ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ವಿರುದ್ಧವೇ ಭಿನ್ನ ಧ್ವನಿ ಕೇಳಲಾರಂಭಿಸಿದೆ. ನಿನ್ನೆ 23 ನಾಯಕರು ಕಾಂಗ್ರೆಸ್ ಅಧ್ಯಕ್ಷರಿಗೆ ಬರೆದ ಪತ್ರದಿಂದ ಆರಂಭವಾದ ಈ ಬೆಳವಣಿಗೆ ಸೋನಿಯಾ ಗಾಂಧೀ ಅವರಲ್ಲಿ ಮತ್ತೆ ವಿಶ್ವಾಸ ವ್ಯಕ್ತಪಡಿಸುವುದರೊಂದಿಗೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಈ ಬೆಳವಣಿಗೆಗೆ ಕಾರಣಗಳಾದರು ಏನು? ಈ ಹಿಂದೆಯೂ ಇಂಥ ಬೆಳವಣಿಗೆಗಳು ಕಾಂಗ್ರೆಸ್ ನಲ್ಲಿ ನಡೆದ ಉದಾಹರಣೆ ಗಳಿವಿಯೆ? ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ಮತ್ತು ಕನ್ನಡ ಪ್ರೆಸ್ .ಕಾಮ್ ಸಂಪಾದಕ ಶ್ರೀವತ್ಸ ನಾಡಿಗ್ ನಡೆಸಿದ ಪಾಡ್ಕಾಸ್ಟ್ ಇಲ್ಲಿದೆ.
ಮೂಲಭೂತವಾಗಿ ಮಾನವನ ಸಾಮರ್ಥ್ಯವನ್ನು ಹೆಚ್ಚಿಸಲು, ಸಮಾಜ ಮತ್ತು ರಾಷ್ಟ್ರೀಯ ಅಭಿವೃದ್ಧಿಯನ್ನು ಸಾಧಿಸಲು ಶಿಕ್ಷಣ ಬಹಳ ಮುಖ್ಯ. ಆರ್ಥಿಕ ಬೆಳವಣಿಗೆಗೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆ, ವೈಜ್ಞಾನಿಕ ಪ್ರಗತಿಗೆ ಶಿಕ್ಷಣ ಬಹಳ ಮುಖ್ಯ. ನಮ್ಮ ದೇಶವು ವಿಶ್ವದಲ್ಲಿ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ದೇಶ. ಮುಂಬರುವ ದಶಕಗಳಲ್ಲಿ , ಮುಂದಿನ ಯುವ ಪೀಳಿಗೆಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಮತ್ತು ಅವಶ್ಯಕತೆಗೆ ಅನುಗುಣವಾಗಿ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ. ನಿಜವಾಗಲೂ ಶಿಕ್ಷಣ ದೇಶದ ಭವಿಷ್ಯವನ್ನು ರೂಪಿಸುತ್ತದೆ. ಈ ದಿಶೆಯಲ್ಲಿ ಭಾರತ ಸರ್ಕಾರವು ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಭಾರತ ಸರ್ಕಾರದ ಸಚಿವ ಸಂಪುಟವು 29ನೇ ಜುಲೈ 2020 ರಂದು ನಡೆದ ಸಭೆಯಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ( NEP 2020) ನ್ನು ಅಂಗೀಕರಿಸಿತು. 1986ರ ಶಿಕ್ಷಣ ನೀತಿಯನ್ನು ಪಲ್ಲಟಗೊಳಿಸಿದ ಈ ಹೊಸ ಶಿಕ್ಷಣ ನೀತಿಯು 21ನೇ ಶತಮಾನದ ಮೊಟ್ಟ ಮೊದಲ ಶಿಕ್ಷಣ ನೀತಿ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.ಇಸ್ರೊದ ಮಾಜಿ ಅಧ್ಯಕ್ಷ ಡಾ. ಕೆ. ಕಸ್ತೂರಿರಂಗನ್ ಅವರ ಅಧ್ಯಕ್ಷತೆಯಲ್ಲಿ ರಚನೆಗೊಂಡ ಸಮಿತಿಯು ನೀಡಿರುವ ಶಿಪಾರಸ್ಸುಗಳ ಮೇರೆಗೆ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಬಂದ ಸುಮಾರು ಎರಡು ಲಕ್ಷ ಸಲಹೆಗಳನ್ನು ಪರಿಶೀಲಿಸಿ, ನೀತಿಯನ್ನು ರಚಿಸಿರುವುದು ಇದರ ವೈಶಿಷ್ಟ್ಯ.
ಚಾರಿತ್ರಿಕವಾಗಿ ಮೊಟ್ಟ ಮೊದಲ ಸಮಗ್ರ ರಾಷ್ಟ್ರೀಯ ಶಿಕ್ಷಣ ನೀತಿಯು 1968 ರಲ್ಲಿ ಅಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ ಇಚ್ಛೆಯ ಮೇರೆಗೆ ಜಾರಿಗೆ ಬಂದಿತು. 1968ರ ರಾಷ್ಟ್ರೀಯ ಶಿಕ್ಷಣ ನೀತಿಯ ಸಮಿತಿ ಅಧ್ಯಕ್ಷರಾಗಿ ಶಿಕ್ಷಣ ತಜ್ಞ ಪ್ರೊ. ಡಿ ಎಸ್ ಕೊಠಾರಿಯವರು ಕಾರ್ಯನಿರ್ವಹಿಸಿದ್ದರು. ನಂತರ 1986ರಲ್ಲಿ ಎರಡನೆಯ ರಾಷ್ಟ್ರೀಯ ಶಿಕ್ಷಣ ನೀತಿಯು ರಾಜೀವ್‍ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲಿ ಅವರ ಒಪ್ಪಿಗೆ ಮತ್ತು ಆದೇಶದ ಮೇರೆಗೆ ಜಾರಿಗೆ ಬಂದಿತು. ಪುನಃ 1986 ರ ಶಿಕ್ಷಣ ನೀತಿಯನ್ನು 1992 ರಲ್ಲಿ ಪರಿಷ್ಕರಿಸಲಾಯಿತು.ಸುಮಾರು 34 ವರ್ಷಗಳ ಬಳಿಕ ಈಗ 2020 ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಜಾರಿಗೆ ಬಂದಿದೆ.
ಇಕ್ವಿಟಿ, ಗುಣಮಟ್ಟ, ಕೈಗೆಟಕುವಿಕೆ ಮತ್ತು ಹೊಣೆಗಾರಿಕೆ.
ಭಾರತ ಕೇಂದ್ರಿತ ಶಿಕ್ಷಣ ವ್ಯವಸ್ಥೆಯೊಂದಿಗೆ ಸರ್ವರಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ನಮ್ಮ ಸಮಾಜವನ್ನು ಒಂದು ಸುಸ್ಥಿರ, ಸಮಾನ ಹಾಗೂ ಜೀವಂತಿಕೆಯುಳ್ಳ ಸಮಾಜವನ್ನಾಗಿ ಮಾರ್ಪಡಿಸುವುದು ನೀತಿಯ ಮೂಲ ಉದ್ದೇಶವಾಗಿರುತ್ತದೆ. ನೀತಿಯ ಆಧಾರ ಸ್ತಂಭಗಳು ಇಕ್ವಿಟಿ, ಗುಣಮಟ್ಟ, ಕೈಗೆಟಕುವಿಕೆ ಮತ್ತು ಹೊಣೆಗಾರಿಕೆ.
ನೀತಿಯ ಅವಲೋಕನ – ಪ್ರಮುಖಾಂಶಗಳು
ಶಾಲಾ ಶಿಕ್ಷಣ
ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹೆಸರನ್ನು ಶಿಕ್ಷಣ ಸಚಿವಾಲಯ ಎಂದು ಮರು ನಾಮಕರಣ ಮಾಡಲಾಗಿದೆ. ಇನ್ನು ಮುಂದೆ 10+2 ಶಿಕ್ಷಣದ ವ್ಯವಸ್ಥೆ ಇರುವುದಿಲ್ಲ. ಬದಲಾಗಿ ಇದನ್ನು 5+3+3+4 ರಂತೆ ವಿಂಗಡಣೆ ಮಾಡಲಾಗಿದೆ. ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ, ದೈಹಿಕ ಮತ್ತು ಮಾನಸಿಕ ಬೆಳವಣಿಗೆ, ಗ್ರಹಣ ಸಾಮರ್ಥ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆ. ಈ ವಿನ್ಯಾಸದ ಆಧಾರದ ಮೇಲೆ ಪಠ್ಯಕ್ರಮದ ಚೌಕಟ್ಟನ್ನು ರೂಪಿಸಲಾಗಿದೆ.
ಅ) ಬುನಾದಿ ಹಂತ ( Foundation stage ) ( 3 – 8 ವರ್ಷಗಳು ) ಇನ್ನು ಮುಂದೆ ಮಕ್ಕಳ ಶಿಕ್ಷಣದ ಹಕ್ಕು ಮೂರನೇ ವಯಸ್ಸಿನಿಂದಲೇ ಪ್ರಾರಂಭವಾಗುತ್ತದೆ. ಶಾಲೆಯ ಮೊದಲ ಐದು ವರ್ಷಗಳು ಬುನಾದಿಯ ಹಂತ. ಮೂರು ವರ್ಷದ ಅಂಗನವಾಡಿ ಅಥವಾ ಪೂರ್ವ ಶಾಲಾ ಹಂತ ( 3 – 6 ವ ) ಮತ್ತು 1 ನೇ ಹಾಗೂ 2 ನೇ ತರಗತಿಗಳು ಈ ಹಂತದಲ್ಲಿ ಸೇರಿವೆ. ಈ ಹಂತದಲ್ಲಿ ಜಾರಿ ಮಾಡಿರುವ ಪ್ರಮುಖ ಬದಲಾವಣೆಯೆಂದರೆ, ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣದ ( Early childwood care and Education – ECCE ) ಅಡಿಯಲ್ಲಿ ಇದುವರೆವಿಗೂ ಗಣನೆಗೆ ತೆಗದುಕೊಳ್ಳದ ಮೂರು ವರ್ಷದ ಮಕ್ಕಳ ಶಿಕ್ಷಣವನ್ನು ಮುಖ್ಯವಾಹಿನಿಗೆ ಸರಿಸಿರುವುದು. ಈ ಹಂತದಲ್ಲಿ ಆಟ ಚಟುವಟಿಕೆಗಳ ಮೂಲಕ ಶಿಕ್ಷಣ, ಅನ್ವೇಷಣೆ ಆಧಾರಿತ ಕಲಿಕೆ, ವರ್ಣಮಾಲೆಗಳು, ಭಾಷೆಗಳು, ಸಂಖ್ಯೆಗಳು, ಎಣಿಕೆ, ಬಣ್ಣಗಳು, ಆಕಾರಗಳು, ಚಿತ್ರಕಲೆ, ಇತ್ಯಾದಿ, ಸೂಕ್ಷ್ಮತೆ, ಉತ್ತಮ ನಡವಳಿಕೆ ಮತ್ತು ಸೌಜನ್ಯ ಇವುಗಳಿಗೆ ಒತ್ತು ನೀಡಲಾಗುತ್ತದೆ.
ಆ) ಪೂರ್ವ ಸಿದ್ಧತಾ ಹಂತ ( Preparatory stage ) ( 8 – 11 ವರ್ಷಗಳು ) ಈ ಹಂತದಲ್ಲಿ 3 ರಿಂದ 5 ನೇ ತರಗತಿಯವರೆಗಿನ ಶಿಕ್ಷಣವು ಒಳಗೊಂಡಿದೆ. ಈ ಹಂತದಲ್ಲಿ ಆಟ ಚಟುವಟಿಕೆಗಳ ಮೂಲಕ ಶಿಕ್ಷಣ, ಹೊಸತನ್ನು ಕಂಡುಹಿಡಿಯುವ ಮೂಲಕ ಬೆಳವಣಿಗೆ ಹಾಗೂ ಸೃಜನಾಶೀಲಾತ್ಮಕ ಕಲಿಕೆಯನ್ನು ಪ್ರಾರಂಭಿಸಲು ಒತ್ತು ನೀಡಲಾಗುವುದು.
ಇ) ಮಧ್ಯಮ ಹಂತ ( Middle school stage ) ( 11- 14 ವರ್ಷಗಳು ) ಈ ಹಂತದಲ್ಲಿ 6 ರಿಂದ 8 ನೇ ತರಗತಿಯ ವರೆಗಿನ ಶಿಕ್ಷಣವನ್ನು ನೀಡಲಾಗುವುದು. ವಿಷಯಗಳ ಪರಿಕಲ್ಪನೆ ಮತ್ತು ಭೋದನೆಗೆ ಒತ್ತು ನೀಡಲಾಗುವುದು. ಈ ಹಂತದಲ್ಲಿ 6 ನೇ ತರಗತಿಯಿಂದ ವೃತ್ತಿ ಪರ ಶಿಕ್ಷಣವನ್ನು ಮುಖ್ಯವಾಹಿನಿ ಶಿಕ್ಷಣದ ಜೊತೆಗೆ ಸಂಯೋಜಿಸಿರುವುದು ನೀತಿಯ ವೈಶಿಷ್ಟ್ಯತೆ.
ಈ) ಪ್ರೌಢ ಹಂತ ( Secondary stage ) ( 14 – 18 ವರ್ಷಗಳು ) ಈ ಹಂತದಲ್ಲಿ 9 ನೇ ತರಗತಿಯಿಂದ 12 ನೇ ತರಗತಿಯ ವರೆಗಿನ ವಿದ್ಯಾಭ್ಯಾಸವನ್ನು ನೀಡಲಾಗುವುದು. ಈ ಹಂತದಲ್ಲಿ ವಿಮರ್ಶಾತ್ಮಕ ಚಿಂತನೆ, ವಿಷಯಗಳ ಆಳವಾದ ಅಧ್ಯಯನ, ಜೀವನದ ಆಸೆ ಆಕಾಂಕ್ಷೆಗಳಿಗೆ ಗಮನ. ಜೀವನೋಪಾಯ ಮತ್ತು ಉನ್ನತ ಶಿಕ್ಷಣದ ತಯಾರಿ, ಈ ಅಂಶಗಳಿಗೆ ಒತ್ತು ನೀಡಲಾಗುವುದು. ವಿಷಯಗಳ ಆಯ್ಕೆಯಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗುವುದು.
ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸಿ, 2030 ರ ವೇಳೆಗೆ ಪೂರ್ವ ಶಾಲೆಯಿಂದ ಪ್ರೌಢಶಾಲೆಯ ಹಂತದವರೆಗೆ ನೂರಕ್ಕೆ ನೂರರಷ್ಟು ವಿದ್ಯಾರ್ಥಿಗಳ ನೊಂದಣಿಯನ್ನು ಸಾಧಿಸುವುದು ( 100% ಜಿಇಆರ್ ). ಇದರಿಂದ ಶಾಲೆಯಿಂದ ಹೊರಗೆ ಉಳಿದಿರುವ ಎರಡು ಕೋಟಿ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವ ಉದ್ದೇಶ.
ಕನಿಷ್ಠ 5 ನೇ ತರಗತಿಯವರೆಗೆ ಮಾತೃ ಭಾಷೆ / ಸ್ಥಳೀಯ ಭಾಷೆಯಲ್ಲಿ ಶಿಕ್ಷಣವನ್ನು ನೀಡುವುದು.
ತ್ರಿ ಭಾಷಾ ಸೂತ್ರವನ್ನು ಮುಂದುವರಿಸಲಾಗಿದೆ.
ಭಾರತೀಯ ಶಾಸ್ತ್ರೀಯ ಭಾಷೆಗಳನ್ನು ಮತ್ತು ಸಾಹಿತ್ಯವನ್ನು ಐಚ್ಛಿಕವಾಗಿ ಕಲಿಯುವ ಅವಕಾಶವನ್ನು ಕಲ್ಪಿಸಲಾಗಿದೆ.
ಶಾಲಾ ಪೂರ್ವ ಕಲಿಕೆಯಿಂದ ಪ್ರೌಢ ಶಿಕ್ಷಣದವರೆಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣಕ್ಕೆ ಖಾತರಿಯನ್ನು ನೀಡಲಾಗಿದೆ. ಪಠ್ಯ ಕ್ರಮದಲ್ಲಿ ನೈತಿಕ, ಮಾನವೀಯ ಮತ್ತು ಸಂವಿಧಾನಿಕ ಮೌಲ್ಯಗಳು, ಭಾರತೀಯ ಎಥೋಸ್, ಸಂಸ್ಕೃತಿ, ಪರಂಪರೆ ಹಾಗೂ ಸಂಪ್ರದಾಯಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.
ಜೀವನದ ಮೌಲ್ಯಗಳ ಕಲಿಕೆಗೆ ಹೆಚ್ಚು ಪ್ರಾಧಾನ್ಯತೆ.
ಎಲ್ಲಾ ಹಂತಗಳ ಕಲಿಕೆಯ ವಿಧಾನದಲ್ಲಿ ಸೃಜನಾತ್ಮಕ, ವಿಮರ್ಶಾತ್ಮಕ ಚಿಂತನೆ ಹಾಗೂ ಕಲ್ಪನಾ ಶಕ್ತಿಯ ವೃದ್ಧಿ ಮತ್ತು ಅದರಂತೆ ಗ್ರಹಿಸುವ ಶಕ್ತಿಯ ಬೆಳವಣಿಗೆಗೆ ಒತ್ತು ನೀಡಲಾಗಿದೆ.
ಬಹಳ ಮುಖ್ಯವಾಗಿ ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಏಕರೂಪ ನಿಯಮಗಳು ಅನ್ವಯವಾಗಲಿವೆ.
ರಾಷ್ಟ್ರೀಯ ಮಟ್ಟದಲ್ಲಿ ಏಕರೂಪದ ಪಠ್ಯಕ್ರಮ ಮತ್ತು ಶಿಕ್ಷಣ ಶಾಸ್ತ್ರದ ಪ್ರೇಮ್ ವರ್ಕ್‍ನ್ನು ತಯಾರಿಸುವ ಗುರಿಯನ್ನು ಹೊಂದಲಾಗಿದೆ.
ಸಾರಾಂಶ ಮೌಲ್ಯ ಮಾಪನದ ಬದಲು ( summative Assesment ) ನಿರಂತರ ರಚನಾತ್ಮಕ ಮೌಲ್ಯ ಮಾಪನದ ( Formative assessment ) ವನ್ನು ಎಲ್ಲಾ ಹಂತಗಳಲ್ಲಿ ಅಳವಡಿಸಲು ಸೂಚಿಸಲಾಗಿದೆ.
ಪ್ರತಿ ವರ್ಷ ಪರೀಕ್ಷೆಗಳು ಇರುವುದಿಲ್ಲ. ಬದಲಿಗೆ ಮೂರು, ಐದು ಮತ್ತು ಎಂಟನೇ ತರಗತಿಯಲ್ಲಿ ಮಾತ್ರ ಪರೀಕ್ಷೆ ಇರುತ್ತದೆ. ಹತ್ತು ಮತ್ತು ಹನ್ನೆರಡನೇ ತರಗತಿಗಳಿಗೆ ಪರೀಕ್ಷಾ ಮಂಡಳಿಗಳಿಂದ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಬಹಳ ಮುಖ್ಯವಾಗಿ ಹೇಳುವುದಾದರೆ, ಬಹು ಶಿಸ್ತೀಯ ( multidisciplinary ) ಮತ್ತು ಬಹು ಭಾಷೆಯನ್ನುಕಲಿಯುವಂತೆ ಮಕ್ಕಳನ್ನು ತಯಾರು ಮಾಡ ಬೇಕೆಂಬುವುದು ಈ ನೀತಿಯ ಗುರಿ. ಇನ್ನು ಮುಂದೆ ಕಲೆ, ವಿಜ್ಞಾನ, ವಾಣಿಜ್ಯ ವಿಷಯಗಳು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು, ಕೌಶಲ ಮತ್ತು ಶೈಕ್ಷಣಿಕ ವಿಷಯಗಳ ನಡುವೆ ಕಠಿಣವಾದ ವ್ಯತ್ಯಾಸ ಮತ್ತು ಅಡ್ಡ ಗೋಡೆಗಳು ಇರುವುದಿಲ್ಲ.
5 ರಿಂದ 10 ಕಿಲೋ ಮೀಟರ್ ತ್ರಿಜ್ಯವುಳ್ಳ ಪ್ರದೇಶದಲ್ಲಿ ಒಂದರಂತೆ, ಶಾಲಾ ಸಂಕೀರ್ಣಗಳನ್ನು ಸ್ಥಾಪಿಸಲಾಗುವುದು. ಈ ಸಂಕೀರ್ಣದಲ್ಲಿ ಪೂರ್ವ ಶಾಲಾ ತರಗತಿಯಿಂದ ಪ್ರೌಢಶಾಲಾ ಮಟ್ಟದವರೆವಿಗೆ ತರಗತಿಗಳಿದ್ದು, ಉತ್ತಮ ಮಟ್ಟದ ಮೂಲ ಭೂತ ಸೌಕರ್ಯಗಳನ್ನು ಹೊಂದಿರುತ್ತವೆ.
ಉನ್ನತ ಶಿಕ್ಷಣ
ಉನ್ನತ ಶಿಕ್ಷಣದಲ್ಲಿ 2035 ರ ವೇಳೆಗೆ ಶೇ 50 ರಷ್ಟು ಸರಾಸರಿ ದಾಖಲಾತಿ ಅನುಪಾತವನ್ನು ( ಜಿಇಆರ್ ) ಮುಟ್ಟುವ ಗುರಿಯನ್ನು ಹೊಂದಲಾಗಿದೆ.
2035 ರ ವೇಳೆಗೆ ವಿಶ್ವ ವಿದ್ಯಾಲಯಗಳಿಂದ ಕಾಲೇಜುಗಳು ಸಂಯೋಜನೆ ಪಡೆಯುವ ಪದ್ಧತಿ ಇರುವುದಿಲ್ಲ ( No affiliation system ). ಆ ವೇಳೆಗೆ ಪ್ರತಿಯೊಂದು ಮಹಾ ವಿದ್ಯಾಲಯವು ಬಹು ಶಿಸ್ತೀಯ ( multidisciplinary ) ಮತ್ತು ದೊಡ್ಡ ಮಟ್ಟದ ಕಾಲೇಜಾಗಿ ಹಂತ ಹಂತವಾಗಿ ಬೆಳೆದು, ಕನಿಷ್ಟ ಮೂರು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡ ಬೇಕಾಗುತ್ತದೆ. ಈ ಮಹಾವಿದ್ಯಾಲಯಗಳು ಉತ್ತಮ ಗುಣ ಮಟ್ಟವನ್ನು ಹೊಂದಿದ್ದು, ಪದವಿಗಳನ್ನು ನೀಡುವ ಸ್ವಾಯತ್ತ ಶಿಕ್ಷಣ ಸಂಸ್ಥೆಗಳಾಗಿ ಬೆಳೆಯ ಬೇಕಾಗುತ್ತದೆ.
2035 ರ ವೇಳೆಗೆ ದೇಶದ ಪ್ರತಿಯೊಂದು ಜಿಲ್ಲೆಯಲ್ಲು ದೊಡ್ಡಮಟ್ಟದ ( 3000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ) ಬಹು ವಿಷಯಗಳ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ.
2035 ರ ವೇಳೆಗೆ ಒಂದೇ ವಿಷಯದಲ್ಲಿ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳು ಇರುವುದಿಲ್ಲ ( single faculty colleges and universities ). ಈಗಿರುವ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಮಹಾ ವಿದ್ಯಾಲಯಗಳು ಬಹು ಶಿಸ್ತೀಯ ಶಿಕ್ಷಣ ಸಂಸ್ಥೆಗಳಾಗಿ ಬದಲಾಗಲು ಅವಶ್ಯಕತಾ ಕ್ರಮಗಳನ್ನು ತೆಗದುಕೊಳ್ಳಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳನ್ನು ಎರಡು ರೀತಿಯಲ್ಲಿ ವಿಂಗಡಿಸಲು ತೀರ್ಮಾನಿಸಲಾಗಿದೆ.
ಅ) ಜಾಗತಿಕ ಮಟ್ಟದ ಸಂಶೋಧನೆಗೆ ಒತ್ತು ನೀಡುವ ಹಾಗೂ ಉತ್ತಮ ಮಟ್ಟದ ಭೋದನೆಯನ್ನು ಮಾಡುವ ವಿಶ್ವ ವಿದ್ಯಾಲಯಗಳು ( Research Intensive univerities )
ಆ) ಭೋದನಗೆ ಒತ್ತು ಕೊಟ್ಟು, ಗಮನಾರ್ಹ ಸಂಶೋಧನೆಯನ್ನು ನಡೆಸುವ ವಿಶ್ವ ವಿದ್ಯಾಲಯಗಳು ( Teaching Intensive universities ). ಜೊತೆಗೆ, ಪದವಿಗಳನ್ನು ನೀಡುವ ಬಹು ಶಿಸ್ತೀಯ ಸ್ವಾಯತ್ತ ಮಹಾವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತವೆ. ಇನ್ನು ಮುಂದೆ ಎಂ. ಫಿಲ್ ಕೋರ್ಸ್ ಇರುವುದಿಲ್ಲ. ಈ ಕೋರ್ಸ್‍ಗೆ ತಿಲಾಂಜಲಿ ನೀಡಲಾಗಿದೆ.
ವಿಶ್ವ ವಿದ್ಯಾಲಯಗಳಲ್ಲಿ ಮತ್ತು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಮಟ್ಟದ ಸಂಶೋಧನೆಗೆ ಪ್ರಾಧಾನ್ಯತೆ ನೀಡುವ ಸಲುವಾಗಿ ರಾಷ್ಟ್ರೀಯ ಸಂಶೋಧನಾ ಪೌಂಢೇಶನ್ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಪದವಿ ಶಿಕ್ಷಣದಲ್ಲಿ ನಾಲ್ಕು ವರ್ಷಗಳ ಅವಧಿಯನ್ನು ಹೊಂದಿರುವ ಪದವಿಯ ಶಿಕ್ಷಣವನ್ನು ಕಾರ್ಯ ರೂಪಕ್ಕೆ ತರಲು ಉದ್ದೇಶಿಸಲಾಗಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಈ ಅವಧಿಯಲ್ಲಿ ವಿವಿಧ ಬಗೆಯ ನಿರ್ಗಮನ ಆಯ್ಕೆಯ ಅವಕಾಶಗಳನ್ನು ನೀಡಲಾಗಿದೆ. ಅಂದರೆ 2 ವರ್ಷದ ಅಧ್ಯಯನ ಮುಗಿದ ನಂತರ ನಿರ್ಗಮಿಸಿದರೆ ಡಿಪ್ಲೊಮೊ ಪ್ರಮಾಣ ಪತ್ರ, ಒಂದು ವರ್ಷದ ಅಧ್ಯಯನ ಮುಗಿದ ನಂತರ ನಿರ್ಗಮಿಸಿದರೆ ಸರ್ಟಿಫಿಕೇಟ್ ಕೋರ್ಸ್ ಪ್ರಮಾಣ ಪತ್ರವನ್ನು ನೀಡಲಾಗುವುದು. ನಾಲ್ಕು ವರ್ಷದ ವ್ಯಾಸಂಗ ಮುಗಿದ ನಂತರ ಒಂದು ವರ್ಷದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯ ಬಹುದು.
ರಾಷ್ಟ್ರ ಮಟ್ಟದಲ್ಲಿ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ( NTA ) ಏಕ ರೀತಿಯ ಸಾಮಾನ್ಯ ಪರೀಕ್ಷೆಯನ್ನು ನಡೆಸಲಿದೆ. ಆನ್‍ಲೈನ್ ಶಿಕ್ಷಣ, ದೂರ ಶಿಕ್ಷಣಗಳಿಗೆ ಉತ್ತೇಜನ ನೀಡಲಾಗಿದೆ.ಒಟ್ಟು ಆಂತರಿಕ ಉತ್ಪನ್ನದ ( ಜಿಡಿಪಿ ) ಶೇ 6 ರಷ್ಟನ್ನು ಶಿಕ್ಷಣಕ್ಕೆ ವ್ಯಯ ಮಾಡಲು ಸೂಚಿಸಲಾಗಿದೆ.
ತಾಂತ್ರಿಕ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಜಾಗತಿಕ ಮಟ್ಟದಲ್ಲಿ ಮೊದಲ ನೂರು Rank ಪಟ್ಟಿಯಲ್ಲಿ ಸ್ಥಾನಗಳಿಸಿರುವ ವಿದೇಶಿ ವಿಶ್ವ ವಿದ್ಯಾಲಯಗಳಿಗೆ ನಮ್ಮ ದೇಶದಲ್ಲಿ ಕ್ಯಾಂಪಸ್ ಸ್ಥಾಪಿಸಲು ಅನುಮತಿ ನೀಡಲಾಗುವುದು. ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಕಲೆ, ಸಂಗೀತ, ನೃತ್ಯ, ಚಿತ್ರಕಲೆ, ನಾಟಕ, ಸಾಹಿತ್ಯ ಸೇರಿದಂತೆ ಹಲವು ವಿಷಯಗಳ ಬೋಧನೆಗೆ ಒತ್ತು ನೀಡಲಾಗುವುದು. ದೇಶದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು “ಭಾರತೀಯ ಉನ್ನತ ಶಿಕ್ಷಣ ಮಂಡಳಿ” ಸ್ಥಾಪನೆಯಾಗಲಿದೆ.
ಶಿಕ್ಷಕರ ಶಿಕ್ಷಣ
ಬೋಧನಾ ಕ್ರಮ ಮತ್ತು ಅಭ್ಯಾಸದಲ್ಲಿ ಉನ್ನತ ಗುಣಮಟ್ಟದ ತರಬೇತಿ ನೀಡುವ ಸಲುವಾಗಿ ಇನ್ನು ಮುಂದೆ ನಾಲ್ಕು ವರ್ಷಗಳ ಸಂಯೋಜಿತ ಶಿಕ್ಷಣ ಪದವಿ ( Integrated B.Ed course ) ಕಾರ್ಯ ಕ್ರಮವನ್ನು ಬಹು ಶಿಸ್ತಿನ ( Multi disciplinary ) ವಿದ್ಯಾ ಸಂಸ್ಥೆಗಳಲ್ಲಿ ನೀಡಲಾಗುವುದು. ಇದರಲ್ಲಿ ವಿಷಯ ಮತ್ತು ಶಿಕ್ಷಕರ ತರಬೇತಿ ಕೋರ್ಸುಗಳು ಸೇರಿವೆ. 2030 ರ ನಂತರ 4 ವರ್ಷಗಳ ಬಿ.ಎಡ್ ಕೋರ್ಸ್‍ನ್ನು ಶಿಕ್ಷಕರಿಗೆ ಕಡ್ಡಾಯ ಮಾಡಲಾಗುತ್ತದೆ. ಪದವಿ ಪಡೆದವರಿಗೆ ಎರಡು ವರ್ಷದ ಬಿ. ಎಡ್ ಕೋರ್ಸ್ ಲಭ್ಯವಿರುತ್ತದೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ವೈದ್ಯಕೀಯ ಮತ್ತು ಕಾನೂನು ಶಿಕ್ಷಣಗಳನ್ನು ಹೊರತು ಪಡಿಸಿ, ಉಳಿದ ಎಲ್ಲಾ ಶಿಕ್ಷಣ ಪದ್ಧತಿಗಳಿಗೆ ಅನ್ವಯವಾಗುತ್ತದೆ. ನೀತಿಯನ್ನು ಯಶಸ್ವಿಯಾಗಿ ಜಾರಿಗೊಳಿಸಲು , ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ರಾಜ್ಯ ಶಿಕ್ಷಣ ಮಂಡಳಿಗಳು, ನಿಯಂತ್ರಣ ಸಂಸ್ಥೆಗಳು, ಭೋದಕರು, ಹೀಗೆ ಹಲವಾರು ಸಂಸ್ಥೆಗಳು ಎಲ್ಲರೂ ಸಹ ಒಟ್ಟಿಗೆ ಕೈಗೂಡಿಸಿ ಆಸಕ್ತಿಯಿಂದ ಕಾರ್ಯ ನಿರ್ವಹಿಸ ಬೇಕಾಗಿದೆ. ಮುಂದಿನ ದಶಕಗಳಲ್ಲಿ ಭಾರತೀಯ ಶಿಕ್ಷಣವು ಯುವ ಪೀಳಿಗೆಗೆ ಅನುಕೂಲವಾಗಲೆಂಬ ಆಶಯ. ಭಾರತ ಸರ್ಕಾರವೇ ದಾಖಲಿಸಿರುವಂತೆ 2030 – 40 ರ ದಶಕದ ವೇಳೆಗೆ ಹೊಸ ಶಿಕ್ಷಣ ನೀತಿಯು ಸಂಪೂರ್ಣವಾಗಿ ಕಾರ್ಯ ರೂಪಕ್ಕೆ ಬರುವ ಇಚ್ಚೆಯನ್ನು ಹೊಂದಲಾಗಿದೆ. ಕಾರ್ಯ ರೂಪಕ್ಕೆ ತರುವಾಗ ನಮ್ಮ ಎದುರು ನಿಲ್ಲುವ ಸವಾಲುಗಳಿಗೆ ಉತ್ತರ ಕಂಡುಕೊಂಡು ಮುನ್ನಡೆಯ ಬೇಕಾಗಿದೆ.
ಎಲ್ಲವೂ ಊಹಿಸಿದಂತೆ ಆಗಿದೆ. ಸಂಜೆಯವೆರಗೂ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೋನಿಯಾ ಗಾಂಧೀ ಅವರೆ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಬೇಕೆಂಬ ನಿರ್ಧಾರಕ್ಕೆ ಬಂದಿದೆ.
ದಿನ ನಿತ್ಯದ ವ್ಯವಹಾರ ನೋಡಿಕೊಳ್ಳಲು ಪಕ್ಷದ ಅಧ್ಯಕ್ಷರಿಗೆ ಸಹಾಯ ಮಾಡಲು ಸಮಿತಿಯೊಂದನ್ನು ನೇಮಿಸಲು ಕೂಡ ನಿರ್ಧರಿಸಿದೆ. ಮುಂದಿನ ಆರು ತಿಂಗಳ ಒಳಗೆ ಸೇರಲಿರುವ ಎಐಸಿಸಿ ಸಭೆ ಮುಂದಿನ ಕಾರ್ಯತಂತ್ರವನ್ನು ರೂಪಿಸಲಿದೆ.
ಪಕ್ಷದ ಹುದ್ದೆ ಬೇಡವೆಂದೆ ಕುಳಿತ್ತಿದ್ದ ಸೋನಿಯಾ ಗಾಂಧೀ ಕೊನೆಗೆ ಎಲ್ಲರ ಒತ್ತಾಯಕ್ಕೆ ಮಣಿದು ಮುಂದುವುರಿಯಲು ಸಮ್ಮಿತಿಸಿದರು. ಪಕ್ಷದಲ್ಲಿ ಯಾವುದೇ ಸಮಸ್ಯೆ ಬಂದರೂ ಅದು ಪಕ್ಷದ ವೇದಿಕೆಯಲ್ಲೇ ಇತ್ಯರ್ಥವಾಗಬೇಕೆಂದರು.
ಬೆಳಿಗ್ಗೆಯಿಂದ ಹಲವು ಹೇಳಿಕೆ ಪ್ರತಿಹೇಳಿಕೆಗಳಿಂದ ತೀವ್ರ ಕುತೂಹಲ ಕಂಡಿದ್ದ ಸಭೆ ಕೊನೆಗೆ ನಿರೀಕ್ಷಿಸಿದ ನಿರ್ಧಾರವನ್ನೆ ತೆಗೆದುಕೊಂಡಿದೆ.
ಹೊಸ ಅಧ್ಯಕ್ಷರನ್ನು ಹುಡುಕಿಕೊಳ್ಳುವಂತೆ ಸೋನಿಯಾ ಗಾಂಧೀ ಸೂಚಿಸಿದ್ದಾರೆಂಬ ಸುದ್ದಿ ಆ ಪಕ್ಷದಲ್ಲಿ ಆಂತರಿಕ ತಳಮಳ ಹುಟ್ಟು ಹಾಕಿದೆ.23 ಕಾಂಗ್ರೆಸ್ ನಾಯಕರು ಅಮೂಲಾಗ್ರ ಬದಲಾವಣೆಗೆ ಒತ್ತಾಯಿಸಿ ಬರೆದ ಪತ್ರ ಇದಕ್ಕೆ ಕಾರಣ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಗಾಂಧೀ ಕುಟುಂಬ ಹೊರತು ಪಡಿಸಿ ಉಳಿದವರನ್ನು ಅಧ್ಯಕ್ಷರನ್ನಾಗಿ ಕಾಣುವುದು ಸುಲಭವೆ ಎಂಬುದು ಈಗಿನ ಪ್ರಶ್ನೆ.
2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಕೂಡಲೇ ಕಾಂಗ್ರೆಸ್ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿತ್ತು. ಆದರೆ ವಸ್ತುಸ್ಥಿತಿ ಹಾಗಾಗಿರಲಿಲ್ಲ. ನೆಹರು ಕುಟುಂಬದ ಕುಡಿಗಳ ಹಿಂದೆ ಬಿದ್ದಿದ್ದ ಆಪ್ತ ಸಮೂಹ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಬಳಿಕ ಕಾಂಗ್ರೆಸ್ ನಲ್ಲಿ ನಿರ್ವಾತ ವಾತಾವರಣ ನಿರ್ಮಾಣವಾಗಿತ್ತು. ಅದನ್ನು ಸಮರ್ಥವಾಗಿ ತುಂಬಿದವರು ಮಾಜಿ ಪ್ರಧಾನಿ ಪಿ. ವಿ. ನರಸಿಂಹ ರಾಯರು. ಪಕ್ಷಕ್ಕೆ ಒಂದು ರೀತಿಯಲ್ಲಿ ಗೆಲುವನ್ನೇ ತಂದುಕೊಟ್ಟು ಅಲ್ಪ ಮತವಿದ್ದರೂ ಐದು ವರ್ಷ ತುಟಿ ಬಿಚ್ಚದೆ ಆಡಳಿತ ಮಾಡಿದವರು.
ಹೊಸ ಚಿಂತನೆ ಜತೆಗೆ ಜಾಗತೀಕರಣಕ್ಕೆ ಭಾರತವನ್ನು ತೆರೆದುಕೊಳ್ಳುವಂತೆ ಮಾಡಿ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಭಾರತವನ್ನು ಸೃಷ್ಟಿಸುವಲ್ಲಿ ಪಿವಿಎನ್-ಮನಮೋಹನ್ ಸಿಂಗ್ ಜೋಡಿ ಕೆಲಸ ಮಾಡಿತು. ಆದರೆ ಏನು ಲಾಭ ? ಕಾಂಗ್ರೆಸ್ ನ ಹಳೆ ತಲೆಗಳು (ಬೇಕೆಂದೇ ಹಳೆ ಹುಲಿಗಳು ಶಬ್ದ ಬಳಕೆ ಮಾಡಿಲ್ಲ) ಮತ್ತೆ ಲಾಭದ ಲಾಬಿಯನ್ನು ಹುಟ್ಟು ಹಾಕಿದವು. ಹೀಗಾಗಿ ಕಾಂಗ್ರೆಸ್ ಗಾಧಿ ಮತ್ತೆ ನೆಹರು ಕುಟುಂಬಕ್ಕೆ ಒಲಿದು ಬಂತು, ಮತ್ತು ಅದರಲ್ಲಿ ಸೋನಿಯಾ ಗಾಂಧಿಯವರು ತಾವು ಎಷ್ಟು ಸಮರ್ಥರು ಎಂಬುದನ್ನು ಎರಡು ಅವಧಿಯಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬರುವ ಮೂಲಕ ತೋರಿಸಿಕೊಟ್ಟರು. ನಾನಾ ಪಕ್ಷಗಳನ್ನು ಒಗ್ಗೂಡಿಸಿಕೊಂಡರೂ, ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಮಾಡುವ ಮೂಲಕ ಎದುರಾಳಿ ಪಕ್ಷಕ್ಕೆ ಎದ್ದೇಳಲು ಸಾಕಷ್ಟು ವರ್ಷಗಳೇ ಬೇಕಾದ ರೀತಿ ಮಾಡಿದರು ಎಂಬುದು ನಿಜ.
ಈಗಿರುವ ಪ್ರಶ್ನೆ
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ಇಲ್ಲಿ ಯಾರು ಏನು ಬೇಕಾದರೂ ಮಾಡಬಹುದು ಹಾಗೂ ಮಾತನಾಡಬಹುದು. ಆದರೆ, ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ಧ ಶತಮಾನದಷ್ಟು ಹಳೆಯ ಕಾಂಗ್ರೆಸ್ ನಲ್ಲೇ ಆಂತರಿಕ ಪ್ರಜಾಪ್ರಭುತ್ವ ಇದೆಯಾ ಎಂಬುದು. ಮಹಾತ್ಮಾ ಗಾಂಧೀಜಿಯವರ ಮಾತು ಇಲ್ಲಿ ಸ್ಮರಣಾರ್ಹ. “ಪ್ರಜಾತಂತ್ರದ ಸ್ಫೂರ್ತಿ ಎಂಬುದು ಎಲ್ಲಾ ನೀತಿಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ತಾಂತ್ರಿಕ ವಿಷಯವಲ್ಲ. ಇದು ಎಲ್ಲರಿಗೂ ಮಾತನಾಡುವ ಹಕ್ಕು ಕೊಡುವ ಸ್ವಾತಂತ್ರ್ಯ. ಇದು ಹೃದಯದಲ್ಲಿ ಬದಲಾವಣೆಯನ್ನು ತರುವಂತಹದ್ದಾಗಿರಬೇಕು”. ಆದರೆ ಕಾಂಗ್ರೆಸ್ ನಲ್ಲಿ ಈಗ ಅದು ಇದೆಯಾ ? ಇಲ್ಲ ಎಂದೇ ಹೇಳಬೇಕಾಗುತ್ತದೆ.
ಈಗೇನೋ 23-25 ಹಿರಿಯ ನಾಯಕರು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು, ಹೊಸ ಅಧ್ಯಕ್ಷರನ್ನು ಪ್ರಜಾತಂತ್ರ ರೀತಿಯಲ್ಲಿ ಅಂದರೆ ಮತದಾನದ ಮೂಲಕ ಆಯ್ಕೆ ಮಾಡಬೇಕು ಎಂದು ಹಕ್ಕೊತ್ತಾಯ ಮಂಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸುಲಭದ ದಾರಿಯಲ್ಲ
ಒಂದು ವೇಳೆ, ಇಷ್ಟು ನಾಯಕರ ಮನವಿಗೆ 74 ವರ್ಷ ವಯಸ್ಸಾಗಿರುವ ಸೋನಿಯಾ ಗಾಂಧಿ ಮಣೆ ಹಾಕಿದರೂ, ಹುಟ್ಟಿನಿಂದಲೇ ನೆಹರು ಕುಟುಂಬವನನ್ನು ಓಲೈಸುತ್ತಲೇ ಬದುಕು ಕಟ್ಟಿಕೊಂಡ, ಸಕಲ ಸೌಭಾಗ್ಯ ಅನುಭವಿಸಿದ ಒಂದು ವರ್ಗ ಇದನ್ನು ಒಪ್ಪುತ್ತದೆಯಾ ? ಒಪ್ಪಿದರೂ ಮುಂದಿನ ದಿನಗಳಲ್ಲಿ ಹೊಸ ಅಧ್ಯಕ್ಷರನ್ನು ಹೇಗೆ ಹೊಸಕಿ ಹಾಕಬೇಕು ಎಂಬ ತಂತ್ರವನ್ನು ರೂಪಿಸದಿರಲು ಸಾಧ್ಯವಿಲ್ಲವೇ ? ಎಂಬೆಲ್ಲಾ ಪ್ರಶ್ನೆಗಳ ಸರಣಿ ಉದ್ಭವಿಸುತ್ತಲೇ ಹೋಗುತ್ತದೆ.
ವಂಶಾಡಳಿತದ ಸರಣಿ ಇಲ್ಲಿ ಇನ್ನೊಂದು ವಿಷಯ ತುಂಬಾ ಮುಖ್ಯವಾಗುತ್ತದೆ. ಕರ್ನಾಟಕ ಕಾಂಗ್ರೆಸ್ ನ ಅಧ್ಯಕ್ಷರಾಗಿ ಡಿ. ಕೆ. ಶಿವಕುಮಾರ್ ಸ್ಥಾಪನೆಗೊಳ್ಳಲು ಎಷ್ಟು ಮೀನ-ಮೇಷ ಎಣಿಸಬೇಕಾಯಿತು ? ಒಬ್ಬ ಸಾಮಾನ್ಯ ಕಾರ್ಯಕರ್ತರಾಗಿ ಈ ಮಟ್ಟಕ್ಕೆ ಅವರು ಏರಬೇಕಾದರೆ ಅದಕ್ಕೆ ಪರೋಕ್ಷವಾಗಿ ಸಾಕಷ್ಟು ವಿರೋಧವನ್ನು ಎದುರಿಸಲೇಬೇಕಾಯಿತು. ಕೊನೆಗಂತೂ ಕೆಪಿಸಿಸಿ ಅಧ್ಯಕ್ಷರಾದರು ಬಿಡಿ, ಆದರೆ, ಕಾಂಗ್ರೆಸ್ ನ ಪ್ರತಿಯೊಂದು ಹಂತವನ್ನು ಗಮನಿಸಿದರೂ ಅಲ್ಲಿ ಇರುವುದು ವಂಶಾಡಳಿತ (ಡೈನೆಸ್ಟಿ ಪಾಲಿಟಿಕ್ಸ್) ರಾಜಕೀಯ. ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್, ಜ್ಯೋತಿರಾಧಿತ್ಯ ಸಿಂಧ್ಯಾ ಹೀಗೆ ಪಟ್ಟಿ ಮಾಡಿದರೆ ಎಲ್ಲರೂ ರಾಜಕೀಯ ಹಿನ್ನೆಲೆಯುಳ್ಳ ಅಪ್ಪ-ಅಮ್ಮನನ್ನುಹೊಂದಿದವರೇ ಅಲ್ಲವೇ ?
ಮೂರು ದಿನ ದೀಪ ಆರಬಾರದು, ರಾತ್ರಿ,ಹಗಲು… ಎರಡೂ ದೀಪಗಳಿಗೆ ಖಾಲಿ ಆದಾಗಲೆಲ್ಲ ಪಕ್ಕದಲ್ಲಿರುವ ಶೀಶೆಯಿಂದ ಎಣ್ಣೆ ಹಾಕ್ತಾ ಇರಬೇಕು.ಎರಡು ರಾತ್ರಿ ಇರಬೇಕು, ಯಾರ್ಯಾರು ಇಲ್ಲೇ ಇರ್ತೀರಿ….ಅಂತ ದ್ಯಾಮಣ್ಣ ಮೇಷ್ಟ್ರು ಕೇಳಿದ್ರು ಅಂದ್ರೆ, ನಾನಿರ್ತೀನಿ ಸಾ…ನಾನಿರ್ತೀನಿ ಸಾ ಅಂತ ನನ್ನನ್ನು ಸೇರಿಸಿ,ನನ್ನ ಹಲವಾರು ಗೆಳೆಯರು ಕೈ ಎತ್ತುತ್ತಿದ್ದೆವು.
ಮ್ಮೂರ ಶಾಲೆಯಲ್ಲಿ ಗಣಪತಿ ಹಬ್ಬಕ್ಕೆ ಗಣಪನನ್ನು ಕೂಡಿಸುವ ಸಲುವಾಗಿ ,ಪೂರ್ವಬಾವೀ ತಯಾರಿ ನಡೆಸುವ ಸಲುವಾಗಿ ಶಾಲೆಯಲ್ಲಿ ಒಂದು ಕೋಣೆಯಲ್ಲಿ ಜಮೆ ಆಗಿರುತ್ತಿದ್ದ ನಮ್ಮನ್ನು ಐದನೇ ತರಗತಿಯ ಕ್ಲಾಸ್ ಟೀಚರ್ ಆಗಿದ್ದ ಆಗಲೇ 55 ದಾಟಿದ್ದ ದ್ಯಾಮಣ್ಣ ಮಾಸ್ತರರು ಕೂಡಿ ಹಾಕಿ ಕೇಳಿದರು ಅಂದ್ರೆ ಹತ್ತಿರದಲ್ಲೇ ಗಣಪತಿ ಹಬ್ಬ ಬಂದಿದೆ, ಶಾಲೆಯಲ್ಲಿ ಗಣಪತಿ ಕೂಡಿಸುವ ಕಾರ್ಯಕ್ರಮ ಪ್ರಾರಂಭ ಗೊಂಡಿವೆ ಅಂತ ನಮ್ಮ ಮನಸ್ಸುಗಳು ಪುಳಕ ಗೊಳ್ಳುತ್ತಿದ್ದವು.
ಇಡೀ ನಮ್ಮ ಊರಲ್ಲಿ ಶಾಲೆಯ ಗಣಪನೂ ಸೇರಿ ಮತ್ತೆರೆಡು ಗಣಪತಿಗಳು ಪ್ರಸಿದ್ದಿ. ಒಂದು ಪೂಲೆಪ್ಪ ಶೆಟ್ಟಿ ಹೋಟೆಲ್ ದು ಮತ್ತೊಂದು ಚನ್ನವೀರಯ್ಯ ಸ್ವಾಮಿ ಮನೆಯದ್ದು. ನಮ್ಮ ಮನೆಯೂ ಸೇರಿ,ಮನೆ ಮನೆಗಳಲ್ಲಿ ಗಣಪ ಇರುತ್ತಿರಲಿಲ್ಲ. ಅಪ್ಪ ತನ್ನ ಶಾಲೆಯ ಗಣಪನನ್ನು ಕೂಡಿಸುವಲ್ಲಿ ಬ್ಯುಸಿ ಇರುತ್ತಿದ್ದುದರಿಂದ ನಮ್ಮ ಮನೆಯಲ್ಲೂ ಗಣಪ ಕೂಡುತ್ತಿರಲಿಲ್ಲ.
1ನೇ ತರಗತಿಯಿಂದ 4ನೇ ತರಗತಿ ವರೆಗೆ ಪ್ರತಿಯೊಬ್ಬರೂ 5 ಪೈಸೆ, 5,6 ಮತ್ತು 7ನೇ ತರಗತಿಯವರು 10 ಪೈಸೆ ಗಣಪನ ದೇಣಿಗೆ ಕೊಡಬೇಕು. ಅವುಗಳನ್ನೆಲ್ಲ ಕ್ಲಾಸ್ ಲೀಡರ್ ಗಳು ಸಂಗ್ರಹಿಸಿಕೊಂಡು ಇಟ್ಕೋಬೇಕು. ಈ ಪ್ರಕ್ರಿಯೆ 3-4 ದಿನದ ಮುಂಚೆಯೇ ಶುರು ಆಗಬೇಕು ಮತ್ತು ಗಣಪತಿ ಕೂಡುವ ಹಿಂದಿನ ದಿನಕ್ಕೆ ಮುಗಿಯಬೇಕು. 7ನೇ ಕ್ಲಾಸಿನ ಲೀಡರ್ ಬುಡ್ಡೆನಹಳ್ಳಿ ರಂಗಪ್ಪನಿಗೆ ಎಲ್ಲರೂ ಕೊಡಬೇಕು. ಹೆಡ್ಮಾಸ್ಟರ್ ಸಯ್ಯದ್ ಮಹಮ್ಮದ್ ಅವರು ದ್ಯಾಮಣ್ಣ ಮಾಸ್ತರನ್ನು ಉಸ್ತುವಾರಿಕೆಗೆ ನೇಮಿಸುತ್ತಿದ್ದರು. ನಮ್ಮ ಶಾಲೆಗೆ ಮೊದಲನೇ Graduate Head Master ಅಂತ ಬಂದಿದ್ದ ಸಯ್ಯದ್ ಮಾಸ್ಟರ್ ತುಂಬಾ ಸ್ಟ್ರಿಕ್ಟ್ ಮತ್ತು 5ನೇ ಕ್ಲಾಸ್ ನಿಂದ ಇಂಗ್ಲಿಷ್ ಹೇಳುವವರು. ಕೈಯಲ್ಲಿ ಯಾವಾಗಲೂ ಬೆತ್ತ, ಬಿಳೀ ಪೈಜಾಮ, ಬಿಳೀ ಶರ್ಟು. ಅಪ್ಪನೆಂದರೆ ಇವರಿಗೆ ಪ್ರೀತಿ, ಅಪ್ಪನಿಗೂ ಅಭಿಮಾನ. ಮಾತಿಗೊಮ್ಮೆ ನಮ್ಮೂರ ಶಾಲೆಗೆ Graduate Head Master ಬಂದಿರೋದು ಹೆಮ್ಮೆ ಅನ್ನುವ ರೀತಿ ಅವರ ನುಡಿಗಳು. ಅಪ್ಪ ಆಗ ಪಕ್ಕದ ಗೌರಿಪುರದ ಶಾಲೆಯಲ್ಲಿ ಇದ್ದರು. ಬಿಳೀ ಕಚ್ಛೆ,ಬಿಳೀ ಅಂಗಿ ತೊಟ್ಟು, ಎತ್ತರದ ನಿಲುವಿನ ವಿಭೂತಿ ಧಾರಿ ದ್ಯಾಮಣ್ಣ ಮಾಸ್ಟ್ರು ಸೊವೇನಹಳ್ಳಿ ಯಿಂದ ದಿನಾಲೂ ಬರ್ತಿದ್ದರು. ಹಾಗಾಗಿ ಕೂಡ್ಲಿಗಿಯಿಂದ ಗಣಪನನ್ನು ಖರೀದಿಸಿ ತರುವುದು ಅವರ ಜವಾಬ್ದಾರಿ.
ಆಗ ನಮ್ಮೂರ ಶಾಲೆಯ ಒಟ್ಟು ಗಣತಿ 40 ದಾಟುತ್ತಿರಲಿಲ್ಲ…ಒಂದೂವರೆ ರೂಪಾಯಿಗೆ ಮೀರದ ಒಂದಡಿ ಗಣಪ, ಕಾಯಿ,ಕರ್ಪುರ,ಊದಿನಕಡ್ಡಿ,ದೀಪಕ್ಕೆ ಎಣ್ಣೆ, ಮೂರ್ನಾಲ್ಕು ಲೀಟರ್ ಮಂಡಕ್ಕಿ…ಇವು ಗಣಪತಿ ಹಬ್ಬದ ಬಜೆಟ್…ಬಣ್ಣ ಇಲ್ಲದ ಮಣ್ಣಿನ ಗಣಪಗಳೇ ಹೆಚ್ಚು ಆಗ. ಎಂಟಾಣೆ ಹೆಚ್ಚಿಗೆ ಕೊಟ್ಟು ಬಣ್ಣ ಇದ್ದ ಗಣಪನನ್ನು ದ್ಯಾಮಣ್ಣ ಮಾಸ್ಟ್ರು ಹಿಂದಿನ ದಿನ ತಂದರು ಎಂದರೆ,ಶಾಲೆಗೆಲ್ಲ ಸಂಭ್ರಮ. ಪೇಪರ್ ನಲ್ಲಿ ಮುಚ್ಚಿಟ್ಟಿರುತ್ತಿದ್ದ ಆ ಗಣಪನನ್ನು ನೋಡೋದೇ ಹಬ್ಬ ನಮಗೆಲ್ಲ.
ಬೊಮ್ಮಘಟ್ಟದ ಶಾಲೆ
ಸಾಲಾಗಿ ನಾಲ್ಕು ಕೋಣೆಗಳಿದ್ದ ನನ್ನೂರ ಶಾಲೆಯಲ್ಲಿ, 1,2 ಒಂದು ಕೋಣೆಯಲ್ಲಿ, 3,4 ಮತ್ತೊಂದು ಕೋಣೆಯಲ್ಲಿ, 5,6 ಇನ್ನೊಂದರಲ್ಲಿ, 7 ಮಾತ್ರ ಹೆಡ್ಮಾಸ್ಟರ್ ರೂಮ್ ಕಮ್ ಆಫೀಸ್ ಅನ್ನುವ ಕೋಣೆಯಲ್ಲಿ. ಸಾಮಾನ್ಯವಾಗಿ ಕೊನೆಯ ಕೋಣೆ, ಆಫೀಸ್ ಪಕ್ಕ ಗಣಪತಿಯನ್ನು ಕೂಡಿಸುತ್ತಿದ್ದೆವು. ಶ್ರಾವಣ ಮಾಸ ಮುಗಿಯುತ್ತ ಬರುತ್ತಿದ್ದ ಆ ದಿನಗಳಲ್ಲಿ, ಮಳೆ ಜೋರು ಬಂದರೆ, ಕೋಣೆಗಳು ಸೋರುತ್ತಿದ್ದವು, ಹಾಗೆ ಸೋರದ ಜಾಗ ನೋಡಿ ಕೂಡಿಸುತ್ತಿದ್ದೆವು.
ಗಣಪತಿ ಬಂದ ದಿನವೇ ಶಾಲೆ ಮುಗಿದ ನಂತರ ಕೋಣೆಯಲ್ಲಿ ಇರುತ್ತಿದ್ದ ಟೇಬಲ್, ಅದರ ಮೇಲೆ ಕುರ್ಚಿ ಇಟ್ಟು, ಎರಡೂ ಕಡೆ ಬಾಳೆ ಕಂಬ,ಅಥವಾ ತೆಂಗಿನ ಗರಿಗಳನ್ನು ಇಟ್ಟು, ಕುರ್ಚಿಗೆ ಒಂದು ಬಿಳೀ ಬಟ್ಟೆ ಹಾಸಿದೆವು ಅಂದ್ರೆ ಗಣಪನ ಪೀಠ ಸಿದ್ಧವಾದಂತೆ. ಅದನ್ನೇ ಕಣ್ತುಂಬಾ ನೋಡ್ತಾ ಸಂಭ್ರಮಗೊಂಡು ಮನೆಗೆ ಹೋದರೆ,ನಿದ್ದೆಯೇ ಬರ್ತಿದ್ದಿಲ್ಲ ಅವತ್ತೆಲ್ಲ!
ಆಗಸ್ಟ್ 15,ಜನವರಿ 26 ಬಿಟ್ಟರೆ ಬೆಳಿಗ್ಗೆ ಬೇಗನೇ ಶಾಲೆಯ ಬಯಲಲ್ಲಿ ಸೇರುತ್ತಿದ್ದೆಂದರೆ ಈ ಗಣಪನ ಹಬ್ಬಕ್ಕೇ. ಊರ ದಕ್ಷಿಣಕ್ಕೆ,ಎತ್ತರದ ಸ್ಥಳದಲ್ಲಿ, ಉತ್ತರಕ್ಕೆ ಮುಖ ಮಾಡಿ ನಿಂತಿದ್ದ ನಾಲ್ಕು ಕೋಣೆಗಳ ಮುಂದೆ 6ಅಡಿ ವಾರಾಂಡ ಹೊಂದಿದ್ದ,ಮಂಗಳೂರು ಹೆಂಚಿನ ಮಾಳಿಗೆಯ ಕಲ್ಲಿನ ಕಟ್ಟಡ ನನ್ನ ಶಾಲೆ. ಮುಂದಿನ ವಿಶಾಲ ಬಯಲು, ಇಡೀ ತಾಲೂಕಲ್ಲೇ ಯಾವ ಶಾಲೆಗೂ ಇರಲಿಲ್ಲ. ಊರಿಂದ ಹೊರಗೇ ಎನ್ನುವಷ್ಟು ದೂರದಲ್ಲಿತ್ತು. ಹೂ,ಎಣ್ಣೆ ಬತ್ತಿ,ದೀಪ ಹಿಡಿದು ಹುಡುಗಿಯರು ಬಂದರೆ, ಹಾಸಲು ಜಮಖಾನ,ತೆಂಗಿನ ಗರಿ,ಜಾಗಟೆ,ಗಂಟೆ ಮುಂತಾದುವುಗಳನ್ನು ಹೊತ್ತು ಹುಡುಗರು ಬರುತ್ತಿದ್ದರು. ಸಯ್ಯದ್ ಮೇಷ್ಟ್ರು ಆಗಲೇ ಇರುತ್ತಿದ್ದರು. ಗಾಂಧೀಜಿ, ನೆಹರು ಫೋಟೋಗಳ ಜೊತೆ ಲಕ್ಷ್ಮಿ,ಗಣಪ ಸರಸ್ವತಿಯರು ಇದ್ದ ಒಂದು ಫೋಟೋವನ್ನು ಬೀರುವಿನಿಂದ ತೆಗೆದು ಕೊಡುತ್ತಿದ್ದರು.
ರೇವಣ ಸಿದ್ದಯ್ಯ,ದ್ಯಾಮಣ್ಣ,ಶಾಮಸುಂದರ್ ರಾವ್,ಅಗ್ರಹಾರದ ಶರಣಪ್ಪ,ರಾಮದುರ್ಗದ ಕೃಷ್ಣಮೂರ್ತಿ, ಶೆಲಿಯಪ್ಪನ ಹಳ್ಳಿಯ ಷಣ್ಮುಖಪ್ಪ ಮಾಸ್ಟರ್ ಗಳ ವೃಂದ ಒಬ್ಬೊಬ್ಬರಾಗಿ ಬರುತ್ತಿದ್ದರು. ಅಕ್ಕ ಪಕ್ಕದ 2,3 ಕಿ.ಮೀ ದೂರದ ಹಳ್ಳಿಗಳಿಂದ ನಮ್ಮ ಗೆಳೆಯರೂ ಬರುತ್ತಿದ್ದರು. ಬೆಳಗಿನ 9 ಘಂಟೆಗೆಲ್ಲ ಗಣಪನ ಹಬ್ಬದ ಸಡಗರ ಶಾಲೆಯ ಆವರಣದ ತುಂಬಾ ಪಸರಿಸುತ್ತಿತ್ತು.
ಒಗೆದ,ಶುಭ್ರಗೊಂಡ ಬಟ್ಟೆಗಳನ್ನು ಹಾಕಿಕೊಂಡು,ಢಾಳಾಕಾರವಾಗಿ ಕೊಬ್ಬರಿ ಎಣ್ಣೆ ತಲೆಗೆ ಹಚ್ಚಿ ಬಾಚಿದ ತಲೆಗಳೊಂದಿಗೆ ಎಲ್ಲರೂ ಗಣಪನ ಪೀಠದ ಮುಂದೆ ನೆರೆದಿರುತ್ತಿದ್ದೆವು. ನಮ್ಮ ಗೆಳೆಯನೇ ಆದ ಗರಗದ ರಾಮಾಚಾರಿ ಮೊಮ್ಮಗ ಗುರುರಾಜ ಆಗತಾನೇ ಮುಂಜಿ ಮಾಡಿಸಿಕೊಂಡು ಮುಖಕ್ಕೆಲ್ಲ ಮುದ್ರೆ ಹೊತ್ತಿಸಿಕೊಂಡು, ಬರೀ ಮೈಯಲ್ಲಿ ಗಣಪನನ್ನು ಸಿಂಗರಿಸುತ್ತ ಹತ್ತಿರ ಕೂತಿರುತ್ತಿದ್ದ. ಏನೇನೋ ಮಂತ್ರ ಹೇಳ್ತಿದ್ದ, ಶುಕ್ಲಾಮ್ ಭರಧರಮ್ ಬಿಟ್ಟು ಬೇರೆ ನಮಗೆ ಅರ್ಥ ಆಗ್ತಿರಲಿಲ್ಲ.
ಕರ್ಪೂರ,ಊದಿನಕಡ್ಡಿ ಪರಿಮಳಗಳೊಂದಿಗೆ ತುಂಬಿದ್ದ ಆ ಕೊಠಡಿ ನಮಗೆ ದೇವಸ್ಥಾನವಾಗಿ ಕಾಣುತ್ತಿತ್ತು. ಬುಡ್ಡೆನಹಳ್ಳಿ ಪಾಂಡು,ಪೂಜಾರಿ ಕಿಟ್ಟ ನಮ್ಮ ಜೊತೆಯ ಸೊಗಸಾದ ಹಾಡುಗಾರರು ಆಗ. ….ಪಾರ್ವತಿ ಮಾತೆಯ ಮಗನಾಗಿ ಜನಿಸಿದ ಗಣಪತಿ…….ಅಂತ ಹಾಡಿನ ಜೊತೆ ಇನ್ನೂ ಮೂರ್ನಾಲ್ಕು ಗಣಪನ ಹಾಡುಗಳನ್ನು ತಯಾರು ಮಾಡಿಕೊಂಡು ಬಂದು ಹಾಡುತ್ತಿದ್ದರು. ಗುರು ಮಂತ್ರ ಜೋರಾಗಿ ಹೇಳಿದನೆಂದ್ರೆ, ಜಾಗಟೆ,ಶಂಖ ರೆಡಿಮಾಡಿಕೊಂಡ ತಂಡ ಜೋರಾಗಿ ಜಾಗಟೆ ಬಾರಿಸಿ,ಶಂಖ ಊದುತ್ತಿದ್ದರು. ಕಿಟ್ಟ ಇದರ ಉಸ್ತುವಾರಿ. ಎಲ್ಲರೂ…ಬೆನಕ,ಬೆನಕ ಏಕದಂತ ಪಚ್ಛೆಕಲ್ಲು ಪಾಣಿಪೀಠ….ಅಂತ ಶುರುಮಾಡಿ…… ಒಪ್ಪಿದ ವಿಘ್ನೇಶ್ವರನಿಗೆ ಇಪ್ಪತ್ತೊಂದು ನಮಸ್ಕಾರಗಳು ಅಂತ ಕಿವಿ ಹಿಡಿದುಕೊಂಡು ಮೇಲೆ,ಕೆಳಗೆ ಕುಳಿತು ಎದ್ದೆವೆಂದರೆ ಗಣಪನ ಶಾಲೆಯ ಪೂಜೆ ಮುಗಿತು. ಒಡೆದ ತೆಂಗಿನಕಾಯಿಗಳ ಕೊಬ್ಬರಿಯನ್ನು ಸಣ್ಣ ಸಣ್ಣ ಚೂರು ಮಾಡಿ,ಬೆಲ್ಲದ ಚೂರಿನೊಂದಿಗೆ ಮಂಡಕ್ಕಿಗೆ ಬೆರೆಸಿ, ಅದನ್ನು ಎಲ್ಲರಿಗೂ ಪ್ರಸಾದ ಅಂತ ಶಾಮಸುಂದರ್ ಮೇಷ್ಟ್ರು ಕೊಡ್ತಿದ್ದರು.
ತಿಂದು ಬಯಲಿಗೆ ಬಂದರೆ ದಿನ ಇಡೀ ಕಬ್ಬಡ್ಡಿ,ಖೊಖೊ, ಮೂರುಕಾಲಿನ ಓಟ, ಚಮಚದಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ಓಡುವುದು, ಸೂಜಿಗೆ ದಾರ ಪೋಣಿಸುವುದು ಹೀಗೆ ವಿಧ,ವಿಧ ಆಟಗಳು. ಅಗ್ರಹಾರದ ಶರಣಪ್ಪ ಮೇಷ್ಟ್ರ ಫೈನಲ್ ಗೆ ಬಂದ ತಂಡಗಳ ಕಬ್ಬಡ್ಡಿ ಆಡಿಸುವುದಂತೂ ನಮಗೆ ವರ್ಲ್ಡ್ ಕಪ್. ಒಬ್ಬೊಬ್ಬ ಮೇಷ್ಟ್ರು ಒಂದೊಂದು ಆಟ ಆಡಿಸಿ,ಗೆದ್ದವರ ಹೆಸರು ಬರೆದುಕೊಳ್ಳುತ್ತಿದ್ದರು. ಅದರಲ್ಲೇ ಶಾಲೆಯ ಚಾಂಪಿಯನ್ನಗಳೂ ಇರುತ್ತಿದ್ದರು!
ಕೂಡ್ಲಿಗಿ ಬಸ್ ಡಿಪೋದ ಗಣಪತಿ ಸುತ್ತ ಭಾರೀ ಪ್ರಸಿದ್ಧಿ. ಅವತ್ತು ಊರಿಗೆ ಬಸ್ಸುಗಳು ಬರ್ತಿರಲಿಲ್ಲ. ಸಾಯಂಕಾಲ ನಾವೇ ಎಂಟತ್ತು ಹುಡುಗರು ಗುಂಪು ಮಾಡಿಕೊಂಡು ಯಾವ್ಯಾವ ಮನೆಗಳಲ್ಲಿ ಗಣಪ ಇರುತ್ತಿದ್ದನೋ ಅಲ್ಲೆಲ್ಲಾ ಹೋಗಿ, ಸಾಲಾಗಿ ನಿಂತುಕೊಂಡು ಮೂರ್ನಾಲ್ಕು ಗಣಪನ ಹಾಡು ಹಾಡಿ ಮತ್ತೆ ಇಪ್ಪತ್ತೊಂದು ನಮಸ್ಕಾರ ಹಾಕಿ ಬರೋದು. ಹಾಗೆ ಪ್ರತೀ ಗಣಪನ ಮುಂದೆ ಹಾಕಿದ ನಮಸ್ಕಾರಗಳಿಗೆ ಲೆಕ್ಕವೇ ಇಲ್ಲ. ಕೆಲವು ಅವತ್ತೇ ಕೆರೆ ಸೇರುವ ಗಣಪಗಳಿದ್ದರೆ,ಅವುಗಳಿಗೆ ಮೊದಲೇ ನಮಸ್ಕಾರ. ಮೂರು ದಿನಕ್ಕೆ ಹೋಗುವ ಗಣಪಗಳಿಗೆ ನಾಳೆ ಹೋಗುವ ಅಂದು ಕೊಳ್ಳುತ್ತಿದ್ದೆವು.
ಪೂಲೆಪ್ಪ ಶೆಟ್ಟಿ ಹೋಟೆಲಿನ ಗಣಪನದ್ದೇ ಒಂದು ಸ್ಪೆಷಲ್ ಏನಂದ್ರೆ, ಗಣಪ ಒಂದು ವರ್ಷ ಪೂರ್ತಿ ಹೋಟಲ್ ನಲ್ಲಿ ಇರ್ತಿದ್ದ. ಹೋದ ವರ್ಷದ ಹಳೆಯ ಗಣಪನನ್ನು ಈ ವರ್ಷ ಕೆರೆಗೆ ಹಾಕುವುದು. ಅಲ್ಲದೆ ವರ್ಷ ಇಡೀ ಶುಕ್ರವಾರಗಳ ಸಾಯಂಕಾಲ ಮಂಡಕ್ಕಿ ಬೆಲ್ಲ ಹಂಚುತ್ತಿದ್ದರು,ಹುಡುಗರಿಗೆ.
ಕತ್ತಲಾಗುವುದರೊಳಗೆ ಮನೆಯಲ್ಲಿರಬೇಕು, ಯಾರೂ ಚಂದ್ರನನ್ನು ನೋಡಬಾರದು ಇವತ್ತು ಅಂತ ಅಮ್ಮ,ಅಪ್ಪ ಹೇಳಿದ್ದ ಮಾತುಗಳು ನೆನಪಿಗೆ ಬಂದು, ಸ್ವಲ್ಪ ಕತ್ತಲಾದರೂ ತಲೆತಗ್ಗಿಸಿಕೊಂಡು,ಅಪ್ಪಿ ತಪ್ಪಿಯೂ ಆಕಾಶದ ಕಡೆ,ಚಂದ್ರನ ಕಡೆ ನೋಡ್ತಿರಲಿಲ್ಲ. ಅಪ್ಪನ ಶಮಂತಕೋಪಾಖ್ಯಾನ ಕಥೆಯಲ್ಲಿ ಹೊಟ್ಟೆತುಂಬಾ ಕಡಬು ತಿಂದು,ಹೊಟ್ಟೆ ಹೊಡೆದು,ಸಿಕ್ಕ ಹಾವನ್ನು ಹೊಟ್ಟೆಗೆ ಸುತ್ತಿಕೊಂಡ ಗಣಪನನ್ನು ನೆನೆಸಿಕೊಂಡು ನಗುವುದೇ ನಗುವುದು. ಸಿಟ್ಟಾದ ಗಣಪ,ಅವನ ಅವಸ್ಥೆ ನೋಡಿ ನಕ್ಕ ಚಂದ್ರನನ್ನು ಶಪಿಸಿದ್ದು ಕೇಳಿ ಗಂಭೀರವಾಗುವುದು. ಜೊತೆಗೆ ಅಪ್ಪ ಗಣಪನಿಗೆ ಮದುವೆ ಏಕೆ ಆಗಲಿಲ್ಲ ಅಂತ ಕಥೆ ಹೇಳ್ತಿದ್ದರು.
ಕೃಷ್ಣ, ಕರಡಿ (ಜಾಂಬವಂತ) ಯುದ್ಧ ಮಾಡೋದು, ಸೋಲದೆ ಹೋದಾಗ,ಕೃಷ್ಣ ರಾಮನಾಗಿ ತೋರೋದು,ಜಾಂಬವತಿಯನ್ನು ಕೃಷ್ಣ ಮದುವೆ ಆಗೋದು,ಮತ್ತೆ ಶಮಂತಕ ಮಣಿ ಸಿಕ್ಕಾಗ ಆಗ್ತಿದ್ದ ಖುಷಿ ಎಲ್ಲಾ ಕೇಳಿ ನಾವು ದ್ವಾಪರ,ತೇತ್ರಾಯುಗಕ್ಕೆ ಹೋಗಿಬಿಟ್ಟಿರುತ್ತಿದ್ದೆವು.
ಮೂರ್ನಾಲ್ಕು ದಿನ ಗಣಪನ ಕಥೆ ಶಾಲೆ,ಮನೆಗಳಲ್ಲಿ ಕೇಳ್ತಿದ್ದರೆ,ಈ ಶಿವನಿಗೆ ಯಾಕೆ ಅಷ್ಟು ಸಿಟ್ಟು ಬರಬೇಕು ಮಗನ ಮೇಲೆ ಅಂತ ಅನ್ನಿಸುತ್ತಿತ್ತು. ಆದರೆ ನಮ್ಮ ಅಜ್ಜಿ ಬೇರೆಯದೇ ಕಥೆ ಹೇಳುತ್ತಿದ್ದರು. ಭೂಮಿ ಗೌರಮ್ಮನ ತವರು ಮನೆ. ಗೌರಮ್ಮ ತವರು ಮನೆಗೆ ಬಂದಿರ್ತಾಳೆ, ಮಗ ಗಣಪ ಅಮ್ಮನನ್ನು ಕರೆದುಕೊಂಡು ಕೈಲಾಸಕ್ಕೆ ಹೋಗಲು ಭೂಮಿಗೆ ಬರ್ತಾನೆ. ಹಾಗೆ ಬಂದವನು ಭೂಮಿಯ ಮೇಲೆ ಮಳೆ,ಬೆಳೆ,ಹಸಿರು ನೋಡಿ ತನ್ನ ಅಪ್ಪನಿಗೆ ವರದಿ ಒಪ್ಪಿಸುತ್ತಾನೆ….ಅಂತ…ಎಳೆ ಮೆದುಳಿಗೆ ಇಂತಹ ಕಥೆಗಳು ನಾಟಿ, ಶಿವ, ಗೌರಿ,ಗಣಪ ಎಲ್ಲ ನಮ್ಮ ಪಕ್ಕದ ಮನೆಯವರೇ ಎನ್ನುವಂತಹ ಕಲ್ಪನೆ,ಸಮಾಧಾನ, ಮುದ ನೀಡುತ್ತಿತ್ತು.
ನಮ್ಮೂರಲ್ಲಿ ಆಗ ಸಾಮೂಹಿಕ ಗಣಪ ಇರಲಿಲ್ಲ. ಪೆಂಡಾಲ್,ಆರ್ಕೆಸ್ತ್ರಾ ಇಲ್ಲ. ಆದರೂ ಗಣಪನ ಹಬ್ಬ ನಮಗೆ ಅಳಿಯದ ನೆನಪುಗಳಲ್ಲಿ ಸೇರಿದೆ. ತುಂಬಾ ಸಂಭ್ರಮದಿಂದ ಮಾಡಿದ್ದೆವು ಅಂತ ಅನ್ನಿಸ್ತಿದೆ.
ಒಂದು ಇಂಥ ಗಣಪತಿ ಹಬ್ಬ ಮುಗಿಸಿ, ಸಡಗರದಿಂದ ಗಣಪನನ್ನು ನಮ್ಮೂರ ಕೆರೆಯ ನೀರಲ್ಲಿ …ಈ ವರ್ಷ ಹೋಗಯ್ಯ…ಬರೋ ವರ್ಷ ಬಾರಯ್ಯ…..ಚಿಕ್ಕೆರೆಗೆ ಎದ್ದ,…ಹಿರೇಕೆರೆಗೆ ಬಿದ್ದ….ಅಂತ ಮುಳುಗಿಸಿ ಶಾಲೆಗೆ ಬಂದಾಗ, ಸಯ್ಯದ್ ಮೇಷ್ಟ್ರು ಎಲ್ಲರಿಗೂ ಪೆಪ್ಪರಮೆಂಟ್ ಕೊಟ್ಟು, ಸುತ್ತಲೂ ಕರೆದುಕೊಂಡು ಎಲ್ಲರ ತಲೆಮೇಲೆ ಕೈ ಆಡಿಸುತ್ತಾ,ಕಣ್ಣಲ್ಲಿ ನೀರು ತಂದುಕೊಂಡು, ನಾಳೆಯಿಂದ ನಾನು ಶಾಲೆಗೆ ಬರಲ್ಲ,ಹೋಗ್ತಿದ್ದೇನೆ ಅಂತ ಭಾವಪರವಶರಾಗಿದ್ದರು. ರೈಲ್ವೇ ಇಲಾಖೆಯಲ್ಲಿ ಅವರಿಗೆ ನೌಕರಿ ಸಿಕ್ಕು, ಗುಂತಕಲ್ಲಿಗೆ ಹೋದರು. ಅವತ್ತೇ ಕೊನೆ ಮತ್ತೆ ನನಗೆ ಅವರನ್ನು ನೋಡುವ ಭಾಗ್ಯ ಸಿಕ್ಕಿಲ್ಲ.
ಅವರ ಜಾಗಕ್ಕೆ ಹರಪನಹಳ್ಳಿಯಿಂದ ನಾಗಭೂಷಣ್ ನಮ್ಮೂರ ಶಾಲೆಗೆ Graduate Head Master ಆಗಿ ಬಂದಿದ್ದರು. ಸದ್ದಿಲ್ಲದೆ ಜರುಗುತ್ತಿರುವ ಈ ವರ್ಷದ ಕರೊನಾ ನನ್ನ ಬಾಲ್ಯದ ಸದ್ದಿಲ್ಲದ ಗಣಪನನ್ನು ನೆನಪಿಗೆ ತಂದ. ಅಷ್ಟೇ ಅಲ್ಲ,ಇಂತಹ ಒಂದು ಗಣಪತಿ ಹಬ್ಬದಂದೇ ಗೌರಿಪುರ ಶಾಲೆಯ ಗಣಪತಿ ಮುಂದೆ ನನಗೆ ಅಪ್ಪ ತನ್ನ ತೊಡೆಯ ಮೇಲೆ ಕೂಡಿಸಿಕೊಂಡು ಪ್ರಥಮವಾಗಿ ಅಕ್ಷರ ಅಭ್ಯಾಸ ಮಾಡಿಸಿದ್ದರಂತೆ.
ಇಂದು ಎಲ್ಲೆಡೆ ಗಣಪತಿ ಹಬ್ಬದ ಸಂಭ್ರಮ. ನಿಮ್ಮ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಈ ಪಾಡ್ಕಾಸ್ಟ್ ಅನ್ನು ಸಾದರ ಪಡಿಸುತ್ತಿದ್ದೇವೆ. ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಕನ್ನಡತಿ ಶ್ರುತಿ ಕೋಡನಾಡ್ ಅವರು ತಮ್ಮ ಸುಮಧುರ ಗಾಯನದಲ್ಲಿ ಗಣೇಶ ಭಕ್ತಿ ಸಂಗೀತವನ್ನು ಇಲ್ಲಿ ಪ್ರಸ್ತುತ ಪಡಿಸಿದ್ದಾರೆ.
ಮೂಲತಃ ಚಿತ್ರದುರ್ಗದವರಾದ ಶ್ರುತಿ ಕೋಡನಾಡ್ ರವರು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಗಮಕ ಕಲೆಯನ್ನು ಗಮಕ ಕಲಾನಿಧಿ ಶ್ರೀಮತಿ ಚಂಪಕಾ ಶ್ರೀಧರ್ ಇವರಲ್ಲಿ ಅಭ್ಯಾಸ ಮಾಡಿದ್ದಾರೆ.ಚಿಕ್ಕವಯಸ್ಸಿನಲ್ಲೇ ತಮ್ಮ ತಾಯಿ ಗಮಕಿ ಶ್ರೀಮತಿ ಮಂಜುಳಾ ದತ್ತಾತ್ರೇಯ ಅವರಿಂದ ಗಮಕ ಕಲೆಗೆ ಪರಿಚಿತರಾಗಿರುತ್ತಾರೆ.
ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಹಲವಾರು ಗಮಕ ವಾಚನ ಹಾಗೂ ರೂಪಕ ಕಾರ್ಯಕ್ರಮಗಳನ್ನು ನೀಡಿದ್ದು, ಪ್ರಮುಖವಾಗಿ ಹೊಸಳ್ಳಿಯಲ್ಲಿ ಗಮಕ ಗಂಧರ್ವ ಶ್ರೀ ಕೇಶವಮೂರ್ತಿರವರ ಸಮ್ಮುಖದಲ್ಲಿ ಗಮಕ ವಾಚನ ಮತ್ತು ೯ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನ(೨೦೧೩)ರಲ್ಲಿ ‘ಕುವೆಂಪು ರಾಮಾಯಣದರ್ಶನಂ’ ಗಮಕ ರೂಪಕದಲ್ಲಿ ಭಾಗವಹಿಸಿರುತ್ತಾರೆ.
ಹಲವೆಡೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ ಮತ್ತು ಆಕಾಶವಾಣಿಯಲ್ಲೂ ಹಾಡಿರುತ್ತಾರೆ.ಇವರು ವೃತ್ತಿಯಲ್ಲಿ ವಸ್ತ್ರ ವಿನ್ಯಾಸಕಿಯಾಗಿದ್ದು ನೃತ್ಯ, ನಾಟಕ, ಕರಕುಶಲ ಕಲೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ.
ಪ್ರಸ್ತುತ ಶ್ರುತಿಯವರು ತಮ್ಮ ಪತಿ ಅಂಜನ್ ರಾಘವೇಂದ್ರ ಅವರೊಂದಿಗೆ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದು ಅಲ್ಲಿನ ಕನ್ನಡ ಸಂಘ ಹಾಗೂ ವಿವಿಧ ಸಂಸ್ಥೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ನಮ್ಮ ದೇಶದಲ್ಲಿ ಗಣಪತಿಯ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಕಾಡು ಪ್ರಾಣಿಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತರು ಆನೆಯ ಮುಖವುಳ್ಳ ದೇವನನ್ನು ಪೂಜಿಸಿದರೆ, ಗೋದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳನ್ನೂ ಪೂಜಿಸಿ ಇಬ್ಬರನ್ನೂ ಸಮಾಧಾನಿಸುವುದೂ ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು.
ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಗಣೇಶನನ್ನು ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು.
ಚೌತಿ ಗಣೇಶನನ್ನು ನಿತ್ಯ ಪೂಜೆ ಮಾಡಿ ೧೦ನೆಯ ದಿನ ಅಂದರೆ ಅನಂತ ಚತುರ್ದಶಿಯ ದಿನದಂದು ವಿಸರ್ಜನೆ ಮಾಡುವರು. ದಕ್ಷಿಣ ಭಾರತದಲ್ಲಿ ಮನೆ ಮನೆಗಳಲ್ಲಿ ಗಣಪತಿಯ ಮೂರ್ತಿಗೆ ಪೂಜಿಸಿದರೆ, ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ.
ಇನ್ನು ಚೌತಿ ಹಬ್ಬದಂದು ಗಣೇಶನಿಗೆ ಪ್ರಿಯವಾದ ಮೋದಕ / ಕಡುಬು ತಯಾರಿಸಿ ನೈವೇದ್ಯ ಅರ್ಪಿಸಿದರೇನೇ ಹಬ್ಬ ಪರಿಪೂರ್ಣವಾಗುವುದು ಎಂಬ ನಂಬಿಕೆಯಿದೆ. ಮೋದಕ ಪ್ರಿಯ ನಮ್ಮ ಗಣೇಶ.ಅಂಥ ಕೆಲವು ಮೋದಕಗಳ ಪರಿಚಯ ಇಲ್ಲಿದೆ.
1. ಕಡುಬು/ ಮೋದಕ – ಎಣ್ಣೆಯಲ್ಲಿ ಕರಿಯುವ ವಿಧಾನ
ಬೇಕಾಗುವ ಪದಾರ್ಥಗಳು:ಮೈದಾ ಹಿಟ್ಟು/ಗೋಧಿ ಹಿಟ್ಟು 2 ಬಟ್ಟಲು 2 ದೊಡ್ಡ ಚಮಚ ಚಿರೋಟಿ ರವೆ ಬೆಲ್ಲ 1 ಬಟ್ಟಲು ತುರಿದ ಕೊಬ್ಬರಿ 1 ಬಟ್ಟಲು ಏಲಕ್ಕಿ ಪುಡಿ ಸ್ವಲ್ಪ ಎಣ್ಣೆ
ಹೂರಣ: ಮೊದಲಿಗೆ ಪುಡಿ ಮಾಡಿದ ಬೆಲ್ಲ , ಏಲಕ್ಕಿ ಮತ್ತು ತುರಿದ ಹಸಿ ಕೊಬ್ಬರಿಯನ್ನು ಒಟ್ಟಿಗೆ ಸೇರಿಸಿ ಬಾಣಲೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡುತ್ತಾ ಸೌಟ್ ನಿಂದ ಕೈಆಡಿಸುತ್ತಿರಬೀಕು. ಬೆಲ್ಲ ಕಾದು ನೀರಾಗಿ ನಂತರ ಗಟ್ಟಿಯಾಗಿ ಬೆಲ್ಲ ಮತ್ತು ಕೊಬ್ಬರಿಯ ಹೂರಣ ರೆಡಿಯಾಗುತ್ತದೆ.
ಕಣಕ: ಮೈದಾ /ಗೋಧಿ , ಚಿರೋಟಿ ರವೆ ಜೊತೆ ಸೇರಿಸಿ ಸ್ವಲ್ಪ ಗಟ್ಟಿಯಿರುವಂತೆ ಎಣ್ಣೆ ಮತ್ತು ನೀರಿನೊಡನೆ ನಾದಿಕೊಳ್ಳಬೇಕು. ಕಲೆಸಿದ ಹಿಟ್ಟು ಚಪಾತಿ ಹಿಟ್ಟಿನಷ್ಟು ಗಟ್ಟಿಯಾಗಿರಬೇಕು.
ಈಗ, ಹಿಟ್ಟನ್ನು ಒಂದು ಉಂಡೆಯಷ್ಟು ತೆಗೆದುಕೊಂಡು ಪೂರಿಯ ಗಾತ್ರದಲ್ಲಿ ಲಟ್ಟಿಸಿ ಅದರಲ್ಲಿ ಸ್ವಲ್ಪ ಬೆಲ್ಲ ಕೊಬ್ಬರಿ ಹೂರಣವನ್ನು ತುಂಬಿ ಅದರ ಮೇಲ್ತುದಿಯನ್ನು ಮುಚ್ಚಬೇಕು. (ಮೋದಕ ನೋಡಲು ಬೆಳ್ಳುಳ್ಳಿಯ ಆಕಾರದಲ್ಲಿರುವಂತೆ ತುದಿಯನ್ನು ಮುಚ್ಚಿ).
ಈ ರೀತಿ ಮೋದಕಗಳನ್ನು ರೆಡಿಯಾಗಿಟ್ಟುಕೊಂಡು ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿಯಿರಿ.
ಅದೇ ಹಿಟ್ಟನ್ನು ಹಪ್ಪಳದಂತೆ ಲಟ್ಟಿಸಿ ಹೂರಣವನ್ನು ಅದರಲ್ಲಿ ಇಟ್ಟು ಎರಡೂ ತುದಿಯನ್ನು ಅಂಟಿಸಿ ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿಯಿರಿ. ಅದು ಕಡುಬು.
2. ಆವಿಯಲ್ಲಿ ಬೇಯಿಸಿ ಮಾಡುವ ಮೋದಕ/ ಕುಚ್ಚಿದ ಕಡುಬು.
ಬೇಕಾಗುವ ಪದಾರ್ಥಗಳು:
ಕಣಕ:ಒಂದು ಕಪ್ ಅಕ್ಕಿ ಹಿಟ್ಟು ಒಂದೂವರೆಯಿಂದ ಎರಡು ಕಪ್ಪು ನೀರು ಚಿಟಿಕೆ ಉಪ್ಪು, ಎಣ್ಣೆ.
ಮಾಡುವ ವಿಧಾನ :ಒಂದು ಬಾಣಲೆಯಲ್ಲಿ ನೀರು ಅರ್ಧ ಟೀ ಸ್ಪೂನ್ ಎಣ್ಣೆ ಮತ್ತು ಉಪ್ಪು ಹಾಕಿ ಕುದಿಯಲು ಇಡಿ. ನೀರು ಕುದಿಯಲು ಪ್ರಾರಂಭಿಸಿದ ನಂತರ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ. ಅಕ್ಕಿಹಿಟ್ಟು ಬಿಸಿಯಾಗಿರುತ್ತದೆ. ಆರಿದ ನಂತರ ಚೆನ್ನಾಗಿ ನಾದಿ ಒಂದು ನಿಂಬೆ ಗಾತ್ರದ ಹಿಟ್ಟು ತೆಗೆದುಕೊಂಡು ಹಪ್ಪಳದ ಗಾತ್ರ ಲಟ್ಟಿಸಿ ಕಾಯಿ ಹೂರಣ ಇಟ್ಟು ಎರಡೂ ತುದಿ ಅಂಟಿಸಿ ಕಡುಬು ಮಾಡಿ.
ಹಿಟ್ಟನ್ನು ಒಂದು ಉಂಡೆಯಷ್ಟು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಬೆಲ್ಲ ಕೊಬ್ಬರಿ ಹೂರಣವನ್ನು ತುಂಬಿ ಅದರ ಮೇಲ್ತುದಿಯನ್ನು ಮುಚ್ಚಬೇಕು. ಮೋದಕ ನೋಡಲು ಬೆಳ್ಳುಳ್ಳಿಯ ಆಕಾರದಲ್ಲಿರುವಂತೆ ತುದಿಯನ್ನು ಮುಚ್ಚಿ.
ಈಗ ಕಡುಬು ಮತ್ತು ಮೋದಕವನ್ನು ಆವಿಯಲ್ಲಿ ಬೇಯಿಸಿ.
3 ಕರ್ಜಿಕಾಯಿ
ಒಣ ಕೊಬ್ಬರಿ ತುರಿ, ಬೆಲ್ಲ, ಏಲಕ್ಕಿ, ಬಿಳಿ ಎಳ್ಳು, ಗಸಗಸೆ ಸೇರಿಸಿ ಪುಡಿ ಮಾಡಿ ಕಲೆಸಿ ಹೂರಣ ಕಲೆಸಿಕೊಂಡು ಮೈದಾ, ರವೆಯ ಕಣಕದಲ್ಲಿಟ್ಟು ಕಡುಬು ಎಣ್ಣೆಯಲ್ಲಿ ಕರಿಯುವುದು.
4 ಖಾರದ ಕಡುಬು
ಬೇಳೆಗಳನ್ನು ನೆನೆಸಿ ರುಬ್ಬಿ ಉಪ್ಪು ಖಾರ ಹಾಕಿ ಅಕ್ಕಿಹಿಟ್ಟಿನ ಕಣಕದಲ್ಲಿಟ್ಟು ಬೇಯಿಸುವುದು.
ಅರಿಶಿನ ಎಲೆಯಲ್ಲಿ ಇಟ್ಟು ಕುಚ್ಚಿದ ಕಡುಬು ಮಾಡಿದರೆ ಅದರ ಘಮವೇ ಬೇರೆ.
5ಅಕ್ಕಿತರಿ ಕಡುಬು
ಇದು ಮಲೆನಾಡ ಅಡಿಗೆ. ಆವಿಯಲ್ಲಿ ಬೇಯಿಸುವ ಈ ಕಡುಬುಗಳು ರುಚಿಕರ ಹಾಗೂ ಆರೋಗ್ಯಕರ. ಅಕ್ಕಿತರಿ ಉಪಯೋಗಿಸಿ ಮಾಡುತ್ತಾರೆ.
6 ಹಲಸಿನ ಹಣ್ಣಿನ ಕಡುಬು
ಮಳೆಗಾಲದಲ್ಲಿ ಮಲೆನಾಡಿನಲ್ಲಿ ಹಲಸಿನ ಮೇಳ ನಡೆಯುತ್ತದೆ . ಈ ಹಣ್ಣಿನಲ್ಲಿ ತರತರದ ಖಾದ್ಯಗಳನ್ನು ಮಾಡುತ್ತಾರೆ . ಅದರಲ್ಲಿ ಹಲಸಿನ ಇಡ್ಲಿ ಅಥವಾ ಕಡುಬು ಕೂಡ ಒಂದು.
7 ಕುಂಬಳ ಕಾಯಿ ಕಡುಬು
ಸಿಹಿ ಕುಂಬಳಕಾಯಿ ಹಾಕಿ ಮಾಡುತ್ತಾರೆ. ಇದು ತುಂಬ ಆರೋಗ್ಯಕರವಾದದ್ದು.
8ಕೊಟ್ಟೆ ಕಡುಬು
ಹಲಸಿನ ಅಥವಾ ಬಾಳೆ ಎಲೆಗಳಲ್ಲಿ ಕೊಟ್ಟೆ ಮಾಡಿ ಅದಕ್ಕೆ ಇಡ್ಲಿಹಿಟ್ಟು ಹಾಕಿ ಹಬೆಯಲ್ಲಿ ಬೇಯಿಸುವುದು.
ಒಟ್ಟಿನಲ್ಲಿ ಕಣಕ ಎರಡೆ. ಒಂದು ಅಕ್ಕಿ ಹಿಟ್ಟಿನದು ಇನ್ನೊಂದು ಗೋಧಿ/ ಮೈದಾಹಿಟ್ಟಿನದು. ಅದರೊಳಗಿನ ಹೂರಣ ಮಾತ್ರ ನಿಮ್ಮ ಇಚ್ಛೆಯಂತೆ ಬದಲಾಯಿಸಿ ಕೊಳ್ಳಬಹುದು.
ಈಗಿನ ಜನರೇಶನ್ ಮಕ್ಕಳಿಗೆ ಬೇಕಾದಲ್ಲಿ ನೀವು ಡ್ರೈಫ್ರೂಟ್ ಹೂರಣ ಮಾಡಿ ಮೋದಕ ತಯಾರಿಸಬಹುದು, ಕ್ಯಾರೆಟ್ ಹೂರಣ ಮಾಡಿ ಕಡುಬು , ಚಾಕೊಲೇಟ್ ಮೋದಕ, ರವೆ ಮೋದಕ ಹೀಗೆ ನಾನಾ ತರಹದ ಮೋದಕ, ಕಡುಬುಗಳನ್ನು ಮಾಡಿ ವಿಘ್ನರಾಜನಿಗೆ ನೈವೇದ್ಯಮಾಡಬಹುದು.
ಭಾರತ ದೇಶ ತನ್ನದೇ ಆದ ವೈವಿಧ್ಯತೆಗಳಿಂದ ದೊಡ್ಡ ರಾಷ್ಟ್ರವಾಗಿ ಮೆರೆಯುತ್ತಿದೆ. ಅದೇ ರೀತಿ ಅರಬ್ ಸಾಮ್ರಾಜ್ಯವೆಂದು ಪ್ರಸಿದ್ಧಿಯಾಗಿರುವ ಗಲ್ಫ್ ನಾಡು ತನ್ನದೇ ಆದ ವಿಶಿಷ್ಟತೆಗಳಿಂದ ಕೂಡಿದೆ.
ವಿಧವಿಧದ ರೆಂಬೆ-ಕೊಂಬೆಗಳಂತೆ ದುಬೈ,ಕತಾರ್, ಅಬು ದಾಬಿ, ಬೆಹರಿನ್,ಹೀಗೆ ಅನಂತ ದೇಶಗಳಿಂದ ಕೂಡಿದ ಒಂದು ಹೆಮ್ಮರ ಗಲ್ಫ್ ನಾಡು. ಈ ನಾಡಲ್ಲಿ ಅನೇಕ ಭಾರತೀಯರು ತಮ್ಮದೇ ಆದ ವೈಯಕ್ತಿಕ ಕಾರಣಗಳಿಂದ ವಾಸವಾಗಿ ಅನಿವಾಸಿ ಭಾರತೀಯರಾಗಿದ್ದಾರೆ. ಆದರೆ ಕುಟುಂಬ ಹಾಗೂ ತಮ್ಮ ದೇಶದಿಂದ ದೂರವಿದ್ದರೂ ತಮ್ಮ ದೇಶದ ಸಂಪ್ರದಾಯ ಹಬ್ಬ-ಹರಿದಿನಗಳನ್ನು ತಪ್ಪದೆ ಈ ನಾಡಲ್ಲೂ ಆಚರಿಸುವುದು ಒಂದು ಹೆಮ್ಮೆ ಹಾಗೂ ಹಾಗೂ ವಿಶಿಷ್ಟ.
ದುಬೈನಲ್ಲಿ ಎಷ್ಟೊ ಹಿಂದೂ ಭಾರತೀಯರು ಇಂಡಿಯನ್ ಕಮ್ಯುನಿಟಿ ತರಹ ಭಾರತದ ವಿವಿಧ ಭಾಗದ ಜನರು ಸೇರಿ ಸಂಘಗಳನ್ನು ಮಾಡಿಕೊಂಡಿದ್ದಾರೆ. ಅದರಲ್ಲಿ ಸದಸ್ದೆಯರಾಗಿ ಅದೆಷ್ಟೊ ಅಪರಿಚಿತ ಭಾರತೀಯರು ಸ್ನೇಹ ಬಾಂಧವ್ಯದ ಜೊತೆಗೆ ಪುಟ್ಟ ಕೌಟುಂಬಿಕ ಭಾವನೆಗಳೊಂದಿಗೆ ಹಬ್ಬ-ಹರಿದಿನಗಳನ್ನು ಸಂಭ್ರಮಿಸುತ್ತಾರೆ. ಬರ್ ದುಬಾಯಿ, ಮೀನಾ ಬಜಾರ್ ನಲ್ಲಿ ಪ್ರತಿ ವರ್ಷ ದೊಡ್ಡ ಗಣೇಶನ ಮೂರ್ತಿ ಇಟ್ಟು ಎಲ್ಲ ರೀತಿಯ ಸಂಪ್ರದಾಯ ಆಚಾರ ವಿಚಾರಗಳೊಂದಿಗೆ ಮೋದಕದ ಪ್ರಸಾದ ದೊಂದಿಗೆ ಐದು ದಿನ ಗಣೇಶ ಉತ್ಸವ ನಡೆಯುತ್ತದೆ.
ಮೀನಾ ಬಜಾರ್ ರಸ್ತೆಯಲ್ಲಿ ಎಷ್ಟೊ ವಿಧವಿಧದ ಗಣೇಶ ಮೂರ್ತಿಗಳು ಮಾರಾಟ ವಾಗುತ್ತವೆ. ಎಷ್ಟೋ ಜನರು ಭಾರತದಂತೆ ತಮ್ಮ ತಮ್ಮ ಮನೆಗಳಿಗೆ ಮೂರ್ತಿಗಳನ್ನು ಖರೀದಿಸಿ ಪೂಜೆ ಮಾಡಿ ಹಬ್ಬ ಆಚರಿಸುವರು. ಈ ದಿನಗಳಲ್ಲಿ ಹಬ್ಬದ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ತೊಟ್ಟು ಗಣೇಶನ ದರ್ಶನ ಮಾಡುತ್ತಾರೆ. ಸಂಜೆ ಭಜನೆ ಕೀರ್ತನೆಗಳು ನಮ್ಮ ದೇಶದ ಆಚರಣೆಗಳನ್ನು ನೆನಪಿಸುತ್ತವೆ. ಚಿಕ್ಕ ಪುಟ್ಟ ಮಕ್ಕಳಿಗೆ ತಮ್ಮ ಸಂಪ್ರದಾಯವನ್ನು ಪರಿಚಯಿಸಲು, ದೂರದಲ್ಲಿ ತಮ್ಮ ಕುಟುಂಬಸ್ಥರಿಂದ ದೂರವಿದ್ದು ಅವರನ್ನು ಮನದಲ್ಲಿ ನೆನೆಯುತ್ತಾ ಅಪರಿಚಿತರೊಂದಿಗೆ ಸ್ನೇಹದಿಂದ, ಭಕ್ತಿಭಾವನೆಗಳನ್ನು ಗಣೇಶನ ಪಾದಕ್ಕೆ ಇಟ್ಟು ಭಕ್ತಿಪೂರ್ವಕವಾಗಿ ನಮಿಸುತ್ತಾರೆ.
ಆದರೆ ಈ ವರ್ಷ ಕೊರೊನಾ ಕಾರಣದಿಂದಾಗಿ ಸಾರ್ವಜನಿಕವಾಗಿ ಮೂರ್ತಿಯನ್ನು ಪ್ರತಿಷ್ಠಾಪಿಸಿರುವುದಾದರೂ, ಹೆಚ್ಚಾಗಿ ಸಾಮೂಹಿಕ ಆಚರಣೆಗೆ ನಿರ್ಬಂಧ ಇರಲಿ ಎಂದು ಕಮ್ಯುನಿಟಿ ಅವರ ಅಭಿಪ್ರಾಯ ಹಾಗೂ ಮನವಿ. ಜನರು ಕೂಡ ತಮ್ಮ ತಮ್ಮ ಮನೆಗಳಲ್ಲಿ ಮಣ್ಣಿನ ಮೂರ್ತಿಗಳನ್ನು ಮಾಡಿ ಆಚರಿಸುವ ಮನೋಭಾವನೆಯಲ್ಲಿದ್ದಾರೆ.ಮಿಸ್ ಕಿಸ್ನಿ ದುಬೈವಾಸಿ, ಗಣೇಶ ಮೂರ್ತಿಗಳನ್ನು ಮಾಡಿ ಮಾರುವ ವ್ಯಾಪಾರಿ.ಒಂದು 15-50ಸೆಂಮಿ ಎತ್ತರದ ಮೂರ್ತಿಯನ್ನು ಮಾಡಲು 10ಕೆಜಿ ಮಣ್ಣನ್ನು ಬಳಸುವರು.ಅವರ ಪ್ರಕಾರ ಈ ಮೂರ್ತಿಯ ವಿಸರ್ಜನೆಗೆ 3-4ಗಂಟೆ ಸಾಕು ಹಾಗು ಮಣ್ಣಿನ ಪೋಷಕಾಂಶಗಳು ಸಸಿಗಳನ್ನು ಬೆಳೆಸಲು ಸಹಕಾರಿ. ಈ ಬಾರಿ ಹೆಚ್ಚಿನ ಜನರು ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ ಎಂಬುದು ಅವರ ಅನಿಸಿಕೆ.
ಒಟ್ಟಿನಲ್ಲಿ ಸಂದರ್ಭ ಹೇಗೆ ಇರಲಿ ಯಾವ ದೇಶದಲ್ಲೆ ಇರಲಿ,ಆಚರಣೆ ನಿಲ್ಲದೆ ನಿಜವಾದ ಸಂಪ್ರದಾಯಗಳೊಂದಿಗೆ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ವಿಧಿವಿಧಾನಗಳನ್ನು ಕೀರ್ತನೆಗಳನ್ನು ಭಾವದಿಂದ ಮಾಡುವುದು ಮುಖ್ಯ. ಆಡಂಬರ ತಾತ್ಕಾಲಿಕ ಖುಷಿಗಾದರೂ ಮೂಲ ಉದ್ದೇಶ ಮರೆಯಬಾರದು. ರಾಸಾಯನಿಕಯುಕ್ತ ಮೂರ್ತಿ ಪರಿಸರಕ್ಕೆ ಹಾನಿಕರ ಹಾಗೆ ವಿಸರ್ಜನೆಯಿಂದ ನೀರು ಕಲುಷಿತ. ಪಟಾಕಿ ಸಿಡಿಸುವುದು ವಾಯುಮಾಲಿನ್ಯಕ್ಕೆ ದಾರಿ. ದೇವರು ಪರಿಸರಕ್ಕೆ ಹಾನಿ ಮಾಡಿ ಪೂಜಿಸು ಎಂದು ಎಲ್ಲೂ ಹೇಳಿಲ್ಲ ಅಲ್ಲವೇ. ಹಾಗಾದರೆ ಜವಾಬ್ದಾರಿಯುತ ನಾಗರಿಕರಾಗಿ ನಮ್ಮ ಸಂಪ್ರದಾಯಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸೋಣ. ದುಬೈನಲ್ಲೇ ಇರಲಿ, ಅಮೆರಿಕದಲ್ಲಿ ಇರಲಿ, ಸ್ವದೇಶದಲ್ಲೇ ಇರಲಿ ಭಾರತೀಯರಾಗಿ ಇರೋಣ.
ಧಾರವಾಡದ ಮಮತಾ ಕುಲಕರ್ಣಿ ಓದಿದ್ದು ಸಿವಿಲ್ ಎಂಜಿನಿಯರಿಂಗ್. ಸಧ್ಯ ಇರುವುದುದುಬೈ. ಮೊದಲು ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಆಗಿ ವೃತ್ತಿಯಲ್ಲಿದ್ದು ಈಗ ಹೋಮ್ ಮೇಕರ್ .ಕವನ, ಸಾಹಿತ್ಯ ರಚನೆ ಹವ್ಯಾಸ . ಬರಹ ಕೌಶಲ್ಯವನ್ನು ಬೆಳೆಸಿಕೊಳ್ಳುವ ಆಸಕ್ತಿ. ಪತಿ ವಿಜಯ್ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.
‘ ಚಂದ್ರ ‘…… ಹುಣ್ಣಿಮೆಯಲ್ಲಿ ಆಗ ತಾನೇ ತುಪ್ಪದ ಕೈಯಿಂದ ಕಟ್ಟಿದ ರವೆ ಉಂಡೆಯಂತೆ. ಒಮ್ಮೆ ನಿಸರ್ಗವೇ ಅರ್ಧ ತಿಂದುಳಿಸಿದ ರಸಗುಲ್ಲದಂತೆ . ಮತ್ತೊಮ್ಮೆ ನೈಲ್ ಕಟ್ಟರಿನಿಂದ ಕತ್ತರಿಸಿದ ಉಗುರಿನ ಚೂರಿನ ಹಾಗೆ ಬಾನಿನಲ್ಲಿ ಕಾಣಸಿಗುತ್ತದೆ.
ಅಮ್ಮನ ತೋಳಿನಲ್ಲಿ ಇರುವ ಮುಗ್ಧ ಮಗುವಿಗೆ ಚೆಂದದ ಮಾಮನಾಗಿ ,ಪ್ರೇಮಿಗಳಿಗೆ ಸಾಕ್ಷಿಯಾಗಿ ,ಒಮ್ಮೊಮ್ಮೆ ಕತೆಯಾಗಿ ಕವನವಾಗಿ,ಗ್ರಹವಾಗಿ ಗ್ರಹಣವಾಗಿ , ಬೆಳದಿಂಗಳ ಆಸೆಯಾಗಿ ಅಮಾವಾಸ್ಯೆಯ ನಿರಾಸೆಯಾಗಿ,ಹಸೀ ಸುಳ್ಳಾಗಿ ನೈಜ ನಿಜವಾಗಿ , ಭಕ್ತಿಯಾಗಿ ಶಕ್ತಿಯಾಗಿ ,ನಂಬಿಕೆಯಾಗಿ ಮೂಢನಂಬಿಕೆಯಾಗಿ , ಹಬ್ಬವಾಗಿ ಹರಿದಿನವಾಗಿ, ಭಾಗಶಃ ಬದುಕಿನ ಭಾಗವಾಗಿ ಸದಾ ನಮ್ಮ ಜೊತೆಗಿರುತ್ತದೆ .
ಆಕಾಶದ ಇರುಳಿನ ತಂಪುಗ್ರಹ ಈ ಚಂದಮಾಮ . ಗ್ರಹಣಕ್ಕೊಳಗಾಗುವ ಕೆಲವೇ ಗ್ರಹಗಳಲ್ಲಿ ಚಂದ್ರ ಗ್ರಹವೂ ಒಂದು.ಅಮ್ಮನ ಬಾಯಿಂದ ಕಂದ ಕೇಳಿಸಿಕೊಳ್ಳುವ ಮೊದಲ ಸುಳ್ಳು…. ಇದನ್ನ ತಿಂದುಬಿಡು ನಿನಗೆ ಚಂದಮಾಮನ ಹತ್ರ ಕರ್ಕೊಂಡ್ ಹೊಗ್ತೀನಿ ಅಂತ . ಆಗಿನ ಪ್ರಿಯತಮ ತನ್ನ ಪ್ರೇಯಸಿಗೆ ಕೊಡುತ್ತಿದ್ದ ಹುಸಿ ಭರವಸೆ ನಿನಗೋಸ್ಕರ ಚಂದ್ರನ್ನ ಬೇಕಾದ್ರೂ ತಂದುಕೊಡ್ತೀನಿ ಅಂತ.
ಹಳೆಯ ಸಿನಿಮಾಗಳಲ್ಲಿ ನಾಯಕ ನಾಯಕಿ ಇಬ್ಬರೂ ತಮ್ಮ ಅದರಗಳನ್ನು ಹತ್ತಿರ ತರುತ್ತಿದ್ದಂತೆ ನಿರ್ದೇಶಕರು ಚಂದಿರನ ಷಾಟ್ ತೋರಿಸುತ್ತಿದ್ದರು……ಅದೊಂಥರ ಮೂನಿಂಗ್ ಫುಲ್ ಷಾಟ್ .ಮದುವೆಯಾದ ನೂತನ ಜೋಡಿಯ ಮೊದಲ ರಾತ್ರಿಯ ಹೆಸರೇ ಮಧುಚಂದ್ರ . ಬೆಲೆ ಕಟ್ಟಲಾಗದ ಬೆಳದಿಂಗಳ ಒಡೆಯ ಈ ಚಂದ್ರ . ಬಾಲಕನೊಬ್ಬ ಮೊದಲು ಬಿಡಿಸಿದ ಚಿತ್ರದಲ್ಲಿ ಕಾಣುವ ಕಲಾಕೃತಿ ಈ ಚಂದ್ರ . ಈಶ್ವರನ ಮುಡಿಯಲ್ಲಿ ಮುಡಿದಿರುವ ಸೌಂದರ್ಯ ಪರಿಕರ . ಸಾಹಿತಿಗಳ ಸ್ಪೂರ್ತಿ, ಲೇಖಕರ ಮೂರ್ತಿ ಇದು .
ಇಂತಹ ಚಂದ್ರನ ಮೇಲೂ ಗಣೇಶನನ್ನು ನೋಡಿ ನಕ್ಕಿದ ಅಪವಾದವಿದೆ . ಬಾಲ್ಯದಲ್ಲಿ ಊರಿಗೆ ಹೋದಾಗೋ ಇಲ್ಲ ಊರಿನವರು ನಮ್ಮ ಮನೆಗೆ ಬಂದಾಗ್ಲೋ ಅವರುಗಳ ಜೊತೆ ಕೂತ ನಮಗೆ ಅಮ್ಮ ಬೆಳದಿಂಗಳ ಬೆಳಕಿನಲ್ಲಿ ಅನ್ನ ಸಾರನ್ನು ಕಲಿಸಿ ಕೈತುತ್ತು ಹಾಕುತ್ತಿದ್ದಾಗ ನಾವು ಸವಿಯುತ್ತಿದ್ದರೆ ಚಂದ್ರನ ಅಂಗಳದಲ್ಲೇ ಕೂತು ತಿನ್ನುತ್ತಿದ್ದೇವೇನೋ ಎನ್ನುವ ಸ್ವರ್ಗಾನುಭವವಾಗುತ್ತಿತ್ತು .
ಹೀಗೆ ನಿಬ್ಬೆರಗಾಗಿ ಚಂದ್ರನನ್ನು ನೋಡುತ್ತಾ ಅಮ್ಮನ ತೋಳಿನಿಂದ….. ಬೇಬಿ ವಾಕರಿನಿಂದ ಇಳಿದ ಮಗು ತನ್ನೊಂದಿಗೇ ಬೆಳೆದ ಜಗತ್ತು ಮತ್ತು ವಿಜ್ಞಾನದ ಸಹಕಾರದಿಂದ ಸೀದಾ ಹೋಗಿ ಲಕ್ಷಾಂತರ ಕಿಲೋಮೀಟರ್ ದೂರದ ಚಂದ್ರನ ಮೇಲೆಯೇ ಕಾಲಿಟ್ಟು ಇತಿಹಾಸ ನಿರ್ಮಿಸಿದ. ಚಂದ್ರನಲ್ಲಿ ಏನಿದೆ ಏನಿಲ್ಲ ಎಂಬುದನ್ನು ಕಣ್ಣಾರೆ ಕಂಡು ಸಾಕ್ಷಿ ಸಮೇತ ಹಿಂದಿರುಗಿದ.
ಇವತ್ತಿಗೂ ವಿಜ್ಞಾನಿಗಳು ಸಂಶೋಧನೆಗಳನ್ನು ನಿತ್ಯ ಪೂಜೆಗಳಂತೆ , ಜ್ವಾಲೆ ಆರದ ಯಾಗದಂತೆ ಮಾಡುತ್ತಿದ್ದಾರೆ . ಅಲ್ಲಿಯೂ ಗಾಳಿ ನೀರು ಇದೆ ಎಂದು ಖಾತ್ರಿಯಾದರೆ ಸಾಕು ಮನುಷ್ಯ ಚಂದ್ರಮಂಡಲದಲ್ಲಿ ರಿಯಲ್ ಎಸ್ಟೇಟ್ ಆಫೀಸು ತೆರೆಯುವುದು ಗ್ಯಾರಂಟಿ .
ಅಮೇರಿಕ, ರಷ್ಯ, ಜರ್ಮನಿ, ಇಟಲಿ, ಚೀನಾ, ,ಜಪಾನ್ ನಂತಹ ದೈತ್ಯ ರಾಷ್ಟ್ರಗಳು ಸಹಸ್ರಾರು ಕೋಟಿಗಳನ್ನು ವ್ಯಯಿಸಿ ದೊಡ್ಡ ದೊಡ್ಡ ವಿಜ್ಞಾನಿಗಳನ್ನು ನೇಮಿಸಿ ಗ್ರಹವನ್ನೇ ಗೃಹವನ್ನಾಗಿಸಲು ಪಣ ತೊಟ್ಟಿದ್ದಾರೆ . ಅದರ ಮೇಲೆ ಉಪಗ್ರಹಗಳನ್ನು ಇಳಿಬಿಟ್ಟಿದ್ದಾರೆ , ಪ್ರಯೋಗಾಲಯಗಳಲ್ಲಿ ತಂತ್ರಜ್ಞಾನ ಮತ್ತು ತಂತ್ರಗಾರಿಕೆಯನ್ನು ಎತ್ತುಗಳಂತೆ ದುಡಿಸುತ್ತಿದ್ದಾರೆ.
ಇವರ ಅನ್ವೇಷಣೆ ಫಲಿಸಿ ಪ್ರಯತ್ನ ಯಶಸ್ವಿಯಾಗಿ ಜನ ಜೀವನ ನಡೆಸಲು ಶುರು ಮಾಡಿದರೆ …..ಚಂದ್ರನ ಮೇಲೆ ಅಮ್ಮ ಮಗೂನ ಎತ್ಕೊಂಡು ಬಟ್ಲಲ್ಲಿ ಅನ್ನ ಕಲ್ಸ್ಕೊಂಡು ಮಗುವಿಗೆ ತಿನ್ನಿಸುತ್ತ ದೂರದ ಭೂಮಿಯನ್ನು ತೋರಿಸಿಕೊಂಡು ಅದರ ಬಗ್ಗೆ ಕತೆಗಳನ್ನು ಹೇಳುತ್ತಾಳೇನೋ ಅನ್ಸುತ್ತೆ .
ಕಿರಣ ಆರ್
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ಸಮುದ್ರತಟದಲ್ಲಿ ಒಂದು ಅಲೆ ಉಬ್ಬಿ ಬಂದು ಅಪ್ಪಳಿಸಿ ನೆಲಸಮವಾಗುತ್ತದೆ. ಅದರ ಹಿಂದೆಯೇ ಮತ್ತೊಂದು ಅಲೆ ಎತ್ತರಕ್ಕೇರಿ ಉಬ್ಬಿಬ್ಬಿ ಬಂದು ದಡವನ್ನು ಅಪ್ಪಳಿಸಿ ನೆಲಸಮವಾಗುತ್ತದೆ. ಇದುವರೆಗೆ ಕಾಡಿರುವ ಕೊರೊನ ವೈರಸ್ಸು ಹಲವು ದೇಶಗಳಲ್ಲಿ ಮೊದಲನೆಯ ಅಲೆಯ ಹಂತದಲ್ಲಿದೆ. ಅಂದರೆ ಅದರ ಅಬ್ಬರವಿನ್ನೂ ಮುಗಿದಿಲ್ಲ. ಪ್ರತಿನಿತ್ಯ 50-60 ಸಾವಿರ ಜನರಲ್ಲಿ ಸೋಂಕು ಹರಡುತ್ತಿರುವ ಭಾರತದಲ್ಲಿ ಮೊದಲ ಅಲೆಯಿನ್ನೂ ಎತ್ತರದಲ್ಲೇ ಇದೆ ಮತ್ತು ಕೆಳಮುಖವಾಗಿಲ್ಲ ಅಥವಾ ನೆಲಸಮವಾಗಿಲ್ಲ.
ಮೊದಲ ಅಲೆ ಮುಗಿದಿದೆ ಎನ್ನುವ ದೇಶಗಳಲ್ಲಿ ಹೊಸದಾಗಿ ಪತ್ತೆಯಾಗುವ ಸೋಂಕಿತರ ಸಂಖ್ಯೆ ಸೊನ್ನೆಯಾಗಬೇಕು ಅಥವಾ ಒಂದಕಿಗೆ ಇಳಿಯಬೇಕು. ಸಾಯುವವರು ಕೂಡ ಕಡಿಮೆಯಾಗಬೇಕು.ಇದು ಒಂದು ನಿಗದಿತ ಸಮಯದವರೆಗೆ ಬದಲಾಗದಂತಿರಬೇಕು. ಆ ನಂತರ ಮತ್ತೆ ಸೋಂಕುಗಳು ಹೊಸ ಸಂಪರ್ಕದೊಂದಿಗೆ ಶುರುವಾದಲ್ಲಿ ಅದನ್ನು ಎರಡನೆಯ ಅಲೆಯೆನ್ನುತ್ತೇವೆ.
ಮೊದಲನೆಯ ಅಲೆ ನೆಲಸಮವಾಗುವತ್ತ ಸಾಗಿರುವ ಹಲವು ದೇಶಗಳಲ್ಲಿ ಪೂರ್ಣ ಪ್ರಮಾಣದ ಸಾವುಗಳಿನ್ನೂ ನಿಂತಿಲ್ಲ. ಆದರೆ ಬಹುತೇಕ ಕಡಿಮೆಯಾಗಿವೆ.ಆದರೆ ಈ ದೇಶಗಳಲ್ಲಿ ಇದೀಗ ಎರಡನೆಯ ಅಲೆ ಅಲ್ಲಲ್ಲಿ ಉಬ್ಬಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹಿಂದೆಯೇ ಸಾವಿನ ಸಂಖ್ಯೆ ಏರುವ ಸಾಧ್ಯತೆಯಿದೆ.ಈ ಕಾರಣ ಪ್ರತಿಯೊಂದು ದೇಶದಲ್ಲಿ ಎಚ್ಚರಿಕೆ, ಸಾಮಾಜಿಕ ಅಂತರ, ಮಾಸ್ಕಗಳ ಬಳಕೆ ಎಲ್ಲವೂ ಮುಂದುವರೆಯುತ್ತಿವೆ.
ಆದರೆ ’ ಅಲೆ ’ ಅಥವಾ ’ವೇವ್ ’ ಎನ್ನುವ ಪದ ವೈಜ್ಞಾನಿಕವಲ್ಲ. ಏರಿಳಿತವನ್ನು ಸೂಚಿಸುವ ಜನ ಸಾಮಾನ್ಯರ ಬಳಕೆಗಾಗಿ ಇರುವ ಪದ. ಎರಡನೆಯ ಅಲೆಯ ಸೋಂಕುಗಳು ಮೊದಲ ಅಲೆಯ ಜನರಿಂದಲೇ ಬಂದಿರಬಹುದು. ಅದನ್ನು ತಿಳಿಯುವುದು ಕಷ್ಟ ಸಾಧ್ಯ. ಒಟ್ಟಿನಲ್ಲಿ ಕೊರೊನಾ ಸೋಂಕಿನ ಕೊಳದಲ್ಲಿ ನೀರಿರುವರೆಗೆ ಅಲೆಗಳು ಮೂಡುತ್ತಲೇ ಇರಬಹುದು ಎನ್ನುವ ಗ್ರಹಿಕೆಯನ್ನು ನೀಡುವ ಪದ.
ಉದಾಹರಣೆಗೆ ಜೂನ್ 16 ಕ್ಕೆ ನ್ಯೂಝಿಲ್ಯಾಂಡಿನಲ್ಲಿ ಸೋಂಕಿತರ ಸಂಖ್ಯೆ ಸೊನ್ನೆಯನ್ನು ಮುಟ್ಟಿತು. 24 ಗಂಟೆಗಳಲ್ಲಿ ಯಾವೊಂದು ಹೊಸ ಸೋಂಕು ಪತ್ತೆಯಾಗಲಿಲ್ಲ. ಆದರೆ ಹೊರಗಿನಿಂದ ಇಬ್ಬರು ಸೋಂಕಿತರು ಆಕ್ಲ್ಯಾಂಡಿನಲ್ಲಿ ಬಂದಿಳಿದರು. ಜೂನ್ 18 ರಿಂದ ಇವರನ್ನು ಪೂರ್ತಿ ಕ್ವಾರಂಟೈನ್ ನಲ್ಲಿಟ್ಟು ವೈರಸ್ಸನ್ನು ನಿಯಂತ್ರಿಸಲಾಯಿತು.
ಆದರೆ ಇದೇ ತಿಂಗಳ 11 ರಂದು ಮತ್ತೂ ನಾಲ್ವರು ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲಿನ ಪ್ರಧಾನಿ ಜಸಿಂದಾ ಆರ್ಡೆಮ್ ಆಕ್ಲ್ಯಾಂಡಿನಲ್ಲಿ ಮತ್ತೆ ಮೂರನೇ ಶ್ರೇಣಿಯ ಎಚ್ಚರಿಕಾ ಕ್ರಮಗಳನ್ನು ಮತ್ತು ನಿರ್ಬಂಧಗಳನ್ನು ಜಾರಿಗೊಳಿಸಬೇಕಾಯಿತು. ಏಕೆಂದರೆ ಇದಕ್ಕಿನ್ನ ಹೆಚ್ಚು ಸೋಂಕಿತರು ಸಮಾಜದ ಸಮುದಾಯಗಳಲ್ಲಿ ಇರಬಹುದು ಎನ್ನುವ ವಿಚಾರ ಅವರದು. ಈ ನಾಲ್ವರು ಒಂದೇ ಸಂಸಾರದ ಜನ. ಆದರೆ ನಾಲ್ವರೂ ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ಕೆಲಸಮಾಡುತ್ತಿದ್ದ ಕಾರಣ ಇಡೀ ನಗರದ ಮೇಲೆ ಜಾಗರೂಕತಾ ನಿರ್ಬಂಧಗಳನ್ನು ಹೇರಲಾಯಿತು.
ಆ ವೇಳೆಗೆ ಆಸ್ಟ್ರೇಲಿಯಾದಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು. ಒಂದು ತಿಂಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಇದೇ ರೀತಿಯ ಘಟನೆ ನಡೆದಾಗ ಆ ದೇಶ ಬರೀ ಸಂಭಂದಪಟ್ಟ ಉಪನಗರದ ಏರಿಯಾಗಳನ್ನು ಮಾತ್ರ ಮುಚ್ಚಿತ್ತು. ಆದರೆ ಅದರಿಂದ ಪ್ರಯೋಜನವಾಗಿರಲಿಲ್ಲ. ಇದೇ ಕಾರಣಕ್ಕೆ ನ್ಯೂಜಿಲ್ಯಾಂಡ್ ಬೇರೆಯ ಪ್ರದೇಶಗಳಿಗೆ ವಿನಾಯತಿಯನ್ನು ತೋರಿಸದೆ ಇಡೀ ನಗರದ ವಹಿವಾಟುಗಳನ್ನು ಮುಚ್ಚಿತು.
ಈ ಮೇಲಿನ ಘಟನೆ ಒತ್ತಿ ಹೇಳುವುದೆಂದರೆ, ಎರಡನೆಯ ಅಲೆಯನ್ನು ಹತ್ತಿಕ್ಕಲು ಕೂಡ ಅತ್ಯಂತ ತ್ವರಿತ ಮತ್ತು ಧೃಡ ನಿರ್ಧಾರಗಳನ್ನು ದೇಶದ ನಾಯಕರು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದಲ್ಲಿ ವೈರಸ್ಸಿನ ನಿಯಂತ್ರಣ ಸಾಧ್ಯವಾಗುವುದಿಲ್ಲ.
ಭಾರತದಲ್ಲಿ ಇದೀಗ ಸೋಂಕಿತರಿಗಾಗಿ ಪರೀಕ್ಷೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಆದರೆ, ಬೃಹತ್ ದೇಶವಾದ ಭಾರತದಲ್ಲಿ ಈ ಸೋಂಕಿತರ ಪರೀಕ್ಷೆ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ ಎಂಬುದು ಅಂತಾರಾಷ್ಟ್ರೀಯ ಮಟ್ಟದ ಅಭಿಪ್ರಾಯವಾಗಿದೆ. ಇಲ್ಲದಿದ್ದಲ್ಲಿ ದಿನಕ್ಕೊಂದು ಲಕ್ಷ ಸೋಂಕಿತರು ಪತ್ತೆಯಾಗುವುದೇನೂ ಕಷ್ಟವಿರಲಿಲ್ಲ ಎನ್ನುವುದು ಇವರ ಅಂಬೋಣ.
ಭಾರತದಲ್ಲಿ ಈಗಾಗಲೇ ಸರಿಸುಮಾರು ವಹಿವಾಟುಗಳು ಶುರುವಾಗಿರುವ ಕಾರಣ ಸೋಂಕು ಹರಡುವುದನ್ನು ತಪ್ಪಿಸುವುದು ಅತ್ಯಂತ ಕಷ್ಟ.ಈ ಕಾರಣ ಮೊದಲ ಅಲೆಯೇ ಇನ್ನೂ ಬಹುಕಾಲ ಇರುವ ಸಾಧ್ಯತೆಗಳಿವೆ.
ನಾಳಿನಿಂದ ಶುರುವಾಗಲಿರುವ ಗೌರಿ-ಗಣೇಶನ ಹಬ್ಬಕ್ಕೆ ಈ ವರ್ಷ ಸಾರ್ವಜನಿಕ ಸಮಾರಂಭಗಳನ್ನು ಮಾಡಬೇಡಿ, ಹಬ್ಬವನ್ನು ಮನೆಯ ಮಟ್ಟಕ್ಕೆ ಸೀಮಿತಗೊಳಿಸಿ ಎಂದು ಸರ್ಕಾರ ವಿನಂತಿಸಿಕೊಂಡರೂ , ಸಾರ್ವಜನಿಕವಾಗಿ ಮಾಡೇ ತೀರುತ್ತೇವೆಂದು ಹೇಳುವವರು ಇದ್ದಾರೆ. ಸರಕಾರ ಈಗ ಸಾರ್ವಜನಿಕ ಗಣೇಶೋತ್ಸವಗಳಿಗೆ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ. ಸರಕಾರ ಎಷ್ಟೇ ಹೇಳಿದರು ಮಾಸ್ಕ್ ಧರಿಸದೆ, ಅಂತರ ಪಾಲಿಸದೆ ಓಡಾಡುವ ಅನೇಕರನ್ನು ಕಾಣುತ್ತಲೇ ಇದ್ದೇವೆ. ಮಾಸ್ಕ್ ಅನ್ನು ಸರಿಯಾಗಿ ಧರಿಸದೆ ಅದನ್ನು ಕತ್ತಿಗೆ ಸರದಂತೆ ಧರಿಸುವವರು ಸಾಮಾನ್ಯ ವಾಗಿದ್ದಾರೆ. ಹೀಗಾಗಿ ಮೊದಲ ಅಲೆಯೇ ಇನ್ನೂ ಸೊಕ್ಕಿ ಮೆರೆಯುತ್ತಿದೆ. ಹೀಗಿರುವಾಗ ಎರಡನೆಯ ಅಲೆಯ ಬಗ್ಗೆ ಗಂಭೀರವಾದ ವಿಚಾರಮಾಡುವ ಕಾಲವಿನ್ನೂ ಭಾರತಕ್ಕೆ ಬಂದಿಲ್ಲ.
ಆದರೆ, ಮತ್ತೊಂದು ಬಗೆಯಲ್ಲಿ ಎರಡನೇ ಅಲೆ ಹರಡುವ ಸಾಧ್ಯತೆಗಳಿವೆ. ಕೋವಿಡ್ -19 ತನ್ನ ಸ್ವರೂಪವನ್ನು ಬದಲಾಯಿಸಿಕೊಂಡು ಹೊಸ ಅವತಾರದಲ್ಲಿ ಮರಳಿ ಮತ್ತೆ ಅವಾಂತರ ಮಾಡುವ ಸಾಧ್ಯತೆಗಳಿವೆ. ಇದನ್ನೂ ಎರಡನೆಯ ಅಲೆ ಎನ್ನಬಹುದು ಈ ಎರಡನೆಯ ಭಿನ್ನ ಅಲೆಯ ದರ್ಶನ ಮತ್ತಷ್ಟು ಕಷ್ಟಗಳನ್ನು ತರಬಹುದಾದ ಸಾಧ್ಯತೆಗಳನ್ನು ಪರಿಣಿತರು ಗಂಭೀರವಾಗಿ ತೆಗೆದುಕೊಂಡು ಅದಕ್ಕಾಗಿ ತಯಾರಿಯನ್ನು ಶುರುಮಾಡಿದ್ದಾರೆ.
ಮುಂದಿನ ತಿಂಗಳುಗಳಲ್ಲಿ ಚಳಿಗಾಲ ಆರಂಭವಾದಾಗ ’ ವಿಂಟರ್ ಫ್ಲೂ” ಎನ್ನುವ ಮತ್ತೊಂದು ಬಗೆಯ ಜ್ವರ ಕೆಮ್ಮು ದಮ್ಮಿನ ಸೋಂಕು ಶುರುವಾಗಲಿದೆ. ಇದು ಚಳಿ ದೇಶಗಳಲ್ಲಿ ಪ್ರತಿವರ್ಷವೂ ನಡೆಯುವ ವಿದ್ಯಮಾನ.ಇಂತಹ ದೇಶಗಳಲ್ಲಿ ಕೋವಿಡ್-19 ಈ ಹಳೆಯ ವೈರಸ್ಸಿನ ಜೊತೆ ಸೇರಿ ಹೊಸದೊಂದು ಅವತಾರ ತಾಳಿ ಕಾಡುವ ಸಾಧ್ಯತೆಗಳ ಬಗ್ಗೆ ಎಲ್ಲರೂ ಆತಂಕದಲ್ಲಿರುವುದು ಅತ್ಯಂತ ನಿಜ. ಆಗ ಹೊಸದೊಂದು ವೈರಸ್ಸಿನ ತಳಿಯೇ ಸೃಷ್ಟಿಯಾಗುವ ಸಾದ್ಯತೆಗಳ ಬಗ್ಗೆ ಎಲ್ಲರಗೂ ಅಧೈರ್ಯವಿದೆ. ಹಾಗೆ ಆದಲ್ಲಿ ಅದರ ಅಲೆ ಮತ್ತೆ ಪ್ರಪಂಚವನ್ನು ತನ್ನ ಸೆಳೆತಕ್ಕೆ ತೆಗೆದುಕೊಳ್ಳಬಹುದು.
ಚೈನಾದಲ್ಲಿ ಮೊದಲು ಶುರುವಾಗಿ, ಇಡೀ ಪ್ರಪಂಚಕ್ಕೆ ಹರಡಿದಂತೆ, ಪ್ರಪಂಚದ ಯಾವುದೇ ದೇಶದಲ್ಲಿ ಈ ವೈರಸ್ಸು ಬೇರೊಂದು ಸ್ವರೂಪಕ್ಕೆ ರೂಪಾಂತರ ಹೊಂದಿದರೂ ಅದು ಮತ್ತೆ ಪ್ರಪಂಚದಲ್ಲೆಲ್ಲ ಹರಡುವ ಸಾಧ್ಯತೆಗಳಿವೆ. ಹಾಗಾದಲ್ಲಿ ಪ್ರಪಂಚದ ವಹಿವಾಟುಗಳಿಗೆ ಮತ್ತೊಮ್ಮೆ ಕೊಖ್ ಬೀಳಲಿದೆ.
ಎರಡನೆಯ ಅಲೆಯ ಸ್ವರೂಪ ಹೇಗಿರಬಹುದು?
ಈ ಬಗ್ಗೆ ಪ್ರಪಂಚಕ್ಕಿನ್ನೂ ಹೆಚ್ಚಿನ ಅರಿವಿಲ್ಲ. ಇದರ ಅಗಾಧತೆ ಮೊದಲಿನಷ್ಟೇ ಗಂಭೀರವೇ?- ಎನ್ನುವ ಬಗ್ಗೆ ತಿಳಿದವರಿಗೂ ಕರಾರುವಕ್ಕಾಗಿ ಹೇಳಲು ಸಾಧ್ಯವಾಗಿಲ್ಲ.
ಆದರೆ, ಮೊದಲ ಅಲೆಯಿಂದಾಗಿ ತೆರೆದುಕೊಂಡಿರುವ ಆರೋಗ್ಯ ಕೇಂದ್ರಗಳು, ತಪಾಸಣಾ ಕೇಂದ್ರಗಳು, ಚಿಕಿತ್ಸಾ ಆಸ್ಪತ್ರೆಗಳು, ಅವಲಂಬಿತ ಸಹಾಯಕ ಘಟಕಗಳನ್ನು ತತ್ ಕ್ಷಣ ಪುನರುಜ್ಜೀವನಗೊಳಿಸಲು ಸಾಧ್ಯವಿದೆ. ಈಗಾಗಲೇ ಖರೀದಿಸಿರುವ ವೆಂಟಿಲೇಟರ್ ಗಳು, ತರಬೇತುಗೊಳಿಸಿರುವ ಸಿಬ್ಬಂದಿ ಇವರ ಬಳಕೆಯನ್ನು ಮತ್ತೆ ಮಾಡಬಹುದಾಗಿದೆ. ಈಗಾಗಲೇ ಜಾರಿಯಿರುವ ಕಾಂಟಾಕ್ಟ್ ಟ್ರೇಸಿಂಗ್, ಬಳಸಿರುವ ಚಿಕಿತ್ಸೆಗಳು, ಮಾಸ್ಕ್, ಸಾಮಾಜಿಕ ಅಂತರಗಳು, ಕ್ವಾರಂಟೈನ್ ಕೇಂದ್ರಗಳು ಇತ್ಯಾದಿ ಅನುಭವಗಳನ್ನು ಬಳಸಿಕೊಂಡು ಸೋಂಕು ಹರಡುವಿಕೆಯನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದಾಗಿದೆ ಎನ್ನುವ ಆಶಾವಾದಗಳಿವೆ.
ಆದರೆ ಜೊತೆ ಜೊತೆಯಲ್ಲೆ, ಕೆಲವು ಆತಂಕಗಳಿವೆ.
ಮೊದಲು ಈ ವಿಶ್ವವ್ಯಾಪಿ ವ್ಯಾಧಿ ಅಪ್ಪಳಿಸಿದಾಗ ಜನರು ಭಯಭೀತಿಯಿಂದ ನಿಯಮಗಳನ್ನು ಪಾಲಿಸಿದರು.ಆದರೆ ಈಗ ಜನರ ಸಹನೆ ಮೀರಿದೆ. ಆರ್ಥಿಕ ಕಷ್ಟ -ನಷ್ಟಗಳನ್ನು ತಡೆದುಕೊಳ್ಳುವ ತಾಳ್ಮೆ ಮುಗಿದಿದೆ. ಸರ್ಕಾರಗಳು ನಲುಗಿವೆ. ವಾಣಿಜ್ಯ ಕುಸಿದಿದೆ. ದೇಶ-ವಿದೇಶಗಳ ಓಡಾಟ, ಪ್ರವಾಸ, ಸಾರಿಗೆ, ವಿಮಾನ ಎಲ್ಲವೂ ತತ್ತರಿಸಿವೆ. ಹೀಗಾಗಿ ಎರಡನೆಯ ಅಲೆಯನ್ನು ತಡೆದುಕೊಳ್ಳುವ ಜನರ ಮತ್ತು ಸಂಘ ಸಂಸ್ಥೆ, ಸರ್ಕಾರಗಳ ಹರವು ಸಂಕುಚಿಸಿವೆ. ಹಾಗಾದಲ್ಲಿ ನಾವು ಇದುವರೆಗೆ ಮಾಡಿಕೊಂಡ ವ್ಯವಸ್ಥೆಗಳು ನಲುಗಿಹೋಗುತ್ತವೆ. ಮೊದಲ ಅಲೆಯನ್ನು ತಡೆಗಟ್ಟಿದಷ್ಟು ಪರಿಣಾಮಕಾರಿಯಾಗಿ ಎರಡನೆಯ ಅಲೆಯನ್ನು ತಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ ಎನ್ನುವ ಎಚ್ಚರಿಕೆಯ ಗಂಟೆಗಳು ಮೊಳಗುತ್ತಿವೆ.
ಅಸಲಿಗೆ ದಿನಕ್ಕೆ ಸಾವಿರಾರು ಸೋಂಕಿತರು ಪತ್ತೆಯಾಗುತ್ತಿರುವಾಗಲೇ ಲಾಕ್ ಡೌನ್ ಅನ್ನು ಸಡಿಲಗೊಳಿಸಬೇಕಾದ ಸ್ಥಿತಿಯನ್ನು ಬಂದು ಮುಟ್ಟಿರುವ ನೂರಾರು ದೇಶಗಳಲ್ಲಿ ಇದೇ ಕಾರಣಕ್ಕೆ ಎರಡನೇ ಅಲೆ ಮೊದಲಿಗಿಂತ ಹೆಚ್ಚು ಅಪಾಯಕಾರಿ ಮತ್ತು ಸಾವು ನೋವುಗಳನ್ನು ತರಬಲ್ಲದು ಎನ್ನುವ ಆತಂಕ ಇದ್ದೇ ಇದೆ.
ಎರಡನೇ ಅಲೆಯ ಆತಂಕದಲ್ಲಿರುವ ದೇಶಗಳು
250,000 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕನ್ನು ನೋಡಿರುವ 45 ದೇಶಗಳಿವೆ. ಇವುಗಳಲ್ಲಿ 21 ದೇಶಗಳು ಲಾಕ್ ಡೌನ್ ನ್ನು ಸಡಿಲಿಸಿವೆ. ಇವುಗಳಲ್ಲಿ 10 ದೇಶಗಳು ಎರಡನೇ ಅಲೆಯ ಸೋಂಕನ್ನು ವರದಿಮಾಡಿವೆ. ಈ ಹತ್ತು ದೇಶಗಳು ಕೊರೊನಾ ವೈರಸ್ಸಿನ ನಿಯಂತ್ರಣದಲ್ಲಿ ಸಡಿಲವಾದ ಆಸಕ್ತಿ ತೋರಿಸಿದ ದೇಶಗಳಾಗಿವೆ. ಆಕ್ಸ್ ಫರ್ಡ್ ನ ಕೊರೊನಾ ವೈರಸ್ ಟ್ರಾಕರ್ ಪ್ರಕಾರ ಅಮೆರಿಕಾ, ಇರಾನ್, ಜೆರ್ಮನಿ, ಸ್ವಿಟ್ಜರ್ ಲ್ಯಾಂಡ್, ಫ್ರಾನ್ಸ್ ಇತ್ಯಾದಿ ದೇಶಗಳು ಈ ಪಟ್ಟಿಯಲ್ಲಿವೆ. ಒಂದು ಹಂತಕ್ಕೆ ನಿಯಂತ್ರಣಕ್ಕೆ ಬಂದಿದ್ದ ಕೊರೊನಾ, ಇದೀಗ ಮತ್ತೆ ಈ ದೇಶಗಳಲ್ಲಿ ಬಲಗೊಳ್ಳುತ್ತ ಸಂತಾನ ವೃದ್ಧಿಯನ್ನು ನಡೆಸುತ್ತಿವೆ. ಎರಡು ವಾರಗಳ ಹಿಂದೆ ಭಾನುವಾರದಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಪಂಚದಲ್ಲಿ ಅತ್ಯಧಿಕ ಕೊರೊನಾ ವೈರಸ್ಸುಗಳ ಸೋಂಕಿತರನ್ನು ಇತ್ತೀಚೆಗೆ ಕಂಡ ಬಗ್ಗೆ ವರದಿ ಮಾಡಿ ಆತಂಕ ವ್ಯಕ್ತಪಡಿಸಿತು.
ಪ್ರಪಂಚದಲ್ಲಿ ಅತ್ಯಧಿಕ ಸೋಂಕಿತರನ್ನು ಹೊಂದಿರುವ ಮೊದಲ ಹನ್ನೆರಡು ದೇಶಗಳು ಒಂಭತ್ತು ದೇಶಗಳಿನ್ನೂ ಪ್ರತಿದಿನ ಹೆಚ್ಚಾಗುತ್ತಲೇ ಇರುವ ಮಾದರಿಯ ಸೋಂಕಿತರ ಸಂಖ್ಯೆಯನ್ನು ನೀಡಿದ್ದರೆ ಇನ್ನು ಮೂರು ದೇಶಗಳಲ್ಲಿ ಈ ರೇಖೆ ಕೆಳಮುಖವಾಗಿ ಸಾಗಿವೆ.ಆದರೆ, ಈ ಎಲ್ಲ ದೇಶಗಳು ತಮ್ಮ ಆರ್ಥಿಕತೆಯನ್ನು ಈಗಾಗಲೇ ಸಡಿಲಗೊಳಿಸಿವೆ.
ಅಂದರೆ ಆಯಾ ದೇಶಗಳ ಲಾಕ್ ಡೌನ್ ನ್ನು ನೂರು ಅಂಕಗಳೊಂದಿಗೆ (Stringency scale) ನಾವು ಅಳೆಯುವುದಾದರೆ ಅದರಲ್ಲಿ 70 ಕ್ಕಿನ್ನ ಕಡಿಮೆ ಅಂಕಗಳಿಸುವ ದೇಶಗಳನ್ನು ರಿಲ್ಯಾಕ್ಸಡ್ ಅಥವಾ ಸಡಿಲ ನೀತಿಯ ದೇಶಗಳೆಂದು ಕರೆಯಬಹುದು. ಈ ದೇಶಗಳು ಕೊರೊನಾ ವಿರುದ್ಧ ಮಾಡುವ ಪ್ರಚಾರ ಪ್ರಣಾಳಿಕೆಗಳು, ಸೋಂಕನ್ನು ಹತ್ತಿಕ್ಕಲು ತೆಗೆದುಕೊಳ್ಳುವ ಕ್ರಮ ಮತ್ತು ಲಾಕ್ ಡೌನ್ ಕ್ರಮಗಳನ್ನು ಆಧರಿಸಿ ಈ ಸೂಚ್ಯಂಕದ ಗಣನೆಯನ್ನು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯ ಅಳೆಯುತ್ತದೆ.
ಉದಾಹರಣೆಗೆ ಕಟ್ಟು ನಿಟ್ಟಾದ ಕ್ರಮಗಳನ್ನು ಕೈ ಬಿಟ್ಟಕೂಡಲೆ ಜರ್ಮನಿಗೆ ದೊರಕಿದ್ದ 73 ಅಂಕಗಳು ಐವತ್ತಕ್ಕಿಳಿದವು. ಹತ್ತು ದಿನದ ಕೆಳಗೆ ಜರ್ಮನಿಯಲ್ಲಿ ಕೊರೊನಾ ಸಂತಾನೋತ್ಪತ್ತಿಯ ವೇಗ ಮೂರಕ್ಕೇರಿತು. ಸೋಂಕಿತರ ಸಂಖ್ಯೆ ಅತ್ಯಂತ ವೇಗವಾಗಿ ಏರತೊಡಗಿತು. ಸೌದಿ ಅರೇಬಿಯ ಮತ್ತು ಇರಾನಿನಲ್ಲೂ ಸಂಖ್ಯೆಗಳು ಏರು ಮುಖದಲ್ಲಿ ಸಾಗಿ ಎರಡನೇ ಅಲೆಯನ್ನು ಖಾತರಿಪಡಿಸಿದವು.ಆದರೆ ವಿಚಿತ್ರವೆಂಬಂತೆ ಇಟಲಿಯಲ್ಲಿ ಕ್ರಮಗಳನ್ನು ಸಡಿಲಗೊಳಿಸಿದರೂ ಸೋಂಕಿತರ ಸಂಖ್ಯೆ ಏರಿಲ್ಲ. ಆದರೆ ಅಲ್ಲಿ ಕೂಡ ಶಿಸ್ತಾಗಿ ನಿಯಮಗಳನ್ನು ಪಾಲಿಸಬೇಕು ಎನ್ನುವುದು ಪಂಡಿತರ ಪ್ರತಿಕ್ರಿಯೆಯಾಗಿದೆ.
ಒಂಭತ್ತು ದೇಶಗಳಲ್ಲಿ ದಕ್ಷಿಣ ಅಮೆರಿಕಾದ ಮೂರು ದೇಶಗಳು ಬಿಗಿಯಾದ ಲಾಕ್ ಡೌನ್ (?) ಪಾಲಿಸಿದರೂ ಬೊಲಿವಿಯ, ಅರ್ಜೆಂಟಿನಾ ಮತ್ತು ಕೊಲಂಬಿಯ ದೇಶಗಳಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಹೋಗಿದ್ದು ಈ ಹಿಂದೆ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಇವುಗಳಲ್ಲಿ ಅರ್ಜೆಂಟಿನಾ ಮೊದಲೇ ಲಾಕ್ ಡೌನ್ ಪ್ರವೇಶಿಸಿ ಬಹುಕಾಲ ಸೋಂಕನ್ನು ಹತ್ತಿಕ್ಕಿತ್ತಾದರೂ ಅದನ್ನು ಸಡಿಲಗೊಳಿಸಿದ ಕೂಡಲೇ ಅತಿಹೆಚ್ಚಿನ ಸೋಂಕಿತರನ್ನು ವರದಿ ಮಾಡಿತು.ಭಾರತದಲ್ಲಿಯೂ ಇದೇ ನಡೆದದ್ದು.
ಮೊದಮೊದಲಿನಲ್ಲೇ 200,000 ಸೋಂಕಿತರನ್ನು ಹೊಂದಿದ್ದ ಇರಾನ್ ಏಪ್ರಲ್ ಅಥವಾ ಮೇ ವೇಳೆಗೆ ಸೋಂಕಿತರು ಕಡಿಮೆಯಾಗುತ್ತಿರುವ ಬಗ್ಗೆ ಹೇಳಿತ್ತು. ಒಂದು ವಾರದ ಕಾಲ ಅಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತ ಹೋಗಿತ್ತು.ಒಂದು ತಿಂಗಳ ಕಾಲ ಅದು ಕಡಿಮೆಯೇ ಉಳಿದು ಆ ದೇಶಕ್ಕೆ ಆಶಾ ದೀಪವನ್ನು ಹಚ್ಚಿಟ್ಟಿತ್ತು.
ಆದರೆ ನಂತರ ಶುರುವಾದ ಎರಡನೇ ಅಲೆಯ ಸೋಂಕುಗಳು ಮತ್ತೆ ಆ ದೇಶವನ್ನು ಕಾಲೂರುವಂತೆ ಮಾಡಿತು.ಇದೀಗ ಎರಡನೆಯ ಅಲೆಯೂ ಮತ್ತೆ ನೆಲಸಮವಾಗುತ್ತಿದೆ. ಇಸ್ರೇಲ್, ಸೌದಿ ಅರೇಬಿಯ ಇತರೆ ದೇಶಗಳಲ್ಲಿ ಎರಡನೇ ಅಲೆ ನಿಧಾನವಾಗಿ ಮೇಲೇರಿತು. ಕೆಲವನ್ನು ಮೊದಲನೇ ಅಲೆಯ ಸೋಂಕೇ ಅಥವಾ ಎರಡನೆಯ ಅಲೆಯ ಸೋಂಕೇ ಎಂದು ಹೇಳಲಾಗಲಿಲ್ಲ. ಏಕೆಂದರೆ ಕೆಲವು ಬಾರಿ ಅದು ಗರಿಷ್ಠ ಮಟ್ಟ (ಪೀಕ್) ಮುಟ್ಟಿದ ವರದಿ ಸುಳ್ಳಾಗಿತ್ತು. ಹಾಗಾಗಿ ಎರಡನೇ ಅಲೆ ಅಂದುಕೊಂಡಿದ್ದು ಇನ್ನೂ ಮೊದಲ ಅಲೆಯ ಮುಂದುವರಿಕೆಯಾಗಿದ್ದ ವರದಿಗಳು ಬಂದಿವೆ. ಚೈನಾದಲ್ಲಿ, ಏಪ್ರಿಲ್ ವೇಳೆಗೆ ಮುಗಿದೇ ಹೋಯಿತು ಎಂದುಕೊಂಡಿದ್ದ ಸೋಂಕು, ಜೂನ್ ವೇಳೆಗೆ ಮತ್ತೆ ಕಾಣಿಸಿಕೊಂಡು ಅಲ್ಲಿಯ ಜನರಿಗೆ ಭಾರೀ ಆತಂಕವನ್ನು ಹುಟ್ಟಿಸಿತು.ಇದೀಗ ಅದನ್ನ ಹತ್ತಿಕ್ಕಿದ ವರದಿ ಬಂದಿದೆ.
ಅಮೆರಿಕಾದಲ್ಲಿ ಮೊದಲ ಅಲೆಯೇ ತಗ್ಗಲಿಲ್ಲ. ಬಹುಕಾಲ ಹೊಸ ಸೋಂಕಿತರನ್ನು ವರದಿಮಾಡುತ್ತಲೇ ಇದ್ದರು.ಆದರೆ, ಯುನೈಟೆಡ್ ಕಿಂಗ್ಡಮ್ಮಿನಲ್ಲಿ ಮೇ ಮತ್ತು ಜೂನ್ ವೇಳೆಗೆ ನಿಖರವಾದ ದಾಖಲೆಗಳೊಂದಿಗೆ ಮೊದಲ ಅಲೆ ನೆಲಸಮನಾಗುತ್ತ ಹೋಯಿತು. ಆದರೆ ಹಲವಾರು ನಗರಗಳಲ್ಲಿ ಎರಡನೆಯ ಅಲೆಯ ವರದಿಯಾಗಿ ಆಯಾ ನಗರಗಳಲ್ಲಿ ಮತ್ತೆ ಲಾಕ್ ಡೌನ್ ನ್ನು ಘೋಷಿಸಲಾಯಿತು. ಭಾರತದಲ್ಲಿ ಕೊರೊನಾ ಕಾಣಿಸಿಕೊಂಡಾಗಿನಿಂದ ಇದುವರೆಗೆ ಸೋಂಕಿತರ ಸಂಖ್ಯೆ ಏರುಹಾದಿಯಲ್ಲಿಯೇ ಸಾಗಿದ್ದು, ಶೃಂಗ ಶಿಖರವನ್ನಿನ್ನೂ ಮುಟ್ಟಿಲ್ಲ. ಯಾರಿಂದ ಸೋಂಕು ಬಂದಿರಬಹುದೆಂಬುದನ್ನು ಇದೀಗ ಕಂಡುಹಿಡಿಯಲು ಸಾದ್ಯವಾಗದೆ ಇದು ಸಮುದಾಯಮಟ್ಟದಲ್ಲಿ ಹರಡುತ್ತಲೇ ಇದೆ.
ಜೀವನಿರೋಧಕ ಶಕ್ತಿ ಕಡಿಮೆ ಇರುವ ಜನಸಮುದಾಯಗಳಲ್ಲಿ ಅತಿ ಹೆಚ್ಚಿನ ಸೋಂಕು ಹರಡಬಲ್ಲದು. ಈ ಕಾರಣ ನಾವು ವಾಸ್ತವ ಪರಿಸ್ಥಿತಿಯನ್ನು ಮರೆತು ಆರ್ಥಿಕತೆಯನ್ನು ಪೂರ್ತಿ ಸಡಿಲಿಸಕೂಡದು. ಇದುವರೆಗೆ ಪಾಲಿಸಿದ ಸಾಮಾಜಿಕ ಅಂತರ,ಮಾಸ್ಕ್ ಗಳು, ದೀರ್ಘಕಾಲ ಕೈ ತೊಳೆಯುವುದು ಇತ್ಯಾದಿಯನ್ನು ಬಹುಕಾಲ ಮುಂದುವರೆಸಬೇಕಾಗಿದೆ.ಇಲ್ಲದಿದ್ದಲ್ಲಿ ಮೊದಲ ಅಲೆಯ ಮಾರಣ ಹೋಮಕ್ಕಿಂತ ಹೆಚ್ಚು ಗಂಭೀರವಾದ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು.