ಸೂಳೆಕೆರೆ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಚನ್ನಗಿರಿನ ತಾಲ್ಲೂಕಿನ ಭೂಪಟದ ಕೇಂದ್ರ ಭಾಗದಲ್ಲಿರುವ ಜಲರಾಶಿಯ ಪ್ರಸಿದ್ಧ ತಾಣ. ಏಷ್ಯಾಖಂಡದಲ್ಲಿಯೇ ಎರಡನೇ ದೊಡ್ಡ ಕೆರೆಯ ಖ್ಯಾತಿ ಪಡೆದ ಸೂಳೆಕೆರೆ ವಿಶಿಷ್ಟ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಗಿರಿ, ಶಿಖರಗಳಿಂದ ಆವೃತ ಸದಾ ಹಸಿರು ಹೊದ್ದ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಪಾಟ್. ಅಪರೂಪದ ವನರಾಶಿ, ಪ್ರಾಣಿ ಪಕ್ಷಿಗಳ ಮೌನ ಕಣಿವೆ. ಶಾಂತವ್ವೆ ಕಟ್ಟಿಸಿದಳೆಂದು ಹೇಳಲಾಗುವ ಸುಮಾರು 6 ಸಾವಿರ ವಿಸ್ತೀರ್ಣ ಹೊಂದಿದ ತಿಳಿನೀರಿನ ವಿಹಂಗಮ ದೃಶ್ಯ ಕಣ್ಣಿನ ದೃಷ್ಟಿ ಹಾಯುವವರೆಗೆ ಮುದನೀಡುತ್ತದೆ.
ಎರಡು ಗುಡ್ಡಗಳ ನಡುವೆ ಏರಿ ನಿರ್ಮಿಸುವ ಮೂಲಕ ಸರಳ ತಂತ್ರಜ್ಞಾನದಿಂದ ನೀರು ನಿಲ್ಲಿಸುವ ಮೂಲಕ ಅಪಾರ ಪ್ರಮಾಣದ ನೀರು ಹಿಡಿದಡಲ್ಪಟ್ಟಿದೆ. ನೈಸರ್ಗಿಕ ಜಲಮೂಲ ಹರಿದ್ರಾವತಿ ಹಳ್ಳದೊಂದಿಗೆ ಇತರೆ ಹಳ್ಳಗಳು. ಭ್ರದ್ರಾ ನಾಲೆಯ ನೀರು ಕೆರೆಯಲ್ಲಿ ಸದಾ ನೀರು ತುಂಬಿರಲು ತನ್ನದೇ ಕೊಡುಗೆ ನೀಡುತ್ತಿದೆ. ನೀರಾವರಿ ಸೌಲಭ್ಯಕ್ಕಿಂತ ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ನಗರ, ಪಟ್ಟಣ ಹಾಗೂ ನೂರಾರು ಹಳ್ಳಿಗಳಿಗೆ ಕುಡಿಯುವ ನೀರಿನ ಆಸರೆ.
ನೈಸರ್ಗಿಕ ತಾಣಗಳು ಯಥಾಸ್ಥಿತಿ ಬಿಡದೇ ವಾಣಿಜ್ಯೋದ್ಯಮಕ್ಕೆ ಪರಿವರ್ತಿಸಿ ಲಾಭಗಳಿಸುವ ಕಾರ್ಪೋರೇಟ್ ವ್ಯವಸ್ಥೆಯ ಕಪಿಮುಷ್ಟಿಯಲ್ಲಿ ಸಿಲುಕಿದ ಪರಿಣಾಮ ಮೂಲ ಸ್ವರೂಪ ಕಳೆದುಕೊಂಡಿವೆ. ಕಾಡುನಾಶ, ಗುಡ್ಡ ನೆಲಸಮ ಮಾಡಿ ಉದ್ಯಮಗಳತ್ತ ವಾಲುವಿಕೆ ದುರಂತಗಳಿಗೆ ದಾರಿ ಮಾಡಿದೆ. ಬೃಹತ್ ಯಂತ್ರಗಳ ಸದ್ದಿಗೆ ಪ್ರಾಣಿ ಪಕ್ಷಿಗಳು ಪಲಾಯನ. ನೈಸರ್ಗಿಕ ಬೀಜ ಪ್ರಸರಣವಿಲ್ಲದೇ ಕಾಡು ನಾಶ. ಅವೈಜ್ಞಾನಿಕ ಯಂತ್ರಾಧಾರಿತ ಉದ್ಯಮಗಳ ಆಕ್ರಮಣದಿಂದ ಪರಿಸರ ಸಮತೋಲನ ಕಳೆದುಕೊಂಡಿದೆ.
ಇಂದು ಮಳೆಗಾಲ ಬಂತೆಂದರೆ ಆತಂಕ. ಪ್ರವಾಹ, ಗುಡ್ಡ ಕುಸಿತ. ಭೂ ಸವಕಳಿ, ನದಿಯಲ್ಲಿ ಹೂಳು. ಇವೆಲ್ಲಾ ಅಸಮತೋಲನದ ಪರಿಣಾಮವೇ. ತಕ್ಷಣದ ಲಾಭಕ್ಕಾಗಿ ಲಕ್ಷಾಂತರ ವರ್ಷದಿಂದ ನೆಲೆ ಕಂಡುಕೊಂಡಿದ್ದ ಮಳೆಕಾಡು ಕೆಲವೇ ಗಂಟೆಗಳಲ್ಲಿ ನೆಲಸಮ ಮಾಡುವ ಹುನ್ನಾರ ನಡೆದಿದೆ. ಹಿಂದೆಯೂ ಇದಕ್ಕಿಂತ ಭರ್ಜರಿ ಮಳೆ ಸುರಿಯುತ್ತಿತ್ತು. ಈಗಿನಂತಹ ಅನಾಹುತಗಳು ಇರಲಿಲ್ಲ. ಕಳೆದ ಬಾರಿ ಕೊಡಗಿನಲ್ಲಾದ ಕುಸಿತ, ಈ ಬಾರಿ ಭಾಗಮಂಡಲದಲ್ಲಿ ಅರ್ಚಕರ ಮನೆ ಗುಡ್ಡ ಕುಸಿತ ಇವುಗಳ ಪ್ರತಿಫಲಗಳೇ. ಕಾಡಿನಲ್ಲಿ ಹೆದ್ದಾರಿ ನಿರ್ಮಾಣ, ವಿದ್ಯುತ್ ಮಾರ್ಗಗಳಿಗೆ ಮರಗಳ ಮಾರಣ ಹೋಮ ನಡೆಯುತ್ತಿದೆ. ಕೊಳವೆ ಬಾವಿಗಳು, ಜೆಸಿಬಿ ಯಂತ್ರದಿಂದ ಗುಡ್ಡದ ಬುಡ ಸಮತಟ್ಟು ಮಾಡುವ ಪ್ರಕ್ರಿಯೆಗಳಿಂದ ಅವಘಡಗಳು ಸಂಭವಿಸುತ್ತಿವೆ. ನೂರಾರು ವರ್ಷ ಬದುಕು ಕಟ್ಟಿಕೊಂಡ ಪರಂಪರಾಗತ ಕುಟುಂಬಗಳ ಹೇಳ ಹೆಸರಿಲ್ಲದಂತೆ ಮಣ್ಣು ಪಾಲಾಗುತ್ತಿವೆ.
ಜೋಗದಲ್ಲಿಯೂ ದಟ್ಟಡವಿಯಲ್ಲಿ ನೀರೆತ್ತುವ ಮೂಲಕ ವಿದ್ಯುತ್ ಉತ್ಪಾದನೆ ಯೋಜನೆಗೆ ಪರೀಕ್ಷೆ ನಡೆಸಲು ಪರಿಸರ ಇಲಾಖೆ ಅನುಮತಿ ನೀಡಿತ್ತು. ತೀವ್ರ ವಿರೋಧದ ನಡುವೆಯೂ ಯಂತ್ರಗಳ ಸದ್ದು ನಡೆಯಿತು. ರಾಜಕಾರಣಿಗಳೂ ಕೂಡ ಕಾರ್ಪೋರೇಟ್ ವ್ಯವಸ್ಥೆಯ ಬಂಡವಾಳಶಾಹಿಗಳ ಹಿತಾಸಕ್ತಿಗೆ ಬೆನ್ನೆಲುಬಾಗಿ ನಿಲ್ಲುವುದು ದೇಶದ ಮಳೆಕಾಡು ಪ್ರದೇಶ ನಿತ್ಯ ಕರಗುತ್ತಿದೆ. ಪ್ರಪಂಚದಲ್ಲಿಯೇ ತೇವಾಂಶಭರಿತ ಭಾರತ ದೇಶದಲ್ಲಿ ಕಾಡಿನ ಪ್ರಮಾಣ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ದೇಶದ ಪರಿಸರ ಸಮತೋಲನಕ್ಕೆ ಶೇ.33 ಮಳೆಕಾಡು ಇರುವುದು ಅಗತ್ಯ. ಕಾಡು ಕಡಿದು ಮರಬೆಳೆಸುವುದು ಕಣ್ಣೆರೊಸುವ ತಂತ್ರ. ವಾಸ್ತವ ನೈಸರ್ಗಿಕವಾಗಿ ಬೆಳೆಯುವ ವೈವಿಧ್ಯಮಯ ಜಾತಿಯ ಗಿಡಮರದ ದಟ್ಟಕಾಡು ಮಳೆ ತರಿಸುವುದು. ಈ ಎಲ್ಲಾ ಅಂಶಗಳನ್ನು ಒತ್ತಿ ಹೇಳುವ ಉದ್ದೇಶ ಸೂಳೆಕೆರೆಯೂ ಹಾಗಾಗದಿರಲಿ ಎಂಬ ಸದಾಶಯ.
ಸೂಳೆಕೆರೆಯಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಖಾಸಗಿ ಕಂಪನಿಯೊಂದು ನೀಡಿದ ಪ್ರಸ್ತಾವವನನ್ನು ಪರಿಶೀಲಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಅನುಮೋದನಾ ಸಮಿತಿ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಪರಿಸರ ಕಾಳಜಿಯ ಸಾರ್ವಜನಿಕರಲ್ಲಿ ತಲ್ಲಣ ಉಂಟಾಗಿದೆ. ವಿದ್ಯುತ್ ಉತ್ಪಾದನೆ ಘಟಕ ಕಾರ್ಯಾರಂಭ ಮಾಡಿದಲ್ಲಿ ಸೈಲೆಂಟ್ ವ್ಯಾಲಿಯೆಂದೇ ಗುರುತಿಸಿಕೊಂಡ ಸೂಳೆಕೆರೆ ಗಿಜಿಗುಡುವ ವಾಣಿಜ್ಯ ಪ್ರದೇಶವಾಗಿ ಪರಿವರ್ತಿತಗೊಳ್ಳುವುದು. ಇದರಿಂದ ಇಲ್ಲಿನ ಪರಿಸರಕ್ಕೆ ಹಾನಿ ಖಂಡಿತ. ಈ ಹಿನ್ನೆಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಏನಿದು ವಿದ್ಯುತ್ ಉತ್ಪಾದನೆ:ಬೆಂಗಳೂರು ಮೂಲದ ಖಾಸಗಿ ಕಂಪನಿಯೊಂದು ಸೂಳೆಕೆರೆಯಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಪ್ರಸ್ತಾವ ಸಲ್ಲಿಸಿದೆ. ಪರ್ವ ಜನರೇಷನ್ ಪಂಪ್ ಸ್ಟೊರೇಜ್ ಪ್ರಾಜೆಕ್ಟ್ ಹೆಸರಿನಲ್ಲಿ ರೂ.1347 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಗೆ ಪ್ರಸ್ತಾವನೆಯಲ್ಲಿದೆ. ಚನ್ನಗಿರಿ ತಾಲ್ಲೂಕಿನ ಸೋಮಶೆಟ್ಟಿ ಹಳ್ಳಿ ಹಾಗೂ ಅರಿಶಿನಘಟ್ಟ ಗ್ರಾಮಗಳಲ್ಲಿ ಯೋಜನೆ ಅನುಷ್ಟಾನಕ್ಕೆ ಆಯ್ಕೆಮಾಡಿಕೊಳ್ಳಲಾಗಿದೆ. ಸೂಳೆಕೆರೆಯಿಂದ 0.279 ಟಿಎಂಸಿ ನೀರನ್ನು ಎತ್ತರದ ಗುಡ್ಡಕ್ಕೆ ಪಂಪ್ ಮಾಡಲಾಗುವುದು. ಅಲ್ಲಿಂದ ನೀರನ್ನು ಲಿಂಗನಮಕ್ಕಿ ಮಾದರಿಯಲ್ಲಿ ದುಮ್ಮುಕ್ಕಿಸಿ ವಿದ್ಯುತ್ ತಯಾರು ಮಾಡಲು ಪ್ರಸ್ತಾವನೆಯಲ್ಲಿ ಮಂಡಿಸಲಾಗಿದೆ. ಗರಿಷ್ಟ 25 ಮೆಗಾವ್ಯಾಟ್ ವಿದ್ಯುತ್ ತಯಾರಿಕೆ ಗುರಿ ಸೂಚಿಸಲಾಗಿದೆ.
ಈ ಯೋಜನೆಗೆ 201 ಎಕರೆ ಭೂಮಿ ಅಗತ್ಯವಿದೆ. ಅರಣ್ಯ ಇಲಾಖೆ 137 ಎಕರೆ, ಹಾಗೂ 67 ಎಕರೆ ಖಾಸಗಿ ಜಮೀನು ನೀಡುವಂತೆ ಕಂಪನಿ ಪ್ರಸ್ತಾವನೆಯಲ್ಲಿ ನಮೂದಿಸಿದೆ. ಈ ಪ್ರಸ್ತಾವಣೆ ಜಿಲ್ಲಾಡಳಿತಕ್ಕೆ ರವಾನಿಸಲಾಗಿದೆ. ಸ್ಥಳ ಪರಿಶೀಲನೆ ನಡೆಸಲು ಅನುಮೋದನಾ ಸಮಿತಿ ತಿಳಿಸಿದೆ.
ಯೋಜನೆಗೆ ವಿರೋಧ:ಚನ್ನಗಿರಿ ಕ್ಷೇತ್ರದ ಶಾಸಕ ಹಾಗೂ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ನೀರಾವರಿ ಪ್ರದೇಶ, ಕುಡಿಯುವ ನೀರು ಹಾಗೂ ಮೀನುಗಾರರ ಜೀವನದ ಮೂಲ ಸೂಳೆಕೆರೆ. ಯೋಜನೆಗೆ ಅಸ್ತು ನೀಡಿದರೆ ದೊಡ್ಡಮಟ್ಟದಲ್ಲಿ ಪರಿಸರ ಹಾನಿಗೆ ದಾರಿ ಮಾಡಿಕೊಡಲಿದೆ. ಸೂಳೆಕೆರೆ ಗುಡ್ಡದಲ್ಲಿ ಪ್ಲಾಟಿನಂ ಹಾಗೂ ಯುರೇನಿಯಂ ನಿಕ್ಷೇಪ ಇರುವುದರಿಂದ ದುರುದ್ದೇಶದಿಂದ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೈಗಾರಿಕಾ ಸಚಿವರಿಗೆ ಹಾಗೂ ಜಲ ಸಂಪನ್ಮೂಲ ಸಚಿವರಿಗೆ ಯೋಜನೆಗೆ ಅನುಮತಿ ನೀಡಬಾರದೆಂದು ಮನವಿ ಮಾಡಿದ್ದೇನೆ. ಅದನ್ನು ಮೀರಿ ಅನುಮತಿ ನೀಡಿದಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಈಚೆಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅರಿಶಿನಘಟ್ಟದ ಬಳಿ ಸ್ಥಳ ಪರಿಶೀಲನೆ ನಡೆಸಿದರು. ಅವರ ಅಭಿಪ್ರಾಯದಲ್ಲಿ ದೇವರು ಕೊಟ್ಟ ಸುಂದ ಕೆರೆ ಸೂಳೆಕೆರೆ. ಇದನ್ನು ನಂಬಿ 4 ರಿಂದ 5 ಲಕ್ಷ ಜನರು ಜೀವನ ನಡೆಯುತ್ತಿದೆ. ಯೋಜನೆಗೆ ಅನುಮತಿ ನೀಡಿದರೆ ತೀವ್ರ ತೊಂದರೆ ಅನುಭವಿಸುವರು. ಪರಿಸರ ಹಾಗೂ ಅರಣ್ಯ ಇಲಾಖೆಗಳಿಂದ ಗುಡ್ಡಗಳ ಮಾಹಿತಿ ಪಡೆದು ನಾಲ್ಕೈದು ದಿನಗಳಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಇರುವವರೆಗೂ ಅನುಮತಿ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಇದರಿಂದ ಸುತ್ತಮುತ್ತಲಿನಗ ಗ್ರಾಮಸ್ಥರಲ್ಲಿ ಭರವಸೆ ಮೂಡಿತು.
ಖಡ್ಗ ಸಂಘದ ಹೋರಾಟ: ಕಳೆದು ಮೂರ್ನಾಲ್ಕು ವರ್ಷದಿಂದ ಸೂಳೆಕೆರೆ ರಕ್ಷಣೆಗೆ ತನು,ಮನ ಧನದಿಂದ ಹೋರಾಟ ನಡೆಸುತ್ತಿರುವ ಖಡ್ಗ ಸಂಘ ಯೋಜನೆ ಪ್ರಸ್ತಾವನೆಗೆ ತೀವ್ರ ಹೋರಾಟ ನಡೆಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಿದೆ.
ಇದೊಂದು ಅವೈಜ್ಞಾನಿಕ ಯೋಜನೆ. ನೀರನ್ನು ಗುಡ್ಡದ ಮೇಲಕ್ಕೆ ಎತ್ತಲು ಎಷ್ಟು ವಿದ್ಯುತ್ ಬೇಕು. ಅಲ್ಲಿಂದ ನೀರು ದುಮ್ಮುಕ್ಕಿಸಿ ಎಷ್ಟು ವಿದ್ಯುತ್ ಉತ್ಪಾದನೆ ಸಾಧ್ಯ. ಇದು ಲಾಭಕರ ಅಲ್ಲವೇ ಅಲ್ಲ. ಪರಿಸರಕ್ಕೆ ದೊಡ್ಡ ಹಾನಿ ಸಂಭವಿಸಲಿದೆ. ಇಲ್ಲಿನ ರೈತರ, ಜನರ ಹಾಗೂ ಮೀನುಗಾರರ ಜೀವನದ ಮೇಲೆ ದುಷ್ಪರಿಣಾಮ ಬೀರಲಿದೆ. ಯೋಜನೆ ಅನುಷ್ಟಾನಗೊಳ್ಳದಂತೆ ತಡೆಯಲು ಯಾವುದೇ ಹೋರಾಟಕ್ಕೆ ಸಿದ್ದ ಎಂದು ಖಡ್ಗ ಸಂಘದ ರಾಜ್ಯಾಧ್ಯಕ್ಷ ಬಿ.ಆರ್.ರಘು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.