28 C
Karnataka
Monday, April 21, 2025
    Home Blog Page 16

    Sri Lanka: ಶ್ರೀಲಂಕಾ ದಂಗೆ: ಅಧಿಕೃತ ನಿವಾಸದಿಂದ ಪರಾರಿಯಾದ ಅಧ್ಯಕ್ಷ

    COLOMBO, Sri Lanka

    ತೀವ್ರ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಶ್ರೀಲಂಕಾ ಜನತೆಯ ಸಹನೆ ಕಟ್ಟೆ ಒಡೆದಿದೆ. ಇಂದು ಅಧ್ಯಕ್ಷ ಗೋಟಬಯ ರಾಜಪಕ್ಸ ಅವರ ಪದತ್ಯಾಗಕ್ಕೆ ಒತ್ತಾಯಿಸಿ ಲಕ್ಷಾಂತರ ಜನರು ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕುತ್ತಿದ್ದಂತೆ ಅವರು ಅಲ್ಲಿಂದ ಪಲಾಯನಗೈದಿದ್ದಾರೆ. ಕೊಲಂಬೊದಲ್ಲಿರುವ ಅಧಿಕೃತ ನಿವಾಸದಿಂದ ಅಧ್ಯಕ್ಷರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಉನ್ನತ ರಕ್ಷಣಾ ಮೂಲಗಳು ತಿಳಿಸಿವೆ.

    “ಅಧ್ಯಕ್ಷರನ್ನು ಸುರಕ್ಷಿತವಾಗಿ ಬೇರೆಡೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ, ಉದ್ರಿಕ್ತ ಪ್ರತಿಭಟನಾಕಾರರು ಅಧ್ಯಕ್ಷರ ನಿವಾಸಕ್ಕೆ ನುಗ್ಗುವ ಸಾಧ್ಯತೆಯನ್ನು ತಡೆಯಲು ಭದ್ರತಾಪಡೆ ಗಾಳಿಯಲ್ಲಿ ಗುಂಡು ಹಾರಿಸಿದೆ. ಈ ಸಂದರ್ಭ 14 ಜನಕ್ಕೆ ಗಾಯಗಳಾಗಿವೆ. ಇಂದು ಸರ್ಕಾರದ ವಿರುದ್ಧ ಕೊಲಂಬೊ ಸೇರಿದಂತೆ ಪಶ್ಚಿಮ ಪ್ರಾಂತ್ಯದಲ್ಲಿ ಯೋಜಿತ ಪ್ರತಿಭಟನೆಗೆ ಮುನ್ನ ದೇಶದ ಏಳು ವಲಯಗಳಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಶ್ರೀಲಂಕಾ ಪೊಲೀಸರು ತೆಗೆದುಹಾಕಿದ್ದರ ಮಧ್ಯೆ ಈ ಘಟನೆ ನಡೆದಿದೆ.

    ದೇಶದ ಆರ್ಥಿಕ ದುಸ್ಥಿಗೆ ವಿದೇಶಿ ಸಾಲದ ಮರುಪಾವತಿ ವೈಫಲ್ಯಕ್ಕೆ ಶ್ರೀಲಂಕಾ ಸರ್ಕಾರ ಕಾರಣವಾಗಿದ್ದು,ಶ್ರೀಲಂಕಾದ ಒಟ್ಟು ವಿದೇಶಿ ಸಾಲವು 51 ಬಿಲಿಯನ್ ಅಮೆರಿಕಾ ಡಾಲರ್ ಆಗಿದೆ.

    13 ಜಿಲ್ಲೆಗಳಲ್ಲಿ ಪ್ರವಾಹ ಹಿನ್ನಲೆ: ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ಆದ್ಯತೆ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸೂಚನೆ

    BENGALURU JUNE 8
    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು 13 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು.
    ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಕಳೆದ ಮೂರು ನಾಲ್ಕು ದಿನಗಳಿಂದ ಕರಾವಳಿ, ಮಲೆನಾಡು, ಹಾಗೂ ಬಯಲು ಸೀಮೆಯಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದ್ದು, ಜನ, ಜಾನುವಾರುಗಳಿಗೆ ತೊಂದರೆಯಾಗಿದೆ. 13 ಜಿಲ್ಲೆಗಳಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಇದ್ದು, 17 ತಾಲ್ಲೂಕುಗಳಲ್ಲಿ ಮಳೆ ಹಾವಳಿ ಹೆಚ್ಚಾಗಿದೆ. ಇದುವರೆಗೂ ಜೂನ್ 1 ರಿಂದ ಈವರೆಗೆ 12 ಜನ ಮೃತಪಟ್ಟಿದ್ದು, 65 ಜಾನುವಾರುಗಳಿಗೆ ಜೀವಹಾನಿಯಾಗಿದೆ ಎಂದು ತಿಳಿಸಿದರು.

    ಭೂ-ಕುಸಿತ ಉಂಟಾಗಿರುವ ಸ್ಥಳಗಳಲ್ಲಿ ಕೆಳಭಾಗದಲ್ಲಿರುವ ಜನರ ಸ್ಥಳಾಂತರಕ್ಕೆ ಆದೇಶಿಸಲಾಗಿದೆ. ಕೆಲವೆಡೆಗಳಲ್ಲಿ ಸಂಪೂರ್ಣ ಭೂಕುಸಿತವಾಗಿಲ್ಲ, ಭೂಮಿ ಸ್ವಲ್ಪ ಕುಸಿದಿದ್ದು ರಸ್ತೆ ಸಂಚಾರ ಸ್ಥಗಿತವಾಗಿದೆ. ಅದನ್ನು ಟಾಸ್ಕ್ ಪೋರ್ಸ್ ಗಳನ್ನು ರಚಿಸಿ ಕೂಡಲೇ ತೆರವುಗೊಳಿಸಲು ಸೂಚನೆ ನೀಡಲಾಯಿತು ಎಂದರು.

    ಮನೆ ಹಾನಿಯಾದಲ್ಲಿ ಭಾಗಶಃ ಅಥವಾ ನೀರು ನುಗ್ಗಿರುವ ಮನೆಗಳಿಗೆ ಮೊದಲು 10 ಸಾವಿರ ತುರ್ತು ಪರಿಹಾರ ಕೂಡಲೇ ನೀಡುವಂತೆ ಆದೇಶ ಮಾಡಿದ್ದು, ನಂತರ ಹಾನಿ ಪ್ರಮಾಣವನ್ನು ವರದಿಯನ್ನು 2-3 ದಿನಗಳಲ್ಲಿ ಜಿಲ್ಲಾ ಪಂಚಾಯತ್ ನ ಇಂಜಿನಿಯರ್ ಗಳಿಂದ ಪಡೆದು ನಿಯಮಾನುಸಾರ ಅಂದಾಜು ಮಾಡಿ, ವರ್ಗೀಕರಿಸಿ, ರಾಜೀವ್ ಗಾಂಧಿ ವಸತಿ ನಿಗಮದ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.

    ಮಳೆ ಪ್ರಮಾಣ ಕಡಿಮೆಯಾದ ನಂತರ ಬೆಳೆ ಹಾನಿ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಲು ಪಡೆದು ಪರಿಹಾರ ನೀಡುವಂತೆ ಸೂಚಿಸಲಾಯಿತು.ಎಸ್.ಡಿ.ಆರ್.ಎಫ್/ಎನ್.ಡಿ.ಆರ್.ಎಫ್ ತಂಡಗಳನ್ನು ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳವಂತೆ, ಸೂಚಿಸಲಾಯಿತು.
    ಮಳೆಯಿಂದ ಹಾನಿಗೊಳಗಾದ ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ರಸ್ತೆ ದುರಸ್ತಿಯನ್ನು ಆದ್ಯತೆ ಮೇರೆಗೆ ಕೈಗೊಂಡು ಸಂಚಾರ ಸಂಪರ್ಕ ಸಮರ್ಪಕವಾಗಿರುವಂತೆ ಎಚ್ಚರ ವಹಿಸಲು ಸೂಚನೆ ನೀಡಿದ್ದು, ಹಾನಿಯಾದ ಪ್ರಮಾಣದ ವರದಿಯನ್ನು ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
    ವಿದ್ಯುತ್ ಕಂಬಗಳು ಬಿದ್ದು ಹೋದಲ್ಲಿ ಕೂಡಲೇ ಸರಿಪಡಿಸಿ, ವಿದ್ಯುತ್ ಸರಬರಾಜು ಅಡಚಣೆಯಾಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ.

    ಕಡಲ ಕೊರೆತ ಆದಲ್ಲಿ ತುರ್ತು ಕಾಮಗಾರಿ ಕೂಡಲೇ ಕೈಗೊಂಡು ಹೆಚ್ಚಿನ ಹಾನಿಯಾಗದಂತೆ ತಾತ್ಕಾಲಿಕವಾಗಿ ಕಡಲ ಕೊರೆತ ಆಗದಂತೆ ಕ್ರಮವಹಿಸಬೇಕು. ರಸ್ತೆಗಳು ಕೊರೆತ ಆಗಿದ್ದು, ಅವುಗಳನ್ನು ಪುನಃಸ್ಥಾಪಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ತಿಳಿಸಲಾಗಿದೆ. ಈ ಬಾರಿ ಸರ್ಕಾರವು ಶಾಶ್ವತವಾಗಿ ಕಡಲ ಕೊರೆತ ಆಗದಂತೆ ಒಂದು ವಿಶೇಷ ತಂತ್ರಜ್ಞಾನದ ಮೂಲಕ ತೆಡೆದು ಇನ್ನು ಮುಂದೆ ಶಾಶ್ವತ ಕಡಲ ಕೊರೆತ ಆಗದ ರೀತಿಯಲ್ಲಿ ಕ್ರಮವಹಿಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

    ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಮನ್ವಯದೊಂದಿಗೆ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ರಚಿಸಿ, ನೇರ ಸಂಪರ್ಕ ಹೊಂದಲು ತಿಳಿಸಲಾಗಿದೆ. ನಿಯಂತ್ರಣ ಕೊಠಡಿ ಸ್ಥಾಪಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸೂಚಿಸಲಾಯಿತು. ಪೊಲೀಸರು ಸೇವೆಗೆ ದಿನದ 24 ಗಂಟೆಯೂ ಲಭ್ಯರಿರಬೇಕು.

    ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬಳಿ ಒಟ್ಟು 735.59 ಕೋಟಿ ರೂ. ಲಭ್ಯವಿದೆ.ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದ್ದು ಬೀದರ್ ಜಿಲ್ಲೆಯಲ್ಲಿ ರೇಡ್ ಅಲರ್ಟ್, ಕರಾವಳಿ ಪ್ರದೇಶ ಹಾಗೂ ಹಾವೇರಿ ಜಿಲ್ಲೆಯಲ್ಲಿ ಆರೋಜ್ ಅಲರ್ಟ್ ಇದ್ದು, ಒಟ್ಟಾರೆ ವ್ಯಾಪಕವಾಗಿ ಮುಂದಿನ 3-4 ದಿನಗಳಲ್ಲಿ ಮಳೆಯಾಗುವಂತ ಸೂಚನೆಯನ್ನು ಹವಾಮಾನ ಇಲಾಖೆಯವರು ತಿಳಿಸಿರುತ್ತಾರೆಂದು ಬೊಮ್ಮಾಯಿ ಅವರು ತಿಳಿಸಿದರು.
    ಸದ್ಯದ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಕೊಯ್ನಾ ಡ್ಯಾಂ ಹಾಗೂ ಹೊರ ರಾಜ್ಯದ ಇತರೆ ಡ್ಯಾಂ ಗಳಲ್ಲಿ ಪೂರ್ಣ ಪ್ರಮಾಣದ ನೀರು ತುಂಬಿರುವುದಿಲ್ಲ. ರಾಜ್ಯದ ಘಟಪ್ರಭ, ಮಲಪ್ರಭ, ಹಿಡ್ಕಲ್ ಡ್ಯಾಂ ಹಾಗೂ ನವಿಲತೀರ್ಥದಲ್ಲಿ ಶೇಕಡಾ 50ರಷ್ಟು ಪ್ರಮಾಣ ನೀರು ತುಂಬಿದ್ದು, ಇನ್ನೂ ಶೇಕಡಾ 50ರಷ್ಟು ನೀರು ತುಂಬಲು ಬಾಕಿ ಇದೆ. ಹೀಗಾಗಿ ಹೊರ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಎಚ್ಚರವಹಿಸುವಂತೆ ಸೂಚನೆ ನೀಡಿದ್ದು, ಅಂತರರಾಜ್ಯದ ಸಮಿತಿ ಇದ್ದು, ಹೊರ ರಾಜ್ಯ ಮತ್ತು ರಾಜ್ಯ ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು

    ಜಯನಗರ ಕ್ರಾಸಿಂಗ್‌ನಲ್ಲಿ


    ನಾಡಿನ ಹೆಸರಾಂತ ಸಾಹಿತಿ- ಕಥೆಗಾರ ಕೆ . ಸತ್ಯನಾರಾಯಣ ಅವರ ಹೊಸ ಕಥಾ ಸಂಕಲನ ಮನುಷ್ಯರು ಬದಲಾಗುವರೆ? ಬಿಡುಗಡೆಗೆ ಸಿದ್ಧವಾಗಿದೆ. ಗೀತಾಂಜಲಿ ಪ್ರಕಾಶನ ಈ ಕೃತಿ ಪ್ರಕಟಿಸುತ್ತಿದೆ. ನಮ್ಮ ಓದುಗರಿಗಾಗಿ ಅದರಿಂದ ಆಯ್ದ ಜಯನಗರ ಕ್ರಾಸಿಂಗ್ ನಲ್ಲಿ ಕಥೆಯನ್ನು ಇಲ್ಲಿ ಸಾದರ ಪಡಿಸುತ್ತಿದ್ದೇವೆ.


    ಕೆ ಸತ್ಯನಾರಾಯಣ

    ಅಪ್ಪನ ಕರ್ಮಾಂತರಗಳಿಗೆ ಡೆನ್‌ವರ್‌ನಿಂದ ಬಂದಿದ್ದ ಮಮತಾ ಕೃತಜ್ಞತೆಯ ಭಾವದಿಂದ ತೊಯ್ದು ಹೋಗಿದ್ದಳು. ಮಮತಾ ತಾಯಿ ಸತ್ತು ಅದೆಷ್ಟು ವರ್ಷಗಳಾಗಿತ್ತು. ಮಮತಾಳನ್ನು ಹೆತ್ತ ಹತ್ತು ದಿವಸದಲ್ಲೇ ಸತ್ತು ಹೋಗಿದ್ದರು. ಇವಳ ಹೆರಿಗೆಗೆ ಮುಂಚೆ ಐದು ಸಲ ಗರ್ಭಪಾತವಾಗಿತ್ತಂತೆ. ಡಾಕ್ಟರ್‌ ಇನ್ನು ಮುಂದೆ ಗರ್ಭಿಣಿಯಾಗುವುದು ಬೇಡ ಬೇಡ ಎಂಬ ಎಚ್ಚರಿಕೆಯ ಮಾತನ್ನು ನೂರಾರು ಸಲ ಹೇಳಿದ್ದರೂ, ಇಲ್ಲ, ಇಲ್ಲ, ಇದೊಂದು ಛಾನ್ಸ್‌ ಕೊಡಿ, ಕೊನೆ ಅವಕಾಶ ಅಂತ ಗೋಗರೆದು ಸವಾಲಾಗಿ ತೆಗೆದುಕೊಂಡ ಒಂಭತ್ತು ತಿಂಗಳಾದ ಮೇಲೂ ಹದಿನಾರು ದಿನ ಸತಾಯಿಸಿ, ಸಿಸೇರಿಯನ್‌ ಹೆರಿಗೆಯಲ್ಲಿ ಹುಟ್ಟಿದವಳು ಮಮತಾ. ಹಾಗಾಗಿ ತಾಯಿಯನ್ನು ನೋಡಲೇ ಇಲ್ಲ. ಇಡೀ ಜೀವನವನ್ನು ಅವಳು ಹೇಗಿದ್ದಿರರಬಹುದು, ಹತ್ತು ದಿನದಲ್ಲಿ ಎಷ್ಟೆಷ್ಟು ಸಲ ಎಲ್ಲೆಲ್ಲಿ ತನ್ನನ್ನು ಮುಟ್ಟಿರಬಹುದು, ತಾನು ಸಾಯುತ್ತೇನೆ, ಸತ್ತೇ ಹೋಗುತ್ತೇನೆ ಅಂತ ಖಚಿತವಾದಾಗ ನನ್ನ ಕಡೆ ಹೇಗೆ ನೋಡಿ ಕಣ್ಣು ತುಂಬಿಕೊಂಡಿರಬಹುದು ಎಂಬ ಲೆಕ್ಕಾಚಾರ, ಕನಸುಗಾರಿಕೆಯಲ್ಲಿ ಮಮತಾ ಕಳೆದಿದ್ದಾಳೆ.

    ಆದರೆ ತಾಯಿಗೆ ತುಂಬಾ ಖ್ಯಾತಿಯಿತ್ತು. ಮೈಸೂರು ವಿಶ್ವವಿದ್ಯಾಲಯಕ್ಕೇ ಮನಶ್ಯಾಸ್ತ್ರದಲ್ಲಿ ಮೊದಲ ಸ್ನಾತಕೋತ್ತರ ಪದವೀಧರೆಯಂತೆ. ಮನಶ್ಯಾಸ್ತ್ರದ ಮಾಧವಿ ಎಂದೇ ಹೆಸರಾಗಿದ್ದ ಅವರು ಎಂ.ಎ ಮಾಡಿದ ಮೇಲೆ ಇನ್ನೊಬ್ಬ ಹೆಂಗಸು ಅದೇ ಎಂ.ಎ ಮಾಡುವುದಕ್ಕೆ ಇನ್ನೂ ಹದಿನಾರು ವರ್ಷಗಳಾಯಿತಂತೆ. ಪಠ್ಯ ಪುಸ್ತಕಗಳ ಲೇಖಕಿ ಬೇರೆ. ಇನ್ನೂ ಮುಖ್ಯವಾಗಿ ಬೆಂಗಳೂರು, ಊಟಿ, ವೆಲ್ಲೂರಿನ ಆಸ್ಪತ್ರೆಗಳಿಗೆಲ್ಲ ಹೋಗಿ ಕೌನ್ಸಿಲರ್‌ ಆಗಿ ಕೆಲಸ ಕೂಡ ಮಾಡುತ್ತಿದ್ದರು. ತುಂಬಾ ಲಕ್ಷಣವಾಗಿದ್ದರು ಮತ್ತು ಪ್ರತಿ ತಿಂಗಳೂ ಒಂದಲ್ಲ ಒಂದು ಹೊಸ ಕೇಶ ವಿನ್ಯಾಸವನ್ನು ವಿದ್ಯಾರ್ಥಿನಿಯರಿಗೆ ತೋರಿಸುತ್ತಿದ್ದರಂತೆ ಎಂದೂ ಕೂಡ ಮಮತಾ ಕೇಳಲ್ಪಟ್ಟಿದ್ದಾಳೆ.

    ತಂದೆ ಹಳೇ ಮೈಸೂರು ಸೀಮೆಗೇ ಪ್ರಸಿದ್ಧ ಟೆನಿಸ್‌ ಆಟಗಾರ. ಜೊತೆಗೆ ಕ್ರಿಕೆಟ್‌ ಪಂದ್ಯಗಳ ವೀಕ್ಷಕ ವಿವರಣೆ ನೀಡುವ ಹವ್ಯಾಸ. ವೃತ್ತಿಯಲ್ಲಿ ಜೀವಶಾಸ್ತ್ರದ ಅಧ್ಯಾಪಕ. ಊಟಿ ಮತ್ತು ಬೆಂಗಳೂರಿನಲ್ಲಿ ನಡೆಯುವ ಡರ್ಬಿ ರೇಸ್‌ಗಳಿಗೆ ಗಂಡ-ಹೆಂಡತಿ ಇಬ್ಬರೂ ಕಾರು ಮಾಡಿಕೊಂಡು ಎರಡೆರಡು ದಿನ ಹೋಗಿ ಬರುತ್ತಿದ್ದರಂತೆ.

    ಆ ಕಾಲಕ್ಕೆಕ್ಕೇ ಮೈಸೂರಿನ ಸಾಂಸ್ಕೃತಿಕ, ಸಾರ್ವಜನಿಕ ವಲಯದಲ್ಲಿ ಅನ್ಯೋನ್ಯವಾದ ಶೃಂಗಾರಮಯ ದಾಂಪತ್ಯಕ್ಕೆ ಇವರೇ ಮಾನದಂಡ, ಸ್ಫೂರ್ತಿ ಎಲ್ಲವೂ.

    ಮಮತಾಗೆ ಅಮ್ಮನ ಫೋಟೋ ಗೊತ್ತು, ಪ್ರಸಿದ್ಧಿ ಗೊತ್ತು. ಜಗತ್ತಿನಲ್ಲೆಲ್ಲ ಹರಡಿಕೊಂಡಿರುವ ಅಮ್ಮನ ಬಂಧು ಬಳಗದ ಮೂಲಕ ಎಲ್ಲವನ್ನೂ ಕೇಳಿ, ಕೇಳಿಸಿಕೊಂಡೇ ಬಾಲ್ಯ, ಯೌವನವನ್ನು ಕಳೆದಳು. Micro-Biology ಓದಲು ಅಮೆರಿಕದಲ್ಲಿ ವಿದ್ಯಾರ್ಥಿ ವೇತನ ಸಿಕ್ಕಾಗ ಹೋಗಲು ಅಪ್ಪ ಬೇಡವೆನ್ನಲಿಲ್ಲ. ಆಮೇಲೆ, ಅಲ್ಲೇ ಉದ್ಯೋಗ, ಮದುವೆ, ಮಕ್ಕಳು ಅಂತ ವರ್ಷಗಳ ಮೇಲೆ ದಶಕಗಳು ಕೂಡ ಕಳೆದುಹೋದವು. ಹಿನ್ನೋಟದಿಂದ ಈಗ ಎಲ್ಲವನ್ನೂ ನೋಡಿದಾಗ, ನೆನಪಿಸಿಕೊಂಡಾಗ ಎಷ್ಟೊಂದು ದೀರ್ಘವಾದ ಬದುಕು ಎಂದೂ ಅನಿಸುತ್ತೆ. ಕೊನೆಗೆ ಜೀವನವೆಂದರೆ ಇಷ್ಟು ಕಡಿಮೇನಾ ಎಂದು ಕೂಡ ಅನಿಸುತ್ತದೆ.

    ಆದರೆ ಅಮ್ಮ ತನ್ನ ಬದುಕಿನಲ್ಲಿ ಇಲ್ಲವೆನ್ನುವ ಭಾವನೆ ಮಮತಾಗೆ ಬರದೇ ಇರುವುದಕ್ಕೆ ಎರಡು ಕಾರಣ. ಮಾಧವಿಯ ತಾಯಿ ರಾಧಮ್ಮ ಇನ್ನೂ ಬದುಕಿದ್ದು, ತಾಯಿಯಿಲ್ಲದ ಕೊರತೆಯನ್ನು ತುಂಬಿದ್ದರು. ಹಾಗೆ ತಂದೆ ಕೂಡ ಮತ್ತೊಂದು ಮದುವೆ ಆಗದೆ ವಿಧುರರಾಗಿಯೇ ಉಳಿದು ಮಗಳಿಗೆ ಯಾವುದೇ ರೀತಿಯ ಭಾವನಾತ್ಮಕ ಮಾನಸಿಕ ಕೊರೆ ಆಗದ ಹಾಗೆ ನೋಡಿಕೊಂಡರು.

    ಇದೆಲ್ಲದರ ಬೆಲೆ ಮಹತ್ವ ಮಮತಾಗೆ ಗೊತ್ತಾದದ್ದು ನಿಧಾನವಾಗಿ, ಕ್ರಮೇಣವಾಗಿ. ಅದೂ ಅವಳೇ ಸಂಸಾರಸ್ಥೆಯಾಗಿ ಆಗಾಗ ಅಪ್ಪನನ್ನು ನೋಡಲು ಮೈಸೂರಿಗೆ ಬರುತ್ತಿದ್ದಾಗ. ಅವರ ಒಂಟಿತನ, ಇನ್ನೂ ದೇಹವನ್ನು ಆರೋಗ್ಯವಾಗಿ, ಸೂಟಿಯಾಗಿ ಇಟ್ಟುಕೊಂಡಿರುವುದು, ಅಮ್ಮನ ಸಾವಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರತಿ ವರ್ಷವೂ ಮಹಿಳಾ ಸಮಾಜಕ್ಕೆ ಏಳು ಟೈಲರಿಂಗ್‌ ಮೆಶಿನ್‌ಗಳನ್ನು ಉಡುಗೊರೆಯಾಗಿ ನೀಡುತ್ತಿದ್ದುದು, ಅಮ್ಮನ ಹೆಸರಿನಲ್ಲಿ ಮನಶ್ಯಾಸ್ತ್ರದ ವಿದ್ಯಾರ್ಥಿನಿಯರಿಗೆ Subject Scholarship ಕೊಡುತ್ತಿದ್ದುದು. ಅಮ್ಮನ ಬಗ್ಗೆ ಇಷ್ಟೊಂದು ವರ್ಷಗಳ ನಂತರ ಮಾತನಾಡುವಾಗಲೂ ಕಣ್ಣಲ್ಲಿ ಕಾಣಿಸಿಕೊಳ್ಳುವ ಮಿಂಚು. ಅಮೆರಿಕದಲ್ಲಿ ಬದುಕುತ್ತಿದ್ದ ಅವಳಿಗೆ ಇದೆಲ್ಲ ದೇವ ದುರ್ಲಭವೆಂದೇ ಮತ್ತೆ ಮತ್ತೆ ಅನಿಸುತ್ತಿತ್ತು. ಯಾರ ಬಗ್ಗೆಯೇ ಆಗಲಿ ನೆನಪು, ಕೃತಜ್ಞತೆ, ಪ್ರೀತಿಯೆಲ್ಲವೂ ಅಷ್ಟೊಂದು ದೀರ್ಘಕಾಲ ಉಳಿಯಬಹುದೆ? ಒಂದೇ ಪ್ರಮಾಣದ ತೀವ್ರತೆಯಲ್ಲಿ ಜೀವನದುದ್ದಕ್ಕೂ ಇರಬಹುದೇ? ಎಂಬ ಆಶ್ಚರ್ಯವೇ ಮಮತಾಳನ್ನು ಮತ್ತೆ ಮತ್ತೆ ಕಾಡುತ್ತಿತ್ತು.

    ಈ ಕಾರಣಕ್ಕೋ ಏನೋ ಅಜ್ಜಿ ಕೂಡ ಅಪ್ಪನ ಜೊತೆಯೇ ಉಳಿದುಬಿಟ್ಟರು. ಅಮ್ಮನ ಸಹೋದರ-ಸಹೋದರಿಯರು ಇದ್ದರೂ, ಆಗಾಗ್ಗೆ ಅವರಲ್ಲಿಗೆ ಹೋಗಿ ಬಂದು ಮಾಡುತ್ತಿದ್ದರೂ ಜೊತೆಯಲ್ಲಿ ಅಂತ ಉಳಿದದ್ದು ಅಪ್ಪನ ಹತ್ತಿರ ಮಾತ್ರ. ನನಗೆ ಮಾಧವಿ ಮೇಲೆ ಇನ್ನಿಲ್ಲದ ಪ್ರೀತಿ. ಈ ಮನೆಯನ್ನು ಅವಳೇ ನಿಂತು ಕಟ್ಟಿಸಿದ್ದು. ಮೈಸೂರಿನಲ್ಲಿದ್ದ ಎಲ್ಲ ಮನೆಗಳ ವಾಸ್ತು-ವಿನ್ಯಾಸವನ್ನೆಲ್ಲ ಶೋಧಿಸಿ, ಇಟ್ಟಿಗೆ, ಇಟ್ಟಿಗೆ ಕಿಟಕಿ, ಕಿಟಕಿಯನ್ನು ಕೂಡ ಪರೀಕ್ಷಿಸಿ ಕಟ್ಟಿದ ಮನೆ. ಈ ಮನೆಯ ತೋಟವನ್ನು ಒಂಭತ್ತು ಭಾಗ ಮಾಡಿ ಒಂದೊಂದು ಭಾಗಕ್ಕೆ ದಶಾವತಾರದ ಒಂದೊಂದು ಹೆಸರು ಇಟ್ಟು, ಪ್ರತಿ ಭಾಗದಲ್ಲೂ ಚಪ್ಪರ ಎಬ್ಬಿಸಿದ್ದಳು. ಅದನ್ನೆಲ್ಲ ನೋಡಿಕೊಳ್ಳಬೇಕಾದದ್ದು ನನ್ನ ಕರ್ತವ್ಯ ತಾನೆ ಅಂತ ಅಳಿಯನ ಹತ್ತಿರವೇ ಇದ್ದುಬಿಟ್ಟರು.

    ಅಪ್ಪ ಕೂಡ ಮಾಧವಿಯ ತಾಯಿ ಅತ್ತೆಯಲ್ಲ, ಸ್ವಂತ ತಾಯಿ ಇದ್ದ ಹಾಗೆ ಅಂತ ಪದೇ ಪದೇ ಹೇಳುತ್ತಲೇ ಇರೋರು. ಇಂತಹ ಅಪ್ಪ ಇದೀಗ ತೀರಿ ಹೋದರೂ ಮಾಧವಿಯ ತಾಯಿ ಇನ್ನೂ ಬದುಕೇ ಇದ್ದಾರೆ. ಅವರ ವಯಸ್ಸಿಗೆ ಗಟ್ಟಿಮುಟ್ಟಾಗಿಯೇ ಇದ್ದಾರೆ. ದೃಷ್ಟಿ ಮೊದಲಿನಷ್ಟು ಇಲ್ಲ. ಕಿವಿ ಕೂಡ ಚುರುಕಿಲ್ಲ. ಆದರೂ ಕೂಡ ಹಾಸಿಗೆ ಹಿಡಿದು ಮಲಗಿಲ್ಲ. ಸ್ವಂತದ ಕೆಲಸವನ್ನೆಲ್ಲ ಅವರೇ ಮಾಡಿಕೋತಾರೆ. ತರಕಾರಿ ಅಂಗಡಿಗೂ ಯಾರನ್ನಾದರೂ ಜೊತೆ ಮಾಡಿಕೊಂಡು ಹೋಗಿ ಬರುತ್ತಿದ್ದರು. ಆದರೆ ಬೀದಿ ದೀಪಗಳು ಆಗಾಗ್ಗೆ ಕೆಟ್ಟು ಹೋಗುತ್ತೆ ಅನ್ನುವ ಕಾರಣಕ್ಕೆ ಈಚೆಗೆ ಹೋಗುವುದನ್ನು ನಿಲ್ಲಿಸಿಬಿಟ್ಟರು.

    ಯಾರ‍್ಯಾರೋ ಬಂಧು ಬಳಗದವರನ್ನು ಹಿಡಿದು ನಂಬಿಕಸ್ಥ ಪುರೋಹಿತರು, ಅಡುಗೆ ಮಾಡುವವರನ್ನು ಗೊತ್ತು ಮಾಡಿ, ಮಮತಾ ಕರ್ಮಾಂತರಗಳನ್ನು ಮುಗಿಸಿದಳು. ಅಪ್ಪ-ಅಮ್ಮನ ಬಹುಪಾಲು ಸಮಕಾಲೀನರು ತೀರಿ ಹೋಗಿದ್ದರು. ಉಳಿದವರು ಕೂಡ ಶಾಸ್ತ್ರ, ಆಚರಣೆ, ಊಟಗಳಿಗೆ ಬರುವಷ್ಟು ಆರೋಗ್ಯವಾಗಿರಲಿಲ್ಲ. ಬಂದವರಿಗೂ ಕುಳಿತು ಊಟ ಮಾಡುವಷ್ಟು, ಮಾತನಾಡುವಷ್ಟು ಚೈತನ್ಯವಿರಲಿಲ್ಲ. ಕೆಲವರಿಗಂತೂ ನೆನಪಿನ ಸ್ವಭಾವವೇ ತಿರುಚಿ ಹೋಗಿತ್ತು. ಅಪ್ಪ ಎಲ್ಲವನ್ನೂ ಇವಳಿಗೇ ವಿಲ್‌ ಮಾಡಿ ತೀರಿ ಹೋಗಿದ್ದರು. ಮನೆಯೆಲ್ಲ ಬಿಕೋ ಎನ್ನುತ್ತಿತ್ತು. ಮಮತಾ ಸುಮ್ಮನೆ ಕುಳಿತುಕೊಂಡು ಮನೆಯ ತಾರಸಿ, ತೋಟದ ಪಾತಿ, ನಿರ್ಜನ ಬೀದಿಗಳನ್ನು ನೋಡುತ್ತಾ ತಂದೆ-ತಾಯಿ ಬದುಕಿ ಬಾಳಿದ ಊರಿನಲ್ಲಿ ಇನ್ನು ನಾನು ನೆನಪಿನಲ್ಲಿ ಕೂಡ ಇರುವುದಿಲ್ಲ ಎಂಬುದನ್ನು ನೆನಸಿಕೊಳ್ಳುತ್ತಾ ಅಪ್ಪನ ಬದುಕನ್ನು ಮತ್ತೆ ಮತ್ತೆ ಕಟ್ಟಿಕೊಳ್ಳುತ್ತಿದ್ದಳು. ಅಪ್ಪನ ತ್ಯಾಗ, ಒಂಟಿತನ, ಜೀವನದಲ್ಲಿ ಕೊನೆಯ ತನಕ ರುಚಿ-ಆಸಕ್ತಿ ಕಳೆದುಕೊಳ್ಳದೆ ಸಂತೋಷವಾಗೇ ಬದುಕಿದ್ದು, ಎಲ್ಲ ಕಣ್ಣು ಮುಂದೆ ಬರುತ್ತಿತ್ತು. ವಿಷಾದದ ಮೇಲುಸ್ತರ ಮರೆಯಾದ ಮೇಲೆ ಎಲ್ಲವೂ ಸಾರ್ಥಕವಾದದ್ದು, ಪವಿತ್ರವಾದದ್ದು, ಅಪ್ಪ ಇನ್ನೂ ಸತ್ತಿಲ್ಲ, ಸಾಯುವುದೂ ಇಲ್ಲ ಅನಿಸುತ್ತಿತ್ತು.

    ಕರ್ಮಾಂತರದ ಎಂಟನೇ ದಿನದಿಂದ ಅಜ್ಜಿ ರಾಗ ಎಳೆಯುವುದಕ್ಕೆ ಶುರುಮಾಡಿತು. ಯಾಕೆ ಶುರುಮಾಡಿತು, ಹೇಗೆ ಶುರುಮಾಡಿತು ಮಮತಾಗೆ ಗೊತ್ತಿಲ್ಲ. ಮೊದಮೊದಲು ಸುಮ್ಮನೆ ಹೇಳುತ್ತಿದ್ದಾರೆ ಅಂದುಕೊಳ್ಳುತ್ತಿದ್ದಳು. ಆದರೆ ಬರ‍್ತಾ ಬರ‍್ತಾ ದಿನವೆಲ್ಲ ಯಾವಾಗಲೂ ಅದೇ ಮಾತುಗಳು, ಮಾತಿನಲ್ಲಿ ವಿಪರೀತ ಒರಟುತನ, ಹತಾಶೆ. ಮಧ್ಯರಾತ್ರಿ ಎಬ್ಬಿಸಿ ಯಾವ ಯಾವುದೋ ಘಟನೆ, ಕತೆ, ಪ್ರಸಂಗಗಳನ್ನೆಲ್ಲ ಎಡಬಿಡದೆ ಹೇಳುವರು.

    *****

    ನಿಮ್ಮಪ್ಪ ಒಳ್ಳೆಯವರು ನಿಜ. ಆದರೆ ನೀನು ತಿಳಿದುಕೊಂಡಷ್ಟು ದೊಡ್ಡ ಮನುಷ್ಯ ಅಲ್ಲ. ಮಾಧವಿ ಇವನು ಹಾಕಿದ ಗಡಿ ಮೀರುತ್ತಿರಲಿಲ್ಲ. ಇವನು ಹಠ ಹಿಡಿದು ಮಗು ಬೇಡ ಅಂತ ಹೇಳಿದ್ದರೆ, ಅವಳು ಇನ್ನೊಂದು ಮಗುವಿಗೆ ಪ್ರಯತ್ನಿಸುತ್ತಿರಲಿಲ್ಲ. ಆಯ್ತು, ಗಂಡ-ಹೆಂಡತಿ ಸಮಾಚಾರ. ಅದೇನು ಮಾಡಿಕೊಂಡರೋ, ಅದೇನು ಮಾತಾಡಿಕೊಂಡರೋ ನೀನು ಹುಟ್ಟಿದೆ. ಹುಟ್ಟಿದ ಹದಿನೈದು ದಿನಕ್ಕೇ ಮಾಧವಿ ತೀರಿಕೊಂಡಳು. ಮಗಳು ಅಂತ ಹೇಳ್ತಾ ಇಲ್ಲ. ಸಾಯುವ ವಯಸ್ಸಲ್ಲ ಅದು ಅನ್ನುವುದು ಎಲ್ಲರೂ ಹೇಳಿದ ಮಾತು. ಸಾಯಬೇಕಾದ ವ್ಯಕ್ತಿಯಾಗಿರಲಿಲ್ಲ. ನಿಮ್ಮ ಅಮ್ಮ ಬದುಕಿ, ಬಾಳಿ, ಬೆಳಗಬೇಕಾಗಿದ್ದವಳು.

    ಅವಳು ತೀರಿಹೋದ ಮೇಲೆ ಇವನು ಇನ್ನೊಂದು ಲಗ್ನ ಮಾಡ್ಕೋತಾನೆ ಅಂತ ಊರ ತುಂಬಾ ಸುದ್ದಿಯಿತ್ತು. ಆದರೆ ನಿಮ್ಮಮ್ಮ ಸ್ನೇಹಮಯಿ ಹೆಣ್ಣು. ಗಂಡನನ್ನು ಅಷ್ಟೊಂದು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ತುಂಬಾ ಅನ್ಯೋನ್ಯವಾದ ಗಂಡ-ಹೆಂಡತಿ ಅಂತ ಎಲ್ಲರಿಗೂ ನಿಮ್ಮಮ್ಮನೇ ಯಾವಾಗಲೂ ಹೇಳಿಕೊಳ್ಳುತ್ತಿದ್ದಳು. ಎಲ್ಲರ ಕಣ್ಣು ಇವನ ಮೇಲಿತ್ತು. ಆ ಭಯಕ್ಕೇ ಮದುವೆ ಆಗಲಿಲ್ಲ. ಮಾಧವಿ ಹೋದ ಹೊಸತರಲ್ಲಿ ನನ್ನ ಹತ್ತಿರ ಅಷ್ಟೊಂದು ಮಾತು ಕೂಡ ಆಡುತ್ತಿರಲಿಲ್ಲ. ವಯಸ್ಸಾದ ಮುದುಕಿ ಎನ್ನುವ ಗೌರವವೂ ಇಲ್ಲದೆ ರಾತ್ರಿ ಹೊತ್ತು ಕ್ಲಬ್‌ನಿಂದ ತುಂಬಾ ತಡವಾಗಿ ಬರೋನು.

    ದಿನವೂ ಅದೇ ಸುದ್ದಿ, ಅದೇ ಮಾತುಕತೆ. ಆ ಮೇಡಂ ಜೊತೆ ಸಂಬಂಧ; ಕ್ಲಬ್‌ ಪೂವಮ್ಮನ ಜೊತೆ ಸಂಬಂಧ ಇದೆ; ಇವಳ ಜೊತೆ ಶ್ರೀರಂಗಪಟ್ಟಣಕ್ಕೆ ಹೋದರು; ಅವಳ ಜೊತೆ ಈರೋಡ್‌ಗೆ ಹೋದರು; ಗುಟ್ಟಾಗಿ ಬೆಂಗಳೂರಲ್ಲಿ ಒಬ್ಬಳನ್ನು ಮದುವೆ ಆಗಿದ್ದಾರೆ; ಬೆಂಗಳೂರಲ್ಲೇ ಸಂಸಾರ ನಡೀತಾಯಿದೆ; ಶನಿವಾರ ಭಾನುವಾರ ಆಸಾಮಿ ಬೆಂಗಳೂರಿಗೆ ಹೋಗೋದು ಕ್ರಿಕೆಟ್‌ ಮ್ಯಾಚ್‌ ನೋಡೋಕಲ್ಲ, ಹೊಸ ಹೆಂಡತಿ ಜೊತೆ ಸಂಸಾರ ಮಾಡೋಕ್ಕೆ.

    ಇದನ್ನೆಲ್ಲ ನಾನು ಹೇಗೆ ನಿಂದಿಸಿ ಕೇಳುವುದು. ಇಬ್ಬರಿಗೆ ಎಷ್ಟೂ ಅಂತ ಅಡುಗೆ ಬೇಯಿಸಿ ಹಾಕೋಕೆ ಆಗುತ್ತೆ. ಈ ಮನುಷ್ಯ ಹೀಗೆಲ್ಲ ಇದ್ದರೆ ಎರಡು ಹೊತ್ತು ಯಾಕೆ ಬಿಸಿ ಬಿಸಿ ಅಡುಗೆ ಮಾಡಿ ಹಾಕಬೇಕು. ಬೆಳಿಗ್ಗೆ ಒಂದು ಸಲ ಅಡುಗೆ ಮಾಡಿದರೆ ರಾತ್ರಿಯ ತನಕವೂ ಅದೇ ನಡೆಯೋದು. ಒಂದು ದಿನ ಬಾಯಿಬಿಟ್ಟು ಕೇಳಲಿಲ್ಲ, ಯಾಕೆ ಇದೆಲ್ಲ ಅಂತ.

    *****

    ಮಮತಾ ಅಮೆರಿಕಕ್ಕೆ ಹೊರಡಲು ಇನ್ನು ಎರಡು ಹಗಲು, ಒಂದು ರಾತ್ರಿ ಮಾತ್ರ ಇತ್ತು. ಒಂದು ಟ್ಯಾಕ್ಸಿ ಮಾಡಿ ನನ್ನನ್ನು ನಾನು ಹೇಳಿದ ಒಂದು ಜಾಗಕ್ಕೆ ಕರೆದುಕೊಂಡು ಹೋಗು. ಒಂದರ್ಧ ಘಂಟೆಯ ಕೆಲಸ. ಕೊಪ್ಪಲು ಗೇಟಿನಿಂದ ಜಯನಗರ ಗೇಟಿಗೆ ಎಷ್ಟು ಮಹಾದೂರ. ಹೋಗಿ ಬರೋಣ. ಅಜ್ಜಿಯ ಬೇಡಿಕೆ ಶುರುವಾಯಿತು. ಮತ್ತೆ ಮತ್ತೆ ಅದೇ ಬೇಡಿಕೆ.

    ವಿಚಿತ್ರ ಎನಿಸಿತು ಮಮತಾಗೆ. ಯಾರ ಮನೆಗೆ ಹೋಗಬೇಕು? ಎಷ್ಟು ಕೇಳಿದರೂ ಹೇಳಲಿಲ್ಲ. ಮಾಡ್ತೀಯೋ ಇಲ್ಲವೋ ಟ್ಯಾಕ್ಸಿ ಹೇಳು? ಕರೆದುಕೊಂಡು ಹೊಗ್ತೀಯೋ ಇಲ್ಲವೋ? ಅಜ್ಜಿ ಹಟ ಬಿಡಲಿಲ್ಲ.

    ಅಂತೂ ಒಂದು ಮಧ್ಯಾಹ್ನ ಅಜ್ಜಿ-ಮೊಮ್ಮಗಳು ಹೊರಟರು. ಅಜ್ಜಿಯ ಕಣ್ಣಲ್ಲಿ ನೀರು ತುಂಬುತ್ತಿರುವುದನ್ನು ಮಮತಾ ಗಮನಿಸಿದಳು. ಯಾಕಜ್ಜಿ ಅಳ್ತಾ ಇದೀ. ಅಜ್ಜಿಯ ಎರಡೂ ಕೈಗಳನ್ನು ಹಿಡಿದುಕೊಳ್ಳಲು ಮಮತಾ ಪ್ರಯತ್ನಿಸಿದಳು.

    ಅಳದೆ ಏನು ಮಾಡಬೇಕು? ನಾಳೆ ರಾತ್ರಿ ಬೆಂಗಳೂರಿಗೆ ಹೊರಡುವೆ. ಅಲ್ಲಿಂದ ಅಮೆರಿಕಕ್ಕೆ ಹಾರುವೆ. ನೀನು ಇನ್ನೊಂದು ಸಲ ಇಲ್ಲಿಗೆಲ್ಲ ಬರ‍್ತೀಯೋ ಇಲ್ಲವೋ? ಬಂದರೂ ನಾನು ಇರಬೇಕಲ್ಲ. ಇನ್ನೂ ಯಾಕಿರಬೇಕು ನಾನು? ಮಮತಾಳಿಗೆ ಗಂಟಲು ಸೆರೆ ಕಟ್ಟಿತು.

    ನೋಡು ಮಮತಾ, ಆವತ್ತು ಕೂಡ ಇಷ್ಟೇ ಹೊತ್ತು ಆಗಿತ್ತು. ಇಷ್ಟೊಂದು ಬಿಸಿಲಿರಲಿಲ್ಲ ಅಷ್ಟೇ. ರೋಡ್‌ನಲ್ಲಿ ಇಷ್ಟೊಂದು ವಾಹನಗಳು ಕೂಡ ಇರಲಿಲ್ಲ. ನಾನಂತೂ ಆವತ್ತು ಒಂದೇ ಉಸಿರಿನಲ್ಲಿ ಓಡೋಡಿ ಜಯನಗರ ಕ್ರಾಸಿಂಗ್‌ ಹತ್ತಿರ ಬಂದೆ. ಇದೇ ಜಾಗ. ಅಜ್ಜಿ ಕೈ ಬೆರಳು ಮಾಡಿ ತೋರಿಸಿದಳು.

    ಇಲ್ಲಿ ನೋಡು, ಈಗ ಮನೆಗಳೆಲ್ಲ ಬಂದಿವೆಯಲ್ಲ ಅಲ್ಲಿ ಆವಾಗ ಒಂದು ಪೆಟ್ಟಿ ಅಂಗಡಿ ಮಾತ್ರವಿತ್ತು. ಆ ಹೆಂಗಸು ಬಂದು ರೈಲ್ವೆ ಗಾರ್ಡ್‌ ರೂಮಿನಲ್ಲಿ ಕುಳಿತುಕೊಳ್ಳುತ್ತಿದ್ದಳು. ನಿಮ್ಮಪ್ಪ ಕಾಲೇಜಿಂದ ಸೈಕಲ್‌ ತಳ್ಳಿಕೊಂಡು ಬರುತ್ತಿದ್ದರು. ಅವಳು ಗಾರ್ಡ್‌ ರೂಮಿನಿಂದ ಹೊರ ಬಂದು ಸೈಕಲ್‌ ಹಿಡಿದುಕೊಂಡು ಮಾತನಾಡುತ್ತಾ ನಿಲ್ಲುತ್ತಿದ್ದಳು. ಹೆರಳು ಹಾಕಿಕೊಂಡಿರುತ್ತಿದ್ದಳು. ಹೆಗಲಲ್ಲಿ ದೊಡ್ಡ ವ್ಯಾನಿಟಿ ಬ್ಯಾಗ್‌. ತುಂಬಾ ಹೊತ್ತು ಮಾತಾಡ್ತಾ ನಿಂತಿರೋರು.

    ಜನ ಹೇಳ್ತಾ ಇರೋದೆಲ್ಲ ನಿಜವೇ ಅನಿಸಿತು. ನಿಮ್ಮಪ್ಪ ಇವಳನ್ನು ಮದುವೆ ಮಾಡ್ಕೋಬಹ್ದು. ಸಂಬಂಧ ಇಟ್ಕೋಬಹುದು ಅನಿಸಿತು. ತುಂಬಾ ಒದ್ದಾಡಿದೆ, ಸಂಕಟಪಟ್ಟೆ. ಎರಡು ಮೂರು ದಿನದ ನಂತರ ಮತ್ತೆ ಬಂದೆ. ಅದೇ ಹೆಂಗಸು, ಅದೇ ನಿಮ್ಮಪ್ಪ. ಮನಸ್ಸು ತಡೀಲಿಲ್ಲ. ಓಡಿಹೋಗಿ ನಿಮ್ಮಪ್ಪನ ಸೈಕಲ್‌ ಹಿಡಿದುಕೊಂಡು ಗಳಗಳ ಅತ್ತುಬಿಟ್ಟೆ.

    ನನ್ನ ಮಗಳಿಗೆ ವಂಚನೆ ಮಾಡಬೇಡಿ. ನನ್ನ ಕರುಳ ಬಳ್ಳಿ ಕತ್ತರಿಸಿಕೊಂಡು ಹೋಗಿ ಇನ್ನೊಬ್ಬರಿಗೆ ಕೊಡಬೇಡಿ. ಕೈ ಮುಗಿದು ಕೇಳಿಕೊಂಡೆ. ಆಕೆಯ ಎರಡೂ ಕೈಯನ್ನು ಹಿಡಿದು ಅಂಗಲಾಚಿದೆ.

    ಅಳ್ತಾ ಅಳ್ತಾ ಓಡಿ ಬಂದೆ. ನಿಮ್ಮಪ್ಪ ಕೂಡ ಹಿಂದೆಯೇ ಬಂದರು. ಏನೂ ಮಾತನಾಡಲಿಲ್ಲ. ಆಮೇಲೆ ಕೂಡ ನಾನು ವಾರಕ್ಕೆ, ಹದಿನೈದು ದಿನಕ್ಕೆ, ತಿಂಗಳಿಗೆ ಅಂತ ಮತ್ತೆ ಮತ್ತೆ ಬಂದು ಇಲ್ಲಿ ನಿಲ್ಲುತ್ತಿದ್ದೆ. ನಿಮ್ಮಪ್ಪ ಆ ಹೆಂಗಸು ಇಲ್ಲಿ ಕಾಣಿಸಿಕೊಳ್ಳಲಿಲ್ಲ.

    ಸುಳ್ಳು ಹೇಳಬಾರದು, ನಿಮ್ಮಪ್ಪ ವಂಚನೆ ಇಲ್ಲದ ಮನುಷ್ಯ. ಆಮೇಲೆ ಒಂದು ದಿನ ಕೂಡ ಇಂತಹ ಮಾತು ಕೇಳಿಬರಲಿಲ್ಲ.

    ಇಷ್ಟೆಲ್ಲ ಹೇಳಿಕೊಳ್ಳುವಾಗ ಅಜ್ಜಿ ರೈಲ್ವೆ ಗೇಟ್‌, ಗಾರ್ಡ್‌ ರೂಮ್‌, ಆವತ್ತು ಇಬ್ಬರೂ ಮಾತನಾಡುತ್ತ ನಿಲ್ಲುತ್ತಿದ್ದ ಜಾಗದ ನಡುವೆ ಪಟಪಟನೆ ಓಡಾಡಿದಳು. ಕಣ್ಣೀರು ಒರೆಸಿಕೊಂಡಳು. ಅದೇನೋ ನಿರ್ಧಾರ ಮಾಡಿದವಳಂತೆ ಕೆಮ್ಮಿದಳು.

    ಆಮೇಲೆ ಟ್ಯಾಕ್ಷಿಯಲ್ಲಿ ಮನೆಗೆ ವಾಪಸ್‌ ಹೋಗುವಾಗ ಮೊಮ್ಮಗಳ ನೆತ್ತಿಯನ್ನು ಮತ್ತೆ ಮತ್ತೆ ನೇವರಿಸಿದಳು. ಕಾರು ಮನೆ ಮುಂದೆ ನಿಂತಾಗ ಮೊಮ್ಮಗಳನ್ನು ಬಾಚಿ ತಬ್ಬಿಕೊಂಡಳು. ಇನ್ನೂ ಒಂದು ಸಲ ಕಣ್ಣು ಒರೆಸಿಕೊಂಡಳು. ಇಬ್ಬರೂ ಮನೆ ಒಳಗೆ ಹೆಜ್ಜೆ ಹಾಕಿದರು.

      ಅಜ್ಜಿಯ ಹೆಜ್ಜೆಗಳೇ ಹೆಚ್ಚು ದೃಢವಾಗಿದ್ದವು.


    ಕನ್ನಡದ ಪ್ರಮುಖ ಬರೆಹಗಾರರಲ್ಲಿ ಒಬ್ಬರಾಗಿರುವ ಕೆ.ಸತ್ಯನಾರಾಯಣ ಅವರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ 1954ರ ಏಪ್ರಿಲ್‌ 21ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸುವರ್ಣ ಪದಕದೊಂದಿಗೆ ಪದವಿ ಪಡೆದು, ಅಲ್ಲಿಯೇ ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್‌ ರೆವಿನ್ಯೂ ಸರ್ವಿಸ್‌ಗೆ ಸೇರಿದ ಅವರು ಆದಾಯ ತೆರಿಗೆ ಇಲಾಖೆಯಿಂದ ನಿವೃತ್ತರಾಗುವಾಗ ಕರ್ನಾಟಕ ಮತ್ತು ಗೋವಾ ವಲಯದ ಮುಖ್ಯ ಆಯುಕ್ತರಾಗಿದ್ದರು. ಸಣ್ಣಕತೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣ ಬರೆಹ, ವಿಮರ್ಶೆ, ಪ್ರವಾಸ ಕಥನ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅವರ 30ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಬಂದಿವೆ. ಬೆಂಗಳೂರು ವಿಶ್ವವಿದ್ಯಾನಿಲಯ ಅವರಿಗೆ 2013ರಲ್ಲಿ ಗೌರವ ಡಾಕ್ಟರೇಟ್‌ ನೀಡಿದೆ.


                 

               

    Indian Stock Market: ಆರ್ಥಿಕ ಸಾಕ್ಷರತಾ ಆಂದೋಲನ ಇಂದಿನ ಅಗತ್ಯ

    ಜಾಗತೀಕರಣದ ನಂತರದ ಪರಿವರ್ತನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು, ಅಭಿವೃದ್ಧಿಗಳನ್ನೂ ಹಾಗೂ ಹತ್ತಾರು ನಕಾರಾತ್ಮಕತೆಗಳನ್ನೂ ಕಾಣುವಂತಾಗಿದೆ. ಆದರೂ ಜೀವನ ಶೈಲಿಗಳು ಅದಕ್ಕೆ ಹೊಂದಿಕೊಂಡು ಹೋಗುವ ಹಾಗೆ ಮನಸ್ಥಿತಿಗಳನ್ನು ಬದಲಾಯಿಸಿಕೊಳ್ಳುವುದನ್ನು ಅನಿವಾರ್ಯವಾಗಿ ಬೆಳೆಸಿಕೊಳ್ಳಲೇಬೇಕಾದ ಪರಿಸ್ಥಿತಿಗಳು ನಿರ್ಮಾಣವಾಗಿವೆ.

    ಪರಿಸ್ಥಿತಿಗಳು ಬದಲಾಗಿರುವುದು ಕೇವಲ ಸಾಮಾನ್ಯರಿಗೆ ಮಾತ್ರವಲ್ಲ, ಅದು ಕಾರ್ಪೊರೇಟ್‌ ವಲಯದಲ್ಲೂ, ಸಾಂಸ್ಥಿಕ ವಲಯದಲ್ಲೂ, ಪತ್ರಿಕಾ ರಂಗದಲ್ಲೂ ಅಲ್ಲದೆ ಸರ್ಕಾರಗಳ ಮೇಲೂ ಹೆಚ್ಚಿನ ಬದಲಾವಣೆಗಳನ್ನು ತಂದಿದೆ. ಜಾಗತೀಕರಣಕ್ಕೂ ಮುಂಚೆ ಸರ್ಕಾರಗಳು ಸೇವೆಗಳಿಗಾಗಿ ಶ್ರಮಿಸುತ್ತಿದ್ದವು. ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿ ಅವರ ಜೀವನ ಶೈಲಿಗಳನ್ನು ಸುಧಾರಿಸುವತ್ತ ಹೆಚ್ಚು ಗಮನಹರಿಸುತ್ತಿದ್ದವು. ಆದರೆ ನಂತರದಲ್ಲಿ ಉದ್ದಿಮೆಗಳು, ಸೇವಾ ಸಂಸ್ಥೆಗಳೊಂದಿಗೆ ವಿದೇಶೀ ಕೈಗಾರಿಕೆಗಳು, ವಿದೇಶೀ ವಿತ್ತೀಯ ಸಂಸ್ಥೆಗಳು ದೇಶದೊಳಗೆ ಪ್ರವೇಶಿಸಿದ ಕಾರಣ ದೇಶದಲ್ಲಿ ಔದ್ಯೂಗೀರಣ ಮಿಂಚಿನಂತೆ ಬೆಳೆಯತೊಡಗಿದ ಕಾರಣ ಪರಿವರ್ತನೆಗಳು ನಿರೀಕ್ಷಿತ ಮಟ್ಟಕ್ಕಿಂತ ವೇಗವಾಗಿ ಸಾಗಿವೆ.

    ಈ ಬದಲಾವಣೆಗಳು ಯಾವ ಮಟ್ಟಕ್ಕಾಯಿತೆಂದರೆ 2012 ರಲ್ಲಿ ಆಮ್ ಸ್ಟರ್ ಡ್ಯಾಂ ನಲ್ಲಿ ನಡೆದ ಅಂತಾರಾಷ್ಟ್ರೀಯ ಆರ್ಥಿಕ ಸಾಕ್ಷರತಾ ಸಮ್ಮೇಳನದಲ್ಲಿನ ಮಾಪನದಂತೆ ಭಾರತದ ಆರ್ಥಿಕ ಸಾಕ್ಷರತಾ ಮಟ್ಟವು ಶೇ.35 ರಷ್ಟಿದ್ದು 2016 ರಲ್ಲಿ ಅದು ಶೇ.24 ಕ್ಕೆ ಕುಸಿಯಿತು. ಅಂದರೆ ನಮ್ಮ ಚಿಂತನೆಗಳು ವ್ಯವಹಾರಿಕತೆಯಲ್ಲುಂಟಾದ ಪರಿವರ್ತನೆಗಳಿಗೆ, ಪ್ರಚಾರಗಳಿಗೆ ಮಾರುಹೋಗಿ ನಮ್ಮ ಆರ್ಥಿಕ ಚಿಂತನೆಗಳನ್ನು ತ್ಯಜಿಸಿ ಮೋಹಕ ಪದಗಳಿಂದ ಪ್ರಭಾವಿಯಾಗಿ, ಆರ್ಥಿಕ ನಿರ್ವಹಣೆಯ ಗುಣಮಟ್ಟವನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದೇವೆ. ಈ ವ್ಯವಹಾರಿಕತೆಯ ಪ್ರಭಾವವು ಎಲ್ಲಿಯವರೆಗೂ ವಿಸ್ತರಿಸಿದೆ ಎಂದರೆ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ವಲಯಗಳಿಗೂ ಹರಡಿಕೊಂಡಿವೆ.

    ಹೀಗಿರುವಾಗ, ಮಾಧ್ಯಮಗಳೂ ಈ ವ್ಯವಹಾರಿಕ ಜಾಲದೊಳಗೆ ಸಿಲುಕಿಕೊಂಡಿರುವುದು ಅಚ್ಚರಿಯಲ್ಲ. ಈಚಿನ ದಿನಗಳಲ್ಲಿ ಮುದ್ರಣ ಮಾಧ್ಯಮಗಳಲ್ಲಿ ಪತ್ರಿಕೆಗಳ ಮುಖಪುಟಗಳನ್ನೇ ಜಾಹಿರಾತುಗಳು ನುಂಗಿಹಾಕಿರುವುದನ್ನು ಆಗಿಂದಾಗ್ಗೆ ಅನೇಕ ಬಾರಿ ಕಾಣಬಹುದಾಗಿದೆ. ಕೆಲವು ಬಾರಿ ಪತ್ರಿಕೆಗಳಲ್ಲಿ ಅರ್ಧ ಪುಟವನ್ನೇ ಒಂದು ಪುಟ ಎಂದು ಪುಟಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಾಣುತ್ತೇವೆ. ಇವೆಲ್ಲವೂ ಸಾಮಾನ್ಯವಾಗಿ ವಿಶೇಷವೆಂದೆನಿಸುವುದಿಲ್ಲ. ಹಾಗೆಯೇ ಇಂದಿನ ದಿನಗಳಲ್ಲಿ ಷೇರುಪೇಟೆಯಲ್ಲಿ ವಿಶ್ಲೇಷಣೆಗಳು, ಚಿಂತನೆಗಳು ಸಾಮಾನ್ಯರ ಸ್ವಾಭಾವಿಕ ಚಿಂತನೆಗಳನ್ನು ದಾರಿ ತಪ್ಪಿಸುವ ಮಟ್ಟಕ್ಕೆ ಕೊಂಡೊಯ್ಯುತ್ತಿವೆ.

    ಸಾಮಾನ್ಯರ ಚಿಂತನೆ:

    ನಾವು ಐ ಪಿ ಒ ಗಳಲ್ಲಿ ಹೂಡಿಕೆ ಮಾಡಿದಲ್ಲಿ ನಾವು ಹಣ ಗಳಿಸಲು ಸಾಧ್ಯ. ಈ ಹಿಂದೆ 1993 ರಲ್ಲಿ ಇನ್ಫೋಸಿಸ್‌ ಕಂಪನಿಯ ಐ ಪಿ ಒ ನಲ್ಲಿ ರೂ.95 ರಂತೆ ಖರೀದಿಸಿದ್ದರೆ ಇಂದು ಅದು ಎರಡೂವರೆ ಕೋಟಿ ರೂಪಾಯಿಗಳಷ್ಟು ಬೆಳೆದಿದೆ ಎಂಬ ಅಂಶ ಸದಾ ಮನದಾಳವನ್ನು ಆಕ್ರಮಿಸಿದೆ.

    ಅದೇ ರೀತಿ ಈಗ ಒಂದು ಬ್ರಾಂಡೆಡ್‌ ಕಂಪನಿಗಳಲ್ಲಿ ಹೂಡಿಕೆ ಮಾಡಿದಲ್ಲಿ ಸುಲಭವಾಗಿ ಸಂಪಾದಿಸಬಹುದು ಎಂದು ನಂಬಿರುವವರು ಅತಿ ಹೆಚ್ಚು. ಆ ಚಿಂತನೆಯಿಂದ ಕಳೆದ ಒಂದು ವರ್ಷದಲ್ಲಿ ತೇಲಿಬಿಟ್ಟ ಕಂಪನಿಗಳ ಬ್ರಾಂಡ್‌ ವ್ಯಾಮೋಹಕ್ಕೆ ಬಿದ್ದು, ಹೂಡಿಕೆಯ ಮೂಲ ಉದ್ದೇಶವಾದ ಸುರಕ್ಷತೆ, ಹೂಡಿಕೆಯ ಅಭಿವೃದ್ಧಿ, ಹೂಡಿಕೆ ಮುಂದುವರೆಸಿದ್ದಕ್ಕೆ ನಿಯತಕಾಲಿಕವಾಗಿ ಅದು ನೀಡಬಹುದಾದ ಕಾರ್ಪೊರೇಟ್‌ ಫಲಗಳ ಬಗ್ಗೆ ಚಿಂತಿಸದೆ, ಕಂಪನಿಯ ಒಳಗಣ ಚಿತ್ರಣ ಅಂದರೆ ಅದು ನಡೆಸುತ್ತಿರುವ ಚಟುವಟಿಕೆ ಎಷ್ಟರಮಟ್ಟಿಗೆ ಲಾಭ ಗಳಿಸಿಕೊಡುತ್ತಿದೆ, ಆ ಕಂಪನಿ ಗಳಿಸಿರುವ ಬ್ರಾಂಡ್‌ ಗೆ ಮೂಲ ಆಂತರಿಕ ಸಾಧನೆ ಮತ್ತು ಅದಕ್ಕನುಗುಣವಾಗಿ ಆ ಕಂಪನಿ ಲಾಭ ಗಳಿಸುತ್ತಿದೆಯೇ ಅಥವಾ ಟರ್ನೋವರ್‌ ಮಾತ್ರ ಹೆಚ್ಚಿದ್ದು ಹಾನಿಗೊಳಗಾಗಿದೆಯೇ, ಆ ಕಂಪನಿಯು ಹೊಂದಿರುವ ಸ್ವತ್ತುಗಳ ಸ್ವರೂಪ ಮತ್ತು ಗುಣಮಟ್ಟ, ಕಂಪನಿಯ ಪ್ರವರ್ತಕರ ಹೂಡಿಕೆದಾರ ಸ್ನೇಹಿಗುಣ ಮುಂತಾದವುಗಳನ್ನು ತುಲನೆ ಮಾಡಿ ನಿರ್ಧರಿಸದೆ, ಅಲಂಕಾರಿಕ ಮಾತು- ಪ್ರಚಾರಗಳಿಗೆ ಮೋಹಿತರಾಗಿ ಹೆಚ್ಚಿನ ಹಾನಿಗೊಳಗಾದವರ ಸಂಖ್ಯೆ ಹೆಚ್ಚಾಗಿದೆ.

    ಇನ್ಫೋಸಿಸ್‌ ಹೂಡಿಕೆದಾರರಿಗೆ ಹೇಗೆ ಗೋಲ್ಡನ್‌ ಟಚ್‌ ಆಗಿದೆ?:

    ಇನ್ಫೋಸಿಸ್‌ 1993 ರಲ್ಲಿ ಪ್ರಥಮ ಬಾರಿ ಪ್ರತಿ ಷೇರಿಗೆ ರೂ.95 ರಂತೆ ವಿತರಿಸಿದಾಗ ತಾಂತ್ರಿಕ ವಲಯದ ಮೊದಲ ಕಂಪನಿಯಾಗಿದ್ದು, ಆ ಸಂದರ್ಭದಲ್ಲಿ ವಿತ್ತೀಯ ವಲಯದಲ್ಲಿ ಹರಿದಾಡುತ್ತಿದ್ದ ಹಣದ ಪ್ರಮಾಣವು ಹೆಚ್ಚಿರಲಿಲ್ಲ. ಆ ಸಂದರ್ಭದಲ್ಲಿ ಕಂಪನಿಗೆ ತನ್ನ ದೈನಂದಿನ ಚಟುವಟಿಕೆಗೆ ಸಂಪನ್ಮೂಲದ ಆವಶ್ಯಕತೆ ಇತ್ತು, ಸಂಗ್ರಹಿಸಿದ ಸಂಪನ್ಮೂಲವನ್ನು ಬಳಕೆ ಮಾಡಿ ಹೂಡಿಕೆದಾರರಿಗೆ ಪ್ರತಿಫಲಗಳನ್ನು ವಿತರಿಸುವ ಬದ್ಧತೆ ಮತ್ತು ಬಾಧ್ಯತೆಗಳಿದ್ದ ಕಾರಣ ಅದು ಪ್ರಬುದ್ಧತೆಯಿಂದ ಮೆರೆಯಿತು. ಇನ್ಫೋಸಿಸ್‌ ಕಂಪನಿಯು ಆರಂಭದಿಂದ 7 ಬಾರಿ 1:1 ರ ಅನುಪಾತದಲ್ಲಿ ಬೋನಸ್‌ ಷೇರು ವಿತರಿಸಿದೆ ಮತ್ತು ಒಂದು ಬಾರಿ ಅಂದರೆ 2004 ರಲ್ಲಿ 3:1 ರ ಅನುಪಾತದಲ್ಲಿ ಬೋನಸ್‌ ಷೇರು ವಿತರಿಸಿದೆ.

    2000 ದಲ್ಲಿ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.5 ಕ್ಕೆ ಸೀಳಿತು. ಇದರಿಂದ ಐ ಪಿ ಒ ನಲ್ಲಿ ಪಡೆದ 100 ಷೇರುಗಳು ಸುಮಾರು 55,000 ಷೇರುಗಳಿಗೂ ಹೆಚ್ಚಾಗಿ ಬೆಳೆಯಿತು. ಇದಲ್ಲದೆ ನಿರಂತರವಾಗಿ ಷೇರುದಾರರಿಗೆ ಆಕರ್ಷಣೀಯ ಲಾಭಾಂಶವನ್ನು ವಿತರಿಸಿದ ಹೆಗ್ಗಳಿಕೆ ಈ ಕಂಪನಿಗಿದೆ. ಈ ಕಂಪನಿಯು 2020.21 ರಲ್ಲಿ ಪ್ರತಿ ಷೇರಿಗೆ ರೂ.37 ರ ಲಾಭಾಂಶವನ್ನು, 2021.22 ರಲ್ಲಿ ರೂ.31 ರಂತೆ ಲಾಭಾಂಶ ವಿತರಿಸಿದೆ. ಇಲ್ಲಿ ಹೂಡಿಕೆದಾರರು ಗಮನಿಸಬೇಕಾದ ಅಂಶವೆಂದರೆ ಒಂದು ಷೇರಿಗೆ ರೂ.37 ರಂತೆ ಅಂದರೆ ರೂ.37X55 ಸಾವಿರದಷ್ಟು ಹಣ ಎಂದರೆ ರೂ.20 ಲಕ್ಷಕ್ಕೂ ಹೆಚ್ಚಿನ ಹಣ ಐಪಿಒ ನಲ್ಲಿ ಪಡೆದ 100 ಷೇರುಗಳಿಗೆ ಲಭಿಸಿದ ಲಾಭಾಂಶದ ಪ್ರಮಾಣವಾಗುತ್ತದೆ.

    ಅಂದರೆ 100 ಷೇರುಗಳ ರೂ.9,500 ರ ಹೂಡಿಕೆಗೆ ಷೇರುಗಳ ಸಂಖ್ಯೆಯು 55 ಸಾವಿರಕ್ಕೆ ಬೆಳೆದಿದೆ ಜೊತೆಗೆ ದಶ ಲಕ್ಷಗಳ ಪ್ರಮಾಣದಲ್ಲಿ ಲಾಭಾಂಶವನ್ನು ನಿರಂತರವಾಗಿ ಲಭಿಸುವ ಹಂತವು ಈಗಿನ ದಿನಗಳಲ್ಲಿ ಕಲ್ಪನಾತೀತವಲ್ಲವೇ? ಅಂದಿನ 100 ಷೇರುಗಳ ಮೌಲ್ಯವು ಇಂದಿನ ರೂ.1,400 ರ ಬೆಲೆಯಲ್ಲಿ ರೂ.7.70 ಕೋಟಿಯಾಗಿ ಬೆಳೆದಿದೆ. ಈಗಿನ ವಾತಾವರಣದಲ್ಲಿ ಈ ರೀತಿಯ ಏಳ್ಗೆ ಸಾಧ್ಯವೇ?

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಆಕಾಶಕ್ಕೆ ಏಣಿ ಹಾಕುವ  ಯೋಚನೆ  ಎಂದಿಗೂ ಸರಿಯಲ್ಲ

     ಸುಮಾ ವೀಣಾ

    ಬಾಡಿದ ಸಸಿ ಮಲೆಯ ಪೆತ್ತಂತೆ- ರತ್ನ ತ್ರಯರಲ್ಲಿ ಎರಡನೆಯವನಾದ ಪೊನ್ನನ  ಮಾತಿದು. ಸಸಿ  ಎಂದರೆ ಎಳಸು  ಎಂತಲೂ ಅಷ್ಟೇನು ಕಾರ್ಯಕ್ಷಮತೆ ಇಲ್ಲದ ಎನ್ನುವ   ಅರ್ಥದಲ್ಲಿ ಬಳಕೆಯಾಗಿದೆ.   ಕೆಲವು  ಜವಾಬ್ದಾರಿಗಳನ್ನು  ನಿರ್ವಹಿಸಲು ಮೂಲ ಅರ್ಹತೆ ಬೇಕಾಗುತ್ತದೆ ಇಲ್ಲವಾದರೆ  ಆ ಕೆಲಸ ಸಾಗುವುದಿಲ್ಲ.

    ಪೊನ್ನ

       ಜೈವಿಕ ಗುಣಲಕ್ಷಣಗಳನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಒಂದು ಹೂ ಬೀರುವ ಸುವಾಸನೆಯನ್ನು ಇನ್ನೊಂದು ಹೂ ಬೀರಲು ಸಾದ್ಯವೇ? ಒಂದು ಹಣ್ಣು ಕೊಡುವ ರುಚಿಯನ್ನು ಇನ್ನೊಂದು ಹಣ್ಣು ಕೊಡಲು ಸಾಧ್ಯವೇ? ಖಂಡಿತಾ ಇಲ್ಲ. ಇನ್ನೂ  ಮುಂದುವರೆದು ಹೇಳುವುದಾದರೆ ದೈಹಿಕ ಬಲವೂ ಗಣ್ಯವಾಗುತ್ತದೆ ಅವುಗಳ ಜೈವಿಕ ಲಕ್ಷಣಗಳಂತೆ ಅವು ಇರುತ್ತವೆ. ಕೆಲವರು ಕಡಿಮೆ ಕೆಲಸವನ್ನೂ ಇನ್ನೂ ಕೆಲವರು ಹೆಚ್ಚಿನ ಕೆಲಸವನ್ನು ಮಾಡುವಂಥವರಾಗಿರುತ್ತಾರೆ ಅದಕ್ಕೆ ಅಜಗಜಾಂತರ  ಅನ್ನುವ  ಮಾತು ಇರುವುದು.

     ಪ್ರಸ್ತುತ ಬಾಡಿದ ಸಸಿ  ಪರ್ವತವನ್ನು ಹತ್ತಲು ಸಾಧ್ಯವೇ ಅನ್ನುವ  ಅರ್ಥ ಬರುತ್ತದೆ.   ಮೂಲ ಮಾತುಗಳಲ್ಲೆ ಸಸಿ, ಬಾಡಿರುವುದು ಎಂಬ ಮಾತುಗಳು ಬರುತ್ತವೆ . ಹೀಗಿದ್ದು  ಪರ್ವತವನ್ನು ಏರಿ ನೆಲೆ ಕಂಡುಕೊಳ್ಳಲು ಸಾಧ್ಯವೇ? ಹಾಗೆಂದುಕೊಂಡರೆ ಅದು ಮೂರ್ಖತನದ ಪರಮಾವಧಿ ಅಲ್ವೆ!  ಅಷ್ಟೇನು ಕ್ಷಮತೆ ಇಲ್ಲದೆ ಪರ್ವತವನ್ನೇರುವ ಪ್ರಯತ್ನ ಮಾಡಬಹುದು  ಆದರೆ  ಪರ್ವತವನ್ನೇರಿಯೇ ಬಿಡುವೆ ಎಂಬುದು  ಹುಂಬತನದ ಮಾತು.

    ಹಾಗೆ ಬಸವನ ಹುಳು ಹಾರಾಡಲು ಸಾಧ್ಯವೇ? ಅದರ ಗುಣವೇ ನಿಧಾನವಾಗಿ  ಚಲಿಸುವುದು .ಕೃತಿ ರೂಪಕ್ಕಿಳಿಯದವುಗಳಿಂದ ನಾವು ಅಪೇಕ್ಷೆ ಪಡುವುದು ಸಲ್ಲ  ಎಂಬುದನ್ನೆ ಪ್ರಸ್ತುತ ಮಾತು  ಹೇಳುತ್ತದೆ.  

     ಆಕಾಶಕ್ಕೆ ಏಣಿ ಹಾಕುವ  ಯೋಚನೆ  ಎಂದಿಗೂ ಸರಿಯಲ್ಲ .ಮುಗಿಲ ಮಲ್ಲಿಗೆಯನ್ನು ಮೆಲ್ಲಗೆ ಕೈಗೆ ತೆಗೆದುಕೊಂಡೇ ಬಿಡುತ್ತೇವೆ  ಎನ್ನುವ ಮಾತುಗಳೆಲ್ಲ  ನಗು ತರಿಸುವಂತದ್ದು. ತನ್ನಾಯವನ್ನು ನೋಡಿ ಕೈಯೆಡಕದಲ್ಲಿ ಸಂಸಾರವನ್ನಿರಿಸಿಕೊಳ್ಳಬೇಕು ಎಂಬ ಮಾತಿನಂತೆ ನಮ್ಮ ಲಭ್ಯತೆ ನೋಡಿ  ಮುಂದಿನ  ಯೋಜನೆಗಳನ್ನು ಹಾಕಿಕೊಳ್ಳಬೇಕು .

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

     .

    ವಿದ್ಯಾರ್ಥಿಗಳ ಕುಂಚದಲ್ಲಿ ಅರಳಿನಿಂತ ವಿಭಿನ್ನ ಕಲಾಕೃತಿಗಳ ಗುಚ್ಛ

    ಬಳಕೂರು ವಿ ಎಸ್ ನಾಯಕ

    ಬೆಂಗಳೂರಿನ ವಿಷ್ಣುವರ್ಧನ್ ಮುಖ್ಯರಸ್ತೆಯಲ್ಲಿರುವ ಚಿತ್ರಕಲಾ ಮಹಾವಿದ್ಯಾಲಯ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಬಂದ ಕಲಾಸಕ್ತರಿಗೆ ಒಂದು ಕ್ಷಣ ಕಲಾ ಸಂತೆಗೆ ಬಂದ ಅನುಭವವಾಗಿತ್ತು. ಅಲ್ಲಿನ ಚಿತ್ರಕಲಾ ಗ್ಯಾಲರಿಯಲ್ಲಿ ಒಂದಕ್ಕಿಂತ ಒಂದು ವಿಬಿನ್ನ ಕಲಾಕೃತಿಗಳು ಎಲ್ಲರ ಮನಸೂರೆಗೊಳ್ಳುವಂತೆ ಇತ್ತು. ಇಷ್ಟಕ್ಕೆಲ್ಲ ಕಾರಣ ಚಿತ್ರಕಲಾ ಮಹಾವಿದ್ಯಾಲಯದ ಬಿ. ವಿ. ಎ. ಕಲಾ ಅಂತಿಮ ವಿಭಾಗದ ವಿದ್ಯಾರ್ಥಿಗಳ ಕುಂಚದಲ್ಲಿ ಅರಳಿನಿಂತ ವಿಭಿನ್ನ ಕಲಾಕೃತಿಗಳ ಗುಚ್ಛ.

    ಒಂದಕ್ಕಿಂತ ಒಂದು ಆಕರ್ಷಣೀಯ ಒಂದಕ್ಕಿಂತ ಒಂದು ವಿಭಿನ್ನ ವಿಶೇಷವಾದ ಅರ್ಥಪೂರ್ಣ ಕಲಾತ್ಮಕ ನೋಟಗಳನ್ನು ಒಳಗೊಂಡ ಕಲಾಕೃತಿಗಳ ಸರಣಿ ಒಂದು ವಿಸ್ಮಯಕಾರಿ ಕಲಾಲೋಕಕ್ಕೆ ಕಾಲಿಟ್ಟ ಅನುಭವವಾಗುತ್ತಿತ್ತು.

    ಚಿತ್ರಕಲಾ ಮಹಾವಿದ್ಯಾಲಯದ ಕಲಾ ಗ್ಯಾಲರಿಯಲ್ಲಿ ಸುಮಾರು 150 ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ ಸಂದೇಶವನ್ನು ನೀಡುವಂತೆ ಇತ್ತು. ಕಲಾ ಪ್ರದರ್ಶನವನ್ನು ವೀಕ್ಷಿಸಲು ಬಂದ ಹಲವಾರು ಕಲಾಸಕ್ತರು ವಿದ್ಯಾರ್ಥಿಗಳ ಕೈಚಳಕದಲ್ಲಿ ಮೂಡಿಬಂದ ಕಲಾಕೃತಿಗಳ ಬಗ್ಗೆ ಪ್ರಶಂಸೆಯನ್ನು ಮಾಡಿದಾಗ ಅಲ್ಲಿಯ ಕಲಾ ವಿದ್ಯಾರ್ಥಿಗಳಿಗೆ ಒಂದು ಕ್ಷಣ ಸಂತೋಷ ಸಂಭ್ರಮದಲ್ಲಿ ಮುಳುಗಿದಂತೆ ಕಾಣುತ್ತಿದ್ದರು.

    ಇಷ್ಟಕ್ಕೆಲ್ಲ ಕಾರಣ ಏನಿರಬಹುದು ಎಂದು ತಿಳಿದರೆ ಪ್ರತಿವರ್ಷದಂತೆ ಚಿತ್ರಕಲಾ ಮಹಾವಿದ್ಯಾಲಯ ದಲ್ಲಿ ಅಂತಿಮ ವರ್ಷದಲ್ಲಿ ಓದಿದ ಕಲಾ ವಿದ್ಯಾರ್ಥಿಗಳ ಕಲಾ ಸಂತೆ ನಡೆಯುತ್ತದೆ. ಈ ವರ್ಷವೂ ಕೂಡ ದೃಶ್ಯ ಉತ್ಸವ ಈ ಕಲಾ ಜಾತ್ರೆ ವಿಭಿನ್ನವಾಗಿಮೂಡಿಬಂದಿರುವುದು ವಿಶೇಷ.ಬಿ. ವಿ. ಎ. ಅಂತಿಮ ವರ್ಷದ ಕಲಾ ವಿದ್ಯಾರ್ಥಿಗಳಿಗೆ ಇಷ್ಟು ವರ್ಷ ತಾವು ಕಲಿತ ಅನುಭವದ ಮೇರೆಗೆ ತಮ್ಮ ಮನಸ್ಸಿನಲ್ಲಿ ಮೂಡಿದ ವಿಭಿನ್ನ ವಿಚಾರಧಾರೆಯನ್ನು ಕಲಾಕೃತಿಗಳ ಮೂಲಕವಾಗಿ ರಚಿಸುವ ಕಾರ್ಯವನ್ನು ನೀಡಲಾಗಿತ್ತು.

    ಕಲಾ ವಿದ್ಯಾರ್ಥಿಗಳು ಇಂದಿನ ಮತ್ತು ಹಿಂದಿನ ವಿಷಯ ವಸ್ತುಗಳನ್ನು ತೆಗೆದುಕೊಂಡು ಕಲಾ ಶಿಕ್ಷಕರಾದ ಮುನಿ ಮೋಹನ್ ಮತ್ತು ರಘುರಾಮ್ ರವರ ಸಾರಥ್ಯದಲ್ಲಿ ಮತ್ತು ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಬಾಬು ಜತ್ತಕರ್ ಅವರ ಮಾರ್ಗದರ್ಶನದಲ್ಲಿ ಈ ಕಲಾ ಸಂತೆ ವಿಶೇಷವಾಗಿ ನಡೆಯುತ್ತದೆ. ಸುಮಾರು 30 ಕಲಾ ವಿದ್ಯಾರ್ಥಿಗಳ ಕೈಚಳಕದಲ್ಲಿ 150 ಕ್ಕಿಂತಲೂ ಹೆಚ್ಚು ಕಲಾಕೃತಿಗಳು ವಿಭಿನ್ನ ಸಂದೇಶಗಳನ್ನು ನೀಡುವ ಕಲಾಕೃತಿಗಲಾಗಿದ್ದು ಇಂತಹ ಉತ್ತಮ ಕಲಾಕೃತಿಗಳನ್ನು ನೋಡಿ ಕಣ್ತುಂಬಿಕೊಳ್ಳಬೇಕಾದರೆ ಉತ್ತರಹಳ್ಳಿ ಮುಖ್ಯರಸ್ತೆ ಶ್ರೀನಿವಾಸಪುರ ದಲ್ಲಿರುವ ಚಿತ್ರಕಲಾ ಮಹಾವಿದ್ಯಾಲಯ ಕಲಾ ಪರಿಷತ್ತಿನ ಕಲಾಗ್ಯಾಲರಿ ಗೆ ಭೇಟಿ ನೀಡಲೇ ಬೇಕು. ದ್ರಶ್ಯ ಉತ್ಸವ ಇಲ್ಲಿ ಇದೇ ತಿಂಗಳ 29 ರವರೆಗೆ ನಡೆಯಲಿದ್ದು ತಮ್ಮ ಬಿಡುವಿನ ಸಮಯದಲ್ಲಿ ಬಂದು ಭೇಟಿಕೊಡಬಹುದು.


    ಪ್ರವೇಶ ಉಚಿತ,ಪ್ರದರ್ಶನದ ಸ್ಥಳ:ಚಿತ್ರಕಲಾ ಮಹಾವಿದ್ಯಾಲಯ
    ಕರ್ನಾಟಕ ಚಿತ್ರಕಲಾ ಪರಿಷತ್ತು,ಉತ್ತರಹಳ್ಳಿ ಮುಖ್ಯರಸ್ತೆ
    ಶ್ರೀನಿವಾಸಪುರ ಓಂಕಾರ್ ಆಶ್ರಮದ ಹತ್ತಿರ ಬೆಂಗಳೂರು

    ಏರಿಳಿತಗಳನ್ನು ಕಾಣುತ್ತಿರುವ ಷೇರು ಪೇಟೆ

    ಷೇರು ಪೇಟೆಯಲ್ಲಿ ಹೆಚ್ಚಿನ ಕಂಪನಿಗಳ ಷೇರುಗಳು ಭಾರಿ ಏರಿಳಿತಗಳನ್ನು ಕಾಣುತ್ತಿವೆ. ಇದು ಹೆಚ್ಚಿನ ಅಸ್ಥಿರತೆ ಮತ್ತು ಹೂಡಿಕೆದಾರರ ನಂಬಿಕೆಯ ಕೊರತೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಜಾಗತಿಕ ಮಟ್ಟದಲ್ಲಾಗುತ್ತಿರುವ ಬೆಳವಣಿಗೆಳು, ಬದಲಾವಣೆಗಳು, ಒತ್ತಡಗಳಾಗಿವೆ. ಆದರೂ ಕೆಲವು ಕಂಪನಿಗಳು ಆಕರ್ಷಕವಾದ ಕುಸಿತಗಳನ್ನು, ಚೇತರಿಕೆಯನ್ನು ಪ್ರದರ್ಶಿಸುವುದರೊಂದಿಗೆ ಹತ್ತಾರು ಅವಕಾಶಗಳನ್ನು ಒದಗಿಸಿವೆ.

    • ಆರ್‌ ಇ ಸಿ ಲಿಮಿಟೆಡ್‌ ಕಂಪನಿಯು ಈಗಾಗಲೇ ಪ್ರತಿ ಷೇರಿಗೆ ರೂ.4.80 ರಂತೆ ಲಾಭಾಂಶ ಘೋಷಿಸಿದೆ. ಈಗ ಅದರೊಂದಿಗೆ ಈ ತಿಂಗಳ 30 ರಂದು ಕಂಪನಿಯ ಆಡಳಿತ ಮಂಡಳಿಯು ಷೇರುದಾರರಿಗೆ ಬೋನಸ್‌ ಷೇರು ವಿತರಣೆಯನ್ನು ಪರಿಶೀಲಿಸಲಿದೆ ಎಂದು ಪ್ರಕಟಿಸಿದೆ.
    • ಮೋರ್ಗನ್‌ ಸ್ಟಾನ್ಲಿ ಇನ್ವೆಸ್ಟ್‌ ಮೆಂಟ್‌ ಫಂಡ್ಸ್‌ ನ ಎಮರ್ಜಿಂಗ್‌ ಲೀಡರ್‌ ‌ ಈಕ್ವಿಟಿ ಫಂಡ್ ಸೋಮವಾರದಂದು 13.14 ಲಕ್ಷ ಹ್ಯಾಪಿಯೆಸ್ಟ್‌ ಮೈಂಡ್ಸ್‌ ಷೇರನ್ನು ರೂ.800 ರಂತೆ ಮಾರಾಟ ಮಾಡಿದೆ.
    • ಬಜಾಜ್‌ ಆಟೋ ಲಿಮಿಟೆಡ್‌ ಕಂಪನಿಯು ಈ ಹಿಂದೆ 14 ನೇ ಜೂನ್‌ ನಂದು ಷೇರು ಹಿಂಕೊಳ್ಳುವಿಕೆಯನ್ನ ಪರಿಶೀಲಿಸುವ ಕಾರ್ಯ ಸೂಚಿ ಪ್ರಕಟಿಸಿತ್ತು. ಅಂದು ಷೇರಿನ ಬೆಲೆ ರೂ.3,890 ರಿಂದ ಆರಂಭವಾಗಿ ರೂ.4,000 ನ್ನು ತಲುಪಿ ನಂತರ ಇಳಿಕೆ ಕಾಣತೊಡಗಿತು. ಈ ಇಳಿಕೆ ಕಾಣಲು ಕಾರಣ ಕಂಪನಿಯು ತನ್ನ ಷೇರು ಹಿಂಕೊಳ್ಳುವಿಕೆ ಯೋಜನೆ ಪರಿಶೀಲನೆಯನ್ನು ಮುಂದೂಡಿತ್ತು. ಹಾಗಾಗಿ ಷೇರಿನ ಬೆಲೆ ರೂ.3,684 ರ ಸಮೀಪ ಕೊನೆಗೊಂಡಿತು. ನಂತರ 20 ನೇ ಸೋಮವಾರದಂದು ರೂ.3,577 ರವರೆಗೂ ಕುಸಿದಿತ್ತು. ಕಂಪನಿಯು 22 ರಂದು ಬುಧವಾರ ಸಂಜೆ ಮತ್ತೊಮ್ಮೆ ಆಡಳಿತ ಮಂಡಳಿಯು 27 ರಂದು ಸಭೆಸೇರಿ ಷೇರು ಹಿಂಕೊಳ್ಳುವ ಯೋಜನೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಕಾರ್ಯ ಸೂಚಿ ಪ್ರಕಟಿಸಿದ ಕಾರಣ ಗುರುವಾರ ಷೇರಿನ ಬೆಲೆ ಪುಟಿದೆದ್ದಿತು. ಅಂದು ರೂ.3,795 ರಗಡಿ ದಾಟಿತು. ಶುಕ್ರವಾರ ರೂ.3,841 ರವರೆಗೂ ಏರಿಕೆ ಕಂಡು ರೂ.3,812 ರ ಸಮೀಪ ಕೊನೆಗೊಂಡಿತು. ಅಂದರೆ ಕೆಲವು ಬೆಳವಣಿಗೆಗಳಿಗೆ ಪೇಟೆ ಎಷ್ಟು ತೀಕ್ಷ್ಣವಾಗಿ ಸ್ಪಂಧಿಸುವುದು ಎಂಬುದನ್ನು ಈ ಬೆಳವಣಿಗೆ ತಿಳಿಸುತ್ತದೆ.
    • ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಮೇ ತಿಂಗಳಲ್ಲಿ ತನ್ನ ವಾರ್ಷಿಕ ಫಲಿತಾಂಶ ಪ್ರಕಟಿಸಿದ್ದು ಆಕರ್ಷಣೀಯ ಅಂಕಿ ಅಂಶಗಳನ್ನು ಸಾಧಿಸಿದೆ. ಆದರೂ ಆ ಸಂದರ್ಭದಲ್ಲಿ ಕಂಪನಿಯು ಅಂತಿಮ ಲಾಭಾಂಶ ಪ್ರಕಟಣೆಯನ್ನು ಮಾಡಿರಲಿಲ್ಲವಾದ್ದರಿಂದ ನಂತರದ ದಿನಗಳಲ್ಲಿ ಸ್ವಲ್ಪ ಕುಸಿತಕ್ಕೊಳಗಾಗಿ ನಂತರ ಚೇತರಿಸಿಕೊಂಡಿತು. ಕಂಪನಿಯ ಆಡಳಿತ ಮಂಡಳಿಯು 28 ರಂದು ಸಭೆ ಕರೆದಿದ್ದು ಅಂದು ಅಂತಿಮ ಲಾಭಾಂಶ ಪ್ರಕಟಣೆಯ ಕಾರ್ಯ ಸೂಚಿ ಹೊರಡಿಸಿದೆ. ಘೋಷಣೆಯು ಸ್ವಲ್ಪ ವಿಳಂಬವಾದರೂ ಆಕರ್ಷಣೀಯ ಅಂಶ ಹೊರಬೀಳಬಹುದು.
    • ಕೆನರಾ ಬ್ಯಾಂಕ್‌ ತನ್ನ ಆಡಳಿತ ಮಂಡಳಿಯ ಸಭೆಯಲ್ಲಿ ರೂ.9,000 ಕೋಟಿ ಮೌಲ್ಯದ ಸಂಪನ್ಮೂಲ ಸಂಗ್ರಹಣೆ ಮಾಡಲು ನಿರ್ಧರಿಸಿದೆ.
    • ಗ್ಲೆನ್‌ ಮಾರ್ಕ್‌ ಫಾರ್ಮಸ್ಯುಟಿಕಲ್ಸ್‌ ಲಿಮಿಟೆಡ್‌ ಕಂಪನಿಯ ಘಟಕವು ಅಮೇರಿಕಾದ ಎಫ್‌ ಡಿ ಎ ಯ ತನಿಖೆಗೊಳಪಟ್ಟಿದ್ದು, ಇದರಿಂದ 6 ಅಬ್ಸರ್ವೇಷನ್ ಗಳನ್ನು ಎಫ್‌ ಡಿ ಎ ನೀಡಿದೆ. ಈ ಕಾರಣದಿಂದಾಗಿ ಷೇರಿನ ಬೆಲೆಯು 23 ರಂದು ರೂ.351 ರವರೆಗೂ ಕುಸಿದಿತ್ತು. ಆದರೆ ಶುಕ್ರವಾರದಂದು ಪೇಟೆಯ ಚಟುವಟಿಕೆಯು ಚುರುಕಾದ ಕಾರಣ ರೂ.385 ರವರೆಗೂ ಜಿಗಿಯಿತು.
    • ಹಿಕಾಲ್‌ ಲಿಮಿಟೆಡ್‌ ಕಂಪನಿಯ ಷೇರಿನ ಬೆಲೆಯು ಕಂಪನಿಯ ಫಲಿತಾಂಶವು ಆಕರ್ಷಣಿಯವಲ್ಲದ ಕಾರಣ ಕಳೆದ ಒಂದು ತಿಂಗಳಲ್ಲಿ ರೂ.400 ರ ಸಮೀಪದಿಂದ ವಾರ್ಷಿಕ ಕನಿಷ್ಠ ರೂ.215 ರ ಸಮೀಪಕ್ಕೆ ಕುಸಿದಿತ್ತು. ಈ ವಾರದ ಆರಂಭದಿಂದಲೂ ಸ್ವಲ್ಪ ಚೇತರಿಸಿಕೊಂಡು ಶುಕ್ರವಾರದಂದು ರೂ.233 ರಿಂದ ರೂ.253 ರವರೆಗೂ ಏರಿಕೆ ಕಂಡಿದೆ.
    • ಇನ್ವೆಸ್ಕೋ ಮ್ಯುಚುಯಲ್‌ ಫಂಡ್‌ ಶುಕ್ರವಾರದಂದು ತನ್ನ ಇನ್ವೆಸ್ಕೋ ಟ್ಯಾಕ್ಸ್‌ ಪ್ಲಾನ್‌ ಯೋಜನೆಯ 3,39,349 ರೆಪ್ಕೋ ಹೋಮ್‌ ಫೈನಾನ್ಸ್‌ ಲಿಮಿಟೆಡ್‌ ಕಂಪನಿಯ ಷೇರನ್ನು ಗಜಗಾತ್ರದ ವಹಿವಾಟಿನಲ್ಲಿ ರೂ.117 ರಂತೆ ಮಾರಾಟ ಮಾಡಿದೆ. ನಂತರದಲ್ಲಿ ಷೇರಿನ ಬೆಲೆಯು ಚೇತರಿಸಿಕೊಂಡು ರೂ.131 ರ ಸಮೀಪ ಕೊನೆಗೊಂಡಿದೆ.
    • ಹೀರೋ ಮೋಟೊ ಕಾರ್ಪ್‌ ಲಿಮಿಟೆಡ್‌ ಕಂಪನಿಯು ತನ್ನ ದ್ವಿಚಕ್ರವಾಹನಗಳಾದ ಸ್ಕೂಟರ್‌ ಮತ್ತು ಮೋಟಾರ್‌ ಸೈಕಲ್‌ ಗಳ ಬೆಲೆಯನ್ನು ಪ್ರತಿ ಘಟಕಕ್ಕೆ ರೂ.3,000 ದಂತೆ ಜುಲೈ ಒಂದರಿಂದ ಬೆಲೆ ಹೆಚ್ಚಿಸಲಿದೆ.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ತಾನೊಂದು ಬಗೆದರೆ ದೈವವೊಂದು ಬಗೆದಂತೆ

    ಕಡವರನೆಡಹಿ ಸಂಧಿಸಿದ ಕಡುನಡವನಂತೆ– ಉಪಮಾಲೋಲ ಲಕ್ಷ್ಮೀಶನ  ‘ಜೈಮಿನಿ ಭಾರತ’ದ  ‘ಚಂದ್ರಹಾಸನ ಬಾಲ್ಯ’ದಲ್ಲಿ ಉಲ್ಲೇಖವಾಗಿರುವ    ಮಾತಿದು.  ಕುಳಿಂದಕ ಎನ್ನುವ ಮಹಾರಾಜ ಬೇಟೆ ನಿಮಿತ್ತ ಕಾಡಿಗೆ ಬಂದಿರುವಾಗ  ಕಾಡಿನ ನಡುವೆ ರೋಧಿಸುತ್ತಿದ್ದ ಮಗುವನ್ನು ಪಡೆದಾಗ ರಾಜನಿಗಾದ ಸಂತೋಷವನ್ನು ವಿವರಿಸುವ ಸಂದರ್ಭದಲ್ಲಿ ಕವಿ ಈ ಮಾತುಗಳನ್ನಾಡಿದ್ದಾನೆ. 

    ಮಕ್ಕಳಿಲ್ಲದ ರಾಜನಿಗೆ ಕಾಡಿನ ನಡುವೆ ಬೆರಳನ್ನು  ಕಳೆದುಕೊಂಡು  ಅಸಾಧ್ಯವಾದ ನೋವಿನ ನಡುವೆಯೂ  ಹರಿನಾಮಸ್ಮರಣೆ ಮಾಡುತ್ತಿದ್ದ ಬಾಲಕನ  ಸಾಂಗತ್ಯ  ಅತ್ಯಂತ ಖುಷಿ ಕೊಡುತ್ತದೆ . ಕಡು ಬಡವನೊಬ್ಬ  ದಾರಿಯಲ್ಲಿ ನಡೆದುಹೋಗುವಾಗ ಅಕಸ್ಮಾತ್ ಎಡವಿ ಪಡೆಯುವ ದ್ರವ್ಯದ ಗಂಟು ಹೇಗೆ ಸಂತೋಷ ನೀಡುತ್ತದೆಯೋ ಹಾಗೆ ಕುಳಿಂದಕನಿಗೆ   ಅಕಸ್ಮಿಕ  ಎಂಬಂತೆ ಮಗು ಸಿಕ್ಕಿದ್ದು ಅವರ್ಣನೀಯ ಆನಂದ ತರುತ್ತದೆ.

    ಇಂದಿನ ದಿನಮಾನಗಳಲ್ಲಿ ಅನ್ನಾಹಾರಗಳಿಲ್ಲದೆ ಇದ್ದವರು ಮಾತ್ರ ಬಡವರು ಎನ್ನುವಂತಿಲ್ಲ. ವಿಶಾಲ ಚಿಂತನೆ ಮಾಡಿದರೆ ಅವಕಾಶ ದೇಹಿಗಳೂ ಬಡವರೇ ಸರಿ! ಪೈಪೋಟಿ ಯಿಂದ ಕೂಡಿರುವ ಜಗತ್ತು ಇದು. ಆರೋಗ್ಯಕರ ಪೈಪೋಟಿ  ಇಲ್ಲವೇ ಇಲ್ಲ. ಆನಾರೋಗ್ಯಕರ ಪೈಪೋಟಿ ಇರುವಂಥದ್ದು .ಹೀಗಿರುವಾಗ  ನಿಜಕ್ಕೂ ಪ್ರತಿಭಾವಂತನಿಗೆ ತನ್ನ ಸಾಮರ್ಥ್ಯವನ್ನು  ತೋರಿಸಲು ಅವಕಾಶ ಸಿಕ್ಕರೆ ಅಪರಿಮಿತ ಸಂತೋಷವಾಗುತ್ತದೆ. 

    ಯಾವ ನಿರೀಕ್ಷೆಯೂ ಇಲ್ಲದೆ  ನಮ್ಮ ನಿರೀಕ್ಷೆಗೂ ಮೀರಿದ್ದನ್ನು ಆಕಸ್ಮಿಕವಾಗಿ ಪಡೆಯುವುದೆಂದರೆ  ಸಂತೋಷದ ವಿಚಾರವೆ ಅಲ್ವೆ!   ಬದುಕಿನಲ್ಲಿ ಎಲ್ಲವೂ ನಿರೀಕ್ಷೆಯಂತೆ ಆಗುತ್ತದೆ ಎನ್ನುವುದು ಸುಳ್ಳು. ‘ತಾನೊಂದು ಬಗೆದರೆ ದೈವವೊಂದು ಬಗೆದಂತೆ’ ಎಂಬಂತೆ ಅಪಸವ್ಯಗಳಾಗುವುದೇ  ಹೆಚ್ಚು. ಅವುಗಳ ನಡುವೆ ಇಂಥ ಅನಿರೀಕ್ಷಿತಗಳು  ಸಂತಸದ ಕಡಲಿನಂತೆಯೇ ಭಾಸವಾಗುತ್ತದೆ.

    ಲಕ್ಷ್ಮೀಶ ಕವಿ ಇಲ್ಲಿ  ಕಡುಬಡವ  ಬಂದರೆ ತೀವ್ರ ಬಯಕೆಯನ್ನು ಹೊಂದಿದ್ದವನು    ಎಂಬ ಅರ್ಥದಲ್ಲಿ ಬಳಸಿರುವುದು ಕವಿಯ  ಪ್ರತಿಭೆಗೆ ಹಿಡಿದಿರುವ ಕೈಗನ್ನಡಿ ಎನ್ನಬಹುದು.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ಎಸ್.ಎಂ.ಕೃಷ್ಣ, ನಾರಾಯಣಮೂರ್ತಿ, ಪಡುಕೋಣೆಗೆ ಚೊಚ್ಚಲ ‘ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ

    5 ಲಕ್ಷ ರೂ. ನಗದುಸಹಿತ ಸೋಮವಾರ ಪ್ರಶಸ್ತಿ ಪ್ರದಾನ

    BENGALURU JUNE 25

    ನಾಡಪ್ರಭು ಕೆಂಪೇಗೌಡರ ಗೌರವಾರ್ಥ ಈ ವರ್ಷದಿಂದ ಸರಕಾರವು ಕೊಡಮಾಡುತ್ತಿರುವ ‘ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಮತ್ತು ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ತಕಾಶ್ ಪಡುಕೋಣೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

    ಜೂನ್ 27ರ ಸೋಮವಾರ ವಿಧಾನಸೌಧದಲ್ಲಿ ನಡೆಯಲಿರುವ ಕೆಂಪೇಗೌಡರ 513ನೇ ಜಯಂತಿ ಕಾರ್ಯಕ್ರಮದಲ್ಲಿ ಮೂವರಿಗೂ ತಲಾ 5 ಲಕ್ಷ ರೂಪಾಯಿ ನಗದುಸಹಿತ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿ ಕೊಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

    ಸಚಿವ ಅಶ್ವತ್ಥ ನಾರಾಯಣ ಅವರು, ಮೂವರು ಪುರಸ್ಕೃತರ ಪೈಕಿ ಹಿರಿಯರಾದ ಕೃಷ್ಣ ಅವರನ್ನು ಶನಿವಾರ ಅವರ ಮನೆಯಲ್ಲಿ ಭೇಟಿಯಾಗಿ, ಕೆಂಪೇಗೌಡ ಜಯಂತಿಗೆ ಆಗಮಿಸಿ ಪ್ರಶಸ್ತಿ ಸ್ವೀಕರಿಸಬೇಕೆಂದು ಸರಕಾರದ ಪರವಾಗಿ ಆಹ್ವಾನಿಸಿದರು. ಇದಕ್ಕೆ ಕೃಷ್ಣ ಅವರು ಸಮ್ಮತಿಸಿ, ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ‘ಮೂವರೂ ಪುರಸ್ಕೃತರು ಬೆಂಗಳೂರಿನ ಬೆಳವಣಿಗೆಗೆ ಮತ್ತು ಕೀರ್ತಿಗೆ ತಮ್ಮದೇ ಆದ ಅನನ್ಯ ವಿಧಾನಗಳ ಮೂಲಕ ಅನುಪಮ ಕೊಡುಗೆ ನೀಡಿದ್ದಾರೆ’ ಎಂದು ಬಣ್ಣಿಸಿದರು.

    ಸಾಧಕರನ್ನು ಆಯ್ಕೆ ಮಾಡಲು ರಾಜ್ಯ ಸರ್ಕಾರದ ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಇದರಲ್ಲಿ ಉದ್ಯಮಿ ಮೋಹನದಾಸ್ ಪೈ, ವಿವೇಕಾನಂದ ಯೂತ್ ಮೂವ್ ಮೆಂಟ್ ಸ್ಥಾಪಕ ಆರ್.ಬಾಲಸುಬ್ರಹ್ಮಣ್ಯಂ, ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ.ಶಂಕರಲಿಂಗೇಗೌಡ ಅವರು ಸದಸ್ಯರಾಗಿದ್ದರು. ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಆರ್. ವಿನಯದೀಪ್ ಅವರು ಸದಸ್ಯ ಕಾರ್ಯದರ್ಶಿ ಆಗಿದ್ದರು.

    ಗ್ರಾಮೀಣ ಬ್ಯಾಂಕ್ ಗಳ ನೇಮಕ: ಅರ್ಜಿ ಸಲ್ಲಿಕೆ ಸೋಮವಾರವೇ ಕಡೇ ದಿನ

    ಐಬಿಪಿಎಸ್ ಮೂಲಕ ಗ್ರಾಮೀಣ ಬ್ಯಾಂಕುಗಳಲ್ಲಿ 8,106 ಹುದ್ದೆಗಳಿಗೆ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.2017ರಲ್ಲಿ ಐಬಿಪಿಎಸ್, ನೇಮಕಕ್ಕೆ ಅಧಿಸೂಚನೆ ಹೊರಡಿಸಿದಾಗ 15,332 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. 2018ರಲ್ಲಿ ಅದು ಕೇವಲ 10,190ಕ್ಕೆ ಇಳಿಯಿತು. 2019 ರಲ್ಲಿ 8,400 ಹಾಗೂ 2020 ರಲ್ಲಿ 9638 ಹುದ್ದೆಗಳಿಗೆ ಪರೀಕ್ಷೆ ನಡೆಸಿದರೆ 2021 ರಲ್ಲಿ 12,810 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿತು. ಇದೀಗ 2022ನೇ ಸಾಲಿನ 8,106 ಹುದ್ದೆಗಳಿಗೆ ನೇಮಕ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ವರ್ಷ ದಿಂದ ವರ್ಷಕ್ಕೆ ನೇಮಕಾತಿಯಲ್ಲಿ ಇಳಿಮುಖವಾಗಿರೋದನ್ನ ಸ್ಪಷ್ಟವಾಗಿ ಕಾಣಬಹುದು.

    ರಾಜ್ಯದ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳಲ್ಲಿ ಹುದ್ದೆ ಗಳಿಗೆ ಅರ್ಜಿ ಕರೆಯಲಾಗಿದೆ.
    ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ದೇಶದ 43 ಗ್ರಾಮೀಣ ಬ್ಯಾಂಕುಗಳಲ್ಲಿ (ಆರ್ ಆರ್ ಬಿ) ಖಾಲಿ ಇರುವ ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್ ) ಮತ್ತು ಆಫೀಸರ್ ಹುದ್ದೆಗಳ ನೇಮಕಕ್ಕೆ ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಅಧಿಸೂಚನೆಯನ್ನು ಪ್ರಕಟಿಸಿದೆ.

    ಜೂನ್ 7ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಜೂನ್ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಪರೀಕ್ಷೆ ನಡೆಸಿ, ನವೆಂಬರ್ನಲ್ಲಿ ಸಂದರ್ಶನ ನಡೆಸಲು ಐಬಿಪಿಎಸ್ ನಿರ್ಧರಿಸಿದೆ. ರಾಜ್ಯದ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲಿಷ್ ಜೊತೆಗೆ ಕನ್ನಡ ಮತ್ತು ಕೊಂಕಣಿ ಭಾಷೆಯಲ್ಲೂ ಪರೀಕ್ಷೆ ಬರೆಯುವ ಅವಕಾಶವನ್ನು ಐಬಿಪಿಎಸ್ ನೀಡಿದೆ.

    ಹುದ್ದೆ ವಿವರ:

    ಈ ಬಾರಿ 8,106 ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂದು ಪ್ರಕಟಿಸಲಾಗಿದೆ. ಇದರಲ್ಲಿ
    ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) ಹುದ್ದೆಗಳ ಸಂಖ್ಯೆಯೇ 4483, ಆಫೀಸರ್ ಸ್ಕೇಲ್-I ರ ಹುದ್ದೆ 2676, ಆಫೀಸರ್ ಸ್ಕೇಲ್-II ರ ಹುದ್ದೆ 867 ಮತ್ತು ಆಫೀಸರ್ ಸ್ಕೇಲ್-IIIರ 80 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ರಾಜ್ಯದಲ್ಲಿನ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳಿಗೆ ಈ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ನಡೆಯಲಿದೆ. ರಾಜ್ಯದ ಎರಡು ಬ್ಯಾಂಕುಗಳಲ್ಲಿ 832 ಹುದ್ದೆಗಳು ಖಾಲಿ ಇವೆ, ಇದರಲ್ಲಿ ಆಫೀಸ್ ಅಸಿಸ್ಟೆಂಟ್ ಹುದ್ದೆಗಳ ಸಂಖ್ಯೆಯೇ 173, ಆಫೀಸರ್ ಸ್ಕೇಲ್-Iರ 429 ಮತ್ತು ಆಫೀಸರ್ ಸ್ಕೇಲ್-II ರ 230 (ಜನರಲ್ ಬ್ಯಾಂಕಿಂಗ್) ಹುದ್ದೆಗಳಿಗೆ ನೇಮಕ ನಡೆಯಲಿದೆ.

    ರಾಜ್ಯದಲ್ಲಿ ಎಲ್ಲೆಲ್ಲಿ ಪರೀಕ್ಷೆ?

    ಪೂರ್ವಭಾವಿ ಪರೀಕ್ಷೆ:

    ಬೆಂಗಳೂರು,ಬೆಳಗಾವಿ,ಬೀದರ,ದಾವಣಗೆರೆ ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮಂಡ್ಯ ಮೈಸೂರು,ಶಿವಮೊಗ್ಗ,ಮಂಗಳೂರು ಮತ್ತು ಉಡುಪಿ.

    ಮುಖ್ಯಪರೀಕ್ಷೆ:

    ಬೆಂಗಳೂರು,ಬೆಳಗಾವಿ, ದಾವಣಗೆರೆ ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮೈಸೂರು,ಶಿವಮೊಗ್ಗ.

    ಅರ್ಜಿ ಶುಲ್ಕ:

    ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 850 ರೂ. ಹಾಗೂ ಎಸ್ಸಿ/ಎಸ್ಟಿ/ವಿಕಲಚೇತನರು/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 175 ರೂ.ಶುಲ್ಕ ನಿಗದಿಪಡಿಸಲಾಗಿದೆ. ಬ್ಯಾಂಕ್ ಸೇವಾ ಶುಲ್ಕ ಮತ್ತು ಇಂಟಿಮೇಷನ್ ಫೀ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಆನ್ ಲೈನ್ ಮೂಲಕ ಮಾತ್ರ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

    ವಯೋಮಿತಿ:

    ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್) ಹುದ್ದೆಗೆ 18ರಿಂದ 28 ವರ್ಷ. ಆಫೀಸರ್ ಸ್ಕೇಲ್-I ಹುದ್ದೆಗೆ ಅಭ್ಯರ್ಥಿಗಳು 18ರಿಂದ 30 ವರ್ಷದೊಳಗಿನವರಾಗಿರಬೇಕು ಆಫೀಸರ್ ಸ್ಟೇಲ್- II ಹುದ್ದೆಗೆ 21ರಿಂದ 32 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಹಾಗೂ ಆಫೀಸರ್ ಸ್ಟೇಲ್ – III ಹುದ್ದೆಯ ಆಕಾಂಕ್ಷಿಗಳು 21ರಿಂದ 40 ವರ್ಷದೊಳಗಿನವರಾಗಿರಬೇಕು.

    ಪರೀಕ್ಷಾ ಪೂರ್ವ ತರಬೇತಿ:

    ಐಬಿಪಿಎಸ್ ಎಸ್ ಸಿ/ಎಸ್ ಟಿ, ಅಲ್ಪಸಂಖ್ಯಾತ ಅಭ್ಯರ್ಥಿಗಳು ಮಾಜಿ ಸೈನಿಕರು ವಿಕಲಚೇತನ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಿದೆ. ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪಸ್ ) ಮತ್ತು ಆಫೀಸರ್ ಸ್ಕೇಲ್-I ಹುದ್ದೆಗಳಿಗೆ ತರಬೇತಿ ಪಡೆಯಬಹುದು. ತರಬೇತಿ ಪಡೆಯುವ ಅಭ್ಯರ್ಥಿಗಳು ಆನ್ ಲೈನ್ ನಲ್ಲಿಅರ್ಜಿ ಸಲ್ಲಿಸುವಾಗಲೇ ತರಬೇತಿ ಪಡೆಯುವ ಬಗ್ಗೆ ಅದಕ್ಕಾಗಿ ಮೀಸಲಿಟ್ಟ ಕಾಲಂನಲ್ಲಿ ನಮೂದಿಸಬೇಕು,ತರಬೇತಿ ಸ್ಥಳದ ಖರ್ಚು ವೆಚ್ಚಗಳನ್ನು ಹಾಗೂ ಪ್ರಯಾಣದ ಖರ್ಚು ವೆಚ್ಚವನ್ನು ಅಭ್ಯರ್ಥಿಗಳ ಭರಿಸಬೇಕಾಗುತ್ತದೆ.

    ಅರ್ಹತೆಗಳೇನು?

    ಆಫೀಸ್ ಅಸಿಸ್ಟೆಂಟ್: ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆದರೆ ಸ್ಥಳೀಯ ಭಾಷೆಯನ್ನು ತಿಳಿದಿರಬೇಕಾದುದು ಅವಶ್ಯಕ. ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರಬೇಕು.

    ಆಫೀಸರ್ ಸ್ಕೇಲ್-I: ಕೃಷಿ, ತೋಟಗಾರಿಕೆ, ಅರಣ್ಯ, ಪ್ರಾಣಿಶಾಸ್ತ್ರ, ಪಶು ವಿಜ್ಞಾನ, ಅಗ್ರಿಕಲ್ಟರ್ ಎಂಜಿನಿಯರಿಂಗ್, ಪಿಸಿಕಲ್ಟರ್, ಅಗ್ರಿಕಲ್ಟರ್ ಮಾರ್ಕೆಟಿಂಗ್ ಆ್ಯಂಡ್ ಕೋ-ಆಪರೇಷನ್, ಇನ್ಫಾರ್ಮೇಷನ್ ಟೆಕ್ನಾಲಜಿ, ಮ್ಯಾನೇಜ್ ಮೆಂಟ್ ಲಾ, ಅರ್ಥಶಾಸ್ತ್ರ ಮತ್ತು ಲೆಕ್ಕಶಾಸ್ತ್ರ-ಈ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಪಡೆದವರು ಆಫೀಸರ್ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.

    ಆಫೀಸರ್ ಸ್ಕೇಲ್ – II: ಅಂಗೀಕೃತ ವಿವಿಯಿಂದ ಶೇಕಡಾ 50 ಅಂಕಗಳೊಂದಿಗೆ ಪದವಿ ಪಡೆದಿರುವುದು ಕಡ್ಡಾಯ. ಆಫೀಸರ್ ಸ್ಕೇಲ್-I ಗೆ ತಿಳಿಸಿದ ವಿಷಯಗಳಲ್ಲಿ ಪದವಿ ಪಡೆದಿದ್ದರೆ ನೇಮಕದಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ಇದರೊಂದಿಗೆ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಎರಡು ವರ್ಷಗಳ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು. ಆಫೀಸರ ಸ್ಕೇಲ್-II ನ ಸ್ಪೆಷಲಿಸ್ಟ್ ಆಫೀಸರ್ಗಳಾದ ಇನ್ ಫಾರ್ಮೇಷನ್ ಆಫೀಸರ್, ಚಾರ್ಟಡ್ ಅಕೌಂಟೆಂಟ್, ಲಾ ಆಫೀಸರ್, ಟ್ರೇಸರಿ ಆಫೀಸರ್, ಮಾರ್ಕೆಟಿಂಗ್ ಆಫೀಸರ್ ಮತ್ತು ಅಗ್ರಿಕಲ್ಚರ್ ಆಫೀಸರ್ ಹುದ್ದೆಗಳಿಗೆ ಪದವಿ ಮತ್ತು ಒಂದು ವರ್ಷದ ಸೇವಾನುಭವ ಹೊಂದಿರಬೇಕು.

    ಆಫೀಸರ್ ಸ್ಕೇಲ್-III: ಮಾರ್ಕೆಂಟಿಂಗ್ ಫೈನಾನ್ಸ್, ಅಗ್ರಿಕಲ್ಚರ್ ಹಾರ್ಟಿಕಲ್ಟರ್, ಫಾರೆಸ್ಟ್ರಿ ಅಗ್ರಿಕಲ್ಟರ್, ಅಗ್ನಿಕಲ್ಚರಲ್ ಮಾರ್ಕೆಟಿಂಗ್, ಕೊ ಆಪರೇಷನ್, ಇನ್ಫಾರ್ಮೇಷನ್ ಟೆಕ್ನಾಲಜಿ, ಮ್ಯಾನೇಜ್ಮೆಂಟ್ ಮತ್ತು ಕಾನೂನು ವಿಷಯವ ಶೇ. 50 ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜೊತೆಗೆ ಬ್ಯಾಂಕ್ ಅಥವ ವಿತ್ತೀಯ ಸಂಸ್ಥೆಗಳಲ್ಲಿ ಐದು ವರ್ಷ ಕಾರ್ಯನಿರ್ವಹಿಸಿ ಅನುಭವ ಹೊಂದಿರಬೇಕು.

    ಈ ಬಾರಿಯ ಬದಲಾವಣೆಗಳೇನು?:

    ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವರ್ಷದಿಂದ ವರ್ಷಕ್ಕೆ ಕೆಲವು ಬದಲಾವಣೆಗಳು ಸಾಮಾನ್ಯ. ಹಾಗೆಯೇ ಈ ಬಾರಿಯ ಬದಲಾವಣೆಗಳು ಕೆಳಗಿನಂತಿವೆ:

    ಈ ಬಾರಿ ಅರ್ಜಿ ಸಲ್ಲಿಸುವಾಗ ಪರೀಕ್ಷೆಗೆ ನೀವು ತರುವ ಐಡಿ ಪ್ರೂಫ್ ಸಂಖ್ಯೆ ನೀಡುವುದು ಕಡ್ಡಾಯ ಹಾಗೂ ಅದು ನೀವು ಅರ್ಜಿ ಸಲ್ಲಿಸಿದ ಹೆಸರಿನೊಂದಿಗೆ ಹೊಂದಾಣಿಕೆಯಾಗಬೇಕು. ಈ ಬಾರಿ ಪ್ರಿಲಿಮ್ಸ್ ಪರೀಕ್ಷೆಯ ಪ್ರವೇಶ ಪತ್ರವನ್ನು ಪರೀಕ್ಷಾ ಸ್ಥಳದಲ್ಲಿ ಸಂಗ್ರಹಿಸಲಾಗುವುದಿಲ್ಲ. ಬದಲಾಗಿ ಇದನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿಯಿಂದ ಧೃಡಪಡಿಸಿಕೊಳ್ಳುವ ಆಗತ್ಯವಿದೆ. ಮೇನ್ಸ್ ಪರೀಕ್ಷೆಗೆ ಅರ್ಹಗೊಂಡ ಅಭ್ಯರ್ಥಿಗಳು ಮೇನ್ಸ್ ಪರೀಕ್ಷೆಯ ಪ್ರವೇಶ ಪತ್ರದೊಂದಿಗೆ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ದೃಢೀಕರಣಗೊಂಡ ಪ್ರವೇಶ ಪತ್ರವನ್ನು ಕೂಡ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ನೋಡಬಹುದು.

    ಮುಖ್ಯ ಸೂಚನೆಗಳು:

    ನಿಗದಿತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿ ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಹುದ್ದೆ ಎರಡಕ್ಕೂ ಅರ್ಜಿ ಸಲ್ಲಿಸಬಹುದು. ಆದರೆ ಆಫೀಸರ್ ಕೇಡರ್ ನಲ್ಲಿ ಯಾವುದಾದರೂ ಒಂದು ಹುದ್ದೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.

    ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಸ್ಕೇಲ್-Iಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರಬೇಕಾದುದು ಕಡ್ಡಾಯ.
    ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಸ್ಕೇಲ್-I ಕ್ಕೆ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯ ಹೊಂದಿರುವುದು ಅವಶ್ಯ. 8ನೇ ತರಗತಿಯವರೆಗೆ ಅಥವಾ ಅದಕ್ಕೂ ಮೇಲ್ಪಟ್ಟು ಸ್ಥಳೀಯ ಭಾಷೆಯ ಮಾಧ್ಯಮದಲ್ಲಿ ಓದಿದವವರನ್ನು ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯ ಪಡೆದ ಅಭ್ಯರ್ಥಿ ಎಂದು ಪರಿಗಣಿಸಲಾಗುತ್ತದೆ.

    ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಮಾಹಿತಿಯು ಪ್ರವೇಶಪತ್ರದ ಜತೆಗೆ ನೀಡಲಾಗುವ ’ಮಾಹಿತಿ ಕೈಪಿಡಿ’ಯಲ್ಲಿ ಇರುತ್ತದೆ. ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಮೆರಿಟ್ ಲಿಸ್ಟ್ ಸಿದ್ಧಪಡಿಸುವಾಗ ಅಭ್ಯರ್ಥಿಯು ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಈ ಹುದ್ದೆಯ ನೇಮಕ ಪ್ರಕ್ರಿಯೆಯಲ್ಲಿ ಸಂದರ್ಶನ ಇರುವುದಿಲ್ಲ. ಆಫೀಸರ್ ಸ್ಟೇಲ್-1 ಹುದ್ದೆಗೆ ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕ ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ಅಂತಿಮ ಆಯ್ಕೆ ಪಟ್ಟೆ ಪ್ರಕಟಿಸಲಾಗುತ್ತದೆ.

    ಹೆಚ್ಚಿನ ಮಾಹಿತಿಯನ್ನು ಐಬಿಪಿಎಸ್ ನ ಅಧಿಕೃತ ವೆಬ್ ಸೈಟ್ ನಲ್ಲಿ ಪಡೆದು ಅರ್ಜಿ ಸಲ್ಲಿಸಿ.
    ಲಿಂಕ್: https://www.ibps.in/

    ಹೆಚ್ಚಿನ ಮಾಹಿತಿಗೆ ವೆಬ್: https://www.ibps.in/

    error: Content is protected !!