26.8 C
Karnataka
Tuesday, April 22, 2025
    Home Blog Page 160

    ಬಿಜೆಪಿಯ ಮುಂದಿನ ಅಸ್ತ್ರ ಏನಾಗಬಹುದು ?

    ಶ್ರೀ ರಾಮಜನ್ಮಭೂಮಿ ವಿವಾದ ತಾರ್ಕಿಕ ಅಂತ್ಯ ಕಂಡಿದೆ. ಮಂದಿರಕ್ಕೆ ಶಿಲಾನ್ಯಾಸ ಆಗಿ ಹೋಗಿದೆ. ಕಾಂಗ್ರೆಸ್ ಸೇರಿದಂತೆ ಯಾವುದೇ ಜಾತ್ಯತೀತ ಎಂದು ಕರೆಸಿಕೊಳ್ಳುತ್ತಿರುವ ಪಕ್ಷಗಳು ಕೂಡ ಶಿಲಾನ್ಯಾಸವನ್ನು ಸ್ವಾಗತಿಸಿವೆ. ಹೀಗಾಗಿ ಬಿಜೆಪಿಯ ಪಾಲಿಗೆ ಮುಂದೆ ಏನು ವಿಷಯ ?

    ಭವಿಷ್ಯವನ್ನು ಬಗೆದು ನೋಡಲು ಯಾರಿಗೂ ಸಾಧ್ಯವಿಲ್ಲ. ಆದಾಗ್ಯೂ, ಒಂದಿಷ್ಟು ರೀತಿಯಲ್ಲಿ ಈಗಿನ ಪರಿಸ್ಥಿತಿಯೇ ಮುಂದುವರಿದರೆ ಏನಾಗಬಹುದು ಎಂದು ಯೋಚನೆ ಮಾಡಲು ಸಾಧ್ಯವಿದೆ.

    ಬತ್ತಳಿಕೆ ಖಾಲಿ ?

    ಲೋಕಸಭಾ ಚುನಾವಣೆಗೆ ಇನ್ನೂ ಬಹುತೇಕ ಮೂರು ವರ್ಷಗಳು ಬಾಕಿ ಇವೆ. ಪ್ರಧಾನಿ ನರೇಂದ್ರ ಮೋದಿಯ ವರ್ಚಸ್ಸು, ಅಮಿತ್ ಶಾ ಅವರ ಕಾರ್ಯತಂತ್ರ ಇವೆರಡರಿಂದಲೇ ಪಕ್ಷ ಮತ್ತೊಮ್ಮೆ ಅಂದರೆ ಮೂರನೇ ಬಾರಿಗೆ ಅಧಿಕಾರಕ್ಕೆ ಏರಲು ಸಾಧ್ಯ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಆಡಳಿತ ವಿರೋಧಿ ಅಲೆ ಎಂಬುದು ಭಾರತದಲ್ಲಿ ಸಾಮಾನ್ಯ. ಆದರೆ, ಸಧ್ಯದ ಸ್ಥಿತಿಯಲ್ಲಿ ಪರ್ಯಾಯ ಸಮೂಹ ನಾಯಕ ಇಲ್ಲದಿರುವುದೇ ಬಿಜೆಪಿಯ ಪಾಲಿಗೆ ಬಹುದೊಡ್ಡ ಲಾಭ.

    ಹಾಗೆಂದು ಅದು ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಈಗಾಗಲೇ ಜಮ್ಮು-ಕಾಶ್ಮೀರದ ಕುರಿತಾಗಿ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದೆ. ದೊಡ್ಡ ಮುಖಬೆಲೆಯ ನೋಟು ಅಮಾನ್ಯದ ಮೂಲಕ ಸುದ್ದಿ ಮಾಡಿದೆ. ತ್ರಿವಳಿ ತಲ್ಲಾಕ್ ಅದರ ಮತ್ತೊಂದು ಅಸ್ತ್ರ. ಆದರೆ ಮುಂದೇನು ?

    ಇನ್ನೂ ಇದೆ

    ಹಾಗೆಂದು ಬಿಜೆಪಿಯ ಬತ್ತಳಿಕೆ ಖಾಲಿಯಾಗಿದೆ ಎಂದು ಹೇಳುವ ಹಾಗಿಲ್ಲ. ಮುಂದಿನ ಲೋಕಸಭಾ ಚುನಾವಣೆಯ ಕಾಲದಲ್ಲೇ ರಾಮ ಮಂದಿರದ ಉದ್ಘಾಟನೆಯನ್ನು ಹಮ್ಮಿಕೊಳ್ಳುವ ಎಲ್ಲಾ ಸಾಧ್ಯತೆಯಿದೆ. ಈ ಮೂಲಕ ನರೇಂದ್ರ ಮೋದಿಯನ್ನು ಮತ್ತೊಮ್ಮೆ ಯುಗ ಪುರುಷ ಎಂದು ಬಿಂಬಿಸಿ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಇದರ ಜತೆಗೆ ಏಕರೂಪ ನಾಗರಿಕ ಸಂಹಿತೆ (ಕಾಮನ್ ಸಿವಿಲ್ ಕೋಡ್)ಯ ವಿಷಯ ಮುನ್ನಲೆಗೆ ತರುವ ಸಾಧ್ಯತೆಗಳಿವೆ.

    ಈಗಂತೂ ಇಂಟರ್ ನೆಟ್ ಯುಗ. ಬಿಜೆಪಿಯಲ್ಲಿ ಅದರಲ್ಲಿ ಪರಿಣತರಾದ ಬಹುದೊಡ್ಡ ತಂಡವೇ ಇದೆ. ತಮ್ಮ ಭಾವನೆಗಳನ್ನು ಜನರ ಮನಸ್ಸಿಗೆ ತಾಕುವ ಹಾಗೆ ಹೇಳುವ ಪೋಸ್ಟ್ ಗಳನ್ನು ಅವರು ಹಾಕಿಯೇ ಹಾಕುತ್ತಾರೆ. ಆದರೆ ಕಾಂಗ್ರೆಸ್ ನಲ್ಲಿ ಅಂತಹ ಒಂದು ತಂಡ ಸದ್ಯದ ಮಟ್ಟಿಗೆ ಇಲ್ಲ. ಸೋನಿಯಾ ಗಾಂಧಿಯವರು ಕಾಂಗ್ರೆಸ್ ಪಕ್ಷಾಧ್ಯರಾಗಿ ಪಕ್ಷವನ್ನು ಮುನ್ನಡೆಸಿದ್ದಾರೆಯೇ ಹೊರತು ಸ್ವಯಂ ಆಗಿ ಅಲ್ಲ ಎಂದು ಹೇಳಿದರೆ ತಪ್ಪಿಲ್ಲ. ಜತೆಗೆ ಶತಮಾನದ ಹಳೆಯ ಪಕ್ಷದಲ್ಲಿ ಹೊಸ ಚಿಂತನೆಗಳೂ ಹುಟ್ಟುತ್ತಿಲ್ಲ. ಹಳೆಬರ ಆಡಂಬೋಲವಾಗಿರುವ ಕಾಂಗ್ರೆಸ್, ಚೇತನವಿಲ್ಲದೆ ಬಳಲುತ್ತಿದೆ. ಹೀಗಾಗಿ ಬಿಜೆಪಿಗೆ ಮತ್ತೊಂದು ಅವಕಾಶ ಬಂದರೂ ಬಂದಿತು ಎಂದೇ ಹೇಳಬೇಕಾಗುತ್ತದೆ. ಆದರೆ, ಮೂರು ವರ್ಷಗಳು ಅಂದರೆ ದೀರ್ಘಕಾಲ. ಆಗ ಏನು ಬೇಕಾದರೂ ಬದಲಾವಣೆಯಾಗಬಹುದು ಅಲ್ಲವೇ ?

    ಮಳೆಯೊಂದು ಬಾಲ್ಯದ ಆಶ್ಚರ್ಯ , ಯೌವನದ ಅನುಭವ , ಬದುಕಿನ ಸಂಭ್ರಮ

    ನಿನ್ನಿಂದ ಬೇಸಾಯ . ನಿನ್ನಿಂದ ಕೊಯ್ಲು .ನಿನ್ನಿಂದ ಸುಗ್ಗಿ .ನೀನೇ ಫಲ, ನೀನೇ ದವಸ , ನೀನೇ ಧಾನ್ಯ . ನೀನು ಬರ್ತೀಯ ಅಂದ್ರೇನೆ ಕಾರ್ಮೋಡಗಳು ಜೊತೆಯಾಗುತ್ತವೆ . ಭಾನು ಗುಡುಗುತ್ತಾ ಬಹುಪರಾಕನ್ನ ತಿಳಿಸುತ್ತೆ ‌. ಮಿಂಚು ಸಂಚರಿಸಿ ಸಂಚಲವನ್ನೇ ಸೃಷ್ಟಿಸುತ್ತೆ . ಕೃಷಿಕರು ಕನಸಿನಲ್ಲಿ ನಿನ್ನ ಭ್ರಮಿಸುತ್ತಾರೆ , ಜೊತೆಗೆ ರಮಿಸುತ್ತಾರೆ , ಕೈಎತ್ತಿ ನಮಿಸುತ್ತಾರೆ .

    ಕೆರೆಗಳು ಜಾಗ ಹುಡುಕಿದ್ರೇ ನದಿಗಳು ದಾರಿ ಹುಡುಕುತ್ತವೆ . ನಿನ್ನತ್ರ ಹೆಚ್ಚು ಕಡಿಮೆ ಎಂಬೆರಡು ಪದಕ್ಕೆ ತುಂಬಾನೇ ಒಳ ಅರ್ಥ ಇದೆ . ನೀನು ಅಳತೆ ಮೀರಿದರೂ ಅಪಾಯ , ಅಳತೆಗೆ ಬಾರದಿದ್ದರೂ ಅಪಾಯ. ನಿನದೊಂದು ಸ್ವಾದದ ಸುವಾಸನೆಯಿದೆ . ನಿನ್ನದೇ ಆದ ನಿರ್ಧಿಷ್ಟ ಕಾಲವಿದೆ . ನಿನ್ನನ್ನಳಿಯಲು ಹವಾಮಾನ ಇಲಾಖೆಯಿದೆ .

    ಅನ್ನದಾತರಿಗೆ ನೀನು ಅನ್ನವೂ ಹೌದು ಕನ್ನವೂ ಹೌದು . ನಿನ್ನ ಮನಸ್ಥಿತಿ ಚೆನ್ನಾಗಿದ್ರೆ ಸೂರ್ಯನೊಂದಿಗೆ ಬೆರೆತು ಸೊಗಸಾದ ಕಾಮನಬಿಲ್ಲನ್ನು ಸೃಷ್ಟಿಸ್ತೀಯ. ಅದೇ ನಿನ್ನ ಮೂಡು ಸರಿ ಇಲ್ಲದಾಗ ಅದೇ ಸೂರ್ಯನ ಹುಟ್ಟಡಗಿಸ್ತೀಯ . ನಿನ್ನ ಗೈರುಹಾಜರಿಯಿಂದ ಪ್ರಕೃತಿ ಕೋಪಗೊಂಡ್ರೆ ನಿನ್ನ ಜೋರುಹಾಜರಿಯಿಂದ ಪ್ರಕೃತಿ ವಿಕೋಪಗೊಳ್ಳುತ್ತೆ.

    ಕವಿಗಳು ನಿನ್ನನ್ನು ಜಲಧಾರೆ, ವರ್ಷಧಾರೆ, ವರುಣ, ತುಂತುರುಮಳೆ , ಸೋನೇಮಳೆ , ಜೋರುಮಳೆ , ಮುಂಗಾರುಮಳೆ , ಜಡಿಮಳೆ , ಆಲೀಕಲ್ಲು ಮಳೆ, ಧಾರಾಕಾರಮಳೆ ಎಂದು ವಿಧವಿಧವಾಗಿ ವರ್ಣಿಸುತ್ತಾರೆ.

    ನಿನ್ನ ಹನಿಗಳದ್ದು ಒಮ್ಮೊಮ್ಮೆ ನರ್ತನವಾದರೆ ಒಮ್ಮೊಮ್ಮೆ ರುದ್ರನರ್ತನ . ನೀನು ಪ್ರೇಮಿಗಳಿಗೆ ಸಿಹಿ ಭಗ್ನಪ್ರೇಮಿಗಳಿಗೆ ಕಹಿ . ನಿನ್ನ ಆಗಮನಕ್ಕೆ ಕೃತಕ ಛತ್ರಿಗಳು ಅರಳಿದರೆ , ನಿರ್ಗಮನದ ನಂತರ ಜೀವಂತ ಅಣಬೆಗಳೇ ಅರಳುತ್ತವೆ .

    ಕಾಲಕಾಲಕ್ಕೆ ನಿನ್ನಿಂದ ಗಿಡ ಮರ ಕಾಡು ನಿಸರ್ಗ ಬೆಳೆಯುತ್ತವೆ , ಅದೇ ನೀನು ಮುನಿಸಿಕೊಂಡರೆ ಬೃಹತ್ ಮರಗಳು ತಲೆಕೆಳಗಾಗಿ ಉರುಳುತ್ತವೆ , ಅಷ್ಟೇ ಯಾಕೇ ಸರ್ಕಾರಗಳೇ ಉರುಳಿದರೂ ಆಶ್ಚರ್ಯವಿಲ್ಲ . ಎಷ್ಟೇ ಆಗಲಿ ನೀನು “ವರುಣದೇವ” ನಲ್ಲವೇ.

    ಹಳ್ಳಿಗಳಲ್ಲಿ ಮೊದಲೆಲ್ಲಾ ಪರ ಊರಿನವರು ಯಾರೇ ಕಂಡರೂ ಅವರು ಕೇಳುತ್ತಿದ್ದ ಮೊದಲ ಪ್ರಶ್ನೆ ನಿಮ್ ಕಡೆ ಮಳೆ ಆಯ್ತಾ ಅಂತ . ಅವರು ವಾತಾವರಣ ಮತ್ತು ವಾಸನೆ ಗ್ರಹಿಸಿಯೇ ಮಳೆ ಬರುತ್ತಾ ಬರಲ್ವಾ ಅಂತ ಊಹಿಸುತ್ತಿದ್ದರು . ಮಳೆಗೆ ಹಳ್ಳಿಗರ ಮುಖ ಮಾತ್ರ ಅರಳುತ್ತಿರಲಿಲ್ಲ , ಹೊಲ ಗದ್ದೆ ತೋಟ ಪ್ರತಿಯೊಂದೂ ಸಂಪೂರ್ಣವಾಗಿ ಹಸಿರಿನಿಂದ ನಳನಳಿಸುತ್ತಿತ್ತು .

    ಮಳೆ ಅನ್ನುವುದು ಕಣ್ಣಿಗೆ ಹನಿಯಾಗಿ ಕಾಣಿಸಿದರೆ, ಕಿವಿಗೆ ಧ್ವನಿಯಾಗಿ ಕೇಳಿಸುತ್ತದೆ .
    ಮಳೆಯೊಂದು ಬಾಲ್ಯದ ಆಶ್ಚರ್ಯ , ಯೌವನದ ಅನುಭವ , ಬದುಕಿನ ಸಂಭ್ರಮ ,ಜಲಚರಗಳ ಜೀವಜಲ .

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಕೋವಿಡ್ -19 ಲಸಿಕೆಯ ಶೀತಲ ಸಮರದಲ್ಲಿ ರಷ್ಯಾ ಗೆದ್ದು ಬಿಟ್ಟಿತೇ ?

    ಮಹಾಯುದ್ಧಗಳ ಕಾಲ ಮುಗಿದಿದೆ. ಈಗೇನಿದ್ದರೂ ಸೈಬರ್, ಜೈವಿಕ, ವೈರಸ್ ಸಮರಗಳ ಯುಗ. ಸದ್ಯ ರಷ್ಯಾವು ಕೋವಿಡ್ -19 ವಿರುದ್ಧ ಮೊದಲ ಲಸಿಕೆಯನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದಕ್ಕೆ ಅಲ್ಲಿನ ಸರಕಾರದ ಅನುಮೋದನೆಯೂ ಸಿಕ್ಕಿದೆ. ಸ್ವತಃ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ತಮ್ಮ ಇಬ್ಬರು ಪುತ್ರಿಯರ ಪೈಕಿ ಒಬ್ಬಳ ಮೇಲೆ ಇದರ ಪ್ರಯೋಗವನ್ನು ಯಶಸ್ವಿಯಾಗಿ ಮಾಡಲಾಗಿದೆ. ಆಕೆ ಕೊರೊನಾ ವೈರಸ್ ವಿರುದ್ಧ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಿದ್ದು ಸಾಬೀತಾಗಿದೆ ಎಂದು ಘೋಷಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಇದರ ಪರಿಣಾಮದ ದೃಢೀಕರಣ (ವೆರಿಫಿಕೇಶನ್) ಇನ್ನೂ ಆಗಿಲ್ಲ.

    ಆದರೆ, ಈ ಸಂದರ್ಭದಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ, ಸ್ಪುಟ್ನಿಕ್ –ವಿ ಹೆಸರಿನ ಈ ಲಸಿಕೆ ಮತ್ತೊಂದು ಶೀತಲ ಸಮರದ ಮುನ್ಸೂಚನೆಯೇ ಎಂಬುದು. ಇಲ್ಲಿ ಸ್ಪುಟ್ನಿಕ್ ಹೆಸರಿನ ಬಗ್ಗೆಯೇ ವಿಶ್ಲೇಷಣೆ ನಡೆಸದೆ ಮುಂದುವರಿಯುವಂತಿಲ್ಲ.

    ರಷ್ಯಾದ ತಂತ್ರಜ್ಞಾನದ ಪ್ರತೀಕ

    1957ರಲ್ಲಿ ರಷ್ಯಾ (ಆಗ ರಷ್ಯಾ ಯುಎಸ್ಎಸ್ಆರ್ ಆಗಿತ್ತು) ಸ್ಪುಟ್ನಿಕ್ ಎಂಬ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾಯಿಸಿತು. ಬಳಿಕ ಸ್ಪುಟ್ನಿಕ್ -2 (ಅದರ ಹೆಸರನ್ನು ಬಳಿಕ ಸ್ಪುಟ್ನಿಕ್ -3) ಎಂದು ಬದಲಾಯಿಸಲಾಯಿತು. ಅದರಲ್ಲಿ ಬಾಹ್ಯಾಕಾಶಕ್ಕೆ ಲೈಕಾ ಎಂಬ ನಾಯಿಯನ್ನು ರಷ್ಯಾ ಕಳುಹಿಸಿತು. ಇದಕ್ಕಾಗಿ  ರಷ್ಯಾದ ಬಾಹ್ಯಾಕಾಶ ಸಂಸ್ಥೆ ಬೀದಿ ನಾಯಿಯನ್ನೇ ಆರಿಸಿಕೊಂಡಿತ್ತು. ಇದರಲ್ಲಿ ಚಳಿ, ಬಿಸಿಲು, ಹಸಿವು ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೆಚ್ಚಿದೆ ಎಂಬುದು ಅದರ ನಿರ್ಣಯವಾಗಿತ್ತು. ಬಳಿಕ ಲೈಕಾ ಬಾಹ್ಯಾಕಾಶ ಪ್ರವಾಸ ಮುಗಿಸಿ ಯಶಸ್ವಿಯಾಗಿ ಭೂಮಿಗೆ ಇಳಿದಿದ್ದು ಇತಿಹಾಸ.

    ಆ ಸಂದರ್ಭದಲ್ಲೇ ವಿಶ್ವದ ದೊಡ್ಡಣ್ಣ ಎಂದು ಹೊಗಳಲ್ಪಡುತ್ತಿದ್ದ ಅಥವಾ ಗುರುತಿಸಿಕೊಂಡಿದ್ದ ಅಮೆರಿಕಗೆ ಹೊಟ್ಟೆ ಉರಿ ಆರಂಭವಾಯಿತು. ಇದರ ಪರಿಣಾಮವಾಗಿಯೇ ಚಂದ್ರನ ಅಂಗಳದಲ್ಲಿ ನೀಲ್ ಆರ್ಮ ಸ್ಟ್ರಾಂಗ್ ಇಳಿದಿದ್ದು. ಇದರ ಕುರಿತು ಸಾಕಷ್ಟು ವಿವಾದಗಳು ಇವೆ ಎಂಬುದು ನಿಜ. ಆದರೂ ಸ್ಪರ್ಧೆಗೆ ಬಿದ್ದಿದ್ದು ಅಂತೂ ಸುಳ್ಳಲ್ಲವಲ್ಲ ? ಹೀಗಾಗಿಯೇ ಲಸಿಕೆಗೆ ಸ್ಪುಟ್ನಿಕ್ –ವಿ ಎಂದು ರಷ್ಯಾ ಹೆಸರಿಟ್ಟಿರುವುದು ಕುತೂಹಲ ಮೂಡಿಸಿದೆ.

    ಲಸಿಕೆ ರಾಜಕೀಯ

    ಈಗ ಕೊರೊನಾ ಎಂಬ ಮಹಾಮಾರಿ (ಘೋಷಿತ) ವಿಶ್ವದೆಲ್ಲೆಡೆ ಹಾವಳಿ ಎಬ್ಬಿಸುತ್ತಿರುವ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷರು ತಾವು ಜಗತ್ತಿನ ಮೊದಲ ಲಸಿಕೆ ಸಿದ್ಧ ಪಡಿಸಿದ್ದೇವೆ. ಮಾತ್ರವಲ್ಲ ಅದನ್ನು ಸ್ವತಃ ತಮ್ಮ ಮಗಳ ಮೇಲೆಯೇ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ ಎಂದು ಘೋಷಿಸಿದ್ದಾರೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬಾಕೆ ಮರಿಯಾ ಪುಟಿನ್ ಇನ್ನೊಬ್ಬಾಕೆ ಯೆಕಟೆರಿನಾ ಪುಟಿನ್. ಇವರ ಪೈಕಿ ಯಾರ ಮೇಲೆ ಇದರ ಪ್ರಯೋಗ ಆಗಿದೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲವೇ ಇಲ್ಲ. ಆದರೆ, ಸ್ಪುಟ್ನಿಕ್ –ವಿ ಎಂದು ಹೆಸರಿಡುವ ಮೂಲಕ ಮತ್ತೊಂದು ಸುತ್ತಿನ ಪರೋಕ್ಷ ಶೀತಲ ಸಮರಕ್ಕೆ ನಾಂದಿ ಹಾಡಿದ್ದಾರೆಯೇ ಎಂಬ ಅನುಮಾನ ಉದ್ಭವ ಆಗದಿರುವುದಿಲ್ಲ.

    ಏನೇ ಆಗಲಿ, ಸದ್ಯದ ಮಟ್ಟಿಗೆ ಮನುಕುಲಕ್ಕೆ ಶಾಪವಾಗಿ ದೇಶ, ವಿಶ್ವದ ಆರ್ಥಿಕತೆಯನ್ನೇ ಹದಗೆಡುವಂತೆ ಮಾಡಿದ ಕೋವಿಡ್ -19 ಸಾಂಕ್ರಾಮಿಕವನ್ನು ತಡೆಯುವ ನಿಟ್ಟಿನಲ್ಲಿ ಮೊದಲ ಪ್ರಯತ್ನವಂತೂ ಆಗಿದೆ. ಆದರೆ, ಇದರ ನಡುವೆ ಇನ್ನೆಷ್ಟು ರಾಜಕಾರಣ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

    ಕೊರೋನ ಕಾಲದಲ್ಲಿ ಕನ್ನಡ ಸಾಹಿತ್ಯ ತೆಗೆದುಕೊಂಡ ತಿರುವು

    ಕಾಲ ಅಥವಾ ಸಮಯದ ಬಗ್ಗೆ ಜನರಲ್ಲಿ ಇರುವ ಹಲವು ಅಭಿಪ್ರಾಯಗಳನ್ನು 2020 ಬದಲಿಸಿದೆ.
    ಕರೋನ ಕಾಟದಿಂದ ಜನರ ಓಡಾಟ ನಿಂತಿತೇನೋ ನಿಜ. ಆದರೆ ಅವರ ಆಲೋಚನೆಗಳ, ಕಲ್ಪನೆಗಳ, ಚಿಂತನೆಗಳ ಓಘವನ್ನು ನಿಲ್ಲಿಸಲು ಸಾಧ್ಯವೇ?

    ಈ ಸಮಯದಲ್ಲಿ ಬ್ರೇಕಿಂಗ್ ನ್ಯೂಸ್ ಗಳು, ವಾಣಿಜ್ಯ, ಕೃಷಿ, ಸಿನಿಮಾ, ಶಿಕ್ಷಣ, ಟೆಕ್ನಾಲಜಿ, ಆರೋಗ್ಯದ ಕುರಿತಾದ ಎಲ್ಲ ವರ್ತಮಾನಗಳೂ ಕರೋನ ವಿಚಾರದ ಸುತ್ತಲೇ ತಿರುಗುತ್ತಿರುವುದು ನಿಜ. ಹಾಗಾದರೆ ಸೃಜನಶೀಲ ಸಾಹಿತ್ಯ?

    ಸಾಹಿತ್ಯಕ್ಕೆ ಪ್ರೇರೇಪಣೆ ಬೇಕು. ಅದು ಸುತ್ತ ಮುತ್ತಲಿನ ಆಗು-ಹೋಗುಗಳಿಂದ, ಮಾನಸಿಕ ಪ್ರಪಂಚದ ಕಲ್ಪನೆಗಳಿಂದ ಅಥವಾ ವೈಯಕ್ತಿಕ ಚಿಂತನೆಯ ಗರಡಿಯ ಪಟ್ಟುಗಳಿಂದ ಹುಟ್ಟುವಂತದ್ದು. ಆಂತರ್ಯಕ್ಕೂ ಬಾಹ್ಯಕ್ಕೂ ಮುರಿಯಲಾರದ ಸಂಬಂಧವಿದೆ. ಅಂತಹ ಸಾಹಿತ್ಯಕ್ಕೆ ಏನಾಯಿತು?

    ಸಾಹಿತ್ಯ ಮತ್ತು ಕಲೆಗಳಿಗೆ ಬೇಡಿಕೆಯಿರುವುದು, ಹೊಟ್ಟೆ-ಬಟ್ಟೆಗಳ ಚಿಂತೆ ಮುಗಿದ ನಂತರ. ಕೋವಿಡ್ ನ ಕಾರಣ ಪ್ರಪಂಚವೇ ನಲುಗುತ್ತಿದೆ ಎಂದಾದಾಗ ಈ ಎರಡೂ ವಿಚಾರಗಳು ಮೂಲೆಗೆ ಸೇರಿದ್ದುಸಹಜ.ಆದರೆ, ಮನೆಯಿಂದ ಹೊರಬರಲಾಗದ ಜನರಿಗೆ ಚೆನ್ನಾದ ಮನರಂಜನೆ ನೀಡಿ ಅವರ ಮಾನಸಿಕ ಆರೋಗ್ಯವನ್ನು ಕಾಪಾಡಿದ್ದು ಕೂಡ ಇವೇ ಸಾಹಿತ್ಯ ಮತ್ತು ಕಲಾ ಮಾಧ್ಯಮಗಳು!

    ಎಲ್ಲ ರಂಗಗಳಂತೆ ಸಾಹಿತ್ಯವೂ ಒಂದು ದೊಡ್ಡ ಉದ್ಯಮ. ಪುಸ್ತಕ ಮಳಿಗೆಗಳು, ಪ್ರಿಂಟಿಂಗ್ ಪ್ರೆಸ್
    ಗಳು,ಸಾಹಿತ್ಯಕ ಸಂಘಟನೆಗಳು, ಪ್ರಕಾಶಕರ ಚಟುವಟಿಕೆಗಳು ಮತ್ತು ಸಾಹಿತ್ಯಮಂದಿರಗಳನ್ನೇ
    ನೆಚ್ಚಿಕೊಂಡು ಜೀವನ ಸಾಗಿಸುವ ಸಾವಿರಾರು ಜನರಿದ್ದಾರೆ. ಅವರಿಗೆ ವಸ್ತುಗಳನ್ನು, ಒದಗಿಸುವ,
    ಮಾರಾಟ ಮಾಡುವ ಸರಪಳಿಯನ್ನು ನಂಬಿ ಬದುಕುವ ದೊಡ್ಡ ಸಮುದಾಯವೇ ಇದೆ.ಕೊರೊನಾ ಕಾಲದಲ್ಲಿ ಇವರೆಲ್ಲರ ದುಡಿತ ಮತ್ತು ಹೊಟ್ಟೆಪಾಡಿಗೆ ಹೊಡೆತ ಬಿದ್ದದ್ದೂ ನಿಜ. ಆದರೆ ಮೂಲ ಸಾಹಿತ್ಯ ಮತ್ತು ಕಲೆಗಳ ಒರತೆಗಳು ಬತ್ತಲಿಲ್ಲ. ಬದಲಿಗೆ ಅವು ಬೇರೊಂದು ಮಾರ್ಗವನ್ನು ಹುಡುಕಿಕೊಂಡಿವೆ.

    ಲಾಕ್ ಡೌನಿನ ಈ ಸಮಯದಲ್ಲಿ ಸಾಹಿತ್ಯ ಮತ್ತು ಕಲೆಯ ವಿಚಾರವಾಗಿ ಅಂತರ್ಜಾಲ ಮತ್ತು
    ಸಾಮಾಜಿಕ ಜಾಲತಾಣಗಳು ಇದೀಗ ಮುಂಚೂಣಿಗೆ ಬಂದು ಹಿಂದೆಂದಿಗಿಂತಲೂ ಹೆಚ್ಚು
    ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿವೆ.
    ಲಾಕ್ ಡೌನ್ ಸಾಹಿತ್ಯ ಲಾಕ್ ಡೌನಿನಲ್ಲಿ ಮುದ್ರಿತ ಪುಸ್ತಕ ಸಾಹಿತ್ಯ ಕ್ವಾರಂಟೈನಿನಲ್ಲಿ ವಿರಮಿಸಿದ್ದು ನಿಜ.ಉದಾಹರಣೆಗೆ ತರಂಗದಂತಹ ವಾರಪತ್ರಿಕೆ ಮೂರುವಾರಗಳ ಕಾಲ ನಿಂತೇ ಹೋಗಿತ್ತು.ಕೋವಿಡ್ ನ ಕಾರಣ ಹಲವು
    ಹಬ್ಬಗಳ ಸಾಮೂಹಿಕ ಆಚರಣೆ ರದ್ದಾದವು. ಅಂಗಡಿಗಳು ಬಾಗಿಲು ಮುಚ್ಚಿದವು. ದಿನಪತ್ರಿಕೆ,
    ವಾರಪತ್ರಿಕೆಗಳಂತ ನಿಯತಕಾಲಿಕಗಳಿಗೆ ಬರುವ ಜಾಹೀರಾತಿನ ಹಣ ಬಹುತೇಕ
    ಇಲ್ಲವಾಯಿತು.ಪತ್ರಿಕೆಗಳು ತೆಳ್ಳಗಾದವು. ಪತ್ರಿಕೆಗಳಲ್ಲಿ ಕೆಲಸಮಾಡುತ್ತಿದ್ದ ಹಲವರ ಕೆಲಸಗಳು ಇಲ್ಲವಾದವು. ಕೆಲಸವನ್ನು ಉಳಿಸಿಕೊಂಡ ಇತರರ ಮೇಲೆ ಒತ್ತಡ ಇನ್ನೂ ಹೆಚ್ಚಾಯಿತು. ಅವುಗಳ ಮುದ್ರಣ, ಸಾಗಾಣಿಕೆ ಮತ್ತು ವಿತರಣೆಗಳು ದುಸ್ತರವಾದವು. ಪುಸ್ತಕ ಮುದ್ರಣ,ಸಾಹಿತ್ಯ ಸಮ್ಮೇಳನಗಳು,ಪುಸ್ತಕ ಬಿಡುಗಡೆಯ ಸಮಾರಂಭ, ಮಾರಾಟ ವ್ಯವಸ್ಥೆ ಮತ್ತು ಮಳಿಗೆಗಳು, ಸಾಹಿತ್ಯ ಸ್ಪರ್ಧೆಗಳು, ಕವಿ
    ಸಮ್ಮೇಳನಗಳು, ಅಭಿನಂದನಾ ಸಮಾರಂಭಗಳು, ವಿಚಾರ ಸಂಕಿರಣಗಳು ಎಲ್ಲವೂ ಈ ವರ್ಷ ಹಿನ್ನಡೆ ಪಡೆದವು.

    ಹಲವು ಆಯೋಜನೆಗಳು, ಹೊಸ ಯೋಜನೆಗಳು ಬಹುತೇಕ ನೆಲಕಚ್ಚಿದವು. ಮುದ್ರಣದ ಬಹುತೇಕ
    ಕೆಲಸಗಳು ನಿಂತವು. ಈ -ಪುಸ್ತಕಗಳ ಹೊರತಾಗಿ ಇತರೆ ಪುಸ್ತಕಗಳನ್ನು ಹೊರತರುವ ಹಲವು
    ಆಲೋಚನೆಗಳು ಇವತ್ತಿಗೂ ಅರ್ಧದಲ್ಲಿಯೇ ನಿಂತಿವೆ. ಬಹುತೇಕ ದಿನಪತ್ರಿಕೆ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ನಿಲ್ಲದೆ ಬರುತ್ತಿವೆಯಾದರೂ ಅವುಗಳ ತಳಹದಿಯೂ ಒಮ್ಮೆ ಕಂಪಿಸಿದ್ದು ಸುಳ್ಳಲ್ಲ.ಶಾಸ್ತ್ರೀಯವಾದ ದಾರಿಯಲ್ಲಿ ಸಾಗುತ್ತಿದ್ದ ಮುದ್ರಿತ ಸಾಹಿತ್ಯದ ಹಾದಿಯಲ್ಲಿ ದೊಡ್ಡದೊಂದು ಕಲ್ಲುಬಂಡೆ ಬಿದ್ದಂತಾಗಿ ಮುಂದಿನ ದಾರಿಗಳು ಹಲವು ರೀತಿಯಲ್ಲಿ ಮುಚ್ಚಿಹೋಗಿವೆ. ಆದರೆ ಸಾಹಿತ್ಯ ರಂಗಕ್ಕೆ ಎಲ್ಲವೂ ನಿರಾಸೆ ತರುವ ವಿಚಾರಗಳಾಗಲಿಲ್ಲ.ಬದಲಿಗೆ ಕನ್ನಡ ಸಾಹಿತ್ಯ ರಂಗ ಈಗಾಗಲೇ ಕ್ರಮಿಸಬೇಕೆಂದಿದ್ದ ಆದರೆ ಮೀನ -ಮೇಷ ಎಣಿಸುತ್ತಿದ್ದ ದಾರಿಗಳು ಹಠಾತ್ತನೆ
    ತೆರೆದುಕೊಂಡಿವೆ.

    ಸಾಹಿತ್ಯಕ್ಕೆ ಕೋವಿಡ್ ಪ್ರೇರಣೆ

    ವಿರಾಮವೇ ಇಲ್ಲ, ರಾಮ ರಾಮ
    ಎಂದವರಿಗೆಲ್ಲ ಆರಾಮ
    ಏನೆಂದು ತೋರಿದ ಲಾಕ್ ಡೌನ್
    ಹದುಳಗೊಳಿಸಿದೆ ಕಾಲವನ್ನ

    ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ಗಿಂಡಿ ತೆರೆದುಕೊಳ್ಳುತ್ತದಂತೆ. ಕರೋನದ ಕಾಲದಲ್ಲಿಯೂ ಇದೇ ನಡೆದಿದೆ.ಸಾಹಿತ್ಯವನ್ನು ಓದಲು ಸಮಯವೇ ಇಲ್ಲ ಎನ್ನುತ್ತಿದ್ದವರಿಗೂ ಸಮಯ ದೊರೆತು ಸಾಹಿತ್ಯಕ್ಕೆ ಹೊಸ ಜಿಗಿತವನ್ನು ನೀಡಿದೆಯೆಂದರೆ ತಪ್ಪಾಗಲಾರದು.ಅಂತೆಯೇ ಸಾಹಿತ್ಯ ಸೆಲೆಯ ಹರಿವು ತನ್ನ ಎಂದಿನ ಮಾರ್ಗದಿಂದ ತಿರುವನ್ನು ತೆಗೆದುಕೊಂಡು
    ಬೇರೊಂದು ಮಾರ್ಗದಲ್ಲಿ ಸಾಹಿತ್ಯ ಪ್ರಿಯರ ಕಣ್ಣಿಗೆ ಬೆಳಕನ್ನು ತರಲು ತವಕಿಸುತ್ತಿರುವುದನ್ನು
    ಕಾಣಬಹುದು. ವ್ಯಕ್ತಿತಃ ಭೇಟಿಯಾಗಿ ಆಗಬೇಕಿದ್ದ ಸಮಾರಂಭಗಳೆಲ್ಲ ಇದೀಗ ವರ್ಚುಯಲ್ ಮೀಟ್
    ಗಳಾಗಿ ಬದಲಾಗಿವೆ.ಎಲ್ಲ ಭೇಟಿಗಳು ಅಂತರ್ಜಾಲದ ಮೂಲಕವೇ ನಡೆದಿವೆಯೇ ಹೊರತುನಿಂತುಹೋಗಲಿಲ್ಲ. ಬದಲಾಗಿ ಇ- ಪುಸ್ತಕಗಳು, ವರ್ಚುಯಲ್ ಬಿಡುಗಡೆಗಳು ಹೆಚ್ಚಾಗಿವೆ. ಹಿಂದೆಲ್ಲಇಂತಹ ಪ್ರಯತ್ನಗಳ ಬಗ್ಗೆ ಮೂಗು ಮುರಿಯುತ್ತಿದ್ದ ಜನ ಇದೀಗ ಅವುಗಳ ನಾನಾ ಉಪಯೋಗಗಳನ್ನು ಮನಗಾಣಲು ಶುರುಮಾಡಿದ್ದಾರೆ. ಅದಕ್ಕೆ ಸಹಾಯ ಮಾಡಲು ಈ ರಂಗದಲ್ಲಿ ಆಸಕ್ತಿಯಿರುವ ಎಲ್ಲ ಓದುಗರು, ಪ್ರಕಾಶಕರು, ಆಯೋಜಕರು, ಸಂಘ ಸಂಸ್ಥೆಗಳು ಶ್ರಮಿಸಿದ್ದಾರೆ. ಬರಹಗಾರರು ವಾಟ್ಸಾಪ್ಪಿನಲ್ಲಿಯೇ ಹಲವು ಕವಿತೆ, ಕಥೆ, ಜೋಕ್ ಗಳನ್ನು ಬರೆದು ಹರಿಬಿಟ್ಟರು.ಫೇಸ್ಬುಕ್ ಬರಹಗಳು, ಆಡಿಯೋ ಮತ್ತು ವೀಡಿಯೋ ಓದುಗಳು ಹೆಚ್ಚಾದವು.ಇನ್ನು ಆನ್ಲೈನ್ ಮೀಟ್ ಗಳಂತೂಅತ್ಯಧಿಕ ಸಂಖ್ಯೆಯಲ್ಲಿ ನಡೆದವು. ಆಗೆಲ್ಲ ಕರೋನ ತಂದ ಬದಲಾವಣೆಗಳ ವಿಚಾರವೇ ಅವರಿಗೆ
    ವಸ್ತುವಾಯಿತು. ಲಾಕ್ ಡೌನ್ ಸಮಯ ವೇದಿಕೆಯನ್ನೊದಗಿಸಿತು. ಮನೆಯಲ್ಲಿ ಕುಳಿತು ತಮ್ಮಮಿದುಳಿಗೆ ವ್ಯಾಯಾಮ ನೀಡಬಯಸಿದ ಜನರು ಪ್ರೇಕ್ಷಕರಾದರು.

    ಕೋವಿಡ್ 19 ತಂದ ಸಾವು, ನೋವು, ಆರ್ಥಿಕ ನಷ್ಟ, ಕಷ್ಟಗಳು, ಹಣದಿಂದಲೇ ನಿರ್ಧಾರವಾದ ಶ್ರಮಿಕ ವಲಸೆ ಕೆಲಸಗಾರರ ಜೀವದ ಬೆಲೆಗಳು, ರೈತಾಪಿ ಜನರ ಆಕ್ರಂದನಗಳು ಬಹಳಷ್ಟು ಕವಿಗಳನ್ನು,ಅಂಕಣಗಾರರ ಬರಹಗಳನ್ನು ಪ್ರಭಾವಿಸಿದವು.

    ಬೆಳಗಾದರೆ ಮುಗೀತು ರಾತ್ರಿ ಬರುತ್ತೆ ಎಂದವರು ಮತ್ತೊಂದು ಬೆಳಗಾಯಿತೆ?
    ನಾಳೆನ ಭವಿಷ್ಯ ಉಳಿದೀತೆ ?
    ಎಂದು ಚಿಂತಿಸಿದ್ದಾರೆ ನಿದ್ರೆ ಬರದೆ…..

    ಲಾಕ್ ಡೌನಿನ ಸಮಯದಲ್ಲಿ ಚಿಂತನೆಕಾರರು ಸಮಯದ ಮೌಲ್ಯದ ಮರುಪರೀಶೀಲನೆಗೆ ಸಾಹಿತ್ಯ ಮುಖೇನ ಕರೆನೀಡಿದರು. ಮೊದಲೆಲ್ಲ ಸಂಸಾರದ ಜಂಜಾಟದಲ್ಲಿ ಸಮಯವಿಲ್ಲದೆ ಕೈಬಿಟ್ಟಿದ್ದ ಹವ್ಯಾಸಗಳನ್ನು ಜನರು ಮತ್ತೆ ಮೈ ಗೂಡಿಸಿಕೊಂಡರು. ಇಂತಹ ಸಮಯದಲ್ಲಿ ತಮ್ಮ ಬದುಕಿನ ಹಲವು ಹಳೆಯ ನೆನಪುಗಳಿಗೆ ಮತ್ತೆ ಭೇಟಿ ನೀಡಿದರು.ಮಕ್ಕಳ ಜೊತೆ ಒಂದಷ್ಟು ಹೆಚ್ಚಿನ ಸಮಯವನ್ನುಕಳೆದರು. ಜೊತೆಗೆ ಒಳಗೊಳಗೇ ಹುಟ್ಟಿದ ಆತಂಕಗಳಿಗೂ ಸಾಹಿತ್ಯ ರೂಪ ಕೊಟ್ಟು, ಅಬ್ಬಾ. ಕಾಲ ಏನೇನನ್ನೆಲ್ಲ ಬದಲಿಸಬಲ್ಲದು ಎಂದು ಉದ್ಗರಿಸಿದರು.

    ಏರುತ್ತದೆ ಬಿಸಿ ಕಡಿಮೆಯಾದರೆ ಕಾಲ
    ತುಸು ಹೆಚ್ಚೇ ಆದರೆ ಪಾದಕ್ಕೆ ಚಳಿ
    ತಟಸ್ಥವಾದರೆ ಉಡುಗಿ ಬಿಡುತ್ತದೆ ಬಲ
    ಎಲ್ಲವೂ ಕರೋನ ಕಾಲದ ಮಹಿಮೆ…

    ದೊರಕಿರುವ ಸಮಯವನ್ನು ತಮ್ಮ ವಯಕ್ತಿಕ ಆಸಕ್ತಿಗಳಲ್ಲಿ ತೊಡಗಿಸಿಕೊಂಡು ಹೊಸ
    ಭರವಸೆಗಳೊಂದಿಗೆ ಹೊರಬರಲು ಕರೆನೀಡಿದರು. ಪರಿಣಾಮವಾಗಿ ಅದೆಷ್ಟು ಸಾಹಿತ್ಯ ಚಟುವಟಿಕೆಗಳು ನಡೆದವೆಂದರೆ, ಸಮಾಜ ಸಹಜವಾಗಿದ್ದ ಸಮಯದಲ್ಲೇ ಹೆಚ್ಚು ಬಿಡುವು ಸಿಗುತ್ತಿತ್ತು ಎನ್ನುವ ಲೆಕ್ಕಕ್ಕೆ ಇಂದು ಬರಹಗಾರರು ಮತ್ತು ಓದುಗರು ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

    ಪುರುಸೊತ್ತೇ ಇಲ್ಲ ಸ್ವಂತ ಕೆಲಸಕ್ಕೆ
    ಎಂದು ಮರುಗಿದ್ದ ಜನರು
    ಕೆಲಸದಲ್ಲಾದರು ಸಿಗುತ್ತಿತ್ತು ಸ್ವಲ್ಪ ಬಿಡುವು
    ಎನ್ನುತ್ತಿದ್ದಾರೆ ಬೇಸತ್ತು ದಾರಿ ತೋರದಲ್ಲ?

    ಸತ್ಯನಾರಾಯಣ ಎನ್ನುವವರು ’ ಕರೋನ ಕಥೆಗಳು ’ ಎನ್ನವ ಪುಸ್ತಕವನ್ನೇ ಹೊರತಂದರು.
    ಡುಂಡಿರಾಜ್ ರವರು “ ಕೊರೊನಾರೀ..ಸಹೋದರ. “ ಎನ್ನುವ ಹನಿಗವನಗಳ ಹೊಸದೊಂದು
    ಪುಸ್ತಕವನ್ನು ಹೊರತಂದರು. ಇನ್ನು ಅಮೆರಿಕದಲ್ಲಿ ವೈದ್ಯ ಬರಹಗಾರರಾಗಿರುವ ಗುರುರಾಜ ಕಾಗಿನೆಲೆಯವರು ವೈದ್ಯಕೀಯ ಕರೋನಾ ಸ್ಟೋರೀಸ್ ಗೆ ತಯಾರಾಗುತ್ತಿದ್ದಾರೆ. ಬಿಡಿ ಕಥೆ ಮತ್ತುಕವನಗಳಂತೂ ಯಥೇಚ್ಛವಾಗಿ ಪ್ರಕಟಗೊಂಡಿವೆ. ಬರಹಗಾರರು ಕರೋನದ ಸುತ್ತ ನಡೆದಘಟನೆಗಳು,ಬದಲಾದ ಪರಿಸ್ಥಿತಿಗಳು,ಸಾವು-ನೋವು, ಆರ್ಥಿಕ ನಷ್ಟಗಳು, ಅನುಭವಗಳು ಮತ್ತು ತಮ್ಮಕಲ್ಪನೆಗಳನ್ನು ಬೆರೆಸಿ ತಮ್ಮ ಸೃಜನಶೀಲತೆಯನ್ನು ಮೆರೆದರು. ಕೊರೊನಾ ಡೈರಿ ಎನ್ನುವ ಹೆಸರಿನಲ್ಲಿಈ ಒಂದು ಅಂಕಣ ಬರುತ್ತಿರುವುದು ಕೂಡ ಮತ್ತೊಂದು ಉದಾಹರಣೆ. ಕೆಲವರು ಪುಸ್ತಕ ಬಿಡುಗಡೆಯನ್ನು
    ತಮ್ಮ ಸಂಸಾರದವರ ಜೊತೆ ದೇವರ ಎದುರಿನಲ್ಲಿ ಮುಗಿಸಿ ಮುನ್ನೆಡೆದರು.ಪುಸ್ತಕ ಮಳಿಗೆಗಳು
    ವರ್ಚುಯಲ್ ವೇದಿಕೆಗಳ ಮೂಲಕ ಮಾರಾಟಕ್ಕೆ ಒತ್ತುಕೊಟ್ಟರು. ಒಟ್ಟಿನಲ್ಲಿ ಕೊರೊನಾದ ಪ್ರಸ್ತುತಿ
    ಇಲ್ಲದೆ ದೈನಂದಿನ ಆಗು-ಹೋಗುಗಳನ್ನು ಅವಲೋಕಿಸಬಹುದಾದ ವಿಚಾರಗಳು ಅತ್ಯಂತ ವಿರಳ

    ಎನ್ನಬಹುದಾದ ಕಾಲವಿದು.ಭವಿಷ್ಯದಲ್ಲಿ ಇನ್ನೂ ಬಹುಕಾಲ ಕರೋನ ವಿಷಯವಿರುವ ಸಾಹಿತ್ಯವನ್ನು,ಕಲಾ ವಿಚಾರಗಳನ್ನು ನಾವು ನೋಡತ್ತೇವೆ ಎನ್ನುವುದರಲ್ಲಿ ಅನುಮಾನವಿಲ್ಲ.
    ಕರೋನ ಪೀಡಿತ ಕಾಲದಲ್ಲಿ ದೊರೆತ ಬಿಡುವಿನ ಸಮಯವೂ ಇದಕ್ಕೆ ಇಂಬಾಗಿ ನಿಂತದ್ದು ದೊಡ್ಡ
    ಕೊಡುಗೆಯಾಯಿತು.

    ಇದೇ ಸಮಯದಲ್ಲಿ ಕನ್ನಡಪ್ರೆಸ್.ಕಾಂ ಜಾಲತಾಣ ಅಸ್ತಿತ್ವಕ್ಕೆ ಬಂದಿತು.ಅಲ್ಪಕಾಲದಲ್ಲಿಯೇ ಅತ್ಯುದ್ಭತವಾಗಿ ಜನಪ್ರಿಯವಾಗಿದ್ದನ್ನು ನಾವಿಲ್ಲಿ
    ನೆನೆಯಬಹುದು.

    ಬೆಂಗಳೂರು ರಾಮನಗರ ಗ್ರಾಮಾಂತರ ಶಾಖೆಯ ಕನ್ನಡ ಸಾಹಿತ್ಯ ಪರಿಷತ್ತಿನ ದಾಸರಹಳ್ಳಿ ವಿಭಾಗದ
    ಪದಾಧಿಕಾರಗಳು ಹೊರಬಂದು ಪುಸ್ತಕ ಕೊಳ್ಳಲಾಗದ ಸಾಹಿತ್ಯಾಭಿಮಾನಿಗಳ ಮನೆ ಮನೆಯ ಬಾಗಿಲು ತಟ್ಟಿ 10,500 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಉಚಿತವಾಗಿ ಹಂಚಿದ್ದಾರೆ. ಅಕ್ಕಿ-ಬೇಳೆಯನ್ನು ಸರ್ಕಾರ ಒದಗಿಸುತ್ತಿದೆ ಆದರೆ ಸಾಹಿತ್ಯದ ಹಸಿವನ್ನು ತೀರಿಸಲು ಯಾರಿದ್ದಾರೆ ಹೇಳಿ ?- ಎನ್ನುವ ಇವರ ಕಾಳಜಿ
    ಮನೆ ಮನೆ ಮಾತಾಯಿತು. ಸ್ವತಃ ಬರಹಗಾರರೂ, ಕಸಾಪ ಅಧ್ಯಕ್ಷರೂ ಆದ
    ವೈ.ಜಿ.ಹೆಚ್.ಜಯದೇವರದು “ ಲಾಕ್ ಡೌನಿನ ಕಾಲದಲ್ಲಿ ಜನರಿಗೆ ಸಮಯ ಸಿಕ್ಕಿರುವುದರಿಂದ ಜನರು ಖಂಡಿತ ಸಾಹಿತ್ಯ ಓದುತ್ತಾರೆ “ ಎನ್ನುವ ಸಮಯೋಚಿತ ವಿವೇಕ ಮತ್ತು ಉತ್ಸಾಹವನ್ನು ತೋರಿ ಮಾದರಿಯಾದರು.

    ಕಹಳೆ, ಮುದ್ದಣ, ಛಂದ ಇತ್ಯಾದಿ ಸಂಸ್ಥೆಗಳು ಕರೋನ ಪಿಡುಗನ್ನು ಕಾರಣವನ್ನಾಗಿ ನೀಡಿ ಕೈ ಚೆಲ್ಲಿ ಕೂರದೆ ಬರಹಗಾರರನ್ನು ಉತ್ತೇಜಿಸಲು ಎಂದಿನಂತೆ ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಿಉತ್ತೇಜಿಸಿದ್ದಾರೆ. ಬರಹಗಾರರು ಹಿಂದೆಂದಿಗಿಂತಲೂ ಹೆಚ್ಚು ಬ್ಯುಸಿಯಾಗಿ ದೇಸೀಯ ಮತ್ತು ಅಂತರರಾಷ್ಟ್ರೀಯ ಕನ್ನಡಿಗರನ್ನು ಅಂತರ್ಜಾಲದ ಮೂಲಕ ತಲುಪಿದ್ದಾರೆ. ಅನಿವಾಸಿ ಕನ್ನಡಿಗರಾದ ನಮಗೆ ಹಿಂದೆಲ್ಲ ವರ್ಷಕ್ಕೆ ಎರಡೋ-ಮೂರೋ ಎನ್ನುವಂತೆ ಸಾಹಿತಿಗಳೊಂದಿಗೆ ಬೆರೆಯುವ ಅವಕಾಶಗಳಿರುತ್ತಿದ್ದವು. ಆದರೆ ಇದೀಗ ಬಹುತೇಕ ಪ್ರತಿ ವಾರಾಂತ್ಯದಲ್ಲಿ ಎಲ್ಲ ಬಗೆಯ ಬರಹಗಾರರು ಮತ್ತು ಕಲಾಕಾರರ ಜೊತೆ ಬೆರೆಯುವ ಅವಕಾಶಗಳು ದೊರೆಯುತ್ತಿವೆ. ಯಾವ ಮೀಟ್ ಅನ್ನು ಆಯ್ಕೆಮಾಡಿಕೊಳ್ಳುವುದು ಅಥವಾ ಬಿಡುವುದು ಎನ್ನುವಂತಾಗಿದೆ!

    ಸಾಹಿತ್ಯಕ್ಕೆ ದೊರೆತ ಹೊಸ ಸ್ವರೂಪಗಳು
    ಕರೋನ ಕಾಲದಲ್ಲಿ ಅಂತರ್ಜಾಲ ಮೂಲದಲ್ಲಿ ಸಾಹಿತ್ಯದ ಹೊಸ ಚೈತನ್ಯವನ್ನು ಪಡೆದಿದೆ. ಇ-
    ಪುಸ್ತಕಗಳು, ಆಡಿಯೋ ಪುಸ್ತಕಗಳು, ಫೇಸ್ಬುಕ್ಕಿನ ಕವನ-ಕಥಾ ವಾಚನಗಳು ಇತ್ಯಾದಿ ಹೊಸ
    ಪರಿಪಾಠಗಳು ದಿಡೀರನೆ ಹೆಚ್ಚಾಗಿವೆ. ತಮ್ಮ ತಮ್ಮ ಊರೋ, ಕೇರಿಯಲ್ಲೋ ನಡೆಯುತ್ತಿದ್ದ ಸಾಹಿತ್ಯ
    ಚಟುವಟಿಕೆಗಳು ಅಂತರ್ಜಾಲದ ಮೂಲಕ ಹಲವು ಪರಿಧಿಗಳನ್ನು ದಾಟಿವೆ.
    ಝೂಮ್,ಗೂಗಲ್ ಅಥವಾ ಏರ್ ಮೀಟ್ ಗಳು ಸಾಹಿತಿ-ಕಲಾವಿದರನ್ನು ಅಭಿಮಾನಿಗಳ
    ಮನೆಯೊಳಕ್ಕೇ ಕರೆತಂದವು. ಈ ರೀತಿಯ ಭೇಟಿಗಳ ಬಗ್ಗೆ ಮುಜುಗರವಿದ್ದ ಜನರು, ಹಳೆಯ ಮತ್ತು ಹೊಸತಲೆಮಾರಿನವರು ಎಲ್ಲ ಒಟ್ಟುಗೂಡಿ ಈ ಕಾರ್ಯದಲ್ಲಿ ಭಾಗವಹಿಸಿದರು. ಸಾಮಾಜಿಕ
    ಜಾಲತಾಣಗಳು ಸಾಹಿತ್ಯದ ಗಂಧವನ್ನು ಹರಡಲು ಸಹಕಾರಿಯಾದವು.

    ಆಶ್ಚರ್ಯ ಎಂಬಂತೆ ಹೊಸದರ ಜತೆ ಹಳೆಯ ಸಾಹಿತ್ಯವೂ ಮತ್ತೆ ಹೊಸ ಮಾಧ್ಯಮಗಳಲ್ಲಿ ಮರುಹುಟ್ಟು ಪಡೆಯಿತು. ’ರೂಪ ಯಾವುದಾದರೇನು, ಭಾವ ನವ ನವೀನ …’ ಎನ್ನುವಂತೆ ಒಟ್ಟಾರೆ ಸಾಹಿತ್ಯ
    ಸೊರಗಲಿಲ್ಲ. ಮತ್ತೆ ಬರುವ ಸಹಜ ಬದುಕಿನಲ್ಲಿ ಏನನ್ನು ಮಾಡಬಹುದ ಎಂಬ ಹೊಸ
    ಯೋಜನೆಗಳೊಂದಿಗೆ ಸಧ್ಯದ ಟೆಕ್ನಾಲಜಿಯ ಲಾಭವನ್ನು ಎಲ್ಲ ಸಾಹತ್ಯ ಪ್ರಿಯರೂ ಅನುಭವಿಸಿದರು.ಇವೆಲ್ಲ ಮನುಷ್ಯನ ಸೃಜನಶೀಲತೆಗಿರುವ ಸ್ಥಿತಿಸ್ಥಾಪಕತ್ವ ಗುಣಗಳನ್ನು (Resilience)
    ತೋರಿಸುವ ವಿಚಾರಗಳ ದಿಟ್ಟಪ್ರದರ್ಶನಗಳಾಗಿವೆ.

    ಡಿಜಿಟಲ್ ಲೋಕದಲ್ಲಿ ಕನ್ನಡ ಸಾಹಿತ್ಯದ ಭವಿಷ್ಯ?

    ಲಾಕ್ಡೌನ್ ಸಮಯ ಓದುವುದನ್ನು ನಿಲ್ಲಿಸಿಯೇ ಬಿಟ್ಟಿದ್ದ ಹಲವರನ್ನು ಮತ್ತೆ ಓದುವತ್ತ ಕರೆತಂದದ್ದು ನಿಜ.ಅದರಿಂದ ಸಾಹಿತ್ಯಕ್ಕೆ ಲಾಭವೇ ಆಗಿದೆ. ಓದುವ ಕಾಲ ಹೆಚ್ಚಾದ ಕಾರಣ, ಸ್ವತಃ ತಾವು ಬರೆದ ಅಥವಾ ಇತರರು ಬರೆದ ಸಾಹಿತ್ಯ ವಿಮರ್ಶೆಗಳು ಕೂಡ ಹೆಚ್ಚಾದವು. ಡಿಜಿಟಲ್ ಲೋಕದಲ್ಲಿ ಕನ್ನಡ
    ಸಾಹಿತ್ಯದ ಭವಿಷ್ಯಕ್ಕಾಗಿ ದುಡಿಯುತ್ತಿರುವ ಋತುಮಾನ, ಬುಕ್ ಬ್ರಮ್ಹ, ವಿವಿಡ್ಲಿಪಿ, ಮೈ ಲ್ಯಾಂಗ್, ಪ್ರತಿಲಿಪಿ ಮತ್ತಿತರ ಹತ್ತಾರು ಅಂತರ್ಜಾಲ ವೇದಿಕೆಗಳು, ಇನ್ನಿತರ ತಾಂತ್ರಿಕ ಪತ್ರಿಕೆಗಳು ಕನ್ನಡದ ಜನರಿಗೆ ಸಾಹಿತ್ಯವನ್ನು ಒದಗಿಸಲು ಶ್ರಮಪಡುತ್ತಿರುವ ಯುವಕ ಯುವತಿಯರು ಮತ್ತು ಇವರೊಡನೆ
    ತಮ್ಮ ಸಾಮರಸ್ಯವನ್ನು ಬೆಸೆದುಕೊಂಡಿರುವ ಪ್ರಕಾಶಕರು ಹಲವು ಕಾರ್ಯಕ್ರಮಗಳನ್ನು ಸಾಹಿತ್ಯ

    ಪ್ರಿಯರಿಗಾಗಿ ಯೋಜಿಸಿದರು. ಪುಸ್ತಕಗಳ ಡಿಜಿಟಲ್ ಬಿಡುಗಡೆ ಮತ್ತು ನೇರ ಪ್ರಸಾರವೂ ಇತ್ತೀಚೆಗೆ
    ಜನಪ್ರಿಯವಾಗುತ್ತಿವೆ. ವಿವಿಡ್ಲಿಪಿ “ಥಟ್ಟಂತ ಹೇಳಿ… ’ ಯಂತ ಕ್ವಿಝ್ ಕಾರ್ಯಕ್ರಮವನ್ನು ಅಂತರ್ಜಾಲದ ಫೇಸ್ಬುಕ್ ಮತ್ತು
    ಯೂಟ್ಯೂಬ್ ಗಳ ಮೂಲಕ ಅಮೆರಿಕಾದ ಶರಾವತಿ ಕನ್ನಡ ಕೂಟಕ್ಕೂ, ಇಂಗ್ಲೆಂಡಿನ ಸಾಹಿತ್ಯ ಪ್ರೇಮಿಗಳ ವೇದಿಕೆಯಾದ ಅನಿವಾಸಿ.ಕಾಂ ನ ಮೂಲಕ ಅಲ್ಲಿನ ಕನ್ನಡಿಗರಿಗೂ ತಲುಪಿಸಿತು. ಇಂಗ್ಲೆಂಡಿಗೇ ಬಂದು ಮಾತನಾಡಬೇಕಿದ್ದ ಜಯಂತ ಕಾಯ್ಕಿಣಿಯವರ ಪ್ರವಾಸ ಸಾಧ್ಯವಾಗದೆ ಕೊನೆಗೆ ಝೂಮ್ ವೇದಿಕೆಯ ಮೂಲಕ ಇಲ್ಲಿನ ಸಾಹಿತ್ಯಾಸಕ್ತರಿಗೆ ಸಣ್ಣ ಕಥೆಗಳ ಬಗ್ಗೆ ಉಪನ್ಯಾಸ ನೀಡಿದರು.
    ಪ್ರಸಿದ್ದ ಚಲನಚಿತ್ರ ತಾರೆಯರು, ಹಾಡು ಬರೆಯುವವರು, ನಿರ್ದೇಶಕರು, ಸಂಗೀತಕಾರರು,
    ವಾದ್ಯವೃಂದದವರು,ಮೈಸೂರಿನ ಮಹಾರಾಜರು ಕೊನೆಗೆ ಹಲವು ಮಠಾಧಿಪತಿಗಳು ಮನೆಯಲ್ಲಿ
    ಬಂಧಿಗಳಾದ ಕನ್ನಡಿಗರನ್ನು ತಲುಪಿ ಸಮುದಾಯ ಭಾವವನ್ನು ಜೀವಂತವಾಗಿಟ್ಟುಕೊಳ್ಳುವ ಜೊತೆ
    ಜೊತೆಯಲ್ಲೆ ಜನರ ಮನಸ್ಸಿನಲ್ಲಿ ತಾವು ಮರೆತುಹೋಗದಂತೆ ಉಳಿಯಲು ಪ್ರಯತ್ನಿಸಿದ್ದಾರೆ. ತಮ್ಮ ಅಭಿಮಾನಿಗಳ ಕೋರಿಕೆಗಳಿಗೆ ಸ್ಪಂದಿಸಿದ್ದಾರೆ. ಕರ್ನಾಟಕದ ಪ್ರತಿ ಪ್ರಸಿದ್ದ ಸಾಹಿತ್ಯ ತಾರೆಯರು ತಮ್ಮ
    ಅಭಿಮಾನಿಗಳೊಂದಿಗೆ ಡಿಜಿಟಲ್ ದರ್ಶನ ನೀಡಿದ್ದಾರೆ.

    ಕನ್ನಡ ಸಾಹಿತ್ಯ ತೆಗೆದುಕೊಂಡಿರುವ ಈ ಹೊಸ ತಿರುವು ತಾತ್ಕಾಲಿಕವಾಗದೆ ಇನ್ನು ಮುಂದೆ ಹೆಚ್ಚು
    ಹೆಚ್ಚಾಗಿ ಡಿಜಿಟಲ್ ಮಾಧ್ಯಮವನ್ನೇ ಅನುಸರಿಸಬಹುದು ಎನ್ನುವ ಅಭಿಪ್ರಾಯಗಳನ್ನು ಹಲವರಲ್ಲಿ ಇದೀಗ ನೋಡಬಹುದಾಗಿದೆ.
    ಪ್ರಕಾಶಕರು ಕೂಡ ಪುಸ್ತಕಗಳನ್ನು ಮುದ್ರಿಸಲು ತಗಲುವ ಖರ್ಚುಗಳು, ಅವನ್ನು ಸಾಗಿಸುವ,
    ಉದ್ಘಾಟಿಸುವ, ಮಾರಾಟಮಾಡಲು ನಡೆಸುವ ಮಳಿಗೆಗಳ. ಸಂಭಾವನೆಗಳ ಇತ್ಯಾದಿ ಖರ್ಚುಗಳ
    ಗೊಂದಲದಿಂದ ಹೊರಬರಲು ಕಾಯುತ್ತಿದ್ದರು. ಈ -ಮಾರುಕಟ್ಟೆಯ ಉಪಯೋಗವನ್ನು ಅವರುಗಳು ಕರೋನ ಕಾಲದಲ್ಲಿ ಪ್ರಯೋಗಕ್ಕೆ ಒರೆ ಮಾಡಿ ನೋಡಲು ಸಾಧ್ಯವಾಯಿತು.
    ಸೀಮಿತ ಮಾರುಕಟ್ಟೆಯನ್ನು ಹೊಂದಿರುವ ಕಾರಣ ಮತ್ತು ಸಂಪ್ರದಾಯಬದ್ದವಾಗಿ ಮುದ್ರಿತ
    ಪುಸ್ತಕಗಳನ್ನು ಓದಲು ಇಷ್ಟಪಡುವ ಕನ್ನಡ ಓದುಗರ ಕಾರಣ ಇ- ಪುಸ್ತಕಗಳು ರ್ಯಾಯವಾದ
    ಮಾರುಕಟ್ಟೆಯನ್ನಷ್ಟೇ ಸೃಷ್ಟಿಸಲು ಸಾಧ್ಯವಾಗುವುದು ಎನ್ನುವುದನ್ನು ಅವರು ಅರಿತರು. ಆದರೆ ಇದೊಂದು ಪರ್ಯಾಯ ಮಾರುಕಟ್ಟೆಯಾಗಬಲ್ಲದು ಎಂಬ ಹೊಸ ಭರವಸೆಯನ್ನು ಕರೋನ ಕಾಲ
    ಅವರಲ್ಲಿ ಮೂಡಿಸಿದೆ ಎಂದರೆ ತಪ್ಪಾಗಲಾರದು.

    ಮಗಳ ಆಸೆಗೆ ಅಪ್ಪನ ಬೆಂಬಲ

    ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣೊಬ್ಬಳು ಅದನ್ನು ಮೀರಿ ಸಾಧನೆ ಮಾಡಿದ ಕಥೆಯನ್ನು ಸಾರುವ ಅನೇಕ ಸಿನಿಮಾಗಳು ಬಂದಿವೆ ಹೋಗಿವೆ. ಆದರೆ ಹತ್ತರಲ್ಲಿ ಒಂದಾಗುವ ಸಿನಿಮಾಗಳೇ ಹೆಚ್ಚು. ಆದರೆ ಬುಧವಾರ ನೆಟ್ ಪ್ಲಿಕ್ಸ್ ನಲ್ಲಿ ಬಿಡುಗಡೆಯಾಗಿರುವ   ಗುಂಜನ್ ಸಕ್ಸೇನಾ ಕಾರ್ಗಿಲ್ ಗರ್ಲ್  ಆ ಸಾಲಿಗೆ ಸೇರದಂತೆ  ನಿರ್ದೇಶಕ  ಶರಣ್ ಶರ್ಮಾ ಎಚ್ಚರ ವಹಿಸಿದ್ದಾರೆ. ಇತ್ತೀಚೆಗೆ ಬರುತ್ತಿರುವ ವಾರ್ ಸಿನಿಮಾಗಳ ಸಾಲಿಗೂ ಇದು ಸೇರುವುದಿಲ್ಲ. ಬದಲಾಗಿ ಅಪ್ಪನೊಬ್ಬ ಮಗಳ ಆಸೆ ಈಡೇರಿಸಲು ಬಂಡೆಗಲ್ಲಿನಂತೆ ನಿಂತು ಬೆಂಬಲ ನೀಡುವ ಚಿತ್ರವಾಗಿ ಗಮನಸೆಳೆಯುತ್ತದೆ.

    ಕಾರ್ಗಿಲ್ ವಿಜಯಕ್ಕೆ ಕಾರಣಕರ್ತರೊಬ್ಬಳಾಗಿ ಶೌರ್ಯ ಚಕ್ರ ಪ್ರಶಸ್ತಿ ಪಡೆದ ಮೊದಲ ಮಹಿಳೆಯೆಂಬ  ಗೌರವಕ್ಕೂ ಪಾತ್ರಳಾದ ವಾಯು ಪಡೆಯ ಅಧಿಕಾರಿ ಗುಂಜನ್ ಸಕ್ಸೇನಾ ಅವರ ಬಯೋಪಿಕ್ ಇದು.

    1994ರಲ್ಲಿ ವಾಯು ಪಡೆ ಸೇರಿದ ಮೊದಲ ಮಹಿಳೆ ಗುಂಜನ್. ಅಲ್ಲಿ ಆಕೆ ತಂಡದ ಏಕೈಕ ಮಹಿಳೆಯಾಗಿ ಎದುರಿಸುವ ಸವಾಲುಗಳು ನಂತರ ಅದನ್ನು ಎದುರಿಸಿ  ಯಶಸ್ವಿಯಾಗುವ ಹಾದಿಯೆ ಚಿತ್ರದ ವಸ್ತು. ಈಗ  ವಾಯುಪಡೆಯಲ್ಲಿ ಸ್ಥಿತಿ  ಹಾಗಿಲ್ಲ.ಸುಮಾರು 1625  ಮಂದಿ ಮಹಿಳಾ ಆಫೀಸರ್ಸ್ ಇದ್ದಾರೆ.

    ಬಾಲ್ಯದಿಂದಲೇ  ಗುಂಜನ್ ಗೆ ಪೈಲಟ್ ಆಗುವ ಕನಸು. ಹುಡುಗಿಯೊಬ್ಬಳು ಪೈಲಟ್ ಆಗುವುದೆ ಎನ್ನುವವರೆ ಅನೇಕ. ಆಕೆಯ ಅಣ್ಣ  ಮೇಜರ್ ಅನ್ಷುಮಾನ್ (ಅಂಗದ್ ಬೇಡಿ) ಸೇರಿದಂತೆ ಎಲ್ಲರದು ಇದೇ ಅಭಿಪ್ರಾಯ. ಆದರೆ ಆಕೆಗೆ ಬೆಂಬಲವಾಗಿ ನಿಲ್ಲುವುದು ತಂದೆ ಕರ್ನಲ್ ಅಶೋಕ್ ಕುಮಾರ್ ಸಕ್ಸೇನಾ (ಪಂಕಜ್ ತ್ರಿಪಾಠಿ). ದುಬಾರಿ ಪೈಲಟ್ ತರಬೇತಿಗೆ ಮನೆಯವರಿಂದಲೇ ವಿರೋಧ ಬಂದಾಗ ಆಕೆಗೆ ವರದಾನವಾಗಿ ಬುರುವುದು ಮಹಿಳೆಯರನ್ನು ನೇಮಕ ಮಾಡಿಕೊಳ್ಳಲು ವಾಯುಪಡೆ ಹೊರಡಿಸಿದ ಜಾಹೀರಾತು.

    ಅಪ್ಪನ ಬೆಂಬಲದೊಂದಿಗೆ ವಾಯುಪಡೆಗೆ ಆಯ್ಕೆಯೂ ಆಗುತ್ತಾಳೆ. ತರಬೇತಿಯ ಅವಧಿಯಲ್ಲೇ  ಆಕೆಗೆ ಪುರುಷ ಪ್ರಧಾನ ವ್ಯವಸ್ಥೆಯ ಪರಿಚಯಾಗುತ್ತದೆ. ಎಲ್ಲಿ ಹೆಣ್ಣೊಬ್ಬಳು ಮುಂದೆ ಬಂದು ನಾವೆಲ್ಲಾ ಆಕೆಯನ್ನು ಬಾಸ್ ಎಂದು ಒಪ್ಪಿಕೊಳ್ಳಬೇಕಾದೀತೋ ಎಂಬ ಪುರುಷ ಮನಸುಗಳು ಸದಾ ಆಕೆಯನ್ನು ಹಿಂದಕ್ಕೆ ಎಳೆಯಲು ಕಾತರಿಸುತ್ತಿರುತ್ತವೆ.

    ಡ್ರೆಸ್ ಚೇಂಜ್ ಮಾಡಲು ದೂರದಲ್ಲಿರುವ ತನ್ನು ರೂಮಿಗೆ ಹೋಗಬೇಕಾದ ಅನಿವಾರ್ಯತೆ, ಪುರುಷ  ಟಾಯ್ಲೆಟ್ ಗಳನ್ನು ಬಳಸಬೇಕಾದ ಸ್ಥಿತಿ . ಏಕೆಂದರೆ ಇಡೀ ತರಬೇತಿಯೊಬ್ಬಳೆ ಈಕೆ ಒಬ್ಬಳೆ ಹೆಣ್ಣು. ಆದರೆ ಇದಾವುದು ಆಕೆಗೆ ಅಡ್ಡಿ ಮಾಡುವುದಿಲ್ಲ. ಆದರೆ ದೈಹಿಕ ಶಕ್ತಿಯಲ್ಲೂ ಆಕೆಗೆ ಪುರುಷನಿಗ ಸರಿಸಮಾನವಾಗಿ ಇರಬೇಕೆಂಬ ಹೀಯಾಳಿಕೆ ಬಂದಾಗ ಕೊನೆಗೆ ರೋಸಿ ಹೋಗುತ್ತಾಳೆ. ನಾನಿಲ್ಲಿ ವಿಮಾನ ಓಡಿಸಲು ಬಂದಿದ್ದೇನೆ ಹೊರತು ಅದನ್ನು ಎತ್ತಲು  ಅಲ್ಲ ಎಂದು ಪುರುಷ ಸಮಾಜಕ್ಕೆ ಹೇಳಿ ವಾಪಸ್ಸು ಮನೆಗೆ ಹೋಗಿ ಮದುವೆ, ಗಂಡ ಮಕ್ಕಳು ಎಂಬ  ನಿರ್ಧಾರಕ್ಕೆ ಬಂದು ಬಿಡುತ್ತಾಳೆ.

    ಆದರೆ ಅಪ್ಪ ಅವಳ ಆಸೆ  ಕಮರುವುದಕ್ಕೆ ಬಿಡುವುದಿಲ್ಲ. ನೀನು ರೆಕ್ಕೆ ಬಿಚ್ಚಿ ಹಾರಬೇಕೆ ಹೊರತು ಮುದುಡಿ ಕುಳಿತುಕೊಳ್ಳುವುದಕ್ಕಲ್ಲ ಎಂದು ಉತ್ಸಾಹ ತುಂಬುತ್ತಾನೆ. ಮನಸ್ಸು ಬದಲಿಸಿದ   ಆಕೆ ರಜೆ ಮುಂದುವರಿಸದೆ  ವಾಪಸ್ಸು ವಾಯುಪಡೆ ಸೇರುತ್ತಾಳೆ. ಅದೇ ಸಮಯದಲ್ಲಿ ಕಾರ್ಗಿಲ್ ಯುದ್ಧ ಆರಂಭ. ಸಮರ ಭೂಮಿಗೆ ಈಕೆಯನ್ನು ಕಳುಹಿಸಲು ಹಿಂದೆ ಮುಂದೆ ನೋಡುವ ಸೀನಿಯರ್ ಆಫೀಸರ್ ಗಳೆ  ಬೆರಗಾಗುವಂತೆ ಯುದ್ಧ ಭೂಮಿಯಲ್ಲಿ ಗಾಯಗೊಂಡ ಯೋಧರನ್ನು ರಕ್ಷಿಸುತ್ತಾಳೆ. ಅಂದು ಹೆಣ್ಣೆಂದು ಜರಿದವರೆ ಇದು ಚಪ್ಪಾಳೆ ತಟ್ಟುತ್ತಾರೆ. ಯುದ್ದ ಭೂಮಿ ಹೆಣ್ಣು ಮಕ್ಕಳೆಗೆ ಅಲ್ಲ ಎನ್ನುತ್ತಿದ್ದ ಆಕೆ ಅಣ್ಣನೆ ಕೊನೆಗೆ  ಜೈಹಿಂದ್ ಆಫೀಸರ್  ಸಕ್ಸೇನಾ ಎಂದು ಹೇಳುವ ಮೂಲಕ ಆಕೆಯ ಸಾಧನೆ ಒಪ್ಪಿಕೊಳ್ಳುತ್ತಾನೆ.

    ವಾರ್ ಮೂವಿಗಳಂತೆ  ಕೇವಲ ಯುದ್ಧಕ್ಕೆ ಸೀಮಿತವಾಗದೆ ಹೆಣ್ಣೊಬ್ಬಳ ಮನಸನ್ನು ತೆರೆದಿಡುವಲ್ಲಿ ನಿರ್ದೇಶಕರು  ಯಶಸ್ವಿ ಯಾಗಿದ್ದಾರೆ. ಒಮ್ಮೊಮ್ಮೆ ಉರಿ ಸಿನಿಮಾದ ವಾರ್ ಭೂಮಿ ನೆನಪಿಗೂ ತಂದರೂ ಇಲ್ಲಿ ಯುದ್ಧ ವಿಜೃಂಭಿಸುವುದಿಲ್ಲ. ಬದಲಾಗಿ ಗುರಿ ಸಾಧಿಸುವ ಹೆಣ್ಣೊಬ್ಬಳ ಬದ್ಧತೆಯೇ ಪ್ರಮುಖವಾಗುತ್ತದೆ.

    ಗುಂಜನ್ ಆಗಿ ಜಾಹ್ನವಿ ಕಪೂರ್ ಇಡೀ ಚಿತ್ರ ಆಕ್ರಮಿಸಿದ್ದಾರೆ. ಹಲವು ಕಡೆ ಸಹಜ ಅಭಿನಯ ಎಂದು ಎನಿಸಿದರೂ ಭಾವ ತೀವ್ರತೆಯ ಸನ್ನಿವೇಶದಲ್ಲಿ ಇನ್ನು ಪಳಗ ಬೇಕು ಎಂದು ಅನ್ನಿಸುತ್ತದೆ. ತಮಗೆ ಒಪ್ಪಿಸಿದ ಪಾತ್ರವನ್ನು ಅಚ್ಚು ಕಟ್ಟಾಗಿ ಒಪ್ಪಿಸುವ ಪಂಕಜ್ ತ್ರಿಪಾಠಿಯದು ಇಲ್ಲಿಯೂ ಅದೇ ಗಾಂಭೀರ್ಯದ ನಟನೆ.

    ಮೊದಲು ನಾಲ್ಕು ನಿಮಿಷ ಬಿಟ್ಟರೆ ಉಳಿದಂತೆ ಇಡೀ ಸಿನಿಮಾ 1994ಕ್ಕೆ ಕರೆದೊಯ್ಯುತ್ತದೆ.  ಇಡೀ 1ಗಂಟೆ 52 ನಿಮಿಷದ ಸಿನಿಮಾ ಎಲ್ಲೂ ಬೋರ್ ಆಗದೆ ಚಕ ಚಕನೆ ಸಾಗುತ್ತದೆ. ಹಿನ್ನಲೆ ಸಂಗೀತವೂ ಕಥೆಗೆ ಪೂರಕ. ಹೀಗಾಗಿ ಮನೆ ಮಂದಿಯೆಲ್ಲಾ ನೋಡಬಹುದಾದ ಚಿತ್ರವಾಗಿ ಮೂಡಿ ಬಂದಿದೆ.

    ಕಾವೇರಿ ಕೂಗು ಅಭಿಯಾನಕ್ಕೆ ಅಡ್ಡಿಯಾಗದ ಕರೋನಾ

    ಕಾವೇರಿ ನದಿ ಬತ್ತಿ ಹೋಗುತ್ತಿದೆ ಎಂಬ ಕೂಗು ಇಂದು, ನಿನ್ನೆಯದಲ್ಲ, ಕಳೆದ ಅನೇಕ ವರ್ಷಗಳಿಂದ ಇಂತಹ ಕೂಗು ಎದ್ದಿದೆ. ಇಂತಹ ಮಯದಲ್ಲಿಕಾವೇರಿ ನದಿಯನ್ನು ಪುನರುಜ್ಜೀವಗೊಳಿಸಲು ಎಲ್ಲರ ಬೆಂಬಲದೊಂದಿಗೆ ಧೃಡ ಸಂಕಲ್ಪದಿಂದ ಹೊರಟಿದ್ದಾರೆ ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು.

    ಸದ್ಗುರು ಅವರ ನೇತೃತ್ವದಲ್ಲಿ ಕಾವೇರಿ ನದಿ ಪಾತ್ರದ ಕರ್ನಾಟಕ ಮತ್ತು ತಮಿಳುನಾಡು ಎರಡೂ ಕಡೆಗಳಲ್ಲಿಕಳೆದ ವರ್ಷ ಕಾವೇರಿ ಕೂಗು ಅಭಿಯಾನ ಆರಂಭವಾಗಿದೆ. ಸರಕಾರಗಳು, ಸಾಧು ಸಂತರು, ರೈತರು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.

    ಕಾವೇರಿ ಕೂಗು ಅಭಿಯಾನ ಕಾವೇರಿ ನದಿಯನ್ನು ಉಳಿಸುವುದರ ಜೊತೆಗೇ ರೈತರಿಗೂ ಆರ್ಥಿಕವಾಗಿ ಆದಾಯ ತಂದುಕೊಡುವ ಯೋಜನೆಯಾಗಿದೆ. ಮರ ವ್ಯವಸಾಯದ ಈ ಅಭಿಯಾನದಲ್ಲಿರೈತರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಕಾವೇರಿ ಕೂಗು ಪರಿಸರದ ಸಮಸ್ಯೆಗೆ ಆರ್ಥಿಕ ಪರಿಹಾರವಾಗಿದೆ.
    ಇದು ಕಾವೇರಿ ಜಲಾನಯನ ಪ್ರದೇಶದಲ್ಲಿಮರ ವ್ಯವಸಾಯವನ್ನು ಉತ್ತೇಜಿಸುತ್ತದೆ. ಹೆಚ್ಚಿನ ಮೌಲ್ಯವಿರುವ 242 ಕೋಟಿ ಮರಗಳನ್ನು ಬೆಳೆಸಲು 50 ಲಕ್ಷ ರೈತರ ಕೈಗಳನ್ನು ಬಲಪಡಿಸುವ ಗುರಿ ಹೊಂದಿದೆ. ಇದು ಜಲಾನಯನ ಪ್ರದೇಶದ ಮೂರನೇ ಒಂದು ಭಾಗವನ್ನು ನೆರಳಿನಡಿಯಲ್ಲಿತಂದು ಮಣ್ಣಿನ ಆರೋಗ್ಯ ಮತ್ತು ಅಂತರ್ಜಲದ ಮಟ್ಟವನ್ನು ಮುಖ್ಯವಾಗಿ ಸುಧಾರಿಸುತ್ತದೆ. ಇದು ರೈತರ ಆದಾಯವನ್ನು 5 ರಿಂದ 7 ವರ್ಷಗಳಲ್ಲಿ3 ರಿಂದ 8 ಪಟ್ಟು ಹೆಚ್ಚಿಸಲಿದೆ . ಇದು ಈ ಅಭಿಯಾನದ ಪ್ರಮುಖ ಅಂಶಗಳು.


    ನಿರೀಕ್ಷೆಯ ಪ್ರಕಾರ ಇದು 12 ಲಕ್ಷ ಕೋಟಿ ಲೀಟರ್‌ಗಳಷ್ಟು ನೀರನ್ನು ಜಲಾನಯನ ಪ್ರದೇಶದಲ್ಲಿಯೇ ಹಿಡಿದಿಟ್ಟುಕೊಂಡು ನೀರಿನ ಸ್ಥಾವರ ಹಾಗೂ ಕಾವೇರಿ ನದಿಯ ಹರಿವಿನ ಮೂಲವನ್ನು ವೃದ್ಧಿಸಲಿದೆ.

    ಸದ್ಗುರು ಇತ್ತೀಚೆಗೆ ವೆಬಿನಾರ್‌ನಲ್ಲಿ ಕಾವೇರಿ ಕೂಗುವಿನ ಒಂದು ವರ್ಷದ ಪ್ರಗತಿಯ ಸಂಕ್ಷಿಪ್ತ ವಿವರವನ್ನು ನೀಡಿದರು. ರಾಜ್ಯ ಅರಣ್ಯ ಇಲಾಖೆ, ರೈತರು, ಕಾವೇರಿ ಕೂಗಿನ ಸ್ವಯಂ ಸೇವಕರು ಹಾಗೂ ಮಾಧ್ಯಮದವರಿಂದ ದೊರೆತ ಬೆಂಬಲದಿಂದ ಕರೋನಾ ಮಹಾಮಾರಿಯ ನಿರ್ಬಂಧಗಳ ಹೊರತಾಗಿಯೂ ಯೋಜನೆಯು ಸರಿಯಾದ ಮಾರ್ಗದಲ್ಲಿಸಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಕೃಷಿ ಇಲಾಖೆ ಸಿಬ್ಬಂದಿ ತುಂಬಾ ಉತ್ಸಾಹದಿಂದ ಈ ಅಭಿಯಾನವನ್ನು ಬೆಂಬಲಿಸಿದ್ದಾರೆ ಎಂದರು.ಕರ್ನಾಟಕ ಮತ್ತು ತಮಿಳುನಾಡಿನ ರೈತರಿಗೆ ಕಳೆದ ಎರಡು ತಿಂಗಳಿನಲ್ಲಿ61 ಲಕ್ಷ ಸಸಿಗಳನ್ನು ವಿತರಿಸಲಾಗಿದೆ. ಕರ್ನಾಟಕದಲ್ಲಿಯೇ 50 ಲಕ್ಷ ಸಸಿಗಳನ್ನು ವಿತರಿಸಲಾಗಿದೆ. ಕೊರೊನಾದಿಂದಾಗಿ ನಿರೀಕ್ಷಿಸಿದಷ್ಟು ಸಸಿಗಳನ್ನು ನೆಡೆಸಲು ಸಾಧ್ಯವಾಗಿಲ್ಲ. ಮಣ್ಣಿನ ಫಲವತ್ತತೆ ಉಳಿದು ಬೆಳೆಯಬೇಕೆಂದರೆ ಮರ ಸಸಿಗಳನ್ನು ನೆಡಬೇಕು. ರೈತರಿಗೆ ಮರ ವ್ಯವಸಾಯದಲ್ಲಿಆಸಕ್ತಿ ಕಂಡು ಬಂದಿದೆ ಎಂದು ವಿವರಿಸಿದರು ಸದ್ಗುರು.

    ಕಾವೇರಿ ಕೂಗು ಯೋಜನೆಯು ವಿಶ್ವದ ಎಲ್ಲಉಷ್ಣವಲಯ ಪ್ರದೇಶಗಳ ನದಿಗಳ ಪುನರುಜ್ಜೀವನಕ್ಕೆ ಜಾಗತಿಕ ನೀಲನಕ್ಷೆ ತಯಾರಿಸುವ ಅವಕಾಶ. ಇದು ಅಲ್ಲಿವಾಸಿಸುವ 4.7 ಶತಕೋಟಿ ಜನರ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು ಎಂದರು.

    ಮುಂದಿನ 12 ವರ್ಷಗಳಲ್ಲಿಕಾವೇರಿಯನ್ನು ತನ್ನ ನಿಜವಾದ ವೈಭವದಲ್ಲಿಪುನರ್‌ ಸ್ಥಾಪಿಸುವುದು ಈ ಇಡೀ ತಲೆಮಾರಿನ ಜವಾಬ್ದಾರಿಯಾಗಿದೆ ಎಂದರು ಸದ್ಗುರು.

    ಕರೋನಾದಂತಹ ಮಹಾ ಮಾರಿಗೂ ನಮ್ಮ ಅಡುಗೆ ಮನೆ ಡಬ್ಬಗಳಲ್ಲಿ ಅಡಗಿದೆ ರಾಮ ಬಾಣ

    ಅಡುಗೆ ಮನೆ ಗಂಡಸರದ್ದಾ ಇಲ್ಲ ಹೆಂಗಸರದ್ದ? ಹೀಗಂತ ಯಾರನ್ನೇ ಕೇಳಿದ್ರು ಇವನೆಂತ ಅಸಂಬದ್ಧ ಪ್ರಶ್ನೆ ಕೇಳ್ತಾನೆ ಅಂತ ನಕ್ಕುಬಿಡ್ತಾರೆನೋ ಆದ್ರೆ ಉತ್ತರ ಗಂಡಸರದ್ದು ಅಂದು ಬಿಟ್ಟರಂತೂ ಇವನಿಗೆ ತಲೆ ಕೆಟ್ಟಿದೆ ಅಂತ ತೀರ್ಮಾನಿಸಿಬಿಡ್ತಾರೆ. ಅಷ್ಟೊಂದು ನಮ್ಮ ಅಡುಗೆಮನೆಗಳು ಹೆಣ್ಮಕ್ಕಳ ಅಸ್ತಿತ್ವದ, ಹಕ್ಕುಗಳ ಆಸ್ತಿಗಳಾಗಿ ಬಿಟ್ಟಿವೆ. ಹಬ್ಬ, ಹರಿದಿನಗಳಲ್ಲಂತೂ ಕೇಳಲೇ ಬೇಡಿ. ಹೆಣ್ಮಕ್ಕಳು ಎಲ್ಲರಿಗಿಂತ ಮುಂಚೆ ಎದ್ದು,ಸ್ನಾನ ಮಾಡಿ, ಹಸಿ ಹೆರಳನ್ನು ಬಟ್ಟೆಯಲ್ಲಿ ಕೂದಲಿನ ಆಕಾರದಲ್ಲಿ ಕಟ್ಟಿ, ಸಡಗರದಿಂದ ಕೈಬಳೆ ಸದ್ದು ಮಾಡುತ್ತಾ ವಿಧ,ವಿಧ ಅಡುಗೆಗಳ ಪರಿಮಳಗಳೊಂದಿಗೆ ಅಡುಗೆಮನೆಯಲ್ಲಿ ಸ್ಥಾಪಿತರಾದರು ಅಂದ್ರೆ ಹಬ್ಬದ ಸಂಭ್ರಮ ಮುಗಿಲು ಮುಟ್ಟುವುದೇ ಆಗ.  ಸಾಧಾರಣ ದಿನಗಳಲ್ಲೂ ಹೆಣ್ಮಕ್ಕಳು ಇಲ್ಲದ ಅಡುಗೆ ಮನೆಗಳು ಭಣ, ಭಣ. ಅಷ್ಟೊಂದು ನಮ್ಮ ಅಡುಗೆಮನೆಗಳು ಹೆಣ್ಮಕ್ಕಳ ಕಾರ್ಯ ಸ್ಥಾನಗಳಾಗಿ,ಇಡೀ ಮನೆಯನ್ನು, ಕುಟುಂಬವನ್ನು ಹಿಡಿದಿಟ್ಟಿವೆ.

    ಇಂಥ ಅಡುಗೆ ಅಥವಾ ಅಡುಗೆ ಮನೆಗಳು ಮೊದಲಿಗೆ ಗಂಡಸರದ್ದಾಗಿತ್ತು ಅಂತ ಅನ್ನಿಸೋದೇ ನಳ ಪಾಕ, ಭೀಮಪಾಕ ಎನ್ನುವಂತಹ ಶಬ್ದಗಳನ್ನು ಕೇಳುವಾಗ. ಎಲ್ಲೂ ಸೀತೆ ಪಾಕ, ದ್ರೌಪದಿ ಪಾಕ,ದಮಯಂತಿ ಪಾಕ ಅಂತ ಕೇಳುವುದೇ ಇಲ್ಲ!  ಅಲ್ಲದೆ ಬಾಣಸಿಗ ಎನ್ನುವ ಶಬ್ದ ಕೇಳ್ತೇವೆ ಬಿಟ್ಟರೆ ಬಾಣಸಿಗಿತ್ತಿ ಅಂತ ಕೇಳಿಲ್ಲ ಅನ್ಸುತ್ತೆ. ಇವತ್ತಿಗೂ ಸಾಮೂಹಿಕ ಅಡುಗೆಗಳಲ್ಲಿ ಬಾಣಸಿಗರೇ ಕಾಣುತ್ತಾರೆ,ಬಿಟ್ಟರೆ ಬಾಣಸಿಗಿತ್ತಿಯರು ಕಾಣಲ್ಲ. ಇದನ್ನೆಲ್ಲ ನೋಡಿದಾಗ, ಅಡುಗೆ ಮನೇನೂ ಒಂದೊಮ್ಮೆ ಪುರುಷ ಪ್ರಧಾನ ಕೇಂದ್ರ ಆಗಿದ್ದಿರಬಹುದು ಅನ್ನುವ ಅನ್ನಿಸಿಕೆಯನ್ನ ಮಾತ್ರ ಹೊರಹಾಕಿ,ಮುಂದಿನ ಅದರ ವಿಶ್ಲೇಷಣೆಗೆ ಕೈ ಹಾಕಲ್ಲ. ಹಾಗೇನಾದ್ರು ಕೈ ಹಾಕಿ ಮಾತಾಡಿದೆ ಅಂದ್ರೆ, ನನಗೂ ಸೇರಿ ಬಹುತೇಕ ಗಂಡಸರು ಅಡುಗೆ ಮನೆಯಲ್ಲಿ ನಾಳೆಯಿಂದ ಸ್ಥಾಪಿತರಾಗಬೇಕಾಗುತ್ತೆ.

    ನಮ್ಮ ಸಂಸ್ಕೃತಿಯಲ್ಲಿ ಅಡುಗೆ ಮನೆಗೆ ತುಂಬಾ ಪವಿತ್ರ ಸ್ಥಾನ ಕೊಟ್ಟಿದ್ದೇವೆ. ದೇವರ ಮನೆ ಆದ ನಂತರ, ಅಡುಗೆ ಮನೆಗೇ ಪ್ರಾಶಸ್ತ್ಯ. ಯಾಕೆಂದರೆ, ಅಡುಗೆ ಮನೆ ನಮ್ಮ ಆರೋಗ್ಯ ಕಾಪಾಡುವ ಔಷಧಾಲಯವೂ ಹೌದು. ನಮ್ಮ ಅಡುಗೆಯೇ ಔಷಧ! ಅಡುಗೆ ಮನೆಯಲ್ಲಿನ ಸಣ್ಣ ಸಣ್ಣ ಬಾಟಲು ಗಳಲ್ಲಿ ತುಂಬಿಟ್ಟಿರುವ ಅಡುಗೆಗೆ ಅಂತ ಉಪಯೋಗಿಸುವ ಸಾಮಾನು ನೋಡಿದ್ರೆ, ನನಗಂತೂ ಹಾಗೇ ಅನ್ಸುತ್ತೆ. ಅದು ನಿಜವೂ ಹೌದು. ನಮ್ಮ ವೈದ್ಯಕೀಯ ಶಾಸ್ತ್ರವಾದ ಆಯುರ್ವೇದದ ಹಲವಾರು ಸಾಮಾನುಗಳು ನಮಗೆ ಅಡುಗೆ ಮನೆಯಲ್ಲಿ ದೊರೆಯುತ್ತವೆ,ಅವುಗಳನ್ನು ದಿನ ನಿತ್ಯ ಉಪಯೋಗಿಸಲು ನಮ್ಮ ಆಹಾರ ಪದ್ಧತಿಗಳಲ್ಲಿ ಅಳವಡಿಸಿ ಕೊಂಡಿದ್ದೇವೆ ಕೂಡಾ. ಹಾಗೆಯೇ ನಾವು ಪಾಲಿಸುವ ಋತುಮಾನಗಳಿಗೆ ತಕ್ಕಂತೆ ಬರುವ ಹಬ್ಬ,ಹರಿದಿನಗಳ ನಿರ್ದಿಷ್ಟ ಆಹಾರ ಪದ್ಧತಿ ಇದಕ್ಕೆ ಬೆಂಬಲವಾಗಿ ನಿಲ್ಲುತ್ತೆ. ಋತುಮಾನ, ಆಹಾರ ಧರ್ಮಾತೀತವಾದ್ದರಿಂದ ಇದು ಎಲ್ಲರಿಗೂ ಅನ್ವಯಿಸುವ ವಿಷಯವೇ. ಆದರೆ, ಈಗಿನ ಕೆಲವು ಬೆಳವಣಿಗೆಗಳು ಇವುಗಳನ್ನೂ ಧರ್ಮದ ಪರಿಧಿಗೆ ತಂದು ಇವುಗಳಿಗೂ ಧರ್ಮದ ಸೋಂಕನ್ನು ಹಚ್ಚಿಬಿಟ್ಟಿವೆ.

    ನಮ್ಮಲ್ಲಿಯ ಔಷಧಿ ಗುಣಗಳನ್ನು ಒಳಗೊಂಡಿರುವ ಸಾಂಬಾರು ಪದಾರ್ಥಗಳು ಪ್ರಪಂಚದ ಬೇರೆ ಎಲ್ಲೂ ಸಿಕ್ಕಲ್ಲ, ಅಷ್ಟೇ ಅಲ್ಲ ಇವುಗಳಿಗಾಗಿಯೇ ಡಚ್ಚರು, ಪೋರ್ಚ್ಗೀಸರು, ಅರಬ್ಬಿಗಳೂ ಭಾರತದ ವಾಯುವ್ಯ ಮೂಲೆಯಿಂದ ದಾಳಿ ಮಾಡುವ ಎಷ್ಟೋ ಶತಮಾನಗಳ ಮುಂಚೆಯೇ ದಕ್ಷಿಣ ರಾಜ್ಯಗಳ ರಾಜರೊಂದಿಗೆ ವ್ಯಾಪಾರ ಮಾಡಿರುವುದು ಇತಿಹಾಸ ಆಗಿದೆ.

    ಪ್ರತಿ ನೂರು ಚದರ ಮೈಲಿಗೆ ನಮ್ಮ ದೇಶದ ಹವಾಗುಣ ಬದಲಾಗುವ ಲಕ್ಷಣ ಇದೆಯಲ್ಲ, ಇದು ನಮ್ಮ ಸಂಸ್ಕೃತಿ, ಭಾಷೆ, ಆಚಾರ ವಿಚಾರದ ಮೇಲೆ ಬೀರಿರುವ ಪ್ರಭಾವ ನಮ್ಮ ಆಹಾರ ಪದ್ಧತಿಗಳ ಮೇಲೂ ಬೀರಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಅಂಶವೂ ನಮ್ಮ ಆಹಾರ ಪದ್ಧತಿ,ಔಷಧ ಅನ್ನುವುದನ್ನು ಹೆಚ್ಚು ಸ್ಪಷ್ಟಪಡಿಸುತ್ತದೆ. ಈ ಕಾರಣದಿಂದ ನಮ್ಮ ಕರ್ನಾಟಕದಲ್ಲಿ ಉತ್ತರ ಕರ್ನಾಟಕ ಆಹಾರ,ದಕ್ಷಿಣ ಕರ್ನಾಟಕ ಆಹಾರ ಪದ್ಧತಿಗಳನ್ನೂ ಕಾಣುತ್ತೇವೆ.

    ಬಳ್ಳಾರಿಯವರಾದ ನಾವು ಮಧ್ಯೆ ಕರ್ನಾಟಕದವರು,ಆದರೂ ಉತ್ತರ ಕರ್ನಾಟಕಕ್ಕೆ ಸೇರಿಸಿಬಿಟ್ಟಿದ್ದಾರೆ. ನಮ್ಮಲ್ಲಿ ಎರಡೂ ಪದ್ಧತಿಗಳ ಜೊತೆ,ಆಂಧ್ರ ಆಹಾರ ಪದ್ಧತಿಯೂ ಸೇರಿಕೊಂಡಿದೆ. ದಕ್ಷಿಣ ಕರ್ನಾಟಕದ ಮುದ್ದೆ,ಸೊಪ್ಪು ಸಾರು, ಉತ್ತರ ಕರ್ನಾಟಕದ ಜೋಳದ ರೊಟ್ಟಿ, ತರಕಾರಿ, ಕಾಳುಗಳು,ಆಂಧ್ರದ ಪಪ್ಪು,ಅನ್ನ ಎಲ್ಲವೂ ನಮ್ಮಲ್ಲಿ ಆಹಾರ ಪದ್ಧತಿಗಳಾಗಿವೆ. ಏಕದಳ ಧಾನ್ಯಗಳನ್ನು ದ್ವಿದಳ ಧಾನ್ಯಗಳ ಜೊತೆ  ವರ್ಷ ಇಡೀ ಸಾಂಬಾರು ದಿನಿಸುಗಳ ಜೊತೆಯಾಗಿ ತಿನ್ನುವ ಆಹಾರ ಪದ್ಧತಿ ದಕ್ಷಿಣ ಭಾರತದಲ್ಲೇ ಸಾಮಾನ್ಯ.

    ಬರುವ ಗೌರೀ ಹುಣ್ಣಿಮೆಯ ಕುಂತೀ ರೊಟ್ಟಿಎಂಬ ಸಾಯಂಕಾಲದ ಊಟದ  ಕಾರ್ಯಕ್ರಮದಲ್ಲಿ ನಮ್ಮ ಜೋಳದ,ಸಜ್ಜೆಯ ರೊಟ್ಟಿ ಊಟ, ವಿಧ ವಿಧ ತರಕಾರಿ, ಸೊಪ್ಪು,ಕಾಳುಗಳ ಊಟ ಸವಿಯಬೇಕು ಕಣ್ರೀ, ಆಗಲೇ ನನಗೆ ಅನ್ನಿಸಿದ್ದು, ನಮ್ಮ ಪೂರ್ವಿಕರು ಎಷ್ಟೊಂದು ಸಂಶೋಧನೆ ಈ ವಿಷಯದಲ್ಲಿ ಮಾಡಿ ಇದಕ್ಕೆ ಪಾಕ ಶಾಸ್ತ್ರ ಅಂತ ಹೆಸರಿಟ್ಟಿದ್ದಾರಲ್ಲ ಅಂತ.

    ಇನ್ನು ಹೋಳಿಗೆ ಊಟದ ಸಂಭ್ರಮವಂತೂ ಪ್ರತಿ ಹಬ್ಬಕ್ಕೂ ನಮಗೆ ಇರುತ್ತದೆ. ಪಂಚಮಿಯ ಉಂಡೆಗಳು, ಯುಗಾದಿಯ,ದಸರಾದ ಹೋಳಿಗೆ, ಸಂಕ್ರಮಣದ ರೊಟ್ಟಿ, ದೀಪಾವಳಿಯ ಸಿಹಿತಿನಿಸುಗಳು, ಶಿವರಾತ್ರಿ ಜಾಗರಣೆ ಮಂಡಕ್ಕಿ ಒಗ್ಗರಣೆ, ಮೆಣಸಿನಕಾಯಿ…. ವರ್ಷವಿಡೀ ಅಂತ್ಯವಿಲ್ಲದ ಹಬ್ಬಗಳು,ಆಹಾರ ಪದ್ಧತಿಗಳು…ವಾವ್…ಬಿಸಿಲಲ್ಲಿ,ಚಳಿಯಲ್ಲಿ,ಮಳೆಯಲ್ಲಿ ಯಾವಾಗಲೂ ಮೆಲ್ಲುವ ನಮ್ಮ ಇಷ್ಟವಾದ ಖಾದ್ಯವೆಂದರೆ ಅದು ಮಂಡಕ್ಕಿ,ಮೆಣಸಿನಕಾಯಿ. ಮೆಣಸಿನಕಾಯಿ ಹೊಟ್ಟೆ ಬಗೆದು, ಉಪ್ಪು ಜೀರಿಗೆ ತುಂಬಿದರಂತೂ ಹ ಹಾ ಅನ್ನುತ್ತಾ, ಬೆವರು ಬರುತ್ತಿದ್ದರೂ ಬಿಡುವುದಿಲ್ಲ ನಾವು ತಿನ್ನುವುದನ್ನು. ಗ್ರಾಮೀಣ ಭಾಗಗಳಲ್ಲಂತೂ ನೀವು,ನಾವು ಕಂಡು ಕೇಳರಿಯದ ಆಹಾರ ಪದ್ಧತಿ ನಮಗೆ ದೇಶದ ಎಲ್ಲ ಭಾಗಗಳಲ್ಲೂ ಸಿಗುತ್ತದೆ. 
    ಸಸ್ಯ ಆಹಾರದಲ್ಲಿ ಭಾರತದ ಆಹಾರ ಪದ್ಧತಿ,ಇಡೀ ವಿಶ್ವಕ್ಕೆ ಮೊದಲನೆಯದು ಮತ್ತು ತುಂಬಾ ಶಾಸ್ತ್ರೀಯವಾದುದು ಅಂತ ಹೇಳಬಹುದು.

    ಇದನ್ನು ಇಷ್ಟೊಂದು ಆಳವಾಗಿ ನೈಸರ್ಗಿಕವಾಗಿ ಸಿಗುವ ಸೊಪ್ಪು,ಕಾಳುಗಳಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಅಂಶಗಳನ್ನು ಗುರುತಿಸಿ, ಅವುಗಳನ್ನು ಉಪಯೋಗಿಸುವ ಕ್ರಮ ಹೇಳಿಕೊಟ್ಟು, ಮನೆ ಮನೆಗಳಲ್ಲೂ ಆಯುರ್ವೇದದ ಸಾರವನ್ನು ಅಡುಗೆ ರೂಪದಲ್ಲಿ ಅಡುಗೆ ಮನೆಯಲ್ಲಿಟ್ಟಿರುವುದರಿಂದ ಏನೋ ನನ್ನ ಅಮ್ಮ ಬೆಳಿಗ್ಗೆ ಎದ್ದ ತಕ್ಷಣ ಒಲೆಯ ಬೂದಿ ತೆಗೆದು,ಸ್ವಚ್ಛಗೊಳಿಸಿ, ಒಲೆ ಪೂಜೆ ಮಾಡಿಯೇ, ಅಂಗಳ,ಹೊಸ್ತಿಲು ಪೂಜೆ ಮಾಡುತ್ತಿದ್ದದ್ದು. ಒಲೆಗಳೂ,ಬೂದಿಯೂ ಕಾಣದಿರುವ ಈ ದಿನಗಳಲ್ಲಿ, ಅಡುಗೆ ಮನೆ ತನ್ನ ಸಂಭ್ರಮವನ್ನಂತೂ ನಮ್ಮ ಹೆಣ್ಣುಮಕ್ಕಳ ಮುಖಾಂತರ ಉಳಿಸಿಕೊಂಡು ಬಂದಿರುವುದು ಸಂತೋಷವೇ.

    ನಳ ಪಾಕ, ಬಾಣಸಿಗ, ಅಡುಗೆ ಭಟ್ಟ ಅಂತ ಪುರುಷ ಪ್ರಧಾನ ಶಬ್ದಗಳನ್ನು ಹೊಂದಿದ್ದರೂ ನಮ್ಮ ಅಡುಗೆ ಮನೆಗಳಿಗೆ ನಮ್ಮ ಅನ್ನಪೂರ್ಣೇಶ್ವರಿಯರೇ ಭೂಷಣ.ಕರೋನಾದಂತಹ ಮಹಾ ಮಾರಿಗೂ  ನಮ್ಮ ಅಡುಗೆ ಮನೆ ಡಬ್ಬಗಳಲ್ಲಿ ರಾಮ ಬಾಣಗಳು ಅಡಗಿರುವ ಅಂಶ ,ಮತ್ತೊಮ್ಮೆ ನಮ್ಮ ಅಡುಗೆ ಮನೆಗಳು ಔಷಧ ಕೇಂದ್ರಗಳು ಅಂತ ಸಾಬೀತು ಮಾಡಿವೆ.

    ಕಿರಣ್ ಮಾಡಾಳು

    ಇಲ್ಲಿ ಪ್ರಕಟವಾಗಿರುವ animated illustration ರಚಿಸಿದವರು ಕಿರಣ್ ಮಾಡಾಳು. ಸಾಂಪ್ರದಾಯಿಕ ಚಿತ್ರಕಲೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡಿ ಅದು ಮತ್ತಷ್ಟು ಪರಿಣಾಮಕಾರಿಯಾಗುವಂತೆ ಮಾಡಬಲ್ಲ ನಾಡಿನ ಕೆಲವೇ ಕಲಾವಿದರಲ್ಲಿ ಇವರೂ ಕೂಡ ಒಬ್ಬರು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ. 3D ಚಿತ್ರ ರಚನೆಯಲ್ಲಿ ವಿಶೇಷ ಪ್ರಾವೀಣ್ಯ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156

    ಜನ್ಮಾಷ್ಟಮಿ: ಇಸ್ಕಾನ್ ನಿಂದ ಲೈವ್ ಪ್ರಸಾರ

    ಬೆಂಗಳೂರಿನ ಇಸ್ಕಾನ್ ನಲ್ಲಿ ಸ್ವಾಗತಂ ಕೃಷ್ಣ ಹೆಸರಿನಲ್ಲಿ ಭಗವಂತನ ಆರಾಧನೆ ನಡೆಯುತ್ತಿದೆ. ಈ ಬಾರಿ ಎಲ್ಲವೂ ಡಿಜಿಟಲ್. ಅದರ ನೇರ ಪ್ರಸಾರ ಇಲ್ಲಿದೆ. ವೀಕ್ಷಿಸಿ ನೀವು ಕೃಷ್ಣಾಷ್ಟಮಿ ಸಡಗರದಲ್ಲಿ ಭಾಗಿಯಾಗಿ.

    ಸ್ವಾಗತಂ ಕೃಷ್ಣ: ಇಸ್ಕಾನ್ ನಿಂದ ಲೈವ್ ಪ್ರಸಾರ

    ಬೆಂಗಳೂರಿನ ಇಸ್ಕಾನ್ ನಲ್ಲಿ ಸ್ವಾಗತಂ ಕೃಷ್ಣ ಹೆಸರಿನಲ್ಲಿ ಭಗವಂತನ ಆರಾಧನೆ ನಡೆಯುತ್ತಿದೆ. ಈ ಬಾರಿ ಎಲ್ಲವೂ ಡಿಜಿಟಲ್. ಅದರ ನೇರ ಪ್ರಸಾರ ಇಲ್ಲಿದೆ. ವೀಕ್ಷಿಸಿ ನೀವು ಕೃಷ್ಣಾಷ್ಟಮಿ ಸಡಗರದಲ್ಲಿ ಭಾಗಿಯಾಗಿ.

    ಆಡ ಪೋಗೋಣ ಬಾರೋ ರಂಗ

    ಇಂದು ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯ ಸಡಗರ. ಕೋವಿಡ್ ಕಾರಣದಿಂದ ಈ ಬಾರಿ ಮನೆಯಿಂದಲೆೇ ಜನ್ಮಾಷ್ಟಮಿ ಆಚರಿಸಬೇಕಾದ ಅನಿವಾರ್ಯತೆ.ಆದರೆ ಹಬ್ಬದ ಸಡಗರಕ್ಕೆ ಮನೆಯಾದರೇನು ಮಂದಿರವಾದರೇನು . ಎಲ್ಲಿ ನಿನ್ನ ಭಕ್ತರೋ ಅಲ್ಲೇ ದೇವಾಲಯ.

    ನಮ್ಮ ಕೃಷ್ಣ ಮಕ್ಕಳ ಪ್ರೀತಿಯ ದೇವರು. ಬಾಲ್ಯದಲ್ಲಿ ಎಲ್ಲರೂ ಒಮ್ಮೆಯಾದರು ಕೃಷ್ಣ ರಾಧೆಯಾಗಿ ಶಾಲೆಯ ಕಾರ್ಯಕ್ರಮದಲ್ಲಿ ನಲಿದವರೆ. ಇನ್ನೂ ಶ್ರೀಕೃಷ್ಣನ ಬಾಲ ಲೀಲೆಗಳನ್ನು ಮಕ್ಕಳ ಬಾಯಿಂದ ಕೇಳಿದರಂತೂ ಅದರ ಸೊಗಸೆ ಬೇರೆ. ಹೀಗಾಗಿ ನಮ್ಮಈ ಪಾಡ್ಕಾಸ್ಟ್ ನಲ್ಲಿ ಮಕ್ಕಳ ಕಲರವವನ್ನು ಕೇಳಿಸುತ್ತಿದ್ದೇವೆ. ಅವರ ತೊದಲ ನುಡಿಗಳಲ್ಲಿ ಶ್ರೀಕೃಷ್ಣ ಲೀಲಾಮೃತವನ್ನು ಕೇಳಿ ಆನಂದಿಸಿ.

    ಏಳು ವರ್ಷದ ರಾಮಪ್ರಿಯ ನ ಕೃಷ್ಣಾಷ್ಟಕಂ ನಿಂದ ಆರಂಭವಾದ ಈ ಪಾಡ್ಕಾಸ್ಟ್ ನಲ್ಲಿ ಮುಂದೆ ನಾಲ್ಕು ವರ್ಷದ ಮಿಹಿರಾ ಜಯ ಜನಾರ್ದನ ಎಂದು ಕೃಷ್ಣನ ಗುಣಗಾನ ಮಾಡಿದ್ದಾಳೆ.ಮುಂದೆ ರಾಧೆ ಗೋವಿಂದ ಎನ್ನುವ ಮೂಲಕ ಎಂಟು ವರ್ಷದ ಶ್ರೀಯಾ ರಾಧಾ ಕೃಷ್ಣರ ಪ್ರೀತಿಯನ್ನು ಭಕ್ತಿ ತುಂಬಿ ಹಾಡಿದ್ದಾಳೆ. ದೂರದ ಅಮೆರಿಕಾದಿಂದ ದನಿಗೂಡಿಸಿರುವ ಐದು ವರ್ಷದ ಶ್ರೀಯಶ್ ಅಚ್ಯುತಂ ಕೇಶವಂ ಎಂದು ಅಲ್ಲಿನ ಶೈಲಿಯಲ್ಲೇ ಕೃಷ್ಣನನ್ನು ಪಠಿಸುತ್ತಾನೆ. ಆಡ ಪೋಗೋಣ ಬಾರೋ ರಂಗ ಎಂದು ಸಿಂಗಾಪುರದಿಂದ ಕೃಷ್ಣನನ್ನುಆಟಕ್ಕೆ ಕರೆದಿದ್ದಾಳೆ ಮೂರು ವರ್ಷದ ಸಾನ್ವಿ. ಮುಂದೆ ಒಂಭತ್ತು ವರ್ಷದ ನಿತ್ಯಶ್ರೀ ಕಾಳಿಂಗ ಮರ್ಧನದ ಕಥೆ ಹೇಳಿದ್ದಾಳೆ. ಎಲ್ಲಾಡಿ ಬಂದೆ ಎಂದು ಕೃಷ್ಣನನ್ನು ಕೇಳಿದ್ದಾಳೆ ಹತ್ತು ವರುಷದ ಮಾನ್ಯಾ. ನನ್ನನ್ನು ಎತ್ತಿಕೊಳ್ಳಮ್ಮಎಂದು ಯಶೋದೆಯನ್ನು ಕೇಳುತ್ತಾಳೆ ಮೈಸೂರಿನಿಂದ ಆರು ವರ್ಷದ ಅವನಿ. ಕೊನೆಯಲ್ಲಿ ಎಂಟು ವರ್ಷದ ಧನ್ಯಶ್ರೀ ಲಾಲಿ ಹಾಡಿದ್ದಾಳೆ. ಕಾರ್ಯಕ್ರಮದ ಮಧ್ಯದಲ್ಲೇ ಬರುವ ಕವಿ ಎಚ್. ಎಸ್ .ವಿ ಅವರ ಅಮ್ಮಾ ನಾನು ದೇವರಣೆ ಬೆಣ್ಣೆ ಕದ್ದಿಲ್ಲಮ್ಮ.. ಹಾಡಿದ್ದು ಪ್ರಿಯಾಂಕ. ನಿರೂಪಣೆ ಭಾರತಿ .

    ಆಲಿಸಿ, ಪ್ರತಿಕ್ರಿಯಿಸಿ.

    error: Content is protected !!