32.2 C
Karnataka
Monday, April 21, 2025
    Home Blog Page 161

    ಕೃಷ್ಣನೆಂದರೆ ‘ಪ್ರೀತಿ’ ರಾಧೆಗಷ್ಟೇ ಅಲ್ಲ

    ಭಗವಾನ್ ವಿಷ್ಣುವಿನ ಎಂಟನೇ ಅವತಾರ ಶ್ರೀಕೃಷ್ಣ ಪರಮಾತ್ಮ. ಧರ್ಮ ಸಂಸ್ಥಾಪನೆಗಾಗಿ ಜನ್ಮವೆತ್ತಿದ್ದು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು. ಶ್ರೀಕೃಷ್ಣ ಜನ್ಮಾಷ್ಟಮಿ ಹಿಂದೂ ಹಬ್ಬಗಳಲ್ಲಿ ಅತ್ಯಂತ ವಿಶಿಷ್ಟವಾದ ಹಬ್ಬ. ಕೃಷ್ಣನ ಜನ್ಮದಿನವನ್ನು ದೇಶಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಮಥುರಾ ಶ್ರೀಕೃಷ್ಣನ ಜನ್ಮಭೂಮಿ. ಇಲ್ಲಿ ಬಹಳ ಸಂಭ್ರಮದಿಂದ ಅಷ್ಟಮಿಯನ್ನು ಆಚರಿಸುತ್ತಾರೆ. ತನ್ನ ಬಾಲಲೀಲೆಗಳನ್ನು ತೋರಿದ ಬೃಂದಾವನದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಇರುತ್ತದೆ. ಅಷ್ಟೇ ಅಲ್ಲ ದೇಶದೆಲ್ಲೆಡೆ ಜನ್ಮಾಷ್ಟಮಿಯ ವಿಶೇಷ ಆಚರಣೆಗಳು  ಕಂಡು ಬರುತ್ತವೆ. ಎಲ್ಲವೂ ಅಂದುಕೊಂಡಂತೆ ಇರುತ್ತಿದ್ದಿದ್ದರೆ ಇಷ್ಟೊತ್ತಿಗಾಗಲೇ ಆಚರಣೆ ಕಳೆಗಟ್ಟುತ್ತಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದ ಹಬ್ಬದ ಸಂಭ್ರಮ ಮನೆಮನ, ಆನ್‍ಲೈನ್ ಕಾರ್ಯಕ್ರಮಗಳಿಗಷ್ಟೇ ಸೀಮಿತಗೊಂಡಿದೆ. ಏನೇ ಇರಲಿ, ಭಗವಾನ್ ಶ್ರೀಕೃಷ್ಣನ ಬಾಲಲೀಲೆ, ಬದುಕು, ಸಂದೇಶಗಳು ಎಂದೆಂದಿಗೂ ಪ್ರಸ್ತುತವೇ.

    ಆಡಿಸಿದಳೆಶೋಧೆ…

    ಮುದ್ದು ಕೃಷ್ಣ, ಬಾಲಕೃಷ್ಣ, ಗೋಪಕೃಷ್ಣ ಎಂದೆಲ್ಲಾ ಕರೆಸಿಕೊಳ್ಳುವ ದೇವಕಿ ನಂದ ಶ್ರೀಕೃಷ್ಣ ಎಂದರೆ ಎಲ್ಲರಿಗೂ ಪ್ರೀತಿಯ ಭಾವ. ಹಾಗೆಯೇ ಶ್ರೀಕೃಷ್ಣನ ಬಾಲಲೀಲೆಗಳು ಇಂದಿಗೂ ಪ್ರಸ್ತುತ. ಜನ್ಮಾಷ್ಟಮಿಯಂದು ಮಕ್ಕಳು ಶ್ರೀಕೃಷ್ಣನ ವೇಷ ಹಾಕಿ ಸಂಭ್ರಮಿಸುವ ಪರಿ ಇದಕ್ಕೆ ಸಾಕ್ಷಿ. ಮನೆಯಲ್ಲಿ ತೊಟ್ಟಿಲಲ್ಲಿ ತೂಗುವ, ಇನ್ನೂ ಅಂಬೆಗಾಲಿಡುವ ಮುದ್ದುಮೊಗದ ಮಗುವಿಗೂ ನಂದಕಿಶೋರನ ವೇಷ ಹಾಕಿ, ತಾನೇ ಯಶೋಧೆಯಾಗಿ ತನ್ನ ಕಂದನನ್ನು ಮುದ್ದುಕೃಷ್ಣನನ್ನಾಗಿ ಕಾಣುವ ಸಂಭ್ರಮ ಎಲ್ಲ ಅಮ್ಮಂದಿರಿಗೆ. ಮಗುವಿದ್ದಾಗ ಒಮ್ಮೆಯಾದರೂ ತನ್ನ ಕಂದನಿಗೆ ಶ್ರೀಕೃಷ್ಣನ ವೇಷ ಹಾಕಿ ಸಂಭ್ರಮಿಸದೇ ಇರುವವರು ಸಿಗುವುದು ವಿರಳ.

    ಪ್ರೀತಿಯ ಕಣ್ಣುಭಗವಾನ್ ಶ್ರೀಕೃಷ್ಣ ಪ್ರೀತಿಯ ದ್ಯೋತಕವಾಗಿ ಕಾಣಿಸುತ್ತಾನೆ.  ಕೃಷ್ಣನಿಲ್ಲದೆ ರಾಧೆ ಅಪೂರ್ಣ, ರಾಧೆಯಿಲ್ಲದೆ ಕೃಷ್ಣ ಪೂರ್ಣವಾಗುವುದೆಂಟೇನೋ? ಎರಡು ದೇಹ ಒಂದೇ ಉಸಿರಿನಂತಿದ್ದವರು ಅವರು. ನಿಷ್ಕಲ್ಮಶ ಪ್ರೀತಿಯದು.ರುಕ್ಮಿಣಿ, ರಾಧೆ ಎಲ್ಲರೂ ಶ್ರೀಕೃಷ್ಣನ ಲೀಲೆಗೆ ಒಳಗಾದವರೇ. ಅವನೇ ನನ್ನ ಸರ್ವಸ್ವ ಎಂದು ಭಾವಿಸಿ ತನ್ನೊಳಗೊಬ್ಬ ಸಖನನ್ನು ಕಂಡವರೂ ಇದ್ದಾರೆ. ಶ್ರೀಕೃಷ್ಣನನ್ನೇ ಧ್ಯಾನಿಸಿ ಅಮರಳಾದ ರಾಜಕುವರಿ ಮೀರಾ ಇದಕ್ಕೊಂದು ನಿದರ್ಶನ.  ಆಕೆ ಕೃಷ್ಣನೆಡೆಗೆ ತೋರಿದ ಭಕ್ತಿಯ ಪ್ರೀತಿಯದು. ಅದು ದೇವಪ್ರೀತಿ. ಶ್ರೀಕೃಷ್ಣನಿಗೆ ಹದಿನಾರು ಸಾವಿರ ಮಡದಿಯರು ಎಂಬುದಾಗಿಯೂ ಪುರಾಣ ಕಥೆಗಳಿಂದ ತಿಳಿದು ಬರುತ್ತದೆ. ಶ್ರೀಕೃಷ್ಣನ ಕುರಿತಾದ ಕಥೆಗಳನ್ನು ಕೇಳಿದರೆ ಜಗದೋದ್ಧಾರ ಇಡೀ ಜಗತ್ತಿಗೇ ಪ್ರೀತಿಯ ದ್ಯೋತಕ ಎಂಬುದು ಅರಿವಾಗುತ್ತದೆ. ಹೆಚ್.ಎಸ್. ವೆಂಕಟೇಶ ಮೂರ್ತಿ ಅವರು ಬರೆದ ಈ ಹಾಡು ಪ್ರಸಿದ್ಧಿ. “ಲೋಕದ ಕಣ್ಣಿಗೆ ರಾಧೆಯು ಕೂಡಾ ಎಲ್ಲರಂತೆ ಒಂದು ಹೆಣ್ಣು, ನನಗೂ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು’.

    ಜಗತ್ತಿಗೆ ಸಾರಿದ ಸಂದೇಶ

    ಭಗವಾನ್ ಶ್ರೀಕೃಷ್ಣ ಹುಟ್ಟಿದ್ದು ದೇವಕಿ ಹಾಗೂ ವಾಸುದೇವನ ಕಂದನಾಗಿ, ಬೆಳೆದದ್ದು ಯಶೋಧೆಯ ಮಡಿಲಲ್ಲಿ. ಹೆತ್ತವರು, ಪೋಷಕರು, ಸ್ನೇಹಿತ, ಎಲ್ಲರೆಡೆಗೂ ವಿಶೇಷ ಗೌರವ ಆದರಗಳನ್ನು ಹೊಂದಿದ್ದ ಶ್ರೀಕೃಷ್ಣ ದೈವತ್ವಕ್ಕೇರಿದ್ದು ತನ್ನ ಗುಣಗಳಿಂದಲೇ. ತನ್ನ ಹೆತ್ತವರು, ಪೋಷಕರೆಡೆಗೂ ತನ್ನ ಕರ್ತವ್ಯಗಳನ್ನು ಮಾಡುವ ಮೂಲಕ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದ. ಎಂದಿಗೂ ಫಲದ ನಿರೀಕ್ಷೆ ಹೊಂದಿರಲಿಲ್ಲ. ಭಗವದ್ಗೀತೆಯಲ್ಲಿ ಹೇಳಿದಂತೆ “ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಶು ಕದಾಚನ, ಮಾ ಕರ್ಮಫಲ ಹೇತುರ್ಭೂಮಾ ತೇ ಸಂಗೋಸ್ತ್ವ ಕರ್ಮಣಿ// ಫಲದ ಚಿಂತೆ ಬಿಟ್ಟು ನಿನ್ನ ಕರ್ತವ್ಯವನ್ನು ಮನಸ್ಸಿಟ್ಟು ಮಾಡು. ಕರ್ತವ್ಯವನ್ನು ಮಾಡದೆ ತಪ್ಪಿಸಿಕೊಳ್ಳುವ ವಿಚಾರ ನಿನ್ನಲ್ಲಿ ಮೂಡದಿರಲಿ ಎಂದು.

    ಶ್ರೀಕೃಷ್ಣ ಎಂದಿಗೂ ಪ್ರೀತಿ ಮತ್ತು ನ್ಯಾಯದ ಪರವಾಗಿದ್ದ. ಹಾಗಾಗಿಯೇ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಪರ ವಹಿಸುತ್ತಾನೆ. ಧರ್ಮ ಸಂಸ್ಥಾಪನೆಗಾಗಿ ತನ್ನವರ ವಿರುದ್ಧವೇ ಹೋರಾಟ ನಡೆಸುತ್ತಾನೆ. ಇದರರ್ಥ ಮನುಷ್ಯ ತನ್ನವರೆಂಬ ಬಂಧಗಳನ್ನು ಕಳಚಿಕೊಂಡು ಕಾಲದೊಂದಿಗೆ ಹೆಜ್ಜೆಹಾಕಬೇಕು.ಈ ಕ್ಷಣದಲ್ಲಿ ಬದುಕುವುದು ಎಷ್ಟು ಮುಖ್ಯ ಎಂಬುದನ್ನು ಸಾರಿದ್ದಾನೆ. ಈ ಕ್ಷಣ ಅನ್ನುವುದು ನಿನ್ನದು, ಹಿಂದೆ ಕಳೆದ ಹೋದ ಸಮಯ ಮತ್ತೆಂದೂ ಬಾರದು. ಕಳೆದುಹೋದುದರ ಬಗ್ಗೆ ಚಿಂತಿಸುವುದು ಅನಗತ್ಯ. ನಿನ್ನೆ ಎಂಬುದು ಇಂದು ಇಲ್ಲ, ನಾಳೆ ಏನಿರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ, ಹಾಗಾಗಿ ಈ ಕ್ಷಣಕ್ಕೆ ಮಹತ್ವ ನೀಡಬೇಕು ಎಂದು.

    ಭಗವಾನ್ ಶ್ರೀಕೃಷ್ಣನ ಪ್ರಸಿದ್ಧ ಸಂದೇಶಗಳಲ್ಲಿ ಒಂದು  ‘ಬದಲಾವಣೆ ಜಗದ ನಿಯಮ’. ಆದುದೆಲ್ಲಾ ಒಳ್ಳೆಯದಕ್ಕಾಗಿ, ಆಗುವುದೆಲ್ಲವೂ ಒಳ್ಳೆಯದಕ್ಕಾಗಿ. ಕಳೆದುಕೊಂಡುದುದರ ಬಗ್ಗೆ ದುಃಖಿಸಲು ನೀನು ಪಡೆದುಕೊಂಡು ಬಂದುದಾದರೂ ಏನನ್ನು. ಏನೇ ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ, ಇಂದು ನಿನ್ನಲ್ಲಿರುವುದು ನಿನ್ನೆ ಮತ್ಯಾರದೋ ಆಗಿತ್ತು, ನಾಳೆ ಇನ್ಯಾರದ್ದೋ ಆಗಲಿದೆ. ಹೀಗೆ ಭಗವಾನ್ ಶ್ರೀಕೃಷ್ಣ ಮನುಕುಲಕ್ಕೆ ಸಾರಿದ ಸಂದೇಶಗಳು ಅನೇಕ. ಅದರಂತೆ ನಡೆದರೆ ಬಾಳು ಬಹುತೇಕ ಸುಂದರ.ಭಗವಾನ್ ಶ್ರೀಕೃಷ್ಣ ಇಡೀ ವಿಶ್ವಕ್ಕೆ ಸಾರಿದ ಸಂದೇಶ ನಂಬಿಕೆ ಇರುವವರಿಗೆ ದಾರಿದೀಪದಂತೆ ತೋರುತ್ತಿದೆ, ಕಾಲಕಾಲಕ್ಕೆ ಮನುಕುಲಕ್ಕೆ ಎಚ್ಚರಿಕೆಯನ್ನೂ ನೀಡುತ್ತಿದೆ.

    ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.

    ಪರೀಕ್ಷಾ ಫಲಿತಾಂಶ; ಅನುತ್ತೀರ್ಣತೆ ಶಾಪವಲ್ಲ ಸಾಧನೆಗೆ ರಹದಾರಿ…

    ಇದೀಗ ಅಷ್ಟೇ  ಎಸ್.ಎಸ್.ಎಲ್.ಸಿ.  ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ.  ಉತ್ತೀರ್ಣರಾದ, ಅದರಲ್ಲೂ ಡಿಸ್ಟಿಂಕ್ಷನ್, ಪ್ರಥಮ ದರ್ಜೆಯಲ್ಲಿ  ಉತ್ತೀರ್ಣರಾದ   ವಿದ್ಯಾರ್ಥಿಗಳು   ಮತ್ತು ಅವರ ಹೆತ್ತವರು   ಸಂಭ್ರಮದಲ್ಲಿದ್ದರೆ,  ಅನುತ್ತೀರ್ಣರಾದ ಮಕ್ಕಳು ಮನೆಯಲ್ಲಿ ತಮ್ಮ ಅಪ್ಪ ಅಮ್ಮನ ಹತ್ತಿರ  ‘ಅವನನ್ನು  ನೋಡು ಅಷ್ಟು   ತೆಗೆದಿದ್ದಾನೆ, ಇವಳು  ನೋಡು ಇಷ್ಟು ತೆಗೆದಿದ್ದಾಳೆ,  ನೀನು ಇದ್ದೀಯಾ….”  ಅಂತ ಬೈಗುಳ ಕೇಳುತ್ತಾ  ಹ್ಯಾಪು ಮೊರೆ ಹಾಕಿಕೊಂಡು ಕುಳಿತಿರಬಹುದು. ‘ತಾನು ಫೇಲ್ ಆದೇ’ ಅಂತ  ದುಖ:ದುಮ್ಮಾನದಲ್ಲಿ    ಕುಳಿತಿರುವ ವಿದ್ಯಾರ್ಥಿಗಳು   ಹಾಗೂ   ತಮ್ಮ  ಮಗ / ಮಗಳು ಫೇಲ್ ಎಂದು ಬೇಜಾರು   ಕೋಪದಲ್ಲಿ  ಬುಸುಬುಸು ಅನ್ನುತ್ತಿರುವ   ತಂದೆ ತಾಯಿಗಳು  ಕೆಲವು  ಮಹಾನ್ ಸಾಧಕರ ಬಗ್ಗೆ  ತಿಳಿಯಲೇ ಬೇಕು.

    ಸರ್ ಜಾನ್ ಬಿ. ಗುರ್ಡಾನ್, ಆರ್. ಕೆ. ನಾರಾಯಣ್ ಮತ್ತು ಶ್ರೀನಿವಾಸ ರಾಮಾನುಜನ್

    ಇಲ್ಲಿ ನೀಡಿರುವ ಮೊದಲ ವ್ಯಕ್ತಿಯ ಛಾಯಚಿತ್ರವನ್ನು ನೋಡಿ. ಮಂದಹಾಸ  ಬೀರುತ್ತಿರುವ ಈ ವ್ಯಕ್ತಿ  ಬೇರೆ  ಯಾರೂ  ಅಲ್ಲ. ೨೦೧೨ ರಲ್ಲಿ ಜೀವ-ವೈದ್ಯಕೀಯ ಕ್ಷೇತ್ರದಲ್ಲಿ  ನೊಬೆಲ್   ಪಾರಿತೋಷಕ ಪಡೆದ ವಿಜ್ಞಾನಿ ಸರ್ ಜಾನ್ ಬಿ. ಗುರ್ಡಾನ್. ಕಾಂಡಕೋಶ (ಸ್ಟೆಮ್ ಸೆಲ್) ಮತ್ತು ತದ್ರೂಪಿ  ಸೃಷ್ಟಿ   (ಕ್ಲೋನಿಂಗ್)  ಮೇಲೆ ನಡೆಸಿದ  ಉನ್ನತ (ಪ್ರಬುದ್ಧ ಕೋಶಗಳನ್ನು ಕಾಂಡಕೋಶಗಳಾಗಿ ಪರಿವರ್ತನೆ) ಸಂಶೋಧನೆಗಾಗಿ  ಶಿನ್ಯಾ ಯಮನಕ ಎಂಬ ಇನ್ನೊಬ್ಬ  ವಿಜ್ಞಾನಿಯೊಂದಿಗೆ ಜಗತ್ತಿನ ಅತ್ಯುನ್ನತ  ಪ್ರಶಸ್ತಿಯಾದ ನೊಬೆಲ್ ಪಾರಿತೋಷಕವನ್ನು ಗಳಿಸಿರುವ  ಒಬ್ಬ ಶ್ರೇಷ್ಠ ವಿಜ್ಞಾನಿ.   ಅಷ್ಟು ಮಾತ್ರವಲ್ಲದೇ,  ವಿಲಿಯಂ ಬೇಟ್ ಹಾರ್ಡಿ ಪ್ರಶಸ್ತಿ (1984), ರಾಯಲ್ ಮೆಡಲ್ (1985), ಜೀವಶಾಸ್ತ್ರಕ್ಕಾಗಿ ಅಂತರರಾಷ್ಟ್ರೀಯ ಪ್ರಶಸ್ತಿ (1987) ಮೆಡಿಸಿನ್ ವುಲ್ಫ್ ಪ್ರಶಸ್ತಿ (1989) ಎಡ್ವಿನ್ ಗ್ರಾಂಟ್ ಕಾಂಕ್ಲಿನ್ ಪದಕ (2001), ಆಲ್ಬರ್ಟ್ ಲಾಸ್ಕರ್ ಮೂಲ ವೈದ್ಯಕೀಯ ಸಂಶೋಧನಾ ಪ್ರಶಸ್ತಿ (2009), ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ತನ್ನ   ಮುಡಿಗೇರಿಸಿಕೊಂಡಿದ್ದರು. ಇಂತಹ ಶ್ರೇಷ್ಠ ಸಾಧನೆ ಮಾಡಿರುವ ಸರ್ ಜಾನ್ ಬಿ. ಗುರ್ಡಾನ್ ಅವರು ಕೂಡ ಅನುತ್ತೀರ್ಣರಾಗಿದ್ದರು.

    ಎಡ್ಜ್ಬರೋದಲ್ಲಿರುವ  ಎಟನ್ ಕಾಲೇಜಿನಲ್ಲಿ ಓದುತ್ತಿರುವಾಗ   ಅಂಕ ಗಳಿಕೆಯಲ್ಲಿ ಇವರೇ ಕೊನೆಯವರಾಗಿದ್ದರು.   ಅವರ ಅಧ್ಯಾಪಕರೊಬ್ಬರು  “ಈತ ವಿಜ್ಞಾನಿ ಆಗಬೇಕೆಂಬ ಕನಸು ಕಾಣುತ್ತಿದ್ದಾನೆ,  ಆದರೆ ಇವನು ತೆಗೆದಿರುವ ಅಂಕಗಳನ್ನು ನೋಡಿದರೆ ಹಾಸ್ಯಾಸ್ಪದವಾಗಿದೆ”   ಎಂಬ ವರದಿಯನ್ನು ಬರೆದಿದ್ದರು.  ಅಂಕ ಗಳಿಕೆಯಲ್ಲಿ   ಕಟ್ಟಕಡೆಯ ವಿದ್ಯಾರ್ಥಿಯಾಗಿದ್ದು ಹಾಸ್ಯಾಸ್ಪದಕ್ಕೆ ಒಳಗಾಗಿದ್ದ ಹುಡುಗನೊಬ್ಬ ಭವಿಷ್ಯದಲ್ಲಿ ನೊಬೆಲ್  ಪಾರಿತೋಷಕ ಪಡೆಯುವಂತಹ ಸಾಧನೆ ಮಾಡುತ್ತಾನೆಂದು ಯಾರೂ  ಊಹಿಸಿರಲಿಲ್ಲ.

    ಶ್ರೀನಿವಾಸ ರಾಮಾನುಜನ್ ಹೆಸರು ಕೇಳದವರಿಲ್ಲ.  ಗಣಿತದಲ್ಲಿ ಇವರು ಮಾಡಿದ ಸಾಧನೆ ಅಸಾಮಾನ್ಯ.  ಆದರೆ, ಶಾಲೆಯಲ್ಲಿ ಗಣಿತ ವಿಷಯ ಬಿಟ್ಟು ಬೇರೆ ವಿಷಯಗಳಲ್ಲಿ ನಪಾಸಾಗಿದ್ದರು.  ವಿದ್ಯಾರ್ಥಿವೇತನಕ್ಕಾಗಿ   ಎರಡು ಸಲ  ‘ಫೆಲೋ ಆಫ್  ಆರ್ಟ್ಸ್’ ಪರೀಕ್ಷೆಗೆ  ಕುಳಿತುಕೊಂಡರೂ    ಅನುತ್ತೀರ್ಣರಾಗಿದ್ದರು.  ಆದರೆ, ಅದೇ ವ್ಯಕ್ತಿ ಮುಂದೆ ಜಗತ್ತನ್ನೇ ಬೆರಗುಗೊಳಿಸುವ ಒಬ್ಬ ಶ್ರೇಷ್ಠ ಗಣಿತಜ್ಞರಾದರು. ಅವರು ಅಂದು   ಕಂಡುಹಿಡಿದ ಗಣಿತದ ಪ್ರಮೇಯ, ಸೂತ್ರಗಳು ಇಂದಿಗೂ  ವಿಶ್ವದ  ಎಲ್ಲಾ ಕಾಲೇಜು,  ವಿಶ್ವವಿದ್ಯಾನಿಲಯಗಳಲ್ಲೂ ಅಧ್ಯಯನ  ಮಾಡಲಾಗುತ್ತದೆ. ಬದುಕಿರುವ  ಕೇವಲ ೩೩ ವರ್ಷಗಳಲ್ಲಿ ಗಣಿತ ಕ್ಷೇತ್ರದಲ್ಲಿ  ಶ್ರೀನಿವಾಸ ರಾಮಾನುಜನ್ ನೀಡಿರುವ   ಕೊಡುಗೆ ಜಗತ್ತಿನಲ್ಲಿ ಇಂದಿಗೂ ವಿಸ್ಮಯ.

    ಮಾಲ್ಗುಡಿ ಡೇಸ್ ಹೆಸರು ಕೇಳಿದ ತಕ್ಷಣ ಇಬ್ಬರು ಮಹಾನ್ ವ್ಯಕ್ತಿಗಳ ಹೆಸರು ಮನದಲ್ಲಿ ಮೂಡುತ್ತದೆ.  ನಟ, ನಿರ್ದೇಶಕ  ಶಂಕರನಾಗ್ ಮತ್ತು ಮಾಲ್ಗುಡಿ  ಎಂಬ  ಕಾಲ್ಪನಿಕ ಪಟ್ಟಣದ   ಸೃಷ್ಟಿಕರ್ತ  ಆರ್. ಕೆ. ನಾರಾಯಣ್. ತಮ್ಮ ಅದ್ಭುತ ಸಾಹಿತ್ಯ ಕೃತಿಗಳ ಮೂಲಕ  ಪದ್ಮವಿಭೂಷಣ, ಸಾಹಿತ್ಯ ಅಕಾಡೆಮಿ ಫೆಲೋಶಿಪ್, ಬೆನ್ಸನ್ ಪದಕ, ಅತ್ಯುತ್ತಮ ಕಥೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ,  ಲೀಡ್ಸ್ ವಿಶ್ವವಿದ್ಯಾಲಯ,  ದೆಹಲಿ ವಿಶ್ವವಿದ್ಯಾಲಯ ಮತ್ತು ಮೈಸೂರು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್,   ಹೀಗೆ ಹತ್ತಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ  ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದ  ಆರ್. ಕೆ. ನಾರಾಯಣ್ ಅವರು ಕೂಡ ವಿದ್ಯಾರ್ಥಿ ಜೀವನದಲ್ಲಿ ವೈಫಲ್ಯವನ್ನು  ಅನುಭವಿಸಿ ಉತ್ತುಂಗಕ್ಕೆ ಏರಿದವರು.

      
    
    ಪ್ರೌಢ ಶಾಲಾ ವ್ಯಾಸಂಗವನ್ನು    ಮುಗಿಸಿದ ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ  ಶಿಕ್ಷಣವನ್ನು ಮುಂದುವರಿಸಲು   ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು.    ಒಂದು ವರ್ಷ ಮನೆಯಲ್ಲೇ  ಕುಳಿತು ಓದಿ   ಪರೀಕ್ಷೆಯಲ್ಲಿ ಉತ್ತೀರ್ಣರಾಗಿ  ವ್ಯಾಸಂಗವನ್ನು ಮುಂದುವರಿಸಿದರು. ಮೂರು   ವರ್ಷದ ಪದವಿ ವ್ಯಾಸಂಗವನ್ನು ಮುಗಿಸಲು ನಾಲ್ಕು ವರ್ಷ ತೆಗೆದುಕೊಂಡರು. ವಿದ್ಯಾರ್ಥಿ ಜೀವನದಲ್ಲಿ   ಇಂಗ್ಲೀಷ್  ಭಾಷಾ ವಿಷಯದಲ್ಲಿ ಅನುತ್ತೀರ್ಣರಾಗಿ ಮುಂದೆ  ಆದೇ  ಭಾಷೆಯಲ್ಲಿ  ಅಪೂರ್ವವಾದ ಸಾಹಿತ್ಯ ಕೃತಿಗಳನ್ನು  ರಚಿಸಿ ಜಗದ್ವಿಖ್ಯಾತರಾದರು.  ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿಗೂ ಸಹ  ಹಲವು ಬಾರಿ ಅವರ ಹೆಸರು ನಾಮನಿರ್ದೇಶನಗೊಂಡಿತ್ತು.  

    ಇವುಗಳು ಮಹಾಸಾಧಕರ  ಕೆಲವು ಉದಾಹರಣೆಗಳಷ್ಟೇ.  ತಮ್ಮ ವಿದ್ಯಾರ್ಥಿ ಜೀವನದಲ್ಲಿ   ಅನುತ್ತೀರ್ಣರಾಗಿ  ಭವಿಷ್ಯದಲ್ಲಿ  ಅಪ್ರತಿಮ  ಸಾಧನೆ ಮಾಡಿರುವ, ಮಾಡುತ್ತಿರುವ ಎಷ್ಟೋ ಸಾಧಕರು ಜಗತ್ತಿನಾದ್ಯಂತ  ಇದ್ದಾರೆ; ವಿಶ್ವ ಪ್ರಸಿದ್ಧ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್, ಮಹಾನ್ ಸಂಶೋಧಕ    ಥಾಮಸ್ ಅಲ್ವಾ ಎಡಿಸನ್,  ಹೈಸ್ಕೂಲ್ ಶಿಕ್ಷಣವನ್ನು ಪೂರೈಸದ   ರೈಟ್ ಸಹೋದರರು, ಮೈಕ್ರೋಸಾಫ್ಟ್ ಕಾರ್ಪೊರೇಶನ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಆಪಲ್ ಇಂಕ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್,  ಫೇಸ್ಬುಕ್   ಸಹ-ಸಂಸ್ಥಾಪಕ  ಮಾರ್ಕ್ ಜುಕರ್ಬರ್ಗ್,     ಡೆಲ್ ಟೆಕ್ನಾಲಜೀಸ್ ಸಂಸ್ಥಾಪಕ  ಮೈಕೆಲ್ ಡೆಲ್, ವಿಶ್ವ ಹವ್ಯಾಸಿ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್,  ಕ್ರಿಕೆಟ್ ತಂಡದ ನಾಯಕನಾಗಿ  ಭಾರತಕ್ಕೆ ಮೊದಲ  ವಿಶ್ವಕಪ್ ಗೆದ್ದುಕೊಟ್ಟ  ಕಪಿಲ್ ದೇವ್, ವಿಪ್ರೋ ಲಿಮಿಟೆಡ್  ಅಧ್ಯಕ್ಷ ಅಜೀಮ್ ಪ್ರೇಮ್ ಜಿ,  ಇನ್ನೂ ಅನೇಕರು ತಮ್ಮ ವೈಫಲ್ಯವನ್ನೇ  ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತುಂಗಕ್ಕೇರಿದವರು. ತಮ್ಮ ಶಾಲಾ ಕಾಲೇಜು ವ್ಯಾಸಂಗದ  ಸಮಯದಲ್ಲಿ ಅನುತ್ತೀರ್ಣರಾದರೂ  ಮುಂದೆ ಐಎಎಸ್ ಅಧಿಕಾರಿಗಳು, ವಿಜ್ಞಾನಿಗಳು, ಎಂಜಿನಿಯರ್‌ಗಳು, ವೈದ್ಯರು, ಉದ್ಯಮಿಗಳು,  ನ್ಯಾಯವಾದಿಗಳು, ಮಂತ್ರಿಗಳಾದ ಅನೇಕ ವ್ಯಕ್ತಿಗಳು  ನಮ್ಮ ನಡುವೆ ಇದ್ದಾರೆ.

    ಆದ್ದರಿಂದ,  ಯಾವ ವಿದ್ಯಾರ್ಥಿಯೂ   ಪರೀಕ್ಷೆಯಲ್ಲಿ ಅನುತ್ತೀರ್ಣನಾದಾಗ,   ಅದನ್ನು  ಹಿನ್ನಡೆ ಅಥವಾ ಅವಮಾನ ಎಂದು ಪರಿಗಣಿಸಬಾರದು. 1940 ರಿಂದ 1945 ರಲ್ಲಿ ಯುನೈಟೆಡ್ ಕಿಂಗ್ಡಮ್ ನ ಪ್ರಧಾನಿ  ಆಗಿದ್ದ   ಸರ್ ವಿನ್ಸ್ಟನ್ ಚರ್ಚಿಲ್ ಅವರು ಹೇಳಿರುವ   “ಯಶಸ್ಸು ಅಂತಿಮವಲ್ಲ, ವೈಫಲ್ಯವು ಮಾರಕವಲ್ಲ: ಸಾಧನೆಯ ಮೆಟ್ಟಿಲನ್ನು ಏರಲು   ಧೈರ್ಯ ಇದು”  ಎಂಬ ಮಾತು ವಿದ್ಯಾರ್ಥಿಗಳಿಗೆ  ಸ್ಥೈರ್ಯ ತುಂಬುವಂಥದ್ದು.  “ವೈಫಲ್ಯಗಳು ಜೀವನದ ಒಂದು ಭಾಗ. ವಿಫಲರಾಗದಿದ್ದರೆ ನೀವು ಕಲಿಯುವುದಿಲ್ಲ. ನೀವು ಕಲಿಯದಿದ್ದರೆ ಎಂದಿಗೂ ಯಶಸ್ವಿಯಾಗಲು  ಸಾಧ್ಯವಿಲ್ಲ” ಗೌತಮ ಬುದ್ಧ ಅಂದು ಹೇಳಿದ  ಮಾತು  ಇಂದಿಗೂ ಮಾರ್ಗದರ್ಶಿ.

    ಸಹಜವಾಗಿ, ಫೇಲ್  ಪದವು ನಿರಾಶಾದಾಯಕವಾಗಿದೆ. ಆದರೆ ಯಾವುದೇ ವಿದ್ಯಾರ್ಥಿಯು  ಅದರಿಂದ  ಧೃತಿಗೆಡಬಾರದು.  ಫಲಿತಾಂಶ ಪ್ರಕಟವಾದ ನಂತರ ಅನುತ್ತೀರ್ಣರಾದ  ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುವ  ಕಹಿ  ಘಟನೆಗಳು  ನಡೆಯುತ್ತಿವೆ.  ಕಳೆದ ತಿಂಗಳು   ಪಿ.ಯು.ಸಿ.   ಫಲಿತಾಂಶ ಪ್ರಕಟವಾದಾಗ  ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಕೆಲವು ವಿದ್ಯಾರ್ಥಿಗಳ ಪ್ರಬುದ್ಧತೆಯ ಮಟ್ಟ ಕಡಿಮೆ ಇದ್ದು  ಹೆಚ್ಚು ಭಾವನಾತ್ಮಕರಾಗಿರಬಹುದು. ಅಂತಹ  ಕೆಲವು  ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ  ವಿಫಲರಾದಾಗ     ದೊಡ್ಡ ಅವಮಾನವೆಂದು ಪರಿಗಣಿಸಿ   ಅಥವಾ  ಪೋಷಕರ ಭಯದಿಂದಾಗಿ  ಆತ್ಮಹತ್ಯೆಗೆ ಪ್ರಯತ್ನಿಸುವ ಸಾಧ್ಯತೆಗಳಿವೆ. ಫೇಲ್ ಅಥವಾ ಕಡಿಮೆ ಅಂಕ ಬಂದಿದೆ ಎಂದು ಧೈರ್ಯಗುಂದಿದ ವಿದ್ಯಾರ್ಥಿಗಳನ್ನು  ಪೋಷಕರು, ಬಂಧುಮಿತ್ರರು  ಹಾಗೂ  ಶಿಕ್ಷಕರು ಸಾಂತ್ವನದ ಮಾತುಗಳನ್ನಾಡಿ  ಅವರಲ್ಲಿ  ಆತ್ಮವಿಶ್ವಾಸವನ್ನು ತುಂಬುವುದು  ನೈತಿಕ ಕರ್ತವ್ಯವಾಗಿದೆ. ಉತ್ತಮ ಅಂಕದೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸುವುದರ ಜೊತೆಗೆ  ಕಡಿಮೆ ಅಂಕ ಪಡೆದಿರುವ ಅಥವಾ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂತೈಸುವುದು ಅಷ್ಟೇ ಮುಖ್ಯವಾದದ್ದು.

    ಎಷ್ಟೋ ತಂದೆ ತಾಯಂದಿರು ತಮ್ಮ ಮಕ್ಕಳ ನ್ಯೂನತೆ, ಆಸಕ್ತಿ, ಪ್ರತಿಭೆಯನ್ನು ಗುರುತಿಸದೆ ತಮ್ಮ ಕನಸಿನ ಮತ್ತು  ಪ್ರತಿಷ್ಠೆಯ  ಗೋಪುರವನ್ನು ಮಕ್ಕಳ ತಲೆಯ ಮೇಲೆ ಕಟ್ಟುತ್ತಾರೆ.  ಪರೀಕ್ಷೆ ಫಲಿತಾಂಶ ಹೊರಬಿದ್ದ ಸಂದರ್ಭದಲ್ಲಿ ಒಂದು ವೇಳೆ  ಆ ಗೋಪುರವು ಒಡೆದು ಹೋದರೆ, ಇದರ ಅರಿವಿರುವ ಮಕ್ಕಳು  ತಮ್ಮ ಪೋಷಕರನ್ನು ಎದುರಿಸುವ  ಧೈರ್ಯ ಸಾಲದೇ  ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬಹುದು.

    ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಮಾತ್ರ ಬುದ್ಧಿವಂತರು, ಉಳಿದವರು ದಡ್ಡರು ಎಂದು ಎಲ್ಲಿಯೂ ಯಾವ ಪುರಾಣ, ಶಾಸನದಲ್ಲಿಯೂ ಬರೆದಿಲ್ಲ. ಅನುತ್ತೀರ್ಣರಾದಾಗ  ವಿದ್ಯಾರ್ಥಿಗಳು ನಿರಾಶೆಗೊಳ್ಳುವ ಬದಲು ಅದನ್ನೇ ಒಂದು ಸವಾಲಾಗಿ ತೆಗೆದುಕೊಂಡು  ಮುಂದಿನ ಅವಕಾಶಗಳಲ್ಲಿ   ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಾಧಿಸುವ ಸಂಕಲ್ಪ ಮಾಡಬೇಕು. ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಅವರನ್ನು ಹುರಿದುಂಬಿಸಬೇಕು.  ಜಗತ್ತು ವಿಶಾಲವಾಗಿದೆ,  ಪ್ರತಿಯೊಬ್ಬರಿಗೂ  ತಮ್ಮ  ಪ್ರತಿಭೆಯನ್ನು ಅನ್ವೇಷಿಸಲು ಮತ್ತು ಉತ್ಕೃಷ್ಟಗೊಳಿಸಲು ಅಪಾರ ಅವಕಾಶಗಳಿವೆ. 

    ಒಬ್ಬ ವ್ಯಕ್ತಿಯ ಬುದ್ಧಿಮತ್ತೆಯ ಪ್ರಮಾಣ (Intelligence Quotient; I.Q.) ಎಷ್ಟು ಮುಖ್ಯವೋ,  ಅಷ್ಟೇ ಅಥವಾ ಅದಕ್ಕಿಂತಲೂ ಪ್ರಾಮುಖ್ಯವಾದದ್ದು ಭಾವನಾತ್ಮಕ ಅಂಶ (Emotional Quotient; E.Q). ಜೀವನದ ಏನೇ ಎಡರು ತೊಡರುಗಳನ್ನು ಸ್ಥೈರ್ಯದಿಂದ  ನಿಭಾಯಿಸಲು ಮಕ್ಕಳ  ಭಾವನಾತ್ಮಕ ಅಂಶವನ್ನು  (E.Q.) ಹೆಚ್ಚಿಸುವುದು ಕೂಡ  ಮುಖ್ಯ.   ಈ ನಿಟ್ಟಿನಲ್ಲಿ, ಪೋಷಕರು, ಶಿಕ್ಷಕರು ಮತ್ತು ಸಮಾಜದ ಪಾತ್ರ ಬಹಳ ಮುಖ್ಯ. 

    ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಸಂಭ್ರಮದಲ್ಲಿರುವರು. ಅನುತ್ತೀರ್ಣರಾದವರೂ  ಸಂಭ್ರಮಿಸಿ, ‘ತಾನು ಫೇಲ್  ಆದೆ’ ಅಂತ ಅಲ್ಲ;  ‘ತನ್ನ ಪರಿಪೂರ್ಣತೆಯನ್ನು  ಹೆಚ್ಚಿಸಲು, ಒಳ್ಳೆಯ  ಅಂಕಗಳನ್ನು ಗಳಿಸಲು  ಇನ್ನೂ ಒಂದು ಅವಕಾಶವಿದೆ’ ಎಂಬ ಆತ್ಮವಿಶ್ವಾಸದೊಂದಿಗೆ.  ಯಾರಿಗೆ ಗೊತ್ತು..? ನಾಳೆ ನೀವು ಸಹ    ಸರ್ ಜಾನ್ ಬಿ. ಗುರ್ಡಾನ್, ಶ್ರೀನಿವಾಸ ರಾಮಾನುಜನ್, ಆರ್. ಕೆ. ನಾರಾಯಣ್  ಮುಂತಾದ ಮಹಾನ್  ಸಾಧಕರಂತೆ  ಜಗದ್ವಿಖ್ಯಾತರಾಗಬಹುದು.  ಇದೇನಿದ್ದರೂ ಸಮಯದ ವಿಷಯ. ಕಾಲಚಕ್ರದಲ್ಲಿ ಕೆಟ್ಟ ಸಮಯ ಉರುಳಿದಂತೆ ಒಳ್ಳೆಯ ಸಮಯ ಬಂದೇ ಬರುತ್ತದೆ.  ಆಲ್  ದಿ  ಬೆಸ್ಟ್

    Photo by Belle Co from Pexels

    ಕರೋನ ಜೊತೆಗಿನ ಜೀವನ, ವೈದ್ಯರು ಏನು ಹೇಳ್ತಾರೆ ಕೇಳೋಣ

    ಕೊರೋನಾದ ಜೊತೆಗೆ ಜೆೊತೆ ಜೊತೆಗೆ ಜೀವನ ನಡೆಸಬೇಕಾದುದು ಅನಿವಾರ್ಯವಾಗಿದೆ. ಇಂಥ ಸಮಯದಲ್ಲಿ ಜನರಲ್ಲಿ ಹಲವಾರು ಪ್ರಶ್ನೆಗಳು ಏಳುತ್ತಿವೆ. ಮಾಸ್ಕ್ ಹೇಗೆ ಧರಿಸಬೇಕು, ಎಂಥ ಮಾಸ್ಕ್ ಧರಿಸಬೇಕು, ಅದನ್ನು ಹೇಗೆ ವಾಷ್ ಮಾಡಬೇಕು ಎಂಬ ಪ್ರಶ್ನೆಗಳಿಂದ ಹಿಡಿದು ತರಕಾರಿಯನ್ನು ಹೇಗೆ ಶುಚಿ ಗೊಳಿಸಬೇಕು, ವೈರಸ್ ಗೂ ಬ್ಯಾಕ್ಟೀರಿಯಾಗೂ ವ್ಯತ್ಯಾಸ, ಲಸಿಕೆ ಯಾವಾಗ ಬರುತ್ತದೆ ಎಂಬ ಹಲವಾರು ಪ್ರಶ್ನೆಗಳು ಏಳುತ್ತವೆ.

    ಈ ಸಂದೇಹಗಳನ್ನು ದೂರ ಮಾಡಲು ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಅರಿವಿನ ಅಂಗಳ ಸಮೂಹ ಪ್ರಖ್ಯಾತ ವೈದ್ಯ ಡಾ. ಪ್ರಹ್ಲಾದರಾವ್ ಸಿ.ಜಿ ಅವರೊಂದಿಗೆ ಕರೋನ ಜೊತೆಗಿನ ಜೀವನ, ವೈದ್ಯರು ಏನು ಹೇಳ್ತಾರೆ ಕೇಳೋಣ ಎಂಬ ಕಾರ್ಯಕ್ರಮ ಹಮ್ಮಿಕೊಂಡಿತ್ತು.

    ಈ ಕಾರ್ಯಕ್ರಮದಲ್ಲಿ ಡಾ. ಪ್ರಹ್ಲಾದರಾವ್ ಜನಸಾಮಾನ್ಯರಲ್ಲಿ ಹುಟ್ಟುವ ಅನೇಕ ಪ್ರಶ್ನೆಗಳಿಗೆ ಸರಳವಾಗಿ ಉತ್ತರ ನೀಡುವ ಮೂಲಕ ಕರೋನಾ ಬಗೆಗಿನ ಅನಗತ್ಯ ಭಯವನ್ನು ದೂರ ಮಾಡಿದರು. ಕಾಲೇಜಿನ ಡಾ. ಶಿಲ್ಪಾ ಆರ್ ಮತ್ತು ಎ ಪಿ ಕಾವ್ಯ ಅವರು ಕಾರ್ಯಕ್ರಮನ್ನು ನಡೆಸಿಕೊಟ್ಟರು.

    ಈ ಆಸಕ್ತಿದಾಯಕ ಕಾರ್ಯಕ್ರಮದ ವಿಡಿಯೋ ಇಲ್ಲಿದೆ. ಆಲಿಸಿ ಪ್ರತಿಕ್ರಿಯಿಸಿ. ಕರೋನಾ ಬಗ್ಗೆ ತಿಳಿದುಕೊಳ್ಳಿ.

    ವಿಮಾನ ಅಪಘಾತಕ್ಕೆ ಅಸಲಿ ಕಾರಣಗಳಾದರು ಏನು

    ಮೊನ್ನೆ ಶುಕ್ರವಾರ ರಾತ್ರಿ 9 ಗಂಟೆ. ದಿನದ ಆಗು ಹೋಗುಗಳನ್ನು ಅರಿಯಲು ಪ್ರೈಮ್ ಟೈಮ್ ನ್ಯೂಸ್ ನೋಡಲು ಕುಳಿತವರಿಗೊಂದು ಆಘಾತಕಾರಿ ಸುದ್ದಿ. ದುಬೈನಿಂದ ಬಂದು ಇನ್ನೇನು ಕೇರಳದ ಕೋಜಿಕ್ಕೋಡು ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ ಇಂಡಿಯನ್ ಏರ್ ಲೈನ್ ಎಕ್ಸಪ್ರೆಸ್ ಗೆ ಸೇರಿದ ವಿಮಾನ ರನ್ ವೇ ನಲ್ಲಿ ನೆಲಕ್ಕಪ್ಪಳಿಸಿ ಎರಡು ಹೋಳಾಯಿತು.ಪೈಲಟ್ ಸೇರಿ ಹಲವು ಪ್ರಯಾಣಿಕರು ಮೃತಪಟ್ಟರು. ವಿಮಾನ ಕೆಳಗೆ ಬಿದ್ದಾಗ ಬೆಂಕಿ ಹೊತ್ತದ ಕಾರಣ ಅನೇಕರ ಜೀವ ಉಳಿಯಿತು.

    ಆಗಸಕ್ಕೆ ಹಾರಿದ ಕ್ಷಣದಿಂದ ಇಳಿಯುವರೆಗೆ ರಾಡರ್ ನ ಕಣ್ಗಾವನಲ್ಲೇ ಇರುವ ವಿಮಾನಗಳು ಅಪಘಾತಕ್ಕೆ ಈಡಾದಾಗ ಜನಮಾನಸದಲ್ಲಿ ಹೆಚ್ಚಿನ ಆತಂಕ. ಬಸ್ಸು , ರೇಲು ಅಫಘಾತಗಳಿಗಿಂತ ಹೆಚ್ಚಾಗಿ ವಿಮಾನ ಅಪಘಾತದ ಸುದ್ದಿ ವಿಮಾನದಲ್ಲಿ ಒಂದು ಬಾರಿಯೂ ಪ್ರಯಾಣಿಸದವರಿಗೂ ಆತಂಕ ತರುವ ಸಮಾಚಾರವಾಗುತ್ತದೆ. ಹಲವಾರು ಪರೀಕ್ಷೆಗೆ ಒಳಗಾಗಿ, ಸಕಲ ಮುನ್ನೆಚ್ಚರಿಕೆ ತೆಗೆದುಕೊಂಡುರೂ ವಿಮಾನಗಳು ಅಪಘಾತಕ್ಕೆ ಈಡಾಗವುದಾದರು ಏಕೆ- ಇದು ಅನೇಕರನ್ನು ಕಾಡುವ ಪ್ರಶ್ನೆ.

    ಸುಮಾರು 25-30 ವರುಷದ ಹಿಂದೆ ವಿಮಾನ ಪ್ರಯಾಣ ಶ್ರೀಮಂತರಿಗೆ ಮಾತ್ರ ಸೀಮಿತವಾಗಿತ್ತು. ಮಧ್ಯಮ ವರ್ಗದವರು ವಿಮಾನಗಳು ಹಾರಾಡುವುದನ್ನು ನೋಡುತ್ತಾ ಹಕ್ಕಿಯಂತೆ ಹಾರುವುದು ತಮಗೊಂದು ಕನಸೇ ಎಂದು ಭಾವಿಸಿದ್ದರು. ಆದರೆ ಖಾಸಗಿ ಆಪರೇಟರ್ ಗಳಿಗೂ ವಿಮಾನ ಯಾನದ ಅವಕಾಶ ಸಿಕ್ಕಮೇಲೆ ಸಹಜವಾಗಿಯೇ ಬೆಲೆಗಳು ಇಳಿದು ಹೆಚ್ಚೆಚ್ಚು ಪ್ರಯಾಣಿಕರು ವಿಮಾನದ ಪ್ರಯಾಣದ ಸುಖ ಅನುಭವಿಸುವಂತೆ ಆಯಿತು. ಪರಿಣಾಮ ವಿಮಾನಗಳು ಹೆಚ್ಚಿದವು, ಪ್ರಯಾಣಿಕರು ಹೆಚ್ಚಿದರು ಜೊತೆಗೆ ಅಪಘಾತಗಳು ಹೆಚ್ಚಿದವು.

    ಒಂದೇ ಒಂದು ನಿರ್ದಿಷ್ಟ ಕಾರಣದಿಂದ ವಿಮಾನ ಅಪಘಾತಗಳು ಎಂದಿಗೂ ಸಂಭವಿಸುವುದಿಲ್ಲ. ವಿಮಾನ ಅಪಘಾತ ಅಥವಾ ಘಟನೆಗೆ ಕಾರಣವಾಗುವ ಅನೇಕ ಅಂಶಗಳು ಯಾವಾಗಲೂ ಇರುತ್ತವೆ. ಕೆಟ್ಟ ಹವಾಮಾನ ಮತ್ತು ತಾಂತ್ರಿಕ ಸಮಸ್ಯೆ, ಮಾನವ ಸಹಜ ತಪ್ಪುಗಳು ಇದಕ್ಕೆ ಕಾರಣವಾಗುತ್ತವೆ.

    ವಿಮಾನಗಳು ಹಾರುವ ಮೊದಲು ಮತ್ತು ಇಳಿದ ನಂತರವೂ ತಪಾಸಣೆ ನಡಸಲಾಗುತ್ತದೆ. ಒಮ್ಮೊಮ್ಮೆ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದೆ ಎಂದು ನಂಬಿ ಹಾರಾಟಕ್ಕೆ ಅನುಮತಿ ಕೊಟ್ಟಾಗ ಅವು ಇಳಿಯುವ ಸಮಯದಲ್ಲಿ ಕೈ ಕೊಟ್ಟರೆ ಅಪಘಾತ ನಿಶ್ಛಿತ.ಇನ್ನೊಮ್ಮೆ ಪೈಲಟ್ ಗಳು ಹೊರಗಿನ ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸುವುದು , ಇಂಥದ್ದು ನಾನೆಷ್ಟು ನೋಡಿಲ್ಲ ಎಂದು ತೆಗೆದುಕೊಳ್ಳುವ ರಿಸ್ಕೂ ಅಪಘಾತಕ್ಕೆ ಕಾರಣವಾಗುತ್ತದೆ.

    ನೀರು ನಿಲ್ಲುವುದು ತುಂಬಾ ಅಪಾಯಕಾರಿ

    ರನ್‌ ವೇ ನಲ್ಲಿ ನೀರು ನಿಲ್ಲುವುದು ತುಂಬಾ ಅಪಾಯಕಾರಿ.ನೀರು ನಿಲ್ಲದೆ ಹರಿದು ಹೋಗುವಂಥ ವ್ಯವಸ್ಥೆ ಇರಬೇಕು. ವಿಮಾನಗಳು ಇಳಿಯುವ ಹಂತದಲ್ಲಿ ವಿಮಾನದ ಚಕ್ರಗಳು ಲಾಕ್ ಆಗಿರುತ್ತವೆ. ಭೂ ಸ್ಪರ್ಶ ಆಗುತ್ತಿದ್ದಂತೆ ಅವು ರಿಲೀಸ್ ಆಗಬೇಕು. ಅಂಥ ಸಮಯದಲ್ಲಿ ರನ್ ವೇ ನಲ್ಲಿ ನಿಗದಿತ ಮಟ್ಟಕ್ಕಿಂತ ನೀರಿದ್ದರೆ ಅವು ವಿಮಾನವನ್ನು ಯಾವುದೇ ದಿಕ್ಕಿಗೂ ಎಳೆಯಬಹುದು ಎಂದು 2010 ರ ಮಂಗಳೂರು ವಿಮಾನ ದುರಂತವನ್ನು ತನಿಖೆ ಮಾಡಿದ್ದ ಏರ್ ಮಾರ್ಷಲ್ (ನಿವೃತ್ತ) ಭೂಷಣ್ ಗೋಖಲೆ ಇಂಗ್ಲಿಷ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಮೊನ್ನೆ ಅಪಘಾತ ನಡೆದದ್ದು ಟೇಬಲ್ ಟಾಪ್ ವಿಮಾನ ನಿಲ್ದಾಣ. ಹಾಗೆಂದು ಟೇಬಲ್ ಟಾಪ್ ವಿಮಾನ ನಿಲ್ದಾಣಗಳ ಬಗ್ಗೆ ಭಯ ಪಡುವ ಅಗತ್ಯವಿಲ್ಲ . ಆದರೆ ಇಂಥ ನಿಲ್ದಾಣಗಳು ಅನುಭವಿ ಪೈಲಟ್ ಗಳನ್ನು ಬಯಸುತ್ತವೆ. ಭಾರತದಲ್ಲಿ ಐದು ಟೇಬಲ್ ಟಾಪ್ ರನ್ ವೇ ಗಳಿವೆ .ಮಂಗಳೂರು, ಕೋಝಿಕ್ಕೋಡ್, ಶಿಮ್ಲಾ , ಪಕ್ಯಾಂಗ್ (ಸಿಕ್ಕಿಂ) ಮತ್ತು ಮಿಜೋರಾಮ್ ನ ಲಿಂಫು.

    ಮೊನ್ನೆ ವಿಸಿಬಿಲಿಟಿ ಕಡಿಮೆ ಇದ್ದರೂ ಪೈಲಟ್ ಅಲ್ಲಿ ವಿಮಾನ ಇಳಿಸುವ ನಿರ್ಧಾರ ಮಾಡಿದರೆ ? ಇತ್ಯಾದಿ ವಿವರಗಳು ತನಿಖೆಯಿಂದ ಗೊತ್ತಾಗಬೇಕಿದೆ. ಅಪಾಯದ ವಾಸನೆ ಅರಿತು ಬೆಂಕಿ ಹತ್ತದಂತೆ ವಿಮಾನ ಇಳಿಸದ ಪೈಲಟ್ ದೀಪಕ್ ಸೇಥಿಗೆ ಪ್ರಶಂಸೆ ವ್ಯಕ್ತವಾಗಿದೆ.

    ಪೈಲಟ್‌ಗಳು ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸಿದಾಗ, ಹವಾಮಾನ ಪರಿಸ್ಥಿತಿಗಳನ್ನು ತಪ್ಪಾಗಿ ಗ್ರಹಿಸಿದಾಗ ಅಥವಾ ಯಾಂತ್ರಿಕ ದೋಷಗಳನ್ನು ಸರಿಯಾಗಿ ಪರಿಹರಿಸಲು ವಿಫಲವಾದಾಗ ಅನೇಕ ವಾಯುಯಾನ ಅಪಘಾತಗಳು ಸಂಭವಿಸುತ್ತವೆ. ವಿಮಾನಗಳು ಅಪಘಾತಕ್ಕೀಡಾಗಲು ಪೈಲಟ್ ದೋಷವನ್ನು ಪ್ರಥಮ ಕಾರಣವೆಂದು ಪರಿಗಣಿಸಲಾಗುತ್ತದೆ.

    ಅನುಭವಿ ಪೈಲಟ್

    ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಿಂದ ಭಾರತಕ್ಕೆ ಬಂದ ಈ ವಿಮಾನ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ 1344 ಹದಿಮೂರು ವರ್ಷಗಳಿಗಿಂತಲೂ ಹಳೆಯದಾಗಿತ್ತು.ವಿಂಗ್ ಕಮಾಂಡರ್ ದೀಪಕ್ ಸಾಥೆ (ಏಪ್ರಿಲ್ 24, 1961 – ಆಗಸ್ಟ್ 7, 2020) ಈ ನತದೃಷ್ಟ ವಿಮಾನದ ಕ್ಯಾಪ್ಟನ್ . ಮಾಜಿ ಭಾರತೀಯ ವಾಯುಪಡೆಯ ಅಧಿಕಾರಿಯಾಗಿದ್ದು, 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಮಿಗ್ -21 ಸೂಪರ್ಸಾನಿಕ್ ಜೆಟ್ ಫೈಟರ್ ಅನ್ನು ಹಾರಿಸುವ ಮೂಲಕ ಭಾರತೀಯ ವಾಯುಸೇನೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ವಿಂಗ್ ಕಮಾಂಡರ್ ಆಗಿ 2003 ರಲ್ಲಿ ನಿವೃತ್ತರಾದರು ಮತ್ತು 2005 ರಲ್ಲಿ ಏರ್ ಇಂಡಿಯಾ ಸೇರಿದರು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು ಮತ್ತು ಅವರ ತರಬೇತಿ ಕೋರ್ಸ್‌ನಲ್ಲಿ ಸ್ವೋರ್ಡ್ ಆಫ್ ಆನರ್ ಪ್ರಶಸ್ತಿಯನ್ನು ಪಡೆದಿದ್ದರು. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಪರೀಕ್ಷಾ ಪೈಲಟ್ ಕೂಡ ಆಗಿದ್ದರು ಮತ್ತು ಬೋಯಿಂಗ್ 737 ವಾಣಿಜ್ಯ ವಿಮಾನಗಳನ್ನು ನಿರ್ವಹಿಸುತ್ತಿದ್ದರು.

    .ಆಗಸ್ಟ್ 7, 2020 ರಂದು, ಭಾರೀ ಗಾಳಿಯಿಂದಾಗಿ ಅನೇಕ ಸ್ಥಗಿತಗೊಂಡ ಲ್ಯಾಂಡಿಂಗ್ ಪ್ರಯತ್ನಗಳ ನಂತರ, ವಿಮಾನವು ಕೋಝಿಕ್ಕೋಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ರನ್ ವೇ ಕೊನೆಯಲ್ಲಿ 9–10.5 ಮೀ (30–35 ಅಡಿ) ಕಮರಿಗೆ ಇಳಿಯಿತು.

    ತಪ್ಪು ಆಗಿದ್ದೆಲ್ಲಿ ಎಂಬುದು ತನಿಖೆಯಿಂದಷ್ಟೆ ಗೊತ್ತಾಗಬೇಕು. ಹಾಗೆಂದು ಜೀವನದ ಪ್ರಯಾಣ ಸಾಗಲೇ ಬೇಕು. ವಿಮಾನಗಳು ಹಾರಾಡಲೇ ಬೇಕು. ಮುಂದಿನ ದಿನಗಳಲ್ಲಿ ಇಂಥ ಅಪಘಾತಗಳು ಮರುಕಳಿಸದಿರಲಿ.

    happy takeoff and happy landing

    ಮತ್ತೆ ಮಳೆ ಸುರಿಯುತಿದೆ ಕೊಡೆಗಳು ನೆನಪಾಗುತಿವೆ

    ಜಯಶ್ರೀ ಅಬ್ಬೀಗೇರಿ

    ಮೊದಲೆಲ್ಲ ಕೊಡೆಗಳೆಂದರೆ ಸಾಕು ಬಣ್ಣದಲ್ಲಿ ಕಪ್ಪು, ಗಾತ್ರದಲ್ಲಿ ದೊಡ್ಡದು ಹಿಡಿಕೆಯೊಂದು ಹಿಡಿಯಲು ಇರಲೇ ಬೇಕು. ಕೊಡೆ ಎಂದರೆ ಸಾಕು ಇವೆಲ್ಲವುಗಳ ಸಮಾಗಮವಿರುವ ಚಿತ್ರ ನಮ್ಮ ಕಣ್ಮುಂದೆ ಬರುತ್ತಿತ್ತು. ಹಳ್ಳಿಯಲ್ಲಿಯ ಪ್ರತಿಷ್ಠಿತರಿಗೆ ಶ್ರೀಮಂತರಿಗೆ ಬೇಸಿಗೆಯಲ್ಲಿ ಕೊಡೆ ಹಿಡಿಯಲೆಂದೇ ಕೆಲವರು ಇರುತ್ತಿದ್ದರು. ಸಿರಿವಂತರಿಗೆ ಕೊಡೆ ಹಿಡಿಯುವುದೇ ಅವರ ಕೆಲಸವಾಗಿತ್ತು. ಬಿಸಿಲಿನ ಧಗೆಗೆ ಮನೆಯ ಯಜಮಾನರು ಹಿರಿಯ ಜೀವಗಳು ಬಿಳಿ ಅಂಗಿ ಬಿಳಿ ಧೋತರವನ್ನುಟ್ಟುಕೊಂಡು ಕಪ್ಪು ಕೊಡೆ ಹಿಡಿದು ಬರುವ ಗತ್ತು, ಗಾಂಭಿರ್ಯ ನೋಡುಗರ ಕಣ್ಮನ ಸೆಳೆಯುತ್ತಿತ್ತು.

    ಉಳ್ಳವರು ಮಾತ್ರ ಕೊಡೆ ಹಿಡಿದು ನಡೆಯುತ್ತಿದ್ದರು. ಗೋಣಿಚೀಲದ ಮೂಲೆಗಳು ತಲೆಯನ್ನಾವರಿಸಿಕೊಳ್ಳುವುದೇ ಇಲ್ಲದವರ ಕೊಡೆಗಳು.ಅವುಗಳನ್ನು ಎಳೆಯ ಕಣ್ಣುಗಳು ಜಗದ ಅಚ್ಚರಿಯನ್ನು ನೋಡಿದಂತೆ ಕಣ್ಣು ಪಿಳಿ ಪಿಳಿ ಬಿಟ್ಟು ನೊಡುತ್ತ ನಗುತ್ತಿದ್ದವು. ಗೋಣಿಚೀಲದ ಕೊಡೆಗಳಿಗೆ ಕೈಗಳ ಅವಶ್ಯಕತೆಯಿಲ್ಲ. ಹೆಗಲಿಗೆ ಹಾಕುವ ಚೀಲದಂತೆ ತಲೆಗೆ ಹಾಕಿಕೊಂಡು ನಡೆದರಾಯಿತು.

    ಕಾಲ ಬದಲಾದಂತೆ ಪ್ಲಾಸ್ಟಿಕ್ ಚೀಲಗಳನ್ನು ಕೊಡೆಯಂತೆ ಉಪಯೋಗಿಸಿದ್ದೂ ಉಂಟು.’ಹೊಸ ಬಾಟಲಿಯಲ್ಲಿ ಹಳೆಯ ಮದ್ಯದಂತೆ.’ ಅದೇ ಬಣ್ಣ ಬಣ್ಣದ ಪ್ಲಾಸ್ಟಿಕ್ ಚೀಲಗಳನ್ನು ಹೊಲಿದು ರೇನ್ ಕೋಟ್ ಎಂಬ ಹೆಸರಿನೊಂದಿಗೆ ಸೃಜನಶೀಲ ಮಾರ್ಕೆಟ್ ತಲೆಯುಳ್ಳವರು ಮಾರುಕಟ್ಟೆಯಲ್ಲಿ ಬಿಟ್ಟರು. ಸಣ್ಣ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಇವು ವರದಾನವಾದವು. ಆಲ್ ಇನ್ ಒನ್ ಎಂಬಂತಿದ್ದ ಕೊಡೆಗಳು ಹೋಗಿ ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಒಂದೊಂದು ಅವರದೇ ಅಳತೆಯ ರೇನ್ ಕೋಟ್ ಕೊಳ್ಳುವುದು ಚಾಲ್ತಿಗೆ ಬಂತು.

    ಜೋರಾಗಿ ಸುರಿಯುವ ಮಳೆಗೆ ರೇನ್ ಕೋಟ್ ಒಂದೇ ಸಾಲದು ಎಂದು ಕೈಯಲ್ಲಿ ಕೊಡೆ ಹಿಡಿದು ಅದರ ಮುಖ ಅರಳಿಸಿ ನಡೆಯುವವರನ್ನು ನೋಡುವುದೇ ಒಂದು ಅಂದ. ಮೈಗಂಟಿದ ರೇನ್ ಕೋಟ್ ಒಂದು ಬಣ್ಣ ತಲೆ ಮೇಲಿನ ಕೊಡೆ ಒಂದು ಬಣ್ಣ. ಹೀಗೆ ವಿವಿಧ ರಂಗು ಕಂಡ ಕಣ್ಣಿಗೆ ಮಳೆಯಲ್ಲಿ ನಡೆದು ಬರುವವರು ಪಕ್ಕ ಬಿಚ್ಚಿ ಹಾರಿ ಬರುವ ಚಿಟ್ಟೆಯಂತೆ ಕಾಣುತ್ತಾರೆ.

    ಮನಸ್ಸನ್ನು ಮತ್ತೆ ಹಳೆಯ ಕಪ್ಪು ಕೊಡೆಗಳಿಗೆ ಮರಳಿ ಕರೆದೊಯ್ದರೆ ಅಲ್ಲಿ ಕೊಡೆಗೆ ಕಪ್ಪು ಬಣ್ಣ ಬಿಟ್ಟು ಬೇರಾವ ಬಣ್ಣವೂ ಒಪ್ಪದು. ಅಷ್ಟೊಂದು ಛಾಪನ್ನು ನಮ್ಮ ತಲೆಯಲ್ಲಿ ಒತ್ತಿ ಬಿಟ್ಟಿತ್ತು. ಮಳೆಗಾಲ ಸಂಸ್ಕೃತಿಯ ಪ್ರತೀಕವಾಗಿ ಬಿಟ್ಟಿದ್ದವು. ಸಿರಿವಂತರು ಮಳೆ ಮತ್ತು ಬೇಸಿಗೆಯೆನ್ನದೇ ಸದಾ ಒಂದು ಸಂಗಾತಿಯಂತೆ ಗಾಂಭೀರ್ಯದಿಂದ ಕೊಡೆಯ ಹಿಡಿಕೆಯನ್ನು ಅಂಗಿಯ ಬೆನ್ನಿಗೆ ಸಿಕ್ಕಿಸಿಕೊಂಡು ಬಲು ಠೀವಿಯಿಂದ ನಡೆಯುವ ಪರಿಯು ಚೆಂದವೆನಿಸುತ್ತಿತ್ತು. ಸಮಯ ಸರಿದಂತೆ ಇಲ್ಲದವರ ತಲೆಯ ಮೇಲೂ ಮಳೆಗಾಲದಲ್ಲಿ ತಲೆಯ ಮೇಲೆ ಕಪ್ಪು ಕೊಡೆ ಕಂಗೊಳಿಸಹತ್ತಿತು.

    ಈಗ ಕಾಲ ಬದಲಾಗಿದೆ. ಕೊಡೆ ಕೇವಲ ಮಳೆಗಾಲಕ್ಕೆ ಅಷ್ಟೇ ಅಲ್ಲ ಬೇಸಿಗೆಗೂ ತನ್ನ ರಂಗು ರಂಗಿನ ಮೈ ಅರಳಿಸಿಕೊಂಡು ರಸ್ತೆಯಲ್ಲಿ ನಮ್ಮ ಕಣ್ಮನ ಸೆಳೆಯುತ್ತದೆ. ವಿವಿಧ ವಿನ್ಯಾಸಗಳ ರಂಗು ರಂಗಿನ ಕೊಡೆಗಳನ್ನು ಕಣ್ತುಂಬಿಸಿಕೊಳ್ಳುವುದೇ ಚೆಂದ.

    ತುಂತುರು ಮಳೆಯಲ್ಲಿ ಅಗ ತಾನೆ ಅರಳಿದ ತಾಜಾ ಹೂಗಳಂತೆ ನಳನಳಿಸುತ್ತವೆ ಕೊಡೆಗಳು. ಕೊಂಡುಕೊಳ್ಳುವ ಪ್ರತಿಯೊಂದು ವಸ್ತುಗಳಲ್ಲಿ ನಾವೀನ್ಯತೆಯನ್ನು ವೈವಿಧ್ಯತೆಯನ್ನು ಬಯಸುವವರು ನಾವೆಲ್ಲ. ಕೆಲವರಂತೂ ತಮ್ಮ ಉಡುಗೆ ತೊಡುಗೆಗಳಿಗೆ ಹೊಂದಿಕೆಯಾಗುವಂಥ ಕೊಡೆಗಳ ಹುಡುಕಾಟದಲ್ಲಿ ಇರುತ್ತಾರೆ. ಇನ್ನೂ ಕೆಲವು ಯುವತಿಯರಂತೂ ಟ್ರೆಂಡಿಯಾಗಿರಬೇಕು. ಸ್ಟೈಲಿಷ್ ಆಗಿರಬೇಕೆಂಬ ಹಟ ಹೊಂದಿರುತ್ತಾರೆ. ಇಂಥವರು ಅನೇಕ ಅಂಗಡಿಗಳನ್ನು ಹೊಕ್ಕು ತಮಗಿಷ್ಟವಾದುದನ್ನೇ ಹೆಕ್ಕಿ ತರುತ್ತಾರೆ. ಉದ್ಯೋಗಸ್ಥ ಮಹಿಳೆಯರು ತಮ್ಮ ವೆನಿಟಿ ಬ್ಯಾಗಿನಲ್ಲಿ ಕೂಡ್ರುವಂಥ ಥ್ರೀ ಫೋಲ್ಡ್ ಛತ್ರಿಗಳಿಗೆ ಹೆಚ್ಚಾಗಿ ಆದ್ಯತೆ ನೀಡುತ್ತಾರೆ.

    ಕೊಡೆಗಳು ನಮ್ಮ ದಿನ ನಿತ್ಯ ಜೀವನದ ಅತ್ಯವಶ್ಯಕ ವಸ್ತುಗಳಾಗಿ ಬದಲಾಗಿವೆ. ನಾವು ಹೋದಲೆಲ್ಲ ನಮ್ಮೊಂದಿಗೆ ಅವೂ ಕಾಲು ಹಾಕುತ್ತಿವೆ.ತಲೆಗೆ ಮೈಗೆ ರಕ್ಷಣೆ ಕೊಡುತ್ತಿವೆ. ಹಾಗಂತ ಇವುಗಳ ಆಯ್ಕೆಯಲ್ಲಿ ಹೆಂಗಳೆಯರು ಕೈಗೆ ಸಿಕ್ಕದ್ದನ್ನು ಕಣ್ಣಿಗೆ ಕಂಡದ್ದನ್ನು ಸುಲಭವಾಗಿ ಕೊಳ್ಳುತ್ತಾರೆ ಅಂತಿಲ್ಲ. ಆಕರ್ಷಕವಾದ ಚಿತ್ತಾರ, ವಿಭಿನ್ನ ಬಣ್ಣ, ಗಾತ್ರಗಳನ್ನು ಹೊಂದಿದ ತಮ್ಮ ಧಿರಿಸಿಗೆ ಹೊಂದಿಕೆಯಾಗುವಂಥ ಎಲ್ಲ ರಂಗುಗಗಳನ್ನು ಹೊಂದಿದ ಕಾಮನ ಬಿಲ್ಲಿನ ಕೊಡೆಗಳನ್ನು ಕೊಳ್ಳೋಕೆ ಮನಸ್ಸು ಮಾಡುತ್ತಾರೆ. ಪುಸ್ತಕಗಳಂತೆ ತಮ್ಮ ಮೈ ಮೇಲೆ ಅಕ್ಷರಗಳನ್ನು ಬರೆಸಿಕೊಂಡ ಛತ್ರಿಗಳು ಲಭ್ಯವಿವೆ. ಶಾಲೆ ಕಾಲೇಜಿಗೆ ಹೋಗುವ ಹುಡುಗಿರೆಲ್ಲ ಇವುಗಳಿಗೆ ಮನಸೋತು ಖರೀದಿಸುತ್ತಾರೆ.

    ಸಮಯ ಕಳೆದಂತೆ ಕೊಡೆಗಳ ಬೇಡಿಕೆ ಹೆಚ್ಚುತ್ತಿರುವುದನ್ನು ಕಂಡ ತಯಾರಕರು ಗ್ರಾಹಕರ ಉಪಯೋಗಕ್ಕೆ ತಕ್ಕಂತೆ ವಿವಿಧ ನಮೂನೆಯ ಕೊಡೆಗಳನ್ನು ತಯಾರಿಸುತ್ತಿದ್ದಾರೆ. ಅವುಗಳಲ್ಲಿ ಮಳೆಗಳಲ್ಲೂ ಓಡಾಡಿ ಕೆಲಸ ಮಾಡುವಂತವರಿಗೆ ಫುಲ್ ಬಾಡಿ ಅಂಬ್ರೆಲಾ, ಹಿಡಿಕೆಗಳಿಲ್ಲದ (ಹ್ಯಾಂಡ್ಸ್ ಫ್ರೀ) ಅಂಬ್ರೆಲಾ ಆಟಗಾರರಿಗೆ ಉಪಯುಕ್ತವಾಗುವಂಥ ಟೊಪ್ಪಿಗೆ ಹೊಂದಿರುವ ಕೊಡೆಗಳನ್ನೂ ನಿರ್ಮಿಸಿದ್ದಾರೆ. ಈ ವಿಷಯದಲ್ಲಿ ಚಿಕ್ಕ ಮಕ್ಕಳಂತೂ ಬಣ್ಣ ಬಣ್ಣದ ಚಿತ್ತಾರಗಳನ್ನು ಹೊಂದಿದ ನಾನಾ ನಮೂನೆಯ ಕೊಡೆಗಳನ್ನು ಕಂಡು ಮನೆಯಲ್ಲಿ ಹಳೆ ಛತ್ರಿಯಿದ್ದರೂ ಹೊಸ ಛತ್ರಿ ಖರೀದಿಸದೇ ಮಾರ್ಕೆಟಿನಿಂದ ಮರಳಿ ಮನೆಗೆ ಬರಲು ಬಿಡುವುದಿಲ್ಲ. ಅಂದರೆ ಪುಟ್ಟ ಪುಟಾಣಿಗಳಿಗೂ ಹೊಸ ಫ್ಯಾಷನ್ನಿನ ಕೊಡೆಗಳನ್ನು ಮಳೆಯುಲ್ಲಿ ಹಿಡಿದು ಓಡಾಡೋದು ಅಷ್ಟು ಇಷ್ಟ.


    ಬಿಟ್ಟೂ ಬಿಡದೇ ಸುರಿಯುವ ಮಳೆಗೆ ಭೂತಾಯಿ ಹೊಸ ಹಸಿರು ಸೀರೆಯನ್ನುಟ್ಟು ತನ್ನ ಸೌಂದರ್ಯ ಹೆಚ್ಚಿಸಿಕೊಳ್ಳುತ್ತಾಳೆ. ಮನಮೋಹಕ ಕೊಡೆಗಳನ್ನು ಹಿಡಿದು ಆನಂದಿಸಲು ಇದೇ ಸಕಾಲ ಎಂದು ಇಷ್ಟವಾದ ಕೊಡೆಗಳನ್ನು ಅರಳಿಸಿಕೊಂಡು ಸುರಿಯುವ ಮಳೆಯಲ್ಲಿ ವಯ್ಯಾರದಿಂದ ಹೆಜ್ಜೆ ಹಾಕುವವರನ್ನು ನೋಡುವುದೂ ಚೆಂದಕಿಂತ ಚೆಂದ. ಹೀಗೆ ರಂಗು ರಂಗಿನ ಕೊಡೆಗಳು ಮಳೆಯ ಸೊಬಗಿನ ರಂಗನ್ನು ಇನ್ನಷ್ಟು ಹೆಚ್ಚಿಸುತ್ತವೆ. ನಾವೆಲ್ಲ ಮಳೆಗಾಲದ ಖುಷಿಯ ಹೂಮಳೆಯನ್ನು ಹೆಚ್ಚಿಸಿಕೊಳ್ಳಲು ಕೊಡೆಯ ಕಡೆ ಆಕರ್ಷಿತರಾಗುತ್ತಿರುವುದಂತೂ ಸುಳ್ಳಲ್ಲ. ಸಂಜೆ ಮಳೆಯಲ್ಲಿ ರಂಗು ರಂಗಿನ ಚಿತ್ತಾರದ ಚಿತ್ತಾಕರ್ಷಕ ಕೊಡೆ ಹಿಡಿದು ಹೆಜ್ಜೆ ಹಾಕಿ ಮಳೆಯ ಸವಿ ಸವಿಯೋಣವಲ್ಲವೇ?

    Photo by Bozhidar Petkov on Unsplash

    ಷೇರುಪೇಟೆಯಲ್ಲಿ ಅಧಿಕ ಲಾಭಗಳಿಸಲು ಹೂಡಿಕೆ ನಿರ್ವಹಿಸುವುದು ಹೇಗೆ?

    ಷೇರುಪೇಟೆಯ ಹೂಡಿಕೆಯನ್ನು ಕೇವಲ ವಾಹಿನಿಗಳಲ್ಲಿ ಬರುವ ಕಾರ್ಯಕ್ರಮಗಳನ್ನು, ವಿಶ್ಲೇಷಣೆಗಳನ್ನು ವೀಕ್ಷಿಸಿ ನಿರ್ಧರಿಸುವುದು ಯಶಸ್ಸು ಕಾಣಲು ಸಾಧ್ಯವಿಲ್ಲ. ಅದಕ್ಕೆ ಹಲವಾರು ಆಯಾಮಗಳ ಮೂಲಕ ಪರಿಶೀಲಿಸಿ ನಿರ್ಧರಿಸಬೇಕು.

    ಸಾಮಾನ್ಯವಾಗಿ ಒಂದು ಕಂಪನಿ ಪ್ರಕಟಿಸಿದ ಕಾರ್ಪೊರೇಟ್‌ ಫಲಗಳನ್ನಾಧರಿಸಿ ಅಂದರೆ ಲಾಭಾಂಶ, ಬೋನಸ್‌ ಗಳನ್ನು ಪ್ರಕಟಿಸಿದ ನಂತರ ಹೂಡಿಕೆ ಮಾಡಲು ಆಯ್ಕೆಮಾಡಿಕೊಳ್ಳುವುದು ರೂಢಿಯಲ್ಲಿದೆ. ಆದರೆ ಈಗಿನ ದಿನಗಳಲ್ಲಿ ಕಾರ್ಪೊರೇಟ್‌ ಫಲಗಳು ಪ್ರಕಟವಾಗುವ ಮುನ್ನವೇ ಅದನ್ನೊಳಗೊಂಡ ಬೆಲೆ ಏರಿಕೆಯಾಗಿರುತ್ತದೆ. ಕಾರ್ಪೊರೇಟ್‌ ಫಲಗಳು ಪ್ರಕಟವಾದ ನಂತರ ಹೆಚ್ಚಿನ ಲಾಭ ದೊರೆಯದಂತಾಗಿದೆ.

    • ಸಾಮಾನ್ಯವಾಗಿ ಷೇರುಪೇಟೆಯಲ್ಲಿ ಷೇರಿನ ಬೆಲೆಗಳು ಚುರುಕಾದ ಏರಿಕೆ ಕಂಡಮೇಲೆ ಸಾಮಾನ್ಯ ಹೂಡಿಕೆದಾರರು ಆ ಷೇರನ್ನು ಖರೀದಿಸುವತ್ತ ಗಮನಹರಿಸುತ್ತಾರೆ.ಇಳಿಕೆಯಲ್ಲಿದ್ದಾಗ ಖರೀದಿಸಿದರೆ ಆದಾಯ ಹೆಚ್ಚಿಸಿಕೊಳ್ಳಲು ಅವಕಾಶವಾಗಿರುತ್ತದೆ.
    • ಷೇರನ್ನು ಕೊಂಡಮೇಲೆ ಆ ಷೇರಿನ ಬೆಲೆ ಅನಿರೀಕ್ಷಿತ ಏರಿಕೆ ಕಂಡಾಗ ಅದರಿಂದ ಹೊರಬರದೆ, ಮತ್ತಷ್ಟು ಏರಿಕೆ ಕಾಣಬಹುದೆಂದು ಹೂಡಿಕೆ ಮುಂದುವರೆಸುತ್ತಾರೆ, ನಂತರ ಷೇರಿನ ಬೆಲೆ ಕುಸಿದಾಗ ಬೇಸರಿಸಿಕೊಳ್ಳುತ್ತಾರೆ.
    • ಷೇರಿನ ಬೆಲೆ ಕುಸಿದಾಗ, ಹೆಚ್ಚಿನ ಬೆಲೆಯಲ್ಲಿ ಕೊಂಡಿರುವ ಷೇರುಗಳನ್ನು ನೆನಪಿಸಿಕೊಂಡು, ಅದೇ ಉತ್ತಮ ಷೇರಿನ ಬೆಲೆ ಕುಸಿದಾಗ ಮತ್ತೊಮ್ಮೆ ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶದಿಂದ ವಂಚಿತರಾಗುತ್ತಾರೆ.
    • ಉತ್ತಮ, ಸಾಧನೆಯಾಧಾರಿತ ಕಂಪನಿಯ ಷೇರಿನ ಬೆಲೆ ಕುಸಿದಾಗ ಅದನ್ನು Value pick ಅವಕಾಶ ಎಂದು ಖರೀದಿಸುವುದು ಸೂಕ್ತ. ಕುಸಿತ ಕಾಣಲು ವಹಿವಾಟುದಾರರ ಚಟುವಟಿಕೆಯ ರೂಪವೂ ಪ್ರಮುಖವಾಗಿರುತ್ತದೆ.

    ಹೂಡಿಕೆಗೆ ಮುಂಚೆ ಅರಿಯಬೇಕಾದ ಸಂಗತಿಗಳು:

    ಈ ಕೆಳಗಿನ ಕಂಪನಿಗಳಲ್ಲಿ ಹೂಡಿಕೆಯು LOYALTY ಬೆಳೆಸದೆ ಕೇವಲ ROYALTYಗಾಗಿ ಎಂಬುದನ್ನು ಅರಿಯಬೇಕು. ಅಂದರೆ ಏರಿಕೆಯಾದಾಗ ಮಾರಾಟಮಾಡಿ ಹೊರಬರುವುದೇ ಲಾಭಕರ.

    ರಿಲಯನ್ಸ್‌ ಇಂಡಸ್ಟ್ರೀಸ್‌ :ಮಾಧ್ಯಮಗಳಲ್ಲಿ ಷೇರಿನ ಬೆಲೆ ಅತಿಯಾಗಿ ಏರಿಕೆಯಾದಲ್ಲಿ ಅಥವಾ ಭಾರಿ ಇಳಿಕೆಯಾದಲ್ಲಿ ಹೆಚ್ಚು ಪ್ರಚಾರ ನೀಡಲಾಗುವುದು. ಇತ್ತೀಚೆಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ಬಗ್ಗೆ ಭಾರಿ ಪ್ರಚಾರ ನೀಡಲಾಗುತ್ತಿದೆ. ಈ ಕಂಪನಿಯ ಷೇರಿನ ಬೆಲೆ ಕಳೆದ ಮಾರ್ಚ್‌ ಅಂತ್ಯದಲ್ಲಿದ್ದ ರೂ.900 ರ ಸಮೀಪದಿಂದ ರೂ.2,100 ರ ಸಮೀಪಕ್ಕೆ ಜಿಗಿತ ಕಂಡಿದೆ. ಕಂಪನಿ ಉತ್ತಮವಾದುದೇ ಆದರೆ ಹೂಡಿಕೆ ಮಾಡುವ ಉದ್ದೇಶ ಲಾಭಗಳಿಕೆಯಲ್ಲವೇ? ಈಗಿನ ಬೆಲೆ ರೂ.2,100 ರ ಸಮೀಪ ಹೂಡಿಕೆಮಾಡಿದಲ್ಲಿ ಯಾವ ರೀತಿಯ ಏರಿಕೆ ನಿರೀಕ್ಷೆ ಮಾಡಬಹುದು. ಒಂದು ವೇಳೆ ಧೀರ್ಘಕಾಲೀನ ಹೂಡಿಕೆ ಎಂದಾದರೂ, ಆ ಕಂಪನಿ ವಿತರಿಸಬಹುದಾದ ಡಿವಿಡೆಂಡ್‌ ಆದರೂ ಏನು? ರೂ.2,100 ರ ಹೂಡಿಕೆಗೆ ರೂ.6.50 ಯ(ಹಿಂದಿನ ವರ್ಷದ ಡಿವಿಡೆಂಡ್‌ ಪ್ರಮಾಣ) ಡಿವಿಡೆಂಡ್‌ ಲಭಿಸುತ್ತದೆ ಅದು ಒಂದು ವರ್ಷದ ಕಾಲ ಸಲಹಬೇಕಾಗುತ್ತದೆ. ಅಂದರೆ ರೂ.2,100 ಹೂಡಿಕೆಗೆ ರೂ.6.50ಯ ನಿಶ್ಚಿತವಲ್ಲದ ಆದಾಯ ಉತ್ತಮ ಹೂಡಿಕೆಯೇ? ನೆನಪಿನಲ್ಲಿಡಿ: ಷೇರುಪೇಟೆಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರಿನ ಒಂದು ರೂಪಾಯಿ ಏರಿಕೆ ಆ ಕಂಪನಿಯ ಮಾರ್ಕೆಟ್‌ ಕ್ಯಾಪ್‌ ನ್ನು ರೂ.633.94 ಕೋಟಿಯಷ್ಟು ಹೆಚ್ಚಿಸುತ್ತದೆ. ಹಾಗಾಗಿ ಆ ಕಂಪನಿಯ ಮಾಲಿಕರ ನೆಟ್‌ ವರ್ಥ್‌ ಷೇರಿನಬೆಲೆಯೊಂದಿಗೆ ಹೆಚ್ಚುತ್ತಿದೆ. ಷೇರಿನ ಬೆಲೆ ಇಳಿಕೆಯಾದಲ್ಲಿ ಅದೇ ಪ್ರಮಾಣದ ಮಾರ್ಕೆಟ್‌ ಕ್ಯಾಪ್‌ ಇಳಿಕೆಯಾಗುತ್ತದೆ ಎಂಬುದು ಗಮನಿಸಬೇಕು.

    ಕೋಟಕ್‌ ಮಹೀಂದ್ರ ಬ್ಯಾಂಕ್:ಕೋಟಕ್‌ ಮಹೀಂದ್ರ ಬ್ಯಾಂಕ್‌ ಸಹ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಸೆನ್ಸೆಕ್ಸ್‌ ನಲ್ಲಿರುವ ಒಂದು ಪ್ರಮುಖ ಕಂಪನಿಯಾಗಿದೆ. ಈ ಷೇರಿನ ಬೆಲೆ ಸಹ ಮಾರ್ಚ್‌ ನಲ್ಲಿ ರೂ.1,000 ದ ವರೆಗೂ ಕುಸಿದು ನಂತರ ರೂ.1,400 ರವರೆಗೂ ಪುಟಿದೆದ್ದು ಸಧ್ಯ ರೂ.1,342 ರ ಸಮೀಪ ವಹಿವಾಟಾಗುತ್ತಿದೆ. ಈಗಾಗಲೇ ಗರಿಷ್ಠ ಹಂತದಲ್ಲಿರುವ ಈ ಷೇರಿನಲ್ಲಿ ಹೂಡಿಕೆಗೆ ಮುಂಚೆ ಈ ಹಂತದಲ್ಲಿ ಹೂಡಿಕೆ ಯಾವ ರೀತಿ ಲಾಭ ಅಥವಾ ಆದಾಯ ಗಳಿಸಿಕೊಡುತ್ತದೆ ಎಂಬುದನ್ನು ಅರಿಯಬೇಕು. ಇನ್ನು ಈ ಕಂಪನಿ ವಿತರಿಸುವ ಡಿವಿಡೆಂಡ್‌ 2019 ರಲ್ಲಿ ಪ್ರತಿ ಷೇರಿಗೆ 80 ಪೈಸೆ ಮಾತ್ರ. ಈ ವರ್ಷ ಲಾಭಾಂಶವನ್ನು ಕೈ ಬಿಟ್ಟಿದೆ. ಅಂದರೆ ಹೂಡಿಕೆ ಮಾಡಬೇಕಾದಲ್ಲಿ ಷೇರಿನ ಬೆಲೆ ಏರಿಕೆಯ ನಿರೀಕ್ಷೆಯಿಂದ ಮಾಡಬೇಕು, ಅದರ ಸಾಧ್ಯತೆ ತೀರ ಕಡಿಮೆ. ಇನ್ನು ವಿತರಿಸುವ ಡಿವಿಡೆಂಡ್‌ ಪ್ರಮಾಣ ಕಳಪೆಮಟ್ಟದ್ದಾಗಿದೆ. ಅಂದರೆ ಕೇವಲ speculative interest ನಿಂದ ಹೂಡಿಕೆಗೆ ಆಯ್ಕೆಮಾಡಕೊಳ್ಳಬೇಕಷ್ಟೆ.

    ಹೂಡಿಕೆಯಿಂದ ಲಾಭವನ್ನು ಯಾವ ರೀತಿ ಗಳಿಸಲು ಸಾಧ್ಯ ಎಂಬುದಕ್ಕೆ ಹಿಂದಿನವಾರದ ಉದಾಹರಣೆ ಗಮನಿಸಿ:

    ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್‌: ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್‌ ಕಂಪನಿಯ ಮೊದಲ ತ್ರೈಮಾಸಿಕ ಸಾಧನೆಯ ಅಂಕಿ ಅಂಶಗಳು ಉತ್ತಮವಾಗಿದ್ದ ಕಾರಣ ಬುಧವಾರದಂದು ಷೇರಿನ ಬೆಲೆ ರೂ.471 ರ ಸಮೀಪದಿಂದ ಆರಂಭವಾಗಿ ನಂತರ ರೂ.440 ರ ಸಮೀಪಕ್ಕೆ ಕುಸಿಯಿತು. ಆದರೆ ಗುರುವಾರದಂದು ರೂ.480 ರವರೆಗೂ ಏರಿಕೆ ಕಂಡು ಶುಕ್ರವಾರ ರೂ.530 ರ ವಾರ್ಷಿಕ ಗರಿಷ್ಠ ದಾಖಲಿಸಿತು. ಅಂದರೆ ಎರಡೇ ದಿನಗಳಲ್ಲಿ ರೂ.90ರಷ್ಟು ಏರಿಕೆ ಕಂಡಿದೆ. ಇಂತಹ ಅಸಹಜ ಏರಿಕೆಯ ಲಾಭ ಪಡೆದುಕೊಂಡಲ್ಲಿ ಮಾತ್ರ ಹೂಡಿಕೆ ಸುರಕ್ಷಿತ. ಇದೇ ಷೇರಿನ ಬೆಲೆ ಮತ್ತೊಮ್ಮೆ ಕುಸಿದಾಗ ಪುನ: ಖರೀದಿಸಬಹುದಲ್ಲವೆ?

    ಗ್ರಾಫೈಟ್‌ ಇಂಡಿಯಾ:ಈ ಕಂಪನಿಯ ಷೇರು ಹಿಂದಿನ ವರ್ಷ ಜೂನ್‌ ತಿಂಗಳಲ್ಲಿ ಪ್ರತಿ ಷೇರಿಗೆ ರೂ.35 ರಂತೆ ಡಿವಿಡೆಂಡ್‌ ಘೋಷಿಸಿದಾಗ ಷೇರಿನ ಬೆಲೆ ರೂ.430 ರ ಸಮೀಪಕ್ಕೆ ಜಿಗಿದು ನಂತರದಿನಗಳಲ್ಲಿ ಕುಸಿಯುತ್ತಾ ಬಂದು ಈ ವರ್ಷ ಮಾರ್ಚ್‌ ನಲ್ಲಿ ರೂ.103ರವರೆಗೂ ಜಾರಿ ನಂತರ ಸ್ವಲ್ಪ ಚೇತರಿಕೆ ಕಂಡಿತು. ಹಿಂದಿನ ವಾರದ ಆರಂಭದಲ್ಲಿದ್ದ ರೂ.163 ರ ಸಮೀಪದಿಂದ ವಾರಾಂತ್ಯಕ್ಕೆ ರೂ.192 ವರೆಗೂ ಏರಿಕೆ ಕಂಡಿದೆ. ಈ ಕಂಪನಿಯು ಈ ತಿಂಗಳ 12 ರಂದು ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿರುವ ಕಾರಣ ಈ ಜಿಗಿತ ಕಂಡಿದೆ.
    ಹೀಗೆ ರಭಸದ ಏರಿಳಿತಗಳನ್ನು ನಮ್ಮ ಅನುಕೂಲಕ್ಕೆ ಪರಿವರ್ತಿಸಿಕೊಳ್ಳುವ ನೈಪುಣ್ಯತೆ ಬೆಳೆಸಿಕೊಂಡಲ್ಲಿ ಈಗಿನ ಅತ್ಯಲ್ಪ ಬಡ್ಡಿ ಯುಗದಲ್ಲಿ ಬಂಡವಾಳವನ್ನು ಸ್ವಲ್ಪಮಟ್ಟಿನ ಸುರಕ್ಷತೆಯೊಂದಿಗೆ ಬೆಳೆಸಬಹುದು.
    ಹೃದಯ ಮತ್ತು ಮೆದುಳನ್ನು ಉಪಯೋಗಿಸುವ ಕಲೆಯನ್ನು ಕರಗತ ಮಾಡಿಕೊಂಡರೆ, ವೃತ್ತಿ , ಪ್ರವೃತ್ತಿಗಳಲ್ಲಿ ಯಶಸ್ಸು ಶತಸಿದ್ಧ.

    ಹೂಡಿಕೆಯನ್ನು ನಿರ್ದಿಷ್ಟ ಅವಧಿಗೆ ಎಂದು ಸೀಮಿತಗೊಳಿಸದೆ ಪೇಟೆ ನೀಡುವ ಅವಕಾಶಗಳನ್ನು ತನ್ನದಾಗಿಸಿಕೊಂಡಲ್ಲಿ ಹೆಚ್ಚಿನ ಆದಾಯವನ್ನು ಗಳಿಸುವುದರೊಂದಿಗೆ ಬಂಡವಾಳವನ್ನು ಸುರಕ್ಷಿತವಾಗಿರಿಸಬಹುದಲ್ಲವೇ? ಆದರೆ ಹೂಡಿಕೆ ಮಾತ್ರ ಉತ್ತಮ ಕಂಪನಿಗಳಲ್ಲಿರಬೇಕು.

    ಅಂತಿಮವಾಗಿ ಷೇರುಪೇಟೆಯ ಯಶಸ್ಸಿಗೆ ಅಧ್ಯಯನ, ಅನುಭವ, ಚಿಂತನೆಗಳು ಅತ್ಯವಶ್ಯಕ. ಅಧ್ಯಯನದಿಂದ ಅರಿವು, ಅನುಭವದಿಂದ ತಿಳಿವು, ಚಿಂತನೆಯಿಂದ ಸುಳಿವು ಲಭಿಸುತ್ತದೆ. ಅರಿವು- ತಿಳಿವು-ಸುಳಿವುಗಳಿಂದ ಹಣವು.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಒಂದು ಕಡೆ ನಾವು ಆತ್ಮ ನಿರ್ಭರರಾಗಬೇಕು. ಇನ್ನೊಂದು ಕಡೆ ಜಾಗತೀಕರಣದ ಹೊಡೆತಕ್ಕೆ ಪಕ್ಕಾಗಬೇಕು

    ನೂತನ

    ಡ್ರ್ಯಾಗನ್ ಫ್ರುಟ್ ಎಂಬ ಹಣ್ಣು  ಆಕಾರದಲ್ಲೇನು ಅಂಥಾ ದೊಡ್ಡದಲ್ಲ.  ಗುಲಾಬಿ ಬಣ್ದದ  ದೇಹದ  ಮೇಲೆ  ಹಳದಿಯ ಪಕಳೆಗಳು. ಹೊರನೋಟಕ್ಕೆ ಸುಂದರವಾಗಿ ಕಾಣುತ್ತದೆ. ಇಂಥ ಹಣ್ಣಿನ ರುಚಿಯನ್ನು  ಒಮ್ಮೆ ನೋಡಬೇಕೆನ್ನಿಸಿತು.ಮಾರ್ಟಗಳಿಗೋ ಮಾಲ್ ಗಳಿಗೋ ಹೋದರೆ ಅಲ್ಲಿನ ಅಂಗಡಿಗಳಲ್ಲಿ ಇಂಥ ಬಣ್ಣ ಬಣ್ಣದ ತರಹೆವಾರು ಹಣ್ಣು- ತರಕಾರಿಗಳಿರುತ್ತವೆ. ಅವು ಬಣ್ಣದಿಂದಲೇ ಆಕರ್ಷಿಸುತ್ತವೆ. ಹಾಗೆ  ಸಾಲಾಗಿ ಜೋಡಿಸಿಟ್ಟ ನೂರಾರು ಟ್ರೇಗಳಲ್ಲಿ ಡ್ರ್ಯಾಗನ್ ಫ್ರುಟ್ ಭಿನ್ನವಾಗಿ ಕಾಣುತ್ತದೆ. ಅದರ ಹೆಸರು ಕೇಳಿ ಚೀನಾದ್ದೇ ಎಂದು ಕಣ್ಣಗಲಿಸುತ್ತಿರುವಾಗಲೇ ಅದು ಅಮೇರಿಕಾದ ಹಣ್ಣು ಎಂದು ತಿಳಿದು ಕೊಂಚ ನಿರಾಳವಾಯಿತು.

    ಸಾವಿರಾರು ಮೈಲಿ ದಾಟಿ ಬರುವ ಇಂಥ ಹಣ್ಣುಗಳು ಹೊತ್ತು ಬರುವ ಬ್ಯಾಕ್ಟೀರಿಯಾಗಳ ಬಗ್ಗೆ ನನಗೆ ಸದಾ ಎಚ್ಚರ. ಏಕೆಂದರೆ ಅವು ಬಂದು ಬೀಳುತ್ತಿರುವುದು ಭಾರತದಂಥ ಕ್ವಾಲಿಟಿ ಮಾಪಕಗಳೇ ಇಲ್ಲದ ಬ್ರಹತ್ ಮಾರುಕಟ್ಟೆಗೆ. ಒಮ್ಮೆ ಸೇಬು ಹಣ್ಣಿನ ಬಗ್ಗೆ ಓದುತ್ತಿದ್ದಾಗ ಯಾವ ಸೇಬಿನಲ್ಲಿ ಎಷ್ಟೆಷ್ಟು ಬ್ಯಾಕ್ಟೀರಿಯಾಗಳಿರುತ್ತವೆ ಎಂದು ನೋಡಿದರೆ ನಮ್ಮ ಕಾಶ್ಮೀರದ ಅಥವಾ ಶಿಮ್ಲಾದ ಸೇಬಿನಲ್ಲೇ ಕಡಿಮೆ ಇರುವುದು ತಿಳಿದಿತ್ತು. ಆಗಿನಿಂದ ದುಪ್ಪಟ್ಟು ಬೆಲೆಯ, ಆಕರ್ಷಕ ಹೊಳಪಿನ ‘ಗಾಲಾ’ ಇತ್ಯಾದಿ ಲೇಬಲ್ ಹಚ್ಚಿದ ಹಣ್ಣುಗಳನ್ನು ಮುಟ್ಟುವುದೇ ಇಲ್ಲ. ಆದರೂ ಡ್ರ್ಯಾಗನ್ ಫ್ರುಟ್ ಸೆಳೆತದಿಂದ ಅದನ್ನು ತರಿಸಿದ್ದಾಯಿತು. ಅದೂ ಸ್ಯಾಂಪಲ್ಲಿಗಾಗಿ ಒಂದೇ ಹಣ್ಣು! ಅದರ ಮೇಲಿನ ಸಿಪ್ಪೆ ತೆಗೆಯಲು ಆರಂಭಿಸಿದಂತೆ ಪಕ್ಕದಲ್ಲಿದ್ದ ಮಗ  ‘ಅದು ನಮಗಲ್ಲ’ ಎಂದು ನಗಲು ಆರಂಭಿಸಿದ.

    ಆ ಹಣ್ಣು ಕಾಣಲು ಮಾತ್ರ ಡ್ರ್ಯಾಗನ್ ಹಾಗೆ ಕಠಿಣ. ಮೇಲಿನ ಸಿಪ್ಪೆ ಸುಲಿದು ಹಣ್ಣನ್ನು ಕತ್ತರಿಸಿದರೆ ಒಳಗೆ  ಜೆಲ್ಲಿಯ ಹಾಗೆ ಇರುವ  ಬಿಳಿ ತಿರುಳಲ್ಲಿ ಸಾಲಾಗಿ ಜೋಡಿಸಿಟ್ಟ ಪುಟ್ಟ ಪುಟ್ಟ ಕರಿಮಣಿಗಳು. ನೋಡಲಂತೂ ಚಂದವೇ. ಒಂದು ಚೂರು ಕತ್ತರಿಸಿ ಮಗನ ಎದುರು ಹಿಡಿದರೆ ನನಗೆ ಬೇಡ ಎಂತಲೇ ಹೇಳಿದ. ಈಗ ಮಾಡಿದ್ದುಣ್ಣೋ ಮಾರಾಯ ಸರದಿ. ಒಂದು ಚೂರು ತಿನ್ನುವಷ್ಟರಲ್ಲೇ ಆಸ್ವಾದನೆಯ ಮಂದಹಾಸ ಮೂಡದಿದ್ದುದ ನೋಡಿ ಪಕ್ಕದಲ್ಲಿ ನಗು ಶುರುವಾಯಿತು.ಅದಕ್ಕೇ ನಾನು ಹೇಳಿದ್ದು ಅದು ನಮಗಲ್ಲ ಅಂತಾ. ಅದೇನಿದ್ದರೂ ಒಂದೊಂದು ಚೂರು ಹಣ್ಣು ತಿನ್ತಾರೆ ನೋಡು ಅವರಿಗೆ ಅಂದ. ಅಲ್ಲಿಗೆ ಡ್ರ್ಯಾಗನ್ ಫ್ರುಟ್ ಕತೆ ಮುಗಿಯಿತು.

    ನಮ್ಮೂರ ಹಣ್ಣು

    ಆ ಕ್ಷಣಕ್ಕೆ ನಮ್ಮ ಊರಲ್ಲಿ ಗೆಳತಿಯ ಮನೆಯ ಹಿತ್ತಲಲ್ಲಿದ್ದ ಪನ್ನೀರ ಹಣ್ಣಿನ. ಮರ ನೆನಪಾಯಿತು. ಹಸಿರು ಮೋದಕಗಳು ತೂಗಿದಂತೆ ಕಾಣುವ ಈ ಹಣ್ಣಿಗೆ ಇರುವ ಘಮ ಬೇರಾವ ಹಣ್ಣಿಗೂ ಇಲ್ಲ. ತಿಂದರೆ ಮನಸ್ಸೆಲ್ಲಾ ಆ ಘಮದಿಂದಲೇ ಉಲ್ಲಸಿತವಾಗುತ್ತಿತ್ತು. ಆ ಮರಕ್ಕೆ ನಮ್ಮ ಲಗ್ಗೆ ಮಧ್ಯಾನ್ಹ ಮೂರಕ್ಕೆ. ಅವಳ ಮನೆಯಲ್ಲಿ ಎಲ್ಲರೂ ಊಟ ಮಾಡಿ ಮಲಗಿದ ಮೇಲೆ ಗೆಳೆತಿಯರೆಲ್ಲ ಸೇರಿ ಅವಳ ಮನೆಯಲ್ಲಿ ಅವಳ ಜೊತೆಯೇ ಹಣ್ಣು ಕದಿಯುತ್ತಿದ್ದೆವು. ಮರದ ಹಣ್ಣುಗಳನ್ನೆಲ್ಲ ಖಾಲಿ ಮಾಡದೇ ಕದಲುತ್ತಿರಲಿಲ್ಲವಾದ್ದರಿಂದ ಕದಿಯುವುದು ಅನಿವಾರ್ಯವಾಗಿತ್ತು. ಆ ಹಣ್ಣಿನ ಕಂಪಿನಿಂದ ಸೇರಿದ ಸವಿ ಈಗಲೂ ನಾಲಿಗೆಗೆ ನೆನಪಿದೆ.

    ಮಾವಿನ ಹಣ್ಣನ್ನು ಕತ್ತರಿಸಿ ತಿಂದ ಬಾಲ್ಯವೇ ಅಲ್ಲ ನಮ್ಮದು. ಎಲ್ಲರ ಮನೆಗಳಲ್ಲೂ ಮರಗಳಿರುತ್ತಿದ್ದವು. ಲೆಕ್ಕ ಮಾಡಿ  ಕಲ್ಲು ಹೊಡೆದು ಹಣ್ಣು ಬೀಳಿಸಿ ಎಲ್ಲರೂ ಒಂದೊಂದು ಹಣ್ಣು ಹಿಡಿದು ಮುಂಗೈವರೆಗೆ ರಸ ವಸರಿ ತಿಂದರೇ ಆ ಹಣ್ಣಿಗೆ ಗೌರವ.  ಆಗ ಹಣ್ಣುಗಳಿಗೆ ಕೆಜಿಯ ಲೆಕ್ಕ ಇರಲಿಲ್ಲ. ಅದೇನಿದ್ದರೂ‌ ಬುಟ್ಟಿಗಳ ಲೆಕ್ಕದಲ್ಲಿ ಮಾರಾಟವಾಗುತ್ತಿದ್ದ ಕಾಲ. ಹಣ್ಣಿನಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಮಕ್ಕಳು ನಾವಾಗಿದ್ದೆವು.

    ಹಲಸಿನ ರಾಜ ಚಂದ್ರಬಕ್ಕೆ ಹಣ್ಣು. ಕೆಂಡಸಂಪಿಗೆಯ ಬಣ್ಣದ ಈ ಹಣ್ಣಿನಲ್ಲೇ ಜೇನುತುಪ್ಪದ ಸವಿ. ಮನೆಯ ಹಿರಿಯರ ಜೊತೆ ಸೇರಿ ಹಲಸಿನ ಹಣ್ಣು ಕತ್ತರಿಸುವುದನ್ನೂ ಕಲಿತಿದ್ದೆವು. ಅದರಲ್ಲಿ ಬಿಳಿಯ   ಅಂಟು ದ್ರವ ಸೋರುವುದರಿಂದ ಕೈಗೆ ಎಣ್ಣೆ ಹಚ್ಚಿಕೊಂಡು ತೊಟ್ಟಿನ ಭಾಗದಲ್ಲಿ ಕತ್ತಿಯನ್ನು ತೂರಿ ಸ್ವಲ್ಪ ಸಡಿಲಿಸಿಕೊಂಡು ತೊಟ್ಟನ್ನು ತಿರುಗಿಸಿದರೆ ಒಳಗೆ ಹಣ್ಣಿಗೆ ಅಂಟಿಕೊಂಡಿರುವ ಆ ಭಾಗ ಪೂರ್ಣವಾಗಿ ಬಿಟ್ಟು ಹಣ್ಣು ಬಾಯಿಬಿಟ್ಟು ಭಾಗವಾಗುತ್ತದೆ. ತಿನ್ನಲು ಆರಂಭಿಸುವುದು ಮಾತ್ರ ಗೊತ್ತಾಗುತ್ತಿತ್ತು. ಕೊನೆಗೆ ಅಂದಿನ ಊಟವೂ ಅದೇ.

    ಪೇರಲೇ ಮರದಲ್ಲಿ ಗಿಳಿಗಳಿಂದ ಹಣ್ಣುಗಳನ್ನು ರಕ್ಷಿಸಿ ತಿನ್ನುವುದಕ್ಕೆ ಉಳಿಸಿಕೊಳ್ಳುವುದು ಬಹಳ ಕಷ್ಟದ ಕೆಲಸ. ಮರದ ಮೇಲೆ ಕುಳಿತೇ ಹಣ್ಣನ್ನು ತಿನ್ನುವುದು ಪೇರಲೇ ಹಣ್ಣಿನ ಗಮ್ಮತ್ತು. ತೀರ ಎತ್ತರವಲ್ಲದ, ಸುಲಭವಾಗಿ ಹತ್ತಬಹುದಾದ  ಹಾಗೂ ಸಾಕಷ್ಟು ಟಿಸಿಲುಗಳು ಇರುವುದರಿಂದ ಅಲ್ಲೇ ಕುಳಿತು ತಿಂದರೇನೇ ಪೇರಲೆ ಹಣ್ಣು ತಿಂದಂತೆ. 

    ಇನ್ನು ಕಾಡು ಹಣ್ಣುಗಳ ಸ್ವಾರಸ್ಯವೇ ಬೇರೆ. ಕವಳೆ ಹಣ್ಣು , ಮುಳ್ಹಣ್ಣು, ಸಂಪಿಗೆ ಹಣ್ಣು … ಅದೆಷ್ಟು ಬಗೆಯ ಹಣ್ಣುಗಳು. ಅವೆಲ್ಲ ಪಟ್ಟಣಗಳಿಗೆ ತಲುಪಿಯೇ ಇಲ್ಲ. ಮಲೆನಾಡ ಊರುಗಳಲ್ಲಿ ಇವೆಲ್ಲ ಈಗಲೂ ಸಿಗುತ್ತವೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕುಮಟಾ ಬಸ್ ಸ್ಟ್ಯಾಂಡಿನಲ್ಲಿ  ಹಾಲಕ್ಕಿ ಹೆಂಗಸರು ಹಲಸಿನ ಎಲೆಗೆ ಕಡ್ಡಿ ಚುಚ್ಚಿ ದೊನ್ನೆ ಮಾಡಿ‌ ಮಾರುತ್ತಾರೆ. ಅವರ   ಬುಟ್ಟಿಗಳಲ್ಲಿ ತುಂಬಿರುವ ಕಂಡು ಬಣ್ಣಗಳ, ಸಹಜ ಹೊಳಪಿನ,  ಯಾವುದೇ ರಾಸಾಯನಿಕವಿಲ್ಲದೆ ಕಾಡಲ್ಲಿ ಹಾಯಾಗಿ ಬೆಳೆದ ಮರಗಳು ನೀಡುವ ಈ ಹಣ್ಣುಗಳನ್ನು ತಿನ್ನುವ ಆನಂದವೇ ಬೇರೆ.

    ನಮ್ಮ ಹಣ್ಣುಗಳೇ ನಮಗ ಪಾಡ

    ಹೀಗೆ ಒಂದೊಂದು ಹಣ್ಣಿಗೂ ಒಂದೊಂದು ಕತೆ ತೆರೆದುಕೊಳ್ಳುತ್ತದೆ. ಅದಕ್ಕಾಗಿಯೇ ಅವನು ಹೇಳಿದ್ದು ಅದು ನಮಗಲ್ಲ ಎಂದು. ಏನಿದ್ದರೂ ನಮ್ಮ ಹಣ್ಣುಗಳೇ ನಮಗ ಪಾಡ. ಅಂದ ಹಾಗೆ ಅವನು ಚಿಕ್ಕವನಿದ್ದಾಗ ಹೇವರ್ಡ್ಸ್ 5000 ಜಾಹಿರಾತು ಆಗಷ್ಟೇ ಶುರುವಾಗಿತ್ತು. ಇದನ್ನೊಂದು ನಾನು ಕುಡಿದಿಲ್ಲ. ಒಮ್ಮೆ ಕುಡಿದು ನೋಡಬೇಕು ಎಂದಿದ್ದ. ಆಗ ನಾನು ಗಾಬರಿಯಾಗಿದ್ದೆ. ಅದೇ ಅವನು ಈಗ  ಈ ಹಣ್ಣು  ನಮಗಲ್ಲ ಎಂದು ಹೇಳಿದ್ದ. ಎಲ್ಲವೂ ಬಂದು ಬಂದು ಬೀಳುತ್ತಿರುವ ನಮ್ಮ ಮಾರುಕಟ್ಟೆಗಳಲ್ಲಿ ಈಗ ಆಯ್ಕೆಯೇ ಬಹಳ ಕಷ್ಟವಾಗಿದೆ. ಸಿಕ್ಕಿದ್ದನ್ನೆಲ್ಲ ಬಾಚಿಕೊಳ್ಳುವವರನ್ನು ಕಂಡಾಗ ದಿಗಿಲಾಗುತ್ತದೆ. ಒಂದು ಕಡೆ ನಾವು ಆತ್ಮ ನಿರ್ಭರರಾಗಬೇಕು. ಇನ್ನೊಂದು ಕಡೆ ಜಾಗತೀಕರಣದ ಹೊಡೆತಕ್ಕೆ ಪಕ್ಕಾಗಬೇಕು. ಎರಡೂ ಒಟ್ಟಿಗೇ ಹೇಗೆ ಸಾಧ್ಯ?

    Photo by Heather Ford on Unsplash

    ‘ಗ್ರಹಣ’ದ ಭೈರಪ್ಪ ಒಬ್ಬ ಪುರೋಗಾಮಿ ಲೇಖಕ

    ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪನವರ ಮೇಲೆ ವಿಮರ್ಶಕರ ಮತ್ತು ಚಿಂತಕರ ಹಲವು ಆಕ್ಷೇಪಗಳಿವೆ. ಅವರೊಬ್ಬ ಪ್ರತಿಗಾಮಿ ಲೇಖಕ, ಸ್ತ್ರೀಪಾತ್ರಗಳನ್ನು ಗೌಣವಾಗಿ ತೋರಿಸುತ್ತಾರೆ, ಜೀವವಿರೋಧಿ ಧೋರಣೆ ಅವರದು ಎಂದೆಲ್ಲ ಹೇಳುತ್ತಾರೆ. ಆದರೆ ಈ ಆಕ್ಷೇಪಗಳಿಗೆಲ್ಲ ಉತ್ತರ ಎನ್ನುವಂತೆ ಇದೆ ಅವರ `ಗ್ರಹಣ’ ಕಾದಂಬರಿ.

    -ಸತ್ಯಪ್ರಿಯ

    ನಮ್ಮ ಕಾಲದಲ್ಲಿ ಓದುಗರನ್ನು ದೊಡ್ಡ ಸಂಖ್ಯೆಯಲ್ಲಿ ಹಿಡಿದಿಟ್ಟುಕೊಂಡಿರುವ ಲೇಖಕರಲ್ಲಿ ಎಸ್‌.ಎಲ್‌. ಭೈರಪ್ಪನವರು ಒಬ್ಬರು. ವಿಮರ್ಶಕರಿಂದ ಮೆಚ್ಚುಗೆ ಮತ್ತು ಟೀಕೆಗಳನ್ನು ಹೆಚ್ಚಾಗಿ ಪಡೆದ ಲೇಖಕರೂ ಹೌದು. ಅವರೊಬ್ಬ ಬಲಪಂಥೀಯ ಲೇಖಕ. ತಮ್ಮ ಸಿದ್ಧ ಸೂತ್ರಗಳಿಗೆ ಘಟನೆಗಳನ್ನು ಜೋಡಿಸುತ್ತ ಕತೆಯನ್ನು ಹೆಣೆಯುತ್ತಾರೆ ಎಂದು ಎಡಪಂಥೀಯ ಚಿಂತಕರು ದೂರುತ್ತಾರೆ. ಭೈರಪ್ಪನವರು ತಮ್ಮ ಸ್ತ್ರೀ ಪಾತ್ರಗಳಿಗೂ ಸರಿಯಾದ ನ್ಯಾಯವನ್ನು ಒದಗಿಸಿಲ್ಲ ಎಂಬ ಇನ್ನೊಂದು ಆರೋಪವೂ ಸ್ತ್ರೀವಾದಿ ಚಿಂತಕರಿಂದ ಕೇಳಿ ಬಂದಿದೆ. ಅದಕ್ಕೆ ಭೈರಪ್ಪನವರು ವಿವಿಧ ವೇದಿಕೆಗಳಲ್ಲಿ ತಮ್ಮ ಸಮಜಾಯಿಷಿಯನ್ನು ನೀಡಿದ್ದಾರೆ.
    ಆದರೆ ಈ ಎಲ್ಲ ಟೀಕೆಗಳಿಗೂ ಸೃಜನಾತ್ಮಕ ಉತ್ತರವನ್ನು ನಾವು ಅವರ `ಗ್ರಹಣ’ ಕಾದಂಬರಿಯಲ್ಲಿ ನೋಡಬಹುದಾಗಿದೆ.

    `ಗ್ರಹಣ’ದ ಕಥಾ ವಸ್ತು ಮೈತಳೆಯುವುದು ದಕ್ಷಿಣ ಕರ್ನಾಟಕದಲ್ಲಿ. ಹಿಮವತೀ ನದಿಯ ದಡದಲ್ಲಿರುವ ಹಿಮಗರಿ ಎನ್ನುವ ಊರಿನಲ್ಲಿ. ಗ್ರಹಣದ ವೈಜ್ಞಾನಿಕ ವಿವರಣೆಯ ಉಪನ್ಯಾಸದೊಂದಿಗೇ ಕಾದಂಬರಿ ಆರಂಭವಾಗುವುದು. ಅತ್ತ ಹಳ್ಳಿಯೂ ಅಲ್ಲದ ಇತ್ತ ದೊಡ್ಡ ಪಟ್ಟಣವೂ ಅಲ್ಲದ ಊರು ಹಿಮಗಿರಿ. ಅಲ್ಲೊಂದು ನದಿ ಹಿಮವತಿ. ಅಲ್ಲಿ ಹಿಮಗಿರೀಶ್ವರ ಎಂಬ ಒಂದು ಮಠವಿದೆ. ಹೈಸ್ಕೂಲು, ಕಾಲೇಜು, ಆಸ್ಪತ್ರೆ, ಪ್ರಸೂತಿಗೃಹ ಮೊದಲಾದವು ಅಲ್ಲಿವೆ. ಆ ಊರಲ್ಲಿಯ ಮಠ ಅನಾದಿ ಕಾಲದ್ದು. ಐದು ತಲೆಮಾರಿನ ಹಿಂದೆ ಅದರ ಸ್ವಾಮೀಜಿ ಇದ್ದಕ್ಕಿದ್ದ ಹಾಗೆ ಮಠವನ್ನು ಬಿಟ್ಟು ಹೋಗುತ್ತಾರೆ. ಅವರು ತಮ್ಮ ಉತ್ತರಾಧಿಕಾರಿಯನ್ನೂ ನೇಮಿಸದೇ ಹೋಗಿದ್ದರು. ಇದರಿಂದಾಗಿ ಮಠ ಹಾಳುಬಿದ್ದಿತ್ತು. ಇಪ್ಪತ್ತು ವರ್ಷಗಳ ಹಿಂದೆ ಈಗಿನ ಸ್ವಾಮಿಗಳು ಹಿಮಾಲಯದಿಂದ ಬಂದರು. ಊರಿನ ಹಿರಿಯರ ಅಪೇಕ್ಷೆಯ ಮೇರಗೆ, ತಾಮ್ಮದೇ ಕೆಲವು ಷರತ್ತುಗಳನ್ನು ವಿಧಿಸಿ ಈ ಊರಿನಲ್ಲಿ ಉಳಿಯುವುದಕ್ಕೆ ಅವರು ಒಪ್ಪುತ್ತಾರೆ. ಅವರು ಮಠಕ್ಕೆ ಕಟ್ಟಡ ಕಟ್ಟಿಸಲಿಲ್ಲ. ಬದಲಿಗೆ ಹಿಮಗಿರೀಶ್ವರ ಕಲ್ಯಾಣ ಸಮಿತಿಯನ್ನು ಸ್ಥಾಪಿಸಿದರು. ಈ ಸಮಿತಿಯ ಆಶ್ರಯದಲ್ಲಿಯೇ ಸುತ್ತ ಹತ್ತೂರಿನಲ್ಲಿ ಹೈಸ್ಕೂಲುಗಳು, ಈ ಊರಿನಲ್ಲಿ ಕಾಲೇಜು, ಪ್ರಸೂತಿಗೃಹ, ಆಸ್ಪತ್ರೆ ಎಲ್ಲವೂ ಬಂದವು. ಸ್ವಾಮೀಜಿ ಮಠಕ್ಕೆ ಹೋಗದೆ ಇದ್ದರೂ ಅವರ ಮೇಲೆ ಜನರಿಗೆ ಭಕ್ತಿ ಹುಟ್ಟಿತು. ಸಮಿತಿಯು ಅವರನ್ನು ಮುಂದೆ ಇಟ್ಟುಕೊಂಡು ಹಣ ಸಂಗ್ರಹ ಮಾಡಿತು. ಜನಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿತು.

    ಕಾದಂಬರಿಯ ಇನ್ನೊಂದು ಮುಖ್ಯ ಪಾತ್ರ ಕಾಲೇಜಿನ ಪ್ರಿನ್ಸಿಪಾಲರು. ತಮ್ಮ ಬಡತನದ ಆರಂಭಿಕ ಜೀವನ, ಕಾಲೇಜಿನ ಪ್ರಿನ್ಸಿಪಾಲರಾಗುವಲ್ಲಿ ಸಮಿತಿಯ ಮತ್ತು ಸ್ವಾಮೀಜಿಯ ಕೃಪೆಯಿಂದಾಗಿ ತುಂಬ ವಿನೀತ ಸ್ವಭಾವದವರು. ಯಾವುದೇ ಸ್ವಂತದ ದೃಢ ನಿರ್ಧಾರ ಇಲ್ಲದವರು. ಆದರೆ ನ್ಯಾಯಯುತವಾಗಿ ಬದುಕಬೇಕು ಎನ್ನುವವರು. ಭೌತ ವಿಜ್ಞಾನದ ಪ್ರೊಫೆಸರ್‌ ಆಗಿದ್ದರೂ ಅವರ ಒಲವು ವೇದಾಂತದ ಕಡೆ ಇತ್ತು. ಪ್ರಿನ್ಸಿಪಾಲರು ಕಾಲೇಜಿನಲ್ಲಿ ಗ್ರಹಣದ ವೈಜ್ಞಾನಿಕ ವಿವರಣೆಯನ್ನು ನೀಡಿದರೆ ಅವರ ಗರ್ಭಿಣಿ ಪತ್ನಿ ಎಂ.ಎಸ್ಸಿ. ಪದವೀಧರೆ ಲಲಿತಮ್ಮ ಮನೆಯಲ್ಲಿ ಗ್ರಹಣದ ಕುರಿತ ಸಾಂಪ್ರದಾಯಿಕ ನಂಬಿಕೆಯನ್ನು ಪಾಲಿಸಿದ್ದರು. ಅದೇ ಕಾಲೇಜಿನಲ್ಲೆ ರಸಾಯನ ಶಾಸ್ತ್ರದ ಲೆಕ್ಚರರ್‌ ಆಗಿದ್ದ ಅವರು ಪ್ರಿನ್ಸಿಪಾಲರನ್ನು ಪ್ರೀತಿಸಿ ಮದುವೆಯಾದ ಮೇಲೆ ಕೆಲಸವನ್ನು ಬಿಟ್ಟಿದ್ದರು.

    ಸ್ವಾಮೀಜಿಯವರು ಅಧ್ಯಕ್ಷರಾಗಿದ್ದ ಸಮಿತಿಗೆ ಪ್ರಿನ್ಸಿಪಾಲರು ಕಾರ್ಯದರ್ಶಿಯಾಗಿದ್ದರು. ಕಾಲೇಜಿಗೆ ಹಣ ಕೂಡಿದ ಬಳಿಕ ಅದರ ಅಧ್ಯಕ್ಷತೆಯನ್ನು ಸ್ವಾಮೀಜಿ ಬಿಟ್ಟುಬಿಡುತ್ತಾರೆ. ತಾವಿಲ್ಲದೆ ಸಮಿತಿಯು ಮುಂದೆ ನಡೆಯುವುದನ್ನು ಕಲಿಯಬೇಕು ಎಂಬುದು ಅವರ ಇಚ್ಛೆಯಾಗಿತ್ತು. ಸ್ವಾಮೀಜಿಯವರ ಬಳಿಕ ಚಂದ್ರಣ್ಣ ಎಂಬ ಸ್ಥಳೀಯ ಎಂಎಲ್‌ಎ ಸಮಿತಿಯ ಅಧ್ಯಕ್ಷರಾಗುತ್ತಾರೆ.

    ಈ ಕಾದಂಬರಿಯ ಮತ್ತೊಂದು ಪಾತ್ರ ಯಜ್ಞೇಶ್ವರ ಶಾಸ್ತ್ರಿ. ಪುರೋಹಿತ ಮನೆತನವಾದರೂ ಪೌರೋಹಿತ್ಯದಿಂದ ಜೀವನ ಸಾಗಿಸಬೇಕಾದ ರಿಕ್ತ ಸ್ಥಿತಿ ಅವರದಲ್ಲ. ಸಾಕಷ್ಟು ಆಸ್ತಿ ಇತ್ತು.  ಶಾಸ್ತ್ರದಲ್ಲಿ ಸುತ್ತ ನಾಲ್ಕೂರಿಗೆ ಅವರು ಪ್ರಸಿದ್ಧರಾಗಿದ್ದರು. ಹಿಮಗಿರಿಯ ಕಲ್ಯಾಣ ಸಮಿತಿಯಲ್ಲಿ ಅವರೂ ಒಬ್ಬ ಸದಸ್ಯರಾಗಿದ್ದರು. ಸ್ವಾಮೀಜಿ ಊರಲ್ಲಿ ನೆಲೆಯಾಗುವುದಕ್ಕೆ ಅವರೂ ಒಬ್ಬ ಕಾರಣಪುರುಷ. ತಮ್ಮ ಮೂವತ್ತೊಂಬತ್ತನೆಯ ವಯಸ್ಸಿನ ತನಕ ಬ್ರಹ್ಮಚಾರಿಯೇ ಆಗಿದ್ದ ಪ್ರಿನ್ಸಿಪಾಲರು ಗೃಹಸ್ಥಾಶ್ರಮ ಪ್ರವೇಶಿಸುವುದಕ್ಕೆ ಶಾಸ್ತ್ರಿಗಳು ಮೊದಲು ವಿರೋಧಿಸಿದ್ದರು. ನಂತರ ಸ್ವಾಮಿಗಳೇ ಒಪ್ಪಿಗೆ ಕೊಟ್ಟಮೇಲೆ ಇವರು ಸುಮ್ಮನಾಗಿದ್ದರು. ನಂತರ ಪ್ರಿನ್ಸಿಪಾಲ್‌ ದಂಪತಿಯನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು.

    ಊರ ಯಜಮಾನ ಅಪ್ಪೇಗೌಡರು ದಾನ ಮಾಡುವುದರಲ್ಲಿ ಎತ್ತಿದ ಕೈ. ಅವರ ಮಾತಿಗೆ ಸುತ್ತ ಮೂವತ್ತು ಹಳ್ಳಿಯಲ್ಲಿ ಗೌರವವಿದೆ. ಎಪ್ಪತ್ತೈದು ವರ್ಷದ ಇವರ ದಾನ ಗುಣದಿಂದಲೇ ಊರಲ್ಲಿ ಹೈಸ್ಕೂಲು, ಕಾಲೇಜು, ಆಸ್ಪತ್ರೆ ಎಲ್ಲ ಬಂದದ್ದು. ಇವರ ಕನಸಿನಲ್ಲಿಯೇ ಮತ್ತೊಬ್ಬ ಸ್ವಾಮೀಜಿ ಬರುತ್ತಾರೆ ಎಂದು ಗೊತ್ತಾದದ್ದು ಮತ್ತು ಆ ಕಾರಣಕ್ಕಾಗಿಯೇ ಈಗಿನ ಸ್ವಾಮೀಜಿಯವರನ್ನು ಒತ್ತಾಯ ಮಾಡಿ ಉಳಿಸಿಕೊಂಡವರು ಅವರು.

    ಊರಿನ ಸ್ವಾಮೀಜಿ ಮಠಕ್ಕೆ ಹೋಗದೆ ಇದ್ದರೂ ತಮ್ಮದೇ ಒಂದು ಗುಡಿಸಲು ಕಟ್ಟಿಕೊಂಡು, ಒಂದು ಆಕಳನ್ನು ಸಾಕಿಕೊಂಡು ತಮ್ಮ ಅಡುಗೆಯನ್ನು ತಾವೇ ಮಾಡಿಕೊಂಡು ಒಪ್ಪತ್ತು ಊಟ ಮಾಡಿ ಬದುಕುತ್ತಿದ್ದರು. ಈ ಸ್ವಾಮೀಜಿಯ ನಿಜವಾದ ಹೆಸರು ಯಾರಿಗೂ ಗೊತ್ತಿಲ್ಲ. ಅದನ್ನು ಕೇಳಿ ತಿಳಿಯುವ ಅಗತ್ಯವೂ ಊರವರಿಗೆ ಬಂದಿರಲಿಲ್ಲ.

    ಊರಿನ ಆಸ್ಪತ್ರೆಯ ಡಾಕ್ಟರ್‌ ಸರೋಜಮ್ಮನನ್ನು ತಾವು ಮದುವೆಯಾಗುವುದಾಗಿ  ಸ್ವಾಮೀಜಿ ಅಪ್ಪೇಗೌಡರ ಬಳಿ ಒಂದು ದಿನ ಹೇಳಿದಾಗ ಅದನ್ನು ತಡೆಯುವುದಕ್ಕೆ  ನಡೆಯುವ ಹುನ್ನಾರಗಳೇ ಈ ಕಾದಂಬರಿಯ ವಸ್ತು. ಗ್ರಹಣದ ಕಾರಣದಿಂದಲೇ ಸ್ವಾಮೀಜಿಯವರ ಮನಸ್ಸು ಕಲುಷಿತಗೊಂಡಿದೆ ಎನ್ನುವುದು ಶಾಸ್ತ್ರಿಗಳ ಅಭಿಮತವಾಗಿತ್ತು. ಅದನ್ನೇ ಅವರು ಅಪ್ಪೇಗೌಡರಿಗೂ ಹೇಳುತ್ತಾರೆ. ಸ್ವಾಮೀಜಿಗಳು ಸನ್ಯಾಸವನ್ನು ತ್ಯಜಿಸಿ ಮದುವೆಯಾಗಿಬಿಟ್ಟರೆ ಇಡೀ ಊರಿನ ಅಧ್ಯಾತ್ಮಶಕ್ತಿ ಕುಸಿದುಬೀಳುತ್ತದೆ. ಅಧ್ಯಾತ್ಮ ಹೋದಮೇಲೆ ದಾನ ಹೇಗೆ ನಡೆದೀತು? ದಯೆ ಎಲ್ಲಿ ಉಳಿದೀತು? ಈ ಆತಂಕ ಅಪ್ಪೇಗೌಡರಿಗೆ ಮತ್ತು ಶಾಸ್ತ್ರಿಗಳಿಗೆ.

    ಸ್ವಾಮೀಜಿಯನ್ನು ಮದುವೆಯಾಗುವುದರಿಂದ ವಿಮುಖಗೊಳಿಸಬೇಕು ಎಂದು ಅಪ್ಪೇಗೌಡರು, ಶಾಸ್ತ್ರಿಗಳು,, ಎಂಎಲ್‌ಎ ಚಂದ್ರಣ್ಣ ಎಲ್ಲರೂ ಪ್ರಯತ್ನಿಸುತ್ತಾರೆ. ಅಲ್ಲದೇ ಡಾಕ್ಟರ್‌ ಸರೋಜಮ್ಮನ ಮನವೊಲಿಸಲೂ ನೋಡುತ್ತಾರೆ. ಯಾವುದೂ ನಡೆಯುವುದಿಲ್ಲ. ಈ ಸಂದಿಗ್ಧದ ಸಮಯದಲ್ಲಿಯೇ ಭಾರೀ ಮಳೆ ಸುರಿಯುತ್ತಿದ್ದ ಒಂದು ದಿನ ಸ್ವಾಮೀಜಿಯ ಗುಡಿಸಲಿನಲ್ಲಿ ಸರೋಜಮ್ಮ ಇದ್ದಾಗ ಇಬ್ಬರೂ ತಕ್ಷಣವೇ ಮದುವೆಯಾಗಿಬಿಡಬೇಕು. ಆ ಮೂಲಕ ಊರವರ ಒತ್ತಡದಿಂದ ತಪ್ಪಿಸಿಕೊಳ್ಳಬಹುದು. ಕೆಲವು ದಿನ ಆಡಿಕೊಳ್ಳುತ್ತಾರೆ, ನಂತರ ಸುಮ್ಮನಾಗಿ ಬಿಡುತ್ತಾರೆ ಎಂದು ನಿರ್ಧಾರ ಮಾಡುತ್ತಾರೆ. ಗಂಡು ಹೆಣ್ಣು ಪರಸ್ಪರ ಒಪ್ಪಿಕೊಂಡ ಮೇಲೆ ಮದುವೆ ಎನ್ನುವುದು ಕೇವಲ ಲೋಕಾರೂಢಿ. ಅದರ ಅಗತ್ಯವೂ ಇಲ್ಲ ಎಂಬ ಸ್ವಾಮೀಜಿಯ ಮಾತಿಗೆ ಡಾಕ್ಟರ್‌ ಸಮ್ಮತಿಸುತ್ತಾರೆ. ಅಲ್ಲಿ ಅವರಿಬ್ಬರ ದೈಹಿಕ ಮಿಲನವಾಗಿಬಿಡುತ್ತದೆ. ಅದೇ ಮಳೆಯಲ್ಲಿ ಗುಡಿಸಲು ಬಿದ್ದುಹೋಗುತ್ತಿರುತ್ತದೆ. ನಾಳೆ ನಿಮ್ಮ ಮನೆಗೇ ಬಂದುಬಿಡುತ್ತೇನೆ ಎಂದು ಡಾಕ್ಟರ್‌ಗೆ ಸ್ವಾಮೀಜಿ ಹೇಳುತ್ತಾರೆ. ಅದಕ್ಕೆ ಡಾಕ್ಟರ್‌ ಸಮ್ಮತಿಸುತ್ತಾರೆ.

    ಸನ್ಯಾಸವನ್ನು ತೊರೆದುದಕ್ಕಾಗಿ ಬಿಳಿ ಬಟ್ಟೆಯನ್ನು ಧರಿಸಿಕೊಂಡು, ಒಂದು ಟ್ರಂಕು ಹಿಡಿದು, ಆಕಳನ್ನು ಕರೆದುಕೊಂಡು ಬಂದ ಸ್ವಾಮೀಜಿಗೆ ಡಾಕ್ಟರ್‌ ಮನೆಯ ಎದುರು ದೊಡ್ಡ ನಾಟಕವನ್ನು ಎದುರಿಸಬೇಕಾಗುತ್ತದೆ. ಸ್ವಾಮೀಜಿ ಗೃಹಸ್ಥರಾಗುವುದರಿಂದ ಮನೋರೋಗಕ್ಕೆ ಒಳಗಾದ ಅಪ್ಪೇಗೌಡರು ಸಾಯುವ ಸ್ಥಿತಿಯನ್ನು ಮುಟ್ಟಿದ್ದರಿಂದ ಅವರನ್ನು ಮಂಚದಮೇಲೆ ಮಲಗಿಸಿಕೊಂಡು ಅಲ್ಲಿಗೆ ತಂದಿರುತ್ತಾರೆ. ಊರವರೆಲ್ಲ ಅಲ್ಲಿ ಸೇರಿರುತ್ತಾರೆ. ಸ್ವಾಮೀಜಿ ಜನರಿಗೆ ತಮ್ಮದು ಮತ್ತು ಡಾಕ್ಟ್ರಮ್ಮನದು ನಿನ್ನೆಯೇ ಮದುವೆ ಆಯಿತೆಂದೂ, ಜೊತೆಗೆ ಶೋಭನವೂ ಆಗಿದೆ ಎಂದೂ ಹೇಳುತ್ತಾರೆ. ಸರೋಜಮ್ಮನಿಗೆ ಊರವರ ಮುಂದೆ ಇದನ್ನು ಒಪ್ಪಿಕೊಳ್ಳುವಂತೆ ಹೇಳುತ್ತಾರೆ. ಯಾರೂ ನೋಡದೆ ಇದ್ದಾಗ ಅದೆಂಥ ಮದುವೆ ಎಂದು ಶಾಸ್ತ್ರಿಗಳು ಪ್ರಶ್ನಿಸುತ್ತಾರೆ. ಡಾಕ್ಟರ್‌ಗೆ ಉಭಯ ಸಂಕಟ. ತಾನು ಹೌದೆಂದರೆ ಮನೋರೋಗದಿಂದ ಅಪ್ಪೇಗೌಡ ಸತ್ತುಹೋಗುತ್ತಾರೆ. ಸ್ವಾಮೀಜಿಯನ್ನು ಉಳಿಸಿಕೊಳ್ಳುವುದೋ ಸಾಯುತ್ತಿರುವ ರೋಗಿಯನ್ನು ಉಳಿಸಿಕೊಳ್ಳುವುದೋ ಎಂಬ ತೊಳಲಾಟದಲ್ಲಿ ತಮ್ಮ ವೃತ್ತಿಧರ್ಮವಾದ ರೋಗಿಯನ್ನು ಉಳಿಸಿಕೊಳ್ಳುವುದಕ್ಕೆ ಮುಂದಾಗುತ್ತಾರೆ. ಕೋಪಗೊಂಡ ಸ್ವಾಮೀಜಿ ಅವರ ಸೊಂಟಕ್ಕೆ ಒದೆದು ಇಲ್ಲೇ ಸಾಯಿ ಎಂದು ಹೇಳಿ ಊರುಬಿಟ್ಟು ಹೊರಡುತ್ತಾರೆ.

    ಅಕ್ಕಪಕ್ಕದ ಊರುಗಳಲ್ಲಿ ಸುತ್ತಾಡುತ್ತಿದ್ದಾಗ ತಾವೇ ಸ್ಥಾಪಿಸಿದ ಶಾಲೆಯ ಮಕ್ಕಳು ಎದುರಾದಾಗ ಅವರನ್ನು ಕೂಡಿಸಿಕೊಂಡು ತಮ್ಮ ಮನದ ತೊಳಲಾಟವನ್ನು ವಿವರಿಸುತ್ತಾರೆ. ಆ ಮೂಲಕ ತಮಗೇ ಒಂದು ಸ್ಪಷ್ಟತೆಯನ್ನು ತಂದುಕೊಳ್ಳಲು ಪ್ರಯತ್ನಿಸುತ್ತಾರೆ. ಈ ನಡುವೆ ಸ್ವಾಮೀಜಿಯವರೊಂದಿಗೆ ದೈಹಿಕ ಮಿಲನ ಸಾಧಿಸಿದ್ದರಿಂದ ಡಾಕ್ಟ್ರಮ್ಮ ಬಸುರಿಯಾಗುತ್ತಾಳೆ. ತನ್ನ ಗರ್ಭವನ್ನು ತೆಗೆಸಿಕೊಳ್ಳಬೇಕು ಎಂದು ಆಲೋಚಿಸಿದ್ದ ಅವರಿಗೆ ವಿದ್ಯಾರ್ಥಿಗಳೊಂದಿಗೆ ನಡೆದ ಮುಖಾಮುಖಿಯಲ್ಲಿ ಸ್ವಾಮೀಜಿಯದು ತಪ್ಪಿಲ್ಲ ಎನ್ನಿಸುತ್ತದೆ. ವಿದ್ಯಾರ್ಥಿಗಳ ಗುಂಪಿನ ಮುಂದೆ ತನಗೂ ಸ್ವಾಮೀಜಿಗೂ ಮದುವೆಯಾಗಿದೆ. ಅವರ ಮಗುವಿಗೆ ತಾನು ತಾಯಿಯಾಗುತ್ತಿದ್ದೇನೆ ಎಂದು ಕೂಗಿ ಹೇಳುತ್ತಾರೆ. ಗರ್ಭ ತೆಗೆಸಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ.

    ಮಠ, ಪೀಠ, ಸ್ವಾಮೀಜಿ ಇವುಗಳ ಮೂಲಕ ಜನಸಾಮಾನ್ಯರ ಧಾರ್ಮಿಕ ನಂಬಿಕೆಯನ್ನು ಶೋಷಣೆ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಬೇಕೆನ್ನುವ ಜನರು ಒಂದು ಕಡೆ, ಒಳ್ಳೆಯ ಕಾರ್ಯವನ್ನು ಮಾಡುವುದಕ್ಕೆ ಇವು ಯಾವುದರ ಅಗತ್ಯವೂ ಇಲ್ಲ, ಅಂಥ ಅಗತ್ಯ ಕಂಡು ಬಂದರೆ ಅದು ಯಶಸ್ವಿಯಾಗುವುದಿಲ್ಲ, ಅಂಥದ್ದು ಇರಬೇಕಾಗಿಯೇ ಇಲ್ಲ ಎಂದು ನಂಬುವ ಸ್ವಾಮೀಜಿ ಇನ್ನೊಂದು ಕಡೆ. ಸ್ವಾಮೀಜಿಯ ನಂಬಿಕೆಗೆ ಅಪ್ಪೇಗೌಡರು, ಶಾಸ್ತ್ರಿಗಳು, ಚಂದ್ರಣ್ಣ ಇವರೆಲ್ಲರೂ ಅಡ್ಡಿಯಾಗುತ್ತಾರೆ. `ನಿನ್ನನ್ನು ರಕ್ಷಿಸ್ತೀನಿ ಅನ್ನೂ ಅಹಂಕಾರ ನನಗಿಲ್ಲ. ಆದರೆ ಅಕಸ್ಮಾತ್‌ ಸಾಯಬೇಕಾಗಿ ಬಂದರೆ ನಿನ್ನನ್ನು ಬಿಟ್ಟುಕೊಟ್ಟು ನಾನು ಉಳಿಯೂದಿಲ್ಲ’ ಎಂಬ ಭರವಸೆಯನ್ನು ನೀಡಿದ್ದ ಸ್ವಾಮೀಜಿಗೆ ಮಹತ್ವದ ಕ್ಷಣದಲ್ಲಿ ಕೈಕೊಟ್ಟ ಸರೋಜಮ್ಮ, ಅವರನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ.
    ಕಾದಂಬರಿಯಲ್ಲಿ ಸ್ವಾಮೀಜಿ ಮತ್ತು ಸರೋಜಮ್ಮನ ಪಾತ್ರವನ್ನು ಅತ್ಯಂತ ಗಟ್ಟಿಯಾಗಿ, ಜೀವಪರವಾಗಿ, ನ್ಯಾಯಪರವಾಗಿ ಭೈರಪ್ಪನವರು ಕಟ್ಟಿಕೊಟ್ಟಿದ್ದಾರೆ. ಮದುವೆಯೆಂಬ ತೋರಿಕೆಯ ಆಡಂಬರದ ಆಚರಣೆಗಿಂತಲೂ ಪರಸ್ಪರರ ನಂಬಿಕೆ ಮುಖ್ಯ ಎಂದು ಅವರು ಹೇಳುತ್ತಾರೆ. ಕೊನೆಯಲ್ಲಿ ಶಾಲೆಯ ಮಕ್ಕಳೇ ಸ್ವಾಮೀಜಿಗಳಿಗೆ ಭಾಸ್ಕರ ಎಂಬ ಹೆಸರನ್ನು ನೀಡುತ್ತಾರೆ. ಭಾಸ್ಕರ ಎಂಬುದು ಸೂರ್ಯನ ಪರ್ಯಾಯ ನಾಮ. ಸನ್ಯಾಸವೆಂಬ ಗ್ರಹಣದಿಂದ ಮುಕ್ತರಾದ ಸ್ವಾಮೀಜಿ ಭಾಸ್ಕರನಾಗಿ ಹೊಳೆಯುತ್ತಾರೆ ಎಂದು ಸಾಂಕೇತಿಕವಾಗಿ ಹೇಳುತ್ತಾರೆ.

    `ಗ್ರಹಣ’ ಕಾದಂಬರಿ ಮೊದಲ ಮುದ್ರಣವನ್ನು ಕಂಡಿದ್ದು 1972ರ ಜುಲೈನಲ್ಲಿ. ಆದರೆ ಅದಕ್ಕಿಂತ ನಾಲ್ಕು ವರ್ಷ ಮೊದಲೇ ಈ ಕಾದಂಬರಿಯನ್ನು ಅವರು ಬರೆದದ್ದು. ಈ ಮಾಹಿತಿ ಅವರ ಆ ಕೃತಿಯಲ್ಲಿಯ ಕೃತಜ್ಞತೆ ಮಾತುಗಳಲ್ಲಿ ಇದೆ. ಈ ಕಾದಂಬರಿಯಲ್ಲಿ ಅವರು ಅಪ್ಪಟ ಪುರೋಗಾಮಿ, ಸ್ತ್ರೀಪರ ನಿಲವು ಹೊಂದಿದವರು ಮತ್ತು ವೈಜ್ಞಾನಿಕ ಮನೋಭಾವದವರು, ಸ್ಥಾಪಿತ ಮೌಲ್ಯಗಳ ವಿರುದ್ಧ ಜೀವಪರ ಧೋರಣೆ ಹೊಂದಿದವರು ಎನ್ನುವುದು ತಿಳಿಯುತ್ತದೆ. ನಂತರದ ದಿನಗಳಲ್ಲಿ ಅವರ ವೈಚಾರಿಕ ನಿಲವಿನಲ್ಲಿ ಆಗಿರುವ ಬದಲಾವಣೆಗೆ ಕಾರಣಗಳೇನು, ಪ್ರತಿಗಾಮಿ ಎನ್ನುವುದಾದರೆ ಯಾವ ಕಾರಣಗಳಿಗಾಗಿ ಎನ್ನುವುದು ಒಂದು ಅಧ್ಯಯನಯೋಗ್ಯ ವಿಷಯವಾಗಿದೆ.

    ಮೊಬೈಲಿನೊಳಗೆ ಲಾಕ್ ಆಗುತ್ತಿರುವ ನಾವು!

    ನಯನ್ ಕುಮಾರ್

    ನಾವು ನಮ್ಮ ಕಾಲೇಜು, ಕ್ಲಾಸ್‌, ಕ್ಲಾಸ್‌ಬಂಕ್, ಒಂದಷ್ಟು ಕಿರಿಕ್‌, ಪರೀಕ್ಷೆ ತಯಾರಿ ಅಂತೆಲ್ಲಾ ಬ್ಯುಸಿಯಾದ್ದ ನಮ್ಮ ವೇಗಕ್ಕೆ ಕೊರೋನಾ ಎಂಬ ಕ್ರಿಮಿ ಪೂರ್ಣವಿರಾಮವಿಟ್ಟಿತು. ಬೇಕು ಬೇಕು ಅಂತ ಕಾಯ್ತಿದ್ದ ರಜಾ ದಿನಗಳು ಈಗ ಜಡಿಮಳೆಯಂತೆ ನಿಲ್ಲುತ್ತಲೇ ಇಲ್ಲ. ಕಾಲೇಜು ದಿನಗಳಲ್ಲಿ ಪರೀಕ್ಷೆಗೆ ಹೆದರಿ ಅಲ್ಪಸ್ವಲ್ಪ ಓದುತ್ತಿದ್ದವರಿಗೆಲ್ಲ ಈಗ, “ಏನೇ ಆದ್ರು ಈ ಕೊರೋನಾ ಈ ವರ್ಷ ಕಡಿಮೆ ಆಗಲ್ಲ ”  ಅನ್ನೊ ದೈರ್ಯ ಬಂದಿದೆ.

    ಕಾಲೇಜು ನಡಿತಾ ಇದ್ದಾಗ ನಮ್ಮ ಕೈಯಲ್ಲಿರೋ ಮೊಬೈಲಿಗೆ ಉಸಿರಾಡೊದಕ್ಕಾದರೂ ಸ್ವಲ್ಪ ಸಮಯ ಸಿಗ್ತಾ ಇತ್ತು. ಆದ್ರೆ‌ ಈಗ ಹಾಗಿಲ್ಲ. ಇಡೀ ದೇಶ ಕೊರೋನಾದಿಂದ ನರಳಾಡುತ್ತಿದೆ, ನಮಗೂ ಬೇಡದ ವಿರಾಮ ಸಿಕ್ಕಿದೆ, ಆದ್ರೆ ಮೂಬೈಲಿಗೆ ಮಾತ್ರ ಇಪ್ಪತ್ತನಾಲ್ಕು ಗಂಟೆ ಕೆಲಸಾನೆ. ಮೊದಲೇ ಪುಸ್ತಕಗಳನ್ನ ಓದುವುದು ಅಷ್ಟಕ್ಕಷ್ಟೆ, ಈಗಂತು ಅವುಗಳ ನೆನಪೇ‌ ಇಲ್ಲ. ವಾಟ್ಸಾಪ್ , ಫೇಸ್ ಬುಕ್, ಯೂಟ್ಯೂಬ್ ಅಂತಲೇ ದಿನ ಕಳೆದು ಹೋಗುತ್ತಿದೆ.

    ದಿನ ಆರಂಭವಾಗೋದೆ ತಡ ಕೈಯಲ್ಲಿ ಮೊಬೈಲ್ ಕುಣಿಯುತ್ತಿರುತ್ತದೆ. ಅನಂತರ ರಾತ್ರಿ ಮಲಗುವವರೆಗೆ ನಾವು ಮತ್ತು ನಮ್ಮ ಮೊಬೈಲ್ ಮಾತ್ರವೆ ನಮ್ಮೊಳಗೆ. ಸುತ್ತಮುತ್ತ ಏನಾಗುತ್ತಿದೆ, ಯಾವಾಗ ಪರೀಕ್ಷೆ ನಡೆಸ್ತಾರೆ, ಪರೀಕ್ಷೆ ಆಗುವುದಿದ್ದರೆ ಅದಕ್ಕೆ ನಾವೇನು ತಯಾರಿ ಮಾಡಬೇಕು ಇದ್ಯಾವುದೂ ನಮ್ಮ ತಲೆಯಲ್ಲಿಲ್ಲ. ನಾವು ಪ್ರಸ್ತುತ ಯೋಚಿಸುತ್ತಿರುವುದು ಕೇವಲ ನಾಳೆಯ ಉಚಿತ ಡೇಟಾ ಹೇಗೆ ಖಾಲಿ ಮಾಡುವುದು ಎಂಬುದನ್ನಷ್ಟೆ!

    ಒಂದಷ್ಟು ಬುದ್ದಿವಂತ ಎನಿಸಿಕೊಂಡವನೂ ಈ ಕೊರೋನಾ ರಜೆಯಿಂದಾಗಿ ದಡ್ಡನಾಗುತ್ತಿದ್ದಾನೆ. ಮೊಬೈಲ್ ಎಂಬ ಮಾಯಾಲೋಕದಲ್ಲಿ ಬಿದ್ದು ತನ್ನನ್ನು ತಾನೇ ಮರೆಯುತ್ತಿದ್ದಾನೆ. ನಾವದನ್ನು ಬಿಟ್ಟಿರಲಾರದಷ್ಟು ಅಂಟಿಕೊಂಡಿದ್ದೆವೆ. “ಊಟ ಇಲ್ಲದಿದ್ದರೂ ಪರವಾಗಿಲ್ಲ, ಮೊಬೈಲ್ ಡೇಟಾ ಇಲ್ಲದಿದ್ದರೆ ಬದುಕಲಾರೆ” ಎಂಬಷ್ಟು ಅದಕ್ಕೆ ಜೋತುಬಿದ್ದಿದೇವೆ. ಪ್ರಸ್ತುತ ಯುವ ಸಮುದಾಯವನ್ನು ಕೊರೋನಾಗಿಂತಲು ಪ್ರಬಲವಾಗಿ ಲಾಕ್ ಮಾಡಿರುವುದು ಮೊಬೈಲ್. ಅದರೊಳಗೆಯೇ ನಮಗೆ ಲಾಕ್ ಡೌನ್…

    ಈಗಲೇ‌ ಇದರಿಂದ ನಾವು ನಮ್ಮನ್ನು ಬಿಡುಗಡೆ ಮಾಡಿಕೊಳ್ಳದೇ ಹೋದರೆ ನಮ್ಮನ್ನೇ ನಾವೆಲ್ಲೋ ಕಳೆದುಕೊಳ್ಳಬಹುದು.

    ನಯನ್‌ ಕುಮಾರ್‌ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿ ಅಂತಿಮ ಪದವಿ ಓದುತ್ತಿದ್ದಾರೆ.‌ ಎನ್‌ಎಸ್‌ಎಸ್‌ ಮೂಲಕ ನಟನೆ, ಮಿಮಿಕ್ರಿ, ಏಕಪಾತ್ರಾಭಿನಯ, ಹಾಡು, ಬರವಣಿಗೆಗಳಲ್ಲಿ ಪಳಗಿದ್ದಾರೆ. ಕಿರುಚಿತ್ರಗಳ ನಟನಾಗಿ, ಸಾಹಿತ್ಯಕಾರನಾಗಿ ಬಹುಮಾನ ಗೆದ್ದವರು. ಆರ್ಥಿಕ ಬೆಂಬಲವೇನೂ ಇಲ್ಲದಿದ್ದರೂ ಪ್ರತಿಭೆಯಿಂದಲೇ ತನ್ನಂತಹ ಹಲವರಿಗೆ ಮಾದರಿಯಾಗಿದ್ದಾರೆ.

    ಕಿರಣ್ ಮಾಡಾಳು

    ಇಲ್ಲಿ ಪ್ರಕಟವಾಗಿರುವ animated illustration ರಚಿಸಿದವರು ಕಿರಣ್ ಮಾಡಾಳು. ಸಾಂಪ್ರದಾಯಿಕ ಚಿತ್ರಕಲೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡಿ ಅದು ಮತ್ತಷ್ಟು ಪರಿಣಾಮಕಾರಿಯಾಗುವಂತೆ ಮಾಡಬಲ್ಲ ನಾಡಿನ ಕೆಲವೇ ಕಲಾವಿದರಲ್ಲಿ ಇವರೂ ಕೂಡ ಒಬ್ಬರು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ. 3D ಚಿತ್ರ ರಚನೆಯಲ್ಲಿ ವಿಶೇಷ ಪ್ರಾವೀಣ್ಯ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156

    ಎಷ್ಟೇ ಚಪ್ಪಲಿ ಸವೆದರೂ ಬಾಲ್ಯದ ನೆನಪು ಸವೆಯಲ್ಲ

    ಪ್ರತೀ ಮಗುವಿನ ಮುದ್ದಾದ ಚಟುವಟಿಕೆ ಅಂದ್ರೆ ಅದು ಬಾಗಿಲಲ್ಲಿ ಬಿಟ್ಟ ದೊಡ್ಡವರ ಚಪ್ಪಲಿಯಲ್ಲಿ ತನ್ನ ಪುಟ್ಟ ಪಾದಗಳನ್ನಿಟ್ಟು ನಡೆಯಲು ಪ್ರಯತ್ನಿಸುವುದು .

    ಬಾಲ್ಯದಲ್ಲಿ ನಾವುಗಳು ಚಪ್ಪಲಿ ಇಲ್ಲದೇ ತುಂಬಾ ದಿನಗಳನ್ನ ಕಳೆದಿದೀವಿ.ಹೊಸ ಚಪ್ಪಲಿಗಳನ್ನ ಕೊಂಡು ಆನಂದಿಸಿದೀವಿ.ಅನುಭವಿಸಿದೀವಿ ಹಾಗೇ ಕಳ್ಕೊಂಡು ದುಖ್ಹಿಸಿದೀವಿ .

    ಆಗೆಲ್ಲಾ ಚಪ್ಪಲಿ ತಗೋಬೇಕು ಅನ್ನೋದೇ ಒಂದು ದೊಡ್ ಸುದ್ದಿ .ಮನೆಯವರು, ಅಕ್ಕಪಕ್ಕದ ಮನೆಯವರು, ಫ್ರೆಂಡ್ಸು ಎಲ್ಲಾ ಯಾವ್ ಚಪ್ಪಲಿ ತಗೋತೀಯಾ ? ಕಂಪನಿ ಚಪ್ಪಲಿ ತಗೋ ಒಳ್ಳೇ ಬಾಳಿಕೆ ಬರುತ್ತೆ , ಅದು ಕಚ್ಚಲ್ಲ , ಕಿತ್ತೋದ್ರೆ ಪಟ್ಟೀ ಹಾಕಿಸ್ಕೋಬಹುದು ಅಂತೆಲ್ಲಾ ಸಲಹೆ ಸೂಚನೆಗಳನ್ನ ಕೊಡುತ್ತಿದ್ದರು.

    ಬ್ರಾಂಡೆಡ್ ಚಪ್ಪಲಿ ಕಚ್ಚಲ್ಲ ಅನ್ನೋ ಬಲವಾದ ನಂಬಿಕೆ ಅವರಲ್ಲಿತ್ತು . ಮನೆಯವರು ನಮಗೆ ಕೊಡಿಸ್ತಿದ್ದಿದ್ದೇ ರಬ್ಬರಿನ ಹವಾಯಿ ಚಪ್ಪಲಿ. ಅದರಲ್ಲಿ ಕಲರಿನ ಅಯ್ಕೆಗೆ ಇದ್ದದ್ದು ಎರಡೇ ಆಪ್ಷನ್ ಒಂದು ನೀಲಿ ಬಣ್ಣದ್ದು ಮತ್ತೊಂದು ಕ್ರೀಂ ಬಣ್ಣದ್ದು.ಹೊಸತರಲ್ಲಿ ಅದೊಂಥರ ಮಜವಾದ ವಾಸನೆ ಇರೋದು.

    ಅಪ್ಪ ಅಂಗಡೀಗೆ ಕರ್ಕೊಂಡೋಗಿ ಸೈಜ್ ಆಗುತ್ತಾ ನೋಡು ಎರಡೂ ಒಂದೇ ನಂಬರ್ರಾ ನೋಡು…. ಎಂದು ಚೆಕ್ ಮಾಡಿ ಕೊಡುಸ್ತಾಯಿದ್ರು. ಕಳಕೋಬೇಡ ಅಂತ ಎಚ್ಚರಿಸ್ತಾಯಿದ್ರು .ಅಕಸ್ಮಾತ್ ಚಪ್ಪಲಿ ಏನಾದ್ರೂ ಕಳ್ಕೊಂಡ್ ಮನೇಗ್ ಬಂದ್ರೆ ನಮಗಿರೋದು ಹಬ್ಬ ….ಇನ್ನೂ ಸ್ಟಿಕ್ಕರ್ರೇ ಕಿತ್ತಿರ್ಲಿಲ್ಲ ಆಗಲೇ ಕಳದಾಕ್ಕೊಂಡವ್ನೆ , ನಿಮ್ಮಪ್ಪ ಬರಲಿ ಇರು ನಿನಗೈತೆ , ಎಷ್ಟು ಧೈರ್ಯ ಇದ್ರೆ ಹೊಸಾ ಚಪ್ಪಲಿ ಕಳ್ಕೊಂಡು ಬರ್ತೀಯ , ಮೈಗೆ ಎಣ್ಣೆ ಹಚ್ಕೋ , ಇವತ್ತು ಎಡಗಡೆ ಎದ್ದಿದೀಯಾ ಅನ್ಸುತ್ತೆ……. ಹಿಂಗೆಲ್ಲಾ ಹೆದರಿಸಿ ಇಟ್ಬಿಡೋವ್ರು.

    ಮನೆಗೆ ಅಪ್ಪ ಬಂದ್ ತಕ್ಷಣ ಅವರಿಗೆ ಸುದ್ದೀ ಮುಟ್ಸವ್ರು. ಅಪ್ಪ ಮನೆಯವರ ಮಾತಿನಂತೆ ಭಾರಿಸಿ ಕೆಡವವ್ರು. ನಮ್ಮ ನೋವು ಅಳುವಿನ ಆಕ್ರಂದನ ಅಕ್ಕಪಕ್ಕದ ಮನೆಯವರಿಗೂ ಮುಟ್ಟೋದು. ಅವರೂ ಹೊಸ ಚಪ್ಪಲಿ ಕಳದಾಕ್ಕೊಂಡಿರೋದಕ್ಕೆ ಹೊಡೀತಿರೋದು ಅಂತ ಮಾತಾಡ್ಕೋಳೋವ್ರು .

    ಅತ್ತು ಸುರಿದು ಮಲಗಿ ಬೆಳಿಗ್ಗೆ ಎದ್ದು ಮುಖ ಗಂಟಾಕ್ಕೊಂಡು ಮೂಲೆಯಲ್ಲಿ ಕುಂತಿದ್ದಾಗ ” ಗೋಪಿ ಮನೇಲಿ ಬಿಟ್ಟಿದ್ನಂತೆ ಅಂತ ಯಾರೋ ಮಾತನಾಡಿಕೊಳ್ಳುವ ವಾಯ್ಸ್ ಕಿವಿಗೆ ಬೀಳೋದು , ಅದನ್ನ ಕೇಳ್ತಾಇದ್ದಂಗೆ ಮುಖ ಅರಳೋಗೋದು , ಗೋಪಿ ತಗೊಂಡು ಬಂದು ಕೊಡೋವ್ನು .ಗೋಪಿಯನ್ನು ಧನ್ಯತಾಭಾವದಿಂದ ನೋಡಿ ಅವನಿಂದ ಚಪ್ಪಲಿ ಈಸ್ಕೊತಾ ಇದ್ವಿ.

    ಅಯ್ಯೋ ಮಗನನ್ನು ಅನ್ಯಾಯವಾಗಿ ಹೊಡೆದುಬಿಟ್ವಲ್ಲ ಅನ್ನೋ ಸಣ್ಣ ಪಶ್ಚಾತ್ತಾಪಾನೂ ಮನೆಯವರ ಮುಖದಲ್ಲಿ ಕಾಣ್ತಿರಲಿಲ್ಲ.ಬದಲಾಗಿ ಇನ್ನೊಂದ್ಸಲಾ ಯಾರ ಮನೇಲಾದ್ರೂ ಬಿಟ್ಟುಬಾ ಅದರಲ್ಲೇ ಬೀಳ್ತಾವೇ ಅಂತಾನೇ ಹೇಳೋವ್ರು . ಕೆಲವೊಮ್ಮೆ ರಾತ್ರಿ ಕನಸಿನಲ್ಲಿ ಚಪ್ಪಲಿ ಕಳೆದುಕೊಂಡ ಕೆಟ್ಟ ಕನಸು ಬೇರೇ ಬೀಳೋದು .

    ಭಾನುವಾರಾನೋ ರಜಾದಿನಾನೋ ಅದನ್ನ ತೊಳೆದು ಬಿಸಿಲಲ್ಲಿ ಗೋಡೆಗೆ ಒರಗಿಸಿ ನಿಲ್ಲಿಸ್ತಾಇದ್ವಿ . ಕಿತ್ತೋದ್ರೆ ರಿಪೇರಿ ಮಾಡಿಸ್ಕೋತಾ ಇದ್ವಿ. . ಪಟ್ಟಿ ಕಿತ್ತು ಹೊಲಿಸಲಿಕ್ಕೆ ಆಗುವುದಿಲ್ಲ ಅನ್ನೊ ಸಂದರ್ಭದಲ್ಲಿ ಹೊಸ ಪಟ್ಟೀನ ಹಾಕಿಸ್ಕೋತಿದ್ವಿ .ಐದಾರು ಜನ ಫ್ರೆಂಡ್ಸು ಹೊಗ್ತಿದ್ರೆ ಹಿಂದ್ಗಡೆಯಿಂದ ತುಳಿದೋ , ಕಲ್ಲಿಗೆ ಎಡವೋ, ಗುಂಪಿನಲ್ಲಿ ಒಬ್ಬನ್ದಾದ್ರೂ ಚಪ್ಲಿ ಕಿತ್ತೋಗ್ತಿರೋದು ಉಳಿದವರು ಅವನಿಗೆ ಪಿನ್ ಹಾಕೋ , ಪಟ್ಟಿ ಸಿಕ್ಸು , ಹಿಂಗ್ ನಡೀ, ಹಿಂಗೆಲ್ಲಾ ಐಡಿಯಾ ಕೊಡ್ತಿರೋವ್ರು .ಸ್ಕೂಲಿಗೆ ಹೊಸಾ ಚಪ್ಪಲಿ ಹಾಕ್ಕೊಂಡೋದ್ರೆ ಮೇಷ್ಟ್ರು ಸಹ ಎಷ್ಟೋ ಚಪ್ಲಿ ? ಎಲ್ಲಿ ತಗೊಂಡೆ ಅಂತ ಕೇಳೋವ್ರು .

    ಅಗೆಲ್ಲಾ ಮನೆಗಳಲ್ಲಿ ಚಪ್ಪಲಿ ಸ್ಟ್ಯಾಂಡ್ ಅಂತ ಇರ್ತಿರಲಿಲ್ಲ ಯಾಕಂದ್ರೆ ಮನೇಲಿ ಎಷ್ಟು ಜನ ಇರ್ತಿದ್ರೋ ಅಷ್ಟೇ ಜೊತೆ ಚಪ್ಪಲಿಗಳು ಇರ್ತಿದ್ವು , ಒಂದು ಜೊತೆ ಹಾಳಾಗೋವರೆಗೂ ಇನ್ನೊಂದ್ ಜೊತೆ ತಗೋತಿರ್ಲಿಲ್ಲ .
    ಅಪ್ಪ ಮನೇಗೆ ಬಂದಿದಾರ ಇಲ್ವಾ ಅನ್ನೋದನ್ನ ಅವರ ಚಪ್ಪಲಿಯಿಂದ ಕಂಡುಹಿಡೀತಿದ್ವಿ . ಸಾಮಾನ್ಯವಾಗಿ ಅಪ್ಪನದ್ದು ಚರ್ಮದ ಚಪ್ಪಲಿಯಾಗಿರೋದು ಸಂಸಾರದ ಭಾರ ಹೊತ್ತು ತಿರುಗುತ್ತಿದ್ದಕ್ಕೊ ಏನೋ ಅವರ ಚಪ್ಪಲಿ ನನಗೆ ನೆನಪಿರುವಂತೆ ಸದಾ ಸವೆದಂತೆಯೇ ಕಾಣುತ್ತಿತ್ತು .ಅದಕ್ಕವರು ಸೋಲ್ ಹಾಕಿಸುತ್ತಿದ್ದರು . ಮಳೆ ಬಂದ್ರೆ ನೆಂದೋಗುತ್ತೆ ಅಂತ ಓಡೋಗಿ ಚಪ್ಪಲಿಗಳನ್ನ ಮನೆ ಒಳಗೆ ಇಡ್ತಾಇದ್ವಿ .

    ಆಗೆಲ್ಲಾ ಬಸ್ ಸ್ಟ್ಯಾಂಡಿನ ಸಮೀಪ ಫುಟ್ ಪಾತಿನ ಮೇಲೆ ಚಪ್ಪಲಿ ರಿಪೇರಿ ಮಾಡುವವರು ತುಂಬಾ ಮಂದಿ ಕಾಣುತ್ತಿದ್ದರು . ಅವರ ಬಳಿ ನಾವು ಹೋಗಿ ಎಷ್ಟಾಗುತ್ತೆ ಅಂತ ಮುಂಚೆಯೇ ಮಾತಾಡಿ ಬಾರ್ಗೇಯ್ನ್ ಮಾಡತ್ತಿದ್ವಿ.ರಿಪೇರಿ ಮಾಡಿಕೊಟ್ಟ ಮೇಲೆ ಎಷ್ಟು ದಿನ ಬರುತ್ತೆ ಅಂತ ಕೇಳ್ತಿದ್ವಿ.

    ಈಗೆಲ್ಲಾ ಬದಲಾಗಿದೆ …. ಮನೆ ಮನೇಗೆ ಚಪ್ಪಲಿ ಗೂಡು ಶೂ ಸ್ಟ್ಯಾಂಡ್ ಗಳಿವೆ .ನೂರಾರು ಬ್ರಾಂಡ್ ಗಳಿವೆ . ಮನೆ ಒಳಗೆ ಉಪಯೋಗಿಸಕ್ಕೇ ಚಪ್ಪಲಿಗಳಿವೆ . ಯಾವ್ ಶೂ ಹಾಕ್ಕೋಬೇಕು ಅಂತ ಕನ್ಫೂಸ್ ಆಗೋ ಅಷ್ಟು ಜೊತೆ ಷೂಗಳಿರುತ್ತವೆ. ಕಳದೋದ್ರೆ ತಲೇನೇ ಕೆಡಸ್ಕೋಳಲ್ಲ ದರಿದ್ರ ಹೋಯ್ತು ಅಂದ್ಕೋತಾರೆ .

    ಏನೇ ಹೇಳಿ….. ಬದುಕಲ್ಲಿ ಎಷ್ಟೇ ಚಪ್ಪಲಿ ಸವೆದರೂ …..ಬದುಕು ಸವೆದರೂ ….ಬಾಲ್ಯದ ನೆನಪುಗಳು ಮಾತ್ರ ಯಾವುದೇ ಕಾರಣಕ್ಕೂ ಸವೆಯಲ್ಲ .

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    error: Content is protected !!