16.8 C
Karnataka
Monday, November 25, 2024
    Home Blog Page 163

    ಅರ್ಥಪೂರ್ಣವಾಗಿರಲಿ ರಕ್ಷಾಬಂಧನ

    ಇಂದು ನಾಡಿನಾದ್ಯಂತ ರಕ್ಷಾ ಬಂಧನದ ಸಡಗರ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲೂ ಈ ಹಬ್ಬ ಜನಪ್ರಿಯವಾಗುತ್ತಿದೆ. ಈ ಪದ್ಧತಿ ಆರಂಭವಾದ ಬಗೆ, ಅದರ ಪೌರಾಣಿಕ ಹಿನ್ನಲೆ, ಐತಿಹಾಸಿಕ ಕಾರಣ ಮತ್ತು ಈಗಿನ ದಿನ ಮಾನದಲ್ಲಿ ಅದನ್ನುಆಚರಿಸುತ್ತಿರುವ ಬಗೆಯನ್ನು ಕುರಿತು ಕನ್ನಡಪ್ರೆಸ್.ಕಾಮ್ ನ ಜನಪ್ರಿಯ ಬರಹಗಾರ ಹಾಗೂ ಚಿಂತಕ ಮಂಜುನಾಥ ಬೊಮ್ಮಘಟ್ಟ ತಮ್ಮ ಅಭಿಪ್ರಾಯವನ್ನು ಈ ಪಾಡ್ಕಾಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಆಲಿಸಿ , ಪ್ರಕಿಕ್ರಿಯಿಸಿ ಮತ್ತು ಹಂಚಿ.

    ಇದನ್ನೂ ಓದಿ : ಕರೋನದಿಂದಾಗಿ ತವರಿಗೆ ಹೋಗಲಾರದಿದ್ದರೇನಂತೆ ಆನ್ಲೈನ್ ನಲ್ಲೇ ರಾಖಿ ಕಳಿಸಿ

    ಕರೋನದಿಂದಾಗಿ ತವರಿಗೆ ಹೋಗಲಾರದಿದ್ದರೇನಂತೆ ಆನ್ಲೈನ್ ನಲ್ಲೇ ರಾಖಿ ಕಳಿಸಿ

    ‘ಹೆಣ್ಣಿನ ಜನುಮಕ್ಕೆ ಅಣ್ಣ ತಮ್ಮರು ಬೇಕು ಬೆನ್ನು ತಟ್ಟುವರು ಸಭೆಯೊಳಗೆ ‘ ಹೀಗೊಂದು ಜಾನಪದ ಗೀತೆ ಹಿಂದೆ ಮನೆಮನೆಯ ಹೆಣ್ಣು ಮಕ್ಕಳು ಹಾಡುತ್ತಿದ್ದರು . ಬಹುತೇಕ ಕನ್ನಡಿಗರರಿಗೆ ಇದರ ಬಗ್ಗೆ ಅರಿವಿರದೇ ಇಲ್ಲ. ಹಾಗೆ ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ತನ್ನ ರಕ್ಷೆಗೆ ಸಹೋದರನಿದ್ದಾನೆ ಎಂದು ಹೆಮ್ಮೆ ಪಡುತ್ತಾಳೆ. ಹಾಗೆಯೆ ಗಂಡಿಗೆ ಛೇಡಿಸಲು ,ಜೊತೆಗೆ ಬೆಳೆಯಲು ಪ್ರೀತಿಯ ತಂಗಿ ತಾಯಿಯಂತಹ ಅಕ್ಕನ ಅವಶ್ಯಕತೆ ಇದೆ. ಇಂತಹ ಒಂದು ಅದ್ಬುತ ಸಂಬಂಧವನ್ನು ಬಿಂಬಿಸುವ ಅದಕ್ಕಾಗಿ ಕೃತಜ್ಞತೆ ತೋರಿಸುವ ಹಬ್ಬವೇ ರಾಖಿ ಹಬ್ಬ ಅಥವಾ ರಕ್ಷಾಬಂಧನ ಎಂದೇ ಕರೆಸಿಕೊಳ್ಳುವ ಸಹೋದರ ಸಹೋದರಿಯರ ಬಾಂಧವ್ಯ ಬೆಸೆಯುವ ಹಬ್ಬ. ರಕ್ಷಾ ಬಂಧನವನ್ನು ರಾಖಿ ಹಬ್ಬ , ರಾಖಿ ಪೂರ್ಣಿಮಾ ಎಂದು ಕೂಡ ಕರೆಯಲಾಗುತ್ತದೆ .

    ಶ್ರಾವಣ ಮಾಸದ ಮೊದಲ ಹುಣ್ಣಿಮೆಯ  ದಿನ ಹಿಂದೂಗಳು ಆಚರಿಸುವ ಈ ಹಬ್ಬ ಭಾರತ ಮತ್ತು ನೇಪಾಳಗಳಲ್ಲಿ ಆಚರಿಸಲಾಗುತ್ತದೆ. ಕೊಲ್ಕತ್ತಾದಲ್ಲಿ ಇದನ್ನು ಹಿಂದೂ ಮುಸ್ಲಿಂಗಳು ಒಬ್ಬರಿಗೊಬ್ಬರು ರಾಖಿ ಕಟ್ಟುವುದರ ಮೂಲಕ ಹಿಂದೂ ಮುಸ್ಲಿಂ ಭಾಯಿ ಭಾಯಿ ಎಂದು ಆಚರಿಸುತ್ತಾರೆ. ಇಂತಹದ್ದೊಂದು ಆಚರಣೆಯನ್ನು ರವೀಂದ್ರನಾಥ್ ಟ್ಯಾಗೋರ್ ಅವರು 1905 ರಲ್ಲಿ ಕೋಲ್ಕತ್ತಾದಲ್ಲಿ ಪ್ರಾರಂಭಿಸಿದರು ಎಂಬುದು ಈಗ ಇತಿಹಾಸ. ರಾಖಿ ಕೇವಲ ಒಡಹುಟ್ಟಿದ ಅಣ್ಣ ತಂಗಿಯ ಮಧ್ಯೆ ಮಾತ್ರವಲ್ಲದೇ ಸಾಕಷ್ಟು ಜನರು ಮನೆಯ ಹೊರಗೆ ಕೂಡ ಸಾಕಷ್ಟು ಅಣ್ಣ ತಮ್ಮಂದಿರನ್ನು ಹುಡುಕಿಕೊಂಡು ರಾಖಿ ಕಟ್ಟಿ ರಕ್ಷಣೆಯ ಭರವಸೆಯನ್ನು ಕಂಡು ಕೊಂಡಿದ್ದಾರೆ.

    ರಕ್ಷಾಬಂಧನದ ದಿನ ಸಹೋದರಿಯರು ತಮ್ಮ ಸಹೋದರಿಗೆ ರಾಖಿಯನ್ನು ಕಟ್ಟಿ ಸಿಹಿ ತಿನಿಸಿ ಸಂಭ್ರಮಿಸಿದರೆ ಸಹೋದರರು ರಾಖಿ ಕಟ್ಟಿದ ತಂಗಿ ಅಥವಾ ಅಕ್ಕಂದಿರಿಗೆ ತಮ್ಮ ಕೈಲಾದ ಉಡುಗೊರೆಯನ್ನು ನೀಡುವುದು ಸಾಮನ್ಯವಾಗಿ ಮೊದಲಿನಿಂದ ನಡೆದುಕೊಂಡು ಬಂದಿರುವ ಹಬ್ಬದ ಪದ್ಧತಿಯಾಗಿದೆ.

    ಈ ರಾಖಿ ಹಬ್ಬ ಈಗಿನದಲ್ಲ ಪುರಾಣದಿಂದಲೂ ನಡೆದುಕೊಂಡು ಬಂದಿದೆ ಎಂಬುದಕ್ಕೆ ದ್ರೌಪದಿ ಮತ್ತು ಕೃಷ್ಣ ರ ಅಣ್ಣ ತಂಗಿಯ ದ್ರೌಪದಿ ವಸ್ತ್ರಾಪಹರಣವೇ ಸಾಕ್ಷಿ  ಎಂಬುದನ್ನು ತಿಳಿಯದವರಿಲ್ಲ. ದ್ರೌಪದಿಯ ವಸ್ತ್ರಾಪಹರಣ ಮಾಡುವ ಸಂದರ್ಭದಲ್ಲಿ ಆಕೆ ಕೃಷ್ಣನನ್ನು ತನ್ನ ರಕ್ಷಿಸುವಂತೆ ಮೊರೆ ಹೋಗುವುದು ಮತ್ತು ಶ್ರೀ ಕೃಷ್ಣ ಆಕೆಯನ್ನು ರಕ್ಷಿಸುವುದನ್ನು ಕೂಡ ರಕ್ಷಾ ಬಂಧನದ ಸಂಕೇತವಾಗಿ ಪರಿಗಣಿಸಲಾಗಿದೆ.
    ಹಾಗೆಯೇ ಇನ್ನೊಂದು ಸಂದರ್ಭದಲ್ಲಿ ಶಿಶುಪಾಲನನ್ನು ಕೊಳ್ಳಲು ಕೃಷ್ಣನು ಸುದರ್ಶನ ಚಕ್ರವನ್ನು ಬೀಸುತ್ತಾನೆ ಆಗ ಕೃಷ್ಣನ ಕೈಬೆರಳಿಗೆ ಸ್ವಲ್ಪ ತಾಗಿ ರಕ್ತ ಸುರಿಯಲಾರಂಭಿಸುತ್ತದೆ ಈ ಸಂದರ್ಭದಲ್ಲಿ ದ್ರೌಪದಿಯು ತನ್ನ ಸೀರೆಯ ಅಂಚನ್ನು ಹರಿದು ಕೃಷ್ಣ ಕೈಬೆರಳಿಗೆ ಸುತ್ತಿ ರಕ್ತ ಸುರಿಯುವುದನ್ನು ನಿಲ್ಲಿಸುತ್ತಾಳೆ. ಹೀಗೆ ರಕ್ಷಾ ಬಂಧನ ಎಂದರೆ ಕೇವಲ ಅಣ್ಣ ತಂಗಿಯನ್ನು ರಕ್ಷಿಸುವುದು ಮಾತ್ರವಲ್ಲ ಸಮಯ ಬಂದಲ್ಲಿ ಸಹೋದರಿಯರು ಕೂಡ ಸಹೋದರರ ಜೊತೆಗೂಡಬೇಕು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿ ನಿಲ್ಲುತ್ತದೆ.

    ಇತಿಹಾಸದಲ್ಲೂ ರಕ್ಷಾಬಂಧನ

    ಪುರಾಣಗಳಲ್ಲಿ ಮಾತ್ರವಲ್ಲ ಇತಿಹಾಸದಲ್ಲೂ ರಕ್ಷಾಬಂಧನವನ್ನು ಉಪಯೋಗಿಸಿಕೊಂಡ ಉದಾಹರಣೆಗಳು ಉಲ್ಲೇಖವಾಗಿವೆ . ವಿಧವೆಯಾದ ಚಿತ್ತೂರಿನ ರಾಣಿ ಕರ್ಣಾವತಿಯು ತನ್ನ ರಾಜ್ಯವನ್ನು ರಕ್ಷಿಸಿಕೊಳ್ಳಲು ಮೊಘಲರ ರಾಜ ಹುಮಾಯೂನ್ ನಿಗೆ ರಾಖಿಯನ್ನು ಕಳಿಸಿ ರಕ್ಷಣೆಯ ಮೊರೆಹೋಗುತ್ತಾಳೆ ಮತ್ತು ಇದಕ್ಕೆ ಒಪ್ಪಿದ ಹುಮಾಯುನ್ ರಾಣಿ ಕರ್ಣಾವತಿಯ ಬೆಂಬಲಕ್ಕೆ ಬರುತ್ತಾನೆ ಎಂಬುದು ಇತಿಹಾಸದಲ್ಲೂ ದಾಖಲಿಸಲಾಗಿದೆ.   

    ಮದಿಂದ ಆಚರಿಸುವ ಈ ಹಬ್ಬ ಹೊರ ದೇಶಗಳಲ್ಲಿ ಕೂಡ ಭಾರತೀಯರು ತಪ್ಪದೆ ಆಚರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ರಾಖಿಯನ್ನು ಆನ್ಲೈನ್ ಮೂಲಕ ಸ್ವಂತ ಅಣ್ಣ ತಮ್ಮಂದಿರಿಗೆ ಮನೆಗೇ ಕಳಿಸುವ ಅವಕಾಶವಿದೆ. ಅಷ್ಟೇ ಅಲ್ಲದೆ ರಾಖಿಯನ್ನು ಚಿಕ್ಕ ಮಕ್ಕಳು ಕೂಡ ಆಚರಿಸಿ ನಮ್ಮ ಸಂಪ್ರದಾಯವನ್ನು ಮುಂದುವರಿಸುತ್ತಿದ್ದಾರೆ. 

    ಈಗಂತೂ ರಾಖಿ ಹಲವಾರು ಬಗೆಗಳಲ್ಲಿ ಲಭ್ಯ. ಚಿಕ್ಕ ಮಕ್ಕಳು ಒಬ್ಬರಿಗೊಬ್ಬರು ರಾಖಿ ಕಟ್ಟಿ ಸಂತೋಷ ಪಡಲು ಕಾರ್ಟೂನ್ ಗಳನ್ನು ಒಳಗೊಂಡ ರಾಖಿಗಳು , ಹಾಗೆಯೇ  ಪರಿಸರಕ್ಕೆ ಹೊರೆಯಾಗದಂತ ಭೂಮಿಯಲ್ಲಿ ಕರಗುವ ಪರಿಸರಸ್ನೇಹಿ ರಾಖಿಗಳು , ಪೊಂ ಪೊಂ ರಾಖಿ , ವುಲ್ಲನ್ ನಲ್ಲಿ , ಬಟ್ಟೆಯಲ್ಲಿ ಮಾಡಿದ ರಾಖಿಗಳು , ಇನ್ನು ಫೋಟೋ ರಾಖಿಗಳು , ಸಂಗೀತ ಹೊಮ್ಮಿಸುವ ರಾಖಿಗಳು . ಅಷ್ಟೇ ಏಕೆ ಬ್ರೇಸ್ ಲೈಟ್ ನಂತಹ ಬಂಗಾರ ಬೆಳ್ಳಿಗಳ್ಲಲೂ ಕೂಡ ರಾಖಿ ಮಾಡಿಸಿ ಕೊಡಬಹುದು.

    ಹೀಗೆ ರಾಖಿ ಪೂರ್ಣಿಮೆಗೆ ತನ್ನದೇ ಆದ ವಿಶೇಷತೆ ಇದೆ . ಇದೇ ಆಗಸ್ಟ್ ಮೂರರಂದು ರಾಖಿ ಹಬ್ಬ . ಕರೋನದಿಂದಾಗಿ ತವರೂರಿಗೆ ಹೋಗಲಾರದಿದ್ದರೇನಂತೆ ಈಗಂತೂ ಆನ್ಲೈನ್ ವ್ಯವಸ್ಥೆ ಇದೆ . ಇನ್ನೇಕೆ  ತಡ ಈಗಲೇ ನಿಮ್ಮ ಸಹೋದರರಿಗೆ ರಾಖಿ ಕಳಿಸಿ ಸಂಭ್ರಮ ಆಚರಿಸಿ. 

    Image by Shantanu Kashyap from Pixabay

    ಬಂಗಾರದ ಹೊಸ ನೀತಿ ಭಯ ಬೇಡ

    ಚಿನ್ನ ಖರೀದಿಯ ಬಗ್ಗೆ ಹೊಸ ನೀತಿಯ ಘೋಷಣೆ ಆಗುತ್ತಿದೆ ಎನ್ನುವ ಸುಳಿವು ಸಿಕ್ಕಿದ ಕೂಡಲೇ ನಮ್ಮಲ್ಲಿ ಅದರ ಬಗ್ಗೆ ವಿಶ್ಲೇಷಣೆ ಮಾಡುವವರು, ಅದರ ಕುರಿತು ಅತಿಯಾಗಿ ತಜ್ಞರಾಗಿ ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.ಸರಕಾರ ಈ ಬಗ್ಗೆ ಇನ್ನು ಏನನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.ಅಕ್ರಮ ಚಿನ್ನವನ್ನು ಸಕ್ರಮಗೊಳಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಅಷ್ಟೆ.

    ಕೋವಿಡ್-19 ರೀತಿಯಲ್ಲೇ ಜನರಲ್ಲಿ ಮತ್ತೆ ಭಯ-ಭೀತಿಯನ್ನು ಹುಟ್ಟಿಸುವ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಜನರಿಗೆ ನಿಜ ವಿಷಯವನ್ನು ತಿಳಿಸುವ ಕೆಲಸ ಆಗುತ್ತಿಲ್ಲ. ಚಾನಲ್ ಗಳಲ್ಲಿ ಒಂದು ಗಂಟೆ ಕಾರ್ಯಕ್ರಮದಲ್ಲಿ ತಮಗೆ ಬೇಕಾದ ರೀತಿಯಲ್ಲಿ ಬಂಗಾರದ ಕುರಿತ ಹೊಸ ನೀತಿಯ ಬಗ್ಗೆ ಚರ್ಚೆಗಳು, ತಜ್ಞರು ಎನ್ನುವವರಿಂದ ಅಭಿಪ್ರಾಯಗಳು, ಸಾರ್ವಜನಿಕರ ಆತಂಕಗಳು ಪ್ರಸಾರವಾಗುತ್ತಲೇ ಇದೆ.

    ಹಾಗಾದರೆ ನಿಜವಾಗಿ ಚಿನ್ನದ ಹೊಸ ನೀತಿ ಏನು ? ಅದರಲ್ಲಿ ಅಡಕವಾಗಿರುವ ಅಂಶಗಳಾವುದಾದರೂ ಯಾವುದು ? ಅದು ಸಾಮಾನ್ಯ ಚಿನ್ನ ಖರೀದಿದಾರರಿಗೆ ಅಂದರೆ ಮಧ್ಯಮ ವರ್ಗ ಮತ್ತು ಬಡವರ ಜೀವನಾಡಿಯಾದ ಬಂಗಾರದ ಖರೀದಿಯ ಮೇಲೆ ಬೀಳಬಹುದಾದ ಪರಿಣಾಮಗಳೇನು ? ಎಂಬ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ.

    ಭಾರತವು ಸುಮಾರು 25 ಸಾವಿರ ಟನ್ ಚಿನ್ನವನ್ನು ವಾರ್ಷಿಕವಾಗಿ ಆಮದು ಮಾಡಿಕೊಳ್ಳುತ್ತಿದೆ. ಅದರಲ್ಲಿ ಅನ್ ಅಕೌಂಟೆಡ್ ಅಂದರೆ ಲೆಕ್ಕಕ್ಕೆ ಸಿಕ್ಕದ (ರಾಮನ ಲೆಕ್ಕ-ಕೃಷ್ಣನ ಲೆಕ್ಕ) ಬಂಗಾರವೇ ಹೆಚ್ಚು. ಹೀಗಾಗಿ ಇದನ್ನು ನಿಯಂತ್ರಿಸಲು 2015ರಲ್ಲೇ ಕೇಂದ್ರ ಸರಕಾರ ಒಂದು ಸಮಿತಿಯನ್ನು ರೂಪಿಸಿ, ಇದನ್ನು ನಿಯಂತ್ರಿಸಲು ಯೋಜನೆ ಮಾಡಿ ಎಂದು ನಿರ್ದೇಶಿಸಿತ್ತು. ಇದರ ಉದ್ದೇಶ ಉತ್ತಮವಾಗಿತ್ತು. ಕಪ್ಪು ಹಣವನ್ನು ನಿಯಂತ್ರಿಸಲು ನಿರ್ದಿಷ್ಟ ಮುಖ ಬೆಲೆಯ ನೋಟು ಅಮಾನ್ಯ ಮಾಡಿದಂತೆ ಚಿನ್ನದ ಖರೀದಿಯ ಮೇಲೆಯೂ ನಿಯಂತ್ರಣ ಹೇರಬೇಕು ಎಂದಾಗಿತ್ತು. ಅದರಲ್ಲೂ ಮುಖ್ಯವಾಗಿ ನೋಟು ಅಮಾನ್ಯದ ಬಳಿಕ ಅನಿಯಂತ್ರಿತವಾಗಿಯೇ ಸಾಗುತ್ತಿದ್ದ ಚಿನ್ನ ಖರೀದಿಗೆ ಒಂದು ಕಡಿವಾಣ ಬೇಕಾಗಿತ್ತು.

    ಆದರೆ ನಮ್ಮ ಜನರು ತುಂಬಾ ಬುದ್ಧಿವಂತರು. ಅದರಲ್ಲೂ ಶ್ರೀಮಂತ ವರ್ಗಕ್ಕೆ ಸೇರಿದ್ದ ಜನರು ತಮ್ಮ ಕೋಟ್ಯಂತರ ರೂಪಾಯಿಯನ್ನು ಭೂಮಿ, ಶೇರು ಮಾರುಕಟ್ಟೆಯ ಬದಲಿಗೆ ಚಿನ್ನದ ಮೇಲೆ ಹೂಡಿಕೆ ಮಾಡಿದರು. ಇದರಿಂದಾಗಿ ಅವರಿಗೆ ಸಾಕಷ್ಟು ಲಾಭವಿತ್ತು. ಎಷ್ಟು ಚಿನ್ನವಿದೆ ಎಂಬ ಬಗ್ಗೆ ಸರಕಾರಕ್ಕೆ ಲೆಕ್ಕ ಕೊಡುವ ಅಗತ್ಯವೇ ಇರಲಿಲ್ಲ. ಆದರೆ ಹೊಸ ನೀತಿಯೇನಾದರೂ ಜಾರಿಗೆ ಬಂದರೆ (ಇದು ಕಷ್ಟ) ಆಗ ಅವರು ತಮ್ಮಲ್ಲಿರುವ ಚಿನ್ನಕ್ಕೆ ಉತ್ತರದಾಯಿಗಳು ಆಗಲೇಬೇಕಾಗುತ್ತದೆ.

    ಸಾಮಾನ್ಯರಿಗೆ ಯಾವುದೇ ಸಮಸ್ಯೆಯಿಲ್ಲ

    ಸಾಮಾನ್ಯ ಜನರಿಗೆ ಈ ಹೊಸ ನೀತಿಯಿಂದ ಯಾವುದೇ ಸಮಸ್ಯೆಯಿಲ್ಲ ಎಂಬುದನ್ನು ಇಲ್ಲಿ ಸ್ಪಷ್ಟ ಪಡಿಸಲೇಬೇಕಾಗುತ್ತದೆ. ಸುಮಾರು ಎರಡು ಕೆಜಿವರೆಗೆ ಅಂದರೆ 2,000 ಗ್ರಾಂ.ವರೆಗೆ ಚಿನ್ನವನ್ನು ಮನೆಯಲ್ಲಿ ಹೊಂದಿರುವವರು (ಉಡುಗೊರೆ, ತಂದೆ-ತಾಯಿ ಸೇರಿದಂತೆ ಪಾರಂಪರಿಕವಾಗಿ ಬಂದ ಬಳುವಳಿ ಅಥವಾ ವರ್ಗಾವಣೆ) ಯಾವುದೇ ತೊಂದರೆಗೆ ಸಿಲುಕುವುದಿಲ್ಲ.  ಆಮೇಲೆ ಇನ್ನು ಮುಂದೆ ತೆಗೆದುಕೊಂಡ ಪ್ರತಿಯೊಂದು ಗ್ರಾಂ ಚಿನ್ನಕ್ಕೂ ಅಂಗಡಿಯಲ್ಲಿ ಬಿಲ್ ತೆಗೆದುಕೊಂಡರೆ ಸಾಕಾಗುತ್ತದೆ. ಇದುವರೆಗೆ ಮನೆಯಲ್ಲಿ ಇರುವ ಚಿನ್ನಕ್ಕೆ ಇದು ಅನ್ವಯವಾಗುವುದಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಆದ್ದರಿಂದ ಜನ ಸಾಮಾನ್ಯರು ಏನಪ್ಪ ಇದು ಹೊಸ ಚಿನ್ನದ ನೀತಿ ಎಂದು ಭಯ ಪಡುವ ಅಗತ್ಯವಿಲ್ಲ. ಅಲ್ಲದೆ ವಿವಾಹಿತ ಮಹಿಳೆ, ಅವಿವಾಹಿತ ಪುರುಷ ಹೀಗೆ ನಾನಾ ವಿಭಾಗಗಳಲ್ಲಿ ನಾನಾ ಮಿತಿಗಳನ್ನು ನೀಡಿರುವುದರಿಂದ ಯಾವುದೇ ಸಮಸ್ಯೆಯಿಲ್ಲ. ಕೇವಲ ಕಪ್ಪು ಹಣವನ್ನು ಕೆಜಿಗಟ್ಟಲೆ ಚಿನ್ನಕ್ಕೆ ಹೂಡಿ ಮನೆಯಲ್ಲಿ ಕೂಡಿ ಹಾಕಿಕೊಳ್ಳುವವರಷ್ಟೇ ಭೀತಿ ಪಡಬೇಕು ಅಷ್ಚೇ, ಭೂಮಿ ಇರಲಿ, ಇನ್ಯಾವುದೇ ರೀತಿಯಲ್ಲಿ ಅಕ್ರಮ ಸಂಪಾದನೆ ಮಾಡಿರಲಿ ಅವರಿಗಷ್ಟೇ ತೆರಿಗೆ ಪಾವತಿಯ ಭಯ ಇದ್ದೇ ಇರುತ್ತದೆ.

    Photo by Sayak Bala on Unsplash

    Invest and track it :ವಿತ್ತೀಯಪೇಟೆಯಲ್ಲಿ ಸುರಕ್ಷತೆ ಎಂಬುದು ಸ್ವಯಂ ಕಲ್ಪಿತ ವ್ಯವಸ್ಥೆ

    ಕದಡಿದ ವಾತಾವರಣದಲ್ಲಿ ಮನೆಯಲ್ಲೇ ಕುಳಿತು ಕೈಲಿರುವ ಹಣದಲ್ಲೇ ಸೀಮಿತ ಚಟುವಟಿಕೆ ನಡೆಸಿ ಹಣವನ್ನು ಗಳಿಸುವುದರೊಂದಿಗೆ ಮನಸ್ಸನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಹರ್ಷೋಲ್ಲಾಸಭರಿತವಾಗಿರಲು ಷೇರುಪೇಟೆ ಒಂದು ಉತ್ತಮ ಸಾಧನ. ಷೇರುಪೇಟೆಯ ಚಟುವಟಿಕೆಯಿಂದ ಲಾಭ ಗಳಿಸಿಕೊಂಡಲ್ಲಿ ಅದು ಸ್ವಕಾರ್ಯ, ಜೊತೆಗೆ ಈ ಚಟುವಟಿಕೆಯಿಂದ ದೇಶದ ಖಜಾನೆಗೂ ಆದಾಯ ಗಳಿಸಿಕೊಡುವ ಕಾರಣ ದೇಶದ ಸೇವೆ ಮಾಡಿದ ಸಾರ್ಥಕ ಕಾರ್ಯವಾಗುತ್ತದೆ.

    ಇಂದಿನ ಸಂಕೀರ್ಣಮಯ ದಿನಗಳಲ್ಲಿ ಸುರಕ್ಷಿತ ಎಂಬುದು ನಾವೇ ನಿರ್ಮಿಸಿಕೊಳ್ಳಬೇಕಾಗಿದೆ. ಸರ್ಕಾರಗಳಾಗಲಿ, ನಿಯಂತ್ರಕರಾಗಲಿ ತೆಗೆದುಕೊಳ್ಳುವ, ಆದೇಶಿಸುವ ಕಾರ್ಯಗಳಿಂದಾಗಲಿ ಸುರಕ್ಷಿತತೆ ಸಾಧ್ಯವಿಲ್ಲ, ಅದಕ್ಕೆ ಪೂರಕವಾಗಿ ನಾವು ನಮ್ಮ ಕೌಶಲ್ಯ, ಅರಿವು, ತಿಳಿವು, ಅನುಭವ, ಪರಿಸರ ಮುಂತಾದ ವಾಸ್ತವ ಅಂಶಗಳನ್ನಾಧರಿಸಿ ತೆಗೆದುಕೊಳ್ಳುವ ನಿರ್ಧಾರಗಳಿಂದ ಮಾತ್ರ ಸಾಧ್ಯ. ಆರ್ಥಿಕ ಸಾಕ್ಷರತೆಯ ಮೂಲಕ ಮಾತ್ರ ಆರ್ಥಿಕ ಸುರಕ್ಷತೆ ಪಡೆಯಲು ಸಾಧ್ಯ.

    ಸುರಕ್ಷಿತ ಎಂಬುದು ಎಷ್ಟರಮಟ್ಟಿಗೆ ಸರಿ:

    ಷೇರುಪೇಟೆಯಲ್ಲಿ ಹೂಡಿಕೆ ಮಾಡಿದರೆ ಅಪಾಯ ಹೆಚ್ಚು ಎಂಬ ಕಲ್ಪನೆ ಹೆಚ್ಚಿನವರಲ್ಲಿದೆ. ಆದರೆ ಈಗಿನ ದಿನಗಳಲ್ಲಿ ಸುರಕ್ಷಿತ ಎಂಬುದು ಕೇವಲ ನಿಘಂಟಿನಲ್ಲಿದೆ. ಬ್ಯಾಂಕ್‌ ಗಳಲ್ಲಿ ತಮ್ಮ ಹಣ ಇರಿಸಿದಲ್ಲಿ ಸುರಕ್ಷಿತ ಎಂಬುದು ಹಿಂದಿನಿಂದ ಬಂದಿರುವ ಸಾಂಪ್ರದಾಯಿಕ ಚಿಂತನೆಯಾಗಿದೆ. ಇದು ಸ್ವಲ್ಪಮಟ್ಟಿಗೆ ಸರಿಯೂ ಹೌದು.
    ಇದಕ್ಕೆ ಮುಖ್ಯ ಕಾರಣ ನಮಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ಗಳ ಮೇಲಿರುವ ನಂಬಿಕೆಯಾಗಿದೆ. ಇದಕ್ಕೆ ಆಧಾರವೂ ಇದೆ. ದುರ್ಬಲ ಬ್ಯಾಂಕ್‌ ಗಳನ್ನು ಬಲಿಷ್ಠ ಬ್ಯಾಂಕ್‌ ನಲ್ಲಿ ವಿಲೀನಗೊಳಿಸಲು 1960 ರಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಗೆ ಅಧಿಕಾರ ನೀಡಲಾಗಿದೆ. ಈ ಅಧಿಕಾರವನ್ನು ಆರ್‌ ಬಿ ಐ ಈ ಕೆಳಗಿನ ಬ್ಯಾಂಕ್‌ ಗಳ ಮೇಲೆ ಪ್ರಯೋಗಿಸಿದೆ.

    ನೆಡಂಗಡಿ ಬ್ಯಾಂಕ್‌ ಲಿಮಿಟೆಡ್:2002 ರಲ್ಲಿ ನೆಡಂಗಡಿ ಬ್ಯಾಂಕ್‌ ಎಂಬ ಖಾಸಗಿ ಬ್ಯಾಂಕ್‌ ತೊಂದರೆಗೊಳಗಾದ ಕಾರಣ ಠೇವಣಿದಾರರ ಹಿತದಿಂದ ಆರ್‌ ಬಿ ಐ ಆ ಬ್ಯಾಂಕ್‌ ನ್ನು ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ನಲ್ಲಿ ವಿಲೀನಗೊಳಿಸುವ ಮೂಲಕ ಠೇವಣಿದಾರರ ಹಿತವನ್ನು ಕಾಪಾಡಿತು. ಈ ವಿಲೀನವಾಗಿ 18 ವರ್ಷವಾದರೂ ಇದುವರೆಗೂ ಷೇರುದಾರರಿಗೆ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ. ಆದರೆ ಠೇವಣಿದಾರರಿಗೆ ಯಾವುದೇ ರೀತಿಯ ಹಾನಿಯಾಗದಂತೆ ನೋಡಿಕೊಳ್ಳಲಾಯಿತು.

    ಗ್ಲೋಬಲ್‌ ಟ್ರಸ್ಟ್‌ ಬ್ಯಾಂಕ್‌:2004 ರಲ್ಲಿ ಗ್ಲೋಬಲ್‌ ಟ್ರಸ್ಟ್‌ ಬ್ಯಾಂಕ್‌ ವಿಫಲಗೊಂಡಾಗ ಠೇವಣಿದಾರರ ಹಿತ ಕಾಪಾಡಲು ಆ ಬ್ಯಾಂಕ್‌ ನ್ನು ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ನಲ್ಲಿ ವಿಲೀನಗೊಳಿಸಲಾಯಿತು. ಇಲ್ಲಿಯೂ ಸಹ ಠೇವಣಿದಾರರಿಗೆ ತೊಂದರೆಯಾಗದಂತೆ ನಿರ್ವಹಿಸಿದ ಹೆಮ್ಮೆ ಆರ್‌ ಬಿ ಐ ಗೆ ಸಲ್ಲುತ್ತದೆ. ಷೇರುದಾರರಿಗೆ ಮಾತ್ರ ಇದುವರೆಗೂ ಯಾವುದೇ ಪರಿಹಾರ ದೊರೆತಿಲ್ಲ.

    ಯುನೈಟೆಡ್‌ ವೆಸ್ಟರ್ನ್ ಬ್ಯಾಂಕ್‌‌ ಲಿಮಿಟೆಡ್:2006 ರಲ್ಲಿ ಯುನೈಟೆಡ್‌ ವೆಸ್ಟರ್ನ್ ಬ್ಯಾಂಕ್‌ ‌ ದುರ್ಬಲಗೊಂಡ ಕಾರಣ ಆ ಬ್ಯಾಂಕನ್ನು ಐ ಡಿ ಬಿ ಐ ಬ್ಯಾಂಕ್‌ ನಲ್ಲಿ ವಿಲೀನಗೊಳಿಸಲಾಯಿತು. ಈ ಸಂದರ್ಭದಲ್ಲಿ ಯುನೈಟೆಡ್‌ ವೆಸ್ಟರ್ನ್‌ ಬ್ಯಾಂಕ್‌ ಷೇರುದಾರರಿಗೂ ಅನುಕೂಲಕರವಾಗಿದೆ. ಅಂದರೆ ಠೇವಣಿದಾರರ ಹಿತ ಕಾಪಾಡುವುದರೊಂದಿಗೆ ಷೇರುದಾರರ ಹಿತವನ್ನೂ ಕಾಪಾಡಿದೆ.ಈ ಹಿನ್ನೆಲೆಯಲ್ಲಿ ಬ್ಯಾಂಕ್‌ ಗಳ ಮೇಲಿನ ನಂಬಿಕೆ ಮತ್ತಷ್ಟು ಬಲಿಷ್ಠವಾಯಿತು

    ಯೆಸ್‌ ಬ್ಯಾಂಕ್‌‌ ಪ್ರಕರಣ

    ಈ ವರ್ಷದ ಮಾರ್ಚ್‌ ನಲ್ಲಿ ಯೆಸ್‌ ಬ್ಯಾಂಕ್‌ ದುರ್ಬಲಗೊಂಡ ಸುದ್ಧಿಯ ಕಾರಣ ಆ ಬ್ಯಾಂಕ್‌ ಗೆ ಎಸ್‌ ಬಿ ಐ ನೇತೃತ್ವದಲ್ಲಿ ವಿವಿಧ ಬ್ಯಾಂಕ್‌ ಗಳು ಸೇರಿ ಆರ್ಥಿಕ ಬೆಂಬಲ ನೀಡಿದವು. ಈ ಸಂಪನ್ಮೂಲ ಕ್ರೋಡೀಕರಣ ಸಾಲದೆಂಬಂತೆ, ಬ್ಯಾಂಕ್‌ ಉತ್ತುಂಗದಲ್ಲಿದ್ದಾಗ ವಿತರಿಸಿದ ಅಡಿಷನಲ್‌ ಟೈರ್‌ 1 ಬಾಂಡ್‌ ಗಳನ್ನು ಸಂಪೂರ್ಣವಾಗಿ ರದ್ದುಮಾಡಿ, ಹೂಡಿಕೆಯನ್ನು ಶೂನ್ಯವಾಗಿಸಿತು. ಈ ಕ್ರಮವು ಸಾರ್ವಜನಿಕವಾಗಿ ಬ್ಯಾಂಕಿಂಗ್‌ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಅಲ್ಲಾಡಿಸಿದೆ.

    ಮೂಲಭೂತ ಗುಣಕ್ಕೇ ಅಪವಾದ

    ಯೆಸ್‌ ಬ್ಯಾಂಕ್‌ ನ ಈ ಹಗರಣವು ಅಲ್ಲಿಗೇ ನಿಲ್ಲದೆ, ಕ್ಯಾಪಿಟಲ್‌ ಮಾರ್ಕೆಟ್‌ ನ ಇತಿಹಾಸದಲ್ಲೇ ಮೊದಲ ಬಾರಿ ಬ್ಯಾಂಕ್‌ ನ 75% ರಷ್ಟು ಚಲಾವಣೆಯಿಂದ ಸ್ಥಗಿತಗೊಳಿಸಿದ ಕ್ರಮವು ಅನೇಕ ಸಣ್ಣ ಹೂಡಿಕೆದಾರರು ತೊಂದರೆಗೊಳಗಾಗಿದ್ದಲ್ಲದೆ ಈ ಕ್ರಮದ ನಂತರ ಕಂಡ ಷೇರಿನ ಬೆಲೆ ಏರಿಕೆಯ ಅವಕಾಶದಿಂದ ವಂಚಿತರಾಗುವಂತಾಯಿತು. ಈ ಕ್ರಮವು ಪೇಟೆಯ ಮೂಲಭೂತ ಗುಣವಾದ ಷೇರುಗಳ ದಿಢೀರ್‌ ನಗದೀಕರಣ( creating ready liquidity) ಕ್ಕೆ ಅಪವಾದವಾಗಿದೆ.

    ಈ ಎಲ್ಲಾ ಬೆಳವಣಿಗೆಗಳು ಮತ್ತು ಘಟನೆಗಳ ಕಾರಣ, ಬ್ಯಾಂಕ್ ಗಳ ಮೇಲಿನ ನಂಬಿಕೆಗೆ ಕೊಡಲಿ ಏಟು ಕೊಟ್ಟಂತಾಗಿದೆ. ಹಾಗಾಗಿ ನಾವೇ ನಿಯಂತ್ರಿಸಬಹುದಾದ ಷೇರುಪೇಟೆ ಹೂಡಿಕೆಯೇ ಸ್ವಲ್ಪಮಟ್ಟಿನ ಸುರಕ್ಷಿತ ವಿಧವಾಗಿದೆ ಎಂಬ ಭಾವನೆ ಮೂಡುತ್ತಿದೆ. ಅದರಲ್ಲೂ ಉತ್ತಮವಾಗಿ ಕಾರ್ಯ ನಿರ್ವಹಿಸುವ ಹೂಡಿಕೆದಾರ ಸ್ನೇಹಿ ಕಂಪನಿಗಳು ಹೂಡಿಕೆಗೆ ಯೋಗ್ಯವಾಗಿರುತ್ತದೆ. ಲಾರ್ಜ್‌ ಕ್ಯಾಪ್‌ ಕಂಪನಿಗಳಲ್ಲಿ ಹೂಡಿಕೆಗೆ ಆಧ್ಯತೆ ಇರಲಿ. ಇವು ಒಂದು ರೀತಿಯ ಡ್ರೈ ಫ್ರೂಟ್ಸ್‌ ನಂತೆ ಹೆಚ್ಚಿನ ಅವಧಿಯವರೆಗೂ ಯೋಗ್ಯವಾಗಿರುತ್ತವೆ.

    ಹಲವಾರು ಉತ್ತಮ ಕಂಪನಿಗಳು ಪ್ರದರ್ಶಿಸಿದ ಏರಿಳಿತಗಳ ಕೆಲವು ಉದಾಹರಣೆಗಳು ಇಂತಿವೆ

    2018 ರ ಜುಲೈನಲ್ಲಿ ರೂ.1,000 ದ ಸಮೀಪವಿದ್ದ, 2019 ರಲ್ಲಿ ಪ್ರತಿ ಷೇರಿಗೆ ರೂ.35 ರಂತೆ ಲಾಭಾಂಶ ವಿತರಿಸಿದ ಗ್ರಾಫೈಟ್‌ ಇಂಡಿಯಾ ಕಂಪನಿ ಷೇರಿನ ಬೆಲೆ ರೂ.168 ರ ಸಮೀಪವಿದೆ.

    2018 ರ ಜನವರಿಯಲ್ಲಿ ರೂ.250 ರ ಸಮೀಪವಿದ್ದ Rallis India ನಂತರದಲ್ಲಿ ಕುಸಿಯಿತು. ಈ ವರ್ಷದ ಮಾರ್ಚ್ ನಲ್ಲಿ ರೂ.127 ರವರೆಗೂ ಕುಸಿದು ನಂತರ ಕೇವಲ ಮೂರೇ ತಿಂಗಳಲ್ಲಿ ರೂ.324 ರ ವಾರ್ಷಿಕ ಗರಿಷ್ಠ ತಲುಪಿದೆ. ಅಂದರೆ ಶೇ.250 ಕ್ಕೂ ಹೆಚ್ಚಿನ ಲಾಭ ಗಳಿಸಿಕೊಟ್ಟಿದೆ.

    2018 ರ ಮಾರ್ಚ್‌ ನಲ್ಲಿ ರೂ.265 ರ ಸಮೀಪವಿದ್ದ ಇಂಡೊಕೋ ರೆಮೆಡೀಸ್‌ ಷೇರಿನ ಬೆಲೆ 2019 ರ ಅಕ್ಟೋಬರ್‌ ನಲ್ಲಿ ರೂ.133 ರ ಸಮೀಪಕ್ಕೆ ಕುಸಿದಿತ್ತು. ನಂತರದಲ್ಲಿ ಚೇತರಿಕೆ ಕಂಡಿದೆ. ಈ ವರ್ಷದ ಮಾರ್ಚ್‌ ನಲ್ಲಿ ರೂ.145 ರ ಸಮೀಪವಿದ್ದ ಈ ಷೇರಿಗೆ ಕೋವಿಡ್‌ 19 ಕಾರಣ ಬೇಡಿಕೆ ಹೆಚ್ಚಾಗಿ ರೂ.260 ರ ವರೆಗೂ ಏರಿಕೆ ಕಾಣುವಂತಾಯಿತು. ಈ ಕಂಪನಿ ಉತ್ಪಾದಿಸುವ ಹೈಡ್ರಾಕ್ಸಿ ಕ್ಲೋರೋಕ್ವಿನ್‌ ಗೆ ಹೆಚ್ಚಿನ ಬೇಡಿಕೆ ಈ ಕಂಪನಿ ಷೇರಿಗೆ ಹೆಚ್ಚು ಬೆಂಬಲ ತಂದುಕೊಟ್ಟಿದೆ. ಸಧ್ಯ ಈ ಷೇರಿನ ಬೆಲೆ ರೂ.225 ರ ಸಮೀಪವಿದೆ.

    2018 ಅಕ್ಟೋಬರ್‌ ತಿಂಗಳಲ್ಲಿ ಭಾರತ್‌ ಪೆಟ್ರೋಲಿಯಂ ಷೇರಿನ ಬೆಲೆ ರೂ.239 ರಲ್ಲಿ ವಹಿವಾಟಾಗುತ್ತಿತ್ತು. ಅಲ್ಲಿಂದ ಒಂದು ವರ್ಷದಲ್ಲಿ ಅಂದರೆ 2019 ರ ಅಕ್ಟೋಬರ್‌ ತಿಂಗಳಲ್ಲಿ ರೂ.550 ರ ಸಮೀಪಕ್ಕೆ ಜಿಗಿತ ಕಂಡಿತು. 2020 ರ ಮಾರ್ಚ್‌ ನಲ್ಲಿ ಕಂಡ ಜಾತ್ಯಾತೀತ ಕುಸಿತದ ಕಾರಣ ರೂ.252 ಕ್ಕೆ ಜಾರಿತು. ಜುಲೈ ತಿಂಗಳಲ್ಲಿ ಮತ್ತೆ ರೂ.480 ಕ್ಕೆ ಪುಟಿದೆದ್ದಿತು.

    2010 ರಲ್ಲಿ ಪ್ರತಿ ಷೇರಿಗೆ ರೂ.610 ರಂತೆ ಷೇರು ವಿತರಿಸಿದ ಟಾಟಾ ಸ್ಟೀಲ್‌ ಕಂಪನಿಯಲ್ಲಿ ಅನೇಕ ಸ್ಥಳೀಯ ಮತ್ತು ವಿದೇಶಿ ವಿತ್ತೀಯ ಸಂಸ್ಥೆಗಳು ಹೂಡಿಕೆ ಮಾಡಿದವು. ಕ್ರಮೇಣದಲ್ಲಿ ಅಂದರೆ 2013 ರ ಆಗಸ್ಟ್‌ ತಿಂಗಳಲ್ಲಿ ರೂ.195 ರವರೆಗೂ ಕುಸಿಯಿತು. 2018ರ ಜನವರಿಯಲ್ಲಿ ಮತ್ತೆ ಚೇತರಿಕೆಯಿಂದ ರೂ.792 ರವರೆಗೂ ಪುಟಿದೆದ್ದಿತು. ಅ ಸಂದರ್ಭದಲ್ಲಿ ಕಂಪನಿಯು ಪ್ರತಿ ಷೇರಿಗೆ ರೂ.510 ರಂತೆ ಹಕ್ಕಿನ ಷೇರು ವಿತರಿಸಿತು. ಜೊತೆಗೆ ಭಾಗಶ: ಪಾವತಿಸಿದ (partly paid) ಷೇರುಗಳನ್ನು ಅಂದರೆ ಮೊದಲ ಕಂತು ರೂ.154 ನ್ನು ಪಾವತಿಸಿದ ಷೇರುಗಳನ್ನು ವಿತರಿಸಿ ಉಳಿದ ರೂ.461 ನ್ನು ಪಾವತಿಸಬೇಕಾಗಿದೆ. ಇದುವರೆಗೂ ಇನ್ನೂ ಅಂತಿಮ ಕಂತು ರೂ.461 ನ್ನು ಪಾವತಿಸಲು ಕರೆ ನೀಡಬೇಕಾಗಿದೆ. ಆದರೆ ಷೇರಿನ ಬೆಲೆ ರೂ.365 ರ ಸಮೀಪ ವಹಿವಾಟಾಗುತ್ತಿದೆ. ಅಂದರೆ ಮುಂದೆ ಬಾಕಿ ಇರುವ ರೂ.461 ನ್ನು ಪಾವತಿಸಲು ಕರೆ ನೀಡಬೇಕಾದರೆ ಮೂಲ ಷೇರಿನ ಬೆಲೆಯು ಸಹ ಹೆಚ್ಚಿರಲೇಬೇಕು. ಇಲ್ಲದಿದ್ದರೆ ಆ ಕರೆಗೆ ಮಾನ್ಯತೆ ದೊರೆಯದು. ಹಾಗಾಗಿ ಪ್ರತಿ ಕುಸಿತದಲ್ಲೂ ಈ ಷೇರು ಉತ್ತಮ ಹೂಡಿಕೆಯಾಗಬಹುದು. ಒಂದು ವೇಳೆ ಕುಸಿತಕ್ಕೊಳಗಾದರೆ ಅದರ ಪ್ರಮಾಣ ತೀರ ಕಡಿಮೆಯಾಗಿರುತ್ತದೆ.

    2018 ರ ಜುಲೈನಲ್ಲಿ ರೂ.640 ರ ಸಮೀಪ ವಹಿವಾಟಾಗುತ್ತಿದ್ದ ಬಯೋಕಾನ್‌ ಲಿಮಿಟೆಡ್‌ ಒಂದು ವರ್ಷ ಅಂದರೆ ಆಗಸ್ಟ್ 2019 ರಲ್ಲಿ 1:1 ರ ಅನುಪಾತದ ಬೋನಸ್‌ ಷೇರು ವಿತರಿಸಿದ ನಂತರ ಷೇರಿನ ಬೆಲೆ ರೂ.211‌ ರವರೆಗೂ ಕುಸಿಯಿತು. ಆದರೆ ಅಲ್ಲಿಂದ ಪುಟಿದೆದ್ದು ಜುಲೈ 2020 ರಲ್ಲಿ ರೂ.455 ರವರೆಗೂ ಪುಟಿದೆದ್ದು ವಾರ್ಷಿಕ ಗರಿಷ್ಠಕ್ಕೆ ತಲುಪಿದೆ. ಸಧ್ಯ ರೂ.410 ರ ಸಮೀಪ ವಹಿವಾಟಾಗುತ್ತಿದೆ.

    2018 ರ ಆಗಸ್ಟ್‌ ನಲ್ಲಿ ಫಾರ್ಮ ಕಂಪನಿ ಕ್ಯಾಡಿಲ್ಲಾ ಹೆಲ್ತ್‌ ಕೇರ್‌ ಷೇರಿನ ಬೆಲೆ ರೂ.400 ರ ಸಮೀಪವಿತ್ತು. ಒಂದು ವರ್ಷದ ನಂತರ ರೂ.206 ರವರೆಗೂ ಕುಸಿಯಿತು. ಈ ವರ್ಷ ಮಾರ್ಚ್‌ ನಲ್ಲಿ ರೂ.212 ರ ಸಮೀಪದಲ್ಲೇ ಸ್ಥಿರವಾಗಿತ್ತು. ಆದರೆ ಜುಲೈ ತಿಂಗಳ ಅಂತ್ಯದಲ್ಲಿ ರೂ.396 ರವರೆಗೂ ಏರಿಕೆ ಕಂಡು ರೂ.388 ರ ಸಮೀಪ ಕೊನೆಗೊಂಡಿದೆ.

    2018 ರ ಫೆಬ್ರವರಿಯಲ್ಲಿ ಕ್ಲಾರಿಯಂಟ್‌ ಕೆಮಿಕಲ್ಸ್‌ ಕಂಪನಿಯು ರೂ.600 ಸಮೀಪ ವಹಿವಾಟಾಗುತ್ತಿತ್ತು. ಅದೇ ಷೇರು ಆಗಸ್ಟ್‌ 2019 ರಲ್ಲಿ ರೂ.265 ರ ಸಮೀಪಕ್ಕೆ ಜಾರಿತು. ಕಳೆದ ಮಾರ್ಚ್‌ ನಲ್ಲಿ ಪೇಟೆ ಕಂಡ ಭಾರಿ ಕುಸಿತದ ಕಾರಣ ರೂ.192ಕ್ಕೆ ತಲುಪಿತು. ಅಲ್ಲಿಂದ ಚೇತರಿಕೆ ಕಂಡ ಷೇರು, ಕಂಪನಿಯು ಪ್ರತಿ ಷೇರಿಗೆ ರೂ.140 ರಂತೆ ಡಿವಿಡೆಂಡ್‌ ಘೋಷಿಸಿದ ನಂತರ ಷೇರಿನ ಬೆಲೆ ರೂ.460 ರ ಸಮೀಪದಿಂದ ರೂ.608 ರ ವರೆಗೂ ಏರಿಕೆಯನ್ನು ಕೇವಲ ಎರಡೇ ದಿನಗಳಲ್ಲಿ ದಾಖಲಿಸಿತು. ಆದರೆ ಡಿವಿಡೆಂಡ್‌ ನಂತರ ಷೇರಿನ ಬೆಲೆ ಇಳಿಯುತ್ತಾ ರೂ.375 ರವರೆಗೂ ಇಳಿಕೆ ಕಂಡಿದೆ.

    ಈ ಎಲ್ಲಾ ಕಂಪನಿಗಳೂ ಆಗಿಂದಾಗ್ಗೆ ಆಕರ್ಷಕ ಲಾಭಾಂಶಗಳನ್ನು ವಿತರಿಸಿವೆ. ಅಗ್ರಮಾನ್ಯ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ ಇಂತಹ ಏರಿಳಿತಗಳು ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತವೆ. ಆದ್ದರಿಂದಲೇ Value pick – Prfit book ಸದಾ ಹಸಿರಾದ ಸಮೀಕರಣವಾಗಿದೆ. Invest it and forget it ಎಂಬುದು ಈಗಿನ ದಿನಗಳಲ್ಲಿ ತಪ್ಪು ಕಲ್ಪನೆ. Invest and track it ಎಂಬುದು ಈಗ ಅನ್ವಯವಾಗುವ ಸೂತ್ರ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೋವಿಡ್- 19 : ಸುರಕ್ಷತೆಗಾಗಿ ಡಿಜಿಟಲ್ ಕರೆನ್ಸಿ

    ಭಾರತವು ಸೇರಿದಂತೆ ಜಗತ್ತಿನಾದ್ಯಂತ, ಕೋವಿಡ್-19 ಸಾಂಕ್ರಮಿಕ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ದಿನಕ್ಕೆ ಭಯಾನಕವಾಗಿ ಏರುತ್ತಿದೆ. ಕಣ್ಣಿಗೆ ಕಾಣಿಸದ ನೋವೆಲ್ ಕೊರೊನಾ ವೈರಸ್ ನಿಶಬ್ದವಾಗಿ ಹೇಗೆಲ್ಲಾ ಹಬ್ಬುತ್ತಿದೆ ಎಂಬ ಚರ್ಚೆಯ ನಡುವೆ,ಕಲುಷಿತ ಕರೆನ್ಸಿ ನೋಟುಗಳ ಮೂಲಕವೂ ಹರಡುವ ಸಾಧ್ಯತೆ ಇದೆಯೆ ಎಂಬುದು ಮತ್ತೊಮ್ಮೆ ಚರ್ಚೆಗೆ ಬಂದಿದೆ. ಕರೆನ್ಸಿ ನೋಟುಗಳನ್ನು ಬಳಸದಂತೆ ತಡೆಯುವುದು ಆಗದ ಕೆಲಸ. ಹಾಗಾದರೆ ಸುರಕ್ಷಿತವಾಗಿ ಹೇಗೆ ಬಳಸಬಹುದು ಅದಕ್ಕೆ ಇರುವ ಪರಿಹಾರವಾಗಿ ಇರುವ ಮಾರ್ಗಗಳ ಕುರಿತು ಒಂದು ಅವಲೋಕನ.


    ವಿಶ್ವಾದ್ಯಂತ, ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ.ವಿಶ್ವ ಅರೋಗ್ಯ ಸಂಸ್ಥೆ ಮತ್ತು ಸರ್ಕಾರಿ ಮಾರ್ಗಸೂಚಿಗಳ ಪ್ರಕಾರ, ಲಾಕ್‌ಡೌನ್, ಫೇಸ್ ಮಾಸ್ಕ್ ಧರಿಸುವುದು,ಸಾಮಾಜಿಕ ಅಂತರ, ಕೈಗವಸುಗಳ ಬಳಕೆ, ಕೈಕಾಲುಗಳನ್ನು ಸೋಪಿನಿಂದ ಶುಚಿಗೊಳಿಸುವುದು, ಸ್ಯಾನಿಟೈಜರ್‌ನಿಂದ ಕೈಗಳನ್ನುಸೋಂಕು ರಹಿತಗೊಳಿಸುವುದು ಸೇರಿದಂತೆ ವಿವಿಧ ಮುನ್ನೆಚ್ಚರಿಕೆ ಕ್ರಮಗಳ ಹೊರತಾಗಿಯೂ, ವೇಗವಾಗಿ ಹಬ್ಬುತ್ತಿರುವ ಕೊರೊನಾ ವೈರಸ್ ಅನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

    ನಿಶಬ್ದವಾಗಿ, ಜನಸಮುದಾಯದ ನಡುವೆ ವೈರಸ್ ಹೇಗೆ ಹರಡುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಚಿತ್ರ ಇನ್ನೂ ಲಭ್ಯವಿಲ್ಲ. ಕಲುಷಿತ ಗಾಳಿಯ ಮೂಲಕ ವೈರಸ್ ಹರಡುವ ಸಾಧ್ಯತೆಯ ಕುರಿತು ಇತ್ತೀಚಿನ ಕೆಲವು ವರದಿಗಳು ಜನರಲ್ಲಿ ಮತ್ತೊಂದು ಭೀತಿಯನ್ನು ಸೃಷ್ಟಿಸಿದೆ . (ಇದರ ಬಗ್ಗೆ ಇನ್ನಷ್ಟೂ ಸಂಶೋಧನೆಗಳು ಅಗತ್ಯ ಇವೆ).

    ಕರೆನ್ಸಿ ನೋಟುಗಳಿಂದ ವೈರಸ್ ಹರಡುವ ಸಾಧ್ಯತೆ ಎಷ್ಟು?

    ಇತ್ತೀಚಿನ ಒಂದು ಗಂಭೀರ ಕಳವಳ ಏನೆಂದರೆ ಕರೆನ್ಸಿ ನೋಟುಗಳ ಮುಖಾಂತರ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ.ಇತ್ತೀಚೆಗೆ ದೆಹಲಿ ವರ್ತಕರ ಸಂಘ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಅರ್ಪಿಸಿ ಕರೆನ್ಸಿ ನೋಟುಗಳಿಂದ ವೈರಾಣು ಹರಡುವ ಸಾಧ್ಯತೆ ಬಗ್ಗೆ ಸ್ಪಷ್ಟನೆ ಕೇಳಿದೆ. ಈ ಕಳವಳಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಮೊದಲನೆಯದಾಗಿ ನಮ್ಮ ಕೈ ಸೇರುವ ಮೊದಲು ಕರೆನ್ಸಿ ನೋಟುಗಳು ಎಷ್ಟೋ ಅಪರಿಚಿತ ವ್ಯಕ್ತಿಗಳ ನಡುವೆ ಒಬ್ಬರಿಂದ ಒಬ್ಬರಿಗೆ ಹಸ್ತಾಂತರವಾಗಿರುತ್ತವೆ.

    ಸೆಂಟ್ರಲ್ ಬ್ಯಾಂಕ್ ನಡೆಸಿದ ಅಂಕಿಅಂಶಗಳ ಪ್ರಕಾರ, ಮಾರ್ಚ್ 31, 2019 ರ ವೇಳೆಗೆ ಭಾರತದಲ್ಲಿ 10,875 ಕೋಟಿ ಕರೆನ್ಸಿ ನೋಟುಗಳು ಮತ್ತು
    12,000 ಕೋಟಿ ನಾಣ್ಯಗಳು ಸಾರ್ವಜನಿಕ ಚಲಾವಣೆಯಲ್ಲಿದ್ದವು. ಒಬ್ಬರಿಂದ ಒಬ್ಬರಿಗೆ ಹಸ್ತಾಂತರವಾಗುವಾಗ ಯಾವುದೇ ಸಮಯದಲ್ಲಿ, ಕರೆನ್ಸಿ ನೋಟುಗಳು ಮತ್ತು ನಾಣ್ಯಗಳು ಸೋಂಕಿತ ವ್ಯಕ್ತಿಯಿಂದ ರೋಗಾಣುವಿನಿಂದ ಕಲುಷಿತವಾಗಬಹುದು. ಕೆಲವು ಜನರು ಕರೆನ್ಸಿ ನೋಟುಗಳನ್ನು ಅನಾರೋಗ್ಯಕರವಾಗಿ ಹ್ಯಾಂಡಲ್ ಮಾಡುವುದರಿಂದ ಪರಿಸ್ಥಿತಿ ಇನ್ನೂ ಹದಗೆಡುತ್ತದೆ. ನೋಟುಗಳಿಗೆ ಎಂಜಲು ಹಚ್ಚುವುದು ನಮ್ಮ ದೇಶದಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿದೆ.

    ಎರಡನೆಯ ಕಾರಣ, ಕೋವಿಡ್-19 (COVID-19) ಗೆ ಕಾರಣವಾಗುವ SARS-CoV-2 ವೈರಸ್ ಕಾಗದ, ರಟ್ಟುಗಳ ಮೇಲೆ 3 ಗಂಟೆಗಳಿಂದ 4 ದಿನಗಳವರೆಗೆ ‘ಜೀವಂತ’ವಾಗಿರುತ್ತದೆ ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿ.ಡಿ.ಸಿ) ಸಂಸ್ಥೆಯು ವಿವಿಧ ವೈಜ್ಞಾನಿಕ ಅಧ್ಯಯನಗಳ ಆಧಾರದ ಮೇಲೆ ವರದಿ ಮಾಡಿದೆ. ಕಾಗದದಿಂದ ಮಾಡಲ್ಪಟ್ಟಿರುವ ಕರೆನ್ಸಿ ನೋಟುಗಳು ಜನರಿಂದ ಜನರಿಗೆ ಹಸ್ತಾಂತರವಾಗುವಾಗ ವೈರಸ್‌ನಿಂದ ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚು ಇದೆ. ಕರೆನ್ಸಿ ನೋಟುಗಳಿಗಿಂತ ನಾಣ್ಯಗಳು ಇನ್ನು ಅಪಾಯಕಾರಿ; ಏಕೆಂದರೆ ಕೊರೊನಾವೈರಸ್ ಲೋಹದ ಮೇಲ್ಮೈಗಳಲ್ಲಿ ಸುಮಾರು 5
    ದಿನಗಳವರೆಗೆ ‘ಜೀವಂತ’ ಇರಬಲ್ಲದು. ‘ಜರ್ನಲ್ ಆಫ್ ಹಾಸ್ಪಿಟಲ್ ಇಂಫೆಕ್ಷನ್ಸ್’ ಇದರಲ್ಲಿ ಪ್ರಕಟವಾಗಿರುವಂತೆ ಈ ಅಂಕಿಅಂಶಗಳು ಹವಾಮಾನ ಪರಿಸ್ಥಿತಿಗಳು ಮತ್ತು ಭೌಗೋಳಿಕ ಪ್ರದೇಶಗಳನ್ನು ಅವಲಂಬಿಸಿ ಬದಲಾಗುತ್ತವೆ; ಹೆಚ್ಚಿನ ತಾಪಮಾನ ಮತ್ತು ಆರ್ದ್ರತೆ ಇರುವ ಸ್ಥಳಗಳಲ್ಲಿ ಕೊರೊನಾವೈರಸ್ ಕಡಿಮೆ ಅವಧಿಯವರೆಗೆ ‘ಜೀವಂತ’ವಿರುತ್ತದೆ.

    ವಾಸ್ತವವಾಗಿ, ನಮ್ಮ ದೇಶದಲ್ಲಿ ಕರೆನ್ಸಿ ನೋಟುಗಳು ರೋಗಾಣುಗಳಿಂದ ಸುಲಭ ಮತ್ತು ವೇಗವಾಗಿ ಕಲುಷಿತಗೊಳ್ಳುವ ಬಗ್ಗೆ ಕೋವಿಡ್ -19 ಮಹಾಮಾರಿ ಪ್ರಾರಂಭವಾಗುವ ಮೊದಲೇ ಕೆಲವು ವೈಜ್ಞಾನಿಕ ಸಂಶೋಧನೆಗಳು ನಿರೂಪಿಸಿವೆ. ನವದೆಹಲಿಯಲ್ಲಿರುವ ‘ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿ’ ವಿಜ್ಞಾನಿಗಳ ತಂಡವೊಂದು 2015ರಲ್ಲಿ ಸಾರ್ವಜನಿಕ ಸ್ಥಳಗಳಿಂದ ಸಂಗ್ರಹಿಸಿದ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳನ್ನು ವಿಶ್ಲೇಷಿಸಿದಾಗ ಅವುಗಳು ವೈರಸ್,
    ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಗೆ ಸೇರಿದ ಒಟ್ಟು 78 ರೋಗಾಣುಗಳಿಂದ ಕಲುಷಿತಗೊಂಡಿರುವುದು ಮತ್ತು ಅವುಗಳಲ್ಲಿ ಕೆಲವು ಮಲ್ಟಿ-ಆಂಟಿಬಯೋಟಿಕ್ (ಬಹು-ಪ್ರತಿಜೀವಕ ಔಷಧಿಗಳು) ನಿರೋಧಕ ಜೀನ್‌ಗಳು (ವಂಶವಾಹಿಗಳು) ಅವುಗಳ ಜೀನೋಮ್‌ಗಳಲ್ಲಿ ಇರುವುದು ಪತ್ತೆಯಾಗಿವೆ. 2016 ರಲ್ಲಿ, ತಮಿಳುನಾಡಿನ ತಿರುನೆಲ್ವೇಲಿ ವೈದ್ಯಕೀಯ ಕಾಲೇಜಿನ ಸಂಶೋಧಕರ ತಂಡವು ಅಧ್ಯಯನವೊಂದನ್ನು ಕೈಗೊಂಡಿತ್ತು; ವೆಲ್ಲೂರ್ ನಗರದಲ್ಲಿ ಬಸ್ ಕಂಡಕ್ಟರ್‌ಗಳು, ವೈದ್ಯರು, ಮೀನು-ಮಾಂಸ ವ್ಯಾಪಾರಿಗಳು, ವಿದ್ಯಾರ್ಥಿಗಳು, ಗೃಹಿಣಿಯರು, ತರಕಾರಿ ಮಾರಾಟಗಾರರು ಸೇರಿದಂತೆ ವಿವಿಧ ಸ್ತರದ ಜನರಿಂದ ಕರೆನ್ಸಿ ನೋಟುಗಳನ್ನು ಸಂಗ್ರಹಿಸಿ ಸೂಕ್ಷ್ಮಜೀವಿಗಳಿಂದ ಕಲುಷಿತಗೊಂಡಿರುವ ಸಾಧ್ಯತೆಯನ್ನು ಪರೀಕ್ಷೆಗೆ ಒಳಪಡಿಸಲಾಯಿತು.ಪರೀಕ್ಷೆಗೊಳಪಡಿಸಿದ ಕರೆನ್ಸಿ ನೋಟುಗಳು ಸಾಮಾನ್ಯ ಮಾತ್ರವಲ್ಲದೆ ಕೆಲವು ರೋಗಕಾರಕ ಪ್ರಭೇದಗಳನ್ನು ಒಳಗೊಂಡ
    ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡಿರುವುದನ್ನು ವಿಜ್ಞಾನ ಜರ್ನಲ್ ಒಂದರಲ್ಲಿ ಪ್ರಕಟವಾಗಿದೆ.

    2015 ರಲ್ಲಿ ಲಖನೌದಲ್ಲಿರುವ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ನಡೆಸಿದ ಇದೇ ರೀತಿಯ ಸಂಶೋಧನೆಯು ಕರೆನ್ಸಿನೋಟುಗಳು ಮತ್ತು ನಾಣ್ಯಗಳು ವಿವಿಧ ತಳಿಗಳ ವೈರಾಣುಗಳು, ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳಿಂದ
    ಕಲುಷಿತಗೊಂಡಿರುವುದು ತೋರಿಸಿಕೊಟ್ಟಿತು. ಕರೆನ್ಸಿ ನೋಟುಗಳು ಮತ್ತು ನಾಣ್ಯಗಳು ಕೋವಿಡ್ -19 ಉಂಟುಮಾಡುವ SARS- CoV-2 ವೈರಾಣುವಿನಿಂದ ಕಲುಷಿತಗೊಳ್ಳುವ ಸಾಧ್ಯತೆಯ ಬಗ್ಗೆ ಯಾವುದೇ ವೈಜ್ಞಾನಿಕ ಅಧ್ಯಯನಗಳ ವರದಿ ಈವರೆಗೆ ಲಭ್ಯವಿರುವುದಿಲ್ಲ.ಆದರೆ ಈ ಹಿಂದಿನ ಅನೇಕ ಸಂಶೋಧನೆಗಳ ಆಧಾರದ ಮೇಲೆ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳು ಕೊರೊನಾ ವೈರಸ್‌ನಿಂದ ಕಲುಷಿತಗೊಂಡು ಆ ಮೂಲಕ ಜನಸಮುದಾಯದ ನಡುವೆ ಕೋವಿಡ್ -19 ಹರಡುವ ಅಪಾಯವನ್ನು ಅಲ್ಲಗಳೆಯಲಾಗದು.

    ಕರೆನ್ಸಿ ನೋಟುಗಳ ನಿರ್ಮಲೀಕರಣಗೊಳಿಸಲು ತಂತ್ರಗಳು

    ಈ ಹಿನ್ನೆಲೆಯಲ್ಲಿ, ಭಾರತದಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಅಭಿವೃದ್ಧಿಯ ನೋಡಲ್ ಸಂಸ್ಥೆಯಾದ ‘ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್’ (ಸಿ.ಎ.ಐ.ಆರ್.) ಕರೆನ್ಸಿ ನೋಟುಗಳ ಮೂಲಕ ಕೋವಿಡ್-19 ಹರಡುವ ಸಾಧ್ಯತೆಯ ಬಗ್ಗೆಉನ್ನತಮಟ್ಟದ ಸಂಶೋಧನೆಯನ್ನು ನಡೆಸಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿಯನ್ನು ಮಾಡಿದೆ. ನೋವೆಲ್ ಕರೋನಾ ಹುಟ್ಟು ಪಡೆದುಕೊಂಡು ಕೋವಿಡ್ -19 ಕಾಯಿಲೆಗೆ ನಾಂದಿ ಹಾಡಿದ ಚೀನಾದಲ್ಲಿ, ಪ್ರಾರಂಭದಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದ್ದರೂ, ಮುಂದೆ ರೋಗದ ಸಾಮೂಹಿಕ ಹರಡುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾ ಡುವಲ್ಲಿ ಯಶಸ್ವಿಯಾಯಿತು.

    ಅಲ್ಲಿ ಕೈಗೊಂಡ ಮುಖ್ಯವಾದ ಒಂದು ಕ್ರಮ: ಕರೆನ್ಸಿ ನೋಟುಗಳನ್ನು ನೆರಳಾತೀತ (ಅಲ್ಟ್ರಾವೈಲೆಟ್) ಕಿರಣಗಳು ಅಥವಾ ಹೆಚ್ಚಿನ ತಾಪಮಾನಕ್ಕೆ ತೆರೆದಿಟ್ಟು ನಿರ್ಮಲೀಕರಣಗೊಳಿಸುವುದು (Decontamination), 14 ದಿನಗಳವರೆಗೆ ಹಣವನ್ನು ದಿಗ್ಬಂಧನಕ್ಕೆ (ಕ್ವಾರಂಟೈನ್) ಒಳಪಡಿಸುವುದು ಮತ್ತು ವೈರಸ್‌ನಿಂದ ಕಲುಷಿತಗೊಂಡಿರುವ ಕರೆನ್ಸಿ ನೋಟುಗಳನ್ನು ನಾಶಪಡಿಸುವ ಕ್ರಮಗಳನ್ನು ‘ಪೀಪಲ್ಸ್ ಬ್ಯಾಂಕ್ ಆಫ್ ಚೀನಾ’ ಕೈಗೊಂಡಿತು.

    ಅಂತೆಯೇ, ಇತರ ದೇಶಗಳು ತಮ್ಮಲ್ಲಿನ ಕರೆನ್ಸಿ ನೋಟುಗಳನ್ನು ಅಕಲುಷಿತಗೊಳಿಸಲು (Decontamination) ತಮ್ಮದೇ ಆದ 3 ಮಾರ್ಗಗಳನ್ನು ಅಳವಡಿಸಿಕೊಂಡಿವೆ; ‘ಸೆಂಟ್ರಲ್ ಬ್ಯಾಂಕ್ ಆಫ್ ಹಂಗೇರಿ’ ಕರೆನ್ಸಿ ನೋಟುಗಳನ್ನು ಸ್ವಲ್ಪ ಹೊತ್ತು 170 ಡಿಗ್ರಿ ಸೆಲ್ಸಿಯಸ್ ನಲ್ಲಿ ಇಟ್ಟು 14 ದಿನಗಳವರೆಗೆ ದಿಗ್ಬಂಧನಕ್ಕೆ ಒಳಪಡಿಸುವುದು. ಕೊರಿಯಾದಲ್ಲಿ, ಚಲಾವಣೆಯಿಂದ ಹೊರಬರುವ ಕರೆನ್ಸಿ ನೋಟುಗಳನ್ನು ಆರ್ಥಿಕತೆಗೆ ಹಿಂದಿರುಗಿಸುವ ಮೊದಲು 150 ಡಿಗ್ರಿ ಸೆಲ್ಸಿಯಸ್ ನಲ್ಲಿ ಸೂಪರ್ ಹೀಟ್ ಮಾಡಿ ಅಕಲುಷಿತಗೊಳಿಸುವುದು.

    ಆದರೆ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಸುಮಾರು 135+ ಕೋಟಿ ಜನಸಂಖ್ಯೆ ಇರುವ ವಿಶ್ವದ 7 ನೇ ದೊಡ್ಡ ರಾಷ್ಟ್ರ ಭಾರತದಲ್ಲಿ ದೇಶಾದ್ಯಂತ ಕರೆನ್ಸಿ ನೋಟುಗಳನ್ನು ಸಂಗ್ರಹಿಸಿ ಅಕಲುಷಿತಗೊಳಿಸುವ
    ಕಾರ್ಯ ಅಷ್ಟು ಸುಲಭವಲ್ಲ. ಏಕೆಂದರೆ ಅದಕ್ಕೆ ಸಾಕಷ್ಟು ಮೂಲಸೌಕರ್ಯಗಳ ವ್ಯವಸ್ಥೆ ಆಗಬೇಕು ಮತ್ತು ಈಗಿನ
    ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ಪೂರಕವಾದ ಪರಿಹಾರವಲ್ಲ.

    ಪಾಲಿಮರ್ ಕರೆನ್ಸಿ ಪರಿಹಾರವೇ…?

    ಕರೆನ್ಸಿ ನೋಟುಗಳ ಮೂಲಕ ಜನಸಮುದಾಯದಲ್ಲಿ ವೈರಸ್ ಹರಡುವ ಅಪಾಯವನ್ನು ತಪ್ಪಿಸಲು ಕೆಲವು ದೇಶಗಳು ಪೇಪರ್ ಕರೆನ್ಸಿ ನೋಟುಗಳ ಸ್ಥಾನದಲ್ಲಿ ಪಾಲಿಮರ್ ಕರೆನ್ಸಿಗೆ ಬದಲಾಯಿಸಿಕೊಂಡಿವೆ. ಪಾಲಿಮರ್ ನೋಟುಗಳನ್ನು ಪರಿಚಯಿಸಿ ಆರ್ಥಿಕತೆಗೆ ಅಳವಡಿಸಿಕೊಂಡಿರುವ ಮೊದಲ ರಾಷ್ಟ್ರ ಆಸ್ಟ್ರೇಲಿಯಾ. ಪಾಲಿಪ್ರೊಪಿಲೀನ್ ಎಂಬ ವಸ್ತುವಿನಿಂದ ಮಾಡಲ್ಪಟ್ಟಿರುವ ಪಾಲಿಮರ್ ಕರೆನ್ಸಿಗೆ ಹೋಲಿಸಿದರೆ ಹತ್ತಿ ಮತ್ತು ಹತ್ತಿ ಚಿಂದಿನಿಂದ ಕೂಡಿದ ಕಾಗದದ ಕರೆನ್ಸಿ ನೋಟುಗಳು ಹೆಚ್ಚು ತೇವಾಂಶವನ್ನು
    ಹೀರಿಕೊಳ್ಳುತ್ತದೆ; ಇದರಿಂದಾಗಿ ವೈರಸ್, ಬ್ಯಾಕ್ಟೀರಿಯ ಮತ್ತು ಶಿಲೀಂಧ್ರಗಳಿಂದ ಬೇಗನೆ ಕಲುಷಿತಗೊಳ್ಳುತ್ತವೆ ಎಂದು
    ಸಂಶೋಧನೆಯಿಂದ ತಿಳಿದುಬಂದಿದೆ.

    ಆ ಕಾರಣದಿಂದ, ಕೊರೊನಾವೈರಸ್ ಹರಡುವ ವಿಷಯದಲ್ಲಿ ಕಾಗದದ ಕರೆನ್ಸಿಗೆ ಹೋಲಿಸಿದರೆ, ಪಾಲಿಮರ್ ಕರೆನ್ಸಿಯನ್ನು ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಸಂಶೋಧನಾ ತಂಡವು ಭಾರತದಲ್ಲಿ ಪಾಲಿಮರ್ ಕರೆನ್ಸಿ ನೋಟುಗಳನ್ನು ಚಲಾವಣೆಗೆ ತರುವ ಸಾಧ್ಯತೆಯ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲಹೆಯನ್ನು ನೀಡಿದೆ. ಆದಾಗ್ಯೂ, ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ, ಅಲ್ಪಾವಧಿಯಲ್ಲಿಯೇ ಪಾಲಿಮರ್ ಕರೆನ್ಸಿಗೆ ಬದಲಾವಣೆಗೊಳ್ಳುವುದು ಆರ್ಥಿಕವಾಗಿ, ಅದೂ ಪ್ರಸ್ತುತ ಇರುವ ಸಂಧಿಗ್ಧ ಪರಿಸ್ಥಿಯಲ್ಲಿ ಕಾರ್ಯಸಾಧ್ಯವಲ್ಲ. ಹಾಗಿದ್ದರೆ, ಕರೆನ್ಸಿ ನೋಟುಗಳ ಮೂಲಕ SARS-CoV-2 ಹರಡುವ ಅಪಾಯವನ್ನು ತಪ್ಪಿಸಲು ಪರ್ಯಾಯ ಮಾರ್ಗ ಯಾವುದು?

    ಪರಿಹಾರ ಮಾರ್ಗ

    ಪರಿಹಾರ ಮಾರ್ಗ ಸರಳ! ಅದುವೇ ಡಿಜಿಟಲ್ ವ್ಯವಹಾರ. ಅಂದರೆ ವಿದ್ಯುನ್ಮಾನ (ಇಲೆಕ್ಟ್ರಾನಿಕ್) ಹಣ ವರ್ಗಾವಣೆ ಮತ್ತು ಸ್ವೀಕಾರ; ಇದನ್ನು ಆನ್‌ಲೈನ್ ಪಾವತಿ (Online payment), ಎಲೆಕ್ಟ್ರಾನಿಕ್ ಮನಿ ಟ್ರಾನ್ಸಫರ್ (Electronic Money transfer) ಮತ್ತು ಡಿಜಿಟಲ್ ಕರೆನ್ಸಿ (Digital currency) ಎಂಬ ಇತರ ಹೆಸರುಗಳಿಂದಲೂ ಜನಪ್ರಿಯತೆ ಗಳಿಸಿದೆ.
    ದಿನಸಿ, ತರಕಾರಿ, ಔಷಧಿ, ಇತ್ಯಾದಿ ಖರೀದಿಸಲು, ವಿದ್ಯುತ್, ನೀರು ಸರಬರಾಜು ಮುಂತಾದ ಯುಟಿಲಿಟಿ ಬಿಲ್ ಪಾವತಿ, ಹೋಟೆಲ್
    ರೆಸ್ಟೋರೆಂಟ್‌ನಲ್ಲಿ ಪಾವತಿ, ಶಾಲಾ ಶುಲ್ಕ, ಪಾರ್ಕಿಂಗ್ ಶುಲ್ಕ, ಚಿತ್ರಮಂದಿರ, ರೈಲ್ವೆ ಟಿಕೆಟ್ ಕಾಯ್ದಿರಿಸಲು ಹೀಗೆ ಹತ್ತು ಹಲವಾರು ಹಣಕಾಸಿನ ವ್ಯವಹಾರಗಳನ್ನು ನಡೆಸುವುದು ನಮ್ಮ ದೈನಂದಿನ ಜೀವನದ ಭಾಗವಾಗಿದೆ. ಕಳೆದ ಹತ್ತು ವರ್ಷಗಳಿಂದೀಚೆ, ಭಾರತದಲ್ಲಿ ವಿಶೇಷವಾಗಿ ಪಟ್ಟಣಗಳು ​​ಮತ್ತು ನಗರಗಳಲ್ಲಿ ಈಗಾಗಲೇ ಅನೇಕ ಜನರು ಡಿಜಿಟಲ್ ವ್ಯವಹಾರಕ್ಕೆ
    ಉತ್ತಮವಾಗಿ ಹೊಂದಿಕೊಂಡಿದ್ದಾರೆ.

    ಆದರೆ, ಇನ್ನೂ ಅನೇಕ ಜನರಿಗೆ, ಡಿಜಿಟಲ್ ವ್ಯವಹಾರ ಅಂದರೆ “ಅದು ಏನೋ ದೊಡ್ಡ ತಂತ್ರಜ್ಞಾನ, ನಮ್ಮಂತಹ ಸಾಮಾನ್ಯ ಜನರಿಗೆ ಕಾರ್ಯಸಾಧುವಲ್ಲ” ಎಂಬ ಅನಿಸಿಕೆ ಮನದಲ್ಲಿ ಇರಬಹುದು. ತಾಂತ್ರಿಕವಾಗಿ ಇದು ಮಾಹಿತಿ ತಂತ್ರಜ್ಞಾನದ ಒಂದು ಅಭಿವೃದ್ಧಿ ಹೊಂದಿದ ಆವಿಷ್ಕಾರ; ಆದರೆ ಬಳಕೆದಾರರು ಹಣಕಾಸಿನ ವ್ಯವಹಾರಗಳನ್ನು ಸುಲಭವಾಗಿ ನಿರ್ವಹಿಸುವ ರೀತಿಯಲ್ಲಿ ಡಿಜಿಟಲ್ ಕರೆನ್ಸಿಯನ್ನು ಪ್ರೋಗ್ರಾಮ್ ಮಾಡಲಾಗಿರುತ್ತದೆ.

    ಸ್ಮಾರ್ಟ್‌ಫೋನ್‌ ಮತ್ತು ಇ-ವಾಲೆಟ್

    ಇಂದಿನ ಆಧುನಿಕ ಜೀವನಶೈಲಿಯಲ್ಲಿ, ಮೊಬೈಲ್ ಫೋನ್ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ; ಇಂದು ಹಳೆ
    ಮಾದರಿಯ ಮೊಬೈಲ್ ಫೋನ್ಗಳ ಸ್ಥಾನದಲ್ಲಿ ಬಹುಪಯೋಗಿ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನವರ ಕೈಯಲ್ಲಿವೆ. ಮಾರುಕಟ್ಟೆ
    ಸಂಶೋಧನಾ ಸಂಸ್ಥೆ ಟೆಕ್ಎ.ಆರ್‌.ಸಿ. (techARC) ಪ್ರಕಾರ, ಡಿಸೆಂಬರ್ 2019 ರ ವೇಳೆಗೆ 502.2 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರು ಭಾರತದಲ್ಲಿ ಇದ್ದಾರೆ. ಅಂದರೆ, ಪ್ರತಿಶತ 77 ಭಾರತೀಯರು ಈಗ ಸ್ಮಾರ್ಟ್‌ಫೋನ್‌ಗಳ ಮೂಲಕ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಪಡೆಯುತ್ತಿದ್ದಾರೆ. ಸ್ಮಾರ್ಟ್‌ಫೋನ್‌ಗಳಲ್ಲಿ ಆನ್‌ಲೈನ್ ಹಣ ವರ್ಗಾವಣೆಗಾಗಿ
    ಇನ್ಸ್ಟಾಲ್ ಮಾಡಿರುವ ಅಪ್ಲಿಕೇಶನ್ (ಆಪ್) ಅನ್ನು ಬಳಸಿಕೊಂಡು ಹತ್ತು ರೂಪಾಯಿ ಬೆಲೆಯ ವಸ್ತುವನ್ನು ಖರೀದಿಸಲು ಸಹ ಹಣ ಪಾವತಿ ಮಾಡಬಹುದು.

    ಇಲೆಕ್ಟ್ರಾನಿಕ್ ಹಣ ವರ್ಗಾವಣೆಗಾಗಿ ಇರುವ ಮೊಬೈಲ್ ಅಪ್ಲಿಕೇಶನ್ ಅನ್ನು ಇ-ವಾಲೆಟ್ (e-Wallet) ಎಂದು ಕರೆಯಲಾಗುತ್ತದೆ; ‘ಇ’ ಅಂದರೆ ಇಲೆಕ್ಟ್ರಾನಿಕ್ , ವಾಲೆಟ್ ಅಂದರೆ ಹಣವನ್ನು ಇಟ್ಟುಕೊಳ್ಳಲಿಕ್ಕಿರುವ ವ್ಯವಸ್ಥೆ.ಜೇಬಿನಲ್ಲಿ ಪರ್ಸ್ ಇರುವ ಹಾಗೆ ಮೊಬೈಲ್ ಫೋನಿನಲ್ಲಿ ಇ-ವಾಲೆಟ್; ಒಂದೇ ವ್ಯತ್ಯಾಸ ಅಂದರೆ ಪರ್ಸ್ ನಲ್ಲಿ ಹಣ ನಗದು
    ರೂಪದಲ್ಲಿ ಇದ್ದರೆ, ಇ-ವಾಲೆಟ್ ನಲ್ಲಿ ಡಿಜಿಟಲ್ ರೂಪದಲ್ಲಿ ಇರುತ್ತದೆ.ಇತ್ತೀಚಿನ ವರ್ಷಗಳಲ್ಲಿ ನಗದುರಹಿತ ವ್ಯವಹಾರ ಎಷ್ಟು ಜನಪ್ರಿಯವಾಯಿತು ಎಂದರೆ 2018 ರ ‘ಇ-ಮಾರ್ಕೆಟರ್’
    ನಡೆಸಿದ ಅಂಕಿಅಂಶಗಳ ಪ್ರಕಾರ ಭಾರತದಾದ್ಯಂತ 73.9 ಮಿಲಿಯನ್ ಜನರು ಮೊಬೈಲ್ ಇ-ವ್ಯಾಲೆಟ್ ಗಳನ್ನು ಬಳಸುತ್ತಿದ್ದಾರೆ. ಅನೇಕ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ಗ್ರಾಹಕರಿಗೆ ಆನ್‌ಲೈನ್ ಹಣ ವರ್ಗಾವಣೆ ಮತ್ತು ಸ್ವೀಕೃತಿಗೆ ವ್ಯವಸ್ಥೆ ಒದಗಿಸುವ ಮೂಲಕ ತಮ್ಮ ವ್ಯವಹಾರವನ್ನು ನವೀಕರಿಸಿರುವುದು ಮೆಚ್ಚುವಂತದ್ದು,

    ಇನ್ನು, ಅಪಾಯಕಾರಿ ವೈರಸ್ ಸೋಂಕಿಗೆ ಒಳಗಾಗುವ ಮತ್ತು ಇತರರಿಗೆ ಹರಡುವ ಅಪಾಯವನ್ನು ತಪ್ಪಿಸಲು ಡಿಜಿಟಲ್ ಕರೆನ್ಸಿ ಸೌಲಭ್ಯವನ್ನು ಬಳಸಿಕೊಳ್ಳುವುದು ಜನರ ಕೈಯಲ್ಲಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು. ಎಚ್‌. ಒ) ಕಲುಷಿತ ಕರೆನ್ಸಿ ನೋಟುಗಳು ವೈರಸ್ ಹರಡುವ ಅಪಾಯದ ಸಾಧ್ಯತೆಯನ್ನು ಮನಗಂಡು ಜಗತ್ತಿನಾದ್ಯಂತ ಜನರಿಗೆ ಕರೆನ್ಸಿ ನೋಟುಗಳ ಬದಲಾಗಿ ಡಿಜಿಟಲ್ ಕರೆನ್ಸಿಗೆ ಹೆಚ್ಚು ಅವಲಂಬಿತವಾಗುವುದು ಸೂಕ್ತ ಎಂದು ಸಲಹೆ ನೀಡಿದೆ.

    ಆನ್‌ಲೈನ್ ವಹಿವಾಟಿನ ಸುರಕ್ಷತೆ

    ಹಣದ ವ್ಯವಹಾರವನ್ನು ಆನ್‌ಲೈನ್ ಮೂಲಕ ಮಾಡುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಅನೇಕ ಜನರ ಮನದಲ್ಲಿಇರಬಹುದು. ಆನ್‌ಲೈನ್ ವ್ಯವಹಾರ ಸೇವೆಯನ್ನು ಒದಗಿಸುವ ಇ-ಕಾಮರ್ಸ್ ಸಂಸ್ಥೆಗಳಿಗೆ ಮತ್ತು ತಂತ್ರಜ್ಞಾನವನ್ನು
    ಬಳಸುವವರಿಗೆ ಸೈಬರ್‌ ಸುರಕ್ಷತೆ ಒಂದು ದೊಡ್ಡ ಸವಾಲು. ಈ ದೃಷ್ಟಿಕೋನದಿಂದ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
    ಆನ್‌ಲೈನ್ ಹಣಕಾಸು ವ್ಯವಹಾರದ ಸುರಕ್ಷತೆ ಮತ್ತು ಅಪಾಯವನ್ನು ತಗ್ಗಿಸುವ ಕ್ರಮಗಳಾಗಿ ಕೆಲವು ಮಾರ್ಗಸೂಚಿಗಳನ್ನು
    ಹೊರತಂದಿದೆ.

    ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (National Payment Corporation of India;NPCI), ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (Indian Computer Emergency Response Team;CERT-In), ನ್ಯಾಷನಲ್ ಕ್ರಿಟಿಕಲ್ ಇನ್ಫರ್ಮೇಷನ್ ಇನ್ಫ್ರಾಸ್ಟ್ರಕ್ಚರ್ ಪ್ರೊಟೆಕ್ಷನ್ ಸೆಂಟರ್ (National Critical Information Infrastructure Protection Centre; NCIIPC) ಆನ್‌ಲೈನ್ ಪಾವತಿ ಮತ್ತು ಇತರ ಡಿಜಿಟಲ್ ವಹಿವಾಟಿನ ಸೈಬರ್ ಸುರಕ್ಷತೆಗಾಗಿ ಭಾರತದಲ್ಲಿರುವ ಕೇಂದ್ರ ಸರಕಾರದ ಇತರ ಅಂಗ ಸಂಸ್ಥೆಗಳು. ಎಲ್ಲಾ ಡಿಜಿಟಲ್ ಪಾವತಿಗಳು ಪಾಸ್‌ವರ್ಡ್ ರಕ್ಷಿತ ಅಥವಾ ಕ್ಯೂಆರ್ (ಕ್ವಿಕ್ ರೆಸ್ಪಾನ್ಸ್ ಕೋಡ್) ಕೋಡ್ / ಅವಲಂಬಿತವಾಗಿರುತ್ತದೆ.

    ಪ್ರತಿ ಹಣ ವರ್ಗಾವಣೆ ಸಮಯದಲ್ಲಿ ಸೇವಾ ಪೂರೈಕೆದಾರರಿಂದ ಏಕ-ಬಳಕೆಯ ಪಾಸ್‌ವರ್ಡ್ ಸೃಷ್ಟಿಯಾಗಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್. ಎಂ.ಎಸ್ ಮೂಲಕ ಬರುವ ಒ.ಟಿ.ಪಿ. (ಒನ್-ಟೈಮ್ ಪಾಸ್ವರ್ಡ್) ಆಧಾರಿತವಾಗಿ ಕಾರ್ಯನಿರ್ವಹಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ, ಅನಧಿಕೃತ ಪ್ರವೇಶವನ್ನು ತಡೆಯಲು ಪಾಸ್‌ವರ್ಡ್ (ಗುಪ್ತಪದ) ಮತ್ತು ಒಟಿಪಿಗಳು ಎರಡನ್ನೂ ಎನ್‌ಕ್ರಿಪ್ಟ್ ಆಗುತ್ತವೆ; ಅಂದರೆ ನಮೂದಿಸಿದ
    ಮಾಹಿತಿಯನ್ನು ಡಿಕೋಡ್ ಮಾಡಲಾಗದ ಕೋಡ್ ಆಗಿ ಪರಿವರ್ತಿಸಲಾಗುತ್ತದೆ. ಮುಖ್ಯವಾಗಿ ಬಳಕೆದಾರರು ಅಥವಾ
    ಪಾವತಿದಾರರು, ಯಾವುದೇ ಕಾರಣಕ್ಕೂ ಮತ್ತು ಯಾವುದೇ ಸಮಯಕ್ಕೂ ತಮ್ಮ ಪಾಸ್‌ವರ್ಡ್ ಮತ್ತು ಒಟಿಪಿಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳದಂತೆ ಜಾಗೃತೆ ವಹಿಸಬೇಕು.

    ಅದಕ್ಕಿಂತ ಮುಖ್ಯವಾಗಿ, ಫೋನ್ ಮಾಡಿ ಯಾರು ಏನೇ ಬಣ್ಣದ ಮಾತುಗಳನ್ನಾಡಿದರೂ ಪಾಸ್‌ವರ್ಡ್, ಪಿನ್ (Personal Identification Number; ವೈಯಕ್ತಿಕ ಗುರುತಿನ ಸಂಖ್ಯೆ) ಅಥವಾ ಒಟಿಪಿಯನ್ನು ಬಹಿರಂಗಪಡಿಸದೆ ಹ್ಯಾಕರ್‌ಗಳ ಬಲೆಗೆ ಬೀಳದ ಹಾಗೆ ಬಹಳ ಜಾಗರೂಕರಾಗಿರಬೇಕು. ಈ ಅರಿವು ಮತ್ತು ಜಾಗರೂಕತೆ
    ಇದ್ದರೆ, ಡಿಜಿಟಲ್ ಪಾವತಿ ಹೆಚ್ಚು ಸುಲಭ, ವಿಶ್ವಾಸಾರ್ಹ, ವೇಗ ಮತ್ತು ಸುರಕ್ಷಿತವಾಗಿದೆ. ಡಿಜಿಟಲ್ ವ್ಯವಹಾರಕ್ಕೆ ಮೊಬೈಲ್ ಅಪ್ಲಿಕೇಶನ್‌ಗಳು
    ವಿಶ್ವಾದ್ಯಂತ, ಸುರಕ್ಷಿತ ಆನ್‌ಲೈನ್ ಹಣ ವರ್ಗಾವಣೆಗಾಗಿ ವಿವಿಧ ಇ-ಕಾಮರ್ಸ್ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ನೂರಾರು ಮೊಬೈಲ್ ಅಪ್ಲಿಕೇಶನ್‌ಗಳು (ಆಪ್ ಗಳು) ಚಾಲ್ತಿಯಲ್ಲಿ ಇವೆ. ಪೇಟಿಎಂ (PayTM), ಮೊಬಿಕ್ವಿಕ್ (MobiKwik),ಭೀಮ್ (BHIM), ಫೋನ್‌ಪೇ (PhonePe), ಫ್ರೀಚಾರ್ಜ್ (FreeCharge), ಏರ್‌ಟೆಲ್ ಮನಿ (Airtel Money), ಓಲಾ ಮನಿ(Ola Money), ಪೇಪಾಲ್ ಇಂಡಿಯಾ (PayPal India), ಇಪೈಸಾ (ePaisa), ಗೂಗಲ್ ಪೇ (Google Pay) ಮತ್ತುಅಮೆಜಾನ್ ಪೇ (Amazon Pay), ವಾಟ್ಸಪ್ಪ್ ಪೇ (WhatsApp Pay) ನಮ್ಮ ದೇಶದಲ್ಲಿ ಈಗಾಗಲೇ ಜನಪ್ರಿಯತೆ ಗಳಿಸಿರುವಯುಪಿಐ (Unified Payments Interface) ಆಧಾರಿತ ಹಣ ಪಾವತಿ ಮತ್ತು ಸ್ವೀಕರಿಸಲು ಅನುವು ಮಾಡಿಕೊಡುವ
    ಮೊಬೈಲ್ ಅಪ್ಲಿಕೇಶನ್‌ಗಳು. ಈ ಎಲ್ಲಾ ಡಿಜಿಟಲ್ ಪಾವತಿ ವ್ಯವಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಪರವಾನಗಿ ಪಡೆದುಕೊಂಡು ಷರತ್ತುಬದ್ಧ ನಿಯಮಗಳು ಮತ್ತು ಮಾರ್ಗಸೂಚಿಗಳಿಗೆ ಅನುಸಾರವಾಗಿ ಡಿಜಿಟಲ್ ವ್ಯವಹಾರದ (ಆನ್‌ಲೈನ್ ನಲ್ಲಿ ಹಣ ಪಾವತಿ ಮತ್ತು ಸ್ವೀಕಾರ) ಸೇವೆಗಳನ್ನು 24×7 ಬಳಕೆದಾರರಿಗೆ ಒದಗಿಸುತ್ತವೆ.

    ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು

    ಅನೇಕ ರಾಷ್ಟ್ರೀಕೃತ ಮತ್ತು ಖಾಸಗಿ ವಲಯದ ಬ್ಯಾಂಕುಗಳು ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಮೊಬೈಲ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿವೆ; ಇದನ್ನು ಡಿಜಿಬ್ಯಾಂಕ್ ಎಂದು ಕರೆಯಲಾಗುತ್ತದೆ. ಎಸ್‌ಬಿಐ ‘ಯೊನೊ’(YONO), ಕಾರ್ಪೊರೇಷನ್ ಬ್ಯಾಂಕ್‌ನ ‘ಕಾರ್ಪ್ ಇ-ಪರ್ಸ್’ (Corp e-Purse), ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಪೇಝಾಪ್ (PayZapp) ಮತ್ತು ಐಸಿಐಸಿಐ ಪಾಕೆಟ್ (ICICI Pocket), ಡಿಜಿಬ್ಯಾಂಕ್‌ಗಳಿಗೆ ಕೆಲವು ಉದಾಹರಣೆಗಳು.

    ನೆಟ್-ಬ್ಯಾಂಕಿಂಗ್

    ಡಿಜಿಟಲ್ ವ್ಯವಹಾರಕ್ಕೆ, ನೆಟ್-ಬ್ಯಾಂಕಿಂಗ್ ಸಹ ಒಂದು ಉತ್ತಮ ಆಯ್ಕೆಯಾಗಿದೆ. ನೆಟ್-ಬ್ಯಾಂಕಿಂಗ್‌ನಲ್ಲಿ ವೈ-ಫೈ / ಇಂಟರ್ನೆಟ್ ಸಂಪರ್ಕ ಹೊಂದಿರುವ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್ ಅಥವಾ ಡೆಸ್ಕಟಾಪ್ ಬಳಸಿಕೊಂಡು ಒಬ್ಬ ವ್ಯಕ್ತಿಯು ತನ್ನ ಖಾತೆಯನ್ನು ತಾನೇ ನಿರ್ವಹಿಸಿ ಅನೇಕ ಬ್ಯಾಕಿಂಗ್ ವ್ಯವಹಾರಗಳನ್ನು ನಡೆಸಬಹುದು. ನಗದು ಪಾವತಿ ಅಥವಾ ಸ್ವೀಕೃತಿ ಯಾವುದೇ ಇರಲಿ, ಅದರ ಮೌಲ್ಯವು ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಸಂಖ್ಯೆ 2,000, ಅದು
    ಕಾಗದದ ಕರೆನ್ಸಿ ನೋಟಿನಲ್ಲಿರಲಿ ಅಥವಾ ಆನ್‌ಲೈನ್ ವರ್ಗಾವಣೆಯ ಸಮಯದಲ್ಲಿ ನಮೂದಿಸುವುದಾಗಿರಲಿ, ಅದರ ಮೌಲ್ಯವು ಅಷ್ಟೇ ಆಗಿರುತ್ತದೆ. ಒಂದೇ ವ್ಯತ್ಯಾಸ ಏನೆಂದರೆ, ಕಾಗದದ ಕರೆನ್ಸಿ ನೋಟುಗಳು ನಮ್ಮ ವಾಲೆಟ್ (ಪರ್ಸ್) ಅಥವಾ ಕಿಸೆಯಲ್ಲಿದ್ದರೆ, ಡಿಜಿಟಲ್ ಕರೆನ್ಸಿ ನಮ್ಮ ಮೊಬೈಲ್ ಫೋನಿನ ಇ-ವಾಲೆಟ್ ಅಥವಾ ಬ್ಯಾಂಕ್ ಖಾತೆಯಲ್ಲಿ ಇರುತ್ತದೆ.ಸುರಕ್ಷತೆಯ ದೃಷ್ಟಿಯಿಂದ, ನೆಟ್-ಬ್ಯಾಂಕಿಂಗ್ ಬಳಕೆದಾರರು ಮತ್ತು ಡೆಬಿಟ್ / ಕ್ರೆಡಿಟ್ ಕಾರ್ಡ್ ಹೊಂದಿರುವವರು ಅವಾಗಾವಾಗ ಪಿನ್ ಮತ್ತು ಪಾಸ್ವರ್ಡ್ ಬದಲಾಯಿಸುವ ಸ್ವಾತಂತ್ರ್ಯವನ್ನು ಬಳಸಿಕೊಳ್ಳಲು ಅವಕಾಶವಿದೆ.

    .ಆಫ್‌ಲೈನ್‌ ಹಣ ಪಾವತಿ
    ಡಿಜಿಟಲ್ ಪಾವತಿ ಅಂದರೆ ಸ್ಮಾರ್ಟ್‌ಫೋನ್‌, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಮೂಲಕ ಮಾಡುವ ಆನ್‌ಲೈನ್ ಪಾವತಿ. ಸಹಜವಾಗಿ, ಇದಕ್ಕೆ ಅಂತರ್ಜಾಲದ (ಇಂಟರ್ನೆಟ್) ಅವಶ್ಯಕತೆ ಇರುವುದು ಮುಖ್ಯ. ಆಫ್‌ಲೈನ್‌, ಅಂದರೆ ಇಂಟರ್ನೆಟ್ ಸೌಲಭ್ಯ ಇಲ್ಲದೆ ಅಥವಾ ನೆಟ್‌ವರ್ಕ್ ಇಲ್ಲದ ಪ್ರದೇಶ ಹಾಗೂ ಸಮಯದಲ್ಲಿಯೂ ಕ್ಯೂಆರ್ ಕೋಡ್ (QR Code)ಆಧಾರಿತವಾಗಿ ಪಾವತಿ ಮಾಡಲು ಸಹ ಕೆಲವು ಸೇವಾಸಂಸ್ಥೆಗಳು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿರುತ್ತಾರೆ. ಉದಾಹರಣೆಗೆ,PayTM ಟ್ಯಾಪ್ ಕಾರ್ಡ್ ಮೂಲಕ ಅನೇಕ ವ್ಯಾಪಾರಿ ಮಳಿಗೆಗಳಲ್ಲಿ ಹಣ ಪಾವತಿಯನ್ನು ಆಫ್‌ಲೈನ್‌ನಲ್ಲಿ ಮಾಡಬಹುದು.

    ಸ್ವದೇಶಿ ಆಪ್ ಗಳು

    ಸ್ವದೇಶಿ ಉತ್ಪನ್ನಗಳಲ್ಲಿ ಮಾತ್ರ ಆಸಕ್ತಿ ಹೊಂದಿರುವವರು ಭಾರತೀಯ ಇ-ಕಾಮರ್ಸ್ ಪಾವತಿ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಪೇಟಿಎಂ (PayTM), ಭೀಮ್ (BHIM), ಫೋನ್‌ಪೇ (PhonePe) ಮೊಬಿಕ್ವಿಕ್ (MobiKwik) ಅಥವಾ ಏರ್ಟೆಲ್ ಮನಿ (Airtel Money) ಮೊಬೈಲ್ ಆಪ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಎಲ್ಲಾ ಮೊಬೈಲ್ ಆಧಾರಿತ
    ಹಣಕಾಸಿನ ವ್ಯವಹಾರದಲ್ಲಿ, ಪೇ, ಪೇಯೀ, ಪೇಯರ್, ಕ್ರೆಡಿಟ್, ಡೆಬಿಟ್, ಎಕ್ಸಿಟ್, ಎಂಟರ್, ಕನ್ಫರ್ಮ್, ಮುಂತಾದ ಆಂಗ್ಲ ಭಾಷಾ ಪದಗಳು ಮಾತ್ರ ಬಳಕೆಯಾಗುತ್ತವೆ ಎಂಬ ಕಾರಣದಿಂದ ಅನೇಕರು ಡಿಜಿಟಲ್ ವಹಿವಾಟುಗಳನ್ನು ಬಳಸಲು ಹಿಂದೇಟು ಹಾಕಬಹುದು. ಅಂತವರಿಗಾಗಿಯೇ, ಪ್ರಾದೇಶಿಕ ಭಾಷೆಗಳಲ್ಲೂ ಡಿಜಿಟಲ್ ವ್ಯವಹಾರ ನಡೆಸಲು ಮೊಬೈಲ್
    ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಪೇಟಿಎಂ (PayTM) ಮತ್ತು ಫೋನ್ ಪೇ (PhonePe) ಅಪ್ಲಿಕೇಶನ್‌ಗಳು ಕನ್ನಡ ಸೇರಿದಂತೆ ಭಾರತದ 10 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ.

    ಸಮಯದ ಉಳಿತಾಯ

    ಆನ್‌ಲೈನ್ ಪಾವತಿಯು ಇತರ ಹಲವು ಪ್ರಯೋಜನಗಳನ್ನು ಹೊಂದಿದೆ. ಬ್ಯಾಂಕ್, ವಿದ್ಯುತ್ ಬಿಲ್, ಇಎಂಐ ಮತ್ತುನೀರಿನ ಬಿಲ್ ಗಳನ್ನು ಪಾವತಿ ಮಾಡಲು, ಸಿನೆಮಾ ಟಿಕೆಟ್ ಖರೀದಿಸಲು, ರೈಲು ಅಥವಾ ಬಸ್ ಟಿಕೆಟ್ ಮುಂಗಡ ಪಡೆಯಲು,ಮುಂತಾದವುಗಳಿಗಾಗಿ ಕ್ಯೂನಲ್ಲಿ ನಿಂತು ಸರದಿಗಾಗಿ ಕಾಯುವ ಅಗತ್ಯವಿಲ್ಲ. ಮನೆ ಅಥವಾ ಕಚೇರಿಯಲ್ಲೇ ಕುಳಿತು ಎಲ್ಲಾ
    ಪಾವತಿಗಳನ್ನು ಬೆರಳ ತುದಿಯಲ್ಲೇ ಮಾಡಬಹುದು. ಇದು ಆನ್‌ಲೈನ್ ವ್ಯವಸ್ಥೆಯಾಗಿರುವುದರಿಂದ, ಯಾವುದೇ ದೂರದ ಮಿತಿಯಿಲ್ಲ, ಒಂದೆರಡು ನಿಮಿಷಗಳಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಹಣವನ್ನು ಪಾವತಿ ಮಾಡಬಹುದು ಅಥವಾ ಪಡೆಯಬಹುದು. ನೀವು ಇಲ್ಲಿದ್ದೀರಿ, ನಿಮ್ಮ ಗೆಳೆಯ ದೂರದ ದೆಹಲಿಯಲ್ಲಿದ್ದರೆ, ಬೇಕೆಂದಾಗ ಕ್ಷಣ ಮಾತ್ರದಲ್ಲಿ ನೀವು ಆತನಿಗೆ
    ಹಣ ಕಳುಹಿಸಬಹುದು ಅಥವಾ ಆತನಿಂದ ನೀವು ಹಣ ಪಡೆಯಬಹುದು. ಮುಖ್ಯ ಏನೆಂದರೆ, ಹಣ ಕಳುಹಿಸುವವನ ಇ-ವಾಲೆಟ್ ಅಥವಾ ಬ್ಯಾಂಕ್ ಖಾತೆಯಲ್ಲಿ ಹಣ ಇರಬೇಕು. ಡಿಜಿಟಲ್ ವಹಿವಾಟಿನಿಂದ ಶ್ರಮರಹಿತ ವ್ಯವಹಾರ ಮತ್ತು ಸಮಯ ಉಳಿತಾಯದ ಪ್ರಯೋಜನಗಳಂತೂ ಖಾತರಿ.

    ಎಟಿಎಂ ಕಾರ್ಡಗಳು ಸುರಕ್ಷಿತವೇ?

    ಡಿಜಿಟಲ್ ವ್ಯವಹಾರಕ್ಕೆ ಇನ್ನೊಂದು ಮಾಧ್ಯಮವಾಗಿರುವ ಎಟಿಎಂ / ಡೆಬಿಟ್ / ಕ್ರೆಡಿಟ್ ಕಾರ್ಡ್‌ಗಳ ಬಳಕೆ ರೋಗಾಣುಗಳನ್ನು ಹರಡುವಿಕೆಗೆ ಸಂಬಂಧಿಸಿದಂತೆ ಸುರಕ್ಷಿತವೇ ? ನಿಸ್ಸಂಶಯವಾಗಿ, ಕಾರ್ಡ್‌ಗಳು ನಗದು ವಹಿವಾಟುಗಳಿಗಿಂತ ಹೆಚ್ಚು ಸುರಕ್ಷಿತವಾಗಿವೆ. ಏಕೆಂದರೆ, ಕರೆನ್ಸಿ ನೋಟುಗಳಂತೆ ಕಾರ್ಡ್‌ಗಳು ಒಬ್ಬರಿಂದ ಒಬ್ಬರಿಗೆ ಕೈಬದಲಾಗುವುದಿಲ್ಲ. ಆದರೆ ಕೊರೊನಾವೈರಸ್ ವಿಷಯದಲ್ಲಿ ಇದು ಸಂಪೂರ್ಣವಾಗಿ ಅಪಾಯ-ಮುಕ್ತವಾಗಿದೆ ಎಂದು ಹೇಳುವಂತಿಲ್ಲ. ಕೊರೊನಾವೈರಸ್
    ಪ್ಲಾಸ್ಟಿಕ್ ಮೇಲ್ಮೈಯಲ್ಲಿ 2 ರಿಂದ 5 ದಿನಗಳವರೆಗೆ ‘ಜೀವಂತ’ ಇರಬಲ್ಲದು ಎಂಬುದು ಸಾಬೀತಾಗಿದೆ. ಈ ಎಲ್ಲಾ ಕ್ರೆಡಿಟ್ /
    ಡೆಬಿಟ್ ಕಾರ್ಡ್‌ಗಳು ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿವೆ. ಆದ್ದರಿಂದ, ಮಾರುಕಟ್ಟೆಗಳಲ್ಲಿ ಕಾರ್ಡ್‌ಗಳನ್ನು ಬಳಸುವ
    ಸಮಯದಲ್ಲಿ, ಎಟಿಎಂನಿಂದ ಹಣವನ್ನು ಪಡೆಯುವಾಗ ಮತ್ತು ಅಂಗಡಿ, ಮಾಲ್ ಗಳಲ್ಲಿ ಸ್ವೈಪ್ ಮಾಡಲು ನೀಡಿದಾಗ ವೈರಸ್
    ನಿಂದ ಮಲಿನಗೊಂಡು ಅದು ಹೆಚ್ಚು ಸಮಯ ‘ಜೀವಂತ’ ಇರಬಹುದು. ಅದೇನೇ ಇದ್ದರೂ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಸಹಾಯದಿಂದ, ಮನೆಯಲ್ಲೇ ಕುಳಿತು ಆನ್‌ಲೈನ್ ಪಾವತಿ ಮಾಡುವುದರಿಂದ ರೋಗಾಣುಗಳಿಂದ ಸೋಂಕಿತವಾಗುವ ಯಾವುದೇ ಅಪಾಯವಿಲ್ಲ.

    ಕಲಿಯಲು ಮತ್ತು ಕಾರ್ಯನಿರ್ವಹಿಸಲು ಸುಲಭ

    ಇಂದಿನ ದಿನಗಳಲ್ಲಿ ಚಿಕ್ಕ ಮಕ್ಕಳು ಸಹ ಮೊಬೈಲ್ ಫೋನ್‌, ಕಂಪ್ಯೂಟರ್‌ಗಳನ್ನು ಯಾರಿಂದಲೂ ಕಲಿಯದೇ ತಮಗೆ ಬೇಕಾದ ಹಾಗೆ ಬಳಸುವಾಗ, ಡಿಜಿಟಲ್ ಪಾವತಿಯನ್ನು ನಾವು ಏಕೆ ಕಲಿಯಬಾರದು? ಡಿಜಿಟಲ್ ವ್ಯವಹಾರಕ್ಕಾಗಿ ಅಭಿವೃದ್ಧಿಪಡಿಸಿರುವ ಹೆಚ್ಚಿನ ಇ-ವ್ಯಾಲೆಟ್ ಮತ್ತು ಡಿಜಿಬ್ಯಾಂಕುಗಳು ಬಳಕೆದಾರ-ಸ್ನೇಹಿಯಾಗಿವೆ. ಆಯಾಯ ಡಿಜಿಟಲ್ ಕರೆನ್ಸಿ ಸೇವೆ ಒದಗಿಸುವ ಇ-ಕಾಮರ್ಸ್ ಕಂಪೆನಿಗಳು ಪ್ರಕಟಿಸಿರುವ ಬಳಕೆದಾರರ ಕೈಪಿಡಿಯ ಸಹಾಯದಿಂದ ಒಬ್ಬ ವ್ಯಕ್ತಿಯು ಸ್ವಯಂ ಆಗಿಕಲಿಯಬಹುದು ಅಥವಾ ಡಿಜಿಟಲ್ ವ್ಯವಹಾರದ ಬಗ್ಗೆ ಒಳ್ಳೆಯ ಅನುಭವ ಇರುವ ವಿಶ್ವಾಸಾರ್ಹ ಸ್ನೇಹಿತ ಅಥವಾ ಬಂಧುಗಳಿಂದ
    ಕೇಳಿ ತಿಳಿದುಕೊಳ್ಳಬಹುದು. ಗೂಗಲ್‌ನಲ್ಲಿ ಹುಡುಕಿದರೆ ಇ-ವ್ಯಾಲೆಟ್/ ಡಿಜಿಬ್ಯಾಂಕ್ ಹೇಗೆ ನಿರ್ವಹಿಸಬೇಕು ಎಂಬುದನ್ನು ಹಂತ
    ಹಂತವಾಗಿ ಹೇಳಿಕೊಡುವ ಅನೇಕ ಯೂಟ್ಯೂಬ್ ಚಾನೆಲ್‌ಗಳು ಕೂಡ ಇವೆ. ಒಮ್ಮೆ ಕಲಿತ ನಂತರ ಸ್ಮಾರ್ಟ್‌ಫೋನ್‌ / ಕಂಪ್ಯೂಟರ್ ಮೂಲಕ ಮಾಡುವ ಡಿಜಿಟಲ್ ವ್ಯವಹಾರ ಕ್ಯಾಲ್ಕುಲೇಟರ್ ಬಳಸುವಷ್ಟು ಸುಲಭ.

    ಕೊರೊನಾವೈರಸ್ ಸೃಷ್ಟಿಸಿದ ಅನಿವಾರ್ಯತೆ

    ಕಣ್ಣಿಗೆ ಕಾಣಿಸದ ಒಂದು ಅಪಾಯಕಾರಿ ರೋಗಾಣು ಯಾವುದೇ ಕ್ಷಣದಲ್ಲಿ ನಮ್ಮ ಅರಿವಿಗೆ ಬಾರದೆ ಯಾವುದಾದರೂ ಮಾರ್ಗದ ಮೂಲಕ ನಮ್ಮನ್ನು ಸೋಂಕಿತಗೊಳಿಸುವ ಅಪಾಯ ಇರುವುದರಿಂದ ಮುಂಜಾಗ್ರತೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ. ನಮ್ಮ ದಿನ ನಿತ್ಯದ ಜೀವನದ ವ್ಯವಹಾರದಲ್ಲಿ ಪ್ರಮುಖ ಭಾಗವಾಗಿರುವ ಕರೆನ್ಸಿ ನೋಟುಗಳ ಮತ್ತು ನಾಣ್ಯಗಳ
    ಮೂಲಕವೂ ವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆ ಇರುವುದರಿಂದ ಈಗಿನ ಪರಿಸ್ಥಿತಿಯಲ್ಲಿ ಸುರಕ್ಷತೆಯ ದೃಷ್ಟಿಯಿಂದ, ಡಿಜಿಟಲ್ ಕರೆನ್ಸಿಗೆ ಹೊಂದಿಕೊಳ್ಳುವುದು ಉತ್ತಮ.

    ವರದಿಯೊಂದರ ಪ್ರಕಾರ, 2020 ರ ಏಪ್ರಿಲ್ 16 ರಂದು, 3 ವಾರಗಳವರೆಗೆ ಲಾಕ್‌ಡೌನ್ ಅವಧಿಯಲ್ಲಿ, 42% ಕ್ಕೂ ಹೆಚ್ಚು ಭಾರತೀಯರು ಇ-ವ್ಯಾಲೆಟ್‌ಗಳನ್ನು ಬಳಸಿಕೊಂಡು ಆನ್‌ಲೈನ್ ಪಾವತಿಗಳನ್ನು ಮಾಡಿದ್ದಾರೆ ಎಂಬುವುದು ತಿಳಿದುಬಂದಿದೆ. ಇನ್ನು ಮನಸ್ಸು ಮಾಡದವರು, ಸಾಂಪ್ರದಾಯಿಕ ನಗದು ಪಾವತಿ ವಿಧಾನದಿಂದ ಆನಲೈನ್ ಪಾವತಿ ಮತ್ತು ಸ್ವೀಕೃತಿ ವಿಧಾನಕ್ಕೆ ಅಂದರೆ, ಕರೆನ್ಸಿ ನೋಟುಗಳ ಬದಲಾಗಿ ಡಿಜಿಟಲ್ ಕರೆನ್ಸಿಗೆ ಬದಲಾಗಲು ಇದು ಸೂಕ್ತ ಸಮಯ. ಸ್ಮಾರ್ಟ್‌ಫೋನ್‌ಗಳನ್ನು ಡಿಜಿಟಲ್ ವಹಿವಾಟಿಗೆ ಮಾತ್ರವಲ್ಲದೆ ಕರೆನ್ಸಿ ನೋಟುಗಳ ಮೂಲಕ ಕೊರೊನಾವೈರಸ್ ಸೋಂಕಿನಿಂದ ನಮ್ಮನ್ನು ಮತ್ತು ನಮ್ಮವರನ್ನು ರಕ್ಷಿಸಿಕೊಳ್ಳಲು ಉಪಯೋಗಿಸುವುದು ಅನಿವಾರ್ಯವಾಗಿದೆ. ನಗರ, ಪಟ್ಟಣಗಳಲ್ಲಿ ಡಿಜಿಟಲ್ ಕರೆನ್ಸಿ ಬಳಕೆದಾರರು ಸಾಕಷ್ಟಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಇದರ ಬಗ್ಗೆ ಜನರನ್ನು ಸುಶಿಕ್ಷಿತರನ್ನಾಗಿ ಮಾಡುವ ಅವಶ್ಯಕತೆ ಇದೆ.

    ಒಂದು ಕಾಲ ಇತ್ತು, ಓದಲು ಅಥವಾ ಬರೆಯಲು ಬಾರದ ವ್ಯಕ್ತಿಗಳನ್ನು ಅನಕ್ಷರಸ್ಥರೆಂದು ನಿರ್ಧರಿಸಲಾಗುತಿತ್ತು. ಇಂದಿನ  ತಂತ್ರಜ್ಞಾನದ ಯುಗದಲ್ಲಿ ಮಾಹಿತಿ ತಂತ್ರಜ್ಞಾನದ ಪ್ರಯೋಜನಗಳನ್ನು ಬಳಸಿಕೊಳ್ಳಲು
    ಅವಶ್ಯವಿರುವ ಪೂರಕ ಅಂಶಗಳನ್ನು  ಕಲಿತಿರದವರನ್ನು  ‘ಅನಕ್ಷರಸ್ಥ’ರೆಂದು  ಪರಿಗಣಿಸಲಾಗುತ್ತದೆ.

     
    ಸಂಕ್ಷಿಪ್ತವಾಗಿ ಹೇಳುವುದಾದರೆ, ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್, ಕಂಪ್ಯೂಟರ್ ಮೂಲಕ ನಡೆಸುವ ಡಿಜಿಟಲ್ ವಹಿವಾಟು, ಕಾಗದದ ಕರೆನ್ಸಿ ನೋಟುಗಳಿಗಿಂತ ಹೆಚ್ಚು ಸುರಕ್ಷಿತವಾಗಿದೆ. ಹಾಗಂತ, ಇದರಿಂದ ಯಾವುದೇ ಅಪಾಯವಿಲ್ಲ ಎಂದು ಇದರ ಅರ್ಥವಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಫೋನ್, ಡೆಬಿಟ್ (ಎಟಿಎಂ) / ಕ್ರೆಡಿಟ್ ಕಾರ್ಡ್‌ ಬಳಸಿದಾಗಲೆಲ್ಲಾ
    ಕೈಗಳನ್ನು ಸೋಪ್ ಅಥವಾ ಸ್ಯಾನಿಟೈಜರ್ ಮೂಲಕ ತೊಳೆದುಕೊಳ್ಳುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು.

    ಒಂದು ನೈಜ ಘಟನೆ:
    ನವ ದೆಹಲಿಯ ಬುದ್ದ ವಿಹಾರ್ ಬಳಿ ಇತ್ತೀಚೆಗೆ ನಡೆದ ಒಂದು ಕುತೂಹಲಕಾರಿ ಘಟನೆ. ಸಾಮಾನ್ಯವಾಗಿ, ರಸ್ತೆಯ ಮೇಲೆ
    ಅನಾಮಧೇಯವಾಗಿ ಬಿದ್ದಿರುವ ಹಣವನ್ನು ನೋಡಿದ ತಕ್ಷಣ ಜನರು ಅದನ್ನು ಹೆಕ್ಕಿ ಜೇಬಿಗಿಳಿಸುತ್ತಾರೆ. ಆದರೆ, 2,000/-
    ರೂಪಾಯಿಯ ಕರೆನ್ಸಿ ನೋಟುಗಳ ಕಂತೆ ಸುಮಾರು ಹೊತ್ತು ರಸ್ತೆಯಲ್ಲಿ ಚದುರಿ ಬಿದ್ದಿದ್ದರೂ ನೋಡಿದವರ್ಯಾರು ತೆಗೆದುಕೊಳ್ಳಲು ಮುಂದೆ ಬರಲಿಲ್ಲ. ಕಾರಣ, ಕೊರೊನಾವೈರಸ್ ಭಯ. ಅಲ್ಲಿನ ಪೊಲೀಸ್ ಇಲಾಖೆ ತನಿಖೆ ನಡೆಸಿದಾಗ ವ್ಯಕ್ತಿಯೊಬ್ಬ ಎಟಿಎಂನಿಂದ ಹಣ ತೆಗೆದು ಕಿಸೆಯಲ್ಲಿ ತುರುಕಿಸುವಾಗ ರಸ್ತೆಯಲ್ಲಿ ಬೀಳಿಸಿಕೊಂಡು ಹೋಗಿರುತ್ತಾನೆ. ಆ ವ್ಯಕ್ತಿಯನ್ನು ಪತ್ತೆಹಚ್ಚಿ ಹಣವನ್ನು ಹಿಂದಿರುಗಿಸಲಾಯಿತು. ಕೋವಿಡ್- 19 ಮಹಾಮಾರಿ ಸ್ಫೋಟಗೊಂಡ ನಂತರ ದೇಶದ ಕೆಲವು ಭಾಗಗಳಲ್ಲಿ ಇದೇ ರೀತಿಯ ಘಟನೆಗಳುನಡೆದಿದ್ದು ಅನಾಮಧೇಯವಾಗಿ ಬಿದ್ದಿದ್ದ ಹಣವನ್ನು ಎತ್ತಿಕೊಳ್ಳುವ ಧೈರ್ಯ ಯಾರೂ ತೋರಿಸಲಿಲ್ಲ.

    ಮುಂಜಾಗ್ರತೆ ಏಕೆ ಮತ್ತು ಹೇಗೆ?
    ಸೋಂಕಿತ ವ್ಯಕ್ತಿಯು ಸೀನುವಾಗ, ಕೆಮ್ಮುವಾಗ ಅಥವಾ ಮಾತನಾಡುವಾಗ   ಸಿಂಪಡಣೆ ಆಗುವ ಎಂಜಲಿನ ಹನಿಗಳಿಂದ, ಹತ್ತಿರದಲ್ಲಿರುವ ವ್ಯಕ್ತಿಗಳು  SARS-CoV-2 ವೈರಾಣುವಿನಿಂದ ಸೋಂಕಿತರಾಗಬಹುದು. ಇದು ನೇರವಾಗಿ ಸೋಂಕು ಉಂಟಾಗುವ ವಿಧಾನ.
    ಅದಕ್ಕಾಗಿಯೇ, ಬಾಯಿ ಮೂಗು ಮುಚ್ಚಿಕೊಳ್ಳಲು ಫೇಸ್ ಮಾಸ್ಕ್ ಧರಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ 2 ಮೀಟರ್ ಸಾಮಾಜಿಕ ಅಂತರವನ್ನು ಕಾಪಾಡುವುದನ್ನು ಕಡ್ಡಾಯಗೊಳಿಸಲಾಗಿದೆ.  ಇನ್ನೊಂದು ರೀತಿಯಲ್ಲಿಯೂ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ; ಅದು, ಮೇಲ್ಮೈ-ಮಾನವ ಪ್ರಸರಣ. ವೈರಾಣುವಿನಿಂದ
    ಕಲುಷಿತಗೊಂಡಿರುವ ವಸ್ತುವನ್ನು ಸ್ಪರ್ಶಿಸಿದಾಗ ಅದರ ಮೇಲ್ಮೈಯಲ್ಲಿರುವ ರೋಗಾಣುಗಳು ಸುಲಭವಾಗಿ ದೇಹವನ್ನು ಪ್ರವೇಶಿಸುತ್ತವೆ.
    ಅದಕ್ಕಾಗಿಯೇ,  ಸಾಬೂನಿನಿಂದ ಆಗಾಗ್ಗೆ ತೊಳೆಯಿರಿ; ಸ್ಯಾನಿಟೈಜರ್ ಬಳಸಿ; ಮೂಗು, ಬಾಯಿ ಮತ್ತು ಕಣ್ಣುಗಳನ್ನು ಆವಾಗಾವಾಗ
    ಸ್ಪರ್ಶಿಸದಿರಿ ಎಂದು ಪದೇಪದೇ ಸರ್ಕಾರ  ಸಾರ್ವಜನಿಕರನ್ನು ಎಚ್ಚರಿಸುತ್ತಿರುವುದು.ಬಹುಬೇಡಿಕೆಯ ದೃಷ್ಟಿಯಿಂದ ಕೆಲವು ಕಂಪನಿಗಳು ‘ಫೋನ್‌ಮಾಪ್’ ಮತ್ತು ‘ಮೊಬಿವಾಶ್’ ಎಂಬ ಮೊಬೈಲ್
    ಸೋಂಕುನಿವಾರಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಇತ್ತೀಚೆಗೆ ಮಾಡಿವೆ.

    Photo by Austin Distel on Unsplash

    ಮಾತಿಲ್ಲದೆ ಅರಳುವ ಪ್ರೇಮ ವೈಭವ್ ಮಹಾದೇವ್ ಅವರ ಜೆನ್ನಿ ಎಂಬ ಕಿರುಚಿತ್ರ

    ಆಕೆ ಮಾತನಾಡುವುದಿಲ್ಲ. ಆದರೆ ಆಕೆಯ ಪ್ರತಿಯೊಂದು ಚರ್ಯೆಯೂ ಹೇಳುತ್ತದೆ. ಹೋಟೆಲಿನಲ್ಲಿ ತಿನಿಸು ಸಿದ್ಧಪಡಿಸುವುದು ಆಕೆಯ ಕೆಲಸ. ಆಕೆ ಒಂದು ಜ್ಯೂಸ್, ಐಸ್ ಕ್ರೀಂ ಇನ್ನೇನನ್ನೇ ಕೊಡಲಿ ಅದರಲ್ಲಿ ಪ್ರೀತಿಯ ತುಸು ಸೇರ್ಪಡೆ ಇರುತ್ತದೆ. ಪ್ರೀತಿ ಹೆಚ್ಚಾದರೆ ಜ್ಯೂಸ್ ಲೋಟದ ಅಂಚಿಗೆ ಇನ್ನೊಂದು ಚೆರಿ ಹಣ್ಣು ಹೆಚ್ಚಾಗುತ್ತದೆ. ಆಕೆ ತನ್ನ ಕೆಲಸದಲ್ಲಿ ಸದಾ ಸಂತೋಷ ಕಾಣುವವಳು. ಬಂದ ಗ್ರಾಹಕರಿಗೆ ಪ್ರೀತಿಯಿಂದ ತಿನಿಸು ಸಿದ್ಧಪಡಿಸುವವಳು.

    ಅಂತಹ ಹುಡುಗಿಗೆ ಕಣ್ಣು ಕಾಣದ ಗ್ರಾಹಕನೊಬ್ಬನಲ್ಲಿ ಪ್ರೀತಿ ಹುಟ್ಟುತ್ತದೆ. ಇನ್ನೇನು ತನ್ನ ಪ್ರೀತಿಯನ್ನು ಸಂವಾದಿಸಬೇಕು ಎಂದುಕೊಳ್ಳುವಷ್ಟರಲ್ಲಿ ಆತನೊಂದಿಗೆ ಒಬ್ಬ ಹುಡುಗಿ!

    ನಿರ್ದೇಶಕ ವೈಭವ್

    ಆಗಷ್ಟೇ ಚಿಗುರಿದ ಪ್ರೀತಿ ಕಮರುತ್ತದೆ. ಅದು ಆಕೆ ಪೂರೈಸುವ ತಿನಿಸಿನಲ್ಲೂ ವ್ಯಕ್ತವಾಗುತ್ತದೆ. ಗಾಜಿನ ಲೋಟಕ್ಕೆ ಅಂಟಿಸಿದ ಹಣ್ಣನ್ನು ಅರ್ಧ ಕತ್ತರಿಸಿ ನೀಡುತ್ತಾಳೆ. ಕಷ್ಟಪಟ್ಟು ಬ್ರೇಲ್ ಕಲಿತು ಬರೆದಿದ್ದ ಪ್ರೇಮಪತ್ರ ಕಸದ ಬುಟ್ಟಿ ಸೇರುತ್ತದೆ. ಆದರೆ ಬಂದ ಹುಡುಗಿ ಆತನ ಸಹೋದರಿ ಎಂದ ಕೂಡಲೇ ಈಕೆಯ ಉತ್ಸಾಹ ಮತ್ತಷ್ಟು ಇಮ್ಮಡಿಯಾಗುತ್ತದೆ. ಆಕೆಯ ಪ್ರೀತಿ ಗೆಲ್ಲುತ್ತದೆಯೇ ಎನ್ನಲು “ಜೆನ್ನಿ” ಎಂಬ ವಿಶಿಷ್ಟ ಕಿರುಚಿತ್ರ ನೀವು ವೀಕ್ಷಿಸಬೇಕು.

    ಸಿನಿಮಾ ಬಗೆಗಿನ ಅಪಾರ ಪ್ರೀತಿ ಈ ಚಿತ್ರದ ಪ್ರತಿ ಫ್ರೇಮಿನಲ್ಲೂ ಅಭಿವ್ಯಕ್ತಗೊಳ್ಳುತ್ತದೆ. ಇದೊಂದು ಮಾತಿಲ್ಲದ ಚಿತ್ರ. ಆದರೆ ಪ್ರತಿ ಫ್ರೇಮ್ ಕೂಡಾ ತನ್ನಷ್ಟಕ್ಕೆ ತಾನು ಹೇಳಬೇಕಾದುದನ್ನು ಹೇಳಿ ಮುಂದಕ್ಕೆ ಹೋಗುತ್ತಿರುತ್ತದೆ.

    ಖ್ಯಾತ ರೂಪದರ್ಶಿ, ನಟಿ ಹಾಗೂ ಗಾಯಕಿ ಅಂಜಲಿ ಸಿವರಾಮನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ,ಈ ಚಿತ್ರದ ಕಲಾವಿದರೆಲ್ಲರು ಪ್ರಾಗ್ ಫಿಲ್ಮ್ ಸ್ಕೂಲ್ ನಲ್ಲಿ ಸಿನಿಮಾ ತರಬೇತಿ ಪಡೆದಿದ್ದಾರೆ.

    ಎಂಜಿನಿಯರ್ ಆಗಿರುವ ವೈಭವ್ ಮಹಾದೇವ್ ಈ ಸುಂದರ ಕಿರುಚಿತ್ರ ಕಟ್ಟಿಕೊಟ್ಟಿದ್ದಾರೆ. ಅಜಿನ್ ಬಸಂತ್ ಛಾಯಾಗ್ರಹಣ ಪ್ರತಿ ಫ್ರೇಮ್ ಅನ್ನೂ ಒಂದು ಕಲಾಕೃತಿಯಾಗಿಸಿದೆ.

    ನಾಗಭೂಷಣ್ ದೇಶಪಾಂಡೆ ಸಹಾಯಕ ನಿರ್ದೇಶಕರಾಗಿದ್ದಾರೆ. ಜೋಯೆಲ್ ಸಾಕಾರಿ ಅವರ ಮಧುರ ಸಂಗೀತ ಚಿತ್ರವನ್ನು ಆಸಕ್ತಿದಾಯಕವಾಗಿಸುತ್ತದೆ. ಮಹೇಶ್ ಪತ್ತಾರ್ ಅವರ ಕಲಾ ನಿರ್ದೇಶನ ಹೊಂದಿದೆ. ಉದ್ಯಮಿ, ಭರತನಾಟ್ಯ ಕಲಾವಿದೆ ಜಲ್ಪ ಮಹದೇವ್ ಕಾರ್ಯ ನಿರ್ವಾಹಕ ನಿರ್ಮಾಪಕಿಯಾಗಿದ್ದಾರೆ. ಶ್ರೀಮತಿ ಶಿಖಾ ಚವ್ಹಾಣ್ ನಟಿಸಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಸಂದೀಪ್ ಸಾಗರ್ ಮತ್ತು ಪ್ರತೀಕ್ಷಾ ಕಡೂರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    ಚಿತ್ರ ನಿರ್ದೇಶಕ ವೈಭವ್ ಮಹಾದೇವ್ ಈ ಚಿತ್ರ ಮುಂದಿನ ಚಿತ್ರಗಳಿಗೆ ಒಂದು ಪರಿಚಯ ಪತ್ರದಂತೆ ಎನ್ನುತ್ತಾರೆ. ವಿದೇಶದಲ್ಲಿ ಕಲಿತರೂ ಕನ್ನಡ ಚಲನಚಿತ್ರ ನಿರ್ದೇಶನ ಮಾಡಬೇಕು ಎನ್ನುವುದು ಅವರ ಹಂಬಲ. ವಿದೇಶಗಳಲ್ಲಿ ಕೆಲಸ ಮಾಡಿದರೆ ತಂತ್ರಜ್ಞರಾಗಿ ಉಳಿದುಬಿಡುತ್ತೇವೆ. ಇಲ್ಲಿ ಸ್ವತಂತ್ರ ನಿರ್ದೇಶನ ಮಾಡುವುದು ಸಾಧ್ಯ. ಅದಕ್ಕೆ ಸೂಕ್ತವಾದ ಸಿದ್ಧತೆ ಈ ಚಿತ್ರ ಎನ್ನುತ್ತಾರೆ. ಅದಮ್ಯ ಸಿನಿಮಾ ಪ್ರೀತಿಯಿಂದ ತನ್ನ ವೃತ್ತಿ ತ್ಯಜಿಸಿ ಈ ಚಿತ್ರ ನಿರ್ದೇಶನ ಮಾಡಿರುವ ಬೆಂಗಳೂರಿನ ಹುಡುಗ ವೈಭವ್ ಮಹಾದೇವ್ ಅವರ ನಿರ್ದೇಶನದ ಚಿತ್ರ ವರಮಹಾಲಕ್ಷ್ಮಿ ದಿನದಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಚಿತ್ರದ ಲಿಂಕ್ ಇಲ್ಲಿದೆ:


    ಗಣಿತ ಮತ್ತು ತಾಯ್ತನದ ಸಂಗಮ

     ಇಂದು ಅಮೆಜಾನ್  ಪ್ರೈಮ್ ನಲ್ಲಿ ಬಿಡುಗಡೆಯಾಗಿರುವ ಮಾನವ ಕಂಪ್ಯೂಟರ್ ಶಕುಂತಲಾ ದೇವಿ ಅವರ ಜೀವನ ಕಥೆಯನ್ನು ಆಧರಿಸಿ ತಯಾರಾಗಿರುವ ಶಕುಂತಲಾ ದೇವಿ ಚಿತ್ರ 2013ರ ವರೆಗೂ ನಮ್ಮೊಡನೆ ಇದ್ದ  ಶಕುಂತಲಾ ದೇವಿ ಅವರ ಜೀವನದ ನಾನಾ ಹಂತಗಳನ್ನು ಪರಿಣಾಮಕಾರಿಯಾಗಿ ತೆರೆದಿಡುತ್ತಾ ಹೋಗುತ್ತದೆ.  ಪುತ್ರಿ ಅನುಪಮ ಬ್ಯಾನರ್ಜಿ  ಕಂಡಂತೆ ಶಕುಂತಲಾದೇವಿ ಚಿತ್ರದ ಕಥೆ ಹೆಣೆಯಲಾಗಿದೆ  ಎಂದು  ನಿರ್ದೇಶಕ  ಅನು ಮೆನನ್  ಚಿತ್ರ ಆರಂಭವಾಗುವ ಮೊದಲೇ ಹೇಳಿ ಮುಂದೆ ಬರಬಹುದಾದ ವಿವಾದಗಳಿಗೆ ಕೇವಿಯಟ್ ತೆಗೆದುಕೊಂಡು ಬಿಡುತ್ತಾರೆ. ಹೀಗಾಗಿ ಚಿತ್ರ  ಮಗಳ ದೃಷ್ಟಿಕೋನದಿಂದಲೇ ಸಾಗುತ್ತದೆ.

    ಶಕುಂತಲಾ ದೇವಿಯ ಪುತ್ರಿ ಅನುಪಮ ಬ್ಯಾನರ್ಜಿ  (ಸನ್ಯಾ ಮಲ್ಹೋತ್ರ)  ತನ್ನ ತಾಯಿಯ ವಿರುದ್ಧವೆ ಕ್ರಿಮಿನಲ್ ಕೇಸ್ ಹಾಕುವ ದೃಶ್ಯದೊಂದಿಗೆ ಸಿನಿಮಾ ಆರಂಭವಾಗುತ್ತದೆ. ಅದು 2001. ತಾಯಿಯ ವಿರುದ್ಧವೇ ಕೇಸು ದಾಖಲಿಸುವ ತನ್ನ ಖಚಿತ ನಿರ್ಧಾರದೊಂದಿಗೆ ಅನುಪಮಾ ಹೊರಬರುತ್ತಿದ್ದಂತೆ ಅಲ್ಲಿ ಕೆಂಪು ಸೀರೆಯಲ್ಲಿ ಕುಳಿತ್ತಿದ್ದ ಶಕುಂತಲಾ ದೇವಿ ಕಾಣಿಸುತ್ತಾರೆ . ಮಗಳೇ ಕೇಸು ಹಾಕಲು ಕಾರಣ ಏನು ಎಂಬುದನ್ನು ನಾನು ಇಲ್ಲಿ ಹೇಳುವುದಿಲ್ಲ. ಆದರೆ ಅಮ್ಮ ಮಗಳ ಸಂಬಂಧ ಎಂಥದ್ದು ಎಂಬುದನ್ನು ಅರಿಯಲು ನೀವು ಈ ಕೇಸಿನ ಬಗ್ಗೆ ತಿಳಿದುಕೊಳ್ಳಬೇಕು. ಅದು ಸಿನಿಮಾ ನೋಡಿದಾಗ ಗೊತ್ತಾಗುತ್ತದೆ. ಅಮ್ಮ ಎನ್ನುವುದು ಎರಡಕ್ಷರ ಇರಬಹುದು. ಆದರೆ ಅದು ಮಾಡುವ ಪರಿಣಾಮ ಆಗಾಧ. ಚಿತ್ರ  ಮುಗಿದ  ಮೇಲೆ ಅಮ್ಮ ಮಗಳ ನಡುವಿನ ಸಂಬಂಧವನ್ನು  ನೀವು ನೋಡುವ ಬಗೆ ಬದಲಾಗಬಹುದು.

    ನಾವು ಕಂಡಂತೆ ಶಕುಂತಲಾ ದೇವಿ ಗಣಿತದ ಅದ್ಭುತ. ಅಷ್ಚು ಮಾತ್ರ ನಮಗೆ ಗೊತ್ತು. ಮಗಳು, ಸಹೋದರಿ, ಹೆಂಡತಿ, ತಾಯಿ ಹೀಗೆ ಅವರ ಜೀವನದ ನಾನಾ ಮಜಲುಗಳು ಇಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ.

    ಕರ್ನಾಟಕದಲ್ಲಿ ಶಕುಂತಲಾ ದೇವಿ ಕಳೆಯುವ ಬಾಲ್ಯದೊಂದಿಗೆ ಚಿತ್ರ ಆರಂಭವಾಗುತ್ತದೆ. ಅವರ ತಂದೆ ಕನ್ನಡದ ಅಜೇಯ ಪತ್ರಿಕೆ ಓದುತ್ತಿರುವ ದೃಶ್ಯದ ಮೂಲಕ ಅದು ಕರ್ನಾಟಕ ಎಂದು ನಿರ್ದೇಶಕರು ತೋರಿಸುತ್ತಾರೆ.   ಬೆಂಗಳೂರು ಜಂಟಲ್ಮನ್ ಕ್ಲಬ್ ನಲ್ಲಿ  ಆಕೆ ಬಿಡಿಸುವ  ಗಣಿತ ಲೆಕ್ಕ ಆಕೆ ಮುಂದೆ ಮಾನವ ಕಂಪ್ಯೂಟರ್ ಆಗುವ ಹಾದಿಯ ಆರಂಭ.

    ಇದು ಒಂದು ಕಡೆಯಾದರೆ ಮತ್ತೊಂದು ಕಡೆ ತಾಯಿ ಮಗಳ ನಡುವಿನ ಸಂಬಂಧ . ಅದನ್ನು ನಿರ್ದೇಶಕರು ತುಂಬ ಮನೋಜ್ಞವಾಗಿ  ತೆರೆದಿಟ್ಟಿದ್ದಾರೆ. ಇಡೀ ಚಿತ್ರದಲ್ಲಿ  ಆಕೆ ತಾನು ಕ್ಷಮೆ ಕೇಳುವುದೆ ಇಲ್ಲವೆನ್ನುವ ರೀತಿ ನಡೆದುಕೊಳ್ಳುವುದು ಸ್ಫೂರ್ತಿದಾಯಕವಾಗಿದೆ. 1950ರಲ್ಲಿ ಒಬ್ಬಳೇ ಲಂಡನ್ ಹೋಗಿ ತನ್ನ ಜೀವನವನ್ನು ತಾನೆ ಕಟ್ಟಿಕೊಳ್ಳುವದು ಆಕೆಯ ಸ್ವಾಭಿಮಾನವನ್ನು ತೋರಿಸುತ್ತದೆ.  ತನ್ನ ಎರಡು ಜಡೆ ಹಾಗೂ ಸೀರೆಯ ಮೇಲೆ ಆಕೆಗೆ ಇರುವ ಪ್ರೀತಿ ಸಿನಿಮಾದಲ್ಲಿ ಸೊಗಸಾಗಿ ಮೂಡಿ ಬಂದಿದೆ.

    ಪುರುಷನ ಸಹಾಯವೇ ಇಲ್ಲದೆ ಮಹಿಳೆಯೊಬ್ಬಳು ಹೇಗೆ ಯಶಸ್ವಿಯಾಗಬಹುದು ಎಂಬುದನ್ನು ತೋರಿಸಲು ಆಕೆ ಪಡುವ ಶ್ರಮ ಅನೇಕ ಒಬ್ಬಂಟಿ ಮಹಿಳೆಯರಿಗೆ ಸ್ಫೂರ್ತಿ  ತರಬಲ್ಲದು. ಕಂಪ್ಯೂಟರ್ ಗಿಂತ ತಾನೇ ಬೆಸ್ಟ್ ಎಂದು ಸಾಧಿಸುವ ಕ್ಷಣವಂತೂ ಅದ್ಭುತ. ಮ್ಯಾಥ್ ಮೆಟಿಕ್ಸ್  ಮತ್ತು ಮದರ್ ಹುಡ್ ನ ಮಹಾಸಂಗಮವಾಗಿ  ಚಿತ್ರ ಮೂಡಿಬಂದಿದೆ.

    ಇಡೀ ಚಿತ್ರವನ್ನು ಆವರಿಸಿರುವುದು ವಿದ್ಯಾಬಾಲನ್.  ತಾಯಿಯಾಗಿ, ಗಣಿತ ತಜ್ಞೆಯಾಗಿ ವಿದ್ಯಾಬಾಲನ್ ಅಮೇಜಿಂಗ್. ಗಣಿತದ ಲೆಕ್ಕ ಸುಲುಭವಾಗಿ ವೀಕ್ಷಕರಿಗೂ ಅರ್ಥವಾಗುವಂತೆ ಬಳಸಿರುವ ಗ್ರಾಫಿಕ್ ಗಳು ಸಿನಿಮಾವನ್ನು  ಸುಲಭವಾಗಿಸಿದೆ.

    ಒಮ್ಮೊಮ್ಮೆ ತಮಾಷೆ. ಒಮ್ಮೊಮ್ಮೆ ಗಂಭೀರ,ಮತ್ತೊಮ್ಮೆ ವಿಷಾದ . ಹೀಗೆ ಸ್ಪೂರ್ತಿ ನೀಡುವ ಚಿತ್ರವಾಗಿ ಶಕುಂತಲಾ ದೇವಿ ಹೊರ ಹೊಮ್ಮಿದೆ.

    ನೀವು ಕೂಡ ಅಮೆಜಾನ್ ಪ್ರೈಮ್ ಮೆಂಬರ್ ಆಗುವ ಮೂಲಕ ಶಕುಂತಲಾದೇವಿ ವೀಕ್ಷಿಸಬಹುದು. ಅದಕ್ಕಾಗಿ ಈ ಕೆಳಗಿನ ಲಿಂಕ್ ಅಮೆಜಾನ್ ಪ್ರೈಮ್ ಲಿಂಕ್ ಒತ್ತಿ.

    ಕೋವಿಡ್ ರಣಕೇಕೆಗೆ ಖಾಸಗಿ ಬಸ್ ಉದ್ಯಮ ಜರ್ಝರಿತ

    ಖಾಸಗಿ ಬಸ್ ಗಳು ಕಳೆದ ಹಲವು ದಶಕಗಳಿಂದ ಕರ್ನಾಟಕದ ಸಂಪರ್ಕ ಕೊಂಡಿಗಳು.ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಜನ ಜೀವನಕ್ಕೆ ಇವುಗಳೇ ಆಧಾರ. ರೈತರ, ಕೂಲಿ ಕಾರ್ಮಿಕರ,ಮಧ್ಯಮವರ್ಗದವರ ದೈನಂದಿನ ಬದುಕು ಇವುಗಳೊಂದಿಗೆ ಅನ್ಯೋನ್ಯತೆಯಲ್ಲಿ ಸಾಗಿತ್ತು. ಮಧ್ಯ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಇವುಗಳದ್ದೆ ಸಾಮ್ರಾಜ್ಯ. ಗ್ರಾಮಗಳ ನಾಡಿನಲ್ಲಿ ಖಾಸಗಿ ಬಸ್ ಗಳ ಹೆಸರೇ ಜನಜನಿತ. ತಮ್ಮ ಮನೆಯ ಮಗನಂತೆಯೇ ನಾಮಧೇಯಗಳ ಪಠಣ.

    ಅರ್ಧ ಶತಮಾನಕ್ಕಿಂತ ಹೆಚ್ಚು ಕಾಲ ರಸ್ತೆಯಲ್ಲಿ ರಾರಾಜಿಸಿದ ಖಾಸಗಿ ಬಸ್ ಗಳು ಕೊವಿಡ್ ರಣಕೇಕೆಯಲ್ಲಿ ತಣ್ಣಗೆ ಅವಿತಿವೆ. ಮತ್ತೊಮ್ಮೆ ಖಾಸಗಿ ಬಸ್ ಗಳು ರಸ್ತೆಯಲ್ಲಿ ತನ್ನ ಹಳೆಯ ವೈಭವ ಪಡೆಯುವವೇ ಎಂಬುದು ಆತಂಕದ ಅಸಹಾಯಕ ನಿಟ್ಟಸಿರು ಬಿಡುವಂತೆ ಮಾಡಿದೆ. ಖಾಸಗಿ ಬಸ್ ನೌಕರರ ಬದುಕು ಡೋಲಾಯಮಾನ ಸ್ಥಿತಿಯಲ್ಲಿದೆ. ಸಾವಿರಾರು ನೌಕರರ ಬದುಕು ಬೀದಿಗೆ ಬಿದ್ದಿವೆ. ಕೌಶಲ್ಯಪಡೆಯದ ವೃತ್ತಿ ತೊಡಗಿಕೊಂಡ ಅರೆಕಾಸಿಗೆ ಅವಮಾನ ಸಹಿಸಿ ಬದುಕುವ ಅಸಹನೀಯತೆ ಮಡುಗಟ್ಟಿದೆ.

    ಖಾಸಗಿ ಬಸ್ ಚಾಲಕರು ಮಕ್ಕಳ ಕುತೂಹಲಕಾರಿ ವ್ಯಕ್ತಿ. ಮುಂದೆ ಕುಳಿತು ಚಾಲನೆಯನ್ನೆ ಎವೆಯಿಕ್ಕದೆ ಗಮನಿಸುತ್ತಿದ್ದವರೆಷ್ಟೋ. ಕಾಗದ ಪತ್ರಗಳಿಂದ ಹಿಡಿದು ಸಾಮಾನು ಸರಂಜಾಮು ಹಾಗೂ ಹಣವನ್ನು ಒಂದೂರಿಂದ ಮತ್ತೊಂದರಿಗೆ ತಲುಪಿಸುವ ನಂಬಿಕಸ್ಥ.ಏಜೆಂಟರು ಸಿಟ್ಟು ಸೆಡವುಗಳಿಂದಲೆ ಚಾರ್ಜು ವಸೂಲಿ ಮಾಡುತ್ತ ಮಾನವೀಯತೆ ತೋರುವ ಜೀವ. ಕಡಿಮೆ ಇದ್ದರೂ ಬೈದು ಪ್ರಯಾಣಕ್ಕೆ ಅನುವು ಮಾಡುವ ಅದೆಷ್ಟೋ ಉದಾಹರಣೆಗಳು. ಕಂಡಕ್ಟರ್ ಗಳು ಬಾಗಿಲಲ್ಲಿಯೇ ಜೋತು ಬಿದ್ದು ಜನರನ್ನು
    ಮುಂದೆ ಬನ್ನಿ.. ಒಳಗೆ ಹೋಗಿ..ಎಂದು ಗದುರುತ್ತ ಕಲೆಕ್ಷನ್ ಹೆಚ್ಚಿಸುವ ನೆಚ್ಚಿನ ಭಂಟ. ಇನ್ನೂ ಬಸ್ ಮಾಲೀಕರೆಂದರೆ ಆಗ ಮಂತ್ರಿಗಳಂತೆ ನೋಡುತ್ತಿದ್ದ ಕಾಲ. ಆನಂತರ ಬಿಡಿ ಬಸ್ ಏಜೆಂಟರೆಲ್ಲಾ ಬಸ್ ಮಾಲೀಕರಾಗಿ ಕೈ ಸುಟ್ಟುಕೊಂಡವರಿದ್ದಾರೆ. ನಿತ್ಯ ಸಾವಿರಾರು ರೂಪಾಯಿ ವಹಿವಾಟು ನಡೆಸಿ ಪ್ರಯಾಣಿಕರ ಮನ್ನಣೆಗೆ ಪಾತ್ರವಾಗಿದ್ದ ಖಾಸಗಿ ಬಸ್ ಉದ್ಯಮ ತೆರಿಗೆ,
    ಬ್ಯಾಂಕ್ ಸಾಲ, ಹೆಚ್ಚಿದ ಡೀಸಲ್ ಬೆಲೆ, ಪರಿಕರಗಳ ಕೈಗೆಟುಕದ ಬೆಲೆಯಲ್ಲಿ ಸಾವರಿಸಿಕೊಂಡು ನಡೆಯುತ್ತಿತ್ತು. ಕೋವಿಡ್ ಸೋಂಕಿನಲ್ಲಿ ಸಂಪೂರ್ಣ ನೆಲಕಚ್ಚಿ ಚೇತರಿಸಿಕೊಳ್ಳುವ ಭರವಸೆ ಕಳೆದುಕೊಳ್ಳುವ ಸ್ಥಿತಿ ತಲುಪಿದೆ.

    ಸತತ ನಾಲ್ಕು ತಿಂಗಳಿಂದ ನಿಂತಲ್ಲೆ ನಿಂತ ಖಾಸಗಿ ಬಸ್ ಗಳು ತುಕ್ಕು ಹಿಡಿಯುತ್ತಿವೆ. ಚಾಲಕರು, ಏಜೆಂಟರು ಹಾಗೂ ಕಂಡಕ್ಟರ್ ಗಳು ಉದ್ಯೋಗ ಬದಲಾಯಿಸಿದ್ದಾರೆ. ಕೌಶಲ್ಯರಹಿತ ಕೆಲಸದಲ್ಲಿ ಕೊಟ್ಟಷ್ಟು ಕೂಲಿ ಪಡೆದು ಜೀವಹಿಡಿದುಕೊಂಡಿದ್ದಾರೆ. ಸಾಲಗಾರರಿಗೆ ಬಡ್ಡಿಯೂ ಕಟ್ಟಲಾಗದೆ ಭರವಸೆ ರಹಿತ ಜೀವನ ನಡೆಸುತ್ತಿದ್ದಾರೆ.ಸರ್ಕಾರ ಖಾಸಗಿ ಬಸ್ ಓಡಿಸಲು 14 ನಿಬಂಧನೆಗಳನ್ನು ಸೂಚಿಸಿದೆ. ಅವುಗಳಲ್ಲಿ ಪ್ರಮುಖವಾಗಿ 30 ಜನರು
    ಪ್ರಯಾಣಿಸಬೇಕು. ತೆರಿಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಬೇಕು. ಕೋವಿಡ್ ಸೋಂಕಿತರಿದ್ದರೆ ಮಾಲೀಕರೇ ಪೂರ್ಣ ವಾಬ್ದಾರಿ ಹೊರಬೇಕು. ಸೋಂಕು ಹರಡದಂತೆ ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ಯಾನರ್ ಪರಿಕರಗಳನ್ನು
    ಹೊಂದಿರಬೇಕು. ಬಸ್ ಫೇರ್ ಹೆಚ್ಚಿಸುವಂತಿಲ್ಲ. ಇದರಿಂದ ಇನ್ನಷ್ಟು ನಷ್ಟ ಸ್ಪಷ್ಟ.

    ಖಾಸಗಿ ಬಸ್ ಮಾಲೀಕರ ಬೇಡಿಕೆಗಳು: ಬಸ್ ಓಡಾಟ ಆರಂಭವಾದ ನಂತರ ಕನಿಷ್ಟ ಆರು ತಿಂಗಳು ತೆರಿಗೆ ವಿನಾಯಿತಿ ನೀಡಬೇಕು. ಆನಂತರ ಮೂರು ತಿಂಗಳು ತೆರಿಗೆ ಕಟ್ಟಲು ಕಾಲಾವಕಾಶ ನೀಡಬೇಕು. 48 ಸೀಟು ಬದಲು 30 ಸೀಟಿಗೆ ಮಾತ್ರ ತೆರಿಗೆ ವಿಧಿಸಬೇಕು. ಡೀಸಲ್ ಬೆಲೆ ಏರುತ್ತಿರುವ ಹಿನ್ನೆಲ್ಲೆಯಲ್ಲಿ ಬಸ್ ಫೇರ್ ಹೆಚ್ಚಿಸಲು ಅವಕಾಶ ನೀಡಬೇಕು.

    ಸುದೀಪ್

    ಉದಾಹರಣೆಗೆ ದಾವಣಗೆರೆ ಜಿಲ್ಲೆಯಲ್ಲಿ 330 ಖಾಸಗಿ ಬಸ್ ಗಳಿವೆ. ಇದರಿಂದ ಸಾವಿರಾರು ಕುಟುಂಬದ ಜೀವನ ನೆಲೆ ಕಳೆದುಕೊಂಡಿದೆ. ನಮ್ಮ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಇದುವರೆಗೂ ಸ್ಪಂದಿಸಿಲ್ಲ. ಹಾಗಾಗಿ ಖಾಸಗ ಬಸ್ ಸಂಚಾರ ಅನಿಶ್ಚಿತವಾಗಿದೆ ಎಂದು ದಾವಣಗೆರೆ ಜಿಲ್ಲೆಯ ಗೀತಾಂಜನೇಯ ಬಸ್ ಕಂಪನಿ ಮಾಲೀಕರಾದ ಸುದೀಪ್ ಸಮಸ್ಯೆಯನ್ನು ಬಿಚ್ಚಿಡುತ್ತಾರೆ.

    ನಮ್ಮ ಬಸ್ ಗಳು ಪೆಟ್ರೋಲ್ ಬಂಕ್ ಬಳಿ ನಿಂತಿವೆ. ಬ್ಯಾಂಕ್ ಸಾಲ ಮರು ಪಾವತಿಗೆ ಒತ್ತಾಯಿಸುತ್ತಿವೆ. ಬಸ್ ಮಾರಾಟ ಮಾಡಲು ಹೊರಟರೆ ಖರೀದಿಸುವವರಿಲ್ಲ. ರೂ.10 ಲಕ್ಷ ಬೆಲೆ ಬಾಳುವ ಬಸ್ ರು.1.50 ಲಕ್ಷಕ್ಕೆ ಕೇಳುತ್ತಿದ್ದಾರೆ. ಹಾಗಾಗಿ ಕಿರಾಣಿ ಅಂಗಡಿ ವ್ಯಾಪಾರಕ್ಕೆ ತೊಡಗಿಸಿಕೊಂಡಿದ್ದೇನೆ. ಮತ್ತೊಮ್ಮೆ ಬಸ್ ಓಡಿಸುವ ಇರಾದೆ ಇಲ್ಲ ಎಂದು . ಶ್ರೀ ಶೈಲ ಬಸ್ ಮಾಲೀಕ ಸಂತೋಷ್ ಉದ್ಗಾರ.

    ಶ್ರೀ ಶೈಲ ಬಸ್ ಮಾಲೀಕ ಸಂತೋಷ್

    ನಿತ್ಯ ರೂ.600 ರಿಂದ 800 ಗಳ ಸಂಪಾದನೆ ಇತ್ತು. ಗಾರೆ ಸಹಾಯಕ ಕೆಲಸಕ್ಕೆ ಹೋದರೆ ದಿನಕ್ಕೆ ರೂ.400 ಕೊಟ್ಟರೆ ಹೆಚ್ಚು. ಕೆಲವರು ಕೆಲಸ ಗೊತ್ತಲ್ಲವೆಂದು ಬಿಡಿಸಿ ಕಳಿಸಿದ್ದಾರೆ.ಸಾಲ ಮರುಪಾವತಿ ಮಾಡಲಾಗುತ್ತಿಲ್ಲ. ಬಡ್ಡಿ ಕಟ್ಟಲಾಗುತ್ತಿಲ್ಲ. ಮಕ್ಕಳ ಓದು ಬರಹಕ್ಕೆ ದುಡ್ಡಿಲ್ಲ ಎಂದು ಖಾಸಗಿ ಬಸ್ ಚಾಲಕರಾದ ಇರ್ಫಾನ್ ಮತ್ತು ನಾಯಕ ದುಃಖಿಸುತ್ತಾರೆ.

    ಕಳೆದ 25 ವರ್ಷದಿಂದ ಖಾಸಗಿ ಬಸ್ ಏಜೆಂಟ್ ಆಗಿ ದುಡಿದೆ. ನಾಲ್ಕು ತಿಂಗಳಿಂದ ಕೆಲಸವಿಲ್ಲ. ಆರಂಭದಲ್ಲಿ ಕೇಟರಿಂಗ್ ವೃತ್ತಿ
    ಆರಂಭಿಸಿದೆ. ಹೋಟೆಲ್ ಆರಂಭವಾದ ನಂತರ ಆ ಕೆಲಸವೂ ನಿಂತಿತು. ಹೊಸ ಉದ್ಯೋಗಾರಂಭಕ್ಕೆ ಯೋಚಿಸುತ್ತಿದ್ದೇನೆ.ಬಸ್ ಮಾಲೀಕರು ಇಲ್ಲಿವರೆಗೆ ನಮ್ಮ ಜೀವನದ ಬಗ್ಗೆ ಒಂದು ಮಾತನ್ನು ಕೇಳಿಲ್ಲ ಎಂದು ನೋವಿನಿಂದ ನುಡಿಯುತ್ತಾರೆ ಚಿತ್ರದುರ್ಗದ ಖಾಸಗಿ ಬಸ್ ಏಜೆಂಟ್ ಎಸ್.ಜೆ.ಶಿವಕುಮಾರ್.ಬಸ್ ಕಂಡಕ್ಟರ್ ಕೆಲಸ ಕಳೆದುಕೊಂಡ ಮೇಲೆ ತರಕಾರಿ ಮಾರುತ್ತಿದ್ದೇನೆ. ಕೆಲವರು ಪಂಚರ್ ಅಂಗಡಿ ನಡೆಸುತ್ತಿದ್ದಾರೆ. ಬಸ್ ಕೆಲಸವೇ ಚೆನ್ನಾಗಿತ್ತು ಎಂಬ ಅಭಿಪ್ರಾಯ ಕಂಡಕ್ಟರ್ ಪ್ರಕಾಶ್ ಅವರಿಂದ.

    ಖಾಸಗಿ ಬಸ್ ನೌಕರರ ಮೇಲಿನ ಕೆಲವು ಉದಾಹರಣೆಗಳಷ್ಟೆ. ಸಾವಿರಾರು ಕುಟುಂಬಗಳು, ತರಕಾರಿ, ಕೂಲಿ, ಪಂಕ್ಚರ್ ಅಂಗಡಿ, ಕಟ್ಟಡ ಕೂಲಿ ಕೆಲಸಗಳಿಗೆ ಪರಿವರ್ತನೆಗೊಂಡಿದ್ದಾರೆ. ಮತ್ತೊಮ್ಮೆ ಬಸ್ ಗಳು ರಸ್ತೆಗಿಳಿಯಲಿ ನಮ್ಮ ಜೀವನ ಸಲೀಸಾಗಿ ಸಾಗಲಿ ಎಂಬ ಭರವಸೆಯೊಂದಿಗೆ ಜೀವನ ತಳ್ಳುತ್ತಿದ್ದಾರೆ.

    ಸರ್ಕಾರ ಖಾಸಗಿ ಬಸ್ ಮಾಲೀಕರ ಬೇಡಿಕೆಗಳನ್ನು ಗಮನಿಸಿ. ನಷ್ಟವನ್ನು ತಪ್ಪಿಸುವಲ್ಲಿ ಸೂಕ್ತ ಕ್ರಮಗಳನ್ನು ರೂಪಿಸಬೇಕು. ಪ್ರಯಾಣಿಕ ಸ್ನೇಹಿ ಖಾಸಗಿ ಬಸ್ ಗಳು ಮತ್ತೊಮ್ಮೆ ರಸ್ತೆಯಲ್ಲಿ ರಾರಾಜಿಸಬೇಕು. ಮಾಲೀಕರು ನಿಂತಲ್ಲೆ ತುಕ್ಕು ಹಿಡಿಯುವ ನಷ್ಟದಿಂದ ಹೊರಬರಲು ಶೀಘ್ರ ನಿಯಮ ಬದಲಾಯಿಸಿ ನೆರವಿಗೆ ಬರಬೇಕು ಎಂದು ಖಾಸಗಿ ಬಸ್ ಉದ್ಯಮ ಒತ್ತಾಯಿಸುತ್ತಿದೆ.

    ರಫೇಲ್ ಯುದ್ಧ ವಿಮಾನ ಭಾರತಕ್ಕೆ ಯಾಕೆ ಅಗತ್ಯವಾಗಿದೆ

    ರಫೇಲ್ ಯುದ್ಧ ವಿಮಾನದ ಮೊದಲ ಕಂತು ಭಾರತಕ್ಕೆ ತಲುಪಿದೆ. ಇದರೊಂದಿಗೆ ನಮ್ಮ ವಾಯು ಪಡೆ ಮತ್ತಷ್ಟು ಸಶಕ್ತವಾಗಿದೆ. ಇದಕ್ಕೆ ಕಾರಣವೆಂದರೆ ಚೀನಾದ ಜತೆಗಿನ ಗಡಿ ವಿವಾದದ ನಡುವೆಯೇ ತುರ್ತಾಗಿ ಈ ಯುದ್ಧ ವಿಮಾನಗಳು ಅಂಬಾಲ ವಾಯು ನೆಲೆಗೆ ಬಂದಿಳಿದಿರುವುದು.

    ಹಾಗೆಂದು ಚೀನಾ ಇಂತಹ ವಿಮಾನವನ್ನು ಹೊಂದಿಲ್ಲ ಎಂದೇನಲ್ಲ. ಆದರೆ ಅದು ಐದನೇ ಪೀಳಿಗೆಯ (ಜನರೇಶನ್) ಜೆ-20 ಚೆಂಗ್ಡು ಜೆಟ್ ಆಗಿದ್ದರೆ, ರಫಲ್ 4.5ನೇ ಪೀಳಿಗೆಯ ಯುದ್ಧ ವಿಮಾನ. ಇದರಲ್ಲೇ ಅರ್ಥವಾಗಿರಬಹುದು. ಇದು ಒಂದಿಷ್ಟು ಹೆಚ್ಚು ಸುಧಾರಿತ ತಂತ್ರಜ್ಞಾನ ಹೊಂದಿದೆ ಎಂಬುದು. ಇಷ್ಟಲ್ಲದೆ ಜೆ-20ಗೆ ಹೋಲಿಸಿದರೆ ರಫಲ್ ಹೆಚ್ಚು ಇಂಧನ ಮತ್ತು ಶಸ್ತ್ರಾಸ್ತ್ರ ಹೊತ್ತೊಯ್ಯಬಲ್ಲ ಸಾಮರ್ಥ್ಯ ಕೂಡ ಹೊಂದಿದೆ.

    ಇದಕ್ಕಿಂತಲೂ ಮುಖ್ಯವಾಗಿ ಜೆ-20 ಫೈಟರ್ ಜೆಟ್ ಇದುವರೆಗೆ ವಾಸ್ತವ ನೆಲೆಗಟ್ಟಿನಲ್ಲಿ ಯುದ್ಧದಲ್ಲಿ ನೆರವಾಗಿ ಭಾಗಿಯಾದ (ಆಕ್ಚುವಲ್ ಕಾಂಬ್ಯಾಕ್ಟ್) ಅನುಭವಿಲ್ಲ. ಆದರೆ ಫ್ರಾನ್ಸ್ ನಿರ್ಮಿತ ರಫೇಲ್ ಈಗಾಗಲೇ ಅಫ್ಘಾನಿಸ್ತಾನ, ಲಿಬಿಯಾ, ಮಾಲಿ ಮತ್ತು ಕೇಂದ್ರೀಯ ದಕ್ಷಿಣ ಆಫ್ರಿಕಾದಲ್ಲಿ ಯಶಸ್ವಿಯಾಗಿ ಯುದ್ಧದಲ್ಲಿ ಭಾಗಿಯಾಗಿ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದೆ. ಈ ಮೂಲಕ ರಫೇಲ್ ನೈಜ ಸಾಮರ್ಥ್ಯದ ಅರಿವು ಈಗಾಗಲೇ ಜಗತ್ತಿಗೆ ಆಗಿ ಹೋಗಿದೆ.

    ಭಾರತಕ್ಕೆ ಯಾಕೆ ಅಗತ್ಯ ?

    ಮೂರು ಕಡೆ ಸಮುದ್ರ, ಒಂದು ಕಡೆ ಹಿಮಚ್ಛಾದಿತ ಪರ್ವತ ಸಮೂಹವನ್ನೇ ಹೊಂದಿರುವ ಭಾರತಕ್ಕೆ ಇಂಥ ಹೊಸ ಪೀಳಿಗೆಯ ಯುದ್ಧ ವಿಮಾನ ಅಗತ್ಯ ಮತ್ತು ಅನಿವಾರ್ಯತೆ ಇದ್ದೇ ಇತ್ತು. ಇದುವರೆಗೆ ಫೈಟರ್ ಜೆಟ್ ವಿಷಯದಲ್ಲಿ ರಷ್ಯಾವನ್ನೇ ಭಾರತ ಅವಲಂಬಿಸಿತ್ತು. ಮಿಗ್-21 ಮತ್ತು ಮಿಗ್ -27 ಭಾರತದ ವಾಯು ದಾಳಿಯ ಪ್ರಬಲ ಅಸ್ತ್ರವಾಗಿದ್ದವು. ಆದರೆ ಪದೇ ಪದೆ ಮಿಗ್ ವಿಮಾನಗಳು ಪತನ ಆಗುತ್ತಿರುವಂತೆಯೇ ಇದನ್ನು ಹೊರತು ಪಡಿಸಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಯುದ್ಧ ವಿಮಾನವನ್ನು ಪಡೆಯುವ ಯತ್ನಕ್ಕೆ 2018ರಲ್ಲಿ ಭಾರತ ಕೈ ಹಾಕಿತು.

    ಸದ್ಯದ ಮಟ್ಟಿಗೆ ನಮ್ಮ ವಾಯು ಪಡೆಯು ಕೇವಲ 31 ಸ್ಕ್ವಾಡ್ರನ್ ಆಗಿದೆ. ಒಂದೆಡೆ ಚೀನಾ, ಇನ್ನೊಂದು ಕಡೆಯಲ್ಲಿ ಪಾಕಿಸ್ತಾನ ಹೀಗೆ (ನೇಪಾಳ, ಶ್ರೀಲಂಕಾ ನಗಣ್ಯ) ಪ್ರಬಲ ಶತ್ರುಗಳನ್ನು ಗಡಿಯಲ್ಲಿ ಹೊಂದಿರುವ ಭಾರತವು ಮುಂದಿನ ಹತ್ತು ವರ್ಷಗಳಲ್ಲಿ ತನ್ನ ಸ್ಕ್ವಾಡ್ರನ್ ಸಂಖ್ಯೆಯನ್ನು ಕನಿಷ್ಠವೆಂದರೂ 42ಕ್ಕೆ ಏರಿಸಲೇಬೇಕಾಗಿದೆ. ಪ್ರತಿ ಸ್ಕ್ವಾಡ್ರನ್ ಗೆ 12ರಿಂದ 24 ಫೈಟರ್ ಜೆಟ್ ಗಳ ಅಗತ್ಯವಿದೆ. ಹೀಗಾಗಿ ಆಗಸದಿಂದ ಆಗಸಕ್ಕೆ ಮತ್ತು ನೆಲದಿಂದಲೂ ಆಗಸಕ್ಕೆ ನಿಖರ ಗುರಿಯತ್ತ ಕ್ಷಿಪಣಿಯನ್ನು ಉಡಾಯಿಸುವ ಗಂಟೆಗೆ 3,704 ಕಿ.ಮೀ. ವೇಗದಲ್ಲಿ ಹಾರಾಡಬಲ್ಲ ಫೈಟರ್ ಜೆಟ್ ಬೇಕಾಗಿತ್ತು. ಈ ಅಗತ್ಯತೆಯನ್ನು ಈಗ ರಫೇಲ್ ಪೂರೈಸಿದೆ.

    1996ರಲ್ಲಿ ಭಾರತ ಕೊನೆಯ ಬಾರಿಗೆ ಸುಕೋಯಿ-30 ಫೈಟರ್ ಜೆಟ್ ಖರೀದಿಸಿತ್ತು. ಈಗ ತಂತ್ರಜ್ಞಾನ ಬದಲಾಗಿದೆ. ಸುಮಾರು 24 ವರ್ಷಗಳ ಬಳಿಕದ ಸುದೀರ್ಘ ಅವಧಿಯಲ್ಲಿ ಆಗಿರಬಹುದಾದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈಗ ವಾಯು ಪಡೆಗೆ ಹೊಸ ಬಲ ಬಂದಂತಾಗಿದೆ.

    ರಫಲ್ ಇತಿಹಾಸ

    ರಫಲ್ ಎನ್ನುವುದು ಒಂದು ತಾಂತ್ರಿಕ ಶಬ್ದ. ಗಾಳಿಯನ್ನೂ ಬೇಧಿಸುವ ಮತ್ತು ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಕೊನೆಯ ಕ್ಷಣದವರೆಗೆ ಯತ್ನಿಸುವ ಎಂಬ ಅರ್ಥ ಇದಕ್ಕಿದೆ. ನಾಲ್ಕು ವಿಭಾಗಗಳಲ್ಲಿ ಸಿಗುವ ಇದನ್ನು ಮೊದಲ ಬಾರಿಗೆ 1986ರಲ್ಲಿ ಸಿದ್ಧ ಪಡಿಸಲಾಯಿತು. ಬಳಿಕ 2018ರ ಅವಧಿಯಲ್ಲಿ ಸುಮಾರು 165 ಯುದ್ಧ ವಿಮಾನಗಳು ಸಿದ್ಧವಾಗಿವೆ. ಒಂದು, ಎರಡು ಸೀಟು ಮತ್ತು ಡಬಲ್ ಎಂಜಿನ್ ಗಳನ್ನು ಇದು ಹೊಂದಿದೆ.

    ಆಗಸದಲ್ಲಿ ಹಾರಾಡುತ್ತಲೇ ತೀರಾ ಕೆಳಮಟ್ಟದಲ್ಲಿ ಕ್ಷಿಪಣಿಯನ್ನು ನಿಖರ ಗುರಿಯತ್ತ ಉಡಾಯಿಸುವ ಸಾಮರ್ಥ್ಯವನ್ನು ಹೊಂದಿರುವ ಇದು ಆಕ್ಸಿಜನ್ ಜನರೇಶನ್ ಸಿಸ್ಟಂ ಅನ್ನು ಹೊಂದಿದೆ. ಈ ಮೂಲಕ ಯುದ್ಧ ವಿಮಾನಕ್ಕೆ ಅಗತ್ಯವಾದ ದ್ರವೀಕೃತ ಆಮ್ಲಜನಕವನ್ನು ಹೊತ್ತೊಯ್ಯಬೇಕಾದ ಅಗತ್ಯ ಇದಕ್ಕೆ ಇರುವುದಿಲ್ಲ. ಇನ್ನು 3ಡಿ ಮ್ಯಾಪಿಂಗ್, ಇಲೆಕ್ಟ್ರಾನಿಕ್ ಸ್ಕ್ಯಾನಿಂಗ್ ರಾಡಾರ್ ಮೂಲಕ ತಕ್ಷಣವೇ (ರಿಯಲ್ ಟೈಮ್) ಶತ್ರುವಿನ ಗುರಿಯನ್ನು ಗುರುತಿಸುವ ಸಾಮರ್ಥ್ಯ ಇದಕ್ಕಿದೆ. ಹೀಗಾಗಿ ಮಳೆ, ಮೋಡ, ಹಿಮ ಸೇರಿದಂತೆ ಹವಾಮಾನ ವೈಪರೀತ್ಯಗಳ ನಡುವೆಯೇ ಯಾವುದೇ ಸಂದರ್ಭದಲ್ಲಿ ನಾನಾ ಗುರಿಗಳನ್ನು ಏಕ ಕಾಲದಲ್ಲಿ ಗುರುತಿಸುವ ಶಕ್ತಿ ಇದಕ್ಕಿದೆ.

    36ರಿಂದ 50 ಸಾವಿರ ಅಡಿ ಎತ್ತರದಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿರುವ ಇದು ಕೇವಲ ಒಂದು ನಿಮಿಷದಲ್ಲೇ 50 ಸಾವಿರ ಅಡಿ ಎತ್ತರವನ್ನು ತಲುಪಬಲ್ಲದು. ಸುಮಾರು 50 ಸಾವಿರ ಲೀಟರ್ ಇಂಧನವನ್ನು ಹೊತ್ತೊಯ್ಯಬಲ್ಲದು. ಅಮೆರಿಕದ ಎಫ್-16 ಯುದ್ಧ ವಿಮಾನಕ್ಕಿಂತ 0.82 ಅಡಿ ಹೆಚ್ಚು ಎತ್ತರ ಹಾಗೂ 0.79 ಅಡಿ ಹೆಚ್ಚು ಉದ್ದವಿದೆ.

    ಎಫ್-16 ಯುದ್ಧ ವಿಮಾನದ ಮಿಸೈಲ್ ಬಿಯಾಡ್ ವಿಷುವಲ್ ರೇಂಜ್ (ಬಿವಿಆರ್) 75 ಕಿ.ಮೀ. ಆಗಿದ್ದರೆ, ರಫಲ್ ನದ್ದು 100 ಕಿ.ಮೀ. ಆಗಿದೆ. ಇದಲ್ಲದೆ ಎಸ್ ಸಿಎಎಲ್ ಪಿ ಕರೆಯಲಾಗುವ ನೆಲದಿಂದ 300 ಕಿ.ಮೀ. ದೂರದ ಗುರಿಗೆ ನಿಖರವಾಗಿ ಕ್ಷಿಪಣಿ ಉಡಾಯಿಸುವ ಸಾಮರ್ಥ್ಯವೂ ಇದಕ್ಕಿದೆ.

    ಭಾಗ್ಯದ ಲಕ್ಷ್ಮೀ ಬಾರಮ್ಮ

    ಇಂದು ನಾಡಿನಾದ್ಯಂತ ಶ್ರೀವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ನೆರೆ ಹೊರೆಯವರೆಲ್ಲಾ ಸಂಭ್ರಮದಿಂದ ಒಬ್ಬರ ಮನೆಗೆ ಮತ್ತೊಬ್ಬರು ಹೋಗಿ ಸಡಗರದಿಂದ ಆಚರಿಸುತ್ತಿದ್ದ ಈ ಹಬ್ಬ ಈ ಬಾರಿ ಕೋವಿಡ್ ಕಾರಣದಿಂದ ಅವರವರ ಮನೆಗೆ ಸೀಮಿತವಾಗಿದೆ.

    ಶ್ರಾವಣ ಮಾಸವೇ ಹಾಗೆ. ಹಬ್ಬಗಳ ಸಾಲು. ಈ ಮಾಸದ ಎರಡನೇ ಶುಕ್ರವಾರ ಹೆಂಗಳೆಯರಿಗಂತೂ ಸಂಭ್ರಮದ ದಿನ. ಮನೆಯಲ್ಲಿ ಲಕ್ಶ್ಮಿ ಪೂಜೆಯ ಸಡಗರ. ನಮ್ಮ ದಾಸವರೇಣ್ಯರು ಲಕ್ಷ್ಮಿಯನ್ನು ಸ್ತುತಿಸುವುದನ್ನು ಕೇಳುವುದೇ ಸೊಗಸು. ಅದರ ಜೊತಗೆ ನಮ್ಮಲ್ಲಿ ಸಂಪ್ರದಾಯ ಗೀತೆಗಳು ಅನೇಕ. ಇವುಗಳನ್ನೆಲ್ಲಾ ಒಂದೆಡೆ ಸೇರಿಸಿ ಈ ದಿನ ನಾಡಿನ ಜತೆಗೆ ಈ ವಿಶೇಷ ಪಾಡ್ಕಾಸ್ಟ್ ಅನ್ನು ಕನ್ನಡಪ್ರೆಸ್.ಕಾಮ್ ಅರ್ಪಿಸುತ್ತಿದೆ. ಭಾರತಿ ಅವರು ಪ್ರಸ್ತುತ ಪಡಿಸಿದ ಈ ಪಾಡ್ಕಾಸ್ಚ್ ಗೆ ಅರುಣ್ ಕುಮಾರ್ , ಜಯಶೀಲ,ಸುಮನ್, ಗೀತಾ ಗಣೇಶ್, ಮೀರಾ ನಾಗರಾಜ್, ಶ್ಯಾಮಲಾ ಮತ್ತು ಮಮತಾ ಅವರು ಹಾಡಿನ ಮೂಲಕ ಜತೆಯಾಗಿದ್ದಾರೆ. ಆರ್. ಶ್ರೀನಿವಾಸ್ ಕೀ ಬೋರ್ಡ್ ನುಡಿಸಿದ್ದಾರೆ.

    ಪುರಂದರದಾಸರ ಜನಪ್ರಿಯ ಭಾಗ್ಯದ ಲಕ್ಷ್ಮಿ ಬಾರಮ್ಮ ಗೀತೆಯೊಂದಿಗೆ ಆರಂಭವಾಗುವ ಈ ಸಂಗೀತ ಯಾತ್ರೆ ಆರತಿ ಹಾಡಿನೊಂದಿಗೆ ಮಂಗಳವಾಗುತ್ತದೆ. ಆಲಿಸಿ .ಸಂಭ್ರಮಿಸಿ.ಹಂಚಿ

    error: Content is protected !!