32.8 C
Karnataka
Monday, April 21, 2025
    Home Blog Page 164

    ಕೋವಿಡ್ ರಣಕೇಕೆಗೆ ಖಾಸಗಿ ಬಸ್ ಉದ್ಯಮ ಜರ್ಝರಿತ

    ಖಾಸಗಿ ಬಸ್ ಗಳು ಕಳೆದ ಹಲವು ದಶಕಗಳಿಂದ ಕರ್ನಾಟಕದ ಸಂಪರ್ಕ ಕೊಂಡಿಗಳು.ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಜನ ಜೀವನಕ್ಕೆ ಇವುಗಳೇ ಆಧಾರ. ರೈತರ, ಕೂಲಿ ಕಾರ್ಮಿಕರ,ಮಧ್ಯಮವರ್ಗದವರ ದೈನಂದಿನ ಬದುಕು ಇವುಗಳೊಂದಿಗೆ ಅನ್ಯೋನ್ಯತೆಯಲ್ಲಿ ಸಾಗಿತ್ತು. ಮಧ್ಯ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಇವುಗಳದ್ದೆ ಸಾಮ್ರಾಜ್ಯ. ಗ್ರಾಮಗಳ ನಾಡಿನಲ್ಲಿ ಖಾಸಗಿ ಬಸ್ ಗಳ ಹೆಸರೇ ಜನಜನಿತ. ತಮ್ಮ ಮನೆಯ ಮಗನಂತೆಯೇ ನಾಮಧೇಯಗಳ ಪಠಣ.

    ಅರ್ಧ ಶತಮಾನಕ್ಕಿಂತ ಹೆಚ್ಚು ಕಾಲ ರಸ್ತೆಯಲ್ಲಿ ರಾರಾಜಿಸಿದ ಖಾಸಗಿ ಬಸ್ ಗಳು ಕೊವಿಡ್ ರಣಕೇಕೆಯಲ್ಲಿ ತಣ್ಣಗೆ ಅವಿತಿವೆ. ಮತ್ತೊಮ್ಮೆ ಖಾಸಗಿ ಬಸ್ ಗಳು ರಸ್ತೆಯಲ್ಲಿ ತನ್ನ ಹಳೆಯ ವೈಭವ ಪಡೆಯುವವೇ ಎಂಬುದು ಆತಂಕದ ಅಸಹಾಯಕ ನಿಟ್ಟಸಿರು ಬಿಡುವಂತೆ ಮಾಡಿದೆ. ಖಾಸಗಿ ಬಸ್ ನೌಕರರ ಬದುಕು ಡೋಲಾಯಮಾನ ಸ್ಥಿತಿಯಲ್ಲಿದೆ. ಸಾವಿರಾರು ನೌಕರರ ಬದುಕು ಬೀದಿಗೆ ಬಿದ್ದಿವೆ. ಕೌಶಲ್ಯಪಡೆಯದ ವೃತ್ತಿ ತೊಡಗಿಕೊಂಡ ಅರೆಕಾಸಿಗೆ ಅವಮಾನ ಸಹಿಸಿ ಬದುಕುವ ಅಸಹನೀಯತೆ ಮಡುಗಟ್ಟಿದೆ.

    ಖಾಸಗಿ ಬಸ್ ಚಾಲಕರು ಮಕ್ಕಳ ಕುತೂಹಲಕಾರಿ ವ್ಯಕ್ತಿ. ಮುಂದೆ ಕುಳಿತು ಚಾಲನೆಯನ್ನೆ ಎವೆಯಿಕ್ಕದೆ ಗಮನಿಸುತ್ತಿದ್ದವರೆಷ್ಟೋ. ಕಾಗದ ಪತ್ರಗಳಿಂದ ಹಿಡಿದು ಸಾಮಾನು ಸರಂಜಾಮು ಹಾಗೂ ಹಣವನ್ನು ಒಂದೂರಿಂದ ಮತ್ತೊಂದರಿಗೆ ತಲುಪಿಸುವ ನಂಬಿಕಸ್ಥ.ಏಜೆಂಟರು ಸಿಟ್ಟು ಸೆಡವುಗಳಿಂದಲೆ ಚಾರ್ಜು ವಸೂಲಿ ಮಾಡುತ್ತ ಮಾನವೀಯತೆ ತೋರುವ ಜೀವ. ಕಡಿಮೆ ಇದ್ದರೂ ಬೈದು ಪ್ರಯಾಣಕ್ಕೆ ಅನುವು ಮಾಡುವ ಅದೆಷ್ಟೋ ಉದಾಹರಣೆಗಳು. ಕಂಡಕ್ಟರ್ ಗಳು ಬಾಗಿಲಲ್ಲಿಯೇ ಜೋತು ಬಿದ್ದು ಜನರನ್ನು
    ಮುಂದೆ ಬನ್ನಿ.. ಒಳಗೆ ಹೋಗಿ..ಎಂದು ಗದುರುತ್ತ ಕಲೆಕ್ಷನ್ ಹೆಚ್ಚಿಸುವ ನೆಚ್ಚಿನ ಭಂಟ. ಇನ್ನೂ ಬಸ್ ಮಾಲೀಕರೆಂದರೆ ಆಗ ಮಂತ್ರಿಗಳಂತೆ ನೋಡುತ್ತಿದ್ದ ಕಾಲ. ಆನಂತರ ಬಿಡಿ ಬಸ್ ಏಜೆಂಟರೆಲ್ಲಾ ಬಸ್ ಮಾಲೀಕರಾಗಿ ಕೈ ಸುಟ್ಟುಕೊಂಡವರಿದ್ದಾರೆ. ನಿತ್ಯ ಸಾವಿರಾರು ರೂಪಾಯಿ ವಹಿವಾಟು ನಡೆಸಿ ಪ್ರಯಾಣಿಕರ ಮನ್ನಣೆಗೆ ಪಾತ್ರವಾಗಿದ್ದ ಖಾಸಗಿ ಬಸ್ ಉದ್ಯಮ ತೆರಿಗೆ,
    ಬ್ಯಾಂಕ್ ಸಾಲ, ಹೆಚ್ಚಿದ ಡೀಸಲ್ ಬೆಲೆ, ಪರಿಕರಗಳ ಕೈಗೆಟುಕದ ಬೆಲೆಯಲ್ಲಿ ಸಾವರಿಸಿಕೊಂಡು ನಡೆಯುತ್ತಿತ್ತು. ಕೋವಿಡ್ ಸೋಂಕಿನಲ್ಲಿ ಸಂಪೂರ್ಣ ನೆಲಕಚ್ಚಿ ಚೇತರಿಸಿಕೊಳ್ಳುವ ಭರವಸೆ ಕಳೆದುಕೊಳ್ಳುವ ಸ್ಥಿತಿ ತಲುಪಿದೆ.

    ಸತತ ನಾಲ್ಕು ತಿಂಗಳಿಂದ ನಿಂತಲ್ಲೆ ನಿಂತ ಖಾಸಗಿ ಬಸ್ ಗಳು ತುಕ್ಕು ಹಿಡಿಯುತ್ತಿವೆ. ಚಾಲಕರು, ಏಜೆಂಟರು ಹಾಗೂ ಕಂಡಕ್ಟರ್ ಗಳು ಉದ್ಯೋಗ ಬದಲಾಯಿಸಿದ್ದಾರೆ. ಕೌಶಲ್ಯರಹಿತ ಕೆಲಸದಲ್ಲಿ ಕೊಟ್ಟಷ್ಟು ಕೂಲಿ ಪಡೆದು ಜೀವಹಿಡಿದುಕೊಂಡಿದ್ದಾರೆ. ಸಾಲಗಾರರಿಗೆ ಬಡ್ಡಿಯೂ ಕಟ್ಟಲಾಗದೆ ಭರವಸೆ ರಹಿತ ಜೀವನ ನಡೆಸುತ್ತಿದ್ದಾರೆ.ಸರ್ಕಾರ ಖಾಸಗಿ ಬಸ್ ಓಡಿಸಲು 14 ನಿಬಂಧನೆಗಳನ್ನು ಸೂಚಿಸಿದೆ. ಅವುಗಳಲ್ಲಿ ಪ್ರಮುಖವಾಗಿ 30 ಜನರು
    ಪ್ರಯಾಣಿಸಬೇಕು. ತೆರಿಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಬೇಕು. ಕೋವಿಡ್ ಸೋಂಕಿತರಿದ್ದರೆ ಮಾಲೀಕರೇ ಪೂರ್ಣ ವಾಬ್ದಾರಿ ಹೊರಬೇಕು. ಸೋಂಕು ಹರಡದಂತೆ ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ಯಾನರ್ ಪರಿಕರಗಳನ್ನು
    ಹೊಂದಿರಬೇಕು. ಬಸ್ ಫೇರ್ ಹೆಚ್ಚಿಸುವಂತಿಲ್ಲ. ಇದರಿಂದ ಇನ್ನಷ್ಟು ನಷ್ಟ ಸ್ಪಷ್ಟ.

    ಖಾಸಗಿ ಬಸ್ ಮಾಲೀಕರ ಬೇಡಿಕೆಗಳು: ಬಸ್ ಓಡಾಟ ಆರಂಭವಾದ ನಂತರ ಕನಿಷ್ಟ ಆರು ತಿಂಗಳು ತೆರಿಗೆ ವಿನಾಯಿತಿ ನೀಡಬೇಕು. ಆನಂತರ ಮೂರು ತಿಂಗಳು ತೆರಿಗೆ ಕಟ್ಟಲು ಕಾಲಾವಕಾಶ ನೀಡಬೇಕು. 48 ಸೀಟು ಬದಲು 30 ಸೀಟಿಗೆ ಮಾತ್ರ ತೆರಿಗೆ ವಿಧಿಸಬೇಕು. ಡೀಸಲ್ ಬೆಲೆ ಏರುತ್ತಿರುವ ಹಿನ್ನೆಲ್ಲೆಯಲ್ಲಿ ಬಸ್ ಫೇರ್ ಹೆಚ್ಚಿಸಲು ಅವಕಾಶ ನೀಡಬೇಕು.

    ಸುದೀಪ್

    ಉದಾಹರಣೆಗೆ ದಾವಣಗೆರೆ ಜಿಲ್ಲೆಯಲ್ಲಿ 330 ಖಾಸಗಿ ಬಸ್ ಗಳಿವೆ. ಇದರಿಂದ ಸಾವಿರಾರು ಕುಟುಂಬದ ಜೀವನ ನೆಲೆ ಕಳೆದುಕೊಂಡಿದೆ. ನಮ್ಮ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಇದುವರೆಗೂ ಸ್ಪಂದಿಸಿಲ್ಲ. ಹಾಗಾಗಿ ಖಾಸಗ ಬಸ್ ಸಂಚಾರ ಅನಿಶ್ಚಿತವಾಗಿದೆ ಎಂದು ದಾವಣಗೆರೆ ಜಿಲ್ಲೆಯ ಗೀತಾಂಜನೇಯ ಬಸ್ ಕಂಪನಿ ಮಾಲೀಕರಾದ ಸುದೀಪ್ ಸಮಸ್ಯೆಯನ್ನು ಬಿಚ್ಚಿಡುತ್ತಾರೆ.

    ನಮ್ಮ ಬಸ್ ಗಳು ಪೆಟ್ರೋಲ್ ಬಂಕ್ ಬಳಿ ನಿಂತಿವೆ. ಬ್ಯಾಂಕ್ ಸಾಲ ಮರು ಪಾವತಿಗೆ ಒತ್ತಾಯಿಸುತ್ತಿವೆ. ಬಸ್ ಮಾರಾಟ ಮಾಡಲು ಹೊರಟರೆ ಖರೀದಿಸುವವರಿಲ್ಲ. ರೂ.10 ಲಕ್ಷ ಬೆಲೆ ಬಾಳುವ ಬಸ್ ರು.1.50 ಲಕ್ಷಕ್ಕೆ ಕೇಳುತ್ತಿದ್ದಾರೆ. ಹಾಗಾಗಿ ಕಿರಾಣಿ ಅಂಗಡಿ ವ್ಯಾಪಾರಕ್ಕೆ ತೊಡಗಿಸಿಕೊಂಡಿದ್ದೇನೆ. ಮತ್ತೊಮ್ಮೆ ಬಸ್ ಓಡಿಸುವ ಇರಾದೆ ಇಲ್ಲ ಎಂದು . ಶ್ರೀ ಶೈಲ ಬಸ್ ಮಾಲೀಕ ಸಂತೋಷ್ ಉದ್ಗಾರ.

    ಶ್ರೀ ಶೈಲ ಬಸ್ ಮಾಲೀಕ ಸಂತೋಷ್

    ನಿತ್ಯ ರೂ.600 ರಿಂದ 800 ಗಳ ಸಂಪಾದನೆ ಇತ್ತು. ಗಾರೆ ಸಹಾಯಕ ಕೆಲಸಕ್ಕೆ ಹೋದರೆ ದಿನಕ್ಕೆ ರೂ.400 ಕೊಟ್ಟರೆ ಹೆಚ್ಚು. ಕೆಲವರು ಕೆಲಸ ಗೊತ್ತಲ್ಲವೆಂದು ಬಿಡಿಸಿ ಕಳಿಸಿದ್ದಾರೆ.ಸಾಲ ಮರುಪಾವತಿ ಮಾಡಲಾಗುತ್ತಿಲ್ಲ. ಬಡ್ಡಿ ಕಟ್ಟಲಾಗುತ್ತಿಲ್ಲ. ಮಕ್ಕಳ ಓದು ಬರಹಕ್ಕೆ ದುಡ್ಡಿಲ್ಲ ಎಂದು ಖಾಸಗಿ ಬಸ್ ಚಾಲಕರಾದ ಇರ್ಫಾನ್ ಮತ್ತು ನಾಯಕ ದುಃಖಿಸುತ್ತಾರೆ.

    ಕಳೆದ 25 ವರ್ಷದಿಂದ ಖಾಸಗಿ ಬಸ್ ಏಜೆಂಟ್ ಆಗಿ ದುಡಿದೆ. ನಾಲ್ಕು ತಿಂಗಳಿಂದ ಕೆಲಸವಿಲ್ಲ. ಆರಂಭದಲ್ಲಿ ಕೇಟರಿಂಗ್ ವೃತ್ತಿ
    ಆರಂಭಿಸಿದೆ. ಹೋಟೆಲ್ ಆರಂಭವಾದ ನಂತರ ಆ ಕೆಲಸವೂ ನಿಂತಿತು. ಹೊಸ ಉದ್ಯೋಗಾರಂಭಕ್ಕೆ ಯೋಚಿಸುತ್ತಿದ್ದೇನೆ.ಬಸ್ ಮಾಲೀಕರು ಇಲ್ಲಿವರೆಗೆ ನಮ್ಮ ಜೀವನದ ಬಗ್ಗೆ ಒಂದು ಮಾತನ್ನು ಕೇಳಿಲ್ಲ ಎಂದು ನೋವಿನಿಂದ ನುಡಿಯುತ್ತಾರೆ ಚಿತ್ರದುರ್ಗದ ಖಾಸಗಿ ಬಸ್ ಏಜೆಂಟ್ ಎಸ್.ಜೆ.ಶಿವಕುಮಾರ್.ಬಸ್ ಕಂಡಕ್ಟರ್ ಕೆಲಸ ಕಳೆದುಕೊಂಡ ಮೇಲೆ ತರಕಾರಿ ಮಾರುತ್ತಿದ್ದೇನೆ. ಕೆಲವರು ಪಂಚರ್ ಅಂಗಡಿ ನಡೆಸುತ್ತಿದ್ದಾರೆ. ಬಸ್ ಕೆಲಸವೇ ಚೆನ್ನಾಗಿತ್ತು ಎಂಬ ಅಭಿಪ್ರಾಯ ಕಂಡಕ್ಟರ್ ಪ್ರಕಾಶ್ ಅವರಿಂದ.

    ಖಾಸಗಿ ಬಸ್ ನೌಕರರ ಮೇಲಿನ ಕೆಲವು ಉದಾಹರಣೆಗಳಷ್ಟೆ. ಸಾವಿರಾರು ಕುಟುಂಬಗಳು, ತರಕಾರಿ, ಕೂಲಿ, ಪಂಕ್ಚರ್ ಅಂಗಡಿ, ಕಟ್ಟಡ ಕೂಲಿ ಕೆಲಸಗಳಿಗೆ ಪರಿವರ್ತನೆಗೊಂಡಿದ್ದಾರೆ. ಮತ್ತೊಮ್ಮೆ ಬಸ್ ಗಳು ರಸ್ತೆಗಿಳಿಯಲಿ ನಮ್ಮ ಜೀವನ ಸಲೀಸಾಗಿ ಸಾಗಲಿ ಎಂಬ ಭರವಸೆಯೊಂದಿಗೆ ಜೀವನ ತಳ್ಳುತ್ತಿದ್ದಾರೆ.

    ಸರ್ಕಾರ ಖಾಸಗಿ ಬಸ್ ಮಾಲೀಕರ ಬೇಡಿಕೆಗಳನ್ನು ಗಮನಿಸಿ. ನಷ್ಟವನ್ನು ತಪ್ಪಿಸುವಲ್ಲಿ ಸೂಕ್ತ ಕ್ರಮಗಳನ್ನು ರೂಪಿಸಬೇಕು. ಪ್ರಯಾಣಿಕ ಸ್ನೇಹಿ ಖಾಸಗಿ ಬಸ್ ಗಳು ಮತ್ತೊಮ್ಮೆ ರಸ್ತೆಯಲ್ಲಿ ರಾರಾಜಿಸಬೇಕು. ಮಾಲೀಕರು ನಿಂತಲ್ಲೆ ತುಕ್ಕು ಹಿಡಿಯುವ ನಷ್ಟದಿಂದ ಹೊರಬರಲು ಶೀಘ್ರ ನಿಯಮ ಬದಲಾಯಿಸಿ ನೆರವಿಗೆ ಬರಬೇಕು ಎಂದು ಖಾಸಗಿ ಬಸ್ ಉದ್ಯಮ ಒತ್ತಾಯಿಸುತ್ತಿದೆ.

    ರಫೇಲ್ ಯುದ್ಧ ವಿಮಾನ ಭಾರತಕ್ಕೆ ಯಾಕೆ ಅಗತ್ಯವಾಗಿದೆ

    ರಫೇಲ್ ಯುದ್ಧ ವಿಮಾನದ ಮೊದಲ ಕಂತು ಭಾರತಕ್ಕೆ ತಲುಪಿದೆ. ಇದರೊಂದಿಗೆ ನಮ್ಮ ವಾಯು ಪಡೆ ಮತ್ತಷ್ಟು ಸಶಕ್ತವಾಗಿದೆ. ಇದಕ್ಕೆ ಕಾರಣವೆಂದರೆ ಚೀನಾದ ಜತೆಗಿನ ಗಡಿ ವಿವಾದದ ನಡುವೆಯೇ ತುರ್ತಾಗಿ ಈ ಯುದ್ಧ ವಿಮಾನಗಳು ಅಂಬಾಲ ವಾಯು ನೆಲೆಗೆ ಬಂದಿಳಿದಿರುವುದು.

    ಹಾಗೆಂದು ಚೀನಾ ಇಂತಹ ವಿಮಾನವನ್ನು ಹೊಂದಿಲ್ಲ ಎಂದೇನಲ್ಲ. ಆದರೆ ಅದು ಐದನೇ ಪೀಳಿಗೆಯ (ಜನರೇಶನ್) ಜೆ-20 ಚೆಂಗ್ಡು ಜೆಟ್ ಆಗಿದ್ದರೆ, ರಫಲ್ 4.5ನೇ ಪೀಳಿಗೆಯ ಯುದ್ಧ ವಿಮಾನ. ಇದರಲ್ಲೇ ಅರ್ಥವಾಗಿರಬಹುದು. ಇದು ಒಂದಿಷ್ಟು ಹೆಚ್ಚು ಸುಧಾರಿತ ತಂತ್ರಜ್ಞಾನ ಹೊಂದಿದೆ ಎಂಬುದು. ಇಷ್ಟಲ್ಲದೆ ಜೆ-20ಗೆ ಹೋಲಿಸಿದರೆ ರಫಲ್ ಹೆಚ್ಚು ಇಂಧನ ಮತ್ತು ಶಸ್ತ್ರಾಸ್ತ್ರ ಹೊತ್ತೊಯ್ಯಬಲ್ಲ ಸಾಮರ್ಥ್ಯ ಕೂಡ ಹೊಂದಿದೆ.

    ಇದಕ್ಕಿಂತಲೂ ಮುಖ್ಯವಾಗಿ ಜೆ-20 ಫೈಟರ್ ಜೆಟ್ ಇದುವರೆಗೆ ವಾಸ್ತವ ನೆಲೆಗಟ್ಟಿನಲ್ಲಿ ಯುದ್ಧದಲ್ಲಿ ನೆರವಾಗಿ ಭಾಗಿಯಾದ (ಆಕ್ಚುವಲ್ ಕಾಂಬ್ಯಾಕ್ಟ್) ಅನುಭವಿಲ್ಲ. ಆದರೆ ಫ್ರಾನ್ಸ್ ನಿರ್ಮಿತ ರಫೇಲ್ ಈಗಾಗಲೇ ಅಫ್ಘಾನಿಸ್ತಾನ, ಲಿಬಿಯಾ, ಮಾಲಿ ಮತ್ತು ಕೇಂದ್ರೀಯ ದಕ್ಷಿಣ ಆಫ್ರಿಕಾದಲ್ಲಿ ಯಶಸ್ವಿಯಾಗಿ ಯುದ್ಧದಲ್ಲಿ ಭಾಗಿಯಾಗಿ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದೆ. ಈ ಮೂಲಕ ರಫೇಲ್ ನೈಜ ಸಾಮರ್ಥ್ಯದ ಅರಿವು ಈಗಾಗಲೇ ಜಗತ್ತಿಗೆ ಆಗಿ ಹೋಗಿದೆ.

    ಭಾರತಕ್ಕೆ ಯಾಕೆ ಅಗತ್ಯ ?

    ಮೂರು ಕಡೆ ಸಮುದ್ರ, ಒಂದು ಕಡೆ ಹಿಮಚ್ಛಾದಿತ ಪರ್ವತ ಸಮೂಹವನ್ನೇ ಹೊಂದಿರುವ ಭಾರತಕ್ಕೆ ಇಂಥ ಹೊಸ ಪೀಳಿಗೆಯ ಯುದ್ಧ ವಿಮಾನ ಅಗತ್ಯ ಮತ್ತು ಅನಿವಾರ್ಯತೆ ಇದ್ದೇ ಇತ್ತು. ಇದುವರೆಗೆ ಫೈಟರ್ ಜೆಟ್ ವಿಷಯದಲ್ಲಿ ರಷ್ಯಾವನ್ನೇ ಭಾರತ ಅವಲಂಬಿಸಿತ್ತು. ಮಿಗ್-21 ಮತ್ತು ಮಿಗ್ -27 ಭಾರತದ ವಾಯು ದಾಳಿಯ ಪ್ರಬಲ ಅಸ್ತ್ರವಾಗಿದ್ದವು. ಆದರೆ ಪದೇ ಪದೆ ಮಿಗ್ ವಿಮಾನಗಳು ಪತನ ಆಗುತ್ತಿರುವಂತೆಯೇ ಇದನ್ನು ಹೊರತು ಪಡಿಸಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಯುದ್ಧ ವಿಮಾನವನ್ನು ಪಡೆಯುವ ಯತ್ನಕ್ಕೆ 2018ರಲ್ಲಿ ಭಾರತ ಕೈ ಹಾಕಿತು.

    ಸದ್ಯದ ಮಟ್ಟಿಗೆ ನಮ್ಮ ವಾಯು ಪಡೆಯು ಕೇವಲ 31 ಸ್ಕ್ವಾಡ್ರನ್ ಆಗಿದೆ. ಒಂದೆಡೆ ಚೀನಾ, ಇನ್ನೊಂದು ಕಡೆಯಲ್ಲಿ ಪಾಕಿಸ್ತಾನ ಹೀಗೆ (ನೇಪಾಳ, ಶ್ರೀಲಂಕಾ ನಗಣ್ಯ) ಪ್ರಬಲ ಶತ್ರುಗಳನ್ನು ಗಡಿಯಲ್ಲಿ ಹೊಂದಿರುವ ಭಾರತವು ಮುಂದಿನ ಹತ್ತು ವರ್ಷಗಳಲ್ಲಿ ತನ್ನ ಸ್ಕ್ವಾಡ್ರನ್ ಸಂಖ್ಯೆಯನ್ನು ಕನಿಷ್ಠವೆಂದರೂ 42ಕ್ಕೆ ಏರಿಸಲೇಬೇಕಾಗಿದೆ. ಪ್ರತಿ ಸ್ಕ್ವಾಡ್ರನ್ ಗೆ 12ರಿಂದ 24 ಫೈಟರ್ ಜೆಟ್ ಗಳ ಅಗತ್ಯವಿದೆ. ಹೀಗಾಗಿ ಆಗಸದಿಂದ ಆಗಸಕ್ಕೆ ಮತ್ತು ನೆಲದಿಂದಲೂ ಆಗಸಕ್ಕೆ ನಿಖರ ಗುರಿಯತ್ತ ಕ್ಷಿಪಣಿಯನ್ನು ಉಡಾಯಿಸುವ ಗಂಟೆಗೆ 3,704 ಕಿ.ಮೀ. ವೇಗದಲ್ಲಿ ಹಾರಾಡಬಲ್ಲ ಫೈಟರ್ ಜೆಟ್ ಬೇಕಾಗಿತ್ತು. ಈ ಅಗತ್ಯತೆಯನ್ನು ಈಗ ರಫೇಲ್ ಪೂರೈಸಿದೆ.

    1996ರಲ್ಲಿ ಭಾರತ ಕೊನೆಯ ಬಾರಿಗೆ ಸುಕೋಯಿ-30 ಫೈಟರ್ ಜೆಟ್ ಖರೀದಿಸಿತ್ತು. ಈಗ ತಂತ್ರಜ್ಞಾನ ಬದಲಾಗಿದೆ. ಸುಮಾರು 24 ವರ್ಷಗಳ ಬಳಿಕದ ಸುದೀರ್ಘ ಅವಧಿಯಲ್ಲಿ ಆಗಿರಬಹುದಾದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈಗ ವಾಯು ಪಡೆಗೆ ಹೊಸ ಬಲ ಬಂದಂತಾಗಿದೆ.

    ರಫಲ್ ಇತಿಹಾಸ

    ರಫಲ್ ಎನ್ನುವುದು ಒಂದು ತಾಂತ್ರಿಕ ಶಬ್ದ. ಗಾಳಿಯನ್ನೂ ಬೇಧಿಸುವ ಮತ್ತು ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಕೊನೆಯ ಕ್ಷಣದವರೆಗೆ ಯತ್ನಿಸುವ ಎಂಬ ಅರ್ಥ ಇದಕ್ಕಿದೆ. ನಾಲ್ಕು ವಿಭಾಗಗಳಲ್ಲಿ ಸಿಗುವ ಇದನ್ನು ಮೊದಲ ಬಾರಿಗೆ 1986ರಲ್ಲಿ ಸಿದ್ಧ ಪಡಿಸಲಾಯಿತು. ಬಳಿಕ 2018ರ ಅವಧಿಯಲ್ಲಿ ಸುಮಾರು 165 ಯುದ್ಧ ವಿಮಾನಗಳು ಸಿದ್ಧವಾಗಿವೆ. ಒಂದು, ಎರಡು ಸೀಟು ಮತ್ತು ಡಬಲ್ ಎಂಜಿನ್ ಗಳನ್ನು ಇದು ಹೊಂದಿದೆ.

    ಆಗಸದಲ್ಲಿ ಹಾರಾಡುತ್ತಲೇ ತೀರಾ ಕೆಳಮಟ್ಟದಲ್ಲಿ ಕ್ಷಿಪಣಿಯನ್ನು ನಿಖರ ಗುರಿಯತ್ತ ಉಡಾಯಿಸುವ ಸಾಮರ್ಥ್ಯವನ್ನು ಹೊಂದಿರುವ ಇದು ಆಕ್ಸಿಜನ್ ಜನರೇಶನ್ ಸಿಸ್ಟಂ ಅನ್ನು ಹೊಂದಿದೆ. ಈ ಮೂಲಕ ಯುದ್ಧ ವಿಮಾನಕ್ಕೆ ಅಗತ್ಯವಾದ ದ್ರವೀಕೃತ ಆಮ್ಲಜನಕವನ್ನು ಹೊತ್ತೊಯ್ಯಬೇಕಾದ ಅಗತ್ಯ ಇದಕ್ಕೆ ಇರುವುದಿಲ್ಲ. ಇನ್ನು 3ಡಿ ಮ್ಯಾಪಿಂಗ್, ಇಲೆಕ್ಟ್ರಾನಿಕ್ ಸ್ಕ್ಯಾನಿಂಗ್ ರಾಡಾರ್ ಮೂಲಕ ತಕ್ಷಣವೇ (ರಿಯಲ್ ಟೈಮ್) ಶತ್ರುವಿನ ಗುರಿಯನ್ನು ಗುರುತಿಸುವ ಸಾಮರ್ಥ್ಯ ಇದಕ್ಕಿದೆ. ಹೀಗಾಗಿ ಮಳೆ, ಮೋಡ, ಹಿಮ ಸೇರಿದಂತೆ ಹವಾಮಾನ ವೈಪರೀತ್ಯಗಳ ನಡುವೆಯೇ ಯಾವುದೇ ಸಂದರ್ಭದಲ್ಲಿ ನಾನಾ ಗುರಿಗಳನ್ನು ಏಕ ಕಾಲದಲ್ಲಿ ಗುರುತಿಸುವ ಶಕ್ತಿ ಇದಕ್ಕಿದೆ.

    36ರಿಂದ 50 ಸಾವಿರ ಅಡಿ ಎತ್ತರದಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿರುವ ಇದು ಕೇವಲ ಒಂದು ನಿಮಿಷದಲ್ಲೇ 50 ಸಾವಿರ ಅಡಿ ಎತ್ತರವನ್ನು ತಲುಪಬಲ್ಲದು. ಸುಮಾರು 50 ಸಾವಿರ ಲೀಟರ್ ಇಂಧನವನ್ನು ಹೊತ್ತೊಯ್ಯಬಲ್ಲದು. ಅಮೆರಿಕದ ಎಫ್-16 ಯುದ್ಧ ವಿಮಾನಕ್ಕಿಂತ 0.82 ಅಡಿ ಹೆಚ್ಚು ಎತ್ತರ ಹಾಗೂ 0.79 ಅಡಿ ಹೆಚ್ಚು ಉದ್ದವಿದೆ.

    ಎಫ್-16 ಯುದ್ಧ ವಿಮಾನದ ಮಿಸೈಲ್ ಬಿಯಾಡ್ ವಿಷುವಲ್ ರೇಂಜ್ (ಬಿವಿಆರ್) 75 ಕಿ.ಮೀ. ಆಗಿದ್ದರೆ, ರಫಲ್ ನದ್ದು 100 ಕಿ.ಮೀ. ಆಗಿದೆ. ಇದಲ್ಲದೆ ಎಸ್ ಸಿಎಎಲ್ ಪಿ ಕರೆಯಲಾಗುವ ನೆಲದಿಂದ 300 ಕಿ.ಮೀ. ದೂರದ ಗುರಿಗೆ ನಿಖರವಾಗಿ ಕ್ಷಿಪಣಿ ಉಡಾಯಿಸುವ ಸಾಮರ್ಥ್ಯವೂ ಇದಕ್ಕಿದೆ.

    ಭಾಗ್ಯದ ಲಕ್ಷ್ಮೀ ಬಾರಮ್ಮ

    ಇಂದು ನಾಡಿನಾದ್ಯಂತ ಶ್ರೀವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ನೆರೆ ಹೊರೆಯವರೆಲ್ಲಾ ಸಂಭ್ರಮದಿಂದ ಒಬ್ಬರ ಮನೆಗೆ ಮತ್ತೊಬ್ಬರು ಹೋಗಿ ಸಡಗರದಿಂದ ಆಚರಿಸುತ್ತಿದ್ದ ಈ ಹಬ್ಬ ಈ ಬಾರಿ ಕೋವಿಡ್ ಕಾರಣದಿಂದ ಅವರವರ ಮನೆಗೆ ಸೀಮಿತವಾಗಿದೆ.

    ಶ್ರಾವಣ ಮಾಸವೇ ಹಾಗೆ. ಹಬ್ಬಗಳ ಸಾಲು. ಈ ಮಾಸದ ಎರಡನೇ ಶುಕ್ರವಾರ ಹೆಂಗಳೆಯರಿಗಂತೂ ಸಂಭ್ರಮದ ದಿನ. ಮನೆಯಲ್ಲಿ ಲಕ್ಶ್ಮಿ ಪೂಜೆಯ ಸಡಗರ. ನಮ್ಮ ದಾಸವರೇಣ್ಯರು ಲಕ್ಷ್ಮಿಯನ್ನು ಸ್ತುತಿಸುವುದನ್ನು ಕೇಳುವುದೇ ಸೊಗಸು. ಅದರ ಜೊತಗೆ ನಮ್ಮಲ್ಲಿ ಸಂಪ್ರದಾಯ ಗೀತೆಗಳು ಅನೇಕ. ಇವುಗಳನ್ನೆಲ್ಲಾ ಒಂದೆಡೆ ಸೇರಿಸಿ ಈ ದಿನ ನಾಡಿನ ಜತೆಗೆ ಈ ವಿಶೇಷ ಪಾಡ್ಕಾಸ್ಟ್ ಅನ್ನು ಕನ್ನಡಪ್ರೆಸ್.ಕಾಮ್ ಅರ್ಪಿಸುತ್ತಿದೆ. ಭಾರತಿ ಅವರು ಪ್ರಸ್ತುತ ಪಡಿಸಿದ ಈ ಪಾಡ್ಕಾಸ್ಚ್ ಗೆ ಅರುಣ್ ಕುಮಾರ್ , ಜಯಶೀಲ,ಸುಮನ್, ಗೀತಾ ಗಣೇಶ್, ಮೀರಾ ನಾಗರಾಜ್, ಶ್ಯಾಮಲಾ ಮತ್ತು ಮಮತಾ ಅವರು ಹಾಡಿನ ಮೂಲಕ ಜತೆಯಾಗಿದ್ದಾರೆ. ಆರ್. ಶ್ರೀನಿವಾಸ್ ಕೀ ಬೋರ್ಡ್ ನುಡಿಸಿದ್ದಾರೆ.

    ಪುರಂದರದಾಸರ ಜನಪ್ರಿಯ ಭಾಗ್ಯದ ಲಕ್ಷ್ಮಿ ಬಾರಮ್ಮ ಗೀತೆಯೊಂದಿಗೆ ಆರಂಭವಾಗುವ ಈ ಸಂಗೀತ ಯಾತ್ರೆ ಆರತಿ ಹಾಡಿನೊಂದಿಗೆ ಮಂಗಳವಾಗುತ್ತದೆ. ಆಲಿಸಿ .ಸಂಭ್ರಮಿಸಿ.ಹಂಚಿ

    ಬಟ್ಟೆಗೆ ಈಗ ಗೌರವ ಇರಬಹುದು ಆಗ ಬೆಲೆ ಇತ್ತು

    ಹಬ್ಬಕ್ಕೆ ಹುಟ್ಟಿದಬ್ಬಕ್ಕೆ , ಫ್ರೆಂಡ್ ನಿಶ್ಚಿತಾರ್ಥಕ್ಕೆ , ಕಸಿನ್ ಮದುವೆಗೆ , ಚೆನ್ನಾಗಿ ಕಾಣಿಸುತ್ತೆ ಅಂತ , ತಗೋಳಕ್ಕೆ ಆಫರ್ ಇದೆ ಅಂತ , ನೋಡಕ್ಕೆ ಸೂಪರ್ ಇದೆ ಅಂತ ಒಂದಲ್ಲ ಒಂದು ಕಾರಣವಲ್ಲದ ಕಾರಣಕ್ಕೆ ವರ್ಷವಿಡೀ ಬಟ್ಟೆ ಖರೀದಿ ಮಾಡ್ತಾನೇ ಇರ್ತೀವಿ.

    ಕವರ್ ತಗೊಂಡು ಮನೇಗ್ ಹೋದ್ರೆ ಸಾಕು. ಮೊನ್ನೆಯೆಲ್ಲಾ ತಗೊಂಡಿದ್ದಲ್ಲೋ ಅಂತ ಬಯ್ತಾನೇ ಇರ್ತಾರೆ .ಮನೆಯಲ್ಲಂತು ವಾಷಿಂಗ್ ಮಿಷಿನ್ ಒಳಗೆ ಮೇಲೆ , ಸ್ನಾನದ ಮನೆಯಲ್ಲಿ , ರೂಮಿನ ಹ್ಯಾಂಗರ್ರಲ್ಲಿ , ಕಬೋರ್ಡಿನಲ್ಲಿ , ಒಣಗಾಕೋ ಕಂಬಿಯ ಮೇಲೆ , ಐರನ್ ಟೇಬಲ್ ಮುಂದೆ ಹೀಗೆ ಎಲ್ಲೆಲ್ಲೂ ಬಟ್ಟೆಗಳ ರಾಶಿ ಕಾಣಸಿಗುತ್ತದೆ .

    ಒಮ್ಮೆ ಹಿಂದಿನ ದಿನಗಳನ್ನು ನೆನಪಿಸಿಕೊಂಡಾಗ ಆಶ್ಚರ್ಯ ಆಗುತ್ತೆ.
    ಬಾಲ್ಯಾನೆಲ್ಲಾ ಖಾಕಿ ನಿಕ್ಕರ್ರು ಬಿಳಿ ಅಂಗೀಲೇ ಕಳಿದಿದ್ವಲ್ಲ ಅಂತ. ಎಲ್ಲಂದ್ರಲ್ಲಿ ಕೆಟ್ಟ ಜಾರಾಬಂಡಿ ಆಡುವ ಖಯಾಲಿ ಯಾವಾಗಲೂ ಕುಂಡಿಯತ್ತಿರ ಹರಿದಿರುತಿತ್ತು , ಜೊತೆಹುಡುಗರು ಪೋಸ್ಟ್ ಆಫೀಸು ಅಂತ ರೇಗಿಸುತ್ತಿದ್ದರು.

    ಅಡಿಯಲ್ಲಿ ನೀರು ತಾಗಿ ಕಿಲುಬಿಡಿಯುತ್ತದೆ ಎಂದು ಹಲಗೆ ಪೀಸು ಒತ್ತಿಗೆ ಕೊಟ್ಟಿದ್ದ…ಸೌಂಡು ಬರುವ ಹಳೆಯ ಬೀರುವಿನಲ್ಲಿ ನಮ್ಮದು ಅಂತ ಮೂರರಿಂದ ನಾಲ್ಕು ಷರ್ಟು ಎರಡು ಚೆಡ್ಡಿ ಇದ್ದರೆ ಅದೇ ಹೆಚ್ಚು. ಅದರಲ್ಲಿ ಒಂದಕ್ಕೂ ನೆಟ್ಟಗೆ ಗುಂಡಿಗಳಿರುತ್ತಿರಲಿಲ್ಲ . ಪ್ರತಿ ಸಲ ಷರ್ಟ್ ಹಾಕಿಕೊಳ್ಳುವಾಗಲೂ ಅಮ್ಮನನ್ನು ಪಿನ್ನು ಕೇಳುತ್ತಿದ್ದೆವು.
    ಹಾಕಿರೋ ಷರಟನ್ನೇ ಹಾಕಿ ಹಾಕೀ ಏರಿಯಾದ ಜನ ನಮ್ಮನ್ನ ಯಾವ ಮಟ್ಟದಲ್ಲಿ ಗುರುತು ಹಿಡೀತಿದ್ರು ಅಂದ್ರೆ ‘ ಅದೇ ಆ ಹಳದೀ ಕಲರ್ ಷರ್ಟ್ ಹಾಕ್ಕೊಂಡ್ ಬರ್ತಾನಲ್ವಾ ಆ ಹುಡುಗ ಅನ್ನೋವ್ರು.

    ನಿಜವಾಗ್ಲೂ ಬಟ್ಟೆಗೆ ಈಗ ಗೌರವ ಇರಬಹುದು ಆಗ ಬೆಲೆ ಇತ್ತು .
    ಆಗ ರೆಡಿಮೇಡ್ ಬಟ್ಟೆ ಅನ್ನೋದು ತೀರಾ ಅಪರೂಪ , ಆ ಬಟ್ಟೆಗಳು ಚೆನ್ನಾಗ್ ಇರಲ್ಲ , ಮತ್ತೆ ಹೊಲಿಸಿದಷ್ಟು ಲಕ್ಷಣವಾಗಿ ಕಾಣಲ್ಲ , ಎಲ್ಲಕ್ಕಿಂತ ಹೆಚ್ಚಾಗಿ ಬಾಳಿಕೆ ಬರಲ್ಲ ಅನ್ನೋ ಧೋರಣೆ ನಮ್ಮ ಮನೆಯವರಲ್ಲಿತ್ತು . ನಮಗೂ ಆಗ ಬಟ್ಟೆಗಳ ಬಗ್ಗೆ ಅಂತಹ ಮೋಜು ಇರಲಿಲ್ಲ , ರಜೆ ಆಟ ತಿಂಡಿಗಳ ಬಗ್ಗೆ ವಿಪರೀತ ಆಸಕ್ತಿ ಇರುತ್ತಿತ್ತು , ಬಟ್ಟೆ ಅಂದ್ರೆ ಹಾಕ್ಕೋಬೇಕು ಹಾಕ್ಕೋತಿದ್ವಿ.

    ತಂದೆ ಕೆ ಇ ಬಿ ಯಲ್ಲಿ ಕೆಲಸ ಮಾಡ್ತಿದ್ರೆ ಮಕ್ಕಳಿಗೆ ಗಾಢ ಹಸಿರಿನ ಅವರದೇ ಯೂನಿಫಾರಂ ಬಟ್ಟೇಲಿ ಪ್ಯಾಂಟು , ಅಪ್ಪ ಪೋಲಿಸ್ ಆಗಿದ್ರೆ ಮಕ್ಕಳಿಗೆ ಖಾಕಿ ಬಟ್ಟೆಯಲ್ಲೇ ಪ್ಯಾಂಟು , ಎಚ್ ಎಂ ಟಿ ಎಂಪ್ಲಾಯಿ ಆಗಿದ್ರೆ ಮಕ್ಕಳಿಗೆ ತೆಳು ನೀಲಿ ಷರಟು . ಮಕ್ಕಳು ಹಾಕೋ ಬಟ್ಟೆ ನೋಡಿ ಅವರಪ್ಪನ ವೃತ್ತಿ ಕಂಡುಹಿಡೀತಿದ್ರು ಅಂದ್ರೆ ಲೆಕ್ಕ ಹಾಕಿ ಇನ್ಯಾವ ಮಟ್ಟಕ್ಕೆ ಬಟ್ಟೆ ಹಾಕ್ತಿದ್ವಿ ಅಂತ . ಆಗ ಹೊಸ ಬಟ್ಟೆ ಅಂದ್ರೆ ಮನೆಯಲ್ಲಿ ತೀರಾ ಸ್ವಂತದವರ ಮದುವೆಯೋ ಮುಂಜಿಯೋ ಇರಬೇಕು . ಇಲ್ಲ ಯುಗಾದಿ ರೀತಿಯ ದೊಡ್ಡ ಹಬ್ಬವಾಗಿರಬೇಕು . ಅದೂ ಸ್ಟೈಲು ಡಿಸೈನು ಎಂತದ್ದೂ ಇಲ್ಲ ಮನೆಯಲ್ಲಿ ಮೂವರು ಮಕ್ಕಳು ಅಂದ್ರೆ ಮೂವರಿಗೂ ಒಂದೇ ಥರದ ಷರ್ಟು ಒಂದೇ ಥರದ ನಿಕ್ಕರ್ರು .ಪ್ರತಿ ಸಲ ಹಾಕ್ಕೋಳೋವಾಗ್ಲೂ ದೊಡ್ಡದಾ ಚಿಕ್ಕದಾ ಅನ್ನೋ ಗೊಂದಲ ಗೋಜಲ್ಲೇ ಹಾಕ್ಕೋತಾ ಇದ್ವಿ .

    ಈ ಮನೆಯವ್ರಾ ಯುಗಾದಿಗೆ ಅಂತ ಬಟ್ಟೆ ಹೊಲಿಸಿ ಹಬ್ಬದ ದಿನ ಹಾಕ್ಕೋಳಕ್ಕೆ ಕೊಡದೇ ಅರ್ಧ ದಿನ ಬನೀನಲ್ಲೇ ಬಿಟ್ಟಿರೋವ್ರು ಕೊಳೆ ಮಾಡ್ಕೊಂತಾನೆ ಅಂತ .ಇದರ ಮಧ್ಯೆ ತಂದೆದೀರು ಹಾಕ್ಕೋಳ್ದೇ ಇರೋ ಪ್ಯಾಂಟನ್ನ ನಾವು ಆಲ್ಟ್ರೇಷನ್ ಬೇರೆ ಮಾಡ್ಸಿ ಹಾಕ್ಕೋಳೋ ಯುಗ ಬೇರೆ ಇತ್ತು ಅದಕ್ಕೇ ಅಂತಲೇ ಸ್ಪೆಷಲಿಸ್ಟ್ ದರ್ಜಿಗಳಿರುತ್ತಿದ್ರು .

    ಸ್ವಲ್ಪ ಬುದ್ಧಿ ಬಂದಾಗ ಮನೆಯಲ್ಲಿ ನಮ್ಮನ್ನೂ ಬಟ್ಟೆ ತರಕ್ಕೆ ಅಂತ ಕರ್ಕೊಂಡು ಹೋಗೋವ್ರು ಅದೂ ಯಾವುದೇ ಕಾರಣಕ್ಕೂ ರೆಡಿಮೇಡ್ ತಗೋಳಂಗಿಲ್ಲ ಅನ್ನೋ ಕಂಡಿಷನ್ ಮೇಲೆ. ಇಲ್ಲಿ ಪ್ಯಾಂಟ್ಗೆ ಟೈಲರ್ರು ಒನ್ ಪಾಯಿಂಟ್‌ ತ್ರೀ ಬೇಕು ಅಂತ ಹೇಳಿರೋವ್ನು. ಅಲ್ಲಿ ಅಂಗಡಿಯವನು ಒನ್ ಪಾಯಿಂಟ್ ಟು ಸಾಕು ಅನ್ನೋವ್ನು. ಜಾಸ್ತಿ ಮಾತಾಡಿದ್ರೆ ದೊಡ್ ಪನ್ನಾ ಅನ್ನೋವ್ನು ಒಂದೂ ಅರ್ಥ ಆಗ್ತಿರ್ಲಿಲ್ಲ. ಸರಿ ಕಟ್ ಮಾಡ್ಸಿ ತಗೊಂಡೋಗ್ ದರ್ಜಿ ಹತ್ರ ಕೊಟ್ಟು ಅವನಿಗೆ ನಮ್ ವಿನ್ಯಾಸ ವಿವರಿಸಿ‌ , ಯಾವಾಗ್ ಕೊಡ್ತೀರ ಅಂತ ಕೇಳ್ತಿದ್ವಿ ಅವನು ಕ್ಯಾಲೆಂಡರ್ ನೋಡಿ ನಿನಗ್ ಯಾವಾಗ್ ಬೇಕು ಅಂತ ಕೇಳೋವ್ನು . ಸುಮ್ನೆ ಕೇಳೋವ್ನ್ ಅಷ್ಟೇ ಬಟ್ ಅವನು ಕೊಡ್ತಿದ್ದಿದ್ದು ಅವನ ಡೇಟ್ ಗೇನೆ .

    ಏನೇ ಹೇಳಿ ಟೈಲರ್ಗೆ ಕಾದು ಅವನು ಹೊಲಿದು ಕೊಟ್ಟ ಆ ಹೊಸಾ ಬಟ್ಟೆ ಹಾಕ್ಕೋಳ್ಲೋವಾಗ ಒಂದು ತರಹದ ಆಹ್ಲಾದಕರವಾದ ವಾಸನೆ ಬರೋದು ಒಂದು ಫ್ರೆಷ್ ಫೀಲಿಂಗ್ ಇರೋದು .

    ಬೆಲ್ ಬಾಟಮ್ , ನ್ಯಾರೋ ಫಿಟ್ಟಿಂಗ್ , ಬ್ಯಾಗಿ , ಪ್ಯಾರಲಲ್ ಬ್ಯಾಗಿ , ಬೂಟ್ ಕಟ್ , ರೆಗ್ಯುಲರ್ ಫಿಟ್ ಹೀಗೆ ಪ್ಯಾಂಟುಗಳಲ್ಲಿ ……ಬಾಬ್ಜಿ ಕಾಲರ್ , ಚೈನಾ ಕಾಲರ್ , ಬಟನ್ ಕಾಲರ್ , ಸಿಂಗಲ್ ಸ್ಟಿಚ್ , ಡಬಲ್ ಸ್ಟಿಚ್ ಹೀಗೇ ಷರ್ಟ್ಗಳಲ್ಲಿ ವಿನ್ಯಾಸ ಬದಲಾಗುತ್ತಲೇ ಬಂದಿದೆ .

    ಕಿರಣ್ ಮಾಡಾಳು

    ಈ ಅಂಕಣದೊಂದಿಗೆ ಪ್ರಕಟವಾಗಿರುವ animated illustration ರಚಿಸಿದವರು ಕಿರಣ್ ಮಾಡಾಳು. ಸಾಂಪ್ರದಾಯಿಕ ಚಿತ್ರಕಲೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡಿ ಅದು ಮತ್ತಷ್ಟು ಪರಿಣಾಮಕಾರಿಯಾಗುವಂತೆ ಮಾಡಬಲ್ಲ ನಾಡಿನ ಕೆಲವೇ ಕಲಾವಿದರಲ್ಲಿ ಇವರೂ ಕೂಡ ಒಬ್ಬರು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ. 3D ಚಿತ್ರ ರಚನೆಯಲ್ಲಿ ವಿಶೇಷ ಪ್ರಾವೀಣ್ಯ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156

    ಕುಸುಮಾ ಬಸ್,ಮೀರಾಲಾಂ ಟಾಕೀಸ್ ಮತ್ತು ರಾಜ್ಕುಮಾರ್ ಸಿನಿಮಾ

    ಪೀರಾ,ಹೂವಿನ ಹಾರ ತರೋದು ಮರ್ತೋಯ್ತು, ನಾಳೆ ಅವನಿಗೊಂದು ಹಾರ ಹಾಕ್ರೋ ಅಂತ ನಮ್ಮ ಬಸಪ್ಪ ಮೇಷ್ಟ್ರು ಉಸಿರು ಬಿಗಿ ಹಿಡಿದು ಕುಳಿತಿದ್ದ , ಕಿಕ್ಕಿರಿದ, ಮಂದ ಬೆಳಕಿನ ಬಸ್ಸಿನ ಮಧ್ಯದಿಂದ ಗಟ್ಟಿಯಾಗಿ ಹೇಳಿದರು ಅಂದ್ರೆ,ಕೂಡ್ಲಿಗಿ ಕಡೆ ಹೊರಟಿದ್ದ ಕುಸುಮಾ ಬಸ್ಸು, ಸೊವೇನಹಳ್ಳಿ ದಾಟಿ ಗುಡ್ಡೇ ಗುನ್ನಳ್ಳಿ(ಅಮರ ದೇವರ ಗುಡ್ಡ) ಮಧ್ಯೆ ಇದ್ದ ದಿನ್ನೆಯನ್ನು ಸಲೀಸಾಗಿ ಏರಿದೆ ಎಂದು ಅರ್ಥ. ಮೇಲೆ,ಒಳಗೆ,ಹಿಂಬದಿಯ ಏಣಿ ಮೇಲೆ,ಎಲ್ಲೆಂದರಲ್ಲಿ ಸುಮಾರು 70-80 ಜನರಿಂದ ತುಂಬಿದ್ದ ರಾತ್ರಿಯ ನಮ್ಮೂರಿನಿಂದ ಕೂಡ್ಲಿಗಿಗೆ ಕುಸುಮಾ ಬಸ್ಸಲ್ಲಿ ಆಗುತ್ತಿದ್ದ ಪಯಣ ಬಲು ರೋಚಕ ಮತ್ತು ಆನಂದ ಭರಿತ.

    ಕುಸುಮಾ ಬಸ್ ಈಗ ಹೀಗಿದೆ

    ನಮ್ಮೂರ ಪಕ್ಕದ ಚೋರನೂರಿನಿಂದ ಸಂಡೂರಿನ ಲೋಹಾದ್ರಿ ಬೆಟ್ಟದ ತಪ್ಪಲಿನ ರುದ್ರ ರಮಣೀಯ ಹಾದಿಯಲ್ಲಿ ಬಳ್ಳಾರಿಗೆ ಹೋಗುವ ಕುಸುಮಾ ಬಸ್ಸು,ಬಳ್ಳಾರಿಯಲ್ಲಿದ್ದ,ಈಗಲೂ ಇರುವ ಕುಸುಮಾ ಟ್ರಾವೆಲ್ಸ್ ಒಡೆತನದ್ದು. ಮಧ್ಯಾಹ್ನ 3 ಘಂಟೆಗೆ ಬಳ್ಳಾರಿಯ ಮೋತಿ ಸರ್ಕಲ್ ನಿಂದ ಬಿಡುತ್ತಿದ್ದ ಈ ಬಸ್ಸು ನಮ್ಮೂರನ್ನು ಸಾಯಂಕಾಲ 5.30 ರ ಹೊತ್ತಿಗೆ ತಲುಪಿ, 5 ಕಿ.ಮೀ ದೂರದಲ್ಲಿದ್ದ ಚೋರನೂರನ್ನು 6 ಕ್ಕೆ ಮುಟ್ಟಿ ಅಲ್ಲೇ ಹಾಲ್ಟ್. ಮತ್ತೆ ಬೆಳಿಗ್ಗೆ 6.30 ಕ್ಕೆ ಚೋರನೂರು ಬಿಟ್ಟು, 7 ರ ಹೊತ್ತಿಗೆ ನಮ್ಮೂರು ತಲುಪಿ 10 ರ ಸುಮಾರು ಬಳ್ಳಾರಿ ತಲುಪುತ್ತಿತ್ತು. ಬೆಳಿಗ್ಗೆ,ಸಾಯಂಕಾಲ ಕೆರೆಯ ಏರಿ ಮೇಲಿನ ಇದರ ಶಿಳ್ಳೆ ನಮ್ಮೂರ ದಿನಚರಿಗಳಲ್ಲಿ ಬಹು ಮುಖ್ಯವಾದ ಅಂಶ. ಬೆಳಿಗ್ಗೆ ಕುಸುಮಾ ಬಸ್ಸು ಹೋಯ್ತು,ಇನ್ನೂ ಎದ್ದಿಲ್ಲಾ …ಎನ್ನುವ ಅಮ್ಮಂದಿರ ತಗಾದೆಯಿಂದ, ಸಾಯಂಕಾಲ ಕುಸುಮಾ ಬಸ್ಸು ಹೋಯ್ತು, ಇನ್ನೂ ಇವ ಶಾಲೆಯಿಂದ ಏಕೆ ಬರಲಿಲ್ಲ ಎನ್ನುವ ತನಕ ಅದರ ನಂಟು. ಅದರ ಡ್ರೈವರ್ ಚೋರನೂರಿನವನೆ ಆದ ಪೀರ ಅಂತೂ ದಾರಿಯುದ್ಧದ ಹಳ್ಳಿಗಳ ಮನೆ ಮಗ.

    ಇದರಲ್ಲಿ ಬರೀ ಮನುಷ್ಯರು ಮಾತ್ರ ಪಯಣಿಸುತ್ತಿದ್ದರು ಅಂತ ಏನಾದ್ರು ನೀವು ಅಂದುಕೊಂಡರೆ ನಾವೆಲ್ಲ ನಕ್ಕು ಬಿಡ್ತೀವಿ ನೋಡ್ರಿ. ಇದರಲ್ಲಿ ಕುರಿ,ಕೋಳಿ, ಹುಲ್ಲಿನ ಮೆದೆ ಹೊತ್ತವರು, ಅಂಗಡಿಯ ಶೆಟ್ಟರ ಸಾಮಗ್ರಿಗಳು, ಬಟ್ಟೆ ಅಂಗಡಿಯವರ ಹೊಸಬಟ್ಟೆಗಳ ಮೂಟೆಗಳು ಇತ್ಯಾದಿ ಇರುತ್ತಿದ್ದವು. ಬಳ್ಳಾರಿಗೆ ಸಮೀಪದ ರಾಂಪುರ ಈ ಮಾರ್ಗದ ಎಲ್ಲ ಹಳ್ಳಿಗಳ ಕೇಂದ್ರ ಸ್ಥಾನ. ಹಾಗಾಗಿ,ಬಳ್ಳಾರಿ,ರಾಂಪುರಗಳ ಎಲ್ಲ ಸಾಮಾನುಗಳನ್ನು ಹೊತ್ತು,ನಮ್ಮಲ್ಲಿಯ ಕುರಿ,ಕೋಳಿಗಳನ್ನು, ಆರೋಗ್ಯ ತಪಾಸಣೆಗೆ,ಆಸ್ಪತ್ರೆಗಳಿಗೆ ಹೋಗುವ ರೋಗಿಗಳನ್ನು,ಬಳ್ಳಾರಿಯಲ್ಲಿ ಐಟಿಐ ಓದುವ ಹುಡುಗರ ರೊಟ್ಟಿ,ಅನ್ನದ ಗಂಟುಗಳನ್ನು ಅಲ್ಲಿಗೆ ತಲುಪಿಸುವ ರಾಯಭಾರಿ ನಮ್ಮ ಕುಸುಮಾ ಬಸ್ಸು.

    ಇದು ಅಡ್ಡಾಡುವ ಮಾರ್ಗ ಬಲು ಭೀಕರ ಅನ್ನುವಂಥಾದ್ದು. ಪೀರ ನನ್ನು ಬಿಟ್ಟರೆ ಮತ್ತಾರು ಆ ರಸ್ತೆಯಲ್ಲಿ ಬಸ್ಸು ಓಡಿಸಲು ಅಸಮರ್ಥರು ಎಂದೇ ಎಲ್ಲರ ಭಾವನೆ. ಒಂದು ದಿನ ಪೀರ ರಜಾ ಹಾಕಿದರೆ,ಕುಸುಮಾ ಬಸ್ಸೇ ಬರದಿದ್ದರೆ, ಅದು ಮತ್ತೆ ಬರುವ ತನಕ ಅದರದ್ದೇ ಮಾತು,ಅಷ್ಟು ಹಾಸು ಹೊಕ್ಕಾಗಿತ್ತು ನಮ್ಮ ಹಳ್ಳಿಗಳಿಗೆ ಕುಸುಮಾ ಬಸ್ಸಿನ ನಂಟು.

    ಸ್ವಾಮಿಹಳ್ಳಿ ಶಾಲೆಯಲ್ಲಿ ಮೇಷ್ಟ್ರು ಆಗಿದ್ದ ನಮ್ಮೂರ ಬಸಪ್ಪ ಮೇಸ್ಟ್ರು, ಇದರ ಕಾಯಂ ಪ್ರಯಾಣಿಕರು. ಪೀರನ ಇವರ ಸಂಬಂಧ ಮತ್ತೆ ಹೇಳಬೇಕಿಲ್ಲ ಅಲ್ಲ… ಹಾಗಾಗಿ ಆಗಾಗ ಕೂಡ್ಲಿಗಿಯ ಮೀರಾಲಾಂ ಟಾಕಿಸಿನಲ್ಲಿ ಯಾವುದಾದ್ರು ಒಳ್ಳೆಯ ಕನ್ನಡ ಪಿಚ್ಚರ್ ಬಂದ್ರೆ ಎಲ್ಲರೂ ಈ ಪೀರನ ಮತ್ತು ಬಸಪ್ಪ ಮೇಷ್ಟ್ರ ಕಡೆ ಆಸೆ ಕಣ್ಣುಗಳಿಂದ ನೋಡ್ತಾ, ಬಸ್ಸು ಬಿಡ್ತಾರೆನೋ ಅಂತ ದಿನಗಟ್ಟಲೆ ನಿರೀಕ್ಷೆ. ಪೀರ ನೈಟ್ ಹಾಲ್ಟ್ ಗಾಡಿಯನ್ನು ತನ್ನ ಯಜಮಾನನಿಗೆ ಗೊತ್ತಾಗದ ಹಾಗೆ ನಮ್ಮೂರವರನ್ನು ತುಂಬಿಕೊಂಡು ಕೂಡ್ಲಿಗಿ ಮೀರಲಾಮ್ ತಾಕಿಸಿಗೆ ಸೆಕೆಂಡ್ ಷೋ ಪಿಚ್ಚರಿಗೆ ಕರೆದುಕೊಂಡು ಹೋಗಿ,ರಾತ್ರಿಯೇ ಮರಳುವುದು ಮತ್ತೆ ಬೆಳಿಗ್ಗೆ ಎದ್ದು ಯಥಾರೀತಿ ತನ್ನ ಬಳ್ಳಾರಿಯ ಪಯಣಕ್ಕೆ ಸಿದ್ಧನಾಗುವುದು. ಇದಕ್ಕೆ ಹೊರಡುವ ಎಲ್ಲರೂ ಸೇರಿ ಡೀಸಲ್ ಹಾಕಿಸೋದು,ಪೀರನಿಗೆ ಹತ್ತೋ,ಇಪ್ಪತ್ತೋ ಕೈಗಿಡುವುದು. ಪೀರ ಕೇಳ್ತಿರಲಿಲ್ಲ ಬಿಡಿ,ಅದು ಬೇರೆ ವಿಷಯ. ಇದರ ಉಸ್ತುವಾರಿಕೆ ನಮ್ಮ ಬಸಪ್ಪ ಮಾಸ್ತರದ್ದು. ಊರಿಗೆ ಊರೇ ಹೊರಟು ಬಿಡುತ್ತಿತ್ತು,ಯಾರಿಗೂ ಬೇಸರ ಮಾಡದೆ,ನಮ್ಮ ಮೇಷ್ಟ್ರು,ಪೀರ ಎಲ್ಲರನ್ನು ನಕ್ಕೋತ ಎಲ್ಲೆಲ್ಲಿ ನೀವು ಕೂತ್ಕೋಬಹುದೋ,ನಿಂತ್ಕೋಬಹುದೋ ಅಲ್ಲೆಲ್ಲ ಹೋಗಿ ಅಂತಿದ್ದರು. ಆಗ ಇವರಿಬ್ಬರೂ ಸಾಕ್ಷಾತ್ ದೇವರ ಸ್ವರೂಪಗಳು.

    ಇಂತಹ ಸುವರ್ಣಾವಕಾಶವನ್ನು ಯಾರಾದ್ರೂ ಕಳಕೊಳ್ತಾರ ಅನ್ನೋಷ್ಟು ಸಂಭ್ರಮ ಮನೆಮಾಡಿದ್ದ ಸಮಯದಲ್ಲಿ, ನಮ್ಮ ಮನೆಯಲ್ಲಿ ಅಪ್ಪನ ಆಕ್ಷೇಪಣೆ. ಹೊಟೇಲಲ್ಲಿ ಬಿಡಿ,ದೂರ ಆಯ್ತು, ಮನೆಯಲ್ಲಿ ಸಹಾ ಚಾ,ಕಾಫಿ ನಿಷಿದ್ಧ. ಸಿನೆಮಾ ಅಂದ್ರೆ ಉರಿದು ಬೀಳ್ತಿದ್ದರು. ಬದಲಿಗೆ ಅದರದ್ದೇ ಕಥೆಯ ಪುಸ್ತಕ ಓದಿ ಅನ್ನುವ ಭಾರೀ ನಿರಾಶೆಯ ಉಪದೇಶ. ಅಮ್ಮ ನನ್ನನ್ನು,ನಾನು ಅಮ್ಮನನ್ನು ಅರ್ಥವಾಗದ ಭಾಷೆಯಲ್ಲಿ,ಕಣ್ಣುಗಳಲ್ಲೇ ಮಾತಾಡ್ತಾ ಅಪ್ಪನ ರುದ್ರಾವತಾರದ ಮುಂದೆ ಅಪರಾಧಿ ಮನೋಭಾವನೆಯಲ್ಲಿ ನಿಲ್ಲೋದು. ಕೊನೆಗೆ ಸಾಯಂಕಾಲ ಕುಸುಮಾ ಬಸ್ಸು ಬರುವ ಹೊತ್ತಿಗೆ, ಉರಲ್ಲಿಯ ಸಂಭ್ರಮ ನೋಡಿಯೋ ಏನೋ… ಏನೇ ನಿನಗಂತೂ ಬುದ್ಧಿ ಇಲ್ಲ,ಇವನನ್ನೂ ಕರ್ಕೊಂಡು ಹೋಗ್ತೀನಿ ಅಂತಿಯಲ್ಲ… ಅಂತ ಬೈಯುತ್ತ 10ರ ಎರಡು ನೋಟನ್ನು ಅಮ್ಮನಿಗೆ ಕೊಡ್ತಿದ್ದರು. ನನಗೂ, ಅಮ್ಮನಿಗೂ ಸ್ವರ್ಗ ಮೂರು ಗೇಣು.

    ಅಪ್ಪ,ಬೀಚಪ್ಪ ಮಾಸ್ಟ್ರು,ಗುರುಮೂರ್ತಿ ಮೇಷ್ಟ್ರ ಮತ್ತು ಕೆಲವು ಆಗ್ಗೆ ಹಿರಿಯರು ಅನ್ನಿಸಿಕೊಂಡಿದ್ದ ದೇವೇಂದ್ರಪ್ಪ,ಮಲ್ಲೇಶಪ್ಪ ಶೆಟ್ಟಿ,ಕೃಷ್ಟಣ್ಣ ಶೆಟ್ಟಿ ಅನ್ನುವ ಗಾಂಧಿವಾದಿಗಳು,ನಮ್ಮೂರ ಬುದ್ಧಿಜೀವಿಗಳ ಹೊರತಾಗಿ ಎಲ್ಲ ಹೆಣ್ಣು,ಗಂಡು,ಮಕ್ಕಳು ತಯಾರಾಗಿ ರಾತ್ರಿ 8ಕ್ಕೆ ಎಲ್ಲರನ್ನು ಕೊಂಡು ಹೋಗಲು ಬರ್ತಿದ್ದ ಕುಸುಮಾ ಬಸ್ಸನ್ನು ಕಾಯುವುದಿತ್ತಲ್ಲ, ಆ ಸಂಭ್ರಮ ವರ್ಣಿಸಲು ಆಗ್ತಿಲ್ಲ. ನೀನೂ ಹೊರಟ್ಯಾ,ನೀನೂ ಹೊರಟ್ಯಾ ಅಂತ ಅಮ್ಮಂದಿರು ಆಶ್ಚರ್ಯಭರಿತರಾಗಿ ಕೇಳಿಕೊಳ್ತಾ ಇದ್ದರೆ, ಹುಡುಗರಾದ ನಾವು ನೋಡುವ ಸಿನೆಮಾದ ವಿಶ್ಲೇಕಕರಾಗಿ ಬಹಳ ಹೊತ್ತು ಆಗಿರುತ್ತಿತ್ತು.

    ಎಲ್ಲರ ಮನೆಗಳ ಬೈದವರೂ ನಮ್ಮನ್ನು ಬಸ್ಸು ಹತ್ತಿಸಲು ನೆರೆದಿರುತ್ತಿದ್ದರು,ನಾವೆಲ್ಲ ಬೇರೆ ಗ್ರಹಗಳಿಗೆ ಭೇಟಿ ನೀಡ್ತಿದ್ದೀವೇನೋ ಎನ್ನುವಂತಹ ಆತಂಕ ಕೆಲವರಿಗಾದ್ರೆ,ಮತ್ತೆ ಕೆಲವರಿಗೆ ಎಂತಹದೋ ಕುತೂಹಲ. ಈ ಮಧ್ಯ ಅಪ್ಪ….ಏ ಬಸಪ್ಪಾ, ನಾಳೆ ಸ್ಕೂಲ್ ಇಲ್ಲೆನು ನಿನಗೆ ಅಂದ್ರೆ, ಶಾಂತಮ್ಮ, ಮಂಜು ಹೊರಟರಿಲ್ಲೋ, ನಿನಗೆ ಅರ್ಥ ಆಗಲ್ಲ, ಇವನು ಮಂಜು ಇದಾನೆ ನೋಡು ಇವನನ್ನೂ ಹಾಳು ಮಾಡಬೇಡ ನಿನ್ನ ಜೊತೆ ಇಟ್ಕೊಂಡು, ನೀನು ಮಗನ್ನ ಕರ್ಕೊಂಡು ಬಸ್ಸು ಹತ್ತಮ್ಮ…..ಅನ್ನುವಾಗ ಎಲ್ಲರೂ ಘೊಳ್ ಅಂತ ನಗೋದು. ನನಗಂತೂ ಬಸಪ್ಪ ಮೇಷ್ಟ್ರು ಹೀರೊ,ಅಪ್ಪ ವಿಲ್ಲನ್.

    ಅಪ್ಪನನ್ನು ಕಿಚಾಯಿಸುವಲ್ಲಿ ಯಾವಾಗಲೂ ಮುಂದಿರುತ್ತಿದ್ದ ಐನೋರ ಸಿದ್ಲಿಂಗಣ್ಣ, self declared conductor ಆಗಿ …ಅಪ್ಪನನ್ನು ಉದ್ದೇಶಿಸಿ, ಅಣ್ಣಾ,ಬಸ್ಸು ಹೊರಡಬೇಕು,ದಾರಿ ಗೊತ್ತಲ್ಲ ಹೆಂಗೈತೆ ಅಂತ,ಮೊನ್ನೆ ಮಳೆಗೆ ಇನ್ನೂ ಅದ್ವಾನ ಆಗೇತಿ, ನೀನು ಸ್ವಲ್ಪ side ಗೆ ಬಂದ್ರೆ, ಪೀರ start ಮಾಡ್ತಾನೆ ಅಂದು….right, right ಅಂತಿದ್ದರು….ಅವನಜ್ಜಿ ಈಗಿನ flight take off ಆಗೋದು ಇದರ ಮುಂದೆ ಏನೂ ಅಲ್ಲ ಬಿಡಿ.

    ಸುಮಾರು 20 ಕಿ. ಮೀ ದೂರದ ಕೂಡ್ಲಿಗಿ ಪಯಣ ರೋಮಾಂಚನಕಾರಿ. ಇನ್ನು ಕುಳಿತವರ ಸಂಭ್ರಮ ಮುಗಿದಿರುತ್ತಿರಲಿಲ್ಲ, ಬಸ್ ಗೊಲ್ಲರಹಟ್ಟಿ ದಿನ್ನೆ ಏರುವ ಸೌಂಡ್ ನಿಂದ ಪೀರ ಎಲ್ಲರನ್ನು ಸುಮ್ಮನಾಗಿಸುತ್ತಿದ್ದ. ಎಲ್ಲರದ್ದೂ ಒಂದೇ ಪ್ರಾರ್ಥನೆ ದೇವರಿಗೆ…ಸರಿಯಾದ ಸಮಯಕ್ಕೆ ಕೂಡ್ಲಿಗಿಯ ಮಿರಲಾಮ್ ಟಾಕಿಸಿನ ಅಂಗಳದಲ್ಲಿ ನಮ್ಮ ಬಸ್ಸು ನಿಲ್ಲಬೇಕು. ಬರುವಾಗ ಏನಾದ್ರು ಆಗಲಿ,ಮತ್ತೆ ನೋಡುವ…ಹಾಗೆ ಬರ್ತಿದ್ದ ಕೊನೆಯ ದಿಬ್ಬವೇ ಈ ಸೊವೇನಹಳ್ಳಿ,ಗುಡ್ಡಗುನ್ನಳ್ಳಿಯ ನಡುವಿನದು. ಸಂತೋಷಕ್ಕೆ ಬಸಪ್ಪ ಮೇಷ್ಟ್ರು ಪೀರನಿಗೆ ಹಾರ ಹಾಕೋಣ ಅಂದ್ರೆ,ಎಲ್ಲರೂ ಗಟ್ಟಿಯಾಗಿ ಚಪ್ಪಾಳೆ ಹೊಡೆದು ತಮ್ಮ ಹರ್ಷ ವ್ಯಕ್ತಪಡಿಸುತ್ತಿದ್ದರು.

    ಹೀಗೆ ನೋಡಿದ್ದ ಸಿನಿಮಾಗಳೇ ಭಕ್ತ ಕುಂಬಾರ, ಕರುಳಿನ ಕರೆ, ಬಂಗಾರದ ಮನುಷ್ಯ,ಸತೀ ಸಕ್ಕೂಬಾಯಿ ಮುಂತಾದವು. 45 ವರ್ಷಗಳ ಹಿಂದೆ ನೋಡಿದ್ದ ಈ ಸಿನೆಮಾಗಳ ಪಾತ್ರಗಳು,ಪಾತ್ರಧಾರಿಗಳು ಇಂದಿಗೂ ಕಣ್ಣಿಗೆ ಕಟ್ಟಿದಂತೆ ಇವೆ. ಅವರ್ಯಾರೂ ಅಭಿನಯಿಸುತ್ತಿದ್ದಾರೆ ಅಂತ ನಮಗೆ ಅನ್ನಿಸಿದ್ದೇ ಇಲ್ಲ. ಅಷ್ಟು ಸಹಜ ನಟನೆ,ನಮ್ಮ ಪರಿಸರದ ಸೀನ್ ಗಳು, ನಮ್ಮ ಸುತ್ತಲಿನ,ನಮ್ಮವೇ ಏನೋ ಎನ್ನುವಂತಹ ಕಥಾವಸ್ತುಗಳು,ನಮ್ಮ ಊರುಗಳಲ್ಲಿ, ಮನೆಗಳ ಅಂಗಳದಲ್ಲಿ,ಪಡಸಾಲೆಯಲ್ಲಿ,ಅಡುಗೆಮನೆಯಲ್ಲಿ ಆಗುವಂತಹ ನೈಜ ಘಟನೆಗಳು ಪರದೆಯ ಮೇಲೆ ಮೂಡುವಾಗ ತದೇಕ ಚಿತ್ತರಾಗಿ ವೀಕ್ಷಿಸಿ,ಅತ್ತು,ಸಿಟ್ಟುಮಾಡಿಕೊಂಡು, ಕೆಲವು ಖಳ ಪಾತ್ರಗಳನ್ನು ಇನ್ನಿಲ್ಲದ ನಮ್ಮವೇ ಗ್ರಾಮಾಂತರ ಬೈಗುಳಲ್ಲಿ ಬೈಯುತ್ತ, ಆನಂದಿಸಿದ ಆನಂದ ಈಗೇಕೆ ಮರೆಯಾಯ್ತು?ಬಂಗಾರದ ಮನುಷ್ಯದಲ್ಲಿಯ ರಾಜೀವಪ್ಪ ನಮ್ಮೂರಲ್ಲಿ ಹಲವರಿಗೆ ಒಂದು ಕಾಲ ಘಟ್ಟದ ತನಕ ಮಾದರಿ ಆಗಿದ್ದ. ನಮ್ಮವೇ ಬಯಲುಸೀಮೆಯ ಹೊಲದ ಮಾಡರಿಯಲ್ಲಿದ್ದ ಕಲ್ಲುಗಳನ್ನು ಹೊಡೆದು,ಹಸನು ಮಾಡಿಕೊಂಡು ಉತ್ತಿ,ಬೆಳೆದ ರಾಜಕುಮಾರ ಎಷ್ಟೋ ಜನರ ಬಾಳನ್ನು ಹಸನು ಮಾಡಲು ಪ್ರೇರಕ ಆಗಿದ್ದರು. ಭಕ್ತ ಕುಂಬಾರದಲ್ಲಿನ ಲೀಲಾವತಿಯನ್ನು ನೋಡಿ ರಾಜಕುಮಾರ ಕೈ ಕಡಿದುಕೊಂಡಾಗ ಮರುಗದ ಹೆಂಗಳೆಯರೇ ಟಾಕಿಸಿನಲ್ಲಿ ಇರುತ್ತಿರಲಿಲ್ಲ. ಅಂತಹ ತನ್ಮಯತೆಯಿಂದ ಸವಿಯುತ್ತಿದ್ದ ಮನಸ್ಸುಗಳು ಏನಾದವು? ನೋಡಿದ ಪ್ರತಿ ಸಿನೆಮಾದ ಅಭಿನೇತ್ರಿಯೇ ನಮ್ಮ ಮುಂದಿನ ಬಾಳ ಸಂಗಾತಿ ಆಗಬೇಕು ಅಂತ ಬಯಸುತ್ತಿದ್ದ ಮನಸ್ಸುಗಳ ಅಮಾಯಕತೆ ಈಗೇಕೆ ಮರೆಯಾಗಿದೆ? ಎರಡು ರೇಖೆಗಳ ಗೀತಾ,ಸರಿತಾ ರ ನಾ ಮುಂದು,ತಾ ಮುಂದು ಎನ್ನುವ ಅಭಿನಯಕ್ಕೆ ಮನಸೋತ ಉರಲ್ಲಿಯ ಇಬ್ಬರ ಹೆಂಡಿರ ಮುದ್ದಿನ ಗಂಡಂದಿರನ್ನು ತಿಂಗಳುಗಳ ಕಾಲ ಕಂಡ ಕಂಡಲ್ಲಿ ರೇಗಿಸಿದ್ದ ಮನಸ್ಸುಗಳು ಎಲ್ಲಿ ಹೋದವು? ಅದೇನು ಕಾಲದ ಮಹಿಮೆಯೇನೋ,ಈ ಲಾಕ್ಡೌನ್ ಸಮಯದಲ್ಲಿ ಬೇಸರ ನಿಗುವುದಕ್ಕೆಂದು ನಿನ್ನೆ ನೋಡಿದ 3-4 ಚಿತ್ರಗಳ ಒಂದೂ ಪಾತ್ರ,ಸನ್ನಿವೇಶ ನನ್ನಲ್ಲೇ ಉಳಿಯುತ್ತಿಲ್ಲ….ಏಕೆ ಹೀಗೆ?

    ಅಂದಿಗಿಂತಲೂ ಇಂದು ಉತ್ತಮ ತಂತ್ರಜ್ಞಾನ, ಹೊರದೇಶದ ಚಿತ್ರೀಕರಣ, ಚೆಲುವ ಚೆಲುವೆಯರ ಕಥೆಗಳು ಆಗಿನ ರೀತಿ ಇಡೀ ಒಂದು ಕಾಲಘಟ್ಟದ ಮನಸ್ಸುಗಳನ್ನು ಸೆರೆಹಿಡಿದ ಹಾಗೆ ಸೆರೆಹಿಡಿಯುವಲ್ಲಿ ವಿಫಲವಾಗುತ್ತಿರುವುದಾದ್ರು ಏಕೆ?! ರುಚಿಯನ್ನು ಸವಿಯುವ ರುಚಿಗ್ರಂಥಿಗಳೇ ನಮ್ಮಿಂದ ಕಾಣೆಯಾದವಾ ಅಥವಾ ರುಚಿ ಹೆಚ್ಚಾಗಿ ವಾಕರಿಕೆ ಬಂತಾ?

    ಇದೆಲ್ಲವೂ ನನ್ನ ತಪ್ಪು ಗ್ರಹಿಕೆಯಾಗಿ ಈಗಿನ ಮಕ್ಕಳು ಇದನ್ನು enjoy ಮಾಡ್ತಿದ್ದಾರಾ? ಯಾಕೆಂದ್ರೆ, ಬಾಲ್ಯ ಎಂತಹ ಪರಿಸ್ಥಿತಿ,ಸನ್ನಿವೇಶಗಳಲ್ಲೂ ಸುಂದರ ಆಗಿರುತ್ತಂತೆ. ಅದು ಮರುಭೂಮಿಯ ಬಾಲ್ಯವಾಗಲಿ,ಸಮೃದ್ಧ ಹಸುರಿನ ಮಲೆನಾಡ ಬಾಲ್ಯವೇ ಆಗಿರಲಿ, ನನ್ನಂತಹ ಒರಟು ಬಯಲುಸೀಮೆಯ ಬಾಲ್ಯವೇ ಆಗಿರಲಿ, ಬಾಲ್ಯ,ಬಾಲ್ಯದ ರುಚಿಯ ಸ್ವಾದ ಚಿರಸ್ಮರಣೀಯವಂತೆ.
    ಏನೋ ಗೊತ್ತಿಲ್ಲ……

    ಸ್ಥೂಲ ಕಾಯ ಮತ್ತು ಕೋವಿಡ್ ಸೋಂಕು; ಸೊಂಟದ ಸುತ್ತಳತೆ ಮೇಲೆ ಇರಲಿ ಎಚ್ಚರ

    ಜುಲೈ 27 ರಂದು ಇಂಗ್ಲೆಂಡ್ ಸರ್ಕಾರ ಜಂಕ್ ಫುಡ್ ಜಾಹೀರಾತುಗಳ ಮೇಲೆ ನಿಯಂತ್ರಣ ಹೇರಿ ರಾತ್ರಿ 9 ಗಂಟೆಯವರೆಗೂ ಜಂಕ್ ಫುಡ್ ಜಾಹೀರಾತು ತೋರಿಸಬಾರದು ಎನ್ನುವ ಕಾನೂನನ್ನು ಜಾರಿಗೆ ತರುವ ಬಗ್ಗೆ ಅಧಿಕೃತ ಪ್ರಕಟಣೆ ನೀಡಿದೆ.ಇದಕ್ಕೆ ಕಾರಣ ಕೋವಿಡ್ ಸೋಂಕಿಗೂ ಮತ್ತು ಮಾರಕವಾಗಿ ಸ್ಥೂಲವಾಗಿರುವುದಕ್ಕೂ ಇರುವ ನೇರ ಸಂಬಂಧ.

    ಇಡೀ ಯೂರೋಪಿನಲ್ಲಿ ಸ್ಕಾಂಟ್ಲ್ಯಾಂಡ್ ಅತ್ಯಂತ ಹೆಚ್ಚಿನ ಧಡೂತಿ ದೇಹದ (ಶೇಕಡ 33ರ ವರೆಗೆ) ಜನರನ್ನು ಹೊಂದಿದ್ದರೆ, ಸರಾಸರಿ ಶೇಕಡ 31 ಸ್ಥೂಲಕಾಯತೆಯೊಡನೆ ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿದೆ. ಪಂಡಿತರ ಪ್ರಕಾರ ಸ್ಥೂಲಕಾಯದ ನಿಯಂತ್ರಣದ ಬಗೆಗಿನ ನಿರ್ಧಾರವನ್ನು ಸರ್ಕಾರ ಎರಡು ವರ್ಷಗಳ ಹಿಂದೆ ಗಂಭೀರವಾಗಿ ತೆಗೆದುಕೊಂಡಿದ್ದರೆ ಕೋವಿಡ್ ಕಾರಣ ಯು.ಕೆ.ಯಲ್ಲಿ ಸತ್ತ ಜನರ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಬಹುದಾಗಿತ್ತು ಎಂಬುದಾಗಿದೆ

    ತಡವಾಗಿಯಾದರೂ ಇದೀಗ ಕೊಬ್ಬು ಮತ್ತು ಸಕ್ಕರೆಯ ಅಂಶ ಜಾಸ್ತಿಯಿರುವ ವಸ್ತುಗಳ ಮೇಲೆ ’ ಒಂದನ್ನು ಕೊಂಡರೆ, ಮತ್ತೊಂದು ಉಚಿತ ’ ಎನ್ನುವಂತ ಡೀಲ್ ಗಳನ್ನು ನಿಷೇಧಿಸಲಾಗುತ್ತಿದೆ.ಬದಲಿಗೆ, ಆರೋಗ್ಯಕ್ಕೆ ಉತ್ತಮವಾದ ಹಣ್ಣು ಮತ್ತು ತರಕಾರಿ, ಬೇಳೆ, ಮಾಂಸ ಇತ್ಯಾದಿಗಳು ಅಗ್ಗವಾಗಿ ಸಿಗಬೇಕು ಎನ್ನುವ ಕರೆ ಬಲವಾಗುತ್ತದೆ. ವೈದ್ಯರು ವ್ಯಾಯಾಮವನ್ನು ಅದರಲ್ಲೂ ಸೈಕ್ಲಿಂಗ್ ನ್ನು ಚಿಕಿತ್ಸೆಯಾಗಿ ಬರೆದು ಕೊಡಬಹುದಿದೆ. ನಮ್ಮ ಸುತ್ತಲಿನ ಪ್ರಪಂಚ ಬದಲಾದರೆ ಜನರು ಆರೋಗ್ಯಕರ ಜೀವನ ಶೈಲಿಯನ್ನು ಹೊಂದಲು ಸುಲಭವಾಗುತ್ತದೆ ಎನ್ನುವ ತರ್ಕ ಈ ಬದಲಾವಣೆಗಳ ಬೆನ್ನೆಲುಬಾಗಿದೆ.

    ಕೋವಿಡ್ ಶುರುವಾದಾಗಿನಿಂದ ಸ್ಥೂಲ ಗಾತ್ರದ ಜನರಿಗೂ ಕೋವಿಡ್ ಸಾವುಗಳಿಗೂ ಹತ್ತಿರದ ಸಂಬಂಧವಿರುವ ಬಗ್ಗೆ ಎಲ್ಲ ದೇಶಗಳಲ್ಲಿ ಸಹಮತ ಅಭಿವ್ಯಕ್ತವಾಗಿದೆ. ದಪ್ಪಗಿರುವವರಲ್ಲಿ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಉಬ್ಬಸ ಇತ್ಯಾದಿ ಹೆಚ್ಚಾಗಿರುವುದು ಮತ್ತೊಂದು ಕಾರಣ.ಇನ್ನೂ ಮುಖ್ಯ ಕಾರಣವೆಂದರೆ ಧಡೂತಿ ದೇಹ ಹೊಂದಿದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿರುವುದು. ವ್ಯಾಯಾಮ ಮಾಡುವ ಚೈತನ್ಯವೂ ಇವರಲ್ಲಿ ಕಡಿಮೆಯಿರುತ್ತದೆ. ಅದರಲ್ಲೂ ಸೊಂಟದ ಸುತ್ತಲು ಹಬ್ಬುವ ಕೊಬ್ಬು ಇಡೀ ದೇಹದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು ಮತ್ತೂ ಹೆಚ್ಚು.ಈ ರೀತಿಯ ಕೊಬ್ಬಿನ ವಿತರಣೆ  ಭಾರತೀಯರಾದ ನಮ್ಮಲ್ಲಿ ಹೆಚ್ಚು ಎನ್ನುವುದು ಕೂಡ ಸಾಬೀತಾಗಿರುವ ವಿಚಾರ.

    ಮಾರಕವಾಗಿ ದೇಹತೂಕವನ್ನು ಹೆಚ್ಚಿಸಿಕೊಳ್ಳುತ್ತಿರುವ ಭಾರತೀಯರ ಸಂಖ್ಯೆಯೂ ಅಧಿಕವಾಗುತ್ತಿದೆ. ವೈದ್ಯಕೀಯ ಲೆಕ್ಕದಲ್ಲಿ ಭಾರತೀಯರ ದೇಹ ಸೇಬಿನಂತೆ ತೂಕವನ್ನು ಗಳಿಸುತ್ತದೆ. ಅಂದರೆ ಹೊಟ್ಟೆ ಮತ್ತು ಸೊಂಟದ ಸುತ್ತ ಕೊಬ್ಬನ್ನು ಶೇಖರಿಸುತ್ತದೆ. ಕೋವಿಡ್ ಜೊತೆ, ಹೃದಯಕ್ಕೆ ಸಂಬಂಧಿಸಿದ ಹಲವು ರೋಗಗಳಿಗೆ ಇದು ಆಹ್ವಾನವನ್ನು ನೀಡುತ್ತದೆ.

    ಮಾರಕ ಸ್ಥೂಲಕಾಯತೆ ಏಕೆ ಹೆಚ್ಚಾಗುತ್ತಿದೆ?

     ಆಹಾರೋದ್ಯಮದಲ್ಲಿ ಕೈಗಾರೀಕರಣ ಕಾಲಿಟ್ಟಿದ್ದು ಬಹಳ ಹಿಂದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಆಹಾರೋದ್ಯಮ ಕ್ರಾಂತಿ ಮೊದಲಿಗೆ ಶುರುವಾಯಿತು. ಮನೆಯ ಅಡುಗೆ ನಿಧಾನಕ್ಕೆ ಹಿಂದೆ ಸರಿಯಿತು.ಮೊದಲ ಮತ್ತು ಎರಡನೇ ಮಹಾಯುದ್ದಗಳ ಕಾಲದಿಂದಲೇ ಮಹಿಳೆಯರು ಹೊರಗಿನ ಕೆಲಸಗಳ ನೊಗಕ್ಕೆ ಕತ್ತು ಕೊಟ್ಟರು. ಮನೆಯಡುಗೆಗೆ ಸಮಯ ಇಲ್ಲವಾಗಿ, ಸಿದ್ದ ಆಹಾರಗಳು ಬದುಕನ್ನು ಆವರಿಸಿದವು.

    ಇಂಗ್ಲೆಂಡಿನಂತ ದೇಶಗಳಲ್ಲಿ ಈಗಿನ ತಲೆಮಾರಿನವರಿಗೆ ಬೆಳಗೆದ್ದರೆ ಸೀರಿಯಲ್, ಮಧ್ಯಾಹ್ನ  ಅಂಗಡಿಯಲ್ಲಿ ಕೊಳ್ಳುವ ಸ್ಯಾಂಡ್ವಿಚ್, ರಾತ್ರಿಯಾದರೆ ಈಗಾಗಲೇ ಅರೆ ಬರೆ ಬೆಂದಿರುವ/ ತಯಾರಿರುವ ಅಡುಗೆಗಳನ್ನು ಒಂದಿಷ್ಟು ಬಿಸಿ ಮಾಡಿಕೊಂಡು ತಿನ್ನುವ  ದಿನನಿತ್ಯದ ಆಭ್ಯಾಸಗಳಿವೆ.

    ಯುಗಾದಿಗೆ ಒಬ್ಬಟ್ಟು, ಗಣೇಶನ ಹಬ್ಬಕ್ಕೆ ಕಡುಬು,ದೀಪಾವಳಿಗೆ ಕಜ್ಜಾಯ ಎಂದು ಒಂದೊಂದು ಹಬ್ಬಕ್ಕೂ ಬಗೆ ಬಗೆಯ ವಿಷೇಶ ತಿನಿಸುಗಳನ್ನು ಮಾಡಿಕೊಂಡು ತಿನ್ನುವ ನಮ್ಮ ದೇಶದ ಸಂಪ್ರದಾಯಗಳು ಒಂದುಕಡೆಯಿದ್ದರೆ, ವರ್ಷಕ್ಕೆ ಒಂದೇ ಒಂದು ದೊಡ್ಡ ಹಬ್ಬವಾದ ಕ್ರಿಸ್ಮಸ್ ನಲ್ಲಿ ಕೂಡ ಇಂತಹ ದೇಶಗಳು ಹಬ್ಬದ ಎಲ್ಲ ಅಡುಗೆಗಳನ್ನು ಅಂಗಡಿಯಿಂದಲೇ ಕೊಂಡುತಂದು ಓವನ್ನಿನಲ್ಲಿ , ಮೈಕ್ರೋ ಓವನ್ನಿನಲ್ಲಿ ಬಿಸಿಮಾಡಿಕೊಂಡು, ಚೆಂದವಾಗಿ ಊಟದ ಟೇಬಲ್ಲುಗಳನ್ನು ಅಲಂಕರಿಸಿ, ತಾವೂ ಅಲಂಕರಿಸಿಕೊಂಡು ಆನಂದಿಸಿ ತಿಂದು ಮುಗಿಸಿಬಿಡುತ್ತಾರೆ.ಹಬ್ಬದ ಸಮಯದಲ್ಲಿ ಆಹಾರದ ಮಾರಾಟದ ಉದ್ಯಮಗಳು ಬಿಲ್ಲಿಯನ್ನುಗಟ್ಟಲೆ ವಹಿವಾಟನ್ನು ನಡೆಸುತ್ತವೆ.

    ಇಡೀ ಯೂರೋಪಿನಲ್ಲಿ ತಯಾರಾಗುವ ಸಿದ್ದ  ಊಟಗಳ  ಅರ್ಧ ಭಾಗವನ್ನು ಇಂಗ್ಲೆಂಡ್ ಒಂದೇ ತಿನ್ನುತ್ತಿದೆ. 2016 ರಲ್ಲಿ ಮೈಕ್ರೋವೇವ್ ನಲ್ಲಿ ಬಿಸಿ ಮಾಡಿಕೊಂಡು ತಿನ್ನ ಬಹುದಾದ ಸಿದ್ಧ ಆಹಾರದ ಮೇಲೆ ಈ ಜನರು 3 ಬಿಲಿಯನ್ ಪೌಂಡುಗಳನ್ನು ಖರ್ಚುಮಾಡಿದ್ದಾರೆ. ಅಂದರೆ ಪ್ರತಿದಿನ 9 ಮಿಲಿಯನ್ ಪೌಂಡುಗಳನ್ನು ಜನರು ವ್ಯಯಿಸಿದ್ದಾರೆ. ಫ್ರಾನ್ಸ್ ಗಿಂತ ಇಂಗ್ಲಿಷರು ಸಿದ್ಧ ಆಹಾರಗಳ ಮೇಲೆ ಎರಡು ಬಾರಿ ಹೆಚ್ಚಿಗೆ ಹಣ ಹೂಡುತ್ತಿದ್ದಾರೆ. ಸ್ಪೇನ್ ದೇಶಕಿನ್ನ ಆರು ಪಟ್ಟು ಹೆಚ್ಚು ಸಿದ್ದ ಹಾರದ ಮೇಲೆ ಅವಲಂಬಿತರಾಗಿದ್ದಾರೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

    2015 ಕ್ಕೆ ಹೋಲಿಸಿದರೆ 2016 ರಲ್ಲಿ ಮತ್ತೂ ಒಂದು ಲಕ್ಷಕ್ಕೂ ಹೆಚ್ಚಿನ ಮನೆಗಳು ಇಂತಹ ಆಹಾರಕ್ಕೆ ಮಣಿದವು. 37 ಮಿಲಿಯನ್ನು ವಹಿವಾಟು ಇದರಿಂದ ಹೆಚ್ಚಿತು.  ಈ ಇಂಗ್ಲಿಷರ ಮನಸ್ಥಿತಿ ಈಗಾಗಲೇ ಎರಡೆರಡು ತಲೆಮಾರುಗಳಿಂದ ಸಿದ್ಧ  ಆಹಾರಗಳ ಕಡೆ ವಾಲಿದೆ. ಈ ಹಿಂದೆ ಫ್ರೀಜರಿನಲ್ಲಿ ಇಟ್ಟಂತ ಅತಿ ತಣ್ಣಗಿನ ಆಹಾರಗಳನ್ನು ಮನೆಯ ವಾತಾವರಣಕ್ಕೆ ತಂದು ನಂತರ ತಿನ್ನುವ ಸಹನೆಯಾದರೂ ಇತ್ತು. ಆದರೆ ಕಳೆದ ವರ್ಷದ ಅಂಕಿ ಅಂಶಗಳ ಪ್ರಕಾರ  ಈಗ ಜನರಲ್ಲಿ ಆ ರೀತಿಯ ಸಹನೆಯೂ ಉಳಿದಿಲ್ಲ. ಹಾಗಾಗಿ ಪ್ರೀಜರಿನಲ್ಲಿ ಇಡುತ್ತಿದ್ದ ತಣ್ಣ  ಆಹಾರದ ವಹಿವಾಟು 25 ಮಿಲಿಯನ್ನುಗಳಷ್ಟು ಕಡಿಮೆಯಾಯ್ತು. ಆದರೆ ಫ್ರಿಜ್ಜಿನಿಂದ ತೆಗೆದು ಒಂದೆರಡು ನಿಮಿಷಗಳಲ್ಲಿ ಬಿಸಿ ಮಾಡಿ ತಿನ್ನುವಂತ  ಅತಿ ಸುಲಭದ, ತತ್ ಕ್ಷಣದ ಅಡುಗೆಯ ವಹಿವಾಟು 62 ಮಿಲಿಯನ್ನು ಪೌಂಡುಗಳಷ್ಟು ಜಾಸ್ತಿಯಾಯ್ತು. ಕಾಲಕ್ಕೆ ವೇಗ ಬಂದಿಲ್ಲ ಎಂದರೆ ನಂಬದಿರುವವರಾದರೂ ಯಾರು?

    ಇವತ್ತು ಇಂಗ್ಲೆಂಡಿನಲ್ಲಿ ಇಂಗ್ಲಿಷರ ರುಚಿಗೆ ಹೊಂದುವಂತೆ ಮಾಡುವ ಭಾರತದ ಅಡುಗೆಗಳಿಗೆ ಶೇಕಡ 18 ರಷ್ಟು ಬೇಡಿಕೆಯಿದ್ದು ಅದು ಮಂಚೂಣಿಯಲ್ಲಿದೆ. ಚೈನಾಕ್ಕೆ ಶೇಕಡ13, ಇಟಲಿಯ ಅಡುಗೆಗಳಿಗೆ  ಮತ್ತು ಇಂಗ್ಲಿಷರ  ಅಡುಗೆಗಳಿಗೆ ಶೇಕಡ 10 , ಬರ್ಗರ್ ಮುಂತಾದ ಫಾಸ್ಟ್ ಆಹಾರಗಳಿಗೆ ಶೇಕಡ 4ರ ಬೇಡಿಕೆಯಿದೆ. ಇನ್ನಿತರ ಎಲ್ಲ  ಬಗೆಯ ಏಶಿಯನ್ ಆಹಾರಗಳಿಗೆ ಒಟ್ಟಾರೆ ಶೇಕಡ 44 ಜನಪ್ರಿಯತೆಯಿದೆ. ಇನ್ನೊಂದರ್ಥದಲ್ಲಿ ಅಡುಗೆಮನೆಗಳ ರುಚಿ ಕಳೆದಂತೆ ದೇಶ ವಿದೇಶಿ ಆಹಾರಗಳು ಅವರಿಗೆ ಪ್ರಿಯವಾಗಿ ಬಿಟ್ಟಿವೆ. ಈ ಸಿದ್ಧ ಆಹಾರಗಳ ಬೇಡಿಕೆ ಕಳೆದ ವರ್ಷ ಶೇಕಡ 44 ಹೆಚ್ಚಾಯಿತು. ಬ್ರಿಟನ್ನೇ ಅಲ್ಲದೆ ಇನ್ನಿತರ ಯೂರೋಪಿಯನ್ ದೇಶಗಳಲ್ಲಿ ಬೇಡಿಕೆ ಶೇಕಡ 29 ಹೆಚ್ಚಾಯ್ತು. ಇದು ಪ್ರತಿ ವರ್ಷ ಹೆಚ್ಚುತ್ತಲೇ ಇದೆ.

    ಈಗಾಗಲೇ ರೆಡಿಮೇಡ್ ಫುಡ್ ಅನ್ನೇ ಅವಲಂಬಿಸಿ ಬದುಕುವ ಇಂತಹ ಒಂದೆರಡು ತಲೆಮಾರುಗಳು ಬಂದು ಹೋಗಿರುವ ಕಾರಣ ಅವರಿಗೆ ಪ್ರತಿದಿನ ಅಡುಗೆ ಮಾಡುವ ತಂದೆ ತಾಯಿಯರ ಪರಿಚಯವಿಲ್ಲ. ಸಂಸ್ಕರಿಸಿದ ಆಹಾರ, ಅಗ್ಗವಾದ ರುಚಿಯಾದ ಕೊಬ್ಬಿನ ಸಿದ್ಧ ಅಡುಗೆಗಳು, ಜಂಕ್ ಆಹಾರಗಳ ವ್ಯಸನದ ಕಾರಣ ಪಾಶ್ಚಾತ್ಯರಲ್ಲಿ ಸ್ಥೂಲಕಾಯತೆ ಹೆಚ್ಚಿದೆ. ಇದೇ ನಿಟ್ಟಿನಲ್ಲಿ  ಭಾರತವೂ ದಾಪುಗಾಲಿಟ್ಟಿದೆ.

    ಭಾರತದಲ್ಲಿ ಸಿದ್ದ ಆಹಾರ ಉದ್ಯಮ ಮತ್ತು ಸ್ಥೂಲಕಾಯತೆ

    ನಮ್ಮ ದೇಶದ  ಆಹಾರದ ಉದ್ಯಮಗಳು ಇನ್ನೂ ಆ ಮಟ್ಟಕ್ಕೆ ಬೆಳೆದಿಲ್ಲ.  ಬಡತನ ಇನ್ನೂ ತಾಂಡವವಾಡುತ್ತಿರುವ ದೇಶ ನಮ್ಮದು. ಬಹುತೇಕ ಬದಲಾವಣೆಗಳು ಕೇವಲ ನಗರಗಳಲ್ಲಿ, ನಗರವಾಸಿಗಳಲ್ಲಿ ಮಾತ್ರ ಕಾಣಿಸುತ್ತಿದೆ. ಆದರೆ ಭಾರತೀಯರ ಆಹಾರ ಪದ್ದತಿಗಳು, ಅಡುಗೆ ಮನೆಗಳು ಖಂಡಿತ ಬದಲಾಗುತ್ತಿವೆ. ಈ ಬದಲಾವಣೆಯ ಚಕ್ರದಲ್ಲಿ ಬಡವರಿಂದ ಬಲ್ಲಿದರವರೆಗೆ ಎಲ್ಲರೂ ತಮಗರಿವಿಲ್ಲದಂತೆಯೇ ಭಾಗಿಗಳಾಗುತ್ತಿದ್ದಾರೆ.

    ಭಾರತದ ಮಹಾನಗರಿಗಳು ಸಿದ್ಧ ಆಹಾರದ ಮಾರಕಟ್ಟೆಗೆ ಅತ್ಯಂತ ಆಕರ್ಷಕ ತಾಣಗಳಾಗಿವೆ. ಇತರೆ ಸಣ್ಣ ಪುಟ್ಟ ನಗರಗಳಲ್ಲಿ ಇದೇ ಪ್ರಮಾಣದ ವ್ಯತ್ಯಾಸಗಳಿನ್ನೂ ಬಂದಿಲ್ಲ. ಪ್ರತಿ ಮನೆಯಲ್ಲಿಯೂ ಇನ್ನೂ ಅಡುಗೆಯ ಸಂಭ್ರಮ ಇದ್ದೇ ಇದೆ.ಆದರೆ, ಇವೆಲ್ಲ ಅತ್ಯಂತ ವೇಗವಾಗಿ ಬದಲಾಗುತ್ತಿವೆ. ಹಣ ಮತ್ತು ಮಾರುಕಟ್ಟೆಗಳು ಆ ಬಗೆಯ ಒತ್ತಡವನ್ನು ತರುತ್ತಿವೆ.

    ಭಾರತದ ಆರ್ಥಿಕ ಬೆಳವಣಿಗೆ ಹಲವಾರು ವರ್ಷಗಳಿಂದ  ಏರುಮುಖ ಕಂಡಿದೆ. ಹೀಗೇ ಬೆಳೆದರೆ 2025 ರ ವೇಳೆಗೆ ಪ್ರಪಂಚದ 5 ನೇ  ಅತಿದೊಡ್ಡ ವಾಣಿಜ್ಯ ದೇಶವಾಗುತ್ತದೆ ಎನ್ನುವ ಅಂದಾಜಿದೆ. ಆದರೆ ಭಾರತದ  ಇಂದಿನ ಜನಸಂಖ್ಯೆಯಲ್ಲಿ ಶೇಕಡ 50 ಜನರು ಮೂವತ್ತು ವರ್ಷಕ್ಕಿನ್ನ ಕಡಿಮೆ ವಯಸ್ಸಿನವರು. ಇವರ ಸಂಖ್ಯೆ 440 ಮಿಲಿಯನ್ನುಗಳನ್ನೂ ಮೀರಿದೆ. ಬೆಳೆಯುತ್ತಲೇ ಇದೆ. ಇವರಲ್ಲಿ 390 ಮಿಲಿಯನ್ ಜನರು 2000 ನೇ ಇಸವಿಯ ನಂತರ ಹುಟ್ಟಿದವರು. ಇವರಲ್ಲಿ ಶೇಕಡ 81 ಮಂದಿ ಹೋಟೆಲುಗಳಲ್ಲಿ ತಿನ್ನಲು ಬಯಸುತ್ತಾರೆ. ಶೇಕಡ 19 ಮನೆಗೇ ಊಟ ತರಿಸಿಕೊಂಡು ತಿನ್ನುವ ಇರಾದೆ ಇರುವವರು. 2015 ರ ಅಧ್ಯಯನದ ಪ್ರಕಾರ ಸ್ಥಳೀಯ ಬದಲಾವಣೆಗಳೊಂದಿಗೆ ಸ್ಥೂಲಕಾಯದ ಜನರು ನೂರಕ್ಕೆ ಶೇಕಡ 11.8 ರಿಂದ 16.9 ಇದ್ದಾರೆ. ಸೊಂಟದ ಸುತ್ತ  ಕೊಬ್ಬಿರುವವರ ಸಂಖ್ಯೆ ನೂರಕ್ಕೆ ಶೇಕಡ16.9 ರಿಂದ 36.3 ನಷ್ಟಿದೆ. ಭಾರತವೂ ಸೇರಿದಂತೆ ಪ್ರತಿದೇಶದ ಆರೋಗ್ಯದ ವಿಚಾರದಲ್ಲಿ ಸ್ಥೂಲಕಾಯತೆ ಅತ್ಯಂತ ಗಂಭೀರವಾದದ್ದು. ಭಾರತದಲ್ಲಿ ಹೆಂಗಸರಲ್ಲಿ ಸೊಂಟದ ಸುತ್ತಲಿನ ಕೊಬ್ಬು ಗಂಡಸರಿಗಿಂತ ಹೆಚ್ಚಿದೆ.ಆಹಾರದ ಗುಣಮಟ್ಟದ ಆಯ್ಕೆಯ ಜೊತೆ ಪ್ರಮಾಣದ ಬಗ್ಗೆಯೂ ಅರಿವುಮೂಡಬೇಕಿದೆ. ವ್ಯಾಯಾಮಗಳು ಹೆಚ್ಚಬೇಕಿವೆ.

    ಭಾರತೀಯರ ಗಳಿಕೆಯ ದೊಡ್ಡ ಭಾಗ ಆಹಾರ ಮತ್ತು ದಿನಸಿಗಳ ಮೇಲೆ ಖರ್ಚಾಗುತ್ತದೆ. ಇದೇನು ಉತ್ಪ್ರೇಕ್ಷೆಯಲ್ಲ. ಯಾಕೆಂದರೆ ಭಾರತೀಯರು ಊಟಕ್ಕೆ ಖರ್ಚು ಮಾಡುವುದು ಬೇರೆ ದೇಶಗಳಿಗಿನ್ನ ಅತಿ ಹೆಚ್ಚು ಎನ್ನಬಹುದು.  ಒಬ್ಬ ಭಾರತೀಯನ ದುಡಿಮೆಯ ಅಂದಾಜು ಶೇಕಡ 31 ಭಾಗ ಊಟಗಳ ಮೇಲೆ ಖರ್ಚಾಗುತ್ತದೆ. ಚೈನೀಯರು ಶೇಕಡ 25, ಬ್ರೆಝಿಲ್ ನವರು ಶೇಕಡ17 ಮತ್ತು ಅಮೆರಿಕನ್ನರು ಶೇಕಡ 9 ಮಾತ್ರ ಊಟಕ್ಕೆ ಸಂಬಂಧಪಟ್ಟಂತೆ  ಖರ್ಚುಮಾಡುವುದು. ಇದಕ್ಕೆ ನಮ್ಮ ಬದುಕಿನ ಶೈಲಿಯೂ ಕಾರಣವಿರಬಹುದು. ಮೂರೂ ಹೊತ್ತು ದೊಡ್ಡ ಊಟಗಳನ್ನು ಮಾಡುವುದು, ಊಟಕ್ಕೆ ಅತಿ ಪ್ರಾಮುಖ್ಯತೆ ಕೊಡುವುದು, ಊಟದ ಸುತ್ತಲೇ ಎಲ್ಲ ಕಾರ್ಯಕ್ರಮಗಳನ್ನು ಮಾಡುವುದು ಎಲ್ಲವೂ ಕಾರಣವಿರಬಹುದು. ಹೀಗಾಗಿಯೇ ಸಿದ್ದ ಆಹಾರದ ಉದ್ಯಮಗಳು ಇಂತಹ ಭೋಜನಪ್ರಿಯ  ಭಾರತವನ್ನು  ತಮ್ಮ ಕರ್ಮಕ್ಷೇತ್ರ ಮಾಡಿಕೊಂಡಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.

    ಭಾರತದ ಸಿದ್ದ ಆಹಾರದ  ಉದ್ಯಮಗಳ ಒಟ್ಟು ಮೊತ್ತ ಇಡೀ ಪ್ರಪಂಚದಲ್ಲಿ ಈಗಾಗಲೇ ಆರನೆಯ ಸ್ಥಾನದಲ್ಲಿದೆ. ಸದ್ಯಕ್ಕೆ ಶೇಕಡ 70 ವಹಿವಾಟು ಚಿಲ್ಲರೆ ವ್ಯಾಪಾರಿಗಳಿಂದ ಉತ್ಪನ್ನವಾಗುತ್ತಿದೆ. ಪೂರ್ತಿ ಸರ್ವೀಸು ಕೊಡುವ ರೆಸ್ಟೋರೆಂಟ್ ಗಳು ಉದ್ಯಮ ಶೇಕಡ 56.6 ನಷ್ಟಿದೆ. ಇದರ ಹಿಂದೆ ಫಾಸ್ಟ್ ಫುಡ್ ಉದ್ಯಮ ಶೇಕಡ16.3, ಬೀದಿ ಬದಿಯ  ಆಹಾರ ಮಳಿಗೆಗಳು ಶೇಕಡ 14.6 ಇದ್ದರೆ, ಕೆಫೆ ಮತ್ತು ಬಾರ್ ಗಳು ಶೇಕಡ 12.5 ರಷ್ಟು ಉದ್ಯಮವನ್ನು ಹೊಂದಿವೆ. ಈ ಅಂಕಿ ಸಂಖ್ಯೆಗಳು ಎಂದಿಗಿಂತಲೂ ಅತ್ಯಧಿಕವಾಗಿರುವುದು ಭಾರತದ ಹೊಸ ಮಿಡಿತವನ್ನು ಡಾಳಾಗಿ ಹೇಳುತ್ತವೆ.

    ಜಾಗತೀಕರಣ ತಂದಿರುವ ಬದಲಾವಣೆಗಳು

    ಜಾಗತೀಕರಣದ ಕಾರಣ ವಿದೇಶೀ ಆಹಾರಗಳು, ಫ್ಯೂಷನ್ ಫುಡ್ ಗಳು ಹೆಚ್ಚುತ್ತಿವೆ. ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿಗಳೂ ಹೆಚ್ಚುತ್ತಿವೆ. ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಕಾಳಜಿಯಿರುವ ಜನರ ದೊಡ್ಡ ದಂಡೇ ಇದೆ.

    ನಿಧಾನಕ್ಕೆ ಉಪ್ಪು, ಖಾರ, ಸಕ್ಕರೆ, ಕೊಬ್ಬು ಕಡಿಮೆಯಿರುವ ಆಹಾರಗಳ ಮಹತ್ವವನ್ನು ಜನರು ಅರಿಯಲು ಶುರುಮಾಡಿದ್ದಾರೆ. ಆದರೆ ಇವರ ಸಂಖ್ಯೆ ಕೇವಲ 5 ಮಿಲಿಯನ್ನು ಮಾತ್ರ ಎಂಬುದು ಹುಬ್ಬೇರಿಸುವಂತೆ ಮಾಡುತ್ತದೆ. ಆದರೆ ಇವರ ಸಂಖ್ಯೆ  ಪ್ರತಿವರ್ಷ ಶೇಕಡ 10-15 ನಷ್ಟು ಬೆಳೆಯುತ್ತಿದೆ ಎನ್ನುವುದಷ್ಟೇ ಸಮಾಧಾನದ ಸಂಗತಿ.

    ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಬೆಳೆವ ಆಹಾರಗಳನ್ನು ಉತ್ಪಾದಿಸುವಲ್ಲಿ ಭಾರತ ಮಂ ಣಿಯಲ್ಲಿದೆ. ಬೆಂಗಳೂರಿನಲ್ಲಿ 2013 ರಲ್ಲಿ ನಡೆದ ಸರ್ವೆಯ ಪ್ರಕಾರ ಶೇಕಡ 90 ಜನರು ಈ ಬಗೆಯ ಆಹಾರಕ್ಕೆ ಹೆಚ್ಚು ಹಣ ಕೊಡಲು ತಯಾರಿದ್ದಾರೆ. ಆದರೆ ಶೇಕಡ 83 ಜನರಿಗೆ ಯಾರು ಇವನ್ನು ಮಾರುತ್ತಾರೆ, ಎಲ್ಲ ಬಗೆಯ ಆಹಾರಗಳೂ ಈ ರೇಂಜಿನಲ್ಲಿ ಸಿಗುತ್ತವೆಯೇ ಮತ್ತು ವರ್ಷವಿಡೀ ಇವು ಲಭ್ಯವಿವೆಯೇ ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲದೆ ಇವುಗಳ ಮೇಲಿನ ಅವಲಂಬನೆಯಿಂದ ಹಿಂತೆಗೆಯುವಂತೆ ಮಾಡಿದೆ.

    ಭಾರತೀಯರನ್ನು ಸಿದ್ದ ಆಹಾರದ  ಸೌಲಭ್ಯ , ರುಚಿಗಳು ಮ್ಯಾಗ್ನೆಟ್ನಂತೆ ಸೆಳೆದಿವೆ ಎನ್ನುವುದರಲ್ಲಿ ಶಂಕೆಯಿಲ್ಲ. ಆದರೆ ಸಧ್ಯಕ್ಕೆ ಪ್ರಿ ಪ್ಯಾಕೇಜ್ ಮಾಡಿರುವ  ಆಹಾರಗಳನ್ನು  ಖರೀದಿಸುತ್ತಿರುವ ಶೇಕಡ 90 ಜನರಲ್ಲಿ ಕೇವಲ ಶೇಕಡ 30ರಷ್ಟು ಜನ ಮಾತ್ರವೇ ಈ ಆಹಾರಗಳ ಪೋಷಕಾಂಶಗಳ ಬಗ್ಗೆ ಓದುವ ಪ್ರಯತ್ನ ಮಾಡುತ್ತಿದ್ದಾರೆ.  ಇವರಲ್ಲಿ ಕೂಡ ಸಕ್ಕರೆ ಮತ್ತು ಕೊಬ್ಬಿನ ಅಂಶಗಳ ಬಗ್ಗೆ ಗಮನ ಇರುವುದು ತಾವು ದಪ್ಪಗಾದರೆ ಎನ್ನುವ ಸೌಂದರ್ಯದ ಕಾರಣದಿಂದಲೇ ಹೊರತು ಆರೋಗ್ಯದ ಕಾಳಜಿಗಳು ಇಲ್ಲವಾಗಿವೆ. ಜನರಲ್ಲಿ ಯಾವ ಆಹಾರಗಳು ತಮಗೆ ಉತ್ತಮ ಎನ್ನುವ ತಿಳಿವಳಿಕೆ ಇಲ್ಲದಿರುವುದು ಒಂದು ಕಾರಣವಾದರೆ ಮಾಹಿತಿಗಳು ಬಹಳ ತಾಂತ್ರಿಕ ವಿವರಣೆಯನ್ನು ಮಾತ್ರ ಹೊಂದಿರುವುದು ಇನ್ನೊಂದು  ಕಾರಣ.

    ಈ ಸಿದ್ದ ಆಹಾರಗಳ ಭರಾಟೆ ನಿಲ್ಲುವಂತವೇ?

    ಒಂದಾನೊಂದು ಕಾಲದಲ್ಲಿ ಚಾಕಲೇಟಿನಂತ ಸಿಹಿ ಪದಾರ್ಥ ಮುಂದುವರೆದ ದೇಶಗಳಲ್ಲಿ ಕೂಡ ಕೇವಲ ಶ್ರೀಮಂತರ ಸ್ವತ್ತಾಗಿತ್ತು. ಬೆಲೆ ಗಗನ ಮುಟ್ಟುತ್ತಿತ್ತು. ಕೈಗಾರಿಕಾ ಕ್ರಾಂತಿಯಾದ ನಂತರ ಎಲ್ಲ  ಉತ್ಪಾದನೆಗಳೂ ಔದ್ಯಮಿಕ ಮಟ್ಟ ತಲುಪಿದವು. ಬೆಲೆಗಳು ಕುಸಿದವು. ಸಣ್ಣ ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಬೀಗ ಹಾಕಿ ನಷ್ಟ ಅನುಭವಿಸಿದರು. ಆದರೆ ಬಡವನಿಗೂ ಚಾಕಲೇಟಿನಂತಹ ಸಿಹಿ ದೊರಕುವುದು ಸಾಧ್ಯವಾಯಿತು.  ಲಾಭ-ನಷ್ಟಗಳ ಲೆಕ್ಕಾಚಾರ ಗೌಣವಾಯಿತು.ಕಾಲ ಚಕ್ರವನ್ನು ನಿಲ್ಲಿಸುವುದು ಸಾದ್ಯವಿಲ್ಲ. ಈ ಸಿದ್ದ ಆಹಾರಗಳ ಭರಾಟೆ ಕೂಡ ಅಂತದ್ದೇ ಎನ್ನ ಬಹುದೇನೋ?

    ಸಿದ್ಧ ಆಹಾರವನ್ನು ಮಾರುಕಟ್ಟೆಗಳಿಂದ ತಡೆಯುವುದು ಸಾಧ್ಯವಿಲ್ಲ. ಆದರೆ ಅವುಗಳ ಗುಣಮಟ್ಟವನ್ನು ಕಾಪಾಡುವುದು ಸರ್ಕಾರದ ಕೆಲಸವಾಗಬೇಕು. ಈ ಬಗ್ಗೆ  ನಿಷ್ಕಳಂಕಿತ ಅಧ್ಯಯನಗಳು, ವರದಿಗಳು ಹೊರಬರಬೇಕು. ನಿಯಂತ್ರಣ ಬೇಕು. ಮಾಧ್ಮಮಗಳು, ವೈದ್ಯರುಗಳು ಜನರಿಗೆ ಮಾಹಿತಿ ನೀಡಬೇಕು. ಅಲ್ಲಿಯವರೆಗೆ ಜನಸಾಮಾನ್ಯರು ಬರಿಯ ನಾಲಿಗೆಯ ತೀರ್ಮಾನಕ್ಕೆ ಮಾತ್ರ ಮಣಿಯದೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಸಂಸ್ಕರಿಸಿದ, ಹೆಚ್ಚು ರಾಸಾಯನಿಕ ಮತ್ತು ಕೊಬ್ಬಿನಂಶವಿರುವ ಆಹಾರಗಳಿಂದ ನಮ್ಮ ದೇಹಕ್ಕೆ ಹಾನಿಯಾಗುತ್ತದೆ ಎಂದು ತಿಳಿದಿರುವುದು ಮುಖ್ಯ.

    ಇಲ್ಲದಿದ್ದಲ್ಲಿ ಪ್ರಗತಿಯ ಹೆಸರಲ್ಲಿ ಹಾಡುಹಗಲೇ ಜನರ ಕಿಸೆಯಿಂದ ದುಡ್ಡು ಖಾಲಿಯಾಗಿ, ಅನಾರೋಗ್ಯದ ಖರೀದಿ ನಡೆಯಬಹುದು. ಸಾಮಾಜಿಕ ಮಟ್ಟದಲ್ಲಿ ಆಹಾರದ ಶುಚಿತ್ವ, ಪ್ರಮಾಣ, ಪೋಷಕಾಂಶಗಳ ಬಗ್ಗೆ ಅರಿವು ಮೂಡದಿದ್ದಲ್ಲಿ, ಮೂಡಿಸದಿದ್ದಲ್ಲಿ ಭಾರತೀಯರ ಸಿದ್ಧ ಆಹಾರದ ಬಿಲಿಯನ್ನುಗಟ್ಟಳೆ ಉದ್ಯಮಗಳು ನಿಯಂತ್ರಣವಿಲ್ಲದ ನಾಯಿ ಕೊಡೆಗಳಾಗಬಹುದು. ಮಧ್ಯ ಮತ್ತು ಧೂಮಪಾನಗಳಂತೆ  ಜಂಕ್ ಫುಡ್ ಮತ್ತು ಸಂಸ್ಕರಿಸಿದ ಆಹಾರೋತ್ಪನ್ನ ಮಾಡುವ ಉದ್ಯಮಗಳು ಸರ್ಕಾರಗಳನ್ನು ನಿಯಂತ್ರಿಸುವ ಮುನ್ನವೇ ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕಿದೆ.

    ಕೋವಿಡ್ ಇರಲಿ ಜೊತೆಗೆ ಇತರೆ ಖಾಯಿಲೆಗಳನ್ನು ಕೂಡ ದೂರವಿಟ್ಟು, ಜೀವನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲಂತ ಆರೋಗ್ಯಕರ ಊಟ, ವ್ಯಾಯಾಮ ಮತ್ತು ಜೀವನಶೈಲಿ ಎಲ್ಲಕ್ಕಿಂತ ಹೆಚ್ಚಿನ ಮಹತ್ವ ಗಳಿಸಿಕೊಳ್ಳಲು ಸರ್ಕಾರ, ಮಾದ್ಯಮ ಮತ್ತು ಜನರು ಮುಂದೆಯೂ ಶ್ರಮಿಸಬೇಕಿದೆ.

    Photo by Kobby Mendez on Unsplash

    ನಿರುದ್ವಿಗ್ನ ನಿರೂಪಣೆಯ ಬಾಡಿಗೆ ಮನೆಗಳ ರಾಜಚರಿತ್ರೆ

    ಕನ್ನಡಿಗರಿಗೆ ಹೊಸ ಪುಸ್ತಗಳನ್ನು ಪರಿಚಯಿಸಬೇಕೆಂಬ ಉದ್ದೇಶದಿಂದ ಕನ್ನಡಪ್ರೆಸ್.ಕಾಮ್ ಪುಸ್ತಕ ಲೋಕವನ್ನು ಆರಂಭಿಸುತ್ತಿದೆ. ಈ ವಿಭಾಗದ ಮೊದಲ ಪ್ರಯತ್ನವಾಗಿ ಕಥೆಗಾರ ಕೆ. ಸತ್ಯನಾರಾಯಣ ಅವರ ಆತ್ಮಕಥನ ಬಾಡಿಗೆ ಮನೆಗಳ ರಾಜಚರಿತ್ರೆಯ ಬಗ್ಗೆ ಸತ್ಯಪ್ರಿಯ ಅವರು ಬರೆದಿರಿವ ವಿಮರ್ಶೆ ಪ್ರಕಟಿಸುತ್ತಿದ್ದೇವೆ. ಓದಿ ಪ್ರತಿಕ್ರಿಯಿಸಿ.

    ಸತ್ಯಪ್ರಿಯ

    ಕಳೆದ ಶತಮಾನದ ಕೊನೆಯ ಎರಡು ದಶಕಗಳು ಮತ್ತು ಈ ಶತಮಾನದ ಕಳೆದೆರಡು ದಶಕಗಳಲ್ಲಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುತ್ತಿರುವ ಕೆ. ಸತ್ಯನಾರಾಯಣ ಅವರು ಮುಖ್ಯವಾಗಿ ಕತೆಗಾರ ಎಂದೇ ಪ್ರಸಿದ್ಧರಾದವರು. ತಮ್ಮ ಬರೆಹಗಳಲ್ಲಿ ಸದಾ ಪ್ರಯೋಗಶೀಲರಾಗಿರುವ ಅವರು ಹೊಸ ರೀತಿಯಲ್ಲಿ ಹೇಳುವುದಕ್ಕೆ ಸದಾ ತುಡಿಯುತ್ತಿರುತ್ತಾರೆ. ಈ ಮಾತಿಗೆ ಅವರ ಆತ್ಮಕಥನವೇ ಸಾಕ್ಷಿ.

    ಆತ್ಮಕಥನಗಳನ್ನು ಹೀಗೂ ಬರೆಯಬಹುದೇ ಎಂದು ಆಶ್ಚರ್ಯಪಡುವ ಹಾಗೆ ವಿಶಿಷ್ಟವಾಗಿ ಅವರು ಬರೆದಿರುವರು. ಅದು ಒಂದಲ್ಲ, ನಾಲ್ಕು ಸಂಪುಟಗಳಲ್ಲಿ. ಮೊದಲಿನದು, ನಾವೇನು ಬಡವರಲ್ಲ, ಎರಡನೆಯದು ಸಣ್ಣಪುಟ್ಟ ಆಸೆಗಳ ಆತ್ಮಚರಿತ್ರೆ, ಮೂರನೆಯದು ವೃತ್ತಿ ವಿಲಾಸ. ಇದೀಗ ಬಂದಿರುವುದು ಬಾಡಿಗೆ ಮನೆಗಳ ರಾಜಚರಿತ್ರೆ.

    ಮೊದಲಿನ ಮೂರನ್ನು ನಾನು ಓದಿಲ್ಲ. ಆದರೆ ಅವರ ಕೆಲವು ಕಥಾಸಂಕಲನ, ಕಾದಂಬರಿಗಳನ್ನು ನಾನು ಓದಿರುವೆನು. ಕೆ.ಸತ್ಯನಾರಾಯಣ ಅವರು ತಾವು ಬಾಲ್ಯದಿಂದ ನಿವೃತ್ತಿಯ ನಂತರ ಸ್ವಂತ ಮನೆಯಲ್ಲಿ ನೆಲೆಯಾಗುವ ವರೆಗೆ ಯಾವ ಯಾವ ಊರುಗಳಲ್ಲಿ ಬಾಡಿಗೆ ಮನೆಗಳಲ್ಲಿ ಇದ್ದೆವು, ಆ ಬಾಡಿಗೆ ಮನೆಗಳ ಮೂಲಕ ತಮ್ಮ ಬದುಕು ಹೇಗೆ ಪ್ರಭಾವಿತವಾಯಿತು, ಬಾಡಿಗೆ ಮನೆಗಳ ಕಾರಣದಿಂದ ಸಾಮೀಪ್ಯಕ್ಕೆ ಬಂದ ವಿವಿಧ ರೀತಿಯ ಜನರಿಂದ ತಮ್ಮ ಅನುಭವಕ್ಕೆ ಬಂದ ಅಧ್ಯಾತ್ಮ ಯಾವುದು ಎಂಬುದನ್ನು ತುಂಬ ಸರಳ ಸುಂದರ ಶೈಲಿಯಲ್ಲಿ ಹೇಳಿದ್ದಾರೆ. ಸಹಜ ಕತೆಗಾರರು ಅವರಾಗಿರುವ ಕಾರಣ ಇಲ್ಲಿ ಕಥಿಸುವುದು ಅವರಿಗೆ ಕಷ್ಟವಾಗಿಲ್ಲ. ಅವರ ದೃಷ್ಟಿಯಲ್ಲಿ ಪ್ರತಿಯೊಂದು ಮನೆಯೂ ವಾಸ್ತವ್ಯವೂ ಜಗತ್ತಿಗೆ, ಮನುಷ್ಯನ ಸ್ವಭಾವಕ್ಕೆ ಹೊಸದೊಂದು ಕಿಟಕಿ.

    ಆತ್ಮಕಥನ ಎಂಬುದು ಸಾಹಿತ್ಯದ ಒಂದು ಭಾಗವಾಗಿ ಪರಿಗಣಿತವಾಗಿದೆ. ವಿವಾದದ ಮೂಲಕ ಪ್ರಸಿದ್ಧಿಯನ್ನು ಪಡೆಯುವ ಉದ್ದೇಶದಿಂದಲೇ ಆತ್ಮಕಥನಗಳನ್ನು ಬರೆದವರೂ ಇದ್ದಾರೆ. ಆತ್ಮಕಥನವು ವ್ಯಷ್ಟಿ ಚರಿತ್ರೆಯಾದರೂ ವ್ಯಷ್ಟಿಯು ಸಮಾಜದ ಭಾಗವಾಗಿರುವ ಕಾರಣ ಸಮಷ್ಟಿ ಚರಿತ್ರೆಯೂ ಆಗಿರುತ್ತದೆ. ಆ ಕಾರಣಕ್ಕೆ ಆತ್ಮ ಕಥನವು ವ್ಯಕ್ತಿಯು ಬದುಕಿದ ಸಮಕಾಲೀನ ಸಮಾಜದ ಕಥನವೂ ಆಗಿರುತ್ತದೆ. ಈ ಮೂಲಕ ಆತ್ಮಕಥನಗಳ ಅಧ್ಯಯನವು ವ್ಯಕ್ತಿಯನ್ನು ಅರಿಯುವುದರ ಜೊತೆಗೆ ಆತನ ಸಮಕಾಲೀನ ಸಮಾಜವನ್ನು ಅರಿಯುವುದಕ್ಕೂ ಒಂದು ಕಿಂಡಿಯಾಗುತ್ತದೆ.

    ಆತ್ಮಕಥನ ಬರೆಯಬೇಕಾದರೆ ಮುಖ್ಯವಾಗಿ ಇರಬೇಕಾದ ಅರ್ಹತೆ ಪ್ರಾಮಾಣಿಕತೆ. ಮುಚ್ಚುಮರೆ ಇಲ್ಲದೆಯೇ ಬೆತ್ತಲಾಗುವ ಎದೆಗಾರಿಕೆ ಆತ್ಮಕಥನ ಬರೆಯುವವರಲ್ಲಿ ಇರಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಮಹಾತ್ಮ ಗಾಂಧೀಜಿಯವರ ಆತ್ಮಕಥನ `ನನ್ನ ಸತ್ಯಾನ್ವೇಷಣೆ’ (ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ಅನುವಾದ) ಸುಪ್ರಸಿದ್ಧವಾದದ್ದು. ಜಗತ್ತಿನ ಆತ್ಮಕಥನಗಳಲ್ಲೆಲ್ಲ ತುಂಬ ಶ್ರೇಷ್ಠವಾದದ್ದು ಮತ್ತು ನನಗೆ ಇಷ್ಟವಾದದ್ದು ಅದು. ಅದರ ಮುನ್ನುಡಿಯಲ್ಲಿ ಗಾಂಧೀಜಿಯವರು ಒಂದು ಮಾತನ್ನು ಹೇಳುತ್ತಾರೆ,- `ನಾನು ನನ್ನಲ್ಲೇ ಆಲೋಚನೆ ಮಾಡಿ ಹಿನ್ನೋಟ ಬೀರಿದಂತೆ ನನ್ನ ದೌರ್ಬಲ್ಯ ನನಗೆ ಹೆಚ್ಚು ಸ್ಪಷ್ಟವಾಗಿ ಅನುಭವವಾಗುತ್ತದೆ’ ಎಂದು. ನಿಜ, ಇದು ಪ್ರತಿಯೊಬ್ಬ ಆತ್ಮಕಥನಕಾರನ ಅನುಭವವಾಗಿರಬಹುದು.

    ಆತ್ಮಕಥನದಲ್ಲಿ ಇರುವ ಪ್ರಮುಖ ತೊಡಕು ಎಂದರೆ ನಮ್ಮ ಸಂಪರ್ಕದಲ್ಲಿ ಬರುವ ವ್ಯಕ್ತಿಗಳನ್ನು ನಮ್ಮದೇ ದೃಷ್ಟಿಯಲ್ಲಿ ಬೆಲೆಕಟ್ಟುವುದು. ನಾವು ನಮ್ಮೆರಡು ಕಣ್ಣುಗಳಿಂದ ಜಗತ್ತನ್ನು ನೋಡುತ್ತಿರುವಾಗ ಸಾವಿರ ಕಣ್ಣುಗಳು ನಮ್ಮನ್ನು ನೋಡುತ್ತಿರುತ್ತವೆ. ಆ ಸಾವಿರ ಕಣ್ಣುಗಳಿಗೆ ನಮ್ಮ ಕುರಿತು ಸಾವಿರ ಅಭಿಪ್ರಾಯಗಳಿರುತ್ತವೆ. ಊರವರ ವಿಚಾರವೇಕೆ, ಸ್ವತಃ ತಮ್ಮ ತಂದೆತಾಯಿಗಳ ಕುರಿತು, ಒಡಹುಟ್ಟಿದವರ ಕುರಿತು ನಮ್ಮ ಅಭಿಪ್ರಾಯಗಳು ಎಲ್ಲ ಕಾಲದಲ್ಲಿಯೂ ಸರಿಯಾಗಿಯೇ ಇರಬೇಕಾಗಿಲ್ಲ. ಯಾರು ಯಾರ ಕುರಿತೇ ಆಗಲಿ ಯಾವುದರ ಕುರಿತೇ ಆಗಲಿ ತಮ್ಮ ಅಭಿಪ್ರಾಯ ಹೇಳಿದರೆ ಅದು ಆಂಶಿಕ ಸತ್ಯವಾಗಿ ಮಾತ್ರ ಇರುತ್ತದೆ.

    ನನಗೆ ಮತ್ತೆ ಇಲ್ಲಿ ಗಾಂಧೀಜಿಯವರು ತಮ್ಮ ಆತ್ಮಕಥನದಲ್ಲಿ ಹೇಳಿದ ಈ ಮಾತು ನೆನಪಾಗುತ್ತದೆ, -`ತನ್ನ ತಪ್ಪನ್ನು ಯಾವಾಗಲೂ ದೊಡ್ಡದು ಮಾಡಿ ನೋಡಬೇಕು.ಇತರರ ತಪ್ಪನ್ನು ಚಿಕ್ಕದು ಮಾಡಿ ನೋಡಬೇಕು. ಆಗ ಮಾತ್ರ ಮನುಷ್ಯ ಎರಡರ ನ್ಯಾಯವಾದ ಸಮತೂಕವನ್ನು ಅರಿಯಬಲ್ಲನೆಂಬುದು ನನ್ನ ಅಭಿಪ್ರಾಯ.’ (ಪುಟ487)-. ನನ್ನ ದೃಷ್ಟಿಯಲ್ಲಿ ಇದು ಅತ್ಮಕಥನಕಾರರ ಎರಡನೆಯ ಅರ್ಹತೆಯಾಗಿರುತ್ತದೆ.

    ಬಾಡಿಗೆ ಮನೆಗಳ ರಾಜಚರಿತ್ರೆಯಲ್ಲಿ ಕೆ.ಸತ್ಯನಾರಾಯಣ ಅವರು ತಮ್ಮ ಬದುಕಿನಲ್ಲಿ ಸಂದುಹೋದ ಹಲವು ಘಟನೆಗಳ ಮರು ಅವಲೋಕನ ಮಾಡುವಾಗ ಇಂಥ ಸಮತೂಕವನ್ನು ಸಾಧಿಸುವ ಪ್ರಯತ್ನ ಮಾಡಿದ್ದಾರೆ. ತಮ್ಮ ಸಂಪರ್ಕದಲ್ಲಿ ಬಂದವರ ಕುರಿತು ಕೇವಲ ತಮ್ಮ ಅಭಿಪ್ರಾಯವನ್ನು ಮಾತ್ರ ಹೇಳದೆ ಅವರ ಮನದಲ್ಲಿ ತಮ್ಮ ಬಗ್ಗೆ ಯಾವ ಅಭಿಪ್ರಾಯ ಮೂಡಿರಬಹುದು ಎಂಬುದನ್ನೂ ಊಹಿಸಿಕೊಳ್ಳುತ್ತಾರೆ. ಇತರರ ಕುರಿತು ತಮ್ಮ ಅಭಿಪ್ರಾಯವನ್ನು ಹೇಳುವಾಗ ಖಚಿತವಾಗಿ ಹೀಗೇ ಎಂದು ಹೇಳುವುದಿಲ್ಲ. ಉದಾಹರಣೆಗೆ ತಮ್ಮ ತಂದೆಯ ಕುರಿತು ಅವರು ಹೇಳುವ ಒಂದು ಮಾತು,- `ಬಾಡಿಗೆ ಮನೆಗಳು ಕೂಡ ಇಂತಹದೇ ಇರಬೇಕು, ಇಷ್ಟೇ ಅನುಕೂಲಗಳಿರಬೇಕು ಎಂದು ಕೂಡ ನಮ್ಮ ತಂದೆ ನಂಬಿರಲಿಲ್ಲವೆಂದು ಕಾಣುತ್ತದೆ.’- ತಮ್ಮ ತಂದೆಯ ಆಲೋಚನೆ ಇದಕ್ಕೂ ಭಿನ್ನವಾಗಿದ್ದಿರಬಹುದು ಎಂಬ ಅರಿವು ಅವರಿಗೆ ಇದೆ. ಇತರರ ಕುರಿತು ಅಭಿಪ್ರಾಯ ವ್ಯಕ್ತಪಡಿಸುವಾಗ ಇರಬೇಕಾದ ಎಚ್ಚರ ಇದು.

    ಕೃತಿಯಲ್ಲಿ ಹಲವು ಕಡೆ ಮನುಷ್ಯ ಸ್ವಭಾವಗಳ ಸುಂದರ ವಿಶ್ಲೇಷಣೆ ಬರುತ್ತದೆ. `ವಯಸ್ಸಾಗುತ್ತಾ ಆಗುತ್ತಾ, ಗಂಡ-ಹೆಂಡತಿ ಇಬ್ಬರೂ ಎಲ್ಲ ಸಂಗತಿ- ವಿದ್ಯಮಾನಗಳನ್ನು ಕುರಿತಂತೆ ಒಂದೇ ಅಭಿಪ್ರಾಯಕ್ಕೆ ಬಂದುಬಿಡುತ್ತಾರೆ’ ಎಂಬ ಮಾತು. ನಿಜ, ಕೆಲವೊಮ್ಮೆ ಹೆಂಡತಿಯು ಆಡಬೇಕಾದ ಮಾತನ್ನು ಗಂಡನೇ ಮೊದಲು ಆಡಿಬಿಡುತ್ತಾನೆ. ಹಾಗೆಯೇ ಗಂಡನ ಮಾತನ್ನು ಹೆಂಡತಿಯೇ ಮೊದಲು ಆಡಿಬಿಡುತ್ತಾಳೆ. ಸುದೀರ್ಘ ದಾಂಪತ್ಯದಲ್ಲಿ ಇಂಥ ಅನುಭವ ಪ್ರತಿಯೊಬ್ಬರಿಗೂ ಆಗಿರುತ್ತದೆ. ಬದುಕಿನಲ್ಲಿ ಮಾಗಿದಂತೆ ಈ ರೀತಿಯ ಬರೆವಣಿಗೆ ಸಾಧ್ಯವಾಗುತ್ತದೆ.

    ಈ ಆತ್ಮಕಥನದಲ್ಲಿ ನಟ ರಾಜಕುಮಾರ್‌ ಅವರ ಪ್ರಸ್ತಾಪ ಬರುತ್ತದೆ. ರಾಜಕುಮಾರ್‌ ಅವರ ಹುಟ್ಟೂರು ಸಿಂಗಾನಲ್ಲೂರಿಗೆ ಮುಕ್ಕಾಲು ಮೈಲು ದೂರದಲ್ಲೇ ಲೇಖಕರು ಕೆಲವು ಕಾಲ ವಾಸಿಸಿದ್ದರು. ರಾಜಕುಮಾರ್‌ ಅವರ ಕುರಿತು ಆ ಹಳ್ಳಿಯ ಜನರಿಂದ ಹಲವು ಸಂಗತಿಗಳನ್ನು ಕೇಳಿದ್ದರು. ನಟನನ್ನು ತುಂಬಾ ಹತ್ತಿರದಿಂದ, ದಿನನಿತ್ಯದ ಜೀವನದ ಮನೆವಾರ್ತೆಯ ಭಾಗವಾಗಿ ಕಂಡಿದ್ದ ಅವರಿಗೆ ಈಗ ರಾಜಕುಮಾರ್‌ರನ್ನು ನಮ್ಮ ಸಂಸ್ಕೃತಿ ಚಿಂತನೆ ಕಟ್ಟಿಕೊಡುವ ರೀತಿ ಕಂಡಾಗ ಗಲಿಬಿಲಿಗೊಳ್ಳುತ್ತಾರೆ. `ವಸ್ತುವನ್ನಾಗಲೀ, ವ್ಯಕ್ತಿಯನ್ನಾಗಲೀ ಅದು ಇರುವ ಸ್ವರೂಪದಲ್ಲೇ ನಾವು ಗ್ರಹಿಸುವುದಿಲ್ಲ. ನಮಗೆ ಬೇಕಾದ ಹಾಗೆ, ನಮ್ಮ ಮಾನಸಿಕ ಅವಶ್ಯಕತೆಗನುಗುಣವಾಗಿ ಗ್ರಹಿಸುತ್ತೇವೆ ಎಂಬ ಮಾತು ಎಷ್ಟು ಸತ್ಯವಾದದ್ದು!’ ಎಂದು ಲೇಖಕರು ಬರೆದಿರುವುದು. ಆತ್ಮಕಥನಕಾರರ ಬಿಕ್ಕಟ್ಟಿನ ಒಂದು ಮುಖ ಇದು.

    ಹಾಗೆಯೇ ಅವರು ಹೇಳುವ ಇನ್ನೊಂದು ಮಾತು, `… ಒಂದನ್ನು ಅನುಭವಿಸುವಾಗ ಉಂಟಾಗುವ ಭಾವನೆಗಳು ನಿಜವೋ, ಈಗ ಹೋಲಿಕೆಯಲ್ಲಿ ನೆನಸಿಕೊಂಡಾಗ ಮೂಡುವ ಭಾವನೆಗಳು ನಿಜವೋ. ಇಲ್ಲ ಎರಡನ್ನೂ ಸರಿಯಾದ ಹದದಲ್ಲಿ ಬೆರೆಸಿ ನೆನಪುಗಳನ್ನು ಕಟ್ಟಬೇಕೋ?’ ಇದು ಬಿಕ್ಕಟ್ಟಿನ ಇನ್ನೊಂದು ಮುಖ.

    ತಮ್ಮ ಬಾಲ್ಯವನ್ನು ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಕಳೆದ ಲೇಖಕರು ಸ್ಪೃಶ್ಯ ಮತ್ತು ಅಸ್ಪೃಶ್ಯತೆಯ ಅನುಭವದ ವಿವಿಧ ಮುಖಗಳನ್ನು ಸ್ವಾರಸ್ಯಕರವಾಗಿ ಹೇಳುವರು. ಹಾಗೆಯೇ ಬದುಕಿನ ತತ್ವಜ್ಞಾನವನ್ನು ಕೂಡ. `ಮನುಷ್ಯ ಬೆಳೆಯುವಾಗ, ಸುಖಪಡುವಾಗ, ಸುಖವನ್ನು ಬಯಸುವಾಗ, ಯಾರ ಯಾರ ಸ್ವಾರ್ಥ ಯಾವಾಗ ಎಷ್ಟು ಮುಂದೆ ಬರುತ್ತದೆ ಎಂಬುದು ನಿಗೂಢವೇ. ಅದಕ್ಕೆ ವಯಸ್ಸಿನ ಹಂಗಿರುವುದಿಲ್ಲ. ಎಲ್ಲರಿಗೂ ಬೇರು ಬಿಡುವ, ಸ್ಥಾಪಿಸಿಕೊಳ್ಳುವ ಹಪಾಹಪಿಯೇ…’ ಎಂದು ಹೇಳುವಾಗ ಮತ್ತು, `ಇನ್ನೊಬ್ಬರ ಮನೆಯಲ್ಲಾದಾಗ ವೈಚಾರಿಕವಾಗಿ ಪ್ರತಿಕ್ರಿಯಿಸುವುದಕ್ಕೂ, ನಮ್ಮ ಮನೆಯಲ್ಲೇ ಆದಾಗ ಏನು ಮಾಡುತ್ತೇವೆ ಎಂಬ ಪ್ರಶ್ನೆಗೆ ಉತ್ತರಿಸುವುದಕ್ಕೂ ತುಂಬಾ ವ್ಯತ್ಯಾಸವಿದೆ. ನಮ್ಮ ನಮ್ಮ ವರ್ಗ ಹಿತಾಸಕ್ತಿಗಳನ್ನು ಮೀರಿ ಯೋಚಿಸುವುದು ನಿಜಕ್ಕೂ ಸಾಧ್ಯವೇ ಎಂಬ ಪ್ರಶ್ನೆಗೆ ನಿಜವಾಗಿಯೂ ಉತ್ತರವಿಲ್ಲ..’ ಎಂದು ಹೇಳುವಲ್ಲಿ ಈ ತತ್ವಜ್ಞಾನ ಕಾಣುತ್ತದೆ.
    `ಬಾಡಿಗೆ ಮನೆಗಳ ರಾಜಚರಿತ್ರೆ’ಗೆ ಭರತವಾಕ್ಯದಂತೆ ಈ ಮಾತುಗಳು ಕೃತಿಯಲ್ಲಿವೆ. `ನೀವು ಎಷ್ಟೇ ಮನೆಗಳನ್ನು ಬದಲಾಯಿಸಿದರೂ, ಎಷ್ಟೇ ಊರುಗಳಿಗೆ ಹೋದರೂ, ಕೊನೆಗೆ ನಿಮಗೆ ಸಿಗುವುದು ನಿಮ್ಮ ಸ್ವಭಾವ, ಜಾಯಮಾನಕ್ಕೆ ಸಮೀಪವಾದ ಜನಗಳು ಮಾತ್ರ. ಹಾಗಾಗಿ, ನಿಮಗೆ ಮನುಷ್ಯ ಸ್ವಭಾವದ, ವೈವಿಧ್ಯ-ಆಳಗಳ ಪರಿಚಯವಾಗುವುದೇ ಇಲ್ಲ. ಆದರೆ ಕೆಲವೊಂದು ಮನೆಗಳಲ್ಲಿ ಮನೆಗಳ ಮೂಲಕ ಸಿಗುವ ಸಂಬಂಧಗಳು ಕೆಲವು ಪಾಠಗಳನ್ನು ಕಲಿಸುತ್ತವೆ.’ ಲೇಖಕರ ಈ ಮಾತು ನಿಜ. ಇದನ್ನೇ ಹೇಳುವುದು, ತೆರೆದಷ್ಟೇ ಬಾಗಿಲು ಎಂದು.

    ನಾನು ಹಲವು ಆತ್ಮಕಥನಗಳನ್ನು ಓದಿದ್ದೇನೆ. ಅದರಲ್ಲೂ ಸಾಹಿತಿಗಳ ಆತ್ಮಕಥನಗಳನ್ನು ಓದಿದ್ದೇನೆ. ಆದರೆ ಅವೆಲ್ಲವುಗಳಿಗಿಂತ ಭಿನ್ನವಾದ ಕಟ್ಟುವಿಕೆಯಿಂದಾಗಿ, ಯಾವುದೇ ಆತ್ಮಪ್ರತ್ಯಯವಿಲ್ಲದೆ ಒಪ್ಪಿಕೊಳ್ಳುವಿಕೆಯ ಪ್ರಾಮಾಣಿಕತೆಯಿಂದಾಗಿ, ಬದುಕಿನ ಸರಳ ಸತ್ಯಗಳಿಗೆ ಉದಾಹರಣೆಗಳೆಂಬಂತೆ ಸಂಗತಿಗಳನ್ನು ಹೇಳುವ ಶೈಲಿಯಿಂದಾಗಿ, ವಿವಾದಗಳಿಂದ ದೂರವಾಗಿರುವ ಘಟನೆಗಳ ನಿರುದ್ವಿಗ್ನ ನಿರೂಪಣೆಯಿಂದಾಗಿ `ಬಾಡಿಗೆ ಮನೆಗಳ ರಾಜಚರಿತ್ರೆ’ಗೆ ರಾಜಕಳೆ ಬಂದಿದೆ.

    ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದವರಿಗೆ ಕಾಲಿಗೆ ಬೇಡಿ ಹಾಕಿದಂತಾಗಿದ್ದು ಸುಳ್ಳಲ್ಲ

    ರಸ್ತೆಯ ಆ ಪಕ್ಕ ದಟ್ಟ ಕಾಡು, ಈ ಕಡೆ ಅಡಿಕೆ ಮತ್ತು ಕಾಫಿ ತೋಟ, ಅದರಾಚೆಗೆ ಗದ್ದೆ, ಬಾಳೆ ತೋಟ, ಇವೆಲ್ಲದರ ನಡುವೆ ಇರುವ ಮನೆ. ಕಲ್ಮಶದ ಹೆಸರರಿಯದ ಬಾವಿನೀರು, ಮಾಲಿನ್ಯದುಸಿರೂ ಸೋಕಿಸಿಕೊಳ್ಳದ ಶುದ್ದ ಗಾಳಿಯ ಜೊತೆಗೇ ಬೆಳಗು ಕಂಡವರಿಗೆ ಮೊದಮೊದಲು ಹಾದಿಗೊಂದು, ಬೀದಿಗೊಂದಿರುವ ಕಾಣುವ ಪಾರ್ಕುಗಳು ತುಂಬಾ ಆಕರ್ಷಕವಾಗಿಯೇ ಕಂಡಿದ್ದವು. ಯಕ್ಷಗಾನದಲ್ಲಿ ಬಣ್ಣಗೊಂಡು ಮೆರೆವ ರಾಜ, ಬಣ್ಣ ಕಳೆದ ಮೇಲೆ ಮುಪ್ಪಿನ ಮುದುಕ ಎಂಬುದನ್ನು ಏಕ್ ದಮ್ ಒಪ್ಪಿಕೊಳ್ಳಲು ಮನಸು ಹೇಗೆ ತಯಾರಿರಲಿಲ್ಲವೋ ಹಾಗೇ ಈ ಪಾರ್ಕಿನ ಗೀಳು ಬಹಳ ಕಾಲವುಳಿಯಲಿಲ್ಲ.

    ಶಾಲೆ, ಕಾಲೇಜಿನ ಯುಗದಲ್ಲಿಯೂ ಪ್ರವಾಸ, ಕಾಡುಮೇಡೆಂದು ಅಲೆದಾಡುತ್ತಾ ನಿರಾಳವಾಗಿದ್ದವರಿಗೆ, ಆಫೀಸಿನ ಏಕತಾನತೆ ತಲೆಚಿಟ್ಟು ತರಿಸುತ್ತಿತ್ತು. ಮೀಟಿಂಗ್, ಜೀರಾ ಅಪ್ಡೇಟ್, ಬಿಲ್ಡ್, ಡಿಫೆಕ್ಟ್ ಲೈಫ್ ಸೈಕಲ್ಲುಗಳ ಚಕ್ರದ ನಡುವೆ ಸಿಕ್ಕಿಬಿದ್ದು ದೇಹವೂ, ಮನಸೂ ಭಾರವಾಗುತ್ತಿತ್ತು. ಇಂತಹ ಜಂಜಾಟದಿಂದ ಕ್ಷಣಕ್ಕಾದರೂ ಮುಕ್ತಿ ಪಡೆಯಲು ನಮ್ಮಂತಹ ಬಹುತೇಕ ಟೆಕ್ಕಿಗಳು ಕಂಡುಕೊಂಡ ಸುಲಭ ಪರಿಹಾರವೇ ಈ ವೀಕೆಂಡ್ ಟ್ರಿಪ್ ಅಂದ್ರೆ ವಾರಾಂತ್ಯದ ಸಣ್ಣ ಪ್ರವಾಸ.

    ಒಂದು ದಿನದ ಅಥವಾ ಎರಡು ದಿನಗಳ ಪ್ರವಾಸದ ಸಡಗರ ಗುರುವಾರದಿಂದಲೇ ಶುರುವಾಗುತ್ತಿತ್ತು. ಶುಕ್ರವಾರವಂತೂ ಬೆಟ್ಟದಷ್ಟಿದ್ದ ಕೆಲಸವನ್ನೂ ಕಲ್ಲು ಸಕ್ಕರೆಯಂತೇ ಕರಗಿಸಿಕೊಂಡು ಮುಗಿಸಿ ‌ಮನೆಗೋಡುವ ತರಾತುರಿ. ಬೆಂಗಳೂರಿನ ಸುತ್ತಲಿನ ನಂದಿಬೆಟ್ಟ, ಅವಳ ಬೆಟ್ಟ, ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ಸಾವನದುರ್ಗ, ತುರಹಳ್ಳಿ ಮತ್ತು ಕನಕಪುರದ ಕಾಡು, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮುಂತಾದ ಬೆಟ್ಟಗುಡ್ಡಗಳಿಗೆ ನಸುಕಿನಲ್ಲೇ ಟ್ರೆಕ್ಕಿಂಗ್ ಹೊರಡುವುದು, ಅಲ್ಲಿನ ಕಾಡಲ್ಲಿ ತಿರುಗುವುದು, ಅಲ್ಲಿಯ ಹಳ್ಳಿ ಜನರನ್ನು ಮಾತನಾಡಿಸಿ ಅವರು ಬೆಳೆದ ಸೊಪ್ಪು-ತರಕಾರಿ ಕೊಂಡು ಅವರ ಮುಗ್ಧ ನಗು ತರುವ ಸಂತಸವನ್ನು ವಾರಗಟ್ಟಲೇ ಕಾಪಿಟ್ಟುಕೊಳ್ಳುವುದು ನೆಚ್ಚಿನ ಸಂಗಾತಿಯಾಗಿತ್ತು.

    ಪೂರ್ವ ತಯಾರಿಯೇ ಇಲ್ಲದಾಗ ಜನಪದಲೋಕದಲ್ಲಿ ಚೂರು ವಿಹರಿಸಿ, ಕಾಮತ್ ಹೋಟೆಲಿನಲ್ಲಿ ಊರಕಡೆ ತಿಂಡಿಯನ್ನು ಮೆದ್ದು, ಸೂಕ್ಷ್ಮವಾದ ಕುಸುರಿ ಕಲೆಯಿಂದ ಮಾಡಿದ ಚೆನ್ನಪಟ್ಟಣದ ಗೊಂಬೆಗಳನ್ನು ಪ್ರವಾಸದ ನೆನಪಿಗೆಂದು ಮುಂದಿಟ್ಟುಕೊಳ್ಳುವುದು ಸಹಜ ಪ್ರಕ್ರಿಯೆಯೇ ಆಗಿಹೋಗಿತ್ತು. ವಾರಾಂತ್ಯದಲ್ಲಿ ಬೇರೆ ಬೇರೆ ಕೆಲಸದಿಂದ ಎಲ್ಲಿಗೂ ಹೋಗಲಿಕ್ಕೆ ಆಗದಿರುವಾಗ ಪಕ್ಕದ ರಾಗಿಗುಡ್ಡ,‌ ಬಸವನಗುಡಿ, ಓಂಕಾರೇಶ್ವರ, ಜಯನಗರದ ಕಾಂಪ್ಲೆಕ್ಸ್, ಬನ್ನೆರುಘಟ್ಟದ ಲಕ್ಷ್ಮೀ ನರಸಿಂಹ ದೇವಸ್ಥಾನದ ಗುಡ್ಡಕ್ಕೊ ವಿನಾಕಾರಣ ಸುತ್ತಿ ಬರುವ ಸಂಗತಿಗಳೆಲ್ಲ ಅದೆಷ್ಟು ನೈಜವಾಗಿ ದಿನಚರಿಯಲ್ಲಿ ಭಾಗವೇ ಆಗಿತ್ತಲ್ಲಾ ಎಂದು ಈಗ ಅನಿಸುತ್ತಿದೆ.

    ಮೊದಲೆಲ್ಲಾ ಪ್ರಕೃತಿಯ ಮಡಿಲಲ್ಲಿರುವ ನನ್ನವನೂರಿಗೆ ಬರಲು ಜೀವ ಜೀಕುತ್ತಿತ್ತು. ಅಕ್ಕಪಕ್ಕದ ಊರಿನ ರಾಣಿಝರಿ, ಕ್ಯಾತನಮಕ್ಕಿ, ಕುಂದಾದ್ರಿ, ಜೋಗಿ ಗುಂಡಿ, ಸಿರಿಮನೆ, ಮಘೇಬೈಲು, ನರಸಿಂಹ ಪರ್ವತ, ಕವಲೇದುರ್ಗ, ಕುಪ್ಪಳ್ಳಿ, ಆಗುಂಬೆ ಹೀಗೆ ಅನೇಕಾನೇಕ ನೈಸರ್ಗಿಕ ತಾಣಗಳ ಮಡಿಲಲ್ಲಿ ಶಿಶುವಾಗಿ ನಲಿವ ಸುಮಧುರ ಘಳಿಗೆಗಳನ್ನು ನಮ್ಮದಾಗಿಸಿಕೊಳ್ಳುವ ತವಕದಲ್ಲೇ ಇರುತ್ತಿದ್ದೆವು. ಹಾಗೆ ಕಳೆವ ಕ್ಷಣಗಳು ದಿನಕ್ಕಿಂತಲೂ ಕಮ್ಮಿ ಸಮಯವೇ ಆದರೂ ಪ್ರವಾಸ ತಂದುಕೊಡುವ ಸವಿನೆನಪಿಗೆ ಆಯಸ್ಸು ಜಾಸ್ತಿ.

    ಹೀಗಾಗಿ ಕೊರೊನ ಕಾಲದಲ್ಲಿ ಒಂದು ತಿಂಗಳು ಊರಲ್ಲಿದ್ದು, ವಾರಾಂತ್ಯದಲ್ಲಿ ಇಷ್ಟುದಿನ ನೋಡಲಿಕ್ಕಾಗದ ಸ್ಥಳಗಳನ್ನೆಲ್ಲಾ ನೋಡಿಬಿಡಬೇಕೆಂಬ ಲಿಸ್ಟ್ ತಯಾರಸಿಯೇ ಊರಿಗೆ ಹೊರಟೆವು. ‘ಲಾಕ್ಡೌನ್’ ಎಂಬ ಬಂಗಾರದ ಶರಪಂಜರದೊಳಗಿರುವ ಮುನ್ನವೇ ಮನೆಗೆ ಸಮೀಪವಿದ್ದ ಜಲಪಾತವೆರಡನ್ನು ಕಣ್ತುಂಬಿಸಿಕೊಂಡು ತಂಪಾಗಿದ್ದೆವು. ನಂತರ ವಾರಾಂತ್ಯ ಕಳೆಯಲು ಮನೆಯ ಹಿಂದಿನ ಗುಡ್ಡವನ್ನೇರಿ ಉದುರಿದ್ದ ನವಿಲುಗರಿಯನ್ನೆಲ್ಲಾ ಹೆಕ್ಕಿಕೊಂಡು ನಲಿದಿದ್ದೂ ಆಯ್ತು. ತಿಂಡಿ ಕಟ್ಟಿಕೊಂಡು ಮನೆಯವರೆಲ್ಲಾ ಒಣಗಿದ ಗದ್ದೆಬೈಲಿನಲ್ಲಿ ಕುಳಿತು ತಿಂದು ತೇಗಿದ್ದಕ್ಕೆ ಪಿಕ್ನಿಕ್ ಎಂದು ಕರೆದಿದ್ದಾಯ್ತು. ಆದರೂ ಮನಕ್ಕೆ ಎನೋ ಕಳೆದುಕೊಂಡು ಅನುಭವ.

    ಅಂತೂ ಲಾಕ್ಡೌನ್ ಮುಗೀತು, ನಾವಿದ್ದುದು ‘ಹಸಿರು ವಲಯ’ ಬೇರೆ, ಅದಕ್ಕೆ ಮನೆಯಿಂದ ತುಂಬಾ ಹತ್ತಿರದ ಬೆಟ್ಟಕ್ಕೆ ಹೊರಡುವ ಸಿದ್ಧತೆಯಾಯ್ತು. ಎರಡು ವರ್ಷದ ಮರಿಗುಬ್ಬಿಯನ್ನು ಮನೆಯಲ್ಲಿಯೇ ಅವನಜ್ಜಿ ಬಳಿ ಬಿಟ್ಟು ಹೊರಡಲು ನಾನೂ ತಯಾರಾದೆ. ತೊರೆ, ಹಳ್ಳ, ಸೇತುವೆಯ ಕಂಡೊಡನೆ ಬೈಕು ನಿಲ್ಲಿಸಿ ಕ್ಲಿಕ್ಕಿಸುವ ಕ್ಯಾಮೆರಾದ ಬೆಳಕಿಗೆ ಅಕ್ಕಪಕ್ಕದಲ್ಲಿರುತ್ತಿದ್ದ ಊರತಲೆಗಳು ಎಂತದೋ ಸಂಶಯದಿಂದ ನೋಡತೊಡಗಿದ್ದವು. ನಸುಕಿನಲ್ಲೇ ಮನೆಯಿಂದ ಹೊರಟವರು ಕ್ಷಣಕ್ಕೆ ಮೈಮುರಿ ತೆಗೆದು, ಬೆನ್ನು ನೆಟ್ಟಗಾಗಿಸಲು ಒಂದು ಎಸ್ಟೇಟ್ ಬಳಿ ನಿಲ್ಲಿಸಿದಾಗ, ಮುಂದೆ ಸಾಗುತ್ತಿದ್ದ ಗೂಡುರಿಕ್ಷಾದವ ರಿವರ್ಸ್ ಗೇರಿನಲ್ಲಿ ಬಂದಾಗ ಚೂರು ಕಸಿವಿಸಿಯಾಯ್ತು. ನಾವು ಬೆಟ್ಟಕ್ಕೆ ಹೋಗುವವರೆಂದು ತಿಳಿದು ‘ಆ ಬೆಟ್ಟದಲ್ಲಿ ಜೀಪುರುಳಿ ಬಿದ್ದಿದೆ, ಡಿವೈಎಸ್ಪಿ ಎಲ್ಲಾ ಬರ್ತಾರೆ, ಸ್ಥಳೀಯ ಜೀಪಿನಲ್ಲಿ ಹೋದರೆ ಒಳ್ಳೇದು’ ಎಂದೆಲ್ಲಾ ಪುಕ್ಕಟೆ ಸಲಹೆಯಿತ್ತು ಹೊರಟ. ಇಂತಹ ಲಾಬಿಯೆಲ್ಲಾ ಇದ್ದದ್ದೇ ಅಂದುಕೊಂಡು ಹೊರಟರೂ ಅವ್ಯಕ್ತ ಭಯವೊಂದು ಸಣ್ಣಗೆ ಭುಸುಗುಡುತ್ತಲೇ ಇತ್ತು. ನಂತರ ಅಲ್ಲಿನ ಸ್ಥಳೀಯರೊಬ್ಬರ ಮಾರ್ಗದರ್ಶನದಿಂದ ಅಲ್ಲಿನ ಬೆಟ್ಟವನ್ನೂ, ಆ ಹಳ್ಳಿಕೊಂಪೆಯ ತುದಿಗಿದ್ದ ಜೈನ ದೇಗುಲದ ವೈಭೋಗವನ್ನೂ, ಆ ಬೆಟ್ಟದ ಬುಡದಲ್ಲಿನ ಮಹಾವೀರನ ಗುಹೆಯ ಅಮೋಘ ಪ್ರಶಾಂತತೆಯನ್ನೂ ಸೋಜಿಗದಿಂದಲೇ ಸವಿದು ಹಿಂದಿರುಗಿದೆವು.

    ಮತ್ತೊಂದು ವಾರ ಮೂಲಮನೆಯ ಹತ್ತಿರದ ಜಲಪಾತವನ್ನು ನೋಡಲು ಹೊರಟಿದ್ದೆವು. ಊರ ಕಡೆಯವರಾದರೂ ಊರು ಬಿಟ್ಟವರೆನಿಸಿಕೊಂಡ ನಮ್ಮನ್ನು ಅಲ್ಲಿನ ಜನ ಧಿಕ್ಕರಿಸಬಹುದೆಂಬ ಕಲ್ಪನೆಯೂ ಇರಲಿಲ್ಲ. ಜಲಪಾತದ ಜಾಗ ಕೇಳಲು ಅಲ್ಲಿದ್ದ ಏಕೈಕ ಮನೆಯ ಬಳಿ ಬೈಕ್ ನಿಲ್ಲಿಸಿದೆವು. ಮುಂಚೆ ನಕ್ಸಲರ ಚಟುವಟಿಕೆ ಹೆಚ್ಚಾಗಿದ್ದ ಜಾಗ ಬೇರೆ, ಮೊದಲು ಅಲ್ಲಿನ ಜನ ನೋಡಿ ತುಸು ನಡುಕವೇ ಉಂಟಾಯ್ತು. ನಂತರ ಅವರು ಆತಿಥ್ಯ, ಅವರ ಔಚಿತ್ಯಪೂರ್ಣ ಮಾತು ನಮ್ಮನ್ನು ತಟ್ಟಿದವು. ನಾವು ಅಲ್ಲಿಗೆ ಹೋಗುವ ಎರಡು ದಿನಗಳ ಹಿಂದೆ ಬೆಂಗಳೂರಿನ ಕಡೆಯಿಂದ ಬಂದ ಉತ್ತರಭಾರತದ ಜನರ ಗುಂಪೊಂದು ಆ ಜಲಪಾತದ ನೀರಲ್ಲೇ ಸ್ನಾನ ಮಾಡಿ, ಅಲ್ಲಿಯ ಕುಡಿದು ಕುಣಿದು ಮಸ್ತಿ ಮಾಡಿ ತೆರಳಿದರು. ಆ ನೀರನ್ನೇ ಊರಲ್ಲಿನ ನಾಕೈದು ಮನೆಗಳು ಕುಡಿಯಲು ಬಳಸುವುದರಿಂದ ಅವರ ಕಾಳಜಿ,‌ ಕಳಕಳಿ ಸಹಜವೇ ಆಗಿತ್ತು. ಅದೊಂದು ಪಾಠವಾಗಿ ತೆಗೆದುಕೊಂಡು ಮರಳಿದೆವು.

    ನಮ್ಮ ಪ್ರವಾಸದ ಖುಶಿ ಮತ್ತೊಬ್ಬರಿಗೆ ಪ್ರಯಾಸ ತರುವಂತಾಗಬಾರದೆಂದು ಮನೆಬಿಟ್ಟು ತೆರಳದೇ ತಿಂಗಳೆರಡಾಯ್ತು. ವಾರಕ್ಕೂ, ವಾರಾಂತ್ಯಕ್ಕೂ ಹೆಚ್ಚಿನ ಪರಕ್ಕೇನೂ ಇಲ್ಲ ಈಗ. ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದವರಿಗೆ ಕಾಲಿಗೆ ಬೇಡಿ ಹಾಕಿದಂತಾಗಿದ್ದು ಸುಳ್ಳಲ್ಲ. ಆದರೆ ಮನೆಯೆಂದೂ ಜೈಲು ಅನಿಸಿದಂತೆ ಕಾದಿದ್ದು ಮಾತ್ರ ನಮ್ಮ ಹವ್ಯಾಸಗಳು. ಪ್ರವಾಸವಿಲ್ಲದೇ ಮನ ಭಣಗುಡುತ್ತಿದೆ, ಪ್ರಕೃತಿಯ ಮಡಿಲಲ್ಲಿ ಪದ್ಮಾಸನದಲ್ಲಿ ಕುಳಿತು ನಿಡುಸುಯ್ಯುವ ಸುಖವಿಲ್ಲ ಎಂಬುದೂ ನಿಜವೇ. ಆದರೂ ನಮ್ಮ ಪ್ರವಾಸದ ಹುಚ್ಚಿನಿಂದ ಮನೆಯವರಿಗೂ, ಉಳಿದವರಿಗೂ ಯಾವುದೇ ಸಮಸ್ಯೆಯಂತೂ ಆಗುತ್ತಿಲ್ಲ ಎಂಬ ಭಾವವೇ ಸಾಕು ನೆಮ್ಮದಿಯ ಮುಗುಳು ತರಲು. ಇಷ್ಟಕ್ಕೂ ಇದೇ ಜೀವನದ ಕೊನೆಯಲ್ಲವಲ್ಲ, ನಾಳೆಯೆಂಬ ತುಂಬು ಬೆಳಕೂ ನಮ್ಮ ಮುಂದಿದೆ. ಹಳಿ ತಪ್ಪಿದ ರೈಲಿನಿಂದಾಗಿ ಮುಂದಿನ ನಿಲ್ದಾಣಕ್ಕೆ ತೆರಳಲು ಚೂರು ತಡವಾಗಬಹುದು, ಅಲ್ಲಿಯ ತನಕ ಮನೆಯೆಂಬ ಪ್ಲಾಟ್ಫಾರ್ಮಿನಲ್ಲಿ ನಿಂತು ಕಾಯುವ ಅಲ್ಲವಾ?

    FB ಯಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವ ವಿದ್ಯಾರ್ಥಿಗಳು, ಮೇಷ್ಟ್ರಿಗಿಂತ ಮೊದಲೆ ಎಲ್ಲಾ ಅರಿತಿರುವ ಶಿಷ್ಯರು!

    ಮೂವತ್ತು ವರುಷದ ನನ್ನ ವೃತ್ತಿ ಜೀವನದಲ್ಲಿ ಬಹಳಷ್ಟು ತಿರುವುಗಳನ್ನು ನೋಡಿರುವೆ. ಮೊದಮೊದಲು ನಾನು ಅಧ್ಯಾಪಕ ವೃತ್ತಿಗೆ ಸೇರಿದಾಗ ಇದ್ದ ವಿದ್ಯಾರ್ಥಿಗಳ ಮನೋಭಾವ ಸ್ವಾಭಾವಿಕವಾಗಿ ಈಗಿಲ್ಲ. ಆಗ ನನ್ನ ವಯಸ್ಸು ಚಿಕ್ಕದಾಗಿದ್ರೂ   ಮಕ್ಕಳಿಗೆ ಭಯ,ಭಕ್ತಿ ಇತ್ತು. ಈಗ ಸ್ವಲ್ಪ ಬದಲಾವಣೆಗಳಾಗಿವೆ.

    ಪ್ರಾಧ್ಯಾಪಕರೆಂದರೆ ಇದ್ದ ಗೌರವ, ಪ್ರೀತಿ ಈಗಲೂ ಇದೆ ಆದರೆ ಬೇರೆ ರೀತಿಯಲ್ಲಿ. ಮುಂಚೆ ಇಬ್ಬರ ನಡುವೆ ಒಂದು ಅಂತರವಿತ್ತು. ಮಾತನಾಡುವುದಕ್ಕೆ ಮುನ್ನ ಯೋಚಿಸಿ, ವಿವೇಚಿಸಿ ಆಡುತ್ತಿದ್ದರು. ಈಗ ಮನಸ್ಸಿಗೆ ಬಂದ ವಿಷಯಗಳನ್ನು ಅಷ್ಟು ಹಿಂಜರಿಕೆಯಿಲ್ಲದೆ ಹೇಳುವುದು, ಗುರುಗಳನ್ನು ಸ್ನೇಹಿತರಂತೆ ಕಾಣುವುದು ಸಾಮಾನ್ಯವಾಗಿದೆ. ಅಧ್ಯಾಪಕರೂ ಸಹ ಮುಂಚಿನಂತೆ ಕಠಿಣವಾಗಿರದೆ ಸ್ವಲ್ಪ ಮಟ್ಟಿಗೆ ಮೃದುವಾಗಿರುವುದು ಕಾಣಬಹುದು. ಹಿಂದೆ ಇರಲಿಲ್ಲವೆಂದಲ್ಲ, ಈಗ ಅಧ್ಯಾಪಕರ ಮನಸ್ಸು ಬೇರೆ ರೀತಿಯಲ್ಲಿ ಬದಲಾಗಿರುವುದನ್ನು ಕಾಣಬಹುದು. ಚಿಕ್ಕವರು, ಮಕ್ಕಳು ಎಂಬ ಭಾವನೆಗಿಂತ ಸಮಾನರು, ಸ್ವಲ್ಪ ಮಟ್ಟಿಗೆ ಗೆಳೆಯರು ಎಂಬ ಮನೋಭಾವ ಜಾಸ್ತಿಯಾಗುತ್ತಿದೆ.

    ಸಾಮಾಜಿಕ ಜಾಲತಾಣಗಳು ಇವರಿಬ್ಬರ ಮಧ್ಯೆ ಅಂತರವನ್ನು ಕಡಿಮೆ ಮಾಡಿದೆ. ಪರಸ್ಪರ  ಮೊದಲ ಸಲ ವಿದ್ಯಾರ್ಥಿಗಳಿಂದ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಾಗ ಸ್ವಲ್ಪ ಗೊಂದಲ ಉಂಟಾಗಿತ್ತು. ಎಷ್ಟೋ ವರುಷಗಳ ಹಿಂದೆ ಉತ್ತೀರ್ಣರಾಗಿ ಈಗ ಬದುಕಲ್ಲಿ ಬಹು ಮುಂದೆ ಸಾಗಿರುವ  ಅನೇಕ ವಿದ್ಯಾರ್ಥಿಗಳ ಜತೆ ಸಂಪರ್ಕ ಇಟ್ಟುಕೊಳ್ಳಲು ಇದೊಂದೇ ದಾರಿ, ಅವರು ನನ್ನನ್ನು, ನಾನು ಅವರನ್ನು ಸಂಪರ್ಕಿಸಲು ಸುಲಭವಾದ ಪಥ ಇದು ಎಂದರಿವಾದಾಗ ಖುಷಿಯಾಯಿತು. 

    ಆಗೆಲ್ಲಾ ಕ್ಲಾಸ್ ಅಲ್ಲಿ ತರ್ಲೆ ತಂಟೆ ಮಾಡುತ್ತಿದ್ದ ಹುಡುಗ ಹುಡುಗಿಯರು ಈಗ ಜವಾಬ್ದಾರಿಯುಳ್ಳ ವ್ಯಕ್ತಿಗಳಾಗಿ ಬದಲಾಗಿದ್ದು ಸಂತಸದ ವಿಷಯ. ನಮ್ಮ ಮನಸ್ಸಿನ ಮಾತುಗಳನ್ನು ನಿಲುಮೆಗಳಲ್ಲಿ, ಪಟಗಳಲ್ಲಿ ಹಂಚಿಕೊಂಡಾಗ ವಿದ್ಯಾರ್ಥಿಗಳಿಂದ ಬಂದ ಪ್ರತಿಕ್ರಿಯೆ, ಅದನ್ನು ಅವರು ಮುಕ್ತವಾಗಿ, ಸ್ಪಷ್ಟವಾಗಿ ಹೇಳುವ ಪರಿ ಬಹಳ ಖುಷಿ ಕೊಟ್ಟಿತು, ಮೊದಲಾದರೆ ತರಗತಿಯಲ್ಲಿ ತಮ್ಮ ವಾದ ಮಂಡಿಸುವುದಕ್ಕೆ ಹಿಂಜರಿಯುತ್ತಿದ್ದ ಮಕ್ಕಳು ಈಗ ಇಷ್ಟರ ಮಟ್ಟಿಗೆ ಮಾತಾಡಬಲ್ಲರು ಎಂಬುದೇ ಸಂತಸ.

    ಮೊದಲೆಲ್ಲಾ, ಪತ್ರ ಬರೆಯುವಾಗ, ಮಾತನಾಡುವಾಗ ಒಂದು ಭಯಮಿಶ್ರಿತ ಗೌರವ ಸೂಚಿಸುತ್ತಿದ್ದ ಮಕ್ಕಳು ಈಗ ಎದೆಯೆತ್ತಿ ಧೈರ್ಯವಾಗಿ ಮಾತಾಡುವುದನ್ನು ನೋಡಿದರೆ ಮೊದಮೊದಲು ಸ್ವಲ್ಪ ಕಸಿವಿಸಿ ಆಗುತ್ತಿತ್ತು. ಅವರ ಮನಸ್ಸಲ್ಲಿರುವ ಅನುಮಾನಗಳು, ಯೋಚನೆಗಳು ಮುಕ್ತವಾಗಿ ಹಂಚಿಕೊಳ್ಳುವಾಗ ಕೆಲವೊಮ್ಮೆ ಹೇಗೆ ಪ್ರತಿಕ್ರಿಯಸಬೇಕೆಂದು ಗೊತ್ತಾಗದೆ ಚಡಬಡಿಸಿದ್ದೂ ಉಂಟು. ಈಗ ಅದೆಲ್ಲ ಕ್ರಮೇಣವಾಗಿ ಅಭ್ಯಾಸವಾಗತೊಡಗಿದೆ. ಪಾಠಗಳಿಗೆ ಸಂಬಂಧ ಪಟ್ಟಂತೆ ವಾಟ್ಸಾಪಿನಲ್ಲಿ, FB ಯಲ್ಲಿ ಕೇಳುವುದು ಸಾಮಾನ್ಯವಾಗಿಬಿಟ್ಟಿದೆ.

    ಡಿಜಿಟಲ್ ಯುಗದಲ್ಲಿ ಮಾಹಿತಿಗಾಗಿ ಅಧ್ಯಾಪಕರನ್ನು ಅವಲಂಬಿಸುವ ಅಗತ್ಯವಿಲ್ಲ. ನೆಟ್ ಅಲ್ಲಿ ಎಲ್ಲಾ ಮಾಹಿತಿಗಳೂ ಲಭ್ಯವಿದೆ. ಆದ್ದರಿಂದ ತರಗತಿಯಲ್ಲಿ ಬಹಳ ಶ್ರದ್ಧೆಯಿಂದ ಹೊಸ ಆವಿಷ್ಕಾರಗಳ  ಬಗ್ಗೆ ಮಾಹಿತಿ ನೀಡಿ ಅವರ ಮನ ಮುಟ್ಟುವಂತೆ ಪಾಠ ಮಾಡುವುದು ಅನಿವಾರ್ಯ. ಎಷ್ಟೊ ಸಲ ನಾ ಹೊಸದೇನಾದರು ವಿವರಿಸುತ್ತಿದ್ದಾಗ ತರಗತಿಯ ಮಕ್ಕಳು ಬೆಂಚಿನ ಕೆಳಗೆ ಮೊಬೈಲ್ ತೆರೆದು ಅದರ ಬಗ್ಗೆ ಮಾಹಿತಿ ಹುಡುಕುವುದು, ಪ್ರಶ್ನಿಸುವುದು ನನ್ನರಿವಿಗೆ ಬಂದಿದೆ. ಆ ಕ್ಷಣದಲ್ಲಿ ತರಗತಿಯಲ್ಲಿ ಸೆಲ್ ಫೋನ್ ಬಳಕೆ ಮಾಡದು ಎಂದರೆ ಅವರಿಗೆ ನಮ್ಮ ಮೇಲೆ ಒಳ್ಳೆಯ ಭಾವನೆ ಉಂಟಾಗುವುದಿಲ್ಲ. ಅವರ ಪ್ರಶ್ನೆಗಳಿಗೆ ಉತ್ತರಿಸಿ, ಸಾಧ್ಯವಾಗದಿದ್ದರೆ ಆಮೇಲೆ ತಿಳಿದುಕೊಂಡು ಹೇಳುವೆ ಎಂದು ಅಲ್ಲಿಗೆ ಪ್ರಕರಣವನ್ನು ಮುಗಿಸಿದ್ದೇನೆ.

    ಮೊಬೈಲುಗಳ ಬಳಕೆ ಹೆಚ್ಚಾದಂತೆ ಅಧ್ಯಾಪಕರಿಗೆ ಕಷ್ಟವಾಗುತ್ತಾ ಇದೆ. ಮಧ್ಯೆ ಮಧ್ಯೆ ಸಂದೇಶಗಳನ್ನು ಚೆಕ್ ಮಾಡುವುದು, ಮೊಬೈಲಲ್ಲಿ ಇಣುಕುವುದು, ಅದರಿಂದ ಮನಸ್ಸು ಓದಿನಲ್ಲಿ ನಿಲ್ಲದಿರುವುದು, ಇದೆಲ್ಲಾ ಸರ್ವೇಸಾಮಾನ್ಯವಾಗುತ್ತಿದೆ. ಆದರೂ ತಾಳ್ಮೆ ಕಳೆದುಕೊಳ್ಳದೆ ಅವರ ಜತೆ ವರ್ತಿಸಬೇಕಾದ್ದು ಮುಖ್ಯವಾಗುತ್ತದೆ.

    Photo by Timon Studler on Unsplash

    ಸಿಕ್ಕಿದ ಬದುಕನ್ನು ಸಾರ್ಥಕ ಗೊಳಿಸುವುದೇ ಜೀವನದ ಗುರಿ ಆಗ ಬಾರದೇಕೆ?

    ದಿನೇ ದಿನೆ ಕಾಡುತ್ತಿರುವ ಕೊರೋನಾ ಕೆಲವರ ಬದುಕಿಗೆ ಪಾಠ ಕಲಿಸಿದ್ದರೆ, ಮತ್ತೆ ಕೆಲವರಿಗೆ ಬದುಕೇ ಬೇಡ ಅನ್ನುವಷ್ಟರ ಮಟ್ಟಿಗೆ ಸಂಕಷ್ಟ ತಂದೊಡ್ಡಿದೆ.ಕಾಯಿಲೆ ನಡುವೆ ಕಾಡುವ ಮನಸ್ಸಿನ ತೊಳಲಾಟ ಕೂಡಾ ನಿದ್ದೆಗೆಡಿಸಿದೆ.ಇದರಿಂದ ಮಾನಸಿಕ ನೆಮ್ಮದಿ ಕಳೆದುಕೊಂಡ ವರು, ಖಿನ್ನತೆಯಿಂದ ಬಳಲುವವರ ಸಂಖ್ಯೆ ಹೆಚ್ಚಿದೆ.

    ಮನುಷ್ಯ ಜೀವನ ಸಿಕ್ಕಿದ್ದು ಬದುಕಿ ಬಾಳಲು. ಅದನ್ನು ಹೇಗೆ ನಿರ್ವಹಿಸುತ್ತೇವೆ ಎನ್ನುವುದು ನಮ್ಮ ಮನಸ್ಸಿಗೆ ಸಂಬಂಧಿಸಿದ್ದು. ಮನಸ್ಸನ್ನು ನಿಯಂತ್ರಿಸುವ ಕಲೆ ಗೊತ್ತಿದ್ದರೆ ಎಂತಹದ್ದೇ ಸಂದರ್ಭ ಬರಲಿ ಬದುಕಿನ ಬಗೆಗೆನ ಭರವಸೆ ಕಳೆದುಕೊಳ್ಳುವುದಿಲ್ಲ.

    ಎಲ್ಲ ಸಂದರ್ಭಗಳಲ್ಲೂ ಆ ಕ್ಷಣದಿಂದ ಬಚಾವಾಗುವುದೊಂದೇ ಜೀವನದ ಗುರಿಯಾಗಿರುತ್ತದೆ. ಕಷ್ಟದ ಸಂದರ್ಭಗಳಲ್ಲಿ ಕಷ್ಟದಿಂದ ಪಾರಾದರೆ ಸಾಕು ಎಂದುಕೊಂಡಿರುತ್ತೇವೆ. ಆದರೆ ಜೀವನ ಅಂದರೆ ಅಷ್ಟೇ ಅಲ್ಲ. ಒಂದು ಕ್ಷಣ ಆ ಘಟನೆಯಿಂದ ತಪ್ಪಿಸಿಕೊಳ್ಳುವುದು ಮಾತ್ರವಲ್ಲ, ಅದರೊಂದಿಗೆ ಆಂತರಿಕ ನೆಮ್ಮದಿಯ ಶೋಧವೂ ಇರಬೇಕು. ಆಂತರಿಕ ನೆಮ್ಮದಿ ಕಂಡುಕೊಂಡಾಗಲೇ ಶಾಶ್ವತ ಸುಖ ಅನುಭವಿಸುವುದಕ್ಕೆ ಸಾಧ್ಯ. ಆಂತರಿಕ ನೆಮ್ಮದಿ ಬೇರೆಲ್ಲೋ ಕಂಡುಕೊಳ್ಳುವುದಕ್ಕೆ ಸಾಧ್ಯ ಇಲ್ಲ. ನಮ್ಮ ಮನಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಂಡು, ಸಂದರ್ಭಗಳಿಗೆ ಪ್ರತಿಕ್ರಿಯಿಸುವ ಜಾಣ್ಮೆಯಿದ್ದರೆ ಮಾತ್ರ ಆಂತರಿಕ ಶಾಶ್ವತ ಶಾಂತಿಯನ್ನು ಕಂಡುಕೊಳ್ಳಬಹುದು.

    ಯಾವಾಗ ನಮ್ಮನ್ನು ನಾವು ಇತರರೊಂದಿಗೆ ಹೋಲಿಸಿ ನೋಡಿಕೊಳ್ಳುತ್ತೇವೆಯೋ ಅದರಿಂದ ಬೇಸರ ಕಾಡುವುದು.ಇನ್ನು ಕೆಲವೊಮ್ಮೆ ನಮ್ಮ ವೈಫಲ್ಯತೆಗೆ ಸದ್ಯದ ಪರಿಸ್ಥಿತಿ ಕಾರಣ ಎಂದುಕೊಳ್ಳುತ್ತೇವೆ. ಆದರೆ ಪರಿಸ್ಥಿತಿಗಳು ಸೋಲಿಗೆ ಕಾರಣವಲ್ಲ. ನಮ್ಮ ಮನಸ್ಸು. ಯಾಕೆಂದರೆ ಯಾವುದೇ ಒಂದು ಸಂದರ್ಭದಲ್ಲಿ ನಾವು ಪರಿಸ್ಥಿತಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತೇವೆ ಎಂಬುದು ಮುಖ್ಯ.

    ಗೆಲುವು ಅಥವಾ ಸೋಲು ಯಾವುದೇ ಆಗಿರಲಿ, ನಮ್ಮ ನಡೆವಳಿಕೆಗಳಿಂದಲೇ ಬದುಕು ನಿರ್ಧರಿತವಾಗಿರುತ್ತವೆ.ಜೀವನದಲ್ಲಿ ಎಲ್ಲವೂ ಇದೆ ಅಂದುಕೊಂಡಾಗ ಅಥವಾ ಕೊರತೆಗಳು ಇಲ್ಲದೇ ಹೋದಾಗ ಅವರಿಗೆ ಸೋಲು ಎಂಬುದು ಕಾಡುವುದಿಲ್ಲ. ಯಾವಾಗ ತಮ್ಮನ್ನು ತಾವು ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಾರೋ ಆಗ ತಾನು ಸೋಲಿನ ಟ್ರ್ಯಾಕ್‍ನಲ್ಲಿದ್ದೇನೇನೋ ಎಂದೆಣಿಸುವುದು. ಹೋಲಿಕೆ ಮಾಡಿಕೊಳ್ಳುವುದರ ಮೂಲಕ ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳುವುದಕ್ಕೋಸ್ಕರ ಮಾಡಿಕೊಳ್ಳಬೇಕೇ ವಿನಾಃ ಅದು ತಮ್ಮ ಶಕ್ತಿಯನ್ನು ಕುಗ್ಗಿಸುವಂತಿರಬಾರದು.

    ನಮ್ಮ ಮನಸ್ಥಿತಿಯೇ ಎಲ್ಲದಕ್ಕೂ ಕಾರಣ. ನಾವು ಸಕಾರಾತ್ಮಕವಾಗಿದ್ದರೆ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ. ಇಲ್ಲವಾದರೆ ನಕಾರಾತ್ಮತೆಯ ಗೂಡಾಗುತ್ತದೆ. ಮನಸ್ಸೇ ಆಂತರಿಕ ಸ್ವರ್ಗವನ್ನು ಅಥವಾ ನಮ್ಮೊಳಗಿನ ನರಕವನ್ನು ಸೃಷ್ಟಿಸುವುದು.

    ಕೆಲವೊಂದು ಸಂದರ್ಭಗಳಲ್ಲಿ ಪ್ರಪಂಚವೇ ತಲೆಯ ಮೇಲೆ ಬಿದ್ದಂಥ ಘಟನೆಗಳು ನಡೆಯುವುದು ಸಹಜ. ಅದು ಜಗತ್ತಿನ ನಿಯಮ. ನಕಾರಾತ್ಮಕವಾಗಿ ಸ್ವೀಕರಿಸಿದರೆ ಇಲ್ಲದ ನೋವು ಹತಾಶೆಗಳು ಕಾಣಿಸಿಕೊಳ್ಳುವುದು. ಇದು ದೈಹಿಕವಾಗಿ ಘಾಸಿಗೊಳಿಸದೇ ಇದ್ದರೂ ಮನಸ್ಸಿಗೆ ನೋವನ್ನುಂಟು ಮಾಡುವುದು ಸಹಜ. ಅಂದರೆ ಒಂದು ಸಂದರ್ಭವನ್ನು ಮನಸ್ಸು ಯಾವ ರೀತಿ ಸ್ವೀಕರಿಸುತ್ತದೆ ಎಂಬುದರ ಮೇಲೆ ಫಲಿತಾಂಶ ನಿರ್ಣಯವಾಗುತ್ತದೆ.ಬದುಕಿನೊಂದಿಗೆ ಹೋರಾಟ ನಿರಂತರ. ಅದನ್ನು ಎದುರಿಸಬೇಕೇ ವಿನಃ ಅದರಿಂದ ತಪ್ಪಿಸಿ ಕೊಳ್ಳುವ ಪ್ರಯತ್ನ ಮಾಡಬಾರದು.”ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಿ ಕೊಳ್ಳದಿರಿ ಹುಚ್ಚಪ್ಪಗಳಿರಾ” ಎಂದಿದ್ದಾರೆ ಪುರಂದರ ದಾಸರು. ಮತ್ತೆ ಮನುಷ್ಯ ಜನ್ಮ ದಕ್ಕುವುದೋ ಇಲ್ಲವೋ ಗೊತ್ತಿಲ್ಲ. ಸಿಕ್ಕಿದ ಬದುಕನ್ನು ಸಾರ್ಥಕ ಗೊಳಿಸುವುದೇ ಜೀವನದ ಗುರಿ ಆಗ ಬಾರದೇಕೆ?

    Photo by Luca Upper on Unsplash

    error: Content is protected !!