28 C
Karnataka
Monday, April 21, 2025
    Home Blog Page 165

    ಉಗುಳು ವೀರರ ಜಗದಲ್ಲಿ..

    ಹೊರಗೆ ಹದವಾದ ಬಿಸಿಲು.

    ತೀರ ವೇಗವೂ ಅಲ್ಲದ ಮಂದವೂ ಅಲ್ಲದ ಹಾಗೇ ಚಲಿಸುತ್ತಿರುವ ಬಸ್ಸು.ಸಹಪಯಣಿಗರ ಸದುದ್ದೇಶ ಭರಿತ ಮೌನ.ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತು ಓಡುವ ಗಿರಿ, ಮರ ಕೆರೆಗಳನ್ನು ಕಣ್ತುಂಬಿಕೊಳ್ಳುತ್ತಾ,ಫೋರ್ಲೇನ್ ರಸ್ತೆಯ ನಡುಮಧ್ಯದ ಗ್ರೀನ್ ಸ್ಪೇಸಿನಲ್ಲಿ ನಿಚ್ಛಂಪೊಸತು ಎಂಬಂತೆ ಗಂಟೆಗಂಟೆಗೂ ಹೊಸ ಹೂವು ಅರಳಿಸಿಕೊಂಡು ನಗುವ ಕಣಗಿಲ ಹೂವ ರಾಶಿಯನ್ನು ಸವಿಯುತ್ತಾ ,ಹೊಳೆದ ಯಾವುದೋ ಸಾಲಿಗೆ ಮುದಗೊಂಡು ಮನಸಲ್ಲೇ ಮುಂದುವರೆಸುತ್ತಾ ಮುಗುಳ್ನಗುವೊಂದನ್ನು ಹೊದ್ದು ಸಾಗುತ್ತಿರುವ ಸಮಯ. ಹಾಸನದಿಂದ ಬೆಂಗಳೂರು ಮಹಾನಗರಿಗೆ ನನ್ನ ಪಯಣ.ಬಸ್ಸಿನ ಎಂಜಿನ್‌ ಸದ್ದೂ ಮೃದುವಾದ ಮುದವಾದ ಸಂಗೀತದಂತೆ ಅನಿಸುತ್ತಿರುವ ದಿವ್ಯ ಘಳಿಗೆಯದು.

    ಇಂತಹದೊಂದು ಸುದಿನ ಸುಮೂಹರ್ತದಲ್ಲಿ ಮುಂದಿನ ಸೀಟಿನಿಂದ
    “ಕ್ಯಾ…ವ್ಯಾ..ಕ್್ಕ್್್ಕ್್್್ಕ್್” ಎನ್ನುವ ಈ ಹಿಂದೆ ಎಂದೂ ಕೇಳಿರದಂತಹ ,ಕಂಡಿರದಂತಹ ಕ್ಯಾಕರಿಸಿದ ಸದ್ದಿಗೆ ಬಾಂಬು ಬಿದ್ದವಳಂತೆ ಭಯಭೀತಳಾಗಿ ಮುಂದಿನ ನೇರ ಪರಿಣಾಮದ ಗಾಬರಿಯಲ್ಲಿ ಕಿಟಿಕಿ ಗ್ಲಾಸು ಮುಚ್ಚಬೇಕೆಂದು ನನ್ನ ಬಲಗೈ ಗ್ಲಾಸಿನ ಮೇಲಿಡುವುದಕ್ಕೂ ,ಮುಂದಿದ್ದ ವ್ಯಕ್ತಿ ಕತ್ತುಹೊರಚಾಚಿ ‘ಕ್ಯಾಕ್್್್್್’ ಅಂತ ತುಪ್ಪುವುದಕ್ಕೂ ಸರಿಯಾಗಿಹೋಯ್ತು.

    ಥಿಯೇಟರ್ ಗೆ ಹೋದರೆ ಮನೆಯಿಂದ ಒಂದು ದುಪ್ಪಟ್ಟಾ ಒಯ್ದು ಸೀಟಿನ ಮೇಲೆ ಹಾಕಿಕೊಳ್ಳುವ,ಹೋಟೆಲಿಗೆ ಹೋಗಲೇ ಬೇಕಾದಾಗ ಮಾತ್ರ ಹೋಗಿ ,
    ಹೋದರೂ ತಟ್ಟೆ ಲೋಟ ಎಲ್ಲವನ್ನೂ ಹತ್ತು ಸರ್ತಿ ಟಿಷ್ಯುವಿನಲ್ಲಿ ಸ್ವಚ್ಛ ಗೊಳಿಸಿಕೊಳ್ಳುವ,ಮನೆಯಲ್ಲಿ ಮಕ್ಜಳಿಗೂ ಗಂಡನಿಗೂ ಕೆಮ್ಮುವುದಕ್ಕೂ ಸೀನುವುದಕ್ಕೂ ಬಿಗಿ ಕಾನೂನು ಕಟ್ಟಳೆ ರೂಪಿಸಿರುವ ಘನ ಮಹಿಮೆಯ ಮಹತ್ತುಳ್ಳ ನನ್ನ ಕೈ ಬೆರಳಿನ ಕಡೆಗೆ ಮುಂದಿದ್ದ ವ್ಯಕ್ತಿಯ ಶಿರದಿಂದ ಕಿರುಬೆರಳಿನವರೆಗಿನ ನರನಾಡಿಗಳಲ್ಲಿಸಂಚಯಿತವಾಗಿದ್ದ ಕಫದ ತೊಪ್ಪೆಯ ಒಂದು ತುಣುಕು ಹಾರಿ ಬಂದು ಕುಳಿತೇ ಬಿಟ್ಟಿತು.

    ನನ್ನ ಬಿಳಿಹರಳಿನ ಉಂಗುರ ನೀಟಾಗಿ ಕತ್ತರಿಸಿಕೊಂಡಿದ್ದ ಉಗುರು
    ಪದೇಪದೇ ಸ್ಯಾನಿಟೈಸ್ ಮಾಡಿಕೊಂಡಿದ್ದ ಬೆರಳುಗಳ ಮಹತ್ತನ್ನೂ ಗಮನಿಸದೆ ಕುಳಿತ ಆ ತೊಪ್ಪೆಯನ್ನು ಕ್ಷಣ ಗಾಬರಿಯಿಂದ ನೋಡಿದೆ.
    ಹೃದಯ ಶ್ವಾಸಕೋಶ, ಅನ್ನನಾಳದ ಸಮಸ್ತ ಪದಾರ್ಥವೂ ಕುಳಿತ ಆ ತೊಪ್ಪೆಯ ತುಣುಕಿನಿಂದ ಹೇವರಿಕೆಗೊಂಡು ಹೊರ ಬರಲು ಬಯಸಿ ವಾಕರಿಕೆ ಶುರುವಾಗುವ ಹೊತ್ತಿನಲ್ಲೇ ಇನ್ನೂ ಮುಚ್ಚದೇ ಇದ್ದ ನನ್ನ ಕಿಟಿಕಿಯ ಮುಂಬಾಗದ‌ ಬದಿಯಿಂದ ಎರಡೇ ಸೆಕೆಂಡಿನೊಳಗೆ ಮತ್ತದೇ ಕತ್ತು ಹೊರಬಂದು ಮತ್ತೊಮ್ಮೆ ಕರ್ಣಕಠೋರ ಸದ್ದಿನೊಡನೆ ತುಪ್ಪಿದ್ದು ನನ್ನ ಗೋಲ್ಡ್ ರೇಡಿಯೆನ್ಸ್ ಕ್ರೀಮು ಲೇಪಿಸಿ ಸಣ್ಣಗೆ ಹೊಳೆಯುತ್ತಿದ್ದ ಕೆನ್ನೆಯ ಮೇಲೆ ತುಂತುರು ಸೋನೆ ಮಳೆಯಂತೆ ಸಿಡಿದು ಬಿಟ್ಟಿತು.

    ನಖಶಿಖಾಂತ ಕೊಳಕಿನ ಕೊಳದಲ್ಲಿ ಅದ್ದಿದಂತಾಗಿ ಕೈ ಬೆರಳ ಮೇಲಿದ್ದ ತೊಪ್ಪೆ ತುಣುಕನ್ನು ಒರೆಸಿಕೊಳ್ಳಲು ಟಿಷ್ಯೂ ಹುಡುಕುವುದಕ್ಕೆ ಮತ್ತದೇ ಕೈಯ ನೆರವು ಪಡೆಯಲು ಮನಸ್ಸು ಒಪ್ಪದೆ, ಮುಖದ ಮೇಲಿನ ಕಫದ ಸೋನೆಗೆ ವ್ಯಾಕರಿಕೆ,ಕ್ಯಾಕರಿಕೆ,ಹುಃಕರಿಕೆ ,ಶೋಕ ಎಲ್ಲವೂ ಒಟ್ಟಿಗೆ ಆರಂಭವಾಗಿ ಎದುರು ಸೀಟಿನ ವ್ಯಕ್ತಿಗೆ ನಾನೂ ತುಪ್ಪೆ ಬಿಡುವ ಭರದಲ್ಲಿ ಎದ್ದುನಿಂತೆ.

    ಮುಖದ ಸೋನೆ ,ಬೆರಳ ತುಣುಕನ್ನು ಹತ್ತಾರು ಟಿಷ್ಯೂಗಳನ್ನು ಖರ್ಚು ಮಾಡಿ ಒರೆಸಿ ಹಾಕಿದರೂ ಮಹಾಹೇಸಿಗೆಯೊಂದರಲ್ಲಿ ಬಿದ್ದು ಎದ್ದಂಥ ಒದ್ದಾಟದಲ್ಲಿ
    ಕ್ರೋಧಾನ್ವಿತಳಾಗಿ ಗಂಟಲು ಸರಿ‌ಪಡಿಸಿಕೊಂಡೆ.

    “ಏನಯ್ಯಾ..ಮನುಷ್ಯತ್ವವೇ ಇಲ್ಲವೆ ನಿಮಗೆ.

    ಉಗುಳ ಬೇಕೆಂದ್ರೆ ಹಿಂದೆಮುಂದೆ ಕುಳಿತವರ ಪರಿಜ್ಞಾನ ಇಲ್ಲವೇ.?

    ನಿಮಿಷಕ್ಕೊಮ್ಮೆಉಗಿವ ಚಟವಿದ್ರೆ ಸರ್ಕಾರಿ ಬಸ್ ಯಾಕ್ರೀ ಹತ್ತಿದ್ರಿ.?
    ಹೋಗಬೇಕಿತ್ತು ದಾರಿಯುದ್ದಕ್ಕೂ ತುಪ್ಪಿಕೊಂಡು ನಿಮ್ಮ ಸ್ವಂತ ಗಾಡಿಯಲ್ಲಿ..
    ಯಾರು ಬೇಡಾಂದಿದ್ರು..?”

    ಮೈಮನಸ್ಸಿನ ಕೋಪವನ್ನು ಧ್ವನಿಯ ಮೂಲಕ ಹೊರಹಾಕಲು ಅಶಕ್ಯವೆನಿಸಿದರೂ ಶಕ್ತಿಮೀರಿ ಯತ್ನಿಸುತ್ತಿರುವಾಗಲೇ ಆ ಉಗುಳು ವೀರ ಮಾತ್ರ ಏನೂ ಕೇಳಲೇ ಇಲ್ಲವೆಂಬಂತೆ,ತನಗದು ಸಂಬಂಧಿಸಿಯೂ ಇಲ್ಲವೆಂಬಂತೆ ಶ್ವಾಸಕೋಶ ಖಾಲಿಯಾದ ಸುಖದ ನಿರಾಳತೆಯಲ್ಲಿ ನನ್ನೊಮ್ಮೆ ಕಡೆಗಣ್ಣಿನಲ್ಲಿ ನೋಡಿ ಮತ್ತೆ ಅರ್ದನಿಮೀಲಿತನಾದ.

    ಈ ಘನಘೋರ ಹೇಸಿಗಿ ಕೆಲಸ ಮಾಡಿದ್ದನ್ನು ವಿರೋಧಿಸಲು ಸಹಪಯಣಿಗರ ನೆರವು ಸಿಗಬಹುದೇ ಅಂತ ಸುತ್ತಾ ನೋಡಿದೆ. ಮುಕ್ಕಾಲು ಮಂದಿ‌ ಸುಖನಿದ್ರೆಯಲಿದ್ದರೆ ಉಳಿದವರು ಅಚಾನಕ್ಕು‌ಆರಂಭವಾದ ಗಲಾಟೆಗೆ ಎಚ್ಚರಾಗಿ ಮಂಪರು ಮೆತ್ತಿದ ನೋಟದಲ್ಲಿ ನನ್ನೊಮ್ಮೆ ನೋಡಿ ಯಥಾ ಸ್ವಲೋಕಕ್ಕೆ ತೆರಳಿ ತಣ್ಣಗಾದರು.ಈ ನಡುವೆ ಬಸ್ಸು ಹತ್ತಿದಾಗಿಂದ ನನ್ನನ್ನೇ ನೋಡುತ್ತಿದ್ದ ಆ ಚಲುವ ಮಾತ್ರ ನಿಂತಿರುವ ನನ್ನ ಪೋಸು ನೋಡಲೆಂದೇ ಇಷ್ಟು ಹೊತ್ತು ಕಾದಿದ್ದವನಂತೆ ನೆಟ್ಟಗೆ ಕುಳಿತ.ಅಸಡ್ಡೆಯಲ್ಲಿ ಬಿಗಿದ ತುರುಬಿನಿಂದ ಅವನಿಗೆ ಕಾಣುವ ನನ್ನ ನಡುವಿನವರೆಗೂ ನೋಡಿ ಸ್ಟೈಲಾಗಿ ಕಣ್ಣು ಮಿಟುಕಿಸಿಯೂಬಿಟ್ಟ.

    ಅರೆ..ತುಪ್ಪಿದವನನ್ನು ಮಾತಿನಲ್ಲಿ ತದುಕಲು ಎದ್ದು ನಿಂತವಳಿಗೆ ಮತ್ತೊಂದು ಬಾಣ ಚುಚ್ಚಿದಂತಾಗಿ‌ ಕುಕ್ಕರಿಸಿದರೂ‌ ಮನುಷ್ಯ ಸಹಜ ಬಯಕೆ. ಮತ್ತೊಮ್ಮೆ ನೋಡಿದೆ..ನನ್ನ ರಾಣಿ ಚೆನ್ನಮ್ಮ ಪೋಸನ್ನು ಬಹಳ ಮೆಚ್ಚಿಕೊಂಡವನಂತೆ ಸಣ್ಣಗೆ ನಕ್ಕ.ನನ್ನ ಸೋನೆ ಸಿಡಿದ ಮುಖದಲ್ಲಿ ಸಣ್ಣಗೆ ಬೆವರೊಡೆಯಿತು.

    ಅದೆಲ್ಲಾ ಅಂತಿರಲಿ.

    ನನ್ನ ಬೆರಳು ಮತ್ತು ಮುಖದ‌‌ ಸೋನೆ ತೊಪ್ಪೆಗಳು ಇನ್ನೂ ಅಲ್ಲೇ ಇವೆಯೇನೋ ಅನಿಸುವಂತಾಗಿಬಿಟ್ಟಿದೆ ಮನಸ್ಸಿಗೆ.ಮನೆಗೆ ಹೋದವಳೇ ನನ್ನ ಚರ್ಮದ ಒಂದು ಲೇಯರನ್ನೇ ‌ಕಿತ್ತುಹಾಕುವವಳಂತೆ ಸೀಗೆಪುಡಿ ತಿಕ್ಕಿ ,ಡೆಟಾಲ್ ಸುರಿದು,ಕುದಿ ಕುರಿ ನೀರನ್ನು ಸುರಿಸುರಿದುಕೊಂಡು‌ ಮಿಂದರೂ‌
    ಮನಸ್ಸಿಗೆ ಸಮಾಧಾನ ಆಗಲಿಲ್ಲ ಎನ್ನಿ.

    ಈ ಘಟನೆಯ ನಂತರ ಈ ಉಗುಳುವೀರರ ಕುರಿತು ಆರಂಭವಾದ ಅಸಹನೆ ಬಸ್ಸಿನಲ್ಲಿ ಸೀಟು ಹಿಡಿಯುವಾಗ ಮುಂದಿನವರ,ಹಿಂದಿನವರ,ಪಕ್ಕದವರ ಮೈಯಿ ಬಾಯಿ‌ ಕೈಯಿ,ಆರೋಗ್ಯ, ಅನಾರೋಗ್ಯಗಳ ವರದಿಯನ್ನು ಕಣ್ಣಲ್ಲೇ ಒಮ್ಮೆ ತಯಾರು ಮಾಡಿ ಯೋಗ್ಯವೆನಿಸಿದರೆ ಮಾತ್ರ’ಪವಡಿಸು ಪರಮಾತ್ಮ’
    ಹಂತಕ್ಕೆ ನನ್ನನ್ನು ತಂದಿಟ್ಟಿದೆ.

    ನನ್ನ ವಕ್ರ ಅದೃಷ್ಟಕೆಂಬಂತೆ ನಮ್ಮದೇ ಕಾರಿನಲ್ಲಿ ಹೋಗುವಾಗಲೂ ಎದುರು ಸಿಗುವ ಪಾದಾಚಾರಿಗಳು,ಬೈಕಿಗರು,ಸ್ಟೀರಿಂಗ್ ತಿರುಗಿಸುವವರಿಗೂ ನನ್ನ ನೋಟ ದಕ್ಕಿದೊಡನೆ ಗಂಟಲಲ್ಲಿ ಕಿಚ್ ಕಿಚ್ ಶುರುವಾಗಿ ತುಪ್ಪುವ ಅವಸರವಾಗ್ತದೆ.

    ಜೊತೆಯಲ್ಲಿದ್ದವರಿಗೆ ಕಾಣದ ಈ ಪೀಕುವ ದೃಶ್ಯ ನನ್ನ ಕಣ್ಣಿಗೆ ಮಾತ್ರ ಬಿದ್ದು ನನ್ನ ಸುಖಪಯಣವೂ ಪೀಕುಶೋಕದಲ್ಲಿ ಮುಳುಗಿಹೋಗುತ್ತದೆ.
    ಇನ್ನು ಕೆಲವರಂತೂ ತಾವು ಈ ‌ಮನುಷ್ಯ ಲೋಕದವರೇ ಅಲ್ಲವೇನೋ ಎಂಬಂತೆ ದೊಡ್ಡ ದೊಡ್ಡ ಬಿಳಿ ಹಳದಿ ತೊಪ್ಪೆ ಗುಪ್ಪೆಗಳನ್ನು ನಿಂತಲ್ಲಿಂದ ಅಲುಗಾಡದೇ ಸುತ್ತಲೂ ತುಪ್ಪಿಕೊಳ್ಳುತ್ತಾರೆ.

    ಜೊತೆಗೆ ಅದೇನು ಅಂತಹ ಘನಂದಾರಿ ಗಲೀಜಲ್ಲವೇನೋ ಎಂಬಂತೆ ಅಕ್ಕಪಕ್ಕ ಹಾದುಹೋಗುವವರಿಗೆ ದಾರಿ ಬಿಡದೆ,ತಾವು ತುಪ್ಪಿದ್ದರ ಮೇಲೆ ನಡೆದುಹೋದರೆ ಅವರ ಜನ್ಮ ಪರಮ ಪಾವನವಾಗುವುದೇನೋ ಎಂಬಂತ ಕೃತಕೃತ್ಯ ಭಾವದಲ್ಲಿ ಮತ್ತಷ್ಟು ಅದೇ ಜಾಗದಲ್ಲಿ ಮೊಳೆಕೆಯೊಡೆದಂತೋ, ಮೊಳೆ ಹೊಡೆದಂತೋ ನಿಂತು ಬಿಡುತ್ತಾರೆ.ಇದನ್ನೆಲ್ಲಾ ನೋಡಿಯೇ ಸಂಭ್ರಮಿಸಬೇಕು.(?)

    ಹೋಟೆಲುಗಳಲ್ಲಿ ಈ ಉಗುಳುವೀರರ ದರ್ಬಾರಿಗೆ ಹೊಸ ಕಳೆ.ಓಪನ್ ದರ್ಶಿನಿಗಳಲ್ಲಂತೂ ಕೈ ತೊಳೆಯುವ ಸಿಂಕೂ ಅಲ್ಲೇ ಇದ್ದುದರ ಪರಿಣಾಮ ಊಟಕ್ಕೂ‌ ಮೊದಲು ಮತ್ತು ನಂತರ ತಮ್ಮ ಬಾಯಿ ಗಂಟಲು ಅನ್ನನಾಳ ಕ್ಕೂ ಕೆಳಗಿಳಿದು ಸಂಚಯಿತ ಪದಾರ್ಥಗಳನ್ನು ಚಿತ್ರ ವಿಚಿತ್ರ ಸದ್ದಿನೊಂದಿಗೆ ಹೊರಹಾಕಿ ಕೊನೆಯ ದಾಗಿ ಮೂಗಿನ ಶುದ್ದತೆಗೂ ಗಮನ ಹರಿಸುವ ಅವರನ್ನು ಕಂಡಾಗ ಸ್ವಚ್ಛ ಭಾರತದ ಕಲ್ಪನೆ ಎಷ್ಟೊಂದು ಯಶಸ್ವಿಯಾಗಿ ಕಾರ್ಯಗತವಾಗಿದೆ ಎನಿಸ್ತದೆ.ಅಲ್ಲಿ ನಿಂತುಕುಂತು ತಿನ್ನುತ್ತಿರುವವರ ಕುರಿತು ಮರುಕವೂ ಆಗ್ತದೆ ಅನ್ನಿ.

    ಗಲ್ಲಿಗಳಲ್ಲಿ,ತಿರುವುಗಳಲ್ಲಿ, ಸರ್ಕಲ್ಲುಗಳಲ್ಲಿ,ರಸ್ತೆಗಳಲ್ಲಿ ಉಗುಳು ವೀರರ ದಾಳಿಗೆ ಬಲಿಯಾಗುವುದು ನಗರವಾಸಿಗಳಿಗೆ ತೀರಾ ಸಹಜವಾಗಿರುವಾಗ ನನ್ನ ‘ಛೀಈಈ..ವ್ಯಾಕ್..’ಎನ್ನುವ ಸಶಬ್ದ ಹೇಸಿಕೊಳ್ಳುವ ಬಗೆ ನಗರಿಗರಿಗೆ ಅಷ್ಟೇನೂ ಸಮಂಜಸವಾಗಲಾರದೇನೊ.

    ಇನ್ನು ಈ ಪೀಕುಗಾರರಿಗಾಗಿಯೇ ಇರುವ ಬರಹಗಳು , ಫಲಕಗಳು ಇನ್ನೂ ಪುಲಕ ಕೊಡುತ್ತವೆ. ಅಪರೂಪಕ್ಕೆ ಟ್ರೈನು ಹತ್ತುವ ನಾನು ಒಮ್ಮೆ ಅಲ್ಲಿ ಕಂಡ “ಟ್ರೈ ನಿನ ಒಳಗೆ ಉಗಿಯುವಂತಿಲ್ಲ’ ಬರಹ ನೋಡಿ ಗಾಬರಿಯಾಗಿ ಎಲ್ಲಿ ಕೂರುವುದು,ಎಲ್ಲಿ ನಿಲ್ಲುವುದು,ಎಲ್ಲಿ ಹಿಡಿಯುವುದು ,ಎಲ್ಲಿ ಮಡಿಯುವುದು (ಛೆ..ಪ್ರಾಸಕ್ಕೆ ಬಂದ್ ಬಿಡ್ತು)ತಿಳಿಯದೆ ಪರದಾಡಿದ್ದೆ.
    ಈಗಲೂ ರೈಲು ಪ್ರಯಾಣದಲ್ಲಿ ಈ ಬರಹದ ನೆನಪಾಗಿ ಗ್ಲಿಟರ್ ಕ್ರಿಮು ಲೇಪಿಸಿಕೊಂಡು ಹೊಳೆಯುವ ನನ್ನ ‌ಮುಖ ಹುಳ್ಳಗಾಗುತ್ತದೆ.

    ಒಮ್ಮೆ ಬೆಂಗಳೂರೆಂಬ ಮಹಾನಗರದಲ್ಲಿ ಶಾಪಿಂಗಿನ‌ ಸಲುವಾಗಿ ಬೀದಿ ಪಾಲಾದ ಸಮಯ. ನನ್ನ ಹಾದುಹೋದ ಸ್ಕೂಟರಿನವನೊಬ್ಬ ಕ್ಯಾಕರಿಸಿ’ಕತ್ರಿಗುಪ್ಪೆ’ ಎನ್ನುವ ಬೋರ್ಡುಗಲ್ಲಿಗೆ ತುಪ್ಪಿದಾಗ ಆ ತೊಪ್ಪೆ ನೇರ ‘ಕತ್ರಿ’ಯ‌ಮೇಲೆ ಆಸೀನವಾಗಿ ‘ಗುಪ್ಪೆ’ಯನ್ನು ‌ಮಾತ್ರ ಕಾಣಗೊಟ್ಟಿತು ಎಂದರೆ ಆ ಉಗುಳು ವೀರನ‌ ಪರಾಕ್ರಮ ವನ್ನು ಊಹಿಸಿಕೊಳ್ಳಬಹುದು.
    ನನ್ನೆದುರೇ ನಡೆದ ಈ ದಾಳಿಗೆ ನನ್ನೊಳಗಿಂದಲೂ ದ್ರವವೊಂದು ಉಕ್ಕಿಬಂದು ಅಲ್ಲೇ ಬದಿಯಲ್ಲಿ ಕಂಡ ಡ್ರೈನೇಜಿಗೆ ತುಪ್ಪುವ‌ ತೀವ್ರ ತುಡಿತವನ್ನು ಪೂರೈಸಿಕೊಳ್ಳುವ ‌‌ಮೊದಲು ಯಾರಾದರೂ ನೋಡ್ತಿದ್ದಾರಾ ಅಂತ ಸುತ್ತ ನೋಡಿ ‌ಪರೀಕ್ಷಿಸಿಕೊಂಡಾಗ ಡ್ರೈನೇಜಿನ ಪಕ್ಕದ ಗೋಡೆ ಮೇಲೆ‌ ಕಂಡಿದ್ದು
    ” ಇಲ್ಲಿ ಉಗುಳುವವರು ಮಲ ತಿಂದಂತೆ” ಎಂಬ ಬರಹ.!!
    ಮತ್ತೆಂದೂ ನನ್ನ ಬಾಯಿ ದ್ವಾರದಿಂದ ಹೊರಬರುವುದಿಲ್ಲವೆಂಬಂತೆ ಒಳಹೋದ ದ್ರವ ಹುಟ್ಟಿಸಿದ ತಳಮಳವನ್ನು ಯಾವ ಪದ ಬಳಸಿ ಇಲ್ಲಿ ಬರೆದರೂ‌ ನಿಮಗೂ ತುಪ್ಪುವ ತೀವ್ರ ತುಡಿತವುಂಟಾಗಿ..ಆಮೇಲೆ…

    ಸದಾ ಹಚ್ಚ ಹಸುರು, ಶುಭ್ರ ಗಾಳಿ,ಮಂಜುಹೊತ್ತ ಗರಿಕೆ,ಪುಟಾಣಿ ಇರುವೆ ಗೂಡು, ಕಲರವಿಸುವ ಹಕ್ಕಿ,ಅಳಿಲು ನವಿಲುಗಳೇ ಯೋಗಕ್ಷೇಮ ವಿಚಾರಿಸಿಕೊಳ್ಳುವ ಪುಟ್ಟ ಹಳ್ಳಿಯಲ್ಲಿ ನನ್ನ ವಾಸ.
    ಇಂತಹ ಚಂದದೂರಿನಲ್ಲಿ‌‌ ನನ್ನ ಇರಿಸಿದ್ದಕ್ಕಾಗಿ ದೇವರಿಗೆ ಆಗಾಗ ಕೈಮುಗಿದರೂ ಅವನೇನು ಅಷ್ಟೊಂದು ಕರುಣಾಮಯಿಯಾಗಲಿಲ್ಲ‌ ನನ್ನ ಪಾಲಿಗೆ.

    ಕಾರಣ..

    ದೊಡ್ಡದಾದ ಒಡಮನೆಯ ಎಡಬಾಗದಲ್ಲಿ ನಮ್ಮ ವಾಸ್ತವ್ಯ.
    ಈಗೈದು ವರ್ಷಗಳ ಹಿಂದೆ ನನ್ನ ಮಲಗು ಕೋಣೆಯ ನೇರ ಎದುರಿಗಿದ್ದ ಸಣ್ಣ ತೋಟವನ್ನು ನೆಲಸಮ ಮಾಡಿ ಮನೆಯೊಂದು ತಲೆಯೆತ್ತಿದೆ.
    ಅಚೀಚೆ ಮನೆಯ ಈ ಇಬ್ಬರು ಗಂಡಸರೂ ಆಗಾಗ ಕ್ಯಾಕರಿಸುವ ವ್ಯಾಕರಿಸುವ ಘನಘೋರ ಸದ್ದು ವಾಚಮಗೋಚರ ನನ್ನ ಕಿವಿಗೆ ಬಿದ್ದು
    ‘ದೂರ ಬಯಲಿನಲ್ಲಿ ಒಂದು ‌ಮನೆಯಿರಬೇಕು’ ಎನ್ನುವ ಅಸೆ ದಿನೇದಿನೇ ಗಟ್ಟಿಯಾಗುತ್ತಿದೆ.. ಇದಕ್ಕಿಂತಲೂ ದೊಡ್ಡ ಸಂಗತಿಯೆಂದರೆ ಈ ಆಚೀಚೆ ಮನೆಯ ಗಂಡಸರಿಗೆ ನನ್ನ ಊಟತಿಂಡಿಯ ಕರಾರುವಾಕ್ಕು ಸಮಯ ಗೊತ್ತಾಗಿ ಅದೇ ಹೊತ್ತಿನಲ್ಲಿ ಕ್ಯಾಕರಿಸಲು ಮೊದಲಿಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಊಟಕ್ಕೂ‌ ಮೊದಲು ಆಚೆ ಬಗ್ಗಿನೋಡಿ ಅವರವರ ಶೆಡ್ಡಿನಲ್ಲಿ ಕಾರುಗಳು ಇಲ್ಲದಿದ್ದರೆ ನಿರಾಳವಾಗಿ ಊಟ ಮಾಡುವ ಪದ್ದತಿ ಆರಂಭವಾಗಿಬಿಟ್ಟಿದೆ.

    ನಮ್ಮದು ಕಾಫಿ ತೋಟವಾದ್ದರಿಂದ ಹಣ್ಣು‌ಕುಯ್ಲಿನ ‌ನಂತರ ‘ಹನಕಲು’ಅಥವಾ ‘ಬೇಳೆ ಆಯುವ’ಕೆಲಸ ಕಾಯಮ್ಮಾಗಿ ಮಾಡಲೇಬೇಕು.
    ಹಣ್ಣು ಕೊಯ್ಲಿನಲ್ಲಿ ಉದುರಿದ್ದ,ಪ್ರಾಣಿ ಪಕ್ಷಿಗಳು ತಿನ್ನುವಾಗ ಉದುರಿಸಿದ ಕಾಫಿ ಬೆಳೆಗಳನ್ನು ಆಯುವ ಕೆಲಸ. ಈ ಕೆಲಸದ ಸಂದರ್ಭದಲ್ಲಿ ತೋಟಕ್ಕೆ ಹೋಗುತ್ತಿದ್ದ ನಾನೂ ನಮ್ಮ ಹೆಣ್ಣಾಳುಗಳ ಜೊತೆಗೆ ಬೇಳೆ ಆಯಲಿಕ್ಕೆ ಕೈ ಜೋಡಿಸ್ತಿದ್ದೆ.

    ಹೇಳಿಕೇಳಿ ನಮ್ಮ ಕಡೆ ಕೂಲಿ ಕಾರ್ಮಿಕರಿಗೆ ತಂಬಾಕಿನ ಖಯಾಲಿ.
    ಅದ್ರಲ್ಲೂ ಹೆಣ್ಣಾಳಿಗೆ ಎಲೆಅಡಿಕೆ ಜೊತೆಗೆ ಕಡ್ಡಿಪುಡಿ ತಮ್ಮ ಕೆನ್ನೆ ಬದಿಯಲ್ಲಿ ದೊಡ್ಡ ನಿಂಬೆಕಾಯಿ ಗಾತ್ರದಲ್ಲಿ ಇರಲೇಬೇಕು. ಕರಸೋಟೆಯಲ್ಲಿ ಸದಾ ರಸ ಒಸರುತ್ತಲೇ ಮಾತಾಡ್ತಾ ಅಲ್ಲಲ್ಲಿ ಹೆಚ್ಚಿದ್ದ ರಸವನ್ನು ಕಡ್ಡಿಪುಡಿ ರಾಶಿ ಸಮೇತ ತುಪ್ಪುತ್ತಾ ಕೆಲಸ ಮಾಡುವುದು ಅನೂಚಾನ. ಈ ಅಭ್ಯಾಸ ಇರದವರೂ ‌ಕೂಡ ಕೆಲಸಕ್ಕೆ ಬಂದ ನಂತರದ ದಿನಗಳಲ್ಲಿ ತಂಬಾಕು ಜಗಿಯುವುದನ್ನು ಕಲಿತುಬಿಡುತ್ತಾರೆ.ಇದಕ್ಕೆ ಮಹತ್ತರವಾದ ಕಾರಣವೂ ‌ಇದೆ.

    ಐದು ಗಂಟೆಯ ಕೆಲಸದ ಅವಧಿಯಲ್ಲಿ ಆರು ಬಾರಿಯದರೂ ‘ಎಲೆ ಹಕ್ಕಾ ಬಾರದಾ ಕಾಣಿ’ ಅಂತ ಓನರಮ್ಮನನ್ನು ಗದರಿಸಿ ಅಲ್ಲಲ್ಲಿ ಮೊಳಕೆ ಬಿಡುವುದು ತಂಬಾಕಿನ ಮೂಲ ಉದ್ದೇಶ.

    ಹೋಗಲಿ.ಅದು ಪರಂಪರಾಗತವಾದ್ದರಿಂದ ಅದಕ್ಕೆ ಹೆಚ್ಚಿನ ಮಹತ್ವ ಬೇಡ.
    ಇಂತದ್ದೇ ಹೊತ್ತಿನಲ್ಲಿ ನಾನು ತೋಟದಲ್ಲಿ ಬೇಳೆ ಆಯುತ್ತಿದ್ದೆ.ಕಾಟಾಚಾರಕ್ಕೆ ಆಯ್ದುಕೊಂಡು ಮುಂದೆ ಮುಂದೆ ಹೋಗ್ತಿದ್ದ ಹೆಣ್ಣಮಗಳೊಬ್ಬಳ ಸಾಲಿನಲ್ಲಿ ಹಿಂದಿನಿಂದ ನಾನು ಒಂದೂ ಕಾಳುಳಿಯದಂತೆ ಆಯ್ದುಕೊಂಡು ಬರುತ್ತಿದ್ದೆ.
    ಒಂದು ವಿಶಾಲ ಕಾಫಿ ಗಿಡದ ಕೆಳಗೆ ಆಯುವ ಬರಸಿನಲ್ಲಿದ್ದ ನಾನು ಮುಂದೆ ಹೋದವರು ತುಪ್ಪಿದ್ದ ಕಡ್ಡಿಪುಡಿಯ ಕೆಂಪು ಬೆಟ್ಟಕ್ಕೆ ನೇರ ಕೈ‌ಹಾಕಿಬಿಟ್ಟೆ.
    ಅಂದಿನ ನನ್ನ ಮನಸ್ಥಿತಿಯನ್ನು, ಬೆರಳ ಸ್ಥಿತಿಯನ್ನು ‌ಹೇಳುವುದು ಹೇಗೂ ತ್ರಾಸವೇ.ಹೋಗಲಿ ಬಿಡಿ.

    ಇನ್ನೊಂದು ಮಾತು.

    ಹಳೆಯ ಕಂಚಿನ ಪಾತ್ರೆಗಳು ಹಿತ್ತಾಳೆ ಬಟ್ಟಲುಗಳೆಲ್ಲಾ ಈಗ ಪಾಲೀಷ್ ಹಾಕಿಸಿಕೊಂಡು ಡ್ರಾಯಿಂಗ್ ರೂಮಿನಲ್ಲಿ ಆರಾಮು ಪಡೆಯುವುದು ಅವುಗಳ ಪುನರ್ಜನ್ಮ ದ ಕಥೆ.ಇಂಥದ್ದೇ ಒಂದು ಚಂದದ ತಳ ಎತ್ತರವಿದ್ದ ಸುಂದರ ಬಟ್ಟಲೊಂದನ್ನು ನನ್ನ ಬೆಡ್ ರೂಮ್ ನಲ್ಲಿ ಇಟ್ಟು ನಾನು ಆಗಾಗ ಬಾಯಿಗೆ ಹಾಕಿಕೊಳ್ಳುವ ಚಿಕ್ಕಿಸ್ ಹಾಕಿಟ್ಟೆ. ಬಹಳ ದಿನಗಳಾದ ಮೇಲೆ ತಿಳಿಯಿತು ಅದು ‘ಪೀಕುದಾನಿ’ ಯೆಂದು.!ಚಿಕ್ಕಿಯೂ ಆ ಬಟ್ಟಲೂ ನಂತರದ ದಿನಗಳಲ್ಲಿ ವಿನಾ ನನ್ನ ಅಸಹನೆಗೆ ಗುರಿಯಾದವು.

    ಸ್ನೇಹಿತರನ್ನು ಆರಿಸಿಕೊಳ್ಳುವುದು,ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಅವರವರ ವೈಯಕ್ತಿಕ ಆಯ್ಕೆ.ಹನ್ಸ್ ,ಜರ್ದಾ,ತಂಬಾಕು ,ಧೂಮಪಾನಗಳ ಸುಸ್ನೇಹದಲ್ಲಿರುವವರಿಗೆ ಅಡಿಗಡಿಗೆ ತುಪ್ಪುವುದು ಅಗತ್ಯವೇ ಇದ್ದರೂ ಅವರಿಗದೇನು ಪಾತಕ ಅಂತ ಅನಿಸದೇ ಹೋಗುವುದು ಮಾತ್ರ ‌ನನಗೆ‌ ಕೌತುಕ.

    ಕಾಯ್ದೆ ಕಾನೂನು ಮಸೂದೆಗಳಂತವು ಈ ಉಗುಳವೀರರಿಗಾಗಿಯೇ ಮಂಡನೆಯಾಗಿದ್ರೂ‌,ಮೋದಿಜಿಯವರ ಮನ್ ಕೀ ಬಾತ್ ಲ್ಲೂ ಇಂಥ ಉಗುಳು ವೀರರ ಪ್ರಸ್ತಾಪ ವಾದರೂ,ಸ್ಮಾರಕ ಶಿಲ್ಪ ದೇವಾಲಯ ಸೇತುವೆ ರಸ್ತೆ ಕಟ್ಟೆ ಕೈಮರ ಪಾರ್ಕುಗಳೆಲ್ಲವೂ ಈ ಉಗುಳುವೀರರ ಕೃಪೆಗೆ ಪಾತ್ರರಾಗಿ ಅಚ್ಚಗೆಂಪುನ ಚಿತ್ತಾರ ಹೊದ್ದುಕೊಂಡಾದ ಮೇಲೂ ಈ ಪೀಕುದಾರರ ಲೋಕ ಮಾತ್ರ ತಮ್ಮ ಪಾಡಿಗೆ ತಾವು ಪೀಕುವುದನ್ನು ರಣವೇಗದಲ್ಲಿ ಮುಂದುವರೆಸುತ್ತಲೇ ಇದೆ. ರಾಜ್ಯಸರ್ಕಾರವೂ ೨೦೧೩ರ‌ ಪೌರ ಕಾಯ್ದೆಯನ್ವಯ ಸಾರ್ವಜನಿಕವಾಗಿ ತುಪ್ಪುವುದು ಅಪರಾಧ ಅಂತ ಕಾನೂನು ಮಾಡಿದರೂ ಅದಕ್ಕೆಲ್ಲಾ ಗೋಲಿ ಮಾರೋ ಎಂಬಂತೆ ಜನಗಳಲ್ಲಿ ಜನಜನಿತವಾದ ಉಗುಳುಕಾರ್ಯ ರಣ ವೇಗದಲ್ಲಿ ಮುಂದುವರೆದಿದೆ.

    ಇದು ಕರೋನಾ ಯೆರಾ.ಉಗುಳುವ,ಸೀನುವ,ಸಿಡಿಯುವ ಹಲವು ಬಗೆಗಳಿಂದಲೇ ವೈರಾಣು ನೆರೆಮನುಜರ ಮೊಗದ ದ್ವಾರಗಳಲ್ಲಿ ದಾರಿ ಗಿಟ್ಟಿಸಿ ಸವಾರಿ ಮಾಡುತ್ತದೆ ಎನ್ನುವುದೂ , ಕೆಲವರಿಗೆ ವೈಕುಂಠವನ್ನೂ ತೋರಿಸಿದೆ ಎನ್ನುವುದೂ ತಿಳಿದ ವಿಚಾರವೇ.ಕ್ಷಯದಂತಹ ಮಾರಣಾಂತಿಕ ರೋಗದಲ್ಲೂ ಉಗುಳುವೀರರ ಕೊಡುಗೆಯೇ ಘನವಾದದ್ದು.

    ಮೂಢನಂಬಿಕೆ ಎನ್ನುವ ಅಸ್ಟ್ರಾಲಜಿಯ ಪ್ರಕಾರವೂ ನಮ್ಮ ಬದುಕಿನಲ್ಲಿ ಕೆಡುಕುಂಟು ಮಾಡುವ ಹತ್ತು ಕೆಲಸಗಳಲ್ಲಿ ಪದೇಪದೇ ತುಪ್ಪುವ ಕಾರ್ಯವೂ ಒಂದು.ಇನ್ನು ನಮ್ಮ ಪೌರಾತ್ಯ ರಾಷ್ಟ್ರಗಳಲ್ಲಿ ಸಾರ್ವಜನಿಕವಾಗಿ ಉಗುಳುವುದು ಸ್ವಚ್ಚತೆಯ ದೃಷ್ಟಿಯಿಂದ ‌ಮಾತ್ರವಲ್ಲ ನಂಬಿಕೆಯಿಂದಲೂ ತಪ್ಪು.ಉಗುಳಿದ ಕೊಪ್ಪೆಯಡಿ ಸಿಲುಕಿದ ಅಸಂಖ್ಯ ಜೀವಿಗಳು ಉಸಿರುಕಟ್ಟಿ ಸಾಯುತ್ತವಂತೆ.ಕೊಂದ ಪಾಪದ ಹೊರೆ ಬರಬಾರದೆಂದರೆ ತಮ್ಮ ತಮ್ಮ ಬಚ್ಚಲುಮನೆಯಲ್ಲಿ ಮಾತ್ರ ತುಪ್ಪಿಕೊಳ್ಳುವುದು ಅಲ್ಲಿನ ವಾಡಿಕೆಯಂತೆ.
    ಎಂತೆಂತದನ್ನೋ ನಂಬುವ,ಎರವಲು ಪಡೆಯುವ,ಅನುಸರಿಸುವ ನಾವು ಇದನ್ನು ಮಾತ್ರ ಕಡೆಗಣಿಸಿ ತುಪ್ಪು ಕಾರ್ಯದಲ್ಲೇ ಮಗ್ನರಾಗಿದ್ದೇವೆ.

    ಆದರೆ…

    ಈ ರಣರೋಗಗಳ ಸಂದರ್ಭದಲ್ಲಾದರೂ ಸರ್ಕಾರಗಳು ಸಾರ್ವಜನಿಕವಾಗಿ ಉಗುಳುವುದು ಶಿಕ್ಷಾರ್ಹ ಅಪರಾಧ ಎನ್ನುವ ಕಾನೂನನ್ನು ಬಿಗಿಯಾಗಿ ಜಾರಿಗೆ ತರಬಾರದೇ ಅನಿಸ್ತದೆ.ದಂಡ ಶಿಕ್ಷೆ ಗಳಿಗೆ ನಮ್ ಜನರೆಲ್ಲಿ ಹೆದರುತ್ತಾರೆ ಅನಿಸಬಹುದು.ದಿನದಲ್ಲಿ ಸಾವಿರದ ಲೆಕ್ಕದಲ್ಲಿ ಕೇವಲ ತುಪ್ಪಿದ್ದಕ್ಕೇ ಖಾಲಿಯಾದರೆ ಭಾರತ ದೇಶ ಪೀಕು‌ಮುಕ್ತವಾಗಲಾರದೇ?

    ತೊಳೆವ ಜಲಗಾರರೂ ನಮ್ಮಂತೆ ಹೇಸಿಗೆ ಅಸಹ್ಯಗಳ ಪರಿಧಿಗೇ ಬರುವ ಜೀವವಲ್ಲವೇ.?ಈ ತರಹದ ಯಾವ ಮೌಲ್ಯಗಳೂ ತಾಕದೇ ಹೋದವರಿಗೆ ವ್ಯವಸ್ಥೆಯ ಕಡುಬಿಗಿಯ ನಿಯಮಗಳಲ್ಲಿ ಬಾಯಿ ಹೊಲೆಸಬೇಕಿದೆ..
    ಶಿಕ್ಷೆಯಿಂದಾದರೂ ಉಗುಳು ವೀರರಿಂದ ಸಾಮಾನ್ಯ ಜನತೆಗೆ ಮುಕ್ತಿ ಕೊಡಿಸಬಹುದೇ? ಉಗುಳು ವೀರರ ದಾಳಿಗೆ ಪದೇಪದೇ ಬಲಿಯಾದ ಅಸಹಾಯಕ ಜೀವವೊಂದರ ಬೇಡಿಕೆ ಇದು.

    ಸಂತೋಷ ಸಸಿಹಿತ್ಲು

    ಈ ಪ್ರಬಂಧದೊಂದಿಗೆ ಪ್ರಕಟವಾಗಿರುವ ವ್ಯಂಗ್ಯ ಚಿತ್ರ ಬರೆದವರು ನಾಡಿನ ಪ್ರತಿಭಾವಂತ ಕಲಾವಿದ ಸಂತೋಷ್ ಸಸಿಹಿತ್ಲು.ಉಡುಪಿ ಜಿಲ್ಲೆಯ ಕುಂದಾಪುರದವರಾದ ಸಸಿಹಿತ್ಲು ಓದಿದ್ದು ಭಂಡಾರ್ಸ್ ಕರ್ ಸೈನ್ಸ್ ಮತ್ತು ಆರ್ಟ್ಸ್ ಕಾಲೇಜಿನಲ್ಲಿ. ಯಾವುದೇ ಕಲಾ ಶಿಕ್ಷಣದ ಹಿನ್ನೆಲೆ ಇಲ್ಲದೆ ಸ್ವಂತ ಆಸಕ್ತಿಯಿಂದ ಚಿತ್ರ ಬರೆಯುವುದನ್ನು ರೂಢಿಸಿಕೊಂಡವರು. ಮುಂಬೈನಲ್ಲಿ ಕೆಲ ಕಾಲವಿದ್ದಾಗ ಅಲ್ಲಿ ಅದಕ್ಕೊಂದು ಶಾಸ್ತ್ರೀಯ ಆಯಾಮ ದೊರೆಯಿತು. ವ್ಯಂಗ್ಯಚಿತ್ರ, ಇಲ್ಸ್ ಸ್ಟ್ರೇಷನ್ , ಭಾವ ವ್ಯಂಗ್ಯಚಿತ್ರ ..ಇತ್ಯಾದಿಗಳನ್ನು ಸೊಗಸಾಗಿ ಬಿಡಿಸಬಲ್ಲರು. ನಾಡಿನ ಹಲವು ಮುಂಚೂಣಿ ಪತ್ರಿಕೆಯಲ್ಲಿ ದುಡಿದ ಅನುಭವ.

    ಪವರ್ ಸ್ಟಾರ್‌ ಸಿನಿಮಾವಲ್ಲ ಕಿರು ಚಿತ್ರ

    ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಇತ್ತೀಚೆಗೆ ಡಿಜಿಟಲ್‌ ಪ್ಲಾಟ್‌ಫಾರ್ಮ್‌ನಲ್ಲಿ ಸಿಕ್ಕಾಪಟ್ಟೆ ಪ್ರಯೋಗ ಮಾಡುತ್ತಿದ್ದಾರೆ.

    ‘ನೆಕೆಡ್‌’, ‘ಕ್ಲೈಮ್ಯಾಕ್ಸ್’ ಹೆಸರಿನಲ್ಲಿ ಸಣ್ಣ ಸಣ್ಣ ಸಿನಿಮಾಗಳನ್ನು ಮಾಡಿ ತಮ್ಮದೆ ಆದ ಡಿಜಿಟಲ್‌ ಪ್ಲಾಟ್‌ಫಾರ್ಮ್‌ ಸೃಷ್ಟಿ ಮಾಡಿ ಅದರಲ್ಲಿ ಅವುಗಳನ್ನು ರಿಲೀಸ್‌ ಮಾಡಿದ್ದರು. ಆ ಎರಡು ಸಿನಿಮಾಗಳಲ್ಲಿ ಕಥೆ ಇಲ್ಲದೇ ಹೋದರು ಜನ ಮಾತ್ರ ಮುಗಿ ಬಿದ್ದು ನೋಡಿ ಆರ್‌ಜಿವಿ ಜೇಬನ್ನು ತುಂಬಿಸಿದರು. ಇಂತಹ ಆರ್‌ಜಿವಿ ಕೆಲ ದಿನಗಳ ಹಿಂದೆ ‘ಪವರ್‌ ಸ್ಟಾರ್‌’ ಎಂಬ ಸಿನಿಮಾ ಮಾಡುವುದಾಗಿ ಅನೌನ್ಸ್‌ ಮಾಡಿದರು. ಈ ಪವರ್‌ ಸ್ಟಾರ್‌ ಸಿನಿಮಾದಲ್ಲಿ ತೆಲುಗಿನ ಸ್ಟಾರ್‌ ನಟ ಪವನ್‌ ಕಲ್ಯಾಣ್‌ರನ್ನೇ ಹೋಲುವಂತ ನಟನನ್ನು ಕರೆತಂದು ಫೋಟೋ ಗಳನ್ನು ಟ್ವೀಟ್ಟರ್‌ ಮೂಲಕ ರಿಲೀಸ್‌ ಮಾಡಿದರು. ಆಗ ಇಡೀ ಟಾಲಿವುಡ್‌ ಆರ್‌ಜಿವಿಗೆ ತಲೆ ಕೆಟ್ಟಿದೆ, ಹಾಗಾಗಿ ಪವನ್‌ ಕಲ್ಯಾಣ್‌ರನ್ನು ವಿಡಂಭನೆ ಮಾಡುವಂತಹ ಸಿನಿಮಾ ಮಾಡುತ್ತಿದ್ದಾರೆ. ಇದರಿಂದ ಅವರು ತೊಂದರೆಗೆ ಸಿಲುಕಿಕೊಳ್ಳಲಿದ್ದಾರೆ ಎಂದು ಮಾತನಾಡಿಕೊಂಡರು. ಅಂದುಕೊಂಡಂತೆ ತಮ್ಮ ಡಿಜಿಟಿಲ್‌ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾವನ್ನು ರಿಲೀಸ್‌ ಮಾಡಿದರು. ಈ ಚಿತ್ರದ ಟ್ರೇಲರ್‌ ನೋಡಲು ದುಡ್ಡು ಕೊಡಬೇಕು ಎಂದು ಹೇಳಿದ್ದ ಆರ್‌ಜಿವಿ ಅದನ್ನು ಯೂ ಟ್ಯೂಬ್‌ನಲ್ಲಿ ರಿಲೀಸ್‌ ಮಾಡಿದ್ದರು.

    ರಾಮ್ ಗೋಪಾಲ್ ವರ್ಮಾ

    ಸಿನಿಮಾ ನೋಡಿದ ಸಾಕಷ್ಟು ಮಂದಿ ಚಿತ್ರದ ಬಗ್ಗೆ ಬೇರೆ ಬೇರೆ ರೀತಿ ಮಾತನಾಡಿದರು, ಈ ಚಿತ್ರದಲ್ಲಿ ಪವನ್‌ ಕಲ್ಯಾಣ್‌ರನ್ನು ಅವಹೇಳನ ಮಾಡುವಂತಹ ದೃಶ್ಯಗಳಿಗಿಂತಲೂ ಅವರ ಸುತ್ತ ಇರುವವರು ಅವರನ್ನು ದಾರಿ ತಪ್ಪಿಸಿದ ಬಗೆ ಹೇಗೆ ಎಂಬುದನ್ನು ಆರ್‌ಜಿವಿ ವಿವರಿಸಿದ್ದಾರೆ. ಇದರಲ್ಲಿ ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು ಗೊತ್ತಿಲ್ಲ.

    ವಿಶೇಷ ಎಂದರೆ 37 ನಿಮಿಷ ಇರುವ ಇದನ್ನು ಸಿನಿಮಾ ಎನ್ನುವುದಕ್ಕಿಂತ ಕಿರು ಚಿತ್ರ ಎನ್ನಬಹುದು. ಇಡೀ ಸಿನಿಮಾ ಕಾಮಿಡಿ   ಅನಿಸಿದರು, ಕ್ಲೈಮ್ಯಾಕ್ಸ್‌ನಲ್ಲಿ ಈ ಚಿತ್ರ ಮಾಡಿದ ಉದ್ದೇಶವೇನು ಎಂಬುದನ್ನು ಆರ್‌ಜಿವಿ ತಾವೇ ನಟಿಸುವ ಮೂಲಕ ಹೇಳಿದ್ದಾರೆ. ಪವನ್‌ ಕಲ್ಯಾಣ್‌ ಅವರ ಯೋಚನಾ ಲಹರಿ, ಅವರ ಸಿನಿಮಾಗಳ ಆಯ್ಕೆ, ಅವರ ಸಿದ್ಧಾಂತಗಳಿಗೆ ಆರ್‌ಜಿವಿ ತಾವು ದೊಡ್ಡ ಫ್ಯಾನ್‌ ಎಂದು ಹೇಳುತ್ತಾರೆ. ಈ ಮೂಲಕ ಪವನ್‌ ಕಲ್ಯಾಣ್‌ ಬದಲಾಗಬೇಕು, ತನ್ನ ಸುತ್ತ ಇರುವವರನ್ನು ಬದಲಾಯಿಸಬೇಕು, ತಮ್ಮ ಐಡಿಯಾಲಜಿಗಳ ಮೂಲಕ ತೆಲುಗು ಜನರಿಗೆ ಒಳ್ಳೆಯದನ್ನು ಮಾಡಬೇಕು ಎಂದು ಈ ಕಿರುಚಿತ್ರದ ಮೂಲಕ ಆರ್‌ಜಿವಿ ಹೇಳುವ ಪ್ರಯತ್ನ ಮಾಡಿದ್ದಾರೆ.

    ಜನರ ಚಪ್ಪಾಳೆ, ಪಂಚ್‌ ಮತ್ತು ಮಾಸ್‌ ಡೈಲಾಗ್‌ಗಳಿಗೆ ಬೀಳುವ ಶಿಳ್ಳೆಗಳಾವುವು ಮತಗಳಾಗಿ ಪರಿವರ್ತನೆ ಆಗುವುದಿಲ್ಲ. ಬದಲಿಗೆ ಜನ ಸೇವೆಯೇ ನಾಯಕರನ್ನಾಗಿಸುತ್ತದೆ ಎಂದು ಆರ್‌ಜಿವಿ ತಮ್ಮದೇ ಆದ ಶೈಲಿಯಲ್ಲಿ ಹೇಳಿದ್ದಾರೆ. ಆದರೆ ಪವನ್‌ ಕಲ್ಯಾಣ್‌ ಫ್ಯಾನ್ಸ್‌ಗೆ ಈ ಚಿತ್ರ ಬೇಸರ ತರಿಸಿದರೂ ಕ್ಲೈಮ್ಯಾಕ್ಸ್‌ ನೋಡಿ ಅವರು ಖುಷಿಯಾಗಬಹುದೇನೊ. ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವಂತೆ ಆರ್‌ಜಿವಿ ಕಳೆದ ನಾಲ್ಕೈದು ತಿಂಗಳಿನಿಂದ ಏನಿಲ್ಲವೆಂದರೂ 3 ಕೋಟಿಗೂ ಅಧಿಕ ಹಣವನ್ನು ಈ ರೀತಿಯ ಸಿನಿಮಾಗಳಿಂದ ಮಾಡುತ್ತಿದ್ದಾರೆ. ಅಲ್ಲಿಗೆ ಅವರು ಮತ್ತೊಮ್ಮೆ ನಾನು ಟ್ರೆಂಡ್‌ ಸೆಟರ್‌ ಎಂಬುದನ್ನು ಸಾಬೀತು ಪಡಿಸಿದ್ದಾರೆ. 

    ಹೂಡಿಕೆ ಮಾಡುವಾಗ ಮೋಹಕ ಪದಗಳಿಂದ ದೂರವಿರಿ

    ನಮ್ಮ ಶ್ರಮದ- ದುಡಿಮೆಯ ಹಣದಲ್ಲಿ ಅಲ್ಪಸ್ವಲ್ಪವಾದರೂ ಉಳಿಸಿ, ಅದನ್ನು ಭವಿಷ್ಯಕ್ಕಾಗಿ ಕೂಡಿಡಬೇಕು ಅನ್ನೋದು ನಿರ್ವಿವಾದಿತ ಅಂಶ. ಆ ಹಣವೂ ಒಂದಿಷ್ಟು ಹಣ ದುಡಿಯಲಿ ಎಂಬ ಭಾವನೆ ಎಲ್ಲರಲ್ಲೂ ಇರುತ್ತದೆ. ಹಾಗೆ ಆಲೋಚಿಸುವಾಗ ಗೋಚರಿಸುವ ಮೊದಲ ದಾರಿ ಷೇರುಪೇಟೆ.
    ಆದರೆ, ಇತ್ತೀಚಿನ ದಿನಗಳಲ್ಲಿ ಷೇರುಪೇಟೆಯು ಅಸ್ಥಿರತೆಯಿಂದ ಕೂಡಿದೆ. ಷೇರಿನ ಬೆಲೆಗಳು ವಿನಾಕಾರಣ ಇಳಿಯುತ್ತವೆ. ಅದೇ ರೀತಿ ಏರಿಕೆ ಆಗುತ್ತವೆ. ಈ ಏರಿಳಿತಕ್ಕೆ ರುಪಾಯಿಯ ಬೆಲೆ ಕುಸಿತ, ಕಚ್ಚಾ ತೈಲ ಬೆಲೆ ಏರಿಕೆ, ಅಂತರ ರಾಷ್ಟ್ರೀಯ ಪೇಟೆಗಳಲ್ಲಾಗುವ ಇಳಿಕೆ ಮುಂತಾದವುಗಳ ಕಾರಣವನ್ನು ನೀಡಲಾಗುವುದು. ಆದರೆ ಈಗ ಕೋವಿಡ್‌ ಪ್ರಭಾವದ ಕಾರಣ ಪೇಟೆಯೊಳಗೆ ಹರಿದುಬರುತ್ತಿರುವ ಹಣದ ಹೊಳೆ ಈ ಎಲ್ಲಾ ಕಾರಣಗಳನ್ನು ಬದಿಗೊತ್ತಿ ವಿಭಿನ್ನತೆ ಪ್ರದರ್ಶಿತವಾಗುತ್ತಿದೆ.

    ಷೇರಿನ ಬೆಲೆಗಳ ಏರಿಳಿತಕ್ಕೆ ಕಂಪನಿಗಳು ಅಂತರ್ಗತವಾಗಿ ಸಾಧಿಸಿದ ಅಂಶಗಳನ್ನು ಪರಿಗಣಿಸದೆ, ಕೇವಲ ಬಾಹ್ಯ ಬೆಳವಣಿಗೆಗಳಿಗೆ, ವಿತ್ತೀಯ ಸಂಸ್ಥೆಗಳು ನೀಡುವ ರೇಟಿಂಗ್ ಗಳನ್ನು ಆಧರಿಸಿ ಅಲಂಕಾರಿಕ ಶೈಲಿಯಲ್ಲಿ ವರ್ಣಿಸಲಾಗುವುದು. ಇಂತಹ ವಾತಾವರಣವು ಪಾರಂಪರಿಕವಾಗಿ ಬೆಳೆದು ಬಂದಿರುವ ದೀರ್ಘಕಾಲೀನ ಹೂಡಿಕೆಗೆ ಅಪವಾದವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಪ್ರತಿಷ್ಠೆ ಹೆಚ್ಚುತ್ತಿದೆ. ಭಾರತದ ಷೇರುಪೇಟೆಯು 2018 ರ ಸಮೀಕ್ಷೆ ಪ್ರಕಾರ, ವಿಶ್ವದ ಏಳನೇ ಸ್ಥಾನದಲ್ಲಿದೆ. ಈ ಕೋವಿಡ್‌ಸಮಯದಲ್ಲಿ ಸಕಾರಾತ್ಮಕ ಭಾವನೆಗಳನ್ನು ಜನಮನದಲ್ಲಿ ಪ್ರತಿಷ್ಠಾಪಿಸುತ್ತಿರುವುದು ಒಂದು ಕಡೆಯಾದರೆ, ಆಂತರಿಕವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆಗೆ ಪ್ರಯತ್ನಿಸಲಾಗುತ್ತಿದ್ದು, ತಳಮಟ್ಟದ, ಮಧ್ಯಮ ವರ್ಗದವರ ನಿತ್ಯದ ಬವಣೆಗಳು ಹೆಚ್ಚಾಗಿ ಅಸಮಾಧಾನವು ತುಂಬಿ ತುಳುಕಾಡುತ್ತಿದೆ.

    ಜನಸಾಮಾನ್ಯರ ಖರೀದಿಸುವ ಸಾಮರ್ಥ್ಯವು ಕ್ಷೀಣಿಸುತ್ತಿದೆ. ನಮ್ಮ ದೇಶದ ಆರ್ಥಿಕ ಬೆನ್ನೆಲುಬಾಗಿರುವ ಗ್ರಾಹಕ ವೃಂದದ ಖರೀದಿ ಸಾಮರ್ಥ್ಯವು ಹೆಚ್ಚುವವರೆಗೂ ಯಾವ ಯೋಜನೆಯು ಯಶಸ್ಸು ಕಾಣಲಾಗದು. ಈ ದಿಶೆಯಲ್ಲಿ ಭಾವನೆಗಳನ್ನು ಮತ್ತು ವಾಸ್ತವವನ್ನು ಬೇರ್ಪಡಿಸಿ, ಪರಿಶೀಲಿಸಿ, ನಿರ್ಧರಿಸುವ ಚಿಂತನೆಯನ್ನು ಅಳವಡಿಸಿಕೊಂಡು ಆರ್ಥಿಕ ಸಾಕ್ಷರತೆಯನ್ನು ಬೆಳೆಸಿಕೊಳ್ಳಬೇಕಾಗಿದೆ. ಕೇವಲ ಸಾಕ್ಷರತೆಯೊಂದೇ ಸಾಲದು, ಜೊತೆಗೆ ಆರ್ಥಿಕ ಸಾಕ್ಷರತೆ ಬೆಳೆಸಿಕೊಂಡಲ್ಲಿ ಜೀವನವು ಸುಖಕರವಾಗಿಸಲು ಸಾಧ್ಯ.

    ಷೇರುಪೇಟೆಯಲ್ಲಿ ಪ್ರದರ್ಶಿತವಾಗುತ್ತಿರುವ ಅಸಹಜ ನಡೆ ಬಹಳಷ್ಟು ಹೂಡಿಕೆದಾರರನ್ನು ದೂರ ತಳ್ಳಿರಬಹುದು. ಹೆಚ್ಚಿನವರು ಸುರಕ್ಷತಾ ಕಾರಣಕ್ಕಾಗಿ ಬ್ಯಾಂಕ್ ಡಿಪಾಸಿಟ್ ಗಳನ್ನು ಆಶ್ರಯಿಸಿರಬಹುದು. ಬ್ಯಾಂಕ್ ಗಳು ಸಹ ಸಂಪನ್ಮೂಲ ಕೊರತೆಯಿಂದ ಬಳಲುತ್ತಿವೆ. ಕಾರ್ಪೊರೇಟ್ ವಲಯವು ಸಹ ಸಂಪನ್ಮೂಲ ಕೊರತೆಯಿಂದ ಹೆಚ್ಚಿನ ಕಂಪನಿಗಳು ವಿವಿಧ ರೀತಿಯ ಯೋಜನೆಗಳಿಂದ, ವಿವಿಧ ಮೂಲಗಳಿಂದ ಹಣ ಸಂಗ್ರಹಣಾ ಕಾರ್ಯವನ್ನು ಚುರುಕುಗೊಳಿಸಿವೆ. ಈ ಮಧ್ಯೆ ಬ್ಯಾಂಕ್‌ಬಡ್ಡಿದರಗಳು ಕುಸಿಯುತ್ತಿರುವುದು, ಬ್ಯಾಂಕ್‌ಗಳಿಂದ ಸಾಲ ಪಡೆಯುವವರ ಸಂಖ್ಯೆ ಕ್ಷೀಣಿತವಾಗುತ್ತಿದ್ದು ಬೇಡಿಕೆ ಕಡಿಮೆಯಾಗುತ್ತಿದೆ. ಉದ್ಯಮಗಳು ಹೆಚ್ಚಿನ ಸಮಯ ಸ್ಥಬ್ಧವಾಗಿದ್ದ ಕಾರಣ ಸಾಲ ಮರುಪಾವತಿಗೂ ತೊಂದರೆಯಾಗಿದೆ. ಹೆಚ್ಚಿನ ತಾಂತ್ರಿಕತೆ ಆಧಾರಿತ ಉದ್ಯಮಗಳು ʼವರ್ಕ್‌ಫ್ರಂ ಹೋಂʼ ಅಳವಡಿಸಿಕೊಂಡಿರುವುದರ ಜೊತೆಗೆ ಷೇರುಪೇಟೆಯೂ ಚಟುವಟಿಕೆಯಲ್ಲಿರುವುದು ಬಹಳಷ್ಟು ಹೊಸ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಇದರ ಹಿಂದೆ ಷೇರುಪೇಟೆಯಲ್ಲಿ ಷೇರಿನ ಬೆಲೆಗಳು ಸತತವಾದ ಏರಿಕೆ ಪಡೆಯುತ್ತಿರುವುದು, ದಿನೇ ದಿನೇ ಷೇರಿನ ಬೆಲೆಗಳು ವಾರ್ಷಿಕ ಗರಿಷ್ಟದ ಸುದ್ಧಿಯೂ ಸಹ ಹೊಸ ಹೂಡಿಕೆದಾರರನ್ನು ಪ್ರವೇಶಿಸಲು ಪ್ರೇರೇಪಿಸುತ್ತದೆ.

    ಸಾಮಾನ್ಯವಾಗಿ ಸುರಕ್ಷಿತ ಹೂಡಿಕೆ ಎಂದರೆ ಬ್ಯಾಂಕ್ ಡಿಪಾಸಿಟ್ ಗಳು ಎಂಬ ಕಲ್ಪನೆ ಎಲ್ಲರಲ್ಲೂ ಬೇರೂರಿದೆ. ಆದರೆ ಬ್ಯಾಂಕ್ ಗಳಲ್ಲಿ ಕೇವಲ ರೂ.ಐದು ಲಕ್ಷದವರೆಗೂ ಮಾತ್ರ ವಿಮೆಯ ಸುರಕ್ಷತೆ ಇರುತ್ತದೆ. ಹೆಚ್ಚಿನದಕ್ಕೆ ಯಾವುದೇ ರೀತಿಯ ಗ್ಯಾರಂಟಿ ಇರುವುದಿಲ್ಲ. ಆದರೂ ನಾವು ಸರತಿಯಲ್ಲಿ ಬ್ಯಾಂಕ್ ಗಳಲ್ಲಿ ಠೇವಣಿ ಇಡುತ್ತೇವೆ. ಇದಕ್ಕೆ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿರುವ ನಂಬಿಕೆ ಕಾರಣವಾಗಿದೆ. ಕೇಂದ್ರ ಸರ್ಕಾರವು ಸಹ ತನ್ನ ವಿವಿಧ ಯೋಜನೆಗಳಿಗೆ ಸಂಪನ್ಮೂಲ ಸಂಗ್ರಹಣೆಯ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದೆ. ಅಲ್ಲದೆ ಬಂಡವಾಳ ಹಿಂತೆಗೆತದ ನೆಪದಲ್ಲಿ ಸಾರ್ವಜನಿಕ ವಲಯದ ಕಂಪೆನಿಗಳಲ್ಲಿರುವ ಮೀಸಲು ನಿಧಿಯ ಮೇಲೆ ಗಮನಹರಿಸಿ, ಆ ನಿಧಿಯನ್ನು ಕಂಪನಿಗಳ ವಿಲೀನ, ಸ್ವಾಧೀನ, ಭಾಗಿತ್ವ ಖರೀದಿ ಮುಂತಾದವುಗಳಿಗೆ ವಿನಿಯೋಗಿಸುವ ಮೂಲಕ ತನ್ನ ಗುರಿಯನ್ನು ತಲುಪಲು ಪ್ರಯತ್ನಿಸುತ್ತಿದೆ. ಹೀಗಿರುವಾಗ ನಾವು, ಸಣ್ಣ ಹೂಡಿಕೆದಾರರು ನಮ್ಮಲ್ಲಿರುವ ಸಮನ್ಮೂಲವನ್ನು ಕರಗಿಸಿಕೊಳ್ಳದೆ, ಸಾಧ್ಯವಾದಷ್ಟು ಸುರಕ್ಷತೆಯಿಂದ ಉಳಿಸಿ ಬೆಳೆಸುವ ಮೂಲಕ ಆರ್ಥಿಕ ಸಾಕ್ಷರತೆಯನ್ನು ಗಳಿಸಬೇಕಾಗಿದೆ. ಬ್ಯಾಂಕ್ ಗಳು ತಮ್ಮ ಠೇವಣಿದಾರರಿಗೆ ಸುಮಾರು ಶೇ 5ರಿಂದ ಶೇ 7 ರವರೆಗೂ ವಾರ್ಷಿಕ ಬಡ್ಡಿ ನೀಡುತ್ತವೆ. ಇದೇ ಬ್ಯಾಂಕ್ ಗಳಲ್ಲಿ ಹಲವಾರು ಬ್ಯಾಂಕ್ ಗಳು ತಮ್ಮ ಬೆಸಲ್ 3 ರ ನಿಯಮಾನುಸಾರ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಬಡ್ಡಿ ನೀಡುವ ಸಾಲಪತ್ರಗಳನ್ನು ವಿತರಿಸಿವೆ, ವಿತರಿಸುತ್ತಿವೆ.

    ʼಸೆಕ್ಯೂರ್ಡ್‌ʼ ಮತ್ತು ʼ ಹೈಲಿ ರೇಟೆಡ್‌ʼ ಮೋಹಕ ಪದಗಳಿಂದ ದೂರವಿರಿ:

    ಹೆಚ್ಚಿನ ಕಾರ್ಪೊರೇಟ್‌ಗಳು ಸಂಪನ್ಮೂಲ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡಿವೆ. ಇವುಗಳಲ್ಲಿ ಕಾರ್ಪೊರೇಟ್‌ಡಿಪಾಜಿಟ್‌, ಎನ್‌ಸಿ ಡಿ ಗಳನ್ನು ಸಹ ತೇಲಿಬಿಡುತ್ತವೆ. ಅವುಗಳಲ್ಲಿ ಪ್ರಯೋಗಿಸುವ ʼಸೆಕ್ಯೂರ್ಡ್‌ʼ ಎಂಬ ಪದಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯವಿಲ್ಲ. ನಮ್ಮಲ್ಲಿ ʼಸೆಕ್ಯೂರ್ಡ್‌ʼ ಎಂಬ ಪದಕ್ಕೆ ಹೆಚ್ಚು ಮಹತ್ವ ನೀಡುವ ಗುಣ ಬೆಳೆದಿದೆ. ಕಾರ್ಪರೇಟ್‌ವಲಯದ ಯೋಜನೆಗಳು ʼಸೆಕ್ಯೂರ್ಡ್‌ʼ ಆಗಿರಬೇಕಾದಲ್ಲಿ ಕಂಪನಿಗಳು ಅಂತರ್ಗತವಾಗಿ ಕಂಪನಿಗಳು ಸುಭದ್ರವಾಗಿರಬೇಕು. ಮತ್ತು ಈ ಕಂಪನಿಗಳು ಇಂದು ಸುಭದ್ರವಾಗಿದ್ದರೂ ಮುಂದೆ ಅವು ಕಾರಣಾಂತರದಿಂದ ದುರ್ಬಲವಾಗಿ ಹೂಡಿಕೆಗೆ ಕುತ್ತಾಗಬಹುದು. ಈ ರೀತಿಯ ಬದಲಾವಣೆಗಳ ವೇಗ ಹೇಗಿರಬಹುದೆಂಬುದಕ್ಕೆ 2018 ರ ಸೆಪ್ಟೆಂಬರ್‌ತಿಂಗಳಲ್ಲಿ AAA ರೇಟಿಂಗ್‌ಪಡೆದಿದ್ದ ಐ ಎಲ್‌ಎಫ್‌ಎಸ್‌ಸಂಸ್ಥೆಯು ನಂತರ ತನ್ನ ಠೇವಣಿದಾರರಿಗೆ ಬಡ್ಡಿ ನೀಡಲು ಎಡವಿದಾಗ ಆ ಕಂಪನಿಯನ್ನು ʼಜಂಕ್‌ʼ ರೇಟಿಂಗ್‌ನೀಡಿವೆ ರೇಟಿಂಗ್‌ಕಂಪನಿಗಳು. ಹೀಗೆ ಬದಲಾದ ರೇಟಿಂಗ್‌ಕಾರಣ ಠೇವಣಿಗಳನ್ನು ಹಿಂಪಡೆಯಲಾಗದು. ಆದ್ದರಿಂದ ʼಸೆಕ್ಯೂರ್ಡ್‌ʼ ʼ ಹೈಲಿ ರೇಟೆಡ್‌ʼ ಎಂಬ ಅಲಂಕಾರಿಕ ಪದಗಳಿಗೆ ಹೆಚ್ಚು ಗಮನದ ಅಗತ್ಯವಿಲ್ಲ.

    ಬ್ಯಾಂಕ್‌ ಠೇವಣಿಗಳಿಗೆ ಪರ್ಯಾಯ ಹೂಡಿಕೆ:

    2018 ರ ಮೇ ತಿಂಗಳಲ್ಲಿ ದಿವಾನ್ ಹೌಸಿಂಗ್ ಫೈನಾನ್ಸ್ ಕಂಪನಿಯು ರೂ.1,000 ಮುಖಬೆಲೆಯ, ಶೇ.8.56 ರಿಂದ ಶೇ.9.1 ರವರೆಗಿನ ವಾರ್ಷಿಕ ಬಡ್ಡಿಯ ಸೆಕ್ಯೂರ್ಡ್ ನಾನ್ ಕನ್ವರ್ಟಬಲ್ ಡಿಬೆಂಚರ್ ಗಳನ್ನು ವಿತರಿಸಿತು. ಆರಂಭದಲ್ಲಿ ಈ ಬಾಂಡ್ ಗಳು ಆಕರ್ಷಕ ಬೆಲೆಯಲ್ಲಿ ವಹಿವಾಟಾಗುತ್ತಿದ್ದವು. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಹೊರಬಿದ್ದ ಎನ್ ಬಿ ಎಫ್ ಸಿ ಕಂಪನಿಗಳ ಗೊಂದಲದ ಪ್ರಭಾವದಿಂದ ಒಂದೇ ದಿನ ಷೇರಿನ ಬೆಲೆ ರೂ.615 ರ ಸಮೀಪದಿಂದ ರೂ.246 ರವರೆಗೂ ಕುಸಿದ ಕಾರಣದಿಂದ ಈ ಬಾಂಡುಗಳ ಬೆಲೆ ಹೆಚ್ಚು ಒತ್ತಡವನ್ನೆದುರಿಸಿ. ಸಧ್ಯ ರೂ.1,000 ಮುಖಬೆಲೆಯ ಸೆಕ್ಯೂರ್ಡ್ ಎನ್ ಸಿ ಡಿ ಗಳು ರೂ.250 ರಿಂದ 300 ರ ಸಮೀಪ ವಹಿವಾಟಾಗುತ್ತಿವೆ. ಅಂದರೆ ಸುಮಾರು ಒಂದೆರಡು ವರ್ಷದಲ್ಲಿ ಸೆಕ್ಯೂರ್ಡ್ ಎನ್ ಸಿ ಡಿ ಗಳಲ್ಲಿ ಶೇ.65 ಕ್ಕೂ ಹೆಚ್ಚು ಬಂಡವಾಳ ಕರಗಿಹೋಗಿದೆ. ಖಾಸಗಿ ಕಂಪನಿಗಳಾದ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್, ಈ ಸಿ ಎಲ್ ಫೈನಾನ್ಸ್, ಮನಪುರಂ ಫೈನಾನ್ಸ್, ಶ್ರಯ್ ಇನ್ಫ್ರಾ, ರಿಲಯನ್ಸ್ ಕ್ಯಾಪಿಟಲ್, ಇಂಡಿಯಾ ಬುಲ್‌ ಹೌಸಿಂಗ್ ಫೈನಾನ್ಸ್, ಮುಂತಾದವುಗಳ ಬಾಂಡ್ ಗಳು ಮುಖಬೆಲೆಗಿಂತಲೂ ಕಡಿಮೆ ಬೆಲೆಗೆ ವಹಿವಾಟಾಗುತ್ತಿವೆ. ಕೆಲವು ಕಂಪನಿಗಳು ಬಡ್ಡಿ ಹಣ ನೀಡದೆ ತೊಂದರೆಗೊಳಪಟ್ಟಿವೆ. ಬ್ಯಾಂಕ್‌ ಬಡ್ಡಿದರ ಕುಸಿತದ ಈ ಸಂದರ್ಭದಲ್ಲಿ ಕಂಪನಿ ಡಿಪಾಜಿಟ್‌ ಗಳು ಘೋಷಿಸುವ ಬಡ್ಡಿದರಗಳಿಗೆ ಪ್ರೇರೇಪಿತರಾಗದೆ ವಾಸ್ತವ ಅಂಶಗಳನ್ನರಿತು ನಿರ್ಧರಿಸಿರಿ.

    ಬ್ಯಾಂಕ್‌ ಎನ್‌ ಸಿ ಡಿ ಮತ್ತು ಪರ್ಪೆಚುಯಲ್‌ ಬಾಂಡ್:

    ಈಚಿನ ವರ್ಷಗಳಲ್ಲಿ ಕರ್ಣಾಟಕ ಬ್ಯಾಂಕ್ ಶೇ 12ರಂತೆ ಬಡ್ಡಿ ನೀಡುವ ಎನ್ ಸಿಡಿಗಳನ್ನು, ಕರೂರ್‌ ವೈಶ್ಯ ಬ್ಯಾಂಕ್‌ 11.95% ಬಡ್ಡಿ ನೀಡುವ ಬಾಂಡ್‌, ಸೌತ್‌ ಇಂಡಿಯನ್‌ ಬ್ಯಾಂಕ್‌ ಶೇ.11.75 ಮತ್ತು 13.75 ಬಡ್ಡಿದರದ ಬಾಂಡ್‌ ಗಳು, ಇಂಡಸ್‌ ಇಂಡ್‌ ಬ್ಯಾಂಕ್‌ ನ ಶೇ.9.50 ದರದ ಬಾಂಡ್‌ ಗಳು, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಶೇ 11.7 ಬಡ್ಡಿ ನೀಡುವ ಟೈರ್ 2 ಬಾಂಡ್ ಗಳನ್ನು ವಿತರಿಸಿವೆ. ಈ ರೀತಿಯ ಬ್ಯಾಂಕ್ ಬಾಂಡ್ ಗಳು ಪೇಟೆಯಲ್ಲಿ ಹಲವು ಬಾರಿ ಸ್ವಲ್ಪ ಪ್ರೀಮಿಯಂನಲ್ಲಿ ದೊರೆಯುತ್ತವೆ. ಆದಾಯ ತೆರಿಗೆಯನ್ನು ಪಾವತಿಸುವವರು ಹೆಚ್ಚಿನ ಸ್ಲಾಬ್ ನಲ್ಲಿದ್ದರೆ ಅವರು ತೆರಿಗೆ ಮುಕ್ತ ಬಡ್ಡಿ ನೀಡುವ, ಅಂದರೆ ಪವರ್‌ ಫೈನಾನ್ಸ್‌, ಆರ್‌ ಇ ಸಿ, ಹುಡ್ಕೋ, ಐಆರ್‌ ಎಫ್‌ ಸಿ, ಮುಂತಾದ ಉತ್ತಮ ಕಂಪನಿಗಳ ಬಾಂಡ್ ಗಳನ್ನೂ ಖರೀದಿಸಲು ಪೇಟೆ ಅವಕಾಶ ಮಾಡಿಕೊಟ್ಟಿದೆ. ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟು ಕಡಿಮೆ ಬಡ್ಡಿ ಪಡೆಯುವುದಕ್ಕಿಂತ ಅದೇ ಬ್ಯಾಂಕ್ ಗಳು ವಿತರಿಸಿರುವ ಸಾಲಪತ್ರಗಳಲ್ಲಿ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಬಡ್ಡಿ ಪಡೆಯಬಹುದು. ತುಲಾನಾತ್ಮಕವಾಗಿ ಅಡಕವಾಗಿರುವ ವಿವಿಧ ಅಂಶಗಳನ್ನು ಪರಿಗಣಿಸಿ, ನಿರ್ಧರಿಸುವ ಆರ್ಥಿಕ ಸಾಕ್ಷರತಾ ಮಟ್ಟ ಬೆಳೆಸಿಕೊಳ್ಳುವುದು ಇಂದಿನ ಅವಶ್ಯವಾಗಿದೆ. ಕೆಲವು ಬ್ಯಾಂಕ್‌ಗಳು ಧೀರ್ಘಕಾಲೀನ ಹೂಡಿಕೆಯಾಗಿ ʼ ಪರ್ಪೆಚುಯಲ್‌ಬಾಂಡ್‌ʼ ಗಳನ್ನು ತೇಲಿಬಿಟ್ಟಿವೆ. ಸಾಮಾನ್ಯವಾಗಿ ಬ್ಯಾಂಕ್‌ಯೋಜನೆಗಳಲ್ಲಿ ನಮ್ಮ ಹೂಡಿಕೆಯ ಹಣವು ಸುರಕ್ಷಿತ ಎಂಬ ನಿರ್ಧಾರ ಎಲ್ಲರಲ್ಲಿದೆ.

    ಇದಕ್ಕೆ ಅಪವಾದ ಎಂಬಂತೆ ಇತ್ತೀಚೆಗೆ ಯೆಸ್‌ಬ್ಯಾಂಕ್‌ಹಗರಣಗಳು ಬೆಳಕಿಗೆ ಬಂದು, ಬ್ಯಾಂಕ್‌ಆರ್ಥಿಕ ಒತ್ತಡಕ್ಕೊಳಗಾದ ಸಂದರ್ಭದಲ್ಲಿ ನಿಯಂತ್ರಕರು ಈ ಬ್ಯಾಂಕ್‌ವಿತರಿಸಿದ ʼಟೈರ್‌1ʼ ಬಾಂಡ್‌ಗಳನ್ನು ಸಂಪೂರ್ಣವಾಗಿ ಶೂನ್ಯವಾಗಿಸಿದೆ. ಅಷ್ಟೆ ಅಲ್ಲ, ಟೈರ್‌ 2 ಬಾಂಡ್‌ ಗಳ ಮೇಲೆ ಜೂನ್‌ ನಲ್ಲಿ ನೀಡಬೇಕಾದ ಶೇ.10.25 ರ ಬಡ್ಡಿ ಹಣವನ್ನು ಸಹ ವಿತರಿಸಲಿಲ್ಲ. ಇದು ಬ್ಯಾಂಕ್‌ಗಳ ಮೇಲಿನ ನಂಬಿಕೆಯನ್ನು ಸ್ವಲ್ಪ ಮಟ್ಟಿಗೆ ಕರಗಿಸಿದೆ.

    ಪ್ರಮುಖ ಬ್ಯಾಂಕ್‌ಗಳಾದ ಎಸ್‌ಬಿ ಐ, ಐಸಿಐಸಿಐ ಬ್ಯಾಂಕ್‌, ಬ್ಯಾಂಕ್‌ಆಫ್‌ಬರೋಡ, ಆಕ್ಸಿಸ್‌ಬ್ಯಾಂಕ್‌, ಕೆನರಾ ಬ್ಯಾಂಕ್‌, ಪಿ ಎನ್‌ಬಿ ಅಲ್ಲದೆ 11.8% ಬಡ್ಡಿ ನೀಡುವ ಟಾಟಾ ಸ್ಟೀಲ್‌ಬಾಂಡ್‌ಗಳು ಸ್ಟಾಕ್‌ಎಕ್ಸ್‌ಚೇಂಜ್‌ಗಳಲ್ಲಿ ವಹಿವಾಟಾಗುತ್ತವೆ. ಇವುಗಳ ವಿವರಗಳನ್ನು ಪಡೆದುಕೊಂಡು ಅವರವರ ಅನೂಕೂಲಕ್ಕೆ ತಕ್ಕಂತೆ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬಹುದು. ಟಾಟಾ ಸ್ಟೀಲ್‌ಬಾಂಡ್‌ಗಳು 2011 ರಿಂದಲೂ ಜಾರಿಯಲ್ಲಿರುವ ಕಾರಣ ಇಷ್ಟು ಹೆಚ್ಚಿನ ಬಡ್ಡಿ ನೀಡುವ ಯೋಜನೆಯಾಗಿದೆ. ಅಲ್ಲದೆ ಮುಂದಿನ ವರ್ಷದ ಮಾರ್ಚ್‌ನಿಂದ ಕಂಪನಿಯಿಂದಲೇ ಪ್ರತಿ ವರ್ಷದ ಮಾರ್ಚ್‌ನಲ್ಲಿ ʼಬೈ ಬ್ಯಾಕ್‌ʼ ಗೆ ಅವಕಾಶವಿರುತ್ತದೆ. ಪೇಟೆಯಲ್ಲಿ ವಹಿವಾಟಾಗದಿದ್ದಲ್ಲಿ ಕಂಪನಿಗೆ ಹಿಂದಿರುಗಿಸಬಹುದು.

    ಸಾಲಪತ್ರ ಪೇಟೆಯಲ್ಲಿ ಎರಡು ರೀತಿ ವ್ಯವಹರಿಸಬಹುದು. ಒಂದು ನೇರವಾಗಿ ಷೇರುಪೇಟೆಯಲ್ಲಿ ಮತ್ತೊಂದು ಷೇರುಪೇಟೆ ಹೊರಗೆ ಡೆಟ್‌ಮಾರ್ಕೆಟ್‌ನ ಡೀಲರ್‌ಗಳ ಮೂಲಕ. ಷೇರುಪೇಟೆಯಲ್ಲಿ ವ್ಯವಹರಿಸುವುದರಿಂದ ಹೂಡಿಕೆದಾರರಿಗೆ ಖರೀದಿಸಿದ ದರ ಮತ್ತು ಅದಕ್ಕೆ ತಗಲಿದ ಬ್ರೋಕರೇಜ್‌, ತೆರಿಗೆಯಂತಹವುಗಳು ಮಾತ್ರ ಸೇರುತ್ತದೆ. ಆದರೆ ಹೊರಗಿನ ಡೆಟ್‌ಮಾರ್ಕೆಟ್‌ಡೀಲರ್‌ಗಳ ಮೂಲಕ ಖರೀದಿಸಿದಲ್ಲಿ, ಖರೀದಿದಾರರು, ಆ ಕಂಪನಿ ಹಿಂದೆ ಬಡ್ಡಿ ವಿತರಿಸಿದ ದಿನದಿಂದ ಖರೀದಿಸುವ ದಿನದವರೆಗೂ ಸಂಗ್ರಹವಾದ ಬಡ್ಡಿ ಮೊತ್ತವನ್ನು ತೆರಬೇಕಾಗುವುದು. ಅದ್ದರಿಂದ ಖರೀದಿಸುವ ಮುನ್ನ ಈ ಅಂಶಗಳನ್ನು ಪರಿಗಣಿಸಿ ಯಾವುದು ಅನುಕೂಲಕರ ಎಂದು ನಿರ್ಧರಿಸಬೇಕು.

    ಇತ್ತೀಚಿನ ಬೆಳವಣಿಗೆಗಳಲ್ಲಿ ಪೇಟೆಯ ನಿಯಂತ್ರಕ ಸಂಸ್ಥೆ ʼ ಸೆಬಿʼ ಸಾಲಪತ್ರ ಪೇಟೆಯನ್ನು ಚುರುಕುಗೊಳಿಸಿ ರೀಟೇಲ್‌ ಹೂಡಿಕೆದಾರರು ಸಹ ಸಾಲಪತ್ರ ಪೇಟೆಯಲ್ಲಿಯೂ ಚಟುವಟಿಕೆ ನಡೆಸಲು ಹಾದಿ ಸುಗಮಗೊಳಿಸುವತ್ತ ಗಮನಹರಿಸಿರುವುದು ಬ್ಯಾಂಕ್‌ ಬಡ್ಡಿಯ ಅವಲಂಬಿತರಾದವರಿಗೂ, ನಿವೃತ್ತರಿಗೂ ಒಂದು ಉತ್ತಮ ಬೆಳವಣಿಗೆಯಾಗಿದೆ.

    ನೆನಪಿರಲಿ: ಸುರಕ್ಷತೆಯು ಹೂಡಿಕೆಯ ಸೂತ್ರವಾದಲ್ಲಿ, ಗಳಿಕೆಯು ಸುಸೂತ್ರ

    Photo by Micheile Henderson on Unsplash

    ಕಷ್ಟಪಟ್ಟು ಪದವಿ ಪಡೆದರೂ ಇಷ್ಟಪಟ್ಟು ಆಡಳಿತ ನಡೆಸಲು ಅಡ್ಡಿ

    ಅಶೋಕ ಹೆಗಡೆ
    ಕರ್ನಾಟಕದ ರಾಜಕಾರಣದಲ್ಲಿ ‘ಛಲದಂಕ ಮಲ್ಲ’ ಯಾರಾದರೂ ಇದ್ದರೆ ಅದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರ. ಹಾಗೆಯೇ ‘ದುರಂತ ನಾಯಕ’ ಎಂದು ಯಾರನ್ನಾದರೂ ಹೇಳವುದಿದ್ದರೆ ಅದೂ ಸಹ ಯಡಿಯೂರಪ್ಪನವರೇ. ನಾಲ್ಕು ಸಲ ಮುಖ್ಯಮಂತ್ರಿಯಾದರೂ ಒಮ್ಮೆಯೂ ಪೂರ್ಣಾವಧಿ ಪೂರೈಸುವ ಅದೃಷ್ಟವಿಲ್ಲ, ಒಮ್ಮೆಯೂ ನಿರಾತಂಕವಾಗಿ ಆಡಳಿತ ನಡೆಸುವ ಸೌಭಾಗ್ಯವಿಲ್ಲ. ಈಗಲೂ ಅಷ್ಟೇ, ಮುಖ್ಯಮಂತ್ರಿಯಾಗಿ ಭಾನುವಾರ (ಜುಲೈ ೨೬) ವರ್ಷ ತುಂಬಿದರೂ ಅದನ್ನು ಸಂಭ್ರಮಿಸಲು ಪರಿಸ್ಥಿತಿ ಇಲ್ಲ.

    ಮೊದಲ ಸಲ ಮುಖ್ಯಮಂತ್ರಿಯಾಗಿದ್ದು ಬೆರಳೆಣಿಕೆಯ ದಿನಗಳ ಅವಧಿಗೆ. ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ‘ವಚನ ಭ್ರಷ್ಟತೆ’ಯನ್ನೇ ಜನರ ಮುಂದಿಟ್ಟು ಅನುಕಂಪ ಗಳಿಸುವಲ್ಲಿ ಯಶಸ್ವಿಯಾದರೂ ಅಧಿಕಾರಕ್ಕೆ ಏರುವಷ್ಟು ಬಹುಮತ ಸಿಗಲಿಲ್ಲ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರಳ ಬಹುಮತಕ್ಕೆ ನಾಲ್ಕು ಸ್ಥಾನಗಳ ಅಗತ್ಯವಿತ್ತು. ಆರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಸರಕಾರ ರಚಿಸಿದರೂ, ಯಾವುದೇ ಕ್ಷಣದಲ್ಲಿ ಪಕ್ಷೇತರರು ಕೈ ಕೊಡಬಹುದು ಎಂಬ ಆತಂಕದಿಂದ ‘ಆಪರೇಷನ್ ಕಮಲ’ ನಡೆಸಿದರು.

    ಅದೇ ‘ಆಪರೇಷನ್ ಕಮಲ’ವೇ ಅವರ ನೆಮ್ಮದಿ ಕಸಿದುಕೊಂಡಿದ್ದು ಸುಳ್ಳಲ್ಲ. ಬಿಜೆಪಿಯ ಆಂತರಿಕ ತಿಕ್ಕಾಟದಿಂದ ಮೂರೂವರೆ ವರ್ಷಕ್ಕೆ ರಾಜೀನಾಮೆ ನೀಡಬೇಕಾಯಿತು. ತಮ್ಮದೇ ಸ್ವತಂತ್ರ ಪಕ್ಷವನ್ನೂ ರಚಿಸಿ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆದದ್ದೂ ಆಯಿತು.

    ೨೦೧೩ರ ಚುನಾವಣೆ ಸಂದರ್ಭದಲ್ಲಿ ಕೆಜೆಪಿ ರಚಿಸಿದಾಗ ಅವರ ಗುರಿ ತಾವು ಮತ್ತೆ ಅಧಿಕಾರಕ್ಕೆ ಏರುವುದಾಗಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವುದಾಗಿತ್ತು, ಯಡಿಯೂರಪ್ಪ ಇಲ್ಲದ ಬಿಜೆಪಿ ಕರ್ನಾಟಕದಲ್ಲಿ ಹೇಗಿರುತ್ತದೆ ಎಂಬುದನ್ನು ತೋರಿಸಿಕೊಡುವುದಾಗಿತ್ತು ಮತ್ತು ಅದರಲ್ಲಿ ಯಶಸ್ವಿಯೂ ಆದರು. ಮೂವರು ಮುಖ್ಯಮಂತ್ರಿಗಳೊಂದಿಗೆ ಐದು ವರ್ಷ ಆಡಳಿತ ನಡೆಸಿದ ನಡೆಸಿದ್ದ ಬಿಜೆಪಿ ಮತ್ತೆ ೫೦ಕ್ಕಿಂತ ಕಡಿಮೆ ಸ್ಥಾನ ಗಳಿಸಿ ನೆಲಕಚ್ಚಿತು. ಹೀಗೆ ತಮ್ಮ ‘ಸಾಮರ್ಥ್ಯ’ ತೋರಿಸಿದ ಯಡಿಯೂರಪ್ಪನವರನ್ನು ಬಿಜೆಪಿ ಪುನಃ ಪಕ್ಷಕ್ಕೆ ಸೇರಿಸಿಕೊಂಡು ಶಿವಮೊಗ್ಗದಿಂದ ಲೋಕಸಭೆಗೆ ಕಳುಹಿಸಿತು. ಅದರ ನಡುವೆಯೇ ಕಾನೂನು ಹೋರಾಟದಲ್ಲಿ ಜಯ ಗಳಿಸಿ ನಿರ್ದೋಷಿಯೂ ಆದರು.

    ಎರಡನೇ ಅಧ್ಯಾಯ: ಆದರೆ ರಾಷ್ಟ್ರ ರಾಜಕಾರಣದಲ್ಲಿ ಯಡಿಯೂರಪ್ಪನವರಿಗೆ ಯಾವತ್ತೂ ಆಸಕ್ತಿ ಇರಲಿಲ್ಲ. ಅವರ ಗಮನ ಇದ್ದುದೆಲ್ಲ ಕರ್ನಾಟಕದ ಮೇಲೆಯೇ. ಅದನ್ನು ಹಲವು ಸಲ ನರೇಂದ್ರ ಮೋದಿ-ಅಮಿತ್ ಶಾ ಬಳಿ ಹೇಳಿಕೊಂಡಿದ್ದರು. ಗುಮಾಸ್ತನಾಗಿ ರೈಸ್‌ಮಿಲ್ ಮ್ಯಾನೇಜರ್, ಹಾರ್ಡ್‌ವೇರ್ ಅಂಗಡಿ ಮಾಲೀಕನ ಸ್ಥಾನದವರೆಗೆ; ಪುರಸಭೆ ಸದಸ್ಯನಿಂದ ಮುಖ್ಯಮನಂತ್ರಿ ಹುದ್ದೆವರೆಗೆ ಏರಿದ್ದ ಅವರಿಗೆ ಈ ನೆಲದ ಇಂಚಿಂಚೂ ರಾಜಕಾರಣ ಗೊತ್ತು. ಜಾತಿ ಸಮೀಕರಣದಲ್ಲಿ ಯಡಿಯೂರಪ್ಪನವರ‍್ನು ಹೊರಗಿಟ್ಟು ಚುನಾವಣೆ ಎದುರಿಸುವುದು ಸುಲಭವಲ್ಲ ಎನ್ನುವುದು ಮೋದಿ-ಶಾ ಜೋಡಿಗೂ ಅರ್ಥವಾಗಲು ಹೆಚ್ಚುಕಾಲ ಬೇಕಾಗಲಿಲ್ಲ.

    ಹೀಗಾಗಿ ಮತ್ತೆ ಅವರಿಗೇ ರಾಜ್ಯಾಧ್ಯಕ್ಷ ಪದವಿ ನೀಡಿ, ಅವರ ನೇತೃತ್ವದಲ್ಲೇ ಚುನಾವಣೆ ಎಂದು ಘೋಷಿಸಿದರು. ಖುದ್ದು ಅಮಿತ್ ಶಾ ಅವರೇ ‘ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ’ ಎಂದು ಘೋಷಿಸಿದರು. ಅವರಿಗೆ ಇಷ್ಟ ಇತ್ತೋ, ಇಲ್ಲವೋ, ಹಾಗೆ ಘೋಷಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ್ದು ಯಡಿಯೂರಪ್ಪನವರ ಚಾಣಾಕ್ಷತೆ.

    ೨೦೧೮ರ ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಪುನಃ ಬಿಜೆಪಿ ಅತಿದೊಡ್ಡ ಪಕ್ಷವಾದರೂ ಬಹುಮತ ಸಿಗಲಿಲ್ಲ. ಯಡಿಯೂರಪ್ಪ ಎರಡು ದಿನಗಳ ಅವಧಿಗೆ ಸಿಎಂ ಹುದ್ದೆ ಅಲಂಕರಿಸಿದ್ದಷ್ಟೇ ಬಂತು. ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಮಿಂಚಿನ ನಡೆಯಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದಿತು. ಈ ಮೈತ್ರಿ ಹೆಚ್ಚುಕಾಲ ಬಾಳುವುದಿಲ್ಲ ಎನ್ನುವುದು ಯಡಿಯೂರಪ್ಪನವರಿಗೆ ಸ್ಪಷ್ಟವಾಗಿ ಗೊತ್ತಿತ್ತು. ಹೀಗಾಗಿ ಮೈತ್ರಿಕೂಟದ ಅತೃಪ್ತ ಶಾಸಕರ ಬಗ್ಗೆ ಕಣ್ಣಿಟ್ಟಿದ್ದರು. ಆರೇಳು ಸಲ ‘ಆಪರೇಷನ್’ಗೆ ಪ್ರಯತ್ನಿಸಿ, ಕೊನೆಗೂ ಯಶಸ್ವಿಯಾಗಿ ಬರೋಬ್ಬರಿ ೧೭ ಶಾಸಕರ ರಾಜೀನಾಮೆ ಕೊಡಿಸಿ ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾದರು. ಉಪ ಚುನಾವಣೆಯಲ್ಲಿ ಶಾಸಕನ್ನು ಗೆಲ್ಲಿಸಿಕೊಂಡು ಸ್ಪಷ್ಟಬಹುತದ ಸರಕಾರವನ್ನು ಮುನ್ನಡಸುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಸೋತವರನ್ನು ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.

    ಅಡಿಗಡಿಗೂ ಹೆಜ್ಜೆ: ಜುಲೈ ೨೬, ೨೦೧೯ರಂದು ಯಡಿಯೂರಪ್ಪ ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾದರು ಖರೆ. ಆದರೆ ಒಂದು ಹೆಜ್ಜೆಯನ್ನೂ ಸಮಾಧಾನದಿಂದ ಇಡಲು ಅವರಿಗೆ ಸಾಧ್ಯವಾಗಿಲ್ಲ ಎನ್ನುವುದೂ ಸತ್ಯ. ಪೂರ್ಣ ಪ್ರಮಾಣದ ಸಂಪುಟ ರಚನೆಗೆ ಅವಕಾಶ ನೀಡದೇ ಶುರುವಿನಲ್ಲೇ ವರಿಷ್ಠರು ಕೈ ಕಟ್ಟಿ ಹಾಕುವ ಪ್ರಯುತ್ನ ಮಾಡಿದರು. ಮಿಗಿಲಾಗಿ ಈ ಬಾರಿ ಯಡಿಯೂರಪ್ಪ ಸರಕಾರ ರಚಿಸುವುದು ಮೋದಿ-ಶಾಗೆ ಇಷ್ಟವಿರಲಿಲ್ಲ. ಹಾಗಂತ ದೂರ ಇಡುವುದೂ ಸಾಧ್ಯವಿರಲಿಲ್ಲ. ಈ ಅಸಮಾಧಾನವನ್ನು ಅವರ ತೀರಿಸಿಕೊಂಡಿದ್ದು ಶಿವಮೊಗ್ಗದವರೇ ಆದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಮೂಲಕ.

    ಯಡಿಯೂರಪ್ಪನವರಿಗೂ, ಸಂತೋಷ್‌ಗೂ ಎಣ್ಣೆ-ಸೀಗೆಕಾಯಿ ಸಂಬಂಧ ಎನ್ನುವುದರ ಅರಿವಿದ್ದ ದಿಲ್ಲಿ ಜೋಡಿ ಅವರನ್ನೇ ಬಿಎಸ್‌ವೈ ವಿರುದ್ಧದ ಅಸ್ತ್ರವಾಗಿ ಬಳಸಿಕೊಂಡಿತು. ಅಷ್ಟು ಸಾಲದಂತೆ ಸಂತೋಷ್ ಅವರ ಪರಮಾಪ್ತ ನಳಿನ್‌ಕುಮರ್ ಕಟೀಲು ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿತು. ಮೂವರು ಉಪ ಮುಖ್ಯಮಂತ್ರಿಗಳ ಮೂಲಕ ಪರ್ಯಾಯ ನಾಯಕತ್ವದ ಸೂಚನೆಯನ್ನೂ ರವಾನಿಸಿತು.

    ಅದಕ್ಕಿಂತ ದೊಡ್ಡ ಸವಾಲು ಯಡಿಯೂರಪ್ಪನವರಿಗೆ ಎದುರಾದದ್ದು ಅಧಿಕಾರ ವಹಿಸಿಕೊಂಡ ತಕ್ಞಣ ಸುರಿದ ಭಾರಿ ಮಳೆ. ೨೦೦೮ರಲ್ಲಿ ಸಿಎಂ ಆದಾಗಲೂ ಅತಿವೃಷ್ಟಿ, ಪ್ರವಾಹದಿಂದ ರಾಜ್ಯ ಕಂಗೆಟ್ಟಿತ್ತು. ೨೦೧೯ರಲ್ಲಿಯೂ ಬರದ ಛಾಯೆಯಲ್ಲಿದ್ದ ರಾಜ್ಯದಲ್ಲಿ ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆ ಸಾಕು ಅನ್ನಿಸುವಷ್ಟು ಮಳೆ ಸುರಿಯಿತು. ಒಂದೆಡೆ ಪೂರ್ಣ ಪ್ರಮಾಣದ ಸಂಪುಟವಿಲ್ಲ, ತಮ್ಮದೇ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಬಿಡಿಗಾಸಿನ ನೆರವೂ ಇಲ್ಲ. ಖುದ್ದು ಗೃಹ ಸಚಿವ, ಹಣಕಾಸು ಸಚಿವರು ರಾಜ್ಯಕ್ಕೆ ಭೇಟಿ ನೀಡಿ ಹೋದರೂ ರಾಜ್ಯದ ಬಗ್ಗೆ ಕಿಂಚಿತ್ತೂ ಮಮಕಾರ ತೋರಲಿಲ್ಲ. ಪ್ರತಿಪಕ್ಷಗಳ ಟೀಕೆಗೂ ಇದು ಆಹಾರವಾಯಿತು. ಆದರೂ ಯಡಿಯೂರಪ್ಪ ಕುಗ್ಗಲಿಲ್ಲ, ಅಳುಕಲಿಲ್ಲ. ಏಕಾಂಗಿ ಯೋಧನಂತೆ ಮಡಿಕೇರಿಯಿಂದ ಕಲಬುರಗಿವರೆಗೆ ಸುತ್ತಾಡಿದರು,. ತಾವೇ ಖುದ್ದು ಪರಿಹಾರ ಕಾರ್ಯಗಳ ನಿಗಾವಹಿಸಿದರು. ಇಳಿವಯಸ್ಸಿನಲ್ಲಿಯೂ ಅವರ ಕ್ರಿಯಾಶೀಲತೆ ನೋಡಿ ರಾಜ್ಯಕ್ಕೆ ರಾಜ್ಯವೇ ಬೆರಗಾಯಿತು.

    ಅತಿವೃಷ್ಟಿ ಸಮಸ್ಯೆ ಮುಗಿಯಿತು ಎನ್ನುವಷ್ಟರಲ್ಲಿ ಸಂಪುಟ ರಚನೆ, ಅದರ ಬಳಿಕ ಖಾತೆ ಹಂಚಿಕೆ ಕಸರತ್ತಿನಲ್ಲಿ ಕೆಲದಿನಗಳು ಕಳೆದವು. ಎಲ್ಲವೂ ಒಂದು ಹಂತಕ್ಕೆ ಬಂತು ಎನ್ನುವಷ್ಟರಲ್ಲಿ ಕೊರೊನಾ ವಕ್ಕರಿಸಿದೆ. ಕೋವಿಒಡ್-೧೯ ಸೋಂಕು ನಿಯಂತ್ರಣದಲ್ಲೂ ಯಡಿಯೂರಪ್ಪನವರ ನಡೆ, ಪ್ರಯತ್ನ ಪ್ರತಿಪಕ್ಷಗಳ ಶ್ಲಾಘನೆಗೂ ಪಾತ್ರವಾಗಿದೆ. ಗಮನಿಸಬೇಕಾದ ಅಂಶವೆಂದರೆ ಅತಿವೃಷ್ಟಿ ಇರಲಿ, ಕೊರೊನಾ ಇರಲಿ, ಯಡಿಯೂರಪ್ಪನವರಿಗೆ ಸಂಪುಟದ ಹಳೆ ಸದಸ್ಯರಿಂದ ಅಷ್ಟಾಗಿ ಬೆಂಬಲ ಸಿಕ್ಕಿಲ್ಲ. ‘ಆಪರೇಷನ್’ಗೆ ಒಳಗಾಗಿ ಬಿಜೆಪಿಗೆ ಬಂದು ಸಚಿವರಾದವರು ಸಿಎಂ ಹೆಗೆಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಹಳಬರು ವರಿಷ್ಠರಿಗೆ ನಿಷ್ಠರಾಗಿ ಯಡಿಯೂರಪ್ಪನರಿಂದ ಅಂತರ ಕಾಪಾಡಿಕೊಂಡರೆ, ಹೊಸಬರು ಕೊಟ್ಟ ಮಾತಿನಂತೆ ಮಂತ್ರಿ ಮಾಡಿದ ಯಡಿಯೂರಪ್ಪನವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತಿದ್ದಾರೆ.

    ಬೊಕ್ಕಸವೂ ಖಾಲಿ: ರಾಜಕೀಯ ಅಡೆತಡೆಗಳು ಯಡಿಯೂರಪ್ಪನವರಿಗೆ ಹೊಸತೇನಲ್ಲ. ಅವರಿಗೆ ದೊಡ್ಡ ಸವಾಲು ಇರುವುದು ಹಣಕಾಸು ಖಾತೆ ನಿರ್ವಹಣೆಯಲ್ಲಿ. ಹಿಂದಿನ ಸರಕಾರಗಳ ಬೇಕಾಬಿಟ್ಟಿ ಯೋಜನೆಗಳಿಂದ ರಾಜ್ಯದ ಮೇಲೆ ಸಾಲದ ದೊಡ್ಡ ಹೊರೆ ಇದೆ. ವಿತ್ತೀಯ ಕೊರತೆ ಮಿತಿ ಕಾಪಾಡಿಕೊಂಡು, ಆರ್ಥಿಕ ಶಿಸ್ತು ಕಾಪಾಡಿಕೊಳ್ಳಬೇಕೆಂದರೆ ಹೊಸದಾಗಿ ಭಾರಿ ಪ್ರಮಾಣದ ಸಾಲ ಪಡೆಯುವಂತಿಲ್ಲ. ಕೇಂದ್ರ ಸರಕಾರವೂ ರಾಜ್ಯಕ್ಕೆ ಬರಬೇಕಾದ ಅನುದಾನ, ತೆರಿಗೆ ಪಾಲನ್ನು ಸಕಾಲದಲ್ಲಿ ಬಿಡುಗಡೆ ಮಾಡುತ್ತಿಲ್ಲ. ಬಜೆಟ್ ಮಂಡನೆ ವೇಳೆ ಹಣಕಾಸು ಖಾತೆ ಹೊಂದಿ ಮುಖ್ಯಮಂತ್ರಿಯೊಬ್ಬರು ತಮ್ಮದೇ ಪಕ್ಷ ಕೇಂದ್ರದಲ್ಲಿದ್ದರೂ, ‘ಕೇಂದ್ರದಿಂದ ನೆರವು ಸಿಗುತ್ತಿಲ್ಲ’ ಎಂದು ಸದನದಲ್ಲೇ ಹೇಳಿದ್ದು ಇದೇ ಮೊದಲು.

    ಇದೆಲ್ಲದರ ನಡುವೆಯೂ ಮುಖ್ಯಮಂತ್ರಿಯಾಗಿ ಒಂದು ವರ್ಷದ ಅವಧಿಯಲ್ಲಿ ಯಡಿಯೂರಪ್ಪನವರ ಕಾರ್ಯವೈಖರಿ ಬಗ್ಗೆ ಯಾರದ್ದೂ ಆಕ್ಷೇಪವಿಲ್ಲ. ಬಿಜೆಪಿಯಲ್ಲಿನ ಮುಖಂಡರೇ ಹೇಳುವಂತೆ ಯಡಿಯೂರಪ್ಪ ‘ಹಠವಾದಿ’. ಅಂದುಕೊಂಡಿದ್ದನ್ನು ಸಾಧಿಸುವವರೆಗೂ ವಿರಮಿಸುವುದು ಅವರಿಗೆ ಗೊತ್ತಿಲ್ಲ. ರಾಜ್ಯದ ಬಗ್ಗೆ ಅವರಿಗೆ ಸ್ಪಷ್ಟ ಕನಸುಗಳಿವೆ, ರೈತ ನಾಯಕನಾಗಿ ರೈತರಿಗೆ ಮತ್ತಷ್ಟು ನೆರವು ನೀಡಬೇಕೆಂಬ ಹಂಬಲವಿದೆ. ಜನಪರ ಯೋಜನೆಗಳನ್ನು ನೀಡಬೇಕೆಂಬ ಆಸೆಯಿದೆ. ಇನ್ನೂ ಎರಡೂವರೆ ವರ್ಷ ಅಧಿಕಾರವಿದೆ. ‘ಛಲದಂಕ ಮಲ್ಲ’ನ ಒಳಗಿರುವ ‘ಹಠವಾದಿ’ ಎದ್ದುಕುಳಿತಿದ್ದಾನೆ. ೭೭ರಲ್ಲಿರುವ ಯಡಿಯೂರಪ್ಪನವರಿಗೆ ಇದು ಕೊನೆಯ ಅವಕಾಶ. ಈ ಸಲವೂ ಯಡಿಯೂರಪ್ಪ ರಾಜಕಾರಣದ ‘ದುರಂತ ನಾಯಕ’ ಆಗದಿರಲಿ.

    ನಾಗರ ಪಂಚಮಿ ನಾಡಿಗೆ ದೊಡ್ಡದು

    ಶ್ರಾವಣ ಮಾಸದ ಜಿಟಿ,ಜಿಟಿ ಮಳೆ ನನ್ನ ಬಾಲ್ಯವನ್ನು ಎಳೆದು ತಂದು ಲವಲವಿಕೆ ಮೂಡಿಸುತ್ತದೆ.ಆಗ ತಾನೇ ಶಾಲೆಗಳು ಬೇಸಿಗೆಯ ರಜೆ ಕಳೆದು ಮುಂದಿನ ತರಗತಿಗಳ ಕೋಣೆಯೊಳಕ್ಕೆ ಎಂತಹುದೋ ಆಹ್ಲಾದಕರ ಮನಸ್ಸಿನಿಂದ ನಮ್ಮನ್ನು ಬರಮಾಡಿರುತ್ತಿದ್ದವು. ಹೊಸ ಪೆನ್ನು,ಇಂಕಿನ ವಾಸನೆ,ಹೊಸ ಪುಸ್ತಕಗಳ ವಾಸನೆ,ಲೇಖಕ್ ನೋಟ್ ಬುಕ್ಕಗಳ ವಾಸನೆ ,ಮೋಡ ತುಂಬಿದ ನವಿರಾದ ದಿನಗಳ ಸೊಬಗಿನಲ್ಲಿ ತರಗತಿಗಳಲ್ಲಿ ಕುಳಿತುಕೊಳ್ಳುವ ಸೊಬಗೇ ಈಗ ಮುದಕೊಡುತ್ತಿದೆ. ಹಾಗೆ ಸೇರಿದ ಹೊಸತರಗತಿಗಳಿಗೆ ಮೊದಲಾಗಿ ರಜೆ ಅಂತ ಬರ್ತಿದ್ದುದೇ ಈ ನಾಗರ ಪಂಚಮಿಗೆ. ಈ ದಿನ ನಮ್ಮ ಜೊತೆಯ ಹುಡುಗಿಯರು ಕಾಲು ಪೂರ್ತಿ ಮುಚ್ಚುವ ಲಂಗಗಳನ್ನು ಹಾಕಿಕೊಂಡು ಸಂಭ್ರಮಿಸುತ್ತಿದ್ದರು.

    ನನ್ನೂರಲ್ಲಿ ಜಾತಿ,ಮತಗಳ ಭೇದಗಳಿಲ್ಲದೆ ಇಂದು ಎಲ್ಲರೂ ದೇವಸ್ಥಾನದ ಹತ್ತಿರ ಇದ್ದ ನಾಗರ ಕಟ್ಟೆಗೆ ಹಾಲೆರೆಯಲು ಬೆಳಿಗ್ಗೆ 10 ಗಂಟೆಯಿಂದ ಪ್ರಾರಂಭಿಸಿ,12 ಗಂಟೆಯವರೆಗೆ ಊರಿಂದ ಗುಂಪುಗಳಲ್ಲಿ ಊರ ಹೆಂಗಳೆಯರೆಲ್ಲ ಹುರುಪಿನೊಂದಿಗೆ ಹೊರಡುವ ದೃಶ್ಯ ಅವಿಸ್ಮರಣೀಯ. ಹೊಸದಾಗಿ ಮದುವೆಯಾಗಿ ಹೋಗಿದ್ದ ಹೆಂಗಳೆಯರ ಸಡಗರವಂತೂ ಕೇಳಲೇ ಬೇಡಿ. ಅವರ ಒನಪು, ವಯ್ಯಾರ,ಸಂಭ್ರಮ ಮುಗಿಲು ಮುಟ್ಟಿ ಅಲ್ಲ, ದಾಟಿ ಮೇಲೆ ಮೂರಿಂಚು!

    ಬೇಸಿಗೆ ರಜೆಯ ಮಧ್ಯಾಹ್ನಗಳಲ್ಲಿ ಮನೆಗೆಲಸ ಮಾಡುತ್ತಾ,ಸಿಕ್ಕ ಅಲ್ಪ ಸ್ವಲ್ಪ ಸಮಯದಲ್ಲಿ ಕೈ ಕಸೂತಿ ಹಾಕಿ,ಎರಡು ಮೂರು ಬಣ್ಣಗಳಿಂದ ಹೂ,ಹಣ್ಣು ಕಾಣುವ ರೀತಿ ಹೆಣೆದುಕೊಂಡು, ಬಲೆಯಂತಿದ್ದ ಬಿಳೀ ಬಣ್ಣದ ಬಟ್ಟೆಯನ್ನು ತಟ್ಟೆಯಲ್ಲಿಟ್ಟಿದ್ದ ಹಾಲೆರೆಯುವ ಸಾಮಗ್ರಿಗಳನ್ನು ಮುಚ್ಚಲು ಉಪಯೋಗಿಸಿ ಸಡಗರದಿಂದ ಹೊರಡುತ್ತಿದ್ದ ಅಮ್ಮನ ಹಿಂದೆ ಹೊರಡುವುದೇ ನನಗೆ ಹಬ್ಬ.

    ಎದುರಿಗೆ ಬರುತ್ತಿದ್ದವರು ಹಾಲು ಹಾಕಿದಿರಾ ಅಂತ ನಗುಮೊಗದಲ್ಲಿ ಮಾತಾಡಿಸಿ, ನಿಂತು ಅವರ ಸೀರೆ,ಹೆಣೆದ ತಟ್ಟೆಯಮೇಲಿನ ಬಟ್ಟೆಗಳ ವಿಷಯ ವಿನಿಮಯ ಮಾಡಿಕೊಳ್ಳುತ್ತ ಜಿಟಿ,ಜಿಟಿ ಮಳೆಯಲ್ಲಿ,ಸಾಮಾನ್ಯವಾಗಿ ಬರಿದಾಗಿರುತ್ತಿದ್ದ ನಮ್ಮೂರ ಕೆರೆ ಅಂಗಳದ ಮುಖಾಂತರ ದೇವಸ್ಥಾನದ ನಾಗರ ಕಟ್ಟೆಗೆ ಹೋಗುವ ಸಂಭ್ರಮ ಇಂದಿನ ಯಾವ ಮಾಲ್ ಗಳ ಭೇಟಿಗೂ ಸಮ ಇಲ್ಲ ಬಿಡಿ.

    ಈ ಸಡಗರದ ನಡಿಗೆಯಲ್ಲಿ ಸಿಗುತ್ತಿದ್ದ ನನ್ನ ಗೆಳೆಯರ ಕೈಯಲ್ಲಿರುತ್ತಿದ್ದ ಕೊಬ್ಬರಿ ಬಟ್ಟಲಿನ ತಿರುಗುಗಳು,ಅದಕ್ಕೆ ಜೋಡಿಸಿದ್ದ ಬಿಳೀ ದಾರ ಎಳೆದೆಳೆದು ಕೊಬ್ಬರಿಬಟ್ಟಲನ್ನು ತಿರುಗಿಸುವ ಖುಷಿ,ಅದಕ್ಕಿಂತ ನನ್ನದು ಹೇಗೆ ಬೇರೆ ಅಂತ ತುಲನೆ ಮಾಡಿ ಆನಂದಿಸುವುದು ಮುಗಿಯುವುದರಲ್ಲಿ ನಾಗರಕಟ್ಟೆಯ ಹತ್ತಿರವಿರುತ್ತಿದ್ದ ಹೆಂಗಳೆಯರ ಗುಂಪಿನಲ್ಲಿ ಸೇರಿ ಆಗಿರುತ್ತಿತ್ತು. ಅಲ್ಲಿ ಅಮ್ಮನೂ ನನ್ನನ್ನು ಮರೆತಂತೆ ತನ್ನ ಸರದಿ ಬರುವವರೆಗೆ ಅಲ್ಲಿಗೆ ಬಂದಿದ್ದ ಎಲ್ಲ ಸಡಗರದ ಹೆಂಗಸರೊಂದಿಗೆ ಮಾತುಗಳು. ….ಯಾವಗಾ ಬಂದಿಯೇ,ಮನೆಕಡೆ ಬರ್ಲಿಲ್ಲ,ನಿನ್ನ ಗಂಡನೂ ಬಂದನಾ,ಅತ್ತೆ ಮನೆ ಹೇಗಿದೆ,ನೋಡಿದರೆ ಗಂಡನ ಮನೆ ನೀರು ಹೊಂದಿಕೊಂಡ ಹಾಗಿದೆ ಬಿಡು….ಅಂತ ಮದುವೆಯಾದ ನನ್ನೂರ ಚೆಲುವೆಯರನ್ನು ವಿಚಾರಿಸುತ್ತಿದ್ದರೆ,ಆ ಹುಡುಗಿಯರ ಮುಖದ ನಾಚಿಕೆಯ ನಗು ಇರುತ್ತಿತ್ತಲ್ಲ, ಅದು ಈಗಿನ ಯಾವ ಮಾಡೆಲ್ ಗಳೂ ಅನುಸರಿಸಲು ಸಾಧ್ಯವಿಲ್ಲ ಬಿಡಿ.

    ನೀವು ಹಾಲು ಎರೆಯಿರಿ,ನೀವು ಎರೆಯಿರಿ ಅಂತ ಪ್ರೀತಿಯಿಂದ ಹಾಲು ಹಾಕಲು ಜಾಗ ಮಾಡಿಕೊಡುತ್ತಿದ್ದವರನ್ನು ಮಾತಾಡಿಸುತ್ತಲೇ ನನ್ನನ್ನು ಕೂಗಿ ಕರೆದು ಹುತ್ತದ ಹತ್ತಿರ ನಿಲ್ಲಿಸಿ ಬಲ ಮುಂಗೈಗೆ ಒಂದೇ ಒಂದು ಮಲ್ಲಿಗೆ ಹೂ ಕಟ್ಟಿದ್ದ ಬಿಳೀ ದಾರವನ್ನು ಕಟ್ಟಿ, ತಟ್ಟೆಯಲ್ಲಿ ಮನೆಯಿಂದ ಮಾಡಿಕೊಂಡು,ಹೆಣೆದ ಬಟ್ಟೆ ಮುಚ್ಚಿ ತಂದಿದ್ದ ಚಿಗಳೆ, ತಂಬಿಟ್ಟು (ಅಕ್ಕಿ,ಎಳ್ಳು ಗಳಿಂದ ಮಾಡಿದ ಸಿಹಿ ಉಂಡೆಗಳು) ಉಂಡೆಗಳನ್ನು ವೀಳ್ಯೇದ ಎಲೆಮೇಲೆ,ಅಡಿಕೆ ,ಈ ಉಂಡೆಗಳನ್ನು ಇಟ್ಟು, ನೆನಸಿದ್ದ ಕಡ್ಲೆ ಬೇಳೆ ಜೊತೆಗೆ ಹುತ್ತದ ಮೇಲಿದ್ದ ಹುಣಸೆಮರದಿಂದ ಆಗತಾನೇ ಚಿಗುರಿ,ಸಣ್ಣ ಮರಿ ಹಾವುಗಳ ರೂಪದಲ್ಲಿರುತ್ತಿದ್ದ ಹುಣಸೇ ಕಾಯಿಗಳನ್ನು ಇಟ್ಟು, ಊದಿನಕಡ್ಡಿ ಹಚ್ಚಿ ಪೂಜೆ ಮಾಡಿ, ತಟ್ಟೆಯಲ್ಲಿದ್ದ ಚಿಕ್ಕ ಗಿಂಡಿಯೊಳಗಿನ ಹಾಲನ್ನು ಬಿಳೀ ದಾರ ಸುತ್ತ ಕಟ್ಟಿದ್ದ ಹುತ್ತಕ್ಕೆ ಮೂರು ಸಲ ಹಾಕುವುದು…ಅಲ್ಲಿಗೆ ಅಮ್ಮ ಹಿಂದಕ್ಕೆ ತಿರುಗಿ ಸರದಿಯಲ್ಲಿದ್ದವರಿಗೆ ಚಿಗಳೆ ತಂಬಿಟ್ಟು ಕೊಡುತ್ತಾ,ಬನ್ನಿ ನಮ್ದು ಆಯ್ತು,ನೀವೂ ಎರೆಯಿರಿ ಅಂತ ಹೇಳಿದರೆ,ಅಲ್ಲಿಗೆ ಪಂಚಮಿಯ ನಾಗನಿಗೆ ಹಾಲೆರೆಯುವುದು ಮುಗಿದ ಹಾಗೆ.

    ಆಕಾಶದ ಕಡೆ ಬಾಯಿ ತೆರೆದುಕೊಂಡ ದೊಡ್ಡ ಬಿಲಗಳು ನನಗೆ ಹಾವಿನ ಬಾಯಿಗಳು ಏನೋ ಅನ್ನುವ ರೀತಿ ಕಾಣಿಸುತ್ತಿದ್ದವು. ಹಾಲು ಹಾಕಿ ಅವುಗಳ ಒಳಗೆ ಹಾವು ಇದೆಯೇನೋ ಅಂತ ಹತ್ತಿರ ಬಗ್ಗಿ ನೋಡುತ್ತಿದ್ದವನನ್ನು ಎಳೆದು ಕೊಂಡು ಅಮ್ಮ ಹೊರಡುವಾಗ ಎಂತಹದೋ ನಿರಾಶೆ!

    ಮನೆಗೆ ಮತ್ತೆ ಜಿಟಿ,ಜಿಟಿ ಮಳೆಯಲ್ಲಿ ಹಿಂತಿರುಗುವ ನಡಿಗೆಯಲ್ಲಿ, ಬರುವಾಗಿನ ಎಲ್ಲ ಸಂಭ್ರಮ ಮರುಕಳಿಸುತ್ತಿತ್ತು. ವ್ಯತ್ಯಾಸ ಅಂದ್ರೆ ಅಮ್ಮ ಈಗ ಎದುರು ಬರುತ್ತಿದ್ದವರನ್ನು ಯಾಕೆ ತಡ ಮಾಡಿಕೊಂಡು ಬಿಟ್ಟಿಯಲ್ಲ ಅಂತ ವಿಚಾರಿಸಿ,ನಗುವಿನ ವಿನಿಮಯ. ಮನೆಗೆ ಬಂದು ಪಾಯಸದ ಜೊತೆ,ಪಂಚಮಿ ಉಂಡೆಗಳನ್ನು ತಿಂದು,ಊಟ ಅಂತ ಮುಗಿಯುವುದನ್ನು ಕಾಯ್ತಿದ್ದ ಹಾಗೆ ಹೊರಗಡೆಗೆ ಜಿಗಿತ. ಇವತ್ತು ಅಪ್ಪನ ರಜೆ ದಿನಗಳ ಲೆಕ್ಕದ ಕ್ಲಾಸ್ ಇರುತ್ತಿರಲಿಲ್ಲ. ಊರಲ್ಲಿ ಬಂದರೆ, ಬಜಾರದಲ್ಲಿ ವಿಧ ವಿಧದ ಸ್ಪರ್ಧೆಗಳು ಗುಂಪು,ಗುಂಪಾಗಿ ಇರುತ್ತಿದ್ದವು. ನಮ್ಮಲ್ಲಿ ಸಜ್ಜೆ ಹುರಿದು,ಪುಡಿಮಾಡಿ ಬೆಲ್ಲದ ಜೊತೆ ಹುರಿದ ಶೇಂಗಾ ಬೀಜ,ಎಳ್ಳು ಹಾಕಿ ಮಾಡಿದ ಉಂಡೆಗೆ ಟಮಟ ಅಂತೀವಿ. ಆರಿದ ನಂತರ ಇವು ಕಲ್ಲಿನ ತರ ಗಟ್ಟಿ ಆಗ್ತಿದ್ದವು. ಇಂತಹ ಉಂಡೆಗಳನ್ನು ಕೈಯಿಂದ ಹೊಡೆದು ಪುಡಿ ಮಾಡುವ ಸ್ಪರ್ಧೆಗಳು ಊರ ತುಂಬಾ ಇರುತ್ತಿದ್ದವು. ಮತ್ತೆ ಕೆಲವು ಕಡೆ ತೆಂಗಿನ ಕಾಯಿಯನ್ನು ಕೈಯಿಂದ ಗುದ್ದಿ ಹೊಡೆಯುವ ಸ್ಪರ್ಧೆಗಳು. ಊರ ಗಟ್ಟಿ ಯುವಕರು ತಲೆಮೇಲಿನ ಟವೆಲ್ ತೆಗೆದು,ಮುಂಗೈ ಪೂರ್ತಿ ಮುಚ್ಚುವ ಹಾಗೆ ಕಟ್ಟಿಕೊಂಡು,ಸಣ್ಣ ಬೆಂಕಿಕಡ್ಡಿಯನ್ನು ತೆಂಗಿನಕಾಯಿಯ ಕೆಳಗೆ ಒಂದು ಕಡೆ ನಿಲ್ಲಿಸಿ, ನೆರೆದವರನ್ನೆಲ್ಲ ಒಮ್ಮೆ ನೋಡಿ, ಅವನ ಬಟ್ಟೆ ಮುಚ್ಚಿದ ಬಲ ಮುಂಗೈ ಯನ್ನು ವಿಶಿಷ್ಟ ರೀತಿಯಲ್ಲಿ ಸಜ್ಜಾಗಿಸಿ, ತನ್ನೆರಡು ಮೊಳಕಾಲ ಮೇಲೆ ಭಾರ ಹಾಕಿ,ಕೈ ಎತ್ತಿ, ಒಂದೇ ಏಟಿಗೆ ಕಾಯಿ ಒಡೆದನೆಂದರೆ,ಅದರ ಚೂರುಗಳೆಲ್ಲ ಚೆಲ್ಲಾ ಪಿಲ್ಲಿ!

    ಇವು ದಂತ ಕಥೆಗಳಾಗಿ ತಿಂಗಳುಗಳ ಕಾಲ ಊರವರ ಬಾಯಲ್ಲಿ ಇರುತ್ತಿತ್ತು. ಇವೆಲ್ಲಕ್ಕೆ ಸಾಕ್ಷಿಯಾಗಿ,ಮುಂದಿನ ಸಾಲಲ್ಲೇ ಇದ್ದು ನೋಡುತ್ತಿದ್ದ ನನಗೆ ಎಲ್ಲಿಲ್ಲದ ಸಂಭ್ರಮ! ಯಾರಾದ್ರೂ ಚೂರು ಸಿಡಿಯುತ್ತೆ ಹಿಂದೆ ಬಾ ಅಂತ ಎಳೆದರೆ,ಹೊಡೆದು ಬಿಡುವಷ್ಟು ಸಿಟ್ಟು.

    ಚಿಕ್ಕ ಮಕ್ಕಳಾಗಿದ್ದ ನಮ್ಮ ಕೈಗಳಲ್ಲಿ ನಾನಾ ತರಹದ ದಾರಗಳಿಂದ ಮಾಡಿದ ತಿರುಗುಗಳು. ದಾರವನ್ನು ಎರಡೂ ಕೈಗಳ ಹೆಬ್ಬೆರಳು ಮತ್ತು ಕಿರುಬೆರಲುಗಳಿಗೆ ಹಾಕಿಕೊಂಡು,ಹಿಂದೆ,ಮುಂದೆ ಕೈ ಗಳನ್ನು ತಂದರೆ,ಜಿಯ್,ಜಿಯ್ ಅನ್ನುವ ಶಬ್ದದೊಂದಿಗೆ ಮದ್ಯೆ ಇರುತ್ತಿದ್ದ ದುಂಡನೆಯ,ಚಪ್ಪಟೆಯ ವಸ್ತು ತಿರುಗುತ್ತಿತ್ತು. ಬೆಳಿಗ್ಗೆಯಿಂದ,ಸಾಯಂಕಾಲದ ವರೆಗೆ ಇದನ್ನು ಕೈಯಲ್ಲಿ ಭಯಂಕರ ಮೌಲ್ಯವಾದದ್ದು ಅನ್ನುವ ರೀತಿಯಲ್ಲಿ ಹಿಡಿದು,ಹೊಸ ಗೆಳೆಯರು ಕಂಡ ತಕ್ಷಣ ತಿರುಗಿಸಿ ತೋರಿಸುವುದರ ಸಂಭ್ರಮ ಇತ್ತಲ್ಲ, ಇವತ್ತು 30 ಲಕ್ಷ ಕಾರು ಕೊಂಡರೂ ಅನುಭವಿಸಲು ಸಾಧ್ಯ ಇಲ್ಲ ಬಿಡಿ.

    ಹಾಗೇ ಇಳಿಸಂಜೆ ಆಗುತ್ತಿದ್ದಂತೆ ಮನೆಗೊಂದರಂತೆ ಕಟ್ಟಿದ್ದ ಹಗ್ಗದ ಜೋಕಾಲಿಗಳಲ್ಲಿ ತೂರಾಟ. ಹೆಚ್ಚಾಗಿ ಹೆಣ್ಣು ಮಕ್ಕಳು ಹಾಡು ಹಾಡುತ್ತಾ ತಮ್ಮನ್ನು ತಾವೇ ಜೀಕಿ ಕೊಳ್ಳುತ್ತ ತುರಾಡುವುದನ್ನು ನೋಡಲು ಸುತ್ತ ಹತ್ತು ಹುಡುಗ ಹುಡುಗಿಯರ ಗುಂಪು. ಜೋಕಾಲಿ,ಮನೆಗಳ ಕಟ್ಟೆಯ ಮೇಲೆ,ಮನೆ ಮುಂದಿನ ಮರಕ್ಕೆ ಕಟ್ಟುತ್ತಿದ್ದರು. ಈ ಜೋಕಾಲಿಗಳು,ಕೆಲವರ ಜಗುಳಿಗಳ ಮೇಲೆ ಮುಂದೆ ಬರ್ತಿದ್ದ ಗೌರಿ ಹುಣ್ಣಿಮೆ ವರೆಗೂ ಇರುತ್ತಿದ್ದವು. ಅಂತಹ ಅಪ್ಪ,ಅಮ್ಮಂದಿರಿಗೆ ನಮ್ಮ ಗುಂಪುಗಳಲ್ಲಿ ಭಾರೀ ಮೆಚ್ಚುಗೆ ಮತ್ತು ಅವರೆಡೆಗೆ ಹೆಮ್ಮೆ. ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಜಿಟಿ ಜಿಟಿ ಮಳೆಯಲ್ಲೇ ಕಳೆಯುತ್ತಿದ್ದ ನಾಗರ ಪಂಚಮಿಯ ಸಡಗರ,ಹಳ್ಳಿಗಳಲ್ಲೂ ಸಹ ಮರೆಯಾಗುತ್ತಿವೆ ಎನ್ನುವುದು ವಿಷಾದಕರ ಸಂಗತಿ.

    ಆಧುನಿಕತೆಯ ಮನೆ ಬದಲಾವಣೆಗಳು ಜೋಕಾಲಿ ಕಟ್ಟುವ ವ್ಯವಸ್ಥೆಯನ್ನೇ ಹಾಳು ಮಾಡಿವೆ. ಮನೆ ಮುಂದಿನ ಮರಗಳು ಕಾಣೆಯಾಗಿ ಸಿಮೆಂಟ್ ಅಂಗಳಗಳು,ಸಗಣಿ ನೀರಿನ ಸಿಂಚನದೊಂದಿಗೆ ಮೈತಳೆಯುತ್ತಿದ್ದ ಬೆಳಗಿನ ರಂಗೋಲಿಗಳನ್ನು ತಿಂದು ಹಾಕಿವೆ. ಸ್ಕೂಲು,ಕಾಲೇಜು ಅಂತ ಓದುತ್ತಿರುವ ಹುಡುಗಿಯರಿಗೆ, ನಾಗ ಪಂಚಮಿ,ಗೌರಿ ಹಬ್ಬಗಳ ಜೋಕಾಲಿಗಳು ನಾಚಿಕೆಯ ವಿಷಯಗಳಾಗಿರುವುದು ನನಗಂತೂ ನೋವಿನ ಸಂಗತಿ.

    ಶ್ರಾವಣದ ಜಿಟಿ,ಜಿಟಿ ಮಳೆಗೆ ರೈತಾಪಿ ಜನರು ಬೆಳೆಯ ಪ್ರಾರಂಭಿಕ ಕೆಲಸಗಳನ್ನು ಮುಗಿಸಿ,ಮಳೆರಾಯನ ಕರುಣೆಗೆ ಕಾಯುತ್ತ, ಜೀವನ ಪ್ರೀತಿಯನ್ನು ಉಳಿಸಿಕೊಂಡು,ಚೇತನಗಳನ್ನು ಲವಲವಿಕೆಯಿಂದ ಇರಿಸಿಕೊಳ್ಳಲು ಬೇಕಾದ ಹಾಗೆ ಋತುಮಾನಗಳಿಗೆ ತಕ್ಕ ಆಹಾರ,ಹಬ್ಬಗಳನ್ನು ಹೆಣೆದುಕೊಂಡಿದ್ದ ನಮ್ಮ ಪೂರ್ವಿಕರು ನನಗಂತೂ ಮಹಾನ್ ಮಾನವರು ಅಂತಲೇ ಅನ್ನಿಸುವುದು……ನಿಮಗೆ???

    ಬೆಂಗಳೂರಿನ ಗಲ್ಲಿಗಳಲ್ಲಿ ಹಾಸ್ಯದ ಓಟ

    ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ಯಾರದೋ ಕೈಗೆ ಸಿಕ್ಕಿ ತನ್ನ ಸೂಟ್ ಕೇಸ್ ಕಳೆದುಕೊಳ್ಳುವ ಫ್ರೆಂಚ್ ಪ್ರಜೆ, ಆತನನ್ನು ತನ್ನ ಬಾಸ್ ಬಳಿಗೆ ಕರೆದೊಯ್ಯಲಾಗದ ಚಾಲಕ, ತನ್ನ ಆಟೊದಲ್ಲಿ ಹತ್ತಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿ, ತನ್ನ ಬೆನ್ನಿಗೆ ಕಟ್ಟಿಕೊಳ್ಳುವ ನಾಯಕ, ಆತನ ತಂಗಿಯ ಅಂತರ್ಧರ್ಮೀಯ ವಿವಾಹ, ಅವರಿಗೆ ಮಕ್ಕಳಾಗದ ಸಮಸ್ಯೆ, ವಿದೇಶಿ ಪ್ರಜೆ ಮತ್ತು ಆತನ ಸೂಟ್ ಕೇಸ್ ಹುಡುಕಾಡುವ ರೌಡಿಗಳು, ಇವರನ್ನು ಹಿಡಿದುಕೊಂಡು ಹೋಗುವ, ಫ್ರಾನ್ಸ್ ಎಂದರೆ ಫ್ರಾನ್ಸ್ ಚಿಲ್ಲಿ, ಫ್ರಾನ್ಸ್ ಕರಿ, ಫ್ರಾನ್ಸ್ ಬಿರಿಯಾನಿ ಎಂದು ತಿಳಿಯುವ ಕನಿಷ್ಠ ಜ್ಞಾನವಿಲ್ಲದ ಪೊಲೀಸರು… ದಾನಿಶ್ ಸೇಠ್ ಪ್ರಮುಖ ಪಾತ್ರದ ಪನ್ನಗ ಭರಣ ನಿರ್ದೇಶನದ “ಫ್ರೆಂಚ್ ಬಿರಿಯಾನಿ” ಚಿತ್ರ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಓಡುವಂತೆ ಚಕಚಕನೆ ಸುತ್ತಿ ಪ್ರೇಕ್ಷಕರನ್ನು ಅಷ್ಟೇ ವೇಗವಾಗಿ ನಗಿಸಿ ಕ್ಲೈಮ್ಯಾಕ್ಸ್ ಥಿಯೇಟರ್ ನಲ್ಲಿ ಅಂತ್ಯ ಕಾಣುತ್ತದೆ.

    ಒಂದೇ ತಿಂಗಳಲ್ಲಿ ಪಿ.ಆರ್.ಕೆ. ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯಿಂದ ನಿರ್ಮಿಸಿರುವ “ಲಾ” ಮತ್ತು “ಫ್ರೆಂಚ್ ಬಿರಿಯಾನಿ” ಚಿತ್ರಗಳು ಥಿಯೇಟರ್ ಪ್ರದರ್ಶನ ಇಲ್ಲದ ಕಾರಣಕ್ಕೆ ಬಹಳ ಚರ್ಚೆಗೆ ಒಳಗಾಗಿದ್ದವು. ಮೊದಲು ಬಿಡುಗಡೆಯಾದ `ಲಾ’ ಚಿತ್ರದಂತೆ “ಫ್ರೆಂಚ್ ಬಿರಿಯಾನಿ” ಪ್ರೇಕ್ಷಕರನ್ನು ನಿರಾಸೆಗೊಳಿಸುವುದಿಲ್ಲ.

    ವಿದೇಶದಿಂದ `ಸಾಮಾನು’ ತರಬೇಕಾದ ವ್ಯಕ್ತಿ ತನ್ನ ಹೆಸರು ಸೈಮನ್ ಎಂದ ಕೂಡಲೇ ತಪ್ಪಾಗಿ ಗ್ರಹಿಸಿ ಹಿಡಿದು ಕರೆ ತರುವುದರಿಂದ ಪ್ರಾರಂಭವಾಗುವ ಸಿನಿಮಾ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ಅಡೆತಡೆಯಿಲ್ಲದೆ ಓಡುತ್ತಿರುತ್ತದೆ. ಇತ್ತೀಚೆಗೆ ಒಟಿಟಿಯಲ್ಲಿ ಹಲವು ಭಾಷೆಗಳ ಚಲನಚಿತ್ರಗಳು ಬಿಡುಗಡೆಯಾಗುತ್ತಿವೆ. ಇವುಗಳಲ್ಲಿ ಬಹಳಷ್ಟು ಸಿನಿಮಾಗಳು ಮೊದಲ ಹದಿನೈದು ನಿಮಿಷಗಳಲ್ಲಿ ಆಸಕ್ತಿ ಕಳೆದುಕೊಳ್ಳುವಂತಿವೆ. ಆದರೆ ಫ್ರೆಂಚ್ ಬಿರಿಯಾಗಿ ಒಂದರೆಕ್ಷಣವೂ ನಿಲ್ಲದೆ, ಬೋರು ಹೊಡೆಸದೆ ಅಲ್ಲಿನ ಪಾತ್ರಗಳು ಚಲಿಸಿದಷ್ಟೇ ವೇಗವಾಗಿ ಚಲಿಸುತ್ತಾ ಇರುತ್ತದೆ. ಈ ವೇಗ ಚಿತ್ರವನ್ನು ತಡೆಯಿರದಂತೆ ಮುನ್ನಡೆಸಿದರೂ ಗಟ್ಟಿ ಕಥೆಯ ಕೊರತೆ ಎದ್ದು ಕಾಣುತ್ತದೆ. ಕೆಲವು ಪಾತ್ರಗಳು ಯಾವುದೇ ಕಾರಣವಿಲ್ಲದೆ ಇರುತ್ತವೆ.

    ಹಾಸ್ಯರಸವು ನಟ, ನಿರ್ದೇಶಕರಿಬ್ಬರಿಗೂ ಸವಾಲು. ಕೊಂಚ ಹದ ತಪ್ಪಿದರೆ ಅಪಹಾಸ್ಯವಾಗುತ್ತದೆ. ದಾನಿಶ್ ಸೇಠ್ ಲೀಲಾಜಾಲವಾಗಿ ತಮ್ಮ ಪಾತ್ರ ನಿಭಾಯಿಸಿದ್ದಾರೆ. ರಂಗಾಯಣ ರಘು ಯಾವತ್ತಿನಂತೆ ತಮ್ಮ ನಟನೆಯಲ್ಲಿ ಹಿಡಿದಿಡುತ್ತಾರೆ. ಚಿಕ್ಕಣ್ಣ ಬರುವುದು ಕೆಲ ನಿಮಿಷಗಳಾದರೂ ತಮ್ಮ ಛಾಪು ಒತ್ತಿ ಹೋಗುತ್ತಾರೆ. ಬಹುತೇಕ ಕಡಿಮೆ ಪರಿಚಯದ, ಹೊಸ ಮುಖಗಳೇ ಇರುವ ಈ ಚಿತ್ರ ಅಂತಹ ಕೊರತೆಗಳೇನನ್ನೂ ಎತ್ತಿ ತೋರದೆ ಮುನ್ನಡೆಯುತ್ತದೆ.

    ಚಿತ್ರಮಂದಿರದ ಪ್ರದರ್ಶನ ಇಲ್ಲದ ಕಾರಣಕ್ಕೆ ಚಿತ್ರಮಂದಿರದಲ್ಲಿ ಕುಳಿತು ಆನಂದಿಸಬಹುದಾದ ಕಾಮಿಡಿ ಚಿತ್ರ ಕೈ ತಪ್ಪಿತು ಎನ್ನಿಸುವುದು ಸುಳ್ಳಲ್ಲ.ದಾನಿಶ್ ಸೇಠ್, ಫ್ರಾನ್ಸ್ ದೇಶದಿಂದ ಬಂದು ಇಲ್ಲಿ ಎಲ್ಲವನ್ನೂ ಕಳೆದುಕೊಳ್ಳುವ ವಿದೇಶಿಗನಾಗಿ ಸಾಲ್ ಯೂಸುಫ್ ಮನೋಜ್ಞ ಅಭಿನಯ. ಭಾಷೆ ಗೊತ್ತಿಲ್ಲದೆ ತನಗೆ ಸಂಬಂಧಿಸದ ಸಿಕ್ಕುಗಳಲ್ಲಿ ಸಿಲುಕಿಕೊಳ್ಳುವ ಸೈಮನ್ ಪಾತ್ರಧಾರಿಯಾಗಿ ಅವರದು ಅತ್ಯಂತ ಸಮರ್ಥ ಅಭಿನಯ. ರಂಗಾಯಣ ರಘು, ಸಂಪತ್ ಕುಮಾರ್ ಅವರದು ಪಾತ್ರಗಳಲ್ಲಿ ಲೀಲಾಜಾಲ ಅಭಿನಯ.

    ಡಾನ್ ಮಗ ಮಣಿಯಾಗಿ ಮಹಾಂತೇಶ್ ಹಿರೇಮಠ್ ತನ್ನ “ಲ”ಕಾರ ಉಚ್ಚಾರಣೆಯಿಂದ ಗಮನ ಸೆಳೆಯುತ್ತಾರೆ. ಅವರ ಪಾತ್ರ, ಅಭಿನಯ, ವೇಷಭೂಷಣ ಎಲ್ಲವೂ ಪೂರಕವಾಗಿದ್ದು ಹಾಸ್ಯ ಕಲಾವಿದರ ಕೊರತೆ ತುಂಬುತ್ತಾರೆ.

    ಯಾರೂ ಊಹಿಸಲಾಗದ ದುರಂತವೆಂದರೆ ಇತ್ತೀಚೆಗೆ ಮೃತರಾದ ನಟ ಮೈಕೆಲ್ ಮಧು ಈ ಚಿತ್ರದಲ್ಲಿ ಮೃತರಾಗಿ ಅವರ ಶವದ ಮೆರವಣಿಗೆ ದೃಶ್ಯವಿದೆ. ಅವರ ಮರಣದ ನಂತರದ ಬಂದ ಸಿನಿಮಾದಲ್ಲಿ ಅವರ ಸಾವಿನ ಮೆರವಣಿಗೆ ಕಾಕತಾಳೀಯ.

    ಕೋವಿಡ್ ಸಾಂಕ್ರಾಮಿಕದಿಂದಾಗಿ ಜನರು ಥಿಯೇಟರ್ ನಲ್ಲಿ ಚಿತ್ರ ಆನಂದಿಸುವ ಅವಕಾಶ ಕಳೆದುಕೊಂಡಿದ್ದಾರೆ. ಚಲನಚಿತ್ರವನ್ನು ಥಿಯೇಟರ್ ನಲ್ಲಿ ವೀಕ್ಷಿಸಲು ಅದರ ಕ್ಯಾನ್ವಾಸ್ ಬೃಹತ್ತಾಗಿರಲೇಬೇಕು ಎಂದೇನೂ ಇಲ್ಲ. ಫ್ರೆಂಚ್ ಬಿರಿಯಾನಿ ಥಿಯೇಟರ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಚಿತ್ರ. ಫ್ರೆಂಚ್ ಬಿರಿಯಾನಿ ಥಿಯೇಟರ್ ವೀಕ್ಷಕರಿಗೆ ಆದ ನಷ್ಟ ಎಂದೇ ಹೇಳಬಹುದು. ಪ್ರೇಕ್ಷಕರು ಥಿಯೇಟರ್ ನಲ್ಲಿ ಆತ್ಮೀಯರೊಂದಿಗೆ ಕುಳಿತು ನಕ್ಕು ನಲಿಯಬಹುದಾದ ಚಿತ್ರವೊಂದು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಹಾಗೆಂದು ಇದು ಕುಟುಂಬ ಸಮೇತ ನಲಿಯುವ ಚಿತ್ರವೆಂದೇನೂ ಅಲ್ಲ. ಅಲ್ಲಲ್ಲಿ ಭಾಷೆ ಕೊಂಚ ಮಿತಿ ಮೀರುತ್ತದೆ. ಹಾಗಿದ್ದರೂ ಚಿತ್ರದ ಒಟ್ಟಂದಕ್ಕೆ ಇದು ಅಡ್ಡಿಯಾಗಿಲ್ಲ.

    ಹಾಡಿನಲ್ಲಿ ಕಾಣಿಸಿಕೊಳ್ಳುವ ಅಗತ್ಯ ನಿರ್ದೇಶಕ ಪನ್ನಗ ಭರಣರಿಗೆ ಇತ್ತೇ? ಈ ಎಲ್ಲ ಕೊರತೆಗಳ ನಡುವೆಯೂ ಪನ್ನಗ ಭರಣರಿಂದ ಮತ್ತಷ್ಟು ಒಳ್ಳೆಯ ಚಿತ್ರಗಳನ್ನು ನಿರೀಕ್ಷೆ ಮಾಡಬಹುದು.

    ಈ ಕೆಳಗಿನ ಲಿಂಕ್ ಒತ್ತುವ ಮೂಲಕ ನೀವು ಪ್ರೈಮ್ ವಿಡಿಯೋ ಸದಸ್ಯರಾಗಬಹುದು.

    ಕೋವಿಡ್-19 : ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?

    ಈ ಹಿಂದಿನ ‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತಂತ್ರವೇ ವ್ಯಾಕ್ಸಿನ್..!’ ಲೇಖನದಲ್ಲಿ ಕೋವಿಡ್-19 ವಿರುದ್ಧ ಅಭಿವೃದ್ಧಿ ಪಡಿಸುತ್ತಿರುವ ಲಸಿಕೆಗಳು ಹಾಗೂ ಅದರ ಹಿಂದಿರುವ ಸೂತ್ರ, ಕಾರ್ಯವಿಧಾನ, ಪ್ರಾಯೋಗಿಕ ಫಲಿತಾಂಶಗಳ ಕುರಿತು ಒಂದು ಅವಲೋಕನ ಮಾಡಿದ್ದೆವು. ಅದರ ಮುಂದಿನ ಭಾಗವಾಗಿ ರೋಗನಿರೋಧಕ ಶಕ್ತಿಯ ಮಹತ್ವ, ಅದನ್ನು ಹೆಚ್ಚಿಸುವ ವಿಧಾನಗಳು, ಲಸಿಕೆಯ ಹಿನ್ನೆಲೆ,ಹೊಸ ಉತ್ಪನ್ನಗಳ ಕ್ಲಿನಿಕಲ್ ಟ್ರಯಲ್ಸ್ ನಡೆಸುವ ಕುರಿತು ಒಂದು ಕಿರುಚಿತ್ರಣ.

    ಹೊಸ ತಳಿಯ ಕೊರೊನಾವೈರಸ್ ವಕ್ಕರಿಸಿದ ನಂತರ ಪತ್ರಿಕೆ, ರೇಡಿಯೋ, ಜಾಲತಾಣ, ದೃಶ್ಯ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ಇಮ್ಮ್ಯೂನಿಟಿ (ರೋಗನಿರೋಧಕ ಶಕ್ತಿ) ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಹರಿದುಬರುತ್ತಿವೆ. ಪ್ರಬಲವಾದ ಇಮ್ಯುನಿಟಿ ಇದ್ದರೆ ಕೋವಿಡ್-19 ಅನ್ನು ಹಿಮ್ಮೆಟಿಸಬಹುದು ಎಂದು ಜನರಲ್ಲಿ ನಂಬಿಕೆ ಮೂಡಿಸಿದೆ. ನಮ್ಮ ರೋಗನಿರೋಧಕ ಶಕ್ತಿಯ ಮಹತ್ವದ ಬಗ್ಗೆ ಸರಳವಾಗಿ ಅರ್ಥ ಮಾಡಿಕೊಳ್ಳಲು ಏಡ್ಸ್ ಮೇಲೆ ಒಂದು ಪಕ್ಷಿ ನೋಟವನ್ನು ಬೀರಬೇಕು.

    ಏಡ್ಸ್ ಕೂಡ ಕೋವಿಡ್-19 ತರಹ ಆರ್.ಎನ್.ಎ. ವೈರಸ್‌ ಸೋಂಕಿನಿಂದ ಉಂಟಾಗುವ ಕಾಯಿಲೆ. ಏಡ್ಸ್ (AIDS) ಇದರ ವಿಸ್ತೃತ ರೂಪ ಅಕ್ವೈರ್ಡ್ ಇಮ್ಯುನೊ-ಡಿಫಿಷಿಯನ್ಸಿ ಸಿಂಡ್ರೋಮ್ (Acquired Immunodeficiency Syndrome). ಏಡ್ಸ್ ಪೀಡಿತ ವ್ಯಕ್ತಿಯನ್ನು ಹಿಂಡಿ ಹಿಪ್ಪಿ ಮಾಡುವ ರೋಗಾಣುವಿನ ಹೆಸರು, ಹ್ಯುಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ ; ಸಂಕ್ಷಿಪ್ತವಾಗಿ, ಎಚ್ಐವಿ (HIV). ಈ ವೈರಸ್ ವಿಶೇಷತೆಯೇನೆಂದರೆ ದೇಹದ ರೋಗನಿರೋಧಕ ಶಕ್ತಿಯನ್ನು ನಾಶಪಡಿಸುತ್ತದೆ. ಕೊರೊನಾವೈರಸ್ ಮುಖ್ಯವಾಗಿ ಶ್ವಾಸಕೋಶದ ಅಲ್ವಿಯೋಲಾರ್ ಕೋಶಗಳಿಗೆ ಸೋಂಕು ತಗುಲಿದರೆ, ಎಚ್ಐವಿ ರೋಗಾಣುಗಳನ್ನು ಹೊಡೆದೋಡಿಸುವಲ್ಲಿ ಬಹುಮುಖ್ಯ ಕಾರ್ಯ ನಿರ್ವಹಿಸುವ ‘ಸಿಡಿ4 ಟಿ-ಲಿಂಫೋಸೈಟ್ಸ್’ ಎಂಬ ಕೋಶಗಳನ್ನು ಆಕ್ರಮಿಸಿ ರೋಗನಿರೋಧಕ ಶಕ್ತಿಯನ್ನೇ ಹಾನಿಗೊಳಿಸುತ್ತದೆ.

    ಪ್ರತಿರಕ್ಷಣಾ ವ್ಯವಸ್ಥೆಯೇ ಕುಸಿದು ಬಿದ್ದಾಗ ಏನಾಗುತ್ತದೆ..?

    ರೋಗಾಣುಗಳಿಂದ ದೇಹವನ್ನು ಕಾಪಾಡುವ ಪ್ರತಿರಕ್ಷಣಾ ವ್ಯವಸ್ಥೆಯೇ ಕುಸಿದು ಬಿದ್ದಾಗ ಏನಾಗುತ್ತದೆ..? ಸಿಕ್ಕಿದ್ದೆ ಅವಕಾಶವೆಂದು ದೇಹವನ್ನು ಆಕ್ರಮಿಸುವ ಎಲ್ಲಾ ರೋಗಾಣುಗಳು ತಾಮುಂದು ನಾಮುಂದು ಎಂದು ಕಾಯಿಲೆಗಳು ಏಡ್ಸ್ ರೋಗಿಯನ್ನು ಆವರಿಸುತ್ತವೆ. ಎಷ್ಟೇ ಪ್ರಭಾವಶಾಲಿ ಔಷಧಿಗಳಿದ್ದರೂ ಕಾಯಿಲೆಗಳನ್ನು ಗುಣಪಡಿಸುವಲ್ಲಿ ರಕ್ಷಣಾವ್ಯೂಹದ ಪಾತ್ರವೇ ಪ್ರಾಥಮಿಕವಾದದ್ದು. ದೇಹವನ್ನು ಆಕ್ರಮಿಸುವ ರೋಗಾಣುಗಳೆಂಬ ಶತ್ರುಗಳ ವಿರುದ್ಧ ಚಕ್ರವ್ಯೂಹದಂತೆ ಭದ್ರಕೋಟೆಯಾಗಿ ಈ ರಕ್ಷಣಾವ್ಯೂಹ ನಮ್ಮನ್ನು ಸದಾ ರಕ್ಷಿಸುತ್ತದೆ. ಇಷ್ಟು ಪ್ರಬಲವಾದ ಭದ್ರಕೋಟೆ ಇರುವಾಗಲೂ ಮತ್ತೇಕೆ ಆಗೊಮ್ಮೆ ಈಗೊಮ್ಮೆ ಶೀತ, ನೆಗಡಿ, ಚಿಕುನ್‌ಗುನ್ಯಾ, ಡೆಂಗ್ಯೂ, ಡಿಫ್ತಿರಿಯಾ, ಕಾಲರ ಮುಂತಾದ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವುದು? ಏಕೆಂದರೆ, ಎಲ್ಲದಕ್ಕೂ ಒಂದು ಮಿತಿ ಎಂಬುದಿದೆ.

    ಇದನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ನೀವೊಬ್ಬ ಪೈಲ್ವಾನ್ ದಿಟ್ಟುಕೊಳ್ಳಿ; ನಿಮ್ಮ ಸಾಮರ್ಥ್ಯಕ್ಕೆ ಒಮ್ಮೆಲೆ ಐದು ಜನರಿಗೆ ಹೊಡೆದು ಸೋಲಿಸಬಹುದು. ಆದರೆ ಒಟ್ಟಿಗೆ ಐವತ್ತು ಜನರು ಕುಸ್ತಿಗೆ ಬಂದರೆ ಹೊಡೆದುರುಳಿಸಲು ಸಾಧ್ಯವಿದೆಯೇ..? ಸಿನಿಮಾದಲ್ಲಿ ಒಟ್ಟಿಗೆ ಐವತ್ತಲ್ಲ, ನೂರು ದಾಂಡಿಗರು ಧುಮುಕಿದರು, ‘ಹೀರೋಗಳು’ ಗುರುತ್ವಾಕರ್ಷಣೆ ನಿಯಮಕ್ಕೆ ವಿರುದ್ಧವಾಗಿ ಗಾಳಿಯಲ್ಲಿ ಸೆಣಸಾಡಿ ಒಬ್ಬಂಟಿಯಾಗಿ ಸದೆಬಡಿಯುತ್ತಾರೆ; ಅದೆಲ್ಲ ಫ್ಯಾಂಟಸಿಗೆ ಮಾತ್ರ ಸೀಮಿತ.

    ರೋಗಾಣು ಮತ್ತು ಪ್ರತಿರಕ್ಷಣಾ ಶಕ್ತಿಯ ನಡುವಿನ ಹೋರಾಟ

    ಮಾನವನ ದೇಹದಲ್ಲಿ ಲಕ್ಷಾಂತರ ಸೂಕ್ಷ್ಮಜೀವಿಗಳು ವಾಸವಾಗಿರುತ್ತವೆ ಎಂಬುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ..! ಆದರೆ ಅವುಗಳೆಲ್ಲವೂ ರೋಗಗಳನ್ನು ಉಂಟುಮಾಡುವುದಿಲ್ಲ. ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ, ಸ್ಪರ್ಶಿಸುವ ವಸ್ತುಗಳಲ್ಲಿ ಸ್ವಲ್ಪಮಟ್ಟಿನ ಕಣ್ಣಿಗೆ ಕಾಣದ ರೋಗಾಣುಗಳು ಇದ್ದೇ ಇರುತ್ತವೆ. ಪ್ರತಿ ದಿನ ಪ್ರತಿ ಕ್ಷಣವೂ, ಕಲುಷಿತಗೊಂಡಿರುವ ಗಾಳಿ,ನೀರು, ಆಹಾರ, ಸ್ಪರ್ಶಿಸುವ ವಸ್ತು ಅಥವಾ ನಮ್ಮ ಕೈಗಳಿಂದಲೇ ಸೂಕ್ಷ್ಮಜೀವಿಗಳು ದೇಹವನ್ನು ಪ್ರವೇಶಿಸುತ್ತಿದ್ದಂತೆ, ನಮ್ಮಲ್ಲಿರುವ ರಕ್ಷಣಾವ್ಯೂಹ ಅವುಗಳಿಂದ ಯಾವುದೇ ರೋಗ ತಟ್ಟದಂತೆ ನಿರಂತರವಾಗಿ ಕಾಪಾಡುತ್ತಿರುತ್ತದೆ. ಆದ್ದರಿಂದಲೇ ಈ ರಕ್ಷಣಾವ್ಯೂಹವನ್ನು
    ರೋಗನಿರೋಧಕ ಶಕ್ತಿ ಅಥವಾ ಪ್ರತಿರಕ್ಷಣಾ ವ್ಯವಸ್ಥೆ ಅಂತಲೂ ಹೆಸರಿಸಲಾಗಿದೆ.

    ಕುಡಿಯುವ ನೀರಿನಲ್ಲಿ ಹತ್ತರಷ್ಟು, ಬೇಡ ಇಪ್ಪತ್ತರಷ್ಟು ಸೂಕ್ಷ್ಮಜೀವಿಗಳು ಇವೆ ಅಂತಿಟ್ಟುಕೊಳ್ಳೋಣ. ರೋಗನಿರೋಧಕ ಶಕ್ತಿ ಆ ಇಪ್ಪತ್ತರಷ್ಟು ಸೂಕ್ಷ್ಮಜೀವಿಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿರುತ್ತದೆ. ಒಂದೊಮ್ಮೆ ತುಂಬಾ ಕಲುಷಿತಗೊಂಡಿರುವ ನೀರನ್ನು ಕುಡಿದರೆ, ಅಂದರೆ ಅದರಲ್ಲಿ 20ಕ್ಕಿಂತಲೂ ಜಾಸ್ತಿ ಪ್ರಮಾಣದಲ್ಲಿ ರೋಗಾಣುಗಳು ಇದ್ದರೆ, ನಮ್ಮ ರಕ್ಷಣಾವ್ಯೂಹ ಅವುಗಳಿಗೆ ಶರಣಾಗಬಹುದು, ಶರಣಾಗಿ ಕಾಯಿಲೆಗೆ ನಾಂದಿ ಹಾಡಬಹುದು. ಸೂಕ್ಷ್ಮಜೀವಿಗಳು ವೇಗವಾಗಿ ವಂಶಾಭಿವೃದ್ಧಿ ಮಾಡುವುದರಿಂದ, ಅವುಗಳ ಸಂಖ್ಯೆಯನ್ನು ಹತೋಟಿಗೆ ತರಲು ಪ್ರತಿರಕ್ಷಣಾ ವ್ಯವಸ್ಥೆಯ ಸಾಮರ್ಥ್ಯವು ಸಾಕಾಗದೆ ಇರಬಹುದು. ಒಂದು ಕಡೆಯಲ್ಲಿ, ಪ್ರತಿರಕ್ಷಣಾ ವ್ಯವಸ್ಥೆಯು ನೂರಾರು ರೋಗಾಣುಗಳನ್ನು ನಾಶಪಡಿಸುತ್ತಿದ್ದರೆ, ಇನ್ನೊಂದು ಕಡೆಯಿಂದ ಅವುಗಳ ಪುನರುತ್ಪಾದನೆ ವೇಗವಾಗಿ ಆಗುತ್ತಿರುತ್ತದೆ. ರೋಗನಿರೋಧಕ ಶಕ್ತಿ ಮತ್ತು ರೋಗಾಣುಗಳ ನಡುವಿನ ಹೋರಾಟದಲ್ಲಿ, ಪ್ರತಿರಕ್ಷಣಾ ವ್ಯವಸ್ಥೆಯು ಕೆಲವು ಬಾರಿ ವಿಫಲವಾಗಬಹುದು. ಕ್ರಮೇಣ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ.

    ಇಂತಹ ಸಮಯದಲ್ಲೇ ನಾವು ವೈದ್ಯರನ್ನು ಭೇಟಿಯಾಗಿ ಆಂಟಿಬಯೋಟಿಕ್ (ಬ್ಯಾಕ್ಟೀರಿಯಾಗಳನ್ನು ಕೊಲ್ಲಲು), ಆಂಟಿವೈರಲ್ (ವೈರಾಣುಗಳನ್ನು ಕೊಲ್ಲಲು) ಔಷಧಿಗಳಿಗೆ ಮೊರೆ ಹೋಗುವುದು. ಈ ಔಷಧಗಳು ರೋಗಕಾರಕ ಸೂಕ್ಷ್ಮಾಜೀವಿಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಕೊಲ್ಲುತ್ತವೆ. ಆ ಮೂಲಕ ನಾವು ರೋಗಲಕ್ಷಣಗಳಿಂದ ಬಚಾವ್ ಆಗುತ್ತೇವೆ. ಆದರೆ ರೋಗಲಕ್ಷಣಗಳು ನಿಂತಿದ್ದರೂ ಕೆಲವು ರೋಗಾಣುಗಳು ದೇಹದಲ್ಲಿ ಅಡಗಿರುತ್ತವೆ.ವೈದ್ಯರು ಬರೆದುಕೊಟ್ಟ ಕೋರ್ಸನ್ನು ಸಂಪೂರ್ಣಗೊಳಿಸದೆ ಔಷಧಿ ತೆಗೆದುಕೊಳ್ಳುವುದನ್ನು ಅರ್ಧಕ್ಕೆ ನಿಲ್ಲಿಸಿದರೆ ಉಳಿದಿರುವ
    ರೋಗಾಣುಗಳು ಅವೇ ಔಷಧಿಗಳ ವಿರುದ್ಧ ಪ್ರತಿರೋಧವನ್ನು ಬೆಳೆಸಿ ಮುಂದೆ ಇನ್ನೂ ಮಾರಕವಾಗಬಹುದು; ಹಾಗೂ ಚಿಕಿತ್ಸೆಯ ಅವಧಿಯಲ್ಲಿ ಅದೇ ರೋಗಾಣುವಿನಿಂದ ಮರು-ಸೋಂಕು ಆಗಬಹುದು; ಈ ಎರಡು ಕಾರಣಕ್ಕಾಗಿ ಸೋಂಕು ಉಂಟಾದಾಗ ಔಷಧಿಗಳನ್ನು ಕೆಲವು ದಿನಗಳ ಅವಧಿಗೆ ಒಂದು ಕೋರ್ಸ್ ಆಗಿ ನೀಡಲಾಗುತ್ತದೆ.

    ಅಂದಹಾಗೆ, ರೋಗನಿರೋಧಕ ಶಕ್ತಿಯ ಸಾಮರ್ಥ್ಯ ಎಲ್ಲರಲ್ಲಿಯೂ ಒಂದೇ ತೆರನಾಗಿರುವುದಿಲ್ಲ; ಕೆಲವರಲ್ಲಿ ಪ್ರಬಲವಾಗಿರಬಹುದು, ಇನ್ನು ಕೆಲವರಲ್ಲಿ ಸ್ವಲ್ಪ ದುರ್ಬಲ ಇರಬಹುದು, ಮತ್ತೆ ಕೆಲವರಲ್ಲಿ ತುಂಬಾ ದುರ್ಬಲವಾಗಿರಬಹುದು. ಅದು ಅವರವರ ದೇಹಪ್ರಕೃತಿ, ಆಹಾರ ಪದ್ಧತಿ, ವಯಸ್ಸು, ಶೈಶವಾವಸ್ಥೆಯಲ್ಲಿ ಪಡೆದ ತಾಯಿ ಎದೆ ಹಾಲಿನ ಪ್ರಮಾಣ, ಒಳ್ಳೆಯ ಅಭ್ಯಾಸಗಳು (ವ್ಯಾಯಾಮ, ಯೋಗಾಭ್ಯಾಸ), ದುಶ್ಚಟಗಳು (ಧೂಮಪಾನ, ಮಧ್ಯಪಾನ, ಗುಟ್ಕಾ ತಂಬಾಕು, ಮಾದಕ ವಸ್ತುಗಳ ಸೇವನೆ) ಇನ್ನಿತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.

    ಉತ್ತಮ ಅಭ್ಯಾಸಗಳು ಆರೋಗ್ಯಕ್ಕೆ ಪೂರಕವಾಗಿದ್ದರೆ ದುರಾಭ್ಯಾಸಗಳು ಪ್ರತಿರಕ್ಷಣಾ ವ್ಯವಸ್ಥೆಯ ಶಕ್ತಿಯನ್ನೂ ಕುಂದಿಸುವುದರಿಂದ ಅನಾರೋಗ್ಯಕ್ಕೆ ದಾರಿಯಾಗಿವೆ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಇತ್ತೀಚಿನ
    ಸಂಶೋಧನೆಯ ಪ್ರಕಾರ, ನಿದ್ರಾಹೀನತೆ, ಮಾನಸಿಕ ಒತ್ತಡ, ಆತಂಕ, ಸಹ ರಕ್ಷಣಾವ್ಯೂಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂಬುದು
    ತಿಳಿದುಬಂದಿದೆ.

    ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮಾರ್ಗಗಳು:

    ಧೂಮಪಾನ, ಮದ್ಯಪಾನ ಮುಂತಾದ ದುಶ್ಚಟಗಳನ್ನು ತ್ಯಜಿಸುವುದು ಅಥವಾ ಮಿತಗೊಳಿಸುವುದು, ನಿಯಮಿತವಾಗಿ ವ್ಯಾಯಾಮ/ಯೋಗಾಸನ/ಧ್ಯಾನ ಮಾಡುವುದು, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು, ಸಾಕಷ್ಟು ನಿದ್ರೆ ಮಾಡುವುದು (7-8 ಗಂಟೆ), ಒತ್ತಡವನ್ನು ಕಡಿಮೆಗೊಳಿಸುವುದು, ಮೈ, ಕೈ, ಬಾಯಿಯನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಇಂತಹ ಸರಳ ಜೀವನಶೈಲಿಯ ಶಿಸ್ತನ್ನು ಪಾಲಿಸಿದರೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ವರ್ಧಿಸಬಹುದು.

    ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲವು ಆಹಾರ ಪದಾರ್ಥಗಳು ಹೀಗಿವೆ: ಕಪ್ಪುದ್ರಾಕ್ಷಿ (ಆಂಥೋಸಯಾನಿನ್ ಎಂಬ ಫ್ಲೇವನಾಯ್ಡ್‌ನ ಸಮೃದ್ಧವಾಗಿದೆ; ಸಂಶೋಧನೆಯ ಪ್ರಕಾರ ಫ್ಲೇವನಾಯ್ಡ್‌ ಗಳು ಶ್ವಾಸಕೋಶಗಳ ಪ್ರತಿರಕ್ಷಣಾ ರಕ್ಷಣಾ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ). ಅರಿಶಿನ (ಕರ್ಕ್ಯುಮಿನ್ ಅಂಶ ಇದ್ದು, ಇದು ಉತ್ತಮ
    ಆಂಟಿಆಕ್ಸಿಡೆಂಡ್ ಮತ್ತು ಉರಿಯೂತ- ನಿರೋಧಕ ಗುಣಗಳನ್ನು ಹೊಂದಿದೆ), ಗೆಣಸು ( ವಿಟಮಿನ್ ಎ ಯ ಮೂಲವಾಗಿರುವ ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ), ಪಾಲಕ್ (ಫ್ಲೇವನಾಯ್ಡ್ ಗಳು ಕ್ಯಾರೊಟಿನಾಯ್ಡ್ ಗಳು, ವಿಟಮಿನ್ ಸಿ, ವಿಟಮಿನ್ ಇ ಹೇರಳವಾಗಿದೆ). ಶುಂಠಿ (ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ), ಬೆಳ್ಳುಳ್ಳಿ (ಆಲಿಸಿನ್ ಅಂಶ ಹೊಂದಿದ್ದು ಶೀತ ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ). ಗ್ರೀನ್ ಟೀ (ಅಲ್ಪ ಪ್ರಮಾಣದ ಕೆಫೀನ್ ಇದ್ದು ಚಹಾ ಅಥವಾ ಕಾಫಿಗೆ ಪರ್ಯಾಯವಾಗಿ ಕುಡಿಯಬಹುದು), ಸೂರ್ಯಕಾಂತಿ ಬೀಜಗಳು (ವಿಟಮಿನ್ ಇ ಜೊತೆಗೆ ಮ್ಯಾಂಗನೀಸ್, ಮೆಗ್ನೀಸಿಯಮ್
    ಮತ್ತು ಫೈಬರ್ ಕೂಡ ಸಾಕಷ್ಟು ಇವೆ). ಕಿತ್ತಳೆ, ಕಿವಿಫ್ರೂಟ್ (ವಿಟಮಿನ್ ಸಿ ಸಮೃದ್ಧವಾಗಿದೆ). ಎಣ್ಣೆಯುಕ್ತ ಮೀನುಗಳು (ಸಾಲ್ಮನ್/ಭೂತಾಯಿ, ಟ್ಯೂನ, ಪಿಲ್‌ಚಾರ್ಡ್ಸ್ ಮತ್ತು ಇತರ ಒಮೆಗಾ -3 ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾಗಿದೆ.) ಪೇರಳೆ,ನೆಲ್ಲಿಕಾಯಿ, ದಾಳಿಂಬೆ, ಹರಿವೆ ಇತರ ಹಸಿರು ತರಕಾರಿಗಳು, ಹಣ್ಣು ಹಂಪಲುಗಳು (ವಿಟಮಿನ್, ಫ್ಲವನೋಯ್ಡ್ಸ್ ಮುಂತಾದ ಪೋಷಕಾಶಗಳಿಂದ ಹೇರಳವಾಗಿವೆ. ಇಂತಹ ಆಹಾರಗಳನ್ನು ನಮ್ಮ ದೈನಂದಿನ ಆಹಾರದಲ್ಲಿ ನಿಯಮಿತವಾಗಿ ಬಳಸಿಕೊಂಡರೆ
    ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಬಹುದು.

    ರೋಗನಿರೋಧಕ ಶಾಸ್ತ್ರದ ಪಿತಾಮಹರು

    ಇದೀಗ ವಿಶ್ವಾದ್ಯಂತ ಹೆಮ್ಮಾರಿಯಂತೆ ಕಾಡುತ್ತಿರುವ ಕೋವಿಡ್-19 ತರಹವೇ, 19-20 ಶತಮಾನದಲ್ಲಿ ಲಕ್ಷಾಂತರ ಜನರ ಬಲಿತೆಗೆದುಕೊಂಡ ಒಂದು ಮಾರಣಾಂತಿಕ ಸಾಂಕ್ರಾಮಿಕ ಕಾಯಿಲೆ ಸಿಡುಬು. ಇದು ಕೂಡ ಕೋವಿಡ್-೧೯ ಅಂತೆ ಒಂದು ವೈರಸ್ (ವೇರಿಯೊಲಾ ಮೇಜರ್ ಮತ್ತು ವೇರಿಯೊಲಾ ಮೈನರ್) ಸೋಂಕಿನಿಂದ ಉಂಟಾಗುವ ಕಾಯಿಲೆ. ಸೋಂಕಿತ ವಯಸ್ಕರಲ್ಲಿ 20-60% ಮತ್ತು ಸೋಂಕಿತ ಮಕ್ಕಳಲ್ಲಿ 80% ಕ್ಕಿಂತ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಈ ವೈರಸ್ ವಿರುದ್ಧ ಕೊನೆಗೂ ಒಂದು ಅಸ್ತ್ರವನ್ನು ಅಭಿವೃದ್ಧಿಪಡಿಸಿ, ಅಂತಿಮವಾಗಿ 1977 ರಲ್ಲಿ ಸಿಡುಬು ನಿರ್ಮೂಲನೆಗೊಳಿಸಲಾಯಿತು.

    ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು.ಎಚ್.‌ಒ) 1980 ರಲ್ಲಿ ರೋಗವನ್ನು ಜಾಗತಿಕವಾಗಿ ನಿರ್ಮೂಲನೆ ಮಾಡಲಾಗಿದೆ ಎಂದು ಘೋಷಿಸಿತು. ಸಿಡುಬು ಎಂಬ ಮಹಾಮಾರಿಯನ್ನು ನಿರ್ಮೂಲನೆ ಮಾಡಿದ ಆ ಅಸ್ತ್ರವೇ ವ್ಯಾಕ್ಸಿನ್. ದೇಹದ ರೋಗ ನಿರೋಧಕ ಶಕ್ತಿಯ ಬಗ್ಗೆ ಬಹಳ ಹಿಂದಿನಿಂದಲೂ ಜನರಿಗೆ ಸ್ವಲ್ಪ ತಿಳಿವು ಇದ್ದಿದ್ದರೂ, 1798 ರಲ್ಲಿ ಅದಕ್ಕೆ ಒಂದು ವೈಜ್ಜಾನಿಕ ರೂಪು ನೀಡಿ ಲಸಿಕೆ ಎಂಬ ಪರಿಕಲ್ಪನೆ ಜಗತ್ತಿಗೆ ನೀಡಿದ ಅನೇಕ ವಿಜ್ಞಾನಿಗಳಲ್ಲಿ ಪ್ರಮುಖರು ಎಡ್ವರ್ಡ್ ಜೆನ್ನರ್ (1749 –1823). ಮುಂದೆ, ಸಂಶೋಧನೆಯ ಮೂಲಕ ಅದಕ್ಕೆ ಇನ್ನಷ್ಟು ಹೊಳಪು ನೀಡಿದ್ದು ಲೂಯಿಸ್ ಪಾಶ್ಚರ್ (1822 –1895).

    ಆದ್ದರಿಂದ ಎಡ್ವರ್ಡ್ ಜೆನ್ನರ್ ಅವರನ್ನು ರೋಗನಿರೋಧಕ ಶಾಸ್ತ್ರದ ಪಿತಾಮಹ (Father of Immunology) ಎಂದು ಮತ್ತು ಲೂಯಿಸ್
    ಪಾಶ್ಚರ್ ಅವರನ್ನು ಆಧುನಿಕ ರೋಗನಿರೋಧಕ ಶಾಸ್ತ್ರದ ಪಿತಾಮಹ (Father of Modern Immunology) ಎಂಬ ಮನ್ನಣೆ
    ನೀಡಲಾಗಿದೆ. ಈ ಇಬ್ಬರು ಮಹಾನ್ ವಿಜ್ಞಾನಿಗಳ ಸಾಧನೆ, ಸಂಶೋಧನೆಗಳ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು, ಆಸಕ್ತರು ಇಲ್ಲಿ ನೀಡಿರುವ
    ಯು-ಟ್ಯೂಬ್ ಚಾನೆಲ್‌ಗಳಿಗೆ ಕ್ಲಿಕ್ ಮಾಡಬಹುದು.

    ಹೊಸ ಉತ್ಪನ್ನಗಳಿಗೆ ಅನುಮತಿಯ ರೂಪುರೇಷೆ
    ಹೊಸ ಔಷಧಿ ಮತ್ತು ಲಸಿಕೆಗಳ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಪ್ರಯೋಗಶಾಲೆಯಲ್ಲಿ ಜೀವಕೋಶಗಳ (ಇನ್ ವಿಟ್ರೊ) ಮತ್ತು ಇಲಿ, ಹೆಗ್ಗಣ, ಗಿನಿಯಿಲಿ, ಮೊಲ ಇನ್ನಿತರ ಪ್ರಾಯೋಗಿಕ ಪ್ರಾಣಿಗಳ ಮೇಲೆ (ಇನ್ ವಿವೊ) ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಜೊತೆಗೆ,ಕಂಪ್ಯೂಟರ್ ಪ್ರೋಗ್ರಾಮ್ ಗಳನ್ನು ಬಳಸಿ ‘ಡ್ರಗ್-ಟಾರ್ಗೆಟ್ ಇಂಟರ್ಯಾಕ್ಷನ್’ ಅಧ್ಯಯನವನ್ನೂ (ಇನ್ ಸಿಲಿಕೊ ಪ್ರಯೋಗ) ಮಾಡಲಾಗುತ್ತದೆ.

    ಈ ಎಲ್ಲಾ ಪೂರ್ವ-ಕ್ಲಿನಿಕಲ್ ಪ್ರಯೋಗಗಳು ಸಕಾರಾತ್ಮಕ ಫಲಿತಾಂಶದೊಂದಿಗೆ ಪೂರ್ಣಗೊಂಡರೆ ಅವುಗಳನ್ನು ಮಾನವನ
    ಮೇಲೆ ಪ್ರಯೋಗಗಳಿಗೆ ಒಳಪಡಿಸಲಾಗುತ್ತದೆ. ಇದನ್ನೇ ಕ್ಲಿನಿಕಲ್ (ಹ್ಯೂಮನ್ ) ಟ್ರಯಲ್ಸ್ ಅನ್ನುವುದು. ನಾಲ್ಕು ಹಂತದ ಕ್ಲಿನಿಕಲ್ ಟ್ರಯಲ್ಸ್ ನಲ್ಲಿ ಹೊಸ ಉತ್ಪನ್ನವು ಯಾವುದೇ (ಗಂಭೀರ) ಅಡ್ಡಪರಿಣಾಗಳಿಲ್ಲದೆ ಕಾಯಿಲೆಯನ್ನು ಗುಣಪಡಿಸುವಲ್ಲಿ ಅಥವಾ ತಡೆಹಿಡಿಯುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಕಂಡುಬಂದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಪರವಾನಿಗೆ / ಅನುಮೋದನೆ ನೀಡಲಾಗುತ್ತದೆ.

    ಹೊಸ ಔಷಧಿಗಳನ್ನು ಪರೀಕ್ಷಿಸಲು ಮತ್ತು ಅನುಮೋದಿಸಲು ಒಂದು ನಿರ್ದಿಷ್ಟ ಸಮಯದ ಮಿತಿ ಇರುವುದಿಲ್ಲ. ಕ್ಲಿನಿಕಲ್ ಪ್ರಯೋಗಗಳ ಎಲ್ಲಾ 3 ಹಂತಗಳನ್ನು ಪೂರ್ಣಗೊಳಿಸಲು ಸುಮಾರು 10 ರಿಂದ 15 ವರ್ಷಗಳು ಅಥವಾ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು.ಅಂತಾರಾಷ್ಟ್ರೀಯ ಮಟ್ಟದಲ್ಲಿ, ಮಾನವ ಮತ್ತು ಪಶುವೈದ್ಯಕೀಯ ಹೊಸ ಉತ್ಪನ್ನಗಳ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವ ಮೂಲಕ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ಜವಾಬ್ದಾರಿಯನ್ನು ‘ಯು. ಎಸ್. – ಫುಡ್ ಎಂಡ್ ಡ್ರಗ್ ಎಡ್ಮಿನಿಸ್ಟ್ರೇಷನ್’ ಸಂಸ್ಥೆಯು ಹೊತ್ತಿದೆ.

    ಕ್ಲಿನಿಕಲ್ ಪ್ರಯೋಗಗಳ ನಾಲ್ಕು ಹಂತಗಳು:

    ಒಂದನೇ ಹಂತ: ಔಷಧದ ಸರಿಯಾದ ಪ್ರಮಾಣ (ಡೋಸ್) ಕಂಡುಹಿಡಿಯಲು , ಸುರಕ್ಷತೆ ಮತ್ತು ಅಡ್ಡಪರಿಣಾಮಗಳನ್ನು ನಿರ್ಣಯಿಸಲು
    ಆರೋಗ್ಯವಂತ 20 ರಿಂದ 80 ಜನರ ಸಣ್ಣ ಗುಂಪಿನ ಮೇಲೆ ಪ್ರಾಯೋಗಿಕ ಚಿಕಿತ್ಸೆಯನ್ನು ನಡೆಸಲಾಗುತ್ತದೆ.

    ಎರಡನೇ ಹಂತ: 100 ರಿಂದ 300 ಜನರ ಮೇಲೆ ನಡೆಸುವ ಪ್ರಯೋಗದ ಈ ಹಂತವು ಒಂದು ನಿರ್ದಿಷ್ಟ ರೋಗ ಅಥವಾ ಸ್ಥಿತಿಯನ್ನು ಹೊಂದಿರುವ ಜನರಲ್ಲಿ ಔಷಧವು ಕಾರ್ಯನಿರ್ವಹಿಸುತ್ತದೆಯೇ ಎಂಬ ಬಗ್ಗೆ ಪ್ರಾಥಮಿಕ ಡೇಟಾವನ್ನು ಪಡೆಯಲಾಗುತ್ತದೆ. ಈ ಪ್ರಯೋಗಗಳು ಅಲ್ಪಾವಧಿಯ ಅಡ್ಡಪರಿಣಾಮಗಳನ್ನು ಒಳಗೊಂಡಂತೆ ಸುರಕ್ಷತೆಯನ್ನು ಅಧ್ಯಯನ ಮಾಡುವುದನ್ನು ಮುಂದುವರಿಸುತ್ತವೆ ಮತ್ತು ಇದು ಹಲವಾರು ವರ್ಷಗಳನ್ನು ತೆಗೆದುಕೊಳ್ಳಬಹುದು.
    ಮೂರನೇ ಹಂತ: ಸುಮಾರು 3,000 ವಿಭಿನ್ನ ಜನರ ಮೇಲೆ ಅಧ್ಯಯನ ನಡೆಸಿ ಹೊಸ ಉತ್ಪನ್ನದ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಈ ಹಂತದಲ್ಲಿ ಇತರ ಷಧಿಗಳೊಂದಿಗೆ ಸಂಯೋಜನೆ ಮಾಡಿಯೂ ಪರೀಕ್ಷಿಸಲಾಗುತ್ತದೆ.ಫಲಿತಾಂಶಗಳು ಸಕಾರಾತ್ಮಕವಾಗಿದ್ದಾರೆ ಸಾರ್ವಜನಿಕರ ಬಳಕೆಗೆ ಪ್ರಾಯೋಗಿಕ ಔಷಧಿ/ಲಸಿಕೆಯಾಗಿ ಬಿಡುಗಡೆಗೊಳಿಸಲು ಅನುಮತಿಯನ್ನು ನೀಡಲಾಗುತ್ತದೆ.
    ನಾಲ್ಕನೇ ಹಂತ: ಅನುಮೋದನೆಗೊಂಡ ಹೊಸ ಉತ್ಪನ್ನದ ರಿಣಾಮಕಾರಿತ್ವ ಮತ್ತು ಸುರಕ್ಷತೆಯ ಮೇಲ್ವಿಚಾರಣೆಯನ್ನು ದೊಡ್ಡ,ವೈವಿಧ್ಯಮಯ ಜನಸಂಖ್ಯೆಯಲ್ಲಿ ಮಾಡಲಾಗುತ್ತದೆ. ಮುಖ್ಯವಾಗಿ ಔಷಧದ ದೀರ್ಘಕಾಲದ ಅಡ್ಡಪರಿಣಾಮಗಳ ಮೇಲೆ ಗಮನ ಇರಿಸಲಾಗುತ್ತದೆ. ಅಡ್ಡಪರಿಣಾಮಗಳೇನಾದರೂ ಕಂಡುಬಂದಲ್ಲಿ ಆ ಹೊಸ ಉತ್ಪನ್ನಗಳ ಬಳಕೆಯನ್ನು ನಿಷೇಧಿಸಲಾಗುತ್ತದೆ.

    ವೈದ್ಯಕೀಯ ತುರ್ತುಸ್ಥಿತಿ ಇದ್ದರೆ, ಫಾಸ್ಟ್ ಟ್ರ್ಯಾಕ್ನಲ್ಲಿ ಕ್ಲಿನಿಕಲ್ ಪ್ರಯೋಗಗಳಿಗೆ ಅವಕಾಶವಿದೆ. ವಿಶ್ವಾದ್ಯಂತ, ಹೊಸ ತಳಿಯ ಕೊರೊನಾವೈರಸ್ (SARS-CoV-2) ಆರೋಗ್ಯ, ಆರ್ಥಿಕತೆ ಮತ್ತು ಸಮಾಜದ ಮೇಲೆ ಉಂಟುಮಾಡುತ್ತಿರುವ ಪರಿಣಾಮಗಳು ಅಂತಹ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ
    ನಡೆಯುತ್ತಿರುವ ಎಲ್ಲಾ ಪ್ರಯೋಗಗಳು ಮತ್ತು ಕ್ಲಿನಿಕಲ್ ಟ್ರಯಲ್ಸ್ ಗಳು ಯಶಸ್ವಿಯಾಗಲಿ ಮತ್ತು ಕೋವಿಡ್-19 ಸಾಂಕ್ರಾಮಿಕವನ್ನು ನಿಯಂತ್ರಿಸಲು ಶೀಘ್ರವಾಗಿ ಜನರನ್ನು ತಲುಪಲಿ ಎಂದು ಆಶಿಸೋಣ.

    ಹಿತ್ತಲ ಗಿಡ ಮದ್ದಲ್ಲವೆ?

    ಆಯುರ್ವೇದ ಔಷಧಿಗಳು, ಗಿಡಮೂಲಿಕೆಗಳ ಚಿಕಿತ್ಸೆ, ಮನೆಮದ್ದುಗಳು ಮತ್ತು ಇತರ ಅನೇಕ ಪೂರಕ ಚಿಕಿತ್ಸಾ ವಿಧಾನಗಳು ಕೋವಿಡ್ -19 ಅನ್ನು ತಡೆಗಟ್ಟುವ ಮತ್ತು ಗುಣಪಡಿಸುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ, ಮುಖ್ಯವಾಗಿ
    ಭಾರತದಲ್ಲಿ ಸಂವೇದನೆ ಮತ್ತು ಸಾರ್ವಜನಿಕರಲ್ಲಿ ಒಂದು ಹೊಸ ಆಶಾಕಿರಣವನ್ನು ಮೂಡಿಸಿರುವುದಂತೂ ಸತ್ಯ. ಹಾಗೆಯೇ,’ಹಿತ್ತಲ ಗಿಡ ಮದ್ದಲ್ಲ’ ಎಂಬ ಧೋರಣೆಯ ವಿರುದ್ಧ ಟೀಕೆಗಳೂ ಕೇಳಿಬರುತ್ತಿರುವುದೂ ಅಷ್ಟೇ ದಿಟ.

    Photo by CDC from Pexels

    ಹಿಂದಿನ ಓದು : ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತಂತ್ರವೇ ವ್ಯಾಕ್ಸಿನ್..!

    ಇಸ್ಕಾನ್ ನಲ್ಲಿ ಈ ಬಾರಿ ಡಿಜಿಟಲ್ ಜನ್ಮಾಷ್ಟಮಿ

    ಒಂದು ಕಡೆ ಭಕ್ತರ ಸಾಲು..ಮತ್ತೊಂದು ಕಡೆ ಒಳ ಹೋಗಲು ಸರತಿ ಕಾಯುತ್ತ ನಿಂತಿರುತ್ತಿದ್ದ ಕಾರುಗಳು..ಮತ್ತೊಂದೆಡೆ ಬಸ್ಸುಗಳಿಂದ ಇಳಿದು ಪರಮಾತ್ಮನ ದರ್ಶನಕ್ಕೆಂದು ಓಡುತ್ತಿದ್ದ ಪ್ರವಾಸಿಗರ ಗುಂಪು….ಯಾವುದಕ್ಕೂ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ನಿಯೋಜಿತವಾಗಿರುವ ಸ್ವಯಂ ಸೇವಕರು….ಇದು ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಇಸ್ಕಾನ್ ಮಂದಿರದಲ್ಲಿ ನಿತ್ಯ ಕಾಣುತ್ತಿದ್ದ ದೃಶ್ಯ. ಆದರೆ ಕಳೆದ ಮೂರು ತಿಂಗಳಿಂದ ಈ ದೃಶ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಕಾರಣ ಕೋವಿಡ್ 19.

    ಇನ್ನು ಜನ್ಮಾಷ್ಟಮಿ, ವೈಕುಂಠ ಏಕಾದಶಿ ಬಂತೆಂದರೆ ಮಂದಿರದ ಮುಂದೆ ಭಕ್ತರ ದಂಡು. ಮೈಲುದ್ದದ ಸಾಲು. ಮಂದಿರಕ್ಕೆ ಹೋಗಲು ವಿವಿಧ ಬಣ್ಣದ ಪಾಸುಗಳು. ಯಾರಿಗೂ ಯಾವುದೇ ರೀತಿಯ ಅಡಚಣೆಯಾಗದಂತೆ ತೆಗೆದುಕೊಳ್ಳುತ್ತಿದ್ದ ಮುತುವರ್ಜಿ. ಆದರೆ ಈ ಬಾರಿ ಸ್ವಲ್ಪ ಬದಲಾಗಿದೆ. ಕಾರಣ ಕೋವಿಡ್ 19.

    ಈ ಬಾರಿ ಎಲ್ಲವೂ ಆನ್ ಲೈನ್ . ಶಾಲಾ ತರಗತಿಗಳು ಆನ್ ಲೈನ್ , ಕಾರ್ಪೋರೇಟ್ ಮೀಟಿಂಗ್ ಗಳು ಆನ್ ಲೈನ್ ಅಷ್ಟೇ ಏಕೆ ರಾಜಕೀಯ ಭಾಷಣಗಳೂ ಆನ್ ಲೈನ್, ಕೆಲಸವೂ ಆನ್ ಲೈನ್ . ದೇವರ ಪ್ರಾರ್ಥನೆಯೂ ಆನ್ ಲೈನ್. ಇದು ಕೋವಿಡ್ ತಂದಿಟ್ಟ ಅನಿವಾರ್ಯತೆ.

    ಹಾಗಾಗಿಯೇ ಇಸ್ಕಾನ್ ಕೂಡ ಸಂಭ್ರಮದ ಕೃಷ್ಣ ಜನ್ಮಾಷ್ಟಮಿಯನ್ನು ಈ ಬಾರಿ ಡಿಜಿಟಲೀಕರಣ ಗೊಳಿಸಿದೆ. ಮನೆಯೇ ಮಂತ್ರಾಲಯ ಎಂಬುದನ್ನು ಸಾಕಾರಗೊಳಿಸುತ್ತಿದೆ.ಮನೆಯಲ್ಲೇ ಕುಳಿತು ಜನ್ಮಾಷ್ಟಮಿಯ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ವ್ಯವಸ್ಥೆ ಕಲ್ಸಿಸಿದೆ.

    ಸಂಪೂರ್ಣ ಡಿಜಿಟಲ್

    ಆಗಸ್ಟ್ 11 ಮತ್ತು 12 ರಂದ ನಡೆಯುವ ಈ ಬಾರಿಯ ಜನ್ಮಾಷ್ಟಮಿ ಸಂಪೂರ್ಣ ಡಿಜಿಟಲ್ ಆಗಿರುತ್ತದೆ ಎನ್ನುತ್ತಾರೆ ಇಸ್ಕಾನ್ ನ ಮಾಧ್ಯಮ ವಕ್ತಾರ ಕುಲಶೇಖರ ದಾಸ ಪ್ರಭು.ಫೇಸ್ ಬುಕ್ , ಯೂ ಟ್ಯೂಬ್ , ಇನ್ಸ್ ಸ್ಟಾ ಗ್ರಾಮ್ ,ಟ್ವಿಟರ್ ಹೀಗೆ ಎಲ್ಲಿ ಸಾಧ್ಯವಾಗುತ್ತೋ ಅಲ್ಲಿಂದಲೆ ಶ್ರೀಕೃಷ್ಣನ ದರ್ಶನ ಭಾಗ್ಯ ಪಡೆಯಬಹುದೆಂದು ಅವರು ಕನ್ನಡಪ್ರೆಸ್ .ಕಾಮ್ ಗೆ ತಿಳಿಸಿದ್ದಾರೆ.

    ಮುಂಜಾನೆ ಶ್ರೀ ರಾಧಾಕೃಷ್ಣಚಂದ್ರ ದೇವರಿಗೆ ನೆಡಯುವ ತೆಪ್ಪೋತ್ಸವ, ನಂತರದ ಅಭಿಷೇಕ,ನಾನಾ ರೀತಿಯ ಸೇವೆಗಳು ಎಲ್ಲವೂ ಲೈವ್ ಆಗಿ ಬಿತ್ತರವಾಗಲಿವೆ. ನೀವಿರುವ ಕಡೆಯಲ್ಲೇ ಮೊಬೈನಲ್ಲೇ ಪರಮಾತ್ಮನ ದರ್ಶನ ಪಡೆಯಬಹುದು.

    ಈ ಬಾರಿಯ ಮತ್ತೊಂದು ವಿಶೇಷವೆಂದರೆ ಹೆಸರಾಂತ ಕಲಾವಿದರ ಲೈವ್ ಸಂಗೀತ ಕಚೇರಿಗಳು.ಕು.ಸೂರ್ಯ ಗಾಯತ್ರಿ ಅವರಿಂದ ಶಾಸ್ತೀಯ ಸಂಗೀತ,ಶ್ರೀಮತಿ ಅನುರಾಧ ಪೌಡ್ವಾಲ ಮತ್ತು ಅನೂಪ್ ಜಲೋಟ ಅವರಿಂದ ಭಜನೆ. ಎಂ. ಎಸ್ ಸುಬ್ಬಲಕ್ಷ್ಮಿ ಅವರ ಮೊಮ್ಮಕ್ಕಳ ಸಂಗೀತ ಕಚೇರಿಯೂ ನಡೆಯಲಿದೆ. ಆಗಮ ಬ್ಯಾಂಡ್ ಸೇರಿದಂತೆ ವಿವಿಧ ಬ್ಯಾಂಡ್ ಗಳಿಂದ ಕೃಷ್ಣ ಗೀತೆಗಳ ಪ್ರಸ್ತುತಿ ಇದೆ.

    ಬೆಂಗಳೂರು ಇಸ್ಕಾನ್ ಅಧ್ಯಕ್ಷರಾದ ಮಧು ಪಂಡಿತ ದಾಸ ಅವರು ಡಾ. ಕಸ್ತೂರಿ ರಂಗನ್ ,ಅನುಪಮ್ ಖೇರ್ ಮತ್ತು ಹೇಮಾ ಮಾಲಿನಿ ಅವರೊಂದಿಗೆ ಚರ್ಚೆ ನಡೆಸುವುದು ಈ ಬಾರಿಯ ವಿಶೇಷ ಕಾರ್ಯಕ್ರಮಗಳಲ್ಲಿ ಒಂದು. ಇಸ್ಕಾನ್ ಆಹಾರ ಏಕೆ ರುಚಿಕರ ಎಂಬುದರ ಬಗ್ಗೆ ಖ್ಯಾತ ಬಾಣಸಿಗ ಸಂಜೀವ್ ಕುಮಾರ್ ಅವರೊಂದಿಗೆ ಚರ್ಚೆ ಮತ್ತೊಂದು ವಿಶೇಷ.

    ಮಕ್ಕಳಿಗಾಗಿಯೂ ಕಾರ್ಯಕ್ರಮಗಳು ಇವೆ. ಸಾರ್ವಜನಿಕರೊಂದಿಗೆ ಫೋನ್ ಇನ್ ಕಾರ್ಯಕ್ರಮ ಕೂಡ ಇದೆ. ಇದಲ್ಲದೆ ಅಷ್ಟಮಿ. ದಿನ108 ಖಾದ್ಯಗಳನ್ನು ಒಳಗೊಂಡ ವಿಶೇಷ ರಾಜಭೋಗವನ್ನು ಭಗವಂತನಿಗೆ ಅರ್ಪಿಸಲಾಗುದು. ಕೋವಿಡ್ ನಿವಾರಣೆಗೆಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗವುದು .ಜೊತೆಗೆ ನಾನಾ ಆನಾಥಶ್ರಮಗಳಲ್ಲಿ ಇಸ್ಕಾನ್ ವತಿಯಿಂದ ಜನ್ಮಾಷ್ಟಮಿ ಆಚರಿಸಲಾಗುವುದು.

    ಶತ ಶತಮಾನಗಳು ಕಳೆದರೂ ಬಂಧ ಕಳೆದುಕೊಳ್ಳದ ಸಂಬಂಧಗಳು

    ಓದು, ಕೆಲಸ ,ಮನೆ ,ಗಾಡಿ ,ಲೋನು ,ಮದುವೆ ,ಮಕ್ಕಳು, ಭೋಗ್ಯ ,ಬಾಡಿಗೆ, ಸ್ವಂತ ….ಹೀಗೇ ಬದುಕು ಯಾಂತ್ರಿಕವಾಗಿಯೂ, ಯಾರಿಗಿಂತ ನಾವೇನು ಕಡಿಮೆ ಅಂತ ಸ್ಪರ್ಧಾತ್ಮಕವಾಗಿಯೂ ನಡೆಯುತ್ತಿರುತ್ತದೆ .ಒಂದು ಕಡೆ ಜ್ಞಾನವನ್ನೇ ಓವರ್ ಟೇಕ್ ಮಾಡಿಕೊಂಡು ತಂತ್ರಜ್ಞಾನವು ಬೆಳೆಯುತ್ತಿದೆ. ಜಗತ್ತಿನಲ್ಲಿ ಏನೆಲ್ಲಾ ಬದಲಾವಣೆಗಳಾದ್ರೂ ಜೀವನ ಶೈಲಿಯಲ್ಲಿ ಏನೇ ಮಾರ್ಪಾಡುಗಳಾದ್ರೂ ಬದಲಾಗದೇ ಇರೋದು ಅಂದ್ರೆ ಮೂರೇ ಪ್ರಶ್ನೆ ತಿಂಡಿ ಏನು ? ಏನ್ ಸಾರು ? ರಾತ್ರಿ ಊಟಕ್ಕೇನಿದೆ ? ಪ್ರತಿದಿನ ತಪ್ಪದೇ ಈ ಪ್ರಶ್ನೆಕೇಳೇ ಕೇಳ್ತೀವಿ ಮನೆಯವರು ಆನ್ಸರ್ ಮಾಡೇ ಮಾಡ್ತಾರೆ .

    ಪ್ರಪಂಚದ ನಾನಾ ಕಡೆ ಸಾವಿರಾರು ರೀತಿಯ ತಿಂಡಿ ತಿನಿಸುಗಳು, ಊಟ ವಗೈರೆ ಸಿಗಬಹುದು. ಆದರೆ ನಮ್ಮ ದೇಶದ ಅದರಲ್ಲೂ ಈ ದಕ್ಷಿಣ ಭಾರತದ ಆಹಾರ ಶೈಲಿ ಇದೆಯಲ್ಲ ಅದು ನಿಜಕ್ಕೂ ಕೇಳ್ತಿದ್ರೇನೇ ಬಾಯಲ್ಲಿ ನೀರೂರುತ್ತೆ ಮತ್ತೆ ತಿನ್ನೋ ನಾಲಿಗೆಯಿಂದಾನೆ ಹೆಮ್ಮೆಯಿಂದ ಹೇಳ್ಬಹುದು ನಾವು ನಿಜಕ್ಕೂ ಊಟದ ವಿಚಾರದಲ್ಲಿ ಅದೃಷ್ಟ ಮಾಡಿದ್ವಿ ಅಂತ .

    ನಮ್ಮಲ್ಲಿ ತುಂಬಾ ಕುತೂಹಲ ಅಂತ ಅನ್ನಿಸೋದು ಈ ಕಾಂಬಿನೇಷನ್ಗಳು ಇಡ್ಲಿ-ವಡೆ , ಪೂರಿ ಸಾಗು , ಖಾರಾಬಾತ್ -ಕೇಸರಿ ಬಾತ್ , ಪಲಾವ್ – ಮೊಸರು ಬಜ್ಜಿ , ಮಸಾಲ್ ದೋಸೆ -ಆಲೂಗಡ್ಡೆ ಪಲ್ಯ , ಈರುಳ್ಳಿದೋಸೆ -ಗಟ್ಟಿ ಚಟ್ನಿ .

    ಪಾಕಪ್ರವೀಣರು ಆಗಿನಿಂದಲೂ ಈ ಐಟಮ್ಗೆ ಇದನ್ನೇ ಹಾಕ್ಕೋಬೇಕು ಅಂತ ತೋರಿಸ್ಕೊಂಡು ಬಂದಿದಾರೆ , ಪಾಕಪ್ರಿಯರಾದ ನಾವುಗಳೂ ಅದನ್ನೇ ಚಪ್ಪರಿಸ್ಕೊಂಡು ಹೋಗ್ತಿದೀವಿ.

    ಕಾಂಬಿನೇಷನ್ ಕರೆಕ್ಟಾಗಿ ಮಾಡಿಲ್ಲ ಅಂದ್ರೆ ನಮ್ ಪಾಲಿಗೆ ಅದನ್ನು ಮಾಡದೋವ್ರು ಅಡಿಗೆಯವರೆ ಅಲ್ಲ. ಅಸಲಿಗೆ ಅದು ಹೋಟಲ್ಲೇ ಅಲ್ಲ.
    ಖಾಲಿ ಆಗಿದೆ ಬದಲಾಗಿ ಇದು ತಗೋಳಿ ಅಂತ ಒಂದು ಪಕ್ಷ ಹೋಟೆಲ್ಲಲ್ಲಿ ಆದ್ರೆ ನಡೆದುಹೋಗುತ್ತೆ , ಆದರೆ ಮನೆಗಳಲ್ಲಿ ಕಾಂಬಿನೇಷನ್ ಮಾಡದೇ ಹೋದ್ರೆ ಮುಗಿದೋಯ್ತು. ಕಾಲದಿಂದ ನಡ್ಕೊಂಡು ಬರ್ತಿದ್ದ ಸಂಪ್ರದಾಯಾನೇ ಮುರಿದಂಗ್ ಆಡ್ತಾವಿ .ಬಸ್ಸಾರಿಗೆ ಪಲ್ಯ , ಉಪ್ಸಾರಿಗೆ ಖಾರ , ಬೇಳೇಸಾರಿಗೆ ಸಂಡಿಗೆ , ಸೊಪ್ಪಿನ ಸಾರಿಗೆ ಉಪ್ಪಿನ ಕಾಯಿ ……

    ತುಂಬಾ ಜನ ಮನೆ ಊಟವನ್ನೇ ಇಷ್ಟ ಪಡಕ್ಕೆ ಕಾರಣ ಸಹ ಇದೇ….. ಮನೆಯವರಿಗೆ ತಿನ್ನೋವ್ರ ಇಷ್ಟ ಗೊತ್ತಿರುತ್ತೆ ಮತ್ತೆ ಅವರಿಗೆ ಮಾಡಕ್ಕೆ ಆಯ್ಕೆ ಇರುತ್ತೆ .ಚಟ್ನಿ ಅಂದ್ರೆ ಅದರಲ್ಲಿ ಕಾಯಿ ಚಟ್ನಿ , ಶೇಂಗಾ ಚಟ್ನಿ, ನೆಲಗಡಲೇ ಚಟ್ನಿ, ಪುದೀನ ಚಟ್ನಿ .ಪಲ್ಯ ಅಂದೊಡನೆ ಸೊಪ್ಪಿನ ಪಲ್ಯ , ಬೆಂಡೇಕಾಯಿ ಪಲ್ಯ, ಹುರುಳೀಕಾಯಿ ಪಲ್ಯ , ಬಾಳೇಕಾಯಿ ಪಲ್ಯ .
    ಬೋಂಡ ಅಂದ್ರೆ ಈರುಳ್ಳಿ ಬೋಂಡ , ಸಬ್ಬಕ್ಕಿ ಸೊಪ್ಪಿನ ಬೋಂಡ .
    ಪಾಯಸ ಅಂದ್ರೆ ಶಾವಿಗೆ ಪಾಯಸ , ಸಬ್ಬಕ್ಕಿ ಪಾಯಸ , ಗಸಗಸೆ ಪಾಯಸ , ಹೆಸರುಬೇಳೆ ಪಾಯಸ .

    ಮನೆಗಳಲ್ಲಿ ಇಡ್ಲಿ ದೋಸೆ ಅಂದ್ರೆ ಏನ್ ಚಟ್ನಿ ಅಂತ ಚಿಕ್ಕ ಮಕ್ಕಳೂ ಕೇಳ್ತಾವೆ.
    ಇದೆಲ್ಲಾ ಸಾಧಾರಣ ದಿನಗಳದ್ದಾಯ್ತು ಇನ್ನು ಹಬ್ಬ ಹರಿದಿನಗಳದ್ದು ಬೇರೆಯದೇ ವಿಶೇಷ.

    ಸಂಕ್ರಾಂತಿ ಅಂದ್ರೆ ಪೊಂಗಲ್ಲು ಅದರಲ್ಲಿ ಸಿಹಿ ಖಾರ ಎರಡೂ , ಯುಗಾದಿಗೆ ಬೇಳೆ ಒಬ್ಬಟ್ಟು ಮತ್ತು ಒಬ್ಬಟ್ಟಿನದ್ದೇ ಸಾರು, ಗಣೇಶನ ಚತುರ್ಥಿಗೆ ಕಡುಬು , ದೀಪಾವಳಿಗೆ ಕಜ್ಜಾಯ. ರಂಜಾನಿಗೆ ಬಿರಿಯಾನಿ , ಕ್ರಿಸ್ಮಸ್ಗೆ ಕೇಕು .
    ಶಾಖಾಹಾರ ವಿಭಾಗವೇ ದೊಡ್ಡದಿದೆ ಇನ್ನು ಮಾಂಸಾಹಾರ…. ಅದು ಬರೆದರೆ ಪುಸ್ತಕವೇ ಆದೀತು .

    ಹಬ್ಬಕ್ಕೂ ಆಹಾರಕ್ಕೂ ನಡುವೆ ಅಧ್ಭುತವಾದ ನಂಟಿದೆ .ಆ ದಿನ ದೇವರಿಗೆ ಏನಿಷ್ಟ , ಏನಕ್ಕಿಷ್ಟ ಅದರ ಹಿಂದಿರುವ ಕತೆ ಏನು… ಶ್ರೇಷ್ಠತೆ ಏನು… ಹೀಗೆ ಪ್ರತಿಯೊಂದನ್ನು ಹಿರಿಯರು ಪುರಾವೆ ಸಹಿತ ತಿಳಿಸಿದ್ದಾರೆ .
    ಇದಲ್ಲದೇ ಯಾವ ಕಾಲದಲ್ಲಿ ಯಾವುದು ತಿನ್ನಬೇಕು , ತಿಂದ್ರೆ ಆರೋಗ್ಯಕ್ಕೆ ಯಾವ ರೀತಿ ಅನುಕೂಲ ಆಗುತ್ತೆ ಅಂತಾನೂ ಹಿರಿಯರು ಮಾಡಿ ತಿನ್ನಿಸಿ ತಿಳಿಸಿದ್ದಾರೆ .ಹಬ್ಬ ಅನ್ನೋದು ನಮ್ಮ ಆಚಾರವಾದರೆ , ಹಬ್ಬದೂಟ ಅನ್ನುವುದು ಅದಕ್ಕೂ ಮೀರಿದ ಉಪಚಾರ .

    ಚದುರಿಹೋದ ಮನೆಯವರನ್ನು , ಹಲವು ಮನಸ್ಸುಗಳನ್ನು ಒಂದು ಕಡೆ ಸೇರಿಸೋ ಅಗಾಧವಾದ ಶಕ್ತಿ ಒಂದು ಅಡುಗೆ ಮನೆಗಿದೆ .ಸೌಂದರ್ಯವನ್ನು ನೋಡಿದಾಗ ಕಣ್ಣು , ಸಂಗೀತವನ್ನು ಕೇಳಿದಾಗ ಕಿವಿ, ಸುವಾಸನೆಯನ್ನು ಆಸ್ವಾದಿಸಿದಾಗ ಮೂಗು , ಆಹಾರದ ರುಚಿಯನ್ನು ಸವಿದಾಗ ನಾಲಿಗೆ ಸ್ವರ್ಗವನ್ನು ನೆನಪಿಸುತ್ತದೆ .

    ಒಂದಂತೂ ಸತ್ಯ …..
    ಸಿಕ್ಕಿದ್ದನ್ನೆಲ್ಲಾ ತಿನ್ನೋಕಾಗಲ್ಲ , ತಿನ್ನೋದನ್ನೆಲ್ಲಾ ಆಹಾರ ಅನ್ನಕ್ಕಾಗಲ್ಲ, ಯಾಕಂದ್ರೆ “ಆಹಾರ ಅನ್ನೋದು ಪದ್ದತಿ ” .

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಅಗತ್ಯದ ಕೆಲಸಗಾರರ ಪೂರೈಕೆಯಾಗದ ಅಗತ್ಯಗಳು

    ಬದುಕಿನ ಹೃದಯದ ಬಡಿತಕ್ಕೆ ಹಲವು ಮಿಡಿತಗಳ ಪೂರೈಕೆಯಾಗುತ್ತಿರಬೇಕು. ಇಲ್ಲದಿದ್ದರೆ ಅದು ಸ್ಥಗಿತವಾಗಿ ಜೀವನದಲ್ಲಿ ಆಹಾಕಾರ ಶುರುವಾಗುತ್ತದೆ.ಇಂದಿನ ಜಗತ್ತು ಹಿಂದೆಂದಿಗಿಂತಲೂ ಸಂಕೀರ್ಣವಾಗಿದೆ.ಬದುಕಿನಲ್ಲಿ, ಹೆಚ್ಚು, ಹೆಚ್ಚು ಸಮಯ ಸಿಗುತ್ತದ್ದಂತೆ ಅದಕ್ಕಿನ್ನ ಹೆಚ್ಚು ಅನಗತ್ಯ ಕೆಲಸಗಳನ್ನು,ಹವ್ಯಾಸಗಳನ್ನು ಸೃಷ್ಬಿಸಿಕೊಂಡು ಬಿಟ್ಟಿದ್ದೇವೆ.ಹಾಗಾಗಿ ಇಂದಿನ ಕಾಲದ  ‘ಅಗತ್ಯದ ಬದುಕು ‘ ಎನ್ನುವ ಅರ್ಥಕ್ಕೆ ಬಹು ದೊಡ್ಡ ವ್ಯಾಪ್ತಿಯಿದೆ.

    ಕೋವಿಡ್ ನ ಕಾರಣವಾಗಿ ’ ಅಗತ್ಯ ಕೆಲಸಗಾರರು ’ ಮತ್ತು‘ಅಗತ್ಯವಾದಷ್ಟು ಬದುಕು ‘ ಎಂದರೆ ಏನು ಎಂದು ಎಲ್ಲರೂ ತಿಳಿಯುವಂತಾಗಿದೆ. ಜೊತೆ ಜೊತೆಯಲ್ಲೇ ಬದುಕನ್ನು ನಡೆಸಲುಸಮಾಜದ ಎಲ್ಲರೂ ಬೇಕು ಎನ್ನುತ್ತಿದ್ದ ವಿಶಾಲ ಅರ್ಥಕ್ಕೆ ಕಡಿವಾಣ ಬಿದ್ದು, ಬದುಕಿನ ಮೂಲಭೂತ ಅಗತ್ಯಗಳೇನು ಎನ್ನುವುದನ್ನು ಅರಿಯಲು ಲಾಕ್ ಡೌನ್ ಅನುವುಮಾಡಿಕೊಟ್ಟಿದೆ. ಅಗತ್ಯ ಕೆಲಸಗಾರರು ಯಾರು ಎನ್ನುವುದನ್ನು ಪ್ರತಿದೇಶದ ಜನರು ಅರಿಯುವಂತಾಗಿದೆ. ಅಗತ್ಯ ಕೆಲಸಗಾರರು ( Essential workers) ಎಂದು ಕರೆಸಿಕೊಳ್ಳುವ ಇವರಿಗೆ ಹಿಂದೆಂದೂ ಸಿಗದ ಗೌರವ ಮತ್ತು ಮನ್ನಣೆಗಳು ದೊರೆತಿವೆ.

    ಕೈ ತುಂಬ ಕೆಲಸ, ಹೊಟ್ಟೆಯ ತುಂಬ ಊಟ, ಸಂಸಾರ, ನಿದ್ದೆ -ಇವಿಷ್ಟೇ ಸಾಧಾರಣವಾದ ದಿನವೊಂದರಲ್ಲಿ ಇರುತ್ತಿದ್ದ ಕಾಲ ಮುಗಿದಿದೆ. ಸಾಧಾರಣ ದಿನವೊಂದರ ಸ್ವರೂಪವೇ ಬದಲಾಗಿದೆ. ಅಗತ್ಯಗಳೂ ಬದಲಾಗಿವೆ. ಹೀಗಾಗಿ ನಾವೆಲ್ಲ ಪ್ರಗತಿಯ ಪ್ರತಿ ಉತ್ಪಾದನೆಗೆ ಹರಕೆಯ ಕುರಿಗಳಂತೆ ಗ್ರಾಹಕರಾಗಿದ್ದೇವೆ.ಹೊಸ ಹೊಸ ಆವಿಷ್ಕಾರಗಳನ್ನು ನಮ್ಮದಾಗಿಸಿಕೊಳ್ಳುವ ಕನಸಿನಲ್ಲೇ ನಮ್ಮ ದುಡಿಮೆಯನ್ನು ಕೇಂದ್ರೀಕರಿಸಿಕೊಂಡಿದ್ದೇವೆ. ಇದು ಬದಲಾವಣೆಗೆ ಸದಾ ತುಡಿವ ಮನುಷ್ಯನ ಸಹಜ ವರ್ತನೆ.’ಇರುವುದನ್ನೆಲ್ಲ ಹಿಂದಿಕ್ಕಿ ಇಲ್ಲದುದರೆಡೆಗೆ ತುಡಿವುದೇ ಜೀವನ ’-ಎನ್ನುವ ಸರ್ವಕಾಲಿಕ ಮಾತಿನಂತೆ.

    ದೊಡ್ಡ ಚಿತ್ರಣವೊಂದರಲ್ಲಿ ಕೆಲವೆಲ್ಲ ವಿಚಾರಗಳು ಗೌಣವಾದರೂ ನಮ್ಮ ಹಲವು ಅಗತ್ಯಗಳು ಸುತ್ತ ಮುತ್ತಲಿನ ಜಗತ್ತಿನ ಮೇಲೆ ಅವಲಂಬಿತವಾಗಿವೆ. ಈ ಕಾರಣ ಜಗತ್ತಿನೊಂದಿಗೆ ನಾವು ಒಪ್ಪಂದ ಮಾಡಿಕೊಳ್ಳುತ್ತ  ಸಾಗುತ್ತೇವೆ. ಒಂದು ಅರ್ಥದಲ್ಲಿ ಬೇರೆ ವಿಧಿಯೂ ಇಲ್ಲ.ಉದಾಹರಣೆಗೆ ಮೂಲಭೂತ ಶಿಕ್ಷಣ,ಮಾಹಿತಿಗಳು, ಓದು,ಬರಹ,ವ್ಯಾಪಾರ,ಕೆಲಸಗಳು, ಮನರಂಜನೆಗಳು ಎಲ್ಲವೂ ಅಂತರ್ಜಾಲ ಮಾಧ್ಯಮಕ್ಕೆ ಶರಣಾಗಿರುವಾಗ, ಎಷ್ಟು ಜನರು, ಎಷ್ಟು ಕಾಲ ಬದಲಾವಣೆಗಳನ್ನು ವಿರೋಧಿಸಬಲ್ಲರು? ಸ್ಮಾರ್ಟ್ ಫೋನ್ ಗಳು, ಖಾಸಗೀ ಮನರಂಜನೆಯ ಚಾನಲ್ ಗಳು , ಅಂತರ್ಜಾಲ, ಸಾಮಾಜಿಕ ಜಾಲತಾಣಗಳು ಇವೆಲ್ಲ ಬದುಕಿಗೆ ವೇಗವನ್ನು ನೀಡುತ್ತಲೇ ಸಾಗಿವೆ.ಅವುಗಳ ಮೇಲೆ ನಮ್ಮ ಅವಲಂಬನೆ ಹೆಚ್ಚಾದಂತೆಲ್ಲ ನಮ್ಮ ಅಗತ್ಯಗಳ ಪರಿಧಿಯೂ ಹಿಗ್ಗಿದೆ. ಹೀಗಾಗಿ ನಮ್ಮ ಸಾಮಾನ್ಯ ಬದುಕಿನ ಇಂದಿನ ಮೂಲಭೂತ ಅಗತ್ಯಗಳು ಹಿಂದೆಂದಿಗಿಂತಲೂ ಹೆಚ್ಚಾಗಿವೆ.

    ಸಾಮಾಜಿಕ ಸಂಸ್ಕೃತಿಗಳನ್ನು ಆಧರಿಸಿಆಯಾ ದೇಶಗಳು ತಮ್ಮ ’ಅಗತ್ಯ ಕೆಲಸಗಾರರನ್ನು ’ ಹೆಸರಿಸಿವೆ.ಇವುಗಳಲ್ಲಿ ಹಲವು ಸಣ್ಣ ಪುಟ್ಟ ವ್ಯತ್ಯಾಸಗಳಿವೆ. ಹೀಗಿದ್ದೂ.ಜಾಗತೀಕರಣದ ಕಾರಣ ಇಂದಿನ ಜಗತ್ತಿನ ಬಹುತೇಕ ಎಲ್ಲ ದೇಶಗಳ ಜನರ ಅಗತ್ಯಗಳು ಒಂದೇ ಆಗುತ್ತ ಸಾಗಿವೆ.

    ಯಾರು ಅಗತ್ಯ ಕೆಲಸಗಾರರು?

    ಆರೋಗ್ಯ ಇಲಾಖೆಗೆ ಸಂಬಂಧಿಸಿದ ಎಲ್ಲ ಕೆಲಸಗಾರರು,ಆಹಾರ ಸರಬರಾಜು ಸರಪಳಿಯಲ್ಲಿರುವ  ಅಂದರೆ ಬೆಳೆವವರು,ಉತ್ಪಾದಕರು, ಆಹಾರದ ಕಾರ್ಖಾನೆ, ಪ್ಯಾಕ್ ಮಾಡುವವರು, ಟ್ರಾನ್ಸ್ ಪೋರ್ಟ್ ನ ವ್ಯವಹಾರದವರು ಇನ್ನಿತರ ಎಲ್ಲ  ಕೆಲಸಗಾರರು, ಪೊಲೀಸರು,ಲಾಯರುಗಳು ಮತ್ತುಕಾನೂನು ಮಂಡಳಿ, ಸ್ವಚ್ಛತೆಯನ್ನು ಕಾಪಾಡುವ ಕೆಲಸಗಾರರು, ಆಡಳಿತ ವರ್ಗದವರು, ಅಂಚೆ ಕೆಲಸಗಾರರು,ಶೈಕ್ಷಣಿಕ ಇಲಾಖೆಯ ಎಲ್ಲ ಕೆಲಸಗಾರರು,ಸತ್ತವರನ್ನು ಹೂಳುವವರು, ಸಮಾಜಕ್ಕೆ ಕಣ್ಣಾಗಿ ಕೆಲಸಮಾಡುವ ಎಲ್ಲ ಮಾಧ್ಯಮದವರು, ಸಂಪರ್ಕ ವ್ಯವಸ್ಥೆಯ ಜಾಲದವರು, ಮನೆಯೊಂದು ನಡೆಯಲು ಬೇಕಿರುವ ನೀರು, ವಿದ್ಯುತ್,ಗ್ಯಾಸ್ ಇತ್ಯಾದಿ ಅತ್ಯಗತ್ಯಗಳನ್ನು ಪೂರೈಸುವ ಸರಪಳಿಯಲ್ಲಿರುವ ಎಲ್ಲರು, ಹಲವು ಬಗೆಯ ಸಾರಿಗೆ ವ್ಯವಸ್ಥೆಗಳ ಕೆಲಸಗಾರರು, -ಇತ್ಯಾದಿ ಜನರು ಅಗತ್ಯ ಕೆಲಸಗಾರರ ಪಟ್ಟಿಯಲ್ಲಿದ್ದಾರೆ.

    ಸ್ವಂತ ಉದ್ಯೋಗ ಅಥವಾ ಖಾಸಗೀ ಸಂಸ್ಥೆಯ ಅಗತ್ಯ ಕೆಲಸಗಾರರಿಗೆ ಲಾಕ್ ಡೌನ್ ಸಮಯದಲ್ಲಿ ಕೆಲಸ ಮಾಡಲು ಪರವಾನಗಿ ಇದ್ದರೂ ಕೆಲಸ ಮಾಡಬೇಕೇ ಇಲ್ಲವೇ -ಎನ್ನುವ ಬಗ್ಗೆ ತಮ್ಮದೇ ನಿಲುವನ್ನು ತಳೆಯಬಹುದಾಗಿದೆ. ಮತ್ತೆ ಕೆಲವರ ಜತೆ ಸರ್ಕಾರಗಳು ಇಂತಿಷ್ಟು ಎಂದು ಮಾತಾಡಿ ಒಪ್ಪಂದ ಮಾಡಿಕೊಂಡಿವೆ (ಉದಾಹರಣೆಗೆ-ಖಾಸಗೀ ಆಸ್ಪತ್ರೆಗಳು). ಸರ್ಕಾರದಿಂದ ಆರ್ಥಿಕ ಸಹಾಯ ಪಡೆದು ಕೊಳ್ಳುತ್ತಿರುವ ಸ್ವಂತ ಉದ್ಯೋಗ ಉಳ್ಳ ಜನರು ಸರ್ಕಾರದ ಆದೇಶಗಳ ಪ್ರಕಾರ ಕೆಲಸವನ್ನು ಮಾಡಬೇಕಿದೆ.

    ಆದರೆ ಬಹುತೇಕ ದೇಶಗಳಲ್ಲಿ, ಸ್ವಂತ ಉದ್ಯೋಗವುಳ್ಳ ಜನರು ವೈಯಕ್ತಿಕ ಆಸಕ್ತಿಗಳ ಕಾರಣ ತಾವೇ ಮುಗಿಬಿದ್ದು  ತಮ್ಮ ಅಗತ್ಯದ ಗಳಿಕೆಗಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲವೇ ಕೆಲಸಕ್ಕೆ ಮರಳಲು ಕಾಯುತ್ತಿದ್ದಾರೆ.ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಜನರು ಸರ್ಕಾರದ ಆದೇಶ ಮತ್ತು ಲಾಕ್ ಡೌನ್ ನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಲಾಕ್ ಡೌನ್ ನ್ನು ತೆರವುಗೊಳಿಸಿ ಎಲ್ಲ ಉದ್ಯಮಗಳನ್ನು ಮತ್ತೆ ಸಹಜ ಸ್ಥಿತಿಗೆ ತರಲು ಆಗ್ರಹಿಸುತ್ತಿದ್ದಾರೆ.ಕೆಲಸಕ್ಕೆ ಮರಳಲು ಅನುಮತಿ ಕೋರಿ ತಮ್ಮ ಆರೋಗ್ಯವನ್ನು ಕಡೆಗಣಿಸಿ ಇಂಥವರು ರಸ್ತೆಗಿಳಿದು ಮೆರವಣಿಗೆ ನಡೆಸಿದ್ದಾರೆ.

    ಇವರ ತುರ್ತು ಅಗತ್ಯ ಸಮಾಜಕ್ಕಿಲ್ಲದಿದ್ದರೂ ಸಮಾಜದ ಸಹಜ ಆಗು ಹೋಗುಗಳ ಸುತ್ತ ತಮ್ಮ ಬದುಕನ್ನು ಕಟ್ಟುಕೊಂಡ ಇವರಿಗೆ ಸಮಾಜದ ಅಗತ್ಯವಿದೆ. ತುರ್ತಾಗಿ ಹೊಟ್ಟೆ ಹೊರೆಯುವ ಅಥವಾ ಪರಿಹಾರ ಧನದ ಜರೂರತ್ತಿದೆ.

    ಅಗತ್ಯ ಕೆಲಸಗಾರರ ಬವಣೆಗಳು

    ಅಗತ್ಯ ಕೆಲಸಗಾರರಿಗೆ ಹೊಟ್ಟೆ ಹೊರೆಯಲು ದಾರಿಯಿದೆ.ಆದರೆ,ಅವರ ಆರೋಗ್ಯ ಅಪಾಯದಲ್ಲಿದೆ.ಆದರೆ ಆರೋಗ್ಯ ಸಂಬಂಧೀ ಬೇಡಿಕೆಗಳನ್ನು ಮುಂದಿಟ್ಟರೆ ಕೆಲಸಗಳನ್ನು ಕಳೆದುಕೊಳ್ಳುವ ಆತಂಕ ಅವರಿಗಿದೆ. ಕಂಡರಿಯದ ಈ ಕೋವಿಡ್ ಪರಿಸ್ಥಿತಿಯಲ್ಲಿ ಅವರ ಮೇಲೆ ಬಹಳ ಕೆಲಸದ ಒತ್ತಡವಿದೆ. ಅಕಸ್ಮಾತ್ ಕೆಲಸದ ರೀತಿ -ನೀತಿಯನ್ನು ಪ್ರಶ್ನಿಸಿದರೆ ಕೆಲಸವನ್ನು ಕಳೆದುಕೊಳ್ಳುತ್ತಿದ್ದಾರೆ. ಅವರ ಸ್ಥಾನವನ್ನು ತುಂಬಲು ನಿರುದ್ಯೋಗಿಗಳ ದಂಡೇ ಸರದಿಯಲ್ಲಿ ನಿಂತಿದ್ದಾರೆ.

    ಎಲ್ಲ ಸಮಾಜಗಳಲ್ಲಿ, ಹೊಡೆತ ಬೀಳುತ್ತಿರುವುದು ಅಗತ್ಯ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರವ ಮೂರು ಮತ್ತು ನಾಲ್ಕನೇ ದರ್ಜೆಯ ಕೆಲಸಗಾರರ ಮೇಲೆ. ಕಾಯಂ ಕೆಲಸದ ಆದೇಶ ಇಲ್ಲದವರ ಮೇಲೆ. ಅರೆಕಾಲಿಕ ಉದ್ಯೋಗಸ್ಥರ ಮೇಲೆ.ಕೆಲಸಗಾರರ ಯೂನಿಯನ್ ಇತ್ಯಾದಿಗಳ ಬೆಂಬಲವಿಲ್ಲದವರ ಕಾರಣ ಅವರ ಮೇಲೆ ಇನ್ನಿಲ್ಲದ ಒತ್ತಡಗಳಿವೆ.ಶೋಷಣೆಗಳೂ ನಡೆದಿವೆ.

    ಉದಾಹರಣೆಗೆ, ಏಪ್ರಿಲ್ ನಲ್ಲಿ ಒಂದು ದೊಡ್ಡ ಸುದ್ದಿಯಾದದ್ದು ಜೊಮ್ಯಾಟೊ ದ ಪಿಜ್ಜಾ ಸರಬರಾಜು ಮಾಡುತ್ತಿದ್ದ ಅರೆಕಾಲಿಕ ಸಮಯದ ಉದ್ಯೋಗಿಯೊಬ್ಬನು ಕರೋನ ಸೋಂಕಿತ ಎಂದು ತಿಳಿದ ಕೂಡಲೇ ಆತನೂ ಸೇರಿದಂತೆ ಆತ ಪಿಜ್ಜಾ ತಲುಪಿಸಿದ 72 ಕುಟುಂಬದವರು ಕ್ವಾರಂಟೈನ್ ಗೆ ಒಳಪಟ್ಟದ್ದು.ಅವನ ಜೊತೆ ಕೆಲಸಮಾಡುತ್ತಿದ್ದ 17 ಮಂದಿಯೂ 14 ದಿನ ಕ್ವಾರೈಂಟೈನ್ ಗೆ ಒಳಪಟ್ಟದ್ದು.

    ಭಾರತದಲ್ಲಿ ಮಾರ್ಚ್ 24 ರಂದೇ ಲಾಕ್ ಡೌನ್ ಶುರುವಾಗಿತ್ತು. ಆದರೆ,  ಸಾಮಾಜಿಕ ಅಂತರದ ಲಕ್ಷುರಿ ಅಥವಾ ವಿಶೇಷ ಸವಲತ್ತು ಡೆಲವರಿ ಬಾಯ್  ಆಗಿದ್ದ ಈತ ಮತ್ತು ಈತನಂತಹ ಮಿಲಿಯನ್ ಗಟ್ಟಲೆ ಜನರಿಗೆ ದೊರೆತಿರಲಿಲ್ಲ. ಏಪ್ರಿಲ್ 14 ರಂದು ಈತ ಕರೋನ ಸೋಂಕಿತ ಎಂದು ಖಾತರಿಯಾಗುವ  ವೇಳೆಗೆ ಈತ ಹಲವರ ಸಂಪರ್ಕಕ್ಕೆ ಬಂದಾಗಿತ್ತು.

    ಈ ಘಟನೆ ತಕ್ಷಣ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿತು.

    ಪಿಜ್ಜಾ ಡೆಲಿವರಿ ಅಥವಾ ಆಹಾರ ಸರಬರಾಜು ಅಗತ್ಯ ಸೇವೆಯ ಕೆಳಗೆ ಬಂದರೂ, ಯಾವುದೇ ಉದ್ಯೋಗದ ಗುತ್ತಿಗೆ, ರಕ್ಷಣೆ, ರಜಾಗಳು, ಪಿಂಚಣಿ ಇಲ್ಲದ ಆತನ ಆರೋಗ್ಯಕ್ಕೆ ಯಾವುದೇ ರಕ್ಷಣೆಯಿರಲಿಲ್ಲ. ಇತ್ತ ಉದ್ಯೋಗದಾತ, ಅತ್ತ ಪೋಲೀಸರು, ಜೊತೆಗೆ ಬೇಜವಾಬ್ದಾರೀ  ಗ್ರಾಹಕರು ಎಲ್ಲರನ್ನೂ ಮೌನವಾಗಿ ಸಹಿಸಿಕೊಳ್ಳಬೇಕಾದ ಕಟು ವಾಸ್ತವವನ್ನು ಅಗತ್ಯ ಕೆಲಸಗಾರರು ಎದುರಿಸುತ್ತಿದ್ದರು.

    ಸರ್ಕಾರದ ನಿಯಮಗಳ ಬಗ್ಗೆ ಅಷ್ಟೇನೂ ತಿಳಿವಳಿಕೆ ಇಲ್ಲದಿರುವುದು,ಕಡಿಮೆ ಆದಾಯ, ತುಟ್ಟಿ ಕಾನೂನು ಮತ್ತು ಆರೋಗ್ಯ ರಕ್ಷಣೆ ಎಲ್ಲವೂ ಇಂತಹ ಕೆಲಸಗಾರರನ್ನುಇಂದಿಗೂ ನಲುಗಿಸಿವೆ.ಉದ್ಯೋಗ ನೀಡುವ ಸಂಸ್ಥೆಗಳು ಅಕಸ್ಮಾತ್ ಕೆಲಸಗಾರರಿಗೆ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸಿದರೂ ಅವರ ಕುಟುಂಬದವರಿಗೆ ಸೋಂಕು ಹರಡಿದರೆ ಅದಕ್ಕೆಯಾರೂ ಜವಾಬ್ದಾರಿ ಹೊರುವುದಿಲ್ಲ. ಹಾಗಾಗಿ ಅಗತ್ಯ ಕೆಲಸಗಾರರಷ್ಟೇ ಅಲ್ಲದೆ ಅವರ ಇಡೀ ಕುಟುಂಬಗಳು ತಮ್ಮ ಆರೋಗ್ಯದ ವಿಚಾರದಲ್ಲಿ ಆತಂಕಗಳನ್ನು ಎದುರಿಸಿದ್ದಾರೆ.

    ನಮ್ಮ ದೇಶದಲ್ಲಿ ಆರ್ಥಿಕ ವ್ಯತ್ಯಾಸಗಳು ಹೆಚ್ಚಿರುವ ಕಾರಣ ಶ್ರೀಮಂತರು ಬಡವರಿಂದ ಅತ್ಯಂತ ಬೇಗನೆ ಅಂತರ ನಿರ್ಮಿಸಿಕೊಂಡರು. ಆದರೆ ಬಡವರು ಶ್ರೀಮಂತರ ಬೇಡಿಕೆಗಳನ್ನು ಪೂರೈಸಲು ತಮ್ಮ ಆರೋಗ್ಯವನ್ನು ಕಡೆಗಣಿಸಿ ದುಡಿಯದೆ ವಿಧಿಯಿರಲಿಲ್ಲ. ಮೇಲು-ಕೀಳುಗಳಲಂಬವಾದ (vertical) ಅಂತರ ಸುಲಭವಾದರೂ, ಸಾಮಾಜಿಕವಾಗಿ ಮಟ್ಟಸವಾದ (Horizontal) ಅಂತರವನ್ನು ಕಾಪಾಡುವುದು ಸುಲಭವಾಗಲಿಲ್ಲ.ಈ ಡೆಲಿವರಿಯ ಮನುಷ್ಯ ರಾಜ್ಯ ,ಅಥವಾ ದೇಶವನ್ನು ಬಿಟ್ಟು ಎಲ್ಲಿಯೂ ಹೋಗಿರದಿದ್ದರೂ, ಗ್ರಾಹಕರಿಂದಲೋ ಮತ್ತೊಬ್ಬರಿಂದಲೋ ಸೋಂಕನ್ನು ಪಡೆದಿದ್ದ.ಆದರೆ ಹೊಟ್ಟೆ ಹೊರೆಯಲು ಇದ್ದ ಈ ಅರೆಕಾಲಿಕ ಕೆಲಸವನ್ನು ಅವನು ನಿಲ್ಲಿಸಲು ಸಾಧ್ಯವಿರಲಿಲ್ಲ. ಆರೋಗ್ಯ ಸೇತುವಿನಂತಹ ಆಪ್ ನ್ನು ಕೆಲಸಗಾರರು ಹೊಂದಿದ್ದರೂ, ಗ್ರಾಹಕರಿಗೆ ಅದರ ಕಡ್ಡಾಯವಿರಲಿಲ್ಲ.ಏಪ್ರಿಲ್ ನ ಕರೋನಾ ಕಾಲದಲ್ಲಿ ನಮ್ಮ ದೇಶದ 55.1% ಕುಟುಂಬಗಳಿಗೆ ಎರಡು ಹೊತ್ತಿನ ಊಟವನ್ನಷ್ಟೇ ಮಾಡಲು ಸಾಧ್ಯವಾಗಿದೆ ಎಂಬುದನ್ನು ಒಂದು ಸಮೀಕ್ಷೆ ತಿಳಿಸಿದೆ.ಈ ಸಮೀಕ್ಷೆಯಲ್ಲಿ5,500 ಕುಟುಂಬಗಳು ಭಾಗವಹಿಸಿದ್ದವು.ಇವರಲ್ಲಿ ಶೇಕಡಾ ಶೇಕಡ 60 ಜನರ ಉದ್ಯೋಗಕ್ಕೂ ಸಂಚಕಾರ ಬಂದಿತ್ತು.

     ವಿಶ್ವದ ಹಲವು ದೇಶಗಳಲ್ಲಿಯೂ ಅಗತ್ಯ ಕೆಲಸಗಾರರು ಎದುರಿಸಿದ ಸಮಸ್ಯೆಗಳು ಈ ರೀತಿಯವೇ ಆಗಿವೆ. ಸರ್ಕಾರದ ಆಶ್ವಾಸನೆ, ಯೋಜನೆಗಳು, ಭರವಸೆಗಳು ಒಂದೆಡೆಯಾದರೆ, ನಿಜಗಳು ಮತ್ತೊಂದು ಚಿತ್ರವನ್ನು ಕಟ್ಟಿಕೊಡುತ್ತವೆ.

    ಉದಾಹರಣೆಗೆ ಅಮೆರಿಕಾದಲ್ಲಿ ಅಗತ್ಯ ವಸ್ತುಗಳನ್ನು ಆನ್ ಲೈನ್ ಗ್ರಾಹಕರಿಗೆ ಸರಕನ್ನು ತಲುಪಿಸುವ ಸಂಸ್ಥೆಯೊಂದರ ಅರೆಕಾಲಿಕ ಉದ್ಯೋಗಿಗಳಲ್ಲಿ ಕೆಲಸದ ಒತ್ತಡ ನೂರುಪಟ್ಟಾಯಿತು. ಕೋವಿಡ್ ಕಾರಣ ಅವರ ವಹಿವಾಟು ನೂರಾರು ಪಟ್ಟು ಹಿಗ್ಗಿತು.ಸಾವಿರಾರು ಜನರಿಗೆ ಹೊಸ ಉದ್ಯೋಗಾವಾಕಾಶಗಳೂ ಹುಟ್ಟಿಕೊಂಡವು. ಆದರೆ ಸಾಮಾಜಿಕ ಅಂತರ, ಕೆಲಸದಲ್ಲಿನ ಆರೋಗ್ಯ ಮೂರಾಬಟ್ಟೆಯಾಯಿತು.ಹೆಚ್ಚಿದಬೇಡಿಕೆಗಳನ್ನು ಪೂರೈಸಲು ಹಲವರನ್ನು ವೇರ್ ಹೌಸ್ ಕೆಲಸ ಬಿಡಿಸಿ ಡೆಲಿವರಿ ಕೆಲಸಕ್ಕೆ ಹಚ್ಚಲಾಯಿತು. ಆಫೀಸಿನಲ್ಲಿ ಕೆಲಸ ಮಾಡುವವರು ಮನೆಯಿಂದ ಕೆಲಸ ಮಾಡಿದರೆ, ನೆಲ ಗೆಲಸಗಾರರಿಗೆ ಮಾತ್ರ ಸಾಮಾನ್ಯ ರಕ್ಷಣೆಯಲ್ಲೂ ಕೊರತೆಯಿತ್ತು.ಈ ಬೃಹತ್ ಸಂಸ್ಥೆಯ ಹಲವು ಸೋಂಕಿತರ ವಿಚಾರವನ್ನು ಗುಟ್ಟಾಗಿಡಲಾಯಿತೆಂಬ ಗುಮಾನಿ ಕೆಲಸಗಾರರಲ್ಲಿ ಹರಡಿತು.

    ಇಟಲಿ ಮತ್ತು ಸ್ಪೇನಿನ ಸಂಸ್ಥೆಗಳು ಸೋಂಕಿತರು ಪತ್ತೆಯಾದ ನಂತರ ಅವರನ್ನು ಮನೆಗೆ ಕಳಿಸಿದರೇ ಹೊರತು ವೇರ್ ಹೌಸ್ ಗಳನ್ನು ಮುಚ್ಚಲು ನಿರಾಕರಿಸಿದರು.ನ್ಯೂಯಾರ್ಕಿನ ವೇರ್ ಹೌಸ್ ನ ಒಬ್ಬನಿಗೆ ಸೋಂಕು ಪತ್ತೆಯಾದ ನಂತರ ಅವರು ಆತ ಕೆಲಸಮಾಡುತ್ತಿದ್ದ ಜಾಗವನ್ನು ಒಂದು ಪಾಳಿಯ ಲೆಕ್ಕಕ್ಕೆಮಾತ್ರ ಮುಚ್ಚಲು ಒಪ್ಪಿದ್ದು. ಒಂದೇ ಸೂರಿನಡಿ ಕೆಲಸಮಾಡುತ್ತಿದ್ದ ಸಹೋದ್ಯೋಗಿಯೊಬ್ಬನ ಕರೋನ ಸಾವಿನ ನಂತರವಂತೂ ಅಲ್ಲಿನ ಕೆಲಸಗಾರರಲ್ಲಿ ಈ ಬಗ್ಗೆ ದಟ್ಟ ಅಸಮಾಧಾನ ಶುರುವಾಯಿತು.

    ಜನದಟ್ಟಣೆಯ ಜಾಗದ ಅಲ್ಲಿನ ಕೆಲಸ, ಕೆಲಸದ ಮಧ್ಯೆ ಪ್ರತಿಬಾರಿ ಕೈ ತೊಳೆಯಲು ಸಾಧ್ಯವಾಗದ ಕೆಲಸದ ಗತಿ, ಆರೋಗ್ಯ ತಪಾಸಣೆಗಿಲ್ಲದ ಸೌಲಭ್ಯಗಳು ಜೊತೆಗೆ ಮುರಿದು ಬಿದ್ದ ವಿಶ್ವಾಸಗಳು ಅಮೆರಿಕಾದ ಅಗತ್ಯಕೆಲಸಗಾರರನ್ನು ರಸ್ತೆಗಿಳಿಸಿತು.ಅವರು ಮುಷ್ಕರ ಆರಂಭಿಸಿದರು. ಅರೆಕಾಲಿಕ ಗುತ್ತಿಗೆಯ ಇವರಿಗೆ ಯಾವ ಯೂನಿಯನ್ ಗಳ ಬೆಂಬಲವೂ ಇರಲಿಲ್ಲ. ಕೊನೆಗೆ ಆ ಸಂಸ್ಥೆ ತನ್ನ ಕೆಲಸಗಾರರ ಹಲವು ಒತ್ತಡಗಳಿಗೆ ಮಣಿಯಬೇಕಾಯಿತು.ಹಲವು ಬದಲಾವಣೆಗಳನ್ನು ಜಾರಿಗೆ ತರಬೇಕಾಯಿತು.

     ಭಾರತದಲ್ಲಿ ನಾನಾ ವಸ್ತುಗಳನ್ನು ಡೆಲಿವರಿ ಮಾಡುವ ಸಂಸ್ಥೆಗಳು ಲಾಕ್ಡೌನಿನ ಸಮಯದಲ್ಲಿ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡರೇ ಹೊರತು ಕಳೆದುಕೊಳ್ಳಲಿಲ್ಲ. ಬಹುತೇಕ ದೇಶಗಳಲ್ಲಿ ಅಂತರ್ಜಾಲ ಮಾರುಕಟ್ಟೆಗಳೇ ಕರೋನ ಕಾಲದಲ್ಲಿ ಅತ್ಯಧಿಕ ವಹಿವಾಟು ನಡೆಸಿದ್ದು.

    ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಎಲ್ಲ ಅಗತ್ಯಕೆಲಸಗಾರರು ಆತಂಕದಲ್ಲೇ ಕೆಲಸಮಾಡುತ್ತಿದ್ದಾರೆ.ಆಟೋ-ಟ್ಯಾಕ್ಸಿಗಳನ್ನು ಓಡಿಸುವವರು, ಬಸ್ಸು-ಲಾರಿಯ ಚಾಲಕರು, ಅಂಚೆ ಮತ್ತು ಕುರಿಯರ್ ನವರು, ಬರಹ ಮತ್ತು ದೃಶ್ಯ ಮಾಧ್ಯಮದವರು, ಹಣ್ಣು-ತರಕಾರಿ ಮಾರುವವರು,ಹೋಟೆಲಿನವರು,ಗ್ರಾಹಕರನ್ನು ಇದುರಿಸುವ ಪ್ರತಿ ಅಂಗಡಿ-ಮಳಿಗೆಯವರು,ನಮ್ಮ  ದಿನನಿತ್ಯದ ಅಗತ್ಯಗಳನ್ನು ಪೂರೈಸುವಕಾರ್ಖಾನೆಗಳಲ್ಲಿ ಕೆಲಸಮಾಡುವವರು, ಅವುಗಳನ್ನು ನಮ್ಮ ಮನೆಬಾಗಿಲಿಗೇ ತಲುಪಿಸುವ ಎಲ್ಲರೂ ಕೋವಿಡ್ ನ ಆತಂಕದಲ್ಲೇ ದಿನಶುರುಮಾಡಿ-ದಿನವನ್ನು ಮುಗಿಸುತ್ತಿದ್ದಾರೆ. ಸಾಮಾಜಿಕ ಅಂತರಗಳನ್ನು ಕಾಯ್ದುಕೊಳ್ಳುವುದು ಕೇವಲ ಉಳ್ಳವರಿಗೆ ಸಾಧ್ಯವಾಗಿದೆ. ಆದರೆ ಅಗತ್ಯ ಕೆಲಸಗಾರರಿಗೆ ಇರಬೇಕಾದ ಸಾಮಾಜಿಕ ರಕ್ಷಣೆ ಮಾತ್ರ ಇಲ್ಲವಾಗಿದೆ.

    ಇವರ ಅಗತ್ಯ ಸೇವೆಗಳನ್ನು ನಾವು ಇನ್ನಿಲ್ಲದಂತೆ ನಿಸ್ಸಂಕೋಚವಾಗಿ ಬಳಸಿಕೊಳ್ಳುತ್ತಿರುವಾಗಲೇ ಇವರ ಆರೋಗ್ಯ ಮತ್ತು ಆರ್ಥಿಕ ಅಗತ್ಯಗಳು ಮೂಲೆಗುಂಪಾಗಿವೆ. ಹಲವು ಸಂಸ್ಥೆಗಳು ಅವರಿಗೊಂದಿಷ್ಟು ಹೆಚ್ಚುವರಿ ಹಣ ನೀಡಿದರು. ಮತ್ತೆ ಕೆಲವರಿಗೆ ಅವರಿಗೆ ಕೋವಿಡ್ ಬಂದರೆ ಆಸ್ಪತ್ರೆಯ ಖರ್ಚನ್ನ ಭರಿಸುವುದಾಗಿ ಹೇಳಿದರು. ಆದರೆ ಅವರು ತಪಾಸಣೆಗೆ ಹೋದದಿನ ಮತ್ತು ಪರೀಕ್ಷೆಯ ಫಲಿತಾಂಶ ಸಿಗುವವರೆಗಿನ ದಿನಗಳ ದಿನಗೂಲಿಯನ್ನು ಕತ್ತರಿಸಿದರು.ಕೋವಿಡ್ ಪರೀಕ್ಷೆಯ ವೆಚ್ಚವೂ ಕೆಲಸಗಾರರೇ ಭರಿಸಬೇಕಾಯಿತು .ಅಕಸ್ಮಾತ್ ಅವರ ಕುಟುಂಬದ ಸದಸ್ಯರಿಗೆ ಕೋವಿಡ್ ಬಂದರೆ ಅದರ ಖರ್ಚಿಗೆ ಯಾರೂ ಜವಾಬ್ದಾರಿಯನ್ನು ಹೊರಲು ಮುಂದೆ ಮುಂದಿಲ್ಲ.

    ಕೋವಿಡ್ ನ ಬಿಕ್ಕಟ್ಟಿನಲ್ಲಿ ಒದಗಿದ ಅವಕಾಶದಿಂದ ಲಾಭಮಾಡಿಕೊಂಡ ಹಲವು ಕಂಪನಿಗಳುಅವರ ಜೊತೆ ಕೆಲಸಮಾಡುವ ಅಗತ್ಯ ಕೆಲಸಗಾರರ ಜೊತೆ ಈ ಲಾಭವನ್ನು ಹಂಚಿಕೊಂಡಿದ್ದು ದೂರದ ಮಾತಾಯಿತು.ಅಗತ್ಯ ಕೆಲಸಗಾರರ ಅಗತ್ಯಗಳ ಆರೈಕೆಗೆ ನಿಂತ ಸಂಸ್ಥೆಗಳು ಬಹಳ ಕಡಿಮೆ. ಅಗತ್ಯ ಕೆಲಸಗಾರರು ಹಲ್ಲು ಕಚ್ಚಿ, ತುಟಿಬಿಚ್ಚದೆ, ಆತಂಕದಲ್ಲಿ ಕೆಲಸ ಮಾಡಿದ್ದೇ ಹೆಚ್ಚು.

    ಸಾರ್ವಜನಿಕರ ಹೊಣೆಗಳು

    ಅಗತ್ಯ ಕೆಲಸಗಾರರ  ಆರೋಗ್ಯದ ಆತಂಕಗಳನ್ನು ಕಡಿಮೆ ಮಾಡುವಲ್ಲಿ ಸಾರ್ವಜನಿಕರ ಪಾತ್ರವೂ ಹಿರಿದು. ಅಗತ್ಯ ಕೆಲಸಗಾರರಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಅವರ ಕೆಲಸವನ್ನು ಸುಗಮಗೊಳಿಸಲು ಇತರರು ಸಹಕರಿಸಬೇಕಿದೆ.

    ಅಗತ್ಯ  ಕೆಲಸಗಾರರ ಮೇಲೆ ಅನಗತ್ಯ ಬೇಡಿಕೆಗಳ ಹೊಣೆಯನ್ನು ಕಡಿಮೆ ಮಾಡಲು ನಾವು ಸಹಕರಿಸಬಹುದಾಗಿದೆ.ಉದಾಹರಣೆಗೆ ಮೆಡಿಕಲ್ ಸಪ್ಪ್ಲೈ, ಸ್ಯಾನಿಟೈಸರ್ ಗಳು, ಮಾಸ್ಕ್ ಗಳ ಅಗತ್ಯವನ್ನು ಪೂರೈಸಲು ಅನುವು ಮಾಡಿಕೊಟ್ಟು ತತ್ ಕ್ಷಣಕ್ಕೆ ಬೇಡದ ವಸ್ತುಗಳನ್ನು ನಂತರ ತರಿಸಿಕೊಳ್ಳಬಹುದಿದೆ.

    ಅಗತ್ಯ ಕೆಲಸಗಾರರನ್ನು ಅನಗತ್ಯವಾಗಿ ಪೊಲೀಸರು ರಸ್ತೆಯಲ್ಲಿ ತಡೆಯುವುದು, ಶೋಷಿಸುವುದು ಇವನ್ನು ಕಡಿಮೆ ಮಾಡಲು ಆಗ್ರಹಿಸಬಹುದಿದೆ. ಸ್ವತಃ ಮುಖಗವಸುಗಳನ್ನು ಧರಿಸಿ ಅಗತ್ಯ ಕೆಲಸಗಾರರೊಡನೆ ವ್ಯವಹರಿಸಬಹುದಿದೆ.ಅವರ ವೇತನದಲ್ಲಿ ಹೆಚ್ಚಳ ಅಥವ ಅವರಿಗೆ ಒಂದಿಷ್ಟು ಹೆಚ್ಚು ಟಿಪ್ಸ್ ಕೊಡುವ ಮೂಲಕ ನಮ್ಮ ಅಭಿನಂದನೆಗಳನ್ನು ಸಲ್ಲಿಬಹುದಾಗಿದೆ. ಅವರ ಕೋವಿಡ್ ತಪಾಸಣೆ ಮತ್ತು ಚಿಕಿತ್ಸೆಯಲ್ಲಿ ರಿಯಾಯಿತಿಯನ್ನು ತೋರಿಸಬಹುದಾಗಿದೆ. ಅವರ ಮಾನಸಿಕ  ಆತಂಕಗಳನ್ನು ಅರ್ಥಮಾಡಿಕೊಂಡು ಅನಗತ್ಯ ಕೆಲಸಗಳ ಹೊರೆ ಅವರ ಮೇಲೆ ಬೀಳದಂತೆ ನೋಡಿಕೊಳ್ಳಬಹುದಾಗಿದೆ.

    ಅಗತ್ಯ ಕೆಲಸಗಾರರು ನಾವು ಸುರಕ್ಷಿತವಾಗಿರಲು, ನಮ್ಮ ಜೀವನದ ಅಗತ್ಯಗಳಿಗೆ ಧಕ್ಕೆಯಾಗದಿರಲು ತಮ್ಮ ಜೀವಗಳನ್ನು ಒತ್ತೆಯಿಟ್ಟು ಕೆಲಸಮಾಡುತ್ತಿದ್ದಾರೆ. ವೈರಸ್ಸಿನ ದಾಳಿಯಿಂದ ನಮ್ಮನ್ನು ರಕ್ಷಿಸುತ್ತಿದ್ದಾರೆ.ಅವರನ್ನು ಬಲಿಪಶುಗಳಂತೆ ಬಳಸಿಕೊಳ್ಳದಿರಲು ಸರ್ಕಾರ, ಉದ್ಯೋಗದಾತರು, ಪೊಲೀಸರು ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಜನಿಕರು ಪ್ರಯತ್ನಿಸಬೇಕಿದೆ.

    Photo by Anna Shvets from Pexels

    error: Content is protected !!