ವಿರಾಮದ ಓದಿಗೆ ಉತ್ತಮ ಸಣ್ಣ ಕಥೆಗಳನ್ನು ಪ್ರಕಟಿಸಿ ಎಂಬ ನಮ್ಮ ಓದುಗರ ಒತ್ತಾಸೆಗೆ ಒಪ್ಪಿ ಕಥಾ ಲೋಕ ಎಂಬ ಹೊಸ ವಿಭಾಗ ಆರಂಭಿಸುತ್ತಿದ್ದೇವೆ. ಮುಂಬೈ ಕನ್ನಡತಿ ಅಪರ್ಣಾ ರಾವ್ ಬರೆದ ಅತಿವೃಷ್ಟಿ ಈ ಅಂಕಣದ ಮೊದಲ ಕಥೆ. ಈ ಮಳೆಗಾಲದ ಬೆಚ್ಚನೆಯ ಓದಿಗೆ 2005ರ ಮುಂಬೈ ಮಹಾಮಳೆಯ ಕಥೆ . ಆನ್ ಲೈನ್ ಪತ್ರಿಕೆಗಳಲ್ಲಿ ಇದೇ ಪ್ರಥಮ ಬಾರಿಗೆ animated illustration ಬಳಸಿದ್ದೇವೆ. ಇದನ್ನು ರಚಿಸಿದವರು ನಾಡಿನ ಪ್ರತಿಭಾವಂತ ಕಲಾವಿದ ಕಿರಣ್ ಮಾಡಾಳು. ಇನ್ನು ಓದುವ ಸಂತಸ ನಿಮ್ಮದು.
2005 ರ ಜುಲೈ 26 !
ನಿಂತಿದೆ. ಅಲ್ಲಾ.. ಅಸಲಿಗೆ ಅಸಹಾಯಕವಾಗಿ ಮಲಗಿದೆ. ಹೂಂ. ನನ್ನನ್ನು ಯಾರೂ ಕ್ಷಣ ಮಾತ್ರವೂ ನಿಲ್ಲಿಸುವವರಿಲ್ಲ ಎಂದು ಬೀಗುತ್ತಿದ್ದ ಮುಂಬೈ ಯಾವುದೋ ಧೈತ್ಯ ಶಕ್ತಿಗೆ ಡಿಕ್ಕಿ ಹೊಡೆದಂತೆ, ತನ್ನ ಅವಯವಗಳನ್ನೆಲ್ಲಾ ಮುರಿದುಕೊಂಡಂತೆ ಬಿದ್ದಿದೆ. ಸಮುದ್ರ ಯಾವುದೋ ನೆಲ ಯಾವುದೋ ಕಾಣದಂತೆ ಮುಂಬೈಯ ಏಳು ದ್ವೀಪಗಳೂ ಜಲಾವೃತವಾಗಿವೆ. ಕಳೆದ ಎರಡು ದಿನದಿಂದ ಸುರಿದ ಮಳೆಗೆ ಜನಜೀವನವೆಲ್ಲಾ ಇರುವೆಗಳಂತೆ ಹಾದಿ ತಪ್ಪಿ ಚಿಲ್ಲಾಪಿಲ್ಲಿಯಾಗಿ ಓಡುತ್ತಿದ್ದಾರೆ. ದಿನಃ ಪ್ರತಿ ಬದುಕು ಕಟ್ಟಿಕೊಳ್ಳಲು ಎದ್ದು ಶಿಸ್ತಿನಲ್ಲಿ ಓಡುತ್ತಿದ್ದರೋ ಅದನ್ನೆಲ್ಲಾ ಬಿಟ್ಟಲ್ಲೇ ಬಿಟ್ಟು ಜೀವ ಉಳಿಸಿಕೊಳ್ಳಲು ಎತ್ತರದ ಸ್ಥಳ ಹುಡುಕಿ ಓಡುತ್ತಿದ್ದಾರೆ. ಎಲ್ಲಿ ನೋಡಿದರೂ ನೀರು ನೀರು.
ಹಾಗೆ ನೋಡಿದರೆ ಮುಂಬೈ ಜನರಿಗೆ ಮಳೆಗಾಲದಲ್ಲಿ ಎಲ್ಲಾ ಕಡೆ
ನೀರು ತುಂಬಿಕೊಳ್ಳುವುದು ಹೊಸದೇನಲ್ಲ. ತಗ್ಗಿನ ಚಾಳ್, ಜೋಪಡಿಗಳಲ್ಲಿ ಜನ ತಮ್ಮ ಕಾಲಿನ ಮಂಡಿಯ ತನಕ ನೀರಲ್ಲಿ ಮುಳುಗಿಸಿಕೊಂಡೇ ಮನೆ ಕೆಲಸ ಮಾಡಿಕೊಳ್ಳುತ್ತಾರೆ. ಎಲ್ಲವನ್ನೂ ಮಂಚ ಟೇಬಲ್ ಮೇಲಿರಿಸಿಕೊಂಡು ಸಾಮಾನ್ಯವೆನ್ನುವಂತೆ ದಿನಚರಿ ನಡೆಸುವವರಿದ್ದಾರೆ. ಮಲಗಲೆಂದೇ ಗುಡಿಸಲುಗಳಲ್ಲೂ ಊಪರ್ ಮಾಲಾ ಕಟ್ಟಿಕೊಂಡಿರುತ್ತಾರೆ.
ಆದರೆ ..ಇವತ್ತಿನ ನೀರಿನ ರಭಸ ಸಾಮಾನ್ಯದ್ದಾಗಿರಲಿಲ್ಲ. ಅರಿವಿಗೂ ಬರುವ ಮುನ್ನವೇ ಕೂತು ಕೂತಂತೆಯೇ ಕೊಚ್ಚಿಕೊಂಡು ಹೋಗುತ್ತಿರುವಂತದ್ದು. ಆ ರಭಸಕ್ಕೆ ಕಾರು ಲಾರಿಗಳೇ ಕೊಚ್ಚಿ ಹೋಗುತ್ತಿರುವಾಗ ಮನುಷ್ಯನ ಪಾಡೇನು?
ಮುಂಬೈ ಬದುಕೆಂದರೆ ‘ಟೈಮ್ ಈಸ್ ಮನಿ’ ಎನ್ನುವ ಮಾತು ಉತ್ಪ್ರೇಕ್ಷೆ ಏನಲ್ಲ. ಇಲ್ಲಿ ತುರುಸಿಕೊಳ್ಳಲೂ ಜನರಿಗೆ ಪುರುಸೊತ್ತಿಲ್ಲ. ಲೋಕಲ್ ಟ್ರೈನ್ ಅವಘಡದಲ್ಲಿ ಸತ್ತವನ ಶವ ಸ್ಟ್ರೆಚರ್ ಅಲ್ಲಿ ಸಾಗಿಸುತ್ತಿದ್ದರೂ ಪಕ್ಕದಲ್ಲೇ ಅದನ್ನು ಕಂಡರೂ ‘ಅಯ್ಯೋ ಪಾಪ ‘ ಅನ್ನಲೂ ಪುರುಸೊತ್ತಿಲ್ಲದವರಂತೆ ಜನ ತಮ್ಮ ತಮ್ಮ ಸಮಯದ ಟ್ರೈನ್ ಹಿಡಿಯಲು ಓಡುವವರು. ಯಾವ ಗಂಭೀರ ವಿಷಯವೂ ಮುಂಬೈಯನ್ನು ನಿಲ್ಲಿಸುವುದಿಲ್ಲ ಎನ್ನುವ ಒಣ ಹೆಮ್ಮೆ ಸುಮ್ಮನೆ ಬಂದಿದ್ದೆ?
ಇವತ್ತೂ ಸಹ ಹವಾಮಾನ ಇಲಾಖೆ ‘ಹೈ ಟೈಡ್” ಬಗ್ಗೆ ಎಲ್ಲಾ ಮಾಧ್ಯಮಗಳಲ್ಲೂ ಎಚ್ಚರಿಕೆ ಕೊಟ್ಟೇ ಇತ್ತು. ಜನರಿಗೆ ಇದೆಲ್ಲಾ ಯಾವ ಲೆಕ್ಕ. ಮೀನುಗಾರರಿಗೆ ಮಾತ್ರ ಆ ಎಚ್ಚರಿಕೆ ಎಂದುಕೊಂಡು ಎಂದಿನಂತೆ ಅಂದೂ ಎರಡು ದಿನದಿಂದ ಸುರಿಯುತ್ತಿದ್ದ ಮಳೆಗೆ ಹೆದರದೆ ತಮ್ಮ ತಮ್ಮ ಕೆಲಸಕ್ಕೆ ಓಡಿದ್ದರು.
ಇವರೆಲ್ಲರ ಅಸಡ್ಡೆಗೆ ಸಿಟ್ಟುಗೊಂಡಂತೆ ಸಮುದ್ರ ಮಧ್ಯಾಹ್ನ ಸುಮಾರು ಒಂದೂವರೆ ಹೊತ್ತಿಗೆ ಎತ್ತೆತ್ತರದ ಅಲೆಗಳನ್ನು ಎಬ್ಬಿಸಿ ರುದ್ರ ತಾಂಡವ ಆಡತೊಡಗಿ ಎಗ್ಗಿಲ್ಲದಂತೆ ತನ್ನ ಮಿತಿ ದಾಟಿ ರಸ್ತೆ ರಸ್ತೆಗೂ ಮನೆ ಮನೆಗೂ ನೀರು ನುಗ್ಗತೊಡಗಿತು. ಎಂದಿನಂತೆ ಮಾಮೂಲಿಯಾಗಿ ಮನೆ ಕೆಲಸ ಮಾಡಿಕೊಂಡಿದ್ದವರಿಗೆ ಮುನ್ಸೂಚನೆಯೂ ಕೊಡದಂತೆ ನೀರು ನುಗ್ಗಿತ್ತು. ಮನೆಯೇ ಸಮುದ್ರ ಸೇರಿತೋ .ಸಮುದ್ರವೇ ಮನೆಗೆ ಬಂದಿತೋ ತಿಳಿಯದ ಅಯೋಮಯ. ಮನೆಯಲ್ಲಿದ್ದವರಿಗೆ ತಾನೀಗ ಏನೇನು ಎತ್ತಿಟ್ಟುಕೊಂಡು, ಯಾವ ಸಾಮಾನುಗಳನ್ನು ಕಾಪಾಡಿಕೊಳ್ಳಲಿ ಎಂಬ ವಿವೇಚನೆಗೂ ಸಮಯ ಕೊಡಲಿಲ್ಲ.
ಯಾರೋ ಕೆಲ ಪುಣ್ಯಾತ್ಮರು ಅದೃಷ್ಟವಶಾತ್ ಮನೆ ಡಾಕ್ಯುಮೆಂಟ್ಸ್ ತೀರಾ ಆವಶ್ಯಕ ಕಾಗದ ಪತ್ರ, ಒಡವೆ ದುಡ್ಡು ಉಳಿಸಿಕೊಂಡವರು ಕೊಂಚ ನೆಮ್ಮದಿಯಿಂದ ಜಾಗ ಸಿಕ್ಕ ಕಡೆ ಸೇರಿಕೊಂಡರು. ಏನೂ ಸಿಗದವರು, ಕೈಲಾಗದವರನ್ನು ಹಾಸಿಗೆ ಹಿಡಿದ ವೃದ್ದರನ್ನು ಬದುಕಿಸಿಕೊಳ್ಳಲು ಸಿಕ್ಕ ಸಿಕ್ಕವರನ್ನು ಸಹಾಯಕ್ಕಾಗಿ ಗೋಗರಿಯುತ್ತಿದ್ದರು. ಇದರಲ್ಲೆಲ್ಲಾ ಅದೃಷ್ಟವಂತರೆಂದರೆ ಬಹು ಮಹಡಿ ಕಟ್ಟಡಗಳಲ್ಲಿ ಹೊರಗೆಲ್ಲೂ ಹೋಗದೆ ಉಳಿದವರು. ಅವರ ಮನೆಗಳಲ್ಲಿ ಅತ್ಯವಶ್ಯಕ ಸಾಮಾನುಗಳು ಏನಿದ್ದವೋ ಅದಷ್ಟೇ ನಿಜವಾದ ಆಸ್ತಿ ಅವರಿಗೂ ಅಂದು. ಅಲ್ಲೂ ವಿದ್ಯುತ್ ಇಲ್ಲ. ಅದಿಲ್ಲದೆ ನೀರೂ ಕೂಡ ಇಲ್ಲ.
ಈ ಪ್ರವಾಹಕ್ಕೆ ಬಡವ ಬಲ್ಲಿದ ಎಂಬ ಭೇದವಿಲ್ಲವಷ್ಟೇ. ಸಿಲೆಬ್ರಿಟಿಗಳ ಏರಿಯಾ ಅನ್ನಿಸಿಕೊಂಡ ಜುಹು ಬಾಂದ್ರಾ ಪರಿಸರಗಳು ನೀರಲ್ಲೇ ಮುಳುಗೇಳುತ್ತಿದೆ. ಅಲ್ಲಿಯ ಜನಗಳಿಗೆ ಮೊದಲಿನಿಂದಲೂ ಅಂಧೇರಿಯಾಚೆಯ ನಗರವಾಸಿಗಳನ್ನು ಕಂಡರೆ ಒಂದು ರೀತಿ ಅಸಡ್ಡೆ. ‘ ಬಾಪ್ ರೇ. ಉದರ್ ಕೌನ್ ಜಾಯೇಗಾ.. ಅಂಧೇರಿ ಸೇ ಆಗೇ ತೋ ತಬೇಲೇ ಹೀ ಹೈ.. ಆ ಬದಿ ಎಲ್ಲಾ ಹಳ್ಳಿಗರ ಪ್ರದೇಶ’ ಎಂದು ಆಡಿಕೊಳ್ಳುವುದು ಮಾಮೂಲಿನ ವಿಷಯ.
2005 ರ ಜುಲೈ 26 ನೇ ತಾರೀಖು ಅಂಥವರ ಆ ಗಮಂಡ್ ಅನ್ನೂ ಮುಳುಗಿಸಿತ್ತು. ಇದ್ದದ್ದರಲ್ಲಿ ಗೋರೇಗಾಂವ್ ನ ಒಂದಷ್ಟು ಜಾಗಗಳಲ್ಲಿ ನೀರು ತೀರಾ ಎಲ್ಲವನ್ನೂ ಮುಳುಗಿಸಿರಲಿಲ್ಲ. ತಗ್ಗಿನ ಪ್ರದೇಶದ ಚಾಲಿ ಮನೆಗಳು ಮುಳುಗಿದ್ದು ಬಿಟ್ಟರೆ, ಎಸ್ ವಿ ರೋಡ್ ಬದಿಯ ಎತ್ತರದ ಜಾಗಗಳು ಇದ್ದದ್ದರಲ್ಲಿ ಸುರಕ್ಷಿತವಾಗಿತ್ತು. ಆದರೂ ಅಲ್ಲಿಯೂ ಮಂಡಿಯ ವರೆಗಿನ ನೀರಿನಲ್ಲಿ ಜನ ಪರದಾಡಿ ಸಾಧ್ಯವಾದಷ್ಟು ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದವರಿಗೆ ಸಹಾಯ ಹಸ್ತ ಚಾಚುತ್ತಿದ್ದರು. ಅದುವರೆಗೂ ಕಂಜೂಸಿತನದಲ್ಲೇ ವ್ಯವಹರಿಸುತ್ತಿದ್ದ ವ್ಯಾಪಾರಿಗಳು ಎನ್ನಿಸಿಕೊಂಡವರೂ ‘ನಾಳೆ’ ಎಂಬುದೇ ಇಲ್ಲವೇನೋ ಎಂಬ ಜ್ಞಾನೋದಯ ಆದಂತೆ ದಯಾವಾನ್ ಗಳಾಗಿ ನೀರಿನ ಬಾಟಲಿಗಳು, ಪ್ಯಾಕ್ ಮಾಡಿದ ಆಹಾರಗಳನ್ನು, ವಡಾ ಪಾವ್ ಸಮೋಸಾಗಳನ್ನು ಆ ಮಳೆಯಲ್ಲಿಯೂ ಜನರನ್ನು ಕರೆ ಕರೆದು ಹಂಚುತ್ತಿದ್ದರು. ಇನ್ನು ಬಿಲ್ಡಿಂಗ್ ಗಳಲ್ಲಿ ಇದ್ದವರೂ ಸಹ ಆಗೊಮ್ಮೆ ಈಗೊಮ್ಮೆ ನೋಡಿದ್ದ ಒಮ್ಮೆಯೂ ಮುಖತಃ ಮಾತನಾಡದವರಿಗೂ ಸಹ ಮನೆಯಲ್ಲಿ ಕರೆದು ಆಶ್ರಯ ನೀಡುವ ದೃಶ್ಯವೂ ಕಾಣುತ್ತಿತ್ತು. ದೇವಸ್ಥಾನ ಶಾಲೆ ಕಾಲೇಜುಗಳು ಮನೆ ಮಠ ಕಳೆದುಕೊಂಡವರಿಗೆ ಆಶ್ರಯ ತಾಣಗಳಾದವು.
ಎಲ್ಲಕ್ಕಿಂತ ಘೋರ ಎಂದರೆ ‘ಆರೇ’ ಡೈರಿಗೆ ಹಾಲು ಒದಗಿಸುವ ಬೃಹತ್ ತಬೆಲಾ ಸಂಕುಲಗಳಲ್ಲಿ ಕಟ್ಟಿ ಹಾಕಿದ್ದ ಮೂಕ ಎಮ್ಮೆ ಹಸುಗಳು ಈಜಿ ತಪ್ಪಿಸಿಕೊಳ್ಳಲೂ ದಾರಿ ಕಾಣದೆ ಇದ್ದಲ್ಲಿಯೇ ನೀರಿನಲ್ಲಿ ಮುಳುಗಿ ಹೋರಾಡಿ ಮರಣವಪ್ಪಿದ್ದವು.
ಇದ್ಯಾವುದರ ಅರಿವೇ ಇಲ್ಲದಂತೆ ಹೌಸಿಂಗ್ ಸೊಸೈಟಿಯ ಕಟ್ಟಡಗಳಲ್ಲಿ ಮನೆಯಲ್ಲೇ ಉಳಿದಿದ್ದ ಜನ ಸುತ್ತಲಿನ ಜನರ ದಾರುಣತೆಗೆ ಕರಗಿ ತಮ್ಮಿಂದಾದ ಸಹಾಯ ಮಾಡುತ್ತಿದ್ದರು. ಯಾವ ಜಾತಿ ಯಾವ ಅಂತಸ್ತೂ ಅವತ್ತು ಯಾರಿಗೂ ನೆನಪಾಗುತ್ತಿಲ್ಲ. ಹೀಗೇ ಮುಂದುವರೆದು ನಾವೂ ಮುಳುಗುವ ಪರಿಸ್ಥಿತಿ ಎದುರಾದರೆ, ತಮ್ಮಲ್ಲಿರುವ ವಸ್ತುಗಳೂ ಉಳಿಯುವುದು ಅನುಮಾನ ಎಂದು ಭಾವಿಸಿದ ಜನ ಮಾಡಿದ ಅಡಿಗೆಯನ್ನೋ ಮತ್ತೊಂದನ್ನೋ ಧಾರಾಳವಾಗಿ ಹಂಚಿಕೊಳ್ಳುತ್ತಿದ್ದರು.
ಹೋಟೆಲ್ ಗಳಿಂದ ತಮ್ಮ ಅಂಗಡಿಗಳಿಂದ ತಿನಿಸು ಸಾಮಾನು ಎತ್ತಿ ಎತ್ತಿ ರಸ್ತೆಯ ಜನರಿಗೆ ಕೊಡಲು ಆರಂಭಿಸಿದ್ದರು. ರಸ್ತೆಯ ಚಾಯ್ ವಾಲಾ ಕೂಡ ವ್ಯಾಪಾರ ಮರೆತು ಸಿಕ್ಕಿದವರಿಗೆಲ್ಲಾ ಚಾಯ್ ಹಂಚುತ್ತಿದ್ದ.
ಒಟ್ಟಿನಲ್ಲಿ ಗಾಂಧೀಜಿ ಕನಸಿನ ರಾಮರಾಜ್ಯ ಆ ದಿನದ ಮಟ್ಟಿಗಾದರೂ ಹುಟ್ಟಿಕೊಂಡಿತ್ತು.
* * * * *
ಪಗರಾವ್ ಬಿಲ್ಡಿಂಗ್ ನ ಕಾಳೆ ಫ್ಯಾಮಿಲಿಯ ಏಕ ಮಾತ್ರ ಪುತ್ರಿ ತೃಪ್ತಿ ಅಂದು ಕಾಲೇಜಿಗೆ ಹೋದವಳು ಸಂಜೆ ಆರಾದರೂ ಮರಳಿರಲಿಲ್ಲ. ಹನ್ನೆರಡೂವರೆಗೆಲ್ಲಾ ಕಾಲೇಜು ಮುಗಿದು ಹೆಚ್ಚೆಂದರೆ ಎರಡರ ಒಳಗೆ ದಿನಾ ಮನೆ ತಲುಪುವವಳು ಅವಳು.. ಕಾಳೆ ದಂಪತಿಗಳಿಗೆ ಮದುವೆ ಆದ ಹದಿನೇಳು ವರ್ಷದ ನಂತರ ಹುಟ್ಟಿದ ಮಗು ಅವಳು. ಟೆಸ್ಟ್ ಟ್ಯೂಬ್ ಬೇಬಿ ಅಂತೆ ಕಂತೆಗಳು ಬೇರೆ.. ಅಂಥಾ ಅವಳ ಅಮ್ಮ ಸುಮನ್ ಅಂದು ನಿಂತಲ್ಲಿ ನಿಲಲಾರದವರಾಗಿದ್ದರು. ಮಗಳು ಮನೆಗೆ ಬಂದಿಲ್ಲ. ಬಹಳ ಕಾಳಜಿಯಿಂದ ಬೆಳೆಸಿದ ಕಾರಣಕ್ಕೋ ಏನೋ ವ್ಯವಹಾರ ಜ್ಞಾನ ಸರಿಯಾಗಿ ಬೆಳೆಯದ ಹುಡುಗಿ. ಮನೆ ಕಾಲೇಜು ಬಿಟ್ಟರೆ ಅಪ್ಪ ಅಮ್ಮನೇ ಅವಳ ಪ್ರಪಂಚ. ಅದೇನೋ.. ಅಕ್ಕ ಪಕ್ಕದವರ ಜೊತೆಯೂ ಬೆರೆಯುವುದು ತೀರಾ ಕಡಿಮೆ. ಅಂತವಳು ಈ ಮಳೆಯಲ್ಲಿ ಎಲ್ಲಿ ಸಿಕ್ಕಿಕೊಂಡಳೋ? ಎಂಬ ಚಿಂತೆ ಅವರಿಗೆ. ಎಲ್ಲೋ ಒಂದು ಕಡೆ ಸುರಕ್ಷಿತ ಅನ್ನುವ ಸುದ್ದಿಯಾದರೂ ಸಿಕ್ಕರೆ ನೆಮ್ಮದಿ. ಹೇಗೆ ತಿಳಿದುಕೊಳ್ಳುವುದು? ಮಗಳಿಗೆ ಮೊಬೈಲ್ ಕೂಡ ಕೊಡಿಸಿಲ್ಲ. ಅನುಕೂಲವಿಲ್ಲವೆಂದೇನಿಲ್ಲ. ತಂದೆ ಸಿಎ. ಪ್ರಕಾಶ ಕಾಳೆಗೆ ಅವೆಲ್ಲಾ ದುಂದು ವೆಚ್ಚ ಅನ್ನುವ ಭಾವನೆ.
ಪ್ರಕಾಶ್ ಕಾಳೆ ತಮ್ಮ ಮನೆಯ ಹತ್ತಿರದಲ್ಲೇ ಆಫೀಸು ಇಟ್ಟುಕೊಂಡವರು. ಮಧ್ಯ ವಯಸ್ಸು ದಾಟಿರುವ ಹಂತದಲ್ಲಿ ದೂರ ಪಾರ ಬೇಡ ಎಂದು ಫೋರ್ಟಿನಲ್ಲಿದ್ದ ಆಫೀಸ್ ಮುಚ್ಚಿ ಮನೆಗೆ ಹತ್ತಿರವೇ ಮಾಡಿಕೊಂಡಿದ್ದರು. ಅವರ ಶಿಷ್ಯ ವೃಂದವೂ ಸಾಕಷ್ಟಿತ್ತು. ಅಂದೂ ಕೂಡ ಎಂದಿನಂತೆ ಮನೆಗೆ ಬಂದವರಿಗೆ ಮಗಳು ಮನೆಗೆ ಬಂದಿಲ್ಲ ಎನ್ನುವ ವಿಷಯ ತಿಳಿಯುತ್ತಿದ್ದಂತೆ ತಮ್ಮ ಶಿಷ್ಯರನ್ನು ಸ್ಟೇಷನ್ನಿಗೆ ಅಟ್ಟಿದ್ದರು. ಅಲ್ಲಿ ಹೋದವರಿಗೆ ಟ್ರೇನ್ ಓಡಾಟ ಮಳೆಯ ಆರ್ಭಟಕ್ಕೆ ಟಪ್ಪಾಗಿದ್ದು ತಿಳಿದು ವಿಷಯ ಮುಟ್ಟಿಸಿದರು. ಇವರ ಚಡಪಡಿಕೆ ಹೆಚ್ಚಾಯಿತು. ಹಾಳಾದ್ದು ಟಿವಿ ಕೂಡ ಇಲ್ಲ ಏನಾಗುತ್ತಿದೆ ಅನ್ನುವ ನ್ಯೂಸ್ ನೋಡಲಿಕ್ಕಾದರೂ. ಕಾಳೆಗೆ ಏನು ಮಾಡಬೇಕು ತೋಚದೆ ಇದ್ದಕ್ಕಿದ್ದಂತೆ ಪ್ಯಾಂಟ್ ತೊಡೆಯವರೆಗೂ ಮಡಚಿ, ಕೊಡೆ ಹಿಡಿದು ಬಿಲ್ಡಿಂಗ್ ಇಂದ ಇಳಿದು ಮುಂದೆ ಹೋಗಿ ರಸ್ತೆ ಕೊನೆಗೆ ನಿಂತು ಆತಂಕದಿಂದ ಸ್ಟೇಷನ್ ರಸ್ತೆಯ ಕಡೆಗೆ ನೋಡುತ್ತಿದ್ದರು.
ಇತ್ತ ತಾಯಿ ಸುಮನ್ ಗ್ಯಾಲರಿಯಲ್ಲಿ ನಿಂತು ದೂರದಲ್ಲಿ ಕಾಣುವ ಗಂಡನತ್ತಲೇ ದೃಷ್ಟಿ ನೆಟ್ಟಿದ್ದರು. ಮಧ್ಯೆ ಮಧ್ಯೆ ಮುಂಬಾಗಿಲಿಗೆ ಬಂದು ಹೊರಗಿನಿಂದ ಬರುತ್ತಿರುವ ಫ್ಲಾಟಿನ ಇತರರನ್ನು ಲೋಕಲ್ ಟ್ರೇನ್ ಬಗ್ಗೆ ವಿಚಾರಿಸುವರು. ಹಾಗೆ ನೋಡಿದರೆ ಏರಿಯಾ ಬಿಟ್ಟು ಹೊರ ಹೋದವರು ಯಾರೂ ವಾಪಸ್ ಬಂದಿರಲಿಲ್ಲ. ಇಲ್ಲಿ ಓಡಾಡುತ್ತಿದ್ದವರೆಲ್ಲಾ ಅಲ್ಲಲ್ಲಿಯೇ ಸುತ್ತ ಮುತ್ತಲೇ ಇದ್ದವರು. ಒಟ್ಟಿನಲ್ಲಿ ಜನಗಳ ನಡುವೆ ಏನೇನೋ ಊಹಾಪೋಹಗಳು ಒಂದಷ್ಟು. ಬರೀ ಮುಳುಗಿದ ಮನೆಗಳವರ ಬಗ್ಗೆಯೇ ಮಾತು. ಆ ನಡುವೆ ಆಗೊಮ್ಮೆ ಈಗೊಮ್ಮೆ ಫೈರ್ ಬ್ರಿಗೆಡ್ ಆಂಬುಲೆನ್ಸ್ ಸದ್ದು, ತೃಪ್ತಿಯ ಅಮ್ಮನನ್ನು ಮತ್ತಷ್ಟು ಅಧೀರಗೊಳಿಸುತ್ತಿತ್ತು. ಎಲ್ಲಾ ಕಡೆ ಕತ್ತಲು ಬೇರೆ ಆವರಿಸಿದೆ. ಬೀದೀ ದೀಪಗಳೂ ಇಲ್ಲ. ಮುನ್ನೂರು ಅರವತ್ತು ದಿನವೂ ಜಗಜಗಿಸುವ ಮುಂಬೈ ಜೊತೆಗೆ ಅಂದು ಕಸ್ತಿ ಕಟ್ಟಿ ಕತ್ತಲು ಗೆದ್ದಿದೆ.ಇಷ್ಟರವರೆಗೂ ಕೆಲಸವೇ ಇಲ್ಲದೆ ಬಿದ್ದಿದ್ದ ಕ್ಯಾಂಡಲ್ಗಳಿಗೆ ಅವತ್ತು ಎಲ್ಲಿಲ್ಲದ ಡಿಮಾಂಡ್. ಒಂದೊಂದು ಫ್ಲೋರ್ ನವರೂ ಕ್ಯಾಂಡಲ್ ಹಚ್ಚಿ ಮನೆಗೆ ಬರುವವರ ದಾರಿ ಕಾಯುತ್ತಿದ್ದರು.
ಸದಾ ಮನೆಯೊಳಗೇ ಅವಿತುಕೊಳ್ಳುವ , ಅಮವಾಸ್ಯೆಗೋ ಪೌರ್ಣಮಿಗೋ ಒಮ್ಮೆ ಮಾತ್ರ ತಮ್ಮದೇ ಬಿಲ್ಡಿಂಗ್ ಜನರನ್ನು ಕಂಡು ‘ಕಶಿ ಹೋ’ ‘ಕೈಸೆ ಹೋ’ ಅನ್ನುತ್ತಲೇ ಕೈ ಬೀಸಿ ಸಾಗಿ ಹೋಗುವ ಜನ ಇವತ್ತು ಮಾತ್ರ ಪುರುಸೊತ್ತೇ ಪುರುಸೊತ್ತಾಗಿರುವವರಂತೆ ಸಿಕ್ಕವರ ಜೊತೆ ಮಾತಿಗಿಳಿದಿದ್ದರು. ಯಾವ ರಸ್ತೆಯಲ್ಲಿ ಎಷ್ಟು ಅಡಿ ನೀರು ತುಂಬಿದೆ ಎಂಬುವುದರ ಬಗ್ಗೆ, ರಸ್ತೆಯಲ್ಲಿ ತೇಲಿ ಬರುತ್ತಿರುವ ಗ್ಯಾಸ್ ಸಿಲಿಂಡರ್, ಪ್ರಾಣಿಯ ಶವ, ಮುಳುಗಿದ ವಾಹನಗಳ ಬಗ್ಗೆ, ಸತ್ತು ಹೋದ ಜನರ ಬಗ್ಗೆ. ದುಡ್ಡು ಕಳೆದುಕೊಂಡವರ ಬಗ್ಗೆ ಎಲ್ಲೆಲ್ಲೂ ಚರ್ಚೆ. ಶ್ರೀಮಂತಿಕೆಯ ಭಾರಿ ಧಿಮಾಕಿನಿಂದ ಯಾರ ಅಗತ್ಯವೂ ಇಲ್ಲವೆಂಬಂತೆ ಇದ್ದ ಜನರೂ ಅಂದು ಒಂದು ಜೊತೆ ಬಟ್ಟೆಯೂ ಇಲ್ಲದೆ ಬೀದಿ ಪಾಲಾದ ಬಗ್ಗೆ ರಂಜನೀಯವಾಗಿ ಕೈ ಬಾಯಿ ತಿರುಗಿಸುತ್ತಾ ಮಾತಾಡಿಕೊಳ್ಳುತ್ತಿದ್ದರು.
ಬಾಕಿ ಸಮಯದಲ್ಲಾಗಿದ್ದರೆ ತೃಪ್ತಿಯ ಅಮ್ಮನಿಗೆ ಬಹಳಾ ಆಸಕ್ತಿ ಇಂಥಾ ಮಾತುಗಳಲ್ಲಿ. ಅವರ ಮಾತಿನ ಭರಾಟೆ ಎಷ್ಟೆಂದರೆ ಬೇರೆಯವರಿಗೆ ಆಡಲು ಅವಕಾಶವೇ ಕೊಡುತ್ತಿರಲಿಲ್ಲ. ಆಕೆ ಗವರ್ನಮೆಂಟ್ ಶಾಲೆಯ ಪ್ರಾಧ್ಯಾಪಕಿ ಆಗಿದ್ದವರು ತೃಪ್ತಿ ಹುಟ್ಟಿದ ಮೇಲೆ ಕೆಲಸ ಬಿಟ್ಟಿದ್ದರು. ಸದಾ ಮಾತಾಡುವ ವೃತ್ತಿಯಿಂದ ಬಂದವರಾದ್ದರಿಂದ ಮನೆಯಲ್ಲಿ ಸುಮ್ಮನೆ ಕೂರುವುದು ಅವರಿಗೇ ಅಸಾಧ್ಯವಾಗಿತ್ತು. ಮಾತಿಗೆ ಯಾರಾದರು ಸಿಕ್ಕರೆಂದರೆ ಮುಗಿಯಿತು. ಯಾವುದೇ ಕಾರಣಕ್ಕೊ ಬಿಡುತ್ತಿರಲಿಲ್ಲ. ಸಾಮಾನ್ಯವಾಗಿ ಬೇರೆಯವರ ಜೊತೆ ಮಾತನಾಡುವ ವ್ಯವಧಾನ ಇಲ್ಲದವರು ಮುಂಬೈ ಫ್ಲಾಟ್ ಸಂಸ್ಕೃತಿಯ ಜನ. ಇವರನ್ನು ಕಂಡ ಕೂಡಲೇ ತಪ್ಪಿಸಿಕೊಂಡು ಹೋಗುತ್ತಿದ್ದರು.
ಅದರಲ್ಲೂ ಎದುರು ಮನೆಯ ಶೇಟೆ ಹೆಂಡತಿಗೆ ಇವರನ್ನು ಕಂಡರೆ ಅಷ್ಟಕ್ಕಷ್ಟೇ. ಇವರ ಜೊತೆ ಮಾತಿಗೆ ನಿಂತರೆ ಮುಗಿಯಿತು. ಮನೆಯೇ ಹತ್ತಿ ಉರಿದರೂ ಬಿಡುವ ಹೆಂಗಸಲ್ಲ. ಅತೀ ಮಾತು ಎಂದು ಮೂಗು ಮುರಿದು ಬಾಗಿಲು ಧಡಾರ್ ಅಂತ ಹಾಕುವವರು. ಅಂಥವರು ಇವತ್ತಿನ ಇವರ ತಳಮಳ ಕಂಡು ಕನಿಕರಿಸಿ, ಗಳಿಗೆಗೊಮ್ಮೆ ‘ ತೃಪ್ತಿ ಆಲಿ ಕಾಯ್? ‘ ಅಂತ ಮತ್ತೆ ಮತ್ತೆ ವಿಚಾರಿಸುತ್ತಿದ್ದರು. ‘ಅಜೂನ್ ಆಲಿ ನಾಯ್” ಎಂದು ಇವರು ಸಪ್ಪಗೆ ಉತ್ತರಿಸುತ್ತಿದ್ದರು. ಕಣ್ಣೆಲ್ಲಾ ಬೀದಿಯ ಕಡೆಗೇ. ರಾತ್ರಿ ಒಂಬತ್ತು ಹೊಡೆಯುತ್ತಿದ್ದಂತೆ ಆಕೆಯ ಕಣ್ಣಲ್ಲಿ ಕಂಡೂ ಕಾಣದ ಹಾಗೆ ನೀರು. ಧೃತಿ ಗೆಟ್ಟಿಲ್ಲ ಎಂದು ತೋರಿಸಿಕೊಳ್ಳುವ ವರಸೆ ಮಾತ್ರ ಹೆಡ್ ಮಿಸ್ ನಂತೆ. ಆಕೆ ಮಗಳು ತೃಪ್ತಿಯನ್ನು ಒಬ್ಬಳೇ ಎಲ್ಲೂ ಬಿಟ್ಟವರೇ ಅಲ್ಲ. ಹೆಚ್ಚು ನೆಂಟರೊಂದಿಗೂ ಒಡನಾಟ ಇಲ್ಲದ ಅವರ ಮನೆಗೆ ಬಂದು ಹೋಗುವರೂ ಕಡಿಮೆ. ಬಾರಹ್ವಿ ವರೆಗೂ ಕಾಳೆಯವರು ಜೊತೆಯಲ್ಲಿಯೇ ಹೋಗಿ ಮಗಳನ್ನು ಬಿಟ್ಟು ಬರುತ್ತಿದ್ದರು. ಅವಳು ಒಳ್ಳೆಯ ಅಂಕ ಪಡೆದು ಎಂಜಿನಿಯರಿಂಗ್ ಸೇರಿದ ಮೇಲೆ ಸಾಂತಾಕ್ರೂಜ್ ತನಕ ಹೋಗಿ ಬಿಡೋದು ಕಷ್ಟ ಆಗಿ ಕಡೆಗೆ ಸ್ಟೇಷನ್ ತನಕ ತಲುಪಿಸಿ ಬರುತ್ತಿದ್ದರು. ಅಷ್ಟು ಕಾಳಜಿ ಮಗಳ ಮೇಲೆ. ಅವಳು ಬರುವಾಗ ಹೇಗೂ ಅಂತೂ ಸ್ಟೇಷನ್ ಇಂದ ಏಳು ನಿಮಿಷದ ದಾರಿಯನ್ನು ಒಬ್ಬಳೇ ನೆಡೆದು ಬರುತ್ತಿದ್ದಳು. ಆ ಸಮಯದಲ್ಲಿ ಸುಮನ್ ರಸ್ತೆಯ ಕಡೆ ಕಣ್ಣು ನೆಟ್ಟು ನಿಲ್ಲುತ್ತಿದ್ದರು. ಅಪರೂಪಕ್ಕೆ ಹುಟ್ಟಿದ ಮಗಳು. ಅಂತಹವಳು ಇಂದು ರಾತ್ರಿ ಒಂಬತ್ತಾದರೂ ಮನೆ ಸೇರದಿರುವುದು ತಂದೆ ತಾಯಿಗೆ ಆತಂಕ ತರದಿದ್ದೀತೆ? ಪೋಲಿಸ್ ಸ್ಟೇಷನ್ ಗೂ ಎಡತಾಕಿ ಬಂದದ್ದಾಯ್ತು. ಅವರು ಎಲ್ಲಾ ಟ್ರೈನ್ ಸ್ಥಗಿತವಾದ ಕಾರಣ ಪ್ಯಾಸಂಜರ್ ಗಳೆಲ್ಲಾ ಎಲ್ಲೆಲ್ಲಿ ಇದ್ದಾರೋ ಅಲ್ಲಲ್ಲೇ ಸುರಕ್ಷಿತ ಸ್ಥಳ ಹುಡುಕಿಕೊಂಡಿರುವುದಾಗಿಯೂ ವಿಷಯ ತಿಳಿದರೆ ತಿಳಿಸುವುದಾಗಿಯೂ ಹೇಳಿ ಕಳಿಸಿದ್ದರು.
ಅದೇ ಆತಂಕದಲ್ಲಿ ಒದ್ದಾಡುತ್ತಿರುವಂತೆಯೇ ಮನೆಯ ಲ್ಯಾಂಡ್ ಲೈನ್ ಅಲ್ಲೂ ಜೀವ ಬಂದು ಟ್ರಿನ್ ಗುಟ್ಟಿತ್ತು. ಎದ್ದು ಓಡಿದರು ಸುಮನ್. ಗದ್ದಲದ ನಡುವೆ ತೃಪ್ತಿಯ ಧ್ವನಿ. ಯಾರದ್ದೂ ಮೊಬೈಲ್ ಪಡೆದು ಮಾತಾಡುತ್ತಿರುವುದಾಗಿ ಹೇಳಿ, ತಾನು ಹಳಿಯ ಮಧ್ಯದಲ್ಲಿ ನಿಂತಿರುವ ಟ್ರೈನ್ ಅಲ್ಲೇ ಸಿಕ್ಕಿಕೊಂಡಿರುವುದಾಗಿಯೂ, ಸುತ್ತಲೂ ನೀರು ತುಂಬಿರುವ ಕಾರಣ ಕೆಳಗೆ ಇಳಿಯಲಾಗುತ್ತಿಲ್ಲ. ನೆಲ ಕಾಣುತ್ತಿಲ್ಲ.. ರಾತ್ರಿಯೆಲ್ಲಾ ಸ್ನೇಹಿತೆಯರ ಜೊತೆ ಅಲ್ಲಿಯೇ ಇರಬೇಕಾಗುತ್ತದೆಂದೂ, ಬೆಳಗಿನ ಜಾವ ನೀರು ಇಳಿದ ಮೇಲಷ್ಟೇ ಹೊರ ಬರುವ ಸಾಧ್ಯತೆ ಇದೆ ಎಂದು ಹೇಳಿ ಮುಂದಿನ ಮಾತಿಗೆ ಅವಕಾಶ ಇಲ್ಲದವಳಂತೆ ಫೋನ್ ಇಟ್ಟಿದ್ದಳು.
ಅಂತೂ ಮಗಳು ಸುರಕ್ಷಿತವಾಗಿ ಇರುವುದು ತಿಳಿದು ಇಬ್ಬರಿಗೂ ಪ್ರಾಣ ಬಂದಂತಾಯ್ತು. ಮೊದಲ ಬಾರಿ ತಾವು ಮಗಳಿಗೆ ಮೊಬೈಲ್ ಕೊಡಿಸದೇ ತಪ್ಪು ಮಾಡಿದೆವು ಅನ್ನಿಸತೊಡಗಿತು. ಇನ್ನೊಬ್ಬರ ಬಳಿ ಸಹಾಯ ಕೇಳಲೂ ಹಿಂಜರಿಯುವ ಮಗಳು ಪಾಪ ಹೇಗಿರಬಹುದು ಎಂದು ನೆನೆದೇ ದುಃಖ ಪಟ್ಟರು. ಅದಕ್ಕೆ ಕಾರಣ ತಾವೇ ಎಂಬುದು ಒಪ್ಪಿಕೊಳ್ಳಲೇ ಬೇಕಿತ್ತು. ಅಕ್ಕ ಪಕ್ಕದವರು ಎಲ್ಲಿಗಾದರೂ ಜೊತೆಗೆ ಕರೆದೊಯ್ಯಲು ಬಯಸಿದರೂ ಕಳಿಸುತ್ತಿರಲಿಲ್ಲ. ವಯಸ್ಸಾದ ಇಬ್ಬರ ನಡುವೆ ಈ ಪುಟ್ಟ ಹುಡುಗಿ ಹೋಗುವುದನ್ನು ನೋಡಿ ಜನ ಆಡಿಕೊಳ್ಳುವವರೂ ಇದ್ದರು. ಆಗೆಲ್ಲಾ ಇಂಥ ಪರಿಸ್ಥಿತಿ ಬರಬಹುದು ಎಂದು ಕನಸಿನಲ್ಲೂ ಊಹಿಸಿದವರಲ್ಲ. ಬೆಳಗಿನವರೆಗೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದರು. ಬೆಳಗಿನ ಐದೂವರೆ ಸುಮಾರಿಗೆ ಮೇಲಿನ ಮನೆಯ ವಿಕಾಸ್ ರಾನಡೆ ದಾದರ್ ನ ಕೆಲಸದ ಸ್ಥಳದಿಂದ ಹಿಂದಿರುಗಿದ್ದ. ಇಪ್ಪತ್ತೆರಡು ಘಂಟೆಗಳ ನಂತರ. ಕಾಳೆ ದಂಪತಿಗಳಿಬ್ಬರೂ ಬಾಗಿಲಲ್ಲೇ ಅವನನ್ನು ನಿಲ್ಲಿಸಿ ಹೊರಗಿನ ಪರಿಸ್ಥಿತಿ ಬಗ್ಗೆ ವಿಚಾರಿಸಿದರು. ಅವನಂತೂ ತನ್ನ ಸಾಹಸ ಗಾಥೆಯನ್ನು ವರ್ಣಿಸಿ ಹೇಳಿದ. ತಾನು ಕುತ್ತಿಗೆಯ ತನಕದ ನೀರಿನಲ್ಲಿ ಜನಗಳ ಗುಂಪಿನೊಂದಿಗೆ ರೈಲ್ವೆ ಹಳಿಯ ಮೇಲೆಯೇ ರಾತ್ರಿಯೆಲ್ಲಾ ನಡೆದು ಬಂದು ಈಗ ತಲುಪುತ್ತಿರುವುದಾಗಿಯೂ, ಆ ದಾರಿಯಲ್ಲಿ ಸತ್ತ ಪ್ರಾಣಿ,ವಾಹನಗಳು, ಕಸ ಎಲ್ಲವೂ ತೇಲಿ ಹೋಗುತ್ತಿರುವುದಾಗಿಯೂ, ವಿಧಿ ಇಲ್ಲದೆ ಒಬ್ಬರಿಗೊಬ್ಬರು ಕೈ ಹಿಡಿದು ರೈಲ್ವೆ ಪಟ್ರಿಯ ಮೇಲೆ ಧೈರ್ಯಮಾಡಿ ಬಿದ್ದು ಎದ್ದು ನಡೆದು ಬಂದೆವು ಎಂದು ಹೇಳುತ್ತಿದ್ದ. ಅವನ ವೇಷ ಅವನ ಮಾತಿಗೆ ಪುಷ್ಟಿ ಕೊಡುತ್ತಿತ್ತು. ಮತ್ತೆ ಮಗಳ ಪರಿಸ್ಥಿತಿಯ ಬಗ್ಗೆ ಇವರಿಗೆ ಆತಂಕ.
ಹಾಗೂ ಹೀಗೂ ಹನ್ನೆರಡರ ಆಸುಪಾಸಿಗೆ ನೀರಿನ ಮಟ್ಟ ಇಳಿದು, ಕಡೆಗೂ ಮಗಳು ತೃಪ್ತಿ ಸುಸ್ತಾಗಿ ಮನೆ ಸೇರಿದಳು. ಅವಳಪ್ಪ ಅಮ್ಮ ಮೈಎಲ್ಲಾ ತಡಕಾಡಿ ಮಗಳಿಗೆ ಹೆಚ್ಚೇನೂ ತೊಂದರೆ ಆಗಿಲ್ಲವೆಂಬುದನ್ನು ಧೃಢಪಡಿಸಿಕೊಂಡು ನೀಳ ಉಸಿರು ಬಿಟ್ಟರು. ತೃಪ್ತಿ ಬಂದದ್ದು ತಿಳಿಯುತ್ತಲೇ ಬಾಗಿಲು ತೆರೆದು ಶೇಟೆ ಮನೆಯವರು ‘ ಆಗಾ! ಆಲಿ ತೃಪ್ತಿ’ ಎಂದು ಹೇಳಿ ಸಂತಸ ಪಟ್ಟರು. ಬಿಲ್ಡಿಂಗಿನ ಎಲ್ಲರೂ ತೃಪ್ತಿಯನ್ನು ವಿಚಾರಿಸುವವರೇ. ಅವಳೂ ಸುಸ್ತಿನಲ್ಲೇ ತಾನು ಪಟ್ಟ ಹಿಂಸೆ ತಡೆ ತಡೆದು ಹೇಳುತ್ತಿದ್ದಳು. ಇಡೀ ರಾತ್ರಿ ಬೆಳಕಿಲ್ಲದ ಲೋಕಲ್ ಟ್ರೈನಲ್ಲಿ ನೀರು ತುಂಬಿ ಅದರಲ್ಲಿಯೇ ಕಾಲು ಇಳಿಬಿಟ್ಟುಕೊಂಡು ಹಿಡಿ ಜಾಗದಲ್ಲಿ ಕೂತಿದ್ದು. ಕುಡಿಯಲು ನೀರೂ ಸಿಗದೇ ಒದ್ದಾಡಿದ್ದು, ಶೌಚಕ್ಕೆ ಹೋಗಲೂ ಅವಕಾಶ ಇಲ್ಲದೆ ನಿಂತಲ್ಲಿಯೇ ಮುಗಿಸಿಕೊಂಡಿದ್ದು, ಪಟ್ಟ ಕಷ್ಟ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಹೇಳಿದಳು.ಮನೆಗೆ ವಿಷಯ ಮುಟ್ಟಿಸಲು ಲೋಕಲ್ ಟ್ರೈನ್ ನ ಒಳಗಿದ್ದ ಜನರ ಅಲ್ಪ ಸ್ವಲ್ಪ ಚಾರ್ಜ್ ಇದ್ದ ಕೆಲವೇ ಮೊಬೈಲುಗಳು ತಮ್ಮ ಬದುಕಿನ ಕೊಂಡಿಯಾಗಿದ್ದರ ಬಗ್ಗೆ ಹೇಳಿ ಕಡೆಗೆ ಒಳ ಸೇರಿದಳು. ಅದುವರೆಗೂ ಮೂಕವಾಗಿದ್ದ ಸುಮನ್ ವಾಕ್ ಲಹರಿ ತಡೆ ಇಲ್ಲದಂತೆ ಮತ್ತೆ ಮುಂದುವರೆಯಿತು. ಮಗಳು ಹೇಳುತ್ತಿದ್ದ ಪರಿಸ್ಥಿತಿಯ ಗಾಂಭೀರ್ಯ ಇನ್ನೂ ಅವರಿಗೆ ಅರ್ಥವಾದಂತಿರಲಿಲ್ಲ. ಹೋಗುವ ಬರುವರಿಗೆಲ್ಲಾ ಮಗಳ ಕತೆ ಹೇಳುತ್ತಾ ನಿಂತರು.
ಹೆಂಡತಿಯ ಮಾತಿಗೆ ತಡೆ ಹಾಕಲು ತ್ರಾಣವಿಲ್ಲದ ಪ್ರಕಾಶ್ ಕಾಳೆ ಮಗಳನ್ನು ವಿಚಾರಿಸಿಕೊಳ್ಳಲು ಒಳಗೆ ಹೋದರು.ತೃಪ್ತಿಗೆ ಚೇತರಿಸಿಕೊಳ್ಳಲು ಮೂರ್ನಾಲ್ಕು ದಿನವೇ ಹಿಡಿಯಿತು.
ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಕಡೆದುಕೊಂಡಿದ್ದ ಮನೆಗಳಿಗೆ ಹಾಗೂ ಹೀಗೂ ಕರೆಂಟ್ ಬಂದು ಟೀವಿ ಫೋನ್ ಕೆಲಸ ಮಾಡತೊಡಗಿತು. ಆಗ ಎಲ್ಲರಿಗೂ ಪ್ರವಾಹದಿಂದಾದ ಅವಘಡಗಳ ಬಗ್ಗೆ ನೋಡಲು ಅರಿಯಲು ಸಿಕ್ಕಿದ್ದು. ಎರಡು ಸಾವಿರ ಜನ ಅವತ್ತೊಂದೇ ದಿನದಲ್ಲಿ ಸಾವನ್ನಪ್ಪಿದ್ದು, ಮೂಕ ಪ್ರಾಣಿಗಳು ಮನುಷ್ಯ ಮಾಡಿದ ತಪ್ಪಿಗೆ ಬಲಿಯಾಗಿದ್ದು, ಲೆಕ್ಕಕ್ಕೆ ಸಿಗದಷ್ಟು ಸರಕಾರೀ ಹಾಗು ನಾಗರಿಕರ ವಾಹನಗಳು ಮುಳುಗಿ ಹಾಳಾಗಿದ್ದು.. ಲಕ್ಷಾಂತರ ಜನ ಮನೆ ಆಸ್ತಿ ಕಳೆದುಕೊಂಡಿದ್ದು.. ಎಲ್ಲವನ್ನೂ ಟೀವಿಯಲ್ಲಿ ನೋಡುತ್ತಾ ನೋಡುತ್ತಾ ತೃಪ್ತಿಯ ತಾಯಿ ಸುಮನ್ ಕಣ್ಣಲ್ಲಿ ಆಗ ಧಾರಾಕಾರ ನೀರು. ಇಂಥಾ ಪರಿಸ್ಥಿತಿಯಲ್ಲೂ ಮಗಳು ನಮಗೆ ಸಿಕ್ಕಳಲ್ಲಾ ಎಂದು ಸಂತೋಷದಿಂದ ಹೋಗಿ ಮಗಳನ್ನು ಅಪ್ಪಿಕೊಂಡಳು. ತಂದೆಯಂತೂ ಅಂದೇ ಮಗಳಿಗೆ ಹೊಸ ಮೊಬೈಲ್ ಖರೀದಿಸಿ ತಂದು ಕೊಟ್ಟರು. ಅದನ್ನು ಕಂಡ ತೃಪ್ತಿಯ ಮುಖದಲ್ಲಿ ಸಾವಿರ ವೋಲ್ಟ್ ಬಲ್ಪಿನ ಹೊಳಪು. ಏನೋ ಬಚ್ಚಿಟ್ಟುಕೊಳ್ಳಲೂ ಆಗದ, ಹೇಳಲೂ ಆಗದ ಸಂತೋಷ. ಪಕ್ಕದ ಮನೆಯ ಮಾಮಿಗೆ ಓಡಿ ಹೋಗಿ ತೋರಿಸಿದಳು. ಅವಳಿಂದಲೇ ಅದನ್ನು ಬಳಸುವ ವಿಧಾನ ಎಲ್ಲಾ ಕೇಳಿ ತಿಳಿದುಕೊಂಡಳು. ಅರುಣಾ ಮಾಮಿಯ ಮುಖದಲ್ಲಿ ಕಿರುನಗು.
ಮಾರನೆ ದಿನ ಅರುಣಾ ಮಾಮಿ ಬಟ್ಟೆ ಒಣ ಹಾಕಲು ಬಾಲ್ಕನಿಗೆ ಬಂದಾಗ
ಪಕ್ಕದ ಮನೆಯ ಗ್ಯಾಲೆರಿಯಲ್ಲಿ ಇವಳಿಗೆ ಬೆನ್ನು ಮಾಡಿ ಕೂತಿದ್ದ ತೃಪ್ತಿ ಮೊಬೈಲ್ ಅಲ್ಲಿ ಮಾತಾಡುತ್ತಿದ್ದಳು. ಮಾತು ಮಧ್ಯೆ ಮಧ್ಯೆ ನಗು ಸಂಭ್ರಮ ನಡೆಯುತ್ತಿತ್ತು. ಅವಳ ಮಾತೆಲ್ಲವೂ ಸ್ಪಷ್ಟವಾಗಿ ಕೇಳುತ್ತಿತ್ತು. ‘ತೂ ಕಬ್ ಮಿಲ್ನೇ ವಾಲೇ ಹೋ ಬೋಲೋ. ನಹೀ.. ಮೈ ನಹಿ ಆಯೇಗಿ’. ಮತ್ತೆ ನಗು. ‘ಪತಾ ಚಲೇಗಾನಾ ಘರ್ ಮೆ .. ಉಸ್ ದಿನ್ ತುಮ್ ರಾತ್ ಭರ್ ಟ್ರೈನ್ ಮೇ ಮೇರಾ ಹಾತ್ ಪಕಡ್ಕೆ ಬೈಟೆ ಥೇನಾ.. ಮಾಲೂಮ್ ಪಡ್ನೇ ದೋ ಘರ್ ಮೇ.. ದೋನೋ ಕೊ ಮಾರ್ ಡಾಲೇಂಗೇ. ಬಾತ್ ಕರ್ತಾ ಹೈ ಸಾಲಾ.. ಚಲ್ ಫಟ್ಟು ಕಯೀಕಾ’ ಅಲೆಅಲೆಯಾಗಿ ನಗು.. ‘ ರಖ್ ಅಭಿ ಫೋನ್.. ಸುನ್ ಸುನ್. ಕಲ್ ಮೆ ಪಾರ್ಲಾ ಮೆ ಉತರ್ಕೆ ಫೋನ್ ಕರೆಗೀ. ಉಟಾನಾ ಧ್ಯಾನ್ ಸೆ.. ಸೈಲೆಂಟ್ ಪೆ ಡಾಲ್ಕೆ ಮತ್ ಗೂಮ್.. ಸಮಜಾ? ರಕ್ತೀ ಹ್ಞೂ .. ಚಲ್ ಅಭಿ ಮಮ್ಮಿ ಬುಲಾರಾಹಿ ಹೈ’ ಎಂದೆಲ್ಲಾ ಮಾತನಾಡುತ್ತಾ ಪ್ರೀತಿಯ ರಂಗು ತುಂಬಿದ ನಗುವನ್ನು ನಗುತ್ತಾ ಒಳಗೆ ಹೋದಳು. ಈ ಕೆಸರಿನಲ್ಲಿ ಅರಳುತ್ತಿದ್ದ ಕಮಲವನ್ನು ಕಂಡು ಅರುಣಾ ಮಾಮಿಗೆ ವಿಚಿತ್ರ ಭಾವ.
ಸಂಜೆ ಸುಮಾರಿಗೆ ಅರುಣಾ ಮಾಮಿ ತೃಪ್ತಿಯ ಮನೆಗೆ ಬೆಲ್ ಮಾಡಿ ಒಳ ಹೋದಳು. ಮಾತಿಗೆ ಒಬ್ಬರು ಸಿಕ್ಕ ಸಂತೋಷದಲ್ಲಿ ಸುಮನಾ ಹಿಗ್ಗಿ ಸ್ವಾಗತಿಸಿದಳು. ಅಲ್ಲೇ ಸೋಫಾ ಮೇಲೆ ಉರುಳಿದ್ದ ತೃಪ್ತಿ ಯಾವುದೋ ಭಾವ ಪ್ರಪಂಚದಲ್ಲಿ ತೇಲಾಡುತಿದ್ದಳು. ಅರುಣಾ ಮಾಮಿ ಅವಳನ್ನು ಎಚ್ಚರಿಸುತ್ತಾ.. ‘ ತೃಪ್ತಿ.. ಸುಭ್ಹೆ ಗ್ಯಾಲರಿ ಕೆ ವಹಾ ತುಮ್ ಫೋನ್ ಪೆ ಕಿಸ್ ಸೆ ಬಾತ್ ಕರ್ ರಹೀ ಥಿ?’ ಅಂದಳು. ತೃಪ್ತಿ ಜಗ್ಗನೆ ಬೆಚ್ಚಿ ಎದ್ದಳು. ಅವಳ ಮುಖದ ತುಂಬಾ ಗಾಭರಿಯೋ ಗಾಭರಿ. ತನ್ನ ಗುಟ್ಟೆಲ್ಲವೂ ಅರುಣಾ ಮಾಮಿಗೆ ತಿಳಿದೇ ಹೋಗಿದೆ. ಅದನ್ನು ಅಮ್ಮನ ಬಳಿ ಇನ್ನೇನು ಹೇಳೇ ಬಿಡುತ್ತಾಳೆ ಎಂಬ ಆತಂಕ. ಅರುಣಾ ಮಾಮಿ ಕೂಡ ಅವಳ ಅಂತರಂಗವನ್ನೇ ಬಗಿಯುವಂತೆ ದೀರ್ಘವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾಳೆ. ತೃಪ್ತಿಗೆ ಈಗ ಹೇಗೆ ಮುಚ್ಚಿಸಲಿ ಇವಳ ಬಾಯನ್ನು ಅಂದುಕೊಳ್ಳುತ್ತಿರುವಾಗಲೇ ಮನೆಯೊಳಗೆ ಪ್ರಕಾಶ್ ಕಾಳೆ ಬಂದರು. ಮನೆಗೆ ಬಂದಿದ್ದ ಅರುಣಾಳನ್ನು ನೋಡಿ ‘ ಕ್ಯಾ ಅರುಣಾ ..ಬಹುತ್ ದಿನ್ ಕೆ ಬಾದ್’ ಅನ್ನುತ್ತಾ ಶೂ ಕಳಚುತ್ತಿದ್ದಂತೆ, ತೃಪ್ತಿ ಮತ್ತಷ್ಟು ಹೆದರಿ ಅರುಣಾ ಮಾಮಿಗೆ ಹಿಂದಿನಿಂದ ಏನೇನೋ ಸನ್ನೆ ಮಾಡಿದಳು. ಇವಳು ಗಮನಿಸಿಯೂ ಗಮನಿಸದಂತೆ ‘ ಕುಚ್ ನಹಿ ಅಂಕಲ್.. ಆಪ್ ಸೆ ಕುಚ್ ಬಾತ್ ಕರ್ನೀ ಥಿ’ ಅನ್ನುತ್ತಿದ್ದಂತೆ, ತೃಪ್ತಿಗೆ ಜ್ಞಾನ ತಪ್ಪುವುದೊಂದು ಬಾಕಿ. ‘ ಅಲ್ಲೇ ಚೇರಿನ ಮೇಲೆ ಕೂತು ‘ಅಚ್ಚಾ.. ಬೋಲ್ನಾ ಅರುಣಾ’ ಅಂದ ಪ್ರಕಾಶ್ ಕಾಳೆಗೆ ಅರುಣಾ ತೃಪ್ತಿಯ ಕಡೆ ನೋಡುತ್ತಲೇ. ‘ ತೃಪ್ತಿ ತೋ..’ ಅನ್ನುತ್ತಿದ್ದಂತೆ, ತೃಪ್ತಿ ಜೋರಾಗಿ ‘ಅರುಣಾ ಮಾಮಿ’ ‘ ಮುಜೆ ಕುಚ್ ಬೋಲ್ನಾ ಥಾ ಆಪಸೇ’ ಎಂದು ಕಿರುಚಿದಳು. ಅವಳಪ್ಪ. ‘ ರುಖ್ ನಾ ತೃಪ್ತಿ .. ಬಾದ್ ಮೆ ಬೋಲೋ’ ಪಹೆಲೇ ಸುನ್ ನೇ ದೋ..’ ಎಂದು ಸಿಡುಕಿದರು. ಮನಸ್ಸಿನಲ್ಲೇ ನಗುತ್ತಾ ಅರುಣಾ.. ‘ ವಹೀ ಅಂಕಲ್.. ತೃಪ್ತಿ ಅಭಿ ಭಗವಾನ್ ಕಿ ದಯಾ ಸೆ ಸಹಿ ಸಲಾಮತ್ ಘರ್ ಪಹುಂಚ್ಗಯಿ ಹೈ.’ ‘ತೋ.. ಆಪ್ ವಹೀ ಖುಷಿ ಮೆ ಕುಚ್ ಪೈಸೆ ದೇದೋನಾ.. ಜೋ ಬೇಘರ್ ಹುಯೇ ಹೈ ಉನಕೋ.. ನಯೇ ಬೆಡ್ ಶೀಟ್ , ಕಪಡಾ,, ಕುಚ್ ಬರ್ತನ್ ದೇನೇಕೇ ಲಿಯೇ. ಹಾಮಾರೆ ಕುಚ್ ಲೋಗ್ ಪೈಸೆ ಇಕ್ಕಟ್ಟಾ ಕರ್ ರಹೇ ಹೈ. ಆಪ್ ಭಿ ಖುಷಿ ಸೆ ಕುಚ್ ಮದತ್ ಕರ್ದೋ’ ಎಂದು ಹೇಳಿ ನಗುತ್ತಾ ತೃಪ್ತಿಯ ಮುಖ ನೋಡಿದಳು. ಇನ್ನೇನು ಮುಗಿದೇ ಹೋಯಿತು ಎನ್ನುವಂತಿದ್ದವಳ ಮುಖದಲ್ಲಿ ಜೀವ ಬಂದಿತು. ಇವಳ ಕಡೆ ನೋಡಿ ದಯನೀಯವಾಗಿ ನಕ್ಕಳು. ಇವಳೂ ಪ್ರತಿಯಾಗಿ ಅಭಯದ ನಗೆ ನಕ್ಕಳು. ಪ್ರಕಾಶ್ ಕಾಳೆ ಒಳಗೆ ಹೋಗಿ ಸಂತೋಷದಿಂದ ಎರಡು ಸಾವಿರ ರುಪಾಯಿ ಚೆಕ್ ತಂದು ಅರುಣಾಳ ಕೈಗಿಟ್ಟರು. ಅರುಣಾ ಎಲ್ಲರಿಗೂ ಥ್ಯಾಂಕ್ಸ್ ಹೇಳಿ ಹೊರಟಳು. ಮಾತಿಗೆ ಸರಿಯಾಗಿ ಸಿಗದೇ ಹೊರಟದ್ದು ನೋಡಿ ಅಸಮಾಧಾನದಿಂದಲೇ ತೃಪ್ತಿ ತಾಯಿ ಸುಮನ್ ‘ ಇತ್ನಾ ಕ್ಯಾ ಜಲ್ದಿ ಹೈ .. ರುಕೋ ನಾ’ ಅನ್ನುತ್ತಿದ್ದರೂ ತೃಪ್ತಿ ‘ ಜಾನೆ ದೋನಾ ಮಾ.. ಮಾಮಿಕೋ ಕಾಮ್ ಹೈ.ಕ್ಯೂ ಪಕಡ್ ಕೆ ರಕ್ತೀ ಹೋ’ ಅಂದಳು. ಅರುಣಾ ಜೋರಾಗಿ ನಗುತ್ತಾ ಮತ್ತೊಮ್ಮೆ ಬರುವುದಾಗಿ ಹೇಳಿ ಹೊರ ಬಂದಳು. ಬಾಲ್ಕನಿಯಲ್ಲಿ ನಿಂತ ತೃಪ್ತಿಯನ್ನು ಮೋಡದ ಮರೆಯಿಂದ ಬಂದ ಚಂದ್ರ ನೋಡಿ ನಗುತ್ತಿದ್ದ.

ಕಿರಣ್ ಮಾಡಾಳು
ಈ ಕಥೆಯೊಂದಿಗೆ ಪ್ರಕಟವಾಗಿರುವ animated illustration ರಚಿಸಿದವರು ಕಿರಣ್ ಮಾಡಾಳು. ಸಾಂಪ್ರದಾಯಿಕ ಚಿತ್ರಕಲೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡಿ ಅದು ಮತ್ತಷ್ಟು ಪರಿಣಾಮಕಾರಿಯಾಗುವಂತೆ ಮಾಡಬಲ್ಲ ನಾಡಿನ ಕೆಲವೇ ಕಲಾವಿದರಲ್ಲಿ ಇವರೂ ಕೂಡ ಒಬ್ಬರು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಈ ಕಿರಣ್ ಫೈನ್ ಆರ್ಟ್ಸ್ ಪದವೀಧರ. 3D ಚಿತ್ರ ರಚನೆಯಲ್ಲಿ ವಿಶೇಷ ಪ್ರಾವೀಣ್ಯ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.