20.3 C
Karnataka
Sunday, November 24, 2024
    Home Blog Page 167

    ಆರೋಗ್ಯಕ್ಕೆ ಒಂದೇ ಮಂತ್ರ…ಸ್ಮೈಲ್‌ ಪ್ಲೀಸ್‌!

    ಇಂದಿನ ಕ್ಯಾಂಪಸ್ ಪ್ರೆಸ್ ಅಂಕಣದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು,ಮಂಗಳೂರು ಇಲ್ಲಿನ ದ್ವಿತೀಯ ಬಿಎ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಪ್ರಮೀಳಾ ನಗುವಿನ ಮಹತ್ವವನ್ನು ವರ್ಣಿಸಿದ್ದಾರೆ.

    ನಗುವುದು ಸಹಜ ಧರ್ಮ; ನಗಿಸುವುದು ಪರಧರ್ಮ
    ನಗುವ ಕೇಳುತ ನಗುವುದತಿಶಯದ ಧರ್ಮ
    ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
    ಮಿಗೆ ನೀನು ಬೇಡಿಕೊಳೊ-ಮಂಕುತಿಮ್ಮ

    ಕವಿ ಗುಂಡಪ್ಪನವರು ಹೇಳಿದಂತೆಯೇ, ನಗು ಮನುಷ್ಯನಿಗೆ ಸಿದ್ಧಿಸಿದ ಅಮೂಲ್ಯ ಕಲೆಗಳಲ್ಲಿ ಒಂದು. ನಮ್ಮ ಸೌಂದರ್ಯವನ್ನು ದ್ವಿಗುಣಗೊಳಿಸುವ, ಎಲ್ಲೆಡೆ ಸಂತೋಷ ಪಸರಿಸುವ ನಗು ಯಾರಿಗೆ ಬೇಡ… ನಗುವಿನ ಶಕ್ತಿ ಇಷ್ಟು ಮಾತ್ರವಲ್ಲ. “ನಕ್ಕರೆ ನೂರು ವರುಷ ಆಯುಷ್ಯ” ಎಂಬ ಮಾತಿನಂತೆ ಮುಗುಳ್ನಗೆ ಎಂಬ ಆಸ್ತಿ ನಮ್ಮ, ನಮ್ಮವರ ಜೀವನದಲ್ಲಿ ಎಷ್ಟೋ ಬದಲಾವಣೆ ತರಬಹುದು.  

    ಪರಿಚಯ, ಆಸಕ್ತಿ, ಲವಲವಿಕೆಗೆ ನಗುವೆಂಬ ಸ್ನೇಹಿತ ಸಹಕರಿಸುತ್ತಾನೆ. ದುಃಖದಲ್ಲಿ ಎಲ್ಲರೂ ದೂರವಾದರೂ ನಗುವೆಂಬ ಗೆಳೆಯ ನಮ್ಮ ಸಹಭಾಗಿಯಾಗುತ್ತಾನೆ. ನಮ್ಮನ್ನು ಸಮಾಧಾನಿಸಲು ಯತ್ನಿಸುತ್ತಾನೆ. ಅದೆಷ್ಟೋ ಬಾರಿ ನಮ್ಮ ಸಂತೋಷ–ದುಃಖ ಎರಡನ್ನೂ ನಗುವೇ ವ್ಯಕ್ತಪಡಿಸುತ್ತದೆ. ಹೀಗೆ ನಗುವಿಗೆ ಅದರದೇ ಆದ ಮಹತ್ವವಿದೆ. ನಾವದನ್ನು ಅರ್ಥಮಾಡಿಕೊಂಡರೆ ಮಾತ್ರ ಮಾಸದ ನಗು ನಮ್ಮ ಮುಖದ ಭೂಷಣವಾಗಬಹುದು.

    ನಗುವಲ್ಲಿ ಹಲವು ಬಗೆ. ಕೆಲವರದು ಗಹಗಹಿಸುವ ನಗೆಯಾದರೆ, ಕೆಲವರದು ವ್ಯಂಗ್ಯದ ನಗು. ಮತ್ತೆ ಹಲವರದು ಮುಗುಳುನಗೆಯಾದರೆ, ಕೆಲವರದ್ದು ತುಟಿಯಂಚಿನ ಕಿರುನಗೆ. ನಮ್ಮ ಗಹಗಹಿಸುವಿಕೆ, ವ್ಯಂಗ್ಯದ ನಗು ಇತರರ ದುಃಖಕ್ಕೆ ಕಾರಣವಾಗಬಹುದು ಎಂಬ ಎಚ್ಚರ ಸದಾ ಇರಬೇಕು. ಉಳಿದಂತೆ ನಮ್ಮ ಮುಗುಳು ನಗು ನೋವನ್ನು ಮರೆಸಿ ದೀರ್ಘಾಯಸ್ಸಿಗೆ ಕಾರಣವಾಗುತ್ತದೆ. ನಮ್ಮ ಜೀವನದಲ್ಲಿ ಹೊಸ  ಹುರುಪು ಮೂಡಿಸುವುದರ ಜೊತೆಗೆ ನಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರಗು ನೀಡುತ್ತದೆ.

    ಒಂದು ಪುಟ್ಟ ನಗುವಿಗೆ ಮಾತಿನಲ್ಲಿ ಹೇಳಲಾಗದ್ದನ್ನು ಹೇಳಲು ಸಾಧ್ಯವಿದೆ. ನಮ್ಮ ಜೀವನವನ್ನೇ ಬದಲಿಸುವ ಶಕ್ತಿಯಿದೆ. ಇಷ್ಟಾಗಿಯೂ ನಗಲಾಗದವರ ಕುರಿತು ಒಂದು ಮಾತಿದೆ- “ನಗೆ ಬೇಕು, ನಗಿಸಬೇಕು. ಇದೇ ನಿನ್ನ ಧರ್ಮ, ನಗಲಾರೆ ಎಂದರೆ ಅದು ನಿನ್ನ ಕರ್ಮ” ಎಂದು! ಹಾಗಾಗಿ ಬದುಕಿನ ಪಯಣದಲ್ಲಿ ನಗುವೆಂಬ ಸ್ನೇಹಿತ ಸದಾ ನಮ್ಮ ಜೊತೆಗಿರಲಿ.

    Photo by chaitanya pillala on Unsplash

    ಮಾಸ್ಕ್ ಗಳ ಸತ್ಯ ಮತ್ತು ಮಿಥ್ಯೆ: ಬಳಸುವುದರಿಂದ ಲಾಭವಿದೆಯೇ ಹೊರತು ನಷ್ಟವಿಲ್ಲ

    ಮೂಗು,ಬಾಯಿಗಳನ್ನು ಮುಚ್ಚಿ ಕಿವಿಗಳ ಆಧಾರದ ಮೇಲೆ ಕೂರುವ ’ಮಾಸ್ಕ್ ’ಎನ್ನುವುದುಪುಟ್ಟದೊಂದು ಬಟ್ಟೆ.ಇದು ಪ್ರಪಂಚವನ್ನೇ  ಕಲಕುತ್ತಿರುವ ಕರೋನ ವೈರಸ್ಸನ್ನು ತಡೆಯಲು ಶಕ್ಯವೇ? ಅಥವಾ ಇದು ಬರಿ ಹುಸಿ ಮಿಥ್ಯೆಯೇ?

    ಸಾಮಾನ್ಯವಾಗಿ  ’ ಮೌತ್ ಮಾಸ್ಕ್ ’ (ಬಾಯಿ ಕವಚ) ಅಥವಾ ಫೇಸ್ ಮಾಸ್ಕ್ (ಮುಖ ಕವಚ) ಎನ್ನುವ ಈ ಪುಟ್ಟ ರಕ್ಷಣಾ ಕವಚವನ್ನು  ವೈದ್ಯರು, ದಂತವೈದ್ಯರು, ದಾದಿಯರು, ಪರೀಕ್ಷಾ ಘಟಕಗಳ ಸಿಬ್ಬಂದಿ, ಆಹಾರ ತಯಾರಿಕಾ ಕಾರ್ಖಾನೆಗಳು, ವಾಯುಮಾಲಿನ್ಯ ಇರುವ ಜಾಗಗಳು-ಇಂತಹ ಹಲವು ಸ್ಥಳಗಳಲ್ಲಿ ಮಾತ್ರ ಬಳಸುತ್ತಿದ್ದರು. ಆದರೆ ಇದೀಗ ಹೊರಗೆ ಓಡಾಡುವ ಎಲ್ಲ ಸಾರ್ವಜನಿಕರೂ ಇದನ್ನು ಕಡ್ಡಾಯವಾಗಿ ಧರಿಸಬೇಕಿದೆ. ಹೀಗಾಗಿ ಎಲ್ಲರಿಗೂ ಇದೇನೆಂದು ಗೊತ್ತು. ಮಾಸ್ಕ್ ಧರಿಸದವರು ’ ಅಪರಾಧಿ ’ ಎನ್ನಿಸಿಕೊಂಡು ದಂಡ  ತೆರಬೇಕಿದೆ.ವಿಶ್ವವೇ ಕರೋನ ವೈರಸ್ಸಿನ ಕಾರಣ ಈ ಹೊಸ ಬದಲಾವಣೆಗೆ ಹೊಂದಿಕೊಳ್ಳುತ್ತಿದೆ.

    ಬೆಳಿಗ್ಗೆ ವಾಕ್ ಹೋಗಲು ಹೊರಡುವ ವೆಂಕಮ್ಮ ಮಾಸ್ಕನ್ನು ಭದ್ರವಾಗಿ ಸೊಂಟಕ್ಕೆ ಸಿಕ್ಕಿಸಿಕೊಂಡು ಹೊರಡುತ್ತಾಳೆ. ನಾಗಪ್ಪ ತನ್ನ ಪಾಕೀಟಿನ ಜೇಬಲ್ಲೇ ಇಟ್ಟುಕೊಂಡು ತಿರುಗುತ್ತಾನೆ. “ ಅಕಸ್ಮಾತ್ ಪೊಲೀಸರು ಹಿಡಿದರೆ ಇರಲಿ “-ಎಂದು ಇಬ್ಬರೂ ಮುಂಜಾಗ್ರತೆ ವಹಿಸುತ್ತಾನೆ. ಸುಮ ಒಂದೇ ಮಾಸ್ಕ್ ಅನ್ನು ಒಂದು ತಿಂಗಳಿಂದ ಭದ್ರವಾಗಿಟ್ಟುಕೊಂಡು ಉಪಯೋಗಿಸುತ್ತಿದ್ದಾಳೆ. ಹರಿದರೆ, ಅಥವಾ ಕಳೆದುಹೋದರೆ ಮಾತ್ರ ಇನ್ನೊಂದನ್ನು ಹೊರತೆಗೆಯುತ್ತಾಳೆ. ಕೊಂಡುಕೊಂಡ ಎಲ್ಲ ಮಾಸ್ಕ್ ಗಳು ಮುಗಿದು ಹೋದರೆ ಮತ್ತೆ ಕೊಳ್ಳಬೇಕಲ್ಲ? ಬದಲು ಅಗ್ಗವಾಗಿರುವ ಸೊಗಡಿನ ಸೀಸನಲ್ ಅವರೇಕಾಯಿ ಅವರ ಮನಸ್ಸಿನಲ್ಲಿದ್ದರೆ ಅಚ್ಚರಿಯಿಲ್ಲ.

    ಪರಿಸ್ಥಿತಿ ಹೀಗಿರುವಾಗ ಕರೋನ ನಿಯಂತ್ರಣಕ್ಕೆ ಮಾಸ್ಕ್ ನೆರವಾಗಬಲ್ಲದೇ ಎಂಬ ಮೂಲಭೂತ ಪ್ರಶ್ನೆ ಮತ್ತೆ ಎದುರಾಗುತ್ತದೆ.

    ಪ್ರಪಂಚ ಜ್ಞಾನ ಈ ವಿಚಾರದಲ್ಲಿ ಕಾಲ ಕಳೆದಂತೆಲ್ಲ ಬದಲಾಗುತ್ತಿದೆ. ಕಳೆದ ವಾರ ವಿಶ್ವ ಸಂಸ್ಥೆ ಕರೋನ ವೈರಾಣು ಗಾಳಿಯಿಂದಲೂ ಹರಡಬಲ್ಲದು ಎಂಬ ಅಧಿಕೃತ ಘೋಷಣೆ ಹೊರಡಿಸಿದ ಕೂಡಲೇ ಮಾಸ್ಕ್ ಗಳ ಮಹತ್ವಕ್ಕೆ ಇನ್ನೂ ಹೆಚ್ಚಿನ ಆದ್ಯತೆ ದೊರಕಿದೆ.

    ಮಾಸ್ಕ್ ನ ಬಗೆಗಿನ ಕೆಲವುಸತ್ಯಗಳು

    ಮಾಸ್ಕ್ ಧರಿಸುವುದರಿಂದ ನಮಲ್ಲಿ ಗೊತ್ತಿದ್ದೋ-ಗೊತ್ತಿಲ್ಲದೆಯೋ ಇರಬಹುದಾದ ಕೋವಿಡ್ ಸೋಂಕು ನಮ್ಮಿಂದ ಇತರರಿಗೆ ಹರಡುವುದನ್ನು ಕಡಿಮೆಮಾಡಬಹುದು. ಮಾತನಾಡುವಾಗ, ಸೀನು-ಕೆಮ್ಮು ಬಂದಾಗ ನಮ್ಮ ಎಂಜಲಿನ ಸೂಕ್ಷ್ಮ ಹನಿಗಳು ಮತ್ತು ಉಸಿರಿನ ಗಾಳಿಯ ಮೂಲಕ ವೈರಸ್ಸು  ನೇರವಾಗಿ ಚಿಮ್ಮಿ ಹರಡುವುದನ್ನು ಮಾಸ್ಕ್ ಅಲ್ಪಮಟ್ಟಿಗೆ ತಪ್ಪಿಸುತ್ತದೆ.ದೂರ ದೂರಕ್ಕೆ ಗಾಳಿ ಮತ್ತು ಎಂಜಲಿನ ಮೂಲಕ ಚಿಮ್ಮಬಲ್ಲ  ವೈರಾಣುಗಳ ಮೇಲೆ ಕಡಿವಾಣ ಹಾಕುತ್ತದೆ.ಈ ಕಾರಣಕ್ಕೆಮುಖಗವಸನ್ನು ಧರಿಸುವುದು ಉತ್ತಮ.

    ಮುಖಗವಸನ್ನು ಧರಿಸುವುದರಿಂದ ಇತರರಿಗೆ ಸೋಂಕು ಹರಡುವುದನ್ನು ಮಾತ್ರ ತಡೆಯಬಲ್ಲೆವು ಆದರೆ ಅವುಗಳನ್ನು ಧರಿಸುವವರಿಗೆ ಕೋವಿಡ್ ಸೋಂಕಿನಿಂದ ರಕ್ಷಣೆ ಸಿಗುವುದಿಲ್ಲ ಎಂದೇ ಇದುವರೆಗೆ ನಂಬಿದ್ದೆವು. ಆದರೆ ಕಳೆದ ಕೆಲವು ದಿನಗಳಲ್ಲಿ ವೈಜ್ಞಾನಿಕ ಸಾಕ್ಷ್ಯಿ ಆಧಾರಗಳು ಬದಲಾಗಿವೆ. ವೈರಾಣುಗಳು ಕೇವಲ ಘನ ವಸ್ತುಗಳ ಮೇಲ್ಮೈ ಅಲ್ಲದೆ ಗಾಳಿಯಲ್ಲಿ ಕೂಡ ಬದುಕಿರಬಲ್ಲವು ಎಂಬುದು ತಿಳಿದ ನಂತರ ಮಾಸ್ಕ್ ಧರಿಸುವುದಕ್ಕೆ ಮತ್ತಷ್ಟು ಮನ್ನಣೆ ದೊರೆತಿದೆ. ಮಾಸ್ಕ್ ಗಳನ್ನು ಧರಿಸಿದವರಿಗೆ ಕೂಡ ಅಲ್ಪಮಟ್ಟಿನ ರಕ್ಷಣೆ ದೊರೆಯುತ್ತದೆ ಎಂದಾಗಿದೆ.ಆದರೆ ಮಾಸ್ಕ್ ನಮಗೆ ಸಂಪೂರ್ಣ ರಕ್ಷಣೆಯನ್ನು ಒದಗಿಸುವುದಿಲ್ಲ.

    ಅಳವಡಿಕೆ ಸೂಕ್ತವಾಗಿರಲಿ, ಬೇಕಾ ಬಿಟ್ಟಿ ಧರಿಸಬಾರದು

    ಯಾಕೆಂದರೆ ಮುಖಗವಸನ್ನು ಧರಿಸಿದ್ದರೂ ಅದರ ಅಳವಡಿಕೆ ಅತ್ಯಂತ ಸುರಕ್ಷಿತವಾಗಿಲ್ಲದಿದ್ದಲ್ಲಿ ವೈರಾಣುಗಳು ನಮ್ಮ ಮೂಗು ಮತ್ತು ಬಾಯಿಯ ಮೂಲಕ  ಪ್ರವೇಶಿಸಬಲ್ಲವು.ಇವೇ ಅಲ್ಲದೆ ಕಣ್ಣು, ಆಹಾರ, ಕೈಗಳ ಮೂಲಕವೂ ಅವು ನಮ್ಮ ದೇಹವನ್ನು ಸೇರಬಲ್ಲವು.ಹೀಗಾಗಿ ಮಿಕ್ಕೆಲ್ಲ  ಕ್ರಮಗಳನ್ನು ನಾವು ಪಾಲಿಸುವುದು ಮಾಸ್ಕ ಧರಿಸುವುದಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎನ್ನುವ ಅರಿವಿರುವುದು ಅತ್ಯಂತ ಅಗತ್ಯವಾಗಿದೆ.

    ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಜನ ದಟ್ಟಣೆಯಿಂದ ದೂರವಿರುವುದು, ಕನಿಷ್ಠ ಇಪ್ಪತ್ತು ಸೆಕೆಂಡುಗಳ ಕಾಲ ಸೋಪನ್ನು ಬಳಸಿ ಪದೇ ಪದೇ ಕೈ ತೊಳೆಯುವುದು, ಸೋಂಕು ನಿವಾರಕ ಸ್ಯಾನಿಟೈಸರ್ ಗಳನ್ನು ಬಳಸುವುದು, ಲಾಕ್ ಡೌನ್ ನಿಯಮಗಳನ್ನು ಪಾಲಿಸುವುದು ಅತ್ಯಂತ ಮುಖ್ಯವಾಗುತ್ತದೆ.

    ಮೇಲಿನ ಇವೆಲ್ಲ ಕ್ರಮಗಳ ಬಗ್ಗೆ ಎಂದಿಗೂ ವಿವಾದಗಳಿಲ್ಲ. ಆದರೆ, ಪುಟ್ಟದೊಂದು ಬಟ್ಟೆಯನ್ನು ಬಾಯಿ ಮತ್ತು ಮೂಗಿನ ಮುಂದೆ ಕಟ್ಟಿಕೊಳ್ಳುವ ಬಗ್ಗೆ ಮಾತ್ರ ಕಳೆದ ಮೂರು ತಿಂಗಳಿನಿಂದ ಇನ್ನಿಲ್ಲದಂತೆ ಚರ್ಚೆಗಳು ನಡೆದಿವೆ.

    ಮುಖಗವಸನ್ನು ಸುತ್ತುವರೆದಿರುವ ವಿವಾದಗಳು

    ಮುಖಗವಸನ್ನು ಧರಿಸುವುದರಿಂದ ನಿಜಕ್ಕೂ ಲಾಭಗಳಿವೆಯೇ ಎನ್ನುವ ಬಗ್ಗೆ ಬಹಳ ಮೊದಲಿಂದಲೂ ಚರ್ಚೆಗಳು ಹುಟ್ಟಿಕೊಂಡವು. ಭಾರತ, ಚೆಕ್ ರಿಪಬ್ಲಿಕ್, ಚೀನಾ, ಜಪಾನ್ ನಂತಹ ದೇಶಗಳಲ್ಲಿನ ಸರ್ಕಾರಗಳು ಸಾರ್ವಜನಿಕರು ಕಡ್ಡಾಯವಾಗಿ ಧರಿಸಬೇಕು,ಇಲ್ಲದಿದ್ದರೆ ದಂಡ ಹೇರಲಾಗುತ್ತದೆ ಎಂಬ ನಿಯಮಗಳನ್ನು ಜಾರಿಗೆ ತಂದರು. ಆದರೆ , ಇಂಗ್ಲೆಂಡ್, ಅಮೆರಿಕಾದಂತಹ ಕೆಲವು ದೇಶಗಳು ಈ ಬಗ್ಗೆ ಕಡ್ಡಾಯಗಳನ್ನು ಹೇರಲಿಲ್ಲ. ಇವತ್ತಿಗೂ ಇಂಗ್ಲೆಂಡಿನ ಸಾರ್ವಜನಿಕರು ಇದನ್ನು ಕಡ್ಡಾಯವಾಗಿ ಧರಿಸಬೇಕಿಲ್ಲ.

    ಕರೋನ ವೈರಸ್ಸು ಶುರುವಾದ ಹೊಸತರಲ್ಲಿ ಅತ್ಯಂತ ಬೇಡಿಕೆಯಲ್ಲಿದ್ದ ವಸ್ತು ಎಂದರೆ ಅದು ಮುಖಗವಸು. ಈ ಕಾರಣ ಅಮೆರಿಕಾ ಮತ್ತು ಇಂಗ್ಲೆಂಡ್ ಎರಡೂ ಅದನ್ನು ಸಾರ್ವಜನಿಕರ ವೈಯಕ್ತಿಕ ಆಯ್ಕೆಗಾಗಿ ಬಿಟ್ಟರು.ಇದರಿಂದ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕೊರತೆಯಾಗದಿರುವಂತೆ ಕ್ರಮ ಕೈಗೊಂಡರು. ಸಾರ್ವಜನಿಕರು ಸರ್ಜಿಕಲ್ ಮಾಸ್ಕ್ ತೊಡಬೇಕಿಲ್ಲ, ಬರಿಯ ಬಟ್ಟೆಯ ಮಾಸ್ಕ್ ಗಳನ್ನು ಮನೆಯಲ್ಲೇ ಮಾಡಿ ತೊಡಿರಿ ಎಂದು ಪ್ರಚಾರ ಮಾಡಿದರು. ಇದರಿಂದ ಜನರು ನಾನಾ ರೀತಿಯ ಕಲ್ಪನೆಗಳನ್ನು ಬಳಸಿ ವಿಧ ವಿಧದ ಮಾಸ್ಕ್ ಗಳನ್ನು ಮಾರುಕಟ್ಟೆಗೆ ತಂದರು.

    ಇಂಗ್ಲೆಂಡಿನಲ್ಲಿ ಕೇವಲ ಬಸ್ಸು, ರೈಲು, ವಿಮಾನ ಪ್ರಯಾಣಗಳಂತಹ  ಹೊಸ ಗಾಳಿಯಾಡದಂತಹ ಜಾಗಗಳಲ್ಲಿ ಮತ್ತು ಜನದಟ್ಟಣೆ ಇರುವ ಒಳಾಂಗಣಗಳಲ್ಲಿ ಮಾತ್ರ ಇತ್ತೀಚೆಗೆ ಮುಖಗವಸನ್ನು ಕಡ್ಡಾಯಗೊಳಿಸಲಾಗಿದೆ. ಅಮೆರಿಕಾದUS Centers for Disease Control and Prevention (CDC)ಕೂಡ ಇದೇ ನಿಲುವನ್ನು ಹೊಂದಿದೆ.

    ಇದಕ್ಕೂ ಕಾರಣಗಳಿವೆ. ಕೆಮ್ಮೋ, ಸೀನೋ ಬಂದು ಒತ್ತಡದಿಂದ ಹೊರಬೀಳುವ ಗಾಳಿ ಮಾಸ್ಕ್ ಗೆ ಬಡಿಯುತ್ತಿದ್ದಂತೆ ನೇರವಾಗಿ ಮುಂದುವರೆಯುವುದನ್ನು ನಿಲ್ಲಿಸಿದರೂ, ಬೇರೆ ಎಲ್ಲ ದಿಕ್ಕುಗಳಲ್ಲಿ ಸಿಡಿಯುತ್ತದೆ. ಹಿಂದೆ, ಸುತ್ತ- ಮುತ್ತ ಮತ್ತು ಹತ್ತಿರವೇ ನಿಂತಿರುವವರನ್ನು ತಲುಪುತ್ತದೆ. ಈ ಕಾರಣ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಎಲ್ಲಕ್ಕಿಂತ ಮುಖ್ಯವಾಗುತ್ತದೆ.ಮುಖಗವಸಿಗೆ ಹೆಚ್ಚು ಒತ್ತು ಕೊಟ್ಟರೆ ಜನರಿಗೆ ತಾವು ಸುರಕ್ಷಿತವಾಗಿದ್ದೇವೆಂಬ ಸುಳ್ಳು ಕಲ್ಪನೆ ಬರುತ್ತದೆ ಎಂಬುದು ಮುಖ್ಯ ಕಾರಣ.

    ಅಮೆರಿಕಾದಲ್ಲಿಸಾರ್ವಜನಿಕರು ಮುಖಗವಸನ್ನು ಧರಿಸಬೇಕೆಂಬ ಮಾರ್ಗದರ್ಶನವನ್ನು ಜಾರಿಗೆ ತಂದರು. ಆದರೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತವರ ಬೆಂಬಲಿಗರು ಈ ನಿಯಮಕ್ಕೆ ಬದ್ಧತೆ ತೋರಿಸಲಿಲ್ಲ. ಇದೀಗ ಸಾವಿನ ಸಂಖ್ಯೆಯ ಶಿಖರ ಶೃಂಗವನ್ನು ತಲುಪುವತ್ತ ದಾಪುಗಾಲು ಹಾಕುತ್ತಿರುವ ಬ್ರೆಝಿಲ್ ನ ಅಧ್ಯಕ್ಷರಿಗೂ ಕರೋನ ವೈರಸ್ಸಿನ ಸೋಂಕು ಹರಡಿ ಸುದ್ದಿಮಾಡಿತು. ಇವರೂ ಕೂಡ ಮುಖಗವಸುಗಳ ವಿರೋಧಿ.ಇವರಷ್ಟೇ ಅಲ್ಲದೆ ಹಲವು ವಿಜ್ಞಾನಿಗಳು, ವೈದ್ಯಾಧಿಕಾರಿಗಳು ಮುಖಗವಸು ವೈರಾಣುವನ್ನು ತಡೆಯಲಾರದು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಾಕ್ಷ್ಯ ಆಧಾರಗಳನ್ನು ಪ್ರಶ್ನಿಸಿದರು.

    ಸಾಮಾನ್ಯವಾಗಿ ವೈದ್ಯರು ಧರಿಸುವ ಸರ್ಜಿಕಲ್ ಮಾಸ್ಕ (N95) ಗಳು ಕೂಡ ಧರಿಸಿದ ಕೇವಲ 20 ನಿಮಿಷಗಳ ನಂತರ ಪ್ರಯೋಜನವಿಲ್ಲದಾಗುತ್ತವೆ. ಬ್ಯಾಕ್ಟೀರಿಯಾಗಳು ಮುಖಗವಸಿನ ಸುತ್ತಲಿನ ಸಂದುಗಳ ಮೂಲಕ ಕೂಡ ಪ್ರವೇಶಿಸಬಲ್ಲವು ಎಂದು ಅಭಿಪ್ರಾಯ ಇರುವುದೇ ಇದಕ್ಕೆ ಕಾರಣವಾಗಿದೆ. ಇಂಗ್ಲೆಂಡಿನ ಕೆಲವು ಸಂಸ್ಥೆಗಳಲ್ಲಿ ಇದೇ ಕಾರಣಕ್ಕೆ ಪ್ರತಿ ರೋಗಿಗೂ ಹೊಸ ಮಾಸ್ಕ್ ಅನ್ನು ಧರಿಸಿ ಚಿಕಿತ್ಸೆ ನೀಡಿ ಎಂಬ ಮಾರ್ಗದರ್ಶನ ಉಂಟು. ಆದರೆ ಅದರಿಂದ ಉಂಟಾಗುವ ಖರ್ಚು ವೆಚ್ಚಗಳ ಕಾರಣ ಪ್ರತಿ 3-4 ಗಂಟೆಗೊಮ್ಮೆ ಅಥವಾ ಗಲೀಜಾದ ಕೂಡಲೇ ಬದಲಿಸಿ ಎನ್ನುವ ಸಡಿಲ ನಿಯಮಗಳನ್ನು ಕೂಡ ಪಾಲಿಸುತ್ತಾರೆ. ಆದರೆ ಸರ್ಜಿಕಲ್ ಚಿಕಿತ್ಸೆಯನ್ನು ಪಡೆಯುವ ಪ್ರತಿ ರೋಗಿಯನ್ನು ನೋಡುವಾಗ ಮುಖಗವಸನ್ನು ಬದಲಾಯಿಸುವುದು ಕಡ್ಡಾಯ.

    ಸ್ಕಾಟ್ಲ್ಯಾಂಡಿನ ಎಡಿನ್ ಬರೋ ವಿಶ್ವವಿದ್ಯಾಲಯ ಕೋವಿಡ್ ವಿರುದ್ಧವಾಗಿ ಮಾಸ್ಕ್ ಗಳು ಹೇಗೆ ಕೆಲಸಮಾಡುತ್ತವೆ ಎನ್ನುವ ಬಗ್ಗೆ ವಿಸ್ತ್ರುತ ಅಧ್ಯಯನ ಮಾಡಿ ವರದಿ ಸಲ್ಲಿಸಿದೆ. ಆ ಪ್ರಕಾರ ಎಲ್ಲ ಬಗೆಯಮುಖಗವಸುಗಳು ಅಂದರೆ ಬಟ್ಟೆಯ ಮಾಸ್ಕ್, ಸರ್ಜಿಕಲ್ ಮಾಸ್ಕ್ ಮತ್ತು ಉಸಿರಾಡಲು ಕವಾಟ (valve) ಗಳಿರುವ FFPಮುಖ ಗವಸುಗಳು ಅವನ್ನು ಧರಿಸಿರುವವರು ಕೆಮ್ಮಿದರೆ, ಸೀನಿದರೆನೇರ ದಿಕ್ಕಿನಲ್ಲಿ ಹೊರಬೀಳುವ ಗಾಳಿಯ ದೂರವನ್ನು 90% ಕಡಿಮೆ ಮಾಡುತ್ತವೆ. ಆದರೆ ಅವುಗಳನ್ನು ಮುಖದ ಅಳತೆ ಮತ್ತು ಆಕಾರಕ್ಕೆ ಅಳವಡಿಕೆ ಮಾಡಬೇಕಾದ್ದು ಅತ್ಯಂತ ಅಗತ್ಯ.ಇಲ್ಲದಿದ್ದಲ್ಲಿ ಕೆಳಮುಖವಾಗಿ, ಹಿಂಭಾಗಕ್ಕೆ ಮತ್ತು ಬದಿಗಳಿಗೆ ಹಾರಬಲ್ಲ ಎಂಜಲಿನ ಮತ್ತು ಗಾಳಿಯಲ್ಲಿ ಸೇರಬಲ್ಲ ಜೈವಿಕ ದ್ರವಗಳ ಸೂಕ್ಷ್ಮಾತಿ ಸೂಕ್ಷ್ಮ ಹನಿಗಳು ಕೊರೋನವನ್ನು ಹರಡಬಲ್ಲವು.ಇದಕ್ಕೆ ಫಿಟ್ ಟೆಸ್ಟ್ (Fit test) ಮಾಡಬೇಕಾಗುತ್ತದೆ.

     ‘ಫಿಟ್ ಟೆಸ್ಟ್ ಅಂದರೇನು?

    ಸಡಿಲ ಮಾಸ್ಕ್ ಗಳ  ದೋಶಗಳನ್ನು ನಿವಾರಿಸಲು  ಅತ್ಯುತ್ತಮ ರಕ್ಷಣೆಯನ್ನು ಒದಗಿಸಬಲ್ಲ  ಮಾಸ್ಕ್ ಗಳನ್ನು ರೋಗಿಗಳನ್ನು ಪ್ರತಿದಿನ ನೋಡುವ ವೈದ್ಯರಿಗೆ, ದಂತವೈದ್ಯರಿಗೆ, ದಾದಿ ಇನ್ನಿತರರಿಗೆ ಅದರಲ್ಲೂ ಕೋವಿಡ್ ರೋಗಿಗಳನ್ನು ನೋಡಿಕೊಳ್ಳುವವರಿಗೆ  ನೀಡಲಾಗುತ್ತಿದೆ. ಅವರ ಮುಖಕ್ಕೆ ಅದನ್ನು ಅಳವಡಿಸಿ, ಪರೀಕ್ಷೆಗಳನ್ನು ಮಾಡಿ ನಂತರ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ.ಇವನ್ನು FFP  (Filtering face pieces) ಮಾಸ್ಕ್ ಗಳೆಂದು ಕರೆಯುತ್ತಾರೆ.

    ಇವುಗಳಲ್ಲಿ ಹೊರಗಿನ ಗಾಳಿ ಒಳಬರುವ ಮುನ್ನ ಫಿಲ್ಟರ್ ಗಳ ಮೂಲಕ ಹಾದುಬರುತ್ತದೆ. ಇವನ್ನು 28 ದಿನಗಳಿಗೊಮ್ಮೆ ಬದಲಾಯಿಸಲಾಗುತ್ತದೆ. ಅವರು ಉಸಿರಾಡಿದ ಗಾಳಿ ಹೊರಹೋಗಲು ಕವಾಟಗಳಿರುತ್ತವೆ.ಈ ಕಾರಣ ಅವರ ನಿಶ್ವಾಸ ಹೊರ ಹರಿಯಲು ಕವಾಟಗಳು ತೆರೆದುಕೊಂಡರೂ ಹೊರಗಿನ ಗಾಳಿ ಒಳಬರದಂತೆ ವಿನ್ಯಾಸಮಾಡಲಾಗಿರುತ್ತದೆ. ಇದು ಆರೋಗ್ಯ ಸಂಬಂಧೀ ವ್ಯಕ್ತಿಗಳಿಗೆ ಹೆಚ್ಚಿನ ರಕ್ಷಣೆ ಒದಗಿಸುತ್ತದೆ. ಆದರೆ ಇದನ್ನು ಹೆಚ್ಚು ಹೊತ್ತು ಧರಿಸಲಾಗುವುದಿಲ್ಲ. ಇದರ ಮೂಲಕ ಹರಿವ ಗಾಳಿಯಲ್ಲಿ  ಆಮ್ಲಜನಕದ (ಆಕ್ಸಿಜನ್) ಪ್ರಮಾಣ ಕಡಿಮೆಯಾಗುವ ಕಾರಣ ಒಂದು ಗಂಟೆಯ ನಂತರ ಈ ಮಾಸ್ಕ್ ನ್ನು ತೆಗೆದು ವಿರಾಮ ತೆಗೆದುಕೊಳ್ಳಲಾಗಬೇಕಾಗುತ್ತದೆ.ಇದೇ ಕಾರಣ ನೀವು ಟಿವಿ ಯಲ್ಲಿ ನೋಡುವ ಇಂತಹ ಮಾಸ್ಕ್ ಗಳಲ್ಲಿ ಮತ್ತು ಸ್ವರಕ್ಷಣಾ ಉಡುಪುಗಳಲ್ಲಿ ವೈದ್ಯರಿಗೆ ಒಂದೇ ಸಮನೆ ಕೆಲಸಮಾಡಲಾಗುವುದಿಲ್ಲ. ಆಮ್ಲಜನಕದ ಕೊರತೆ ಹೆಚ್ಚು ಕಾಲ ಅದಲ್ಲಿ ಅವರ ಪ್ರಜ್ಞೆತಪ್ಪಬಹುದು. ಆದರೆ ಸಾರ್ವಜನಿಕರು ಧರಿಸುವ ಮಾಸ್ಕ್ ಗಳು ಉಸಿರಾಟಕ್ಕೆ ತೊಂದರೆ ಮಾಡುವುದಿಲ್ಲ.

    FFP  ಮಾಸ್ಕ್ ಗಳು ಧೂಳು, ಹೊಗೆ, ವಿಷಯಕ್ತ ಅನಿಲ, ವೈರಾಣು, ಬ್ಯಾಕ್ಟೀರಿಯ,ಶಿಲೀಂದ್ರ, ಕ್ಯಾನ್ಸರ್  ಕಣಗಳು, ಕ್ಷ-ಕಿರಣ ಕಣಗಳು ಎಲ್ಲದರಿಂದಲೂ ರಕ್ಷಣೆ ಒದಗಿಸಬಲ್ಲವು. FFP1,2,3 ಎನ್ನುವ ಹಲವು ಮಟ್ಟದ ಮಾಸ್ಕ್ ಗಳು ಲಭ್ಯವಿವೆ. ಇದನ್ನು ತರಭೇತಿಯಿರುವ ವ್ಯಕ್ತಿ ಪ್ರತಿಯೊಬ್ಬರ ಮುಖದ ಅಳತಗೆ ತಕ್ಕಂತೆ ಅಳವಡಿಸುತ್ತಾರೆ. ಇದನ್ನೇ ಫಿಟ್ ಟೆಸ್ಟ್ ಎನ್ನುತ್ತೇವೆ.

    ಇವೇ ಅಲ್ಲದೆ ಹಲವು ಬಗೆಯ ಸುಲಭ ರೆಸ್ಪಿರೇಟರ್ ಮಾಸ್ಕ್ ಗಳು ಕೂಡ ಲಭ್ಯವಿವೆ. ಆದರೆ ಎಲ್ಲ ಮುಖಗವಸುಗಳು ಧರಿಸುವವರಿಗೆ ಇದೇ ಬಗೆಯ ರಕ್ಷಣೆ ಒದಗಿಸುವುದಿಲ್ಲ. ಇನ್ನು ಮಾರುಕಟ್ಟೆಯಲ್ಲಿ ಮಾತಾಗಿರುವ ಚಿನ್ನದ, ರೇಶ್ಮೆಯ, ಡಿಸೈನರ್ಮುಖ ಗವಸುಗಳು ಬರಿಯ ಮನರಂಜನೆಗೆ ಮಾತ್ರ ಎನ್ನುವುದನ್ನು ಹೇಳಬೇಕಿಲ್ಲ.

    ಮಾಸ್ಕ್ ಗಳಲ್ಲಿ ರಾಜಕೀಯ ತೂರಿದ್ದು ಯಾವಾಗ?

    “ಮಾಸ್ಕನ್ನು ಧರಿಸುವುದುಸ್ವಾಭಿಮಾನದ ಲಿಬೆರಲ್ಸ್ ಗಾಗಿ ಆದರೆ ಅದನ್ನು ಧರಿಸಲು ನಿರಾಕರಿಸುವುದು ನಿರಂಕುಶ ರೆಪಬ್ಲಿಕನ್ ಗಳಿಗಾಗಿ “- ಎನ್ನುವ ಹೇಳಿಕೆಯೊಂದು ಅಮೆರಿಕಾದಲ್ಲಿ ಸುದ್ದಿ ಮಾಡಿತು.

    ಅಧ್ಯಕ್ಷ ಟ್ರಂಪ್ ಮಾಸ್ಕ್ ತೊಡಲು ತಾನು ಸಿದ್ಧನಿಲ್ಲ ಎಂದ ಮರುದಿನವೇ ಆತನ ಈಗಿನ ಪತ್ನಿ ಮಿಲಾನಿಯ ಮತ್ತು ಪುತ್ರಿ ಇವಾಂಕ ಮಾಸ್ಕ್ ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕಿದರು. ಎಡದವರು ಮಾಸ್ಕ್ ಹಾಕದವರ ಜನ್ಮ ಜಾಲಾಡಿದರೆ, ರಿಪಬ್ಲಿಕನ್ ಗಳಲ್ಲಿ ಹಲವರು ಮತ್ತು ಕಡು ಬಲಪಂಥೀಯರು ತಮ್ಮ ಆರೋಗ್ಯವನ್ನು ಕಡೆಗಣಿಸಿ ಮಾಸ್ಕ್, ಸಾಮಾಜಿಕ ಅಂತರ ಎಲ್ಲವನ್ನೂ ಗಾಳಿಗೆ ತೂರಿ ಆರೋಗ್ಯದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ರಾಜಕೀಯದ ದೃಷ್ಟಿಯಿಂದ ಮಾತ್ರ ನೋಡಿದರು. ಮಾಸ್ಕ್ ರಹಿತ ಮೆರವಣಿಗೆಯನ್ನು ನಡೆಸಿ, ಲಾಕ್ ಡೌನ್ ನ್ನು ವಿರೋಧಿಸಿದರು. ವೈದ್ಯರ, ವಿಜ್ಞಾನಿಗಳ, ವಿಶ್ವ ಸಂಸ್ಥೆಯ ಎಲ್ಲರ ಶಿಫಾರಸ್ಸುಗಳಿಗೆ ರಾಜಕೀಯವನ್ನು ಬೆರೆಸಿ ಕಲಬೆರಕೆ ಮಾಡಿದರು. ಈ ನಡುವೆ  ಸಿಲುಕಿದ ಸಾರ್ವಜನಿಕರು ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಯಿತು. ಇದರಿಂದಾಗಿ ಆರೋಗ್ಯದ ವಿಚಾರ ಮೂಲೆಗುಂಪಾಗಿ ಮಾಸ್ಕ್ ಅಲ್ಲಿನ ಜನರ ವೈಯಕ್ತಿಕ ಹೇಳಿಕೆಗಳಂತೆ ಕಾಣತೊಡಗಿದವು.

    ಇದು ಯಾವ ವಿಕೋಪಕ್ಕೆ ಹೋಯ್ತೆಂದರೆ, ಮೇ 4 ರಂದು ಮಿಶಿಗನ್ ನ ಫ್ಲಿಂಟ್ ಎಂಬಲ್ಲಿ ಡಾಲರ್ ಸ್ಟೋರ್ಸ್ ನ ಅಂಗಡಿಯ ಕೆಲಸಗಾರನೊಬ್ಬ ಗಿರಾಕಿಯೊಬ್ಬನ ಮಗಳು ಮಾಸ್ಕ್ ಧರಿಸದೆ ಅಂಗಡಿಯ ಒಳಬರುವಂತಿಲ್ಲ ಎಂದು ತಡೆದ. ಆ ಗಿರಾಕಿ ಅವನನ್ನೇ ಗುಂಡಿಟ್ಟು ಕೊಂದುಬಿಟ್ಟ.

    ಜುಲೈ 11ನೇ ತಾರೀಖು ಇದೂ ಬದಲಾಯಿತು. ಅಮೆರಿಕಾದಲ್ಲಿ ಒಂದೇ ದಿನ 66000 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾದರು.ಮಾಸ್ಕ್ ಎನ್ನುವ ಪುಟ್ಟ ಬಟ್ಟೆ ಟ್ರಂಪ್ ನನ್ನೂ ಮಣಿಸಿತು. ಮರುದಿನ ಆತ ಮತ್ತು ಆತನ ಹಿಂಬಾಲಕರು ದೊಡ್ಡ ಕರಿ ಮಾಸ್ಕ್ ನ್ನುಧರಿಸಿ “ ತಾನು ಮಾಸ್ಕ್ ವಿರೋಧಿಯಲ್ಲ, ಆದರೆ ಅದಕ್ಕೆ ಒಂದು ಟೈಂ ಮತ್ತು ಪ್ಲೇಸ್ ಇದೆ “ಎಂದು ಹೇಳಿಕೆ ಕೊಡಬೇಕಾಯಿತು.ಇದು ವಿಪರ್ಯಾಸದ ಸಂಗತಿಯಾದರೂ ಪ್ರಾಣ  ಭಯವಿರುವ ಬಹುಪಾಲು ಅಮೆರಿಕನ್ನರುಮುಖಗವಸನ್ನು ಧರಿಸಿಯೇ ಓಡಾಡುತ್ತಾರೆ.ಇಂಗ್ಲೆಂಡಿನಲ್ಲಿ ಕಾರಣಯುಕ್ತವಾದ ಚರ್ಚೆಗಳು ನಡೆದವು.

     ಮಾಸ್ಕ್ ಧರಿಸುವುದರಿಂದ  ನಿರ್ಧಿಷ್ಠವಾದ ಲಾಭ ಇದೆ ಎಂದು ಯಾವ ನಿಖರ ಸಾಕ್ಷ್ಯಗಳೂ ಇಲ್ಲ. ಆದರೆ ಮಾಸ್ಕ್ ಧರಿಸಿದ ಸಾಮಾನ್ಯ ಜನರು ತಮಗೆ ಕರೋನ ವೈರಸ್ಸಿನಿಂದ ಪೂರ್ತಿ ರಕ್ಷಣೆ ಸಿಕ್ಕಿದೆಯೆಂದು ತಿಳಿದು ಮಿಕ್ಕ ನಿಯಮಗಳನ್ನು ಗಾಳಿಗೆ ತೂರಬಹುದು, ಆದ್ದರಿಂದ ಆದಕ್ಕಿಂತ ಹೆಚ್ಚಿನ ಮಹತ್ವದ ಇತರೆ ಕ್ರಮಗಳ ಮೇಲೆ ಹೆಚ್ಚು ಒತ್ತು ನೀಡಬೇಕೆಂದು ಸರ್ಕಾರ  ಇದುವರೆಗೆ ನಿರ್ಧರಿಸಿತ್ತು. ಆದರೆ,ಮೊದಲ ಕರೋನ ಅಲೆ ನೆಲಕಚ್ಚಿ ಲಾಕ್ ಡೌನ್ ತೆರವಾಗುತ್ತಿರುವ ಈ ದಿನಗಳಲ್ಲಿ ಸಾಕ್ಷ್ಯಿ ಆಧಾರವನ್ನು ಅವಲಂಬಿಸಿ ತನ್ನ ನಿಲುವನ್ನು ಬದಲಿಸಿದೆ. ವ್ಯಾಪಾರವೂ ಸೇರಿದಂತೆ ಎಲ್ಲೆಡೆ ಮಾಸ್ಕ್ ಗಳನ್ನು ಧರಿಸಲು ಸಾರ್ವಜನಿಕರಿಗೆ ಕರೆನೀಡಿದೆ. ಇದೇ ಶುಕ್ರವಾರದಿಂದ ಅದನ್ನು ಒಳಾವರಣಗಳಲ್ಲಿ ಕಡ್ಡಾಯಗೊಳಿಸಿದೆ. ಆದರೆ ಆಫೀಸುಗಳಲ್ಲಿ ಇದು ಕಡ್ಡಾಯವಲ್ಲ.

    ಜಪಾನಿನಲ್ಲಿ ಮಾಸ್ಕ್ ನ್ನು ಧರಿಸುವುದು ಬಹಳ ಹಳೆಯ ಪದ್ದತಿ. 2003 ರ ರಿಂದಲೇ ಅಲ್ಲಿನ ಜನರು ಸಾಮಾನ್ಯ ಕೆಮ್ಮು ನೆಗಡಿಯಾದರೂ ಮಾಸ್ಕ್ ನ್ನು ಧರಿಸಿ ಓಡಾಡುತ್ತಾರೆ. ತಮ್ಮಿಂದ ಇನ್ನೊಬ್ಬರಿಗೆ, ಅವರಿಂದ ಮತ್ತೊಬ್ಬರಿಗೆ ಹರಡದಿರಲಿ ಎಂಬುದೇ ಎಲ್ಲರ ಸಮುದಾಯ ಭಾವನೆ.ಆದ್ದರಿಂದ ಕರೋನ ಕಾಲದಲ್ಲಿ ಮಾಸ್ಕ್ ಧರಿಸುವುದು ಅವರಿಗೆ  ಕಷ್ಟವಾಗಲೇ ಇಲ್ಲ.

    ಭಾರತದಲ್ಲಿ  ಇನ್ನೂ ಹಲವು ತಿಂಗಳ ಕಾಲ ಖಡ್ಡಾಯ ಮುಖಗವಸುಗಳ ಬಳಕೆ ಮುಂದುವರೆಯಲಿದೆ.ಎಲ್ಲರೂ ಧರಿಸಲು ಶುರುಮಾಡಿದರೆ ಅದು ಅಭ್ಯಾಸವೂ ಆಗುತ್ತದೆ. ಮಾಸ್ಕ್ ಗಳನ್ನು ಬಳಸುವುದರಿಂದ ಲಾಭವಿದೆಯೇ ಹೊರತು ನಷ್ಟವಿಲ್ಲ.

    ಮಾಸ್ಕ್ ಕುರಿತ ಮೂಢ ನಂಬಿಕೆಗಳು

    ಸಾಮಾನ್ಯ ಬಟ್ಟೆ ಮತ್ತು ಸರ್ಜಿಕಲ್ ಮಾಸ್ಕ್ ಗಳ (N 95)  ಬಳಕೆಯಿಂದ ಯಾವುದೇ ರೀತಿಯಲ್ಲಿ ಆರೋಗ್ಯಕ್ಕೆ ಬಾಧೆಯಾಗುವುದಿಲ್ಲ. ಅಮೆರಿಕಾದ ಕೆಲವರು ಮಾಸ್ಕ್ ಧರಿಸುವುದು ತಮ್ಮ ಸ್ವತಂತ್ರ್ಯಕ್ಕೆ ಅಡ್ಡಿ ಬರುವ ವಿಚಾರವೆಂಬ ಮೂಢನಂಬಿಕೆಯನ್ನು ತೋರಿಸಿದ್ದಾರೆ. ಕಳೆದವಾರ ಪ್ರಸಿದ್ದ ಕನ್ನಡ ದಿನಪತ್ರಿಕೆಯೊಂದರಲ್ಲಿ ವ್ಯಕ್ತಿಯೊಬ್ಬರು ಸಾಮಾನ್ಯ ಮಾಸ್ಕ್ ನ್ನು ಹೆಚ್ಚುಕಾಲ ಧರಿಸಿದರೆ ಆರೋಗ್ಯಕ್ಕೆ ಹಾನಿ ಎಂದು ಹೇಳುವ ಲೇಖನವನ್ನು ಬರೆದಿರುವುದನ್ನು ಓದಿ ಮಹದಾಶ್ಚರ್ಯವಾಯಿತು.ಮಾಸ್ಕ್ ಧರಿಸಬೇಕಾದ್ದು ಹೊರಗೆ ಹೋದಾಗ ಅಥವಾ ಒಳಾವರಣಗಳಲ್ಲಿ ಜನರು ಸೇರಿದ್ದಾಗ ಮಾತ್ರ. ಮನೆಯಲ್ಲಿದ್ದಾಗ, ತಮ್ಮದೇ ಕಾರು ಓಡಿಸುವಾಗ,ನಿದ್ದೆ ಮಾಡುವಾಗ, ಮನೆಯವರೊಂದಿಗಿದ್ದಾಗ ಇದರ ಅಗತ್ಯವಿಲ್ಲ. ಸರಿಯಾದನಿಯಮಗಳನ್ನು ಪಾಲಿಸಿ FFP ಮಾಸ್ಕ್ ಗಳನ್ನು ಧರಿಸಿದರೂ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ.

    ಮುಖಗವಸುಗಳನ್ನು ಬರಿಯ ಪೋಲೀಸರ ದಂಡಕ್ಕೆ ಹೆದರಿಕೊಂಡು ಬಳಸದೆ ಕರೋನ ವಿರುದ್ದ ಹೋರಾಡುವ ದೃಷ್ಟಿಯಿಂದ ಧರಿಸಿರಿ.ನಿಮ್ಮನ್ನು ಮತ್ತು ನಿಮ್ಮ ಸುತ್ತ ಮುತ್ತಲಿನ ಇತರರನ್ನು ರಕ್ಷಿಸಿರಿ.

    ಬಿಡುವುನೆಂದರೂ ಬಿಡದ Modern Physics ಎಂಬ ಮಾಯೆ

    ಒಮ್ಮೆ ತತ್ವಜ್ಞಾನಿಯಂತೆ ,ಮತ್ತೊಮ್ಮೆ ವಿಜ್ಞಾನಿಯಂತೆ, ಮಗದೊಮ್ಮೆ ರಾಜಕೀಯ ವಿಶ್ಲೇಷಕರಂತೆ ತಾವು ಕಂಡ ಸಂಗತಿಗಳನ್ನು ಸರಳ ಕನ್ನಡದಲ್ಲಿ ಮಂಡಿಸುವ ಮಂಜುನಾಥ ಬೊಮ್ಮಘಟ್ಟ ಕನ್ನಡಪ್ರೆಸ್ .ಕಾಮ್ ನ ಜನಪ್ರಿಯ ಲೇಖಕರಲ್ಲಿ ಒಬ್ಬರು. . ಎಲ್ಲರನ್ನೂ ಆವರಿಸಿರುವ ಭೌತಶಾಸ್ತ್ರದ ಕೌತುಕಗಳನ್ನು ಬೆಡಗಿನಿಂದ ನೋಡಿದ ಸಂದರ್ಭಗಳನ್ನು ಈ ಬರಹದಲ್ಲಿ ದಾಖಲಿಸಿದ್ದರೆ. ಓದಿ ಪ್ರತಿಕ್ರಿಯಿಸಿ

    ಸೈಕಲ್ ಮತ್ತು ರೇಡಿಯೋ ಗಳು ಶ್ರೀಮಂತ ಜೀವನದ ಸಾಧನಗಳಾಗಿದ್ದ ಕಾಲದಲ್ಲಿ ನನ್ನ ಬಾಲ್ಯ ಕಳೆದಿತ್ತು. ಎಲ್ಲರ ಮನೆ ರೇಡಿಯೋ ಗಳಲ್ಲಿ ಒಬ್ಬಳೇ ಹೆಂಗಸು ಮಾತಾಡ್ತಾಳಲ್ಲ ಎನ್ನುವಂತಹ ಅನುಮಾನ ಬಹಳ ದಿನಗಳವರೆಗೆ ನನ್ನಲ್ಲಿ ಇತ್ತು. ಅಂಚೆ ಇಲಾಖೆ ಹೇಗೆ ಕೆಲಸ ಮಾಡುತ್ತೆ ಅನ್ನುವ ಬಗ್ಗೆ ಪಠ್ಯದಲ್ಲಿ ಹೇಳಿದ್ದರೇ ವಿನಾ ರೇಡಿಯೋ ಬಗ್ಗೆ ಹೇಳಿರಲಿಲ್ಲ. ಅಂದರೆ ಅದು ಆಗ್ಗೆ ಭಯಂಕರ ತಾಂತ್ರಿಕತೆಯನ್ನು ಒಳಗೊಂಡ ಸಾಧನ!

    ನನ್ನ ಅನುಮಾನ ಪರಿಹಾರ ಆದದ್ದು ನಾನು ಎಂಜಿನಿಯರಿಂಗ್ ಸೇರಿದ ಮೇಲೆಯೇ. ಹೌದು ಅಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಟೆಲೆ ಕಮ್ಯುನಿಕೇಶನ್ ಎನ್ನುವ ಭಾಗದ ನನ್ನ ಹಿರಿಯ ಸ್ನೇಹಿತರಲ್ಲಿ ಚರ್ಚಿಸಿ ನನ್ನ ಅನುಮಾನ ಪರಿಹಾರ ಮಾಡಿಕೊಂಡಿದ್ದೆ. ಅಷ್ಟರಲ್ಲಾಗಲೇ ಟೀವಿ ಬಂದಿತ್ತು. ಆದರೆ ಅದರ ವೀಕ್ಷಣೆ ಎಲ್ಲರಿಗೂ ಸಾಧ್ಯ ಇರಲಿಲ್ಲ,ಟವರ್ ಬೇಕಿತ್ತು. ರಾಗಿಂಗ್ ನೆಪದಲ್ಲಿ ಪರಿಚಯವಾಗಿದ್ದ ಧಾರವಾಡದ,ಆಗ 3ನೇ ವರ್ಷದಲ್ಲಿದ್ದ(ಹೆಸರು ನೆನಪಾಗುತ್ತಿಲ್ಲ) ಹಿರಿಯನಲ್ಲಿ ಒಂದು ಸಾಯಂಕಾಲ ಕಾಲೇಜ್ ಬೀಚ್ ನಲ್ಲಿ ‘ಸಾರ್ ಎಲ್ಲೋ ಡೆಲ್ಲಿ,ಶ್ರೀಲಂಕಾ ದಲ್ಲಿ ಮಾತಾಡುವ ಹೆಂಗಸು ರೇಡಿಯೋದಲ್ಲಿ ನಮಗೆ ಎಲ್ಲಿ ಬೇಕಾದ್ರೂ ಕೇಳಿಸ್ತಾಳೆ,ಈ ಟೀವಿ ಜನ ಏಕೆ ನಮ್ಮೂರಲ್ಲಿ ಕಾಣಿಸಲ್ಲ’ ಅಂತ ಕೇಳಿದ್ದೆ. ಶಬ್ದ ತರಂಗಗಳು ಸುರಳಿಯಾಗಿ ಚಲಿಸುತ್ತವೆ,ಬೆಳಕಿನ ಕಿರಣ ನೇರವಾಗಿ ಚಲಿಸುತ್ತೆ ಅಂತ ಓದಿದ್ದೀಯ? ಅಂತ ಕೇಳಿದಾಗ,ಎಲ್ಲ ಒಮ್ಮೆಗೇ ಅರ್ಥವಾದಂತೆ ಭಾಸವಾಗಿತ್ತು.

    ಈ ಅಂಶಗಳನ್ನು 5ನೇ ತರಗತಿಯಲ್ಲಿ UNECEF science ಅಂತ ನಮಗಿದ್ದ ವಿಜ್ಞಾನ ಪಠ್ಯದಲ್ಲಿ ಇದ್ದದ್ದು,ಮೂರು ರಟ್ಟಿನ ಪ್ರಯೋಗ ಮಾಡಿ ಬೆಳಕು ನೇರ ಚಲನೆ ಹೊಂದಿದೆ ಅಂತ ಹೇಳಿದ್ದು ,ನಿಂತ ನೀರಲ್ಲಿ ಕಲ್ಲು ಹಾಕಿದಾಗ ಮೂಡುವ ನೀರಿನ ಸುರಳಿ ನೋಡಿದ್ದೀರಾ ಅಂತ ಕೇಳಿದ್ದ ನನ್ನ ಪ್ರಾಥಮಿಕ ಶಾಲೆಯ ವಿಜ್ಞಾನದ ಶರಣಪ್ಪ ಮೇಸ್ಟ್ರು ಎಲ್ಲ ನೆನಪಾಗಿತ್ತು. 5ನೇ ತರಗತಿಯಲ್ಲಿ ಓದಿದ್ದು ಏನು ಅಂತ ತಿಳಿಯಲು ನಾನು ಪಿಯುಸಿ ಯಲ್ಲಿ ಶೇಕಡ 98 ಅಂಕ ಪಡೆದು,ಸುರತ್ಕಲ್ ಎಂಜಿನಿಯರಿಂಗ್ ಕಾಲೇಜ್ ಸೇರಬೇಕಾಯ್ತು! ಇದನ್ನು ವಿಪರ್ಯಾಸ ಅನ್ನದೆ ಬೇರೆ ಏನು ಹೇಳಲಿ?

    ಇನ್ನು ಸೈಕಲ್…..ಇದರಷ್ಟು ಹುಚ್ಚು ನನಗೆ ಬಾಲ್ಯದಲ್ಲಿ ಬೇರೆ ಯಾವುದೂ ಹುಟ್ಟಿಸಿದ್ದಿಲ್ಲ. ಅದರ ಗಾಲಿಗಳು, ಕಡ್ಡಿಗಳು, ಭಯಂಕರ ಚೂಪಾದ ಹಲ್ಲುಗಳನ್ನು ಹೊಂದಿದ್ದ ಎರಡು ವಿವಿಧ ಗಾತ್ರದ ಸ್ಟೀಲ್ ಚಕ್ರಗಳು,ಅವುಗಳನ್ನ ಸೇರಿಸಿದೆಯೇನೋ ಎನ್ನುವಂತಹ ವಿಚಿತ್ರ ತೂತುಗಳಿರುವ ಚೈನ್, ತ್ರಿಕೋಣದಲ್ಲಿದ್ದ ಒಂದು ಇಂಚು ಗಾತ್ರದ ಕಬ್ಬಿಣದ ಪೈಪಿನಿಂದ ಮಾಡಿದ್ದ ಅದರ ಅಸ್ಥಿಪಂಜರ,ಚಿಕ್ಕ ಆಸನ, ಸ್ಟ್ಯಾಂಡ್ ಜೊತೆ ಸೇರಿಕೊಂಡಿದ್ದ ಹಿಂದಿನ ಆಸನ, ಆತ್ಮೀಯರನ್ನು ಮುಂದಿನ ಕಂಬಿನ ಮೇಲೆ ಕೂರಿಸಿಕೊಂಡು ಮಾಡುವ ಪಯಣ….ಓಹ್…ಒಂದಾ ಎರಡಾ …ನನ್ನನ್ನು ಮೂಕನನ್ನಾಗಿ ಮಾಡಿದ್ದು?!

    ಸೀಟಲ್ಲಿ ಕೂತರೆ ಪೆಡಲಿಗೆ ನನ್ನ ಕಾಲು ತಾಕುತ್ತಿರಲಿಲ್ಲ,ಹಾಗಾಗಿ ಕಂಬಿಯ ನಡುವೆ ಅಡ್ಡ ಕಾಲಿಂದ ಸೈಕಲ್ ಓಡಿಸುವಾಗ,ಅದು ಹೇಗೆ ಇದು ಬೀಳದೆ ಓಡುತ್ತಿದೆ ಎನ್ನುವ ಅಂಶ ತಲೆ ತಿನ್ನುತ್ತಿತ್ತು. ಚಲನೆಯೇ ಅದನ್ನು ಬೀಳದ ಹಾಗೆ ಹಿಡಿದಿಟ್ಟಿರುತ್ತದೆ ಅಂತ ತಿಳಿಯುವಾಗ ತುಟಿಯ ಮೇಲೆ ಸಣ್ಣಗೆ ಕೂದಲು ಬರಲು ಪ್ರಾರಂಭಿಸಿತ್ತು.

    ವಿಚಿತ್ರ ಕುತೂಹಲಗಳು

    ಆ ವಯಸ್ಸಲ್ಲಿ ಮೂಡುತ್ತಿದ್ದ ವಿಚಿತ್ರ ಕುತೂಹಲಗಳೇ ಮುದ ಕೊಡುತ್ತಿವೆ ಈಗ. ಹಾಗೆ ಮೂಡಿದ್ದ ಕುತೂಹಲಗಳಲ್ಲಿ ಈ ವಿದ್ಯುತ್ ಶಕ್ತಿಯದು ಮತ್ತೊಂದು ಅಧ್ಯಾಯ. ಶಿವನ ಸಮುದ್ರದಲ್ಲಿ ಮೇಲಿನಿಂದ ಬೀಳುವ ನೀರಿಗೆ,ಕೆಳಗೆ ಚಕ್ರಗಳು ತಿರುಗುವ ವ್ಯವಸ್ಥೆಯಿಂದ ಈ ವಿದ್ಯುತ್ ತಯಾರಾಗುತ್ತದೆ ಅಂತ ಹೇಳುವುದನ್ನು ಇನ್ನಿಲ್ಲದ ಕುತೂಹಲದಿಂದ ಕೇಳಿದ ದಿನಗಳು ನನ್ನಿಂದ ಇನ್ನೂ ಮರೆಯಾಗಿಲ್ಲ. ಶಾಲೆಯ ದಾರಿಯಲ್ಲಿ ಊರಲ್ಲಿದ್ದ ಒಂದೇ ಟ್ರಾನ್ಸ್ ಫಾರ್ಮರ್ ಲ್ಲಿ ಈ ವಿದ್ಯುತ್ ನ್ನು ಸಂಗ್ರಹಿಸಿ ಇಟ್ಟಿದ್ದಾರೆನೋ ಅನ್ನುವ ಕುತೂಹಲ ಬೇರೆ. ಅಸಲಿಗೆ ಈ ವಿದ್ಯುತ್ ಸಂಗ್ರಹ,ಉಳಿತಾಯ ಎನ್ನುವುದೂ ತುಂಬಾ ದಿನಗಳವರೆಗೆ ನನಗೆ ತಿಳಿಯದ ವಿಷಯದಲ್ಲಿ ಒಂದಾಗಿತ್ತು. ಕಾರಣ ಪ್ರಪಂಚದ ಎಲ್ಲ ವಸ್ತುಗಳು ಘನ, ದ್ರವ, ಗಾಳಿ ರೂಪದಲ್ಲಿವೆ ಎಂದು ಓದಿದ್ದು. ಹಾಗಾದರೆ ಈ ವಿದ್ಯುತ್ ಯಾವ ರೂಪದಲ್ಲಿ ಶೇಖರಣೆ ಆಗಿದೆ?…..ಇವು ಆಗ ತರಲೆ ಪ್ರೆಶ್ನೆಗಳಾಗಿ ಬಿಂಬಿಸಿಕೊಂಡಿದ್ದೂ ಇದೆ. ಇದನ್ನು ಹಿಡಿದಿಡುವ ಯಾವ ಸಾಧನೆಯೂ ಇಲ್ಲ,ಕಾರಣ ಇದಕ್ಕೆ ಆಕಾರ ಇಲ್ಲ,ಇದೊಂದು ಶಕ್ತಿ,ಉತ್ಪಾದಿಸಿದ ಹಾಗೆ ಇದರ ಬಳಕೆ ಆಗಬೇಕು ಅಂತ ನಾನು ತಿಳಿದದ್ದು ಸಿವಿಲ್ ಎಂಜಿನೀರಿಂಗ್ 3ನೇ ವರ್ಷದಲ್ಲಿ ಇದ್ದ ನೀರನ್ನು ಸಂಗ್ರಹಿಸುವ ಡ್ಯಾಮ್ , ನೀರಿಂದ ವಿದ್ಯುತ್ ಉತ್ಪಾದಿಸುವ ಪರಿಕರಗಳನ್ನು ನಿರ್ಮಿಸುವ ವಿಷಯ ಹೇಳುತ್ತಿದ್ದ ಹೈಡ್ರಾಲಿಕ್ಸ್ ಎನ್ನುವ ವಿಷಯ ಕಲಿಯುವಾಗ!

    ಇನ್ನು ಫೋನ್…ಇದನ್ನು ನಾನು ನೋಡಿದ್ದೇ ಸುರತ್ಕಲ್ ಕ್ಯಾಂಪಸ್ ನಲ್ಲಿ ಮತ್ತು ಆಗಿನ ಕೆಲವು ಸಿನೆಮಾಗಳಲ್ಲಿ. ಪ್ರಾಥಮಿಕ ಶಾಲೆಯ ದಿನಗಳಲ್ಲಿಯೇ ಖಾಲಿ ಬೆಂಕಿ ಪೊಟ್ಟಣಗಳಿಗೆ ದಾರ ಕಟ್ಟಿ ಹಲೋ,ಹಲೋ ಅಂತ ಆಟ ಆಡಿದ್ದರಿಂದಲೋ ಏನೋ ಮತ್ತು ಧ್ವನಿ ಸಂವಹನೆಗೆ ಒಂದು ಮಾಧ್ಯಮ ಬೇಕು ಅಂತ ಓದಿದ್ದರಿಂದಲೋ ವಿವರಿಸಲಾಗದ ಅರ್ಥದೊಂದಿಗೆ ಇದರ ಮರ್ಮ ಅರ್ಥ ಆಗಿತ್ತು. ಇದರ ಮುಂದುವರೆದ ಭಾಗಗಳಾಗಿ ಬಂದಿರುವ ಸೆಲ್ ಫೋನ್,ಸ್ಮಾರ್ಟ್ ಫೋನ್ ಈಗ ವಿಸ್ಮಯಗೊಳಿಸುತ್ತಿವೆ. ಇವುಗಳಿಗೆಲ್ಲ ಬುನಾದಿ ಎಂಬಂತಿದ್ದ ನಾನು ಕಲಿತ ಪಿಯುಸಿ ಯಲ್ಲಿನ ಭೌತಶಾಸ್ತ್ರ ವನ್ನು ಯಾಕೋ ಅವಲೋಕಿಸುವ ಮನಸ್ಸಾಗುತ್ತಿದೆ. ಬರೀ ಅಂಕಗಳನ್ನು ಪಡೆದು ಎಂಜಿನಿಯರ್ರೋ,ಡಾಕ್ಟ್ರೋ ಆಗುವ ಭರದಲ್ಲಿ ಆಗ ಅವಲೋಕಿಸುವ ವ್ಯವಧಾನ ಇರಲಿಲ್ಲವೇನೋ….

    ನಮಗೆ ಭೌತಶಾಸ್ತ್ರ 4 ಭಾಗಗಳ ವಿಷಯವಾಗಿ ಹೇಳಲ್ಪಟ್ಟಿತ್ತು. 1.ಬೆಳಕು(Light)2.ಧ್ವನಿ(sound)3.ಬಿಸಿ(Heat) 4, ಆಧುನಿಕ ಭೌತಶಾಸ್ತ್ರ (Modern Physics)

    ಈ Modern Physics.ಏನೆಂದರೆ ಏನೂ ಅರ್ಥ ಆಗದಿದ್ದ ಆ ದಿನಗಳಲ್ಲಿ,ಅರ್ಥ ಆಗಿದ್ದೆಂದರೆ definition, formulas, problem solving ಅಷ್ಟೇ.(ನನಗೆ ಮಾತ್ರ ಅನ್ವಯಿಸಿ ಹೇಳುತ್ತಿದ್ದೇನೆ. ಬೇರೆಯವರಿಗೆ ಎಲ್ಲ ಅರ್ಥ ಆಗಿರಲಿಕ್ಕೂ ಸಾಕು) ಮಾಡರ್ನ್ ಫಿಸಿಕ್ಸ್ ನಲ್ಲಿದ್ದ ನ್ಯೂಟ್ರಾನ್, ಪ್ರೋಟ್ರಾನ್,ಎಲೆಕ್ಟ್ರಾನ್, ಅಲ್ಫಾ ಕಣ, ಗ್ಯಾಮ ಕಣ, ಬೀಟಾ ಕಣ ದೇವರಾಣೆಗೂ ನನಗೆ ಅರ್ಥ ಆಗಿದ್ದಿಲ್ಲ. ಕಾರಣ ತಲೆ,ಬುಡ ಪರಿಚಯಿಸದೆ ಒಮ್ಮೆಲೇ ವಿಷಯಗಳನ್ನು ಹೇಳುವ ನಮ್ಮ ಪಠ್ಯಕ್ರಮ! ವಿಷಯಗಳಿಗೆ ಅಲ್ಪ,ಸ್ವಲ್ಪ ಪೀಠಿಕೆ ತುಂಬಾ ಸಹಾಯ ಆಗುತ್ತೆ ಅನ್ನುವುದು ನನ್ನ ವೈಯಕ್ತಿಕ ಅನಿಸಿಕೆ…ಇರಲಿ.

    Light ಮತ್ತು Sound ನ ಎಲ್ಲ ಪ್ರಯೋಜನಗಳನ್ನು Modern Physics ಸಹಾಯದೊಂದಿಗೆ ನಮ್ಮ ಜೀವಿತ ಅವಧಿಯಲ್ಲಿ ನೋಡಿ ಅನುಭವಿಸುತ್ತಿರುವುದು ನಮ್ಮ ಪೀಳಿಗೆಯ ಹೆಮ್ಮೆಯೇ ಸರಿ. ನಮ್ಮ ಕಾಲದಲ್ಲಿ ಮಾಡರ್ನ್ ಫಿಸಿಕ್ಲ್ ಅಂತ ಅನ್ನಿಸಿಕೊಂಡು ಶೈವಾವಸ್ಥೆಯಲ್ಲಿದ್ದ ವಿಷಯವು ಇಂದು ಎಲೆಕ್ಟ್ರಾನಿಕ್ಸ್, ಕಮ್ಯುನಿಕೇಶನ್ಸ್ , ಕಂಪ್ಯೂಟರ್ಸ್ ಅಂತ ಅನ್ನಿಸಿಕೊಂಡು ಅಕ್ಷರಶಃ ಪ್ರಪಂಚವನ್ನು ಆವರಿಸಿದೆ. ಎಲೆಕ್ಟ್ರಾನಿಕ್ಸ್ , ಡಿಜಿಟಲ್ ಆದಮೇಲೆ,ಇದರ ಓಟ ಊಹೆಗೂ ನಿಲುಕಲು ಅಸಾಧ್ಯ.

    ಯಾರ ನಿಯಂತ್ರಣ ಇಲ್ಲದೆ ಕೊಚ್ಚಿಹೋಗುತ್ತಿರುವ ಅನುಭವ

    ರೇಡಿಯೋ,ಸೈಕಲ್,ವಿದ್ಯುತ್,ಫೋನ್ ಇಲ್ಲದೇ ಬದುಕಿದ್ದ ನಾವು ಇಂದು ಈ ಡಿಜಿಟಲ್ ಎಲೆಕ್ಟ್ರಾನಿಕ್ಸ್ ನ ಸಾಧನೆ ಆದಂತಹ ಕಂಪ್ಯೂಟರ್,ಸೆಲ್ ಫೋನ್ ಇರದೇ ಘಂಟೆಗಳ ಕಾಲ ಇರಲಾಗುತ್ತಿಲ್ಲ. ಏನಿದು? ಯಾಕಿದು? ಹೀಗೆ ಅಂತ ಆಲೋಚಿಸುವ ವ್ಯವಧಾನ ಯಾರಿಗೂ ಇಲ್ಲ. ಪ್ರವಾಹದ ಅಲೆಯಲ್ಲಿ ಎಲ್ಲವೂ ಎಲ್ಲರೂ ಯಾರ ನಿಯಂತ್ರಣ ಇಲ್ಲದೆ ಕೊಚ್ಚಿಹೋಗುತ್ತಿರುವ ಅನುಭವ ಅಂತೂ ನನಗೆ ಆಗುತ್ತಿದೆ. ಊರು, ದೇಶ ಬಿಡಿ, ಗದ್ದಲದ ಮಕ್ಕಳು ಮನೆಯಿಂದ ಕಾಣೆಯಾಗಿದ್ದಾರೆ, ಗೊಣಗುಡುತ್ತಿದ್ದ ವೃದ್ಧಾರೂ ಕಾಣುತ್ತಿಲ್ಲ. ಯಾವಾಗಲೂ ಯಾವುದಾದ್ರು ವಿಷಯದಲ್ಲಿ ಕಾಣೆಯಾಗುವ ನಡು ವಯಸ್ಕರೂ ಇಂದು ಇದರಲ್ಲೇ ಬಿದ್ದಿದ್ದಾರೆ. ಇಡೀ ಮಾನವ ಪ್ರಪಂಚವನ್ನು ಇಂಥಹ ಮಾಯೆ ಆವರಿಸಿದ್ದು ಯಾವ ಇತಿಹಾಸದಲ್ಲಿ,ಯಾವ ಊಹೆಯ ಪುರಾಣದಲ್ಲಿಯೂ ಇಲ್ಲ! ಈಗ ಏನಾದ್ರು ನಮ್ಮ ವಿಷ್ಣು ಅಕಸ್ಮಾತ್ ಅವತಾರ ತಾಳಿದ್ರೆ,ಕೈಯಲ್ಲಿ ಸುದರ್ಶನ ಚಕ್ರದ ಬದಲಿಗೆ ಸೇಲ್ ಫೋನ್, ಗದೆಯ ಬದಲಿಗೆ lap top ಹಿಡಿಯುವುದು ಗ್ಯಾರಂಟಿ.

    ನಾವು ಪುರಾಣಗಳಲ್ಲಿ ಓದಿದ ಎಲ್ಲ ಅಂಶಗಳೂ ರೂಪ,ವೇಷ ಮರೆಸಿಕೊಂಡು ಈಗ ಪ್ರತ್ಯಕ್ಷವಾಗಿ,ಜನ ಸಾಮಾನ್ಯನೂ ಅನುಭವಿಸಿ,ಪ್ರಯೋಜನ ಪಡೆಯುತ್ತಿರುವುದು ಸಾಮಾನ್ಯವಾಗಿದೆ. ಇಡೀ ಪ್ರಪಂಚ Global Village ಅಂತ ಕರೆಯಿಸಿಕೊಂಡ ಹಳ್ಳಿಯಾಗಿದೆ! ಸೂರ್ಯ,ಚಂದ್ರ,ಗ್ರಹಗಳು,ನಿಲುಕದ ದೂರದಲ್ಲಿದ್ದ ತಾರೆಗಳು ಪಕ್ಕದ ಬೀದಿಯ ಮನೆಗಳಂತೆ ಆಗಿವೆ! ಇನ್ನು ಅದೊಂದು ಇದೆ, Nano Bio Technology ಅಂತ. ಅದನ್ನು ಬೇಕಾಗಿಯೇ ಮನುಷ್ಯ ತಡೆ ಹಿಡಿದಿದ್ದಾನೆ. ಇಲ್ಲವಾದ್ರೆ ಅಕ್ಷರಶಃ ರಕ್ತ ಬಿಜಾಸುರರು ನಮ್ಮ ಮಧ್ಯೆದಲ್ಲಿ ಇಷ್ಟೊತ್ತಿಗೆ ಓಡಾಡುತ್ತಿದ್ದರು!

    ಸೈಕಲ್ ನಿಂದ ಮೋಟಾರ್ ಸೈಕಲ್ಲಿಗೆ ಜಗತ್ತು ಬಂದು ತಲುಪಲು ಹಲವು ದಶಕಗಳ ಕಾಲ ಕಾದಿದ್ದ ಜಗತ್ತು ಇಂದು ಯಾವ ವೇಗದಲ್ಲಿ ಓಡುತ್ತಿದೆಯೆಂದ್ರೆ ಮಾನವನ ಊಹೆಗೆ ನಿಲುಕದ ಸಂಗತಿಯಾಗಿದೆ. ಈಗ ಅವಿಷ್ಕಾರಗೊಂಡ ಒಂದು ತಾಂತ್ರಿಕತೆ,ಹೊರಗೆ ಬಂದು ಕಣ್ಣು ಬಿಡುವಷ್ಟರಲ್ಲಿ ಅದರ ಮುಂದುವರೆದ ತಾಂತ್ರಿಕತೆ ರಾರಾಜಿಸುತ್ತಿರುತ್ತದೆ!ಭೂಮಿಯ ವೇಗವನ್ನು ಕಂಡು ಬೆಚ್ಚಿಬಿದ್ದಿದ್ದ ಮನುಷ್ಯ ಮತ್ತೆ ಬೆಚ್ಚಿರುವುದು ಈಗಲೇ….. ಇವೆಲ್ಲವನ್ನು ಕಂಡು ಅನುಭವಿಸಿದ ನಮ್ಮ ಪೀಳಿಗೆ ನಿಜಕ್ಕೂ ಅದ್ಭುತ ಕಾಲಘಟ್ಟಕ್ಕೆ ಸಾಕ್ಷಿಯಾಗಿದೆ ಅಂತ ಅನ್ನಿಸದೇ ಇರಲಾಗದು. Generations are born for future ಎನ್ನುವಂತೆ ಈಗಿನ ಹುಡುಗರು ಯಾವುದೇ ರೀತಿಯ ವಿಸ್ಮಯಗಳಿಲ್ಲದೆ,ಸಾಮಾನ್ಯದಲ್ಲಿ ಸಾಮಾನ್ಯ ಎನ್ನುವಂತೆ ಸಾಗುತ್ತಿರುವುದು ನೋಡಿಯೂ ಒಮ್ಮೊಮ್ಮೆ ನಾನು ವಿಸ್ಮಯಗೊಂಡಿದ್ದೇನೆ.

    ನಾನು ಓದಿದ್ದ ಭೌತಶಾಸ್ತ್ರದ 3ನೇ ಭಾಗವಾದ HEAT ಹಾಗೆಯೇ ಉಳಿದಿದೆ. ಅದರ ಆವಿಷ್ಕಾರ,ವಿರಾಟ ರೂಪದ ಅಂಶಗಳು ಇನ್ನು ಬರಬೇಕಾಷ್ಠೆ! LIGHT & SOUND ಗಳ ಆರ್ಭಟವೇ ಇಷ್ಟಿರಬೇಕಾದ್ರೆ, ಇನ್ನು HEAT ನ ಆರ್ಭಟ ಊಹಿಸಿಕೊಂಡರೇನೇ ವಿಸ್ಮಯವಾಗುತ್ತೆ ನನಗೆ….ನಿಮಗೆ?
    ವಿಸ್ಮಯ ಎನ್ನುವುದು ಮನುಷ್ಯನನ್ನು ಜೀವಂತವಾಗಿಸಿ ತನ್ನನ್ನು ತಾನು ಪ್ರಕಟಗೊಳ್ಳಲು ಪ್ರಕೃತಿ ನೀಡಿದ ಕಾಣಿಕೆಯಂತೆ ಅಪ್ಪ ಆಗಾಗ ಹೇಳ್ತಿದ್ದರು.

    Photo by Karlis Reimanis on Unsplash

    ಹ್ಯಾಂಡ್ ಮೇಡ್ ಸೋಪು ತಯಾರಿಸಿ ಯಶಸ್ವಿ ಉದ್ಯಮಿಯಾದ ಗೃಹಿಣಿ

    ಇಪ್ಪತ್ತೈದು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿರುವ ಲೇಖಕಿ ಅಲ್ಲಿ ಹ್ಯಾಂಡ್ ಮೇಡ್ ಸಾಬೂನು ತಯಾರಿಕೆ ಆರಂಭಿಸಿ ಯಶಸ್ವಿ ಉದ್ಯಮಿಯಾಗುವ ನಿಟ್ಟಿನಲ್ಲಿ ಮುಂದುವರೆದಿದ್ದಾರೆ. ಕನ್ನಡಪ್ರೆಸ್. ಕಾಮ್ ಓದುಗರಿಗೆ ಇದು ಸ್ಪೂರ್ತಿ ತುಂಬಲಿ. ಆ ಮೂಲಕ ಮತ್ತಷ್ಟು ಉದ್ಯಮಿಗಳು ಉದಯವಾಗಲಿ ಎಂಬ ಆಶಯ ನಮ್ಮದು.

    ನಾನು ಸುಮಾರು ಇಪ್ಪತ್ತೈದು ವರ್ಷಗಳಾಯ್ತು ಮುಂಬೈ ವಾಸಿಯಾಗಿ. ಸಂಸಾರ, ಮಕ್ಕಳ ಬೆಳವಣಿಗೆ ಒಂದು ಹಂತಕ್ಕೆ ಬಂದಿದೆ ಇನ್ನು ನನ್ನನ್ನು ನಾನು ಗಮನಿಸಿಕೊಳ್ಳುವ ಸಮಯ ಎನ್ನುವಂತಾದಾಗ ಒಂದಷ್ಟು ಸಂಸಾರದಾಚೆಯ ಪ್ರಪಂಚ ನೋಡಲು ಶುರುಮಾಡಿದ್ದೆ. ಗೆಳತಿಯರೊಡನೆ ಓಡಾಟ ಆಗಷ್ಟೇ ಶುರುವಾಗಿದ್ದ ಫೇಸ್ಬುಕ್ ಅನ್ನುವ ವರ್ಚುಯಲ್ ಪ್ರಪಂಚ ಒಳಗಿನ ಜಗತ್ತು ಶುರುವಾಗಿತ್ತು.

    ‌‌‌‌ ಆಗೀಗ ಗಂಡನೊಂದಿಗೆ ಕೈಗಾರಿಕಾ ಮೇಳ ಕರಕುಶಲ ಮೇಳ ಅಂತೆಲ್ಲಾ ಸುತ್ತುವಾಗ ಬಿಡದಂತೆ ಗಮನ ಸೆಳೆಯುತ್ತಿದ್ದದ್ದು ಬಣ್ಣ ಬಣ್ಣದ ಗಾಜಿನಂತ ಸೋಪುಗಳು. ಕೈಯಲ್ಲೊಮ್ಮೆ ಹಿಡಿದು ನಿಂತುಬಿಟ್ಟರೆ ಅವರು ವಿವರಿಸುತ್ತಿದ್ಧದ್ದು ಕಿವಿಯಿಂದಾಚೆ ಎಲ್ಲೋ ಸೇರುತ್ತಿತ್ತು. ಬಣ್ಣಗಳು ಚಿಕ್ಕಂದಿನಿಂದ ನನಗೆ ಸೋಜಿಗ ಸಂಭ್ರಮ ಹುಟ್ಟಿಸುತ್ತಿತ್ತು. ಅದರಲ್ಲೂ ಬಣ್ಣದ ಗಾಜುಗಳು ಹರಳುಗಳು ಕೈಗೆ ಸಿಕ್ಕರೆ ದಿಟ್ಟಿಸುತ್ತಾ ಪ್ರಪಂಚವನ್ನೇ ಮರೆತು ಅದರೊಳಗೇ ಮುಳುಗುತ್ತಿದ್ದೆ. ಆ ಬಣ್ಣಗಳ ಆಕರ್ಷಣೆಯಿಂದಾಗಿಯೇ ಮಧ್ಯದಲ್ಲಿ ಒಮ್ಮೆ ಒಂದು ವರ್ಷಗಳ ಕಾಲ ಕಲಾ ಮಾಧ್ಯಮದಲ್ಲಿ ಕಲಿಯಲು ಅವಕಾಶ ಸಿಕ್ಕಿತ್ತು. ನಂತರ ಮದುವೆ. ಎಲ್ಲಾ ಮರೆತಂತೆ ಜೀವನ ಸಾಗಿದ್ದಾಗ ಮತ್ತೆ ನನ್ನನ್ನು ಸೆಳೆದದ್ದು ಹ್ಯಾಂಡ್ ಮೇಡ್ ಸೋಪುಗಳು.

    ಹಾಗೆ ನೋಡಿದರೆ ನಾನು ಅಷ್ಟೇನು ಅಲಂಕಾರ ಪ್ರಿಯಳಲ್ಲ. ಆದರೂ ಈ ಸೋಪಿನ ಆಕರ್ಷಣೆ ಎಷ್ಟಾಯಿತೆಂದರೆ ಹೇಗಾದರೂ ಕಲಿಯಬೇಕು ಎಂದು ಹಠ ಮೂಡುವಷ್ಟು. ಅದಕ್ಕೆ ಪೂರಕವೆಂಬಂತೆ ಅಂಧೇರಿಯಲ್ಲಿ ಅದಕ್ಕೆ ಸಂಬಂಧಿಸಿದ ತರಗತಿಗಳು ನೆಡೆಯುತ್ತಿರುವುದು ಆನ್ ಲೈನ್ ಅಲ್ಲಿ ತಿಳಿದುಬಂತು. ಸೇರಿಕೊಂಡೆ. ಅಲ್ಲಿ ಸೋಪು ತಯಾರಿಕೆ ಹೇಳಿಕೊಟ್ಟರಾದರೂ ಅದರಲ್ಲಿ ಕಲೆ ಅರಳಿಸುವುದು ನಮ್ಮ ಅಭ್ಯಾಸದ ಬಲದಿಂದಷ್ಟೇ ಸಾಧ್ಯವಿತ್ತು. ಅಲ್ಲದೆ ಜೊತೆಗೆ ಕೇವಲ ಆಕರ್ಷಣೆಯ ವಸ್ತುವಾಗಷ್ಟೇ ಉಳಿದರೆ ಪ್ರಯೋಜನ ಸಾಲದು, ಅವುಗಳಲ್ಲಿ ಬಳಕೆ ಆಗುವ ಗಿಡಮೂಲಿಕೆ, ವಿವಿಧ ಎಣ್ಣೆಗಳ ಸುಗಂಧ ದ್ರವ್ಯಗಳ ಉಪಯೋಗ ಅವುಗಳ ಗುಣ, ಕ್ರಿಯೆಗಳ ಬಗ್ಗೆ ತಿಳಿವಳಿಕೆ ಅತ್ಯಗತ್ಯವಾಗಿತ್ತು. ಪ್ರತಿಯೊಂದನ್ನೂ ಯಾವ ಹಂತದಲ್ಲಿ ಯಾವ ರೀತಿಯಲ್ಲಿ ಯಾವ ರೂಪದಲ್ಲಿ ಬಳಕೆ ಮಾಡಬೇಕು ಎಂಬುದರ ಜ್ಞಾನ ಅತೀ ಮುಖ್ಯ ಎಂದು ಅರಿವಾಗಿ ನಂತರದ ದಿನಗಳಲ್ಲಿ ದೊಡ್ಡ ದೊಡ್ಡ ಅನುಭವಿಗಳು ಕಾಸ್ಮೆಟಿಕ್ ವಲಯದ ದಿಗ್ಗಜರೆನಿಸಿಕೊಂಡವರು ನೆಡೆಸುವ ವರ್ಕ್ ಶಾಪ್ ಗಳಿಗೆ ಸೇರಿಕೊಂಡೆ. ಕಲೆಯ ಜೊತೆ ವಿಜ್ಞಾನ ಅತ್ಯವಶ್ಯಕ ಎಂಬುದು ತಿಳಿಯಿತು.

    ಅವರು ಕೊಡುತ್ತಿದ್ದ ಮಾಹಿತಿಗಳೊಡನೆ ಅವರು ಹೇಳುತ್ತಿದ್ದ ಎಲ್ಲಾ ಸೋಪ್ ಸಂಬಂಧಿ ಬ್ಲಾಗ್ ಬರಹಗಳನ್ನು ಓದಲು ಶುರುಮಾಡಿದೆ. ಮಾಹಿತಿ ಸಿಗಬಹುದಾದ ಎಲ್ಲಾ ಮಾಧ್ಯಮಗಳನ್ನೂ ಸಿಕ್ಕಷ್ಟೂ ಜಾಲಾಡಿ ಕಲಿಯುತ್ತಾ ಹೋದೆ ಜೊತೆ ಜೊತೆಗೆ ತಯಾರಿಕೆ ಮಾಡುತ್ತಾ ನಡು ನಡುವೆ ಎದುರಾಗುತ್ತಿದ್ದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಕಾಸ್ಮೆಟಾಲಜಿ ಮಾಡಿದ್ದವರ ಬಳಿ ಸತತವಾಗಿ ಸಂಪರ್ಕದಲ್ಲಿದ್ದು ಸಲಹೆ ಕೇಳುತ್ತಿದ್ದೆ. ದುಡ್ಡು ಕೊಟ್ಟು ಅವರ ವರ್ಕ್ ಶಾಪ್ ಮಾಡಿದವರಿಗೆ ಮಾತ್ರ ಹಂಚಿಕೆಯಾಗುವ ಮಾಹಿತಿಗಳವು. ಕಲಿಯಲೇ ಬೇಕೆಂಬ ಹಠ ಇದ್ದ ಕಾರಣ ದುಡ್ಡು ಕೊಟ್ಟು ಮತ್ತೆ ಮತ್ತೆ ಹೋಗುತ್ತಿದ್ದೆ.

    ದುಬಾರಿ ಕಲಿಕೆ

    ಹಾಗೆ ನೋಡಿದರೆ ಇದು ದುಬಾರಿ ಕಲಿಕೆಯೇ. ಅದಕ್ಕಿಂತಾ ದುಬಾರಿ ಅವುಗಳ ತಯಾರಿಕೆಗೆ ಬೇಕಾಗುವ ಸಾಮಾನುಗಳು. ಒಟ್ಟಿನಲ್ಲಿ ಒಂದೂವರೆ ವರ್ಷದ ಸತತ ಪ್ರಯೋಗ ಮುಗಿಸಿ ಒಂದು ವರ್ಷದಿಂದೀಚೆಗೆ ನಾನು ತಯಾರಿಸುವ ಸಾಬೂನುಗಳು ಈಗಾಗಲೆ ಮಾರಾಟವಾಗುತ್ತಿರುವ ಬ್ರಾಂಡ್ ಸೋಪುಗಳ ಸಾಲಿನಲ್ಲಿ ನಿಲ್ಲಬಹುದು ಎನ್ನುವ ಭರವಸೆ ಕಲಿಸಿದವರಿಂದ ಸಿಕ್ಕಿತು. ಮೊದ ಮೊದಲು ಮನೆಯವರಿಗೆ,ಸಂಬಂಧಿಕರಿಗೆ ಬಳಸಲು ಕೊಟ್ಟು ಅವರಿಂದ ಜೈ ಅನ್ನಿಸಿಕೊಂಡು ನಂತರ ನನ್ನ ಗೆಳತಿಯರಿಗೆ ಮೊದ ಮೊದಲು ಮಾರಾಟ ಮಾಡಲು ಆರಂಭಿಸಿದೆ.

    ಅದೃಷ್ಟವಶಾತ್ ಪ್ರತಿಯೊಬ್ಬ ಗೆಳತಿಯೂ ಆ ವಿಷಯಕ್ಕೆ ಪ್ರೋತ್ಸಾಹಿಸಿ ಕೊಂಡುಕೊಂಡರು. ಪ್ರತಿಯೊಬ್ಬರ ಚರ್ಮದ ಮೇಲೂ ಅವರವರ ಚರ್ಮದ ಗುಣಕ್ಕೆ ಅನುಗುಣವಾಗಿ ಬೇರೆ ಬೇರೆ ಪರಿಣಾಮ ಬೀರುತ್ತಿದ್ದರಿಂದ ಅವರಿಗಾಗುತ್ತಿದ್ದ ಅನುಭವಗಳನ್ಬು ಹಂಚಿಕೊಳ್ಳುತ್ತಿದ್ದರು. ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಲು ಮಾರ್ಗದರ್ಶನ ಮಾಡುತ್ತಿದ್ದರು. ಆರೇಳು ತಿಂಗಳಲ್ಲಿ ಸಾಕಷ್ಟು ಅನುಭವ ಆಗಿ ಕೈ ಕೂಡ ಪಳಗಿ ಹೊಸ ಹೊಸ ಡಿಸೈನ್ ಸೋಪುಗಳನ್ನು ಮಾಡಲು ಕಲಿಯುತ್ತಾ ಬಂದಿದ್ದೇನೆ. ಅದನ್ನು ಇಷ್ಟ ಪಟ್ಟು ಕೊಂಡುಕೊಳ್ಳುವ ಒಂದು ಗುಂಪಿನ ಜನರೂ ಸಹ ಸಿಕ್ಕಿದ್ದಾರೆ. ಈ ಕಲಿಕೆಗೆ ಕೊನೆ ಎನ್ನುವುದೇ ಇಲ್ಲ. ಈ ಸೋಪ್ ಪ್ರಪಂಚ ಕೂಡ ಪ್ರಕೃತಿಯಷ್ಟೇ ವಿಶಾಲವಾದುದು.. ಕಲಿಕೆ ನಿರಂತರವಾಗಿದೆ. ಜೊತೆಗೆ ಗಳಿಕೆಯೂ ಆಗುತ್ತಿದೆ.

    ತಯಾರಿಕೆಯಲ್ಲಿ ಒಂದು ಮಟ್ಟಕ್ಕೆ ಬಂದ ನಂತರ ನಮ್ಮನ್ನು ನಾವು ವ್ಯಾಪಾರದ ಜಗತ್ತಿಗೆ ತೆರೆದುಕೊಳ್ಳಲು ಇನ್ನೂ ಸಾಕಷ್ಟು ಪಳಗಬೇಕಿದೆ. ಕಾಯಿದೆ, ಕಾನೂನು ರೆಜಿಸ್ಟ್ರೇಷನ್ ಪ್ರಕ್ರಿಯೆಗಳಲ್ಲಿ ತೊಡಗಬೇಕಿದೆ. ಮನೆ ಮಟ್ಟಿಗೆ ಗೆಳೆಯರು ಸಂಬಂಧಿಕರಿಗೆ ಕೊಡಲು ಮಾಡುವಾಗ ಇವುಗಳ ಅಗತ್ಯ ಇಲ್ಲದಿದ್ದರೂ ಮಾರುಕಟ್ಟೆಯಲ್ಲಿ ನಿಲ್ಲಲು ಅವೆಲ್ಲಾ ಅನಿವಾರ್ಯ. ಕುಶಲತೆ ತಯಾರಿಕೆಯಲ್ಲಿ ಇದ್ದರೆ ಮಾತ್ರ ಸಾಲದು. ವ್ಯವಹಾರದಲ್ಲೂ ಬೇಕು.

    ಉತ್ತರ ಭಾರತೀಯರು ಮತ್ತು ದಕ್ಷಿಣ ಭಾರತೀಯರು

    ನನ್ನ ಇಷ್ಟು ವರ್ಷದ ಅನುಭವದಲ್ಲಿ ಇಲ್ಲಿಯ ಜನರ ನಡವಳಿಕೆ ಹಾಗೂ ದಕ್ಷಿಣ ಭಾರತದವರ ನಡವಳಿಕೆ ತಕ್ಕಮಟ್ಟಿಗೆ ಅರ್ಥ ಮಾಡಿಕೊಂಡಿದ್ದೀನಿ.‌ ಈ ಉತ್ತರ ಭಾರತದ ಮಹಿಳೆಯರಿಗೆ ಹಿಂದಿನಿಂದಲೂ ಕಟ್ಟು ಪಾಡುಗಳು ಹೆಚ್ಚು. ಪುರುಷ ಪ್ರಾಧಾನ್ಯತೆ ಅನ್ನುವುದು‌ ಅವರಲ್ಲಿ ಇವತ್ತಿಗೂ ಅಂಟಿಕೊಂಡಿರುವ ವಿಷಯ. ಅವರವರ ಪರಿಸ್ಥಿತಿಗೆ ತಕ್ಕಂತೆ ಅಪವಾದಗಳು ಇರಬಹುದಾದರೂ ಶೇಕಡವಾರು ಲೆಕ್ಕ ತೆಗೆದುಕೊಂಡರೆ ಪುರುಷ ಪ್ರಾಧಾನ್ಯತೆ ಇವರ ಕುಟುಂಬಗಳಲ್ಲಿ ಹೆಚ್ಚು. ಈ ವಿಷಯದಲ್ಲಿ ಮುಂಬೈಯ ಮಾರಾಠಿ ಮಹಿಳೆಯರನ್ನು ಬೆಂಗಾಲಿ ಮಹಿಳೆಯರನ್ನು ಹೊರತು ಪಡಿಸಿ ಹೇಳಬೇಕಾಗುತ್ತದೆ. (ಅದಕ್ಕೆ ಹಲವಾರು ಕಾರಣಗಳಿವೆ)

    ಮಾರ್ವಾಡಿ ಗುಜರಾತಿ ಬಿಹಾರಿ ರಾಜಸ್ಥಾನಿ.. ಇವರಲ್ಲಿನ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ವೃತ್ತಿ ಆಯ್ಕೆ ಸ್ವಾತಂತ್ರ್ಯ ಕಡಿಮೆ. ಅದರಲ್ಲೂ ಓದಿದ್ದರೂ ವೃತ್ತಿಯ ಕಾರಣಕ್ಕೆ ಹೊರಗೆ ಒಬ್ಬಂಟಿಯಾಗಿ ಹೋಗುವ ಅವಕಾಶಗಳಂತೂ ತೀರಾ ಕಡಿಮೆ.‌ಇವರಲ್ಲಿ ಹೆಚ್ಚಿನಂಶ ವ್ಯಾಪಾರಸ್ಥ ಕುಟುಂಬದವರೇ ಆದ್ದರಿಂದ ಸಾಕಷ್ಟು ಮನೆಗಳಲ್ಲಿ ಆರ್ಥಿಕ ತೊಂದರೆ ಅಷ್ಟಾಗೇನೂ ಕಾಡುವುದಿಲ್ಲ. ಹಾಗೆ ನೋಡಿದರೆ ತುಂಬಾ ಅನುಕೂಲಸ್ಥರು ಸಾಕಷ್ಟು ಜನರಿದ್ದಾರೆ.

    ಇವರ ಮನೆಯ ಹೆಣ್ಣು ಮಕ್ಕಳಿಗೆ ಐಶಾರಾಮಕ್ಕೇನೂ ಕೊರತೆ ಇರುವುದಿಲ್ಲ. ಆದರೂ ಇತ್ತೀಚೆಗೆ ಅಂಥ ಕುಟುಂಬದ ಹೆಣ್ಣುಮಕ್ಕಳಿಗೂ ಸ್ವತಃ ದುಡಿಯುವ ತಮ್ಮ ಅಸ್ತಿತ್ವ ಕಂಡುಕೊಳ್ಳುವ ತುಡಿತ ಹೆಚ್ಚಾಗಿದೆ.ಮನೆಯಲ್ಲಿ ವ್ಯಾಪಾರಸ್ಥರೇ ಹೆಚ್ಚಾಗಿ‌ ಇರುವ ಕಾರಣ ಸಹಜವಾಗಿಯೇ ವ್ಯಾಪಾರದ ಗುಟ್ಟುಗಳು ಚಿಕ್ಕ ವಯಸ್ಸಿನಿಂದಲೇ ಕರತಲಾಮಲಕವಾಗಿರುತ್ತದೆ.
    ಈ ಅನುಕೂಲಗಳಿಂದಾಗಿ ಇಂದಿನ ಹೆಚ್ಚು ಉತ್ತರ ಭಾರತೀಯ ಮಹಿಳೆಯರು ಹೆಚ್ಚು ಪ್ರಚಾರಕ್ಕೆ ಬರದೆಯೂ ಮನೆಯಿಂದಲೇ ವ್ಯಾಪಾರ ವಹಿವಾಟುಗಳನ್ನು ಮಾಡುತ್ತಾ ಸಬಲೀಕರಣ ಹೊಂದುತ್ತಿದ್ದಾರೆ. ಅವರಿಗೆ ತಾವು ವ್ಯಾಪಾರ ಮಾಡುತ್ತಿರುವುದರ ಬಗ್ಗೆ ಯಾವುದೇ ಕೀಳರಿಮೆ ಇಲ್ಲ. ಕೆಲವು ಮಹಿಳೆಯರಂತೂ‌ ವ್ಯಾಪಾರದಲ್ಲಿ ಪುರುಷರನ್ನೂ ಮೀರಿಸುವ ಚಾಕಚಕ್ಯತೆ ತೋರಿಸಿ ಕಡೆಗೆ ಅವರ ಮನೆಯ ಪುರುಷರೇ ಅವರ ವ್ಯವಹಾರಗಳಿಗೆ ಒತ್ತಾಸೆಯಾಗಿ ನಿಲ್ಲುತ್ತಿದ್ದಾರೆ.

    ಹೀಗೆ ಮನೆಯಿಂದಲೇ ವ್ಯಾಪಾರ ಮಾಡಿ ಅಂತರಾಷ್ಟ್ರೀಯ ಮಟ್ಟದ ವರೆಗೆ ಹೆಸರು ಮಾಡಿದವರ ಬಗ್ಗೆ ನಾನೇನು ಹೇಳಬೇಕಿಲ್ಲ. ಎಲ್ಲವೂ ಮಾಧ್ಯಮದ ಮೂಲಕ ತಿಳಿಯುವಂತದ್ದೆ.‌ ಇವರಿಂದ ಇಡೀ ಭಾರತದ ಮಹಿಳೆಯರು ಕಲಿಯುವಂತದ್ದು ಸಾಕಷ್ಟಿದೆ. ಇವರ ವ್ಯಾಪಾರ ಕೌಶಲ್ಯಗಳು ಅನುಕರಣೀಯ. ಇಂಥವರಲ್ಲಿ ದುಡಿಮೆ ಅನ್ನುವುದು ಅವಶ್ಯಕತೆಗಿಂತ ಅಭ್ಯಾಸ ಆಗಿ ಹೋಗಿದೆ.

    ಅದೇ ನಮ್ಮ ದಕ್ಷಿಣದ ಕಡೆಯ ಹೆಣ್ಣು ಮಕ್ಕಳನ್ನು ತೆಗೆದುಕೊಂಡರೆ ಬಹಳ ಬೇಗ ಸಾಕ್ಷರತೆಗೆ ತೆರೆದುಕೊಂಡವರು ಹಾಗೂ ಶೇಕಡವಾರು ಲೆಕ್ಕದಲ್ಲಿ ವಿದ್ಯಾಭ್ಯಾಸ ಹಾಗು ವೃತ್ತಿಯ ಆಯ್ಕೆ ವಿಷಯದಲ್ಲಿ ಉತ್ತರ ಭಾರತೀಯ ಮಹಿಳೆಯರಿಗಿಂತ ಹೆಚ್ಚು ಸ್ವತಂತ್ರರು. ಇವರ ತಲೆಗಳಲ್ಲಿ ಚಿಕ್ಕಂದಿನಿಂದಲೂ ವಿದ್ಯಾಭ್ಯಾಸದ ಪ್ರಾಮುಖ್ಯತೆ ಬಗ್ಗೆ ಮನೆ ಮನೆಗಳಲ್ಲಿ ತುಂಬಿರುತ್ತಾರಾಗಲೀ, ವ್ಯಾಪಾರ ವ್ಯವಹಾರದ ಬಗ್ಗೆ ಅಲ್ಲ. ವ್ಯಾಪಾರ ಮಾಡುವವರ ಬಗ್ಗೆ ಇವರಲ್ಲಿ ಒಂದು ರೀತಿಯ ಉದಾಸೀನತೆ ಅಥವಾ ಅದು ಅನವಶ್ಯಕ ಕೆಲಸ ಎನ್ನುವ ಭಾವವೇ ಹೆಚ್ಚು. ಇಲ್ಲೂ ಕೂಡ ಕೆಲವರು ಅಪವಾದವಾಗಿ ಇರಬಹುದು.

    ಇವತ್ತಿಗೂ ಮನೆಯಿಂದ ವ್ಯಾಪಾರ ವ್ಯವಹಾರ ಮಾಡುತ್ತಿರುವ ಮಹಿಳೆಯರನ್ನು ಕಂಡರೆ ಹೆಚ್ಚಿನವರಿಗೆ ಪಾಪ ಹೆಚ್ಚು ಕಲಿಯದವರೇನೋ ಅನ್ನುವ ಅನಿಸಿಕೆ ಹುಟ್ಟಿಬಿಡುತ್ತದೆ. ಹಾಗಾಗಿ ವ್ಯಾಪಾರದ ವಿಷಯದಲ್ಲಿ ನಮ್ಮ ದಕ್ಷಿಣ ಭಾರತದ ಮಹಿಳೆಯರು ಉತ್ತರ ಭಾರತೀಯ ಮಹಿಳೆಗಿಂತ ಹಿಂದೆ ಎಂದೇ ಹೇಳಬೇಕು. ನಾವಿನ್ನು ಎಂಜಿನಿಯರ್ ಡಾಕ್ಟರ್ ಸರ್ಕಾರಿ ಅಧಿಕಾರಿಗಳು ಇಂಥವರು ಮಾತ್ರ ಸಮಾಜದಲ್ಲಿ ಮಾನ್ಯರು ಅನ್ನುವ ದೃಷ್ಟಿಕೋನದಿಂದ ಹೊರ ಬರಬೇಕಾದ ಅವಶ್ಯಕತೆ ಹಿಂದೆಂದಿಗಿಂತ ಇಂದು ಅತ್ಯಗತ್ಯವಾಗಿದೆ.

    ಮನೆಯಿಂದ ಸಣ್ಣ ಪುಟ್ಟ ವ್ಯವಹಾರ- ವ್ಯಾಪಾರ ಮಾಡುವುದು ನಾಲ್ಕು ಜನರಿಗೆ ತಿಳಿದರೆ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂಬ ಹುಂಬತನದಿಂದ‌ ಇಲ್ಲಿಯ ಮಹಿಳೆಯರು ಮೊದಲು ಹೊರಬರಬೇಕಿದೆ. ಹಾಗೆಯೇ ಮನೆಯ ಇತರ ಸದಸ್ಯರೂ ಕೂಡ ತಮ್ಮ ಮನೆಯ ಹೆಂಗಸರಲ್ಲಿ ಸೂಕ್ತವಾದ ಯಾವುದೇ ಕೌಶಲ್ಯ ವಿದ್ದರೆ ಅವರನ್ನು ಪ್ರೋತ್ಸಾಹಿಸಿ ಆ ಮೂಲಕ ಆರ್ಥಿಕ ಭದ್ರತೆ ಕಂಡುಕೊಳ್ಳಲು ಸಹಾಯ ಮಾಡಬೇಕಿದೆ. ಈಗಂತೂ ಸೋಶಿಯಲ್ ಮೀಡಿಯಾಗಳು ಬೆರಳ ತುದಿಯಲ್ಲೇ ಲಭ್ಯವಿರುವಾಗ ಅವುಗಳ ಸದುಪಯೋಗ ಮಾಡಿಕೊಂಡು ದೇಶದ ಆರ್ಥಿಕ ಬೆಳವಣಿಗೆಗೆ ಸಣ್ಣ ಮಟ್ಟದಲ್ಲೇ ಸರಿ, ಕೊಡುಗೆ ನೀಡಬಹುದಾಗಿದೆ.

    ಟಿಫಿನ್ ಲಂಚ್ ಚಾಟ್ ಸರ್ವಿಸ್

    ಇದಕ್ಕೆ ಪೂರಕವಾದ ಒಂದು ಸಂಗತಿಯನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ. ನಾನು ನಮ್ಮ ಬೆಂಗಳೂರಿನ ಫ್ಲಾಟ್ ಒಂದನ್ನು ಬಾಡಿಗೆದಾರರಿಂದ ಬಿಡಿಸಿಕೊಂಡು ನಾವು ಮುಂಬೈಯಿಂದ ಬೆಂಗಳೂರಿಗೆ ಆಗಾಗ ಹೋದಾಗ ಉಳಿದುಕೊಳ್ಳುವುದಕ್ಕೆ ಬೇಕಾಗುತ್ತದೆ ಎಂದು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ಆ ಸಮಯದಲ್ಲಿ ಅಲ್ಲಿಯ ವಸತಿ ಸಮುಚ್ಚಯದಲ್ಲಿಯೇ ಸುಮಾರು ವಾಟ್ಸಾಪ್ ಗ್ರೂಪ್ಗಳು ಇರುವುದು ಪರಿಚಿತರಿಂದ ತಿಳಿದು ಬಂತು. ಹಲವಾರು ವ್ಯಾಪಾರಗಳು ಆ ಮೂಲಕ ನಡೆಯುತ್ತದೆ. ಅದರಲ್ಲಿ ಸ್ಥಳೀಯ ಮಹಿಳೆಯರೇ ಟಿಫಿನ್ ಲಂಚ್ ಚಾಟ್ ಸರ್ವಿಸ್ ನೆಡೆಸುವ ವ್ಯವಸ್ಥೆ ಕೂಡ ಮಾಡಿಕೊಂಡಿದ್ದಾರೆ. ಅಲ್ಲಿರುವ ಹೆಚ್ಚಿನಂಶ‌ ಎಲ್ಲರೂ ಆರ್ಥಿಕವಾಗಿ ಅನುಕೂಲಸ್ಥರೆ. ಹೆಚ್ಚಿನವರು ಉತ್ತರ ಭಾರತೀಯರು. ಅವರು ತಮ್ಮ ಮನೆಗಳಿಂದಲೇ ಖಾದ್ಯಗಳನ್ನು ತಯಾರಿಸಿ ಗ್ರೂಪ್ ಅಲ್ಲಿ ಪ್ರಾಚಾರ ಕೊಟ್ಟು ಮಾರಾಟ ಮಾಡುತ್ತಾ ಬಂದಿದ್ದಾರೆ. ಆ ಇಡೀ ಗುಂಪಿನಲ್ಲಿ ಸರಿಯಾದ ದಕ್ಷಿಣ ಭಾರತದ ತಿನಿಸು ಮಾತ್ರ ಸಿಗುವುದಿಲ್ಲ. ಸಿಕ್ಕರೂ ಹೇಳಿಕೊಳ್ಳುವಂಥದ್ದಲ್ಲ. ಕಾರಣ ಮತ್ತೆ ಹೇಳಬೇಕಿಲ್ಲ.

    ಒಮ್ಮೆ ನಾನು ನಾಲ್ಕು ಪಾನಿಪುರಿ ಆರ್ಡರ್ ಕೊಟ್ಟಿದ್ದೆ. ತಯಾರಿಸಿ ಮಾರುವ ಮಹಿಳೆ‌ ಇಪ್ಪತ್ತು ರುಪಾಯಿಗೆ ಒಂದು ಪ್ಲೇಟ್ ಮನೆಗೇ ತಲುಪಿಸುವವರಿದ್ದರು. ನನಗೆ ಇಲ್ಲಿಯ ಪಾನಿಪುರಿ ಮಾರುವವರನ್ನು ಹೆಚ್ಚಾಗಿ ನೋಡಿದ್ದ ಕಾರಣ.. ತಂದು ಕೊಡುವವರ ಬಗ್ಗೆ ಹೆಚ್ಚೇನೂ ನಿರೀಕ್ಷೆ ಇರಲಿಲ್ಲ. ಮನೆಯ ಸಾಮಾನುಗಳನ್ನು ಜೋಡಿಸುವುದರಲ್ಲಿ ನಾವು ನಿರತರಾಗಿದ್ದೆವು. ಬಟ್ಟೆಗಳು ಗಲೀಜಾಗಿ ನಾವೇ ಸ್ವತಃ ಏನಾದರು ಮನೆಯಲ್ಲೇ ಮಾಡಿಕೊಂಡು ತಿನ್ನಲು ಸಮಾಯಾಭಾವವೂ ಇತ್ತು. ಹಾಗಾಗಿ ಹೊರಗಿಂದ ತರಿಸುವುದು ಅನಿವಾರ್ಯವೂ ಆಗಿತ್ತು.

    ಕೆಲ ಸಮಯದ ನಂತರ ಆರ್ಡರ್ ಕೊಟ್ಟ ಪಾನಿಪುರಿ ಮನೆಗೆ ಬಂತು. ತಂದವರು ಎಷ್ಟು ಶಿಸ್ತಾಗಿ ಶುಭ್ರವಾಗಿ ಸುಂದರವಾಗಿ ತಾಯಾರಾಗಿ ಬಂದಿದ್ದರೆಂದರೆ ನಮಗೆ ನಮ್ಮ ಆ ಸ್ಥಿತಿಯಲ್ಲಿ ಅವರನ್ನು ಸ್ವಾಗತಿಸಬೇಕಾಗಿ ಬಂದದ್ದು ಬಹಳ ಮುಜುಗರವನ್ನುಂಟು ಮಾಡಿತ್ತು.

    ಬಂದವರು ಪಾನಿಪುರಿ ತಯಾರಿಸುವ ಮಹಿಳೆಯ ಪತಿ. ಅವರು ಒಳ್ಳೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ನಮ್ಮ ಕಮಿಟಿಯ ಸದಸ್ಯರು ಹೌದು ಎಂಬುದು ನಂತರ ತಿಳಿದುಬಂತು. ಕೊಡುವ ಒಂದು ಇಪ್ಪತ್ತು ರುಪಾಯಿ ಪಾನಿ ಪುರಿಯ ಬಗ್ಗೆ ಅದೆಂತಾ ಹೆಮ್ಮೆ ಇತ್ತು ಎನ್ನುವುದು ಅವರ ಮಾತು ಹಾವ ಭಾವವನ್ನು ನೋಡಿಯೇ ತಿಳಿಯಬೇಕು. ಅವರ ಪತ್ನಿ ತಯಾರಿಸುವ ಪಾನಿಪುರಿ ಉತ್ಕೃಷ್ಟ ಮಟ್ಟದ್ದೆಂದು, ಅದನ್ನು ತಿಂದ ಮೇಲೆ ಅದರ ಬಗ್ಗೆ ನಮ್ಮ ಅನಿಸಿಕೆ ಹೇಳುವುದು ಬಹಳ ಮುಖ್ಯವೆಂದು‌ ದೊಡ್ಡ ಕಾರ್ಪೋರೇಟ್‌ ಡೀಲ್ ಎನ್ನುವ ರೀತಿಯಲ್ಲಿ ತಾಳ್ಮೆಯಿಂದ ವಿವರಿಸಿ ಹೋದರು. ಅವರು ಹೇಳಿದ ರೀತಿಯಲ್ಲೇ ಪಾನಿಪುರಿ ಚೆನ್ನಾಗಿತ್ತು ಸಹ. ಅದನ್ನು ಅವರಿಗೆ ಮೆಸೇಜ್ ಮಾಡಿ ತಿಳಿಸಿದೆವು ಅವರಿಗೂ ಸಿಕ್ಕ ಪ್ರೋತ್ಸಾಹಕ್ಕೆ ಖುಶಿ ಆಯಿತು. ಅವತ್ತಿನಿಂದ ನಾವು ಅವರು ಪರಿಚಿತರಾದೆವು.ಎರಡು ಸಾವಿರ ಮನೆಗಳನ್ನು ಹೊಂದಿರುವ ಕಾಂಪ್ಲೆಕ್ಸ್ ಅಲ್ಲಿ ಯಾವುದೇ ಸಂಭ್ರಮಾಚರಣೆಗಳು ನೆಡೆಯುತ್ತಿದ್ದರೂ ಆತ ಮುಂದೆ ನಿಂತು ಎಲ್ಲರನ್ನು ಪಾಲ್ಗೊಳ್ಳುವಂತೆ ಹುರಿದುಂಬಿಸುವ ರೀತಿಯನ್ನು ನಾವು ಇವತ್ತಿಗೂ ಅಚ್ಚರಿ ಹಾಗು ಮೆಚ್ಚುಗೆಯಿಂದ ನೋಡುತ್ತೇವೆ. ನಾವು ಮಾಡುವ ಯಾವುದೇ ಕೆಲಸದಲ್ಲಿ ಘನತೆ ಹೇಗಿರಬೇಕೆಂದು ಅರ್ಥವಾಗಿದೆ.

    ನನಗೀಗ ಸ್ವತಃ ನಾನು ಮಾಡುತ್ತಿರುವ ಹ್ಯಾಂಡ್ ಮೇಡ್ ಸೋಪುಗಳ ಬಗ್ಗೆ ಅದರ ಮಾರಾಟದ ಬಗ್ಗೆ ಮತ್ತಷ್ಟು ಗೌರವ ಆಸಕ್ತಿ ಹೆಚ್ಚಾಗಿದೆ. ನಿಮಗೂ ಈ ಬರಹ ಆ ನಿಟ್ಟಿನಲ್ಲಿ ಪ್ರೋತ್ಸಾಹಿಸಲಿ ಎಂಬುದು ನನ್ನ ಆಶಯ.

    ಮಂಗಳನ ಅಂಗಳದ ಏಲಿಯಾನ್ಸ್ ಸುಧಾರಿತ ತಂತ್ರಜ್ಞಾನ ಹೊಂದಿವೆಯಾ ?

    ಭೂಮಿಯಲ್ಲಿರುವ ಮಾನವರು ನಾವೇ ಶ್ರೇಷ್ಠರು, ನಮ್ಮಷ್ಟು ವಿಜ್ಞಾನ-ತಂತ್ರಜ್ಞಾನದಲ್ಲಿ ಮುಂದುವರಿದವರು ಇಲ್ಲ ಎಂದು ಹೆಮ್ಮೆಯಿಂದ ಬೀಗುತ್ತಿದ್ದೇವೆ. ಆದರೆ, ಈ ಬ್ರಹ್ಮಾಂಡದಲ್ಲಿ ಅದೆಷ್ಟು ಭೂಮಿಯಂತಹ ಗ್ರಹಗಳು ಇವೆಯೋ ಮತ್ತು ಅವು ಎಷ್ಟು ಸಹಸ್ರ ವರ್ಷಗಳ ಹಿಂದೆಯೇ ಹುಟ್ಟಿದ್ದು, ಆ ಮೂಲಕವೇ ಅಂತಹ ಗ್ರಹಗಳಲ್ಲಿ ಇರುವ ಜೀವಿಗಳು ಅಂದರೆ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಅನ್ಯಗ್ರಹ ಜೀವಿಗಳು (ಯುಎಫ್ಒ- ಅನ್ ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್ಸ್- ಆಕ್ಸ್ ಫರ್ಡ್ ಇಂಗ್ಲಇಂಗ್ಲಿಷ್ ಡಿಕ್ಷನರಿ) ನಾನಾ ರೀತಿಯಲ್ಲಿ ವಿಜ್ಞಾನ-ತಂತ್ರಜ್ಞಾನದಲ್ಲಿ ಅಗಣಿತ ಪರಿಣತಿಯನ್ನು ಸಾಧಿಸಿವೆಯೋ ಎಂಬ ಬಗ್ಗೆ ಇನ್ನೂ ನಾವು ಭೂಮಿಯಲ್ಲಿರುವ ಜನರು ಅಜ್ಞಾನಿಗಳಾಗಿಯೇ ಇದ್ದೇವೆ. ಯಾವುದೇ ಸಂದರ್ಭ, ಸನ್ನಿವೇಶದಲ್ಲಿ ಇಂತಹದ್ದೊಂದು ಕಾಣಿಸಿತ್ತಂತೆ, ಎಂಬ ಮಾತಿನಲ್ಲೇ ನಾವು ಆ ಕುರಿತು ಯೋಚನೆ ಮಾಡುತ್ತಿದ್ದೇವೆ.

    ಇಷ್ಟೆಲ್ಲಾ ಪೀಠಿಕೆ ಮಾತು ಯಾಕೆಂದರೆ ಇತ್ತೀಚೆಗೆ ಅನ್ಯಗ್ರಹ ಜೀವಿಗಳ ಬಗ್ಗೆ ಖಾಸಗಿಯಾಗಿ ಅವಿರತವಾಗಿ ಸಂಶೋಧನೆ ಮಾಡುತ್ತಿರುವ ಸುಪ್ರಸಿದ್ಧ ಏಲಿಯನ್ ಹಂಟರ್ ಸ್ಕಾಟ್ ಸಿ ವಾರಿಂಗ್ ಈ ಕುರಿತು ಹೊಸ ವಿಷಯವನ್ನು ಹೊರ ಹಾಕಿದ್ದಾರೆ.

    ಅವರ ಪ್ರಕಾರ ಮಂಗಳ ಗ್ರಹದಲ್ಲಿ ವಿನೂತನ ಯಂತ್ರವೊಂದು ಕಂಡು ಬಂದಿದ್ದು, ಇದು ಕೆಂಪು ಗ್ರಹದಲ್ಲಿ ಜೀವಿಸುತ್ತಿರುವ ಏಲಿಯನ್ಸ್ ನದ್ದು ಎಂದವರು ಪ್ರತಿಪಾದಿಸಿದ್ದಾರೆ.  ನಾಸಾ ಕ್ಯೂರಿಸಿಟಿ ರೋವರ್ ಕ್ಯಾಮರಾದಲ್ಲಿ ಕಂಡು ಬಂದ ಈ ವಿಶಿಷ್ಟ ವಾಹನ ಅಥವಾ ಯಂತ್ರದ ವಿಶ್ಲೇಷಣೆಯನ್ನು ತಾವು ಮಾಡಿದ್ದು, ಈ ಮೂಲಕ ಇಂತಹ ಪ್ರತಿಪಾದನೆ ಮಾಡಿರುವುದಾಗಿ ಅವರು ಹೇಳಿದ್ದಾರೆ.

    ಉದ್ದವಾದ, ಸಿಲಿಂಡರ್ ಆಕೃತಿಯ ಲೋಹದ ವಸ್ತುವೊಂದು ತಾನು ಬಳಸಿದ ದೂರದರ್ಶಕದಲ್ಲಿ ಕಂಡು ಬಂದಿದ್ದು, ಇದು ಏಲಿಯನ್ಸ್ ಗಳು ನಮ್ಮಿಂದ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದೆ ಹೋಗಿವೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ತಾನು ಏಲಿಯನ್ಸ್ ಇರುವಿಕೆಯ ಬಗ್ಗೆ ಸದೃಢವಾದ ಪುರಾವೆಯನ್ನು ತೋರಿಸಬಲ್ಲೆ ಎಂದವರು ಹೇಳಿದ್ದು, ಮಂಗಳ ಗ್ರಹದಲ್ಲಿ ವಿಮಾನವನ್ನೇ ಹೋಲುವ ಪ್ರಾಚೀನ ವಸ್ತುವೊಂದು ಕಾಣಿಸಿಕೊಂಡಿದ್ದು, ಇದು ಬಹುತೇಕ ಈಗಿನ ಜೆಟ್ ವಿಮಾನಗಳನ್ನೇ ಹೋಲುತ್ತಿದೆ. ಇದರಿಂದ ಅನ್ಯಗ್ರಹ ಜೀವಿಗಳು ನಮ್ಮಿಂದ ತುಂಬಾ ಹಿಂದೆಯೇ ತಂತ್ರಜ್ಞಾನದಲ್ಲಿ ಮುಂದುವರಿದಿದ್ದರೆ ಎಂಬುದು ತಿಳಿಯುತ್ತದೆ ಎಂದು ವಿವರಿಸಿದ್ದಾರೆ.

    ಈ ವಿಮಾನ ರೀತಿಯ ವಸ್ತು ಹಳೆಯದಾಗಿರಬಹುದು, ದೂಳಿನಿಂದಅಚ್ಛಾದಿತವಾಗಿರಬಹುದು ಆದರೆ, ನಮ್ಮಿಂದ ಮೊದಲೇ ಮಂಗಳ ಗ್ರಹದಲ್ಲಿ ಇಂತಹ ವಿಶೇಷ ವಾಹನ ಸಿದ್ಧವಾಗಿತ್ತು ಎಂಬುದಕ್ಕೆ ಇದು ಸಾಕ್ಷಿ ಎಂದಿದ್ದಾರೆ. ಈ ಬಗ್ಗೆ ತಮ್ಮ ಇಟಿ ಡೇಟಾಬೇಸ್ ಎಂಬ ಬ್ಲಾಗ್ ನಲ್ಲಿ ಅವರು ಸವಿವರವಾಗಿ ವಿಷಯ ತಿಳಿಸಿದ್ದಾರೆ.

    ಈಗ ಕಂಡು ಬಂದಿರುವ ವಾಹನವು ತಾಮ್ರ ಅಥವಾ ಚಿನ್ನದಿಂದ ನಿರ್ಮಿತವಾಗಿರಬಹುದು ಎಂದವರು ಅಂದಾಜಿಸಿದ್ದಾರೆ. ಮಂಗಳ ಗ್ರಹದಲ್ಲಿದ್ದ ಜೀವಿಗಳು ತಮ್ಮ ರಕ್ಷಣೆಗಾಗಿ ಮೊರೆ ಹೋದ ದೇವರ ಚಿತ್ರವು ಇದರಲ್ಲಿದೆ ಎಂದು ಹೇಳಬಹುದು. ವಾಹನವು ಸಿಲಿಂಡರ್ ಆಕೃತಿಯಲ್ಲಿದ್ದರೂ ಅದನ್ನು ದೇವರ ವಿಗ್ರಹವೆಂದು ಪರಿಗಣಿಸಲು ಸಾಧ್ಯವಿದೆ. ಯಾಕೆಂದರೆ ಇಲ್ಲಿಂದ ಅದನ್ನು ಅಂದಾಜಿಸಲು ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ. ಆದರೆ ಬುದ್ಧಿವಂತರಾದ ಜೀವಿಗಳು ಮಂಗಳ ಗ್ರಹದಲ್ಲಿ ಜೀವಿಸಿದ್ದರು ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಇದರ ಮಧ್ಯೆಯೇ ಸ್ಕಾಟ್ ಅವರ ವೆಬ್ ಸೈಟ್ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಇದರಿಂದಾಗಿ ಅಮೆರಿಕ ಸರಕಾರ ಇಂತಹ ವಿಷಯಗಳ ಬಗ್ಗೆ ಸಾಕಷ್ಟು ರಹಸ್ಯವನ್ನು ಕಾಪಾಡುತ್ತಿದೆಯಾ ಎಂಬ ಅನುಮಾನ ಕಾಡಲಾರಂಭಿಸಿದೆ. ಯಾಕೆಂದರೆ ಈಗಾಗಲೇ ಅಮೆರಿಕದ ನೌಕಾಪಡೆಯ ನೆಲೆಯೊಂದು ಟಾಪ್ ಸಿಕ್ರೆಟ್ ಪಟ್ಟಿಯನ್ನು ಕಟ್ಟಿಕೊಂಡಿದೆ. ಅಲ್ಲಿಗೆ ಯಾರಿಗೂ ಪ್ರವೇಶವಿಲ್ಲ ಮಾತ್ರವಲ್ಲ ಅಲ್ಲಿ ಏನಿದೆ ಹಾಗೂ ಏನಾಗುತ್ತಿದೆ ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ. ಬಹುತೇಕ ನಂಬಿಕೆಯ ಪ್ರಕಾರ ಅಲ್ಲಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸಿಕ್ಕಿದ ಅನ್ಯಗ್ರಹ ಜೀವಿಯ ದೇಹದ ಕುರಿತು ಸಂಶೋಧನೆ ನಡೆಯುತ್ತಿದೆ ಎಂಬ ಮಾಹಿತಿ ಇದೆ.

    ಲಾಕ್‌ಡೌನ್ ಕೊರೊನಾ ನಿಯಂತ್ರಿಸುವುದಕ್ಕೋ, ಎದುರಿಸುವುದಕ್ಕೊ?

    ಅಶೋಕ ಹೆಗಡೆ

    ‘ಯಾವ ಕಾರಣಕ್ಕೂ ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್ ಮಾಡಲ್ಲ. ದಯವಿಟ್ಟು ಬೆಂಗಳೂರು ಬಿಟ್ಟು ತೆರಳಬೇಡಿ,’ ಎಂದು ಗೃಹ ಸಚಿವರಾದಿಯಾಗಿ ಬಹುತೇಕ ಮಂತ್ರಿಗಳು ವಾರದ ಹಿಂದೆ ಜನತೆಗೆ ಮನವಿ ಮಾಡಿದ್ದರು. ಮತ್ತೊಂದೆಡೆ ಕೆಲವು ಸಚಿವರು ಲಾಕ್‌ಡೌನ್ ಸೂಚನೆ ನೀಡುತ್ತಲೇ ಇದ್ದರು. ಆದರೆ ಜನ ಮಾತ್ರ, ಸೋಂಕು ಹೆಚ್ಚುತ್ತಲೇ ಇರುವುದರಿಂದ ‘ಮತ್ತೊಂದು ಲಾಕ್‌ಡೌನ್ ಖಚಿತ,’ ಎಂಬ ನಿಲುವಿಗೆ ಬಂದಿದ್ದರು. ಅದೇ ನಿಜವಾಗಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜುಲೈ 14ರಿಂದ 21ರವರೆಗೆ ಲಾಕ್‌ಡೌನ್; ಸೋಂಕು ಹೆಚ್ಚಿರುವ 12 ಜಿಲ್ಲೆಗಳಲ್ಲಿಯೂ ಮತ್ತೆ ಲಾಕ್‌ಡೌನ್ ಜಾರಿಯಾಗುವ ಸಾಧ್ಯತೆ ಇದೆ.

    ಮೊದಲಿನ ಲಾಕ್‌ಡೌನ್‌ಗೂ, ಈಗಿನ ಲಾಕ್‌ಡೌನ್‌ಗೂ ಬಹಳ ವ್ಯತ್ಯಾಸವಿದೆ. ಮೊದಲು ಕೊರೊನಾ ಸೋಂಕಿನ ಪ್ರಸರಣದ ಸರಪಳಿಗೆ ತಡೆ ಹಾಕುವ ಉದ್ದೇಶದಿಂದ ಲಾಕ್‌ಡೌನ್ ಜಾರಿ ಮಡಲಾಗಿತ್ತು. ಈಗ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಪರಿಸ್ಥಿತಿ ಎದುರಿಸುವ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ಲಾಕ್‌ಡೌನ್ ಜಾರಿಗೊಳಿಸಲಾಗುತ್ತದೆ!

    ರಾಜ್ಯದಲ್ಲಿ ಜುಲೈ ತಿಂಗಳಲ್ಲೇ 12000ಕ್ಕೂ ಅಧಿಕ ಹೊಸ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಂತೂ ಪರಿಸ್ಥಿತಿ ಅಧ್ವಾನ. ರೋಗಿಗಳಿಗೆ ಹಾಸಿಗೆ ಸಿಗುತ್ತಿಲ್ಲ. ಹೋಮ್ ಕ್ವಾರಂಟೈನ್ ಜಾರಿಯೂ ಸಮರ್ಪಕವಾಗಿಲ್ಲ. ಶೇ.99ರಷ್ಟು ಪ್ರಕರಣಗಳಲ್ಲಿ ಸೋಂಕಿನ ಮೂಲವೇ ಪತ್ತೆಯಾಗುತ್ತಿಲ್ಲ. ಬೆಂಗಳೂರು ಸೇರಿ ನಗರಗಳಲ್ಲಿ ಬದುಕು ಕಟ್ಟಿಕೊಂಡಿದ್ದ ಜನ ಹಳ್ಳಿಗಳಿಗೆ ಮರಳುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿಯೂ ಸೋಂಕು ನಿರೀಕ್ಷೆಗೂ ಮೀರಿದ ವೇಗದಿಂದ ಹರಡುತ್ತಿದೆ. ಸರಕಾರಕ್ಕೆ ಏನು ಮಾಡಬೇಕು ಎಂದೇ ತೋಚುತ್ತಿಲ್ಲ. ಹೀಗಾಗಿ ಮಧ್ಯಂತರ ವ್ಯವಸ್ಥೆಯಾಗಿ ಲಾಕ್‌ಡೌನ್ ಮೊರೆ ಹೋಗಲಾಗಿದೆ.

    ಸೋಂಕಿನ ವೇಗಕ್ಕೆ ಕಡಿವಾಣ

    ಅಷ್ಟಕ್ಕೂ ಈಗ ಲಾಕ್‌ಡೌನ್ ಜಾರಿ ಮಾಡುವುದರಿಂದ ಸೋಂಕು ನಿಯಂತ್ರಣಕ್ಕೆ ಬಂದು ಬಿಡುತ್ತಾ? ‘ಹೌದು’ ಎಂದು ಯಾವ ಆರೋಗ್ಯ ತಜ್ಞರೂ ಖಚಿತವಾಗಿ ಹೇಳುತ್ತಿಲ್ಲ. ಆದರೆ, ಒಂದು ವಾರದ ಅವಧಿಯಲ್ಲಿ ಸೋಂಕಿನ ವೇಗಕ್ಕೆ ಕಡಿವಾಣ ಹಾಕಬಹುದು ಎಂದು ಡಾ.ಸುದರ್ಶನ ಬಲ್ಲಾಳ್ ಸೇರಿ ಹಲವು ತಜ್ಞರು ಅಭಿಪ್ರಾಯಪಟ್ಟಿದ್ದರೆ. ಈ ಅವಧಿಯಲ್ಲಿ ಮುಂದಿನ ಸ್ಥಿತಿ ಎದುರಿಸಲು, ಒಂದಷ್ಟು ಸಾವಿರ ಹಾಸಿಗೆಗಳನ್ನು ವ್ಯವಸ್ಥೆ ಮಾಡಿಕೊಳ್ಳಲು ಸರಕಾರಕ್ಕೆ ಸ್ವಲ್ಪ ಅವಕಾಶ ಸಿಗುತ್ತದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಎದುರಾಗಲಿರುವ ತೀವ್ರತೆಯನ್ನು ಎದುರಿಸುವ ಸಿದ್ಧತೆಗೆ ರಾಜ್ಯ ಸರಕಾರ ಮಾಡಿಕೊಂಡಿರುವ ಮಧ್ಯಂತರ ವ್ಯವಸ್ಥೆ ಇದು.

    ಜನರೇ ಅರ್ಥ ಮಾಡಿಕೊಳ್ಳಬೇಕು

    ಸರಕಾರ ಎಷ್ಟೇ ಪ್ರಯತ್ನಿಸಿದರೂ, ಸೋಂಕು ಹೋಗಲಾಡಿಸುವ ಲಸಿಕೆ ಅಥವಾ ಔಷಧ ಕಂಡುಹಿಡಿದರೂ ಕೊರೊನಾದಿಂದ ಸಂಪೂರ್ಣ ಮುಕ್ತಿ ಸಿಗಲು ಸಾಧ್ಯವೇ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಮುಖ್ಯವಾಗಿ ಆಗಬೇಕಾದದ್ದು ಸೋಂಕು ಹರಡುವುದಕ್ಕೆ ಕಡಿವಾಣ ಹಾಕುವ ಕ್ರಮಗಳು. ಅದನ್ನು ಸರಕಾರ ಮಾಡಲು ಸಾಧ್ಯವಿಲ್ಲ. ಜನ ತಮ್ಮ ಹೊಣೆಗಾರಿಕೆ ಅರಿತುಕೊಂಡು ನಡೆಯಬೇಕು. ತಾಲ್ಲೂಕು ಕೇಂದ್ರಗಳಲ್ಲಿ, ಹಳ್ಳಿಗಳಲ್ಲಿ ಜನ ಸ್ವಯಂ ‘ದಿಗ್ಬಂಧನ’ ವಿಧಿಸಿಕೊಳ್ಳುತ್ತಿದ್ದಾರೆ. ವ್ಯಾಪಾರ-ವಹಿವಾಟಿನ ಸಮಯವನ್ನು ತಾವೇ ನಿರ್ಧರಿಸಿಕೊಂಡು ಭಾಗಶಃ ಲಾಕ್‌ಡೌನ್ ಅನುಷ್ಠಾನಕ್ಕೆ ತಂದುಕೊಂಡಿದ್ದಾರೆ. ಅಷ್ಟು ಸಾಲದು.

    ಕೆಲವರಿಗೆ ಕಂಡಲ್ಲಿ ಉಗುಳುವ ಚಟ. ಕೆಲವರಿಗೆ ‘ಬರುವುದಿದ್ದರೆ ಹೇಗಿದ್ದರೂ ಕೊರೊನಾ ಬಂದೇ ಬರುತ್ತದೆ’ ಎಂಬ ಧೋರಣೆ. ಕೆಲವರದ್ದು ಮೊದಲಿನಿಂದಲೂ ವ್ಯವಸ್ಥೆಯ ವಿರುದ್ಧ ಹೋಗುವ ಅಥವಾ ಅವರ ‘ನಿಯಂತ್ರಕ’ ವ್ಯವಸ್ಥೆ ಹೇಳಿದರೆ ಮಾತ್ರ ಕೇಳುವ ಮನೋಭಾವ. ಇಂತಹ ವರ್ತನೆಗಳಲ್ಲಿ ಮೊದಲು ಸುಧಾರಣೆಯಾಗಬೇಕು.

    ಸರಕಾರ ಲಾಕ್‌ಡೌನ್‌ಗಿಂತಲೂ ಇಂತಹ ಸಂಗತಿಗಳತ್ತ ಗಂಭೀರವಾಗಿ ಗಮನ ಕೊಡಬೇಕು. ಕಂಡಲ್ಲಿ ಉಗುಳಬಾರದು, ಮಾಸ್ಕ್ ಧರಿಸದೇ ಅಡ್ಡಾಡಬಾರದು ಎಂಬ ನಿಯಮ ಇದೆ. ಅವುಗಳನ್ನು ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸಲು ಮುಂದಾಗಬೇಕು. ದಂಡ ಅಥವಾ ಬಂಧನದಿಂದ ಸರಿ ಹೋಗುತ್ತದೆ ಅಂತಲ್ಲ, ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜಾರಿ ಮಾಡಿದರೆ ಅಥವಾ ಸದಾ ನೆನಪುಳಿಯುವ ರೀತಿ ಯಾವುದಾದರೂ ಪ್ರಹಾರ ಮಾಡಿದರೆ ಅದರ ನೋವಿನ ನೆನಪಿನಲ್ಲಾದರೂ ಒಂದಷ್ಟು ಪುಂಡರು ಮನೆಯಲ್ಲಿ ಕುಳಿತುಕೊಂಡಾರು, ಸೋಂಕು ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದೀತು.

    ದುಃಖತಪ್ತರಾದ ಸೀನಿಯರ್ಸ್; ಟಪ್ಪಾಂಗುಚ್ಚಿ ಹಾಕಿದ ಜೂನಿಯರ್ಸ್

    ಫೇಸ್ ಬುಕ್ಕಲ್ಲಿ, ವಾಟ್ಸಾಪ್ , ಇನ್ಸ್ಟಾ ದಲ್ಲಿ ಕಳೆದು ಹೋಗುತ್ತಿರುವ ನಮ್ಮ ವಿದ್ಯಾರ್ಥಿ ಸಮುದಾಯದಲ್ಲಿ ಬರೆಯುವ ಅಭ್ಯಾಸವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕನ್ನಡಪ್ರೆಸ್ ಆರಂಭಿಸುತ್ತಿರುವ ಕ್ಯಾಂಪಸ್ ಪ್ರೆಸ್ ಅಂಕಣದ ಚೊಚ್ಚಲ ಬರಹ ಇದು. ವಿಶ್ವವಿದ್ಯಾಲಯ ಕಾಲೇಜು ,ಮಂಗಳೂರು ಇಲ್ಲಿನ ಪ್ರಥಮ ಬಿಎ ವಿದ್ಯಾರ್ಥಿನಿ ಪ್ರಜ್ಞಾ , ಪದವಿ ಪರೀಕ್ಷೆಗಳು ಕ್ಯಾನ್ಸಲ್ ಆದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಭಾವನೆಯನ್ನು ನವಿರಾದ ಹಾಸ್ಯದೊಂದಿಗೆ ಇಲ್ಲಿ ಹಂಚಿಕೊಂಡಿದ್ದಾರೆ.

    ಕೂತಲ್ಲಿ, ನಿಂತಲ್ಲಿ, ನಿದ್ದೆಯ ಮಂಪರಿನಲ್ಲಿ, ಲಾಕ್ಡೌನ್ ಮೋಜಿನಲ್ಲಿ, ಕೋರೋನ ಟೆನ್ಶನ್ನಲ್ಲಿ , ಮನೆಯವರ ಜತೆಗಿನ  ಜಗಳದಲ್ಲಿ, ಗೆಳೆಯರೊಂದಿಗಿನ ವಿಡಿಯೋ ಕಾಲ್‌ನಲ್ಲಿ, ವಾಟ್ಸಪ್ಪ್ನಲ್ಲಿ, ಫೇಸ್ಬುಕ್ನಲ್ಲಿ, ಎಲ್ಲೆಲ್ಲೂ  ಪದವಿ ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷೆಯದ್ದೇ  ಚಿಂತೆ. ಅತ್ತ  ಎಕ್ಸಾಂ ಇಲ್ಲವೆಂಬ ಅತಿಯಾದ ವಿಶ್ವಾಸ, ಇತ್ತ ಒಂದೊಮ್ಮೆ ನಡೆಸಿಯೇ ಬಿಟ್ಟರೆ ಎಂಬ ಆತಂಕದಲ್ಲೇ ತಮ್ಮ ಅರ್ಧ  ಲಾಕ್ಡೌನ್  ರಜೆಯನ್ನೇ ಕಳೆದುಬಿಟ್ಟರು! 

    ಇನ್ನೇನು ʼಮುಂಗಾರು ಮಳೆʼಯ ಗಣೇಶನಂತೆ ತಮ್ಮ ಮೆದುಳಿನೊಳಗೆ ಕೈ ಹಾಕಿ ಪರಪರ  ಎಂದು ಕೆರೆದುಕೊಂಡು ದೊಡ್ಡ ಗಾಯ ಆಗುವಷ್ಟರಲ್ಲಿ  ಆಪತ್ಪಾಂಧವರಾಗಿ  ಬಂದ ಸಚಿವ ಅಶ್ವಥ್ ನಾರಾಯಣರು  ಎಕ್ಸಾಂ ಇಲ್ಲವೆಂದು  ಘೋಷಿಸಿಯೇ ಬಿಟ್ಟರಲ್ಲ!   

    ಎಕ್ಸಾಂ ಇಲ್ಲವೆಂದು ತಿಳಿಸಿದ ನಾರಾಯಣರು  ಕೊನೆಗೂ ಫೈನಲ್ ಯಿಯರ್ಸ್‌ಗೆ  ಪರೀಕ್ಷೆ  ಇದೆ  ಎಂದು  ಘೋಷಿಸಿ  ಬಿಟ್ಟರಲ್ಲ, ಅದೇ ಟ್ವಿಸ್ಟ್. ದುಃಖತಪ್ತರಾದ  ಸೀನಿಯರ್ಸ್  ಮನಸಲ್ಲೇ  ಬಯ್ಯುತ್ತಾ , ಶಾಪಹಾಕುತ್ತ  ಲಾಕ್ಡೌನ್‌ನಲ್ಲಿ ಮೂಲೆಸೇರಿದ್ದ, ಗುಜರಿ ಅಂಗಡಿಗೆ ಮೀಸಲಾಗಿರಿಸಿದ್ದ  ತಮ್ಮ  ಧೂಳು  ಹಿಡಿದ ಪುಸ್ತಕಗಳ  ಮೇಲೆ  ಒಂದೆರಡು  ಬಾರಿ  ಬಡಿದು  ಧೂಳ ತೆಗೆದು  ಮನಸಿಲ್ಲದ  ಮನಸ್ಸಿನಲ್ಲಿ  ಓದಲು ಕುಳಿತರಂತೆ. 

    ಇನ್ನೂ ಪ್ರಥಮ ಹಾಗೂ ದ್ವಿತೀಯ  ವರ್ಷದ ಪದವಿ ವಿದ್ಯಾರ್ಥಿಗಳಲ್ಲೂ  ಹಲವು  ವಿಧಗಳಿವೆ. ಛೆ.. ! ಈ ಭಾರಿ  ಚೆನ್ನಾಗಿ ಓದಿ  100ಕ್ಕೆ  101 ಅಂಕಗಳಿಸಬೇಕೆಂದಿದ್ದೆ ಎಲ್ಲ  ನೀರಲ್ಲಿ  ಹೋಮ  ಮಾಡಿದಂತಯಿತು , ಎಂದು  ಫಸ್ಟ್ಬೆಂಚರ್ಸ್  ತಲೆ ಜಜ್ಜಿಕೊಂಡರೆ , ಇತ್ತ ಎಕ್ಸಾಮ್  ಇದ್ರೂ , ಇರದಿದ್ರೂ  ಓಕೆ  ಎಂಬ  ಮನಸ್ಥಿತಿ  ಮಿಡಲ್ ಬೆಂಚರ್ಸ್  ಹೊಂದಿದ್ದರು.  ಅತ್ತ  ಕ್ಲಾಸಿನ  ಮುಖ್ಯ  ಆಕರ್ಷಣೆ  ಅಂದರೆ ಲಾಸ್ಟ್ ಬೆಂಚ್‌  ಸ್ಟೂಡೆಂಟ್ಸ್  ಟಪ್ಪಾಂಗುಚ್ಚಿ   ಹಾಡಿಗೆ  ಸ್ಟೆಪ್ಸ್  ಹಾಕಿ  ಸೋಶಿಯಲ್  ಮೀಡಿಯಾ ದಲ್ಲಿ  ತಮ್ಮ ಸಂತಸವನ್ನು  ಹಂಚಿಕೊಂಡಿದ್ದಾರೆ!

    Photo by Roberto Arias on Unsplash

    ಮಳೆ ಅನುಭವಿಸಲು ಮಲೆನಾಡಿಗೇ ಬರಬೇಕು

    ಮಳೆ ಮತ್ತು ಇಳೆಗೆ ಪ್ರೀತಿಯ ಬಂಧ. ಏಪ್ರಿಲ್ ತಿಂಗಳ ಬಿಸಿಲ ಧಗೆಗೆ ಮೈಸುಟ್ಟುಕೊಂಡಂತಿದ್ದ ನೆಲ, ಮರಗಿಡಗಳು, ಚಿಗುರೊಡೆದು ನಳನಳಿಸುವುದು ಮಳೆಯ ಸಿಂಚನದಿಂದಲೇ. ಮಳೆಗಾಲದಲ್ಲಿ ಪ್ರಕೃತಿ ಹಸಿರು ಹೊದ್ದು ಮಲಗಿದಂತಿರುತ್ತದೆ. ಭತ್ತದ ಬೇಸಾಯ ಆರಂಭಗೊಳ್ಳುವುದು ಮಳೆಗಾಲದಲ್ಲಿಯೇ. ಹಾಗಾಗಿ ಮಳೆಗಾಲದಲ್ಲಿ ಮಲೆನಾಡು ಚಟುವಟಿಕೆಯಿಂದಲೇ ಕೂಡಿರುತ್ತದೆ. ಮಳೆಗಾಲಕ್ಕೆ ಬೇಕಾದ ಸಿದ್ಧತೆಗಳನ್ನು ಆಗಲೇ ಮಾಡಿಕೊಂಡಿರುತ್ತಾರೆ. ಮಲೆನಾಡಲ್ಲಿ ಬಿರುಸಾಗಿ ಸುರಿವ ಮಳೆಗೆ ಅಲ್ಲಿನವರು ಒಂದು ರೀತಿಯಲ್ಲಿ ಒಗ್ಗಿಕೊಂಡಿರುತ್ತಾರೆ. ಹಾಗಾಗಿ ಬಿಡದೇ ಸುರಿವ ಮಳೆ ಎಂದೂ ಕಿರಿಕಿರಿ ಎನ್ನಿಸುವುದಿಲ್ಲ. ಮಳೆಗಾಲಕ್ಕೆಂದೇ ತಯಾರಿಸಿಟ್ಟ ಹಲಸಿನಕಾಯಿ ಹಪ್ಪಳ, ಚಿಪ್ಸ್, ಸಂಡಿಗೆಗಳು ಜಿಟಿ ಜಿಟಿ ಸುರಿವ ಸಂಜೆಯ ಮಳೆಗೆ ಸಾಥ್ ನೀಡುತ್ತವೆ.

    ಮಲೆನಾಡಿನಲ್ಲಿ ಮಳೆಗಾಲ ಅಂದರೆ ಅದೇನೋ ಸಂಭ್ರಮ. ಪ್ರಕೃತಿಯಲ್ಲಿ ಸಿಗುವ ಕಣಿಲೆ, ಚಗಟೆ ಸೊಪ್ಪು, ಪತ್ರೋಡೆ, ಮೊಳಕೆಯೊಡೆದ ಗೇರುಬೀಜ… ಹೀಗೆ ನಿತ್ಯವೂ ಪ್ರಕೃತಿಯಲ್ಲಿ ಅದರಲ್ಲೂ ಮಳೆಗಾಲದಲ್ಲಿ ಮಾತ್ರ ಸಿಗುವ ಆಹಾರ ಪದಾರ್ಥಗಳಿಂದ ತರಹೇವಾರಿ ತಿನಿಸು ತಯಾರಿಸಿ ಸವಿಯುವ ಸಂಭ್ರಮ.


    ಎತ್ತ ನೋಡಿದರೂ ಹಸಿರು. ಅಲ್ಲಲ್ಲಿ ನೀರಿನ ಝರಿಗಳು, ಬತ್ತದ ಒರತೆಗಳು, ಕೆರೆ, ಕುಂಟೆ, ತೋಡುಗಳಲ್ಲಿ ಹರಿಯುವ ನೀರಿನ ಜುಳು ಜುಳು ನಾದ, ರಾತ್ರಿಯಾದರೆ ಸಾಕು ವಟಗುಟ್ಟುವ ಕಪ್ಪೆಗಳು, ಇವು ಪ್ರಕೃತಿಯ ನಡುವೆ ಇರುವವರ ಪಾಲಿಗೆ ಮಳೆಗಾಲದ ಮಾತ್ರ ದಕ್ಕುವ ಸೌಭಾಗ್ಯ.

    ಮಳೆಗಾಲ ಕುರಿತು ಕವಿವರೇಣ್ಯರು ಹಲವಾರು ಹಾಡುಗಳನ್ನು ಬರೆದಿದ್ದಾರೆ. ಹಾಡುಗಳಲ್ಲೆಲ್ಲ ಮಳೆಯ ಬಗೆಗಿನ ವರ್ಣನೆ ಬಲು ಸೊಗಸು. ಮಳೆ ಮಳೆ ಒಲವಿನಾ ಸುರಿಮಳೆ, ಮನ ಹರೆಯದ ನದಿಯಾಗಿದೆ…. ಮಳೆ ಎಲ್ಲರ ಮನಸ್ಸಿಗೂ ಹರೆಯದ ಸ್ಪರ್ಶವನ್ನು ನೀಡುತ್ತದೆ. ಅಂದರೆ ಮಳೆಯನ್ನು ಎಲ್ಲರೂ ಖುಷಿಯಿಂದಲೇ ಅನುಭವಿಸುತ್ತಾರೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಮಳೆಯನ್ನು ಅನುಭವಿಸದವರಿಲ್ಲ. ಮಳೆ ಮಾಡುವ ಚಮತ್ಕಾರವೇ ಅಂತಹದ್ದು.

    ಜೂನ್ ತಿಂಗಳಿನಲ್ಲಿ ಮಳೆಯ ಆರ್ಭಟ ಜೋರಾಗಿಯೇ ಇರುತ್ತದೆ. ಶಾಲೆ ಆರಂಭವಾಗುವುದೂ ಜೂನ್‍ನಲ್ಲಿಯೇ. ಆದರೆ ಈ ಬಾರಿ ಕೊರೊನಾ ಕಾರಣದಿಂದ ಮಕ್ಕಳಿಗೆ ಮಳೆಗಾಲವನ್ನು ಸಂಪೂರ್ಣವಾಗಿ ಅನುಭವಿಸುವ ಅವಕಾಶ.

    ಮಕ್ಕಳು ಮಳೆಯಲ್ಲಿ ನೆಪ ಮಾತ್ರಕ್ಕೆ ಕೊಡೆ ಹಿಡಿದು ಆಡುವುದು. ಆದರೆ ಮಳೆ ನೀರಿನಲ್ಲಿ ಪೂರ್ತಿ ಒದ್ದೆಯಾಗಿಸಿಕೊಂಡು ಮೈಮರೆಯುವುದೇ ಸಂಭ್ರಮ. ಗದ್ದೆ ಬದಿಗಳಲ್ಲಿ, ಸಣ್ಣ ಸಣ್ಣ ತೋಡುಗಳಲ್ಲಿ ಚಳಪಳ ಮಾಡಿಸಿಕೊಂಡು, ಒಬ್ಬರ ಮೇಲೊಬ್ಬರು ನೀರೆರಚಿಕೊಂಡು, ಆಟವಾಡಿ ದಿನಕ್ಕೆ ಕನಿಷ್ಟ ಮೂರು ನಾಲ್ಕು ಬಾರಿಯಾದರೂ ಬಟ್ಟೆ ಬದಲಾಯಿಸಿಕೊಳ್ಳದಿದ್ದರೆ ಸಮಾಧಾನವಿಲ್ಲ. ಸರಳೀ ಹಣ್ಣು, ಮೊಗ್ಗರೆಕಾಯಿ, ಚಾಕೋಟೆ ಹಣ್ಣು, ಚೂರಿ ಕಾಯಿ, ಹೀಗೆ ಗುಡ್ಡ ಗಾಡು ಅಲೆದು ಮಕ್ಕಳ ಪಾಲಿನ ಕಾಡಿನ ಸಂಪತ್ತನ್ನು ತಂದು ಸವಿಯುವುದು ಮಳೆಗಾಲದ ಸಂಭ್ರಮ. ಆದರೆ ಮಳೆ ಗಾಳಿಗೆ ಶೀತ, ನೆಗಡಿಯಾದೀತು ಎಂಬ ಭಯ ಹೆತ್ತವರಿಗಷ್ಟೇ.

    ಮಳೆಗಾಲದಲ್ಲಿ ಪ್ರಕೃತಿಯಲ್ಲಿ ಅಮೋಘ ಬದಲಾವಣೆ. ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಹಸಿರು ವನ, ಹರಿಯುವ ನದಿಯ ಜುಳು ಜುಳು ನಿನಾದ ಕಣ್ಣಿಗೆ ತಂಪು, ಕಿವಿಗೆ ಇಂಪು. ಗದ್ದೆ ಉಳುವ ಯೋಗಿ, ಭತ್ತ ಬಿತ್ತುವ ಖುಷಿ, ಪುರುಷರು ಮಹಿಳೆಯರು ಸೇರಿ ಗದ್ದೆಯಲ್ಲಿ ಭತ್ತದ ಸಸಿಗಳನ್ನು ನಾಟಿ ಮಾಡುವ ಸಂಭ್ರಮ ಹೀಗೆ…. ಎಲ್ಲವೂ ಕಣ್ಣಿಗೆ ಕಳೆಗಟ್ಟುವುದು ಮಳೆನಾಡು ಎನ್ನಿಸಿಕೊಂಡ ಮಲೆನಾಡಿನಲ್ಲಿ ಮಾತ್ರ ಸಾಧ್ಯ.
    ಕಾಂಕ್ರೀಟ್ ಕಾಡಿನ ನಡುವೆ ಬದುಕುವ ಜೀವಗಳು ಪ್ರಕೃತಿಯ ಸೊಬಗನ್ನು ಪದಗಳಲ್ಲಿ ಕಾಣಬೇಕಷ್ಟೇ. ಅದನ್ನು ಅನುಭವಿಸಲು ಮಲೆನಾಡಿಗೇ ಬರಬೇಕು

    ಪೇಟೆಯ ವಾಸ್ತವ ಚಟುವಟಿಕೆ ಆಧರಿಸಿ ನಿರ್ಧರಿಸಿ

    ಷೇರುಪೇಟೆಯ ಚಲನೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚು ರಭಸದಿಂದ ಕೂಡಿದೆ. ಇಳಿಕೆಯಾಗಲಿ ಅಥವಾ ಏರಿಕೆಯಾಗಲಿ ಅತಿ ವೇಗವಾಗಿರುತ್ತದೆ. ಹಿಂದಿನ ದಿನಗಳಲ್ಲಿ ಎರಡು ದಿನ ಕ್ರೂರಿ ಮೂರುದಿನ ಕ್ರೂರಿ ಎಂಬತೆ ಕಂಡರೂ ಇಂದಿನ ದಿನಗಳಿಗೆ ಹೋಲಿಸಿದಲ್ಲಿ ಅದೇ ಉತ್ತಮವೆನಿಸುವಷ್ಟರ ಮಟ್ಟಿಗೆ ಬದಲಾವಣೆ ಕಾಣುತ್ತಿದೆ. ಕೇವಲ ಹಣ ಸಂಪಾದನೆಯೊಂದೇ ಇಂದಿನ ವಹಿವಾಟುದಾರರ ಗುರಿ ಎನಿಸುತ್ತದೆ. ಇದಕ್ಕೆ ಇಂದಿನ (ಶುಕ್ರವಾರ) ಚಟುವಟಿಕೆಯಲ್ಲಿ ಅಲೋಕ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಪ್ರದರ್ಶಿಸಿದ ಏರಿಳಿತಗಳೇ ಸಾಕ್ಷಿ.

    ದಿನದ ಆರಂಭಿಕ ಸಮಯದಿಂದಲೂ ಕನಿಷ್ಠ ಆವರಣಮಿತಿಯಲ್ಲಿದ್ದ ಈ ಕಂಪನಿ ಷೇರಿನ ಬೆಲೆ ರೂ..41.10 ರಲ್ಲಿ ಸುಮಾರು 2.8 ಕೋಟಿ ಷೇರುಗಳು ಮಾರಾಟಕ್ಕಿದ್ದವು. ಸುಮಾರು ಒಂದು ಗಂಟೆಯ ಸಮಯದ ನಂತರ ಹೆಚ್ಚಿನ ಬೇಡಿಕೆಯ ಕಾರಣ ಆವರಣ ಮಿತಿಯಿಂದ ಹೊರಬಂದ ಷೇರು ಸುಮಾರು ಶೇ.10 ರಷ್ಟು ಏರಿಕೆಯಿಂದ ರೂ.45.40 ರ ವರೆಗೂ ತಲುಪಿ ಗರಿಷ್ಠ ಆವರಣ ಮಿತಿ ತಲುಪಿ ವಿಜೃಂಭಿಸಿತು. ಆದರೆ ಈ ವಿಜೃಂಭಣೆ ಹೆಚ್ಚು ಸಮಯವಿರದೆ ಕೇವಲ ಕೆಲವೇ ನಿಮಿಷಗಳಲ್ಲಿ ಮಾಯವಾಗಿ ಷೇರಿನ ಬೆಲೆ ಜಾರತೊಡಗಿತು. ಸುಮಾರು ಅರ್ಧ ಗಂಟೆಯ ಸಮಯದಲ್ಲಿ ಮತ್ತೆ ಕನಿಷ್ಠಆವರಣಮಿತಿಗೆ ತಲುಪಿ ದಿನದ ಅಂತ್ಯದವರೆಗೂ ಮುಂದುವರೆಯಿತು.

    ಈ ಮಿಂಚಿನ ಏರಿಕೆ – ಸಿಡಿಲಿನ ಇಳಿಕೆಯ ಪ್ರಕ್ರಿಯೆಯಲ್ಲಿ NSE ಲ್ಲಿ ಸುಮಾರು12 ಕೋಟಿ ಷೇರುಗಳು ವಹಿವಾಟಾಗಿವೆ. ಅಂದರೆ ಸುಮಾರು ಒಂದು ಗಂಟೆಯ ಅವಧಿಯಲ್ಲಿ ಪ್ರದರ್ಶಿತವಾದ ಈ ಹಾವು ಏಣಿ ಆಟವು ಅನೇಕರನ್ನು ಆಕರ್ಷಿಸಿ ಹಾನಿಗೊಳಪಡಿಸಿರಬಹುದು. ಅನೇಕರನ್ನು ಅವಕಾಶ ವಂಚಿತರನ್ನಾಗಿಸಿಯೂ ಇರಬಹದು. ಕೇವಲ ಪ್ರಚಲಿತದ ಅಂಶಗಳನ್ನಾಧರಿಸಿಯಾಗಲಿ, ಮಾಧ್ಯಮಗಳ ವಿಶ್ಲೇಷಣೆಗಳಿಗಾಗಲಿ ಆದ್ಯತೆ ನೀಡದೆ ವಾಸ್ತವದ ಪೇಟೆಯ ಚಟುವಟಿಕೆಯ ನಡೆಯನ್ನಾಧರಿಸಿ ನಿರ್ಧರಿಸುವುದು ಈಗಿನ ಪೇಟೆಗಳಲ್ಲಿ ಉತ್ತಮ ಫಲಿತಾಂಶ ಕಾಣಲು ಸಾಧ್ಯ.

    ಅಲೋಕ್‌ ಇಂಡಸ್ಟ್ರೀಸ್‌ ಲಿಮಿಟೆಡ್‌, ಒಂದು ರೋಗ ಗ್ರಸ್ತ ಕಂಪನಿಯಾಗಿತ್ತು. ಕಳೆದ ಅಕ್ಟೋಬರ್‌ ತಿಂಗಳಲ್ಲಿ ಈ ಷೇರಿನ ಬೆಲೆ ರೂ.1.40 ರ ಸಮೀಪವಿತ್ತು. ಆ ಸಂದರ್ಭದಲ್ಲಿ ಸಾಲಗಾರರು NCLT ಮೆಟ್ಟಲೇರಿದರು. ಅಲ್ಲಿ ಈ ಕಂಪನಿಯನ್ನು ರಿಲಯನ್ಸ್‌ ಇಂಡಸ್ಟ್ರೀಸ್‌‌ ಕಂಪನಿಯು ಈ ಕಂಪನಿಯ ಶೇ.37.7 ರಷ್ಟನ್ನು ರೂ.250 ಕೋಟಿಗೆ ಈ ವರ್ಷದ ಫೆಬ್ರವರಿಯಲ್ಲಿ ಖರೀದಿಸಿ ತನ್ನ ಸಮೂಹಕ್ಕೆ ಸೇರಿಸಿಕೊಂಡಿತು. ಏಪ್ರಿಲ್‌ ತಿಂಗಳಲ್ಲಿ ರೂ.5 ರ ಸಮೀಪವಿದ್ದ ಈ ಕಂಪನಿ ಷೇರು ಮೇ ತಿಂಗಳಲ್ಲಿ ರೂ.14 ರ ಸಮೀಪವಿತ್ತು. ಅಲ್ಲಿಂದ ನಿರಂತರವಾಗಿ ಕನಿಷ್ಠ ಆವರಣಮಿತಿಯ ಮೂಲಕ ಖರೀದಿಗೆ ಅವಕಾಶ ಕೊಡದೆ, ರೂ.61 ರ ವರೆಗೂ ಏರಿಕೆ ಕಂಡಿತು. ನಂತರ ಮಾರಾಟಕ್ಕೆ ಅವಕಾಶ ನೀಡದ ರೀತಿಯಲ್ಲಿ ಇಂದು ರೂ.41.10 ರ ವರೆಗೂ ಕುಸಿದು ಈ ನಾಟಕೀಯ ರೀತಿ ಏರಿಳಿತಗಳನ್ನ ಪ್ರದರ್ಶಿಸಿದೆ.

    ಇಂದಿನ ದಿನಗಳಲ್ಲಿ ಷೇರು ವಹಿವಾಟು ಚಿಟಿಕೆ ಹೊಡೆಯುವಷ್ಟರಲ್ಲಿ ಸಾಹುಕಾರರನ್ನಾಗಿಸುತ್ತದೆ ಎಂದೆನಿಸಿದರೂ, ಇಂತಹ ವಾತಾವರಣದಲ್ಲಿ ವ್ಯಾಮೋಹಕ್ಕೆ ಬಲಿಯಾಗಿ ಹಾನಿಗೊಳಗಾಗುವವರೇ ಹೆಚ್ಚು. ಎಚ್ಚರದ ವಹಿವಾಟು, ಸಮಯ ಪ್ರಜ್ಣೆಯಾಧಾರಿತ ಹಿಡಿತದ ನಿರ್ಧಾರ ಮಾಡುವುದು ಸಂತಸದ ಸರದಾರ

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಇವೆಂದರೆ ಧೈರ್ಯ, ಇವಿದ್ದರೆ ನಂಬಿಕೆ

    ಪ್ರತಿದಿನ ಮನೆಯಲ್ಲಿ ಯಾರಾದರೊಬ್ಬರು ಮನೆಯ ಎಲ್ಲಾ ಕಡೆ ಹುಡುಕುತ್ತಲೇ ಇರುತ್ತಾರೆ , ತಂದು ಒಂದು ಕಡೆ ಇಡಲ್ಲ ಅದೆಲ್ಲಿ ಹಾಕ್ಬಿಡ್ತಿರೋ ? ನಿನ್ ರೂಮಲ್ಲಿ ನೋಡ್ದಾ ? ಪ್ಯಾಂಟ್ ಜೇಬಲ್ಲೇ ಇರುತ್ತೆ ನೋಡು , ಹೀಗೆ ಅಮ್ಮ ಹೇಳ್ತಿರ್ತಾರೆ ..

    ‘ಕೀ ‘ ಗಾಗಿ ಹುಡುಕಾಟ , ಅನ್ವೇಷಣೆ ….ಕೊನೆಗೆ ಸಿಕ್ತು ….ಅನ್ನೋ ಸಮಾಧಾನ ಇದು ನಿತ್ಯ ನಮ್ಮಲ್ಲಿ ನಡೆಯುವ ಚಟುವಟಿಕೆ .‌

    ಸಣ್ಣವಯಸ್ಸಿನಲ್ಲಿ ಬೊಂಬೆಗಳಿಗೆ ಕೀ ಕೊಟ್ಟು ತಿರುಗಿಸಿ ಅದು ಆಡುತಿದ್ದರೆ ನೋಡೋಕೆ ಅದೇನೋ ಖುಷಿ. ಬೊಂಬೆ ಮೇಲಿನ ಪ್ರೀತಿಗಿಂತ ಆ ಸಣ್ಣ ಕೀ ಮೇಲಿನ ಪ್ರೀತಿಯೇ ಜಾಸ್ತಿ ಇರೋದು. ಸ್ಕೂಲು ಮುಗಿಸಿ ಬಂದಾಗ ಮನೆಬೀಗ ಹಾಕಿದ್ರೆ ಅಕ್ಕಪಕ್ಕದ ಮನೆಗಳಲ್ಲೆಲ್ಲಾ ಬೀಗದ ಕೈ ಕೊಟ್ಟವ್ರ ಬೀಗದ ಕೈ ಕೊಟ್ಟವ್ರ ಅಂತ ಕೇಳ್ತಿದ್ವಿ . ಗಡುಸಾದ ಕಬ್ಬಿಣದ ಅಲ್ಲಲ್ಲಿ ತಾಮ್ರದ ಟಚ್ ಹೊಂದಿದ್ದ ಬೀಗ ಮನೆಯ ಪ್ರಮುಖ ಸದಸ್ಯನಂತೆ ಕಾಣುತ್ತಿತ್ತು . ಅಮ್ಮ ಹೊರಗೆ ಹೋಗ್ಬೇಕಾದ್ರೆ ನಾವು ಬೀಗ ಹಾಕಿ ಇನ್ನೆಲ್ಲಿ ಕೀ ಕಳದಾಕ್ ಬಿಡ್ತೀವೋ ಅಂತ ‘ಬರೀ ಚಿಲಕ ಹಾಕ್ಕೊಂಡ್ ಹೋಗೋ ಬೀಗ ಹಾಕ್ಬೇಡ ‘ ಅಂತ ಹೇಳಿ ಹೋಗೋವ್ರು .

    ಊರುಗಳಲ್ಲಿ ಅಜ್ಜಿದೀರು ಕೀಯನ್ನು ತಮ್ಮ ಕತ್ತಲ್ಲಿರುವ ಕರಿಮಣಿ ದಾರದಲ್ಲಿ , ಕಡ್ಡಿಪುಡೀ ಚೀಲದಲ್ಲಿ , ತಾತಂದಿರು ತಮ್ಮ ಉಡುದಾರದಲ್ಲಿ ಸುರಕ್ಷಿತವಾಗಿ ಇಟ್ಟಿರುತ್ತಿದ್ದರು.

    ನಾವುಗಳು ಮನೆ ಬೀಗ ಹಾಕಿ ಕೀನ ಮರೆತು ಜೇಬಲ್ಲಿ ಹಾಕ್ಕೊಂಡು ಹೋಗೋವಾಗ್ಲೋ ಆಟಾಡೋವಾಗ್ಲೋ ಕಳೆದಾಕಿದ್ರೆ ಮುಗುದೋಯ್ತು…ಮನೆಬೀಗ ಕಳೆದವ್ನೆ ಅನ್ನೋದಕ್ಕಿಂತಾ ಹೆಚ್ಚಾಗಿ ಮನೆಬೀಗ ಮುರಿದು ಕಳ್ತನಾನೇ ಮಾಡವ್ನೇನೋ ಅನ್ನೋ ಥರ ಬಾಸುಂಡೆ ಬರಂಗ್ ಬಾರಿಸೋವ್ರು .

    ಧರ್ಮ ಕ್ಷೇತ್ರಗಳಿಗೆ ಹೋದಾಗ ಲಾಡ್ಜ್ ನವರು ಬೀಗ ಕಳೆದಾಕಿದ್ರೆ ದಂಡ ಬೇರೆ ಕಟ್ಟಿಸ್ಕೊಳ್ಳೋವ್ರು . ಮದುವೆ ಚೌಟ್ರಿಗಳಲ್ಲೂ ಅಷ್ಟೇ ಗಂಡು ಕಡೆಯವರಿಗೆ ಐದೋ ಹತ್ತೋ ರೂಮು ಕೊಟ್ಟು ಅವರಲ್ಲಿ ಯಾರಾದ್ರೂ ಮರೆತು ಕೀ ತಗೊಂಡೋಗಿದ್ರೆ ಮುಗೀತು ಪಾಪ ಹೆಣ್ಣುಕಡೆಯವರೇ ಚೌಟ್ರಿ ಅವನ ಹತ್ರ ಪೇಮೆಂಟ್ ಸೆಟಲ್ ಮಾಡ್ಬೇಕಿತ್ತು . ಸಿನಿಮಾಗಳಲ್ಲಿ ಐನೂರೊಂದು ಬಾರ್ ಸೋಪ್ ಮೇಲೆ ಕೀ ಇಟ್ಟು ಅಚ್ಚು ಪಡೆದು ನಕಲಿ ಕೀ ಮಾಡಿಸ್ಕೊಳ್ಳೋ ಸೀನು ತುಂಬಾನೇ ರೋಮಾಂಚಕವಾಗಿರ್ತಿತ್ತು . ಸೀರಿಯಲ್ನಲ್ಲೂ ಅಷ್ಟೇ… ಮಗನ ಕೈ ಹಿಡಿದ ಸೊಸೆ ಮನೆಗೆ ಬಂದೊಡನೆ ಆಕೆಯ ನೋಟವನ್ನು ಅತ್ತೆಯ ಸೊಂಟದಲ್ಲಿರ್ತಿದ್ದ ಬೆಳ್ಳೀ ಕೀ ಗೊಂಚಲಿನ ಕಡೆ ತಿರುಗಿಸುತ್ತಿದ್ದರು. ಈ ದೃಶ್ಯದಲ್ಲೇ ಇಡಿ ಕತೆ ಅಡಗಿರೋದು.

    ಸ್ಕೂಲಿನ ಪ್ರಾರ್ಥನೆ ಮುಗಿದ ನಂತರ ಮಾಸ್ತರು ಇದ್ಯಾರ್ದೋ ಕೀ ಸಿಕ್ಕಿದೆ ಬಂದು ತಗೋಳೀ ಅನ್ನೋವ್ರು . ಆಟ ಆಡ್ತಿದ್ದಾಗ ನಮಗೆ ಸಿಕ್ಕಿದ್ರೂ ಅಷ್ಟೇ ಅದನ್ನ ಪಿ ಟಿ ಮಾಸ್ಟರ್ ಹತ್ರ ಕೊಡ್ತಿದ್ವಿ . ನಮ್ಮ ಜೊತೆಗೇ ಇದ್ದ ಸ್ನೇಹಿತನೊಬ್ಬನಿಗೆ ಮೂರ್ಚೇ ಖಾಯಿಲೆ ಬಂದೆರಗಿದಾಗ ಹಿರಿಯರು ಅವನ ಕೈಗೆ ಕೀ ಗೊಂಚಲ್ಲನಿರಿಸಿ ಶುಶ್ರೂಷೆ ಮಾಡಿದಾಗ ಕೀ ನಮಗೆ ಚಿಕಿತ್ಸೆಯಂತೆ ಕಂಡಿತ್ತು .ಕಾರಾಗೃಹ ಪೋಲೀಸರ ಮುದ್ರೆಯಲ್ಲಿ ಕೀ ಚಿತ್ರ ಇರುತ್ತದೆ , ಪ್ರತಿಷ್ಠಿತ ಬ್ಯಾಂಕಾದ ಎಸ್ ಬಿ ಐ ನ ಲಾಂಛನ ಈ ಕೀನ ಕಿಂಡಿ .

    ಮೊದಲೆಲ್ಲಾ ಮನೆಗೊಂದೇ ಬೀಗ ಆ ಬೀಗಕ್ಕೊಂದೇ ಕೀ ಇರೋದು. ಬೀಗ ರಿಪೇರಿ ಮಾಡುವವರಿಗೆ ಭಾರೀ ಬೇಡಿಕೆಯಿರೋದು . ಈಗ ಬೀಗಗಳ ಜೊತೆಗೇ ಎರಡು ಕೀ ಬರುತ್ತೆ , ಅದಲ್ಲದೇ ಎಲ್ಲಂದರಲ್ಲಿ ಕಂಪ್ಯೂಟರಯಸ್ಡ್ ಕೀ ಮೇಕಿಂಗ್ ಮಳಿಗೆಗಳು ತಲೆಎತ್ತಿವೆ.ಕೀ ಗಳು ಒರಿಜಿನಾಲಿಟಿ ಕಳ್ಕೊಂಡಿದಾವೆ .

    ಡೋರ್ಲಾಕು, ಹ್ಯಾಂಡ್ ಲಾಕು , ವಾರ್ಡ್ ರೋಬ್ ಲಾಕು , ಸೀಕ್ರೆಟ್ ಲಾಕು , ಸೆನ್ಸಾರ್ ಲಾಕು , ಥಂಬ್ ಲಾಕು, ಆಟೋಮ್ಯಾಟಿಕ್ ಲಾಕು ಹೀಗೆ ನೂರಾರು ಲಾಕುಗಳು ಆಧೂನಿಕತೆಯ ಪ್ರವಾಹದಲ್ಲಿ ಬಂದು ಬಾಲ್ಯದಿಂದ ರಕ್ಷಣಾಮಂತ್ರಿಯಂತಿದ್ದ ಬೀಗ ಮತ್ತು ಬೀಗದ ಕೈಯನ್ನು ಮೂಲೆಗೆ ಸೇರಿಸಿದೆ .

    ಮನೆಯಲ್ಲಿ ಕೀ ಆಕಾರದ ಸ್ಟ್ಯಾಂಡು ಬಂದಿದೆ ಅದರಲ್ಲಿ ಒಂದಷ್ಟು ನೇತಾಡುತ್ತಿರುತ್ತದೆ . ಫ್ರಿಡ್ಜ್ ನ ಮೇಲೊಂದಷ್ಟು ಬಿದ್ದಿರುತ್ತದೆ .ಟೇಬಲ್ಲಿನ ಡ್ರಾನಲ್ಲೊಂದಷ್ಟು ಶೇಖರವಾಗಿರುತ್ತದೆ . ಇಷ್ಟೆಲ್ಲಾ ಇದ್ರೂ ಬೇಕಾಗಿರೋ ಕೀ ಟೈಮ್ಗೆ ಸಿಗಲಿಲ್ಲ ಅಂದಾಗ ಆ ದಿನದ ಅಷ್ಟೂ ಕೆಲಸ ವ್ಯತ್ಯಯವಾಗುತ್ತದೆ .

    ಏನೇ ಹೇಳಿ ‘ಬಾಗಿಲು ಚಿಲಕ ಬೀಗ ಕೀಲಿ ‘ ಈ ಗುಂಪು ಎಂಥಾ ಒಂಟಿಯನ್ನು ಸಹ ಧೈರ್ಯವಾಗಿ ಇರಿಸುತ್ತಿದ್ದಂತವು , ಅಂದಿನಿಂದಲೂ ನಮ್ಮನ್ನು ಕಾಪಾಡಿಕೊಂಡು ಬಂದಂತವು , ನಮಗೆ ಇವೆಂದರೆ ಧೈರ್ಯ, ಇವಿದ್ದರೆ ನಂಬಿಕೆ .

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ.ಹಲವಾರು ಕವಿತೆಗಳಿಗೆ ಇಲಸ್ಟ್ರೇಷನ್ ಮಾಡಿದ್ದಾರೆ. ಇಂಟಿರೀಯರ್ ಡಿಸೈನ್ ಮತ್ತು ಇದರ ಬಗ್ಗೆ ಕೆಲವು ಲೇಖನಗಳನ್ನು ಪತ್ರಿಕೆಗೆ ಬರೆದಿದ್ದಾರೆ. ಅಅಜೊತೆಗೆ ಕವಿತೆಗಳನ್ನು ಕೂಡ ಬರೆಯುತ್ತಾರೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    error: Content is protected !!