ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.ಸಾಯುವವರ ಸಂಖ್ಯೆಯೂ ಅಧಿಕವಾಗುತ್ತಿದೆ.ಹಲವು ಕಡೆ ಸಮುದಾಯಗಳಲ್ಲೇ ಹರಡಿಕೆ ಕಂಡು ಬಂದಿದ್ದು ಭಾರತ ಅಲ್ಲಲ್ಲಿ ಮೂರನೇ ಹಂತಕ್ಕೆ ಕಾಲಿಟ್ಟಿದೆ ಎಂಬುದು ದೃಢವಾಗಿದೆ. ಈಗ ಕೋವಿಡ್ ಸೋಂಕು ಉಲ್ಬಣವಾದ ಅಥವಾ ಒತ್ತಟ್ಟಿಗೆ ಕೋವಿಡ್ ನ ಹಲವು ಲಕ್ಷಣಗಳಿರುವವರನ್ನು ಮಾತ್ರವೇ ಪರೀಕ್ಷಿಸಲಾಗುತ್ತಿದೆ. ಹೀಗಾಗಿ ಪ್ರಕಟಗೊಳ್ಳುತ್ತಿರುವವರ ಸಂಖ್ಯೆಗಿಂತ ಅತಿಹೆಚ್ಚು ಸೋಂಕಿತರು ಇರುವ ವಿಚಾರ ಎಲ್ಲರನ್ನೂ ಬಾಧಿಸುತ್ತಿದೆ. ಲಾಕ್ ಡೌನ್ ತೆರವಾದ ಅಥವಾ ಸಡಿಲಗೊಂಡ ಸ್ಥಳಗಳಲ್ಲಿ ಸೋಂಕಿತರ ಸಂಖ್ಯೆಗಳು ಅತ್ಯಂತ ವೇಗದ ಏರುಹಾದಿಯಲ್ಲಿ ಸಾಗಿವೆ.ಜನರು ದೊಡ್ಡ ನಗರಗಳನ್ನು ತೊರೆದು ಓಡುತ್ತಿದ್ದಾರೆ.ಆದರೆ ಇಡೀ ದೇಶ ಒಂದೇ ಹಂತದಲ್ಲಿಲ್ಲ.ನಾಲ್ಕನೆಯ ಹಂತವನ್ನಿನ್ನೂ ಭಾರತ ನೋಡಿಲ್ಲ.
ಪ್ರಪಂಚದಲ್ಲಿಯೂ ಸೋಂಕಿತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಹೆಚ್ಚಾಗುತ್ತಿದೆ.ಪ್ರಪಂಚದ ಹಲವು ದೇಶಗಳು ಎರಡನೆಯ ಕೋವಿಡ್ ಅಲೆಯನ್ನು ಎದುರಿಸುತ್ತಿದ್ದಾರೆ. ಲ್ಯಾಟಿನ್ ಅಮೆರಿಕಾದ ಬ್ರೆಝಿಲ್ ನಲ್ಲಿ ಈ ತಿಂಗಳ ಕೊನೆಯ ವೇಳೆಗೆ ಸಾವಿನ ಸಂಖ್ಯೆ ಪ್ರಪಂಚದಲ್ಲೇ ಮೊದಲ ಸ್ಥಾನ ಪಡೆಯಬಹುದು ಎನ್ನುವ ಅಂದಾಜನ್ನು ಮಾಡಲಾಗಿದೆ. ಮೆಕ್ಸಿಕೊ, ಬೊಲಿವಿಯ, ಪೆರು, ಚಿಲಿ, ರಷಿಯಾ ಇತ್ಯಾದಿ ದೇಶಗಳು ಕೂಡ ವೈರಸ್ಸಿನ ವಿರುದ್ಧದ ತಮ್ಮ ಹೋರಾಟವನ್ನು ಮುಂದುವರೆಸಿವೆ.
ಜೂನ್ 23 ನೇ ತಾರೀಖು ಕೋವಿಡ್ -19ನ ಕಾರಣ ಅಮೆರಿಕಾದಲ್ಲಿ ಮೃತರಾದವರ ಸಂಖ್ಯೆ ಒಂದನೇ ಪ್ರಪಂಚ ಯುದ್ಧದಲ್ಲಿ ಮಡಿದ ಅಮೆರಿಕನ್ನರ ಸಂಖ್ಯೆಯನ್ನೂ ಹಿಂದಿಟ್ಟು ಮುಂದಕ್ಕೆ ನಡೆಯಿತು. ಒಂದನೇ ಪ್ರಪಂಚ ಯುದ್ಧದಲ್ಲಿ ಮಡಿದ ಅಮೆರಿಕನ್ನರ ಸಂಖ್ಯೆ 116,516 . ನಂತರ ನಡೆದ ವಿಯೆಟ್ನಾಂ (58,209 ಸಾವು ), ಕೊರಿಯನ್ (36,516 ಸಾವು) ಎರಡೂ ಯುದ್ಧಗಳನ್ನು ಒಟ್ಟುಗೂಡಿಸಿದರೂ ಕಾಣದಷ್ಟುಸಾವನ್ನು ಅಮೆರಿಕಾ ಕೋವಿಡ್ ನ ಕಾರಣ ಕಂಡಿದೆ. ನವೆಂಬರ್ ವೇಳೆಗೆ ಈ ಸಂಖ್ಯೆ180,000- 200,000 ಸಾವಿರ ದಾಟಬಹುದು ಎಂಬ ಅಂದಾಜನ್ನು ಅಮೆರಿಕಾ ನೀಡಿದೆ.
1918 ರ ಸ್ಪಾನಿಶ್ ಫ್ಲೂ ಪ್ರಪಂಚದ 50 ಕೋಟಿ ಜನರಿಗೆ ಸೋಂಕನ್ನು ಹರಡಿತ್ತು. ಇದರಿಂದ ಅಮೆರಿಕಾದಲ್ಲಿ ಮಡಿದವರ ಸಂಖ್ಯೆ 6,75,000. ಇದು ಅಮೆರಿಕಾ ದೇಶ ಎಲ್ಲ ಯುದ್ಧಗಳಲ್ಲಿ ಕಳೆದುಕೊಂಡ ಜೀವಗಳಿಗಿಂತ ಹೆಚ್ಚಿನ ಸಂಖ್ಯೆಯ ಸಾವು. ಅಂದರೆ, ಪ್ಯಾಂಡೆಮಿಕ್ ಗಳು ದೇಶವೊಂದು ಯಾವುದೇ ಯುದ್ಧಗಳಲ್ಲಿ ಕಳೆದುಕೊಳ್ಳುವುದಕ್ಕಿಂತ ಹೆಚ್ಚು ಜೀವಗಳನ್ನು ಅತ್ಯಂತ ಕಡಿಮೆಅವಧಿಯಲ್ಲಿ ಬಲಿತೆಗೆದುಕೊಳ್ಳ ಬಲ್ಲವು.
ಸ್ಪಾನಿಶ್ ಫ್ಲೂ ಬಂದದ್ದು 102 ವರ್ಷಗಳ ಹಿಂದೆ. ನೂರು ವರ್ಷಗಳ ವೈಜ್ಞಾನಿಕ ಪ್ರಗತಿ, ತಂತ್ರ ಜ್ಞಾನದ ಸಾಧನೆಗಳ ನಂತರವೂ ಅಮೆರಿಕಾದಂತಹ ದೇಶ ವೈರಾಣುವೊಂದಕ್ಕೆ ನೂರಾರು ಸಾವಿರ ಜನರನ್ನು ಕಳೆದುಕೊಂಡಿದೆ.ಇದು,ಯಕಃಚಿತ್ ವೈರಾಣುವೊಂದರ ಶಕ್ತಿಯನ್ನು ತೋರಿಸಿದರೆ ಅದರ ಜೊತೆ ಜೊತೆಯಲ್ಲಿಯೇ ಮನುಷ್ಯರು ಕಾಲಚಕ್ರದಲ್ಲಿ ಸಾಧಿಸುವ ಪ್ರಗತಿಗೂ ಮಿತಿಯಿದ್ದೇ ಇದೆ ಎಂಬ ವಿಚಾರವನ್ನು ಧೃಡಪಡಿಸುತ್ತದೆ.ಪ್ರಪಂಚದ ಸಾಧನೆಗಳ ಮೇಲೆ ಪ್ರಕೃತಿಯ ಕಡಿವಾಣವಿರುವುದನ್ನು ನಿಚ್ಚಳವಾಗಿ ತೋರಿಸುತ್ತದೆ.
ಸಕಾರಾತ್ಮಕವಾಗಿ ಚಿಂತಿಸವವರಿಗೆ ವಿಶ್ವ ವ್ಯಾಪೀ ಹೊಸ ವ್ಯಾಧಿಯೊಂದು ಬಂದಾಗ ಹಲವು ನೂರು ಸಾವಿರ ಸಾವುಗಳನ್ನು ತಡೆಗಟ್ಟುವಲ್ಲಿ ದೇಶವೊಂದು ಶತಮಾನವೊಂದರ ಸಮಯ ತೆಗೆದುಕೊಂಡು ಯಶಸ್ವಿಯಾಗಿದೆ- ಎಂದು ಕೂಡ ಅನ್ನಿಸಬಹುದು.
ಈ ನಡುವೆ ಕೋವಿಡ್ ನ ಹಾವಳಿ ಹೆಚ್ಚಿದಂತೆಲ್ಲ ಇದನ್ನು ಯುದ್ಧಕ್ಕೆ ಹೋಲಿಸಿ ಮಾತನಾಡುವುದು ಕೇಳಿಬರುತ್ತಿದೆ.ಕೋವಿಡ್ ಕದನವೆನ್ನುವ ಪದದ ವ್ಯಾಪಕ ಬಳಕೆಯಾಗಿದೆ.ಕೋವಿಡ್ ವಿರುದ್ಧ ಸೆಣೆಸುತ್ತಿರುವ ವೈದ್ಯರು, ದಾದಿಯರು ಮತ್ತು ಇನ್ನಿತರ ಅಗತ್ಯ ಕೆಲಸಗಾರರನ್ನು ವೀರ ಯೋಧರೆಂದು ಕರೆಯಲಾಗಿದೆ.
ವೈದ್ಯಲೋಕ ಇದನ್ನು ಒಪ್ಪುತ್ತದೆಯೇ?
ಸೋಂಕಿನಿಂದ ಭಾದಿತರಾದವರನ್ನು ಆಸ್ಪತ್ರೆಗಳ ಕೆಲಸಗಾರರು ರಕ್ಷಿಸಬೇಕಾಗಿದೆಯೆನ್ನುವುದು ನಿಜ.ಆದರೆ ವೈರಸ್ಸಿನ ಈ ಅನಿರೀಕ್ಷಿತ ದಾಳಿ ನಡೆದಾಗ ವೈದ್ಯಲೋಕಕ್ಕೆ ಈ ಹೊಸವ್ಯಾಧಿಯ ಬಗ್ಗೆ ಅರಿವಿರಲಿಲ್ಲ, ತರಬೇತಿಯಿರಲಿಲ್ಲ, ಅವರನ್ನು ಅವರು ರಕ್ಷಿಸಿಕೊಳ್ಳಬೇಕಾದ ಪರಿಕರಗಳಿರಲಿಲ್ಲ. ವೈರಿ ಕಣ್ಣಿಗೆ ಕಾಣದ ವ್ಯಕ್ತಿಯಾಗಿದ್ದ. ಆರೋಗ್ಯದ ರಕ್ಷಣೆಗೆ ಇದ್ದವರ ಸಂಖ್ಯೆಯೂ ಅತ್ಯಂತ ಮಿತವಾಗಿತ್ತು.
ಸಮುದಾಯ ಜೀವನಿರೋಧಕ ಶಕ್ತಿಯನ್ನು (Herd Immunity)ಯನ್ನು ತಲುಪಲು ದೇಶವೊಂದರ ಶೇಕಡ 70 ರಷ್ಟು ಜನರಿಗೆ ಈ ಸೋಂಕು ಹರಡಬೇಕು. ಆದರೆ, ಆ ಬಗೆಯ ಸಂಖ್ಯೆ ಯಾವುದೇ ದೇಶದ ಮೇಲಿನ ದಾಳಿಗಿಂತಲೂ ಹೆಚ್ಚಿನ ಮಟ್ಟದ .ಸಮಸ್ಯೆಯಾಗುತ್ತದೆ.ಊಹಿಸಲಸಾಧ್ಯವಾದ ಈ ದಾಳಿಯಲ್ಲಿ ಸ್ವದೇಶಿಗಳು, ಬಂಧುಗಳು, ಸಮಾಜವೇ ಸೋಂಕನ್ನು ಹರಡುವ ಮೂಲಗಳಾಗುತ್ತವೆ.ಜೊತೆಯಲ್ಲಿ ಕೆಲಸಮಾಡುವವರು ಕೂಡ ಆಪತ್ತಿಗೆ ಕಾರಣರಾಗುತ್ತಾರೆ.ಹಾಗಾಗಿ, ವೈರಸ್ಸನ್ನು ಸೋಲಿಸುವುದು ಹೇಗೆ?
ಯುದ್ಧವೊಂದರಲ್ಲಿ ಸೈನಿಕರ ಬಳಿ ಹೋರಾಡಲು ಶಸ್ತ್ರಗಳಾದರೂ ಇರುತ್ತವೆ. ಆದರೆ ಸೋಂಕಿನ ಲಕ್ಷಣಗಳನ್ನು ಮಾತ್ರ ನಿಭಾಯಿಸಲು ಶಕ್ತವಾಗಿರುವ ವೈದ್ಯಲೋಕದಲ್ಲಿ ಈ ವೈರಾಣು ಶತ್ರುವಿನ ವಿರುದ್ಧ ಹೋರಾಡಲು ಸದ್ಯಕ್ಕೆ ಯಾವುದೇ ಚಿಕಿತ್ಸೆಯ ಅಸ್ತ್ರಗಳೂ ಇಲ್ಲ. ತಡೆಯಬಲ್ಲ ಲಸಿಕೆಯೂ ಇಲ್ಲ. ಹೀಗಿರುವಾಗ “ರಣಕೇಕೆ ಹಾಕುವ ವೈರಾಣು ಫಿರಂಗಿಗಳಿಗೆ ಎದೆ ತೆರೆದುಕೊಂಡು ಬರಿಗೈಲಿ ಹೋಗಿ ಹೋರಾಡಿ ಎನ್ನಬೇಡಿ. ಕನಿಷ್ಠ ಸ್ವರಕ್ಷಣಾ ಕವಚಗಳನ್ನಾದರೂ ನೀಡಿ ’ ಎಂದು ವೈದ್ಯರುಗಳು ಸರಕಾರಕ್ಕೆ ಮೊರೆಯಿಡಬೇಕಾಯಿತು. ನಮ್ಮನ್ನು ನೇರವಾಗಿ .ಸೈನಿಕರಿಗೆ ಹೋಲಿಸಬೇಡಿ ಎಂದು ಎಚ್ಚರಿಕೆಯ ಮನವಿಗಳನ್ನು ನೀಡಬೇಕಾಯಿತು.ಆ ವೇಳೆಗಾಗಲೇ ಹಲವು ವೈದ್ಯ- ದಾದಿಯರ ಬಲಿಯೂ ಆಗಿತ್ತು.
ಸಾರ್ವಜನಿಕ ಪ್ರಶಂಸೆ
ಯುದ್ಧವೊಂದರಲ್ಲಿ ಮಡಿಯುವವರ ಸಂಖ್ಯೆಯನ್ನು ಆತ್ಯಾಧುನಿಕ ಕೃತಕ ಬುದ್ದಿಮತ್ತತೆಯ ಬಳಕೆಯಿಂದ, ತಂತ್ರಜ್ಞಾನದ ಬಳಕೆಯಿಂದ, ಹೊಸ ವೈದ್ಯಕೀಯ ಚಿಕಿತ್ಸೆಗಳಿಂದ ಮಿತಗೊಳಿಸುವುದನ್ನುಇಂದಿನ ಪ್ರಪಂಚ ಕಲಿತಿದೆ. ಡಿಪ್ಲೊಮಸಿ, ನಿಷೇಧ ಹೇರಿಕೆಗಳು, ವಾಣಿಜ್ಯ ಮತ್ತು ಆರ್ಥಿಕ ತೆರಿಗೆಗಳ ಹೇರಿಕೆ ಮತ್ತು ಕೋಲ್ಡ್ ವಾರ್ ತಂತ್ರಗಳ ಮೂಲಕ ಯುದ್ಧಗಳನ್ನು ತಡೆಯಬಲ್ಲದಾಗಿದೆ.ಆದರೆ ವೈದ್ಯಲೋಕಕ್ಕೆ ಈ ಯಾವುದೇ ಸೌಲಭ್ಯಗಳಿಲ್ಲ.
“ಯುದ್ಧಕಾಲೇ ಶಸ್ತ್ರಾಭ್ಯಾಸ “- ಎನ್ನುವಂತೆ ವೈದ್ಯಲೋಕ ಅಲ್ಪ -ಸ್ವಲ್ಪ ಭರವಸೆ ನೀಡಬಲ್ಲ ಎಲ್ಲ ಚಿಕಿತ್ಸೆಗಳನ್ನು ಕಲಿಯುತ್ತ ಅದನ್ನು ಕೋವಿಡ್ ವಿರುದ್ಧ ಬಳಸುತ್ತಿದ್ದಾರೆ.ಹೊಸ ವಿಧಾನಗಳು ಬೆಳಕಿಗೆ ಬಂದಂತೆಲ್ಲ ಅವನ್ನು ಕಲಿತು ಪ್ರಯೋಗಿಸುತ್ತಿದ್ದಾರೆ.ತಮಗೆ ತಿಳಿದಿರುವ, ಆಧಾರವಿರುವ ಎಲ್ಲ ಬಗೆಯ ಚಿಕಿತ್ಸೆಗಳನ್ನು,ಅನುಭವಗಳನ್ನು ಬೆರೆಸಿ ಪ್ರಯೋಗಿಸುತ್ತಿದ್ದಾರೆ.
ತಾವು ಬಲಿಪಶುಗಳಾಗುತ್ತಿದ್ದರೂ ವೃತ್ತಿಪರ ಕರ್ತವ್ಯಗಳಿಗಾಗಿ ಹೋರಾಡುತ್ತಿರುವ ವೈದ್ಯ ಲೋಕಕ್ಕೆ ಇದೇ ಕಾರಣಕ್ಕೆ ಸಾರ್ವಜನಿಕರು ಚಪ್ಪಾಳೆ ತಟ್ಟಿ, ಊಟ-ತಿಂಡಿಗಳನ್ನು ಕಳಿಸಿ, ವಿಶೇಷ ಸವಲತ್ತುಗಳನ್ನು ನೀಡಿ ಸೈನಿಕರನ್ನು, ಪೋಲೀಸರನ್ನು ಹುರಿದುಂಬಿಸುವಂತೆ ಪ್ರಪಂಚದಾದ್ಯಂತ ಹುರಿದುಂಬಿಸಿದ್ದಾರೆ.ಪ್ರಪಂಚದಾದ್ಯಂತ ರೋಗಿಗಳ ಸೇವೆಯಲ್ಲಿ ಮಡಿದ ನೂರಾರು ವೈದ್ಯರು ಮತ್ತು ಇತರೆ ಸಿಬ್ಬಂದಿಗಾಗಿ ಮರುಗಿದ್ದಾರೆ.
ಅವ್ಯವಸ್ಥೆಯ ಕಾರಣ ಕುಸಿಯುತ್ತಿರುವ ನೈತಿಕ ಸ್ಥೈರ
ಕೋವಿಡ್ ಬಂದ ಕೆಲವರು ತಮ್ಮ ಯಾವುದೇ ಲಕ್ಷಣಗಳನ್ನು ಹೇಳಿಕೊಳ್ಳದೆ ಸುಮ್ಮನಿದ್ದುಬಿಡುತ್ತಿದ್ದಾರೆ.ವಾಟ್ಸಾಪ್ ಗಳಲ್ಲಿ ಹರಡಿದ ಕೆಲ ವೈರಲ್ ವಿಡಿಯೋಗಳಿಂದ ಭೀತಿ ಗೊಳ್ಳುತ್ತಿದ್ದಾರೆ. ಬಂದದೆಲ್ಲಾ ನಿಜ ಎಂಬ ಮನೋಭಾವನೆ ರೂಢಿಸಿಕೊಂಡಿದ್ದಾರೆ. ಸಾಮಾಜಿಕ ಜಾಲ ತಾಣಗಳ ಹಾವಳಿಿಯಿಂದ ನಿಜ ಯಾವುದು ಫೇಕ್ ಯಾವುದು ಎಂಬುದೇ ಗೊತ್ತಾಗದ ಒದ್ದಾಡುವ ಸ್ಥಿತಿ ಇದೆ. ಇನ್ನು ಕೆಲವರು ಕ್ವಾರೈಂಟೈನ್ ಕ್ಯಾಂಪುಗಳಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ರೋಗ ಬಂದದ್ದು ಖಾತ್ರಿಯಾದ ನಂತರ ಹೆದರಿಕೆ ಮತ್ತು ಖಿನ್ನತೆಯಿಂದ ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ಇವರಲ್ಲಿ ವ್ಯವಸ್ಥೆಯ ಬಗ್ಗೆ ನಂಬಿಕೆ, ಭರವಸೆ ಎರಡೂ ಶೂನ್ಯವಾಗಿವೆ. ಈ ವಾತಾವರಣ ರೋಗಿಗಳಲ್ಲಿ ಮಾತ್ರವಲ್ಲ ಬದಲಿಗೆ ವೈದ್ಯಕೀಯ ಸಿಬ್ಬಂದಿಯಲ್ಲೂ ಮನೋಧೈರ್ಯ ಕುಸಿಯುವಂತೆ ಮಾಡಿದೆ. ಬೆಂಗಳೂರಲ್ಲಿ ರೋಗಿಯೊಬ್ಬರು ರಸ್ತೆಯಲ್ಲೇ ಮೃತಪಟ್ಟಾಗ ಅಂಬುಲೆನ್ಸ್ ಬರಲೇ ಇಲ್ಲ. ಈ ಅಚಾತುರ್ಯಕ್ಕಾಗಿ ನಗರಪಾಲಿಕೆ ಆಯುಕ್ತರು ನೊಂದವರ ಮನೆಗೆ ಹೋಗಿ ಕ್ಷಮೆಯಾಚಿಸಿದ ಘಟನೆಯೂ ನಡೆಯಿತು.
ಅತ್ಯಧಿಕ ಕೇಸುಗಳಿರುವ ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯ ವೈದ್ಯರುಗಳು ತಮಗೇ ಸ್ವರಕ್ಷಣಾ ಕವಚಗಳಿಲ್ಲವೆಂದು ಹೇಳಿಕೊಂಡರು.ರೋಗಿಗಳನ್ನು ನೋಡಿಕೊಳ್ಳಲು ಉಪಕರಣಗಳೇ ಇಲ್ಲದ ತಮ್ಮ ದಾರುಣ ಪರಿಸ್ಥಿತಿಯಲ್ಲಿ ರೋಗಿಗಳನ್ನು ನಾವು ಹೇಗೆ ಬದುಕಿಸಿಡಲು ಸಾಧ್ಯ?- ಎಂದು ಕೇಳುತ್ತ ಅಲ್ಲಿನ ಅವ್ಯವಸ್ಥೆಗಳ ವಿಡೀಯೋವನ್ನು ಹಂಚಿಕೊಂಡು ತಮ್ಮ ಅಳಲನ್ನು ತೋಡಿಕೊಂಡರು. ವೈದ್ಯರ ಪ್ರಾಣಗಳೇ ಅಪಾಯದಲ್ಲಿರುವ ಈ ಸ್ಥಿತಿಯಲ್ಲಿ ಹಲವು ಆಸ್ಪತ್ರೆಗಳಲ್ಲಿ ಉಪಕರಣಗಳಿದ್ದು, ರೋಗಿಗಳಿದ್ದೂ ಇದೀಗ ಅವರನ್ನು ನೋಡಿಕೊಳ್ಳಲು ವೈದ್ಯರಿಲ್ಲವಾಗಿದೆ.
ಇದರ ಜೊತೆಗೆ ಹಿರಿಯ ಅನುಭವೀ ವೈದ್ಯರು, ವಶೀಲಿಯಿರುವವರು, ಕಿರಿಯ ವೈದ್ಯರಿಗೆ ಮಾರ್ಗದರ್ಶನ ನೀಡುವುದಕ್ಕೂ ಮುಂದಾಗದೆ ಮನೆಯಲ್ಲೇ ಉಳಿದು, ವಿದ್ಯಾರ್ಥಿ ದೆಸೆಯ ವೈದ್ಯರುಗಳನ್ನು, ಕಿರಿಯ ವೈದ್ಯರನ್ನು ಮುಂದಕ್ಕೆ ತಳ್ಳಿ ಕರ್ತವ್ಯಗಳನ್ನು ವಂಚಿಸಿ ಮಾಯವಾಗಿದ್ದಾರೆ.ಹಲವು ರೀತಿಯ ಶೋಷಣೆಗಳನ್ನು ಎದುರಿಸುತ್ತಿರುವ ಕಿರಿಯ ವಯಸ್ಸಿನ ವೈದ್ಯರುಗಳು ಮಾನಸಿಕವಾಗಿ ಒತ್ತಡಕ್ಕೊಳಗಾಗಿ ತಮ್ಮ ಅಳಲನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಮುಂದೆ ತೋಡಿಕೊಂಡಿದ್ದಾರೆ.
ಸೈನಿಕರಂತೆ ಹೋರಾಡಲು ವೈದ್ಯರ ಮೇಲೆ ಕಡ್ಡಾಯದ ನಿಯಮಗಳೇನೂ ಇರುವುದಿಲ್ಲ. ಸರ್ಕಾರೀ ಕೆಲಸದಲ್ಲಿಲ್ಲದಿದ್ದರೆ ಅವರ ಮೇಲೆ ಒತ್ತಡ ಹೇರಲು ಇತರರಿಗೆ ಸಾಧ್ಯವೂ ಇಲ್ಲ. ಮನುಷ್ಯರಾದ ಅವರಿಗೆ ಬೇಕಾದ ರಕ್ಷಣೆ, ಸವಲತ್ತುಗಳು, ಅನುಕಂಪ, ಮಾನವೀಯತೆಗಳ ಭರವಸೆ ನಮ್ಮ ವ್ಯವಸ್ಥೆಯಲ್ಲಿ ಸಿಗುವವರೆಗೆ ಸರ್ಕಾರ ಅದೆಷ್ಟೇ ದೊಡ್ಡ ಆಸ್ಪತ್ರೆಗಳನ್ನು ನಿರ್ಮಿಸಿ, ಹಾಸಿಗೆ ಜೋಡಿಸಿದರೂ ಅದಕ್ಕೆ ತಕ್ಕಷ್ಟು ವೈದ್ಯರನ್ನು ಒದಗಿಸಲು ಹೆಣಗಬೇಕಾಗುತ್ತದೆ. ಕಡಿಮೆ ವೈದ್ಯರ ಮೇಲೆ ಕೆಲಸದ ಒತ್ತಡ ಹೆಚ್ಚಾದರೆ ಅವರ ಭೌತಿಕ ಮತ್ತು ಮಾನಸಿಕ ಸ್ವಾಸ್ಥ್ಯಗಳು ಕುಸಿದು ಮತ್ತೂ ಹೆಚ್ಚಿನ ಸಮಸ್ಯೆಗೆ ನಾಂದಿಯಾಗುತ್ತದೆ.
ಯುದ್ಧ ಮತ್ತು ಪ್ಯಾಂಡೆಮಿಕ್ ನ ಸಾವುಗಳು
ಯುದ್ಧದ ಸಾವುಗಳನ್ನೂ, ಪ್ಯಾಂಡೆಮಿಕ್ ನಲ್ಲಿ ಉಂಟಾಗುವ ಸಾವುಗಳನ್ನೂ ನೇರವಾಗಿ ಹೋಲಿಸಲಾಗುವುದಿಲ್ಲ. ಏಕೆಂದರೆ ಯುದ್ದದಲ್ಲಿ ಮಡಿದವರ ಲೆಕ್ಕಕ್ಕೆ ನೇರ ಹೋರಾಟದಲ್ಲಿ ಸತ್ತವರನ್ನು ಮಾತ್ರ ಹೆಸರಿಸಲಾಗುತ್ತದೆ. ಆದರೆ ಯುದ್ಧದ ಆಗು-ಹೋಗುಗಳ ನಡುವೆ ಖಾಯಿಲೆಯಿಂದ ಸತ್ತವರು ಕೂಡ ಬಹಳಷ್ಟು ಮಂದಿಯಿರುತ್ತಾರೆ. ಅಂಗಾಂಗಗಳನ್ನು ಕಳೆದುಕೊಂಡವರು, ಮಾನಸಿಕ ಖಾಯಿಲೆಗಳಿಗೆ ತುತ್ತಾದವರು, ಆರ್ಥಿಕವಾಗಿ ಭ್ರಷ್ಟರಾದವರು, ಮಾನಸಿಕ ಖಾಯಿಲೆಗಳಿಗೆ ತುತ್ತಾದವರು ಹೀಗೆ ಹಲವು ಬಗೆಯ ನೋವುಗಳಾಗಿರುತ್ತವೆ.
ಯುದ್ಧಗಳಂತೆ ಪ್ಯಾಂಡೆಮಿಕ್ ಗಳೂ ಹಲವು ರೀತಿಯ ಸಂಕಷ್ಟಗಳನ್ನು ಸೃಷ್ಟಿಸಿವೆ.ಯುದ್ದಗಳಂತೆಯೇ ಲಕ್ಷಾಂತರ ಜನರು ಸಾವು-ನೋವು, ಆರ್ಥಿಕ ಕಷ್ಟ-ನಷ್ಟಗಳನ್ನು ಎದುರಿಸುತ್ತಿದ್ದಾರೆ. ಕೋವಿಡ್ ನಲ್ಲಿ ಸಾಯುವವರ ಸಂಖ್ಯೆ ಕಡಿಮೆಯೆನ್ನುವುದು ಅತ್ಯಂತ ಅದೃಷ್ಟಕರ ಸಂಗತಿ. ಆದರೆ ಇನ್ನು ಕೆಲವು ವಿಚಾರಗಳಲ್ಲಿ, ಪ್ಯಾಂಡೆಮಿಕ್ ಗಳು ಕೆಲವು ಯುದ್ದಗಳಿಗಿಂತಲೂ ಹೆಚ್ಚಿನ ನಷ್ಟವನ್ನು ಉಂಟುಮಾಡಬಲ್ಲವು.
ಯುದ್ದಗಳಲ್ಲಿ ತೊಡಗಿದ ದೇಶಗಳನ್ನು ಬಿಟ್ಟರೆ ಇತರರಿಗೆ ಈ ಯುದ್ದದ ನೋವುಗಳು ಹರಡುವುದು ಪರೋಕ್ಷವಾಗಿ. ಆದರೆ ಕೋವಿಡ್ ನಂತಹ ಹೊಸ ವ್ಯಾಧಿಗಳು ಇಡೀ ಪ್ರಪಂಚವನ್ನು ನಲುಗಿಸಿವೆ.ಇಲ್ಲಿ ದೇಶಗಳ ಗಡಿಯನ್ನು, ಪ್ರಜೆಗಳನ್ನು ಕಾಯುವ ಯೋಧರಷ್ಟೇ ಅಲ್ಲದೆ ಪ್ರಪಂಚದ ಪ್ರತಿ ಪ್ರಜೆಯೂ ತನ್ನನ್ನು ತಾನು ವೈರಾಣುವಿನ ಧಾಳಿಯಿಂದ ರಕ್ಷಿಸಿಕೊಳ್ಳಬೇಕಾಗಿದೆ. ಸರ್ಕಾರದ ಜೊತೆಗೂಡಿ ಸಹಕರಿಸಬೇಕಿದೆ. ಇಷ್ಟಾದರೂ ಪ್ಯಾಂಡೆಮಿಕ್ ನಲ್ಲಿ ಸತ್ತವರಿಗೆ ದೇಶಕ್ಕಾಗಿ ಹೋರಾಡಿ ಮಡಿದವರ ಪಟ್ಟ ದೊರಕುವುದಿಲ್ಲ. ಹಣಕಾಸಿನ ನೆರವೂ ದಕ್ಕುವುದಿಲ್ಲ. ಸಮಾಧಾನವೂ ಸಿಗುವುದಿಲ್ಲ. ಸಣ್ಣದೊಂದು ವೈರಾಣುವಿನ ಕಾರಣ ಮಾರಣಹೋಮದ ಸೃಷ್ಟಿಯಾಗಿದೆ.ಹಲವು ಹಿರಿಯರು ಇದೇ ಕಾರಣಕ್ಕೆ “ ಪ್ರಪಂಚ ಪ್ರಳಯವೆಂದರೆ ಇದೇ ಇರಬೇಕು”-ಎಂದು ಉದ್ಗರಿಸಿದ್ದಾರೆ.
ಕೋವಿಡ್ ಸೋಂಕಿತರನ್ನು ರಕ್ಷಿಸಲು, ಅತ್ಯಲ್ಪ ಸಹಾಯದೊಂದಿಗೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದುಡಿಯುವಾಗ ಅಕಸ್ಮಿಕವಾಗಿ ಸಾಯುತ್ತಿರುವ ಆರೋಗ್ಯ ಮತ್ತು ಇತರೆ ಸಿಬ್ಬಂದಿ ವರ್ಗದವರಿಗೆ ಕೆಲವು ಸರ್ಕಾರಗಳು ಹೆಚ್ಚುವರಿ ಹಣಕಾಸನ್ನು ಪರಿಹಾರವಾಗಿ ಘೋಷಿಸಿವೆ.ಅವರು ಸೇವೆಯನ್ನು ಮುಂದುವರೆಸಲು ಉತ್ತೇಜನ ಮತ್ತು ಪ್ರೇರಣೆಗಳನ್ನು ನೀಡಿವೆ.ಒಂದು ರೀತಿಯಲ್ಲಿ ಇದು ಯುದ್ದದಲ್ಲಿ ಮಡಿವವರಿಗಾಗಿ ’ ’ವೀರ ಮರಣ ’ ಎನ್ನುವ ಪ್ರಶಂಸಾ ಪತ್ರವಿಲ್ಲದೆ ಕೊಡಲಾಗುತ್ತಿರುವ ಪರಿಹಾರ ಧನವಾಗಿದೆ.
ಯೋಧರು ಮತ್ತು ವೈದ್ಯರು
ದೇಶವನ್ನು ಕಾಯುವ ಯೋಧರು ಯುದ್ಧ ಭೂಮಿಗಿಳದಾಗ ಜರ್ಜರಿತರಾಗುವ ಅವರ ಶುಶ್ರೂಷೆಗೆ ಒಂದು ವೈದ್ಯಕೀಯ ತಂಡವೇ ದುಡಿಯುತ್ತದೆ. ವೈದ್ಯಲೋಕ ಎದುರಿಸುತ್ತಿರುವ ಪ್ಯಾಂಡೆಮಿಕ್ ನ ಈ ಕಷ್ಟಕಾಲದಲ್ಲಿ ಪ್ರಜೆಗಳನ್ನು ಹತೋಟಿಯಲ್ಲಿಡಲು, ಕೆಲವೊಂದು ಆಸ್ಪತ್ರೆಗಳ ನಿರ್ಮಾಣಗಳಿಗೆ, ಪರೀಕ್ಷೆ ಇತ್ಯಾದಿ ನಡೆಸಲು ಪೋಲೀಸರು ಮತ್ತು ಅರೆ-ಸೇನಾ ಮತ್ತು ಸೇನಾ ಪಡೆಗಳು ನೆರವನ್ನು ಒದಗಿಸಿವೆ. ಆದರೆ ಈ ಎರಡೂ ಪಡೆಗಳ ನೇರ ತುಲನೆಯನ್ನು ಯಾವುದೇ ಒಂದೇ ಒಂದು ಪರಿಸ್ಥಿತಿಗೆ ಹೋಲಿಸಿ ನೋಡಲಾಗುವುದಿಲ್ಲ.
ಅತ್ಯಲ್ಪ ಕಾಲದಲ್ಲಿ ಅತಿ ಹೆಚ್ಚಿನ ಸಾವು-ನೋವನ್ನು ನೋಡಿದ ಯೋಧರು ಮತ್ತು ವೈದ್ಯರ ಮನಸ್ಸುಗಳು ವೃತ್ತಿಯ ಪರಿಮಿತಿಯನ್ನು ಮೀರಿ ಸಾಮಾನ್ಯ ಮನುಷ್ಯರಂತೆ ಮಿಡಿಯುವುದು ಕೂಡ ಸತ್ಯ.
ಶತ್ರುಗಳ ರುಂಡ-ಮುಂಡ ಚೆಲ್ಲಾಡಲೆಂದೇ ಹೋಗುವ ಸೈನಿಕರು ಕೂಡ ಸಾವು ನೋವುಗಳನ್ನು ಹೆಚ್ಚಾಗಿ ನೋಡಿದಲ್ಲಿ ಅದರಿಂದ ಬದುಕಿಡೀ ನರಳುವ ಮಾನಸಿಕ ಕಾಯಿಲೆಗಳಿಗೆ ತುತ್ತಾಗಬಲ್ಲರು. ಅಂತೆಯೇ ರೋಗ, ಸೋಂಕು, ಸಾವುಗಳನ್ನು ನೋಡುವ ವೈದ್ಯರುಗಳು ಕೂಡ ಹಿಂದೆ ಕಂಡಿಲ್ಲದ ಪ್ರಮಾಣದ ಸಾವು ನೋವುಗಳನ್ನು ನೋಡಿದಾಗ ಮಾನಸಿಕ ಖಾಯಿಲೆಗಳಿಗೆಆಘಾತಗಳಿಗೆ, ಒಳಗಾಗಬಲ್ಲರು.
44,000 ಸಾವಿರಕ್ಕೂ ಹೆಚ್ಚು ಸಾವುಗಳನ್ನು ನೋಡಿರುವ ಯುನೈಟೆಡ್ ಕಿಂಗ್ಡಮ್ ನ ಆಸ್ಪತ್ರೆಗಳ, ಕೋವಿಡ್ ವಾರ್ಡುಗಳಲ್ಲಿ ಕೆಲಸಮಾಡುತ್ತಿರುವ ವೈದ್ಯರುಗಳು ದಿನವೊಂದರಲ್ಲಿ ಹಲವು ಸಂಸಾರದವರಿಗೆ ಸಾವಿನ ವಾರ್ತೆಯನ್ನು ತಿಳಿಸಬೇಕಾಯಿತು. ಇಲ್ಲಿನ ಆಸ್ಪತ್ರೆಗಳಲ್ಲಿ “ಬ್ರೇಕಿಂಗ್ ಬ್ಯಾಡ್ ನ್ಯೂಸ್” ಎನ್ನುವುದು ಅತ್ಯಂತ ನಾಜೂಕಿನ ಕೆಲಸ. ಸತ್ತವರ ಸಂಸಾರದ ವ್ಯಕ್ತಿಗಳ ಭಾವನೆಗಳಿಗೆ ಘಾಸಿಮಾಡದಂತೆ ಕೆಟ್ಟಸುದ್ದಿಯನ್ನು ಹೇಳುವುದನ್ನು ಒಂದು ’ವೃತ್ತಿಪರ ಕಲೆ ’. ಆದರೆ ಕೋವಿಡ್ ಸಾವುಗಳು ತಿಂಗಳ ಹಿಂದೆ ಅದೆಷ್ಟು ತ್ವರಿತಗತಿಯಲ್ಲಾಗುತ್ತಿದ್ದವೆಂದರೆ,ದಿನವೊಂದರ ಕೊನೆಗೆ ವೈದ್ಯರುಗಳೇ ಕಣ್ಣೀರಾಗಿ ಕುಸಿದ ಘಟನೆಗಳು ನಡೆದವು.ಅವರ ಇಡೀ ವೃತ್ತಿ ಬದುಕಿನಲ್ಲಿ ಇಂತಹ ಸಾವಿನ ಸುರಿಮಳೆಯನ್ನು ಅವರು ಹಿಂದೆಂದೂ ಕಂಡಿರಲಿಲ್ಲ.
ವೈದ್ಯರೇ ಆದರೂ ಅವಿರತ ಸಾವು, ನೋವು, ಆಕ್ರಂದನಗಳನ್ನು ನೋಡುವ ಅವರ ಮನಸ್ಸೂ ಮನುಷ್ಯರದೇ ಆದ ಕಾರಣ ಅವರನ್ನೂ ಮಾನಸಿಕ ಹಿಂಸೆಗಳು ತಕ್ಷಣ ಅಥವಾ ಮುಂದಿನ ಬದುಕಿನುದ್ದಕ್ಕೂ ಬಾಧಿಸಬಲ್ಲವು ಎಂಬುದನ್ನು ಮರೆಯಲು ಸಾಧ್ಯವಿಲ್ಲ.ವೈರಾಣುವಿನ ಈ ದಾಳಿಯಲ್ಲಿ ವೈದ್ಯರು ಯೋಧರೋ ಅಲ್ಲವೋ ಆದರೆ ಸೈನಿಕರಂತೆ ಅವರೂ ಮನುಷ್ಯರೇ. ಆದರೆ ಅವರ ಯುದ್ದ ಸೈನಿಕರಿಗಿಂತ ಅತ್ಯಂತ ಭಿನ್ನವಾದ್ದಾಗಿದೆ ಎಂದು ಧಾರಾಳವಾಗಿ ಹೇಳಬಹುದು.
Photo by Edward Jenner from Pexels