26 C
Karnataka
Sunday, November 24, 2024
    Home Blog Page 169

    ಐಸ್ ನ ಜೊತೆ ಒಂದು ಬಾಂಧವ್ಯ ಇತ್ತು, ಬೆಸುಗೆ ಇತ್ತು, ಜೊತೆಗೆ ಬೇಸಿಗೆ ಇತ್ತು

    ಬೀದಿಯಲ್ಲಿ ಐಸ್ ಐಸ್ ‌….. ಎಂಬ ಕೂಗೋ , ಗಂಟೆಯ ಶಬ್ದವೋ , ರಬ್ಬರ್ ಹಾರನ್ನೋ…. ಕಿವಿಗೆ ಬಿದ್ದರೆ ಸಾಕು ಮನೆಯಿಂದ ಹೊರಗೆ ಓಡಿ ಬರುತ್ತಿದ್ದೆವು. ಮೂರು ಗಾಲಿಯ ಮರದ ಗಾಡಿ ಅದರ ಮೇಲೆ ಮಗುವು ಐಸ್ ಕ್ಯಾಂಡಿ ತಿನ್ನುತ್ತಿರುವ ಚಿತ್ರ . ಮನೆಯವರ ಹತ್ತಿರ ಹಠ ಮಾಡಿ ಬೈಸಿಕೊಂಡು ಕಾಸು ಪಡೆದು ಗಾಡಿಯವನ ಹತ್ತಿರ ಹೋಗಿ ನಿಲ್ಲುತ್ತಿದ್ದೆವು. ಯಾವುದು ಅನ್ನೋ ಮಾತಿಲ್ಲ.ಎಷ್ಟರದ್ದು ಅಂತ ಕೇಳೋವ್ನು . ನಮಗೆ ಆ ಗಾಡಿಯ ಒಳಗಡೆ ನೋಡುವ ಆಸೆ ಆದರೆ ಎಟುಕುತ್ತಿರಲಿಲ್ಲ ಹತ್ತಿ ನೋಡುವಂತೆಯೂ ಇರಲಿಲ್ಲ.

    ಹಳದಿ ಕೆಂಪು ಬಿಳಿ ಹೀಗೆ ಬಣ್ಣ ಹೇಳಿದರೆ ಕೊಡುತ್ತಿದ್ದನು. ನಮ್ ಟೈಂ ಚೆನ್ನಾಗಿದ್ದು ಯಾರಾದ್ರು ದೊಡ್ಡವರು ನಮ್ಮನ್ನ ಎತ್ತಿಕೊಂಡು ಆ ಗಾಡಿಯ ಮರದ ಮುಚ್ಚಳ ಎತ್ತಿ ತೋರಿಸಿದರೆ ಪುಣ್ಯ. ಮ್ಯಾಂಗೊ , ಗ್ರೇಪು , ಶಾವಿಗೆ ಅದನ್ನೇ ನಾವು ಕೊಬ್ಬರಿ ಐಸ್ ಅಂತಿದ್ವಿ.ಒಟ್ನಲ್ಲಿ ಸ್ವರ್ಗವನ್ನೇ ಕಂಡ ಅನುಭವ. ಅದನ್ನ ತಗೊಂಡಿದ್ರೆ ಚೆನ್ನಾಗಿರೋದು ಅನ್ನೊ ಗೊಂದಲದಲ್ಲೇ ತಗೊಂಡಿರೋ ಐಸ್ ಕ್ಯಾಂಡಿಯನ್ನ ತಿಂತಿದ್ವಿ . ಬಾಯಿ ತುಟಿ ಎಲ್ಲಾ ಬಣ್ಣ ಆಗೋಗಿರೋದು .ತಿಂದಾದ್ಮೇಲೂ ಆ ಸಣ್ಣ ಬಿದರಿನ ಕಡ್ಡಿಯನ್ನ ಕಡ್ಕೊಂಡ್ ಇರ್ತಿದ್ವಿ .

    ತಿಂದಿದ್ದೇ ತಡ ಅದೆಲ್ಲಿರೋದೋ ನೆಗಡಿ ! ಮೂಗಿನ ತುದೀಲೇ ಕಾಯ್ತಿತ್ತೇನೋ ಅನ್ನೋ ಥರ ಬಂದ್ಬಿಡೋದು , ಮನೆಯಲ್ಲಿ ಸೊರಕ್ ಸೊರಕ್ ಅಂತ ಶಬ್ದ ಕೇಳಿದ್ ಕೂಡ್ಲೇ ಶುರುವಾಗೋದು ಬೈಗುಳ ‘ ಇನ್ನೊಂದ್ ಸಲ ಐಸ್ ಕ್ಯಾಂಡಿ ಅಂತ ಕೇಳು…ನಿನಗಿದೆ ‘ ಅಂತ ಧಮ್ಕಿ ಹಾಕೋವ್ರು .

    ಒಂದೆರಡು ದಿನಗಳ ನಂತರ ಬರೋದು ‘ ಐಸ್ ಕ್ರೀಂ ‘ ಗಾಡಿ ಅರ್ಧ ಸೈಕಲ್ಲು ಅದಕ್ಕೊಂದಿಕೊಂಡಂತೆಯೇ ಒಂದು ಸ್ಟ್ಯಾಂಡು, ಬಾಕ್ಸು ಎಲ್ಲಾ ಇರೋದು , ಆ ಸ್ಟ್ಯಾಂಡಿನಲ್ಲಿ ಕನಕಾಮ್ರ ಕಲರಿನ ವಿವಿಧ ಸೈಝಿನ ಬಿಸ್ಕತ್ತಿನಿಂದ ತಯಾರಿಸಿದ ಕೋನ್ ಗಳು , ಪಕ್ಕದಲ್ಲಿಯೇ ಬಿಳಿಯ ಕಾಗದದ ಕಪ್ಪುಗಳು . ಆ ಗಾಡಿಯವನ ಕೈಯಲ್ಲಿ ಯಕ್ಹಶ್ಚಿತ್ ಅನ್ನದ ಸೌಟೇ ಇರೋದು.ಅವನು ಬಗ್ಗಿ ಕೆರೆದು ಕೆರೆದು ಬಿಸ್ಕತ್ತಿನ ಕೋನಕ್ಕೆ ಐಸ್ ಕ್ರೀಂ ತುಂಬಿ ಅದರ ಮೇಲೆ ಪಪ್ಪಾಯಿನ ಕೆಂಪು ಕಣಗಳನ್ನು ಇಟ್ಟು ಅದಕ್ಕೊಂದು ಚಿಕ್ಕ ಬಿದಿರಿನ ಚಮಚ ಸಿಕ್ಕಿಸಿ ಕೊಡುತ್ತಿದ್ದ .

    ಅದನ್ನ ಕೈಯಲ್ಲಿ ಹಿಡಿಯುತ್ತಲೇ ನಮ್ಮ ಮನದಲ್ಲೊಂದು ಪ್ರೆಶ್ನೆ ಉದ್ಭವ. ಇದನ್ನ ಯಾವ ರೀತಿ ತಿನ್ನೋಣ ಅಂತ .ಕೋನ್ ಅನ್ನು ಕೆಳಗೆ ತೂತ ಮಾಡಿ ಅಲ್ಲಿಂದ ತಿನ್ನುವುದು , ಬಿಸ್ಕತ್ತನ್ನು ಸ್ವಲ್ಪ ಸ್ವಲ್ಪವೇ ಕಚ್ಚಿ ತಿನ್ನುವುದು . ಹೀಗೆ ಏನೇನೋ ಅವತಾರ ಮಾಡ್ಕೊಂಡು ಮನಸ್ಸಿನಿಂದ ಅನುಭವಿಸಿ ತಿಂದು ಮುಗುಸ್ತಾ ಇದ್ವಿ .

    ಇದರ ಮಧ್ಯೆ ಇನ್ನೊಂದು ಗಾಡಿ ಬರೋದು ಅದರಲ್ಲಿ ಐಸ್ ನೀರಿನ ಮಧ್ಯೆ ಚೌಕಾಕಾರದ ಉದ್ದನೆಯ ಅಲ್ಯೂಮಿನಿಯಂ ಅಚ್ಚುಗಳು ಅದರ ಮದ್ಯೆ ಕಡ್ಡಿ .ತೆಗೆದರೆ ಅದರಲ್ಲಿ ಕುಲ್ಫಿ, ಎಲ್ಲಾ ಒಂದೇ ಬಣ್ಣದ್ದಾಗಿದ್ರೂ , ಇದರಲ್ಲಿ ಕೋವ ಇರ್ತಿದಿದ್ದು ವಿಶೇಷ , ದುಡ್ಡು ಜಾಸ್ತಿ ಕೊಟ್ಟಂಗೆ ಕೋವಾ ಜಾಸ್ತಿ ಇರೋ ಐಸು ಕೊಡೋವ್ನು .

    ಮತ್ತೊಂದು ಆಕರ್ಷಕವಾದ ಗಾಡಿ ಬರೋದು ಬಣ್ಣ ಬಣ್ಣದ ಶರಬತ್ತು ಬಾಟಲಿಗಳನ್ನು ಸುತ್ತಲೂ ಜೋಡಿಸಿಕೊಂಡು ಮದ್ಯೆ ಐಸ್ ಗಡ್ಡೆಯನ್ನೇ ಕೊಬ್ಬರಿಯಂತೆ ತುರಿದು ಅಲ್ಯೂಮಿನಿಯಂ ಅಚ್ಚಿಗೆ ಸುರಿದು ಕಡ್ಡಿ ಸಿಕ್ಕಿಸಿ ಅದಕ್ಕೆ ಮೂರು ಫ್ಲೇವರಿನ ಬಣ್ಣಗಳನ್ನು ಹಾಕಿ ಕೊಡುತ್ತಿದ್ದ. ತಿನ್ನೋದಕ್ಕಿಂತಲೂ ನೋಡೋದಕ್ಕೇ ಸಕ್ಕತ್ತಾಗಿರೋದು .

    ಮನೆಯಲ್ಲಿ ಐಸ್ ಗಂತಲೇ ಹಠ ಉಪವಾಸ ಮಾಡುತ್ತಿದ್ದೆವು , ಬೈಸಿಕೊಳ್ಳುತ್ತಿದ್ದೆವು .ಐಸ್ ತಿಂದಿದ್ದಕ್ಕಿಂತಲೂ ಒದೆ ತಿಂದಿದ್ದೇ ಹೆಚ್ಚು .
    ಮನೆಗೆ ನೆಂಟರು ಬಂದಾಗ ಬೇಕಂತ್ಲೇ ಕೇಳುತ್ತಿದ್ದೆವು. ಅವರ ಮುಂದೆ ನಮ್ಮನೆಯವರು ಒಳಗೆ ಅಗಾಧವಾದ ಸಿಟ್ಟಿದ್ದರೂ ಮೇಲೆ ನಗುತ್ತಲೇ ತಗೋಳೋ ತಗೋ ಹೋಗು ಅಂತ ಕಾಸು ಕೊಡೋವ್ರು. ನೆಂಟರು ಹೊರಟ ಮೇಲೆ ಆ ಸಿಟ್ಟನ್ನ ಸೇಡು ಥರ ತೀರಿಸ್ಕೊಳೋವ್ರು .

    ಯಾವಾಗಲಾದರೂ ಮನೆಯವರೂ ನಮ್ಮ ಜೊತೆ ಐಸ್ ಕ್ರೀಂ ತಿನ್ನಲು ಗಾಡಿ ಬಳಿ ಬಂದ್ರೆ , ಸ್ಕೂಲಿನ ಹತ್ತಿರ ಟೀಚರ್ಗಳು ಅಪರುಪಕ್ಕೊಮ್ಮೆ ಸ್ಟ್ಯಾಫ್ ರೂಂಗೆ ಐಸ್ ಕ್ಯಾಂಡಿ ತರಿಸಿ ತಿಂದರೆ ನಮಗದೇನೋ ಆನಂದ . ನಮ್ಮ ರೋಲ್ ಮಾಡಲ್ಗಳು ಸಹ ಐಸ್ ಕ್ಯಾಂಡಿ ತಿಂತಾರೆ ಅನ್ನೋ ಫೀಲಿಂಗ್ ಆಗೋದು .

    ‘ಐಸು’…….ತಣ್ಣಗಿನ ಸಿಹಿಸ್ವರ್ಗ. ತಂಪಾದ ನವೊಲ್ಲಾಸ . ಸುಲಭಕ್ಕೆ ಸಿಗದ ಹಿಮಾಮೃತ.ಕನಸಲ್ಲೂ ಕಾಡುತ್ತಿದ್ದ ರಂಗಿನಗಡ್ಡೆ ….ಚಿಲ್ಲರೆ ಹಣ ಕೂಡಿಟ್ಟಿಕೊಂಡು ಕಾದಿದೀವಿ , ಓಡಿದೀವಿ , ಬಿದ್ದಿದೀವಿ , ಕಡಿಮೆ ಬೆಲೆಗೆ ಸಿಗುತ್ತೆ ಅಂತ ಐಸ್ಕ್ಯಾಂಡಿ ಫ್ಯಾಕ್ಟರಿ ಬಳಿ ಅಲೆದಿದೀವಿ . ತಿಂದ್ರೆ ಬೇಗ ಮುಗಿದೋಗುತ್ತೆ ಅಂತ ಸ್ಟೀಲ್ ಗ್ಲಾಸಿನಲ್ಲಿ ಹಾಕಿ ಅಲುಗಾಡಿಸುತ್ತಾ ಆ ಕರಗುವ ನೀರನ್ನು ನಾಲಿಗೆಗೆ ಸುರಿದುಕೊಂಡಿದ್ದೀವಿ .ರಚ್ಚೆ ಹಿಡಿದಿದೀವಿ ಹಾಸಿಗೆ ಹಿಡಿದಿದೀವಿ. ಗಂಟಲು ಕಟ್ಟಿಸಿಕೊಂಡಿದೀವಿ ಸೂಜಿ ಚುಚ್ಚಿಸಿಕೊಂಡಿದೀವಿ. ಬೈಸಿಕೊಂಡು, ಹೊಡೆಸಿಕೊಂಡು , ಕೊಡಿಸಿಕೊಂಡು , ಅದೆಷ್ಟೋ ಬಾರಿ ಕಣ್ಣೀರಿನಜೊತೆಯಲ್ಲೇ ಐಸ್ ಕ್ಯಾಂಡಿ ಮೆಕ್ಕಿದ್ದೇವೆ.

    ಏನೇ ಆದರೂ ಈಗ ಇದು ಬಹುದೊಡ್ಡ ಉದ್ಯಮವಾಗಿ ಬೆಳೆದಿದೆ , ನಮ್ಮಲ್ಲಿಗೆ ಅಂತರಾಷ್ಟ್ರೀಯ ಬ್ರಾಂಡ್ಗಳು ಲಗ್ಗೆ ಇಟ್ಟಿವೆ , ಐಷಾರಾಮಿ ಹವಾನಿಯಂತ್ರಿತ ಮಳಿಗೆಗಳು , ಪಾರ್ಲರ್ಗಳು ತಲೆಎತ್ತಿವೆ , ಎಲ್ಲಾ ರೀತಿಯ ತರಹೇವಾರಿ ಸ್ವಾದದ ಐಸ್ ಕ್ರೀಂಗಳು ದಿನದ ಯಾವುದೇ ಸಮಯದಲ್ಲೂ ಋತುವಿನ ಎಲ್ಲಾ ಕಾಲಗಳಲ್ಲೂ ಸಿಗುತ್ತಿವೆ .ಆರ್ಡರ್ ಮಾಡಿದರೆ ಮನೆಬಾಗಿಲಿಗೇ ತಲುಪಿಸುತ್ತಾರೆ . ಈಗಿನ ಮಕ್ಕಳಿಗೆ ಅದರ ಮೇಲೆ ಅಂತಹ ಆಸೆಯಾಗಲೀ ಪ್ರೀತಿಯಾಗಲಿ ಅಷ್ಟಾಗಿ ಕಾಣುವುದಿಲ್ಲ , ಅವರಿಗದು…..ದುಡ್ಡು ಕೊಟ್ರೆ ಸಿಗುತ್ತೆ ಅನ್ನೋ ತಿನಿಸು ಅಷ್ಟೇ !ಏನೇ ಆಗಲಿ ನಮ್ಮ ಬದುಕಲ್ಲಿ ತಣ್ಣಗೆ ಕರಗಿಹೋಗಿದ್ದು ಎರಡೇ ಒಂದು ಐಸ್ ಕ್ಯಾಂಡಿ ಮತ್ತೊಂದು ಬಾಲ್ಯ .

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ.ಹಲವಾರು ಕವಿತೆಗಳಿಗೆ ಇಲಸ್ಟ್ರೇಷನ್ ಮಾಡಿದ್ದಾರೆ. ಇಂಟಿರೀಯರ್ ಡಿಸೈನ್ ಮತ್ತು ಇದರ ಬಗ್ಗೆ ಕೆಲವು ಲೇಖನಗಳನ್ನು ಪತ್ರಿಕೆಗೆ ಬರೆದಿದ್ದಾರೆ. ಜೊತೆಗೆ ಕವಿತೆಗಳನ್ನು ಕೂಡ ಬರೆಯುತ್ತಾರೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ರಾಜ್ಯ ಕಾಂಗ್ರೆಸ್ ಆಗುವುದೆ ಕೇಡರ್ ಆಧಾರಿತ ಪಕ್ಷ

    ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಪದಗ್ರಹಣ ಮಾಡಿದ್ದಾರೆ. ತಮ್ಮದೆ ಶೈಲಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಿ ಕೆ ಶಿವಕುಮಾರ್, ಕೇಡರ್ ಆಧಾರಿತ ಪಕ್ಷ ಕಟ್ಟುವ ಮಾತಾನಾಡಿದ್ದಾರೆ. ಸಾಮೂಹಿಕ ನಾಯಕತ್ವದ ಮಂತ್ರ ಪಠಿಸಿದ್ದಾರೆ. ಅವರು ಇದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿ ಆಗಬಹುದು? ಅವರೇ ಹೇಳಿದಂತೆ ವಿಧಾನ ಸೌಧದ ಮೆಟ್ಟಿಲಿನ ಚಪ್ಪಡಿ ಕಲ್ಲಾಗಿ ಕಾಂಗ್ರೆಸ್ ಪಕ್ಷ ಮೂರನೆ ಮಹಡಿ ತಲುಪಿ ಅಧಿಕಾರ ಹಿಡಿಯುವಂತೆ ಮಾಡಬಲ್ಲರೆ ? ಈ ಬಗ್ಗೆ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ ಮತ್ತು ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ನಡೆಸಿದ ಪಾಡ್ಕಾಸ್ಟ್ ಇದು. ಆಲಿಸಿ ನಿಮ್ಮ ಅಭಿಪ್ರಾಯ ತಿಳಿಸಿ.

    ಕೋವಿಡ್ ಮತ್ತು ಮಾನಸಿಕ ಸ್ವಾಸ್ಥ್ಯ ;ಒಂಟಿತನ, ಸಂಕಟ, ಅಭದ್ರತೆಯಿಂದ ಹೊರಬನ್ನಿ

    ಮಾರ್ಚ್ 11 ರಂದು ಕೋವಿಡ್ -19 ಎನ್ನುವ  ಈ ವಿಶ್ವವ್ಯಾಪಿ ಹೊಸವ್ಯಾಧಿ ( ಪ್ಯಾಂಡಮಿಕ್)  ಪ್ರಪಂಚಕ್ಕೆಲ್ಲ ಹರಡುತ್ತಿರುವುದರ ಆಪತ್ತಿನ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಧೃಡಪಡಿಸಿತು.ಇದು ಸಂತೋಷದ ಸುದ್ದಿಯಾಗಿರಲಿಲ್ಲ. ಅಂತೆಯೇ ದುಃಖದ ಹರವನ್ನೂ ದೃಢಪಡಿಸಿರಲಿಲ್ಲ.ಆದರೆ,ಆ ದಿನ ವಿಶ್ವದ ಜನರಿಗೆ ತಮ್ಮ ಜೀವಿತಾವಧಿಯಲ್ಲೇ ಕಂಡು ಕೇಳಿಲ್ಲದ ಒಂದು ಮಹಾ ವಿಪತ್ತಿನ ಮುನ್ಸೂಚನೆಯಂತೂ ದೊರೆಕಿತು.

    ಜಗತ್ತಿನ ಜನರು ಅದಕ್ಕೆ ಎಂದಿನಂತೆ ಸ್ಪಂದಿಸಿದರು. ಮೊದಲಿಗೆ ಆಶ್ಚರ್ಯ, ಉದ್ರೇಕ ಮತ್ತು ನಂಬಲಸಾಧ್ಯವಾದ ಒಂದು ಭಾವ ಅವರಲ್ಲಿ ಹರಿದುಹೋಯ್ತು. ಜೊತೆಗೆ ಕಂಡರಿಯದ ವಿಪತ್ತಿನ ಬಗ್ಗೆ ಅವರಿಗೆ ಭಯವೂ ಆಯ್ತು. ಕಳವಳವೂ ಆಯ್ತು.ಮತ್ತೆ ಕೆಲವರು ಇದನ್ನು ನಂಬಲಿಲ್ಲ.ಅಥವಾ ಸಧ್ಯಕ್ಕೆ ಇದನ್ನು ನಂಬುವ ಅವಶ್ಯಕತೆ ತಮಗಿಲ್ಲ ಎಂದು ತಲೆಕೊಡವಿಕೊಂಡರು.ಭಯವನ್ನು ದೂರವಿಡುವ ತಂತ್ರವನ್ನು ಅನುಸರಿಸಿದರು.

    ಚೈನಾ ಮತ್ತು ಸರಹದ್ದಿನ ದೇಶಗಳನ್ನು ಬಿಟ್ಟರೆ ಈ ಸೋಂಕು ತ್ವರಿತವಾಗಿ ಹರಡಿದ್ದು ಪಾಶ್ಚಿಮಾತ್ಯ ದೇಶಗಳಲ್ಲಿ. ಹೀಗಾಗಿ ಮೊದ ಮೊದಲಲ್ಲಿ “ಕರೋನಾ ಎನ್ನುವ ಖಾಯಿಲೆ ವಿದೇಶಗಳಲ್ಲಿ ಮಾತ್ರ ಇರುವ ರೋಗ,ತಮ್ಮೂರಿನವರೆಗೆ ಈ ರೋಗ ಬರಲು ಸಾಧ್ಯವಿಲ್ಲ” ಎಂಬ ಧೃಡ ನಂಬಿಕೆಯೇ ಭಾರತದ ಮುಕ್ಕಾಲು ಮೂರು ಜನರಲ್ಲಿ ಹೆಚ್ಚು ಪ್ರಧಾನವಾಗಿತ್ತು.ಕೋವಿಡ್ ಸೋಂಕು ಹರಡುವುದನ್ನು ಮತ್ತು ಸುತ್ತ ಮುತ್ತಲಿನ ಜನ ಸಾಯುತ್ತಿದ್ದುದನ್ನು ನೋಡಿದ್ದ ಜನರನ್ನು ಬಿಟ್ಟರೆ ಪ್ರಪಂಚದ ಮಿಕ್ಕೆಲ್ಲ ಜನರು ಕೂಡ ಹೀಗೆಯೇ ನಂಬಿದ್ದರು.ಪಾಶ್ಚಾತ್ಯ, ಮತ್ತು ಪೌರ್ವಾತ್ಯ ವಿದೇಶಗಳಿಂದ ಈ ಸೋಂಕು ಇಷ್ಟೊಂದು ಕ್ಷಿಪ್ರಗತಿಯಲ್ಲಿ ಹರಡಬಲ್ಲದು ಎನ್ನುವ ಕಲ್ಪನೆ ಜನರಲ್ಲಿ ಖಂಡಿತ ಇರಲಿಲ್ಲ. ಪ್ರಪಂಚವೆಲ್ಲ ಇಷ್ಟೊಂದು ಸಂಕೀರ್ಣವಾಗಿ ಹೆಣೆದುಕೊಂಡಿರುವ ಬಗ್ಗೆ ಅರಿವಿಲ್ಲದ ಅವರ ಈ ಪ್ರತಿಕ್ರಿಯೆ ಅತ್ಯಂತ ಸಹಜವಾಗಿತ್ತು ಕೂಡ.

     ಪ್ಯಾಂಡೆಮಿಕ್ ನ ವಿರಾಟ್ ದರ್ಶನ ಅಥವಾ ಅದರ ವಿರಾಟ್ ಸ್ವರೂಪದ ಅರಿವಾದ ಕ್ಷಣದಿಂದ ಮೊದಲ ಎರಡು ವಾರಗಳವರೆಗೆ ಶೇಕಡ 80 ಜನರ ಮಾನಸಿಕ ಸ್ವಾಸ್ಥ್ಯದ ಮೇಲೆ ಈ ವಿಚಾರ ಒಂದಿಲ್ಲೊಂದು ರೀತಿಯ ಪರಿಣಾಮ ಬೀರುತ್ತದೆ ಎನ್ನುವುದುಈಗಾಗಲೇ ಧೃಡಗೊಂಡಿರುವ ವಿಚಾರ.

    ಯಾವುದೇ ತುರ್ತು ಸಂದರ್ಭ ನಮಗೆ ಎದುರಾದಾಗ ಕಳವಳ ಪಡುವುದು, ಕೈ ಕಾಲು ಆಡದ ಸ್ಥಿತಿಯಲ್ಲಿ ಸ್ಥಂಭೀಭೂತರಾಗುವುದು, ಸ್ವಾರ್ಥದಿಂದ ನಡೆದುಕೊಳ್ಳುವುದು, ಇತರರಿಗೆ ಸಹಾಯ ಮಾಡಲು ಮುಂದಾಗುವುದು, ಮತ್ತು ಏನೂ ತಿಳಿಯದ ಎಡಬಿಡಂಗಿಗಳಂತೆ ಎರ್ರಾ ಬಿರ್ರಿ ನಡೆದುಕೊಳ್ಳುವುದು,ಕಾರಣಯುಕ್ತವಾಗಿ ವರ್ತಿಸುವುದು, ಮನುಷ್ಯ ತೋರುವ ಅತ್ಯಂತ ಸಹಜ ಸ್ಪಂದನೆಗಳು.ಇವೇ ವೈವಿಧ್ಯತೆಗಳನ್ನು ಒಳಗೊಂಡ ವರ್ತನೆಯನ್ನು ಎಲ್ಲ ಸಮುದಾಯಗಳ ಸಮಾಜಗಳು ಪ್ರದರ್ಶಿಸಿದವು.ಈ ವೈಜ್ಞಾನಿಕ ಪ್ರಕ್ರಿಯೆ ಇನ್ನಿತರ ಪ್ಯಾಂಡೆಮಿಕ್ ಅಥವಾ ಯುದ್ಧಗಳಂತಹ ತುರ್ತು ಪರಿಸ್ಥಿತಿಯಲ್ಲೂ ಕಂಡುಬಂದಿರುವ ವಿಚಾರಗಳಾಗಿವೆ.

    ಒಂದು ಪ್ಯಾಂಡೆಮಿಕ್ ನಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯ ಮಾನಸಿಕ ಘಾಸಿಗಳಿಗೆ ತುತ್ತಾಗುತ್ತಾರೆ. ಮಕ್ಕಳು, ವಯಸ್ಕರರು, ವಯಸ್ಸಾದವರು, ಗಂಡಸರು, ಹೆಂಗಸರು,ಉದ್ಯೋಗಸ್ಥರು, ನಿರುದ್ಯೋಗಿಗಳು, ಉದ್ಯಮಗಳು ಎಲ್ಲರೂ ಕಷ್ಟಗಳಿಗೆ ಸಿಲುಕುತ್ತಾರೆ. ಆತಂಕದಲ್ಲಿ ಬದುಕುತ್ತಾರೆ. ಅದು ಎಲ್ಲರಿಗೂ ಕಾಣುವಂತಿರಬಹುದು ಅಥವಾ ಸುಪ್ತವಾಗಿರಬಹುದು. ಕೆಲವರದು ಹೆಚ್ಚಿರಬಹುದು ಮತ್ತೆ ಕೆಲವರದು ಕಡಿಮೆಯಿರಬಹುದು.ಕೆಲವರು ಅದನ್ನು ದೊಡ್ಡದು ಮಾಡಬಹುದು ಮತ್ತೆ ಕೆಲವರು ಸುಮ್ಮನಿರಬಹುದು.

    ಶೇಕಡ 80 ವಯಸ್ಕ ಜನರ ಮಾನಸಿಕ ಸ್ವಾಸ್ಥ್ಯ ಇಂತಹ ತುರ್ತು ಸಂದರ್ಭಗಳಲ್ಲಿ ಅಲ್ಪ -ಸ್ವಲ್ಪ ಮಟ್ಟದ ಬಳಲಿಕೆಗೆ ಒಳಗಾಗುತ್ತವೆ.ಆದರೆ ಇವರು ಬಹುಬೇಗ ಚೇತರಿಸಿಕೊಳ್ಳುತ್ತಾರೆ. ಇನ್ನುಳಿದ ಶೇಕಡ 20 ಜನರಲ್ಲಿ ಇಂತಹ ಸಮಯಗಳು ಆರದ ಗಾಯಗಳನ್ನು ಸೃಷ್ಟಿಸಬಲ್ಲವು.

    ಸಂತ್ರಸ್ತರು

    ಉದಾಹರಣೆಗೆ ಕೋವಿಡ್ ನಲ್ಲಿ ಪ್ರಾಣ ಕಳೆದುಕೊಂಡ ಸಂಸಾರಗಳು ಎಲ್ಲರಿಗಿಂತಲೂ ಹೆಚ್ಚು ಘಾಸಿಕೊಂಡಿದ್ದಾರೆ. ಪ್ರಾಣ,ಪ್ರೀತಿ, ಸಂಬಂಧ, ದುಡಿಮೆ, ಭದ್ರತೆ, ಎಲ್ಲವನ್ನು ಕಳೆದುಕೊಂಡು ಬರಿಗೈಯಾಗಿರುವ ಈ ಸಂಸಾರಗಳು ದುಃಖದ ಜೊತೆ ಜೊತೆಗೆ ತಮ್ಮ ಆರೋಗ್ಯ, ತಮ್ಮನ್ನು ನಂಬಿದ ಇತರರ ಆರೋಗ್ಯದ ಕಡೆ ಒತ್ತಟ್ಟಿಗೆ ಗಮನಕೊಡಬೇಕಾದ ಸಂಕಷ್ಟಕರ ಕರ್ತವ್ಯಗಳಲ್ಲಿ ಸಿಲುಕಿ ದಿಗ್ಭ್ರಾಂತರಾಗಿದ್ದಾರೆ.ಜೊತೆಗೆ ಆರ್ಥಿಕ ಜಂಜಾಟಗಳಿಗೆ ಮತ್ತು ಅದಕ್ಕೆ ಸಂಬಂಧಿಸಿದ ಯುದ್ದ ಭೂಮಿಗೂ ತಟ್ಟನೆ ಜಾರಿದ್ದಾರೆ. ಹತ್ತಿರವೇ ಇದ್ದು ಸಾಯುತ್ತಿರುವವರ ಬಳಿ ನಿಂತು ಸಾಂತ್ವನ ಹೇಳಲಾಗದ, ಸತ್ತವರ ಮುಂದೆ ನಿಂತು ಅಳಲಾಗದ ಈ  ವಿಚಿತ್ರ ಸಂದರ್ಭ ಮನುಷ್ಯನ ಸಾಮಾನ್ಯ ಮಾನಸಿಕ ಧರ್ಮವನ್ನು ಮೀರಿರುವ ವಿಚಾರವಾಗಿದೆ. ಈ ಕಾರಣ ಹಲವು ತಲೆಮಾರುಗಳು ಈ ಗಾಯಗಳನ್ನು ಭವಿಷ್ಯದಲ್ಲೂ ಬಹುಕಾಲ ಹೊತ್ತೇ ಬದುಕುತ್ತಾರೆ.

    ಒತ್ತಡದಲ್ಲಿ ಕೆಲಸಮಾಡುತ್ತಿರುವ ಜನರು

    ಸಾವಿನ ಭಯದಲ್ಲಿ ಕೆಲಸ ಮಾಡಲೇ ಬೇಕಾದ ಜನರು ಒತ್ತಡಕ್ಕೊಳಗಾಗಿದ್ದಾರೆ.ಅವರ ಅಯ್ಕೆಗಳು ಈ ಸಂದರ್ಭದಲ್ಲಿ  ’ಪ್ರಾಣಕ್ಕೆ ಕಂಟಕ V/S ಮೇಲೇರಲಾಗದ ಆರ್ಥಿಕ ಕಂದಕ’ಗಳ ನಡುವಿನದಾದ್ದರಿಂದ ವಿಧಿಯಿಲ್ಲದೆ ದೇವರ ಮೇಲೆ ಭಾರ ಹಾಕಿ ಕೆಲಸಗಳಿಗೆ ತೆರಳಬೇಕಿದೆ.ಆದರೆ ಈ ದ್ವಂದ್ವ ಅವರ ಮನಸ್ಸನ್ನು ಅರಿವೇ ಇಲ್ಲದ ಮಾನಸಿಕ ಬೇಗುದಿಗಳಿಗೆ, ಒತ್ತಡಗಳಿಗೆ ಸಿಲುಕಿಸಿರುವುದು ನಿಜ.

    ಬದುಕಲು ಸೆಣೆಸುತ್ತಿರುವ ವರ್ಗ

     ಮಾಡಲು ಏನೂ ಇಲ್ಲದೆ ಕೆಲಸ ಕಳೆದುಕೊಂಡು ಆರ್ಥಿಕ ನಷ್ಟದಲ್ಲಿರುವ ಜನರು ಸಂಕಷ್ಟದಲ್ಲಿದ್ದಾರೆ.ಇವರು ಹೊರಗಿನಿಂದ ದೊರೆಯಬಹುದಾದ ನೆರವಿಲ್ಲದೆ ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಇವರಿಗೆ ’ ಸಾವು ’ V/S  ’ಸಾವಿನ ಸಂಭವನೀಯತೆ ’ ಗಳ ನಡುವಿನ ಆಯ್ಕೆಯೇ ಎದುರಾಗಿರುವ ಕಾರಣ ಒಂದು ಬಗಯ ಜಡತ್ವವನ್ನು ಮೈ ಗೂಡಿಸಿಕೊಂಡರೆ ಮಾತ್ರ ಬದುಕಬಲ್ಲ ಸಾಧ್ಯತೆಯನ್ನು ಕಾಣಬಲ್ಲರು.ಇಲ್ಲವೇ ಹಸಿವು, ಖಿನ್ನತೆ, ಆತ್ಮಹತ್ಯೆಗಳ ಸರಣಿಯನ್ನು ಎದುರಿಸುತ್ತಿರುವ ಜನರಿವರು.

     ಸರಳವಾಗಿ ಗುರುತಿಸಿ,ವಿಂಗಡಿಸಬಲ್ಲ ಮೇಲಿನ ಈ ವರ್ಗಗಳನ್ನು ಬಿಟ್ಟು ಬೇರೆ ವರ್ಗದ ಜನಗಳೂ ಇದ್ದಾರೆ.ಇವರಲ್ಲಿ ಕೆಲವರು ಅತ್ಯಂತ  ಕಳವಳಕ್ಕೊಳಗಾದರೂ ಅತ್ಯಂತ ಬೇಗನೆ ಚೇತರಿಸಿಕೊಳ್ಳಬಲ್ಲವರಾಗಿದ್ದಾರೆ. ಇನ್ನು ಕೆಲವರು ನಿಧಾನಕ್ಕೆ ಸಹಜ ಮಾನಸಿಕ ಸ್ಥಿತಿಗೆ ಹಿಂತಿರುಗಬಲ್ಲರು. ಒಂದಿಷ್ಟು ಸಮಯ ಮತ್ತು ಸಮುದಾಯಗಳ ಸಹಾಯ ಸಿಕ್ಕರೆ ಬಹುತೇಕರು ಪೂರ್ತಿ ಗುಣಮುಖರಾಗುತ್ತಾರೆ. ಕೋವಿಡ್ ನಂತಹ ಪ್ಯಾಂಡೆಮಿಕ್ ಗಳನ್ನುಅನುಭವಿಸಿದ ಕೆಲವರಿಗೆ  ಮಾತ್ರ ವೃತ್ತಿಪರರ ಸಹಾಯವಿಲ್ಲದೆ ಈ ಸಾವು-ನೋವುಗಳ ಮಹಾಪೂರದಿಂದ ಹೊರಬರಲು ಸಾಧ್ಯವಾಗುವುದಿಲ್ಲ.ಇಂತವರು ಆತಂಕ (anxiety disorders )ಅಥವಾ ಖಿನ್ನತೆ(depression) ಗಳಿಂದ ನರಳಬಲ್ಲರು. ಮದ್ಯದ ವ್ಯಸನಿ ( Alcohol addiction) ಗಳಾಗಬಹುದು. ಆದೃಷ್ಟಕ್ಕೆಪ್ಯಾಂಡೆಮಿಕ್ ಒಂದರ ನಂತರpost-traumatic stress disorder (PTSD)ಅತ್ಯಂತ ವಿರಳವಾಗಿ ದಾಖಲಾಗಿರುವ ವಿಚಾರ.

    ಒಂಟಿತನ, ವೃದ್ದಾಪ್ಯ, ಮಾನಸಿಕ ರೋಗಿಗಳು.

    ಒಬ್ಬರಿಂದ ಒಬ್ಬರು ದೂರವಿರಬೇಕಾದ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಾದ ಈ ಕಾಲದಲ್ಲಿ ಮಾನಸಿಕ ಸ್ವಾಸ್ಥ್ಯ ಸದ್ದೇ ಇಲ್ಲದಂತೆ ನಲುಗಿಸುವುದು ಒಂಟಿಯಾಗಿ ಬದುಕುವವರನ್ನು, ಪ್ರೀತಿಸಲು ಮತ್ತೊಂದು ಜೀವ ಇಲ್ಲದವರನ್ನು, ಪ್ರೀತಿಗೆ ಸ್ಥಾನವೇ ಇಲ್ಲದೆ ಹೊಟ್ಟೆಯ ಪಾಡಿಗೆ ಪರದಾಡುವವರನ್ನು, ಈಗಾಗಲೇ ಹಲವು ಮಾನಸಿಕ ಮತ್ತು ದೈಹಿಕ ಖಾಯಿಲೆಗಳಿಂದ ಬಳಲುತ್ತಿರುವವರನ್ನು, ಬೇರೆ ಭಾಷೆ ಮಾತಾಡುವ ವಲಸಿಗರನ್ನು, ಈಗಾಗಲೇ ವ್ಯಸನಗಳಿಂದಲೋ ಅಥವಾ ಖಿನ್ನತೆಯಿಂದಲೋ ಬಳಲುತ್ತಿರುವವರನ್ನು. ನೆಲೆ, ಭದ್ರತೆ ಇಲ್ಲದೆ  ಬದುಕಿನಲ್ಲಿ ನಿರೀಕ್ಷೆಗಳನ್ನು ಕಳೆದುಕೊಂಡಿರುವವರನ್ನು, ಹುಟ್ಟಿನಿಂದಲೇ ಕಲಿಕೆಯ ಪೂರ್ಣ ಬೆಳವಣಿಗೆ ಇರದ ಜನರನ್ನು. ಇವರಲ್ಲಿ ಈಗಾಗಲೇ ಒತ್ತಡಗಳಿರುವ ಕಾರಣ ಪ್ಯಾಂಡೆಮಿಕ್ ಸುಲಭವಾಗಿ  ಎರಡನೇ ಒತ್ತಡವಾಗುತ್ತದೆ.  ತಮ್ಮ ಒತ್ತಡಗಳನ್ನು ಹೇಗೆ  ಹೇಳಿಕೊಳ್ಳಬೇಕೆಂದು ತಿಳಿಯದ, ಸಮಾಜದಲ್ಲಿ ಧ್ವನಿಯಿಲ್ಲದ ಇಂತಹವರಿಗೆ ಎಲ್ಲರಿಗಿಂತ ಹೆಚ್ಚಿನ ಸಹಾಯಗಳು ಬೇಕಾಗುತ್ತವೆ.

    ಮುಂದುವರೆದ ದೇಶಗಳಲ್ಲಿ ಇಂತಹ ಜನರ ಆರೋಗ್ಯದ ಬಗ್ಗೆ ತುರ್ತು ಸಂದರ್ಭಗಳಲ್ಲಿ ಪ್ರಾಮುಖ್ಯತೆಯನ್ನು ನೀಡುವ ಯತ್ನ ನಡೆಯುತ್ತದೆ. ಒಂಟಿತನ ಹೆಚ್ಚಿರುವ ಪಾಶ್ಚಿಮಾತ್ಯ ದೇಶಗಳಲ್ಲಿ ಒಂಟಿಯಾಗಿ ಬದುಕುತ್ತಿರುವ ವೃದ್ಧರಿಗೆ ಖಿನ್ನತೆ ತಗುಲದಂತೆ ಸಮುದಾಯಗಳು ಶ್ರಮಿಸುತ್ತವೆ. ಒಂಟಿತನದ ಅಸಹಾಯಕತೆಯಲ್ಲಿ ಬದುಕುವ ಇತರರ ಮಾನಸಿಕ ಆರೋಗ್ಯದ ಬಗ್ಗೆ ಸಾಧ್ಯವಿದ್ದಷ್ಟೂ ಗಮನಹರಿಸಲಾಗಿದೆ.

    ಮನೆಯಲ್ಲೇಇದ್ದು ಜನರ ಮಧ್ಯೆ ಒಂಟಿಯಾಗಿರುವ ವೃದ್ಧರೂ ಇದ್ದಾರೆ. ಅವರೆಲ್ಲ ಈ ಕಾಲದಲ್ಲಿ ಬೇಜಾರಿನ ಬವಣೆಯಲ್ಲಿ ಬೇಯುತ್ತಿದ್ದಾರೆ. ಸ್ನೇಹಿತರು, ವಾಕಿಂಗ್, ದೇವಸ್ಥಾನ, ಸಂಬಂಧಿಕರ ಮನೆ, ವ್ಯಾಪಾರ ಎನ್ನುವ ನೆಪದಲ್ಲಿ ದಿನಕ್ಕೆ ಒಂದು ಸಾರಿಯಾದರೂ ಓಡಾಡುತ್ತ ತಮ್ಮ ದೇಹದ ಆರೋಗ್ಯಕ್ಕೆ ಗಮನ ನೀಡಬೇಕಿದ್ದ ಈ ಹಿರಿಯರು ಮೂರು ತಿಂಗಳಿಂದ ಆತಂಕ, ಒಂಟಿತನ ಮತ್ತು ಬೇಜಾರಿನಲ್ಲಿ ಕಳೆಯುತ್ತಿದ್ದಾರೆ. ಇಂತವರು ಖಿನ್ನತೆಗೆ ಜಾರದಂತೆ ಮನೆಯವರು, ನೆರೆ ಹೊರೆಯವರು, ಸ್ನೇಹಿತರು, ಹಿತೈಷಿಗಳು, ಸಂಬಂಧಿಕರು ನೋಡಿಕೊಳ್ಳಬೇಕಾದ ಆಅವಶ್ಯಕತೆಯಿದೆ. ದೂರವಾಣಿ ಕರೆಗಳ ಮೂಲಕ ಅವರ ಆಗು-ಹೋಗುಗಳನ್ನು ಪ್ರತಿ-ದಿನ ಕೇಳುವುದು ಲಾಕ್ ಡೌನ್ ಕಾಲದಲ್ಲಿ ಇನ್ನೂ ಅತ್ಯಗತ್ಯವಾಗಿದೆ.

    ಆತಂಕದಲ್ಲಿ ಬದುಕುತ್ತಿರುವ ಜನ

    ಆತಂಕದಲ್ಲಿರುವ ಜನರು ತಾವು ಆತಂಕದಲ್ಲಿದ್ದೇವೆ ಎಂದು ಹೇಳಲಾರರು. ಬಹುಬಾರಿ ಇದು ಅವರ ಅರಿವಿನಲ್ಲಿರುವುದೂ ಇಲ್ಲ. ಆದರೆ ಅವರ ಮಾತಿನಲ್ಲಿ ಭಯ, ಅಸಹಾಯಕತೆ, ತಪ್ಪಿತಸ್ಥ ಭಾವನೆ, ಆತಂಕ,”ಸೋಂಕು ತಗುಲಿಬಿಟ್ಟರೆ “ ಎಂಬ ಅತ್ಯಪಾರ ಕಳವಳ, ಬದುಕಿನ ಬಗ್ಗೆ ಇಲ್ಲದ ಭರವಸೆ, ವಿಶಾದ ತುಂಬಿರುತ್ತದೆ. ಅವರಲ್ಲಿ ತಮ್ಮ ಬಗ್ಗೆ ಗಮನ ಇಲ್ಲದಿರುವುದು, ಗಲಿಬಿಲಿ, ಕುಂದಿದ ಆತ್ಮ ವಿಶ್ವಾಸ, ಕಿರಿ-ಕಿರಿ, ಪ್ಯಾಂಡೆಮಿಕ್ ವಿಚಾರದಲ್ಲಿ ಸಿಕ್ಕಾ ಪಟ್ಟೆ ನಿಗಾ ವಹಿಸುವುದು ಇತ್ಯಾದಿ  ಲಕ್ಷಣಗಳು ಕಂಡು ಬರುತ್ತದೆ. ಇಂಥವರು ನಿದ್ರಾಹೀನತೆ, ಕೈ ಬೆವರುವುದು, ಹಸಿವಿಲ್ಲದಿರುವುದು ಇತ್ಯಾದಿ ದೂರುಗಳನ್ನು ಹೇಳುತ್ತಾರೆ.ಇವೆಲ್ಲ ಅವರ ಮಾನಸಿಕ ಲೋಕದಲ್ಲಿ ಆಗುವ ಏರು-ಪೇರನ್ನು ಹೇಳುತ್ತವೆ.ಭಾರತದ ಹಳ್ಳಿಗಳಲ್ಲಿ ಕೋವಿಡ್ ಕಡಿಮೆಯಿರುವುದು ವರದಾನವೇ ಸರಿ. ಇಲ್ಲದಿದ್ದಲ್ಲಿ ಮಾನಸಿಕ ಪ್ರಪಂಚದ ಸಮಸ್ಯೆಗಳು ಇನ್ನೂ ಹೆಚ್ಚಾಗಿರುತ್ತಿದ್ದವು.

    ದೇವರು, ಆಧ್ಯಾತ್ಮ, ಪಾರಮಾರ್ಥಿಕ ಚಿಂತನೆಗಳು ಕೂಡ  ಒಂಟಿತನದ ಅಸದಳ ಹಿಂಸೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆಮಾಡಿವೆಯೆನ್ನಬಹುದು.ಆದರೆ ಬೇರೊಬ್ಬ ಮನುಷ್ಯನ ಪ್ರೀತಿ, ಸಂಪರ್ಕ ಮತ್ತು ಸ್ಪರ್ಶಗಳು ಮಾನವರಾದ ನಮಗೆ ಅತ್ಯಗತ್ಯ. ಸ್ಪರ್ಶದಿಂದ ದೂರ ಉಳಿಯಬೇಕಿರುವ ಈ ಕಾಲದಲ್ಲಿ ಸಂಪರ್ಕ ಸೇತುಗಳಾಗಿ ಫೋನ್ ಮತ್ತು ವೀಡಿಯೋ ಕಾಲ್ ಗಳು ವರದಾನವಾಗಿವೆ. ಮನುಷ್ಯನ ವಯಸ್ಸು ಎಷ್ಟೇ ಇರಲಿ ಅವನ ಚಲನ ವಲನಕ್ಕೆ ಕಡಿವಾಣ ಬಿದ್ದರೆ ಆತ ಬೇಗುದಿಗೆ ಬೀಳುತ್ತಾನೆ. ಸಹನೆಯನ್ನು ಕಳೆದುಕೊಂಡು ಪ್ರಾಣವನ್ನೂ ಲೆಕ್ಕಿಸದೆ ಹೊರಬರುತ್ತಾನೆ. ಅವನ ಸ್ವಾತಂತ್ರ್ಯ ಅವನ ಸ್ವತ್ತು. ಇದೇ ಕಾರಣಕ್ಕೆ ಪ್ರಜೆಗಳ ಒಳಿತಿಗೇ ಆದರೂ ಸರಕಾರಗಳು ಅವರನ್ನು ಮನೆಯಲ್ಲೇ ಇರಿಸಲು ಹೆಣಗಬೇಕಾಗಿದೆ.

    ಮನಸ್ಸಾಮಾಜಿಕ ಸಂಭಾವಣೆ

    ಅರ್ಥಮಾಡಿಕೊಳ್ಳುವ, ಹೊಂದಾಣಿಕೊಂಡು ನಿಭಾಯಿಸುವ ಮನಸ್ಸಾಮಾಜಿಕ(Psycho social) ಸಂಭಾವಣೆಯ ಶಕ್ತಿ ಎಲ್ಲರಿಗೂ ಸಮನಾಗಿರುವುದಿಲ್ಲ. ಕಷ್ಟಗಳಿಂದ ಸಂಪೂರ್ಣ ಬಿಡುಗಡೆ ಹೊಂದಲು ಕೆಲವರು ಹೆಣಗುತ್ತಾರೆ. ಇವರ ಮೇಲೆ ಮಾನಸಿಕ ವೈಪರೀತ್ಯಗಳ ಪರಿಣಾಮ ಆಳವಾಗಿ ಆಗುತ್ತದೆ. ಮಿಕ್ಕವರು ಬದುಕಿನಲ್ಲಿ ಬರುವ ಅಡಚಣೆಯನ್ನೇ ಹಾರುಮಣೆಯನ್ನಾಗಿ ಮಾಡಿಕೊಂಡು ಒಂದಷ್ಟು ಗಟ್ಟಿಯಾಗುತ್ತಾರೆ. ಮುಂದಿನ ಸಂದರ್ಭಗಳಿಗೆ ತಯಾರಾಗುತ್ತಾರೆ.

    ವಲಸಿಗರು

    ಅವರವರ ಊರು,ರಾಜ್ಯ, ದೇಶದ ಜನರು ತಮ್ಮದೇ ಸ್ಥಳಗಳಲ್ಲಿದ್ದರೆ, ನಿವಾಸ ಹೊಂದಿದ್ದರೆ ಅದು ಅ ವರಿಗೆ ವರದಾನ.ಆದರೆ ಈ ಜಾಗತಿಕ ಯುಗದಲ್ಲಿ ವಿಶ್ವದ ಜನರು ಒಂದೆಡೆಯಿಂದ ಮತ್ತೊಂದು ಕಡೆ ಹೋಗಿ ಬದುಕುವುದು ಅತ್ಯಂತ ಸಾಮಾನ್ಯವಾದ ವಿಚಾರ. ಈ ವಲಸಿಗರ ಮತ್ತು ಅವೇ ದೇಶಗಳಲ್ಲಿರುವ ಅಲ್ಪಸಂಖ್ಯಾತರ ಮಾನಸ ಪ್ರಪಂಚ ಅತ್ಯಂತ ಸೂಕ್ಷ್ಮವೂ, ಶಿಥಿಲವೂ ಆಗಿರುತ್ತದೆ. ಅಧೀರತೆಯೂ ಮನೆ ಮಾಡಿರುತ್ತದೆ. ಪ್ಯಾಂಡೆಮಿಕ್ ನಂತಹ  ವಿಶ್ವವ್ಯಾಪೀ ಸಮಸ್ಯೆಗಳು ಎದುರಾದಾಗ ತಮ್ಮನ್ನು ಮಿಕ್ಕ, ಸ್ಥಳೀಯರು, ಬಹುಸಂಖ್ಯಾತರು ಅವರನ್ನು ದೌರ್ಜನ್ಯಕ್ಕೆ ಒಳಪಡಿಸಿ ಮೂಲೆಗುಂಪಾಗಿಸುತ್ತಾರೆಂಬ ಅಳುಕು ಅವರಲ್ಲಿ ತುಂಬಿರುತ್ತದೆ. ಪರ ರಾಜ್ಯಗಳಲ್ಲಿ ಅಥವಾ ಪರ ಊರುಗಳಲ್ಲಿ ನೆಲೆಸಿದವರಿಗೂ ಇವೇ ಆತಂಕಗಳಿರುತ್ತವೆ. ಎಲ್ಲ ಬಗೆಯ ಸಂಚಾರ ವ್ಯವಸ್ಥೆಗಳು ನಿಂತೇ ಹೋದಾಗ ಈ ಆತಂಕ ಮತ್ತೂ ಹೆಚ್ಚಾಗುತ್ತದೆ. ಗೊತ್ತಿರುವ ಜಾಗ, ಜನರು, ತಮ್ಮದೇ ಮನೆಗಳಿಗೆ ತಲುಪಿದರೆ ಸಾಕು ಎನ್ನುವ ಅವರ ಮನಸ್ಥಿತಿ ಇತ್ತೀಚೆಗೆ ಎಲ್ಲ ವೈರುದ್ಯಗಳ ನಡುವೆಯೂ ಸಂಭವಿಸಿದ ಭಾರತದ ಮಹಾ ವಲಸೆಯಂತಹ ಘಟನೆಗಳಿಗೆ ಕಾರಣವಾಗುತ್ತದೆ.ಇಂತಹ ಸಮಯದಲ್ಲಿ ಅವರಿಗೆ ಇತರರಿಗಿಂತ ಒಂದು ಪಟ್ಟು ಹೆಚ್ಚೇ ಭರವಸೆಯನ್ನು ನೀಡಬೇಕಾಗುತ್ತದೆ.

    ಅವರಿಗೆ ಅತ್ಯಗತ್ಯವಾಗಿ ಬೇಕಾದ ಊಟ, ತಿಂಡಿ, ವಸತಿ, ಶೌಚ ಇತ್ಯಾದಿಗಳನ್ನು ಕಲ್ಪಿಸುವ ಅವಶ್ಯಕತೆಗಳ ಜೊತೆಗೆ ಅವರ ಮೂಲಭೂತ ಸ್ವಾತಂತ್ರ್ಯಗಳೇ ತುಂಡರಿಸಿದ ಭಾವನೆಗಳನ್ನು ನಿವಾರಿಸಿ ವಿಶ್ವಾಸ ತುಂಬಬೇಕಾಗುತ್ತದೆ. ಅವರ ಬುದ್ದಿವಂತಿಕೆಯನ್ನು ಪ್ರಶ್ನಿಸದೆ, ಟೀಕಿಸದೆ ಅವರದೇ ಆದ ನಂಬಿಕೆ, ಧರ್ಮ ಆಚರಣೆಗಳಿಗೂ ನಮ್ಮದೇ ಆಚರಣೆ ಮತ್ತು ನಂಬಿಕೆಗಳಿಗೆ ನೀಡುವಷ್ಟೇ ಗೌರವವನ್ನು ತೋರಿಸುವುದು ಅತ್ಯಗತ್ಯವಾಗುತ್ತದೆ.

    ನಾಗರಿಕ ಪ್ರಪಂಚದಲ್ಲಿ ಈ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಲಾಗುತ್ತದೆ. ಉದಾಹರಣೆಗೆ ಯಹೂದಿಯೊಬ್ಬ ಇಂಗ್ಲೆಂಡಿನ ಆಸ್ಪತ್ರೆಯ ವಾರ್ಡಿನಲ್ಲಿ ಕೋವಿಡ್ ನಿಂದ ಸಾಯುತ್ತಿದ್ದು, ತನ್ನ ಧರ್ಮದ ಪ್ರಕಾರ ಬದುಕಿನ ಕೊನೆಯ ಪ್ರಾರ್ಥನೆ ಸಲ್ಲಿಸಬೇಕೆಂದು ಇಚ್ಚಿಸಿದಲ್ಲಿ ಆಸ್ಪತ್ರೆಯವರು ಸಾಯುವವನ ಜೀವದ ಘನತೆಗೆ ಬೆಲೆ ಕೊಡುತ್ತಾರೆ. ಆತ ಸಾಯುವ ಮುನ್ನ ತನ್ನ ನಂಬಿಕೆ, ಧರ್ಮದ ಪ್ರಕಾರ ಕೊನೆಯ ಪ್ರಾರ್ಥನೆಯನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಹಿಂದೂ, ಮುಸ್ಲಿಂ, ಯಹೂದಿ, ಸಿಕ್ಕರು, ಕ್ರಿಶ್ಚಿಯನ್ನರ ಪ್ರಕಾರವೇ ಅವರ ಅಂತಿಮ ಪ್ರಾರ್ಥನೆ ಮತ್ತು ಯಾತ್ರೆಗಳು ನಡೆದಿದೆ. ಇದರಿಂದ ಬದುಕುಳಿದ ಅವರ ಕುಟುಂಬಗಳಿಗೆ ಸಾವನ್ನು ನೆಮ್ಮದಿಯಾಗಿ ಒಪ್ಪಿಕೊಳ್ಳಲು ನೆರವಾಗಿದೆ.ಮಾನಸಿಕ ಆಘಾತಗಳು, ಬರೆಗಳು, ಘರ್ಷಣೆಗಳು ಕಡಿಮೆಯಾಗಿವೆ.

    ಒಬ್ಬ ವಲಸಿಗ, ಅಲ್ಪ ಸಂಖ್ಯಾತ, ಹಿಂದೂ ಧರ್ಮದವಳಾಗಿ ವಿದೇಶದ ಈ ಪ್ರಪಂಚದಲ್ಲಿ ಬದುಕುವ ನನ್ನಂತವರಿಗೆ ಇದು ಅತ್ಯಂತ ಮಾನವೀಯ ವಿಚಾರವಾಗಿ ಕಂಡರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ.ಇಲ್ಲಿ ಕುಳಿತು ನೋಡುವ ನನ್ನ ಕಣ್ಣುಗಳಿಗೆ ಈ ಪ್ಯಾಂಡೆಮಿಕ್ ನ ಸಮಯದಲ್ಲಿಯೂ ಧಾರ್ಮಿಕ ನಂಬಿಕೆಗಳ ಹೆಸರಲ್ಲಿ ಭಾರತದಲ್ಲಿ ನಡೆದ ಕೆಲವುಅನಗತ್ಯ ದಾಳಿಗಳು ಅಮಾನವೀಯವೆನಿಸುತ್ತದೆ. ಅವುಗಳು ಮುರಿದಿರುವ ಹಲವು ನಂಬಿಕೆಯ ಸೇತುವೆಗಳುಮಾನಸಿಕವಾಗಿ ಆಳ ಅಂತರವನ್ನು ಸೃಷ್ಟಿಸುವ ಬಗ್ಗೆ ಖೇದವೆನಿಸುತ್ತದೆ. ಆದರೆ ಜಾತಿ,ಧರ್ಮ, ಇನ್ನಿತರ ಭೇದಗಳನ್ನು ನೋಡದೆ ಎಲ್ಲರ ಹಿತಕ್ಕಾಗಿ ದುಡಿದ, ದಾನಮಾಡಿದ, ಶ್ರಮಪಟ್ಟ ಅಸಂಖ್ಯಾತ ದೊಡ್ಡ ಮನಸ್ಸಿನ ನಾಗರಿಕರನ್ನು ಭಾರತವೂ ಸೇರಿದಂತೆ ಎಲ್ಲ ದೇಶಗಳಲ್ಲಿ ನೋಡುವಾಗ ಮನುಷ್ಯನ ಮಾನಸಿಕ ಪ್ರಪಂಚದ ಸ್ವಾಸ್ಥ್ಯ ರಾಜಕೀಯವನ್ನು,ಧಾರ್ಮಿಕತೆಯನ್ನು ಮೀರಿದ ಉದಾತ್ತ ಗುಣದಿಂದ ತುಂಬಿರುವುದರ ಅರಿವಾಗಿ ಹಿತವೆನ್ನಿಸುತ್ತದೆ.

    ಮಾನಸಿಕ ಸಹಾಯ ಬೇಕಿರುವುದು ಬರೇ ಸಂತ್ರಸ್ತರಿಗೆ ಮಾತ್ರವಲ್ಲ. ಖಿನ್ನತೆ, ಬುದ್ದಿ ಮಾಂದ್ಯತೆ, ಅಂಗವಿಕಲತೆ, ವೃದ್ಧಪ್ಯ, ಅನಾಥರು, ಒಬ್ಬಂಟಿ ಪೋಷಕರಿಗೆ ಎಲ್ಲರಿಗೂ ಬೇಕು. ಜೊತೆಗೆ ಕೋವಿಡ್ ಸಮಸ್ಯೆಯನ್ನು ಮಿತಗೊಳಿಸಲು ಶ್ರಮಿಸುತ್ತಿರುವ ವೈದ್ಯರಿಗೆ, ದಾದಿಯರಿಗೆ, ಪೊಲೀಸರಿಗೆ,ಅಸಂಖ್ಯಾತ ಶವಗಳನ್ನು ಹೂಳುತ್ತಿರುವವರಿಗೆ, ಮೂಲಭೂತ ಅಗತ್ಯಗಳನ್ನು ಪೂರೈಸುತ್ತಿರುವವರಿಗೂಬೇಕು.

    ಈ ಕಂಟಕದ ಸಮಯದಲ್ಲಿ ಬದುಕುಳಿಯುವ ತಲೆಮಾರುಗಳಲ್ಲಿ ಹಲವು ಬಗೆಯ ಮಾನಸಿಕ ಕಲೆಗಳು ಸಾಯುವವರೆಗೆ ಉಳಿಯುತ್ತವೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಪ್ರತಿಯೊಬ್ಬರೂ ಇನ್ನೊಬ್ಬರ ಒಂಟಿತನಕ್ಕೋ, ಸಂಕಟಗಳಿಗೋ, ಮಾನಸಿಕವಾಗಿ ಸಹಾಯಮಾಡುತ್ತ ಬೆಂಬಲವಾಗಿ ನಿಲ್ಲುವ ಅವಕಾಶವನ್ನಂತೂ ಕಾಣುತ್ತಿದ್ದೇವೆ. ಅವನ್ನು ಉಪಯೋಗಿಸಿಕೊಂಡು ಕೋವಿಡ್ ನಿಂದಷ್ಟೇ ಅಲ್ಲದೆ ಅದರಿಂದ ಉಂಟಾಗುವ ಹಲವು ಮಾನಸಿಕ ಹೊಡೆತಗಳಿಂದ ಬಳಲುವ ದುರ್ಬಲ ಜೀವಗಳನ್ನು ರಕ್ಷಿಸುವ ಹೊಣೆ ಎಲ್ಲ ದೇಶದ ಸರ್ಕಾರಗಳು, ಆರೋಗ್ಯ ಸಂಸ್ಥೆಗಳು ಮತ್ತು ಜನಸಾಮಾನ್ಯರಾದ ನಮ್ಮ ಮೇಲಿದೆ. ಕೋವಿಡ್ ನಿಧಾನಗೊಂಡ ನಂತರವೂ ಆ ಹೊಣೆಭಿನ್ನ ರೂಪಗಳಲ್ಲಿ ಇನ್ನೂ ಬಹುಕಾಲ ಮುಂದುವರೆಯಬೇಕಿದೆ.

    ಚಿತ್ರ ಕೃಪೆ : Lisa Fotios from Pexels

    ಹೂಡುವ ಮೊದಲು ಕಂಪೆನಿಗಳ ಪೂರ್ವಾಪರ ಗೊತ್ತಿರಲಿ

    ಕೋವಿಡ್‌ 19 ರ ಈ ದಿನಗಳಲ್ಲಿ ಎಲ್ಲಾ ವ್ಯವಹಾರಗಳು ಸೊರಗಿ ಹೋಗುತ್ತಿವೆ. ವೃತ್ತಿಗಳಾಗಲಿ, ವೃತ್ತಿಪರರಾಗಲಿ, ದಿನನಿತ್ಯದ ಕಾರ್ಯಸ್ಥರಾಗಲಿ ಎಲ್ಲರೂ ತೊಂದರಗೊಳಪಟ್ಟಿರುವುದು ಜಗಜ್ಜಾಹಿರವಾದ ಅಂಶ. ಈ ಸಂದರ್ಭದಲ್ಲಿ ಎಲ್ಲಾ ವರ್ಗದ ಜನರಿಗೂ ಸುಲಭವಾಗಿ ಲಭ್ಯವಿರುವ ವಲಯ ಎಂದರೆ ʼ ಷೇರುಪೇಟೆ.
    ಷೇರುಪೇಟೆಯ ಬಗ್ಗೆ ಜನಸಾಮಾನ್ಯರಲ್ಲಿ ಒಂದು ರೀತಿಯ ಅಸ್ಪರ್ಷತಾ ಭಾವನೆ ಹಾಗೂ ಭಯ. ಇದಕ್ಕೆ ಮುಖ್ಯ ಕಾರಣ ಷೇರುಪೇಟೆಯ ಪ್ರಮುಖ ಗುಣ ಊಹೆಗೂ, ಕಲ್ಪನೆಗೂ ಸಿಗದಿರುವುದಾಗಿದೆ. ಷೇರುಪೇಟೆ ಚಟುವಟಿಕೆಯಲ್ಲಿ ಯಶಸ್ಸು ಕಾಣಬೇಕಾದರೆ ಕಲ್ಪನಾ ಲೋಕದ ವಿಶ್ಲೇಷಣೆಗಳಿಂದ ಹೊರಬಂದು ಗುಣಮಟ್ಟದ ಕಂಪನಿಗಳ ಬೆಲೆ ಕುಸಿತದಲ್ಲಿದ್ದಾಗ ಅವುಗಳ ಅರ್ಹತೆಯಾಧಾರಿತಗಳನ್ನು ಮಾಪನ ಮಾಡಿ ಹೂಡಿಕೆಗೆ ಆಯ್ಕೆ ಮಾಡಿಕೊಂಡಲ್ಲಿ ಅಪಾಯದ ಮಟ್ಟವನ್ನು ಮಿತಗೊಳಿಸುತ್ತದೆ.

    ಈ ವಲಯದ ಮತ್ತೊಂದು ವಿಶಿಷ್ಟತೆ ಎಂದರೆ ಇಲ್ಲಿ ಬಿದ್ದವರಿಗೊಂದು ಕಲ್ಲು- ಗೆದ್ದವರಿಗೊಂದು ಹಾರ ಎಂಬಂತೆ ಒಂದು ಉತ್ತಮ ಕಂಪನಿ ಷೇರಿನ ಬೆಲೆ ಕುಸಿತದಲ್ಲಿದ್ದಾಗ ವಿವಿಧ ರೀತಿಯ ನಕಾರಾತ್ಮಕ ಚಿಂತನೆಗಳು ವಿಜೃಂಭಿಸುತ್ತವೆ. ಅದೇ ಪೇಟೆ ಏರಿಕೆಯಲ್ಲಿದ್ದಾಗ ಕೊಳ್ಳುವ ಕಾತುರ ಹೆಚ್ಚು. ಇದಕ್ಕೆ ಹಲವಾರು ವಿಶ್ಲೇಷಣೆಗಳು ಪೂರಕ ಪಾತ್ರ ವಹಿಸುತ್ತವೆ. ಈ ರೀತಿಯ ಚಿಂತನೆಗಳಿಂದ ಹೊರಬಂದು ವಿಶ್ಲೇಷಣೆಗಳನ್ನು ಅರ್ಹತೆಯಾಧಾರದ ಮೇಲೆ ನಿರ್ಧರಿಸುವ ಗುಣ ಬೆಳೆಸಿಕೊಂಡಲ್ಲಿ ಷೇರುಪೇಟೆ ಒದಗಿಸುತ್ತದೆ ಸಂಪತ್ತಿನ ಮೂಟೆ.

    ಇತ್ತೀಚೆಗೆ ಕೆಳಮಧ್ಯಮ ಷೇರುಗಳು ಗರಿಷ್ಟಮಟ್ಟದ ಅವರಣ ಮಿತಿ ತಲುಪಿ ಹೂಡಿಕೆದಾರರನ್ನು ಆಕರ್ಷಿಸಿ, ಪ್ರೇರೇಪಿಸುವ ಕಾರ್ಯ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ ಎಂಬ ಭಾವನೆ ಮೂಡಿಸುತ್ತದೆ. ಇಂತಹ ಬೆಳವಣಿಗೆಗಳಿಗೆ ಒಲವು ತೋರದೆ ಮಾನಸಿಕ ಚಿಂತನೆಗಳಿಗೆ ಅವಕಾಶ ನೀಡಿ, ಅರ್ಹತೆಯಾಧಾರಿತ, ಸರಿ-ತಪ್ಪುಗಳನ್ನು ನಿರ್ಧರಿಸುವ ಗುಣ ಬೆಳೆಸಿಕೊಳ್ಳುವುದು ಯಶಸ್ಸಿನ ಸಮೀಪಕ್ಕೆ ತಲುಪಿಸುತ್ತದೆ.

    ಮಿಡ್‌ ಕ್ಯಾಪ್‌, ಸ್ಮಾಲ್‌ ಕ್ಯಾಪ್‌ ಕಂಪನಿ ಷೇರುಗಳಲ್ಲಿ ವಹಿವಾಟು ನಡೆಸುವಾಗ ಕಂಪನಿಗಳ ಘನತೆ, ಗುಣ ಮಟ್ಟಕ್ಕೆ ಹೆಚ್ಚಿನ ಆದ್ಯತೆ ಅಗತ್ಯ. ವಿವಿಧ ಕಾರಣಗಳಿಂದ ಪ್ರೇರಣೆಪಡೆದು ಗರಿಷ್ಠ ಆವರಣ ಮಿತಿ ತಲುಪಿದ ರಿಲಯನ್ಸ್‌ ಇನ್ ಫ್ರಾ, ರಿಲಯನ್ಸ್ ಕ್ಯಾಪಿಟಲ್‌, ರಿಲಯನ್ಸ್‌ ಹೋಂ , ಸಿಂಟೆಕ್ಸ್‌, ಬಾಂಬೆ ರೆಯಾನ್ ನಂತಹ ಕಂಪನಿಗಳ ಬಗ್ಗೆ ಗಮನಿಸುವುದರ ಜೊತೆಗೆ ಸಾಧನೆ ಮಾಡುತ್ತಿರುವ ಸ್ಮಾಲ್ ಕ್ಯಾಪ್ ಕಂಪೆನಿಗಳ ಬಗ್ಗೆಯೂ ಗಮನಿಸಬಹುದು.

    ಉದಾಹರಣೆಗೆ ಕ್ಲಾರಿಯಂಟ್‌ ಕೆಮಿಕಲ್ಸ್‌ ಲಿಮಿಟೆಡ್‌ ಕಂಪನಿ. ಇದು 1958 ರಿಂದ ಲೀಸ್ಟಿಂಗ್‌ ಆಗಿರುವ ಕಂಪನಿ. ಸ್ಪೆಷಾಲಿಟಿ ಕೆಮಿಕಲ್ಸ್‌ ವಲಯದಲ್ಲಿದೆ. ಇದು ಆಕರ್ಷಕ ಡಿವಿಡೆಂಡ್‌ ಜೊತೆಗೆ ಆಂತರಿಕವಾಗಿಯೂ ಉತ್ತಮ ಸಾಧನೆ ಪ್ರದರ್ಶಿಸುತ್ತಿದೆ. ಇದು ಮಾರ್ಚ್‌ ಅಂತ್ಯದ ವರ್ಷದಲ್ಲಿ ರೂ.11 ರ ಡಿವಿಡೆಂಡ್ ಪ್ರಕಟಿಸಿದೆ. ಇದಕ್ಕೆ ಆಗಸ್ಟ್‌ 10 ನಿಗದಿತ ದಿನವಾಗಿದೆ. ಈ ಮಧ್ಯೆ ಈ ಕಂಪನಿ ಷೇರು ಬುಧವಾರದಂದು ಒಂದೇ ದಿನ 65 ರಷ್ಟು ಏರಿಕೆ ಕಂಡಿದೆ. ಒಂದು ವಾರದಲ್ಲಿ ರೂ.107 ಕ್ಕೂ ಹೆಚ್ಚಿನ ಏರಿಕೆ ಪಡೆರುವ ಈ ಷೇರು ಒಂದು ತಿಂಗಳಲ್ಲಿ ರೂ.136 ರಷ್ಟು ಏರಿಕೆ ಕಂಡಿದೆ.

    ಮಾರ್ಚ್‌ ನ ಕುಸಿತದ ಸಮಯದಲ್ಲಿ ರೂ.192 ರ ಸಮೀಪಕ್ಕೆ ಕುಸಿದಿದ್ದ ಈ ಷೇರಿನ ಬೆಲೆ ನಿನ್ನೆ ರೂ.477 ಕ್ಕೆ ಜಿಗಿತ ಕಂಡಿತ್ತು. ಆ ಜಿಗಿತ ಇಂದೂ ಮುಂದುವರೆದು 495 ತಲುಪಿ ಮತ್ತೆ 477 ರ ಆಸು ಪಾಸಿಗೆ ಇಳಿದಿದೆ. ಇದು ಕಂಪನಿಯ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ. ಇದೇ 4 ರಂದು ಸ್ಪೆಷಲ್‌ ಡಿವಿಡೆಂಡ್‌ ಘೋಷಿಸಲು ಆಡಳಿತ ಮಂಡಳಿ ಸಭೆಯು ಪರಿಶೀಲಿಸಲಿದೆ ಎಂಬ ಸುದ್ದಿ ಈ ದಿಢೀರ್ ಏರಿಕೆಗೆ ಕಾರಣವಾಯಿತು.

    Value pick – profit book ಸೂತ್ರದಿಂದ ಘನತೆಯುಳ್ಳ ಕಂಪನಿಗಳನ್ನೇ ಹೂಡಿಕೆಗೆ ಆಯ್ಕೆ ಮಾಡಿಕೊಂಡಲ್ಲಿ ಮಾತ್ರ ಹೂಡಿಕೆ ಮಾಡಿದ ಬಂಡವಾಳ ಸ್ವಲ್ಪ ಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೊರೊನಾ ತಡೆಗೆ ಆಯುರ್ವೇದದಲ್ಲಿರುವ ಪರಿಹಾರ

    ಜಗತ್ತಿನಲ್ಲಿ ಕೊರೊನಾ ಅಟ್ಟಹಾಸ ಮಾಡುತ್ತಿದೆ. ರಾಜ್ಯದಲ್ಲಿ ಮರಣ ಮೃದಂಗ ಬಾರಿಸಿದೆ. ವಿರುದ್ಧದ ಹೋರಾಟದಲ್ಲಿ ನಾಡಿನ ವೈದ್ಯ ಪಡೆ ಹಗಲೂ ರಾತ್ರಿ ದುಡಿಯುತ್ತಿದೆ. ಇಂದು ವೈದ್ಯರ ದಿನ. ಈ ಹಿನ್ನೆಲೆಯಲ್ಲಿ ಮೈಸೂರಿನ ಹೆಸರಾಂತ ಆಯುರ್ವೇದ ತಜ್ಞ ಡಾ. ಬಿ. ಗುರುಬಸವರಾಜ ಅವರು ಕನ್ನಡ ಪ್ರೆಸ್.ಕಾಮ್ ನ ಪಾಡ್ಕಾಸ್ಟ್ ನಲ್ಲಿ ಭಾಗವಹಿಸಿದ್ದಾರೆ. ಹಿರಿಯ ಪತ್ರಕರ್ತ ಡಾ. ಕೂಡ್ಲಿ ಗುರುರಾಜ ಅವರು ನಡೆಸಿಕೊಟ್ಟ ಪಾಡ್ಕಾಸ್ಟ್ ನಲ್ಲಿ ಕೊರೊನಾ ತಡೆಗೆ ಆಯುರ್ವೇದದಲ್ಲಿರುವ ಪರಿಹಾರದ ಬಗ್ಗೆ ಡಾ. ಗುರುಬಸವರಾಜ ಮಾತಾಡಿದ್ದಾರೆ. ಆಲಿಸಿ. ನಿಮ್ಮ ಅಭಿಪ್ರಾಯ ತಿಳಿಸಿ. ಸುರಕ್ಷಿತವಾಗಿರಿ.

    ಶಾಂತಲಾದಲ್ಲಿ ಇನ್ನು ಕೇಳಿಸದ ನಮೋ ವೆಂಕಟೇಶ

    ಇತ್ತೀಚಿಗೆ, ಮೈಸೂರಿಗರ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದ ಪದ್ಮ(ಪ್ರಭುದೇವ) ಮತ್ತು ಶಾಂತಲಾ ಚಿತ್ರಮಂದಿರಗಳನ್ನು ಮುಚ್ಚುವ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿ ಆಘಾತವಾಯಿತು. ನನ್ನ ಮನಃಪಟಲದಲ್ಲಿ ಸಾಲು ಸಾಲು ನೆನಪುಗಳ ಮೆರವಣಿಗೆ.
    ಈ ಎರಡು ಚಿತ್ರಮಂದಿರಗಳ ಜೊತೆಗಿನ ನನ್ನ ನೆನಪುಗಳು ಹಾಗೂ ಅನುಭವಗಳು ಅಚ್ಚಳಿಯದೆ ಉಳಿದಿವೆ. ಇಂದು ವಿಶೇಷವಾಗಿ ಶಾಂತಲ ಚಿತ್ರಮಂದಿರದ ಕುರಿತು ಅನಿಸಿಕೆ, ನೆನಪುಗಳನ್ನು ಹಂಚಿಕೊಳ್ಳಬಯಸುವೆ.

    ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಡಬ್ಬಲ್ ರೋಡ್ ಗೆ ತಾಕಿದಂತಿರುವ ಶಾಂತಲ ಚಿತ್ರಮಂದಿರ ಬಹಳ ಹೆಸರು ವಾಸಿ. ಹಿಂದೆ ಓಂಕಾರ್ ಸೌಂಡ್ ಸಿಸ್ಟಮ್, ಎದುರುಗಡೆ ಸುಬ್ಬರಾಯ ಕೆರೆ.. ಸುಬ್ಬರಾಯ ಕೆರೆಯ ಈಜುಕೊಳ, ದಸರಾ ಸಮಯದ ಕೊಕ್ಕೋ ಮತ್ತು ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಗಳು.. ಶಾಂತಲಾ ಒಟ್ಟಿಗೆ ಮೇಳೈಸಿವೆ. ಈ ಚಿತ್ರಮಂದಿರದ ವಿಶೇಷ ಅಂದ್ರೆ ಇಲ್ಲಿ ಯಾವಾಗಲೂ ಕನ್ನಡ ಚಿತ್ರಗಳನ್ನು ಪ್ರದರ್ಶನ ಮಾಡ್ತಾ ಇದ್ದದ್ದು. ಪ್ರಶಸ್ತಿ ವಿಜೇತ ಗ್ರಹಣ ಇಲ್ಲಿಯೇ ತೆರೆ ಕಂಡಿದ್ದು ಮತ್ತೆ ಆ ಸಿನಿಮಾ ಇಲ್ಲಿ ನೋಡಿದ್ದು ನನ್ನ ಅತ್ಯಂತ ಹಳೆಯ ನೆನಪು. ಶಾಂತಲಾ ಚಿತ್ರಮಂದಿರದ ಆಕರ್ಷಣೆ ಎಂದರೆ ಅದರ ಮ್ಯಾನೇಜರ್.. ಗಿರಿಜಾ ಮೀಸೆಯ ಆ ವ್ಯಕ್ತಿ ಪೊಲೀಸ್ ಅಲ್ಲದಿದ್ದರೂ ಪೊಲೀಸರಿಗಿಂತ ಕಟ್ಟುನಿಟ್ಟು.. ಶಾಂತಲ ಚಿತ್ರಮಂದಿರದಲ್ಲಿ ಎಂದಿಗೂ ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ ಆಗುತ್ತಿರಲಿಲ್ಲ. ಒಬ್ಬರಿಗೆ ಒಂದೇ ಟಿಕೆಟ್ ನೀಡುವ ಪರಿಪಾಠವಿತ್ತು. ಡಾ. ರಾಜಕುಮಾರ್ ಅಭಿನಯದ ಹಲವಾರು ಸಿನಿಮಾಗಳನ್ನು ನಾನು ಅಲ್ಲಿಯೇ ನೋಡಿದ್ದು ಅವುಗಳಲ್ಲಿ ಪ್ರಮುಖವಾದದ್ದು ಹೊಸಬೆಳಕು, ಕೆರಳಿದಸಿಂಹ ಇತ್ಯಾದಿ. ದಿನವಹಿ ಮೂರು ಆಟ ಕೆರಳಿದ ಸಿಂಹ ಇದ್ದಾಗ ಬೆಳಗಿನ ಆಟ ಸಾಹಸಸಿಂಹ. ಡಾ. ರಾಜಕುಮಾರ್ ಮತ್ತು ವಿಷ್ಣುವರ್ಧನ್ ರ ಈ ಚಿತ್ರಗಳಿಗೆ ಸ್ಟಾರ್ ಕಟ್ಟಿದವರು, ಮೆರವಣಿಗೆ ತಂದವರು, ಟಿಕೆಟ್ ಗಾಗಿ ಒದೆ ತಿಂದವರು.. ಇವರನ್ನೆಲ್ಲ ಕಂಡಾಗ ಕಣ್ಣಿಗೆ ಹಬ್ಬ. ರಾಜಕುಮಾರ್ ಚಿತ್ರಕ್ಕೆ ನಗರದ ಬೇರೆ ಬೇರೆ ಕಾರಣಗಳು ಅಭಿಮಾನಿ ಸಂಘದವರು ಸ್ಟಾರ್ ಮೆರವಣಿಗೆ, ಪಟಾಕಿ ಸದ್ದು, ಬ್ಯಾಂಡ್ ಸೆಟ್, ಕುಣಿತಗಳ ಸಮೇತ ಬರುತ್ತಿದ್ದುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು.

    ದಸರಾ ಚಲನಚಿತ್ರೋತ್ಸವದಲ್ಲಿ ಒಂದು ರೂಪಾಯಿ, ಎರಡು ರೂಪಾಯಿಗೆ ದಿನಕ್ಕೊಂದು ಪ್ರಖ್ಯಾತ ಚಿತ್ರಗಳ ಪ್ರದರ್ಶನ ನಡೆಯುತ್ತಿದ್ದಾಗ ಮುಗಿಬಿದ್ದು ನೋಡುತ್ತಿದ್ದೆವು. ಶಿವರಾತ್ರಿಯ ತಡರಾತ್ರಿ ಶೋ ಕೂಡಾ ಇಲ್ಲಿ ನಡೆಯುತ್ತಿತ್ತು. ಇವೆಲ್ಲಾ ನೆನಪುಗಳು ವಿಶಿಷ್ಠ.

    ಯಾವುದೇ ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಮಾಡುವ ವ್ಯವಸ್ಥೆ ಬೇರೆಲ್ಲಾ ಕಡೆ ಇದ್ದಾಗಲೂ ಶಾಂತಲಾದಲ್ಲಿ ಇರಲಿಲ್ಲ. ಪ್ರತಿ ಪ್ರದರ್ಶನಕ್ಕೂ ಒಂದರ್ಧ ಗಂಟೆ ಮೊದಲು ಗೇಟನ್ನು ತೆಗೆದು ಒಳಗೆ ಬಿಡುತ್ತಿದ್ದರು ಅದು ಕೂಡ ಒಂದೇ ಸಾಲಿನಲ್ಲಿ ನಿಲ್ಲಬೇಕೆಂಬ ಕಟ್ಟಳೆ. ಎರಡನೇ ಸಾಲು ರೂಪುಗೊಂಡರೆ ಹೊರಗೆ ಎಳೆದು ಹಾಕುತ್ತಿದ್ದರು. ಚಿತ್ರಮಂದಿರದ ಹೊರಗಿನ ಗದ್ದಲ ಹೇಗೆ ಇದ್ದರೂ ಒಳಗೆ ಮಾತ್ರ ಶಿಸ್ತು ತುಂಬಿತ್ತು. ಇದಕ್ಕೆ ಮುಖ್ಯ ಕಾರಣವೇ ಅಲ್ಲಿನ ಪೊದೆ ಮೀಸೆ ಮ್ಯಾನೇಜರ್.

    ಶಾಂತಲಾ ಚಿತ್ರಮಂದಿರದಲ್ಲಿ ಯಾವುದೇ ಚಿತ್ರ ಪ್ರದರ್ಶನವಾಗುವ ಮೊದಲು ತೆರೆಮೇಲೆ ಏಳುವಾಗ ಘಂಟಸಾಲ ಅವರು ಹಾಡಿದ್ದ ತೆಲುಗಿನ ನಮೋ ವೆಂಕಟೇಶ ಹಾಡು ಹಾಕುವುದು ವಾಡಿಕೆ. ಸಿನಿಮಾ ಆರಂಭವಾಯಿತು ಎಂಬುದಕ್ಕೆ ನಾವೆಲ್ಲ ಬಳಸುತ್ತಿದ್ದುದ್ದೇ ನಮೋ ವೆಂಕಟೇಶ ಶುರುವಾಯಿತು ಎಂಬ ಮಾತನ್ನು.

    ಇಲ್ಲಿ ಅಂಬರೀಷ್ ಅಭಿನಯದ ಅಂತ ಚಿತ್ರ ಬಿಡುಗಡೆಯಾಗಿದ್ದು ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಮೊದಲ ಮೂರು ದಿನ ಬಹುತೇಕ ಖಾಲಿ ಇದ್ದ ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿದ್ದೆ. ಆಗಿನ್ನೂ ಹಲವು ದೃಶ್ಯಗಳು ಕತ್ತರಿ ಪ್ರಯೋಗಕ್ಕೆ ಒಳಗಾಗಿರಲಿಲ್ಲ. ಮೂರನೆಯ ದಿನದಿಂದ ತನ್ನ ಹಸಿಹಸಿ ದೃಶ್ಯಗಳಿಂದ ಇದ್ದಕ್ಕಿದ್ದಂತೆ ಜನಪ್ರಿಯತೆ ಗಳಿಸಿದ ಚಿತ್ರದ ಕೆಲವು ದೃಶ್ಯಗಳಿಗೆಗಳಿಗೆ ಕತ್ತರಿ ಪ್ರಯೋಗವಾಗಿದ್ದು ಜನರಲ್ಲಿ ಕುತೂಹಲ ಹೆಚ್ಚಿಸಿ ಹಿಂದೆಂದೂ ಕಾಣದಷ್ಟು ಜನಸಂದಣಿ ಉಂಟಾಗಿತ್ತು.. ಜನರ ಸರತಿ ಸಾಲು ಚಿತ್ರಮಂದಿರದ ಹಿಂದಿನ ರಸ್ತೆಯನ್ನು ದಾಟಿ ಎಣ್ಣೆ ಗಾಣದವರೆಗೂ ಇರುತ್ತಿದ್ದುದನ್ನು ನೋಡಿ ನಮಗೆ ಒಳಗೊಳಗೆ ಪುಳಕ. ಇಷ್ಟು ಜನ ನೋಡಬೇಕೆಂದು ಒದ್ದಾಡುತ್ತಿರುವ ಚಿತ್ರವನ್ನು ಎಲ್ಲರಿಗಿಂತ ಮೊದಲು ಆರಾಮಾಗಿ ನೋಡಿದ್ದೇವೆ ಅಂತ ಜಂಬ ಪಡುತ್ತಿದ್ದೆವು.ವಿಷ್ಣುವರ್ಧನ್ ಅಭಿನಯದ ಅಡಿಮೈ ಚಂಗಲ್ ಎಂಬ ಪರಭಾಷಾ ಚಿತ್ರವನ್ನು ಕೂಡ ಇಲ್ಲಿ ಬೆಳಗಿನ ಆಟದಲ್ಲಿ ನೋಡಿದ ನೆನಪಿದೆ.

    ಚಿತ್ರಮಂದಿರ ಮನಸ್ಸಿಗೆ ಎಷ್ಟು ಹತ್ತಿರವಾಗಿತ್ತೋ ಅಷ್ಟೇ ಅದನ್ನು ಸಿಹಿ ಮಾಡಿದ್ದು ಎದುರಿನ ಪಾನಿಪುರಿ ಗಾಡಿ, ಪಕ್ಕದ ಸಣ್ಣ ಹೋಟೆಲ್, ಸಮೀಪದ ಜ್ಯೂಸ್ ಅಂಗಡಿಗಳು..

    ಒಟ್ಟಿನಲ್ಲಿ, ನನ್ನ ಬಾಲ್ಯದ ಹಲವು ವರ್ಷಗಳ ಕಾಲದ ಅವಧಿಯಲ್ಲಿ ಮರೆಯಲಾಗದ ನೆನಪುಗಳನ್ನು ಮನದಲ್ಲಿ ಅಚ್ಚು ಹಾಕಿದ ಶಾಂತಲ ಚಿತ್ರಮಂದಿರ ಇದೀಗ ಶಾಶ್ವತವಾಗಿ ಮುಚ್ಚುತ್ತಿರುವುದು ನೋವಿನ ಸಂಗತಿ. ಶಾಂತಲ ಚಿತ್ರಮಂದಿರ ಮೈಸೂರಿಗರ ಮನಗಳಲ್ಲಿ ಸದಾ ಉಳಿಯುತ್ತದೆ. ಮತ್ತೊಮ್ಮೆ ಅಲ್ಲಿನ ತೆರೆ ಮೇಲೆ ಏಳಬಹುದು, ಮತ್ತೊಮ್ಮೆ ನಮೋ ವೆಂಕಟೇಶ ಕೇಳಿಬರಬಹುದು ಎಂಬ ದೂರದ ಆಸೆ ನಮ್ಮೆಲ್ಲರ ಮನದಲ್ಲಿ ಸದಾ ಹಸಿರು.

    ಬೆಂಗಳೂರು ಮೈಸೂರು ಸೇರಿದಂತೆ ಅನೇಕ ನಗರಗಳಲ್ಲಿ ಅನೇಕ ಥಿಯೇಟರ್ ಗಳು ಬಂದ್ ಆಗಿವೆ.ಅಲ್ಲದೆ ಕರೋನಾ ಕಾರಣದಿಂದ ಚಿತ್ರಮಂದಿರಗಳು ಇನ್ನೂ ತೆರೆದಿಲ್ಲ. ಚಿಂತೆ ಬೇಡ. ಅಮೆಜಾನ್ ಪ್ರೈಮ್ ಸದಸ್ಯರಾದರೆ ಕನ್ನಡ ಸೇರಿದಂತೆ ವಿಶ್ವದ ಸಿನಿಮಾ ಲೋಕವೇ ನಿಮ್ಮ ಮನೆಯಲ್ಲಿ ತೆರೆದುಕೊಳ್ಳುತ್ತದೆ ಈ ಕೆಳಗಿನ ಲಿಂಕ್ ಒತ್ತಿ ಅಮೆಜಾನ್ ಪ್ರೈಮ್ ವಿಡಿಯೋ ಬಳಗ ಸೇರಿ.

    ಅರಿತು ಹೂಡಿಕೆ ಮಾಡಿರಿ- ಅನುಸರಿಸಬೇಡಿರಿ

    ಇಂದಿನ ದಿನಗಳಲ್ಲಿ ಷೇರುಪೇಟೆಯ ಚಟುವಟಿಕೆ ಹೇಗಿದೆ ಎಂದರೆ ಯಾವುದೇ ವಿಧದಲ್ಲಿ ಸಮೀಕರಿಸಲು ಸಾಧ್ಯವಾಗದ ರೀತಿಯಲ್ಲಿರುತ್ತದೆ. ಇತ್ತೀಚಿನ ಮಾಧ್ಯಮ ವರದಿಯ ಪ್ರಕಾರ ಪ್ರಮುಖ ವಿಮಾ ಕಂಪನಿಗಳಾದ ಎಸ್ ಬಿ ಐ ಲೈಫ್ ಇನ್ಶುರೆನ್ಸ್ ಕಂಪನಿ ಮತ್ತು ಎಚ್ ಡಿ ಎಫ್ ಸಿ ಲೈಫ್ ಕಂಪೆನಿಗಳು ನ್ಯಾಶನಲ್‌ ಸ್ಟಾಕ್‌ ಎಕ್ಸ್ ಚೇಂಜ್‌ ನ ನಿಫ್ಟಿ ಯಲ್ಲಿ ಸೇರುವ ಸಾಧ್ಯತೆ ಕಂಡು ಬರುತ್ತಾ ಇದೆ. ಹೀಗೆಂದ ಮಾತ್ರಕ್ಕೆ ಈ ವಿಮಾ ಕಂಪನಿಗಳ ಷೇರುಗಳು ಹೆಚ್ಚಿನ ಅಭಿವೃದ್ದಿಯನ್ನು ಕಾಣುತ್ತವೆ ಎಂದು ನಿರ್ಧರಿಸುವುದು ಸರಿಯಲ್ಲ. ಇದನ್ನು ದೃಢೀಕರಿಸಲು ಈ ಕೆಳಗಿನ ಉದಾಹರಣೆಯತ್ತ ಕಣ್‌ ಹಾಯಿಸಿರಿ.

    2017 ರ ನವೆಂಬರ್‌ ನಲ್ಲಿ ಪ್ರತಿ ಷೇರಿಗೆ ರೂ.800 ರಂತೆ ಆರಂಭಿಕ ಷೇರು ವಿತರಣೆಯನ್ನು ಮಾಡಿದ ಸಾರ್ವಜನಿಕ ವಲಯದ ನ್ಯೂ ಇಂಡಿಯಾ ಅಶುರೆನ್ಸ್ ಕಂಪೆನಿ ಲಿಮಿಟೆಡ್ ಅ ವರ್ಷ ರೂ.8.75 ನ್ನು ಡಿವಿಡೆಂಡ್‌ ಆಗಿ ವಿತರಿಸಿತು. 2018 ರಲ್ಲಿ 1:1 ರ ಅನುಪಾತದ ಬೋನಸ್‌ ಷೇರನ್ನು ವಿತರಿಸಿ, ಹೂಡಿಕೆಯ ಮೊತ್ತವನ್ನು ರೂ.400 ಕ್ಕೆ ಇಳಿಸಿತು. ಹಿಂದಿನ ವರ್ಷ ಪ್ರತಿ ಷೇರಿಗೆ ರೂ.1.50 ಯಂತೆ ಡಿವಿಡೆಂಡ್‌ ವಿತರಿಸಿದೆ. ಆದರೆ ಮಾರ್ಚ್‌ ನಲ್ಲಿ ಪೇಟೆ ಕಂಡ ಭಾರಿ ಕುಸಿತದ ಕಾರಣ ಷೇರಿನ ಬೆಲೆ ರೂ.75 ಕ್ಕೆ ಜಾರಿ ಇಂದು ರೂ.116 ರ ಸಮೀಪವಿದೆ. ನಿನ್ನೆ ಕಂಪನಿಯು ತನ್ನ ವಾರ್ಷಿಕ ಫಲಿತಾಂಶ ಪ್ರಕಟಿಸಿತು. ಅದರಂತೆ ಕಂಪನಿಯ ಲಾಭ ಗಳಿಕೆ ಹೆಚ್ಚು ಕುಸಿತ ಕಂಡಿದ್ದು ವಾರ್ಷಿಕ ಲಾಭವು ಹಿಂದಿನ ವರ್ಷದ ರೂ.483.04 ಕೋಟಿಗೆ ಬದಲಾಗಿ ಈ ವರ್ಷ ರೂ.126.64ಕೋಟಿ ಗೆ ಇಳಿದಿದೆ. ಲಾಭ ಗಳಿಕೆ ಭಾರಿ ಇಳಿಕೆಯ ಕಾರಣ ಈ ವರ್ಷ ಡಿವಿಡೆಂಡನ್ನು ಘೋಷಿಸಿಲ್ಲ. ಅಂದರೆ IPO ನಲ್ಲಿ ಹೂಡಿದ ರೂ.400 ಹೇಗೆ ಕರಗಿ ರೂ.116 ರ ಸಮೀಪಕ್ಕೆ ಕರಗಿರುವುದರೊಂದಿಗೆ ಮೂರು ವರ್ಷದ ಹೂಡಿಕೆಯೂ ನಿರುಪಯುಕ್ತವಾಗಿದೆ.

    ಇದು ಕೇವಲ ಈ ಕಂಪನಿಯ ಕಥೆಯಲ್ಲ ಇಂತಹ ಅನೇಕ IPO ಗಳ ಪಟ್ಟಿಯೇ ಇದೆ. 2018 ರಲ್ಲಿ HAL ಕಂಪನಿಯ IPO ರೂ.1,215 ರಂತೆ ಮಾಡಿತಾದರೂ ಇದುವರೆಗೂ ವಿತರಣೆ ಬೆಲೆ ತಲುಪಲಾಗಿಲ್ಲ. ಇನ್ನು ಖಾಸಗಿ ವಲಯದ ಕಂಪನಿ ರಿಯಲ್‌ ಎಸ್ಟೇಟ್‌ ಕಂಪನಿಗಳಾದ ಶೋಭಾ ಡೆವಲಪರ್ಸ, ಡಿ ಬಿ ರಿಯಾಲ್ಟಿ, ಅಲ್ಲದೆ ಜೆಟ್‌ ಏರ್ವೇಸ್‌, ಮನ್ ಪಸಂದ್‌ ಬೆವರೇಜಸ್‌, ಪಿ ಎನ್‌ ಬಿ ಹೌಸಿಂಗ್ ಗಳಂತಹ ಕಂಪನಿಗಳು ಹೂಡಿಕೆದಾರರ ಸಂಪತ್ತನ್ನು ಕರಗಿಸಿವೆ.

    ಇನ್ನು 2010 ರಲ್ಲಿ ಕೋಲ್‌ ಇಂಡಿಯಾ ರೂ.245 ರಂತೆ IPO ಮೂಲಕ ಪೇಟೆ ಪ್ರವೇಶಿಸಿತು. ಆ ಸಮಯದಲ್ಲಿ ಷೇರಿನ ಬೆಲೆ ರೂ.440 ರವರೆಗೂ ಏರಿಕೆ ಕಂಡು ವಿಜೃಂಬಿಸಿತು. ಆನಂತರದಲ್ಲಿ ಷೇರಿನ ಬೆಲೆ ಕುಸಿಯುತ್ತಾ ಜಾರಿದೆ. ಒಂದು ಸಮಾಧಾನಕರ ಅಂಶವೆಂದರೆ ಈ ಕಂಪನಿಯು ಹಲವು ಭಾರಿ ಆಕರ್ಷಕ ಡಿವಿಡೆಂಡ್‌ ವಿತರಿಸಿದೆ.

    ಒಟ್ಟಾರೆ ಹಣ ಹೂಡಿಕೆಗೂ ಮುನ್ನ ಯಾವುದೇ ಪ್ರಚಾರಿಕ ಅಂಶಗಳಿಗೆ ಮಾರುಹೋಗದೆ ಯೋಗ್ಯತೆಯ ಮಾಪನಮಾಡಿ ನಿರ್ಧರಿಸಿದಲ್ಲಿ ಹೂಡಿಕೆ ಸ್ವಲ್ಪಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ.

    ಅರಿತು ಹೂಡಿಕೆ ಮಾಡಿರಿ- ಅನುಸರಿಸಬೇಡಿರಿ. ಉಳಿಸಿದ ಹಣ – ಗಳಿಸಿದ ಹಣ

    ಚೀನಾ ಆ್ಯಪ್ ಗಳ ಅಸಲಿ ರಹಸ್ಯ

     ಚೀನಾ ನಿರ್ಮಿತ 59 ಮೊಬೈಲ್ ಅಪ್ಲಿಕೇಶನ್ ಗಳನ್ನು ಕೇಂದ್ರ ಸರಕಾರ ಬ್ಯಾನ್ ಮಾಡಿದ ಬೆನ್ನಲ್ಲೇ ಇಂಟರ್ ನೆಟ್ ಒದಗಿಸುವ ಕಂಪೆನಿಗಳು ಈ ಆ್ಯಪ್ ಗಳ ಸಂಪರ್ಕವನ್ನು ಕಡಿತಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿವೆ. ಈಗಾಗಲೇ ಅಳವಡಿಕೆಯಾಗಿರುವ ಅಪ್ಲಿಕೇಶನ್ ಗಳು ಓಪನ್ ಆಗುವುದಿಲ್ಲ.

    ಈಗಾಗಲೇ ಇನ್ಸ್ಚಾಲ್ ಆಗಿರುವ ಆ್ಯಪ್ ಗಳನ್ನು ತೆರೆಯಲು ಹೋದಾಗ ಕಾಣುವ ನೋಟೀಸ್

    ಟಿಕ್ ಟಾಕ್ , ಹೆಲೋ, ವಿ ಚಾಟ್ ಸೇರಿದಂತೆ ಹಲವು ಆ್ಯಪ್ ಗಳನ್ನು ದೇಶದ ಸಾರ್ವಭೌಮತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡುತ್ತವೆ ಎಂಬ ಕಾರಣಕ್ಕೆ ಐಟಿ ಕಾಯ್ದೆ 2009 ರ ಐಟಿ ಕಾಯ್ದೆ ಅನ್ವಯ ನಿಷೇಧಿಸಲಾಗಿದೆ. ಈ ಆ್ಯಪ್ ಗಳು ಹೇಗೆ ಗಂಡಾಂತರಕಾರಿ ಎಂಬುದನ್ನು ಅರಿಯೋಣ. 

    ಹೆಲೋ ಮತ್ತು ಶೇರಿಟ್ ಮತ್ತು ಯುಸಿ ಬ್ರೌಸರ್‌ನಂತಹ ಬ್ರೌಸರ್‌ಗಳು ಸೇರಿದಂತೆ ಚೀನಾದ ಹತ್ತು ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಕನಿಷ್ಠ ಆರು, ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮೆರಾ ಮತ್ತು ಮೈಕ್ರೊಫೋನ್ಗಳಿಗೆ ಪ್ರವೇಶವನ್ನು ಒದಗಿಸಲು  ಅನುಮತಿ ಕೊಡಲು ಕೇಳುತ್ತವೆ.  ಅಂತಹ ಪ್ರವೇಶ ಅಗತ್ಯವಿಲ್ಲದಿದ್ದರೂ ಸಹ, ವೈಯಕ್ತಿಕ ಮಾಹಿತಿಗಳನ್ನೂ  ಶೇಖರಿಸುತ್ತಿವೆ ಎಂದು  ಒಂದು ಅಧ್ಯಯನ ಪತ್ತೆ ಮಾಡಿದೆ.

    ಅಸಲಿಗೆ ಈ ಮಾಹಿತಿಯಿಂದ ಚೀನಾಕ್ಕೆೇನು ಉಪಯೋಗ ಎಂಬ ಸಂಗತಿಗಳನ್ನು ಹುಡುಕುತ್ತಾ ಹೋದರೆ ಅದರ ಅಸಲಿ ಆಟ ಗೊತ್ತಾಗುತ್ತದೆ. ಈ ಅಸಲಿ ಆಟ ಗೊತ್ತಿಲ್ಲದ ನಮ್ಮ ಹುಡುಗರು ಟಿಕ್ ಟಾಕ್ ಮಾಡುತ್ತಾ ಕುಣಿದಿದ್ದೇ ಕುಣಿದಿದ್ದು.

        
    ಮೊದಲನೇ ರೀತಿ :  
    ಚೀನೀ ಆ್ಯಪ್ಸ್ ಗಳು  ನಿಮ್ಮ ಮೊಬೈಲ್ ನಲ್ಲಿ  ದಾಖಲಾಗುವ, ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ, ನಿಮ್ಮ ಕಾಂಟಾಕ್ಟ್ ಡೀಟೇಲ್ಸ್, ನಿಮ್ಮ ಬ್ಯಾಂಕ್ ಅಪ್ಲಿಕೇಶನ್ಸ್ ಗಳ  ಮಾಹಿತಿಗಳನ್ನು ಸಂಗ್ರಹಿಸುತ್ತವೆ. ನೀವು ಯಾವುದಾದರೂ ಸೈಟ್ ಅಥವಾ ಆ್ಯಪ್ ಮೂಲಕ ತರಿಸಿದ ಸಾಮಗ್ರಿಗಳ ಸಾರಾಂಶವನ್ನು ನಿಮಗೆ ಗೊತ್ತಿಲ್ಲದೆ ಪಟ್ಟಿ ಮಾಡಿಕೊಳ್ಳುತ್ತವೆ. ನಿಮ್ಮ ತಿಂಗಳ ಹಣ ಖರ್ಚು ಮಾಡುವ ವಿಧಾನ, ನೀವು ಯಾವ ಯಾವ ಸ್ಥಳಗಳಲ್ಲಿ ಸಂಚಾರ ಮಾಡಿದ್ದೀರಾ?  ಈ ರೀತಿಯ ಎಲ್ಲಾ ಮಾಹಿತಿಗಳನ್ನು ತೆಗೆದುಕೊಂಡು  ಅದಕ್ಕೆ ತಕ್ಕಂತೆ ವಸ್ತುಗಳನ್ನು ತಯಾರಿಸಿ ಅದನ್ನುಭಾರತಕ್ಕೆ ಶಿಪ್ ಮಾಡುತ್ತದೆ . ಇದರಿಂದ ಚೀನಾ ಉತ್ಪಾದಕರು ಒತ್ತಡವಿಲ್ಲದೆ, ಹೆಚ್ಚಿನ ವಸ್ತುಗಳನ್ನು ತಯಾರಿಸಿ ಕಡಿಮೆ ವೆಚ್ಚದಲ್ಲಿ ಹೆಚ್ಚುಲಾಭ  ಮಾಡಿಕೊಳ್ಳುತ್ತಾರೆ.


    ಎರಡನೇ ರೀತಿ: 
    ಚೀನೀ ಆಪ್ಸ್ ಗಳಲ್ಲಿ  ಸಿಗುವ ಮಾಹಿತಿ ಆಧರಿಸಿ ಸಂಗ್ರಹಿಸುವ ಪರ್ಸನಲ್ ದತ್ತಾಂಶಗಳನ್ನ ಬೇರೆಯವರಿಗೆ ಮಾರಾಟಮಾಡಿ ಅದರಿಂದ ಹಣ ಸಂಗ್ರಹಿಸುವುದು.  ಚೀನೀ ಆಪ್ ಗಳಲ್ಲಿ ಹೆಚ್ಚಿನವು ಮಕ್ಕಳು ಉಪಯೋಗಿಸುವ  ಗೇಮಿಂಗ್ ಆಪ್ಸ್ . ಅದರ ಮುಖಾಂತರ ಮಕ್ಕಳ ಮನಸನ್ನ ಓದಿನಿಂದ ಹೆಚ್ಚು ಹೆಚ್ಚು  ಆಟವಾಡುವ ರೀತಿಯಲ್ಲಿ ಬದಲಿಸುವುದು. ಜೊತೆೆಗೆ
    ಹದಿ ಹರೆಯದವರ ಮಾಹಿತಿ ಪಡೆದು, ಅವರಿಗೆ ಬೇಡವಾಗಿದ್ದರೂ  ವಯಸ್ಕರ ವಿಷಯಗಳನ್ನು ಸೇರಿಸಿ ಅವರು ಉಪಯೋಗಿಸುವ ಆಪ್ ಗಳಲ್ಲಿ ತುರುಕುವುದು. 

    ಇದರ ಪರಿಣಾಮ ಸದ್ಯಕ್ಕೆ ಗೊತ್ತಾಗದಿದ್ದರೂ ಮುಂದೆ ಮಕ್ಕಳ, ಯುವಕರ ಹಾಗು ಪ್ರತಿಯೊಬ್ಬ ಬಳೆಕೆದಾರರ ಮನಸ್ಸಿನ ಮೇಲೆ ಆಗುವ ಪರಿಣಾಮ ಅಗಾಧ. 

    ಚೀನಿ ವಸ್ತುಗಳು ಅಷ್ಟು ಕಡಿಮೆ ಬೆಲೆಗೆ ಸಿಗುವುದಾದರೂ ಯಾಕೆ?  ಹೆಚ್ಚು ಗ್ರಾಹಕರು ಇದ್ದಾಗ ಹೆಚ್ಚು ಉತ್ಪಾದನೆ ಅದರಂತೆ ಹೆಚ್ಚು ಲಾಭ!.  ಈ ಸೂತ್ರದಮೇಲೆ ಚೀನೀ ಸರ್ಕಾರ ಕೆಲಸ ಮಾಡುತ್ತಿದೆ.

    ಬೆಂಗಳೂರಿನ ಬವಣೆ ಉಲ್ಬಣಿಸಲು ಐದು ಕಾರಣ

    ವಿ.ಜಯರಾಮ್

    ಬೆಂಗಳೂರಿಗೆ ಗರ ಬಡಿದಿದೆ. ಸದಾ ಗಿಜಿಗುಡುವ ರಸ್ತೆಗಳು ಈಗ ಬಣಬಣ. ಮಾಲು, ಮಂದಿರ ಮುಚ್ಚಿವೆ. ಶಾಲಾ ಕಾಲೇಜುಗಳಿಗೆ ಬಿದ್ದ ಬೀಗ ತೆರೆದಿಲ್ಲ. ವಿಧಾನಸೌಧ, ಹೈಕೋರ್ಟಿನಂತಹ ಶಕ್ತಿ ಕೇಂದ್ರಗಳೇ ಜನವಿಲ್ಲದೆ ಕಳೆಗುಂದಿ ಹೋಗಿವೆ. ಅಣುಬಾಂಬಿಗೂ ಹೆದರದ ಈ ಮಹಾನಗರದ ಬದುಕು ಅಣುವಿಗಿಂತಲೂ ಕಡೆ ಎನಿಸಿದ, ಕಣ್ಣಿಗೆ ಕಾಣಸಿಗದ ಯಕಃಶ್ಚಿತ್ ಒಂದು ಕ್ಷುದ್ರ ಕ್ರಿಮಿಗೆ ಬೆದರಿ ಬೆಚ್ಚಿ ಕುಳಿತಿದೆ. ಎಲ್ಲವೂ ಖಾಲಿ ಖಾಲಿ. ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲ. ರಸ್ತೆಗಳಲ್ಲಿ ವಾಹನವಿಲ್ಲ. ಮಾರುಕಟ್ಟೆಗಳಲ್ಲಿ ಜನವಿಲ್ಲ. ಮೂರು ತಿಂಗಳಿಂದ ಮರೆಯಾದ ಲವಲವಿಕೆ ಮರಳುವುದು ಯಾವಾಗ ಗೊತ್ತಿಲ್ಲ.
    ಕೋವಿಡ್ ಎಂಬ ಒಂದು ಕ್ರಿಮಿಯ ರೂಪದಲ್ಲಿ ಬಂದೆರಗಿದ ಬವಣೆಗೆ ಬದುಕು ಎಷ್ಟೆಲ್ಲ ಬದಲಾಗಿದೆ?!

    ತಾನು ಅತಿ ಬಲಿಷ್ಠ ಎಂದು ಬೀಗುತ್ತಿದ್ದ ಸರಕಾರವೂ ಹೆಚ್ಚುತ್ತಿರುವ ಪ್ರಕರಣಗಳಿಂದ ತಬ್ಬಿಬ್ಬಾಗಿದೆ. ನಿಜಕ್ಕೂ ಸರಕಾರದ ಕೈಯಿಂದಲೂ ನಿಯಂತ್ರಿಸಲಾಗದ ಸಾಂಕ್ರಾಮಿಕವೇ ಇದು? ಖಂಡಿತ ಇಲ್ಲ. ಖಚಿತ ನಿರ್ಧಾರಗಳೊಂದಿಗೆ ಹೊರಟರೆ ಈ ಕ್ರಿಮಿಯ ಅಟ್ಟಹಾಸ ಕಟ್ಟಿಹಾಕುವುದು ಕಷ್ಟವೇನಲ್ಲ.

    ಇಲ್ಲಿ ಬೆಂಗಳೂರಿನ ಪರಿಸ್ಥಿತಿಯನ್ನೇ ನೋಡಿ ಏನಾಗಿದೆ?

    ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ನಿತ್ಯ 1000 ಹೊಸ ಪ್ರಕರಣ ಪತ್ತೆಯಾಗುತ್ತಿವೆ. ಮುಂಬಯಿ ನಗರದ ಛಿದ್ರಗೊಂಡ ಬದುಕಿನ ಕರಾಳ ಚಿತ್ರ ಕಣ್ಣು ಕಟ್ಟುತ್ತಿದೆ. ಯಾಕೆ ಹೀಗಾಗಿದೆ?
    ಈ ಪ್ರಶ್ನೆಯನ್ನು ಕನ್ನಡಪ್ರೆಸ್.ಕಾಂ ಕೆಲವು ದಕ್ಷ ಅಧಿಕಾರಿಗಳ ಮುಂದೆ ಇಟ್ಟಾಗ “ಹೌದು, ಈ ವೈಫಲ್ಯದಲ್ಲಿ ನಮ್ಮ ಅಧಿಕಾರಿ ವರ್ಗದ ಪಾತ್ರ ಢಾಳಾಗಿದೆ” ಎಂದು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ.ಸರಕಾರದ ಮಟ್ಟದಲ್ಲಿ ತೆಗೆದುಕೊಳ್ಳುವ ಕಠಿಣ ನಿರ್ಧಾರಗಳು ಜಾರಿಗೆ ಬರುವ ಸಮಯದಲ್ಲಿ ಕಠಿಣತೆಯನ್ನು ಕಳೆದುಕೊಳ್ಳುತ್ತಿವೆ.

    1. ಬೆಂಗಳೂರಿನಲ್ಲಿ ಸೋಂಕು ಅಟ್ಟಹಾಸ ಮೇರೆ ಮೀರಲು ಗ್ರೌಂಡ್ ಲೆವೆಲ್ ನಲ್ಲಿ ಕೆಲಸ ಮಾಡುವ ಅಧಿಕಾರಿಗಳ ಲೋಪ ಮಖ್ಯವಾಗುತ್ತಿದೆ. ಕೆಳವರ್ಗದ ದಕ್ಷತೆ ತೀರಾ ಕಳಪೆಯಾಗಿದೆ. ಇದಕ್ಕೆ ಪಕ್ಕದ ಕೇರಳ ಅಪವಾದ. ಅಲ್ಲಿ ಕೆಳ ವರ್ಗದ ಅಧಿಕಾರಿಗಳ ದಕ್ಷತೆ ಸಮರ್ಥವಾಗಿದೆ. ಆ ಕಾರಣ ಸೋಂಕು ಹೆಚ್ಚು ಆರ್ಭಟಿಸುತ್ತಿಲ್ಲ.ನಮ್ಮ ರಾಜ್ಯದ ಕೆಲವು ಜಿಲ್ಲೆಗಳಲ್ಲೂ ಸೋಂಕು ನಿಯಂತ್ರಣದಲ್ಲಿದೆ.

    2 ಅಂತಾರಾಜ್ಯಗಳಿಂದ ನೇರ ಬೆಂಗಳೂರಿಗೆ ಬರುವ ಜನರ ತಪಾಸಣೆ ವ್ಯವಸ್ಥೆ ತೀರ ಹದಗೆಟ್ಟು ಹೋಗಿದೆ. ಇವರು ಯಾವ ಅಡೆ ತಡೆಯೂ ಇಲ್ಲದೆ ನಗರದ ತಮ್ಮ ಗಮ್ಯ ಸೇರಿಕೊಳ್ಳಬಹುದಾಗಿದೆ. ಇವರಲ್ಲಿ ಇರಬಹುದಾದ ಸೋಂಕಿತರು ಸಮುದಾಯ ಮಟ್ಟಕ್ಕೆ ಸಾಂಕ್ರಾಮಿಕವನ್ನು ಕೊಂಡೊಯ್ಯುತ್ತಿರುವುದು ವರದಿಯಾಗುತ್ತಿದೆ.

    3.ಅತಿ ಸೋಂಕು ಬಾಧಿತ ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ನಿತ್ಯ ಲಕ್ಷಾಂತರ ಜನ ಬಂದು ಹೋಗುತ್ತಿದ್ದಾರೆ. ಇವರನ್ನು ಪರೀಕ್ಷೆಗೆ ಒಳಪಡಿಸುವ ಯಾವುದೇ ನಿಯಮ ಜಾರಿಯಲ್ಲಿಲ್ಲ.

    4. ಕೆಲವು ನಿರ್ಬಂಧಗಳು ಇದ್ದರೂ ಅವುಗಳ ಜಾರಿ ಇಲ್ಲವಾಗಿದೆ. ಗಡಿಯಲ್ಲಿ ಸೋಂಕಿತರು ಕೂಡ ನಿರಾಯಾಸವಾಗಿ ನುಸುಳಿ ಬರುತ್ತಿದ್ದಾರೆ. ದುಡ್ಡು, ಗಡಿ ಕಾವಲು ಸಿಬ್ಬಂದಿಯ ಕೈಬಿಸಿ ಮಾಡುತ್ತಿದ್ದು ನಿಯಮಗಳು ಚಿಂದಿಯಾಗಲು ಕಾರಣವಾಗಿದೆ.

    5. ನಾಗರಿಕ ಪ್ರಜ್ಞೆ ಕೊರತೆ ಕೂಡ ಬೆಂಗಳೂರಿನ ಸೋಂಕು ಉಲ್ಬಣಗೊಳ್ಳಲು ಪ್ರಧಾನ ಕಾರಣವಾಗಿದೆ. ಕೆಲಸವಿಲ್ಲದೇ ಅನಗತ್ಯ ಸುತ್ತಾಡುವುದು, ಮೋಜುಮಸ್ತಿ ಗೋಷ್ಠಿಗಳನ್ನು ಸೇರುವುದು, ಸೋಂಕು ಹಾಗೂ ಶುಚಿತ್ವದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ.

    ಸರಕಾರ ಲಾಕ್ ಡೌನ್ ಸಮಯದಲ್ಲಿದ್ದ ಕಠಿಣ ಕ್ರಮಗಳನ್ನು ಮತ್ತೆ ಅಳವಡಿಸಿದರೆ ಮಾತ್ರ ಸೋಂಕು ನಿಯಂತ್ರಣಕ್ಕೆ ಬರಬಹುದು.

    ಮಳೆಗಾಲದಲ್ಲಿ ಅರಳುವ ರುಚಿ ಮೊಗ್ಗುಗಳು

    ಹೊರಗಡೆ ವರ್ಷಧಾರೆ ಸುರಿಯುತ್ತಿರಬೇಕಾದರೆ ಮನೆಯೊಳಗಡೆ ಬಿಸಿ ಬಿಸಿ ತಿನಿಸುಗಳ ಸಮಾರಾಧನೆ ಶುರುವಾಗುತ್ತದೆ. ಬಿಸಿ ಬಿಸಿ ಕಾಫಿ, ಟೀ, ಕಷಾಯದ ಜೊತೆಗೆ ಕೆಲವು ತಿಂಡಿಗಳ ನೆನಪು ಬೇಡವೆಂದರೂ ಕಾಡುತ್ತದೆ. ಮಳೆಗಾಲದಲ್ಲೇ ತಿನ್ನಬೇಕೆಂದು ಅನಿಸುವ ಈ ತಿಂಡಿಗಳು ಮುಂಗಾರನ್ನು ಹಿತವಾಗಿಸುತ್ತವೆ. ನಗರವಾಸಿಗಳಿಗೂ ಮಳೆಗಾಲದಲ್ಲಿ ಆಪ್ತವೆನಿಸುವ ಈ ತಿನಿಸುಗಳನ್ನು ತಿನ್ನುವಾಗ ಅವರು ತಮ್ಮೂರಿನ ಸವಿನೆನಪುಗಳ ಮೆರವಣಿಗೆಯಲ್ಲಿ ಕಳೆದು ಹೋಗುತ್ತಾರೆ…

    ಪ್ರಕೃತಿ ಮತ್ತು ಆಹಾರದ ಬೆಸುಗೆ ಎಂದೂ ಬಿಡಿಸಲಾಗದು. ಪ್ರಕೃತಿ ಬದಲಾದಂತೆ ಆಹಾರವೂ ಬದಲಾಗುತ್ತದೆ ಮತ್ತು ಬದಲಾಗಲೇಬೇಕು. ಯಾಕೆಂದರೆ ಆಯಾ ಋತುಮಾನಕ್ಕೆ ಇಂಥದ್ದೇ ಆಹಾರ ಸೇವಿಸಬೇಕು ಎಂಬುದು ನಿಸರ್ಗದ ನಿಯಮ. ಅದಕ್ಕೆ ತಕ್ಕಂತೆಯೇ ನಮ್ಮ ಆಹಾರ ಕ್ರಮಗಳು ರೂಪುಗೊಂಡಿವೆ. ಈ ಆಹಾರ ನಿಯಮ ಪಾಲಿಸದಿದ್ದರೆ ಆಯಾ ಸೀಸನ್‌ಗೆ ಸಿಗುವ ಕೆಲವು ಪ್ರಕೃತಿದತ್ತ ಆಹಾರಗಳ ಪೋಷಕಾಂಶಗಳಿಂದ ವಂಚಿತರಾಗುತ್ತೇವೆ ಮತ್ತು ಸುಲಭವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತೇವೆ.

    ಮಾನ್ಸೂನ್ ರುಚಿಗಳು

    ಬೇಸಿಗೆ ಸೀಸನ್‌ನ ಧಗೆ ಮುಗಿದು ಈಗಷ್ಟೇ ಮಳೆಗಾಲ ಆರಂಭವಾಗಿದೆ. ಆಗಲೇ ಇಳೆಯೆಲ್ಲ ತಂಪಾಗಿದೆ. ಈ ಸೀಸನ್‌ಗೆ ಬೇಸಿಗೆ ಕಾಲದ ಆಹಾರಗಳನ್ನೇ ಸೇವಿಸಲಾಗುವುದಿಲ್ಲ. ಮಳೆಗಾಲ ಶುರುವಾದಾಗಲೇ ನಮಗೆ ಅರಿವಿಲ್ಲದಂತೆಯೇ ನಮ್ಮ ನಾಲಗೆ ರುಚಿ ರುಚಿಯಾದ ತಿನಿಸುಗಳನ್ನು ಬಯಸುತ್ತದೆ. ಜಡಿಮಳೆ ಸುರಿದಾಗ ಮರೆತೇ ಹೋಗಿದ್ದ ಕೆಲವು ತಿಂಡಿ, ತಿನಿಸುಗಳು ನೆನಪಾಗುತ್ತವೆ. ಅವುಗಳನ್ನು ಮಳೆಗಾಲದಲ್ಲಿ ತಿಂದರೇನೇ ರುಚಿ ಜಾಸ್ತಿ. ಹಲಸಿನಕಾಯಿ ಚಿಪ್ಸ್, ಹಪ್ಪಳ, ಕಳಲೆ ಪಲ್ಯ, ಕೆಸುವಿನೆಲೆಯ ಪತ್ರೊಡೆ, ಹೊಳೆ ಮೀನಿನ ಸಾರು, ಮಳೆಗಾಲದಲ್ಲೇ ಚಿಗುರಿಕೊಳ್ಳುವ ತಗ್ಚೆ, ಒಂದೆಲಗ ಮುಂತಾದ ಸೊಪ್ಪುಗಳ ಪಲ್ಯ, ಚಟ್ನಿಗಳು ಮಳೆಗಾಲದಲ್ಲೇ ಅತ್ಯಂತ ಟೇಸ್ಟಿಯೆನಿಸುತ್ತವೆ. ಇವುಗಳನ್ನು ಬೇರೆ ಸೀಸನ್‌ಗಳಲ್ಲಿ ಸವಿದಿದ್ದರೂ ಮಳೆಗಾಲದಲ್ಲಿ ಸಿಗುವ ರುಚಿಯೇ ಬೇರೆ. ಈ ಸಮಯದಲ್ಲಿ ಅದೆಷ್ಟೇ ಬಜ್ಜಿ, ಬೋಂಡಾ ಕರಿದು ತಿಂದರೂ ಹಲಸಿನ ಹಣ್ಣಿನ ಬೀಜಗಳನ್ನು ಸುಟ್ಟು ತಿನ್ನುವುದರಲ್ಲಿ ಇರುವ ಸ್ವಾದ ಬೇರೆ ಯಾವುದರಲ್ಲೂ ಸಿಗಲ್ಲ. ಇದುವೇ ಮಳೆಗಾಲದತಿನಿಸುಗಳ ವಿಶೇಷ.

    ಪ್ರಾದೇಶಿಕ ವೈವಿಧ್ಯ

    ಮಳೆಗಾಲದ ತಿನಿಸುಗಳಲ್ಲೂ ಪ್ರಾದೇಶಿಕ ವೈವಿಧ್ಯವಿದೆ. ಆಯಾ ಪ್ರದೇಶದಲ್ಲಿ ಆ ಸೀಸನ್‌ಗೆ ಸಿಗುವ ಹಣ್ಣು, ತರಕಾರಿಗಳಿಂದ ಮಾಡುವ ಕೆಲವು ವಿಶೇಷ ತಿನಿಸುಗಳು ಅವುಗಳ ಪ್ರಾದೇಶಿಕ ವೈಶಿಷ್ಟ್ಯವನ್ನೂ ಸಾರುತ್ತವೆ. ಉದಾಹರಣೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಗಾಲ ಬಂತೆಂದರೆ ಪ್ರತಿ ಮನೆಗಳಲ್ಲಿ ಕೆಸುವಿನೆಲೆಯ ಪತ್ರೊಡೆ, ಹಲಸಿನಹಣ್ಣಿ ಕಡುಬು, ಮುಳ್ಕ, ತಗ್ಚೆ ಪಲ್ಯ, ಅರಿಶಿನ ಎಲೆಯ ಕಡುಬು, ಹಲಸಿನ ಹಣ್ಣಿನ ಬೇಯಿಸಿ ಒಣಗಿಸಿದ ಬೀಜ, ಕಾಡು ಅಣಬೆಯ ಪಲ್ಯ, ಅಮಟೆಕಾಯಿ ಉಪ್ಪಿನಕಾಯಿ, ಹುರುಳಿಕಾಳಿನ  ಸಾರು ಇತ್ಯಾದಿಗಳು ಘಮಗುಟ್ಟಿದರೆ, ಉತ್ತರ ಕನ್ನಡದ ಭಾಗಗಳಲ್ಲಿ ಹಲಸಿನ ಚಿಪ್ಸ್, ಹಪ್ಪಳ, ಅಪ್ಪಿ ಪಾಯಸ, ಝುಣಕ ವಡೆ ಕಂಪು ಬೀರುತ್ತವೆ. ಧಾರಾಕಾರ ಮಳೆಯ ಸಮಯದಲ್ಲಿ ಕೈತೋಟ, ಹೊಲ, ಕಾಡುಗಳಲ್ಲಿ ಯಾವುದೇ ಶ್ರಮವಿಲ್ಲದೆ ತಮ್ಮ ಪಾಡಿಗೇ ಬೆಳೆದ ಹಸಿರು ಸೊಪ್ಪು, ತರಕಾರಿ, ಹಣ್ಣುಗಳೇ ಜನರಿಗೆ ಆಧಾರವಾಗುತ್ತವೆ. ಬಿಡದೇ ಸುರಿಯುವ ಮಳೆಗೆ ಹೊರಗಡೆ ಹೋಗಿ ತರಕಾರಿ, ಹಣ್ಣುಗಳನ್ನು ತರುವುದು ಕಷ್ಟವಾಗುವ ಕಾರಣ ಒಂದು ರೀತಿಯಲ್ಲಿ ಪ್ರಕೃತಿಯೇ ಜನರಿಗೆ ದಯಪಾಲಿಸಿರುವ ಆಹಾರಗಳಿವು.

    ಮಳೆಗಾಲದಲ್ಲಿ ತಿನ್ನಲೇಬೇಕಾದ ಅಂಥ ಕೆಲವು ರುಚಿ ವೈವಿಧ್ಯವನ್ನು ಮಾಡುವ ವಿಧಾನ ಇಲ್ಲಿದೆ.

    ಹಲಸಿನ ಹಣ್ಣಿನ ಕಡುಬು

    ಬೇಕಾಗುವ ಸಾಮಗ್ರಿ

    ಚೆನ್ನಾಗಿ ಮಾಗಿರುವ ಹಲಸಿನ ಹಣ್ಣಿನ ತೊಳೆಗಳು-ಎರಡೂವರೆ ಕಪ್, ಬೆಲ್ಲ-ಅರ್ಧ ಕಪ್, ಏಲಕ್ಕಿ ಪುಡಿ-ಅರ್ಧ ಚಮಚ, ತೆಂಗಿನಕಾಯಿ ತುರಿ-೧ ಕಪ್, ಅಕ್ಕಿ-೨ ಕಪ್, ಉಪ್ಪು-ರುಚಿಗೆ ತಕ್ಕಷ್ಟು, ಕಾಳುಮೆಣಸು-ಅರ್ಧ ಚಮಚ, ತೇಗದ ಎಲೆ ಅಥವಾ ಬಾಳೆ ಎಲೆ-೨೦.

    ಮಾಡುವ ವಿಧಾನ

    ಅಕ್ಕಿಯನ್ನು ತೊಳೆದು ನೀರಿನಲ್ಲಿ ಆರು ಗಂಟೆ ನೆನೆಸಿಡಿ. ತೇಗದ ಎಲೆಗಳನ್ನು ಸ್ವಚ್ಛ ಮಾಡಿ ಒರೆಸಿ ಒಣಗಿಸಿ. ಹಲಸಿನ ಹಣ್ಣಿನ ತೊಳೆಗಳ ಬೀಜಗಳನ್ನು ತೆಗೆದು ಸಣ್ಣದಾಗಿ ಕತ್ತರಿಸಿ ಮಿಕ್ಸಿ ಜಾರ್‌ಗೆ ಹಾಕಿ. ಇದಕ್ಕೆ ಬೆಲ್ಲ, ಏಲಕ್ಕಿ ಪುಡಿ ಹಾಕಿ ನುಣ್ಣಗೆ ಅರೆಯಿರಿ. ನಂತರ ತೆಂಗಿನಕಾಯಿ ತುರಿ ಮತ್ತು ಹಲಸಿನ ಹಣ್ಣಿನ ತೊಳೆಗಳನ್ನು ಹಾಕಿ ಮತ್ತೆ ನುಣ್ಣಗೆ ಅರೆಯಿರಿ. ಈ ಹಂತಗಳಲ್ಲಿ ಸ್ವಲ್ಪವೂ ನೀರು ಹಾಕಬಾರದು. ಈ ಮಿಶ್ರಣಕ್ಕೆ ಸ್ವಲ್ಪ ಉಪ್ಪು, ಕಾಳುಮೆಣಸು ಮತ್ತು ಒಂದು ಚಿಟಿಕೆ ಅರಶಿನ ಹಾಕಿ. ಈ ಒಂದೊಂದು ತೇಗದ ಎಲೆಗೆ ಈ ಮಿಶ್ರಣವನ್ನು ಒಂದೊಂದು ಸೌಟಿನಂತೆ ಹಾಕಿ ಎಲೆಯ ನಾಲ್ಕು ಅಂಚುಗಳನ್ನು ಮಡಚಿ ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಅರ್ಧ ಗಂಟೆ ಬೇಯಿಸಿ. ನಂತರ ಇದರ ಎಲೆಗಳನ್ನು ಬಿಡಿಸಿ ಬಿಸಿ ಬಿಸಿ ಕಡುಬನ್ನು ತುಪ್ಪದ ಜೊತೆಗೆ ತಿನ್ನಿ.

    ಕೆಸುವಿನೆಲೆಯ ತೇಟ್ಲ

    ಬೇಕಾಗುವ ಸಾಮಗ್ರಿ

    ಮಧ್ಯಮ ಗಾತ್ರದ ಕೆಸುವಿನ ಎಲೆ-೨೦, ಉಪ್ಪು-ರುಚಿಗೆ ತಕ್ಕಷ್ಟು, ಮಸಾಲೆಗೆ ಬ್ಯಾಡಗಿ ಮೆಣಸು-೬, ಅರಶಿನ ಪುಡಿ-ಅರ್ಧ ಟೀ ಸ್ಪೂನ್, ಜೀರಿಗೆ-ಅರ್ಧ ಟೀ ಸ್ಪೂನ್, ಬೆಳ್ಳುಳ್ಳಿ-೩ ಎಸಳು, ಮಧ್ಯಮ ಗಾತ್ರದ ಈರುಳ್ಳಿ-೧, ಹುಣಸೆ ಹಣ್ಣು-೧ ನಿಂಬೆ ಗಾತ್ರದ್ದು, ಒಗ್ಗರಣೆಗೆ ಸಾಸಿವೆ-ಕಾಲು ಟೀ ಸ್ಪೂನ್, ಜಜ್ಜಿದ ಬೆಳ್ಳುಳ್ಳಿ-೩, ಎಣ್ಣೆ-ಸ್ವಲ್ಪ.

    ಮಾಡುವ ವಿಧಾನ

    ಹಿಂದಿನ ದಿನ ಕೆಸುವಿನ ಎಲೆಗಳನ್ನು ಚೆನ್ನಾಗಿ ತೊಳೆದು ಒರೆಸಿ ಒಣಗಿಸಿ. ಮರುದಿನ ಪ್ರತಿ ಎಲೆಯನ್ನು ಉದ್ದಕ್ಕೆ ಸುರುಳಿ ಸುತ್ತಿ ಕೊನೆಗೆ ಒಂದು ಗಂಟು ಹಾಕಿ. ಮಸಾಲೆ ಸಾಮಗ್ರಿಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ಅರೆಯಿರಿ. ಮಸಾಲೆಯ ನೀರಿನಲ್ಲಿ ಕೆಸುವಿನ ಎಲೆಯ ಗಂಟುಗಳನ್ನು ಐದು ನಿಮಿಷ ಬೇಯಿಸಿ ಆಮೇಲೆ ಅರೆದ ಮಸಾಲೆ ಮತ್ತು ಉಪ್ಪು ಹಾಕಿ ಮಂದ ಉರಿಯಲ್ಲಿ ಹತ್ತು ನಿಮಿಷ ಕುದಿಸಿ. ನಂತರ ಇದಕ್ಕೆ ಸಾಸಿವೆ ಮತ್ತು ಬೆಳ್ಳುಳ್ಳಿ ಒಗ್ಗರಣೆ ಕೊಡಿ. ಇದಕ್ಕೆ ಹಲಸಿನ ಬೀಜ ಹಾಕಿ ಮಾಡಿದರೆ ಇನ್ನೂ ರುಚಿಯಾಗಿರುತ್ತದೆ.

    ತಗ್ಚೆ ಸೊಪ್ಪಿನ ಪಲ್ಯ

    ಬೇಕಾಗುವ ಸಾಮಗ್ರಿ

    ತಗ್ಚೆ ಸೊಪ್ಪು-೧ ಬಟ್ಟಲು, ಬ್ಯಾಡಗಿ ಮೆಣಸು-೫, ಜೀರಿಗೆ-ಅರ್ಧ ಚಮಚ, ಕೊತ್ತಂಬರಿ ಬೀಜ-೧ ಚಮಚ, ಮೆಂತ್ಯೆ ಕಾಳು-ಅರ್ಧ ಚಮಚ, ಅರಶಿನ ಪುಡಿ-ಅರ್ಧ ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ತೆಂಗಿನಕಾಯಿ ತುರಿ-ಅರ್ಧ ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ-೧ ಕಪ್, ಜಜ್ಜಿದ ಬೆಳ್ಳುಳ್ಳಿ-೩, ಸಾಸಿವೆ-ಅರ್ಧ ಚಮಚ, ಕರಿಬೇವಿನ ಎಲೆ-ಸ್ವಲ್ಪ, ಎಣ್ಣೆ-ಸ್ವಲ್ಪ.

    ಮಾಡುವ ವಿಧಾನ

    ತಗ್ಚೆ ಸೊಪ್ಪನ್ನು ಚೆನ್ನಾಗಿ ತೊಳೆದು ಹೆಚ್ಚಿಡಿ. ಮಸಾಲೆ ಸಾಮಗ್ರಿಗಳನ್ನು ಸ್ವಲ್ಪ ಹುರಿದು ಮಿಕ್ಸಿ ಜಾರ್‌ನಲ್ಲಿ ಪುಡಿ ಮಾಡಿ. ಇದಕ್ಕೆ ಹುರಿದ ತೆಂಗಿನಕಾಯಿ ತುರಿ ಹಾಕಿ ತರಿತರಿಯಾಗಿ ರುಬ್ಬಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕರಿಬೇವು ಮತ್ತು ಜಜ್ಜಿದ ಬೆಳ್ಳುಳ್ಳಿ ಹಾಕಿ ಸಿಡಿಸಿ. ಇದಕ್ಕೆ ಈರುಳ್ಳಿ ಹಾಕಿ ಹುರಿಯಿರಿ. ನಂತರ ತಗ್ಚೆ ಸೊಪ್ಪು ಹಾಕಿ ಚೆನ್ನಾಗಿ ಹುರಿದು ಬಾಡಿಸಿ. ಇದು ಬೆಂದ ಮೇಲೆ ಉಪ್ಪು ಮತ್ತು ಮಸಾಲೆ ಮಿಶ್ರಣ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಬೇಯಿಸಿ.

    error: Content is protected !!