19.4 C
Karnataka
Monday, November 25, 2024
    Home Blog Page 17

    ಪ್ರಾಣ,ಅಪಾನ, ವ್ಯಾನ,ಉದಾನ, ಸಮಾನ

    ದಿನ ಇಡೀ ಕಟ್ಟಡ ಕೆಲಸಗಳ ವೀಕ್ಷಣೆ, ಸಂಜೆ ಆರು ಗಂಟೆಯಿಂದ ರಾತ್ರಿ ಒಂಭತ್ತರ ವರೆಗೆ ನನ್ನ ಆಫೀಸಲ್ಲಿ ತಾಂತ್ರಿಕ ಸಲಹೆ. ಮನೆ,ಹೋಟೆಲ್,ಆಸ್ಪತ್ರೆ, ಗೋದಾಮುಗಳು ಅಥವಾ ಸಿಮೆಂಟ್ ಉಪಯೋಗಿಸಿ ಕಟ್ಟುವ ಯಾವುದೇ ರೀತಿಯ ಕಟ್ಟಡಗಳನ್ನು ಕಟ್ಟಿಸುವವರು ನನ್ನನ್ನು ಸಂಪರ್ಕಿಸುವ ಸಮಯ ಇದು. ಅಷ್ಟೇ ಅಲ್ಲ ನನ್ನ ತಾಂತ್ರಿಕ ಸಲಹೆಗಳ ಮೇರೆಗೆ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಗುತ್ತಿಗೆದಾರರು, ಕಬ್ಬಿಣದ ಸರಳುಗಳನ್ನು ಕತ್ತರಿಸಿ,ಬಾಗಿಸಿ ತಾರಸಿಗೆ ಕಟ್ಟುವವರು, ಕೊಳಾಯಿ ಕೆಲಸದವರು, ಎಲೆಕ್ಟ್ರಿಸಿಎನ್ಸ್ ಮತ್ತು ಎಲ್ಲಾ ತರಹದ ನಿರ್ಮಾಣಕ್ಕೆ ಸಂಬಂಧ ಪಟ್ಟ ಕೆಲಸಗಾರರೂ ನನ್ನನ್ನು ಮುಖತಃ ಕಂಡು ಮುಂದಿನ ಕೆಲಸಗಳಿಗೆ ಸಲಹೆಗಳನ್ನು ತೆಗೆದುಕೊಳ್ಳುವ ಸಮಯ ಅದು.

    ಮೊದ ಮೊದಲು ಸಾಮಾನ್ಯ ಕೋಣೆಯಾಗಿದ್ದ ನನ್ನ ಈ ಸಲಹಾ ಕೊಠಡಿ ಬರಬರುತ್ತಾ ಸುಸಜ್ಜಿತ ಹವಾನಿಯಂತ್ರಿತ ಕೊಠಡಿಯಾಗಿ ಬದಲಾಗಿತ್ತು. ಬಹಳಷ್ಟು ಜನರು ಒಮ್ಮೆಲೇ ಬಂದಾಗ ಕೆಲವೊಮ್ಮೆ ಕಿರಿ ಕಿರಿ ಆದದ್ದೂ ಇದೆ. ಜೀವನದಲ್ಲಿ ಕಟ್ಟುವ ತಮ್ಮ ಕನಸಿನ ಒಂದೇ ಮನೆ ಹಾಗಿರಬೇಕು,ಹೀಗಿರಬೇಕು ಅನ್ನುವ ಯೋಚನೆಗಳೊಂದಿಗೆ ಇಡೀ ಕುಟುಂಬ ಮತ್ತು ಅವರ ಆಪ್ತರು ಬಂದು ಬಿಡುತ್ತಿದ್ದರು! ಅದು ಅಭ್ಯಾಸವಾಗಿದ್ದರೂ,ಮೊದ ಮೊದಲು ಹುರುಪಿನಿಂದ ಎಲ್ಲರ ಸಲಹೆಗಳನ್ನು ಸಮಾಧಾನದಿಂದ ಆಲಿಸುತ್ತಿದ್ದೆ. ಅದೇನು ವೃತ್ತಿ ಮದವೋ ಅಥವಾ 50 ದಾಟಿದ್ದ ಪರಿಣಾಮವೋ ಅಂತೂ ನಂತರ ಕಿರಿ ಕಿರಿ ಆಗುತ್ತಿತ್ತು.
    ಈಗ ಸುಮಾರು 8 ವರ್ಷಗಳ ಹಿಂದೆ ಅಮ್ಮನಿಗೆ ಒಂದು ಸಣ್ಣ ಶಸ್ತ್ರ ಚಿಕಿತ್ಸೆ ಆಗಿತ್ತು. ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರೂ ಮನೆಯಲ್ಲಿ ಅವರ ಆರೈಕೆ ನಡೆದಿತ್ತು. ಗೊತ್ತಿರುವ, ಅವರ ಮನೆಯನ್ನು ನಾನೇ ಕಟ್ಟಿಸಿದ್ದ,ಪರಿಚಯದ ಡಾಕ್ಟರ್ ಒಬ್ಬರು ಮನೆಗೆ ಬಂದೇ ಅಮ್ಮನನ್ನು ಆಗಾಗ ನೋಡಿಕೊಂಡು ಹೋಗುತ್ತಿದ್ದರು. ಸುಮಾರು ಮೂರ್ನಾಲ್ಕು ತಿಂಗಳ ಕಾಲ ಅಮ್ಮ,ಅಪ್ಪನ ಸನಿಹ ನನಗೆ 50ರ ಹರೆಯದರಲ್ಲಿ ಮತ್ತೆ ಸಿಕ್ಕಿತ್ತು! ನನ್ನ ಇಬ್ಬರೂ ಮಕ್ಕಳು ಅಮ್ಮನಿಗೆ ಔಷಧಿ ತೆಗೆದು ಕಾಲ ಕಾಲಕ್ಕೆ ನೆನಪಿಸಿ ಕೊಡೋದು ಅಪ್ಪನಿಗೆ ಬಲು ಮುದ ನೀಡಿತ್ತು. ಮಂಜೂ ಮುದುಕರಿಗೆ ದೇವರು ರೋಗ,ರುಜಿನಗಳನ್ನು ಕೊಟ್ಟರೂ ಅದರಲ್ಲಿ ಇಂಥಹ ಸುಖ ಇಟ್ಟಿರುತ್ತಾನೆ ನೋಡು ಅಂದಿದ್ದರು!

    ಹಾಗೆ ಇದ್ದ ಸಮಯದಲ್ಲಿ ಮನೆಯ ಆವರಣದಲ್ಲೇ ಇದ್ದ ನನ್ನ ಆಫೀಸಿಗೆ ಅಪ್ಪ ಆಗಾಗ ಬರುತ್ತಿದ್ದರು. ಬಂದವರೇ ಈ ಹವಾನಿಯಂತ್ರಣ ಒಳ್ಳೆಯದಲ್ಲ, ಕಿಟಕಿ ತೆರೆದು ಬಿಡು ಅನ್ನುತ್ತಿದ್ದರು. ಬಳ್ಳಾರಿಯ ಬಿಸಿಲು 40 ಡಿಗ್ರಿ ದಾಟಿರುತ್ತಿತ್ತು. ರಾತ್ರಿಯಲ್ಲೂ ತಂಪು ಗಾಳಿ ಬೀಸುತ್ತಿರಲಿಲ್ಲ. ಅದಿಲ್ಲದೆ ಕೂರಲು ಅಸಾಧ್ಯ ಅನ್ನುವ ಸ್ಥಿತಿ ತಲುಪಿದ್ದರಿಂದ ನಕ್ಕು ಸುಮ್ಮನಾಗುತ್ತಿದ್ದೆ. ಅಪ್ಪ ಹಾಗೆಯೇ…ಮೊದಲಿಗೆ ಬೈಕ್ ತೆಗೆದುಕೊಂಡಾಗ ಬೈಕ್ ಏಕೆ, ಸೈಕಲ್ ಮೇಲೆ ಹೋದರೆ ಆಗದೇ…ಕಟ್ಟಡಗಳ ವೀಕ್ಷಣೆಗೆ… ಆರೋಗ್ಯ ಚೆನ್ನಾಗಿರುತ್ತದೆ ಅಂದಿದ್ದರು. ಆಗಲೂ ನಕ್ಕು ಸುಮ್ಮನಾಗಿದ್ದೆ.

    ಹಾಗೊಂದು ದಿನ ಆಫೀಸೆಲ್ಲಾ ಖಾಲಿ ಆದ ಮೇಲೆ ಒಳ ಬಂದರು. ಸ್ವಲ್ಪ ಬಳಲಿದ್ದ ನನ್ನನ್ನು ನೋಡಿ ಯಾಕೆ ಏನಾಯ್ತು, ಸಾಯಂಕಾಲ ಎಷ್ಟೊಂದು ಲವಲವಿಕೆಯಿಂದ ಇದೆಯಲ್ಲ….ಈಗೇಕೆ ಇಷ್ಟೊಂದು ಬಳಲಿದ್ದೀಯಾ ಅಂತ ಹಣೆಗೆ, ಕುತ್ತಿಗೆಯ ಕೆಳಗೆ ಕೈ ಇಟ್ಟೇ ಬಿಟ್ಟಿದ್ದರು…ನಾನು ಏನೂ ಇಲ್ಲ, ಕುಳಿತುಕೊಳ್ಳಿ ಅಂದು ತುಂಬಾ ದಿನದಿಂದ ನನ್ನನ್ನು ಕೊರೆಯುತ್ತಿದ್ದ ಒಂದು ವಿಷಯವನ್ನು ಅವರ ಹತ್ತಿರ ಪ್ರಸ್ತಾವಿಸಿದೆ.

    ಅಪ್ಪಾ, ನಾನು ಇಡೀ ದಿನ ಈ ಬಳ್ಳಾರಿಯ ಬಿಸಿಲಲ್ಲಿ ನಿಂತು ಕಟ್ಟಡಗಳಿಗೆ ತಾರಸಿ ಹಾಕಿಸಬಲ್ಲೆ ಆದರೆ ಕೆಲವೊಮ್ಮೆ ಈ ಕೊಠಡಿ ಒಳಗೆ ತಣ್ಣನೆಯ ಗಾಳಿಯಡಿ, ಸಾಯಂಕಾಲ ನಡೆಸುವ ಸಲಹಾ ಕ್ರಿಯೆ ತುಂಬಾ ಸುಸ್ತನ್ನು ತರುತ್ತದೆ, ಒಮ್ಮೊಮ್ಮೆ ನನ್ನೆಲ್ಲಾ ಶಕ್ತಿ ಹರಿದು ಹೋಗಿ ನಿಶಕ್ತನಾದೆ ಅಂತ ಅನ್ನಿಸುತ್ತೆ… ಅಂದೆ.

    ಯಾವಾಗಲೂ ಅಲ್ಲ…ಒಮ್ಮೊಮ್ಮೆ ಮಾತ್ರ. ಸುಮಾರು ನಾಲ್ಕೈದು ವರ್ಷಗಳಿಂದ ಇದನ್ನು ನಾನೇ ಗಮನಿಸಿದ್ದೇನೆ. ಸಾಯಂಕಾಲ, ನನ್ನ ಸಲಹಾ ವೇಳೆಯಲ್ಲೇ ಅಂತ ಏನೂ ಅಲ್ಲ, ಹಲವು ಸಾರಿ ಬೇರೆ ಬೇರೆ ಸಂಧರ್ಭಗಳಲ್ಲೂ ಹೀಗೆ ಕುಳಿತಾಗ ಯಾರಾದ್ರು ಬಂದು ಹೋದಾಗ ಆಗಿದ್ದನ್ನ ಸಂಕ್ಷಿಪ್ತವಾಗಿ ಹೇಳ್ತೀನಿ….ಅಂದೆ. ಹೇಳು ಅಂದರು.

    ಸಾಮಾನ್ಯವಾಗಿ ನನ್ನನ್ನು ಕಾಣಲು ಮೊದಲೇ ಕಾಲವನ್ನು ನಿರ್ಣಯಿಸಿಕೊಂಡು ಬರುವವರೂ, ಹಾಗೆಯೇ ಧಿಡೀರ್ ಅಂತ ಬರುವವರೂ ಇದ್ದಾರೆ. ಹಾಗೆ ಬರುವವರಲ್ಲಿ ಪರಿಚಿತರೂ,ಅಪರಿಚಿತರೂ ಇರ್ತಾರೆ. ಒಟ್ಟಾರೆ ಉದಾಹರಿಸಿ ಹೇಳೋದಾದ್ರೆ ಯಾರೋ ನನಗೆ ಹಣ ಕೊಡುವವರು ಬಂದಿರ್ತಾರೆ. ಅವರು ನಗುಮುಖದಿಂದ,ಅಪ್ಯಾಯತೆಯಿಂದ ಹಣ ಕೊಟ್ಟು ಸ್ವಲ್ಪ ಹೊತ್ತು ಅದು,ಇದು ಮಾತಾಡ್ತಾ ಕುಳಿತು ಹೋಗ್ತಾರೆ. ನನಗೆ ಅವರ ಬರುವು ಖುಷಿ ಕೊಟ್ಟಿರುತ್ತದೆ. ಆದರೆ ಅವರು ಬಂದು ಹಣ ಕೊಟ್ಟು ಹೋದಮೇಲೆ ಒಂದು ಥರಾ ಸುಸ್ತಿನ ಅನುಭವ ಆಗುತ್ತದೆ. ಇವರು ಬೇಗನೇ ಇಲ್ಲಿಂದ ಹೋದರೆ ಸಾಕು ಅನ್ನಿಸುತ್ತಿರುತ್ತದೆ…… ಮತ್ತೊಬ್ಬರು ಕಟ್ಟಡದಲ್ಲಿನ ಸಮಸ್ಯೆ, ಗುತ್ತಿಗೆದಾರನ ಮೇಲೆ ದೂರು, ಅದರ ಮುಖಾಂತರ ನನ್ನನ್ನೂ ದೂಷಿಸುತ್ತಾರೆ. ಆದರೂ ಅವರ ಇರುವು ನನಗೆ ಉಲ್ಲಾಸ ತರುತ್ತಿರುತ್ತದೆ. ಇನ್ನೂ ಸ್ವಲ್ಪ ಹೊತ್ತು ಕೂತುಕೊಂಡು ಮಾತಾಡಬೇಕು ಅನ್ನಿಸುತ್ತದೆ…..ಈ ಎರಡು ತೆರನಾದ ಅನುಭವಗಳನ್ನು ಸಾಕಷ್ಟು ಸಾರಿ ನಾನು ಗಮನಿಸಿದ್ದೇನೆ….ಅಂದೆ

    ಅರ್ಥ ಆಯ್ತು. ನಿನಗೆ ಹಣ ಕೊಟ್ಟವನ ಸನಿಹ ಹಿತ ಅನ್ನಿಸಬೇಕಿತ್ತು. ದೂಷಿಸುವವನ ಸನಿಹ ಕಿರಿ ಕಿರಿ ಆಗಬೇಕಿತ್ತು….ಆದರೆ ಉಲ್ಟಾ ಆಗೋದು ಯಾಕೆ ಅನ್ನೋದು ನಿನ್ನ ಸಮಸ್ಯೆ…ತಾನೇ? ಅಂದ್ರು, ನಾನು ಹೌದು ಅಂದೆ.

    ಪ್ರತಿಯೊಬ್ಬ ಮನುಷ್ಯನೂ ಹುಟ್ಟಿನಿಂದಲೇ ಉಸಿರಾಡುವುದನ್ನು ಪ್ರಕೃತಿದತ್ತವಾಗಿ ರೂಢಿಸಿಕೊಂಡು ದೇಹಕ್ಕೆ ಬೇಕಾಗುವ ಶಕ್ತಿಯನ್ನು ಪಡೆದು, ಈ ದೇಹದ ದೈನಂದಿನ ಕಾರ್ಯಗಳಿಗೆ ವಿನಿಯೋಗಿಸಿಕೊಳ್ಳುತ್ತಾನೆ. ಈ ಶಕ್ತಿ ಹೆಚ್ಚಿಗೆ ವಿನಿಯೋಗಿಸುವುದು ಅವಶ್ಯ ಇದ್ದಾಗ ಜೋರಾಗಿ ಉಸಿರಾಡುತ್ತಾನೆ. ನೆಮ್ಮದಿಯಿಂದ ಕುಳಿತಾಗ ನಿಧಾನವಾಗಿ ಉಸಿರಾಡುತ್ತಾನೆ. ಇದು ಒಂದು ಸಾಮಾನ್ಯವಾದ, ಪ್ರತಿ ಜೀವಿಗಳಲ್ಲೂ ಇರುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಉಸಿರಾಟದ ಮುಖಾಂತರ ಎಷ್ಟೇ ಗಳಿಸಿಕೊಂಡು ವಿನಿಯೋಗಿಸಿದರೂ ದೇಹದಲ್ಲಿ ಶಕ್ತಿಯ ಒಂದಂಶ ಯಾವಾಗಲೂ ಇರಲೇ ಬೇಕು, ಜೀವಂತವಾಗಿರಲು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅದಕ್ಕೆ ಆ ವ್ಯಕ್ತಿಯ ಆರೋಗ್ಯ, ಮಾನಸಿಕ ಸ್ಥಿತಿ, ಜೀವನ ವಿಧಾನ ಮುಂತಾದ ಹಲವಾರು ಕಾರಣಗಳಿವೆ. ನಮ್ಮ ಹಿರಿಯರು ಇದನ್ನು ವಲಯ ಅಥವಾ ಇಂಗ್ಲಿಷ್ ನಲ್ಲಿ AURA ಅಂತ ಕರೆದಿದ್ದಾರೆ. ಇದನ್ನು ನೀನು ಹಣ ಗಳಿಸುವ ಹಾಗೆ ಗಳಿಸಬಹುದು ಮತ್ತು ಹಣವನ್ನು ವಿನಿಯೋಗಿಸಿದ ಹಾಗೆ ವಿನಿಯೋಗಿಸಬಹುದು. ಈ ಶಕ್ತಿ ಮೌನದಿಂದ,ನೆಮ್ಮದಿಯಿಂದ,ಧ್ಯಾನದಿಂದ, ಸದಾ ಗಳಿಸಿಕೊಂಡರೆ, ಸಿಟ್ಟು, ಅಸೂಯೆ, ದ್ವೇಷ ಮುಂತಾವುಗಳಿಂದ ವಿನಿಯೋಗವಾಗುತ್ತದೆ. ಈಗ ನೀವೆಲ್ಲಾ ಪಾಸಿಟಿವ್ ಎನರ್ಜಿ, ನೆಗೆಟಿವ್ ಎನರ್ಜಿ ಅಂತಿರಲ್ಲ ಹಾಗೆ.

    ಹಾಗೆ ಪ್ರತಿಯೊಬ್ಬರಲ್ಲೂ ಒಂದೊಂದು ಪ್ರಮಾಣದಲ್ಲಿರುವ ಈ ಶಕ್ತಿ, ವ್ಯಕ್ತಿಗಳ ನಡುವಣ ಸಂಬಂಧಗಳಿಗೂ ಮುಖ್ಯ ಕಾರಣವಾಗಿರುತ್ತದೆ. ಸಾಮಾನ್ಯವಾಗಿ ಈ ಶಕ್ತಿ ಸಾಧಾರಣ ಮಟ್ಟಕ್ಕಿಂತ ಹೆಚ್ಚಿಗೆ ಇರುವವರು ಯಾವುದೋ ಕಾರಣಕ್ಕೆ ಎಲ್ಲರಿಗೂ ಬೇಕಾದವರಾಗಿರುತ್ತಾರೆ.

    ಈಗ ನಿನ್ನ ಸಮಸ್ಯೆಗೆ ಇದು ಹೇಗೆ ಕಾರಣವಾಗುತ್ತೆ ಅನ್ನೋದು ನಿನ್ನ ಸಂಶಯ ಅಲ್ಲಾ?? ಹಾಗಾದ್ರೆ ಕೇಳು.

    ನಿನಗಿಂತಲೂ ಹೆಚ್ಚಿನ ಮಟ್ಟದ ಇಂತಹ ಶಕ್ತಿ ಇದ್ದವನು ನಿನಗೆ ಅಪರಿಚಿತನಾಗಲೀ, ನಿನ್ನ ಭೌತಿಕ ಇಂದ್ರಿಯಗಳಿಗೆ ಸುಖ ಕಲ್ಪಿಸುವ ಯಾವ ವಿಷಯವನ್ನೂ ಮಾಡದಿದ್ದರೂ ಅಂಥವರ ಇರುವು ನಿನಗೆ ಉಲ್ಲಾಸ ಮೂಡಿಸುತ್ತದೆ. ಕಾರಣ ಅವರ ಸನಿಹದಲ್ಲಿ ನಿನಗಿಂತಲೂ ಹೆಚ್ಚಿನ ಮಟ್ಟದಲ್ಲಿರುವ ಅವರ ಶಕ್ತಿ ಕಡಿಮೆ ಮಟ್ಟದ ನಿನ್ನ ಕಡೆ ಹರಿದು ಬರುತ್ತಿರುತ್ತದೆ.ನಿನ್ನ ವಿಜ್ಞಾನ ಹೇಳಿಲ್ಲವೇ ಶಕ್ತಿಯ ಸಂಚಯ ಹೆಚ್ಚಿನ ಮಟ್ಟದಿಂದ ಕಡಿಮೆ ಮಟ್ಟಕ್ಕೆ ಹರಿಯುತ್ತಿರುತ್ತದೆ ಅಂತ. ಹಾಗೆಯೇ ಇದು.

    ನಿನಗಿಂತಲೂ ಕಡಿಮೆ ಮಟ್ಟದ ಶಕ್ತಿ ಹೊಂದಿದ ವ್ಯಕ್ತಿ ನಿನ್ನ ಸನಿಹ ಕುಳಿತಾಗ ಅವನು ನಿನಗೆ ಹಣಕೊಟ್ಟರೂ, ನಿನಗೆ ಪ್ರಿಯವಾದ ಸಂಗತಿ ಹೇಳುತ್ತಿದ್ದರೂ ನಿನ್ನ ಶಕ್ತಿ ಅವನೆಡೆಗೆ ಹರಿಯುತ್ತಿದ್ದರಿಂದ ನಿನಗೆ ಅವನ ಇರುವು ಕಿರಿ ಕಿರಿ ಅನ್ನಿಸುತ್ತದೆ. ಎರಡು ವ್ಯಕ್ತಿಗಳ ಈ ಶಕ್ತಿಯ ಮಟ್ಟ ಒಂದೇ ಸ್ಥರದಲ್ಲಿ ಇದ್ದರೆ, ಅವರಿಬ್ಬರೂ ಒಬ್ಬರನ್ನೊಬ್ಬರ ಇರುವನ್ನು ಪ್ರೀತಿಸುತ್ತಾರೆ. ಅದರಲ್ಲೂ ಈ ರೀತಿಯ ಹವಾ ನಿಯಂತ್ರಿತ ಕೋಣೆಗಳಲ್ಲಿ ಅದರ ಪ್ರಭಾವ ಬಲು ತೀಕ್ಷ್ಣವಾಗಿರುತ್ತದೆ.ಈ ಉದ್ದೇಶಕ್ಕಾಗಿಯೇ ನಮ್ಮ ಸಂಪ್ರದಾಯಗಳಲ್ಲಿ ಯತಿಗಳನ್ನು, ಸ್ವಾಮಿಗಳನ್ನು, ಹಲವಾರು ಸಾಧಕರನ್ನು ಮುಟ್ಟುವುದು ಇರಲಿ, ಸಾಮಾನ್ಯನು ಹತ್ತಿರವೂ ಹೋಗಲು ನಿಷೇಧಿಸಿರುವುದು….ಅಂದು ಬಿಟ್ಟರು!

    ಧ್ಯಾನದಿಂದ, ಉಸಿರಾಟವನ್ನು ಕ್ರಮಬದ್ಧವಾಗಿ ಮಾಡುವ ಪ್ರಾಣಾಯಾಮದಿಂದ, ತಪಸ್ಸಿನಿಂದ ಇಂಥಹ ಶಕ್ತಿಯನ್ನು ಯೋಗಿಗಳು ಗಣನೀಯ ಮಟ್ಟದಲ್ಲಿ ಗಳಿಸಿಕೊಂಡಿರುತ್ತಾರೆ.ನಮ್ಮಂತಹ ಸಾಮಾನ್ಯರು ಒಳ್ಳೆಯ ನಡತೆಯಿಂದ, ಆರೋಗ್ಯಕರ ಜೀವನದಿಂದ ಒಂದು ಸಾಧಾರಣ ಮಟ್ಟದಲ್ಲಿ ಕಾಪಾಡಿಕೊಳ್ಳಬಹುದು.

    ಈ ಉಸಿರಾಟ ಅನ್ನೋದು ಪ್ರಕೃತಿ ಪ್ರತಿ ಜೀವಿಗಳಿಗೆ ಕೊಟ್ಟ ಶಕ್ತಿ ಸಂಚಲನ ಕ್ರಿಯೆ. ದೇಹದ ಹೊರಗಡೆ ಇರುವುದನ್ನು ಗಾಳಿ ಅಂದರೆ ಒಳಗಡೆ ಇರುವುದನ್ನ ಪ್ರಾಣ ಅಂತಾರೆ. ದೇಹದ ಬೇರೆ ಬೇರೆ ಭಾಗಗಳಲ್ಲಿ ಇರುವ ಈ ಪ್ರಾಣವನ್ನು ಪ್ರಾಣ,ಅಪಾನ, ವ್ಯಾನ,ಉದಾನ, ಸಮಾನ ಅಂತ ಪಂಚ ಪ್ರಾಣ ಅಂದಿದ್ದಾರೆ.

    ಹೊರಗಡೆ ಇರುವ ಗಾಳಿಯನ್ನು ವಾಹನದ ಚಕ್ರಗಳಲ್ಲಿಯ ರಬ್ಬರ್ ಚೀಲದಲ್ಲಿ ತುಂಬಿದಾಗ ಅದರ ಶಕ್ತಿ ಎಷ್ಟೊಂದು ಹೆಚ್ಚಾಗಿ, ಇಡೀ ವಾಹನದ ಭಾರವನ್ನು ವೇಗವಾಗಿ ಹೊತ್ತೊಯ್ಯಲು ಸಹಕಾರಿಯಾಗಿದೆ. ಹಾಗೆಯೇ ನಮ್ಮ ದೇಹದ ಕೋಟ್ಯಂತರ ಜೀವಕಣಗಳಲ್ಲಿ ಬೇರೆ ಬೇರೆ ಸ್ತರದಲ್ಲಿ ಇರುವ ವಾಯುವನ್ನು ಒಂದೇ ಸ್ಥರಕ್ಕೆ ತಂದರೆ, ಈ ದೇಹವೇ ಒಂದು ಅದ್ಭುತ ಶಕ್ತಿ ಕೇಂದ್ರವಾಗುತ್ತದೆ. ಈ ಉಸಿರಾಟದ ಕ್ರಮವೇ ನಮ್ಮ ಪರಂಪರೆಯಲ್ಲಿ ಹಠಯೋಗ ದ ಕಾಯಸಿದ್ಧಿ ಗೆ ಪ್ರೇರಣೆಯಾಗಿದೆ. ನಂತರ ಮನಃಸಿದ್ಧಿ ಗಾಗಿ ರೂಪುಗೊಂಡ ಪತಾಂಜಲಿ ಯೋಗ ದಲ್ಲಿ ಪ್ರಾಣಾಯಾಮ ವಾಗಿ ರೂಪುಗೊಂಡಿದೆ. ಈ ಕ್ರಮವಾದ ಉಸಿರಾಟದಿಂದ ಸಂಚಯಿಸಬಹುದಾದ ಶಕ್ತಿಯ ಸ್ಥರಕ್ಕೆ ಮಿತಿಯೇ ಇಲ್ಲ. ನಿನ್ನೊಳಗಿನ ಶಕ್ತಿಯನ್ನು ಹೊರಗಿನ ಪ್ರಕೃತಿಯಲ್ಲಿ ನೀನೇ ಲೀನ ಗೊಳಿಸುವಷ್ಟು ಸಾಧನೆ ಮಾಡಬಹುದು ಎಂಬುದನ್ನು ನಮ್ಮ ಸಾಕಷ್ಟು ದಾರ್ಶನಿಕರು ಸಾಧಿಸಿ ತೋರಿಸಿದ್ದಾರೆ ಎಂದು ಅಂದಿದ್ದರು.

    ಇಂತಹ ಉಸಿರಾಟವನ್ನು ಪ್ರಾಥಮಿಕ ಕ್ರಮವನ್ನಾಗಿ ಅಳವಡಿಸಿಕೊಂಡು ಮಾನವನ ಶಕ್ತಿ ಸಂಚಯಕ್ಕೆ ಅನುವು ಮಾಡಿಕೊಟ್ಟ ನಾಥ ಸಂಪ್ರದಾಯದ ಹಠಯೋಗಕ್ಕೂ, ಯೋಗ ಸಂಪ್ರದಾಯದ ಪತಾಂಜಲಿ ಯೋಗಕ್ಕೂ ನನ್ನ ಅನೇಕಾನೇಕ ನಮನಗಳು.

    ಇಂದು ವಿಶ್ವ ಯೋಗ ದಿನ…ನೆನಪಾಯ್ತು ಅಪ್ಪನ ವ್ಯಾಖ್ಯಾನ….ಎಲ್ಲರಿಗೂ ಯೋಗ ದಿನದ ಶುಭಾಶಯಗಳು.

    B R Ambedkar School Of Economics -ಬೇಸ್ ವಿವಿ ಕ್ಯಾಂಪಸ್ ಲೋಕಾರ್ಪಣೆ ಮಾಡಿದ ಮೋದಿ; ಅಂಬೇಡ್ಕರ್ ಪ್ರತಿಮೆ ಅನಾವರಣ, ಮೇಲ್ದರ್ಜೆಗೇರಿಸಿರುವ 150 ಐಟಿಐ ಉದ್ಘಾಟನೆ

    BENGALURU JUNE 20

    ಇಲ್ಲಿನ ಜ್ಞಾನಭಾರತಿ ಆವರಣದಲ್ಲಿರುವ `ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯ’ದ (ಬೇಸ್) ನೂತನ ಕ್ಯಾಂಪಸ್ಸನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು.

    ಎರಡು ದಿನಗಳ ರಾಜ್ಯ ಪ್ರವಾಸದ ಅಂಗವಾಗಿ ಸೋಮವಾರ ಬೆಂಗಳೂರಿಗೆ ಬಂದಿಳಿದ ಮೋದಿಯವರ ಈ ಕಾರ್ಯಕ್ರಮದಲ್ಲಿ ಭಾಷಣಗಳಿರಲಿಲ್ಲ; ಘೋಷಣೆಗಳಿರಲಿಲ್ಲ. ಮೌನದ ಚೆಲುವಿನಲ್ಲಿ ಅರ್ಥಪೂರ್ಣವಾಗಿ ನಡೆದ ಈ ಕಾರ್ಯಕ್ರಮದುದ್ದಕ್ಕೂ ಬೇಸ್ ಕ್ಯಾಂಪಸ್ಸಿನಲ್ಲಿ ಅವ್ಯಕ್ತ ಸಂಭ್ರಮ ಮನೆಮಾಡಿತ್ತು.

    ಕೊಮ್ಮಘಟ್ಟದಿಂದ ನೇರವಾಗಿ ಬೇಸ್’ ಕ್ಯಾಂಪಸ್ ತಲುಪಿದ ಪ್ರಧಾನಿಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಗೌರವಾದರಗಳಿಂದ ಬರಮಾಡಿಕೊಂಡರು. ಬಳಿಕ ಮೋದಿ ಅವರು ಮೊದಲಿಗೆ,ಬೇಸ್’ ಆವರಣದಲ್ಲಿ ಪ್ರತಿಷ್ಠಾಪಿಸಿರುವ 22 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಮೂಲಕ ಸಂವಿಧಾನ ಶಿಲ್ಪಿ ಮತ್ತು ಅರ್ಥಶಾಸ್ತ್ರಜ್ಞ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಸೂಕ್ತ ಸ್ಮರಣೆಯ ಸಂಕೇತವನ್ನು ಸಮರ್ಪಿಸಿದ ಭಾವ ನೆರೆದಿದ್ದವರಲ್ಲಿ ಮನೆ ಮಾಡಿತ್ತು.

    ಇದಾದ ಬಳಿಕ ಬೇಸ್’ ಕ್ಯಾಂಪಸ್ಸಿನ ಆಡಳಿತ ವಿಭಾಗಕ್ಕೆ ತೆರಳಿದ ಅವರು, 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 13 ಬ್ಲಾಕ್ ಗಳನ್ನು ಲೋಕಾರ್ಪಣೆ ಮಾಡಿದರು. ಅಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರುಬೇಸ್’ ಪರಿವಾರದ ಪರವಾಗಿ ಅಂಬೇಡ್ಕರರ ಚಿಕ್ಕ ಪ್ರತಿಮೆಯನ್ನು ಪ್ರಧಾನಿಗೆ ಉಡುಗೊರೆಯಾಗಿ ಕೊಟ್ಟರು. ಪ್ರಧಾನಿ ಇದನ್ನು ಹರ್ಷಚಿತ್ತರಾಗಿ ಸ್ವೀಕರಿಸಿದರು.

    ಮೋದಿ ಅವರ ವೇಳಾಪಟ್ಟಿಯೆಂದರೆ, ಅಲ್ಲಿ ಅರೆನಿಮಿಷವೂ ವ್ಯರ್ಥವಾಗುವ ಪ್ರಶ್ನೆಯೇ ಇಲ್ಲ! ಇದಕ್ಕೆ ತಕ್ಕಂತೆ, ರಾಜ್ಯ ಸರಕಾರವು ಟಾಟಾ ಸಮೂಹದ ನೆರವಿನೊಂದಿಗೆ 4,736 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಿರುವ 150 ಸರಕಾರಿ ಐಟಿಐಗಳನ್ನು ರಾಜ್ಯಕ್ಕೆ ಸಮರ್ಪಿಸಿದರು. ಮೋದಿಯವರು ಇವುಗಳ ಚಾಲನೆಗೆ ಗುಂಡಿ ಒತ್ತುತ್ತಿದ್ದಂತೆಯೇ, ರಾಜ್ಯಾದ್ಯಂತ ಇರುವ ಐಟಿಐಗಳೆಲ್ಲ ನೂತನ ಅಧ್ಯಾಯಕ್ಕೆ ತೆರೆದುಕೊಂಡು, ಕ್ರಿಯಾಶೀಲವಾದವು. ಇದನ್ನು ಕಂಡು, ಮೋದಿ ಸಂತಸ ಪಟ್ಟರು.

    ಕ್ಷಣಾರ್ಧದಲ್ಲಿ ವಿದ್ಯಾರ್ಥಿಗಳ ಬಳಿಗೆ ಹೋದ ಅವರು, ಅವರೊಂದಿಗೆ ಐದಾರು ನಿಮಿಷ ಕಳೆದು, ಶೈಕ್ಷಣಿಕ ಪ್ರಗತಿಯ ಬಗ್ಗೆ ವಿಚಾರಿಸಿದರು. ಹಾಗೆಯೇ, ಕ್ಯಾಮರಾ ಕ್ಲಿಕ್ ಗಳಿಗೆ ಸಾಕ್ಷಿಯಾದರು. ಆದರೆ, ಏಕೋ ಸಮಾಧಾನವಾಗದೆ, `ಅಲ್ಲಿರುವ ಮೆಟ್ಟಲ ಬಳಿಗೆ ನೀವೆಲ್ಲ ಬನ್ನಿ. ಅಲ್ಲಿ ಫೋಟೋ ಸೆಷನ್ ಆಗಲಿ’ ಎಂದು ಹೇಳಿ, ಉನ್ನತೀಕರಿಸಿರುವ ಐಟಿಐ ಮಾದರಿಯನ್ನು ವೀಕ್ಷಿಸಲು ತೆರಳಿದರು. ಅಲ್ಲಿ ನಿಯೋಜಿತರಾಗಿದ್ದ ಸಿಬ್ಬಂದಿಯಿಂದ ಐಟಿಐ ಸಾಧನ-ಸಲಕರಣೆಗಳ ಬಗ್ಗೆ ಮೋದಿ ಮಾಹಿತಿ ಪಡೆದುಕೊಂಡರು.

    ಇಲ್ಲಿಂದ, ಕ್ಯಾಂಪಸ್ಸಿನ ಮೆಟ್ಟಿಲುಗಳ ಬಳಿ ತೆರಳಿದ ಅವರು, ಇನ್ನೊಮ್ಮೆ ಕ್ಯಾಮರಾಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಬಂಧಿ’ಯಾದರು. ಇವೆಲ್ಲದರ ಮಧ್ಯೆಯೇ ಕಾರ್ಯಕ್ರಮದಲ್ಲಿದ್ದ ಗಣ್ಯರಿಗೆ ಕೈ ಮುಗಿದು, ಅವರೊಂದಿಗೆ ಅರೆಘಳಿಗೆ ಮಾತನಾಡುತ್ತಲೇ ಮುಂದಡಿ ಇಡುತ್ತ ಹೋದರು. ಬೇಸ್ ಕ್ಯಾಂಪಸ್ಸಿನಿಂದ ಪುನಃ ಕೊಮ್ಮಘಟಕ್ಕೆ ಹೊರಟಾಗಲೂ ಮೋದಿ, ಎಲ್ಲರಿಗೂ ವಂದನೆಗಳನ್ನು ಅರ್ಪಿಸಿ, ತಮ್ಮ ಸುಸಂಸ್ಕೃತಿಯನ್ನು ಪ್ರದರ್ಶಿಸಿದರು. ಕೇವಲ ಒಂದು ಗಂಟೆ ಕಾಲಕ್ಕೂ ಕಡಿಮೆ ಅವಧಿಯಲ್ಲಿಬೇಸ್’ ಆವರಣ ಉಜ್ವಲ ಅಧ್ಯಾಯಕ್ಕೆ ಸಾಕ್ಷಿಯಾಯಿತು!

    ಅರ್ಥಶಾಸ್ತ್ರ ಮತ್ತು ಸಮಾಜವಿಜ್ಞಾನಗಳ ಉನ್ನತಾಧ್ಯಯನಕ್ಕೆ ಮೀಸಲಾಗಿರುವ `ಬೇಸ್’ ವಿ.ವಿ.ಯಲ್ಲಿ ಇನ್ನು ಮೂರು ವರ್ಷಗಳಲ್ಲಿ 1,100 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಲಭ್ಯವಾಗಲಿದೆ. ಹಾಗೆಯೇ, ಮೇಲ್ದರ್ಜೆಗೇರಿಸಿರುವ ಐಟಿಐಗಳಿಂದ 1.70 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ.

    ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಚಿವರಾದ ಸೋಮಣ್ಣ, ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಶ್ರೀರಾಮುಲು, ಕುಲಪತಿ ಡಾ.ಭಾನುಮೂರ್ತಿ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಕೌಶಲ್ಯಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಉಪಸ್ಥಿತರಿದ್ದರು.

    ಮಿದುಳು ಅಧ್ಯಯನ ಕೇಂದ್ರದ ಉದ್ಘಾಟನೆ
    ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಗೆ ಶಂಕುಸ್ಥಾಪನೆ
    ಇದಕ್ಕೂ ಮುನ್ನ ಮೋದಿ, ಭಾರತೀಯ ವಿಜ್ಞಾನ ಮಂದಿರದಲ್ಲಿ (ಐಐಎಸ್ಸಿ) 280 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮಿದುಳು ಅಧ್ಯಯನ ಕೇಂದ್ರವನ್ನು ಲೋಕಾರ್ಪಣೆ ಮಾಡಿದರು. ಈ ಕೇಂದ್ರಕ್ಕೆ ಮೋದಿಯವರೇ 2015ರ ಫೆ.18ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.

    ಈ ಕೇಂದ್ರವು, ಕರ್ನಾಟಕ ಮತ್ತು ಭಾರತದ ಗ್ರಾಮೀಣ ಭಾಗಗಳಲ್ಲಿ ನಡೆಸುತ್ತಿರುವ ಪ್ರಮುಖ ಸಂಶೋಧನೆಗಳತ್ತ ಗಮನ ಕೇಂದ್ರೀಕರಿಸಲಿದ್ದು, ಡಿಮೆನ್ಶಿಯಾ ಕಾಯಿಲೆಗೆ ವೈದ್ಯಕೀಯ ಪರಿಹಾರ ಕಂಡುಹಿಡಿಯಲಿದೆ.

    ಇದಾದ ಬಳಿಕ ಅವರು, ಐಐಎಸ್ಸಿ ಆವರಣದಲ್ಲಿ ತಲೆಯೆತ್ತಲಿರುವ 800ಕ್ಕೂ ಹೆಚ್ಚು ಹಾಸಿಗೆಗಳ ಸಾಮರ್ಥ್ಯದ `ಬಾಗ್ಚಿ-ಪಾರ್ಥಸಾರಥಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ’ಯ ಬೃಹತ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಆಸ್ಪತ್ರೆಯ ನಿರ್ಮಾಣಕ್ಕೆ, ಉದ್ಯಮಿಗಳಾದ ಸುಸ್ಮಿತಾ ಮತ್ತು ಸುಬ್ರತೋ ಬಾಗ್ಚಿ ಹಾಗೂ ರಾಧಾ ಮತ್ತು ಎನ್.ಎಸ್.ಪಾರ್ಥಸಾರಥಿಯವರು 425 ಕೋಟಿ ರೂ.ಗಳನ್ನು ದೇಣಿಗೆ ನೀಡಿದ್ದಾರೆ.

    ಈ ಆಸ್ಪತ್ರೆ ಕಾರ್ಯಾರಂಭ ಮಾಡತೊಡಗಿದರೆ, ಐಐಎಸ್ಸಿಯಲ್ಲಿ ಅಂತರ್ಶಿಸ್ತೀಯ ತರಬೇತಿ, ಸಂಶೋಧನೆ, ಮತ್ತು ಕ್ಯಾನ್ಸರ್ ಹಾಗೂ ಹೃದ್ರೋಗಗಳಂಥ ಕಾಯಿಲೆಗಳಿಗೆ ಚಿಕಿತ್ಸೆ ಸಾಧ್ಯವಾಗಲಿದೆ. ಜೊತೆಗೆ, ಪ್ಲಾಸ್ಟಿಕ್ ಸರ್ಜರಿ, ರೋಬೋಟಿಕ್ ಸರ್ಜರಿ, ಅಂಗಾಂಗ ಕಸಿ ಕೂಡ ನಡೆಯಲಿದೆ.

    ಕ್ಯಾಪ್ಶನ್

    Indian Stock Market:ಪೇಟೆಗಳು ಕುಸಿಯುತ್ತಿರಲು ಕಾರಣವೇನು?

    ಷೇರುಪೇಟೆಯಲ್ಲಿ ದಿನನಿತ್ಯ, ವಹಿವಾಟಿನ ದೃಷ್ಟಿಯಿಂದ ಹೊಸ ಹೊಸ ಕಾರಣಗಳು ಸೃಷ್ಟಿ ಯಾಗುತ್ತವೆ. ವಿಶೇಷವಾಗಿ ಜನ ಸಾಮಾನ್ಯರ ಆಸಕ್ತಿ ಹೆಚ್ಚುತ್ತಿರುವ ಈಗಿನ ದಿನಗಳಲ್ಲಿ ವೈವಿಧ್ಯಮಯ ರೀತಿಯ ಬೆಳವಣಿಗೆಗಳು ಪ್ರಭಾವಿಯಾಗುತ್ತವೆ.

    2022-23 ಆರ್ಥಿಕ ವರ್ಷಾರಂಭದಿಂದಲೂ ವಿದೇಶೀ ವಿತ್ತೀಯ ಸಂಸ್ಥೆಗಳು ಮಾರಾಟದತ್ತಲೇ ಹೆಚ್ಚು ಒತ್ತು ನೀಡುತ್ತಿವೆ. ಈ ಆರ್ಥಿಕ ವರ್ಷದಲ್ಲಿ ಅಂದರೆ ಸುಮಾರು ಎರಡೂವರೆ ತಿಂಗಳಲ್ಲಿ ವಿದೇಶೀ ವಿತ್ತೀಯ ಸಂಸ್ಥೆಗಳು ವರ್ಷದ ಆರಂಭದ ಸಮಯ ಅಂದರೆ ಏಪ್ರಿಲ್ 3 ರಂದು ರೂ.1,152.21 ಕೋಟಿ, 4ರಂದು ರೂ.374.80. 28 ರಂದು ರೂ.743.22 ಕೋಟಿ ನಂತರ ಮೇ 30 ರಂದು ರೂ.502.08 ಕೋಟಿ ಮೌಲ್ಯದ ಷೇರುಗಳ ಖರೀದಿ ಬಿಟ್ಟರೆ ಉಳಿದಂತೆ ಎಲ್ಲಾ ದಿನಗಳೂ ಮಾರಾಟದ ಹಾದಿಯಲ್ಲಿ ಸಾಗಿವೆ. ಇದು ವಿದೇಶೀ ವಿತ್ತೀಯ ಸಂಸ್ಥೆಗಳ ಚಟುವಟಿಕೆಯ ಶೈಲಿಯಾಗಿದೆ.

    ಸಂವೇದಿ ಸೂಚ್ಯಂಕ ಚಲನೆಯ ಶೈಲಿ:

    ಪೇಟೆಯಲ್ಲಿ ಹೆಚ್ಚಿನ ಪಾಲು ವ್ಯವಹಾರಿಕ ಚಿಂತನೆಯ ಚಟುವಟಿಕೆಯೇ ಗುರಿಯಾಗಿದೆ ಎಂದು ತಿಳಿಯಲು ಸಂವೇದಿ ಸೂಚ್ಯಂಕದ (Sensex) ಚಲನೆಯ ಜಾಡು ಹಿಡಿದುಹೊರಟರೆ ಅರಿವಾಗುವುದು. ಮಾರ್ಚ್ 7 ರಂದು ಸೆನ್ಸೆಕ್ಸ್ 52,800 ರಲ್ಲಿದ್ದು ಅಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.241.10 ಲಕ್ಷ ಕೋಟಿಯಲ್ಲಿತ್ತು. ನಂತರದ ಒಂದು ತಿಂಗಳಲ್ಲಿ ಅಂದರೆ ಏಪ್ರಿಲ್ 8 ರಂದು ಸೆನ್ಸೆಕ್ಸ್ 59,446 ಕ್ಕೆ ಜಿಗಿದಿತ್ತು, ಆ ಸಮಯದಲ್ಲಿ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.274.10 ಲಕ್ಷ ಕೋಟೆಗೆ ಏರಿಕೆಯಾಗಿತ್ತು. ಅಲ್ಲಿಂದ ಒಂದು ತಿಂಗಳಾದ ನಂತರ ಅಂದರೆ ಮೇ 13 ರಂದು ಸೆನ್ಸೆಕ್ಸ್ ಮತ್ತೆ 52,793 ಪಾಯಿಂಟುಗಳಿಗೆ ಹಿಂದಿರುಗಿತು, ಅಂದು ಮತ್ತೆ ಬಂಡವಾಳೀಕರಣ ಮೌಲ್ಯವು ರೂ.241.34 ಲಕ್ಷ ಕೋಟಿಗೆ ಇಳಿಯಿತು.

    ಜೂನ್ ತಿಂಗಳ 17 ರಂದು ಸೆನ್ಸೆಕ್ಸ್ 50,921.22 ಕ್ಕೆ ಕುಸಿದು ವಾರ್ಷಿಕ ಕನಿಷ್ಠದ ದಾಖಲೆ ನಿರ್ಮಿಸಿದೆ. ಅಂದಿನ ಬಂಡವಾಳೀಕರಣ ಮೌಲ್ಯವನ್ನು ರೂ.236.77 ಲಕ್ಷ ಕೋಟಿಗೆ ಜಾರುವಂತಾಯಿತು. ಈ ರೀತಿ ಒಂದೊಂದು ತಿಂಗಳಲ್ಲಿ ಒಂದೊಂದು ರೀತಿಯ ಏರಿಳಿತಗಳ ಪ್ರದರ್ಶನವು ಪೇಟೆಯಲ್ಲಿ ನಡೆಯುತ್ತಿರುವ ವ್ಯವಹಾರಿಕ ಚಟುವಟಿಕೆಗೆ ಹಿಡಿದ ಕನ್ನಡಿಯಾಗಿದೆ. ಕಾರಣ ಕಂಪನಿಗಳಲ್ಲಿ ಆಂತರಿಕವಾಗಿ ಇಷ್ಟು ಬದಲಾವಣೆಗಳನ್ನು ತರುವ ರೀತಿ ಬೆಳವಣಿಗೆಗಳೇನು ಇರದೆ ಕೇವಲ ಬಾಹ್ಯ ಕಾರಣಗಳ ಪ್ರಭಾವ, ಚಿಂತನೆಗಳೇ ಕಾರಣವಾಗಿವೆ

    ಪೇಟೆಗಳು ಕುಸಿಯುತ್ತಿವೆ ಏಕೆ ?

    ಷೇರುಪೇಟೆಗಳು ಬೃಹದಾಕಾರವಾಗಿ ಬೆಳೆದು ನಿಂತಿವೆ. ಈ ರೀತಿಯ ಬೆಳವಣಿಗೆ ಕಾಣಲು ಮುಖ್ಯ ಕಾರಣ ತಾಂತ್ರಿಕ ಸೌಲಭ್ಯಗಳು ಒದಗಿಸುವ ಸೌಕರ್ಯಗಳು, ವಹಿವಾಟಿನ ವೇಗ ಮತ್ತು ಎಲ್ಲಕ್ಕೂ ಮಿಗಿಲಾಗಿ ಹಣದ ಅವಶ್ಯಕತೆಯಿದ್ದಾಗ, ಶೀಘ್ರ ನಗದೀಕರಿಸಬಹುದಾದ ಸ್ವತ್ತು ಷೇರು ಹೂಡಿಕೆಯಾಗಿದೆ. ಹಾಗಾಗಿ ಲಾಕ್ ಡೌನ್ ಸಮಯದಲ್ಲಿ ಎಲ್ಲಾ ವ್ಯವಹಾರಗಳು ಸ್ಥಗಿತಗೊಂಡಿದ್ದರೂ ಷೇರುಪೇಟೆಗಳು ಕಾರ್ಯನಿರ್ವಹಿಸುತ್ತಿದ್ದವು. ಈ ಕಾರಣದಿಂದಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಜಿ ಎಸ್ ಟಿ ಮೂಲಕ ಉತ್ತಮ ಸಂಗ್ರಹಣೆಯೂ ಆಗುತ್ತಿತ್ತು. ಅಂದರೆ ಪರೋಕ್ಷವಾಗಿ ದೇಶ ಸೇವೆಯಾದಂತಿತ್ತು.

    ಸೆನ್ಸೆಕ್ಸ್ ಏರಿಕೆಗೆ ಪ್ರಮುಖ ಕೊಡುಗೆ ಕೊಟ್ಟಿರುವುದೆಂದರೆ ವಿದೇಶೀ ವಿತ್ತೀಯ ಸಂಸ್ಥೆಗಳು. ಇವುಗಳಿಂದ ಬರುತ್ತಿದ್ದ ಹಣದ ಒಳಹರಿವು ಜೊತೆಗೆ ಸ್ಥಳೀಯವಾಗಿ ಸಣ್ಣ ಹೂಡಿಕೆದಾರರ ಮೂಲಕ ನೇರವಾಗಿ ಪೇಟೆಯತ್ತ ಹರಿದುಬರುತ್ತಿದ್ದ ಹಣದೊಂದಿಗೆ ಎಸ್ ಐ ಪಿ ಗಳ ಮೂಲಕ ಹರಿದುಬಂದ ಹಣ ಎಲ್ಲವೂ ಸೇರಿ ಪೇಟೆಯಲ್ಲಿ ಬೇಡಿಕೆ ಹೆಚ್ಚಾಯಿತು. ಮಾಧ್ಯಮಗಳಲ್ಲಿನ ವಿಶ್ಲೇಷಣೆಗಳು, ಬ್ರೋಕಿಂಗ್ ಹೌಸ್ ಗಳ ರೇಟಿಂಗ್ ಗಳು, ಅಪ್ ಗ್ರೆಡೇಷನ್ ಗಳು, ಕಾರ್ಪೊರೇಟ್ ಸಾಧನೆಗಳೂ ಸೇರಿ ಪೇಟೆಯನ್ನು ವಿಜೃಂಭಿಸುವಂತೆ ಮಾಡಿದವು.

    ಆ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಎಲ್ಲಾ ಸರ್ಕಾರಗಳೂ ಫ್ರೀಮನಿ ಪಾಲಿಸಿಯನ್ನು ಅಳವಡಿಸಿಕೊಂಡು ಹರಿದಾಡುವ ಹಣದಿಂದ ಜನತೆಗೆ ಸಾಂಕ್ರಾಮಿಕದಿಂದ ತೊಂದರೆಯಾಗದೆ ಇರುವ ರೀತಿ ನೋಡಿಕೊಂಡವು. ಈ ಕಾರಣದಿಂದ ಹಣದುಬ್ಬರದ ಪ್ರಮಾಣ ಹೆಚ್ಚಾಗತೊಡಗಿತು. ಸಾಂಕ್ರಾಮಿಕದ ಪ್ರಭಾವ ಕ್ಷೀಣಿತಗೊಂಡು ಉದ್ಯಮಗಳು, ಜನಜೀವನ ಸಹಜತೆಗೆ ಮರಳಿದ ಕಾರಣ, ಆ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ಬಡ್ಡಿದರವನ್ನು ಹೆಚ್ಚಿಸಲು ಮುಂದಾಯಿತು. ಆದರೂ ಪೇಟೆಗಳು ಸಹಜತೆಯೊಂದಿಗೆ ಸಾಗಿದವು. ಆದರೆ ಎರಡನೇ ಬಾರಿ ಬ್ಯಾಂಕ್ ಬಡ್ಡಿದರದೊಂದಿಗೆ ರೆಪೋದರವನ್ನು ಹೆಚ್ಚಿಸಿದ ಕಾರಣ, ಪೇಟೆಯಲ್ಲಿ ಹರಿದಾಡುವ ಹಣದಲ್ಲಿ ರೂ.83 ಸಾವಿರ ಕೋಟಿಯನ್ನು ಹೀರಿಕೊಂಡಿತು. ಜೊತೆಗೆ ಈ ಸಮಯದಲ್ಲಿ ತೇಲಿಬಂದ ಎಲ್ ಐ ಸಿ ಆಫ್ ಇಂಡಿಯಾದ ಆರಂಭಿಕ ಷೇರು ವಿತರಣೆ ಮೂಲಕ ಸುಮಾರು ರೂ.20 ಸಾವಿರ ಕೋಟಿ ಹಣ ಪೇಟೆಯಿಂದ ಹಿಂದೆ ಸರಿಯಿತು. ಇವೆಲ್ಲಾ ಸಾಲದೆಂಬಂತೆ ಏಪ್ರಿಲ್ ನಲ್ಲಿದ್ದ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.274.10 ಲಕ್ಷ ಕೋಟಿಯಿಂದ ಶುಕ್ರವಾರ ರೂ.236.77 ಲಕ್ಷಕೋಟಿಗೆ ಜಾರಿ ಸುಮಾರು ರೂ.37 ಲಕ್ಷಕೋಟಿಗೂ ಹೆಚ್ಚಿನ ಹಣ ಕರಗಿ ಹೋಯಿತು. ಹೀಗಾಗಿ ಪೇಟೆಯಲ್ಲಿ ಸುಲಭ ಹಣ ಮಾಯವಾಗಿ, ಶ್ರಮಕ್ಕನುಗುಣವಾದ ಹಣ ಎಂಬ ವಾತಾವರಣ ನಿರ್ಮಾಣವಾಗಿದ್ದು, ವಿದೇಶೀ ವಿತ್ತೀಯ ಸಂಸ್ಥೆಗಳ ಮಾರಾಟವೂ ಇದಕ್ಕೆ ಪೂರಕವಾದ ವಾತಾವರಣ ಸೃಷ್ಠಿಯಾಗಿ ಕುಸಿತದ ಪ್ರಭಾವ ಹೆಚ್ಚಿಸಿದೆ.

    ಪೇಟೆಯಲ್ಲಿ ಹೀಗಾಗಿರಬಹುದೇ ?

    ಶುಕ್ರವಾರದ ಚಟುವಟಿಕೆಯನ್ನೊಮ್ಮೆ ಗಮನಿಸಿದಾಗ ಇತ್ತೀಚೆಗೆ ಐ ಪಿ ಒ ವಿತರಣೆ ಮೂಲಕ ಷೇರುಪೇಟೆ ಪ್ರವೇಶಿಸಿದ ಅನೇಕ ಕಂಪನಿಗಳು ಹೆಚ್ಚಿನ ಸಂಖ್ಯಾಗಾತ್ರದ ವಹಿವಾಟಿನೊಂದಿಗೆ ವಿಲೇವಾರಿ ಪ್ರಮಾಣವೂ ಹೆಚ್ಚಿದೆ. ಅಂದರೆ ಕೆಲವು ಕ್ವಾಲಿಫೈಡ್ ಇನ್ಸ್ ಟಿಟ್ಯೂಷನ್ ಗಳು ತಮ್ಮ ಷೇರುಗಳನ್ನು, ಆಂಕರ್ ಇನ್ವೆಸ್ಟರ್ ಕೋಟಾದ ಷೇರುಗಳನ್ನು ಲಾಕ್ ಇನ್ ಅವಧಿ ಮುಗಿದ ಕಾರಣ ಮಾರಾಟಮಾಡಿರುವ ಸಾಧ್ಯತೆ ಹೆಚ್ಚಿರಬೇಕು ಎಂದೆನಿಸುತ್ತದೆ.

    • ಮೇ ತಿಂಗಳಲ್ಲಿ ಪ್ರತಿ ರೂ.1 ರ ಮುಖಬೆಲೆಯ ಷೇರಿಗೆ ರೂ.487 ರಂತೆ ಆರಂಭಿಕ ಷೇರು ವಿತರಣೆಮಾಡಿ ಪೇಟೆಯಲ್ಲಿ ಚಟುವಟಿಕೆಗೆ ನೋಂದಾಯಿಸಿಕೊಂಡಿದೆ. ಈ ಕಂಪನಿಯು ಲೀಸ್ಟಿಂಗ್ ಆದ ನಂತರದ ಆರಂಭಿಕ ದಿನಗಳಲ್ಲಿ ಅಂದರೆ 2ನೇ ಜೂನ್ ರಂದು ರೂ.600 ರ ಗಡಿದಾಟಿತ್ತಾದರೂ ಶುಕ್ರವಾರ 17 ರಂದು ಷೇರು ಮಾರಾಟದ ಒತ್ತಡದಿಂದ ರೂ.457 ರವರೆಗೂ ಕುಸಿದು ರೂ.470 ರಲ್ಲಿ ಕೊನೆಗೊಂಡು ವಿತರಣೆಬೆಲೆಗೂ ಕಡಿಮೆ ಬೆಲೆಯಲ್ಲಿ ಕೊನೆಗೊಂಡಿದೆ. ಇದಲ್ಲದೆ ಅಂದು ವಹಿವಾಟಾದ ಸಂಖ್ಯೆಯೊಂದಿಗೆ ವಿಲೇವಾರಿಯಾದ ಷೇರುಗಳ ಗಾತ್ರ ಶೇ.60.21 ರಷ್ಟು ಎಂಬುದು ಗಮನಾರ್ಹ. ಹಿಂದಿನ ಮೂರು ವರ್ಷಗಳಲ್ಲೂ ಹಾನಿಗೊಳಗಾಗಿದ್ದಂತಹ ಈ ಕಂಪನಿಯಿಂದ ಈ ಪ್ರಮಾಣದ ನಿರ್ಗಮನ ಸೋಜಿಗವೇನಲ್ಲವೆಂದೆನಿಸುತ್ತದೆ.
    • ಡಿಸೆಂಬರ್ ತಿಂಗಳಲ್ಲಿ ರೂ.10 ರ ಮುಖಬೆಲೆಯ ಷೇರನ್ನು ರೂ.900 ರಂತೆ ವಿತರಿಸಿದ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶೂರನ್ಸ್ ಕಂಪನಿ ಲಿಮಿಟೆಡ್ ಲೀಸ್ಟಿಂಗ್ ಆದ ದಿನಗಳಲ್ಲಿ ಷೇರಿನ ಬೆಲೆ ರೂ.940 ರವರೆಗೂ ಏರಿಕೆ ಕಂಡಂತಹ ಷೇರು. ನಂತರದ ದಿನಗಳಲ್ಲಿ ಅಂದರೆ ಮಾರ್ಚ್ ನಲ್ಲಿ ರೂ.583 ರ ಸಮೀಪದವರೆಗೂ ಕುಸಿದಿತ್ತು. 17ನೇ ಶುಕ್ರವಾರದಂದು ಷೇ ಮರಿನ ಬೆಲೆ ರೂ.650 ರ ಸಮೀಪದಿಂದ ರೂ.605 ರವರೆಗೂ ಕುಸಿದು ಅಂತ್ಯದಲ್ಲಿ ನ್ಯಾಶನಲ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ರೂ.634 ರಲ್ಲಿ ಕೊನೆಗೊಂಡು ಶೇ.64.46 ರಷ್ಟು ವಿಲೇವಾರಿಯಾಗಬಹುದಾದ ವಹಿವಾಟು, ಬಿ ಎಸ್ ಇ ಯಲ್ಲಿ ರೂ.620 ರ ಸಮೀಪಕೊನೆಗೊಂಡು ಶೇ.70.30 ರಷ್ಟು ವಿಲೇವಾರಿ ವಹಿವಾಟಾಗಿರುವುದು ಗಮನಾರ್ಹ.
    • ಹಾಗೆಯೇ ಅಕ್ಟೋಬರ್ ತಿಂಗಳಲ್ಲಿ ಪ್ರತಿ ರೂ.1 ರ ಮುಖಬೆಲೆಯ ಷೇರಿಗೆ ರೂ.1,125 ರಂತೆ ವಿತರಿಸಿದ ನೈಕಾ ಕಂಪನಿಯ ಷೇರೂ ಸಹ ರೂ.1,412 ರಿಂದ ಆರಂಭಿಸಿ ಮಧ್ಯಂತರದಲ್ಲಿ ರೂ.1,312 ರವರೆಗೂ ಕುಸಿದು ರೂ.1,389 ರಲ್ಲಿ ಕೊನೆಗೊಂಡಿತು. ವಿಲೇವಾರಿಯಾದ ಷೇರುಗಳ ಸಂಖ್ಯೆಯು ಸಹ ಶೇ.53.97 ರಷ್ಟಿತ್ತು.

    ವ್ಯವಹಾರಿಕತೆ ಹೀಗೂ ಇರುತ್ತದೆಯೇ?

    ನವೆಂಬರ್ 2021 ರಲ್ಲಿ ಪ್ರತಿ ರೂ.1 ರ ಮುಖಬೆಲೆಯ ಷೇರನ್ನು ರೂ.2,150 ರಂತೆ ಆರಂಭಿಕ ಷೇರು ವಿತರಣೆ ಮಾಡಿದ ಕಂಪನಿ. ಆ ಸಂದರ್ಭದಲ್ಲಿ ಕಂಪನಿಯ ಪ್ರವರ್ತಕರು ಸಹ ರೂ.402 ಕೋಟಿ ಮೌಲ್ಯದ ಷೇರುಗಳನ್ನು ಆಫರ್ ಫಾರ್ ಸೇಲ್ ಮೂಲಕ ಮಾರಾಟಮಾಡಿದ್ದರು. ಲೀಸ್ಟಿಂಗ್ ಆದ ನಂತರದಲ್ಲಿ ಈ ಷೇರು ತನ್ನ ವಿತರಣೆಬೆಲೆಯನ್ನು ತಲುಪದಾಯಿತು. ಮೇ ತಿಂಗಳಲ್ಲಿ ಷೇರಿನ ಬೆಲೆ ರೂ.510 ರ ವರೆಗೂ ಕುಸಿದಿತ್ತು. ಮೇ ತಿಂಗಳ ಅಂತ್ಯದಲ್ಲಿ ಷೇರಿನ ಬೆಲೆ ರೂ.630 ರ ಸಮಯದಲ್ಲಿದ್ದಾಗ ಕಂಪನಿಯ ಪ್ರವರ್ತಕರು 1.70 ಲಕ್ಷ ಷೇರುಗಳನ್ನು ರೂ.11 ಕೋಟಿ ಮೌಲ್ಯದಲ್ಲಿಖರೀದಿಸಿದ್ದಾರೆ. ರೂ.2,150 ರಂತೆ ಮಾರಾಟಮಾಡಿದ ಷೇರನ್ನು ರೂ.630 ರಂತೆ ಖರೀದಿಸಿ, ಕೇವಲ ಕೆಲವೇ ತಿಂಗಳಲ್ಲಿ ಈ ಪ್ರಮಾಣದ ಆದಾಯ ಗಳಿಸಲು ಷೇರುಪೇಟೆ ಹೇಗೆ ಒದಗಿಸಬಹುದು ಎಂಬುದನ್ನು ತಿಳಿಯಬೇಕು. ವಿಶೇಷವಾಗಿ ಹೊಸದಾಗಿ ಪೇಟೆಯನ್ನು ಪ್ರವೇಶೀಸಿದವರಿಗೆ ಒಂದು ಉದಾಹರಣೆಯಾಗಿದೆ.

    ಈಗಿನ ಪರಿಸ್ಥಿತಿ ಇದಾಗಿರಬಹುದೇ?

    ಇದುವರೆಗಿನ ಪೇಟೆಯ ತೇಜೀ ವಾತಾವರಣವು ವೇತನದಾರರ ಮಾಸಾರಂಭದ ಪರಿಸ್ಥಿತಿಯಂತೆ ಸುಲಭವಾಗಿ ವೆಚ್ಚಮಾಡುವ ವಾತಾವರಣವಾಗಿತ್ತು. ಸಧ್ಯದ ಪರಿಸ್ಥಿತಿಯು ಮಾಸಾಂತ್ಯದ ಬಿಗಿ ಆರ್ಥಿಕತೆಯ ವಾತಾವರಣವಾಗಿದ್ದು, ನಂತರ ಮಾಸಾರಂಭವಾಗಿ ವೇತನದ ದಿನ ಬರಲೇಬೇಕಲ್ಲವೇ?

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೋಪ ತಾನು ಹುಟ್ಟಿದ ಸ್ಥಳವನ್ನು ಮೊದಲು ನಿರ್ನಾಮ ಮಾಡುವಂತೆ ಅಸೂಯೆ  ವ್ಯಕ್ತಿಯನ್ನು ಹಾಳು ಮಾಡುತ್ತದೆ

    ಸುಮಾ ವೀಣಾ

    ಕರುಬರಿದ್ದೂರಿಂದೆ   ಕಾಡೊಳ್ಳಿತು- ಉಪಮಾಲೋಲ ಲಕ್ಷ್ಮೀಶನ  ‘ಜೈಮಿನಿ ಭಾರತದ’  ‘ಚಂದ್ರಹಾಸನ ಬಾಲ್ಯ’ದಲ್ಲಿ ಬರುವ    ನೀತಿಯುಕ್ತ ಮಾತಿದು. ರಾಜನಾಗಬಹುದು ಎನ್ನುವ ಉದ್ದೇಶದಿಂದ  ಚಂದ್ರಹಾಸನ ಮೇಲೆ ಇನ್ನಿಲ್ಲದ ಹಾಗೆ ಸಾಧಿಸಿದವನು ದುಷ್ಟಬುದ್ಧಿ ಎಂಬ ಮಂತ್ರಿ.  ಆ ಬಾಲಕನನ್ನು ಕೊಂದು ಗುರುತು ತೋರಿಸುವಂತೆ   ತನ್ನ ಭಟರಿಗೆ ಆಜ್ಞಾಪಿಸಿರುತ್ತಾನೆ.  ಚಂದ್ರಹಾಸನ ಮುಗ್ಧ ರೂಪವನ್ನು ಕಂಡು ಕೊಲ್ಲಲು ಮನಸ್ಸು ಬಾರದೆ   ಬಾಲಕನ ಕಾಲಿನ ಕಿರುಬೆರಳನ್ನು ಕತ್ತರಿಸಿ  ಕೊಂದೆವೆಂದು ಸುಳ್ಳು ಹೇಳುತ್ತಾರೆ.

    ರಕ್ತ ಒಸರಿಸಿಕೊಂಡು  ಚೀತ್ಕರಿಸುತ್ತಿದ್ದ ಬಾಲಕ ಚಂದ್ರಹಾಸನನ್ನು  ಕಂಡು  ಕಾಡಿನ ಮೃಗಾದಿ ಪಕ್ಷಿಗಳು  ಮರುಗುತ್ತವೆ,ಸಂತೈಸುತ್ತವೆ . ಆದರೆ ದುಷ್ಟಬುದ್ಧಿ  ಮತ್ಸರದಿಂದ ಮಗುವಿನ ಮೇಲೆ ಮಾಡಬಾರದ್ದನ್ನು ಮಾಡಿಸುತ್ತಾನೆ. ಆ ಸಂದರ್ಭದಲ್ಲಿ ಕವಿ ಇಂಥ ಮನುಷ್ಯರೊಂದಿಗೆ ಇರುವುದಕ್ಕಿಂತ  ಕಾಡಿನ ಜೀವನ ಮೇಲು ಎನ್ನುತ್ತಾನೆ. 

    ಮನುಷ್ಯ ಒಳ್ಳೆಯ ಗುಣವನ್ನು ಹೊಂದಿರುವಂತೆ ಕೆಟ್ಟಗುಣಗಳನ್ನು ಹೊಂದಿರುತ್ತಾನೆ. ಅದರಲ್ಲಿ ಈರ್ಷ್ಯೆ ಕೂಡ ಒಂದು. ತನ್ನನ್ನು ಬಿಟ್ಟು  ಯಾರೂ ಏಳಿಗೆ ಹೊಂದಿದರೂ ಸಹಿಸದ  ಮನಸ್ಥಿತಿಗಳು. ಎಷ್ಟು ಎಂದರೆ ಒಡಹುಟ್ಟಿದವರ ಅಭಿವೃದ್ಧಿಯನ್ನೂ ಸಹಿಸದ ಸಂಕುಚಿತ ಮನಸ್ಸುಗಳು  ದಿನೇ ದಿನೇ ಹೆಚ್ಚಾಗುತ್ತಿವೆ. ಇದೊಂದು  ಅನುಭವಿಸಲಾರದ ಇತರರಲ್ಲಿ ಹಂಚಿಕೊಳ್ಳಲಾರದ   ಉಭಯ ಸಂಕಟ.  ಹಿತಶತ್ರುಗಳ ಕಿರಿ ಕಿರಿ  ಸಹಿಸಲಸಾಧ್ಯವಾದಾಗ  ಇಂಥ  ಅಸೂಯಾ ಮನಸ್ಸುಗಳ ನಡುವೆ ಇರುವುದಕ್ಕಿಂತ ಕಾಡಿನ ವಾಸ ಅರ್ಥಾತ್ ಪರಿಚಯವೇ ಇಲ್ಲದವರ  ನಡುವೆ  ಜೀವನ ಸಾಗಿಸುವುದು  ಉತ್ತಮ  ಅನ್ನುವ ಅರ್ಥದಲ್ಲಿ  ದುಷ್ಟರನ್ನು ಕಂಡರೆ ದೂರ ಇರುವುದು ಲೇಸು   ಭಾವನೆಯನ್ನು “ಕರುಬರಿದ್ದೂರಿಂದೆ   ಕಾಡೊಳ್ಳಿತು” ಎಂಬ ಮಾತು ಸಂಕೇತಿಸುತ್ತದೆ.    ಹೊಟ್ಟೆ ಕಿಚ್ಚಿಗೆ ಕಣ್ಣಿರ್ ಸುರಿಸು ಎನ್ನುವಂತೆ ದುಷ್ಡಬುದ್ಧಿಗೆ ಕಡೆಗೆ ತನ್ನ ತಪ್ಪಿನ ಅರಿವಾಗುತ್ತದೆ.

    ಮನುಷ್ಯನ ಮಾನಸಿಕ ಸ್ವಾಸ್ಥವನ್ನು ಹಾಳುಮಾಡುವ ಪರಿಭಾಷೆ ಎಂದರೆ    ‘ಅಸೂಯೆ’. ಇನ್ನೊಬ್ಬರ ಏಳಿಗೆಯನ್ನು ಸಹಿಸದೆ ಇರುವುದು. ತನ್ನ ಜೀವನದ ಎಡರು ತೊಡರುಗಳಿಗೆ   ಅಸಂಬಂದ್ಧ ಕಾರಣಗಳನ್ನು   ಇನ್ಯಾರನ್ನೋ  ಆರೋಪಿಸಿ ಬದುಕುವ ಅತೃಪ್ತ ಮನಸ್ಸುಗಳು ಹೀಗೆ  ವರ್ತಿಸುವುದು.    ಕೋಪ ತಾನು ಹುಟ್ಟಿದ ಸ್ಥಳವನ್ನು ಮೊದಲು ನಿರ್ನಾಮ ಮಾಡುವಂತೆ ಅಸೂಯೆ  ವ್ಯಕ್ತಿಯನ್ನು ಹಾಳು ಮಾಡುತ್ತದೆ. ಇದುವೆ  ಇನ್ನೂ ಕೆಟ್ಟಗುಣಗಳನ್ನು ಸಂಚಯಿಸಿಕೊಳ್ಳಲು ಕಾರಣವಾಗಬಹುದು ಮನಸ್ಸಿನ ನೆಮ್ಮದಿಯನ್ನು ಕಸಿಯಬಹುದು. ( ಚಾಡಿ,ಕುತಂತ್ರ,   ಆರೋಪ ಹೊರಿಸುವುದು, ತೇಜೋವಧೆ, ಗುಂಪುಗಾರಿಕೆ….)  ವಿಘ್ನ ಸಂತೋಷಿಯಾಗದೆ ಎಲ್ಲರ  ಏಳಿಗೆಯನ್ನು  ಸಂಭ್ರಮಿಸುವುದು ಒಳ್ಳೆಯದು.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

     

    777 ಚಾರ್ಲಿ ಚಿತ್ರ ವೀಕ್ಷಿಸಿ ಭಾವುಕರಾದ ಸಿಎಂ ಬಸವರಾಜ ಬೊಮ್ಮಾಯಿ

    BENGALURU JUNE 14

    ನಾಯಿ ಮತ್ತು ಮನುಷ್ಯ ಪ್ರೀತಿಯನ್ನು ಅನಾವರಣಗೊಳಿರುವ 777 ಚಾರ್ಲಿ ಕನ್ನಡ ಚಲನ ಚಿತ್ರವನ್ನು ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ತಮ್ಮ ಮನೆಯಲ್ಲಿದ್ದ ಪ್ರೀತಿಯ ನಾಯಿ ‘ ಸನ್ನಿ’ ಯನ್ನು ನೆನಪಿಸಿಕೊಂಡು ಭಾವುಕರಾದರು. ದುಃಖ ತಡೆಯಲಾಗದೇ ಕಣ್ಣೀರು ಹಾಕಿದರು.

    ಮನುಷ್ಯ ಮತ್ತು ನಾಯಿಯ ನಡುವಿನ ಪ್ರೀತಿ, ಯಾವುದೇ ಕಟ್ಟುಪಾಡಿಲ್ಲದ (unconditional) ಪ್ರೀತಿಗೆ ಉತ್ತಮ ಉದಾಹರಣೆ. ಅತ್ಯಂತ ಪರಿಶುದ್ಧ ಪ್ರೀತಿ ಇದು ಎಂದು ಮುಖ್ಯಮಂತ್ರಿಗಳು ಗದ್ಗದಿತರಾಗಿ ನುಡಿದರು. ನಾಯಕನಟ ರಕ್ಷಿತ ಶೆಟ್ಟಿ ಮನೋಜ್ಞ ವಾಗಿ ನಟಿಸಿದ್ದಾರೆ ಎಂದು ಹೇಳಿದ ಅವರು,ಈಗ ನಾನು ಮನೆಯಲ್ಲಿ ಹೆಣ್ಣುನಾಯಿ ಟಿಯಾ’ಳನ್ನು ಸಾಕುತ್ತಿರುವುದಾಗಿ ತಿಳಿಸಿದರು.

    ಈ ಸಿನಿಮಾ ನೋಡಲು ಜನರ ದಟ್ಟಣೆ ನೋಡಿದಾಗ ಪ್ರಾಣಿ ಮತ್ತು ಮನುಷ್ಯ ನ ಸಂಬಂಧ ವಿರುವ ಚಿತ್ರ ನೋಡಬೇಕು ಎಂದೆನಿಸಿತ್ತು. ರಕ್ಷಿತ್ ಅವರೂ ಚಿತ್ರ ವೀಕ್ಷಿಸಬೇಕೆಂದು ಕರೆದಿದ್ದರು. ಹಾಗಾಗಿ ಚಿತ್ರ ನೋಡಿದಂತಾಯಿತು ಎಂದರು.
    ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಅದರಲ್ಲಿಯೂ ನಾಯಿ , ಮನುಷ್ಯನನ್ನು ಅತ್ಯಂತ ಪ್ರೀತಿಸುವ ಪ್ರಾಣಿ. ಮನುಷ್ಯನೂ ನಾಯಿಯನ್ನು ಪ್ರೀತಿಸುತ್ತಾನೆ. ಸಂಬಂಧಗಳನ್ನು ಮಾರ್ಮಿಕ ಮತ್ತು ಸೂಕ್ಷ್ಮವಾಗಿ ಭಾವನಾತ್ಮಕವಾಗಿ ತೆಗೆದಿದ್ದಾರೆಚಿತ್ರದ ನಿರ್ದೇಶಕರು ಎಂದರು.

    ತಜ್ಞರೊಂದಿಗೆ ಚರ್ಚೆ
    ಬೀದಿನಾಯಿಗಳನ್ನು ಸೂಕ್ತ ರೀತಿಯಲ್ಲಿ ನೋಡಿಕೊಳ್ಳಲು ತಜ್ಞರೊಂದಿಗೆ ಚರ್ಚಿಸಿ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ನಾಯಿಗಳ ತರಬೇತಿ ನೀಡುವವರಿಗೆ ಪ್ರೋತ್ಸಾಹ ನೀಡುವ ವಿಶೇಷ ಕಾರ್ಯಕ್ರಮ ರೂಪಿಸುವ ಚಿಂತನೆ ಇದೆ. ಬೀದಿನಾಯಿಗಳನ್ನು ದತ್ತು ತೆಗೆದುಕೊಳ್ಳಬೇಕು. ಪ್ರಾಣಿಗಳನ್ನು ಹಿಂಸಿಸಬಾರರು. ಬೀದಿನಾಯಿಗಳನ್ನು ಹಾಗೂ ಇತರೆ ಪ್ರಾಣಿಗಳನ್ನು ರಕ್ಷಿಸಬೇಕು ಹಾಗೂ ಸಾಧ್ಯವಾದರೆ ದತ್ತು ಪಡೆಯಬೇಕು. ಯಾರೂ ಇಲ್ಲದ ಪ್ರಾಣಿಗಳನ್ನು ದತ್ತು ಪಡೆದು ಸಾಕಿದರೆ ಉಪಕಾರವಾಗುತ್ತದೆ. ಅವುಗಳಿಂದ ಹೆಚ್ಚಿನ ಪ್ರೀತಿ, ಸಂತೋಷ ಹಾಗೂ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.

    ಮನೋಜ್ಞ ಕಥೆಯನ್ನು ನಿರ್ದೇಶಕ ಕಿರಣ್ ಚಿತ್ರಿಸಿದ್ದಾರೆ. ನಾಯಿ ಜೊತೆಗೆ ಪಾತ್ರ ಮಾಡುವುದು ಸುಲಭದ ಮಾತಲ್ಲ. ಅದರ ಭಾವನೆಯ ಮಟ್ಟಕ್ಕೆ ಹೋಗಿ ಪಾತ್ರ ನಿಭಾಯಿಸಬೇಕಾಗುತ್ತದೆ. ರಕ್ಷಿತ್ ಶೆಟ್ಟಿ ಅವರ ಪಾತ್ರವನ್ನು ಅದ್ಭುತವಾಗಿ ಅಭಿನಯಿಸಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಕಿರಣ್ ಅದ್ಭುತ ಸಿನಿಮಾ ಮಾಡಿದ್ದಾರೆ.

    ಎಲ್ಲರೂ ಪ್ರಾಣಿಪ್ರೇಮಿಗಳಾಗಲು ಸಿಎಂ ಕರೆ
    ಕನ್ನಡ ಚಿತ್ರರಂಗ ಅಂತರರಾಷ್ಟ್ರೀಯ ಮಟ್ಟದ ಸಾಧನೆಯನ್ನು ಮಾಡುತ್ತಿದೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ಕೆ.ಜಿ.ಎಫ್ 2 ಹಿನ್ನೆಲೆಯಲ್ಲಿ ಒಂದು ಅರ್ಥಪೂರ್ಣ, ಮನೋಜ್ಞವಾಗಿ ರುವ ಚಿತ್ರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಡಬಹುದು ಎಂದು ನಿರೂಪಿಸಿದ್ದಾರೆ. ಚಿತ್ರ ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆದಿದೆ. ಚಿತ್ರವನ್ನು ಎಲ್ಲರೂ ವೀಕ್ಷಿಸಿ ಪ್ರಾಣಿಗಳ ಪ್ರೇಮಿಗಳಾಗಬೇಕು ಎಂದು ಕರೆ ನೀಡಿದರು.

    ಕನ್ನಡಕ್ಕೆ ಚಿತ್ರರಂಗ ಅಂತರರಾಷ್ಟ್ರೀಯ ಸ್ಥಾನವನ್ನು ಕಲ್ಪಿಸಿಕೊಟ್ಟಿದೆ.ಕನ್ನಡ ಸಿನಿಮಾಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುವಂಥ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಕನ್ನಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳ ದೊಡ್ಡ ಹೆಸರು ಮಾಡಲಿದೆ. ಕನ್ನಡಕ್ಕೆ ಚಿತ್ರರಂಗ ಅಂತರರಾಷ್ಟ್ರೀಯ ಸ್ಥಾನವನ್ನು ಕಲ್ಪಿಸಿಕೊಟ್ಟಿದೆ.

    ಚಿತ್ರನಗರಿ
    ಮೈಸೂರಿನಲ್ಲಿ ಈಗಾಗಲೇ ಚಿತ್ರನಗರಿನಿರ್ಮಾಣಕ್ಕೆ ಸ್ಥಳ ಮೀಸಲಿರಿಸಿದೆ. ಇಂದಿನ ಹಾಗೂ ಭವಿಷ್ಯದ ತಂತ್ರಜ್ಞಾನವನ್ನು ಬಳಕೆ ಮಾಡಿ ಯಾವ ರೀತಿ ಸ್ಟುಡಿಯೋ ಮಾಡಬಹುದು , ಆಸಕ್ತರೊಂದಿಗೆ ಮಾತನಾಡಿ ಅಂತರರಾಷ್ಟ್ರೀಯ ಮಟ್ಟದ ಜಂಟಿ ಉದ್ಯಮವನ್ನು ಕೈಗೊಳ್ಳಲಾಗುವುದು ಎಂದರು.

    ತನ್ನ ನೋಡಲಿ ಎಂದು ಕನ್ನಡಿ ಕರೆಯುವುದೆ?

    ಸುಮಾ ವೀಣಾ

    ತನ್ನ ನೋಡಲಿ ಎಂದು ಕನ್ನಡಿ ಕರೆಯುವುದೆ?-  ಇದು ಸರ್ವಜ್ಞನ ವಚನದ ಸಾಲು. ಲೋಕ ನೀತಿಯನ್ನು ಹೇಳುವ ಸಂದರ್ಭದಲ್ಲಿ  ಈ ಮಾತುಗಳನ್ನು ಉದ್ಗರಿಸಿದ್ದಾನೆ. ಸರ್ವಜ್ಞ   ಅರ್ಥವತ್ತಾದ ಹೋಲಿಕೆಗಳನ್ನು ನೀಡುವ ಸಾರ್ವಕಾಲಿಕ   ತ್ರಿಪದಿಗಳಿಂದಲೇ ಹೆಸರಾಗಿರುವವನು.

    ಜ್ಞಾನಿ ಎಂದರೆ ಈತನ ಪ್ರಕಾರ ಮಹಾತ್ಮನೇ ಸರಿ ಹಾಗಾಗಿ ಈತ ಲೋಕದ ಪಾಲಿಗೆ ಕನ್ನಡಿಯಂತೆ ಇರುವವನು.  ಕನ್ನಡಿಯನ್ನು ನೋಡಿಕೊಂಡು  ನಾವು ಅಲಂಕಾರ ಮಾಡಿಕೊಂಡು ಸುಂದರವಾಗಿ ಕಾಣಿಸುತ್ತೇವೆ. ಕನ್ನಡಿಯನ್ನು ನೋಡಿಕೊಂಡಾಗಲೆ ನಮ್ಮ ಓರೆಕೋರೆಗಳು ತಿಳಿಯುತ್ತವೆ.  ವಿಶಿಷ್ಟ ಮಾರ್ಗದಾಳು ಈ  ಕನ್ನಡಿ. ಹಾಗೆಯೇ ನಮ್ಮ ಮನಸ್ಸಿನ ವ್ಯಕ್ತಿತ್ವದ ಓರೆಕೋರೆಗಳು  ತಿಳಿಯಬೇಕೆಂದರೆ ‘ಜ್ಞಾನಿ’ ಎಂಬ ‘ಕನ್ನಡಿ’ಯ ಬಳಿಗೆ ಹೋಗಬೇಕು ಅವನ ಮಾರ್ಗದರ್ಶನದಲ್ಲಿ  ನಮ್ಮನ್ನು ತಿದ್ದಿಕೊಳ್ಳಬೇಕು ಸದ್ವಿಚಾರಗಳನ್ನು ಅಳವಡಿಸಿಕೊಳ್ಳಬೇಕು.

    ‘ಕನ್ನಡಿ’ ಯಾರ ಬಳಿಗೂ ಹೋಗಿ ‘‘ನಿಮ್ಮಲ್ಲಿ ಲೋಪವಿದೆ ಸರಿಮಾಡಿಕೊಳ್ಳಿ! ಅಲಂಕಾರ ಮಾಡಿಕೊಳ್ಳಿ’’ ಎಂದು  ಬೆನ್ನು ಹತ್ತುವುದಿಲ್ಲ. ಹಾಗೆ ಗುರುವಾದವನು  ಶಿಷ್ಯರನ್ನು ಹುಡುಕಿಕೊಂಡು ಹೋಗುವುದಿಲ್ಲ.  ಶಿಷ್ಯರೆ ಗುರುವಿನ ಬಳಿಗೆ ಹೋಗಬೇಕು.  ನಮ್ಮ ದೈಹಿಕ ಕಲ್ಮಷಗಳನ್ನು ತೊಳೆದುಕೊಳ್ಳಲು  ಸ್ನಾನಕ್ಕೆ ನೀರನ್ನರಸಿ ಹೋಗುವಂತೆ  ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ  ಆವರಿಸಿಕೊಂಡಿರುವ ಸಂಚನೆಗಳನ್ನು ಕಳೆಯಲು   ಸನ್ಮಾರ್ಗದಲ್ಲಿ ನಡೆಯಲು ಜ್ಞಾನಿಗಳ ಹಿರಿಯರ , ಅನುಭವಿಗಳ  ಮಾರ್ಗದರ್ಶನ ಬೇಕು.

    ‘ಜ್ಞಾನಿಯಾದವನು ಅರಿವಿನ ಸಾಗರ’ವಿದ್ದಂತೆ.   ‘ತಿಳಿವಳಿಕೆ’ ಎಂಬ ಜ್ಞಾನ ಸರೋವರ’ದ  ತಂಪನ್ನು ಕಂಪನ್ನು ಅನುಭವಿಸಬೇಕಾದರೆ ಸರೋವರದ ಬಳಿಗೆ ನಾವು ತೆರಳಲೆಬೇಕು. ಅಲ್ಲಿ  ನಾವುಗಳು ಹಮ್ಮು ಬಿಮ್ಮುಗಳನ್ನು ಪ್ರತಿಷ್ಠೆಗಳನ್ನು ತೊರೆದು ಸ್ವಚ್ಛಂದ ಮನಸ್ಸಿನಲ್ಲಿ ವಿಹರಿಸಬೇಕು.  ಲೋಪಗಳನ್ನು ಅಲ್ಲಿಯೇ ಮೌನವಾಗಿ ವಿಸರ್ಜಿಸಿಬಿಡಬೇಕು ಹಾಗಾದಾಗ  ಯಾವುದೇ ಶೇಷಗಳು ಉಳಿಯದೆ  ನಮ್ಮ ವ್ಯಕ್ತಿತ್ವಕ್ಕೆ ವಿಶೇಷ  ಹೊಳಹು ಲಭ್ಯವಾಗುತ್ತದೆ. 

     ‘ತುಂಬಿದ ಕೊಡ ತುಳುಕುವುದಿಲ್ಲ’  ಎಂಬಂತೆ ಜ್ಞಾನಿಯಾದವನು ತನ್ನ  ತಿಳಿವಿನ ಪ್ರದರ್ಶನ ಮಾಡುವುದಿಲ್ಲ . ನಿಧಿಯನ್ನು ಹುಡುಕಿ ಹೊರಡುವ  ದ್ರವ್ಯ ನಿರೀಕ್ಷರಂತೆ   ಜ್ಞಾನಾಪೇಕ್ಷಿಗಳು  ಜ್ಞಾನವೆಂಬ ಸ್ವಯಂಪ್ರಕಾಶವನ್ನು ಹುಡುಕಿ ಹೊರಟು ಅದರ ಪ್ರಭೆಯಿಂದ  ಅಜ್ಞಾನವನ್ನು ನೀಗಿಕೊಳ್ಳಬೇಕಿದೆ.  ಕನ್ನಡಿ  ದೈಹಿಕ ಸೌಂದರ್ಯವನ್ನು  ಹೆಚ್ಚಿಸಿಕೊಳ್ಳಲು  ಸಹಾಯ ಮಾಡುವಂತೆ   ಜ್ಞಾನಿಯ  ಸಂಗಾತ ನಮ್ಮ   ತಿಳಿವಳಿಕೆಯನ್ನು ಸುಸೂಕ್ಷ್ಮಗೊಳಿಸುತ್ತದೆ.ಪರಿಪೂರ್ಣತೆಗೆ ಹಣತೆಯಾಗುತ್ತದೆ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    INDIAN STOCK MARKET: ಎಲ್ ಐ ಸಿ ಷೇರು ದರ ಇಳಿಯುತ್ತಿರುವ ಬಗ್ಗೆ ಈಗಲೇ ನಿರ್ಧರಿಸುವುದು premature

    ಎಲ್ ಐ ಸಿ ಆಫ್ ಇಂಡಿಯಾ ಷೇರು ಲಿಸ್ಟಿಂಗ್‌ ಆದ ನಂತರ ನಿರಂತರವಾಗಿ ಕುಸಿಯುತ್ತಿದೆ. ಹೂಡಿಕೆದಾರರಿಗೆ ಅಗಾದ ಪ್ರಮಾಣದ ಹಾನಿಯುಂಟಾಗುತ್ತಿದೆ, ಪೇಟೆಯಲ್ಲಿ ಕಂಪನಿಯ ಬಂಡವಾಳೀಕರಣ ಮೌಲ್ಯ ಕರಗುತ್ತಿದೆ. ಹೂಡಿಕೆದಾರರು ಆತಂಕಕ್ಕೊಳಗಾಗಿದ್ದಾರೆ ಎಂಬ ವಿಚಾರದ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ವರ್ಣಿಸಲ್ಪಡುತ್ತಿದೆ.

    ಪ್ರತಿ ಷೇರಿಗೆ ರೂ.949 ರಂತೆ ವಿತರಣೆಮಾಡಿ, ರೀಟೇಲ್‌ ಹೂಡಿಕೆದಾರರಿಗೆ ರೂ.45 ರ ರಿಯಾಯಿತಿಯೊಂದಿಗೆ ರೂ.904 ರಂತೆ ವಿತರಿಸಿದ ಈ ಕಂಪನಿಯ ಷೇರು ಲಿಸ್ಟಿಂಗ್‌ ಆಗಿ ಸುಮಾರು ಒಂದು ತಿಂಗಳಾಗುತ್ತಾ ಬಂದಿದೆ. ಆದರೆ ಇಷ್ಟುಬೇಗ ಕಂಪನಿಯ ಬಗ್ಗೆ ಈ ಅಭಿಪ್ರಾಯ ವ್ಯಕ್ತವಾಗುತ್ತಿರುವುದು ಖೇದಕರ. ಮೂಲವಾಗಿ ಇತ್ತೀಚಿನ ತಿಂಗಳುಗಳಲ್ಲಿ ಪೇಟೆ ಪ್ರವೇಶ ಮಾಡಿ ಹೂಡಿಕೆದಾರರ ಸಂಪತ್ತನ್ನು ಇದಕ್ಕಿಂತ ವೇಗವಾಗಿ ನಶಿಸಿಹೋಗುವಂತಹ ಬೆಳವಣಿಗೆಗಳನ್ನು ಕಡೆಗಣಿಸಿ ಎಲ್‌ ಐ ಸಿ ಆಫ್‌ ಇಂಡಿಯಾ ಷೇರಿನ ಬಗ್ಗೆ ಮಾತ್ರ ಅಪಪ್ರಚಾರ ನಡೆಯುತ್ತಿದೆ. ಅನೇಕ ಕಂಪನಿಗಳು ವಿತರಣೆಗೆ ಮುನ್ನ ತೆಗೆದುಕೊಂಡ ಕ್ರಮಗಳು, ವಿತರಣೆ ಸಂದರ್ಭದಲ್ಲಿ ಆದಂತಹ ಬೆಳವಣಿಗೆಗಳು, ವಿತರಣೆಯಾದ ನಂತರದ ಘಟನೆಗಳನ್ನು ಪರಿಶೀಲಿಸಿದಾಗ ಮಾತ್ರ ಎಲ್‌ ಐ ಸಿ ಆಫ್‌ ಇಂಡಿಯಾದ ಪ್ರತಿಷ್ಠೆ ಎಂತಹುದು ಎಂಬುದರ ಅರಿವಾಗುವುದು.

    ಷೇರಿನ ಮುಖಬೆಲೆಯ ವ್ಯತ್ಯಾಸ

    ಈ ಸಂದರ್ಭದಲ್ಲಿ ಮೊದಲಿಗೆ ಗಮನಿಸಲೇಬೇಕಾದ ಮುಖ್ಯ ಅಂಶ ಎಂದರೆ ಅದು ಕಂಪನಿಗಳ ಷೇರಿನ ಮುಖಬೆಲೆ. ಒಂದು ಷೇರಿನ ಮುಖಬೆಲೆ ರೂ.1 ಮತ್ತು ಮತ್ತೊಂದು ಕಂಪನಿ ಷೇರಿನ ಮುಖಬೆಲೆ ರೂ.10 ಎಂದರೆ ಅವುಗಳ ವ್ಯತ್ಯಾಸ ರೂ.1 ಮತ್ತು ರೂ.10 ಕರೆನ್ಸಿ ನೋಟ್‌ ಗಳಿಗಿರುವ ಅಂತರಕ್ಕೆ ಸಮನಾಗಿರುತ್ತದೆ. ಅಂದರೆ ರೂ.10 ರ ಮುಖಬೆಲೆ ಷೇರು ರೂ. 1 ರ ಮುಖಬೆಲೆಯ 10 ಷೇರುಗಳಿಗೆ ಸಮನಾಗಿರುತ್ತದೆ. ಇದು ಎಲ್ಲಾ ರೀತಿಯ ಕಂಪನಿಗಳಿಗೂ ಅನ್ವಯವಾಗುವ ಅಂಶ. ಇತ್ತೀಚಿನ ತಿಂಗಳುಗಳಲ್ಲಿ ಆರಂಭಿಕ ಷೇರು ವಿತರಿಸಿದ ಕೆಲವು ಕಂಪನಿಗಳನ್ನು ಪರಿಶೀಲಿಸೋಣ.

    ಕಂಪನಿಗಳು ತೇಲಿಬಿಡುವ ಆರಂಭಿಕ ಷೇರು ವಿತರಣೆಯ ಸಂದರ್ಭಕ್ಕೂ ಮುಂಚಿನ ದಿನಗಳಲ್ಲಿ ಕೈಗೊಂಡ ಕೆಲವು ತೀರ್ಮಾನಗಳು, ನಿರ್ಧಾರಗಳು, ಬೆಳವಣಿಗೆಗಳನ್ನು ಪರಿಶೀಲಿಸಿದಾಗ ಅವು ಎಷ್ಟರ ಮಟ್ಟಿಗೆ ಹೂಡಿಕೆದಾರರ ಸ್ನೇಹಿ, ಎಷ್ಟರ ಮಟ್ಟಿಗೆ ಅವು ತೆಗೆದುಕೊಂಡ ನಿರ್ಧಾರಗಳು ನ್ಯಾಯಸಮ್ಮತ ಎಂಬುದನ್ನು ನಿರ್ಧರಿಸಲು ಕೆಲವು ನಿದರ್ಶನಗಳನ್ನು ನೀಡಲಾಗಿದೆ.

    ಹಿಂದಿನ ವರ್ಷ ಜೂನ್‌ ನಲ್ಲಿ ವಿತರಿಸಿದ ಡೋಡ್ಲಾ ಡೈರಿ ಲಿಮಿಟೆಡ್‌ ಕಂಪನಿಯು ರೂ.10 ರ ಮುಖಬೆಲೆಯ ಷೇರನ್ನು ರೂ.428 ರಂತೆ ವಿತರಿಸಿತು. ಇದರ ಬೆಲೆ ಸಧ್ಯ ರೂ.494 ರ ಸಮೀಪವಿದೆ. ಹೂಡಿಕೆದಾರರು ನಿರಾಸೆಗೊಳ್ಳಬೇಕಾಗಿಲ್ಲ.

    ಅಂತೆಯೇ ಜೂನ್‌ 2021 ರಲ್ಲಿ ವಿತರಣೆಯಾದ ರೂ.1 ರ ಮುಖಬೆಲೆಯ ಇಂಡಿಯಾ ಪೆಸ್ಟಿಸೈಡ್ಸ್‌ ಲಿಮಿಟೆಡ್‌ ಕಂಪನಿಯು ಪ್ರತಿ ಷೇರಿಗೆ ರೂ.296 ರಂತೆ ವಿತರಿಸಿದೆ. ಸಧ್ಯದ ಬೆಲೆಯು ರೂ.229 ರ ಸಮೀಪವಿದೆ. ಅಂದರೆ ಆರಂಭಿಕ ಷೇರು ವಿತರಣೆಯ ಸಂದರ್ಭದಲ್ಲಿ ಹೂಡಿಕೆ ಮಾಡಿದವರಿಗೆ, ಷೇರಿನ ಬೆಲೆ ರೂ.365 ರವರೆಗೂ ಏರಿಕೆ ಕಂಡಾಗ ಮಾರಾಟ ಮಾಡುವ ಅವಕಾಶವನ್ನು ಪೇಟೆ ಕಲ್ಪಿಸಿಕೊಟ್ಟಿತ್ತು. ಆದರೂ ಕಂಪನಿಯು ಲಾಭಗಳಿಕೆಯಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಬೆಲೆಯು ಪುಟಿದೇಳಬಹುದೆಂದು ಆಶಿಸಬಹುದು.

    ಐ ಪಿ ಒ ಗಾಗಿ ಪ್ರೈವೇಟ್‌ ಲಿಮಿಟೆಡ್‌ ನಿಂದ ಪಬ್ಲಿಕ್‌ ಲಿಮಿಟೆಡ್‌ ಆಗಿ ಪರಿವರ್ತನೆ:

    ಝೊಮೆಟೋ ಲಿಮಿಟೆಡ್‌: 2021 ರ ಜುಲೈನಲ್ಲಿ ಝೊಮೆಟೋ ಲಿಮಿಟೆಡ್‌ ಪ್ರತಿ ಷೇರಿಗೆ ರೂ.76 ರಂತೆ ಆರಂಭಿಕ ಷೇರು ವಿತರಣೆ ಮಾಡಿತು. ಲಿಸ್ಟಿಂಗ್‌ ನಂತರದ ಆರಂಭಿಕ ದಿನಗಳಲ್ಲಿ ಷೇರಿನ ಬೆಲೆ ರೂ.169 ರವರೆಗೂ ಏರಿಕೆ ಕಂಡು ಸಧ್ಯ ರೂ.69 ರ ಸಮೀಪವಿದೆ. ಈ ಕಂಪನಿಯು ಐಪಿಒ ವಿತರಣೆಯ ಉದ್ದೇಶದಿಂದ ಮುಂಚಿನ ತಿಂಗಳುಗಳಲ್ಲಿ ಕಂಪನಿಯನ್ನು ಪ್ರೈವೇಟ್‌ ಲಿಮಿಟೆಡ್‌ ನಿಂದ ಪಬ್ಲಿಕ್‌ ಲಿಮಿಟೆಡ್‌ ಆಗಿ ಪರಿವರ್ತಿಸಿಕೊಂಡಿತು.

    ರೊಲೆಕ್ಸ್‌ ರಿಂಗ್ಸ್‌ ಲಿಮಿಟೆಡ್:‌ ಈ ಕಂಪನಿ ಜುಲೈ 2021 ರಲ್ಲಿ ರೂ.10 ರ ಮುಖಬೆಲೆಯ ಪ್ರತಿ ಷೇರಿಗೆ ರೂ.900 ರಂತೆ ವಿತರಿಸಿತು. ಇದೇ ಉದ್ದೇಶಕ್ಕಾಗಿ 2021 ರಲ್ಲಿ ಪ್ರೈವೇಟ್‌ ಲಿಮಿಟೆಡ್‌ ನಿಂದ ಪಬ್ಲಿಕ್‌ ಲಿಮಿಟೆಡ್‌ ಆಗಿ ಪರಿವರ್ತನೆಗೊಂಡಿದೆ.

    ಕೃಷ್ಣ ಡಯಾಗ್ನಾಸ್ಟಿಕ್ಸ್‌ ಲಿಮಿಟೆಡ್: ‌ ಈ ಕಂಪನಿಯು 2021 ರ ಆಗಷ್ಟ್‌ ನಲ್ಲಿ ಪ್ರತಿ ರೂ.5 ರ ಮುಖಬೆಲೆಯ ಷೇರನ್ನು ರೂ.954 ರಂತೆ ವಿತರಿಸಿತು. ಸಧ್ಯ ಈ ಷೇರಿನ ಬೆಲೆ ರೂ.568 ರ ಸಮೀಪವಿದೆ. ಈ ಕಂಪನಿಯೂ ಸಹ 2021 ರಲ್ಲಿ ಪ್ರೈವೇಟ್‌ ಲಿಮಿಟೆಡ್‌ ನಿಂದ ಪಬ್ಲಿಕ್‌ ಲಿಮಿಟೆಡ್‌ ಆಗಿ ಪರಿವರ್ತನೆಗೊಂಡಿದೆ.

    ಕಾರ್‌ ಟ್ರೇಡ್‌ ಟೆಕ್ ಲಿಮಿಟೆಡ್:‌ ಪೇಟೆಯು ಚುರುಕಾದ ಚಟುವಟಿಕೆಯಲ್ಲಿದ್ದ ಸಂದರ್ಭವನ್ನು ಬಳಸಿಕೊಳ್ಳಲುಸಫಲವಾದ ಈ ಕಂಪನಿಯ ಆರಂಭಿಕ ಷೇರು ವಿತರಣೆಯನ್ನು ಆಗಸ್ಟ್‌ 2021 ರಲ್ಲಿ ಪ್ರತಿ ರೂ.10 ರ ಮುಖಬೆಲೆಯ ಷೇರನ್ನು ರೂ.1,618 ರಂತೆ ವಿತರಿಸಲಾಯಿತು. ವಿತರಣೆಗೂ ಮುಂಚಿನ ತಿಂಗಳುಗಳಲ್ಲಿ ಕಂಪನಿಯನ್ನು ಪ್ರೈವೇಟ್‌ ಲಿಮಿಟೆಡ್‌ ನಿಂದ ಪಬ್ಲಿಕ್‌ ಲಿಮಿಟೆಡ್‌ ಆಗಿ ಪರಿವರ್ತಿಸಲಾಗಿದೆ. ಸಧ್ಯ ಈ ಷೇರಿನ ಬೆಲೆ ರೂ.696 ರ ಸಮೀಪವಿದೆ. ಈ ಕಂಪನಿಯು ಕಳೆದ ತ್ರೈಮಾಸಿಕಗಳು ಹಾನಿಕಾರಕ ಹಂತದಲ್ಲಿದೆ.

    ಪಿ ಬಿ ಫಿನ್‌ ಟೆಕ್ ಲಿಮಿಟೆಡ್ (‌ ಪಾಲಿಸಿ ಬಜಾರ್):‌ ಈ ಕಂಪನಿಯು ಕಳೆದ ನವೆಂಬರ್‌ ತಿಂಗಳಲ್ಲಿ ರೂ.2 ರ ಮುಖಬೆಲೆಯ ಷೇರನ್ನು ರೂ.980 ರಂತೆ ಐ ಪಿ ಒ ಮೂಲಕ ವಿತರಿಸಲಾಯಿತು. ಸಧ್ಯ ಈ ಷೇರಿನ ಬೆಲೆ ರೂ.590 ರ ಸಮೀಪವಿದ್ದು, ಕಳೆದೆರಡು ತ್ರೈಮಾಸಿಕಗಳೂ ಹಾನಿಕಾರಕ ಹಂತದಲ್ಲಿರುವ ಈ ಕಂಪನಿ ಐ ಪಿ ಒ ಗೂ ಮುಂಚಿನ ತಿಂಗಳುಗಳಲ್ಲಿ ಪ್ರೈವೇಟ್‌ ಲಿಮಿಟೆಡ್‌ ನಿಂದ ಪಬ್ಲಿಕ್‌ ಲಿಮಿಟೆಡ್‌ ಆಗಿ ಪರಿವರ್ತನೆಗೊಂಡಿದೆ.

    ಗೋ ಫ್ಯಾಶನ್‌ (ಇಂಡಿಯಾ) ಲಿಮಿಟೆಡ್:‌ ನವೆಂಬರ್‌ 2021 ರಲ್ಲಿ ಪ್ರತಿ ರೂ.10 ರ ಮುಖಬೆಲೆ ಷೇರಿಗೆ ರೂ.690 ರಂತೆ ಐಪಿಒ ಮೂಲಕ ವಿತರಣೆ ಮಾಡಿದ ಈ ಕಂಪನಿ, ವಿತರಣೆಗೂ ಮುನ್ನ ತನ್ನಸ್ಟಾಟಸ್‌ ನ್ನು ಪ್ರೈವೇಟ್‌ ಲಿಮಿಟೆಡ್‌ ನಿಂದ ಪಬ್ಲಿಕ್‌ ಲಿಮಿಟೆಡ್‌ ಆಗಿ ಪರಿವರ್ತನೆಗೊಂಡಿದೆ.

    ಐ ಪಿ ಒ ಗೂ ಮುನ್ನ ಷೇರಿನ ಮುಖಬೆಲೆ ಸೀಳಿಕೆಗೆ ಮುಂದಾದ ಕಂಪನಿಗಳು:

    ವಿಜಯ ಡಯಾಗ್ನಸ್ಟಿಕ್ ಸೆಂಟರ್‌ ಲಿಮಿಟೆಡ್:‌ ಈ ಕಂಪನಿಯು 2021 ರ ಆಗಸ್ಟ್‌ ನಲ್ಲಿ ರೂ.1 ರ ಮುಖಬೆಲೆಯ ಷೇರನ್ನು ರೂ.531 ರಂತೆ ಐಪಿಒ ಮೂಲಕ ವಿತರಿಸಲಾಯಿತು. ಈ ಕಂಪನಿಯು ಐಪಿಒ ಗೂ ಮುಂಚಿನ ತಿಂಗಳುಗಳಲ್ಲಿ ಪ್ರತಿ ರೂ.10 ರಮುಖಬೆಲೆಯ ಷೇರನ್ನು ರೂ.1 ಕ್ಕೆ ಸೀಳಿಕೆ ಮಾಡಿದೆ. ಹಾಗಾಗಿ ರೂ.1 ರ ಮುಖಬೆಲೆ ಷೇರನ್ನು ರೂ.531 ಕ್ಕೆ ವಿತರಿಸಿದೆ.

    ಒನ್‌ 97 ಕಮ್ಯುನಿಕೇಶನ್ಸ್‌ ಲಿಮಿಟೆಡ್‌ : ಹಿಂದಿನ ವರ್ಷ ನವೆಂಬರ್‌ ನಲ್ಲಿ ಪ್ರತಿ ರೂ1 ರ ಮುಖಬೆಲೆಯ ಷೇರನ್ನು ರೂ.2,150 ರಂತೆ ಐಪಿಒ ಮೂಲಕ ವಿತರಣೆ ಮಾಡಿದೆ. ಆದರೆ ಅದಕ್ಕೂ ಮುಂಚೆ ಜೂನ್‌ ತಿಂಗಳಲ್ಲಿ ರೂ 10 ರ ಮುಖಬೆಲೆಯನ್ನು ರೂ.1 ಕ್ಕೆ ಸೀಳಿದೆ.

    ಐ ಪಿ ಒ ಗೂ ಮುನ್ನ ಬೋನಸ್‌ ಷೇರು ವಿತರಿಸಿ ಬೊಕ್ಕಸ ಬರಿದು ಮಾಡಿದ ಕಂಪನಿಗಳು:

    ಕಂಪನಿಗಳ ಬಂಡವಾಳ ಮತ್ತು ರಿಸರ್ವ್‌ ನಿಧಿಯನ್ನಾಧರಿಸಿ ಅವುಗಳ ಪುಸ್ತಕ ಮೌಲ್ಯವನ್ನು ನಿರ್ಧರಿಸಲಾಗುವುದು. ಆದರೆ ಕೆಲವು ಕಂಪನಿಗಳು ತಮ್ಮ ಷೇರುಗಳನ್ನು ಐ ಪಿ ಒ ಮೂಲಕ ವಿತರಿಸುವ ಮುಂಚೆ ತಮ್ಮಲ್ಲಿರುವ ಮೀಸಲು ನಿಧಿಯನ್ನು ಐಪಿಒ ಗೂ ಮುಂಚಿನ ಸೀಮಿತ ಷೇರುದಾರರಿಗೆ ಬೋನಸ್‌ ಷೇರು ವಿತರಿಸುವ ಮೂಲಕ ಬೊಕ್ಕಸವನ್ನು ಬರಿದುಮಾಡಿ ನಂತಹ ಅತಿ ಹೆಚ್ಚಿನ ಪ್ರೀಮಿಯಂನಲ್ಲಿ ವಿತರಿಸಲು ಮುಂದಾಗಿ ಯಶಸ್ವಿಯಾಗಿವೆ. ಕೆಲವು ಉದಾಹರಣೆಗಳು ಈ ಕೆಳಗಿನಂತಿವೆ.

    ಝೋಮೆಟೊ ಲಿಮಿಟೆಡ್:‌ ಈ ಕಂಪನಿ ಕಳೆದ ವರ್ಷದ ಜುಲೈನಲ್ಲಿ ಆರಂಭಿಕ ಷೇರು ವಿತರಣೆಗೂ ಮುನ್ನಾ ತಿಂಗಳುಗಳಲ್ಲಿ ಪ್ರತಿ ಒಂದು ಷೇರಿಗೆ 6,699 ಬೋನಸ್‌ ಷೇರುಗಳನ್ನು ವಿತರಿಸಿ, ಬೊಕ್ಕಸವನ್ನು ಕರಗಿಸಿದೆ. ನಂತರ ಐ ಪಿ ಒ ಮೂಲಕ ಪ್ರವರ್ತಕರು 375 ಕೋಟಿ ಷೇರುಗಳನ್ನು ಮಾರಾಟಮಾಡಿ ಎರಡು ವಿಧದ ಲಾಭ ಪಡೆದುಕೊಂಡಿದ್ದಾರೆ. ಅಲ್ಲದೆ ಈ ಕಂಪನಿಯು ನಿರಂತರವಾಗಿ ಹಾನಿಗೊಳಗಾಗಿದ್ದರೂ, ವಹಿವಾಟಿನ ವೃದ್ಧಿಯಾಗಿದೆ ಎಂಬ ಅಂಶದೊಂದಿಗೆ ಮಾಧ್ಯಮಗಳಲ್ಲಿಪ್ರಚಾರ ನೀಡಲಾಗುತ್ತಿದೆ.

    ವಿಜಯ ಡಯಾಗ್ನಸ್ಟಿಕ್ ಸೆಂಟರ್‌ ಲಿಮಿಟೆಡ್:‌ ಈ ಕಂಪನಿಯು 2021 ರ ಆಗಸ್ಟ್‌ ನಲ್ಲಿ ರೂ.1 ರ ಮುಖಬೆಲೆಯ ಷೇರನ್ನು ರೂ.531 ರಂತೆ ಐಪಿಒ ಮೂಲಕ ವಿತರಿಸಲಾದ ಈ ಕಂಪನಿ ಮೇ 2021 ರಲ್ಲಿ ಪ್ರತಿ 4 ಷೇರಿಗೆ 5 ಬೋನಸ್‌ ಷೇರು ವಿತರಿಸಿ ಬೊಕ್ಕಸವನ್ನು ಬರಿದಾಗಿಸಿ ನಂತರ ಐಪಿಒ ತೇಲಿಬಿಟ್ಟಿದೆ. ಈಗ ಈ ಷೇರಿನ ಬೆಲೆ ವಿತರಣೆ ಬೆಲೆಗಿಂತ ಬಹಳ ಕಡಿಮೆಯಲ್ಲಿದೆ. ಅಂದರೆ ರೂ.328 ರ ಸಮೀಪವಿದೆ.

    ಡೆಲ್ಲಿವರಿ ಲಿಮಿಟೆಡ್:‌ ಈ ವರ್ಷದ ಮೇ ತಿಂಗಳಲ್ಲಿ ಪ್ರತಿ ರೂ.1 ರ ಮುಖಬೆಲೆ ಷೇರಿಗೆ ರೂ.487 ರಂತೆ ತೇಲಿಬಿಟ್ಟ ಆರಂಭಿಕ ಷೇರು ವಿತರಣೆಯು ಅಂತಿಮ ಕ್ಷಣದಲ್ಲಿ ಯಶಸ್ವೀಗೊಳಿಸಲಾಯಿತು. ಇದಕ್ಕೂ ಹಲವು ತಿಂಗಳುಗಳ ಮುಂಚೆ ಈ ಕಂಪನಿಯು ಪ್ರತಿ 1 ಷೇರಿಗೆ 9 ಷೇರುಗಳ ಬೋನಸ್‌ ವಿತರಣೆ ಮಾಡಿಕೊಂಡು, ನಂತರ ಈ ಹಾನಿಗೊಳಗಾಗಿರುವ ಕಂಪನಿಯು ಅತಿ ಹೆಚ್ಚಿನ ಬೆಲೆಯಲ್ಲಿ ವಿತರಣೆ ಮಾಡಿದೆ.

    ಒಟ್ಟಾರೆಯಾಗಿ ಹೇಳಬೇಕೆಂದರೆ ನಿರಂತರವಾಗಿ ಹಾನಿಗೊಳಗಾಗಿರುವ ಕಂಪನಿಗಳನ್ನು, ಐ ಪಿ ಒ ಗೂ ಮುಂಚೆ ಇರುವ ಮೀಸಲು ನಿಧಿಯನ್ನು ಕರಗಿಸಿದ ಕಂಪನಿಗಳನ್ನು, ಐ ಪಿ ಒ ವಿತರಣೆಯ ನೆಪದಿಂದಲೇ ಮುಂಚಿತವಾಗಿ ಷೇರಿನ ಮುಖಬೆಲೆಯನ್ನು ಸೀಳುವ ಪ್ರಕ್ರಿಯೆಗೊಳಗಾದ ಕಂಪನಿಗಳನ್ನು, ವಿತರಣೆ ಬೆಲೆಗಿಂತ ಭಾರಿ ಪ್ರಮಾಣದಲ್ಲಿ ಹೂಡಿಕೆಯನ್ನು ಕರಗಿಸಿದ ಕಂಪನಿಗಳನ್ನು, ಐ ಪಿ ಒ ಉದ್ದೇಶದಿಂದಲೇ ಪ್ರೈವೇಟ್‌ ಲಿಮಿಟೆಡ್‌ ನಿಂದ ಪಬ್ಲಿಕ್‌ ಲಿಮಿಟೆಡ್‌ ಕಂಪನಿಗಳನ್ನಾಗಿ ಪರಿವರ್ತಿಸಿಕೊಂಡು ಅಗಾಧ ಪ್ರೀಮಿಯಂ ನಿಗಧಿಪಡಿಸಿ ಹೂಡಿಕೆದಾರರನ್ನು ದಾರಿತಪ್ಪಿಸಿದ ಕಂಪನಿಗಳ ಬಗ್ಗೆ, ಅವುಗಳ ಷೇರಿನ ಬೆಲೆಗಳು ನಿರರ್ಗಳವಾಗಿ ಕರಗಿಸಿದ ಬಗ್ಗೆ ಚಕಾರವೆತ್ತದೆ ಕೇವಲ ಎಲ್‌ ಐ ಸಿ ಬಗ್ಗೆ ನಕಾರಾತ್ಮಕವಾಗಿ ಬಿಂಬಿಸುವುದು ಸರಿಯಲ್ಲ.

    ಎಲ್‌ ಐ ಸಿ ಬಗ್ಗೆ ಒಂದು ಪ್ರಮುಖ ಅಂಶ ತಿಳಿಯಬೇಕಾದುದೆಂದರೆ ಮಾರ್ಚ್‌ 2022 ರ ಅಂತ್ಯದಲ್ಲಿ ಅದು ಗಳಿಸಿದ ಲಾಭದ ಪ್ರಮಾಣ ರೂ.7.21 ಲಕ್ಷ ಕೋಟಿಯಲ್ಲಿ ಶೇ.40 ರಷ್ಡರ ಕೊಡುಗೆ ಅದರ ಹೂಡಿಕೆಯಿಂದ ಗಳಿಸಿದ್ದಾಗಿದೆ.ಉಳಿದದ್ದು ಪ್ರೀಮಿಯಂಗ ಸಂಬಂಧಪಟ್ಟಿದ್ದಾಗಿದೆ. ಅಂದರೆ ಆ ಕಂಪನಿಯ ಹೂಡಿಕೆಯ ಗಾತ್ರ ಮತ್ತು ಸ್ವರೂಪದ ಬಗ್ಗೆ ಅರಿವಾಗುವುದು. ಅಲ್ಲದೆ ಈ ಷೇರಿನ ಮುಖಬೆಲೆ ರೂ.10 ಇದ್ದು ಆಕರ್ಷಣೀಯ ಲಾಭ ಗಳಿಸುತ್ತಿದೆ. ಅದೇ ಇತ್ತೀಚೆಗೆ ಪ್ರತಿ ಷೇರಿಗೆ ರೂ.900 ರಂತೆ ತೇಲಿಬಿಟ್ಟ ಸ್ಟಾರ್‌ ಹೆಲ್ತ್‌ ಅಂಡ್‌ ಅಲೈಡ್‌ ಇನ್ಶೂರನ್ಸ್‌ ಕಂಪನಿ ಷೇರು ಈಗ ರೂ.690 ರ ಸಮೀಪವಿದ್ದು ಅದರ ಬಗ್ಗೆ ಚಕಾರವೇ ಇಲ್ಲ. ಒಟ್ಟಿನಲ್ಲಿ ಸಣ್ಣ ಹೂಡಿಕೆದಾರರು ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ತಮ್ಮ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಲ್ಲಿ ಮಾತ್ರ ಉತ್ತಮ ಪ್ರತಿಫಲ ಪಡೆಯಲು ಸಾಧ್ಯ ಅಲ್ಲವೇ?

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಸಿಪೋರೆಕ್ಸ್ ಕಾರ್ವಿಂಗ್ ಕಾರ್ಯಾಗಾರ

    ಬಳಕೂರು ವಿ ಎಸ್ ನಾಯಕ

    ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಚಿತ್ರಕಲಾ ಮಹಾವಿದ್ಯಾಲಯ ವಿಷ್ಣುವರ್ಧನ್ ರಸ್ತೆಯಲ್ಲಿರುವ ಶಿಲ್ಪಕಲಾ ವಿಭಾಗದಲ್ಲಿ ಅಡಿ ಇಟ್ಟವರಿಗೆ ಒಂದು ವಿಸ್ಮಯಕಾರಿ ಶಿಲ್ಪ ಕಲಾಲೋಕಕ್ಕೆ ಅಡಿ ಇಟ್ಟ ಅನುಭವವಾಗಿತ್ತು. ಒಂದಕ್ಕಿಂತ ಒಂದು ಕಲಾಕೃತಿಗಳು ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಕೈಚಳಕದಲ್ಲಿ ಅರಳಿ ಒಂದು ವಿನೂತನವಾದ ಶಿಲ್ಪಕಲಾಲೋಕವೇ ಧರೆಗಿಳಿದುಬಂದಂತೆ ಗೋಚರವಾಗುತ್ತಿದೆ.

    ಹಾಗಾದ್ರೆ ಏನಿರಬಹುದು ಎಂಬ ಕುತೂಹಲ ಕಲಾಸಕ್ತರಿಗೆ ಅನಿಸದೇ ಇರುವುದಿಲ್ಲ. ಚಿತ್ರಕಲಾ ಮಹಾವಿದ್ಯಾಲಯದ ಬಿ. ವಿ. ಎ. ಫೌಂಡೇಶನ್ ತರಗತಿಯ ವಿದ್ಯಾರ್ಥಿಗಳಿಗೆ ಶಿಲ್ಪಕಲಾ ಶಿಬಿರವೊಂದನ್ನು ಆಯೋಜಿಸಲಾಗಿದೆ. ಮಧ್ಯಪ್ರದೇಶದ ಇಂದೋರ್ ಪ್ರಸಿದ್ಧ ಶಿಲ್ಪ ಕಲಾವಿದ

    ಪ್ರಕಾಶ್ ಪಾಟೀದಾರ್ ಅವರ ನಿರ್ದೇಶನದಲ್ಲಿ ಅತಿ ಹಗುರ ಸಿಮೆಂಟ್ ಇಟ್ಟಿಗೆ ಯನ್ನು ಬಳಸಿ ಅದರಲ್ಲಿ ಕಾರ್ವಿಂಗ್ ಮಾಡಿ ವಿಶಿಷ್ಟವಾದ ಕಲಾಕೃತಿಗಳನ್ನು ರಚಿಸುವ ತರಬೇತಿ ಶಿಲ್ಪಕಲಾ ವಿಭಾಗದಲ್ಲಿ ನಡೆಯುತ್ತಿರುವುದು ವಿಶೇಷ . ಬಿ.ವಿ.ಎ ಫೌಂಡೇಶನ್ ತರಗತಿಯ ಸುಮಾರು 140 ಗಿಂತಲೂ ಹೆಚ್ಚಿನ ಕಲಾ ವಿದ್ಯಾರ್ಥಿಗಳಿಗೆ ವಿಭಿನ್ನಬಗೆಯ ಶಿಲ್ಪ ಕಲಾಕೃತಿಗಳನ್ನು ರಚಿಸುವ ಶಿಬಿರ ನಡೆದಿದೆ ಸುಮಾರು ಎರಡು ವಾರಗಳ ಕಾಲ ನಡೆಯುವ ಈ ಶಿಬಿರದಲ್ಲಿ ಕಲಾ ವಿದ್ಯಾರ್ಥಿಗಳು ಇಂಥ ಒಂದು ವಿಭಿನ್ನವಾದ ಶಿಲ್ಪಕಲಾಕೃತಿಗಳನ್ನು ಕಾರ್ವಿಂಗ್ ಮಾಡುವುದರ ಮೂಲಕ ರಚಿಸುವ ಕಾರ್ಯವನ್ನು ಮಾಡಿದ್ದಾರೆ.

    ಶಿಲ್ಪಕಲಾ ಶಿಬಿರದ ಉದ್ದೇಶವೆಂದರೆ ಕಲಾ ವಿದ್ಯಾರ್ಥಿಗಳಿಗೆ ಶಿಲ್ಪಕಲೆಯ ಸಾಧ್ಯತೆಗಳನ್ನು ತಿಳಿಸುವುದು ಬೇರೆಬೇರೆ ಮಾಧ್ಯಮ ಪ್ರಕಾರಗಳನ್ನು ಪರಿಚಯಿಸುವ ಕಾರ್ಯ ನಡೆಯಲಿದೆ. ಶಿಲ್ಪಕಲಾ ಶಿಬಿರದಲ್ಲಿ ಎಂದೂ ನೋಡದ ಅಚ್ಚರಿಯ ಶಿಲ್ಪಕಲಾಕೃತಿಗಳನ್ನು ವಿದ್ಯಾರ್ಥಿಗಳು ಸಿಮೆಂಟ್ ಇಟ್ಟಿಗೆಗಳನ್ನು ಬಳಸಿ ಕಾರ್ವಿಂಗ್ ಮಾಡುವುದರ ಮೂಲಕಒಂದು ಅಚ್ಚರಿಯ ನೋಟ ನೋಟಕ್ಕೆ ಸಾಕ್ಷಿಯಾಗಿದ್ದಾರೆ. ಇಂತಹ ಪ್ರಕಾರದ ಶಿಲ್ಪಗಳನ್ನು ಮಾಡುವುದರಿಂದ ಮತ್ತು ಇನ್ಸ್ಟಾಲೇಷನ್ ಮಾಡಿದರೆ ಮುಂದೆ ಬರುವ ವಿದ್ಯಾರ್ಥಿಗಳಿಗೆ ವಿಭಿನ್ನ ಕಲಾಪ್ರಕಾರಗಳನ್ನು ಪರಿಚಯಿಸಿದ ಹಾಗೆ ಆಗುತ್ತದೆ.

    ಶಿಲ್ಪಕಲಾ ಶಿಬಿರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಬಾಬು ಜತ್ತಕರ ರವರ ಮುಂದಾಳತ್ವದಲ್ಲಿ ಮತ್ತು ಶಿಲ್ಪ ಕಲಾ ವಿಭಾಗದ ಉಪನ್ಯಾಸಕರಾದ ನಾಗಪ್ಪ ಪ್ರಧಾನಿ, ವಿಶಾಲ್ ಕಾವಟೆಕಾರ್, ಗೋಪಾಲ್ ಕಮ್ಮಾರ್ ರವರ ಸಹಭಾಗಿತ್ವದಲ್ಲಿ, ಮತ್ತು ಈ ಶಿಲ್ಪಕಲಾ ಶಿಬಿರ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ : ಬಿಎಲ್ ಶಂಕರ್ ಮತ್ತು ಗೌರವ ಕಾರ್ಯದರ್ಶಿಗಳಾದ ಪ್ರೊ. ಅಪ್ಪಜಯ್ಯ ಸಹಕಾರದೊಂದಿಗೆ ನಡೆಯುತ್ತಿದೆ. ಈ ಕಲಾ ಶಿಬಿರ ಇನ್ನು ಒಂದು ವಾರಗಳ ಕಾಲ ನಡೆಯಲಿದ್ದು ಕಲಾಸಕ್ತರು ಕಂಡುಕೊಳ್ಳಬಹುದಾಗಿದೆ.


    ಸ್ಥಳ:ಚಿತ್ರಕಲಾ ಮಹಾವಿದ್ಯಾಲಯ,ಕರ್ನಾಟಕ ಚಿತ್ರಕಲಾ ಪರಿಷತ್ತು
    ವಿಷ್ಣುವರ್ಧನ್ ರಸ್ತೆ ಓಂಕಾರ್ ಆಶ್ರಮದ ಹತ್ತಿರ ಶ್ರೀನಿವಾಸಪುರ ಬೆಂಗಳೂರು

    ದಿಟ್ಟ ಮಹಿಳೆಯರ ಸೂಕ್ಷ್ಮ ಸಂವೇದನೆ


    ತಮ್ಮ ಲೇಖನಗಳ ಮೂಲಕ ಕನ್ನಡಪ್ರೆಸ್ .ಕಾಮ್ ಓದುಗರಿಗೆ ಚಿರಪರಿಚಿತರಾಗಿರುವ ಶಶಿಕಲಾ ರಾವ್ ಅವರ ಚೊಚ್ಚಲ ಕೃತಿ ಪುನರಕ್ತಿ ಕಾದಂಬರಿ ಇದೇ ಜೂನ್ 18ರ ಶನಿವಾರ ಲೋಕಾರ್ಪಣೆಯಾಗುತ್ತಿದೆ. ಸುಚಿತ್ರ ಫಿಲಂ ಸೊಸೈಟಿ ಆವರಣದಲ್ಲಿ ಸಂಜೆ 4-30 ರಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ಹೆಸರಾಂತ ಕವಿ ವಿಮರ್ಶಕ ಡಾ.ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹೆಸರಾಂತ ನಿರ್ದೇಶಕ ಪಿ,ಶೇಷಾದ್ರಿ ಅವರು ಅಧ್ಯಕ್ಷತೆ ವಹಿಸಲಿದ್ದು, ಕನ್ನಡಪ್ರೆಸ್ .ಕಾಮ್ ಸಂಪಾದಕ ಶ್ರೀವತ್ಸ ನಾಡಿಗ್ ಮತ್ತು ನಿರೂಪಕಿ, ಕಲಾವಿದೆ ಅಪರ್ಣಾ ವಸ್ತಾರೆ.ಮುಖ್ಯ ಅತಿಥಿಯಾಗಿ ಭಾಗವಹಿಸಸಿದ್ದಾರೆ.


    ಲೇಖಕಿ ಶಶಿಕಲಾ ರಾವ್ ಅವರು ಕೃತಿ ಬಿಡಗಡೆಗೂ ಮುನ್ನ ಕನ್ನಡಪ್ರೆಸ್ .ಕಾಮ್ ಜೊತೆ ಮಾತನಾಡಿ ತಮ್ಮ ಸಾಹಿತ್ಯ ಯಾತ್ರೆಯನ್ನು ವಿವರಿಸಿದ್ದಾರೆ.

    ಲೇಖನ ಬರೆಯುವುದಕ್ಕೂ ಕಾದಂಬರಿ ಬರೆಯುವುದಕ್ಕೂ ಇರುವ ವ್ಯತ್ಯಾಸ

    ಲೇಖನಗಳನ್ನು ಬರೆದು ಸಂಪಾದಿಸುವುದಕ್ಕು ಕಾದಂಬರಿಯನ್ನು ಸಂಪಾದಿಸುವುದಕ್ಕೂ ಅಜಗಜಾಂತರವ್ಯತ್ಯಾಸವಿದೆ. ಲೇಖನಗಳು ಪ್ರಬಂಧಗಳು ಅಥವಾ ಸಣ್ಣಕಥೆಗಳನ್ನು ಬರೆಯುವುದು ಮತ್ತು ಸಂಪಾದಿಸುವುದು ಸುಲಭ. ಇಲ್ಲಿ ಕಾಲದ ಮಿತಿ ಇರುತ್ತದೆ. ಆದರೆ ಕಾದಂಬರಿಯಲ್ಲಿ ಪಾತ್ರಗಳು ಒಂದಾದ ಮೇಲೆ ಒಂದು ಸೇರಿಕೊಂಡು ಬರುತ್ತಾ ಕಾಲದ ಮಿತಿ ಇರುವುದಿಲ್ಲ. ಹತ್ತಾರು ಪಾತ್ರವನ್ನು ಕಥೆಯಲ್ಲಿ ತಂದು ಎಲ್ಲರನ್ನೂ ಒಂದು ಸೂತ್ರದಲ್ಲಿ ಬಂಧಿಸಿ ಅವರವರ ಪಾತ್ರಗಳನ್ನು ಭೂತಕಾಲದಿಂದ ವರ್ತಮಾನಕಾಲದವರಿಗೂ ವಿಸ್ತರಿಸಿ ವಿಚಕ್ಷಣೆಯಿಂದ ಎಲ್ಲರನ್ನೂಕಥೆಯ ಅಂತ್ಯದವರಿಗೂ ಕುತೂಹಲಕಾರಿಯಾಗಿರುವಂತೆ ಬರೆಯುವುದು ಸಾಕಷ್ಟು ಕಷ್ಟದ ಕೆಲಸವೆ..

    ಕಾದಂಬರಿ ಬರೆಯಲು ಪ್ರೇರಣೆ

    ಪುನರುಕ್ತಿಯಲ್ಲಿ ಬಂದಿರುವ ಎಲ್ಲಾ ಪಾತ್ರಗಳು ನನ್ನ ಮನದಂಗಳದಲ್ಲಿ ಓಡಾಡುತ್ತ ಕಾಡುತ್ತಿದ್ದವು. ಒತ್ತಡದಿಂದ ಪಾತ್ರಗಳೇ ರೂಪುರೇಖೆಗಳನ್ನು ರಚಿಸಿಕೊಂಡು ಮೂರ್ತಿಸ್ವರೂಪರಾಗಿ ಅನಾವರಣಗೊಂಡಿವೆ

    ಕಾದಂಬರಿಯಲ್ಲಿ ಬಂದಿರುವ ಮಹಿಳಾ ಪಾತ್ರಗಳ ಬಗ್ಗೆ

    ಕಾದಂಬರಿಯಲ್ಲಿ ಬಂದಿರುವ ಡಾಕ್ಟರ್ ಭವಾನಿ, ಸೀತೆ, ಸುಜಯ, ಶ್ಯಾಮಲಬಾಯಿ(ನಿರುಪಮ) ಎಲ್ಲರೂ ಒದಗಿ ಬಂದ ಕಷ್ಟಗಳನ್ನು ಎದುರಿಸಿ, ಸೋಲದೆ ಸಾರ್ಥಕತೆ ಪಡೆಯುತ್ತಾರೆ. ಹಟದ ಸ್ವಭಾವವಿದ್ದ ಭವಾನಿ ಜೀವನದಲ್ಲಿ ಅತ್ಯಂತ ಸುಖದಲ್ಲಿದ್ದಾಗ ತನ್ನ ಗಂಡ ವಿನೋದನನ್ನು ಕಳೆದುಕೊಂಡು ಜೀವನದಲ್ಲಿ ಸಂಕಟನೋವು ಅನುಭವಿಸುತ್ತಾಳೆ. ಮುಗ್ದ ಸೀತೆಯನ್ನು ಜನ ಸಂಶಯದಿಂದ ನೋಡುತ್ತಾರೆ. ಜೀವನಪೂರ್ತಿ ತಾನೊಬ್ಬ ಕೊಲೆಗಾತಿಯೆಂದು ನರಳುತ್ತಾಳೆ.ಅತ್ಯಂತ ಬುದ್ಧಿವಂತಳಾದ ಸುಜಯ ಸಲೀಲನ ಸುಂದರ ರೂಪಕ್ಕೆ ಮೆಚ್ಚಿಕೊಂಡು ಜೀವನದಲ್ಲಿ ಮುಗ್ಗರಿಸುತ್ತಾಳೆ. ಇದರ ಮಧ್ಯೆ ಶ್ಯಾಮಲ ಬಾಯಿ ತನ್ನನ್ನು ವೇಶ್ಯಾವಾಟಿಕೆಗೆ ಮಾರುತ್ತಾನೆಂದು ಗೊತ್ತಾದ ತಕ್ಷಣ ಧೈರ್ಯ ಸಾಹಸದಿಂದ ತಪ್ಪಿಸಿಕೂಳ್ಳುತ್ತಾಳೆ. ಇಲ್ಲಿ ಹೆಣ್ಣಿಗೆ ಬಂದೊದಗಿದ ಕಷ್ಟಗಳನ್ನು ಹೀಗೆ ಧೈರ್ಯದಿಂದ ಎದುರಿಸಿ ಹೊಸ ದಾರಿ ಕಂಡುಕೊಳ್ಳುತ್ತಾರೆ. ಮುಖ್ಯ ಸ್ತ್ರೀ ಪಾತ್ರಗಳೆಲ್ಲಾ ಶಕ್ತಿ ಸ್ವರೂಪಣಿಯಾಗಿದ್ದಾರೆ.

    ಪುನರುಕ್ತಿ ಎಂದು ಹೆಸರಿಡಲು ಕಾರಣ

    ಮಹಿಳೆಯರೆಲ್ಲಾ ಭಾವನಾತ್ಮಕವಾಗಿ ನೊಂದಿರುವುದು ಪುನಃ ಪುನಃ ಕಾಣಿಸಿತು. ಅದ್ದರಿಂದ ಈ ಕಾದಂಬರಿಯ ಹೆಸರೂ ಪುನರುಕ್ತಿ ಆಯಿತು.


    ಬೆಂಗಳೂರಿನ ಸಂಪದ ಪಬ್ಲಿಕೇಶನ್ ಪುಸ್ತಕವನ್ನು ಪ್ರಕಟಿಸಿದೆ. ಆಸಕ್ತರು 9880593349/ 08026612655 ಫೋನ್ ಮಾಡಿದರೆ ಪುಸ್ತಕ ಮನೆಗೆ ತಲುಪುತ್ತದೆ.

    ಕೋವಿಡ್ ನಿಯಂತ್ರಣದಲ್ಲಿದೆ; ಗಾಬರಿ ಬೇಡ: ಮುಖ್ಯಮಂತ್ರಿ

    BENGALURU JUNE 6

    ಕೋವಿಡ್ ಸಂಪೂರ್ಣ ನಿಯಂತ್ರಣದಲ್ಲಿದೆ. ಅನಗತ್ಯವಾಗಿ ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

    ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸಭೆ ನಡೆಸಿ ಎಲ್ಲಾ ಜಿಲ್ಲೆಗಳಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ಸಲ್ಲಿಸಲಿದ್ದಾರೆ. ಅದರ ಆಧಾರದ ಮೇಲೆ 2-3 ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

    error: Content is protected !!