23 C
Karnataka
Sunday, November 24, 2024
    Home Blog Page 170

    ಎಚ್ಚರದಿಂದಿದ್ದರೆ ಷೇರುಪೇಟೆ ನೀಡುವುದು ಸಂಪತ್ತಿನ ಮೂಟೆ

    ಷೇರುಪೇಟೆಯ ಇಂದಿನ ದಿನಗಳಲ್ಲಿ ಯಾವ ನಿಖರವಾದ ನಿಯಮಗಳಿಲ್ಲದೆ ಚಲಿಸುತ್ತಿರುವಂತಿದೆ. ವಹಿವಾಟುದಾರರು ನಡೆಸುವ ಚಟುವಟಿಕೆಯೇ ಅಂತಿಮ ಎಂಬಂತಿದೆ. ಷೇರುಪೇಟೆಗಳು ರಭಸದ ಏರಿಳಿತ ಪ್ರದರ್ಶಿಸುತ್ತಿರುವುದರ ಹಿಂದೆ ಯಾವುದೇ ಪ್ರಮುಖ ಕಾರಣಗಾಳಿಲ್ಲದಂತಿದೆ. ಆಂತರಿಕ ಸಾಧನೆ ಮೀರಿ ಸೂಚ್ಯಂಕಗಳು ಏರಿಕೆ ಕಂಪನಿಗಳ ಸಾಧನೆಗೂ ಷೇರಿನ ದರ ಏರಿಕೆಗೂ ಸಂಬಂಧವಿಲ್ಲದಂತಿದೆ. ಕೆಳಗಿನ ಉದಾಹರಣೆ ಈ ಅಂಶ ದೃಢಪಡಿಸುತ್ತದೆ.

    ಆಂಧ್ರಾ ಪೇಪರ್‌ ಲಿಮಿಟೆಡ್‌ ಕಂಪನಿಯ ಷೇರಿನ ಬೆಲೆ ಗುರುವಾರದಂದು ಸುಮಾರು ೩೬ ರೂಪಾಯಿಗಳಷ್ಠು ಕುಸಿತಕ್ಕೊಳಗಾಯಿತು ಅದಕ್ಕೆ ಕಾರಣ ಕಂಪನಿಯ ಪ್ರವರ್ತಕರು ತಮ್ಮ ಭಾಗಿತ್ವದ ಶೇ.10 ರಷ್ಟನ್ನು ಆಫರ್‌ ಫಾರ್‌ ಸೇಲ್‌ ಮೂಲಕ ಮಾರಾಟಮಾಡಲಿರುವ ಅಂಶ ಪ್ರಕಟವಾಗಿದ್ದು. ಅಂದು ರೂ.194 ರ ಸಮೀಪಕ್ಕೆ ಕುಸಿದಿದ್ದ ಷೇರಿನ ಬೆಲೆ ಸೋಮವಾರ ದಿಢೀರನೆ ಶೇ.20 ರಷ್ಟರ ಏರಿಕೆಯಿಂದ ಮಿಂಚಿದೆ. ಅಂದರೆ ಕಂಪನಿಯ ಆಂತರಿಕ ಸಾಧನೆಗೆ ಸಂಬಂಧವಿಲ್ಲದ ಸುದ್ದಿಗೆ ಪೇಟೆ ಪ್ರದರ್ಶಿಸಿದ ರೀತಿ ಫಂಡಮೆಂಟಲ್ಸ ಆಧಾರದ ಹೂಡಿಕೆದಾರರಿಗೆ ಗೊಂದಲಮೂಡಿಸುವುದು ಸಹಜ. ಮೂರೇ ದಿನದಲ್ಲಿ ರೂ.60 ರಷ್ಟರ ಏರಿಕೆ ಕಂಡಿದೆ. ಕೇವಲ ವ್ಯಾಲ್ಯೂ ಪಿಕ್‌ ಅಧಾರದ ಮೇಲೆ ಕೊಂಡವರಿಗೆ ಉತ್ತಮ ಲಾಭದ ಅವಕಾಶ ಪೇಟೆ ಒದಗಿಸಿದೆ ಈ ಸಂದರ್ಭ ಹೇಗೆ ಅವಕಾಶ ಸೃಷ್ಟಿಸಿಕೊಟ್ಟಿದೆ ಎಂದರೆ S B I Mutual Fund ತನ್ನ ವಿವಿಧ ಯೋಜನೆಗಳಡಿಯಲ್ಲಿ ಒಟ್ಟು 31,33,000 ಷೇರುಗಳನ್ನು ಈ ಆಫರ್‌ ಫಾರ್‌ ಸೇಲ್‌ ಮೂಲಕ ಖರೀದಿಸಿದೆ. ಸೋಮವಾರ ನಡೆದ ವಹಿವಾಟಿನಲ್ಲಿ ಶೇ.28.07 ರಷ್ಟು ಮಾತ್ರ ವಿಲೇವಾರಿ ವಹಿವಾಟಾಗಿರುವುದು. ಪೇಟೆಯಲ್ಲಿ ನಡೆಯುತ್ತಿರುವ ವಿಲೇವಾರಿ ರಹಿತ ಚಟುವಟಿಕೆಗೆ ಹಿಡಿದ ಕನ್ನಡಿಯಾಗಿದೆ.

    ಈ ಕಂಪನಿಯ ಇತ್ತೀಚಿನ ವಹಿವಾಟಿನ ರೀತಿ ಈ ಕೆಳಕಂಡಂತಿದೆ.

    ಈ ಷೇರಿನಲ್ಲಿ ಒಂದು ವಾರದ ಹೂಡಿಕೆ ಶೇ.2.7 ರಷ್ಟು ಏರಿಕೆ ಕಂಡಿದೆ.
    ಒಂದು ತಿಂಗಳಲ್ಲಿನ ಹೂಡಿಕೆ ಶೇ.45 ರಷ್ಟು ಏರಿಕೆ ಕಂಡಿದೆ.
    ಆರು ತಿಂಗಳಲ್ಲಿ ಈ ಕಂಪನಿ ಹೂಡಿಕೆ ಶೇ.18.67ರಷ್ಟು ಹಾನಿ ಕಂಡಿದೆ.
    ಒಂದು ವರ್ಷದ ಹೂಡಿಕೆಯು ಶೇ.40.57 ರಷ್ಟು ಹಾನಿ ಕಂಡಿದೆ.

    ಅಂದರೆ ಇತ್ತೀಚಿನ ದಿನಗಳಲ್ಲಿ ಈ ಷೇರು ಹೆಚ್ಚು ಹೆಚ್ಚು ಏರಿಕೆ ಕಂಡಿದೆ ಎಂಬುದು ಗಮನಿಸಬೇಕಾದ ಅಂಶ. 2011 ರ ನಂತರದಲ್ಲಿ ಈ ಕಂಪನಿ ಯಾವುದೇ ಡಿವಿಡೆಂಡ್‌ ನೀಡಿರದ ಈ ಕಂಪನಿ ಎಂತಹ ಮಟ್ಟದ ಲಾಭ ಗಳಿಸಿಕೊಟ್ಟಿದೆ. ಇಂತಹ ಸ್ಮಾಲ್‌ ಕ್ಯಾಪ್‌ ಕಂಪನಿಗಳಲ್ಲಿ ಚಟುವಟಿಕೆ ನಡೆಸುವಾಗ ಅಪಾಯದ ಮಾಟ್ಟವನ್ನರಿತು ನಡೆಸುವುದು ಒಳಿತು.

    ಬಂಡವಾಳ ಸುರಕ್ಷತೆಗೆ ವ್ಯಾಲ್ಯೂ ಪಿಕ್‌ – ಪ್ರಾಫಿಟ್‌ ಬುಕ್‌ ಗಳು ಜೊತೆ ಜೊತೆ ಇರಲೇಬೇಕು

    ಭಾರತದ ಘಾತಕ್ ಕಮಾಂಡೋಗಳಿಗೆ ಬೆದರಿದ ಚೀನಾ

    ವಾಸ್ತವ ಗಡಿ ರೇಖೆಯಲ್ಲಿ ಭಾರತ-ಚೀನಾ ಸಮರ ಸನ್ನದ್ಧತೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಸೇನಾ ಸಂಖ್ಯೆ, ಯುದ್ಧ ವಿಮಾನಗಳು, ಕ್ಷಿಪಣಿ ನಿರೋಧಕ ಪಡೆ ಹೀಗೆ ಈ ಪಟ್ಟಿ ಹೆಚ್ಚುತ್ತಲೇ ಹೋಗುತ್ತಿದೆ. ಆದರೆ, ಉಭಯ ರಾಷ್ಟ್ರಗಳ ಮಧ್ಯೆ ಈಗಿರುವ ಒಪ್ಪಂದದ ಪ್ರಕಾರ ಬೆಂಕಿಯುಗುಳುವ ಅಸ್ತ್ರಗಳ ಪ್ರಯೋಗ (ಫೈರ್ ಆರ್ಮ್) ಬಳಸುವಂತಿಲ್ಲ. ಅದರ ಕಾರಣದಿಂದಾಗಿಯೇ ಕಳೆದ ಕೆಲ ದಿನಗಳ ಹಿಂದೆ ಮೊಳೆಗಳನ್ನು ಅಳವಡಿಸಿದ ಬಡಿಗೆಗಳಿಂದಲೇ ಉಭಯ ದೇಶಗಳ ಯೋಧರು ಕಾದಾಡಿದ್ದರು. ಚೀನಿಯರಿಗೆ ತಕ್ಕ ಶಾಸ್ತಿ ಮಾಡುತ್ತಲೇ ಹಲವು ಭಾರತೀಯ ಯೋಧರು ಹುತಾತ್ಮರಾಗಿದ್ದರು.

    ಈಗ ಭಾರತದ ಘಾತಕ್ ತುಕಡಿ ಕಮಾಂಡೋಗಳ ಭಯಕ್ಕೆ ಬಿದ್ದಿರುವ ಚೀನಾ ಸೇನಾ ಪಡೆಯುವ ಟಿಬೆಟ್ ಭಾಗದಲ್ಲಿ ತನ್ನ ಸೇನಾ ಪಡೆಗೆ ತರಬೇತಿ ನೀಡಲು ಕನಿಷ್ಠವೆಂದರೂ 20 ಮಾರ್ಷಲ್ ಆರ್ಟ್ಸ್ ಪರಿಣಿತರನ್ನು ನೇಮಕ ಮಾಡಿದೆ ಎಂದು ತಿಳಿದು ಬಂದಿದೆ.

    ಘಾತಕ್ ಕಮಾಂಡೋ

    ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಯೋಧರ ನಡುವೆ ಸಂಘರ್ಷ ಆರಂಭವಾಗುವ ಮೊದಲೇ ಭಾರತ ತನ್ನ ಘಾತಕ್ ಕಮಾಂಡೋಗಳನ್ನು ಈ ಭಾಗದಲ್ಲಿ ನಿಯೋಜಿಸಿತ್ತು ಎಂದು ಹೇಳಲಾಗುತ್ತಿದೆ. ಕೈ-ಕೈ ಹೋರಾಟದಲ್ಲಿ ಅತಿ ಪರಿಣತಿಯನ್ನು ಈ ಕಮಾಂಡೋಗಳು ಹೊಂದಿದ್ದಾರೆ. ವಿಶೇಷವೆಂದರೆ ಇವರಿಗೆ ಕರ್ನಾಟಕದ ಬೆಳಗಾವಿ ಸೇನಾ ನೆಲೆಯಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಇವರೆಲ್ಲರಿಗೂ 43 ದಿನಗಳ ವಿಶೇಷ ತರಬೇತಿ ನೀಡಲಾಗುತ್ತದೆಯಂತೆ. ಮೈಮೇಲೆ 35 ಕೆ. ಜಿ. ಗೂ ಅಧಿಕ ಭಾರ ಹೊತ್ತು ಸುಮಾರು 40 ಕಿ.ಮೀ. ವಿಶ್ರಾಂತಿ ಇಲ್ಲದೆ ಓಡುವ ತರಬೇತಿಯೂ ಇವರು ಪಡೆಯುತ್ತಾರೆ. ಒಮ್ಮೆ ಇವರ ತರಬೇತಿ ಪೂರ್ಣಗೊಂಡರೆ ಬಳಿಕ ಮರುಭೂಮಿ, ನಾನಾ ಭೌಗೋಳಿಕ ಸನ್ನಿವೇಶಗಳಲ್ಲಿ ಅವರನ್ನು ನಿಯೋಜಿಸಿ ತರಬೇತಿಯನ್ನು ನಿಯಮಿತವಾಗಿ ಮುಂದುವರಿಸಲಾಗುತ್ತದೆ.

    ಹಲವು ಕಮಾಂಡೋಗಳು

    ಪ್ರತಿ ಘಾತಕ್ ಕಮಾಂಡೋ ಯೂನಿಟ್ ನಲ್ಲಿ ಒಬ್ಬ ಹಿರಿಯ ಅಧಿಕಾರಿ ಮತ್ತು 22 ಯೋಧರು ಇರುತ್ತಾರೆ. ಸದ್ಯದ ಮಟ್ಟಿಗೆ ಚೀನಾ ಗಡಿಯಲ್ಲಿ 40-45 ಇಂತಹ ಯೋಧರನ್ನು ನಿಯೋಜನೆ ಮಾಡಲಾಗಿದೆ. ಉಳಿದವರು ಈ ಕಮಾಂಡೋಗಳಿಗೆ ಬ್ಯಾಕ್ ಅಫ್ ಆಗಿ ಹಿನ್ನೆಲೆಯಲ್ಲಿ ಇರುತ್ತಾರೆ.

    ಪ್ರತಿ ಬಾರಿಯೂ ಪದಾತಿ ಯೋಧರ ನೇಮಕ (ಇನ್ ಫ್ಯಾಂಟ್ರಿ)ವಾದಾಗಲೂ ಅವರಲ್ಲಿ ಕನಿಷ್ಠವೆಂದರೂ 40 ಜನರನ್ನು ಅವರ ಆರೋಗ್ಯ, ದೈಹಿಕ ಸಾಮರ್ಥ್ಯವನ್ನು ಪರಿಗಣಿಸಿ ಈ ಪಡೆಗೆ ಸೇರಿಸಲಾಗುತ್ತದೆ. ಬಳಿಕ ಅತಿ ಕಠಿಣ ತರಬೇತಿ ನೀಡಲಾಗುತ್ತದೆ. 

    ಯಾಕೆ ಈ ಕಮಾಂಡೋಗಳು

    ಭಾರತ ಮತ್ತು ಚೀನಾ ನಡುವೆ 1996ರಲ್ಲಿ ಆದ ಒಪ್ಪಂದದ ಪ್ರಕಾರ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಬಂದೂಕು, ಸ್ಫೋಟಕ ಮತ್ತು ರಾಸಾಯನಿಕ ಅಸ್ತ್ರಗಳನ್ನು ಉಭಯ ದೇಶಗಳು ಬಳಕೆ ಮಾಡುವಂತಿಲ್ಲ. ಇದೇ ಕಾರಣಕ್ಕಾಗಿಯೇ ಬಡಿಗೆ ಹೊಡೆದಾಟ ಈ ಬಾರಿ ಸಂಭವಿಸಿತ್ತು.

    ಹೆಚ್ಚುತ್ತಿರುವ ಸೋಂಕು; ಮುನ್ನೆಚ್ಚರಿಕೆ ಇಲ್ಲದೆ ಅನ್‌ಲಾಕ್ ಮಾಡಿದ್ದೇ ಮುಳುವಾಯ್ತ

    .ಅಶೋಕ ಹೆಗಡೆ
    ಕರ್ನಾಟಕದಲ್ಲಿ, ಅದರಲ್ಲಿಯೂ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವಿಪರೀತ ಏರುತ್ತಿದೆ. ಎರಡು ದಿನಗಳಿಂದ ಈಚೆಗೆ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಸಾವಿರದ ಆಸುಪಾಸಿನಲ್ಲಿದೆ. ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ ಅವರ ಈ ಕೆಳಗಿನ ಟ್ವೀಟ್ ಇದನ್ನು ದೃಢಪಡಿಸುತ್ತದೆ.

    ವೈದ್ಯಕೀಯ ಶಿಕ್ಷಣ ಸಚಿವರೇನೋ ಎಲ್ಲರಿಗೂ ಚಿಕಿತ್ಸೆ ನೀಡಲು ಸರಕಾರ ಸಜ್ಜಾಗಿದೆ ಎನ್ನುತ್ತಾರೆ. ಆದರೆ ಈ ಕೆಳಗಿನ ಘಟನೆಗಳು ಸರಕಾರದ ಸಿದ್ಧತೆಯನ್ನು ದೃಢೀಕರಿಸುವುದಿಲ್ಲ. ಅನ್ಲಾಕ್ ಆದ ನಂತರ ಸೋಂಕು ಜಾಸ್ತಿ ಆಗಬಹುದು ಎಂಬ ಅರಿವಿದ್ದರೂ ಬಿಬಿಎಂಪಿ ಅದನ್ನು ನಿಭಾಯಿಸಲು ಹೆಣಗಾಡುತ್ತಿರುವುದು ನಿತ್ಯವೂ ಸಾಬೀತಾಗುತ್ತಿದೆ. ಈಗಾಗಲೇ ವರದಿ ಆಗಿರುವ ಈ ಘಟನೆಗಳು ಬಿಬಿಎಂಪಿ ಕೈ ಚೆಲ್ಲಿ ಬಿಟ್ಟಿದೆಯೆ ಎಂಬ ಅನುಮಾನ ಮೂಡಿಸುವಂತೆ ಇದೆ.

    ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಾಯವಾಣಿಗೆ ಕರೆ ಮಾಡಿ ವಿಷಯ ತಲುಪಿಸಿದರು. ಬಿಬಿಎಂಪಿ ಅವರನ್ನು ಕರೆದೊಯ್ಯಲು ಬಂದಿದ್ದು ಎರಡು ದಿನಗಳ ಬಳಿಕ! ಆ ಎರಡು ದಿನದಲ್ಲೇ ಅವರು ನರಕ ನೋಡಿಬಿಟ್ಟರು. ಮನೆಯಮಂದಿ ಜತೆ ಮಾತನಾಡುವುದಿರಲಿ, ಮನೆಯಲ್ಲಿ ಇರುವ ಏಕೈಕ ಟಾಯ್ಲಟ್ ಬಳಸಲೂ ಭಯ.

    ಮತ್ತೊಂದು ಘಟನೆಯಲ್ಲಿ ಆರೋಗ್ಯ ವಿಭಾಗದ ಸಿಬ್ಬಂದಿ ಆ ವ್ಯಕ್ತಿಗೆ ಮುಂಜಾನೆ ಕರೆ ಮಾಡಿ, ‘ನಿಮಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ನಿಮ್ಮನ್ನು ಕರೆದೊಯ್ಯಲು ಆಂಬುಲೆನ್ಸ್ ಬರುತ್ತದೆ. ಸರಿಯಾಗಿ ಬೆಳಗ್ಗೆ 10 ಗಂಟೆಗೆ ಎರಡು ಜತೆ ಬಟ್ಟೆ ಜತೆ ಇಂತಹ ಸ್ಥಳಕ್ಕೆ ಬನ್ನಿ,” ಎಂದು ಹೇಳಿದರು. ಲಗೇಜ್ ಸಮೇತ ಅವರು 9.50ಕ್ಕೆ ನಿಗದಿತ ಸ್ಥಳದಲ್ಲಿ ಹಾಜರಿದ್ದರು. ಆದರೆ ಆಂಬುಲೆನ್ಸ್ ಬಂದಿದ್ದು ರಾತ್ರಿ 11 ಗಂಟೆಗೆ! ಮನೆಗೆ ಹೋಗುವಂತಿಲ್ಲ, ಹೋಟೆಲ್-ಬೇಕರಿಗೆ ಹೋಗಿ ಊಟ-ತಿಂಡಿ ಮಾಡುವಂತಿಲ್ಲ. ಅದು ಹೋಗಲಿ, ರಸ್ತೆ ಪಕ್ಕ ಕೂರಲೂ ಭಯ- ತಮ್ಮಿಂದಾಗಿ ಬೇರೆಯವರಿಗೆ ಸೋಂಕು ಅಂಟಿಕೊಂಡರೆ ಎಂಬ ಆತಂಕ!

    ಇನ್ನೊಂದು ಘಟನೆಯಲ್ಲಿ ಬಿಬಿಎಂಪಿ ಹೇಳಿದ ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳದಲ್ಲಿ ಆಂಬುಲೆನ್ಸ್ ಬಂತು. ಇವರೂ ಹತ್ತಿ ಕುಳಿತರು. ಆದರೆ ಇವರನ್ನು ಯಾವ ಆಸ್ಪತ್ರೆಗೆ ಕರೆದೊಯ್ಯಬೇಕು ಎನ್ನುವುದೇ ಆಂಬುಲೆನ್ಸ್ ಚಾಲಕನಿಗೆ ಗೊತ್ತಿರಲಿಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿ ಕೊನೆಗೆ ಎಲ್ಲೋ ಒಂದು ಕಡೆ ಹಾಸಿಗೆ ವ್ಯವಸ್ಥೆ ಮಾಡುವಷ್ಟರಲ್ಲಿ ಇವರ ಸ್ಥಿತಿ ಗಂಭೀರವಾಗಿ ನೇರವಾಗಿ ಐಸಿಯುಗೆ ದಾಖಲಿಸಬೇಕಾಗಿ ಬಂತು!

    ಬೆಂಗಳೂರಿನ ಅವ್ಯವಸ್ಥೆಯನ್ನು ಸಾದರಪಡಿಸುವ ಘಟನೆಗಳಿವು. ಇಡೀ ದೇಶದಲ್ಲಿ ಲಾಕ್‌ಡೌನ್ ಇದ್ದಾಗ ಬೆಂಗಳೂರು ಸೇರಿದಂತೆ ಎಲ್ಲೆಡೆ ಸೋಂಕು ನಿಯಂತ್ರಣದಲ್ಲಿತ್ತು. ಅನ್‌ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಸ್ಫೋಟಗೊಂಡಿತು. ಸೂಕ್ತ ಮುನ್ನೆಚ್ಚರಿಕೆ ಇಲ್ಲದೆ ಅನ್‌ಲಾಕ್ ಪ್ರಕ್ರಿಯೆ ಜಾರಿಗೊಳಿಸಲು ಮುಂದಾದದ್ದೇ ಇದಕ್ಕೆ ಕಾರಣ. ಈಗ ಹೇಗಾಗಿದೆ ಎಂದರೆ ಯಾರು ಎಲ್ಲಿ ಏಕೆ ಸಂಚಾರ ಮಾಡುತ್ತಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ.

    ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ

    ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಪತ್ತೆಯೂ ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆಯಿಂದ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವುದು ಸೋಂಕು ದೃಢಪಟ್ಟ ಬಳಿಕ ಕನಿಷ್ಠ ಎರಡು ದಿನ ತಡವಾಗುತ್ತಿದೆ. ಇದರಿಂದ ಏನಿಲ್ಲವೆಂದರೂ ಒಬ್ಬ ವ್ಯಕ್ತಿಯಿಂದ ಕಡೇಪಕ್ಷ ಹತ್ತು ಮಂದಿಗಾದರೂ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸೋಂಕು ಅಂಟಿರುತ್ತದೆ. ಸ್ವತಃ ಸೋಂಕಿತನ ಸ್ಥಿತಿಯೂ ಆಸ್ಪತ್ರೆ ಸೇರುವಷ್ಟರಲ್ಲಿ ಗಂಭೀರವಾಗಿರುತ್ತದೆ. ಮರಣ ಪ್ರಮಾಣ ಹೆಚ್ಚಲು ಇದೂ ಕಾರಣ.
    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎರಡು ವಾರ ಹಿಂದೆಯೇ ಭಾನುವಾರದ ಲಾಕ್‌ಡೌನ್ ಪ್ರಸ್ತಾಪ ಮಾಡಿದ್ದರು. ಹಿರಿಯ ಸಚಿವರ ವಿರೋಧದಿಂದ ಅದನ್ನು ಕೈ ಬಿಟ್ಟು, ಈಗ ಪರಿಸ್ಥಿತಿ ಉಲ್ಬಣಿಸಿದ ಬಳಿಕ ಮತ್ತೆ ಮುಂದಿನ ವಾರದಿಂದ ಭಾನುವಾರದ ಲಾಕ್‌ಡೌನ್ ಜಾರಿಗೆ ಮುಂದಾಗಿದ್ದಾರೆ.

    ರಾತ್ರಿ10ರಿಂದ ಬೆಳಗ್ಗೆ 5ರವರೆಗೆ ಸಂಚಾರ ನಿರ್ಬಂಧ ಜಾರಿಯಲ್ಲಿದ್ದರೂ ಕಟ್ಟುನಿಟ್ಟಾಗಿ ಜಾರಿಯಾಗಿಯೇ ಇಲ್ಲ. ಯಾವ್ಯಾವ ಪ್ರದೇಶಗಳಿಂದ ಸೋಂಕು ಹರಡುತ್ತಿದೆ ಎಂಬುದು ಗೊತ್ತಿದ್ದರೂ ‘ಭಯ’ದಿಂದ ಅಧಿಕಾರಿಗಳು ಅಂತಹ ಪ್ರದೇಶಗಳತ್ತ ಸುಳಿಯುತ್ತಲೇ ಇಲ್ಲ. ಕೆಲವರಿಗೆ ಬಾಯಿಮಾತಿನಲ್ಲಿ ಹೇಳಿದವರಿಗೆ ಅರ್ಥವಾಗುವುದಿಲ್ಲ, ದಂಡ ಪ್ರಯೋಗ ಅನಿವಾರ್ಯ. ಪೊಲೀಸ್ ಬಲದೊಂದಿಗೆ ಅಂತಹ ಪ್ರದೇಶಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಜಾರಿಗೆ ಪ್ರಯತ್ನ ಮಾಡಿದ್ದರೆ ಪರಿಸ್ಥಿತಿ ಸ್ವಲ್ಪವಾದರೂ ಹಿಡಿತದಲ್ಲಿರುತ್ತಿತ್ತು.

    ಇನ್ನು ಹಾಸಿಗೆ ವಿಚಾರಕ್ಕೆ ಬರೋಣ. ನಾರಾಯಣ ಹೃದಯಾಲಯದ ಡಾ.ದೇವಿಶೆಟ್ಟಿ ಅವರು ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಬಹುದೆಂದು ಆರಂಭದಲ್ಲಿಯೇ ಎಚ್ಚರಿಕೆ ನೀಡಿದ್ದರು. ತಪಾಸಣೆಗೆ ವೇಗ ನೀಡುತ್ತಿದ್ದಂತೆಯೇ ಹೆಚ್ಚಿನ ಹಾಸಿಗೆ, ವೈದ್ಯ ಸಿಬ್ಬಂದಿಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಿತ್ತು. ಅದನ್ನೂ ಮಾಡಲಿಲ್ಲ. ಸಾವಿರಾರು ಹಾಸಿಗೆ ಸಾಮರ್ಥ್ಯದ ಕೋಚ್‌ಗಳು ರೆಡಿ ಇವೆ, ಅವುಗಳನ್ನು ಒದಗಿಸಲು ರಾಜ್ಯ ಸರಕಾರದಿಂದ ಮನವಿ ಬಂದಿಲ್ಲ ಎಂದು ರೈಲ್ವೆ ಇಲಾಖೆ ಹಲವು ಸಲ ಮಾಧ್ಯಮಗಳ ಮೂಲಕ ಬಹಿರಂಗ ಹೇಳಿಕೆ ನೀಡಿದರೂ ಅದನ್ನು ಬಳಸಿಕೊಳ್ಳುವ ಗೋಜಿಗೇ ಸರಕಾರ ಹೋಗಲಿಲ್ಲ.

    ಈಗ ರೈಲ್ವೆ ಕೋಚ್, ಸಮುದಾಯ ಭವನ, ಕ್ರೀಡಾಂಗಣ, ಹಾಸ್ಟೆಲ್‌ಗಳ ಪಟ್ಟಿ ಮಾಡುತ್ತಿದ್ದಾರೆ. ಹಾಸ್ಟೆಲ್‌ಗಳಲ್ಲಿ ಇರುವವರನ್ನೂ ಏಕಾಏಕಿ ತೆರವುಗೊಳಿಸಲಾಗುತ್ತಿದೆ. ಇದನ್ನೆಲ್ಲ ನೋಡಿದರೆ ರಾಜ್ಯ ಸರಕಾರ, ಬಿಬಿಎಂಪಿಗಳೇ ನಗರದ ಜನರ ಪ್ರಾಣದ ಜತೆ ಚೆಲ್ಲಾಟವಾಡುತ್ತಿವೆ ಎಂಬ ಭಾವನೆ ಮೂಡಿದರೆ ತಪ್ಪಲ್ಲ.

    ಹಳ್ಳಿಗಳಲ್ಲೂ ಮಹಾಸ್ಫೋಟ?
    ಬೆಂಗಳೂರು ಹೊರತುಪಡಿಸಿದರೆ ಉಳಿದ ಜಿಲ್ಲೆಗಳು ಹಾಗೂ ಗ್ರಾಮೀಣ ಪ್ರದೇಶಗಳೇ ಎಷ್ಟೋ ವಾಸಿ. ವಲಸಿಗರ ಸಮಸ್ಯೆ ಇದ್ದರೂ ಜಿಲ್ಲಾಡಳಿತಗಳು ಸಮರ್ಥವಾಗಿ ನಿಭಾಯಿಸುತ್ತಿವೆ. ಹಳ್ಳಿಗಳಲ್ಲಿ ಜನರೇ ಸ್ವಯಂ ದಿಗ್ಬಂಧನ ವಿಧಿಸಿಕೊಳ್ಳುತ್ತಿದ್ದಾರೆ. ಊರಿಗೆ ಯಾರೊಬ್ಬರೂ ಹೊರಗಿನಿಂದ, ಸ್ವತಃ ಮಹಾನಗರಗಳಲ್ಲಿ ಇರುವ ತಮ್ಮೂರಿನ ಜನ ಕೂಡ ಕಾಲಿಡದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಉತ್ತರ ಕನ್ನಡದಂತಹ ಜಿಲ್ಲೆಗಳಲ್ಲಿ ಬೆಂಗಳೂರಿನಿಂದ ಬರುವ ಬಸ್‌ಗಳು ನೇರವಾಗಿ ತಾಲೂಕು ಆಸ್ಪತ್ರೆಗೆ ತೆರಳಿ, ಪ್ರತಿಯೊಬ್ಬರ ಥರ್ಮಲ್ ತಪಾಸಣೆ ಕಡ್ಡಾಯ ಎಂಬ ನಿಯಮ ರೂಪಿಸಿಕೊಂಡಿವೆ. ವಿಶೇಷವಾಗಿ ಗ್ರಾಮ ಪಂಚಾಯಿತಿಗಳು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ.

    ಕಾಯಂ ನಿವಾಸಿ ಅಲ್ಲದ ಯಾರೇ ಊರಿಗೆ ಯಾರಾದರೂ ತಕ್ಷಣದಲ್ಲಿ ಆಶಾ ಕಾರ್ಯಕರ್ತೆಯರಿಗೆ, ಪಂಚಾಯಿತಿಯವರಿಗೆ ಮಾಹಿತಿ ರವಾನೆಯಾಗುವ ವ್ಯವಸ್ಥೆ ಇದೆ. ಗ್ರಾಮ ಪಂಚಾಯಿತಿ ಸದಸ್ಯರು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಅಲ್ಲಿಯೂ ಎಡವಟ್ಟು ಮಾಡಿಕೊಳ್ಳುತ್ತಿದೆ. ಗ್ರಾಮ ಪಂಚಾಯಿತಿಗಳ ಅವಧಿ ಮುಗಿದಿದೆ ಎಂಬ ನೆಪ ಹೇಳಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ.

    ಸುಗ್ರೀವಾಜ್ಞೆ ಮೂಲಕ ಆರು ತಿಂಗಳು ಪಂಚಾಯಿತಿ ಅವಧಿ ವಿಸ್ತರಿಸಿದ್ದರೆ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ. ಈಗ ಆಡಳಿತಾಧಿಕಾರಿಗಳ ಸುಪರ್ದಿಗೆ ಒಪ್ಪಿಸಿ ಮತ್ತೊಂದು ಮಹಾಸ್ಫೋಟಕ್ಕೆ ಮುನ್ನಡಿ ಬರೆದಂತಿದೆ ಸರಕಾರದ ನಡೆ.

    ರಾಜೀವ್ ಫೌಂಡೇಶನ್ನೂ, ಯುಪಿಎ ಸರಕಾರವೂ, ಮೋದಿ ಆಡಳಿತವೂ…

    ನಿಮ್ಮ ವೋಟು ಯಾರಿಗೆ? ಕಾಂಗ್ರೆಸ್ ಗೇ…ಇಂದಿರಾ ಗಾಂಧಿಗೆ….ಹಸು ಕರು ಗುರ್ತಿಗೆ… ಹಾಗೆನ್ನುವ ಘೋಷಣೆಗಳನ್ನು ಕೇಳಿಕೊಂಡೇ ಬೆಳೆದವನು ನಾನು. ಇವುಗಳ ಜೊತೆಯಲ್ಲಿ ಗರೀಬಿ ಹಟವೋ, ಇಪ್ಪತ್ತು ಅಂಶಗಳ ಕಾರ್ಯಕ್ರಮ, ಉಳುವವನೇ ಭೂಮಿಯ ಒಡೆಯ,ಕೊಟ್ಟ ಸಾಲ ಕೊಡಬೇಡಿ… ಎನ್ನುವ ಘೋಷಣೆಗಳೊಂದಿಗೆ ನಿಮ್ಮ ಓಟು ಯಾರಿಗೆ?…ಹಸ್ತದ ಗುರುತಿಗೆ,ಇಂದಿರಾ ಕಾಂಗ್ರೆಸ್ ಗೆ… ಅನ್ನುವುದನ್ನು ಕೇಳುವಾಗ,ನಾನೂ ಗುಂಪಿನಲ್ಲಿ ಹೋಗಿ ಬೊಬ್ಬೆ ಹೊಡೆಯಬೇಕು ಎನ್ನುವ ಆಸೆ. ಆದರೆ ಅಪ್ಪನ ಭಯ.

    ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಅಪ್ಪ,ನಾನು ಸರ್ಕಾರಿ ನೌಕರ,ಹಾಗಾಗಿ ನಮ್ಮ ಮನೆಯಲ್ಲಿ ಇದೆಲ್ಲವೂ ನಿಷಿದ್ಧ. ನಾವ್ಯಾರೂ ರಾಜಕೀಯದ ಬಗ್ಗೆ ಮುಕ್ತವಾಗಿ ಮಾತಾಡುವುದು ಅಪರಾಧ ಎಂದೇ ಅಪ್ಪನ ಅಪ್ಪಣೆ! ಎರಡು ದಿನ ತಡವಾಗಿ ಬರುತ್ತಿದ್ದ ದಿನಪತ್ರಿಕೆ ಹಿಡಿದು,ಸಾಯಂಕಾಲ ಕಟ್ಟೆಗೆ ತನ್ನ ಸ್ನೇಹಿತರೊಂದಿಗೆ ಕುಳಿತುಕೊಳ್ಳುತ್ತಿದ್ದ ಅಪ್ಪ ದೇವರಾಜ್ ಅರಸ್ ಹೀಗೆಂದರು,ವೀರೇಂದ್ರ ಪಾಟೀಲರು ಹೀಗೆಂದರು,ಜಾರ್ಜ್ ಫರ್ನಾಂಡಿಸ್,ರಾಮಕೃಷ್ಣ ಹೆಗಡೆ, ಮಧು ದಂಡವತೆ,ರಾಜ್ ನಾರಾಯಣ್,ಜಯಪ್ರಕಾಶ್ ನಾರಾಯಣ್,ಚರಣ್ ಸಿಂಗ್,ಮೊರಾರ್ಜಿ ದೇಸಾಯಿ ಏನಂತ ತಮ್ಮ ಅಭಿಪ್ರಾಯ ಮಂಡಿಸಿದರು ಅಂತ ಬಲು ಸ್ವಾರಸ್ಯವಾಗಿ ಪೇಪರಿನಲ್ಲಿ ಮುದ್ರಿಸಿದ್ದ ವಿಷಯವನ್ನು ಒಬ್ಬೊರಿಂದ ಒಬ್ಬರಿಗೆ ಹೇಳಿಕೊಳ್ಳುತ್ತಿದ್ದರು.

    8-10 ವರ್ಷದವನಿದ್ದ ನನಗೆ ವಿಷಯ ಅರ್ಥ ಆಗದಿದ್ದರೂ, ಅಪ್ಪನಿಗೆ,ಅವರ ಗೆಳೆಯರಿಗೆ ಕಾಂಗ್ರೆಸ್,ಇಂದಿರಾಗಾಂಧಿ ಎಂದರೆ ಒಳ್ಳೆ ಅಭಿಪ್ರಾಯ ಇಲ್ಲ ಅನ್ನುವುದಂತೂ ಸ್ಪಷ್ಟವಾಗುತ್ತಿತ್ತು. ಇಡೀ ಕಾಂಗ್ರೆಸ್ ಬೆಂಬಲಿಗರಿಂದ ತುಂಬಿದ್ದ ನನ್ನೂರಲ್ಲಿ 2 ಅಥವಾ 3 ಮನೆಗಳು ಮಾತ್ರ ವ್ಯತಿರಿಕ್ತವಾಗಿದ್ದವು. ಚುನಾವಣೆ ಮುಗಿದು,ಫಲಿತಾಂಶ ಬಂದ ದಿನ ನಮ್ಮ ಮನೆಯ ಮುಂದೆ ನಡು ರಾತ್ರಿಯವರೆಗೆ ತಪ್ಪಡಿ ಬಡಿಯುತ್ತ,ಹೆಂಡ ಕುಡಿದ ಜನರ ಕುಣಿತವೋ ಕುಣಿತ, ಅಪ್ಪನನ್ನು ಹಂಗಿಸುವ ರೀತಿ!!!…ಮತ್ತೆಲ್ಲವೂ ಸ್ತಬ್ಧ,ಮತ್ತೆ ಚುನಾವಣೆ ಬರುವ ತನಕ.ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ಸೇ ಗೆಲ್ಲುತ್ತಿದ್ದುದು. ಅದಕ್ಕೆ ವಿರೋಧವೇ ಇರಲಿಲ್ಲ ಎನ್ನಬಹುದು. ಇದ್ದರೂ ಊರಿಗೆ ಒಂದೋ,ಎರಡೋ ಮನೆಗಳು.

    1975 ರ ತುರ್ತುಪರಿಸ್ಥಿತಿ

    ಹತ್ತು ವರ್ಷವಿದ್ದ ನನಗೆ,1975 ರ ತುರ್ತುಪರಿಸ್ಥಿತಿ ಚೆನ್ನಾಗಿಯೇ ನೆನಪಿದೆ. ಹಲವಾರು ರಾಜಕೀಯ ನಾಯಕರ ಹೆಸರುಗಳು ನನಗೆ ಪರಿಚಯವಾದದ್ದೇ ಆಗ. ಕರಾಳ ದಿನಗಳನ್ನು ಅಪ್ಪ ಭಯಂಕರ ಚಿಂತಿತರಾಗಿ, ಕಾಂಗ್ರೆಸ್ ನಡೆಗೆ,ಇಂದಿರಾಗಾಂಧಿ ಎಡೆಗೆ ಅಸಮಾಧಾನ ಹೊರಹಾಕುತ್ತಿದ್ದರು. ಅಪ್ಪಟ ಗಾಂಧೀ ಪ್ರೇಮಿಯಾಗಿದ್ದ ಅಪ್ಪ, ಗಾಂಧಿ,ಸ್ವತಂತ್ರ ಬಂದ ತಕ್ಷಣ, ಕಾಂಗ್ರೆಸ್ ಹೆಸರಿನ ಪಕ್ಷವನ್ನು ವಿಸರ್ಜಿಸಿ ಬಿಡಿ ಅಂದರೂ ನೆಹರು ಕೇಳಲಿಲ್ಲ ಅಂತ ಆಗಾಗ ಹೇಳುತ್ತಿದ್ದರು. 1977 ರ ತುರ್ತುಪರಿಸ್ಥಿತಿ,ನಂತರ ಪ್ರಥಮ ಕಾಂಗ್ರೆಸ್ಸೇತರ,ಜನತಾ ಪಕ್ಷದ ಮೊರಾರ್ಜಿಯವರ ಸರ್ಕಾರ ರಚನೆ,ಮತ್ತೆ ಆರು ತಿಂಗಳಲ್ಲಿ ಚರಣ್ ಸಿಂಗರ ಪತನ,ಮತ್ತೆ ಚುನಾವಣೆ,ಮತ್ತೆ ಇಂದಿರಾಗಾಂಧಿ ಅಧಿಕಾರಕ್ಕೆ ಬಂದಾಗ, ಅಪ್ಪ ವಿರೋಧಪಕ್ಷದವರ ಕಚ್ಚಾಟಕ್ಕೆ ಬೇಸತ್ತು,ಸ್ವಲ್ಪದಿನ ರಾಜಕೀಯ ಮಾತಾಡುವುದನ್ನೇ ಬಿಟ್ಟು ಬಿಟ್ಟಿದ್ದರು!

    ರಾಜಕೀಯಕ್ಕೆ ಪ್ರವೇಶ ಇಲ್ಲ ಎನ್ನುವ ಫಲಕ ಇದ್ದ ಮಲ್ಲಾಡಿಹಳ್ಳಿಯ ಆಶ್ರಮಕ್ಕೆ ಪ್ರೌಢ ಶಿಕ್ಷಣಕ್ಕೆ ಸೇರಿದ ನಂತರ ರಾಜಕೀಯ ನನ್ನಿಂದಲೂ ದೂರ ಆಯ್ತು. ರಜೆಗೆ ಊರಿಗೆ ಹೋದಾಗ,ಯಾವುದಾದ್ರು ಚುನಾವಣೆ ಬಂದವು ಅಂದ್ರೆ ಜನತಾಪಕ್ಷದ ನೇಗಿಲು ಹೊತ್ತ ರೈತ ನ ಪರ ಪ್ರಚಾರಕ್ಕೆ ಅಪ್ಪನ ಬೈಗುಳದ ನಡುವೆಯೂ ಊರೂರು ತಿರುಗುತ್ತಿದ್ದೆ. ಆಗ ಅದೆಲ್ಲ ಏನೋ ಖುಷಿಯ ವಿಚಾರ. ಕಾಂಗ್ರೆಸ್ ನವರಿಗೆ ಹಣ ಸಿಕ್ಕಾಪಟ್ಟೆ ಮೇಲಿಂದ ಬರುತ್ತಿತ್ತು. ಜನತಾ ಪಕ್ಷದವರಿಗೆ ಹಣವೇ ಇಲ್ಲ. ಕಾರ್ಯಕರ್ತರೇ ವಂತಿಗೆ ಹಾಕಿಕೊಂಡು ಪ್ರಚಾರ ಮಾಡಬೇಕಾದ ಸ್ಥಿತಿ ಆಗ.

    ಮೌಲ್ಯಾಧಾರಿತ ರಾಜಕೀಯ

    1983 ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಮೌಲ್ಯಾಧಾರಿತ ರಾಜಕೀಯ ಎನ್ನುವ ಹೊಸ ಶಬ್ದದೊಂದಿಗೆ ರಾಜ್ಯವಾಳುವಾಗ, ನಾನು ಸುರತ್ಕಲ್ ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದಿದ್ದೆ. ಅಲ್ಲಿಯ ವಿದ್ಯಾರ್ಥಿ ಜೀವನದಲ್ಲಿ ಬೇರೆ ಯಾವ ವಿಷಯಕ್ಕೂ ಸಮಯವೇ ಇರುತ್ತಿರಲಿಲ್ಲ. ಹೀಗೆ ನನ್ನ ಬಾಲ್ಯದ ರಾಜಕೀಯ ಯಾವಾಗಲೋ ಒಮ್ಮೆ ತವರಿಗೆ ಬಂದ ಹೆಣ್ಣಿನ ಸ್ಥಿತಿಯಂತೆ ಇತ್ತು. ನಂತರ ಯಾಕೋ ರಾಜಕೀಯ ಹೇಸಿಗೆ ಅನ್ನುವಷ್ಟು ಬೇಸರವಾಗಿ ಅದರ ತಂಟೆಗೇ ಹೋಗುವುದನ್ನು ಬಿಟ್ಟುಬಿಟ್ಟಿದ್ದೆ. ಆದರೂ ರಾಜಕೀಯ ಬೆಳವಣಿಗೆಗಳ ಅರಿವು ಇತ್ತು.

    ಬಹಳ ದಿನಗಳ ವರೆಗೆ ನಮ್ಮೂರಲ್ಲಿ ಕಾಂಗ್ರೆಸ್,ಜನತಾ ಪಕ್ಷ(ದಳ) ಇದ್ದವೇ ಹೊರತು ಬಿಜೆಪಿ ಇರಲೇ ಇಲ್ಲ. ಇನ್ನು ರಾಮಕೃಷ್ಣ ಹೆಗಡೆಯಂತಹ ಮೌಲ್ಯಾಧಾರಿತ ನಾಯಕನನ್ನು ಆಗಿನ ಅವರದೇ ಪಕ್ಷದವರು ಅವಮಾನ ಮಾಡಿದ್ದ ರೀತಿ ಬಹಳ ಕಾಲದವರೆಗೆ ನನ್ನಲ್ಲಿ ಬೇಸರ ತರಿಸಿತ್ತು. ರಾಜಕೀಯಕ್ಕೆ ಬೇರೆಯೇ ತೆರನಾದ ವ್ಯಕ್ತಿತ್ವ ಬೇಕೇನೋ ಎನ್ನುವಷ್ಟು ನಿರಾಶೆ ಹೊಂದಿ,ಅದರಿಂದ ದೂರ ಆಗಿದ್ದೆ. ಆಗ ವೃತ್ತ ಪತ್ರಿಕೆಗಳೊಂದೇ ಮಾಧ್ಯಮಗಳಾಗಿದ್ದು,ಈಗಿನಷ್ಟು ಕಳಪೆ,ಅಮೌಲ್ಯಯುತವಾಗಿರಲಿಲ್ಲ. ಸ್ವಲ್ಪ ಮಟ್ಟಿಗೆ ಪ್ರಜಾಪ್ರಭುತ್ವದ ನಾಲ್ಕನೇ ಸ್ಥoಭವಾಗಿ ಕೆಲಸ ಮಾಡಿದ್ದಿದೆ.

    ಕಾರ್ಯಾಂಗ, ಶಾಸಕಾಂಗ ಒಂದು ನಿರ್ದಿಷ್ಟ ಕುಟುಂಬದ ಒಡೆತನದಲ್ಲಿದ್ದಾಗ, ಬಹುತೇಕ ದೇಶವಾಸಿಗಳೂ ಅದಕ್ಕೇ ಬೆಂಬಲವಾಗಿದ್ದಾಗ,ನಿರಂಕುಶ ಆಡಳಿತದ ಎಲ್ಲ ಲಕ್ಷಣಗಳೂ ಬರಿ ಕಣ್ಣಿಗೆ ರಾಚುತ್ತಿದ್ದಾಗ,ತುರ್ತುಪರಿಸ್ಥಿತಿಯಂತಹ ಕರಾಳ ವ್ಯವಸ್ಥೆಯನ್ನು ಸಹಿಸಿಕೊಂಡು,ಪ್ರಜಾಪ್ರಭುತ್ವ ಇಂದು ಜೀವಂತವಾಗಿದೆ ಎಂದರೆ,ಅದರ ಶ್ರೇಯಸ್ಸು,ನ್ಯಾಯಾಂಗ ಮತ್ತು ಪತ್ರಿಕಾ ಮಾಧ್ಯಮಕ್ಕೆ ಸಲ್ಲಬೇಕು. ವಿರೋಧ ಪಕ್ಷಗಳು,ಎಡರಂಗ ಗಳು ಇದ್ದವಾದ್ರೂ,ಯಾವಾಗ ಎಲ್ಲರೂ ಅಧಿಕಾರ,ಹಣಕ್ಕಾಗಿ ಒಂದಾಗಿ, ಜನರನ್ನು, ಪಕ್ಷಗಳ ಸಿದ್ಧಾಂತಗಳನ್ನು ಗಾಳಿಗೆ ತುರಿಬಿಡುತ್ತಾರೋ ಎನ್ನುವಂತಹ ದುಗುಡು ಯಾವಾಗಲೂ ಇರುತ್ತಿತ್ತು. ಕಾಂಗ್ರೆಸ್ ಬಿಟ್ಟರೆ,ಬೇರ್ಯಾರೂ ಸ್ಥಿರ ಸರ್ಕಾರ ಕೊಡಲು ಸಾಧ್ಯವೇ ಇಲ್ಲ ಎನ್ನುವಂತಹ ಅಸಹಾಯಕ ಸ್ಥಿತಿಯಲ್ಲಿ ಕಾಂಗ್ರೆಸ್ಸೇತರರು ಚುನಾವಣೆಗಳಲ್ಲಿ ಭಾಗವಹಿಸುವುದನ್ನೇ ನಿಲ್ಲಿಸಿದ್ದಂತಹ ಕಾಲ ಅದು. ಮತದಾನ ಪ್ರತಿಶತ 40-45 ಇರುತ್ತಿತ್ತು ಎಂದ್ರೆ, ಯಾರಾದ್ರೂ ಊಹಿಸಿಕೊಳ್ಳಿ,ಅಂದಿನ ರಾಜಕೀಯವನ್ನು. ಅಂತಹ ರಾಜಕೀಯ ವಾತಾವರಣ,ಇಂದಿರಾ ಮತ್ತು ರಾಜೀವರ ಹತ್ಯೆಗಳಲ್ಲಿ ಪರ್ಯಾವಸನ ವಾಗಬಹುದು ಅಂತ ಯಾರೂ ಊಹಿಸಲು ಸಾಧ್ಯವೇ ಇರಲಿಲ್ಲ.ನಂತರ ಭಾರತದಲ್ಲಿ ಆರ್ಥಿಕ ಸುಧಾರಣೆಗಳಿಗೆ ಅಡಿಪಾಯ ಹಾಕಿದ ನರಸಿಂಹರಾಯರ ಆಡಳಿತವನ್ನು ನೋಡಿ ಆಯಿತು. ಈ ವರ್ಷ ನರಸಿಂಹಾರಾಯರ ಜನ್ಮ ಶತಮಾನೋತ್ಸವ. ತೆಲಾಂಗಣ ಸರಕಾರ ಅದನ್ನು ಆಚರಿಸುತ್ತಿದೆ. ಬಹುಶಃ ಕಾಂಗ್ರೆಸ್ ಪಕ್ಷಕ್ಕೆ ತಮ್ಮದೆ ಪಕ್ಷದ ನಾಯಕನೊಬ್ಬನ ಜನ್ನಮ ಶತಮಾನೋತ್ಸವ ಎಂಬುದು ನೆನಪಿದೆಯೋ ಕಾಣೆ.

    ಲಂಚ ಕೊಟ್ಟರೆ,ಭಾರತದಲ್ಲಿ ದೆಹಲಿಯಿಂದ ಹಳ್ಳಿಯವರೆಗೆ ಯಾವ ಸರ್ಕಾರಿ ಕೆಲಸ ಬೇಕಾದ್ರೂ ಮಾಡಿಕೊಳ್ಳಬಹುದು ಎನ್ನುವ ಅಂಶ ಸಾರ್ವತ್ರಿಕವಾಗಿ ಜನರಲ್ಲಿ,ನಾಯಕರಲ್ಲಿ,ಅಧಿಕಾರಿಗಳಲ್ಲಿ ಮನೆ ಮಾಡಿಕೊಂಡು ಬಿಟ್ಟಿತ್ತು. ರಾಜಕೀಯ, ಸರ್ಕಾರ,ನೌಕರಿ ಕೆಲವೇ ಕೆಲವು ಜನಕ್ಕೆ ಬಿಟ್ಟರೆ, ಸಾಮಾನ್ಯ ಜನಗಳಿಗೆ ಎಟುಕದ ಮತ್ತು ಸಂಬಂಧ ಇಲ್ಲದ ವಿಷಯಗಳು ಎನ್ನುವ ಹಣೆ ಪಟ್ಟ ಹೊತ್ತು ಗಾಢವಾದ ನಿದ್ರೆಯಲ್ಲಿ ಸಮಾಜ ಮಲಗಿಬಿಟ್ಟಿತ್ತು. ಆಗ ವಾಜಪೇಯಿ ಬಂದ್ರು. ಜನಗಳಿಗೆ ಏನೋ ಆಸೆ. ಉ ಹುಂ…ಬಹುಮತವಿಲ್ಲದೆ, ಹಲವಾರು ಸಿದ್ಧಾಂತಗಳ ಪಕ್ಷಗಳೊಡನೆ ಅಧಿಕಾರ ನಡೆಸಿದ್ದೇ ಸಾಹಸ ಎಂಬಂತಾಗಿ,ಅಂತಹ ಮುತ್ಸದ್ದಿಯೇ ಇನ್ನು ಏನಿದ್ದರೂ ಸಮ್ಮಿಶ್ರ ಸರ್ಕಾರಗಳ ಕಾಲ, ಏಕ ಪಕ್ಷ ಆಡಳಿತ ಕೊನೆಯಾಗಲಿದೆ ಅಂತ ಹೇಳಿದಾಗ ನಾನಂತೂ ಬಹುವಾಗಿ ನೊಂದಿದ್ದೆ.

    90 ಬಂದವನು ಜವಾನನಾಗಿ,40 ಬಂದವನು ದಿವಾನರಾಗಿದ್ದ ದಿನಗಳನ್ನು ನೋಡಿದ್ದ ನಾನು, 20 ಸೀಟ್ ಪಡೆದ ಪಕ್ಷದವರು ದೆಲ್ಲಿಯ ಗದ್ದುಗೆ ಹಿಡಿದದ್ದೂ ನೋಡಿದೆ. ಇತ್ತೀಚೆಗೆ, 224 ಸೀಟ್ ಗಳ ಕರ್ನಾಟಕ ವಿಧಾನ ಸಭೆಯ ಅತಿರಥ,ಮಹಾರಥರು ತೆಪ್ಪಗೆ ಕುಳಿತು,35-40 ಇದ್ದವರು ಆಡಳಿತ ಮಾಡುವುದನ್ನು ನೋಡಿಯೂ ಆಯ್ತು.

    ನರಸಿಂಹರಾಯರ ಸರಕಾರದಲ್ಲಿ ಸಕ್ರಿಯರಾಗಿದ್ದ ಮನಮೋಹನ ಸಿಂಗ್ ಅವರು ತಾವೇ ಪ್ರಧಾನಿ ಆದಗ ಮಹಾಮೌನಿಯಾದರು. ಅಸಹ್ಯ ಎನ್ನುವಷ್ಟು ಹಗರಣಗಳು ನಡೆದವು. ದಿನವೂ ಹಗರಣ ಕೇಳುತ್ತಿದ್ದ ಜನರು,ಇಷ್ಟೆಲ್ಲಾ ಹಳ್ಳಿಯಿಂದ, ದಿಲ್ಲಿಯವರೆಗೆ, ಚುನಾಯಿತರು ದೇಶವನ್ನು ಕೊಳ್ಳೆ ಹೊಡೆದರೂ ಭಾರತ ಉಸಿರಾಡುತ್ತಿದೆಯಲ್ಲ,ಇನ್ನೆಷ್ಟು ಶ್ರೀಮಂತವಾಗಿರಬೇಕು ನನ್ನ ಭಾರತ ಅಂತ ಅದರಲ್ಲೇ ಶ್ರೇಷ್ಟತೆ ಗುರುತಿಸಿ,ಬೆನ್ನು ತಟ್ಟಿಕೊಳ್ಳುವ ಜನರ ಮಧ್ಯದಿಂದ ಬಂದ ನೋಡಿ ನರೇಂದ್ರ ದಾಮೋದರ ಮೋದಿ. ವಾಜಪೇಯಿ ಯನ್ನೇ ನೋಡಿದ್ದ ಜನ,ಅಡ್ವಾಣಿ,ಸುಷ್ಮಾ ಸ್ವರಾಜ್ ಅಂತಹ ಘಟಾನುಘಟಿಗಳನ್ನು ಹಿಂದಿಕ್ಕಿ ಸಂಸದ್ ಭವನದ ಮೆಟ್ಟಿಲಿಗಳಿಗೆ ತಲೆ ಬಾಗಿ ವಂದಿಸಿ ಮೊದಲ ಬಾರಿಗೇ ಪ್ರಧಾನಿ ಪಟ್ಟ ಏರಿ ಎಲ್ಲರ ಗಮನ ಸೆಳೆದಿದ್ದರು. ಅಲ್ಲಿಯತನಕದ ಭಾರತದ ಇತಿಹಾಸದಲ್ಲಿ ಹಗರಣ ರಹಿತ ಸರ್ಕಾರ ಎನ್ನಿಸಿಕೊಂಡು ದಿವಾಳಿ ಭಾರತ ವನ್ನು ಸ್ವಚ್ಛ ಭಾರತ ಅಂತ ಎತ್ತಿ ನಿಲ್ಲಿಸಿದ್ದು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಿಂದ ಬರೆಯಲ್ಪಡುತ್ತದೆ.

    ರಾಜೀವ್ ಗಾಂಧೀ ಫೌಂಡೇಶನ್ ವಿವಾದ

    2014 ರ ತನಕ ಕಾಂಗ್ರೆಸ್ ಮಾಡಿದ ಅವಾಂತರ …4G ಹಗರಣ, ಕಾಮನ್ವೆಲ್ತ್ ಗೇಮ್ ಹಗರಣ, ಕಲ್ಲಿದ್ದಲು ಹಗರಣ ಎಲ್ಲ ಅವರ ಕಾಲಾವಧಿಯಲ್ಲೇ ಬಯಲಿಗೆ ಬಂದು,ಸರ್ಕಾರದ ಪಾಲುದಾರರೇ ಜೈಲಿನ ಪಾಲಾಗಿದ್ದು ಒಂದೆಡೆ ಆದರೆ, ಯಾರಿಗೂ ಗೊತ್ತಾಗದ ಹಾಗೆ ಖಾಸಗಿ ಒಡೆತನದ ರಾಜೀವ್ ಗಾಂಧೀ ಫೌಂಡೇಶನ್ ಗೆ ಸರಕಾರಿ ಉದ್ಯಮಗಳಿಂದ ದೇಣಿಗೆ ಹೋಗುತ್ತಿತ್ತು ಎಂಬ ಸಂಗತಿ ಬೆಚ್ಚಿ ಬೀಳಿಸಿದೆ.ಸಾರ್ವಜನಿಕರು PMNRF ಗೆ ಕೊಟ್ಟ ಹಣವನ್ನು ರಾಜೀವಗಾಂಧಿ ಫೌಂಡೇಶನ್ ಟ್ರಸ್ಟ್ ಎನ್ನುವ ಖಾಸಗಿ ಸಂಸ್ಥೆಗೆ ವರ್ಗಾಯಿಸಿಕೊಂಡಿದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.ಚೀನಾದಿಂದಲೂ ಈ ಫೌಂಡೇಶನ್ ಗೆ ಹಣ ಬಂದಿರುವುದು ಈಗ ಮತ್ತೊಂದು ವಿವಾದ.

    ಸಮಾಜವಾದದ ಹಿನ್ನೆಲೆಯಿಂದ,ಜಾತ್ಯಾತೀತರಾಗಿ ಗುರುತಿಸಿಕೊಂಡಿರುವ, ಕಾಂಗ್ರೆಸ್ ನ ವಂಶ ಪಾರಂಪರ್ಯ ನಾಯಕತ್ವ ವನ್ನು ಧಿಕ್ಕರಿಸಿದಂತಹ ದೇವೇಗೌಡರು, 2019 ರ ಚುನಾವಣೆಯಲ್ಲಿ ಸೋತು, ತಮ್ಮ 88ನೇ ತಾರುಣ್ಯದಲ್ಲಿ ಕಾಂಗ್ರೆಸ್ ಸಹಾಯದಿಂದ ರಾಜ್ಯಸಭೆಗೆ ಹೋದ ಮರುದಿನವೇ ಹೇಳ್ತಾರೆ… ಮೋದಿಯವರೇ ದೇಶದಲ್ಲಿ ರಾಷ್ಟ್ರೀಯತೆ ಹೆಚ್ಚಾಗ್ತಿದೆ,ದಯಮಾಡಿ ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳಿ ಅಂತ!

    ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ 32 ಲಕ್ಷ ಕೋಟಿಗಳಷ್ಟು ಸಾಲ ಪಡೆದು,ದೇಶಬಿಟ್ಟು ಹೋಗಿರುವ ಕಳ್ಳರನ್ನು ಹಿಡಿದು ತರಲು ಮೋದಿ ಶ್ರಮಿಸುತ್ತಿದ್ದರೆ, ಯಾರೊಬ್ಬರೂ ಪ್ರಶಂಸಿವುದು ಇರಲಿ,ಸೌಜನ್ಯದ ಸಹಕಾರವನ್ನೂ ಕೊಡದೆ,ಉಲ್ಟಾ ಇವರು ಮಾಡಿರುವ ತಪ್ಪುಗಳನ್ನೆಲ್ಲ ಮೋದಿ ಮೇಲೆ ಹಾಕಿ ಮಾತಾಡುತ್ತಾರಲ್ಲ,ಇನ್ನೆಂತಹ ಧೈರ್ಯ ಇವರದ್ದು?

    ವಿನಾಶದತ್ತ ಹೊರಟಿದ್ದ ಭಾರತವನ್ನು ರಕ್ಷಿಸಿದ ಕೀರ್ತಿ ಮೋದಿಗೆ ಇತಿಹಾಸ ಸಲ್ಲಿಸುತ್ತದೆ,ಅದರಲ್ಲಿ ಯಾವ ಸಂಶಯವೂ ಬೇಡ. ಅಪರೂಪಕ್ಕೆ ಸಿಕ್ಕ ಇಂತಹ ನಾಯಕನನ್ನು ಗೌರವಿಸಿ,ಅನುಸರಿಸುವುದು,ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ ಆಗುವುದು ಯಾವಾಗ? ಒಳಿತು,ಕೆಡುಕುಗಳು ಕಣ್ಣ ಮುಂದೆ ಸ್ಪಷ್ಟವಾಗಿ ಇದ್ದರೂ ಪ್ರಜೆಗಳು ಯಾವುದೋ ಮಂಕುಜಾಲದಲ್ಲಿ ಬಿದ್ದ ಹಾಗೆ ವರ್ತಿಸುವುದನ್ನು ಕಂಡಾಗ ತುಂಬಾ ನೋವಾಗುತ್ತದೆ.

    ಆನೆ ನಡೆದಿದ್ದೇ ದಾರಿ, ಪೇಟೆ ಪ್ರದರ್ಶಿಸಿದ್ದೇ ಸರಿ

    ಇಂದಿನ ದಿನಗಳಲ್ಲಿ ಷೇರುಪೇಟೆ ಹೂಡಿಕೆಯು ಸ್ವಲ್ಪ ಮಟ್ಟಿನ ಯಶಸ್ಸು ಕಾಣಬೇಕಾದರೆ ಕೆಲವು ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳಲೇಬೇಕು ಕಾರಣ ಮಂತ್ರಕ್ಕಿಂತ ಮಾತೇ ಹೆಚ್ಚು ಎಂಬುವ ಪರಿಸ್ಥಿತಿ ಯಲ್ಲಿದ್ದೇವೆ. ಅಂದರೆ ಆಂತರಿಕ ಸಾಧನೆ ಇಲ್ಲದಿದ್ದರೂ ಅಲಂಕಾರಿಕ ಪ್ರಚಾರದಿಂದ ಷೇರಿನ ಬೆಲೆಗಳು ಗಗನಕ್ಕೇರುತ್ತಿವೆ

    ಹೂಡಿಕೆಮಾಡಿದ ಹಣದ ಸುರಕ್ಷತೆಯನ್ನು ಸೂತ್ರವಾಗಿಸಿಕೊಂಡು, ಚಟುವಟಿಕೆ ಜಾಲ ಹರಡಬೇಕಾಗಿದೆ

    ಸ್ಪರ್ಧಾತ್ಮಕವಾಗಿರುವ ಈಗಿನ ಸಮಯದಲ್ಲಿ ದೊರೆತಂತಹ ಲಾಭಗಳಿಕೆಯ ಅವಕಾಶವನ್ನು ಕೈಗೆಟುಕಿಸಿಕೊಳ್ಳುವುದು ಅನಿವಾರ್ಯ. ಕಾರಣ ಹಣಗಳಿಕೆಯೊಂದೇ ಇಂದಿನ ವಹಿವಾಟುದಾರರ ಗುರಿ. ಬೆಲೆ ಏರಿಕೆ ಸ್ಥಿರತೆ ಕಾಣಲು ಕಾರ್ಪೊರೇಟ್ ಸಾಧನೆಗಳು ಬೆಂಬಲಿಸುವ ಮಟ್ಟದಲ್ಲಿಲ್ಲ.

    ಸಾಧ್ಯವಾದಷ್ಟು ಅಗ್ರಮಾನ್ಯ ಕಂಪೆನಿಗಳನ್ನೇ ಹೂಡಿಕೆಗೆ ಆಯ್ಕೆಮಾಡಿಕೊಳ್ಳುವುದು ಸೂಕ್ತ. ಕಾರಣ ಇಂತಹ ಕಂಪನಿಗಳಲ್ಲಿ ಹೂಡಿಕೆದಾರರ ಆಸಕ್ತಿ ಹೆಚ್ಚಾಗಿದ್ದು, ಡೆರಿವೆಟೀವ್ಸ್ ಪೇಟೆಗನುಗುಣವಾಗಿ ಬದಲಾಗುವುದರಿಂದ ಅಪಾಯದ ಮಟ್ಟ ಕಡಿಮೆಯಾಗಿರುತ್ತದೆ. ಒಂದು ವೇಳೆ ಹೂಡಿಕೆ ಧೀರ್ಘಕಾಲವಾದರೆ ಡಿವಿಡೆಂಡ್ ವಿತರಿಸುವ ಸಾಧ್ಯತೆ ಇರುತ್ತದೆ.

    ಇಂದಿನ ದಿನಗಳಲ್ಲಿ ಹೂಡಿಕೆಯು ಸ್ವಲ್ಪ ಮಟ್ಟಿನ ಯಶಸ್ಸು ಕಾಣಬೇಕಾದರೆ ಸರಳ ಸೂತ್ರಗಳು:

    • ಹೂಡಿಕೆಮಾಡಿದ ಹಣದ ಸುರಕ್ಷತೆಕಡೆ ಹೆಚ್ಚು ಗಮನ ನೀಡಬೇಕು.
    • ಸ್ಪರ್ಧಾತ್ಮಕವಾಗಿರುವ ಈಗಿನ ಸಮಯದಲ್ಲಿ ದೊರೆತಂತಹ ಲಾಭಗಳಿಕೆಯ ಅವಕಾಶವನ್ನು ಕೈಗೆಟುಕಿಸಿಕೊಳ್ಳುವುದು ಅನಿವಾರ್ಯ.
    • ಸಾಧ್ಯವಾದಷ್ಟು ಅಗ್ರಮಾನ್ಯ ಕಂಪೆನಿಗಳನ್ನೇ ಹೂಡಿಕೆಗೆ ಆಯ್ಕೆಮಾಡಿಕೊಳ್ಳುವುದು ಸೂಕ್ತ.
    • ವ್ಯಾಲ್ಯೂ ಪಿಕ್ – ಪ್ರಾಫಿಟ್ ಬುಕ್ ಇಂದಿನ ಅಗತ್ಯ.
    • ಕಂಪೆನಿಗಳ ಆಂತರಿಕ ಸಾಧನೆಗೆ ಹೆಚ್ಚು ಪ್ರಾಶ್ಯಸ್ತ್ಯವಿರಲಿ.
    • ಕಾರ್ಪೊರೇಟ್ ಫಲಗಳನ್ನು ವಿತರಿಸುವ ಕಂಪೆನಿಗಳತ್ತ ಹೆಚ್ಚು ಒಲವಿರಲಿ.
    • ಹೂಡಿಕೆ ದೀರ್ಘಕಾಲೀನವಾದರೂ – ಲಾಭಕಾಲೀನವಾಗಿರಲಿ, ದೊರೆತಂತಹ ಲಾಭದ ಅವಕಾಶ ನಗದೀಕರಣಕ್ಕೆ ಆದ್ಯತೆಯಿರಲಿ.
    • ವಿಶ್ಲೇಷಣೆಗಳನ್ನು ಆಲಿಸಿ, ತುಲನೆಮಾಡಿ ವಾಸ್ತವ ಪೇಟೆಯ ಪರಿಸ್ಥಿತಿಯನ್ನಾಧರಿಸಿ ನಿರ್ಧರಿಸಿರಿ

    ವ್ಯಾಲ್ಯೂ ಪಿಕ್ – ಪ್ರಾಫಿಟ್ ಬುಕ್ ಇಂದಿನ ಅಗತ್ಯ. ಕಾರಣ ರಭಸದ ಏರಿಳಿತಗಳಿದ್ದಲ್ಲಿ ಮಾತ್ರ ವಹಿವಾಟುದಾರರು ಲಾಭ ಗಳಿಸಲು ಸಾಧ್ಯ. ಉದಾಹರಣೆಗೆ ಬಯೋಕಾನ್, ಬಜಾಜ್ ಫೈನಾನ್ಸ್, ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಿಹೆಚ್ಇಎಲ್, ಭಾರತ್ ಪೆಟ್ರೋಲಿಯಂ, ಮುಂತಾದವು ಜೀಕುತ್ತಾ ಪ್ರದರ್ಶಿಸಿದ ಅವಕಾಶಗಳು ಅಪಾರ.

    ಕಂಪೆನಿಗಳ ಆಂತರಿಕ ಸಾಧನೆಗೆ ಹೆಚ್ಚು ಪ್ರಾಶ್ಯಸ್ತ್ಯವಿರಲಿ. ಕಾರಣ ಈ ಕಂಪನಿಗಳು ಕಾರ್ಪೊರೇಟ್ ಫಲಗಳನ್ನು ವಿತರಿಸುವ ಸಾಧ್ಯತೆ ಹೆಚ್ಚು.

    ಅಪಾರವಾದ ಏರಿಳಿತದ ಈ ದಿನಗಳಲ್ಲಿ ಹೂಡಿಕೆ ದೀರ್ಘಕಾಲೀನವಾದರೂ – ಲಾಭಕಾಲೀನವಾಗಿರಲಿ, ದೊರೆತಂತಹ ಲಾಭದ ಅವಕಾಶ ನಗದೀಕರಣಕ್ಕೆ ಆದ್ಯತೆಯಿರಲಿ. ಹಾಗಿದ್ದಲ್ಲಿ ಮಾತ್ರ ಹೂಡಿಕೆ ಮಾಡಿದ ಬಂಡವಾಳ ಸುರಕ್ಷತೆ ಕಾಣಬಹುದು.

    ಮಾಧ್ಯಮಗಳಲ್ಲಿ ಪ್ರಸಾರವಾಗುವ ವಿಶ್ಲೇಷಣೆಗಳನ್ನು ಆಲಿಸಿ, ತುಲನೆಮಾಡಿ ವಾಸ್ತವ ಪೇಟೆಯ ಪರಿಸ್ಥಿತಿಯನ್ನಾಧರಿಸಿ ನಿರ್ಧರಿಸಿರಿ. ಯಾವ ವಿಶ್ಲೇಷಣೆಗಳು ಪರಿಪೂರ್ಣವಾಗಿರದು.

    ನೆನಪಿರಲಿ ಆನೆ ನಡೆದಿದ್ದೇ ದಾರಿ, ಪೇಟೆ ಪ್ರದರ್ಶಿಸಿದ್ದೇ ಸರಿ

    ಚಿತ್ರ ಸೌಜನ್ಯLorenzo from Pexels

    ನಿನ್ನ ನೀ ಪ್ರೀತಿಸು

    ಉದ್ಯೋಗ ಸಿಕ್ಕಿದ್ದು, ನನ್ನ ಪಾಲಿಗೆ ದಕ್ಕಿದ ಪುಣ್ಯವೆಂದೇ ಭಾವಿಸಿ ಕಂಪನಿಯೊಂದಕ್ಕೆ ಕೆಲಸಕ್ಕೆ ಸೇರಿರುತ್ತೇವೆ. ಕ್ರಮೇಣ ಅಲ್ಲಿನ ವ್ಯವಸ್ಥೆಗಳಿಗೆ (ಅದು ಹೇಗೇ ಇದ್ದರೂ) ಹೊಂದಿಕೊಳ್ಳುತ್ತಾ ಬದುಕು ಕಟ್ಟಿಕೊಳ್ಳಲು ಶುರು ಮಾಡಿರುತ್ತೇವೆ. ವರ್ಷ ಕಳೆದಂತೆ ಆ ಸಂಸ್ಥೆಯೊಂದಿಗೆ ಅದೇನೋ ಒಂದು ರೀತಿಯ ಬಂಧ ಇನ್ನಿಲ್ಲದಂತೆ ಬೆಳೆದು ಬಿಟ್ಟಿರುತ್ತದೆ.

    ಏಳೆಂಟು ವರ್ಷ ದುಡಿದರೂ ಒಂದು ಪ್ರೊಮೋಷನ್ ಇರುವುದಿಲ್ಲ, ಹೇಳಿಕೊಳ್ಳುವಂತಹ ಹೈಕ್ ಕೂಡಾ ಸಿಕ್ಕಿರುವುದಿಲ್ಲ, ಅದೆಲ್ಲಾ ನಾಳೆಗೆ ಸರಿ ಹೋಗುತ್ತದೆ ಎನ್ನುವ ನಂಬಿಕೆಯೂ ಅಲ್ಲಿಲ್ಲ. ಆದರೂ ಅಲ್ಲಿಂದ ಸ್ವತಃ ತಾನೇ ಗಟ್ಟಿ ಮನಸ್ಸು ಮಾಡಿ ಎದ್ದು ಹೋಗುವುದಕ್ಕೆ ಮನಸ್ಸು ಮಾಡಿರುವುದಿಲ್ಲ. ಯಾಕಂದರೆ ತಮ್ಮದೇ ಸಂಸ್ಥೆಯೆಂಬಂತೆ ನಿತ್ಯ ದುಡಿಯುತ್ತೇವೆ. ನಿಯತ್ತಿನಿಂದ ಕೆಲಸ ಮಾಡಿರುತ್ತೇವೆ. ಅದುವೇ ಜೀವನ ಎಂಬಂತೆ ಅದೇ ವೃತ್ತಿಯಲ್ಲಿ ಹೊಂದಿಕೊಂಡು ಕೆಲಸ ಮಾಡುತ್ತೇವೆ. ನನಗೆ ಋಣ ಇರುವವರೆಗೂ ಅಲ್ಲಿ ದುಡಿಯುತ್ತೇನೆ ಎನ್ನುವ ನೆಪ ಹೇಳಿಕೊಂಡು ಅಲ್ಲೇ ಇರಲು ಪ್ರಯತ್ನಿಸುತ್ತೇವೆ.

    ಕಂಫರ್ಟ್‍ಝೋನ್

    ಸಂಸ್ಥೆಯೊಂದಿಗೆ ನಿಷ್ಠುರವಾಗಿ ದುಡಿಯುವ ಕೆಲವರಿಗೆ ನಾನು ಇದ್ದಷ್ಟೂ ಸಮಯ ಅಲ್ಲಿ ಯಾವುದೇ ರೀತಿಯ ನನ್ನ ಬೆಳವಣಿಗೆಗೂ ಅವಕಾಶ ಇರುವುದಿಲ್ಲ ಅನ್ನೋದು ಗೊತ್ತು. ಆದರೂ ಅಲ್ಲೇ ಉಳಿಯುತ್ತಾನೆ. ಯಾಕಂದರೆ ಅಲ್ಲಿ ಕೆಲಸ ಮಾಡುವುದರ ಜತೆಗೆ ಅಲ್ಲೊಂದು ಕಂಫರ್ಟ್‍ಝೋನ್ ಸೃಷ್ಟಿಸಿಕೊಂಡುಬಿಟ್ಟಿರುತ್ತೇವೆ.
    ಕಚೇರಿಯಲ್ಲಿನ ವಾತಾವರಣ, ನಮ್ಮ ವೃತ್ತಿ ಬಗೆಗೆ ನಮಗೇ ಇರುವ ಅಪನಂಬಿಕೆ, ಆಫೀಸ್ ಪಾಲಿಟಿಕ್ಸ್, ಹೀಗೆ ಹಲವು ವಿಚಾರಗಳು ಆಗಾಗ್ಗೆ ಮನಸ್ಸಿಗೆ ಬಂದು ಗೊಂದಲ ಸೃಷ್ಟಿಸುತ್ತಿರುತ್ತದೆ. ಇದರ ಫಲಿತಾಂಶ ಕೇವಲ ನಮ್ಮ ಮೇಲೇ ನಮಗೆ ಉಂಟಾಗುವ ಅಪನಂಬಿಕೆ ಮತ್ತು ಖಿನ್ನತೆ.

    ಅದರ ಮಧ್ಯೆ ಒಮ್ಮೆ ಉದ್ಯೋಗ ಕಳೆದುಕೊಂಡ ಮೇಲೆ ಬೇರೆ ದಾರಿ ಇಲ್ಲವೇನೋ ಎಂಬಂತೆ ಕುಸಿದು ಕುಳಿತು ಬಿಡುತ್ತಾನೆ. ಆದರೆ ಜಗತ್ತಿನಲ್ಲಿ ಪರಿಸ್ಥಿತಿ ಖಂಡಿತಾ ಹಾಗಿರುವುದಿಲ್ಲ. ಮಾಡಲು ಮನಸ್ಸಿದ್ದರೆ ಅವಕಾಶಗಳು ಹಲವು. ಬದುಕು ಕಟ್ಟಿಕೊಳ್ಳಲು ನೂರಾರು ದಾರಿ ಇವೆ. ಅದನ್ನು ನಾವೇ ಕಂಡುಕೊಳ್ಳಬೇಕಷ್ಟೇ.ಹಿರಿಯರೊಬ್ಬರು ಹೇಳಿದ ಪ್ರಸಿದ್ಧ ಮಾತು “ನಿಮ್ಮ ಕೆಲಸವನ್ನು ಪ್ರೀತಿಸಿ, ಸಂಸ್ಥೆಯನ್ನಲ್ಲ. ಯಾಕಂದರೆ ಕಂಪನಿ ಯಾವಾಗ ನಿಮ್ಮನ್ನು ಪ್ರೀತಿಸುವುದನ್ನು ನಿಲ್ಲಿಸುತ್ತದೋ ಗೊತ್ತಿಲ್ಲ’ ಎಂದು. ಸಂಸ್ಥೆ ದೂರ ಮಾಡಿದರೂ ಅದೇ ಕೆಲಸ ನಮ್ಮನ್ನು ಯಾವ ಸಂದರ್ಭದಲ್ಲಿ ಎಲ್ಲಿ ಬೇಕಾದರೂ ಕೈಹಿಡಿಯುತ್ತದೆ. ಅನುಭವಕ್ಕೆ ಅವಕಾಶಗಳು ಹೆಚ್ಚು. ಗಳಿಸಿದ ಜ್ಞಾನ ಮತ್ತು ಅನುಭವ ನಮಗೆ ಅವಕಾಶಗಳನ್ನು ಹುಡುಕಿಕೊಡುತ್ತದೆ ಎಂಬುದು ಸತ್ಯ.

    ಆತ್ಮಗೌರವ ಇರಲಿ
    ಅದಕ್ಕೂ ಮೊದಲು ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ತನ್ನನ್ನು ತಾನು ಪ್ರೀತಿಸುವುದು ಅಂದರೆ ಆತ್ಮಗೌರವ, ಮನಸ್ಸಿನಲ್ಲಿ ಸಕಾರಾತ್ಮಕ ಭಾವ, ಯಾವುದೇ ಕಂಡೀಶನ್‍ಗಳಿಲ್ಲದೇ ತನ್ನನ್ನು ತಾನು ಮೊದಲು ಒಪ್ಪಿಕೊಳ್ಳುವುದು. ಇದೊಂದು ರೀತಿಯಲ್ಲಿ ಆರೋಗ್ಯಕರ ಚಿಂತನೆ. ಈ ಜಗತ್ತಿನಲ್ಲಿ ಯಾರೂ ಕೂಡಾ ಪರಿಪೂರ್ಣರಲ್ಲ.

    ಪ್ರತಿಯೊಬ್ಬರಲ್ಲೂ ಬಲ ಮತ್ತು ಬಲಹೀನತೆಗಳಿರುತ್ತವೆ. ಅದನ್ನು ನಾವೇ ಸರಿಪಡಿಸಿಕೊಳ್ಳಬೇಕಷ್ಟೇ. ಯಾವಾಗ ನಮ್ಮನ್ನು ನಾವು ಇಷ್ಟಪಡುದಿಲ್ಲವೋ ಅಲ್ಲಿಯವರೆಗೆ ನಾವು ಇತರರ ಬಗ್ಗೆಯೂ ಒಲವು, ಪ್ರೀತಿಯ ಭಾವ, ಒಟ್ಟಿನಲ್ಲಿ ನಮ್ಮದೇ ಜೀವನದ ಬಗ್ಗೆ ಕನಸು ಕಟ್ಟಿಕೊಳ್ಳುವುದಕ್ಕೆ ಸಾಧ್ಯ ಇಲ್ಲ.
    ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದರಿಂದ, ನಮ್ಮೊಳಗಿನ ಕೌಶಲಗಳನ್ನು ಗುರುತಿಸಿಕೊಳ್ಳುವುದರಿಂದ ಮತ್ತಷ್ಟು ಬೆಳವಣಿಗೆ ಸಾಧ್ಯ.

    ಉದಾಹರಣೆಗೆ ಉದ್ಯೋಗ ಕಳೆದುಕೊಂಡಾಗ ಧೃತಿಗೆಡದೆ ನಮ್ಮದೇ ಆಸಕ್ತಿಯ ಆಯ್ಕೆಯನ್ನು ಮಾಡಿಕೊಳ್ಳಬಹುದು. ಅಲ್ಲಿ ಕೆಲಸ ಮಾಡಲು ಇತರರ ಅಪ್ರೂವಲ್‍ಗಾಗಿ ಕಾಯಬೇಕಿಲ್ಲ. ಅದರಿಂದ ವೈಯಕ್ತಿಕ ಬೆಳವಣಿಗೆ ಸಾಧ್ಯ. ಅದು ನಮ್ಮನ್ನು ಉತ್ತಮ ಸ್ಥಿತಿಯೆಡೆಗೆ ಕರೆದೊಯ್ಯುವ ದಾರಿ ಕೂಡಾ ಅದಾಗಿರುತ್ತದೆ. ಬೆಳವಣಿಗೆಯ ಹಾದಿಯಲ್ಲಿ ಎದುರಾಗುವ ಪ್ರತಿಯೊಂದು ತೊಂದರೆಗಳನ್ನು ಎದುರಿಸಬಲ್ಲ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ. ಅಂತಹ ಆತ್ಮವಿಶ್ವಾಸ ಮತ್ತು ನಂಬಿಕೆ ಬಹಳ ಮುಖ್ಯ. ಯಾವಾಗ ನಮ್ಮನ್ನು ನಾವು ಪ್ರೀತಿಸಲು ಶುರು ಮಾಡುತ್ತೇವೆಯೋ ಆಗ ಮಾನಸಿಕವಾಗಿ, ದೈಹಿಕವಾಗಿ ಹಾಗೂ ಭಾವನಾತ್ಮಕವಾಗಿಯೂ ಆರೋಗ್ಯವಾಗಿರುತ್ತೇವೆ. ಅದರ ಫಲಿತಾಂಶ ಎಲ್ಲವುಗಳಿಗಿಂತ ವಿಭಿನ್ನವಾಗಿರುತ್ತದೆ.

    ಚಿತ್ರ ಕೃಪೆ : eberhard grossgasteiger from Pexels

    ದಕ್ಷಿಣ ಭಾರತದ ಸುಂದರ ಪುಷ್ಕರಣಿಗೆ ಆಮೆವೇಗದ ಅಭಿವೃದ್ಧಿ

    ಸಂತೇಬೆನ್ನೂರು ದಾವಣಗೆರೆ ಜಿಲ್ಲೆ ಅಡಿಕೆ ನಾಡು ಚನ್ನಗಿರಿ ತಾಲ್ಲೂಕಿನ ಹೋಬಳಿ ಕೇಂದ್ರ. ಇಲ್ಲಿನ ಐತಿಹಾಸಿಕ ಪುಷ್ಕರಣಿಯೊಂದಿಗೆ ಬೆಸೆದುಕೊಂಡಿರುವ ಗ್ರಾಮ ಸದಾ ಚಟುವಟಕೆಯ ತಾಣ.

    ನಾವು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಪುಷ್ಕರಣಿ ನಮ್ಮ ನಿತ್ಯದ ನೀರಿನ ಮೂಲ. ಅದರ ಇತಿಹಾಸದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಆಗ ಇರಲಿಲ್ಲ. ಶಿಲ್ಪಕಲೆಯಲ್ಲಿ ಮನಮೋಹಕ ರಚನೆಯಲ್ಲಿ ಯಾರು ಕಟ್ಟಿರಬಹುದು ಎಂಬ ಪ್ರಶ್ನೆ ಆಗಾಗ ತಲೆ ಕೊರೆಯುತ್ತಿತ್ತು. ಗ್ರಾಮದ ಅರ್ಧಭಾಗದ ಜನ ನೀರಿಗಾಗಿ ದಿನ ಬೆಳಿಗ್ಗೆ ಪುಷ್ಕರಣಿಗೆ ಬರಬೇಕು. ಗಡಿಗೆ, ತಾಮ್ರದ ಕೊಡ, ಸೈಕಲ್ ಗಳಲ್ಲಿ ನೀರು ಹೊರುವ ಕಾಯಕ. ದನಕರುಗಳಿಗೆ ನಿರುಣಿಸುವುದು, ಮೈ ತೊಳೆಯುವುದು ಅಲ್ಲೆ. ಸುಮಾರು 30 ರಿಂದ 40 ಮೆಟ್ಟಿಲು ಕೊಡ ಹೊತ್ತು ಏರಬೇಕು. ಅಂದಿನ ಜನರ ಐತಿಹ್ಯ ದೇವರುಗಳು ಒಂದೇ ರಾತ್ರಿಗೆ ಹೊಂಡ ಕಟ್ಟಿದರು. ಯಾರೋ ಬೆಳಗಾಗುವ ವೇಳೆ ನೋಡುವರೆಂದು ಅಪೂರ್ಣಗೊಳಿಸಿದರು ಎಂದು ತಲೆಯಲ್ಲಿ ತುಂಬಿತ್ತು.

    ಪ್ರೌಢಶಾಲೆ, ಕಾಲೇಜು ಓದುವಾಗ ಮನೆಗಿಂತ ಹೆಚ್ಚು ಪುಷ್ಕರಣಿಯಲ್ಲೇ ಓದಲು ಹೋಗುತ್ತಿದ್ದೆವು. ಕಲ್ಲಿನ ಮಂಟಪಗಳ ತಣ್ಣನೆ ಗಾಳಿ, ನೀರಿನಲ್ಲಿ ಮೀನಿನ ಓಡಾಟ, ಪಕ್ಷಿಗಳ ಹಾರಾಟದೊಂದಿಗೆ ರಮ್ಯ ಪರಿಸರವೇ ಓದಿಗೆ ಪ್ರೇರಣೆ ನೀಡುವಂತೆ ಇತ್ತು. ಆಗ ಪ್ರಾಚ್ಯವಸ್ತು ಇಲಾಖೆ ಅಷ್ಟಾಗಿ ಗಮನ ಹರಿಸಿದ್ದಿಲ್ಲ. ಯಾವ ನಿರ್ಭಂಧವೂ ಇಲ್ಲದೇ ಓಡಾಟ ನಡೆದಿತ್ತು. ಇತಿಹಾಸದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಗ್ರಾಮದ ಇತಿಹಾಸ ಸಂಶೋಧಕ ಸುಮತೀಂದ್ರ ನಾಡಿಗ್ ಅವರಿಂದ ನಡೆಯಿತು.

    ಶಾಸನಗಳು, ಮೆಕೆಂಜಿ ಪತ್ರ ಹಾಗೂ ವಿವಿಧ ಮೂಲಗಳಿಂದ 15 ಶತಮಾನದಲ್ಲಿ ನಾಯಕ ವಂಶ ಇಲ್ಲಿ ಆಡಳಿತ ನಡೆಸಿತ್ತು. ತನ್ನ ಸಾಮ್ರಾಜ್ಯ ವಿಸ್ತರಣೆಯೊಂದಿಗೆ ಶ್ರೀಮಂತವಾಗಿ ಉತ್ತುಂಗಕ್ಕೇರಿತ್ತು. ಕೆಂಗ ಹನುಮಪ್ಪ ನಾಯಕ ಪುಷ್ಕರಣಿ ನಿರ್ಮಿಸಲು ಮುಂದಾದರು. ಉತ್ತರ ದಿಕ್ಕಿನಲ್ಲಿ ಕೋಟೆ, ಅರಮನೆ ಇದ್ದವು. ದಕ್ಷಿಣ ದಿಕ್ಕಿನಲ್ಲಿ ಶ್ರೀ ರಾಮ ದೇವರ ದೇಗುಲ ನಿರ್ಮಿಸಲಾಗಿತ್ತು. ಹೊಂದಿಕೊಂಡತೆ ರಾಮತೀರ್ಥ ದೇವರ ವಿವಿಧ ಆರಾಧನೆಗಾಗಿ ನಿರ್ಮಿಸಲಾಗಿತ್ತು. ಅದಕ್ಕಾಗಿ ವಿಶೇಷ ಗ್ರಾನೈಟ್ ಹಾಗೂ ಕಲಾಕೃತಿಗಳಿಂದ ಆಕರ್ಷಣೆ ನೀಡಲಾಗಿತ್ತು.

    ಅಂದೇ ಮಳೆಕೊಯ್ಲು ರೀತಿಯಲ್ಲಿ ಭೂಗರ್ಭದಲ್ಲಿ ಕಲ್ಲಿನ ಕೊಳವೆ ಮೂಲಕ ಜಲಹರಿ ಮಂಟಪದಿಂದ ನೀರು ಸಂಗ್ರಹ ಮಾಡಲು ಯೋಜನೆ ಕಾರ್ಯರೂಪಕ್ಕೆ ಬಂದಿತ್ತು. ಇಂದಿಗೂ ಮಳೆಗಾಲದಲ್ಲಿ ಜಲಪಾತದಲ್ಲಿ ನೀರು ಧುಮುಕುವ ನೋಟ ಮನಮೋಹಕ. ಮಧ್ಯದಲ್ಲಿನ ವಸಂತ ಮಂಟಪದ ಕಾಲ ನೈಪುಣ್ಯತೆ ಸಾಕ್ಷಿ ಆಗಿದೆ. ನೀರಿನ ಮೇಲಿನ ರಥದಂತೆ ಆಕರ್ಷಣೀಯವಾಗಿದೆ. ಬಿಜಾಪುರ ಸುಲ್ತಾನರ ದಾಳಿಗೆ ತುತ್ತಾಗಿ ದೇವಾಲಯ ಧ್ವಂಸ ಮಾಡಿ ಮಸೀದಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ಈಗ ಅದು ಮುಸಾಫೀರ್ ಖಾನ ಹೆಸರಿನಲ್ಲಿ ಕಲ್ಲಿನ ಬೃಹತ್ ಕಮಾನುಗಳ ಕಟ್ಟಡ ಪುಷ್ಕರಣಿ ಎದುರಿಗಿದೆ.

    ಖ್ಯಾತ ಸಂಶೋಧಕ ಡಾ.ಚಿದಾನಂದ ಮೂರ್ತಿ ಇಷ್ಟೊಂದು ಸುಂದರ ಪುಷ್ಕರಣಿ ದಕ್ಷಿಣ ಭಾರತದಲ್ಲಿಯೇ ಇಲ್ಲ ಎಂದು ಹೇಳಿದ್ದರು. ಇದು ಧ್ವಜಾಯದಲ್ಲಿದ್ದು, 235 ಅಡಿ ಉದ್ದ, 245 ಅಡಿ ಅಗ ಹಾಗೂ 30 ಅಡಿ ಆಳವಿದೆ. ಸುತ್ತಲೂ 3 ಅಡಿ ಅಗಲ ಹಾಗೂ ಉದ್ದವಿರುವ ಪೌಳಿ ಇದೆ. ನಾಲ್ಕು ದಿಕ್ಕಿನಲ್ಲಿಯೂ ಪ್ರವೇಶ ದ್ವಾರಗಳಿವೆ. ಉತ್ತರ, ದಕ್ಷಿಣ ಹಾಗೂ ಪೂರ್ವ ದಿಕ್ಕಿನ ಪ್ರವೇಶ ದ್ವಾರ ಮಂಟಪಗಳಿವೆ. 12 ಕಲ್ಲಿನ ಕಂಬಗಳ ಆಧಾರದ ಮೇಲೆ 15 ಅಡಿ ಉದ್ದ, 22 ಅಡಿ ಅಗಲದ ವ್ಯಾಸ ಪೀಠದ ಮೇಲೆ ನಿರ್ಮಿಸಿದ್ದಾರೆ. ಕಂಬಗಳಲ್ಲಿ ವಿವಿಧ ದೇವರ ವಿಗ್ರಹ ಕೆತ್ತಲಾಗಿದೆ. ತಳ ಭಾಗ ತಲುಪಲು 52 ಮೆಟ್ಟಿಲುಗಳಿವೆ.

    ನೀರಿನ ಮಧ್ಯದಲ್ಲಿರುವುದು ವಸಂತ ಮಂಟಪ. ಇದಕ್ಕೆ ನಾಲ್ಕು ಅಂತಸ್ತುಗಳಿವೆ. ಹಿಂದೂ ಹಾಗೂ ಇಸ್ಲಾಂ ವಾಸ್ತುಶಿಲ್ಪದಲ್ಲಿ ರಚಿತವಾಗಿದೆ. ಇವುಗಳನ್ನು ಪ್ರವೇಶದ್ವಾರ, ಸುರಂಗ ಮಾರ್ಗ ಮಹಡಿ, ಉಯ್ಯಾಲೆ ಮಹಡಿ, ಗೋಪುರ ಮಹಡಿ ಎಂದು ವಿಂಗಡಿಸಲಾಗಿದೆ. ಗೋಪುರ ಮಹಡಿಯಲ್ಲಿ ಗಾರೆ ಜಾಲರಿ, ಗಂಡಭೇರುಂಡ, ಆನೆ, ಸಿಂಹ, ಶಾರ್ದೂಲ, ನವಿಲು, ಹಂಸ, ನಾಗರ, ಬಳ್ಳಿ ಪ್ರಾಣಿ ಪಕ್ಷಿಗಳ ಸೂಕ್ಷಾತಿಸೂಕ್ಷ್ಮ ಕೆತ್ತನೆಗಳಿವೆ.

    ಕಳೆದ ಎರಡು ದಶಕಗಳಿಂದ ಕೇಂದ್ರ ಸರ್ಕಾರದ ಪ್ರಾಚ್ಯವಸ್ತು ಇಲಾಖೆ ಪುಷ್ಕರಣಿ ರಕ್ಷಣೆಗೆ ಕ್ರಮ ಕೈಗೊಂಡಿದೆ. ಸುತ್ತಲೂ ತಂತಿ ಬೇಲಿ ಹಾಕಿದೆ. ಶಿಥಿಲಾವಸ್ಥೆ ತಲುಪದಂತೆ ರಕ್ಷಣಾ ನಿರ್ಮಾಣ ನಡೆಸಿದೆ. ಉದ್ಯಾನವನ ನಿರ್ಮಿಸಿದೆ. ಸಿಬ್ಬಂದಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಅಕ್ರಮ ನಡೆಯದಂತೆ ವೀಕ್ಷಣೆ ನಡೆಸಿದೆ.

    ಈಚೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಸಿನಿಮಾ ಚಿತ್ರೀಕರಣ ನಡೆದ ನಂತರ ಪ್ರವಾಸಿಗರ ದಂಡೆ ಬರುತ್ತಿದೆ. ಸುಂದರ ಶಿಲ್ಪಾ ಕಲಾಕೃತಿ ಆಸ್ವಾದಿಸುತ್ತಾ ಕಾಲ ಕಳೆಯುವುದು ನಿತ್ಯದ ಪರಿಪಾಠ. ವಿವಾಹ ಪೂರ್ವ ಫೋಟೋಗ್ರಫಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಸದಾ ಬ್ಯುಸಿ ಆಗಿರುವ ಈ ಪ್ರವಾಸಿ ತಾಣಕ್ಕೆ ಇನ್ನಷ್ಟು ಸೌಲಭ್ಯಗಳು ಭರದಿಂದ ಆಗಬೇಕಾಗಿದೆ.

    ಪ್ರವೇಶ ದ್ವಾರದಲ್ಲಿ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಕೊರೊನಾ ಹಿನ್ನೆಲೆಯಲ್ಲಿ ಪ್ರವೇಶ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿರ್ವಹಣೆಯಲ್ಲಿ ಅಲಕ್ಷ್ಯ ಕಂಡು ಬರುತ್ತಿದೆ. ಸಿಸಿ ಕ್ಯಾಮೆರಾ ಅಳವಡಿಸಬೇಕು. ಯಾತ್ರಿ ನಿವಾಸ ನಿರ್ಮಿಸಬೇಕು. ಉದ್ಯಾನವನ ನಿರ್ವಹಣೆ ಸಮರ್ಪಕವಾಗಬೇಕು ಎಂಬುದು ಪ್ರವಾಸಿಗರ ಬೇಡಿಕೆ ಆಗಿದೆ.

    ನಮ್ಮ ಐತಿಹಾಸಿಕ ತಾಣಗಳು ನಮ್ಮ ಸಮೃದ್ಧ ಪರಂಪರೆಯ ದ್ಯೋತಕ. ಶ್ರೀಮಂತ ಸಂಸ್ಕೃತಿಯ ಪ್ರತೀಕ. ಅವುಗಳ ರಕ್ಷಣೆಯಿಂದ ಪರಂಪರೆ ಉಳಿವು ಸಾಧ್ಯ. ಪ್ರವಾಸದ್ಯೋಮ ಇಲಾಖೆ ಇತ್ತ ಗಮನ ಹರಿಸಬೇಕು.

    ಇದು ಆಕಾಶವಾಣಿ ..ನಿಮ್ಮ ಮೆಚ್ಚಿನ ಚಿತ್ರಗೀತೆಗಳು…..

    ಹಿಂದೆಲ್ಲಾ ಕಾರ್ಖಾನೆಗಳ ,ವಾಹನಗಳ, ಜನರ ಶಬ್ಧ ಮಾಲಿನ್ಯವಾಗಲೀ ವಾಯು ಮಾಲಿನ್ಯವಾಗಲಿ ಹೆಚ್ಚಾಗಿ ಇರುತ್ತಿರಲಿಲ್ಲ…. ಹಸಿರು ಭೂಮಿ ಶುಭ್ರ ಆಕಾಶ ಶುದ್ಧ ಗಾಳಿಯ ಮಧ್ಯೆ ನಮ್ಮ ಕಿವಿಗೆ ಕೇಳಿಸುತ್ತಿದ್ದಿದ್ದು ಒಂದೇ ಅದು ರೇಡಿಯೋದ ಸುಶ್ರಾವ್ಯ ತರಂಗಗಳು .

    ಆಕಾಶವಾಣಿ ಅಂದ್ರೆ ಅದೊಂದು ಪ್ರತಿಷ್ಠಿತ ಸಂಸ್ಥೆ , ಅವರನ್ನು ಅವರು ಪರಿಚಯಿಸುತ್ತಿದ್ದಿದ್ದೇ ‘ಬಾನುಲಿ ಕೇಂದ್ರ’ ‘ಆಕಾಶವಾಣಿ ನಿಲಯ’ ಅಂತ ……ಅವರುಗಳ ಮಾತು ಎಷ್ಟು ಆಪ್ತವಾಗಿ ಇರ್ತಿತ್ತು ಅಂದ್ರೆ ಕೇಳುಗರನ್ನ ಅಯಸ್ಕಾಂತದ ಥರ ಸೆಳೆಯೋದು , ಗಮನಾರ್ಹ ಸಂಗತಿ ಏನು ಅಂದ್ರೆ ರೇಡಿಯೋದ ಒಳಗಿನ ತಂತ್ರಜ್ಞಾನದಲ್ಲಿ ‘ಅಯಸ್ಕಾಂತ’ ಪ್ರಮುಖವಾದ ಬಿಡಿಭಾಗ. ಅವರ ಕಾರ್ಯಕ್ರಮಗಳ ರೂಪುರೇಷೆ ಮತ್ತು ಅವರು ಇಡುತ್ತಿದ್ದ ಶೀರ್ಷಿಕೆಗಳೇ ಅದ್ಭುತ , ಸಂಗೀತ ಹಾಡುಗಳಿಗೆ ನಂದನ , ಚಂದನ , ಇಂಚರ , ಬೃಂದಾವನ . ಚರ್ಚೆಗಳಿಗೆ ಚಿಂತನ , ಮಂಥನ .
    ವಾರ್ತೆಗಳಿಗೆ ಪ್ರದೇಶ ಸಮಾಚಾರ , ಪ್ರಸಾರ ಭಾರತಿ , ವಾರ್ತಾ ಭಾರತಿ , ಹವಾಗುಣಕ್ಕೆ ಸಂಬಂಧಿಸಿದಂತೆ ಹವಾಮಾನ ವರದಿ. ದೆಹಲಿಯಿಂದ ಪಾರ್ತೆ ಓದುತ್ತಿದ್ದ ಉಪೇಂದ್ರರಾವ್,ರಂಗರಾವ್ ಪ್ರದೇಶ ಸಮಾಚಾರ ಓದುತ್ತಿದ್ದ ನಾಗಮಣಿ ಎಸ್ ರಾವ್, ಕೆ ಎಸ್ ಪುರುಷೋತ್ತಮ್ ತುಂಬಾನೆ ಫೇಮಸ್ಸು‌ .

    ಶನಿವಾರ ಭಾನುವಾರ ಸೇರಿ ಒಂದೂವರೆ ದಿನ ಚೆನ್ನಾಗಿ ಆಡಿ ಕುಣಿದು ನೆಂದು ಬೆಂದು ಸುಸ್ತಾಗಿ ಮನೆಯವರ ಹತ್ತಿರ ಈ ಮಕ್ಕಳಿಗೆ ರಜ ಯಾಕಾದ್ರೂ ಬರುತ್ತೋ ಅಂತ ಬೈಸಿಕೊಂಡು ಹೊಡೆಸಿಕೊಂಡು…..ಸೋಮವಾರ ಹ್ಯಾಪ್ಮೋರೆಯಲ್ಲಿ ಸ್ಕೂಲ್ ಬ್ಯಾಗ್ ನೇತಾಕ್ಕೊಂಡು , ಧುತ್ತನೆ ನೆನಪಾಗುವ ಹೋಮ್ ವರ್ಕು , ಗಣಿತದ ಮೇಷ್ಟ್ರುನ ನೆನೆಸಿಕೊಂಡು ಶಾಲೆಯ ಕಡೆ ಭಾರದ ಹೆಜ್ಜೆಯಿಡುತ್ತಿದ್ದರೆ , ನಮ್ಮ ಕಿವಿಗೆ ಬೀಳುತ್ತಿದ್ದುದ್ದೇ ‘ ಈಗ ಸಮಯ ಹತ್ತುಗಂಟೆ ಹದಿನೈದು ನಿಮಿಷ ….. ನಿಮ್ಮ ಮೆಚ್ಚಿನ ಚಿತ್ರಗೀತೆಗಳು ಕಾರ್ಯಕ್ರಮ. ಚನ್ನಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಗ್ರಾಮಸ್ಥರಾದ ಕೃಷ್ಣಪ್ಪ , ದೊಡ್ಡಯ್ಯ, ಮುನಿರಾಜು, ರಮೇಶ, ಸುರೇಶ , ನರಸಿಂಹರಾಜು , ಪಾರ್ಥಸಾರಥಿ , ಸರೋಜಮ್ಮ , ಪುಟ್ಟಮ್ಮ , ಲಕ್ಷ್ಮಮ್ಮ , ಶಾರದಮ್ಮ , ಕಾಂತಮ್ಮ ಮತ್ತು ಪುಟಾಣಿಗಳಾದ ಚಂದ್ರ , ವಿಷ್ಣು , ಆಂಜಿ, ಬಾಬು , ನರೇಶ , ಪ್ರಹ್ಲಾದ , ಗೋಪಾಲ , ಶಬ್ಬೀರ , ಮಣಿಕಾಂತ , ಗೌರಿ , ಲಕ್ಷ್ಮಿ ….ಹೀಗೇ ಅವರ ಹೆಸರುಗಳನ್ನೆಲ್ಲಾ ಹೇಳಿ ಅವರ ಕೋರಿಕೆಯ ಮೇರೆಗೆ ಅಂತ ನೆಚ್ಚಿನ ಚಿತ್ರಗೀತೆಯನ್ನು ಪ್ರಸಾರ ಮಾಡುತ್ತಿದ್ದರು, ಅಣ್ಣಾವ್ರ , ಪಿಬಿ ಶ್ರೀನಿವಾಸ್ , ಎಸ್ಪಿ ಬಾಲಸುಬ್ರಹ್ಮಣ್ಯಂ , ಜಾನಕಿ , ಪಿ ಸುಶೀಲ ಇವರುಗಳ ಗಾನಸುಧೆ ಹಾಡಾಭಿಮಾನಿಗಳನ್ನು ರಂಜಿಸುತ್ತಿದ್ದರು .

    ಹೀಗೆ ರೇಡಿಯೋದಲ್ಲಿ ತಮ್ಮ ಹೆಸರು ಬಂದಿದ್ದನ್ನ ಆ ಊರವ್ರು ಏಳು ಹಳ್ಳೀಗೆ ತಿಳಿಸಿ ಸಂಭ್ರಮ ಪಡುತ್ತಿದ್ದರು . ಇಲ್ಲಿ ನಾವು ಶಾಲೆಗೆ ಹೋಗೋವಾಗ ನಮ್ಮ ಅಮ್ಮದೀರು ಅಕ್ಕಪಕ್ಕದ ಮನೆ ಹೆಂಗಸರ ಜೊತೆ ಜಗಲಿಮೇಲೆ ಕೂತ್ಕೊಂಡು ರೇಡಿಯೋ ಕೇಳ್ಕೊಂಡು ಮಾತಾಡ್ಕೊಂಡು….ಅವರೆಕಾಯಿ ತೊಗರೀಕಾಯಿ ಸೊಪ್ಪು ಬಿಡಸ್ಕೊಂಡು ಕೂತಿರ್ತಿದ್ರು , ಅವರನ್ನ ನೋಡಿ ನಾವು….ಇವರಿಗೆ ದಿನಾ ರಜಾನೇ ಅಂತ ಮನಸ್ಸಲ್ಲಿ ಅನ್ಕೊಂಡು ಹೋಗ್ತಿದ್ವಿ .

    ಮಧ್ಯಾಹ್ನ ಊಟಕ್ಕೆ ಬಂದ್ರೂನೂ ಮನೆಗಳಲ್ಲಿ ರೇಡಿಯೋ ಕೇಳಿಸ್ತಾನೇ ಇರೋದು ….ಟೈಲರ್ ಅಂಗಡಿಯಲ್ಲಂತೂ ಮಿಷಿನ್ ಸೌಂಡ್ ನಿಂತ್ರೂ ರೇಡಿಯೋ ಸೌಂಡ್ ನಿಲ್ತಿರ್ಲಿಲ್ಲ . ಏನಕ್ಕೆ ರೇಡಿಯೋನ ಹಿಂಗ್ ಹಚ್ಕೊಂಡಿರೋವ್ರು ಅಂದ್ರೆ ಅದನ್ನ ಕೇಳಿಸ್ಕೊಂಡ್ ಇವರ ಪಾಡಿಗೆ ಇವರು ಕೆಲಸ ಮಾಡ್ತಿರೋವ್ರು ….ಒಂದು ಕಡೆ ಕಿವಿಗೆ ಇಂಪಾಗಿರೋದು ಇನ್ನೊಂದ್ಕಡೆ ಕೆಲಸಾನೂ ಆಗೋದು .

    ಬಾಲ್ಯದಲ್ಲಿ ನಮಗೆ ರೇಡಿಯೋದಲ್ಲಿ ತುಂಬಾ ಕುತೂಹಲ ಮೂಡಿಸಿದ್ದು ಯಾವುದು ಅಂದ್ರೆ ಬ್ಯಾಂಡ್ ಬದಲಿಸಲು ಒಂದು ನಾಬನ್ನು ತಿರುಗಿಸುತ್ತಿದ್ದೆವು ಆಗ ಒಳಗಡೆ ಒಂದು ಕೆಂಪು ಬಣ್ಣದ ಕಡ್ಡಿ ಅತ್ತ ಇತ್ತ ಚಲಿಸುತ್ತಿತ್ತು ಅದು ನೋಡಕ್ ಹೆಂಗಿರೋದು ಅಂದ್ರೆ ನಾವು ಬೇಳೇಸಾರು ಅನ್ನ ಊಟ ಮಾಡಿ ತಟ್ಟೆ ತೊಳಿಯಕ್ಕೆ ಹಾಕ್ದಾಗ ತಟ್ಟೆಯಲ್ಲುಳಿದ ಸುರುಳಿಸುತ್ತಿದ ಟೊಮೋಟೋ ಹೊಟ್ಟಿನಂತಿರೋದು . ರೇಡಿಯೋದಲ್ಲಿ ಬರುತ್ತಿದ್ದ ಕೆಲವೇ ಜಾಹೀರಾತುಗಳು ಮಕ್ಕಳ ಬಾಯಿಪಾಠವಾಗಿತ್ತು .


    ನಿಜಕ್ಕೂ ಆಕಾಶವಾಣಿಯವರು ಉಪಯೋಗಿಸುತ್ತಿದ್ದ ವೇಳೆಯನ್ನು, ಸಿದ್ಧಪಡಿಸುತ್ತಿದ್ದ ವೇಳಾಪಟ್ಟಿಯನ್ನು , ಮನರಂಜನೆಯ ಜೊತೆ ಜೊತೆಗೆ ಪ್ರತಿಯೊಂದನ್ನೂ ಪ್ರತಿ ವರ್ಗಕ್ಕೂ ವಿನಿಯೋಗಿಸುತ್ತಿದ್ದ ರೀತಿಯನ್ನೂ ಕೇಳಿ ಖುಷಿಯಾಗೋದು . ಬೆಳಿಗ್ಗೆ ಆವತ್ತಿನ ಆಗುಹೋಗುಗಳ ‘ಚಿಂತನ’ , ವಾರ್ತೆಗಳು ,ನಿಮ್ಮ ನೆಚ್ಚಿನ ಚಿತ್ರಗೀತೆಗಳು , ಸುಗಮ ಶಾಸ್ತ್ರೀಯ ಕರ್ನಾಟಕ ಹೀಗೆ ಒಂದಿಲ್ಲೊಂದು ಸಂಗೀತ , ಪ್ರಸಿದ್ಧ ನಟ ನಟಿ ನಿರ್ದೇಶಕರುಗಳ ಮುದ್ರಿತ ಸಂದರ್ಶನಗಳು , ನಾಟಕ , ಯಕ್ಷಗಾನ , ಮಧ್ಯಾಹ್ನ ನಮ್ಮ ನಾಡಿನ ‘ಪ್ರದೇಶ ಸಮಾಚಾರ ‘ , ಮೀನುಗಾರರಿಗೆ ಸಹಾಯವಾಗಲಿ ಎಂದು ಹವಾಮಾನ ಮುನ್ಸೂಚನೆ , ಸಂಜೆ ಅನ್ನದಾತರಿಗೇ ಅಂತಲೇ ಕೃಷಿರಂಗ , ವಾಗ್ಮಿಗಳಿಂದ ಅರಳೀಕಟ್ಟೆ , ಪೆಂಪು ಇಂಪು ಎಂಬ ಹಾಸ್ಯ ಅವಧಿ , ರಾತ್ರಿ ಹತ್ತರ ನಂತರ ಭೋಲೇ ಬಿಸರೇ ಗೀತ್ ಎಂಬ ಹಿಂದಿ ಹಾಡುಗಳ ರಸದೌತಣ .

    ಇದಲ್ಲದೇ ಬೋನಸ್ ಎಂಬಂತೆ ಭಾನುವಾರ ಒಂದಿಡೀ ಸಿನಿಮಾದ ಚಿತ್ರಕತೆ , ಅಂತರ್ರಾಷ್ಟ್ರೀಯ ಕ್ರಿಕೆಟ್ ನ ಕಾಮೆಂಟರಿ , ಬಿನಾಕಾ ಗೀತ್ ಮಾಲಾ , ಬಿರು ಬಿಸಿಲಿನ ಮಧ್ಯಾಹ್ನ ಬರುತ್ತಿದ್ದ ‘ಸಿಲೋನ್’ ನಲ್ಲಿ ಅನ್ಯಭಾಷಿಕರ ಕನ್ನಡ ಉಚ್ಚಾರಣೆಯೇ ಕೇಳಕ್ಕೆ ಮಜಾ ಇರೋದು, ಅವರು ಉಪಾಸನೆ ಸಿನಿಮಾವನ್ನು ಉಪ್ಪು ಸಾನೆ ಅಂತ ಹೇಳುತ್ತಿದ್ದರು . ಇದಂ ಸಂಸ್ಕೃತ ವಾರ್ತಾಹ ಎಂದು ಹೇಳಿ ಮುಗಿಯುತ್ತಿದ್ದ ಸಂಸ್ಕೃತ ವಾರ್ತೆಗಳು ……ಒಂದಕ್ಕಿಂತ ಒಂದು ಅದ್ಭುತ ಕಾರ್ಯಕ್ರಮಗಳೇ.

    ಬಿನಾಕ ಗೀತ್ ಮಾಲ್ ನ ಅಮೀನ್ ಸಯಾನಿ

    ಹೀಗೆ ದಶಕಗಳ ಕಾಲ ಮನರಂಜನೆಯೆಂಬ ಮಹಲ್ಲಿಗೆ ಅಡಿಪಾಯ ಹಾಕಿದ್ದು ರೇಡಿಯೋ ಮತ್ತು ಆಕಾಶವಾಣಿ . ಟೀವಿ ಎಂಬ ಮೂರ್ಖರ ಪೆಟ್ಟಿಗೆ ಬಂದು ರೇಡಿಯೋ ಎಂಬ ಮಾಯಾಪೆಟ್ಟಿಗೆಯನ್ನು ಬದಿಗೆ ಸರಿಸಿದ್ದು ನಿಜಕ್ಕೂ ವಿಪರ್ಯಾಸವೇ ಸರಿ. ಎಫ್ ಎಂ ಮೂಲಕ ರೇಡಿಯೋ ಮತ್ತೆ ಚಾಲ್ತಿಗೆ ಬಂದರೂ ರೇಡಿಯೋ ಕೇಳುವ ಆಗಿನ ಮಜಾ ಈಗಿಲ್ಲ.

    ಬದಲಾವಣೆ ಜಗದ ನಿಯಮವೇ ಆದರೂ ಚಲಾವಣೆಯಲ್ಲಿದ್ದಷ್ಟೂ ದಿನ ತನ್ನ ಕೇಳುಗರನ್ನು ತಲೆದೂಗುವಂತೆ ಮಾಡಿದ್ದು ರೇಡಿಯೋ ಎಂಬ ಸಾರ್ಥಕಸಾಧನ,

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ.ಹಲವಾರು ಕವಿತೆಗಳಿಗೆ ಇಲಸ್ಟ್ರೇಷನ್ ಮಾಡಿದ್ದಾರೆ. ಇಂಟಿರೀಯರ್ ಡಿಸೈನ್ ಮತ್ತು ಇದರ ಬಗ್ಗೆ ಕೆಲವು ಲೇಖನಗಳನ್ನು ಪತ್ರಿಕೆಗೆ ಬರೆದಿದ್ದಾರೆ. ಅಅಜೊತೆಗೆ ಕವಿತೆಗಳನ್ನು ಕೂಡ ಬರೆಯುತ್ತಾರೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಕೊರೋನಾ ವ್ಯಾಕ್ಸಿನ್ ತಯಾರಾಗಲು ಇನ್ನೆಷ್ಟು ಸಮಯ ಬೇಕು

    ರೋಗಕ್ಕೊಂದು ಚಿಕಿತ್ಸೆ ಇಲ್ಲದಿದ್ದರೆ ಸಮಸ್ಯೆಗೊಂದು ಪರಿಹಾರವಿಲ್ಲದಂತೆಯೇ ಸರಿ. ಇಡೀ ಪ್ರಪಂಚದ ಮೇಲೆ ತನ್ನ ಬಲೆಯನ್ನು ಹಾಸಿ ಲಕ್ಷಾಂತರ ಜೀವಗಳನ್ನು ಬಲಿತೆಗೆದುಕೊಳ್ಳುವ ಕಾಯಿಲೆಯೊಂದು ತನ್ನನ್ನು ನಿಯಂತ್ರಿಸಬಲ್ಲ ಲಸಿಕೆಯೊಂದರ ಮಾರುಕಟ್ಟೆಯನ್ನು ಹೊತ್ತುಕೊಂಡೇ ಹುಟ್ಟಿರುತ್ತದೆ. ಅದೂ ಅಂತಿಂಥ ಮಾರುಕಟ್ಟೆಯಲ್ಲ. ಇಡೀ ಪ್ರಪಂಚದಲ್ಲಿ ಅತ್ಯಪಾರ ಬೇಡಿಕೆಯಿರುವ ಮಾರುಕಟ್ಟೆಯನ್ನು.

    ಹಾಗಾಗಿ ಕರೋನ ಸೋಂಕಿನ ಶುರುವಾತಿನೊಂದಿಗೇ ಕರೋನ ಲಸಿಕೆಗೂ ಬೇಡಿಕೆ ಹುಟ್ಟಿಕೊಂಡಿತು. ಸ್ಪರ್ಧೆಯೂ ಶುರುವಾಯಿತು. ಲಸಿಕೆಯನ್ನು ಕಂಡುಹಿಡಿಯಲು ಒಂದಷ್ಟು ದೇಶಗಳು ಸ್ಪರ್ಧಿಸಿದರೆ, ಅತ್ಯಂತ ಕಡಿಮೆ ವೆಚ್ಚದಲ್ಲಿ  ಮತ್ತು ಅತ್ಯಂತ ವೇಗವಾಗಿ ಅವುಗಳನ್ನು ತಯಾರಿಸಲು ಉತ್ಪಾದನೆಗೆಂದೇ ಪ್ರಸಿದ್ದವಾದ ದೇಶಗಳು ಒಬ್ಬರ ಮೇಲೊಬ್ಬರು ಮುಗಿಬಿದ್ದು ಸೆಣೆಸುತ್ತಿದ್ದಾರೆ. ಪ್ರಪಂಚದ ಕರೋನ ಸಾವಿನ ಸಂಖ್ಯೆ 483959 ಮೀರಿ ಬೆಳೆಯುತ್ತಿದೆ.9.39 ಮಿಲಿಯನ್ ಗೂ ಹೆಚ್ಚಿನ ಜನ ಸೋಂಕಿತರಾಗಿದ್ದಾರೆ. ಆದರೆ ಇದಕ್ಕೆ ಬೇಕಾದ ಉತ್ತಮ ಗುಣಮಟ್ಟದ ಲಸಿಕೆ ಯಾವಾಗ ಲಭ್ಯವಾಗುತ್ತದೆ ಎನ್ನುವ ಪ್ರಶ್ನೆ ಸಧ್ಯಕ್ಕೆ ಇನ್ನೂ ಉಳಿದಿದೆ.

    ವ್ಯಾಕ್ಸಿನ್ ಡೆವೆಲಪ್ ಮೆಂಟ್ ಎನ್ನವುದು ಅಷ್ಟೊಂದು ಸುಲಭದ ಕೆಲಸವೇ?

    ನೂರಾರು ಕಾಯಿಲೆಗಳಿಗೆ ವ್ಯಾಕ್ಸಿನ್ ತಯಾರಿಸಲು ಪ್ರಪಂಚದಲ್ಲಿಸದಾಪ್ರಯತ್ನ ಮತ್ತು ಪ್ರಯೋಗಗಳು ನಡೆಯುತ್ತಲೇ ಇರುತ್ತದೆ.ಇದಕ್ಕೆ ನೂರಾರು ಕೋಟ್ಯಂತರ ರೂಪಾಯಿಗಳ ಹಣವನ್ನು ಹೂಡಬೇಕಾಗುತ್ತದೆ. ಆದರೆ ಯಶಸ್ಸು ಸಿಗುವುದು ಬಹಳ ಕಡಿಮೆ ಬಾರಿ. ಕೊನೆಗೆ ಬೆರಳೆಣಿಕೆಯಷ್ಟೇ  ವ್ಯಾಕ್ಸಿನ್ ಗಳು ಉತ್ಪಾದನೆಯ ಮಟ್ಟದ ಪರವಾನಗಿ ಪಡೆದು ಸಾಮಾನ್ಯ ಜನರಿಗೆ ಲಭ್ಯವಾಗುತ್ತವೆ.ಅಂತಹ ಲಸಿಕೆಗಳು ಒಂದೇ ರೂಪದಲ್ಲಿರುವುದಿಲ್ಲ. ಕಾಲ ಕಳೆದಂತೆಲ್ಲ ಬದಲಾಗುವ ವೈರಾಣುಗಳ ರೂಪಕ್ಕೆ ಹೊಂದುವಂತೆ ಅವುಗಳ ಸ್ವರೂಪವನ್ನೂ ಬದಲು ಮಾಡಲು ಸಾಧ್ಯವಿರಬೇಕಾಗುತ್ತದೆ.ಶ್ರೇಣೀಕೃತ ಉತ್ಪಾದನೆಯನ್ನು ಕಾದಿರಿಸಬೇಕಾಗುತ್ತದೆ.

    ಹಾಗಾಗಿ ಇದು ಸುಲಭವಲ್ಲ. ಪ್ರತಿಬಾರಿ ಲಸಿಕೆಯೊಂದನ್ನು ಕಂಡುಹಿಡಿದಾಗಲೂ ಮನುಕುಲವನ್ನು ಮಾರಣಹೋಮದಿಂದ ರಕ್ಷಿಸಿದ ದೊಡ್ಡ ಸಾಧನೆಯಾಗುತ್ತದೆ..ಜೊತೆಗೆ ಊಹೆಗೂ ನಿಲುಕದಷ್ಟು ಹಣ ಇದರಲ್ಲಿದೆ.ಹಾಗಾಗಿ ರಾಜಕೀಯದ ಜೊತೆ ಪ್ರಪಂಚವೇ ಇದರಲ್ಲಿ ಬೆರೆಯುತ್ತದೆ.

    ಲಸಿಕೆಯನ್ನು ಕಂಡುಹಿಡಿಯುವಾಗ ಸಾಮಾನ್ಯವಾಗಿ ಪ್ರಿ-ಕ್ಲಿನಿಕಲ್ ಮತ್ತು ನಂತರದ ಕ್ಲಿನಿಕಲ್ ಎಂಬ ಘಟ್ಟಗಳಿರುತ್ತವೆ. ಅವುಗಳಲ್ಲಿಯೂ ಹಲವುಹಂತಗಳಿರುತ್ತವೆ.ಪ್ರಿ-ಕ್ಲಿನಿಕಲ್ ಹಂತದಲ್ಲಿ ಇತರ ಹಂತಗಳ ಜೊತೆ ಟೆಸ್ಟ್ ಟ್ಯೂಬ್ ಗಳಲ್ಲಿ ಮತ್ತು ಪ್ರಾಣಿಗಳ ಮೇಲೆ ಪ್ರಯೋಗ ಮಾಡುವ ಹಂತಗಳಿವೆ. ಮುಂದಿನ ಹಂತದಲ್ಲಿ ಅದನ್ನು ಕೆಲವೇ ಕೆಲವರು ಮನುಷ್ಯರ ಮೇಲೆ ಪ್ರಯೋಗ ಮಾಡಲಾಗುತ್ತದೆ. ಅದರಲ್ಲೂ ಹಲವು ಹಂತಗಳಿದ್ದು ಇದು ಮುಗಿಯಲು ಹಲವು ವರ್ಷಗಳ ಕಾಲ ಬೇಕಾಗುತ್ತದೆ.ಈ ಪ್ರಯೋಗದ ಎಲ್ಲ ಹಂತಗಳಲ್ಲಿಅತ್ಯಂತ ನೈತಿಕವಾದ ಮತ್ತು  ಕಟ್ಟು ನಿಟ್ಟಾದ ನಿಯಮಗಳನ್ನು ಪಾಲಿಸಲಾಗುತ್ತದೆ. ಆಯ್ಕೆ ಮಾಡಿದ ಜನರಿಂದ ಮಾಹಿತಿಪೂರ್ಣ ಒಪ್ಪಿಗೆಯನ್ನು (informed consent) ಪಡೆಯಬೇಕಾಗುತ್ತದೆ. ಪ್ರಪಂಚದ ಬಹುತೇಕ ದೇಶಗಳು ಈ ಘಟ್ಟದಲ್ಲಿವೆ.

    ಒಂದೇ ವ್ಯಾಕ್ಸಿನ್ ಎಲ್ಲ ಜನರ ಮೇಲೆ ಕೆಲಸ ಮಾಡುತ್ತದೆಯೇ ಇಲ್ಲವೇ ಎನ್ನುವ ಬಗ್ಗೆಯೂ ಖಾತರಿ ಬೇಕಾಗುತ್ತದೆ. ಹೀಗಾಗಿ ಎರಡನೇ ಘಟ್ಟದಲ್ಲಿ ಕ್ಲಿನಿಕಲ್ ಹಂತದ ಮೊದಲ ಹೆಜ್ಜೆಯಾಗಿ ಕೆಲವೊಮ್ಮೆ (ಉದಾಹರಣೆಗೆ- ಬಡ ದೇಶದ  ಕಾಯಿಲೆಗಳು)  ಹಲವು ದೇಶ ಮತ್ತು ಜನಾಂಗದ ಮೇಲೆ ಇದನ್ನು ಪರೀಕ್ಷಿಸಬೇಕಾಗುತ್ತದೆ.

    ಎರಡನೇ ಹಂತದಲ್ಲಿ ಕೃತಕವಾಗಿ ಸೋಂಕನ್ನು ನೀಡಿ ಈ ಲಸಿಕೆ ಅದಕ್ಕೆ ವಿರುದ್ಧವಾಗಿ  ಕೆಲಸಮಾಡಬಲ್ಲದೇ ಎಂದು ಅಳೆಯಬೇಕಾಗುತ್ತದೆ. ನೂರಾರು ಜನರಲ್ಲಿ ಅದರ ಪರಿಣಾಮಗಳು, ಲಕ್ಷಣಗಳು, ರೋಗ ನಿರೋಧಕ ಶಕ್ತಿ ಇತ್ಯಾದಿಗಳನ್ನು ಅಳೆಯಬೇಕಾಗುತ್ತದೆ. ಇವೆರಡೂ ಹಂತದಲ್ಲಿ ಲಸಿಕೆಯಿಂದ ಅಪಾಯ ಇಲ್ಲ ಎಂದಾದರೆ ಮೂರನೆಯ ಹಂತ ತಲುಪುತ್ತಾರೆ.

    ಮೂರನೇ ಹಂತ ಇನ್ನೂ ದೊಡ್ಡದು.ಈ ಮೂರನೆಯ ಹಂತದಲ್ಲಿ ಸಾವಿರಾರು ಜನರ ಮೇಲೆ ಲಸಿಕೆಯ ಪ್ರಯೋಗ ನಡೆಸಬೇಕಾಗುತ್ತದೆ.ಆದರೆ ಇದನ್ನು ಹಲವು ಜಾಗಗಳಲ್ಲಿ ಮಾಡಬೇಕಾಗುತ್ತದೆ. ಅಲ್ಲಿನ ಜನರಿಗಿರುವ ಹಲವು ಕಾಯಿಲೆಗಳು, ದೇಹ ಪ್ರಕೃತಿ, ಪರಿಸರಗಳಲ್ಲಿ ಇದೇ ಲಸಿಕೆ ಕೆಲಸ ಮಾಡುತ್ತದೆಯೇ ಎಂದು ಅಳೆಯಬೇಕಾಗುತ್ತದೆ.ಅದನ್ನು ದೀರ್ಘಾವಧಿಯಲ್ಲಿ ಮತ್ತೆ ಮತ್ತೆ ಪರೀಕ್ಷೆ ಮಾಡಬೇಕಾಗುತ್ತದೆ. ಲಸಿಕೆ ಈ ನಿಗದಿತ ಸಮಯದಲ್ಲಿ ತನ್ನ ಕಾರ್ಯ ಕ್ಷಮತೆಯನ್ನು ಉಳಿಸಿಕೊಂಡು ಯಾವುದೇ ದುಷ್ಪರಿಣಾಮಗಳಿಂದ ಮುಕ್ತವಾಗಿದ್ದರೆ ಮಾತ್ರ ಅದಕ್ಕೆ ಮಾರಾಟದ ಪರವಾನಗಿ ಸಿಕ್ಕು ಅದು ಸಾರ್ವಜನಿಕರ ಬಳಕೆಗ ಲಭ್ಯವಾಗುತ್ತದೆ.

    ಇದಾದ ನಂತರ ಅದು ಕ್ಲಿನಿಕಲ್ಘಟ್ಟದನಾಲ್ಕನೆಯಹಂತವನ್ನು ಪ್ರವೇಶಿಸುತ್ತದೆ. ಅದನ್ನು post-marketing surveillance ಎಂದು ಕರೆಯುತ್ತಾರೆ. ಅಕಸ್ಮಾತ್ತಾಗಿ  ವಿರಳವಾಗಿ ಆಗಬಹುದಾದ ಕೆಲವು ದುಷ್ಪರಿಣಾಮಗಳನ್ನು ಮತ್ತು ದೀರ್ಘಾವಧಿಯಲ್ಲಿ ಕಾಣಿಸಿಕೊಳ್ಳುವ ಪರಿಣಾಮಗಳನ್ನು ಈ ಹಂತದಲ್ಲಿ ಅಳೆಯಲಾಗುತ್ತದೆ.ಇದಕ್ಕೆಲ್ಲ ಹಲವು ವರ್ಷಗಳೇ ಬೇಕಾಗುತ್ತದೆ.ಬೆರಳೆಣಿಕೆಯಷ್ಟು  ದೇಶಗಳು ಎರಡನೇ ಘಟ್ಟದ ಮೊದಲ ಹಂತಗಳನ್ನು ತಲುಪಿದ್ದಾರೆ.

    ಕರೋನ ವೈರಸ್ ಅಧಿಕೃತವಾಗಿ ದಾಖಲಾದ್ದು 6 ತಿಂಗಳ ಹಿಂದೆ. ಅವುಗಳಲ್ಲಿಈಗಾಗಲೇMERS-CoV (MERS), SARS-CoV, (SARS), SARS-CoV-2, (COVID-19 )  ಎನ್ನುವ ದೊಡ್ಡ ಪಂಗಡಗಳನ್ನು ಮತ್ತು229E (alpha), NL63 (alpha),OC43 (beta),HKU1 (beta) ಎನ್ನುವ ಉಪಪಂಗಡಗಳನ್ನೂ ಗುರುತಿಸಲಾಗಿದೆ. ಇನ್ನೂ ಹಲವು ಸೂಕ್ಷ್ಮ ಬದಲಾವಣೆಗಳ ಜೊತೆಗೆ ಮತ್ತೂ ಹಲವು ಸ್ವರೂಪದ ಕೋವಿಡ್ ವೈರಸ್ಸುಗಳನ್ನು ವಿಂಗಡಿಸಬಹುದು. ಆದರೆ ಲಸಿಕೆಯನ್ನು ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿರುವುದು ಮನುಷ್ಯರನ್ನು ಸಾಮಾನ್ಯವಾಗಿ ಕಾಡಿರುವ, SARS-CoV-2, (COVID-19) ಗಾಗಿ.

    ಕೋವಿಡ್-19 ಕ್ಕೆ ಲಸಿಕೆಯನ್ನು ಕಂಡುಹಿಡಿಯಲು ಹಲವು ದೇಶಗಳ ಒಟ್ಟು 80 ಜೈವಿಕ ವಿಜ್ಞಾನ ಸಂಸ್ಥೆಗಳು ಸೆಣೆಸುತ್ತಿವೆ.ಪ್ರತಿ  ಸಂಸ್ಥೆ  ಭಿನ್ನವಾದ ರೀತಿಯಲ್ಲಿ ಕೋವಿಡ್ ವೈರಸ್ಸನ್ನು ನಿಷ್ಪಲಗೊಳಿಸುವ ದಾರಿಗಳನ್ನು ಹುಡುಕುತ್ತಿದ್ದಾರೆ.ಅಂದರೆ ಯಾವ ವಿಧಾನ ಅತ್ಯಂತ ಫಲಪ್ರದ ಎನ್ನುವುದರ ಮೇಲೆ ಲಸಿಕೆಯ ಯಶಸ್ಸು ನಿರ್ಧಾರವಾಗುತ್ತದೆ.

    ಕೋವಿಡ್-19 ರ ಮೇಲೆ ಕೆಲಸ ಮಾಡಬಲ್ಲ ಲಸಿಕೆಯ ಸೃಷ್ಟಿಯನ್ನು ತಯಾರು ಮಾಡಲು  ಎಷ್ಟು ಸಮಯ ಬೇಕಾಗಬಹುದು?

    ಸಧ್ಯಕ್ಕೆ ಇದೊಂದು ಯಕ್ಷಪ್ರಶ್ನೆ. ಪ್ರತಿಯೊಂದು ಸಂಸ್ಥೆಯೂ ತಾವೇ ಮೊದಲು ಕಂಡುಹಿಡಿಯುತ್ತೇವೆಂದು ಹೇಳಿಕೊಳ್ಳುತ್ತಿದ್ದಾರೆ.

    ಈ ವೈರಸ್ಸಿನ ತಳಿವಿಜ್ಞಾನದ  ಅನುಕ್ರಮವನ್ನು ಪ್ರಕಟಿಸಿದ್ದು 11 ಜನವರಿ 2020 ರಲ್ಲಿ. ಇದನ್ನು ಈ ಜೆನೆಟಿಕ್ ಮ್ಯಾಪ್ ಅನ್ನು ಅತ್ಯಂತ ತ್ವರಿತವಾಗಿ ಬರೆದದ್ದು ಚೈನಾ ದೇಶ.ಅಷ್ಟೇ ಅಲ್ಲದೆ ಅದನ್ನು ವಿಶ್ವದ ಇತರೆ ದೇಶಗಳೊಂದಿಗೆ ಹಂಚಿಕೊಂಡಿತು.

    ಇದರಿಂದಾಗಿ ಲಸಿಕೆಯನ್ನು ಸೃಷ್ಟಿಸುವ ಕಾರ್ಯ ತಟ್ಟನೆ ಶುರುವಾಯಿತು. ಅತ್ಯಂತ ಕಟ್ಟು ನಿಟ್ಟಾದ ನಿಯಮಗಳನ್ನು ಪಾಲಿಸುವ ದೇಶಗಳು ಕೂಡ  ಸಾಂಪ್ರದಾಯಿಕವಾದ ಹಲವು ಘಟ್ಟಗಳನ್ನು ಗಾಳಿಗೆ ತೂರಿ ನಾಗಾಲೋಟದಲ್ಲಿ ಮನುಷ್ಯರ ಮೇಲೆ ಪ್ರಯೋಗ ನಡೆಸಲು ತಯಾರಾದವು. 16ಮಾರ್ಚ್ ವೇಳೆಗಾಗಲೇ ಮನುಷ್ಯನ ಮೇಲೆ ಲಸಿಕೆಯ ಮೊದಲ ಪ್ರಯೋಗ ನಡೆಯಿತು.ಅಂದರೆ, ವರ್ಷವಾದರೂ ಬೇಕಿದ್ದ ಹಂತಗಳನ್ನು ಅತಿಕ್ರಮಿಸಿ ಕೇವಲ 65 ದಿನಗಳಲ್ಲಿ ಈ ಹಂತವನ್ನು ತಲುಪಲಾಯಿತು. ಸಣ್ಣ ಪ್ರಮಾಣದಲ್ಲಿ ಮನುಷ್ಯನ ಮೇಲೆ ಲಸಿಕೆಯನ್ನು ಮೊದಲು ಪ್ರಯೋಗ ಮಾಡಿದ್ದು ಅಮೆರಿಕಾದ ಬೋಸ್ಟನ್ ನಗರದ ಮಾಡರ್ನ ಕಂಪನಿ.ಇದಕ್ಕೆ ಹಣ ಹೂಡಿದ್ದು The Coalition for Epidemic Preparedness Innovations (CEPI).ಇವರೊಡನೆ  ಅಮೆರಿಕಾದ ಇನ್ನೂ ನಾಲ್ಕು ಕಂಪನಿಗಳ ಪೈಪೋಟಿಯಲ್ಲಿವೆ. ಇಂಗ್ಲೆಂಡಿನ ಆಕ್ಸ್ ಫರ್ಡ್ ಕೂಡ ಈ ಹಂತವನ್ನು ತಲುಪಿದೆ. ಬೇರೆಯ ಹಲವು ಸಂಸ್ಥೆಗಳೂ ತಮ್ಮ ಚಟುವಟಿಕೆ ನಡೆಸುತ್ತಿದ್ದಾರೆ. ಆಸ್ಟ್ರೇಲಿಯ,ರಷಿಯ, ಚೈನ ಮತ್ತು ಇತರೆ ದೇಶಗಳು ಕೂಡ ಸ್ಪರ್ಧಿಸುತ್ತಿವೆ.

    ಶೇಕಡಾವಾರು ಲೆಕ್ಕದಲ್ಲಿ ಲಸಿಕೆ ತಯಾರಿಯ ಚಟುವಟಿಕೆ  ಉತ್ತರ ಅಮೆರಿಕಾದಲ್ಲಿ 46%, ಚೈನಾ, ಆಸ್ಟ್ರೇಲಿಯಾ ಮತ್ತು ಯೂರೋಪಿನಲ್ಲಿ18% ನಷ್ಟಿದೆ.ಇವರೆಲ್ಲ ಸಣ್ಣ ಪ್ರಮಾಣದಲ್ಲಿ ಮನುಷ್ಯರ  ಮೇಲೆ ಪ್ರಯೋಗ ಶುರುಮಾಡಿದ್ದಾರೆ.ಸದ್ಯಕ್ಕೆ19 ದೇಶಗಳು ಮಂಚೂಣಿಯಲ್ಲಿವೆ. ಇವರಲ್ಲಿ ಯಾರೇ ಗೆದ್ದರೂ ಮನಕುಲಕ್ಕಂತೂ ಉಪಯೋಗವಾಗುತ್ತದೆ. ಶಾರ್ಟ್ ಕಟ್ ಹಾದಿಯಲ್ಲಿ ಅತ್ಯಂತ ತ್ವರಿತ ಗತಿಯಲ್ಲಿ ಇವರಲ್ಲಿ ಯಾರಾದರೂ ಯಶಸ್ವಿಯಾದರೆ ಮುಂದಿನ ವರ್ಷದಲ್ಲಿ ಎಲ್ಲರಿಗೂ ವ್ಯಾಕ್ಸಿನ್ ಸಿಗಬಹುದೆಂಬ ಆಶಯವಿದೆ.ಆದರೆ ಈ ವರ್ಷವೇ ತಾವಿದನ್ನು ಬಿಡುಗಡೆ ಮಾಡುತ್ತೇವೆಂದು ಹಲವು ಕಂಪನಿಗಳು ಭರವಸೆ ಕೊಡುತ್ತಿವೆ. ಇವುಗಳ ಜೊತೆಗೆ ಕರೋನಾವನ್ನು ಭಾಗಶಃ ತಡೆಗಟ್ಟಲು ನಮ್ಮ ಔಷದಗಳು  ಉಪಯುಕ್ತ ಎನ್ನುವ ತೃತೀಯ ಮಾರುಕಟ್ಟೆಗಳು ಈಗಾಗಲೇ ಹಣ ಮಾಡುತ್ತಿದ್ದಾರೆ.

    ಸಾಂಪ್ರದಾಯಕ ಹಾದಿಯಲ್ಲಿ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಲು ಸುಮಾರು ಹತ್ತು ವರ್ಷಗಳು ಬೇಕು. ತ್ವರಿತವಾಗಿ ಎಂದರೂ ಎಬೋಲ ಲಸಿಕೆಗೆ ಐದು ವರ್ಷಗಳು ಅಗತ್ಯಬಿತ್ತು.(2014-2019) ಆದರೆ ಕರೋನ ವೈರಸ್ಸಿನ ಲಸಿಕೆಯ ತಯಾರಿಕೆಯ ವೇಗ ಪ್ರಪಂಚದ ಎಲ್ಲ ಕಟ್ಟಲೆಗಳನ್ನು ಮುರಿದಿದೆ. ಕರೋನ ಲಸಿಕೆಯ ತಯಾರಿಗೆ ಒಂದರಿಂದ-ಒಂದೂವರೆ ವರ್ಷ ಸಾಕೇ ಎಂಬ ವಿಚಾರ ಎಲ್ಲರ ಹುಬ್ಬೇರಿಸಿದೆ. ಮನುಷ್ಯನ ಇತಿಹಾಸದಲ್ಲೇ ಇಂತಹ ವೇಗ ಹಿಂದೆಂದೂ ದಾಖಲಾಗಿಲ್ಲ.

    ಕೋವಿಡ್ ಲಸಿಕೆಯೊಂದರ ತಯಾರಿಕೆ ಅತ್ಯಂತ ಕಷ್ಟವಾದ್ದು.ಏಕೆಂದರೆ ಸ್ಪರ್ಧೆ ಇರುವುದು ಅಂತರರಾಷ್ಟ್ರೀಯ  ಸಂಸ್ಥೆಗಳ ನಡುವೆ ಮಾತ್ರವಲ್ಲ. ಕೋವಿಡ್-19 ವೈರಸ್ಸಿನ ಜೊತೆಗೆ ಕೂಡ ಸೆಣೆಸಬೇಕಿದೆ. ಕರೋನ ಅಲೆಗಳೋಪಾದಿಯಲ್ಲಿ ಬರುವ ಸೋಂಕು. ಈಗಾಗಲೇ ಹಲವು ದೇಶಗಳು ಎರಡನೆಯ ಅಲೆಯನ್ನು ಎದುರಿಸುತ್ತಿದ್ದಾರೆ. ಸಾಂಪ್ರದಾಯಿಕವಾಗಿ ಕಾಯುವುದಾದರೆ ಈ ವೈರಸ್ಸಿನ ವೇಗದೊಡನೆ ಸೆಣಸಿ ಲಸಿಕೆಯನ್ನು ಕಂಡುಹಿಡಿಯಲು ಸಾದ್ಯವಾಗುವುದಿಲ್ಲ. ಪೂರ್ಣವಾಗುವ ಮುನ್ನವೇ ಪ್ರಯೋಗಕ್ಕೆ ಬೇಕಾದಷ್ಟು ಸೋಂಕಿತ ಜನರನ್ನು ಹೊಂದಿಸುವುದು ದುಸ್ಸಾಧ್ಯವಾಗುತ್ತದೆ.

    ಹಿಂದೆಂದೂ ಇಲ್ಲದ ರೀತಿಯಲ್ಲಿ ಹುಟ್ಟಿಕೊಂಡು ಬೆಳೆಯುತ್ತಿರುವ ಶರ ವೇಗದ ವ್ಯಾಕ್ಸಿನ್ ತಯಾರಿಕೆ ಹೊಸ ಮಾರ್ಗ ದರ್ಶಿಕೆಗಳು ಹಲವರಿಗೆ ಒಗ್ಗಿ ಬರುತ್ತಿಲ್ಲ. ಉಪಯೋಗಿಸಲ್ಪಡುತ್ತಿರುವ ಟೆಕ್ನಾಲಜಿಯೂ ಅತ್ಯಂತ ಹೊಸತು. ಬೇಗನೆ ವ್ಯಾಕ್ಸಿನ್ ತಯಾರುಮಾಡುವ ಒತ್ತಡದಲ್ಲ ಆಗುವ ತಪ್ಪುಗಳು ಜಾಸ್ತಿ ಎನ್ನುವ ಎಚ್ಚರಿಕೆಯ ಗಂಟೆಯನ್ನ ಕಟ್ಟಿಕೊಂಡೇ ವಿಜ್ಞಾನಿಗಳು ಕೆಲಸ ಆರಂಭಿಸಿದ್ದಾರೆ. ಆದರೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಮಾನಿಗಳ ಮೆಚ್ಚುಗೆಗಾಗಿ ಕರೋನ ವ್ಯಾಕ್ಸಿನ್ಖರಾರುವಕ್ಕಾಗಿ ಅಮೆರಿಕಾದ ನವೆಂಬರಿನ ಎಲೆಕ್ಷನ್ ವೇಳೆಗೆ  ತಯಾರಿರುತ್ತದೆ ಎಂದು ಹೇಳಿಕೆ ನೀಡಿದ್ದು ಇದೀಗ ಇತಿಹಾಸದ ಮತ್ತೊಂದು ಹಾಸ್ಯಾಸ್ಪದ ಸಂಗತಿಯಾಗಿ ದಾಖಲಾಗಿದೆ!

    ಅಂತಾರಾಷ್ಟ್ರೀಯ ಸಹಕಾರ, ಪಾಲಿಸಿ ಮೇಕರ್ ಗಳ ನಡುವಿನ ಹೊಂದಾಣಿಕೆ, ಹಣ ಹೂಡುವ ಜನ,ಆಯಾ ದೇಶ ಮತ್ತು ವಿದೇಶಗಳ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ಭಿನ್ನ ಸರಕಾರಗಳು ಒತ್ತಟ್ಟಿಗೆ ಬಂದು ಕೆಲಸಮಾಡದಿದ್ದರೆ ಮತ್ತು ಲಸಿಕೆಯೊಂದರ ತಯಾರಿಯಲ್ಲಿ  ನಡೆಯುವ ರಾಜಕೀಯವನ್ನು ದೂರವಿಡದಿದ್ದರೆ ಕರೋನ ವೈರಸ್ ಗೆ ಲಸಿಕೆ ತಯಾರಿಸುವುದು ಸುಲಭವಲ್ಲ ಎನ್ನುವ ವಾಸ್ತವ ಎಲ್ಲರನ್ನೂ ಬಲವಾಗಿ ತಟ್ಟಿದೆ.ಇದೆಷ್ಟು ಕಷ್ಟವನ್ನು ತಂದೊಡ್ಡಿದೆಯೆಂದರೆ ಲಸಿಕೆ ತಯಾರಿಕೆಗೆ ಹೂಡಿದ್ದ ಹಣವೆಲ್ಲ ಪ್ರಯೋಜನಕ್ಕೇ ಬರದೆ ನಷ್ಟವನ್ನು ತಂದೊಡಿದ್ದರೂ ಸ್ಪರ್ಧೆಗೆ ಇಳಿದಿದ್ದ ಹಲವು ಕಂಪನಿಗಳು ಈಗಾಗಲೇ ಸೋಲೊಪ್ಪಿಕೊಂಡು ಹಿಂತೆಗೆದಿದ್ದಾರೆ.ಮನುಷ್ಯರ ಮೇಲಿನ ಪ್ರಯೋಗದ ಹಂತದಲ್ಲಿ ಎಡವುವ ಕುದುರೆಗಳೇ ಅಧಿಕ.ಈ ಕುದುರೆಗಳ ರೇಸಿನಲ್ಲಿ ಎಲ್ಲವೂ ಗುರಿಯವರೆಗೆ ಓಡದಿರುವ ಸಾಧ್ಯತೆಗಳೇ ಹೆಚ್ಚು.

    ಹಾಗಿದ್ದೂ ಇದಕ್ಕಾಗಿ ಸ್ಪರ್ಧೆಯೇ ನಡೆಯುತ್ತಿರುವಾಗ ಇದರಲ್ಲಿ ಎಷ್ಟು ಹಣವಿರಬಹುದು?

    ಅಮೆರಿಕಾದಲ್ಲಿ ಮಂಚೂಣಿಯಲ್ಲಿರುವ ಮಾಡರ್ನ್ ಕಂಪೆನಿ ಎರಡನೇ ಘಟ್ಟವನ್ನು ತಲುಪುತ್ತಿದ್ದಂತೆ ಅದೇ ಕಂಪನಿ ರೇಸಿನಲ್ಲಿ ಗೆಲ್ಲುತ್ತದೆ ಎಂಬಂಥ ಉತ್ಪ್ರೇಕ್ಷಿತ ವಾತಾವರಣ ಸೃಷ್ಟಿಯಾಯ್ತು.ಅದು ತನ್ನ ಪ್ರಗತಿಯನ್ನು ಸಾರ್ವಜನಿಕವಾಗಿ ತಿಳಿಸಿದ ಒಂದೆರೆಡೇ ಗಂಟೆಗಳಲ್ಲಿ  17.6 ಮಿಲಿಯನ್ ಡಾಲರುಗಳಷ್ಟು ಮೊತ್ತದ ಶೇರುಗಳ ಮಾರಾಟವಾಯ್ತು.ಇದುವರೆಗೆ ಈ ಕಂಪನಿ 1.3 ಬಿಲಿಯನ್ ಡಾಲರ್ ಗಳಷ್ಟು ಶೇರುಗಳನ್ನು ಮಾರಿದೆ. ಈ ಕಂಪನಿಯ ಟಾಲ್ ಝ್ಯಾಕ್ ಮತ್ತು ಲಾರೆನ್ಸ್ ಕಿಮ್ ಎಂಬ ಬರೇ ಇಬ್ಬರು ಎಕ್ಸೆಕ್ಯೂಟಿವ್ ಮೆಡಿಕಲ್ ಆಫೀಸರುಗಳು  ಒಟ್ಟು 30 ಮಿಲಿಯನ್ ಮೊತ್ತದ ಶೇರುಗಳನ್ನು ಮಾರಿಕೊಂಡಿದ್ದಾರೆ.

    ಇಂಗ್ಲೆಂಡಿನಲ್ಲಿ ಮಂಚೂಣಿಯಲ್ಲಿರುವ ಆಕ್ಸಫರ್ಡ್ ಗೆ ಸರ್ಕಾರ 43 ಮಿಲಿಯನ್  ಪೌಂಡುಗಳನ್ನು ಹೂಡಿದೆ. ಇದರ  ಫಲಿತಾಂಶದ ಮೇಲೆ ಅಪಾರ ಭರವಸೆಯನ್ನಿಟ್ಟಿರುವ ಭಾರತದ ಉತ್ಪಾದಕ ಕಂಪನಿಯೊಂದು ಲಸಿಕೆಯ ತಯಾರಿ ಪೂರ್ಣವಾಗಿಲ್ಲದಿದ್ದರೂ ಈಗಾಗಲೇ ಲಸಿಕೆಯನ್ನು ಉತ್ಪಾದಿಸಿ ತಯಾರಿಟ್ಟುಕೊಂಡು ಅಧಿಕೃತ ಫಲಿತಾಂಶ ಹೊರಬೀಳಲು ಕಾಯುತ್ತಿದೆ ಎಂಬ ವದಂತಿಯಿದೆ. ಅಕಸ್ಮಾತ್ ಋಣಾತ್ಮಕ ಫಲಿತಾಂಶ ಬಂದರೆ ಅದೆಲ್ಲವನ್ನೂ ನಾಶಪಡಿಸಲು ತಯಾರಿದೆ ಎಂದರೆ ಇದರಲ್ಲಿರುವ ಹಣದ ಕಲ್ಪಿತ ಅಂದಾಜು ಸಿಗಬಹುದು.

     ಇದೇ ತಿಂಗಳ 4-5, ಜೂನ್ ರಂದು ಲಂಡನ್ನಿನಲ್ಲಿ ಇದಕ್ಕಾಗಿ ಒಂದು ಲಸಿಕೆಗಳ ಗ್ಲೋಬಲ್ ಸಮ್ಮಿಟ್ ನಡೆಯಿತು.ಯುನೈಟೆಡ್ ಕಿಂಗ್ಡಮ್ಮಿನ ಪ್ರಧಾನಿ ಬೋರಿಸ್ ಜಾನ್ಸನ್ನನ ನೇತೃತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ’ವೇಗ ’,’ಗ್ಲೋಬಲ್ ಮಟ್ಟದ ಉತ್ಪಾದನೆ ’ ಮತ್ತು  ’ಇಡೀ ಪ್ರಪಂಚಕ್ಕೆ ಅದರ ಸರಬರಾಜು ’ ಈ ಮೂರು ಅಂಶಗಳನ್ನು ಸಾಧಿಸಲು ಎಲ್ಲ ದೇಶಗಳು ಹಣ ಹೂಡಿ, ಪ್ರಯತ್ನಪಟ್ಟು ಮತ್ತು ಹಂಚಿಕೊಳ್ಳುವುದಕ್ಕೆ ಒಪ್ಪಿ ಒಗ್ಗೂಡಿಕೆಲಸ ಮಾಡಬೇಕೆಂದು ಒತ್ತಾಯ ಹೇರಲಾಯ್ತು.

    ಇಲ್ಲಿ ಸೇರಿದ್ದ ನಾಯಕರು,52 ಸಂಸ್ಥೆಗಳ ಮುಖ್ಯಸ್ಥರು ಅಂತರ ರಾಷ್ಟ್ರೀಯ  ಲಸಿಕೆ ಕಾರ್ಯಕ್ರಮಗಳ ಮುಂದಾಳತ್ವ ವಹಿಸುವ ಗ್ಯಾವಿ ( Gavi, the vaccine alliance) ಎನ್ನುವ ಸಂಸ್ಥೆ ಗೆ 8.8 ಬಿಲಿಯನ್ ಡಾಲರುಗಳನ್ನು ನೀಡಲು ಒಪ್ಪಿವೆ. ಇದರಿಂದ ಮುಂದಿನ ಐದು ವರ್ಷಗಳಲ್ಲ 8 ಮಿಲಿಯನ್ ಜನರ ಬದುಕನ್ನು ಉಳಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ.

    ಸ್ವಿಟ್ಜ್ ರ್ ಲ್ಯಾಂಡಿನ ಜಿನೀವ ನಗರದಲ್ಲಿ ಮುಖ್ಯ ಕಚೇರಿ ಹೊಂದಿರುವ GAVI (Global Alliance for Vaccines and Immunization)  WHO ಗಿಂತ ಹೆಚ್ಚು ನಂಬಿಕೆಯನ್ನು ಉಳಿಸಿಕೊಂಡ ಸಂಸ್ಥೆಯಾಗಿದೆ. ಇದೇ ಸಮಯದಲ್ಲಿ ಕರೋನದ ಅಬ್ಬರದಲ್ಲಿ ನಿಂತೇ ಹೋಗಿದ್ದ ಇತರೆ ಮಹಾಮಾರಿಗಳ ಲಸಿಕೆ ಕಾರ್ಯಕ್ರಮಕ್ಕೆ ಮತ್ತೆ ಜೀವ ತುಂಬಲು 300 ಮಿಲಿಯನ್ ಡಾಲರ್ ಗಳನ್ನು ಕಾದಿರಿಸಿದೆ.ಇದರಿಂದ ಪ್ರಪಂಚದ 50% ಮಕ್ಕಳಿಗೆ ಒಳಿತಾಗಲಿದೆ.ಜೂನ್ 7ರಂದು ಚೈನಾ ತಾನು ಮೊದಲಿಗೆ ಲಸಿಕೆಯನ್ನು ಕಂಡುಹಿಡಿಯುವುದಾದರೆ ಅದನ್ನು ಪ್ರಪಂಚದ ಎಲ್ಲರೊಂದಿಗೆ ಹಂಚಿಕೊಳ್ಳುತ್ತೇನೆಂಬ ಹೇಳಿಕೆ ನೀಡಿತು.

    ಇಷ್ಟೆಲ್ಲ ಪ್ರಯತ್ನಕ್ಕೆ ಮಹತ್ತರ ಕಾರಣಗಳಿವೆ

    2009 ರಲ್ಲಿ H1N1 ಗೆ ಲಸಿಕೆಯೊಂದು ದೊರೆಯುವಂತಾದಾಗ ಪ್ರಪಂಚದ ಸಿರಿವಂತ ದೇಶಗಳು ತಟ್ಟನೆ ಲಸಿಕೆಗಳನ್ನು ಖರೀದಿಸಿಬಿಟ್ಟವು. ಕೊಳ್ಳುವ ಬಲವಿರದ ಬಡ ದೇಶದ ಪ್ರಜೆಗಳಿಗೆ ಇದು ದೊರೆಯುವುದು ಬಹಳ ನಿಧಾನವಾಯಿತು. ಭಾರತಕ್ಕೆ ಇಡೀ ಪ್ರಪಂಚಕ್ಕೆ ಅತಿ ಕಡಿಮೆ ದರದಲ್ಲಿ ಮತ್ತು ಅತಿ ವೇಗವಾಗಿ ಲಸಿಕೆಯನ್ನು ತಯಾರಿಸಿಕೊಡಬಲ್ಲ ಸಾಮರ್ಥ್ಯವಿದೆ. ಅದೇನಾದರೂ ಮೊದಲಿಗೆ ತನ್ನ 1.37 ಬಿಲಿಯನ್ ಪ್ರಜೆಗಳಿಗೆ ಲಸಿಕೆ ಹಾಕುವ ನಿರ್ದಾರ ತೆಗೆದುಕೊಂಡಲ್ಲಿ ಇತರೆ ರಾಷ್ಟ್ರಗಳು ಬಹುಕಾಲ ಕಾಯಬೇಕಾಗುತ್ತದೆ.

    ಲಸಿಕೆಗಳು ಕೋವಿಡ್ ನಂತಹ ಸರ್ವವ್ಯಾಪಿ  ವ್ಯಾಧಿಯ ಮೇಲೆ ಪರಿಣಾಮಕಾರಿಯಾಗಬೇಕೆಂದರೆ ಪ್ರಪಂಚದ ಎಲ್ಲ ಕಡೆ ಆ ವ್ಯಾಕ್ಸಿನ್ ಲಭ್ಯವಾಗಬೇಕು. ಇಲ್ಲದಿದ್ದಲ್ಲಿ ಮತ್ತೆ ಇಂತಹ ಪ್ಯಾಂಡಮಿಕ್ ಹರಡಬಲ್ಲದು. ಈ ಅರಿವನ್ನು ನೀಡುವ ನಿಟ್ಟಿನಲ್ಲಿ ಕೋವಿಡ್ ಜಾಗತಿಕಗೊಂಡಿರುವ ಈ ಲೋಕದ ಹಾದಿಯನ್ನೇ ಬದಲಿಸಿದೆ.ಅದೇ ರೀತಿ ಲಸಿಕೆ ತಯಾರಿಕೆಯ ಎಲ್ಲ ನಿಯಮ ಮತ್ತು ಕಟ್ಟಲೆಗಳನ್ನು ಕೂಡ ಸಾರಾ ಸಗಟಾಗಿ ಮುರಿದಿದೆ.

    H1B ,L1 ಹಾಗೂ ವರ್ಕ್ ಪರ್ಮಿಟ್ ವೀಸಾ ಅಮಾನತು; ಕಮರಿದ ಅಮೆರಿಕಾ ಕನಸು

    ಭಾರತದಲ್ಲಿ  ಎಂಜಿನಿಯರಿಂಗ್  ಓದುವ ವಿದ್ಯಾರ್ಥಿಗಳಿಗೆ  ಇಂಥ ಕನಸುಗಳು ಸಾಮಾನ್ಯವಾಗಿ ಇರುತ್ತವೆ. ಒಂದು  ಓದು ಮುಗಿದ ಮೇಲೆ ಒಳ್ಳೆಯ  ಐಟಿ  ಕಂಪೆನಿಯಲ್ಲಿ ಕೆಲಸ ಮಾಡಬೇಕು. ಎರಡು ಕೆಲಸದ  ಜೊತೆಗೆ ಒಂದು ಸಾರಿ ಅಮೆರಿಕಾಗೆ ಹೋಗಿಬರಬೇಕು. ಅಲ್ಲಿ  ಒಂದೆರೆಡು ವರ್ಷಗಳವರೆಗಾದರೂ ಕೆಲಸ ಮಾಡಿ ಒಂದಿಷ್ಟು ಹಣ ಸಂಪಾದಿಸಬೇಕು. ಆ ದುಡ್ಡಿನಲ್ಲಿ ಬೆಂಗಳೂರಿನಲ್ಲಿ ಒಂದು ಬಿಡಿಎ ಸೈಟು ಕೊಂಡು  ಸಾಲವಿಲ್ಲದೆ ಸ್ವಂತ ಮನೆ ಮಾಡಬೇಕು.  ಈ ಕನಸುಗಳು  ಕಳೆದ ಮೂರು ದಶಕದಿಂದ ಸಾಧ್ಯವಾಗಿತ್ತು. 

      
    ಅಧ್ಯಕ್ಷ ಟ್ರಂಪ್ ಭಾರತದ ಯುವಕರ ಈ ಕನಸಿಗೆ  ತಮ್ಮ ಒಂದು ಆದೇಶದಿಂದ ತಣ್ಣೀರು ಎರಚಿದ್ದಾರೆ. ಈ ವರ್ಷದ ಡಿಸೆಂಬರ್ ವರೆಗೂ    H1B, L1 ಹಾಗೂ ವರ್ಕ್ ಪರ್ಮಿಟ್  ವಲಸೆ  ಕೆಲಸಗಾರರ ವೀಸಾವನ್ನು ಅಮಾನತ್ತು ಮಾಡಿದ್ದಾರೆ. ಹೀಗಾಗಿ ಭಾರತದ ಮಧ್ಯಮ ವರ್ಗದ ಯುವಕರಿಗೆ ಅಮೆರಿಕಾದಲ್ಲಿ ಕೆಲಸ ಎಂಬುವುದು  ಮುಂದಿನ ಹಲವು ವರ್ಷದವರೆಗೆ ಕನಸಾಗೇ ಉಳಿಯಲಿದೆ. 

    ಕರೋನ ಪರಿಣಾಮ

    ಕರೋನ   ದಿನದಿಂದ ದಿನಕ್ಕೆ ಇಡೀ ಪ್ರಪಂಚದಲ್ಲಿ ವ್ಯಾಪಾರ, ವಹಿವಾಟು, ಪ್ರವಾಸ, ವಸ್ತುಗಳ ಪೂರೈಕೆ  ಸರಪಳಿಯಲ್ಲಿ ಹಲವಾರು ಬದಲಾವಣೆ ಮಾಡಿಕೊಳ್ಳಲೇ ಬೇಕಾದ ಪರಿಸ್ಥಿತಿಯನ್ನು ತಂದೊಡ್ಡಿದೆ.  ಅಮೆರಿಕಾದಲ್ಲಿ ಸರಿ ಸುಮಾರು 20 ಲಕ್ಷ ಜನರು ಕಳೆದ 3 ತಿಂಗಳಿಂದ ಕೆಲಸವನ್ನು ಕಳೆದುಕೊಂಡಿದ್ದಾರೆ.  ಜೊತೆಗೆ ಅಮೆರಿಕಾದಲ್ಲಿ ಆಫ್ರಿಕನ್ ಅಮೆರಿಕನ್ ತಾರತಮ್ಯದ ಹೋರಾಟ ಭುಗಿಲೆದ್ದಿದೆ.  

    ಹೀಗಾಗಿ ಅಮೆರಿಕಾದಲ್ಲಿ ನಿರುದ್ಯೋಗ ಅತಿದೊಡ್ಡ ಸಮಸ್ಯೆ ತಂದೊಡ್ಡಿದೆ.    ಆಫ್ರಿಕನ್ ಅಮೆರಿಕನ್ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹಾಗೂ  ಅಮೆರಿಕಾದ ಪೌರತ್ವವಿರುವವರಿಗೆ ಮೊದಲ ಕೆಲಸ ಕೊಡಬೇಕೆಂಬ ಆದ್ಯತೆ ಮೇರೆಗೆ, ಅಧ್ಯಕ್ಷ ಟ್ರಂಪ್,  ಈ ವರ್ಷದ ಡಿಸೆಂಬರ್ ವರೆಗೂ    H1B, L1 ಹಾಗು ವರ್ಕ್ ಪರ್ಮಿಟ್  ವಲಸೆ  ಕೆಲಸಗಾರರ ವೀಸಾವನ್ನು ಅಮಾನತ್ತು ಮಾಡಿ ಆದೇಶಿಸಿದ್ದಾರೆ. 

      
    ಕರೋನ ಹೀಗೆ ಮುಂದುವರೆದರೆ ಈ ಅಮಾನತು ಇನ್ನು ಹೆಚ್ಚಿನ ಸಮಯ ಮುಂದುವರಿಯುವ ಸಾಧ್ಯತೆಗಳಿವೆ. ಇದರ ಅರ್ಥ ಮತ್ತು ಪರಿಣಾಮ ಏನಾಗಬಹುದು ಎಂಬ ಕುತೂಹಲ H1B  ವೀಸಾದ  ಹೆಚ್ಚಿನ ಪಾಲುದಾರ ದೇಶವಾದ ಭಾರತೀಯರಿಗೆ ಇದ್ದೆ ಇದೆ. 

    H1B ,L1 ವೀಸಾ  ಅಂದರೇನು?

    H1B: ಹದಿನಾರು ವರ್ಷದ ವಿದ್ಯಾಭ್ಯಾಸ  (ಎಂಜಿನಿಯರಿಂಗ್ ನಲ್ಲಿ ಯಾವುದೇ ಪದವಿ) ನಂತರ ಯಾವುದೇ ವಿಷಯದಲ್ಲಿ ಕೌಶಲ್ಯ ಗಳಿಸಿದ  ಕಾರ್ಮಿಕನಿಗೆ/ತಂತ್ರಜ್ಞರಿಗೆ  (ವೈಟ್ ಕಾಲರ್ ಜಾಬ್ ) ಅಮೆರಿಕಾದಲ್ಲಿ ಕೆಲಸ ಮಾಡಲು ಕೊಡುವ ವೀಸಾ.  ಆರು ವರ್ಷದ ಪರಿಮಿತಿ ಹೊಂದಿದ ಈ ವೀಸಾ ಪಡೆದು ಅಮೆರಿಕಾದ ಯಾವುದೇ ಕಂಪೆನಿಗಳಲ್ಲಿ ನೇರವಾಗಿ ಕೆಲಸ ಮಾಡಬಹುದು ಹಾಗೂ ನವೀಕರಿಸಲೂ ಬಹುದು. 

    L1: ಇದು H1B ವೀಸಾ ಕಿಂತ ಸ್ವಲ್ಪ ಭಿನ್ನ,  ಈಗಾಗಲೇ ಭಾರತದಲ್ಲಿ ಇರುವ ಕಂಪೆನಿಗಳಲ್ಲಿ  ಕೆಲಸ ಮಾಡುವ ತಂತ್ರಜ್ಞರು ಅದೇ ಕಂಪನಿಯ ಅಥವಾ ಆ ಕಂಪನಿಯ ಒಡಂಬಡಿಕೆಯಲ್ಲಿ ಹೊಂದಿರುವ  ಅಮೆರಿಕಾದಲ್ಲಿ ಇರುವ ಕಂಪನಿಗೆ  ಕೌಶಲ್ಯ ತುಂಬಿದ ನುರಿತ  ಕೆಲಸ ಮಾಡಲು ಕಳುಹಿಸುವುದು. 

    ಅಮೆರಿಕಾದಲ್ಲಿ ವರ್ಷಕ್ಕೆ ಸರಿ ಸುಮಾರು 65,000  H1B ವೀಸಾವನ್ನು ಲಾಟರಿ ಮೂಲಕ ವಿತರಣೆ ಮಾಡುತ್ತಾರೆ.  ಇದರ ಜೊತೆ L1  ವೀಸಾ ದಡಿಯಲ್ಲಿ ಸುಮಾರು 70 ಸಾವಿರದಷ್ಟು ಜನರು ಭಾರತದಿಂದ ಅಮೆರಿಕಾಕ್ಕೆ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ.   ಅದರಲ್ಲಿ ಭಾರತದ  IT ದಿಗ್ಗಜ ಕಂಪನಿಗಳಾದ ಇನ್ಫೋಸಿಸ್, ವಿಪ್ರೊ, ಟಿಸಿಎಸ್   ಪಾಲೇ ಹೆಚ್ಚು. 


    ಅದರೊಟ್ಟಿಗೆ  ನೇರವಾಗಿ ಕನ್ಸಲ್ಟೆಂನ್ಸಿಗಳ ಮೂಲಕವೂ H1B ಕೆಲಸಕ್ಕೆ ಅರ್ಜಿಹಾಕಿ ಅಮೆರಿಕಾ ಹಾರುವವರ ಸಂಖ್ಯೆಯೂ ಜಾಸ್ತಿಯೇ ಇದೆ. 

    ಇನ್ನು ಮುಂದೆ ಹಲವು ವರ್ಷಗಳ ಕಾಲ ಅಮೆರಿಕಾ ಕೆಲಸದ ಕನಸು ಕನಸಾಗೇ ಉಳಿಯುವ ಸಾಧ್ಯತೆ ಹೆಚ್ಚಿದೆ.  ಆದರೆ ಜಾಗತಿಕ ಗ್ರಾಮ ಎಂಬ ಪರಿಕಲ್ಪನೆಯಲ್ಲಿ  ಪ್ರಪಂಚದಲ್ಲಿ ಯಾವ ಮೂಲೆಯಲ್ಲಿ ಇದ್ದರೂ ಇರುವಲ್ಲಿಯೇ ಕೆಲಸ ಮಾಡುವದಕ್ಕೆ ಹೊಸ ರೂಪ ಸಿಗಲಿದೆ. 

    ಇದರ ಮಧ್ಯ ಒಂದು ಸಮಾಧಾನಕರ ಸಂಗತಿ ಎಂದರೆ, ಈಗಾಗಲೇ  H1B ವೀಸಾ ಹೊಂದಿರುವವರು ಅದರ ಸಿಂಧುತ್ವ ಹೊಂದಿರುವ ವರೆಗೆ ಅಮೆರಿಕಾದಲ್ಲಿ ಕೆಲಸ ಮುಂದುವರಿಸಬಹುದಾಗಿದೆ. 

    ಮುಂದೆ ಏನಾಗಬಹುದು


    1. ಅಮೆರಿಕಾದಲ್ಲಿ ಅಲ್ಲಿಯ ಪೌರತ್ವ ಹೊಂದಿರುವವರಿಗೆ ಹೆಚ್ಚು ಕೆಲಸ ಸಿಗಲಿದೆ.  ಆದರೆ ಕೌಶಲ್ಯ ಭರಿತ ನುರಿತ ತಂತ್ರಜ್ಞರು ಕೆಲವೊಂದು ಕೆಲಸಗಳಿಗೆ ಸಿಗದಿದ್ದಾಗ  ಕಡಿಮೆ ವೆಚ್ಚದಲ್ಲಿ ಐಟಿ ಸೇವೆ ನೀಡುವ ?ದೇಶಗಳಲ್ಲಿ ಪ್ರಮುಖ ವಾದ ಭಾರತಕ್ಕೆ ಆ ಕೆಲಸಗಳು ಹರಿದು ಬರುವ ಸಾಧ್ಯತೆಗಳಿವೆ. 

     
    2. ಹೆಚ್ಚಿನ ಕೌಶಲ್ಯ ಭರಿತ ತಂತ್ರಜ್ಞರು ಅಮೆರಿಕಾದಲ್ಲಿ ಸಿಗದಿದ್ದಾಗ ಹೆಚ್ಚಾಗಿ  ಸಂಶೋಧನೆ ಒಳಪಡುವ ಕೆಲಸಗಳು ಅಮೆರಿಕಾದಿಂದ ಬೇರೆ ಸ್ಥಳಗಳಿಗೆ ರವಾನೆಯಾಗಲಿವೆ.  ಭಾರತದಲ್ಲಿ  ಕೌಶಲ್ಯಭರಿತ  ಮಾನವಶಕ್ತಿ ಸಿಗುವುದರಿಂದ  ವಿಶ್ವದ ಸಂಶೋಧನೆ ಕೆಲಸಗಳಿಗೆ ನಚ್ಚಿನ ತಾಣವಾಗಲಿದೆ.

     
    3. ಈಗಾಗಲೇ ಮನೆಯಿಂದಲೇ  ಕೆಲಸವನ್ನು –WFH- ನಿರ್ವಿಘ್ನವಾಗಿ ಮುಂದುವರಿಸಿಕೊಂಡು ಹೋಗುತ್ತಿರುವ , ಭಾರತದ    ಕಂಪನಿಗಳು ಇನ್ನು ಮುಂದೆ ತನ್ನ ಯಾವುದೇ ತಂತ್ರಜ್ಞರನ್ನು ಅಮೆರಿಕಾಗೆ ಕಳುಹಿಸದೇ ಭಾರತದಿಂದಲೇ ತನ್ನ ಎಲ್ಲಾ ಸಾಫ್ಟ್ ವೇರ್  ಡೆವಲಪ್ಮೆಂಟ್ ಕೆಲಸವನ್ನು ವರ್ಚುಯಲ್ಆಗಿ ನಿರ್ವಹಿಸಿ ವಿತರಿಸುವ ಹಾದಿ ತುಳಿಯಲಿವೆ.  ಇದರಿಂದ ಐಟಿ ಕಂಪನಿಗಳಿಗೆ ನಷ್ಟಕ್ಕಿಂತ ಲಾಭವೇ ಹೆಚ್ಚು.  ಭಾರತದಿಂದ ಕಳುಹಿಸುವ ಪ್ರತಿಯೊಬ್ಬ ಉದ್ಯೋಗಿಗೆ ಸಂಬಳ, ಭತ್ಯೆ ಎಲ್ಲವನ್ನು ಅಮೆರಿಕನ್ ಡಾಲರ್ ಗಳಲ್ಲಿ ಪಾವತಿಸಬೇಕಾದ ಅನಿವಾರ್ಯತೆ ಇತ್ತು.  ಅದು ತಪ್ಪಲಿದೆ.

     
    4. ಭಾರತದಲ್ಲಿ ಅನುಭವ ಇರುವ ಐಟಿ ತಂತ್ರಜ್ಞರ ಸಂಬಳ ಜಾಸ್ತಿ ಯಾಗುವ ಹಾಗು ಹೆಚ್ಚಿನ ಸೌಲಭ್ಯ ಇಲ್ಲೇ ದೊರೆಯುವ ಸಾಧ್ಯತೆಯಿದೆ.   ಹೆಚ್ಚಿನ ಕೌಶಲ್ಯ  ನುರಿತ ತಂತ್ರಜ್ಞರು ಭಾರತದಲ್ಲಿ ಉಳಿಯುವುದರಿಂದ  ಐಟಿ ಕಂಪನಿಗಳಿಗೆ ಹೆಚ್ಚು ಲಾಭ. ಹೊಸ ಹಾಗೂ ಅನುಭವ ವಿರುವ  ಉದ್ಯೋಗಾಂಕ್ಷಿಗಳಲ್ಲಿ ಹೆಚ್ಚಿನ ಸ್ಪರ್ಧೆ ಏರ್ಪಡಲಿದೆ.

        
    5. ಈಗಾಗಲೇ H1B  ಹೊಂದಿ ಅಮೆರಿಕಾದಲ್ಲಿ ಕೆಲಸ ಮಾಡುತ್ತಿರುವವರು H1B  ವೀಸಾದ ಸಿಂಧುತ್ವ ಮುಂದಿನ ಹಲವು ತಿಂಗಳಲ್ಲಿ ಮುಗಿದರೆ ಅದನ್ನು ನವೀಕರಿಸಲಾಗದೆ ಭಾರತಕ್ಕೆ ಹಿಂದಿರುಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. 

     

    error: Content is protected !!