26.7 C
Karnataka
Sunday, April 20, 2025
    Home Blog Page 173

    ‘ನಾವು ಈ ಸಮಾಜದ ವರ, ನಮಗೆ ಕೊರೊನಾ ಶಾಪವಾಗಬಾರದು’

    ಮೂರು ತಿಂಗಳು ಮುಗಿದಿವೆ. ಆದರೂ ಕೋವಿಡ್, ಕೊರೊನಾ, ಲಾಕ್ಡೌನ್, ಸೀಲ್ಡೌನ್ ಎನ್ನುವ ಭೀತಿ ಹುಟ್ಟಿಸುವ ಪದಗಳ ಆಡಂಬರ ನಿಂತಿಲ್ಲ. ಕಣ್ಣಿಗೆ ಕಾಣದ ಒಂದು ಸಣ್ಣ ವೈರಸ್ ತಂದೊಡ್ಡಿದ ತಾಪತ್ರಯ ಅಷ್ಟಿಷ್ಟಲ್ಲ.

    ಯಾರ್ಯಾರಿಗೆ ಎಂಥೆಂತದ್ದೋ ಸಂಕಟ. ಯಾರನ್ನೇ ಮಾತಾಡಿಸಿದರೂ ಕೊರೊನಾ ಕಷ್ಟಗಳ ಉದ್ದುದ್ದ ಸರಣಿ ಬಿಚ್ಚಿಡುವವರೇ. ಅರಮನೆಯ ಅಂಬಾನಿಯಿಂದ ಹಿಡಿದು ಹಾದಿಯಲ್ಲಿ ಹೋಗುವ ಜೋಗಯ್ಯನವರೆಗೆ ಎಲ್ಲರಿಗೂ ಕೊರೊನಾ ಬಾಧೆ ತಟ್ಟದೇ ಬಿಟ್ಟಿಲ್ಲ. ಅಂದಹಾಗೆ, ಜೋಗಯ್ಯ ಎಂದ ತಕ್ಷಣ ನೆನಪಾಗುವ ಜೋಗುತಿಯರ ಬಗ್ಗೆಯೂ ಈ ಘಳಿಗೆ ಒಂದಷ್ಟು ಯೋಚಿಸಲೇಬೇಕಾದ ಸಂಗತಿಗಳಿವೆ.

    ಹೇಮಾ, ಶಿವನ್ಯ

    ಎಲ್ಲರಿಗೂ ತಂತಮ್ಮ ಕಷ್ಟಗಳೇ ಭಾರಿ ದೊಡ್ಡದು ಎನ್ನಿಸಿ ಕೊರಗುವುದುಂಟು.
    ಈ ಸಾಲಿನಲ್ಲಿ ಜೋಗುತಿಯರು ಅಥವಾ ಮಂಗಳಮುಖಿಯರು ಹೀಗೆ ಹಲವು ಹೆಸರುಗಳಲ್ಲಿ ಕರೆಯಲ್ಪಡುವ LGBTQ ಸಮುದಾಯಕ್ಕೆ ಸೇರಿದ ತೃತೀಯ ಲಿಂಗಿಗಳಿದ್ದಾರೆ. ಈಗ ಬಿಸ್ನೆಸ್ ಲಾಸ್ ಆಯಿತು ಎಂದು ಕೊರಗುತ್ತಿಲ್ಲ. ಪೇಮೆಂಟ್ ಕಡಿತವಾಗಿದೆ ಎಂದು ದಿಗಿಲುಬಿದ್ದಿಲ್ಲ. ಕೆಲಸ ಹೋಯಿತಲ್ಲಾ ಎಂದು ಗೋಳಾಡುವುದೂ ಇಲ್ಲ. ಜನ ಸಾಮಾನ್ಯರ ಸಂಕಟಗಳಿಗಿಂತ ಇವರ ಸಂಕಟ ಭಿನ್ನ. ನಮ್ಮ ನಡುವೆ ಇದ್ದೂ ನಮ್ಮಂತೆ ಬದುಕದವರು. ಆದರೆ ಇವರಿಗೂ ಕೊರೊನಾ ಸಂಕಟ ಕಾಡಿರುವುದು ಸತ್ಯ. ಅದು ಯಾವ ರೀತಿಯ ಕೊರೊನಾ ಕಷ್ಟ ? ಇದು ಕುತೂಹಲ….
    ರಸ್ತೆ ಸಿಗ್ನಲ್, ಬಾಜಾರು ಬೀದಿ, ಅಂಗಡಿ ಮುಂಗಟ್ಟು ಮುಂದೆ ಠಳಾರ್ ಎಂದು ಚಪ್ಪಾಳೆ ತಟ್ಟಿ, ಗಟ್ಟಿದನಿಯಲ್ಲಿ ‘ಏ ಕೊಡು’ ಎಂದು ಕೈಚಾಚುವ ಆ ಮಂಗಳಮುಖಿಯರು ಈಗ ಮಾಯವಾದದ್ದಾದರೂ ಎಲ್ಲಿ? ಅವರಿಗೆ ತಟ್ಟಿರುವ ಕೊರೊನಾ ಬಿಸಿಯಾದರೂ ಎಂಥದ್ದು? ಇಂತಹ ಕುತೂಹಲದ ಹಲವು ಪ್ರಶ್ನೆಗಳನ್ನು ಹೊತ್ತು, ಸಾಮಾಜಿಕ ಕಳಕಳಿಯೊಂದಿಗೆ ಕನ್ನಡಪ್ರೆಸ್.ಕಾಂ ಬೆಂಗಳೂರು ನಗರದ ಹಲವು ಬಡಾವಣೆ ಎಡತಾಕಿದಾಗ ಎಲ್ಲಿಯೂ ಅವರ ದರ್ಶನ ಇಲ್ಲ! ನಿತ್ಯ ಕಾಣಿಸುವ ಸಿಗ್ನಲ್ ಬಳಿಯೂ ಅವರು ಗಾಯಬ್. ಕೊರೊನಾ ಭೀತಿಯಿಂದ ಅವರು ನಗರವನ್ನೇ ತೊರೆದು ಓಡಿದರೇ? ಹೀಗೆಂದು ಬಾಣಸವಾಡಿಯ ಸಮಾಜಸೇವಕ ವಿ.ಜಯರಾಮ್ ಅವರನ್ನು ವಿಚಾರಿಸಿದಾಗ “ಅರೇ, ಇಷ್ಟಕ್ಕೆಲ್ಲ ಅವರು ಹೆದರುವುದುಂಟೆ? ಮನೆಮಂದಿಯನ್ನೇ ತೊರೆದು ಬಂದ ಅವರಿಗೆ ಅಸಾಧ್ಯ ಧೈರ್ಯ ಇದೆ. ಅಷ್ಟಕ್ಕೂ ಅವರು ಯಾವ ಸಂಬಂಧ ಅರಸಿ, ಹೋಗಬೇಕಾದರೂ ಎಲ್ಲಿಗೆ ಹೇಳಿ? ಇಲ್ಲೇ ಇದ್ದಾರೆ ಬನ್ನಿ” ಎಂದು ಈ ಲಾಕ್ಡೌನ್ ಪಿರೇಡ್ ನಲ್ಲಿ ಕಷ್ಟಸುಖಗಳಿಗೆ ಆಸರೆ ನೀಡಿ ತಮ್ಮ ಸಂಪರ್ಕದಲ್ಲಿ ಇಟ್ಟುಕೊಂಡಿದ್ದ ಒಂದಷ್ಟು ಮಂಗಳಮುಖಿಯರನ್ನು ಕರೆಸಿದರು.

    ಸೀಮಾ

    ಎಲ್ಲರೂ ಶುಭ್ರ ಉಡುಗೆ ಧರಿಸಿ, ಮಾಸ್ಕ್ ಮರೆಯಲ್ಲೇ ಮುಗುಳ್ನಗೆ ಬೀರುತ್ತ ಆಟೋ ಇಳಿದು ಬಂದು ಎದುರುಬದಿ ಸೀಟುಗಳಲ್ಲಿ ಕುಳಿತರು.
    “ಹೇಳಿ” ಎನ್ನುವಂತೆ ಮುಖ ಎತ್ತಿ ನಮ್ಮತ್ತ ದಿಟ್ಟಿಸಿದರು.
    …ಕೊರೊನಾ ಕಷ್ಟ ಎಂದು ಪ್ರಶ್ನೆ ಎತ್ತುತಿದ್ದಂತೆಯೇ ವಿವರಿಸ ತೊಡಗಿದಳು ಸೀಮಾ.


    “ಎಲ್ಲರಿಗೂ ದೊಡ್ಡವರ ಕಷ್ಟಗಳೇ ದೊಡ್ಡದಾಗಿ ಕಾಣ್ತಾವೆ. ಸಭ್ಯತೆಯ ಚೌಕಟ್ಟು ರೂಪಿಸಿಕೊಂಡ ಸಮಾಜಕ್ಕೆ ನಮ್ಮಂಥವರ ಕಷ್ಟ ಕೇಳುವ ದರ್ದಾದ್ರೂ ಏನಿದೆ ಹೇಳಿ? ನಾವು ದೇವರ ಮಕ್ಕಳು. ಪ್ರಕೃತಿ ಸೃಷ್ಟಿಸಿದ ನಮ್ಮ ದೇಹದ ಭಿನ್ನತೆಯನ್ನು ಇಷ್ಟೆಲ್ಲ ನಾಗರಿಕ ಎಂದು ಹೇಳಿಕೊಳ್ಳುವ ಈ ಸಮಾಜ ಅರ್ಥಮಾಡಿಕೊಳ್ಳುತ್ತಿಲ್ಲ. ಇದು ಅಜ್ಞಾನ. ಈ ಅಜ್ಞಾನದಿಂದಲೇ ನಮ್ಮ ಕಷ್ಟಗಳು ಹೆಚ್ಚಿವೆ. ಕೊರೊನಾ ಕಾಲದಲ್ಲಿ ಈ ಗೋಳು ಹೇಳತೀರದ ಮಟ್ಟ ಮುಟ್ಟಿದೆ” ಎಂದು ನಿಡುಸುಯ್ದು ನಿಂತಳು.

    ಸೂರಿ


    “ಹೇಳಿ… ಎಲ್ಲರಿಗೂ ಇದು ಕಷ್ಟದ ಕಾಲವೇ. ಶ್ರೀಮಂತರು, ಬಡವರು ಎಲ್ಲರನ್ನು ಸಮನಾಗಿ ಬಾಧಿಸಿದೆ” ಎಂದಾಗ, “ಅಲ್ಲ ಸ್ವಾಮಿ, ಶ್ರೀಮಂತರ ಜತೆ ನಮ್ಮನ್ನು ಯಾಕೆ ಹೋಲಿಸಿ ನೋಡ್ತೀರಾ? ನಮ್ ಕಷ್ಟಗಳೇ ಬೇರೆ ಸ್ವರೂಪದವು. ನಾವು ಭಿಕ್ಷೆ ಬೇಡಿ ಹೊಟ್ಟೆ ಬಟ್ಟೆ ನೀಗಿಸಿಕೊಳ್ಳುವವರು. ಕಳೆದ ಮೂರು ತಿಂಗಳಿಂದ ಯಾವೊಬ್ಬ ಮಂಗಳಮುಖಿಯೂ ಒಂದು ನಯಾಪೈಸೆ ದುಡುಮೆ ಮಾಡಿಲ್ಲ.

    ಸಿಂಧು

    ತರಕಾರಿ ಖರೀದಿಸಲೂ ಹಣ ಇಲ್ಲ. ಸರಕಾರ ನೀಡುವ ರೇಷನ್ ಸದ್ಯ ನಮ್ಮ ನಿತ್ಯದ ಗಂಜಿ ಚಿಂತೆ ದೂರ ಮಾಡಿದೆ. ಕೆಲವರಿಗೆ ಮಂಗಳಮುಖಿ ಮಾಸ್ಯಾಸನ ಬರುತ್ತೆ. ಅಂಥವರು ಮನೆಯಲ್ಲೇ ಕುಳಿತು ತುಸು ನೆಮ್ಮದಿಯಿಂದ ಕಾಲದೂಡುತ್ತಿದ್ದಾರೆ. ಆದರೆ, ಈ ದೇಶದಲ್ಲಿ ಸುಮಾರು ಅರ್ಧಕೋಟಿ ಮಂಗಳಮುಖಿಯರು ಇದ್ದಾರೆ, ಅವರೆಲ್ಲರಿಗೂ ಈ ಎಲ್ಲ ಸವಲತ್ತು ಇಲ್ಲ. ನಮ್ಮ ರಾಜ್ಯದಲ್ಲೇ ಮುಕ್ಕಾಲು ಪಾಲು ಮಂಗಳಮುಖಿಯರಿಗೆ ರೇಷನ್ ಕಾರ್ಡು, ವೋಟರ್ ಕಾರ್ಡು ಯಾವುದೂ ಇಲ್ಲ. ಅಂಥವರಿಗೆ ಈ ಲಾಕ್ಡೌನ್ ಸಮಯ ಯಮಯಾತನೆಯೇ ಸರಿ. ಕೆಲವರು ದಾನಿಗಳು ನೀಡಿದ ರೇಷನ್ ಕಿಟ್ ಪಡೆದು ಈವರೆಗೆ ಕಾಲದೂಡಿದ್ದಾರೆ. ಇನ್ನು ಮುಂದೇನು ಎನ್ನುವುದೇ ಅರ್ಥವಾಗದ ಸಂದಿಗ್ದ” ಎಂದು ಗೋಡೆ ಮೇಲಿನ ಪಟಗಳನ್ನು ದಿಟ್ಟಿಸಿದರು ಸೀಮಾ. ಅವರ ಮಗ್ಗುಲಲ್ಲಿದ್ದ ಹೇಮಾಳದ್ದೂ ಭಿನ್ನ ಅಭಿಪ್ರಾಯವೇನು ಇರಲಿಲ್ಲ.

    ಅವರ ಸುಖದುಃಖದ ಅನುಭವ ಅವರದ್ದೇ ಬಾಯಲ್ಲಿ ಕೇಳಿ ನೋಡಿ


    ಕಾರ್ಮಿಕರ ಸಂಕಷ್ಟಗಳಿಗೆ ಕಣ್ಣೀರು ಹಾಕುವವರು ನಮ್ಮತ್ತಲೂ ಒಮ್ಮೆ ಗಮನಹರಿಸಲಿ. ನಾವು ದುಡಿಯಬಲ್ಲೆವು. ಆದರೆ, ನಮ್ಮ ಶಕ್ತಿಯ ಬಗ್ಗೆ ಮಾಲೀಕರಿಗೆ ಅಪನಂಬಿಕೆ. ಬೀದಿಗಳು ಬಂದ್ ಆಗಿ, ಬಿಸ್ನೆಸ್ಸೂ ಡಲ್ ಆಗಿ ಕಂಗೆಟ್ಟಿರುವ ಈ ಘಳಿಗೆ ನಾವು ಯಾರ ಮುಂದೆ ಭಿಕ್ಷಾಂದೇಹಿ ಎಂದು ಕೈಚಾಚುವುದು ಹೇಳಿ. ಇಂತಹ ಬಿಕ್ಕಟ್ಟಿನ ಸಮಯ ಸರಕಾರಗಳೇ ನಮ್ಮನ್ನು ಪೊರೆಯಬೇಕು. ನಾವು ಈ ಸಮಾಜದ ವರ, ಶಾಪ ಅಲ್ಲ. ಕೊರೊನಾ ನಮಗೆ ಶಾಪ ಆಗಬಾರದು. ಉಳ್ಳವರು ಇದಕ್ಕೆ ಆಸ್ಪದ ನೀಡಬಾರದು” ಎಂದು ಅವರು ಕೈಮುಗಿದರು.

    (ವಿಡಿಯೋ :ಜಯರಾಮ್ , ಚಿತ್ರಗಳು :studeo 23 )

    ಕೋವಿಡ್-19; ಗರಬಡಿದ ನೇಯ್ಗೆ ಉದ್ಯಮ, ಸಂಕಷ್ಟದಲ್ಲಿ ನೇಕಾರ

    “ಅಮಾನಿ*ಯಿಂದ ಆಗಲೇ ಕಡಿಮೆ ಸೀರೆ ನೇಯುತ್ತಿದ್ದೆವು. ಲಾಕ್ ಡೌನ್ ಕೆಲಸ ಪೂರ್ತಿ ನಿಲ್ಲಿಸಿಯೇ ಬಿಟ್ಟಿತು” ಎನ್ನುವುದು ದೊಡ್ಡಬಳ್ಳಾಪುರದ ನೇಕಾರ ಡಿ.ಸಿ.ಬಾಬು ಅಳಲು. ವಿದ್ಯೆಗೆ ತಿಲಾಂಜಲಿ ನೀಡಿ ವಂಶ ಪಾರಂಪರ್ಯವಾಗಿ ಬಂದಿರುವ ನೇಯ್ಗೆ ಉದ್ಯಮವನ್ನು ಆರಿಸಿಕೊಂಡಾಗ ನೇಯ್ಗೆ ಉದ್ಯಮದಲ್ಲಿ ಬೆಳೆಯುವ ಹುರುಪು, ಉತ್ಸಾಹವಿತ್ತು. ಅದಕ್ಕೆ ತಕ್ಕಂತೆ ಅವಕಾಶಗಳೂ ಇದ್ದವು. ಆದರೆ ಕಳೆದ ಒಂದು ದಶಕದಲ್ಲಿ ಆಗುತ್ತಿರುವ ಆರ್ಥಿಕತೆಯ ತೀವ್ರ ಬದಲಾವಣೆಗಳು ಬದುಕನ್ನು ದುಸ್ತರಗೊಳಿಸುತ್ತಿರುವಾಗ ಲಾಕ್ ಡೌನ್ ಎನ್ನುವುದು ಮತ್ತೊಂದು ಮಾರಣಾಂತಿಕ ಪೆಟ್ಟು.

    ಕೋವಿಡ್-19 ಸಾಂಕ್ರಾಮಿಕ ದೇಶವನ್ನಷ್ಟೇ ಅಲ್ಲ, ವಿಶ್ವವನ್ನೂ ಲಾಕ್ ಡೌನ್ ಗೆ ಕೊಂಡೊಯ್ಯಿತು. ಲಾಕ್ ಡೌನ್ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿತು.

    ಪರಿಹಾರ ಎಂಬ ಮರೀಚಿಕೆ

    ಈಗಾಗಲೇ ಸಂಕಷ್ಟದಲ್ಲಿದ್ದ ನೇಕಾರರಿಗೆ ರಾಜ್ಯ ಸರ್ಕಾರ ತಲಾ 2000ರೂ. ಪರಿಹಾರ ನೀಡುವ ಭರವಸೆಯನ್ನು ಮೇ 20, 2020ರಂದು ನೀಡಿತು. ಆದರೆ ಒಂದು ತಿಂಗಳಾದರೂ ಇನ್ನೂ ಅದಕ್ಕೆ ಸಂಬಂಧಿಸಿದ ಅರ್ಜಿ ಮಾದರಿ ವಿದ್ಯುಚ್ಛಾಲಿತ ಮಗ್ಗಗಳ ನೇಕಾರರಿಗೆ ದೊರೆತಿಲ್ಲ. ಕೈಮಗ್ಗ ನೇಕಾರರು ಈ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮಾತ್ರ ಪ್ರಾರಂಭವಾಗಿದೆ ಎಂದು ದೊಡ್ಡಬಳ್ಳಾಪುರ ನೇಕಾರ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಜಿ.ಹೇಮಂತರಾಜ್ ಹೇಳುತ್ತಾರೆ.

    ರಾಜ್ಯದಲ್ಲಿ 1,25,000 ನೇಕಾರರಿಗೆ ಮಾತ್ರ ಪರಿಹಾರ ಘೋಷಿಸಲಾಗಿದೆ. ಆದರೆ ವಾಸ್ತವವಾಗಿ ವಿದ್ಯುಚ್ಛಾಲಿತ ಮಗ್ಗಗಳೇ ಸುಮಾರು 1,80,000ಕ್ಕೂ ಹೆಚ್ಚು ಇದ್ದು ಅವುಗಳಿಗೆ ಪೂರಕ ಕೆಲಸಗಳೂ ಸೇರಿ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಆಧಾರಪಟ್ಟಿದ್ದಾರೆ. ಕೈ ಮಗ್ಗಗಳು ಸುಮಾರು 34,000 ಇವೆ ಎಂದು ಅಂದಾಜಿಸಲಾಗಿದೆ. ನೇಯ್ಗೆಯೊಂದಿಗೆ ನೇಯ್ಗೆ ಸಂಬಂಧಿಸಿದ ಬಣ್ಣ ಹಾಕುವುದು, ಅಚ್ಚು ಕೆತ್ತುವುದು, ವಾರ್ಪು ಸುತ್ತುವುದು, ಜಾಕಾರ್ಡ್ ಕಾರ್ಡ್ ಪಂಚಿಂಗ್, ಡಿಸೈನ್ ರೂಪಿಸುವುದು ಇತ್ಯಾದಿ ಅಸಂಖ್ಯವಾದ ಸಂಬಂಧಿಸಿದ ಕೆಲಸಗಳಿವೆ. ಅವುಗಳನ್ನು ನೇಯ್ಗೆ ಎಂದು ಪರಿಗಣಿಸಲಾಗಿಲ್ಲ.

    ಇತರೆ ವೃತ್ತಿಯವರಿಗೆಲ್ಲಾ ಸರ್ಕಾರ ತಲಾ 5000ರೂ. ಪರಿಹಾರ ಘೋಷಿಸಿ ನೇಕಾರರಿಗೆ ಕೇವಲ 2000ರೂ. ಪರಿಹಾರ ನೀಡುವ ಮೂಲಕ ನಿರ್ಲಕ್ಷಿಸಿದೆ ಎನ್ನುವುದು ಅವರ ಆರೋಪ. ಬೆಂಗಳೂರು, ಮೈಸೂರು ಹಾಗೂ ದಕ್ಷಿಣ ಕರ್ನಾಟಕಕ್ಕೆ ಧರ್ಮಾವರಂ, ತೆಲಂಗಾಣ, ತಮಿಳುನಾಡು ಪ್ರಮುಖ ಮಾರುಕಟ್ಟೆಗಳು. ಉತ್ತರ ಕರ್ನಾಟಕದ ನೇಕಾರರಿಗೆ ಮಹಾರಾಷ್ಟ್ರ ಪ್ರಮುಖ ಮಾರುಕಟ್ಟೆ. ಆದರೆ ಪ್ರಸ್ತುತ ಅಲ್ಲಿ ಸಾಂಕ್ರಾಮಿಕ ಭೀತಿಯಿಂದ ವ್ಯಾಪಾರ ವಹಿವಾಟುಗಳು ಹಿನ್ನಡೆ ಕಂಡಿವೆ. ಈ ಕೋವಿಡ್ ಆತಂಕ ದೂರವಾದ ನಂತರ ಮಾತ್ರ ಜನರು ಬಟ್ಟೆ ಕೊಳ್ಳಲು ಬರಬಹುದು. ಅದರ ಲಕ್ಷಣಗಳು ಸದ್ಯಕ್ಕಂತೂ ಕಾಣುತ್ತಿಲ್ಲ ಎನ್ನುವುದು ನೇಕಾರರ ಅಭಿಪ್ರಾಯ.

    ಹೊಸ ತಲೆಮಾರಿಗೆ ನೇಕಾರಿಕೆ ಬೇಡ

    ಈ ಬೆಳವಣಿಗೆಗಳಿಂದ ಕೃಷಿಯಂತೆಯೇ ಹೊಸ ತಲೆಮಾರು ನೇಯ್ಗೆ ಉದ್ಯಮವನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಸಣ್ಣ ಸಂಬಳವಾದರೂ ವೇತನದ ಕೆಲಸಕ್ಕೆ ಹೋದರೆ ಸಾಕು ಎಂಬ ತೀರ್ಮಾನಕ್ಕೆ ಹೊಸ ತಲೆಮಾರು ಬಂದಿದೆ. ಹೊಸದಾಗಿ ಮಗ್ಗದ ಕಸುಬು ಕಲಿತುಕೊಳ್ಳುವವರ ಸಂಖ್ಯೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ರಾಜ್ಯದ ಪ್ರಮುಖ ನೇಯ್ಗೆ ಪ್ರದೇಶಗಳಾದ ನೆಲಮಂಗಲ, ಹೊಸಕೋಟೆ, ಆನೇಕಲ್, ಮೊಳಕಾಲ್ಮೂರು, ಇಳಕಲ್, ಶಹಾಪುರ, ಗದಗ, ಬೆಟಗೇರಿ, ಚಾಮರಾಜನಗರ, ಚಿಂತಾಮಣಿ, ತುಮಕೂರುಗಳಲ್ಲೂ ಈ ಪ್ರವೃತ್ತಿ ಮುಂದುವರಿದಿದೆ. ಕಿರಿಯ ತಲೆಮಾರಿನ ಯುವಕರು ಈ ಸಾಂಪ್ರದಾಯಿಕ ನೇಕಾರಿಕೆಯನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಿ ಲಾಭದ ಸಾಧ್ಯತೆಗಳನ್ನು ಕಂಡುಕೊಳ್ಳುವುದರ ಬದಲು ಅನ್ಯ ಉದ್ಯೋಗಗಳತ್ತ ವಲಸೆ ಹೋಗುತ್ತಿದ್ದಾರೆ.

    ಆಂಧ್ರ ಮಾದರಿ ಇರಲಿ

    ಆಂಧ್ರಪ್ರದೇಶದಲ್ಲಿ ಸಾಕಷ್ಟು ವರ್ಷಗಳ ಹಿಂದೆಯೇ ಜವಳಿ ಇಲಾಖೆ ವತಿಯಿಂದ ನೇಕಾರಿಕೆಯಲ್ಲಿ ತೊಡಗಿರುವವರ ನೋಂದಣಿ ಮಾಡಿಕೊಂಡು ಗುರುತಿನ ಚೀಟಿ ವಿತರಿಸಿದೆ. ಸರ್ಕಾರದ ಯಾವುದೇ ಸೌಲಭ್ಯಗಳನ್ನು ನೀಡುವಾಗ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಇದರಿಂದಾಗಿ ಲಾಕ್‌ಡೌನ್‌ ಜಾರಿ ಸಂದರ್ಭದಲ್ಲಿ ಅಲ್ಲಿನ ಸರ್ಕಾರ ನೇಕಾರಿಕೆಝಢಝಝಯಲ್ಲಿ ತೊಡಗಿಸಿಕೊಂಡಿರುವವರಿಗೆ ಆರ್ಥಿಕ ನೆರವು ಸೇರಿದಂತೆ ಸಾಕಷ್ಟು ಇತರೆ ಸೌಲಭ್ಯಗಳನ್ನು ನೀಡಿದೆ. ಇದೇ ಮಾದರಿಯಲ್ಲಿ ನಮ್ಮಲ್ಲೂ ನೇಕಾರಿಕೆಯಲ್ಲಿ ತೊಡಗಿರುವ ಕಾರ್ಮಿಕರು ಸೇರಿದಂತೆ ಎಲ್ಲರಿಗೂ ಜವಳಿ ಇಲಾಖೆ ವತಿಯಿಂದ ಗುರುತಿನ ಚೀಟಿ ನೀಡುವ ಕೆಲಸ ತುರ್ತಾಗಿ ಆಗಬೇಕು ಎನ್ನುವುದು ನೇಕಾರರ ಆಗ್ರಹ.

    ನೇಕಾರರು ಕಾರ್ಮಿಕರಲ್ಲ

    ವಿದ್ಯುತ್‌  ಚಾಲಿತ ಮಗ್ಗಗಳ ಮುಖ್ಯಜೀವಾಳವೇ ಕಾರ್ಮಿಕರು. ಆದರೆ ಇವರು ಅಸಂಘಟಿತರು. ಬಹುತೇಕರು ತಮ್ಮದೇ ಮಗ್ಗಗಳನ್ನು ಮನೆಗಳಲ್ಲಿ ಹಾಕಿಕೊಂಡು ಗೃಹ ಕೈಗಾರಿಕೆ ನಡೆಸುವವರು. ಹೆಚ್ಚು ಮಗ್ಗಗಳ ಫ್ಯಾಕ್ಟರಿಯಲ್ಲಿ ನೇಯ್ಗೆ ಮಾಡುವವರಿಗೆ ಕಾರ್ಮಿಕ ಕಾನೂನುಗಳ ಅನುಷ್ಠಾನಕ್ಕೂ ಹಲವು ಬಿಕ್ಕಟ್ಟುಗಳಿವೆ. ನೋಂದಣಿ ಇಲ್ಲದ ಕಾರಣಕ್ಕೆ ಕಾರ್ಮಿಕರು ಯಾವುದೇ ಸವಲತ್ತುಗಳು, ಸರ್ಕಾರಿ ಪ್ರಯೋಜನಗಳನ್ನು ಪಡೆಯಲು ಆಗುವುದಿಲ್ಲ. ಇಡೀ ಜೀವನ ಅಸಂಘಟಿತ ಕಾರ್ಮಿಕರಾಗಿಯೇ ಕಳೆಯುತ್ತಿದ್ದಾರೆ. ಕನಿಷ್ಠ ಇಎಸ್ಐನಂತಹ ಸೌಲಭ್ಯಗಳನ್ನು ಪಡೆಯಲೂ ಸಾಧ್ಯವಿಲ್ಲ. ಇದನ್ನು ವ್ಯವಸ್ಥಿತಗೊಳಿಸಲು ಸಾಕಷ್ಟು ಇಚ್ಛಾಶಕ್ತಿ ಬೇಕಾಗುತ್ತದೆ. ನೇಯ್ಗೆ ಉದ್ಯಮದಲ್ಲಿ ಕಾರ್ಮಿಕರ ಹೋರಾಟಗಳು ಮತ್ತು ಅವರ ತ್ಯಾಗಗಳು ಮಾಲೀಕರಿಗೆ ಅನುಕೂಲವಾಗಿ ಅವರ ಹೆಸರಲ್ಲಿ ಮಾಲೀಕರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳೆ ಹೆಚ್ಚಾಗಿವೆ. ಆದುದರಿಂದ  ಸರ್ಕಾರ ಕೂಡಲೆ ತ್ವರಿತವಾಗಿ ಕಾರ್ಮಿಕರ ಸರ್ವೆ ನಡೆಸಿ ಗುರುತಿನ ಚೀಟಿಯನ್ನು ಕೊಡುವ ಅಗತ್ಯವಿದೆ ಎನ್ನುವುದು ಕಾರ್ಮಿಕ ಪರ ಹೋರಾಟಗಾರ ಎಂ.ಕೃಷ್ಣಮೂರ್ತಿ ಅವರ ಅಭಿಪ್ರಾಯ.

    *ಅಮಾನಿ : ವ್ಯಾಪಾರ ವಹಿವಾಟು ನೀರಸವಾಗಿರುವ ಅವಧಿ

    ಪರಿಷತ್ : ಬಿ ಎಸ್ ವೈ ಆಯ್ಕೆಯನ್ನುಬಿಜೆಪಿ ಹೈ ಕಮಾಂಡ್ ಒಪ್ಪುವುದೆ?

    ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಜೂನ್ ೨೯ರಂದು ನಡೆಯುವ ಚುನಾವಣೆಗೆ ಬಿಸಿ ಏರುತ್ತಿದೆ. ಇಂದು ಮೂರು ಪಕ್ಷಗಳು ಬಿರುಸಿನ ಸಭೆಗಳನ್ನು ನಡೆಸಿವೆ. ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಇನ್ನೂ ನಿಗೂಢ. ಈ ಹಿನ್ನೆಲೆಯಲ್ಲಿ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸೆಂಪಾದಕ ಶ್ರೀವತ್ಸ ನಾಡಿಗ್ ಮತ್ತು ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ನಡೆಸಿದ ಪಾಡ್ಕಾಸ್ಚ್ ಇದು. ಆಲಿಸಿ ನಿಮ್ಮ ಅಭಿಪ್ರಾಯ ತಿಳಿಸಿ.

    ಲಖನೌ ಬಿರಿಯಾನಿ

    ದೊಗಲೆ ಪೈಜಾಮ. ಅದರ ಮೇಲೊಂದು ನಿಲುವಂಗಿ. ಉದ್ದನೆಯ ಮೂಗು, ಅದರ ಮೇಲೆ ದೊಡ್ಡ ಗಾತ್ರದ ಕನ್ನಡಕ. ಎತ್ತರದ ಆಸಾಮಿ. ನಡೆಯುವಾಗ ಬಾಗುವ ಕಾಲುಗಳು . ಇವರು ಮಿರ್ಜಾ ನವಾಬ್ .  ಈ ವ್ಯಕ್ತಿ ನಿಮಗೆ ಕಾಣ ಸಿಗುವುದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿರುವ ಗುಲೋಬೋ ಸಿತಾಬೋ ಸಿನಿಮಾದಲ್ಲಿ.  ಈ ಸಿನಿಮಾದ ಬಗ್ಗೆ ಹೆಚ್ಚಿನ ಪೂರ್ವ ಮಾಹಿತಿ ಇಲ್ಲದೆ ಸಿನಿಮಾ ನೋಡಲು ಕೂತರೆ ಮಿರ್ಜಾ ಪಾತ್ರಧಾರಿ ಯಾರು ಎಂಬುದು ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಗೊತ್ತಾದಾಗ  ಅರೆ ಇದು ಅಮಿತಾಭ್ ಬಚ್ಚನ್ ಎಂದು ನಿಮ್ಮ ಬಾಯಿಂದ  ಉದ್ಗಾರ ಬರದಿದ್ದರೆ ಹೇಳಿ.  ಅಮಿತಾಭ್ ಬಚ್ಚನ್ ಮಿರ್ಜಾ ನವಾಬನಾಗಿ ತಮ್ಮ ವೃತ್ತಿ  ಜೀವನದ ಮತ್ತೊಂದು ಹಂತ ಪ್ರವೇಶಿಸಿದ್ದಾರೆ.

    ಈ ಎಪ್ಪತ್ತೇಳರ ಹರಯದಲ್ಲೂ ಬಚ್ಚನ್ ಅವರ ನಟನೋತ್ಸಾಹಕ್ಕೆ ಯಾರಾದರು ಸೈ ಎನ್ನಲೇ ಬೇಕು.  ಇಡೀ ಸಿನಿಮಾವನ್ನು ಆವರಿಸಿರುವುದು ಅವರೇ.  ನಿರ್ದೇಶಕ ಸುಜಿತ್ ಸರ್ಕಾರ್ ತಮ್ಮ ಹಿಂದಿನ ಪೀಕೂವಿನಲ್ಲೂ ಅಮಿತಾಭ್  ಜೊತೆ ಇದೇ ರೀತಿಯ ಪ್ರಯೋಗ ಮಾಡಿದ್ದರು.  ಮಲಬದ್ಧತೆಯಿಂದ ನರಳುವ ವೃದ್ಧನ ಪಾತ್ರದಲ್ಲಿ ಅಮಿತಾಭ್ ಮನಮುಟ್ಟುವಂತೆ ನಟಿಸಿದ್ದರು. ತಾವೊಬ್ಬ ಸೂಪರ್ ಸ್ಚಾರ್ ಎಂಬುದನ್ನು ಮರೆತು ಇಮೇಜಿನ ಹಂಗಿಲ್ಲದೆ ಪಾತ್ರದಲ್ಲಿ ಲೀನವಾಗಿದ್ದರು.

    ಆ ಚಿತ್ರದಲ್ಲೂ  ತಾವು ಕಟ್ಟಿಸಿ ವಾಸಿಸುತ್ತಿದ್ದ ಮನೆಯ ಬಗ್ಗೆಅವರಿಗೆ ಅತೀವ ಪ್ರೀತಿ. ಈ ಸಿನಿಮಾದಲ್ಲೂ   ತಮ್ಮ ಪತ್ನಿ ಬೇಗಂ  ಹೆಸರಲ್ಲಿರವ  ಫಾತಿಮಾ ಮಹಲಿನ ಬಗ್ಗೆ ಮಿರ್ಜಾ ನವಾಬನಿಗೆ  ಅಷ್ಟೇ ಪ್ರೀತಿ . ಹಳೇ ಲಖನೌ ಪಟ್ಟಣದಲ್ಲಿರುವ ಈ ಮಹಲು ಭರ್ಜರಿಯಾಗಿದೆ. ಮಿರ್ಜಾ, ಆತನ ಪತ್ನಿ ಬೇಗಂ ಅಲ್ಲದೆ ಹಲವಾರು ಮಂದಿ ಈ ಮಹಲಿನ ಹಲವು ಭಾಗಗಳಲ್ಲಿ ವರ್ಷಾನಗಟ್ಟಲೆಯಿಂದ ಬಾಡಿಗೆಗೆ ಇದ್ದಾರೆ.  ಈ ಮಹಲನ್ನು ಹೇಗಾದರು ಮಾಡಿ ತನ್ನ ಹೆಸರಿಗೆ ಮಾಡಿಕೊಳ್ಳಬೇಕು ಹಾಗೂ ವರ್ಷಾನುಗಟ್ಟಲೆ ಬಾಡಿಗೆ ಕೊಡದ ಬಾಂಕೆ ಸೋಂದಿಯನ್ನು (ಆಯುಷ್ಮಾನ್ ಖುರಾನ )ಮಹಲಿನಿಂದ ಹೊರಹಾಕಬೇಕು. ಇದು ಮುದುಕ ಮಿರ್ಜಾ ನವಾಬನ ಪ್ಲಾನ್. ಆದರೆ ಅವನ ಪ್ಲಾನ್ ಕಾರ್ಯರೂಪಕ್ಕೆ ತರುವಲ್ಲಿ ನೂರೆಂಟು ವಿಘ್ನ.

    ಅಸಲಿಗೆ ಈ ಮಹಲಿನ ಒಡತಿ  ಬೇಗಂ ಈ ಮುದುಕನಿಗಿಂತ ದೊಡ್ಜಾಕೆ. ಆಕೆ ಸತ್ತರೆ ಸಾಕು ಮಹಲಿಗೆ ನಾನೇ ವಾರಸುದಾರ ಎಂಬುದು ಇವನ ಕನಸು.  ಆ ಬೇಗಂ ಘಾಟಿ  ಮುದುಕಿ. ಇನ್ನೇನು ಸತ್ತೇ ಬಿಟ್ಟಳು ಎಂದು ಈ ಮುದುಕ ಭಾವಿಸುವಷ್ಟರಲ್ಲಿ ಎದ್ದು ಕೂತಿರುತ್ತಾಳೆ.  ಈ ಮಹಲಿಗೋ  ನೂರು ವರುಷ ದಾಟಿದೆ. ಪುರಾತತ್ವ ಇಲಾಖೆ ಕಣ್ಣೂ ಬಿದ್ದಿದೆ.  ಅದಕ್ಕೆ  ಬಾಡಿಗೆ ದಾರ ಬಾಂಕೆ ಸೋಂದಿಯ ಬೆಂಬಲ ಬೇರೆ. ಆತನಿಗೆ ಈ ಮಹಲು ಸರಕಾರಕ್ಕೆ ಹೋದರೆ ತಮಗೆ  ಎಲ್‌ಐಜಿ  ಮನೆ ಸಿಗಬಹುದೆಂಬ ಆಸೆ. ಒಂದು ಕಡೆ ಬೇಗಂ ನಿಂದ  ಮನೆ ತನ್ನ ಹೆಸರಿಗೆ  ವರ್ಗಾಯಿಸಿಕೊಳ್ಳಲು ಮುದುಕನ ಸರ್ಕಸ್ . ಇನ್ನೊಂದೆಡೆ ಪುರಾತತ್ವ ಇಲಾಖೆ. ಇನ್ನೊಂದೆಡೆ  ಆ ಮಹಲವನ್ನು ಬಿಲ್ಡರ್ ಒಬ್ಬನಿಗೆ ಮಾರಿಸಲು ವಕೀಲನ ತಂತ್ರ. ಯಾರು ಊಹಿಸದ ರೀತಿ ಕಥೆ ಮುಗಿಯುತ್ತದೆ. ಅದು ಗೊತ್ತಾಗಬೇಕಾದರೆ ಸಿನಿಮಾ ನೋಡಿ.

    ಹಳೇ ಲಖನೌ ನಗರದ ಇಡೀ ಚಿತ್ರಣ ಇಲ್ಲಿ ಸಿಗುತ್ತದೆ.  ಅಲ್ಲಿನ ಗಲ್ಲಿಗಳು, ಸೈಕಲ್ ರಿಕ್ಷಾಗಳು, ಸರಕಾರಿ ಕಚೇರಿಗಳು ಒಂದೊಂದಾಗೆ ಇಲ್ಲಿ ತೆರೆದುಕೊಳ್ಳುತ್ತವೆ. ನಮ್ಮ ಪುಟ್ಟಣ್ಣ ನಾಗರಹಾವಿನ ಕಥೆ ಹೇಳುತ್ತಲೆ ದುರ್ಗದ ಬೀದಿ ಬೀದಿಯನ್ನು ತೋರಿಸಿದ ಹಾಗೆ ಇಲ್ಲಿ ಸುಜಿತ್ ಸರ್ಕಾರ್ ನಮಗೆ  ಲಖನೌ ದರ್ಶನ ಮಾಡಿಸುತ್ತಾರೆ.  ಪೀಕು ವಿನಲ್ಲಿ ಇದೇ ರೀತಿ ಕೊಲ್ಕತಾ ನಗರ ನೋಡುವ ಅವಕಾಶ ಸಿಕ್ಕಿತ್ತು,

    ಮಿರ್ಜಾ ನವಾಬ್ ನಂತೆ ನಿಮ್ಮ ಗಮನ ಸೆಳೆಯುವ ಮತ್ತೊಂದು ಪಾತ್ರ ಬಾಂಕೆ ಸೋದಿ. ತಂಗಿಯರ ವಿದ್ಯಾಭ್ಯಾಸಕ್ಕಾಗಿ  ತನ್ನ ಓದನ್ನು ಬದಿಗೊತ್ತಿ ಹಿಟ್ಟಿನ ಗಿರಣಿಯಲ್ಲಿ ದುಡಿಯುವ ಈ ಬಾಂಕೆ ಸದಾ ಕಾಲ  ಮಿರ್ಜಾ ನವಾಬ್ ನ ಜಗಳ ಕಾಯುತ್ತಾ ಅವನಿಗೆ ಸರಿ ಸಮವಾಗಿ ನಟಿಸಿದ್ದಾರೆ.  ಆರ್ಟಿಕಲ್ ೧೫, ಅಂಧಾದುನ್‌ನ ಆಯುಷ್ಮಾನ್ ಖುರಾನ ಇವರೇನಾ ಎಂದೆನಿಸುವಷ್ಟರ ಮಟ್ಟಿಗೆ ಅವರು ಖುರಾನ ನಿಮಗೆ ಆಪ್ತವಾಗುತ್ತಾರೆ.

    ನ್ನೂ ಚಿತ್ರಮಂದಿರಗಳು ಬಾಗಿಲು ತೆರೆಯದ ಈ ದಿನಗಳಲ್ಲಿ   ಒಟಿಟಿ ಯಲ್ಲಿ ಬಿಡುಗಡೆಯಾದ ಮೊದಲ  ಹಿಂದೀ ಚಿತ್ರ ಇದು. ವೀಕ್ಷಕರು ಇದನ್ನು ಸ್ವಾಗತಿಸಿರುವ ಪರಿಯನ್ನು ನೋಡಿದರೆ ಮುಂಬರುವ ದಿನಗಳಲ್ಲಿ ಹೊಸ ಸಿನಿಮಾಗಳು ನೇರವಾಗಿ ಒಟಿಟಿ ಯಲ್ಲೇ ಬಿಡುಗಡೆಯಾದರು ಅಚ್ಚರಿಪಬೇಕಿಲ್ಲ.

    ಇಂಥ ಹಲವು ಸಿನಿಮಾಗಳು ನಿಮಗೆ ಅಮೆಜಾನ್ ಪ್ರೈಮ್ ನಲ್ಲಿ ಸಿಗುತ್ತವೆ . 999 ರೂಪಾಯಿಗೆ ಇಡೀ ವರ್ಷ ಸಿನಿಮಾ ನೋಡಬಹುದು. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ ಅಧ್ಬುತ ಮನರಂಜನಾ ಜಗತ್ತು.

    ಕರೋನ ನಂತರವೂ ಮನೆಯೇ ಆಫೀಸ್ ; ಕಾಯಂ ಆಗಲಿದೆ WFH


    ಕಳೆದ ಹತ್ತು ವರ್ಷಗಳಲ್ಲಿ IT  ಕೆಲಸಗಳಲ್ಲಿ ಸಾಕಷ್ಟು ಬದಲಾವಣೆಗಳು, ಸುಧಾರಣೆಗಳು ಆಗುತ್ತಾ ಬಂದಿವೆ. ತಂತ್ರಜ್ಞಾನ ಬೆಳೆದಂತೆ ಕೆಲಸ ಮಾಡುವ ರೀತಿ, ಸಮಯ ಹಾಗು ಕ್ಷಮತೆ ಬದಲಾಗುತ್ತಾ ಹೋಗುತ್ತಿದೆ.  ಅದರಲ್ಲೂ ಮೊಬೈಲ್ ನೆಟ್ವರ್ಕ್, ಫೈಬರ್ ನೆಟ್ ಹಾಗು ಹಾಟ್ ಸ್ಪಾಟ್ ಗಳ ಸಂಖ್ಯೆ ಜಾಸ್ತಿ ಆದಂತೆ  ಹಾಗೂ  ದಿನೇ ದಿನೇ ನಗರದ ಟ್ರಾಫಿಕ್ ಸಮಸ್ಯೆ ಹೆಚ್ಚಾದಂತೆ ಮನೆಯಿಂದ ಕೆಲಸ ಮಾಡುವವರ ಸಂಖ್ಯೆ ಹೆಚ್ಚುತ್ತಾ ಹೋಗಿದೆ.   

    ಕರೋನ ತನ್ನಬಾಹುಗಳನ್ನು ಚಾಚಲು ಪ್ರಾರಂಭ ಮಾಡಿದ ಮೇಲೆ ಪ್ರಪಂಚದಾದ್ಯಂತ  ಲಾಕ್ ಡೌನ್ ಹೇರಲಾಯಿತು. ಈ  ಸಮಯದಲ್ಲಿ  IT ಕೆಲಸ ಒಂದು ದಿನವೂ ನಿಲ್ಲಲಿಲ್ಲ . WFH ಕಲ್ಪನೆ (ಈಗ ವಾಸ್ತವ)  IT  ಕಂಪನಿಗಳಿಗೆ ಹೆಚ್ಚಿನ ನಷ್ಟ ತಪ್ಪಿಸಿರುವುದರ ಜೊತೆಗೆ  ಭವಿಷ್ಯದ ಕಾಯಕ ಪರಿಕಲ್ಪನೆಗೂ ನಾಂದಿ ಹಾಡಿತು.

    ಇನ್ನುಮುಂದೆ ಆಕಾಶದೆತ್ತರದ ಕಟ್ಟಡಗಳ ಗಾಜಿನ ಪಂಜರದೊಳಗೆ ನೀಟಾಗಿ  ಇಸ್ತ್ರಿ ತಿಕ್ಕಿದ ಶರ್ಟ್, ಪ್ಯಾಂಟ್, ಸೂಟು ಬೂಟು ಹಾಕಿಕೊಂಡು ಕುತ್ತಿಗೆಗೆ ಟೈ ಬಿಗಿದುಕೊಂಡು ಕೆಲಸ ಮಾಡುವವರು ಕಾಣಿಸುವುದಿಲ್ಲ. ಕ್ಯಾಬ್ ಬಂದೇ ಬಿಡ್ತು ಎಂದು ಓಡುವವರು ಇರುವುದಿಲ್ಲ.ಬೆನ್ನಿಗೊಂದು ಲ್ಯಾಪ್ ಟಾಪ್ ಬ್ಯಾಗು ಹಾಕಿಕೊಂಡು ಸಂಜೆ 7ರ ವೇಳೆಗೆ ಬೈಯಪ್ಪನಹಳ್ಳಿಯಲ್ಲೋ, ಚರ್ಚ್ ಸ್ಟ್ರೀಟ್ ನ ಮೆಟ್ರೋ ನಿಲ್ದಾಣದ ಮುಂದೋ ಬಸವಳಿದು ನಿಂತಿರುವ ಹುಡುಗ ಹುಡುಗಿಯರ ಕ್ಯೂ ಕಾಣುವುದಿಲ್ಲ. ಈಗಾಗಲೆ ಐಟಿ ಕಂಪೆನಿಗಳಿಗೆಂದು ಕಟ್ಟಿರುವ ಕಟ್ಟಡಗಳು ಏನಾಗುವುದೆಂಬುದು ಗೊತ್ತಿಲ್ಲ. ಮನೆಯಲ್ಲಿಯೇ ಒಂದು ರೂಮಿನಲ್ಲಿ   ಮೇಜು, ಕುರ್ಚಿ, docking  System,  Big Monitors,  ಫ್ಯಾನ್, ಮೊಬೈಲ್, ಏಸಿ, ಬ್ಯಾಟರಿ ಬ್ಯಾಕಪ್, ಫೈಬರ್ ನೆಟ್ ಕನೆಕ್ಷನ್  ತೆಗೆದುಕೊಂಡು  ಕುಳಿತು ಕೆಲಸ ಮಾಡುವ ವ್ಯವಸ್ಥೆ ಕಾಯಂ ಆಗುವ ಸಾಧ್ಯತೆಗಳೇ ದಟ್ಟವಾಗಿವೆ.

    IT ಕಂಪನಿಗಳು  ಸದ್ಯ ಆಫೀಸ್ ನಲ್ಲಿ ಒಂದು ಮೇಜಿಗೆ ತಿಂಗಳಿಗೆ ಸರಿ ಸುಮಾರು 25  ಸಾವಿರದಿಂದ  35 ಸಾವಿರದ ವರೆಗೆ  ವ್ಯಯಿಸುತ್ತಿವೆ. ( ಸೆಕ್ಯೂರಿಟಿ , ಕಾಫೀ, ಟಿ,ಎಸಿ , ವಿದ್ಯುತ್, ನೆಟ್ ವರ್ಕ್, ಹೌಸ್ ಕೀಪಿಂಗ್ ಇತ್ಯಾದಿ ಒಳಗೊಂಡಂತೆ)ಇನ್ನು ಸಾವಿರಾರು ನೌಕರರಿರುವ IT  ಕಂಪನಿಗಳಿಗೆ   WFH  ಪದ್ದತಿಯಿಂದ ಈ ಹಣ ಪೂರ್ತಿ   ಉಳಿತಾಯವಾಗುತ್ತದೆ.  ಮುಂದೆ ಕೇವಲ ದಿನನಿತ್ಯದ ಆಗುಹೋಗುಗಳಿಗೆ  ಬೇಕಾದ ನೌಕರರನ್ನು ಒಂದು ಸಣ್ಣ ಆಫೀಸ್ ಸ್ಪೇಸ್ ನಲ್ಲಿ  ಕಂಪನಿಗಳು ಕಾರ್ಯನಿರ್ವಹಿಸಿ, ಉಳಿದವರನ್ನೆಲ್ಲಾ WFH  ವ್ಯವಸ್ಥೆಗೆ ಕಾಯಂ ಒಳಪಡಿಸಿ,  ವಾರಕ್ಕೋ ತಿಂಗಳಿಗೋ ಒಮ್ಮೆ ಯಾವುದಾದರೂ ಹೋಟೆಲ್ / ಮೀಟಿಂಗ್ ಹಾಲ್ ನಲ್ಲಿ ಭೇಟಿ ಮಾಡುವ  ವ್ಯವಸ್ಥೆ ಬರುವ ಲಕ್ಷಣ ಕಾಣಿಸುತ್ತಿವೆ.  

    ಎಷ್ಟು ಉಪಯೋಗವೋ ಅಷ್ಟೇ ಅನಾನುಕೂಲ

    WFH  ಎಷ್ಟು ಉಪಯೋಗವೋ ಅಷ್ಟೇ ಅನಾನುಕೂಲಗಳೂ ಇವೆ, ಈ ಬದಲಾದ ಪರಿಸ್ಥಿತಿಯಲ್ಲಿ  ಏಕಾಗ್ರತೆ ಉಳಿಸಿಕೊಂಡು, ನಿರಂತರ ವಿದ್ಯುತ್, ನೆಟ್ವರ್ಕ್ ಸವಾಲುಗಳ ಮಧ್ಯೆ  ಹಲವಾರು ಅಡತಡೆಗಳನ್ನು ಎದುರಿಸಿ ಮಾನಸಿಕ ಒತ್ತಡ ಇಟ್ಟು ಕೊಂಡೇ  ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದೊದಗುತ್ತದೆ.

    ವಿಡಿಯೋ ಕಾಲ್ ಗಳಲ್ಲಿ ಮೇಲೆ ಕೋಟ್ ಹಾಕಿ  ಕೆಳಗೆ ಶಾರ್ಟ್ಸ್ ಹಾಕಿಕೊಂಡು ಕೆಲಸ ಮಾಡುವ,  ನಮ್ಮ ಹಿಂಬದಿಯಲ್ಲಿ ಮನೆ ಉಡುಗೆಯಲ್ಲೇ ಇದ್ದ ಮನೆಯವರು ಓಡಾಡುವುದನ್ನು ಪ್ರಪಂಚದ ಎಲ್ಲರಿಗೂ ಲೈವ್ ತೋರಿಸುವ, ಸ್ವಲ್ಪ ಯಾಮಾರಿದರೂ  ವಿಡಿಯೋ ಕಾಲ್ ಗಳಲ್ಲಿ ಕೌಟುಂಬಿಕ  ಕಲಹಗಳು ಏನಾದರೂ ಬಂದರೆ ಅದು ಬಿತ್ತರವಾಗಿ   ಮಾನ ಹರಾಜು ಆಗುವ ಸಾಧ್ಯತೆಯೂ ಹೆಚ್ಚಿದೆ.  ಎಷ್ಟೇ ಕೌಟುಂಬಿಕ ಕಲಹಗಳಿದ್ದರೂ ಮುಂಜಾನೆ ಆಫೀಸ್ ಹೋಗಿ  ಎಲ್ಲವನ್ನು ಮರೆತು ಕೆಲಸ ಮುಗಿಸಿ ಸಂಜೆ ಮನೆ ಬರುವುದರಲ್ಲಿ  ಶಮನವಾಗುತ್ತಿದ್ದ ಸಂದರ್ಭಗಳು ತಪ್ಪಿಹೋಗಲಿವೆ. 

    ಇವೆಲ್ಲಾ ತಪ್ಪಿಸಲು  ‘ಹೋಮ್ ಆಫೀಸ್’ ಗಾಗಿ ಮನೆಯಲ್ಲಿಯೇ ಒಂದು ರೂಮ್ ಅನ್ನು ಕಾಯ್ದಿರಿಸಬೇಕಿದೆ.  ಚಿಕ್ಕ ಚಿಕ್ಕ ಮನೆ ಇರುವವರಿಗೆ ಇದು ಒಂದು ಸವಾಲಾಗೇ ಉಳಿಯಲಿದೆ.  ಒಂದು ಮನೆಯಲ್ಲಿ ಗಂಡ, ಹೆಂಡತಿ ಇಬ್ಬರೂ ಕೆಲಸ ಮಾಡುತ್ತಿದ್ದರೆ ಬೇರೆ ಬೇರೆ ರೂಮ್ ಗಳಲ್ಲಿ  ಹೋಮ್ ಆಫೀಸ್ setup  ಮಾಡಿಕೊಳ್ಳಬೇಕಾಗಿದೆ 

    ಜೊತೆಯಲ್ಲಿ ಈ ರೀತಿ ಮನೆಯಲ್ಲಿಯೇ ಕುಳಿತು ಎಂಟರಿಂದ ಹತ್ತುಗಂಟೆ  ಕೆಲಸ ಮಾಡುವುದರಿಂದ ಮಾನಸಿಕ , ದೇಹದ ಹಾಗು ಆರೋಗ್ಯದ ಸಮತೋಲನ  ಕಾಪಾಡಲು  ಪ್ರತಿಯೊಬ್ಬ ನೌಕರರು ತಮ್ಮ ದೈನಂದಿನ ಚಟುವಟಿಕೆಗಳನ್ನು, ಅಭ್ಯಾಸಗಳನ್ನು, ಬದಲಾಯಿಸಬೇಕಾದ ಅನಿವಾರ್ಯತೆಯೂ ಇದೆ.ಕೆಲಸದ ಸಮಯದಲ್ಲಿ,  ವರ್ಚುಯಲ್ ಮೀಟಿಂಗ್ ಗಳಲ್ಲಿ ನಿರತರಾಗಿದ್ದಾಗ ಮಕ್ಕಳನ್ನು  ನೋಡಿಕೊಳ್ಳುವ, ಅವರು ಮಾಡುವ ತುಂಟತನ ಗಲಾಟೆಯನ್ನು ತಡೆಯಲು ಮೊಬೈಲ್ ಕೈಗೆ ಕೊಟ್ಟು  ಕೆಲಸ ಮುಂದುವರಿಸುವ  ಸಮಸ್ಯೆ ಇದೆ.  ಮನೆಯಲ್ಲೇ ಇದ್ದರೂ  ಮಕ್ಕಳು, ಅಪ್ಪ ಅಮ್ಮ, ಅತ್ತೆ ಮಾವನವರ ಹತ್ತಿರ ಮಾತನಾಡಲೂ ಆಗದೆ ಇರುವಂತೆ ಆಗುತ್ತಿದೆ.  ಮನೆಗೆ ಬರುವ ನೆಂಟರಿಷ್ಟರಿಗೆ ಕೆಲಸ ಇದೆ, ಮೀಟಿಂಗ್ ಇದೆ, ಒಂದು ಗಂಟೆ  ಕುಳಿತುಕೊಳ್ಳಿ ಎಂದು ಹೇಳಿ ಮತ್ತೆ  ಏಕಾಗ್ರತೆ ಉಳಿಸಿಕೊಂಡು ಕೆಲಸ ಮಾಡುವ ಸವಾಲಿದೆ.  

    ಬ್ಯಾಚುಲರ್ಸ್ ಕಥೆ
      
    ಇದೆಲ್ಲಕ್ಕಿಂತ ಹೆಚ್ಚಾಗಿ ಬ್ಯಾಚುಲರ್ಸ್ ಕಥೆ ಅಂತೂ ಇನ್ನೂ ವಿಚಿತ್ರ.   ಮನೆಯಲ್ಲಿಯೇ ಇರುವುದರಿಂದ ಮೊಬೈಲ್ ನಲ್ಲಿ ಕೂಡ ಮಾತನಾಡಲಾಗದೆ, ವಾಟ್ಸ್ ಆಪ್ ಮೆಸೇಜ್ ಮೇಲೆ ಅವಲಂಬಿಸಬೇಕು.  ಆಫೀಸ್ ಕೆಲಸ ಮುಗಿದು ಸಂಜೆ ಸುತ್ತಾಡಿ ಆಫೀಸ್ ಕೆಲ್ಸಜಾಸ್ತಿ ಅಂತ ಸುಳ್ಳು ಹೇಳಿ ಕಳೆಯುತ್ತಿದ್ದ ಕಾಲ ಸಂಪೂರ್ಣ ಈಗಗಾಲೇ ನಿಂತುಹೋಗಿದೆ.ಅದು ಮುಂದುವರಿಯುವುದು ನಿಶ್ಶಿತ.  ಮಾಲ್, ಮೂವಿ, ಚಾಟ್ಸ್, ಪಾರ್ಕ್, ಲಾಂಗ್ ಡ್ರೈವ್,  ಗುಂಡು, ತುಂಡು ಪಾರ್ಟಿಗಳು ಹಾಗು ಔಟಿಂಗ್ ಸಂಪೂರ್ಣ ನಿಲ್ಲುವ ಹಂತಕ್ಕೆ ಬಂದಿದೆ. ಕಂಪನಿಗಳಲ್ಲಿ ಅರಳುತ್ತಿದ್ದ ಪ್ರೇಮ ಕಥೆಗಳಿಗೆ ಪೂರ್ಣ ವಿರಾಮ ಬೀಳಲಿದೆ.

    IT  ಕಂಪೆನಿಗಳಲ್ಲಿ ಮೂರೂ ತಿಂಗಳಿಗೊಮ್ಮೆ ಟೀಮ್ ಬಿಲ್ಡಿಂಗ್  ಅನ್ನೋ ನೆಪದಲ್ಲಾದರೂ ಯಾವೊದೋ ರೆಸಾರ್ಟ್ ಅಥವಾ ಅಮ್ಯೂಸ್ಮೆಂಟ್ ಪಾರ್ಕ್ ಹೋಗಿ ಮನಸ್ಸು ಹಗುರ ಮಾಡಿಕೊಂಡು ಬರುತ್ತಿದ್ದ ಸಮಯ  ಕರೋನ ಸಂಪೂರ್ಣ ಹತೋಟಿಗೆ ಬರುವವರೆಗೆ ಮತ್ತೆ ಶುರುವಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. 

    ಈ ಹೊಸಾ ವ್ಯವಸ್ಥೆಗೆ IT  ನೌಕರರು ಹೊಂದಿಕೊಳ್ಳುವದು ಕಳೆದ ಎರಡು ತಿಂಗಳಿಂದ ಸ್ವಲ್ಪ ಮಟ್ಟಿಗೆ ಸಾಧ್ಯವಾಗಿದ್ದರೂ, ಮುಂದೆ  ಧೀರ್ಘ ಕಾಲ ಮನೆಯಲ್ಲಿಯೇ ಇದ್ದಾಗ ಆಗುವ ಮಾನಸಿಕ, ಸಾಮಾಜಿಕ  ದುಷ್ಪರಿಣಾಮಗಳ ಅವಲೋಕನ ಮಾಡಬೇಕಾಗಿದೆ. 

    WFH  ಕೇವಲ IT  ಕಂಪನಿಗಳು  ಮಾತ್ರ ಅನುಕೂಲತೆಗಳನ್ನು ಮಾಡಿದರೆ ಸಾಲದು  ಮನೆಯೆಲ್ಲಿ ಕೆಲಸ ಮಾಡುವವರು, ಮಾಡದವರು  ಒಟ್ಟಿಗೆ ಚರ್ಚಿಸಿ ಹಲವಾರು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಿದೆ. ಗಂಡ, ಹೆಂಡತಿ, ಮಕ್ಕಳು, ಪೋಷಕರು  ಒಬ್ಬರಿಗೊಬ್ಬರು ಹೆಚ್ಚಿನ ಬೆಂಬಲ ಕೊಡಬೇಕಾಗಿದೆ. 

    ಈ  WFH ನಲ್ಲಿ  ಮಾನಸಿಕ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು, ಹಲವಾರು ಸಾಧಕ, ಭಾದಕಗಳ ಸುಧೀರ್ಘ ಚರ್ಚೆ, ಚಿಂತನೆ ನಡೆಸಿ,  ನೌಕರರಿಗೆ ಬೇಕಾದ ಹಲವಾರು  ಅನುಕೂಲತೆಗಳನ್ನು ಮಾಡಿಕೊಡುವ ನಿಟ್ಟಿನಲ್ಲಿ IT  ಕಂಪನಿಗಳು ಯೋಚಿಸಬೇಕಾಗಿದೆ.  ವರ್ಚುಯಲ್ ಭ್ರಮಾಲೋಕ  ತ್ರಿಶಂಕು ಸ್ವರ್ಗವಾಗದಿರುವಂತೆ ನೋಡಿಕೊಳ್ಳುವ ಹೆಚ್ಚಿನ ಜವಾಬ್ದಾರಿ ನಮ್ಮ ಸರ್ಕಾರಗಳ ಮೇಲೂ ಇದೆ.

    ನೇಪಾಳದ ದಿಢೀರ್ ಆಕ್ರಮಣ ನೀತಿಯ ಹಿಂದಿನ ಅಸಲಿ ರಹಸ್ಯ

    ಒಂದು ಕಾಲದಲ್ಲಿ ವಿಶ್ವದ ಏಕೈಕ ಅಧಿಕೃತ ಹಿಂದೂ ರಾಷ್ಟ್ರವಾಗಿದ್ದ ನೇಪಾಳ ಇತ್ತೀಚಿನ ದಿನಗಳಲ್ಲಿ ಭಾರತ ಬಗ್ಗೆ ಆಕ್ರಮಣಕಾರಿ ನೀತಿಯನ್ನು ಅನುಸರಿಸಲು ಆರಂಭಿಸಿದೆ. ಇದಕ್ಕೆ ಅಂಕುರಾರ್ಪಣೆ ಮಾಡಿದವರು ಮೊದಲ ಬಾರಿಗೆ ನೇಪಾಳದ ಪ್ರಧಾನಿ ಗದ್ದುಗೆಯೇರಿದ್ದ ಕಮ್ಯೂನಿಸ್ಟ್ ಪಕ್ಷದ ನಾಯಕ ಪ್ರಚಂಡ. 

    ಪುಟ್ಟ ರಾಷ್ಟ್ರವಾದರೂ ಗಡಿಯಲ್ಲಿ ಸೇನಾ ಜಮಾವಣೆ. ಅಪ್ರಚೋದಿತ ಗುಂಡಿನ ದಾಳಿಯಿಂದ ರೈತನೊಬ್ಬನ ಹತ್ಯೆ. ತನ್ನ ದೇಶದ ನಕಾಶೆ (ಮ್ಯಾಪ್) ಪರಿಷ್ಕರಣೆಗೆ ತರಾತುರಿಯಲ್ಲಿ ಅಲ್ಲಿನ ಸಂಸತ್ತಿನಿಂದ ಅನುಮೋದನೆ. ತನ್ಮೂಲಕ ಗಡಿ ವಿಸ್ತರಣೆಯ ಅಭಿಲಾಷೆ. ಇದರ ಹಿಂದಿನ ಕಾರಣಗಳು ಊಹಿಸಿದಷ್ಟು ಸರಳವಲ್ಲ.

    ಪ್ರಸಕ್ತ ನೇಪಾಳ ಪ್ರಧಾನಿಯಾಗಿರುವ ಕೆ. ಪಿ. ಶರ್ಮಾ ಓಲಿ, ಮೂಲತಃ ಕಮ್ಯೂನಿಸ್ಟ್ ಪಕ್ಷದ ಹಿನ್ನೆಲೆ ಹೊಂದಿರುವರು. ಈ ಹಿಂದೆ ನೇಪಾಳವನ್ನು ಹಿಂದೂ ರಾಷ್ಟ್ರದ ಪಟ್ಟಿಯಿಂದ ಹೊರಗಿಟ್ಟಿರುವವರೂ ಇದೇ ಕಮ್ಯೂನಿಸ್ಟ್ ಪಕ್ಷದ ಹಿನ್ನೆಲೆ ಹೊಂದಿದ್ದ ಪ್ರಚಂಡ.

    ರಸ್ತೆಯೇ ಮುಖ್ಯ

    ಪವಿತ್ರ ಮಾನಸ ಸರೋವರ ಯಾತ್ರೆಗೆ ಹೋಗುವ ದಾರಿಯನ್ನು ಸುಗಮಗೊಳಿಸುವ ಉದ್ದೇಶದಿಂದ ಭಾರತ-ಟಿಬೇಟ್ ಗಡಿ ಭಾಗದ ಲಿಪು ಲೇಕ್ (ಲಿಪು ಸರೋವರ) ಪಾಸ್ ಮೂಲಕ ಸಾಗುವ ಹೆದ್ದಾರಿಯನ್ನು ಭಾರತ ನಿರ್ಮಿಸುತ್ತಿದೆ. ಇದು ಚೀನಾ-ಭಾರತ ವಾಸ್ತವ ನಿಯಂತ್ರಣ ಗಡಿ ರೇಖೆ (ಎಲ್ಎಸಿ)ಗೆ ಹೊಂದಿಕೊಂಡಿದೆ. ಚೀನಾಕ್ಕೆ ಸ್ವಲ್ಪ ಮಟ್ಟಿಗೆ ಇರಿಸು-ಮುರುಸು ಆರಂಭವಾಗಲು ಇದು ಒಂದು ಕಾರಣ. ಹಾಗಾಗಿಯೇ ಲಡಾಕ್ ಜತೆಗಿನ ಗಡಿ ಸಂಘರ್ಷದ ಜತೆಗೆ ನೇಪಾಳದ ಮೂಲಕ ಬೇರೆ ವಿಷಯವನ್ನೂ ಅದು ಎತ್ತುವಂತೆ ಮಾಡಿದೆ ಎನ್ನಲಾಗುತ್ತಿದೆ.

    1999ರಲ್ಲೇ ಆಗಿನ ಕೇಂದ್ರ ಸರಕಾರ ಈ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಆದರೆ ಇಷ್ಟು ವರ್ಷಗಳ ಬಳಿಕ ನೇಪಾಳ ಆಕ್ಷೇಪ ಎತ್ತುವುದರ ಹಿಂದಿನ ರಹಸ್ಯವೇನು ? ಇದನ್ನು ಹುಡುಕುತ್ತಾ ಹೋದರೆ ಸಾಕಷ್ಟು ವಿಚಾರಗಳು ಬಹಿರಂಗಗೊಳ್ಳುತ್ತಿವೆ.

    ಕಮ್ಯೂನಿಸ್ಟ್ ಪಕ್ಷದ ನೆರವು

    ಬೇರೆ ಪಕ್ಷಗಳ ನೆರವಿನಿಂದಲೇ ಅಧಿಕಾರಕ್ಕೇರಿರುವ ನೇಪಾಳ ಪ್ರಧಾನಿ, ಕೆ. ಪಿ. ಶರ್ಮಾ ಓಲಿ ಅವರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಕಷ್ಟ. ಅದರಲ್ಲೂ ಮುಖ್ಯವಾಗಿ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಚೀನಾದ ಮಾತಿಗೆ ತಲೆಬಾಗಲೇ ಬೇಕಾದ ಅನಿವಾರ್ಯತೆ ಅವರ ಮುಂದಿದೆ. ಆದರೆ ಭಾರತವನ್ನು ಎದುರು ಹಾಕಿಕೊಂಡು ಬಾಳುವುದೂ ಕೂಡ ನೇಪಾಳಕ್ಕೆ ಕಷ್ಟ. ಭಾವನಾತ್ಮಕವಾಗಿ ನೇಪಾಳ ಭಾರತಕ್ಕೆ ಹತ್ತಿರ.

    2017ರಲ್ಲಿ ಚೀನಾದ ಜತೆಗೆ ಎದುರಾದ ಡೋಕ್ಲಾಂ ಸಂಘರ್ಷದ ಬಳಿಕ ಗಡಿ ಭಾಗದ ಹಲವು ರಸ್ತೆ ಪ್ರಾಜೆಕ್ಟ್ ಗಳಿಗೆ ಭಾರತ ತಕ್ಷಣದ ಅನುಮತಿ ನೀಡಿತ್ತು. 2017ರಲ್ಲಿ ರಕ್ಷಣಾ ವ್ಯವಸ್ಥೆಯ ಕುರಿತಾದ ಸ್ಥಾಯಿ ಸಮಿತಿ ವರದಿಯಲ್ಲಿ “ಗಡಿ ಭಾಗದ ವಿಷಯದಲ್ಲಿ ನಾವು ಕೈಗೊಂಡಿರುವ ರಸ್ತೆ ವಿಸ್ತರಣೆ ಅಥವಾ ನವೀಕರಣದಲ್ಲಿ ಕೇವಲ 22 ಯೋಜನೆಗಳು ಮಾತ್ರ ಪೂರ್ಣಗೊಂಡಿವೆ, ಹೀಗಾಗಿ ಇವುಗಳಿಗೆ ಹೆಚ್ಚುವರಿ ಹಣಕಾಸು ನೆರವು ಒದಗಿಸಬೇಕು ಎಂದು ಕಳವಳ ವ್ಯಕ್ತವಾಗಿತ್ತು.

    ರಸ್ತೆ ಉದ್ಘಾಟನೆ

    ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ನೇಪಾಳ ಮೂಲಕ ಸಾಗುವ ಹೆದ್ದಾರಿಗೆ ಮೇ 11ರಂದು ಚಾಲನೆ ನೀಡಿದ್ದರು. ಅದರ ಮರುದಿನವೇ ನೇಪಾಳ, ತನ್ನ ದೇಶದ ನಕಾಶೆಯನ್ನು ತಿದ್ದುಪಡಿ ಮಾಡಿದೆ. ಅದಕ್ಕೆ ತನ್ನ ದೇಶದ ಸಂಸತ್ತಿನ ಕೆಳಮನೆಯಲ್ಲಿ ತರಾತುರಿಯ ಅನುಮೋದನೆಯನ್ನೂ ಪಡೆದಿದೆ.

    ಈ ಎಲ್ಲಾ ಬೆಳವಣಿಗೆ ನೋಡಿದರೆ ಮತ್ತೆ ನೆನಪಾಗುವುದು ಕಮ್ಯೂನಿಸ್ಟ್ ಆಡಳಿತದ ಚೀನಾ. ಭಾರತವನ್ನು ನೇರವಾಗಿ ಎದುರಿಸಲಾಗದೆ ಚೀನಾ ಹೂಡಿರುವ ತಂತ್ರವೇ ಇದು ಎಂಬುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.

    ನಟಿ ಮಯೂರಿ ಮದುವೆ

    ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ನಟಿ ಮಯೂರಿ ತಮ್ಮ ಬಹು ಕಾಲದ ಗೆಳೆಯ ಅರುಣ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆೆ. ಬೆಂಗಳೂರಿನ ಜೆಪಿ ನಗರದ ತಿರುಮಲಗಿರಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಶುಕ್ರವಾರ ವಿವಾಹ ಸಮಾರಂಭ ನಡೆಯಿತು. ಅರುಣ್ ಅವರು ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿ. ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಸಮೀಪದ ಬಂಧುಗಳು ಮತ್ತು ಸ್ನೇಹಿತರು ಮಾತ್ರ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಮದುವೆಯ ಚಿತ್ರ ಸಂಚಯಇಲ್ಲಿದೆ. (ಚಿತ್ರಗಳು: ಮನು)

    ಬದುಕು ನಾವು ಅಂದುಕೊಂಡಂತೆ ತೀರಾ ನಿರ್ದಯಿ ಅಲ್ಲ

    ಕೆಲವರಿಗೆ ಜೀವನದುದ್ದಕ್ಕೂ ಒಂದಾದ ಮೇಲೊಂದರಂತೆ ಕಷ್ಟಗಳು ಎದುರಾಗುತ್ತಲೇ ಇರುತ್ತದೆ, ಇನ್ನು ಕೆಲವರ ಬದುಕು ದುರಂತಗಳಿಂದಲೇ ಕೂಡಿರುತ್ತದೆ. ಆದಾಗ್ಯೂ ಬದುಕಿನ ಬಗ್ಗೆ ಎಂದಿಗೂ ಭರವಸೆಯನ್ನು ಕಳೆದುಕೊಳ್ಳುವುದಿಲ್ಲ. ತನ್ನ ಗುರಿ ತಲುಪುವವರೆಗೂ ಕಾರ್ಯಪ್ರವೃತ್ತರಾಗುತ್ತಾರೆ. ಇದು ಒಂದು ಕೆಟಗರಿಯವರಾದರೆ, ಮತ್ತೊಂದು ವರ್ಗಕ್ಕೆ ಸೇರಿದವರು ಬದುಕಿನಲ್ಲಿನಡೆಯುವ ಎಲ್ಲಾ ಘಟನೆಗಳನ್ನು ನೆನೆದು ವಿಧಿಬರಹಕ್ಕೆ ಶರಣಾಗಿಬಿಡುತ್ತಾರೆ.
    ಪ್ರತಿಯೊಬ್ಬರಿಗೂ ಕೂಡಾ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತಲೇ ಇರುತ್ತದೆ. ಸಮಸ್ಯೆಗಳು ಮನುಷ್ಯನಿಗಲ್ಲದೇ ಮರಗಿಡಗಳಿಗೆ ಬರುತ್ತವೆಯೇ? ನಾವಂದುಕೊಂಡಂತೆ ಯಾರ ಬದುಕೂ ಕೂಡಾ ಹೂವಿನ ಹಾಸಿಗೆಯಾಗಿರುವುದಿಲ್ಲ. ಏನೋ ಸಾಧಿಸಬೇಕು ಎಂದುಕೊಂಡವರಲ್ಲಿ ಕೆಲವರಿಗೆ ಸಂಪನ್ಮೂಲಗಳ ಕೊರತೆ ಕಾಡಬಹುದು, ಮತ್ತೆ ಕೆಲವರಿಗೆ ಎಲ್ಲಾ ಇದ್ದೂ ಏನೂ ಸಾಧಿಸಲು ಸಾಧ್ಯವಾಗದೇ ಇರಬಹುದು. ಹಾಗಂತ ಬದುಕಿನ ಬಗ್ಗೆ ನಿರಾಶಾವಾದಿಗಳಾಗಬಾರದು.

    ಆಲ್ಟರ್‍ನೇಟಿವ್ ಇದೆ
    ಬದುಕು ನಾವಂದುಕೊಂಡಂತೆ ತೀರಾ ನಿರ್ದಯಿ ಅಲ್ಲ. ಪ್ರತಿಯೊಂದಕ್ಕೂ ಮತ್ತೊಂದು ಬದಲಿ ವ್ಯವಸ್ಥೆ ಇದ್ದೇ ಇರುತ್ತದೆ. ಹಲವು ಆಯ್ಕೆಗಳು ಇರುತ್ತವೆ. ಆದರೆ ನಾವು ಕಳೆದುಕೊಂಡ ಜಾಗದಲ್ಲೇ ಆಯ್ಕೆಗಳನ್ನು ಹುಡುಕಬಾರದು. ಬದುಕಿನಲ್ಲಿ ಕಷ್ಟಗಳು ಎದುರಾದಾಗ, ಕೆಲಸ ಕಳೆದುಕೊಂಡು ನಿರಾಸೆಗಳುಂಟಾದಾಗ ಅದಕ್ಕೊಂದು ಸೂಕ್ತವಾದ ಆಲ್ಟರ್‍ನೇಟಿವ್ ಹುಡುಕಿಕೊಂಡು ಬಿಡಬೇಕು.

    ನಕ್ಷತ್ರಗಳೆಡೆಗಿನ ನೋಟ

    ಭವಿಷ್ಯದ ಸುಂದರ ದಿನಗಳ ಬಗ್ಗೆ ಕನಸು ಕಾಣಲಾರದಷ್ಟು ಯಾರೂ ಕೂಡಾ ಬಡವರಲ್ಲ. ಬದುಕಿನ ಬಗ್ಗೆ ಸಕಾರಾತ್ಮಕ ಭಾವ ಹೊಂದಬೇಕು. ಎಷ್ಟೇ ಕಷ್ಟ ಬಂದರೂ ತಾನಿಟ್ಟ ಗುರಿಯ ಮರೆಯಬಾರದು.
    ಒಂದು ಜನಪದ ಕಥೆ ಹೀಗಿದೆ. ಬದುಕಿನಲ್ಲಿ ಒಬ್ಬ ವ್ಯಕ್ತಿ ಎಲ್ಲವನ್ನು ಕಳೆದುಕೊಳ್ಳುತ್ತಾನೆ. ನಾಲ್ಕೈದು ದಿನ ಹಸಿವಿನಿಂದಲೇ ಬಳಲುತ್ತಾನೆ. ಕೊನೆಗೆ ಕಾಡಿನೊಳಗೆ ಹೋಗಿ ತನ್ನ ಜೀವನ ಕೊನೆಗಾಣಿಸಲು ಮುಂದಾಗುತ್ತಾನೆ. ಆಗ ಅವನ ಮುಂದೆ ದೇವರು ಪ್ರತ್ಯಕ್ಷನಾಗಿ, ಯಾಕೆ ಏನಾಯ್ತು ಸಾಯುವ ನಿರ್ಧಾರ ಏಕೆ ಎಂದು ಪ್ರಶ್ನಿಸುತ್ತಾನೆ. ಆಗ ಆ ವ್ಯಕ್ತಿ ತನ್ನ ಕಷ್ಟವನ್ನು ತೋಡಿಕೊಳ್ಳುತ್ತಾನೆ. ಆಗ ದೇವರು ಹೇಳುತ್ತಾನೆ, “ಪ್ರತಿಯೊಬ್ಬರೂ ಕೂಡಾ ಅವರವರ ಬದುಕನ್ನು ಅವರವರೇ ರೂಪಿಸಿಕೊಳ್ಳಬೇಕು’ ಎಂದು.


    ಅಷ್ಟೊತ್ತಿಗೆ ಆ ಕಾಡಿನಲ್ಲಿ ಹಸಿದ ವಯಸ್ಸಾದ ನರಿಯೊಂದು ಆಹಾರಕ್ಕಾಗಿ ಹೊಂಚು ಹಾಕಿ ಕುಳಿತಿರುವುದನ್ನು ಆತ ಗಮನಿಸುತ್ತಾನೆ. ಆ ವ್ಯಕ್ತಿ ನರಿಯನ್ನು ಹಿಂಬಾಲಿಸುತ್ತಾನೆ. ದೂರದಲ್ಲಿ ಸಿಂಹ ತಾನು ಬೇಟೆಯಾಡಿದ ಜಿಂಕೆಯನ್ನು ತಿನ್ನುತ್ತಿರುತ್ತದೆ. ಹೊಟ್ಟೆ ತುಂಬಿದ ಬಳಿಕ ಸಿಂಹ ಅಲ್ಲಿಂದ ಹೊರಟು ಹೋಗುತ್ತದೆ. ತಕ್ಷಣವೇ ಹಸಿದ ನರಿ, ಸಿಂಹ ತಿಂದು ಬಿಟ್ಟ ಎಂಜಲು ಆಹಾರವನ್ನು ಸೇವಿಸಲು ಅಲ್ಲಿಗೆ ನೆಗೆಯುತ್ತದೆ. ಇದನ್ನು ಗಮನಿಸಿದ ವ್ಯಕ್ತಿ ದೇವರನ್ನು ಮತ್ತೆ ಪ್ರಶ್ನಿಸುತ್ತಾನೆ, “ನೋಡು ನೀನು, ಹಸಿದ ನರಿಯ ಹೊಟ್ಟೆಗೂ ಆಹಾರ ಸಿಗುವಂತೆ ಮಾಡಿದೆ. ನನ್ನನ್ನು ಯಾಕೆ ಈ ರೀತಿ ಬಳಲುವಂತೆ ಮಾಡಿದೆ?’ ಎಂದು.


    ಆಗ ದೇವರು ಉತ್ತರಿಸುತ್ತಾನೆ, “ನೀನೂ ಸಿಂಹವೇ, ನಿನ್ನನ್ನು ನಾನು ತೋಳನನ್ನಾಗಿ ಮಾಡಿಲ್ಲ’ ಎಂದು.

    ಈ ಮಾತಿನ ಮರ್ಮವನ್ನು ಯಾರು ಬೇಕಾದರೂ ಅರ್ಥೈಸಿಕೊಳ್ಳಬಹುದು. ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳುವಾತ ಬಾಳುತ್ತಾನೆ. ಸಿಂಹ ತಾನೇ ಬೇಟೆಯಾಡಿ ಹೊಟ್ಟೆ ಬಿರಿಯುವಷ್ಟು ಆಹಾರ ಹುಡುಕಿಕೊಳ್ಳುತ್ತದೆ. ಆದರೆ ತೋಳ ತಿಂದಿದ್ದು ಹಂಗಿನ ಆಹಾರ.


    ಜವಾಬ್ದಾರಿ ಮನದಲ್ಲಿದ್ದರೆ ಯಾರೂ ಕೂಡಾ ತನ್ನ ಪ್ರಯತ್ನವನ್ನು ಕೈಬಿಡುವುದಿಲ್ಲ. ಕಳೆದುಕೊಂಡುದುದರ ಬಗ್ಗೆ ಪಶ್ಚಾತ್ತಾಪಪಟ್ಟುಕೊಳ್ಳದೆ ಸಾಧಿಸಬೇಕೆಂಬ ಛಲ ಮತ್ತು ಅದರೆಡೆಗಿನ ಪ್ರಯತ್ನ ಜೀವನವೆಂಬ ಹೋರಾಟದಲ್ಲಿ ಯಶಸ್ವಿಯಾಗುವಂತೆ ಮಾಡುತ್ತದೆ. ಹಾಗೆಯೇ ನಕ್ಷತ್ರಗಳನ್ನು ಮುಟ್ಟುವ ಆತನ ಕನಸುಗಳನ್ನು ಯಾರು ತಾನೇ ತಡೆಯುವುದಕ್ಕೆ ಸಾಧ್ಯ? ಅಲ್ಲವೇ?

    ಚಿತ್ರ ಸೌಜನ್ಯ: freestocks.org from Pexels

    ಪ್ರಶಾಂತ್ ನೀಲ್ ಹಿಂದೆ ಬಿದ್ದಿರುವ ತೆಲುಗು ನಿರ್ಮಾಪಕರು

    ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನ ಪ್ರತಿಭಾವಂತ ನಿರ್ದೇಶಕರಿದ್ದಾರೆ, ಆದರೆ ಕೆಲವರ ಹೆಸರು ಮಾತ್ರ ಎಲ್ಲ ಭಾಷೆಯ ಇಂಡಸ್ಟ್ರಿಗೂ ಗೊತ್ತಾಗುತ್ತದೆ. ಆ ಸಾಲಿಗೆ ಕೆಜಿಎಫ್‌ ಖ್ಯಾತಿಯ ಪ್ರಶಾಂತ್‌ ನೀಲ್‌ ಹೆಸರು ಸೇರಿದೆ ಏಕೆಂದರೆ ಇವರ ಕಾಲ್‌ಶೀಟ್‌ಗಾಗಿ ಪಕ್ಕದ ತೆಲುಗು ಚಿತ್ರರಂಗದಿಂದ ಭಾರಿ ಡಿಮಾಂಡ್‌ ಬಂದಿದೆ.

    ಸಾಮಾನ್ಯವಾಗಿ ನಾಯಕರ ಹುಟ್ಟು ಹಬ್ಬಕ್ಕೆ ಪುಟಗಟ್ಟಲೇ ಜಾಹಿರಾತು ನೀಡುವ ನಿರ್ಮಾಪಕರು ನಿರ್ದೇಶಕ ಪ್ರಶಾಂತ್‌ ನೀಲ್‌ ಅವರ ಹುಟ್ಟು ಹಬ್ಬಕ್ಕೆ ಕನ್ನಡದ ಖ್ಯಾತ ದಿನಪತ್ರಿಕೆಗಳಿಗೆ ಪೂರ್ಣ ಪುಟ, ಅರ್ಧಪುಟಗಳ ಜಾಹಿರಾತನ್ನು ನೀಡಿದೆ. ಅದು ಯಾರ್ಯಾರು ಅಂತೀರಾ.  ‘ರಂಗಸ್ಥಳಂ’ , ‘ಶ್ರೀಮಂತುಡು’, ‘ಜನತಾ ಗ್ಯಾರೇಜ್‌’ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ, ಸದ್ಯ ಅಲ್ಲು ಅರ್ಜುನ್‌ ನಟನೆಯ ‘ಪುಷ್ಪ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಮೈತ್ರಿ ಮೂವಿ ಮೇಕರ್ಸ್‌ ಮತ್ತು ‘ಭರತ್‌ ಅನೇ ನೇನು’ , ‘ಆರ್‌ಆರ್‌ಆರ್‌’ ಸಿನಿಮಾ ನಿರ್ಮಾಪಕ ಡಿವಿವಿ ಪ್ರೊಡಕ್ಷನ್‌ ಹೌಸ್‌ಗಳಿಂದ ಈ ಜಾಹಿರಾತು ಪ್ರಕಟವಾಗಿದೆ. ಅಲ್ಲದೆ ಸೆನ್ಸೇಶನಲ್ ಡೈರೆಕ್ಟರ್‌, ಬಾಕ್ಸ್‌ ಆಫೀಸ್‌ ಮಾನ್ ಸ್ಟರ್‌, ಹೀಗೆ ಸಿನಿಮಾ ಹೀರೋಗಳಿಗೆ ಕರೆಯಬಹುದಾದ ಟೈಟಲ್‌ಗಳನ್ನು ನಿರ್ದೇಶಕರೊಬ್ಬರಿಗೆ ನೀಡಲಾಗಿದೆ.

    ಹೌದು ಸದ್ಯ ಕೆಜಿಎಫ್‌ ಚಾಪ್ಟರ್‌-2 ಚಿತ್ರದ ಕೆಲಸದಲ್ಲಿ ಬಿಝಿ ಇರುವ ಪ್ರಶಾಂತ್‌ ನೀಲ್‌ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ ಎಂಬ ಮಾಹಿತಿಯನ್ನು ಅವರ ಅಪ್ತರು ಹೇಳುತ್ತಾರೆ. ಅವರು ಒಪ್ಪಿಕೊಳ್ಳದೆ ಅಷ್ಟು ದೊಡ್ಡ ನಿರ್ಮಾಣ ಸಂಸ್ಥೆಗಳು ಜಾಹಿರಾತು ಯಾಕೆ ಕೊಡುತ್ತವೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಚಾಪ್ಟರ್‌-2 ಆದ ಮೇಲೆ ಶ್ರೀಮುರುಳಿ ಜತೆ ಸಿನಿಮಾ ಮಾಡುತ್ತಾರೆ ಎಂದು ಆದರೆ ಈಗ ಜೂ . ಎನ್‌ಟಿಆರ್‌ಗೆ ಮಾಡುತ್ತಾರೆ ಎಂದು ಸುದ್ದಿಯಾಗಿದೆ. ಇದರ ಬೆನ್ನಲ್ಲೆ ಜಾಹಿರಾತುಗಳು ಬಂದಿರುವುದು, ನೀಲ್‌ ಈ ವರ್ಷ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಡುವುದು ಪಕ್ಕಾ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ. ಒಬ್ಬ ನಿರ್ದೇಶಕನ ಬಗ್ಗೆ ಇಷ್ಟೆಲ್ಲಾ ಸುದ್ದಿಗಳು ಇದೇ ಮೊದಲಬಾರಿಗೆ ಹಬ್ಬಿದ್ದು, ಇದು ಕನ್ನಡದ ಹೆಮ್ಮೆ ಎಂದು ಸಹ ಹೇಳಲಾಗುತ್ತಿದೆ.

    ದುಡ್ಡು ಇದ್ದವರಿಗೆ ಕೃಷಿ ಭೂಮಿ: ರೈತರ ಮೇಲಾಗುವ ಪರಿಣಾಮ ಏನು?

    ಈ ವರೆಗೆ ಕೃಷಿಕನಲ್ಲದ ವ್ಯಕ್ತಿ ಜಮೀನು ಖರೀದಿಸಲು ಅವಕಾಶ ಇರಲಿಲ್ಲ. ಇನ್ನುಮುಂದೆ ರಾಜ್ಯದಲ್ಲಿರುವ ಕೃಷಿಕರಲ್ಲದವರೂ ಯಾವುದೇ ಅಡೆತಡೆ ಇಲ್ಲದೆ ಜಮೀನು ಖರೀದಿಸಬಹುದು. ಇಂಥ ಅವಕಾಶ ಕಲ್ಪಿಸಲು ಕರ್ನಾಟಕ ಭೂ ಸುಧಾರಣ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರಕಾರ ಮುಂದಾಗಿದೆ. ಕೈಗಾರಿಕೋದ್ಯಮಿಗಳು ಈ ತಿದ್ದುಪಡಿಯನ್ನು ಸ್ವಾಗತಿಸಿದ್ದರೆ ರೈತ ಮುಖಂಡರು ಇದೊಂದು ವಿನಾಶಿಕಾರಿ ನಡೆ ಎಂದು ಬಣ್ಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘದ ನಾಯಕ ಕೆ.ಟಿ . ಗಂಗಾಧರ್ ಅವರೊಂದಿಗೆ ಕನ್ನಡಪ್ರೆಸ್ .ಕಾಮ್ಚನ್ನಗಿರಿ ಸುಧೀಂದ್ರ ನಡೆಸಿದ ಪಾಡ್ಕಾಸ್ಚ್ ಇದು. ಆಲಿಸಿ ನಿಮ್ಮಅಭಿಪ್ರಾಯ ತಿಳಿಸಿ

    error: Content is protected !!