17.5 C
Karnataka
Sunday, November 24, 2024
    Home Blog Page 174

    ರವಿಕೆ ಕಣದಲ್ಲಿದೆ ಸಂಬಂಧಗಳನ್ನು ಸೇರಿಸೋ ಅಗಾಧ ಶಕ್ತಿ

    ಮನೆಯಲ್ಲಿ ಹೆಂಗಸರು ಬಟ್ಟೆಗಳನ್ನು ಜೋಡಿಸಿದ ಅಲಮೆರಾವನ್ನು ತೆರೆದ ತಕ್ಷಣ ಅದರೊಳಗಿನಿಂದ ಒಂದು ಬ್ಲೌಸ್ ಪೀಸು ಕೆಳಗೆ ಬೀಳುತ್ತದೆ . ಜಾರಿ ಬಿದ್ದ ಬ್ಲೌಸ್ ಪೀಸನ್ನು ಕೈಲಿ ಹಿಡಿದ ಆಕೆ ಅದನ್ನು ಯಾರು ಕೊಟ್ಟಿದ್ದು ಅಂತ ನೆನಪಿಸಿಕೊಂಡು ಸಣ್ಣ ಫ್ಲ್ಯಾಶ್‌‌‌ಬ್ಯಾಕಿಗೆ ಜಾರುತ್ತಾರೆ .

    ಗೃಹ ಪ್ರವೇಶದಲ್ಲೋ , ಸತ್ಯನಾರಾಯಣ ಪೂಜೆಯಲ್ಲೋ , ನಿಶ್ಚಿತಾರ್ಥದಲ್ಲೋ, ಸಂಬಂಧಿಕರ ಮನೆಗೆ ಹೋದಾಗಲೋ, ಅರಿಷಿಣ ಕುಂಕುಮದ ಜೊತೆಗೋ ಆ ಕುಪ್ಪುಸದ ಕಣ ಕೊಟ್ಟಿರುತ್ತಾರೆ . ಅದನ್ನು ಕೈಲಿ ಹಿಡಿದ ಕೂಡಲೇ ಆ ಹೆಂಗಸಿನ ಮನದಲ್ಲಿ ಹತ್ತು ಆಲೋಚನೆಗಳು ಓಡುತ್ತವೆ. ಅದಕ್ಕೆ ಯಾವ ಸೀರೆ ಮ್ಯಾಚ್ ಆಗುತ್ತೆ , ಮ್ಯಾಚ್ ಆಗದೇ ಇದ್ರೆ ಯಾವ ರೇಂಜಿನ ಸೀರೆ ತಗೋಬಹುದು , ಯಾವಾಗ್ ತಗೋಬೇಕು , ಕುಪ್ಸ ಯಾರ್ ಹತ್ರ ಹೊಲಿಸಬೇಕು , ಯಾವ ವಿನ್ಯಾಸದಲ್ಲಿ ಹೊಲಿಸಬೇಕು, ಅದನ್ನ ಯಾವ ಫಂಕ್ಷನ್ನಿಗೆ ಹಾಕ್ಕೊಂಡ್ರೆ ಚೆನ್ನಾಗಿರುತ್ತೆ ಹೀಗೆ ಹತ್ತುಹಲವಾರು ಆಲೋಚನೆಗಳು ರೇಸುಕುದುರೆಗಳಂತೆ ಓಡುತ್ತವೆ .

    ಅದೊಂದು ಸಣ್ಣ ರವಿಕೆ ಬಟ್ಟೆಯ ತುಂಡಾಗಿದ್ದರೂ ಇದು ಎಷ್ಟೋ ತುಂಡಾದ ಸಂಬಂಧಗಳನ್ನ ಸೇರಿಸೋ ಅಗಾಧ ಶಕ್ತಿ ಹೊಂದಿದೆ , ಒಂದು ಮನೆಯ ಹೆಂಗಸರು ತಮ್ಮ ಮನೆಗೆ ಬರುವ ಬೇರೆ ಮನೆಯ ಹೆಂಗಸರಿಗೆ ಸಲ್ಲಿಸುವ ಗೌರವ ಇದಾಗಿರುತ್ತದೆ .ಕೋಟಿಗಟ್ಟಲೇ ಆದಾಯವಿದ್ದವರೂ ಸಹ ಸಲ್ಲಿಸುವ ಗೌರವ ಇದಾಗಿದೆ. ಬ್ಲೌಸ್ ಪೀಸು ಒಂದು ಸಣ್ಣ ಸಂಪ್ರದಾಯ. ಒಂದು ಸಣ್ಣ ಉಡುಗೊರೆ. ಒಂದು ಸಣ್ಣ ಸತ್ಕಾರವಾದರೂ ಸಹ ಅದನ್ನು ಪಡೆಯುವ ಹೆಣ್ಣಿಗೆ ಅದು ಬಲು ದೊಡ್ಡ ಮಟ್ಟದ ಸಂತಸ ಉಂಟು ಮಾಡುತ್ತದೆ .

    ಆಕೆ ಅದೆಷ್ಟೇ ದೊಡ್ಡ ಶ್ರೀಮಂತಳಾಗಿದ್ದರೂ ಆಕೆಯ ಬಳಿ ಎಷ್ಟೇ ಬೆಲೆಬಾಳುವ ವಸ್ತುಗಳು ಒಡವೆಗಳು ಸೀರೆಗಳಿದ್ದರೂ ಸಹ ಈ ಒಂದು ಬ್ಲೌಸ್ ಪೀಸು ಕೊಡುವ ಸಂತಸ ನಿಜಕ್ಕೂ ಅಪಾರವಾದದದ್ದು .

    ನಾಲ್ಕೈದು ಮಂದಿ ಒಟ್ಟಿಗೆ ಹೋಗಿದ್ದಾಗ ಅವರಿಗೆಲ್ಲಾ ಇದು ಲಭಿಸಿದಾಗಲಂತೂ ಅವರುಗಳು ಓರೆಗಣ್ಣಿನಲ್ಲೇ ಪಕ್ಕದವರಿಗೆ ಯಾವ ಕಲರಿನದು ಸಿಕ್ಕಿದೆ ಎಂದು ನೋಡಿಕೊಂಡುಬಿಟ್ಟಿರುತ್ತಾರೆ. ಮತ್ತೆ ಪ್ರತಿ ಸಾರಿ ಇದು ಅಲೆಮಾರಿನಿಂದ ಕೆಳಗೆ ಬೀಳಲು ಕಾರಣವೇನೆಂದರೆ ಅದನ್ನು ಒಳಗೆ ಇಟ್ಟುಬಿಟ್ಟರೆ ಮರೆತುಹೋಗುತ್ತೇವೆ ಕಾಣೋ ಥರ ಇಟ್ರೆ ಬೇಗ ಹೊಲೆಯಲು ಹಾಕುತ್ತೇವೆ ಎಂದು ಕಾಣುವ ಥರ ಇಟ್ಟಿರುತ್ತಾರೆ.

    ಆದರೆ ವಾಸ್ತವವೇನೆಂದರೆ ಇವರುಗಳು ಯಾವುದೇ ಕಾರಣಕ್ಕೂ ಅದನ್ನು ಮರೆಯುವುದಿಲ್ಲ , ಮತ್ತೆ ಅದು ಬ್ಲೌಸಾಗಿ ಸಿದ್ದವಾದ ನಂತರ ಅದನ್ನು ಹಲವಾರು ಬಾರಿ ಧರಿಸಿ , ಲೆಕ್ಕವಿಲ್ಲದಷ್ಟು ಸಲ ಒಗೆದು ಒಣಹಾಕಿ ಅದು ಇನ್ನೇನು ಬಣ್ಣ ಮಾಸಿ ಬಿಸಾಡುವ ಹಾಗಾದರೂ ಇವರು ಆ ಬ್ಲೌಸು ಪೀಸು ಯಾರು ಕೊಟ್ಟಿದ್ದು ಎಲ್ಲಿ ಕೊಟ್ಟಿದ್ದು ಎಂಬುದನ್ನು ಸಂಧರ್ಭ ಸಹಿತವಾಗಿ ವಿವರಿಸುತ್ತಾರೆ .

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ.ಹಲವಾರು ಕವಿತೆಗಳಿಗೆ ಇಲಸ್ಟ್ರೇಷನ್ ಮಾಡಿದ್ದಾರೆ. ಇಂಟಿರೀಯರ್ ಡಿಸೈನ್ ಮತ್ತು ಇದರ ಬಗ್ಗೆ ಕೆಲವು ಲೇಖನಗಳನ್ನು ಪತ್ರಿಕೆಗೆ ಬರೆದಿದ್ದಾರೆ. ಜೊತೆಗೆ ಕವಿತೆಗಳನ್ನು ಕೂಡ ಬರೆಯುತ್ತಾರೆ

    ಗಡಿಯಿಂದ ಚೀನಾ ಸೇನೆ ಹಿಂದೆ ಸರಿದಿದ್ದೇಕೆ

    ಲಡಾಖ್ ಗಡಿಯಲ್ಲಿ ನಿರ್ಮಾಣವಾದ ಪ್ರಕ್ಷುಬ್ಧ ಪರಿಸ್ಥಿತಿ ನಿಧಾನವಾಗಿ
    ತಿಳಿಯಾಗುತ್ತಿದೆ. ಭಾರತ ಮತ್ತು ಚೀನಾ ಎರಡೂ ದೇಶಗಳು ಮೂರು
    ಪ್ರಮುಖ ಪ್ರದೇಶಗಳಿಂದ ಸೇನೆಯನ್ನು ಭಾಗಶಃ ಹಿಂದಕ್ಕೆ
    ತೆಗೆದುಕೊಳ್ಳುವ ಒಪ್ಪಂದಕ್ಕೆ ಬಂದಿವೆ.
    ಹಠಮಾರಿ ಚೀನಾ ಈ ಸಂದರ್ಭದಲ್ಲೂ ಯಾಕೆ ಇಂತಹ ಒಪ್ಪಂದಕ್ಕೆ
    ಸಹಮತ ಸೂಚಿಸಿತು ಎಂಬುದನ್ನು ಯೋಚಿಸಿದರೆ ಅದಕ್ಕೆ ಹಲವು
    ಉತ್ತರಗಳು ಸಿಗುತ್ತವೆ. ಮುಖ್ಯವಾಗಿ ಈ ಹಿಂದೆ ಅಂದರೆ ನೆಹರೂ
    ಕಾಲದಲ್ಲಿ ನಡೆದ ದುರಾಕ್ರಮಣದಂತಹ ಸನ್ನಿವೇಶ ಈಗಿಲ್ಲ. ಭಾರತ
    ಸೇನಾ ಬಲದಲ್ಲಿ ಸಾಕಷ್ಟು ಪ್ರಾವಿಣ್ಯತೆ ಪಡೆದಿದೆ. ಮೇಲ್ನೋಟಕ್ಕೆ
    ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ತನ್ನ ಸೇನಾ ಬಲ
    ಹೆಚ್ಚಿಸಿಕೊಂಡಿದೆ ಎಂದು ಸಾಮಾನ್ಯವಾಗಿ ವಿಶ್ಲೇಷಿಸಲಾ
    ಗುತ್ತಿದೆಯಾದರೂ, ಭಾರತ ಮುಖ್ಯ ಗುರಿ ಯಾವತ್ತೂ ಚೀನಾ ಸೇನಾ
    ಸಾಮರ್ಥ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿಯೇ
    ಪಾಕಿಸ್ತಾನದ ಗಡಿಯೊಳಗೆ ನೇರ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡುವ
    ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿಯವರನ್ನು
    ಅಷ್ಟು ಲಘುವಾಗಿ ಚೀನಾ ಪರಿಗಣಿಸುತಿಲ್ಲ.
    ಹೆಚ್ಚು ಪರಿಣತಿ
    ಭಾರತದ ಸೇನೆಯ ಪ್ರಮುಖ ಸಾಧನೆಯೆಂದರೆ ಗುಡ್ಡಗಾಡು
    ಪ್ರದೇಶದಲ್ಲಿ ಯುದ್ಧ ಮಾಡುವ ಹೆಚ್ಚಿನ ಪರಿಣತಿಯನ್ನು
    ಕಾಲಾನುಕಾಲಕ್ಕೆ ಮೈಗೂಡಿಸಿಕೊಂಡು ಬಂದಿರುವುದು. ಮುಖ್ಯವಾಗಿ
    ಟಿಬೇಟಿಯನ್ ಗಡಿಯಂತಹ ಹಿಮಾಚ್ಛಾದಿತ ಪರ್ವತ ಪ್ರದೇಶದಲ್ಲಿ
    ಭಾರತದ ಸೇನೆ ಈ ಹಿಂದಿಗಿಂತಲೂ ಹೆಚ್ಚು ಸಂಘಟನಾತ್ಮಕ
    ಯುದ್ಧವನ್ನು ಮಾಡಲು ಶಕ್ತವಾಗಿದೆ. ಇದು ಕೇವಲ ಭಾರತೀಯಭಕ್ತರ ವೃಥಾ ಆಲಾಪವಲ್ಲ, ಅಥವಾ ನಮ್ಮ ಹೆಗ್ಗಳಿಕೆಯ ಬಗ್ಗೆ ನಾವೇ
    ಬೆನ್ನುತಟ್ಟಿಕೊಳ್ಳುವ ಮಾತಲ್ಲ.
    “ಪ್ರಸಕ್ತ ಸನ್ನಿವೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಮೆರಿಕ, ರಷ್ಯಾ,
    ಚೀನಾ ಅಥವಾ ಐರೋಪ್ಯ ದೇಶಗಳಿಗೆ ಹೋಲಿಸಿದರೆ ಭಾರತವು
    ಪ್ರಸ್ಥಭೂಮಿ ಮತ್ತು ಪರ್ವತ ಪ್ರದೇಶಗಳ ಯುದ್ಧದಲ್ಲಿ ಹೆಚ್ಚು
    ಪರಿಣತಿಯನ್ನು ಸಾಧಿಸಿದೆ’ ಎಂದು ಆಧುನಿಕ ಯುದ್ಧ ಸಾಮಗ್ರಿ ಕುರಿತು
    ವರದಿ ಮಾಡುವ ನಿಯತಕಾಲಿಕದ ಸಂಪಾದಕರಾದ ಹ್ವಾಂಗ್ ಗೌಝಿ
    ಅಭಿಪ್ರಾಯ ಪಟ್ಟಿದ್ದಾರೆ.
    ಭಾರತ ಮತ್ತು ಚೀನಾ ಗಡಿ ಭಾಗದ ಉದ್ವಿಗ್ನತೆಯನ್ನು
    ಶಮನಗೊಳಿಸುವ ನಿಟ್ಟಿನಲ್ಲಿ ಸೇನಾ ಪಡೆಯನ್ನು ಹಂತ ಹಂತವಾಗಿ
    ವಾಪಸ್ ಕರೆಸಿಕೊಳ್ಳುವ ನಿರ್ಧಾರ ಕೈಗೊಂಡ ಬೆನ್ನಲ್ಲೇ ಈ ಲೇಖನ
    ಪ್ರಕಟವಾಗಿದೆ.
    ಗಡಿ ಉದ್ವಿಗ್ನತೆ
    ಮುಖ್ಯವಾಗಿ ಟಿಬೇಟ್ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ
    ತನ್ನ ಸೇನಾ ಬಲವನ್ನು ಭಾರತ ವಿಸ್ತರಿಸಿದೆ. ಸದ್ಯ ಭಾರತವು ಪರ್ವತ
    ಪ್ರದೇಶಗಳ ಯುದ್ಧದಲ್ಲಿ ಪರಿಣಿತರಾದ ಎರಡು ಲಕ್ಷ ಯೋಧನ್ನು 12
    ವಿಭಾಗಗಳಲ್ಲಿ ಹೊಂದಿದೆ. ಇದು ಜಗತ್ತಿನಲ್ಲೇ ಅತಿ ಹೆಚ್ಚು ದೊಡ್ಡ
    ಪರ್ವತ ಪ್ರದೇಶ ಯುದ್ಧ ಪರಿಣಿತ ಯೋಧರ ತಂಡ ಎಂದು
    ಪರಿಗಣಿಸಲಾಗಿದೆ ಎಂದವರು ತಮ್ಮ ಅಭಿಪ್ರಾಯಕ್ಕೆ ಪೂರಕ ಮಾಹಿತಿ
    ನೀಡಿದ್ದಾರೆ.
    1970ರ ದಶಕದಲ್ಲಿ ಈ ನಿಟ್ಟಿನಲ್ಲಿ ಭಾರತ ಮುಂದಡಿಯಿಟ್ಟಿತ್ತು.
    ಆಗ 50,000 ಯೋಧರು ಇಂತಹ ಸಾಮರ್ಥ್ಯ ಹೊಂದಿದ್ದರೆ ಈಗ
    ಅದು ಮೂರು ಪಟ್ಟು ಆಗಿದೆ. ಅದರಲ್ಲೂ ಮುಖ್ಯವಾಗಿ ಇಂತಹ
    ಯುದ್ಧದ ಪರಿಣತಿ ಪ್ರತಿ ಯೋಧನಿಗೂ ಮುಖ್ಯ ಎಂದು ಮನಗಂಡಿರುವ
    ಭಾರತ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಅಂತಿಮವಾಗಿ ವೃತ್ತಿಮತ್ತು ಹವ್ಯಾಸಿ ಪರ್ವತಾರೋಹಿಗಳನ್ನು ಸೇನೆಗೆ ಸೇರ್ಪಡೆಗೊಳಿಸಲು
    ಆರಂಭಿಸಿತು ಎಂದವರು ಹೇಳುತ್ತಾರೆ.
    ಸಿಯಾಚಿನ್ ಪ್ರದೇಶ
    ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎಂದೇ ಹೆಸರಾಗಿರುವ ಮತ್ತು
    ಸದಾ ಹಿಮಾಚ್ಛಾದಿತವಾಗಿರುವ (ಮೈನಸ್ ಡಿಗ್ರಿ) ಸಿಯಾಚಿನ್ ನಲ್ಲಿ
    ಭಾರತ ನೂರಕ್ಕೂ ಹೆಚ್ಚು ಔಟ್ ಪೋಸ್ಟ್ ಗಳನ್ನು ರಚಿಸಿದೆ. 6ರಿಂದ
    7 ಸಾವಿರ ಯೋಧರು ಅಲ್ಲಿ ದಿನ ನಿತ್ಯ ಗಡಿ ಕಾವಲು ಕಾಯುತ್ತಿದ್ದಾರೆ.
    6,748 ಮೀಟರ್ ಎತ್ತರದಲ್ಲಿ ಸೇನಾ ಠಾಣೆಯನ್ನೂ ನಿರ್ಮಿಸಿರುವುದು
    ಪರ್ವತ ಯುದ್ಧ ಪ್ರವೀಣತೆಯಲ್ಲಿ ಭಾರತದ ಮೇಲುಗೈಗೆ
    ಸಾಕ್ಷಿಯಾಗಿದೆ.
    ಪ್ರಬಲ ಸೇನಾ ಪಡೆ
    ಹಿಂದಿನ ಭಾರತವು ಇಂದಿನ ಭಾರತವಲ್ಲ. ಎಂ. 777 ಯುದ್ಧ ವಿಮಾನ,
    155 ಎಂಎಂ ಲೈಟ್ ಟ್ಯಾಂಕ್, ಚಿನೂಕ್ ಹೆವ್ವಿ ಟ್ರಾನ್ಸ್ ಪೋರ್ಟ್
    ಹೆಲಿಕಾಪ್ಟರ್ ಗಳು ಭಾರತ ಸೇನೆಯ ಬತ್ತಳಿಕೆಯಲ್ಲಿವೆ. ಎಎಚ್ 64
    ಅಪಾಚಿ ಅಟ್ಯಾಕ್ ಹೆಲಿಕಾಪ್ಟರ್ ಗಳಿಂದಲೂ ಸೇನೆ ಸಜ್ಜಿತವಾಗಿದೆ.
    ಇನ್ನು ಚೀನಾ-ಭಾರತ ಗಡಿ ಭಾಗದ ಪ್ರದೇಶ ಎಷ್ಟು ದುರ್ಗಮವಾಗಿದೆ
    ಎಂದರೆ ಕೇವಲ ಹೋರಾಟದ ಜತೆಗೆ ತನ್ನನ್ನು ರಕ್ಷಿಸಿಕೊಳ್ಳುವುದಕ್ಕೂ
    ಸೇನಾ ಪಡೆ ಮಹತ್ವ ನೀಡಬೇಕಾಗುತ್ತದೆ. ಇಂತಹ ಅತಿಯಾದ
    ಆತ್ಮವಿಶ್ವಾಸ ಸದ್ಯದ ಮಟ್ಟಿಗೆ ಚೀನಾದಲ್ಲಿ ಇಲ್ಲ. ಹೀಗಾಗಿಯೇ
    ಬೆದರಿಸುವ ತಂತ್ರ, ಬಳಿಕ ಒಪ್ಪಂದ ಎನ್ನುವ ಸೂತ್ರಕ್ಕೆ ಮೊರೆಯಾಗಿದೆ
    ಎಂಬುದು ರಾಜಕೀಯ ಮತ್ತು ರಕ್ಷಣಾ ತಜ್ಞರ ವಿಶ್ಲೇಷಣೆಯಾಗಿದೆ.

    ಹೊಳಲ್ಕೆರೆ ರೈತನ ಆತ್ಮಹತ್ಯೆ ಯಾವುದರ ಸೂಚನೆ?

    ಕೋವಿಡ್-19 ವೈರಸ್‌ ಕಾಣಿಸಿಕೊಂಡ ನಂತರ ದೇಶದ ಆರ್ಥಿಕ ಸ್ಥಿತಿಯ ಕುರಿತು ಎಲ್ಲರಿಗೂ ತಿಳಿದೇ ಇದೆ.  ಕೈಗಾರಿಕೆಗಳು ನಷ್ಟ ಅನುಭವಿಸುತ್ತಿವೆ.  ನಿರುದ್ಯೋಗ ಪ್ರಮಾಣ ಹೆಚ್ಚಿದೆ.  ಈ ಬಗ್ಗೆ ಆರ್ಥಿಕ ತಜ್ಞರು ಮಾತನಾಡಿದ್ದಾರೆ. ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಚರ್ಚೆ ನಡೆದಿದೆ. ಆದರೆ ಕೃಷಿ ಕ್ಷೇತ್ರದ ಮೇಲಾದ ಪರಿಣಾಮಗಳ ಕುರಿತು ಯಾರೂ ಹೆಚ್ಚು ಗಮನ ನೀಡಿಲ್ಲ.

    ವಾಸ್ತವವಾಗಿ  ಈ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶದ ಆರ್ಥಿಕತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿರುವ ಏಕೈಕ ಕ್ಷೇತ್ರವೆಂದರೆ ಕೃಷಿ. ಈ ಬಾರಿ ಮುಂಗಾರು ಕೂಡ ಚೆನ್ನಾಗಿ ಆಗುವ ನಿರೀಕ್ಷೆ ಇರುವುದರಿಂದ ಎಲ್ಲರ ಚಿತ್ತ ಕೃಷಿ ಕ್ಷೇತ್ರದತ್ತ ನೆಟ್ಟಿದೆ. ಆದರೆ ದೇಶದ ಒಟ್ಟಾರೆ ಜಿಡಿಪಿಯಲ್ಲಿ ಕೃಷಿ ಕ್ಷೇತ್ರದ ಪಾಲು ಕೇವಲ ಶೇ. 15 ರಷ್ಟಾಗಿರುವುದರಿಂದ ಈ ಕ್ಷೇತ್ರವನ್ನು ಸರ್ಕಾರಗಳು ನಿರ್ಲಕ್ಷಿಸುತ್ತಲೇ ಬಂದಿವೆ.

    ಇದರ ಪರಿಣಾಮವೇ ರೈತರ ಆತ್ಮಹತ್ಯೆ. ಇಡೀ ದೇಶದ ಜನತೆಗೆ ಅನ್ನ ನೀಡುವ ಅನ್ನದಾತನ ಸಂಕಷ್ಟ ಯಾರಿಗೂ ಬೇಡ. ರೈತರ ಆತ್ಮಹತ್ಯೆ ಸಂಖ್ಯೆಯನ್ನು  ಕೃಷಿ ಕ್ಷೇತ್ರದ ಸಂಕಷ್ಟದ ಸೂಚ್ಯಂಕ ಎಂದೇ ಪರಿಗಣಿಸಲಾಗುತ್ತಿದೆ. ಇತ್ತೀಚಿನ ಒಂದೆರಡು ವರ್ಷಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಇಳಿಕೆಯ ಹಾದಿ ಹಿಡಿದಿದ್ದರಿಂದ ಕೃಷಿ ಕ್ಷೇತ್ರದ ಆರೋಗ್ಯ ಸುಧಾರಿಸುತ್ತಿದೆ ಎಂದೇ ಭಾವಿಸಲಾಗಿದೆ.

    ಕೊರೊನಾ  ಕೃಷಿ ಕ್ಷೇತ್ರದ ಮೇಲೆ ಯಾವೆಲ್ಲಾ ರೀತಿಯ ಪರಿಣಾಮ ಬೀರಿದೆ ಎಂಬುದರ ಕುರಿತು ಹೆಚ್ಚು ಅಧ್ಯಯನ ನಡೆದಿಲ್ಲ. ವಲಸೆ ಕಾರ್ಮಿಕರು ಹಳ್ಳಿಗಳಿಗೆ ಹಿಂದಿರುಗಿರುವುದರಿಂದ ಕೃಷಿ ಕಾರ್ಮಿಕರ ಸಮಸ್ಯೆ ಒಂದಿಷ್ಟು ಬಗೆಹರಿದಿರುವ ಸುದ್ದಿಗಳಿವೆ. ಆದರೆ ರೈತರ ಜೇಬು ಕೂಡ ಬೇರೆಲ್ಲರ ಹಾಗೆ ಖಾಲಿ ಖಾಲಿ ಯಾಗಿ, ಅವರು ಕೂಡ ಸಂಕಷ್ಟದಲ್ಲಿದ್ದಾರೆ.

    ಕಂಬದದೇವರ ಹಟ್ಟಿಯ ಘಟನೆ

    ಇದಕ್ಕೆ ಸ್ಪಷ್ಟ ಉದಾಹಣೆ ಎಂದರೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಂಬದದೇವರ ಹಟ್ಟಿ ಎಂಬಲ್ಲಿ 65 ವರ್ಷದ ರೈತ ದಾಸಪ್ಪ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವುದು. ಜೂನ್‌ 9, ರ ಪ್ರಜಾವಾಣಿ ವರದಿ ಪ್ರಕಾರ  ಹೆಣ್ಣು  ಮಕ್ಕಳ ಮದುವೆಗೆಂದು ಸಾಲ ಮಾಡಿದ್ದ ದಾಸಪ್ಪ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಸದರಿ ರೈತ ಹೊಳಲ್ಕೆರೆ  ಶಾಖೆಯ ಎಸ್ ಬಿ ಐ ನಿಂದ 2.70 ಲಕ್ಷ ರೂ, ಪ್ರಗತಿ ಗ್ರಾಮೀಣ ಬ್ಯಾಂಕಿನಿಂದ 1.10  ಲಕ್ಷ ರೂ.  ಹಾಗೂ ಟ್ರಾಕ್ಟರ್ ಕೊಳ್ಳಲೆಂದು ಚಿತ್ರದುರ್ಗದ  ಮಹೀಂದ್ರ ಫೈನ್ಸಾನ್ಸನಿಂದ 4.50 ಲಕ್ಷ ರೂ. ಸಾಲ ಮಾಡಿದ್ದ. ಸಾಲ ಮಾಡಲು ಕಾರಣ ಏನೇ ಇರಲಿ  ಇವರ ಸಾವು ಕೃಷಿಕರ ಸಂಕಷ್ಟವನ್ನು ಎತ್ತಿ ತೋರಿಸುತ್ತಿಲ್ಲವೇ? ಈ ಬಗ್ಗೆ ಚರ್ಚೆಯೇ ನಡೆಯುತ್ತಿಲ್ಲ.

    ಸಾವಿಗೆ ಬೆಲೆ ಇಲ್ಲ

    ರಾಷ್ಟ್ರೀಯ ಅಪರಾಧ ದಾಖಲೆಗಳ ಪ್ರಕಾರ  ನಮ್ಮ ದೇಶದಲ್ಲಿ 2014ರಲ್ಲಿ 12,360  ರೈತರು, 2015ರಲ್ಲಿ12,602, 2016ರಲ್ಲಿ11,379 ಮತ್ತು 2018ರಲ್ಲಿ 10,349 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಇವರೇಕೆ ಹೀಗೆ ಆತ್ಮಹತ್ಯೆಗೆ ಶರಣಾಗಿದ್ದರು? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ನಡೆದಿದ್ದರೆ ಈಗ ಹೊಳಲ್ಕೆರೆ ರೈತರನ ಆತ್ಮಹತ್ಯೆಯನ್ನು ತಪ್ಪಿಸಬಹುದಾಗಿತ್ತು.

    ಹೌದು ರೈತರ ಆತ್ಮಹತ್ಯೆ ವಿಷಯ  ಸರಳವಾಗಿಲ್ಲ. ಕುರುಡರು ಆನೆಯನ್ನು ಮುಟ್ಟಿ ಅದು ಹೇಗಿದೆ ಎಂದು ವರ್ಣಿಸಿದಂತೆ ರೈತರ ಆತ್ಮಹತ್ಯೆಯ ಬಗ್ಗೆಯೂ ಕೆಲ ತಜ್ಞರು ‘ಇದು ಈ ಕಾರಣಕ್ಕೇ ಆಗುತ್ತಿದೆ’ ಎಂದು ವಿಶ್ಲೇಷಿಸಿ, ಸರ್ಕಾರದ ದಿಕ್ಕು ತಪ್ಪಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿಯೇ ಆತ್ಮಹತ್ಯೆಯ ಸರಣಿ ಆರಂಭವಾಗಿ ಎರಡು ದಶಕಗಳಾದರೂ ಪರಿಹಾರ ಕಾಣುತ್ತಿಲ್ಲ. ಈ ವರ್ಷ ಇಷ್ಟು, ಆ ವರ್ಷ ಅಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡರೆಂಬ ಲೆಕ್ಕಾಚಾರದ ಮಾತಿಗೆ ಕೊನೆ ಇಲ್ಲವಾಗಿದೆ. ಈಗ  ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಪೊರೇಟ್‌   ಕಂಪನಿಗಳಿಗೂ ಕೃಷಿ ಕ್ಷೇತ್ರದಲ್ಲಿ ಭಾಗಿಯಾಗಲು  ಅವಕಾಶ ಮಾಡಿಕೊಡುವ ಮೂಲಕ ಆತ್ಮಹತ್ಯೆಗಳಿಗಿದ್ದ ಕಾರಣವನ್ನು ಸರ್ಕಾರ ಹೆಚ್ಚಿಸಿದೆ ಎನ್ನುತ್ತಾರೆ ಕೃಷಿ ಕ್ಷೇತ್ರದ ತಜ್ಞರು.

    ರಾಜ್ಯದ ಸಮಸ್ಯೆ ಮಾತ್ರವಲ್ಲ

    ರೈತರ ಆತ್ಮಹತ್ಯೆ ರಾಜ್ಯದಲ್ಲಿ ಮಾತ್ರ ನಡೆಯುತ್ತಿಲ್ಲ. ದೇಶಾದ್ಯಂತ ಸರಣಿ ಆತ್ಮಹತ್ಯೆಗಳು ನಡೆದೇ ಇದೆ. ಮಹಾರಾಷ್ಟ್ರ ರೈತರ ಆತ್ಮಹತ್ಯೆ ಪ್ರಕರಣಗಳು ರಾಷ್ಟ್ರೀಯಮಟ್ಟದಲ್ಲಿ ಚರ್ಚೆಗೆ ಕಾರಣವಾಗುತ್ತಲೇ ಇರುತ್ತವೆ. ಹಲವು ರಾಜ್ಯಗಳ ಸರ್ಕಾರಗಳು ಪರಿಹಾರ ಧನ, ಸಹಾಯಧನವನ್ನು ಘೋಷಿಸಿಯೂ ಆಗಿದೆ. ಆದರೂ ರೈತರ ಆತ್ಮಹತ್ಯೆ ಪ್ರಕರಣಗಳು ನಿಂತಿಲ್ಲ.

    ಕೈಕೊಟ್ಟ ಬೆಳೆಗಳು, ಪ್ರತಿಕೂಲ ಹವಾಮಾನಗಳು ರೈತರನ್ನು ಪ್ರತಿಕೂಲ ಪರಿಸ್ಥಿತಿಗೆ ತಳ್ಳುತ್ತಿದೆ. ಇದರ ಜೊತೆಗೆ, ನೀರಾವರಿ ಬೀಜ, ಗೊಬ್ಬರ, ಕೀಟನಾಶಕ ಮುಂತಾದ ಕೃಷಿಗೆ ಬೇಕಾದ ಹೂಡುವಳಿಗಳು ಸಮಯಕ್ಕೆ ಸರಿಯಾಗಿ ಸರಬರಾಜಾಗದೆ ಇರುವುದು, ಬೇಕಾದ ಪ್ರಮಾಣ, ಗುಣಮಟ್ಟದಲ್ಲಿ ಸಿಗದೆ ಇರುವುದು ರೈತನನ್ನು ದುಃಸ್ಥಿತಿಗೆ ತಳ್ಳಿರುವುದರಲ್ಲಿ ಅನುಮಾನವಿಲ್ಲ. ಆದರೆ ರೈತರಿಗೆ ಸಂಬಂಧಿಸಿದ ಸರಳ ಸಮಸ್ಯೆಗಳನ್ನು ಬಿಡಿಸಿ, ಅರ್ಥಪೂರ್ಣ ಪರಿಹಾರ ರೂಪಿಸುವಲ್ಲಿ ಕೂಡ ನಮ್ಮ ಸರಕಾರಗಳು ಒಂದು ಹೆಜ್ಜೆ ಮುಂದಿಟ್ಟಿಲ್ಲ. ಕುವೆಂಪು ತಮ್ಮ ‘ರೈತಗೀತೆ’ಯಲ್ಲಿ ಹೇಳಿರುವಂತೆ ರೈತರು ‘ಯೋಗಿಯಾಗಿ, ತ್ಯಾಗಿಯಾಗಿ’ ಬದುಕಬೇಕೆಂದು ಬಯಸುತ್ತಿವೆಯೇ ಹೊರತು, ಅವರಿಗೂ ಕನಸುಗಳಿರುತ್ತವೆ ಎಂಬುದನ್ನೇ ಮರೆತು, ಅವರನ್ನು ಶೋಷಿಸುತ್ತಾ ಬಂದಿವೆ.

    ಉತ್ತರವಿಲ್ಲದ ಪ್ರಶ್ನೆಗಳು

    ರೈತರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ಈ ಹಿಂದೆ ಹೇಳಿದ ಹಾಗೆ ಈ ಪ್ರಶ್ನೆಗೆ ಈವರೆಗೆ ನಡೆದ ಯಾವ ಸಂಶೋಧನೆಯೂ ‘ಇದಮಿತ್ಥಂ’ ಎಂಬಂಥ ಉತ್ತರವೊಂದನ್ನು ನೀಡಿಲ್ಲ. ನಮ್ಮ ಸಂಶೋಧನಾ ವಿಧಾನಗಳಿಗೆ ಇಂಥದ್ದೊಂದು ಉತ್ತರವನ್ನು ನೀಡುವ ಶಕ್ತಿಯೂ ಇಲ್ಲ. ಬಿಡಿ, ಅದು ಬೇರೆ ವಿಷಯ. ರೈತರ ಆತ್ಮಹತ್ಯೆಗಳಿಗೆ ಕಾರಣ ಹುಡುಕುವ ಕ್ರಿಯೆ ವಿಶ್ಲೇಷಣಾತ್ಮಕವಾಗಿ ಸಾಗುತ್ತದೆ. ಆತ್ಮಹತ್ಯೆ ಮಾಡಿಕೊಂಡವರು ಕುಡಿಯುತ್ತಿದ್ದರೆ?, ಮನೆಯ ಖರ್ಚಿಗೂ ಸಾಲ ಮಾಡಿಕೊಂಡಿದ್ದರೇ? ಬಗೆಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ರೈತರ ಆತ್ಮಹತ್ಯೆಗೆ `ಇತರ ಕಾರಣ’ಗಳೂ ಇವೆ ಎಂಬ ತೀರ್ಮಾನಕ್ಕೆ ಬರಲಾಗುತ್ತದೆ. `ಇತರ ಕಾರಣ’ಗಳೂ ಇರುವುದರಿಂದ ರೈತರ ಆತ್ಮಹತ್ಯೆಯ ಕಾರಣ ಅಸ್ಪಷ್ಟವಾಗಿಯೇ ಉಳಿಯುತ್ತದೆ.

    ವಿವಿಧ ಸಂಶೋಧನೆಗಳು ಪಟ್ಟಿ ಮಾಡುವ ಇತರ ಕಾರಣಗಳು ಈಗ ಹುಟ್ಟಿಕೊಂಡವೇನೂ ಅಲ್ಲ. ಈ ಮೊದಲೂ ರೈತರು ಸಾಲ ಮಾಡುತ್ತಿದ್ದರು. ಬೆಳೆ ವಿಫಲವಾಗುತ್ತಿತ್ತು. ಆಗಲೂ ಸಾಲ ಮಾಡಿಯೇ ಮಕ್ಕಳ ಮದುವೆ ಮಾಡುತ್ತಿದ್ದರು ಅಷ್ಟೇಕೆ ಸಾಲ ತಂದೇ ಹಬ್ಬ ಮಾಡುತ್ತಿದ್ದರು. ಆದರೆ ಈ ಸಾಲಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಈಗ ಏಕೆ ಅವೇ ಸಮಸ್ಯೆಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ರೈತರ ಆತ್ಮಹತ್ಯೆಗಳ ಸಂಶೋಧನೆ ನಡೆಸುವ ಯಾರಿಗೂ ಈ ಪ್ರಶ್ನೆ ಕಾಡುವುದಿಲ್ಲವೇಕೆ?

    ಎಲ್ಲಾ ಬಗೆಯ ಆತ್ಮಹತ್ಯೆಗಳ ಹಿಂದಿನ ಮುಖ್ಯ ಕಾರಣ ಹತಾಶೆ. ರೈತ ಯಾಕೆ ಹತಾಶನಾಗಿದ್ದಾನೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೇ ಯಾವ ಪ್ಯಾಕೇಜ್ ಘೋಷಿಸಿದರೂ, ಎಷ್ಟು ಪರಿಹಾರ ನೀಡಿದರೂ ಆತ್ಮಹತ್ಯೆಗಳು ಕಡಿಮೆಯಾಗುವ ಸಾಧ್ಯತೆಗಳಿಲ್ಲ. ರೈತನ ಹತಾಶೆಯ ಕಾರಣಗಳನ್ನು ಹುಡುಕುವುದಕ್ಕೆ `ಹೌದು’ ಅಥವಾ `ಇಲ್ಲ’ಗಳಲ್ಲಿ ಉತ್ತರ ಬಯಸುವ ಸಮೀಕ್ಷೆಗಳಿಗೆ ಸಾಧ್ಯವಿಲ್ಲ. ಇನ್ನು ಎಳಸು, ಎಳಸಾಗಿ ವರ್ತಿಸುವ ನಮ್ಮ ಮುಖ್ಯವಾಹಿನಿಯ ಮಾಧ್ಯಮಗಳಿಂದ ಇದಂತೂ ಸಾಧ್ಯವೇ ಇಲ್ಲ ಬಿಡಿ.

    ಕೈಗಾರಿಕೆಗಳು ನಷ್ಟಕ್ಕೀಡಾದರೆ ಸರ್ಕಾರ ಅವುಗಳ ಸಾಲವನ್ನು ಮನ್ನಾ ಮಾಡುತ್ತದೆ. ಅವುಗಳ ಪುನರುಜ್ಜೀವನಕ್ಕೆ ಮತ್ತೆ ಸಾಲ ನೀಡುತ್ತದೆ! ಆದರೆ ರೈತನೊಬ್ಬ ಸಾಲ ಮಾಡಿಕೊಂಡು ಕಷ್ಟಕ್ಕೆ ಬಿದ್ದರೆ ಅವನ ನೆರವಿಗೆ ಯಾರು ಬರುತ್ತಾರೆ? ಪಡೆದ ಸಾಲವನ್ನು ಮರು ಪಾವತಿ ಮಾಡದಿದ್ದರೆ ಅವನದೇ ಷೇರು ಬಂಡವಾಳದಿಂದ ನಡೆಯುತ್ತಿರುವ ಸಹಕಾರ ಸಂಘ ಕೂಡಾ ಅವನ ಜಮೀನು ಹರಾಜು ಹಾಕುವ ಮಾತನಾಡುತ್ತದೆ. ಮರು ಪಾವತಿಯಿಲ್ಲದೆ ಸಾಲವಿಲ್ಲ ಎಂಬ ಸಹಕಾರ ಸಂಘ ಮತ್ತು ಬ್ಯಾಂಕುಗಳ ನೀತಿಯಿಂದಾಗಿ ರೈತ ಅನಿವಾರ್ಯವಾಗಿ ಸುಲಭದಲ್ಲಿ ಸಾಲಕೊಡುವ ಬಡ್ಡಿ ವ್ಯಾಪಾರಿಗಳ ಬಳಿಗೆ ಹೋಗುತ್ತಾನೆ. ಈ ಸಾಲದ ಮೂಲಕ ಮಾಡಿದ ಹೂಡಿಕೆಯೂ ನಷ್ಟವಾದರೆ? ಈ ಹೊತ್ತಿಗಾಗಲೇ ಚಕ್ರವ್ಯೂಹ ಪ್ರವೇಶ ಮಾಡಿರುವ ರೈತ ಹೊರ ಬರುವ ದಾರಿ ಹುಡುಕುತ್ತಲೇ ಒಂದು ದಿನ ಸತ್ತು ಹೋಗುತ್ತಾನೆ. ಆತ್ಮಹತ್ಯೆ ಸುಲಭ ಬಿಡುಗಡೆಯ ಒಂದು ಮಾರ್ಗ ಎಂದು ಅವನಿಗೆ ಅನಿಸುವುದರ ಹಿಂದೆ ಸರಕಾರಗಳ ಬೇಜವಬ್ದಾರಿ ನಿಮಗೆ ಎದ್ದು ಕಾಣುವುದಿಲ್ಲವೇ?

    ಇನ್ನೊಂದು ಉದಾಹರಣೆ ನೋಡೋಣ. ಭಾರತದಲ್ಲಿರುವ ಖಾಸಗಿ, ಸರಕಾರೀ ಸ್ವಾಮ್ಯದ ಟೆಲಿಫೋನ್ ಕಂಪೆನಿಗಳು ತಮ್ಮ ಸೇವಾದರವನ್ನು ಹೆಚ್ಚಿಸಬೇಕಾದರೆ ಕನಿಷ್ಠ 24 ಗಂಟೆಗಳ ಮೊದಲಾದರೂ ಸೇವೆಯನ್ನು ಪಡೆಯುವರಿಗೆ ಇದರ ವಿವರವನ್ನು ತಿಳಿಸಬೇಕು. ದರ ಹೆಚ್ಚಿಸುವ ಮೊದಲು ಅದನ್ನು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಮುಂದಿಟ್ಟು ಅದರ ಒಪ್ಪಿಗೆ ಪಡೆಯಬೇಕು.

    ರೈತನಿಗೆ ಬೀಜ, ಕೀಟನಾಶಕ ಒದಗಿಸುವ ಹಲವು ದೇಶೀ ಮತ್ತು ವಿದೇಶೀ ಕಂಪೆನಿಗಳು ಭಾರತದಲ್ಲಿವೆ. ಇವುಗಳು ಋತುಮಾನ, ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮೂಗಿನ ನೇರಕ್ಕೆ ಬೀಜದ ಬೆಲೆಯನ್ನು ನಿರ್ಧರಿಸುತ್ತವೆ. ಆ ಬೆಲೆ ಕೊಟ್ಟು ರೈತ ಬೀಜ, ಕೀಟನಾಶಕಗಳನ್ನು ಖರೀದಿಸಬೇಕು. ಈ ಸಂಸ್ಥೆಗಳು ತಮ್ಮ ಉತ್ಪನ್ನಗಳಿಗೆ ಬೆಲೆ ನಿರ್ಧರಿಸುವುದು ಯಾವ ಆಧಾರದ ಮೇಲೆ ಎಂದು ಯಾರೂ ಕೇಳುವುದಿಲ್ಲ. ಈ ಬೆಲೆಗಳನ್ನು ನಿಯಂತ್ರಿಸುವುದಕ್ಕೂ ಟ್ರಾಯ್ ನಂಥ ಒಂದು ಸಂಸ್ಥೆ ಬೇಡವೇ?

    ರೈತರ ಹೆಸರಿನಲ್ಲಿಯೇ ಗೆದ್ದು ಬರುವ ನಮ್ಮ ರಾಜಕಾರಣಿಗಳಿಗೆ ಇದೆಲ್ಲಾ ಅರ್ಥವಾಗುವಂತೆಯೇ ಕಾಣುತ್ತಿಲ್ಲ. ರೈತನೂ ಅಷ್ಟೇ ಉದ್ದಿಮೆಗಳಂತೆ ತನ್ನ ಸಮಸ್ಯೆಯನ್ನು ಪರಿಹರಿಸಲು ಸರಕಾರ ಬರಲೆಂದು ಕಾಯುವುದಿಲ್ಲ. ಅವನದ್ದೇ ಪರಿಹಾರದ ಹಾದಿ ಹುಡುಕಿಕೊಂಡಿದ್ದಾನೆ. ಅದನ್ನು ಎಲ್ಲರೂ ‘ಆತ್ಮಹತ್ಯೆ’ ಎಂದು ಕರೆಯುತ್ತಿದ್ದಾರೆ. ಆದರೆ ಈಗಲಾದರೂ ನಿಮಗನಿಸುತ್ತಿಲ್ಲವೇ, ಇದು ಆತ್ಮಹತ್ಯೆಯಲ್ಲ, ಈ ವ್ಯವಸ್ಥೆ ಮಾಡುತ್ತಿರುವ ಕೊಲೆ ಎಂದು?

    ರೈತರ ಸ್ವಾತಂತ್ರ್ಯ ಕಿತ್ತುಕೊಂಡಿದ್ದು ಯಾರು?

    ‘ಇಂದು ನಾವು ಸ್ವಾತಂತ್ರರು ಎಂಬ ನಂಬಿಕೆ ರೈತರಿಗಿಲ್ಲ. ನಿರಾಶರಾಗಿರುವ ಅವರ ಸುಸ್ಥಿರ ಬದುಕಿನತ್ತ ಸರಕಾರ ಗಮನಹರಿಸದಿರುವುದು ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಲು ಕಾರಣವಾಗಿದೆ’ ಎನ್ನುತ್ತಾರೆ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ. ಅವರ ಪ್ರಕಾರ, ‘ಹಿಂದೆ ಸ್ವತಂತ್ರವಾಗಿ ಬೆಳೆ ಬೆಳೆಯುತ್ತಿದ್ದ ರೈತ ಇಂದು ಎಲ್ಲದಕ್ಕೂ ಪರರನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಕಾರ್ಖಾನೆ ಗಳನ್ನು, ನೀರಿಗಾಗಿ ಮಳೆಯ ನ್ನು ಆಶ್ರಯಿಸಬೇಕಾಗಿದೆ. ಕೊನೆಗೆ ತಾನು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಹ ಮತ್ತೊಬ್ಬರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಇದು ಅಭಿವೃದ್ಧಿ, ಸ್ವಾತಂತ್ರ್ಯ ಎಂಬಂತೆ ಮೇಲ್ನೋಟಕ್ಕೆ ಕಂಡರೂ ಎಲ್ಲ ಕಾರ್ಯಗಳಿಗೂ ಒಬ್ಬರನ್ನೊಬ್ಬರು ಆಶ್ರಯಿಸಬೇಕಾದ ಪರಿಸ್ಥಿತಿಯನ್ನು ನಮ್ಮ ವ್ಯವಸ್ಥೆ ತಂದೊಡ್ಡಿದೆ. ಪರವಾಲಂಬನೆ ರೈತರ ಆತ್ಮವಿಶ್ವಾಸವನ್ನು ಕಿತ್ತುಕೊಳ್ಳುತ್ತಿದ್ದು, ಅವರು ನೇಣಿಗೆ ಕೊರಳೊಡ್ಡುವಂತಾಗಿದೆ’.

    ನಾಗೇಶ್ ಹೆಗಡೆಯವರ ಈ ವಿಶ್ಲೇಷಣೆಯನ್ನೇ ಪಿ. ಸಾಯಿನಾಥ್ ಇನ್ನಷ್ಟು ವಿವರಿಸಿ, ಹೀಗೆ ಹೇಳುತ್ತಾರೆ. ‘ಸುಮಾರು 25 ವರ್ಷಗಳ ಹಿಂದೆ ಬಿತ್ತನೆ ಬೀಜದ ಉತ್ಪಾದನೆ ಸಂಪೂರ್ಣವಾಗಿ ರೈತರ ಕೈಯಲ್ಲಿತ್ತು. ಅವು ಸ್ವಾಭಾವಿಕ ಬೀಜಗಳಾಗಿದ್ದ ರಿಂದ ಸಹಜವಾಗಿಯೇ ಶಕ್ತಿಯುತವಾಗಿದ್ದವು. ಬೀಜಗಳ ಮರು ಉತ್ಪಾದನೆ ಹಾಗೂ ರೈತರ ನಡುವೆ ಬೀಜಗಳ ವಿನಿಮಯ ಕೂಡ ನಡೆಯುತ್ತಿತ್ತು. ಆದರೆ ಇಂದು ವಾಣಿಜ್ಯ ಬೆಳೆಗಳ ಬಿತ್ತನೆ ಮಾತ್ರವಲ್ಲದೆ ಆಹಾರ ಬೆಳೆಗಳ ಬಿತ್ತನೆ ಬೀಜಗಳೂ ಸಹ ಕಾರ್ಪೊರೇಟ್ ಕಂಪೆನಿಗಳ ಹಿಡಿತದಲ್ಲಿವೆ. ಬೀಜ ಮಾರುಕಟ್ಟೆಯ ಮೇಲೆ ತಮ್ಮ ಹಿಡಿತವನ್ನು ಸ್ಥಾಪಿಸಲಿಕ್ಕಾಗಿ ಈ ಲೂಟಿಕೋರ ಕಂಪೆನಿಗಳು ಬೀಜಗಳ ಮರು ಉತ್ಪಾದನೆಯ ಸಾಮರ್ಥ್ಯವನ್ನೇ ನಾಶಪಡಿಸಿ ದ್ದಾರೆ. ಹಾಗಾಗಿ ಪ್ರತಿ ಬಾರಿ ಬಿತ್ತನೆ ಮಾಡಬೇಕಾದಾಗಲೂ ರೈತರು ಅನಿವಾರ್ಯವಾಗಿ ಈ ಬಹುರಾಷ್ಟ್ರೀಯ ಕಂಪೆನಿಗಳ ಬೀಜಗಳನ್ನೇ ಅವಲಂಬಿಸಬೇಕಾದ ದುಃಸ್ಥಿತಿ ಉಂಟಾಗಿದೆ.

    ಈ ಪರಿಸ್ಥಿತಿ ಹೇಗಾಗಿದೆಯೆಂದರೆ ಕೇವಲ 3 ಅಥವಾ 4 ಕಂಪೆನಿಗಳು ಇಡೀ ಜಗತ್ತಿನ ಬೀಜ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿವೆ. ಉದಾ: ಮಾನ್ಸೆಂಟೋ ಕಂಪೆನಿಯೊಂದೇ ಜಗತ್ತಿನ ಒಟ್ಟು ಬೀಜ ಮಾರುಕಟ್ಟೆಯ ಶೇ. 30ರಷ್ಟು ಭಾಗವನ್ನು ನಿಯಂತ್ರಿಸುತ್ತಿದೆ. ಹಾಗೆಯೆ ಸ್ವಾಭಾವಿಕವಾದ ಕೀಟನಾಶಕ ವಿಧಾನವನ್ನು ನಾಶಗೊಳಿಸಿ ಕೆಮಿಕಲ್ ಕಂಪೆನಿಗಳ ಕೀಟನಾಶಕಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಸಲಾಗಿದೆ. ಕೊಟ್ಟಿಗೆ ಗೊಬ್ಬರ ಬಳಕೆಯಂತಹ ಸರಳ ಹಾಗೂ ಶಕ್ತಿಯುತ ವಿಧಾನಗಳ ಸ್ಥಾನವನ್ನು ಕೆಮಿಕಲ್ ಫರ್ಟಿಲೈಸರ್ಗಳು ಆಕ್ರಮಿಸಿವೆ. ಈ ಫರ್ಟಿಲೈಸರ್ಗಳ ತಯಾರಕರು ಯಾರು? ಭಾರೀ ಬಂಡವಾಳ ಹೂಡಿರುವ ಕಂಪೆನಿಗಳು. ನೀರು, ವಿದ್ಯುತ್ ಎಲ್ಲವೂ ರೈತರಿಗೆ ದುಬಾರಿಯಾಗಿದೆ. ಹಾಗೆಯೇ ಕೃಷಿ ಮಾರುಕಟ್ಟೆಯ ಮೇಲೆ ರೈತರಿಗೆ ಯಾವುದೇ ಹಿಡಿತವಿಲ್ಲ. ಬದಲಿಗೆ ಕಾರ್ಪೊರೇಟ್ ಕಂಪೆನಿಗಳು ಕ್ರಮೇಣ ತಮ್ಮ ಹಿಡಿತ ಸಾಧಿಸುತ್ತಿವೆ. ಈ ಎಲ್ಲಾ ಕಾರ್ಪೊರೇಟ್ ಕಂಪೆನಿಗಳ ಲಾಭ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಅವರ ಕಂಪೆನಿಗಳ ಶೇರುಗಳ ವೌಲ್ಯ ದ್ವಿಗುಣಗೊಳ್ಳುತ್ತಾ ಸಾಗುತ್ತಿದೆ. ಆದರೆ ಅದೇ ಸಂದರ್ಭದಲ್ಲಿ ಇಡೀ ರೈತಾಪಿಯ ಬದುಕು ಘೋರ ಸಂಕಷ್ಟಕ್ಕೆ ಸಿಲುಕಿದೆ.

    ರೈತರ ಆತ್ಮಹತ್ಯೆಗೆ ಟಾಪ್-5 ಕಾರಣಗಳು

    • ಬೆಲೆ ಮೇಲೆ ನಿಯಂತ್ರಣವೇ ಇಲ್ಲದಿರುವುದು; ಯಾವ ಬೆಳೆಗೆ ಯಾವಾಗ ಎಷ್ಟು ಬೆಲೆ ಇರುತ್ತದೆ ಎಂಬುದು ರೈತರಿಗೇಕೆ, ದೇಶದ ಆರ್ಥಿಕ ತಜ್ಞರಿಗೂ ಅರ್ಥವಾಗುತ್ತಿಲ್ಲ. ಸಾಲ ಮಾಡಿ ಬೆಳೆದ ಬೆಳೆಗೆ ಬೆಲೆ ಸಿಗದಿದ್ದಾಗ ಆತ್ಯಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಸರಕಾರಗಳು ಸರಿಯಾಗಿ ಬೆಂಬಲ ಬೆಲೆಯನ್ನೂ ನೀಡುತ್ತಿಲ್ಲ. ಜಾಗತೀಕರಣದಿಂದ ಮಾರುಕಟ್ಟೆ ವಿಕೃತಿಗಳು ಹೆಚ್ಚುತ್ತಿದ್ದು, ಅಂದರೆ, ಅನಾವಶ್ಯಕ ಆಮದು, ರಫ್ತಿಗೆ ನಿರ್ಬಂಧ ಇತ್ಯಾದಿ, ಇದು ಮಾರುಕಟ್ಟೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದ್ದು, ಪರೋಕ್ಷವಾಗಿ ರೈತರನ್ನು ಬಲಿ ಪಡೆಯುತ್ತಿದೆ. ಈಗ ಖಾಸಗಿ ವ್ಯಕ್ತಿಗಳಿಗೆ, ಕಾರ್ಪೊರೇಟ್ ಕಂಪನಿಗಳಿಗೆ ನಿಯಂತ್ರಣವಿಲ್ಲದೆ ಮಾರುಕಟ್ಟೆಗೆ ಲಗ್ಗೆ ಹಾಕಲು ಅವಕಾಶ ಮಾಡಿಕೊಟ್ಟಿರುವುದು ಹೊಸ ಹೊಸ ಶೋಷಣೆಗೆ ಅವಕಾಶ ಮಾಡಿಕೊಡುವ ಸಾಧ್ಯತೆಗಳಿವೆ.
    • ಸಾಲದ ಕುಣಿಕೆ; ತಾವು ರೈತರ ಪರ ಎಂದು ಕೊಚ್ಚಿಕೊಳ್ಳುವ ಸರಕಾರಗಳು ಅಗ್ಗದ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡುವ ಯೋಜನೆಗಳನ್ನು ಪ್ರಕಟಿಸಿರುವುದೇನೋ ನಿಜ. ಆದರೆ ಈ ಸಾಲ ಪಡೆಯಲು ಬೇಕಾದ ದಾಖಲೆಗಳನ್ನು ನಮ್ಮ ರೈತರು ಹೊಂದಿಲ್ಲ.  ಇದರ ಬಗ್ಗೆ ಜಾಗೃತಿ ಇರದ ಅವರು, ರಗಳೆಯೇ ಬೇಡವೆಂದು ರೈತರು, ಅದರಲ್ಲೂ ಸಣ್ಣ ಮತ್ತು ಅತಿಸಣ್ಣ ರೈತರು ಸ್ಥಳೀಯವಾಗಿ ಬಡ್ಡಿಗೆ ಸಾಲ ನೀಡುವವರ ಹತ್ತಿರ ಸಾಲ ಪಡೆಯುತ್ತಾರೆ. ಸಾಲದ ಸುಳಿಯಲ್ಲಿ ಸಿಲುಕುತ್ತಾರೆ. ಇದನ್ನು ನ್ಯಾಷನಲ್ ಸ್ಯಾಂಪಲ್ ಸರ್ವೇ ಎತ್ತಿ ತೋರಿಸಿದೆ. ಸರಕಾರಗಳ ಬಳಿ ಸರಳವಾಗಿ ಮತ್ತು ನೇರವಾಗಿ ಎಲ್ಲ ರೈತರಿಗೂ ಸಾಂಸ್ಥಿಕ ಸಾಲವನ್ನು ದೊರಕಿಸುವ ಯೋಜನೆಗಳೇ ಇಲ್ಲ.
    • ಏರುತ್ತಿದೆ ಹೂಡಿಕೆ ವೆಚ್ಚ: ಕೃಷಿಯಲ್ಲಿನ ಆದಾಯದ ಬಗ್ಗೆ ಖಚಿತತೆ ಇಲ್ಲದಿದ್ದರೂ, ಬಂಡವಾಳ ಹೂಡಿಕೆ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ವ್ಯಾಪಾರಿಗಳ ಹಿಡಿತದಲ್ಲಿ ಸಿಲುಕಿರುವ ರಾಸಾಯನಿಕ ಗೊಬ್ಬರ, ಕೀಟ ನಾಶಕ, ಬಿತ್ತನೆ ಬೀಜ, ಇತ್ಯಾದಿಗಳು ರೈತರ ಜೇಬನ್ನು ಖಾಲಿ ಮಾಡುತ್ತಿವೆ. ಇನ್ನೊಂದೆಡೆ ಕೃಷಿ ಕಾರ್ಮಿಕರ ಕೊರತೆ, ವಿದ್ಯುತ್ ಮತ್ತಿತರ ಮೂಲ ಸೌಕರ್ಯಗಳ ಖಚರ್ು ಹೆಚ್ಚುತ್ತಿರುವುದು ರೈತರನ್ನು ಹಣ್ಣುಗಾಯಿ-ನೀರುಗಾಯಿ ಮಾಡಿವೆ.
    • ಸ್ಪಷ್ಟ, ನಿರ್ದಿಷ್ಟ ಕೃಷಿ ನೀತಿ ಇಲ್ಲದಿರುವುದು: ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಪ್ರತಿ ವರ್ಷವೂ ಪರಿಷ್ಕೃತ ನೀತಿ ಪ್ರಕಟಿಸಿ, ವಿದೇಶಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ಹಪಹಪಿಸುವ ನಮ್ಮ ಸರಕಾರಗಳು ಕೃಷಿಗೆ ಸಂಬಂಧಿಸಿದಂತೆ ಸ್ಪಷ್ಟ ನೀತಿ ರೂಪಿಸುತ್ತಿಲ್ಲ. ಯಾವ ಪ್ರದೇಶದಲ್ಲಿ, ಯಾವ ಬೆಳೆ ಬೆಳೆಯಬೇಕು, ನೀರಾವರಿ ಸೌಲಭ್ಯವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕೆಂಬ ಬಗ್ಗೆ ನೀತಿಯೂ ಇಲ್ಲ, ನಿಯಮವೂ ಇಲ್ಲ. ಸಕ್ಕರೆಯ ಮಾರುಕಟ್ಟೆ ಕುಸಿದು ಬಿದ್ದಿದ್ದರೂ, ಕಬ್ಬು ಬೆಳೆಗಾರರ ಕೂಳೆ ನೆಡುತ್ತಲೇ ಇರುತ್ತಾನೆ, ಆತನಿಗೆ ಸರಿಯಾದ ಮಾಹಿತಿ ನೀಡುವ ಜವಾಬ್ದಾರಿ ತನ್ನದೆಂದು ಸರಕಾರ ಎಂದು ಭಾವಿಸಿಯೇ ಇಲ್ಲ!
    • ಆತ್ಮವಿಶ್ವಾಸದ ಕೊರತೆ: ರಾಜರು ಬರಲಿ, ರಾಜರು ಹೋಗಲಿ, ಯೋಗಿಯಾಗಿ, ತ್ಯಾಗಿಯಾಗಿ ಉಳುಮೆ ಮಾಡುತ್ತಿದ್ದ ಅನ್ನದಾತ ಇಂದು ಏಕಾಂಗಿಯಾಗಿದ್ದಾನೆ. ಆತನ ಸುತ್ತಲಿನ ಮಾರುಕಟ್ಟೆ ವ್ಯವಸ್ಥೆ, ಲೋಭ ಸಂಸ್ಕೃತಿ, ಆತನನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಸಾವೊಂದೇ ತನಗೆ ಬಿಡುಗಡೆಯ ದಾರಿ ಎನ್ನಿಸುವಷ್ಟರ ಮಟ್ಟಿಗೆ ಆತನನ್ನು ಕುಗ್ಗಿಸುತ್ತಿರುವ ಸಾಮಾಜ, ಅನ್ನದ ಋಣವನ್ನೇ ಮರೆತಿದೆ. ಆತ್ಮ ವಿಶ್ವಾಸ ತುಂಬಬೇಕಿದ್ದ ಹೋರಾಟಗಳು, ಚಟುವಟಿಕೆಗಳು, ಮಾಧ್ಯಮಗಳ ಮುಂದಷ್ಟೇ ನಡೆಯುತ್ತಿವೆ.

    ಟಾಪ್- 10 ಪರಿಹಾರಗಳು

    • ಕೂಡಲೇ ಎಲ್ಲ ಬೆಳೆಗಳಿಗೂ ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿ ಮಾಡಿ, ಜಾರಿಗೆ ತರಬೇಕು. ರೈತನಿಗೆ ನಿರ್ದಿಷ್ಟ ಆದಾಯ ದೊರೆಯುವಂತೆ ವ್ಯವಸ್ಥೆ ಮಾಡಬೇಕು. ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು.
    • ಬಡ್ಡಿ ವ್ಯಾಪಾರಿ ನಿಯಂತ್ರಣ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಸಾಂಸ್ಥಿಕವಲ್ಲದ ಸಾಲದ ಬಡ್ಡಿದರವು ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ಬಡ್ಡಿದರಕ್ಕಿಂತ ಹೆಚ್ಚಾಗಿರದಂತೆ ನೋಡಿಕೊಳ್ಳಬೇಕು. ಬಡ್ಡಿಯನ್ನೂ ಸೇರಿದಂತೆ ಸಾಲಗಾರನ ಒಟ್ಟಾರೆ ಸಾಲ ಯಾವ ಕಾರಣಕ್ಕೂ ಮೂಲ ಸಾಲದ ಎರಡುಪಟ್ಟು ಆಗದಂತೆ ನೋಡಿಕೊಳ್ಳಬೇಕು.
    • ಬೆಳೆ ಬೆಳೆಯಲೆಂದು ಮಾಡಿದ ಸಾಲ ತೀರಿಸದಿದ್ದರೆ, ಯಾವುದೇ ಕಾರಣಕ್ಕೂ ಮನೆ ಮತ್ತು ಜಮೀನನ್ನು ಜಫ್ತಿ ಮಾಡಬಾರದು.
    • ಸಹಕಾರಿತತ್ವದ ಆಧಾರದ ಮೇಲೆ ನೀರು, ಟ್ಯಾಕ್ಟರ್, ಟಿಲ್ಲರ್ ಇತ್ಯಾದಿ ಕೃಷಿ ಉಪಯೋಗಿ ಯಂತ್ರೋಪಕರಣಗಳನ್ನು ಮತ್ತು ಭೂಮಿಯನ್ನು ಹಂಚಿಕೊಂಡು ಗುಂಪು ಕೃಷಿ ಮಾಡುವುದನ್ನು ಉತ್ತೇಜಿಸಬೇಕು. ಇದಕ್ಕಾಗಿ ಸರಕಾರವೇ ಹೊಸ ಕಾರ್ಯಕ್ರಮವನ್ನು ರೂಪಿಸಬೇಕು.
    • ಕೃಷಿಯ ಮೇಲೆ ಕಾರ್ಪೊರೇಟ್ ಶಕ್ತಿಗಳು ಹಿಡಿತ ಸಾಧಿಸದಂತೆ ನೋಡಿಕೊಳ್ಳಬೇಕು. ರೈತರ ಜಮೀನನ್ನು ಕಸಿದುಕೊಳ್ಳಬಾರದು ಮತ್ತು ಕಾಂಟ್ರಾಕ್ಟ್ ಫಾರ್ಮಿಂಗ್, ಕಾರ್ಪೊರೇಟ್ ಫಾರ್ಮಿಂಗ್ ನೀತಿಗಳನ್ನು ಕೈಬಿಡಬೇಕು. ನೀತಿ ಆಯೋಗ ಮಾಡಿರುವ ಶಿಫಾರಸುಗಳನ್ನು ಜಾರಿಗೆ ತರಬಾರದು.
    • ಗ್ರಾಮಮಟ್ಟದಲ್ಲಿ ಕೃಷಿಗೆ ಪೂರಕವಾದ ವೃತ್ತಿಗಳಿಗೆ ಉತ್ತೇಜನ ನೀಡುವ ಮೂಲಕ ಕೃಷಿಕರಿಗೆ ಪರ್ಯಾಯ ದುಡಿಮೆಗೆ ಅವಕಾಶ ಕಲ್ಪಿಸಬೇಕು.
    • ಸರಕಾರ ಒಂದು ಸಮಗ್ರ ಕೃಷಿ ನೀತಿಯನ್ನು ಜಾರಿಗೆ ತರಬೇಕು. ರೈತರ ಒಟ್ಟಾರೆ ಕೃಷಿ ಸಾಲದ ಶೇ. 90ರಷ್ಟು ಭಾಗವಾದರೂ ಸಾಂಸ್ಥಿಕ ಮೂಲಗಳಿಂದ ಪಡೆಯುವಂತಾಗಲು ಸೂಕ್ತ ಕ್ರಮಗಳನ್ನು ತೆಗದುಕೊಳ್ಳಬೇಕು.
    • ಗ್ರಾಮೀಣ ಭಾಗಕ್ಕೆ ಅನಾವಶ್ಯಕ ಸೌಕರ್ಯಗಳನ್ನು ಒದಗಿಸುವುದಕ್ಕಿಂತ ಹೆಚ್ಚಾಗಿ, ಕೃಷಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸುವುದರತ್ತ ಗಮನ ನೀಡಬೇಕು. ಉದಾಹರಣೆಗೆ ವಿದ್ಯುತ್. ರೈತರಿಗೆ (ಬೆಂಗಳೂರಿಗರಿಗಲ್ಲ!) ಅಗತ್ಯವಾಗಿರುವಾಗೆಲ್ಲಾ ವಿದ್ಯುತ್ ದೊರೆಯುವಂತೆ ನೋಡಿಕೊಳ್ಳಬೇಕು.
    • ತಂತ್ರಜ್ಞಾನ, ಹೊಸ ಕೃಷಿ ವಿಧಾನಗಳ ಬಳಕೆಗೆ ಅತಿ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಜತೆಗೆ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ, ಮಾರುಕಟ್ಟೆ ಸಿದ್ಧಪಡಿಸುವ ಸಣ್ಣ ಸಣ್ಣ ಕೈಗಾರಿಕೆಗಳನ್ನು ಗ್ರಾಮೀಣ ಭಾಗದಲ್ಲಿಯೇ ತೆರೆಯಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ರೈತರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಲು ಅವಕಾಶ ಮಾಡಿಕೊಡುವ ಹೈಟೆಕ್ ಮಾರುಕಟ್ಟೆ ವ್ಯವಸ್ಥೆಯನ್ನು ರಾಜ್ಯದ ಎಲ್ಲ ಭಾಗದಲ್ಲಿಯೂ ರೂಪಿಸಬೇಕು.
    • ರೈತರಿಗೆ ಕಾಲಕಾಲಕ್ಕೆ ಅಗತ್ಯ ಮಾಹಿತಿಯನ್ನು ಒದಗಿಸುವುದರ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಮಾಡಬೇಕು. ರೈತರಾಗಿ ದುಡಿಯುವುದು ಹೆಮ್ಮೆಯ ಉದ್ಯೋಗ ಎಂಬುದನ್ನು ಅವರಿಗೆ ಮನದಟ್ಟು ಮಾಡಿಸಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಮಾತೆತ್ತಿದರೆ ಐಟಿ-ಬಿಟಿ ಎನ್ನುವುದನ್ನು ನಿಲ್ಲಿಸಬೇಕು!

    #No school, No fees!ಫೀಸ್‌‌ಗಾಗಿ ಪುಟ್ಟ ಮಕ್ಕಳಿಗೂ ಆನ್ ಲೈನ್ ಕ್ಲಾಸಸ್ ಬೇಡ


    ಇದು ಕೊರೊನಾ ಕಾಲದ ಆಕರ್ಷಕ ಘೋಷಣೆ. ದೇಶದ ಖಾಸಗಿ ಶಾಲಾ- ಕಾಲೇಜುಗಳ ದುಬಾರಿ ಶುಲ್ಕ ನೀತಿಯಿಂದ ಬಸವಳಿದ ಪೋಷಕರಿಗೆ ಈ ಘೋಷಣೆಯು ಒಂಥರಾ ಫೀಲ್ ಗುಡ್ ಫ್ಯಾಕ್ಟರ್. ಸರಕಾರಿ ಶಿಕ್ಷಣ ಸಂಸ್ಥೆಗಳು ಪೋಷಕರ ವಿಶ್ವಾಸ ಗಳಿಸುವಲ್ಲಿ ಸೋತಿರುವಾಗ ಖಾಸಗಿ ಸಂಸ್ಥೆಗಳು ಸುಗ್ಗಿ ಮಾಡುತ್ತಿವೆ. ಇದು ಸಹಜ ಬೆಳವಣಿಗೆ. ಆದರೆ ಕೊರೊನಾ ಈಗ ವಿಚಿತ್ರವಾದ ಸಂದಿಗ್ಧವನ್ನು ಸೃಷ್ಟಿಸಿದೆ.

    ಒಂದೆಡೆ ಎಷ್ಟೆಲ್ಲ ಹೊಟ್ಟೆಬಟ್ಟೆ ಕಟ್ಟಿಟ್ಟು ಮಕ್ಕಳ ಫೀಸ್ ಕಟ್ಟುವ ತಂದೆತಾಯಿಗೆ ಸದ್ಯ ಅತ್ತ ದುಡ್ಡೂ ಉಳಿಯುತ್ತಿಲ್ಲ, ಇತ್ತ ಮುದ್ದಿನ ಮಕ್ಕಳ ಶಾಲಾ ಓದೂ ಸಾಧ್ಯವಾಗುತ್ತಿಲ್ಲ ಎಂದರೆ ಹೇಗಾಗಬೇಡ? ನಗರಗಳ ಅನೇಕ ಪೋಷಕರು ತಮ್ಮ ಮಕ್ಕಳ ಭವಿಷ್ಯ ನೆನೆದು ನಿದ್ದೆಗೆಟ್ಟಿದ್ದಾರೆ. ಎಲ್ಲವೂ ಶಾಲೆಯ ಪಾಠ ಆಧರಿಸಿಯೇ ನಿರ್ಧಾರಗೊಳ್ಳುತ್ತದೆ ಎಂದು ಭ್ರಮಿಸುವವರಿಗೆ ಇಂದಿನ ಸ್ಥಿತಿಯು ಮನೋಭಿತ್ತಿಯಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಬಿರುಗಾಳಿಯೇ ಈಗ ತಮ್ಮ ಈವರೆಗಿನ ನೆಚ್ಚಿನ ಶಾಲೆಗಳತ್ತ ಇದ್ದಕ್ಕಿದ್ದಂತೆ ಆಕ್ರೋಶದ ಅಲೆ ಸೃಷ್ಟಿಸಲು ಕಾರಣವಾಗಿದೆ. ಪೋಷಕರು-ಖಾಸಗಿ ಶಾಲೆಗಳದ್ದು ಹೊಂದಾಣಿಕೆಯಾಗದ ಅತ್ತೆ-ಸೊಸೆ ಸಂಬಂಧ. ಆಗಾಗ ಕಿತ್ತಾಟ, ಅನಿವಾರ್ಯ ಹೊಂದಾಣಿಕೆ.


    ಈಗ ತರಗತಿ ನಡೆಯದ ಸಂಕಷ್ಟ ಘಳಿಗೆ ಸುಖಾಸುಮ್ಮನೆ ಶುಲ್ಕ ಭರಿಸಬೇಕಾದ ಒತ್ತಡಕ್ಕೆ ಬಳಲಿ ಸಿಡಿದು ಹೋಗುತ್ತಿದ್ದಾರೆ ಪೋಷಕರು. ಆದರೆ ಇದೇ ವೇಳೆ ಶಾಲೆಗಳ ಆಡಳಿತ ಮಂಡಳಿಗಳು ಕೂಡ ಸುಗ್ಗಿ ಕಾಲದ ಹಿಗ್ಗು ಕರಗಿ ಹೋಗಿರುವುದರಿಂದ ಕಂಗೆಟ್ಟಿವೆ. ಜತೆಗೆ ಶುಲ್ಕ ಕಟ್ಟದೇ ಮೊಂಡುಬಿದ್ದು ಪೋ ಷಕರ ವಿರುದ್ಧ ದಿನಕ್ಕೊಂದು ತಂತ್ರ ಪ್ರಯೋಗಿಸುತ್ತಿವೆ.
    ಇದೊಂಥರಾ ಖಾಜಿ ನ್ಯಾಯದ ಮಟ್ಟಕ್ಕೆ ಬಂದು ನಿಂತಿದೆ. “ಕನ್ನಡಪ್ರೆಸ್.ಕಾಂ” ಇಲ್ಲಿ ಇಬ್ಬರ ಅಭಿಪ್ರಾಯ ಕೇಳಿ ಮೂರನೇ ತಜ್ಞ ಸಲಹೆಯ ದಾರಿ ತೆರೆದಿಟ್ಟಿದೆ.

    ನಾವ್ ಕೊಡೋದಿಲ್ಲ

    ಮೊದಲಿಗೆ “ನೋ ಫೀಸ್” ಎಂದು ಹಟ ಹಿಡಿದ ಪೋಷಕರನ್ನು ಮಾತಾಡಿಸಿದಾಗ ಹೊರಬಿದ್ದ ಅಭಿಪ್ರಾಯವನ್ನು ಅವರದ್ದೇ ಮಾತುಗಳಲ್ಲಿ ಕೇಳಿ:


    “ಕೊರೊನಾದಿಂದ ನನ್ನ ಕೆಲಸ ಹೋಗಿದೆ. ಈಗ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಇಷ್ಟರ ಮಧ್ಯ ಕೆಲಸ ಇದ್ದಾಗ ಕೈಬಾಯಿ ಕಟ್ಟಿ ಮಗನ ಓದಿಗೆ ಫೀಸು ಹೊಂದಿಸುತ್ತಿದ್ದೆ. ಒಂದನೆ ತರಗತಿಯಿಂದ ಒಂಬತ್ತನೆ ಕ್ಲಾಸಿಗೆ ಬಂದಿರುವ ಮಗನಿಗೆ ಪ್ರತಿವರ್ಷ ಹೆಚ್ಚಿಸುವ ಶುಲ್ಕವನ್ನು ಪ್ರಶ್ನಿಸದೇ ಭರಿಸಿದ್ದೇನೆ. ಈಗ ನಮಗೆ ಕಷ್ಟ ಕಾಲ. ಅತ್ತ ಕೆಲಸ ಇಲ್ಲ, ಇತ್ತ ಮಗನ ಶಾಲೆ ಇಲ್ಲ. ದಿನಸಿ ದರಗಳೂ ಏರಿವೆ. ಸಾಲಕೊಡುವವರೂ ಇಲ್ಲ. ಇಂತಹ ಸಮಯ ನಮ್ಮ ಕಷ್ಟಕ್ಕೆ ಶಾಲೆಗಳು ಸ್ಪಂದಿಸಬೇಕು. ಕ್ಲಾಸ್ ನಡೆಯದ ಈ ಸಮಯ ಶುಲ್ಕ ಮನ್ನಾ ಮಾಡಬೇಕು. ಇದರಲ್ಲಿ ನ್ಯಾಯ ಇದೆ. ಯಾಕೆಂದರೆ ಬಹುತೇಕ ಶಿಕ್ಷಣ ಸಂಸ್ಥೆಗಳು ಇದುವರೆಗೆ ಸಾಕಷ್ಟು ದುಡ್ಡು ಮಾಡಿವೆ. ಆಸ್ತಿ ಖರೀದಿಸಿವೆ. ಸಾಕಷ್ಟು ಹಣ ಕೂಡಿಟ್ಟಿವೆ. ಈಗ ಒಂದೆರಡು ತಿಂಗಳು ಫೀಸ್ ಸ್ಟಾಪ್ ಮಾಡಿದ್ರೆ ಅವರಿಗೇನೂ ಬಡತನ ಬರೋದಿಲ್ಲ. ಅಷ್ಟಕ್ಕೂ ನಾವು ಶಾಶ್ವತ ನಿಲುಗಡೆಗೆ ಕೇಳುತ್ತಿಲ್ಲ. ಕ್ಲಾಸ್ ಶುರುವಾದರೆ, ಮತ್ತೇ ಕಷ್ಟವೊ ಸುಖವೊ ಹೇಗಾದರೂ ಹೊಂದಿಸಿ ಕಟ್ಟುತ್ತೇವೆ. ಅಲ್ಲಿವರೆಗೆ ಶುಲ್ಕ ವಸೂಲಿ ಮಾಡ್ಬಾರ್ದು. ನಾವು ಕಟ್ಟೋದಿಲ್ಲ” ಎನ್ನುತ್ತಾರೆ ಬೆಂಗಳೂರಿನ ಅನೇಕ ಬಡಾವಣೆಗಳ ನಿವಾಸಿಗರು.

    ನಾವ್ ಬಿಡೋದಿಲ್ಲ

    ಇದಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳನ್ನು ಮಾತಿಗೆಳೆದರೆ ಅವರಿಂದ ಬರುವ ಗೋಳಿನ ಕಥೆಯೂ ಕರುಣಾಜನಕ.


    “ನಾವು ಶೋಷಕರಲ್ಲ. ಸುಲಿಗೆಕೋರರು ಖಂಡಿತ ಅಲ್ಲ. ಒತ್ತಡದ ಕಾರಣ ಪೋಷಕರು ಈಗ ಆ ರೀತಿ ಮಾತಾಡುತ್ತಿದ್ದಾರೆ. ಇದೇ ಪೋಷಕರು ತಮ್ಮ ಮಕ್ಕಳಿಗೆ ಸೀಟು ಕೇಳಲು ಬಂದಾಗ ತೋರಿದ ವಿನಯ, ನೀಡಿದ ಭರವಸೆಗಳನ್ನು ಮರೆತಿದ್ದಾರೆ.

    ಒಂದು ಕ್ಷಣ ತಾಳ್ಮೆಯಿಂದ ಯೋಚಿಸಿ ನೋಡಿ. ನಾವು ಶಾಲಾ ಕಟ್ಟಡ ಮಾರಿಲ್ಲ. ಸಿಬ್ಬಂದಿಗೆ ಸಂಬಳ ಕೊಡೋದು ನಿಲ್ಲಿಸಿಲ್ಲ. ಸರಕಾರಕ್ಕೆ ಕಟ್ಟಬೇಕಾದ ರಾಯಲ್ಟಿ ಸ್ಟಾಪ್ ಆಗಿಲ್ಲ. ಖರ್ಚಿನ ಬಾಬ್ತು ಯಾವ್ದು ಕಡಿಮೆಯಾಗಿದೆ ಹೇಳಿ? ಮಿಗಿಲಾಗಿ ಇವರ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ನಡೆಸುತ್ತಿದ್ದೇವೆ. ಅದಕ್ಕೊಂದಿಷ್ಟು ಎಕ್ಸ್ಟ್ರಾ ಖರ್ಚು. ನಾಳೆ ತರಗತಿ ಶುರುವಾದ್ರೆ ಹೆಚ್ಚುವರಿ ಅವಧಿ ದುಡಿದು ಪೋರ್ಷನ್ ಮುಗಿಸಿ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ದಮಾಡ್ತೇವೆ. ಆಗ ಇವರಿಂದ ಎಕ್ಟ್ರಾ ಫೀಸ್ ಕೇಳಲ್ವಲ್ಲಾ? ಈಗ ಕಷ್ಟ ಅವರೊಬ್ಬರಿಗೇ ಇಲ್ಲವಲ್ಲ? ಎಲ್ಲರ ಸ್ಥಿತಿಯೂ ಒಂದೇ ಆಗಿದೆ. ಅವರು ಅರ್ಥ ಮಾಡಿಕೊಳ್ಳಬೇಕು” ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಬೆಂಗಳೂರಿನ ಖಾಸಗಿ ಶಾಲೆಯೊಂದರ ವ್ಯವಸ್ಥಾಪಕರು

    ಈ ಬಿಕ್ಕಟ್ಟಿಗೆ ತಜ್ಞರು ತೆರೆದಿಟ್ಟ ಸಲಹೆ:

    ೧.ಕ್ಲಾಸ್ ಶುರು ಆಗದ ಹೊರತು ಫೀಸ್ ಕಟ್ಟುವುದೇ ಇಲ್ಲ ಅನ್ನುವ ಪೋಷಕರ ವಾದ ಒಪ್ಪಿತ ಅಲ್ಲ. ಏಕೆಂದರೆ ಹಲವು ಶಿಕ್ಷಕರಿಗೆ ಫೀಸ್ ಕೊಟ್ಟರೆ ಸಂಬಳ ಸಿಗುವುದು.

    ೨.ಈಗಿನ ಸ್ಥಿತಿ ಟೆಂಪರರಿಯಾದದ್ದು. ಅದೇ ಶಾಲೆಗೆ ನಾಳೆ ಮಕ್ಕಳನ್ನು ಕಳಿಸುವುದು ಪೋಷಕರಿಗೆ ಅನಿವಾರ್ಯ. ಆದ್ದರಿಂದ ತಂಟೆ ಇರದ ಸುಗಮ ದಾರಿಗಳ ಬಗ್ಗೆ ಯೋಚಿಸಬೇಕು.

    ೩.ಒಂದಷ್ಟು ಹೊರೆ ಎನ್ನಿಸದ ಫೀಸ್ ಕಟ್ಟಿ ಶಾಲೆಗಳಿಗೂ ಉಸಿರಾಡಲು ಅನುವಾಗಬೇಕು. ಯಾವುದಕ್ಕೂ ಪರಸ್ಪರ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬೇಕು.

    ೪.ಶಾಲಾ ಮ್ಯಾನೇಜ್ಮೆಂಟ್ ಕೂಡ ಈ ವಿಷಯದಲ್ಲಿ ಹಟ ಮಾಡಬಾರದು. ಎಷ್ಟುಸಾಧ್ಯವೋ ಅಷ್ಟನ್ನು ಈ ಸಂಕಷ್ಟ ಅವಧಿ ಮಾಸಿಕ ಶುಲ್ಕ ಕಡಿಮೆ ಮಾಡಬೇಕು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ ಸಂಪನ್ಮೂಲ ಹೊಂದಾಣಿಕೆ ಮಾಡಬೇಕು.

    ೫.ವಿಶೇಷವಾಗಿ ಅನೇಕ ಪೋಷಕರಿಗೆ ವ್ಯಾನ್ ಫೀಸ್ ದೊಡ್ಡ ಹೊರೆ. ಸಾಧ್ಯವಾದರೆ ಇದನ್ನು ಕೊರೊನಾ ತಿಂಗಳಲ್ಲಿ ನಿಲುಗಡೆ ಮಾಡಬೇಕು.

    ೬.ಬಡ ಕುಟುಂಬದ ಮಕ್ಕಳಿಗೆ ವಿಶೇಷ ರಿಯಾಯಿತಿ ಯೋಜನೆ ಜಾರಿಗೊಳಿಸಬೇಕು.

    ೭. ಫೀಸಿಗಾಗಿ ಪುಟ್ಟ ಮಕ್ಕಳಿಗೂ ಆನ್ ಲೈನ್ ಕ್ಲಾಸಸ್ ಗಳು ಸರಿ ಅಲ್ಲ.

    ಧೀಮಂತ ನಟರ ನೆನಪಲ್ಲಿ ಪ್ರಾಣಿ ದತ್ತು

    ಕನ್ನಡ ಸಿನಿಮಾ ರಂಗಕ್ಕೂ ಮೈಸೂರು ಪ್ರಾಣಿ ಸಂಗ್ರಹಾಲಯಕ್ಕೂ ಅವಿನಾಭಾವ ಸಂಬಂಧವಿದೆ. ಕನ್ನಡದ ಅನೇಕ ಸಿನಿಮಾಗಳಲ್ಲಿ ಈ ಮೃಗಾಲಯದ ಪ್ರಾಣಿಗಳು ನಟಿಸಿವೆ. ನಾನಾ ಚಿತ್ರಗಳಲ್ಲಿ ದೃಶ್ಯವಾಗಿ ಮೃಗಾಲಯ ಕಂಡಿದೆ. ಜತೆಗೆ ಅನೇಕ ನಟರು ಈ ಸಂಗ್ರಹಾಲಯದ ಪ್ರಾಣಿಗಳನ್ನು ದತ್ತು ಪಡೆದು ಪೋಷಿಸುತ್ತಿದ್ದಾರೆ. ಇವರ ಸಾಲಿಗೆ ಹೊಸ ಸೇರ್ಪಡೆ ಕನ್ನಡದ ಈ ಧೀಮಂತ ಶಕ್ತಿಗಳು.


    ಮೈಸೂರು ಮೂಲದವರಾದ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್ ಮತ್ತು ಡಾ.ಅಂಬರೀಶ್ ಹೆಸರಿನಲ್ಲಿ ಸೋಮವಾರ (ಜೂ. 8) ಪ್ರಾಣಿಗಳನ್ನು ದತ್ತು ಪಡೆಯಲಾಗಿದೆ.

    ಸುಮಲತಾ ಅಂಬರೀಶ್ ಮತ್ತು ಸಚಿವ ಸೋಮಶೇಖರ್

    ವರನಟ ಡಾ. ರಾಜ್ ಕುಮಾರ್ ಅವರ ಹೆಸರಿನಲ್ಲಿ ಆನೆ ಹಾಗೂ ರೆಬೆಲ್ ಸ್ಟಾರ್ ಅಂಬರೀಷ್ ಅವರ ಹೆಸರಿನಲ್ಲಿ ಆಫ್ರಿಕನ್ ಆನೆ ಮತ್ತು ಸಾಹಸಸಿಂಹ ವಿಷ್ಣುವರ್ಧನ್ ಹೆಸರಿನಲ್ಲಿ ಒಂದು ಸಿಂಹ ದತ್ತು ಪಡೆಯಲಾಗಿದೆ.


    ರಾಜ್ ಕುಮಾರ್ ಅವರಿಗೆ ಆನೆಗಳ ಮೇಲೆ ವಿಶೇಷ ಪ್ರೀತಿ. ಗಂಧದ ಗುಡಿ ಸೇರಿದಂತೆ ಇವರ ನಟನೆಯ ಹಲವು ಚಿತ್ರಗಳಲ್ಲಿ ಆನೆ ಬಳಸಲಾಗಿದೆ. ಜತೆಗೆ ಶೂಟಿಂಗ್ ಸಮಯದಲ್ಲಿ ಆನೆಗಳ ಜತೆ ರಾಜ್ ಕುಮಾರ್ ಬಿಂದಾಸ್ ಆಗಿ ಕಾಲಕಳೆಯುತ್ತಿದ್ದರು. ಅಂಬರೀಶ್ ಅವರಿಗೂ ಕೂಡ ಆನೆಗಳ ಮೇಲೆ ಅಷ್ಟೇ ಅಕ್ಕರೆ ಹಾಗಾಗಿ ಈ ಇಬ್ಬರ ನಟರ ಹೆಸರಿನಲ್ಲಿ ಆನೆಗಳನ್ನು ದತ್ತು ಪಡೆಯಲಾಗಿದೆ.ಸಾಹಸ ಸಿಂಹ ಅವರ ಅಭಿಮಾನಿಗಳ ಅಭಿಮಾನಕ್ಕೆ ತಕ್ಕಂತೆ ವಿಷ್ಣುವರ್ಧನ್ ಅವರ ಹೆಸರಲ್ಲಿ ಸಿಂಹವನ್ನು ದತ್ತು ಪಡೆಯಲಾಗಿದೆ.


    ಈ ಮೇರು ನಟರ ಹೆಸರಿನಲ್ಲಿ ಪ್ರಾಣಿಗಳನ್ನು ದತ್ತು ಪಡೆದವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್. ಸ್ವತಃ ಸುಮಲತಾ ಅಂಬರೀಶ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲೇ ಅವರು ಇಂಥದ್ದೊಂದು ಮೆಚ್ಚುವ ಕಾರ್ಯ ಮಾಡಿದ್ದಾರೆ.

    “ಮೂವರು ನಟರೂ ಮೈಸೂರು ಮೂಲದವರು. ಅವರ ಹೆಸರಿನಲ್ಲಿ ದತ್ತು ತಗೆದುಕೊಳ್ಳುವಂತಹ ಅವಕಾಶ ನನಗೆ ಸಿಕ್ಕಿದೆ. ಹೆಮ್ಮೆಯಿಂದ ಈ ಕೆಲಸಕ್ಕೆ ಮುಂದಾದೆ” ಎಂದಿದ್ದಾರೆ ಸಚಿವರು.


    ಈಗಾಗಲೇ ಸ್ಯಾಂಡಲ್ ವುಡ್ ನಟರಾದ ದರ್ಶನ್, ಸೃಜನ್ ಲೋಕೇಶ್ ಸೇರಿದಂತೆ ಹಲವು ಕಲಾವಿದರು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ.

    ಬಿಎಸ್‌ವೈ & ಟೀಮ್‌ಗೆ ಬಿಜೆಪಿ ಹೈಕಮಾಂಡ್ ನೀಡಿದ ಸಂದೇಶ ಏನು

    ರಾಜ್ಯಸಭೆ ಚುನಾವಣೆಯಲ್ಲಿ ರಾಯಚೂರಿನ ಅಶೋಕ ಗಸ್ತಿ ಮತ್ತು ಬೆಳಗಾವಿಯ ಈರಣ್ಣ ಕಡಾಡಿ ಅವರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ನೀಡಿದ ಸಂದೇಶವಾದರು ಏನು? ಇದರ ಹಿಂದಿನ ರಾಜಕೀಯ ಲೆಕ್ಕಾಚಾರವಾದರು ಏನಿದ್ದೀತು ? ಇದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಆದ ಹಿನ್ನಡೆಯೇ ? ಈ ಎಲ್ಲಾ ಸಂಗತಿಗಳ ಬಗ್ಗೆ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ ಮತ್ತು ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ನಡೆಸಿದ ಪಾಡ್ಕಾಸ್ಟ್ ಇದು. ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ.

    ಇದನ್ನೂ ಓದಿ : ರಾಜ್ಯ ಕೋರ್ ಕಮಿಟಿ ಶಿಫಾರಸ್ಸಿಗೆ ಕಿಮ್ಮತ್ತು ಕೊಡದ ಬಿಜೆಪಿ ಹೈ ಕಮಾಂಡ್

    ಮಾಧ್ಯಮದವರ ಮೇಲೇಕೆ ಟ್ರಂಪ್‌ಗೆ ಅಷ್ಟೊಂದು ಸಿಟ್ಟು

    ಜಾರ್ಜ್ ಫ್ಲಾಯ್ಡ್ ನ ಹತ್ಯೆ ಖಂಡಿಸಿ ಅಮೆರಿಕಾದಲ್ಲೇ ಅಲ್ಲದೆ, ಪ್ರಪಂಚದ ಮತ್ತೊಂದು ತುದಿಯಲ್ಲಿರುವ ಆಸ್ಟ್ರೇಲಿಯಾದವರೆಗೆ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಪ್ರತಿ ದೇಶದಲ್ಲಿ ವ್ಯಾಪಕವಾಗಿ ಹರಡಿರುವ ಜನಾಂಗೀಯ ದ್ವೇಷವನ್ನು ವಿರೋಧಿಸಿ ಈ ಪ್ರತಿಭಟನೆಗಳು ನಡೆಯುತ್ತಿವೆ.

    ಜಾರ್ಜ್ ಫ್ಲಾಯ್ಡ್ ನ ಸಮಾಧಿ ಕ್ರಿಯೆ ಮುಗಿದಿದ್ದು, ಆತನನ್ನು ಹತ್ಗೈ ಮಾಡಿದ ನಾಲ್ಕೂ ಜನ ಪೊಲೀಸರಿಗೆ ಅಧಿಕ ಸಜೆಯ ಘೋಷಣೆಯಾಗಿದ್ದರೂ ಜೂನ್ 7 ಭಾನುವಾರದಂದು ಅಮೆರಿಕಾದ ರಾಜಧಾನಿ ವಾಷಿಂಗ್ಟನ್ ನಲ್ಲಿ ಅತ್ಯಂತ ಬೃಹತ್  ಪ್ರತಿಭಟನೆ ನಡೆಯಿತು.ಇದುವರೆಗಿನ ಪ್ರತಿಭಟನಾ ನಡಿಗೆಯಲ್ಲೇ ಇದನ್ನು ಅತಿದೊಡ್ಡದು ಎಂದು ಹೇಳಲಾಗಿದೆ.ಇದು ಶಾಂತಿಯುತವಾಗಿ ನಡೆದ ಹಿನ್ನೆಲೆಯಲ್ಲೇ ಡೊನಾಲ್ಡ್ ಟ್ರಂಪ್ ಆಡಳಿತ ವಿವಾದಾಸ್ಪದವಾಗಿದ್ದ ನ್ಯಾಷನಲ್ ಗಾರ್ಡ್ ಗಳನ್ನು ಹಿಂದಕ್ಕೆ ಪಡೆದಿದೆ.

    ಜಾರ್ಜ್ ಫ್ಲಾಯ್ಡ್ ನ ಸಾವು ಆಯಾ ದೇಶದ ಎಲ್ಲ ಅನ್ಯಾಯಗಳು ಮತ್ತು ಸ್ವಾತ್ರಂತ್ರ್ಯದ ಮೇಲಿನ ದಾಳಿಯನ್ನು ಪ್ರತಿಬಿಂಬಿಸುತ್ತವೆ.ವಾಷಿಂಗ್ಟನ್ ಸೇರಿದಂತೆ ಅಮೆರಿಕಾದ ಹಲವು ನಗರಗಳು, ಲಂಡನ್, ಬ್ರಿಸ್ಬೇನ್, ಇಸ್ರೇಲ್, ಜರ್ಮನಿ,ಫ್ರಾನ್ಸ್, ದಕ್ಷಿಣ ಅಮೆರಿಕಾದ ಬ್ರೆಜಿಲ್, ದಕ್ಷಿಣ ಆಫ್ರಿಕಾ ಎಲ್ಲೆಡೆಯೂ ಜನರು ಭುಗಿಲೆದ್ದಿದ್ದಾರೆ.  ಈ ಹೋರಾಟ ಪ್ರಜಾಪ್ರಭುತ್ವ ವ್ಯವಸ್ಥೆಗಳಿಲ್ಲದ  ಹಾಂಗ್ ಕಾಂಗ್ ನಂತಹ  ದೇಶಗಳಿಗೂ ಹರಡಿರುವುದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ.

    ಭಾನುವಾರ ಇಂಗ್ಲೆಂಡಿನ ಬ್ರಿಸ್ಟಲ್ ಎನ್ನುವ ನಗರದಲ್ಲಿ ನೆರೆದಿದ್ದ 10,000 ಜನ ಪ್ರತಿಭಟನೆಗಾರರು ಆ ನಗರದ 17 ನೇ ಶತಮಾನದ  ಸ್ಲೇವ್ ಟ್ರೇಡರ್ ನಾಗಿದ್ದ ಎಡ್ವರ್ಡ್ ಕೋಲ್ಸ್ಟನ್ನನ ಪ್ರತಿಮೆಯನ್ನು ಉರುಳಿಸಿ ಹತ್ತಿ ಕುಣಿದು ರಸ್ತೆಯಲ್ಲಿ ದರ ದರನೆ ಎಳೆದುಕೊಂಡು ಹೋಗಿ ಸಮುದ್ರದ ನೀರಲ್ಲಿ  ಎಸೆದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸುಮಾರು 80,000 ಜನರನ್ನು ಅಟ್ಲಾಂಟಿಕ್ ಸಮುದ್ರದ ಮೂಲಕ ದಾಸ್ಯದ ವ್ಯಾಪಾರ ಮಾಡಿದ್ದ ಎಡ್ವರ್ಡ್ ಇಡೀ ಬ್ರಿಸ್ಟಲ್ ನಗರವನ್ನು ಕಟ್ಟಲು ನೆರವಾಗಿದ್ದ ಪ್ರತಿಷ್ಟಿತ ರಾಜಕಾರಣಿ.ಅವನ ಪ್ರತಿಮೆಯನ್ನು ತೆಗೆಯಿರಿ ಎಂಬ ಒತ್ತಾಯ ಈ ಹಿಂದಿನಿಂದಲೇ ತೀವ್ರವಾಗಿತ್ತು. ಆದರೆ ಚಾರಿತ್ರಿಕ ಕಾರಣಗಳಿಗಾಗಿ ಅದನ್ನು ಉಳಿಸಿಕೊಳ್ಳಲಾಗಿತ್ತು.ಪ್ರಸ್ತುತ ಸಮಸ್ಯೆಯ ಜೊತೆ ಚಾರಿತ್ರಿಕ ತಪ್ಪುಗಳ ಮೇಲೆ ಕೂಡ ಜನರ ಆಕ್ರೋಶ ತಿರುಗುತ್ತಿರುವುದು ಜನರ ಭಾವೋದ್ವೇಗಗಳು ಸುಲಭವಾಗಿ ಕರಗುವುದಿಲ್ಲ ಎನ್ನುವ ವಿಚಾರವನ್ನು ದೃಢಪಡಿಸುತ್ತದೆ. ಲಂಡನ್ನಿನಲ್ಲಿ ರಾತ್ರಿ ಒಂಭತ್ತು ಗಂಟೆಯಾದರೂ ಪ್ರತಿಭಟನೆ ನಡೆಯುತ್ತಲೇ ಇತ್ತು.ಇತರೆ ನಗರಗಳಲ್ಲಿಯೂ ಪ್ರತಿಭಟನೆಗಳು ನಡೆದವು.

    ಮಾಧ್ಯಮಗಳೇ ಟಾರ್ಗೆಟ್

    ‌ಇಂತಹ ಎಲ್ಲ ಬೆಳವಣಿಗೆಯನ್ನು ನಿಸ್ಪೃಹವಾಗಿ ವರದಿಮಾಡುವುದು ಮಾಧ್ಯಮಗಳ ನೈತಿಕ ಜವಾಬ್ದಾರಿ.ಸ್ವತಂತ್ರ ಮಾಧ್ಯಮಗಳು ಪ್ರಜಾಪ್ರಭುತ್ವದ ಕಣ್ಣುಗಳು. ಇದೇ ಕಾರಣಕ್ಕೆ ಅವರಿಗೆ ಕಾನೂನಿನ, ಸಂವಿಧಾನದ ರಕ್ಷಣೆಯೂ ಇರುತ್ತದೆ.ಪತ್ರಕರ್ತರನ್ನು ಪೊಲೀಸರು  ಸಾಮಾನ್ಯವಾಗಿ ಮುಟ್ಟುವುದಿಲ್ಲ. ಅವರ ನಡುವೆ ವೃತ್ತಿ ಸಂಬಂಧಿ ಸಹಕಾರ ಮತ್ತು ಗೌರವಗಳಿರುತ್ತವೆ.

    ಆದರೆ ಅಮೆರಿಕಾದಲ್ಲಿ ಕಳೆದ ಮೂರು ವರ್ಷಗಳಿಂದ ಪೊಲೀಸರು, ಪತ್ರಕರ್ತರ ಮೇಲೆ ವರ್ಷಕ್ಕೆ ಸರಾಸರಿ 150 ದೌರ್ಜನ್ಯಗಳನ್ನು ನಡೆಸಿರುವುದು ದಾಖಲಾಗಿವೆ.ಇದನ್ನು ಮಾಧ್ಯಮದವರು ಅವುಡುಗಚ್ಚಿ ಸಹಿಸುತ್ತಿದ್ದಾರೆ. ಆದರೆ ಇತ್ತೀಚೆಗಿನ ಜಾರ್ಜ್ ಫ್ಲಾಯ್ಡ್ ನ ಘಟನೆಯಲ್ಲಿ ಮಾಧ್ಯಮದವರ ಮೇಲಾಗುತ್ತಿರುವ ದೌರ್ಜನ್ಯಗಳು ನಾಲ್ಕು ಪಟ್ಟಾಗಿವೆ. ಇಡೀ ವರ್ಷದಲ್ಲಿ ನಡೆಯುತ್ತಿದ್ದ ದಾಳಿಗಳಿಗಿಂತ ಹೆಚ್ಚುದಾಳಿಗಳು ಕಳೆದ ಹತ್ತು ದಿನಗಳಲ್ಲಿನಡೆದದ್ದು ಸಾಕ್ಷಿ ಸಮೇತ ದಾಖಲಾಗಿದೆ.

     ಅತ್ತ ಮಿನಿಯಾಪೋಲೀಸ್ ಪೊಲೀಸು ಇಲಾಖೆ ಜಾರ್ಜ್ ಫ್ಲಾಯ್ಡ್ ನ ಹತ್ಯೆಯ ಕೇಸಿನಲ್ಲಿ ಕೋರ್ಟಿನಲ್ಲಿ ಸೋತರು. ಜನರೆದುರು ತಮ್ಮ ಧೂರ್ತತನಕ್ಕೆ ಅವಮಾನಿಸಲ್ಪಟ್ಟರು. ಸಾರ್ವಜನಿಕವಾಗಿ ಕ್ಷಮೆಯನ್ನೂ ಯಾಚಿಸಿದರು. ಇತ್ತ  ಅನುಕಂಪವೇ ಇಲ್ಲದೆ, ಸಾಂತ್ವನ ತೋರದೆ, ಇಂತಹ ಘಟನೆಗಳು ಮುಂದೆ ನಡೆಯದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡದೆ ಬರೇ ಬಲಪ್ರಯೋಗದ ಮಾತುಗಳನ್ನು ಆಡದಿದ್ದರಿಂದ ಮತ್ತು  ಅಂತದ್ದೇ ಪ್ರದರ್ಶನಕಾರೀ ನಡವಳಿಕೆಯಿಂದ ಡೊನಾಲ್ಡ್ ಟ್ರಂಪ್ ಖಳನಾಯಕನಂತೆ ಚಿತ್ರಿತರಾದರು. ತನ್ನದೊಂದು . ಟ್ವೀಟ್ ನಲ್ಲಿ ಸ್ವತಃ ಟ್ರಂಪ್ ಪರೋಕ್ಷವಾಗಿ ಪೋಲೀಸರಿಗೆ ತನ್ನ ಸಲಹೆ ಏನೆಂದು ಸಾರ್ವಜನಿಕವಾಗಿಹೇಳಿಕೊಂಡಿದ್ದಾರೆ.

    ಇದರೊಂದಿಗೆ ಮಾಧ್ಯಮದವರ ಮೇಲಿನ ಪೋಲೀಸರ ದೌರ್ಜನ್ಯ ಅಕಸ್ಮಿಕವೇನೋ ಎಂಬಂತಿಲ್ಲದೇ ನೇರವಾಗಿ ನಡೆಯುತ್ತಿರುವುದರ ವಿಡೀಯೋಗಳು ವೈರಲ್ ಆಗಿ, ಅಧಿಕಾರ ಮತ್ತು ಬಲ ಎರಡೂ ಸೇರಿ  ಅಮೆರಿಕಾದಲ್ಲಿ ಮಾಧ್ಯಮದವರ ಕಣ್ಣು ಕೀಳುವ ಯತ್ನವಾಗುತ್ತಿರುವುದು ನಿಚ್ಚಳವಾಗಿದೆ. ಈ ಬಗ್ಗೆ ಮಾಧ್ಯಮಗಳು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ವಿರುದ್ದ ಸಿಡಿದೆದ್ದಿದ್ದಾರೆ.

    ಶನಿವಾರ ಪತ್ರಕರ್ತೆ ಲಿಂಡ ಟಿರಾಡೊ ಜಾರ್ಜ್ ಫ್ಲಾಯ್ಡ್ ಸಂಭಂದಿತ ಪ್ರತಿಭಟನೆಯನ್ನು ವರದಿಮಾಡುತ್ತಿದ್ದಳು.ಅವಳ ಮುಖಕ್ಕೇ ರಬ್ಬರ್ ಬುಲೆಟ್ಟಿನಿಂದ ಹೊಡೆದ ಮಿನಿಯಾಪೋಲೀಸ್ ಪೋಲೀಸರು ಅವಳು ಕಾಯಂ ಆಗಿ ಎಡಗಣ್ಣಿನ ದೃಷ್ಟಿ ಕಳೆದುಕೊಳ್ಳುವಂತೆ ಮಾಡಿದ್ದಾರೆ.

    ಡೆನ್ವರ್ ಪೋಸ್ಟ್ ಪತ್ರಿಕೆಯ ಹ್ಯೂಯಾಂಗ್ ಚಾಂಗ್ ಡೆನ್ವರ್ ನಗರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಚಿತ್ರೀಕರಿಸುತ್ತಿದ್ದ.ಅದನ್ನು ತಡೆಯಲು ಡೆನ್ವರ್ ನ ಪೋಲೀಸರು ಅವನೆಡೆಗೆ ಎರಡು ಪೆಪ್ಪರ್ ಸ್ಪ್ರೇ ಬಾಲ್ ಗಳನ್ನು ಶೂಟ್ ಮಾಡಿದ್ದಾರೆ.

    ಲಾಸ್ ವೆಗಾಸ್ ರಿವ್ಯೂ ಎನ್ನುವ ಜರ್ನಲ್ ನ  ಛಾಯಾಚಿತ್ರಕಾರ ಎಲ್ಲೆನ್ ಸ್ಮಿಡ್ ಮತ್ತು ರಿವ್ಯೂ ಜರ್ನಲ್ ನ ಬ್ರಿಜೆಟ್ ಬೆನ್ನೆಟ್ ಇಬ್ಬರನ್ನೂ ವಿನಾಕಾರಣ ಬಂಧಿಸಿದ್ದಾರೆ.

    ವೇವ್ 3 ಎನ್ನುವ ನ್ಯೂಸ್ ಪೇಪರಿನ ವರದಿಗಾರ್ತಿ ಕೇಟ್ಲಿನ್ ರಸ್ಟ್, ಮತ್ತು ಜೇಮ್ಸ್ ಡಾಬ್ಸನ್ನಿನ ಮೇಲೆ ಲೂಯಿಸ್ವಿಲ್ಲ್ ನ ಪೋಲೀಸರು ಪೆಪ್ಪರ್ ಬಾಲ್ ಗಳ ಪ್ರಯೋಗ ಮಾಡಿರುವುದನ್ನು ಪತ್ರಿಕೆ ಬಲವಾಗಿ ಖಂಡಿಸಿದೆ.

    ಫೀನಿಕ್ಸ್ ಮತ್ತು ಪಿಟ್ಸ್ ಬರೋ ದ ಪತ್ರಕರ್ತರ ಮೇಲೆ ಪ್ರತಿಭಟನೆ ನಡೆಸುತ್ತಿದ್ದವರೇ ಧಾಳಿ ನಡೆಸಿದರು ಆದರೆ ಅವರನ್ನು ರಕ್ಷಿಸಿದ್ದು ಇತರೆ ಪ್ರತಿಭಟನೆಕಾರರು! ಇದರಂತೆ ಫಾಕ್ಸ್ ಟಿ.ವಿ. ಯ ವರದಿಗಾರರ ಮೇಲೆ ಮುಖವನ್ನು ಮುಚ್ಚಿಕೊಂಡಿದ್ದ ದುಷ್ಕರ್ಮಿಗಳು ಧಾಳಿ ಮಾಡಿದ್ದಾರೆ. ಹಾಗಾದಲ್ಲಿ ಪತ್ರಕರ್ತರನ್ನೇ ಗುರಿಗಳನ್ನಾಗಿಸಿಕೊಂಡು ಧಾಳಿ ನಡೆಸಿದ ದುಷ್ಕರ್ಮಿಗಳು ಯಾರ ಪರವಾಗಿ ಕೆಲಸಮಾಡುತ್ತಿದ್ದರು? ಎನ್ನುವ ನಾನಾ ಗುಮಾನಿಗಳನ್ನು ಈ ಘಟನೆಗಳು ಬಡಿದೆಬ್ಬಿಸಿದೆ.

    ಮಿನಿಯಾಪೋಲಿಸ್ ನಲ್ಲಿ ವರದಿಮಾಡುತ್ತಿದ್ದ ಎನ್. ಬಿ. ಸಿ. ಚಾನೆಲ್ ನ ಎಡ್ ಉ ಎಂಬಾತ ತನ್ನ ತಲೆಯ ಮೇಲಿಂದಸುರಿದದ್ದುಅಶ್ರುವಾಯುವೋ, ಪೆಪ್ಪೆರ್ಸ್ಪ್ರೇಯೋ ಅಥವಾ ರಕ್ತವೋಎಂದು ತಡಕಿಕೊಂಡ. ಆಶ್ಚರ್ಯ ಎಂದರೆ  ‘ಪ್ರೆಸ್‘ಎಂದುಹಾಕಿಕೊಂಡಿದ್ದರೂ ಪೋಲೀಸರು ಮೂರನ್ನೂ ಆತನ ಮೇಲೆ ಪ್ರಯೋಗ ಮಾಡಿದ್ದರು. ತಲೆಯಿಂದ ರಕ್ತ ಒಸರುತಿತ್ತು. ವಾಸ್ತವವೆಂದರೆ ಪ್ರೆಸ್ನವನು ಎಂದು ನೋಡಿಯೇ ಬಲಪ್ರಹಾರ ನಡೆದಿತ್ತು. ಆತನ ತಲೆಗೆ ನಾಲ್ಕು ಹೊಲಿಗೆಗಳನ್ನು ಹಾಕಿಸಬೇಕಾಯಿತು

    ಹೆನ್ನೆಸ್ ಫ್ಹಿಸ್ಕಯ್ ಎಂಬಾತ ಸಾರ್ವಜನಿಕ ಪ್ರತಿಭಟನೆಯಷ್ಟೇ ಅಲ್ಲದೆ ಇರಾಕ್ ಮತ್ತು ಆಫ್ಘಾನಿಸ್ತಾನದ  ಯುದ್ಧಗಳನ್ನು ಕೂಡ ವರದಿ ಮಾಡಿದ್ದ ಅನುಭವಿ ಪತ್ರಕರ್ತ.ಎಲ್ಲಿಯೂ ಪೊಲೀಸರು ಮಾಧ್ಯಮದವರನ್ನು ಗುರಿಯನ್ನಾಗಿಸಿದ್ದನ್ನು ನೋಡಿರಲಿಲ್ಲ. ಅಂಥದ್ದರಲ್ಲಿ ಪ್ರಪಂಚಕ್ಕೆಲ್ಲ ಬುದ್ದಿ ಹೇಳುವ ದೊಡ್ಡಣ್ಣ ಅಮೆರಿಕಾ ತನ್ನ ನೆಲದ ಮೇಲೆ ನಡೆಸುತ್ತಿರುವ ಈಗಿನ ದೌರ್ಜನ್ಯದಿಂದ ಆಶ್ಚರ್ಯಚಕಿತನಾಗಿದ್ದಾನೆ.

    ಶನಿವಾರದ ಪ್ರತಿಭಟನೆಯನ್ನು ಲೈವ್ ಸ್ಟ್ರೀಮ್ ಮಾಡುತ್ತಿದ್ದ ಬ್ರಾಂಡೆನ್ ಹಂಟರ್ ನ ಕೈಯಿಂದ ಫೋನನ್ನು ಕಿತ್ತುಕೊಳ್ಳಲಾಗಿದೆ. ಪ್ರೆಸ್ ನವನು ಎಂದರೂ ಕೇಳದೆ  “ we don’t care “ಎಂದು ವರದಿಗಾರರ ಮುಖದ ಮೇಲೆ  ಪೆಪ್ಪರ್ ಸ್ಪ್ರೇ ಹಾಕಿದ್ದು ವೀಡಿಯೋ ಆಗಿದೆ. ಹೇರಿದ್ದ ಕರ್ಫ್ಯೂ ಪ್ರೆಸ್ ನವರಿಗೆ ಅನ್ವಯಿಸದಿದ್ದರೂ ವರದಿಗಾರರನ್ನು ಲಾಕಪ್ಪಿನಲ್ಲಿರಿಸಲಾಗಿದೆ. ಮತ್ತೊಬ್ಬ ವರದಿಗಾರನ ಮೇಲೆ ಪಿಸ್ತೂಲು ಹಿಡಿದು ಅರೆ ಬರೆ ಟ್ರಿಗರ್ ಒತ್ತಿ ಹೆದರಿಸಲಾಗಿದೆ.

    ಅದೆಷ್ಟೋ ಮಂದಿ ವರದಿಗಾರರ ಕ್ಯಾಮೆರಾಗಳು ಪುಡಿ ಪುಡಿಯಾಗಿವೆ. ಕಾರಿನಲ್ಲಿ ಕೂತಿದ್ದ ಚಿಕಾಗೋ ಟ್ರಿಬ್ಯೂನಿನ ವರದಿಗಾರನ ಮೇಲೆ ರಬ್ಬರ್ ಬುಲೆಟ್ ಗಳನ್ನು ಹಾರಿಸಲಾಗಿದೆ. ಅವನಿಗೂ ಹೊಲಿಗೆಗಳು ಬೇಕಾದವು.ಡೆಟ್ರಾಯಿಟ್ ಪೋಲೀಸರು ನಿಕೋಲ್ ಹೆಸ್ಟೆರ್ ಎನ್ನುವ ಮಹಿಳಾ ವರದಿಗಾರಳ ಮೇಲೆ ಧಾಳಿ ನಡೆಸಿದರು.ಇಂತಹ ಪ್ರಕರಣಗಳು ನೂರಾರು.

    ಮೇ 25 ರಿಂದ ಜಾರ್ಜ್ ಫ್ಲಾಯ್ಡ್ ನ ವಿಚಾರವಾಗಿ ಪ್ರತಿಭಟನೆ ಶುರುವಾಯ್ತು. 5 ನೇ ತಾರೀಖು ಜೂನ್ ವೇಳೆಗೆ  US Press Freedom Tracker ಸಂಸ್ಥೆ ಮಾಧ್ಯಮದವರ ಮೇಲೆ ಪೋಲೀಸರು ನಡೆಸಿದ 192 ಪ್ರಕರಣಗಳನ್ನು ದಾಖಲಿಸಿದರು.ಅಂದರೆ ಈ ವರ್ಷ ಮಾಧ್ಯಮದವರ ಮೇಲೆ ನಡೆದಿರುವ ದಾಳಿ ಹಿಂದಿನ ಎಲ್ಲ ದಾಖಲೆಗಳನ್ನು  ಈಗಾಗಲೇ ಮುರಿದಿದೆ. ಮತ್ತೂ ಮುಂದುವರೆಯುವ ಎಲ್ಲ ಸಾಧ್ಯತೆಗಳಿವೆ. ಈ ಎಲ್ಲ ಕಾರಣಗಳಿಗಾಗಿ, ಅಮೆರಿಕಾದ ಸಂವಿಧಾನವನ್ನು ಉಲ್ಲಂಘಿಸಿ ವರದಿಗಾರರ ಮೇಲೆ ನಡೆದ ಧಾಳಿಗಾಗಿ American Civil Liberties Union (ACLU) ತನ್ನ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ದೂರನ್ನು ದಾಖಲಿಸಿ, ನ್ಯಾಯಾಲಯದ ಮೆಟ್ಟಿಲು ಹತ್ತಿದೆ.

    ವರದಿಗಾರರು ನಡೆದದ್ದನ್ನು ನಡೆದಂತೆ ದಾಖಲಿಸುತ್ತಾರೆ. ತಮ್ಮ ಅಭಿಪ್ರಾಯಗಳನ್ನಲ್ಲ. ಹೀಗಿದ್ದೂ ಅವರ ಮೇಲೆ ಇಡೀ ಅಮೆರಿಕಾದಲ್ಲಿ ದಾಳಿ ನಡೆದದ್ದು ಯಾಕೆ ಎಂದು ಎಡ್ ಉ ಅವಿರತವಾಗಿ ಪ್ರಶ್ನೆಗಳನ್ನು ಹಾಕಿದ್ದಾನೆ. ಪ್ರತಿಭಟನೆಕಾರರ ಮೇಲೆ ಪೋಲೀಸರು ಏನನ್ನು ಮಾಡುವ ಹುನ್ನಾರ ಹೊಂದಿದ್ದರು? ಅದನ್ನು ಬಿತ್ತರಿಸದಂತೆ ತಮ್ಮನ್ನು ತಡೆದದ್ದೇ ಅಥವಾ ಮಾಧ್ಯಮದವರನ್ನು ದ್ವೇಷಿಸುವ ಟ್ರಂಪ್ ಅವರ ಮೇಲೆ ದಾಳಿ ಮಾಡಲು ಈ ಸಂದರ್ಭವನ್ನು ಬಳಸಿಕೊಂಡನೇ ಎನ್ನುವ ಪ್ರಶ್ನೆಗಳು ಎಲ್ಲರಲ್ಲೂ ಮೂಡುತ್ತಿವೆ.

    ರಾಜ್ಯ ಕೋರ್ ಕಮಿಟಿ ಶಿಫಾರಸ್ಸಿಗೆ ಕಿಮ್ಮತ್ತು ಕೊಡದ ಬಿಜೆಪಿ ಹೈಕಮಾಂಡ್

    ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಇಬ್ಬರು ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡುವ ಮೂಲಕ `ಲಾಬಿ’ಗೆ ಅವಕಾಶವಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದೆ.ಪ್ರಭಾವಿ ಮುಖಂಡ ಪ್ರಭಾಕರ ಕೋರೆ ಮತ್ತು ಹೋಟೆಲ್ ಉದ್ಯಮಿ ಪ್ರಕಾಶ್ ಶೆಟ್ಟಿ ಅವರಿಗೆ ಟಿಕೆಟ್ ಖಚಿತ ಎಂಬ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ ರಾಯಚೂರಿನ ಅಶೋಕ ಗಸ್ತಿ
    ಮತ್ತು ಬೆಳಗಾವಿಯ ಈರಣ್ಣ ಕಡಾಡಿ ಅವರಿಗೆ ಟಿಕೆಟ್ ನೀಡಿದೆ.

    ಗಸ್ತಿ ಬಳ್ಳಾರಿ ವಿಭಾಗದ ಪ್ರಭಾರಿಯಾಗಿದ್ದರೆ, ಕಡಾಡಿ ಬೆಳಗಾವಿ ವಿಭಾಗದ ಪ್ರಭಾರಿಯಾಗಿ ಪಕ್ಷ ಸಂಘಟನೆಯ ಹೊಣೆ ನಿರ್ವಹಿಸುತ್ತಿದ್ದರು. ಇಬ್ಬರೂ ಅಧಿಕಾರಕ್ಕೆ ಹಪಹಪಿಸದೇ, ಎಲೆ ಮರೆಯ ಕಾಯಿಯಂತೆ ತಮ್ಮ
    ಜವಾಬ್ದಾರಿ ನಿಭಾಯಿಸಿಕೊಂಡು ಹೋಗುತ್ತಿದ್ದರು. ಪ್ರಭಾಕರ ಕೋರೆ ಅವರಿಗೆ ಟಿಕೆಟ್ ನೀಡಿದ್ದರೆ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ಸಿಗಲಿಲ್ಲವೆಂದು ಶಾಸಕ ಉಮೇಶ್ ಕತ್ತಿ ಮುನಿಸಿಕೊಳ್ಳುವ ಅಪಾಯವಿತ್ತು. ಪ್ರಕಾಶ್ ಶೆಟ್ಟಿಯವರನ್ನು ಕಣಕ್ಕೆ ಇಳಿಸಿದ್ದರೆ ಬೇರೆಯೇ ಸಂದೇಶ ರವಾನೆಯಾಗುತ್ತಿತ್ತು. ಹೀಗಾಗಿ
    ಅಳೆದು ತೂಗಿ ಗಸ್ತಿ, ಕಡಾಡಿ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ.

    ರಾಜ್ಯ ಬಿಜೆಪಿಯ ಕೋರ್ ಕಮಿಟಿ ಶಿಫಾರಸು ಮಾಡಿದ್ದ ಪಟ್ಟಿಯಲ್ಲಿ ಇಬ್ಬರ ಹೆಸರೂ ಇರಲಿಲ್ಲ. ಅಂದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಸಿಗುತ್ತದೆ, ಲಾಬಿಗಳಿಗೆ ಅವಕಾಶವಿಲ್ಲ ಎಂಬ ಸಂದೇಶವನ್ನು ವರಿಷ್ಠರು ರವಾನಿಸಿದ್ದಾರೆ. ಅಲ್ಲದೇ ದೇಶದ ಪ್ರತಿ ಬ್ಲಾಕ್‌ನಿಂದಲೂ ತಮ್ಮದೇ ಮೂಲಗಳಿಂದ ಮಾಹಿತಿ ತರಿಸಿಕೊಳ್ಳುವ ಸಾಮರ್ಥ್ಯವಿದೆ ಎಂಬ ಎಚ್ಚರಿಕೆಯನ್ನು ಈ ಇಬ್ಬರ ಮೂಲಕ ರಾಜ್ಯಮಟ್ಟದ `ನಾಯಕ’ರುಗಳಿಗೂ ನೀಡಿದ್ದಾರೆ. ಜತೆಗೆ, ಮುಂಬಯಿ ಕರ್ನಾಟಕ,ಕಲ್ಯಾಣ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡುವ ಮೂಲಕ ಪ್ರಾದೇಶಿಕ ಸಮತೋಲನವನ್ನೂ
    ಸಾಧಿಸಿದ್ದಾರೆ. ಇದರೊಂದಿಗೆ ಒಂದೊಮ್ಮೆ ಕೋರೆ-ಕತ್ತಿ ಅಸಮಾಧಾನಗೊಂಡರೆ ಅದರ ಪರಿಣಾಮ ಪಕ್ಷದ ಮೇಲೆ ಬೀರದಂತೆಯೂ ಜಾಣ್ಮೆಯ ನಡೆ ಇರಿಸಿದ್ದಾರೆ. ಈ ಆಯ್ಕೆ ಕುರಿತು ಯಾರೂ
    ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವಂತೆಯೇ ಇಲ್ಲ!

    ನರೇಂದ್ರ ಮೋದಿ, ಅಮಿತ್ ಶಾ ಅವರಂತಹ ಧುರೀಣರಿಂದ ಮಾತ್ರವೇ ಇಂತಹ ದಿಟ್ಟತನದ ನಿರ್ಧಾರ ಸಾಧ್ಯ.ಕಾಂಗ್ರೆಸ್‌ನಲ್ಲಿ ಕೂಡ ಈ ಸಲ ಹೈಕಮಾಂಡ್ ರಾಜ್ಯ ನಾಯಕರನ್ನು ವಿಶ್ವಾಸಕ್ಕೆತೆಗೆದುಕೊಳ್ಳದೇ ಏಕಾಏಕಿ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ಅಂತಿಮಗೊಳಿಸಿದೆ
    ಎನ್ನುವುದು ಗಮನಾರ್ಹ.

    ಇನ್ನು ಬಿಜೆಪಿಯು ಮೂರನೇ ಅಭ್ಯರ್ಥಿ ಕಣಕ್ಕೆ ಇಳಿಸದೇ ಇರುವಮೂಲಕ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ರಾಜ್ಯಸಭೆ ಪ್ರವೇಶಕ್ಕೆ ಹಾದಿಸುಗಮಗೊಳಿಸಿದೆ. ಇಲ್ಲಿಯೂ ಖರ್ಗೆ, ಗೌಡರಂತಹ ಹಿರಿಯ ನಾಯಕರನ್ನು ನಾವು ಗೌರವಿಸುತ್ತೇವೆ ಎಂಬ ಸಂದೇಶ ಕಳುಹಿಸುವ ಪ್ರಯತ್ನವನ್ನು ಮೋದಿ, ಶಾ ಮಾಡಿರುವುದು ಸ್ಪಷ್ಟ.

    ನಿನ್ನ ಮಡದಿಯ ಪರವಾಗಿ ನಾನಲ್ಲ.. ಯಾರೂ ನಿನ್ನನ್ನ ಕ್ಷಮಿಸೋದಿಲ್ಲ, ಅರ್ಧಕ್ಕೆ ಯಾತ್ರೆ ಮುಗಿಸಿದವನು ನೀನು ಅಂತ

    ಇಂದು ನಿಧನರಾದ ಚಿರಂಜೀವಿ ಸರ್ಜಾ ಬಗ್ಗೆ ಅವರ ಬಾಲ್ಯದ ಗೆಳೆಯ ಕನ್ನಡಕ್ಕಾಗಿ ಒಂದನ್ನು ಒತ್ತಿ ಮತ್ತು ದಯವಿಟ್ಟು ಗಮನಿಸಿ ಸಿನಿಮಾ ಖ್ಯಾತಿಯ ಅವಿನಾಶ್ ಷಟಮರ್ಶನ ಅವರ ಆಪ್ತ ಬರಹ

    ಚಿರು ಅಂದರೆ ಅವನ ಮುಗ್ಧತೆಗೇ ಫೇಮಸ್! ಇವತ್ತು ಅವನು ಇಲ್ಲ ಅನ್ನುವ ಸುದ್ದಿಯನ್ನು ನನ್ನ ಬುದ್ಧಿ ಒಪ್ಪದೇ ಇರುವಷ್ಟು ಮಂಕು ಕವಿದಿದೆ.
    ಸರಳ, ಸಂಯಮ, ಸ್ನೇಹ ಎಲ್ಲದರಲ್ಲೂ ಅವನು ಧಾರಾಳಿ…

    ಅವಿನಾಶ್ ಷಟಮರ್ಶನ

    ನಾನು ಚಿಕ್ಕ ಹುಡುಗ ಇದ್ದಾಗ ಶಾಲೆಗೆ ರಜಾ ಬಂದರೆ, ಬೆಂಗಳೂರಿಗೆ ಬರ್ತಿದ್ದೆ. ಬೆಂಗಳೂರು ಅಂದರೆ, ಪನ್ನಗನ ಮನೆ. ನನಗೆ ಚೆನ್ನಾಗಿ ನೆನಪಿದೆ ಚಿರು ಹತ್ತಿರ ಪಲ್ಸರ್ 150 ಇತ್ತು. ಕಾದ ಅವನ ಗಾಡಿ ಸೈಲೆನ್ಸರ್ ಗೆ ನಾನು ಕಾಲು ಕೊಟ್ಟು ಸುಟ್ಟು ಕೊಂಡಿದ್ದೆ. ಇದನ್ನು ಗೇಲಿ ಮಾಡಿಕೊಂಡು ಎಲ್ಲರೂ ನಗ್ತಿದ್ದಾಗ ಚಿರು ಅಯ್ಯೋ ಪಾಪ ಅಂತ ಅನುಕಂಪ ತೋರಿಸಿದ್ದ. ಅವನ ಅಂತಃಕರಣ ಮೆರೆದಿದ್ದ!

    ನನಗೆ ಬಹಳ ಮರೆವು ಇದೆ ಅಂದುಕೊಂಡಿದ್ದೆ ಆದರೆ ನಿನ್ನ ಅಗಲಿಕೆ ನನ್ನ ನೆನಪಿನ ತೀವ್ರತೆಯನ್ನ ತೋರಿಸ್ತಾ ಇದೆ.

    ಮೊದಲ ಪಿಯು ನಲ್ಲಿ ಇದ್ದಾಗ ಚಿರು ಹೋಗ್ತಿದ್ದ ಜಿಮ್ ಗೆ ನಾನೂ ಹೋಗ್ತಿದ್ದೆ. ಧ್ರುವನೂ ಅಲ್ಲೇ ಜಿಮ್ ಮಾಡ್ತಾ ಇದ್ದದ್ದು.ಜಿಮ್ ನಲ್ಲೂ ಅಷ್ಟೇ ನನ್ನ ಸಾಮರ್ಥ್ಯದ ಬಗ್ಗೆ ನನಗೆ ತಿಳಿವಳಿಕೆ ತುಂಬಿದ ಮೊದಲಿಗ ಚಿರು ಅಂತ ಹೇಳಬಹುದು!

    ಅವನು ಸಿನಿಮಾ ಮಾಡೋಕಿಂತ ಮೊದಲು ನಾನು ಅವನನ್ನ ಹೇಗೆ ನೋಡಿದ್ದೆ ಅದೇ ನಗು ಮುಖ, ಅದೇ ಪ್ರಸನ್ನತೆ ಹ್ಯಾಪಿ ನ್ಯೂ ಯಿಯರ್ ಸಿನಿಮಾ ಆಡಿಯೋ ಲಾಂಚ್ ನಲ್ಲೂ ನೋಡಿದ್ದೆ. ನಾನು ಅವನನ್ನ ಕಡೆಯದಾಗಿ ನೋಡಿದ್ದು ಅಲ್ಲೇ…..

    ನಿನ್ನಲ್ಲಿದ್ದ ಎಷ್ಟೋ ಗುಣಗಳು ನನಗೆ ಹಿಡಿಸಿತ್ತು ಅನ್ನೋದೇ ನನಗೆ ಗೊತ್ತಿರಲಿಲ್ಲ.ನಿಜ ಹೇಳಬೇಕಂದರೆ ಇವತ್ತು ಬೆಳಗ್ಗೆ ಟೀವಿಯಲ್ಲಿ ನಿನ್ನ ಹಾಡು ನೋಡಿದೆ ಕಣೋ… ನನ್ನ ಹಾಡೇ ನಾನು ನೋಡಲ್ಲ, ಟಿ.ವಿ ನೋಡೋದೇ ಇಲ್ಲ….

    ನಿನ್ನ ಇಚ್ಛೆಯನ್ನ ನಿಮ್ಮ ಕುಟುಂಬ, ಸ್ನೇಹಿತರು, ನಿನ್ನ ಪರಿವಾರವರು ಪೂರ್ಣಗೊಳಿಸುವ ಸಾಮರ್ಥ್ಯ ನೀನೇ ಕೊಟ್ಟು ಎಲ್ಲರಿಗೂ ವಿದಾಯ ಹೇಳಬೇಕು.

    ಕೊನೆಯದಾಗಿ, ನಿನ್ನ ಮಡದಿಯ ಪರವಾಗಿ ನಾನಲ್ಲ ಯಾರೂ ನಿನ್ನನ್ನ ಕ್ಷಮಿಸೋದಿಲ್ಲ, ಅರ್ಧಕ್ಕೆ ಯಾತ್ರೆ ಮುಗಿಸಿದವನು ನೀನು ಅಂತ.

    ಇದನ್ನೂ ಓದಿ:ಇಷ್ಟು ಬೇಗ ಹೊರಟು ಹೋಗಲು ಅವಸರ ಏನಿತ್ತು

    ಇಷ್ಟು ಬೇಗ ಹೊರಟು ಹೋಗಲು ಅವಸರ ಏನಿತ್ತು ಚಿರಂಜೀವಿ

    ಕೊರೊನಾ ದಾಳಿಯಿಂದ ಈಗಾಗಲೇ ತತ್ತರಿಸಿರುವ ಸಿನಿಮಾ ರಂಗಕ್ಕೆ ಮತ್ತೊಂದು ಶಾಕಿಂಗ್ ಸುದ್ದಿ. ಅತೀ ಚಿಕ್ಕ ವಯಸ್ಸಿನಲ್ಲೇ ಚಿರಂಜೀವಿ ಸರ್ಜಾ, ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ರವಿವಾರ ಮಧ್ಯಾಹ್ನ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿ ಆಗದೇ ಬಾರದ ಲೋಕಕ್ಕೆ ತೆರಳಿದ್ದಾರೆ. ಜತೆಗೆ ಕಳೆದೆರಡು ತಿಂಗಳಿಂದ ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರು ಎನ್ನಲಾಗುತ್ತಿದೆ.

    2009 ರಲ್ಲಿ ವಾಯು ಪುತ್ರ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಇವರು, ಈವರೆಗೂ 22 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮ್ಮ ಐ ಲವ್ ಯೂ, ಚಂದ್ರಲೇಖ, ಗಂಡೆದೆ, ಆಟಗಾರ, ವಾಯುಪುತ್ರ ಇವರ ಸೂಪರ್ ಹಿಟ್ ಚಿತ್ರಗಳು. ಕೊನೆಯದಾಗಿ ಇವರ ಶಿವಾರ್ಜುನ ಸಿನಿಮಾ ರಿಲೀಸ್ ಆಗಿತ್ತು. ರಾಜಮಾರ್ತಾಂಡ ಬಿಡುಗಡೆಗೆ ಸಿದ್ಧವಾಗಿದೆ.


    ಕನ್ನಡ ಸಿನಿಮಾ ರಂಗಕ್ಕೆ ಸರ್ಜಾ ಕುಟುಂಬದ ಕೊಡುಗೆ ಅಪಾರ. ಇವರ ಸೋದರ ಮಾವ ಕಿಶೋರ್ ಸರ್ಜಾ ಇವರನ್ನು ವಾಯುಪುತ್ರ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಲಾಂಚ್ ಮಾಡಿದ್ದರು. ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಇವರ ಬೆನ್ನೆಲುಬಾಗಿ ನಿಂತಿದ್ದರು. ಸಹೋದರ ಧ್ರುವ ಸರ್ಜಾ ಕೂಡ ಸಹೋದರ ಅನೇಕ ಸಿನಿಮಾಗಳಿಗೆ ಸಾಥ್ ನೀಡಿದ್ದರು.
    ಚಿರಂಜೀವಿ ಸರ್ಜಾ ನಟಿ ಮೇಘನಾ ರಾಜ್​ ಅವರ ಜೊತೆ 2017ರಲ್ಲಿ ನಿಶ್ವಿತಾರ್ಥ ಮಾಡಿಕೊಂಡಿದ್ದು, ಈ ಜೋಡಿ 2018ರಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದರು.


    ಅವರ ಸಾವಿಗೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ನಟಿ, ಸಂಸದೆ ಸುಮಲತಾ ಅಂಬರೀಶ್, ನಟರಾದ ಕಿಚ್ಚ ಸುದೀಪ್, ದರ್ಶನ್, ಗಣೇಶ್, ಶಿವರಾಜ್ ಕುಮಾರ್, ಪುನೀತ್, ನಿರ್ದೇಶಕ ಚೈತನ್ಯ ಸೇರಿದಂತೆ ಸಿನಿಮಾ ರಂಗದ ಅನೇಕ ಗಣ್ಯರು ಚಿರು ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
    ನಟಿ ಸುಮಲತಾ ಅಂಬರೀಶ್ ತಮ್ಮ ಕುಟುಂಬದ ಜತೆಗಿನ ಚಿರು ಒಡನಾಟವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಇದನ್ನೂಓದಿ : ನಿನ್ನ ಮಡದಿಯ ಪರವಾಗಿ ನಾನಲ್ಲ.. ಯಾರೂ ನಿನ್ನನ್ನ ಕ್ಷಮಿಸೋದಿಲ್ಲ, ಅರ್ಧಕ್ಕೆ ಯಾತ್ರೆ ಮುಗಿಸಿದವನು ನೀನು ಅಂತ

    error: Content is protected !!