ಕಣ್ಣಿಗೆ ಕಾಣದ ವೈರಸ್ ಒಂದು ಇಡೀ ವಿಶ್ವವನ್ನೇ ಹೈರಾಣಾಗಿಸಿದೆ. ಕೇವಲ ಒಂದೆರಡು ತಿಂಗಳ ಲಾಕ್ ಡೌನ್ ಮನುಷ್ಯನ ಬದುಕಿಗೆ ತಂದಿಟ್ಟ ತಾಪತ್ರಯಗಳು ಅಷ್ಟಿಷ್ಟಲ್ಲ ಕೊರೋನಾ ಕಾಲದ ಲಾಕ್ ಡೌನ್ ನ ಆರಂಭದ ದಿನಗಳು ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡಿದೆ. ಅಬ್ಬಾ… ಇಷ್ಟು ಕಾಲ ಮಕ್ಕಳು, ಸತಿಪತಿ ಒಂದಾಗಿ ಒಟ್ಟಿಗೇ ಸಮಯ ಕಳೆದದ್ದು ಇದೇ ಮೊದಲೇನೋ ಎಂಬಂತೆ ಸಂಭ್ರಮಿಸಿದವರು ಇದ್ದಾರೆ.
ನಗರ ಜೀವನದಲ್ಲಿ ಪತಿ ಪತ್ನಿ ಇಬ್ಬರೂ ಹೊರಗೆ ಹೋಗಿ ದುಡಿಯುವ ವವರೆ. ಹಾಗಾಗಿ ಇಬ್ಬರ ನಡುವೆ ಮನೆ ಕೆಲಸ, ಮಕ್ಕಳ ಕೆಲಸ ಎಲ್ಲವೂ ಹಂಚಿಕೆಯಾಗಿ ಹೊಂದಾಣಿಕಯೇ ಜೀವನ ಎಂಬಂತಾಗಿತ್ತು.ಕೊರೋನಾ ಕಿರಿಕಿರಿಯಿಂದ ಹೆಚ್ಚಿನವರಿಗೆ ವರ್ಕ್ ಫ್ರಮ್ ಹೋಂ. ಹಂಚಿಕೆಯಾಗಿದ್ದ ಕೆಲಸ ಮನೇಲಿ ಇದ್ದೇವೆಲ್ಲ ಆಮೇಲೆ ಮಾಡಿದರಾಯಿತು ಎನ್ನುವ ಭಾವ. ಸ್ವಲ್ಪ ಹೊತ್ತಿನ ನಂತರ ನೀನು ಮಾಡು, ನೀನು ಮಾಡು. ಕೊನೆಗೆ ನೀನೇ ಮಾಡು ಎನ್ನುವ ಸಣ್ಣ ಸಣ್ಣ ಸಂಘರ್ಷ ಗಳು ಶುರುವಾಗುತ್ತವೆ.
ಕೊರೋನಾ ತಂದ ಬಿರುಕು
ಇದು ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಪತಿ ಪತ್ನಿಯ ಸಂಬಂಧದಲ್ಲಿ ಬದಲಾವಣೆ. ಪ್ರತಿದಿನದ ಸಣ್ಣ ಪುಟ್ಟ ವೈಮನಸ್ಸು ಸಂಸಾರದಲ್ಲಿ ದೊಡ್ಡ ಬಿರುಕು ಮೂಡಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಭಾರತ ಮತ್ತು ಚೈನಾದಲ್ಲಿ ಕೌಟುಂಬಿಕ ಕಲಹದ ಕಾರಣ ಕೊಟ್ಟು ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಹೆಚ್ಚಿದೆ .
ಮತ್ತೊಂದು ಕಡೆ, ಉದ್ಯಾನಗಳಲ್ಲಿ, ಕಾಫಿ ಡೇ, ಮಾಲ್, ಸಿನಿಮಾ ಅಂತೆಲ್ಲ ಕೈ ಕೈ ಹಿಡಿದು ಸುತ್ತಾಡುವ ಕನಸು ಕಂಡಿದ್ದ ಮನಸುಗಳಿಗೆ ಕೊರೋನಾ ತಣ್ಣೀರೆರಚಿದೆ. ಇದರಿಂದಾಗಿ ಹೆಚ್ಚಿನ ಜನರು ಆನ್ಲೈನ್ ಡೇಟಿಂಗ್ ಮಾಡುತ್ತಿರುವುದು ಕೂಡಾ ಇತ್ತೀಚಿನ ಟ್ರೆಂಡ್ ಆಗಿದೆ. ಹೆಚ್ಚಿನವರಿಗೆ ಕೊರೋನಾ ಕಾಟ ಸಂಪೂರ್ಣ ಮುಗಿದರೆ ಸಾಕು, ಯಾವಾಗ ಒಮ್ಮೆ ಹೊರಗೆ ಹೋಗುತ್ತೇನೆ ಎಂದು ಕಾಯುವಂತಾಗಿದೆ.ಯಾಕೆಂದರೆ ಸಂಬಂಧ ಹೇಗೇ ಇರಲಿ, ಅದೆಷ್ಟೇ ಚೆನ್ನಾಗಿರಲಿ ಪ್ರತಿಯೊಬ್ಬರೂ ಕೂಡಾ ಒಂದಷ್ಟು ಹೊತ್ತು ಏಕಾಂತವನ್ನು ಬಯಸುತ್ತಾರೆ .ಮಾತ್ರವಲ್ಲ ಸಂಬಂಧದಲ್ಲಿ ಸಣ್ಣದೊಂದು ಸ್ಪೇಸ್, ಪ್ರೈವಸಿ ಇರಲೇಬೇಕು.
ದೂರದಲ್ಲೇ ಇರಲಿ
ಸಂಸಾರದಲ್ಲಿ ವ್ಯಕ್ತಿಯ ಬೆಲೆ ತಿಳಿಯುವುದು ದೂರ ದೂರ ಇದ್ದಾಗಲೇ. 24×7 ಜತೆಗೇ ಇರುವುದು ಅಂದ್ರೆ ಕಿರಿ ಕಿರಿ ಅನ್ನಿಸದೇ ಇರಲಾರದು. ಒಂದು ಮಾತಿದೆ. ಚಿಕ್ಕ ಮಗುವನ್ನು ಬಿಗಿಯಾಗಿ ಅಪ್ಪಿ ಒಂದಷ್ಟು ಹೊತ್ತು ಎತ್ತಿಕೊಳ್ಳಿ. ಅದು ಸ್ವಲ್ಪ ಹೊತ್ತಲ್ಲೇ ಜಾರಿ ಇಳಿದುಕೊಳ್ಳುವ ಪ್ರಯತ್ನ ಮಾಡುತ್ತಿರುತ್ತದೆ. ಅದೇ ಮಗುವನ್ನು ಸ್ವಲ್ಪ ಹೊತ್ತು ಎತ್ತಿ ಮುದ್ದಾಡಿ ಅದರ ಪಾಡಿಗೆ ಬಿಟ್ಟು ಬಿಡಿ. ಮತ್ತೆ ಅದಾಗಿಯೇ ನಮ್ಮೆಡೆಗೆ ಖುಷಿಯಿಂದ ಅರಸಿ ಬರುತ್ತದೆ. ಹಾಗೆಯೇ ಪ್ರತಿಯೊಬ್ಬರಿಗೂ ಒಂದಷ್ಟು ಹೊತ್ತು ಸ್ವಾತಂತ್ರ್ಯ ಬೇಕು.
ದೂರ ಇದ್ದಾಗ ಪರಸ್ಪರ ಕೊಡುವ ಮಹತ್ವ ಒಟ್ಟಿಗೇ ಇದ್ದಾಗ ಕೊಡುವುದು ಕಡಿಮೆ. ಒಟ್ಟಿಗೇ ಇರ್ತಿವಲ್ಲ ಅನ್ನೋ ಭಾವ. ದೂರ ಇದ್ದಾಗ ವಿಡಿಯೋ ಕಾಲ್, ಚಾಟಿಂಗ್, ಎಲ್ಲವನ್ನೂ ಹಂಚಿಕೊಳ್ಳುವ ಆ ಸಮಯ ಕ್ವಾಲಿಟಿ ಟೈಮ್ ಆಗಿರುತ್ತದೆ.
ದೂರದಲ್ಲಿ ಇದ್ದಾಗ ಬರುತ್ತಿದ್ದ ಫೋನ್ ಕಾಲ್, ಮೆಸೇಜ್, ಕೆಲ್ಸಕ್ಕೆ ಹೊರಟಾಗ ಮಾಡುವ ವಿಷ್…. ಇವೆಲ್ಲವೂ ಈ ಸಂದರ್ಭದಲ್ಲಿ ಮಿಸ್ ಆಗಿರುತ್ತದೆ. ಅಂದರೆ ಜತೆಗಿದ್ದಾಗ ಇದ್ಯಾವುದೂ ಇರುವುದಿಲ್ಲ. ಹೆಚ್ಚು ಸಮಯ ಜತೆಗಿದ್ದಷ್ಟು ನಮ್ಮೆಡೆಗೆ ಒಂದು ಅಸಡ್ಡೆ ಗುಡ್ಡೆ ಹಾಕಿಕೊಂಡು ಕುಳಿತು ಬಿಡುತ್ತದೆ. ದೂರ ಇದ್ದಷ್ಟು ಹೊತ್ತು ನಮ್ಮನ್ನು ಕಾಯುವಂತೆ, ಕಾಡುವಂತೆ, ಪ್ರೀತಿಯ ಜಗಳ ಮಾಡುವಂತೆ ಮಾಡುತ್ತದೆ. ಯಾರೇ ಆದರೂ ಸರಿ ಪದೇ ಪದೆ ಗಮನಿಸುತ್ತಿರುತ್ತಾರೆ ಅಂತನಿಸಿದರೆ ಕಿರಿ ಕಿರಿಯಗುವುದು ಸಹಜ. ಹಾಗಾಗಿ ಆತನ ಅಥವಾ ಆಕೆಯ ಅನುಪಸ್ಥಿತಿಯನ್ನು ಅನುಭವಿಸಲು ಒಂಚೂರು ಸ್ಪೇಸ್ ಕೊಟ್ಟು ಕೊಳ್ಳಬೇಕು.
ಕೌಟುಂಬಿಕ ಕಲಹಗಳು ಹೆಚ್ಚಳ
ಕೋರೋನಾದಿಂದ ಕೌಟುಂಬಿಕ ಕಲಹಗಳು ಹೆಚ್ಚಾಗಿವೆ. ನ್ಯಾಷನಲ್ ಲೀಗಲ್ ಸರ್ವೀಸ್ ಅಥಾರಿಟಿ NALSA ಮಾಡಿದ ಸಮೀಕ್ಷೆ ಪ್ರಕಾರ ನಮ್ಮ ದೇಶದಲ್ಲಿ ಕಳೆದ 2 ತಿಂಗಳುಗಳಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗಿವೆ.
ಲಾಕ್ ಡೌನ್ ಸಮಯದಲ್ಲಿ ವೃತ್ತಿ, ಸಾಮಾಜಿಕ ಬದುಕಿನಲ್ಲಾದ ಬದಲಾವಣೆ ತರುವ ಚಿಂತೆ, ಒತ್ತಡಗಳನ್ನೂ ತನ್ನವರ ಮೇಲೇ ತೋರ್ಪಡಿಸುವುದರಿಂದ ಕಲಹ ಜಾಸ್ತಿ.
ಸುಷ್ಮಸಿಂಧು, ಮನಃಶಾಸ್ತ್ರಜ್ಞೆ
ಉತ್ತರಖಂಡ ದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಹರಿಯಾಣ, ದೆಹಲಿ 3ನೆ ಸ್ಥಾನದಲ್ಲಿದೆ. ಬೇರೆ ಬೇರೆ ರಾಜ್ಯಗಳ ಕಾನೂನು ಸೇವಾ ಕೇಂದ್ರದಿಂದ ಪಡೆದುಕೊಂಡ ಮಾಹಿತಿಯನ್ನಾಧರಿಸಿ ಈ ವರದಿಯನ್ನು ಬಿಡುಗಡೆ ಮಾಡಿತ್ತು.ತೆಲಂಗಾಣದಲ್ಲಿ ಕೂಡಾ ಇಂಥ ಪ್ರಕರಣಗಳು ಹೆಚ್ಚಿವೆ.
ರಾಷ್ಟೀಯ ಮಹಿಳಾ ಆಯೋಗಕ್ಕೆ ಬಂದಿರುವ ದೂರುಗಳನ್ನು ಗಮನಿಸಿದರೆ ಕರ್ನಾಟಕ ದಲ್ಲೂ ಕೌಟುಂಬಿಕ ದೌರ್ಜನ್ಯ ವರದಿಗಳು ಹೆಚ್ಚಾಗಿರುವುದನ್ನು ಗಮನಿಸಬಹುದು.
ಮಾರ್ಚ್ 1ರಿಂದ ಏಪ್ರಿಲ್ 22 ರವರೆಗಿನ ವರದಿ ಪ್ರಕಾರ ಬೆಂಗಳೂರು ನಲ್ಲಿ 40, ಬೆಳಗಾವಿ 11, ಮಂಡ್ಯ 10, ಕಲ್ಬುರ್ಗಿ 10, ರಾಮನಗರ 9, ರಾಯಚೂರು ನಲ್ಲಿ 9 ಪ್ರಕರಣಗಳು ದಾಖಲಾಗಿವೆ.
ನಮ್ಮಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ
ಇಟಲಿ ಯಲ್ಲಿ ಶೇ.30 ರಷ್ಟು ಡಿವೋರ್ಸ್ ಕೇಸ್ ಗಳು ಹೆಚ್ಚಾಗಿವೆ ಎಂದು ‘ದ ಟೆಲಿಗ್ರಾಫ್ ‘ ವರದಿ ಮಾಡಿತ್ತು. ಚೀನಾ, ಸೌದಿ ಅರೇಬಿಯಾದಲ್ಲೂ ಶೇ.40 ರಷ್ಟು ಪ್ರಕರಣಗಳು ಹೆಚ್ಚಿವೆ.
ಯುರೋಪಿನಲ್ಲಿ ಶೇ. 60 ರಷ್ಟು ಪ್ರಕರಣಗಳು ಹೆಚ್ಚಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ಕಚೇರಿ ಇತ್ತೀಚೆಗೆ ಮಾಹಿತಿ ನೀಡಿತ್ತು. ಲಾಕ್ ಡೌನ್ ಮುಂದುವರಿದ ರೆ ಮುಂದಿನ 6 ತಿಂಗಳುಗಳಲ್ಲಿ ವಿಶ್ವದಾದ್ಯಂತ 31 ಮಿಲಿಯನ್ ಗೂ ಅಧಿಕ ಪ್ರಕರಣಗಳು ದಾಖಲಾಗುವ ಆತಂಕ ವ್ಯಕ್ತಪಡಿಸಿದೆ.
ಕೂಸು ಬಡವಾಗದಿರಲಿ
* ಮನೆಯಲ್ಲಿ ಇಡೀ ದಿನ ಜತೆಗೇ ಕಳೆಯುವುದ್ರಿಂದ ಪರಸ್ಪರ ಅರ್ಗುಮೆಂಟ್ ಆಗುತ್ತಲೇ ಇರುತ್ತದೆ. ಇಬ್ಬರ ನಡುವೆ ನಡೆಯುವ ವಾಗ್ವಾದ ವನ್ನು ಗೌರವಯುತವಾಗಿ ಬಗೆಹರಿಸಿಕೊಳ್ಳಬೇಕು.
*ಇಬ್ಬರ ಜಗಳದಿಂದ ಕೂಸು ಬಡವಾಯಿತು ಅಂತಾರೆ. ಅದಷ್ಟೇ ಅಲ್ಲ ಇಬ್ಬರ ನಡುವೆ ನಡೆಯುವ ನಾನು ಸರಿ ನೀನು ತಪ್ಪು ಎನ್ನುವ ವಾದದಿಂದ ಕೊನೆಗೆ ಉಳಿಯುವುದು : ಪರಸ್ಪರ ತಪ್ಪು ತಿಳಿಯುವುದು, ನೋವು, ಬೇಸರ, ಹತಾಶೆ ಅಷ್ಟೆ.
* ಜತೆಗೇ ಒಂದಷ್ಟು ಹೊತ್ತುಸಮಯ ಮೀಸಲಿಡುವುದು, ಒಬ್ಬರನ್ನೊಬ್ಬರು ಸಪೋರ್ಟ್ ಮಾಡಿಕೊಳ್ಳುವುದು, ಒಪ್ಪಿಕೊಳ್ಳುವುದು ಕೂಡಾ ಇಂಪಾರ್ಟೆಂಟ್.
ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಮ್ಮ ಅಂತರಾಳವ/ ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯು ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ//
ಕವಿ ಎಚ್ ಎಸ್ ವೆಂಕ ಟೇಶಮೂರ್ತಿ ಅವರ ಈ ಭಾವಗೀತೆ ಯನ್ನು ಸಂಸಾರವೆಂಬ ಕಡಲಿನ ದೋಣಿಗೂ ಹೋಲಿಕೆ ಮಾಡಿಕೊಳ್ಳಬಹುದೇನೋ?
ಫೋಟೋ ಕೃಪೆ : Jasmine Carter from Pexels