ಜನಸಾಮಾನ್ಯರು ಕಂಟಕಕ್ಕೆ ಸಿಕ್ಕು ಹೊರಬರಲು ದಾರಿ ಹುಡುಕುವಾಗ ಅವರ ಅಸಹಾಯಕತೆಗಳನ್ನು ಅಗತ್ಯಗಳನ್ನು,ಅಜ್ಞಾನದ ಪರಿಸ್ಥಿತಿಯನ್ನೇ ತಮ್ಮ ಲಾಭಕ್ಕೆ ಉಪಯೋಗಿಸಿಕೊಳ್ಳುವ ಘಾತಕರು ಎಲ್ಲೆಡೆ ಇದ್ದಾರೆ. ದುರದೃಷ್ಟವಶಾತ್ ಅದು ಮನುಷ್ಯನ ಒಂದು ಮೃಗೀಯ ಗುಣವೂ ಹೌದು.
ಕರೋನ ವೈರಸ್ಸಿನ ಕಾರಣ ಲಾಕ್ ಡೌನ್ ಶುರುವಾಗಿ ಸಂಚಾರವನ್ನು ಸ್ಥಗಿತಗೊಳಿಸಿದ ನಂತರ ಆಗುತ್ತಿದ್ದ ರಸ್ತೆ ಅಪಘಾತಗಳು, ಪರಿಸರ ಮಾಲಿನ್ಯ, ಕಳ್ಳತನಗಳು, ಅನಾವಶ್ಯಕ ದುಂದು ಇತ್ಯಾದಿ ಕಡಿಮೆಯಾಗಿ ಜನರು ಒಂದು ರೀತಿಯ ನೆಮ್ಮದಿಯ ನಿಟ್ಟುಸಿರಿಟ್ಟರೂ, ಮತ್ತೊಂದೆಡೆ ಕೌಟುಂಬಿಕ ಕಲಹಗಳು, ವ್ಯಾಜ್ಯಗಳು ಜೊತೆಗೆ ಕರೋನಾ ವೈರಸ್ಸಿನ ಸ್ಥಿತಿಯನ್ನೇ ಬಳಸಿಕೊಂಡು ನಡೆಯುತ್ತಿರುವ ವಂಚನೆಯ ಪ್ರಕರಣಗಳು ಹೆಚ್ಚಾಗಿಬಿಟ್ಟಿವೆ. ಕರೋನಾ ತಂದಿರುವ ಸಾವು, ನೋವು, ಸೋಂಕು, ಆತಂಕಗಳ ಜೊತೆಗೆ ಅಂತರ್ಜಾಲ, ಫೋನುಗಳ ಮೂಲಕ ನಡೆಯುತ್ತಿರುವವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿದ್ದುಸಾರ್ವಜನಿಕರನ್ನು ಕಂಗೆಡಿಸಿವೆ.
ಲಾಕ್ ಡೌನ್ ಶುರುವಾದ ಕೂಡಲೇ ಬ್ಯಾಂಕುಗಳು ಬಾಗಿಲು ಹಾಕಿದವು. ನೋಟುಗಳ ಮೂಲಕ ಸೋಂಕು ಹರಡುವ ಭಯದಿಂದ ಕಾರ್ಡ್ ಗಳ ಬಳಕೆ ಹೆಚ್ಚಿತು.ದೇಶಗಳು ಹಲವು ವರ್ಗದ ಜನರಿಗೆ ಸರಕಾರಗಳು ಪರಿಹಾರವನ್ನು ಘೋಷಿಸಿದವು. ತೆರಿಗೆಯಲ್ಲಿ ಕಡಿತವನ್ನು ಘೋಷಿಸಿದವು ಅಥವಾ ತೆರಿಗೆ ಕಟ್ಟಲು ಹೆಚ್ಚು ಸಮಯವನ್ನು ನೀಡಿದವು.
ಸಂದರ್ಭ ತಂದ ಇಂತಹ ಪ್ರತಿಯೊಂದು ಬದಲಾವಣೆಗಳನ್ನು ವಂಚಕರು ತಮ್ಮ ಲಾಭಕ್ಕೆ ಬಳಸಿಕೊಂಡಿದ್ದಾರೆ. ಬ್ಯಾಂಕುಗಳು, ಸರಕಾರ, ಸಂಸ್ಥೆಗಳು ಜನರಿಗೆ ಉದಾರವಾಗಿ ಏನೇನನ್ನೋ ನೀಡುತ್ತಿದ್ದಾರೆ ಎಂದು ನಂಬಿಸಿ, ಅದನ್ನು ನಂಬುವ ಹುಂಬರ ಲೋಭವನ್ನು ತಮ್ಮ ವಯಕ್ತಿಕ ಗಳಿಕೆಯನ್ನಾಗಿ ಪರಿವರ್ತಿಸಿಕೊಂಡು ಟೋಪಿಹಾಕುತ್ತಿದ್ದಾರೆ.ಎಲ್ಲ ಕಾಲದಲ್ಲ ಇಂತಹ ವಂಚನೆಗಳು ನಡೆಯುವುದು ನಿಜವಾದರೂ ಕರೋನ ಕಾಲದಲ್ಲಿ ಜನರು ಮನೆಯಲ್ಲಿದ್ದು ಡಿಜಿಟಲ್ ಉಪಕರಣಗಳ ಬಳಕೆಯನ್ನು ಹೆಚ್ಚಿಸಿರುವ ಕಾರಣ ಈಡಿಜಿಟಲ್ ವಂಚನೆಗಳು ಇದೀಗ ಮತ್ತೂ ಹೆಚ್ಚಿವೆ.
ಲಾಕ್ ಡೌನ್ ಕಾಲದಲ್ಲಿಜೇಬುಗಳ್ಳತನ ಮಾಡಲು ರಸ್ತೆಯಲ್ಲಿ ಜನರಿಲ್ಲ. ಸದಾ ಜನರು ಮನೆಯಲ್ಲೇ ಇರುವ ಕಾರಣ ಮನೆಗಳ್ಳತನವಿಲ್ಲ. ಆದರೆ ಮನೆಯಲ್ಲಿರವ ಜನ ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಇಟ್ಟಿಕೊಳ್ಳಲು ಫೋನ್, ಅಂತರ್ಜಾಲ, ಸಾಮಾಜಿಕ ಜಾಲತಾಣಗಳು, ಇತ್ಯಾದಿ ಇ -ಜಗತ್ತಿನೊಡನಿನ ಸಂಪರ್ಕವನ್ನು ದಾಖಲೆಯ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ಜನರನ್ನು ದುರ್ವಂಚನೆಯ ಆಸೆ, ಆಮಿಷಗಳ ಗಾಳ ಎಸೆದು ಬರಿಗೈ ಮಾಡುತ್ತಿರುವ ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚಾಗಿವೆ. ಬ್ಯಾಂಕುಗಳ ಖಾತೆಯ ವಿವರ, ಎ.ಟಿ.ಎಂ. ಕೋಡ್ ಗಳ ವಿವರ ಮತ್ತು ವೈಯಕ್ತಿಕ ವಿವರಗಳನ್ನು ಕದಿಯುವವರು ಹೆಚ್ಚಾಗಿದ್ಡಾರೆ. ಕೋವಿಡ್ ತಂದಿರುವ ಆರ್ಥಿಕ ಬಿಕ್ಕಟ್ಟುಗಳ ಕಾರಣ ವಯಕ್ತಿಕ ಸಾಲಗಳನ್ನು ನೀಡುವ ಮೋಸಗಾರರ, ಲೋನ್ ಶಾರ್ಕ್ ಗಳ ಸಂಖ್ಯೆ ಹೆಚ್ಚುತ್ತಿದೆ.
ಗೋಪ್ಯವಾಗಿ ಎಲ್ಲೋ ಇದ್ದುಕೊಂಡು, ಫೋನ್ ಗಳ ಮೂಲಕ, ಅಂತರ್ಜಾಲದ ಮೂಲಕ, ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ವಂಚಿಸುತ್ತಿರುವ ಇವರು ಕೂಡ ಕೋವಿಡ್-19 ರಂತೆಯೇ ಕಣ್ಣಿಗೆ ಕಾಣದ ಶತ್ರುಗಳಾಗಿದ್ದಾರೆ.ಯಾವ ಆತ್ಮಸಾಕ್ಷಿಯೂ ಇಲ್ಲದ ಇವರಿಗೆ ತಾವು ವಂಚಿಸುವ ವ್ಯಕ್ತಿಗಳವಯಕ್ತಿಕ ಪರಿಸ್ಥಿತಿಗಳ ಬಗ್ಗೆ ಯಾವ ಕಾಳಜಿಯೂ ಇರುವುದಿಲ್ಲ. ನಿಜದಲ್ಲಿ ದುರ್ಬಲ ವ್ಯಕ್ತಿಗಳನ್ನೇ ಅವರು ಹುಡುಕುತ್ತಿರುತ್ತಾರೆ. ಕೋವಿಡ್ ದುರಂತದ ಸಮಯದಲ್ಲಿ ಹೆಚ್ಚಾಗಿರುವ ಇಂತಹ ಅನ್ಯಾಯಗಳು ಪೋಲೀಸರಿಗೆ ತಲೆನೋವಾಗಿವೆ.ಇದೀಗಾಗಲೇ ಬೆಳಕಿಗೆ ಬಂದಿರುವ ಪ್ರಕರಣಗಳು ಒಂದಷ್ಟಾದರೆ ಕ್ರಮೇಣ ತಿಳಿದು ಬಹದಾದ ಪ್ರಕರಣಗಳು ಅದರ ಹತ್ತರಷ್ಟಿರಬಹುದೆಂಬ ಅಂದಾಜಿದೆ. ಪ್ರಪಂಚದಾದ್ಯಂತ ಇವುಗಳ ಸ್ವರೂಪ ಹಲವು ಬಗೆಯದಾಗಿವೆ
ಟಿವಿ ನೋಡುವವರ ಸಂಖ್ಯೆ ಹೆಚ್ಚುತ್ತಿದ್ದಂತೆ, ಕರೋನ ವೈರಸ್ಸನ್ನು ತಡೆಯುತ್ತೇವೆಂಬ ಹಲವು ಸಾಮಗ್ರಿಗಳು ಮಾರುಕಟ್ಟೆಗೆ ಧಾಳಿಯಿಟ್ಟವು. ಅದಕ್ಕೆ ಯಾವುದೇ ಪುರಾವೆಯಿಲ್ಲದಿದ್ದರೂ, ಅವು ನಕಲಿಗಳೇ ಆದರೂ,ಮಾರುವವರು ಲಾಭಮಾಡಿದರು. ಅತ್ಯಂತ ಅಗತ್ಯವೆನಿಸಿದ ಮಾಸ್ಕ್ ಗಳಂತ ವಸ್ತುಗಳು ಸರಬರಾಜಿನಲ್ಲಿ ಕೊರತೆ ಕಾಣುತ್ತಿದ್ದಂತೆ ಅವನ್ನೇ ನಾಲ್ಕು ಪಟ್ಟು ದುಡ್ಡಿಗೆ ಮಾರಿದ ಅಂತರ್ಜಾಲ ಕಂಪನಿಗಳು ನ್ಯಾಯದರಗಳ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಜನರನ್ನು ಶೋಶಣೆ ಮಾಡಿದವು.ಕೆಲವು ಅಂತರ್ಜಾಲ ಕಂಪನಿಗಳು ಹಣ ಪಡೆದ ನಂತರ ವಸ್ತುಗಳನ್ನ ಕಳಿಸಲೇ ಇಲ್ಲ. ಇತರರು ಕಳಪೆ ಮೌಲ್ಯದ ವಸ್ತುಗಳನ್ನು ಮಾರುಕಟ್ಟೆಗೆ ಬಿಟ್ಟು ಜನರನ್ನು ವಂಚಿಸಿದವು.
ಉದಾಹರಣೆಗೆ ಲಂಡನ್ನಿನ ಒಂದು ಕಾರು ಗ್ಯಾರೇಜಿನಲ್ಲಿ ನಕಲಿ ಕರೋನ ಟೆಸ್ಟಿಂಗ್ ಕಿಟ್ ಗಳನ್ನು ಮಾರುತ್ತಿದ್ದುದನ್ನು ಪತ್ತೆ ಹಚ್ಚಿ ಅದನ್ನು ಪೋಲೀಸರು ವಶ ಪಡಿಸಿಕೊಂಡರು. ಇದೇ ಲಂಡನ್ನಿನ ಮತ್ತೊಂದು ಭಾಗದಲ್ಲಿ 5000 ನಕಲಿ ಮೌತ್ ಮಾಸ್ಕ್ ಗಳನ್ನು ಮತ್ತು ಮತ್ತು 2600 ನಕಲಿ ಸ್ಯಾನಿಟೈಸರ್ ಗಳನ್ನು ವಶಪಡಿಸಿಕೊಂಡರು.. ಇಂತಹ ಘಟನೆಗಳು ಭಾರತವೂ ಸೇರಿದಂತೆ ಎಲ್ಲೆಡೆ ಬೆಳಕಿಗೆ ಬಂದಿವೆ.
ಕರೋನ ಟೆಸ್ಟಿಂಗ್ ಕಿಟ್ ಗಳಲ್ಲಿ ಕೂಡ ಹಲವು ಕಂಪನಿಗಳು ಮೋಸದ ದಂಧೆ ನಡೆಸಿದ್ದಾರೆ. ಇವುಗಳು ನೀಡುತ್ತಿರುವ ಫಲಿತಾಂಶದ ಬಗ್ಗೆ ದೇಶ -ವಿದೇಶಗಳು ಅತ್ಯಂತ ಎಚ್ಚರಿಕೆಯನ್ನು ಕಾಯ್ದುಕೊಳ್ಳಲು ಹೆಣಗುತ್ತಿದ್ದಾರೆ. ಲೋಪಗಳಾದಲ್ಲಿ ಹಣ, ಆರೋಗ್ಯದ ಜೊತೆ ಲಾಕ್ಡೌನಿನ ಎಲ್ಲ ಲಾಭಗಳೂ ಹಗುರವಾಗಿ ಆವಿಯಾಗಿಬಿಡಬಹುದಾದ ಕಾರಣ ನಿಗಾ ವಹಿಸಬೇಕಾದ ನೈತಿಕ ಜವಾಬ್ದಾರಿ ಎಲ್ಲ ದೇಶಗಳ ಮೇಲಿದೆ. ಆರೋಗ್ಯ ಇಲಾಖೆ/ ವರ್ಗದಲ್ಲಿ ಕೆಲಸ ಮಾಡುವವರಿಗೆ ನೀಡಲಾಗುವ ಸ್ವಯಂ ರಕ್ಷಣ ಧಿರುಸುಗಳ ಆಮದು-ರಫ್ತಿನ ವಿಚಾರದಲ್ಲಿಯೂ ಅತಿ ದೊಡ್ಡ ವಿವಾದಗಳು ನಡೆದವು.ಕರೋನ ವಿಶ್ವ ವ್ಯಾಪಿ ಹೊಸ ವ್ಯಾಧಿಯಾದ ಕಾರಣಚೈನಾ ಟರ್ಕಿಗಳೂ ಸೇರಿದಂತೆ ಬಹುತೇಕ ರಾಷ್ಟ್ರಗಳು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಸರಬರಾಜು ವಂಚನೆಗಳನ್ನು,ಗುಮಾನಿಗಳನ್ನು ಎದುರಿಸಬೇಕಾಯ್ತು.
ಇನ್ನು ಖಾಸಗೀ ವಲಯದಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ದಂತ ವೈದ್ಯರು, ದಾದಿಯರು ಯಾವ ಕಂಪನಿಯ ಸ್ವಯಂ ರಕ್ಷಣ ಧಿರುಸುಗಳನ್ನು ನಂಬಿ ಖರೀದಿಸಬಹುದು?ಯಾವುದು ನಿಜ?ಯಾವುದು ಮೋಸ? ಎಂದು ತಿಳಿಯದೆ ಇಂದಿಗೂ ದ್ವಂದ್ವದಲ್ಲಿದ್ದಾರೆ. ಭಾರತವೂ ಸೇರಿದಂತೆ ವೈದ್ಯಕೀಯ ರಂಗ ಡೋಲಾಯಮಾನದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಈ ನಡುವೆ ಮನೆಗಳಲ್ಲಿ ಟಿವಿಯ ವೀಕ್ಷಣೆ ಹೆಚ್ಚಾಯಿತು.ಹಲವು ಖಾಸಗೀ ಚಾನಲ್ ಗಳಿಗೆ ಚಂದಾದಾರರ ಸಂಖ್ಯೆ ಅಧಿಕವಾಯಿತು.ಕೆಲವು ಖಾಸಗೀ ಕಾಮಪ್ರಚೋದಕ ಚಾನೆಲ್ ಗಳು ತಮ್ಮ ವಹಿವಾಟು ಹೆಚ್ಚಿಸಿ, ಇನ್ನೂ ಹೆಚ್ಚಿನ ಯುವತಿಯರನ್ನು ಈ ದಂಧೆಗೆ ನುಗ್ಗಿಸಿದ್ದಾರೆ.ಮೆಕ್ಸಿಕೋ ದಂತಹ ದೇಶಗಳಲ್ಲಿ ಮಾದಕ ವಸ್ತುಗಳ ಸರಬರಾಜಿನಲ್ಲಿ ಏರು ಪೇರು ನಡೆದ ಕಾರಣ ಅವುಗಳ ಬೆಲೆ ಗಗನ ಮುಟ್ಟಿ, ಬೇಡಿಕೆ ಹೆಚ್ಚಿದ ಕಾರಣ ನಕಲಿ ದ್ರವ್ಯಗಳು ಮಾರುಕಟ್ಟೆಯನ್ನುಪ್ರವೇಶಿಸಿ ಇನ್ನೂ ಹೆಚ್ಚಿನ ಬದುಕುಗಳನ್ನು ಬಲಿತೆಗೆದುಕೊಂಡಿವೆ.
ಕೆಲವು ಅಂತರ್ಜಾಲ ತಾಣಗಳಮೂಲಕ ರಾಜಕೀಯ ಪಕ್ಷಗಳು ಹಲವು ಅತ್ಯಂತ ಪ್ರಚೋದಕವಾದ ಮತ, ಧರ್ಮ, ಸ್ವದೇಶೀ ಪ್ರೇಮ ,ಅಸಹಿಶ್ಣುತೆ ಇತ್ಯಾದಿ ರಾಜಕೀಯಗಳ ವಿಚಾರಗಳನ್ನು ಕರೋನದ ಹೆಸರಲ್ಲಿ ಹರಿಯಬಿಟ್ಟು ಉದ್ರೇಕಿತ ಯುವ ಜನತೆಯಲ್ಲಿ, ಮುಗ್ದರಲ್ಲಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿ ಮತಗಟ್ಟೆಗಳನ್ನು ಸೃಷ್ಟಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.ಇವರೆಲ್ಲರೂ ಅಮಾನವೀಯ ವಂಚಕ ಅವಕಾಶವಾದಿಗಳೇ. ಇದು ಕೂಡ ಅಮೇರಿಕಾದಿಂದ ಹಿಡಿದು ಭಾರತದವರೆಗೆ ಹಬ್ಬಿದ ವಿಶ್ವವ್ಯಾಪಿ ವಂಚನೆಯ ವಿಚಾರವಾಗಿದೆ.ದೇಶವೊಂದರ ಮಟ್ಟದಲ್ಲಿ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಡೆದ ರಾಜಕೀಯ ವಂಚನೆಗಳಲ್ಲಿ ಕರೋನವನ್ನು ಅಧಿಕೃತವಾಗಿ ಬಳಸಲಾಗಿರುವುದು ಈ ಸಮಯದಲ್ಲಿ ಜೀವಗಳನ್ನು ಉಳಿಸಲು ಪ್ರಾಣದ ಹಂಗು ತೊರೆದು ಹೋರಾಡಿದ ಎಲ್ಲರಿಗೂ ಭ್ರಮನಿರಸನವನ್ನು ಉಂಟು ಮಾಡಿದೆ.
ಮುಖ್ಯವಾಗಿ ವಂಚನೆಗಳು ನಡೆದದ್ದು ಹಣಕ್ಕಾಗಿ. ಲಾಕ್ ಡೌನ್ ಶುರುವಾದ ಕೂಡಲೇ “ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್ಟುಗಳು ಎಲ್ಲರಿಗೂ ಉಚಿತವಾಗಿ ವೋಚರ್ ಗಳನ್ನು ನೀಡುತ್ತಿದ್ದಾರೆ. ನಿಮ್ಮ ಮಾಹಿತಿಗಳ ನೊಂದಾವಣೆ ಮಾಡಿ “ ಎನ್ನುವ ವಾಟ್ಸ್ಯಾಪ್ ಮೆಸೇಜುಗಳು ಹರಿದಾಡಿದವು.ಜನರ ವೈಯಕ್ತಿಕ ವಿವರಗಳನ್ನು ಪಡೆದು ಅವುಗಳನ್ನು ಹಲವರಿಗೆ ಮಾರಿಕೊಳ್ಳುವ ಹುನ್ನಾರ ನಡೆಸಿದವು.
ತೆರಿಗೆ ಅಧಿಕಾರಿಗಳೇ ಕರೆ ಮಾಡುತ್ತಿದ್ದಾರೇನೋ ಎನ್ನುವ ರೀತಿಯಲ್ಲಿ ಜನರಿಗೆ ದೂರವಾಣಿ ಕರೆಗಳು ಬಂದವು. “ ನೀವು ಇಂತಿಷ್ಟು ತೆರಿಗೆ ಪಾವತಿ ಮಾಡಿಲ್ಲ, ಈ ಕೂಡಲೇ ಇಂತಹ ಬ್ಯಾಂಕಿನ ಖಾತೆಗೆ ಹಣ ಕಟ್ಟದಿದ್ದರೆ ಇಷ್ಟು ದಂಡ ವಸೂಲಿ ಮಾಡುತ್ತೇವೆ “ ಎಂಬ ಬೆದರಿಕೆಗಳು ಹರಿದಾಡಿದವು.
ನಿಮ್ಮ ಟಿ.ವಿ. ಲೈಸನ್ಸ್ ಅಥವಾ ಅಮಜಾನ್ ಪ್ರೈಮ್ ಲೈಸನ್ಸ್ ಮುಗಿದಿದೆ. ತಕ್ಷಣ ಹಣ ಕಟ್ಟಿ ಅದನ್ನು ಮುಂದುವರೆಸಿ ಎನ್ನುವ ಪೊಳ್ಳು ಸಂದೇಶಗಳು, ಮಿಂಚಂಚೆಗಳು ಹರಿದಾಡಿ ಕೊಟ್ಟ ಖಾತೆಗೆ ಹಣ ಕಟ್ಟದಿದ್ದರೆ ನಮಗೆ ಹೊರಗಿನ ಸಂಪರ್ಕ ಕಡಿಯುತ್ತದೆ ಎಂಬ ಆತಂಕವನ್ನು ಜನರಲ್ಲಿ ಸೃಷ್ಟಿಸುವ ಮಾಹಿತಿಗಳನ್ನು ಕಳಿಸುವ ಮೂಲಕ ವಂಚಕರು ಯತ್ನಿಸಿದ್ದಾರೆ.ಆ ಮೂಲಕ ಹಣ ಮಾಡುವ ಯತ್ನದಲ್ಲಿ ತೊಡಗಿಕೊಂಡಿದ್ದಾರೆ.
ಸರ್ಕಾರ ನಿಮಗೆ ಇಂತಿಷ್ಟು ಪರಿಹಾರಧನವನ್ನು ನೀಡಿದೆ. ಅದನ್ನು ನಿಮ್ಮ ಖಾತೆಗೆ ವರ್ಗಾಯಿಸಲು ನಿಮ್ಮ ಬ್ಯಾಂಕಿನ ಎಲ್ಲ ವಿವರಗಳು ಬೇಕು ಎಂದು ಕೇಳಿ ಆ ಮೂಲಕ ನಂಬಿಕೆಯಿಂದ ಮಾಹಿತಿಗಳನ್ನು ನೀಡಿದ ಜನರ ಬ್ಯಾಂಕಿನಲ್ಲಿದ್ದ ಹಣವನ್ನು ದೋಚುತ್ತಿದ್ದಾರೆ.
ಕೋವಿಡ್ ನ ಕಾಲದಲ್ಲಿ ಸರ್ಕಾರ ಮತ್ತು ದಾನಿಗಳು ಎಲ್ಲರಿಗೂ ಉಚಿತ ಹಣ ನೀಡಿದ್ದಾರೆ.ಈ ಲಾಭವನ್ನು ನಿಮ್ಮದಾಗಿಸಿಕೊಳ್ಳಲು ಈ ಕೊಂಡಿ/ಲಿಂಕನ್ನು ಒತ್ತಿ ಎಂದು ಪುಸಲಾಯಿಸಿ ಕಂಪ್ಯೂಟರ್/ ಫೋನ್ ಗಳ ಮೂಲಕ ಬ್ಯಾಂಕುಗಳ ಖಾತೆಗಳನ್ನು ಹ್ಯಾಕ್ ಮಾಡಲು ಅವಿರತ ಪ್ರಯತ್ನಗಳು ನಡೆದಿವೆ. ಡೋಮಿನೋ ಪಿಝ್ಝ ಗಳನ್ನು ಎಲ್ಲರಿಗೂ ಉಚಿತವಾಗಿ ನೀಡಲಾಗುತ್ತಿದೆ,ಇದಕ್ಕಾಗಿ ರಿಜಿಸ್ಟರ್ ಮಾಡಿ ಎನ್ನುವ ನಕಲಿ ಸಂದೇಶಗಳು ಬಂದವು.
ಕೋವಿಡ್ ಸಂತ್ರಸ್ತರಿಗೆ ಸಹಾಯಮಾಡಲು ದಾನ/ದೇಣಿಗೆ ನೀಡಿ ಎಂದು ಕೂಡ ಇಂತವರು ಜನರನ್ನು ವಂಚಿಸಬಹುದು. ಆದ್ದರಿಂದ ನಂಬಲರ್ಹವಾದ ಮೂಲಗಳಿಗೆ ಮಾತ್ರ ದಾನ ನೀಡುವುದು ಉತ್ತಮ.
ಈ ವಂಚಕರು ಎಲ್ಲ ಕಾಲದಲ್ಲೂ ತಮ್ಮ ಚಟುವಟಿಕಗಳನ್ನು ನಡೆಸುತ್ತಾರೆ. ಆದರೆ ಕೋವಿಡ್ ಕಾಲ ಅವರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ವಿಶ್ವವ್ಯಾಪಿ ಹೊಸವ್ಯಾಧಿ ( ಪ್ಯಾಂಡೆಮಿಕ್ )ತಂದಿರುವ ಆತಂಕಗಳನ್ನು ಶೋಷಿಸಲು ಅವರು ಇನ್ನಿಲ್ಲದಷ್ಟು ಪ್ರಯತ್ನ ನಡೆಸಿದ್ದಾರೆ.ಫೋನ್ ಮತ್ತು ಅಂತರ್ಜಾಲಗಳನ್ನು ಹೆಚ್ಚು ಹೆಚ್ಚು ಬಳಸುವ ಪಾಶ್ಚಾತ್ಯ ದೇಶಗಳಲ್ಲಿ ಇದರ ವ್ಯಾಪ್ತಿ ಮತ್ತೂ ಹೆಚ್ಚು.
ಇಂಗ್ಲೆಂಡಿನಲ್ಲಿ ಲಾಕ್ ಡೌನ್ ಶುರುವಾದದ್ದು ಮಾರ್ಚ್ 23 ರಿಂದ. ಅದಕ್ಕಿಂತ ಮುಂಚೆಯೇ ಅಂದರೆ ಮೊದಲ ಕೋವಿಡ್ ವಂಚನೆಯ ಪ್ರಕರಣ ಫೆಬ್ರವರಿ 9 ರಂದು ದಾಖಲಾಯ್ತು.ಅದೇ ತಿಂಗಳಲ್ಲಿ ಒಟ್ಟು ಇಪ್ಪತ್ತು ಪ್ರಕರಣಗಳು ದಾಖಲಾದವು. ಮಾರ್ಚಿ ತಿಂಗಳ ಮೊದಲ 13 ದಿನಗಳಲ್ಲೆ 46 ಪ್ರಕರಣಗಳುನೋಂದಾವಣೆಗೊಂಡವು. ಮಾರ್ಚ್ 18 ರ ವೇಳೆಗೆ Action fraud, ಕರೋನಾಗೆ ಸಂಭಂದಪಟ್ಟಂತ 196 ವಂಚನೆಗಳನ್ನು ದಾಖಲಿಸಿತು. ಒಟ್ಟಾರೆ ಈ ಪ್ರಕರಗಳಲ್ಲಿ ಜನಸಾಮಾನ್ಯರು 9 ಕೋಟಿ ಎಪ್ಪತ್ತು ಲಕ್ಷಗಳನ್ನು ಕಳೆದುಕೊಂಡಿದ್ದರು. ಲಂಡನ್ ಸಿಟಿ ಪೋಲೀಸರ ಪ್ರಕಾರ ಮೊದಲ ಒಂದು ತಿಂಗಳಲ್ಲಿ ಲಂಡನ್ ನಗರವೊಂದರಲ್ಲೇ ಇಂತಹ ವಂಚನೆಗಳು 400% ಅಧಿಕವಾದವು.
ನ್ಯೂಯಾರ್ಕ್ ಆಸ್ಪತ್ರೆಯಲ್ಲಿಯೂ ಇಂತಹ ಧಾಳಿಗಳು ನಡೆದವು. ಉದಾಹರಣೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಬಂದಂತಹ ಮಿಂಚಂಚೆಗಳು, ಡಿಸೀಸ್ ಕಂಟ್ರೋಲ್ ಮತ್ತು ಪ್ರೆವೆನ್ಶ್ ನ್ (DCP) ವಿಭಾಗದಿಂದ ಬಂದಂತೆ ಹಲವು ಕಡತಗಳನ್ನು ಅಂಟಿಸಿದ ಮಿಂಚಂಚೆಗಳು ಆಸ್ಪತ್ರೆಯ ಅಧಿಕಾರಿಗಳಿಗೆ ಬಂದವು. ಅವುಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಸೂಚನೆಗಳಿದ್ದವು.ಅದರಲ್ಲಿದ್ದ ಕೆಲವು ಕೋಡ್ ಗಳ ಮೂಲಕ ಕಂಪ್ಯೂಟರ್ ಗಳಲ್ಲಿದ್ದ ಇಡೀ ಡೇಟಾವನ್ನು ಕದಿಯುವ ಹುನ್ನಾರ ವಂಚಕರದಾಗಿತ್ತು.
ಆಸ್ಪತ್ರೆಯ ಕೆಲವು ಸಪ್ಪ್ಲೈಗಳು ಕೆಲವು ಲೋಪಗಳ ಕಾರಣ ನಿಂತುಹೋಗಿದೆಯೆಂದೂ, ತಕ್ಷಣ ಕೊಂಡಿ/ಲಿಂಕನ್ನು ಒತ್ತುವ ಮೂಲಕ ಅದನ್ನು ಬೇಗ ಕಳಿಸಿಕೊಡಲು ಸಾಧ್ಯವೆಂದೂ ಕೆಲವು ಮಿಂಚಂಚೆಗಳು ಬಂದವು. ಆದರೆ ಅದರ ಜೊತೆಯಲ್ಲಿಯೇ ಕಂಪ್ಯೂಟರ್ ವೈರಸ್ಸನ್ನು ಬಿಡಲಾಗಿತ್ತು.
“Carona live 1.1.” ಎನ್ನುವ ಆಂಡ್ರ್ಯಾಯ್ಡ್ ಫೋನ್ ಗಳಿಗಾಗಿ ಮಾಡಲಾದ ಮ್ಯಾಲ್ವೇರನ್ನು ಲಿಬ್ಯಾದ ಪ್ರಜೆಗಳು ಎದುರಿಸಬೇಕಾಯಿತು.ಇದನ್ನು ಡೌನ್ ಲೋಡ್ ಮಾಡಿಕೊಂಡ ನಂತರ ಅವರ ಉಪಕರಣಗಳಲ್ಲಿ ಸೈಬರ್ ವೈರಸ್ ಸೇರಿಕೊಂಡು ವಂಚನೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿತು.
ಭಾರತದಲ್ಲಿಯೂ ಈ ವಂಚನೆಯ ಪ್ರಕರಣಗಳು ದುಪ್ಪಟ್ಟಾದವು ಎನ್ನುತ್ತಾರೆKPMG India ಸಹಭಾಗಿತ್ವ ಹೊಂದಿದ ಅಖಿಲೇಷ್ ಟುತೇಜ.ಅವರ ಪ್ರಕಾರ ,ಟೆಕ್ನಾಲಜಿ ಮತ್ತು ಸೆಕ್ಯೂರಟಿ ಎರಡೂ ಜೊತೆ ಜೊತೆಯಲ್ಲೇ ಅರಳದಿದ್ದರೆ ಟೆಕ್ನಾಲಜಿ ಸೃಷ್ಟಿಸುವ ಡೇಟ ಎಲ್ಲರಿಗೂ ಲಭ್ಯವಾಗುತ್ತದೆ. ಸೆಕ್ಯೂರಿಟಿ ಕಲ್ಪಿಸುವಲ್ಲೇ ಬಹಳಷ್ಟು ಹಣವಿದೆ. ಹಾಗಾಗಿ ಕೆಲವು ಡೇಟಗಳಿಗೆ ಮಾತ್ರ ಸೆಕ್ಯೂರಿಟಿಯನ್ನು ಸೃಷ್ಟಿಸಲು ಸಾಧ್ಯ. ವ್ಯಕ್ತಿಗಳಿಗೆ ಸಂಬಂಧಿತ ಸೆಕ್ಯೂರಿಟಿ ಅನ್ನುವುದು ಆಯಾ ವ್ಯಕ್ತಿಯ ಅರಿವು, ಬಳಕೆ ಇನ್ನೂ ಹಲವು ವಿಚಾರಗಳನ್ನು ಅವಲಂಭಿಸಿದ ವಿಚಾರ. ಈ ಕಾರಣ ವಂಚಕರು ಸಾಮಾನ್ಯ ಜನತೆಯ ಮೂಲಕ ಮಾಹಿತಿಗಳನ್ನು ವಂಚನೆಗಳ ಮೂಲಕ ಪಡೆದು ಸೆಕ್ಯೂರಿಟಿಯನ್ನು ಸುಲಭವಾಗಿ ಭೇದಿಸಲು ಅವಿರತ ಪ್ರಯತ್ನ ಮಾಡುತ್ತಲೇ ಇರುತ್ತಾರೆ.
ಭಾರತದಲ್ಲಿ ಮತ್ತೊಂದು ಬಾರಿಗೆ ಟ್ರೂ ಕಾಲರ್ ಆಪ್ ಕೋಟ್ಯಾಂತರ ಜನರ ವಯಕ್ತಿಕ ಮಾಹಿತಿಗಳನ್ನು ಬರೇ ಒಂದು ಸಾವಿರ ಅಮೇರಿಕನ್ ಡಾಲರ್ ಗೆ ಮಾರಿಕೊಂಡಿತು ಎನ್ನುವ ಪುಕಾರು ಎದ್ದಿದ್ದೂ ಇದೇ ಕಾಲದಲ್ಲಿ ಎನ್ನುವುದು ಮತ್ತೂ ಆತಂಕವನ್ನು ಸೃಷ್ಟಿಸಿತು. ಆ ಕಂಪನಿ ಸಮಾಧಾನ ಮತ್ತು ಸ್ಪಷ್ಟೀಕರಣ ಎರಡನ್ನೂ ನೀಡಬೇಕಾಯಿತು.
ಜನರಿಗೆ ಇ- ಜಗತ್ತಿನ ಅರಿವು ಮೂಡುವ ಮುನ್ನವೇ ಟೆಕ್ನಾಲಜಿಯ ವಶಕ್ಕೆ ತಳ್ಳುತ್ತಿರುವ ಈ ಪ್ರಪಂಚದಲ್ಲಿ ಇದೇ ಕಾರಣಕ್ಕೆ ಸೈಬರ್ ಕಳ್ಳತನಗಳು ಹೆಚ್ಚಾಗುತ್ತಿವೆ. ಕರೋನ ಅದಕ್ಕೆ ಒಳ್ಳೆಯ ಅವಕಾಶವನ್ನು ಸೃಷ್ಟಿಸಿದೆ.ಕರೋನ ಕಾಲದಲ್ಲಿ ಜನರು ತಮ್ಮ ಕೆಲಸ ದುಡ್ಡು ಇತ್ಯಾದಿಗಳ ಬಗ್ಗೆ ಆತಂಕಪಡಲು ಶುರುಮಾಡಿದ ಕೂಡಲೇ ಪ್ರಪಂಚದಲ್ಲಿ ವರ್ಚುಯಲ್ ವಂಚನೆಗಳ ಸಂಖ್ಯೆ ತ್ರಿಪಟ್ಟು ಜಾಸ್ತಿಯಾಯಿತು.
ಬಹಳಷ್ಟು ಜನರು ಈ ಬಗ್ಗೆ ಅರಿವನ್ನು ಹೊಂದಿ ಇಂತಹ ಆಸೆಗಳಿಂದ ಪಾರಾಗುತ್ತಾರಾದರೂ, ಒಂದಷ್ಟು ಜನರು ಇಂತಹ ವಂಚನೆಗೆ ತುತ್ತಾಗುತ್ತಲೇ ಇರುವ ಕಾರಣ ಈ ವಂಚಕರು ತಮ್ಮ ಪ್ರಯತ್ನಗಳನ್ನು ಮುಂದುವರೆಸುತ್ತಾರೆ. ಒದಗಿಬರುವ ಪ್ರತಿ ಬದಲಾವಣೆಗಳಿಗೆ ಹೊಂದಿಕೊಂಡು ಹೊಸ ಹೊಳಹುಗಳ ಮೂಲಕ ಜನರನ್ನು ವಂಚಿಸಲು ಮುಂದಾಗುತ್ತಾರೆ.ಅಂತರ್ಜಾಲ ಸೆಕ್ಯೂರಿಟಿ ಕಂಪನಿ ಸೊಹೋಸ್ ನಡೆಸಿದ ವಿಚಾರಣೆಯ ಪ್ರಕಾರ ಏಪ್ರಿಲ್ ನ ಮೊದಲ ವಾರದಲ್ಲಿ ಜಗತ್ತಿನ ಎಲ್ಲ ವಂಚನೆಯ ಪ್ರಕರಣಗಳಲ್ಲಿ ಕರೋನ ಸಂಭಂದಿತ ವಂಚನೆಗಳು 3% ಜಾಗವನ್ನ ಆಕ್ರಮಿಸಿದವು.
ವಂಚಕ ಮಿಂಚಂಚೆಗಳು (Phishing), ವಂಚಕ ಸಂದೇಶಗಳು(Smishing)ಬೇರೆಯವರು ಕಳಿಸಿರುವ ಸಂದೇಶಗಳನ್ನೇ ಮುಂದುವರೆಸಿದಂತೆ ಮಾಡಿ ಅವರದೇ ಹೆಸರಲ್ಲಿ ಬರುವ ಸುಳ್ಳು ಸಂದೇಶಗಳು (Spoofing ) ಹೀಗೆ ನಾನಾ ರೀತಿಯಲ್ಲಿ ವಂಚಕರ ಮಾಡುವ ಸಂಪರ್ಕ ವಿಧಾನಗಳನ್ನು ಸೈಬರ್ ಸೆಕ್ಯುರಿಟಿ ಸಂಸ್ಥೆಗಳು ಗುರುತಿಸುತ್ತವೆ.
ಇಂತಹದ್ದರಲ್ಲೂ ಟ್ರೋಜನ್ ಮತ್ತು ರ್ಯಾನ್ಸಮ್ ವೇರ್ ಎನ್ನುವ ಎರಡು ಬಗೆಯ ಮ್ಯಾಲ್ವೇರ್ ಗಳಿವೆ.
ಮೊದಲನೆಯದ್ದರಲ್ಲಿ ನೀವು ಡೌನ್ ಲೋಡ್ ಮಾಡಿಕೊಂಡ ಅಪ್ಲಿಕೇಶನ್ ಕಣ್ಣಿಗೆ ಕಾಣುವಂತೆ ಕೆಲಸಮಾಡುತ್ತಿರುತ್ತದೆ. ಆದರೆ ಅದರ ಜೊತೆಯಲ್ಲೇ ಬರುವ ವಂಚಕ ಮ್ಯಾಲ್ವೇರ್ ಹಿನ್ನೆಲೆಯಲ್ಲಿ ತನ್ನ ಕೆಟ್ಟ ಕೆಲಸವನ್ನು ಕಣ್ಣಿಗೆ ಕಾಣದಂತೆ ಮಾಡುತ್ತಿರುತ್ತದೆ. ಕೋವಿಡ್ ವಿಷಯದಲ್ಲೂ ಇಂತಹ AzorUlt Trojanಬರಬಹುದು.
ರ್ಯಾನ್ಸಮ್ ವೇರ್ ನಲ್ಲಿ ದೊರೆತ ಡೇಟವನ್ನು ಆಯಾ ಸಂಸ್ಥೆ, ಸರಕಾರ ಇತ್ಯಾದಿಗಳನ್ನು ಬ್ಲಾಕ್ ಮೇಲ್ ಮಾಡಲು ಬಳಸಲಾಗುತ್ತದೆ.
ಮೊಬೈಲ್ ಫೋನ್ ಗಳ ರ್ಯಾನ್ಸಮ್ ವೇರ್– ಕೆಲವು ಉಪಯೋಗಕಾರೀ ಅಪ್ಲಿಕೇಶನ್ ನಂತೆ ಕಾಣುವ ಆಪ್ ಗಳನ್ನು ವಂಚಕರು ಬಳಸುತ್ತಿದ್ದಾರೆ.ಉದಾಹರಣೆಗೆ , ’ಕರೋನ ವೈರಸ್ ಅಪ್ಡೇಟ್ ಆಪ್ ’ ಎಂದಿಟ್ಟುಕೊಳ್ಳಿ. ಅದನ್ನು ನಿಮ್ಮ ಮೊಬೈಲ್ ಗಳಲ್ಲಿ ಡೌನ್ ಲೋಡ್ ಮಾಡಿಕೊಂಡ ನಂತರ ಅದು ನಿಮ್ಮ ಇಡೀ ಫೋನ್ ನಲ್ಲಿರುವ ಎಲ್ಲ ಮಾಹಿತಿಗಳನ್ನು ಹ್ಯಾಕ್ ಮಾಡಬಹುದು. ಅಷ್ಟೇ ಅಲ್ಲದೆ ಅವರ ಇಡೀ ಫೋನಿನ ನಿಯಂತ್ರಣವನ್ನು ತಮ್ಮದಾಗಸಿಕೊಳ್ಳಬಹುದು. ನಿಮ್ಮದೇ ಫೋನ್ ನಂಬರನ್ನು ಬಳಸಿ ಇತರರಿಗೆ ಫೋನಾಯಿಸುವುದು, ಸಂದೇಶಕಳಿಸುವುದು ಇತ್ಯಾದಿಗಳನ್ನು ನಿಮಗೆ ತಿಳಿಯದಂತೆ ಯಾವುದೋ ರಿಮೋಟ್ ಪ್ರದೇಶದಲ್ಲಿ ಕುಳಿತು ಮಾಡಬಹುದು.ನೀವು ಮಾಡುವ ಎಲ್ಲವನ್ನು ಅವರು ಎಲ್ಲಿಯೋ ಕುಳಿತು ನಿಮಗೇ ಹೇಳುತ್ತ , ನಿಮ್ಮ ದೂರವಾಣಿಯನ್ನು ಸಂಪೂರ್ಣ ನಿಯಂತ್ರಿಸಿ ನಿಮ್ಮ ಕೈ ಕಟ್ಟಿ ಹಾಕಬಹುದು. ಡೊಮೈನ್ ಟೂಲ್ಸ್ ಎನ್ನುವ ಸಂಸ್ಥೆ ಕರೋನ ಹೆಸರಲ್ಲಿ ನಡೆದ ಇಂತಹ ವಂಚನೆಯ ಹೊಸ ಪ್ರಕರಣಗಳನ್ನು ಹೊರಗೆಳೆದಿದೆ.
ಇಂತಹ ವಂಚಕರು ಸಾಮಾನ್ಯ ಬಹಳ ಒತ್ತಡ ಹೇರುತ್ತಾರೆ. ಬೆದರಿಸುತ್ತಾರೆ. ಆತಂಕ ಹುಟ್ಟಿಸುತ್ತಾರೆ ಅಥವಾ ದೊಡ್ಡ ದೊಡ್ಡ ಆದಾಯವನ್ನು ಘೋಷಿಸುತ್ತಾರೆ. ಇವು ನಂಬಿಕೆಗೆ ಅರ್ಹವಾಗದ ಪ್ರಮಾಣದಲ್ಲಿರುತ್ತವೆ. ಮತ್ತೆ ಕೆಲವರು ಕಾರಣವೇ ಇಲ್ಲದೆ ನಮಗೆ ದುಡ್ಡು ನೀಡುವ ಪ್ರಮಾಣಗಳನ್ನು ನೀಡುತ್ತಾರೆ. ಅಥವಾ ಹಣ ಹೂಡಲು ಹೇಳಿ ದೊಡ್ಡದದ ಮೊತ್ತ ಕೈ ಸೇರುತ್ತದೆಂದು ಹೇಳುತ್ತಾರೆ.ಕೆಲವರು ನಂಬಲರ್ಹವಾದ ಕಂಪನಿಗಳ ಹೆಸರನ್ನು ಬಳಸಿ ವಂಚಿಸಲು ಈ ಪ್ರಯತ್ನಗಳನ್ನು ಮಾಡುತ್ತಾರೆ.
ಇವರು ತಾವೇ ಬ್ಯಾಂಕುಗಳು, ಸರ್ಕಾರಗಳು, ವಿಶ್ವ ಆರೋಗ್ಯ ಸಂಸ್ಥೆ, ಕೊನೆಗೆ ಯುನೈಟೆಡ್ ನೇಷನ್ಸ್ ಎಂಬೆಲ್ಲ ಹೆಸರುಗಳಲ್ಲಿಕೂಡ ಜನರನ್ನು ಸಂಪರ್ಕಿಸಿ ವಂಚಿಸುತ್ತಿದ್ದಾರೆ.
ನಿಮಗೆ ಗೊತ್ತಿಲ್ಲದ ಮಿಂಚಂಚೆಗಳನ್ನು ತೆರೆಯದಿರುವುದು. ಅಗತ್ಯವಿಲ್ಲದ ವಿಚಾರಗಳ ಕೊಂಡಿಗಳನ್ನು ಒತ್ತದಿರುವುದುಗೊತ್ತಿರದವರು ಕಳಿಸಿದ ವಿಚಾರಗಳನ್ನು ಡೌನ್ ಲೋಡ್ ಮಾಡಿಕೊಳ್ಳದಿರುವುದು.ನಿಮ್ಮ ವಿವರಗಳನ್ನು ಗೊತ್ತಿಲ್ಲದವರಿಗೆ ನೀಡದಿರುವುದು ಇತ್ಯಾದಿ ಎಚ್ಚರಿಕೆಗಳು ಕರೋನ ಕಾಲದಲ್ಲಿ ಇನ್ನೂ ಹೆಚ್ಚಾಗಿ ಬೇಕಾಗಿದೆ.
ಯಾವ ಉನ್ನತ ಸಂಸ್ಥೆಗಳೂ ( ಉದಾಹರಣೆಗೆ- ವಿಶ್ವ ಆರೋಗ್ಯ ಸಂಸ್ಥೆ) ಮೊದಲೇ ಸಾರ್ವಜನಿಕ ಹೇಳಿಕೆಗಳನ್ನು ನೀಡದೆ ವೈಯಕ್ತಿಕವಾಗಿ ನಿಮ್ಮನ್ನು ಕರೋನಾದ ಬಗ್ಗೆ ಸಂಪರ್ಕಿಸುವುದಿಲ್ಲ,ನಿಮ್ಮದೇ ಬ್ಯಾಂಕುಗಳ ಹೆಸರಲ್ಲೇ ಮಿಂಚಂಚೆ, ಸಂದೇಶಗಳು ಬಂದರೂ ಅವರು ನಿಮ್ಮ ಬ್ಯಾಂಕ್ ಕಾರ್ಡ್, ಬ್ಯಾಂಕ್ ಖಾತೆಗಳ ವಿವರಗಳನ್ನು ಕೇಳುವುದಿಲ್ಲ ಎಂಬುದನ್ನು ಇದೀಗ ಮತ್ತೆಹೇಳಿಕೊಳ್ಳುವ ಅಗತ್ಯ ಹೆಚ್ಚಾಗಿದೆ.ಬದುಕು ಮತ್ತೆ ಸಾಧಾರಣ ಸ್ಥಿತಿಗೆ ಮರಳಿದರೂ ಕರೋನ ಹೆಸರಲ್ಲಿ ಸೈಬರ್ ವಂಚನೆಗಳು ಫೋನ್ ಮತ್ತು ಅಂತರ್ಜಾಲದ ಮೂಲಕ ಮುಂದುವರೆಯುವುದು ಖಂಡಿತ. ಆದ್ದರಿಂದ ಈ ಬಗ್ಗೆ ಕಾಳಜಿಯಿರಲಿ. PICTURE COURTESY :DONALD TONG