26.3 C
Karnataka
Saturday, November 23, 2024
    Home Blog Page 178

    ಮರುಕಳಿಸುವುದೇ ಫುಡ್ ಸ್ಟ್ರೀಟ್‌ನ ಗತ ವೈಭವ?

    ಬೆಂಗಳೂರಿನ ಸಜ್ಜನ್ ರಾವ್ ಸರ್ಕಲ್ ಅಥವಾ ವಿ.ವಿ ಪುರಂ ಅಂದ್ರೆ ತಕ್ಷಣ ನೆನಪಾಗುವುದೇ ಫುಡ್ ಸ್ಟ್ರೀಟ್. ಈ ಹೈಫೈ ಉದ್ಯಾನ ನಗರಿಯಲ್ಲೂ ಹಳೆಯ ಬೆಂಗಳೂರನ್ನು ನೆನಪಿಸುವ ಅತ್ಯಂತ ಕಿರಿದಾದ ರಸ್ತೆಯಲ್ಲಿ ಸಂಜೆಯಾಗುತ್ತಿದ್ದಂತೆ ತೆರೆದುಕೊಳ್ಳುವ ಈ ಪುಟ್ಟ ಆಹಾರ ಲೋಕ ಬೆಂಗಳೂರಿಗರ ಆಹಾರ ರುಚಿಯನ್ನು ಪರಿಚಯಿಸುತ್ತದೆ. ಲಕ್ಷಗಟ್ಟಲೆ ವೇತನ ಪಡೆಯುವ ಐಟಿ ಉದ್ಯೋಗಿಗಳು, ಬಿಸ್ನೆಸ್‌ಮನ್‌ಗಳು, ಕಾರ್ಪೊರೇಟ್ ಉದ್ಯೋಗಿಗಳು, ಸದಾ ಕಾರಿನಲ್ಲೇ ತಿರುಗುತ್ತ ಕಾರಿನಿಂದ ಕೆಳಗಿಳಿಯಲೂ ಒಲ್ಲೆಯೆನ್ನುವವರು, ಕಾಲೇಜು ವಿದ್ಯಾರ್ಥಿಗಳು ಈ ಇಕ್ಕಟ್ಟಾದ ಫುಡ್ ಸ್ಟ್ರೀಟ್‌ನಲ್ಲಿ ಮಾತ್ರ ತಮ್ಮ ಅಂತಸ್ತು, ಗತ್ತು, ಗೈರತ್ತುಗಳನ್ನು ಮರೆತು ಎಲ್ಲರಲ್ಲೂ ಒಂದಾಗಿ ರುಚಿ ರುಚಿಯಾದ ತಿಂಡಿ ಸವಿದು ಸಂತೃಪ್ತರಾಗುತ್ತಾರೆ. ಅದುವೇ ಈ ಆಹಾರ ತಾಣದ ವಿಶೇಷ.

    ಅತ್ಯಂತ ಕಡಿಮೆ ಬೆಲೆಗೆ ಸುಮಾರು ಇನ್ನೂರಕ್ಕಿಂತಲೂ ಅಧಿಕ ತಿಂಡಿ ತಿನಿಸುಗಳು ಸಿಗುವ ಫುಡ್ ಸ್ಟ್ರೀಟ್ ಬೆಂಗಳೂರಿಗರಿಗೆ ಅತ್ಯಂತ ಮೆಚ್ಚಿನ ಆಹಾರ ತಾಣ. ಸ್ಥಳದಲ್ಲೇ ಬಿಸಿ ಬಿಸಿಯಾಗಿ ಮಾಡಿ ಕೊಡುವ ಮಸಾಲೆ ದೋಸೆ, ಬೆಣ್ಣೆ ದೋಸೆ, ತಟ್ಟೆ ಇಡ್ಲಿ, ಪಡ್ಡು ಚಟ್ನಿಯ ರುಚಿ, ಚಿತ್ರಾನ್ನ, ಲೆಮನ್ ರೈಸ್, ಆಗಷ್ಟೆ ಕರಿದು ತೆಗೆದ ಬಿಸಿ ಜಿಲೇಬಿ, ಗಾಜಿನ ಬಾಟಲಿಯೊಳಗಿರುವ ಕಜ್ಜಾಯ, ಕೊಬ್ಬರಿ ಮಿಠಾಯಿ, ರವೆ ಉಂಡೆ, ಫ್ರೆಶ್ ಹೋಳಿಗೆ, ಚಿರೋಟಿ ಹಾಲು, ಬಿಸಿ ಎಣ್ಣೆಯಲ್ಲಿ ಬೆಂದು ಅರಳುವ ಬಗೆ ಬಗೆಯ ಬಜ್ಜಿ, ಬೋಂಡಾ, ಮಸಾಲೆ ವಡೆ, ಮಿರ್ಚಿ, ಚಾಟ್ಸ್ ಪ್ರಿಯರಿಗೆ ಭೇಲ್‌ಪುರಿ, ಮಸಾಲ ಪೂರಿ, ದಹಿ ಪೂರಿ, ಕಟೋರಿ ಚಾಟ್, ವಡಾ ಪಾವ್, ಪಾವ್ ಭಾಜಿ, ಮಂಚೂರಿಯನ್, ಕಾರ್ನ್ ಮಸಾಲ, ರಸಗುಲ್ಲಾ, ತಣ್ಣನೆಯ ಕೆನೆಭರಿತ ಬಾದಾಮ್ ಮಿಲ್ಕ್, ಗುಲಾಬ್ ಜಾಮೂನ್, ಫ್ರೂಟ್ ಸಲಾಡ್ ವಿದ್ ಐಸ್‌ಕ್ರೀಮ್, ಫ್ರೂಟ್ ಸಲಾಡ್ ವಿದ್ ಗುಲ್ಕನ್, ಚುರುಮುರಿ, ನಿಪ್ಪಟ್ಟು ಮಸಾಲ, ಆಲೂ ಟ್ವಿಸ್ಟರ್, ವಾಸವಿ ಸ್ವೀಟ್ಸ್‌ನ ಅವರೆಕಾಯಿ ಮಿಕ್ಸ್‌ಚರ್, ಸಿಹಿ ತಿಂಡಿ, ವಿ.ಬಿ ಬೇಕರಿಯ ಕಾಂಗ್ರೆಸ್ ಬನ್, ಹನಿ ಕೇಕ್ ಇತ್ಯಾದಿಗಳು ಎಂದಿಗೂ ಮರೆಯಲಾಗದ ರುಚಿಗಳು.

    ಬೆಂಗಳೂರಿಗೆ ಬಂದವರು ಭೇಟಿ ನೀಡಲೇ ಬೇಕಾದ ಫುಡ್ ಸ್ಟ್ರೀಟ್‌ಗಳಲ್ಲಿ ಒಂದಾಗಿರುವ ಸಜ್ಜನ್ ರಾವ್ ಸರ್ಕಲ್‌ನ ಫುಡ್ ಸ್ಟ್ರೀಟ್‌ನಲ್ಲಿ ಸದ್ಯಕ್ಕೆ ತಿನಿಸುಗಳ ಘಮ ಬರುತ್ತಿಲ್ಲ. ಸತತ ಎರಡು ತಿಂಗಳ ಲಾಕ್‌ಡೌನ್‌ನಿಂದಾಗಿ ಸಂಪೂರ್ಣ ಮುಚ್ಚಿ ಹೋಗಿದ್ದ ಈ ಫುಡ್ ಸ್ಟ್ರೀಟ್‌ನಲ್ಲಿ ಕೆಲವು ಗೂಡಂಗಡಿಗಳು ಆರಂಭಗೊಂಡಿದ್ದರೂ ಈ ಆಹಾರ ಬೀದಿ ಮೊದಲಿನ ಗತ ವೈಭವಕ್ಕೆ ಮರುಳುವುದೇ ಎಂಬುದು ಆಹಾರ ಪ್ರಿಯರ ಪ್ರಶ್ನೆಯಾಗಿದೆ. ಈಗಿನ ಲಾಕ್‌ಡೌನ್ ತೆರವಾದರೂ ಕೊರೊನಾ ವೈರಸ್ ಹರಡುವ ಭೀತಿ ನಿಂತಿಲ್ಲದ ಕಾರಣ ಈ ಫುಡ್ ಸ್ಟ್ರೀಟ್ ಸದ್ಯಕ್ಕೆ ನೀರವವಾಗಿದೆ.

    ಅಂಗಡಿಗಳು ಆರಂಭವಾದರೂ ಜನರು ಈ ಮೊದಲಿನಂತೆ ಗುಂಪುಗೂಡುವುದು ಸಾಧ್ಯವಿಲ್ಲ ಮತ್ತು ಈಗಾಗಲೇ ಅತ್ಯಂತ ಇಕ್ಕಟ್ಟಾಗಿರುವ ಈ ತಾಣದಲ್ಲಿ ಸುರಕ್ಷಿತ ಅಂತರ ಮತ್ತು ಸ್ವಚ್ಛತೆ ಕಾಯ್ದುಕೊಳ್ಳುವುದು ಆಗದ ಮಾತು. ಅಲ್ಲದೆ ಈಗಿನ ಪರಿಸ್ಥಿತಿಯಲ್ಲಿ ಜನರು ಹೊರಗಡೆಯ ಆಹಾರ ಸೇವಿಸಲು ಕೂಡಾ ಹಿಂದೇಟು ಹಾಕುತ್ತಿರುವುದರಿಂದ ಫುಡ್ ಸ್ಟ್ರೀಟ್ ತನ್ನ ಆಕರ್ಷಣೆ ಕಳೆದುಕೊಳ್ಳುವ ಸಾಧ್ಯತೆಯೆ ಹೆಚ್ಚು. ಎರಡು ತಿಂಗಳ ಲಾಕ್‌ಡೌನ್‌ನಿಂದಾಗಿ ಅಲ್ಲಿನ ಸಣ್ಣ ಪುಟ್ಟ ವ್ಯಾಪಾರಿಗಳೂ ನಷ್ಟದಲ್ಲಿದ್ದು, ಸದ್ಯಕ್ಕೆ ಯಾರು ಕೂಡ ಮತ್ತೆ ತಮ್ಮ ಅಂಗಡಿಗಳನ್ನು ಆರಂಭಿಸುವ ಸ್ಥಿತಿಯಲ್ಲಿಲ್ಲ ಎಂದು ಸ್ಥಳೀಯ ಜನರು ಅಭಿಪ್ರಾಯಪಟ್ಟಿದ್ದಾರೆ.

    ಬೆಂಗಳೂರಿನಲ್ಲಿ ಅನೇಕ ಐಷಾರಾಮಿ ಆಹಾರ ತಾಣಗಳಿದ್ದರೂ ಸಜ್ಜನ್ ರಾವ್ ಸರ್ಕಲ್‌ನಲ್ಲಿರುವ ಫುಡ್ ಸ್ಟ್ರೀಟ್‌ನಲ್ಲಿ ನಿಂತುಕೊಂಡು ತಿನ್ನುವ ಖುಷಿಯನ್ನು ಬೇರೆ ಯಾವುದೂ ಕೊಡಲಾರದು. ಅದಕ್ಕೆ ಈ ತಾಣದಲ್ಲಿ ಅನೇಕ ರೆಸ್ಟೋರೆಂಟ್‌ಗಳಿರುವ ಚರ್ಚ್ ಸ್ಟ್ರೀಟ್‌ಗಿಂತಲೂ ಹೆಚ್ಚಿನ ಜನ ಸೇರುತ್ತಾರೆ. ನಿಲ್ಲಲು ಜಾಗವಿಲ್ಲದಿದ್ದರೆ ಕಾರಿನೊಳಗೆ ಕುಳಿತುಕೊಂಡೇ ತಿಂಡಿ ತರಿಸಿಕೊಂಡು ತಿನ್ನುವವರೂ ಇದ್ದಾರೆ. ಕೆಲವು ಸೆಲೆಬ್ರಿಟಿಗಳು ಇಲ್ಲಿಗೆ ಬಂದರೂ ಜನರು ತಮ್ಮನ್ನು ಗುರುತಿಸುತ್ತಾರೆ ಎಂದು ಹಾಗೂ ಕೆಲವರು ಇಂಥ ಚಿಕ್ಕ ತಾಣಕ್ಕೆ ಭೇಟಿ ಕೊಟ್ಟಿದ್ದು ಗೊತ್ತಾದರೆ ತಮ್ಮ ಪ್ರತಿಷ್ಠೆ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಐಷಾರಾಮಿ ಕಾರಿನೊಳಗೆ ಕುಳಿತುಕೊಂಡೇ ಇಲ್ಲಿನ ತಿಂಡಿಗಳನ್ನು ಸವಿದು ಹೋಗುವುದಿದೆ. ಆದರೆ ಈಗ ಈ ಫುಡ್ ಸ್ಟ್ರೀಟ್‌ನ ಆ ಹಳೆಯ ಖದರು ಮತ್ತೆ ಮರಳುವ ಸಾಧ್ಯತೆ ದೂರವಾಗಿದೆ ಎಂದು ಈ ಕಡೆ ಸುಮಾರು ಇಪ್ಪತ್ತು ವರ್ಷಗಳಿಂದ ಭೇಟಿ ನೀಡುತ್ತಿದ್ದ ಗ್ರಾಹಕ ಚಿನ್ನಸ್ವಾಮಿ ಹೇಳಿದ್ದಾರೆ.

    ಒಂದೊಮ್ಮೆ ಈಗಿನ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದರೂ ಸರ್ಕಾರದ ಕಠಿಣ ಮಾರ್ಗಸೂಚಿಗಳು ಮುಂದುವರಿಯಲಿವೆ. ರಸ್ತೆ ಬದಿಯಲ್ಲೇ ತಿಂಡಿಗಳನ್ನು ಮಾಡುವಾಗ ಈ ಮಾರ್ಗಸೂಚಿಗಳು ಉಲ್ಲಂಘನೆಯಾಗುವ ಸಾಧ್ಯತೆಯೆ ಹೆಚ್ಚು. ಈ ಹಿಂದೆಯೇ ಜನರ ಗುಂಪಿನಿಂದಾಗಿ ಈ ಪ್ರದೇಶಲ್ಲಿ ಸಂಜೆಯ ವೇಳೆ ಜನಜಂಗುಳಿ ಹೆಚ್ಚಾಗಿ ಜಾತ್ರೆಯಂಥ ವಾತಾವರಣ ಸೃಷ್ಟಿಯಾಗುತ್ತಿತ್ತು. ಇನ್ನು ಸುರಕ್ಷಿತ ಅಂತರ ಕಾಯ್ದುಕೊಂಡು ತಿಂಡಿ ತಿನ್ನಬೇಕಾದರೆ ಕೆ.ಆರ್ ಮಾರ್ಕೆಟ್ ಮತ್ತು ಲಾಲ್‌ಬಾಗ್‌ನಿಂದಲೇ ಜನರು ಫುಡ್ ಸ್ಟ್ರೀಟ್‌ಗೆ ಕ್ಯೂ ನಿಲ್ಲಬೇಕಾದೀತು ಎಂದು ಐಟಿ ಉದ್ಯೋಗಿ ಶಾಂತಿಲಾಲ್ ಹೇಳಿದ್ದಾರೆ.

    ನಾನು ಈಗಾಗಲೇ ಫುಡ್ ಸ್ಟ್ರೀಟ್‌ನ ಫ್ರೂಟ್ ಸಲಾಡ್ ವಿದ್ ಗುಲ್ಕನ್ ಮತ್ತು ಕ್ಯಾಪ್ಸಿಕಂ ಬಜ್ಜಿ ಮಸಾಲವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಫುಡ್ ಸ್ಟ್ರೀಟ್ ಯಾವಾಗ ಓಪನ್ ಆಗುತ್ತದೊ ಎಂದು ಕಾಯುತ್ತಿದ್ದೇನೆ ಎಂದು ಕಾಲೇಜು ವಿದ್ಯಾರ್ಥಿ ಸುನಿಲ್ ಹೇಳಿದ್ದಾರೆ.

    ವಿ.ವಿ ಪುರಂ ಫುಡ್ ಸ್ಟ್ರೀಟ್ ಬೆಂಗಳೂರಿಗೆ ಒಂದು ಅಪೂರ್ವವಾದ ದೃಶ್ಯಕಾವ್ಯವನ್ನೂ ಕಟ್ಟಿಕೊಡುತ್ತದೆ. ಸಂಜೆಯಾಗುತ್ತಿದ್ದಂತೆ ಗರಿಗೆದರುವ ಈ ಪ್ರದೇಶದಲ್ಲಿ ಒಂದೆಡೆ ವಾಹನಗಳ ನಿಬಿಡತೆ, ಇನ್ನೊಂದೆಡೆ ಕಾದ ಕಾವಲಿಯಲ್ಲಿ ಚುಯ್ಯೆಂದು ದೋಸೆಯನ್ನು ಚಕಚಕನೆ ಹೊಯ್ಯುವ ಕಲಾತ್ಮಕತೆ, ಕಾದ ಎಣ್ಣೆಯಲ್ಲಿ ಹೂವಿನಂತೆ ಅರಳುವ ಬೋಂಡಾ, ಬಜ್ಜಿಯನ್ನು ನೋಡಿ ಬಾಯಿ ನೀರೂರಿಸಿಕೊಂಡು ತಮ್ಮ ಸರದಿಗೆ ಕಾಯುವ ಜನರು, ತಡ ರಾತ್ರಿ ರೆಸ್ಟೋರೆಂಟ್‌ಗಳು ಬಾಗಿಲು ಮುಚ್ಚಿದರೂ ಫುಡ್ ಸ್ಟ್ರೀಟ್‌ಗೆ ಹೋದರೆ ಏನಾದರೂ ತಿನ್ನಲು ಸಿಗುತ್ತದೆ ಎಂಬ ಜನರ ವಿಶ್ವಾಸ ಇವೆಲ್ಲವೂ ಆ ಪುಟ್ಟ ಆಹಾರ ಲೋಕದೊಂದಿಗೆ ಜನರನ್ನು ‘ವನಾತ್ಮಕವಾಗಿಯೂ ಬೆಸೆದಿವೆ. ಬೆಂಗಳೂರಿನ ಆಹಾರ ಸಂಸ್ಕೃತಿಯೇ ಮೇಳೈಸಿರುವ ಫುಡ್ ಸ್ಟ್ರೀಟ್ ಮತ್ತೆ ಆರಂಭವಾಗುವುದೇ, ಆರಂಭವಾದರೂ ಎಂದಿನ ಆಪ್ತತೆ ಅಲ್ಲಿರುವುದೇ? ಗರಿ ಗರಿ ಮಸಾಲೆ ದೋಸೆ, ಹೋಳಿಗೆಯ ಹೂರಣ ರುಚಿಸುವುದೇ? ಏನು ತಿಂದರೆ ಏನಾಗುವುದೊ ಎಂಬ ಭಯ ಬಿಟ್ಟು ಜನರು ಫುಡ್ ಸ್ಟ್ರೀಟ್‌ನ ತಿಂಡಿಗಳನ್ನು ಸವಿಯುವರೇ ಎಂಬುದು ಸದ್ಯಕ್ಕೆ ಮಿಲಿಯನ್ ಡಾಲರ್ ಪ್ರಶ್ನೆ!

    ಭಯ ಬೇಡ. ರಾಜ್ಯದತ್ತ ಮಿಡತೆ ಬರುವುದಿಲ್ಲ

    ಹಾಮಾರಿ ಕೋರನಾ ಭೀತಿಯ ನಡುವೆಯೇ ಹಸಿರನ್ನು ತಿಂದು ಕಬಳಿಸುವ ಮಿಡತೆಗಳು ರಾಜ್ಯದತ್ತ ದಾಳಿ ಇಡುತ್ತಿವೆ ಎಂಬ ಸುದ್ದಿ ರಾಜ್ಯದ ರೈತಾಪಿ ವರ್ಗವನ್ನು ಕಂಗೆಡಿಸಿತ್ತು. ಆದರೆ ಆ ಭೀತಿ ಸದ್ಯಕ್ಕೆ ದೂರವಾಗಿದೆ. ಹೀಗೆಂದು ರಾಜ್ಯ ಕೃಷಿ ಸಚಿವರು ಹೇಳಿದ್ದಾರೆ.

    ಹಾಗಾದರೆ ಈ ಮಿಡತೆ ಏನು? ಇದು ಕರ್ನಾಟಕಕ್ಕೆ ದಾಳಿ ಇಡುವ ಭೀತಿ ಎದುರುದಾದ್ದರು ಹೇಗೆ ಎಂಬದನ್ನು ತಿಳಿದುಕೊಳ್ಳುವ ಸಲುವಾಗಿ  ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ  ಕೀಟ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಿ.ಎಂ. ಕಲ್ಲೇಶ್ವರ ಸ್ವಾಮಿ ಅವರನ್ನು ಕನ್ನಡಪ್ರೆಸ್.ಕಾಮ್ ಮಾತನಾಡಿಸಿತು. ಆ ಮಾತುಕತೆಯ ಸಂಗ್ರಹ ಇಲ್ಲಿದೆ

    ಕಲ್ಲೇಶ್ವರ ಸ್ವಾಮಿ

    ವಿಶ್ವದಲ್ಲಿ ಬಹಳಷ್ಟು ತರಹದ ಮಿಡತ ಪ್ರಭೇದಗಳಿದ್ದು, ಅವುಗಳಲ್ಲಿ ಸಿಸ್ಟೋಸೆರ್ಕಾರ ಗ್ರಿಗೇರಿಯಾ ಎಂಬುದು ಬಹಳ ಪ್ರಮುಖ ಮಿಡತೆಯಾಗಿದೆ ಇವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಾರುತ್ತ ದೊಡ್ಡ ಪ್ರಮಾಣದಲ್ಲಿ ಯಾವುದೇ ಅಡ್ಡ ಬರುವ ಹಸಿರು ಬೆಳೆಗಳನ್ನು ತಿನ್ನುತ್ತ ಮುನ್ನುಗುತ್ತದೆ. ಒಂದು ಸಮೂಹದಲ್ಲಿ  ಪ್ರತಿ  ಚದರ ಕಿಲೋಮಿಟರ್‌ಗೆ ೧೫೦ ಮಿಲಿಯನ್ ಮಿಡತೆಗಳು ಕಂಡು ಬರಬಹುದು.

     ಇದರ ಹಾನಿಯು ಉತ್ತರ ಭಾರತದ ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದ ನಾನಾ ಕಡೆ ಕಂಡು ಬರುತ್ತಿದೆ.  ಇವು ಮೂಲತ: ಆಫ್ರಿಕಾ, ಮಧ್ಯಪ್ರಾಚ್ಯ, ದಕ್ಷಿಣ ಮತ್ತು ನೈರುತ್ಯಾ ಏಷ್ಯಾದ ಅನೇಕ ದೇಶಗಳ ಮರುಭೂಮಿಗಳಿಂದ  ಹಾರಿಬರುತ್ತ ದಾಳಿ ಇಡುತ್ತಿವೆ.

    ಈ ತರಹದ ಹಾವಳಿ ಹಿಂದೆ ೧೯೨೬-೧೯೩೪, ೧೯೪೦-೧೯೪೮, ೧೯೪೯-೧೯೬೩, ೧೯೬೭-೬೯, ೧೯೮೭-೧೯೮೯, ೨೦೦೩-೨೦೦೫ ಮತ್ತು ೨೦೧೯-೨೦ ರಂದು ಸಂಭವಿಸಿದ್ದು ಈ ವರ್ಷ ಕೂಡ ಅತಿಯಾದ ರೀತಿಯಲ್ಲಿ ಹಾನಿಮಾಡುತ್ತಿವೆ.

    ಈ ಹರಡುತ್ತಿರುವ ಮಿಡತೆಗಳು ಕರ್ನಾಟಕಕ್ಕೆ  ಮಹಾರಾಷ್ಟ್ರದಿಂದ ಬರುವ ಸಾಧ್ಯತೆ ಇರಬಹುದು. ಆದರೆ ಈ  ಮೇಲೆ ತಿಳಿಸಿದ ವರ್ಷಗಳಲ್ಲಿ ಆದ ವರದಿಯ ಪ್ರಕಾರ ಯಾವ ವರ್ಷದಲ್ಲಿಯೂ ಇದರ ಹಾನಿಯು ದಕ್ಷಿಣ ಭಾರತಕ್ಕೆ ಬಂದಿಲ್ಲ. ಈಗಿನ ವರದಿಯ ಪ್ರಕಾರ ಗಾಳಿಯ ದಿಕ್ಕು ಉತ್ತರದ ಕಡೆ ಬೀಸುತ್ತಿರುವುದರಿಂದ ಕರ್ನಾಟಕಕ್ಕೆ ಬರುವ ಸಾಧ್ಯತೆ ಕಡಿಮೆ ಇದೆ. ಆದರೆ ಗಾಳಿಯ ದಿಕ್ಕು ಬದಲಿಸಿದರೆ ಮಿಡತೆಗಳ ಸಮೂಹ ನೆಡೆ ಕರ್ನಾಟಕದತ್ತ  ತಿರುಗುವ ಸಾಧ್ಯತೆ ಬಿಟ್ಟರೆ ಬಹುತೇಕವಾಗಿ ಬರುವ ಸಾಧ್ಯತೆ  ಕಡಿಮೆ ಇದೆ.

    ಮಿಡತೆಗಳ ಸಮಗ್ರ ನಿರ್ವಹಣೆ

    ಮಿಡತೆ ಸಮೂಹದ ಮಾಹಿತಿ ಪಡೆದ  ತಕ್ಷಣ ಮಿಡತೆಗಳು ಬೆಳೆಗಳ ಮೇಲೆ ಕೂರದಂತೆ ಮಾಡಲು ಖಾಲಿಡಬ್ಬ, ಲೋಹದ ಫಲಕಗಳು, ಡ್ರಮ್, ಪಟಾಕಿ ಸಿಡಿಸುವುದು, ರೇಡಿಯೋ ಅಥವಾ ಇನ್ಯಾವುದೇ ಉಪಕರಣಗಳ ಮೂಲಕ ರೈತರು  ದೊಡ್ಡದಾಗಿ  ಶಬ್ದಮಾಡಿ ಎಚ್ಚರಿಕೆಯಿಂದ ಓಡಿಸಹುದಾಗಿದೆ

    .ಬೇವಿನ ಆಧಾರಿತ ಕೀಟನಾಶಕ (೦.೧೫% ಇಸಿ ೪೫ ಮಿ.ಲೀ./೧೫ ಲೀಟರ್ ನೀರು) ವನ್ನು ಬೆಳೆಗಳ ಮೇಲೆ ಸಿಂಪರಿಸಿದರೆ ಮಿಡತೆಗಳು ಬೆಳೆಗಳನ್ನು ತಿನ್ನದೆ  ವಿಕರ್ಷಣೆಗೆ ಒಳಗಾಗುತ್ತವೆ.

    ಬೆಳೆಗಳ ಮೇಲೆ ಕ್ಲೋರ್‌ಫೈರಿಫಾಸ್ ೧.೫ % ಡಿ.ಪಿ. ಪುಡಿಯನ್ನು ಧೂಳಿಕರಿಸಬಹುದಾಗಿದೆ. ಈ ಕೀಟನಾಶಕ ಧೂಳೀಕರಣವನ್ನು ಬೆಳಿಗ್ಗೆ ಅಥವಾ ಸಾಯಂಕಾಲದ ತಂಪಾದ ಸಮಯದಲ್ಲಿ ಮಾಡುವುದು ಸೂಕ್ತ.

    ಮಿಡತೆಗಳು ಮೊಟ್ಟೆಗಳನ್ನು ಎಲ್ಲಾ ಪ್ರದೇಶಗಳಲ್ಲಿ ನೆಲದಲ್ಲಿ  ಇಡುವುದರಿಂದ ಕ್ವಿನಾಲ್‌ಫಾಸ್ ೧.೫% ಡಿ.ಪಿ. ಆಥವಾ ಕ್ಲೋರ್‌ಪೈರಿಫಾಸ್ ೧.೫ % ಡಿ.ಪಿ. ಪುಡಿಯನ್ನು ಅಂತಹ ಪ್ರದೇಶಗಳಲ್ಲಿ ಧೂಳಿಕರಿಸುವುದು. ಇದರಿಂದ ಮೊಟ್ಟೆಯಿಂದ ಹೊರಬರುವ ಅಪ್ಸರೆಗಳು ಕೀಟನಾಶಕಕ್ಕೆ ತುತ್ತಾಗಿ ಸಾಯುತ್ತವೆ.

    ಮೊಟ್ಟೆಯಿಂದ ಹೊರಬರುವ  ಅಪ್ಸರೆ ಕೀಟಗಳು ಒಂದು ಹೊಲದಿಂದ ಇನ್ನೊಂದು ಹೊಲಕ್ಕೆ ನುಗ್ಗುತ್ತ ಹೋಗುತ್ತವೆ. ಇವುಗಳನ್ನು ತಪ್ಪಿಸಲು ಒಣಹುಲ್ಲನ್ನು ಅಥವಾ ಸಸ್ಯವಶೇಷಗಳನ್ನು ಸುಟ್ಟಿಹಾಕಿ ಮಿಡತೆಗಳ ಸಮೇತ ಕೊಲ್ಲುವುದು.

    ಹಾವಳಿ ಹೆಚ್ಚಾದಲ್ಲಿ ಬಿತ್ತುವ ಮುಂಚೆ ಹೊಲದ ಸುತ್ತಲು ಎರಡು ಅಗಲದ ಹಾಗೂ ಎರಡು ಅಡಿ ಹಾಳದ ಕಾಲುವೆಗಳನ್ನು  ತೋಡಿ ಅದಕೆ  ಶೇ. ೧.೫ ರ ಕ್ವಿನಾಲ್‌ಫಾಸ್ ಅಥವಾ ಶೇ. ೧.೫ರ ಕ್ಲೋರ್ ಪೈರಿಫಾಸ್ ಪಡಿಯನ್ನು ಧೂಳೀಕರಿಸುವುದು.

    ಕೀಟನಾಶಕ ಬಳಸುವಾಗ ಬಟ್ಟೆಗಳಿಂದ , ಕನ್ನಡಕದಿಂದ  ಮೈಯನ್ನು ಮತ್ತು ಕಣ್ಣುನ್ನು ಮುಚ್ಚಿಕೊಂಡು  ಮುಂಜಾಗೃತ ವಹಿಸುವುದು ಉತ್ತಮ

    ಕನ್ನಡಪ್ರೆಸ್.ಕಾಮ್ ಲೋಕಾರ್ಪಣೆ

    ವಿವಿಧ ಮಾದ್ಯಮ ಪ್ರಕಾರಗಳ ಪೈಕಿ ಡಿಜಿಟಲ್ ಮಾಧ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಓದಿನತ್ತ ಹೊಸ ತಲೆಮಾರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಎಂದು ಸ್ಯಾಂಡಲ್‌ವುಡ್ ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದಾರೆ.
    ಬೆಂಗಳೂರಿನಲ್ಲಿ ಗುರುವಾರ ನೂತನ ವೆಬ್‌ತಾಣ ‘ಕನ್ನಡಪ್ರೆಸ್.ಕಾಂ’ ಅನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಗರ-ಪಟ್ಟಣ ಎಂಬ ಎಲ್ಲೆಗಳನ್ನು ಮೀರಿ ಜಗತ್ತಿನಾದ್ಯಂತ ಬೆರಗಾಗುವ ರೀತಿಯಲ್ಲಿ ಡಿಜಿಟಲ್ ಮಾಧ್ಯಮ ವೇಗಗತಿಯಲ್ಲಿ ಬೆಳೆಯುತ್ತಿದೆ. ಇದೇ ವೇಳೆ ಮುದ್ರಣ ಮಾಧ್ಯಮವು ಕಷ್ಟಗಳ ವರ್ತುಲಕ್ಕೆ ಸಿಲುಕಿ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ನಾವು ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾಗಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ ಎಂದಿದ್ದಾರೆ.
    ಹಿರಿಯ ಪತ್ರಕರ್ತ ಶ್ರೀವತ್ಸ ನಾಡೀಗ್ ಅವರ ಸಂಪಾದಕತ್ವದಲ್ಲಿ ‘ಕನ್ನಡಪ್ರೆಸ್.ಕಾಂ’ ಬಂದಿದೆ. ಅವರ ಜತೆಗೆ ಹಾಗೂ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿರುವ ನುರಿತ ಪತ್ರಕರ್ತರು ಈ ತಂಡದಲ್ಲಿರುವುದು ಗಮನಾರ್ಹ. ಹೀಗಾಗಿ ‘ಕನ್ನಡಪ್ರೆಸ್.ಕಾಂ’ ವಿನೂತನವಾಗಿ ಮೂಡಿಬರುವುದು ಖಚಿತ ಎಂಬ ವಿಶ್ವಾಸವನ್ನು ಭಟ್ಟರು ವ್ಯಕ್ತಪಡಿಸಿದ್ದಾರೆ.
    ‘ಮುದ್ರಣದ ವಿಶ್ವಾಸ-ಡಿಜಿಟಲ್‌ನ ವೇಗ’ ಎಂಬುದು ‘ಕನ್ನಡಪ್ರೆಸ್.ಕಾಂ’ನ ಸ್ಲೋಗನ್. ಇದಕ್ಕೆ ತಕ್ಕ ಹಾಗೆಯೇ ಈ ವೆಬ್ ತಾಣವು ಮುದ್ರಣದ ವಿಶ್ವಾಸವನ್ನು ಉಳಿಸಿಕೊಂಡು ತಂತ್ರಜ್ಞಾನದ ವೇಗದಲ್ಲಿ ಬೆಳೆದು ಯಶಸ್ವಿಯಾಗಲಿ ಎಂದು ಯೋಗರಾಜ್ ಭಟ್ಟರು ಶುಭ ಹಾರೈಸಿದರು.
    ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಸಂಭಾಷಣೆಕಾರ ಮಾಸ್ತಿ ‘ಕನ್ನಡಪ್ರೆಸ್.ಕಾಂ’ಕ್ಕೆ ಶುಭ ಹಾರೈಸಿದರಲ್ಲದೆ, ಅನುಭವೀ ಪತ್ರಕರ್ತರ ತಂಡವನ್ನು ಹೊಂದಿರುವ ಈ ವೆಬ್‌ತಾಣ ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಬೆಳೆಯುತ್ತದೆ ಎಂಬ ಅಚಲ ವಿಶ್ವಾಸ ನನಗಿದೆ ಎಂದರು. ನಟ ಜೀವಾ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿ ‘ಕನ್ನಡಪ್ರೆಸ್.ಕಾಂ’ಗೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಹಿರಿಯ ಪತ್ರಕರ್ತ ಕನ್ನಡಪ್ರೆಸ್.ಕಾಂ ತಂಡದ ಪಿ.ಕೆ. ಚನ್ನಕೃಷ್ಣ ಉಪಸ್ಥಿತರಿದ್ದರು

    ದೇಶ ಭಕ್ತರ ವ್ಯಕ್ತಿತ್ವವನ್ನು ಕ್ಷುಲ್ಲಕ ರಾಜಕಾರಣಕ್ಕೆ ಸಂಕುಚಿತಗೊಳಿಸುವ ವ್ಯವಸ್ಥೆ ನಿಲ್ಲಬೇಕು

    ಬೆಂಗಳೂರಿನ ಫೈ ಓವರ್ ವೊಂದಕ್ಕೆ ಸಾವರ್ಕರ್ ಹೆಸರು ಇಡುವ ವಿಷಯ ಅವರನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದೆ. 

    ಸಾವರ್ಕರ್. ಅಂತ 7ನೇ ತರಗತಿಯವರೆಗೆ ಓದಿದ್ದ ಕನ್ನಡ ಮಾಧ್ಯಮದಲ್ಲಾಗಲಿ, Savarkar ಅಂತ ನಂತರ ಪದವಿ ಪೂರ್ವದ ಶಿಕ್ಷಣದ ವರೆಗಿನ ಆಂಗ್ಲ ಮಾಧ್ಯಮದಲ್ಲಾಗಲಿ,ಓದಿದ ಬರೆದ ನೆನಪಂತೂ ನನಗಿಲ್ಲ. ಅಷ್ಟೇ ಅಲ್ಲ ಪಠ್ಯೇತರ ವಿಷಯಗಳಲ್ಲೂ ಆಗ ಈ ಹೆಸರು ನನ್ನ ಕಿವಿಗೆ ಬಿದ್ದಿದ್ದಿಲ್ಲ! ಸ್ವಾತಂತ್ರ್ಯ ಸಂಗ್ರಾಮದ ವಿಷಯದಲ್ಲಿದ್ದ *ಸೌಮ್ಯಗಾಮಿ*  ಬಳಗದಲ್ಲಾಗಲಿ, *ಉಗ್ರಗಾಮಿ*  ಬಣದಲ್ಲಾಗಲಿ ಈ ಹೆಸರ ಉಲ್ಲೇಖ ಬಂದಿದ್ದಿಲ್ಲ. ಶಾಲೆಗಳಲ್ಲಿ ಕಲಿತ ವಿಷಯಗಳು ಶಾಲೆಯ ಪರೀಕ್ಷೆಗಳಿಗಷ್ಟೇ ಸೀಮಿತ,ಜೀವನದ ಉಪಯೋಗಕ್ಕೆ ಅಲ್ಲ ಎಂದು ಅರಿವಾದ ಮೇಲೆ ತೊಡಗಿಸಿಕೊಂಡ ನನ್ನ ಓದುವ ಹವ್ಯಾಸದಲ್ಲಿ ಅಚಾನಕ್ಕಾಗಿ ಸಿಕ್ಕ ಈ ಹೆಸರು ಇತಿಹಾಸದ ಮತ್ತೊಂದು ಮುಖವನ್ನು ಹೇಳಿತ್ತು.

    ಗೋಡ್ಸೆ ಅಂತ ಬರೆಯುವುದೇ ಕಷ್ಟವಾಗಿದ್ದಾಗ,ಈ ಸಾವರ್ಕರ್ ಅನ್ನುವ ಇನ್ನೂ ಕಷ್ಟದ ಪದವು  ನಮ್ಮ ಹುಡುಗರಿಗೇಕೆ ಅಂತ ನಮ್ಮ ಪುಸ್ತಕಗಳ ವಿಷಯವನ್ನು ಸಿದ್ದ ಪಡಿಸಿದ್ದ ಪಂಡಿತರಿಗೆ ಅನ್ನಿಸಿತ್ತೇನೋ ಪಾಪ. ಬ್ರಹ್ಮ ಹಣೆಬರಹ ಬರೆಯುತ್ತಾನೆ ಎನ್ನುವುದು ನಿಜವೋ ಸುಳ್ಳೋ ಗೊತ್ತಿಲ್ಲ.  ಆದರೆ ಸ್ವಾತಂತ್ರಾನಂತರದ ಇತಿಹಾಸಜ್ಞರು ಮಾತ್ರ ನಮ್ಮ ಮುಂದಿನ ಪೀಳಿಗೆಗಳು ಹೀಗೇ ಇರಬೇಕು ಅಂತ ಹಣೆಬರಹದ ಕೆಲಸಕ್ಕೆ ಕೈ ಹಾಕಿದ್ದು ಮಾತ್ರ ವಿಪರ್ಯಾಸ. ಕಾರಣ 70 ವರ್ಷಗಳ ನಂತರ, ಇತಿಹಾಸ ನಿರ್ಮಿಸುವ ಮಾತಿರಲಿ,ಬದಲಿಸುವ ಮಾತು ಕೇಳಿಬರುತ್ತಿರುವುದು *ಸತ್ಯಕ್ಕೆ ಸ್ವಪ್ರಕಟನೆಯ ಶಕ್ತಿ* ಇದೆ ಎನ್ನುವುದನ್ನು ಸ್ಪಷ್ಟ ಪಡಿಸುತ್ತದೆ. ಸಿಹಿ ಲೇಪಿತ ಸುಳ್ಳು,ಕಹಿಯಾದ ಸತ್ಯಕ್ಕೆ ಎಂದೆಂದಿಗೂ ಸಮವಾಗಲಾರದು ಕೂಡ.

    28 ಮೇ 1883 ರಂದು  ಮಹಾರಾಷ್ಟ್ರದ ಬಾಗುರ್ ಎಂಬಲ್ಲಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ   ಹುಟ್ಟಿದ ವಿನಾಯಕ ದಾಮೋದರ ಸಾವರ್ಕರ್ ,ಸ್ವಾತಂತ್ರ್ಯವೀರ ಸಾವರ್ಕರ್ ಆಗಿ ಬದಲಾದದ್ದು ರೋಚಕ ಕಥೆ.

    ಅದ್ಭುತ ವಾಗ್ಮಿ,ಬರಹಗಾರ ಮತ್ತು ಸಂಘಟಕ. 15ನೇ ವಯಸ್ಸಿಗೇ ತನ್ನ ಸಂಘಟನಾ ಸಾಮರ್ಥ್ಯ ಪ್ರದರ್ಶಿಸಿದ್ಧ ಅಪ್ರತಿಮ ಹೋರಾಟಗಾರ. ಅಂದಿನ ಎಲ್ಲ ಯುವಕರಂತೆ, ತಿಲಕರ ವ್ಯಕ್ತಿತ್ವ ಮತ್ತು ಹೋರಾಟದಿಂದ ಪ್ರಭಾವಿತರಾಗಿ,ಪುಣೆಯ ಫಾರ್ಗುಸನ್ ಕಾಲೇಜಿನಿಂದ BA ಪದವಿ ಪಡೆಯುತ್ತಾರೆ. ಇವರ ವಿಶೇಷ ಏನಂದ್ರೆ,ಅಲ್ಲಿಯವರೆಗಿನ ಮತ್ತು ನಂತರದ ನಾಯಕರುಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಲಂಡನ್ ಗೆ ಹೋದರೆ,ಇವರು ಮಾತ್ರ ಬ್ರಿಟಿಷರ ಸಾಮರ್ಥ್ಯವನ್ನು ಅವರ ನೆಲದಲ್ಲೇ ಅಳೆದು,ಸಾಧ್ಯವಾದರೆ ಅಲ್ಲೇ ಅವರನ್ನು ಕಟ್ಟಿ ಹಾಕುವ ಪ್ರಯತ್ನವಾಗಿ ಹೋಗ್ತಾರೆ.

     ನಮ್ಮಲ್ಲಿ ಹುಲಿಯನ್ನು ಅದರ ಗುಹೆಯಲ್ಲೇ ಬೇಟೆ ಆಡುವ ಶೂರತ್ವ ಅಂತ ಇದೆಯಲ್ಲ,ಅದನ್ನು ಅಕ್ಷರಶಃ ತಮ್ಮ ಜೀವನದಲ್ಲಿ ತೊಡಗಿಸಿಕೊಂಡವರು. ಇವರ ಹೋರಾಟಗಳ ಝಲಕ್ ಗೊತ್ತಾಗಬೇಕಾದ್ರೆ, ಹಡಗಿನಲ್ಲಿ ಬ್ರಿಟಿಷ್ ಕಾವಲಿನಿಂದ ತಪ್ಪಿಸಿಕೊಂಡು,ಸಮುದ್ರದಲ್ಲಿ ಧುಮುಕಿ,ಈಸುತ್ತ ದಡ ಸೇರಿದ್ದ ಪ್ರಸಂಗ ಮತ್ತು ಅಂಡಮಾನ್ ಜೈಲಿನ ಕಲಾಪಾನಿ ಸೆರೆಯಲ್ಲಿ ತಮ್ಮನ್ನು ತಾವು ಅಲ್ಲಿನ ಸಹಪಾಠಿಗಳನ್ನು ಸಂಘಟಿಸುವಲ್ಲಿ ತೊಡಗಿಸಿಕೊಳ್ಳುವ ರೀತಿಯಲ್ಲಿ ನೋಡಬೇಕು. ಈಗಿನ ರೀತಿ ಆಗ ಹಿಂದೂ,ಮುಸ್ಲಿಂ ಕೈದಿಗಳು ಇರಲಿಲ್ಲ,ಬದಲಾಗಿ ಭಾರತೀಯ ಕೈದಿಗಳು ಮಾತ್ರ ಇದ್ದದ್ದು ತುಂಬಾ ಹೆಮ್ಮೆಯ ವಿಚಾರ. ಅವರ ವಿಚಾರವಾಗಿ ಈಗ ಅವರ ಎಲ್ಲ ಪುಸ್ತಕಗಳೂ ಲಭ್ಯ.ಆವೇ ವಿಚಾರಗಳನ್ನು ಹೇಳಲು ಇಷ್ಟ ಇಲ್ಲ. ನನಗೆ ಅವರು ಆಕರ್ಷಿಸಿದ್ದೇ, ಸುತ್ತ  ಇರುವ ವ್ಯವಸ್ಥೆಯಲ್ಲೇ ತಮಗೆ ಬೇಕಾದ ಪರಿಸ್ಥಿತಿಯನ್ನು ನಿರ್ಮಿಸಿ,ಕಾರ್ಯ ಸಾಧಿಸುತ್ತಿದ್ದ ಬಗೆ.

    ಅಲ್ಲಿಯವರೆಗೆ ನಮ್ಮಲ್ಲಿ ಇದ್ದ ಪುರಾಣ,ಪುಣ್ಯಕಥೆಗಳು ಸ್ವಾತಂತ್ರ ಹೋರಾಟಕ್ಕೆ ಉಪಯೋಗವಿಲ್ಲ ಅಂತ ಅರಿತು, ಭಾರತೀಯರ ಪ್ರೇರಣಾ ಶಕ್ತಿಯನ್ನು ಜಾಗೃತಿಗೊಳಿಸಲು ಅವರು ಆಯ್ಕೆ ಮಾಡಿಕೊಂಡದ್ದು 1857 ರ *ಸಿಪಾಯಿ ದಂಗೆ* ಯನ್ನು. ಅಲ್ಲಿಗಾಗಲೇ ಬ್ರಿಟೀಷರು ಭಾರತೀಯರನ್ನು,ಹಿಂದೂ,ಮುಸ್ಲಿಂ ಅಂತ ಭಾಗ ಮಾಡುವ ಪ್ರಯತ್ನಕ್ಕೆ ಕೈ ಹಾಕಿ,ಸಫಲರಾಗಿ,ಇದು ಒಳ್ಳೆ ಫಲ ಕೊಡುವ ಮರವಾಗುತ್ತೆ ಅಂದು ತಿಳಿದು,ಹೆಜ್ಜೆ,ಹೆಜ್ಜೆಗೂ ಈ ದ್ವೇಷದ ಕಿಡಿಯನ್ನು ಉದ್ದೀಪನಗೊಳಿಸುತ್ತ,ತಮ್ಮ ಕೆಲಸಗಳನ್ನು ಸಾಧಿಸುತ್ತಿದ್ದ ಕಾಲ. ಮಂಗಳ ಪಾಂಡೆ ಎನ್ನುವ ವೀರನ ಸಾಹಸವನ್ನು ತಳ್ಳಿ ಹಾಕಿ,ಅದು ತೋಪುಗಳಿಗೆ ದನದ ಕೊಬ್ಬು,ಹಂದಿಯ ಕೊಬ್ಬು ಹಚ್ಚುವ ವಿಷಯಕ್ಕೆ ಆದ ಚಿಕ್ಕ ಗಲಾಟೆ ಅಂತ ತೇಪೆ ಸವರಿ ಬಿಸಾಡಿದ್ದ ಘಟನೆಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಅಂತ ಹೆಸರಿಟ್ಟು, ಮುಂಬರುವ ಎಲ್ಲ ಸ್ವತಂತ್ರ ವೀರರಿಗೆ ಪ್ರೇರಣೆಯಾಗುವ ರೀತಿಯಲ್ಲಿ ಅದನ್ನು ಬಿಂಬಿಸುತ್ತಾರೆ ನೋಡಿ,ಅದು ನನ್ನನ್ನು ಬಹುವಾಗಿ ಆಕರ್ಷಿಸಿತು. ಇದೊಂದೇ ವಿಷಯ ಅಂದಿನ ಬ್ರಿಟಿಷ್ ಸರ್ಕಾರದ ಗರ್ವವನ್ನು ಎಷ್ಟು ಘಾಸಿ ಗೊಳಿಸಿತ್ತು ಎಂದರೆ, ಎಲ್ಲಿ ಈ ಪುಸ್ತಕ ಪಾಶ್ಚಿಮಾತ್ಯ ದೇಶಗಳಲ್ಲಿ ನಮ್ಮ ಮರ್ಯಾದೆಯನ್ನು ತೆಗೆದು ಬಿಡುತ್ತೋ ಅಂತ ಭಯವಾಗಿ,ಅದರ ಮುದ್ರಣ ಹೊರಗೆ ಬರದ ಹಾಗೆ ಹರ ಸಾಹಸ ಮಾಡುತ್ತೆ. .

     ವೈರಿಯ ಬಲಹೀನತೆಯನ್ನು ಕಂಡುಕೊಳ್ಳುವುದು,ಅರ್ಧ ಯುದ್ಧವನ್ನು ಗೆಲ್ಲಿಸಿಕೊಡುತ್ತೆ ಅನ್ನೋ ಅಂಶವನ್ನು ಬ್ರಿಟೀಷರ ಮೇಲೆ ಬಹು ಯಶಸ್ವಿಯಾಗಿ ಬಳಸಿದ್ದರು. ಭಗತ್ ಸಿಂಗ್ ನಿಂದ ಹಿಡಿದು,ಬೋಸರು,ಯಾಕೆ ಇಂದಿರಾಗಾಂಧಿಯೂ ಅವರ ಸ್ವತಂತ್ರ ಪ್ರೇಮವನ್ನು,ಅವರ ಅಪ್ರತಿಮ ಹೋರಾಟದ ರೂಪ ರೇಖೆಗಳನ್ನು ಕೊಂಡಾಡಿರುವುದು ಇನ್ನು ಜೀವಂತವಾಗಿ ಇತಿಹಾಸದಲ್ಲಿ ಇರುವಾಗ,ಸ್ವಾತಂತ್ರಾನಂತರದ ಭಾರತಕ್ಕೆ ಅವರು ಅಸ್ಪೃಶ್ಯ ರಾದದ್ದು ದುರಂತ.

    ಎರಡು ಜೀವಿತಾವಧಿಯ,50 ವರ್ಷದ ಅತ್ಯಂತ ಕಠಿಣ ಕಾರಾಗೃಹ ಎಂದೇ ಬಿಂಬಿತವಾಗಿದ್ದ ಕಾಲಾಪಾನಿ ಶಿಕ್ಷೆಯನ್ನು ಬ್ರಿಟಿಷ್ ಸರ್ಕಾರ ಅವರಿಗೆ ವಿಧಿಸಿತ್ತು ಎಂದರೆ,ಯಾರಿಗಾದ್ರು ಅರ್ಥವಾಗುತ್ತೆ ಅವರ ದೇಶಪ್ರೇಮ,ಸ್ವತಂತ್ರ ಪ್ರೇಮ ಎಂತಹದು ಎಂದು. ಇಂತಹ ಕಾಲಪಾನಿಯಿಂದ 14 ವರ್ಷಕ್ಕೇ ಹೊರಬರುವ ಪ್ರಕ್ರಿಯೆಯಲ್ಲಿ ಅಂದಿನ ಗಾಂಧೀ ಕಾಂಗ್ರೆಸ್ ಕೂಡ ನೆರವು ನೀಡಿತ್ತು. ಅಂತಹ ಸಂಧರ್ಭದಲ್ಲಿ ಬ್ರಿಟಿಷರ ಯಾವುದೋ ಷರತ್ತುಗಳ ಪೇಪರ್ ಗಳಿಗೆ ಸಹಿ ಹಾಕಿದ್ದ ವಿಷಯವನ್ನೇ ಇಂದಿನವರು,ಅವರಿಗೆ ಬ್ರಿಟಿಷರಿಗೆ ಶರಣಾದವರು, ಕ್ಷಮೆಭಿಕ್ಷೆ ಕೇಳಿದವರು ಅಂತ ಅಂತಾರೆ ನೋಡ್ರಿ,ಅವರನ್ನು ನೋಡಿ ಅಯ್ಯೋ ಮುರ್ಖರಾ ಅಂತ ಕನಿಕರ ಆಗುತ್ತೆ.

    ಸುಸಜ್ಜಿತ ಕೊಠಡಿಗಳಲ್ಲಿ,ಅವರಿಗೆ ಬೇಕಾದ ಸವಲತ್ತುಗಳೊಂದಿಗೆ,ಏನಾದ್ರು ಆತ್ಮಕಥೆ,ಮಕ್ಕಳಿಗೆ letters ಬರಿತಿವಿ ಅಂದ್ರೆ,pen, paper ಕೊಟ್ಟು ಬರೆಯಲು ಅನುವು ಮಾಡಿಕೊಟ್ಟಿದ್ದಂತಹ ಜೈಲಲ್ಲ,ಸಾವರ್ಕರ್ ಅನುಭವಿಸಿದ್ದು. ಅಲ್ಲಿ ಅವರು ಎತ್ತಿನ ಹಾಗೆ ಗಾಣ ತಿರುಗಿಸಿ,ಎಣ್ಣೆ ತೆಗೆದಿದ್ದಾರೆ. ಹೊಲಸು ವಾಸನೆಯಿಂದ,ಸೊಳ್ಳೆಗಳಿಂದ ತುಂಬಿದ್ದ ಕೊಠಡಿಗಳಲ್ಲಿ ವರ್ಷಗಟ್ಟಲೆ,ಕೈಗೆ ಸಿಕ್ಕ ವಸ್ತುಗಳಿಂದ,ಗೋಡೆಯ ಮೇಲೆ,ಸ್ವತಂತ್ರ ಕ್ರಾಂತಿಯ ಪದ್ಯಗಳನ್ನು ಬರೆದಿದ್ದಾರೆ. ಅವರ ಇವರ ಜೈಲುವಾಸಗಳನ್ನು ಸಮೀಕರಿಸಿ ಮಾತಾಡುವುದೇ ನಾಚಿಕೆ ಇಲ್ಲದ ವಿಚಾರ ಬಿಡಿ.

    23 ಫೆಬ್ರವರಿ 1966 ರಂದು ಸ್ವತಂತ್ರ ಭಾರತದಲ್ಲಿ ಸಾವರ್ಕರ್ ಅವರ ನಿಧನ ಆಗುತ್ತೆ..ಸಾಯುವಾಗ ಸಾವರ್ಕರ್ ಸ್ವತಂತ್ರ ಭಾರತದಲ್ಲಿ ಬಹುವಾಗಿ ನೊಂದಿದ್ದರು.ಪ್ರತಿಯೊಬ್ಬ ಭಾರತೀಯನೂ ತಲೆತಗ್ಗಿಸುವ ವಿಷಯ ಅದು.ವೀರನನ್ನು ರಣ ಭೂಮಿಯಲ್ಲಿ ಸಾಯಿಸಬೇಕೇ ಹೊರತು,ಹೇಡಿ ಅಂತ ಬದುಕಿಸುವ ಇತಿಹಾಸ,ಬಹುಶಃ ಭಾರತಲ್ಲೇ ಮೊದಲೇನೋ….ನನ್ನ ಧಿಕ್ಕಾರವಿರಲಿ. …ಇಡೀ ಬ್ರಿಟಿಷ್ ಪಡೆಗೆ ಸಿಂಹ ಸ್ವಪ್ನವಾಗಿದ್ದ *ವೀರ ಸಾವರ್ಕರ್*  ಸ್ವತಂತ್ರ ಭಾರತದಲ್ಲಿ ತಮ್ಮ ಮನೆ ಮೇಲೆ ಬೀಳುತ್ತಿದ್ದ ಕ್ಷುಲ್ಲಕ,ರೋಗಗ್ರಸ್ಥ ಮನಸ್ವಿಗಳ ಕಲ್ಲುಗಳಿಂದ  ರಕ್ಷಿಸಿಕೊಳ್ಳಲು ತಮ್ಮ ಕುಟುಂಬ ಸಮೇತರಾಗಿ  ಮನೆಯ ಮೂಲೆಯಲ್ಲಿ ಅವಿತುಕೊಳ್ಳುವ ಸಾವರ್ಕರ್ ನನ್ನನ್ನು ಬಹುವಾಗಿ ಇಂದಿಗೂ  ಕಾಡುತ್ತಾರೆ.ಮುಂದಿನ ಪೀಳಿಗೆಗಳಿಗಾದರೂ ನಮ್ಮ ಭವ್ಯ(?) ಇತಿಹಾಸ ಗೊತ್ತಾಗಬೇಕು ದೇಶ ಭಕ್ತರ ವ್ಯಕ್ತಿತ್ವವನ್ನು ಕ್ಷುಲ್ಲಕ ರಾಜಕಾರಣಕ್ಕೆ ಸಂಕುಚಿತಗೊಳಿಸುವ ವ್ಯವಸ್ಥೆ ನಿಲ್ಲಬೇಕು. ಅಧಿಕಾರವೇ ಶಾಶ್ವತವಲ್ಲ ಅಂದ ಮೇಲೆ,ಆ ಅಧಿಕಾರದಿಂದ ಬರೆದ ಇತಿಹಾಸ ಎಂದಿಗೂ ಶಾಶ್ವತವಾಗಿರಲು ಸಾಧ್ಯವೇ ಇಲ್ಲ.

    .

    ಕನ್ನಡಪ್ರೆಸ್.ಕಾಮ್: ಶುದ್ಧ ಪತ್ರಿಕೋದ್ಯಮದ ಆಶಯ

    ನಾಡಿನ ಮುಂಚೂಣಿ ಪತ್ರಿಕೆಗಳಲ್ಲಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದ ತಂಡ ಇದೀಗ ಸ್ವತಂತ್ರ ಪತ್ರಿಕೋದ್ಯಮವನ್ನು ನಾಡಿಗೆ ಸಮರ್ಪಿಸಬೇಕೆಂಬ  ಉದ್ದೇಶದಿಂದ ಕನ್ನಡಪ್ರೆಸ್ .ಕಾಮ್ ಆರಂಭಿಸುವ ಸಾಹಸಕ್ಕೆ ಕೈ ಹಾಕಿದೆ. ಇದು  ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ನ್ಯೂಸ್ ಪೋರ್ಟಲ್. ಡಿಜಿಟಲ್‌‌ನ ವೇಗದೊಂದಿಗೆ ಮುದ್ರಣ ಮಾಧ್ಯಮದ ವಿಶ್ವಾಸವನ್ನು ಉಳಿಸಿಕೊಂಡು ಹೋಗುವುದು ನಮ್ಮ ಧ್ಯೇಯ. ಹಾಗೆ ನೋಡಿದರೆ ಇಂದು ಮುದ್ರಣ ಮಾಧ್ಯಮವೂ ತನ್ನ ಉಳಿವಿಗಾಗಿ ರಾಜಕಾರಣಿಗಳ ಕೃಪ ಕಟಾಕ್ಷ ಬಯಸುತ್ತಿದೆ. ಇಂಥ ದಿನದಲ್ಲಿ ಯಾವ ಆಮಿಷಕ್ಕೂ ಒಳಗಾಗದೆ ನಿರ್ಭೀತವಾಗಿ ವಿಷಯ ಮಂಡನೆ ಮಾಡುವುದು ನಮ್ಮ ಉದ್ದೇಶ. ನಮಗೆ ಯಾರ ಹಂಗೂ ಇಲ್ಲ.ನಮ್ಮಓದುಗರೆ ನಮ್ಮ ಮಾಲೀಕರು. ನಾವು ಬ್ರೇಕಿಂಗ್ ಸುದ್ದಿಯ ಬೆನ್ನು ಹತ್ತುವುದಿಲ್ಲ. ಸುದ್ದಿಯ ಹಿಂದಿನ ಸತ್ಯವನ್ನುಅನಾವರಣ ಮಾಡುತ್ತೇವೆ. ಜೊತೆಗೆ ಒಂದು ಸುದ್ದಿಯನ್ನು ನಮ್ಮ ಹಲವಾರು ಮೂಲಗಳಿಂದ ಖಚಿತ ಪಡಿಸಿಕೊಂಡ ನಂತರವೇ ನಾವು ಪ್ರಕಟಿಸುತ್ತೇವೆ. ಕನ್ನಡಪ್ರೆಸ್.ಕಾಮ್ ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿಗಳು  ಖಚಿತ, ಸತ್ಯ ಮತ್ತು ಸ್ವತಂತ್ರವಾಗಿರುತ್ತವೆ. ಅತ್ಯತ್ತುಮ ಗುಣಮಟ್ಟದ ಸುದ್ದಿ ವಿಶ್ಲೇಷಣೆಯನ್ನು ಯಾರ ಮುಲಾಜಿಗೂ ಒಳಗಾಗದೆ ನೀಡುವ ಭರವಸೆಯನ್ನು ನಾವು ನೀಡುತ್ತೇವೆ.

    ಕೋವಿಡ್ ೧೯ ಮಾಧ್ಯಮ ರಂಗದಲ್ಲಿ ಅನೇಕ ಬದಲಾವಣೆಗಳನ್ನು ತಂದಿದೆ. ಅದರಲ್ಲೂ ಮುದ್ರಣ ಮಾಧ್ಯಮ ಜರ್ಜರಿತವಾಗಿ ದಿನದ ಕೂಳಿಗಾಗಿ ರಾಜಕೀಯ ವ್ಯಕ್ತಿಗಳ ಕದವನ್ನು ತಟ್ಟಿ ದೇಹಿ ಎನ್ನುವ ಸ್ಥಿತಿಗೆ ತಲುಪಿಸಿದೆ. ಆರ್ಥಿಕವಾಗಿ ಸದೃಢವಾಗಿರುವ ಪತ್ರಿಕಾ ಸಂಸ್ಥೆಗಳು ಕೂಡ ಕೋವಿಡ್ ನಮ್ಮನ್ನು ಮುಗಿಸೇ ಬಿಟ್ಟಿತು ಎಂಬಂತೆ ಓವರ್ ರಿಯಾಕ್ಟ್ ಮಾಡಿಕೊಂಡು ರಾಜಕಾರಣಿಗಳ ಕೃಪಾ ಭಿಕ್ಷೆಗಾಗಿ ಸಾಲು ಗಟ್ಟಿ ನಿಂತಿರುವಾಗ ಅವುಗಳಿಂದ ನಿಷ್ಪಕ್ಷಪಾತ ಪತ್ರಿಕೋದ್ಯಮವನ್ನು ನಿರೀಕ್ಷಿಸಲು ಸಾಧ್ಯವೇ ?

    ಒಂದು ಕಡೆ ಪತ್ರಿಕೆಗಳ ಸರ್ಕುಲೇಷನ್ ಬಿದ್ದು ಹೋಗುತ್ತಿದೆ. ಓದುವವರು ಕಡಿಮೆ ಆಗುತ್ತಿದ್ದಾರೆ.  ಮನೆ ಮನೆ ವಿತರಣೆ ಅಸ್ತವ್ಯಸ್ತ ಗೊಂಡಿದೆ. ಸ್ಟಾಲ್ ಸೇಲ್ಸ್  ಕಡಿಮೆ ಆಗಿದೆ. ಮತ್ತೊಂದು ಕಡೆ ಕಾರ್ಪೋರೇಟ್ ಜಾಹೀರಾತುಗಳು ನಿಂತು ಹೋಗಿವೆ. ಸರಕಾರದ ಜಾಹೀರಾತುಗಳೇನೋ  ಬರುತ್ತಿವೆ. ಆದರೆ ಸರಕಾರವೊಂದೆ  ಎಷ್ಟು ಎಂದು  ಮಾಧ್ಯಮಗಳ ಕೈ ಹಿಡಿಯಲು ಸಾಧ್ಯ?  ಸರಕಾರ ಕೂಡ ಎಲ್ಲ ವರ್ಗದ ಜನರ ಕಷ್ಟವನ್ನು ಕೇಳ ಬೇಕಲ್ಲ.

    ಇನ್ನು ಗ್ರಾಹಕರೆ ಇಲ್ಲದಿರುವಾಗ ಕಾರ್ಪೋರೇಟ್ ವಲಯಗಳು ಜಾಹೀರಾತು ನೀಡಿ ಸಾಧಿಸುವುದಾದರು ಏನಿದೆ. ಉದಾಹರಣೆಗೆ ರೆಡಿಮೇಡ್ ಟೆಕ್ಸ್ ಟೈಲ್  ಇಂಡಸ್ಟ್ರೀ. ಸದಾಕಾಲ ಜನರಿಂದ ತುಂಬಿರುತ್ತಿದ್ದ ಈ ಮಳಿಗೆಗಳಲ್ಲಿ ಜನರಿಲ್ಲ. ಟ್ರಯಲ್ ನೋಡುವ ಹಾಗಿಲ್ಲ. ಎಕ್ಸ್ ಚೇಂಜ್ ಇಲ್ಲ. ಹೀಗಾಗಿ ಗ್ರಾಯಕರು ಸುಳಿಯುತ್ತಿಲ್ಲ. ಗ್ರಾಹಕರೆ ಇಲ್ಲವೆಂದ ಮೇಲೆ ಆತ ಜಾಹೀರಾತಿಗೆ ಖರ್ಚು ಮಾಡುವುದು ದೂರದ ಮಾತು.  ಕರೋನಾ ಸಂಕಷ್ಟ ಕಾಲದಲ್ಲಿ ಜನ ಹಣವನನ್ನು ಕೂಡಿಡಲು ಬಯಸುತ್ತಾರೆ ವಿನಾ ಖರ್ಚು ಮಾಡಲು ಬಯಸುವುದಿಲ್ಲ. ಹೀಗಾಗಿ ಹೊಸ ಖರೀದಿಗೆ ಹೊರಡುವುದಿಲ್ಲ. ಮಾಲುಗಳು ತೆರೆದಿಲ್ಲ. ಸಿನಿಮಾಗಳು ಓಪನ್ ಆಗಿಲ್ಲ.  ಹೀಗಾಗಿ ಮಾಧ್ಯಮಗಳಿಗೆ ಜಾಹೀರಾತಿನ ಹರಿವಿಲ್ಲ. ಇಂಥ ಕಡು ಕಷ್ಟದ ಕಾಲದಲ್ಲಿ ಎಷ್ಟೇ ಟಿಆರ್ಪಿ ಬಂದರೂ ರೀಡರ್‌‌ಷಿಪ್  ಬಂದರೂ, ಪ್ರಸರಣದಲ್ಲಿ ಅಗ್ರ ಸ್ಥಾನಕೇರಿದರೂ ಉಪಯೋಗವಿಲ್ಲ.  ಹಾಗಾಗಿಯೇ ರಾಜಕಾರಣಿಗಳು ,ಸಮಾಜಸೇವಕರ ಮರ್ಜಿಗೆ ಮಾಧ್ಯಮಗಳು ಒಳಪಡುವಂತೆ ಹಾಗಿದೆ.

    ಹಾಗಾದರೆ ಪತ್ರಿಕೆಗಳ ಇಂದಿನ ಸ್ಥಿತಿಗೆ  ಕೋವಿಡ್ ಒಂದೇ ಕಾರಣವೇ. ಇಲ್ಲ. ೨೦೧೯ರ ಆರ್ಥಿಕ ವರ್ಷದ ಆರಂಭದಲ್ಲಿ ಪತ್ರಿಕೆಗಳಿಗೆ ಬಿಸಿ ತಟ್ಟಲು ಆರಂಭವಾಗಿತ್ತು.  ಒಂದೆಡೆ   ನ್ಯೂಸ್ ಪ್ರಿಂಟ್ ದರದಲ್ಲಿ ಏರಿಕೆ. ಇನ್ನೊಂದೆಡೆ ಡಿಜಿಟಲ್ ನತ್ತ  ವಾಲುತ್ತಿರುವ ಓದುಗರು ಮತ್ತು ಜಾಹೀರಾತುದಾರರು. ದುಬಾರಿ ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ದರ ಏರಿಸಿದರೆ ಓದುಗರನ್ನು ಕಳೆದುಕೊಳ್ಳುವ ಭೀತಿ. ಹೀಗಾಗಿ . ಇದೇ ಅವಧಿಯಲ್ಲಿ ಹಲವು ಪತ್ರಿಗೆಗಳು ತಮ್ಮ ಆವೃತ್ತಿಗಳನ್ನು ನಿಲ್ಲಿಸಿದವು. ಡೆಕನ್ ಕ್ರಾನಿಕಲ್  ತನ್ನ ಕೇರಳ ಮತ್ತು ಬೆಂಗಳೂರು ಎಡಿಷನ್‌ಗಳನ್ನು ಕ್ಲೋಸ್ ಮಾಡಿತು. ಡಿಎನ್‌ಎ ಕೂಡ ಹಲವು ಆವೃತ್ತಿಗಳನ್ನು ನಿಲ್ಲಿಸಿತು.  ಮುಂಚೂಣಿ ಪತ್ರಿಕೆಳ  ರೀಡರ್ ಶಿಪ್ ಕೂಡ ಇಳಿಮುಖ ಕಾಣಲು ಶುರುವಾಯಿತು.

    ಈ ಸಮಯದಲ್ಲೇ ಕೋವಿಡ್ ಅಪ್ಪಳಿಸಿತು, ಹೀಗಾಗಿ ಹಲವು ಪತ್ರಿಕೆಗಳು ಪುರವಣಿಗಳನ್ನು ನಿಲ್ಲಿಸಿದವು. ಪುಟಗಳ ಸಂಖ್ಯೆ ಕಡಿಮೆ ಮಾಡಿದವು. ಲೇ ಆಫ್ ಗಳನ್ನು ಘೋಷಿಸತೊಡಗಿದವು.ವೇತನ ಕಡಿತ ಪ್ರಕಟಿಸಿದವು.  ಅನೇಕ ಕಡೆ  ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ. ಹಲವಾರು ಮಂದಿ  ಅನಿಶ್ಚತತೆಯಿಂದ ದಿನ ದೂಡುತ್ತಿದ್ದಾರೆ.

    ಇಂಥ ಸ್ಥಿತಿಯಲ್ಲಿ ಶುದ್ಧ ಪತ್ರಿಕೋದ್ಯಮದ ಆಶಯದೊಂದಿಗೆ ಕನ್ನಡಪ್ರೆಸ್.ಕಾಮ್ ಆರಂಭವಾಗುತ್ತಿದೆ. ನಿಮ್ಮ ಬೆಂಬಲ ಸದಾ ಇರಲಿ. ಕೋವಿಡ್ ಕಾರ್ಮೋಡ ಬೇಗ ಸರಿಯಲಿ . ಎಲ್ಲೆಡೆ ಮತ್ತೆ ಸಂತಸ ಮೂಡಲಿ ಎಂಬ ಆಶಯ ದೊಂದಿಗೆ ಕನ್ನಡಪ್ರೆಸ್ . ಕಾಮ್ ಅನ್ನು ನಿಮ್ಮ ಮಡಿಲಿಗೆ  ಹಾಕುತ್ತಿದ್ದೇವೆ. ಒಪ್ಪಿಸಿಕೊಳ್ಳಿ.

    ಸೀರಿಯಲ್‌ ಚಿತ್ರೀಕರಣ ಆರಂಭ

    ಕೆಲ ದಿನಗಳ ಹಿಂದೆಯಷ್ಟೇ ಸೀರಿಯಲ್‌ಗಳ ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿತ್ತು. ಈ ಅನುಮತಿಯನ್ನು ಕೆಟಿವಿ ಅಧ್ಯಕ್ಷರಾದ ಶಿವಕುಮಾರ್‌ ಹೋಗಿ ತಂದಾಗ ಅಸೋಸಿಯೇಶನ್‌ ಒಳಗಡೆ ಒಂದಷ್ಟು ವಿವಾದ ಸೃಷ್ಟಿಯಾಗಿತ್ತು.  ಆದರೆ ಆ ವಿವಾದ ತಣ್ಣಗಾಗಿ 10 ಕ್ಕೂ ಹೆಚ್ಚಿನ ಸೀರಿಯಲ್‌ಗಳ ಚಿತ್ರೀಕರಣ ಆರಂಭವಾಗಿವೆ.

    ವಿವಾದವೇನು

    ಹೌದು, ಕರ್ನಾಟಕ ಟೆಲಿವಿಷನ್‌ ಅಸೋಸಿಯೇಶನ್‌ ಅಧ್ಯಕ್ಷ ಶಿವಕುಮಾರ್‌ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸೀರಿಯಲ್‌ಗಳನ್ನು ಮನೆಯೊಳಗೆ ಶೂಟಿಂಗ್‌ ಮಾಡಿಕೊಳ್ಳುತ್ತೇವೆ ನಮಗೆ ಅನುಮತಿ ನೀಡಿ ಎಂದು ಮನವಿ ಸಲ್ಲಿಸಿದ್ದರು. ಅದರಂತೆ ಮನೆಯೊಳಗೆ ಚಿತ್ರೀಕರಣ ಮಾಡಿಕೊಳ್ಳಬಹುದು, ಶುಚಿತ್ವ ಕಾಪಾಡಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎಂಬಂತಹ ನಿಯಮಗಳನ್ನು ಸೂಚಿಸಿ ಸರ್ಕಾರ ಅನುಮತಿ ನೀಡಿತು. ಆದರೆ ಈ ನಿರ್ಧಾರವನ್ನು ಕೆಲವರು ವಿರೋಧಿಸಿ ಸಾರ್ವಜನಿಕವಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

    ಶಿವಕುಮಾರ್ ಚಿತ್ರೀಕರಣಕ್ಕೆ ಅನುಮತಿಗೆ ಮನವಿ ಸಲ್ಲಿಸುವಾಗ ನಟಿ ತಾರಾ ಅವರ ಜತೆ ಇದ್ದರು. ಆದರೆ ಚಿತ್ರೀಕರಣಕ್ಕೆ ಅನುಮತಿ ಪತ್ರ ನೀಡಲು ಬಂದಿದ್ಧಾರೆ ಎಂಬುದರ ಬಗ್ಗೆ ನನಗೆ ಗೊತ್ತಿರಲಿಲ್ಲ. ನಾನು ಆಗ ಸಿಎಂ ಆಫೀಸ್‌ ಬಳಿ ಇದ್ದಾಗ ಅವರು ಬಂದು ಮನವಿ ಕೊಟ್ಟು ಹೋದರು ಹಾಗಾಗಿ ಆ ಫೊಟೋದಲ್ಲಿ ನಾನಿದ್ದೇನೆ ಎಂದು ಅವರು ಮರು ದಿನ ಮಾಧ್ಯಮಗಳಿಗೆ ತಿಳಿಸಿದರು. ಅಲ್ಲಿಂದಲೇ ವಿವಾದ ಆರಂಭವಾಯಿತು.

    ಕೆಟಿವಿಯ ಕಾರ್ಯದರ್ಶಿ ವೀರೇಂದ್ರ ಬೆಳ್ಳಿಚುಕ್ಕಿ ಮಾಧ್ಯಮಗಳ ಜತೆ ಮಾತನಾಡಿ ‘ಚಿತ್ರೀಕರಣಕ್ಕೆ ಅನುಮತಿ ನೀಡಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ ಮನವಿ ಪತ್ರಕ್ಕೆ ಕಾರ್ಯದರ್ಶಿಯಾದ ನನ್ನ ಸಹಿ ಪಡೆಯದೇ ತೆಗೆದುಕೊಂಡಿಲ್ಲ. ಅಲ್ಲದೇ ಈ ಸಮಯದಲ್ಲಿ ನಿರ್ಮಾಪಕರ ಜತೆ ಮಾತನಾಡಿ, ಮನವಿ ಸಲ್ಲಿಸಬೇಕಿತ್ತು. ಈ ಸಾಂಕ್ರಾಮಿಕ ರೋಗ ಉಲ್ಬಣವಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಚಿತ್ರೀಕರಣ ಮಾಡುವುದು ಒಳ್ಳೆಯದಲ್ಲಿ ಇದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಅಲ್ಲದೇ ಅಧ್ಯಕ್ಷರು ಯಾರಿಗೂ ಹೇಳದೆ ಅವರಷ್ಟಕ್ಕೆ ಅವರೇ ಪತ್ರ ತೆಗೆದುಕೊಂಡು ಹೋಗಿದ್ದಾರೆ ಎಂದು ಮಾತನಾಡಿದರು.

    ಕಾರ್ಯಕಾರಿ ಸಮಿತಿ ಎದುರು ಮನವಿ ಸಲ್ಲಿಸುತ್ತಿರುವ ಬಗ್ಗೆ ಚರ್ಚೆ ಮಾಡಿಯೇ ಪತ್ರ ತೆಗೆದುಕೊಂಡು ಹೋಗಿದ್ದು, ಎಂದು ಅಧ್ಯಕ್ಷ ಶಿವಕುಮಾರ್‌ ಹೇಳಿದ್ದಾರೆ. ಇದನ್ನೆಲ್ಲ ನೋಡಿದರೆ ಕೆಟಿವಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಗೊತ್ತಾಗುತ್ತದೆ.  ಜತೆಗೆ ಕೆಟಿವಿ ಚುನಾವಣೆ ಹತ್ತಿರ ಇರುವುದರಿಂದ ಈ ಘಟನೆಯನ್ನು ವಿವಾದಕ್ಕೆ ತಿರುಗಿಸಲಾಗಿದೆಯಂತೆ.

    ದಿನಾಂಕ ಬದಲು

    ವಿಶೇಷ ಎಂದರೆ ಮೇ 11 ರಿಂದ ಚಿತ್ರೀಕರಣ ಆರಂಭ ಮಾಡುತ್ತೇವೆ ಎಂದಿದ್ದ ಕೆಟಿವಿ ಮರುದಿನ ಸಭೆ ನಡೆಸಿ 21 ರ ನಂತರ ಚಿತ್ರೀಕರಣ ಆರಂಭಿಸುವುದಾಗಿ ಅನೌನ್ಸ್‌ ಮಾಡಿತು. ಇದರ ಜತೆಗೆ ಕೆಲ ಹಿರಿಯ ನಟ, ನಟಿಯರು ಚಿತ್ರೀಕರಣಕ್ಕೆ ಬರಲು ಹಿಂದೇಟು ಹಾಕಿದರು ಎನ್ನುವ ಮಾಹಿತಿ ಸಹ ಲಭ್ಯವಾಯಿತು.

    ಅನುಮತಿ ಪಡೆದಿರುವುದು ಅಧ್ಯಕ್ಷ ಶಿವಕುಮಾರ್‌ ಅವರ ವೈಯಕ್ತಿಕ  ಹಿತಾಸಕ್ತಿ ಎಂಬ ಮಾತುಗಳು ಸಹ ಕೇಳಿ ಬಂದವು. ಶಿವಕುಮಾರ್‌ ಅವರು ಮೂಲತಃ ನಿರ್ಮಾಪಕರು ಅವರ ನಿರ್ಮಾಣ ಸಂಸ್ಥೆಯಿಂದ ಒಂದೆರೆಡು ಸೀರಿಯಲ್‌ಗಳು, ಅಡುಗೆ ಕಾರ್ಯಕ್ರಮಗಳು ನಡೆಯುತ್ತಿದ್ದು, ಅದಕ್ಕೆ ಸಹಾಯವಾಗಲಿ ಎಂದು ಅವಸರವಾಗಿ ಅನುಮತಿ ಪಡೆದುಕೊಂಡಿದ್ದಾರೆ ಎಂದು ಕೆಲವರು ಮಾತನಾಡಿಕೊಂಡರು.

    ಇದರ ಜತೆಗೆ ಖಾಸಗಿ ವಾಹಿನಿಯೊಂದು ರೇಟಿಂಗ್‌ನಲ್ಲಿ  ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ನಿರ್ಮಾಣ ಸಂಸ್ಥೆಗಳಿಗೆ ಚಿತ್ರೀಕರಣಕ್ಕೆ ಒತ್ತಾಯ ಮಾಡಿ ಸರ್ಕಾರದ ಮಟ್ಟದಲ್ಲಿಯೂ ಒತ್ತಡ ಹೇರಿ ಚಿತ್ರೀಕರಣಕ್ಕೆ ಅನುಮತಿ ಪಡೆದುಕೊಂಡಿದೆ ಎಂಬ ಮಾತುಗಳು ಸಹ ಹೆಚ್ಚಾಗಿ ಕೇಳಿ ಬಂದಿವೆ.

    ಆದರೆ ಇಷ್ಟೇಲ್ಲಾ ವಿವಾದಗಳು , ಆರೋಪಗಳು ಕೇಳಿ ಬಂದರೂ ಸೋಮವಾರದಿಂದ ವಿವಿಧ ಚಾನೆಲ್‌ಗಳ ಹತ್ತಕ್ಕೂ ಹೆಚ್ಚಿನ ಸೀರಿಯಲ್‌ಗಳ ಚಿತ್ರೀಕರಣ ಸರ್ಕಾರದ ಮಾರ್ಗಸೂಚಿಗಳ ಪಾಲನೆಯೊಂದಿಗೆ ಆರಂಭವಾಗಿದೆ.

     ರಾಧಾ ಕಲ್ಯಾಣ ಮತ್ತು ಸುಬ್ಬಲಕ್ಷ್ಮಿ ಸಂಸಾರ ಎರಡು ಧಾರಾವಾಹಿಗಳ ಹೊರತಾಗಿ ಜೀ಼ ಕನ್ನಡ ತನ್ನ ಎಲ್ಲ ಧಾರಾವಾಹಿಗಳ ಚಿತ್ರೀಕರಣಕ್ಕೆ ಚಾಲನೆ ನೀಡಿದೆ. ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಇನ್ನೂ ಅನುಮತಿ ದೊರೆತಿಲ್ಲ. 

    ಎಲ್ಲ ಸೆಟ್ ನಲ್ಲೂ ಕಲಾವಿದರೂ ಸೇರಿ ಗರಿಷ್ಠ 15 ಮಂದಿ ಇರುತ್ತಾರೆ. ಕಲಾವಿದರನ್ನು ಆಯಾ ಕಲಾವಿದರ ಚಿತ್ರೀಕರಣದ ಅವಧಿಗೆ ಮಾತ್ರ ಕರೆಸಲಾಗುತ್ತದೆ. ಎಲ್ಲರನ್ನೂ ಒಗ್ಗೂಡಿಸಿ ಚಿತ್ರೀಕರಿಸುವುದಿಲ್ಲ. ತಂತ್ರಜ್ಞರೆಲ್ಲರೂ ಗ್ಲೋವ್ಸ್, ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಕಡ್ಡಾಯವಾಗಿ ಬಳಸುತ್ತಾರೆ. ಈ ಸ್ಯಾನಿಟೈಸರ್ ನಿರ್ವಹಣೆಗೆಂದೇ ಚಾನೆಲ್ ಕಡೆಯಿಂದ ಒಬ್ಬ ಸಿಬ್ಬಂದಿಯನ್ನು ನೀಡಲಾಗುತ್ತಿದೆ. ಈ ರೀತಿಯ ನೈರ್ಮಲ್ಯ ನಿರ್ವಹಣೆಗೆ ಪ್ರತಿ ಸೆಟ್ ನಲ್ಲೂ ಒಬ್ಬ ಸಿಬ್ಬಂದಿ ಇರುತ್ತಾರೆ. 

    ಎಲ್ಲ ಬಗೆಯ ಮುನ್ನೆಚ್ಚರಿಕೆಗಳನ್ನೂ ಕೈಗೊಳ್ಳಲಾಗಿದೆ. ತಿಂಡಿ ತಿನಿಸುಗಳನ್ನು ಸೆಟ್ ನಲ್ಲಿ ಸಿದ್ಧಪಡಿಸಲಾಗುತ್ತದೆ. ಕಲಾವಿದರಿಗೆ ಮನೆಯಿಂದ ತಿಂಡಿ ತರಲು ಅವಕಾಶ ಕಲ್ಪಿಸಲಾಗಿದೆ.  ಇತರೆ ಚಾನೆಲ್‌ಗಳ ‘ಇಂತಿ ನಿಮ್ಮ ಆಶಾ’ , ‘ಮುದ್ದು ಲಕ್ಷ್ಮೀ ಸೀರಿಯಲ್‌ಗಳ ಶೂಟಿಂಗ್‌ ಆರಂಭವಾಗಿದೆ. ಜೂನ್‌ 1 ರಿಂದ ಹೊಸ ಎಪಿಸೋಡ್‌ಗಳು ಪ್ರಸಾರವಾಗಲಿದೆ ಎಂಬ ಮಾಹಿತಿ ವಾಹಿನಿ ವತಿಯಿಂದ ಸಿಕ್ಕಿದೆ.(ಚಿತ್ರಗಳು :ಮನು)

    ವೇಲುಪಿಳ್ಳೈ ಪ್ರಭಾಕರನ್ ನಮ್ಮ ರಾಜೀವ್ ಅವರನ್ನು ಹತ್ಯೆಮಾಡಿಸಬಾರದಿತ್ತು, ಅವನೂ ಹಾಗೆ ಸಾಯಬಾರದಿತ್ತು…

    ಕೆಲ ಐತಿಹಾಸಿಕ ಪ್ರಮಾದಗಳು, ಕೆಟ್ಟ ನಿರ್ಧಾರಗಳು ಭವಿಷ್ಯಕ್ಕೆ ಮೊಳೆ ಹೊಡೆಯುತ್ತವೆ. ಹಾಗೆನ್ನುವುದಕ್ಕಿಂತ ಸರ್ವನಾಶ ಮಾಡುತ್ತವೆ ಎನ್ನುವುದೇ ಬೆಸ್ಟು. 21 ಮೇ 1991ರಂದು ನಡೆದ ದುರಂತ ಇಂಥದ್ದೇ. ಆವತ್ತು ರಾಜೀವ್ ಗಾಂಧಿ ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಯಿತು. ಐಟಿ ಇಂಡಿಯಾಗೆ ಅಂಕುರಾರ್ಪಣೆ ಮಾಡಿದ್ದ ಮಹಾನಾಯಕತ್ವ ಮಾನವ ಬಾಂಬಿಗೆ ಆಹುತಿಯಾಗಿ ಪಂಚಭೂತಗಳಲ್ಲಿ ಲೀನವಾಗಿತ್ತು. ರೂಪದಲ್ಲಿ ದೇವೇಂದ್ರನಿಗೂ ಹೊಟ್ಟೆ ಉರಿಸುವಂತಿದ್ದ ಅವರು ಮಾಂಸದ ತಣುಕುಗಳಾಗಿ ಚೆಲ್ಲಿಬಿದ್ದಿದ್ದನ್ನು ಕಂಡು ಇಡೀ ದೇಶವಕೆ ಜಗತ್ತೇ ರೋಧಿಸಿತ್ತು. ನಿಜಕ್ಕಾದರೆ ಅದು ರಾಜೀವ್ ಸಾವಲ್ಲ! ಸಾವೇ ಅವರನ್ನು ತನ್ನತ್ತ ಸೆಳೆದುಕೊಂಡು ಕ್ರೂರ ನಗೆ ಬೀರಿದ ಪರಿಯದು.

    ಭಾರತದೊಂದಿಗೇ ದ್ವೀಪದೇಶ ಶ್ರೀಲಂಕಾ ಶ್ರೇಯಸ್ಸನ್ನು ಬಲವಾಗಿ ಪ್ರತಿಪಾದಿಸಿದವರು ಅವರು. ಅಲ್ಲಿನ ಮುಖ್ಯವಾಹಿನಿಯಲ್ಲಿ ಎಲ್ಟಿಟಿಈಯನ್ನೂ ಬೆರೆಯವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದವರು. ತಮಿಳುನಾಡಿನ ರಾಮೇಶ್ವರಂ ದ್ವೀಪದ ಕೊನೆಯ ಕೊಂಡಿ ಧನುಷ್ಕೋಡಿಯಿಂದ ಕೆಲವೇ ಮೈಲು ದೂರದ ಜಾಫ್ನಾ ನಡುಗಡ್ಡೆಗಳ ಉದ್ದಗಲಕ್ಕೂ ಚಾಚಿಕೊಂಡು ಬದುಕು ಕಟ್ಟಿಕೊಂಡಿದ್ದ ತಮಿಳರಿಗೆ ಕೊಟ್ಟ ಕಿರುಕುಳ ಮನುಕುಲದ ಒಂದು ಕಪ್ಪುಚುಕ್ಕೆ. ಆ ವಿಷಯದಲ್ಲಿ ಲಂಕಾ ಸರಕಾರಗಳು ಮಾಡಿದ ಪಾಪಗಳು ಅನೇಕ. 70ರ ದಶಕದಿಂದ ಮೊದಲಾಗಿ ಎಲ್ಟಿಟಿಈ ಅಂತ್ಯದವರೆಗೂ ಈ ಅನ್ಯಾಯಕ್ಕೆ ಅಂಕೆಯೇ ಇರಲಿಲ್ಲ. ಇಂಥ ಸ್ಥಿತಿಯಿಂದ ಹೊರಬರಲು ಹಿಂಸೆಯನ್ನೇ ಆಯ್ಕೆ ಮಾಡಿಕೊಂಡ ತಮಿಳು ಟೈಗರುಗಳು ತುಸು ಉದಾರವಾಗಿ ಯೋಚನೆ ಮಾಡಿದ್ದಿದ್ದರೆ ರಾಜೀವ್ ಜೀವಿತಕಾಲದಲ್ಲಿಯೇ ಈ ಬಿಕ್ಕಟ್ಟಿಗೊಂದು ಶಾಶ್ಚತ ರಾಜಕೀಯ ಪರಿಹಾರ ಕಂಡುಕೊಳ್ಳಬಹುದಿತ್ತು. ಅಂಥ ಸುವರ್ಣಾವಕಾಶವನ್ನು ರಾಜೀವ್ ಕಲ್ಪಿಸಿದ್ದರು. ಆದರೆ, ಹಿಂಸೆಯೆಂಬ ಭ್ರಮೆಯ ಮೇಲೆ ಸವಾರಿ ಮಾಡುತ್ತಿದ್ದ ಟೈಗರುಗಳಿಗೆ ಭವಿಷ್ಯದಲ್ಲಿ ಘಟಿಸಲಿದ್ದ ಸಕಾರಾತ್ಮಕ ಪರಿಣಾಮಗಳನ್ನು, ಎದುರಾಗಲಿದ್ದ ಬಂಗಾರದ ದಿನಗಳನ್ನು, ತಮ್ಮ ಮಕ್ಕಳ ಮುಂದಿದ್ದ ಉಜ್ವಲ ಭವಿಷ್ಯವನ್ನು ಅಂದಾಜಿಸುವ ರಾಜಕೀಯ ಪಕ್ವತೆಯೇ ಇರಲಿಲ್ಲ. ಅವರ ಪರವಾಗಿ ತಮಿಳುನಾಡಿನಲ್ಲಿ ಹೋರಾಟ ನಡೆಸುತ್ತಿದ್ದ ವರ್ಚಸ್ವಿ ನಾಯಕರೂ ಮುಂದಿನ ಅಪಾಯವನ್ನು ಊಹಿಸಲಿಲ್ಲ. ಅವರಲ್ಲಿ ಬಹುತೇಕರು ಅವರವರ ವಿಚಾರಗಳ ಮೂಲಕ ಪೇಪರ್ ಟೈಗರುಗಳೇ ಆಗಿಬಿಟ್ಟರೆ ವಿನಾ ಲಂಕೆಯಲ್ಲಿ ನೆಮ್ಮದಿಯ ದಿನಗಳಿಗೆ ಕಾತರರಾಗಿದ್ದ ತಮ್ಮವರ ಕ್ಷೇಮವನ್ನು ಪರಿಗಣಿಸಲಿಲ್ಲ. ಜತೆಗೆ, ಭಾರತ ಮತ್ತು ಲಂಕಾ ಸರಕಾರಗಳ ನಡುವೆ ರಚನಾತ್ಮಕ ಮಾತುಕತೆಗೆ ವೇದಿಕೆ ಕಲ್ಪಿಸುವ ಅವಕಾಶವನ್ನು ಕೂಡ ಕೈಚೆಲ್ಲಿಬಿಟ್ಟರು.

    ಆಗ ಲಂಕೆಯ ನಾಯಕತ್ವ ಹಿಟ್ಲರ್, ಮುಸೋಲಿನಿಗಿಂತ ಕ್ರೂರವಾಗಿತ್ತು. “ನಿಜವಾಗಿಯೂ ತಮಿಳರು ಹಸಿವಿನಿಂದ ಬಳಲುತ್ತಿದ್ದರೆ, ಸಿಂಹಳೀಯರು ಸಂತೋಷಪಡುತ್ತಾರೆ” ಎಂದು “ಡೈಲಿ ಟೆಲಿಗ್ರಾಫ್” ಪತ್ರಿಕೆಗೆ ಹೇಳಿಕೊಂಡಿದ್ದ ಜಯವರ್ಧನೆಯಂಥ ಕ್ರೂರಿಗೆ ರಾಜತಾಂತ್ರಿಕ ಮೂಗುದಾರ ಹಾಕಲು ಯತ್ನಸಿದ ರಾಜೀವ್ ಪ್ರಾಮಾಣಿಕತೆಯನ್ನು ಇವರೆಲ್ಲರೂ ಟೈಗರುಗಳಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಲೇ ಇಲ್ಲ. ಅತ್ತ ಜಾಫ್ನಾದಲ್ಲಿ ಸಾವಿರಾರು ತಮಿಳರ ನರಮೇಧ ನಿಲ್ಲಲೂ ಇಲ್ಲ. ಇತ್ತ ಎಗ್ಗಿಲ್ಲದೆ ಆ ಸಾವುಗಳ ಹೆಸರಲ್ಲಿ ಚಂದಾ ವಸೂಲಿಯೂ ನಿಲ್ಲಲಿಲ್ಲ!! ಎಲ್ಟಿಟಿಈಯ ಈ ಕರ್ಮಕ್ಕೆ ಏನು ಹೇಳುವುದು?

    ಅಷ್ಟೇ ಏಕೆ? ಅಮೆರಿಕ ಬೆಂಬಲದಿಂದ ಹೆಂಡಕುಡಿದ ಹೋರಿಯಂತಾಗಿದ್ದ ಜಯವರ್ಧನೆಯನ್ನು ಆ ವ್ಯಕ್ತಿಯ ದಾರಿಯಲ್ಲೇ ಮಣಿಸಲು ಇಂದಿರಾ ಗಾಂಧಿ ನಿರ್ಧರಿಸಿದ್ದರು. ಆಗಷ್ಟೇ ಪಾಕಿಸ್ತಾನದಿಂದ ಬಾಂಗ್ಲಾವನ್ನು ವಿಮೋಚನೆಗೊಳಿಸಿದ್ದ ಅವರು, ತಮಿಳರಿಗೆ ಪ್ರತ್ಯೇಕ ದೇಶ ಬೇಕೆಂಬ ವಾದಕ್ಕೆ ಬೆನ್ನೆಲುಬಾಗಿ ನಿಂತರು. ಟೈಗರುಗಳಿಗೆ ರಹಸ್ಯವಾಗಿ ಶಸ್ತ್ರಾಸ್ತ್ರಗಳನ್ನು ಕೊಟ್ಟು ತರಬೇತಿಯನ್ನೂ ಕೊಡಿಸಿದ್ದರು. 1983ರಲ್ಲಿ ಅಂತ ಕಾಣುತ್ತೆ, ಶ್ರೀಲಂಕಾದ ಜೈಲೊಂದರಲ್ಲಿ 53 ಜನ ತಮಿಳು ಪ್ರತಿಭಟನಾಕಾರರನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಆ ಕ್ಷಣದಲ್ಲಿ ವ್ಯಘ್ರರಾಗಿಬಿಟ್ಟಿದ್ದ ಇಂದಿರಾ, ರಾಜ್ಯಸಭೆಯಲ್ಲಿ ಮಾತನಾಡುತ್ತ, “ಶ್ರೀಲಂಕಾದಲ್ಲಿ ನಡೆಯುತ್ತಿರುವ ನಮ್ಮವರ ಮಾರಣಹೋಮವನ್ನು ಇನ್ನು ಸಹಿಸಲು ಸಾಧ್ಯವಿಲ್ಲ. ಅದಕ್ಕೊಂದು ಒತ್ತಾಯದ ಅಂತ್ಯ ಕಾಣಿಸಲಾಗುವುದು” ಎಂದಿದ್ದರು. ಪರೋಕ್ಷವಾಗಿ ಅವರು ಸೇನಾ ಕಾರ್ಯಾಚರಣೆಯ ಸುಳಿವು ನೀಡಿದ್ದರು. ದುರದೃಷ್ಟಕ್ಕೆ ಮರುವರ್ಷವೇ ಅವರೂ ಹತ್ಯೆಗೀಡಾದರು. ತಾಯಿಯ ನಂತರ ಅಧಿಕಾರಕ್ಕೆ ಬಂದ ರಾಜೀವ್, ರಾಜತಾಂತ್ರಿಕ ದಾರಿ ಹಿಡಿದರು. ಆವತ್ತಿನ ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್, ಸೋವಿಯತ್ ರಷ್ಯ ಅಧ್ಯಕ್ಷ ಮಿಖಾಯಿಲ್ ಗೊರ್ಬಚೇವ್ ಮೂಲಕ ಜಯವರ್ಧನೆ ಅಟ್ಟಹಾಸಕ್ಕೆ ಕಡವಾಣ ಹಾಕಿಯೇಬಿಟ್ಟರು. ಅಲ್ಲಿಗೆ ಮೆತ್ತಗಾದ ಜಯವರ್ಧನೆ ಮಾತುಕತೆಗೆ ಬರುವಂತೆ ಭಾರತಕ್ಕೆ ದುಂಬಾಲು ಬಿದ್ದರು. ಆ ಪರಿಣಾಮವೇ 1987ರ ಭಾರತ-ಶ್ರೀಲಂಕಾ ಶಾಂತಿ ಒಪ್ಪಂದ. ಆ ಮೂಲಕವಾದರೂ ಎಲ್ಟಿಟಿಈಗಳು ಬಂದೂಕುಗಳನ್ನು ತೊರೆದು ಲಂಕೆಯ ಮುಖ್ಯವಾಹಿನಿಗೆ ಬರಲಿ ಎಂಬುದೇ ರಾಜೀವ್ ಆಸೆಯಾಗಿತ್ತು. ಒಂದು ವೇಳೆ ಟೈಗರುಗಳು ಆ ಒಪ್ಪಂದವನ್ನು ಸಮ್ಮತಿಸಿ ನಡೆದಿದ್ದರೆ ಮುಂದೊಂದು ದಿನ ತಮಿಳರು ಅಧಿಕಾರ ಕೇಂದ್ರಸ್ಥಾನದಲ್ಲಿ ವಿರಾಜಮಾನರಾಗುತ್ತಿದ್ದರು. ಆವತ್ತೇ ಸಿವಿಲ್ ವಾರ್ ಮುಗಿದುಹೋಗುತ್ತಿತ್ತು. ಹಾಗೆ ಆಗಲಿಲ್ಲ.

    ಕೊನೆಪಕ್ಷಕ್ಕೆ ತಮಿಳುನಾಡಿನ ಕೇಂದ್ರಸ್ಥಾನದಲ್ಲೇ ಕಾರ್ಯಾಚರಿಸುತ್ತಿದ್ದ ಟೈಗರುಗಳ ಮಾರ್ಗದರ್ಶಿಗಳು ಉದ್ದಕ್ಕೂ ಲಂಕೆಯ ವಿರುದ್ಧ ಹಿಂಸೆಯನ್ನು ಪ್ರೇರೇಪಿಸಿದರೇ ವಿನಾ ಕೊಲಂಬೋ ಆಡಳಿತವನ್ನು ರಾಜತಾಂತ್ರಿಕವಾಗಿ ಕಟ್ಟಿಹಾಕುವ ತಂತ್ರಗಾರಿಕೆಯನ್ನು ಹೆಣೆದು ಜಾಫ್ನಾ ತೀರದಲ್ಲಿ ನಿಂತು ಆಸೆ ಕಂಗಳಿಂದ ಭಾರತದತ್ತ ನೋಡುತ್ತಿದ್ದ ಜೀವಗಳ ಬಗ್ಗೆ ಯೋಚಿಸಲಿಲ್ಲ. ಇಂಥ ದಿವ್ಯನಿರ್ಲಕ್ಷ್ಯ, ಅಪರಿಪಕ್ವ ನಿರ್ಧಾರಗಳಿಂದಲೇ ಇಡೀ ಜಗತ್ತಿನಲ್ಲೆ ಸಾರ್ವಭೌಮ ರಾಷ್ಟ್ರವೊಂದಕ್ಕೇ ಸಡ್ಡು ಹೊಡೆದು ಪರ್ಯಾಯವಾಗಿ (ಶ್ರೀಲಂಕಾದ ಒಟ್ಟು ಭೂಪ್ರದೇಶದಲದಲ್ಲಿ ಅಂದಾಜು ಶೇಕಡಾ ೩೦ರಷ್ಟಕ್ಕೂ ಹೆಚ್ಚು ಭೂಭಾಗ ಇವರ ವಶದಲ್ಲೇ ಇತ್ತು.) ಸರಕಾರ ನಡೆಸುವಷ್ಟು ಸಶಕ್ತವಾಗಿದ್ದ ಎಲ್ಟಿಟಿಈ ಎಂಬ ಭಾರೀ ಸಶಸ್ತ್ರ ಸಂಘಟನೆ, ಒಂದಲ್ಲ ಒಂದು ದಿನ ಮುಖ್ಯವಾಹಿನಿಗೆ ಬಂದು ಲಂಕೆಯ ಅಧಿಕಾರದ ಕೇಂದ್ರಸ್ಥಾನವನ್ನೇ ಅಧಿರೋಹಣ ಮಾಡಬಲ್ಲ ಚಾಣಾಕ್ಷತೆ ಇದ್ದ ವೇಲುಪಿಳ್ಳೈ ಪ್ರಭಾಕರನ್ ಎಂಬ ವ್ಯಕ್ತಿ ಇಟ್ಟ ಕ್ಷಮಿಸಲಾರದ ತಪ್ಪುಹೆಜ್ಜೆಗಳು ಮುಖ್ಯವಾಗಿ ಭಾರತಕ್ಕೆ ಭಾರೀ ಬೆಲೆ ತೆರುವಂತೆ ಮಾಡಿದವು. ಅಂತಿಮವಾಗಿ ಆ ಸಂಘಟನೆಯೇ ವಿನಾಶವಾಯಿತು. ಕನಸುಗಳು ಹಾಗೆಯೇ ಉಳಿದುಬಿಟ್ಟವು.

    ಹೀಗೆ ನೋಡಿದರೆ, ಎಲ್ಟಿಟಿಈ ಮಾಡಿದ ಘೋರ ತಪ್ಪುಗಳು ಒಂದಲ್ಲ ಎರಡಲ್ಲ. ಅದರಲ್ಲಿ ಮೊದಲನೆಯದು, ಆ ಕಾಲಘಟ್ಟದಲ್ಲಿ ಭಾರತಕ್ಕಷ್ಟೇ ಅಲ್ಲದೆ ಜಗತ್ತಿನ ಅಗ್ರನಾಯಕರಲ್ಲಿ ಒಬ್ಬರಾಗಿದ್ದ, ಭಾರತೀಯರ ಬಹುಮೆಚ್ಚಿನ ಲೀಡರ್ ರಾಜೀವ್ ಗಾಂಧಿ ಹತ್ಯೆ ಮಾಡಿದ್ದು. ಸಮಸ್ಯೆಗೆ ಈ ಹತ್ಯೆಯೊಂದೇ ಪರಿಹಾರ ಎಂದು ದುಡುಕಿದ ಪ್ರಭಾಕರನ್ ಗಳಿಸಿದ್ದೇನು? ತಾಯ್ನಾಡಿನ ಬೆಂಬಲವನ್ನೂ ಶಾಶ್ವತವಾಗಿ ಕಳೆದುಕೊಂಡಿದ್ದು. ಹಾಗೆ ನೋಡಿದರೆ ರಾಜೀವ್ ಅಧಿಕಾರಕ್ಕೆ ಬಂದಾಗಿನಿಂದಲೂ ಎಲ್ಟಿಟಿಈ ಬಗ್ಗೆ ಮೃಧು ನಿಲವೇ ಹೊಂದಿದ್ದರು. 1987ರಲ್ಲಿ ನಿರ್ನಾಮದ ಅಂಚಿಗೆ ಬಂದು ಮುಟ್ಟಿದ್ದ ಟೈಗರುಗಳನ್ನು ಜೀವಸಹಿತ ಉಳಿಸಿದ್ದೇ ಇವರು. ಜಯವರ್ಧನೆ ಸೇನೆ ನಡೆಸಿದ ಮಾರಣಹೋಮದಲ್ಲಿ ದಿಕ್ಕಾಪಾಲಾಗಿದ್ದ ತಮಿಳಿರಿಗೆ, ಟೈಗರುಗಳಿಗೆ ಜಾಫ್ನಾಗೇ ಹೆಲಿಕಾಪ್ಟರುಗಳನ್ನು ನುಗ್ಗಿಸಿ ಆಹಾರ, ಔಷಧಿ, ಆಯುಧಗಳನ್ನೂ ಪೂರೈಸಿದ್ದರು ಎಂದರೆ ರಾಜತಾಂತ್ರಿಕವಾಗಿ ಅವರೆಂಥ ರಿಸ್ಕ್ ತೆಗೆದುಕೊಂಡಿದ್ದರು ಎಂಬುದು ಅರ್ಥವಾಗುತ್ತದೆ. ಆ ಕ್ಷಣದಲ್ಲಿ ಹಾವು ಕಡಿದಂತೆ ಆಗಿಬಿಟ್ಟ ಲಂಕಾ ಸರಕಾರ ಹೊಸ ಪ್ರಸ್ತಾವನೆಯೊಂದಿಗೆ ಭಾರತದ ಕದತಟ್ಟಿತು. “ಪ್ರತ್ಯೇಕ ದೇಶ ಕೊಡುವ ಬೇಡಿಕೆಯೊಂದನ್ನು ಹೊರತುಪಡಿಸಿ ತಮಿಳರ ಉಳಿದೆಲ್ಲ ಬೇಡಿಕೆಗಳನ್ನು ಷರತ್ತುರಹಿತವಾಗಿ ಈಡೇರಿಸಲಾಗುವುದು. ಅದಕ್ಕೆ ಪ್ರತಿಯಾಗಿ ಟೈಗರುಗಳ ಬಳಿ ಇರುವ ಭಾರತೀಯ ಆಯುಧಗಳನ್ನು ವಾಪಸ್ ಪಡೆದುಬಿಡಿ” ಎಂದು ಅಲುವತ್ತಕೊಂಡಿತ್ತು. ಈ ಪ್ರಸ್ತಾವನೆ ರಾಜೀವ್ ಗಾಂಧಿಗೆ ಸರಿಕಾಣಿಸಿತು. ಅವರ ತಂಡದಲ್ಲಿದ್ದ ವಿದೇಶಿ ನೀತಿನಿರೂಪಕರು, ಮುಖ್ಯವಾಗಿ ವಿದೇಶಾಂಗ ಮಂತ್ರಿ, ಸಂಪುಟ ಇದಕ್ಕೆ ಸಹಮತ ವ್ಯಕ್ತಪಡಿಸಿತ್ತು. ತಮ್ಮ ಜೀವಕ್ಕೇ ಎರವಾಗುವಂಥ ರಿಸ್ಕ್ ತೆಗೆದುಕೊಂಡರು ರಾಜೀವ್. ಭಾರತದ ಶಾಂತಿ ಪಾಲನಾ ಪಡೆ ಜಾಫ್ನಾಗೆ ತೆರಳಿತಲ್ಲದೆ ತಾನು ಕೊಟ್ಟಿದ್ದ ಆಯುಧಗಳನ್ನು ವಾಪಸ್ ಪಡೆಯಿತು. ಆದರೆ ಪ್ರಭಾಕರನ್ ನೇತೃತ್ವದ ಟೈಗರುಗಳು ಈ ಒಪ್ಪಂದವನ್ನು ಧಿಕ್ಕರಿಸಿದರು. ಭಾರತೀಯ ಆಯುಧಗಳನ್ನು ಭಾರತದ ವಿರುದ್ಧವೇ ಬಳಸಿದರು. ಎಲ್ಟಿಟಿಈ ಮತ್ತು ಭಾರತಕ್ಕೆ ಎಲ್ಲ ಕೆಟ್ಟಿದ್ದು ಅಲ್ಲಿಯೇ. ಆಮೇಲೆ ಎಲ್ಟಿಟಿಈಗಳು ರಾಜೀವ್ ವಿರುದ್ಧ ಕಟುದ್ವೇಷ ಬೆಳೆಸಿಕೊಂಡರು. ಶರಣಾಗುವಂತೆ ಬಾರತೀಯ ಸೇನೆ ಮಾಡಿದ ಮನವಿಗೆ ಪ್ರಭಾಕರನ್ ಸೊಪ್ಪು ಹಾಕಲಿಲ್ಲ. ಹೇಗಾದರೂ ಮಾಡಿ ಆತನನ್ನು ಮುಖ್ಯವಾಹಿನಿಗೆ ತಂದು ನಿಲ್ಲಿಸಿ ತಮಿಳರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಬೇಕೆಂಬ ರಾಜೀವ್ ಗುರಿ ಫಲಿಸಲೇ ಇಲ್ಲ.

    ಇಂಥ ಸಮಯದಲ್ಲೇ ರಾಜಕೀಯ ಹಿನ್ನಡೆ ಅನುಭವಿಸಿದ ರಾಜೀವ್ 1989ರ ಚುನಾವಣೆಯಲ್ಲಿ ಸೋತರು. ಆಮೇಲೆ ಪ್ರಧಾನಿಯಾದ ವಿ.ಪಿ.ಸಿಂಗ್, ಲಂಕಾದಿಂದ ಶಾಂತಿಪಾಲನಾ ಪಡೆಗಳನ್ನು ವಾಪಸ್ ಕರೆಸಿಕೊಂಡರು. 1991ರಲ್ಲಿ ಮತ್ತೆ ಚುನಾವಣೆ ಬಂದಾಗ ವೇಲುಪಿಳ್ಳೈ ಪ್ರಭಾಕರನ್ ನೇರವಾಗಿ ರಾಜೀವ್ ಕಡೆಗೇ ಗುರಿ ಇಟ್ಟ. ಸಮೀಕ್ಷೆಗಳಲ್ಲಿ ಮತ್ತೊಮ್ಮೆ ರಾಜೀವ್ ಪ್ರಧಾನಿಯಾಗುತ್ತಾರೆಂದು ಹೇಳಲಾಗಿತ್ತು. ಇದು ವೇಲುಪಿಳ್ಳೈಗೆ ಜೀರ್ಣಿಸಿಕೊಳ್ಳಲಾಗಲಿಲ್ಲ. ವಿಶಾಖಪಟ್ಟಣದಲ್ಲಿ ಪ್ರಚಾರ ಮುಗಿಸಿ ರಾತ್ರಿ 10.10ರ ಹೊತ್ತಿಗೆ ಶ್ರೀಪೆರಂಬುದೂರಿಗೆ ಬಂದಿಳಿದ ರಾಜೀವ್ ಈಸಿಯಾಗಿ ಟಾರ್ಗೆಟ್ ಆಗುತ್ತಾರೆಂಬುನ್ನು ಅರಿತುಕೊಂಡ ಪ್ರಭಾಕರನ್ ಅಂದುಕೊಂಡಿದ್ದನ್ನು ಸಾಧಿಸಿಯೇಬಿಟ್ಟ. ಮಾನವ ಬಾಂಬಿಗೆ ರಾಜೀವ್ ಆಹುತಿಯಾಗಿಬಿಟ್ಟರು. (ಹರಿಬಾಬು ಎಂಬ ಪತ್ರಿಕಾ ಫೋಟೋಗ್ರಾಫರ್ ಒಬ್ಬರು ಸೆರೆಹಿಡಿದಿದ್ದ ಚಿತ್ರಗಳು ಹಂತಕಿಯನ್ನು ಗುರುತಿಸಿದ್ದವು. ಆ ಪಾತಕ ಕ್ಷಣಗಳನ್ನು ದಾಖಲಿಸಿದ್ದವು.) ನಿಜಕ್ಕೂ ಪ್ರಭಾಕರನ್ ಎಂಬ ಹಿಂಸಾತ್ಮ ಲಂಕೆಯಲ್ಲಿದ್ದ ಅಷ್ಟೂ ತಮಿಳರ ಕನಸುಗಳನ್ನು ಆ ಸಾವಿನೊಂದಿಗೆ ನುಚ್ಚುನೂರು ಮಾಡಿಬಿಟ್ಟಿತ್ತು.

    ಅದೇ ಲಾಗಾಯ್ತು. ಎಲ್ಟಿಟಿಈ ಸಂಪೂರ್ಣವಾಗಿ ಭಾರತದ ಬೆಂಬಲವನ್ನು ಕಳೆದುಕೊಂಡುಬಿಟ್ಟಿತು. ಬಳಿಕ ಪ್ರಧಾನಿಯಾದ ಪಿ.ವಿ. ನರಸಿಂಹರಾವ್ ಅವರು ಟೈಗರುಗಳ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿ ಅನುಸರಿಸಿದರು.

    ಇದಾದ ಮೇಲೆ ಟೈಗರುಗಳ ರಕ್ತದಾಹ ಮತ್ತೂ ಹೆಚ್ಚಿತು. 1993ರಲ್ಲಿ ಶ್ರೀಲಂಕಾ ಅಧ್ಯಕ್ಷ ರಣಸಿಂಘೆ ಪ್ರೇಮದಾಸ ಅವರನ್ನು ಕೊಲಂಬೋದ ನಡುರಸ್ತೆಯಲ್ಲಿ ನಡುಮಧ್ಯಾಹ್ನವೇ ಸೈಕಲ್ ಮೇಲೆ ಬಂದ ಎಲ್ಟಿಟಿಈ ಆತ್ಮಾಹುತಿ ಬಾಂಬರ್ ಒಬ್ಬ ಪೈಶಾಚಿಕವಾಗಿ ಹತ್ಯೆ ಮಾಡಿದ್ದ. ನಿಜಕ್ಕಾದರೆ ಲಂಕೆಯಲ್ಲಿ ತಮಿಳರ ವಿರುದ್ಧ ಹೆಪ್ಪುಗಟ್ಟುತ್ತಿದ್ದ ದ್ವೇಷ ರೋಷಾಗ್ನಿಯಾಗಿ ಬದಲಾಗಿದ್ದೇ ಆಗ. ಆ ನಂತರ ಅಧ್ಯಕ್ಷೆಯಾದ ಚಂದ್ರಿಕಾ ಕುಮಾರತುಂಗಾ ಹತ್ಯೆಗೂ 1999ರಲ್ಲಿ ಟೈಗರುಗಳು ವಿಫಲಯತ್ನ ನಡೆಸಿದರು. ದಾಳಿಯಲ್ಲಿ ಚಂದ್ರಿಕಾ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡರು. ಅಲ್ಲಿಗೆ ಸಿಂಹಳೀಯರಲ್ಲಿ ತಮಿಳರ ವಿರುದ್ಧ ಸೇಡಿನ ಕಿಚ್ಚು ಧಗಧಗಿಸತೊಡಗಿತ್ತು.

    ಅದಾದ ಮೇಲೆ ಕಾಲಚಕ್ರ ಐದೂವರೆ ವರ್ಷಗಳಷ್ಟೇ ಉರುಳಿತ್ತು. ಲಂಕೆಯಲ್ಲಿ ಮತ್ತೆ ಅಧ್ಯಕ್ಷೀಯ ಚುನಾವಣೆ ಎದುರಾಯಿತು. ಆಗಲೂ ಟೈಗರುಗಳು ಪಾಠ ಕಲಿಯಲಿಲ್ಲ. ಮಹಿಂದ ರಾಜಪಕ್ಸೆ ಎಂಬ ಕಟ್ಟಾ ರಾಷ್ಟ್ರೀಯವಾದಿ, ಅತಿ ಮಹತ್ವಾಕಾಂಕ್ಷಿಯ ವಿರುದ್ಧ ಉದಾರವಾದಿ, ತಮಿಳರ ಪರವಾದ ಮೃದುನಿಲವು ಹೊಂದಿದ್ದ ರನಿಲ್ ವಿಕ್ರಮಸಿಂಘೆ ಎಂಬ ಸಜ್ಜನ, ಸರಳ ವ್ಯಕ್ತಿಗೆ ಮತಹಾಕಿ ಗೆಲ್ಲಿಸಿಕೊಳ್ಳಬೇಕಾಗಿತ್ತು ತಮಿಳರು. ಎಲ್ಟಿಟಿಈಗೆ ಆ ಚುನಾವಣೆ ನಿರ್ಣಾಯಕವಾಗಿತ್ತು. ಆದರೆ ವೇಲುಪಿಳ್ಳೈ ಮಾಡದ್ದೇನು? ಚುನಾವಣೆ ಬಹಿಷ್ಕರಿಸುವಂತೆ ತನ್ನವರಿಗೆ ಕರೆಕೊಟ್ಟುಬಿಟ್ಟ. ಒಬ್ಬೇಒಬ್ಬ ತಮಿಳನೂ ಮತಗಟ್ಟೆಯತ್ತ ಸುಳಿಯಲಿಲ್ಲ. ಭಾರೀ ಅಬ್ಬರದ ಪ್ರಚಾರದಿಂದ ನಡೆದ ಈ ಚುನಾವಣೆಯಲ್ಲಿ ಸಿಂಹಿಳೀಯರು ಒಂದಾಗಿದ್ದರು. ರಾಜಪಕ್ಸೆ ಅರೆದುಕುಡಿಸಿದ್ದ ರಾಷ್ಟ್ರೀಯತೆಯ ಅಮಲಿನಲ್ಲಿ ಅವರೆಲ್ಲರೂ ತೇಲಿಹೋಗಿದ್ದರು. ರಾಜಪಕ್ಸೆ ಕೇವಲ ಒಂದು ಲಕ್ಷ ತೊಂಬತ್ತು ಸಾವಿರ (ಶೇಕಡಾ ೫೦.೩ರಷ್ಟು ಮಾತ್ರ) ಮತಗಳ ಅಂತರದಿಂದ ಗೆದ್ದರೆ, ತಮಿಳರಿಗೆ ನಿಜಕ್ಕೂ ಆಪ್ತಬಂಧುವಾಗಿದ್ದ ವಿಕ್ರಮಸಿಂಘೆ ಎಂಬ ಭರವಸೆ ಸೋತುಹೋಗಿತ್ತು. ಇದೇ ದೊಡ್ಡ ತಿರುವು. ಎಲ್ಟಿಟಿಈ ತನ್ನ ಶವಪೆಟ್ಟಿಗೆಗೆ ಹೊಡೆದುಕೊಂಡ ಕೊನೆ ಮೊಳೆ!!

    ಅಧ್ಯಕ್ಷಪಟ್ಟಕ್ಕೆ ಬಂದು ಕೂತೊಡನೆ ರಕ್ಷಣೆ ಖಾತೆಯನ್ನು ತಾವೇ ಇಟ್ಟುಕೊಂಡ ರಾಜಪಕ್ಸೆ, ಇನ್ನೇನು ಮೂರೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದ ಖಡಕ್ ಸೇನಾಧಿಪತಿ ಶರತ್ ಫೋನ್ಸೆಕಾ ಅಧಿಕಾರಾವಧಿಯನ್ನು ವಿಸ್ತರಿಸಿಬಿಟ್ಟರು. ಜತೆಗೆ ತಮ್ಮ ಸಹೋದರ, ದೇಶದ ಈಗಿನ ಅಧ್ಯಕ್ಷ ಗೋಟಬಯಾ ರಾಜಪಕ್ಸೆಯನ್ನು ಬಹುಮುಖ್ಯವಾದ ಡಿಫೆನ್ಸ್ ಸೆಕ್ರೆಟರಿ ಹುದ್ದೆಗೆ ತಂದು ಕೂರಿಸಿಕೊಂಡರು. ಅಲ್ಲಿಗೆ ಎಲ್ಟಿಟಿಈ ಅಂತ್ಯಕ್ಕೆ ಅಂತಿಮ ಷರಾ ಬರೆದುಬಿಟ್ಟಿದ್ದರು ರಾಜಪಕ್ಸೆ. 2006ರಿಂದಲೇ ಟೈಗರುಗಳ ವಿರುದ್ಧ ಆಪರೇಷನ್ನಿಗಿಳಿದ ಲಂಕಾಪಡೆ 2009 ಮೇ 18ರ ದಿನಕ್ಕೆ ಟೈಗರುಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿಬಿಟ್ಟಿತ್ತು. ಅದೇ ದಿನ ವೇಲುಪಿಳ್ಳೈ ಪ್ರಭಾಕರನ್ ಎಂಬ ಮೋಸ್ಡ್ ವಾಂಟೆಡ್ ವ್ಯಕ್ತಿ ಹತನಾಗಿದ್ದ. ಪಾಯಂಟ್ ಬ್ಲಾಂಕ್ ಸಮೀಪದಲ್ಲಿ ಆತನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ನೇರವಾಗಿ ಹಣೆಗೇ ಗುಂಡು ಹೊಕ್ಕಿತ್ತು. ಅದೆಷ್ಟೋ ಅಮಾಯಕರನ್ನು ಕೊಲ್ಲಿಸಿದ್ದ ಈತ ಸಾವು ಸುತ್ತುವರೆದ ಕೂಡಲೇ ವಿಲವಿಲನೇ ಒದ್ದಾಡಿದ್ದನಂತೆ. ತಪ್ಪಿಸಿಕೊಳ್ಳಲು ಶತಪ್ರಯತ್ನ ಮಾಡಿದ್ದನಂತೆ. 33 ವರ್ಷಗಳಿಂದ ಅದೆಷ್ಟೋ ಸವಾಲುಗಳನ್ನು ಮೆಟ್ಟಿ ಸಾಗಿಬಂದಿದ್ದ ಹೋರಾಟಕ್ಕೆ ಹಾಗೆ ಚರಮಗೀತೆ ಹಾಡಲಾಗಿತ್ತು. ಕಣ್ತೆರೆದ ಸ್ಥಿತಿಯಲ್ಲಿಯೇ ಸಿಕ್ಕ ಪ್ರಭಾಕರನ್ ದೇಹ, ಆತನ ಕೊನೆ (ಸತ್ತ ನಂತರದ) ನೋಟದಲ್ಲಿಯೂ ತಮಿಳು ದೇಶದ ಕನಸು ಹಾಗೆಯೇ ಜೀವಂತವಾಗಿತ್ತೇನೋ ಎಂದೆನಿಸಿದರೆ ಅಚ್ಚರಿಯೇನೂ ಇಲ್ಲ. ತನ್ನ ಸಾವಿನೊಂದಿಗೆ ಲಂಕೆಯ ಅಖಂಡ ತಮಿಳರ ಕನಸುಗಳನ್ನೂ ಸಮಾಧಿ ಮಾಡಿಬಿಟ್ಟ ಈ ಮನುಷ್ಯನನ್ನು ಇತಿಹಾಸ ಕ್ಷಮಿಸುತ್ತದೆಯೇ? ಗೊತ್ತಿಲ್ಲ. ಭಾರತವಂತೂ ಕ್ಷಮಿಸುವುದಿಲ್ಲ.

    ಎಲ್ಟಿಟಿಈ ಮಾಡಿಕೊಂಡ ಇನ್ನೊಂದು ಕರ್ಮವೆಂದರೆ 2009ರಲ್ಲಿ ದಿಲ್ಲಿಯಲ್ಲಿ ಕಾಂಗ್ರೆಸ್ ಸರಕಾರವೇ ಇತ್ತು. ಅತ್ತ ರಾಜಪಕ್ಸೆ ನಮ್ಮ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ಪದತಲಕ್ಕೆ ಬಿದ್ದು ಟೈಗರುಗಳು ವಿರುದ್ಧದ ಯುದ್ಧಕ್ಕೆ ಜಯವಾಗಲಿ ಎಂದು ಬೇಡಿಕೊಂಡು ಹೋದರೂ ಮನಮೋಹನ್ ಸಿಂಗ್ ಸರಕಾರ ಶ್ರೀಲಂಕಾ ಸಿವಿಲ್ ವಾರಿಗೂ ತನಗೂ ಸಂಬಂಧವೇ ಇಲ್ಲ ಎನ್ನುವಂತೆ ಇದ್ದುಬಿಟ್ಟಿತ್ತು. ಪ್ರಭಾಕರನ್ ಹತನಾದ ಎರಡೇ ದಿನಗಳ ಹಿಂದೆ (2009 ಮೇ 16) ಕಾಂಗ್ರೆಸ್ ಮತ್ತೊಮ್ಮೆ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಹೊಡೆದು ಮೇ 22ರಂದು ಮನಮೋಹನ್ ಸಿಂಗ್ ಎರಡನೇ ಅವಧಿಗೆ ಪ್ರಧಾನಿಯಾಗಿಬಿಟ್ಟರು. ಮೊದಲೇ ಸಂಭ್ರಮದಲ್ಲಿದ್ದ ಕಾಂಗ್ರೆಸ್ಸಿಗೆ ಚುನಾವಣೆ ರಿಸಲ್ಟ್ ಬಂದ ದಿನ ಡಬಲ್ ಸಂಭ್ರಮ. ತನ್ನ ಶತ್ರು ನಾಮಾವಶೇಷವಾದ ಘಳಿಗೆ. ಅದೇ ಸರಕಾರದ ಕ್ಯಾಬಿನೆಟ್ಟಿನಲ್ಲಿ ಮಂತ್ರಿಗಿರಿಗೆ ಮೇ 16 ರಿಂದಲೇ (ಪ್ರಭಾಕರನ್ ಸಾಯುವುದಕ್ಕೆ ಎರಡು ದಿನ ಮೊದಲು) ಚೌಕಾಸಿಗಿಳಿದ ತಮಿಳುನಾಡಿನ ರಾಜಕೀಯ ಪಕ್ಷಗಳ ಪಾಲಿಗೆ ವೇಲುಪಿಳ್ಳೈ ಒಂದು ಅಪಥ್ಯವಾದ ಇತಿಹಾಸದ ಭಾಗವಾಗಿಬಿಟ್ಟಿದ್ದ. ಆತನ ಸಾವು ಭಾರತದ ಪಾಲಿಗೆ ದೊಡ್ಡ ಸುದ್ದಿಯಾಗಲೇ ಇಲ್ಲ.

    ಹೀಗೆ ಅಪರಿಮಿತ ಚಾಣಾಕ್ಷ. ಬದ್ಧತೆಯುಳ್ಳ ನಾಯಕ, ಅಸಾಧಾರಣವಾದ ಸಂಘಟನಾ ಚತುರ, ತಮಿಳರಿಗಾಗಿಯೇ ಪ್ರತ್ಯೇಕ ಸೇನೆ, ನ್ಯೂಸ್ ಚಾನೆಲ್, ರೇಡಿಯೋ, ಸುದ್ದಿಪತ್ರಿಕೆಯನ್ನು ಆರಂಭಿಸಿದ್ದ ಬುದ್ಧಿವಂತ, ಶಾಂತಿಗಾಗಿ ನೋಬೆಲ್ ಪುರಸ್ಕಾರ ನೀಡುವ ನಾರ್ವೆ ದೇಶದೊಂದಿಗೇ ರಾಜತಾಂತ್ರಿಕ ಸಂಬಂಧ ಬೆಳೆಸಿದ್ದ ವೇಲುಪಿಳ್ಳೈ ಪ್ರಭಾಕರನ್ ಕಾಲಗರ್ಭದಲ್ಲಿ ಹೂತುಹೋಗಿದ್ದಾನೆ. ಅವನನ್ನು ಹೋರಾಟಗಾರನೋ, ಭಯೋತ್ಪಾದಕನೋ ಅಥವಾ ತಮಿಳರ ಹೀರೋ ಎನ್ನಬೇಕೋ ಇಲ್ಲವೇ ಅವರೆಲ್ಲರ ಕನಸುಗಳನ್ನು ತನ್ನೊಬ್ಬನ ಹಠಕ್ಕೆ ಬಲಿಗೊಟ್ಟ ಮೂರ್ಖ ಎನ್ನಬೇಕೋ ತಿಳಿಯುತ್ತಿಲ್ಲ.

    ರಾಜೀವ್ ಇಲ್ಲವಾಗಿ ಇಪ್ಪತ್ತೊಂಭತ್ತು ವರ್ಷಗಳೇ ಸಂದಿರುವ ಈ ಹೊತ್ತಿನಲ್ಲಿ ಎದುರಾಗುವ ಪ್ರಶ್ನೆಗಳು, ಕಾಡುವ ನೆನಪುಗಳು ಅನೇಕ. ಸುದ್ದಿಮನೆಯ ಸುದ್ದಿ ಸಂಪಾದಕನಾಗಿದ್ದ ನಾನು ಈ ಟೈಗರ್ ಸಾವಿಗೆ ಕೊಟ್ಟಿದ್ದ ಹೆಡ್ಡಿಂಗು, ಮಾಡಿಸಿದ ಪೇಜುಗಳು ಒಮ್ಮೆ ಸ್ಮೃತಿಪಟಲದಲ್ಲಿ ಹಾದುಹೋಗುತ್ತಿವೆ.

    ಅಂತಿಮವಾಗಿ ಅನಿಸಿದ್ದಿಷ್ಟು..,

    ಪ್ರಭಾಕರನ್ ದುಡುಕಿ ರಾಜೀವ್ ಅವರನ್ನು ಹತ್ಯೆ ಮಾಡಿಸಬಾರದಿತ್ತು. ಅವನೂ ಹಾಗೆ ಸಾಯಬಾರದಿತ್ತು. ಇಬ್ಬರೂ ಬದುಕಿದ್ದಿದ್ದರೆ ಮನುಕುಲಕ್ಕೆ ಒಳ್ಳೆಯದೇ ಆಗುತ್ತಿತ್ತು. ಸತ್ಯವಾಗಿ…

    ಸಾವನ್ನೂ ಆಲಂಗಿಸಿ ಹರಸಿದ್ದ ರಾಜೀವ್ ಅವರಿಗೆ ಹ್ಯಾಟ್ಸಾಫ್. ಅವರಿಗೆ ಬಂದ ಸಾವು ಈ ದೇಶದ, ಈ ಜಗತ್ತಿನ ಯಾವ ನಾಯಕನಿಗೂ ಬಾರದಿರಲಿ. ಇದೊಂದೇ ಅವರ ನೆನಪಿನಲ್ಲಿ ನನ್ನ ಪ್ರಾರ್ಥನೆ.

    ಕೇವಲ ಕಾಲಪಾನಿಯಿಂದ ಭಾರತವನ್ನು ಕಟ್ಟಿಹಾಕಲು ಚೀನಾಕ್ಕೆ ಸಾಧ್ಯವಿಲ್ಲ

    ಕೊರೊನದಿಂದ ಜಾಗತಿಕವಾಗಿ ಇನ್ನಿಲ್ಲದ ಮುಖಭಂಗಕ್ಕೆ ಈಡಾಗಿರುವ ಚೀನಾ ಮತ್ತೊಮ್ಮೆ ತಾನು ಕೆಲು ಕೆರೆಯುತ್ತಿದೆ, ಹಾಗೂ ಮಿತ್ರದೇಶ ನೇಪಾಳವನ್ನೂ ಚಿವುಟುತ್ತಿದೆ. ರಾಜತಾಂತ್ರಿಕವಾಗಿ ಇಡೀ ಜಗತ್ತಿನ ನಂಬಿಕೆ ಕಳೆದುಕೊಂಡಿರುವ ನೆರೆ ದೇಶಕ್ಕೆ ತಕ್ಕ ಶಾಸ್ತಿ ಮಾಡಲು ಇದೇ ಸಕಾಲ. ಮೋದಿ ಎಲ್ಲ ದೇಶಗಳನ್ನು ಚೀನಾ ವಿರುದ್ಧ ಒಗ್ಗೂಡಿಸಬೇಕು


    ಮತ್ತೊಮ್ಮೆ ಭಾರತ ಮತ್ತು ಚೀನಾ ನಡುವೆ ಬೆಂಕಿ ಬಿದ್ದಿದೆ. ಈ ಸಲ ಅದರ ದಾಳವಾಗಿರುವುದು ನೇಪಾಳವೆಂಬ ನಂಜಿನ ವಾಸನೆಯೇ ಗೊತ್ತಿಲ್ಲದ ದೇಶ. ಜಗತ್ತಿಗೆ ಕೊರೊನ ವೈರಾಣುವನ್ನು ರಫ್ತು ಮಾಡಿ ಅಪಾರ ಸಾವು-ನೋವಿಗೆ ಕಾರಣವಾದ ಕೆಂಪು ದೇಶ ಈಗಲಾದರೂ ಪಾಪಪ್ರಜ್ಞೆಯಿಂದ ಕೊರಗಬೇಕಿತ್ತು, ಆದರೆ ಆ ದೇಶಕ್ಕೆ ಕೊನೆಪಕ್ಷ ಸಣ್ಣ ಪಶ್ಚಾತ್ತಾಪವೂ ಇದ್ದಂತೆ ಇಲ್ಲ. ನೆಹರು ಕಾಲದಿಂದ ಇವತ್ತಿನ ಮೋದಿಯವರೆಗೆ ಅದು ಕುಟಿಲ ರಾಜಕೀಯ ನೀತಿಗಳಿಂದ ಹೊರಬರುವ ಸಾಧ್ಯತೆ ಇಲ್ಲವೇ ಇಲ್ಲ ಎಂಬುದು ಅನೇಕ ಸಂದರ್ಭಗಳಲ್ಲಿ ಸಾಬೀತಾಗಿಬಿಟ್ಟಿದೆ. ಇತ್ತ ಭಾರತೀಯ ನಾಯಕರ ಜತೆ ಮಾತುಕತೆ ನಡೆಸುವ ನಾಟಕವಾಡುತ್ತಲೇ ಅದರ ವಿರುದ್ಧ ದಿಕ್ಕಿನಲ್ಲಿ ಹಾಲಿನಿಂದ ಕೂದಲು ತೆಗೆಯುವಂತೆ ಒಳಗೊಳಗೇ ಕನ್ನ ಕೊರೆಯುವ ನೀಚ ಮನಃಸ್ಥಿಯ ದೇಶವದು. ಮಾವೋತ್ಸೆತುಂಗ ಕಾಲದಿಂದ ಈಗಿನ ಕ್ಸಿ ಜಿನ್ಪಿಂಗ್ ವರೆಗೂ ಇದೇ ಚಾಳಿ ಚೀನಾದ್ದು.

    ಯಾಕೆ ಹೀಗೆ? : ಅಂತಾರಾಷ್ಟ್ರೀಯ ಮಟ್ಟದ ರಾಜನೀತಿಜ್ಞರು ಹೇಳುವಂತೆ, ಚೀನಾ ಕ್ರೌರ್ಯದಿಂದಲೇ ಅಸ್ತಿತ್ವಕ್ಕೆಬಂದ ದೇಶ. ಪ್ರಕ್ಷುಬ್ಧ ಮನಃಸ್ಥಿತಿಯ ನಾಯಕತ್ವ ಅದರದ್ದು. ಜತೆಗೆ, ಶಾಂತಿ ಎಂಬುದು ಬೀಜಿಂಗಿಗೆ ಪದ. ಮುಕ್ತ ಸಾಹಿತ್ಯ, ಮುಕ್ತ ಮಾತು, ಮುಕ್ತ ಜೀವನಕ್ಕೆ ತೆರೆದುಕೊಳ್ಳದ ಅದಕ್ಕೆ ಸದಾ ಆಭದ್ರತೆಯ ಭಾವ. ಸಮಾಜವಾದವನ್ನು ಒಪ್ಪಿಕೊಂಡಿದ್ದರು ಕೂಡ ಅದರ ಅಂತರಂಗದಲ್ಲಿ ನಿರಂಕುಶತೆಯನ್ನೇ ಆಪೋಷನ ತೆಗೆದುಕೊಂಡಿರುವ ನೆಲವದು. ಈ ಕಾರಣಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯತ್ವ ಪಡೆಯಲು ಭಾರತದ ನೆರವನ್ನು ಪಡೆದಿದ್ದ ಆ ದೇಶ, ಅದೇ ಭಾರತ ಆ ಮಂಡಳಿಯನ್ನು ಸೇರಲು ನಾಚಿಕೆ ಇಲ್ಲದೆ, ರಾಜತಾಂತ್ರಿಕತೆಯ ಕನಿಷ್ಠ ಶಿಷ್ಟಾಚಾರವೂ ಇಲ್ಲದೆ ವಿರೋಧಿಸುತ್ತಿದೆ. ಹೀಗಾಗಿ ಜಗತ್ತಿನ ಯಾವುದೇ ದೇಶಕ್ಕೂ ಚೀನಾ ಮಿತ್ರನಾಗುವುದು ಎಂದರೆ ನಯವಂಚನೆಯನ್ನು ಬಗಲಲ್ಲೇ ಇಟ್ಟುಕೊಂಡಂತೆಯೇ.

    ಜಗತ್ತಿನ ಏಕೈಕ ಹಿಂದೂದೇಶವಾಗಿದ್ದ ನೇಪಾಳವು ಸಹಜವಾಗಿಯೇ ಭಾರತಕ್ಕೆ ಆಪ್ತ ದೇಶವಾಗಿತ್ತು. ಅಲ್ಲಿ ಅರಸೊತ್ತಿಗೆ ಕಾಲದಿಂದ, ಅಂದರೆ ದೊರೆ ಬೀರೇಂದ್ರ ಅವರ ಅವಧಿ, ಅವರು ಹತ್ಯೆಯಾದ ನಂತರ ಪಟ್ಟಕ್ಕೇರಿದ ಜ್ಞಾನೇಂದ್ರ ಅವರವರೆಗೂ ದಿಲ್ಲಿ ಮತ್ತು ಕಾಠ್ಮಂಡು ನಡುವೆ ಸಹಜ, ವಿಶ್ವಾಸಪೂರ್ವಕ ಸ್ನೇಹಬಂಧವೇ ಇತ್ತು. ಎಂಥ ವೇಳೆಯಲ್ಲೂ ಎರಡೂ ದೇಶಗಳ ನಡುವೆ ಅಪನಂಬಿಕೆಗೆ ಅವಕಾಶವೇ ಉಂಟಾಗುವ ಸನ್ನಿವೇಶವೇ ಬರಲಿಲ್ಲ. ಅದಕ್ಕೆ ಈಗ ಚೀನಾ ಹುಳಿ ಹಿಂಡಿದೆ. ಹಿಮಾಲಯದ ತಪ್ಪಲಲ್ಲಿ ನೆಮ್ಮದಿಯಾಗಿದ್ದ ನೇಪಾಳಕ್ಕೆ ಉತ್ತರಕ್ಕೆ ಟಿಬೆಟ್ ಇದ್ದರೆ, ಉಳಿದೆಲ್ಲ ದಿಕ್ಕುಗಳಲ್ಲಿ ಭಾರತವೇ ಇದೆ. ಹೀಗಾಗಿ ಆ ದೇಶದ ಪಾಲಿಗೆ ಭಾರತ ಸದಾ ನಿರ್ಣಾಯಕ, ರಕ್ಷಕ ಹಾಗೂ ನಂಬಿಕೆಯ ಆಪ್ತಬಂಧು. ಆ ಮಾತಿಗೆ ಸಾಕ್ಷಿ ಎಂಬಂತೆ ಭಾರತವೂ ತಾನು ಸ್ವಾಂತಂತ್ರ್ಯಗೊಂಡ ನಂತರ ಯಾವೊತ್ತು ನೇಪಾಳದ ಸಾರ್ವಭೌಮತೆಗೆ ಸವಾಲೊಡ್ಡುವ ರೀತಿ ವರ್ತಿಸಿದ್ದಿಲ್ಲ ಅಥವಾ ಅದೊಂದು ಸಣ್ಣ ದೇಶವೆಂಬ ಹಗುರತನವನ್ನೂ ತೋರಲಿಲ್ಲ. ಆದರೆ, ಅತ್ತ ಅಭಿವೃದ್ಧಿಯೂ ಕಾಣದೆ, ಇತ್ತ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳದ ಆ ದೇಶದ ಅಸ್ಥಿರ ನಾಯಕತ್ವದ ಬಗ್ಗೆ ಎಲ್ಲೋ ಒಂದೆಡೆ ಭಾರತ ಮೈಮರೆತಿತ್ತೇನೋ ಎಂಬ ಮಾತಿತ್ತು.ಸುತ್ತಲೂ ಮುಳ್ಳುಗಳು:ರಾಜತಾಂತ್ರಿವಾಗಿ ಚೌಕಾಶಿ ಮಾಡುತ್ತಲೇ ಮತ್ತೊಂದೆಡೆ ರಕ್ತಪೀಪಾಸುತನಕ್ಕೆ ಒಡ್ಡಿಕೊಳ್ಳುವ ಚೀನಾವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಭಾರತಕ್ಕೆ ತನ್ನ ಸುತ್ತಲೂ ಮಗ್ಗುಲಮುಳ್ಳುಗಳು ಜಾಸ್ತಿಯಾಗುತ್ತಿವೆ.

    ಮೊದಲಿನಿಂದ ಪಾಕ್ ಹಿಂದೆ ನಿಂತು ಭಾರತದ ವಿರುದ್ಧ ಪ್ರಾಕ್ಸಿವಾರ್ ಮಾಡುತ್ತಿರುವ ಚೀನಿ ಖೆಡ್ಡಕ್ಕೆ ೨೦೦೫ರಲ್ಲೇ ದ್ವೀಪದೇಶ ಶ್ರೀಲಂಕಾವೂ ಬಿದ್ದಿತ್ತು. ಅದಾದ ಮೇಲೆ ಹಿಂದೂ ಮಹಾಸಾಗರದ ಆಯಕಟ್ಟಿನ ಜಾಗದಲ್ಲಿರುವ ಮಾಲ್ಡೀವ್ಸ್ ದ್ವೀಪವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿ ಅಲ್ಲಿ ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿಸುವಲ್ಲಿ ಯಶಸ್ವಿಯೂ ಆಗಿತ್ತು. ಈಗ ಭಾರತದ ಜತೆ 1,751 ಕಿಲೋಮೀಟರ್ ಗಡಿ ಹಂಚಿಕೊಂಡಿರುವ ನೇಪಾಳವನ್ನು ಚಿವುಟುವ ಮೂಲಕ ಭಾರತಕ್ಕೆ ಸವಾಲೊಡ್ಡುತ್ತಿದೆ. ಜತೆಗೆ ಬಾಂಗ್ಲಾದೇಶ, ಮ್ಯಾನ್ಮಾರ್, ಪಾಕಿಸ್ತಾನ, ಭೂತಾನ್ ಮತ್ತು ಆಫ್ಘಾನಿಸ್ತಾನದ ಜತೆ ಭಾರತ ಗಡಿ ಹಂಚಿಕೊಂಡಿದೆ. ಪಾಕ್ ಜತೆ ನಿರಂತರ ತಲೆನೋವಿದ್ದರೂ ಅದಕ್ಕೆ ಕಾಲಕಾಲಕ್ಕೆಬೆಂಕಿ-ತುಪ್ಪ ಸುರಿಯುತ್ತಿರುವ ಚೀನಾ ತನಗೆ ಬೇಕಾದ ಹಾಗೆ ಆ ನತದೃಷ್ಟ ದೇಶಗಳನ್ನು ಕುಣಿಸುತ್ತಿದೆ.

    ಮ್ಯಾನ್ಮಾರ್ ಜತೆಯೂ ಬೀಜಿಂಗಿಗೆ ಉತ್ತಮ ಸಂಬಂಧಗಳೇ ಇವೆಯಾದರೂ ಭಾರತಕ್ಕೆ ಅದರಿಂದ ಸಮಸ್ಯೆಯಾಗಿಲ್ಲ. ಬಾಂಗ್ಲಾದಲ್ಲಿ ಬೇಳೆ ಬೇಯಿಸಿಕೊಳ್ಳಲು ಇನ್ನು ಸಾಧ್ಯವಾಗಿಲ್ಲ. ಇನ್ನು ಹಿಮಾಲಯದ ತಪ್ಪಲಲ್ಲೇ ನೆಮ್ಮದಿಯಾಗಿರುವ ಭೂತಾನ್ ದೇಶಕ್ಕೆ ಭಾರತ-ಚೀನಾ ಪೈಕಿ ಯಾವುದು ಬೆಂಕಿ ಎಂಬ ಸ್ವಷ್ಟ ಅರಿವಿದೆ. ನಮ್ಮೆರಡು ದೇಶಗಳ ನಡುವಿನ ಸಂಬಂಧ ಅತ್ಯುತ್ತಮವಾಗಿದೆ. ಮೊದಲಿನಿಂದ ಸಮಸ್ಯೆ ಇರುವುದು ಪಾಕ್ ಮತ್ತು ಚೀನಾ ನಡುವೆ ಮಾತ್ರ. ಆದರೆ ಭಾರತಕ್ಕೆ ಶತ್ರುಗಳನ್ನು ಹೆಚ್ಚು ಸೃಷ್ಟಿ ಮಾಡುವುದು ಚೀನಾದ ಆದ್ಯತೆಯ ರಾಜತಾಂತ್ರಿಕತೆಯಾಗಿದೆ.

    ಈಗ ಆಗಿದ್ದೇನು?:ಕೊರೊನ ವೈರಸ್ ಸೃಷ್ಟಿಸಿ ಜಗತ್ತನ್ನೇ ಅಪಾಯಕ್ಕೆ ದೂಡಿರುವ ಚೀನಾ ಅಪರಾಧಿ ಸ್ಥಾನದಲ್ಲಿ ನಿಂತಿದೆ. ಅದರ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಜಾಗತಿಕ ಮಟ್ಟದ ತನಿಖೆ ಶುರುವಾಗಿದೆ. ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ರಷ್ಯ ಸೇರಿದಂತೆ ಅಷ್ಟೂ ಖಂಡಗಳ ಮುಕ್ಕಾಲುಪಾಲು ದೇಶಗಳು ಬೀಜಿಂಗ್ ಜತೆ ಮುನಿಸಿಕೊಂಡಿವೆ. ಅಮೆರಿಕವಂತು ಚೀನಾ ಹೆಸರೆತ್ತಿದ್ದರೆ ಉರಿದುರಿದು ಬೀಳುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಂತೂ ಅದು ನಂಬರ್ ೧ ಶತ್ರುರಾಷ್ಟ್ರ. ತನ್ನ ದುಷ್ಟತನದಿಂದ ವಿಷಮ ಪರಿಸ್ಥಿತಿಯನ್ನು ತಂದೊಟ್ಟಿರುವ ಅದರ ವಿರುದ್ಧ ಒಟ್ಟಾಗಿರುವ ಜಾಗತಿಕ ಸಮುದಾಯಕ್ಕೆ ಅಮೆರಿಕ ಹೊರತುಪಡಿಸಿದರೆ ಭಾರತವೇ ನಿರ್ಣಾಯಕ ನಾಯಕತ್ವ ವಹಿಸುತ್ತಿದೆ. ಇಸ್ರೇಲ್ ಕೂಡ ಈ ಕೂಟದ ಬಹುಮುಖ್ಯ ಭಾಗವಾಗಿರುವುದು ಮತ್ತೊಂದು ಶೀತಲ ಸಮರಕ್ಕೆ ಮುನ್ನುಡಿಯೇ? ಗೊತ್ತಾಗುತ್ತಿಲ್ಲ.

    ಚೀನಾ ಲೆಕ್ಕಾಚಾರವೇನು?:ಬಲಾಢ್ಯ ದೇಶಗಳೆಲ್ಲವೂ ತನ್ನ ವಿರುದ್ಧ ತಿರುಗಿಬಿದ್ದಿರುವ ಹೊತ್ತಿನಲ್ಲಿಯೇ ಭಾರತವನ್ನು ಕೆಣಕಿದರೆ ವಿಶ್ವ ಸಮುದಾಯ ಚೌಕಾಶಿಗೆ ಬರಬಹುದು ಎಂದ ಲೆಕ್ಕಾಚಾರವನ್ನು ಬೀಜಿಂಗ್ ಹಾಕುತ್ತಿರುವಂತಿದೆ. ಹೀಗಾಗಿಯೇ ಅದು ನೇಪಾಳವನ್ನು ಮುಂದಿಟ್ಟುಕೊಂಡು ಭಾರತದ ವಿರುದ್ಧ ಕಾಲು ಕೆರೆಯುತ್ತಿದೆ.ದೊಕ್ಲಾಮ್ ಘಟನೆಯ ನಂತರ ತಿಳಿಯಾಗಿದ್ದ ಪರಿಸ್ಥಿತಿ ಇದ್ದಕ್ಕಿದ್ದ ಹಾಗೆ ಬಿಗಿಯಾಗಲು ಕಾರಣ ನೆರೆ ದೇಶ  ಅನುಸರಿಸುತ್ತಿರುವ ರಾಜಕೀಯ ಕುತಂತ್ರಗಾರಿಕೆ. ಉಪ ಖಂಡದಲ್ಲಿ ಹೇಗಾದರೂ ಭಾರತವನ್ನು ಒಂಟಿಯಾಗಿಸಿದರೆ ಏಷ್ಯಾದಲ್ಲಿ ಸೂಪರ್ ಪವರ್ ಆಗಬಹುದು ಎಂಬುದು ಅದಕ್ಕೆ ಗೊತ್ತಿದೆ. ಪಕ್ಕದ ದೇಶಗಳನ್ನು ಎತ್ತಿಕಟ್ಟಿ ವ್ಯಾವಹಾರಿಕವಾಗಿ ಅವುಗಳನ್ನು ತನ್ನ ದಾಸ್ಯದಾಳಗಳನ್ನಾಗಿ ಮಾಡಿಕೊಂಡು ಭಾರತದ ವಿರುದ್ಧ ಹಿಮಾಲಯ ಹಾಗೂ ಹಿಂದೂ ಮಹಾಸಾಗರದಲ್ಲಿ ರಕ್ಷಣಾ ಬೇಲಿಯನ್ನು ನಿರ್ಮಿಸಬೇಕು ಎಂಬುದೇ ಚೀನಾದ ದಶಕಗಳ ದುಸ್ಸಾಹಸ.ಪಾಕ್ ಪೋಷಿತ ಭಯೋತ್ಪಾದಕರು, ಪ್ರತ್ಯೇಕತಾವಾದಿಗಳಿಗೆ ಕಾಮಧೇನುವಾಗಿದ್ದ ೩೭೦ನೇ ವಿಧಿಯನ್ನು ಕಿತ್ತೆಸೆದು ಜಮ್ಮು-ಕಾಶ್ಮೀರ ಹಾಗೂ ಲಡಾಕ್ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ್ದೇ ಸಮಸ್ಯೆಗೆ ಮೂಲ ಎಂದು ಹುಯಿಲೆಬ್ಬಿಸುವ ಕೆಲಸವನ್ನು ಚೀನಾ ಶುರುವಿಟ್ಟುಕೊಂಡಿದೆ.

    ಮಂಜಿನ ಪರ್ವತಗಳು, ನದಿ ಝರಿಗಳಿಗೆ ಸೀಮಿತವಾಗಿದ್ದ ತನ್ನ ಭೂ ಪ್ರದೇಶಕ್ಕೆ ಸಮರ್ಪಕ ಬೇಲಿ ಹಾಕಿಕೊಂಡು ಅಭಿವೃದ್ಧಿಯತ್ತ ಮುಖ ಮಾಡಿದ್ದು ಬೀಜಿಂಗ್ ಹೊಟ್ಟೆಗೆ ಬೆಂಕಿ ಹಾಕಿದಂತೆ ಆಗಿದೆ. ಅದರಲ್ಲೂ ಲಡಾಕಿನಲ್ಲಿ ಆರಂಭವಾಗಿರುವ ಅಭಿವೃದ್ಧಿ ಕಾಮಗಾರಿಗಳು ಚೀನಾಕ್ಕೆ ಸವಾಲು ಒಡ್ಡುವಂತಿವೆ. ಮತ್ತೊಂದೆಡೆ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಯಾವುದ ಕ್ಷಣದಲ್ಲೂ ಭಾರತ ಸೇನೆ ಮುಗಿಬೀಳಬಹುದೆಂಬ ಸಂಗತಿ ಚೀನಾಕ್ಕೆ ಗೊತ್ತಿಲ್ಲದೆ ಏನಿಲ್ಲ! ಅದೇನಾದರೂ ಆಗಿಬಿಟ್ಟರೆ ತಾನೂ ಆಕ್ರಮಿಸಿಕೊಂಡಿರುವ ಕಾಶ್ಮೀರವೂ ಕೈಜಾರುತ್ತದೆ ಎಂಬ ಚೀನಾದ ಆತಂಕವೂ ಸದ್ಯದ ಬಿಕ್ಕಟ್ಟಿಗೆ ಹಿನ್ನೆಲೆ ಇರಬಹುದು.ಜತೆಗೆ, ಕೊರೊನೋತ್ತರ ಕಾಲದಲ್ಲಿ ಚೀನಾದಿಂದ ಬಹುತೇಕ ಜಾಗತಿಕ ಕಂಪನಿಗಳು ಕಾಲ್ಕೀಳುವುದು ಪಕ್ಕ. ಅಮೆರಿಕ, ಯುರೋಪ್ ಮೂಲದ ಅನೇಕ ಉದ್ದಿಮೆಗಳು ಭಾರತಕ್ಕೆ ಶಿಫ್ಟ್ ಆಗುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿಬಿಟ್ಟಿವೆ. ಅಂಥ ಕಂಪನಿಗಳಿಗೆ ಅಮೆರಿಕ ವಿಶೇಷ ಪ್ಯಾಕೇಜ್ ಪ್ರಕಟಿಸಿದೆ. ಬೌದ್ಧಿಕ ಸಂಪತ್ತಿನ ವಿಚಾರದಲ್ಲಿ ಚೀನಾ ಅಪವಂಬಿಕೆಯ ಕುಖ್ಯಾತಿ ಹೊಂದಿರುವುದು ಉದ್ದಿಮೆಗಳು ಕಮ್ಯುನಿಸ್ಟ್ ದೇಶವನ್ನು ತೊರೆಯಲು ಮುಖ್ಯಕಾರಣ. ಸೈಬರ್ ಕ್ರೈಮಿನಲ್ಲಿ ಅದು ವಿರಾಟ್ ರೂಪವನ್ನೇ ತಾಳಿರುವುದು ಈಗಾಗಲೇ ಭಾರತವೂ ಸೇರಿ ಅಮೆರಿಕ, ರಷ್ಯಕ್ಕೂ ತಿಳಿದಿರುವ ಸಂಗತಿ. ಎಲ್ಲ ರೀತಿಯಲ್ಲೂ ನಾಚಿಕೆಯ ಸಂವೇದನೆಯನ್ನು ಬಿಟ್ಟುಕೂತಿರುವ ಚೀನಾಕ್ಕೆ ಈಗ ತಾನು ಆಕ್ರಮಿಸಿಕೊಂಡಿರುವ ಕಾಶ್ಮೀರ, ನೇಪಾಳದ ಗಡಿ ನೆಪ ಇಟ್ಟುಕೊಂಡು ಹೊಸ ವರಸೆ ಶುರುವಿಟ್ಟುಕೊಂಡಿದೆ.

    ಏನಿದು ಬಿಕ್ಕಟ್ಟು:ಎಲ್ಲವೂ ಸರಿ ಇದ್ದಾಗ ಭಾರತ-ನೇಪಾಳದ ಪಾಲಿಗೆ ಕಾಲಾಪಾನಿ ಸಮಸ್ಯೆ ಆಗಿತ್ತಾದರೂ ತಿಕ್ಕಾಟ ನಡೆಸುವಷ್ಟು ದೊಡ್ಡ ಬಿಕ್ಕಟ್ಟು ಆಗಿರಲಿಲ್ಲ. ಯಾವಾಗ ಕಾಶ್ಮೀರಕ್ಕೆ ಮೋದಿ ಸರಕಾರ ೩೭೦ನೇ ವಿಧಿಯನ್ನು ತೆಗೆದು ಪರಮನೆಂಟ್ ಪರಿಹಾರ ಕಂಡಕೊಂಡಿತೋ ಅಲ್ಲಿಗೆ ಆಳವಾದ ಕಂಪನಗಳು ಶುರುವಾದವು. ಕೆಲ ತಿಂಗಳ ಹಿಂದೆ ಕೇಂದ್ರ ಸರಕಾರ ನಕ್ಷೆಯೊಂದನ್ನು ಬಿಡುಗಡೆಗೊಳಿಸಿ ಕಾಲಾಪಾನಿಯನ್ನು ಉತ್ತರಾಖಂಡ್ನ ಭಾಗವೆಂದು ಘೋಷಿಸಿತ್ತು. ಐತಿಹಾಸಿಕವಾಗಿ ಇದು ಸತ್ಯವೇ ಆಗಿತ್ತು. ಇದಾದ ಕೆಲ ದಿನಗಳ ಬಳಿಕ ಚೀನಾ ರಾಜಕೀಯ ನಕಾಶೆಯನ್ನು ಬಿಡುಗಡೆ ಮಾಡಿ ಕಾಲಾಪಾನಿ, ಉತ್ತರಾಖಂಡದ ಲಿಂಪಿಯಾಧುರಾ, ಲಿಪುಲೇಖ್ಗಳು ತಮ್ಮದೆಂದು ವಾದಿಸಿತ್ತು. ಇದೇ ಬಿಕ್ಕಟ್ಟಿನ ಮೂಲ. ಈ ಕಾರಣಕ್ಕಾಗಿ ನೇಪಾಳ, ಚೀನಾ ಒಂದಾಗಿ ಭಾರತದ ವಿರುದ್ಧ ನಿಂತಿವೆ. ಈ ಮೈತ್ರಿ ಅದೆಷ್ಟು ದಿನ ಎಂಬುದನ್ನು ಕಾಲವೇ ನಿರ್ಣಯಿಸಬೇಕಿದೆ.

    ಹಾಗೆ ನೋಡಿದರೆ, 1960ರಿಂದಲೇ ಕಾಲಾಪಾನಿ ತಿಕ್ಕಾಟವಿತ್ತು. 370 ಚ.ಕಿ.ಮೀ ವ್ಯಾಪ್ತಿಯ ಈ ಭೂ ಪ್ರದೇಶ ಭಾರತದ ಮಟ್ಟಿಗೆ ಬಹಳ ಮುಖ್ಯ. ಇದು ಭಾರತ-ಟಿಬೆಟ್ಟಿನ ಗಡಿ ಪೊಲೀಸರಿಂದ ನಿಯಂತ್ರಿಸಲ್ಪಡುತ್ತಿದ್ದು, 1962ರಿಂದ ಈ ಪೊಲೀಸರು ಇಲ್ಲಿ ಪಹರೆ ಕಾಯುತ್ತಿದ್ದಾರೆ. ಮೂರು ರಾಷ್ಟ್ರಗಳ ಗಡಿಗಳು ಸೇರುವ ಅತಿಸೂಕ್ಷ್ಮ ಜಾಗವಾದ ಇದರ ಮೇಲೆ ಚೀನಾಗೆ ಆರಂಭದಿಂದಲೂ ಕಣ್ಣಿದೆ. ಜತೆಗೆ, ಲಿಂಪಿಯಾಧುರಾ, ಲಿಪುಲೇಖ್ ಕೂಡ ತನ್ನದೇ ಎಂದು ಚೀನಾ ರಾಗ ತೆಗೆಯುತ್ತಿದೆ. ಈ ತಗಾದೆಯನ್ನು ಇಟ್ಟುಕೊಂಡೇ ನೇಪಾಳವನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಿ ಭಾರತಕ್ಕೆ ತೊಂದರೆ ಕೊಡುವುದು ಚೀನೀ ಕರಾಮತ್ತಾಗಿದೆ. ಬ್ರಿಟೀಷರಿದ್ದ ಕಾಲದಲ್ಲಿಯೇ, ಅಂದರೆ ೧೮೧೬ರಲ್ಲಿ ನೇಪಾಳ ಮತ್ತು ಭಾರತದ ನಡುವೆ ಸುಗೌಳಿ ಒಪ್ಪಂದವೇರ್ಪಟ್ಟಿತ್ತು. ಆದರೆ ಒಪ್ಪಂದದ ಪ್ರಕಾರ ಅಲ್ಲಿ ಪಶ್ಚಿಮ ಭೂ ಪ್ರದೇಶ ನಮ್ಮದು. ಆದರೆ ಅಲ್ಲಿಯೇ ಹರಿಯುವ ಕಾಳೀ ನದಿಯನ್ನು ಒಪ್ಪಂದದಲ್ಲಿ ಉಲ್ಲೇಖೀಸಲಾಗಿಲ್ಲ. ಬಿಕ್ಕಟ್ಟಿಗೆ ಇದೇ ಕಾರಣ. ಕಾಲಪಾನಿಯ ಪಶ್ಚಿಮ ಪ್ರದೇಶದಲ್ಲಿ ಕಾಳೀ ನದಿ ಹರಿಯುತ್ತಿದೆ. ಭಾರತವು ಕಾಲಾಪಾನಿಯ ಪೂರ್ವ ಭಾಗವನ್ನು ಗಡಿಯಾಗಿ ಪರಿಗಣಿಸಿದ್ದು, ಕಾಲಾಪಾನಿ ತನ್ನದು ಎಂದಿದೆ. ಜತೆಗೆ ನೇಪಾಳವೂ ಕ್ಲೈಮ್ ಮಾಡುತ್ತಿದೆ.

    ಭಾರತಕ್ಕೆ ಎಚ್ಚರಿಕೆ ಘಂಟೆ:ಏನೇ ಆಗಲಿ, ಏಷ್ಯಾ ಮಾತ್ರವಲ್ಲ ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿರುವ  ಭಾರತಕ್ಕೆ ಈ ವಿವಾದ ಒಂದು ಎಚ್ಚರಿಕೆಯ ಘಂಟೆ. ಅಕ್ಕಪಕ್ಕದವರನ್ನು ಎತ್ತಿಕಟ್ಟುತ್ತ ನಮಗೆ ಮುಜುಗರ ಉಂಟುಮಾಡುತ್ತಿರುವ ಚೀನಾಕ್ಕೆ ಪಾಠ ಕಲಿಸಲು ಇದು ಸಕಾಲ. ನೇಪಾಳಕ್ಕೂ ತನ್ನ ಶಕ್ತಿ ಏನು ಎಂಬುದನ್ನು ತೋರಿಸಲು ಇದೇ ಸರಿಯಾದ ಸಮಯ. ಕಬ್ಬಿಣ ಕಾದಾಗಲೇ ಹೊಡೆಯಬೇಕು ಎಂದು ಕೇಂದ್ರಕ್ಕೆ ಅನೇಕ ನಿಪುಣರು ಸಲಹೆ ಮಾಡುತ್ತಿದ್ದಾರೆ. ವಾಪಪೇಯಿ ಅವರ ಕಾಲದಲ್ಲಿಯೇ ಈ ಬಿಕ್ಕಟ್ಟಿಗೆ ರಾಜಕೀಯ ಪರಿಹಾರ ಕಂಡುಕೊಳ್ಳಲು ಭಾರತ-ನೇಪಾಳ ಯತ್ನಿಸಿದ್ದುಂಟು. ಆದರೆ ಚೀನಾ ಕಾಲಪಾನಿಗೆ ಬಂದು ವೈರಸ್ಸಿನಂತೆ ಬಂದು ವಕ್ಕರಿಸಿರುವುದು ಕೊಂಚ ಯೋಚಿಸುವಂತೆ ಮಾಡಿದೆ. ಇಲ್ಲಿ ಭಾರತ ಗೆಲ್ಲಲೇಬೇಕು.

    ಇದು ೧೯೬೨ ಅಲ್ಲ. ಜಗತ್ತು ಬದಲಾಗಿದೆ. ಭಾರತವೂ ಬದಲಾಗಿದೆ. ಕೇವಲ ಕಾಲಪಾನಿಯಿಂದ ಭಾರತವನ್ನು ಕಟ್ಟಿಹಾಕಲು ಚೀನಾಕ್ಕೆ ಸಾಧ್ಯವೇ ಇಲ್ಲ.

    ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಬಿಕ್ಕಟ್ಟು

     ‘ಕೃಷಿ ಬಿಕ್ಕಟ್ಟು ಎಂದಾಕ್ಷಣ ರೈತರ ಆತ್ಮಹತ್ಯೆಗಳನ್ನೇ ಬಿಕ್ಕಟ್ಟು ಎಂದು ಬಿಂಬಿಸುವ ಒಂದು ಪರಿಪಾಠ ಬೆಳೆದಿದೆ. ಆದರೆ ರೈತರ ಆತ್ಮಹತ್ಯೆಗಳೇ ಬಿಕ್ಕಟ್ಟಲ್ಲ. ಬದಲಿಗೆ ಅವು ತೀವ್ರವಾದ ಕೃಷಿ ಬಿಕ್ಕಟ್ಟಿನ ಸಿಮ್‌ಟಮ್ಸ್ (ಲಕ್ಷಣಗಳು) ಮಾತ್ರ. ಆತ್ಮಹತ್ಯೆ ಎಂಬುದು ಒಂದು ರೋಗ ಸೂಚಕ ಲಕ್ಷಣವೇ ಹೊರತು ಅದೇ ರೋಗವಲ್ಲ. ತೀವ್ರವಾದ ಆರ್ಥಿಕ, ಸಾಮಾಜಿಕ ಒತ್ತಡಗಳಿಗೆ ಸಿಲುಕಿದ ಅಮಾಯಕ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಾಗೆಂದು ಆತ್ಮಹತ್ಯೆ ಮಾಡಿಕೊಳ್ಳದೆ ಇರುವ ರೈತರು ಆರಾಮಾಗಿದ್ದಾರೆ ಎಂದರ್ಥವಲ್ಲ. ಈ ಕೃಷಿ ಬಿಕ್ಕಟ್ಟಿಗೆ ಒಂದು ಸರ್ವವ್ಯಾಪಿ ಆಯಾಮವಿದೆ. ಭೂಮಿಯ ಒಡೆತನ ಹಾಗೂ ನೇರವಾಗಿ ಉಳುಮೆ ಮಾಡುವುದನ್ನು ಹೊರತುಪಡಿಸಿ ಕೃಷಿ ಕ್ಷೇತ್ರದ ಸರ್ವಸ್ವವನ್ನೂ ಕಾರ್ಪೊರೇಟ್ ಕಂಪೆನಿಗಳೇ ನಿಯಂತ್ರಿಸುತ್ತವೆ. ಬೀಜ, ಗೊಬ್ಬರ, ಕೀಟನಾಶಕ ಮುಂತಾದ ಎಲ್ಲವೂ ಇಂದು ಕಾರ್ಪೊರೇಟ್ ಕಂಪೆನಿಗಳ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿರುವುದೇ ಈ ಬಿಕ್ಕಟ್ಟಿಗೆ ಪ್ರಧಾನ ಕಾರಣ’

    ಹೀಗೆನ್ನುತ್ತಾರೆ ಖ್ಯಾತ ಪತ್ರಕರ್ತ ಪಿ. ಸಾಯಿನಾಥ್. ಕಳೆದ ಒಂದುವರೆ ದಶಗಳಲ್ಲಿ ದೇಶಾದ್ಯಂತ ಓಡಾಡಿ, ರೈತರ ಆತ್ಮಹತ್ಯೆಯ ಬಗ್ಗೆಯೇ ಅಧ್ಯಯನ ನಡೆಸಿರುವ ಸಾಯಿನಾಥ್ ಅವರ ಮಾತು ಇಂದು ಯಾರಿಗೂ ಬೇಡವಾಗಿದೆ.

    ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸುವ ಮೂಲಕ ಕಾರ್ಪೊರೇಟ್ ಕಂಪನಿಗಳಿಗೆ ನೇರವಾಗಿ ಕೃಷಿ ಕ್ಷೇತ್ರದಲ್ಲಿ ಹಸ್ತಕ್ಷೇಪ ನಡೆಸಲು ಅವಕಾಶ ಮಾಡಿಕೊಟ್ಟಿದೆ.

    ರಾಜ್ಯ ಸರ್ಕಾರ ಕೇಂದ್ರ ಈ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸಿದ್ದು, ‘ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಗೆ ತಿದ್ದುಪಡಿತಂದು ಸುಗ್ರೀವಾಜ್ಞೆ ಹೊರಡಿಸಿದೆ.

    ಕಾಯಿದೆಯ ೨ ಸೆಕ್ಷನ್‌ಗಳಿಗೆ ತಿದ್ದುಪಡಿ ತರಲಾಗಿದ್ದು, ಇದರ ಪ್ರಕಾರ ರೈತರು ಯಾವುದೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧೀನಕ್ಕೆ ಒಳಪಡುವುದಿಲ್ಲ. ರೈತರು ತಮ್ಮಿಷ್ಟದಂತೆ ಯಾರಿಗೆ ಬೇಕಾದರೂ ಬೆಳೆ ಮಾರಾಟ ಮಾಡಬಹುದು ಹಾಗೆಯೇ ಖಾಸಗಿಯವರು ನೇರವಾಗಿ ಬೆಳೆ ಖರೀದಿಸಬಹುದು. ದೇಶಾದ್ಯಂತ ಮಾತ್ರವಲ್ಲ, ಪ್ರಪಂಚಾದ್ಯಂತ ಮಾರಾಟ ಜಾಲ ಹೊಂದಿರುವ ಕಾರ್ಪೊರೇಟ್ ಕಂಪನಿಗಳು ಈ ಅವಕಾಶಕ್ಕಾಗಿಯೇ ಕಾಯುತ್ತಿದ್ದವು ಎಂದು ಇಲ್ಲಿ ಬಿಡಿಸಿ ಹೇಳಬೇಕಾಗಿಲ್ಲ.

    ನೀತಿ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರ ಈ ಎಪಿಎಂಸಿಗೆ ಕಾಯ್ದೆ ತಿದ್ದುಪಡಿಗೆ ಸೂಚಿಸಿದೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಈಗಾಗಲೇ ನೀತಿ ಆಯೋಗ, ಒಪ್ಪಂದ ಕೃಷಿಗೆ (ಕಾಂಟ್ರ್ಯಾಕ್ಟ್ ಫಾರ್ಮಿಂಗ್) ಪ್ರೋತ್ಸಾಹ ನೀಡಲು ಕಾನೂನು ರೂಪಿಸುವುದರ ಜತೆಗೆ, ಕಾರ್ಪೊರೇಟ್ ಕಂಪನಿಗಳಿಗೆ ಕೃಷಿ ಭೂಮಿಯನ್ನು ಲೀಸ್ ಪಡೆಯಲು ಅವಕಾಶ ಮಾಡಿಕೊಡಲು ಈಗಾಗಲೇ ಕೇಂದ್ರ  ಜಾರಿಗೆ ತಂದಿರುವ ‘ಕೃಷಿ ಭೂಮಿ ಗುತ್ತಿಗೆ ಕಾಯ್ದೆ -೨೦೧೬’ ಅನ್ನೂ ದೇಶಾದ್ಯಂತ ಜಾರಿಗೆ ತರಲು ಕ್ರಮ ತೆಗೆದುಕೊಳ್ಳಬೇಕೆಂದು ಕೇಂದ್ರಕ್ಕೆ ಹೇಳಿದೆ. ಈ ಕ್ರಮಗಳು ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಕಂಪನಿಗಳಿಗೆ ತಮ್ಮ ಬಿಗಿ ಹಿಡಿತಕ್ಕೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಿದೆ. ಇದರ ಪರಿಣಾಮಗಳು ಕೃಷಿ ಉತ್ಪನ್ನಗಳ ಉತ್ಪಾದನೆ ದುಪಟ್ಟಾಗುತ್ತದೆಯೋ, ರೈತರ ಆತ್ಮಹತ್ಯೆ ಪ್ರಕರಣಗಳು ದುಪ್ಪಟ್ಟಾಗುತ್ತದೆಯೋ ಎಂಬುದು ಈಗ ಬಹುದೊಡ್ಡ ಪ್ರಶ್ನೆಯಾಗಿದೆ

    ಏಷ್ಯಾಖಂಡದ ಎರಡನೇ ಬೃಹತ್ ಕೆರೆ ಸಂರಕ್ಷಣೆಗೆ ಟೆಕ್ಕಿಗಳ ಹೋರಾಟ

    ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನಲ್ಲಿರುವ ಸೂಳೆಕೆರೆ ಏಷ್ಯಾಖಂಡದ ಎರಡನೇ ಅತೀ ದೊಡ್ಡ ಕೆರೆ. ಮಧ್ಯ ಕರ್ನಾಟಕದ ಮೂರು ಜಿಲ್ಲೆಗಳ ಕುಡಿಯುವ ನೀರಿನ ಸೆಲೆ. ಸಾವಿರಾರು ಹೆಕ್ಟೇರ್ ಹೊಲ-ಗದ್ದೆಗಳಿಗೆ ನೀರುಣಿಸುವ ರೈತರ ಜೀವನಾಡಿ.

    ಶತಮಾನಗಳ ಇತಿಹಾಸವನ್ನು ಅಡಗಿಸಿಕೊಂಡಿರುವ ಈ ತಾಣ ಪ್ರವಾಸಿಗರ ಆಕರ್ಷಣೆಯ ಕೇಂದ್ರ. ಗುಡ್ಡ-ಬೆಟ್ಟ, ಕಾಡು-ಮೇಡು, ವೀಕ್ಷಣೆಗೆ ನಿಲುಕಿದಷ್ಟು ನೀರಿನ ಸಮ್ಮೋಹನ ಮನೊಲ್ಲಾಸ ನೀಡುವುದರಲ್ಲಿ ಎರಡು ಮಾತಿಲ್ಲ. ಸಿದ್ಧರ ತಪಸ್ಸಿನ ತಾಣ. ಸಿದ್ದೇಶ್ವರರು ಐಕ್ಯವಾದ ದೇಗುಲ ಧಾರ್ಮಿಕ ಕೇಂದ್ರ. ಸ್ವರ್ಗಾವತಿ ಪಟ್ಟಣದ ರಾಜನ ಮಗಳು ಶಾಂತವ್ವೆ ನಿರ್ಮಿಸಿದಳೆಂಬ ಐತಿಹ್ಯ. ಜಾನಪದ, ಐತಿಹ್ಯಗಳೇನೆ ಇರಲಿ ಇಂದಿಗೂ ಲಕ್ಷಾಂತರ ಜನರ ಕುಡಿಯುವ ನೀರಿನ ಸೆಲೆ.

    ಸೂಳೆಕೆರೆ ವೀಕ್ಷಣೆಗೆ ಟೆಕ್ಕಿಗಳ ಸ್ನೇಹಿತರ ಗುಂಪೊಂದು 2016 ರಲ್ಲಿ ಸೂಳೆಕೆರ ವೀಕ್ಷಣೆಗೆಂದು ಧಾವಿಸಿತು. ಸತತ ಬರಗಾಲದ ಹಿನ್ನೆಲೆಯಲ್ಲಿ ಕೆರೆ ಬರಿದಾಗಿತ್ತು. ಭದ್ರಾ ಜಲಾಶಯದಲ್ಲಿಯೂ ನೀರಿನ ಕೊರತೆ. ಹಾಗಾಗಿ ನಾಲೆಯಿಂದ ಕೂಡ ನೀರು ಹರಿಸಿರಲಿಲ್ಲ. ಭಣಗುಡುತ್ತಿರುವ ಬೃಹತ್ ಕೆರೆಯ ದುಸ್ಥಿತಿ ಕಂಡು ಟೆಕ್ಕಿಗಳಿಗೆ ಮನ ನೊಂದಿತು. ಪಾಶ್ಚಾತ್ಯ ದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವಿ ಸಾಫ್ಟ್ ವೇರ್ ಎಂಜಿನಿಯರ್ ಗಳಿಗೆ ನಮ್ಮ ನೆಲ-ಜಲ ಸಂರಕ್ಷಣೆಗೆ ಬೇಜಾವಾಬ್ದಾರಿ ತೋರಲಾಗುತ್ತಿದೆ ಎಂಬುದನ್ನು ಮನಗಂಡರು. ಹೊರ ದೇಶದಲ್ಲಿ ಕೆರೆ, ನೀರಿನ ಮೂಲಗಳ ಅಭಿವೃದ್ಧಿಯ ಚಿತ್ರಣ ಕಣ್ಮುಂದೆ ಬಂದು ಬೇಸರವನಿಸಿತು.

    ಸ್ಥಳೀಯ ಟೆಕ್ಕಿಗಳಿಗೆ ತಾಕೀತು ಮಾಡುವ ಮೂಲಕ ಹುರಿದುಂಬಿಸಿದರು. ಸೂಳೆಕೆರೆ ರಕ್ಷಣೆಗೆ ಕಟಿಬದ್ಧರಾಗಿ ಪ್ರಯತ್ನಿಸಬೇಕು ಎಂಬ ಛಲ ತುಂಬಿದರು. ನಮ್ಮ ನೈಸರ್ಗಿಕ ಸಂಪತ್ತು ರಕ್ಷಣೆಗೆ ಏನಾದರೂ ಮಾಡುವ ತುಡಿತ ಮೂಡಿತು. ಮನದಲ್ಲಿ ಬಿಂಬಿಸಿದ ಸಂಕಲ್ಪ ಖಡ್ಗ ಸಂಘ ರಚಿಸುವ ಮೂಲಕ ಕಾರ್ಯೋನ್ಮುಖಗೊಂಡಿತು.

    ಟೆಕ್ಕಿ ರಘು ಅವರ ನೇತೃತ್ವದಲ್ಲಿ ಸೂಳೆಕೆರೆ ಹೋರಾಟದ ಅಭಿಯಾನಕ್ಕೆ 2017ರಲ್ಲಿ ಮೊದಲ ಹೆಜ್ಜೆ ಇಡಲಾಯಿತು. ಸುಮಾರು 6500 ಎಕರೆ ವಿಸ್ತೀರ್ಣದ ಕೆರೆ. ಸಾಕಷ್ಟು ಹೂಳು ತುಂಬಿ ನೀರಿನ ಸಂಗ್ರಹ ಕುಂಠಿತವಾಗಿರುವುದನ್ನು ಗಮನಸಿಲಾಯಿತು. ಹೂಳು ತೆಗೆಸಲು ಸರ್ಕಾರ ಗಮನ ಸೆಳೆಯಲು ಪ್ರಯತ್ನ ನಡೆಯಿತು. ಈ ನಡುವೆ ಮೊದಲ ಹೆಜ್ಜೆ ಕೆರೆಯ ವಿಸ್ತೀರ್ಣ ಹದ್ದುಬಸ್ತು ಮಾಡಿಸುವುದಾಗಿತ್ತು. ಸುಮಾರು 1 ಸಾವಿರ ಎಕರೆ ಒತ್ತುವರಿ ಆಗಿರಬಹುದೆಂಬ ಸಂಶಯ ಮೂಡಿತು. ಈ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ನಡೆಸುವುದು ಮೊದಲ ಆದ್ಯತೆ ಆಗಿತ್ತು.

    ಅದಕ್ಕಾಗಿ ನಾಡಿನ ಹೆಸರಾಂತ ಮಠಾಧೀಶರರು, ಚಿತ್ರನಟರು, ಸಾಮಾಜಿಕ ಹೋರಾಟಗಾರರನ್ನು ಭೇಟಿ ಮಾಡಿ ಮಾಹಿತಿ ಪಡೆದರು. ಹೋರಾಟದ ರೂಪುರೇಷೆ ಸಿದ್ಧವಾಯಿತು. ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿ ಕೆರೆ ಸಂರಕ್ಷಣೆಗೆ ನೈತಿಕ ಬೆಂಬಲ ಪಡೆದರು. ಸ್ವಾಮೀಜಿ ಕೆರೆ ಉಳಿಸಲು ಹಲವು ರಾಜಕಾರಣಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಹೋರಾಟಕ್ಕೆ ಮುನ್ನಡಿ ಬರೆದರು.

    ಪಾಂಡೋಮಟ್ಟಿ ವಿರಕ್ತಮಠದ ಶ್ರೀಗುರುಬಸವ ಸ್ವಾಮೀಜಿ ಹಾಗೂ ಚನ್ನಗಿರಿಯ ಶಾಂತವೀರ ಸ್ವಾಮೀಜಿಗಳು ಟೆಕ್ಕಿಗಳೊಂದಿಗೆ ಕೈ ಜೋಡಿಸಿದರು. ಸ್ಥಳೀಯ ರಾಜಕಾರಣಿಗಳು, ಅಧಿಕಾರಿಶಾಹಿಗಳನ್ನು ಭೇಟಿ ಮಾಡಿ ಸೂಳೆಕೆರೆ ಸರ್ವೇ ನಡೆಸಲು ಮನವಿ ಸಲ್ಲಿಸಲಾಯಿತು. ಆದರೆ ಅವರಿಂದ ನಿರೀಕ್ಷಿಸಿದ ಬೆಂಬಲ ಸಿಗಲಿಲ್ಲ. ಒತ್ತುವರಿ ಮಾಡಿದವರ ಸಂರಕ್ಷಣೆಗೆ ನಿಂತವರಂತೆ ವರ್ತಿಸಿದರು. ಆಗ ಖಡ್ಗ ಸಂಘಕ್ಕೆ ಸ್ವಾಮೀಜಿಗಳು, ಸ್ಥಳೀಯ ಗ್ರಾಮಗಳ ಯುವಕರು, ಪತ್ರಕರ್ತರು ನೊಂದಾಯಿಸಿಕೊಳ್ಳುವ ಮೂಲಕ ಹೋರಾಟದ ಹಾದಿ ಹಿಡಿದರು.

    ಮೊದಲ ಬಾರಿ 2017ರಲ್ಲಿ ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ ಹಾಗೂ ಶಾಂತವೀರ ಸ್ವಾಮೀಜಿಗಳ ನೇತೃತ್ವದಲ್ಲಿ ಖಡ್ಗ ಸಂಘದ ಸದಸ್ಯರು ಕಾಲ್ನಡಿಗೆಯ ಜಾಥ ಆಯೋಜಿಸಿದರು. ಸೂಳೆಕರೆಯಿಂದ ಚನ್ನಗಿರಿಗೆ ಕಾಲ್ನಡಿಗೆಯಲ್ಲಿ ಜಾಥಾ ನಡೆಸಿ ಕೆರೆ ಸ್ಥಿತಿ ಬಗ್ಗೆ ಗಮನ ಸೆಳೆದರು. ಸ್ಥಳೀಯರಿಗೆ ಕೆರೆ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿತು.

    ಆನಂತರ ಕೆರೆ ಅಂಚಿನ ಗ್ರಾಮಗಳಿಗೆ ಇದೇ ತಂಡ ಭೇಟಿ ನೀಡಿ ಗ್ರಾಮಸ್ಥರ ಸಭೆ ನಡೆಸಿತು. ಒತ್ತುವರಿ ಆಗಿದ್ದಲ್ಲಿ ಜಮೀನು ತೆರವುಗೊಳಿಸುವ ಭರವಸೆ ಪಡೆಯಲಾಯಿತು. ಈ ನಿಟ್ಟಿನಲ್ಲಿ ಬೃಹತ್ ಸಾಧನೆ ಖಡ್ಗ ಸಂಘದ ವತಿಯಿಂದ ನಡೆಯಿತು. ಹಲವು ಜಿಲ್ಲಾಧಿಕಾರಿಗಳಿಗೆ ಭೇಟ ಮಾಡಿ ಸರ್ವೆ ನಡೆಸಲು ಒತ್ತಾಯಿಸಲಾಯಿತು. ಕೆಲವರು ಆಸಕ್ತಿ ತೋರಿದರು. ಆದರೂ ಕಾರ್ಯರೂಪಕ್ಕಿಳಿಯಲಿಲ್ಲ. ಪ್ರಧಾನ ಮಂತ್ರಿ ಮೋದಿ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಮುಖೇನ ವಾಸ್ತವಾಂಶ ಲಿಖಿತ ರೂಪದಲ್ಲಿ ತಿಳಿಸಲಾಯಿತು.

    ಒಟ್ಟಾರೆ ಖಡ್ಗ ಸಂಘದ ಶತ ಪ್ರಯತ್ನದ ನಂತರ ನೀರಾವರಿ ಇಲಾಖೆಯ ಉಸ್ತುವಾರಿಯಲ್ಲಿ ಸರ್ವೇ ನಡೆಸಲು ರೂ.11 ಲಕ್ಷ ಬಿಡುಗಡೆ ಮಾಡಲಾಯಿತು. 2019ರಲ್ಲಿ ಸರ್ವೇ ನಡೆಸಲು ಬೆಳೆ ಅಡ್ಡಿಪಡಿಸುವ ಹಿನ್ನೆಲೆಯಲ್ಲಿ ಇಲಾಖೆ ಮುಂದೂಡುತ್ತಾ ಬಂದಿತು. ಸರ್ವೇ ನಡೆಸಿ ಟ್ರೆಂಚ್ ತೆಗೆಸಿ ಕೆರೆಯ ವಿಸ್ತೀರ್ಣ ಹದ್ದುಬಸ್ತು ಮಾಡುವುದು ಖಡ್ಗ ಸಂಘದ ಬದ್ಧತೆ ಆಗಿತ್ತು.

    ದೈವಕೃಪೆ ಎಂಬಂತೆ 2019ರಲ್ಲಿ ಉತ್ತಮ ಮುಂಗಾರು ಮಳೆ ಬಿದ್ದಿತು. ಭದ್ರಾ ಜಲಾಶಯ ತುಂಬಿತು. ಸಾಕಷ್ಟು ನೀರು ನಾಲೆಯ ಮೂಲಕ ಕೆರೆ ತುಂಬಿಸಿತು. ಸಂಗ್ರಹಣಾ ಭಾಗದಲ್ಲಿ ಸಾಕಷ್ಟ ಮಳೆ ಬಿದ್ದ ಕಾರಣ ಹಳ್ಳ-ಕೊಳ್ಳಗಳು ತುಂಬಿ ಹರಿದವು. ಸೂಳೆಕೆರೆಯ ಜಲ ಮೂಲ ಹರಿದ್ರಾವತಿ ಹಳ್ಳದಲ್ಲಿ ಸಾಕಷ್ಟು ನೀರು ಹರಿದು ಕೆರೆ ತುಂಬಿತು. ಕೋಡಿ ನೀರು ಅಲ್ಪ ಪ್ರಮಾಣ ಹೊರ ಹರಿಯಿತು. ರೈತರ ಮುಖದಲ್ಲಿ ಸಂತಸ ನಲಿದಾಡಿತು. ಆದರೂ ಸರ್ವೇ ಕಾರ್ಯ ವಿಳಂಬವಾಯಿತು. ನಿರಂತರ ಖಡ್ಗ ಸಂಘದ ಒತ್ತಾಯದ ಮೇರೆಗೆ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ವೀಕ್ಷಣೆಯಲ್ಲಿ ದ್ರೋಣ್ ಕ್ಯಾಮರ ಮೂಲಕ 2020ರ ಆರಂಭದಲ್ಲಿ ಸರ್ವೇ ಕಾರ್ಯ ನಡೆಯಿತು. ಮುಂದಿನ ಕ್ರಮ ಕೈಗೊಳ್ಳಲು ಇಲಾಖೆ ಕೊರೊನಾ ಸಂಕಷ್ಟದ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ ಎಂದು ಸಂಘದ ಅಧ್ಯಕ್ಷ ರಘು ಮನದ ಮಾತು ಬಿಚ್ಚಿಟ್ಟರು.

    ಸದ್ಯ ಪೂರ್ಣ ಮಟ್ಟದಲ್ಲಿ ನೀರು ತುಂಬಿರುವುದೇ ಕೆರೆಯ ವಿಸ್ತೀರ್ಣದ ಭಾಗವಾಗಿದೆ. ನೀರಾವರಿ ಇಲಾಖೆ ಕೆರೆ ಒತ್ತುವರಿ ತಡೆಯುವಲ್ಲಿ ಮೀನಾ-ಮೇಷ ಎಣಿಸುತ್ತಿದೆ. ಅಕ್ರಮವಾಗಿ ಕೆರೆ ಜಾಗ ಕಬಳಿಸುವವರಿಗೆ ಎಚ್ಚರಿಕೆಯನ್ನು ಖಡ್ಗ ಸಂಘ ನೀಡುತ್ತಿದೆ. ಅಧಿಕಾರಿಗಳಿಂದ ನ್ಯಾಯೋಚಿತ ಬೆಂಬಲ ಸಿಗದೆ. ಸೂಳೆಕೆರೆ ಉಳಿವಿನ ಬಗ್ಗೆ ತೀವ್ರ ಹೋರಾಟದ ಸ್ವರೂಪ ರೂಪಿಸುತ್ತಿದೆ. ಸೂಳೆಕೆರೆಯಿಂದಲೇ ಬದುಕು ಕಟ್ಟಿಕೊಂಡವರು ಅದರ ಉಳಿವಿಗೆ ಒಗ್ಗಾಟ್ಟಾಗಬೇಕಾಗಿದೆ ಎಂದು ಕರೆ ನೀಡಿದರು.

    ಸೂಳೆಕೆರೆ ಭಾಗದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳ ಅಭಿವೃದ್ಧಿ ಆಮೆಗತಿಲ್ಲಿ ಸಾಗಿದೆ. ಬದ್ಧತೆ ತೋರದ ರಾಜಕಾರಣಿಗಳಿಂದ ಅಮೂಲ್ಯ ಪ್ರಕೃತಿ ಸೌಂದರ್ಯ ಕಳೆರಹಿತವಾಗಿದೆ. ಒಂದಿಷ್ಟು ಅಭಿವೃದ್ಧಿ ನಡೆದಿದೆ. ಆದರೂ ನಿರ್ವಹಣೆ ಇಲ್ಲದೆ ಪಾಳುಬಿದ್ದಿವೆ. ಇತ್ತೀಚೆಗೆ ದೋಣಿ ವಿಹಾರ ಕೇಂದ್ರ ಆರಂಭಿಸಲಾಗಿದೆ. ಒಟ್ಟಾರ ಪರಿಪೂರ್ಣಾ ಅಭಿವೃದ್ಧಿಗೆ ಖಡ್ಗ ಸಂಘ ತನು, ಮನ ಧನದೊಂದಿಗೆ ನಿಸ್ವಾರ್ಥವಾಗಿ ಹೋರಾಟ ನಡೆಸಿದೆ. ಅವರ ಹೋರಾಟ ಏತಕ್ಕಾಗಿ ಎಂಬುದನ್ನು ಸಾರ್ವಜನಿಕರು ಅರಿಯಬೇಕಾಗಿದೆ.

    ಸಂಘಕ್ಕೆ ಬೆಂಬಲವಾಗಿ ಚಿತ್ರನಟ ಕಿಶೋರ್, ಸಾಮಾಜಿಕ ಕಾರ್ಯಕರ್ತೆ ರೂಪ ಐಯ್ಯರ್, ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಗಡೆ ನಿರ್ದೇಶಕರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.

    ರಘು. ಬಿ.ಆರ್. ಅವರೊಂದಿಗೆ ಬಸವರಾಜ್ ಬೆಳ್ಳೂಡಿ, ಷಣ್ಮುಖ ಸ್ವಾಮಿ, ಕುಬೇಂದ್ರಸ್ವಾಮಿ, ಎಚ್.ಎಂ.ರವಿ, ಪ್ರಶಾಂತ್, ಜಗದೀಶ್ ಹಾಗೂ ಸಾವಿರಾರು ಸದಸ್ಯರು ಕೈ ಜೋಡಿಸಿದ್ದಾರೆ.

    error: Content is protected !!