ಮಾತಾಡಿಸ್ತಿದ್ರು …..ವಿಚಾರಿಸ್ತಿದ್ರು …..ತಮಾಷೆ ಮಾಡ್ತಿದ್ರು …..ನಗಿಸ್ತಿದ್ರು …..ಅವರು ಊಟಕ್ಕೆ ಕೂರ್ತಿದಿದ್ದೇ ಮಕ್ಕಳು ತಿಂದ್ರ ಅಂತ ಕೇಳ್ತಾ , ಅವರು ತಿಂತಾ ನಮ್ಮನ್ನ ಕರೆದು ತಟ್ಟೆಯಲ್ಲಿದ್ದ ತರಕಾರೀನೋ , ಒಂದು ತುತ್ತು ಅನ್ನಾನೋ ತಿನ್ನಿಸ್ತಿದ್ರು . ನಮಗೆ ಮೊದಲು ಹೋಟೆಲ್ಲಿಗೆ ಕರ್ಕೊಂಡು ಹೋಗಿದ್ದವರು , ಮೊದಲ ಡ್ರಾಮಾ ಮೊದಲ ಸಿನಿಮಾ ಮೊದಲ ಸರ್ಕಸ್ ತೋರಿಸಿದ್ದವರು ,ನಮ್ಮ ಮೊದಲ ಹೀರೋ ಅವರು, ಟೂರು ಹೊಡೆಸಿದ್ದವರು ,ಅಟಿಕೆ ಕೊಡಿಸಿದ್ದವರು , ಬಟ್ಟೆ ಹೊಲಿಸಿದ್ದವರು , ನಾವು ಕಂಡ ಮೊದಲ ಸಾಹುಕಾರ ಅಪ್ಪ .
ಅವರ ಜೇಬಿನಲ್ಲಿ ಸದಾ ದುಡ್ಡಿರುತ್ತಿತ್ತು , ಮನೆಯ ದಿನಸಿಗೇ ಆಗಲಿ ನಮ್ಮ ಮುನಿಸಿಗೇ ಆಗಲಿ ನನ್ ಷರ್ಟ ತಗೊಂಡ್ ಬಾ ಅನ್ನೋವ್ರು ಅದರಿಂದ ದುಡ್ಡು ತೆಗೆದು ಕೊಡೋವ್ರು , ನಮ್ಮ ಮೊದಲ ಪಾಕೆಟ್ ಮೊನಿ ಕೊಟ್ಟವರು , ನಮ್ಮ ಮಣ್ಣಿನ ಹುಂಡಿಗೆ ಹಣ ಹಾಕಿದವರು ಅವರು , ಅಪ್ಪ ನಮ್ಮ ಕಣ್ಣಿಗೆ ಯಾವಾಗಲೂ ಪರ್ಫೆಕ್ಟ್ , ಪಕ್ಕಾ ಜಂಟಲ್ಮನ್, ಯಾವತ್ತೂ ಐರನ್ ಬಟ್ಟೆ ಇಲ್ಲದೇ ಹೊರಗೆ ಹೋಗುತ್ತಿರಲಿಲ್ಲ ಅವರು ಹಾಕುವ ವಾಚು , ಧರಿಸುವ ಚಪ್ಪಲಿ ,ಕಟ್ಟುವ ಬೆಲ್ಟು , ಬರೆಯುವ ಪೆನ್ನು ಪ್ರತಿಯೊಂದು ವಿಶೇಷವಾಗಿ ಇರೋವು , ಅವರು ಮನೆಗೆ ಬೇಗ ಬಂದರೆ ಕೇಳುತ್ತಿದ್ದ ಪ್ರಶ್ನೆ ಮಕ್ಕಳೆಲ್ಲಿ ? ಅವರು ಲೇಟಾಗಿ ಬಂದ್ರೂ ಕೇಳುತ್ತಿದ್ದ ಪ್ರೆಶ್ನೆ ಮಕ್ಕಳು ತಿಂದ್ರ ? ಮಲಗ್ಬಿಟ್ರ ? ನಾವು ಹುಷಾರು ತಪ್ಪಿದಾಗ ಅವರು ಒದ್ದಾಡುತ್ತಿದ್ದರು , ನಮಗೆ ಗಾಯವಾದರೆ ಅವರು ನೋವು ತಿಂತಿದ್ರು .
ಸಸಿಗಳಂತಿದ್ದ ನಾವು ಗಿಡಗಳಾಗುತ್ತಿದ್ದಂತೆ ಸಣ್ಣದಾಗಿ ಬಗ್ಗಿಸಲು ಶುರು ಮಾಡಿದರು …..ಇದು ತಿನ್ನು, ಇದು ಮಾಡು , ಇದೇ ಓದು , ಹಿಂಗೇ ಇರು , ಇದೇ ಕೋರ್ಸ್ ತಗೋ , ಹೇಳಿದ್ ಮಾತು ಕೇಳು, ಹಂಗೆಲ್ಲಾ ಮಾತಾಡ್ಬೇಡ, ನಿನಗೆ ಅರ್ಥ ಆಗಲ್ಲ, ನಿನಗೆ ಗೊತ್ತಾಗಲ್ಲ …ಹೀಗೆ ಕಿವಿ ಹಿಂಡುವುದು, ಗದರುವುದು ಶುರು ಮಾಡುತ್ತಾರೆ ….ಆಗ ನಮಗೆ ಅಪ್ಪ ಯಾಕೋ ಈ ನಡುವೆ ಸ್ವಲ್ಪ ಸ್ಟ್ರಿಕ್ಟ್ ಆದಂಗ್ ಕಾಣ್ತಾರೆ ಅಂತ ಸ್ವಲ್ಪ ಬೇಸರ ಆಗೋದು , ನಮಗೇನೇ ಬೇಕು ಅಂದ್ರೂ ಅಮ್ಮನ ಮೂಲಕವೇ ಹೇಳುವುದು ಕೇಳುವುದು ಮಾಡತೊಡಗಿದೆವು , ನಮ್ಮ ತಪ್ಪುಗಳಿಗೆ ಅಮ್ಮನನ್ನು ಬೈಯ್ಯುತ್ತಿದ್ದರು , ಎಷ್ಟೋ ಸಾರಿ ವಾದ ಮಾಡುತ್ತಿದ್ದೆವು ಆಗ ಅಮ್ಮ ಬಿಡಿಸಿ ಅವರೆದುರು ನಮ್ಮನ್ನ ಬಯ್ದು ಕಳುಹಿಸುತ್ತಿದ್ದಳು , ಅಪ್ಪನೆದರು ಮಕ್ಕಳು ಬಾಯಿ ಕೊಡುವುದು ಅಮ್ಮನಿಗೂ ಇಷ್ಟವಿರಲಿಲ್ಲ , ಅವರಿಗೆ ಗೊತ್ತು ಅಪ್ಪನ ಬದುಕಿನ ಒದ್ದಾಟ ಗುದ್ದಾಟ ಎಲ್ಲವೂ ಮನೆಗಾಗಿಯೇ ಮಕ್ಕಳಿಗಾಗಿಯೇ ಅಂತ , ಕ್ವಾರ್ಟ್ರೆಸ್ಸು ಬಾಡಿಗೆ ಲೀಸು ಆ ಮನೆ ಈ ಮನೆ ಅಂತೆಲ್ಲಾ ಒದ್ದಾಡಿ ಜಿದ್ದಿಗೆ ಬಿದ್ದು ಹೊಟ್ಟೆ ಬಟ್ಟೆ ಕಟ್ಟಿ ಹಣ ಉಳಿಸಿ ಹಣ ಹೊಂದಿಸಿ ಸಾಲ ಮಾಡಿ ಸೈಟು ತಗೊಂಡು ಓಡಾಡಿ ನಿಂತು ಒಂದು ಸ್ವಂತ ಮನೆ ಕಟ್ಟಿ , ಅಪ್ಲಿಕೇಷನ್ನು ಸೀಟು ಅಲಾಟ್ಮೆಂಟು ಡೊನೇಷನ್ನು ಎಂಬ ಹತ್ತು ಸಮಸ್ಯೆಗಳ ಮಧ್ಯೆ ಎಜುಕೇಷನ್ನು ಕೊಡಿಸಿ , ಎಂಪ್ಲಾಯ್ಮೆಂಟು ಲಾಸ್ಟ್ ಡೇಟು ಎಕ್ಸಾಮು ಇನ್ಫ್ಲೂಯೆನ್ಸು ವೇಕೆನ್ಸಿ ಅನ್ನೋ ನೂರು ಸ್ಪರ್ಧೆಗಳ ಮಧ್ಯೆ ನೌಕರಿ ಕೊಡಿಸಿ , ಸಂಬಂಧ ಹುಡುಕಿ ವಿಚಾರಿಸಿ ಹಣ ಕೂಡಿಟ್ಟು ಪತ್ರಿಕೆ ಹೊಡಿಸಿ ಚೌಟ್ರಿ ಹುಡುಕಿ ವರೊಪಚಾರ ನಿಶ್ಚಿತಾರ್ಥ ಅಂತ ಮದುವೆ ಮಾಡ್ಸಿ…. ಅಬ್ಬಾ… ಏನ್ ಸ್ಟ್ರಾಂಗ್ ಗುರೂ ನಮ್ಮಪ್ಪ ! ಅಂತ ಅಂದ್ಕೋತಿದ್ವಿ , ಇಲ್ಲ ಬೇರೆ ಯಾರಿಂದಾನೂ ಆಗಲ್ಲ ಅದು ಅಪ್ಪನಿಂದ ಮಾತ್ರ ಸಾಧ್ಯ ….ಅಪ್ಪ ಇದಾರೆ ಅಂದ್ರೆ ಧೈರ್ಯ ಅಪ್ಪ ಇದಾರೆ ಅಂದ್ರೆ ಭಯ ….ಗೌರವ ಸಂಸ್ಕಾರ ಶಿಸ್ತು ಸಾಧನೆ ಪ್ರತಿಯೊಂದಕ್ಕೂ ಉದಾಹರಣೆ ” ಅಪ್ಪ ” ಅನ್ನೋ ಮಟ್ಟಿಗೆ ಆಗಿದ್ದರು .
ಅವರೂ ಮನುಷ್ಯರೇ ಅವರಲ್ಲೂ ಕೋಪ ಇತ್ತು ಲೋಪ ಇತ್ತು , ದುಡಿದಿದ್ರೂ ದುಡುಕಿದ್ರೂ , ನಮ್ಮನ್ನೆಲ್ಲಾ ಹೆದರಿಸ್ತಿದ್ದ ಗದರಿಸ್ತಿದ್ದ ಅಪ್ಪಾನೂ ಒಮ್ಮೊಮ್ಮೆ ತಪ್ಪು ಮಾಡಿದಾಗ ಅಮ್ಮನಿಗೆ ಹೆದರುತ್ತಿದ್ರು . ಒಂದಾದ ಮೇಲೆ ಇನ್ನೊಂದು , ಇನ್ನೊಂದಾದ ಮೇಲೆ ಮತ್ತೊಂದು ಜವಾಬ್ದಾರಿ ಮುಗಿಸಿ , ಒತ್ತಡ , ಅನಾರೊಗ್ಯಕ್ಕೆ ಸಿಲುಕಿ ಅವರೂ ಬಳಲಿದ್ದರು, ಅವರಿಗೂ ವಯಸ್ಸಾಗಿತ್ತು …. ಮಗುವಿನಿಂದಲೂ ನೋಡ್ಕೊಂಡು ಬರ್ತಿದ್ದ ಅಪ್ಪ ಸಮಯ ಹೋಗ್ತಿದ್ದಂತೇ ನಮ್ಮ ಮುಂದೆಯೇ ಮಗುವಾಗಿಬಿಟ್ಟಿದ್ದರು , ಯಾವ ದೇಹದ ಮೇಲೆ ನಾವು ಕೂತು ಉಪ್ಪು ಮೂಟೆ ಆಡಿದ್ವೋ ಆ ದೇಹ ಮುಪ್ಪಾಗಿತ್ತು , ಯಾವ ಶಕ್ತಿಯುತ ತೋಳಲ್ಲಿ ನಾವು ಬೆಳದಿದ್ವೋ ಆ ತೋಳು ಶಕ್ತಿ ಕಳೆದುಕೊಂಡು ಆಸರೆ ಬಯಸಿ ಹಾಸಿಗೆ ಸೇರಿತ್ತು
ಬದುಕು ಕಲಿಸಿದ ಅಪ್ಪ ಒಂದು ದಿನ ನಮ್ಮನ್ನು ಬದುಕಲು ಬಿಟ್ಟು ಹೋಗಿಬಿಡುತ್ತಾರೆ . ಯಜಮಾನ ಅನ್ನೋ ಪದಕ್ಕೆ ಸೂಕ್ತ ಅರ್ಥ ಅವರೇ ಅವರನ್ನು ಬಿಟ್ಟರೆ ಆ ಜಾಗ ತುಂಬಲೂ ಯಾರಿಂದಲೂ ಸಾಧ್ಯವಿಲ್ಲ . ಪರಿಪೂರ್ಣ ಬದುಕನ್ನು ಅನುಭವಿಸಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿ ಕರ್ತವ್ಯಗಳನ್ನು ಮುಗಿಸಿ ಹೊರಟಿರುತ್ತಾರೆ , ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಕಲಿಸಿದ ವಿದ್ಯೆ, ತೋರಿಸಿದ ದಾರಿ , ಮೂಡಿಸಿದ ಭರವಸೆ , ಬೆಳೆಸಿದ ರೀತಿ , ಅವರ ಆದರ್ಶಗಳು ಯಾವತ್ತಿಗೂ ನಮ್ಮೊಂದಿಗಿರುತ್ತವೆ ….. ಇವತ್ತು ನಾವು ತಲೆಯೆತ್ತಿ ಬದುಕುತ್ತಿದ್ದೇವೆಂದರೆ ಅದಕ್ಕೆ ಕಾರಣ ” ಅಪ್ಪ ” ಎನ್ನುವ ಆಕಾಶ