26 C
Karnataka
Thursday, November 21, 2024
    Home Blog Page 180

    ಲಾಕ್‌ಡೌನ್: ಬಂಗಾರದಂತಹ ಬೆಳೆ ನಾಶ, ಕಟ್ಟೆಯೊಡೆದಿದೆ ರೈತರ ಆಕ್ರೋಶ

    ಚನ್ನಗಿರಿ ತಾಲ್ಲೂಕಿನ ರೈತರಿಗೆ ಕೊರೊನಾ ಲಾಕ್ ಡೌನ್ ಪರಿಣಾಮ ಅಪಾರ ನಷ್ಟ ಸಂಭವಿಸಿದೆ. ತರಕಾರಿ, ಹೂವು, ಹಣ್ಣು ಹೊಲದಲ್ಲಿಯೇ ನಾಶ ಮಾಡುವ ಮೂಲಕ ತಮ್ಮ ಅಸಹಾಯಕತೆ ಹೊರಹಾಕಿದ್ದಾರೆ.

    ಪ್ರತಿ ವರ್ಷದಂತೆ ಪ್ರಯೋಗಶೀಲರಾಗಿ ಬೆಳೆದು ಯಶಸ್ಸು ಕಂಡಿದ್ದ ರೈತರು ಕಣ್ಣೀರು ಹಾಕಿದ್ದಾರೆ. ಭೀಮನೆರೆ ಗ್ರಾಮದ ರೈತರು ಬೀಟ್ ರೂಟ್ ಹಾಗೂ ಎಲೆಕೋಸು ಸಮೃದ್ಧವಾಗಿ ಬೆಳೆದಿದ್ದರು. ಬೆಳೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ವೇಳೆಗೆ ಲಾಕ್ ಡೌನ್ ಎದುರಾಯಿತು. ಸಾರಿಗೆ ವ್ಯವಸ್ಥೆ ಇಲ್ಲದೇ ಬೆಳೆ ಹೊಲದಲ್ಲಿಯೇ ನಾಶವಾಯಿತು. ಕೆಲವರು ರಂಟೆ ಹೊಡೆದು ಅಳಿಸಿ ಹಾಕಿದರು.

    ಒಂದು ಎಕರೆಗೆ ರೂ.40 ಸಾವಿರ ಖರ್ಚು ಮಾಡಿ ಬೀಟ್ ರೂಟ್ ಬೆಳೆಯಲಾಗಿತ್ತು. ಸುಮಾರು 15 ಟನ್ ಇಳುವರಿ ನಿರೀಕ್ಷೆ ಮಾಡಲಾಗಿತ್ತು. ಸಗಟು ಬೆಲೆ ಕನಿಷ್ಟ ರೂ.17 ಧಾರಣೆ ಇತ್ತು. ಇದೇ ಧಾರಣೆಗೆ ಎಕರೆಗೆ ರೂ.1ಲಕ್ಷ ಆದಾಯದ ಬರುತ್ತಿತ್ತು. ಈಗ ಬೆಂಗಳೂರು ಮಾರುಕಟ್ಟೆಗೆ ಸಾಗಿಸಲು ಆಗಲಿಲ್ಲ ಹಾಗಾಗಿ ಹೊದಲ್ಲಿಯೇ ಬಿಡಲಾಯಿತು ಎನ್ನುತ್ತಾರೆ ರೈತ ಮಹೇಂದ್ರ ಗೌಡ.

    ಅದೇ ಗ್ರಾಮದಲ್ಲಿ ಹಲವು ರೈತರು ಸುಮಾರು 15 ಎಕರೆಯಲ್ಲಿ ಎಲೆ ಕೋಸು ಬೆಳೆದಿದ್ದರು. ಕೊಯ್ಲಿಗೆ ಬರುವ ವೇಳೆಗೆ ಕೊರೊನಾ ದಿಗ್ಬಂಧನ ಆರಂಭವಾಯಿತು. ಕೇವಲ ರೂ.1 ಕ್ಕೂ ಕೇಳುವವರಿಲ್ಲದೇ ಹೊಲದಲ್ಲಿಯೇ ಮಗುಚಲಾಯಿತು. ಪ್ರತಿ ಎಕರೆಗೆ ರೂ. 50 ಸಾವಿರ ಖರ್ಚು ತಗುಲಿತ್ತು. ಎಕರೆಗೆ 15 ಟನ್ ಇಳುವರಿ ಸಾಧ್ಯತೆ ಇತ್ತು. ರೂ. 8 ಬೆಲೆ ಸಿಕ್ಕಿದ್ದರೂ ಹಾಕಿದ ಬಂಡವಾಳ ವಾಪಸ್ಸು ಬರುತ್ತಿತ್ತು. ಈಗ ಕೊಳ್ಳುವವರಿಲ್ಲದೇ ರೈತ ಬರಿಗೈ ಆಗಿದ್ದಾನೆ ಎನ್ನುತ್ತಾರೆ ರೈತ ವಿಶ್ವನಾಥ್.

    ಕನಕಾಂಬರ ನಾಶ: ಪರಮೇಶ್ವರಪ್ಪ ಎಂಬ ರೈತ ತಮ್ಮ ಅಡಿಕೆ ತೋಟದಲ್ಲಿ ಒಂದೂವರೆ ಎಕರೆ ಪ್ರದೇಶದಲ್ಲಿ ಕನಕಾಂಬರ ಬೆಳೆದಿದ್ದರು. ಲಾಕ್ ಡೌನ್ ನಿಂದಾಗಿ ಮಾರುಕಟ್ಟೆ, ಸಾಗಣೆ ವ್ಯವಸ್ಥೆ ಇಲ್ಲದೇ ಟ್ರ್ಯಾಕ್ಟರ್ ಮೂಲಕ ಬೆಳೆ ನಾಶ ಮಾಡಿದರು.

    ಲಾಕ್ ಡೌನ್ ಪೂರ್ವದಲ್ಲಿ ನಿತ್ಯ 5 ಕೆ.ಜಿ. ಕನಕಾಂಬರ ಹೂವು ಸಿಗುತ್ತಿತ್ತು. ದಾವಣಗೆರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ರೂ.500 ರಿಂದ 600 ಬೆಲೆ ಸಿಗುತ್ತಿತ್ತು. ಒಟ್ಟು 2500-3000 ನಿತ್ಯ ವಹಿವಾಟು ನಡೆಸುತ್ತಿದ್ದೆವು. ಲಾಕ್ ಡೌನ್ ಘೋಷಣೆಯ ನಂತರ ಪ್ರತಿ ಕೆ.ಜಿ. ರೂ.100 ಕ್ಕೆ ಕುಸಿಯಿತು. ಇದರಿಂದ ಹಾಕಿದ ಬಂಡವಾಳವು ಸಿಗುತ್ತಿರಲಿಲ್ಲ.

    ಕನಕಾಂಬರ ಬಿಡಿಸಲು ಬರುವ 5 ಕೂಲಿ ಕಾರ್ಮಿಕರಿಗೆ ರೂ.200 ಕೊಡಬೇಕು. ಇದರಿಂದ ರೂ.1000 ಖರ್ಚು ಬರುತ್ತಿತ್ತು. ದಾವಣಗೆರೆಗೆ ತೆರಳಿ ಸಗಟು ವ್ಯಾಪಾರಿಗಳಿಗೆ ಕೊಡುತ್ತಿದ್ದೆವು. ಖರ್ಚು ಭರಿಸಿ ರೂ.1500 ನಿತ್ಯ ಗಳಿಕೆ ಇತ್ತು. ಲಾಕ್ ಡೌನ್ ಪರಿಣಾಮ ಕೂಲಿಗಳೂ ಬರಲಿಲ್ಲ. ದರ ಕುಸಿತದಿಂದ ನಷ್ಟವಾಯಿತು ಎನ್ನುತ್ತಾರೆ ರೈತ ಪರಮೇಶ್ವರಪ್ಪ.

    ಹಿರೇಕೋಗಲೂರಿನಲ್ಲಿಯೂ ಎಲೆಕೋಸು ಬೆಳೆದು ಮಾರುಕಟ್ಟೆ ಇಲ್ಲದೇ ನಾಶಮಾಡಲಾಗಿದೆ. ಮಾಯಕೊಂಡ ಸಮೀಪದಲ್ಲಿ ಕಲ್ಲಂಗಡಿ ಬೆಳೆದ ರೈತನಿಗೆ ಮಾರುಕಟ್ಟೆ ಇಲ್ಲದೇ ಅಪಾರ ನಷ್ಟ ಸಂಭವಿಸಿದೆ. ಈರುಳ್ಳಿ ಬೆಳೆದ ರೈತರು ಮಾರುಕಟ್ಟೆ ಇಲ್ಲದ ಕಾರಣ ಮನೆ ಬಾಗಿಲಿಗೆ ಹೊತ್ತೊಯ್ದು ಮಾರಾಟ ಮಾಡಿದರು. ಹಾಗಾರಿ ತುಸು ಆರ್ಥಿಕ ಕುಸಿತದಿಂದ ಪಾರಾದರು.

    ರೈತರ ಬವಣೆ ಹಾಗೂ ಬೆಳೆ ನಾಶದ ವರದಿಯನ್ನು ಮನಗಂಡ ತೋಟಗಾರಿಕಾ ಇಲಾಖೆ ರೈತರ ಸಹಾಯಕ್ಕೆ ಮುಂದಾದರು. ರೈತರ ಉತ್ಪಾದನೆಗಳ ಸಾರಿಗೆಗೆ ಮುಕ್ತ ಅವಕಾಶ ನೀಡಲಾಯಿತು. ಎಪಿಎಂಸಿಗಳನ್ನು ತೆರೆದು ಖರೀದಿಗೆ ವ್ಯವಸ್ಥೆ ಮಾಡಲಾಯಿತು. ಹಾಪ್ ಕಾಮ್ಸ್ ಗಳಲ್ಲಿ ಹಣ್ಣು, ತರಕಾರಿ ಮಾರಾಟ ಮಾಡಲು ರೈತರಿಗೆ ಮನವರಿಕೆ ಮಾಡಲಾಯಿತು.

    ಸಾರ್ವಜನಿಕರ ಓಡಾಟವಿಲ್ಲದೇ ಬೇಡಿಕೆ ಕುಸಿಯಿತು. ರೈತರಿಗೆ ಪೂರಕ ಬೆಲೆ ಸಿಗದಾಯಿತು. ಸಿಕ್ಕಷ್ಟೆ ಸಾಕು ಎಂಬ ನಿಲುವಿಗೆ ಬಂದರು. ತುಸು ನಷ್ಟವೆನಿಸಿದರೂ ಹಣ್ಣುಗಳನ್ನು ಮಾರಾಟಮಾಡಿದರು.

    ಮೆಕ್ಕೆಜೋಳದ ಧಾರಣೆಯು ಕೋಳಿ ಮಾರಾಟದ ದಿಗ್ಬಂಧನದಿಂದ ತೀವ್ರ ಕುಸಿದಿತ್ತು. ಈಗ ಸ್ವಲ್ಪ ಚೇತರಿಕೆ ಕಂಡಿದೆ.

    ಸ್ಯಾಂಡಲ್‌ವುಡ್‌ಗೆ ಕೊರೊನಾಘಾತ: ಟಾಕೀಸ್ ಗಳು ತೆರೆದರೂ ಪ್ರೇಕ್ಷಕರು ಬರುವುದು ಅನುಮಾನ

    ಕನ್ನಡಪ್ರೆಸ್ ವರದಿ/ ಒಂದೇ ನಿಮಿಷದ ಓದು

    ಕೊರೊನಾ ವೈರಸ್‌ನಿಂದ ಇಡೀ ದೇಶವೇ ಲಾಕ್‌ಡೌನ್‌ ಆಗಿತ್ತು. ಇದರಿಂದ ಸಾಮಾನ್ಯ ಜನರಿಂದ ಹಿಡಿದ ಕೋಟ್ಯಧಿಪತಿಗಳಿಗೂ ಆರ್ಥಿಕ ಸಂಕಷ್ಟ ಎದುರಾಗಿದೆ. ಸ್ಯಾಂಡಲ್‌ವುಡ್‌ಗಂತೂ ಈ ಲಾಕ್‌ಡೌನ್‌ ಸಿಕ್ಕಾಪಟ್ಟೆ ನಷ್ಟವನ್ನುಂಟುಮಾಡಿದೆ.

    ಹೌದು, ನಿರ್ಮಾಪಕ ಸೂರಪ್ಪ ಬಾಬು ಅವರು ಹೇಳು ಪ್ರಕಾರ ಸದ್ಯ ಚಿತ್ರರಂಗದ ಮೇಲೆ ಏನಿಲ್ಲವೆಂದರು 500 ಕೋಟಿಯಷ್ಟು ಇನ್ವೆಸ್ಟ್‌ಮೆಂಟ್‌ ಇದೆ. ಆದರೆ ಆ ಹಣ ವಾಪಾಸ್ಸಾಗುವುದು ಯಾವಾಗ ಎಂಬುದೇ ನಮಗೆ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಅವರು.

    ದೊಡ್ಡ ಚಿತ್ರಗಳ ಎಫೆಕ್ಟ್

    ‘ಕೆಜಿಎಫ್‌-2’, ‘ರಾಬರ್ಟ್‌’, ‘ಕೋಟಿಗೊಬ್ಬ3’, ‘ಯುವರತ್ನ’, ‘ಪೊಗರು’ , ‘ಸಲಗ’, ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳಲ್ಲಿ ಮೂರು ಚಿತ್ರಗಳಾದರೂ  ಇಷ್ಟೊತ್ತಿಗಾಗಲೇ ರಿಲೀಸ್‌ ಆಗಬೇಕಿತ್ತು. ಲಾಕ್‌ಡೌನ್‌ನಿಂದಾಗಿ ರಿಲೀಸ್‌ ದಿನಾಂಕ ಮುಂದಕ್ಕೆ ಹೋಗಿದೆ. ಇನ್ನು ಕೆಲವು ಚಿತ್ರಗಳ ಕೊನೆಯ ಭಾಗದ ಚಿತ್ರೀಕರಣ ಬಾಕಿ ಉಳಿದುಕೊಂಡಿದೆ. ಈ ದೊಡ್ಡ ಚಿತ್ರಗಳು ಬಿಡುಗಡೆಯಾಗದ ಹೊರತು ಸಣ್ಣ ಬಜೆಟ್‌ನ ಸಿನಿಮಾಗಳು ರಿಲೀಸ್‌ ಆಗುವುದಿಲ್ಲ. ಸದ್ಯಕ್ಕೆ ಕೊರೊನಾ ಮಾಡುತ್ತಿರುವ ಅವಾಂತರವನ್ನು ಗಮನಿಸಿದರೆ ಜುಲೈ ಕೊನೆವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಚಿತ್ರಮಂದಿರಗಳು ತೆರೆಯಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಹಾಗೇನಾದರೂ ಆದರೆ ಈ ವರ್ಷ ಅತಿ ಕಡಿಮೆ ಚಿತ್ರಗಳು ಬಿಡುಗಡೆಯಾಗುತ್ತವೆ.

    ಬೇಸಿಗೆ ರಜೆ

    ಸ್ಯಾಂಡಲ್‌ವುಡ್‌ಗೆ ಬೇಸಿಗೆ ರಜೆ ಹೆಚ್ಚು ವರಮಾನ ತಂದುಕೊಡುವ ಸಮಯ. ಈ ಸಮಯದಲ್ಲಿ ಕೊರೊನಾ ಬಂದು ಇಡೀ ಚಿತ್ರೋದ್ಯಮ ಬಂದ್‌ ಆಗಿದೆ. ಹಾಗಾಗಿ ಉತ್ತಮ ದಿನಾಂಕ ಬರುವವರೆಗೂ ಕೆಲ ನಿರ್ಮಾಪಕರು ಚಿತ್ರಗಳನ್ನು ರಿಲೀಸ್‌ ಮಾಡುವುದಿಲ್ಲ ಎನ್ನಲಾಗುತ್ತಿದೆ.

    ಚಿತ್ರಮಂದಿರಗಳು ಬಂದ್‌   

    ಇನ್ನು ಸಿನಮಾ ಹಾಲ್‌ಗಳು ಮುಚ್ಚಿರುವ ಕಾರಣ ಟಿಕೇಟ್‌ ದರದಿಂದ ಮಾತ್ರ ಲಾಸ್‌ ಆಗಿಲ್ಲ. ಅಲ್ಲಿ ನಡೆಸುವ ಕ್ಯಾಂಟೀನ್‌, ಪಾರ್ಕಿಂಗ್‌ ಸೇರಿದಂತೆ ಬಹಳಷ್ಟು ಮೂಲಗಳಿಂದ ಚಿತ್ರೋದ್ಯಮಕ್ಕೆ ಹೊಡೆತ ಬಿದ್ದಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೇಟ್‌ ದರಕ್ಕಿಂತಲೂ ಅಲ್ಲಿ ಮಾರಾಟ ಮಾಡುವ ತಿಂಡಿಯ ಬೆಲೆಗಳೇ ಹೆಚ್ಚಾಗಿರುತ್ತವೆ. ಜತೆಗೆ ಪಾರ್ಕಿಂಗ್‌ ಶುಲ್ಕದಿಂದಲೂ ಅತಿ ಹೆಚ್ಚು ಹಣವನ್ನು ಮಲ್ಟಿಪ್ಲೆಕ್ಸ್‌ ಮಂದಿ ಗಳಿಸುತ್ತಾರೆ.

    ನಟ,ನಟಿಯರ ಸಂಭಾವನೆ

    ಕಳೆದ ಎರಡು ತಿಂಗಳಲ್ಲಿ ಎಷ್ಟೋ ಜನ ನಟ, ನಟಿಯರ ಸಂಭಾವನೆ ಸಹ ಇಲ್ಲ. ಸೀರಿಯಲ್‌, ಸಿನಿಮಾಗಳಲ್ಲಿ ದಿನವೊಂದಕ್ಕೆ ಸಾವಿರಾರು ರೂಪಾಯಿ ಗಳಿಸುವ ಕಲಾವಿದರು ಕನ್ನಡದಲ್ಲಿದ್ದಾರೆ. ಶೂಟಿಂಗ್‌ ಇಲ್ಲದ ಕಾರಣ ಅವರ್ಯಾರಿಗೂ ಹಣ ಸಿಗುತ್ತಿಲ್ಲ.

    6000 ಕಾರ್ಮಿಕರಿಗೆ ಸಂಕಷ್ಟ

    ಕನ್ನಡ ಚಿತ್ರರಂಗದಲ್ಲಿ ಆರು ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್‌ಹಿನ್ನೆಲೆಯಲ್ಲಿ ಚಿತ್ರೀಕರಣ ಬಂದ್‌ ಆಗಿದೆ.  ಇದರಿಂದ ದಿನಗೂಲಿ ನೌಕರರು ಕಂಗಾಲಾಗಿದ್ದಾರೆ. ಕಾರ್ಮಿಕರ ಸಂಕಷ್ಟಕ್ಕೆ ಸಾಕಷ್ಟು ಮಂದಿ ಬಂದಿದ್ದಾರಾದರೂ ಎಲ್ಲರೂ ಚಿತ್ರೀಕರಣ ಯಾವಾಗ ಪ್ರಾರಂಭವಾಗುತ್ತದೆ ಎಂಬುದನ್ನೇ ಕಾಯುವಂತಾಗಿದೆ.

    ಕೊರೊನಾ ವೈರಸ್‌ ಮನುಷ್ಯನ ಆರೋಗ್ಯದ ಜತೆ ಆರ್ಥಿಕ ಪರಿಸ್ಥಿತಿಗೂ ಕಾಟ ಕೊಡುತ್ತಿದ್ದು, ಚಿತ್ರರಂಗದ ಮೇಲೆ ಭಾರಿ ಪರಿಣಾಮವನ್ನೇ ಬೀರಿದೆ. ಸಿನಿ ಪಂಡಿತರ ಪ್ರಕಾರ ಈ ಸಮಯದಲ್ಲಿ ಆದ ನಷ್ಟವನ್ನು ತುಂಬಿಕೊಳ್ಳಲು ಬಹಳ ಸಮಯ ಹಿಡಿಯುತ್ತದಂತೆ.

    ಕಾರ್ಮಿಕರಿಗೆ ನೆರವಿನ ಮಹಾಪೂರ

    ಲಾಕ್‌ಡೌನ್ ಹಿನ್ನೆಲೆಯಲ್ಲಿ ರಿಲಯನ್ಸ್‌ ಫೌಂಡೇಶನ್‌, ಅಮಿತಾಬ್‌ ಬಚ್ಚನ್‌, ರಾಜ್ಯ ಸರ್ಕಾರ ಸೇರಿದಂತೆ ಸಾಕಷ್ಟು ಮಂದಿ ಸಿನಿಮಾ ಕಾರ್ಮಿಕರ ನೆರವಿಗೆ ಬಂದು ನಿಂತಿದ್ದಾರೆ. ದಿನಸಿ ಕಿಟ್‌ ವಿತರಣೆ, ಆಹಾರ ವಿತರಣೆ, ಕೂಪನ್‌ಗಳ ವಿತರಣೆಯನ್ನು ಈಗಾಗಲೇ ಕಾರ್ಮಿಕರಿಗೆ ಮಾಡಲಾಗಿದೆ.

    ಕರೋನಾ ಡೈರಿ: ದೂರವಾಗಲಿ ಕತ್ತಲು

    ಹಲವು ತಲೆಮಾರುಗಳು ಕಾಣದ ಸಮಸ್ಯೆಯೊಂದು ಅದಕ್ಕಾಗಿ ಸಿದ್ದತೆಗಳಿಲ್ಲದ ಜಗತ್ತಿನ ಮೇಲೆ ತಟ್ಟನೆ ಎರಗಿದರೆ ವಿಶ್ವದ ಎಲ್ಲ ರಾಷ್ಟ್ರಗಳೂ ಅಂಧಕಾರದಲ್ಲಿ ಮುಳುಗಿಸಿಬಿಡುತ್ತವೆ.

    ಇದೀಗ ನಾವ್ಯಾರೂ ಕಂಡು ಕೇಳರಿಯದ  ಸರ್ವವ್ಯಾಪಿ ಹೊಸ ವ್ಯಾಧಿ (ಪ್ಯಾಂಡೆಮಿಕ್) ಕೋವಿಡ್-19 ಇದೇ ರೀತಿ ಜಗತ್ತನ್ನು ಅಂಧಕಾರದಲ್ಲಿ ಮುಳುಗಿಸಿ ದೇಶಗಳು ತತ್ತರಿಸುವಂತೆ ಮಾಡಿದೆ.

    ಇಂತಹ ಸರ್ವವ್ಯಾಪಿ ಹೊಸ ವ್ಯಾಧಿಗಳು ಮನುಕುಲಕ್ಕೆ ಆಗಾಗ ಅಪ್ಪಳಿಸುತ್ತಲೇ ಬಂದಿರುವುದನ್ನು ಚರಿತ್ರೆ ದೃಢಪಡಿಸುತ್ತದೆ.ಅಂತಹ ಕೆಲವನ್ನು ನೆನಪಿಸಿ ಕೊಳ್ಳಬಹುದಾದರೆ ಕೆಳಗಿನ  ವಿವರಗಳನ್ನು ಗಮನಿಸಬಹುದು.

    ಇನ್ಫ್ಲೂಯೆಂಝ ಅಥವಾ ಸ್ಪಾನಿಷ್ ಫ್ಲೂ– 1918-1920, ಜಗತ್ತಿನಲ್ಲಿ ದಾಖಲಾಗಿರುವ ಸಾವಿನ ಸಂಖ್ಯೆ 50 ಮಿಲಿಯನ್  ಆದರೆ ವಿಶ್ವದಲ್ಲಿ ಒಟ್ಟು 500 ಮಿಲಿಯನ್ ಜನರಿಗೆ ಈ ಖಾಯಿಲೆ ಬಂತು. ಇದು ಕೂಡ ವೈರಾಣುವಿನಿಂದ ಹರಡಿದ ಖಾಯಿಲೆ.

    ಎಚ್..ವಿ– 1981 ರಿಂದ ಇದುವರೆಗೆ 32 ಮಿಲಿಯನ್ ಸಾವುಗಳು ಸಂಭವಿಸಿವೆ. ಇದಕ್ಕೆ ಲಸಿಕೆಯಿಲ್ಲವಾದರೂ ಆಂಟಿ ರೆಟ್ರೊ ವೈರಲ್ ಮದ್ದಿನಂತ ಕೆಲವು ಔಷದಗಳ ಕಾರಣ ಆರೋಗ್ಯಕರವಾಗಿ ಬಹುಕಾಲ ಬದುಕಲು ಸಾಧ್ಯವಿದೆ.ವೈರಾಣುವಿನಿಂದ ಬರುವ ಖಾಯಿಲೆ.

    ಕಾಲರಾ-ಕಳೆದ  200 ವರ್ಷಗಳಲ್ಲಿ ದಾಖಲಾದ ಏಳನೆಯ ಕಾಲರಾ 1961–1975  ದಲ್ಲಿ ಕಂಡುಬಂತು. ಎಲ್ಲ ಬಾರಿಯ ಸಾವಿನ ಸಂಖ್ಯೆ ಲೆಕ್ಕ ಸಿಗದಷ್ಟು. ಇದು ಬ್ಯಾಕ್ಟೀರಿಯದಿಂದ ಬರುವಂತ ಖಾಯಿಲೆ. ಇದಕ್ಕೆ ಚಿಕಿತ್ಸೆ ಲಭ್ಯವಿದೆ. ಲಸಿಕೆಯ ಬಳಕೆಯೂ ಇದೆ.

    ಸ್ವೈನ್ ಫ್ಲೂ/ H1N1– 2009 – 2010, ರ ನಡುವಿನ ಸಾವಿನ ಸಂಖ್ಯೆ 12,469.ಆದರೆ ಪ್ರಪಂಚದಾದ್ಯಂತ 60.8 ಮಿಲಿಯನ್ ಜನರಿಗೆ ಖಾಯಿಲೆ ಬಂತು ಮತ್ತು 274,304 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.ಇದಕ್ಕೆ ಲಸಿಕೆಯ ಲಭ್ಯತೆಯಿದೆ.

    ಸಾರ್ಸ್ /Severe acute respiratory syndrome (SARS)– 2002 ರಲ್ಲಿ ಕಂಡುಬಂದ ವೈರಾಣು ಸೋಂಕು.  ಇದರಿಂದ 774 ಸಾವುಗಳು ಸಂಭವಿಸಿದವು. 8079 ಜನರಿಗೆ ಸೋಂಕು ಹರಡಿತ್ತು.ಇದಕ್ಕೆ ಲಸಿಕೆಯಿಲ್ಲ. ಗುಣಮುಖರಾಗಲು ಸಹಾಯಕ ಚಿಕೆತ್ಸೆ ನೀಡಲಾಗುತ್ತದೆ ಅಷ್ಟೆ.

    ವಿಶ್ವ ಆರೋಗ್ಯ ಸಂಸ್ಥೆ (WHO) ಹೊಸ ವ್ಯಾಧಿಗಳೆಂದು ಪ್ರತಿಬಾರಿ ಕರೆದಿರುವಾಗಲೂ ಈ ಸೋಂಕುಗಳು ಹೊಸವೇನಲ್ಲ. ಒಂದೇ ಖಾಯಿಲೆ ಅಲೆ ಅಲೆಯಾಗಿ ಬೇರೆ ಬೇರೆ ಸಮಯದಲ್ಲಿ ಬಂದು ಹೋಗಿರುವುದೂ ಇದೆ. ಹಲವು ವೈರಾಣುಗಳನ್ನು ಹೊಸದಾಗಿ ಹೆಸರಿಸಿದರು,ಈ ವೈರಾಣುಗಳು ಹೊಸವೇನಲ್ಲ. ಹೊಸ ಹೊಸ ಮರುಹುಟ್ಟಿನೊಂದಿಗೆ ಅವುಗಳು ಭಿನ್ನ ವಿಷಮತೆಯನ್ನು ತೋರುತ್ತವೆ.ಆದೆಷ್ಟು  ಬೇಗ ಅವುಗಳ ರೂಪಾಂತರವಾಗುತ್ತದೆಂದರೆ, ಅಷ್ಟೇ ವೇಗದಲ್ಲಿ ಲಸಿಕೆ, ಚಿಕಿತ್ಸೆ ಮತ್ತು ಸವಲತ್ತುಗಳನ್ನು ಸೃಷ್ಟಿಸುವುದು ಅಸಾಧ್ಯವಾಗಿಬಿಡುತ್ತದೆ.ಇದೇ ಕಾರಣಕ್ಕೆ, ಇಂತಹ ಹಲವು ಪ್ಯಾಂಡೆಮಿಕ್ ಗಳನ್ನು ಪ್ರಪಂಚ ಮೊದಲೇ ಎದುರಿಸಿದ್ದರೂ ಮತ್ತೊಂದಕ್ಕೆ ತಯಾರಾಗಿ ಕುಳಿ ತಿರುವುದು ಸಾಧ್ಯವಿಲ್ಲ. ಕೇಳರಿಯದ ಪ್ಯಾಂಡೆಮಿಕ್ ಗಳು ಬಂದಾಗ ಇದೇ ಕಾರಣಕ್ಕೆ ಮನುಕುಲ ಮೊಣಕಾಲೂರಿ ಕುಸಿದು ಸೋಲೊಪ್ಪಿಕೊಳ್ಳಬೇಕಾಗುತ್ತದೆ.  ಇಂತಹ ಹಲವು ಖಾಯಿಲೆಗಳನ್ನು ಈಗಾಗಲೇ ನಾವು ಒಪ್ಪಿಕೊಂಡುಬಿಟ್ಟಿದ್ದೇವೆ. ಕರೋನ ಕ್ಷಿಪ್ರವಾಗಿ ಹರಡಬಲ್ಲ ಆದರೆ ಸಾವಿನ ಪ್ರಮಾಣ ಕಡಿಮೆಯಿರುವ ಇಂತದ್ದೇ ಒಂದ ಸೋಂಕು.

    ಮಾರ್ಚ್ 17 ರಂದು ಯುನೈಟೆಡ್ ಕಿಂಗ್ಡಂ ನ ಮುಕ್ಯ ವೈಜ್ಞಾನಿಕ ಸಲಹೆಗಾರ ಸರ್ ಪ್ಯಾಟ್ರಿಕ್  ವ್ಯಾಲನ್ಸ್ ಈ ವಿಚಾರವನ್ನು ಬಿಂಬಿಸುವ ಒಂದು ಸಾರ್ವಜನಿಕ ಹೇಳಿಕೆ ನೀಡಿದ. “ ಪ್ರತಿ ವರ್ಷ ಫ್ಲೂ ಸಂಭಂದಿತ ವಿಚಾರವಾಗಿ ಕನಿಷ್ಠ 8000 ಜನ ಸಾಯುತ್ತಾರೆ, ಈ ವರ್ಷ ಕರೋನಾದ ಕಾರಣ ಈ ಸಂಖ್ಯೆ 20,000 ವನ್ನು ತಲುಪಿದರೆ ಅದು ನಮ್ಮ ಅದೃಷ್ಟ” ಎಂದ.ಆದರೆ ಆಗಿನ್ನೂ ಯು.ಕೆ. ಲಾಕ್ ಡೌನ್ ಪ್ರವೇಶಿಸಿರಲಿಲ್ಲ. ಇದಾದ ಆರು ದಿನಗಳ ನಂತರ ನಿಧಾನವಾಗಿ ದೇಶ ಬಾಗಿಲು ಮುಚ್ಚಿತಾದರೂ ಈ ಲೇಖನವನ್ನು ಬರೆವ ವೇಳೆಗೆ ಆ ಸಂಖ್ಯೆ 37460 ವನ್ನೂ ಮೀರಿ ಮುಂದೆ ಸಾಗಿದೆ.

    ಮೊಟ್ಟ ಮೊದಲ ಸೋಂಕು ಜನವರಿ 31 ರಂದೇ ದಾಖಲಾದರೂ ಮಾರ್ಚ್ 23 ರವರೆಗೆ ಲಾಕ್ ಡೌನ್ ಘೋಷಿಸದೆ   ದಟ್ಟವಾಗಿ ಸೋಂಕು ಹರಡುವವರೆಗೆ ಹರ್ಡ್ ಇಮ್ಯೂನಿಟಿಯ ಸಿದ್ದಾಂತ ಎತ್ತಿ ಹಿಡಿದು ಆರ್ಥಿಕ ಹಿತಾಸಕ್ತಿಗಳನ್ನು ಕಾದುಕೊಂಡ ಸರ್ಕಾರದ ನಿಲುವು ಸರಿಯೇ ಎನ್ನುವ ಪ್ರಶ್ನೆಗಳು ಮೂಡಿವೆ. ಅವಘಡದ ಅರಿವಿದ್ದರೂ ಆ ಸಂಖ್ಯೆಯನ್ನು ಸಾಧ್ಯವಾದಷ್ಟು ಬೇಗನೆ ಹದ್ದು ಬಸ್ತಿನಲ್ಲಿಡದೆ ಸೋತ ಸರ್ಕಾರವನ್ನು ವಿರೋಧ ಪಕ್ಷಗಳು ಖಂಡಿಸಿವೆ. ಸ್ವಯಂ ರಕ್ಷಾ ಕವಚಗಳ ( PPE)ಆಮದಿನಲ್ಲಿ ಆದ ಲೋಪ ದೋಶಗಳ ಬಗ್ಗೆ ಸರ್ಕಾರವನ್ನು ಬಗ್ಗು ಬಡಿಯಲಾಗುತ್ತಿದೆ. ಮೊದಲ ಕೇಸು ಪತ್ತೆಯಾದನಂತರದ ನೂರು ದಿನಗಳ ಪುನರಾವಲೋಕನವನ್ನು ನಡೆಸಿದೆ. ಪ್ರಜಾ ಧ್ವನಿ ಮತ್ತು ಮಾಧ್ಯಮಗಳು ಬಲಿಷ್ಠವಾಗಿರುವ ಈ ದೇಶದಲ್ಲಿ ವಹಿವಾಟುಗಳ ನಿಧಾನಗತಿಯ ಮರು ಆರಂಭದ ಮಾತಿನ ಜೊತೆಗೇ ಸರ್ಕಾರದ ಪ್ರತಿ ಹೇಳಿಕೆ ಮತ್ತು ಹೆಜ್ಜೆಗಳ ಅವಲೋಕನ ಶುರುವಾಗಿದೆ.

    ಒಂದು ಲಕ್ಷಕ್ಕೂ ಹೆಚ್ಚಿನ ಸಾವಿನ ಸಂಖ್ಯೆಯನ್ನು ಮೀರಿದ ಅಮೆರಿಕಾ ಈ ಕರೋನ ಪೀಡಿತ ಸಮಯದಲ್ಲಿ ಬಹಳಷ್ಟು ಟೀಕೆಗಳಿಗೆ ತುತ್ತಾಯಿತು. ಅಧ್ಯಕ್ಷ ಡೊನಾಲ್ಡ್  ಟ್ರಂಪ್ “ಎಲ್ಲವೂ ಹದ್ದು ಬಸ್ತಿನಲ್ಲಿದೆ” ಎಂದು ಹೇಳಿದ ಹಿನ್ನೆಲೆಯಲ್ಲೇ ಟೆಸ್ಟಿಂಗ್ ಕಿಟ್ ಗಳು, ವೆಂಟಿಲೇಟರ್ಗಳು, ಪಿ.ಪಿ.ಇ. ಗಳು ದೊರಕದೆ  ತಡಮಾಡಿದ್ದು ಆತಂಕವನ್ನು ಸೃಷ್ಟಸಿತು. ಆತ ಸ್ವತಃ ಹಲವು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ನಗೆಪಾಟಲಾಗಿದ್ದೂ ಉಂಟು. ಆಸ್ಪತ್ರೆಗಳನ್ನು ಪ್ರವೇಶಿಸಿದಾಗ ಅಲ್ಲಿನ ನಿಯಮಗಳನ್ನು ಪಾಲಿಸದ ಆತ ಮತ್ತು ಆತನ ಅನುಯಾಯಿ ಮೈಕ್ ಪೆನ್ಸ್ ಇಂದಿಗೂ ಮಾಧ್ಯಮಗಳ ಟೀಕೆಗೆ ತುತ್ತಾಗಿದ್ದಾರೆ.ಅತ್ಯಂತ ತ್ವರಿತ ಗತಿಯಲ್ಲಿ ಸೋಂಕು ಹರಡಿ ಪ್ರಪಂಚದಲ್ಲಿ ಸಂಭವಿಸಿರುವ 357691 ಕ್ಕೂ ಹೆಚ್ಚಿನ ಸಾವಿನ ಸಂಖ್ಯೆಗೆ ಅಮೆರಿಕಾದ ಕೊಡುಗೆ ಭಾರೀ ಪ್ರಮಾಣದಲ್ಲಿದೆ.

    ಬಂಡವಾಳ ಶಾಹಿ ಮನೋವೃತ್ತಿಯ ಟ್ರಂಪ್ ನ ಆಡಳಿತ ಶುರುವಾಗುವ ಮುಂಚಿನಿಂದಲೂ ಅಮೆರಿಕಾದ ಆರ್ಥಿಕ ಸ್ಥಿತಿ  ಉತ್ತಮವಾಗಿದ್ದು ಅವನ ಕೈ ಹಿಡಿದಿತ್ತು. ಇದೀಗ ಆರ್ಥಿಕ ಮಟ್ಟ ಧಿಡೀರನೆ ಕುಸಿದಿದ್ದು ಜನರ ಹಾಹಾಕಾರ ಮುಗಿಲು ಮುಟ್ಟಿದೆ.  ಚೈನಾದ ಜೊತೆ ಆರ್ಥಿಕ ಯುದ್ದದಲ್ಲಿದ್ದ ಟ್ರಂಪ್ ಈಗ ಚೈನಾದ ಮೇಲೆ ಮತ್ತೂ ಕೆಂಡಕಾರಿ ಪುರಾವೆಗಳಿಲ್ಲದ ಹೇಳಿಕೆ ನೀಡಿ ತನ್ನ ನೆಲವನ್ನು ಭದ್ರವಾಗಿ ಹಿಡಿಯಲು, ವಹಿವಾಟುಗಳನ್ನು ಎಂದಿನಂತೆ ಮುಂದುವರೆಸಲು ತಹ ತಹಿಸುತ್ತಿದ್ದಾನೆ.

    ಇಷ್ಟೆಲ್ಲದರ ನಡುವೆ ಕರೋನ ವೈರಸ್ಸಿನ ಮೂಲತಾಣ ಚೀನಾ ಅತ್ಯಂತ ಕಡಿಮ ಸಾವನ್ನು ವರದಿಮಾಡಿ ಅಮೆರಿಕಾದ ಮತ್ತು ಇಡೀ ಪ್ರಪಂಚದ ಉಗ್ರ ಕಣ್ಣಿಗೆ ತೆರೆದುಕೊಂಡಿದೆ.WHO ಪ್ರಕಾರ ಮೊಟ್ಟ ಮೊದಲ ಸೋಂಕು ಪ್ರಕರಣಗಳು ಚೈನಾದ ವುಹಾನ್ ನಲ್ಲಿ ದಾಖಲಾಗಿದ್ದು 31 ನೇ ಡಿಸೆಂಬರ್ ನಂದು. ಅದಕ್ಕಿಂತಲೂ ಹಿಂದಿನಿಂದಲೇ ಈ ಖಾಯಿಲೆ ಚೈನಾದಲ್ಲಿ ಶುರುವಾಗಿತ್ತು ಎನ್ನುವ ಸಂಶಯ ಎಲ್ಲರನ್ನು ಕಾಡುತ್ತಿರುವಾಗಲೇ ಕಳೆದ ವಾರ ಎಲ್ಲರನ್ನು ಬೆಚ್ಚಿ ಬೀಳಿಸುವ ಹೊಸ ಅಂಶಗಳು ಫ್ರಾನ್ಸ್ ನ ಪ್ಯಾರಿಸ್ ಮತ್ತು ಅಮೆರಿಕಾದ ಕ್ಯಾಲಿಪೋರ್ನಿಯಾಗಳಿಂದ ಭಿತ್ತರವಾಗಿದೆ.

    ಡಿಸಂಬರ್ 27 ನೇ ತಾರೀಖು ಪ್ಯಾರಿಸ್ಸಿನಲ್ಲಿ ಅಮಿರಿಷೆ ಹ್ಯಾಮರ್ ಎಂಬ 43 ವರ್ಷದ ವ್ಯಕ್ತಿ ನ್ಯೂಮೋನಿಯದ ಲಕ್ಷಣ ತೋರಿ ಆಸ್ಪತ್ರೆಗೆ ದಾಖಲಾಗಿ ಗುಣಮುಖನಾಗಿ ಮನೆಗೆ ಹೋಗಿದ್ದ.ಈತನ ಇಬ್ಬರು ಮಕ್ಕಳು ಕೂಡ ಸ್ವಲ್ಪ ಅಸ್ವಸ್ಥರಾಗಿದ್ದರು. ಆಗ ತೆಗೆದಿದ್ದ ಮೂಗಿನ ದ್ರವವನ್ನು ಮತ್ತೆ ಪರೀಕ್ಷಿಸಿದಾಗ ಆತನಿಗೆ ಕೋವಿಡ್ ಇದ್ದದ್ದು ದೃಡಪಟ್ಟಿದೆ. ಇದೇ ರೀತಿ ಕ್ಯಾಲಿಪೋರ್ನಿಯಾದ ಆಸ್ಪತ್ರಯಲ್ಲಿ ಡಿಸೆಂಬರಿನಲ್ಲಿ ಮೃತನಾದವನ ಗಂಟಲು ದ್ರವವನ್ನು ಮರುಪರೀಕ್ಷಿಸಿದಾಗ ಅವನಿಗೂ ಕೋವಿಡ್ ಇದ್ದದ್ದು ಗೊತ್ತಾಗಿದೆ. ಜರ್ಮನಿಯೂ ತಾವು ಕೋವಿಡ್ ಲಕ್ಷಣದ ರೋಗಿಗಳನ್ನು ಡಿಸೆಂಬರಿನಲ್ಲಿ ನೋಡಿದ್ದಾಗಿ ಹೇಳಿದ್ದಾರೆ.

    ಹಾಗಾದಲ್ಲಿ ಚೀನಾದಲ್ಲಿ ಕೇಸುಗಳು ದಾಖಲಾಗುವ ತಿಂಗಳಿಗೂ ಮೊದಲೇ ಯೂರೋಪು ಮತ್ತು ಅಮೆರಿಕಾದಲ್ಲಿ ಈ ಸೋಂಕು ಹರಡುತ್ತಿತ್ತು. ಅಂದರೆ ಚೈನಾದಲ್ಲಿ ನಿಜಕ್ಕೂ ಈ ಖಾಯಿಲೆ ಯಾವಾಗ ಶುರುವಾಯಿತು?ಈ ವಿಚಾರದ ಬಗ್ಗೆ ಸರಿಯಾದ ತನಿಖೆ ನಡೆಸಿಲ್ಲವೆಂಬ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೂ ಜನರ ಆಕ್ರೋಷಕ್ಕೆ ತುತ್ತಾಗಿದೆ.

    ಭಾರತದಲ್ಲಿ ಕೂಡ ಜಗತ್ತೇ ಕಣ್ತೆರೆದು ನೋಡಬಲ್ಲಂತ ಹಲವಾರು ತಪ್ಪುಗಳು ನಡೆದಿವೆ.ಸ್ಥಳದಿಂದ ಸ್ಥಳಕ್ಕೆ ಹರಡದಿರಲಿ ಎಂದು ಧಿಡೀರನೆ ಎಲ್ಲ ಸಂಚಾರ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಿದ ಸರ್ಕಾರ ಮಿಲಿಯನ್ ಗಟ್ಟಲೆ ಗುತ್ತಿಗೆ ಕೆಲಸಗಾರರನ್ನು, ಕಾರ್ಮಿಕರನ್ನು ಬೀದಿಗೆಸೆದು ನಗ್ನವಾಯಿತು. ನೂರಾರು-ಸಾವಿರಾರು ಮೈಲಿ  ದೂರ ನಡೆದೇ ಹೊರಟ ಶ್ರಮಿಕವರ್ಗದ ಆರ್ತನಾದ ಜಗತ್ತಿನ ಕರುಳನ್ನು ಕಿವಿಚಿತು. ಕಾದು ಕೆಂಡವಾಗಿರುವ  ರಸ್ತೆಗಳಲ್ಲಿ ಯಾವ ಅಂತರವನ್ನೂ ಕಾಯ್ದುಕೊಳ್ಳಲಾಗದೆ ಹೊರಟ ಮಕ್ಕಳು, ಹೆಂಗಸರು, ಗರ್ಭಿಣಿಯರು, ವಯಸ್ಸಾದ ಕೂಲಿ ವಲಸೆಗಾರರು ಭಾರತದ ಕೋವಿಡ್ ಮುಖವಾಗಿ ಹೋಗಿದ್ದಾರೆ. ರಸ್ತೆ ಬದಿಗಳಲ್ಲಿ, ಅಪಘಾತಗಳಲ್ಲಿ, ಬಳಲಿಕೆ, ಖಾಯಿಲೆಗಳಲ್ಲಿ , ಹಸಿವಿನಿಂದ ಮನೆಸೇರುವ ಮೊದಲೇ ಮೃತರಾದವರು ಮತ್ತೊಂದು ರೀತಿಯಲ್ಲಿ ಸಾವಿನ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ. ಬೆಳೆ ಬೆಳೆದು ಅದನ್ನು ಕಾದಿಡಲಾಗದ, ವಿಲೇವಾರಿ ಮಾಡಲಾಗದ ಸ್ಥಿತಿಯಲ್ಲಿರುವ ರೈತರ ಅಳಲು ದಿನನಿತ್ಯದ್ದಾಗಿದ್ದು, ಶ್ರೀಮಂತ-ಬಡವನ ನಡುವಿರುವ  ವ್ಯತ್ಯಾಸ ಕರೋನ ಕಾಲದಲ್ಲಿ ಇನ್ನೂ ಉಲ್ಬಣಿಸಿದೆ.

    ಭಾರತದ ಪ್ರಜೆಗಳ ಸರಾ ಸರಿ ವಯಸ್ಸು 30 ವರ್ಷ, ಪಾಕಿಸ್ತಾನದ್ದು 22, ನೈಜೀರಿಯಾದ್ದು 19 ಆದರೆ ಇಟಲಿಯದ್ದು 47 ವರ್ಷಗಳು.ಈ ಕಾರಣ ಸಾಮಾನ್ಯವಾಗಿ ವಯಸ್ಸಾದವರನ್ನು ಹೆಚ್ಚು ಕೊಲ್ಲುವ ಕರೋನಾ, ನಮ್ಮ ದೇಶದಲ್ಲಿ ಕಡಿಮೆ ಕಂಡುಬಂದಿದೆಯೇ ಎನ್ನುವ ವಿಶ್ಲೇಷಣೆ ನಡೆದಿದೆ.

     UK,USA ಮತ್ತಿತರ ಪಾಶ್ಚಾತ್ಯ ದೇಶಗಳಲ್ಲಿ ಸರಾಸರಿ ವಯಸ್ಸು ಇನ್ನೂ ಹೆಚ್ಚಿರುವ ಕಾರಣ, ಅತಿ ಹೆಚ್ಚು ಟೆಸ್ಟ್ ಗಳನ್ನು ಮಾಡುತ್ತಿರುವ ಮತ್ತು ಪಾರದರ್ಶಕ ವರದಿಗಳ ಕಾರಣ ಸಾವಿನ ಸಂಖ್ಯೆ ಹೆಚ್ಚು ಕೇಳಿ ಬಂದಿದೆಯೇ ಎಂಬ ಸಂವಾದಗಳು ನಡೆಯುತ್ತಿವೆ

    ಜಾಗತೀಕರಣವಾಗಿ ಜಗತ್ತಿನ ಜನರೆಲ್ಲ ದೇಶದಿಂದ ದೇಶಕ್ಕೆ ಓಡಾಡುವುದನ್ನು ಸಾಮಾನ್ಯಮಾಡಿಕೊಂಡ ಈ ಕಾಲದಲ್ಲಿ ಅದೆಷ್ಟು ಬೇಗನೆ ಸೋಂಕೊಂದು ಹರಡಬಲ್ಲದು ಎಂಬ ವಾಸ್ತವ ಜಗತ್ತನ್ನು ಬೆಚ್ಚಿಬೀಳಿಸಿದೆ. ಈ ಕರೋನಾ ಹರಡಿದ ಕತ್ತಲಲ್ಲಿ ತಪ್ಪು ಮಾಡದ ದೇಶಗಳಿಲ್ಲ. ಸಮಸ್ಯೆಯೊಂದರಿಂದ ಹೊರಬರುವ ದಾರಿಯಿಲ್ಲದಿರುವಾಗ ಪ್ರತಿದೇಶ ತಾನು ಮಾಡಿದ ತಪ್ಪುಗಳನ್ನು ತಡವಿನೋಡಿಕೊಳ್ಳುವಂತಾಗಿದೆ.

    ಹಿಂದೆಂದೂ ಕಂಡರಿಯದ ಕರೋನ ಕತ್ತಲಿನಿಂದ ಮುಕ್ತರಾಗಲು ಪ್ರತಿದೇಶಗಳು ಅಳವಡಿಸಿಕೊಂಡ ತಂತ್ರಗಳು ಭಿನ್ನವಾದರೂ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಎಡವಿ ಬಿದ್ದಿದ್ದಾರೆ. ಸಾವಿನ ನೆರಳಿನ್ನೂ ಕರಗದಿರುವಾಗ ಎರಡನೆಯ ಅಲೆಯ ಆತಂಕದಲ್ಲಿಮುಂದಿನ ದಿನಗಳನ್ನು ಎದುರುನೋಡುತ್ತಿದ್ದಾರೆ. ಸರಕಾರಗಳು ತಾವು ಮಾಡುವ ಕೆಲಸವನ್ನು ಮಾಡುತ್ತಿವೆ. ಹಾಗೆ ನಾವು ನಾಗರಿಕರು ಸರಕಾರ ಹೇಳಿದ ಮುನ್ನೆಚ್ಚರಿಕೆಗನ್ನು ಪಾಲಿಸಿ ಬಹು ಬೇಗ ಕತ್ತಲೆಯಿಂದ ಬೆಳಕಿಗೆ ಬರೋಣ.

    .

    error: Content is protected !!