22 C
Karnataka
Monday, November 25, 2024
    Home Blog Page 21

    ಮಂಗಳವಾರದ ಬದಲು ಸೋಮವಾರವೇ ರಂಜಾನ್ ಹಬ್ಬದ ರಜೆ

    BENGALURU APR 30

    ಸಾರ್ವತ್ರಿಕ ರಜೆ ಪಟ್ಟಿಯಲ್ಲಿ ರಂಜಾನ್ ಹಬ್ಬಕ್ಕೆ ಮೇ 3ರಂದು ರಜೆ ನೀಡಲಾಗಿತ್ತು. ಆದರೆ ಇದೀಗ ಮೂನ್ ಕಮಿಟಿ ಮೇ 2ರಂದು ರಂಜಾನ್ ಆಚರಿಸಲು ತೀರ್ಮಾನಿಸಿದ್ದರಿಂದ ರಾಜ್ಯ ಸರ್ಕಾರ ರಜೆಯಲ್ಲಿ ಬದಲಾವಣೆ ಮಾಡಲಾಗಿದೆ. ಮೇ3ರ ಬದಲಿಗೆ ಮೇ 2ರಂದು ರಜೆ ಘೋಷಣೆ ಮಾಡಲಾಗಿದೆ. ನೆಗೋಷಿಯಬಲ್ ಇನ್ಸ್ಟ್ರಮೆಂಟ್ ಆಕ್ಟ್ ಪ್ರಕಾರವೂ ಈ ರಜೆ ಅನ್ವಯವಾಗಲಿದೆ.

    ಕಾರ್ಮಿಕರ ದಿನವಾದ ಮೇ1, ರಂಜಾನ್ ಮೇ 2 ಹಾಗೂ ಬಸವಜಯಂತಿಗೆ ಮೇ 3ರಂದು ರಜೆ ಇರುವುದರಿಂದ ಸರಕಾರಿ ನೌಕರರಿಗೆ ಒಟ್ಟಿಗೆ ಮೂರು ದಿನ ರಜೆ ಸಿಗಲಿದೆ.

    Centre has agreed for procurement of additional 3 lakh metric tons of Ragi:ಮೂರು ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ರಾಗಿ ಖರೀದಿಗೆ ಕೇಂದ್ರ ಸರ್ಕಾರದ ಒಪ್ಪಿಗೆ

    NEW DELHI APR 30
    ಮೂರು ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ರಾಗಿ ಖರೀದಿಗೆ ಕೇಂದ್ರ ಸರ್ಕಾರದ ಒಪ್ಪಿಗೆ ನೀಡಿದೆ. ಈ ಮೂಲಕ ರಾಗಿ ಬೆಳೆಗಾರರ ದೊಡ್ಡ ಸಂಕಷ್ಟ ಬಗೆಹರಿಸಿದಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ನವದೆಹಲಿಯಲ್ಲಿ ಮುಖ್ಯಮಂತ್ರಿಗಳ ಹಾಗೂ ಸಿಜೆಗಳ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

    ರಾಜ್ಯದ ಐದಾರು ಜಿಲ್ಲೆಗಳಲ್ಲಿ ರಾಗಿ ಬೆಳೆದ ರೈತರಿಗೆ ಬೆಲೆ ಸಿಗಬೇಕೆಂಬ ಕಾರಣದಿಂದ ಮೊದಲು 2 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ ಮಾಡಲಾಯಿತು. ಪುನ: ಬೇಡಿಕೆ ಬಂದ ಹಿನ್ನೆಲೆಯಲ್ಲಿ 485 ಕೋಟಿ ರೂ.ಗಳನ್ನು ಮಂಜೂರು ಮಾಡಿ 1.14 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಲಾಯಿತು. ರಾಗಿ ಹೆಚ್ಚು ಬೆಳೆದ್ದದ್ದರಿಂದ ಖರೀದಿಗೆ ರೈತರ ಒತ್ತಾಸೆಯ ಮೇರೆಗೆ ಕೇಂದ್ರ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದರಿಂದ ರಾಗಿ ಖರೀದಿಯನ್ನು ಪ್ರಾರಂಭಿಸಲಾಗುವುದು. ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ಆಹಾರ ಸಚಿವ ಪಿಯೂಶ್ ಗೋಯಲ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

    ಬಿರುಸಾಗಿ ಆಡಳಿತ ಮಾಡಿದರೆ ಡಿ.ಕೆ.ಶಿ ಅವರಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ:

    “ನಾನು ಬಹಳ ಸರಳವಾಗಿ ಆಡಳಿತ ಮಾಡಿದಾಗಲೇ ಡಿ.ಕೆ ಶಿವಕುಮಾರ್ ಅವರಿಗೆ ಇಷ್ಟು ತೊಂದರೆಯಾಗಿದೆ. ಇನ್ನು ಬಿರುಸಾಗಿ ಆಡಳಿತ ಮಾಡಿದರೆ ಅವರಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ನವದೆಹಲಿಯಲ್ಲಿ ಮುಖ್ಯಮಂತ್ರಿಗಳ ಹಾಗೂ ಸಿಜೆಗಳ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

    ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ ನನ್ನ ಆಡಳಿತದಲ್ಲಿ ಅವರಿಗೆ ಸಾಕಷ್ಟು ತೊಂದರೆಯಾಗಿದೆ. ಏನೇನೂ ಪ್ರಯತ್ನಗಳನ್ನು ಮಾಡಿದರು. ಯಾವುದೂ ಯಶಸ್ವಿಯಾಗಲಿಲ್ಲ ಎಂದರು.

    ಕಾಂಗ್ರೆಸ್‍ನವರು ಹಿಟ್ ಅಂಡ್ ರನ್ ಮಾಡಲಾಗುವುದಿಲ್ಲ:

    ಪಿಎಸ್‍ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ತನಿಖೆಗೆ ಒಂದು ವ್ಯವಸ್ಥೆ ಇದೆ. ಕಾನೂನಿನ ಪ್ರಕಾರವೇ ಆಗಬೇಕು. ನಿಮಗೆ ಅದನ್ನು ಎದುರಿಸಲು ತಾಕತ್ತು ಇಲ್ಲ ಎಂದರೆ ಈ ರೀತಿ ದಿಕ್ಕು ಬದಲಾಯಿಸಬಾರದು. ನೀವೇನೋ ಮಾಹಿತಿಯನ್ನು ಹೇಳಿದ್ದೀರಿ. ಅದರ ಪೂರ್ಣ ಮಾಹಿತಿಯನ್ನು ಕೊಡಿ ಎಂದಷ್ಟೇ ಕೇಳಿದ್ದೇವೆ. ಅದಕ್ಕಾಗಿ ಇಷ್ಟು ವಾದವಿವಾದ ಮಾಡುವ ಅಗತ್ಯವಿಲ್ಲ. ತನಿಖೆಯಲ್ಲಿ ಯಾರ ಹೆಸರು ಬಂದರೂ ತನಿಖೆ ಮಾಡಬೇಕಾಗುತ್ತದೆ. ಹಿಂದೂ ಕೂಡ ಈ ರೀತಿಯಾಗಿದೆ. ಆದ್ದರಿಂದ ಕಾಂಗ್ರೆಸ್‍ನವರು ಹಿಟ್ ಅಂಡ್ ರನ್ ಮಾಡಲಾಗುವುದಿಲ್ಲ ಎಂದರು.

    ಬದಲಾವಣೆ ಹಾಗೂ ಸುಧಾರಣೆ ತರಬೇಕೆಂದು ಸೂಚನೆ
    ನೇಮಕಾತಿ ಪ್ರಕ್ರಿಯೆಯಲ್ಲಿ ಆಗಿರುವ ಅಕ್ರಮ ಸರ್ಕಾರದ ವೈಫಲ್ಯ ಅಲ್ಲ. ಹಿಂದೂ ಕೂಡ ಯು.ಪಿ.ಎಸ್.ಸಿ ಮಾದರಿಯಲ್ಲೇ ನೇಮಕಾತಿ ಆಗುತ್ತಾ ಬಂದಿದೆ. ಮೊದಲ ಬಾರಿಗೆ ಬ್ಲೂಟೂತ್ ತಂತ್ರಜ್ಞಾನವನ್ನು ಈ ರೀತಿ ಕುಲಬುರಗಿಯ ಶಿಕ್ಷಣ ಸಂಸ್ಥೆಯಲ್ಲಿ ಆಗಿದೆ. ಚಾಪೆ ಕೆಳಗೆ ಹೋಗುವಂಥವರಿಗೆ ರಂಗೋಲಿ ಕೆಳಗೆ ಹೋಗುವ ಪರೀಕ್ಷಾ ವ್ಯವಸ್ಥೆಯನ್ನು ತರುವ ಅವಶ್ಯಕತೆ ಇದೆ. ಹಿಂದೂ ಕೂಡ ಬೇಕಾದಷ್ಟು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪೊಲೀಸ್ ಆಯ್ಕೆಯಲ್ಲಿಯೂ ಎರಡು ಮೂರು ಬಾರಿ ಮುಂದೂಡಿರುವ ಪ್ರಕರಣಗಳೂ ಆಗಿವೆ. ಪರೀಕ್ಷಾ ವಿಧಾನದಲ್ಲಿ ಬದಲಾವಣೆ ಹಾಗೂ ಸುಧಾರಣೆ ತರಬೇಕು ಎಂದು ಸೂಚನೆ ನೀಡಿದ್ದೇನೆ. ಯಾವುದೇ ಅಕ್ರಮಗಳು ನಡೆಯದಂತೆ ಮರುಪರೀಕ್ಷೆಯನ್ನು ಅತಿಶೀಘ್ರದಲ್ಲಿಯೇ ಮಾಡಬೇಕೆಂದು ಸೂಚಿಸಲಾಗಿದೆ.

    ಆಧಾರರಹಿತ ಆರೋಪಗಳು

    ವಿರೋಧಪಕ್ಷ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಇದು ಪೂರ್ಣ ಆಧಾರರಹಿತ. ಇಂಥ ಆಧಾರರಹಿತ ಆರೋಪಗಳನ್ನು ಮಾಡಿ ತನಿಖೆಯ ದಿಕ್ಕುತಪ್ಪಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಸಂಪೂರ್ನವಾಗಿ ಎಫ್.ಎಸ್.ಎಲ್ ವರದಿ ಬಂದಿದೆ. ಅದರ ಆಧಾರದ ಮೇಲೆ ದಾಳಿಯಾಗಿದೆ. ಯಾವುದೇ ಪಕ್ಷವಿರಲಿ, ಯಾರೇ ಆಗಲಿ ನಿಷ್ಪಕ್ಷಪಾತ ತನಿಖೆಯಾಗುತ್ತಿದೆ. ಇದನ್ನು ಅವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಅವರ ಬುಡಕ್ಕೆ ನಿರು ಬಂದಾಗ ಹೀಗೆಲ್ಲ ಮಾತನಾಡುತ್ತಾರೆ. ಪಿಯುಸಿ, ಎಸ್.ಎಸ್.ಎಲ್ ಸಿ ಅಥವಾ ಯಾವುದೇ ಪರೀಕ್ಷೆ ಇರಲಿ ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಮರುಪರೀಕ್ಷೆ ಆಗಿದೆ. ಆ ನೀತಿ ಇಂದಿನದಲ್ಲ. 30-40 ವರ್ಷಗಳಿಂದ ಇದೆ. ಅದನ್ನೇ ಮಾಡಿದ್ದೇವೆ. ಹೊಸ ಪರೀಕ್ಷೆ ಅಂದರೆ ಅಧಿಸೂಚನೆ ರದ್ದು ಮಾಡಿಲ್ಲ. ಯಾರಿಗೆ ಅವಕಾಶ ಸಿಕ್ಕಿತ್ತೊ ಅವರಿಗಷ್ಟೇ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

    ದೇಶದ ಸಮಗ್ರ ಅಭಿವೃದ್ಧಿಗೆ ಎನ್ಇಪಿ

    ರಾಷ್ಟೀಯ ಶಿಕ್ಷಣ ನೀತಿ- 2020 ಅನುಷ್ಠಾನದ ರಾಷ್ಟ್ರೀಯ ಸಮ್ಮೇಳನ

    BELAGAAVI APR 30

    ರಾಷ್ಟೀಯ ಶಿಕ್ಷಣ ನೀತಿಯಿಂದ ಭಾರತ ಜ್ಞಾನ ಜಗತ್ತಿನ ಬಲಶಾಲಿ ರಾಷ್ಟ್ರವಾಗಲಿದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರಿಂದ, ಸಮತೆಯುಳ್ಳ ಮತ್ತು ಚಲನಶೀಲ ಜ್ಞಾನ ಸಮಾಜದ ಪರಿವರ್ತನೆಗೆ ಹಾಗೂ ದೇಶದ ಸಮಗ್ರ ಅಭಿವೃದ್ಧಿಗೆ ಎನ್ಇಪಿ ಅವಶ್ಯಕ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ತಿಳಿಸಿದರು.

    ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶನಿವಾರ (ಏ.30) ನಡೆದ “ರಾಷ್ಟೀಯ ಶಿಕ್ಷಣ ನೀತಿ- 2020 ಅನುಷ್ಠಾನದ ರಾಷ್ಟ್ರೀಯ ಸಮ್ಮೇಳನ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಪ್ರಸ್ತುತ ಕಾಲಘಟ್ಟದಲ್ಲಿ ವಿಶ್ವದ ಅನೇಕ ದೇಶಗಳು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಳವಣಿಗೆ ಹೊಂದಿವೆ ಇದಕ್ಕೆ ಅನುಗುಣವಾಗಿ ಬಲಿಷ್ಠ ಭಾರತ ನಿರ್ಮಾಣಕ್ಕೆ ರಾಷ್ಟೀಯ ಶಿಕ್ಷಣ ನೀತಿ ಅವಷ್ಯವಿದ್ದು, ದೇಶದಲ್ಲಿ 34 ವರ್ಷಗಳ ನಂತರ ಈ ನೀತಿಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

    ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ವೃತ್ತಿಪರ ಬೆಳವಣಿಗೆ ಮೂಲಕ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ದಿ ಹೆಚ್ಚಿಸುವುದು ಈ ಶೈಕ್ಷಣಿಕ ಪದ್ಧತಿಯ ಉದ್ದೇಶವಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನಂತರ ಸಲೀಸಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುಬಹುದು ಎಂದು ಹೇಳಿದರು.

    ಮಾನವ ಸಂಪನ್ಮೂಲ ಶಕ್ತಿ ಸದ್ಬಳಕೆ:

    ಸ್ವಾಂತಂತ್ರ್ಯ ನಂತರ ನೂತನ ರಾಷ್ಟೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸುವುದು ಬಹಳ ಸವಾಲಿನ ಕೆಲಸವಾಗಿತ್ತು. ಆದರೆ ಮುಂಬರುವ ದಿನಗಳಲ್ಲಿ ಈ ಶಿಕ್ಷಣ ನೀತಿ ದೇಶದ ಅಭಿೃದ್ಧಿಗೆ ಅನುಕೂಲವಾಗಲಿದೆ. ಭವಿಷ್ಯದಲ್ಲಿ ಸಮಾಜ ಬದಲಾವಣೆಯ ಉತ್ತಮ ಶಿಕ್ಷಣ ನೀತಿ ಇದಾಗಲಿದೆ ಎಂದು ಹೇಳಿದರು.

    ವಿದ್ಯಾರ್ಥಿಗಳು, ಯುವಕರು ಉದ್ಯೋಗ ಅರಸಿ ಹೋಗದೆ ಕೌಶಲ್ಯಾಭಿವೃದ್ಧಿಯಿಂದ ಸ್ವಯಂ ಉದ್ಯೋಗ ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಬೇಕು. ದೇಶದಲ್ಲಿನ ಮಾನವ ಸಂಪನ್ಮೂಲನ ಶಕ್ತಿ ಸದ್ಬಳಕೆ ಮಾಡಿಕೊಂಡು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬದಲಾವಣೆ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎನ್ಇಪಿ ಸಹಾಯ ಆಗಲಿದೆ ಎಂದು ತಿಳಿಸಿದರು.

    ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿಸಲಿದೆ:

    ಹೊಸ ರಾಷ್ಟೀಯ ಶಿಕ್ಷಣ ನೀತಿ ಪರಿಣಾಮಕಾರಿಯಾಗಿದ್ದು, ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸಿ, ಕಲೆ, ವಾಣಿಜ್ಯ ಹಾಗೂ ತಂತ್ರಜ್ಞಾನ ಸೇರಿದಂತೆ ವಿವಿಧ ವಿಭಾಗದ ವಿದ್ಯಾರ್ಥಿಗಳ ಜ್ಞಾನ ಮಟ್ಟವನ್ನು ಸುಧಾರಿಸಲಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯಲಿದೆ ಎಂದು ಸಚಿವ ಅಶ್ವಥ್ ನಾರಾಯಣ ತಿಳಿಸಿದರು.

    ಈ ವೇಳೆ ಮಾತನಾಡಿದ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಭಾರತದಲ್ಲಿ 34 ವರ್ಷಗಳ ನಂತರ, ಉತ್ತಮ ಮಾದರಿಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಶೈಕ್ಷಣಿಕ ಬೆಳವಣಿಯಿಂದ ಸಮಾಜದ ಅಭಿವೃದ್ಧಿ ಜೊತೆಗೆ ಬಲಿಷ್ಠ ಮಾನವ ಸಂಪನ್ಮೂಲ ಶಕ್ತಿ ನಿರ್ಮಾಣಕ್ಕೆ ಈ ಶಿಕ್ಷಣ ನೀತಿ ಸದ್ಬಳಕೆಯಾಗಲಿದೆ ಎಂದು ತಿಳಿಸಿದರು.

    ಹೊಸ ಶಿಕ್ಷಣ ನೀತಿಯಿಂದ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವ ಬೆಳವಣಿಗೆ ಆಗಲಿದೆ. ಸಮಾಜದ ಅಭಿವೃದ್ಧಿಗೆ ಬೇಕಾಗುವ ಉತ್ತಮ ಗುಣಮಟ್ಟದ ಶಿಕ್ಷಣ ನೀತಿ ಇದಾಗಿದ್ದು, ವಿದ್ಯಾರ್ಥಿಗಳು ಕೇವಲ ಪದವಿ ಪ್ರಮಾಣ ಪತ್ರ ಪಡೆಯುವುದು ಮಾತ್ರವಲ್ಲದೆ ವ್ಯಕ್ತಿತ್ವ ವಿಕಸನ ಹೊಂದಬಹುದು ಎಂದು ಸಚಿವ ಬಿ.ಸಿ ನಾಗೇಶ್ ತಿಳಿಸಿದರು.

    ಈ ಸಂದರ್ಭದಲ್ಲಿ ಹೊಸ ಶಿಕ್ಷಣ ಪಠ್ಯಗಳ ಅನುಷ್ಠಾನದ ಕುರಿತು ವಾರ್ಷಿಕ ಕ್ರಮಗಳ ಕೈಪಿಡಿ ಹಾಗೂ ಕರ್ನಾಟಕ ಉತ್ತರ ಪ್ರಾಂತ್ಯದ ಸಮಷ್ಟಿ ವಾರ್ಷಿಕ ಪುಸ್ತಕ ಬಿಡುಗಡೆ ಮಾಡಲಾಯಿತು.

    ಡಾ. ಮನಮೋಹನ ವೈದ್ಯ, ಭಾರತೀಯ ಶಿಕ್ಷಣ ಮಂಡಲದ ರಾಷ್ಟೀಯ ಅಧ್ಯಕ್ಷರಾದ ಪ್ರೊ. ಸಚ್ಚಿದಾನಂದ ಜೋಶಿ, ಭಾರತೀಯ ಶಿಕ್ಷಣ ಮಂಡಲದ ರಾಷ್ಟೀಯ ಸಹ ಸಂಘಟನಾ ಕಾರ್ಯದರ್ಶಿ ಶಂಕರಾನಂದ, ಉತ್ತರ ಕರ್ನಾಟಕ ಭಾಗದ ಭಾರತೀಯ ಶಿಕ್ಷಣ ಮಂಡಲದ ಅಧ್ಯಕ್ಷರಾದ ಡಾ. ಸತೀಶ ಜಿಗಜಿನ್ನಿ, ವಿಟಿಯು ಕುಲಪತಿಗಳಾದ ಪ್ರೊ. ಕರಿಸಿದ್ದಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

    ಕೋವಿಡ್ 4ನೇ ಅಲೆ ಬಂದಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    HUBBALLI APR 28
    ರಾಜ್ಯದಲ್ಲಿ ಕೋವಿಡ್ 4ನೇ ಅಲೆ ಬಂದಿಲ್ಲ. ಏಪ್ರಿಲ್ 9 ರ ನಂತರ ಸ್ವಲ್ಪ ಪ್ರಮಾಣದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವದುದನ್ನು ಗಮನಿಸಲಾಗಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

    ಯೂರೋಪ್ ಮತ್ತು ಇತರೆ ರಾಷ್ಟ್ರಗಳಲ್ಲಿ ಲಸಿಕೆ ಪಡೆಯದವರಿಂದ ಪುನಃ ಪ್ರಕರಣಗಳು ಉಲ್ಬಣವಾಗಿರುವುದು ಕಂಡುಬಂದಿದೆ. ರಾಜ್ಯದಲ್ಲಿ ಎರಡೂ ಡೋಸ್ ಗಳನ್ನು 98% ರಷ್ಟು ಜನ ಲಸಿಕೆ ಪಡೆದಿದ್ದಾರೆ. ಮುನ್ನೆಚ್ಚರಿಕಾ ಡೋಸ್ ಗಳನ್ನು ಇನ್ನಷ್ಟು ಜನಕ್ಕೆ ನೀಡುವ ಬಗ್ಗೆ ಗಮನ ಹರಿಸಲಾಗುವುದು ಎಂದರು.

    ಲಸಿಕೆಗೆ ಮಹತ್ವ
    ಮೊನ್ನೆ ಕೇಂದ್ರ ಸರ್ಕಾರ 6ರಿಂದ 12 ವರ್ಷದ ಮಕ್ಕಳಿಗೆ ಲಸಿಕೆ ಹಾಕಲು ಅನುಮೋದನೆ ನೀಡಿದೆ. ಅದನ್ನು ಪ್ರಾಥಮಿಕ ಶಾಲೆಗಳಲ್ಲಿ ಪ್ರಾರಂಭಿಸುವ ತೀರ್ಮಾನ ಮಾಡಲಾಗಿದೆ. ಲಸಿಕೆ ಹಾಕಲು ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಕೋವಿಡ್ ಸೂಕ್ತ ನಡವಳಿಕೆ ಪಾಲಿಸಲು ಸೂಚನೆ ನೀಡಲಾಗಿದೆ. ಪರೀಕ್ಷೆ ಗಳನ್ನು ಹೆಚ್ಚಿಸಲಾಗುತ್ತಿದೆ.

    ವಿಶೇಷವಾಗಿ ಐ.ಎಲ್.ಐ ಮತ್ತು SARI ಪ್ರಕರಣಗಳು ಆಸ್ಪತ್ರೆಗಳಿಗೆ ದಾಖಲಾಗಿರುವವರ ಪರೀಕ್ಷೆ ಮಾಡಿ , ಅವರಲ್ಲಿ ಪಾಸಿಟಿವ್ ಬಂದರೆ, ಅದನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗುವುದು. ಇದನ್ನು ಮಾಡಿದರೆ ಬೇರೆ ಬೇರೆ ರೂಪಾಂತರ ತಳಿಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಈಗಾಗಲೇ 8500 ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ಗಳನ್ನು ರಾಜ್ಯದಲ್ಲಿ ಮಾಡಲಾಗಿದೆ. 4 ಸಾವಿರ ಬೆಂಗಳೂರಿನಲ್ಲಿ ಹಾಗೂ ಇನ್ನಿತರೆ ಕಡೆಗಳಲ್ಲಿ 4 ಸಾವಿರ ಪರೀಕ್ಷೆಗಳನ್ನು ಮಾಡಲಾಗಿದೆ ಎಂದರು.

    ಕೋವಿಡ್ ಅಲ್ಪಪ್ರಮಾಣದಲ್ಲಿ ಹೆಚ್ಚಳ ಆದರೆ ಗಾಬರಿಯಾಗುವ ಅಗತ್ಯವಿಲ್ಲ

    VIJAYAPURA APR 26

    ರಾಜ್ಯದಲ್ಲಿ ಅಲ್ಪಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ. ಕೋವಿಡ್ ನಿಯಂತ್ರಣಕ್ಕೆ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಅವರು ತಿಳಿಸಿದರು.

    ಅವರು ಇಂದು ವಿಜಯಪುರದ ಕೊಡಗಾನೂರ ಹೆಲಿಪ್ಯಾಡ್‍ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

    ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವೊಡ್ ಸ್ಥಿತಿಗತಿ ಬಗ್ಗೆ ವೀಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಅವರಿಗೆ ವಿವರಿಸಲಾಗುವುದು ಎಂದು ಅವರು ಹೇಳಿದರು.

    ವಿಮಾನ ನಿಲ್ದಾಣಗಳಲ್ಲಿ ಹಾಗೂ ವಿಶೇಷವಾಗಿ ಮಹಾರಾಷ್ಟ್ರ ಮತ್ತು ಕೇರಳ ಗಡಿಭಾಗಗಳಲ್ಲಿ ತಪಾಸಣೆ ಮತ್ತು ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಇತ್ತೀಚೆಗೆ ಎಂಡು ದೇಶಗಳಲ್ಲಿ ಕರೋನಾ ಸಾಂಕ್ರಾಮಿಕ ಉಲ್ಬಣವಾಗಿದೆ. ಭಾರತದ ನೆರೆಯ ದೇಶಗಳಾದ ಥೈಲ್ಯಾಂಡ್, ಇಂಡೋನೇಷ್ಯಾ, ಚೈನಾ ದೇಶಗಳಲ್ಲಿಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲ್ಲಿಯೂ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಪ್ರಧಾನಮಂತ್ರಿಗಳು ಮುಂಜಾಗ್ರತೆ ವಹಿಸಿ ಎಲ್ಲ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ನಿನ್ನೆ ನಡೆದಿರುವ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ಸೇರಿ ಕೆಲವು ಕರೋನಾ ಸೂಕ್ತ ನಡವಳಿಕೆಗಳನ್ನು ಪುನ: ಜಾರಿಗೊಳಿಸಲು ಸೂಚಿಸಲಾಗಿದೆ‌. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಎಲ್ಲರೂ ಇದನ್ನು ಪಾಲಿಸಿದರೆ ಉತ್ತಮ. ಇದುವರೆಗೂ ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಆದರೂ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು‌.

    2017ನೇ ಸಾಲಿನ ಚಲನ ಚಿತ್ರ ಪ್ರಶಸ್ತಿ ಪ್ರದಾನ

    BENGALURU APR 24

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಡಾ. ರಾಜ್ ಕುಮಾರ್ ಅವರ ಜನ್ಮ ದಿನಾಚರಣೆ ಹಾಗೂ 2017 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿದರು.

    ಚಿತ್ರನಟಿ ಲಕ್ಷ್ಮೀ ಅವರಿಗೆ ಜೀವಮಾನ ಸಾಧನೆಗೆ ಡಾ. ರಾಜಕುಮಾರ ಪ್ರಶಸ್ತಿ ಪ್ರದಾನ ಮಾಡಿದರು. ಖ್ಯಾತ ನಿರ್ದೇಶಕ ಎಸ್ ನಾರಾಯಣ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪ್ರದಾನ ಮಾಡಿದರು. ವಿಷ್ಣು ವರ್ಧನ ಪ್ರಶಸ್ತಿ ದಿ. ಜಿ ಎಂ ಲಕ್ಷ್ಮೀಪತಿ ಅವರಿಗೆ ಘೋಷಿಸಲಾಯಿತು. ಪ್ರಶಸ್ತಿಯನ್ನು ಲಕ್ಷ್ಮೀಪತಿ ಅವರ ಪರವಾಗಿ ಅವರ ಪುತ್ರ ರಾಮ್ ಪ್ರಸಾದ ಅವರು ಸ್ವೀಕರಿಸಿದರು.

    ಇನ್ನುಳಿದಂತೆ ೨೦೧೭ ನೇ ಸಾಲಿನ ಕನ್ಮಡ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಮ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಆಯುಕ್ತ ಡಾ. ಪಿ ಎಸ್ ಹರ್ಷ, ಚಿನ್ನೇಗೌಡ ಮತ್ತು ಇತರರು ಉಪಸ್ಥಿತರಿದ್ದರು.

    Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಬೇಡ ಎಂದು ಸಿಎಂ ಗೆ ಬಿಎಸ್ ವೈ ಪತ್ರ

    BENGALURU APR 24

    ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರನ್ನು ಇಡುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ BSY ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.

    ಮೊನ್ನೆ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ನಿಲ್ದಾಣಕ್ಕೆ ಬಿಎಸ್ ವೈ ಅವರ ಹೆಸರನ್ನು ಇಡುವ ಬಗ್ಗೆ ಸಚಿವ ಸಂಪುಟ ತೀರ್ಮಾನ ಮಾಡಿದೆ ಎಂದು ಹೇಳಿದ್ದರು.

    ಈ ಬಗ್ಗೆ ಬಿಎಸ್ ವೈ ಬರೆದಿರುಪ ಪತ್ರದ ಪೂರ್ಣ ಪಾಠ ಇಲ್ಲಿದೆ.

    Covid threat : ಅಲ್ಪ ಪ್ರಮಾಣದಲ್ಲಿ ಮತ್ತೆ ಹೆಚ್ಚಾಗುತ್ತಿರುವ ಸೋಂಕು:ಸಿಎಂ ಗಳ ಜೊತೆ 27 ರಂದು ಪ್ರಧಾನಮಂತ್ರಿ ವಿಡಿಯೋ ಸಂವಾದ

    HUBBALLI APR 24

    ಏಪ್ರಿಲ್ 27 ರಂದು ಪ್ರಧಾನ ಮಂತ್ರಿ ರಾಷ್ಟ್ರದ ಕೋವಿಡ್ ಪರಿಸ್ಥಿತಿ ಹಾಗೂ ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಕರೆದಿದ್ದಾರೆ ಎಂದು ಮುಖ್ಯಮಂತ್ರಿ. ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಹುಬ್ಬಳ್ಳಿಯ ವಿಮಾನನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.ಕೋವಿಡ್ ಬಗ್ಗೆ ಜಾಗೃತರಾಗಿರುವಂತೆ ಕೇಂದ್ರ ಸರ್ಕಾರ ಈಗಾಗಲೇ ಸೂಚನೆಯನ್ನು ಕೊಟ್ಟಿದೆ. ಕಳೆದ 8-10 ದಿನಗಳಿಂದ ಅಲ್ಪಮಟ್ಟದ ಪ್ರಕರಣಗಳು ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕಂಡುಬಂದಿದೆ. ಮೂರು ಅಲೆಗಳನ್ನು ನಿಭಾಯಿಸಿರುವ ಅನುಭವದಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ ಎನ್ನುವ ಮಾತನ್ನು ಪರಿಣಿತರು ಹೇಳಿದ್ದಾರೆ. ಈಗಾಗಲೇ ಆರೋಗ್ಯ ಸಚಿವರೂ ಹಲವಾರು ಸೂಚನೆಗಳನ್ನು ನೀಡಿದ್ದಾರೆ. ಏಪ್ರಿಲ್ 27 ರಂದು ಪ್ರಧಾನ ಮಂತ್ರಿಗಳ ವೀಡಿಯೋ ಸಂವಾದದ ನಂತರ ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡುತ್ತೇವೆ ಎಂದರು.

    ಜನ ಜಾಗೃತರಾಗಿರಬೇಕು
    ಜನರು ಜಾಗೃತರಾಗಿರುವುದು ಬಹಳ ಮುಖ್ಯ. ಕೋವಿಡ್ 2 ನೇ ಅಲೆ ಬಂದಾಗ ಅತ್ಯಂತ ಕಡಿಮೆ ಸಂಖ್ಯೆ ಯಲ್ಲಿ ಪ್ರಾರಂಭವಾಗಿ ನಂತರ ಉಲ್ಬಣವಾಯಿತು. ಈಗಾಗಲೇ ವಿಜ್ಞಾನಿಗಳು ಯಾವ ಮಾದರಿಯಲ್ಲಿದೆ ಎಂದು ಪರೀಕ್ಷಿಸುತ್ತಿದ್ದಾರೆ ಎಂದರು.

    ಹುಟ್ಟು ಹಬ್ಬಕ್ಕೆ ಅಣ್ಣನಿಗೆ ನುಡಿ ಹರಕೆ

    ಎಸ್.ಜಗನ್ನಾಥರಾವ್ ಬಹುಳೆ

    ನಮ್ಮ ಅಣ್ಣಾವ್ರು ವರನಟ ಡಾ. ರಾಜ್ ಕುಮಾರ್ ಭೌತಿಕವಾಗಿ ನಮ್ಮಿಂದ ದೂರಾಗಿ ಏಪ್ರಿಲ್ 12 ಕ್ಕೆ ಹದಿನಾರು ವರ್ಷಗಳಾದರೆ ಈ ಬಾರಿಯ ಏಪ್ರಿಲ್ 24 ಕ್ಕೆ ಅವರ 93ನೇ ಜನ್ಮದಿನ. ಅಭಿಮಾನಿ ದೇವರುಗಳ ಹೃದಯಗಳಲ್ಲಿ, ನಾಡಿನ ಜನತೆಯ ಸ್ಮೃತಿಗಳಲ್ಲಿ ಮಾತ್ರ ನಿತ್ಯ ನಿರಂತರ ನಂದಾದೀಪವಾಗಿ ಬೆಳಗುತ್ತಿರುವ ಅಣ್ಣಾವ್ರು ಕಳೆದ ಶತಮಾನದಲ್ಲಿಅವತರಿಸಿದ ಕನ್ನಡದ ಅದ್ಭುತ ಚೇತನ ಎನ್ನಲು ಯಾವ ಅತಿಶಯವೂ ಇಲ್ಲ.

    ಚಿತ್ರ ಕೃಪೆ :ಭವಾನಿ ಲಕ್ಷ್ಮಿನಾರಾಯಣ/ CHITHRAPATHA.COM

    ಇದೀಗ ಸಾಮಾಜಿಕ ಜಾಲತಾಣಗಳ ಕ್ರಾಂತಿಯ ಕಾಲ. ತುಸು ಇತ್ತ ಗಮನಿಸಿದರೆ ಸಾಕು ಅಣ್ಣಾವ್ರ ಅಭಿಮಾನದ ಜ್ವಲಂತ ಸಾಕ್ಷಿಗಳು ನಮ್ಮ ಮುಂದೆ ಅಚ್ಚರಿಗಳನ್ನು ಮೂಡಿಸುತ್ತಾ ಹೋಗುತ್ತದೆ. ಒಂದೇ ಎರಡೇ ರಾಜ್ ಕುರಿತು ಹೊರಬಂದಿರುವ ನೂರಾರು ಕೃತಿಗಳಿಂದ, ಸಹಸ್ರಾರು ಲೇಖನಗಳಿಂದ, ಗಣ್ಯರ ಅನುಭವಗಳಿಂದ ಲಹರಿ ಲಹರಿಯಾಗಿ ಹೊರಬರುತ್ತಿರುವ ವಿಚಾರಧಾರೆಗಳು ಪ್ರವಾಹದ ರೀತಿಯಲ್ಲಿ ಉಕ್ಕಿ ಉಕ್ಕಿ ಭೋರ್ಗರೆಯುತ್ತಿದೆ. ರಾಜ್ ಕುರಿತು ಮಾತನಾಡುವವರದೇ ಬಳಗ ಸೃಷ್ಟಿಯಾಗಿಹೋಗಿದೆ. ಯೂಟ್ಯೂಬ್ ಚಾನೆಲ್‌ಗಳಂತೂ ರಾಜ್‌ಗಾಗಿಯೇ ತಮ್ಮ ವಿನೂತನ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಎಲ್ಲಕ್ಕೂ ಲಕ್ಷ ಲಕ್ಷ ವೀಕ್ಷಣೆಗಳು, ಮೆಚ್ಚುಗೆಗಳು ಅಣ್ಣಾವ್ರ ಕುರಿತ ಕಳಕಳಿಯನ್ನು ಸಾರುತ್ತಲೇ ಬಂದಿವೆ.

    ರಾಜ್ ಕುರಿತು ಇದುವರೆಗೆ ಅಧಿಕೃತವಾಗಿ ಇನ್ನೂರರ ಗಡಿಯಲ್ಲಿ ಪುಸ್ತಕಗಳು ರಚನೆಯಾಗಿವೆಯಾದರೂ ಬರೆಯುತ್ತಿರುವವರ ಸಂಖ್ಯೆ ಬಹಳ ದೊಡ್ಡದಿದೆ. ಭೂಗೋಳಕ್ಕೆ ಒಂದು ಎಲ್ಲೆ ಇರಬಹುದು. ರಾಜ್ ವಿಚಾರಗಳಿಗಂತೂ ಎಲ್ಲೆಯೂ ಇಲ್ಲ, ಗಡಿಯಂತೂ ಇಲ್ಲವೇ ಇಲ್ಲ. ಎಲ್ಲೆಡೆ ಹೊಸ ವಿಚಾರಗಳನ್ನು ರಾಜ್ ಕುರಿತು ಹೇಳಬೇಕೆಂಬ ಧಾವಂತ. ಅವರ ಶ್ರೇಷ್ಟತೆಯನ್ನು ದಾಖಲಿಸಬೇಕೆಂಬ ಆತುರ. ಅಬ್ಬಾ! ನಿಜಕ್ಕೂ ರಾಜ್ ಕುರಿತ ಈ ಅಭಿಮಾನ ನಭೂತೋ ನಭವಿಷ್ಯತಿ.

    ಅಚ್ಚರಿ ಎಂದರೆ, ಕರ್ನಾಟಕದಲ್ಲಿ ಅನೇಕ ಮಂದಿ ಗಣ್ಯಾತಿಗಣ್ಯ ಸಾಧಕರಿದ್ದಾಗ್ಯೂ ಜನತೆಯಿಂದ ಈವರೆಗೂ ಸರಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಕನ್ನಡ ಜನತೆ ಜನಪ್ರಿಯತೆ ಮತ್ತು ಪ್ರೀತಿಯನ್ನು ಡಾ|| ರಾಜ್‌ರಿಗೆ ಧಾರೆ ಎರೆದಿರುವ ಬಗೆ ನಿಜಕ್ಕೂ ಅದ್ವಿತೀಯ. ಇದು ಸಿನಿಮಾದಿಂದ ಮಾತ್ರ ಸಾಧ್ಯವಾಗಿದೆಯೇ ಎಂದರೆ ಆ ಮಾತನ್ನು ಪೂರ್ಣವಾಗಿ ಒಪ್ಪಲು ಆಗದು. ಆದರೆ, ರಾಜ್ ನಿರ್ವಹಿಸಿದ ಪಾತ್ರಗಳು ಬಹುಮಟ್ಟಿಗೆ ಜನಸಾಮಾನ್ಯರ ನಾಡಿ ಮಿಡಿತಕ್ಕೆ ತಕ್ಷಣ ಸ್ಪಂದಿಸುವ ಪಾತ್ರಗಳೇ ಆಗಿದ್ದರಿಂದ, ಆ ಪಾತ್ರಗಳಲ್ಲಿ ಅವರ ನಡೆ ನುಡಿಗಳಲ್ಲಿ ನಿಜ ಜೀವನಕ್ಕೆ ಅಪವಾದ ತರುವ ಯಾವೊಂದು ಅಂಶವೂ ಇಲ್ಲದ್ದರಿಂದ ರಾಜ್ ರಾಜ್ಯದ ಸಾಮಾನ್ಯ ಜನತೆಗೆ ಭಾವನಾತ್ಮಕವಾಗಿ ತೀರಾ ಹತ್ತಿರವಾದರು ಎಂಬ ವಿಶ್ಲೇಷಣೆ ಅವರ ಪ್ರಚಂಡ ಜನಪ್ರಿಯತೆಗೆ ಸಾಕ್ಷಿಯಾಗುತ್ತದೆ.

    ಭಾಷಾ ಶುದ್ಧತೆ

    ಡಾ|| ರಾಜ್ ಅವರ ಕನ್ನಡ ಭಾಷಾ ಶುದ್ಧತೆ ಅಪ್ಪಟ ದೇಶೀ ತುಪ್ಪದಂತೆ. ಪರಿಶುದ್ಧವಾಗಿ ನಾಡಭಾಷೆಯನ್ನು ಮಾತಾಡುವ ಯಾವುದೇ ಕಲಾವಿದ ಆ ಭಾಷೆಯ ಜನತೆಗೆ ತೀರಾ ಹತ್ತಿರವಾಗುತ್ತಾನೆ ಎನ್ನುವುದಕ್ಕೆ ಜೀವಂತ ಸಾಕ್ಷಿ ರಾಜ್. ಅವರ ಉಚ್ಚಾರಣೆಯಲ್ಲಿ ಅವರು ಸಂಭಾಷಣೆಯನ್ನು ಹೇಳುವ ಶೈಲಿಯಲ್ಲಿ ಆರ್ಭಟವಿಲ್ಲ. ಸಂಸ್ಕೃತಿ ಇದೆ, ಸಂಸ್ಕಾರವಿದೆ.
    ನಿಜ ಜೀವನದಲ್ಲಿ ಅವರು ನಡೆದುಕೊಳ್ಳುವ ರೀತಿ, ಅವರ ಸೌಜನ್ಯ, ಅವರ ಸರಳತೆಗಳು ಅವರ ವ್ಯಕ್ತಿತ್ವವನ್ನು ನೂರು ಪಟ್ಟು ಹೆಚ್ಚಿಸಿರುವ ಗುಣಗಳು. ಅವರೆಂದೂ ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಮೆರೆದವರಲ್ಲ. ತಮ್ಮ ಕೂಲಿಂಗ್ ಗ್ಲಾಸ್ ಮೂಲಕ ಹೊರ ಜೀವನವನ್ನು ಬೇರೊಂದು ಬಣ್ಣದಿಂದ ನೋಡಲಿಲ್ಲ. ಜನತೆಯೊಂದಿಗೆ ನೇರವಾಗಿ ನಿರ್ವಂಚನೆಯಿಂದ ಬೆರೆತರು. ಅವರು ಪದೇ ಪದೇ ಹೇಳುವಂತೆ ಜನಸ್ತೋಮದ ಅಪಾರ ಅಭಿಮಾನ ಸೂಸುವ ಕಣ್ಣುಗಳಲ್ಲಿ ಭಗವಂತನನ್ನೇ ಕಂಡರು. ಜನತೆ ಬೇರೆಯಾಗಲಿಲ್ಲ, ಅವರು ಬೇರೆಯಾಗಲಿಲ್ಲ.

    ಹಿರಿಯ ಪತ್ರಕರ್ತ ವಿ.ಎನ್.ಸುಬ್ಬರಾವ್ ಅವರು ಹೇಳುವಂತೆ “ಡಾ|| ರಾಜ್ ವ್ಯಕ್ತಿತ್ವವೇ ಒಂದು ರೀತಿಯ ಅದ್ವೈತ! ಪ್ರಾಯಶಃ ಭಾರತದಲ್ಲಿ ಇನ್ಯಾವ ರಾಜ್ಯದಲ್ಲಿಯೂ ಇನ್ನಾವ ಊಬ್ಬ ವ್ಯಕ್ತಿಯೂ ಸಮಷ್ಠಿಯೊಂದಿಗೆ ತನ್ನ ವ್ಯಕ್ತಿತ್ವವನ್ನು ಈ ರೀತಿ ಲೀನವಾಗಿಸಿಕೊಂಡಿರಲಾರ.”

    ಇದೇ ವಿಚಾರವಾಗಿ ಒಮ್ಮೆ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸುತ್ತಾ “ಈ ರಾಜ್ ನಮ್ಮವನು ಅಂತಾರಲ್ಲ ಅದುವೇ ನಾನು ಜೀವನದಲ್ಲಿ ಮಾಡಿದ ‘ಸಂಪಾದನೆ’. ಅಭಿಮಾನಕ್ಕೆ ಪ್ರತಿಯಾಗಿ ಕೊಡುವುದಕ್ಕೆ ಇದ್ದದ್ದು ಒಂದೇ ಪದ. ಅದುವೇ ಅಭಿಮಾನಿ ದೇವರುಗಳೇ ಎಂಬುದು. ಕನ್ನಡದ ಕೋಟ್ಯಾನುಕೋಟಿ ದೇವರುಗಳ ಅಭಿಮಾನ ಪಡೆದ ನಾನು ಕೋಟ್ಯಧಿಪತಿಯೇ ಅಲ್ಲವೆ? ಎಂದಿದ್ದರು.

    ನೇರ ಮಾತು, ನೇರ ನಡೆ

    ರಾಜ್ ಎಂಥಹುದೇ ಸಂದರ್ಭದಲ್ಲಿ ಸಹ ತಮ್ಮ ಸಹಜಶೀಲತೆಯನ್ನು ತೋರುವಲ್ಲಿ ಸಂಕೋಚ ಪಡುತ್ತಿರಲಿಲ್ಲ. ನೇರ ಮಾತು, ನೇರ ನಡೆ, ಇದಕ್ಕೊಂದು ಪುಟ್ಟ ಉದಾಹರಣೆ. ಬೆಂಗಳೂರು-ಮೀರಜ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲು ಕೇಂದ್ರ ಸರ್ಕಾರದ ಮಂತ್ರಿಗಳು, ರಾಜ್ಯ ಸರ್ಕಾರದ ಮಂತ್ರಿಗಳು, ಗಣ್ಯರು ಸೇರಿದ್ದ ಸಭೆ, ಸಾರ್ವಜನಿಕ ಬೃಹತ್ ಸಮಾರಂಭ. ರಾಜ್ಯದ ರೈಲ್ವೆ ಪ್ರಗತಿಯ ಬಗ್ಗೆ ಹಿರಿಯರು, ಗಣ್ಯರು, ಮಂತ್ರಿಗಳು ಮಾತಾಡಿದ ಮೇಲೆ, ಹಸಿರು ನಿಶಾನೆ ತೋರಿದ ಮುಖ್ಯ ಅತಿಥಿ ರಾಜ್ ಮಾತನಾಡಲು ಆರಂಭಿಸಿ ಔಪಾಚಾರಿಕ ಮಾತುಗಳಾದ ಬಳಿಕ ನೇರವಾಗಿ ನೆನಪಿನಾಳಕ್ಕೆ ಇಳಿದರು. ಅವರು ಹಿಂದೆ ನಾಟಕ ಕಂಪನಿಯಲಿದ್ದಾಗ ಮೀಟರ್‌ಗೇಜ್ ರೈಲಿನಲ್ಲಿ ಓಡಾಡಿದ್ದು. ಮದ್ರಾಸ್-ಬೆಂಗಳೂರು ನಡುವಿನ ಪ್ರಯಾಣದ ಸೊಗಸು. ಪ್ರಯಾಣಿಸಿ ಇಳಿದಾಗ ಮೈಯೆಲ್ಲಾ ಉಗಿಬಂಡಿ ಹೊಗೆಯಿಂದ ಕಪ್ಪಾಗಿ ಬಿಡುತ್ತಿದ್ದ ಪ್ರಸಂಗವನ್ನು ರಸವತ್ತಾಗಿ ವರ್ಣಿಸಿದರು. ತಮ್ಮ ಸ್ಥಾನಗಳ ಘನತೆಯನ್ನು, ತಮ್ಮ ಉಪಸ್ಥಿತಿಯ ಘನತೆಯನ್ನು ಕಾಪಾಡಿಕೊಂಡು ಎತ್ತರದ ಭಾಷಣಗಳನ್ನು ಮಾಡುವ ಮಂದಿಯ ಮಧ್ಯೆ, ಉಗಿಬಂಡಿಯ ಹೊಗೆಯಿಂದ ತಾವು ಕಪ್ಪಾಗಿದ್ದ ಸರಳಾತಿ ಸರಳ ಉದಾಹರಣೆಯನ್ನು ಜೀವನದ ಭಾಗವಾಗಿ ನೆನೆದ ರಾಜ ಪರಿಯನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.

    ಇಂದಿನ ಸಂದರ್ಭಕ್ಕೆ ಮಾದರಿ ಎನಿಸುವ ಎರಡು ಪ್ರಸಂಗಗಳನ್ನು ರಾಜ್ ಕುರಿತು ಇಲ್ಲಿ ನೆನೆಯಲು ಇಚ್ಛಿಸುತ್ತೇನೆ. ಇತ್ತೀಚೆಗೆ ಕನ್ನಡ ಚಲನಚಿತ್ರಗಳಿಗೆ ಪ್ರಮುಖ ಪಾತ್ರಧಾರಿಗಳನ್ನಾಗಿ ನಮ್ಮ ದೊಡ್ಡ ದೊಡ್ಡ ಹೀರೋಗಳು ಪರಭಾಷೆಯ ಪ್ರಸಿದ್ಧರನ್ನು ಕರೆತರುವ ಬಗ್ಗೆ ವಿಮರ್ಶೆಗಳು ನಡೆಯುತ್ತಲೇ ಇದೆ. ಡಾ. ರಾಜ್‌ರ ಎರಡು ಮಹೋನ್ನತ ಚಿತ್ರಗಳಾದ ಶಂಕರ್‌ಗುರು ಮತ್ತು ಬಬ್ರುವಾಹನ ಚಿತ್ರಗಳಿಗೂ ಇದೇ ಮಾತುಕತೆ ನಡೆದಿತ್ತು. ಶಂಕರ್‌ಗುರುವಿಗೆ ಇಮೇಜ್ ದೃಷ್ಟಿಯಿಂದ ಹಿಂದಿ ಭಾಷೆಯ ಖ್ಯಾತ ವಿಲನ್‌ಗಳನ್ನು ಕರೆಸುವ ಬಗ್ಗೆ ಚರ್ಚೆ ಆಗಿತ್ತು. ರಾಜ್ ಒಪ್ಪಲೇ ಇಲ್ಲ. ಅದೇ ಕಾಸ್ಟ್ಯೂಮ್‌ಗಳನ್ನು ನಮ್ಮವರಿಗೆ ಹಾಕಿ ಮಾಡಿಸಿ ಎಂದು ಪಟ್ಟು ಹಿಡಿದರು. ತೂಗುದೀಪ, ವಜ್ರಮುನಿ, ಶನಿಮಹಾದೇವಪ್ಪ ಚಿತ್ರದ ವಿಲನ್‌ಗಳಾಗಿ ಮಿಂಚಲು ಕಾರಣವಾಯಿತು. ಹಾಗೆಯೇ ಬಬ್ರುವಾಹನ ಚಿತ್ರದ ಕೃಷ್ಣನ ಪಾತ್ರಧಾರಿಯಾಗಿ ಪರಭಾಷೆಯ ಪ್ರಸಿದ್ಧ ನಟರನ್ನು ಕರೆಸಲು ತೀರ್ಮಾನವಾಗಿತ್ತು. ರಾಜ್ ನಮ್ಮ ಹುಡುಗ ರಾಮಕೃಷ್ಣನೇ ಕೃಷ್ಣನಾಗಲಿ ಎಂದು ಅಭಿಪ್ರಾಯ ನೀಡಿದರು. ಅದು ರಾಮಕೃಷ್ಣರ ಪ್ರವೇಶಕ್ಕೆ ಮಹತ್ವದ ಚಿತ್ರವಾಯಿತು. ನಮ್ಮವರ ಮೇಲಿದ್ದ ಅಣ್ಣಾವ್ರ ಅಭಿಮಾನವನ್ನು ಇದೇ ರೀತಿ ಇಂದಿನವರು ಮುಂದುವರೆಸಬಹುದಲ್ಲವೆ? ಇಂಥ ಅನೇಕ ದಾರಿಗಳನ್ನು ರಾಜ್ ಹಾಕಿಕೊಟ್ಟಿದ್ದಾರೆ.

    ಡಾ|| ರಾಜ್ ಗಾಯನವನ್ನು ಮಾನಸಿಕ ಉಲ್ಲಾಸತೆಗೆ, ಆಧ್ಯಾತ್ಮ ಭಾವನೆಗೆ, ಸಂಗೀತದ ಅನುಭೂತಿಗೆ ಸಾವಧಾನದಿಂದ, ಸಾವಕಾಶವಾಗಿ ಆಲಿಸುವ ಕೋಟ್ಯಂತರ ಮಂದಿ ಆಲಿಸುವವರಿದ್ದಾರೆ. ಅಷ್ಟೇಕೆ? ಸೂಪರ್‌ಸ್ಟಾರ್ ರಜನೀಕಾಂತ್ ಅವರೇ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿ ಎತ್ತರಕ್ಕೆ ಬೆಳೆದು ನಿಂತಿದ್ದರೂ ಸಹಿತ ಅವರು ನೆಮ್ಮದಿಯನ್ನು ಕಾಣುವ ಕೆಲವು ಸಾಧನಗಳಲ್ಲಿ ಡಾ|| ರಾಜ್ ಭಕ್ತಿಗಾಯನವೂ ಒಂದಾಗಿದೆ. ರಾಜ್ ಗಾಯನದ ಚಿತ್ರಗೀತೆ ಆನಂದವನ್ನು ನೀಡಿದರೆ, ಭಕ್ತಿಗೀತೆ ಪವಿತ್ರತೆಯ ಜಳಕ ಮಾಡಿಸುತ್ತದೆ. ಒಟ್ಟಾರೆ ಬದುಕಿನ ಜಂಜಡದಲ್ಲಿ ಮುಳುಗಿದವನಿಗೆ ರಾಜ್ ಪರೋಕ್ಷವಾಗಿ ನಿಜಾರ್ಥದಲ್ಲಿ ಡಾಕ್ಟರ್ ಆಗಿ ಉಳಿದಿದ್ದಾರೆ.

    ಎಸ್ ಜಗನ್ನಾಥ ರಾವ್ ಬಹುಳೆ

    ವೃತ್ತಿಯಿಂದ ಸರ್ಕಾರಿ ಸೇವೆ. ಪ್ರವೃತ್ತಿಯಿಂದ ಬರಹಗಾರರು. ಇದುವರೆಗೆ ಕಲೆ, ಸಂಸ್ಕೃತಿ, ಚಿತ್ರ ರಂಗ, ಇತಿಹಾಸ ಗಳಿಗೆ ಸಂಬಂಧಿಸಿದಂತೆ ಅಸಂಖ್ಯಾತ ಲೇಖನಗಳನ್ನು ಬರೆದಿದ್ದಾರೆ. ಮೂವತ್ತೊಂದು ಪುಸ್ತಕಗಳು ರಚಿಸಿದ್ದಾರೆ. ಅದರಲ್ಲಿ ವರನಟ ಡಾ. ರಾಜ್ ಕುಮಾರ್ ಅವರ ಕುರಿತು ವಿಶ್ಲೇಷಣಾತ್ಮಕ ಹದಿನಾಲ್ಕು ಉಪಯುಕ್ತ ಪುಸ್ತಕಗಳಿರುವುದು ವಿಶೇಷ. ಹಲವು ಪ್ರಶಸ್ತಿ ಪುರಸ್ಕಾರಗಳಿಂದ ಗೌರವಿಸಲ್ಪಟ್ಟಿದ್ದಾರೆ. ಸ್ವಯಂ ಡಾ.ರಾಜ್ ಅವರಿಂದಲೇ ಸನ್ಮಾನಿತರಾಗಿರುವ ಭಾಗ್ಯವಂತರು. ಎರಡು ದಶಕಗಳಿಂದ ಡಾ.ರಾಜ್ ಜನ್ಮದಿನಕ್ಕೊಂದು ವಿಶೇಷ ಲೇಖನ ಬರೆಯುತ್ತ ಬಂದಿರುವ ವ್ರತಧಾರಿ.

    ವೈಯಾಲಿಕಾವಲ್ ನ ಚೌಡಯ್ಯ ಸ್ಮಾರಕ ಭವನಕ್ಕೆ ಬರುತಿದೆ ಗಾಂಧಿ ಬಜಾರಿನ ವಿದ್ಯಾರ್ಥಿ ಭವನ

    BENGALURU APR 22

    ಬೆಂಗಳೂರು ಗಾಂಧಿಬಜಾರ್ ನ ಜನಪ್ರಿಯ ವಿದ್ಯಾರ್ಥಿ ಭವನ ಮಲ್ಲೇಶ್ವರಕ್ಕೆ ಬರವುದಿಲ್ಲ ಎಂಬುದು ಇದೀಗ ಅಧಿಕೃತವಾಗಿ ಖಚಿತಗೊಂಡಿದೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದ ಪೋಸ್ಟ್ ಒಂದು ಈ ಐಕಾನಿಕ್ ದೋಸೆ ಹೋಟೆಲ್ ಮಲ್ಲೇಶ್ವರದಲ್ಲಿ ಶಾಖೆ ತೆರೆಯುವ ಊಹಾಪೋಹಗಳನ್ನು ಹುಟ್ಟು ಹಾಕಿತ್ತು. ಮಲ್ಲೇಶ್ವರದ ಪ್ರಖ್ಯಾತ ದೋಸೆ ಪಾಯಿಂಟ್ ಸಿಟಿಆರ್ ಗೆ ಪ್ರತಿಸ್ಪರ್ಧಿಯೊಂದು ಬರುತ್ತದೆ ಎಂದು ಈ ಭಾಗದ ದೋಸೆ ಪ್ರಿಯರು ನಿರೀಕ್ಷಿಸಿದ್ದರು. ಆದರೆ ಅದು ಸಧ್ಯಕ್ಕೆ ಸಾಕಾರವಾಗುತ್ತಿಲ್ಲ. ಅದರ ಬದಲು ವಿದ್ಯಾರ್ಥಿ ಭವನ ತನ್ನೊಂದಿಗೆ ಬೆರೆತಿರುವ ಜನರ ಭಾವನೆಗಳನ್ನು ನಾಟಕ ರೂಪದಲ್ಲಿ ಅಭಿವ್ಯಕ್ತಿಸುವ ಮೂಲಕ ಮಲ್ಲೇಶ್ವರಕ್ಕೆ ಪ್ರವೇಶ ನೀಡುತ್ತಿದೆ.

    ಬೆಂಗಳೂರು ಥಿಯೇಟರ್ ಫೌಂಡೇಶನ್ ಸಹಯೋಗದಲ್ಲಿ ತಮ್ಮ ಸಂಸ್ಥೆ ವಿದ್ಯಾರ್ಥಿ ಭವನದಲ್ಲಿ ಘಟಿಸಿದ ಬಸವನಗುಡಿಯ ಕಥೆಗಳನ್ನು ನಾಟಕ ರೂಪದಲ್ಲಿ ಪ್ರಸ್ತುತ ಪಡಿಸುತ್ತಿದೆ ಎಂದು ವಿದ್ಯಾರ್ಥಿಭವನದ ಪಾಲುದಾರ ಅರುಣ್ ಅಡಿಗ ಶುಕ್ರವಾರ ವರದಿಗಾರರಿಗೆ ತಿಳಿಸಿದರು.

    ಅರುಣ್ ಅಡಿಗ

    90 ನಿಮಿಷಗಳ ಈ ನಾಟಕವನ್ನು ಅರ್ಜುನ ಕಬ್ಬಿನ ನಿರ್ದೇಶಿಸುತ್ತಿದ್ದಾರೆ. ರಾಜೇಂದ್ರ ಕಾರಂತ್ ರಚಿಸಿದ್ದಾರೆ. ಬಸವನಗುಡಿಯ ಸಾಂಸ್ಕೃತಿಕ ಜಗತ್ತನ್ನು ವಿದ್ಯಾರ್ಥಿಭವನದ ದೃಷ್ಟಿಕೋನದಲ್ಲಿ ಈ ನಾಟಕ ಅನಾವರಣ ಮಾಡುತ್ತದೆ.

    ಈ ತಲೆಮಾರಿನ ತರುಣರಿಗೆ ಬಸವನಗುಡಿಯ ಭವ್ಯ ಇತಿಹಾಸವನ್ನು ಹೇಳುವುದಲ್ಲದೆ ಆ ಮೂಲಕ ಈಗಿನ ಹುಡುಗ ಹುಡುಗಿಯರಲ್ಲಿ ರಂಗಪ್ರೀತಿಯನ್ನು ಹೆಚ್ಚಿಸುವ ಕೆಲಸವನ್ನು ಈ ನಾಟಕ ಮಾಡಲಿದೆ ಎಂದು ಅರುಣ್ ಅಡಿಗ ಹೇಳಿದರು.

    ವಿದ್ಯಾರ್ಥಿಭವನವೆಂದರ ಕೇವಲ ಅದೊಂದು ಉಪಹಾರ ಕೇಂದ್ರವಲ್ಲ. ಅದು ಅದನ್ನೂ ಮೀರಿದ ಭಾವನಾತ್ಮಕ ನಂಟಿನ ಕೇಂದ್ರ. ಈ ಏಳು ದಶಕಗಳಕಾಲ ನಾವು ದೋಸೆಯನ್ನು ಜನರಿಗೆ ಉಣಬಡಿಸಿದ್ದೇವೆ. ಈಗ ದೋಸೆ ಏಳು ದಶಕಗಳ ಭಾವನಾತ್ಮಕ ನಂಟನ್ನು ತೆರೆದಿಡಲಿದೆ ಎಂದು ಅಡಿಗ ವಿವರಿಸಿದರು. ಗಮ ಗಮ ಭವನದ ನಂತರ ಇದು ಎಂದು ನಮ್ಮ ಎರಡನೇ ರಂಗ ಪ್ರಯತ್ನ ಎಂದೂ ಅವರು ಹೇಳಿದರು.

    ಸದ್ಯದ ಮಟ್ಟಿಗೆ ಬೆಂಗಳೂರಿನಲ್ಲಿ ಮತ್ತೊಂದು ಶಾಖೆ ತೆರೆಯುವ ಉದ್ದೇಶ ಇಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು.

    ಅರ್ಜುನ ಕಬ್ಬಿನ

    ಗಾಂಧೀಬಜಾರಿನಲ್ಲೇ ಹುಟ್ಟಿ ಬೆಳೆದಿರುವ ನಿರ್ದೇಶಕ ಕಬ್ಬಿನ ಅವರು ಕೋರೋನಾ ಸಾಂಕ್ರಾಮಿಕ ಹರಡುವ ಮುನ್ನ ತಮ್ಮ ಶಿಕ್ಷಕ ವೃತ್ತಿಯನ್ನು ತ್ಯಜಿಸಿ ಪೂರ್ಣಪ್ರಮಾಣದ ರಂಗಕರ್ಮಿಯಾದರು. ಸಾಂಕ್ರಾಮಿಕ ಕಾಲದಲ್ಲಿ ರಂಗಚಟುವಟಿಗಳು ಸ್ಥಗಿತಗೊಂಡು ಅನೇಕ ಕಲಾವಿದರಿಗೆ ಕೆಲಸವಿಲ್ಲದೆ ಹೋಗಿದ್ದು ಕಬ್ಬಿನ ಅವರು ರಂಗಭೂಮಿಯಲ್ಲೇ ಮುಂದುವರಿಯಲು ಪ್ರೇರೇಪಣೆಯಾಯಿತು. ಗಾಂಧೀಬಜಾರು ನನಗೆ ತಾಯಿಯಾದರೆ ವಿದ್ಯಾರ್ಥಿಭವನ ನನಗೆ ದೇವಸ್ಥಾನ ಎನ್ನುವ ಕಬ್ಬಿನ ಬಸವನಗುಡಿಯ ಕಥೆಯನ್ನು ನಾಟಕದ ಮೂಲಕ ಹೇಳಲು ಮುಂದಾಗಿದ್ದಾರೆ.

    ಕೆ ಎಸ್ ನಿಸ್ಸಾರ್ ಅಹಮದ್, ಸಿ ಅಶ್ವತ್ಧ ಹೀಗೆ ನೂರಾರು ಮಹನೀಯರ ನೆನಪುಗಳು ಈ ನಾಟಕದಲ್ಲಿ ಕಾಣಸಿಗಲಿದೆ. ಆರು ತಿಂಗಳ ಶ್ರಮ ಈ ನಾಟಕ ರಚನೆಯಲ್ಲಿದೆ. ಈ ನಾಟಕದ ಕಲಾವಿದರು ಬಸವನಗುಡಿಯ ಎಲ್ಲಾ ಸಾಂಸ್ಕೃತಿಕ ಕೇಂದ್ರಗಳಿಗೂ ಹೋಗಿ ಅಲ್ಲಿನ ಸಾಮಾಜಿಕ ಪ್ರಾಮುಖ್ಯವನ್ನು ಅರಿತು ಬಂದಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ವಿದ್ಯಾರ್ಥಿ ಭವನಕ್ಕೆ ಬಂದಾಗ ಇಂಥ ಸಾಂಸ್ಕೃತಿಕ ಸ್ಥಳಗಳನ್ನು ಜತನ ಮಾಡಬೇಕಾದ ಅಗತ್ಯವನ್ನು ಹೇಳಿದ್ದು, ಗೋಪಾಲಕೃಷ್ಣ ಅಡಿಗರ ವಿದ್ಯಾರ್ಥಿ ಭವನದ ಭೇಟಿ ಎಲ್ಲವೂ ಇಲ್ಲಿ ಕಾಣಸಿಗಲಿದೆ.

    ಸಿಹಿಕಹಿ ಚಂದ್ರು, ಸುಂದರ್ , ವೀಣಾ ಸುಂದರ್, ಪವನ್ ಕುಲಕರ್ಣಿ ಅಂಥ ಕಲಾವಿದರ ದಂಡೇ ಈ ನಾಟಕದಲ್ಲಿ ಕಾಣಿಸಿಕೊಳ್ಳಲಿದೆ. ಮೇ 6,7 ಮತ್ತು 8 ರಂದು ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ನಾಟಕ ಪ್ರದರ್ಶನವಾಗಲಿದೆ. bookmyshow ದಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ.

    error: Content is protected !!