25.2 C
Karnataka
Monday, November 25, 2024
    Home Blog Page 22

    ಪೌರಾಣಿಕ ನಿರೂಪಣೆಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

    ಬಳಕೂರು ವಿ ಎಸ್ ನಾಯಕ

    ಕಲಾವಿದನಿಗೆ ಮುಖ್ಯವಾಗಿ ಕಲಾತ್ಮಕತೆಯನ್ನು ಯಾವ ರೀತಿಯಾಗಿ ಬಿಂಬಿಸಬೇಕು ಎನ್ನುವುದು ಮುಖ್ಯವಾಗಿರುತ್ತದೆ. ಅಂತಹ ವಿಭಿನ್ನ ಹುಡುಕಾಟದಲ್ಲಿ ಕಲಾವಿದ ತಲ್ಲೀನರಾಗಿರುತ್ತಾರೆ. ಹೊಸ ವಿಚಾರಗಳು ಹೊಸ ವಿಷಯಗಳು ಕಲಾ ವಸ್ತುವಾಗಿ ಕಲಾವಿದನ ಕಣ್ಣಿಗೆ ಗೋಚರವಾಗುತ್ತದೆ. ಅಂತಹ ಅದ್ಭುತ ಕಲಾಕೃತಿಗಳನ್ನು ತನ್ನ ಕೈಚಳಕದಿಂದ ಕಲಾಸಕ್ತರ ಮಡಲಿಗೆ ಅರ್ಪಿಸುತ್ತಿದ್ದಾರೆ ಕರ್ನಾಟಕ ಕಂಡ ಶ್ರೇಷ್ಠ ಕಲಾವಿದ ಎ . ಜಿ. ನೆಲ್ಲಗಿ.

    ಇವರು ರಚಿಸಿದ ಕಲಾಕೃತಿಗಳು ವಿವಿಧ ಆಯಾಮದ ಅಡಿಯಲ್ಲಿ ಮೂಡಿಬಂದಿವೆ.
    ಎ.ಜಿ. ನೆಲ್ಲಗಿ ಯವರು ಬಿಜಾಪುರದ ಸಿಂದಗಿ ತಾಲೂಕಿನವರು. ವೃತ್ತಿಪರ ಪ್ರಸಿದ್ಧ ಚಿತ್ರಕಲಾವಿದರು. ಇವರು ರಚಿಸಿರುವ ವಿಭಿನ್ನ ಕಲಾಕೃತಿಗಳು ಹಲವಾರು ಜನರ ಮನಸೂರೆಗೊಂಡರುವುದು ವಿಶೇಷ. ಇವರ ಕಲಾತ್ಮಕತೆ ವಿಶೇಷತೆ ವಿಭಿನ್ನತೆ ನಿಜಕ್ಕೂ ಕೂಡ ಕಲಾಸಕ್ತರ ಮನಸ್ಸಿಗೆ ರಸದೌತಣವನ್ನು ನೀಡುವಂತಿರುತ್ತದೆ.

    ಹೀಗೆ ಇವರು ರಚಿಸಿರುವ ಕಲಾಕೃತಿಗಳು ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ. ಗ್ಯಾಲರಿ ನಂಬರ್ ಮೂರರಲ್ಲಿ ನಡೆಯುವ ಚಿತ್ರಕಲಾ ಪ್ರದರ್ಶನದಲ್ಲಿ ಸುಮಾರು 30 ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ ಇವರು ಹಸುಗಳು ಮತ್ತು ಎತ್ತುಗಳು ಕಥಾ ವಸ್ತುವನ್ನಾಗಿ ಮಾಡಿಕೊಂಡು ವಿಭಿನ್ನವಾಗಿ ಚಿತ್ರಿಸಿರುವುದು ವಿಶೇಷ.

    ನೀನಾರಿಗಾದೆಯೋ ಎಲೆ ಮಾನವ ಎಂಬ ಮಾತಿನಂತೆ ಹಸು ಮಾನವನಿಗೆ ಒಂದಲ್ಲ ಒಂದು ರೀತಿಯಲ್ಲಿ ಉಪಕಾರಿಯಾಗಿ ಕೆಲಸವನ್ನು ಮಾಡುತ್ತದೆ ಅದರಲ್ಲಿ ನಿಸ್ವಾರ್ಥ ಸೇವೆ ಪ್ರತಿಯೊಬ್ಬರಿಗೂ ಅನುಕರಣೀಯ. ಆದರೆ ಮಾನವ ಬುದ್ಧಿಜೀವಿಯಾಗಿಯೂ ಕೂಡ ಸರಿ-ತಪ್ಪು ಇದರ ಬಗ್ಗೆ ಆಲೋಚನೆ ಇದ್ದರೂ ಕೂಡ ಬೇರೆಯವರನ್ನು ತೊಂದರೆಗೆ ಸಿಲುಕಿಸಿ ಸಂತೋಷಪಡುವ ಮನಸ್ಸಿನವನಾಗಿದ್ದಾನೆ. ಎಂಬ ವಿಷಯವನ್ನು ತಮ್ಮ ಕಲಾಕೃತಿಗಳ ಮೂಲಕ ಜನಮಾನಸಕ್ಕೆ ತಲುಪುವ ಹಾಗೆ ಚಿತ್ರಕಲಾವಿದ ವಿಭಿನ್ನ ಸಂದೇಶವನ್ನು ನೀಡಿದ್ದಾರೆ.

    ನಾವು ಕೂಡ ಪರೋಪಕಾರಿಯಾಗಿ ಜೀವನವನ್ನ ಸಾಗಿಸಬೇಕು. ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂಬ ಸಂದೇಶ ನಿಜಕ್ಕೂ ಮೆಚ್ಚತಕ್ಕದ್ದು. ಈ ಶ್ರೇಷ್ಠ ಕಲಾವಿದರ ಕುಂಚದಲ್ಲಿ ಅರಳಿನಿಂತ ವಿಭಿನ್ನ ಕಲಾಕೃತಿಗಳನ್ನು ಕಣ್ತುಂಬಿ ಕೊಳ್ಳಬೇಕಾದರೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಏಪ್ರಿಲ್ 22 ರಿಂದ 28ರವರೆಗೆ ಈ ಕಲಾಪ್ರದರ್ಶನ ನಡೆಯಲಿದೆ. ಕಲಾಕೃತಿಗಳನ್ನು ವೀಕ್ಷಿಸುವ ಅವಕಾಶ ನಿಮಗೆ ಒದಗಿ ಬಂದಿದೆ ತಮ್ಮ ಕೆಲಸದ ಬಿಡುವಿನ ಸಮಯದಲ್ಲಿ ಈ ಚಿತ್ರಕಲಾ ಪ್ರದರ್ಶನಕ್ಕೆ ಬಂದು ಕಣ್ತುಂಬಿಕೊಳ್ಳಬಹುದು.ಎಪ್ರಿಲ್ 22ರಂದು ಸಂಜೆ 5 ಗಂಟೆಗೆ ಕಲಾಪ್ರದರ್ಶನ ಉದ್ಘಾಟನೆಯಾಗಲಿದೆ

    ಚಿತ್ರಕಲಾ ಪ್ರದರ್ಶನದ ಸ್ಥಳ
    ಕರ್ನಾಟಕ ಚಿತ್ರಕಲಾ ಪರಿಷತ್ತು
    ಗ್ಯಾಲರಿ ನಂಬರ್ 3
    ಕುಮಾರಕೃಪಾ ರಸ್ತೆ
    ಬೆಂಗಳೂರು560001

    This image has an empty alt attribute; its file name is V-S-NAIK.jpg

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    PSI ನೇಮಕಾತಿ ಪರೀಕ್ಷೆ ಅಕ್ರಮ:ಪ್ರಕರಣದ ಮೂಲಕ್ಕೆ ಹೋಗಿ ತನಿಖೆ ಮಾಡಲು ಸಿಎಂ ಸೂಚನೆ

    KALABURGI APR 21

    ಪಿಎಸ್ಐ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಫಜಲ್ ಪುರದ ಶಾಸಕ
    ಎಂ.ವೈ.ಪಾಟೀಲ್ ಅವರ ಗನ್ ಮ್ಯಾನ್ ಅಯ್ಯಾಳಿ ದೇಸಾಯಿ ಹಾಗೂ ರುದ್ರಗೌಡ ಎಂಬುವರನ್ನು ಬಂಧಿಸಲಾಗಿದೆ. ಈ ಪ್ರಕರಣದ ಮೂಲಕ್ಕೆ ಹೋಗಿ ತನಿಖೆ ಮಾಡಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಅವರು ಇಂದು ಕಲ್ಬುರ್ಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

    ಯುಪಿಎಸ್ಸಿ ಮಾದರಿಯಲ್ಲಿ ನೇಮಕಾತಿ ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡಲಾಗಿತ್ತು. ಈ ಭದ್ರತೆಯ ವ್ಯವಸ್ಥೆ, ಪಾರದರ್ಶಕತೆಯ ನಡುವೆಯೂ ಲೋಪವೆಸಗಿ ವಾಮಮಾರ್ಗದಲ್ಲಿ ಅಕ್ರಮ ಕಾರ್ಯಾಚರಣೆ ಮಾಡಿರುವುದಕ್ಕೆ ಪೂರ್ಣವಿರಾಮ ಹಾಕಬೇಕೆಂದು ಸರ್ಕಾರದ ಚಿಂತನೆಯಾಗಿದೆ ಎಂದು ಅವರು ತಿಳಿಸಿದರು.

    ಪಿಎಸ್ ಐ ಪರೀಕ್ಷೆ ಅಕ್ರಮದ ಬಗ್ಗೆ ದೂರು ಬಂದ ತಕ್ಷಣವೇ ಪ್ರಾಥಮಿಕ ತನಿಖೆ ಕೂಲಂಕುಷವಾಗಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಉತ್ತರಪತ್ರಿಕೆಗಳಲ್ಲಿ ವ್ಯತ್ಯಾಸ ಕಂಡುಬಂದ ಮೇಲೆ ಪ್ರಕರಣವನ್ನು ಸಿಐಡಿಗೆ ವಹಿಸಲು ತೀರ್ಮಾನಿಸಲಾಗಿದೆ. ನೇಮಕಾತಿಯಲ್ಲಿ ಪಾರದರ್ಶಕತೆ ಇರಬೇಕು ಹಾಗೂ ಸಮಯ ವ್ಯರ್ಥವಾಗದೇ ಕಾರ್ಯಾಚರಣೆ ಮಾಡಲು ಸೂಚನೆ ನೀಡಲಾಗಿದೆ. ಕಲ್ಬುರ್ಗಿಯಲ್ಲಿ ಶಿಕ್ಷಣ ಸಂಸ್ಥೆಗಳ ಮಾಲೀಕರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದೆ. ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥರು ತಲೆಮರೆಸಿಕೊಂಡಿದ್ದು, ಶೋಧನಾ ಕಾರ್ಯ ಮುಂದುವರೆದಿದೆ. ಈಗ ಕಾಂಗ್ರೆಸ್ ಪಕ್ಷದ ಶಾಸಕ ಎಂ ವೈ ಪಾಟೀಲ್ ಅವರ ಗನ್ ಮ್ಯಾನ್ ಅಯ್ಯಾಳಿ ದೇಸಾಯಿ ಹಾಗೂ ರುದ್ರಗೌಡ ಅವರನ್ನು ಬಂಧಿಸಲಾಗಿದೆ. ಪರೀಕ್ಷೆಯನ್ನು ಬರೆದು ಉತ್ತೀರ್ಣರಾದ ಅಭ್ಯರ್ಥಿಗಳ ವಿಚಾರಣೆಯೂ ನಡೆಸಿ, ಸಮಗ್ರ ತನಿಖೆ ಮಾಡಲಾಗುವುದು ಎಂದು ಸಿಎಂ ಹೇಳಿದರು.

    ದಿವ್ಯಾ ಹಾಗರಗಿಯವರು ಭಾರತೀಯ ಜನತಾ ಪಕ್ಷದಲ್ಲಿ ಯಾವುದೇ ಜವಾಬ್ದಾರಿಯನ್ನು ಹೊಂದಿಲ್ಲ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಸರ್ಕಾರವೇ ಸಿಐಡಿ ತನಿಖೆಗೆ ಅನುಮತಿ ನೀಡಿದೆ. ತನಿಖೆ ಮುಕ್ತವಾಗಿ ನಡೆಸಲು ಸೂಚನೆ ನೀಡಿದೆ. ಬೇರೆ ಪಕ್ಷಗಳು ಈ ರೀತಿಯ ಪ್ರಕರಣವನ್ನೇ ಮುಚ್ಚಿಹಾಕಿರುವ ಇತಿಹಾಸ ಇದೆ. ಹಿಂದೆ ಪಿಎಸ್ಐ ಪರೀಕ್ಷೆಗಳು 3-4 ಬಾರಿ ಮಾಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಉತ್ತೀರ್ಣರಾದ ಅಭ್ಯರ್ಥಿಗಳ ವಿಚಾರಣೆ ನಡೆಯುತ್ತಿದ್ದು, ಮಧ್ಯಂತರ ವರದಿ ಬಂದ ನಂತರ ಮರುಪರೀಕ್ಷೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಸಿಐಡಿ ತನಿಖೆ ನಡೆಯುತ್ತಿರುವುದರಿಂದ ಎಲ್ಲಾ ಮಾಹಿತಿಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದರು.

    ಪಿಎಸ್ ಐ ನೇಮಕಾತಿ ಅಕ್ರಮದ ತನಿಖೆಯನ್ನು ನ್ಯಾಯಾಲಯದ ನೇತೃತ್ವದಲ್ಲಿ ತನಿಖೆ ಅಥವಾ ಸಿಬಿಐಗೆ ವಹಿಸಬೇಕೆಂದು ಬೇರೆ ಪಕ್ಷಗಳು ಆಗ್ರಹಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ತನಿಖೆಯ ಮಧ್ಯಂತರ ವರದಿ ಬಂದ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

    ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆಯಲ್ಲಿ ಎಲ್ಲ ಅಂಶಗಳು ತಿಳಿಯುತ್ತದೆ. ಎಲ್ಲ ಸಾಕ್ಷ್ಯಾಧಾರಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ ಸಮಗ್ರ ತನಿಖೆ ಆಗುತ್ತಿದೆ ಎಂದು ತಿಳಿಸಿದರು.

    ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಹೆಸರು


    SHIVAMOGGA A

    ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ಇಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಡಿಸೆಂಬರ್ ತಿಂಗಳಲ್ಲಿ ಈ ವಿಮಾನ ನಿಲ್ದಾನದ ಉದ್ಘಾಟನೆಗೆ ಸಜ್ಜಾಗಲಿದೆ. ಅದಕ್ಕೂ ಮುನ್ನ ಎಲ್ಲಾ ಕಾಮಗಾರಿಗಳನ್ನು ಜೊತೆಯಾಗಿ ನಿರ್ವಹಿಸಿ ಜನರಿಗೆ ಲೋಕಾರ್ಪಣೆ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಶಿವಮೊಗ್ಗದ ವಿಮಾನ ನಿಲ್ದಾಣ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

    ಕೇಂದ್ರ ವಿಮಾನಯಾನ ಸಚಿವರಿಗೆ ಪ್ರಸ್ತಾವನೆ ಕಳುಹಿಸಿ ಅಲ್ಲಿಂದ ಅನುಮೋದನೆ ಪಡೆದ ಕೂಡಲೇ ವಿಮಾನ ನಿಲ್ದಾಣಕ್ಕೆ ನಾಮಕರಣದ ಆದೇಶವನ್ನು ಪಡೆದುಕೊಳ್ಳುತ್ತೇವೆ. ಉಡಾನ್ ಯೋಜನೆಯಡಿ ಕಾಮಗಾರಿಯಲ್ಲಿ ಕೈಗೊಂಡಿದ್ದು, ವಿಮಾನನಿಲ್ದಾಣ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳಲಾಗುವುದು. ಎಟಿಸಿ ಪರಿಕರಗಳನ್ನು ಅಳವಡಿಸಿ, ಸೌಲಭ್ಯಗಳನ್ನು ನಿರ್ಮಿಸಲಾಗುವುದು ತಿಳಿಸಿದರು.

    ಕರ್ನಾಟಕದ ಹೆಮ್ಮೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
    ಶಿವಮೊಗ್ಗದ ಕೈಗಾರಿಕೋದ್ಯಮ, ಶಿಕ್ಷಣ, ಆರೋಗ್ಯ ಎಲ್ಲ ಅಭಿವೃದ್ಧಿಗೆ ವಿಮಾನ ಸೌಲಭ್ಯ ಬಹಳ ಪ್ರಮುಖವಾಗಿದ್ದು, ಜನರ ಸಮಯ ಹಾಗೂ ಹಣದ ಉಳಿತಾಯವೂ ಆಗುತ್ತದೆ. ಬೆಂಗಳೂರು ನಂತರ ವಿವಿಧ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಬಿಜಾಪುರ ಮತ್ತು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಶಿವಮೊಗ್ಗದಲ್ಲಿ ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮಕ್ಕೆ ಇಂಬು ನೀಡಲು ವಿಮಾನನಿಲ್ದಾಣದ ಅವಶ್ಯಕತೆ ಬಹಳ ವರ್ಷಗಳಿಂದ ಇದೆ.

    ನಮ್ಮ ನಾಯಕರಾದ ಯಡಿಯೂರಪ್ಪನವರು ಶಿವಮೊಗ್ಗ ಏರ್‍ಪೋರ್ಟ್ 2006-07 ರಿಂದ ಪ್ರಾರಂಭ ಮಾಡಲು ಯೋಜನೆ ರೂಪಿಸಿದ್ದರು. 2020 ರಲ್ಲಿ ಯೋಜನೆಗೆ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿದ್ದಾರೆ. ಬೆಂಗಳೂರು ನಂತರ ಶಿವಮೊಗ್ಗ ವಿಮಾನನಿಲ್ದಾಣದಲ್ಲಿ 3200 ಮಿ ಉದ್ದದ ರನ್ ವೇ ಇರಲಿದೆ. ಏರ್ ಬಸ್ ಲ್ಯಾಂಡ್ ಆಗುವ ವ್ಯವಸ್ಥೆ ಆಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದ ವಿಮಾನನಿಲ್ದಾಣವಾಗಲು ಎಲ್ಲ ಮೂಲಸೌಕರ್ಯಗಳು ಇಲ್ಲಿ ಸಿಗಲಿವೆ ಎಂದರು.

    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೈಯಕ್ತಿಕವಾಗಿ ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿ ಅವರ ಆಡಳಿತದ ಅವಧಿಯಲ್ಲಿ ಹಲವಾರು ಮೂಲಭೂತ ಸೌಕರ್ಯಗಳನ್ನು ಶಿವಮೊಗ್ಗ ಜಿಲ್ಲೆಗೆ ಕಲ್ಪಿಸಿದ್ದಾರೆ. ವಿಮಾನ ನಿಲ್ದಾಣ ಬರುವ ದಿನಗಳಲ್ಲಿ ಕರ್ನಾಟಕದ ಸಮಗ್ರ ಅಭಿವೃದ್ಧಿ ಈ ಭಾಗದ ಕೈಗಾರಿಕಾ, ವಾಣಿಜ್ಯ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಲಿದೆ. ಕರ್ನಾಟಕದ ಹೆಮ್ಮೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇದಾಗಲಿದೆ ಎಂದರು.

    ರೈತರ ಸಹಕಾರ:
    ವಿಮಾನನಿಲ್ದಾಣಕ್ಕೆ ಜಿಲ್ಲೆಯ ಹಲವಾರು ರೈತರು ಈಗಾಗಲೇ ಸಹಕಾರ ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ರೈತರ ಸಭೆಯನ್ನು ನಡೆಸಲಾಗಿದೆ. ಮುಂದೆ ಅವಶ್ಯಕತೆ ಇರುವ ಜಮೀನನ್ನು ನೀಡಲು ರೈತರು ಒಪ್ಪಿ ಸಹಕರಿಸಿದ್ದಾರೆ. ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
    ಹೆಚ್ಚುವರಿ ಅನುದಾನ ಬಿಡುಗಡೆ
    ವಿಮಾನನಿಲ್ದಾಣ ಕಾಂಪೌಂಡ್ ಸುತ್ತಲಿನ ಸರ್ವಿಸ್ ರಸ್ತೆಗೆ ಡಾಂಬರು ಹಾಕಬೇಕಾಗಿದೆ. ರಾತ್ರಿ ವೇಳೆಯಲ್ಲಿ ವಿಮಾನಗಳನ್ನು ಇಳಿಸಲು (ನೈಟ್ ಲ್ಯಾಂಡಿಂಗ್) ಸೌಲಭ್ಯ ಕಲ್ಪಿಸಬೇಕಿದೆ. ಈ ಎಲ್ಲಾ ಕಾಮಗಾರಿಗಳಿಗೆ ಹೆಚ್ಚುವರಿ ಹಣ ಸುಮಾರು 40-50 ಕೋಟಿ ರೂ.ಗಳ ಅಗತ್ಯವಿದೆ. ಅದನ್ನು ರಾಜ್ಯ ಸರ್ಕಾರ ಅನುಮೋದನೆ ಮಾಡಿ ಬಿಡುಗಡೆ ಮಾಡಲಿದೆ. ಕಾಂಪೌಂಡಿನ ಹೊರಗೆ ರೈತರು ಹೊಲಗಳನ್ನು ಬಿಟ್ಟುಕೊಟ್ಟಿದ್ದು ಅವರು ಓಡಾಡಲು ತೊಂದರೆಯಾಗುತ್ತದೆ. ಅದಕ್ಕಾಗಿ ಕಾಂಪೌಂಡಿನ ಆಚೆಗೂ ಡಾಂಬರು ರಸ್ತೆ ನಿರ್ಮಿಸಲಾಗುವುದು. ಶಿವಮೊಗ್ಗದಿಂದ ವಿಮಾನ ನಿಲ್ದಾಣದ ರಸ್ತೆಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಟ್ಟಕ್ಕೆ ಅಬಿವೃದ್ಧಿ ಮಾಡಲಾಗುವುದು. ಇದರಿಂದ ಪ್ರವಾಸೋದ್ಯಮಕ್ಕೂ ಬಹಳ ದೊಡ್ಡ ಸಹಾಯಾಗಲಿದೆ.
    ಜೋಗದ ಅಭಿವೃದ್ಧಿಗೂ 300 ಕೊಟಿ ರೂ.ಗಳ ಅನುಮೋದನೆ ನೀಡಲಾಗಿದೆ. ಕೇಬಲ್ ಕಾರ್, ಓಡಾಡಲು ವ್ಯವಸ್ಥೆ, ವೀಕ್ಷಣಾ ಪಾಯಿಂಟ್, ಹೋಟೇಲ್, ಡಾರ್ಮೆಟರಿಗಳನ್ನು ನಿರ್ಮಿಸಲಾಗುವುದು. ಮಳೆಗಾಲದಲ್ಲಿ ಮಾತ್ರ ಪ್ರವಾಸಿಗರನ್ನು ಜೋಗ ಆಕರ್ಷಿಸುತ್ತದೆ ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಆದರೆ ವರ್ಷದಲ್ಲಿ 10 ತಿಂಗಳು ಜೋಗ ಜಲಪಾತವನ್ನು ಬಳಕೆ ಮಾಡಬಹುದಾಗಿದೆ ಎಂದರು.

    ಮೂಲಸೌಕರ್ಯ ಅಭಿವೃದ್ಧಿಯಿಂದ ಆರ್ಥಿಕ ಬೆಳವಣಿಗೆ :
    ಅಭಿವೃದ್ಧಿಯ ಪಥದಲ್ಲಿ ಮುಂದುವರಿಯಲು ಮೂಲಭೂತ ಸೌಕರ್ಯ ಅಭಿವೃದ್ಧಿ ಬಹಳ ಮುಖ್ಯ. ಇದರ ಮುಖಾಂತರ ಆರ್ಥಿಕ ಬೆಳವಣಿಗೆ ಸಾಧ್ಯ. ಈ ವರ್ಷ ಕೇಂದ್ರ ಸರ್ಕಾರ ಶಿವಮೊಗ್ಗ-ರಾಣಿಬೆನ್ನೂರು ಮಾರ್ಗ ಸೇರಿದಂತೆ 8 ರೈಲ್ವೆ ಯೋಜನೆಗಳಿಗೆ ಅನುಮೋದನೆ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಒಪ್ಪಂದ ಮಾಡಿಕೊಂಡು, ಜಿಎಸ್‍ಟಿ ತೆರಿಗೆ, ಅಗ್ರಿಗೇಟರ್ಸ್ ರಾಯಲ್ಟಿಯನ್ನು ಬಿಟ್ಟುಕೊಡುವ ವಿಚಾರಕ್ಕೆ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದರಿಂದ ಭೂ ಸ್ವಾಧೀನ ದರ 50 ರಿಂದ 25% ಕ್ಕೆ ಇಳಿಯಲಿದೆ. ಇದರಿಂದಾಗಿ ಬಾಕಿಯಿರುವ ರಿಂಗ್ ರಸ್ತೆ ನಿರ್ಮಾಣವನ್ನು ಸಹ ಕೈಗೆತ್ತಿಕೊಳ್ಳಲಾಗುವುದು. ಮೇಲ್ಸೇತುವೆಗಳ ನಿರ್ಮಾಣವನ್ನು ಪ್ರಾರಂಭಿಸಲಾಗುವುದು ಎಂದರು.

    ಕಾನೂನು ಕೈಗೆ ತೆಗೆದುಕೊಳ್ಳುವ ಸಾಹಸ ಮಾಡಬೇಡಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    VIJAYANAGARA APR 17

    ಯಾರೂ ಕಾನೂನು ಕೈಗೆ ತೆಗೆದುಕೊಳ್ಳುವ ಸಾಹಸ ಮಾಡಬೇಡಿ. ಕರ್ನಾಟಕ ರಾಜ್ಯ ಇದನ್ನು ಸಹಿಸುವುದಿಲ್ಲ. ಕಾನೂನು ತನ್ನ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಎಲ್ಲಾ ಸಂಘಟನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.

    ಹುಬ್ಬಳ್ಳಿಯಲ್ಲಿ ವಿವಾದಾತ್ಮಕ ಪೋಸ್ಟ್ ಗೆ ಸಂಬಂಧಿಸಿದಂತೆ ನಡೆದಿರುವ ಗಲಾಟೆ ಕುರಿತು ಅವರು ಇಂದು ಭಾ.ಜ.ಪ.ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗುಳ್ಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

    ಈಗಾಗಲೇ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಯಾರೇ ಕಾನೂನನ್ನು ಕೈಗೆ ತೆಗೆದುಕೊಂಡರೂ ಕಠಿಣ ಕ್ರಮ ತೆಗೆದುಕೊಳ್ಳಲು ಪೊಲೀಸರು ಹಿಂದೆ ಮುಂದೆ ನೋಡುವುದಿಲ್ಲ. ಇದಕ್ಕೆ ಪ್ರಚೋದನೆ ನೀಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಇದಕ್ಕೆ ರಾಜಕೀಯ ಬಣ್ಣ ನೀಡುವುದು ಬೇಡ . ಈ ಘಟನೆಯನ್ನು ಕಾನೂನಾತ್ಮಕ ಘಟನೆ ಎಂತಲೇ ಕಾಣಬೇಕು. ಅಂದಾಗ ಮಾತ್ರ ಇಂಥವು ನಿಲ್ಲುತ್ತದೆ ಎಂದರು.

    ಹುಬ್ಬಳ್ಳಿಯಲ್ಲಿ ನಿನ್ನೆ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಕೆಲಸವಾಗಿದೆ. ಪೊಲೀಸರು ವಾಟ್ಸಾಪ್ ಪೋಸ್ಟ್ ಒಂದರ ಮೇಲೆ ಕ್ರಮ ತೆಗೆದುಕೊಂಡು ಬಂಧಿಸಿ ಎಲ್ಲಾ ಕ್ರಮ ತೆಗೆದುಕೊಂಡರೂ ಕೂಡ ಪ್ರಚೋದನಕಾರಿಯಾಗಿ ಪೊಲೀಸ್ ಠಾಣೆ ಎದುರಿಗೆ ಬಂದು ಗಲಾಟೆ ಮಾಡಿ ಪೊಲೀಸರಿಗೂ ಏಟು ಬೀಳುವಂತೆ ಮಾಡಿದ್ದಾರೆ. ತದನಂತರ ಹಳೆ ಹುಬ್ಬಳ್ಳಿಯ ವಿವಿಧ ಭಾಗಗಳಲ್ಲಿ ಕಲ್ಲು ತೂರಾಟ ಮಾಡಿರುವುದು ಅಕ್ಷಮ್ಯ ಅಪರಾಧ ಎಂದರು.

    JDS:ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿಎಂ ಇಬ್ರಾಹಿಂ ಅಧಿಕಾರ ಸ್ವೀಕಾರ

    BENGALURU APR 17
    ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರು ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷರಾಗಿ ಇಂದು ಅಧಿಕಾರ ವಹಿಸಿಕೊಂಡರು.

    ಹಾಗೆಯೇ, ಹಿರಿಯ ಶಾಸಕರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಹೆಚ್.ಕೆ.ಕುಮಾರಸ್ವಾಮಿ ಅವರು ಜೆಡಿಎಸ್ ರಾಷ್ಟ್ರೀಯ ಸಂಸದೀಯ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

    ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಧ್ವಜವನ್ನು ಸ್ವೀಕರಿಸುವ ಮೂಲಕ ಈ ಇಬ್ರಾಹಿಂ ಅವರು ಪಕ್ಷದ ಚುಕ್ಕಾಣಿ ಹಿಡಿದರು.

    ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿದರು. ಅವರು ಹೇಳಿದ್ದಿಷ್ಟು;

    ನಾನು ದೇವರನ್ನು ನಂಬುತ್ತೇನೆ. ಅದಕ್ಕೆ ‌‌ಇವತ್ತು ಒಳ್ಳೆಯ ದಿನ ಎನ್ನುವ ಕಾರಣಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಇಬ್ರಾಹಿಂ ಅವರಿಗೆ ನೀಡಿದ್ದೇವೆ. ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಎಚ್.ಕೆ.ಕುಮಾರಸ್ವಾಮಿ ಅವರು ಸಂಸದೀಯ ಮಂಡಳಿ ಅಧ್ಯಕ್ಷರಾಗಿ ಎಂದು ಹೇಳಿದ ಕೂಡಲೇ ಒಪ್ಪಿಕೊಂಡರು.

    ನನಗೆ ಈಗ 90 ವರ್ಷ ವಯಸ್ಸು. ಕುಮಾರಸ್ವಾಮಿ ಅನೇಕ ಯೋಜನೆ ಮಾಡಿದ್ದಾರೆ. ಬಡವರಿಗೆ ಅನ್ಯಾಯ ಆಗಬಾರದು ಅಂತ ಅನೇಕ ಕಾರ್ಯಕ್ರಮ ರೂಪಿಸಿದ್ದಾರೆ. ರಾಜ್ಯದ ಉದ್ದಗಲಕ್ಕೂ ಈಗ ಜಲಧಾರೆ ಕಾರ್ಯಕ್ರಮ ಪ್ರಾರಂಭ ಮಾಡಿದ್ದಾರೆ.

    ಜಲಧಾರೆ ಕಾರ್ಯಕ್ರಮ ಕುಮಾರಸ್ವಾಮಿ ಅವರ ಕಲ್ಪನೆ ಕೂಸು. ಇದೊಂದು ಶ್ರೇಷ್ಠ ಕಾರ್ಯಕ್ರಮ. ಇಬ್ರಾಹಿಂ ಈ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಾರೆ. ಇದರ ನಡುವೆ ದೇವೇಗೌಡರ ಕುಟುಂಬದವರೇ ಎಲ್ಲಾ ಇದ್ದಾರೆ ಅಂತ ಅಪಪ್ರಚಾರ ಮಾಡಬಹುದು.

    ಇದು ಒಕ್ಕಲಿಗರ ಪಾರ್ಟಿ ಅಂತ ಹೇಳಿದರು. ಬರೀ ಸುಳ್ಳು ಹೇಳುತ್ತಾರೆ. ಅಪಪ್ರಚಾರ ಮಾಡಿದರು. ನಾನು ಮಂತ್ರಿ ಮಂಡಲ ರಚನೆ ಮಾಡಿದಾಗ ಒಕ್ಕಲಿಗರು ಇದ್ದದ್ದು 4 ಜನ ಮಾತ್ರ. ಓಬಿಸಿ, ಎಸ್ಸಿ, ಎಸ್ಟಿಗೆ ಹೆಚ್ಚು ಸ್ಥಾನ ಕೊಟ್ಟಿದ್ದೆ. ಎಲ್ಲಾ ವರ್ಗದವರನ್ನು ಗುರುತಿಸಿ ನಾನು ‌ಮಂತ್ರಿಮಂಡಲ ಮಾಡಿದೆ. ಮುಸ್ಲಿಮರಿಗೆ ಮೀಸಲಾತಿ ತಂದಿದ್ದು ನಾನು.

    ಮಿಷನ್ 123 ಸಾಕಾರ ಆಗುತ್ತದೆ. ಭಗವಂತನ ಅನುಗ್ರಹದಿಂದ ಈ ಪಕ್ಷ ಉಳಿಯುತ್ತದೆ. ಈ‌ ಪಕ್ಷವನ್ನು ಯಾರಿಂದಲೂ ತುಳಿಯಲು ಸಾಧ್ಯವಿಲ್ಲ. ಅಂದು ನಾವು ಮಾಡಿದ ಒಳ್ಳೆಯ ಕೆಲಸಕ್ಕೆ ಅವತ್ತು 16 ಎಂಪಿ ಸ್ಥಾನ ಗೆದ್ದೆವು. ಇನ್ನು ಮುಂದೆ ಜೆಡಿಎಸ್ ಅನ್ನು ಒಕ್ಕಲಿಗರ ಪಕ್ಷ ಅಂತ ಯಾರೂ ಹೇಳಬಾರದು. ಅಂತಹ ಮಾತುಗಳಿಗೆ ಇಬ್ರಾಹಿಂ ತಕ್ಕ ಉತ್ತರ ನೀಡುತ್ತಾರೆ. ನಾನು ‌‌ ಕುಳಿತುಕೊಳ್ಳೊಲ್ಲ. ಪಕ್ಷದ ಪರವಾಗಿ ನಾನು ದುಡಿಮೆ ಮಾಡ್ತೀನಿ.

    ಮಾಜಿ ಮುಖ್ಯಮಂತ್ರಿ ಎಚ್ ಡಿಕೆ ಹೇಳಿದ್ದು:

    ಎರಡು ವರ್ಷಗಳ ಕಾಲ ಕಷ್ಟದ ಕಾಲದಲ್ಲೂ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿದ್ದರು ಎಚ್.ಕೆ.ಕುಮಾರಸ್ವಾಮಿ ಅವರು. ಇಬ್ರಾಹಿಂ ಅವರು ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದ ಮತ್ತೆ ಮರಳಿ ಮನೆಗೆ ಬಂದಿದ್ದಾರೆ.

    ರಾಜ್ಯದಲ್ಲಿ ಜಲಧಾರೆ ಕಾರ್ಯಕ್ರಮ ಆರಂಭವಾಗಿದೆ. 15 ಕಡೆ ಒಂದೇ ಬಾರಿಗೆ ನೀರು ತುಂಬುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಇಬ್ರಾಹಿಂ ಅವರ ಸೇರ್ಪಡೆ ಒಂದು ಸಮಾಜವನ್ನು ಓಲೈಕೆ ಮಾಡಲು ಅಲ್ಲ. ನಾನು ಸ್ಪಷ್ಟವಾಗಿ ಹೇಳ್ತಿನಿ ನಾನು ಓಲೈಸಲು ಈ ಕೆಲಸ ಮಾಡ್ತಾ ಇಲ್ಲ. ಒಂದು ಸಮಾಜದ ಪರವಾಗಿ ನಾನು ಇಲ್ಲ. ಸರ್ವ ಜನಾಂಗದ ಶಾಂತಿಯ ತೋಟ ಅಂತ ಕುವೆಂಪು ಹೇಳಿದ್ದಾರೆ. ಇದನ್ನು ಉಳಿಸಲು ಹೋರಾಟ ಮಾಡಬೇಕಿದೆ.

    ಪದಗ್ರಹಣ ಸಮಾರಂಭದಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಷೆಂಪೂರ್, ಶಾಸಕರಾದ ಕೆ.ಎಂ.ಕೃಷ್ಣಾರೆಡ್ಡಿ, ದಾಸರಹಳ್ಳಿ ಮಂಜುನಾಥ್, ಮುಖಂಡರಾದ ನಬಿ, ಟಿ.ಎ.ಶರವಣ, ಜಪ್ರುಲ್ಲಾ ಖಾನ್, ಪಕ್ಷದ ನಗರ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

    Indian Stock Market: ಇಂದಿನ ಪೇಟೆಗೆ ಬೇಕು REAL TIME MARKET STRATEGY !

    ಆರ್ಥಿಕ ಸಾಕ್ಷರತೆ ಎಂದರೆ ಕೈ ತುಂಬಾ ಹಣ ಸಂಪಾದನೆ ಮಾಡಿ ಬ್ಯಾಂಕ್‌ ಖಾತೆಯಲ್ಲಿ ತುಂಬಿಸಿ, ಐಶಾರಾಮಿ ಬಂಗಲೆ, ಕಾರುಗಳನ್ನು ಹೊಂದಿ ಹಣವನ್ನು ನೀರಿನಂತೆ ವೆಚ್ಚ ಮಾಡುವುದರೊಂದಿಗೆ, ಅವಶ್ಯವೋ, ಅನಾವಶ್ಯವೋ ನೋಡಿದ್ದನ್ನೆಲ್ಲಾ ಖರೀದಿಸುತ್ತಾ, ಕ್ರೆಡಿಟ್‌ ಕಾರ್ಡ್‌ ಗಳನ್ನು ಉಜ್ಜುತ್ತಾ, ಮಾಸಾರಂಭದಿಂದ ಅಂತ್ಯದವರೆಗೂ ತೆರಬೇಕಾದ ಇ ಎಂ ಐ ಗಳ ಕೊರತೆಯನ್ನು ಸರಿಪಡಿಸಿಕೊಳ್ಳುವುದಲ್ಲ. ಲಭ್ಯವಿರುವ ಹಣವನ್ನು ಸದ್ವಿನಿಯೋಗ ಮಾಡುವುದರೊಂದಿಗೆ, ಸರಿಯಾಗಿ ನಿರ್ವಹಿಸುವುದರೊಂದಿಗೆ, ನೆಮ್ಮದಿ, ಶಾಂತಿ, ಸಂತೋಷಗಳನ್ನು ಪಡೆದುಕೊಳ್ಳುವುದಾಗಿದೆ.

    ಈ ಹಿಂದೆ ಉಳಿತಾಯ ಎಂಬುದು ಗಳಿಸಿದ ಹಣದಲ್ಲಿನ ಪ್ರಕ್ರಿಯೆಯಾಗಿದ್ದರೆ, ಈಗ ವೆಚ್ಚ ಮಾಡುವ ಹಣದ ಪ್ರಕ್ರಿಯೆಯಾಗಿದೆ. ಗಳಿಸಿದ ಹಣದಿಂದ ಉಳಿತಾಯ ಮಾಡಿದಲ್ಲಿ, ಉಳಿಸಿದ ಹಣವು ಬೆಳೆಸಲೂ ಸಹ ಅವಕಾಶವಿದ್ದು, ಅವಶ್ಯವಿರುವ ಸಮಯದಲ್ಲಿ ಬಳಕೆಮಾಡಿಕೊಳ್ಳಲು ಲಭ್ಯವಿರುವುದರಿಂದ ಹೊರಗಿನ ಸಾಲಗಳಿಗೆ ಮೊರೆಹೋಗುವ ಅವಶ್ಯಕತೆ ಇರುವುದಿಲ್ಲ. ಆದರೆ ವೆಚ್ಚ ಮಾಡುವ ಹಣದಲ್ಲಿ ಉಳಿತಾಯ ಎಂದರೆ ಅದು ಲಭ್ಯತೆಗಿಂತ ಸ್ವಲ್ಪಮಟ್ಟಿನ ಬಾಧ್ಯತೆಯನ್ನು, ಇ ಎಂ ಐ ಮೊಟಕುಗೊಳಿಸುವ ಮೂಲಕ ಸಹಕಾರಿಯಾಗಬಹುದಷ್ಠೆ. ಅವಶ್ಯಕತೆ ಎನಿಸಿದಾಗ ಲಭ್ಯವಿರುವುದಿಲ್ಲ.

    ಇಂದಿನ ದಿನಗಳಲ್ಲಿ ಹೂಡಿಕೆದಾರರು ಹೂಡಿಕೆಯ ಮೂಲ ಉದ್ದೇಶಗಳನ್ನೇ ಮರೆತು ಕೇವಲ ಭಾವನಾತ್ಮಕ, ಕಾಲ್ಪನಿಕ, ವರ್ಣನಾತ್ಮಕ, ಚಿಂತಾಜನಕಾತ್ಮಕ ಶೈಲಿಗಳಿಗೆ ಮಾರು ಹೋಗಿ ತಮ್ಮ ಹೂಡಿಕೆಯ ಹಣವನ್ನುತಳ್ಳುವುದು ಹವ್ಯಾಸ ಮಾಡಿಕೊಂಡಿದ್ದಾರೆ. ಹೂಡಿಕೆಯ ಮೂಲ ಉದ್ದೇಶ ಎಂದರೆ ಹೂಡಿಕೆ ಮಾಡಿದ ಹಣವನ್ನು ಸುರಕ್ಷಿತಗೊಳಿಸಿ ಅದನ್ನು ಬೆಳೆಯುವಂತೆ ಮಾಡುವುದರೊಂದಿಗೆ ಹೆಚ್ಚಿನ ನಿಯತಕಾಲಿಕ ಆದಾಯವನ್ನೂ ಸಹ ಒದಗಿಸುತ್ತದೆಯೇ ಎಂಬುದಾಗಿರಬೇಕು. ಷೇರುಪೇಟೆಯೊಂದೇ ಈ ರೀತಿಯ ಸವಲತ್ತುಗಳನ್ನು ಒದಗಿಸಲು ಸಾಧ್ಯ. ಆದರೆ ನಾವುಗಳು ನಮ್ಮ ತಪ್ಪು ಕಲ್ಪನೆಗಳಿಗೊಳಗಾಗಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳಿಂದ ಹಾನಿಗೊಳಗಾಗುತ್ತೇವೆ. ಕೆಲವೊಮ್ಮೆ ಉತ್ತಮ ಅವಕಾಶ ಕಂಡರೂ ಮತ್ತಷ್ಠು ಹೆಚ್ಚಿನ ಆದಾಯದ ಆಸೆಯಿಂದ ಅವಕಾಶಗಳನ್ನು ಕಳೆದುಕೊಳ್ಳುತ್ತೇವೆ. ಅದು ಇಂದಿನ ಪೇಟೆಯಲ್ಲಿ ಹೆಚ್ಚಿನ ಸಣ್ಣ ಹೂಡಿಕೆದಾರರ ಸ್ಥಿತಿಗೆ ಹಿಡಿದ ಕನ್ನಡಿಯಾಗಿರುತ್ತದೆ.

    ಪರಿಸ್ಥಿತಿ ಪರಿವರ್ತನೆ:

    ಹೆಚ್ಚಿನ ಹೊಸ ಹೂಡಿಕೆದಾರರು ಷೇರುಪೇಟೆಯ ಹಿಂದಿನ ವರ್ಷಗಳ ಫಲಾಫಲಗಳನ್ನು ಆಧಾರವಾಗಿಟ್ಟುಕೊಂಡು ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇನ್ಫೋಸಿಸ್‌ ನ ಐ ಪಿ ಒ ನಲ್ಲಿ ಷೇರು ಅಲಾಟ್ ಆದವರು ಕೋಟಿಗಟ್ಟಲೆ ಹಣ ಮಾಡಿಕೊಂಡಿದ್ದಾರೆ. ಅದೇ ತರಹ ಈಗಲೂ ನಾವು ಹೂಡಿಕೆಯನ್ನು ಐ ಪಿ ಒ ಗಳಲ್ಲಿ ತೊಡಗಿಸಿದಲ್ಲಿ ಹಣ ಗಳಿಸಬಹುದೆಂಬ ಭ್ರಮೆಯಿಂದ ಹೂಡಿಕೆಗೆ ಮುಂದಾಗುತ್ತಾರೆ. ಆದರೆ ಬದಲಾದ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಹಿಂದಿನ ಚಿಂತನೆಗಳನ್ನೇ ಅಳವಡಿಸಿಕೊಂಡಲ್ಲಿ ಬಂಡವಾಳಕ್ಕೆ ಕುತ್ತು ತಂದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

    ಇನ್ಫೋಸಿಸ್‌ ಐ ಪಿ ಒ ಬಂದ ಸಮಯದಲ್ಲಿ ಆ ಕಂಪನಿಗೆ ತಮ್ಮ ಚಟುವಟಿಕೆಯನ್ನು ಅಭಿವೃದ್ಧಿಪಡಿಸಿ, ವಿಸ್ತರಿಸಿ, ಉದ್ದೇಶ ಸಾಫಲ್ಯತೆಗೆ ಸಂಪನ್ಮೂಲದ ಅವಶ್ಯಕತೆ ಇತ್ತು. ಆ ಕಾರಣದಿಂದಾಗಿ ಐ ಪಿ ಒ ತೇಲಿಬಿಟ್ಟು ಸಂಪನ್ಮೂಲ ಸಂಗ್ರಹಣೆ ಮಾಡಿ ತಮ್ಮೊಂದಿಗೆ ಷೇರುದಾರರನ್ನೂ ಸಹ ಹರ್ಷಿತಗೊಂಡು, ಭಾವನಾತ್ಮಕ ಬಾಂಧವ್ಯಕ್ಕೆ ನಾಂದಿ ಹಾಡಿತು.

    ಆದರೆ ಈಗಿನ ಐ ಪಿ ಒ ಗಳ ಉದ್ದೇಶವೇ ಬೇರೆ. ಆ ಕಂಪನಿಗಳು ಸದೃಢವಾಗಿದ್ದು, ಸಂಪನ್ಮೂಲದ ಅಗತ್ಯತೆ ಇರುವುದಿಲ್ಲ, ಆದರೆ ಕಂಪನಿಯ ಪ್ರವರ್ತಕರು, ಖಾಸಗಿ ಹೂಡಿಕೆದಾರರು ಪೇಟೆಯು ಉತ್ತುಂಗದಲ್ಲಿರುವಾಗ, ಸಂದರ್ಭವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು ಲಾಭ ಪಡೆವ ದೃಷ್ಠಿಯಿಂದ ಐ ಪಿ ಒ ಗಳನ್ನು ತೇಲಿಬಿಡುತ್ತಾರೆ ಇದರೊಂದಿಗೆ ಆಫರ್‌ ಫಾರ ಸೇಲ್‌ ನ್ನು ಲಗತ್ತಿಸುತ್ತಾರೆ. ಇವೆರಡಕ್ಕೂ ವಿತರಣೆ ಬೆಲೆ ಒಂದೇ ಇರುತ್ತದೆ. ಇಲ್ಲಿ ನಿಗದಿಪಡಿಸುವ ಪ್ರೀಮಿಯಂ ಇತ್ತೀಚಿನ ದಿನಗಳಲ್ಲಿ ಅತ್ಯಧಿಕಾವಾಗಿರುತ್ತದೆ. ಇನ್ಫೋಸಿಸ್‌ ಷೇರು ವಿತರಣೆಯಾದ ಮೇಲೆ ಬಂದಂತಹ ಅನೇಕ ಕಂಪನಿಗಳು ಹೇಳ ಹೆಸರಿಲ್ಲದೆ ಹೂಡಿಕೆದಾರರ ಬಂಡವಾಳವನ್ನು ಕರಗಿಸಿ ಮಾಯವಾಗಿರುವ ಅನೇಕ ನಿದರ್ಶಗಳಿವೆ.

    ಒಂದು ಸಮಯದಲ್ಲಿ ರೂ.3 ಸಾವಿರದ ಗಡಿ ದಾಟಿದ್ದ ಡಿ ಎಸ್‌ ಕ್ಯು ಸಾಫ್ಟ್‌ ವೇರ್‌, ಒಂದು ಸಾವಿರ ರೂಪಾಯಿಗಳ ದಾಟಿದ್ದ ಸಿಲ್ವರ್‌ ಲೈನ್‌, ಸಮೀಪವಿದ್ದ ರೋಲ್ಟಾ ಇಂಡಿಯಾ, ರೂ. 3,000 ಕ್ಕೂ ಹೆಚ್ಚಿನ ಬೆಲೆಯಲ್ಲಿದ್ದ ಹಿಮಾಚಲ್‌ ಫ್ಯೂಚರಿಸ್ಟಿಕ್‌ ಈಗ ಎರಡಂಕಿಗಳಲ್ಲಿದೆ, ಪೆಟಾಮೀಡಿಯಾ ಗ್ರಾಫಿಕ್ಸ್‌ ಏಕ ಅಂಕಿಯಲ್ಲಿದೆ. ಆಲ್ಪ್ಸ್‌ ಇನ್ಫೋಸಿಸ್, ಕಂಪ್ಯೂಡೈನ್‌ ವಿನ್ ಫೊಸಿಸ್‌, ಐ ಸಿ ಇ ಎಸ್‌ ಸಾಫ್ಟ್‌ ವೇರ್‌, ಇನ್ಫರ್ಮೇಷನ್‌ ಟೆಕ್ನಾಲಜೀಸ್‌ ಇಂಡಿಯಾ, ನೆಕ್ಸಸ್‌ ಸಾಫ್ಟ್ವೇರ್‌, ಪದ್ಮಿನಿ ಟೆಕ್ನಾಲಜೀಸ್‌, ಶಾಲಿಭದ್ರ ಇನ್ಫೋಸೆಕ್‌, ಸಾಫ್ಟ್‌ ಟ್ರಾಕ್‌ ಟೆಕ್ನಾಲಜೀಸ್‌ ಗಳಲ್ಲಿ ಹೂಡಿಕೆ ಮಾಡಿದವರು ಶಾಶ್ವತ ಹೂಡಿಕೆದಾರರಾಗಿ ಪರಿವರ್ತಿತಗೊಂಡಿದ್ದಾರೆ. ಕಾರಣ ಈ ಕಂಪನಿಗಳು ವಹಿವಾಟಿನಿಂದ ಡೀಲೀಸ್ಟ್‌ ಆಗಿವೆ.

    ಹೊಸ ಷೇರು ಮತ್ತು ಆಫರ್‌ ಫಾರ್‌ ಸೇಲ್:

    ಐ ಪಿ ಒ ನಲ್ಲಿ ಹೊಸ ಷೇರುಗಳು ಬಿಡುಗಡೆಯಾದಲ್ಲಿ ಆ ಹಣವು ನೇರವಾಗಿ ಕಂಪನಿಯ ಖಜಾನೆಗೆ ಸೇರಿಕೊಳ್ಳುತ್ತದೆ. ಆದರೆ ಆಫರ್‌ ಫಾರ್‌ ಸೇಲ್‌ ನಲ್ಲಿ ವಿತರಣೆಯಾಗುವ ಷೇರುಗಳ ಮೊತ್ತವು ಮಾರಾಟಮಾಡುತ್ತಿರುವ ಪ್ರವರ್ತಕರು ಮತ್ತು / ಅಥವಾ ಖಾಸಗಿ ವಿತರಕರ ಕಿಸೆ ಸೇರಿ ಕಂಪನಿಗೆ ಯಾವುದೇ ಅನುಕೂಲ ಕಲ್ಪಿಸುವುದಿಲ್ಲ. ಕೆಲವು ಬಾರಿ ವಿತರಣೆಗೊಳ್ಳುತ್ತಿರುವ ಐಪಿಒ ಗಳು ಕೇವಲ ಆಫರ್‌ ಫಾರ್‌ ಸೇಲ್‌ ಮಾತ್ರವಿದ್ದು, ಹೊಸ ಷೇರು ವಿತರಣೆ ಇರುವುದಿಲ್ಲ. ಅಂತಹ ಕಂಪನಿಗಳು ಸಂಗ್ರಹಿಸಿದ ಹಣವು ನೇರವಾಗಿ ಕಂಪನಿಗೆ ಸೇರದೆ ಮಾರಾಟಮಾಡುವವರ ಖಜಾನೆಗೆ ಸೇರುವುದು.

    ಹಿಂದೆ ಇನ್ಫೋಸಿಸ್‌ ನಂತಹ ಕಂಪನಿಗಳು ಷೇರು ವಿತರಣೆಯ ಸಂದರ್ಭದಲ್ಲಿ ಹೂಡಿಕೆದಾರರ ಹಿತದಿಂದ ನಿಗದಿಪಡಿಸುತ್ತಿದ್ದ ಪ್ರೀಮಿಯಂ ಕಡಿಮೆ ಇರುತ್ತಿತ್ತು ಆದರೆ ಈಗ ಹೂಡಿಕೆದಾರರಿಂದ ಸಂಗ್ರಹಿಸಿ ಪ್ರವರ್ತಕರು, ಮತ್ತು ಫಂಡಿಂಗ್‌ ಮಾಡಿರುವವರ ಹಿತದಿಂದ ಪ್ರೀಮಿಯಂ ನಿಗದಿಪಡಿಸಲಾಗುತ್ತಿದೆ. ಇದು ಸ್ವಹಿತಾಸಕ್ತ ಚಟುವಟಿಕೆಯಂತಾಗಿದೆ. ಅಂದರೆ ಐ ಪಿ ಒ ಗಳು ಪ್ರಾಫಿಟಬಲ್‌ ಅನ್ನುವುದಕ್ಕಿಂತ ಚಾರಿಟಬಲ್‌ ರೀತಿಯಾಗುತ್ತಿದೆ. ಐಪಿಒ ಗಳಲ್ಲಿ ಅಲಾಟ್ಮೆಂಟ್‌ ಆದಲ್ಲಿ ಬರಬಹುದಾದ ಲಾಭದ ಹೆಚ್ಚಿನ ಪ್ರಮಾಣವನ್ನು ವಿತರಕರೇ ಸೆಳೆದುಕೊಳ್ಳುವುದರಿಂದ ಆ ಹೂಡಿಕೆ ಹೇಗೆ ಲಾಭದಾಯಕವಾಗುವುದು?

    ಹೂಡಿಕೆ ಹೇಗಿರಬೇಕು?

    ಷೇರುಪೇಟೆಯಲ್ಲಿ ನಡೆಸುವ ಚಟುವಟಿಕೆ ಹೂಡಿಕೆಯಾಗಲಿ ಅಥವಾ ವ್ಯವಹಾರಿಕತೆಯಿಂದಾಗಲಿ ಯಶಸ್ಸು ಕಂಡು ಫಲಪ್ರದವಾಗಲು ಅನುಸರಿಸಬೇಕಾದ ರೀತಿ ಹೇಗಿರಬೇಕೆಂದರೆ ಹೂಡಿಕೆ ಮಾಡಿದ ಷೇರಿನ ಬೆಲೆಯಲ್ಲೂ ಏರಿಕೆ ಕಾಣುವುದರೊಂದಿಗೆ ಆಕರ್ಷಕ ಡಿವಿಡೆಂಡ್‌ ನೀಡುವ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದು ಕಂಪನಿಯು ತನ್ನ ಫಲಿತಾಂಶ ಪ್ರಕಟಿಸಿದಾಗ, ಕಾರ್ಪೊರೇಟ್‌ ಫಲಗಳಾದ ಲಾಭಾಂಶ, ಬೋನಸ್‌ ಗಳನ್ನು ಪ್ರಕಟಿಸಿದಾಗ, ಅಥವಾ ಇತರೆ ಬೆಳವಣಿಗೆಗಳು ಎಂದರೆ, ವಿಲೀನ, ಸಮ್ಮಿಲನ, ಮಿಲನ, ಇತರೆ ಕಂಪನಿಗಳೊಂದಿಗೆ ಮಾಡಿಕೊಂಡ ಒಪ್ಪಂದ ಮುಂತಾದವುಗಳನ್ನು ಪ್ರಕಟಿಸಿದಾಕ್ಷಣ ಕಂಡ ಬೆಲೆ ಏರಿಕೆಗೆ ಹೊಸ ಹೂಡಿಕೆಗೆ ಸ್ಪಂದಿಸದೆ, ಸ್ವಲ್ಪ ಸಮಯದ ನಂತರ ಷೇರಿನ ಬೆಲೆ ಕುಸಿತ ಕಂಡಾಗ ಅದನ್ನು ವ್ಯಾಲ್ಯು ಪಿಕ್‌ ಎಂದು ಹೂಡಿಕೆಗೆ ಆಯ್ಕೆ ಮಾಡಿಕೊಂಡಲ್ಲಿ ಉತ್ತಮ ಫಲ ಪಡೆಯಲು ಸಾಧ್ಯ.

    ಆಯ್ಕೆ ಮಾಡಬೇಕಾಗಿರುವ ಕಂಪನಿ ಉತ್ತಮವಾಗಿದ್ದರೂ ಖರೀದಿಸುವ ಸಮಯದಲ್ಲಿ ಅದು ಇಳಿಕೆಯಲ್ಲಿದ್ದು ಉತ್ತಮ ಮೌಲ್ಯಾದಾರಿತವಾಗಿರಬೇಕು. ಆದರೆ ಷೇರಿನ ಬೆಲೆಯೇ ಗರಿಷ್ಠದಲ್ಲಿದ್ದಾಗ ಖರೀದಿ ಮಾಡಿದಲ್ಲಿ ಆ ಹೂಡಿಕೆಯು ಚಾರಿಟಬಲ್‌ ಶೈಲಿಯಾಗುತ್ತದೆಯೇ ಹೊರತು, ಲಾಭ ಗಳಿಕೆಯ ದೃಷ್ಠಿಯಿಂದ ಸರಿಯಲ್ಲ. ಷೇರಿನ ಬೆಲೆ ಗರಿಷ್ಠದಲ್ಲಿದ್ದಾಗ ಮಾರಾಟಮಾಡಿ ಹೊರಬಂದು, ಮತ್ತೊಮ್ಮೆ ಕುಸಿದಾಗ ಅದನ್ನೇ ಮರುಖರೀದಿ ಮಾಡಿದಲ್ಲಿ ಹೂಡಿಕೆಯ ಹೊರೆಯನ್ನು ತಗ್ಗಿಸಿಕೊಂಡಂತಾಗಿ ಹೂಡಿಕೆ ಫಲಪ್ರದವಾಗುತ್ತದೆ. ಉತ್ತಮ ಸಾಧನೆಯ ಅಗ್ರಮಾನ್ಯ ಕಂಪನಿಗಳೂ ಇತ್ತೀಚಿನ ದಿನಗಳಲ್ಲಿ ವೈವಿಧ್ಯಮಯ ಕಾರಣಗಳಿಂದ ಭಾರಿ ಏರಿಳಿತ ಪ್ರದರ್ಶಿಸುವ ಕಾರಣ ದೀರ್ಘಕಾಲೀನ ಹೂಡಿಕೆಯ ಚಿಂತನೆಯಿಂದ ಅವಕಾಶ ವಂಚಿತರಾಗುವಂತೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬ್ಯಾಂಕ್‌ ಗಳ RTGS ಶೈಲಿಯಂತೆ ಷೇರುಪೇಟೆಯ ಚಟುವಟಿಕೆಯಲ್ಲಿ RTMS ( REAL TIME MARKET STRATEGY) ನಿಯಮ ಅಳವಡಿಸಿಕೊಂಡು ಬಂಡವಾಳ ಸುರಕ್ಷತೆಯೊಂದಿಗೆ ಬೆಳೆಸುವ ಪ್ರಯತ್ನವು ಒಳಿತಲ್ಲವೇ?

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    JIVA at Home : UVನೀರೇ ಆಗಲಿ ROನೀರೇ ಆಗಲಿ ಅದು JIVA ಮೂಲಕವೇ ಹಾದು ಬರಲಿ

    ಡಾ. ಕೃಷ್ಣ ಮಾದಪ್ಪ

    ವಿಶ್ವಾದಾದ್ಯಂತ ಈಗಲೂ ಕೋಟ್ಯಂತರ ಜನರು ಕುಡಿಯಲು ಶುದ್ಧ ನೀರು ಸಿಗದೆ ಪರದಾಡುತ್ತಿದ್ದಾರೆ.  ಸರಕಾರಗಳು ಹಲವು ಹತ್ತು ಯೋಜನೆಗಳನ್ನು ರೂಪಿಸಿದ್ದರೂ  ಅವುಗಳ ಪ್ರಯೋಜನ ಎಲ್ಲರಿಗೂ ಸಿಗುತ್ತಿಲ್ಲ.

    ನೀರಿನಿಂದಲೇ ಜೀವನ. ನೀರು ಇಲ್ಲದಿದ್ದರೆ ಜೀವನವಿಲ್ಲ ಎಂದು ಹೇಳುವಷ್ಟು ನೀರಿನ ಅಗತ್ಯ ಸರ್ವ ಜೀವಿಗಳಿಗೂ ಇದೆ. ಮನುಷ್ಯನ ದೇಹದಲ್ಲಿ ಶೇ 65 ಭಾಗ ನೀರಾದರೆ, ಅಂಬಲಿ ಮೀನಿನ ದೇಹದಲ್ಲಿ ಶೇ 95 ಭಾಗ ನೀರು ಇದೆ. ಅದೇ ರೀತಿ ಜಲವಾಸದ ಸಸ್ಯಗಳಲ್ಲಿ ಶೇಕಡಾ 70 ರಿಂದ 80 ಭಾಗ ನೀರು ಇದ್ದರೆ, ಶುಷ್ಕಪ್ರದೇಶದ ಕೆಲವು ಸಸ್ಯಗಳು ಕೇವಲ ಪ್ರತಿಶತ 4 ರಿಂದ 5 ರಷ್ಟು ಮಾತ್ರ ನೀರನ್ನು ಉಳಿಸಿಕೊಂಡು ಬದುಕುತ್ತವೆ.

    ಭೂಮಿಯ ಸುಮಾರು ಶೇ 70 ಭಾಗ ನೀರಿನಿಂದ ಆವರಿಸಿಕೊಂಡಿದೆ. ಈ 70 ಶೇಕಡ ನೀರಿನಲ್ಲಿ ಶೇಕಡ 97.5ರಷ್ಟು ಭಾಗ ಸಮುದ್ರದ ಉಪ್ಪುನೀರಿನ ರೂಪದಲ್ಲಿದೆ. ಉಳಿದ ಶೇಕಡ 2.5ರಷ್ಟು ನೀರಿನಲ್ಲಿ ಶೇಕಡ 90 ರಷ್ಟು ನೀರಿನ ಪ್ರಮಾಣ ಮಂಜುಗಡ್ಡೆಯ ರೂಪದಲ್ಲಿದೆ. ಇನ್ನುಳಿದ ಶೇಕಡ 0.26 ಭಾಗ ನೀರು ಮಾತ್ರ ಭೂಚರ ಜೀವಿಗಳಿಗೆ ಬಳಸಲು ಯೋಗ್ಯವಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯ ಏನೆಂದರೆ ನೀರು ಭೂಮಿಯಲ್ಲಿ ಎಲ್ಲಾ ಕಡೆ ಸಮ ಪ್ರಮಾಣದಲ್ಲಿ ವಿತರಣೆಯಾಗಿಲ್ಲ. ಇರುವ ಪ್ರಮಾಣದ ಎಲ್ಲಾ ನೀರು ಬಳಸಲು ಯೋಗ್ಯವೂ ಅಲ್ಲ .

    ಇನ್ನು ಕೆಲವರಿಗೆ ಸುರಕ್ಷಿತ ನೀರು ಮರೀಚಿಕೆ

    ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ  ವಿಶ್ವದ ಒಟ್ಟಾರೆ ಜನಸಂಖ್ಯೆಯ ಶೇಕಡ 75 ರಷ್ಟು ಮಂದಿಗೆ (5.8 ಬಿಲಿಯನ್) ಮಾತ್ರ ಸುರಕ್ಷಿತವಾದ ನೀರು ಬಳಸಲು ಸಿಗುತ್ತಿದೆ.  ಇನ್ನುಳಿದವರು  ಕಲುಷಿತ ನೀರನ್ನೇ ಸೇವಿಸಬೇಕಾದ ಸ್ಥಿತಿ ಇದೆ. ವಿಶ್ವದಲ್ಲಿ 2 ಬಿಲಿಯನ್ ಮಂದಿ ಈಗಲೂ ಅಸುರಕ್ಷಿತ ನೀರನ್ನೇ ಬಳುಸುತ್ತಿದ್ಗಾರೆ. ಒಂದು ಅಂದಾಜಿನ ಪ್ರಕಾರ ಪ್ರತಿವರ್ಷ 4 85 000  ಮಂದಿ ಜಲ ಸಂಬಂಧೀ ರೋಗಗಳಿಗೆ ಬಲಿಯಾಗುತ್ತಿದ್ದಾರೆ.

    ಭಾರತದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಮೋದಿ ಸರಕಾರ ಬಂದ ನಂತರ ಜಲಶಕ್ತಿ ಮಿಷನ್  ಮೂಲಕ ಗ್ರಾಮೀಣ ನೀರು ಪೂರೈಕೆಗೆ ಆದ್ಯತೆ ನೀಲಾಗಿದೆಯಾದರು ಇನ್ನು  ಗುರಿ ತಲುಪಲು ಸಾಧ್ಯವಾಗಿಲ್ಲ. 2015ರ ವೇಳೆಗೆ ಭಾರತದಲ್ಲಿ ವ್ವವಸ್ಥಿತ ನೀರು ಸರಬರಾಜಿನಲ್ಲಿ ಶೇಕಡ  92 ರಷ್ಟು ಪ್ರಗತಿ ಸಾಧಿಸಲಾಗಿದೆ.  ಆದರೆ ಸುರಕ್ಷಿತ ನೀರಿನ ಬಳಕೆ  ಜನಸಂಖ್ಯೆಯ ಶೇಕಡ 50ನ್ನು ದಾಟಿಲ್ಲ.  ರಾಸಾಯನಿಕ ಯುಕ್ತ, ಫ್ಲೋರೈಡ್ ಯುಕ್ತ ನೀರಿನಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ.

    ಜನಶಕ್ತಿ ಮಿಷನ್ ಕೊಳವೆ ಮೂಲಕ ಮನೆಗಳಿಗೆ ತಲುಪುಸುತ್ತಿರುವ ನೀರಿನ ಚಿತ್ರಣ ಗಮನಿಸಿ.

    ಸುರಕ್ಷತೆಯ ಹೆಸರಲ್ಲಿ ರಸಾಯಿನಿಕ ಬಳಕೆ

    ಮನೆ ಮನೆಗೆ ನೀರನ್ನೇನೋ ನಾವು ತಲುಪಿಸುತ್ತಿದ್ದೇವೆ.ಆದರೆ ನೀರನ್ನು ಸುರಕ್ಷಿತ ಗೊಳಿಸುವ ನಿಟ್ಟಿನಲ್ಲಿ ಅನೇಕ ರಸಾಯಿನಿಕಗಳನ್ನು ಬಳಸುವ ನಾವು ಒಂದು ಪ್ರಮುಖ ಅಂಶವನ್ನು ಮರೆತು ಬಿಡುತ್ತೇವೆ.  ಪರಿಶುದ್ಧವಾದ ನೀರಿಗೆ ವಾಸನೆ , ಬಣ್ಣ ಮತ್ತು ಆಕಾರವಿಲ್ಲವೆಂದು    ವಿಜ್ಞಾನ ಹೇಳುತ್ತದೆ.  ಅದರ ಜೊತೆಗೆ ಅದರಲ್ಲಿ ಶಕ್ತಿಯೂ ಇರುತ್ತದೆ. ಆದರೆ ನಾವು ಸುರಕ್ಷತೆಯ ಹೆಸರಲ್ಲಿ ನೀರಿನ ಅಸಲಿ ಗುಣವನ್ನೇ ಕೊಲ್ಲುತ್ತಿದ್ದೇವೆ.   ಶಕ್ತಿ ಇಲ್ಲದ ನೀರು ಅನೇಕ  ರೋಗಗಳಿಗೆ ಕಾರಣವಾಗುತ್ತಿದೆ.

    ನೀರಿನ ಸುರಕ್ಷಿತ ಗೊಳಿಸುಸ ನಿಟ್ಟಿನಲ್ಲಿ ನಾವು ಅದಕ್ಕೆ ಸಾಮಾನ್ಯವಾಗಿ ಇಂದು  Reverse Osmosis ಟ್ರೀಟ್ ಮೆಂಟ್ ಕೊಡುತ್ತಿದ್ದೇವೆ. ನಗರ ಪ್ರದೇಶಗಳಲ್ಲಿ ಅನೇಕ ಕಡೆ ಸುರಕ್ಷಿತ ನೀರಿಗಾಗಿ RO ಪ್ಲಾಂಟ್ ಗಳನ್ನು ನಿರ್ಮಿಸಿರುವುದನ್ನು ಕಾಣುತ್ತಿದ್ದೇವೆ. ಆದರೆ ಇದು ಎಷ್ಟರ ಮಟ್ಟಿಗೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು ಎಂಬ ಅಧ್ಯಯನ ನಡೆದಿರಲಿಲ್ಲ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಇಂಥ ನೀರು ಆರೋಗ್ಯದ ದೃಷ್ಟಿಯಿಂದ ಉತ್ತಮ ಅಲ್ಲ ಎಂದು ಹೇಳಿರುವುದು ಅನೇಕ ಪ್ರಶ್ನೆಗಳನ್ನು ಎತ್ತಿದೆ.

    The presence of minimum/optimum concentration of calcium and magnesium in drinking water signify “energy content”. RO machines are very effective in cleaning water, but they remove calcium and magnesium, the elements responsible for producing energy….ಹೀಗೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅಂದರೆ RO ಯಂತ್ರಗಳು ನೀರನ್ನು ಶುದ್ಧ ಮಾಡುತ್ತವೆ. ಇವು ಎಷ್ಟರ ಮಟ್ಟಿಗೆ ಶುದ್ಧ ಮಾಡುತ್ತವೆ ಎಂದರೆ ನೀರಿನಲ್ಲಿ ಅಂತರ್ಗತವಾಗಿರುವ ಶಕ್ತಿಯನ್ನೇ ನಾಶ ಮಾಡಿಬಿಡುತ್ತವೆ.

    ಏನಿದು RO  ಟ್ರೀಟ್ ಮೆಂಟ್?

    RO  ಟ್ರೀಟ್ ಮೆಂಟ್ ನ ವಿಸ್ತ್ರೃತ ರೂಪ Reverse Osmosis. ಅಂದರೆ ನೀರನ್ನು  semipermeable membrane ಮೂಲಕ  ಒಂದು ನಿಗದಿತ ಒತ್ತಡದಲ್ಲಿ ಹಾಯಿಸಿದಾಗ ನೀರಿನಲ್ಲಿರುವ ಬ್ಯಾಕ್ಟೀರಿಯಾ ಸಹಿತ ಲವಣಾಂಶಗನ್ನು ಅದು ಬೇರ್ಪಡಿಸಿ ಶುದ್ಧ ನೀರನ್ನು ನೀಡುತ್ತದೆ. ಇದುವರೆವಿಗೂ ಈ ನೀರು ಅತ್ಯಂತ ಸುರಕ್ಷಿತ ಎಂದೇ ಭಾವಿಸಲಾಗಿತ್ತು. ಆದರೆ ಕಳೆದ  ಜೂನ್ ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮೇಲಿನ ಎಚ್ಚರಿಕೆ ಈ ನಂಬಿಕೆಯನ್ನು ಬುಡ ಮೇಲು ಮಾಡಿದೆ.  ಫಿಲ್ಟರ್ ಗಳು  ನೀರಿನ  ಕ್ಯಾಲ್ಯಿಯಮ್ ಮತ್ತು ಮ್ಯಾಗ್ನೇಷಿಯಂಗಳನ್ನು ಸಹ ನಾಶ ಮಾಡುವುದರಿಂದ  ನೀರಿನಿಂದ ದೇಹಕ್ಕೆ ಸಹಜವಾಗಿ ಸಿಗಬೇಕಾದ ಪೋಷಕಾಂಶಗಳು ಸಿಗುವುದೇ ಇಲ್ಲ.  ಇದು ದೀರ್ಘಕಾಲದಲ್ಲಿ ದೇಹದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ.

     ಅಮೆರಿಕ, ಜರ್ಮನಿ ಮತ್ತು ರಷ್ಯಾಗಳು  ಈಗಾಗಲೇ   RO ನೀರಿಗೆ ಗುಡ್ ಬೈ ಹೇಳಿವೆ. ಅವು ಈಗ ನೀರಿನ ಶುದ್ದತಗೆ ಆಕ್ಟಿವೇಟಡ್ ಕಾರ್ಬನ್ ಬಳಸುತ್ತಿವೆ. ಆದರೆ ಭಾರತದಂಥ ದೇಶದಲ್ಲಿ ಇನ್ನೂ ಕೈಗಾರಿಕೆ ಮತ್ತುಬಳಕೆಗ  RO  ನೀರನ್ನೇ ಬಳಸುತ್ತಿವೆ.

    ಈಗ ನಮ್ಮ ನಗರಗಳನ್ನು ನೋಡಿ ನಲ್ಲಿಯಲ್ಲಿ ಬರುವ ನೀರು ಮನೆಯ ಮೇಲಿನ ಟ್ಯಾಂಕ್ ನಲ್ಲಿ ಸಂಗ್ರಹವಾಗುತ್ತದೆ.  ಅದನ್ನು ಕುಡಿಯಲು ಯೋಗ್ಯವಾಗಬೇಗಾಕದರೆ ಅದು RO ಫಿಲ್ಟರ್ ನಿಂದಲೇ ಹಾದು ಬರಬೇಕಾದ ಸ್ಥಿತಿ ಇದೆ.  ಶೇಖರಿಸಿ ಇಟ್ಟ ನೀರು ಸಹಜವಾಗಿ ಶಕ್ತಿ ಹೀನವಾಗಿರುತ್ತದೆ. ಇನ್ನು ಇದು RO ಟ್ರೀಟ್ ಗೆ ಒಳಗಾದಗ ಇದ್ದ ಬದ್ದ ಶಕ್ತಿಯೆಲ್ಲಾ ಕಳೆದು ಹೋಗುತ್ತದೆ.   ಹುಟ್ಟಿದಾಗಿನಿಂದ ಇಂಥ  ನೀರನ್ನೇ ಕುಡಿದ ಮಕ್ಕಳ ಆರೋಗ್ಯ ಮೇಲೆ ಇದು ಖಂಡಿತವಾಗಿಯೂ  ಪರಿಣಾಮ ಬೀರುತ್ತದೆ ಎಂದು  ವೈದ್ಯರೊಬ್ಬರ ಹೇಳಿಕೆಯನ್ನು ದಿ ಟೈಮ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

    RO ನೀರಿನ ಬಗ್ಗೆ  ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೂಡ ಕೂಡ ದನಿ ಎತ್ತಿದೆ.ಪ್ರತಿ ಒಂದು ಲೀಟರ್ ನೀರಿನಲ್ಲಿ  ಟೋಟಲ್ ಡಿಸ್ಲಾವಡ್ ಸಾಲಿಡ್ 500 ಮಿಲಿಗ್ರಾಂ ಗಿಂತ ಕಡಿಮೆ ಇರುವೆಡೆ ನೀರಿಗೆ  RO ಟ್ರೀಟ್ ಮೆಂಟ್ ಅಗತ್ಯ ಇಲ್ಲ ಎಂದಿದೆ. 500 ಮಿಲಿಗ್ರಾಂಗಿಂತ ಕಡಿಮೆ ಟಿಡಿಎಸ್ ಇರುವ ಕಡೆ  RO ವಾಟರ್ ಫ್ಯೂರಿಫೈಯರ್ ಗಳ ಬಳಕೆ ನಿಷೇಧಿಸಿ ಆದೇಶ ಹೊರಡಿಸುವಂತೆ ಕೇಂದ್ರ ಪರಿಸರ  ನಿಯಂತ್ರಣ ಮಂಡಳಿಗೆ  ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿದ್ದ ಸೂಚನೆಗೆ ತಡೆಯಾಜ್ಳೆ ನೀಡಿದೆ.

    ಕಾನೂನು ಸಮರಗಳು ಒತ್ತಟ್ಟಗಿರಲಿ. ಹಾಗಾದರೆ ಶುದ್ಧ  ಸುರಕ್ಷಿತ ನೀರು ಪಡೆಯುವುದು ಹೇಗೆ ಎಂಬ ಪ್ರಶ್ನೆ ಏಳುವುದು ಸಹಜ.  ಹಾಗೆಂದು ನಾವು  ನಲ್ಲಿಯಲ್ಲಿ ಬರುವ ನೀರನ್ನೇ ನೇರವಾಗಿ  ಸೇವಿಸಲು ಆಗುತ್ತದೆಯೇ ? ಅದು ಇನ್ನೊಂದು ರೀತಿಯ ತೊಂದರೆಯನ್ನು ಆಹ್ವಾನಿಸಿದಂತೆ ಆಗುತ್ತದೆ.  ನಗರಪಾಲಿಕೆಗಳು ಸರಬರಾಜು ಮಾಡುವ ನೀರಿನ ಕೊಳುವೆಗಳು ಸುರಕ್ಷಿತ ಎಂದು ನಾವು ಎಷ್ಟರ ಮಟ್ಟಗೆ ಭಾವಿಸಬಹುದು. ಹಲವೆಡೆ  ಡ್ರೈನೇಜ್ ಪೈಪ್ ಹಾಗೂ ನೀರು ಸರಬರಾಜು ಪೈಪ್ ಬೆಸೆದು ಕೊಂಡಿರುವುದು ಭಾರತದಂಥ ದೇಶದಲ್ಲಿ ಅಪರೂಪವೇನು ಅಲ್ಲ.  ಇಂಥ ನೀರಿನಲ್ಲಿ ಶಕ್ತಿ ಇರಬಹುದು . ಆದರೆ ಶಕ್ತಿಯ ಜೊತಗೆ ರೋಗಾಣುಗಳು ಇರುತ್ತವಲ್ಲ. ಹೀಗಾಗಿ ಇಲ್ಲಿ ಎರಡು ಪ್ರಶ್ನೆಗಳು ಎದುರಾಗುತ್ತವೆ.

    1. ನೀರು ಶುದ್ಧವಾಗಿರಬೇಕು. ಅದರಲ್ಲಿ  ರೋಗಾಣುಗಳು ಇರಬಾರದು.
    2. ರೋಗಾಣು ಮುಕ್ತ ನೀರು  ನೀರಿನ ಸಹಜ ಗುಣಗಳನ್ನು ಕಳದುಕೊಳ್ಳಬಾರದು .

    ಈ ಎರಡು ಪ್ರಶ್ನೆಗಳಿಗೆ ನಮ್ಮಲ್ಲಿರುವ ಉತ್ತರ ಒಂದೇ ಅದು ಹೊಸ ಸಂಶೋಧನೆ ಜೀವ. (JIVA WATER) ಈ ಶತಮಾನದ ಕ್ರಾಂತಿಕಾರಿ ಆಿವಿಷ್ಕಾರ ವಾದ ಜೀವನನ್ನು ಬಳಸುವುದರಿಂದ ಶುದ್ಧ ಹಾಗೂ ನೀರಿನ ಎಲ್ಲಾ ಸಹಜ ಗುಣಗಳನ್ನು ಹೊಂದಿದ ಶಕ್ತಿ ತುಂಬಿದ ನೀರನ್ನು ನಾವು ಪಡೆಯಬಹುದು. ಜೀವ-JIVA- ಎನ್ನುವುದು ಒಂದು ವಿಶಿಷ್ಟ ಸರಳ ಸಾಧನ. ನೀರನ್ನು ಹಿಡಿದಿಡದೆ ಅದನ್ನು ಸ್ವತಂತ್ರವಾಗಿ ಹರಿಯಬಿಟ್ಟಾಗ ಅದರಲ್ಲಿ ಶಕ್ತಿ ಸಂಚಯವಾಗುತ್ತದೆ ಎಂಬ ಸರಳ ಭೌತಶಾಸ್ತ್ರದ ನಿಯಮದ ಅನ್ವಯ ಸಿದ್ಧಗೊಂಡ  ಸಾಧನ. ಹಲವು ಪರೀಕ್ಷೆಗಳನ್ನು ಎದುರಿಸಿ ಅದರಲ್ಲಿ ಜಯಿಸಿದ ಚಮತ್ಕಾರಿ ಸಾಧನ. ನಮ್ಮ ವೇದಗಳಲ್ಲಿ ಅಡಗಿರುವ ಸೂತ್ರದ ಮೇಲೆ ಸಿದ್ಧಗೊಂಡ ಸಾಧನ. ( ಜೀವ ಬಗ್ಗೆ ಅರಿಯಲು ಈ ಲೇಖನವನ್ನು ಓದಿ: JIVA WATER:ನೀವು ಸೇವಿಸುವ ನೀರಿನಲ್ಲಿ ಜೀವ ಇದೆಯೇ ? ನೀರಿಗೆ ಜೀವ ತುಂಬುವ ಜೀವ )

    ಆರೋಗ್ಯದ ಸಮಸ್ಯೆಗಳಿಗೆ ಯಾಮಿ ಪರಿಹಾರ

    ಯಾಮಿ-ವಿಪಾಸ – ಜಾಹ್ನವಿ- ದಿಹಂಗ ಈ ನಾಲ್ಕು ಮಾದರಿಯಲ್ಲಿ ಸಿದ್ಧಗೊಂಡ ಜೀವ ಸಾಧನದಲ್ಲಿ ಯಾಮಿ ನಮ್ಮ ಆರೋಗ್ಯದ ಸಮಸ್ಯೆಗಳಿಗೆ ಉತ್ತರ ಹೇಳಬಲ್ಲದು. ಜೀವದಿಂದಲೇ ಸಾಗಿ ಬಂದ ನೀರಿಗೆ ಶಕ್ತಿ ಸಂಚಯವಾಗುವುದರಿಂದ ಸಹಜವಾಗಿಯೇ ಈ ನೀರಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ.

    ಯಾಮಿ

    ಬೆಂಗಳೂರಿನಂಥ ನಗರದಲ್ಲಿ ನಲ್ಲಿಯ ನೀರಿಗೆ RO ಟ್ರೀಟ್ ಮೆಂಟ್ ಅಗತ್ಯ ಇರುವುದಿಲ್ಲ. ಇಲ್ಲಿನ ನೀರಿಗೆ UV ಟ್ರೀಟ್ ಮೆಂಟ್ ಸಾಕಾಗುತ್ತದೆ. ಆದರೆ ಈ ನೀರು ಜೀವ-JIVA- ಸಾಧನದ ಮೂಲಕ ಹಾದು ಬಂದರೆ ಅದು ನೀರಿನ ಸಹಜ ಶಕ್ತಿಯನ್ನು ಸಂಪಾದಿಸುತ್ತದೆ. ಒಂದೆಡೆ UV ಟ್ರೀಟ್ ಮೆಂಟ್ ಮೂಲಕ ನೀರು ಬ್ಯಾಕ್ಟೀರಿಯಾ ಮುಕ್ತವಾಗಿದೆ. ಆದರೆ ಅದರಲ್ಲಿ ಜೀವ ಇರುವುದಿಲ್ಲ. ಆ ನೀರು ಜೀವ ಸಾಧನದ ಮೂಲಕ ಸಾಗಿದಾಗ ನೀರಿನ ಎಲ್ಲಾ ಸಹಜ ಗುಣಗಳು ಮರಳಿ ಸಂಚಯವಾಗುತ್ತದೆ. ಅಂದರೆ ಸೇವಿಸಲು ಈ ನೀರು ಫರ್ಫೆಕ್ಟ್. ಮಂಗಳೂರಿನಂಥ ಸಮುದ್ರ ತೀರದಲ್ಲಿ ನೀರಿಗೆ RO ಟ್ರೀಟ್ ಮೆಂಟ್ ಅಧಿಕವಾಗಿರುತ್ತದೆ. ಇಂಥ ನೀರನ್ನು ಎರೆಡೆರಡು ಬಾರಿ ಜೀವ ಮಾಡಿದಾಗ ನೀರಿನ ಸಹಜ ಶಕ್ತಿ ಮರುಕಳಿಸುತ್ತದೆ. ನಿಮ್ಮ ಯಾವುದೇ ನೀರಿನ ಫಿಲ್ಟರ್ ಗೆ ಯಾಮಿ ಸಾಧನ ಅಳವಡಿಸಿಕೊಳ್ಳಿ .

    ಬೆಂಗಳೂರಿನಂಥ ಊರಿನಲ್ಲಿ ಜೀವ ನೀರಿನಿಂದ ಆರೋಗ್ಯ ಸುಧಾರಿಸಿದ, ಕೂದಲು ಉದುರುವುದು ಕಡಿಮೆಯಾದ ಅನೇಕ ಉದಾಹರಣೆಗಳು ಸಿಗುತ್ತಿವೆ. ಹೀಗಾಗಿ ಜೀವ ನೀರು ಪರಿಶುದ್ಧ, ಆರೋಗ್ಯಕರ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ.

    ನಾವು ಕುಡಿಯುವ ನೀರು ಶುದ್ಧವಾಗಿರಲಿ, ಶಕ್ತಿಯುತ್ತವಾಗಿರಲಿ ಎಲ್ಲಕಿಂತ ಹೆಚ್ಚಾಗಿ ಅದರಲ್ಲಿ ಜೀವ ಇರಲಿ. ವಿಶ್ವ ಜಲದಿನದಂದು ಇದೇ ನಮ್ಮ ಸಂಕಲ್ಪವಾಗಲಿ.


    ಜೀವ ಎಲ್ಲಿ ಸಿಗುತ್ತದೆ, ಬಳಕೆ ಹೇಗೆ ಇತ್ಯಾದಿ ಮಾಹಿತಿ ಅಗತ್ಯ ವಿದ್ದಲ್ಲಿ 9945949043 ಈ ನಂಬರಿಗೆ ವಾಟ್ಸಾಪ್ ಮಾಡುವ ಮೂಲಕ ಪಡೆಯಬಹುದು


    ಡಾ.ಕೃಷ್ಣ ಮಾದಪ್ಪ ಅವರು ಮೆಕ್ಯಾನಿಕಲ್ ಮತ್ತು ಇಂಡಸ್ಟ್ರಿಯಲ್  ಎಂಜಿನಿಯರ್ . ನಿಸರ್ಗದ ಥರ್ಮೋಡೈನಮಿಕ್ಸ್ ಮತ್ತು ಕ್ವಾಂಟಂ ಆಯಾಮದಿಂದ ಸ್ಫೂರ್ತಿ ಪಡೆದ ಅವರು ಕಳೆದ 25 ವರ್ಷಗಳಿಗೂ ಮೇಲ್ಪಟ್ಟು ಜೈವಿಕ-ಶಕ್ತಿಯ ವಿಜ್ಞಾನಗಳನ್ನು ಆವಿಷ್ಕರಿಸುತ್ತಿದ್ದಾರೆ. ಯುಎಸ್‌ಎಯ ಎಸೆನ್ಸ್ ಆಫ್ ಲೈಫ್‌ನ ಸಂಸ್ಥಾಪಕ ಮತ್ತು ಸಿಇಒ ಕೂಡಾ ಆಗಿದ್ದಾರೆ ಹಾಗೂ ಯುಎಸ್‌ಎಯ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಸ್ಪಿರಿಚುಯಾಲಿಟಿ ಅಂಡ್ ಸಸ್ಟೇನಬಿಲಿಟಿಯ  ಅಧ್ಯಕ್ಷ ಹಾಗೂ ಸಹ-ಸಂಸ್ಥಾಪಕರೂ ಆಗಿದ್ದಾರೆ. ಅವರು ಸೈಕೊನ್ಯೂರೊಬಿಕ್ಸ್ ಅಥವಾ ‘ಬೆಳಕಿನ ವಿಜ್ಞಾನ’ ಮತ್ತು ಯೋಗದಲ್ಲಿ ಪಿಎಚ್.ಡಿ ಹೊಂದಿದ್ದಾರೆ. ಅರ್ಜೆಂಟೀನಾದ ರೋರಿಕ್  ಟ್ರೀಟಿಯು ಗ್ಲೋಬಲ್ ಅಂಬಾಸಡರ್ ಆಫ್ ಪೀಸ್ ಪುರಸ್ಕಾರ ನೀಡಿ ಗೌರವಿಸಿದೆ. ನೀರಿಗೆ ಜೀವ ತುಂಬುವ ಜೀವ ಸಾಧನ ಇವರದೇ ಸಂಶೋಧನೆ.

    ಕಾಡುವ ಕುನ್ನ, ಕಾಡುವ ಕಾಡು!

    ಸಂಕೇತದತ್ತ

    ‘ತಲೆದಂಡ’ ಕನ್ನಡ ಚಿತ್ರ ಈಗ ಬಿಡುಗಡೆಯಾಗಿದೆ. ಇದು ಸಂಚಾರಿ ವಿಜಯ್ ಅವರ ನಟನೆಯ ಚಿತ್ರ. ಈ ಚಿತ್ರ ವಿಜಯ್ ಅವರ ನಟನಾ ಪ್ರತಿಭೆಗೆ ಕನ್ನಡಿಯಂತಿದೆ. ಈ ಹಿಂದೆ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಈ ನಟ ಅದನ್ನು ಮತ್ತೆ ಈ ಚಿತ್ರದ ಮೂಲಕ ಸಾಬೀತು ಪಡಿಸಿದ್ದಾರೆ ಎನ್ನಲ್ಲಡ್ಡಿಯಿಲ್ಲ!

    ಸೋಲಿಗರ ಬದುಕಿನ ಎಳೆಯೊಂದಿಗೆ ಹಚ್ಚ ಹಸಿರಿನ ಕಾಡಿನ ಪರಿಸರದ ಹಳ್ಳಿಯಲ್ಲಿ ನಡೆವ ಕತೆಯು ಇದಾಗಿದೆ. ಆ ಪರಿಸರದ ಹಾಗೂ ಆ ಪಂಗಡದವರ ಭಾಷಾ ವೈಖರಿಯಲ್ಲಿಯೇ ಇಡೀ ಚಿತ್ರ ತೆರೆಗೆ ತರಲಾಗಿದೆ.

    ಇಲ್ಲಿ ಕತೆಯೇ ಮುಖ್ಯ, ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ! ಎಂಬಂತೆ ಪ್ರತಿ ಫ್ರೇಮೂ ಕತೆಗೆ ಪೂರಕವಾಗಿದೆ.ಯಾವುದಕ್ಕೂ ಹೆಚ್ಚು ಪ್ರಾಧಾನ್ಯತೆ ಕೊಡದೇ ಯಾವುದನ್ನು ಉಪೇಕ್ಷಿಸದೇ ಬಿಗಿಯಾಗಿ ಚಿತ್ರಿಸಿಕೊಟ್ಟಿದ್ದಾರೆ. ಬಿಗಿಯಾದ ಚಿತ್ರಕತೆ, ಅಚ್ಚುಕಟ್ಟಾದ ದೃಶ್ಯೀಕರಣ, ಪ್ರತಿ ಸನ್ನಿವೇಶವನ್ನೂ ಮನಕ್ಕೆ ಮುಟ್ಟುವಂತೆ ಸೆರೆ ಹಿಡಿಯಲಾಗಿದೆ.

    ನಿರ್ಮಾಪಕಿ ಡಾ ಹೇಮಾಮಾಲಿನಿ ಕೃಪಾಕರ್ ಅವರು ಉತ್ತಮ ಸಂದೇಶದ ಚಿತ್ರ ಕೊಟ್ಟಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಉಸಿರಿನ ಬೆಲೆಯನ್ನು ತಿಳಿದ ಮನುಜ ಕುಲಕ್ಕಿದು ನೀತಿ ಪಾಠದಂತಿದ್ದು ಪ್ರಸ್ತುತಕ್ಕೆ ಹತ್ತಿರವಾಗಿದೆ.

    ನಿರ್ದೇಶಕ ಪ್ರವೀಣ್ ಕೃಪಾಕರ್ ಅವರ ಆಲೋಚನೆ ಹಾಗೂ ಸೀನ್ ಕ್ರಿಯೇಶನ್ ಅದ್ಭುತ. ಅದಕ್ಕೆ ತಕ್ಕಂತೆ ಸಿನಿಮೋಟೋಗ್ರಫಿ ಮಾಡಿದ ಅಶೋಕ್ ಕಶ್ಯಪ್ ಅವರ ಚೌಕಟ್ಟು ಚಿತ್ರವನ್ನು ಕಲಾಕೃತಿಯಾಗಿಸಿದೆ.

    ನಿಸರ್ಗವನ್ನು ಯಥಾವತ್ತಾಗಿ ತೋರಿಸುವ ಮೂಲಕ ಅದರ ಅಂದವನ್ನು ಅಶೋಕ್ ಹೆಚ್ಚಿಸಿದ್ದಾರೆ. ಸಿನಿಮಾಗೆ ಬೇಕಾದ ತಂತ್ರಜ್ಞಾನವನ್ನು ಎಷ್ಟು ಬೇಕೋ ಅಷ್ಟೇ ಬಳಸಿದ್ದಾರೆ. ಆಶೋಕ್ ಕಶ್ಯಪ್ ಅವರ ಇಂತಹ ಕ್ಯಾಮರಾ ಕುಸುರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿದೆ. ಅಲ್ಲದೇ ಚಿತ್ರಕ್ಕೆ ಹಲವು ಪ್ರತಿಷ್ಟಿತ ಪ್ರಶಸ್ತಿಗಳು ಲಭಿಸಿವೆ.

    ಕನ್ನಡದ ವಿಭಿನ್ನ ಚಿತ್ರಗಳ ಪಟ್ಟಿಗೆ ಇದು ಸೇಪರ್ಡೆಯಾಗಿದೆ!
    ಆದರೆ ಕನ್ನಡ ಪ್ರೇಕ್ಷಕ ಪ್ರಭುಗಳು ಈ ಚಿತ್ರವನ್ನು ನೋಡಿ ಮೆಚ್ಚಿದಲ್ಲಿ ತಂಡದ ಶ್ರಮ ಸಾರ್ಥಕ, ಅದೇ ಬಹು ದೊಡ್ಡ ಪ್ರಶಸ್ತಿ!

    ಮಿಂಚುಹುಳಗಳೊಂದಿಗೆ ಆಡುವ ದೃಶ್ಯವು ಅಷ್ಟೇ ಸಹಜವಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಗುಣವನ್ನು ಹೊಂದಿರುವುದು ಸಾಬೀತಾಗಿದೆ.

    ಕುನ್ನನನ್ನು ಎಲ್ಲೆಡೆ ಹುಡುಕಿ ಕಾಣದಾಗಿ ತನ್ನ ಗುಡಿಸಲ ಮುಂದೆ ಕೂತು ಕಾಯುವಾಗ ಅಲ್ಲಿಗೆ ಕುನ್ನನ ಆಗಮನ! ಈ ದೃಶ್ಯದ ಸಂಯೋಜನೆ, ಬೆಳಕಿನ ವಿನ್ಯಾಸ, ಮನಸ್ಸಿಗೆ ಹತ್ತಿರವಾಗುವ ವಿಕಲಚೇತನನ ನಡವಳಿಕೆ, ಅಮ್ಮನ ಪ್ರೀತಿಯ ಪರಾಕಾಷ್ಟೇ ಅಲ್ಲಿನ ನಡಾವಳಿಗಳು ಕಣ್ತುಂಬುತ್ತೆ!

    ಈಗಿನ ಸಿನಿಮಾ ಜಗತ್ತಿನ ಮಟ್ಟದಲ್ಲೇ ನಾವೂ ಇದ್ದೀವಿ ಎಂದು ಸಾಬೀತು ಪಡಿಸುವ ಇಂತಹ ಹಲವು ದೃಶ್ಯಗಳು ಇದರಲ್ಲಿವೆ.

    ತನ್ನ ಸಾಕಿಯನ್ನು ನೆನೆದೂ, ತನ್ನಿಷ್ಟದ ಮರಗಳ ಕಡಿಯುವವರ ನೆನೆದೂ, ತನ್ನ ಮರಕ್ಕೆ ಗಾಯವಾದಾಗ ಅದಕ್ಕೆ ಶುಶ್ರೂಷೆ ಮಾಡುವ, ನಾಳೆ ಉರುಳಿ ಬೀಳಲಿರುವ ಮರವ ಅಪ್ಪಿ ಮಮ್ಮಲ ಮರುಗುವ, ಊರವರೆಲ್ಲಾ ಡಾಂಬಾರು ರಸ್ತೆಗಾಗಿ ಮರಗಳ ನಾಶಕ್ಕೆ ಒಪ್ಪಿಗೆ ಕೊಡುವಾಗ ಒಬ್ಬನೇ ಕೂತು ಬಿಕ್ಕುವ ದೃಶ್ಯಗಳಿಗೆ ‘ಸೈ’ ಅನ್ನಬೇಕೋ, ದುಃಖಿಸಬೇಕೋ ಆನಂದ ಭಾಷ್ಪ ಸುರಿಸಬೇಕೋ ತಿಳಿಯದು. ದುಃಖದ ಮಡುವಲ್ಲಿ ತಾವರೆಗಳು ಉದಿಸಿವೆ!

    ಸಂಭಾಷಣೆಯು ಈ ಚಿತ್ರಕ್ಕೆ ಹೆಚ್ಚಿನ ಮೆರುಗು ಕೊಟ್ಟಿದೆ. ಪರಿಸರಕ್ಕೆ ತಕ್ಕ ಮಣ್ಣಿನ ವಾಸನೆಯ ಭಾಷೆಯ ಸೊಗಡು ಬೇರೆಯದೇ ಲೋಕ ಸೃಷ್ಟಿಸುತ್ತೆ!

    ಪ್ರತಿ ಸಂಭಾಷಣೆಯಲ್ಲೂ ಹೊಸ ಹೊಸ ಪದಗಳ ಪರಿಚಯವಾಗುತ್ತೆ. ಉಚ್ಚಾರಣೆ ನಾಲಗೆಯ ಹೊರಳು, ವೈವಿಧ್ಯಮಯ ನಿನಾದ. ಏರಿಳಿತದ ಮಾತುಗಳು ಮನಸ್ಸಿಗೆ ನಾಟುತ್ತೆ. ಕರುಳಿಂದ ನೋವು-ಸಂಕಟವು ಒತ್ತರಿಸಿ ಬರುತ್ತೆ. ಒಮ್ಮೆ ಚಿತ್ರ ನೋಡಿ ಹೊರಬಂದ ಪ್ರೇಕ್ಷಕನಿಗೇ ಕಾಡು ಕಾಡುತ್ತೆ!

    ಹೀಗೆ ಕಾಡುವ ಈ ಚಿತ್ರವು ಸಂಕಲನಕಾರರಾದ ಕೆಂಪರಾಜ್ ಅವರಿಗೆ ಇನ್ನೆಷ್ಟು ಕಾಡಿರಬೇಕು. ಇಷ್ಟು ಉತ್ತಮವಾದ ಅಭಿನಯದ ಓಘಕ್ಕೆ, ನೋವು, ಪ್ರೀತಿ-ಪ್ರೇಮಗಳಿಗೆ ಕತ್ತರಿ ಹಾಕಬೇಕು. ಆರ್ದ್ರಗೊಳಿಸುವ ದೃಶ್ಯಗಳನ್ನು ಪದೇ ಪದೇ ನೋಡಿ ಮರುಗದೇ, ಕೊರಗದೇ ಅಂಟಿಸಬೇಕು.

    ಹರಿಕಾವ್ಯ ಅವರು ಸಂಗೀತದ ಮೂಲಕ ನಾಡಿನ ಸಂಸ್ಕೃತಿಗೆ, ಕಾಡಿನ ಪರಿಸರಕ್ಕೆ ತಕ್ಕ ನ್ಯಾಯ ಒದಗಿಸಬೇಕು. ಹೀಗೆ ಎಲ್ಲರೂ ಸೇರಿ ಸಮಾನ ಮನಸ್ಥಿತಿಯಿಂದ ಒಂದು ಅಮೂಲ್ಯವಾದ ಕಲಾಕೃತಿಯನ್ನು ಸಿದ್ಧಗೊಳಿಸಿದ್ದಾರೆ ಈ ಚಿತ್ರ ತಂಡ!

    ನೋಡದವರಿಗೆ ಈ ಅನುಭವವು ಇಲ್ಲವಷ್ಟೇ! ಮೂಕನು ಬೆಲ್ಲವ ತಿಂದಾನು, ಸವಿದಾನು ಹೇಳಲಾಗುವುದೇನು! ಮೆದ್ದು ಅನುಭವಿಸಿದವನಿಗಷ್ಟೇ ಅರಿವಾಗುವುದು ಆ ಸವಿ!

    ಸಂಚಾರಿ ವಿಜಯ್ ಬಗ್ಗೆ ಗೊತ್ತಿರದವರೂ ಈ ಚಿತ್ರದ ಕುನ್ನನ ಪಾತ್ರ ನೋಡಿದಲ್ಲಿ ಮರುಗುವುದು ಸಹಜ. ವಿಜಯ್ ಪಾತ್ರದ ಪರಕಾಯ ಪ್ರವೇಶವು ಅಂತಹ ಗಾಢವಾದ ನೋವನ್ನು ಉಂಟು ಮಾಡುತ್ತೆ. ಉಗ್ಗುವ ರೀತಿಯ ಡೈಲಾಗ್ ಡೆಲಿವರಿಯು ನಟನೆಯಷ್ಟೇ ವಿಶೇಷವೂ ವಿಭಿನ್ನವೂ ಆಗಿದೆ. ಈ ಕುನ್ನನ ಪಾತ್ರವು ಮೈಸೂರಿನ ನಾಗು ಎಂಬ ವ್ಯಕ್ತಿಯನ್ನು ನೋಡಿ ಸೃಷ್ಟಿಸಲಾಗಿದೆ. ಆದರೆ ಒಬ್ಬ ವಿಕಲಚೇತನನ ಪಾತ್ರವನ್ನು ಎಲ್ಲೂ ಏರುಪೇರಾದಂತೆ ಅನುಸರಿಸಿ ನಟಿಸುವುದು ಸುಲಭದ ಮಾತೇ? ಕುನ್ನನಷ್ಟೇ ಉತ್ತಮವಾಗಿ ಕುನ್ನನ ಅಮ್ಮ ಕೇತಮ್ಮನಾಗಿ ಮಂಗಳಾ ರಘು ಅವರು ಜೀವಿಸಿ ನಟಿಸಿದ್ದಾರೆ. ಈವರೆಗೂ ಮೂರ್ನಾಲ್ಕು ಚಿತ್ರಗಳಲ್ಲಷ್ಟೇ ನಟಿಸಿರುವ ಮಂಗಳಾ ಅವರು ಕುನ್ನನ ನಟನೆಗೆ ಸಾಥ್ ಕೊಟ್ಟು ತಾವೊಬ್ಬ ಅಭಿನೇತ್ರಿ ಎಂದು ಸಾಬೀತುಗೊಳಿಸಿದ್ದಾರೆ. ಇಲ್ಲಿ ಇಬ್ಬರೂ ಪೈಪೋಟಿಯೋ ಎಂಬಂತೆ ನಟಿಸಿ ಚಿತ್ರಕ್ಕೆ ತಮ್ಮ ಕೊಡುಗೆಯನ್ನು ಕೊಟ್ಟಿದ್ದಾರೆ.

    ಬಿ ಸುರೇಶ್, ರಮೇಶ್ ಪಂಡಿತ್ ಭವಾನಿ ಪ್ರಕಾಶ್, ಮಂಡ್ಯ ರಮೇಶ್ ಹೀಗೆ ರಂಗಭೂಮಿಯ ಪ್ರತಿಭೆಗಳೇ ಹೆಚ್ಚಿದ್ದು ಒಬ್ಬರಿಗಿಂತ ಒಬ್ಬರು ಜಿದ್ದಿಗೆ ಬಿದ್ದು ನಟಿಸಿದ್ದಾರೆ. ಚೈತ್ರಾ ಆಚಾರ್ ಸಾಕಿ ಪಾತ್ರದ ಮೂಲಕ ಕನ್ನಡಕ್ಕೆ ಹೊಸ ತಾರಾಮಣಿ ಆಗುವ ಭರವಸೆ ಕೊಟ್ಟಿದ್ದಾರೆ.

    ಕಾಡು ಉಳಿಸಿ, ಮರ ನೆಡಿ ಪರಿಸರ ಸಂರಕ್ಷಿಸಿ ಎಂಬ ಸಂದೇಶ ಸಾರುವ ಬೀದಿ ನಾಟಕದ ದೃಶ್ಯ ಸಂಯೋಜನೆಯು ಮುಗ್ಧ ಕುನ್ನನ ಮೇಲೆ ಪರಿಣಾಮ ಬೀರಿದ್ದು ಅಲ್ಲಿ ಹಸಿರುಟ್ಟ ಸ್ತ್ರೀ ಪಾತ್ರಧಾರಿ ಸಾಕಿಯಾಗಿದ್ದೂ, ಭೂ ದೇವಿಯಂತೆ ಕಂಡಿದ್ದೂ ಚಿತ್ರಕ್ಕೆ ಹೊಸ ತಿರುವು ಕೊಟ್ಟಿದೆ. ‘ವಾಡು ವಾಡು ವಾಡೂ ಇವರೆಲ್ಲಾ ಹೊಡಿತಾರೆ ವಾಡು ವಾಡೂ ಸಾಕಿ ವಾಡು ವಾಡೂ’ ಎಂಬುದು ಚಿತ್ರಮಂದಿರದಿಂದ ಹೊರಬಂದರೂ ಕಾಡುತ್ತೆ! ಬೀದಿನಾಟಕವನ್ಬು ಕತೆಗೆ ಬಳಸಿಕೊಂಡ ರೀತಿ ಭಿನ್ನವಾಗಿದೆ. ಎರಡು ವೇರೆ ಬೇರೆ ಪಾತ್ರಗಳನ್ನು ಒಂದೇ‌ ಪಾತ್ರವಾಗಿಸುವ ಪರಿ ವಿಕಲಚೇತನನ ಪಾತ್ರದ ಮನಸ್ಥಿತಿಗೆ ಪೂರಕವಾಗಿಸಿದೆ.

    ಗೋರಕಾನ ಗೋರಕಾನ ಹಾಡಿನಂತಹ ಹಾಡುಗಳು ಗುನುಗುವಂತೆ ಮಾಡಿವೆ. ಅಟ್ಟಿ ಲಕ್ಕವ್ವ ಹಾಗೂ ಬಿಳಿಗಿರಿ ರಂಗನ ನಂಬಿದ ಜನರ ನಂಬಿಕೆಯನ್ನೂ, ಸಂಪ್ರದಾಯವನ್ನೂ ಕತೆಗೆ ತಕ್ಕಂತೆ ತರಲಾಗಿದೆ. ಜನಪದ ಸಂಸ್ಕೃತಿಯನ್ನು ಯಥಾವತ್ತಾಗಿ ಪ್ರತಿಬಿಂಬಿಸಲಾಗಿದೆ.

    ಇದೆಲ್ಲವನ್ನೂ ಮೀರಿದ್ದು ಎನ್ನಬಹುದಾದ ಹಸಿರೇ ಉಸಿರು, ಮರ ಕಡಿದರೆ ಮಳೆಬಾರದು ನೀರಿಗೆ ಬರ ಬರುವುದು, ಉಸಿರಾಡಲು ಶುದ್ದ ಗಾಳಿ ಸಿಗದು, ಪ್ರತಿ ಗಿಡ-ಮರಗಳಿಗೂ ಜೀವವಿದೆ. ಅವುಗಳಿಗೆ ನೋವಾಗಲು, ಕಡಿಯಲು ಎಡೆಕೊಡಬಾರದು ಎಂಬ ಸಂದೇಶವನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ. ಮರ ಸಂರಕ್ಷಿಸಿ, ಗಿಡ ನೆಡಿ ಹಾಗೂ ಬೆಳೆಸಿ, ಕಾಡು ಉಳಿಸಿ ಎಂಬ ಧ್ಯೇಯೋಕ್ತಿಯನ್ನು ಇಷ್ಟು ಪ್ರಮುಖ ವಿಷಯವನ್ನಾಗಿ ಚಿತ್ರದಲ್ಲಿ ಬಳಸಿಕೊಂಡದ್ದು ಅಪರೂಪ ಎನ್ನಬಹುದೇನೋ?

    ಈ ಚಿತ್ರ ನೋಡಿ ಚಿತ್ರಮಂದಿರದಿಂದ ಹೊರ ಬಂದರೂ ಕುನ್ನ, ಕೇತವ್ವ, ಕುನ್ನನ ಅಪ್ಪಯ್ಯ, ಸಾಕಿ, ಪರಿಸರ ತಜ್ಞ, ಮಿನಿಸ್ಟ್ರು ಹೀಗೆ ಎಲ್ಲಾ ಪಾತ್ರಗಳೂ ನಮ್ಮ ತಲೆಯಲ್ಲೇ ಬೇರು ಬಿಟ್ಟು ತಳ ಊರಿರುತ್ವೆ!

    ಒಬ್ಬ ವಿಕಲಚೇತನಿಗಿರುವ ಪರಿಸರ ಕಾಳಜಿ ಕಾಡಿನ ಬಗ್ಗೆ ಇರುವ ಮುಗ್ಧ ಪ್ರೇಮ ಹಾಗೂ ಅದಕ್ಕಾಗಿ ತಲೆದಂಡ ಎಲ್ಲವೂ ಆಳೆತ್ತದವರನ್ನು ಸಣ್ಣಗೆ ನಡುಗಿಸಿ ಬಿಡುತ್ತೆ, ಗೊತ್ತೇ ಆಗದಂತೆ ಕಣ್ಣಾಲಿಯಲಿ ದುಃಖವು ಮಡುಗಟ್ಟುತ್ತೆ. ಆ ಪಾತ್ರದ ಬಗ್ಗೆ ಮರುಕ ಪಡುವಂತೆ ಮಾಡುತ್ತೆ.ಜೀವಿಸಿ ನಟಿಸಿದ ವಿಜಯ್ ಜೀವಂತ ಇದ್ದಾರೆ!

    ಎಷ್ಟೇ ಪ್ರಯತ್ನಪಟ್ಟರೂ ಕೊನೆಯ ಸೀನ್ ವರೆಗೂ ಸಂಚಾರಿ ವಿಜಯ್ ನಮಗೆ ಕಾಣಲೇ ಇಲ್ಲಾ. ಕುನ್ನನನ್ನು ಮಾತ್ರ ನೋಡಲಾಯ್ತು! ಪಾತ್ರವೇ ಆಗಿದ್ದಾರೆ ವಿಜಯ್

    This image has an empty alt attribute; its file name is sanketh-gurudutt-855x1080.jpg

    ಸಂಕೇತದತ್ತ ಎಂಬ ಹೆಸರಿನಿಂದ ಸುಪ್ರಸಿದ್ಧರಾಗಿರುವ ಸಂಕೇತ ಗುರುದತ್ತ ಅವರ ಮೂಲ ತುಮಕೂರು. ಅಲ್ಲಿ ತುಮಕೂರು‌ವಾರ್ತೆ, ಪ್ರಜಾಪ್ರಗತಿ, ಕನ್ನಡ ಗಂಗೋತ್ರಿ, ನಗೆಮಿತ್ರ ಹಾಗೂ ನಗೆಮುಗುಳು, ಪತ್ರಿಕೆಗಳಿಗೆ ಕೆಲಸ ಮಾಡಿದ್ದರು. ಬೆಂಗಳೂರಿಗೆ ಬಂದು ಸುದ್ದಿ ಸಂಗಾತಿ ವಾರ ಪತ್ರಿಕೆಯಲ್ಲಿ ಕೆಲ ಕಾಲವಿದ್ದರು. ಆನಂತರ ಧಾರಾವಾಹಿ, ಸಿನಿಮಾಗಳಲ್ಲಿ ಕೆಲಸ ಮಾಡಿದರು. ನಂತರದಲ್ಲಿ ಕಿರ್ಲೋಸ್ಕರ್ ಮಲ್ಟಿಮೀಡಿಯಾಗೆ ಸೇರ್ಪಡೆ‌‌. ಅಲ್ಲಿಂದ ಒಂದಿಷ್ಟು ಕಲಿತು ಹೈದರಾಬಾದನತ್ತ ಪಯಣ. ಅಲ್ಲಿ ಹನ್ನೊಂದು ವರ್ಷವಿದ್ದು ಮತ್ತೆ ಬೆಂಗಳೂರಿಗೆ ವಾಪಸ್ ಆಗಿ ಸುಧಾ, ಮಯೂರ, ಪ್ರಜಾವಾಣಿ ವಿಶೇಷಾಂಕ, ಹೊಸತು, ಪ್ರಿಯಾಂಕಗಳಿಗೆ ಫ್ರೀಲ್ಯಾನ್ಸ್ ಆಗಿ ಕೆಲಸ ನಿರ್ವಹಿಸಿದರು. ಆ ಸಮಯದಲ್ಲಿಯೇ ಸಿಕ್ಕ ಮತ್ತೊಂದು ಉತ್ತಮ ಅವಕಾಶ ಕನ್ನಡಪ್ರಭದಲ್ಲಿ ಕಲಾಕಾರನಾಗಿದ್ದು. ಕಲಾ ವಿಭಾಗದ ಜೊತೆಗೆ ಪುರವಣಿಯ ಕೆಲ ಪುಟಗಳ ಜವಾಬ್ದಾರಿ ಸಿಕ್ಕಿತು. ಅಲ್ಲಿ ನಾಟಕ, ಸಿನಿಮಾ ಹಾಗೂ ಕಲಾಪ್ರದರ್ಶನಗಳ ವಿಮರ್ಶೆ, ವ್ಯಕ್ತಿ ಹಾಗೂ ಸಾಂಸ್ಕ್ರತಿಕ ತಂಡಗಳ ಪರಿಚಯ ಲೇಖನ ಹೀಗೆ ಹಲವಾರು ವಿಭಾಗದಲ್ಲಿ ಕೆಲಸ ಮಾಡಿದ ಅನುಭವ. ಪ್ರಸ್ತುತ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    karnataka cabinet expansion: ರಾಜ್ಯ ಕಾರ್ಯಕಾರಿಣಿ ಸಭೆ ನಂತರ ಸಚಿವ ಸಂಪುಟ ವಿಸ್ತರಣೆ ನಿರ್ಧಾರ

    NEW DELHI APRIL 7

    ರಾಜ್ಯ ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಸ್ಥೂಲವಾಗಿ ಚರ್ಚೆಯಾಗಿದೆ. ವರಿಷ್ಠರು ಎಲ್ಲಾ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇದೇ ಏಪ್ರಿಲ್ 16 ಮತ್ತು 17 ರಂದು ನಡೆಯುವ ರಾಜ್ಯ ಕಾರ್ಯಕಾರಿಣಿ ಸಭೆಗೆ ಬಂದ ಸಂದರ್ಭದಲ್ಲಿ ಮಿಕ್ಕ ವಿಚಾರಗಳನ್ನು ಮಾತನಾಡುವುದಾಗಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ basavaraja bommai ತಿಳಿಸಿದ್ದಾರೆ. ತಮ್ಮ ದೆಹಲಿ -new delhi -ಪ್ರವಾಸದ ನಂತರ ಬೆಂಗಳೂರಿಗೆ ಹೊರಡುವ ಮುನ್ನ ಅವರು ವರದಿಗಾರರೊಂದಿಗೆ ಮಾತನಾಡಿದರು.

    ಸ್ಥಳೀಯ ವರಿಷ್ಠರು, ನಾಯಕರು, ಸಂಘಟನಾ ಕಾರ್ಯದರ್ಶಿಗಳೊಂದಿಗೆ ಚರ್ಚೆ ಮಾಡಿ ತೀರ್ಮಾನ ಮಾಡೋಣ ಎಂದು ತಿಳಿಸಿದ್ದಾರೆ. ಆನಂತರವೇ ಈ ಬಗ್ಗೆ ತೀರ್ಮಾನವಾಗಲಿದೆ ಎಂದರು.

    ಈ ಬಾರಿ ದೆಹಲಿ ಭೇಟಿ ಬಹಳ ಫಲಪ್ರದವಾಗಿದೆ. ಜಲಶಕ್ತಿ, ಇಂಧನ, ಪರಿಸರ , ಹಣಕಾಸು, ರಕ್ಷಣಾ ಸಚಿವರನ್ನು ಭೇಟಿ ಮಾಡಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ತಿಳಿಸಿದರು.ಭಾ.ಜ.ಪ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಲು ನನಗೆ ಅವಕಾಶ ದೊರೆತಿದ್ದು ಸಂತೋಷ ತಂದಿದೆ ಎಂದರು.

    ಬಜೆಟ್ ಯೋಜನೆಗಳ ಅನುಷ್ಠಾನಕ್ಕೆ ಮಹತ್ವ:ಬೆಂಗಳೂರಿಗೆ ಹಿಂತಿರುಗಿದ ನಂತರ ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳ ಆದೇಶಗಳನ್ನು ನೀಡಿ ಅವುಗಳ ಅನುಷ್ಠಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು ಎಂದರು.

    Indian Stock Market: ಸಮಯೋಚಿತ ನಿರ್ವಣೆಯಿಂದ ಉತ್ತಮ ಫಲಿತಾಂಶ ಸಾಧ್ಯ

    ಬದಲಾವಣೆ ಸೃಷ್ಠಿಯ ನಿಯಮವಾದರೂ ಬದಲಾವಣೆಗಳ ವೇಗ ನಾವುಗಳು ನಿರ್ಮಿಸಿಕೊಂಡಿರುವುದು. ಹಲವಾರು ಬಾರಿ ನಾವು ಬದಲಾವಣೆಗಳಿಗೆ ಸರಿಯಾಗಿ ಹೊಂದಿಕೊಂಡರೆ ಕೆಲವು ಬಾರಿ ಅದನ್ನು ಕಡೆಗಣಿಸಿ ತೊಂದರೆಗೊಳಗಾಗುತ್ತೇವೆ. ಈಗಿನ ದಿನಗಳಲ್ಲಿ ಪ್ರಚಾರಾತ್ಮಕವಾದ ಶೈಲಿಗಳೇ ಹೆಚ್ಚು. ಈ ವಿಧದಿಂದ ನಾವುಗಳು ಚಿಂತನಾಗುಣಗಳನ್ನು ಕರಗಿಸಿಕೊಳ್ಳುತ್ತಿದ್ದೇವೆ ಎಂದೆನಿಸುತ್ತಿದೆ. ಒಂದು ಉತ್ಪನ್ನದ ಜಾಹಿರಾತನ್ನು ನೋಡಿದಾಗ ಈ ಅಂಶ ದೃಢಪಡುತ್ತದೆ. ಮೊದಲು ಬಂದವರಿಗೆ ಆದ್ಯತೆ, ಶೇ.60 ರ ರಿಯಾಯಿತಿ, ಭಾರಿ ಉಳಿತಾಯ, ಮುಂತಾದ ಆಕರ್ಷಣೀಯ ಪದಬಳಕೆ ಜನಸಾಮಾನ್ಯರನ್ನೂ ಸೆಳೆಯುತ್ತದೆ. ಆದರೆ ಈ ಸಂದರ್ಭದಲ್ಲಿ ನಾವು ಉಳಿತಾಯ ಮತ್ತು ಮಿತವ್ಯಯಗಳ ವ್ಯತ್ಯಾಸವನ್ನೇ ಮರೆತುಬಿಟ್ಟಿದ್ದೇವೆ.

    ಉಳಿತಾಯ ಎಂದರೆ ಅದನ್ನು ಗಳಿಸಿದ ಹಣದಲ್ಲಿ ಮಾಡುವ ಪ್ರಕ್ರಿಯೆ. ಇದು ಆಪತ್ಕಾಲದಲ್ಲೂ ಬಳಕೆಗೆ ಲಭ್ಯವಾಗುವ ಸಂಪನ್ಮೂಲ.

    ಮಿತವ್ಯಯ ಎಂದರೆ ಅದು ವೆಚ್ಚದಲ್ಲಿ ಮೊಟಕು ಮಾಡುವ ಕ್ರಿಯೆ. ಇದು ಕಾಲ್ಪನಿಕ ಮತ್ತು ಕೈಗೆಟುಕುವಂತಹುದಲ್ಲ.

    ಈಗಿನ ಪ್ರಚಾರಗಳಲ್ಲಿ ಈ ಎರಡೂ ಒಂದೇ ಆಗಿದೆಯಲ್ಲವೇ?

    ಇಂದಿನ ಅಲ್ಪ ಬಡ್ಡಿ ಯುಗದಲ್ಲಿ ನಾಗರೀಕರಿಗೆ ತಮ್ಮ ಹಣಕಾಸಿನ ನಿರ್ವಹಣೆಯು ಸುಲಭವೇನಲ್ಲ. ಕಾರಣ ಸಂಕೀರ್ಣಮಯ ಜಗತ್ತು. ಸುಮ್ಮನಿದ್ದರೂ ಸಾಕು ಕೈಲಿರುವ ಹಣವು ಕರಗುತ್ತದೆ. ಇದಕ್ಕೆ ಕಾರಣಗಳೇ ಬೇಕಿಲ್ಲ. ಅಲ್ಲದೆ ಕೈಲಿರುವ ಹಣ ಕರಗಿಸಲು ಪ್ರೇರೇಪಿಸುವಂತಹ ಯೋಜನೆಗಳು ಎಲ್ಲೆಡೆ ಹರಿದಾಡುತ್ತಿವೆ. ಸಂಪಾದನೆಗಿಂತ ಕೈಲಿರುವ ಸಂಪತ್ತನ್ನು ಸುರಕ್ಷಿತವಾಗಿರಿಸುವುದೇ ದೊಡ್ಡ ಕೆಲಸವಾಗಿರುತ್ತದೆ. ಇನ್ನು ಹಿರಿಯ ನಾಗರೀಕರಿಗೆ ಸಂಪಾದನೆಯ ಮಟ್ಟ ಇಳಿಮುಖವಾಗಿರುತ್ತದೆ, ಬರುವ ಪಿಂಚಣಿಯನ್ನು, ಅಥವಾ ಬಡ್ಡಿ ಆದಾಯವನ್ನು ಮಾಸಾಂತ್ಯದವರೆಗೂ ಅಗತ್ಯಗಳಿಗೆ ಬಳಸಿಕೊಳ್ಳುವ ಯೋಜನೆ ರೂಪಿಸಿಕೊಳ್ಳುವುದಂತು ಸಾಹಸಮಯವಾಗಿರುವ ಕಾಲ. ಹಾಗಾಗಿ ತಮ್ಮ ಬಿಡುವಿನ ಸಮಯದಲ್ಲಿ ಛಲ, ಚಪಲ, ಚಟಗಳಿಂದ ಹೊರತಾಗಿ, ಹೊಸ ಹವ್ಯಾಸವನ್ನು ಬೆಳೆಸಿಕೊಂಡು, ಆರ್ಥಿಕ ನಿರ್ವಹಣಾ ಕಾರ್ಯವನ್ನು ಮಾಡಿದಲ್ಲಿ, ದೈಹಿಕ ಸ್ವಾಸ್ಥ್ಯವೂ, ಸ್ವಲ್ಪ ಮಟ್ಟಿನ ಆದಾಯವೂ ಕೈಗೆಟುಕುವಂತಾಗುತ್ತದೆ.

    ಅದೇ ರೀತಿ ಮಹಿಳೆಯರು, ಗೃಹಿಣಿಯರು, ತಮ್ಮ ಬಿಡುವಿನ ಸಮಯದಲ್ಲಿ ನಿರುಪಯುಕ್ತ, ದಾರಿ ತಪ್ಪಿಸುವ ಕೌಟುಂಬಿಕ ಕಲಹಗಳ ತಿರುವುಗಳನ್ನು ಪ್ರದರ್ಶಿಸುವ ಧಾರಾವಾಹಿಗಳಿಂದ ದೂರವಾಗಿ ಸಕಾರಾತ್ಮಕ ಚಿಂತನೆಯಿಂದ ಆರ್ಥಿಕ ನಿರ್ವಹಣೆಯ ಅಭ್ಯಾಸ ಪಡೆದುಕೊಂಡು ಸ್ವಾವಲಂಬಿಗಳಾಗಲು ಇಂದಿನ ತಾಂತ್ರಿಕತೆ ದಾರಿ ಮಾಡಿಕೊಟ್ಟಿದೆ.

    ಬಿಡುವಿನ ಸಮಯವನ್ನು ಷೇರುಪೇಟೆಯ ಚಟುವಟಿಕೆ ಕಡೆ ತಿರುಗಿಸಿಕೊಂಡರೆ ಆ ಚಟುವಟಿಕೆಯಿಂದ ತಮ್ಮ ಮನಸ್ಸು, ಚಿಂತನೆಗಳನ್ನು ವೃದ್ಧಿಸಿಕೊಳ್ಳುವುದರೊಂದಿಗೆ ಅಲ್ಪಮಟ್ಟಿನ ಆದಾಯವನ್ನು ಸಹ ಹೆಚ್ಚಿಸಿಕೊಳ್ಳಲು ಸಾಧ್ಯವಿರುತ್ತದೆ.

    ಷೇರುಪೇಟೆಯ ಸಂಕ್ಷಿಪ್ತ ಚಿತ್ರಣ:

    *2018 ರ ಮಾರ್ಚ್‌ 19 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.141.16 ಲಕ್ಷ ಕೋಟಿ : ಸೆನ್ಸೆಕ್ಸ್‌ :32,923

    *2019 ರ ಮಾರ್ಚ್‌ 19 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.149.64 ಲಕ್ಷ ಕೋಟಿ : ಸೆನ್ಸೆಕ್ಸ್‌ :38,503

    *2020 ರ ಮಾರ್ಚ್‌ 19 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.109.76 ಲಕ್ಷ ಕೋಟಿ : ಸೆನ್ಸೆಕ್ಸ್: 28‌,288

    • 2021 ರ ಮಾರ್ಚ್‌ 17 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.260.37ಲಕ್ಷ ಕೋಟಿ ಸೆನ್ಸೆಕ್ಸ್‌ : 57,863

    ಹೂಡಿಕೆದಾರರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ:

    ಸುಮಾರು 145 ವರ್ಷಗಳ ಸಮಯದಲ್ಲಿ 5 ಕೋಟಿ ತಲುಪಿದೆ

    2020 ರಲ್ಲಿ ನೋಂದಾಯಿತ ಗ್ರಾಹಕರು: 5 ಕೋಟಿ

    2022 ರಲ್ಲಿ ಬೆಳೆದು ತಲುಪಿದ ಸಂಖ್ಯೆ : 10 ಕೋಟಿ.

    ಆದರೆ ಅದಕ್ಕನುಗುಣವಾಗಿ ಲೀಸ್ಟೆಡ್‌ ಕಂಪನಿಗಳ ಸಂಖ್ಯೆಯಲ್ಲಿ ಏರಿಕೆ ಕಾಣದಾಗಿದೆ. ಹಾಗಾಗಿ ಉತ್ತಮ ಕಂಪನಿಗಳ ಷೇರುಗಳಿಗೆ ಬೇಡಿಕೆ ಹೆಚ್ಚಾಗಿ ಷೇರಿನ ಬೆಲೆಗಳು ಗಗನಕ್ಕೇರುವಂತಾಗಿದೆ. ಇದಲ್ಲದೆ ಕೋವಿಡ್‌ ನಂತರದ ಸಮಯದಲ್ಲಿ ಕಾರ್ಪೊರೇಟ್‌ ಸಾಧನೆಗಳು ಮತ್ತು ಸರ್ಕಾರದ ಕ್ರಮಗಳು ಸಹ ಷೇರುಪೇಟೆಯ ವಾತಾವರಣವನ್ನು ಉತ್ತಮಗೊಳಿಸಲು ಕಾರಣವಾಗಿದೆ.

    ಸಾಮಾನ್ಯವಾಗಿ ವಯಸ್ಕರು, ಹಿರಿಯ ನಾಗರೀಕರು, ಗೃಹಿಣಿಯರು ಭಾವಿಸುವುದೇನೆಂದರೆ ಬ್ಯಾಂಕ್‌ ಬಡ್ಡಿ ದರವು ಕ್ಷೀಣಿಸುತ್ತಿರುವುದರಿಂದ ಅದನ್ನವಲಂಭಿಸಿ ನಡೆಸುತ್ತಿರುವ ಜೀವನ ಸುಲಭವಾಗಿಲ್ಲ, ತೊಂದರೆಯಾಗುತ್ತಿದೆ. ಇದಕ್ಕೆ ಪರ್ಯಾಯವಾದ ಆದಾಯ ಗಳಿಕೆಯ ಮಾರ್ಗ ಯಾವುದೆಂಬುದರ ಆನ್ವೇಷಣೆ ಮಾಡುವ ಪ್ರಯತ್ನಗಳು ನಡೆಸುವುದು ಸಹಜವಾಗಿದೆ. ಇಂತಹವರು ತಮ್ಮ ಪ್ರಯತ್ನವನ್ನು ಷೇರುಪೇಟೆಯ ಚಟುವಟಿಕೆಯತ್ತಲೂ ನಡೆಸಬಹುದಾಗಿದೆ. ಷೇರುಪೇಟೆಯ ಚಟುವಟಿಕೆ ಎಂದರೆ ಹೆಚ್ಚಿನವರಲ್ಲಿ ತಪ್ಪು ಕಲ್ಪನೆಗಳಿವೆ. ಅದು ಜೂಜಾಟದ ಅಡ್ಡ, ಅಲ್ಲಿ ಅಪಾಯದ ಮಟ್ಟ ಹೆಚ್ಚು, ಷೇರುಪೇಟೆ ಚಟುವಟಿಕೆಗೆ ಹೆಚ್ಚಿನ ಹಣ ಅಗತ್ಯವಿದೆ, ಅದು ಸಾಮಾನ್ಯರ ಪಾಲಿಗಲ್ಲ, ಎಂಬ ಅನೇಕ ನಕಾರಾತ್ಮಕ ಭಾವನೆಗಳಿವೆ.

    ಒಂದು ಕಾಲದಲ್ಲಿ ಕೇವಲ ಪಟಾಕಿ ವ್ಯಾಪಾರದಲ್ಲಿ ಮಾತ್ರ ಶೇ.70, 80 ರಷ್ಟು ಡಿಸ್ಕೌಂಟ್‌ ನೀಡುತ್ತಿದ್ದರು. ಆ ಸಮಯದಲ್ಲಿ ಯಾವುದಾದರೂ ಹೆಚ್ಚಿನ ಡಿಸ್ಕೌಂಟ್‌ ನೀಡಿದರೆ ಅದನ್ನು ಪಟಾಕಿ ವ್ಯಾಪಾರಾದಂತೆ ಎಂದು ಹೋಲಿಸುತ್ತಿದ್ದರು. ಆದರೆ ಈಗ ಎಲ್ಲಾ ವ್ಯವಹಾರಗಳೂ ಅದೇ ದಾರಿಯಲ್ಲಿ ಸಾಗುತ್ತಿವೆ. ಪ್ಯಾಕೇಟ್‌ ಗಳ ಮೇಲೆ ಮುದ್ರಿಸಿದ ಎಂ ಆರ್‌ ಪಿ ಬೆಲೆಗಳಿಗೂ ಪೇಟೆಯಲ್ಲಿ ರೀಟೇಲ್‌ ಗ್ರಾಹಕರಿಗೆ ಲಭ್ಯವಾಗುತ್ತಿರುವ ಬೆಲೆಗಳಿಗೂ ಹೆಚ್ಚಿನ ಅಂತರ, ಅಂದರೆ ಮುದ್ರಿತ ಬೆಲೆಗೂ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಸರ್ಕಾರಿ, ಖಾಸಗಿ ಎಂಬುದಿಲ್ಲ ಎಲ್ಲಾ ವಲಯಗಳಲ್ಲೂ ಈ ವ್ಯವಹಾರಿಕ ಗುಣ ಮುಂದುವರೆಯುತ್ತಿದೆ. ಹೀಗಿರುವಾಗ ಬದಲಾದ ಪರಿಸ್ಥಿತಿಗನುಗುಣವಾಗಿ ನಾವು ಸಹ ನಮ್ಮ ಚಿಂತನೆಗಳನ್ನು ಬದಲಿಸಿಕೊಳ್ಳಬೇಕು.

    ಷೇರುಪೇಟೆಯಲ್ಲಿ ಎಲ್ಲಾ ವರ್ಗದ ಜನರಿಗೂ / ವೃತ್ತಿದಾರರಿಗೂ /ಹಿರಿಯ ನಾಗರೀಕರಿಗೂ ಯಾವುದೇ ಲಿಂಗ ಬೇಧವಿಲ್ಲದೆ ಚಟುವಟಿಕೆ ನಡೆಸಲು ಅವಕಾಶವಿದೆ. ಹೊಸದಾಗಿ ಪೇಟೆ ಪ್ರವೇಶಿಸುವವರು ಆರಂಭದಲ್ಲಿ ಕೇವಲ ಒಂದೆರಡು ಷೇರುಗಳಲ್ಲಿ ಚಟುವಟಿಕೆ ನಡೆಸಿ ಅವಶ್ಯವಿರುವ ಅನುಭವ ಪಡೆದುಕೊಳ್ಳಲು ಸಾಧ್ಯವಿದೆ. ಈ ಮೂಲಕ ದೊರೆತ ಅನುಭವವು ಚಟುವಟಿಕೆ ನಡೆಸಲು ಸಾಮರ್ಥ್ಯದ ನಂಬಿಕೆ ಮೂಡಿದ ಮೇಲೆ ತಮ್ಮ ಚಟುವಟಿಕೆಯ ಗಾತ್ರ ವಿಸ್ತರಿಸಿಕೊಳ್ಳಬಹುದಾಗಿದೆ. ಈಗಿನ ಷೇರುಪೇಟೆಯ ವೈಶಿಷ್ಟತೆಯೆಂದರೆ ಹಣದ ಅಗತ್ಯವಿದ್ದಾಗ ದಿಢೀರ್‌ ನಗದೀಕರಣಕ್ಕೆ ಅವಕಾಶ. ಷೇರು ಮಾರಾಟ ಮಾಡಿದ ಎರಡೇ ದಿನಗಳಲ್ಲಿ ಮಾರಾಟದ ಹಣ ಲಭ್ಯವಾಗುವುದು. ಇಷ್ಟು ತ್ವರಿತವಾಗಿ ಹಣ ಒದಗಿಸುವ ಸ್ವತ್ತು, ಬೇರೆ ಇರಲಾರದು.

    ಸಾಮಾನ್ಯವಾಗಿ ಷೇರುಪೇಟೆಯ ಯಶಸ್ಸಿಗೆ ಅವಶ್ಯವಿರುವುದು ಮೌಲ್ಯಾಧಾರಿತ ಖರೀದಿ. ಅಂದರೆ ಒಂದು ಉತ್ತಮ ಕಂಪನಿಯ ಷೇರಿನ ಬೆಲೆ, ಭಾಹ್ಯ ಕಾರಣಗಳ ಪ್ರಭಾವದಿಂದ, ಭಾರಿ ಕುಸಿತ ಕಂಡಾಗ ಅದನ್ನು ಮೌಲ್ಯಾಧಾರಿತ ಖರೀದಿಗೆ ಪರಿವರ್ತಿಸಿಕೊಳ್ಳಬಹುದು. ಈರೀತಿ ಹೂಡಿಕೆಗೆ ಆಯ್ಕೆ ಮಾಡಿಕೊಂಡಾಗ ದೀರ್ಘಕಾಲೀನ ಹೂಡಿಕೆಯ ಚಿಂತನೆಯಿಂದಲೇ ಎಂದು ನಿರ್ಧರಿಸಿರಬೇಕು. ಒಂದು ವೇಳೆ ಖರೀದಿಸಿದ ಷೇರಿನ ಬೆಲೆಯು ಅನಿರೀಕ್ಷಿತ ಮಟ್ಟದ ಏರಿಕೆಯನ್ನು ಅಲ್ಪಾವಧಿಯಲ್ಲೇ ಪ್ರದರ್ಶಿಸಿದಲ್ಲಿ ಪೂರ್ಣವಾಗಿಯಲ್ಲದಿದ್ದರೂ ಭಾಗಶ:ವಾದರೂ ಲಾಭದ ನಗದೀಕರಣ ಮಡಿಕೊಳ್ಳುವುದು ಉತ್ತಮ. ನೆನಪಿರಲಿ ಬ್ಯಾಂಕ್‌ ಗಳಲ್ಲಿ ಠೇವಣಿ ಮೊತ್ತವು ದ್ವಿಗುಣವಾಗಲು ಸುಮಾರು 12 ವರ್ಷಗಳ ಸಮಯ ಬೇಕಾಗಬಹುದು. ಅಂದರೆ ಈ ಅಲ್ಪಬಡ್ಡಿದರದ ಯುಗದಲ್ಲಿ ಆಕರ್ಷಕ ಲಾಭವನ್ನು ಪೇಟೆ ಒದಗಿಸಿದಾಗ ಫಲಾನುಭವಿಯಾಗುವುದು ಸರಿಯಾದ ಕ್ರಮ.

    ಆಕರ್ಷಣೀಯ ಲಾಭಾಂಶ ಮತ್ತು ಕಾರ್ಪೊರೇಟ್‌ ಫಲಗಳನ್ನು ವಿತರಿಸಿದ ಕಂಪನಿಗಳು:

    Name of CompanyMarket rateDividendsPrevious year Rs.
    BPCL3645+5+79.00
    COAL INDIA187.009+ 5 +16.00
    GAIL162.4+5+ buyback  5.00 + buyback
    H P C L277   22.75
    I O C1225 + 4 +12.00
    IRCON ( 2)410.70+0.70  2.15 + 1:1 BONUS
    R V N L331.58  2.72
    IRFC220.77+  1.05
    N M D C (1)1669.01 +5.73+ 7.76 + BUY BACK
     N T P C1424.00 + 6.15 + BUYBACK
    P  F C1162.25+2.50+6.00+10.00
    POWER GRID CORP2257 +5.50+ 9.00 + 1: 3 BONUS
    OIL INDIA2383.50+5.75+ 5.00
    R E C1262.50+6.00 8.71
    SAIL1024.00+2.50 2.80
    BALMER LAWRI INVESTMENTS370 38.00 (37.50 ಅದರ ಹಿಂದಿನವರ್ಷ)
    SANOFI7,500490.00 CD365.00

    ಸಣ್ಣ ಹೂಡಿಕೆದಾರರ ಗಮನಕ್ಕೆ ತರಬಯಸುವುದೇನೆಂದರೆ ಹಲವಾರು ಕಂಪನಿಗಳು ಪೇಟೆಯ ಬೇಡಿಕೆ, ಪೂರೈಕೆಗಳಿಗನುಗುಣವಾಗಿ ಈಗಿನ ದಿನಗಳಲ್ಲಿ ಹೆಚ್ಚಿನ ಅಲ್ಪಕಾಲೀನ ಏರಿಳಿತಗಳನ್ನು ಪ್ರದರ್ಶಿಸುತ್ತಿರುವ ಕಂಪನಿಗಳೆಂದರೆ:

    ಕೆನರಾ ಬ್ಯಾಂಕ್‌, ಟಾಟಾ ಮೋಟಾರ್ಸ್‌, ಐಟಿಸಿ, ಐ ಇ ಎಕ್ಸ್‌, ಲೌರಸ್‌ ಲ್ಯಾಬ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಐಸಿಐಸಿಐ ಬ್ಯಾಂಕ್‌, ವೇದಾಂತ, ಹಿಂದೂಸ್ಥಾನ್‌ ಝಿಂಕ್‌, ಟಾಟಾ ಸ್ಟೀಲ್‌, ಹಿಂದೂಸ್ಥಾನ್‌ ಕಾಪರ್‌, ಎಲ್‌ ಐ ಸಿ ಹೌಸಿಂಗ್‌, ರೆಡಿಂಗ್ಟನ್‌, ಗ್ಲೆನ್‌ ಮಾರ್ಕ್‌ ಫಾರ್ಮಾ, ಇನ್‌ ಫೊಸಿಸ್‌, ಹೆಚ್‌ ಎ ಎಲ್‌, ಮದರ್ಸನ್‌ ಸುಮಿ, ಮುಂತಾದ ಅನೇಕ ಸಾಧನೆಯಾಧಾರಿತ ಕಂಪನಿಗಳ ಪಟ್ಟಿ ಸಿದ್ಧಪಡಿಸಿಟ್ಟುಕೊಂಡು ಅವಕಾಶಕ್ಕಾಗಿ ಕಾದರೆ ಉತ್ತಮ ಫಲ ಪಡೆಯಲು ಸಾಧ್ಯ.

    ಷೇರಿನ ಬೆಲೆಗಳಲ್ಲಿ ಏರುಪೇರು ಉಂಟುಮಾಡಬಹುದಾದ ಪ್ರಭಾವಿ ಅಂಶಗಳು

    ಷೇರುಪೇಟೆಯ ಚಟುವಟಿಕೆಯನ್ನು ನಮ್ಮ ಅನುಕೂಲಕ್ಕೆ ಪರಿವರ್ತಿಸಿಕೊಳ್ಳಬೇಕಾದಲ್ಲಿ ಅರಿಯ ಬೇಕಾದ ಅಂಶಗಳು ಎಂದರೆ

    1. ಬೇಡಿಕೆ- ಪೂರೈಕೆಯ ಅನುಪಾತ
    2. ಕಾರ್ಪೊರೇಟ್‌ ಗಳಲ್ಲಿನ ಆಂತರಿಕ ಬದಲಾವಣೆಗಳು
    3. ಸರ್ಕಾರಿ ನಿಯಮಗಳಲ್ಲಿನ ಬದಲಾವಣೆಗಳು ಮತ್ತು ಅದರ ಪ್ರಭಾವ
    4. ದೇಶದ ಆರ್ಥಿಕತೆಯ ಮೇಲಾಗುವ ಪ್ರಭಾವಿ ಬದಲಾವಣೆಗಳು
    5. ಜಾಗತಿಕ ಮಟ್ಟದಲ್ಲಾದ ಸೂಚ್ಯಂಕಗಳ ಬದಲಾವಣೆಗಳು
    6. ಸ್ವದೇಶಿ ಮತ್ತು ವಿದೇಶಿ ವಿತ್ತೀಯ ಸಂಸ್ಥೆಗಳ, ಮ್ಯುಚುವಲ್‌ ಫಂಡ್ ಚಟುವಟಿಕೆಯ ಶೈಲಿಗಳು
    7. ಪ್ರವರ್ತಕರ ಭಾಗಿತ್ವದಲ್ಲುಂಟಾದ ಏರುಪೇರು, ಭಾಗಿತ್ವದ
    8. ಮೂಲಾಧಾರಿತ ಪೇಟೆಯ ಚುಕ್ತಾಚಕ್ರದ ಸಮಯದಲ್ಲಿರುವ ಪರಿಸ್ಥಿತಿ
    9. ಕಂಪನಿಗಳ ಬಂಡವಾಳ ಸ್ವರೂಪದಲ್ಲಾಗುವ ಬದಲಾವಣೆ, ಸಂಪನ್ಮೂಲ ಸಂಗ್ರಹಣೆಯ ವಿಧ ಮತ್ತು ಷೇರಿನ ಮೇಲುಂಟಾಗುವ ಪ್ರಭಾವ
    10. ಮಾಧ್ಯಮಗಳಲ್ಲಿನ ಆದ್ಯತಾ ಪ್ರಚಾರ ಶೈಲಿ
    11. ಕಾರ್ಪೊರೇಟ್‌ ಫಲಗಳಾದ ಲಾಭಾಂಶ, ಬೋನಸ್‌, ಹಕ್ಕಿನ ಷೇರು, ಮುಖಬೆಲೆ ಸೀಳಿಕೆ ಮತ್ತು ಕ್ರೋಡೀಕರಣ, ಷೇರು ಹಿಂಕೊಳ್ಳುವಿಕೆಗಳು
    12. ಕಂಪನಿಗಳ ಸಹಭಾಗಿತ್ವ, ವಿಭಾಗಗಳ ಮಾರಾಟ, ವಿಲೀನ, ಸಮ್ಮಿಲನಗಳ ವಿಚಾರ
    13. ಪ್ರವರ್ತಕರ ಭಾಗಿತ್ವದ ಅಡವು- ಅದರಲ್ಲಾಗುವ ಬದಲಾವಣೆಗಳು
    14. ಕಂಪನಿಯ ಹೆಸರಿನಲ್ಲುಂಟಾಗುವ ಬದಲಾವಣೆಗಳು
    15. ಕಾರ್ಪೊರೇಟ್‌ ನಿಯಮ ಪಾಲನೆ ಮತ್ತು ಅದರಲ್ಲಿನ ಲೋಪದೋಶಗಳು
    16. ಸ್ಥಳೀಯ ಮತ್ತು ಅಂತರ ರಾಷ್ಟ್ರೀಯ ಕಂಪನಿಗಳ ರೇಟಿಂಗ್‌ ಮತ್ತು ಅದರ ಬದಲಾವಣೆಗಳು,
    17. ಇನ್ವೆಸ್ಟ್ ಮೆಂಟ್‌ ಕಂಪನಿಗಳ ರೇಟಿಂಗ್
    18. ಕಂಪನಿಯ ಉತ್ಪನ್ನಗಳಿಗಿರುವ ಸ್ಥಳೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಮಾನ್ಯತೆ
    19. ಆದಾಯ ತೆರಿಗೆ, ಅಬಕಾರಿ ಸುಂಕ, ಜಿ ಎಸ್‌ ಟಿ ಗಳಲ್ಲಾದ ಬದಲಾವಣೆಗಳು, ಈ ಇಲಾಖೆಗಳಿಂದ ಕ್ರಮಕ್ಕೊಳಗಾಗುವ ಅಂಶಗಳು
    20. ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ
    21. ನಿಯಂತ್ರಕರ ನಿಯಮಗಳು ಮತ್ತು ಅದರ ಬದಲಾವಣೆಗಳಿಂದಾಗುವ ಪ್ರಭಾವಗಳು
    22. ಷೇರುವಿನಿಮಯ ಕೇಂದ್ರದ ಲೀಸ್ಟಿಂಗ್‌ ನಲ್ಲಿ ಸೇರಿಸಲಾದ ಗುಂಪು ಮತ್ತು ಪಾಲಿಸಿದ ಶಿಸ್ತುಬದ್ಧತೆ
    23. ಕಂಪನಿಯ ಮೇಲೇನಾದರೂ ಷೇರುವಿನಿಮಯ ಕೇಂದ್ರವು ಲೋಪಗಳಿಗೆ ಕ್ರಮ ಜರುಗಿಸಿದೆಯೇ
    24. ಹೂಡಿಕೆದಾರರ ಹಿತರಕ್ಷಣೆಗೆ ಕಂಪನಿ ಕೊಡುವ ಆದ್ಯತೆ
    25. ಷೇರುವಿನಿಮಯ ಕೇಂದ್ರದ ಸೂಚ್ಯಂಕಗಳಲ್ಲುಂಟಾದ ಬದಲಾವಣೆಗಳಿಂದ ಷೇರಿನ ಬೆಲೆಗಳಲ್ಲಿ ಏರುಪೇರು

    ಇಷ್ಠೇ ಅಲ್ಲದೆ ಇನ್ನೂ ಅನೇಕ ಕಾರಣಗಳು ಏರಿಳಿತಕ್ಕೆ ಸೃಷ್ಠಿಯಾಗುತ್ತಿರುತ್ತವೆ. ಈ ಎಲ್ಲಾ ಕಾರಣಗಳನ್ನು ವಿಶ್ಲೇಷಿಸಿ ನಿರ್ಧರಿಸುವುದು ಜನಸಾಮಾನ್ಯರಿಗಂತೂ ಸಾಧ್ಯವಿಲ್ಲ. ಹಾಗೂ ವಿವಿಧ ಮಾಧ್ಯಮಗಳ ಮೂಲಕ, ಸಾಮಾಜಿಕ ಜಾಲತಾಣಗಳಲ್ಲಿ ದೊರೆಯುವ, ಲಭ್ಯವಾಗುವ ಮಾಹಿತಿಯು ಎಷ್ಠರ ಮಟ್ಟಿಗೆ ಸರಿ ಇರಬಹುದು ಎಂಬುದು ದೃಢೀಕರಿಸಲಸಾಧ್ಯ. ಇದಕ್ಕೆ ಸುಲಭ ಸೂತ್ರವೆಂದರೆ, ಷೇರುಪೇಟೆಯ ಚಟುವಟಿಕೆ ನಡೆಸುವ ಕಂಪ್ಯೂಟರ್‌ ಪರದೆ ಅಥವಾ ಮೊಬೈಲ್‌ ನಲ್ಲಿ ಪ್ರದರ್ಶಿತವಾಗುವ ಕಣ್ಣಿಗೆ ಗೋಚರಿಸುವ ಅಂಕಿ ಅಂಶಗಳ ಮೂಲಕ, ಕಂಪನಿಗಳ ಸಾಮರ್ಥ್ಯವನ್ನಾಧರಿಸಿ, ಪೇಟೆಯ ಪರಿಸ್ಥಿತಿಯೊಂದಿಗೆ ತುಲನೆಮಾಡಿ ನಿರ್ಧರಿಸುವುದು ಉತ್ತಮವಲ್ಲವೇ?

    ಮುಖ್ಯವಾಗಿ ಕೇವಲ ವಿಶ್ಲೇಷಣೆಗಳನ್ನು ಅನುಸರಿಸುವ ಬದಲು, ಕಂಪನಿಗಳ ಅರ್ಹತಾ ಮಟ್ಟವನ್ನು ಮಾಪನ ಮಾಡುವ ಚಿಂತನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು.

    ಜನಸಾಮಾನ್ಯರಿಗೆ, ಬೇರೆ ವ್ಯವಹಾರಾ ಅಥವಾ ವೃತ್ತಿಪರರಿಗೆ ಈ ಎಲ್ಲಾ ವಿವಿಧ ಅಂಶಗಳನ್ನು ಗಮನಿಸಿ ನಿರ್ಧರಿಸುವುದು ಸುಲಭದ ಕೆಲಸವಲ್ಲ. ಅಂತಹವರು ಅಳವಡಿಸಿಕೊಳ್ಳಬೇಕಾದ ಸುಲಭಸೂತ್ರವೆಂದರೆ ʼ ವ್ಯಾಲ್ಯು ಪಿಕ್‌ – ಪ್ರಾಫಿಟ್‌ ಬುಕ್ʼ

    Value pick – prafit book ಎಂಬುದು ಷೇರುಪೇಟೆ ವಹಿವಾಟಿಗೆ ಸದಾ ಅನ್ವಯವಾಗುವ ಹಸಿರು ಸಮೀಕರಣವಾಗಿದೆ. ಯಾವುದೇ ಒಂದು ಉತ್ತಮ ಕಂಪನಿ ಷೇರು ಖರೀದಿಸುವಾಗ ಅದರ ಮೌಲ್ಯವು ಭಾರಿ ಕುಸಿತದಲ್ಲಿದೆ ಎಂದಾಗ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬಹುದು. ನಂತರ ಈ ಷೇರಿನ ಬೆಲೆ ಏರಿಕೆ ಕಂಡಾಗ ಹೂಡಿಕೆಯ ಅವಧಿ ಮತ್ತು ಅದು ಗಳಿಸಿಕೊಡುವ ಲಾಭದ ಗಾತ್ರಕ್ಕನುಗುಣವಾಗಿ, ಉತ್ತಮವಾಗಿದ್ದಲ್ಲಿ ಮಾರಾಟ ಮಾಡಿ ನಿರ್ಗಮಿಸಬೇಕು. ಮಾರಾಟಮಾಡಿದ ನಂತರ ಇದೇ ಷೇರು ಮತ್ತಷ್ಟು ಏರಿಕೆ ಕಂಡಲ್ಲಿ ಚಿಂತಿಸದೆ, ಲಾಭ ನಗದೀಕರಿಸಿಕೊಂಡ ತೃಪ್ತಿ ಇದ್ದಲ್ಲಿ ಮುಂದಿನ ನಿರ್ಧಾರಗಳು ಸುಸೂತ್ರವಾಗಿರುತ್ತದೆ. ಹಾಗಾಗಿ ಸಮತೋಲನ ಚಿತ್ತ ಭವಿಷ್ಯದ ಚಟುವಟಿಕೆಗೆ ಅತ್ಯಗತ್ಯ. ಒಂದೊಮ್ಮೆ ಮಾರಾಟಮಾಡಿದ ಷೇರೇ, ಉತ್ತಮವೆನಿಸಿದರೆ, ಕುಸಿತ ಕಂಡಾಗ ಮತ್ತೊಮ್ಮೆ ಖರೀದಿಸಬಹುದಾಗಿದೆ. ಒಂದು ಕಂಪನಿಯು ಪ್ರಕಟಿಸುವ ತನ್ನ ಸಾಧನೆಗಳನ್ನು, ಕಾರ್ಪೊರೇಟ್‌ ಫಲಗಳನ್ನು ಅಥವಾ ಕಂಪನಿಗೆ ಸಂಬಂಧಪಟ್ಟ ಬೆಳವಣಿಗೆಗಳನ್ನು ಸದಾ ಗಮನದಲ್ಲಿರಿಸಿಕೊಂಡು, ಆ ಷೇರಿನ ಬೆಲೆಯು ವಿಬಿನ್ನ ಕಾರಣಗಳಿಂದಾಗಿ ಅಥವಾ ಷೇರುಪೇಟೆಯ ವಾತಾವರಣದಿಂದ ಕುಸಿತಕಂಡಾಗ ಅದನ್ನು ಅಪೂರ್ವ ಅವಕಾಶವೆಂದು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದು. ಆ ಕಂಪನಿಯ ಅರ್ಹತಾ ಮಟ್ಟವನ್ನು ಸಾಧ್ಯವಾದಷ್ಠೂ ಮಾಪನಮಾಡಿಕೊಂಡಿರಬೇಕು.ಸಮಯೋಚಿತವಾಗಿ ನಿರ್ವಹಿಸಿದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    error: Content is protected !!