29.3 C
Karnataka
Tuesday, April 22, 2025
    Home Blog Page 23

    ಕಾಡುವ ಕುನ್ನ, ಕಾಡುವ ಕಾಡು!

    ಸಂಕೇತದತ್ತ

    ‘ತಲೆದಂಡ’ ಕನ್ನಡ ಚಿತ್ರ ಈಗ ಬಿಡುಗಡೆಯಾಗಿದೆ. ಇದು ಸಂಚಾರಿ ವಿಜಯ್ ಅವರ ನಟನೆಯ ಚಿತ್ರ. ಈ ಚಿತ್ರ ವಿಜಯ್ ಅವರ ನಟನಾ ಪ್ರತಿಭೆಗೆ ಕನ್ನಡಿಯಂತಿದೆ. ಈ ಹಿಂದೆ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಈ ನಟ ಅದನ್ನು ಮತ್ತೆ ಈ ಚಿತ್ರದ ಮೂಲಕ ಸಾಬೀತು ಪಡಿಸಿದ್ದಾರೆ ಎನ್ನಲ್ಲಡ್ಡಿಯಿಲ್ಲ!

    ಸೋಲಿಗರ ಬದುಕಿನ ಎಳೆಯೊಂದಿಗೆ ಹಚ್ಚ ಹಸಿರಿನ ಕಾಡಿನ ಪರಿಸರದ ಹಳ್ಳಿಯಲ್ಲಿ ನಡೆವ ಕತೆಯು ಇದಾಗಿದೆ. ಆ ಪರಿಸರದ ಹಾಗೂ ಆ ಪಂಗಡದವರ ಭಾಷಾ ವೈಖರಿಯಲ್ಲಿಯೇ ಇಡೀ ಚಿತ್ರ ತೆರೆಗೆ ತರಲಾಗಿದೆ.

    ಇಲ್ಲಿ ಕತೆಯೇ ಮುಖ್ಯ, ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ! ಎಂಬಂತೆ ಪ್ರತಿ ಫ್ರೇಮೂ ಕತೆಗೆ ಪೂರಕವಾಗಿದೆ.ಯಾವುದಕ್ಕೂ ಹೆಚ್ಚು ಪ್ರಾಧಾನ್ಯತೆ ಕೊಡದೇ ಯಾವುದನ್ನು ಉಪೇಕ್ಷಿಸದೇ ಬಿಗಿಯಾಗಿ ಚಿತ್ರಿಸಿಕೊಟ್ಟಿದ್ದಾರೆ. ಬಿಗಿಯಾದ ಚಿತ್ರಕತೆ, ಅಚ್ಚುಕಟ್ಟಾದ ದೃಶ್ಯೀಕರಣ, ಪ್ರತಿ ಸನ್ನಿವೇಶವನ್ನೂ ಮನಕ್ಕೆ ಮುಟ್ಟುವಂತೆ ಸೆರೆ ಹಿಡಿಯಲಾಗಿದೆ.

    ನಿರ್ಮಾಪಕಿ ಡಾ ಹೇಮಾಮಾಲಿನಿ ಕೃಪಾಕರ್ ಅವರು ಉತ್ತಮ ಸಂದೇಶದ ಚಿತ್ರ ಕೊಟ್ಟಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಉಸಿರಿನ ಬೆಲೆಯನ್ನು ತಿಳಿದ ಮನುಜ ಕುಲಕ್ಕಿದು ನೀತಿ ಪಾಠದಂತಿದ್ದು ಪ್ರಸ್ತುತಕ್ಕೆ ಹತ್ತಿರವಾಗಿದೆ.

    ನಿರ್ದೇಶಕ ಪ್ರವೀಣ್ ಕೃಪಾಕರ್ ಅವರ ಆಲೋಚನೆ ಹಾಗೂ ಸೀನ್ ಕ್ರಿಯೇಶನ್ ಅದ್ಭುತ. ಅದಕ್ಕೆ ತಕ್ಕಂತೆ ಸಿನಿಮೋಟೋಗ್ರಫಿ ಮಾಡಿದ ಅಶೋಕ್ ಕಶ್ಯಪ್ ಅವರ ಚೌಕಟ್ಟು ಚಿತ್ರವನ್ನು ಕಲಾಕೃತಿಯಾಗಿಸಿದೆ.

    ನಿಸರ್ಗವನ್ನು ಯಥಾವತ್ತಾಗಿ ತೋರಿಸುವ ಮೂಲಕ ಅದರ ಅಂದವನ್ನು ಅಶೋಕ್ ಹೆಚ್ಚಿಸಿದ್ದಾರೆ. ಸಿನಿಮಾಗೆ ಬೇಕಾದ ತಂತ್ರಜ್ಞಾನವನ್ನು ಎಷ್ಟು ಬೇಕೋ ಅಷ್ಟೇ ಬಳಸಿದ್ದಾರೆ. ಆಶೋಕ್ ಕಶ್ಯಪ್ ಅವರ ಇಂತಹ ಕ್ಯಾಮರಾ ಕುಸುರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿದೆ. ಅಲ್ಲದೇ ಚಿತ್ರಕ್ಕೆ ಹಲವು ಪ್ರತಿಷ್ಟಿತ ಪ್ರಶಸ್ತಿಗಳು ಲಭಿಸಿವೆ.

    ಕನ್ನಡದ ವಿಭಿನ್ನ ಚಿತ್ರಗಳ ಪಟ್ಟಿಗೆ ಇದು ಸೇಪರ್ಡೆಯಾಗಿದೆ!
    ಆದರೆ ಕನ್ನಡ ಪ್ರೇಕ್ಷಕ ಪ್ರಭುಗಳು ಈ ಚಿತ್ರವನ್ನು ನೋಡಿ ಮೆಚ್ಚಿದಲ್ಲಿ ತಂಡದ ಶ್ರಮ ಸಾರ್ಥಕ, ಅದೇ ಬಹು ದೊಡ್ಡ ಪ್ರಶಸ್ತಿ!

    ಮಿಂಚುಹುಳಗಳೊಂದಿಗೆ ಆಡುವ ದೃಶ್ಯವು ಅಷ್ಟೇ ಸಹಜವಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಗುಣವನ್ನು ಹೊಂದಿರುವುದು ಸಾಬೀತಾಗಿದೆ.

    ಕುನ್ನನನ್ನು ಎಲ್ಲೆಡೆ ಹುಡುಕಿ ಕಾಣದಾಗಿ ತನ್ನ ಗುಡಿಸಲ ಮುಂದೆ ಕೂತು ಕಾಯುವಾಗ ಅಲ್ಲಿಗೆ ಕುನ್ನನ ಆಗಮನ! ಈ ದೃಶ್ಯದ ಸಂಯೋಜನೆ, ಬೆಳಕಿನ ವಿನ್ಯಾಸ, ಮನಸ್ಸಿಗೆ ಹತ್ತಿರವಾಗುವ ವಿಕಲಚೇತನನ ನಡವಳಿಕೆ, ಅಮ್ಮನ ಪ್ರೀತಿಯ ಪರಾಕಾಷ್ಟೇ ಅಲ್ಲಿನ ನಡಾವಳಿಗಳು ಕಣ್ತುಂಬುತ್ತೆ!

    ಈಗಿನ ಸಿನಿಮಾ ಜಗತ್ತಿನ ಮಟ್ಟದಲ್ಲೇ ನಾವೂ ಇದ್ದೀವಿ ಎಂದು ಸಾಬೀತು ಪಡಿಸುವ ಇಂತಹ ಹಲವು ದೃಶ್ಯಗಳು ಇದರಲ್ಲಿವೆ.

    ತನ್ನ ಸಾಕಿಯನ್ನು ನೆನೆದೂ, ತನ್ನಿಷ್ಟದ ಮರಗಳ ಕಡಿಯುವವರ ನೆನೆದೂ, ತನ್ನ ಮರಕ್ಕೆ ಗಾಯವಾದಾಗ ಅದಕ್ಕೆ ಶುಶ್ರೂಷೆ ಮಾಡುವ, ನಾಳೆ ಉರುಳಿ ಬೀಳಲಿರುವ ಮರವ ಅಪ್ಪಿ ಮಮ್ಮಲ ಮರುಗುವ, ಊರವರೆಲ್ಲಾ ಡಾಂಬಾರು ರಸ್ತೆಗಾಗಿ ಮರಗಳ ನಾಶಕ್ಕೆ ಒಪ್ಪಿಗೆ ಕೊಡುವಾಗ ಒಬ್ಬನೇ ಕೂತು ಬಿಕ್ಕುವ ದೃಶ್ಯಗಳಿಗೆ ‘ಸೈ’ ಅನ್ನಬೇಕೋ, ದುಃಖಿಸಬೇಕೋ ಆನಂದ ಭಾಷ್ಪ ಸುರಿಸಬೇಕೋ ತಿಳಿಯದು. ದುಃಖದ ಮಡುವಲ್ಲಿ ತಾವರೆಗಳು ಉದಿಸಿವೆ!

    ಸಂಭಾಷಣೆಯು ಈ ಚಿತ್ರಕ್ಕೆ ಹೆಚ್ಚಿನ ಮೆರುಗು ಕೊಟ್ಟಿದೆ. ಪರಿಸರಕ್ಕೆ ತಕ್ಕ ಮಣ್ಣಿನ ವಾಸನೆಯ ಭಾಷೆಯ ಸೊಗಡು ಬೇರೆಯದೇ ಲೋಕ ಸೃಷ್ಟಿಸುತ್ತೆ!

    ಪ್ರತಿ ಸಂಭಾಷಣೆಯಲ್ಲೂ ಹೊಸ ಹೊಸ ಪದಗಳ ಪರಿಚಯವಾಗುತ್ತೆ. ಉಚ್ಚಾರಣೆ ನಾಲಗೆಯ ಹೊರಳು, ವೈವಿಧ್ಯಮಯ ನಿನಾದ. ಏರಿಳಿತದ ಮಾತುಗಳು ಮನಸ್ಸಿಗೆ ನಾಟುತ್ತೆ. ಕರುಳಿಂದ ನೋವು-ಸಂಕಟವು ಒತ್ತರಿಸಿ ಬರುತ್ತೆ. ಒಮ್ಮೆ ಚಿತ್ರ ನೋಡಿ ಹೊರಬಂದ ಪ್ರೇಕ್ಷಕನಿಗೇ ಕಾಡು ಕಾಡುತ್ತೆ!

    ಹೀಗೆ ಕಾಡುವ ಈ ಚಿತ್ರವು ಸಂಕಲನಕಾರರಾದ ಕೆಂಪರಾಜ್ ಅವರಿಗೆ ಇನ್ನೆಷ್ಟು ಕಾಡಿರಬೇಕು. ಇಷ್ಟು ಉತ್ತಮವಾದ ಅಭಿನಯದ ಓಘಕ್ಕೆ, ನೋವು, ಪ್ರೀತಿ-ಪ್ರೇಮಗಳಿಗೆ ಕತ್ತರಿ ಹಾಕಬೇಕು. ಆರ್ದ್ರಗೊಳಿಸುವ ದೃಶ್ಯಗಳನ್ನು ಪದೇ ಪದೇ ನೋಡಿ ಮರುಗದೇ, ಕೊರಗದೇ ಅಂಟಿಸಬೇಕು.

    ಹರಿಕಾವ್ಯ ಅವರು ಸಂಗೀತದ ಮೂಲಕ ನಾಡಿನ ಸಂಸ್ಕೃತಿಗೆ, ಕಾಡಿನ ಪರಿಸರಕ್ಕೆ ತಕ್ಕ ನ್ಯಾಯ ಒದಗಿಸಬೇಕು. ಹೀಗೆ ಎಲ್ಲರೂ ಸೇರಿ ಸಮಾನ ಮನಸ್ಥಿತಿಯಿಂದ ಒಂದು ಅಮೂಲ್ಯವಾದ ಕಲಾಕೃತಿಯನ್ನು ಸಿದ್ಧಗೊಳಿಸಿದ್ದಾರೆ ಈ ಚಿತ್ರ ತಂಡ!

    ನೋಡದವರಿಗೆ ಈ ಅನುಭವವು ಇಲ್ಲವಷ್ಟೇ! ಮೂಕನು ಬೆಲ್ಲವ ತಿಂದಾನು, ಸವಿದಾನು ಹೇಳಲಾಗುವುದೇನು! ಮೆದ್ದು ಅನುಭವಿಸಿದವನಿಗಷ್ಟೇ ಅರಿವಾಗುವುದು ಆ ಸವಿ!

    ಸಂಚಾರಿ ವಿಜಯ್ ಬಗ್ಗೆ ಗೊತ್ತಿರದವರೂ ಈ ಚಿತ್ರದ ಕುನ್ನನ ಪಾತ್ರ ನೋಡಿದಲ್ಲಿ ಮರುಗುವುದು ಸಹಜ. ವಿಜಯ್ ಪಾತ್ರದ ಪರಕಾಯ ಪ್ರವೇಶವು ಅಂತಹ ಗಾಢವಾದ ನೋವನ್ನು ಉಂಟು ಮಾಡುತ್ತೆ. ಉಗ್ಗುವ ರೀತಿಯ ಡೈಲಾಗ್ ಡೆಲಿವರಿಯು ನಟನೆಯಷ್ಟೇ ವಿಶೇಷವೂ ವಿಭಿನ್ನವೂ ಆಗಿದೆ. ಈ ಕುನ್ನನ ಪಾತ್ರವು ಮೈಸೂರಿನ ನಾಗು ಎಂಬ ವ್ಯಕ್ತಿಯನ್ನು ನೋಡಿ ಸೃಷ್ಟಿಸಲಾಗಿದೆ. ಆದರೆ ಒಬ್ಬ ವಿಕಲಚೇತನನ ಪಾತ್ರವನ್ನು ಎಲ್ಲೂ ಏರುಪೇರಾದಂತೆ ಅನುಸರಿಸಿ ನಟಿಸುವುದು ಸುಲಭದ ಮಾತೇ? ಕುನ್ನನಷ್ಟೇ ಉತ್ತಮವಾಗಿ ಕುನ್ನನ ಅಮ್ಮ ಕೇತಮ್ಮನಾಗಿ ಮಂಗಳಾ ರಘು ಅವರು ಜೀವಿಸಿ ನಟಿಸಿದ್ದಾರೆ. ಈವರೆಗೂ ಮೂರ್ನಾಲ್ಕು ಚಿತ್ರಗಳಲ್ಲಷ್ಟೇ ನಟಿಸಿರುವ ಮಂಗಳಾ ಅವರು ಕುನ್ನನ ನಟನೆಗೆ ಸಾಥ್ ಕೊಟ್ಟು ತಾವೊಬ್ಬ ಅಭಿನೇತ್ರಿ ಎಂದು ಸಾಬೀತುಗೊಳಿಸಿದ್ದಾರೆ. ಇಲ್ಲಿ ಇಬ್ಬರೂ ಪೈಪೋಟಿಯೋ ಎಂಬಂತೆ ನಟಿಸಿ ಚಿತ್ರಕ್ಕೆ ತಮ್ಮ ಕೊಡುಗೆಯನ್ನು ಕೊಟ್ಟಿದ್ದಾರೆ.

    ಬಿ ಸುರೇಶ್, ರಮೇಶ್ ಪಂಡಿತ್ ಭವಾನಿ ಪ್ರಕಾಶ್, ಮಂಡ್ಯ ರಮೇಶ್ ಹೀಗೆ ರಂಗಭೂಮಿಯ ಪ್ರತಿಭೆಗಳೇ ಹೆಚ್ಚಿದ್ದು ಒಬ್ಬರಿಗಿಂತ ಒಬ್ಬರು ಜಿದ್ದಿಗೆ ಬಿದ್ದು ನಟಿಸಿದ್ದಾರೆ. ಚೈತ್ರಾ ಆಚಾರ್ ಸಾಕಿ ಪಾತ್ರದ ಮೂಲಕ ಕನ್ನಡಕ್ಕೆ ಹೊಸ ತಾರಾಮಣಿ ಆಗುವ ಭರವಸೆ ಕೊಟ್ಟಿದ್ದಾರೆ.

    ಕಾಡು ಉಳಿಸಿ, ಮರ ನೆಡಿ ಪರಿಸರ ಸಂರಕ್ಷಿಸಿ ಎಂಬ ಸಂದೇಶ ಸಾರುವ ಬೀದಿ ನಾಟಕದ ದೃಶ್ಯ ಸಂಯೋಜನೆಯು ಮುಗ್ಧ ಕುನ್ನನ ಮೇಲೆ ಪರಿಣಾಮ ಬೀರಿದ್ದು ಅಲ್ಲಿ ಹಸಿರುಟ್ಟ ಸ್ತ್ರೀ ಪಾತ್ರಧಾರಿ ಸಾಕಿಯಾಗಿದ್ದೂ, ಭೂ ದೇವಿಯಂತೆ ಕಂಡಿದ್ದೂ ಚಿತ್ರಕ್ಕೆ ಹೊಸ ತಿರುವು ಕೊಟ್ಟಿದೆ. ‘ವಾಡು ವಾಡು ವಾಡೂ ಇವರೆಲ್ಲಾ ಹೊಡಿತಾರೆ ವಾಡು ವಾಡೂ ಸಾಕಿ ವಾಡು ವಾಡೂ’ ಎಂಬುದು ಚಿತ್ರಮಂದಿರದಿಂದ ಹೊರಬಂದರೂ ಕಾಡುತ್ತೆ! ಬೀದಿನಾಟಕವನ್ಬು ಕತೆಗೆ ಬಳಸಿಕೊಂಡ ರೀತಿ ಭಿನ್ನವಾಗಿದೆ. ಎರಡು ವೇರೆ ಬೇರೆ ಪಾತ್ರಗಳನ್ನು ಒಂದೇ‌ ಪಾತ್ರವಾಗಿಸುವ ಪರಿ ವಿಕಲಚೇತನನ ಪಾತ್ರದ ಮನಸ್ಥಿತಿಗೆ ಪೂರಕವಾಗಿಸಿದೆ.

    ಗೋರಕಾನ ಗೋರಕಾನ ಹಾಡಿನಂತಹ ಹಾಡುಗಳು ಗುನುಗುವಂತೆ ಮಾಡಿವೆ. ಅಟ್ಟಿ ಲಕ್ಕವ್ವ ಹಾಗೂ ಬಿಳಿಗಿರಿ ರಂಗನ ನಂಬಿದ ಜನರ ನಂಬಿಕೆಯನ್ನೂ, ಸಂಪ್ರದಾಯವನ್ನೂ ಕತೆಗೆ ತಕ್ಕಂತೆ ತರಲಾಗಿದೆ. ಜನಪದ ಸಂಸ್ಕೃತಿಯನ್ನು ಯಥಾವತ್ತಾಗಿ ಪ್ರತಿಬಿಂಬಿಸಲಾಗಿದೆ.

    ಇದೆಲ್ಲವನ್ನೂ ಮೀರಿದ್ದು ಎನ್ನಬಹುದಾದ ಹಸಿರೇ ಉಸಿರು, ಮರ ಕಡಿದರೆ ಮಳೆಬಾರದು ನೀರಿಗೆ ಬರ ಬರುವುದು, ಉಸಿರಾಡಲು ಶುದ್ದ ಗಾಳಿ ಸಿಗದು, ಪ್ರತಿ ಗಿಡ-ಮರಗಳಿಗೂ ಜೀವವಿದೆ. ಅವುಗಳಿಗೆ ನೋವಾಗಲು, ಕಡಿಯಲು ಎಡೆಕೊಡಬಾರದು ಎಂಬ ಸಂದೇಶವನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ. ಮರ ಸಂರಕ್ಷಿಸಿ, ಗಿಡ ನೆಡಿ ಹಾಗೂ ಬೆಳೆಸಿ, ಕಾಡು ಉಳಿಸಿ ಎಂಬ ಧ್ಯೇಯೋಕ್ತಿಯನ್ನು ಇಷ್ಟು ಪ್ರಮುಖ ವಿಷಯವನ್ನಾಗಿ ಚಿತ್ರದಲ್ಲಿ ಬಳಸಿಕೊಂಡದ್ದು ಅಪರೂಪ ಎನ್ನಬಹುದೇನೋ?

    ಈ ಚಿತ್ರ ನೋಡಿ ಚಿತ್ರಮಂದಿರದಿಂದ ಹೊರ ಬಂದರೂ ಕುನ್ನ, ಕೇತವ್ವ, ಕುನ್ನನ ಅಪ್ಪಯ್ಯ, ಸಾಕಿ, ಪರಿಸರ ತಜ್ಞ, ಮಿನಿಸ್ಟ್ರು ಹೀಗೆ ಎಲ್ಲಾ ಪಾತ್ರಗಳೂ ನಮ್ಮ ತಲೆಯಲ್ಲೇ ಬೇರು ಬಿಟ್ಟು ತಳ ಊರಿರುತ್ವೆ!

    ಒಬ್ಬ ವಿಕಲಚೇತನಿಗಿರುವ ಪರಿಸರ ಕಾಳಜಿ ಕಾಡಿನ ಬಗ್ಗೆ ಇರುವ ಮುಗ್ಧ ಪ್ರೇಮ ಹಾಗೂ ಅದಕ್ಕಾಗಿ ತಲೆದಂಡ ಎಲ್ಲವೂ ಆಳೆತ್ತದವರನ್ನು ಸಣ್ಣಗೆ ನಡುಗಿಸಿ ಬಿಡುತ್ತೆ, ಗೊತ್ತೇ ಆಗದಂತೆ ಕಣ್ಣಾಲಿಯಲಿ ದುಃಖವು ಮಡುಗಟ್ಟುತ್ತೆ. ಆ ಪಾತ್ರದ ಬಗ್ಗೆ ಮರುಕ ಪಡುವಂತೆ ಮಾಡುತ್ತೆ.ಜೀವಿಸಿ ನಟಿಸಿದ ವಿಜಯ್ ಜೀವಂತ ಇದ್ದಾರೆ!

    ಎಷ್ಟೇ ಪ್ರಯತ್ನಪಟ್ಟರೂ ಕೊನೆಯ ಸೀನ್ ವರೆಗೂ ಸಂಚಾರಿ ವಿಜಯ್ ನಮಗೆ ಕಾಣಲೇ ಇಲ್ಲಾ. ಕುನ್ನನನ್ನು ಮಾತ್ರ ನೋಡಲಾಯ್ತು! ಪಾತ್ರವೇ ಆಗಿದ್ದಾರೆ ವಿಜಯ್

    This image has an empty alt attribute; its file name is sanketh-gurudutt-855x1080.jpg

    ಸಂಕೇತದತ್ತ ಎಂಬ ಹೆಸರಿನಿಂದ ಸುಪ್ರಸಿದ್ಧರಾಗಿರುವ ಸಂಕೇತ ಗುರುದತ್ತ ಅವರ ಮೂಲ ತುಮಕೂರು. ಅಲ್ಲಿ ತುಮಕೂರು‌ವಾರ್ತೆ, ಪ್ರಜಾಪ್ರಗತಿ, ಕನ್ನಡ ಗಂಗೋತ್ರಿ, ನಗೆಮಿತ್ರ ಹಾಗೂ ನಗೆಮುಗುಳು, ಪತ್ರಿಕೆಗಳಿಗೆ ಕೆಲಸ ಮಾಡಿದ್ದರು. ಬೆಂಗಳೂರಿಗೆ ಬಂದು ಸುದ್ದಿ ಸಂಗಾತಿ ವಾರ ಪತ್ರಿಕೆಯಲ್ಲಿ ಕೆಲ ಕಾಲವಿದ್ದರು. ಆನಂತರ ಧಾರಾವಾಹಿ, ಸಿನಿಮಾಗಳಲ್ಲಿ ಕೆಲಸ ಮಾಡಿದರು. ನಂತರದಲ್ಲಿ ಕಿರ್ಲೋಸ್ಕರ್ ಮಲ್ಟಿಮೀಡಿಯಾಗೆ ಸೇರ್ಪಡೆ‌‌. ಅಲ್ಲಿಂದ ಒಂದಿಷ್ಟು ಕಲಿತು ಹೈದರಾಬಾದನತ್ತ ಪಯಣ. ಅಲ್ಲಿ ಹನ್ನೊಂದು ವರ್ಷವಿದ್ದು ಮತ್ತೆ ಬೆಂಗಳೂರಿಗೆ ವಾಪಸ್ ಆಗಿ ಸುಧಾ, ಮಯೂರ, ಪ್ರಜಾವಾಣಿ ವಿಶೇಷಾಂಕ, ಹೊಸತು, ಪ್ರಿಯಾಂಕಗಳಿಗೆ ಫ್ರೀಲ್ಯಾನ್ಸ್ ಆಗಿ ಕೆಲಸ ನಿರ್ವಹಿಸಿದರು. ಆ ಸಮಯದಲ್ಲಿಯೇ ಸಿಕ್ಕ ಮತ್ತೊಂದು ಉತ್ತಮ ಅವಕಾಶ ಕನ್ನಡಪ್ರಭದಲ್ಲಿ ಕಲಾಕಾರನಾಗಿದ್ದು. ಕಲಾ ವಿಭಾಗದ ಜೊತೆಗೆ ಪುರವಣಿಯ ಕೆಲ ಪುಟಗಳ ಜವಾಬ್ದಾರಿ ಸಿಕ್ಕಿತು. ಅಲ್ಲಿ ನಾಟಕ, ಸಿನಿಮಾ ಹಾಗೂ ಕಲಾಪ್ರದರ್ಶನಗಳ ವಿಮರ್ಶೆ, ವ್ಯಕ್ತಿ ಹಾಗೂ ಸಾಂಸ್ಕ್ರತಿಕ ತಂಡಗಳ ಪರಿಚಯ ಲೇಖನ ಹೀಗೆ ಹಲವಾರು ವಿಭಾಗದಲ್ಲಿ ಕೆಲಸ ಮಾಡಿದ ಅನುಭವ. ಪ್ರಸ್ತುತ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    karnataka cabinet expansion: ರಾಜ್ಯ ಕಾರ್ಯಕಾರಿಣಿ ಸಭೆ ನಂತರ ಸಚಿವ ಸಂಪುಟ ವಿಸ್ತರಣೆ ನಿರ್ಧಾರ

    NEW DELHI APRIL 7

    ರಾಜ್ಯ ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಸ್ಥೂಲವಾಗಿ ಚರ್ಚೆಯಾಗಿದೆ. ವರಿಷ್ಠರು ಎಲ್ಲಾ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇದೇ ಏಪ್ರಿಲ್ 16 ಮತ್ತು 17 ರಂದು ನಡೆಯುವ ರಾಜ್ಯ ಕಾರ್ಯಕಾರಿಣಿ ಸಭೆಗೆ ಬಂದ ಸಂದರ್ಭದಲ್ಲಿ ಮಿಕ್ಕ ವಿಚಾರಗಳನ್ನು ಮಾತನಾಡುವುದಾಗಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ basavaraja bommai ತಿಳಿಸಿದ್ದಾರೆ. ತಮ್ಮ ದೆಹಲಿ -new delhi -ಪ್ರವಾಸದ ನಂತರ ಬೆಂಗಳೂರಿಗೆ ಹೊರಡುವ ಮುನ್ನ ಅವರು ವರದಿಗಾರರೊಂದಿಗೆ ಮಾತನಾಡಿದರು.

    ಸ್ಥಳೀಯ ವರಿಷ್ಠರು, ನಾಯಕರು, ಸಂಘಟನಾ ಕಾರ್ಯದರ್ಶಿಗಳೊಂದಿಗೆ ಚರ್ಚೆ ಮಾಡಿ ತೀರ್ಮಾನ ಮಾಡೋಣ ಎಂದು ತಿಳಿಸಿದ್ದಾರೆ. ಆನಂತರವೇ ಈ ಬಗ್ಗೆ ತೀರ್ಮಾನವಾಗಲಿದೆ ಎಂದರು.

    ಈ ಬಾರಿ ದೆಹಲಿ ಭೇಟಿ ಬಹಳ ಫಲಪ್ರದವಾಗಿದೆ. ಜಲಶಕ್ತಿ, ಇಂಧನ, ಪರಿಸರ , ಹಣಕಾಸು, ರಕ್ಷಣಾ ಸಚಿವರನ್ನು ಭೇಟಿ ಮಾಡಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ತಿಳಿಸಿದರು.ಭಾ.ಜ.ಪ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಲು ನನಗೆ ಅವಕಾಶ ದೊರೆತಿದ್ದು ಸಂತೋಷ ತಂದಿದೆ ಎಂದರು.

    ಬಜೆಟ್ ಯೋಜನೆಗಳ ಅನುಷ್ಠಾನಕ್ಕೆ ಮಹತ್ವ:ಬೆಂಗಳೂರಿಗೆ ಹಿಂತಿರುಗಿದ ನಂತರ ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳ ಆದೇಶಗಳನ್ನು ನೀಡಿ ಅವುಗಳ ಅನುಷ್ಠಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು ಎಂದರು.

    Indian Stock Market: ಸಮಯೋಚಿತ ನಿರ್ವಣೆಯಿಂದ ಉತ್ತಮ ಫಲಿತಾಂಶ ಸಾಧ್ಯ

    ಬದಲಾವಣೆ ಸೃಷ್ಠಿಯ ನಿಯಮವಾದರೂ ಬದಲಾವಣೆಗಳ ವೇಗ ನಾವುಗಳು ನಿರ್ಮಿಸಿಕೊಂಡಿರುವುದು. ಹಲವಾರು ಬಾರಿ ನಾವು ಬದಲಾವಣೆಗಳಿಗೆ ಸರಿಯಾಗಿ ಹೊಂದಿಕೊಂಡರೆ ಕೆಲವು ಬಾರಿ ಅದನ್ನು ಕಡೆಗಣಿಸಿ ತೊಂದರೆಗೊಳಗಾಗುತ್ತೇವೆ. ಈಗಿನ ದಿನಗಳಲ್ಲಿ ಪ್ರಚಾರಾತ್ಮಕವಾದ ಶೈಲಿಗಳೇ ಹೆಚ್ಚು. ಈ ವಿಧದಿಂದ ನಾವುಗಳು ಚಿಂತನಾಗುಣಗಳನ್ನು ಕರಗಿಸಿಕೊಳ್ಳುತ್ತಿದ್ದೇವೆ ಎಂದೆನಿಸುತ್ತಿದೆ. ಒಂದು ಉತ್ಪನ್ನದ ಜಾಹಿರಾತನ್ನು ನೋಡಿದಾಗ ಈ ಅಂಶ ದೃಢಪಡುತ್ತದೆ. ಮೊದಲು ಬಂದವರಿಗೆ ಆದ್ಯತೆ, ಶೇ.60 ರ ರಿಯಾಯಿತಿ, ಭಾರಿ ಉಳಿತಾಯ, ಮುಂತಾದ ಆಕರ್ಷಣೀಯ ಪದಬಳಕೆ ಜನಸಾಮಾನ್ಯರನ್ನೂ ಸೆಳೆಯುತ್ತದೆ. ಆದರೆ ಈ ಸಂದರ್ಭದಲ್ಲಿ ನಾವು ಉಳಿತಾಯ ಮತ್ತು ಮಿತವ್ಯಯಗಳ ವ್ಯತ್ಯಾಸವನ್ನೇ ಮರೆತುಬಿಟ್ಟಿದ್ದೇವೆ.

    ಉಳಿತಾಯ ಎಂದರೆ ಅದನ್ನು ಗಳಿಸಿದ ಹಣದಲ್ಲಿ ಮಾಡುವ ಪ್ರಕ್ರಿಯೆ. ಇದು ಆಪತ್ಕಾಲದಲ್ಲೂ ಬಳಕೆಗೆ ಲಭ್ಯವಾಗುವ ಸಂಪನ್ಮೂಲ.

    ಮಿತವ್ಯಯ ಎಂದರೆ ಅದು ವೆಚ್ಚದಲ್ಲಿ ಮೊಟಕು ಮಾಡುವ ಕ್ರಿಯೆ. ಇದು ಕಾಲ್ಪನಿಕ ಮತ್ತು ಕೈಗೆಟುಕುವಂತಹುದಲ್ಲ.

    ಈಗಿನ ಪ್ರಚಾರಗಳಲ್ಲಿ ಈ ಎರಡೂ ಒಂದೇ ಆಗಿದೆಯಲ್ಲವೇ?

    ಇಂದಿನ ಅಲ್ಪ ಬಡ್ಡಿ ಯುಗದಲ್ಲಿ ನಾಗರೀಕರಿಗೆ ತಮ್ಮ ಹಣಕಾಸಿನ ನಿರ್ವಹಣೆಯು ಸುಲಭವೇನಲ್ಲ. ಕಾರಣ ಸಂಕೀರ್ಣಮಯ ಜಗತ್ತು. ಸುಮ್ಮನಿದ್ದರೂ ಸಾಕು ಕೈಲಿರುವ ಹಣವು ಕರಗುತ್ತದೆ. ಇದಕ್ಕೆ ಕಾರಣಗಳೇ ಬೇಕಿಲ್ಲ. ಅಲ್ಲದೆ ಕೈಲಿರುವ ಹಣ ಕರಗಿಸಲು ಪ್ರೇರೇಪಿಸುವಂತಹ ಯೋಜನೆಗಳು ಎಲ್ಲೆಡೆ ಹರಿದಾಡುತ್ತಿವೆ. ಸಂಪಾದನೆಗಿಂತ ಕೈಲಿರುವ ಸಂಪತ್ತನ್ನು ಸುರಕ್ಷಿತವಾಗಿರಿಸುವುದೇ ದೊಡ್ಡ ಕೆಲಸವಾಗಿರುತ್ತದೆ. ಇನ್ನು ಹಿರಿಯ ನಾಗರೀಕರಿಗೆ ಸಂಪಾದನೆಯ ಮಟ್ಟ ಇಳಿಮುಖವಾಗಿರುತ್ತದೆ, ಬರುವ ಪಿಂಚಣಿಯನ್ನು, ಅಥವಾ ಬಡ್ಡಿ ಆದಾಯವನ್ನು ಮಾಸಾಂತ್ಯದವರೆಗೂ ಅಗತ್ಯಗಳಿಗೆ ಬಳಸಿಕೊಳ್ಳುವ ಯೋಜನೆ ರೂಪಿಸಿಕೊಳ್ಳುವುದಂತು ಸಾಹಸಮಯವಾಗಿರುವ ಕಾಲ. ಹಾಗಾಗಿ ತಮ್ಮ ಬಿಡುವಿನ ಸಮಯದಲ್ಲಿ ಛಲ, ಚಪಲ, ಚಟಗಳಿಂದ ಹೊರತಾಗಿ, ಹೊಸ ಹವ್ಯಾಸವನ್ನು ಬೆಳೆಸಿಕೊಂಡು, ಆರ್ಥಿಕ ನಿರ್ವಹಣಾ ಕಾರ್ಯವನ್ನು ಮಾಡಿದಲ್ಲಿ, ದೈಹಿಕ ಸ್ವಾಸ್ಥ್ಯವೂ, ಸ್ವಲ್ಪ ಮಟ್ಟಿನ ಆದಾಯವೂ ಕೈಗೆಟುಕುವಂತಾಗುತ್ತದೆ.

    ಅದೇ ರೀತಿ ಮಹಿಳೆಯರು, ಗೃಹಿಣಿಯರು, ತಮ್ಮ ಬಿಡುವಿನ ಸಮಯದಲ್ಲಿ ನಿರುಪಯುಕ್ತ, ದಾರಿ ತಪ್ಪಿಸುವ ಕೌಟುಂಬಿಕ ಕಲಹಗಳ ತಿರುವುಗಳನ್ನು ಪ್ರದರ್ಶಿಸುವ ಧಾರಾವಾಹಿಗಳಿಂದ ದೂರವಾಗಿ ಸಕಾರಾತ್ಮಕ ಚಿಂತನೆಯಿಂದ ಆರ್ಥಿಕ ನಿರ್ವಹಣೆಯ ಅಭ್ಯಾಸ ಪಡೆದುಕೊಂಡು ಸ್ವಾವಲಂಬಿಗಳಾಗಲು ಇಂದಿನ ತಾಂತ್ರಿಕತೆ ದಾರಿ ಮಾಡಿಕೊಟ್ಟಿದೆ.

    ಬಿಡುವಿನ ಸಮಯವನ್ನು ಷೇರುಪೇಟೆಯ ಚಟುವಟಿಕೆ ಕಡೆ ತಿರುಗಿಸಿಕೊಂಡರೆ ಆ ಚಟುವಟಿಕೆಯಿಂದ ತಮ್ಮ ಮನಸ್ಸು, ಚಿಂತನೆಗಳನ್ನು ವೃದ್ಧಿಸಿಕೊಳ್ಳುವುದರೊಂದಿಗೆ ಅಲ್ಪಮಟ್ಟಿನ ಆದಾಯವನ್ನು ಸಹ ಹೆಚ್ಚಿಸಿಕೊಳ್ಳಲು ಸಾಧ್ಯವಿರುತ್ತದೆ.

    ಷೇರುಪೇಟೆಯ ಸಂಕ್ಷಿಪ್ತ ಚಿತ್ರಣ:

    *2018 ರ ಮಾರ್ಚ್‌ 19 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.141.16 ಲಕ್ಷ ಕೋಟಿ : ಸೆನ್ಸೆಕ್ಸ್‌ :32,923

    *2019 ರ ಮಾರ್ಚ್‌ 19 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.149.64 ಲಕ್ಷ ಕೋಟಿ : ಸೆನ್ಸೆಕ್ಸ್‌ :38,503

    *2020 ರ ಮಾರ್ಚ್‌ 19 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.109.76 ಲಕ್ಷ ಕೋಟಿ : ಸೆನ್ಸೆಕ್ಸ್: 28‌,288

    • 2021 ರ ಮಾರ್ಚ್‌ 17 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.260.37ಲಕ್ಷ ಕೋಟಿ ಸೆನ್ಸೆಕ್ಸ್‌ : 57,863

    ಹೂಡಿಕೆದಾರರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ:

    ಸುಮಾರು 145 ವರ್ಷಗಳ ಸಮಯದಲ್ಲಿ 5 ಕೋಟಿ ತಲುಪಿದೆ

    2020 ರಲ್ಲಿ ನೋಂದಾಯಿತ ಗ್ರಾಹಕರು: 5 ಕೋಟಿ

    2022 ರಲ್ಲಿ ಬೆಳೆದು ತಲುಪಿದ ಸಂಖ್ಯೆ : 10 ಕೋಟಿ.

    ಆದರೆ ಅದಕ್ಕನುಗುಣವಾಗಿ ಲೀಸ್ಟೆಡ್‌ ಕಂಪನಿಗಳ ಸಂಖ್ಯೆಯಲ್ಲಿ ಏರಿಕೆ ಕಾಣದಾಗಿದೆ. ಹಾಗಾಗಿ ಉತ್ತಮ ಕಂಪನಿಗಳ ಷೇರುಗಳಿಗೆ ಬೇಡಿಕೆ ಹೆಚ್ಚಾಗಿ ಷೇರಿನ ಬೆಲೆಗಳು ಗಗನಕ್ಕೇರುವಂತಾಗಿದೆ. ಇದಲ್ಲದೆ ಕೋವಿಡ್‌ ನಂತರದ ಸಮಯದಲ್ಲಿ ಕಾರ್ಪೊರೇಟ್‌ ಸಾಧನೆಗಳು ಮತ್ತು ಸರ್ಕಾರದ ಕ್ರಮಗಳು ಸಹ ಷೇರುಪೇಟೆಯ ವಾತಾವರಣವನ್ನು ಉತ್ತಮಗೊಳಿಸಲು ಕಾರಣವಾಗಿದೆ.

    ಸಾಮಾನ್ಯವಾಗಿ ವಯಸ್ಕರು, ಹಿರಿಯ ನಾಗರೀಕರು, ಗೃಹಿಣಿಯರು ಭಾವಿಸುವುದೇನೆಂದರೆ ಬ್ಯಾಂಕ್‌ ಬಡ್ಡಿ ದರವು ಕ್ಷೀಣಿಸುತ್ತಿರುವುದರಿಂದ ಅದನ್ನವಲಂಭಿಸಿ ನಡೆಸುತ್ತಿರುವ ಜೀವನ ಸುಲಭವಾಗಿಲ್ಲ, ತೊಂದರೆಯಾಗುತ್ತಿದೆ. ಇದಕ್ಕೆ ಪರ್ಯಾಯವಾದ ಆದಾಯ ಗಳಿಕೆಯ ಮಾರ್ಗ ಯಾವುದೆಂಬುದರ ಆನ್ವೇಷಣೆ ಮಾಡುವ ಪ್ರಯತ್ನಗಳು ನಡೆಸುವುದು ಸಹಜವಾಗಿದೆ. ಇಂತಹವರು ತಮ್ಮ ಪ್ರಯತ್ನವನ್ನು ಷೇರುಪೇಟೆಯ ಚಟುವಟಿಕೆಯತ್ತಲೂ ನಡೆಸಬಹುದಾಗಿದೆ. ಷೇರುಪೇಟೆಯ ಚಟುವಟಿಕೆ ಎಂದರೆ ಹೆಚ್ಚಿನವರಲ್ಲಿ ತಪ್ಪು ಕಲ್ಪನೆಗಳಿವೆ. ಅದು ಜೂಜಾಟದ ಅಡ್ಡ, ಅಲ್ಲಿ ಅಪಾಯದ ಮಟ್ಟ ಹೆಚ್ಚು, ಷೇರುಪೇಟೆ ಚಟುವಟಿಕೆಗೆ ಹೆಚ್ಚಿನ ಹಣ ಅಗತ್ಯವಿದೆ, ಅದು ಸಾಮಾನ್ಯರ ಪಾಲಿಗಲ್ಲ, ಎಂಬ ಅನೇಕ ನಕಾರಾತ್ಮಕ ಭಾವನೆಗಳಿವೆ.

    ಒಂದು ಕಾಲದಲ್ಲಿ ಕೇವಲ ಪಟಾಕಿ ವ್ಯಾಪಾರದಲ್ಲಿ ಮಾತ್ರ ಶೇ.70, 80 ರಷ್ಟು ಡಿಸ್ಕೌಂಟ್‌ ನೀಡುತ್ತಿದ್ದರು. ಆ ಸಮಯದಲ್ಲಿ ಯಾವುದಾದರೂ ಹೆಚ್ಚಿನ ಡಿಸ್ಕೌಂಟ್‌ ನೀಡಿದರೆ ಅದನ್ನು ಪಟಾಕಿ ವ್ಯಾಪಾರಾದಂತೆ ಎಂದು ಹೋಲಿಸುತ್ತಿದ್ದರು. ಆದರೆ ಈಗ ಎಲ್ಲಾ ವ್ಯವಹಾರಗಳೂ ಅದೇ ದಾರಿಯಲ್ಲಿ ಸಾಗುತ್ತಿವೆ. ಪ್ಯಾಕೇಟ್‌ ಗಳ ಮೇಲೆ ಮುದ್ರಿಸಿದ ಎಂ ಆರ್‌ ಪಿ ಬೆಲೆಗಳಿಗೂ ಪೇಟೆಯಲ್ಲಿ ರೀಟೇಲ್‌ ಗ್ರಾಹಕರಿಗೆ ಲಭ್ಯವಾಗುತ್ತಿರುವ ಬೆಲೆಗಳಿಗೂ ಹೆಚ್ಚಿನ ಅಂತರ, ಅಂದರೆ ಮುದ್ರಿತ ಬೆಲೆಗೂ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಸರ್ಕಾರಿ, ಖಾಸಗಿ ಎಂಬುದಿಲ್ಲ ಎಲ್ಲಾ ವಲಯಗಳಲ್ಲೂ ಈ ವ್ಯವಹಾರಿಕ ಗುಣ ಮುಂದುವರೆಯುತ್ತಿದೆ. ಹೀಗಿರುವಾಗ ಬದಲಾದ ಪರಿಸ್ಥಿತಿಗನುಗುಣವಾಗಿ ನಾವು ಸಹ ನಮ್ಮ ಚಿಂತನೆಗಳನ್ನು ಬದಲಿಸಿಕೊಳ್ಳಬೇಕು.

    ಷೇರುಪೇಟೆಯಲ್ಲಿ ಎಲ್ಲಾ ವರ್ಗದ ಜನರಿಗೂ / ವೃತ್ತಿದಾರರಿಗೂ /ಹಿರಿಯ ನಾಗರೀಕರಿಗೂ ಯಾವುದೇ ಲಿಂಗ ಬೇಧವಿಲ್ಲದೆ ಚಟುವಟಿಕೆ ನಡೆಸಲು ಅವಕಾಶವಿದೆ. ಹೊಸದಾಗಿ ಪೇಟೆ ಪ್ರವೇಶಿಸುವವರು ಆರಂಭದಲ್ಲಿ ಕೇವಲ ಒಂದೆರಡು ಷೇರುಗಳಲ್ಲಿ ಚಟುವಟಿಕೆ ನಡೆಸಿ ಅವಶ್ಯವಿರುವ ಅನುಭವ ಪಡೆದುಕೊಳ್ಳಲು ಸಾಧ್ಯವಿದೆ. ಈ ಮೂಲಕ ದೊರೆತ ಅನುಭವವು ಚಟುವಟಿಕೆ ನಡೆಸಲು ಸಾಮರ್ಥ್ಯದ ನಂಬಿಕೆ ಮೂಡಿದ ಮೇಲೆ ತಮ್ಮ ಚಟುವಟಿಕೆಯ ಗಾತ್ರ ವಿಸ್ತರಿಸಿಕೊಳ್ಳಬಹುದಾಗಿದೆ. ಈಗಿನ ಷೇರುಪೇಟೆಯ ವೈಶಿಷ್ಟತೆಯೆಂದರೆ ಹಣದ ಅಗತ್ಯವಿದ್ದಾಗ ದಿಢೀರ್‌ ನಗದೀಕರಣಕ್ಕೆ ಅವಕಾಶ. ಷೇರು ಮಾರಾಟ ಮಾಡಿದ ಎರಡೇ ದಿನಗಳಲ್ಲಿ ಮಾರಾಟದ ಹಣ ಲಭ್ಯವಾಗುವುದು. ಇಷ್ಟು ತ್ವರಿತವಾಗಿ ಹಣ ಒದಗಿಸುವ ಸ್ವತ್ತು, ಬೇರೆ ಇರಲಾರದು.

    ಸಾಮಾನ್ಯವಾಗಿ ಷೇರುಪೇಟೆಯ ಯಶಸ್ಸಿಗೆ ಅವಶ್ಯವಿರುವುದು ಮೌಲ್ಯಾಧಾರಿತ ಖರೀದಿ. ಅಂದರೆ ಒಂದು ಉತ್ತಮ ಕಂಪನಿಯ ಷೇರಿನ ಬೆಲೆ, ಭಾಹ್ಯ ಕಾರಣಗಳ ಪ್ರಭಾವದಿಂದ, ಭಾರಿ ಕುಸಿತ ಕಂಡಾಗ ಅದನ್ನು ಮೌಲ್ಯಾಧಾರಿತ ಖರೀದಿಗೆ ಪರಿವರ್ತಿಸಿಕೊಳ್ಳಬಹುದು. ಈರೀತಿ ಹೂಡಿಕೆಗೆ ಆಯ್ಕೆ ಮಾಡಿಕೊಂಡಾಗ ದೀರ್ಘಕಾಲೀನ ಹೂಡಿಕೆಯ ಚಿಂತನೆಯಿಂದಲೇ ಎಂದು ನಿರ್ಧರಿಸಿರಬೇಕು. ಒಂದು ವೇಳೆ ಖರೀದಿಸಿದ ಷೇರಿನ ಬೆಲೆಯು ಅನಿರೀಕ್ಷಿತ ಮಟ್ಟದ ಏರಿಕೆಯನ್ನು ಅಲ್ಪಾವಧಿಯಲ್ಲೇ ಪ್ರದರ್ಶಿಸಿದಲ್ಲಿ ಪೂರ್ಣವಾಗಿಯಲ್ಲದಿದ್ದರೂ ಭಾಗಶ:ವಾದರೂ ಲಾಭದ ನಗದೀಕರಣ ಮಡಿಕೊಳ್ಳುವುದು ಉತ್ತಮ. ನೆನಪಿರಲಿ ಬ್ಯಾಂಕ್‌ ಗಳಲ್ಲಿ ಠೇವಣಿ ಮೊತ್ತವು ದ್ವಿಗುಣವಾಗಲು ಸುಮಾರು 12 ವರ್ಷಗಳ ಸಮಯ ಬೇಕಾಗಬಹುದು. ಅಂದರೆ ಈ ಅಲ್ಪಬಡ್ಡಿದರದ ಯುಗದಲ್ಲಿ ಆಕರ್ಷಕ ಲಾಭವನ್ನು ಪೇಟೆ ಒದಗಿಸಿದಾಗ ಫಲಾನುಭವಿಯಾಗುವುದು ಸರಿಯಾದ ಕ್ರಮ.

    ಆಕರ್ಷಣೀಯ ಲಾಭಾಂಶ ಮತ್ತು ಕಾರ್ಪೊರೇಟ್‌ ಫಲಗಳನ್ನು ವಿತರಿಸಿದ ಕಂಪನಿಗಳು:

    Name of CompanyMarket rateDividendsPrevious year Rs.
    BPCL3645+5+79.00
    COAL INDIA187.009+ 5 +16.00
    GAIL162.4+5+ buyback  5.00 + buyback
    H P C L277   22.75
    I O C1225 + 4 +12.00
    IRCON ( 2)410.70+0.70  2.15 + 1:1 BONUS
    R V N L331.58  2.72
    IRFC220.77+  1.05
    N M D C (1)1669.01 +5.73+ 7.76 + BUY BACK
     N T P C1424.00 + 6.15 + BUYBACK
    P  F C1162.25+2.50+6.00+10.00
    POWER GRID CORP2257 +5.50+ 9.00 + 1: 3 BONUS
    OIL INDIA2383.50+5.75+ 5.00
    R E C1262.50+6.00 8.71
    SAIL1024.00+2.50 2.80
    BALMER LAWRI INVESTMENTS370 38.00 (37.50 ಅದರ ಹಿಂದಿನವರ್ಷ)
    SANOFI7,500490.00 CD365.00

    ಸಣ್ಣ ಹೂಡಿಕೆದಾರರ ಗಮನಕ್ಕೆ ತರಬಯಸುವುದೇನೆಂದರೆ ಹಲವಾರು ಕಂಪನಿಗಳು ಪೇಟೆಯ ಬೇಡಿಕೆ, ಪೂರೈಕೆಗಳಿಗನುಗುಣವಾಗಿ ಈಗಿನ ದಿನಗಳಲ್ಲಿ ಹೆಚ್ಚಿನ ಅಲ್ಪಕಾಲೀನ ಏರಿಳಿತಗಳನ್ನು ಪ್ರದರ್ಶಿಸುತ್ತಿರುವ ಕಂಪನಿಗಳೆಂದರೆ:

    ಕೆನರಾ ಬ್ಯಾಂಕ್‌, ಟಾಟಾ ಮೋಟಾರ್ಸ್‌, ಐಟಿಸಿ, ಐ ಇ ಎಕ್ಸ್‌, ಲೌರಸ್‌ ಲ್ಯಾಬ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಐಸಿಐಸಿಐ ಬ್ಯಾಂಕ್‌, ವೇದಾಂತ, ಹಿಂದೂಸ್ಥಾನ್‌ ಝಿಂಕ್‌, ಟಾಟಾ ಸ್ಟೀಲ್‌, ಹಿಂದೂಸ್ಥಾನ್‌ ಕಾಪರ್‌, ಎಲ್‌ ಐ ಸಿ ಹೌಸಿಂಗ್‌, ರೆಡಿಂಗ್ಟನ್‌, ಗ್ಲೆನ್‌ ಮಾರ್ಕ್‌ ಫಾರ್ಮಾ, ಇನ್‌ ಫೊಸಿಸ್‌, ಹೆಚ್‌ ಎ ಎಲ್‌, ಮದರ್ಸನ್‌ ಸುಮಿ, ಮುಂತಾದ ಅನೇಕ ಸಾಧನೆಯಾಧಾರಿತ ಕಂಪನಿಗಳ ಪಟ್ಟಿ ಸಿದ್ಧಪಡಿಸಿಟ್ಟುಕೊಂಡು ಅವಕಾಶಕ್ಕಾಗಿ ಕಾದರೆ ಉತ್ತಮ ಫಲ ಪಡೆಯಲು ಸಾಧ್ಯ.

    ಷೇರಿನ ಬೆಲೆಗಳಲ್ಲಿ ಏರುಪೇರು ಉಂಟುಮಾಡಬಹುದಾದ ಪ್ರಭಾವಿ ಅಂಶಗಳು

    ಷೇರುಪೇಟೆಯ ಚಟುವಟಿಕೆಯನ್ನು ನಮ್ಮ ಅನುಕೂಲಕ್ಕೆ ಪರಿವರ್ತಿಸಿಕೊಳ್ಳಬೇಕಾದಲ್ಲಿ ಅರಿಯ ಬೇಕಾದ ಅಂಶಗಳು ಎಂದರೆ

    1. ಬೇಡಿಕೆ- ಪೂರೈಕೆಯ ಅನುಪಾತ
    2. ಕಾರ್ಪೊರೇಟ್‌ ಗಳಲ್ಲಿನ ಆಂತರಿಕ ಬದಲಾವಣೆಗಳು
    3. ಸರ್ಕಾರಿ ನಿಯಮಗಳಲ್ಲಿನ ಬದಲಾವಣೆಗಳು ಮತ್ತು ಅದರ ಪ್ರಭಾವ
    4. ದೇಶದ ಆರ್ಥಿಕತೆಯ ಮೇಲಾಗುವ ಪ್ರಭಾವಿ ಬದಲಾವಣೆಗಳು
    5. ಜಾಗತಿಕ ಮಟ್ಟದಲ್ಲಾದ ಸೂಚ್ಯಂಕಗಳ ಬದಲಾವಣೆಗಳು
    6. ಸ್ವದೇಶಿ ಮತ್ತು ವಿದೇಶಿ ವಿತ್ತೀಯ ಸಂಸ್ಥೆಗಳ, ಮ್ಯುಚುವಲ್‌ ಫಂಡ್ ಚಟುವಟಿಕೆಯ ಶೈಲಿಗಳು
    7. ಪ್ರವರ್ತಕರ ಭಾಗಿತ್ವದಲ್ಲುಂಟಾದ ಏರುಪೇರು, ಭಾಗಿತ್ವದ
    8. ಮೂಲಾಧಾರಿತ ಪೇಟೆಯ ಚುಕ್ತಾಚಕ್ರದ ಸಮಯದಲ್ಲಿರುವ ಪರಿಸ್ಥಿತಿ
    9. ಕಂಪನಿಗಳ ಬಂಡವಾಳ ಸ್ವರೂಪದಲ್ಲಾಗುವ ಬದಲಾವಣೆ, ಸಂಪನ್ಮೂಲ ಸಂಗ್ರಹಣೆಯ ವಿಧ ಮತ್ತು ಷೇರಿನ ಮೇಲುಂಟಾಗುವ ಪ್ರಭಾವ
    10. ಮಾಧ್ಯಮಗಳಲ್ಲಿನ ಆದ್ಯತಾ ಪ್ರಚಾರ ಶೈಲಿ
    11. ಕಾರ್ಪೊರೇಟ್‌ ಫಲಗಳಾದ ಲಾಭಾಂಶ, ಬೋನಸ್‌, ಹಕ್ಕಿನ ಷೇರು, ಮುಖಬೆಲೆ ಸೀಳಿಕೆ ಮತ್ತು ಕ್ರೋಡೀಕರಣ, ಷೇರು ಹಿಂಕೊಳ್ಳುವಿಕೆಗಳು
    12. ಕಂಪನಿಗಳ ಸಹಭಾಗಿತ್ವ, ವಿಭಾಗಗಳ ಮಾರಾಟ, ವಿಲೀನ, ಸಮ್ಮಿಲನಗಳ ವಿಚಾರ
    13. ಪ್ರವರ್ತಕರ ಭಾಗಿತ್ವದ ಅಡವು- ಅದರಲ್ಲಾಗುವ ಬದಲಾವಣೆಗಳು
    14. ಕಂಪನಿಯ ಹೆಸರಿನಲ್ಲುಂಟಾಗುವ ಬದಲಾವಣೆಗಳು
    15. ಕಾರ್ಪೊರೇಟ್‌ ನಿಯಮ ಪಾಲನೆ ಮತ್ತು ಅದರಲ್ಲಿನ ಲೋಪದೋಶಗಳು
    16. ಸ್ಥಳೀಯ ಮತ್ತು ಅಂತರ ರಾಷ್ಟ್ರೀಯ ಕಂಪನಿಗಳ ರೇಟಿಂಗ್‌ ಮತ್ತು ಅದರ ಬದಲಾವಣೆಗಳು,
    17. ಇನ್ವೆಸ್ಟ್ ಮೆಂಟ್‌ ಕಂಪನಿಗಳ ರೇಟಿಂಗ್
    18. ಕಂಪನಿಯ ಉತ್ಪನ್ನಗಳಿಗಿರುವ ಸ್ಥಳೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಮಾನ್ಯತೆ
    19. ಆದಾಯ ತೆರಿಗೆ, ಅಬಕಾರಿ ಸುಂಕ, ಜಿ ಎಸ್‌ ಟಿ ಗಳಲ್ಲಾದ ಬದಲಾವಣೆಗಳು, ಈ ಇಲಾಖೆಗಳಿಂದ ಕ್ರಮಕ್ಕೊಳಗಾಗುವ ಅಂಶಗಳು
    20. ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ
    21. ನಿಯಂತ್ರಕರ ನಿಯಮಗಳು ಮತ್ತು ಅದರ ಬದಲಾವಣೆಗಳಿಂದಾಗುವ ಪ್ರಭಾವಗಳು
    22. ಷೇರುವಿನಿಮಯ ಕೇಂದ್ರದ ಲೀಸ್ಟಿಂಗ್‌ ನಲ್ಲಿ ಸೇರಿಸಲಾದ ಗುಂಪು ಮತ್ತು ಪಾಲಿಸಿದ ಶಿಸ್ತುಬದ್ಧತೆ
    23. ಕಂಪನಿಯ ಮೇಲೇನಾದರೂ ಷೇರುವಿನಿಮಯ ಕೇಂದ್ರವು ಲೋಪಗಳಿಗೆ ಕ್ರಮ ಜರುಗಿಸಿದೆಯೇ
    24. ಹೂಡಿಕೆದಾರರ ಹಿತರಕ್ಷಣೆಗೆ ಕಂಪನಿ ಕೊಡುವ ಆದ್ಯತೆ
    25. ಷೇರುವಿನಿಮಯ ಕೇಂದ್ರದ ಸೂಚ್ಯಂಕಗಳಲ್ಲುಂಟಾದ ಬದಲಾವಣೆಗಳಿಂದ ಷೇರಿನ ಬೆಲೆಗಳಲ್ಲಿ ಏರುಪೇರು

    ಇಷ್ಠೇ ಅಲ್ಲದೆ ಇನ್ನೂ ಅನೇಕ ಕಾರಣಗಳು ಏರಿಳಿತಕ್ಕೆ ಸೃಷ್ಠಿಯಾಗುತ್ತಿರುತ್ತವೆ. ಈ ಎಲ್ಲಾ ಕಾರಣಗಳನ್ನು ವಿಶ್ಲೇಷಿಸಿ ನಿರ್ಧರಿಸುವುದು ಜನಸಾಮಾನ್ಯರಿಗಂತೂ ಸಾಧ್ಯವಿಲ್ಲ. ಹಾಗೂ ವಿವಿಧ ಮಾಧ್ಯಮಗಳ ಮೂಲಕ, ಸಾಮಾಜಿಕ ಜಾಲತಾಣಗಳಲ್ಲಿ ದೊರೆಯುವ, ಲಭ್ಯವಾಗುವ ಮಾಹಿತಿಯು ಎಷ್ಠರ ಮಟ್ಟಿಗೆ ಸರಿ ಇರಬಹುದು ಎಂಬುದು ದೃಢೀಕರಿಸಲಸಾಧ್ಯ. ಇದಕ್ಕೆ ಸುಲಭ ಸೂತ್ರವೆಂದರೆ, ಷೇರುಪೇಟೆಯ ಚಟುವಟಿಕೆ ನಡೆಸುವ ಕಂಪ್ಯೂಟರ್‌ ಪರದೆ ಅಥವಾ ಮೊಬೈಲ್‌ ನಲ್ಲಿ ಪ್ರದರ್ಶಿತವಾಗುವ ಕಣ್ಣಿಗೆ ಗೋಚರಿಸುವ ಅಂಕಿ ಅಂಶಗಳ ಮೂಲಕ, ಕಂಪನಿಗಳ ಸಾಮರ್ಥ್ಯವನ್ನಾಧರಿಸಿ, ಪೇಟೆಯ ಪರಿಸ್ಥಿತಿಯೊಂದಿಗೆ ತುಲನೆಮಾಡಿ ನಿರ್ಧರಿಸುವುದು ಉತ್ತಮವಲ್ಲವೇ?

    ಮುಖ್ಯವಾಗಿ ಕೇವಲ ವಿಶ್ಲೇಷಣೆಗಳನ್ನು ಅನುಸರಿಸುವ ಬದಲು, ಕಂಪನಿಗಳ ಅರ್ಹತಾ ಮಟ್ಟವನ್ನು ಮಾಪನ ಮಾಡುವ ಚಿಂತನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು.

    ಜನಸಾಮಾನ್ಯರಿಗೆ, ಬೇರೆ ವ್ಯವಹಾರಾ ಅಥವಾ ವೃತ್ತಿಪರರಿಗೆ ಈ ಎಲ್ಲಾ ವಿವಿಧ ಅಂಶಗಳನ್ನು ಗಮನಿಸಿ ನಿರ್ಧರಿಸುವುದು ಸುಲಭದ ಕೆಲಸವಲ್ಲ. ಅಂತಹವರು ಅಳವಡಿಸಿಕೊಳ್ಳಬೇಕಾದ ಸುಲಭಸೂತ್ರವೆಂದರೆ ʼ ವ್ಯಾಲ್ಯು ಪಿಕ್‌ – ಪ್ರಾಫಿಟ್‌ ಬುಕ್ʼ

    Value pick – prafit book ಎಂಬುದು ಷೇರುಪೇಟೆ ವಹಿವಾಟಿಗೆ ಸದಾ ಅನ್ವಯವಾಗುವ ಹಸಿರು ಸಮೀಕರಣವಾಗಿದೆ. ಯಾವುದೇ ಒಂದು ಉತ್ತಮ ಕಂಪನಿ ಷೇರು ಖರೀದಿಸುವಾಗ ಅದರ ಮೌಲ್ಯವು ಭಾರಿ ಕುಸಿತದಲ್ಲಿದೆ ಎಂದಾಗ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬಹುದು. ನಂತರ ಈ ಷೇರಿನ ಬೆಲೆ ಏರಿಕೆ ಕಂಡಾಗ ಹೂಡಿಕೆಯ ಅವಧಿ ಮತ್ತು ಅದು ಗಳಿಸಿಕೊಡುವ ಲಾಭದ ಗಾತ್ರಕ್ಕನುಗುಣವಾಗಿ, ಉತ್ತಮವಾಗಿದ್ದಲ್ಲಿ ಮಾರಾಟ ಮಾಡಿ ನಿರ್ಗಮಿಸಬೇಕು. ಮಾರಾಟಮಾಡಿದ ನಂತರ ಇದೇ ಷೇರು ಮತ್ತಷ್ಟು ಏರಿಕೆ ಕಂಡಲ್ಲಿ ಚಿಂತಿಸದೆ, ಲಾಭ ನಗದೀಕರಿಸಿಕೊಂಡ ತೃಪ್ತಿ ಇದ್ದಲ್ಲಿ ಮುಂದಿನ ನಿರ್ಧಾರಗಳು ಸುಸೂತ್ರವಾಗಿರುತ್ತದೆ. ಹಾಗಾಗಿ ಸಮತೋಲನ ಚಿತ್ತ ಭವಿಷ್ಯದ ಚಟುವಟಿಕೆಗೆ ಅತ್ಯಗತ್ಯ. ಒಂದೊಮ್ಮೆ ಮಾರಾಟಮಾಡಿದ ಷೇರೇ, ಉತ್ತಮವೆನಿಸಿದರೆ, ಕುಸಿತ ಕಂಡಾಗ ಮತ್ತೊಮ್ಮೆ ಖರೀದಿಸಬಹುದಾಗಿದೆ. ಒಂದು ಕಂಪನಿಯು ಪ್ರಕಟಿಸುವ ತನ್ನ ಸಾಧನೆಗಳನ್ನು, ಕಾರ್ಪೊರೇಟ್‌ ಫಲಗಳನ್ನು ಅಥವಾ ಕಂಪನಿಗೆ ಸಂಬಂಧಪಟ್ಟ ಬೆಳವಣಿಗೆಗಳನ್ನು ಸದಾ ಗಮನದಲ್ಲಿರಿಸಿಕೊಂಡು, ಆ ಷೇರಿನ ಬೆಲೆಯು ವಿಬಿನ್ನ ಕಾರಣಗಳಿಂದಾಗಿ ಅಥವಾ ಷೇರುಪೇಟೆಯ ವಾತಾವರಣದಿಂದ ಕುಸಿತಕಂಡಾಗ ಅದನ್ನು ಅಪೂರ್ವ ಅವಕಾಶವೆಂದು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದು. ಆ ಕಂಪನಿಯ ಅರ್ಹತಾ ಮಟ್ಟವನ್ನು ಸಾಧ್ಯವಾದಷ್ಠೂ ಮಾಪನಮಾಡಿಕೊಂಡಿರಬೇಕು.ಸಮಯೋಚಿತವಾಗಿ ನಿರ್ವಹಿಸಿದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೊಡುವ ದಾನ   ಅಲ್ಪವೇ ಆದರೂ ಒಮ್ಮನಸ್ಸಿನಿಂದ ಕೊಟ್ಟರೆ ಅದುವೇ ಮಹಾದಾನ

    ಸುಮಾವೀಣಾ

    ತನ್ನಷ್ಟಂ ಯನ್ನದೀಯತೇ  (ದಾನಗುಣ ವ್ಯಕ್ತಿತ್ವದ ಸಂಕೇತ)   ಇದೊಂದು ಸಂಸ್ಕೃತ ಸುಭಾಷಿತ. ಶಕ್ತಿ ಕವಿ ರನ್ನ   ತನ್ನ ಪಾರಮಾರ್ಥಿಕ  ಕೃತಿ  ‘ಅಜಿತ ತೀರ್ಥಂಕರ  ಪುರಾಣಂ’ ದಲ್ಲಿ ಅತ್ತಿಮಬ್ಬೆಯ  ದಾನ ಶೀಲತೆಯನ್ನು ವಿವರಿಸುವ ಸಂದರ್ಭದಲ್ಲಿ ಈ ಮಾತನ್ನು ಉಲ್ಲೇಖಿಸಿದ್ದಾನೆ. 

    ಭಾರತೀಯ ಪರಂಪರೆಯಲ್ಲಿ ದಾನಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ.  ಒಬ್ಬ ವ್ಯಕ್ತಿ ತನ್ನ ಗಳಿಕೆಯಲ್ಲಿ ಇಂತಿಷ್ಟು  ದಾನಕ್ಕೆ ಮೀಸಲಿಡಬೇಕು  ಎನ್ನುವ ನಿಯಮವಿದೆ. ಇನ್ನೊಂದರ್ಥದಲ್ಲಿ ವ್ಯಕ್ತಿಯ ಸಿರಿವಂತಿಕೆಯನ್ನು ಅವನ ಗಳಿಕೆಯಲ್ಲಿ ಅಲ್ಲ  ದಾನಗುಣದ ಆಧಾರದ ಮೇಲೆ ನಿರ್ಧರಿಸುವುದು ಎನ್ನುವುದಿದೆ. ಸತ್ಪಾತ್ರಕ್ಕೆ ನೀಡುವುದೆ ಕರಕ್ಕೆ ಶೃಂಗಾರ ಎಂಬ  ನುಡಿ ವಚನಕಾರರ ಹಿನ್ನೆಲೆಯಲ್ಲಿ ಬಂದಿದ್ದು ದಾನದ ಹಿರಿಮೆಯನ್ನು  ಸಂಕೇತಿಸುತ್ತದೆ.

     ಉಳ್ಳವರು  ದಾನ ಮಾಡದಿದ್ದರೆ  ಅದು ನಷ್ಟವೇ ಎಂಬ ಅರ್ಥವನ್ನು ‘ತನ್ನಷ್ಟಂ ಯನ್ನದೀಯತೇ’ ಎಂಬ ಮಾತು ಹೇಳುತ್ತದೆ. ಇದನ್ನೆ ಬಸವಣ್ಣನವರು ಕೊಡಲಿಲ್ಲದಿದ್ದೊಡೊಂದು ಗುಣವಿಲ್ಲದಿದ್ದಡೆ  ಮೂಗ ಕೊಯ್ವದ ಮಾಬನೆ ಕೂಡಲ ಸಂಗಯ್ಯ  ಎಂದಿದ್ದಾರೆ. ಅತ್ತಿಮಬ್ಬೆ ದಾನದಲ್ಲಿ ಎತ್ತಿದ ಕೈ ಆಗಿದ್ದಳು ಹಾಗಾಗೆ  ಆಕೆಯನ್ನು ‘ದಾನಚಿಂತಾಮಣಿ ಅತ್ತಿಮಬ್ಬೆ’, ‘ಕಸವರಗಲಿ’ ಎಂದು ಕರೆಯುವುದಿದೆ.

    ದಾನವೆಂದರೆ ಅದೊಂದು ವೃತವಿದ್ದಂತೆ  ನಾವು ಬಳಸಿ  ಬಿಸಾಡಿದ ವಸ್ತುಗಳನ್ನು  ಕಸದತೊಟ್ಟಿಗೆ ಎಸೆಯುವಂತೆ  ಕೊಡುವುದಲ್ಲ. ದಾನ ತೆಗೆದುಕೊಂಡಿರುವವರಿಗೆ   ನಾವು ಕೊಡಮಾಡಿದ ವಸ್ತುಗಳು ಉಪಯೋಗಕ್ಕೆ ಬರುವಂತಿರಬೇಕು.  ಇರುವ ಸಂಪತ್ತನ್ನು ಇತರರಿಗೂ ಕೊಡದೆ ತಾನೂ ಅನುಭವಿಸದೆ  ವ್ಯರ್ಥ ಮಾಡದೆ ಅಗತ್ಯ ಇರುವವರಿಗೆ  ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ  ಕೊಡುವುದು   ವ್ಯಕ್ತಿತ್ವದ ಹಿರಿತನ.   ಕೊಡುವ ದಾನ   ಅಲ್ಪವೇ ಆದರೂ ಒಮ್ಮನಸ್ಸಿನಿಂದ ಕೊಟ್ಟರೆ ಅದುವೇ ಮಹಾದಾನವಾಗುತ್ತದೆ.  

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

     

    ಮಕ್ಕಳ ವಾಚನಾಭಿರುಚಿ ಹೆಚ್ಚಿಸುವ ಮೋಡಗಳ ಜಗಳ

    ಬಾಲಸಾಹಿತ್ಯವನ್ನು ರಚಿಸುವುದು ಸಿದ್ಧಪ್ರಸಿದ್ಧ ಸಾಹಿತಿಗಳಿಗೇ ಕಷ್ಟದ ಕೆಲಸ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ಮನಸ್ಸು ಉಳ್ಳವರಿಗೆ ಮಾತ್ರ ಇದು ಸುಲಭವಾಗುತ್ತದೆ. ಬಣ್ಣದ ತಗಡಿನ ತುತ್ತೂರಿ ಬರೆದ ಜಿ.ಪಿ.ರಾಜರತ್ನಂ ಅವರಿಗೆ, ಬೊಮ್ಮನಹಳ್ಳಿಯ ಕಿಂದರಿಜೋಗಿ ಬರೆದ ಕುವೆಂಪು ಅವರಿಗೆ ಅಂಥ ಪ್ರತಿಭೆ ಇತ್ತು. ಓದುವುದರ ಜೊತೆಗೆ ಹಾಡುವುದು ಮತ್ತು ಅಭಿನಯಿಸುವುದು ಎಲ್ಲವೂ ಈ ಕವಿತೆಗಳಲ್ಲಿ ಸಾಧ್ಯವಿತ್ತು. ಬಾಲ್ಯದಲ್ಲಿ ಓದಿದ ಆ ಹಾಡುಗಳನ್ನು ವೃದ್ಧರಾದ ಮೇಲೂ ನೆನಪಿನ ಗಣಿಯಿಂದ ಹೊರಗೆ ತೆಗೆಯಬಹುದು. ತಮ್ಮ ಮೊಮ್ಮಕ್ಕಳೆದುರಿಗೆ ಹಾಡಿ ನಲಿಸಬಹುದು.
    
    ಇಂಥ ಸವಾಲಿನ ಕೆಲಸವನ್ನು ಪ್ರೇಮಾ ಶಿವಾನಂದ ಅವರು ಮಾಡಿದ್ದಾರೆ. `ಮೋಡಗಳ ಜಗಳ' ಎಂಬ ಮಕ್ಕಳ ಚಿತ್ರಕಥಾಪಟವನ್ನು ಅವರು 4ರಿಂದ 6 ವರ್ಷದೊಳಗಿನ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಹೊರತಂದಿದ್ದಾರೆ. ಇದು ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ಇದೆ. ಪ್ರೇಮಾ ಅವರು ನಾಡಿನ ಪ್ರಮುಖ ಪತ್ರಿಕೆಗಳ ಮೂಲಕ ಸಾಹಿತ್ಯಾಸಕ್ತರಿಗೆ ಪರಿಚಿತರಾದವರು.
    
    ಒಂದು ಸಲ ಒಂದು ಮೋಡಕ್ಕೆ ತಲೆ ನೋವು ಕಾಣಿಸಿಕೊಂಡು ನೆಗಡಿಯೂ ಆಗುತ್ತದೆ. ಅದು ಅಳುವುದಕ್ಕೆ ಆರಂಭಿಸಿದಾಗ ಇನ್ನೊಂದು ಮೋಡ ಅಣಕಿಸಿ ನಗುತ್ತದೆ. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗುತ್ತದೆ. ಜಗಳ ಸಿಟ್ಟು ಸೆಡವುಗಳಿಂದ ಕೂಡಿ ಗುಡುಗು ಮಿಂಚುಗಳಾಗುತ್ತವೆ. ಮಳೆ ಆರಂಭವಾಗುತ್ತದೆ. ಆಗಸದಲ್ಲಿ ಕಗ್ಗತ್ತಲು. ಜನರು ಅಂಜುತ್ತಾರೆ. ಆಗ ಕಿರಿಯ ಮೋಡಗಳು ಇಬ್ಬರ ಜಗಳ ನಿಲ್ಲಿಸಲು ಸೂರ್ಯನ ಬಳಿ ತೆರಳುತ್ತವೆ. ಸೂರ್ಯ ಆಗಮಿಸಿ ಇಬ್ಬರಿಗೂ ತಿಳಿಹೇಳಿ ಸಮಾಧಾನಪಡಿಸಿ ಕೈಕುಲುಕಿಸಿ ಜಗಳ ನಿಲ್ಲಿಸುತ್ತಾನೆ. ಮಳೆ ನಿಲ್ಲುತ್ತದೆ. ಸೂರ್ಯನ ಕಿರಣಗಳು ಹರಿದಾಡುತ್ತವೆ. ಜಗಳವಾಡುತ್ತಿದ್ದ ಮೋಡಗಳ ಸ್ನೇಹದ ಕುರುಹಾಗಿ ಕಾಮನಬಿಲ್ಲು ಮೂಡುತ್ತದೆ.
    
    ಮಳೆಯಾಗುವ ಪ್ರಕೃತಿ ಸಹಜವಾದ ಕ್ರಿಯೆಯನ್ನು ಮಕ್ಕಳ ಮನಸ್ಸಿಗೆ ನಾಟುವ ಹಾಗೆ ಮೋಡಕ್ಕೆ ನೆಗಡಿಯಾಗುವುದು, ಮೋಡಗಳ ಜಗಳ, ಅದರಿಂದ ಸಿಡಿಲು  ಮಿಂಚು.. ಹೀಗೆ ಕಥೆಯ ರೂಪದಲ್ಲಿ ಪ್ರೇಮಾ ಅವರು ಕಟ್ಟಿಕೊಟ್ಟಿದ್ದಾರೆ. ಸಮರ್ಥ ನಿರ್ದೇಶಕರು ಇದನ್ನು ನಾಟಕವಾಗಿಯೂ ರಂಗದ ಮೇಲೆ ತರಬಹುದಾಗಿದೆ.
    
    ಮುಖಪುಟವೂ ಸೇರಿ ಕೇವಲ 12 ಪುಟಗಳಲ್ಲಿ ಸುಂದರವಾದ ಗ್ರಾಫಿಕ್ಸ್‌ನಲ್ಲಿ ಬಹುಬಣ್ಣಗಳ ಚಿತ್ರದೊಂದಿಗೆ ಮೋಡಗಳ ಜಗಳವನ್ನು ಕಟ್ಟಿಕೊಡಲಾಗಿದೆ. ಕನ್ನಡ ಮತ್ತು ಅದರ ಇಂಗ್ಲಿಷ್‌ ಅನುವಾದ ಅದೇ ಅದೇ ಪುಟಗಳಲ್ಲಿ ಇರುವುದು ಅನುಕೂಲವಾಗಿದೆ. ಇಂಗ್ಲಿಷ್‌‍ ಚೆನ್ನಾಗಿರುವ ಮಕ್ಕಳು ಕನ್ನಡವನ್ನೂ ಕನ್ನಡ ಚೆನ್ನಾಗಿರುವ ಮಕ್ಕಳು ಇಂಗ್ಲಿಷನ್ನೂ ಕಲಿತುಕೊಳ್ಳುವುದಕ್ಕೂ ಇದು ಸಹಾಯ ಮಾಡುತ್ತದೆ. ಇಂಗ್ಲಿಷ್‌ ಅನುವಾದವನ್ನು (The cloud clash) ಬೃಂದಾ ರಾವ್‌ ಮಾಡಿದ್ದಾರೆ. ಯುವ ಕಲಾವಿದೆ ಸ್ನೇಹಾ ಪೈ ಇದರಲ್ಲಿಯ ಚಿತ್ರಗಳನ್ನು ಚೆಂದವಾಗಿ ಬಿಡಿಸಿದ್ದಾರೆ. ಎನ್‌.ಬಿ.ಗ್ರಾಫಿಕ್ಸ್‌ನವರ ಮುದ್ರಣವೂ ಕಣ್ಸೆಳೆಯುತ್ತದೆ.
    -
    

    ಮಾಸ್ಕಲ್ಲೇ ನಗ್ರಿ! ನಕ್ಕು ಹಗುರಾಗ್ರಿ!

    ಸಂಕೇತದತ್ತ

    ನಗುವಿಗೂ ಏಪ್ರಿಲ್‌ಗೂ ನಿಕಟ ಸಂಬಂಧವಿದೆ. ಏಪ್ರಿಲ್ 1 ಬಂತೆಂದರೆ ಗಂಟು ಮು‌ಖಗಳು ಅರಳುತ್ತವೆ, ಸಡಿಲಗೊಂಡು ನಗು ಬಿರಿಯುತ್ತದೆ.

    ಆದರೆ, ಇತ್ತೀಚಿನ ದಿನಗಳಲ್ಲಿ ಮಾಸ್ಕ್ ನ ಹಿಂದೆ ನಗು ಮರೆಯಾಗಿದೆ!

    ಆದರೆ ಏಪ್ರಿಲ್ ಬಂತಂದ್ರೆ ಒಂದಿಷ್ಟು ನಗುವಿಗೆ ಅವಕಾಶವಿದೆ. ಈ ಒಂದರಂದೇ ನಕ್ಕು, ನಗುವುದನ್ನು ಅವತ್ತೇ ಮರೆಯುತ್ತಿದ್ದಾರೆ. ಮತ್ತೆ ಹನ್ನೊಂದು ತಿಂಗಳು ಅದರತ್ತ
    ತಿರುಗಿಯೂ ನೋಡುವುದಿಲ್ಲ!

    ‘ನಗು’ ಯಾರಲ್ಲಿ ಇದೆ? ಎಲ್ಲಿ ಇಲ್ಲ? ಏನೆಲ್ಲ ಆಗಿದೆ ಎಂದು ವೀಕ್ಷಿಸಿದರೆ ಕೆಲವು ಸಂಗತಿಗಳು ರೀಲ್‌ನಂತೆ ಬಿಚ್ಚಿ ಕೋಳ್ಳುತ್ತಾ ಹೋಗುತ್ತೆ. ನಗರದಲ್ಲಿರೋ ನಗರಿಗರಿಗೆ ‘ನಗು’ ಅಂದ್ರೆ ಏನು? ಅದು ಹೇಗಿರುತ್ತೆ? ನಗುವುದು ಹೇಗೆ? ಹೇಗೆ ನಗಬೇಕು? ಯಾವುದಕ್ಕೆ ಎಷ್ಟು ನಗಬಹುದು? ಹೇಗೆ ಹೇಗೆಲ್ಲಾ ನಕ್ಕು ಆರೋಗ್ಯ ಕಾಪಾಡಿಕೊಳ್ಳಬಹುದು? ಎಂದು ನಗ್ಗೆ ಬುಗ್ಗೆಯ ಶಿಬಿರ ಏರ್ಪಡಿಸುತ್ತಾರೆ. ಆನಂತರ ಸಮಾರೋಪದ ದಿನ ಅಂದ್ರೆ ಏಪ್ರಿಲ್ ಒಂದರಂದು ಪ್ರ್ಯಾಕ್ಟಿಕಲ್ ಎಂಬಂತೆ ನಗಿಸಿ, ಕರೆಕ್ಟಾಗಿ ನಗುವುದು ಕಲಿತಿದ್ದಾರೆ ಅಂತಾ ಖಾತ್ರಿ ಪಡಿಸಿಕೊಂಡು ಕಳಿಸಬೇಕಾತ್ತೇನೋ?

    ನಗ್ರೀ ಸ್ವಾಮೀ, ನಗೋದ್ರಿಂದ ಎಲ್ಲಾ ನರಗಳೂ ಹಿಗ್ಗಿ ‘ನರ’ ನ ಆರೋಗ್ಯ ಸುಧಾರಿಸುವಂತೆ ಮಾಡುತ್ತೆ. ನಗಬೇಕು ಆದ್ರೆ ಯಾರನ್ನಾದ್ರೂ ನಗೆಪಾಟಲಿಗೆ ಗುರಿಯಾಗಿಸಿ, ಮತ್ತೊಬ್ಬರನ್ನು ಚುಚ್ಚಿ, ನೋಯಿಸಿ ನಗಬಾರ್ದು! ಕೆಲವರೋ ಹಾಸ್ಯ ಮಾಡಲು ಹೋಗಿ ತಾವೇ ಹಾಸ್ಯಾಸ್ಪದರಾಗ್ತಾರೆ.

    ಇನ್ನು ಸಂಸಾರದಲ್ಲಿ ನಗುವಿಗೆ ಯಾವ ಸ್ಥಾನ ಇರುತ್ತೆ ಅಂದ್ರೆ, ಗಂಡ ಅನ್ನೋ ಪ್ರಾಣಿ ಪಾಣಿಗ್ರಹಣ ಮಾಡಿದ ಹೆಂಡತಿ ಮುಂದೆ ನಗಲ್ಲ, ನಕ್ರೆ ಎಲ್ಲಿ ಸದರ ಆಗ್ತೀನೋ ಅಂತ ಮನೇಲಿ ಮುಖ ಗಂಟ್ಟಿಕ್ಜಿಕೊಂಡೇ ಇದ್ದು ಹೊರಗೆ ಹೋದಾಗ ಮಾತ್ರ ನಗುವ ಪ್ರಮೇಯವಿಲ್ಲದಿದ್ದರೂ ಪ್ರತಿ ವಿಷಯಕ್ಕೂ ಕಿಸಿಕಿಸಿ ಅಂತಾ ಕಿಸಿತಾನೆ!

    ಆಫೀಸ್ನಲ್ಲೋ ಬಾಸ್ ಮುಂದೆ ನಗೋ ಹಾಗಿಲ್ಲಾ! ಹಲ್ಲು ಗಿಂಜ ಬೇಕಷ್ಟೆ.

    ಆ ಬಾಸೋ ನಗುನಗುತ್ತಾ ಇರಲ್ಲಾ, ಹಾಗೇನಾದ್ರೂ ನಗ್ ನಗ್ತಾ ಮಾತಾಡಿದ್ರೆ ಈ ಸ್ಟಾಫ್ ಅನ್ನೋ ಗೂಬೆಗಳು ಎಲ್ಲಿ ಬೋನಸ್ಗೆ ಏಟಾಕ್ತಾರೋ ಅಂತಾ ಮುಗುಂ ಆಗಿರ್ತ್ತಾನೆ!
    ಇನ್ನು ಫ್ರೆಂಡ್ಗಳೋ ಒಬ್ಬರಿಗೊಬ್ಬರು ಹಾಸ್ಯ ಮಾಡ್ಕೊಳ್ತಾರೆ ಆದ್ರೆ ಟೈಮ್ ಇರಲ್ಲಾ, ವೀಕ್ ಡೇಸ್ ಆಫೀಸ್ ಕೆಲ್ಸ, ವೀಕೆಂಡ್ ಮನೆ, ಮಡದಿ ಮಕ್ಳು! ಈ ನಡುವೆ ಯಾವಾಗಾದ್ರೂ ಫೋನ್ನಲ್ಲಿ ಗತಕಾಲದ್ದನ್ನೇ ಮೆಲುಕುತ್ತಾ ಕುಲುಕಾಡಿ ನಕ್ಕು ಸುಮ್ನಾಗ್ತಾರೆ.

    ಇದೆಲ್ಲಾ ಹೀಗಾದ್ರೆ ಮಕ್ಕಳಿಗೆ ಅಪ್ಪ-ಅಮ್ಮನ ಭಯ, ಸ್ಕೂಲಲ್ಲಿ ಪ್ರಿನ್ಸಿ, ಮ್ಯಾಮ್ಗಳ ಭಯ, ಟ್ಯೂಷನ್ನಲ್ಲಿ ಮತ್ತದೇ ಮ್ಯಾಮ್! ಎಲ್ಲೆಡೆ ಸೈಲೆನ್ಸ್, ಗಪ್ ಚುಪ್ ಹಾಗೂ ಯಾವಾಗಲಾದ್ರೂ ನಗಲೇಬೇಕದ್ರೆ ‘ಕಿಸಕ್’ ಎಂದು ಕಸೀಬಹುದು ಅಷ್ಟೇ. ಒಂದರೆಕ್ಷಣದಲ್ಲಿ ಸದ್ದಿಲ್ಲದೇ ಬಂದು ಹೋಗುವ ಮಿಂಚಂತೆ!

    ಹಾಗಾದರೆ ನಗು ಎಲ್ಲಿದೆ? ಯಾಕ್ ಹೀಗೆಲ್ಲಾ ಬಿಗುಮಾನದಲ್ಲಿ, ಸೆಡುವಲ್ಲಿ ಜೀವನ ಸಾಗಿಸಬೇಕಿದೆ ಅನ್ನೋದೆ ತಿಳಿಯುತ್ತಿಲ್ಲಾ!

    ಸಾಹಿತ್ಯ ಭಂಡಾರದಲ್ಲಿ ‘ಹಲ್ಮಡಿ ಶಾಸನ’ ಅನ್ನೋ ಪದ ಕೇಳಿದ ನೆನಪು! ಆ ಪದದಂತೆ ಇನ್ನೊಂದು ಪದ ಹೊಳೆಯುತ್ತೆ ‘ಹಲ್ಬಿಡಿ ಶಾಸನ’! ಈ ಶಾಸನವನ್ನು ಸರ್ಕಾರದವರು ಜಾರಿಗೆ ತರಬೇಕು! ಹಾಗಾದ್ರೂ ಜನ ಮುಕ್ತವಾಗಿ ನಗ್ತಾರೇನೋ? ಹಲ್ಬಿಡದಿದ್ದರೆ ಎಲ್ಲಿ ಫೈನ್ ಹಾಕ್ತಾರೋ ಎಂದು ಹಲ್ಬಿಡ್ತಾರೇನೋ? ನಗಬೇಕು ನಗ್ಲಿ, ಹಲ್ಬಿಡ್ಲಿ. ಆದ್ರೆ ಕುದುರೆ ಹಲ್ಬಿಟ್ಟು ಕೆನೆಯೋ ಥರ ನಗದಿದ್ರೆ ಸಾಕು!

    ಎನಿ ಹೌ, ಫೂಲ್ ಡೇ ಯಲ್ಲಿ ಒಮ್ಮೆಯಾದ್ರೂ ಫೂಲ್ ಆಗಿ ಪರ್ವಾಗಿಲ್ಲಾ, ಫುಲ್ ಖುಷ್ ಆಗಿ ಎಂಜಾಯ್ ಮಾಡಿ. ಆದ್ರೆ ಇಯರ್ ಫುಲ್ ಫೂಲ್ ಎನಿಸಿಕೊಳ್ಳದೇ ಜಾಗೃತರಾಗಿರಿ.

    ಚಾಪ್ಲಿನ್ ಹೇಳೋ ಥರ ತನ್ನನ್ನೇ ತಾನು ವ್ಯಂಗ್ಯ ಮಾಡಿಕೊಂಡು ಇತರರಿಗೆ ಹಾಸ್ಯ ರಸಾಯನ ಉಣಬಡಿಸಬೇಕು. ಅದರಿಂದ ತಾವೂ ಹರ್ಷಿಸಬೇಕು!

    ನಗ್ರಿ, ನಗಿಸ್ರಿ, ನಗ್ತಾನೇ ಇರಿ, ಕಷ್ಟಗಳು ಎಲ್ಲರಿಗೂ ಎಂದೆಂದಿಗೂ ಬರುತ್ತೇ ಹೋಗುತ್ತೇ ಅದರ ಮಧ್ಯೆಯೂ ನಗುವನ್ನು ಹಾಸು ಹೊಕ್ಕಾಗಿಸಿಕೊಂಡು ಸುಖ ಕಂಡುಕೊಳ್ಳಿ.

    ಮುಖವಾಡ ಹಾಕಿ ಬದುಕುವುದಕ್ಕಿಂತ ಮಾಸ್ಕ್ ಹಾಕಿ ಆರೋಗ್ಯದಿಂದ ಬದುಕಬಹುದು!
    ಮಾಸ್ಕ್ ಹಾಕಿದ್ರೂ ಅದ್ರ ಒಳಗೇ ನಗ್ರಿ. ಆಗಲೂ ಆ ನಗು ಕಣ್ಣಲ್ಲಿ ಕಾಣುತ್ತೆ! ನಗಲು ಬೇಕಾದ್ದು ಬಾಯಿಯೂ ಅಲ್ಲಾ, ಮುವತ್ತೆರಡು ಹಲ್ಲೂ ಅಲ್ಲಾ. ನಗಲು ಬೇಕಾದ್ದು ಮುಕ್ತ ಮನಸ್ಸು!

    This image has an empty alt attribute; its file name is sanketh-gurudutt-855x1080.jpg

    ಸಂಕೇತದತ್ತ ಎಂಬ ಹೆಸರಿನಿಂದ ಸುಪ್ರಸಿದ್ಧರಾಗಿರುವ ಸಂಕೇತ ಗುರುದತ್ತ ಅವರ ಮೂಲ ತುಮಕೂರು. ಅಲ್ಲಿ ತುಮಕೂರು‌ವಾರ್ತೆ, ಪ್ರಜಾಪ್ರಗತಿ, ಕನ್ನಡ ಗಂಗೋತ್ರಿ, ನಗೆಮಿತ್ರ ಹಾಗೂ ನಗೆಮುಗುಳು, ಪತ್ರಿಕೆಗಳಿಗೆ ಕೆಲಸ ಮಾಡಿದ್ದರು. ಬೆಂಗಳೂರಿಗೆ ಬಂದು ಸುದ್ದಿ ಸಂಗಾತಿ ವಾರ ಪತ್ರಿಕೆಯಲ್ಲಿ ಕೆಲ ಕಾಲವಿದ್ದರು. ಆನಂತರ ಧಾರಾವಾಹಿ, ಸಿನಿಮಾಗಳಲ್ಲಿ ಕೆಲಸ ಮಾಡಿದರು. ನಂತರದಲ್ಲಿ ಕಿರ್ಲೋಸ್ಕರ್ ಮಲ್ಟಿಮೀಡಿಯಾಗೆ ಸೇರ್ಪಡೆ‌‌. ಅಲ್ಲಿಂದ ಒಂದಿಷ್ಟು ಕಲಿತು ಹೈದರಾಬಾದನತ್ತ ಪಯಣ. ಅಲ್ಲಿ ಹನ್ನೊಂದು ವರ್ಷವಿದ್ದು ಮತ್ತೆ ಬೆಂಗಳೂರಿಗೆ ವಾಪಸ್ ಆಗಿ ಸುಧಾ, ಮಯೂರ, ಪ್ರಜಾವಾಣಿ ವಿಶೇಷಾಂಕ, ಹೊಸತು, ಪ್ರಿಯಾಂಕಗಳಿಗೆ ಫ್ರೀಲ್ಯಾನ್ಸ್ ಆಗಿ ಕೆಲಸ ನಿರ್ವಹಿಸಿದರು. ಆ ಸಮಯದಲ್ಲಿಯೇ ಸಿಕ್ಕ ಮತ್ತೊಂದು ಉತ್ತಮ ಅವಕಾಶ ಕನ್ನಡಪ್ರಭದಲ್ಲಿ ಕಲಾಕಾರನಾಗಿದ್ದು. ಕಲಾ ವಿಭಾಗದ ಜೊತೆಗೆ ಪುರವಣಿಯ ಕೆಲ ಪುಟಗಳ ಜವಾಬ್ದಾರಿ ಸಿಕ್ಕಿತು. ಅಲ್ಲಿ ನಾಟಕ, ಸಿನಿಮಾ ಹಾಗೂ ಕಲಾಪ್ರದರ್ಶನಗಳ ವಿಮರ್ಶೆ, ವ್ಯಕ್ತಿ ಹಾಗೂ ಸಾಂಸ್ಕ್ರತಿಕ ತಂಡಗಳ ಪರಿಚಯ ಲೇಖನ ಹೀಗೆ ಹಲವಾರು ವಿಭಾಗದಲ್ಲಿ ಕೆಲಸ ಮಾಡಿದ ಅನುಭವ. ಪ್ರಸ್ತುತ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    Dr. Sri Shivakumara Swamiji: ಇಂದು ಕಾಯಕಯೋಗಿ, ನಡೆದಾಡುವ ದೇವರು, ಡಾ. ಶ್ರೀ ಶಿವಕುಮಾರ ಸ್ವಾಮಿಗಳ ನೂರಾ ಹದಿನೈದನೇ ಜನ್ಮ ದಿನ

    ಎಂ.ವಿ.ಶಂಕರಾನಂದ

    ಡಾ. ಶ್ರೀ ಶಿವಕುಮಾರಸ್ವಾಮಿಗಳು ಭಾರತೀಯ ಆಧ್ಯಾತ್ಮಿಕ ಜಗತ್ತಿನ ನಾಯಕರು. ತುಮಕೂರಿನ ಸಿದ್ದಗಂಗಾ ಮಠದ ಪೀಠಾಧಿಪತಿಗಳಾಗಿದ್ದ ಅವರು ಶ್ರೀ ಸಿದ್ದಗಂಗ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿ, ಲಕ್ಷಾಂತರ ಬಡ ಮಕ್ಕಳಿಗೆ ಆಶ್ರಯ ಕೊಟ್ಟು, ವಿದ್ಯೆ ಕಲಿಸಿದ ಪುಣ್ಯಪುರುಷರು. ಅವರನ್ನು ರಾಜ್ಯದಲ್ಲಿ ನಡೆದಾಡುವ ದೇವರು ಎಂದು ಕೂಡ ಉಲ್ಲೇಖಿಸಲಾಗಿದೆ. ನೂರಾಹನ್ನೊಂದು ವಸಂತಗಳ ತುಂಬು ಜೀವನ ನಡೆಸಿದ ಅವರಿಗೆ ಭಾರತ ಸರ್ಕಾರವು 2015ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿದೆ.

    ಡಾ. ಶ್ರೀ ಶಿವಕುಮಾರಸ್ವಾಮಿಗಳು ಅನ್ನ, ಅಕ್ಷರ, ಜ್ಞಾನಗಳೆಂಬ ತ್ರಿವಿಧ ದಾಸೋಹಿ. 12ನೇ ಶತಮಾನದ ಯುಗಪುರುಷ, ಕ್ರಾಂತಿಕಾರಿ ಬಸವಣ್ಣನವರ ಕಾಯಕವೇ ಕೈಲಾಸ ಮತ್ತು ನಿತ್ಯದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಾರ್ಚ್ 3, 1930ರಲ್ಲಿ ಇವರು ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದರು.

    ಪೂರ್ವಾಶ್ರಮ: ಮಾಗಡಿ ತಾಲೂಕಿನ ವೀರಾಪುರದ ಶ್ರೀಯುತ ಹೊನ್ನೇಗೌಡ ಮತ್ತು ಗಂಗಮ್ಮನವರಿಗೆ ಏಪ್ರಿಲ್ 1, 1908ರಲ್ಲಿ 13ನೇ ಮಗನಾಗಿ ಶಿವಕುಮಾರಸ್ವಾಮಿಗಳು ಜನಿಸಿದರು. ಇವರ ಪುರ್ವಾಶ್ರಮದ ಹೆಸರು ಶಿವಣ್ಣ. ಎಲ್ಲರಿಗಿಂತಲೂ ಕಿರಿಯರಾದ ಶಿವಣ್ಣನವರೆಂದರೆ ತಂದೆ ತಾಯಿಗಳಿಗೆ ಅಪಾರ ಪ್ರೀತಿ. ವೀರಾಪುರದಲ್ಲಿಯೇ ಇದ್ದ ಕೂಲಿಮಠದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶಿವಣ್ಣನ ಶೈಕ್ಷಣಿಕ ಜೀವನ ಆರಂಭವಾಯಿತು. ಅನಂತರ ಪ್ರಾಥಮಿಕ ಶಾಲೆಗಾಗಿ ಪಕ್ಕದ ಊರಾದ ಪಾಲನಹಳ್ಳಿಯ ಶಾಲೆಗೆ ದಾಖಲಾದರು.
    ತಮ್ಮ ಪ್ರಾಥಮಿಕ ಶಾಲಾ ದಿನಗಳಲ್ಲಿ ತಾಯಿಯನ್ನು ಕಳೆದುಕೊಂಡ ಶಿವಣ್ಣ ಅನಂತರ ಅಕ್ಕನ ಆಸರೆಯಲ್ಲಿ ಬೆಳೆದರು. ತುಮಕೂರು ಬಳಿ ಇರುವ ನಾಗವಲ್ಲಿಯಲ್ಲಿ ಮಾಧ್ಯಮಿಕ ಶಿಕ್ಷಣದ ನಂತರ 1922ರಿಂದ ತುಮಕೂರಿನ ಸರ್ಕಾರಿ ಪ್ರೌಢಶಾಲೆ ಸೇರಿ 1926ರಲ್ಲಿ ಮೆಟ್ರಿಕ್ಯುಲೇಷನ್ ಗಳಿಸಿದರು. 1927ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಉದ್ದಾನ ಶಿವಯೋಗಿಗಳ ಒಡನಾಟ ಉಂಟಾಯಿತು. ಇದೇ ವರ್ಷ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಬೆಂಗಳೂರಿನಲ್ಲಿ ರಾವ್ ಬಹದ್ದೂರ್ ಧರ್ಮಪ್ರವರ್ತ ಶ್ರೀ ಗುಬ್ಬಿ ತೋಟದಪ್ಪ ಧರ್ಮಛತ್ರದಲ್ಲಿ ಉಳಿದುಕೊಂಡು, ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ವಿದ್ಯಾಭ್ಯಾಸದೊಂದಿಗೆ ಸಿದ್ದಗಂಗಾ ಮಠದ ಒಡನಾಟದಲ್ಲಿದ್ದರು. ಹಿರಿಯ ಗುರುಗಳಾದ ಶ್ರೀ ಉದ್ಧಾನ ಸ್ವಾಮೀಜಿಗಳ ಹಾಗು ಆಗ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರ ಸಂಗ ಶಿವಣ್ಣನವರಿಗೆ ಒಂದು ಹಿತಾನುಭೂತಿ ನೀಡುತ್ತಿತ್ತು. ಶಿವಣ್ಣನವರು ಎಲ್ಲ ಸಮಯಗಳಲ್ಲೂ ಮಠದ ಹಿತವನ್ನು ಬಯಸುತ್ತ ಮಠಕ್ಕೆ ಭೇಟಿಕೊಡುತ್ತಿದ್ದರು. ತುಮಕೂರು ಜಿಲ್ಲೆಯಲ್ಲಿ ಭೀಕರ ಪ್ಲೇಗ್ ರೋಗ ಇದ್ದರೂ ಶಿವಣ್ಣನವರ ಹಾಗು ಮಠದ ಒಡನಾಟ ಎಂದಿನತೆಯೇ ಇತ್ತು.

    ಮಠಾಧಿಪತಿ: ಸಿದ್ದಗಂಗಾ ಮಠಕ್ಕೆ 1930ರಲ್ಲಿ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾದರು. ಆಗ ಅವರ ಕ್ರಿಯಾಸಮಾಧಿ ಕಾರ್ಯಕ್ಕೆ ಆಗಮಿಸಿದ್ದ ಶಿವಣ್ಣನರನ್ನು ಉದ್ಧಾನ ಸ್ವಾಮಿಜಿಗಳು ಎಲ್ಲರ ಸಮ್ಮುಖದಲ್ಲಿ ಮಠದ ಉತ್ತರಾಧಿಕಾರಿ ಎಂದು ಘೋಷಿಸಿದರು. ಕಾವಿ, ರುದ್ರಾಕ್ಷಿಗಳನ್ನು ಧರಿಸಿ, ಸನ್ಯಾಸತ್ವ ಸ್ವೀಕಾರದ ನಂತರವೂ ವಿದ್ಯಾಭ್ಯಾಸ ಮುಂದುವರಿಸಿದ ಶಿವಣ್ಣನವರು ಬೆಂಗಳೂರಿಗೆ ಬಂದು ಸನ್ಯಾಸತ್ವದ ರೀತಿ ರಿವಾಜು ಪಾಲಿಸುತ್ತಾ ವಿದ್ಯಾಭ್ಯಾಸ ಮುಗಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಸಿದ್ದಗಂಗಾಮಠಕ್ಕೆ ಹಿಂದಿರುಗಿದರು. ನಂತರ ತಮ್ಮ ಪೂರ್ಣ ಸಮಯವನ್ನು ಮಠದ ಏಳಿಗೆಗಾಗಿ ಮೀಸಲಿಡುತ್ತಾರೆ. ಶ್ರೀ ಉದ್ಧಾನ ಶಿವಯೋಗಿಗಳು ಶಿವೈಕ್ಯರಾದಾಗ ಮಠದ ಸಕಲ ಆಡಳಿತ, ಮಠದ ವಿದ್ಯಾರ್ಥಿಗಳ, ಶಿಕ್ಷಣ ಸಂಸ್ಥೆಗಳ ಯೋಗಕ್ಷೇಮದ ಜವಾಬ್ದಾರಿಯೂ ಶ್ರೀಗಳವರಿಗೆ ಹಸ್ತಾಂತರವಾಗುತ್ತದೆ.

    ಆರಂಭದ ದಿನಗಳು: ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ಸಂದರ್ಭದಲ್ಲಿ ಮಠದ ಆದಾಯ ತುಂಬಾ ಕಡಿಮೆ ಇತ್ತು. ಮಠಕ್ಕೆಂದು ಮೀಸಲಾಗಿದ್ದ ಜಮೀನಿನಲ್ಲಿ ಬೆಳೆದು ವಿದ್ಯಾರ್ಥಿಗಳ ಸನಿವಾಸ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟದಾಯಕವಾಗಿತ್ತು. ಮಠದ ಭೂಮಿಯೆಲ್ಲ ಮಳೆಯಾಧಾರಿತವಾದದ್ದು ಮತ್ತೂ ತೊಡಕಾಗಿ ಅತಿವೃಷ್ಟಿ, ಅನಾವೃಷ್ಟಿಗಳಂತಹ ಸಮಯದಲ್ಲಿ ಬಹಳ ಕಷ್ಟವಾಗುತ್ತಿತ್ತು. ಇದನ್ನೆಲ್ಲಾ ಧೈರ್ಯವಾಗಿ ಮೆಟ್ಟಿ ನಿಂತ ಶ್ರೀಗಳು ಭಕ್ತರ ಮನೆಗೆ ಭಿನ್ನಹವೇ ಮೊದಲಾದ ಆದ್ಯತೆಗಳ ಮೇರೆಗೆ ನಡೆದು ಕೊಂಡೇ ಹೋಗಿ ಅಲ್ಲಿಂದ ಧವಸ ಧಾನ್ಯಗಳನ್ನು ತಂದಿದ್ದೂ ಉಂಟು.

    ಬರಿಯ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಷ್ಟೇ ಅಲ್ಲದೆ ದಿನ ನಿತ್ಯ ಮಠದಲ್ಲಿ ನಡೆಯಬೇಕಾದ ಧಾರ್ಮಿಕ ಕಾರ್ಯಗಳು, ಮಠಕ್ಕೆ ಭಕ್ತರ ಹಾಗು ಗಣ್ಯರ ಭೇಟಿ, ಮಠದ ಅರ್ಥಿಕ ನಿರ್ವಹಣೆಗಳೂ ಸೇರಿ ಶ್ರೀಗಳಿಗೆ ಬಿಡುವಿಲ್ಲದ ಕಾರ್ಯಗಳ ಪಟ್ಟಿಯೇ ಇರುತ್ತಿತ್ತು. ಆರಂಭದ ದಿನಗಳಲ್ಲಿ ಶ್ರೀಗಳು ಇವನ್ನೆಲ್ಲ ನಿಭಾಯಿಸಲು ಸಾಧ್ಯವಿಲ್ಲ ಎಂಬ ಆಡುನುಡಿಗಳೂ ಕೇಳಿಬಂದಿದ್ದವು. ಇದ್ಯಾವುದಕ್ಕೂ ಧೃತಿಗೆಡದ ಶ್ರೀಗಳು ಪೂಜ್ಯ ಲಿಂಗೈಕ್ಯ ಶ್ರೀ ಅಟವೀಸ್ವಾಮಿಗಳ ಹಾಗು ಲಿಂಗೈಕ್ಯ ಶ್ರೀ ಉದ್ಧಾನಸ್ವಾಮಿಗಳ ಆಶಯದಂತೆ ಯಾವುದೇ ತೊಡಕುಗಳಾಗದಂತೆ ಮಠದ ಶಿಕ್ಷಣ ಸಂಸ್ಥೆಗಳನ್ನು, ವಿದ್ಯಾರ್ಥಿ ನಿಲಯಗಳನ್ನು, ಪ್ರಸಾದ ನಿಲಯಗಳನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ.

    ಪ್ರತಿದಿನವೂ ಶ್ರೀಗಳು ಬೆಳಗಿನ ನಾಲ್ಕುಗಂಟೆಗೆ ಎದ್ದು ಸ್ನಾನ ಮಾಡಿ, ಪೂಜಾಕೋಣೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನದಲ್ಲಿ ತಲ್ಲೀನರಾಗುತ್ತಿದ್ದರು. ನಂತರ ಇಷ್ಟಲಿಂಗ ಪೂಜೆ. ದೂರದಿಂದ ಸ್ವಾಮಿಗಳ ದರ್ಶನಕಾಗಿ ಬರುವ ಭಕ್ತರಿಗೆ ತ್ರಿಪುಂಢ್ರ ಭಸ್ಮವನ್ನು ಕೊಟ್ಟು ತಾವೂ ಧರಿಸಿ, ಪೂಜೆಯನ್ನು ಮುಗಿಸುತ್ತಿದ್ದರು. ನಂತರ ಆಹಾರ ಸೇವನೆ, ಮುಂಜಾನೆ ಆರೂವರೆ ಗಂಟೆಗೆ. ಒಂದು ಅಕ್ಕಿಇಡ್ಲಿ, ಸ್ವಲ್ಪ ಹೆಸರುಬೇಳೆ ತೊವ್ವೆ, ಸಿಹಿ ಹಾಗೂ ಖಾರ ಚಟ್ನಿ ಸೇವನೆ. ಎರಡು ತುಂಡು ಸೇಬು. ಇದರ ಬಳಿಕ, ಬೇವಿನ-ಚಕ್ಕೆ ಕಷಾಯ ಸೇವನೆ ಮಾಡುತ್ತಿದ್ದರು.

    ಮುಂಜಾನೆ ಮತ್ತು ಸಂಜೆ ಮಠದ ಆವರಣದಲ್ಲಿ ಮಕ್ಕಳಿಂದ ನಡೆಯುವ ಪ್ರಾರ್ಥನೆಯಲ್ಲಿ ಶ್ರೀಗಳು ಪಾಲ್ಗೊಳ್ಳುತ್ತಿದ್ದರು. ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಿಡಿದು ಪದವಿ ಅಭ್ಯಾಸದಲ್ಲಿರುವ ತರುಣರವರೆಗೂ ಸಾವಿರಾರು ಮಂದಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದನ್ನು ನೋಡಲು ಕಣ್ಣುಗಳು ಪುಣ್ಯ ಮಾಡಿರಬೇಕು. ಮಠದ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದ ಮುಂದಿರುವ ವಿಶಾಲವಾದ ಬಯಲಿನಲ್ಲಿ ಸಾವಿರಾರು ಜನ ಒಟ್ಟಿಗೆ ಪ್ರಾರ್ಥನೆ ಮಾಡುವುದನ್ನು ನೋಡುವುದೂ ಸಿದ್ಧಗಂಗೆಯ ಒಂದು ಪ್ರಮುಖ ಆಕರ್ಷಣೆ.

    ಪ್ರಾರ್ಥನೆಯ ನಂತರ ಕಚೇರಿಗೆ ಧಾವಿಸುವ ಶ್ರೀಗಳು ದಿನ ಪತ್ರಿಕೆಗಳನ್ನು ಓದುತ್ತಿದ್ದರು. ಅಲ್ಲಿಗೆ ಬಂದ ಭಕ್ತರಿಗೆ, ದರ್ಶನಾರ್ಥಿಗಳಿಗೆ ದರ್ಶನ ನೀಡುತ್ತಿದ್ದರು. ಮಳೆ-ಬೆಳೆ, ಕುಶಲೋಪರಿ ವಿಚಾರ, ಗಣ್ಯರ ಭೇಟಿ, ಮಠದ ಆಡಳಿತ ಕಡತಗಳ ಪರಿಶೀಲನೆ, ಪತ್ರವ್ಯವಹಾರಗಳೇ ಮುಂತಾಗಿ ಹಲವಾರು ಕಾರ್ಯಗಳಲ್ಲಿ ನಿರತರಾಗಿರುತ್ತಿದ್ದರಲ್ಲದೆ ಇಳಿವಯಸ್ಸಿನಲ್ಲೂ ದಣಿವರಿಯದೇ ಕಾರ್ಯನಿರತರಾಗಿ ಕಾಯಕವೇ ಕೈಲಾಸ ಎಂದು ನುಡಿಯಲ್ಲಿ ಮಾತ್ರ ಹೇಳದೆ ಹಾಗೆಯೇ ನಡೆಯಲ್ಲೂ ತೋರಿಸಿಕೊಟ್ಟಿದ್ದಾರೆ.

    ಮಠದ ಪ್ರಸಾದ ನಿಲಯದ ಮುಂಭಾಗದ ಮಂಚದ ಮೇಲೆ ಶ್ರೀಗಳು ಆಸೀನರಾಗುತ್ತಿದ್ದರು. ಭಕ್ತರ ಕಷ್ಟ-ಸುಖಕ್ಕೆ ಸ್ಪಂದನ, ಮಧ್ಯಾನ್ಹ ಮೂರು ಗಂಟೆಯವರೆವಿಗೆ ನಿರಂತರವಾಗಿ ಸಾಗುತ್ತಿತ್ತು. ಮಠಕ್ಕೆ ಭೇಟಿ ಕೊಡುವ ಬಹುತೇಕ ಭಕ್ತರು ರೈತಾಪಿ ವರ್ಗದವರಾದ್ದರಿಂದ ಶ್ರೀಗಳು ಬೇರೆ ಬೇರೆ ಪ್ರದೇಶದಿಂದ ಬಂದ ರೈತರಲ್ಲಿ ಮಳೆ ಬೆಳೆಗಳ ಬಗ್ಗೆ ಪ್ರಶ್ನಿಸುತ್ತಿದ್ದರು. ಇದರ ಬಳಿಕ ಶ್ರೀಗಳು, ನೇರವಾಗಿ ಮಠಕ್ಕೆ ಸಾಗಿ, ಸ್ನಾನ ಪೂಜೆಗಳಲ್ಲಿ ಮಗ್ನರಾಗುತ್ತಿದ್ದರು. ಇದರ ಬಳಿಕ, ಒಂದು ಎಳ್ಳಿಕಾಯಿ ಗಾತ್ರದ ಮುದ್ದೆ, ಸ್ವಲ್ಪವೇ ಅನ್ನ ಮತ್ತು ತೊಗರಿಬೇಳೆ ಸಾಂಬಾರ್ ಊಟಮಾಡುತ್ತಿದ್ದರು. ಸಂಜೆ 4 ಗಂಟೆಯ ನಂತರ ಪುನಃ ಭಕ್ತಗಣದ ಭೇಟಿ. ಮಠದಲ್ಲಿ ಉಳಿದುಕೊಂಡು ವಿದ್ಯಾರ್ಜನೆ ಮಾಡುವ ಮಕ್ಕಳ ಕುಶಲೋಪರಿ, ದಾಸೋಹದ ಮಾಹಿತಿ ಸುಮಾರು ರಾತ್ರಿ 9 ಗಂಟೆಯವರೆವಿಗೂ ನಡೆಯುತ್ತಿತ್ತು.

    ರಾತ್ರಿ ಹತ್ತೂವರೆಗೆ ಸ್ವಾಮೀಜಿ ಮಲಗುವ ವೇಳೆ ಪುಸ್ತಕ ಓದಿ ಮಲಗುವ ಹವ್ಯಾಸವಿಟ್ಟುಕೊಂಡಿದ್ದರು. ಇದು ಕನಿಷ್ಠ ಅರ್ಧತಾಸಾದರೂ ನಡೆಯುತ್ತಿತ್ತು. ಹನ್ನೊಂದು ಗಂಟೆಗೆ ಮಲಗುತ್ತಿದ್ದರು. ಓದಿನೊಂದಿಗೆ ಆರಂಭವಾಗುವ ಶ್ರೀಗಳ ದಿನಚರಿ, ಓದಿನೊಂದಿಗೆ ಮುಕ್ತಾಯವಾಗುತ್ತಿತ್ತು. ಹಲವು ದಿನಗಳಲ್ಲಿ, ಕೆಲವಾರು ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆಹ್ವಾನಿಸುವ ಭಕ್ತರ ಮನೆಗಳಿಗೂ ಭೇಟಿನೀಡುತ್ತಿದ್ದರು. ದೂರದ ಊರುಗಳಿಗೂ ಓಡಾಡುತ್ತಿದ್ದರು. ಪ್ರಸಾದ ಸ್ವೀಕರಿಸುವ ವೇಳೆಯಲ್ಲಿ ಮಾತ್ರ ಬಿಸಿನೀರು ಸೇವಿಸುತ್ತಿದ್ದರು. ಬಾಕಿ ಸಂದರ್ಭದಲ್ಲಿ ಏನನ್ನೂ ಸೇವಿಸುತ್ತಿರಲಿಲ್ಲ. ಕಳೆದ 9ದಶಕಗಳ ಜೀವನ ಇದೇರೀತಿ ಸಾಗಿತು. ಶ್ರೀಗಳ ಆರೋಗ್ಯವೂ ಚೆನ್ನಾಗಿಯೇ ಇತ್ತು. ಶ್ರೀಗಳವರ ಮೇಲೆ ಒಂದು ಸಾಕ್ಷ್ಯಚಿತ್ರ ತಯಾರಿಸಿದ್ದಾರೆ.

    ಸಾಮಾಜಿಕ ಕಾರ್ಯಗಳು: ಅವರು ಶಿಕ್ಷಣ ಮತ್ತು ತರಬೇತಿಗಾಗಿ ಒಟ್ಟು132ಸಂಸ್ಥೆಗಳನ್ನು ಸ್ಥಾಪಿಸಿದರು. ನರ್ಸರಿಯಿಂದ ಎಂಜಿನಿಯರಿಂಗ್, ವಿಜ್ಞಾನ, ಕಲೆ ಮತ್ತು ನಿರ್ವಹಣೆ ಜೊತೆಗೆ ವೃತ್ತಿಪರ ತರಬೇತಿಯೂ ಸಹ ಇದೆ. ಅವರು ಸಂಸ್ಕೃತದ ಸಾಂಪ್ರದಾಯಿಕ ಕಲಿಕೆಯಲ್ಲಿ ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನದಲ್ಲಿ ಶಿಕ್ಷಣ ನೀಡುವ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದರು. ಅವರ ಪರೋಪಕಾರಿ ಕೆಲಸಕ್ಕಾಗಿ ಅವರು ಎಲ್ಲಾ ಸಮುದಾಯಗಳಿಂದ ವ್ಯಾಪಕವಾಗಿ ಗೌರವಿಸಲ್ಪಟ್ಟರು.

    ಶಿವಕುಮಾರಸ್ವಾಮಿಗಳ ಮಠದಲ್ಲಿ 5 ವಯಸ್ಸಿನಿಂದ 16 ವರ್ಷ ವಯಸ್ಸಿನ 10000ಕ್ಕಿಂತ ಹೆಚ್ಚು ಮಕ್ಕಳಿಗೆ ಯಾವುದೇ ಹಂತದಲ್ಲಿ ಮತ್ತು ಉಚಿತ ಆಹಾರ, ಶಿಕ್ಷಣ ಮತ್ತು ಆಶ್ರಯವನ್ನು ಒದಗಿಸಲಾಗುತ್ತದೆ. ಮಠದ ಯಾತ್ರಾರ್ಥಿಗಳು ಮತ್ತು ಸಂದರ್ಶಕರಿಗೆ ಕೂಡಾ ಉಚಿತ ಊಟದ ವ್ಯವಸ್ಥೆ ಇದೆ. ಮಠಾಧೀಶರ ಮಾರ್ಗದರ್ಶನದಲ್ಲಿ, ವಾರ್ಷಿಕ ಕೃಷಿ ಜಾತ್ರೆಯನ್ನು ಸ್ಥಳೀಯ ಜನಸಂಖ್ಯೆಯ ಅನುಕೂಲಕ್ಕಾಗಿ ನಡೆಸಲಾಗುತ್ತದೆ. ಕರ್ನಾಟಕ ಸರಕಾರವು ೨೦೦೭ರಿಂದ ಶಿವಕುಮಾರ ಸ್ವಾಮೀಜಿ ಪ್ರಶಸ್ತಿಯನ್ನು, ಸ್ವಾಮೀಜಿಯ ಶತಮಾನೋತ್ಸವದ ವಾರ್ಷಿಕೋತ್ಸವವನ್ನು ಘೋಷಿಸಿತು. ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತುಮಕೂರಿಗೆ ಭೇಟಿ ನೀಡಿ ಶಿಕ್ಷಣ ಮತ್ತು ಮಾನವೀಯ ಕೆಲಸದಲ್ಲಿ ಸ್ವಾಮಿಗಳ ಉಪಕ್ರಮಗಳನ್ನು ಶ್ಲಾಘಿಸಿದರು.

    ಪ್ರಶಸ್ತಿಗಳು: ಸ್ವಾಮೀಜಿಯವರ ಜಾತ್ಯಾತೀತ, ಧರ್ಮಾತೀತ ಶಿಕ್ಷಣ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಶ್ರೀಗಳಿಗೆ1965ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಪೂಜ್ಯ ಸ್ವಾಮೀಜಿಯವರ 100ನೆ ವರ್ಷದ ಹುಟ್ಟು ಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಶ್ರೀಗಳ ಜೀವಮಾನ ಸಮಾಜ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯದ ಮಹೋನ್ನತ ಪ್ರಶಸ್ತಿಯಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಿ ಗೌರವಿಸಿದೆ. 2015ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

    ಸ್ವಾಮೀಜಿಯವರ ಬಗ್ಗೆ ಜಿ.ಎಸ್.ಶಿವರುದ್ರಪ್ಪನವರು
    ``ಸದ್ದು ಗದ್ದಲವಿರದ ಸಾಧನೆಯಿಲ್ಲಿ ಗದ್ದುಗೆಯೇರಿದೆ,
    ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ,
    ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ,
    ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ.’’

    ಎಂದು ಹಾಡಿದ್ದಾರೆ.

    ವಯೋಸಂಬಂಧಿ ಅನಾರೋಗ್ಯದಿಂದ ಬಳಲಿದ ಸ್ವಾಮೀಜಿಯವರನ್ನು ಹೃದಯಕ್ಕೆ ಸ್ಟಂಟ್ ಅಳವಡಿಸುವುದಕ್ಕೋಸ್ಕರ2018ರ ಡಿಸೆಂಬರ್‌ನಲ್ಲಿ ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಸ್ವಾಮೀಜಿ ಮಠಕ್ಕೆ ಹಿಂದಿರುಗಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಶ್ವಾಸಕೋಶ ಸೋಂಕಿನಿಂದ ಬಳಲಿದ ಶ್ರೀಗಳನ್ನು ಮತ್ತೆ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆರೋಗ್ಯ ಸುಧಾರಿಸಿದ ಕಾರಣ ಸ್ವಾಮೀಜಿಯವರನ್ನು ಮಠಕ್ಕೆ ಹಿಂದಿರುಗಿ ಕರೆತರಲಾಗಿತ್ತು. 2019ಜನವರಿ 21ರಂದು ಬೆಳಗ್ಗೆ ರಕ್ತದೊತ್ತಡ ಏರುಪೇರಾಗಿ ಶ್ರೀಗಳು ಸಿದ್ಧಗಂಗಾದ ಹಳೆಯ ಮಠದಲ್ಲಿ ಕೊನೆಯುಸಿರೆಳೆದರು. ಅವರಿಗೆ 111 ವರ್ಷ ವಯಸ್ಸಾಗಿತ್ತು.

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    ನಾಳೆ ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳ 115ನೇ ಜಯಂತಿ ಮತ್ತು ಗುರುವಂದನಾ ಮಹೋತ್ಸವ

    TUMAKURU MAR 31

    ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳ 115ನೇ ಜಯಂತಿ ಮತ್ತು ಗುರುವಂದನಾ ಮಹೋತ್ಸವ ನಾಳೆ ನಡೆಯಲಿದ್ದು, ನಾಡಿಗೆ ಒಳ್ಳೆಯ ಸಂದೇಶವನ್ನು ಸಾರುವ ಅರ್ಥಪೂರ್ಣ ಕಾರ್ಯಕ್ರಮವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

    ಶ್ರೀಗಳ ಬದುಕಿನಿಂದ ದೊರೆತಿರುವ ಪ್ರೇರಣೆಯ ಆಚರಣೆ ಇದಾಗಿದ್ದು, ಇಂದಿನ ಪೀಳಿಗೆಗೆ ಶ್ರೀಗಳ ವಿಚಾರಗಳನ್ನು ತಿಳಿಸುವ ಅರ್ಥಪೂರ್ಣ ಕಾರ್ಯಕ್ರಮವಾಗಲಿದೆ. ಶ್ರೀ ಸಿದ್ಧಗಂಗಾ ಮಠದ ಶಿಕ್ಷಣ ಹಾಗೂ ದಾಸೋಹ ಪರಂಪರೆಗಳು ಇಡೀ ದೇಶಕ್ಕೆ ಮಾದರಿಯಾಗಿದೆ. ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಷಾ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಪೂರ್ವಭಾವಿ ತಯಾರಿಗಳ ಬಗ್ಗೆ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳನ್ನು ಭೇಟಿ ಮಾಡಿ ಚರ್ಚಿಸಿರುವುದಾಗಿ ತಿಳಿಸಿದರು.

    ರಾಜ್ಯದಲ್ಲಿ ಸಾಮರಸ್ಯ ಕೆಡದಂತೆ ಕ್ರಮಸಿಎಂ ಬಸವರಾಜ ಬೊಮ್ಮಾಯಿ
    ರಾಜ್ಯದಲ್ಲಿ ಸಾಮರಸ್ಯ ಕೆಡದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಸರ್ಕಾರ ಸಮವಸ್ತ್ರ ಪ್ರಕರಣ ಸೇರಿದಂತೆ ಎಲ್ಲ ವಿಚಾರಗಳನ್ನು ದಕ್ಷ ರೀತಿಯಲ್ಲಿ ನಿಭಾಯಿಸಿದೆ ಎಂದು ಹಿಂದೂಪರ ಸಂಘಟನೆಗಳ ಕಾರ್ಯಗಳನ್ನು ಭಾಜಪ ಪಕ್ಷ ತಡೆಯುವುದೆ ಎಂಬ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ನೀಡಿರುವ ಹೇಳಿಕೆಗೆ ಬಗ್ಗೆ ಪ್ರತಿಕ್ರಿಯೆ ನೀಡಿದರು.

    KCET: ಜೂನ್ 16, 17, 18ರಂದು ಸಿಇಟಿ ಪರೀಕ್ಷೆ

    BENGALURU MAR 25

    ವೃತ್ತಿಶಿಕ್ಷಣಕ್ಕೆ ಪ್ರವೇಶಾವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಈ ಬಾರಿ ಜೂನ್ 16, 17 ಮತ್ತು 18ರಂದು ನಡೆಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    ಈ ಬಗ್ಗೆ ಸೋಮವಾರ ಮಾತನಾಡಿದ ಅವರು, ಬೇರೆಬೇರೆ ರಾಜ್ಯಗಳಲ್ಲಿ ಇಂತಹ ಪರೀಕ್ಷೆಗೆ ಗೊತ್ತುಪಡಿಸಿಕೊಂಡಿರುವ ಸಂಭವನೀಯ ದಿನಾಂಕಗಳ ಬಗ್ಗೆ ತಿಳಿದುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

    ಇದರಂತೆ ಜೂನ್ 16ರಂದು ಬೆಳಿಗ್ಗೆ ಜೀವಶಾಸ್ತ್ರ, ಮಧ್ಯಾಹ್ನ ಗಣಿತ, 17ರಂದು ಬೆಳಿಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಹಾಗೂ 18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಸಿಇಟಿ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಇದರಂತೆ, ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 5ರಿಂದ 20ರವರೆಗೆ ಸಿಇಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್ಲೈನ್ ಮೂಲಕವೇ ನಿಗದಿತ ಶುಲ್ಕ ಸಲ್ಲಿಸಲು ಏ.22ರವರೆಗೆ ಅವಕಾಶವಿದೆ.

    ಶುಲ್ಕ ಪಾವತಿಸಿದ ನಂತರ, ತಮ್ಮ ಅರ್ಜಿಯಲ್ಲೇನಾದರೂ ಮಾಹಿತಿಯನ್ನು ಪರಿಷ್ಕರಿಸುವುದಿದ್ದರೆ ಅಂಥವರಿಗೇ ಮೇ 2ರಿಂದ 6ವರೆಗೆ ಕಾಲಾವಕಾಶ ಇರಲಿದೆ. ಇದಾದ ಬಳಿಕ ವಿದ್ಯಾರ್ಥಿಗಳು ಮೇ 30ರಿಂದ ಪ್ರವೇಶಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಸಚಿವರು ವಿವರಿಸಿದ್ದಾರೆ.

    ಕಲೆ, ಸಂಸ್ಕೃತಿ,ಪರಂಪರೆ ಪ್ರೋತ್ಸಾಹಿಸುವ ಭಾರತ ವಿಕಾಸ ಪ್ರತಿಷ್ಠಾನ ಆರಂಭ

    BENGALURU MAR 26

    ಸ್ವಯಂ ಸೇವಾ ಸಂಸ್ಥೆಗಳು ಸುಳ್ಳಿನ ಮೂಟೆ ನೀಡುವ ಸಂಸ್ಥೆಗಳಾಗದೇ ಸತ್ಯದ ಹಾದಿಯಲ್ಲಿ ನಡೆದು ಜನರಿಗೆ ಒಳಿತನ್ನು ಮಾಡುವ ಕೆಲಸಗಳನ್ನು ಮಾಡಬೇಕು ಎಂದು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ ಕೆ ಶಿವರಾಮ್ ಅಭಿಪ್ರಾಯ ಪಟ್ಟರು.

    ಮಲ್ಲೇಶ್ವರಂನ ದಕ್ಷಿಣ ಮುಖ ನಂದಿ ತೀರ್ಥ ಕಲ್ಯಾಣಿ ದೇವಸ್ಥಾನದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸ್ವಯಂ ಸೇವಾ ಸಂಸ್ಥೆ ಭಾರತ ವಿಕಾಸ ಪ್ರತಿಷ್ಠಾನವನ್ನು ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.

    ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಮಾಡುವ ಅಭಿವೃದ್ಧಿ ಕಾರ್ಯಗಳು ಶಾಶ್ವತವಾಗಿರುತ್ತವೆ. ಯಾವುದೇ ಸಮಾಜ ಮುಖಿ ಕೆಲಸವನ್ನು ಮಾಡುವಾಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡಿ ಇಡಬೇಕು ಎಂದು ಸಲಹೆ ಮಾಡಿದರು.

    ಪರಭಾರೆಯಾಗುತ್ತಿದ್ದ ಮಲ್ಲೇಶ್ವರದ ದಕ್ಷಿಣ ಮುಖಿ ನಂದಿ ತೀರ್ಥ ಕಲ್ಯಾಣಿ ದೇವಾಲಯವನ್ನು ಕಾನೂನು ಸಮರದಲ್ಲಿ ಗೆದ್ದು ಸ್ಥಳೀಕರ ಸಹಾಯದಿಂದ ಅಭಿವೃದ್ಧಿ ಪಡಿಸಿದ ಕಾಡುಮಲ್ಲೇಶ್ವರ ಗೆಳೆಯರ ಬಳಗದ ಸಾಧನೆಯನ್ನು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು. ಜೊತೆಗೆ ಕಾಡು ಮಲ್ಲೇಶ್ವರ ದೇವಾಲಯದ ಇತಿಹಾಸವನ್ನು ಮತ್ತಷ್ಟು ಆಳಕ್ಕೆ ಇಳಿದು ಸಂಶೋಧನೆ ಮಾಡಬೇಕಾದ ಅಗತ್ಯ ಇದೆ. ಇದಕ್ಕೆ ತಮ್ಮ ಸಂಘ ಎಲ್ಲಾ ರೀತಿಯ ಸಹಕಾರ ನೀಡುವುದು ಎಂದರು.

    ಇದೇ ಸಂದರ್ಭದಲ್ಲಿ ಪ್ರಾಚೀನ ದೇವಾಲಯಗಳ ಪರಿಚಯ ಮತ್ತು ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದ ದೇವಾಲಯ ಇತಿಹಾಸ ಸಂಶೋಧಕ ಕೆಂಗೇರಿ ಚಕ್ರಪಾಣಿ ಅವರು ಕರ್ನಾಟಕದ ಪ್ರಾಚೀನ ದೇವಾಲಯಗಳು ಹೇಗೆ ಆಗಿನ ಕಾಲದಲ್ಲೇ ಎಷ್ಟು ಸುವ್ಯವಸ್ಥಿತವಾಗಿದ್ದವು ಎಂಬುದನ್ನು ವಿವರಿಸಿದರು. ದೇಗುಲಗಳು ಕೇವಲ ದೇಗುಲಗಳಾಗಿರಲ್ಲಿಲ್ಲ. ಸಾಮಾಜಿಕ ಜೀವನದಲ್ಲಿ ಸಾವಿರಾರು ಜನರಿಗೆ ಆಶ್ರಯ ನೀಡಿದ್ದವು. ಊರಿನ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೇಂದ್ರ ಬಿಂದುವಾಗಿದ್ದವು ಎಂದು ಇತಿಹಾಸದ ಹಲವು ಉದಾಹರಣೆಗಳನ್ನು ನೀಡಿದರು. ಮತ್ತೊಬ್ಬ ಇತಿಹಾಸ ಸಂಶೋಧಕ ಟಿ ಎಸ್ ಗೋಪಾಲ್ ಮತ್ತು ಹಿರಿಯ ಪತ್ರಕರ್ತ ಸತ್ಯನಾರಾಯಣ ನಾಡಿಗ್, ನಿವೃತ್ತ ಉಪನ್ಯಾಸಕ ಡಾ. ಮಲ್ಲಿಕಾರ್ಜುನ್, ರಮೇಶ್ ಮತ್ತು ಶಬರೀಶ್ ಉಪಸ್ಥಿತರಿದ್ದರು.

    ಪ್ರತಿಷ್ಠಾನದ ಪ್ರವರ್ತಕರಲ್ಲಿ ಒಬ್ಬರಾದ ಉನ್ನತ ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ಡಾ. ಎಂ ಜಯಪ್ಪ ಸ್ವಾಗತಿಸಿದರು. ಮತ್ತೊಬ್ಬ ಪ್ರವರ್ತಕ ಹಿರಿಯ ಪತ್ರಕರ್ತ ಶ್ರೀವತ್ಸ ನಾಡಿಗ್ ವಂದಿಸಿದರು. ಮಾಯಾ ಜಯಪ್ಪ ಕಾರ್ಯಕ್ರಮ ನಿರೂಪಿಸಿದರು.

    error: Content is protected !!