34.3 C
Karnataka
Tuesday, April 22, 2025
    Home Blog Page 24

    James: ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ಅಡ್ಡಿಯಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    BENGALURU MAR 23

    ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ಯಾವುದೇ ಅಡ್ಡಿ ಪಡಿಸಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಪ್ರದಯೇಶಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿರುವ ಬಗ್ಗೆ ಇಂದು ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

    “ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಯವರೊಂದಿಗೆ ಮಾತನಾಡಿದ್ದೇನೆ. ತೊಂದರೆಯಾಗಿರುವಲ್ಲಿ ಕೂಡಲೇ ಸರಿಪಡಿಸಿ, ಅನಾವಶ್ಯಕವಾಗಿ ಜೇಮ್ಸ್ ಸಿನಿಮಾವನ್ನು ಯಾರೂ ಚಿತ್ರಮಂದಿರಗಳಿಂದ ತೆಗೆಯತಕ್ಕದ್ದಲ್ಲ. ಸಂಬಂಧಪಟ್ಟ ನಿರ್ಮಾಪಕರು, ಚಿತ್ರಮಂದಿರದವರಿಗೆ ಇದನ್ನು ಸರಿಪಡಿಸುವ ಅಧಿಕಾರವಿದೆ. ನಟ ಶಿವರಾಜ್ ಕುಮಾರ್ ಅವರ ಬಳಿಯೂ ಮಾತನಾಡಿದ್ದೇನೆ. ತೊಂದರೆ ಇದ್ದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಥವಾ ನನ್ನ ಗಮನಕ್ಕೆ ತರಬೇಕೆಂದು ತಿಳಿಸಿದ್ದೇನೆ. ಅವರೂ ಸಹ ಒಪ್ಪಿದ್ದಾರೆ. ಕಾಂಗ್ರೆಸ್ ನವರು ಸಿನಿಮಾದಲ್ಲಿಯೂ ರಾಜಕಾರಣ ಮಾಡುವಷ್ಟು ಕೆಳಮಟ್ಟಕ್ಕೆ ಹೋಗಿದ್ದಾರೆ” ಎಂದರು.

    ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಠ ಮಾಡಿದ ರೋಬೊ

    BENGALURU MAR 23

    ಪಾಠ- ಪ್ರವಚನಗಳಲ್ಲಿ ಬೋಧಕರಿಗೂ ವಿದ್ಯಾರ್ಥಿಗಳಿಗೂ ಸಹಕರಿಸಿ, ಕಲಿಕೆಯನ್ನು ಸುಲಭವಾಗಿಸುವಂತಹ `ಈಗಲ್’ ರೋಬೋ ಪರೀಕ್ಷಾರ್ಥ ಪ್ರಾತ್ಯಕ್ಷಿಕೆಯು ಬುಧವಾರದಂದು ಮಲ್ಲೇಶ್ವರಂ 13ನೇ ಅಡ್ಡರಸ್ತೆಯಲ್ಲಿರುವ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.

    ಕ್ಷೇತ್ರದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.

    ಶಾಲೆಯ ಬೋಧಕರು ಮತ್ತು ವಿದ್ಯಾರ್ಥಿನಿಯರು ಇದರಲ್ಲಿ ಪಾಲ್ಗೊಂಡು, ರೋಬೋದ ಕಾರ್ಯಕ್ಷಮತೆಗೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಅವರು `ರೋಬೊಗೆ ಹಲವು ಪ್ರಶ್ನೆಗಳನ್ನು ಕೇಳಿದರು; ಹಾಗೆಯೇ, ಅದು ನೀಡಿದ ಉತ್ತರ ಮತ್ತು ನೆರವನ್ನು ಕಂಡು ಬೆರಗಾದರು.

    ನಂತರ ಮಾತನಾಡಿದ ಅಶ್ವತ್ಥನಾರಾಯಣ ಅವರು, `ಇದು ಪ್ರಾಯೋಗಿಕ ಕಾರ್ಯಕ್ರಮವಾಗಿದ್ದು, ರೋಬೋದ ಕಾರ್ಯ ಸಾಮರ್ಥ್ಯವನ್ನು ವೀಕ್ಷಿಸಲಾಗಿದೆ. ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಜಾಗತಿಕ ಗುಣಮಟ್ಟದ ಬೋಧನೆಯ ಸಲುವಾಗಿ, ಇಂತಹ ರೋಬೋ ಗಳು ಇದ್ದರೆ ಒಳ್ಳೆಯದು’ ಎಂದು ಅಭಿಪ್ರಾಯಪಟ್ಟರು.

    ರೋಬೊ‌ ಶಿಕ್ಷಕರಿಗೆ ಪರ್ಯಾಯ ಅಲ್ಲ. ಆದರೆ ಶಿಕ್ಷಕರಿಗೆ ಬೋಧನೆಯಲ್ಲಿ ಸಹಕರಿಸುವ ಕೆಲಸ ಮಾಡಲಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಕೂಡ ಹೆಚ್ಚಾಗಲಿದೆ ಎಂದು ಹೇಳಿದರು.

    21ನೇ ಶತಮಾನವು ತಂತ್ರಜ್ಞಾನದ ಯುಗವಾಗಿದ್ದು, ಬೋಧನೆಯಲ್ಲಿ ಇದರ ಅಳವಡಿಕೆ ಅಗತ್ಯವಾಗಿದೆ. ಇದರಿಂದಾಗಿ, ಸರಕಾರಿ ಶಾಲಾಕಾಲೇಜುಗಳು ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡಿಮೆಯಿಲ್ಲದಂತೆ ವಿದ್ಯಾರ್ಥಿಗಳನ್ನು ಆಕರ್ಷಿಸಬಹುದು. ಇದರಿಂದ ಬಡಕುಟುಂಬಗಳ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ನುಡಿದರು.

    ಮುಂದಿನ ದಿನಗಳಲ್ಲಿ `ಈಗಲ್’ ರೋಬೋವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ತೋರಿಸಲಾಗುವುದು. ನಂತರ ಅವರಿಂದಲೇ ಈ ಯೋಜನೆಗೆ ಚಾಲನೆ‌ ಕೊಡಿಸುವ ಉದ್ದೇಶ ಇದೆ. ಮಲ್ಲೇಶ್ವರ ಕ್ಷೇತ್ರದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಇದನ್ನು ಜಾರಿ ಮಾಡುವ ಉದ್ದೇಶ ಇದೆ ಎಂದು ಅವರು ವಿವರಿಸಿದರು.

    ಇಂಡಸ್ ಟ್ರಸ್ಟ್ ನ ಸ್ಥಾಪಕ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಲೆ.ಜನರಲ್ ಅರ್ಜುನ್ ರಾಯ್, ಮಲ್ಲೇಶ್ವರ ಬಿಇಒ ಉಮಾದೇವಿ, ಕಾಲೇಜಿನ ಪ್ರಾಂಶುಪಾಲರಾದ ಡಾ.ರವಿ, ಶಾಲೆ ಉಪ ಪ್ರಾಂಶುಪಾಲ ರವಿಕುಮಾರ್ ಈ ಸಂದರ್ಭದಲ್ಲಿ ಇದ್ದರು.

    Mango Production:ಒಣಗಿದ ಹೂವು, ಮರು ಚಿಗುರು ಮಾವಿನ ಫಸಲು ಈ ಬಾರಿ ಮರೀಚಿಕೆ ಹೊಂಬಣ್ಣದ ಹಣ್ಣಿಗೆ ಈ ಬಾರಿ ಚಿನ್ನದ ಬೆಲೆ!

    ಚಂದ್ರಮಾನ ಯುಗಾದಿಗೆ -ugadhi-ಇನ್ನೊಂದೆ ವಾರ ಬಾಕಿ. ಹಾಗೆ ನೋಡಿದರೆ ಪೇಟೆಯಲ್ಲಿ ಮಾವಿನ ಕಾಯಿಯ ರಾಶಿಯೇ ಬೀಳಬೇಕಿತ್ತು. ಪೌಡರ್ ಹಾಕಿ ಹೊಂಬಣ್ಣಕ್ಕೆ ತಿರುಗಿಸಿದ ಮಾವಿನ ಹಣ್ಣು ಅಲ್ಲಿ ಇಲ್ಲಿ ಕಾಣಿಸಬೇಕಿತ್ತು.ಕಳೆದ ನವೆಂಬರ್ ನಲ್ಲಿ ಸುರಿದ ಅಕಾಲಿಕ ಮಳೆ ಈ ಬಾರಿ ಮಾವಿನ ಫಸಲಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಚಿನ್ನದ ಬಣ್ಣದ ಮಾವಿಗೆ ಈ ವರ್ಷ ಚಿನ್ನದ ಬೆಲೆಯೇ ಆದರೂ ಅಚ್ಚರಿ ಪಡಬೇಕಿಲ್ಲ.

    ಮಾವು ಬೆಳೆಯುವ ಪ್ರದೇಶಗಳು ಸೇರಿದಂತೆ ಇಡೀ ರಾಜ್ಯದಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ಭಾರಿ ಮಳೆ ಸುರಿಯಿತು. ಇದರಿಂದಾಗಿ ಮಣ್ಣಿನಲ್ಲಿ ತೇವಾಂಶ ಹೆಚ್ಚಾಯಿತು. ಹೀಗಾಗಿ ಜನವರಿಯಲ್ಲಿ ಭರ್ಜರಿ ಹೂವೇನೋ ಕಾಣಿಸಿತು. ಆಸೆ ಹುಟ್ಟಿಸಿತು. ಆದರೆೆ ದಿನಕಳೆದಂತೆ ಹೂವು ಬಾಡಿದವು. ಭರ್ಜರಿ ಹೂ-ಗುಚ್ಛಗಳಿಂದ ರಾರಾಜಿಸಿದ್ದ ಮಾವಿನ ತೋಪುಗಳಲ್ಲಿ ಹೂವು ಗುಚ್ಛಗಳು ಒಣಗಿ ಕರಕಲಾಗಿವೆ. ಬಹುತೇಕ ತೋಟಗಳಲ್ಲಿ ಮಾರ್ಚ್ ತಿಂಗಳ ಅಂತ್ಯದಲ್ಲಿಯೂ ಭರ್ಜರಿ ಚಿಗುರು ಕಾಣಿಸಿದೆ. ಅಚ್ಚರಿಯ ನೈಸರ್ಗಿಕ ವೈಪರೀತ್ಯದಿಂದ ಮಾವು ಬೆಳೆಗಾರರು, ವರ್ತಕರಿಗೆ ಈ ಬಾರಿಯೂ ಮಾವು ಫಸಲು ಮರೀಚಿಕೆಯೇ ಸೈ.

    ರಾಜ್ಯದ 16 ಜಿಲ್ಲೆಗಳಲ್ಲಿ ವಿಶೇಷವಾಗಿ ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ಮತ್ತು ರಾಮನಗರ ಜಿಲ್ಲೆಗಳಲ್ಲಿ 1.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುವ ಮೂಲಕ ಕರ್ನಾಟಕವು ದೇಶದ  ಮಾವು ಬೆಳೆಯುವ ರಾಜ್ಯಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಸುಮಾರು 10 ಲಕ್ಷ ಟನ್ ಉತ್ಪಾದನೆಯಾಗುತ್ತದೆ.  2020ರಲ್ಲಿ ಇದು 15 ಲಕ್ಷ ಟನ್‌ಗಳಷ್ಟಿತ್ತು. ಆದರೆ ಈ ವರ್ಷ ಈ ಪ್ರಮಾಣದ ಫಸಲು ಸಿಗುವುದು ತುಂಬಾ ಕಷ್ಟ.

    ಮಾವು ಬೆಳೆ ಚಳಿಗಾಲದ ಆರಂಭದಲ್ಲಿ ಚಿಗುರಿ ಅಂತ್ಯದ ವೇಳೆಗೆ ಹೂವು-ಈಚು ಪ್ರಕ್ರಿಯೆ ಸ್ವಾಭಾವಿಕ. ಈ ಬಾರಿ ಒಂದೂವರೆ ತಿಂಗಳು ತಡವಾಗಿ ಮಾವಿನ ಮರಗಳಲ್ಲಿ ರಾಶಿ-ರಾಶಿ ಹೂವು ಕಾಣಿಸಿದ್ದವು. ಕೆಲವೇ ದಿನಗಳಲ್ಲಿ ಹೂವು ಒಣಗಿವೆ. ಖಾಲಿ ಟಿಸಿಲುಗಳು ಒಣಗಿ ನಿಂತಿವೆ. ಕೇವಲ ಶೇ 10 ರಿಂದ 15 ಇಳುವರಿಗೆ ಕುಸಿದಿದೆ. ಸತತ ಮೂರನೇ ವರ್ಷವೂ ಮಾವು ಬೆಳೆ ರೈತನ ಜೇಬು ತುಂಬಿಸುವಲ್ಲಿ ವಿಫಲವಾಗಿದೆ. ಕಡಿಮೆ ಇಳುವರಿ ಕಾರಣ ಗ್ರಾಹಕ ಮಾವಿಗೆ ದುಬಾರಿ ಬೆಲೆ ತೆರೆಬೇಕಾದುದು ಅನಿವಾರ್ಯವಾಗಲಿದೆ.

    ಉದಾಹರಣೆಗೆ ಮಾವು ಬೆಳೆಯುವ ದಾವಣಗೆರೆ ಜಿಲ್ಲೆ ಸಂತೇಬೆನ್ನೂರು ಹೋಬಳಿಯಲ್ಲಿ ಆಲ್ಪನ್ಸೋ, ಸಿಂಧೂರ ಉತ್ಕೃಷ್ಟ ರುಚಿಯ ಮಾವಿನ ಬೆಳೆ ಸಿಂಹಪಾಲು ಪಡೆದಿದೆ. ಮಳೆ ದೀರ್ಘಾವಧಿ ಮುಂದುವರೆದ ಕಾರಣ ಹೂವು ಬಿಡುವ ಪ್ರಕ್ರಿಯೆ ಮುಂದೂಡಿತು. ಹೂಬಿಟ್ಟ ನಂತರ ಬೇಸಿಗೆ ಬಿರುಬಿಸಿಲಿಗೆ ಸೂಕ್ಷ್ಮ ತಳಿಯ ಮಾವಿನ ಹೂವು ಒಣಗಿವೆ. ತೋತಾಪರಿ, ಮಲ್ಲಿಕಾ, ರಸಪೂರಿಯ ಸ್ಥಳೀಯ ತಳಿಗಳಲ್ಲಿ ಸ್ವಲ್ಪ ಮಟ್ಟಿನ ಇಳುವರಿ ಕಾಣಸಿಗುತ್ತಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ನಮಗೆ ಈ ಬಾರಿ ನಿರಾಸೆಯಾಗಿದೆ ಎಂದು ಮಾವು ಬೆಳೆಗಾರ ವಿಜಯ ಕುಮಾರ್ ಹೇಳುತ್ತಾರೆ.

    ಕಳೆದ ಬಾರಿ ಏಪ್ರಿಲ್ ಆರಂಭದಿಂದಲೇ ಆಲ್ಪೊನ್ಸೊ ಮಾವನ್ನು ಸಾವಯವ ರೀತಿ ಹಣ್ಣಾಗಿಸಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ನಗರಗಳಲ್ಲಿ ಸ್ವ ಮಾರುಕಟ್ಟೆ ಕಂಡುಕೊಂಡಿದ್ದೆ. 5 ಎಕರೆಯಲ್ಲಿ ರೂ.7 ರಿಂದ 8 ಲಕ್ಷ ಆದಾಯ ಗಳಿಸಿದ್ದೆ. ಈ ಬಾರಿ ಪೂರ್ವ ತಯಾರಿ ನಡೆಸಿದರೂ ಬೆಳೆನಷ್ಟವಾಗಿದೆ. ಕೇವಲ ಶೇ.15ರಷ್ಟು ಇಳುವರಿ ಸಿಗಲಿದೆ ಎನ್ನುತ್ತಾರೆ ಮತ್ತೊಬ್ಬ ಕೃಷಿಕ ದೊಡ್ಡಬ್ಬಿಗೆರೆಯ ತಿಪ್ಪೇಸ್ವಾಮಿ.

    ಉತ್ತಮ ಇಳುವರಿ ನಿರೀಕ್ಷೆಯಲ್ಲಿ ರೈತರ ತೋಟಗಳನ್ನು ಗೇಣಿ ಮಾಡಲಾಗಿತ್ತು. ದಿಢೀರ್ ಹೂವು ಉದುರಿ ತೀವ್ರ ಕುಸಿತ ಉಂಟಾಗಿದೆ. ಹೂ ಹಂತದಲ್ಲಿ ಸಿಂಪಡಿಸಿದ ಔಷಧಿಯ ಹಣವೂ ಸಿಗುವುದಿಲ್ಲ. ಹಲವರು ಮಾವು ತೋಟಗಳಿಂದ ಬೇರೆ ಬೆಳೆಗೆ ಕಳೆದ ವರ್ಷ ಪರಿವರ್ತನೆಗೊಂಡರು. ಮಾವಿನ ಬೆಳೆಯಲ್ಲಿ ಭರವಸೆಯೇ ಇಲ್ಲ ಎನ್ನುತ್ತಾರೆ ಗೇಣಿದಾರ ಲಾಲ್ ಖಾನ್.

    ದಶಕಗಳಿಂದ ಸ್ಥಿರವಾಗಿದ್ದ ಮಾವು ಬೆಳೆ ಕಳೆದ ಮೂರು ವರ್ಷಗಳಿಂದ ವಿವಿಧ ಕಾರಣಗಳಿಂದ ರೈತರಿಗೆ ನಿರಾಶೆ ಮೂಡಿಸಿದೆ. ಸುಮಾರು500 ಹೆಕ್ಟೇರ್ ಗಿಂತ ಹೆಚ್ಚು ಮಾವು ಬೆಳೆ ತೆರವುಗೊಳಿಸಲಾಗಿದೆ. ಸದ್ಯ 1280ಹೆಕ್ಟೇರ್ ನಲ್ಲಿ ಮಾವು ಬೆಳೆ ಇದೆ. ಸಂತೇಬೆನ್ನೂರು, ದೊಡ್ಡಬ್ಬಿಗೆರೆ, ಸಿದ್ಧನಮಠ, ಚಿಕ್ಕಬ್ಬಿಗೆರೆ, ಕುಳೇನೂರು, ಚಿಕ್ಕಬೆನ್ನೂರು, ದೊಡ್ಡೇರಿಕಟ್ಟೆ ಭಾಗಗಳಲ್ಲಿ ಮಾವಿಲ್ಲದೆ ದಟ್ಟ ಹಸಿರಿನಿಂದ ಮಾವಿನ ಮರಗಳು ಕಂಗೊಳಿಸುತ್ತಿವೆ ಎನ್ನುತ್ತಾರೆ ರೈತರು.

    ಅತ್ಯಧಿಕ ಮಾವು ಬೆಳೆ ಇದ್ದ ಕಾರಣ ಹಲವು ಅಂತರರಾಜ್ಯ ಖರೀದಿ ಕೇಂದ್ರಗಳು, ಉಗ್ರಾಣಗಳು ತಲೆ ಎತ್ತಿದ್ದವು. ಈ ಮೂರು ವರ್ಷದ ಮಾವು ಬೆಳೆ ವೈಪರಿತ್ಯದಿಂದ ಇಳುವರಿ ಕುಸಿದಿದೆ. ಈ ಬಾರಿ ಬಿರುಸಿನ ವ್ಯವಹಾರವಿಲ್ಲದ ಭಣಗುಡುವ ಸಾಧ್ಯತೆ ಇದೆ ಎನ್ನುತ್ತಾರೆ ಮಹಬೂಬ್ ಅಲಿ.

    ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ಮಾವು ರಫ್ತಾಗುವುದು ಕುಂಠಿತವಾಗಿತ್ತು. ಈ ಬಾರಿ ಅದನ್ನು ಪುನರಾರಂಭಿಸಲಾಗವುದು ಎಂದು ಕೇಂದ್ರ ವಾಣಿಜ್ಯ ಇಲಾಖೆ ಕಳೆದ ಜನವರಿಯಲ್ಲಿ ತಿಳಿಸಿತ್ತು. ಫಲಸಲಿನ ಕೊರತೆ ರಫ್ತಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

    ಶುಭ ದಿನ

    ಅವರು ನಿಮ್ಮನ್ನು ಗೌರವಿಸಿದರೆ ನೀವೂ ಗೌರವಿಸಿ. ಅವರು ನಿಮ್ಮನ್ನು ಅಗೌರವದಿಂದ ಕಂಡರೆ, ಆಗಲೂ ನೀವು ಗೌರವಿಸಿ. ಅವರಿಗೋಸ್ಕರ ನಿಮ್ಮಲ್ಲಿರುವ ಒಳ್ಳೆಯ ಗುಣವನ್ನೇಕೆ ಕಳೆದುಕೊಳ್ಳುತ್ತೀರಿ?

    ದಲಾಯಿ ಲಾಮಾ

    . ಸಂಗ್ರಹ: ರಾಜೀವಲೋಚನ

    ದಿನಾಂಕ 22 ಮಾರ್ಚ್ 2022 ಮಂಗಳವಾರ

    ಸಂವತ್ಸರ : ಶ್ರೀ ಪ್ಲವ|ಆಯನ :ಉತ್ತರಾಯಣ|ಋತು: ಶಿಶಿರ|ಮಾಸ :ಫಾಲ್ಗುಣ | ಕ್ಷ :ಕೃಷ್ಣ | ತಿಥಿ:ಚತುರ್ಥಿ ಮತ್ತು ಪಂಚಮಿ | ನಕ್ಷತ್ರ:ವಿಶಾಖ

    ಸೂರ್ಯೋದಯ :ಬೆಳಿಗ್ಗೆ 6.24 ಸೂರ್ಯಾಸ್ತ :ಸಂಜೆ 6.31

    ರಂಗ ಪಂಚಮಿ, ವಿಶ್ವ ಜಲ ದಿನ

    ದುಬಾರಿ ವೈದ್ಯಕೀಯ ಶಿಕ್ಷಣ: ಕೇಂದ್ರದಿಂದ ಗಂಭೀರ ಚಿಂತನೆ

    DAVANGERE MAR 21

    ಉಕ್ರೇನ್ ನಿಂದ ವಾಪಸ್ಸಾಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣ ಅಪೂರ್ಣವಾಗಿದ್ದು, ಪರ್ಯಾಯ ಕ್ರಮಗಳ ಬಗ್ಗೆ ಕೇಂದ್ರ ಗಂಭೀರ ಚಿಂತನೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ನವೀನ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತೆರಳುವ ಸಂದರ್ಭದಲ್ಲಿ ಅವರು ಇಂದು ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

    ಉಕ್ರೇನ್ ನಲ್ಲಿ ಕೋರ್ಸು ಭಿನ್ನವಾಗಿದೆ. ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳು ಇರುವುದರಿಂದ ಈ ಕುರಿತು ಕೇಂದ್ರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದರು.

    ಸರ್ಕಾರದ ಶುಲ್ಕ ಕಡಿಮೆಯಿದ್ದರೂ, ವೈದ್ಯಕೀಯ ಶಿಕ್ಷಣದ ವೆಚ್ಚ ಖಾಸಗಿ ವಲಯದಲ್ಲಿ ಹೆಚ್ಚಾಗುತ್ತಿದೆ.90- 95% ಪಡೆದ ವಿದ್ಯಾರ್ಥಿಗಳಿಗೆ ನೀಟ್ ನಲ್ಲಿ ಉತ್ತೀರ್ಣರಾಗಲು ಆಗುತ್ತಿಲ್ಲ. ಹೀಗಾಗಿ ಮ್ಯಾನೇಜ್ಮೆಂಟ್ ಹಾಗೂ ಎನ್.ಆರ್.ಐ ಸೀಟುಗಳನ್ನು ಪಡೆಯಲು ದುಬಾರಿಯಾಗಿರುವುದರಿಂದ ಪರ್ಯಾಯ ಮಾರ್ಗ ಹುಡುಕುತ್ತಿದ್ದಾರೆ.

    ನಮ್ಮ ರಾಜ್ಯದಲ್ಲಿ ಶುಲ್ಕ ಕಡಿಮೆ ಮಾಡಲು ಎ, ಬಿ, ಸಿ ವರ್ಗಗಳನ್ನು ಮಾಡುವ ಬಗ್ಗೆ ಚರ್ಚೆಯಾಗುತ್ತಿದೆ. ವೈದ್ಯಕೀಯ ಕೋರ್ಸು ರಾಷ್ಟ್ರೀಯ ವೈದ್ಯಕೀಯ ಮಂಡಳಿ ನಿರ್ಧರಿಸುತ್ತದೆ. ಈ ಬಗ್ಗೆ ಪುನರ್ ಪರಿಶೀಲನೆ ನಡೆದಿದೆ ಎಂದರು.

    ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರ ಚಿತ್ತಾರದ ವೈಭವ – ಮರುಕಳಿಸಿದ ಚಿತ್ರಸಂತೆ


    ಬಳಕೂರು ವಿ ಎಸ್ ನಾಯಕ

    ಬೆಂಗಳೂರಿನಲ್ಲಿ ಸಂತೆ ಗಳೆಂದರೆ ಏನೋ ಆಕರ್ಷಣೆ ಜನರು ಹೊಸತನ್ನು ಬಯಸಿ ಆ ಕಡೆಗೆ ಹೋಗಿ ಬರೋಣವೆಂದು ಸಾಗುವುದು ಸಹಜ. ಅದರಲ್ಲಿಯೂ ನವನವೀನ ಚಿತ್ರಗಳನ್ನು ಬಿಂಬಿಸುವ ಚಿತ್ರಸಂತೆಯ ಸೌಂದರ್ಯವನ್ನು ಸವಿಯಲು ವಾರದ ಕೊನೆಯ ದಿನದ ತಮ್ಮ ಹಾಜರಿಯನ್ನು ಅಲ್ಲಿ ಹಾಕಿಬಿಡುತ್ತಾರೆ. ಏಕೆಂದರೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ 19ನೆಯ ಚಿತ್ರಸಂತೆಗೆ ಇನ್ನೂ ಬೆರಳೆಣಿಕೆಯಷ್ಟು ದಿನ ಇದೆ. ಇದೇ ಮಾರ್ಚ್ 27 ರ ಭಾನುವಾರ ಚಿತ್ರಸಂಚಿಕೆಗೆ ವೇದಿರೆ ಸಜ್ಜಾಗಿದೆ. ಕಳೆದೆರಡು ವರ್ಷದಿಂದ ಕೋವಿಡ್ ಕಾರಣದಿಂದ ಹೈಬ್ರಿಡ್ ರೂಪ ಪಡೆದಿದ್ದ ಸಂತೆ ಈ ವರ್ಷ ತನ್ನ ಎಂದಿನ ವೈಭವದೊಂದಿಗೆ ಮರುಕಳಿಸಿದೆ.

    ಚಿತ್ರ ಸಂತೆಯ ಕಲ್ಪನೆಯೂ ಹುಟ್ಟಿದ್ದು ಹೇಗೆ?

    ನಮ್ಮಲ್ಲಿ ಬಹಳಷ್ಟು ಕಲಾವಿದರು ಇದ್ದಾರೆ ಅವರಿಗೆ ತಾವು ರಚಿಸಿದ ಕಲಾಕೃತಿಗಳನ್ನು ಪ್ರದರ್ಶಿಸಲು ಅಥವಾ ಮಾರಾಟ ಮಾಡಲು ಯಾವುದೇ ಸರಿಯಾದ ವೇದಿಕೆ ಸಿಗುವುದಿಲ್ಲ. ಗ್ಯಾಲರಿಗಳಲ್ಲಿ ಹಣಕೊಟ್ಟು ಪ್ರದರ್ಶನ ಮಾಡಲು ಸಾಮರ್ಥ್ಯವಿಲ್ಲದೆ ಇರಬಹುದು. ಅದಕ್ಕಾಗಿ ಅಂತಹ ಕಲಾವಿದರಿಗೆ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ಚಿತ್ರಸಂತೆಯ ಮೂಲಕ ಕರ್ನಾಟಕ ಚಿತ್ರಕಲಾ ಪರಿಷತ್ತು ಅವಕಾಶ ಮಾಡಿಕೊಡುತ್ತಿರುವುದು ಶ್ಲಾಘನೀಯ. ಈ ಸಂದರ್ಭದಲ್ಲಿ ಹಲವಾರು ಕಲಾವಿದರಿಗೆ ಮತ್ತು ಕಲಾಸಕ್ತರಿಗೆ ಉತ್ತಮ ಬಾಂಧವ್ಯ ಮೂಡುತ್ತದೆ.

    ಸಾಮಾನ್ಯವಾಗಿ ಸಂತೆಯ ಮಾದರಿಯಲ್ಲಿಯೇ ಚಿತ್ರಸಂತೆಯನ್ನು ಕರ್ನಾಟಕ ಚಿತ್ರಕಲಾ ಪರಿಷತ್ತು ಕುಮಾರಕೃಪಾ ರಸ್ತೆಯಲ್ಲಿ ಆಯೋಜನೆ ಮಾಡುತ್ತಿರುವುದು ವಿಶೇಷವಾಗಿದೆ. ಚಿತ್ರ ಕಲಾವಿದರಿಗೆ ಸಹಾಯ ಮಾಡುವ ದೃಷ್ಟಿಯಿಂದ ಮತ್ತು ಕಲಾವಿದರು ತಾವು ರಚಿಸಿದ ಶಿಲ್ಪಗಳು ಚಿತ್ರಗಳು ಅದರಲ್ಲಿ ವಿಭಿನ್ನ ರೀತಿಯ ಕಲಾತ್ಮಕ ಚಿತ್ರಗಳು ಕೂಡ ಈ ಸಂತೆಯಲ್ಲಿ ನಮಗೆ ನೋಡಲು ಸಿಗುತ್ತದೆ. ಚಿತ್ರಕಲಾ ಪರಿಷತ್ತಿನಲ್ಲಿ ಆ ದಿನವಿಡೀ ಕಲಾ ಲೋಕವೇ ಧರೆಗಿಳಿದುಬಂದಂತೆ ಗೋಚರವಾಗುತ್ತದೆ. ಚಿತ್ರಕಲಾ ಪರಿಷತ್ತಿನ ರಸ್ತೆಯ ತುಂಬಾ ಚಿತ್ರ ಚಿತ್ತಾರದ ವೈಭವ ಒಂದು ಕ್ಷಣ ದಾರಿಯಲ್ಲಿ ಸಾಗುತ್ತಿದ್ದ ವರಿಗೆ ಕಲಾವಿದನ ಕೈಚಳಕದಲ್ಲಿ ರಚಿಸಿದ ಚಿತ್ರ ಚಿತ್ತಾರಗಳು ಕಲಾ ಔತಣವನ್ನು ಉಣಬಡಿಸುವುದು ಸತ್ಯ. ಅಚ್ಚರಿಯ ಕಲಾ ತಾಣವೇ ಧರೆಗಿಳಿದು ಬಂದ ಅನುಭವ ಒಂದು ಕ್ಷಣ ಬದುಕಿನ ಜಂಜಾಟ ಮರೆತು ಇಲ್ಲಿಯೇ ಒಂದು ಕ್ಷಣ ವಿಹರಿಸಿ ಬಿಡೋಣ ಎನ್ನುವಷ್ಟು ಸಂಭ್ರಮ ತುಂಬಿ ತುಳುಕುತ್ತಿರುತ್ತದೆ

    ಈ ಚಿತ್ರಸಂತೆ ಸ್ವಾತಂತ್ರ್ಯ ಯೋಧರಿಗೆ ಸಮರ್ಪಣೆ

    ಪ್ರತಿವರ್ಷ ನಡೆಯುವ ಚಿತ್ರಸಂತೆಯಲ್ಲಿ ಬೇರೆ ಬೇರೆ ರೀತಿಯ ಮಾದರಿಯಲ್ಲಿ ಆಯೋಜನೆ ಮಾಡಲಾಗುತ್ತದೆ. ಆದರೆ ಈ ವರ್ಷ ನಮಗೆಲ್ಲಾ ಸ್ವಾತಂತ್ರ್ಯವನ್ನು ನೀಡಲು ಹೋರಾಟ ಮಾಡಿದ ಮಹನೀಯರನ್ನು ಸ್ಮರಿಸುವ ಕ್ಷಣಕ್ಕಾಗಿ 19 ನೇ ಚಿತ್ರಸಂತೆಯನ್ನು ನಮ್ಮ ಭಾರತಕ್ಕಾಗಿ ಸ್ವತಂತ್ರವನ್ನು ಕೊಡಿಸಲು ಹೋರಾಟ ಮಾಡಿದ ಹಲವಾರು ಸ್ವತಂತ್ರ ಯೋಧರಿಗಾಗಿ ಆಯೋಜನೆ ಮಾಡುತ್ತಿರುವುದು ವಿಶೇಷ. ಈ ಚಿತ್ರಸಂತೆಯಲ್ಲಿ ಕಲಾ ನಮನದ ಮೂಲಕ ಅವರನ್ನು ನಡೆಸಿಕೊಳ್ಳುತ್ತಿರುವುದು ನಿಜವಾಗಿಯೂ ಹೆಮ್ಮೆಯ ಸಂಗತಿಯಾಗಿದೆ. ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಸ್ವತಂತ್ರ ಯೋಧರನ್ನು ನೆನಪಿಸಿಕೊಳ್ಳುವ ಸ್ಮರಿಸುವ ದರ ಮೂಲಕ ಗೌರವವನ್ನು ಸಲ್ಲಿಸಲಾಗುತ್ತದೆ

    ಒಂದೇ ದಿನದ ವಾರ್ಷಿಕ ಕಲಾ ಸಂತೆ

    ಎಲ್ಲರಿಗಾಗಿ ಕಲೆ ಕಲಾ ಸಂತೆಯ ಮುಖ್ಯ ವೇದವಾಕ್ಯ ವಾಗಿದ್ದು ಸರ್ವರಿಗೂ ಕಲಾಕೃತಿ ದೊರೆಯುವಂತಾಗಬೇಕು ಕಲಾಸಕ್ತರು ಬಂಧು ಕಲಾವಿದರ ಕಲಾಕೃತಿಗಳನ್ನು ಕೊಂಡು ಅವರನ್ನು ಪ್ರೋತ್ಸಾಹಿಸಬೇಕು ಅದರ ಜೊತೆಗೆ ಎಲ್ಲರಿಗೂ ಕಲೆ ತಲುಪುವಂತಾಗಬೇಕು ಎಂಬ ಉದ್ದೇಶದಿಂದ ಈ ಚಿತ್ರಸಂತೆಯನ್ನು ಆಯೋಜಿಸಲಾಗಿದೆ

    ರಾಜ್ಯ ದೇಶ ವಿದೇಶಗಳಿಂದ ಚಿತ್ರಸಂತೆಗೆ ಕಲಾವಿದರು

    ನಮ್ಮ ನಾಡಿನ ಈ ಚಿತ್ರಸಂತೆಗೆ ಬೇರೆ ಬೇರೆ ಕಡೆಯಿಂದ ಕಲಾವಿದರು ಬರುವುದು ವಿಶೇಷ. ಒಂದೇ ಸೂರಿನಲ್ಲಿ ವಿಭಿನ್ನ ಕಲಾವಿದರನ್ನು ನೋಡುವ ಅವಕಾಶ, ಕಲಾತ್ಮಕ ವಿಷಯಗಳನ್ನು ಚರ್ಚೆ ಮಾಡುವ ಅವಕಾಶ, ವಿಚಾರವಿನಿಮಯ ಎಲ್ಲವೂ ಕೂಡ ಇಲ್ಲಿ ನಡೆಯುತ್ತದೆ . ನಮಗೆ ಗೊತ್ತಿರದ ಹಲವಾರು ಕಲೆಗಳನ್ನು, ಕಲಾಪ್ರಕಾರಗಳನ್ನು ಇಲ್ಲಿ ಬರುವ ಕಲಾವಿದರು ಪರಿಚಯ ಮಾಡಿಕೊಡುತ್ತಾರೆ ಈ ವಿಶೇಷವಾದ ಅವಕಾಶವನ್ನು ಎಲ್ಲರೂ ಪಡೆದುಕೊಳ್ಳುವರು.

    ಕಲಾವಿದರಿಗೆ ಊಟ ವಸತಿ ವ್ಯವಸ್ಥೆ

    ಚಿತ್ರಸಂತೆಗೆ ಬರುವ ಕಲಾವಿದರಿಗೆ ಚಿತ್ರಕಲಾ ಪರಿಷತ್ ಉಚಿತವಾಗಿ ಊಟ ಮತ್ತು ವಸತಿ ವ್ಯವಸ್ಥೆ ಮಾಡಿಕೊಡುತ್ತದೆ. ಒಟ್ಟಾರೆ ಕಲಾವಿದರನ್ನು ಬೆಳೆಸುವುದು ಕಲೆಯನ್ನು ಉಳಿಸುವುದು ಇದರ ಉದ್ದೇಶವಾಗಿದೆ. ಸಾಮಾನ್ಯವಾಗಿ ಚಿತ್ರಸಂತೆಗೆ ಬರುವ ಕಲಾವಿದರು ಬೇರೆ ಕಡೆಗೆ ಹೋಗಿ ವಸತಿ ಮಾಡಿಕೊಂಡು ಅದರ ವೆಚ್ಚವನ್ನು ಭರಿಸಲು ಕಷ್ಟವಾಗುತ್ತದೆ ಅದಕ್ಕಾಗಿ ಕಲಾವಿದರ ಕ್ಷೇಮಕ್ಕಾಗಿ ಚಿತ್ರಕಲಾ ಪರಿಷತ್ ವ್ಯವಸ್ಥೆ ಮಾಡುತ್ತಿದೆ

    ವಿದ್ಯಾರ್ಥಿ ಸ್ವಯಂಸೇವಕರು

    ಚಿತ್ರಸಂತೆಯ ದಿನ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಾರೆ. ಚಿತ್ರಕಲಾವಿದರಿಗೆ ಬೇಕಾಗುವ ಊಟ ನೀರು ಇನ್ನಿತರ ವಸ್ತುಗಳನ್ನು ಸ್ಥಳದಲ್ಲಿಯೇ ಅವರಿಗೆ ಪೂರೈಕೆ ಮಾಡುವುದು ಮತ್ತು ಅಗತ್ಯ ಸಹಾಯವನ್ನು ಮಾಡುವ ಕೆಲಸ ನೋಡಿಕೊಳ್ಳುತ್ತಾರೆ.

    ಅಂಗವಿಕಲ ಮತ್ತು ವಯಸ್ಸಾದ ಕಲಾವಿದರಿಗೆ ಪರಿಷತ್ತಿನ ಆವರಣದಲ್ಲಿ ಸ್ಟಾಲ್ ಗಳು

    ಚಿತ್ರಸಂತೆಗೆ ಸಾಮಾನ್ಯವಾಗಿ ಪ್ರತಿಭಾವಂತ ಅಂಗವಿಕಲ ಕಲಾವಿದರು ಮತ್ತು ವಯಸ್ಸಾದ ಚಿತ್ರಕಲಾವಿದರು ಬರುವುದರಿಂದ ಅವರ ಹಿತದೃಷ್ಟಿಯಿಂದ ಚಿತ್ರಕಲಾ ಪರಿಷತ್ತಿನ ಆವರಣದ ಒಳಗೆ ಅವರಿಗೆ ಅಂಗಡಿಗಳನ್ನು ಹಾಕಿ ಕಲಾಕೃತಿಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಇಂತಹ ಕಲಾವಿದರಿಗೆ ಪ್ರೋತ್ಸಾಹಿಸುವ ಕೆಲಸ ಚಿತ್ರಕಲಾ ಪರಿಷತ್ತು ಮಾಡುತ್ತಿದೆ.

    ಈ ಚಿತ್ರಸಂತೆಯಲ್ಲಿ ನೂರು ರೂಪಾಯಿಯಿಂದ ಚಿತ್ರಗಳು ಮಾರಾಟವಾಗುತ್ತದೆ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಕಲಾಕೃತಿಗಳು ಸಿಗುವಂತಾಗಬೇಕು ಎಲ್ಲರ ಮನೆ ಮನೆಗೆ ಒಂದೊಂದು ಕಲಾಕೃತಿಗಳನ್ನು ತೆಗೆದುಕೊಂಡು ಹೋಗಬೇಕು ಎಲ್ಲರ ಮನೆಗೆ ಒಂದೊಂದು ಕಲಾಕೃತಿಗಳನ್ನು ಒಯ್ಯಬೇಕು ಎಂಬ ಉದ್ದೇಶದಿಂದ ಆಯೋಜಿಸಲಾಗಿದೆ ಚಿತ್ರಸಂತೆಯ ದಿನ ಚಿತ್ರಕಲೆ. ಶಿಲ್ಪಕಲೆ ಗ್ರಾಫಿಕ್ ಅಲ್ಲದೆ ವಿವಿಧ ಶೈಲಿಯ ಸಾಂಪ್ರದಾಯಿಕ ಚಿತ್ರಗಳನ್ನು ನೋಡಬಹುದು.

    ಚಿತ್ರಕಲಾ ಸಮ್ಮಾನ್ ಮತ್ತು ಪ್ರೊ. ಎಂ. ಎಸ್. ನಂಜುಂಡರಾವ್ ಪ್ರಶಸ್ತಿ ಪ್ರದಾನ

    ಪ್ರತಿವರ್ಷ ಕರ್ನಾಟಕ ಚಿತ್ರಕಲಾ ಪರಿಷತ್ ನಾಡಿನ ಪ್ರಸಿದ್ಧ ಕಲಾವಿದರನ್ನು ಗುರುತಿಸಿ ಚಿತ್ರಕಲಾ ಸಮ್ಮಾನ್ ಮತ್ತು ಎಂಎಸ್ ನಂಜುಂಡರಾವ್ ಪ್ರಶಸ್ತಿ ಪ್ರಧಾನ ಮಾಡುತ್ತಿದೆ
    ಈ ವರ್ಷ ಎಂಎಸ್ ನಂಜುಂಡ ರಾವ್ ಪ್ರಶಸ್ತಿ ರತನ್ ಪರಿಮು ರವರಿಗೆ ನೀಡಲಾಗುತ್ತದೆ. ಕೆಕೆ ಕೆಜ್ರಿವಾಲ ಪ್ರಶಸ್ತಿಯನ್ನು ಕಲಾವಿದರಾದ ವಿಶ್ವಂಬರ ರವರಿಗೆ, ಆರ್ಯ ಮೂರ್ತಿ ಪ್ರಶಸ್ತಿಯನ್ನು ಬಸವರಾಜ್ ಮು ಸಾವಳಗಿ ಅವರಿಗೆ, ಡಿ ದೇವರಾಜ ಅರಸು ಪ್ರಶಸ್ತಿಯನ್ನು ಶ್ರೀಮತಿ ಪುಷ್ಪಮಾಲಾ ರವರಿಗೆ, ವೈ ಸುಬ್ರಹ್ಮಣ್ಯರಾಜು ಪ್ರಶಸ್ತಿಯನ್ನು ಹೆಸರಾಂತ ವ್ಯಂಗ್ಯ ಚಿತ್ರ ಕಲಾವಿದ ವಿ.ಜಿ. ನರೇಂದ್ರ ಅವರಿಗೆ ಶನಿವಾರ 26 ಏಪ್ರಿಲ್ ರಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಪ್ರದಾನ ಮಾಡಲಾಗುತ್ತದೆ.

    ಸಾಮಾನ್ಯವಾಗಿ ಚಿತ್ರಸಂತೆಗೆ ಸುಮಾರು ಮೂರು ಲಕ್ಷಕ್ಕಿಂತ ಹೆಚ್ಚು ಜನ ಬರುವ ನಿರೀಕ್ಷೆ ಇದೆ ಇದರ ಜೊತೆಗೆ ಬಹಳಷ್ಟು ಕಲಾವಿದರು ಬಂದು ತಮ್ಮ ಕಲಾಪ್ರಕಾರದ ಪರಿಚಯ ಮತ್ತು ವಿಭಿನ್ನ ಕಲಾಕೃತಿಗಳನ್ನು ಪರಿಚಯಿಸುವುದು ಕಲಾ ವಿನಿಮಯ ಚರ್ಚೆ ಇಲ್ಲಿ ಒಂದೇ ಸೂರಿನಲ್ಲಿ ನಡೆಯಲಿದೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಗ್ಯಾಲರಿಯಲ್ಲಿ ಆ ದಿನ ಹಲವಾರು ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಇದಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ ಮಾರ್ಚ್ 27 ಭಾನುವಾರದಂದು ನಡೆಯುವ ಚಿತ್ರಸಂತೆಗೆ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿಎಲ್ ಶಂಕರ್ ಅವರು ವಹಿಸಲಿದ್ದಾರೆ.

    This image has an empty alt attribute; its file name is V-S-NAIK.jpg


    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    ನೆಲದ ಸಿರಿ – ಗ್ರಾಮೀಣ ಸೊಗಡಿನ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಸಮಗ್ರ ಕೃಷಿ ಕೇಂದ್ರ

    ಬಳಕೂರು ವಿ ಎಸ್ ನಾಯಕ

    ಕೋಲೆ ಬಸವ , ರಾಟೆ, ಒಕ್ಕಣೆಯ ಕಣ, ಹಾಲು ಹಿಂಡುವಿಕೆ , ಶಕುನ ಸಾರುವ ಹಕ್ಕಿಗಳು , ಉಳುಮೆ ಮಾಡುತ್ತಿರುವ ರೈತ ಮತ್ತು ಎತ್ತುಗಳು, ಕುಂಬಾರಿಕೆ, ಕುಲುಮೆ, ವೀರಗಾಸೆ ,ಯಕ್ಷಿಣಿ , ಡೊಳ್ಳುಕುಣಿತ, ಗ್ರಾಮೀಣ ವಸ್ತುಸಂಗ್ರಹಾಲಯ ,ಪರಿಸರಸ್ನೇಹಿ ಈಜುಕೊಳ ,ಬಕಾಸುರ, ಇಂಗು ಗುಂಡಿಗಳು, ರೋಮನ್ ಎಂಪಿಥೇಟರ್ ವಿವಿಧ ಸಸ್ಯ ಪ್ರಭೇದಗಳು ದಂಡಕಾರಣ್ಯ ಸಾಕುಪ್ರಾಣಿಗಳ ಮತ್ತು ಜೇನುಸಾಕಣೆ ಇವೆಲ್ಲವನ್ನು ಮಾಗಡಿ ಸಮೀಪದ ತೋಟವೊಂದರಲ್ಲಿ ಕಾಣಬಹುದು. ಇದರ ಹೆಸರು ನೆಲದ ಸಿರಿ ಹಸಿರು ತೋಟ.

    ಬೆಂಗಳೂರಿನಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿ ಬೆಂಗಳೂರು -ಮಾಗಡಿ ರಸ್ತೆಯಲ್ಲಿ ನಿರ್ಮಿಸಲಾದ ಈ ತೋಟ ವಾರಾಂತ್ಯ ವಿಹಾರಕ್ಕೆ ಹೇಿಳಿ ಮಾಡಿಸಿದ ತಾಣ. ವಿಸ್ತೀರ್ಣದಲ್ಲಿ ಚಿಕ್ಕದಾದರೂ ಚೊಕ್ಕವಾಗಿದೆ.

    ತೋಟದ ವಿಶೇಷತೆಗಳು

    ಪರಂಪರಾ ಗ್ರಾಮೀಣ ವಸ್ತುಸಂಗ್ರಹಾಲಯ
    ನಮ್ಮ ಪೂರ್ವಜರು ಬಳಸುತ್ತಿದ್ದ ಉಪಕರಣಗಳು ಸಾಮಗ್ರಿಗಳು ಮತ್ತು ಆಚಾರಗಳನ್ನು ಈಗಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಪರಂಪರಾ ಗ್ರಾಮೀಣ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. ಹಿಂದಿನ ಕಾಲದ ಹೊಲ ಉಳುವ ನೇಗಿಲು ಮತ್ತು ಎತ್ತುಗಳು ಟ್ರ್ಯಾಕ್ಟರ್ ಎಂಬ ಆಧುನಿಕ ಯಂತ್ರದಿಂದ ಕಣ್ಮರೆಯಾಗಿದೆ. ಹಾಗೆಯೇ ಅಡುಗೆ ಮಾಡಲು ಬಳಸುತ್ತಿದ್ದ ಮಣ್ಣಿನ ಕುಡಿಕೆ, ಬಾನ ,ಮುಚ್ಚಳಿಕೆ, ಹಂಚು ಹಿತ್ತಾಳೆ ಪಾತ್ರೆಗಳು ಮಾಯಾವಾಗಿ ಎಲ್ಲವೂ ಅಲ್ಯೂಮಿನಿಯಂ ಸ್ಟೇನ್ಲೆಸ್ ಸ್ಟೀಲ್ ಆಗಿವೆ. ನಮ್ಮ ಪೂರ್ವಿಕರು ಬಳಸುತ್ತಿದ್ದ ಪರಿಸರಸ್ನೇಹಿ ಉಪಕರಣಗಳನ್ನು ಒಂದೆಡೆ ಸೇರಿಸಿ ಮಕ್ಕಳಿಗೆ ಉಪಕರಣಗಳ ಹೆಸರು ಮತ್ತು ಅವುಗಳು ಯಾವ ಕೆಲಸಕ್ಕೆ ಬಳಕೆಯಾಗುತ್ತಿದ್ದವು ಎನ್ನುವ ವಿಚಾರವನ್ನು ಇಲ್ಲಿ ತಿಳಿಯಬಹುದಾಗಿದೆ
    ಪರಿಸರ ಸ್ನೇಹಿ ಈಜುಕೊಳ
    ಹಳ್ಳದ ಕಡೆಗೆ ನೀರು ಹರಿಯುವುದು ಎಂಬ ಗಾದೆಯಂತೆ ಕೊಳವೆಬಾವಿಗಳಿಂದ ಕೆತ್ತಲ್ಪಟ್ಟ ನೀರನ್ನು ಈ ತೊಟ್ಟಿಯಲ್ಲಿ ತುಂಬುವುದು ವಿಶೇಷ.
    ಇಂಗು ಗುಂಡಿಗಳು
    ನೆಲದ ಸಿರಿ ತೋಟದ ಪಕ್ಕದಲ್ಲಿ ಪೂರ್ವದಿಕ್ಕಿಗೆ ಹೊಂದಿಕೊಂಡು ಹಳ್ಳ ಹರಿಯುತ್ತದೆ. ಇಲ್ಲಿ ಸುಮಾರು 600 ಅಡಿ ಸಾಗಿದ ನಂತರ ಮತ್ತೊಂದು ತಡೆಗೋಡೆಯನ್ನು ನಿರ್ಮಿಸಲಾಗಿದೆ ಇಂಗುಗುಂಡಿಯ ಸುಮಾರು 18 ಲಕ್ಷ ಲೀಟರ್ ನೀರು ತುಂಬಿದ ನಂತರ ಬಿಡಲಾಗುತ್ತದೆ .ನೆಲದ ಸಿರಿ ಯಲ್ಲಿ ಸುಮಾರು 25 ಲಕ್ಷ ಲೀಟರ್ ಗಳಷ್ಟು ಮಳೆ ನೀರನ್ನು ಕೊಯ್ಲು ಮಾಡಲಾಗುತ್ತದೆ.
    ರೋಮನ್ Amphy ಥಿಯೇಟರ್
    ನೆಲದ ಸಿರಿ ತೋಟದಲ್ಲಿ ಸುಮಾರು 60 ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಅನುಕೂಲವಾಗುವ ಒಂದು ಥಿಯೇಟರ್ ನಿರ್ಮಾಣವಾಗಿದೆ.ಇದಕ್ಕೆ ರೋಮನ್ ಎಂಬ ಹೆಸರು ಕೊಡಲು ಕಾರಣ ಗ್ರೀಸ್ ದೇಶದ ರೋಮನ್ ನಗರದಲ್ಲಿ ಗುಡ್ಡದ ಇಳಿಜಾರಿನಲ್ಲಿ ಕಲ್ಲಿನ ಆಸನಗಳನ್ನು ನಿರ್ಮಿಸಿ ಕೆಳಭಾಗದ ಸಮತಟ್ಟು ನೆಲದಲ್ಲಿ ವೇದಿಕೆಯನ್ನು ನಿರ್ಮಿಸಲಾಗುತ್ತಿತ್ತು. ರಾತ್ರಿ ವೇಳೆ ನಾಗರಿಕರು ನಾಟಕಗಳನ್ನು ಈ ಆಸನದಲ್ಲಿ ಕುಳಿತು ದೀಪದ ಬೆಳಕಿನಲ್ಲಿ ನೋಡುತ್ತಿದ್ದರು. ಖರ್ಚಿಲ್ಲದೆ ನೈಸರ್ಗಿಕವಾಗಿರುವ ಭೂಭಾಗವನ್ನು ಬಳಸಿ ನಿರ್ಮಿಸಲಾಗಿದೆ.
    ನೆಲದ ಸಿರಿಯ ಇತರೆ ವಿಶೇಷತೆಗಳು
    ಶಾಂತಲಾ ನಾಟ್ಯ ಶಾಲೆ,ಸಾಲು ಪರಗೋಲಾಸ್,ತೋಟದ ಮನೆ,ಭಾಗೀರಥಿ ಕಲ್ಲು ಬಾವಿ,
    ಆಟದ ಗ್ರಾಮೀಣ ಕ್ರೀಡೆಗಳು,ಕೊಟ್ಟಿಗೆಗಳು,ದಂಡಕಾರಣ್ಯ,
    ಶಾಂತಲಾ ನಾಟಕಶಾಲೆ
    ಸುಮಾರು 600 ಚದರಡಿಗಳಷ್ಟು ವಿಸ್ತೀರ್ಣವುಳ್ಳ ನಾಟ್ಯ ಶಾಲೆಯನ್ನು ನಿರ್ಮಿಸಲಾಗಿದೆ. ಇದು ಕಡಪ ಕಲ್ಲಿನಿಂದ ತಯಾರು ಮಾಡಲಾಗಿದೆ . ಸುಂದರವಾದ ಹೂಗಳನ್ನು ಅಳವಡಿಸಲಾಗಿದೆ.
    ಸಾಲು ಪರಗೊಲಾಸ್
    ಇಲ್ಲಿ ಸುಮಾರು 150 ಅಡಿ ದೂರಕ್ಕೆ ಒಂದು ಕಾಲುದಾರಿ ನಿರ್ಮಿಸಿ ಅದಕ್ಕೆ 36 ಕಲ್ಲಿನ ಕಂಬಗಳು ಮತ್ತು 69 ಕಲ್ಲಿನ ತೊಲೆಗಳನ್ನು ಬಳಸಿ ನಿರ್ಮಿಸಲಾಗಿದೆ .ಇದರ ಮೇಲೆ ಪಡವಲ ಸೀಮೆಬದನೆ ಚಪ್ಪರದವರೆಕಾಯಿ ಹೀಗೆ ಹಲವಾರು ತರಕಾರಿಗಳನ್ನು ಹಬ್ಬಿಸಲಾಗಿರುವುದು ವಿಶೇಷ.
    ತೋಟದ ಮನೆ
    ತೋಟದ ಮನೆಯನ್ನು ದೇಶಿ ಸಂಸ್ಕೃತಿಯನ್ನು ಹೊರಗಿನಿಂದ ಕಾಣುವ ಹಾಗೆ ವಿನ್ಯಾಸ ಮಾಡಲಾಗಿದ್ದು ಒಳಭಾಗದಲ್ಲಿ 18 ಅಡಿಗಳ ಎತ್ತರದಲ್ಲಿ ಕಾಂಕ್ರೀಟಿನಿಂದ ಛಾವಣಿಯನ್ನು ನಿರ್ಮಿಸಿದ್ದಾರೆ. ಒಂದು ಭಾಗಕ್ಕೆ ಫ್ಲೋರ್ ನಿರ್ಮಿಸಿದ ರೂಪದಲ್ಲಿ ವಿನ್ಯಾಸವನ್ನು ಮಾಡಲಾಗಿದೆ.
    ಭಾಗೀರಥಿ ಕಲ್ಲಿನ ಬಾವಿ
    ನೆಲದ ಸಿರಿ ತೋಟದಲ್ಲಿ ಪೂರ್ವಜರು ನಿರ್ಮಿಸಿರುವ 200 ವರ್ಷಗಳ ಇತಿಹಾಸವಿರುವ ಸಿಹಿನೀರಿನ ಕಲ್ಲು ಬಾವಿಯೂ ಇದೆ.
    ದಂಡಕಾರಣ್ಯ
    ನೆಲದ ಸಿರಿ ತೋಟದಲ್ಲಿ ಒಂದು ಅರಣ್ಯವನ್ನು ಬೆಳೆಸುವ ಉದ್ದೇಶದಿಂದ ಬಗೆಬಗೆಯ ಕಾಡು ಮರಗಳನ್ನು ಬೆಳೆಸಲಾಗಿದೆ . ಘಮಘಮಿಸುವ ಕಾಡು ಹೂಗಳ ಪರಿಮಳ ಪಕ್ಷಿಗಳ ಕಲರವ ಹಾಡು ಬೆಳೆಸಿರುವ ಸಾರ್ಥಕತೆಯನ್ನು ಮರೆಸುತ್ತದೆ.
    ಕೊಟ್ಟಿಗೆಗಳು
    ನೆಲದ ಸಿರಿ ಯಲ್ಲಿ ಹಸು,ಎಮ್ಮೆ, ಕೋಳಿ-ಕುರಿ, ಮೇಕೆ,ಬೆಕ್ಕು,ಮೊಲ,ಮೀನು ಇತ್ಯಾದಿ ಸಾಕುಪ್ರಾಣಿಗಳನ್ನು ಪ್ರತ್ಯೇಕವಾದ ಕೊಟ್ಟಿಗೆಗಳಲ್ಲಿ ಸಾಕಲಾಗುತ್ತದೆ. ಇದರ ಉದ್ದೇಶ ಆರ್ಥಿಕ ಅವಲಂಬನೆಯ ಜೊತೆಗೆ ಮಕ್ಕಳಿಗೆ ವಿವಿಧ ಸಾಕುಪ್ರಾಣಿಗಳನ್ನು ತೋರಿಸುವುದೇ ಆಗಿದೆ ಎಂದು ಅಲ್ಲಿನ ವ್ಯವಸ್ಥಾಪಕರು ತಿಳಿಸುತ್ತಾರೆ.
    ತೋಟದ ಸಸ್ಯ ಪರಿಚಯ
    ನೆಲದ ಸಿರಿ ತೋಟದಲ್ಲಿ ಸುಮಾರು 2000ಕ್ಕೂ ಹೆಚ್ಚು ಸಸ್ಯಗಳನ್ನು ಬೆಳೆಸಲಾಗಿದೆ.ತೋಟದ ಅಂಚಿನಲ್ಲಿ ಬಿದಿರು ಬೆಳೆಸಲಾಗಿದೆ. ಬೆಂಗಳೂರು ಮಾಗಡಿ ರಸ್ತೆಯಲ್ಲಿ ವಾಹನಗಳಿಂದ ಉಂಟಾಗುವ ಶಬ್ದ ಮಾಲಿನ್ಯ ಮತ್ತು ಕಲುಷಿತ ಗಾಳಿ ಮತ್ತು ರಾತ್ರಿ ವೇಳೆ ಉಂಟಾಗುವ ವಾಹನಗಳ ಬೆಳಕಿನ ಮಾಲಿನ್ಯ ತಡೆಗಟ್ಟುವುದು ಆಗಿದೆ.
    ಗ್ರಾಮೀಣ ಕ್ರೀಡೆಗಳು
    ಗ್ರಾಮೀಣ ಕ್ರೀಡೆಗಳನ್ನು ಜೀವಂತ ಉಳಿಸುವುದು ಮತ್ತು ಈಗಿನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ವಿವಿಧ ಗ್ರಾಮೀಣ ಕ್ರೀಡೆಗಳಾದ ಲಗೋರಿ, ಗೋಲಿ ,ಕಣ್ಣಾಮುಚ್ಚಾಲೆ ,ಮರಕೋತಿ ಆಟ ,ಕುಂಟೆಬಿಲ್ಲೆ, ಚೌಕಾಬಾರ ಇತ್ಯಾದಿ ಆಟಗಳನ್ನು ಆಡಿಸುವುದು ಇಲ್ಲಿನ ವಿಶೇಷ.
    ಟಾಸ್ಕ್ ರೂಪದಲ್ಲಿ ಗ್ರಾಮೀಣ ಕಸುಬುಗಳು
    ಗ್ರಾಮೀಣ ಕಸುಬುಗಳು ಆದ ಮಡಿಕೆ ಮಾಡುವುದು, ಕುಲುಮೆಯನ್ನು ತಯಾರಿಸುವುದು ಗೊಂಬೆ ಆಟ ಆಡುವುದು, ಕೊರವಂಜಿ ,ಬುಡಬುಡುಕಿ ಇತ್ಯಾದಿ ಗ್ರಾಮೀಣ ಕಲೆಗಳನ್ನು ಮಕ್ಕಳಿಗೆ ನುರಿತ ವ್ಯಕ್ತಿಗಳಿಂದ ಮಾಡಿಸಿ ತೋರಿಸಲಾಗುತ್ತದೆ. ಇದರಿಂದ ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಹಲವಾರು ವಿಷಯಗಳನ್ನು ತಿಳಿಸಿಕೊಟ್ಟ ಹಾಗೆ ಆಗುತ್ತದೆ.

    ಬೆಂಗಳೂರಿನಲ್ಲಿ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವ ಡಾ. ಗೋಪಾಲಕೃಷ್ಣ ಅವರ ಕನಸಿನ ಕೂಸು ಈ ನೆಲದ ಸಿರಿ. ಅವರ ಪ್ರಕಾರ ನಗರ ವಾಸ ನರಕವಾಸ. ಮನುಷ್ಯನ ಜೀವನ ನಗರಗಳಲ್ಲಿ ಕಲುಷಿತ ಗಾಳಿ ನೀರು ಮತ್ತು ಆಹಾರ ಸೇವನೆಯಿಂದ ಅನಾರೋಗ್ಯಕರ ವಾಗಿದೆ .ಇಷ್ಟು ಸಾಲದೇ ಒತ್ತಡದ ಜೀವನ ಆರೋಗ್ಯವಂತ ಜೀವನಕ್ಕೆ ಮಾರಕವಾಗಿದೆ . ಈ ನಿಟ್ಟಿನಲ್ಲಿ ಇಲ್ಲಿಗೆ ಬಂದಾಗ ಸ್ವಲ್ಪವಾದರು ಮನಲ್ಲೋಸ ವಾಗುತ್ತದೆ.

    ನೆಲದಸಿರಿಗೆ ಹೋಗುವವರು https://neladasiri.com ನಲ್ಲಿ ಮೊದಲೇ ನೋಂದಾಯಿಸಿಕೊಂಡು ಹೋಗುವುದು ಉತ್ತಮ.

    This image has an empty alt attribute; its file name is V-S-NAIK.jpg

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.


    ಸಾವಿನೂರಿನ ದಾರಿಯ ಅಧ್ಯಾತ್ಮ


    ಮಾನವ ಸ್ವಭಾವದ ಹಲವು ವೈಚಿತ್ರ್ಯಗಳನ್ನು `ಕೋವಿಡ್‌ ದಿನಚರಿ'ಯಲ್ಲಿ ಕೆ.ಸತ್ಯನಾರಾಯಣ ಅವರು ಕಟ್ಟಿಕೊಟ್ಟಿದ್ದಾರೆ. ಸಾವು ಯಾವ ಕ್ಷಣದಲ್ಲಾದರೂ ನಮ್ಮನ್ನು ಸೆಳೆದುಕೊಳ್ಳಬಹುದು ಎಂಬ ಆತಂಕದಲ್ಲಿ ಮೂಡುವ ಆಲೋಚನೆಗಳು ಬಹುತೇಕ ಪ್ರಾಮಾಣಿಕವೂ ಆಗಿರುವುದರಿಂದ ಅವು ಮನಸ್ಸಿಗೆ ತಟ್ಟುತ್ತವೆ.


    ಈ ಶತಮಾನ ಕಂಡಿರುವ ಅತ್ಯಂತ ಭೀಕರವಾದ ಮಾನವ ದುರಂತ ಕೊರೋನಾ ವೈರಸ್ಸಿನ ಹಾವಳಿ ಮಾಡಿರುವ ಗಾಯ ಮಾಯುವುದಕ್ಕೆ ಹಲವು ವರ್ಷಗಳೇ ಬೇಕಾಗಬಹುದು. ಸಮಾಜಜೀವಿಯಾದ ಮನುಷ್ಯ ಅನಿವಾರ್ಯವಾಗಿ ತನ್ನನ್ನೇ ತಾನು ಹೇಗೆ ಒಂದೊಂದು ದ್ವೀಪವಾಗಿ ಮಾರ್ಪಡಿಸಿಕೊಳ್ಳಬೇಕಾಗಿ ಬಂತು ಎಂಬುದು ಇದೀಗ ಬದುಕಿರುವ ಎಲ್ಲರ ಅನುಭವವೂ ಆಗಿದೆ.ಈ ಕೋವಿಡ್‌ ಆಘಾತವನ್ನು ಸೃಜನಶೀಲ ಮನಸ್ಸು ಹೇಗೆ ಪರಿಭಾವಿಸಿತು ಎಂಬುದು ಒಂದು ಕುತೂಹಲ. ಹಲವರು ಹಲವು ರೀತಿಯಲ್ಲಿ ಇದಕ್ಕೆ ಬರೆಹದ ರೂಪವನ್ನು ಕೊಟ್ಟಿದ್ದಾರೆ. ಬಹುತೇಕ ಎಲ್ಲರೂ ಮೋಡ ಕರಗಿ ನೀರಾಗಿ ಸುರಿದ ಮೇಲೆ ನಿರಭ್ರ ಆಕಾಶ ಕಾಣುವ ಹಾಗೆ ಒಳ್ಳೆಯ ದಿನ ಬಂದೇಬರುತ್ತದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈ ದುರಂತದ ಸಮಯದಲ್ಲಿ ಮಾನವನ ಸ್ವಾರ್ಥ ಹೇಗೆ ನಾಚಿಕೆಪಡುವಹಾಗೆ ಮಾಡಿತು, ಹಲವರ ಮಾನವೀಯತೆ ಹೇಗೆ ಹೃದಯ ತಟ್ಟುವ ಹಾಗೆ ಮಾಡಿತು ಎಂಬುದನ್ನು ತಮ್ಮದೇ ರೀತಿಯಲ್ಲಿ ಹೇಳಿದ್ದಾರೆ.

    ಹಿರಿಯ ಸಾಹಿತಿ ಕೆ.ಸತ್ಯನಾರಾಯಣ ಅವರು ಕೋವಿಡ್‌ನ ಸುಮಾರು 40 ದಿನಗಳ ಕಾಲ ತಮ್ಮ ಮನಸ್ಸಿನಲ್ಲಾದ ಭಯ, ಆತಂಕ, ಪಲ್ಲಟಗಳಿಗೆ ಅಕ್ಷರ ರೂಪ ನೀಡಿದ್ದಾರೆ. ಹಾಗೆ ನೋಡಿದರೆ ಇದೊಂದು ಸೃಜನಶೀಲ ಕೃತಿಯಲ್ಲ. ಆ ಕ್ಷಣದಲ್ಲಿ ತಮಗೆ ಅನಿಸಿದ್ದನ್ನು ದಿನಚರಿಯ ರೂಪದಲ್ಲಿ ಬರೆದಿಟ್ಟು ಕೋವಿಡ್‌ ದಿನಚರಿ’ ಎಂಬ ಹೆಸರಿನಲ್ಲಿ ನಂತರ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಸಾಮಾನ್ಯವಾಗಿ ದಿನಚರಿಗಳಲ್ಲಿ ಅಂದಂದು ಏನೇನು ನಡೆಯಿತು, ಅದಕ್ಕೆ ತಮ್ಮ ಪ್ರತಿಕ್ರಿಯೆ ಏನು ಎಂಬ ವಿಷಯಗಳು ನಮೂದಾಗಿರುತ್ತವೆ. ಸೃಜನಶೀಲ ಕೃತಿಯೊಂದರಲ್ಲಿ ತಕ್ಷಣದ ಆಲೋಚನೆ ಬರೆಹದ ರೂಪದಲ್ಲಿ ದಾಖಲು ಆಗುವುದಿಲ್ಲ. ಒಂದು ವಿಷಯವನ್ನು ಕುರಿತು ಮತ್ತೆ ಮತ್ತೆ ಆಲೋಚಿಸುತ್ತ ಹೀಗೆ ಬರೆದರೆ ಸರಿಯೇ, ಹಾಗೆ ಬರೆದರೆ ಉತ್ತಮವಲ್ಲವೆ ಎಂಬೆಲ್ಲ ಸೃಜನಶೀಲ ಸಾಧ್ಯತೆಗಳನ್ನು ತರ್ಕಿಸಿ ನಂತರ ಬರೆಹಕ್ಕೆ ತೊಡಗುವುದು ಮತ್ತು ಬರೆಯುತ್ತಿರುವಾಗಲೇ ಹೊಸ ತಿರುವುಗಳನ್ನು ಪಡೆದುಕೊಳ್ಳುವುದು ಇವೆಲ್ಲ ಸಾಮಾನ್ಯ. ಈ ಎಲ್ಲ ಮಿತಿಗಳ ನಡುವೆಯೂ ಮಾನವ ಸ್ವಭಾವದ ಹಲವು ವೈಚಿತ್ರ್ಯಗಳನ್ನುಕೋವಿಡ್‌ ದಿನಚರಿಯ’ಲ್ಲಿ ಕಟ್ಟಿಕೊಡಲಾಗಿದೆ. ಸಾವು ಯಾವ ಕ್ಷಣದಲ್ಲಾದರೂ ನಮ್ಮನ್ನು ಸೆಳೆದುಕೊಳ್ಳಬಹುದು ಎಂಬ ಆತಂಕದಲ್ಲಿ ಮೂಡುವ ಆಲೋಚನೆಗಳು ಬಹುತೇಕ ಪ್ರಾಮಾಣಿಕವೂ ಆಗಿರುವುದರಿಂದ ಅವು ಮನಸ್ಸಿಗೆ ತಟ್ಟುತ್ತವೆ. ನ್ಯಾಯಾಲಯಗಳಲ್ಲಿ ಕೂಡ ಸಾಯುತ್ತಿರುವ ವ್ಯಕ್ತಿಯ ಹೇಳಿಕೆಯನ್ನು ಪ್ರಮಾಣವೆಂದು ಪರಿಗಣಿಸಲಾಗುತ್ತದೆ.

    ನಾವು ಕೂಡ ಇದೇ ಕಾಲಘಟ್ಟದಲ್ಲಿ ಬದುಕಿರುವುದರಿಂದ ಮತ್ತು ಎಲ್ಲರ ಅನುಭವವೂ ಇದೇ ಆಗಿರುವ ಕಾರಣ ಈ ಕೃತಿಯು ಹೊಸತು ಎಂದು ಏನೂ ಅನಿಸುವುದಿಲ್ಲ. ಬಹುಶಃ ಆಲ್ಬರ್ಟ್‌ ಕಮೂನ ಪ್ಲೇಗ್‌ ಕಾದಂಬರಿಯೂ ಆ ಕಾಲದಲ್ಲಿ ಅಂಥ ಮನೋವೇದಕ ಅನ್ನಿಸುತ್ತಿರಲಿಲ್ಲವೇನೋ. ಇಂಥ ಅನುಭವಗಳ ಸಾಂದ್ರೀಕರಣಕ್ಕೆ ಕಾಲದ ಒಂದು ಅಂತರ ಅಗತ್ಯವಿರುತ್ತದೆ ಎಂಬುದು ನನ್ನ ಭಾವನೆ. ಆದರೆ ಸತ್ಯನಾರಾಯಣರ ಕೃತಿ ಸಾವಿನೂರಿನ ದಾರಿಯಲ್ಲಿ ಅಧ್ಯಾತ್ಮದ ಹಲವು ಹೊಳಹುಗಳನ್ನು ಒಳಗೊಂಡಿದೆ. ಅದಕ್ಕೊಂದು ಉದಾಹರಣೆ ಇಲ್ಲಿದೆ, ಯಾವಾಗಲೂ ನಮ್ಮ ಬಗ್ಗೆಯೇ ನಾವು ಯೋಚಿಸುತ್ತ ಸುತ್ತ ಮುತ್ತಲಿನ ತಕ್ಷಣದ ಪ್ರಪಂಚದಲ್ಲಿ ನಮಗಿಂತ ಉದಾತ್ತರಾಗಿರುವವರನ್ನು ಗಮನಿಸುವುದೇ ಇಲ್ಲ. ಮೂರು ಡಾಕ್ಟರ್‌ಗಳ ಫೋಟೋ ಬಂದಿದೆ ಒಟ್ಟಿಗೇ. ಇವರೆಲ್ಲರೂ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲೇ ತೀರಿಹೋದವರು. ಒಬ್ಬರ ವಯಸ್ಸು ಮಾತ್ರ 50 ದಾಟಿದೆ. ಇವರ ಸೇವೆ, ಕಾಣಿಕೆ ಯುದ್ಧದಲ್ಲಿ ಸಾಯುವ ಸೈನಿಕರ ತ್ಯಾಗದಷ್ಟೇ ಅನುಪಮವಾದದ್ದು. ನಾವು ಗಮನಿಸುವುದಿಲ್ಲ, ಗೌರವಿಸುವುದಿಲ್ಲ. ಅವರ ಬಗ್ಗೆ ನಮಗೆ ಹಕ್ಕಿದೆಯೆಂಬ ಭಾವನೆಯಿಂದ ವರ್ತಿಸುತ್ತೇವೆ.’ ಇಂಥ ಸೂಕ್ಷ್ಮ ಅವಲೋಕನಗಳು ಅಲ್ಲಲ್ಲಿ ಓದುಗರಿಗೆ ಎದುರಾಗುತ್ತವೆ. ಹಾಗೆಯೇ ಸಾರ್ವಕಾಲಿಕ ಸತ್ಯವೆನ್ನಬಹುದಾದ ಆತ್ಮವಿಮರ್ಶೆಯೂ ಇಲ್ಲಿದೆ.

    ಒಬ್ಬರ ಸಾವಿನ ಸುದ್ದಿ ಬಂದಾಗ ನಾವು ಅವರು ಮಾಡಿರುವ ಮೌಲಿಕ ಕೆಲಸವನ್ನು ಬಹಿರಂಗವಾಗಿ ಹೇಳಿದರೂ, ಮನಸ್ಸಿನೊಳಗಡೆ ನಮಗೆ ಅವರು ಮಾಡಿರುವ ಗಾಯ, ನೋವುಗಳನ್ನು ಕುರಿತು ಕೂಡ ಯೋಚಿಸುತ್ತಿರುತ್ತೇವೆ. ಸಾಮಾಜಿಕ ಸಭ್ಯತೆ, ಸೌಜನ್ಯಕ್ಕಾಗಿ ಅದನ್ನೆಲ್ಲ ಹೇಳುವುದಿಲ್ಲ ಅಷ್ಟೇ’ ಎಂಬ ಮಾತನ್ನು ಗಮನಿಸಬೇಕು. ಹಾಗೆಯೇ, ನಮ್ಮ ದುಃಖದಲ್ಲಿ ಸಂತಾಪಗೈಯುವಿಕೆಯಲ್ಲಿ ಹೃತ್ಪೂರ್ವಕತೆ ಕಡಿಮೆ ಎಂದು ದುಃಖ ವ್ಯಕ್ತಪಡಿಸಿದಾಗಲೆಲ್ಲ ನಮಗೆ ಗೊತ್ತಾಗುತ್ತಲೇ ಇರುತ್ತದೆ. ಆದರೆ ಮತ್ತೆ ಅದೇ ಸೋಗು ಹಾಕುತ್ತೇವೆ’ ಎಂಬ ಸಾಲುಗಳಲ್ಲಿರುವ ಆತ್ಮನಿರೀಕ್ಷಣೆ ಮನಸ್ಸಿಗೆ ತಟ್ಟುತ್ತದೆ. ಮತ್ತು,ನಾವು ಸತ್ತೇ ಸಾಯುತ್ತೇವೆ, ನಮ್ಮ ಆಪ್ತರು ಕೂಡ ಇನ್ನೇನು ಸತ್ತೇ ಹೋಗುತ್ತಾರೆ ಎಂಬ ಭಾವನೆ ಗಟ್ಟಿಯಾದ ತಕ್ಷಣ, ನಾವು ಇನ್ನೂ ಕ್ರೂರಿಗಳಾಗುತ್ತೇವೆ. ನಮ್ಮ ಜೊತೆ ಯಾರೂ ಸಾಯುವುದಿಲ್ಲವೆಂಬ ಕಾರಣಕ್ಕೂ ಇರಬಹುದು’ ಎಂಬ ಹೇಳಿಕೆಯನ್ನು ಗಮನಿಸಿ. ಇಂಥ ಸಾರ್ವತ್ರಿಕವಾದ ಸತ್ಯಗಳು ಇರುವ ಕಾರಣಕ್ಕೆ ಇದು ಸಾವಿನೂರಿನ ದಾರಿಯ ಅಧ್ಯಾತ್ಮ ಎಂದೆನ್ನಿಸುವುದು.

    ಬದುಕುವ ಹಕ್ಕಿನಷ್ಟೇ ಮುಖ್ಯವಾದದ್ದು ಸಾಯುವ ಹಕ್ಕು ಕೂಡ. ನಿರ್ದಿಷ್ಟ ರೀತಿಯಲ್ಲಿ ಸಾಯಲು ಬಯಸುವ ಹಕ್ಕು ಎಂಬ ಲೇಖಕರ ಅಭಿಪ್ರಾಯಕ್ಕೆ ಭಿನ್ನ ಅಭಿಪ್ರಾಯವೂ ಸಾಧ್ಯ. ಸಾವು ಯಾವಾಗಲೂ ಆಕಸ್ಮಿಕವೇ. ತನ್ನ ಇಷ್ಟದಂತೆ ಸಾಯುವುದು ಆತ್ಮಹತ್ಯೆಯಂಥ ಸಂದರ್ಭಗಳಲ್ಲಿ ಸಾಧ್ಯ. ಕಾನೂನಿನ ಪ್ರಕಾರ ಆತ್ಮಹತ್ಯೆ ಅಪರಾಧ. ಹಕ್ಕು ಯಾವಾಗಲೂ ಅಪರಾಧವಾಗಿರಲಿಕ್ಕೆ ಸಾಧ್ಯವಿಲ್ಲ ಅಲ್ಲವೆ?

    ಕೃತಿಯಲ್ಲಿ ಸೃಜನಕ್ರಿಯೆಗೆ ಸಂಬಂಧಿಸಿದಂತೆ ಕೆಲವು ವಿಚಾರಗಳು ಇವೆ.

    1. ಓದುವುದಾಗಲಿ, ಬರೆಯುವುದಾಗಲಿ ಸಂಸಾರದ, ಜಗತ್ತಿನ ಎಲ್ಲ ಜಂಜಾಟಗಳು, ಏಳುಬೀಳುಗಳ ಮಧ್ಯೆಯೇ ನಡೆಯಬೇಕು. ಆವಾಗಲೇ ಓದು ಬರಹಕ್ಕೆ ಬೇಕಾದ ಜೀವಂತಿಕೆಯ ಒತ್ತಡ, ಚೈತನ್ಯ ಸೃಷ್ಟಿಯಾಗುವುದು.

    2. ಬರೆಯುವುದೆಂದರೆ, ಬರಹಗಾರನಾಗುವುದೆಂದರೆ ಅದು ಕೌಶಲ್ಯದ ಮಾತು ಮಾತ್ರವಲ್ಲ, ಜೈವಿಕವಾಗಿ, ಭಾವನಾತ್ಮಕವಾಗಿ ಕೂಡ ಲೇಖಕನಾದವನು ಒಂದು ವಿಶಿಷ್ಟ ವಿಭಿನ್ನ ಪ್ರಾಣಿ. ಪ್ರತಿ ಕ್ಷಣ ಮಿಡಿಯುವಂತಹ ಒಂದು ತಂತು ಅವನಲ್ಲಿರುತ್ತದೆ. ಇದು ದೇವರು ಅವನಿಗೆ ಕೊಟ್ಟ ವರ ಮತ್ತು ಶಾಪ. ಈ ವರವನ್ನು ಆತ ಹಗುರವಾಗಿ ಕಾಣಬಾರದು, ಭ್ರಷ್ಟಗೊಳಿಸಬಾರದು, ಕ್ಷುಲ್ಲಕವಾಗಿ ಕಾಣಬಾರದು. ತುಂಬಾ ಜತನದಿಂದ ಕಾಪಾಡಿಕೊಳ್ಳಬೇಕು.

    3. ಬರಹಗಾರನಾಗಬೇಕಾದರೆ ಎಲ್ಲಕ್ಕಿಂತ ಮುಖ್ಯವಾಗಿ ನಾನೊಬ್ಬ ಸಾಮಾನ್ಯ ಮನುಷ್ಯ ಎಂದು ಒಪ್ಪಿಕೊಳ್ಳಬೇಕು. ನಾನು ಬರೆಯುವುದು ಕೂಡ ಬಹುಪಾಲು ಸಾಧಾರಣವಾಗಿರುತ್ತದೆ, ತಪ್ಪು ಒಪ್ಪುಗಳಿಂದ ಕೂಡಿರುತ್ತದೆ, ಯಾವತ್ತೋ ಒಂದು ದಿನ ಅರ್ಥಪೂರ್ಣವಾಗಿ ಬರೆಯಬಹುದು, ಬರೆಯದೆಯೂ ಇರಬಹುದು ಎಂಬ ಎರಡೂ ಸಾಧ್ಯತೆಗಳನ್ನು ಒಪ್ಪಿಕೊಳ್ಳಬೇಕು.

    ಇಂಥ ಚಿಂತನೆಯ ಲೇಖಕರಿಂದ ಜವಾಬ್ದಾರಿಯುತ ಬರೆಹಗಳೇ ಬರುತ್ತವೆ. ಕೃತಿಯಲ್ಲಿ ಹಲವು ವೃತ್ತಿಯವರು, ಅಧಿಕಾರಸ್ಥರ ಮನೋಧರ್ಮ ಹೇಗಿರುತ್ತದೆ ಎಂಬುದರ ಮೇಲೆ ಲೇಖಕರು ಬೆಳಕುಚೆಲ್ಲುತ್ತಾರೆ. ಕೋವಿಡ್‌ ಸಮಯದಲ್ಲಿ ಯಾವೆಲ್ಲ ವೃತ್ತಿಯವರು ಏನೇನು ಮಾಡಿಕೊಂಡಿದ್ದರೋ ಎಲ್ಲರ ಗಮನಕ್ಕೆ ಬಂದಿರುವುದು ಸಾಧ್ಯವಿಲ್ಲ. ಆದರೆ ಮಾಧ್ಯಮದವರು ಮಾತ್ರ ಕೋವಿಡ್‌ ಬಿಕ್ಕಟ್ಟಿನಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಜನರಿಗೆ ಸುದ್ದಿಯನ್ನು ತಲುಪಿಸಿದ್ದಂತೂ ನಿಜ. ಅದರಿಂದ ಜನರಿಗೆ ಎಷ್ಟು ಲಾಭವಾಯಿತೋ ಗೊತ್ತಿಲ್ಲ. ಆದರೆ ಕೆಲಸವಿಲ್ಲದೆ ಮನೆಯಲ್ಲೇ ಕುಳಿತಿರಬೇಕಾದರೆ ಸಕಲ ವಿದ್ಯಮಾನಗಳನ್ನು ವರದಿ ಮಾಡಿದ್ದಾರೆ ಅವರು. ಅದರಲ್ಲಿ ಹಲವು ಅತಿರೇಕಗಳೂ ಇರಬಹುದು.

    ಪತ್ರಕರ್ತರ ಬಗ್ಗೆ ಒಂದು ಮಾತನ್ನು ಸತ್ಯನಾರಾಯಣ ಅವರು ಹೀಗೆ ಹೇಳಿದ್ದಾರೆ. “ಪ್ರತಿಭೆ ಮತ್ತು ಬದ್ಧತೆಯನ್ನೇ ಮಾನದಂಡವಾಗಿಟ್ಟುಕೊಂಡರೆ, ಬಹುಪಾಲು ಪತ್ರಕರ್ತರು, ಸಂಪಾದಕರು ತೀರಾ ಸಾಧಾರಣ ಜನ. ಮಾಧ್ಯಮ ಕೆಲಕಾಲ ಅವರ ಹಿಡಿತದಲ್ಲಿ ಇರುವುದರಿಂದ ಇಲ್ಲದ ಸಾರ್ವಜನಿಕ, ಸಾಂಸ್ಕೃತಿಕ ವ್ಯಕ್ತಿತ್ವವನ್ನು ತಮಗೆ ತಾವೇ ಆರೋಪಿಸಿಕೊಳ್ಳುತ್ತಾರೆ. ಒಮ್ಮೆ ಪತ್ರಿಕೆಯಿಂದ ನಿವೃತ್ತರಾದ ಮೇಲೆ ಹೇಳಹೆಸರಿಲ್ಲದೆ ಕಳೆದುಹೋಗುತ್ತಾರೆ. ಇವರದೇ ಒಂದು ದೊಡ್ಡ ಪಡೆ…” ಈ ಮಾತು ಕೇವಲ ಪತ್ರಕರ್ತರಿಗೆ ಮಾತ್ರವಲ್ಲ, ಯಾವುದೇ ಅಧಿಕಾರಸ್ಥಾನದಲ್ಲಿದ್ದವರಿಗೂ ಅನ್ವಯಿಸುತ್ತದೆ. ಒಳ್ಳೆಯದು ಮಾಡಿದ್ದಷ್ಟೇ ನೆನಪಿನಲ್ಲಿ ಉಳಿಯುತ್ತದೆ.

    ಇತ್ತೀಚೆ ನಾನು ಅಮೆಜಾನ್‌ ಪ್ರೈಮ್‌ನಲ್ಲಿ ಒಂದು ವೆಬ್‌ ಸೀರಿಸ್‌ ನೋಡಿದೆ. ಅದು Unpaused – naya safar. ಐದು ಕಂತುಗಳಲ್ಲಿದೆ. ಕೋವಿಡ್‌ ತಲ್ಲಣಗಳನ್ನು ದೃಶ್ಯ ಮಾಧ್ಯಮದಲ್ಲಿ ಹೇಗೆ ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡಬಹುದು ಎಂಬುದಕ್ಕೆ ಸೃಜನಾತ್ಮಕ ಪುರಾವೆ ಅದು. ಕೋವಿಡ್‌ ಸಂಬಂಧದ ನೋವಿನ ಸಂವಹನದಲ್ಲಿ ಅಕ್ಷರ ಮಾಧ್ಯಮಕ್ಕಿಂತ ದೃಶ್ಯಮಾಧ್ಯಮ ಶಕ್ತಿಯುತ ಎಂದು ಅನಿಸಿತು.
    ಹಲವು ಸೃಜನಶೀಲ ಕೃತಿಗಳನ್ನು ಪರಿಣಾಮಕಾರಿಯಾಗಿ ರಚಿಸಿರುವ ಕೆ.ಸತ್ಯನಾರಾಯಣ ಅವರಿಂದ ಇನ್ನಷ್ಟು ಕೃತಿಗಳು ಬರಲಿ.

    ಮೇಕೆದಾಟು ಯೋಜನೆಗೆ ತ್ವರಿತ ಅನುಮೋದನೆ ಪಡೆಯಲು ಕ್ರಮ

    BENGALURU MAR 18

    ಮೇಕೆದಾಟು ಯೋಜನೆಗೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹಾಗೂ ಕೇಂದ್ರ ಪರಿಸರ ಸಚಿವಾಲಯದಿಂದ ತ್ವರಿತವಾಗಿ ಅನುಮೋದನೆ ಪಡೆದುಕೊಂಡು ಯೋಜನೆಗೆ ಚಾಲನೆ ನೀಡಲು ಕ್ರಮ ವಹಿಸಲು ಇಂದಿನ ವಿಧಾನ‌ ಮಂಡಲ ಉಭಯ ಸದನಗಳ ಸಭಾ ನಾಯಕರ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿಳಿಸಿದರು.

    ಅವರು ಅಂತರ ರಾಜ್ಯ ಜಲವಿವಾದಗಳ ಕುರಿತಂತೆ ಉಭಯ ಸದನಗಳ ಸಭಾ ನಾಯಕರ ಜೊತೆ ಸಭೆ ನಡೆಸಿದ ನಂತರ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.

    ಕಾವೇರಿ ಜಲನಿರ್ವಹಣಾ ಪ್ರಾಧಿಕಾರದ ಸಭೆಗಳಲ್ಲಿ ಮೇಕೆದಾಟು ಯೋಜನೆಯ ಕುರಿತು ವಿಸ್ತೃತ ಚರ್ಚೆಯಾಗಿದೆ. ಈ ಕುರಿತು ನಡಾವಳಿಗಳಲ್ಲಿ ದಾಖಲಿಸದೆ ಇರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕೂಡಲೇ ಜಲಶಕ್ತಿ ಸಚಿವರು ಹಾಗೂ ಪ್ರಾಧಿಕಾರದವರೊಂದಿಗೆ ಚರ್ಚಿಸಿ, ನಡಾವಳಿಗಳಲ್ಲಿ ಚರ್ಚೆಯ ಅಂಶಗಳನ್ನು ದಾಖಲಿಸುವ ಕುರಿತು ಕ್ರಮ ವಹಿಸಲಾಗುವುದು. ಹಾಗೂ ಮುಂದಿನ ಸಭೆಯಲ್ಲಿ ಯೋಜನೆಗೆ ಅನುಮೋದನೆ ನೀಡಲು ಹಾಗೂ ಪರಿಸರ ಸಚಿವಾಲಯದ ತೀರುವಳಿ ಪಡೆಯಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಮುಂದಿನ ವಾರ ಜಲಸಂಪನ್ಮೂಲ ಸಚಿವರು ದೆಹಲಿಗೆ ತೆರಳಲಿದ್ದು, ಅಧಿವೇಶನ ಮುಗಿದ ತಕ್ಷಣ ತಾವು ಸ್ವತಃ ದೆಹಲಿಗೆ ತೆರಳಿ ಕೇಂದ್ರ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸುತ್ತೇನೆ. ಮತ್ತೆ ಅಗತ್ಯವಿದ್ದರೆ ಸರ್ವಪಕ್ಷಗಳ ನಿಯೋಗವನ್ನು‌ ನವದೆಹಲಿಗೆ ಕರೆದೊಯ್ಯಲಾಗುವುದು ಎಂದು ಅವರು ಹೇಳಿದರು.

    ಮಹಾದಾಯಿ ಯೋಜನೆಯಲ್ಲಿ ಈಗಾಗಲೇ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರಿನ ಬಳಕೆಗಾಗಿ ಯೋಜನೆ ಅನುಷ್ಠಾನಕ್ಕೆ ಪರಿಸರ ಇಲಾಖೆಯ ತೀರುವಳಿ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದುರ.

    ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಕುರಿತು ಕೇಂದ್ರ ಸರ್ಕಾರ ಇನ್ನೂ ಗಜೆಟ್ ಅಧಿಸೂಚನೆ ಹೊರಡಿಸಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ರಾಜ್ಯ ಸರ್ಕಾರ ಸಲ್ಲಿಸಿದ ಮಧ್ಯಂತರ ಅರ್ಜಿ ವಿಚಾರಣೆಯ ಪೀಠದಿಂದ ಇಬ್ಬರು ನ್ಯಾಯಾಧೀಶರು ಹಿಂದೆ ಸರಿದಿದ್ದಾರೆ. ಹೊಸ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು

    ಭಾರತ ಸರ್ಕಾರದ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ, ರಾಜ್ಯಕ್ಕೆ ಹಂಚಿಕೆಯಾಗುವ ನೀರಿನ ಪ್ರಮಾಣವನ್ನು ಸ್ಪಷ್ಟ ಪಡಿಸುವಂತೆ ಕೇಂದ್ರವನ್ನು ಕೋರಲಾಗಿದೆ. ಅಲ್ಲದೆ ಈ ಯೋಜನೆಯ ತಾಂತ್ರಿಕ ವರದಿಯ ಮಾಹಿತಿಯನ್ನು ಒದಗಿಸುವಂತೆ ವಿರೋಧ ಪಕ್ಷಗಳು ಕೋರಿದ್ದು, ವರದಿ ಲಭ್ಯವಾದ ಕೂಡಲೇ ಒದಗಿಸಲಾಗುವುದು ಎಂದು ತಿಳಿಸಿದರು.

    ಈ ಸಭೆಯಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ, ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ, ಕಾಂಗ್ರೆಸ್ ಮುಖಂಡರಾದ ಎಚ್ ಕೆ ಪಾಟೀಲ್, ಡಿ ಕೆ ಶಿವಕುಮಾರ್, ಎಂ ಬಿ ಪಾಟೀಲ್, ಜೆಡಿ ಎಸ್ ಪಕ್ಷದ ಮುಖಂಡರಾದ ಬಂಡೆಪ್ಪ ಕಾಶೆಂಪೂರ, ಕಾನೂನು ತಜ್ಞರು ಮತ್ತು ಇತರರು ಭಾಗವಹಿಸಿದ್ದರು.
    ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ರಾಜ್ಯ ವಕೀಲರ ತಂಡದ ಮೋಹನ ಎಂ. ಕಾತರಕಿ ಮೊದಲಾದವರು ಉಪಸ್ಥಿತರಿದ್ದರು

    ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಪಾರ್ಥಿವ ಶರೀರ ಸೋಮವಾರ ಬೆಂಗಳೂರಿಗೆ

    BENGALURU MARCH 18
    ಇತ್ತೀಚೆಗೆ ಉಕ್ರೇನ್ ನಲ್ಲಿ ರಷ್ಯಾ ದಾಳಿ ಸಂದರ್ಭದಲ್ಲಿ ಮೃತ ಪಟ್ಟ ಹಾವೇರಿ ಜಿಲ್ಲೆಯ ಯುವಕ ನವೀನ್ ಗ್ಯಾನಗೌಡರ್ ಅವರ ಪಾರ್ಥಿವ ಶರೀರ ಸೋಮವಾರ ದಿನಾಂಕ 21-3-2022ರಂದು ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ನೀಡಿದರು.

    ಉಕ್ರೇನ್ ನ Kharkiv ನಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯ ಚಳಗೇರಿಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತ ಪಟ್ಟಿದ್ದರು. ಸಮರ ಭೂಮಿಯಿಂದ ಮೃತ ದೇಹವನ್ನು ಭಾರತಕ್ಕೆ ತರಲು ಭಾರತ ಸರ್ಕಾರ ಸರ್ವ ವಿಧದ ಪ್ರಯತ್ನವನ್ನು ನಡೆಸಿತ್ತು.

    error: Content is protected !!