19.4 C
Karnataka
Monday, November 25, 2024
    Home Blog Page 26

    Mekedatu Padayatra: ಕಾಂಗ್ರೆಸ್ ಪಾದಯಾತ್ರೆ: ಬೆಂಗಳೂರಿನ ಜನತೆಗೆ ಸಂಕಷ್ಟ; ಸಿಎಂ ಬಸವರಾಜ ಬೊಮ್ಮಾಯಿ

    BENGALURU MAR 1

    ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ ಹಿತಾಸಕ್ತಿಗೆ ಇಡೀ ಬೆಂಗಳೂರು ಜನರನ್ನು ಸಂಕಷ್ಟಕ್ಕೆ ಈಡು ಮಾಡುತ್ತಿದ್ದಾರೆ. ಇವರ ಪಾದಯಾತ್ರೆಯಿಂದ ಬೆಂಗಳೂರಿಗೆ ಏನೂ ಅನುಕೂಲವಾಗುವುದಿಲ್ಲ. ಬದಲಿಗೆ ಸಂಕಷ್ಟವೇ ಹೆಚ್ಚು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

    ಮೇಕೆದಾಟು ಯೋಜನೆಗೆ ಕುರಿತು ಸರ್ಕಾರವನ್ನು ಒತ್ತಾಯಿಸಲು ಕಾಂಗ್ರೆಸ್ ಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಬೆಂಗಳೂರು ಜನರಿಗೆ ಸಂಕಷ್ಟ

    ಕಾಂಗ್ರೆಸ್ ಸ್ವಾತಂತ್ರ್ಯ ಉದ್ಯಾನವನ ದಲ್ಲಿ ಪ್ರತಿಭಟನೆ, ಭಾಷಣ ಮಾಡಿ ತೆರಳಬಹುದಿತ್ತು. ಬೆಂಗಳೂರಿನಲ್ಲಿ ಮೂರು ದಿನ ಎಲ್ಲಾ ದಿಕ್ಕಿನಲ್ಲಿ ಪಾದಯಾತ್ರೆ ಮಾಡುವ ಮೂಲಕ ಸಂಚಾರ ದಟ್ಟಣೆ ಉಂಟುಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಯಾವುದೋ ಒಂದು ಕಡೆ ಸಂಚಾರ ದಟ್ಟಣೆ ಯಾದರೆ ಅದರ ಪರಿಣಾಮ ಎಲ್ಲಾ ಕಡೆ ಆಗುತ್ತದೆ. ಇದರ ಅರಿವಿದೆ ಅವರಿಗೆ. ಆದರೂ ತಮ್ಮ ರಾಜಕೀಯ ಹಿತಾಸಕ್ತಿಗೆ ಇಡೀ ಬೆಂಗಳೂರು ಜನರನ್ನು ಸಂಕಷ್ಟಕ್ಕೆ ಈಡು ಮಾಡುತ್ತಿದ್ದಾರೆ. ಇವರ ಪಾದಯಾತ್ರೆಯಿಂದ ಬೆಂಗಳೂರಿಗೆ ಏನೂ ಅನುಕೂಲವಾಗುವುದಿಲ್ಲ. ಬದಲಿಗೆ ಸಂಕಷ್ಟವೇ ಹೆಚ್ಚು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು

    ಸರ್ಕಾರ ಮೇಕೆದಾಟು ಯೋಜನೆಗೆ ಬದ್ಧ

    ಸರ್ಕಾರ ಮೇಕೆದಾಟು ಯೋಜನೆಗೆ ಬದ್ಧವಾಗಿದೆ.ತಮ್ಮ ಕಾಲದಲ್ಲಿ ಯಾವ ಯೋಜನೆಗಳನ್ನು ಮಾಡಲಾಗಿಲ್ಲದವುಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಪಾದಯಾತ್ರೆ, ಧರಣಿ ಮಾಡುತ್ತಿದ್ದಾರೆ. ತಮ್ಮ ಕಾಲದಲ್ಲಿ ಮೇಕೆದಾಟು ಯೋಜನೆಗೆ ಡಿಪಿಆರ್ ಸಹ ಮಾಡಿಲ್ಲ. ಈಗ ಕೂಡಲೇ ಅದರ ಕಾಮಗಾರಿ ಪ್ರಾರಂಭ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ. ಇದೆ ರೀತಿ ಎಲ್ಲಾ ಯೋಜನೆಗಳ ಬಗ್ಗೆ ಅವರ ಕಾಲದಲ್ಲಿ ಏನೂ ಮಾಡಲಾಗಿಲ್ಲ.ನಮ್ಮ ಕಾಲದಲ್ಲಿ ನಾವು ಪ್ರಗತಿಯನ್ನು ಮಾಡಿದ್ದೇವೆ. ನಮಗೆ ಈ ವಿಷಯದಲ್ಲಿ ನಮಗೆ ಬದ್ಧತೆಯಿದೆ. ಖಂಡಿತವಾಗಿ ಮಾಡಿಯೇ ಮಾಡುತ್ತೇವೆ. ತಮ್ಮ ಕಾಲದಲ್ಲಿ ಏನೂ ಮಾಡದೇ ನಮ್ಮಿಂದ ಕಾಂಗ್ರೆಸ್ಸಿಗೆ ಯಾವುದೇ ನಿರೀಕ್ಷೆ ಮಾಡಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದರು.

    ಕಾಂಗ್ರೆಸ್ ಪಕ್ಷದವರು ಅಧಿಕಾರಾದಲ್ಲಿದ್ದಾಗ ವಿರೋಧಪಕ್ಷದವರ ಮೇಲೆ ಎಷ್ಟು ಕೇಸ್ ಗಳನ್ನು ಹಾಕಿದ್ದಾರೆ. ಎಷ್ಟು ಲಾಠಿ ಚಾರ್ಚ್ ಮಾಡಿದ್ದಾರೆ. ವಿರೋಧಪಕ್ಷದವರನ್ನು ಹತ್ತಿಕ್ಕುವ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಮಾಡಿದೆ. ಅದನ್ನು ಅವರು ನೆನಪುಮಾಡಿಕೊಳ್ಳಲಿ. ಕಾನೂನು ತನ್ನ ಕೆಲಸವನ್ನು ಮಾಡಿದಾಗ ವಿಪರೀತವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ಒಂದು ಜವಾಬ್ದಾರಿಯುತ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಅದೇ ರೀತಿ ಕಾನೂನಿನ ಅನ್ವಯವೂ ಕೆಲಸ ಮಾಡಲು ಅವಕಾಶವಿದೆ. ಇದರ ವಾಸ್ತವಾಂಶವನ್ನು ಅರ್ಥಮಾಡಿಕೊಳ್ಳದೆ ಈ ಹೇಳಿಕೆ ಕೊಡುತ್ತಿರುವುದು ಕಾಂಗ್ರೆಸ್ ಪಕ್ಷ ಎಷ್ಟರಮಟ್ಟಿಗೆ ರಾಜಕಾರಣದ ಸಲುವಾಗಿ ತಳಮಟ್ಟಕ್ಕೆ ಹೋಗಿದೆ ಎನ್ನುವುದನ್ನು ತಿಳಿಸುತ್ತದೆ ಹಾಗೂ ಅಧಿಕಾರ ಹಿಡಿಯಲು ಅತ್ಯಂತ ಹತಾಶವಾಗಿದೆ ಎಂದರು.

    ಗೃಹ ಸಚಿವರ ಕುರಿತು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಡಿ.ಕೆ.ಶಿವಕುಮಾರ್ ಅವರು ಹಲವಾರು ಖಾತೆಗಳನ್ನು ಹೊಂದಿದ್ದ ಅನುಭವಿ ರಾಜಕಾರಣಿ. ಇನ್ನೊಬ್ಬರ ಬಗ್ಗೆ ಹೇಳುವುದು ಬಹಳ ಸುಲಭ. ಯಾವ ಸಂದರ್ಭದಲ್ಲಿ, ಯಾವುದಕ್ಕಾಗಿ, ಏನು ನಡೆದಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಅದರಲ್ಲಿ ತಮ್ಮ ಪಾತ್ರ ಏನಿದೆ ಎಂದು ವಿಶ್ಲೇಷಣೆ ಮಾಡಿಕೊಳ್ಳಲಿ ಎಂದರು.

    ಮೇಕೆದಾಟು ಮತ್ತು ಕಾಂಗ್ರೆಸ್ ನಾಯಕರ ಚದುರಂಗದಾಟ

    This image has an empty alt attribute; its file name is c-rudrappa-1.jpg

    ಸಿ.ರುದ್ರಪ್ಪ

    ತೊಂಬತ್ತರ ದಶಕದ ಕೊನೆಯ ಭಾಗದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರಲಿಲ್ಲ.ಧರಂ ಸಿಂಗ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.ಮಲ್ಲಿಕಾರ್ಜುನ ಖರ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದರು.ಎಚ್. ಕೆ .ಪಾಟೀಲ್ ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದರು.ಮೂವರು ನಾಯಕರೂ ಅನ್ಯೋನ್ಯವಾಗಿದ್ದರು.ಕೆಲವರು ಅವರನ್ನು ಪ್ರೀತಿಯಿಂದ “ನೀವು ಸೆಟ್ ದೋಸೆ ರೀತಿ ಇದ್ದೀರಿ “ಎಂದು ಕಿಚಾಯಿಸುತ್ತಿದ್ದರು.ಕಳೆದ ಎರಡೂ ಮುಕ್ಕಾಲು ವರ್ಷಗಳಿಂದಲೂ ಕಾಂಗ್ರೆಸ್ ಮತ್ತೆ ಅಧಿಕಾರದಲ್ಲಿಲ್ಲ.

    ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ.ಸಿದ್ದರಾಮಯ್ಯ ವಿಧಾನಸಭೆ ವಿರೋಧಪಕ್ಷದ ನಾಯಕರಾಗಿದ್ದಾರೆ.ಎಸ್ ಆರ್ ಪಾಟೀಲ್ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿದ್ದರು.ಆದರೆ ವಿರೋಧ ಪಕ್ಷದ ನಾಯಕರೆಂದರೆ ಸಿದ್ದರಾಮಯ್ಯನವರೇ ಎಂಬ ಭಾವನೆ ಜನರ ಮನಸ್ಸಿನಲ್ಲಿ ಬೇರೂರಿತ್ತು.ಎಸ್ ಆರ್ ಪಾಟೀಲರು ಮಹತ್ವಾಕಾಂಕ್ಷಿ ಹಾಗೂ ಪ್ರಭಾವಶಾಲಿಯಾಗಿರಲಿಲ್ಲ.ಅವರ ಕಾರ್ಯ ವೈಖರಿಯೂ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ.ಆದರೆ ಶಿಷ್ಟಾಚಾರಕ್ಕೆ ಅನುಗುಣವಾಗಿಯಾದರೂ ಅವರಿಗೆ ಸಿಗಬೇಕಾಗಿದ್ದ ಮನ್ನಣೆ ದೊರೆತಿರಲಿಲ್ಲ.ಸುಮ್ಮನೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಇದ್ದರು.ಸಾರ್ವಜನಿಕ ಸಮಾರಂಭಗಳಲ್ಲಿ,ಪಕ್ಷದ ವೇದಿಕೆಗಳಲ್ಲಿ ಅಗ್ರಗಣ್ಯ ನಾಯಕರ ಸಾಲಿನಲ್ಲಿ ಅವರಿಗೆ ಸ್ಥಾನ ಸಿಕ್ಕಿದ್ದು ಕಡಿಮೆ.ಪೋಸ್ಟರ್ ಗಳಲ್ಲಂತೂ ಒಂದು ಮೂಲೆಯಲ್ಲಿ ಅವರ ಚಿಕ್ಕ ಫೋಟೋ ಇರುತ್ತಿತ್ತು.ಆದರೆ ಇತ್ತೀಚಿಗೆ ಬಿ ಕೆ ಹರಿಪ್ರಸಾದ್ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ನಂತರ ರಾಜಕೀಯ ಚಿತ್ರಣ ಬದಲಾಗಿದೆ.ಅವರಿಗೆ ಪಕ್ಷದ ಅಧ್ಯಕ್ಷರು ಮತ್ತು ವಿಧಾನ ಸಭೆ ವಿರೋಧ ಪಕ್ಷದ ನಾಯಕರಿಗೆ ಸರಿ ಸಮಾನವಾದ ಸ್ಥಾನಮಾನವನ್ನು ಕಲ್ಪಿಸಲಾಗುತ್ತಿದೆ.


    ಮೇಕೆದಾಟು ಪಾದಯಾತ್ರೆಯ ಪೋಸ್ಟರ್ ನಲ್ಲಿ ಹರಿಪ್ರಸಾದ್,ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.ಸೆಟ್ ದೋಸೆಯಂತೆ ಅವರು ಅನ್ಯೋನ್ಯವಾಗಿದ್ದಾರೆ ಎಂದು ಯಾರಾದರೂ ಭಾವಿಸಿದರೆ ಅದು ಅವರ ಭ್ರಮೆಯಷ್ಟೆ.ಈ ಪೋಸ್ಟರ್ ನಲ್ಲಿ ಹರಿಪ್ರಸಾದ್ ಅಧ್ಯಕ್ಷರ ಬಲಕ್ಕೆ ಇರುವುದು ಕೇವಲ ಕಾಕತಾಳೀಯ ಆಗಿರಲಾರದು.

    ರಾಷ್ಟ್ರ ಮಟ್ಟದಲ್ಲಿ ಆರ್ ಎಸ್ ಎಸ್ ಸಿದ್ದಾಂತವನ್ನು ವಿರೋಧಿಸುತ್ತಿರುವವರು ಮತ್ತು “ಮೋದಿ ಭಂಜಕರ”ಪಟ್ಟಿಯಲ್ಲಿ ಸಿದ್ದರಾಮಯ್ಯನವರ ಹೆಸರು ಪ್ರಮುಖವಾಗಿದೆ.ಅದೇ ರೀತಿ ಹರಿಪ್ರಸಾದ್ ಕೂಡ ಸಂಘ ಪರಿವಾರ ಮತ್ತು ಕೋಮುವಾದದ ಉಗ್ರ ಟೀಕಾಕಾರರು.ಅವರಿಗೆ ರಾಷ್ಟ್ರ ರಾಜಕಾರಣದ ಅಪರೂಪದ ಲೋಕದೃಷ್ಟಿ ಮತ್ತು ಭೌದ್ದಿಕ ಪ್ರಖರತೆ(intellectual vigour)ಇದೆ.ದೆಹಲಿ ವರಿಷ್ಠರ ಅಂತಃಪುರಕ್ಕೆ ನೇರ ಪ್ರವೇಶವಿರುವ ಕೆಲವೇ ನಾಯಕರಲ್ಲಿ ಅವರೂ ಒಬ್ಬರು.ಸಿದ್ದರಾಮಯ್ಯನವರಂತೆ ಹರಿಪ್ರಸಾದ್ ಕೂಡ ಒಬ್ಬ ಪರಿಣಾಮಕಾರಿ ಸಂಸದೀಯ ಪಟು.ಶಿವಮೊಗ್ಗದಲ್ಲಿ ಇತ್ತೀಚಿಗೆ ಹತ್ಯೆಗೀಡಾದ ಯುವಕನ ಕುಟುಂಬದವರಿಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿದರೆ ಕಾಂಗ್ರೆಸ್ ಸ್ಪರ್ಧಿಸುವುದಿಲ್ಲ ಎಂದು ಸವಾಲು ಹಾಕುವ ಮೂಲಕ ರಾಜ್ಯದ ಗಮನ ಸೆಳೆದವರು.

    ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹರಿಪ್ರಸಾದ್ ಅವರಿಂದ ಅಂತರ ಕಾಯ್ದುಕೊಂಡಿದ್ದರು.ಸಿದ್ದರಾಮಯ್ಯನವರ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲು ಕೆಲವು ರಾಜಕೀಯ ಹಿತಾಸಕ್ತಿಗಳು ಹರಿಪ್ರಸಾದ್ ಅವರನ್ನುಈಗ ಬಳಸುತ್ತಿವೆಯೇ?ಅಥವಾ ಹರಿಪ್ರಸಾದ್ ತಮಗೆ ಗೊತ್ತಿಲ್ಲದಂತೆಯೇ ಸಿದ್ದರಾಮಯ್ಯನವರ ವಿರುದ್ದದ ಅಸ್ತ್ರವಾಗಿ ಬಳಕೆಯಾಗುತ್ತಿದ್ದಾರೆಯೇ?ಇಂತಹ ಕುತೂಹಲಗಳು ಸಹಜ.ಕಾಂಗ್ರೆಸ್ ನಲ್ಲಿ ರಾಜಕೀಯ ಚದುರಂಗದಾಟದ ದಾಳಗಳು ಮತ್ತು ಪ್ರತಿದಾಳಗಳು ಸಲೀಸಾಗಿ ಉರುಳುತ್ತಿವೆ.

    ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಕಾಂಗ್ರೆಸ್ ಪಕ್ಷದ ಕಚೇರಿಗಿಂತ ಕಾಂಗ್ರೆಸ್ ಶಾಸಕಾಂಗ ಪಕ್ಷದ(CLP)ಕಚೇರಿ,ವಿರೋಧ ಪಕ್ಷದ ನಾಯಕರ ಕೊಠಡಿ ಅಥವಾ ವಿಧಾನಸಭೆ ಮೊಗಸಾಲೆಯಲ್ಲಿ ಸಿದ್ದರಾಮಯ್ಯನವರೊಂದಿಗೆ ಕಾಣಿಸಿಕೊಳ್ಳುತ್ತಿರುವುದೇ ಹೆಚ್ಚು.ಕಾರ್ಯಾಧ್ಯಕ್ಷರುಗಳಂತೂ ಇಬ್ಬರೂ ನಾಯಕರ ನಡುವೆ ಹರಿದು ಹಂಚಿ ಹೋಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.ಒಟ್ಟಿನಲ್ಲಿ ಕಾಂಗ್ರೆಸ್ ವಿದ್ಯಮಾನ ಒಂದು ನೆರಳು-ಬೆಳಕಿನ ಆಟದಂತೆ ಭಾಸವಾಗುತ್ತಿದೆ.ಕಾವೇರಿ ನದಿಗೆ ಅಡ್ಡಲಾಗಿ ಒಂದು ಸಮಾನಾಂತರ ಜಲಾಶಯ(balancing reservoir)ನಿರ್ಮಾಣ ಮಾಡುವುದು ಮೇಕೆದಾಟು ಯೋಜನೆಯ ಉದ್ದೇಶ.ಅದೇ ರೀತಿ ಕಾಂಗ್ರೆಸ್ ಪಕ್ಷದ ವಿವಿಧ ನಾಯಕರ ನಡುವೆ ಒಂದು balancing act ನಡೆಯುತ್ತಿದೆ.


    ಸಿ ರುದ್ರಪ್ಪ ನಾಡಿನ ಹಿರಿಯ ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರು.

    ಕರ್ನಾಟಕದ ಅತ್ಯಂತ ವಿಶಿಷ್ಟ ಶಿವಲಿಂಗಗಳು

    ಕೆಂಗೇರಿ ಚಕ್ರಪಾಣಿ


    1 ಕರ್ನಾಟಕದ ಅತ್ಯಂತ ಪ್ರಾಚೀನ ಶಿವಲಿಂಗ ತಾಳಗುಂದದ ಪ್ರಣವೇಶ್ವರ


    ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನಲ್ಲಿರುವ ಶಿರಾಳಕೊಪ್ಪದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಅತ್ಯಂತ ಪ್ರಾಚೀನ ಅಗ್ರಹಾರ ತಾಳಗುಂದ. ಇಲ್ಲಿರುವ ಸ್ತಂಭ ಶಾಸನದಿಂದ ಕರ್ನಾಟಕದ ಪ್ರಥಮ ಚಕ್ರವರ್ತಿ ಮಯೂರವರ್ಮನ ಚರಿತ್ರೆ ದೊರೆಯುತ್ತದೆ. ತಾಳಗುಂದದಲ್ಲಿರುವ ಪ್ರಣವೇಶ್ವರ ಲಿಂಗವು ಸುಮಾರು 6 ಅಡಿ ಎತ್ತರವಿದ್ದು 5 ಅಡಿ ಅಗಲವಿರುವ ಬೃಹತ್ ಶಿವಲಿಂಗ. ಅತ್ಯಂತ ಪ್ರಾಚೀನ ಶಿವಲಿಂಗಗಳ ಲಕ್ಷಣವಿರುವ ಈ ಶಿವಲಿಂಗದ ಎದುರಿಗಿರುವ ಸ್ತಂಭಶಾಸನದಲ್ಲಿ ಸಾತಕರ್ಣಿಗಳಿಂದ ಪೂಜಿಸಲ್ಪಟ್ಟಂತಹ ಶಿವ ಎಂದು ಉಲ್ಲೇಖಿಸಲಾಗಿದೆ. ಸಾತಕರ್ಣಿ (ಶಾತವಾಹನರು) ಒಂದು ಅಥವಾ ಎರಡನೆಯ ಶತಮಾನದವರಾಗಿರುವುದರಿಂದ ಪ್ರಸ್ತುತ ಶಿವಲಿಂಗವು ಎರಡನೆಯ ಶತಮಾನಕ್ಕೆ ಸೇರಿದ್ದು ಕನ್ನಡನಾಡಿನ ಅತ್ಯಂತ ಪ್ರಾಚೀನ ಶಿವಲಿಂಗ ಎಂಬ ಕೀರ್ತಿಗೆ ಪಾತ್ರವಾಗಿದೆ.


    2 ಚಂದ್ರವಳ್ಳಿಯ ಧರ್ಮೇಶ್ವರ

    ಚಿತ್ರದುರ್ಗ ಜಿಲ್ಲೆ ಅದೇ ತಾಲ್ಲೂಕಿನ ಜಿಲ್ಲಾಕೇಂದ್ರದಿಂದ ಸುಮಾರು ನಾಲ್ಕು ಕಿ.ಮೀ. ದೂರದಲ್ಲಿ ಚಂದ್ರವಳ್ಳಿಯೆಂಬ ಪ್ರಾಚೀನ ಪ್ರದೇಶವಿದೆ. ಇಲ್ಲಿರುವ ಅಂಕಲಿಮಠದ ಬದಿಯಲ್ಲಿ ಒಂದು ಗುಹಾಂತರ ದೇವಾಲಯವಿದೆ. ಇಲ್ಲಿ ಐದು ಶಿವಲಿಂಗಗಳಿದ್ದು ಎಲ್ಲವೂ ಐದನೆಯ ಶತಮಾನಕ್ಕೆ ಸೇರುವ ಶಿವಲಿಂಗಗಳಾಗಿವೆ. ಇಲ್ಲಿರುವ ಶಿವಲಿಂಗಗಳು ಪಂಚಪಾಂಡವರ ಹೆಸರಿನಲ್ಲಿ ಪ್ರತಿಷ್ಠಾಪಿತವಾಗಿವೆ. ಪ್ರಧಾನ ಶಿವಲಿಂಗವಾದ ಧರ್ಮೇಶ್ವರ ಲಿಂಗವು ಸುಮಾರು 5 ಅಡಿ ಎತ್ತರವಿದೆ. ಶಿವಲಿಂಗದ ಪೂಜಾಭಾಗದಲ್ಲಿ ಬ್ರಹ್ಮಸೂತ್ರವು ಸ್ಪಷ್ಟವಾಗಿ ಗೋಚರಿಸುತ್ತದೆ. ಕರಿಶಿಲೆಯಿಂದ ಮಾಡಿರುವ ಧರ್ಮೆಶ್ವರ ಲಿಂಗವು ಪ್ರಾಚೀನತೆಯಿಂದ ಬಹಳ ಮಹತ್ವವಾದ ಶಿವಲಿಂಗವಾಗಿದೆ.

    3. ಬನವಾಸಿಯ ಮಧುಕೇಶ್ವರ

    ಉತ್ತರ ಕನ್ನಡ ಜಿಲ್ಲೆ ಸಿರಸಿ ತಾಲ್ಲೂಕಿನ ಬನವಾಸಿ ಆದಿ ಕದಂಬರ ರಾಜಧಾನಿಯಾಗಿದ್ದ ಸ್ಥಳ. ಇಲ್ಲಿರುವ ಮಧುಕೇಶ್ವರ ದೇವಾಲಯವು ಒಂದು ಸುಂದರವಾದ ಆಲಯ. ಬನವಾಸಿಯ ಮಧುಕೇಶ್ವರ ಲಿಂಗವು ಕದಂಬರ ಆರಾಧ್ಯ ದೈವವಾಗಿದ್ದು ಬಹಳ ಭವ್ಯವಾಗಿದೆ. ಸುಮಾರು ಏಳು ಅಡಿ ಎತ್ತರದ ಶಿವಲಿಂಗವು ಕಲಾತ್ಮಕವಾದ ಪಾಣಿಪೀಠವನ್ನು ಹೊಂದಿದೆ.
    ಬನವಾಸಿಯ ಮಧುಕೇಶ್ವರನ ವಿಶೇಷತೆ, ಶಿವಲಿಂಗವು ಮಧುವಿನ (ಜೇನಿನ) ಬಣ್ಣವನ್ನು ಹೊಂದಿರುವುದು. ಮಧುಕೇಶ್ವರನು ಅಪಾರವಾದ ಭಕ್ತವೃಂದವನ್ನು ಹೊಂದಿರುವನು.

    4. ಭಾರಂಗಿಯ ಮುಖಲಿಂಗ

    ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಭಾರಂಗಿಯ ಊರ ಹೊರವಲಯದಲ್ಲಿರುವ ಶಿವಲಿಂಗವು ಬಹಳ ವೈಶಿಷ್ಟ್ಯಪೂರ್ಣವಾಗಿದೆ. ಶಿವಲಿಂಗದ ಪೂಜಾಭಾಗವು ಲಿಂಗರೂಪದಲ್ಲಿರದೆ ಮಾನವ ರೂಪದಲ್ಲಿದೆ. ಗುಂಡಾದ ತಲೆ, ನೀಳನಾಸಿಕ, ತೆರೆದ ಕಣ್ಣು, ಅಗಲ ಕಿವಿಗಳನ್ನು ಸ್ಪಷ್ಟವಾಗಿ ಬಿಡಿಸಲಾಗಿದೆ. ಇದೂ ಸಹಾ ಒಂದು ಅಪರೂಪದ ಶಿವಲಿಂಗವಾಗಿದ್ದು ಶಿವಲಿಂಗದ ಪ್ರಭೇದಗಳಾದ ಮುಖಲಿಂಗಕ್ಕೆ ಒಂದು ಉತ್ತಮ ಉದಾಹರಣೆ. ಭಾರಂಗಿಯ ಮುಖಲಿಂಗವು ಒಂಭತ್ತನೆಯ ಶತಮಾನಕ್ಕೆ ಸೇರುತ್ತದೆ.

    5. ಮಹಾಕೂಟದ ಪಂಚಲಿಂಗೇಶ್ವರ

    ಪರಶಿವನನ್ನು ಪಂಚಭೂತಗಳ ಸ್ವರೂಪದಲ್ಲಿ ಆರಾಧಿಸಲಾಗುತ್ತದೆ (ಆಕಾಶ, ಅಗ್ನಿ, ವಾಯು, ಜಲ, ಭೂಮಿ). ಅದೇ ರೀತಿಯಾಗಿ ಪರಶಿವನಿಗೆ ವಾಮದೇವ, ತತ್ಪುರುಷ, ಅಘೋರ, ಸದ್ಯೋಜಾತ ಹಾಗೂ ಈಶಾನ ಎಂಬ ಐದು ಮುಖಗಳು. ಭಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನಲ್ಲಿ ಬಾದಾಮಿಯಿಂದ 5 ಕಿ.ಮೀ. ದೂರದಲ್ಲಿರುವ ಮಹಾಕೂಟವು ಚಾಲುಕ್ಯರ ಒಂದು ಪ್ರಮುಖ ಕೇಂದ್ರ, ಚಾಲುಕ್ಯರ ಆರಾಧ್ಯದೈವ ಮುಕುಟೇಶ್ವರ ದೇವಾಲಯದ ಬದಿಯಲ್ಲಿರುವ ಕಲ್ಯಾಣಿಯಲ್ಲಿರುವ ಒಂದು ಮಂಟಪದಲ್ಲಿ ಅಪರೂಪದ ಸೊಗಸಾದ ಪಂಚಲಿಂಗೇಶ್ವರ ಮೂರ್ತಿಯಿದೆ. ನಾಲ್ಕುದಿಕ್ಕಿನಲ್ಲಿಯೂ, ಮುಖಗಳನ್ನು ಹೊಂದಿರುವ ಶಿವಲಿಂಗದ ಐದನೆಯ ಭಾಗ ಈಶಾನ್ಯಲಿಂಗವು ಶಿವಲಿಂಗದ ಶಿರೋಭಾಗವನ್ನು ಪ್ರತಿನಿಧಿಸುತ್ತದೆ. ಬಾದಾಮಿಯ ಚಾಲುಕ್ಯರ ಕಾಲಕ್ಕೆ ಸೇರಿರುವ ಈ ಪಂಚಲಿಂಗೇಶ್ವರ ಲಿಂಗದ ಕಾಲವು ಆರನೆಯ ಶತಮಾನಕ್ಕೆ ಸೇರಿರುತ್ತದೆ. ಇದೇ ರೀತಿಯ ಪಂಚಲಿಂಗೇಶ್ವರ ಲಿಂಗವು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯ ಕೇದಾರೇಶ್ವರ ದೇವಾಲಯದ ಸಮೀಪ ದೊರೆಯುತ್ತದೆ. ಹಿಂದೆ ಇಲ್ಲಿ ಪಂಚಲಿಂಗೇಶ್ವರನಿಗಾಗಿಯೇ ದೇವಾಲಯವಿದ್ದುದಾಗಿ ಶಾಸನದಿಂದ ತಿಳಿದು ಬರುತ್ತದೆ. ಶಿವಲಿಂಗವನ್ನು ಇಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ. ಧಾರವಾಡ ಜಿಲ್ಲೆ ಉಣಕಲ್ಲಿನಲ್ಲಿರುವ ಚಂದ್ರಮೌಳೇಶ್ವರ ದೇವಾಲಯದಲ್ಲಿಯೂ ಸಹ ಪಂಚಲಿಂಗೇಶ್ವರ ಲಿಂಗವಿದೆ.

    6. ಪಂಕಜನಹಳ್ಳಿಯ ಶತಲಿಂಗ

    ಪಂಕಜನಹಳ್ಳಿಯು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವ ಒಂದು ಗ್ರಾಮ. ಇಲ್ಲಿರುವ ಮಲ್ಲಿಕಾರ್ಜುನ ದೇವಾಲಯದಲ್ಲಿರುವ ಮಲ್ಲಿಕಾರ್ಜುನ ಲಿಂಗದ ಪಾಣಿಪೀಠದ ಮೇಲೆ ಒಂದು ಶಿವಲಿಂಗದಲ್ಲಿ ನೂರು ಶಿವಲಿಂಗಗಳನ್ನು ರಚಿಸಲಾಗಿದೆ. ಚಿಕ್ಕದಾದ ಪಾಣಿಪೀಠದ ಮೇಲಿರುವ ಪೂಜಾಭಾಗದಲ್ಲಿ ನೂರು ಶಿವಲಿಂಗಗಳನ್ನು ಪ್ರತಿನಿಧಿಸುವ ಲಿಂಗದ ಮಾದರಿಯ ಗುಂಡುಕಲ್ಲುಗಳಿವೆ. ಮಲ್ಲಿಕಾರ್ಜುನ ದೇವಾಲಯವನ್ನು ದರ್ಶಿಸುವ ಶಿವಭಕ್ತರಿಗೆ ಒಂದೇ ಬಾರಿಗೆ ನೂರು ಶಿವಲಿಂಗಗಳನ್ನು ದರ್ಶಿಸುವ ಭಾಗ್ಯ ಲಭಿಸುವುದೆಂಬ ನಂಬಿಕೆ ಶಿವಭಕ್ತರದು.

    7. ಪುರದ ಸಹಸ್ರಲಿಂಗ

    ಕೊಪ್ಪಳ ಜಿಲ್ಲೆ ಕನಕಗಿರಿ ತಾಲ್ಲೂಕಿನ ಪುರದ ಸೋಮೇಶ್ವರ ದೇವಾಲಯವು ಬಹಳ ವಿಶೇಷತೆಯಿಂದ ಕೂಡಿದೆ. ದೇವಾಲಯದ ಗರ್ಭಗುಡಿಯ ಸುತ್ತಲಿರುವ ಎರಡು ಪ್ರಾಕಾರಗಳಲ್ಲಿ ಶಿವಲಿಂಗಗಳ ಸಾಲುಗಳೇ ಇವೆ. ಇಲ್ಲಿರುವ ಶಿವಲಿಂಗಗಳು ಸಹಾ ಬಹಳ ವೈವಿಧ್ಯತೆಯಿಂದ ಕೂಡಿದೆ. ಒಂದು ಶಿವಲಿಂಗದಲ್ಲಿ ಸಹಸ್ರಲಿಂಗ, ನವಗ್ರಹಗಳನ್ನು ಪ್ರತಿನಿಧಿಸುವ ದಶಲಿಂಗ, ಪಂಚಲಿಂಗ, ಮುಂತಾದ ಶಿವಲಿಂಗಗಳನ್ನು ಪುರದಲ್ಲಿ ಕಾಣಬಹುದು. ಈ ರೀತಿಯ ವಿಶೇಷತೆಯನ್ನು ಹೊಂದಿರುವ ಪುರದ ಸೋಮೇಶ್ವರ ದೇವಾಲಯಕ್ಕೆ ಕೋಟಿಲಿಂಗೇಶ್ವರ ದೇವಾಲಯವೆಂದು ಕರೆಯುವರು. ಕೋಲಾರ ಜಿಲ್ಲೆಯ ಕಮ್ಮಸಂದ್ರದಲ್ಲಿ ಇದೇ ಮಾದರಿಯ ಕೋಟಿಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದ್ದು ಬಹು ಹಿಂದೆಯೇ ಈ ಪರಿಕಲ್ಪನೆಯಲ್ಲಿ ಪುರದ ಸೋಮೇಶ್ವರ ದೇವಾಲಯ ರಚನೆಯಾಗಿರುವುದು ವಿಶೇಷ.

    8.ಸಿರಸಿಯ ಸಹಸ್ರಲಿಂಗ

    ಉತ್ತರ ಕನ್ನಡ ಜಿಲ್ಲೆಯ ಸಿರಸಿಯ ಸಮೀಪ ಶಾಲ್ಮಲಿ ನದಿಯ ತೀರದಲ್ಲಿ ಸಹಸ್ರಲಿಂಗ ಎಂಬ ದಿವ್ಯಕ್ಷೇತ್ರವಿದೆ. ಇಲ್ಲಿ ನದಿ ತೀರದಲ್ಲಿರುವ ಹುಟ್ಟುಬಂಡೆಗಳ ಮೇಲೆ ಹಲವಾರು ಲಿಂಗಗಳನ್ನು ಕೆತ್ತಲಾಗಿದೆ. ಅಭಿಷೇಕ ಪ್ರಿಯನಾದ ಪರಶಿವನಿಗೆ ಇಲ್ಲಿ ನಿತ್ಯವೂ ನದಿ ನೀರಿನಿಂದ ಸಹಜ ಅಭಿಷೇಕ. ಬೇಸಿಗೆಯ ಕಾಲದಲ್ಲಿ ಶಿವಲಿಂಗಗಳ ದರ್ಶನ ಲಭ್ಯ.

    9.ಬಂದಣಿಕೆಯ ಸಹಸ್ರಲಿಂಗ

    ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಂದಣಿಕೆಯು ಹಲವಾರು ದೇವಾಲಯಗಳ ಬೀಡು. ಬಂದಣಿಕೆ ಗ್ರಾಮದ ನಡುವಿರುವ ಶಿವಾಲಯದಲ್ಲಿ ಸಹಸ್ರಲಿಂಗವಿದೆ. ವೃತ್ತಾಕಾರದ ಪಾಣಿಪೀಠದ ಮೇಲಿರುವ ಪೂಜಾ ಭಾಗದಲ್ಲಿ ಒಂದು ಸಾವಿರ ಶಿವಲಿಂಗಗಳನ್ನು ಬಿಡಿಸಲಾಗಿದೆ. ಹತ್ತು ಸಾಲುಗಳಿರುವ ಶಿವಲಿಂಗಗಳಲ್ಲಿ ತಲಾ ನೂರು ಶಿವಲಿಂಗಗಳಂತೆ ಸಹಸ್ರಲಿಂಗಗಳನ್ನು ರಚಿಸಲಾಗಿದೆ.ಧಾರವಾಡ ಸಮೀಪದಲ್ಲಿರುವ ನರೇಂದ್ರ ಎಂಬ ಗ್ರಾಮದಲ್ಲಿಯೂ ಒಂದು ಸುಂದರವಾದ ಸಹಸ್ರಲಿಂಗವಿದೆ.

    10. ಚಾಮರಾಜನಗರದ ಸಹಸ್ರಲಿಂಗ

    ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ರಚಿತವಾದ ಚಾಮರಾಜನಗರ ಜಿಲ್ಲೆಯ ಜಿಲ್ಲಾಕೇಂದ್ರದಲ್ಲಿರುವ ಚಾಮರಾಜೇಶ್ವರ ದೇವಾಲಯವು ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ರಚಿತವಾದ ಸುಂದರ ಆಲಯ. ಚಾಮರಾಜೇಶ್ವರ ದೇವಾಲಯದ ಪ್ರಾಕಾರದಲ್ಲಿ ಬಂದಣಿಕೆಯಲ್ಲಿರುವಂತೆ ಒಂದು ಸಹಸ್ರಲಿಂಗವಿದೆ. ಕಲಾತ್ಮಕವಾದ ಪಾಣಿಪೀಠದ ಮೇಲಿರುವ ಶಿವಲಿಂಗದ ಪೂಜಾಭಾಗದಲ್ಲಿ ಸಹಸ್ರಲಿಂಗಗಳಿವೆ.

    11. ಹಂಪಿಯ ಸಹಸ್ರಲಿಂಗ

    ವಿಶ್ವವಿಖ್ಯಾತ ಹಂಪಿಯಲ್ಲಿರುವ ಚಕ್ರತೀರ್ಥ ಎಂಬ ಪ್ರದೇಶದಲ್ಲಿ ಶಿವಲಿಂಗದ ವ್ಯೂಹವನ್ನು ಬಿಡಿಸಲಾಗಿದೆ. ತುಂಗಭದ್ರಾ ನದಿಯಲ್ಲಿರುವ ಹುಟ್ಟು ಬಂಡೆಯ ಮೇಲೆ ಒಂದು ಶಿವಲಿಂಗವನ್ನು ಪ್ರಧಾನವಾಗಿ ರಚಿಸಿಕೊಂಡು ಚೌಕಾರಾದಲ್ಲಿ ಶಿವಲಿಂಗಗಳನ್ನು ರಚಿಸಲಾಗಿದೆ. ಹಂಪಿಯಲ್ಲಿರುವ ಮೂಲ್ಯವಂತ ರಘುನಾಥ ದೇವಾಲಯದ ಹಿಂಭಾಗದಲ್ಲಿ ಶಿವಲಿಂಗಗಳ ಎರಡು ಸಾಲುಗಳಿವೆ. ಸಾಲಾಗಿರುವ ಪ್ರತಿ ಶಿವಲಿಂಗಗಳ ಮುಂದೆ ನದಿಯ ಶಿಲ್ಪಗಳನ್ನು ಬಿಡಿಸಿರುವುದು ವಿಶೇಷ.

    12. ಮಹಾಕೂಟದ ಕೋಟಿಲಿಂಗೇಶ್ವರ

    ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನಲ್ಲಿರುವ ಮಹಾಕೂಟದ ಮಹಾಕೋಟೇಶ್ವರ ದೇವಾಲಯದ ಆವರಣದಲ್ಲಿ ಒಂದು ಶಿವಲಿಂಗದಲ್ಲಿ ಕೋಟಿಲಿಂಗಗಳನ್ನು ಬಿಡಿಸಲಾಗಿದೆ. ಶಿವಲಿಂಗದ ಪೂಜಾಭಾಗದಲ್ಲಿ ಸಣ್ಣಸಣ್ಣ ಲಿಂಗಗಳನ್ನು ಬಿಡಿಸಲಾಗಿದ್ದು ಪ್ರತಿ ಲಿಂಗಗಳಲ್ಲಿಯೂ ಅತೀ ಸೂಕ್ಷ್ಮ ಲಿಂಗಗಳಿವೆ.

    13. ಬಂದಣಿಕೆಯ ಬ್ರಹ್ಮೇಶ್ವರ

    ತ್ರಿಮೂರ್ತಿಗಳಲ್ಲೊಬ್ಬನಾದ ಬ್ರಹ್ಮದೇವನಿಗೆ ಸಾಮಾನ್ಯವಾಗಿ ಮೂರ್ತಿಪೂಜೆಯಿರುವುದಿಲ್ಲ. ಆತನನ್ನು ಲಿಂಗ ರೂಪದಲ್ಲಿಯೇ ಆರಾಧಿಸುವ ಸಂಪ್ರದಾಯ. ಬ್ರಹ್ಮಲಿಂಗದ ಪಾಣಿಪೀಠವು ಸಾಮಾನ್ಯವಾಗಿ ಎಡಕ್ಕೆ ತಿರುಗಿರುತ್ತದೆ ಹಾಗೂ ಪಾಣಿಪೀಠದ ಮೇಲೆ ಬ್ರಹ್ಮ ಪೀಠವಾದ ಅರಳಿದ ಕಮಲವನ್ನು ಬಿಡಿಸಲಾಗುತ್ತದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಂದಣಿಕೆಯ ತ್ರಿಮೂರ್ತಿ ದೇವಾಲಯದಲ್ಲಿ ಬ್ರಹ್ಮೇಶ್ವರಲಿಂಗವಿದೆ. ಇದೇ ರೀತಿಯ ಬ್ರಹ್ಮೇಶ್ವರ ಲಿಂಗವನ್ನು ಬಳಳಾರಿ ಜಿಲ್ಲೆ ಹೊಸಪೇಟೆ ಸಮೀಪವಿರುವ ಸಂಡೂರಿನ ಕುಮಾರಸ್ವಾಮಿ ದೇವಾಲಯದ ಆವರಣದಲ್ಲಿರುವ ಒಂದು ಶಿವಲಿಂಗದಲ್ಲಿ ಕಾಣಬಹುದು.

    14. ನೆಲಮನೆ, ಚೌಡಪ್ಪನಹಳ್ಳಿ, ಮೋರ್ಕಂಡಿಯ ಹಾಗೂ ಹೆಗ್ಗೆರೆಯ ದಾರಾಲಿಂಗಗಳು

    ದಾರಾಲಿಂಗವು ಶಿವಲಿಂಗದ ಒಂದು ಪ್ರಭೇದ. ಶಿವಲಿಂಗದ ಪೂಜಾಭಾಗದಲ್ಲಿ ಗೆರೆಗಳನ್ನು ಮೂಡಿಸಲಾಗುತ್ತದೆ. ಈ ರೀತಿಯ ರೇಖೆಗಳು 5, 7, 9, 12, 16, 20, 24, 28, 100 ಮುಖಗಳನ್ನು ಹೊಂದಿರಬೇಕೆಂದು ಸುಪ್ರಭೇದಾಗಮದಲ್ಲಿ ವಿವರಿಸಲಾಗಿದೆ. ಪ್ರತಿ ದಾರಾಲಿಂಗಗಳನ್ನು ಅರ್ಜಿಸುವುದರಿಂದ ಆಗುವ ಫಲಶೃತಿಯನ್ನು ಸಹಾ ನೀಡಲಾಗಿದೆ.

    ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಶ್ರೀರಂಗಪಟ್ಟಣ-ಪಾಂಡವಪುರ ರಸ್ತೆಯ ಸಮೀಪ ಶ್ರೀರಂಗಪಟ್ಟಣಕ್ಕೆ ಆರು ಕಿ.ಮೀ. ದೂರದಲ್ಲಿರುವ ನೆಲಮನೆಯೆಂಬ ಗ್ರಾಮದಲ್ಲಿರುವ ಚಂದ್ರಮೌಳೇಶ್ವರ ಲಿಂಗವು ಒಂದು ಅಪರೂಪದ ದಾರಾಲಿಂಗವಾಗಿರುತ್ತದೆ. ಸುಮಾರು ಏಳು ಅಡಿ ಎತ್ತರವಿರುವ ಶಿವಲಿಂಗದ ಪೂಜಾಭಾಗವು ಹದಿನಾರು ಮೂಲೆಗಳನ್ನು (ಗೆರೆಗಳನ್ನು) ಹೊಂದಿದೆ. ಇದೊಂದು ಅಪರೂಪದ ದಾರಾಲಿಂಗವಾಗಿದೆ. ಅಜಿತಾಗಮದಲ್ಲಿ ದಾರಾಲಿಂಗದ ಆರಾಧನೆಯ ಫಲವನ್ನು ನೀಡಲಾಗಿದೆ.ಹದಿನಾರು ಗೆರೆಗಳನ್ನು ಹೊಂದರುವ ದಾರಾಲಿಂಗವು ಸರ್ವಶ್ರೇಷ್ಠವಾದುದೆಂದೂ ಈ ಶಿವಲಿಂಗವನ್ನು ಅರ್ಚಿಸಿದರೆ ಸಂತೋಷ ಮತ್ತು ಸರ್ವಸುಖ ಲಭಿಸುವುದೆಂದು ತಿಳಿಸಲಾಗಿದೆ. ಇದೇ ರೀತಿಯ ದಾರಾಲಿಂಗವು ಬೆಂಗಳೂರು ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯ ಸಮೀಪವಿರುವ ಚೌಡಪ್ಪನಹಳ್ಳಿಯಲ್ಲಿರುವ ತಬ್ಬುಲಿಂಗೇಶ್ವರ ದೇವಾಲಯದಲ್ಲಿದೆ. ದೇವಾಲಯದ ಪ್ರಾಕಾರದಲ್ಲಿ ಎಂಟು ಶಿವಲಿಂಗಗಳಿದ್ದು ಅದರಲ್ಲಿ ಒಂದು ಶಿವಲಿಂಗವು ದಾರಾಲಿಂಗವಾಗಿರುತ್ತದೆ. ದಾರಾಲಿಂಗವು ಒಂಭತ್ತನೆಯ ಶತಮಾನದ ಗಂಗರ ಕಾಲಕ್ಕೆ ಸೇರುತ್ತದೆ. ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮೋರ್ಕಂಡಿ ಎಂಬ ಗ್ರಾಮದ ಶಿವಾಲಯದಲ್ಲಿರುವ ಪ್ರಧಾನ ಲಿಂಗವು ಸಹಾ ದಾರಾಲಿಂಗವಾಗಿರುತ್ತದೆ. ಪ್ರಸ್ತುತ ದಾರಾಲಿಂಗವು ಆರು ಮುಖಗಳನ್ನು ಹೊಂದಿರುವುದು ವಿಶೇಷ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಹೆಗ್ಗೆರೆಯಲ್ಲಿರುವ ಶಿವಲಿಂಗವು ಸಹ ಹದಿಮೂರು ಮೂಲೆಗಳುಳ್ಳ ದಾರಾಲಿಂಗವಾಗಿರುತ್ತದೆ.

    15. ಗದಗದ ತ್ರಿಕೂಟೇಶ್ವರ

    ಗದಗ ನಗರದ ಮಧ್ಯದಲ್ಲಿರುವ ತ್ರಿಕೂಟೇಶ್ವರ ದೇವಾಲಯವು ಹನ್ನೊಂದನೆಯ ಶತಮಾನಕ್ಕೆ ಸೇರಿರುವ ಸುಂದರ ಆಲಯ. ಈ ದೇವಾಲಯದಲ್ಲಿರುವ ಶಿವಲಿಂಗದಲ್ಲಿ ತ್ರಿಮೂರ್ತಿಗಳನ್ನು ಲಿಂಗರೂಪದಲ್ಲಿ ಅರ್ಚಿಸಲಾಗುತ್ತಿದೆ. ಪಾಣಿಪೀಠದ ಮೇಲೆ ಮೂರು ಶಿವಲಿಂಗಗಳಿದ್ದು ಬ್ರಹ,್ಮ ಮಹೇಶ್ವರ, ವಿಷ್ಣುಗಳ್ನು ಪ್ರತಿನಿಧಿಸುತ್ತವೆ. ಈ ರೀತಿಯ ತ್ರೈಪುರುಷಾರಾಧನೆಯು ಪ್ರಾಚೀನ ಕರ್ನಾಟಕದಲ್ಲಿ ಪ್ರಚಲಿತದಲ್ಲಿತ್ತು.

    16. ಸವಡಿಯ ತ್ರಿಮೂರ್ತಿಲಿಂಗ

    ಗದಗ ಜಿಲ್ಲೆ ರೋಣ ತಾಲ್ಲೂಕಿನ ಸವಡಿಯಲ್ಲಿ ತ್ರಿಮೂರ್ತೇಶ್ವರ ದೇವಾಲಯವಿದೆ. ಒಂಭತ್ತನೆಯ ಶತಮಾನಕ್ಕೆ ಸೇರಿರುವ ರಾಷ್ಟ್ರಕೂಟರ ದೇವಾಲಯವಿದಾಗಿದ್ದು, ಗರ್ಭಗುಡಿಯಲ್ಲಿ ಒಂದೇ ಪಾಣಿಪೀಠದ ಮೇಲೆ ಮೂರ್ತಿರೂಪದಲ್ಲಿ ಸೃಷ್ಟಿಕರ್ತನಾದ ಬ್ರಹ್ಮದೇವ, ಸ್ಥಿತಿಕರ್ತನಾದ ವಿಷ್ಣು ದೇವರುಗಳು ಮೂರ್ತಿರೂಪದಲ್ಲಿದ್ದಾರೆ. ಲಯಕರ್ತನಾದ ಶಿವದೇವನು ಲಿಂಗರೂಪದಲ್ಲಿರುವನು. ಬ್ರಹ್ಮ, ವಿಷ್ಣುದೇವರ ನಡುವಿರುವ ಲಿಂಗವು ನೋಡಲು ಬಹಳ ದಿವ್ಯವಾಗಿದೆ.

    17. ಮುನವಳ್ಳಿಯ ಪಂಚಲಿಂಗೇಶ್ವರ

    ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನಲ್ಲಿರುವ ಮುನವಳ್ಳಿಯಲ್ಲಿ ಪಂಚಲಿಂಗೇಶ್ವರ ದೇವಾಲಯವಿದೆ. ಈ ದೇವಾಲಯದ ವಿಶೇಷವೇನೆಂದರೆ ಒಂದೇ ಪಾಣಿಪೀಠದ ಮೇಲೆ ಐದು ಶಿವಲಿಂಗಗಳನ್ನು ಲಿಂಗರೂದಲ್ಲಿ ಪ್ರತಿಷ್ಠಾಪಿಸಲಾಗಿದೆ. ಪ್ರಸ್ತುತ ಶಿವಲಿಂಗವನ್ನು ಅಗಸ್ತ್ಯರು ಪ್ರತಿಷ್ಠಾಪಿಸಿದರೆಂದು ಐತಿಹ್ಯ. ಶಿವಲಿಂಗದ ಹಿಂಬದಿಯಲ್ಲಿ ಅಗಸ್ತ್ಯಮುನಿಗಳ ಮೂರ್ತಿಯಿದೆ. ಈ ದೇವಾಲಯದ ಆವರಣದಲ್ಲಿ ಅನೇಕ ದೇವಾಲಯಗಳಿದ್ದು ಒಂದು ದೇವಾಲಯವು ತ್ರಿಕೂಟವಾಗಿದ್ದು ಪ್ರತಿ ಗರ್ಭಗುಡಿಯಲ್ಲಿಯೂ ಶಿವಲಿಂಗಗಳಿವೆ.


    18. ಕೊಡಗೇನಹಳ್ಳಿಯ ಕುಕ್ಕುಟಾಂಡಲಿಂಗ

    ಕೋಳಿಯ ಮೊಟ್ಟೆಯ ಆಕಾರದಲ್ಲಿ ಶಿವಲಿಂಗಗಳನ್ನು ಸ್ಥಾಪಿಸುವ ಪದ್ಧತಿಯೂ ಇತ್ತು. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಮಧುಗಿರಿ-ಹಿಂದೂಪುರ ರಸ್ತೆಯಲ್ಲಿರುವ ಕೊಡಗೇನಹಳ್ಳಿಯಲ್ಲಿರುವ ಶಿವಲಿಂಗವು ಕುಕ್ಕುಟಾಂಡಾಕಾರವನ್ನು ಹೊಂದಿದೆ. ಸುಮಾರು ಐದು ಅಡಿ ಎತ್ತರದ ಶಿವಲಿಂಗದ ಪೂಜಾಭಾಗವು ಮೊಟ್ಟೆಯಾಕಾರವನ್ನು ಹೊಂದಿದ್ದು ಈ ರೀತಿಯ ರಚನೆಯ ಶಿವಲಿಂಗಗಳ ಪ್ರಭೇದಗಳಲ್ಲೊಂದು ಕೊಡಗೇನಹಳ್ಳಿಯ ಶಿವಲಿಂಗದ ಮೇಲಿನ ಬ್ರಹ್ಮಸೂತ್ರದ ಆಧಾರದಿಂದ ಇದರ ಕಾಲವನ್ನು ಹತ್ತನೆಯ ಶತಮಾನುಕ್ಕೆ ಸೇರಿಸಬಹುದು.

    19. ಯಗಟಿಯ ಶ್ರೀಚಕ್ರಲಿಂಗ

    ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಯಗಟಿಯಲ್ಲಿ ಅನೇಕ ದೇವಾಲಯಗಳಿವೆ. ಯಗಟಿಯ ಕೆರೆಯ ಅಂಚಿನಲ್ಲಿರುವ ಕಲ್ಲೇಶ್ವರ ದೇವಾಲಯವು ಹೊಯ್ಸಳರ ದೊರೆ ವಿಷ್ಣುವರ್ಧನನ ಕಾಲಕ್ಕೆ ಸೇರಿರುತ್ತದೆ. ನವೀಕೃತಗೊಂಡ ದೇವಾಲಯದ ಗರ್ಭಗುಡಿಯಲ್ಲಿರುವ ಶಿವಲಿಂಗದ ಪಾಣಿಪೀಠದ ಮೇಲೆ ಶ್ರೀಚಕ್ರವನ್ನು ಬಿಡಿಸಲಾಗಿದೆ. ಹಾಗಾಗಿ ಇದು ಶಿವ ಮತ್ತು ಶಕ್ತಿಯರ ಸಮಾಗಮವನ್ನು ಹೊಂದಿರುವ ಅಪರಪದ ಶಿವಲಿಂಗವಾಗಿದೆ.

    20. ಯಗಟೀಪುರದ ಜಟಾಧಾರಿ ಮಲ್ಲಿಕಾರ್ಜುನ

    ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಯಗಟೀಪುರದಲ್ಲಿ ಸುಪ್ರಸಿದ್ಧ ಮಲ್ಲಿಕಾರ್ಜುನ ದೇವಾಲಯವಿದೆ. ದೇವಾಲಯವು ಪೂರ್ವಾಭಿಮುಖವಾಗಿ ವೇದಾವತಿ ನದಿಯ ದಂಡೆಯ ಮೇಲೆ ವಿಶಾಲವಾದ ಪ್ರಾಕಾರ ಮಂಟಪಗಳ ನಡುವೆ ವಿರಾಜಮಾನವಾಗಿ ಶೋಭಿಸುತ್ತಿದೆ. ಈ ದೇವಾಲಯದ ಗರ್ಭಗುಡಿಯಲ್ಲಿ ದೇವನು ಒಂದು ಬಂಡೆಯ ಮೇಲೆ ಮೂಡಿರುತ್ತಾನೆ. ಶಿವಲಿಂಗದ ಶಿವ ಜಟೆಯನ್ನು ಸಹಾ ಸ್ಪಷ್ಟವಾಗಿ ಮೂಡಿಸಲಾಗಿದೆ. ಯಗಟೀಪುರದ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವವು ಫಾಲ್ಗುಣ ಶುದ್ಧದಲ್ಲಿ ಬರುವ ಮಖಾನಕ್ಷತ್ರದಲ್ಲಿ ಬಹು ವೈಭವದಿಂದ ಜರುಗುತ್ತದೆ. ಆ ಸುದಿನ ಗರ್ಭಗುಡಿಯಲ್ಲಿ ತೀರ್ಥೋದ್ಭವವಾಗುತ್ತದೆ.

    21. ತುರುವೇಕೆರೆಯ ಗಂಗಾಧರೇಶ್ವರ

    ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ಕೇಂದ್ರದಲ್ಲಿರುವ ಗಂಗಾಧರೇಶ್ವರ ದೇವಾಲಯವು ಬಹಳ ವೈವಿಧ್ಯತೆಯನ್ನು ಹೊಂದಿದೆ. ಗಂಗಾಧರೇಶ್ವರ ಎಂದು ಕರೆಯುವ ಶಿವಲಿಂಗದ ಪೂಜಾಭಾಗದಲ್ಲಿ ಪದ್ಮಾಸನ ಹಾಕಿ ಕುಳಿತಿರುವ ಗಂಗೆಯಿರುವಳು. ಗಂಗೆಯ ಸುತ್ತ ಸರ್ಪದ ಮಾದರಿಯಲ್ಲಿ ಜಟೆ ಮತ್ತು ಸುರುಳಿ ಸುರುಳಿಯಂತೆ ಚಿತ್ರಿಸಿರುವ ಜಡೆಯನ್ನು ಸಹ ಮೂಡಿಸಲಾಗಿದೆ. ಗಂಗೆಯ ಹಿಂದೆ ಅಗ್ನಿಯಿದ್ದು ಅದನ್ನು ತಣಿಸಲು ಗಂಗೆಯಿರುವಂತೆ ಚಿತ್ರಿಸಲಾಗಿದೆ. ಶಿವನ ಜಟೆಯು ಸುರುಳಿಯಾಕಾರದಲ್ಲಿದ್ದು ಅದರಲ್ಲಿ 27 ನಕ್ಷತ್ರಗಳನ್ನು ಗುರುತಿಸಲಾಗಿದೆ. ಗಂಗೆಯ ಎರಡು ಬದಿಯಲ್ಲಿ ಸೂರ್ಯಚಂದ್ರವಿರುವುದು. ಇದು ಒಂದು ಅಪರೂಪದ ಶಿವಲಿಂಗವಾಗಿದ್ದು ಕರ್ನಾಟಕದ ಬೇರ್ಯಾವ ದೇವಾಲಯದಲ್ಲೂ ಪ್ರಧಾನ ದೇವತೆಯಾಗಿ ಪೂಜೆಗೊಳ್ಳುವ ಉದಾಹರಣೆಯು ದೊರೆಯುವುದಿಲ್ಲ.

    ಚಾಮರಾಜನಗರ ಜಿಲ್ಲೆ ಅದೇ ತಾಲ್ಲೂಕಿನ ಉಮತ್ತೂರಿನಲ್ಲಿರುವ ಭಜಂಗೇಶ್ವರ ದೇವಾಲಯದ ಪ್ರಾಕಾರ ಮಂಟಪದಲ್ಲಿರುವ ಶಿವಲಿಂಗಗಳ ಸಾಲಿನಲ್ಲಿ ಗಂಗಾಧರೇಶ್ವರ ಲಿಂಗವಿದ್ದು, ಗಾತ್ರದಲ್ಲಿ ತುರುವೇಕೆರೆಯ ಗಂಗಾಧರೇಶ್ವರನಿಗಿಂತ ಚಿಕ್ಕದಿದೆ.

    22. ಮುದ್ಲಾಪುರದ ಸ್ವಯಂಭುವೇಶ್ವರ

    ಶಿವಲಿಂಗಗಳನ್ನು ಮಾನವನಿರ್ಮಿತವಾಗಿ ಪೂಜಿಸುವುದಲ್ಲದೇ ಸ್ವಯಂಭು ರೂಪದಲ್ಲಿಯೂ ಪೂಜಿಸಲಾಗುತ್ತದೆ. ಇಲ್ಲಿ ಸಹಜವಾಗಿರುವ ಶಿಲೆಗಳನ್ನು ಯಾವ ಕೆತ್ತನೆಯ ಕೆಲಸವು ಇಲ್ಲದೇ ಸ್ಥಾಪಿಸಲಾಗುವುದು.ಈ ರೀತಿಯ ಶಿವಲಿಂಗಗಳು ಪ್ರಾಚೀನತೆಯಿಂದಲೂ ಬಹಳ ಮಹತ್ವವಾಗಿರುತ್ತದೆ. ಹಾಸನ ಜಿಲ್ಲೆ ಅದೇ ತಾಲ್ಲೂಕು ಮುದ್ಲಾಪುರ ಎಂಬ ಗ್ರಾಮವು ಹಾಸನ-ಹಳೇಬೀಡು ರಸ್ತೆಯಲ್ಲಿರುವ ಇಸ್ರೋ ಕೇಂದ್ರದ ಸಮೀಪದಲ್ಲಿದೆ. ಮುದ್ಲಾಪುರದ ಶಿವಲಿಂಗವು ಸ್ವಯಂಭು ಲಿಂಗವಾಗಿರುತ್ತದೆ. ಶಿವಲಿಂಗದಲ್ಲಿ ಐದು ಉದ್ಬುಗಳಿದ್ದು ಪಂಚಲಿಂಗಗಳನ್ನು ಪ್ರತಿನಿಧಿಸುತ್ತದೆ.ಗದಗ ಜಿಲ್ಲೆ ಅದೇ ತಾಲ್ಲೂಕಿನ ಹೊಂಬಳದಲ್ಲಿಯೂ ಸಹಾ ಹನ್ನೊಂದನೆಯ ಶತಮಾನದ ಶಂಕರಲಿಂಗೇಶ್ವರ ದೇವಾಲಯದಲ್ಲಿ ಇದೇ ರೀತಿಯ ಶಿವಲಿಂಗವಿದೆ.

    23. ಹಂಪಿಯ ಬಡಾಲಿಂಗ

    ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ವಿಶ್ವವಿಖ್ಯಾತ ಹಂಪಿಯಲ್ಲಿರುವ ಯೋಗಾ-ಲಕ್ಷ್ಮೀನರಸಿಂಹನ ಮೂರ್ತಿಯ ಬದಿಯಲ್ಲಿ ಬೃಹದಾಕಾರದ ಶಿವಲಿಂಗವಿದೆ. ಸುಮಾರು ಹತ್ತು ಅಡಿಗೂ ಅಧಿಕ ಎತ್ತರದಲ್ಲಿರುವ ಶಿವಲಿಂಗದ ಅಡಿಯಲ್ಲಿ ಸದಾ ನೀರಿರುವುದು ವಿಶೇಷತೆ. ಬಡಾಲಿಂಗವು ನಮ್ಮ ನಾಡಿನ ವಿಜಯನಗರ ಅರಸರ ಕೊಡುಗೆ.

    24. ಬೃಹತ್ ಲಿಂಗಗಳು

    ಕನ್ನಡ ನಾಡಿನಲ್ಲಿ ಅನೇಕ ಬೃಹತ್ ಶಿವಲಿಂಗಗಳಿರುವ ದೇವಾಲಯಗಳವೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಸಖರಾಯಪಟ್ಟಣದ ಸಮೀಪವಿರುವ ಅಯ್ಯನಕೆರೆಯಲ್ಲಿ ಬೃಹದಾಕಾರದ ಶಿವಲಿಂಗವಿದೆ. ಬಲ್ಲಾಳೇಶ್ವರ ಲಿಂಗವೆಂದು ಕರೆಯುವ ಶಿವಲಿಂಗವು ಹೊಯ್ಸಳರ ಕಾಲದ ರಚನೆ. ಶಿವಲಿಂಗದ ಪಾಣಿಪೀಠವು ಅತ್ಯಂತ ಕಲಾತ್ಮಕವಾಗಿದೆ. ದೇವಾಲಯವು ಅಯ್ಯನಕೆರೆಯೆಂದು ಕರೆಯುವ ಸುಂದರವಾದ ಕೆರೆಯ ಬದಿಯಲ್ಲಿದ್ದು ಪರಿಸರವು ಅತ್ಯಂತ ರಮಣೀಯವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಬೊಮ್ಮವಾರ ಎಂಬ ಗ್ರಾಮದಲ್ಲಿ ಸುಮಾರು ಹತ್ತು ಅಡಿಗಳಷ್ಟು ಅಗಲವಿರುವ ಪಾಣಿಪೀಠವನ್ನು ಹೊಂದಿರುವ ಬೃಹತ್ ಶಿವಲಿಂಗವಿದೆ. ಸುಂದರೇಶ್ವರರೆಂದು ಕರೆಯುವ ಈ ಶಿವಲಿಂಗವು ಇಡೀ ದೇವಾಲಯದ ಗರ್ಭಗುಡಿಯನ್ನು ಆವರಿಸಿಕೊಂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಸಮೀಪ ಅನಗೊಂಡನಹಳ್ಳಿಯ,ಲ್ಲಿ ಬಾಣೇಶ್ವರ ಎಂದು ಕರೆಯಲ್ಪಡುವ, ಜಿಲ್ಲೆಯಲ್ಲಿಯೇ ಅತ್ಯಂತ ಎತ್ತರದ ಶಿವಲಿಂಗವಿದೆ. ಬಾಣೇಶ್ವರಲಿಂಗವು ಒಂಭತ್ತು ಅಡಿ ಎತ್ತರವಿದ್ದು ಹತ್ತನೆಯ ಶತಮಾನಕ್ಕೆ ಸೇರುತ್ತದೆ.

    25. ಕೆಂಗೇರಿಯ ಸೋಮೇಶ್ವರ ದೇವಾಲಯ

    ಬೆಂಗಳೂರು-ಮೈಸೂರು ರಸ್ತೆಯಲ್ಲಿ ನಗರದಿಂದ ಕೇವಲ 15 ಕಿ.ಮೀ. ದೂರದಲ್ಲಿರುವ ಕೆಂಗೇರಿಯು ಹತ್ತನೆಯ ಶತಮಾನದಿಂದಲೂ ಅಸ್ತಿತ್ವದಲ್ಲಿದ್ದ ಪ್ರಾಚೀನ ಗ್ರಾಮ. ಕೆಂಗೇರಿಯ ಕೋಟೆ ಪ್ರದೇಶದಲ್ಲಿ ಹತ್ತನೆಯ ಶತಮಾನಕ್ಕೆ ಸೇರುವ ಶಿವಲಿಂಗವನ್ನು ಹೊಂದಿರುವ ಸೋಮೇಶ್ವರ ದೇವಾಲಯವಿದೆ. ಎಲ್ಲ ಪ್ರಾಚೀನ ಶಿವ ದೇವಾಲಯಗಳ ನಿಯಮದಂತೆ ಊರ ಹೊರಗೆ ಈಶಾನ್ಯ ದಿಕ್ಕಿನಲ್ಲಿ ಪೂರ್ವಾಭಿಮುಖವಾಗಿ ಶಿವಲಿಂಗವಿದೆ. ಶಿವಲಿಂಗದ ಪೂಜಾಭಾಗದಲ್ಲಿ ಬ್ರಹ್ಮಸೂತ್ರವು ಸ್ಪಷ್ಟವಾಗಿ ಗೋಚರಿಸುತ್ತದೆ ಹಾಗೂ ಇದರ ವಿನ್ಯಾಸದಿಂದ ಹತ್ತನೆಯ ಶತಮಾನದ ಕಾಲಘಟ್ಟಕ್ಕೆ ಶಿವಲಿಂಗವನ್ನು ಸೇರಿಸಬಹುದು.
    ಕೆಂಗೇರಿಯ ಸೋಮೇಶ್ವರನಿಗೆ ಮಹಾಶಿವರಾತ್ರಿ ಹಾಗೂ ಕಾರ್ತಿಕಮಾಸದ ಸೋಮವಾರಗಳಲ್ಲಿ ವಿಶೇಷ ಪೂಜಾ ಕೈಂಕರ್ಯವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬಹಳ ವೈಭವವಾಗಿ ಜರುಗುವುದು. ಶಿವರಾತ್ರಿಯ ಮಾರನೆಯ ದಿನ ಬೆಳಿಗೆ ಸೂರ್ಯದೇವನ ಕಿರಣಗಳು ಶಿವಲಿಂಗದ ಮೇಲಿ ಬೀಳುವುದು ಬಹು ವಿಶೇಷ.

    ಕೆಂಗೇರಿ ಚಕ್ರಪಾಣಿ ಅವರು ನಾಡಿನ ಹಿರಿಯ ಛಾಯಗ್ರಾಹಕರು ಹಾಗೂ ಇತಿಹಾಸ ಸಂಶೋಧಕರು. ಸಹಪಾಠಿ ಮುನಿ ಅಂಜನಪ್ಪನವರ ಪ್ರೇರಣೆಯಿಂದ ಛಾಯಾಗ್ರಹಣವನ್ನು ಹವ್ಯಾಸವಾಗಿ ಬೆಳೆಸಿಕೊಂಡ ಚಕ್ರಪಾಣಿ ಅದನ್ನು ದೇವಾಲಯಗಳ ಚಿತ್ರೀಕರಣಕ್ಕೆ ಬಳಸಿಕೊಂಡರು. ಇತಿಹಾಸ ತಜ್ಞ ಡಾ.ಎಚ್. ಎಸ್ .ಗೋಪಾಲರಾವ್. ಡಾ. ದೇವರಕೊಂಡಾರೆಡ್ಡಿ, ಡಾ. ಪಿ.ವಿ .ಕೃಷ್ಣಮೂರ್ತಿ,ಡಾ. ಕೆ. ಆರ್. ಗಣೇಶ್ ಅವರ ಮಾರ್ಗದರ್ಶನದಿಂದ ದೇವಾಲಯಗಳ ಇತಿಹಾಸ ಅಧ್ಯಯನದಲ್ಲಿ ಆಸಕ್ತಿ ಬೆಳೆಯಿತು. ದೂರಸಂಪರ್ಕ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಸಹೋದ್ಯೋಗಿಗಳ ಒತ್ತಾಸೆಯಂತೆ ತಾವು ಸೆರೆಹಿಡಿದ ಛಾಯಚಿತ್ರಗಳ ಪ್ರದರ್ಶನ ಏರ್ಪಡಿಸಲು ಆರಂಭಿಸಿದರು. ಈಗ ಅವರ ಬಳಿ 2000ಕ್ಕೂ ಹೆಚ್ಚು ಛಾಯಚಿತ್ರಗಳ ಸಂಗ್ರಹ ಇದೆ. ನಾಡಿನಾದ್ಯಂತ ಈ ಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದಾರೆ. ಬೆಂಗಳೂರು ದೂರವಾಣಿ ನೌಕರರ ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣಾ ಬಳಗವನ್ನು ಕಟ್ಟಿಕೊಂಡು ಅದರ ಮೂಲಕ ಮಿತ್ರರನ್ನು ಪುರಾತನ ದೇವಾಲಯಗಳಿಗೆ ಕರೆದುಕೊಂಡು ಹೋಗಿ ಪರಿಚಯಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಪುರಾತನ ದೇವಾಲಯಗಳ ಜೀರ್ಣೋದ್ಧಾರದಲ್ಲಿ ತೊಡಗಿಕೊಂಡಿರುವ ಧರ್ಮಸ್ಥಳದ ಶ್ರೀ ಮಂಜುನಾಥ ಧರ್ಮೋತ್ಥಾನ ಟ್ರಸ್ಟ್ ಇವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಂಡಿದೆ.

    Maha Shivaratri :ಶಿವನನ್ನು ಪೂಜಿಸುವ ಶುಭ ರಾತ್ರಿಯೇ ಮಹಾಶಿವರಾತ್ರಿ

    ನಮ್ಮ ಭಾರತೀಯ ಪರಂಪರೆಯಲ್ಲಿ ಶಿವನಿಗೆ ಬಹಳ ಮಹತ್ವದ ಸ್ಥಾನವಿದೆ. ಹಿಂದೂ ಪಂಚಾಂಗದ ಪ್ರಕಾರ ಒಂದು ವರ್ಷದಲ್ಲಿ ಹನ್ನೆರಡು ಶಿವರಾತ್ರಿಗಳು ಬರುತ್ತವೆ. ಸಾಮಾನ್ಯವಾಗಿ ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯನ್ನು ಮಾಸ ಶಿವರಾತ್ರಿ ಎನ್ನುತ್ತೇವೆ. ಆದರೆ ಮಾಘ ಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿಯು ಮಹಾಶಿವರಾತ್ರಿ ಎಂದು ಹೆಸರಾಗಿದ್ದು, ಶಿವನ ಭಕ್ತರ ಪಾಲಿಗೆ ಮಂಗಳಕರ ರಾತ್ರಿಯಾಗಿದೆ.

    ಇದು ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆಯಾಗಿದ್ದು (ಅಂದರೆ ನಿದ್ರಿಸದೆ ಎಚ್ಚರವಾಗಿದ್ದು) ಶಿವನ ಧ್ಯಾನವನ್ನು ಮಾಡಿ, ಶಿವನ ಕೃಪೆಗೆ ಪಾತ್ರರಾಗುವ ಶುಭ ದಿನ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ, ತಾವು ಮಾಡಿದ ಪಾಪಗಳೆಲ್ಲ ಪರಿಹಾರವಾಗಿ, ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ. ಮದುವೆಯಾಗದ ಹೆಣ್ಣು ಮಕ್ಕಳು ಶಿವಗುಣರೂಪಿಯಾದ ಅನುರೂಪದ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ.

    ಮಹಾಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ ಸುಖ, ಶಾಂತಿ, ಸಮೃದ್ಧಿ ದೊರೆಯುತ್ತದೆ ಎಂಬುದು ಆಸ್ತಿಕರ ನಂಬಿಕೆ. ತನ್ನನ್ನು ನಂಬಿ ಬಂದ ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ದಯಾಮಯನೆಂದೇ ಹೆಸರಾದ ಶಿವನಿಗೆ ಈ ದಿನ ವಿಶೇಷ ಪೂಜೆಗಳು ನಡೆಯುತ್ತವೆ.

    ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ

    ಕೈಲಾಸವಾಸಿ ಎಂದೇ ಖ್ಯಾತನಾದ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾದ ಅನುಗ್ರಹವನ್ನು ನೀಡುವುದಾಗಿ ಸ್ವತಃ ಶಿವನೇ ಪಾರ್ವತಿಗೆ ಹೇಳಿದ್ದಾನೆ ಎನ್ನುತ್ತದೆ ಶಿವಪುರಾಣ. ಹಾಗೆಯೇ ಪುರಾಣಗಳ ಪ್ರಕಾರ ಈ ದಿನ ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನ ಎಂಬುದು ವಿಶೇಷ. ಪರ್ವತರಾಜ ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡೀ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ. ಆದ್ದರಿಂದಲೇ ಈ ದಿನ ಮದುವೆಯಾಗದ ಹೆಣ್ಣು ಮಕ್ಕಳು ಶಿವನನ್ನು ಪೂಜಿಸುತ್ತಾ ಧ್ಯಾನಿಸಿದರೆ ಅವರಿಗೆ ಸೂಕ್ತವಾದ ವರ ದೊರಕುತ್ತಾನೆ ಎನ್ನುವ ನಂಬಿಕೆ ಇದೆ.
    ಜೊತೆಗೆ ಶಿವನು ರುದ್ರತಾಂಡವವನ್ನಾಡಿದ ರಾತ್ರಿಯೂ ಇದೇ ಎನ್ನಲಾಗುತ್ತದೆ. ದೇವತೆಗಳು ಮತ್ತು ಅಸುರರು ಒಟ್ಟಾಗಿ ಸಮುದ್ರ ಮಂಥನ ನಡೆಸುತ್ತಿದ್ದಾಗ, ಭಯಂಕರವಾದ ಕಾಲಕೂಟ ವಿಷವು ಉದ್ಭವವಾಯಿತು. ಅದನ್ನು ಶಿವನು ಕುಡಿದಾಗ, ವಿಷ ಗಂಟಲೊಳಗಿಂದ ಕೆಳಗೆ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣ. ಹಾಗಾಗಿ ಭಕ್ತರು ಇಡೀ ರಾತ್ರಿ ಎಚ್ಚರವಾಗಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ.

    ಮತ್ತೊಂದು ಕಥೆಯ ಪ್ರಕಾರ ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಧುಮುಕಿದ್ದ ಗಂಗೆಯನ್ನು ಕೆಳಗೆ ಬೀಳದಂತೆ ಶಿವನು ತನ್ನ ಜಟೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ.

    ಅನುಗ್ರಹ ನೀಡಿದ ದಿನವಿದು

    ಲಿಂಗಪುರಾಣದ ಪ್ರಕಾರ ಶಿವನು ಲಿಂಗರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು ಎಂದೂ ಹೇಳುತ್ತಾರೆ. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮರಿಗೆ ಶಿವನು ಈ ದಿನದಂದು ಲಿಂಗರೂಪದಲ್ಲಿ ದರ್ಶನ ನೀಡಿದ ಎಂದು ಪ್ರತೀತಿಯಿದೆ. ಒಮ್ಮೆ ಬ್ರಹ್ಮ ಹಾಗು ವಿಷ್ಣುವಿನ ನಡುವೆ ತಮ್ಮಲ್ಲಿ ಯಾರು ಶ್ರೇಷ್ಠರು ಎಂಬ ವಾದವಿವಾದ ಏರ್ಪಡುತ್ತದಂತೆ. ಅವರಿಬ್ಬರನ್ನು ಸಮಾಧಾನಪಡಿಸುವುದು ಕಷ್ಟವಾದಾಗ ಇತರ ದೇವತೆಗಳು ಶಿವನನ್ನು ಪ್ರಾರ್ಥಿಸುತ್ತಾರಂತೆ. ಆಗ ಶಿವನು ವಿಷ್ಣು ಮತ್ತು ಬ್ರಹ್ಮರ ನಡುವೆ ಅಗ್ನಿ ಕಂಭದ ರೂಪದಲ್ಲಿ ನಿಂತು ತನ್ನ ಆದಿ, ಅಂತ್ಯವನ್ನು ಕಂಡು ಹಿಡಿದವರೇ ಶ್ರೇಷ್ಠರು ಎಂದು ಹೇಳುತ್ತಾನಂತೆ. ಆಗ ಹಂಸದ ರೂಪ ತಾಳಿದ ಬ್ರಹ್ಮ ಶಿವನ ಆದಿ ತುದಿಯನ್ನು ಹುಡುಕಲು ಮೇಲ್ಮುಖವಾಗಿ ಹೊರಟರೆ, ವಿಷ್ಣು ಶಿವನ ಅಂತ್ಯ ತುದಿಯನ್ನು ಕಾಣಲು ವರಾಹ ರೂಪ ತಾಳಿ ಪಾತಾಳಕ್ಕೆ ಇಳಿಯುತ್ತಾನೆ. ಎಷ್ಟೇ ದೂರ ಸಾಗಿದರೂ ಅವರಿಬ್ಬರಿಗೂ ಆ ಶಿವನ ಅಗ್ನಿಕಂಭದ ಮೂಲವೇ ತಿಳಿಯಲಾಗುವುದಿಲ್ಲ. ಆಗ ಬ್ರಹ್ಮನು ಅಗ್ನಿ ಕಂಭದ ತಲೆಯಿಂದ ಕೆಳಗೆ ಬೀಳುತ್ತಿದ್ದ ಕೇತಕಿ ಪುಷ್ಪವನ್ನು ಸಾಕ್ಷಿಯಾಗಿರಿಸಿಕೊಂಡು ಬಂದು ತಾನು ಶಿವನ ತಲೆಯನ್ನು ಮುಟ್ಟಿ ಅಲ್ಲಿಂದ ಈ ಕೇತಕಿ ಹೂವನ್ನು ತಂದೆನೆಂದು ಸುಳ್ಳು ಹೇಳುತ್ತಾನಂತೆ. ಅದು ಹೌದೆನ್ನುತ್ತದೆ. ವಿಷ್ಣು ತನ್ನಿಂದ ಅಗ್ನಿ ಕಂಭದ ಮೂಲವನ್ನು ಕಂಡು ಹಿಡಿಯಲಾಗಲಿಲ್ಲ ಎಂದು ನಿಜವನ್ನು ಹೇಳುತ್ತಾನಂತೆ. ಆಗ ಶಿವನು ಕೋಪಗೊಂಡು ಬ್ರಹ್ಮನಿಗೆ ಭೂಲೋಕದಲ್ಲಿ ಪೂಜೆಯಿಲ್ಲದಂತೆಯೂ, ಕೇತಕೀ ಹೂವನ್ನು ಪೂಜೆಗೆ ಬಳಸದಿರುವಂತೆಯೂ ಶಾಪವನ್ನು ನೀಡಿ ಲಿಂಗರೂಪ ತಾಳುತ್ತಾನೆ. ಆ ದಿನವೇ ಮಾಘ ಮಾಸದ ಕೃಷ್ಣಪಕ್ಷದ ಚತುರ್ದಶಿಯ ಶಿವರಾತ್ರಿಯಾಗಿರುತ್ತದೆ ಎನ್ನುತ್ತಾರೆ.

    ಬೇಡರ ಕಣ್ಣಪ್ಪ

    ಶಿವರಾತ್ರಿ ಆಚರಣೆ ಕುರಿತಾಗಿ ಪ್ರಚಲಿತವಿರುವ ಮತ್ತೊಂದು ಕಥೆಯೊಂದು ಹೀಗಿದೆ: ಬಹಳ ಕಾಲದ ಹಿಂದೆ ಬೇಡನೊಬ್ಬ ಕಾಡಿನಲ್ಲಿ ಬೇಟೆಗಾಗಿ ಹೋಗಿದ್ದ. ದಾರಿ ತಪ್ಪಿದ ಆತ ಅರಣ್ಯದಲ್ಲೇ ಅಲೆದಾಡತೊಡಗಿದ. ಸಂಜೆಯಾಗುತ್ತಾ ಬಂದರೂ ಆತನಿಗೆ ಯಾವುದೇ ಬೇಟೆಯೂ ಸಿಗಲಿಲ್ಲ ಜೊತೆಗೆ ಕಾಡಿನಿಂದ ಹೊರ ಬರುವ ದಾರಿಯೂ ಕಾಣಲಿಲ್ಲ. ನಿಧಾನವಾಗಿ ಕತ್ತಲು ಆವರಿಸಿಕೊಳ್ಳತೊಡಗಿತು. ಇನ್ನು ನೆಲದ ಮೇಲಿದ್ದರೆ ಕ್ರೂರ ಪ್ರಾಣಿಗಳಿಂದ ಅಪಾಯ ತಪ್ಪಿದ್ದಲ್ಲವೆಂದು ತಿಳಿದ ಆ ಬೇಡ ಹತ್ತಿರದಲ್ಲಿ ಕಂಡ ಮರವನ್ನು ಹತ್ತಿ ಕುಳಿತ. ರಾತ್ರಿ ಮರದ ಮೇಲೆ ನಿದ್ರೆ ಮಾಡಿದರೆ ಕೆಳಗೆ ಬೀಳುವ ಅಪಾಯವಿದೆ ಎಂದು ಭಾವಿಸಿ, ರಾತ್ರಿಯಿಡೀ ಎಚ್ಚರನಾಗಿ ಕುಳಿತ. ಹೊತ್ತು ಕಳೆಯಲು, ಬೇಸರ ನೀಗಲು ತಾನು ಕುಳಿತ ಮರದ ಎಲೆ, ಚಿಗುರುಗಳನ್ನು ಕಿತ್ತು ಕೆಳಗಡೆ ಹಾಕತೊಡಗಿದ. ಆ ಎಲೆಗಳು ಮರದ ಕೆಳಗೆ ಇದ್ದ ಶಿವಲಿಂಗದ ಮೇಲೆ ಬೀಳತೊಡಗಿದವು. ಕಾಕತಾಳೀಯವೆಂದರೆ ಅವನು ಏರಿ ಕುಳಿತಿದ್ದ ಮರ ಬಿಲ್ವಪತ್ರೆಯ ಮರವಾಗಿತ್ತು. ಹಾಗೂ ಆ ದಿನ ರಾತ್ರಿಯು ಮಹಾ ಶಿವರಾತ್ರಿಯಾಗಿತ್ತು.

    ಹಗಲೆಲ್ಲಾ ಯಾವುದೇ ಬೇಟೆ ಸಿಗದೆ, ಉಪವಾಸವಿದ್ದು, ರಾತ್ರಿಯೆಲ್ಲಾ ಜಾಗರಣೆಯಾಗಿದ್ದು ಶಿವನಿಗೆ ಬಿಲ್ವ ಪತ್ರೆಗಳನ್ನು ಅರ್ಪಿಸಿದ್ದರಿಂದ ಆ ಬೇಡನು ಅಲ್ಲಿವರೆಗೆ ಮಾಡಿದ್ದ ಪಾಪಗಳೆಲ್ಲಾ ಪರಿಹಾರವಾಗಿ ಅವನಿಗೆ ಶಿವನ ಅಭಯ ಸಿಕ್ಕಿತು. ಶಿವನು ಅವನನ್ನು ರಕ್ಷಿಸಿ, ಅವನಿಗೆ ಮನೆಗೆ ಹೋಗುವ ದಾರಿಯನ್ನು ತೋರಿಸಿಕೊಟ್ಟನು. ಆ ಬೇಡ ಮುಂದಿನ ಜನ್ಮದಲ್ಲಿ ರಾಜ ಚಿತ್ರಭಾನುವಾಗಿ ಜನ್ಮ ತಾಳಿದ. ಅಂದಿನಿಂದ ಭಕ್ತರು ಶಿವನನ್ನು ಶಿವರಾತ್ರಿಯಂದು ಜಾಗರಣೆಯಾಗಿದ್ದು, ಬಿಲ್ವ ಪತ್ರೆಗಳಿಂದ ಪೂಜಿಸಲು ಆರಂಭಿಸಿದರು. ಮಹಾಭಾರತದಲ್ಲಿ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮನು ಈ ಕಥೆಯನ್ನು ಧರ್ಮರಾಯನಿಗೆ ಹೇಳುತ್ತಾನೆ.

    ರಾತ್ರಿ ಪೂಜೆಯೇ ವಿಶೇಷ

    ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿ ಹೊತ್ತು ಪೂಜೆ, ಭಜನೆ ನಡೆಯುವ ಹಬ್ಬ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಈ ದಿನ ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನದೀವಿಗೆಯನ್ನು ಬೆಳಗಿಸುತ್ತಾನೆ ಎಂಬ ನಂಬಿಕೆ ಇದೆ.

    ಕಾಶಿ ವಿಶ್ವನಾಥನೂ ಸೇರಿದಂತೆ ಹನ್ನೆರಡು ಜ್ಯೋತಿರ್ಲಿಂಗಗಳ, ರಾಜ್ಯ, ದೇಶ-ವಿದೇಶಗಳ ಶಿವನ ದೇವಾಲಯಗಳಲ್ಲಿ ಮಹಾಶಿವರಾತ್ರಿಯ ದಿನ ವಿಶೇಷ ಪೂಜೆ ನಡೆಯುತ್ತದೆ. ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವನಾಮ ಧ್ಯಾನಗಳ ಮೂಲಕ ಶಿವನನ್ನು ಆರಾಧಿಸಲಾಗುತ್ತದೆ. ಇಡೀ ರಾತ್ರಿ ಶಿವನ ದೇವಾಲಯಗಳಲ್ಲಿ ರುದ್ರ ಪಠಣದ ಜೊತೆಗೆ ಜಾಗರಣೆ ನಡೆಯುತ್ತದೆ.

    ಶಿವರಾತ್ರಿಯಂದು ಬೆಳಿಗ್ಗೆ ಬೇಗನೆ ಏಳುವ ಭಕ್ತರು ಸ್ನಾನಾದಿಗಳನ್ನು ಮಾಡಿ ಶುಚಿರ್ಭೂತರಾಗಿ, ಶಿವನ ದೇವಾಲಯಕ್ಕೆ ತೆರಳುತ್ತಾರೆ. ಕೆಲವರು ಕೈಲಾಸಯಂತ್ರ ರಚಿಸಿ ಮನೆಯಲ್ಲೇ ಶಿವನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಗಂಗಾ, ಯಮುನಾ, ಬ್ರಹ್ಮಪುತ್ರ, ಕೃಷ್ಣ, ಕಾವೇರಿ, ತ್ರಿವೇಣಿ ಸಂಗಮ ಸೇರಿದಂತೆ ಪುಣ್ಯನದಿಗಳಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ಕೆಲವರು ಹಾಲು, ಹಣ್ಣು ಸೇರಿದಂತೆ ಲಘು ಉಪಾಹಾರವನ್ನು ಸೇವಿಸಿದರೆ, ಇನ್ನೂ ಕೆಲವರು ದಿನವಿಡೀ ಏನನ್ನೂ ತಿನ್ನದೆ, ನೀರನ್ನೂ ಕುಡಿಯದೇ ಉಪವಾಸ ಇರುತ್ತಾರೆ. ಹಣೆಗೆ ವಿಭೂತಿ ಭಸ್ಮವನ್ನು ಲೇಪಿಸಿಕೊಂಡು ದಿನವಿಡೀ ಬಿಲ್ವಾರ್ಚನೆಯ ಮೂಲಕ ರುದ್ರ ಪಠಣ ನಡೆಸುತ್ತಾರೆ.

    ಅಭಿಷೇಕ ಪ್ರಿಯ ಎಂದೇ ಪ್ರಖ್ಯಾತನಾದ ಶಿವನಿಗೆ ದಿನವಿಡೀ, ಹಾಲು, ಜೇನುತುಪ್ಪ ಹಾಗೂ ನೀರಿನ ಅಭಿಷೇಕ ನಡೆಯುತ್ತದೆ. ಪ್ರತಿ ಮೂರು ಗಂಟೆಗಳಿಗೊಮ್ಮೆ ಶಿವನಿಗೆ ಅಭಿಷೇಕ ಮಾಡಲಾಗುತ್ತದೆ. ಬಿಲ್ವಪತ್ರೆ, ತುಳಸಿ, ಶ್ರೀಗಂಧ, ಹಾಲು, ಜೇನುತುಪ್ಪಗಳಿಂದ ಅಭಿಷೇಕ ನಡೆಯುತ್ತದೆ.ಓಂ ನಮಃ ಶಿವಾಯ’ ಎಂಬ ಶಿವ ಪಂಚಾಕ್ಷರಿ ಮಂತ್ರ,ಹರ, ಹರ ಮಹಾದೇವ’ ಎಂಬ ಸ್ತೋತ್ರಗಳಿಂದ ದೇವಾಲಯಗಳೆಲ್ಲಾ ಮಾರ್ದನಿಗೊಳ್ಳುತ್ತವೆ. ನಾಲ್ಕು ಆಯಾಮಗಳ ರುದ್ರ ಪಠಣ ಶಿವರಾತ್ರಿಯ ವಿಶೇಷ. ಶಿವಪುರಾಣದ ಪ್ರಕಾರ ರುದ್ರ ಹಾಗೂ ಚಮಕಗಳ ಪಠಣ ಶಿವನಿಗೆ ಬಹಳ ಅಚ್ಚುಮೆಚ್ಚು. ದೇವಾಲಯಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಆರಂಭವಾಗಿ ಮರುದಿನದ ಮುಂಜಾನೆ 6 ಗಂಟೆಯವರೆಗೂ ರುದ್ರ ಪಠಣದ ಮೂಲಕ ಶಿವಸ್ತುತಿ ಜಾಗರಣೆ ನಡೆಯುತ್ತದೆ. ಪ್ರತಿ ಮೂರು ಗಂಟೆಗಳಿಗೊಮ್ಮೆ ಮಂಗಳಾರತಿ ಮಾಡಲಾಗುತ್ತದೆ. ಮರುದಿನದ ಬೆಳಿಗ್ಗೆ 6 ಗಂಟೆಗೆ ಮಹಾ ಮಂಗಳಾರತಿ ಮೂಲಕ ಜಾಗರಣೆ ಕೊನೆಗೊಳ್ಳುತ್ತದೆ. ಮೊದಲನೇ ಆಯಾಮದಲ್ಲಿ ಹಾಲು, ಎರಡನೇ ಆಯಾಮದಲ್ಲಿ ಮೊಸರು ಮೂರನೇ ಆಯಾಮದಲ್ಲಿ ತುಪ್ಪ, ನಾಲ್ಕನೇ ಆಯಾಮದಲ್ಲಿ ಜೇನುತುಪ್ಪಗಳಿಂದ ಶಿವನಿಗೆ ಅಭಿಷೇಕ ಮಾಡುವ ಪದ್ಧತಿಯು ಕೆಲವೆಡೆ ಇದೆ.

    ಪಂಚಾಕ್ಷರಿ ಮಂತ್ರ

    ನಮಃ ಶಿವಾಯ-ಇದು ಶಿವ ಪಂಚಾಕ್ಷರಿ ಮಂತ್ರವಾಗಿದೆ. ಯಜುರ್ವೇದದಲ್ಲಿನ ರುದ್ರಾಧ್ಯಾಯದಲ್ಲಿ ನಮಃ ಶಿವಾಯ ಈ ಶಬ್ದದಿಂದ ಒಂದು ಉಪ ಭಾಗ ಪ್ರಾರಂಭವಾಗುತ್ತದೆ. ಈ ಮಂತ್ರವನ್ನು ಅಲ್ಲಿಂದಲೇ ತೆಗೆದುಕೊಳ್ಳಲಾಗಿದೆ. ಇದರ ಪ್ರಾರಂಭದಲ್ಲಿ ಪ್ರಣವವನ್ನು ಸೇರಿಸಿದರೆ, ಅದು ಓಂ ನಮಃ ಶಿವಾಯ ಎಂಬ ಷಡಕ್ಷರಿ ಮಂತ್ರವಾಗುತ್ತದೆ.

    “ನಮಃ ಶಿವಾಯ’’ ಮಂತ್ರದಲ್ಲಿನ ಪ್ರತಿಯೊಂದು ಅಕ್ಷರದ ಆಧ್ಯಾತ್ಮಿಕ ಅರ್ಥ ಹೀಗಿದೆ:
    ನ: – ಸಮಸ್ತ ಲೋಕಗಳ ಆದಿದೇವ
    ಮಃ:- ಪರಮಪದವನ್ನು ಕೊಡುವವನು ಮತ್ತು ಮಹಾಪಾತಕಗಳನ್ನು ನಾಶಗೊಳಿಸುವವನು
    ಶಿ:- ಕಲ್ಯಾಣ ಕಾರಕ, ಶಾಂತ ಮತ್ತು ಶಿವನ ಅನುಗ್ರಹಕ್ಕೆ ಕಾರಣನಾದವನು
    ವಾ:- ವೃಷಭ ವಾಹನ, ವಾಸುಕಿ ಮತ್ತು ವಾಮಾಂಗಿ ಶಕ್ತಿಗಳ ಸೂಚಕ
    ಯ:- ಪರಮಾನಂದ ರೂಪ ಮತ್ತು ಶಿವನ ನಿವಾಸಸ್ಥಾನ. ಆದುದರಿಂದ ಈ ಐದು ಅಕ್ಷರಗಳಿಗೆ ನಮಸ್ಕಾರ.

    ಎಲ್ಲ ಆಡಂಬರಗಳಿಂದ ಮುಕ್ತರಾಗಿ ಸರಳ ಮನಸ್ಸಿನಿಂದ ಪರಶಿವನ ನೆನೆದು, ಭಜಿಸಿ ಶಿವರಾತ್ರಿಯನ್ನು ಆಚರಿಸೋಣ. ಶಿವನು ಸರಳತೆ, ಪ್ರಾಮಾಣಿಕತೆ, ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲ ಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯ ಶಿವ ಭಕ್ತರಿಂದ ಬಯಸುವುದು ನಿಷ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ, ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿಯಂದು ಧ್ಯಾನಿಸಿದರೆ ಆತ ಪ್ರಸನ್ನನಾಗುತ್ತಾನೆ ಎಂದು ಹಿರಿಯರು ಹೇಳುತ್ತಾರೆ.

    ಶ್ರೀಶಂಕರಾಚಾರ್ಯರು ಶಿವಾನಂದ ಲಹರಿಯಲ್ಲಿ ಶಿವನನ್ನು ಸ್ತುತಿಸಿದ್ದಾರೆ. ಅದನ್ನು ಈ ವಿಡಿಯೋದಲ್ಲಿ ಆಲಿಸಿ.

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    ಮಕ್ಕಳೇ ಅಭಿವೃದ್ಧಿಮಾಡುವ ಉಪಗ್ರಹ ಯೋಜನೆಗೆ ಪುನೀತ್ ರಾಜ್ ಕುಮಾರ್ ಹೆಸರು

    BENGALURU FEB 28

    ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರಕಾರಿ ಶಾಲೆಗಳ ಮಕ್ಕಳೇ ಉಪಗ್ರಹ ಅಭಿವೃದ್ಧಿ ಮಾಡಲಿದ್ದು, ಇದಕ್ಕೆ ದಿವಂಗತ ನಟ ಪುನೀತ್ ರಾಜಕುಮಾರ್ ಗೌರವಾರ್ಥವಾಗಿ ಅವರ ಹೆಸರನ್ನೇ ಇಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    `ರಾಷ್ಟ್ರೀಯ ವಿಜ್ಞಾನ ದಿನ’ದ ಅಂಗವಾಗಿ ಮಲ್ಲೇಶ್ವರಂನ 18ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದರು.

    ಈ ಸಂದರ್ಭದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್) ಮತ್ತು ಭಾರತೀಯ ತಂತ್ರಜ್ಞಾನ ಸಮಾವೇಶ ಒಕ್ಕೂಟ (ಐಟಿಸಿಎ) ಮಾಡಿಕೊಂಡ ಒಡಂಬಡಿಕೆಯನ್ನು ವಿನಿಮಯ ಮಾಡಿಕೊಳ್ಳಲಾಯಿತು.

    ಸಮಾರಂಭದಲ್ಲಿ ಮಾತನಾಡಿದ ಸಚಿವರು, “ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ ಐಟಿಸಿಎ 75 ಉಪಗ್ರಹಗಳನ್ನು ಉಡಾಯಿಸುತ್ತಿದೆ. ಈ ಪೈಕಿ ಒಂದು ಉಪಗ್ರಹವನ್ನು ರಾಜ್ಯ ಸರಕಾರದ ಸಹಕಾರದಲ್ಲಿ ಸರಕಾರಿ ಶಾಲೆಗಳ ಮಕ್ಕಳು ನಿರ್ಮಿಸುತ್ತಿದ್ದು, ಇದಕ್ಕೆ 1.90 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ,’ ಎಂದರು.

    ಉದ್ದೇಶಿತ ಉಪಗ್ರಹವು 1.50 ಕೆ.ಜಿ. ತೂಕವಿರಲಿದ್ದು, ಯೋಜನೆಯ ಗ್ರೌಂಡ್ ಸ್ಟೇಷನ್ ಕೂಡ ಮಲ್ಲೇಶ್ವರದ ಇದೇ ಕಾಲೇಜಿನ ಆವರಣದಲ್ಲಿ ಇರಲಿದೆ. ಎಲ್ಲ ನಿರ್ವಹಣೆಯೂ ಇಲ್ಲಿಂದಲೇ ಆಗಲಿದೆ. ಯೋಜನೆಗೆ 20 ಸರಕಾರಿ ಶಾಲೆಗಳ 100 ಪ್ರತಿಭಾವಂತ ಮಕ್ಕಳನ್ನು ನಾನಾ ಸ್ಪರ್ಧೆ ಮತ್ತು ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

    ಈ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಆನ್-ಲೈನ್, ಆಫ್-ಲೈನ್, ಹ್ಯಾಂಡ್ಸ್-ಆನ್ ಮತ್ತು ಟ್ಯುಟೋರಿಯಲ್ ಮಾದರಿಗಳಲ್ಲಿ ಪರಿಚಯಾತ್ಮಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಜತೆಗೆ, ಎರಡೂ ಭಾಷೆಗಳಲ್ಲಿ ಅಗತ್ಯ ಪಠ್ಯಗಳ ವೆಬ್-ಲಿಂಕ್ ಒದಗಿಸಲಾಗುವುದು. ಈ ಸಂಬಂಧದ ತರಗತಿಗಳು ಏಪ್ರಿಲ್ 22ರಿಂದ ಆರಂಭವಾಗಲಿವೆ ಎಂದು ಅವರು ಮಾಹಿತಿ ನೀಡಿದರು.

    ಈ ತರಬೇತಿಯಲ್ಲಿ ಉಪಗ್ರಹ ಪೇಲೋಡ್ ತಿಳಿವಳಿಕೆ, ನ್ಯಾನೋ ಉಪಗ್ರಹಗಳ ಪರಿಚಯ, ಬೆಂಗಳೂರಿನಲ್ಲಿರುವ ವೈಜ್ಞಾನಿಕ ಸಂಸ್ಥೆಗಳಿಗೆ ಭೇಟಿ, ಉಡಾವಣೆ ಸಮಯದಲ್ಲಿ ಶ್ರೀಹರಿಕೋಟಾಗೆ ಭೇಟಿ, ವಿಜ್ಞಾನಿಗಳೊಂದಿಗೆ ಸಂವಾದ, ಗ್ರೌಂಡ್ ಸ್ಟೇಷನ್ ನಲ್ಲಿ ತರಬೇತಿ, ಅಗತ್ಯ ಪುಸ್ತಕಗಳ ಪ್ರಕಟಣೆ ಮುಂತಾದ ಚಟುವಟಿಕೆಗಳು ಇರಲಿವೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಡಿ.ವಿ.ಸದಾನಂದ ಗೌಡ, ಸಮಾಜದ ಸಬಲೀಕರಣಕ್ಕೆ ವಿಜ್ಞಾನದ ಆವಿಷ್ಕಾರಗಳಲ್ಲಿ ಪರಿಹಾರೋಪಾಯಗಳಿವೆ. ಆದ್ದರಿಂದ ಯುವಜನರಲ್ಲಿ ಮೊದಲಿನಿಂದಲೇ ವೈಜ್ಞಾನಿಕ ಕುತೂಹಲ ಬೆಳೆಸಬೇಕು,’ ಎಂದರು.

    ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಸ್. ಅಯ್ಯಪ್ಪನ್ ಮಾತನಾಡಿ, `ದೇಶದಲ್ಲಿ ಪ್ರತೀ ಒಂದು ಕೋಟಿ ಜನಸಂಖ್ಯೆಗೆ ಕೇವಲ 2,500 ಸಂಶೋಧಕರು ಮಾತ್ರವೇ ಇದ್ದಾರೆ. ಅಂದರೆ, ಒಟ್ಟಾರೆಯಾಗಿ ಈ ಸಂಖ್ಯೆ 5 ಲಕ್ಷವನ್ನೂ ದಾಟುವುದಿಲ್ಲ. ಹೀಗಾಗಿ ನಮ್ಮಲ್ಲಿ ಆಹಾರ-ಧಾನ್ಯಗಳು ವ್ಯರ್ಥವಾಗುತ್ತಿವೆ. ಮುಂದುವರಿದ ದೇಶಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆಯಾಗಿದೆ. ಜಾಗತಿಕ ಚಿಂತನೆ ಮತ್ತು ಸ್ಥಳೀಯ ಉಪಯುಕ್ತತೆ ಎನ್ನುವ ಸೂತ್ರ ನಮ್ಮದಾಗಬೇಕು,’ ಎಂದರು.

    ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ನ್ಯಾನೋ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷ ಡಾ.ನವಕಾಂತ ಭಟ್, ಪ್ರೊ.ಎಚ್.ಎಸ್. ನಾಗರಾಜು, ಡಾ.ಹೇಮಂತಕುಮಾರ್, ಅಶೋಕ್ ರಾಯಚೂರು, ಸೌಮ್ಯಾ ವೈದ್ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಜ್ಞಾನ ಕಿಟ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

    ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕ ಬಸವರಾಜ ಅವರು ಸ್ವಾಗತಿಸಿದರು.

    ವಿಜ್ಞಾನ ಪ್ರದರ್ಶನದ ಆಕರ್ಷಣೆ

    ಮಲ್ಲೇಶ್ವರದ ಪಿಯು ಕಾಲೇಜು ಮೈದಾನದಲ್ಲಿ ವಿಜ್ಞಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಮಳಿಗೆಗಳಿಗೆ ಭೇಟಿ ನೀಡಿದ ಸಚಿವರು, ಸಂಸದರು ಮತ್ತು ವಿಜ್ಞಾನಿಗಳು, ಅಲ್ಲಿ ಪ್ರದರ್ಶನಕ್ಕಿಟ್ಟಿದ್ದ ವೈಜ್ಞಾನಿಕ ಸಾಧನಗಳು ಮತ್ತು ಉಪಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಪ್ರದರ್ಶನಕ್ಕೆ ಸಾವಿರಾರು ವಿಜ್ಞಾನಾಸಕ್ತರು ಕೂಡ ಭೇಟಿ ನೀಡಿದ್ದು, ಗಮನಾರ್ಹವಾಗಿತ್ತು.

    ಕಾರ್ಯಕ್ರಮದಲ್ಲಿ ಉಪಗ್ರಹಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಕೈಪಿಡಿಯನ್ನೂ ಬಿಡುಗಡೆ ಮಾಡಲಾಯಿತು. ಜೊತೆಗೆ, ಎರಡು ಸರಕಾರಿ ಶಾಲೆಗಳಿಗೆ ಸಾಂಕೇತಿಕವಾಗಿ ವಿಜ್ಞಾನದ ಪ್ರಯೋಗ ಕಿಟ್ ವಿತರಿಸಲಾಯಿತು. ಉಳಿದ ಶಾಲೆಗಳಿಗೆ ಬಿಇಒಗಳ ಮೂಲಕ ಈ ಕಿಟ್ ತಲುಪಿಸಲಾಗುವುದು ಎಂದು ಸಚಿವರು ತಿಳಿಸಿದರು

    Karnataka students studying in Ukraine :ಉಕ್ರೇನ್ ನಿಂದ ಆಗಮಿಸಿರುವ ಕನ್ನಡಿಗರನ್ನು ಅವರ ಊರುಗಳಿಗೆ ಕಳುಹಿಸಲು ಸರ್ಕಾರದ ನೆರವು

    BENGALURU FEB 26

    ಮುಂಬೈ ಅಥವಾ ದಿಲ್ಲಿಗೆ ಇಂದು ಆಗಮಿಸಿರುವ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಕರೆತಂದು ಅವರವರ ಊರುಗಳಿಗೆ ಕಳುಹಿಸಲು ಸಹಾಯ ಸಹಕಾರವನ್ನು ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

    ದಿಲ್ಲಿಯಲ್ಲಿರುವ ಮುಖ್ಯ ಆಯುಕ್ತರಿಗೂ ಬರುವವರಿಗೆ ಸಾರಿಗೆ ಹಾಗೂ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದೆ ಎಂದರು. ರಷ್ಯಾ ಉಕ್ರೇನ್ ಮೇಲೆ ನಡೆಸಿರುವ ಯುದ್ಧದಲ್ಲಿ ಕನ್ನಡಿಗ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳುವ ಬಗ್ಗೆ ನಿನ್ನೆ ಕೇಂದ್ರ ವಿದೇಶಾಂಗ ಸಚಿವ ಜಯಶಂಕರ್ ಅವರೊಂದಿಗೆ ಮಾತನಾಡಿದ ನಂತರ ಅವರ ಪಟ್ಟಿಯನ್ನು ಸಹ ಕಳುಹಿಸಿಕೊಡಲಾಗಿದೆ. ಪಶ್ಚಿಮ ಭಾಗದಲ್ಲಿರುವವರನ್ನು ರಸ್ತೆ ಮುಖಾಂತರ ಕಳುಹಿಸುವುದು ಎಂದು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದರು. ಆ ಪ್ರಕಾರ ರೋಮಾನಿಯಾ ಮತ್ತಿತರ ಕಡೆಯಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಅವರ ವಿವರಗಳನ್ನು ಪಡೆದುಕೊಳ್ಳಲಾಗುತ್ತಿದೆ ಎಂದರು.

    ಹೆಚ್ಚಿನ ವಿದ್ಯಾರ್ಥಿಗಳು ಖಾರಖೈ ಎಂಬಲ್ಲಿದ್ದಾರೆ. ಅದು ಈಶಾನ್ಯ ಭಾದಲ್ಲಿದ್ದು,ಅವರಿಗೆ ಸುರಕ್ಷಿತ ಸ್ಥಳದಲ್ಲಿರಲು ಸೂಚಿಸಲಾಗಿದೆ. ಹಾಗೂ ಅನಾವಶ್ಯಕವಾಗಿ ರಸ್ತೆಗೆ ಬರುವುದನ್ನು ತಪ್ಪಿಸಲು ತಿಳಿಸಲಾಗಿದೆ. ನಮ್ಮ ಪ್ರಧಾನ ಮಂತ್ರಿಗಳು ರಷ್ಯಾದ ಅಧ್ಯಕ್ಷರೊಂದಿಗೆ ಮಾತನಾಡಿದ್ದು, ಭಾರತೀಯರನ್ನು ಸ್ಥಳಾಂತರ ಮಾಡಲು ಇರುವ ವಿಮಾನಗಳಿಗೆ ಸುರಕ್ಷಿತ ಮಾರ್ಗವನ್ನು ಮಾಡಿಕೊಡುವಂತೆ ಕೋರಿದ್ದಾರೆ. ಅದಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ. ಯುದ್ಧದ ವಾತಾವರಣ ನಿಯಂತ್ರಣಕ್ಕೆ ಬಂದ ಮೇಲೆ ಆ ಪ್ರಕ್ರಿಯೆ ಕೂಡ ಪ್ರಾರಂಭವಾಗಲಿದೆ. ಕೆಲವೇ ದಿನಗಳಲ್ಲಿ ರಸ್ತೆ ಹಾಗೂ ವಿಮಾನಗಳ ಮೂಲಕ ನಮ್ಮ ವಿದ್ಯಾರ್ಥಿಗಳನ್ನು ಕರೆತರಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

    ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಸಿಎಂ:“ನಾನೂ ಸಹ ಕೆಲವು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದೇನೆ. ವಿಚಾರಗಳನ್ನು ತಿಳಿಸಿ ಸಂಪರ್ಕಿಸುವ ಸಂಖ್ಯೆಗಳನ್ನು ಒದಗಿಸಲಾಗಿದೆ. ಮಾಹಿತಿಗಳನ್ನು ಪಡೆದು ಧೈರ್ಯ ಹೇಳಿದ್ದೇನೆ. ರಷ್ಯಾ ಅಧ್ಯಕ್ಷ ರೊಂದಿಗೆ ನಮ್ಮ ಪ್ರಧಾನಿಗಳು ಮಾತನಾಡಿರುವ ಫಲಶ್ರುತಿಯಿಂದ ಭಾರತೀಯರು ಮತ್ತು ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆತರಲಾಗುವುದು ಎಂದರು.

    ಯುದ್ಧ ನಡೆಯುತ್ತಿರುವುದರಿಂದ ಯಾವುದೇ ವ್ಯವಸ್ಥೆಗಳು ಇಲ್ಲ. ರಷ್ಯಾದವರು ಪ್ರವೇಶಿಸಿರುವ ನಗರ ಭಾಗಗಳಲ್ಲಿ ಬಹಳಷ್ಟು ಅವ್ಯವಸ್ಥೆ ಇದೆ. ಭಾರತೀಯರು ಸಹ ಅಲ್ಲಿ ಸಿಲುಕಿದ್ದಾರೆ. ಯಾವುದೇ ರೀತಿಯ ಅನಾಹುತ ಅಥವಾ ತೊಂದರೆ ಆಗಿಲ್ಲ.ಆದರೆ ಅವರಿಗೆ ಸರಿಯಾದ ಊಟ, ಇರಲು ವ್ಯವಸ್ಥೆ ಇಲ್ಲ. ಬಹಳಷ್ಟು ಜನ ಮೆಟ್ರೋದಲ್ಲಿರುವ ಬಂಕರ್ ಗಳಲ್ಲಿ ಆಶ್ರಯ ಪಡೆದಿದ್ದಾರೆ. ಬಹಳ ಜನ ಅಲ್ಲಿ ಸೇರಿರುವುದರಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

    ರಾಜತಾಂತ್ರಿಕವಾಗಿ ಭಾರತದ ಪ್ರಧಾನ ಮಂತ್ರಿಗಳ ಮಾತುಕತೆ ಯಶಸ್ವಿ
    ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ ಎಂದ ಮುಖ್ಯ ಮಂತ್ರಿಗಳು, ನಮ್ಮ ವಿದೇಶಾಂಗ ಸಚಿವ ಸಹಕಾರದಿಂದ ಉಕ್ರೇನ್ ನಿಗೆ ಹೊಂದಿಕೊಂಡಿರುವ ದೇಶಗಳೊಂದಿಗೆ ಮಾತನಾಡಿ ರಷ್ಯಾ ಭಾಷೆ ತಿಳಿದಿರುವ ರಾಯಭಾರಿಗಳನ್ನು ಅಲ್ಲಿಗೆ ಕಳುಹಿಸಲಾಗಿದೆ. ರಷ್ಯಾ ದವರ ಮೇಲುಗೈ ಇರುವುದರಿಂದ ಅವರೊಂದಿಗೆ ಮಾತನಾಡಿ ಭಾರತೀಯರನ್ನು ಸುರಕ್ಷಿತವಾಗಿ ಹೊರ ತರಲು ಇದು ಸಹಕಾರಿಯಾಗಲಿದೆ ಎಂದರು.

    ಪಶ್ಚಿಮ ಭಾಗದಿಂದ ರಸ್ತೆ ಮೂಲಕ ಕರೆತರಲು ಅವಕಾಶವಿದೆ. ಅದನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಪೂರ್ವ ಭಾಗದಲ್ಲಿರುವರನ್ನು ಕರೆತರಲು ಗಮನ ಹರಿಸಲಾಗಿದೆ. ಕೆಲವು ವಿಮಾನನಿಲ್ದಾಣಗಳು ಯಾರ ನಿಯಂತ್ರಣದಲ್ಲಿಯೂ ಇಲ್ಲದ ಕಾರಣ ಸುರಕ್ಷಿತ ಮಾರ್ಗಗಳ ಮೂಲಕ ಕರೆತರಲಾಗುತ್ತಿದೆ. ಅವರ ಪೈಕಿ ಬರುವ ಕನ್ನಡಿಗರನ್ನು ಊರು ತಲುಪಿಸುವ ಕೆಲಸ ಮಾಡಲಾಗುವುದು. ಅಲ್ಲಿನ ಸಹಾಯವಾಣಿಯೊಂದಿಗೆ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ಕೇಂದ್ರ ಸರ್ಕಾರದ ಸಹಾಯವಾಣಿಯೂ ಇದೆ. ಕರ್ನಾಟಕದ ಇನ್ನೂರಕ್ಕೂ ಹೆಚ್ವು ಜನ ಸಂಪರ್ಕ ಮಾಡಿದ್ದಾರೆ ಎಂದರು.

    ಯುದ್ಧದ ನೀತಿಯಲ್ಲಿ ನಾಗರಿಕರಿಗೆ ತೊಂದರೆಯಾಗುವ ಉದ್ದೇಶವಿರುವುದಿಲ್ಲ. ಆಕಸ್ಮಿಕವಾಗಿ ಒಮ್ಮೊಮ್ಮೆ ಅನಾಹುತಗಳು ಸಂಭವಿಸಬಹುದು. ಉಕ್ರೇನ್ ನಲ್ಲಿರುವ ಭಾರತದ ದೂತವಾಸ ಕಚೇರಿಯವರೂ ಸಹ ಸಂಪರ್ಕದಲ್ಲಿದ್ದಾರೆ ಎಂದರು.

    Examination for recruitment of Assistant Professors :ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ: 28ರಿಂದ ಪ್ರವೇಶ ಪತ್ರ ಲಭ್ಯ

    BENGALURU FEB 26

    ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅಗತ್ಯವಿರುವ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಹಾಕಿರುವ ಅಭ್ಯರ್ಥಿಗಳು, ಮಾರ್ಚ್ ಮಧ್ಯಭಾಗದಲ್ಲಿ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ಪ್ರವೇಶ ಪತ್ರವನ್ನು ಫೆ.28ರಿಂದ http://kea.kar.nic.in ಜಾಲತಾಣದಲ್ಲಿ ಡೌನ್-ಲೋಡ್ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯಾ ತಿಳಿಸಿದ್ದಾರೆ.

    ಜತೆಗೆ, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆಯನ್ನೂ ನಿಗದಿಪಡಿಸಿದ್ದು, ನಿಷೇಧಿತ ವಸ್ತುಗಳ ಪಟ್ಟಿಯನ್ನೂ ತಿಳಿಸಲಾಗಿದೆ. ಈ ಪರೀಕ್ಷೆಯು ಮಾರ್ಚ್ 12ರಿಂದ 16ರವರೆಗೆ ನಡೆಯಲಿದೆ.

    ಈ ಬಗ್ಗೆ ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಇತ್ತೀಚಿನ 2 ಭಾವಚಿತ್ರ, ಪ್ರವೇಶಪತ್ರ, ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ತರಬೇಕು ಎಂದಿದ್ದಾರೆ.ಆದರೆ, ಪರೀಕ್ಷಾ ಕೊಠಡಿಗೆ ಅಭ್ಯರ್ಥಿಗಳು ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳು (ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋಫೋನ್, ಬ್ಲೂಟೂತ್, ಕೈ ಗಡಿಯಾರ), ಆಹಾರ ಪದಾರ್ಥಗಳು, ಸ್ಟೇಷನರಿ ವಸ್ತುಗಳು (ಪೆನ್ಸಿಲ್, ಕಾಗದ, ಎರೇಸರ್, ಇಂಚುಪಟ್ಟಿ, ಜಾಮಿಟ್ರಿ ಪೆಟ್ಟಿಗೆ, ಕ್ಯಾಲ್ಕುಲೇಟರ್, ಲಾಗ್ ಟೇಬಲ್) ಮತ್ತು ವೈಯಕ್ತಿಕ ವಸ್ತುಗಳನ್ನು (ವ್ಯಾಲೆಟ್, ಅಲಂಕಾರಿಕ ಕನ್ನಡಕ, ಬೆಲ್ಟ್, ಟೋಪಿ, ಕ್ಯಾಮರಾ, ಆಭರಣಗಳು) ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ನಿಗದಿತ ವಸ್ತ್ರ ಸಂಹಿತೆ ಕಡ್ಡಾಯ

    ಪರೀಕ್ಷೆ ಬರೆಯಲಿರುವ ಪುರುಷ ಅಭ್ಯರ್ಥಿಗಳಿಗೆ ಕೋವಿಡ್ ಮಾರ್ಗದರ್ಶಿ ಸೂತ್ರಗಳ ಹಿನ್ನೆಲೆಯಲ್ಲಿ ಅರೆ ಪಾರದರ್ಶಕ ಸರ್ಜಿಕಲ್ ಮಾಸ್ಕ್ (ಎನ್-95 ಮತ್ತು ಇತರ ಬಗೆಯ ಮಾಸ್ಕ್ ನಿಷಿದ್ಧ) ಅರೆದೋಳಿನ ಅಂಗಿ ಮತ್ತು ಸಾದಾ ಪ್ಯಾಂಟ್ ಹಾಗೂ ಚಪ್ಪಲಿಗಳನ್ನು ಕಡ್ಡಾಯಗೊಳಿಸಲಾಗಿದೆ. ಹಾಗೆಯೇ, ಮಹಿಳಾ ಅಭ್ಯರ್ಥಿಗಳಿಗೆ ಸರ್ಜಿಕಲ್ ಮಾಸ್ಕ್, ಅರೆದೋಳಿನ ಉಡುಪುಗಳನ್ನು ಸೂಚಿಸಲಾಗಿದೆ.

    ಪುರುಷರಾಗಲಿ, ಮಹಿಳೆಯರಾಗಲಿ ತುಂಬುದೋಳಿನ ಉಡುಪು, ಶೂ, ಆಭರಣ (ಪದಕ, ಮೂಗುಬೊಟ್ಟು, ಕಿವಿಯೋಲೆ, ನೆಕ್ಲೇಸ್, ಬ್ರೇಸ್ಲೆಟ್) ಮತ್ತು ಆಲಂಕಾರಿಕ ಉಡುಪುಗಳನ್ನು ಧರಿಸಿಕೊಂಡು ಬರುವುದನ್ನು ನಿಷೇಧಿಸಲಾಗಿದೆ.

    ಅಭ್ಯರ್ಥಿಗಳಿಗೆ ಯಾವುದೇ ಬ್ರ್ಯಾಂಡ್ ನ ಹೆಸರಿಲ್ಲದ ಸಾದಾ ಬಾಟಲಿಯಲ್ಲಿ ಕುಡಿಯುವ ನೀರನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಬರಲು ಅವಕಾಶ ಕೊಡಲಾಗಿದೆ ಎಂದು ಪ್ರಾಧಿಕಾರವು ಮಾಹಿತಿ ನೀಡಿದೆ.

    ಶಿಲ್ಪಕಲಾ ಚತುರ ಅಮಿತ್ ಮಂಜುನಾಥ್ ನಾಯಕ

    ಬಳಕೂರು ವಿ ಎಸ್ ನಾಯಕ

    ಬಾಲ್ಯದಿಂದಲೇ ಅಪಾರವಾದಂತಹ ಕಲಾಸಕ್ತಿ. ಕಲೆಯಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವಂತಹ ಅಚಲ ಗುರಿ. ಬಾಲ್ಯದಲ್ಲಿಯೇ ತನ್ನ ಮನಸ್ಸಿಗೆ ಬಂದದ್ದನ್ನು ಗೀಚಿ ಸಂಭ್ರಮಿಸಿದ ಪರಿ. ಶಾಲೆಯಲ್ಲಿರುವಾಗ ತನಗೆ ತೋಚಿದ್ದನ್ನು ಕ್ಷಣಾರ್ಧದಲ್ಲಿಯೇ ಬರೆದು ನಮ್ಮ ಅಧ್ಯಾಪಕರಿಗೆ ತೋರಿಸಿ ಅವರಿಂದ ಪ್ರಶಂಸೆಗೆ ಒಳಗಾಗಿತ್ತು. ಹೀಗೆ ಬಾಲ್ಯದಲ್ಲಿಯೇ ಅರಳಿದ ಕಲಾಸಕ್ತಿ ನಂತರ ಹೆಮ್ಮರವಾಗಿ ತನ್ನ ಕಲಾ ಪಯಣದ ಕಡೆಗೆ ಸಾಗುವಂತೆ ಮಾಡಿದ್ದಂತೂ ಸತ್ಯ. ಅದ್ಭುತ ಕಲಾಸಕ್ತಿಯನ್ನು ಹೃದಯಾಂತರಾಳದಲ್ಲಿ ಬಚ್ಚಿಟ್ಟುಕೊಂಡು ನಂತರದ ದಿನಗಳಲ್ಲಿ ಶಿಲ್ಪಕಲೆಯ ಮಾಧ್ಯಮ ಮೂಲಕವಾಗಿ ಎಲ್ಲರ ಗಮನವನ್ನು ಸೆಳೆಯುವಂತೆ ಮಾಡಿದವರು ಶಿಲ್ಪ ಕಲಾವಿದ ಅಮಿತ್ ಮಂಜುನಾಥ್ ನಾಯಕ .

    ಇವರು ಮೂಲತಹ ಮಲೆನಾಡಿನವರು. ನಮಿತಾ ನಾಯಕ್ ಮತ್ತು ಮಂಜುನಾಥ್ ನಾಯಕರವರ ಪುತ್ರ. ಬಾಲ್ಯದಿಂದಲೇ ಇವರ ಕಲಾ ಪ್ರತಿಭೆಯನ್ನು ಗುರುತಿಸಿದ ಇವರ ತಂದೆ ತಾಯಿ ನಂತರ ಇವನನ್ನು ಚಿತ್ರಕಲಾ ಮಹಾವಿದ್ಯಾಲಯ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಕಲಾ ಅಧ್ಯಯನಕ್ಕಾಗಿ ಸೇರಿಸಿದರು. ಆದರೆ ಅಲ್ಲಿ ಹೋದ ಅವರಿಗೆ ವಿವಿಧ ಕಲಾ ಪ್ರಕಾರಗಳು ಆಕರ್ಷಿಸಿದವು. ಕಲಾತ್ಮಕವಾಗಿ ಏನಾದರೂ ಚಿತ್ರಿಸಬೇಕು ವಿಶೇಷವಾದಂತಹ ಶಿಲ್ಪಗಳನ್ನು ರಚಿಸಬೇಕು ತನ್ನದೇ ಆದಂತಹ ಭಾವನಾತ್ಮಕವಾದ ವಿಚಾರಗಳನ್ನು ಬಿಂಬಿಸಿ ಶಿಲ್ಪ ಮತ್ತು ಚಿತ್ರಕಲೆಗಳಲ್ಲಿ ಅದನ್ನು ತೋರ್ಪಡಿಸಬೇಕು ಎಂಬ ವಿಚಾರ ಅಂದೇ ಆರಂಭವಾಯಿತು. ನಂತರ ಶಿಲ್ಪಕಲೆಯನ್ನು ಆಯ್ಕೆಮಾಡಿಕೊಂಡ ಅವರು ಶಿಲ್ಪಕಲೆಯಲ್ಲಿ ಯಾರಿಗೂ ಕೂಡ ನಿಲುಕದ ವಿಶೇಷವಾದ ಶಿಲ್ಪಗಳನ್ನು ರಚಿಸುವುದರ ಮೂಲಕವಾಗಿ ಚಿಕ್ಕವಯಸ್ಸಿನಲ್ಲಿ ಅದ್ಭುತವಾದ ಕಲಾ ಸಾಧನೆ ಮಾಡಿರುವುದು ನಿಜವಾಗಿಯೂ ಕೂಡ ಮೆಚ್ಚ ಬೇಕಾದ ವಿಷಯ.

    ಒಬ್ಬ ಕಲಾವಿದ ಆದವನಿಗೆ ಗುರಿ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಅಮಿತ್ ರವರ ಶಿಲ್ಪಕಲಾಕೃತಿಗಳು ಸಾಕ್ಷಿ . ಇವರ ಈ ಶಿಲ್ಪಕಲಾಕೃತಿಗಳನ್ನು ನಾವು ನೋಡಿದಾಗ ನಮ್ಮ ಸಮಾಜದಲ್ಲಿ ಹಲವಾರು ರೀತಿಯ ವಿಚಾರಗಳು ಅದರ ಜೊತೆಗೆ ಮನುಷ್ಯನ ಅನುಭವ ನೋವು ದುಃಖ ಸಾಧನೆ ಸಂತೋಷಎಲ್ಲಾ ಭಾವನೆಗಳನ್ನು ಇವರ ಶಿಲ್ಪಗಳಲ್ಲಿಕಾಣ ಬಹುದಾಗಿದೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಕಲಾ ಪದವಿಯನ್ನು ಪಡೆದಿರುವ ಇವರಿಗೆ ಇವರ ಕಲಾ ಸಾಧನೆಯನ್ನು ಗಮನಿಸಿ ಲಲಿತಕಲಾ ಅಕಾಡೆಮಿ ಇಂದ ರಾಜ್ಯಪ್ರಶಸ್ತಿ. ಹೀಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಡೆದ ಆನ್ಲೈನ್ ಕಲಾಪ್ರದರ್ಶನದಲ್ಲಿ ಪಾಲ್ಗೊಂಡು ಒಳ್ಳೆಯ ಹೆಸರನ್ನು ಮಾಡಿದ್ದಾರೆ ಇವರ ಅದ್ಭುತ ಕಲಾ ಸೇವೆಗೆ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ ಇಂತಹ ಶಿಲ್ಪ ಕಲಾವಿದರನ್ನು ನಾವು ಕೂಡ ಗೌರವಿಸೋಣ.

    This image has an empty alt attribute; its file name is V-S-NAIK.jpg

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ , ಪ್ರಖರ ಚಿಂತಕ ಸಾವರ್ಕರ್ ನೆನಪು

    ಇವತ್ತು ಫೆಬ್ರವರಿ 26. 1966 ರ ಇದೇ ದಿನ ಸಾವರ್ಕರ್ ಅವರ ನಿಧನ. ಅವರ ಹೋರಾಟ,ಅದಕ್ಕೆ ಬಳಸಿಕೊಂಡ ತಂತ್ರಗಳು, ವಾಕ್ ಚತುರತೆ, ಬರಹ, ಪ್ರತಿಪಾದಿಸಿದ ನಿಲುವುಗಳು, ಅದಕ್ಕಾಗಿ ಅನುಭವಿಸಿದ ಕಠಿಣ ಶಿಕ್ಷೆ, ಆಗಿನ ಅವರ ಸಮಕಾಲಿಗಳ ಜೊತೆಗಿನ ಸಿದ್ದಾಂತ ಭೇದ ಎಲ್ಲವೂ ಯಾಕೋ ನೆನಪಾದವು. ಇಂತಹ ಎಷ್ಟೋ ಮಹನೀಯರ ಜೀವನ ಚರಿತ್ರೆ ನಮ್ಮ ಇತಿಹಾಸದ ಪುಟಗಳಲ್ಲಿ ಇದ್ದು, ಇವತ್ತಿಗೂ ಅವರವರ ಅನುಯಾಯಿಗಳಿಗೆ ಪ್ರೇರಕರಾಗಿದ್ದಾರೆ. ಎಲ್ಲರೂ ಒಂದಲ್ಲ ಒಂದು ಕಾರಣಗಳಿಗೆ ಇಂದಿಗೂ ಪ್ರಸ್ತುತರಾಗುತ್ತಾರೆ. ಇಂತವರು ಸತ್ತರು ಎನ್ನಲು ಆಗಲ್ಲ. ಅವರ ಭೌತಿಕ ಶರೀರ ಪ್ರಕೃತಿ ಧರ್ಮವನ್ನು ಅನುಸರಿಸಿ ನಶಿಸಲೇ ಬೇಕು, ನಶಿಸಿದೆ ಕೂಡಾ.

    ಬುದ್ಧನಿಂದ ಹಿಡಿದು, ಬಸವಣ್ಣ ಮತ್ತು ನಮ್ಮ ತಲೆಮಾರುಗಳ ಗಾಂಧಿ ತನಕದ ಮಹಾನ್ ಚೇತನಗಳ ಸಾವು ದುರಂತದಲ್ಲಿ ಆಗಿರುವುದು ನಮಗೆ ಅಭಿಪ್ರಾಯ ಭೇದಗಳು ಹಿಂಸೆಯಲ್ಲಿ ಪರ್ಯಾವಸಾನ ಗೊಂಡಿರುವುದನ್ನು ತಿಳಿಸುತ್ತವೆ. ಭಾರತದಲ್ಲೇ ಅಲ್ಲ, ಇಡೀ ಪ್ರಪಂಚದಲ್ಲಿ ಅದು ಸಾಮಾನ್ಯವೇನೋ ಅನ್ನುವಷ್ಟು ಇತಿಹಾಸದ ತುಂಬಾ ಅಂತಹ ಉಲ್ಲೇಖಗಳು ಇವೆ. ಹಾಗೆ ದುರಂತ ಸಾವನ್ನು ಹುತಾತ್ಮರು ಅನ್ನುವ ಮೂಲಕ ಅವರ ದಿವ್ಯ ಚೇತನಗಳನ್ನು ಇಂದಿಗೂ ಜೀವಂತವಾಗಿ ಇಡುವ ಕೆಲಸಗಳೂ ಆಗುತ್ತಿವೆ. ಅದು ಅವರಿಗೆ ಕೊಡುವ ಗೌರವವೂ ಹೌದು. ಕೃತಜ್ಞ ಸಮಾಜ ಪಾಲಿಸಬೇಕು ಸಹಾ.

    ಶಾಂತಿ ಮಾರ್ಗದ ಗಾಂಧೀಜಿ ಸಾವು ದುರಂತದಲ್ಲಿ ಆದರೆ, ಕ್ರಾಂತಿಯ ಮಾರ್ಗವನ್ನು ಪ್ರತಿಪಾದಿಸಿದ ಸಾವರ್ಕರ್ ಸಾವು ವಿಚಿತ್ರವಾಗಿದೆ ಮತ್ತು ಶೋಚನೀಯವಾಗಿದೆ! ಅಭಿಪ್ರಾಯ ಭೇದಗಳನ್ನು ಗೌರವಿಸಬೇಕು, ಅದು ನಮ್ಮ ವಿರುದ್ಧ ಇದ್ದವರದ್ದು ಆದರೂ ಸರಿ ಎಂದು ಬ್ರಿಟಿಷ್ ಸರ್ಕಾರ ತನ್ನ ರಾಣಿಯ ಪಟ್ಟಾಭಿಷೇಕದ ನೆಪಮಾಡಿ ಭಾರತದಲ್ಲಿ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿ, ಪಟ್ಟಿ ತಯಾರಿಸುತ್ತದೆ. ಅದರಲ್ಲಿ ಸಾವರ್ಕರ್ ಸಹೋದರರ (ಗಣೇಶ್,ವಿನಾಯಕ) ಹೆಸರು ಇಲ್ಲದ್ದು ನೋಡಿ ಮತ್ತೊಬ್ಬ ಸಹೋದರ (ನಾರಾಯಣ ಸಾವರ್ಕರ್) ಗಾಂಧೀಜಿ ನೆರವು ಕೋರುತ್ತಾರೆ.

    ಗಾಂಧೀಜಿ 1915ರಲ್ಲಿ ದ.ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದರು. 1911 ರಲ್ಲಿ ಸಾವರ್ಕರ್ ಅವರಿಗೆ ಎರೆಡೆರೆದು ಜೀವಾವಧಿ ಕಠಿಣ ಶಿಕ್ಷೆ ವಿಧಿಸಿ ಆಗಿತ್ತು. ಅಲ್ಲಿಗಾಗಲೇ 10 ವರ್ಷ ಕಠಿಣ ಕಾಲಿಪಾನಿ ಶಿಕ್ಷೆ ಯನ್ನು ಅಂಡಮಾನಿನಲ್ಲಿ ಸಾವರ್ಕರ್ ಅನುಭವಿಸಿರುತ್ತಾರೆ. 1909 ರಲ್ಲಿಯೇ ಸಾವರ್ಕರ್ ಗಾಂಧಿಯನ್ನು, ಅವರ ಮಾರ್ಗವನ್ನು ಟೀಕಿಸಿ ಮಾತಾಡಿರುತ್ತಾರೆ, ಅಷ್ಟೇ ಅಲ್ಲ ಕಸ್ತೂರ್ ಬಾ ಅವರ ಮರಣದ ನೆನಪಲ್ಲಿ ಗಾಂಧಿ ಸಂಗ್ರಹಿಸುತ್ತಿದ್ದ ಹುಂಡಿಯ ಹಣವನ್ನು ಕೊಡಲೂ ನಿರಾಕರಿಸಿರುತ್ತಾರೆ. ಅಷ್ಟೊಂದು ಅಭಿಪ್ರಾಯ ಭೇದವಿದ್ದರೂ ಗಾಂಧಿ ಸಾವರ್ಕರ್ ಸಹೋದರನಿಗೆ, ನಾನು ನಿಮಗೆ ಸಹಾಯ ಮಾಡೋವಷ್ಟು ಇಲ್ಲದಿದ್ದರೂ ಒಂದು ಸಲಹೆ ಕೊಡ್ತೀನಿ. ನೀವು ಅವರು ಮಾಡಿರುವ ಎಲ್ಲ ಕೃತ್ಯಗಳೂ ರಾಜಕೀಯ ಪ್ರೇರಿತವೇ ವಿನಾ ವೈಯಕ್ತಿಕ ಅಲ್ಲ ಅಂತ ಬ್ರಿಟಿಷ್ ಸರ್ಕಾರಕ್ಕೆ ಮನವರಿಕೆ ಮಾಡಿ ಅಂದಿದ್ದರು. ಅಷ್ಟೇ ಅಲ್ಲ ಇದೇ ಫೆಬ್ರವರಿ 26,1920 ರ ತಮ್ಮ ವಾರಕ್ಕೊಮ್ಮೆ ಹೊರಬರುತ್ತಿದ್ದ ಯಂಗ್ ಇಂಡಿಯಾ ದಲ್ಲಿ ಇದರ ಬಗ್ಗೆ ಬರೆಯುತ್ತಾರೆ ಕೂಡ.

    ಇವರಿಗೆ ವೀರ ಸಾವರ್ಕರ್ ಅಂತ ಬಿರುದು ಕೊಟ್ಟದ್ದು ಭಗತ್ ಸಿಂಗ್! ಅಷ್ಟೊಂದು ಕ್ರಾಂತಿಬಣಕ್ಕೆ ಇವರು ಸ್ಫೂರ್ತಿದಾಯಕರಾಗಿರುತ್ತಾರೆ. ಭಗತ್ ಸಿಂಗ್ ರನ್ನು ಗಾಂಧಿ ಉಳಿಸಬಹುದಿತ್ತು, ಹಾಗೆ ಮಾಡಲಿಲ್ಲ ಅನ್ನೋದು ಇವತ್ತಿಗೂ ಒಂದು ವರ್ಗದ ವಾದ. ಸಾವರ್ಕರ್ ಹೇಡಿ, ಬ್ರಿಟಿಷರಿಗೆ ಕ್ಷಮಾ ಭಿಕ್ಷೆ ಬೇಡಿದ್ದರು ಅಂತ ಮತ್ತೊಂದು ವರ್ಗದ ವಾದ. ಒಂದೇ ಗುರಿಗೆ ಎರಡು ದಾರಿಗಳಲ್ಲಿ ಇಂತಹ ಅಭಿಪ್ರಾಯ ಭೇದ ಸಾಮಾನ್ಯ.

    ಇಂತಹ ಅಭಿಪ್ರಾಯ ಭೇದದ ಪರಮೋಚ್ಚತೆ ಏನೋ ಎಂಬಂತೆ ಗಾಂಧಿ ಹತ್ಯೆಯ ದುರಂತದಲ್ಲಿ ಸಾವರ್ಕರ್ ದೋಷಿತರು ಅಂತ ಸ್ವತಂತ್ರ ಭಾರತದ ಸರ್ಕಾರ ಆರೋಪಿಸಿ, ಕಟಕಟೆಯಲ್ಲಿ ನಿಲ್ಲಿಸಿ ಬಿಡುತ್ತೆ! ಸಾವರ್ಕರ್ ತುಂಬಾ ನೊಂದು ಬಿಡುತ್ತಾರೆ. ನಿರ್ದೋಷಿ ಅಂತ ಸಾಬೀತಾಗಿ ಬಂದರೂ 1964 ರಲ್ಲಿ ಸಕ್ರಿಯ ರಾಜಕಾರಣದಿಂದ ದೂರವಾಗ್ತಾರೆ. ಮಹಾಮೌನಕ್ಕೆ ಶರಣಾಗಿ ಬಿಡ್ತಾರೆ. ಅಂದಿನ ವಿದ್ಯಾಮಾನಗಳು ಅವರನ್ನ ಯಾವ ಪರಿ ಹಿಂಸಿಸಿದ್ದವು ಅಂದ್ರೆ, ಫೆಬ್ರವರಿ 1,1966 ರಿಂದ ಊಟ, ನೀರು,ನಿದ್ರೆ ಬಿಟ್ಟು 26 ಕ್ಕೆ ಪ್ರಾಣವನ್ನೂ ಬಿಡ್ತಾರೆ!

    ಇಡೀ ಬ್ರಿಟಿಷ್ ಸರ್ಕಾರವನ್ನು ಅಲುಗಾಡಿಸಿದ ಮಹಾನ್ ಹೋರಾಟಗಾರ, ತನ್ನ ವೈಖರಿ,ಲೇಖನಿಯಿಂದ ಸಾವಿರಾರು ಕ್ರಾಂತಿಕಾರಿಗಳಿಗೆ ಜನ್ಮ ನೀಡಿ ಹುತಾತ್ಮರನ್ನಾಗಿಸಿದ ಸಾವರ್ಕರ್, ಅನ್ನ ನೀರು ಬಿಟ್ಟು ಸಾವನ್ನಪ್ಪಿದರು ಅಂತ ಓದುವಾಗ ಅವ್ಯಕ್ತ ವೇದನೆ ಆಗುತ್ತದೆ. ತನ್ನದೇ ಜನ ತನ್ನನ್ನು ನಡೆಸಿಕೊಂಡ ರೀತಿಗೆ ಝರ್ಝರಿತರಾಗಿ ಬಿಡ್ತಾರೆ. ಯಾಕೋ ಸಾವು ಕೂಡಾ ಸಾವರ್ಕರ್ ಅವರಿಗೆ ಅಗೌರವ ತೋರಿ ದುರಂತ ನಾಯಕನನ್ನಾಗಿ ಮಾಡಿ ಬಿಡ್ತೇನೋ ಅಂತ ಅನ್ನಿಸಿ ಬಿಡ್ತು.

    ಹೌದು ಊರೆಲ್ಲಾ ಒಂದಾದ್ರು ಹೋರಾಡಬಹುದು, ಮನೆಯವರೇ ಎದುರಾದ್ರೆ ಸ್ಥೈರ್ಯ ಕುಂದಿ ಬಿಡುತ್ತದೆ !

    Co Operative Movement: ರಾಷ್ಟ್ರದ ಆರ್ಥಿಕತೆಗೆ ಪೋಷಕವಾಗಿರುವ ವ್ಯವಸ್ಥೆಯನ್ನು ದುರ್ಬಲಗೊಳಿಸಬಾರದು – ಜಿ.ಟಿ. ದೇವೇಗೌಡ


    BENGALURU FEB 25
    ರಾಷ್ಟ್ರದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಸಹಕಾರ ಚಳವಳಿಯ ಬಗ್ಗೆ ಅಪಪ್ರಚಾರ ಸಲ್ಲದು. ರಾಷ್ಟ್ರದ ಅರ್ಥವ್ಯವಸ್ಥೆಗೆ ಪೋಷಕವಾಗಿರುವ ಸಹಕಾರಿ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ಮಾಡಬಾರದೆಂದು ಶಾಸಕರು, ಮಾಜಿ ಸಚಿವರು, ಸಹಕಾರಿ ಮುಖಂಡರೂ ಆದ ಜಿ.ಟಿ. ದೇವೇಗೌಡರು ಮನವಿ ಮಾಡಿಕೊಂಡಿದ್ದಾರೆ.

    ಅವರು ಇತ್ತೀಚಿನ ದಿನಗಳಲ್ಲಿ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಬಗ್ಗೆ ಭಾರವಾದ ಹೃದಯದಿಂದ ಪ್ರತಿಕ್ರಿಯಿಸಿದ್ದಾರೆ. ಅವರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಸಹಕಾರ ಕ್ಷೇತ್ರದ ಬಗ್ಗೆ ತಮಗಿರುವ ಕಳಕಳಿಯನ್ನು ವ್ಯಕ್ತ ಮಾಡಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸಹಕಾರ ಸಂಘಗಳ ಬಗೆಗಿನ ವರದಿ ಬಗ್ಗೆ ತುಂಬಾ ಚಿಂತಿತನಾಗಿದ್ದೇನೆ. ವರದಿಗಳ ಬಗ್ಗೆ ಮಾಧ್ಯಮಗಳನ್ನು ನಾನು ಖಂಡಿತ ಆಕ್ಷೇಪಿಸುತ್ತಿಲ್ಲ. ಅವರ ಕೆಲಸ, ದಕ್ಷತೆ ಬಗ್ಗೆ ತುಂಬಾ ಮೆಚ್ಚುಗೆ ಇದೆ. ಆದರೆ ಪ್ರಮುಖ ದೈನಿಕವೊಂದರಲ್ಲಿ ಪ್ರಕಟವಾದ ವರದಿ ನನಗೆ ನೋವು ತಂದಿದೆ ಎಂದು ಅವರು ಹೇಳಿದ್ದಾರೆ.

    ವಿಶ್ವ ಮನ್ನಣೆಗಳಿಸಿದ ಸಹಕಾರ

    ಭಾರತದಲ್ಲಿ ಸಹಕಾರಿ ಚಳವಳಿ ಆರ್ಥಿಕ ವ್ಯವಸ್ಥೆಯ ಆಶ್ರಯದ ಬಂಡೆಯಂತಿದೆ. ಸಮತಾವಾದ, ಬಂಡವಾಳಶಾಹಿ ನಡುವಿನ ಸುವರ್ಣ ಮಾಧ್ಯಮ ಎನಿಸಿಕೊಂಡಿದೆ. ಕೃಷಿ ಕ್ರಾಂತಿ, ಶ್ರೇತ ಕ್ರಾಂತಿಯ ಶಿಲ್ಪಿ ಆಗಿದೆ. ಅಮೂಲ್, ಇಫ್ಕೋ, ಕ್ರಿಬ್ಕೋ ಸಂಸ್ಥೆಗಳು ವಿಶ್ವ ಮನ್ನಣೆ ಗಳಿಸಲು ಕಾರಣವೆನಿಸಿದೆ.

    ಅಪಪ್ರಚಾರದ ಪ್ರಭಾವ ಎಷ್ಟೇ ಇದ್ದರೂ ಇತ್ತೀಚಿನ ವರ್ಷಗಳಲ್ಲಿ ಸಹಕಾರ ವ್ಯವಸ್ಥೆಯ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚುತ್ತಿರುವುದನ್ನು, ಹಾಗೆಯೇ ಜನತೆ ಜಾಗೃತರಾಗುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಹಕಾರ ಕ್ಷೇತ್ರದ ಬೆಳವಣಿಗೆ, ಸಾಧನೆ ಬಗ್ಗೆ ಹೊಟ್ಟೆಕಿಚ್ಚಿನಿಂದ ತಪ್ಪು ಮಾಹಿತಿಗಳ ಮೂಲಕ ಮಾಧ್ಯಮಗಳನ್ನು ಸೇರಿದಂತೆ ಸಾರ್ವಜನಿಕರನ್ನು ದಾರಿ ತಪ್ಪಿಸಿ, ಜನಸಮುದಾಯ ಸಹಕಾರಿ ವ್ಯವಸ್ಥೆಯನ್ನು ಅನುಮಾನದಿಂದ ನೋಡುವಂತೆ ಮಾಡುವ ಪ್ರಯತ್ನ ರಾಷ್ಟ್ರದ ದೃಷ್ಠಿಯಿಂದ, ಸಮಾಜದ ದೃಷ್ಠಿಯಿಂದ ಒಳ್ಳೆಯದಲ್ಲ.

    ಸಹಕಾರ ಚಳವಳಿ ವಿಶ್ವಮಾನ್ಯತೆ ಗಳಿಸಿದೆ. ಭಾರತದಲ್ಲಿ ಬೃಹತ್ ಸಹಕಾರಿ ವ್ಯವಸ್ಥೆಯ ಜಾಲವಿದೆ. 8 ಲಕ್ಷ ಸಹಕಾರ ಸಂಸ್ಥೆಗಳು 30 ಕೋಟಿ ಸದಸ್ಯರು ಇದ್ದು ರಾಷ್ಟ್ರದ ಅರ್ಥ ವ್ಯವಸ್ಥೆಗೆ ಪೋಷಕವಾಗಿದೆ.ಕರ್ನಾಟಕದಲ್ಲಿ 45 ಸಾವಿರ ಸಹಕಾರ ಸಂಘಗಳಿದ್ದು, 2 ಕೋಟಿ 45 ಲಕ್ಷ ಸದಸ್ಯರಿದ್ದಾರೆ. “ಆಡು ಮುಟ್ಟದ ಸೊಪ್ಪಿಲ್ಲ’’ ಎನ್ನುವಂತೆ ಸಹಕಾರಿ ವ್ಯವಸ್ಥೆ ಜೀವನದ ಎಲ್ಲ ಪ್ರಾಕಾರಗಳನ್ನು ಆವರಿಸಿಕೊಂಡಿದೆ. ಬಡತನ ನಿವಾರಣೆ, ಉದ್ಯೋಗಸೃಷ್ಠಿಗೆ ಆದ್ಯತೆ ನೀಡಿದೆ.

    ಯಾವುದೇ ಚಳವಳಿ, ಯಾವುದೇ ವ್ಯವಸ್ಥೆ ಬೃಹತ್ ಪ್ರಮಾಣದಲ್ಲಿ ಬೆಳೆಯಲಾರಂಭಿಸಿದಾಗ ಸಣ್ಣಪುಟ್ಟ ಲೋಪಗಳು ಸಹಜವಾಗಿ ಕಂಡುಬರುತ್ತವೆ. ಅವು ಮಾರಕವಾಗುವಷ್ಟು ಬಲಿಷ್ಠವಾಗೇನೂ ಇರುವುದಿಲ್ಲ. ಇಂತಹ ಪರಿಸ್ಥಿತಿಯನ್ನೇ ಸಹಕಾರ ವ್ಯವಸ್ಥೆ ಎದುರಿಸುತ್ತಿದೆ. ಸಹಕಾರ ಚಳವಳಿ ಪ್ರಜಾಸತ್ತಾತ್ಮಕ ವಿಧಿವಿಧಾನಗಳ ಅಡಿ ಕೆಲಸ ಮಾಡುವುದರಿಂದ ಮಾನವ ಸಹಜ ದೌರ್ಬಲ್ಯ ಇಣಿಕಿ ಹಾಕುವ ಸಂಭವವಿರುತ್ತದೆ. ಆ ಬಗ್ಗೆ ಕಳವಳಪಡಬೇಕಾದ ಅಗತ್ಯವಿಲ್ಲ.

    ವಿಶ್ವದ ಅರ್ಥತಜ್ಞರ ಮೆಚ್ಚುಗೆ

    ಅಮೇರಿಕಾ ಸೇರಿದಂತೆ ವಿಶ್ವದ ಅರ್ಥ ವ್ಯವಸ್ಥೆ ಕುಸಿದಾಗ, ಬ್ಯಾಂಕುಗಳು ದಿವಾಳಿ ಹಂತ ತಲುಪಿದಾಗ ಭಾರತದ ಸಹಕಾರಿ ಬ್ಯಾಂಕುಗಳು ಅಂಜದೆ, ಅಳುಕದೆ ದಿಟ್ಟತನದಿಂದ ಪ್ರಗತಿಯತ್ತ ಸಾಗಿದುದು ವಿಶ್ವದ ಅರ್ಥತಜ್ಞರ ಮೆಚ್ಚುಗೆಗೆ ಪಾತ್ರವಾಯಿತು.
    ಇಂದಿಗೂ ಭಾರತದಲ್ಲಿ ರೈತರ, ಗ್ರಾಮೀಣ ಜನರ ಬದುಕನ್ನು ಹಸನು ಮಾಡಲು ಸಹಕಾರಿ ವ್ಯವಸ್ಥೆಗೆ ಪರ್ಯಾಯ ವ್ಯವಸ್ಥೆ ಇಲ್ಲದಿರುವುದು ಕಣ್ಣಿಗೆ ಕಟ್ಟಿದಂತಿದೆ.

    ಭಾರತದಲ್ಲಿ 1500ಕ್ಕೂ ಹೆಚ್ಚು, ಕರ್ನಾಟಕದಲ್ಲಿ 260ಕ್ಕೂ ಹೆಚ್ಚು ಪಟ್ಟಣ ಸಹಕಾರಿ ಬ್ಯಾಂಕುಗಳಿವೆ. ಲಕ್ಷಾಂತರ ಕೋಟಿ ರೂ. ಠೇವಣಿಗಳಿವೆ, ಲಕ್ಷಾಂತರ ಕೋಟಿ ರೂ. ಸಾಲ ವಿತರಣೆಯಾಗುತ್ತಿದೆ. ಅಂತ ಸಂದರ್ಭದಲ್ಲಿ ಅಲ್ಲೊಂದು, ಇಲ್ಲೊಂದು ಬ್ಯಾಂಕಿನಲ್ಲಿ ಆಗಬಹುದಾದ ಲೋಪವನ್ನು ಸಾರ್ವತ್ರೀಕರಣಗೊಳಿಸಲಾಗದು. ಸಹಕಾರಿ ಬ್ಯಾಂಕುಗಳು ರಿಜರ್ವ್ ಬ್ಯಾಂಕ್ ಮತ್ತು ರಾಷ್ಟ್ರದ ಎಲ್ಲ ಕಾನೂನು, ನಿಯಮಗಳ ಅಡಿ ಕೆಲಸ ಮಾಡುತ್ತಿವೆ. ಸ್ವೇಚ್ಛೆಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ತಪ್ಪು ಮಾಡಿದ ಸಂಘಗಳು ಹಾಗೂ ವ್ಯಕ್ತಿಗಳು ಶಿಕ್ಷೆಗೆ ಒಳಗಾಗಿದ್ದು, ವ್ಯವಸ್ಥೆ ಪಾರದರ್ಶಕವಾಗಿದೆ. ಹಾಗೆಯೇ ಕೃಷಿ, ಹೈನುಗಾರಿಕೆ, ಸಹಕಾರ ಸಂಘಗಳೂ ಸಹ ಜನಪರ ಧೋರಣೆಯೊಂದಿಗೆ ಕೆಲಸ ಮಾಡುತ್ತಿವೆ. ದೊಡ್ಡ ಪ್ರಮಾಣದ ಪ್ರಯತ್ನದಲ್ಲಿ ಸಣ್ಣ ಪ್ರಮಾಣದ ಲೋಪವನ್ನು ದೊಡ್ಡದು ಮಾಡಿ ಅಪಪ್ರಚಾರಕ್ಕೆ ಅವಕಾಶ ಕೊಡುವುದು ಬೇಡ.

    ಮಾಧ್ಯಮಗಳು ಜನರ ಭಾವನೆಗಳ ಮೇಲೆ, ನಂಬಿಕೆಗಳ ಮೇಲೆ ಅಪಾರ ಪರಿಣಾಮ ಬೀರುತ್ತವೆ. ಮಾಧ್ಯಮಗಳ ಮೂಲಕ ಪಟ್ಟಭದ್ರರು ಸಹಕಾರ ಕ್ಷೇತ್ರದ ಮೇಲೆ ಅಪಪ್ರಚಾರ ನಡೆಸಿದಾಗ ಜನತೆ ವ್ಯವಸ್ಥೆ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಇದು ರಾಷ್ಟ್ರದ ಹಿತದೃಷ್ಠಿಯಿಂದ ಒಳ್ಳೆಯದಲ್ಲ. ಅದು ಕಳವಳಕ್ಕೆ ಕಾರಣವಾಗಿದೆ. ಕರ್ನಾಟಕದ ಜನತೆ ಪ್ರಬುದ್ಧರಾಗಿದ್ದಾರೆ. ಸಹಕಾರ ತತ್ವದಲ್ಲಿ, ವ್ಯವಸ್ಥೆಯಲ್ಲಿ ನಂಬಿಕೆ, ವಿಶ್ವಾಸವನ್ನು ಇರಿಸಿಕೊಂಡವರಿದ್ದಾರೆ.

    ಆತಂಕದ ಅಗತ್ಯವಿಲ್ಲ

    ಕರ್ನಾಟಕದಲ್ಲಿ ಕಾರ್ಯನಿರತವಾಗಿರುವ 36532 ಸಹಕಾರ ಸಂಘಗಳಲ್ಲಿ 2460ಸಂಘಗಳು ನಿಷ್ಕ್ರಿಯವಾಗಿವೆ ಎಂದರೆ ಅದು ಹಲವು ದಶಕಗಳ ಕಾಲದ ಕೂಡಿಬಂದಿರುವ ಪ್ರಕ್ರಿಯೆ ಹಾಗೂ 50 ವಿಭಾಗಗಳಲ್ಲಿ ಕ್ರೋಢೀಕೃತವಾದ ಸಂಖ್ಯೆಯಾಗಿದೆ. ಇದು ಗಾಬರಿಯಾಗುವಂತಹುದಲ್ಲ. ಒಂದೆರಡು ಬ್ಯಾಂಕುಗಳು ಮಾಡಿರಬಹುದಾದ ತಪ್ಪುಗಳ ತನಿಖೆ ನಡೆಯುತ್ತಿದ್ದು, ಯಾವ ಠೇವಣಿದಾರರೂ ಆತಂಕಪಡಬೇಕಾದ ಅಗತ್ಯವಿಲ್ಲವೆಂಬ ಭರವಸೆ ಇದೆ.

    ನಮ್ಮ ರಾಜ್ಯದ ಸಹಕಾರ ಸಂಘಗಳಲ್ಲಿನ ಠೇವಣಿ ಮೊತ್ತ, ಲಾಭ ಗಳಿಸುತ್ತಿರುವ ಸಂಘಗಳ ಸಂಖ್ಯೆ, ಸದಸ್ಯರ ಸಂಖ್ಯೆಗಳು ವ್ಯವಸ್ಥೆಯ ಭದ್ರತೆಗೆ ಸಾಕ್ಷಿ ಎನಿಸಿವೆ. ಸಹಕಾರ ಸಂಘಗಳಲ್ಲಿನ ಲೋಪಕ್ಕೆ ತಕ್ಕ ಶಿಕ್ಷೆ ನೀಡುವ ಬಗ್ಗೆ ಸಹಕಾರಿ ಕಾನೂನು ತಿದ್ದುಪಡಿಗೆ ಪ್ರಯತ್ನಗಳು ನಡೆದಿವೆ.ಸಹಕಾರ ಸಂಘಗಳು ತಮ್ಮ ನೋಂದಣಿಯನ್ನು ಪ್ರತಿ ವರ್ಷ ನವೀಕರಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ.ಹೀಗಾಗಿ ನಮ್ಮ ರಾಜ್ಯದ ಸಹಕಾರ ಸಂಘಗಳು, ಸಹಕಾರಿ ವ್ಯವಸ್ಥೆ ಕೆಲವೇ ಕೆಲವು ದೌರ್ಬಲ್ಯಗಳ ನಡುವೆಯೂ ಸಶಕ್ತವಾಗಿದ್ದು ಯಾರೂ ಯಾವುದೇ ಸಂದರ್ಭದಲ್ಲೂ ಕಳವಳಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲವೆಂದು ತಿಳಿಸುತ್ತಿದ್ದೇನೆ ಎಂದು ಜಿ ಟಿ ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ.

    error: Content is protected !!