18 C
Karnataka
Tuesday, November 26, 2024
    Home Blog Page 27

    E-Office mandatory in Universities -ವಿ.ವಿ.ಗಳಲ್ಲಿ ಇ-ಆಫೀಸ್ ಕಡ್ಡಾಯ; ಭೌತಿಕ ರೂಪದಲ್ಲಿ ಪತ್ರ, ಕಡತ, ಪ್ರಸ್ತಾವನೆ ಬಂದರೆ ವಾಪಸ್

    BENGALURU FEB 25

    ರಾಜ್ಯದ ಎಲ್ಲ ಸರಕಾರಿ ವಿಶ್ವವಿದ್ಯಾಲಯಗಳು ಮಾರ್ಚ್ 1ರಿಂದ ತನ್ನ ಎಲ್ಲ ಕಡತಗಳನ್ನು ಇ- ಕಚೇರಿ ಮೂಲಕವೇ ಅನ್ ಲೈನ್ ನಲ್ಲಿ ಕಳುಹಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ಗಡುವಿನ ನಂತರ ಭೌತಿಕವಾಗಿ ಬರುವ ಎಲ್ಲ ಕಡತಗಳನ್ನು ವಾಪಸ್ ಕಳುಹಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಈ ಬಗ್ಗೆ ತಮ್ಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, `ಇ-ಆಫೀಸ್’ ತಂತ್ರಾಂಶದ ಮೂಲಕವೇ ಕಡತಗಳನ್ನು ಕಳುಹಿಸಲು ವಿ.ವಿ.ಗಳಿಗೆ ಈ ಹಿಂದೆಯೇ ಸೂಚಿಸಿತ್ತು. ಆದರೂ ಕೆಲ ವಿ.ವಿ.ಗಳಲ್ಲಿ ಈ ಕೆಲಸ ಆಗಿಲ್ಲದಿರುವುದು ತಮ್ಮ ಗಮನಕ್ಕೆ ಬಂದಿದೆ’ ಎಂದು ಎಚ್ಚರಿಸಿದ್ದಾರೆ.

    ತಮ್ಮ ಕಚೇರಿಯು ಈಗಾಗಲೇ ಸಂಪೂರ್ಣವಾಗಿ ಇ-ಆಫೀಸ್ ತಂತ್ರಾಂಶದ ಮೇಲೆಯೇ ಕೆಲಸ ಮಾಡುತ್ತಿದೆ. ಆದರೆ ಇಲಾಖೆಗೆ ವಿ.ವಿ.ಗಳಿಂದ ಎಲ್ಲ ಪತ್ರಗಳು, ಕಡತಗಳು ಮತ್ತು ಪ್ರಸ್ತಾವನೆಗಳು ಭೌತಿಕ ರೂಪದಲ್ಲಿ ಬರುತ್ತಿವೆ. ಇದರಿಂದಾಗಿ ಇ-ಆಫೀಸ್ ತಂತ್ರಾಂಶ ಅಳವಡಿಕೆಯ ಮೂಲೋದ್ದೇಶವೇ ವಿಫಲವಾದಂತಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ವಿ.ವಿ.ಗಳ ಆಡಳಿತವೂ ಸೇರಿದಂತೆ ಪ್ರತಿಯೊಂದು ಕೆಲಸವೂ ತ್ವರಿತವಾಗಿ ಮತ್ತು ಪಾರದರ್ಶಕವಾಗಿ ನಡೆಯುವಂತೆ ಮಾಡಬೇಕೆನ್ನುವುದು ಇ-ಆಫೀಸ್ ತಂತ್ರಾಂಶದ ಗುರಿಯಾಗಿದೆ. ವಿ.ವಿ.ಗಳು ಸಮಕಾಲೀನ ಶೈಲಿಯನ್ನು ಅಳವಡಿಸಿಕೊಳ್ಳದಿದ್ದರೆ ಅಪ್ರಸ್ತುತವಾಗಲಿವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

    ಜೊತೆಗೆ, ಎನ್ಇಪಿ ಅನುಸಾರ ವಿ.ವಿ.ಗಳಲ್ಲಿ ನಡೆಯುತ್ತಿರುವ ಡಿಜಿಟಲೀಕರಣ, ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಅಳವಡಿಕೆ, ರಾಷ್ಟ್ರೀಯ ಶೈಕ್ಷಣಿಕ ಕೋಶ (ಎನ್ಎಡಿ), ಇ-ಆಫೀಸ್ ಬಳಕೆಗೆ ವಿ.ವಿ.ಗಳಲ್ಲಿನ ಸಿಬ್ಬಂದಿಯನ್ನು ಹೇಗೆ ಸಿದ್ಧಗೊಳಿಸಲಾಗಿದೆ ಎನ್ನುವುದನ್ನು ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸಿ, 15 ದಿನಗಳಲ್ಲಿ ತಮಗೆ ವರದಿ ನೀಡುವಂತೆಯೂ ಅವರು ಸೂಚಿಸಿದ್ದಾರೆ.

    Hampi: ಹಂಪಿಯಲ್ಲಿ ದೇವಾಲಯ ವಾಸ್ತುಶಿಲ್ಪ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ

    HAMPI FEB 24
    ರಾಷ್ಟ್ರವ್ಯಾಪಿ ನಡೆಯುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್ ಐ) ಹಂಪಿ (ಕರ್ನಾಟಕ)ಯಲ್ಲಿ 2022ರ ಫೆಬ್ರವರಿ25-26ರಂದು ಎರಡು ದಿನಗಳ “ದೇವಯಾತನಂ-ಭಾರತೀಯ ದೇವಾಲಯ ವಾಸ್ತುಶಿಲ್ಪ ಅದ್ಭುತ ಮಹಾಕಾವ್ಯ” ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ.

    ಕೇಂದ್ರ ಸಂಸ್ಕೃತಿ ಸಚಿವರಾದ ಜಿ. ಕಿಶನ್ ರೆಡ್ಡಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸಂಸ್ಕೃತಿ ಖಾತೆ ರಾಜ್ಯ ಸಚಿವ ಗೌರವಾನ್ವಿತ ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರು ವರ್ಚುವಲ್ ಮುಲಕ ಕಾರ್ಯಕ್ರಮದಲ್ಲಿ ಭಾಗವಹಿಸುವರು.

    ಉದ್ಘಾಟನಾ ಸಮಾರಂಭವು ಹಂಪಿ ಪಟ್ಟಾಭಿರಾಮ ದೇವಸ್ಥಾನದಲ್ಲಿ ನಡೆಯಲಿದ್ದು, ಶೈಕ್ಷಣಿಕ ಅಧಿವೇಶನಗಳನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸಮ್ಮೇಳನಕ್ಕೆ ಆಯ್ಕೆಮಾಡಿರುವ ಸ್ಥಳ ಹಂಪಿ, 1336 ರಿಂದ 1556 ವರೆಗೆ ಎರಡು ಶತಮಾನಕ್ಕೂ ಅಧಿಕ ಕಾಲ ವಿಜಯನಗರದ ಮಹಾ ಮಧ್ಯಕಾಲೀನ ಯುಗದ ಸಾಮ್ರಾಜ್ಯದ ರಾಜಧಾನಿಯಾಗಿ ವೈಭವ ಮೆರೆದಿತ್ತು.

    ದೇವಾಲಯವು ತನ್ನದೇ ಆದ ರೀತಿಯಲ್ಲಿ ಭಾರತೀಯ ಜೀವನದ ಅವಿಭಾಜ್ಯ ಅಂಗವಾಗಿದೆ. ದೇವಾಲಯದ ನಿರ್ಮಾಣವು ಉಪಖಂಡದಲ್ಲಿ ಮಾತ್ರವಲ್ಲದೆ ಆಗ್ನೇಯ ಮತ್ತು ಪೂರ್ವ ಏಷ್ಯಾದಂತಹ ಹತ್ತಿರದ ನೆರೆಹೊರೆ ರಾಷ್ಟ್ರಗಳಿಗೂ ಹರಡಿದೆ. ಆದ್ದರಿಂದ, ದೇವಾಲಯದ ವಾಸ್ತುಶಿಲ್ಪದ ಕಲೆ ಮತ್ತು ತಂತ್ರವು ಹೇಗೆ ಹರಡಿತು ಎಂಬುದು ಆಸಕ್ತಿಕರ ಅಧ್ಯಯನವಾಗಿದೆ. ಭಾರತವು ಇತರ ಪ್ರದೇಶಗಳಿಗೆ ಮತ್ತು ಸ್ಥಳೀಯ ಅಗತ್ಯಗಳಿಗೆ ಸರಿಹೊಂದುವಂತೆ ಈ ಕಲೆಯನ್ನು ಹೇಗೆ ಮಾರ್ಪಡಿಸಲಾಗಿದೆ ಮತ್ತು ಅದು ಹೇಗೆ ಹೊಸ ವಾಸ್ತುಶಿಲ್ಪದ ಶೈಲಿಗಳ ಅಭಿವೃದ್ಧಿಗೆ ಸ್ಫೂರ್ತಿ ನೀಡುತ್ತದೆ ಎಂಬುದು ಮುಖ್ಯವಾಗಿದೆ.

    ಸಮ್ಮೇಳನವು ದೇವಾಲಯಗಳ ತಾತ್ವಿಕ, ಧಾರ್ಮಿಕ, ಸಾಮಾಜಿಕ, ಆರ್ಥಿಕ, ತಾಂತ್ರಿಕ, ವೈಜ್ಞಾನಿಕ, ಕಲೆ ಮತ್ತು ವಾಸ್ತುಶಿಲ್ಪದ ಅಂಶಗಳನ್ನು ಚರ್ಚಿಸುವ ಉದ್ದೇಶ ಹೊಂದಿದೆ. ಅಲ್ಲದೆ, ನಾಗರ, ವೇಸರ, ದ್ರಾವಿಡ, ಕಳಿಂಗಾ ಮತ್ತು ಇತರ ದೇವಾಲಯಗಳ ವಾಸ್ತುಶಿಲ್ಪದ ನಾನಾ ಶೈಲಿಗಳ ಉದಯ ಮತ್ತು ಅಭಿವೃದ್ಧಿಯ ಕುರಿತು ಸಂವಾದ ಆಯೋಜಿಸಲಾಗಿದೆ.

    ಭಾರತದ ದೇವಾಲ‌ಯದ ವಾಸ್ತುಶಿಲ್ಪದ ನಾನಾ ಆಯಾಮಗಳು ಅಂದರೆ ದೇವಾಲಯ- ರೂಪವಿಲ್ಲದಿರುವುದಕ್ಕೆ ರೂಪ‌ ನೀಡುವುದು, ದೇವಾಲಯ-ದೇಗುಲ ವಾಸ್ತುಶಿಲ್ಪದ ಉದಯ, ದೇವಾಲಯ- ಪ್ರಾದೇಶಿಕ ಸ್ವರೂಪ ಮತ್ತು ವಿನ್ಯಾಸದ ಅಭಿವೃದ್ಧಿ, ದೇವಾಲಯ- ಕಲೆ, ಸಂಸ್ಕೃತಿ, ಶಿಕ್ಷಣ, ಆಡಳಿತ ಮತ್ತು ಆರ್ಥಿಕತೆಯ ಕೇಂದ್ರ ಬಿಂದು, ದೇವಾಲಯ- ಪರಿಸರ ಸಂರಕ್ಷಣೆ, ದೇವಾಲಯ-ಆಗ್ನೇಯ ಏಷ್ಯಾದಲ್ಲಿ ಸಂಸ್ಕೃತಿ ಪ್ರಸರಣ ಸೇರಿದಂತೆ ನಾನಾ ವಿಷಯಗಳ ಗೋಷ್ಠಿಗಳು ನಡೆಯಲಿವೆ.

    ಈ ಸಮ್ಮೇಳನ ಭಾರತೀಯ ಇತಿಹಾಸದ , ವಿದ್ವಾಂಸರು ಹಾಗೂ ವಿದ್ಯಾರ್ಥಿಗಳು, ಪುರಾತತ್ವ, ಸಂಸ್ಕೃತಿ ಮತ್ತು ವಾಸ್ತುಶಿಲ್ಪ ಮತ್ತು ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ. ನಮ್ಮ‌ಪರಂಪರೆಯ ಬಗ್ಗೆ ತಿಳಿಯಲು ಮತ್ತು ಕಲಿಕೆ ಸೇರಿದಂತೆ ವಿದ್ಯಾರ್ಥಿಗಳು ಮತ್ತು ವಿದ್ವಾಂಸರಿಗೆ ಆಸಕ್ತಿ ಬೆಳೆಸುವ ಗುರಿಯನ್ನು ಸಮ್ಮೇಳನ ಹೊಂದಿದೆ.

    ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯು ಭಾರತದ ಸಾಮಾಜಿಕ-ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಗುರುತು ಮತ್ತು ಸ್ವಾತಂತ್ರ್ಯದ ನಂತರದ ಪ್ರಗತಿಯನ್ನು ಗುರುತಿಸುವುದಾಗಿದೆ.

    Blood Dontation Camp: ಮಂಗಳೂರು ವಿಶ್ವವಿದ್ಯಾನಿಲಯದಿಂದ ರಕ್ತದಾನ ಶಿಬಿರ

    MANGALURU FEB 24

    ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್, ಮತ್ತು  ʼಮಂಗಳ ಯೋಜನೆʼ ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮ ಹಾಗೂ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ – 7ನೇ ಬೆಟಾಲಿಯನ್  (ಅಸೈಗೋಳಿ) ಜಂಟಿ ಸಹಭಾಗಿತ್ವದಲ್ಲಿ ಮಂಗಳಗಂಗೋತ್ರಿಯ   ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ  ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

    ಒಡಿಯೂರು ಶ್ರೀ ದತ್ತಾಂಜನೇಯ ಕ್ಷೇತ್ರದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಶಿಬಿರವನ್ನು ಉದ್ಘಾಟಿಸಿ,  “ಹೃದಯದಲ್ಲಿ ಪ್ರೀತಿ ಭಾವಗಳು ತುಂಬಿಕೊಂಡಾಗ ದ್ವೇಷಗಳು ದೂರವಾಗಿ ಮಾನವೀಯ ಮೌಲ್ಯಗಳು  ಬೆಳೆಯುವಲ್ಲಿ ಸಹಕಾರಿಯಾಗುತ್ತದೆ. ರಕ್ತಕ್ಕೆ ಜಾತಿ ಮತ ಬೇಧವಿಲ್ಲ. ರಕ್ತದಾನ ಬಹಳ ಶ್ರೇಷ್ಠವಾದುದು. ಅದರಲ್ಲೂ  ದಾನದ ಹಿಂದಿರುವ ಪ್ರೀತಿ ಬಹಳ  ಪ್ರಮುಖವಾದುದು. ವಿಶ್ವವಿದ್ಯಾನಿಲಯ ಹಾಗೂ  ಸಂಘ ಸಂಸ್ಥೆಗಳು ಸೇರಿಕೊಂಡು ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು  ಆಯೋಜನೆ‌ ಮಾಡಿರುವುದು ಶ್ಲಾಘನೀಯ.    ಮಂಗಳೂರು ವಿಶ್ವವಿದ್ಯಾನಿಲಯವು ಶಿಕ್ಷಣದ ಜೊತಗೆ ಹಲವಾರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿವುದು ಉತ್ತಮವಾದ ಬೆಳವಣಿಗೆಯಾಗಿದೆ ಎಂದು ಹೇಳಿದರು.

    ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು, ‘ರಕ್ತದಾನದಂತಹ ಮಹಾನ್ ಕಾರ್ಯ ಬೇರೊಂದಿಲ್ಲ. ಇದು ಜಾತಿ‌ಮತ ಧರ್ಮವನ್ನು ಮೀರಿ ನಿಂತಿದೆ.  ರಕ್ತ ಸಿಗದೇ ಯಾರೂ ಮರಣಿಸಬಾರದು. ಹಾಗೆಯೇ ರಕ್ತದಾನ ಮಾಡದೇ ಯಾರೂ ಇಹ ತ್ಯಜಿಸಬಾರದು. ರಕ್ತದಾನದ ಬಗ್ಗೆ ಸಮಾಜದಲ್ಲಿರುವ ಅಪನಂಬಿಕೆಯನ್ನು ದೂರಗೊಳಿಸಬೇಕಿದೆ ಎಂದರು.ಶಸ್ತ್ರಚಿಕಿತ್ಸೆ, ಅಪಘಾತ, ಆಘಾತ, ಕೆಲವು ಅನುವಂಶಿಕ ಕಾಯಿಲೆಗಳು, ಕ್ಯಾನ್ಸರ್ ಹೀಗೆ ಹಲವಾರು ಸಂಧರ್ಭಗಳಲ್ಲಿ ರಕ್ತವು ತುರ್ತಾಗಿ ಬೇಕಿದ್ದು, ರೋಗಿಗಳನ್ನು ಉಳಿಸಲು ದಾನಿಗಳು ನೀಡುವ ರಕ್ತವು ಅಮೂಲ್ಯವಾದದ್ದು. ಎಷ್ಟೋ ಸಂದರ್ಭಗಳಲ್ಲಿ ರಕ್ತವು ಸಮಯಕ್ಕೆ ಸರಿಯಾಗಿ ಸಿಗದೇ ಆಸ್ಪತ್ರೆಯಲ್ಲಿ ರೋಗಿಗಳು ಮರಣ ಹೊಂದುವ ಸ್ಥಿತಿ ನಿರ್ಮಾಣವಾಗುತ್ತದೆ. ಆದುದರಿಂದ ರಕ್ತದಾನ ಶಿಬಿರಗಳಲ್ಲಿ ಅಥವಾ ರಕ್ತ ನಿಧಿಯಲ್ಲಿ ನಿಯಮಿತವಾಗಿ ರಕ್ತವನ್ನು ದಾನ ಮಾಡುವುದರಿಂದ ಎಷ್ಟೋ ಜನರ ಪ್ರಾಣವನ್ನು ಉಳಿಸಬಹುದು. ನಮ್ಮ ದೇಶದಲ್ಲಿ ಅನೇಕ ಜನರು ಮುಖ್ಯವಾಗಿ ಯುವಜನತೆಯು ರಕ್ತದಾನ ಮಹಾಕಾರ್ಯದಲ್ಲಿ ಭಾಗಿಯಾಗಿ ರಕ್ತವನ್ನು ನೀಡುವುದು ಪ್ರಶಂಶನೀಯ ಎಂದರು.

    ಆದಾಗ್ಯೂ ಕೂಡ ಇನ್ನು ಎಷ್ಟೋ ಆರೋಗ್ಯವಂತ ಜನರು ರಕ್ತದಾನದಲ್ಲಿ ಭಾಗಿಯಾಗಲು ಭಯ ಅಥವಾ ತಪ್ಪು ನಂಬಿಕೆಗಳಿಂದ ಹಿಂಜರಿಯುತ್ತಾರೆ. ಇದಕ್ಕೆ ಮುಖ್ಯ ಕಾರಣ ರಕ್ತದಾನದ ಬಗ್ಗೆ ಪರಿಪೂರ್ಣ ಜ್ಞಾನದ ಕೊರತೆ ಇರುವುದು. ರಕ್ತ ಮತ್ತು ರಕ್ತದಾನದ ಮಹತ್ವದ ಬಗ್ಗೆ ಸಾಮಾನ್ಯ ಜನರಲ್ಲಿ ಜ್ಞಾನವನ್ನು ಪಸರಿಸಿವುದು ಮತ್ತು
    ಆ ಮೂಲಕ ಜನಜಾಗೃತಿಯನ್ನು ಉಂಟುಮಾಡಿ ಅವರಲ್ಲಿ ರಕ್ತದಾನಕ್ಕೆ ಹುರಿದುಂಬಿಸುವುದೂ ಕೂಡ ಮುಖ್ಯವಾದದ್ದು. ಈ ಹಿನ್ನೆಲೆಯಲ್ಲಿ, ಈಗಾಗಲೇ ರಕ್ತದಾನ ಶಿಬಿರವನ್ನು ಆಯೋಜಿಸಿ ಅನುಭವ ಇರುವ ; ‘ರಕ್ತದಾನ ಮಹಾದಾನ – ವೈಜ್ಜಾನಿಕ ಮಾಹಿತಿ’  ಎಂಬ ಕೈಪಿಡಿಯನ್ನು ಹೊರತರುತ್ತಿರುವುದು ಒಂದು ಶ್ಲಾಘನೀಯ ಕೆಲಸ ಎಂದರು.

    ಈ ಕೈಪಿಡಿಯಲ್ಲಿ ರಕ್ತದಾನ ನಡೆದು ಬಂದು ಕಿರು ಇತಿಹಾಸ, ರಕ್ತ ದಾನಿಗಳಿಗೆ ಇರಬೇಕಾದ ಅರ್ಹತೆಗಳು, ಯಾರೆಲ್ಲ ಮತ್ತು ಯಾವ ಸಂದರ್ಭದಲ್ಲಿ ರಕ್ತದಾನ ಮಾಡಲಾಗದು , ರಕ್ತದ ಕಾರ್ಯಚಟುವಟಿಕೆಗಳು, ರಕ್ತದ ಘಟಕಗಳು, ಅವುಗಳ ಸಂಗ್ರಹ ವಿಧಾನ ಮತ್ತು ಶೇಖರಣೆ, ರಕ್ತದಾನದ ಬಗ್ಗೆ ಇರುವ ತಪ್ಪು ನಂಬಿಕೆಗಳು, ರಕ್ತದಾನದಿಂದ ದಾನಿಗಳಿಗೆ ಆಗುವ ಪ್ರಯೋಜನಗಳು, ರಕ್ತದಾನದ ಮೊದಲು, ರಕ್ತದಾನದ ದಿನ ಮತ್ತು ರಕ್ತದಾನದ ನಂತರ ದಾನಿಗಳು ವಹಿಸಬೇಕಾದ ಎಚ್ಚರ, ಮುಂತಾದವುಗಳ ಬಗ್ಗೆ ವಿವಿಧ ಸಂಪನ್ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಸರಳವಾಗಿ ನೀಡಿದ್ದಾರೆ. ಈ ಕೈಪಿಡಿಯು ಉಚಿತವಾಗಿ ಹಂಚುತ್ತಿದ್ದು ಇದರಲ್ಲಿರುವ ಮಾಹಿತಿಯು ಜನರಲ್ಲಿ ರಕ್ತದಾನದ ಬಗ್ಗೆ ಜ್ಞಾನದ ಜೊತೆಗೆ ಇನ್ನಷ್ಟೂ ಪ್ರೇರಣೆ ನೀಡುತ್ತದೆ ಎಂದು ಆಶಿಸುತ್ತೇನೆ. ಬನ್ನಿ ರಕ್ತದಾನ ಮಾಡಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯೋಣ’  ಎಂದು ಹೇಳಿದರು.

     ಈಗಾಗಲೇ ಮಂಗಳೂರು ವಿಶ್ವವಿದ್ಯಾನಿಲಯವು ಹತ್ತು ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದು ಗಡಿನಾಡಿನ ಶಾಲೆ ಸೇರಿದಂತೆ ಇನ್ನೂ ಐದು ಶಾಲೆ ದತ್ತು ತೆಗೆದುಕೊಳ್ಳುವ ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದರು.

     ಇದೇ ವೇಳೆ  ಮಂಗಳೂರು ವಿವಿಯ ಕುಲಪತಿ  ಪ್ರೊ. ಪಿ.ಎಸ್ .ಯಡಪಡಿತ್ತಾಯ ಅವರು  ವಿಶ್ವವಿದ್ಯಾನಿಲಯದ ರಕ್ತದಾನಿಗಳ ವೆಬ್ ಪೋರ್ಟಲ್ ಬಿಡುಗಡೆ ಮಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಕಲ್ಲಿಮಾರು ಅವರು ಪ್ರಶಾಂತ್ ನಾಯ್ಕ್ ಅವರ ಸಂಕಲನದ  ʼರಕ್ತದಾನ ಮಹಾದಾನ- ವೈಜ್ಞಾನಿಕ ಮಾಹಿತಿʼ ಎಂಬ ಕೈಪಿಡಿಯನ್ನು ಲೋಕಾರ್ಪಣೆಗೊಳಿಸಿದರು.

    ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ  7 ನೇ ಬೆಟಾಲಿಯನ್ನ ಕಮಾಂಡೆಂಟ್ ಬಿ ಎಂ ಪ್ರಸಾದ್, ಮಂಗಳೂರು ರೆಡ್ ಕ್ರಾಸ್ ಸೊಸೈಟಿಯ ಡಾ. ಜೆ ಎನ್ ಭಟ್,  ಅತಿಥಿಗಳಾಗಿ ಭಾಗವಹಿಸಿದ್ದರು.

    ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಗೋವಿಂದರಾಜು ಅವರು ಸ್ವಾಗತಿಸಿದರು. ಯುವ ರೆಡ್ ಕ್ರಾಸ್ ಸೊಸೈಟಿ, ಮಂಗಳಗಂಗೋತ್ರಿ ಘಟಕದ  ಕಾರ್ಯಕ್ರಮ ಅಧಿಕಾರಿ ಡಾ. ಪರಮೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು.  ಮಂಗಳ ಯೋಜನೆ ಸಂಯೋಜಕರಾದ ಪ್ರೊ.ಪ್ರಶಾಂತ್ ನಾಯ್ಕ   ವಂದಿಸಿದರು. ಸಂಶೋಧನಾರ್ಥಿ ಚಂದನಾ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ವಿವಿಯ ಯುವ ರೆಡ್ ಕ್ರಾಸ್ ಸೊಸೈಟಿಯ  ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ ಮುಂತಾದವರು ಉಪಸ್ಥಿತರಿದ್ದರು.  
     ಶ್ರೀ ರಾಮಕೃಷ್ಣ ಪ್ರೌಢಶಾಲೆ ಹರೇಕಳದ ಸೌಜನ್ಯ ಸ್ಕೌಟ್ ಗೈಡ್ ದಳದ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.

    Russia attacks Ukraine:ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಆರಂಭ

    ಬೆಳ್ಳಂಬೆಳಗ್ಗೆ ಆದೇಶ ನೀಡಿದ ವ್ಲಾದಿಮೀರ್‌ ಪುಟಿನ್; ಅಮೆರಿಕ ಸೇರಿ ಜಾಗತಿಕ ಸಮುದಾಯ ಖಂಡನೆ, ಯುದ್ಧ ನಿಲ್ಲಿಸುವಂತೆ ಆಗ್ರಹ

    MOSCOW FEB 24

    ಜಾಗತಿಕ ಸಮುದಾಯ ಆತಂಕ ನಿಜವಾಗಿದ್ದು, ನಿರೀಕ್ಷೆಯಂತೆ ರಷ್ಯಾ ತನ್ನ ನೆರೆಯ ಉಕ್ರೇನ್‌ ಮೇಲೆ ಯುದ್ಧ ಆರಂಭಿಸಿದೆ. ಎರಡೂ ಕಡೆಯಿಂದಲೂ ಸಾವು ನೋವಿನ ವರದಿಗಳು ಬರುತ್ತಿವೆ. ಜಾಗತಿಕ ಮಟ್ಟದಲ್ಲಿ ಈ ಯುದ್ಧಕ್ಕೆ ವಿರೋಧ ವ್ಯಕ್ತವಾಗಿದೆ.

    ಭಾರತೀಯ ಕಾಲಮಾನದಂತೆ ಇಂದು ಬೆಳಗ್ಗೆ ಹೊತ್ತಿಗೆ ಮಾಸ್ಕೋದಲ್ಲಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ರಷ್ಯಾ ಅಧ್ಯಕ್ಷ ವ್ಲಾದಿಮೀರ್‌ ಪುಟಿನ್‌‌, ಉಕ್ರೇನ್‌ ಮೇಲೆ ರಷ್ಯಾ ದಾಳಿಗೆ ಆದೇಶ ನೀಡಿರುವುದಾಗಿ ಘೋಷಣೆ ಮಾಡಿದರು. ಬೆಳಗ್ಗೆ ಸುಮಾರು ಆರು ಗಂಟೆ ಹೊತ್ತಿಗೆ ರಷ್ಯಾ ಪಡೆಗಳು ದಾಳಿ ಶುರು ಮಾಡಿವೆ ಎಂದು ಗೊತ್ತಾಗಿದೆ.

    ರಷ್ಯಾ ನಡೆಸಿರುವ ಶೆಲ್‌ ದಾಳಿಯಲ್ಲಿ ಉಕ್ರೇನ್‌ʼನ ಕೆಲ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ. ಕೆಲ ಜನರಿಗೆ ಗಾಯಗಳಾಗಿವೆ. ಸಾವು ನೋವಿನ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿಲ್ಲ. ಇದೇ ವೇಳೆ ರಷ್ಯಾಕ್ಕೆ ತಿರುಗೇಟು ನೀಡಲು ಉಕ್ರೇನ್‌ ಕೂಡ ಸಿದ್ಧತೆ ಮಾಡಿಕೊಂಡಿದೆ. ಕೆಲವು ರಷ್ಯಾ ಸೈನಿಕರನ್ನು ಸೆರೆ ಹಿಡಿದಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ. 14 ಜನರಿದ್ದ ಉಕ್ರೇನ್ ವಿಮಾನವನ್ನು ಪತನಗೊಂಡಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

    ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗುವಂತೆ ಉಕ್ರೇನ್‌ ಸೇನೆಗೆ ಕರೆ ನೀಡಿರುವ ಪುಟಿನ್‌, ರಷ್ಯಾ ಸಾರ್ವಭೌಮತೆ ರಕ್ಷಿಸಿಕೊಳ್ಳಲು ಹಾಗೂ ಯುರೋಪ್‌ ಖಂಡದಲ್ಲಿ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಎಲ್ಲ ರೀತಿ ಕ್ರಮಗಳನ್ನು ಕೈಗೊಳ್ಳಲು ಮುಕ್ತ ಅಧಿಕಾರ ಹೊಂದಿದೆ ಎಂದು ಪುಟಿನ್‌ ಹೇಳಿದ್ದಾರೆ.

    ಈ ವಿಷಯದಲ್ಲಿ ಯಾರೇ ಮೂರನೇ ಶಕ್ತಿ ಮಧ್ಯಪ್ರವೇಶ ಮಾಡಿದರೆ ಅವರಿಗೂ ತಕ್ಕ ಉತ್ತರ ನೀಡಲಾಗುವುದು ಎಂದು ಪುಟಿನ್‌ ಇದೇ ವೇಳೆ ಅಮೆರಿಕ ಹಾಗೂ ನ್ಯಾಟೋ ಪಡೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎಚ್ಚರಿಕೆ ನೀಡಿದ್ದಾರೆ.

    ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿದರುವ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ರಷ್ಯಾ ದಾಳಿಯನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿದ್ದು, ಇದು ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಅಪ್ರಚೋದಿತ ದಾಳಿ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಈ ದಾಳಿಗೆ ರಷ್ಯ ತಕ್ಕ ಬೆಲೆ ತೆರಲಿದೆ ಎಂದು ಬೈಡನ್‌ ಎಚ್ಚರಿಕೆ ನೀಡಿದ್ದಾರೆ. ಜತೆಯಲ್ಲಿ ಜರ್ಮನಿ, ಬ್ರಿಟನ್‌ ಸೇರಿದಂತೆ ಯುರೋಪ್‌,ನ ಬಹುತೇಕ ದೇಶಗಳು ದಾಳಿಯನ್ನು ಖಂಡಿಸಿವೆ.

    ಇದರ ಬೆನ್ನಲ್ಲೇ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ಸೇರಿದ್ದು, ರಷ್ಯಾ ದಾಳಿಯನ್ನು ಖಂಡಿಸಿದೆ. ಆದರೆ, ಜಾಗತಿಕ ಸಮುದಾಯದ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿರುವ ಪುಟಿನ್‌, ರಷ್ಯದ ಹಿತವನ್ನು ಬಲಿಗೊಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

    ಭಾರತದ ಆತಂಕ :

    ಉಕ್ರೇನ್ ನಲ್ಲಿನ ಸ್ಥಿಗತಿಗಳ ಬಗ್ಗೆ ಭಾರತದ ಆತಂಕವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವ್ಯಕ್ತಪಡಿಸಿದ್ದಾರೆ. ಉಕ್ರೇನ್ ನಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರುವ ಬಗ್ಗೆ ಭಾರತ ಸರಕಾರ ಎಲ್ಲಾ ರೀತಿಯ ಪ್ರಯತ್ನ ಮಾ್ಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಈ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸುಭದ್ರತೆಯನ್ನು ಭಾರತ ಬಯಸುತ್ತದೆ ಎಂದು ಅವರು ಹೇಳಿದ್ದಾರೆ.

    ಉಕ್ರೇನ್ ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸೂಕ್ತ ಕ್ರಮ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಉಕ್ರೇನ್ ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

    ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಸುಮಾರು ಭಾರತದ ವಿದ್ಯಾರ್ಥಿಗಳು ವಿಮಾನ ನಿಲ್ದಾಣಕ್ಕೆ ತಲುಪುವಾಗ ಯುದ್ಧ ಪ್ರಾರಂಭವಾಗಿದ್ದರಿಂದ ೧೦೦ ವಿದ್ಯಾರ್ಥಿಗಳು ಎರಡು ಬಸ್‌ಗಳಲ್ಲಿ ಸಿಲುಕಿಕೊಂಡಿದ್ದಾರೆ. ಇವರಲ್ಲಿ ೧೦ ಕ್ಕಿಂತ ಹೆಚ್ಚು ಕನ್ನಡಿಗರಿದ್ದು, ಅವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೂ ನಿರಂತರ ಸಂಪರ್ಕದಲ್ಲಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

    ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತವಾಗಿರಲು ಭಾರತೀಯ ರಾಯಭಾರ ಕಚೇರಿ ಸೂಕ್ತ ಮಾರ್ಗದರ್ಶನವನ್ನು ನೀಡಿದೆ. ವಿಮಾನಗಳು ಪುನ: ಪ್ರಾರಂಭವಾದಾಗ ವಿದ್ಯಾರ್ಥಿಗಳನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರದ ವಿದೇಶಾಂಗ ಕಾರ್ಯದರ್ಶಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕೇಂದ್ರ ವಿದೇಶಾಂಗ ಸಚಿವರೊಂದಿಗೂ ಈ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

    ಉಕ್ರೇನ್‌ನಲ್ಲಿ ಯುದ್ಧದ ಛಾಯೆಯಿಂದಾಗಿ ಕಳೆದ ವಾರವೇ 200 ಭಾರತೀಯರು ಮರಳಿದ್ದರು. ಆಗ ವಿದ್ಯಾರ್ಥಿಗಳಿಗೆ ಮಾಹಿತಿ ಇರಲಿಲ್ಲವೇ ಎಂಬುದಕ್ಕೆ ಪ್ರತಿಕ್ರಯಿಸಿ, ವಿದ್ಯಾರ್ಥಿಗಳು ಬ್ಯಾಚ್‌ಗಳಲ್ಲಿ ಭಾರತಕ್ಕೆ ಮರಳುತ್ತಿದ್ದು, ಈ ಬ್ಯಾಚ್ ಕಡೆಯದಾಗಿತ್ತು. ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗುವುದು ಎಂದು ತಿಳಿಸಿದರು.

    ಟೆಂಪಲ್ ಟೂರಿಸಂಗೆ ಆದ್ಯತೆ ನೀಡಲು ಮುಖ್ಯಮಂತ್ರಿ ಕರೆ

    BENGALURU FEB 23
    ಕರ್ನಾಟಕದ ಉತ್ತರ, ದಕ್ಷಿಣ ಹಾಗೂ ಕರಾವಳಿ ಭಾಗದಲ್ಲಿ ದೇವಸ್ಥಾನ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಇದರ ಜೊತೆಗೆ ಸ್ಮಾರಕ ಪ್ರವಾಸೋದ್ಯಮಕ್ಕೂ ಅವಕಾಶವಿರುವುದರಿಂದ ಇದಕ್ಕೆ ಉತ್ತೇಜನ ನೀಡಲು ಎರಡನ್ನೂ ಸಂಯೋಜಿಸಿ ಟೂರಿಸಂ ಸರ್ಕೂಟ್ ನಿರ್ಮಿಸುವಂತೆ ಮಖ್ಯಮಂತ್ರಿಗಳು ಸೂಚಿಸಿದರು.

    ಅವರು ಇಂದು ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಮಗ್ರ ದೇವಸ್ಥಾನಗಳ ನಿರ್ವಹಣಾ ವ್ಯವಸ್ಥೆ ಹಾಗೂ ದೈವ ಸಂಕಲ್ಪ ಯೋಜನೆಗಳನ್ನು (Integrated Temple Management System- ಐಟಿಎಂಎಸ್) ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.ದೇವಸ್ಥಾನಗಳಲ್ಲಿ ಸೌಲಭ್ಯಗಳನ್ನು ಒದಗಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳು ತಿಳಿಸಿದರು.

    ಐಟಿಎಂಎಸ್ ನ್ನು ಜಾರಿಗೆ ತಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ದೇವಸ್ಥಾನಗಳ ನಿರ್ವಹಣೆ ಬಹಳ ಮುಖ್ಯ. ದೇವಸ್ಥಾನಗಳಿಗೆ ಭೇಟಿ ನೀಡುವವರ ಸಂಖ್ಯೆ ಮುಂತಾದವುಗಳನ್ನು ದಾಖಲಿಸುವ ಪ್ರಯತ್ನವಾಗಬೇಕು. ದೇವಸ್ಥಾನಗಳ ಆಸ್ತಿಗಳ ನಿರ್ವಹಣೆಯನ್ನು ಅತ್ಯಂತ ಸಮರ್ಪಕವಾಗಿ ಮಾಡುವ ಅಗತ್ಯವಿದೆ ಎಂದರು.

    ದೇವಸ್ಥಾನಗಳ ಸಮಗ್ರ ಅಭಿವೃದ್ಧಿ ಮಾಡಿ , ಪೂರ್ಣಪ್ರಮಾಣದಲ್ಲಿ ಸ್ಥಳೀಯವಾಗಿ ವ್ಯವಸ್ಥೆ ಮಾಡಿ ಆಡಳಿತ ಸುಧಾರಿಸುವ ಅಗತ್ಯವಿದೆ. ಸಾರ್ವಜನಿಕರ ದೇಣಿಗೆ ಹಾಗೂ ಆಸ್ತಿ ಒಳಗೊಂಡಿರುವುದರಿಂದ ನಿರ್ವಹಣೆಯ ಜೊತೆಗೆ ನಿಯಂತ್ರಣವೂ ಅಗತ್ಯ ಎಂದರು. ದೇವಸ್ಥಾನಗಳ ಅರ್ಚಕರು ಹಾಗೂ ಪೂಜಾರಿಗಳ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

    ದೇವಸ್ಥಾನಗಳ ಸ್ವಚ್ಛತೆಗೆ ಆದ್ಯತೆ:ದೇವಸ್ಥಾನಗಳ ಸ್ವಚ್ಥತೆಯನ್ನು ಕಾಪಾಡಲು ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿಗಳು ದೇವಸ್ಥಾನಗಳ ಆವರಣಗಳ ವಾತಾವರಣ ಕಲುಷಿತಗೊಳ್ಳದಂತೆ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು ಎಂದರು.

    ಕಾರ್ಯಕ್ರಮದಲ್ಲಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಎಸ್ ಎ ರಾಮದಾಸ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಕಂದಾಯ ಇಲಾಖೆ ಕಾರ್ಯದರ್ಶಿ ತುಷಾರ ಗಿರಿನಾಥ, ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಮೊದಲಾದವರು ಉಪಸ್ಥಿತರಿದ್ದರು.

    ಮಂತ್ರಿಗಳ ಶಾಸಕರ ವೇತನ ಹೆಚ್ಚಳ; ಮಾರ್ಚ್ 4 ರಾಜ್ಯ ಬಜೆಟ್

    ಕಾಂಗ್ರೆಸ್ ವಿರೋಧ ಪಕ್ಷವಾಗಿ ವಿಫಲವಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    BENGALURU FEB 22

    ಆಡಳಿತ ಪಕ್ಷವಾಗಿ ನೀವು ಕೆಲಸ ಮಾಡಲು ಯೋಗ್ಯರಲ್ಲ ಎಂದು ಜನ 2018 ರಲ್ಲಿ ತೀರ್ಮಾನ ಮಾಡಿದರು. ಕನಿಷ್ಠ ವಿರೋಧ ಪಕ್ಷವಾಗಿಯಾದರೂ ಕಾಂಗ್ರೆಸ್ ಪಕ್ಷ ಕೆಲಸ ಮಾಡಬೇಕಿತ್ತು. ವಿರೋಧ ಪಕ್ಷವಾಗಿಯೂ ಕಾಂಗ್ರೆಸ್ ವಿಫಲವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

    ರಾಜಕಾರಣದ ಮುಸುಕು ಅವರ ಹಾಗೂ ಅವರ ಪಕ್ಷದ ಮೇಲೆ ಬಿದ್ದಿದೆ. ಎಲ್ಲವನ್ನೂ ರಾಜಕೀಯವಾಗಿ ನೋಡುವುದು, ಧ್ವೇಷದಿಂದ ನೋಡುವುದರಿಂದ ಅವರಿಗಾಗಲಿ, ಅವರ ಪಕ್ಷಕ್ಕಾಗಲಿ ರಾಜಕೀಯ ಭವಿಷ್ಯವಿಲ್ಲ. ಸದನ ಶುಕ್ರವಾರದ ವರೆಗೂ ನಡೆಯಬೇಕಿತ್ತು. ಸದನವನ್ನು ಇಂದೇ ಮೊಟಕುಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದು ಬೇಸರದ ಸಂಗತಿ. ಪ್ರತಿಪಕ್ಷದವರು ಸದನ ಕರೆಯಿರಿ ಚರ್ಚಿಸಬೇಕು ಎನ್ನುತ್ತಾರೆ. ಅಧಿವೇಶನ ನಡೆಯುವಾಗ ಚರ್ಚೆ ಮಾಡಲು ಅವರು ತಯಾರಿಲ್ಲ. ಯಾವುದೇ ವಿಚಾರವನ್ನೇ ಆಗಲಿ ಚರ್ಚೆ ಹಾಗೂ ವಾದ ಮಾಡಬಹುದು. ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಸರ್ಕಾರದ ಸಾಧನೆಯನ್ನು ಹೇಳಿಕೊಂಡಾಗ ಅದರ ನ್ಯೂನ್ಯತೆ ಗಳನ್ನು ಹೇಳಬಹುದಾಗಿತ್ತು. ಆ ಕರ್ತವ್ಯವನ್ನೂ ಅವರು ಮಾಡಲಿಲ್ಲ.

    ಇಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಯ ಬಗ್ಗೆಯೂ ಚರ್ಚೆ ಮಾಡಬಹುದಾಗಿತ್ತು. ಯಾವುದೇ ವಿಚಾರದ ಬಗ್ಗೆ ಚರ್ಚೆ ಮಾಡಲು ಸರ್ಕಾರ ಸಿದ್ಧವಿತ್ತು. ಆದರೆ, ಆ ಹೇಳಿಕೆಯಲ್ಲಿ ಏನೂ ಇಲ್ಲ ಎಂದು ಅವರಿಗೆ ಗೊತ್ತಿದೆ ಎಂದು ಅವರು ಹೇಳಿದರು.

    ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ
    ಧರಣಿ ಮಾರ್ಗದ ಮುಖಾಂತರ ರಾಜ್ಯದ ಜನತೆ ಹಾಗೂ ಸದನದ ದಾರಿಯನ್ನು ತಪ್ಪಿಸಲು ನೋಡುತ್ತಿದ್ದಾರೆ. ವಸ್ತ್ರ ಸಂಹಿತೆಯ ಬಗ್ಗೆ ಉಚ್ಛ ನ್ಯಾಯಾಲಯದಲ್ಲಿ ಗಂಭೀರವಾದ ಚರ್ಚೆ ನಡೆಯುತ್ತಿದೆ. ಈಗಾಗಲೇ ಮಧ್ಯಂತರ ಆದೇಶ ನೀಡಿದೆ. ಅದರ ಅನುಷ್ಠಾನವಾಗುತ್ತಿದೆ. ಈ ಸಂದರ್ಭದಲ್ಲಿ ಕೆಲವು ಗೊಂದಲಗಳನ್ನು ಸೃಷ್ಟಿ ಮಾಡಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ನಾವೆಲ್ಲರೂ ಒಕ್ಕೊರಲಿನ ಸಂದೇಶವನ್ನು ನೀಡೋಣ, ಅಂತಿಮ ಆದೇಶ ಬರುವವರೆಗೂ ಕಾದು, ಶಾಂತಿಯಿಂದ ಇರಬಹುದಾಗಿತ್ತು. ಮಕ್ಕಳ ವಿದ್ಯಾಭ್ಯಾಸ ಬಹಳ ಮುಖ್ಯ. ಪರೀಕ್ಷೆಗಳಿವೆ ಎಂಬ ಕನಿಷ್ಠ ಸಂದೇಶವನ್ನು ಕೊಡಲು ಕೂಡ ಅವರಿಗೆ ಸಾಧ್ಯವಾಗಲಿಲ್ಲ. ಮಾನವೀಯತೆ ವಿಚಾರವನ್ನೇ ಇಟ್ಟುಕೊಂಡಿಲ್ಲ. ರಾಜಕಾರಣವೇ ಪ್ರಮುಖವಾಗಿದೆ. ರಾಜಕಾರಣದಲ್ಲೂ ಕೂಡ ವಿರೋಧ ಪಕ್ಷದ ನಾಯಕರು, ಕಾಂಗ್ರೆಸ್ ಅಧ್ಯಕ್ಷರು, ಹಿರಿಯರು. ಬಹಳ ವರ್ಷಗಳಿಂದ ರಾಜಕಾರಣದಲ್ಲಿರುವವರು. ಅವರ ಅನುಭವ ಎಲ್ಲಿ ಹೋಯಿತು. ಅವರ ಅನುಭವದಿಂದ ವಿರೋಧ ಪಕ್ಷವಾಗಿ ಕೆಲಸ ಮಾಡಿದ್ದರೆ, ಜನ ಮೆಚ್ಚಿಕೊಳ್ಳುತ್ತಿದ್ದರು ಎಂದರು.

    ಮತಾಂತರ ನಿಷೇಧ ಕಾಯ್ದೆ:
    ಬೆಳಗಾವಿಯಲ್ಲಿ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕವನ್ನು ವಿಧಾನಪರಿಷತ್ತಿನಲ್ಲಿ ಮಂಡನೆಯಾಗಲಿಲ್ಲ. ಈಗ ಮಂಡಿಸಲು ಸಾಧ್ಯವಾಗಲಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಸದನ ವ್ಯವಸ್ಥಿತವಾಗಿಲ್ಲ. ಚರ್ಚೆ ಮಾಡಿ ಅಂಗೀಕರಿಸಲಾಗುವುದು ಎಂದರು.

    ಸಚಿವರು ಹಾಗೂ ಶಾಸಕರ ವೇತನ ಹೆಚ್ಚಳ:
    ರಾಜ್ಯದಲ್ಲಿ ಆರ್ಥಿಕ ಮುಗ್ಗಟ್ಟಿರುವ ಸಂದರ್ಭದಲ್ಲಿ ಸಚಿವರು ಮತ್ತು ಶಾಸಕ ವೇತನವನ್ನು ಹೆಚ್ಚಿಸಿರುವ ಬಗ್ಗೆ ಚರ್ಚೆಯಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಹಲವಾರು ವಿಚಾರದಲ್ಲಿ ವೇತನ ಹೆಚ್ಚಾಗಿರಲಿಲ್ಲ. ಎಲ್ಲಾ ಪಕ್ಷದ ಶಾಸಕರ ಅಭಿಪ್ರಾಯ, ದಿನನಿತ್ಯದ ಓಡಾಟ, ಹಣದುಬ್ಬರ ಎಲ್ಲವನ್ನೂ ಪರಿಗಣಿಸಿ ವೇತನವನ್ನು ಹೆಚ್ಚಿಸಲಾಗಿದೆ ಎಂದರು.

    ಮಾರ್ಚ್ 4 ರಂದು ಬಜೆಟ್:
    ಬಜೆಟ್ ಮಾರ್ಚ್ 04 ರಂದು ಮಂಡಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಬೇಲಿಯೇ ಎದ್ದು ಹೊಲಮೇಯ್ದಂತೆ

    ಸುಮಾ ವೀಣಾ

    ಕಾವರೆ ಕಣೆಗೊಂಡರ್ – ಅಭಿನವಪಂಪನೆಂದು ಬಿರುದಾಂಕಿತನಾಗಿರುವ  ನಾಗಚಂದ್ರ ಕವಿಯ ರಾಮಚಂದ್ರ ಚರಿತಪುರಾಣದಲ್ಲಿ ಈ  ಮಾತು ಉಲ್ಲೇಖವಾಗಿದೆ.

    ರಾವಣ  ವಿಧಿಯ ಅಟ್ಟಹಾಸಕ್ಕೆ ಸಿಕ್ಕು ‘ಪದ್ಮಪತ್ರದ ಜಲಬಿಂದುವಿನಂತೆ ಚಲಿತಮಾದುದು ಚಿತ್ತಂ’ ಎಂಬ ನಾಗಚಂದ್ರನ  ಮಾತುಗಳನ್ವಯವೇ ಚಿತ್ತಚಾಂಚಲ್ಯಕ್ಕೊಳಗಾಗಿ  ಸೀತೆಯನ್ನು ಅಪಹರಿಸಿಕೊಂಡು ಹೋಗಿ ಪ್ರಮದ ವನದಲ್ಲಿ ಇರಿಸಿರುತ್ತಾನೆ. ಹೇಗಾದರೂ ಸರಿ  ಆಕೆಯನ್ನು ನಾನು ಕೈವಶಮಾಡಿಕೊಳ್ಳಬೇಕು ಅದಕ್ಕೆ  ನೀನು ಸಹಾಯಮಾಡಬೇಕೆಂದು ತಾನು ಒಲಿಸಿಕೊಂಡಿದ್ದ ಅವಲೋಕಿನಿ ವಿದ್ಯೆಯಲ್ಲಿ  ರಾವಣ ಕೇಳಿಕೊಳ್ಳುತ್ತಾನೆ.

    ಅದಕ್ಕೆ  ಆಕೆ ಉತ್ತರವಾಗಿ  ‘ನಿಷ್ಕಾರಣಮಿವರೊಳ್ ವಿರೋಧಮಂ  ಮಾಡುವುದೇ? ಎನ್ನುತ್ತಾ ರಾಮ ಕಾರಣಪುರುಷ ಆತನ ಹೆಂಡತಿಯನ್ನು ವಿನಾಕಾರಣ  ಅಪಹರಿಸಿ ವಿರೋಧ ಕಟ್ಟಿಕೊಳ್ಳುವುದು ಸರಿಯಲ್ಲ  . ಅಧರ್ಮವನ್ನು ನಿಯಂತ್ರಿಸುವುದು  ರಾಜನ ಕೆಲಸ ಆದರೆ ಅದನ್ನು ಮೀರಿ  ದುರ್ವಿಷಯಕ್ಕೆ ನೀನೇ ಮನಸ್ಸು ಮಾಡುತ್ತಿರುವುದು ಸರಿಯಲ್ಲ.  ನಿನ್ನ ಈ  ಕೆಟ್ಟನಡತೆ ಕಾಯುವ ಕೈಗಳೆ ಕತ್ತಿಹಿಡಿವರೆಂಬ ನಾಣ್ಣುಡಿಗೆ ಸಮ  ಎಂದು ಅವಲೋಕಿನಿ ವಿದ್ಯೆ ಬುದ್ಧಿ ಹೇಳುವ ಪ್ರಯತ್ನವನ್ನು ಮಾಡುತ್ತದೆ. 

    ‘ಕಾವರೆ ಕಣೆಗೊಂಡರ್’ ಎಂಬ ಮಾತು  ಬೇಲಿಯೇ ಎದ್ದು ಹೊಲಮೇಯ್ದಂತೆ,ರಕ್ಷಕರೆ ಭಕ್ಷಕರಾದಂತೆ.  ತಾಯಿಯ ಹಾಲೆ ನಂಜಾದಂತೆ  ಮುಂತಾದ  ನುಡಿಗಳಿಗೆ ಸಮವಾಗಿದೆ.  ಜವಾಬ್ದಾರಿಯಿಲ್ಲದೆ, ತನಗಿರುವ  ಸ್ಥಾನಕ್ಕೆ  ಘನತೆಗೆ ಧಕ್ಕೆ  ತಂದುಕೊಳ್ಳುವ ಕೆಲಸವನ್ನು ಕೆಲವರು ಮಾಡಿಕೊಳ್ಳುತ್ತಾರೆ.  ಅಧಿಕಾರದ ಮದವಾವರಿಸಿರುವವರು, ದುಶ್ಚಟಗಳನ್ನು ಹೊಂದಿರುವವರು ಎಂಥ ನೀಚ ಕೃತ್ಯಕ್ಕೂ ಇಳಿಯಬಲ್ಲರು ಎಂಬುದನ್ನು ಇಲ್ಲಿ  ಅರ್ಥ ಮಾಡಿಕೊಳ್ಳಬಹುದಾಗಿದೆ.  

    ನಾಗಚಂದ್ರ ಕೇವಲ  ಒಂದು ಅಪಸವ್ಯವನ್ನಷ್ಟೇ ಅವಲೋಕಿನಿ ವಿದ್ಯೆಯ ಮೂಲಕ ಹೇಳಿಸಿದ್ದಾನೆ  ಆದರೆ ಇಂಥ ಅನೇಕ  ವೈರುಧ್ಯಗಳು ನಮ್ಮ ನಡುವಿವೆ.  ಇಂದಿನ  ದಿನಮಾನಗಳಲ್ಲಿ  ಕರ್ತವ್ಯ ಮತ್ತು ಜವಾಬ್ದಾರಿಗಳ ಮಹತ್ವವನ್ನು ಯಾರೂ ಅರಿಯುತ್ತಿಲ್ಲ ತಮಗೆ  ಹೇಗೆ ಬೇಕೋ ಹಾಗೆ ಸಾಮಾಜಿಕ, ನೈತಿಕ   ಇತಿಮಿತಿಗಳನ್ನು ಮೀರಿ  ಸ್ವೇಚ್ಛೆಗೆ  ಮನವನ್ನು ಒಪ್ಪಿಸುತ್ತಿದ್ದಾರೆ   ಈ ಕಾರಣದಿಂದಲೇ  ಕೆಲವೊಮ್ಮೆ ಸಾಮಾಜಿಕ ರಕ್ಷಣೆ ಸವಾಲಾಗುತ್ತಿದೆ.  ತನ್ನ ಸ್ಥಾನ,ಕಾರ್ಯ,ಜವಾಬ್ದಾರಿಯನ್ನು  ಅರಿತು  ಸಾಮಾಜಿಕರು ಮುನ್ನಡೆಯಬೇಕಾಗುತ್ತದೆ. 

    ಕಾಯುವವರೆ ಕತ್ತಿ ಹಿಡಿದರು,ಕಾಯುವ ಕೈಗಳೆ  ಕೊಡಲಿ ಕಾವುಗಳಾದವು ಎಂಬ ಮಾತುಗಳು ವಿನಾಶತ್ವವನ್ನು ಎಚ್ಚರಿಸುವ ಮಾತುಗಳು .   ಸಾಮಾಜಿಕ ವ್ಯವಸ್ಥೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರೆಲ್ಲಾ   ಇದನ್ನು ಅರಿಯಬೇಕಿದೆ…. ಪಾಲಿಸಬೇಕಿದೆ!

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    Indian Stock Market: ಐಪಿಒ ಗಳ ಬಗ್ಗೆ ತಿಳಿಯಲೇಬೇಕಾದ ಅಂಶಗಳು

    ಕಂಪನಿಗಳು, ವಿಶೇಷವಾಗಿ ಸ್ಟಾರ್ಟ್‌ ಅಪ್‌, ಯೂನಿಕಾರ್ನ್‌ ಎಂಬ ನಾಮಾಂಕಿತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪನಿಗಳಲ್ಲಿ ಪ್ರವರ್ತಕರ ಹೂಡಿಕೆಯಲ್ಲದೆ, ಹೊರಗಡೆಯಿಂದ ಅನೇಕ ಸಂಸ್ಥೆಗಳು ಈ ಸ್ಟಾರ್ಟ್‌ ಅಪ್‌ ಕಂಪನಿಗಳಿಗೆ ಫಂಡಿಂಗ್‌ ಒದಗಿಸುವ ವ್ಯವಸ್ಥೆಯು ಜಾರಿಯಲ್ಲಿದೆ. ಈ ಅಂಶವು ಎಲ್ಲಾ ಹೂಡಿಕೆದಾರರಿಗೂ ತಿಳಿದಿರುವುದಿಲ್ಲ. ಕೇವಲ ಮಾಧ್ಯಮಗಳಲ್ಲಿ ಬಂದಂತಹ ಅಂಶಗಳನ್ನಾಧರಿಸಿ ನಿರ್ಧರಿಸುತ್ತಾರೆ. ಅದೇ ಮಾಧ್ಯಮದಲ್ಲಿ ಅರಿತು ಹೂಡಿಕೆ ಮಾಡಿ ಎಂದು ಹೇಳುವುದನ್ನು ಕಡೆಗಣಿಸುತ್ತಾರೆ.

    ಯಾವುದೇ ಕಂಪನಿಯಲ್ಲಿ ಸಾರ್ವಜನಿಕ ವಿತರಣೆಗೆ ಮುನ್ನ ಪ್ರೈವೇಟ್‌ ಈಕ್ವಿಟಿ ಇನ್ವೆಸ್ಟರ್‌ ಅಥವಾ ವೆಂಚರ್‌ ಕ್ಯಾಪಿಟಲ್‌ ಸಂಸ್ಥೆಗಳು ಹೂಡಿಕೆ ಮಾಡಿದ್ದಲ್ಲಿ ಅಂತಹ ಕಂಪನಿಗಳು ನಿಗದಿ ಪಡಿಸುವ ಐ ಪಿ ಒ-IPO- ಷೇರುಗಳ ಬೆಲೆ ಅತಿ ಹೆಚ್ಚಾಗಿರುತ್ತವೆ. ಹೆಚ್ಚಿನ ಕಂಪನಿಗಳಲ್ಲಿ ವೆಂಚರ್‌ ಕ್ಯಾಪಿಟಲ್‌ ಸಂಸ್ಥೆಗಳ ಫಂಡಿಂಗ್‌ ಇದೆ. ಐ ಪಿ ಒ ಗೂ ಮುನ್ನ ಗ್ರೇ ಮಾರ್ಕೆಟ್ ಎಂಬ ಅನಧಿಕೃತ ಪೇಟೆಯಲ್ಲಿ ಪ್ರೀಮಿಯಂ ಹೆಚ್ಚಿದೆ ಎಂಬ ಪ್ರಚಾರ ಸಹ ನಡೆಯುತ್ತಿರುತ್ತದೆ. ಇಂತಹ ಗ್ರೇ ಮಾರ್ಕೆಟ್‌ ದರಗಳಿಗೆ ಮಾನ್ಯತೆ ಇರುವುದಿಲ್ಲ. ಇಂತಹವುಗಳಿಂದ ದೂರವಿದ್ದಲ್ಲಿ ಕ್ಷೇಮ. ಏರಿಕೆ ಮತ್ತು ಇಳಿಕೆಗಳಿಗೆ ಇತಿಮಿತಿಗಳಿರುವುದಿಲ್ಲ. ಅಧಿಕೃತವಾಗಿಯೇ ಅನೇಕ ಅವಕಾಶಗಳು ಲಭ್ಯವಿರುವಾಗ, ಅನಧಿಕೃತ ವ್ಯವಹಾರಿಕ ಚಿಂತನೆ ಏಕೆ?

    ಸಂಪನ್ಮೂಲ ಅಗತ್ಯತೆ ಯಾರಿಗಾಗಿ:

    ಒಟ್ಟಾರೆ ಒಂದು ಕಂಪನಿಯ ಹಿಂದೆ ಅಡಗಿರುವ ಆರ್ಥಿಕ ಸಾಮರ್ಥ್ಯ, ತೊಳಲಾಟ, ಗೊಂದಲ, ಒತ್ತಡಗಳು ಸಂಪೂರ್ಣ ಪಾರದರ್ಶಕವಾಗಿರಲು ಸಾಧ್ಯವಿರಲಾರದು. ಹಿಂದೆ ಇನ್ಫೋಸಿಸ್‌ ನಂತಹ ಕಂಪನಿಗಳು ಷೇರು ವಿತರಣೆಯ ಸಂದರ್ಭದಲ್ಲಿ ಹೂಡಿಕೆದಾರರ ಹಿತದಿಂದ ನಿಗದಿಪಡಿಸುತ್ತಿದ್ದ ಪ್ರೀಮಿಯಂ ಕಡಿಮೆ ಇರುತ್ತಿತ್ತು. ಆಗ ಆ ಕಂಪನಿಗೆ ಅಭಿವೃದ್ಧಿಯ ದೃಷ್ಠಿಯಿಂದ, ಸಂಪನ್ಮೂಲದ ಅಗತ್ಯತೆ ಇತ್ತು. ಅದರ ಮೂಲಕ ತನ್ನ ಗುರಿ ಸಾಧನೆಯ ಪ್ರಯತ್ನ ನಡೆಯಬೇಕಿತ್ತು. ಆದರೆ ಈಗ ಕಂಪನಿಯ ಚಟುವಟಿಕೆಗೆ, ಅಭಿವೃದ್ಧಿಗೆ ಸಂಪನ್ಮೂಲದ ಅಗತ್ಯವಿಲ್ಲ. ಕಾರಣ ಕಂಪನಿಯ ಪ್ರವರ್ತಕರು ಮತ್ತು ವೆಂಚರ್‌ ಕ್ಯಾಪಿಟಲ್‌ ಸಂಸ್ಥೆಗಳು ಕಂಪನಿಯ ಅಗತ್ಯವಿರುವ ಸಂಪನ್ಮೂಲವನ್ನು ಪೂರೈಸಿ, ಕಂಪನಿಗೆ ಉತ್ತಮ ಬ್ರಾಂಡ್‌ ಇಮೇಜನ್ನು ತಂದುಕೊಂಡ ಮೇಲೆ ಮೌಲ್ಯಾಧಾರಿತ ವಿತರಣೆ ಮಾಡುವ ಬದಲು, ಸ್ವಹಿತವನ್ನೇ ಆಧರಿಸಿ ಅವಕಾಶಗಳ ಲಾಭ ದೊರಕಿಸಿಕೊಳ್ಳಲು ಐ ಪಿ ಒ ವಿತರಣೆಗೆ ಮುಂದಾಗುತ್ತಾರೆ.

    ಐ ಪಿ ಒ ಮೂಲಕ ಹೂಡಿಕೆದಾರರಿಂದ ಸಂಗ್ರಹಿಸಿದ ಸಂಪನ್ಮೂಲವು ಹಲವ ಭಾರಿ ನೇರವಾಗಿ, ಸಂಪೂರ್ಣವಾಗಿ ಪ್ರವರ್ತಕರು, ಮತ್ತು ಫಂಡಿಂಗ್‌ ಮಾಡಿರುವವರ ಖಜಾನೆ ತುಂಬಿಸುವ ರೀತಿ ಪ್ರೀಮಿಯಂ ನಿಗದಿಪಡಿಸಲಾಗುತ್ತಿದೆ. ಹಲವು ಕಂಪನಿಗಳಂತೂ ವಿತರಣೆಯನ್ನು ಸಂಪೂರ್ಣವಾಗಿ ಆಫರ್‌ ಫಾರ್‌ ಸೇಲ್‌ ಮೂಲಕ ಪ್ರವರ್ತಕರ ಮತ್ತು ವೆಂಚರ್‌ ಕ್ಯಾಪಿಟಲ್‌ ಸಂಸ್ಥೆಗಳ ಖಜಾನೆಗೆ ಸೇರಿ, ಕಂಪನಿಗೆ ಒಂದು ಬಿಡಿಕಾಸು ಸಿಗುವುದಿಲ್ಲ.

    ಪ್ರೈವೇಟ್‌ ಲಿಮಿಟೆಡ್‌ ನಿಂದ ಪಬ್ಲಿಕ್‌ ಲಿಮಿಟೆಡ್‌ ಕಂಪನಿಯಾಗಿ ಪರಿವರ್ತನೆ:

    ಕೆಲವು ಕಂಪನಿಗಳು ಐ ಪಿ ಒ ಗಳನ್ನು ಅಧಿಕ ಪ್ರೀಮಿಯಂನಲ್ಲಿ ತೇಲಿಬಿಡುವುದಕ್ಕಾಗಿಯೇ ತಮ್ಮ ಕಂಪನಿಗಳನ್ನು ಪ್ರೈವೇಟ್‌ ಲಿಮಿಟೆಡ್‌ ನಿಂದ ಪಬ್ಲಿಕ್‌ ಲಿಮಿಟೆಡ್‌ ಕಂಪನಿಗಳಾಗಿ ಪರಿವರ್ತಿಸಿ, ಕೆಲವೇ ತಿಂಗಳಲ್ಲಿ ಐ ಪಿ ಒ ಮೂಲಕ ವಿತರಣೆ ಮಾಡುವರು.

    ಐ ಪಿ ಒ ಗೂ ಮುಂಚೆ ಮುಖಬೆಲೆ ಸೀಳಿಕೆ:

    ಈಚಿನ ದಿನಗಳಲ್ಲಿ ಷೇರುಪೇಟೆಯ ಸೂಚ್ಯಂಕಗಳು ಗಗನದತ್ತ ಚಿಮ್ಮುತ್ತಿರುವುದರ ಪ್ರಚಾರದಿಂದ ಪ್ರೇರಿತರಾಗಿ ಐ ಪಿ ಒ ಎಂದರೆ ಸದಾ ಲಾಭದಾಯಕ ಎಂಬ ವಿಶ್ವಾಸದಿಂದ, ಬೇರೆ ಯಾವುದೇ ಚಿಂತನೆ, ವಿಶ್ಲೇಷಣೆಗಳನ್ನು ಮಾಡದೆ ಅರ್ಜಿ ಸಲ್ಲಿಸುತ್ತಾರೆ. ಕೆಲವು ಕಂಪನಿಗಳು ಅಧಿಕ ಪ್ರೀಮಿಯಂ ನಿಗದಿಪಡಿಸುವುಕ್ಕಾಗಿ ಕೆಲವು ತಿಂಗಳುಗಳ ಮುಂಚೆ ತಮ್ಮ ಷೇರಿನ ಮುಖಬೆಲೆಯನ್ನು ಸೀಳಿರುತ್ತವೆ. ಅಂದರೆ ಉದಾಹರಣೆಗೆ ಮುಖಬೆಲೆ ರೂ.10 ರ ಷೇರನ್ನು ಐಪಿಒ ವಿತರಣೆ ಬೆಲೆ ರೂ. 2000 ಎಂದಾದರೆ, ಕೆಲವು ಕಂಪನಿಗಳು ರೂ.10 ರ ಮುಖಬೆಲೆಯ ಷೇರನ್ನು ರೂ.1 ಅಥವಾ 2 ಕ್ಕೆ ಸೀಳಿಕೆ ಮಾಡಿ ಅದನ್ನೇ ರೂ.2,000 ಎಂದು ವಿತರಣೆ ನಿಗದಿಪಡಿಸುವ ಚಿಂತನೆಯು ಆರ್ಥಿಕ ಸಾಕ್ಷರತಾ ಮಟ್ಟವು ಶೇ.27 ರ ಸಮೀಪವಿದ್ದು, ಹೆಚ್ಚಿನವರು ಷೇರುಪೇಟೆಯ ಚಟುವಟಿಕೆಯ ಅರಿವಿಲ್ಲದೆ ಪ್ರವೇಶಿಸಿರುವ ಸಂದರ್ಭದಲ್ಲಿ ಈ ರೀತಿಯ ಚಿಂತನೆ ಸರಿಯಲ್ಲ.

    ಕಾರ್ಪರೇಟ್‌ ಫಲ ವಿತರಣೆ:

    ಕಂಪನಿಗಳು ಐ ಪಿ ಒ ವಿತರಣೆಗೂ ಮುಂಚೆ ಭಾರಿ ಗಾತ್ರದ ಲಾಭಾಂಶವನ್ನಾಗಲಿ ಅಥವಾ ಅಸಹಜ ಮಟ್ಟದ ಬೋನಸ್‌ ಷೇರು ವಿತರಣೆಯನ್ನು ಮಾಡುವ ಮೂಲಕ ಕಂಪನಿಯಲ್ಲಿರುವ ಮೀಸಲು ನಿಧಿಯನ್ನು ಖಾಲಿ ಮಾಡುವ ಚಿಂತನೆಗಳುಳ್ಳವನ್ನೂ ಈಚಿನ ದಿನಗಳಲ್ಲಿ ಕಂಡಿದ್ದೇವೆ. ಐಪಿಒ ಮೂಲಕ ಪ್ರವೇಶ ಪಡೆದ ಹೂಡಿಕೆದಾರರ ಹಿತಕ್ಕೆ ವಿರುದ್ಧವಾದ ಕ್ರಮವಿದಾಗಿದೆ.

    ಇಂತಹ ಚಿಂತನೆಗಳಿರುವ ಕಂಪನಿಗಳಲ್ಲಿ ಹೂಡಿಕೆ ಅಂದರೆ ಪ್ರಾಫಿಟಬಲ್‌ ಅನ್ನುವುದಕ್ಕಿಂತ ಚಾರಿಟಬಲ್‌ ರೀತಿಯಾಗುತ್ತದೆ. ಸಾಧ್ಯವಾದಷ್ಟು ಮಾಹಿತಿಯನ್ನು ಸಂಗ್ರಹಿಸಿ ನಂತರ ಆ ಕಂಪನಿ ವಿತರಿಸುತ್ತಿರುವ ಬೆಲೆ ಸೂಕ್ತವೆಂದು ದೃಢಪಡಿಸಿಕೊಂಡಲ್ಲಿ, ಹೂಡಿಕೆ ಸ್ವಲ್ಪಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    Kalatapasvi Rajesh:ಕಲಾತಪಸ್ವಿ ರಾಜೇಶ್ ನಿಧನ

    BENGALURU FEB 19

    ಕನ್ನಡ ಚಿತ್ರರಂಗದ ಹಿರಿಯ ನಟ, ‘ಕಲಾತಪಸ್ವಿ’ ರಾಜೇಶ್ ಇಂದು ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 84 ವರ್ಷದ ರಾಜೇಶ್ ಅವರನ್ನು ತೀವ್ರ ನಿಗಾ ಘಟಕ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಇಂದು ಇಹಲೋಕವನ್ನು ತ್ಯಜಿಸಿದ್ದಾರೆ.

    ರಾಜೇಶ್ ಅವರು ಏಪ್ರಿಲ್ 15, 1935ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.ರಾಜೇಶ್ ಪಿ.ಡಬ್ಲ್ಯೂಡಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಹೈಸ್ಕೂಲಿನ ದಿನಗಳಿಂದಲೇ ಅವರಿಗೆ ರಂಗಭೂಮಿಯ ಸೆಳೆತ ಅಪಾರವಾಗಿತ್ತು. ಅಂದಿನ ರಂಗಭೂಮಿ ಕಲಾವಿದರಾದ ತ್ಯಾಗರಾಜ ಭಾಗವತರ್, ಟಿ. ಆರ್. ಮಹಾಲಿಂಗಂ ಅಂತಹ ಕಲಾವಿದರ ಬಗ್ಗೆ ಅವರಿಗೆ ತುಂಬು ಅಭಿಮಾನ. ಹೀಗಾಗಿ ಮನೆಯವರಿಗೆ ತಿಳಿಯದಂತೆ ಸುದರ್ಶನ್ ನಾಟಕ ಮಂಡಳಿಯಲ್ಲಿ ಪಾತ್ರವಹಿಸತೊಡಗಿದರು.ಮುಂದೆ ತಮ್ಮದೇ ಆದ ‘ಶಕ್ತಿ ನಾಟಕ ಮಂಡಳಿ’ಯನ್ನು ಸ್ಥಾಪಿಸಿದ ರಾಜೇಶ್ ನಾಡಿನೆಲ್ಲೆಡೆ ಪ್ರಸಿದ್ಧ ನಾಟಕಗಳನ್ನಾಡಿದರು.

    ನಾಟಕಗಳಲ್ಲಿನ ಜನಪ್ರಿಯತೆ ರಾಜೇಶರನ್ನು ಚಿತ್ರರಂಗಕ್ಕೂ ಕರೆದು ತಂದಿತು. ಅಂದಿನ ಪ್ರಸಿದ್ಧ ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿಯವರು ವಿದ್ಯಾಸಾಗರ್ ಎಂಬ ಹೆಸರಿದ್ದ ರಾಜೇಶ್ ಅವರನ್ನು ‘ವೀರ ಸಂಕಲ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.

    ಪ್ರಸಿದ್ಧ ನಿರ್ಮಾಪಕ ಬಿ. ಎಸ್. ನಾರಾಯಣ್ ನಿರ್ಮಿಸಿ, ಸಿ.ವಿ. ಶಿವಶಂಕರ್ ಅವರು ನಿರ್ದೇಶಿಸಿದ ‘ನಮ್ಮ ಊರು’ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದಲ್ಲದೆ ರಾಜೇಶ್ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದಿತು. ಹೀಗೆ ಸಾಗಿದ ತಮ್ಮ ಚಿತ್ರರಂಗದ ಬದುಕಿನಲ್ಲಿ ರಾಜೇಶ್ ಅವರು150ಕ್ಕೂ ಹೆಚ್ಚು ನಾಯಕ ಪ್ರದಾನ ಪಾತ್ರಗಳು ಮತ್ತು ವೈವಿಧ್ಯಮಯ ಪೋಷಕ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

    ‘ನಮ್ಮ ಊರು’, ‘ಗಂಗೆ ಗೌರಿ’, ‘ಸತೀ ಸುಕನ್ಯ’, ಬೆಳುವಲದ ಮಡಿಲಲ್ಲಿ’, ‘ಕಪ್ಪು ಬಿಳುಪು’, ‘ಬೃಂದಾವನ’, ‘ಬೋರೆ ಗೌಡ ಬೆಂಗಳೂರಿಗೆ ಬಂದ’, ‘ಮರೆಯದ ದೀಪಾವಳಿ’, ‘ಪ್ರತಿಧ್ವನಿ’, ‘ಕಾವೇರಿ’, ‘ದೇವರ ಗುಡಿ’, ‘ಬದುಕು ಬಂಗಾರವಾಯ್ತು’, ‘ಸೊಸೆ ತಂದ ಸೌಭಾಗ್ಯ’, ‘ಮುಗಿಯದ ಕಥೆ’, ‘ಬಿಡುಗಡೆ’, ‘ದೇವರದುಡ್ಡು’, ‘ಕಲಿಯುಗ’, ‘ಪಿತಾಮಹ’ ಮುಂತಾದ ಚಿತ್ರಗಳಲ್ಲಿ ರಾಜೇಶರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ರಾಜೇಶ್ ಅವರು ನಾಯಕನಾಗದೆ, ನಾಯಕನ ಅಥವಾ ನಾಯಕಿಯ ಅಣ್ಣನಂತಹ ಪಾತ್ರಗಳಲ್ಲಿ ಅಭಿನಯಿಸಿದಾಗ ಸಹಾ ಅದು ಬಹಳಷ್ಟು ಜನಪ್ರಿಯವಾಗಿದೆ. ‘ಪ್ರತಿಧ್ವನಿ’, ‘ದೇವರಗುಡಿ’, ‘ಬದುಕು ಬಂಗಾರವಾಯ್ತು’ ಚಿತ್ರಗಳಲ್ಲಿ ಅವರು ನಾಯಕನಾಗಿ ಅಭಿನಯಿಸದಿದ್ದರೂ ಬಹಳ ಕಾಲ ನೆನಪಿನಲ್ಲುಳಿಯುತ್ತಾರೆ. ‘ಕರ್ಣ’ ಚಿತ್ರದಲ್ಲಿ ಡಾಕ್ಟರ್ ಆಗಿ ಅಭಿನಯಿಸಿದ ಅವರ ಗಾಂಭೀರ್ಯ ಕೂಡಾ ಬಹಳ ಕಾಲ ನೆನಪಿನಲ್ಲಿ ಉಳಿಯುವಂತದ್ದು. ಪಾತ್ರವೇ ತಾನಾಗಿ ಪರಕಾಯ ಪ್ರವೇಶ ಮಾಡುವಂತಹ ನಟನೊಬ್ಬನ ಪ್ರಧಾನ ಗುಣಗಳಿವು.

    ರಾಜೇಶ್ ಅವರ ಭಾಷಾ ಉಚ್ಚಾರ, ಭಾವಾಭಿನಯ ಉತ್ತಮ ಮಟ್ಟದ್ದಾಗಿದ್ದು ನಿರಂತರವಾಗಿ ಅವರು ಉತ್ತಮ ಪಾತ್ರಗಳನ್ನು ನಿರ್ವಹಿಸುತ್ತಾ ಬಂದರು. ‘ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ’, ‘ನಾನೇ ಎಂಬ ಭಾವ ನಾಶವಾಯಿತೋ’, ‘ರವಿವರ್ಮನ ಕುಂಚದ ಕಲೆ’, ‘ಈ ದೇಶ ಚೆನ್ನ ಈ ಮಣ್ಣು ಚಿನ್ನ’, ‘ಕಂಗಳು ವಂದನೆ ಹೇಳಿವೆ’ ಮುಂತಾದ ಜನಪ್ರಿಯ ಹಾಡುಗಳನ್ನು ನೆನೆದಾಗ ತಟ್ಟನೆ ರಾಜೇಶ್ ಕಣ್ಮುಂದೆ ಬಂದು ನಿಲ್ಲುತ್ತಾರೆ.

    ‘ಕಲಾತಪಸ್ವಿ ರಾಜೇಶ್’ ಎಂಬುದು ಅವರ ಆತ್ಮಚರಿತ್ರೆಯ ಹೆಸರು. ಅವರ ಅಭಿನಯ ಮೇರು ನಟ ಶಿವಾಜಿಗಣೇಶನ್ ಅವರ ಅಭಿನಯವನ್ನು ನೆನಪಿಸುವಂತದ್ದು ಎಂಬುದು ಅಂದಿನ ದಿನಗಳಲ್ಲಿ ಅವರನ್ನು ಕುರಿತ ಮೆಚ್ಚುಗೆಯ ಮಾತಾಗಿತ್ತು. ಶ್ರೀಮಂತವಾದ ತಮಿಳು ಚಿತ್ರರಂಗದಿಂದ ಅಂದಿನ ದಿನಗಳಲ್ಲಿ ಅವಕಾಶಗಳು ಕೂಡಿಬಂದರೂ ಕನ್ನಡದ ನೆಲದಲ್ಲೇ ಏನನ್ನಾದರೂ ಸಾಧಿಸಬೇಕೆಂಬ ಪ್ರಬಲ ಇಚ್ಛೆ ಹೊಂದಿದ್ದ ರಾಜೇಶ್ ಅಂತಹ ಕರೆಗಳನ್ನು ನಯವಾಗಿ ನಿರಾಕರಿಸಿದ್ದರು.

    ರಾಜೇಶ್ ಅವರನ್ನು ಹಲವಾರು ಪ್ರಶಸ್ತಿ ಗೌರವಗಳು ಅರಸಿ ಬಂದಿವೆ. ಇವಕ್ಕೆಲ್ಲ ಶಿಖರ ಪ್ರಾಯದಂತೆ ಧಾರವಾಡ ವಿಶ್ವವಿದ್ಯಾಲಯವು ರಾಜೇಶ್ ಅವರಿಗೆ ಡಾಕ್ಟರೇಟ್ ಗೌರವವನ್ನು ಸಲ್ಲಿಸಿದೆ. ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ರಾಜೇಶ್ ಅವರ ಅಳಿಯ.

    ನಾನು ಆಗ ಸಿಎಂ ಅಲ್ಲ, ಎಫ್ ಡಿಸಿ ಕೆಲಸ ಮಾಡಿಕೊಂಡಿದ್ದೆ ಎಂದ ಎಚ್.ಡಿ.ಕುಮಾರಸ್ವಾಮಿ

    BENGALURU FEB 19

    ರಾಷ್ಟ್ರಧ್ವಜದ ವಿಷಯದಲ್ಲಿ ನಾನು ಸಚಿವ ಕೆ ಎಸ್ ಈಶ್ವರಪ್ಪ ಅವರ ಪರ ವಕೀಲಿಕೆ ಮಾಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.

    ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ನಾನು ಇರುವ ವಿಷಯವನ್ನು ಇದ್ದ ಹಾಗೆ ಹೇಳಿದ್ದೇನೆ. ಈಶ್ವರಪ್ಪ ಅವರು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಸಹಜವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರೇನೂ ದ್ವಜಕ್ಕೆ ಅಪಮಾನ ಆಗುವಂತಹ ಹೇಳಿಕೆ ಕೊಟ್ಟಿಲ್ಲ. ಹಾಗಂತ ನಾನೇನೂ ಈಶ್ವರಪ್ಪ ಪರ ವಕೀಲಿಕೆ ಮಾಡುತ್ತಿಲ್ಲ ಎಂದರು.

    ಧ್ವಜದ ಬಗ್ಗೆ ಅಷ್ಟೊಂದು ಹೇಳುವ ಕಾಂಗ್ರೆಸ್ ನಾಯಕರು, ಸದನದ ಬಾವಿಯಲ್ಲಿ ರಾಷ್ಟ್ರಧ್ವಜ ಹಾರಿಸುತ್ತ ಪ್ರತಿಭಟನೆ ಮಾಡಿದರು. ಇದು ರಾಷ್ಟ್ರಧ್ವಜಕ್ಕೆ ನೀಡುವ ಗೌರವವೇ? ಸುಖಾ ಸುಮ್ಮನೆ ಸದನದ ಕಲಾಪ ವ್ಯರ್ಥ ಮಾಡದೇ ಹೈಕೋರ್ಟ್ ನಲ್ಲಿ ಪಿಐಎಲ್ ಹಾಕಿ ಹೋರಾಟ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿಗಳು ಟಾಂಗ್ ನೀಡಿದರು.

    ಪ್ರತಿಷ್ಠೆಗೆ ಬಿದ್ದು ಮಂತ್ರಿಯ ರಾಜೀನಾಮೆ ಪಡೆಯಲು ಹೊರಟ ಕಾಂಗ್ರೆಸ್ ನಡೆಯನ್ನು ಜನ ಗಮನಿಸುತ್ತಾ ಇದ್ದಾರೆ. ಕಲಾಪಕ್ಕೆ ಅಡ್ಡಿ ಮಾಡುವವರನ್ನು ಸದನದಿಂದ ಅಮಾನತು ಮಾಡಿ, ಆ ನಂತರ ಸದನ ನಡೆಸಿ ಎಂದು ಸಭಾಧ್ಯಕ್ಷರಿಗೂ ಮನವಿ ಮಾಡುತ್ತೇನೆ. ಕೋವಿಡ್ ಅನಾಹುತ ಸಂದರ್ಭದಲ್ಲಿ ಆಗುತ್ತಿರುವ ಮತ್ತೊಂದು ‘ ರಾಜಕೀಯ ಕೋವಿಡ್ ದುರಂತ ‘ ಇದು. ಈ ವಿನಾಶಕಾರಿ ಕೋವಿಡ್ ಅನ್ನು ಎಲ್ಲಾ ಸೇರಿ ಹರಡಿಸಬೇಡಿ ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರತಿಕ್ರಿಯಿಸಿದರು.

    ನಾವು ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸದನಕ್ಕೆ ಬಂದಿದ್ದೆವು. ಆದರೆ ಇವರು ಹಿಜಾಬ್ ಮತ್ತು ಕೇಸರಿ ಶಾಲು ಎಂದು ಕಲಾಪವನ್ನು ಹಾಳು ಮಾಡಿದರು. ಆಮೇಲೆ ಸಚಿವರ ರಾಷ್ಟ್ರಧ್ವಜದ ಹೇಳಿಕೆ ಇಟ್ಟುಕೊಂಡು ಎರಡು ದಿನಗಳ ಕಲಾಪವನ್ನು ಹಾಳುಗೆಡವಿದರು. ಇದನ್ನು ಒಪ್ಪಲು ಸಾಧ್ಯವೇ? ತಪ್ಪು ಎಂದಿದ್ದಕ್ಕೆ ಕಾಂಗ್ರೆಸ್ ನಾಯಕರು ಈಗ ಬೇರೆ ರಾಗ ಹಾಡುತ್ತಿದ್ದಾರೆ ಎಂದು ಅವರು ಹೇಳಿದರು.

    ಕರಾವಳಿಯ ಒಂದು ಭಾಗದಲ್ಲಿ ಶುರುವಾದ ಹಿಜಾಬ್ ಗೊಂದಲ ಮತ್ತಿತರ ಭಾಗದವರಿಗೆ ಪ್ರೇರೇಪಣೆ ಕೊಟ್ಟಂತೆ ಆಗಿದೆ. ಆ ಪ್ರದೇಶದ ಕೆಲ ಭಾಗದಲ್ಲಿ ಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಹೋಗುತ್ತಿದ್ದರು. ತರಗತಿ ಪ್ರವೇಶ ಮಾಡುವ ಸಮಯದಲ್ಲಿ ಹಿಜಾಬ್ ತೆಗೆದು, ಮನೆಗೆ ಹೋಗುವಾಗ ಮತ್ತೆ ಧರಿಸಿ ಹೋಗುತ್ತಿದ್ದರು.

    ಆರಂಭದಲ್ಲೇ ಚಿವುಟಿ ಹಾಕಬಹುದಾಗಿದ್ದ ವಿವಾದ ಎರಡು ಧರ್ಮದವರ ಸಂಘರ್ಷಕ್ಕೆ ಕಾರಣವಾಗಿದೆ. ಮಕ್ಕಳ ಮನಸ್ಸಲ್ಲಿ ದ್ವೇಷ ಬಿತ್ತಲಾಗಿದೆ. ಕೆಲ ಸಂಘಟನೆಗಳು ಇದನ್ನು ಮತಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿವೆ. ಕಳೆದ ಎರಡು ದಿನಗಳಿಂದ ಎರಡು ಸದನದಲ್ಲಿ ಕಲಾಪಗಳು ಸ್ಥಗಿತಗೊಳಿಸುವ ಹಾಗೆ ಕಾಂಗ್ರೆಸ್ ನಡವಳಿಕೆ ಇದೆ. ಜನರು ಇದನ್ನು ಕ್ಷಮಿಸುವುದಿಲ್ಲ ಎಂದರು ಕುಮಾರಸ್ವಾಮಿ ಅವರು.

    ಮಾಧ್ಯಮಗಳಲ್ಲಿ ಬಂದ ಈಶ್ವರಪ್ಪ ಅವರ ಪ್ರತಿಕ್ರಿಯೆ ಇವತ್ತಿನ ಈ ರೀತಿಯ ಕಲಾಪಗಳಿಗೆ ಕಾರಣವಾಗಿದೆ. ಅದಕ್ಕಿಂತಲೂ ಹೆಚ್ಚಿನ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆದರೆ ಆಗಲಿಲ್ಲ. ಕಾರವಾರದ
    ಸಂಸದರೊಬ್ಬರು ಹಿಂದೆ ದೇಶದ ಸಂವಿಧಾನ ಬದಲಾಯಿಸುತ್ತೇವೆ ಎಂಬಂತೆ ಮಾತನಾಡಿದ್ದರು. ಬಿಜೆಪಿಯವರ ಅಜೆಂಡಾಗಳೇ ಈ ರೀತಿ ಇವೆ. ಈ ದೇಶದಲ್ಲಿ ಹಿಂದೂಗಳು ಮಾತ್ರ ಬದುಕಬೇಕು ಎಂಬ ಅಜೆಂಡಾ ಇಟ್ಟುಕೊಂಡಿದ್ದಾರೆ‌ ಅವರು. ಇಂತಹ ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡೇ ಚುನಾವಣೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

    ಕೇಸರಿ ಎಂಬುದಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಇದೆ. ಅದರ ಬಗ್ಗೆ ನಮಗೂ ಪೂಜ್ಯ ಭಾವನೆ ಇದೆ. ಧಾರ್ಮಿಕ ಕ್ಷೇತ್ರದಲ್ಲಿ ಕಠಿಣ ಜೀವನಶೈಲಿ ರೂಢಿಸಿಕೊಂಡವರು ಕೇಸರಿ ಧರಿಸುತ್ತಾ ಇದ್ದರು. ಈಗ ಎಲ್ಲರ ಮೈಮೇಲೆ ಕೇಸರಿ ಹಾಕುವ ಕೆಲಸ ನಡೆಯುತ್ತಿದೆ. ಬಿಜೆಪಿ ಅಯೋಧ್ಯ ಮಂದಿರ ಕಟ್ಟುವ ಚಳವಳಿ ಶುರು ಮಾಡಿದಾಗ ಇದನ್ನು ಬಳಸುವುದನ್ನು ಬಿಜೆಪಿ ಶುರು ಮಾಡಿದ್ದರು. ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಬದಲಾವಣೆ ತರಲು ಅವರು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

    ಸರ್ಕಾರದ ಆಡಳಿತದ ವೈಫಲ್ಯ ಮತ್ತಿತರ ವಿಚಾರಗಳು ಕಲಾಪದಲ್ಲಿ ಚರ್ಚೆ ಆಗಬೇಕಿತ್ತು. ಉದ್ಯೋಗ, ಆರ್ಥಿಕ ಪರಿಸ್ಥಿತಿ, ಶಾಲೆಗಳ ಪರಿಸ್ಥಿತಿ ಬಗ್ಗೆ ಚರ್ಚೆ ಆಗಬೇಕಿತ್ತು.

    ಭ್ರಷ್ಟ ಹಗರಣಗಳ ಬಗ್ಗೆ ಚರ್ಚೆ ಮಾಡುವವನಿದ್ದೆ:ನಾನು ಈ ಬಾರಿ ಸದನದಲ್ಲಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನಡೆದ ಭ್ರಷ್ಟಾಚಾರಗಳ, ಹಗರಣಗಳ ಬಗ್ಗೆ ಸದನದಲ್ಲಿ ದಾಖಲೆಗಳನ್ನು ಇಡಲು ತಯಾರಿ ಮಾಡಿಕೊಂಡಿದ್ದೆ. ಆದರೆ ಸದನವು ಸರಿಯಾಗಿ ನಡೆಯಲೇ ಇಲ್ಲ. ನೀವು ಕೂಡ 14 ತಿಂಗಳು ಆಡಳಿತ ಮಾಡಿದ್ದಿರಿ. ಆಗ ಸರಿ ಮಾಡಬಹುದಿತ್ತಲ್ಲ ಎಂದು ಯಾರಾದರೂ ಕೇಳಬಹುದು. ಆದರೆ ನಾನು ಆಗ ಸಿಎಂ ಅಲ್ಲ, ಎಫ್ ಡಿಸಿ ಕೆಲಸ ಮಾಡಿಕೊಂಡಿದ್ದೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿಗಳು ಬೇಸರದಿಂದ ಹೇಳಿದರು.

    error: Content is protected !!