17.2 C
Karnataka
Tuesday, November 26, 2024
    Home Blog Page 28

    Administrative-Reforms -ಆಡಳಿತ ಸುಧಾರಣಾ ಆಯೋಗ-2ರ ಎರಡು ಮತ್ತು ಮೂರನೇ ವರದಿ ಸಲ್ಲಿಕೆ; ಕಡತಗಳ ಹಂತ ಇಳಿಕೆಗೆ ಶಿಫಾರಸ್ಸು

    BENGALURU FEB 18

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರ ಎರಡು ಮತ್ತು ಮೂರನೇ ವರದಿಗಳನ್ನು ಆಯೋಗದ ಅಧ್ಯಕ್ಷರಾದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಸಲ್ಲಿಸಿದರು.

    ವರದಿಯ ಮುಖ್ಯಾಂಶಗಳ ಮಾಹಿತಿ ಪಡೆದ ಮುಖ್ಯಮಂತ್ರಿಗಳು ವರದಿಯಲ್ಲಿ ಮಾಡಿರುವ ಶಿಫಾರಸುಗಳನ್ನು ಪರಿಶೀಲಿಸಿ, ಕೂಡಲೇ ಜಾರಿಗೊಳಿಸಲು ಸಾಧ್ಯವಿರುವ ಅಂಶಗಳನ್ನು ಅನುಷ್ಠಾನಕ್ಕೆ ತರಲು ಕ್ರಮ ವಹಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.

    ಇಂದು ಸಲ್ಲಿಸಿದ ವರದಿಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಇಂಧನ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ, ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ಒಳಾಡಳಿತ ಇಲಾಖೆಗಳಿಗೆ ಸಂಬಂಧಿಸಿದ ಶಿಫಾರಸುಗಳನ್ನು ಒಳಗೊಂಡಿದೆ.

    ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಪ್ರಮುಖ ಶಿಫಾರಸುಗಳು

    1. ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ, ನಿಗಮ ಮಂಡಳಿ ಇತ್ಯಾದಿಗಳಲ್ಲಿ ಆಗುವ ಅನುಪಯುಕ್ತ ವೆಚ್ಚಗಳನ್ನು ತಡೆಯುವ ಕುರಿತು ಸಲಹೆ ನೀಡಲು ಅನುಪಯುಕ್ತ ವೆಚ್ಚ ತಡೆ ಕಾರ್ಯಪಡೆಯನ್ನು ರಚಿಸಬಹುದು.
    2. ಭಾರತ ಸರ್ಕಾರವು ತನ್ನ ಸಚಿವಾಲಯಗಳಲ್ಲಿ ಯಾವುದೇ ಕಡತವು ನಾಲ್ಕು ಹಂತಗಳಿಗಿಂತ ಹೆಚ್ಚು ಚಲನವಲನವಾಗಬಾರದು ಎಂದು ನಿರ್ಧರಿಸಿರುವಂತೆ ರಾಜ್ಯ ಸರ್ಕಾರವು ಸಹ ಸಚಿವಾಲಯದಲ್ಲಿ ಯಾವುದೇ ಇಲಾಖೆಯ ಕಡತಗಳು ಮೂರು ಅಥವಾ ನಾಲ್ಕು ಹಂತಗಳಿಗಿಂತ ಹೆಚ್ಚು ಚಲನವಲನವಾಗಬಾರದೆಂದು ನಿರ್ಧಾರ ತೆಗೆದುಕೊಳ್ಳಬಹುದು. ಪ್ರಸ್ತುತ ರಾಜ್ಯದಲ್ಲಿ ಕಡತಗಳು 5-10 ಹಂತಗಳಲ್ಲಿ ಚಲಾವಣೆಯಾಗುತ್ತಿವೆ.
    3.  ಎಲ್ಲ ಇಲಾಖೆಗಳ ಸೂಚಿಸಿದ ಗ್ರೂಪ್-ಸಿ ಮತ್ತು ಡಿ ನೌಕರರ ವರ್ಗಾವಣೆಯನ್ನು ಗಣಕೀಕೃತ ಕೌನ್ಸಿಲಿಂಗ್‌ ಮೂಲಕ ಮಾಡಲು ಕಾಯ್ದೆ ಜಾರಿಗೆ ತರಬಹುದು.
    4. ರಾಜ್ಯ ಸರ್ಕಾರವು ರಾಜ್ಯದಲ್ಲಿರುವ ಎಲ್ಲ ಅಂಚೆ ಕಚೇರಿಗಳಲ್ಲಿ ರಾಜ್ಯ ಸರ್ಕಾರದ ಸೇವೆಗಳನ್ನು   ಒದಗಿಸಲು ಬಳಸಿಕೊಳ್ಳಬಹುದು. ಪ್ರಸ್ತುತ ಅಂಚೆ ಕಚೇರಿಗಳು ಭಾರತ ಸರ್ಕಾರದ ಸೇವೆಗಳನ್ನು ಒದಗಿಸುತ್ತಿವೆ.
    5. ಗ್ರಾಮ ಮಟ್ಟದ ಉದ್ಯಮಿಗಳಿಂದ(VLE) ಸ್ಥಾಪಿಸಲಾದ ಸಾಮಾನ್ಯ ಸೇವಾ ಕೇಂದ್ರಗಳನ್ನು (CSC) ರಾಜ್ಯವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವುದರ ಮೂಲಕ ಸರ್ಕಾರಿ ಮತ್ತು ಸರ್ಕಾರೇತರ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸಲು VLE ಗಳನ್ನು ʼಜನಸೇವಕರಾಗಿʼ ಬಳಸಿಕೊಳ್ಳಬಹುದು.
    6. ಜಿಲ್ಲಾಧಿಕಾರಿಯವರಿಗೆ ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕಾರದ ಇಲಾಖೆಗಳಿಗೆ ನಾಲ್ಕು ಹೆಕ್ಟೇರ್‌ವರೆಗೆ ಮತ್ತು ಜಮೀನಿನ ಮೌಲ್ಯವು ರೂ.5 ಕೋಟಿ ಮೀರದ ಸರ್ಕಾರಿ ಜಮೀನನ್ನು ಪರಿವರ್ತನಾ ಶುಲ್ಕದ ವಿನಾಯಿತಿ ನೀಡಿ ಉಚಿತವಾಗಿ ಮಂಜೂರು ಮಾಡುವ ಹೆಚ್ಚಿನ ಅಧಿಕಾರವನ್ನು ಪ್ರತ್ಯಾಯೋಜಿಸಬಹುದು.
    7. ಸಾರ್ವಜನಿಕ ಉದ್ಯಮಗಳ ಇಲಾಖೆಯನ್ನು(DPE) ಆರ್ಥಿಕ ಇಲಾಖೆಯಲ್ಲಿ ವಿಲೀನಗೊಳಿಸಬಹುದು.
    8. ಭೂಸ್ವಾಧೀನಕ್ಕೆ ಪರಿಹಾರ ಧನದ ಪಾವತಿಯು ಕಾಲಮಿತಿಯದ್ದಾಗಿರಬೇಕು. ಕಾಲಮಿತಿಯಲ್ಲಿ ಪಾವತಿಸದಿದ್ದರೆ ವಿಳಂಬವಾದ ಅವಧಿಗೆ ಅನವಶ್ಯಕಾಗಿ ಹೆಚ್ಚುವರಿ ಪರಿಹಾರ ಧನವನ್ನು ಪಾವತಿಸಬೇಕಾಗುತ್ತದೆ ಹಾಗಾಗಿ ಇದನ್ನು ಭೂ ಕೋರಿಕೆ ಸಂಸ್ಥೆಗಳು ಮತ್ತು ಕಂದಾಯ ಇಲಾಖೆಯು ಸಕಾಲ ಸೇವೆಯಾಗಿ ಅಧಿಸೂಚಿಸಬೇಕು ಮತ್ತು ಪರಿಹಾರ ಧನವನ್ನು ಆಧಾರ್‌ ಬೇಸ್ಡ್‌ ಪಾವತಿ ಮಾಡುವಂತೆ ಪ್ರಕ್ರಿಯೆಗೊಳಿಸಬೇಕು ಇದರಿಂದ ಚೆಕ್‌ ಮೂಲಕ ಪರಿಹಾರ ಧನ ಪಾವತಿಯಲ್ಲಾಗುವ ವಂಚನೆಯನ್ನು ತಡೆಗಟ್ಟಬಹುದು.
    9. ಅಧಿಕಾರಿಗಳ ಮತ್ತು ಸಿಬ್ಬಂದಿವರ್ಗದವರ ಕಾರ್ಯನಿರ್ವಹಣೆಯನ್ನುಮೌಲ್ಯಮಾಪನ ಮಾಡುವ ನಮೂನೆಯನ್ನು ಪರಿಷ್ಕರಿಸಿದ್ದು ಅದರಂತೆ ಕ್ರಮವಹಿಸಬಹುದು.      
    10. ಸಾಧನೆ (ಕಾರ್ಯಕ್ಷಮತೆ ನಿರ್ವಹಣೆ ಮತ್ತು ಮೌಲ್ಯಮಾಪನ ಪದ್ದತಿ) ಇಲಾಖೆಗಳ ಕಾರ್ಯಕ್ಷಮತೆ ನಿರ್ವಹಣೆ ಮತ್ತು ಮೌಲ್ಯಮಾಪನ ಪದ್ದತಿಯನ್ನು ಜಾರಿಗೊಳಿಸಿ ಇಲಾಖೆಗಳ ಮೌಲ್ಯಮಾಪನ ಮಾಡಬಹುದು.
    11. ರಾಷ್ಟ್ರಮಟ್ಟದಲ್ಲಿ ರಾಜ್ಯದ ಸೂಚ್ಯಾಂಕವನ್ನು   ಸುಧಾರಿಸಲು ಬಹು ವಲಯ, ವಲಯ ಸೂಚ್ಯಂಕಗಳ ವಿಶ್ಲೇಷಣೆ, ಸುಧಾರಣೆ, ಮೇಲ್ವಿಚಾರಣೆ ಮಾಡಲು ಸಮಿತಿ ರಚಿಸಲು ಕ್ರಮ ತೆಗೆದುಕೊಳ್ಳಬಹಬುದು ಮತ್ತು ಇವೇ ಸೂಚ್ಯಂಕಗಳ ಆಧಾರದ ಮೇಲೆ ಜಿಲ್ಲಾ ಮತ್ತು ತಾಲ್ಲೂಕುಗಳ ಶ್ರೇಣಿಗಳನ್ನು ಪ್ರಕಟಿಸುವುದು.
    12. ಅತಿ ಹೆಚ್ಚಿನ ಮೌಲ್ಯದ ಟೆಂಡರ್‌ಗಳನ್ನು ಕರೆಯುವ ಮೊದಲು ಕರಡು ಬಿಡ್‌ ಡ್ಯಾಕ್ಯುಮೆಂಟ್‌ನ್ನು ಇ-ಪ್ರೊಕ್ಯುರ್‌ಮೆಂಟ್‌ ವೆಬ್‌ಸೈಟ್‌ ಮೂಲಕ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಬಹುದು. ಆಕ್ಷೇಪಣೆಗಳಿಗೆ ಇಲಾಖೆಗಳು ತಮ್ಮ ನಿರ್ಧಾರಗಳನ್ನು ದಾಖಲಿಸಬೇಕು ನಂತರವೇ ಬಿಡ್‌ ಡ್ಯಾಕ್ಯುಮೆಂಟ್‌ನ್ನು ಅಂತಿಮಗೊಳಿಸಬೇಕು.
    13. ಎಲ್ಲ ಇಲಾಖೆಗಳು ಸಿಬ್ಬಂದಿಗಳನ್ನು ಹೊರಗುತ್ತಿಗೆಯ ಆಧಾರದ ಮೇಲೆ ನಿಯೋಜಿಸಿಕೊಳ್ಳುತ್ತಿದ್ದು, ನಿಯೋಜಿಸಿಕೊಳ್ಳುವಾಗ ಯಾವುದೇ ರೀತಿಯ ಮೀಸಲಾತಿ ಪದ್ದತಿಯನ್ನು ಅಳವಡಿಸಿಕೊಳ್ಳದೆ ಇರುವುದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಅನಾನುಕೂಲವಾಗುತ್ತಿರುವುದು ಕಂಡುಬಂದಿರುತ್ತದೆ.   ಸರ್ಕಾರವು ಹೊರ ಗುತ್ತಿಗೆ ಮೇಲೆ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳುವಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಅಗತ್ಯ ಪ್ರಾತಿನಿಧ್ಯ ನೀಡಿ ನಿಯೋಜಿಸುವಂತೆ ಸೂಕ್ತ ಆದೇಶವನ್ನು ಹೊರಡಿಸಬಹುದು.
    14. ವಿವಿಧ ಕಚೇರಿಗಳಲ್ಲಿ ಕಾರ್ಯಭಾರದ ಆದಾರದ ಮೇಲೆ ಹುದ್ದೆಗಳ ‍ ಸ್ಥಳಾಂತರ ಮಾಡಬಹುದು. ಉದಾ:  ತಹಶೀಲ್ದಾರ್‌ ಕಚೇರಿಗಳಲ್ಲಿನ ಗ್ರೂಪ್‌-ಸಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು ಹಾಗೂ ಪೋಲೀಸ್‌ ಕಾನ್ಸ್‌ಟೇಬಲ್‌ಗಳು ಇತ್ಯಾದಿ.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ಇಲಾಖೆಯ  ಮುಖ್ಯ ಶಿಫಾರಸ್ಸುಗಳು

    1. ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ ಮತ್ತು ಕರ್ನಾಟಕ ಗ್ರಾಮೀಣಾಭಿವೃದ್ಧಿ ರಸ್ತೆ ಅಭಿವೃದ್ಧಿ ಸಂಸ್ಥಯನ್ನು ವಿಲೀನಗೊಳಿಸಬಹುದು.
    2. ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯನ್ನು ಇಂಧನ ಇಲಾಖೆಗೆ ವರ್ಗಾಯಿಸುವುದು ನಂತರ ಇಂಧನ ಇಲಾಖೆಯ ಆಡಳಿತದ ನಿಯಂತ್ರಣದಲ್ಲಿರಿಸಿ ಕರ್ನಾಟಕ ನವೀಕರಿಸಬಹುದಾದ ಇಂಧನಗಳ ಅಭಿವೃದ್ಧಿ ನಿಗಮದ ಜೊತೆ ವಿಲೀನ ಮಾಡಬಹುದು.
    3.  ಬಿಬಿಎಂಪಿಯಲ್ಲಿ ಅನಧಿಕೃತ, ಅಕ್ರಮ ನಿವೇಶನಗಳು ಮತ್ತು ಕಟ್ಟಡಗಳಿಗೆ ಆಸ್ತಿ ತೆರಿಗೆಯ ಎರಡುಪಟ್ಟು ದಂಡವನ್ನು ಸಂಗ್ರಹಿಸುವಂತೆ ಗ್ರಾಮೀಣ ಪ್ರದೇಶದಲ್ಲಿಯೂ ಸಹ ಗ್ರಾಮ ಪಂಚಾಯತ್‌ಗಳು ಅಕ್ರಮ ನಿವೇಶನ ಹಾಗೂ ಕಟ್ಟಡಗಳಿಗೆ ಆಸ್ತಿ ತೆರಿಗೆಯ ಎರಡು ಪಟ್ಟು ದಂಡವನ್ನು ವಿಧಿಸಲು ಅನೂಕೂಲವಾಗುವಂತೆ ಕರ್ನಾಟಕ ಪಂಚಾಯತ್‌ ರಾಜ್‌ ಕಾಯಿದೆ 1993, ಕರ್ನಾಟಕ ಪಂಚಾಯತ್‌ ರಾಜ್‌ (ಗ್ರಾಮ ಪಂಚಾಯತ್‌ ಬಜೆಟ್‌ ಮತ್ತು ಲೆಕ್ಕ ಪತ್ರ ನಿಯಮಗಳು) 2006 ಗೆ ತಿದ್ದುಪಡಿ ಮಾಡಬಹುದು.
    4. ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳನ್ನು ಮತ್ತು ನಗರ ಸ್ಥಳೀಯ ಸಂಸ್ಥಗಳ ಮುಖ್ಯಾಧಿಕಾರಿಗಳನ್ನು ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ನೋಂದಣಿ ಪ್ರಾಧಿಕಾರಗಳನ್ನಾಗಿ ಅಧಿಸೂಚಿಸಬೇಕು. ಗ್ರಾಮ ಪಂಚಾಯತ್‌ಗಳಿಗೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಮಾಜಿಕ ಬದ್ರತಾ ಪಿಂಚಣಿಗಳ ಅರ್ಜಿ ಪಡೆದು  ಶಿಫಾರಸು ಮಾಡುವ ಅಧಿಕಾರ ನೀಡಬಹುದು.
    1. ಬಿಡಿಎ, ನಗರಾಭಿವೃದ್ಧಿ ಪ್ರಾಧಿಕಾರಗಳು, ಕೆಹೆಚ್‌ಬಿ ಮತ್ತು ಕೆಐಎಡಿಬಿಯಂತಹ ಸಂಸ್ಥೆಗಳು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಸದರಿ ಪ್ರಾಧಿಕಾರಗಳು ಮಂಜೂರು ಮಾಡಿದ ನಿವೇಶನಗಳಿಗೆ ಖಾತೆ ನೀಡುವುದು ಮತ್ತು ಆಸ್ತಿ ತೆರಿಗೆಯನ್ನು ಸಂಗ್ರಹಿಸುವದು ಗ್ರಾಮ ಪಂಚಾಯತ್‌ಗಳ ಬದಲಾಗಿ ಸದರಿ ಪ್ರಾಧಿಕಾರಗಳು ಮಾಡುತ್ತಿದ್ದು ಇದರಿಂದ ಗ್ರಾ ಪಂ ಗಳು ಆಸ್ತಿ ತೆರಿಗೆ ಆದಾಯದಿಂದ ವಂಚಿತರಾಗುತ್ತಿವೆ ಆದುದರಿಂದ ಖಾತಾ ನಿರ್ವಹಣೆ, ತೆರಿಗೆ ಸಂಗ್ರಹವನ್ನು ಆಯಾ ಗ್ರಾಮ ಪಂಚಾಯತ್‌ ಗಳು ಮಾಡಬಹುದು.
    2. ಗ್ರಾಮ ಪಂಚಾಯತ್‌ಗಳ ವಿದ್ಯುತ್‌ ಬಿಲ್‌ ಮತ್ತು ಬಾಕಿಗಳನ್ನು ನಿರ್ವಹಿಸುವುದರ ಕುರಿತಂತೆ ಶಿಫಾರಸುಗಳು. 2021-22 ರಲ್ಲಿ ವಿದ್ಯುತ್‌ ಶುಲ್ಕಕ್ಕಾಗಿ ಎಲ್ಲಾ ಗ್ರಾಮ ಪಂಚಾಯತಿಗಳ ಒಟ್ಟು ವೆಚ್ಚ ರೂ.1725 ಕೋಟಿ ಹಾಗೂ ಎಸ್ಕಾಮ್ಸ್‌ಗಳಿಗೆ ಬರಬೇಕಾದ ಒಟ್ಟು ವಿದ್ಯತ್‌ ಬಿಲ್‌ ಬಾಕಿ ರೂ. 3993 ಕೋಟಿ.

    ನಗರಾಭಿವೃದ್ಧಿ ಇಲಾಖೆ, ಮುಖ್ಯ ಶಿಫಾರಸ್ಸುಗಳು

    1. ಅಪರಾಧಗಳ ಸಂಯೋಜನೆಗಾಗಿ ಕೆಟಿಸಿಪಿ ಕಾಯಿದೆಯ ಸೆಕ್ಷನ್‌ 76 ಎಫ್‌ ಅಡಿಯಲ್ಲಿ ವಿಶೇಷ ಆದೇಶ ನಿಡುವುದರ ಮೂಲಕ ಬಿ-ಖಾತಾ ನಿವೇಶನಗಳನ್ನು ಭೂ ಪರಿವರ್ತನೆ ಶುಲ್ಕ ಹಾಗೂ ದಂಡ, ಯೋಜನಾ ಪ್ರಾಧಿಕಾರಕ್ಕೆ ಕಾಂಪೌಂಡಿಂಗ್‌ ಶುಲ್ಕ, ಕಟ್ಟಡ ಯೋಜನಾ ಮಂಜೂರಾತಿ ಶುಲ್ಕ ಹಾಗೂ ದಂಡ ಇತ್ಯಾದಿಗಳನ್ನು ಪಾವತಿಸಿಕೊಂಡು ಎ-ಖಾತಾಗಳಾಗಿ ಪರಿವರ್ತಿಸಬಹುದು.
    2. ಬಿಎಂಆರ್‌ಡಿಎ ಮತ್ತು ಬಿಡಿಎ ವಿಲೀನಗೊಳಿಸಲು ಬಿಡಿಎ ಕಾಯ್ದೆ ತಿದ್ದುಪಡಿ ಮಾಡಿ ಬಿಡಿಎ ಅನ್ನು ಬಿಎಂಅರ್‌ಡಿಎ ಆಗಿ ಪರಿವರ್ತಿಸಿ ಬಿಡಿಎ ಕಛೇರಿಗೆ ಸ್ಥಳಾಂತರಿಸಬಹುದು.
    3. 2400 ಚದರ ಅಡಿವರೆಗಿನ ನಿವೇಶನಗಳಲ್ಲಿ ಭೂ ಮಾಲೀಕರ ಸ್ವಯಂ ಘೋಷಣೆ ಮತ್ತು ಪ್ರಮಾಣೀಕರಣದ ಆದಾರದ ಮೇಲೆ ಆನ್‌ಲೈನ್‌ನಲ್ಲಿಯೇ ಶುಲ್ಕವನ್ನು ಪಾವತಿಸಿಕೊಂಡು ಕಟ್ಟಡ ಯೋಜನೆಗೆ   ತಕ್ಷಣದಲ್ಲಿ ಮಂಜೂರಾತಿ ನೀಡಬಹುದು.
    4. ಬಿಬಿಎಂಪಿ ವ್ಯಾಪ್ತಿಯಲ್ಲಿ, ವಲಯಗಳಲ್ಲಿ ವಲಯ ಆಯುಕ್ತರ ಅಧ್ಯಕ್ಷತೆಯಲ್ಲಿ, ಸಿಟಿ ಕಾರ್ಪೋರೇಷನ್‌ಗಳಲ್ಲಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚನೆ ಮಾಡಬಹುದು.
    5. ಬಿಬಿಎಂಪಿಯಲ್ಲಿ ಬಿ-ಖಾತಾ, ಗ್ರಾಮ ಪಂಚಾಯತ್‌ಗಳಲ್ಲಿ 11-B ಇರುವಂತೆ ಸ್ಥಳೀಯ ನಗರ ಸಂಸ್ಥೆಗಳಲ್ಲಿ ಬಿ-ಖಾತಾಗಳನ್ನು ತೆರೆಯಲು ಬಿಬಿಎಂಪಿ ಕಾಯಿದೆಯ ಮಾದರಿಯಲ್ಲಿ ಕೆಎಂಸಿ ಕಾಯಿದೆ, ಕೆಎಂ ಕಾಯಿದೆಗಳಿಗೆ ಸೂಕ್ತ ತಿದ್ದುಪಡಿಗಳನ್ನು ಮಾಡಬಹುದು.
    6. ಕೆಎಂಸಿ ಕಾಯಿದೆ 1976 ಮತ್ತು ಕೆಎಂ ಕಾಯಿದೆ 1964 ರ ಅಡಿಯಲ್ಲಿ ವಿಧಿಸುವ ವಿವಿಧ ತೆರಿಗೆಗಳು ಮತ್ತು ದಂಡಗಳನ್ನು ಪ್ರಸಕ್ತ ಸಾಲಿಗೆ ಹಣದುಬ್ಬರ ಸೂಚ್ಯಂಕಕ್ಕೆ ಪರಿಷ್ಕರಿಸಬಹುದು. ಉದಾ:  ಕೆಲವು ದರಗಳು 5 ರೂಪಾಯಿಯಿಂದ ವಿಧಿಸಲಾಗುತ್ತಿದೆ.
    7. 74 ನೇ ಸಾಂವಿಧಾನಿಕ ತಿದ್ದುಪಡಿ ಕಾಯಿದೆಯನ್ವಯ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಕಲಬುರಗಿ ಮತ್ತು ಬೆಳಗ/ಾವಿ ಮುಂತಾದ ಮಹಾನಗರಗಳಿಗೆ ಮಹಾನಗರ ಯೋಜನಾ ಸಮಿತಿ ರಚನೆ ಮಾಡಬಹುದು.
    8. ಬಿಬಿಎಂಪಿಯ ಮುಖ್ಯ ಆಯುಕ್ತರ ಮೇಲಿನ ಕೆಲಸದ ಒತ್ತಡವನ್ನು ಕಡಿಮೆ ಮಾಡಲು   ಮುಖ್ಯ ಆಯುಕ್ತರ ಕೆಲವು ಅಧಿಕಾರಗಳನ್ನು ಉದಾ: 2 ಕೋಟಿವರೆಗಿನ ಬಜೆಟ್‌ ಕಾಮಗಾರಿಗಳ ಅನುಮೋದನೆ, ವಲಯ ವ್ಯಾಪ್ತಿಯಲ್ಲಿ ಅಭಿಯಂತರರುಗಳ, ಸಿಬ್ಬಂದಿಗಳ ಹಾಗೂ ಗ್ರೂಪ್-ಸಿ ನೌಕರರ ವರ್ಗಾವಣೆ ಮುಂತಾದ ಅಧಿಕಾರಗಳನ್ನು ಪ್ರತ್ಯಾಯೋಜಿಸಿ ವಲಯ ಆಯುಕ್ತರುಗಳಿಗೆ ನೀಡಬಹುದು.
    9. ಅದೇ ರೀತಿಯಾಗಿ, ಆಯುಕ್ತರು ಬಿಡಿಎ ರವರ ಭೂ ಸ್ವಾಧೀನದ ಅಧಿಕಾರಗಳನ್ನು ಡೆಪ್ಯೂಟಿ ಕಮಿಷನರ್‌ರವರಿಗೆ, ನಿವೇಶನ ಸಂಬಂಧಿತ ಅಧಿಕಾರಗಳನ್ನು ಕಾರ್ಯದರ್ಶಿ, ಉಪಕಾರ್ಯದರ್ಶಿಗಳಿಗೆ, ರಜೆ ನಗದೀಕರಣ, ರಜೆ ಮಂಜೂರಾತಿ, ವೈದ್ಯಕೀಯ ಬಿಲ್‌ ಮಂಜೂರಾತಿ ಇತ್ಯಾದಿಗಳನ್ನು ಕಾರ್ಯದರ್ಶಿಗೆ, 1 ಲಕ್ಷದವರೆಗಿನ ಯುಟಿಲಿಟಿ ಬಿಲ್‌, ಆಕಸ್ಮಿಕ, ಜಾಹೀರಾತು ಬಿಲ್‌ಗಳ ಪಾವತಿಯನ್ನು ವಿಭಾಗ ಮುಖ್ಯಸ್ಥರಿಗೆ ಮುಂತಾದ ಅಧಿಕಾರಗಳ ಪ್ರತ್ಯಾಯೋಜನೆ ಮಾಡಬಹುದು.

    ಇಂಧನ ಇಲಾಖೆಯ ಮುಖ್ಯ ಶಿಫಾರಸುಗಳು

    1. ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಬೋರ್‌ವೆಲ್‌ಗಳಿಗೆ ವಿದ್ಯುತ್‌ ಶಕ್ತಿ ಸಂಪರ್ಕಕ್ಕೆ ವಾಸ್ತವಿಕ ವೆಚ್ಚ ಸುಮಾರು 1.50 ಲಕ್ಷದಿಂದ ರೂ. 3.5 ಲಕ್ಷಗಳಾಗಿದ್ದು,  ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಂದ ಕೇವಲ ರೂ.50,000 ಗಳನ್ನು ಪಾವತಿಸಲಾಗುತ್ತಿದೆ ಎಂದು ವರದಿಯಾಗಿದೆ. ವಿದ್ಯುತ್‌ ಶಕ್ತಿ ಸಂಪರ್ಕದ  ನೈಜ ವೆಚ್ಚವನ್ನು ಮರುಪಾವತಿಸಲು ಅಥವಾ ನಿರ್ದಿಷ್ಟ ಮೊತ್ತವನ್ನು ಹೆಚ್ಚಿಸಲು ಕ್ರಮವನ್ನು ಪ್ರಾರಂಭಿಸಬಹುದು.
    2. ಸುಮಾರು 75% ರಿಂದ 80% ಹೊಸ ಸಂಪರ್ಕಗಳು 5 KW ಗಿಂತ ಕಡಿಮೆಯಿವೆ. ಅಂತಹ ಸಂಪರ್ಕಗಳಿಗೆ ವಿದ್ಯುತ್ ಮಂಜೂರಾತಿ ನೀಡುವ ಅಧಿಕಾರವನ್ನು ಸಂಬಂಧಪಟ್ಟ ಶಾಖಾಧಿಕಾರಿಗಳಿಗೆ ಪ್ರತ್ಯಾಯೋಜಿಸಬಹುದು.
    3. ಹೆಚ್ಚಿನ ಸಂಖ್ಯೆಯ ಅನುಸ್ಥಾಪನೆಗಳು CEI ಯ ವ್ಯಾಪ್ತಿಯಲ್ಲಿವೆ. ಸಕಾಲ ಅಡಿಯಲ್ಲಿ 18 ಸೇವೆಗಳನ್ನು ಒದಗಿಸುವುದರ ಜೊತೆಗೆ, ಇದು ನಿಯಮಿತವಾಗಿ ವಿದ್ಯುತ್ ಸ್ಥಾಪನೆಗಳನ್ನು ಪರಿಶೀಲಿಸಬೇಕು, ಲಭ್ಯವಿರುವ ಎಲ್ಲಾ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಂಸ್ಥೆಗೆ ಸಾಧ್ಯವಾಗದಿರಬಹುದು ಹಾಗಾಗಿ  ಹೊಸ ಹುದ್ದೆಗಳನ್ನು ಮಂಜೂರು ಮಾಡುವುದಕ್ಕಿಂತ ಬದಲಾಗಿ, CEI ಯ ಮೇಲ್ವಿಚಾರಣೆಯ ಅಡಿಯಲ್ಲಿ Chartered Electrical Safety Engineer ಗಳನ್ನು Central Electrical Authority ಮಾರ್ಗಸೂಚಿ ಪ್ರಕಾರ ಅಧಿಕೃತಗೊಳಿಸಲು ಅಧಿಸೂಚನೆ ಹೊರಡಿಸಬಹುದು.

    ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪ ಸಂಖ್ಯಾತರ ಇಲಾಖೆಯ ಮುಖ್ಯ ಶಿಫಾರಸ್ಸುಗಳು

    1. ಅರಣ್ಯ ಹಕ್ಕು ಕಾಯಿದೆ, 2006 ರ ನಿಬಂಧನೆಗಳ ಪ್ರಕಾರ, ಬಳಕೆಯ ಹಕ್ಕುಗಳನ್ನು ST, SC, OBC ಮತ್ತು ಇತರರಿಗೆ ಸೇರಿದ ಅರ್ಹ ವ್ಯಕ್ತಿಗಳಿಗೆ ದೃಢಪಡಿಸಲಾಗಿದೆ. ಅವರಿಗೆ ಹಕ್ಕು ಪತ್ರ(ಹಕ್ಕುಗಳ ಪ್ರಮಾಣಪತ್ರ) ಗಳನ್ನು ಸಹ ನೀಡಲಾಗುತ್ತದೆ. ಈ ಹಕ್ಕುಗಳ ವಿವರಗಳನ್ನು RTC ಯ ಇತರ ಹಕ್ಕುಗಳ ಕಾಲಂನಲ್ಲಿ ನಮೂದಿಸಬೇಕು. ಇದಲ್ಲದೆ, ಈ ರೈತರನ್ನು ಬೆಳೆ ಪರಿಹಾರ, ಬೀಜ ಮತ್ತು ಗೊಬ್ಬರ ಸಬ್ಸಿಡಿ, ಬ್ಯಾಂಕ್ ಸಾಲ ಇತ್ಯಾದಿ ಪ್ರೋತ್ಸಾಹಕಗಳಿಗೆ ಅರ್ಹರು ಎಂದು ಘೋಷಿಸಲಾಗಿಲ್ಲ. ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳು ಜಂಟಿಯಾಗಿ ಸರ್ಕಾರಿ ಆದೇಶವನ್ನು ಹೊರಡಿಸಿ, ರಾಜ್ಯ ಸರ್ಕಾರ ರೈತರಿಗೆ ನೀಡುವಂತಹ ಎಲ್ಲ ಪ್ರೋತ್ಸಾಹಕಗಳಿಗೆ ಅವರು ಸಹ ಅರ್ಹರು ಎಂದು ಪರಿಗಣಿಸುವಂತೆ ಅನುಷ್ಠಾನ ಅಧಿಕಾರಿಗಳಿಗೆ ನಿರ್ದೇಶನ ನೀಡಬಹುದು.
    2. ವಿದ್ಯಾರ್ಥಿನಿಲಯಗಳಲ್ಲಿ ಮಂಜೂರಾದ ಸಾಮರ್ಥ್ಯಕ್ಕಿಂತ ಶೇ. 50 ಕ್ಕಿಂತ ಕಡಿಮೆ ದಾಖಲಾತಿ ಇರುವ ಸುಮಾರು 103 ವಿದ್ಯಾರ್ಥಿನಿಲಯಗಳನ್ನು ವಿಲೀನಗೊಳಿಸಬಹುದು ಮತ್ತು ಆ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳನ್ನು ಹತ್ತಿರದ 93 ವಿದ್ಯಾರ್ಥಿನಿಲಯಗಳಿಗೆ ಸ್ಥಳಾಂತರಿಸಬಹುದು.
    3. ಸಿಬ್ಬಂದಿ ಕೊರತೆಯ ಹಿನ್ನೆಲೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ತಾಲೂಕಾ ಕಛೇರಿಗಳನ್ನು ಒಟ್ಟಿಗೆ ಕಾರ್ಯನಿರ್ವಹಿಸುವಂತೆ ಆದೇಶ ಮಾಡಬಹುದು ಅದೇ ರೀತಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಇಲಾಖೆಗಳ ತಾಲೂಕಾ ಕಛೇರಿಗಳನ್ನು ಒಟ್ಟಿಗೆ ಕಾರ್ಯನಿರ್ವಹಿಸುವಂತೆಯೂ ಸಹ ಆದೇಶ ಮಾಡಬಹುದು.

    ಒಳಾಡಳಿತ ಇಲಾಖೆಯ ಮುಖ್ಯ ಶಿಫಾರಸ್ಸುಗಳು

    1. ನಾಗರಿಕರು ಪೊಲೀಸ್ ಠಾಣೆಗಳಿಗೆ ಬರಲು ತುಂಬಾ ಸಂಕೋಚ ಪಡುತ್ತಾರೆ ಎಂಬುದು ಸಾಮಾನ್ಯ ಸಂಗತಿಯಾಗಿದೆ. ಇಲಾಖೆಯು 32 ಕ್ಕೂ ಹೆಚ್ಚು ನಾಗರಿಕ ಕೇಂದ್ರಿತ ಸೇವೆಗಳನ್ನು ಒದಗಿಸುತ್ತಿದೆ ಹಾಗಾಗಿ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ನಾಗರಿಕ ಸೇವೆಗಳ ಸಹಾಯ ಕೇಂದ್ರ ಸ್ಥಾಪಿಸುವುದು ಹಾಗೂ ಪೋಲೀಸ್‌ ಕೈಪಿಡಿಯಲ್ಲಿ ಇದನ್ನು ಸೇರಿಸಬಹುದು.
    2. ಕರ್ನಾಟಕದಲ್ಲಿ ಗೆಜೆಟೆಡ್ ಅಲ್ಲದ ಪೊಲೀಸ್ ಸಿಬ್ಬಂದಿಗಳಲ್ಲಿ ಶೇಕಡಾವಾರು ಮಹಿಳಾ ಪ್ರಾತಿನಿಧ್ಯವು 8.3% ಆಗಿದೆ (2020 ರಲ್ಲಿ). ಕಾನ್‌ಸ್ಟೆಬಲ್‌ಗಳು ಇತ್ಯಾದಿ ಹುದ್ದೆಗಳ ನೇಮಕಾತಿಯಲ್ಲಿ ಮಹಿಳೆಯರಿಗೆ 25% ಹುದ್ದೆಗಳನ್ನು ಮೀಸಲಿಡಲು ರಾಜ್ಯವು ಆದೇಶಿಸಿದೆ. ಆದರೆ ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ದಿನಾಂಕ:12.05.2015 ರಂದು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೊಲೀಸ್ ಪಡೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಲು ಮಹಿಳೆಯರಿಗೆ 33% ಮೀಸಲಾತಿಯನ್ನು ನೀಡಲು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಹ ಪೊಲೀಸ್ ಪಡೆಗಳಲ್ಲಿ ಕಾನ್ಸ್‌ಟೇಬಲ್‌ನಿಂದ ಸಬ್-ಇನ್‌ಸ್ಪೆಕ್ಟರ್‌ವರೆಗಿನ ಗೆಜೆಟೆಡ್ ಅಲ್ಲದ ಹುದ್ದೆಗಳಲ್ಲಿ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ, ಸಮತಳವಾಗಿ ಮತ್ತು ಪ್ರತಿ ವರ್ಗದಲ್ಲಿ (ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇತರರು) 33% ಮೀಸಲಾತಿಯನ್ನು ಅನುಮೋದಿಸಬಹುದು.

    ಅಡಿಗರ  ‘ಸಮಾಜಭೈರವ ಕವಿತೆ’ ಒಂದು ಅನುಸಂಧಾನ

    ಸುಮಾ ವೀಣಾ

    ಸಾಹಿತ್ಯದಲ್ಲಿ  ಮಣ್ಣಿನ ವಾಸನೆಯ ಅಗತ್ಯವನ್ನು ಬಲವಾಗಿ  ಪ್ರತಿಪಾದಿಸಿರುವ ಗೋಪಾಲಕೃಷ್ಣ ಅಡಿಗರು ಹೊಸಗನ್ನಡ ಕಾವ್ಯ ಸಂದರ್ಭದ   ಪ್ರಮುಖ ಅಂತಃಶಕ್ತಿಯಾಗಿದ್ದವರು.  ಕಾವ್ಯವಸ್ತು ಮತ್ತು ರೂಪದಲ್ಲಿ ಕನ್ನಡ ಕಾವ್ಯಕ್ಕೆ ನವ್ಯತೆಯ ಹೊಸ ನೆಲೆಯನ್ನು  ತಂದವರು.  ಸ್ವಾತಂತ್ರ್ಯೋತ್ತರ  ಭಾರತದ   ಸಂಕೀರ್ಣ ಅನುಭವಗಳನ್ನು  ಸಂಕೇತ ಮತ್ತು ಪ್ರತಿಮೆಗಳಲ್ಲಿ  ಬಂಧಿಸಿ  ಅನನ್ಯ ಕಾವ್ಯಾನುಭೂತಿ ನೀಡಿದವರು. ಇವರ ಕಾವ್ಯದ ಪ್ರಮುಖ ಗುಣಗಳು ವಸ್ತು ನಿಷ್ಟತೆ ಹಾಗು ವೈಚಾರಿಕತೆ.

    ನವ್ಯದ ಹರಿಕಾರನಾಗಿದ್ದರೂ   ಗೋಪಾಲಕೃಷ್ಣ ಅಡಿಗರು ಪ್ರಗತಿಶೀಲ ಧೋರಣೆಗೆ ಒಳಗಾಗಿ  ಬರೆದ ಕವನಗಳಲ್ಲಿ ‘ಸಮಾಜ ಭೈರವ’  ಸಮಾಜಕೇಂದ್ರಿತವಾಗಿದೆ. ಗೋಪಾಲಕೃಷ್ಣ ಅಡಿಗರು ಬರೆದಿರುವ ‘ಕಟ್ಟುವೆವು ನಾವು’  ಕವನ ಸಂಕಲನದಿಂದ  ‘ಸಮಾಜಭೈರವ’ ಕವಿತೆಯನ್ನು ಆರಿಸಲಾಗಿದೆ. ಸಮಾಧಾನದಿಂದ ಕೂಡಿದ ಸಾಮಯಿಕ ಸಂಕಲ್ಪಗಳು   ಭ್ರಷ್ಟಸಮಾಜಕ್ಕೆ  ಆತ್ಯಂತಿಕ ಮಿತಿಯನ್ನು ತೋರಿಸುವ ಈ ಕವಿತೆಯ  ಪದರೂಪದ ಹೂರಣವಾಗಿದೆ.  ನಾನು, ನನ್ನ ಎಂಬ ಪದಗಳು ಸಾಮಾಜಿಕರನ್ನು ಸಮಷ್ಟಿ ಪ್ರಜ್ಞೆಯಿಂದ ಪ್ರತಿನಿಧಿಸುವ  ಪದಗಳಾಗಿವೆ.   ಪುನರಾವರ್ತಿತವಾಗಿ ಈ ಕವಿತೆಯಲ್ಲಿ ಬರುವ “ನನ್ನ” ಎಂದರೆ ಕೇವಲ ವ್ಯಕ್ತಿಯಲ್ಲ  ಪ್ರತಿಯೊಬ್ಬ  ಸಾಮಾಜಿಕನೂ ಹೌದು!

    ಸಮಾಜ ಭೈರವ

     ‘ಸಮಾಜ ಭೈರವ’  ಪ್ರಸ್ತುತಕ್ಕೂ ಅನ್ವಯವಾಗುವಂಥ ಉತ್ತಮ ಕವಿತೆಗಳಲ್ಲಿ ಒಂದಾಗಿದೆ. ಇಲ್ಲಿ ಅಡಿಗರು ಸಮಾಜವನ್ನು ನಾಶಕರ್ತನಾದ ಭೈರವನಿಗೆ  ಹೋಲಿಸಿರುವುದು ವಿಶಿಷ್ಟವಾಗಿದೆ. ಸಮಾಜ  ಮಾನವನ ಏಳಿಗೆಗೆ ಪೂರಕವಾಗಿರಬೇಕೇ ವಿನಃ ಹೇಳಿಗೆಯಂತೆ ಕೆಲವೊಮ್ಮೆ ಭಯವನ್ನು ತರಿಸಬಾರದು.  ಮನುಷ್ಯ  ಸಾಮಾಜಿಕ ಪ್ರಾಣಿ ಹಾಗು ಸಂಘಜೀವಿ ಅವನ ಸಾಂಘಿಕ ಜೀವನದಲ್ಲಿ  ಅನೂಚಾನವಾಗಿ ರೂಢಿಗೆ ಬಂದ ಕೆಲವು ಸಂಪ್ರದಾಯಗಳು ಕಟ್ಟು ಕಟ್ಟಳೆಗಳು ಇರುವುದು ಸತ್ಯ . ಆದರೆ ಅವುಗಳನ್ನು ಸಾಮಾಜಿಕರ  ಇಚ್ಛೆಯ ವಿರುದ್ಧ ಬಲವಂತವಾಗಿ ಹೇರುವುದು  ತಪ್ಪು . ಆ ಹೇರಿಕೆಯ ಸ್ವರೂಪವನ್ನೇ  ಅಡಿಗರು  ಇಲ್ಲಿ’’ಭೈರವ” ಎಂದಿರುವುದು. ವ್ಯಕ್ತಿ ಸ್ವಾತಂತ್ರ್ಯವನ್ನು , ವ್ಯಕ್ತಿ  ವಿಶಿಷ್ಟತೆಯನ್ನೂ ಪ್ರತಿಪಾದಿಸುವ ಈ ಕವನದ  ಆಶಯವನ್ನು ಸಮಗ್ರವಾಗಿ  ಗ್ರಹಿಸಲು “ಆ ಹೆಸರೇ ಸೇರದೇನು ನಿನ್ನ ಯಶೋಮಾಲೆಗೆ?” ಎಂಬ ಸಾಲಿನೊಡನೆ ಅನ್ವಯಿಸಿಕೊಂಡು   ಅನುಸಂಧಾನಿಸಬೇಕಾಗಿದೆ, ವ್ಯಷ್ಟಿ ವಿಶೇಷಗಳಿಂದ, ಶೇಷಗಳಿಂದಲೇ ಸಮಾಜ ಭೈರವನ   ಅವಿರ್ಭಾವವಾಗಿದೆ. ಸಮಷ್ಟಿ ಅಳಿದರೂ ಸಮಾಜಭೈರವ ಮಾತ್ರ ಶಾಶ್ವತ  ಎಂಬ ಧ್ವನಿ ಇಲ್ಲಿ ಬರುತ್ತದೆ.

     “ನನ್ನ ಮನವ ನನಗೆ ಕೊಡು”   ಇದು ‘ಸಮಾಜಭೈರವ’ ಕವಿತೆಯ ಮೊದಲ ಸಾಲು . “ನನ್ನ”  ಎಂಬ ಪದವನ್ನು ಇಲ್ಲಿ  ಎಲ್ಲಾ ಸಾಮಾಜಿಕರನ್ನು ಒಟ್ಟುಗೂಡಿಸಿಯೇ ಸಮಷ್ಟಿಯ  ಅರ್ಥದಲ್ಲಿ ಸಮಾಜಭೈರವನನ್ನು  ಸಮಷ್ಟಿಯ ವಿನಾಶಕಾರಕ ಶಕ್ತಿ  ಎಂದೇ ಇಲ್ಲಿ  ಅಡಿಗರು ಹೇಳಿದ್ದಾರೆ.    ಆ ಶಕ್ತಿಯಲ್ಲಿ  ಅಂದರೆ ಸಮಾಜಭೈರವನಲ್ಲಿ ಕವಿ ನನಗೆ ಬೇಕಾದದ್ದನ್ನು ನೀನು ಕೊಡು, ನನ್ನ  ಬದುಕಿನ ಹಸೆಯಲ್ಲಿ ನೀನು ಇಣುಕಬೇಡ,  ನನ್ನ  ಈ ಮನೋಭೂಮಿಕೆಯಲ್ಲಿ ಅಂತರ್ಗತವಾಗಿರುವ ನನ್ನ  ಸ್ವಗತಗಳು  ವಾಸ್ತವವಾಗಿಯೂ ಲಹರಿಯಾಗಿಯೂ ಹರಿಯಲಿ ಅದನ್ನು ನಿಯಂತ್ರಿಸಬೇಡ  ನನ್ನ ಅವಕಾಶಗಳಿಗೆ  ನೀನು ನನೆಯಾಗಬೇಡ  ಬಿಟ್ಟುಬಿಡು ದಾರಿಯನ್ನು    ಎಂಬುದನ್ನು,ದೈನ್ಯವಾಗಿ ಹೇಳದೆ ದರ್ಪದಿಂದ  ಆರ್ಭಟಿಸಿಯೂ ಕೇಳದೆ  ನಿಷ್ಟುರವಾಗಿಯೇ ಅದೂ  ಕಟುವಲ್ಲದ ಗಾಂಭೀರ್ಯ ಹಾಗು ಮೃದುಹಾಸದಲ್ಲಿ   ನಗೆ,ಜಗ, ಮನ ಎಂಬ ಮೂರು ಪದಗಳ ಮೂಲಕ ಕೇಳಿರುವುದು ಅವರ ಸೌಧರ್ಮಿಕೆಯನ್ನು ಸೂಚಿಸುತ್ತದೆ.

    ಸಮಾಜದ ಹಿಡಿತ ಇಲ್ಲಿ ಅಡಿಗರಿಗೆ ಬಂಗಾರದ ಸಂಕೋಲೆಯಂತೆ ಕಂಡಿದೆ.  ಆ ಭಾವವನ್ನು   “ತೊಡಿಸ ಬರಲು ಬೇಡ ನಿನ್ನ ಹೊನ್ನ ಸಂಕೋಲೆಯ”  ಎಂಬ ಮಾತಿನ ಮೂಲಕ ಹೇಳಿದ್ದಾರೆ. ಹೊಗಳಿ ಹೊಗಳಿ ಹೊನ್ನ ಶೂಲಕ್ಕೆ ಏರಿಸಿದರು ಎಂಬಂತೆ   ಹೊಗಳಿಯೇ ಬಂಗಾರದ ಸರಪಳಿ ತೊಡಿಸಿ ನನ್ನನ್ನು ಬಂಧಿಯಾಗಿಸಬೇಡ  ನನ್ನ ಭಾವಭಿತ್ತಿಗೆ ನಿನ್ನ  ನಿರ್ಧಾರವನ್ನು  ಹೇರುವುದು ನಿನ್ನ  ಬಟ್ಟೆಯನ್ನು  ನನಗೆ ಬಲವಂತವಾಗಿ ತೊಡಿಸಿದಂತೆ, ಹಾಗಾಗಿ ಬಲವಂತವಾಗಿ  ಯಾವುದನ್ನೂ ಹೇರಿ ನಂತರಾಗುವ ಅವ್ಯವಸ್ಥೆಯನ್ನು ಕಂಡು ಮರುಗುವ ನಿನ್ನ ಮಾತುಗಳು ನನಗೆ ದಯೆ ಎಂಬ ಸಾಲವನ್ನು ಹೊರಿಸಿದಂತೆ.  ನನಗೆ ಆ ಸಾಲದ ಹೊರೆ ಬೇಡ   ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.  ಇಲ್ಲಿ ಅಡಿಗರು ಸಾಮಾಜಿಕರನ್ನು ಸ್ವಹಂ ಇಲ್ಲದ ಸ್ವಾಭಿಮಾನಿಗಳಂತೆ  ಕಂಡಿರುವುದು ವಿಶೇಷ.  ಹಾಡು- ಪಾಡು, ಕತೆ- ವ್ಯಥೆಗಳಲ್ಲಿ  ಮೂಗು ತೂರಿಸುವ  ಸಮಾಜಭೈರವನ  ಅಧಿಕಪ್ರಸಂಗವನ್ನು  ಇಲ್ಲಿ ಧಿಕ್ಕರಿಸಿದ್ದಾರೆ.

    ಸಮಾಜದಲ್ಲಿ ಇರುವ ಮೂಢನಂಬಿಕೆ ಇಲ್ಲಿ ಕವಿಗೆ ಬಿಕ್ಕಟ್ಟು ಅನ್ನಿಸಿದೆ. ಅಂಥ  ಇಕ್ಕಟ್ಟಿನ ಹಂದರವನ್ನು ಆಕರ್ಷಣೀಯವಾಗಿ  ನಯವಾಗಿ ಹೆಣೆಯದಿರು  ಸಾಮಾಜಿಕರನ್ನು ಉಪಾಯದಲ್ಲಿ ಅದರಲ್ಲಿ ಸಿಕ್ಕು ತೊಳಲುವಂತೆ ಮಾಡದಿರು . ಇಹಲೋಕ ಪರಲೋಕವೆಂಬ ಮಾತೇ ಬೇಡ  ನೋಡದ ಪರಲೋಕದ ಆಕಾಂಕ್ಷೆಗೆ  ಇರುವ ಬನದುಕನ್ನು ವ್ಯರ್ಥಮಾಡಬೇಕೆ?  ಇಂಥ ನಯವಾದ  ದಿಗ್ಬಂಧಗಳ ಹೇರಿಕೆಯನ್ನು ನಿಲ್ಲಿಸಿಬಿಡು. ಮೊದಲಿ ಇರುವ ಈ ಲೋಕದ ಬದುಕಲ್ಲಿ ಅವರವರ  ಇಚ್ಛೆಯಂತೆ ಬದುಕಬಿಡು ಎನ್ನುತ್ತಾರೆ.  “ಬಿಟ್ಟು ಬಿಡು ನನ್ನ ಮಾತ್ರ ನನ್ನೆದೆಯ ನಚ್ಚಿಗೆ:”  ಎಂಬಲ್ಲಿ ಸಂಪ್ರದಾಯ ಮತ್ತು ಮೌಢ್ಯತೆಯ ಬಲೆಯಲ್ಲಿ  ಸಮಷ್ಟಿಯನ್ನು ಬಂಧಿಸದಿರು  ಎಂದಿದ್ದಾರೆ. ಈ ಸಾಲುಗಳಲ್ಲಿ ಸ್ವೇಚ್ಛೇ ಇರಬೇಕು ಸ್ಚೇಚ್ಛಾರವಲ್ಲ ಎಂಬ ಸೂಕ್ಷ್ಮವೂ     ಸುಳಿ ಮಿಂಚಿನಂತೆ ಮಾಯವಾಗುತ್ತದೆ.  ಆದ್ದರಿಂದಲೇ “ಎದೆಯ ನಚ್ಚಿಗೆ” ಮೊದಲಾದ ಪದ ಬಳಸುತ್ತಾರೆ.  ಹಾಗೊಂದು ವೇಳೆ ಅವರರಿಗೆ ಸ್ವೇಚ್ಛಾಚಾರದ  ಅಹಂ ಇದ್ದಿದ್ದರೆ  “ಎದೆಯ ಕೆಚ್ಚಿಗೆ” ಎನ್ನುತ್ತಿದ್ದರೇನೋ?….. ಅನುಭವಗಳ  ನೈಜತೆ, ತೀವ್ರತೆ, ಭಾವಗಳ ನಾವೀನ್ಯತೆ,ಶಬ್ದಗಳ ಸೌಂದರ್ಯ ಮತ್ತು ಸಾಮರ್ಥ್ಯದಿಂದ ಅಡಿಗರ ಕವಿತೆಗಳು ಯಾವತ್ತೂ ಕಳೆಗಟ್ಟುತ್ತವೆ.

    ವಿಶ್ವಮಾನವತೆಯೂ ಇಲ್ಲಿದೆ

    ಕುವೆಂಪು ಹೇಳುವ “ವಿಶ್ವಮಾನವತೆಯೂ ಇಲ್ಲಿದೆ. “ಕಟ್ಟುವೆವು ನಾವು ಹೊಸ ನಾಡೊಂದನು” ಎಂಬ ಅವರದೇ ಮಾತಿನಂತೆ ಇಲ್ಲಿ ಮನಸ್ಸು ಅನ್ನುವ ಮಲ್ಲಿಗೆ   ಪಾತಾಳದ ಅಂಚಿನಿಂದ ದಿಗಂತದಾಚೆಗೂ ಮುಳುಗಿ , ತೇಲಿ ವಿಭ್ರಮಿಸಬೇಕು  ತಾರೆಗಳ ಲೋಕವನ್ನೂ ಇಣುಕಾಡಿ   ಸೌಸವ ಬೀರಿ  ಅದರ ಒಳಗುಟ್ಟನ್ನು ಅರಿತುಬರಬೇಕು ಬ  ಎಂಬ ಹಂಬಲವನ್ನು  ಇಲ್ಲಿ ಉತ್ಕಟವಾಗಿ ತೋರಿಸಿದ್ದಾರೆ.   ಅಡಿಗರ ಅಡಿಗಡಿಯ ವಿಶಾಲ ಚಿಂತ ನೆಯನ್ನು ಇಲ್ಲಿ ನೋಡಬಹುದು.  ಆದರ ಇಲ್ಲಿ  ಸಮಾಜಭೈರವ ಅಂಥ ಆಸೆಗಳಿಗೆ  ಆಘಾತವನ್ನು ಉಂಟುಮಾಡುತ್ತಾನೆ ಎಂಬ ವಿಷಾದ ವ್ಯಕ್ತ ಪಡಿಸಿದ್ದಾರೆ. ಇಷ್ಟ್ಟಾದರೂ ಸಮಾಜಭೈರವನ ಬಗ್ಗೆ ಕಿಂಚಿತ್ ದುರಾಲೋಚನೆ ಮಾಡದೆ  ತಾಳ್ಮೆ ವಹಿಸಿ  ಸಮಾಜಿಕರಿಗೂ ವಿವೇಕಯುತರಾಗಬೇಕು ಎನ್ನುತ್ತಾರೆ.  “ನೀರಗುಳ್ಳೆ ಕುಣಿದು ಕುಣಿದು ಒಡೆಯಲಿ” ಎಂಬ ಮಾತು ಓದುಗರನ್ನು ಅರ್ಥಧ್ವನಿಯಲ್ಲಿ ಬಂಧಿಗಳನ್ನಾಗಿಸುತ್ತದೆ.  ಬದುಕು ಮೂರು ನಿಮಿಷವೋ? ನೂರು ವರುಷವೋ ? ಆದರೆ ಬದುಕು ಮಾತ್ರ ಅಮೂಲ್ಯ ಅಂಥ ಬದುಕಿನ  ಸವಿಯನ್ನು ಇಂಚಿಂಚಾಗಿ ಅನುಭವಿಸಬೇಕು. ಬದುಕೆಂಬ ಬಣ್ಣದೋಕುಳಿಯಲ್ಲಿ ನಾನು ಮಿಂದೇಳಬೇಕು ಪ್ರತಿಬಣ್ಣದಲ್ಲೂ  ನಾನು ಹೇಗೆ ಕಾಣಬಲ್ಲೆ ಎಂಬ ಕುತೂಹಲ ಅಡಿಗರಿಗೆ ಇದೆ ಹಾಗಾಗಿ ಅದನ್ನು ನೋಡಿಯೇ ಸಿದ್ಧ ಎಂಬ ಸಂಕಲ್ಪವನ್ನು ಹೊಂದಿದ್ದಾರೆ. . ಅಂದರೆ ಬದುಕಿನ ರಸಘಟ್ಠಗಳನ್ನು  ಅನುಭವಿಸಿಯೇ ಸಿದ್ಧ ಅದಕ್ಕೆ ಸಮಾಜ ಭೈರವ ನೀನು ಕೊಡಲಿ  ಪೆಟ್ಟಾಗದಿರು ಎನ್ನುತ್ತಾರೆ.

      “ಬಂದ ಯಾತ್ರಿ ನಿಲ್ಲಲಾರ”  ಎಂಬ ಪದಗಳ ಮೂಲಕ  ಅಡಿಗರು ಅಧ್ಯಾತ್ಮದ ಹೊಸ್ತಿಲಲ್ಲಿ ನಿಂತು ಇಲ್ಲಿ ಬರುವ ಸಾಮಾಜಿಕರು ಅನ್ನುವ ಬಾವ ಜೀವಿಗಳು ಪ್ರಪಂಚದ ನಿತ್ಯ ವಾಸಿಗಳಲ್ಲ . ತಮ್ಮ ಬಾಳ್ವೆ ಎಂಬ ಯಾತ್ರೆ ಮುಗಿದ ನಂತರ ಇಲ್ಲಿ  ಅರೆಕ್ಷಣವೂ ನಿಲ್ಲರು. ಅಂಥ ನಶ್ವರ ಬದುಕಲ್ಲಿ  ನಿನ್ನದೇನು ತಗಾದೆ ಬುಡು ದಾರಿಬಿಡು ಸಮಾಜ  ಭೈರವ ಮತ್ತೆ ಅಡ್ಡಿ ಮಾಡಬೇಡ ಎನ್ನುತ್ತಾರೆ.ಸಮಾಜ ಶಾಶ್ವತವೇ ವಿನಃ  ಸಾಮಾಜಿಕ  ಅಲ್ಲ ಎನ್ನುತ್ತಾರೆ.

     ಸಾಮಾಜಿಕ ರಾಜಕೀಯ, ಆರ್ಥಿಕ , ಬೌದ್ಧಿಕ, ,  ಕೆಲವೊಮ್ಮೆ ಸಾಂಸ್ಕೃತಿಕ  ಶಕ್ತಿಗಳು  ಮಾನವನನ್ನು  ಶೋಷಣೆಗೆ ಗುರಿ ಮಾಡಬಾರದು.  ಒಂದು ವೇಳೆ ಅದು ಹಿಡಿತಕ್ಕೆ ಬಂದರೆ ಅದು ಸಮಾಜ ಭೈರವನ  ಅಸ್ತ್ತಿತ್ವದ ಪ್ರತೀಕ ಎನ್ನುತ್ತಾರೆ. ನಮ್ಮದು ಹೇಗಿದ್ದರೂ ಪ್ರಜಾಪ್ರಭುತ್ವ ರಾಷ್ಟç ಹಾಗಾಗಿ ವ್ಯಕ್ತಿಗತ ಮಾನ ಸಮ್ಮಾನಕ್ಕೂ ಆದ್ಯತೆ ಇರಲಿ ಎಂಬುದು ಕವಿಯ ಪ್ರಧಾನ ಆಶಯವಾಗಿದೆ

     ಅಣುವಿನಲ್ಲೂ ಆ ಮಹತ್ತು ಬಿತ್ತದಂತೆ ಮಲಗಿದೆ ಅಣುವೆಂದು ನಿರ್ಲಕ್ಷ್ಯ ಬೇಡ  ಅಣುವಿನಲ್ಲೂ ಲೋಕವನ್ನುದ್ಧರಿಸಬಹುದಾದ  ಚೈತನ್ಯ ಶಕ್ತಿ  ಇದ್ದೇ ಇರುತ್ತದೆ. ಅಂಥ ಗೌಣವಾದ ಶಕ್ತಿ  ಗಾಳಿ , ಮಳೆ ಬೆಳಕಿಗೆ ತೆರವಾದರೆ  ಅದರಲ್ಲಿಯೂ ಸಮಷ್ಟಿಗೆ ಉಪಯೋಗವಾದೀತು ಎಂಬ ಸದಾಶಯವನ್ನು ವ್ಯಕ್ತಪಡಿಸಿ  ಅದರ ಶ್ರೇಯಸ್ಸಿನ ಲೆಖ್ಖಣಿಕೆ ನಿನ್ನ ಸಿವುಡಿಗೇ ಬರುತ್ತದೆ  ತತ್ಫಲವಾಗಿ  ಸಮಾಜಭೈರವ ಬಲವಂತ ದಯವಂತ ಅನ್ನುವ ಶ್ರೇಯಸ್ಸು ನಿನಗೇ ಲಭಿಸುತ್ತದೆ  ಎಂಬ ಸಂದೇಶವನ್ನೂ ಕೊಡುತ್ತಾರೆ.

    ಹುಲ್ಲಿಗಿಲ್ಲ, ಕಳ್ಳಿಗಿಲ್ಲ, ಹೂವಿಗೇಕೆ ಸೌಸವ ಎನ್ನಬೇಡ ಭೈರವ   ಎಲ್ಲವನ್ನು ಒಂದೇ ತಕ್ಕಡಿಗಿಟ್ಟು ತೂಗಲೂಬೇಡ  ಮನಸ್ಸು ಅನ್ನುವದು ಅಣುವೂ ಹೌದು ಅನಲವೂ ಹೌದು  ಹಾಗಾಗಿ ತಮಷ್ಟಕ್ಕೆ ತಮ್ಮ ತನವನ್ನು  ತೀರಿಸಿಕೊಂಡೇ ನಯಜವಾಗಿ ಯಾವುದೇ ಕೃತ್ರಿಮತೆ ಇಲ್ಲದಂತೆ ಬದುಕುವ ಅವಕಾಶವಿದೆ ಅದಕ್ಕೆ ಮುಳ್ಳುಗಂಟಿಯಾಗಬೇಡ. ಆ ಮನಸ್ಸೆಂಬ ಹೂವನ್ನು ಪದೇ ಪದೇ ಹಿಂಸಿಸಿ ಕಾಂತಿಯನ್ನು ಮಸುಕು ಮಾಡಬೇಡ ಎಂದು  ಪ್ರತಿಭಟಿಸುತ್ತಾರೆ.

    ಅನುಭವ ಶೂನ್ಯವಾಗಿ ಬಂದ ಮನ ತನುವನ್ನು ಇಲ್ಲಿ ಒಗ್ಗಿಸಿಕೊಂಡು, ಅನುಭವವನ್ನು  ಒಳಗುಮಾಡಿಕೊಂಡು  ಕಡೆಗೊಮ್ಮೆ ಖಾಲಿ ಒಡಲನ್ನು  ಬಿಟ್ಟು ಅನುಭವವನ್ನು ಮಾತ್ರ ಹೊತ್ತು   ನಿರ್ಗಮಿಸುವ ತನಕ ನೀನು ಯಾಜಮಾನ್ಯ ತೋರಿಸಬೇಢ ಸ್ವಚ್ಛಂದಕ್ಕೆ ಬಿಟ್ಟು ಬಿಡು ಎನ್ನುತ್ತಾರೆ. .  ಚಿಂತನಶೀಲತೆ , ಸಂಕೀರ್ಣತೆ ,  ಭ್ರಷ್ಟತೆಯ ಕುರಿತ ಆಕ್ರೋಶ ವಿಡಂಬನೆ,  ಅಡಿಗರ ಈ ಪದ್ಯದ ವಿಶೇಷತೆ. ಕವಿತೆಯನ್ನು ಓದುವಾಗ    ನಿರಾಶೆ ಯಿಂದ  ಅಡಿಗರು ಮೆತ್ತಗಾದರೇನೋ  ಅನ್ನುವಷ್ಟರಲ್ಲಿ ಮರುಸಾಲಿನಲ್ಲಿಯೇ  ಬತ್ತದ ಜೀವನೋತ್ಸಾಹವನ್ನು ತೋರಿಸಿ ಓದುಗನನ್ನೂ ಉತ್ಸಾಹಿಯಾಗಿಸುತ್ತಾರೆ. ಪು.ತಿ.ನರಸಿಂಹಾಚಾರ್  ಅವರು ಅಡಿಗರ  ಕಾವ್ಯವನ್ನು “ಶಬ್ದದೊಳಗಣ ಶಬ್ದದಂತೆ” ಎನ್ನುತ್ತಾರೆ.  ಕಾವ್ಯದ ಆತ್ಮ ಕವನದಲ್ಲಿಯೇ ಹುದುಗಿ ಹೋಗಿರುತ್ತದೆ. ಅರ್ಥಸಹಿತವಾದ  ಪದಸಮೂಹದಿಂದ ಕಾವ್ಯದ ಆತ್ಮವನ್ನು ದರ್ಶಿಸುವ ಕೌಶಲ್ಯ ಮಾಂತ್ರಿಕ ಎನ್ನಬಹುದು.

    ಯಾವುದೇ ಕಟ್ಟು ಪಾಡಿಗೆ ಒಳಗಾಗದೆ  ಬದುಕುವ ಹಂಬಲ ಕವಿಯಲ್ಲಿದೆ.  ಅಪ್ಪಟ ಪ್ರಜಾಪ್ರಭುತ್ವ ವಾದಿಯಾಗಿ ಸ್ವಾತಂತ್ರ್ಯವನ್ನು  ಹತ್ತಿಕ್ಕುವ ಸರ್ವಾಧಿಕಾರಿ ಧೋರಣೆಯನ್ನು ಇಲ್ಲಿ   ನಯವಾಗಿಯೇ ಧಿಕ್ಕರಿಸಿದ್ದಾರೆ ಎನ್ನಬಹುದು. ವೈ ಎನ್ಕೇಯವರು  ಅಡಿಗರ ಪದ್ಯವನ್ನು ಒಮ್ಮೆಓದಿ   “ಅಡಿಗ ಫಾರ್ ಆಲ್ ಅಕೇಷನ್ಸ್” ಎಂದಿದ್ದು ಅಕ್ಷರಶಃ ಸತ್ಯವಾಗಿದೆ. ಹೌದು  ಎಲ್ಲಾ ಸಂದರ್ಭಗಳಿಗೂ ಅಡಿಗರು ಅಡಿಗಡಿಗೆ ಇದ್ದಾರೆ.   ಒಟ್ಟಾರೆಯಾಗಿ  ಗೋಪಾಲಕೃಷ್ಣ ಅಡಿಗರು  ಇಲ್ಲಿ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಆಯಾಮಗಳಲ್ಲಿ   ಸಮಾಜವನ್ನು ನೋಡಿ ಜವಾಬ್ದಾರಿಯನ್ನು ಓರ್ವ ಕವಿಯಾಗಿ ನಿಭಾಯಿಸಿದ್ದಾರೆ  ಎಂದರೆ ಅತಿಶಯೋಕ್ತಿಯಲ್ಲ. 

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಗೆ ಕೇಂದ್ರ ಸರ್ಕಾರ ಅನುಮೋದನೆ

    CHITRADURGA FEB 16
    ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಲು ಕೇಂದ್ರ ಸರ್ಕಾರ ನಿನ್ನೆ ನಡೆದ ಹೈಪವರ್ ಕಮಿಟಿಯಲ್ಲಿ ಅನುಮೋದನೆ ನೀಡಿದೆ. ರಾಷ್ಟ್ರೀಯ ಯೋಜನೆಯ ನೆರವಿನಿಂದ ರಾಜ್ಯಕ್ಕೆ ಸುಮಾರು ರೂ.12,500 (ಹನ್ನೇರೆಡುವರೆ) ಸಾವಿರ ಕೋಟಿಯ ನೆರವು ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ತರಳುಬಾಳು ಬೃಹನ್ಮಠದ ವತಿಯಿಂದ ಬುಧವಾರ ಗುರುಶಾಂತೇಶ್ವರ ದಾಸೋಹ ಭವನದಲ್ಲಿವ ಆಯೋಜಿಸಿದ್ದ ತರಳುಬಾಳು ಹುಣ್ಣಿಮೆ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
    ಭದ್ರಾ ಮೇಲ್ದಂಡೆ ಯೋಜನೆಯು ರಾಷ್ಟ್ರೀಯ ಯೋಜನೆಯಾದ ಏಕೈಕ ಯೋಜನೆ ಇದಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ಮಧ್ಯಕರ್ನಾಟಕದ ನೀರಾವರಿ ಯೋಜನೆಗೆ ತುಂಬಾ ಸಹಕಾರಿಯಾಗಿದ್ದು, ಇದರಿಂದ ಅಂತರ್ಜಲ ಹೆಚ್ಚಳದ ಜೊತೆಗೆ ನೀರನ್ನು ಒದಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

    ಭದ್ರಾ ಮೇಲ್ದಂಡೆ ಯೋಜನೆಗೆ 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. ಇದರ ಜೊತೆಗೆ ಕೆರೆಗಳ ತುಂಬಿಸುವ ಯೋಜನೆಗೆ ಕ್ರಮಕೈಗೊಂಡಿದ್ದೇವೆ. ಹಿಂದಿನ ಸರ್ಕಾರ ಕೆರೆಗಳಿಗೆ ನೀರು ಭರ್ತಿ ಮಾಡುವ ವಿದ್ಯುತ್ ಶುಲ್ಕವನ್ನು ರೈತರೇ ಪಾವತಿಸಬೇಕು ಎಂದು ತಿಳಿಸಲಾಗಿತ್ತು. ಸಿರಿಗೆರೆ ಗುರುಗಳು ಹೇಳಿ ಈ ಹಣವನ್ನು ಸರ್ಕಾರದಿಂದಲೇ ಭರಿಸಬೇಕು ಎಂದು ಹೇಳಿದ ತಕ್ಷಣವೇ ಆ ಆದೇಶವನ್ನು ಬದಲಿಸಲಾಗಿದೆ ಎಂದರು.

    ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಎದುರಾಗಿದ್ದ ಅನೇಕ ಅಡ್ಡಿ ಆತಂಕಗಳನ್ನು ಎಲ್ಲ ನಿವಾರಣೆ ಮಾಡಲಾಗಿದೆ. ಅಜ್ಜಂಪುರ ಟನಲ್‍ನಿಂದ ವಿವಿಸಾಗರಕ್ಕೆ ನೀರು ಹರಿಸಲಾಗಿದ್ದು, ವಿವಿಸಾಗರ ನಿರ್ಮಾಣ ಮಾಡಿದಾಗಿನಿಂದ ಎರಡು-ಮೂರು ಬಾರಿ ತುಂಬಿದೆ. ಭೂಮಿ ತಾಯಿಗೆ ಹಸಿರು ಸೀರೆ ಉಡಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಪ್ರಧಾನಿ ಮೋದಿ ಅವರು ಈಗಾಗಲೇ ಕೃಷಿ ಸಿಂಚಾಯಿ, ಕಿಸಾನ್ ಸಮ್ಮಾನ್ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಹೇಳಿದರು. ನಾವುಗಳು ಜನಪರವಾಗಿದ್ದು, ದುಡಿಯುವ ವರ್ಗವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ದುಡಿಮೆಯೇ ದೊಡ್ಡಪ್ಪ, ಕಾಯಕ ಸಮಾಜ ದೇಶ, ನಾಡು ನಿರ್ಮಾಣ ಮಾಡಿದಾಗ ಅಭಿವೃದ್ಧಿ ಸಾಧ್ಯ. ನವಕರ್ನಾಟಕದಿಂದ ನವಭಾರತ ನಿರ್ಮಾಣ ನಮ್ಮ ಘೋಷಣೆಯಾಗಿದೆ ಎಂದು ಹೇಳಿದರು.

    ವೀರ ಮರಣ ಹೊಂದಿದ ಸೈನಿಕರ ಪತ್ನಿಯರಿಗೆ ಸನ್ಮಾನ: ಸೈನಿಕರು ವೀರ ಮರಣ ಹೊಂದಿದ ಬಗ್ಗೆ ವಿವರಣೆ ನೀಡಲಾಗುತ್ತಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾದರು.
    ವೀರ ಮರಣ ಹೊಂದಿದ ಸೈನಿಕರ ಪತ್ನಿಯರಿಗೆ ಶ್ರೀಮಠದಿಂದ ಸನ್ಮಾನಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭಾವುಕರಾದರು. ವೀರಮರಣ ಹೊಂದಿದ ಸೈನಿಕರ ಪತ್ನಿಯರಿಗೆ ಸಿರಿಗೆರೆ ತರಳುಬಾಳು ಬೃಹನ್ಮಠದಿಂದ ಸನ್ಮಾನ ಮಾಡಲಾಯಿತು. ತಲಾ ರೂ.50 ಸಾವಿರ ರೂಪಾಯಿಗಳಂತೆ ಒಟ್ಟು ಒಂಭತ್ತು ಮಂದಿಗೆ ಶ್ರೀಮಠದ ವತಿಯಿಂದ ಚೆಕ್ ವಿತರಿಸಲಾಯಿತು.
    ಈ ಸಂದರ್ಭದಲ್ಲಿ ವೀರ ಮರಣ ಹೊಂದಿದ ಸೈನಿಕರ ಪತ್ನಿಯರು ಕುಂದುಕೊರತೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಿರಿಗೆರೆ ಶ್ರೀಗಳಿಗೆ ನೀಡಿದರು. ಈ ಮನವಿ ಪತ್ರವನ್ನು ಸಿರಿಗೆರೆ ಶ್ರೀಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದರು.
    ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್, ರೈತರಿಗಾಗಿ ಕೆಲಸ ಮಾಡುವ ಉದ್ದೇಶದಿಂದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೇ ಕೇಳಿ ಅರಣ್ಯ ಬದಲಾಗಿ ಕೃಷಿ ಇಲಾಖೆಯನ್ನು ಪಡೆದು ರೈತರ ಸೇವೆ ಮಾಡಲು ಅವಕಾಶ ಪಡೆದೆ. ರೈತರ ಸಮಸ್ಯೆಯನ್ನು ಆಲಿಸಿ, ರೈತರ ಕಣ್ಣೀರು ಒರೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.

    ರೈತರ ಮಕ್ಕಳ ಬಿ.ಎಸ್.ಸಿ ಕೃಷಿ ಪದವಿ ವ್ಯಾಸಂಗಕ್ಕಾಗಿ ಶೇ.40 ರಿಂದ ಶೇ.50ಕ್ಕೆ ಸೀಟು ಹೆಚ್ಚಳ ಮಾಡಲಾಗಿದೆ. ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಮುಖ್ಯಮಂತ್ರಿ ರೈತವಿದ್ಯಾನಿಧಿ ಯೋಜನೆ ಸ್ಥಾಪನೆ ಮಾಡಿ ರೈತರ ಮಕ್ಕಳಿಗೆ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.

    ಜಲ ಸಂರಕ್ಷಣವಾದಿ ಮತ್ತು ಪರಿಸರವಾದಿ ರಾಜೇಂದ್ರ ಸಿಂಗ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಹೇರಳವಾದ ಸಂಪನ್ಮೂಲವಿದ್ದು, ಅದು ಸಂಪೂರ್ಣವಾಗಿ ಸದುಪಯೋಗವಾಗಬೇಕು. ಕರ್ನಾಟಕ ಒಂದು ಸುಂದರವಾದ ರಾಜ್ಯ. ಇಲ್ಲಿ ವಿಶೇಷವಾಗಿ ಪ್ರಕೃತಿಯನ್ನು ಸಂರಕ್ಷಣೆ ಮಾಡುವಂತಹ ವಿಶ್ವವಿದ್ಯಾಲಯಗಳನ್ನು ತೆರೆಯಬೇಕು. ಅದರಲ್ಲೂ ನೀರಿನ ಸಂರಕ್ಷಣೆ ಮತ್ತು ಅದರ ಉಪಯೋಗದ ಕುರಿತು ಮಾಹಿತಿಯನ್ನು ಒಳಗೊಂಡ ಪರಿಣಿತರನ್ನು ತಯಾರು ಮಾಡುವ ಕೆಲಸ ರಾಜ್ಯದ ಮುಖ್ಯಮಂತ್ರಿಗಳಿಂದ ಆರಂಭವಾಗಬೇಕು. ಇದೊಂದು ಅದ್ಭುತವಾದ ಕೆಲಸವಾಗಿದ್ದು, ಇದರು ಬೇರೆ ರಾಜ್ಯದ ಮುಖ್ಯಮಂತ್ರಿಗಳಿಗೆ ಇದು ಮಾದರಿಯಾಗಬೇಕು. ಈ ಹಿಂದೆ ಚನ್ನಗಿರಿಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಸಮಾರಂಭದಲ್ಲಿ ಕೆರೆಯಿಂದ ಕೆರೆಗೆ ನೀರು ತುಂಬಿಸುವ ಯೋಜನೆ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದು, ಅದು ಅತ್ಯುತ್ತಮವಾದ ಕೆಲಸವಾಗಿದ್ದು, ರಾಜ್ಯ ಸರ್ಕಾರವೇ ಜಲ ವಿಶ್ವವಿದ್ಯಾಲಯವನ್ನು ಆರಂಭ ಮಾಡಬೇಕು ಎಂದು ಮನವಿ ಮಾಡಿದರು.

    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು. ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭದ ನೇತೃತ್ವದ ವಹಿಸಿದ್ದರು.

    ಕಾರ್ಯಕ್ರಮದಲ್ಲಿ ಕೈಗಾರಿಕಾ ಸಚಿವ ಮುರುಗೇಶ್‍ನಿರಾಣಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ್, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ, ಹೊನ್ನಳಿ ಮಾಜಿ ಶಾಸಕ ಶಾಂತನಗೌಡ, ನೀರಾವರಿ ನಿಗಮ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಸಪ್ಪ ಗುಂಗೆ, ಜಗಳೂರು ಶಾಸಕ ಎಸ್.ವಿ.ರಾಮಚಂದ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿದೇವಿ, ದಾವಣಗೆರೆ ವಿವಿ ಕುಲಪತಿ ಪ್ರೊ.ಶರಣಪ್ಪ ಹಲಸೆ ಸೇರಿದಂತೆ ಮತ್ತಿತರರು ಇದ್ದರು.

    ಪದವಿ ಪರೀಕ್ಷೆ: ಒಂದು ತಿಂಗಳು ಮುಂದೂಡಲು ವಿವಿಗಳಿಗೆ ಸೂಚನೆ

    BENGALURU FEB 16

    ಕೊರೋನಾ ಮತ್ತು ಓಮೈಕ್ರಾನ್ ಸೋಂಕು ಹೆಚ್ಚಳ ಹಾಗೂ ಅತಿಥಿ ಉಪನ್ಯಾಸಕರ ಮುಷ್ಕರದಿಂದಾಗಿ ಪಾಠ-ಪ್ರವಚನಗಳು ಮುಗಿಯದಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಒಳಪಡುವ ಎಲ್ಲಾ ವಿಶ್ವವಿದ್ಯಾಲಯಗಳ ಸೆಮಿಸ್ಟರ್ ಪರೀಕ್ಷೆಯನ್ನು ಒಂದು ತಿಂಗಳ ಕಾಲ ಮುಂದೂಡುವಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್ ಅವರು ವಿ.ವಿ.ಗಳ ಕುಲಸಚಿವರುಗಳಿಗೆ ಸೂಚಿಸಿದ್ದಾರೆ.

    ಈ ಬಗ್ಗೆ ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, `ಕೆಲವು ವಿ.ವಿ.ಗಳು ಈಗಾಗಲೇ ಸೆಮಿಸ್ಟರ್ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದವು. ಆದರೆ, ಮೇಲೆ ಉಲ್ಲೇಖಿಸಿದ ಕಾರಣಗಳನ್ನು ನೀಡಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಪರೀಕ್ಷೆಯನ್ನು ಮುಂದೂಡುವಂತೆ ಕೋರಿದ್ದರು. ಹೀಗಾಗಿ, ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನಿಸಿ, ಪರೀಕ್ಷೆಯನ್ನು ಮುಂದೂಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

    402 ಲೆಕ್ಕ ಪರಿಶೋಧಕರ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಕೆ

    BENGALURU FEB 15

    ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ಖಾಲಿ ಇರುವ 402 ಲೆಕ್ಕ ಪರಿಶೋಧಕರ ಹುದ್ದೆಗಳ ನೇಮಕಾತಿಗಾಗಿ ಪ್ರಸಾವನೆ ಸಲ್ಲಿಸಲಾಗಿದೆ. ಕೋವಿಡ್‌ ನಿಂದಾಗಿ ಕಳೆದ ಎರಡು ವರ್ಷದಿಂದ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿರಲಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್‌ ಹೇಳಿದರು.

    ಸಹಕಾರಿ ಲೆಕ್ಕಪರಿಶೋಧನಾ ಇಲಾಖೆಯನ್ನು ಬಲಪಡಿಸಲು ಇಲಾಖೆ ಕೈಗೊಂಡಿರುವ ಕ್ರಮಗಳೇನು ಎಂದು ವಿಧಾನಪರಿಷತ್‌ ಸದಸ್ಯರಾದ ಭಾರತಿಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಲೆಕ್ಕ ಪರಿಶೋಧನೆ ವರದಿ ಆಧಾರದ ಮೇಲೆ ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತವೆ. ಖಾಲಿ ಇರುವ 402 ಲೆಕ್ಕ ಪರಿಶೋಧಕರ ಹುದ್ದೆಗಳ ನೇಮಕ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು.

    ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌

    ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಿಂದ ಠೇವಣಿದಾರರಿಗೆ ವಂಚನೆಯಾಗಿರುವ ಬಗ್ಗೆ ಕೈಗೊಂಡಿರುವ ಕ್ರಮಗಳೇನು ಎಂದು ವಿಧಾನಪರಿಷತ್‌ ಸದಸ್ಯರಾದ ಯು.ಬಿ.ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭಾರತೀಯ ರಿಸರ್ವ್‌ ಬ್ಯಾಂಕ್‌ ಸಲಹೆ ಮೇರೆಗೆ ಹಾಗೂ ಹೈಕೋರ್ಟ್‌ ನಿರ್ದೇಶನದ ಪ್ರಕಾರ ಬ್ಯಾಂಕಿನ ಆಡಳಿತ ಮಂಡಳಿಯನ್ನು ರದ್ದುಗೊಳಿಸಿ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

    24 ನಿರ್ದೇಶಕರು ಮತ್ತು ಅಧ್ಯಕ್ಷರ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. 2014-15 ರಿಂದ 2018-19ರವರೆಗಿನ ಲೆಕ್ಕಪತ್ರಗಳನ್ನು ಮರುಲೆಕ್ಕಪರಿಶೋಧನೆಗೆ ಆದೇಶಿಸಲಾಗಿದೆ. ‌ಪ್ರಕರಣದ ಕುರಿತು ಸಿಐಡಿ ತನಿಖೆ ಕೂಡ ನಡೆಯುತ್ತಿದೆ. ಬ್ಯಾಂಕ್‌ ಪುನಶ್ಚೇತನಗೊಳಿಸುವ ಕುರಿತು ಸಹಕಾರ ಇಲಾಖೆ, ಆರ್‌ ಬಿಐ ಅಧಿಕಾರಿಗಳು ಪ್ರತಿ 15 ದಿನಕ್ಕೊಮ್ಮೆ ಸಭೆ ನಡೆಸಿ ಪರಾಮರ್ಶಿಸುತ್ತಿದ್ದಾರೆ. ಸಾಲ ವಸೂಲಾತಿಗೆ ಕ್ರಮವಹಿಸಲಾಗುತ್ತಿದೆ. ಆರೋಪಿಗಳ ಫೋಟೋವನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸುವಂತೆ ಸೂಚಿಸಲಾಗಿದೆ. ಠೇವಣಿ ಹಿಂಪಾವತಿ, ಬ್ಯಾಂಕ್‌ ಪುನಶ್ಚೇತನ ಕುರಿತಂತೆ ಫೆಬ್ರವರಿ ಅಂತ್ಯದ ವೇಳೆಗೆ ಠೇವಣಿದಾರರಿಗೆ ವರ್ಚ್ಯುವಲ್‌ ಮೂಲಕ ಮಾಹಿತಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

    ಎಪಿಎಂಸಿ

    ರಾಜ್ಯದಲ್ಲಿ ಯಾವುದೇ ಎಪಿಎಂಸಿಗಳು ನಷ್ಟದಲ್ಲಿಲ್ಲ ಹಾಗೂ ಎರಡೆರಡು ಎಪಿಎಂಸಿಗಳನ್ನು ವಿಲೀನಗೊಳಿಸುವ ಪ್ರಸ್ತಾವನೆ ಪ್ರಸ್ತುತ ಸರ್ಕಾರದ ಮುಂದೆ ಇಲ್ಲ ಎಂದು ವಿಧಾಪರಿಷತ್‌ ಸದಸ್ಯ ಕೆ.ಹರೀಶ್‌ ಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದರು. 1.50 ರೂ. ಸೆಸ್‌ ಇದ್ದಾಗ ವರ್ಷಕ್ಕೆ 625 ಕೋಟಿ ರೂ. ಹಣ ಸಂಗ್ರವಾಗುತ್ತಿತ್ತು. ಈಗ 130 ರಿಂದ 170 ಕೋಟಿ ರೂ. ಸಂಗ್ರಹವಾಗುತ್ತಿದೆ. ಸೆಸ್‌ ಕಡಿಮೆ ಮಾಡಿದ ಕಾರಣಕ್ಕೆ ಎಪಿಎಂಸಿಗಳು ನಷ್ಟದಲ್ಲಿ ಇಲ್ಲ ಎಂದರು.

    ಸಹಾಯಕ ಪ್ರಾಧ್ಯಾಪಕರ ಹುದ್ದೆ: ಮಾರ್ಚ್ 12ರಿಂದ ಪರೀಕ್ಷೆ

    BENGALURU FEB 15

    ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಮಾರ್ಚ್ 12ರಿಂದ 16ರವರೆಗೆ ಪರೀಕ್ಷೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಪ್ರವೇಶಪತ್ರವನ್ನು ಫೆ.28ರಿಂದ http://kea.kar.nic.on ಜಾಲತಾಣದಲ್ಲಿ ಡೌನ್-ಲೋಡ್ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

    ಈ ಬಗ್ಗೆ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ ಅವರು ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಅದು ಕೆಳಕಂಡಂತಿದೆ:

    ಇದರಂತೆ ಮಾರ್ಚ್ 12ರಂದು ಮಧ್ಯಾಹ್ನ 2.30ರಿಂದ 4.30ರವರೆಗೆ ಸಾಮಾನ್ಯ ಜ್ಞಾನ ಕಡ್ಡಾಯ ಪತ್ರಿಕೆ (50 ಅಂಕ), 13ರಂದು ಬೆಳಿಗ್ಗೆ 10.30ರಿಂದ 12.30ರವರೆಗೆ ಕಡ್ಡಾಯ ಕನ್ನಡ (100 ಅಂಕ), ಮಧ್ಯಾಹ್ನ 2.30ರಿಂದ 4.30ರವರೆಗೆ ಕಡ್ಡಾಯ ಇಂಗ್ಲಿಷ್ (100 ಅಂಕ) ಪರೀಕ್ಷೆ ನಡೆಯಲಿದೆ.

    ಉಳಿದಂತೆ, ತಲಾ 250 ಅಂಕಗಳುಳ್ಳ ಐಚ್ಛಿಕ ವಿಷಯಗಳ ಪರೀಕ್ಷೆ ನಡೆಯಲಿವೆ. ಇದರಂತೆ, ಮಾರ್ಚ್ 14ರಂದು ಬೆಳಿಗ್ಗೆ 10ರಿಂದ 1ರವರೆಗೆ ಕನ್ನಡ, ಉರ್ದು, ಸಸ್ಯಶಾಸ್ತ್ರ, ಭೂಗೋಳ ಮತ್ತು ಫ್ಯಾಷನ್ ಟೆಕ್ನಾಲಜಿ, 14ರ ಮಧ್ಯಾಹ್ನ 2ರಿಂದ 5ರವರೆಗೆ ರಾಜ್ಯಶಾಸ್ತ್ರ, ಮೈಕ್ರೋಬಯಾಲಜಿ ಮತ್ತು ಭೂಗರ್ಭಶಾಸ್ತ್ರ, 15ರಂದು ಬೆಳಿಗ್ಗೆ ಇತಿಹಾಸ, ಕಾಮರ್ಸ್, ಗಣಿತ ಮತ್ತು ಪ್ರಾಣಿಶಾಸ್ತ್ರ, 15ರ ಮಧ್ಯಾಹ್ನ ಅರ್ಥಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಇಂಗ್ಲಿಷ್ ಮತ್ತು ಸಮಾಜಕಾರ್ಯ, 16ರಂದು ಬೆಳಿಗ್ಗೆ ಶಿಕ್ಷಣ ಶಾಸ್ತ್ರ, ಹಿಂದಿ, ಕಂಪ್ಯೂಟರ್ ಸೈನ್ಸ್, ಕಾನೂನು ಮತ್ತು ಸ್ಟ್ಯಾಟಿಸ್ಟಿಕ್ಸ್, ಅಂದು ಮಧ್ಯಾಹ್ನ ಮ್ಯಾನೇಜ್ಮೆಂಟ್, ಬಯೋಕೆಮಿಸ್ಟ್ರಿ, ಎಲೆಕ್ಟ್ರಾನಿಕ್ಸ್ ಮತ್ತು ಸಮಾಜಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.

    ಬುಧವಾರದಿಂದ ಡಿಗ್ರಿ ಮತ್ತು ಪಿಯು ಕಾಲೇಜು ಆರಂಭ

    BENGALURU FEB 14

    ಬುಧವಾರ, ಫೆಬ್ರವರಿ 16ರಿಂದ ಪಿಯು ಮತ್ತು ಡಿಗ್ರಿ ಕಾಲೇಜುಗಳನ್ನುು ಆರಂಭಿಸಲು ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆ ತೀರ್ಮಾನಿಸಿದೆ.

    ಸಭೆಯ ನಂತರ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಈ ವಿಷಯ ತಿಳಿಸಿದರು. ಎಲ್ಲೆಲ್ಲಿ ಸಮವಸ್ತ್ರ ಕಡ್ಡಾಯವಾಗಿದಿಯೋ ಅದನ್ನು ಪಾಲಿಸಲಾಗುವುದು. ಹೈಕೋರ್ಟಿನ ಮಧ್ಯಂತರ ಆದೇಶವನ್ನು ಪಾಲಿಸಲಾಗುವುದು ಎಂದು ತಿಳಿಸಿದರು.

    ಹೈ ಕೋರ್ಟ್ ಆದೇಶದಂತೆ ಕಾಲೇಜು ಆಡಳಿತ ಮಂಡಳಿಗಳು ತೆಗೆದುಕೊಳ್ಳುವ ನಿರ್ಧಾರವನ್ನು ಜಾರಿಗೆ ತರಲು ಪೋಲೀಸ್ ಇಲಾಖೆ ಸಹಕಾರ ನೀಡಲಿದೆ ಎಂದು ಇಧೇ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಶಾಂತಿ ಭಂಗವಾಗದಂತೆ ತಮ್ಮ ಇಲಾಖೆ ಶ್ರಮಿಸಲಿದೆ ಎಂದೂ ಹೇಳಿದರು.

    ಬುಧವಾರದಿಂದಲೇ ಪದವಿ, ಎಂಜಿನಿಯರಿಂಗ್ ಕಾಲೇಜುಗಳು ಪುನಾರಂಭ

    ಸಮವಸ್ತ್ರ ವಿವಾದದ ಹಿನ್ನೆಲೆಯಲ್ಲಿ ರಜೆ ನೀಡಲಾಗಿದ್ದ ಪದವಿ, ಎಂಜಿನಿಯರಿಂಗ್, ಡಿಪ್ಲೊಮಾ ಮತ್ತು ಸ್ನಾತಕೋತ್ತರ ತರಗತಿಗಳನ್ನು ಬುಧವಾರದಿಂದಲೇ ಪುನಾರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಹೀಗಾಗಿ, ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ಬಗೆಯ ಶಿಕ್ಷಣ ಸಂಸ್ಥೆಗಳಲ್ಲೂ ಭೌತಿಕ ತರಗತಿಗಳು ಮತ್ತೆ ಆರಂಭವಾಗಲಿವೆ. ರಜೆ ಹಿನ್ನೆಲೆಯಲ್ಲಿ ಈ ಸಂಸ್ಥೆಗಳಲ್ಲಿ ಆನ್ ಲೈನ್ ತರಗತಿಗಳನ್ನು ನಡೆಸಲಾಗುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.

    Bhargavi Narayan Passes Away: ಹಿರಿಯ ಕಲಾವಿದೆ ಭಾರ್ಗವಿ ನಾರಾಯಣ್ ನಿಧನ

    BENGALURU FEB 14

    ಹಿರಿಯ ರಂಗ ಕಲಾವಿದೆ ಭಾರ್ಗವಿ ನಾರಾಯಣ್ (84) ಇಂದು ಸಂಜೆ ಸುಮಾರು 7.30ಕ್ಕೆ ನಿಧನರಾದರು. ಕಳೆದ ಕೆಲವು ದಿನಗಳಿಂದ ವಯೋ ಸಹಜ ಕಾಯಿಲೆಗೆ ತುತ್ತಾಗಿದ್ದರು.

    ಭಾರ್ಗವಿ ನಾರಾಯಣ್ ಅವರು ಅನೇಕ ಚಲನ ಚಿತ್ರಗಳು ಹಾಗೂ ಮಂಥನಾ ಮತ್ತು ಮುಕ್ತಾ ಸೇರಿದಂತೆ ಕನ್ನಡದ ಅನೇಕ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಕನ್ನಡ ನಾಟಕ ಅಕಾಡೆಮಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ.

    ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಮುನ್ನ, ಭಾರ್ಗವಿ ಅವರು ಬೆಂಗಳೂರಿನ ಇಎಸ್ಐ ಕಾರ್ಪೊರೇಶನ್ ಅಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು.

    ಭಾರ್ಗವಿ ಅವರು 4 ಫೆಬ್ರವರಿ 1938 ರಂದು ಮತ್ತು ನಾಮಗಿರಿಯಮ್ಮ ಮತ್ತು ಎಂ. ರಾಮಸ್ವಾಮಿಯವರಿಗೆ ಜನಿಸಿದರು. ಪ್ರಸಾದನ ಕಲಾವಿದ ಬೆಳವಾಡಿ ನಂಜುಂಡಯ್ಯ ನಾರಾಯಣ (ಮೇಕಪ್ ನಾಣಿ) ಭಾರ್ಗವಿ ಅವರ ಪತಿ. ಸುಜಾತಾ, ಪ್ರಕಾಶ್, ಪ್ರದೀಪ್ ಮತ್ತು ಸುಧಾ ಮಕ್ಕಳು. ಭಾರ್ಗವಿ ನಾರಾಯಣರ ಆತ್ಮಚರಿತ್ರೆ ‘ನಾನು, ಭಾರ್ಗವಿ’  2012ರಲ್ಲಿ ಬಿಡುಗಡೆಯಾಯಿತು,

    ರಾಜ್ಯಪಾಲರ ಭಾಷಣದ ಬಗ್ಗೆ ಮುಖ್ಯಮಂತ್ರಿಗಳ ಪ್ರತಿಕ್ರಿಯೆ; ಕೋವಿಡ್ ಮತ್ತು ಪ್ರವಾಹ ನಿರ್ವಹಣೆ ಕುರಿತಂತೆ ಸ್ಪಷ್ಟ ಚಿತ್ರಣ

    BENGALURU FEB 15

    ಸರ್ಕಾರ ಕೋವಿಡ್ ಮತ್ತು ಪ್ರವಾಹ ನಿರ್ವಹಣೆ ಕುರಿತಂತೆ ಕೈಗೊಂಡಿರುವ ಕಾರ್ಯಕ್ರಮಗಳ ಸ್ಪಷ್ಟ ಚಿತ್ರಣವನ್ನು ರಾಜ್ಯಪಾಲರು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿದ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದರು.

    ಮುಖ್ಯಮಂತ್ರಿಗಳು ವರ್ಷದ ಆರಂಭದಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಕಳೆದ ಒಂದು ವರ್ಷದಲ್ಲಿ ಆಗಿರುವ ಕೋವಿಡ್ ಮತ್ತು ಪ್ರವಾಹ ನಿರ್ವಹಣೆ ಕುರಿತಂತೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯಾಗಿರುವ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದ್ದಾರೆ. ಹಲವಾರು ಇಲಾಖೆಗಳ ಸಾಧನೆಯನ್ನೂ ಬಿಂಬಿಸುವುದಿದೆ ಎಂದರು.

    ರಾಜ್ಯಪಾಲರ ಭಾಷಣದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರು ರಾಜ್ಯಪಾಲರಿಂದ ಸರ್ಕಾರ ಸುಳ್ಳು ಹೇಳಿಸಿದೆ ಎಂದು ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಸದನದಲ್ಲಿ ಉತ್ತರ ನೀಡುವಾಗ ಇನ್ನಷ್ಟು ಮಾಹಿತಿಯನ್ನು ನೀಡಲಾಗುವುದು. ವಿರೋಧ ಪಕ್ಷದವರಿಗೆ ಅಧಿವೇಶನದಲ್ಲಿಯೇ ಉತ್ತರ ನೀಡಲಾಗುವುದು. ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದರು.

    ಹಿಜಾಬ್ ಧರಿಸದಿದ್ದರೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲಿವೆ ಎಂಬ ಶಾಸಕ ಜಮೀರ್ ಅಹಮದ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಅವರ ವಿಚಾರಗಳು ಎಷ್ಟು ಸಮಂಜಸ, ಅವರ ಮನೋಭಾವ ಎಂಥದ್ದು ಎಂದು ಅವರ ಹೇಳಿಕೆಯಿಂದಲೇ ತಿಳಿಯುತ್ತದೆ. ಇಡೀ ದೇಶವೇ ಅವರ ಹೇಳಿಕೆಯನ್ನು ಖಂಡಿಸುತ್ತದೆ ಎಂದರು.

    ಆಯ್ದಕ್ಕಿ ಲಕ್ಕಮ್ಮನ ಕಾಯಕ ನಿಷ್ಠೆ

    ಸುಮಾ ವೀಣಾ

    ಸಮಾಜ ಸುಧಾರಣ ಚಳವಳಿಯಲ್ಲಿ ಸಕ್ರಿಯವಾಗಿದ್ದ ಶ್ರೇಷ್ಠ ವಚನಕಾರ್ತಿಯರಲ್ಲಿ ಆಯ್ದಕ್ಕಿಲಕ್ಕಮ್ಮ ಕೂಡ ಒಬ್ಬರು. ವಚನಕಾರ ಆಯ್ದಕ್ಕಿ ಮಾರಯ್ಯನ ಮಡದಿ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯರಡೋಣಿ ಗ್ರಾಮದವರು. ಈಕೆಯ ಅಂಕಿತ “ಮಾರಯ್ಯ ಪ್ರಿಯ ಅಮರೇಶ್ವರ ಲಿಂಗ”.

    ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
    ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
    ಸದ್ಭಕ್ತರಿಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
    ಮಾರಯ್ಯಪ್ರಿಯ ಅಮಲೇಶ್ವರ ಲಿಂಗದ ಸೇವೆಯುನ್ನಳ್ಳನ್ನಕ್ಕರ

    ಮನಸ್ಸು ಬಿಳಿಯರಳೆಯಂತೆ ಸದಾಶುಭ್ರವಾಗಿರಬೇಕು. ಮನಸ್ಸು ಗೊಂದಲ ಸಂಶಯಗಳಲ್ಲಿ ತುಂಬಿಕೊಂಡರೆ ಆತನದ್ದು ಕೊರತೆಯ ಬದುಕೇ ಸರಿ ಅರ್ಥಾತ್ ಬಡತನದ ಬದುಕು ಎನ್ನುತ್ತಾರೆ.

    ಇನ್ನಷ್ಟು ಮತ್ತಷ್ಟು ಬೇಕೆಂಬ ಬಯಕೆಗಳ ಪಟ್ಟಿ ಮತ್ತಷ್ಟು ಮಗದಷ್ಟು ಬೆಳೆಯುತ್ತಲೇ ಇರುತ್ತವೆ. ನಶ್ವರವಾದ ಸಂಪತ್ತಿನ ಭ್ರಮೆಯಲ್ಲಿ ಇರುವ ಅತ್ಯಲ್ಪ ಜೀವನದ ಸಂತೋಷ ಕಳೆದುಕೊಳ್ಳುವಂತೆ ಮಾಡುತ್ತದೆ. ಮನಶುದ್ಧಿ ಹೊಂದಿರುವಂತೆ ತಾನು ಯಾವ ಕೆಲಸ ಮಾಡುತ್ತಾನೆಯೋ ಅದರಲ್ಲೇ ಸಂತೃಪ್ತಿಯನ್ನು ಹೊಂದುತ್ತಾನೆ. ಅತೀನಿರೀಕ್ಷೆ ಅತ್ಯಂತ ಲಾಭದ ಬಗ್ಗೆ ತಲೆಕೆಡಿಸಿಕೊಳ್ಳದೆ ಚಿತ್ತಶುದ್ಧಿಯಿಂದ ಮಾಡುವ ಕಾಯಕ ಅತ್ಯಂತ ಸಾರ್ಥಕವಾದುದು.

    ಸದ್ಭಕ್ತ ಎಂದು ಕರೆಸಿಕೊಳ್ಳುವವನು ತನಗಾಗಿ ತನ್ನ ಮನಸ್ಸಿನ ಸಂತೋಷಕ್ಕಾಗಿ ತನಗೊಪ್ಪಿತ ಅಥವಾ ಒದಗಿಬಂದ ಕಾಯಕವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಆಗ ಲಕ್ಷ್ಮಿ ತಾನಾಗಿಯೇ ಒಲಿಯುತ್ತಾಳೆ. “ಮನಸ್ಸಿದ್ದರೆ ಮಾರ್ಗವೆಂಬಂತೆ” ಚಿತ್ತದಲ್ಲಿ ಒಳ್ಳೆಯ ಆಲೋಚನೆಯನ್ನು ಹೊಂದಿ ಕಾಯಕವನ್ನು ನಿರೀಕ್ಷೆಗಳಿಲ್ಲದಂತೆ ಮಾಡಬೇಕು. ಆಯ್ದಕ್ಕಿ ಲಕ್ಕಮ್ಮನವರ ಪ್ರಕಾರ ಕಾಯಕ ನಿಷ್ಠೆ ಬದುಕಿನ ಒಂದು ಆದರ್ಶತತ್ವವಾಗಿದೆ. ತಾನೂ ಅದನ್ನೇ ಆಚರಿಸಿ ಗಂಡನಿಗೂ ಅದನ್ನೇ ಹೇಳಿದವಳು ಆಯ್ದಕ್ಕಿ ಲಕ್ಕಮ್ಮ.

    ಅತಿಆಸೆ,ಆಡಂಬರದ ಆಛರಣೆ ಅಪರಿಗೃಹವೃತ್ತಿ ಇರಬಾರದೆಂದು ಹೇಳಿದ್ದಾರೆ. ಇವುಗಳಿಂದ ಹೊರತಾದ ಕಾಯಕನಿಷ್ಠೆ ಶ್ರದ್ಧಾ, ಪ್ರಾಮಾಮಾಣಿಕತೆಗಳಿಂದಲೂ ದಾಸೋಹವೆಂಬ ತತ್ತ್ವದ ಬದುಕು ರೂಪಿತವಾಗುತ್ತದೆ. ಕಾಯಕದಲ್ಲಯೇ ಕೈಲಾಸವನ್ನು ಕಾಣುವ ಆಕೆಯ ನಿಲುವು ಸಮಾಜಕ್ಕೆ ಮಾದರಿಯಾಗಿದೆ. ಆಕೆಯ ಈ ಪ್ರಸ್ತುತ ವಚನವು ಸಾಮಾಜಿಕ ಮೌಲ್ಯಗಳ ಪ್ರತೀಕವಾಗಿ ರೂಪುಗೊಂಡಿದೆ . ಆದರ್ಶ ಸಮಾಜದ ನಿರ್ಮಾಣಕ್ಕೆ ಕಾಯಕ ನಿಷ್ಠೆ ಅತ್ಯಂತ ಅಗತ್ಯ ಬುನಾದಿ ಎಂದು ಈ ವಚನ ಹೇಳುತ್ತದೆ.

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    error: Content is protected !!