27.8 C
Karnataka
Wednesday, April 23, 2025
    Home Blog Page 29

    Bhargavi Narayan Passes Away: ಹಿರಿಯ ಕಲಾವಿದೆ ಭಾರ್ಗವಿ ನಾರಾಯಣ್ ನಿಧನ

    BENGALURU FEB 14

    ಹಿರಿಯ ರಂಗ ಕಲಾವಿದೆ ಭಾರ್ಗವಿ ನಾರಾಯಣ್ (84) ಇಂದು ಸಂಜೆ ಸುಮಾರು 7.30ಕ್ಕೆ ನಿಧನರಾದರು. ಕಳೆದ ಕೆಲವು ದಿನಗಳಿಂದ ವಯೋ ಸಹಜ ಕಾಯಿಲೆಗೆ ತುತ್ತಾಗಿದ್ದರು.

    ಭಾರ್ಗವಿ ನಾರಾಯಣ್ ಅವರು ಅನೇಕ ಚಲನ ಚಿತ್ರಗಳು ಹಾಗೂ ಮಂಥನಾ ಮತ್ತು ಮುಕ್ತಾ ಸೇರಿದಂತೆ ಕನ್ನಡದ ಅನೇಕ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಕನ್ನಡ ನಾಟಕ ಅಕಾಡೆಮಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ.

    ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಮುನ್ನ, ಭಾರ್ಗವಿ ಅವರು ಬೆಂಗಳೂರಿನ ಇಎಸ್ಐ ಕಾರ್ಪೊರೇಶನ್ ಅಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು.

    ಭಾರ್ಗವಿ ಅವರು 4 ಫೆಬ್ರವರಿ 1938 ರಂದು ಮತ್ತು ನಾಮಗಿರಿಯಮ್ಮ ಮತ್ತು ಎಂ. ರಾಮಸ್ವಾಮಿಯವರಿಗೆ ಜನಿಸಿದರು. ಪ್ರಸಾದನ ಕಲಾವಿದ ಬೆಳವಾಡಿ ನಂಜುಂಡಯ್ಯ ನಾರಾಯಣ (ಮೇಕಪ್ ನಾಣಿ) ಭಾರ್ಗವಿ ಅವರ ಪತಿ. ಸುಜಾತಾ, ಪ್ರಕಾಶ್, ಪ್ರದೀಪ್ ಮತ್ತು ಸುಧಾ ಮಕ್ಕಳು. ಭಾರ್ಗವಿ ನಾರಾಯಣರ ಆತ್ಮಚರಿತ್ರೆ ‘ನಾನು, ಭಾರ್ಗವಿ’  2012ರಲ್ಲಿ ಬಿಡುಗಡೆಯಾಯಿತು,

    ರಾಜ್ಯಪಾಲರ ಭಾಷಣದ ಬಗ್ಗೆ ಮುಖ್ಯಮಂತ್ರಿಗಳ ಪ್ರತಿಕ್ರಿಯೆ; ಕೋವಿಡ್ ಮತ್ತು ಪ್ರವಾಹ ನಿರ್ವಹಣೆ ಕುರಿತಂತೆ ಸ್ಪಷ್ಟ ಚಿತ್ರಣ

    BENGALURU FEB 15

    ಸರ್ಕಾರ ಕೋವಿಡ್ ಮತ್ತು ಪ್ರವಾಹ ನಿರ್ವಹಣೆ ಕುರಿತಂತೆ ಕೈಗೊಂಡಿರುವ ಕಾರ್ಯಕ್ರಮಗಳ ಸ್ಪಷ್ಟ ಚಿತ್ರಣವನ್ನು ರಾಜ್ಯಪಾಲರು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿದ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದರು.

    ಮುಖ್ಯಮಂತ್ರಿಗಳು ವರ್ಷದ ಆರಂಭದಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಕಳೆದ ಒಂದು ವರ್ಷದಲ್ಲಿ ಆಗಿರುವ ಕೋವಿಡ್ ಮತ್ತು ಪ್ರವಾಹ ನಿರ್ವಹಣೆ ಕುರಿತಂತೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯಾಗಿರುವ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದ್ದಾರೆ. ಹಲವಾರು ಇಲಾಖೆಗಳ ಸಾಧನೆಯನ್ನೂ ಬಿಂಬಿಸುವುದಿದೆ ಎಂದರು.

    ರಾಜ್ಯಪಾಲರ ಭಾಷಣದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರು ರಾಜ್ಯಪಾಲರಿಂದ ಸರ್ಕಾರ ಸುಳ್ಳು ಹೇಳಿಸಿದೆ ಎಂದು ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಸದನದಲ್ಲಿ ಉತ್ತರ ನೀಡುವಾಗ ಇನ್ನಷ್ಟು ಮಾಹಿತಿಯನ್ನು ನೀಡಲಾಗುವುದು. ವಿರೋಧ ಪಕ್ಷದವರಿಗೆ ಅಧಿವೇಶನದಲ್ಲಿಯೇ ಉತ್ತರ ನೀಡಲಾಗುವುದು. ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದರು.

    ಹಿಜಾಬ್ ಧರಿಸದಿದ್ದರೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲಿವೆ ಎಂಬ ಶಾಸಕ ಜಮೀರ್ ಅಹಮದ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಅವರ ವಿಚಾರಗಳು ಎಷ್ಟು ಸಮಂಜಸ, ಅವರ ಮನೋಭಾವ ಎಂಥದ್ದು ಎಂದು ಅವರ ಹೇಳಿಕೆಯಿಂದಲೇ ತಿಳಿಯುತ್ತದೆ. ಇಡೀ ದೇಶವೇ ಅವರ ಹೇಳಿಕೆಯನ್ನು ಖಂಡಿಸುತ್ತದೆ ಎಂದರು.

    ಆಯ್ದಕ್ಕಿ ಲಕ್ಕಮ್ಮನ ಕಾಯಕ ನಿಷ್ಠೆ

    ಸುಮಾ ವೀಣಾ

    ಸಮಾಜ ಸುಧಾರಣ ಚಳವಳಿಯಲ್ಲಿ ಸಕ್ರಿಯವಾಗಿದ್ದ ಶ್ರೇಷ್ಠ ವಚನಕಾರ್ತಿಯರಲ್ಲಿ ಆಯ್ದಕ್ಕಿಲಕ್ಕಮ್ಮ ಕೂಡ ಒಬ್ಬರು. ವಚನಕಾರ ಆಯ್ದಕ್ಕಿ ಮಾರಯ್ಯನ ಮಡದಿ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯರಡೋಣಿ ಗ್ರಾಮದವರು. ಈಕೆಯ ಅಂಕಿತ “ಮಾರಯ್ಯ ಪ್ರಿಯ ಅಮರೇಶ್ವರ ಲಿಂಗ”.

    ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
    ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
    ಸದ್ಭಕ್ತರಿಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
    ಮಾರಯ್ಯಪ್ರಿಯ ಅಮಲೇಶ್ವರ ಲಿಂಗದ ಸೇವೆಯುನ್ನಳ್ಳನ್ನಕ್ಕರ

    ಮನಸ್ಸು ಬಿಳಿಯರಳೆಯಂತೆ ಸದಾಶುಭ್ರವಾಗಿರಬೇಕು. ಮನಸ್ಸು ಗೊಂದಲ ಸಂಶಯಗಳಲ್ಲಿ ತುಂಬಿಕೊಂಡರೆ ಆತನದ್ದು ಕೊರತೆಯ ಬದುಕೇ ಸರಿ ಅರ್ಥಾತ್ ಬಡತನದ ಬದುಕು ಎನ್ನುತ್ತಾರೆ.

    ಇನ್ನಷ್ಟು ಮತ್ತಷ್ಟು ಬೇಕೆಂಬ ಬಯಕೆಗಳ ಪಟ್ಟಿ ಮತ್ತಷ್ಟು ಮಗದಷ್ಟು ಬೆಳೆಯುತ್ತಲೇ ಇರುತ್ತವೆ. ನಶ್ವರವಾದ ಸಂಪತ್ತಿನ ಭ್ರಮೆಯಲ್ಲಿ ಇರುವ ಅತ್ಯಲ್ಪ ಜೀವನದ ಸಂತೋಷ ಕಳೆದುಕೊಳ್ಳುವಂತೆ ಮಾಡುತ್ತದೆ. ಮನಶುದ್ಧಿ ಹೊಂದಿರುವಂತೆ ತಾನು ಯಾವ ಕೆಲಸ ಮಾಡುತ್ತಾನೆಯೋ ಅದರಲ್ಲೇ ಸಂತೃಪ್ತಿಯನ್ನು ಹೊಂದುತ್ತಾನೆ. ಅತೀನಿರೀಕ್ಷೆ ಅತ್ಯಂತ ಲಾಭದ ಬಗ್ಗೆ ತಲೆಕೆಡಿಸಿಕೊಳ್ಳದೆ ಚಿತ್ತಶುದ್ಧಿಯಿಂದ ಮಾಡುವ ಕಾಯಕ ಅತ್ಯಂತ ಸಾರ್ಥಕವಾದುದು.

    ಸದ್ಭಕ್ತ ಎಂದು ಕರೆಸಿಕೊಳ್ಳುವವನು ತನಗಾಗಿ ತನ್ನ ಮನಸ್ಸಿನ ಸಂತೋಷಕ್ಕಾಗಿ ತನಗೊಪ್ಪಿತ ಅಥವಾ ಒದಗಿಬಂದ ಕಾಯಕವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಆಗ ಲಕ್ಷ್ಮಿ ತಾನಾಗಿಯೇ ಒಲಿಯುತ್ತಾಳೆ. “ಮನಸ್ಸಿದ್ದರೆ ಮಾರ್ಗವೆಂಬಂತೆ” ಚಿತ್ತದಲ್ಲಿ ಒಳ್ಳೆಯ ಆಲೋಚನೆಯನ್ನು ಹೊಂದಿ ಕಾಯಕವನ್ನು ನಿರೀಕ್ಷೆಗಳಿಲ್ಲದಂತೆ ಮಾಡಬೇಕು. ಆಯ್ದಕ್ಕಿ ಲಕ್ಕಮ್ಮನವರ ಪ್ರಕಾರ ಕಾಯಕ ನಿಷ್ಠೆ ಬದುಕಿನ ಒಂದು ಆದರ್ಶತತ್ವವಾಗಿದೆ. ತಾನೂ ಅದನ್ನೇ ಆಚರಿಸಿ ಗಂಡನಿಗೂ ಅದನ್ನೇ ಹೇಳಿದವಳು ಆಯ್ದಕ್ಕಿ ಲಕ್ಕಮ್ಮ.

    ಅತಿಆಸೆ,ಆಡಂಬರದ ಆಛರಣೆ ಅಪರಿಗೃಹವೃತ್ತಿ ಇರಬಾರದೆಂದು ಹೇಳಿದ್ದಾರೆ. ಇವುಗಳಿಂದ ಹೊರತಾದ ಕಾಯಕನಿಷ್ಠೆ ಶ್ರದ್ಧಾ, ಪ್ರಾಮಾಮಾಣಿಕತೆಗಳಿಂದಲೂ ದಾಸೋಹವೆಂಬ ತತ್ತ್ವದ ಬದುಕು ರೂಪಿತವಾಗುತ್ತದೆ. ಕಾಯಕದಲ್ಲಯೇ ಕೈಲಾಸವನ್ನು ಕಾಣುವ ಆಕೆಯ ನಿಲುವು ಸಮಾಜಕ್ಕೆ ಮಾದರಿಯಾಗಿದೆ. ಆಕೆಯ ಈ ಪ್ರಸ್ತುತ ವಚನವು ಸಾಮಾಜಿಕ ಮೌಲ್ಯಗಳ ಪ್ರತೀಕವಾಗಿ ರೂಪುಗೊಂಡಿದೆ . ಆದರ್ಶ ಸಮಾಜದ ನಿರ್ಮಾಣಕ್ಕೆ ಕಾಯಕ ನಿಷ್ಠೆ ಅತ್ಯಂತ ಅಗತ್ಯ ಬುನಾದಿ ಎಂದು ಈ ವಚನ ಹೇಳುತ್ತದೆ.

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    Indian Stock Market: ಉತ್ತಮ ಲಾಭಾಂಶ ವಿತರಿಸಿ ಪೇಟೆಯಲ್ಲಿ ಸ್ಥಿರತೆ ತಂದ ಕಂಪನಿಗಳು

    ಸೆನ್ಸೆಕ್ಸ್‌ ಜನವರಿ 17 ರಂದು ಇದ್ದ 61,300 ರಿಂದ ನಿರಂತರವಾಗಿ ಇಳಿಕೆಯಲ್ಲಿದೆ. ಇದಕ್ಕೆ ಪ್ರಮುಖ ಕಾರಣ ವಿದೇಶಿ ವಿತ್ತೀಯ ಸಂಸ್ಥೆಗಳ ಮಾರಾಟದ ಒತ್ತಡವಾಗಿದೆ. ಹಲವಾರು ಕಂಪನಿಗಳು ಉತ್ತಮ ಫಲಿತಾಂಶ ಪ್ರಕಟಿಸಿವೆ. ಹೆಚ್ಚಿನ ಸಾರ್ವಜನಿಕ ವಲಯದ ಕಂಪನಿಗಳು ಆಕರ್ಷಕ ಲಾಭಾಂಶಗಳನ್ನು ಘೋಷಿಸಿವೆ. ಹಲವು ಕಂಪನಿಗಳು ಉತ್ತಮ ವಹಿವಾಟು ನಿರ್ವಹಿಸಿದರೂ ಹಾನಿಗೊಳಗಾಗಿವೆ. ಕೆಲವು ಕಂಪನಿಗಳು ಇತ್ತೀಚಿನ ದಿನಗಳಲ್ಲಿ ರಭಸದ ಏರಿಳಿತಗಳನ್ನು ಪ್ರದರ್ಶಿಸಿ, ಉತ್ತಮ ಫಲಿತಾಂಶಗಳನ್ನು ನೀಡಿದರೂ ಸಹ ಪೇಟೆಯಲ್ಲಿ ಹೆಚ್ಚಿನ ಕುಸಿತಕ್ಕೊಳಗಾಗುತ್ತಿವೆ.

    ವಾರಾಂತ್ಯದ ಸೆನ್ಸೆಕ್ಸ್

    ಕಂಪನಿಗಳಾದ ಶಾರದಾ ಕ್ರಾಪ್‌ ಒಂದು ತಿಂಗಳಲ್ಲಿ ಶೇಕಡ.53 ರಷ್ಟು ಏರಿಕೆ ಕಂಡರೆ, ಕ್ರೆಡಿಟ್‌ ಅಕ್ಸೆಸ್‌ ಗ್ರಾಮೀಣ್‌ ಶೇ.28 ರಷ್ಟು ಏರಿಕೆ ಕಂಡಿದೆ, ಟಿವಿ 18 ಬ್ರಾಡ್‌ ಕ್ಯಾಸ್ಟ್‌ ಶೇ.48 ರ ಏರಿಕೆ ಕಂಡುಕೊಂಡಿದೆ. ಹಿಂದೂಸ್ಥಾನ್‌ ಕನ್ಸ್ಟ್ರಕ್ಷನ್‌ ಕಂಪನಿ ಶೇ.21 ರಷ್ಟು, ಬ್ಯಾಂಕ್‌ ಆಫ್‌ ಬರೋಡಾ ಶೇ.21 ರಷ್ಟು ಏರಿಕೆ ಕಂಡಿವೆ. ಗೋದಾವರಿ ಪವರ್‌ ಅಂಡ್‌ ಇಸ್ಪಾಟ್‌ ರೂ.52 ಕ್ಕೂ ಹೆಚ್ಚಿನ ಏರಿಕೆ ಕಂಡಿದೆ. ಜಿ ಎನ್‌ ಎಫ್‌ ಸಿ, ವಿ ಐ ಪಿ ಇಂಡಸ್ಟ್ರೀಸ್‌ ನಂತಹ ಕಂಪನಿಗಳೂ ಏರಿಕೆ ಕಂಡಿವೆ. ಆದರೆ ಈ ಪಟ್ಟಿಯಲ್ಲಿ ಗಮನಾರ್ಹ ಎನಿಸಬಹುದಾದ ಏರಿಕೆ ಕಂಡಿರುವುದು ವೇದಾಂತ ಮತ್ತು ಬಯೋಕಾನ್‌ ಶೇ.12 ರಷ್ಟು ಏರಿಕೆ ಗಳಿಸಿದರೆ, ಆಕ್ಸಿಸ್‌ ಮತ್ತು ಕೆನರಾ ಬ್ಯಾಂಕ್‌ ಗಳೂ ಶೇ.10 ರಿಂದ 11 ಏರಿಕೆ ಗಳಿಸಿವೆ.

    ಅಂದರೆ ಚಟುವಟಿಕೆಯು ಅಗ್ರಮಾನ್ಯ ಕಂಪನಿಗಳಿಗಿಂತ, ಅಂಚಿನ ಕಂಪನಿಗಳಲ್ಲಿಯೇ ಚುರುಕಾಗಿತ್ತು. ಡಾ ಲಾಲ್‌ ಪತ್‌ ಲ್ಯಾಬೋರೇಟರೀಸ್‌, ವೆಂಕೀಸ್‌, ಸ್ಟರ್ಲೈಟ್‌ ಟೆಕ್ನಾಲಜೀಸ್‌, ವೆಂಕೀಸ್‌, ಫರ್ಸ್ಟ್‌ ಸೋರ್ಸ್‌ ಗಳು ತಮ್ಮ ಕಳಪೆ ಸಾಧನೆಗಳಿಂದ ಹೆಚ್ಚಿನ ಕುಸಿತಕ್ಕೊಳಗಾದವು. ಟಿಸಿಎಸ್‌ ಕಂಪನಿಯು ಷೇರು ಹಿಂಕೊಳ್ಳುವಿಕೆಯ ಕಾರಣ ರೂ.4,000 ದ ಗಡಿ ದಾಟಿ ಮತ್ತೆ ರೂ.3,700 ರ ಒಳಗೆ ಕುಸಿದಿದೆ. ಮೈಂಡ್‌ ಟ್ರೀ ಷೇರಿನ ಬೆಲೆ ಒಂದು ತಿಂಗಳಲ್ಲಿ ರೂ.4,700 ರ ಸಮೀಪದಿಂದ ರೂ.3,500 ರವರೆಗೂ ಕುಸಿದು ಈಗ ರೂ.3,870 ರ ಸಮೀಪವಿದೆ. ಎಲ್‌ ಅಂಡ್‌ ಟಿ ಟೆಕ್ನಾಲಜೀಸ್‌ ಷೇರು ಒಂದೇ ತಿಂಗಳಲ್ಲಿ ರೂ.5,700 ರ ಸಮೀಪದಿಂದ ರೂ.4,311 ರ ಸಮೀಪಕ್ಕೆ ಕುಸಿದು ರೂ.4,490 ರ ಸಮೀಪವಿದೆ. ಟೆಕ್‌ ಮಹೀಂದ್ರ ಷೇರಿನ ಬೆಲೆ ರೂ.300 ಕ್ಕೂ ಹೆಚ್ಚು ಜಾರಿದೆ. ಇಂತಹ ವಾತಾವರಣದಲ್ಲಿ ಈ ಕೆಳಗೆ ನೀಡಿರುವ ಕಂಪನಿಗಳು ಉತ್ತಮವಾದ ಲಾಭಾಂಶಗಳನ್ನು ಘೋಷಿಸಿ ಹೂಡಿಕೆದಾರರನ್ನು ಹರ್ಷಿತಗೊಳಿಸಿ ಷೇರಿನ ಬೆಲೆಗಳನ್ನು ಸ್ವಲ್ಪಮಟ್ಟಿನ ಸ್ಥಿರತೆಯಲ್ಲಿರಿಸಿವೆ.

    • NMDC : ರೂ.5.73 ಪ್ರತಿ ಷೇರಿಗೆ,
    • ACC : ರೂ.58 ಪ್ರತಿ ಷೇರಿಗೆ,
    • Auro Pharma : ರೂ.1.50 ಪ್ರತಿ ಷೇರಿಗೆ,
    • Engineers Ind : ರೂ,2.00 ಪ್ರತಿ ಷೇರಿಗೆ,
    • I R C T C : ರೂ.2.00 ಪ್ರತಿ ಷೇರಿಗೆ,
    • Mahanagar Gas: ರೂ.9.50 ಪ್ರತಿ ಷೇರಿಗೆ,
    • National Alum : ರೂ.3.00 ಪ್ರತಿ ಷೇರಿಗೆ,
    • Power Grid : ರೂ.5.50 ಪ್ರತಿ ಷೇರಿಗೆ,
    • Cochin Ship : ರೂ.7.00 ಪ್ರತಿ ಷೇರಿಗೆ,
    • Oil India : ರೂ.5.75 ಪ್ರತಿ ಷೇರಿಗೆ,
    • MOIL ರೂ.3.00 ಪ್ರತಿ ಷೇರಿಗೆ,
    • PFC : ರೂ.6.00 ಪ್ರತಿ ಷೇರಿಗೆ,
    • Akzo Ind : ರೂ.40.00 ಪ್ರತಿ ಷೇರಿಗೆ,
    • SJVNL : ರೂ.1.15 ಪ್ರತಿ ಷೇರಿಗೆ,
    • Bector Food : ರೂ.1.25 ಪ್ರತಿ ಷೇರಿಗೆ,
    • H G S Ltd : ರೂ.28.00 ಪ್ರತಿ ಷೇರಿಗೆ,
    • H A L : ರೂ.26.00 ಪ್ರತಿ ಷೇರಿಗೆ,
    • First Source : ರೂ.3.50 ಪ್ರತಿ ಷೇರಿಗೆ,
    • Sukhjit Starch : ರೂ.10.00 ಪ್ರತಿ ಷೇರಿಗೆ,
    • Sun TV : ರೂ.2.50 ಪ್ರತಿ ಷೇರಿಗೆ,
    • Cummins : ರೂ.8.00 ಪ್ರತಿ ಷೇರಿಗೆ,
    • Hero Motocorp : ರೂ.60.00 ಪ್ರತಿ ಷೇರಿಗೆ,
    • India Nippon Elec: ರೂ.6.25 ಪ್ರತಿ ಷೇರಿಗೆ,
    • Metropolis Health : ರೂ.8.00 ಪ್ರತಿ ಷೇರಿಗೆ,
    • ONGC : ರೂ.1.75 ಪ್ರತಿ ಷೇರಿಗೆ

    ಲಾಭಾಂಶಗಳಿಗಿಂತ ಮುಂಚೆ ಹೆಚ್ಚಿನ ಏರಿಕೆ ಕಂಡರೆ ಷೇರುಗಳನ್ನು ಪೇಟೆಯಲ್ಲೇ ಮಾರಾಟಮಾಡಿ ಲಾಭ ಗಳಿಸಬಹುದು. ಲಾಭಾಂಶ ವಿತರಣೆಯ ನಂತರ ಮತ್ತೆ ಷೇರಿನ ಬೆಲೆ ಕುಸಿತ ಕಂಡಲ್ಲಿ ಮೌಲ್ಯಾಧಾರಿತ ಖರೀದಿಗೆ ಅವಕಾಶವಾಗುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಷೇರಿನ ಬೆಲೆಯಲ್ಲಿ ಹೆಚ್ಚಿನ ಲಾಭ ತರಲಾರದೆಂದರೆ, ಕಂಪನಿ ವಿತರಿಸುವ ಲಾಭಾಂಶದ ನಂತರ ಅವಕಾಶಕ್ಕೆ ಕಾಯಬೇಕಾಗುವುದು. ಮುಖ್ಯವಾಗಿ ಲಾಭಾಂಶ ಆಧಾರಿತ ಖರೀದಿಗೂ ಮುನ್ನ ನಿಗದಿತ ದಿನ ಮತ್ತು ಅರ್ಹತೆಗಳನ್ನು ದೃಢಪಡಿಸಿಕೊಂಡು ಮುನ್ನಡೆಯಿರಿ.

    ವಿಸ್ಮಯಕಾರಿ ಬೆಳವಣಿಗೆ:

    ಗುರುವಾರದಂದು ರೂ.70,899 ರವರೆಗೂ ಏರಿಕೆ ಕಂಡದ್ದ MRF Ltd, ಷೇರಿನ ಬೆಲೆಯು ಶುಕ್ರವಾರದಂದು ರೂ.68,100 ಗಳವರೆಗೂ ಕುಸಿದು ರೂ.68,265 ರಲ್ಲಿ ಕೊನೆಗೊಂಡಿದೆ. ರೂ.68,100 ವಾರ್ಷಿಕ ಕನಿಷ್ಠ ದರವಾಗಿದೆ. ಹಿಂದಿನ ವರ್ಷ ಫೆಬ್ರವರಿಯಲ್ಲಿ ರೂ.98,500 ನ್ನು ದಾಟಿದ್ದ ಈ ಕಂಪನಿ ಷೇರು ಗುರುವಾರದಂದು ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿತು. ಕಂಪನಿಯ ಸಾಧನೆಯು ತೃಪ್ತಿದಾಯಕವಲ್ಲದ ಕಾರಣ ಷೇರಿನ ಬೆಲೆಯಲ್ಲಿ ಕುಸಿತ ಕಂಡಿತು. ಕೇವಲ ಎರಡೇ ದಿನಗಳಲ್ಲಿ ರೂ.2,700 ಕ್ಕೂ ಹೆಚ್ಚಿನ ಕುಸಿತಕಂಡ ಈ ಷೇರಿಗೆ ಕಂಪನಿಯು ಪ್ರತಿ ಷೇರಿಗೆ ರೂ.3 ರ ಲಾಭಾಂಶ ಪ್ರಕಟಿಸಿದೆ.

    ಬೋನಸ್‌ ಷೇರಿನ ವಿಚಾರ:

    HGS Ltd ಕಂಪನಿ ವಿತರಿಸುವ 1:1 ರ ಅನುಪಾತದ ಬೋನಸ್‌ ಷೇರಿಗೆ ಫೆಬ್ರವರಿ 23 ನ್ನು ನಿಗದಿತ ದಿನವನ್ನಾಗಿ ಘೋಷಿಸಿದೆ.

    ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    2022 Election: 2024ರ ಚುನಾವಣೆಯ ದಿಕ್ಸೂಚಿ

    ಅಶೋಕ ಹೆಗಡೆ

    ಭೌತಿಕ ರ‍್ಯಾಲಿಗಳನ್ನು ನಡೆಸಲು ಚುನಾವಣಾ ಆಯೋಗ ಅನುಮತಿ ನೀಡುವುದರೊಂದಿಗೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಕಾವು ಪಡೆದಿದೆ. ಕೆಲವೆಡೆ ಮೊದಲ ಹಂತದ ಮತದಾನವೂ ಮುಕ್ತಾಯವಾಗಿದೆ. ಐದು ರಾಜ್ಯಗಳ ಪೈಕಿ ಹಲವು ಕಾರಣಗಳಿಂದ ಮಹತ್ವ ಪಡೆದಿರುವ ಎರಡು ರಾಜ್ಯಗಳೆಂದರೆ ಉತ್ತರ ಪ್ರದೇಶ-uttara pradesha- ಮತ್ತು ಪಂಜಾಬ್-Punjab. ಈ ಎರಡು ರಾಜ್ಯಗಳ ಫಲಿತಾಂಶ 2024ರ ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಕೇಂದ್ರ ಸರಕಾರದ ಮೂರು ಕೃಷಿ ಕಾಯಿದೆಗಳ ವಿರುದ್ಧ ದಿಲ್ಲಿಯಲ್ಲಿ ವರ್ಷ ಕಾಲ ನಡೆದ ಪ್ರತಿಭಟನೆಯಲ್ಲಿ ಈ ಎರಡು ರಾಜ್ಯಗಳೇ ಮುಂಚೂಣಿಯಲ್ಲಿದ್ದವು ಎನ್ನುವುದೂ ಇದಕ್ಕೆ ಕಾರಣ.

    ಉತ್ತರ ಪ್ರದೇಶವು ಮೊದಲಿನಿಂದಲೂ ರಾಷ್ಟ್ರ ರಾಜಕಾರಣದ ದಿಕ್ಕುದೆಸೆಗಳನ್ನು ನಿರ್ಧರಿಸುತ್ತ ಬಂದಿದೆ. ಅದಕ್ಕೆ ಕಾರಣ ಅಲ್ಲಿ 70 ಲೋಕಸಭಾ ಕ್ಷೇತ್ರಗಳಿರುವುದು. 2014ಕ್ಕೂ ಮುನ್ನ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆಯೋ ಅದೇ ಪಕ್ಷದಿಂದು ಹೆಚ್ಚಿನ ಸಂಖ್ಯೆಯ ಸಂಸದರು ಆಯ್ಕೆಯಾಗುತ್ತಿದ್ದರು. ಆದರೆ 2014ರಲ್ಲಿ ಆ ಎಲ್ಲ ಸಂಪ್ರದಾಯ ಮೀರಿ, ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದರೂ ಬಿಜೆಪಿ 60ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ.2019ರಲ್ಲಿಯೂ ಅದೇ ಫಲಿತಾಂಶ ಮರುಕಳಿಸಿದೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವುದನ್ನು ಬಿಜೆಪಿ ಘೋಷಿಸದೇ ಇದ್ದರೂ ಪಕ್ಷ ಪ್ರಚಂಡ ವಿಜಯ ಸಾಧಿಸಿದೆ. ಅದರ ಅರ್ಥ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಉತ್ತರ ಪ್ರದೇಶದಲ್ಲಿ ಬಹಳ ಪ್ರಬಲವಾಗಿ ಬೇರು ಬಿಟ್ಟಿದೆ ಎನ್ನುವುದೇ ಆಗಿದೆ.

    ಉತ್ತರ ಪ್ರದೇಶವು ಭೌಗೋಳಿಕ ವಿಸ್ತೀರ್ಣದಿಂದ ಮಾತ್ರ ಮಹತ್ವದ್ದಲ್ಲ. ಅಲ್ಲಿ ನೂರಾರು ಉಪ ಜಾತಿಗಳಿವೆ, ಸಮುದಾಯಗಳಿವೆ. ಹತ್ತಾರು ಸಣ್ಣಪುಟ್ಟ ಪಕ್ಷಗಳಿವೆ. ಅವು ಇಡೀ ರಾಜ್ಯಕ್ಕೆ ವ್ಯಾಪಿಸಿಕೊಂಡಿರದಿದ್ದರೂ, ನಿರ್ದಿಷ್ಟ ಪ್ರದೇಶಗಳಲ್ಲಿ ಕೆಲವು ಜಾತಿ, ಕೆಲವು ಪಕ್ಷಗಳು ಬಲಿಷ್ಠವಾಗಿವೆ. ಹೀಗಾಗಿ ಉತ್ತರ ಪ್ರದೇಶದ ರಣತಂತ್ರ ರೂಪಿಸುವಾಗ ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. 2014ರ ಲೋಕಸಬೆ ಮತ್ತು2017ರ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯ ಚಾಣಕ್ಯ ಅಮಿತ್ ಶಾ ಅವರು ತಿಂಗಳುಗಳ ಕಾಲ ಉತ್ತರ ಪ್ರದೇಶದಲ್ಲಿಯೇ ನೆಲೆಸಿ ಇಂತಹ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನೂ ಗಮನಿಸಿ, ಅರ್ಥ ಮಾಡಿಕೊಂಡಿದ್ದರಿಮದಲೇ ಪ್ರಚಂಡ ಗೆಲುವು ಸಾಧ್ಯವಾಯಿತು. ಈ ಸಲವೂ ಅಮಿತ್ ಶಾ ಉತ್ತರ ಪ್ರದೇಶದಲ್ಲಿಯೇ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಅವರ ಜತೆಗೆ ಯೋಗಿ ಆದಿತ್ಯನಾಥ್ -yogi adityanath-ಎಂಬ ಫೈರ್ ಬ್ರಾಂಡ್ ಕೂಡ ಇದೆ. ಹೀಗಾಗಿ ಬಿಜೆಪಿಯ ಸತತ ಎರಡನೇ ಬಾರಿಗೆ ಸರಕಾರ ರಚಿಸಿ ದಾಖಲೆ ಬರೆಯುತ್ತದೆ ಎಂದು ಹೇಳಲಾಗುತ್ತಿದೆ.ಬಿಜೆಪಿಗೆ ಸವಾಲಾಗಿರುವುದು ಅಖಿಲೇಶ್ ಯಾದವ್-akhilesh yadav- ನೇತೃತ್ವದ ಸಮಾಜವಾದಿ ಪಕ್ಷ. ಅವರು ಜಾಟ್ ಸಮುದಾಯದವರ ಪಕ್ಷ ಎಂದೇ ಹೇಳಲಾಗಿರುವ ರಾಷ್ಟ್ರೀಯ ಲೋಕದಳ ಜತೆ ಮೈತ್ರಿ ಮಾಡಿಕೊಂಡಿರುವುದು ಹೆಚ್ಚನ ಲಾಭ ತಂದುಕೊಡುತ್ತದೆ ಎಂದು ವಿಶ್ಲೇಷಿಸಲಾಗಿದೆ.

    ಸ್ವಾಮಿ ಪ್ರಸಾದ್ ಮೌರ್ಯ ಅವರಂತಹ ಒಬಿಸಿ ನಾಯಕರು ಬಿಜೆಪಿ ತೊರೆದು ಎಸ್ಪಿ ಸೇರಿರುವುದು ಸಹ ಪ್ಲಸ್ ಪಾಯಿಂಟ್. ಆದರೆ, ಇದರಿಂದ ಕಳೆದ ಸಲಕ್ಕೆ ಹೋಲಿಸಿದರೆ ಎಸ್ಪಿ ಸ್ಥಾನ ಗಳಿಕೆ ಹೆಚ್ಚಾಗಬಹುದೇ ವಿನಃ ಸರಕಾರ ರಚಿಸಲು ಅಗತ್ಯವಿರುವಷ್ಟು ಸಂಖ್ಯೆಯ ಶಾಸಕರ ಗೆಲುವುಗೆ ಕಾರಣವಾಗುವುದಿಲ್ಲ ಎನ್ನುವುದೂ ನಿಜ. ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಅವರನ್ನು ಟೀಕಿಸಿದರೆ ಹಾನಿಯಾಗುವ ಸಾಧ್ಯತೆಯೇ ಹೆಚ್ಚು ಎನ್ನುವುದನ್ನು ಮನಗಂಡಿರುವ ಬಿಜೆಪಿಯು ಚೌಧರಿಯನ್ನು ಟೀಕಿಸುವುದನ್ನು ನಿಲ್ಲಿಸಿದೆ. ಅಲ್ಲದೇ ಬಹುಜನ ಸಮಾಜಪಾರ್ಟಿ ನಾಯಕಿ ಮಾಯಾವತಿ ತಟಸ್ಥ ಧೋರಣೆ ತಾಳಿರುವುದು, ಪ್ರಚಾರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದೇ ಇರುವುದು ಬಿಜೆಪಿಗೆ ಅನುಕೂಲ ಎಂದು ಹೇಳಲಾಗುತ್ತಿದೆ.

    ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಚೈತನ್ಯ ತುಂಬಲು ಹರಸಾಹಸ ಮಡುತ್ತಿದ್ದಾರೆ. ಅವರದು ಏಕಾಂಗಿ ಹೋರಾಟ. ಮಹಿಳೆಯರನ್ನು ಸೆಳೆಯುವ ಸಂಗತಿಗಳನ್ನು ಪ್ರಚಾರ ಭಾಷಣ, ಪ್ರಣಾಳಿಕೆಗಳಲ್ಲಿ ಪ್ರಸ್ತಾಪಿಸಿ ಗೆಲುವು ಸಾಧಿಸುವ ತಂತ್ರಗಾರಿಕೆ ಅವರದು. 30 ವರ್ಷಗಳ ಬಳಿಕ ಮೊದಲ ಬಾರಿ ಎಲ್ಲ 403 ವಿಧಾನಸಭೆ ಕ್ಷೇತ್ರಗಳಲ್ಲಿಯೂ ಪಕ್ಷ ಸ್ಪರ್ಧೆ ಮಾಡಿದೆ. ಆದರೆ ಆ ಪಕ್ಷಕ್ಕೆ ರಾಜ್ಯದಲ್ಲಿ ಪ್ರಭಾವಿ ನಾಯಕರೇ ಇಲ್ಲ. ಹೀಗಾಗಿ ಸಂಘಟನೆಯ ಬಲದಿಂದ ಕಾಂಗ್ರೆಸ್ ಸೊರಗಿದೆ. ಯಾವ ಹಂತದಲ್ಲಿಯೂ ಪೈಪೋಟಿ ನೀಡುವ ಸ್ಥಿತಿಯಲ್ಲಿ ಪಕ್ಷ ಇಲ್ಲ ಎನ್ನುವುದು ವಾಸ್ತವ.

    ಆಪ್‌ಗೆ ಪಂಜಾಬ್ ಕನಸು
    ಪಂಜಾಬ್‌ನಲ್ಲಿ ಕಾಂಗ್ರೆಸ್ ಒಳಜಗಳವೇ ಆ ಪಕ್ಷಕ್ಕೆ ಮುಳ್ಳಾಗಲಿದೆ. ಹಾಲಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಪಕ್ಷದ ಹಿರಿಯ ನಾಯಕ ಸುನೀಲ್ ಜಾಖಡ್ ಅವರಿಗೆ ಅಸಮಾಧಾನ ತಂದಿದೆ. ಜಾಖಡ್ ಅಂತೂ ಸಕ್ರಿಯ ರಾಜಕಾರಣದಿಂದಲೇ ನಿವೃತ್ತಿ ಘೋಷಿಸಿದ್ದಾರೆ. ಸತತ ಸಂಘರ್ಷದ ಮೂಲಕ ಕ್ಯಾಅಮರಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಖುರ್ಚಿಯಿಂದ ಇಳಿಸುವಲ್ಲಿ ಯಶಸ್ವಿಯಾದ ಸಿಧು, ತಾವು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಲಾಗದೇ ಸೋತಿದ್ದಾರೆ. ಇದು ಅವರ ಒರಟುತನ ಮತ್ತು ಹಠಮಾರಿತನದ ಪರಿಣಾಮ. ಅದನ್ನು ಖುದ್ದು ರಾಹುಲ್ ಗಾಂಧಿಯವರೇ ಪರೋಕ್ಷವಾಗಿ ಹೇಳಿದ್ದಾರೆ. ಜತೆಗೆ ಚನ್ನಿ ದಲಿತ ಸಿಖ್ ಎನ್ನುವುದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತದಾರರ ಮನಗೆಲ್ಲುವ ಪ್ರಯತ್ನ ಮಾಡಲಿದೆ.

    ಶಿರೋಮಣಿ ಅಕಾಲಿದಳದ ಜತೆಗೆ ಮೈತ್ರಿ ಇಲ್ಲದೇ ಬಿಜೆಪಿ ಎದುರಿಸುತ್ತಿರುವ ಮೊದಲ ಚುನಾವಣೆ ಇದು. ಕ್ಯಾ.ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಹಾಗೂ ಅಕಾಲಿದಳ (ಸಂಯುಕ್ತ) ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಮೊದಲ ಸಲ ಪಂಜಾಬ್‌ನಲ್ಲಿ ಮೈತ್ರಿಕೂಟದ ಡ್ರೈವಿಂಗ್ ಸೀಟಿನಲ್ಲಿ ಕುಳಿತಿದೆ. ಅಮರಿಂದರ್ ಅವರ ಬಲವೇ ಬಿಜೆಪಿಗೆ ಶಕ್ತಿ. ಎರಡೂ ಪಕ್ಷಗಳು ರಾಷ್ಟ್ರೀಯತೆ, ಸಿಧುಗೆ ಪಾಕಿಸ್ತಾನ ಜತೆಗಿನ ಮೈತ್ರಿ, ಡ್ರಗ್ಸ್ ಪಿಡುಗನ್ನು ಪ್ರಸ್ತಾಪಿಸುತ್ತಿವೆ.

    ಈಗಿರುವ ವಿಧಾನಸಭೆಯಲ್ಲಿ ಪ್ರತಿಪಕ್ಷವಾಗಿರುವ ಆಮ್ ಆದ್ಮಿ ಪಾರ್ಟಿ ಅಧಿಕಾರದ ಸನಿಹಕ್ಕೆ ಬಂದರೂ, ಬಹುಮತಕ್ಕೆ ಒಂದೆರಡು ಸ್ಥಾನಗಳ ಕೊರತೆ ಎದುರಾಗಬಹುದು ಎಂದು ಸಮೀಕ್ಷೆಗಳು ಅಂದಾಜಿಸಿವೆ. ಎರಡು ಲೋಕಸಭೆ ಚುನಾವಣೆಗಳಲ್ಲಿಯೂ ಪಕ್ಷ ಉತ್ತಮ ಸಾಧನೆ ಮಾಡಿದೆ. ಉಚಿತ ವಿದ್ಯುತ್‌ನಂತಹ ಘೋಷಣೆಗಳು ಜನರ ಮನ ಗೆಲ್ಲುತ್ತಿವೆ.

    ಉಳಿದೆಡೆ ಬಿಜೆಪಿಗಿಲ್ಲ ಸಮಸ್ಯೆ
    ಇನ್ನು, ಉತ್ತರಾಖಂಡ, ಗೋವಾ, ಮಣಿಪುರಗಳಲ್ಲಿ ಆಡಳಿತಾರೂಢ ಬಿಜೆಪಿಗೆ ಯಾವುದೇ ಸಮಸ್ಯೆ ಇಲ್ಲ. ಉತ್ತರಾಖಂಡದಲ್ಲಿ ಒಂದೇ ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಾಯಿಸಿದ್ದು, ಆಡಳಿತ ವಿರೋಧ ಅಲೆ ಕೊಂಚ ಹಿನ್ನಡೆ ತರಬಹುದು. ನಿಸ್ತೇಜ ಕಾಂಗ್ರೆಸ್ ಮತ್ತು ಮೋದಿ ಅಲೆಯಿಂದ ಪಕ್ಷ ಅಧಿಕಾರ ಉಳಿಸಿಕೊಳ್ಳಲಿದೆ. ಗೋವಾದಲ್ಲಿ ತೃಣಮೂಲ ಕಾಂಗ್ರೆಸ್, ಆಪ್‌ಗಳೂ ಅದೃಷ್ಟ ಪರೀಕ್ಷೆಗೆ ಮುಂದಾಗಿವೆಯಾದರೂ, ಯಶಸ್ಸು ಪಡೆಯುವ ಸಾಧ್ಯತೆ ಬಹಳ ಕಡಿಮೆ. ಮಣಿಪುರದಲ್ಲಿಯೂ ಬಿಜೆಪಿಗೆ ಯಾವ ತೊಂದರೆಯೂ ಇಲ್ಲ.


    ಲೇಖಕರು ವೃತ್ತಿಯಲ್ಲಿ ಲೆಕ್ಕ ಸಲಹೆಗಾರರು, ಪ್ರವೃತ್ತಿಯಲ್ಲಿ ರಾಜಕೀಯ ವಿಶ್ಲೇಷಕರು.

    guest lecturess:ಅತಿಥಿ ಉಪನ್ಯಾಸಕರ ಹುದ್ದೆ: ಅರ್ಜಿಯಲ್ಲಿನ ತಪ್ಪು ಮಾಹಿತಿ ಸರಿಪಡಿಸಲು 2 ದಿನ ಅವಕಾಶ

    BENGALURU FEB 11

    2021-22ನೇ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಅತಿಥಿ ಉಪನ್ಯಾಸಕರ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಹಾಕುವಾಗ ತಪ್ಪು ಮಾಹಿತಿ ಒದಗಿಸಿದ್ದ ಅಭ್ಯರ್ಥಿಗಳಿಗೆ ಇದನ್ನು ಸರಿಪಡಿಸಿಕೊಳ್ಳಲು ಫೆ.12 ಮತ್ತು 13ರ ಮಟ್ಟಿಗೆ ಎರಡು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ.

    ಶುಕ್ರವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, `ಅತಿಥಿ ಉಪನ್ಯಾಸಕರ ಹುದ್ದೆಗಳ ನೇಮಕಕ್ಕೆ ಈಗಾಗಲೇ ಮೊದಲನೇ ಸುತ್ತಿನ ಕೌನ್ಸೆಲಿಂಗ್ ಮುಗಿದಿದ್ದು, ಆಯ್ಕೆಯಾಗಿರುವ ಬಹುತೇಕರು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ. ಆದರೆ, ಕೆಲವರು ಅರ್ಜಿ ಸಲ್ಲಿಸುವಾಗ ಸೇವಾ ಅನುಭವ ವಿವರ, ಸ್ನಾತಕೋತ್ತರ ಪದವಿ ಅಂಕಗಳು, ಪಿಎಚ್.ಡಿ/ಎಂ.ಫಿಲ್ ಪದವಿಗೆ ಸಂಬಂಧಿಸಿದ ವಿವರಗಳನ್ನು ತಪ್ಪಾಗಿ ತುಂಬಿದ್ದು, ಇವುಗಳನ್ನು ಸರಿಪಡಿಸಿಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ದಿನ ಅವಕಾಶ ಕೊಡಲಾಗುತ್ತಿದೆ’ ಎಂದು ವಿವರಿಸಿದ್ದಾರೆ.

    ಅಭ್ಯರ್ಥಿಗಳು ವಾಸ್ತವ ಮಾಹಿತಿಯನ್ನು ಒದಗಿಸದೆ, ಪುನಃ ತಪ್ಪು ಮಾಡಿದಲ್ಲಿ ಅಂತಹವರನ್ನು ಆಯ್ಕೆಪ್ರಕ್ರಿಯೆಯಲ್ಲಿ ಪರಿಗಣಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಕಾಲೇಜು ರಜೆ ಫೆ.16ವರೆಗೆ ಮುಂದುವರಿಕೆ:Online ಕಲಿಕೆ ಅಭಾದಿತ

    BENGALURU FEB 11

    ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಶಿಕ್ಷಣ ಸಂಸ್ಥೆಗಳಿಗೆ ನೀಡಿದ್ದ ರಜೆಯನ್ನು ಮುಂಜಾಗ್ರತಾ ಕ್ರಮವಾಗಿ ಫೆ.16ರವರೆಗೂ ಮುಂದುವರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಶುಕ್ರವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, `ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ವಿಶ್ವವಿದ್ಯಾಲಯಗಳು, ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜುಗಳಿಗೆ ಇದು ಅನ್ವಯಿಸುತ್ತದೆ. ಆದರೆ, ಈ ಅವಧಿಯಲ್ಲಿ ಆನ್ಲೈನ್ ಬೋಧನೆ ಎಂದಿನಂತೆಯೇ ನಡೆಯಲಿದೆ. ಜೊತೆಗೆ, ಈಗಾಗಲೇ ನಡೆಯುತ್ತಿರುವ ಮತ್ತು ನಿಗದಿಯಾಗಿರುವ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

    ಪರಿಸ್ಥಿತಿಯನ್ನು ಅವಲೋಕಿಸಿ, ಕಾಲೇಜು ಪುನಾರಂಭದ ಬಗ್ಗೆ ಫೆ.16ರ ಹೊತ್ತಿಗೆ ತೀರ್ಮಾನಿಸಲಾಗುವುದು ಎಂದು ಅವರು ಹೇಳಿದ್ದಾರೆ.

    ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ಇಲ್ಲ: ಅಶ್ವತ್ಥನಾರಾಯಣ

    BENGALURU FEB 11

    ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರುತ್ತಾರೆ ಎನ್ನುವುದು ಸುಳ್ಳು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    ಈ ಬಗ್ಗೆ ಸುದ್ದಿಗಾರರು ಶುಕ್ರವಾರದಂದು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, `ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸದಂತೆ ನಿರ್ಬಂಧಿಸಲಾಗುವುದು ಎಂದು ಕೆಲವರು ಗಾಳಿಸುದ್ದಿ ಹಬ್ಬಿಸುತ್ತಿದ್ದಾರೆ. ಬೋಧನಾ ವ್ಯವಸ್ಥೆಯು ಆನ್ ಲೈನ್ ರೂಪ ಪಡೆದಿರುವುದರಿಂದ ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಮುಂತಾದ ಆಧುನಿಕ ತಾಂತ್ರಿಕ ಸಾಧನಗಳು ವಿದ್ಯಾರ್ಥಿಗಳ ಕಲಿಕೆಯ ಅವಿಭಾಜ್ಯ ಅಂಗವೇ ಆಗಿಹೋಗಿವೆ. ಹೀಗಿರುವುದಾಗ ನಿಷೇಧದ ಮಾತು ಎಲ್ಲಿಂದ ಬರುತ್ತದೆ’ ಎಂದು ಅವರು ಪ್ರಶ್ನಿಸಿದರು.

    ಇಂತಹ ಗಾಳಿಮಾತುಗಳನ್ನು ವಿದ್ಯಾರ್ಥಿಗಳಾಗಲಿ, ಪೋಷಕರಾಗಲಿ ನಂಬಬಾರದು. ಆಧುನಿಕ ಸಾಧನಗಳನ್ನು ಬಳಸಿಕೊಂಡು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಮತ್ತು ಶಿಕ್ಷಣ ಪೂರೈಸುವುದು ಸರಕಾರದ ಆದ್ಯತೆಯಾಗಿದೆ. ಮೊಬೈಲ್ ಬಳಕೆ ಎಂದಿನಂತೆ ಮುಂದುವರಿಯಲಿದೆ’ ಎಂದು ಸಚಿವರು ನುಡಿದರು.

    Karnataka Schools : ಫೆಬ್ರವರಿ 14 ರಿಂದ ಹೈಸ್ಕೂಲ್ ಆರಂಭ ; ಪಿಯು ಮತ್ತು ಡಿಗ್ರಿ ಕಾಲೇಜು ಸಧ್ಯಕ್ಕಿಲ್ಲ

    BENGALURU FEB 10

    ಫೆಬ್ರವರಿ 14 ರಿಂದ ಪ್ರೌಢ ಶಾಲೆಗಳನ್ನು ಪುನರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮುಂದಿನ ಹಂತದಲ್ಲಿ ಪಿಯು ಮತ್ತು ಡಿಗ್ರಿ ಕಾಲೇಜು ಆರಂಭಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು. ಅವರು ಇಂದು ಶಿಕ್ಷಣ ಹಾಗೂ ಗೃಹ ಇಲಾಖೆಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಇಂದು ನಡೆದ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

    ನಾಳೆ ಉನ್ನತ ಮಟ್ಟದ ಸಭೆ :‘ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಸರ್ಕಾರದ್ದಾಗಿದೆ. ನಾಳೆ ಸಂಜೆ ಎಲ್ಲ ಸಚಿವರು, ಡಿಸಿ, ಎಸ್‍ಪಿ, ಸಿಇಓಗಳೊಂದಿಗೆ ಸಭೆ ನಡೆಸಲಿದ್ದು, ಜಿಲ್ಲೆಗಳಲ್ಲಿನ ವಸ್ತುಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ನಿರ್ದೇಶನ ನೀಡಲಾಗುವುದು. ನಾನು, ಶಿಕ್ಷಣ ಹಾಗೂ ಗೃಹ ಸಚಿವರು ನಿರಂತರ ಸಂಪರ್ಕದಲ್ಲಿರಲಿದ್ದೇವೆ. ಹಿರಿಯ ಅಧಿಕಾರಿಗಳು ಕೂಡ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಂಪರ್ಕದಲ್ಲಿರಲು ಸೂಚನೆ ನೀಡಿದೆ ’ ಎಂದರು.

    ಉಚ್ಛನ್ಯಾಯಾಲಯದ ಆದೇಶ ಬರುವವರೆಗೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ಶಿಕ್ಷಣವನ್ನು ಮುಂದುವರೆಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈ ಬಾರಿ ಶಾಲೆಗಳು ಪ್ರಾರಂಭವಾದಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

    ಪ್ರಚೋದನೆಗಳಿಗೆ ಕಿವಿಗೊಡದೆ ಶಾಂತಿಯನ್ನು ಕಾಪಾಡಬೇಕು:
    ಶಾಲೆಗಳ ವಸ್ತ್ರ ಸಂಹಿತೆಯ ಕುರಿತು ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ವಿವಾದವು ಉಚ್ಛ ನ್ಯಾಯಾಲಯದ ಮೆಟ್ಟಿಲನ್ನು ಏರಿದೆ. ಎಲ್ಲರೂ ಶಾಂತಿ ಕಾಪಾಡಿ ನ್ಯಾಯಾಲಯದ ತೀರ್ಪನ್ನು ನಾವೆಲ್ಲರೂ ಗೌರವಿಸಬೇಕಾಗುತ್ತದೆ ಎಂದರು.

    ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಮಕ್ಕಳಲ್ಲಿ ಗೊಂದಲ ಕಡಿಮೆಯಾಗಿದೆ. ಕಳೆದ ಯಾವುದೇ ಅಹಿತಕರ ಘಟನೆ ಎಲ್ಲಿಯೂ ನಡೆದಿಲ್ಲ. ಹೊರಗಡೆಯಿಂದ ಆಗುವ ಪ್ರಚೋದನೆಗಳಿಗೆ ಕಿವಿಗೊಡದೆ ಶಾಂತಿಯನ್ನು ಕಾಪಾಡಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು. ತ್ರಿಸದಸ್ಯ ಪೀಠದ ಮುಂದೆ ವಿಚಾರಣೆಯಲ್ಲಿ ಪ್ರತಿದಿನ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಅಲ್ಲಿಯವರೆಗೆ ಎಲ್ಲರೂ ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ. ಶಾಂತಿ ಕಾಪಾಡಲು ಕಾಲೇಜಿನಲ್ಲಿ ಯಾವುದೇ ಧಾರ್ಮಿಕವಾದ ಬಟ್ಟೆಯನ್ನು ಧರಿಸುವುದು ಬೇಡ ಎಂಬ ಸೂಚನೆ ನೀಡಿದ್ದಾರೆ. ಶಾಲೆಗಳು ಪ್ರಾರಂಭಿಸುವಂತೆಯೂ ನ್ಯಾಯಾಲಯ ಸೂಚನೆ ನೀಡಲಾಗಿದೆ ಎಂದರು.

    ವಿದ್ಯಾರ್ಥಿಗಳಿಗೆ ಧನ್ಯವಾದ:
    ವಿದ್ಯಾರ್ಥಿಗಳು ಒಗ್ಗಟ್ಟಾಗಿ ವಿದ್ಯಾರ್ಜನೆ ಮಾಡಬೇಕು. ಶಾಲೆಗಳ ಹಾಗೂ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಅತ್ಯಂತ ಸಂಯಮದಿಂದ ವರ್ತಿಸಿದ್ದಾರೆ. ಅವರಿಗೆ ಪ್ರೀತಿಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಪದವಿ ಸೆಮಿಸ್ಟರ್ ಪರೀಕ್ಷೆ: ಒಂದು ತಿಂಗಳು ಮುಂದೂಡಲು ಮನವಿ

    BENGALURU FEB10
    ಕೊರೋನಾ ಮತ್ತು ಓಮೈಕ್ರಾನ್ ಸೋಂಕು ಹೆಚ್ಚಳ ಹಾಗೂ ಅತಿಥಿ ಉಪನ್ಯಾಸಕರ ಮುಷ್ಕರದಿಂದಾಗಿ ಬೋಧನಾ ಕಾರ್ಯ ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ ಪದವಿ ಕೋರ್ಸುಗಳ ಸೆಮಿಸ್ಟರ್ ಪರೀಕ್ಷೆಯನ್ನು ಒಂದು ತಿಂಗಳಾದರೂ ಮುಂದೂಡುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಅವರು ಉನ್ನತ ಶಿಕ್ಷಣ ಇಲಾಖೆಯ ಹೆಚ್ಚವರಿ ಮುಖ್ಯ ಕಾರ್ಯದರ್ಶಿ ಅವರನ್ನು ಕೋರಿದ್ದಾರೆ.

    ಈ ಬಗ್ಗೆ ಗುರುವಾರ ಪತ್ರ ಬರೆದಿರುವ ಅವರು, ‘ಕೆಲವು ವಿ.ವಿ.ಗಳು ಈಗಾಗಲೇ ಸೆಮಿಸ್ಟರ್ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿವೆ. ಆದರೆ, ಬೋಧನಾ ಕಾರ್ಯ ಇನ್ನೂ ಮುಗಿದಿಲ್ಲ. ಹೀಗಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡುವಂತೆ ರಾಜ್ಯದ ಎಲ್ಲ ವಿ.ವಿ.ಗಳಿಗೂ ನಿರ್ದೇಶಿಸಬೇಕು’ ಎಂದು ಅವರು ಕೋರಿದ್ದಾರೆ.

    error: Content is protected !!