ಮಲ್ಲೇಶ್ವರದ ಮಾರ್ಗೋಸಾ ರಸ್ತೆಯ 15ನೇ ಅಡ್ಡರಸ್ತೆಯ ಸಿಗ್ನಲ್ ಬಳಿ ಅವೈಜ್ಞಾನಿಕವಾಗಿ ರಸ್ತೆ ಉಬ್ಬು ಹಾಕಿರುವ ಬಿಬಿಎಂಪಿ ಅಧಿಕಾರಿಗಳನ್ನು ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಅವರು, `ಮಾರ್ಗೋಸಾ ರಸ್ತೆಯ ವೀಣಾ ಸ್ಟೋರ್ಸ್ ಜಂಕ್ಷನ್ ಸಮೀಪ ಹಾಕಿರುವ ರಸ್ತೆ ಉಬ್ಬು ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ರಸ್ತೆ ನಿರ್ಮಾಣದ ನಿಯಮಗಳಿಗೆ ತದ್ವಿರುದ್ಧವಾಗಿ ಮಾಡಿರುವ ಈ ರಸ್ತೆ ಉಬ್ಬಿನಿಂದಾಗಿ ಇಲ್ಲಿ ಹಲವು ಅಪಘಾತಗಳಾಗಿವೆ. ಇದನ್ನು ತ್ವರಿತವಾಗಿ ಸರಿಪಡಿಸದಿದ್ದರೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧವೇ ಪ್ರಕರಣ ದಾಖಲಿಸಲಾಗುವುದು’ ಎಂದು ಬಿಬಿಎಂಪಿ ಬೃಹತ್ ರಸ್ತೆಗಳ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರವೀಣ್ ಅವರಿಗೆ ಎಚ್ಚರಿಕೆ ನೀಡಿದರು.
`ಈ ರಸ್ತೆ ಉಬ್ಬಿಗೆ ಬಿಳಿ ಬಣ್ಣದ ಪಟ್ಟೆಗಳನ್ನಾಗಲಿ, ರಾತ್ರಿ ಹೊತ್ತು ಈ ಉಬ್ಬು ಇರುವುದು ಗೊತ್ತಾಗುವಂತೆ ರೇಡಿಯಂ ಫಲಕಗಳನ್ನಾಗಲಿ ಅಳವಡಿಸಿಲ್ಲ. ಜೊತೆಗೆ, ಸಿಗ್ನಲ್ ಸಮೀಪದಲ್ಲೇ ಇದನ್ನು ಹಾಕಲಾಗಿದೆ. ಇಲ್ಲಿ ಅಪಘಾತಗಳು ಸಂಭವಿಸಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದರೂ ಅಧಿಕಾರಿಯಾದ ನೀವು ಸ್ಥಳಕ್ಕೆ ಭೇಟಿ ನೀಡದೆ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿದ್ದೀರಿ. ಇದನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ಬಿಬಿಎಂಪಿ ಅಧಿಕಾರಿಗಳು ಜನರ ಪ್ರಾಣದ ಜೊತೆ ಚೆಲ್ಲಾಟವಾಡುವುದನ್ನು ಬಿಡಬೇಕು’ ಎಂದು ಅವರು ಹರಿಹಾಯ್ದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳ ತಂಡವು ಸಬೂಬು ಹೇಳಲು ಮುಂದಾಯಿತು. ಇದನ್ನು ಒಪ್ಪದ ಸಚಿವರು, ದಿನವೂ ಹತ್ತಾರು ಸಾವಿರ ವಾಹನಗಳು ಚಲಿಸುವ ನಿಬಿಡ ರಸ್ತೆಯಾಗಿರುವ ಮಾರ್ಗೋಸಾ ರಸ್ತೆಯಲ್ಲಿ ಇತ್ತೀಚೆಗೆ ಹೊಸದಾಗಿ ಡಾಂಬರೀಕರಣ ಮಾಡಲಾಗಿದೆ. ಆ ಸಂದರ್ಭದಲ್ಲೇ ಯೋಜನೆ ಪ್ರಕಾರ ವೈಜ್ಞಾನಿಕ ರಸ್ತೆ ಉಬ್ಬು ಹಾಕಬೇಕಿತ್ತು. ಆ ಕೆಲಸ ಮಾಡದ ಕಾರಣಕ್ಕೆ ಹಲವು ವಾಹನ ಸವಾರರು ರಾತ್ರಿ ವೇಳೆ ಬೀಳುತ್ತಿದ್ದಾರೆ. ಈ ರೀತಿ ಇನ್ನು ಮುಂದೆ ಆಗದಂತೆ ನೋಡಿಕೊಳ್ಳಬೇಕು. ಕ್ಷೇತ್ರ ವ್ಯಾಪ್ತಿಯ ಈ ರೀತಿಯ ಕಪ್ಪು ಸ್ಥಳಗಳನ್ನು ಗುರುತಿಸಿ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.
ಈ ರಸ್ತೆ ಉಬ್ಬಿನ ಸಮೀಪ ಇತ್ತೀಚೆಗೆ ಹಲವು ಅಪಘಾತಗಳು ಸಂಭವಿಸಿದ್ದವು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಸಾರ್ವಜನಿಕರು ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದಿದ್ದರು. ಇದಾದಮೇಲೆ ಸಚಿವರು ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಇದರ ಜತೆಗೆ, ಸ್ಥಳಕ್ಕೆ ಭೇಟಿ ನೀಡದೆ ಕರ್ತವ್ಯಲೋಪ ಎಸಗಿರುವ ಎಂಜಿನಿಯರ್ ಪ್ರವೀಣ್ ಅವರನ್ನೂ ಸಚಿವರು ತರಾಟೆಗೆ ಕೂಡ ಎಚ್ಚರಿಕೆ ನೀಡಿದರು.
ಮಲ್ಲೇಶ್ವರಂ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಜಯಶಂಕರ್, ಬಾಲಾಜಿ, ಸಹಾಯಕ ಎಂಜಿನಿಯರ್ ಮಾರ್ಕಂಡಯ್ಯ ಇದ್ದರು.
ಬಯಕೆಗೆ ಬಡವರಿಲ್ಲ- ರುದ್ರಭಟ್ಟನ ‘ಜಗನ್ನಾಥ ವಿಜಯ’ದಲ್ಲಿ ಬರುವ ಮಾತಿದು. ಬಯಕೆ ಎಂದರೆ ಬೇಡಿಕೆಗಳು,ಆವಶ್ಯಕತೆಗಳು ಎಂದಾಗುತ್ತವೆ. ಬಯಸಿದ್ದೆಲ್ಲಾ ಸಿಗುವುದು ಸಿಗದೆ ಇರುವುದು ಬೇರೆಯ ವಿಚಾರ ಆದರೆ ಬಯಸುವುದರಲ್ಲಿ ತಪ್ಪಿಲ್ಲ.
ಬಯಕೆಗೆ ಬಡವರಿಲ್ಲ ಎಂಬುದೊಂದು ಬಡತನಕ್ಕೆ ಸಂಬಂಧಿಸಿದ ನಾಣ್ಣುಡಿ ಎನ್ನಬಹುದು. ಆಕಾಶವನ್ನು ನೋಡಲು ನೂಕು ನುಗ್ಗಲೇ ? ನಾವು ಎಲ್ಲಿ ನಿಂತರೂ ಆಕಾಶವನ್ನು ವೀಕ್ಷಿಸಬಹುದು. ಹಾಗೆಯೇ ಬಯಕೆಯನ್ನು ಹೊಂದಲು ಶ್ರೀಮಂತರಾಗಿರಬೇಕು ಬಡವರಾಗಿರಬೇಕು ಎನ್ನುವ ಕಟ್ಟುಪಾಡಿಲ್ಲ. ಈ ಬಯಕೆಗಳು ಸೀಮಾತೀತ,ವರ್ಗಾತೀತ.
‘ಬಯಕೆ’ ಎನ್ನುವುದು ಧನಾತ್ಮಕತೆಯ ಸಂಕೇತ ಎನ್ನಬಹುದು. ಉದಾಹರಣೆಗೆ ವಿದ್ಯಾರ್ಥಿಯೊಬ್ಬ ಉತ್ತಮ ಅಂಕಗಳನ್ನು ಪಡೆದು ಉತ್ತಮ ಗಳಿಕೆಹೊಂದಬೇಕು ಎಂದಾದಲ್ಲಿ ಅದಕ್ಕೆ ಪೂರಕವಾಗಿ ಆತ ಪ್ರಯತ್ನ ಮಾಡಲೇಬೇಕಾಗುತ್ತದೆ. ಅಂದರೆ ಬಯಕೆ ಈಡೇರಲು ಶ್ರಮವನ್ನು ಅಪೇಕ್ಷಿಸುತ್ತದೆ ಎಂದಾಯಿತು ಅಲ್ಲವೆ. ಅರ್ಥಾತ್ ಶ್ರಮ ನಮಗೆ ಬಯಸಿಒದ್ದನ್ನು ಕೊಡಬಹುದು ಎಂದಾಯಿತಲ್ಲವೆ?
ಬಯಕೆಯೇ ಬದುಕು ಎಂಬಂತೆ ಬಯಕೆಗಳು ಬದುಕುವ ಆಸೆಯನ್ನು ಜೀವಂತವಾಗಿರಿಸುತ್ತವೆ. ಈ ಆಸೆಗಳು ನಮ್ಮನ್ನು ಇನ್ನಷ್ಟು ಕ್ರಿಯಾಶೀಲರನ್ನಾಗಿಸಬಹುದು. ಬಯಕೆ ಹೊಂದಲು ನಿರ್ಬಂಧಗಳೆನ್ನುವ ಟ್ರಾಫಿಕ್ ಜಾಮನ್ನು ಧಾಟಬೇಕಿಲ್ಲ, ಮುಂಗಡ ಚೀಟಿಯನ್ನೇನು ನಾವು ಪಡೆಯಬೇಕಿಲ್ಲ. ಬಯಕೆಗಳಿಲ್ಲದ ಬದುಕು ಬರಡೇ ಸರಿ! ನಮಗನ್ನಿಸಿದ್ದನ್ನು ಆಶಿಸಿ ಈಡೇರಿಸಿಕೊಳ್ಳಬಹುದಾದ ಬಯಕೆಗಳು ಬದುಕಿಗೆ ಅಮೃತ ಸಿಂಚನಗಳು.
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.
ಭಾರತೀಯ ಷೇರುಪೇಟೆಯ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನ ಹೆಗ್ಗುರುತಾದ ಸೆನ್ಸೆಕ್ಸ್ ದಿನನಿತ್ಯವೂ ಏರಿಳಿತಗಳನ್ನು ಪ್ರದರ್ಶಿಸುತ್ತಿದ್ದು, ಸೆನ್ಸೆಕ್ಸ್ ನಲ್ಲಿರುವ 30 ಕಂಪನಿಗಳು ಚಕ್ರಾಕರಾದಲ್ಲಿ ಚಲಿಸಿ ಎರಡು ದಿನ ಏರಿಕೆ ಕಂಡರೆ, ಮತ್ತೆರಡು/ ಮೂರು ದಿನ ಇಳಿಕೆ ಕಾಣುವ ರೀತಿ ಮ್ಯೂಸಿಕಲ್ ಚೇರ್ ಆಟದಂತೆ ಏರಿಳಿತಗಳನ್ನು ಪ್ರದರ್ಶಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ವಲಯದ ಕಂಪನಿಗಳು, ಅವುಗಳಲ್ಲಿ ಕೆಲವು ಉತ್ತಮವಾದ, ಆಕರ್ಷಣೀಯ ಫಲಿತಾಂಶಗಳನ್ನು ಪ್ರಕಟಿಸಿದರೂ ಸಹ ಏರಿಕೆಯ ಹಂತವನ್ನು ಸ್ಥಿರಗೊಳಿಸಿಕೊಳ್ಳಲು ಅಸಮರ್ಥವಾಗಿದ್ದು ಪೇಟೆಯಲ್ಲಿ ನಡೆಯುತ್ತಿರುವ ವ್ಯವಹಾರಿಕ ಚಿಂತನೆಗೆ ಹಿಡಿದ ಕನ್ನಡಿಯಾಗಿದೆ.
ಹಿಂದಿನವಾರದಲ್ಲಿ ಅಮೇರಿಕಾದ ಫೇಸ್ ಬುಕ್ ಕಂಪನಿಯ ಕಳಪೆ ಸಾಧನೆಯ ಕಾರಣ ಭಾರಿ ಮಾರಾಟದ ಒತ್ತಡಕ್ಕೊಳಗಾಗಿ ಷೇರಿನಬೆಲೆ ಭರ್ಜರಿ ದಾಖಲೆಯ ಕುಸಿತ ಕಂಡಿದೆ. ಇದಕ್ಕೆ ಆ ಕಂಪನಿಯು ನೀಡಿದ ಸಮಜಾಯಿಶಿ ಎಂದರೆ ʼ ಭಾರತದಲ್ಲಿ ಬಳಕೆದಾರರ ಬೆಂಬಲದ ಕೊರತೆಯ ಕಾರಣ ಕಂಪನಿ ಏಳ್ಗೆ ಕಾಣಲು ವಿಫಲವಾಗಿದೆʼ ಎಂದಿದೆ. ಅಂದರೆ ಒಂದು ವಿದೇಶಿ ಕಂಪನಿಯ ಏಳ್ಗೆಗೆ ಭಾರತೀಯರ ಕೊಡುಗೆ ಯಾವ ಮಟ್ಟದಲ್ಲಿದೆ ಎಂಬುದರ ಅರಿವಾಗುತ್ತದೆ.
ಭಾರತೀಯ ಷೇರುಪೇಟೆಗಳಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳು ಜನವರಿ 12 ರಿಂದಲೂ ನಿರಂತರವಾಗಿ ಮಾರಾಟಮಾಡುತ್ತಿವೆ. ಜನವರಿ 12 ರಿಂದಲೂ ಏಕಮುಖವಾಗಿ ಮಾರಾಟದ ಹಾದಿಯಲ್ಲಿ ರೂ.46,498 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರೂ, ಸೆನ್ಸೆಕ್ಸ್ ಮಾತ್ರ 3,184 ಪಾಯಿಂಟುಗಳಷ್ಠು ಮಾತ್ರ ಕುಸಿದಿದೆ. ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.277.22 ಲಕ್ಷ ಕೋಟಿಯಿಂದ ರೂ.267.71 ಲಕ್ಷ ಕೋಟಿಗೆ ಇಳಿದಿದೆ. ಆದರೆ 2020 ರ ಫೆಬ್ರವರಿ 20 ರಿಂದ ಮಾರ್ಚ್ 26 ರವರೆಗೂ ವಿದೇಶಿ ವಿತ್ತೀಯ ಸಂಸ್ಥೆಗಳು ಸುಮಾರು ರೂ.70 ಸಾವಿರ ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿ ಸೆನ್ಸೆಕ್ಸ್ ನಲ್ಲಿ 11,354 ಪಾಯಿಂಟುಗಳ ಇಳಿಕೆಯನ್ನುಂಟುಮಾಡಿದ್ದವು. ಆದರೆ ಈ ಬಾರಿ ರೂ.46,498 ಕೋಟಿ ಮೌಲ್ಯದ ಷೇರು ಮಾರಾಟಮಾಡಿದರೂ ಕೇವಲ 3,184 ಪಾಯಿಂಟುಗಳ ಕುಸಿತ ಕಂಡಿದೆ.
ಈ ರೀತಿಯ ತಾರಾತಮ್ಯಕ್ಕೆ ಮುಖ್ಯ ಕಾರಣ ನಮ್ಮ ದೇಶದ ಆಂತರಿಕ ಶಕ್ತಿ. ಅದು ಜನಸಾಮಾನ್ಯರು ಷೇರುಪೇಟೆಯತ್ತ ಗಮನಹರಿಸಿರುವುದಾಗಿದೆ. ಹಿಂದಿನ ವರ್ಷ ಅಂದರೆ 08 ನೇ ಫೆಬ್ರವರಿ 2021 ರಂದು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ನೋಂದಾಯಿಸಿಕೊಂಡಿದ್ದ ಗ್ರಾಹಕರ ಸಂಖ್ಯೆಯು 5.92 ಕೋಟಿ ಇತ್ತು. ಈ ವರ್ಷ ಫೆಬ್ರವರಿ 4 ರಂದು ಈ ಸಂಖ್ಯೆಯು 9.59 ಕೋಟಿಗೆ ಏರಿಕೆ ಕಂಡಿದೆ. ಸುಮಾರು ಶೇ.64ರಷ್ಠು ಭಾಗವಹಿಸುವವರ ಸಂಖ್ಯೆಯು ಹೆಚ್ಚಾಗಿದೆ. ಈ ಹೊಸ ಹೂಡಿಕೆದಾರರ ಪ್ರವೇಶದಿಂದ ಪೇಟೆಯತ್ತ ಹರಿದುಬರುತ್ತಿರುವ ಹಣದ ಹೊಳೆಯೊಂದಿಗೆ ಮ್ಯೂಚುಯಲ್ ಫಂಡ್ ಗಳ ಮೂಲಕ ಪ್ರತಿ ತಿಂಗಳೂ, ಈಕ್ವಿಟಿ ಆಧಾರಿತ ಎಸ್ ಐ ಪಿ ಹೂಡಿಕೆಯ ಸುಮಾರು ರೂ.25,000 ಕೋಟಿ ಸಂಗ್ರಹವಾಗುತ್ತಿರುವ ಹಣವೂ ಸಹ ಪೇಟೆಯತ್ತ ಹರಿದುಬರುತ್ತಿರುವುದು, ಉತ್ತಮ, ಅಗ್ರಮಾನ್ಯ ಕಂಪನಿಗಳಿಗೆ ಭಾರಿ ಬೇಡಿಕೆಯನ್ನು ಸೃಷ್ಟಿಸಿದೆ.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ ವಿದೇಶಿ ವಿತ್ತೀಯ ಸಂಸ್ಥೆಗಳು ಹೆಚ್ಚು ಮಾರಾಟಮಾಡುತ್ತಿದ್ದರೂ ಸಹ ಆಂತರಿಕವಾಗಿ ಬರುತ್ತಿರುವ ಹಣದ ಹೊಳೆಯು ಎಲ್ಲವನ್ನೂ ಹೀರಿಕೊಳ್ಳುತ್ತಿರುವುದರಿಂದ ಷೇರುಪೇಟೆಯ ಮೇಲೆ ಹೆಚ್ಚು ಪ್ರಭಾವಿಯಾಗುತ್ತಿಲ್ಲ. ಈ ಸಂದರ್ಭದಲ್ಲಿ ಗಮನಿಸಬೇಕಾದ ಅಂಶ ಎಂದರೆ 141 ದೇಶಗಳ ಗ್ಲೋಬಲ್ ಕಾಂಪಿಟೇಟಿವ್ ಇಂಡೆಕ್ಸ್ ನಲ್ಲಿ ಭಾರತದ ಮಾರ್ಕೆಟ್ ಸೈಜ್ – 3, ಇದು ಇಂದು ಸಕಾರಾತ್ಮಕವಾಗಿ ಪರಿಣಮಿಸಿದೆ. ದೇಶದ ಜನಸಂಖ್ಯೆ 140 ಕೋಟಿಯಲ್ಲಿ ಕೇವಲ 9.59 ಕೋಟಿ ಜನರು ಮಾತ್ರ ಷೇರುಪೇಟೆಯ ಚಟುವಟಿಕೆಯಲ್ಲಿ ಭಾಗವಹಿಸುವ ಕಾರಣ ಈ ರೀತಿಯ ಸ್ಥಿರತೆ ಕಾಣುತ್ತಿದ್ದೇವೆ. ಇದು ದ್ವಿಗುಣಗೊಂಡಲ್ಲಿ ಯಾವ ಪ್ರಮಾಣದ ಬೇಡಿಕೆ ಉಂಟಾಗಿ ಅಸ್ಥಿರತೆಗೆ ಕಾರಣವಾಗಬಹುದೇ, ಕಾದು ನೋಡಬೇಕಾಗಿದೆ.
ಈ ವಾತಾವರಣವನ್ನು ಇತ್ತೀಚೆಗೆ ಬರುತ್ತಿರುವ ಹೊಸಪೀಳಿಗೆ ಸ್ಟಾರ್ಟ್ ಅಪ್ ಗಳು ಜನಸಾಮಾನ್ಯರನ್ನು ಆಕರ್ಷಿಸಿ ಅವರಿಗೆ ತಮ್ಮ ಷೇರುಗಳನ್ನು ಅತ್ಯಧಿಕ ಪ್ರೀಮಿಯಂನಲ್ಲಿ ವಿತರಿಸಿ, ಅವರಲ್ಲಿ ಐಪಿಒ ಎಂದರೆ ತಾತ್ಸಾರ ಭಾವನೆಯನ್ನು ಬಿತ್ತುತ್ತಿವೆ.
ಈ ದಿಶೆಯಲ್ಲಿ ಐ ಪಿ ಒ ಗಳು ತೇಲಿಬಿಟ್ಟಾಗ ಗಮನಿಸಲೇಬೇಕಾದಂತಹ ಹಲವು ಅಂಶಗಳು ಇಂತಿವೆ.
ಐ ಪಿ ಒ ಮೂಲಕ ವಿತರಿಸಲಾಗುತ್ತಿರುವ ಷೇರುಗಳ ಮುಖಬೆಲೆ ಏನು? ಅದು ರೂ.1 ಅಥವಾ 2 ಆದರೆ ವಿತರಣಾ ಸಂದರ್ಭಕ್ಕೂ ಮುಂಚಿನ ದಿನಗಳಲ್ಲಿ ಮುಖಬೆಲೆ ಸೀಳಲಾಗಿದೆಯೇ? ಹೌದೆಂದಾದರೆ ಆ ಕಂಪನಿಯ ಉದ್ದೇಶವೇನೆಂಬುದರ ಅರಿವಾಗುತ್ತದೆ.
ಆ ಕಂಪನಿಯು ಐಪಿಒ ಗೂ ಮುಂಚಿನ ದಿನಗಳಲ್ಲಿ ಪಬ್ಲಿಕ್ ಲಿಮಿಟೆಡ್ ಕಂಪನಿಯಾಗಿದೆಯೇ? ಹೌದೆಂದಾದರೆ ಕಂಪನಿ ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಂದ ಹಣ ಸಂಗ್ರಹಣೆಯ ದೃಷ್ಟಿಯಿಂದಲೇ ಈ ಕ್ರಮಕ್ಕೆ ಮುಂದಾಗಿದೆ ಎಂದಾಗುವುದು.
ಐ ಪಿ ಒ ಗೂ ಮುಂಚೆ ಕಂಪನಿಯು ಯಾವ ರೀತಿಯ ಕಾರ್ಪೊರೇಟ್ ಫಲಗಳನ್ನು ವಿತರಿಸಿಕೊಂಡಿದೆ, ವಿಶೇಷವಾಗಿ ಅದು ವಿತರಿಸಿದ ಬೋನಸ್ ಷೇರಿನ ಪ್ರಮಾಣವೇನು? ಕಾರಣ ಆಗಸ್ಟ್ 2021 ರಲ್ಲಿ ವಿತರಿಸಿದ ವಿಜಯ್ ಡಯಾಗ್ನಾಸ್ಟಿಕ್ಸ್ ಕಂಪನಿಯು ಮೇ 2021 ರಲ್ಲಿ ಪ್ರತಿ 4 ಷೇರುಗಳಿಗೆ 5 ರಂತೆ ಬೋನಸ್ ಷೇರು ವಿತರಿಸಿ, ಇರುವ ಮೀಸಲು ನಿಧಿಯನ್ನು ಕರಗಿಸಿ, ನಂತರ ರೂ.531 ರಂತೆ ಐಪಿಒ ನಲ್ಲಿ ಷೇರು ವಿತರಿಸಿದೆ. ಝೊಮಾಟೋ ಕಂಪನಿಯು ಜುಲೈ 2021 ರಲ್ಲಿ ಪ್ರತಿ 1 ಷೇರಿಗೆ 6,691 ಷೇರುಗಳ ಅನುಪಾತದಲ್ಲಿ ಬೋನಸ್ ಷೇರು ವಿತರಿಸಿ, ಇರುವ ಮೀಸಲು ನಿಧಿಯನ್ನು ಕರಗಿಸಿ, ನಂತರ ರೂ.76 ರಂತೆ ಷೇರು ವಿತರಿಸಿದೆ. ಅಂದರೆ ಕಂಪನಿಯ ಖಜಾನೆಯಲ್ಲಿರುವ ʼರಸʼವನ್ನು ಹೀರಿಕೊಂಡು ನಂತರ ಸಿಪ್ಪೆಯಂತಹ ಸಪ್ಪೆಯ ಭಾಗವನ್ನು ಸಾರ್ವಜನಿಕರಿಗೆ ಹಂಚುವುದು ಯಾವ ನ್ಯಾಯ?
ಕಂಪನಿಯ ಪ್ರವರ್ತಕರಿಗೆ ಬಿದ್ದ ಷೇರಿನ ಬೆಲೆ ಏನು? ಮತ್ತು ಆ ಷೇರುಗಳನ್ನು ವಿತರಿಸುತ್ತಿರುವ ಪ್ರೀಮಿಯಂ ಏನು? ಇವುಗಳ ವ್ಯತ್ಯಾಸ ಭಾರಿ ಪ್ರಮಾಣದಲ್ಲಿದ್ದಲ್ಲಿ ಅಂತಹ ಕಂಪನಿಗಳಿಂದ ದೂರ ಉಳಿವುದೇ ಲೇಸು.
ಕಂಪನಿಗಳು ಹೊಸ ಷೇರುಗಳನ್ನು ಮತ್ತು ಪ್ರವರ್ತಕರಾದಿಯಾಗಿರುವವರ ಷೇರುಗಳನ್ನು ಮಾರಾಟಮಾಡುತ್ತಿರುವ ಪ್ರಮಾಣವನ್ನೂ ಸಹ ಗಮನಿಸಬೇಕು. ಕೆಲವು ಕಂಪನಿಗಳು ಕೇವಲ ಆಫರ್ ಫಾರ್ ಸೇಲ್ ಮೂಲಕ ಮಾತ್ರ ಷೇರು ವಿತರಿಸುವುವು. ವಿತರಿಸುವ ಪ್ರೀಮಿಯಂ ಸಹ ಅತಿ ಹೆಚ್ಚಾಗಿದ್ದು ಸಂಗ್ರಹವಾದ ಸಂಪೂರ್ಣ ಸಂಪನ್ಮೂಲವು ಪ್ರವರ್ತಕರ ಕಿಸೆಗೆ ಸೇರಿಕೊಳ್ಳುವುದು. ಇದರಿಂದ ಕಂಪನಿಗೆ ಯಾವ ರೀತಿಯ ಪ್ರಯೋಜನವಿರಲಾರದು. ಹಾಗಾಗಿ ಇಂತಹ ಕಂಪನಿಗಳಿಗೆ ಐಪಿಒ ಮೂಲಕ ಚಂದಾದಾರರಾಗುವುದಕ್ಕಿಂತ, ಆ ಕಂಪನಿಯ ಷೇರುಗಳು ಲೀಸ್ಟಿಂಗ್ ಆದ ಮೇಲೆ ಆಕರ್ಷಕ ಹೂಡಿಕೆ ಎನಿಸಿದಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲದಿದ್ದಲ್ಲಿ ಪೇಟೆಯಲ್ಲಿ ಪರ್ಯಾಯ ಹೂಡಿಕೆ ಆನ್ವೇಷಣೆ ಮಾಡಬಹುದು. ಉದಾಹರಣೆಗೆ ವೇದಾಂತ ಫ್ಯಾಶನ್ಸ್ ಕಂಪನಿ ವಿತರಿಸುತ್ತಿರುವ ರೂ.1 ರ ಮುಖಬೆಲೆಯ ಷೇರಿಗೆ ರೂ.866 ಎಂದು ನಿಗದಿಪಡಿಸಿದ್ದು, ಸಂಗ್ರಹಣೆಯಾದ ಸಂಪೂರ್ಣ ರೂ.3,149 ಕೋಟಿ ಹಣವೂ ಪ್ರವರ್ತಕರ ಕಿಟ್ಟಿಗೆ ಸೇರಿಕೊಳ್ಳುವುದು. ಇದರಿಂದ ಕಂಪನಿಗೆ ಯಾವ ಪ್ರಯೋಜನವೂ ಇರುವುದಿಲ್ಲ.
ಈ ಅಂಶಗಳು ಕೇವಲ ಮಾರ್ಗದರ್ಶನಕ್ಕಾಗಿ, ಹೊಸ ಹೂಡಿಕೆದಾರರ ಮಾಹಿತಿಗಾಗಿ ನೀಡಲಾಗಿದ್ದು, ಅಂತಿಮವಾಗಿ ಹೂಡಿಕೆದಾರರೇ ನಿರ್ಧರಿಸಬೇಕು. ಅರಿತು ಹೂಡಿಕೆ ಮಾಡಿ – ಅನುಸರಿಸಬೇಡಿ.
ಇದುಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.
ಎಂಟು ದಶಕಗಳಿಂದ ಭಾರತೀಯರಿಗೆ ಸುಮಧುರ ಗಾಯನವನ್ನು ನೀಡಿದ ಗಾನ ಕೋಗಿಲೆ ಇಂದು ಹಾಡು ನಿಲ್ಲಿಸಿದೆ. ಲತಾ ಮಂಗೇಶ್ಕರ್ ಅವರ ನಿಧನದಿಂದ ಭಾರತೀಯ ಸಂಗೀತ ಕ್ಷೇತ್ರಕ್ಕೆ ದೊಡ್ಡ ನಷ್ಟ. ಕೇಳುಗರಿಗೆ ಮತ್ತು ನೋಡುವವರಿಗೆ ಬಾಲಿವುಡ್ ನಟಿಯರೇ ಹಾಡುತ್ತಿರಬಹುದೆಂಬ ಭ್ರಮೆ ಹುಟ್ಟಿಸುವಂತಹ ಧ್ವನಿ ಅವರದು. ಅಷ್ಟೊಂದು ವೈವಿಧ್ಯತೆಯಲ್ಲಿ ಹಾಡುವ ಲತಾಜೀಗೆ ಮತ್ತೊಬ್ಬರು ಸಾಟಿ ಇಲ್ಲ.
ಸವಿನಯದ ಪ್ರತಿರೂಪ
ಸೌಜನ್ಯ, ಸರಳತೆ ಮತ್ತು ಸವಿನಯದ ಪ್ರತಿರೂಪವೇ ಲತಾ ಮಂಗೇಶ್ಕರ್. ಸದಾ ಬಿಳಿಯ ಉಡುಪಿನಲ್ಲಿ ಕಾಣಿಸಿಕೊಳ್ಳುವ ಈ ಸ್ವರ ಸಂಗೀತದ ಗಾನಕೋಗಿಲೆ, ಬಹಳ ಸಂಕೋಚದ ಸ್ವಭಾವದವರು.
ಹಾಗೆಂದು ಜೀವನವೇನು ಸುಖದಲ್ಲಿ ಶುರುವಾಗಲಿಲ್ಲ.ತಂದೆ ದೀನಾನಾಥ್ ಅವರ ಅಕಾಲಿಕ ಮರಣ ದಿಂದಾಗಿ 12 ವರ್ಷದ ಲತಾಗೆ ಮೂರು ಜನ ತಂಗಿಯರು ಮತ್ತು ಒಬ್ಬ ತಮ್ಮನನ್ನು ಸಾಕುವ ಜವಾಬ್ದಾರಿ ಹೆಗಲೇರಿ ಹೇಗಾದರೂ ಕಷ್ಟಪಟ್ಟು ಸಂಪಾದಿಸಲೇ ಬೇಕಾದ ಪರಿಸ್ಥಿತಿ ಎದುರಾಯಿತು.
ತಂದೆಯಿಂದ ಶಾಸ್ತ್ರೀಯ ಸಂಗೀತದ ಪಾಠ ಮನೆಯವರೆಲ್ಲರಿಗೂ ಆಗಿತ್ತು. ಜೀವನದ ದಾರಿಗೆ ಮತ್ತೇನು ಗೊತ್ತಿಲ್ಲದ ಲತಾ ಮರಾಠಿ ನಾಟಕದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಅಭಿನಯಿಸಿ ಹಾಡುತ್ತಿದ್ದರು.ಈ ರೀತಿ ಸಣ್ಣ ಝರಿಯಾಗಿ ಶುರುವಾದದ್ದು ಇಂದು 25000ಕ್ಕೂ ಹೆಚ್ಚಿನ ಹಾಡುಗಳನ್ನು 36 ಭಾಷೆಗಳಲ್ಲಿ ಹಾಡಿ ಪ್ರಪಂಚದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿರುವ ಹಿನ್ನೆಲೆ ಗಾಯಕಿ ಎಂದು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಇದೆ.
ಇವರು ಹಾಡಿದ ಚಾಂದಿನಿ ಚಿತ್ರದ ಮೇರೆ ಹಾಥೋ ಮೆ ನೌ ನೌ ಚೂಡಿಯಾ ಹೆ ಹಾಗೂ ಹಮ್ ಆಪ್ ಕೆ ಹೈ ಕೌನ್ ನ ದೀದೀ ತೇರಾ ದೇವರ್ ದೀವಾನಾ ಹಾಡುಗಳು ಎಷ್ಟು ಫೇಮಸ್ ಎಂದರೆ ಆ ಕಾಲದಲ್ಲಿ ಮದುವೆ ಮನೆಗಳಲ್ಲಿ ಈ ಹಾಡುಗಳು ಇರಲೇ ಬೇಕಿತ್ತು. ಉದಯೋನ್ಮುಖ ಗಾಯಕಿ ಪ್ರಿಯಾಂಕ ಪದಕಿ ಆ ಸಾಲನ್ನು ಇಲ್ಲಿ ನೆನಪಿಸಿದ್ದಾರೆ.
ಒಮ್ಮೆ ಹಾಡುವಾಗ ಲತಾಗೆ ನಟ ದಿಲೀಪ್ ಕುಮಾರ್ ಹೇಳಿದರಂತೆ ನಿಮ್ಮ ಹಿಂದಿ ಉಚ್ಛಾರಣೆಯಲ್ಲಿ ಮರಾಠಿ ಭಾಷೆಯ ಛಾಯೆ ಎದ್ದು ಕಾಣುತ್ತದೆ ಎಂದು. ಅಷ್ಟಕ್ಕೆ ಲತಾರವರು ಉರ್ದು ಮತ್ತು ಹಿಂದಿಯನ್ನು ಕಲಿತು ಎಲ್ಲರಿಗೂ ನಾನೂ ಸರಿಯಾದ ಹಿಂದಿಯಲ್ಲಿ ಹಾಡಬಲ್ಲೆ ಎಂದು ತೋರಿಸಿದರಂತೆ. ಹಿಂದುಸ್ಥಾನಿ ಸಂಗೀತವನ್ನು ಹಲವಾರು ಗುರುಗಳಿಂದ ಕಲಿತಿದ್ದಾರೆ.
ನಮ್ಮ ದೇಶದ ಎಲ್ಲಾ ಭಾಗದಲ್ಲಿ ಲತಾ ಅವರ ಅಭಿಮಾನಿಗಳಿದ್ದಾರೆ. .ಇಂದಿಗೂ ವಯಸ್ಸಾದವರೇ ಆಗಲಿ ಯುವಕರೇ ಆಗಲಿ ಲತಾ ಹಾಡನ್ನು ಕೇಳಿ ಸಂತೋಷಪಡುತ್ತಾರೆ. ನಮ್ಮ ದೇಶ ಒಂದೇ ಅಲ್ಲ ಪರದೇಶಗಳಲ್ಲಿರುವ ಭಾರತೀಯರನ್ನೂ ಭಾವನಾತ್ಮಕವಾಗಿ ಒಂದುಗೂಡಿಸುವುದರಲ್ಲಿ ಲತಾ ಹಾಡುಗಳು ಪ್ರಮುಖ ಪಾತ್ರ ವಹಿಸುತ್ತವೆ.
ಲಾಂಗ್ ಡ್ರೈವ್ ಹೋಗಬೇಕಾದರೆ ಮೊದಲು ಲತಾ ಹಾಡಿರುವ ಹಾಡುಗಳ ಪೆನ್ ಡ್ರೈವ್ ಅನ್ನು ತಮ್ಮ ಕಾರಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಆಗ ಎಲ್ಲರಿಗೂ ತಾಯಿನಾಡು ಭಾರತದೊಡನೆ ಸಂಪರ್ಕದಲ್ಲಿರುವೆವೇನೋ ಎಂಬಂತೆ ಭಾಸವಾಗುತ್ತಿತ್ತಂತೆ. ಈಗ ಬಿಡಿ ಯಾವ ಹಾಡು ಬೇಕಾದರೂ ಆನ್ಲೈನ್ ನಲ್ಲಿ ಸಿಗುತ್ತದೆ. ನನಗೆ ಈಗ ಓ ಕೌನ್ ಥೀ ಚಿತ್ರದ ಲಗ್ ಜಾ ಗಲೆ ಹಾಡು ನೆನಪಿಗೆ ಬರುತ್ತಿದೆ. ಪ್ರಿಯಾಂಕ ಆ ಗೀತೆಯನ್ನು ಇಲ್ಲಿ ಗುಣ ಗುಣಸಿದ್ದಾರೆ.
1962 ರಲ್ಲಿ ಭಾರತದೊಡನೆ ಚೀನಾ ಯುದ್ಧ ಮಾಡಿದ ಸಂದರ್ಭ. 1963ರ ಗಣರಾಜ್ಯೋತ್ಸವದಂದು ಲತಾಜಿ ನಮ್ಮ ಯೋಧರ ಬಲಿದಾನದ ಸ್ಮರಣಾರ್ಥ ‘ಎ ಮೇರೆ ವತನ ಕೆ ಲೋಗೋ ಜ಼ರ ಆಂಖೋ ಮೆ ಭರಲೋ ಪಾನಿ‘ ಎಂಬ ಹಾಡನ್ನು ಹಾಡಿದರು. ಆಗ ಅಲ್ಲಿ ಸೇರಿದ್ದ ಎಲ್ಲರ ಹಾಗೂ ಪ್ರಧಾನಮಂತ್ರಿಗಳಾಗಿದ್ದ ನೆಹರೂ ಅವರ ಕಣ್ಣಲ್ಲಿ ಸಹ ನೀರು ಬಂತಂತೆ. ಈಗಲೂ ಆ ಹಾಡನ್ನು ಕೇಳಿದರೆ ಮೈ ಝುಮ್ ಎನ್ನುತ್ತದೆ. ಒಮ್ಮೆ ಕೇಳೋಣ ಬನ್ನಿ ಆ ಹಾಡಿನ ಎರಡು ಸಾಲುಗಳನ್ನು.
ಆಲ್ಬರ್ಟ್ ಹಾಲ್ ಲಂಡನ್ನಲ್ಲಿ ಪ್ರಪ್ರಥಮ ಕನ್ಸರ್ಟ್ ಕೊಟ್ಟ ಶ್ರೇಯಸ್ಸು ಲತಾ ಮಂಗೇಶ್ವರ್ ಅವರ ಮುಡಿಗೇರಿದೆ. ಅಲ್ಲಿ ನೆಲೆಸಿದ್ದ 6000 ಪಾಕಿಸ್ತಾನಿಗಳು ಕನ್ಸರ್ಟ್ ಗೆ ಬಂದಿದ್ದರಂತೆ ! 1974ರಲ್ಲಿ ನಡೆದ ಈ ಉತ್ಸವಕ್ಕೆ ಕೆನಡಾ,ಅಮೇರಿಕಾ ಹಾಗೂ ಪ್ಯಾರಿಸ್ ನಿಂದ ಜನಗಳು ಬಂದಿದ್ದರಂತೆ. ಪ್ರಖ್ಯಾತಿ ಎಂದರೆ ಹೀಗೆ ಇರಬೇಕಲ್ಲವೇ?
ಸಂಗೀತದಲ್ಲಿ ಮಾಡಿರುವ ಅದ್ವಿತೀಯ ಸೇವೆಗಾಗಿ ಭಾರತ ತನ್ನ ಪ್ರಜೆಗಳಿಗೆ ಕೊಡುವ ಸರ್ವಶ್ರೇಷ್ಠ ಭಾರತರತ್ನ ಪ್ರಶಸ್ತಿಯನ್ನು ಲತಾಜಿ ಅವರಿಗೆ 2001ರಲ್ಲಿ ನಮ್ಮ ಘನ ಸರ್ಕಾರ ಕೊಟ್ಟು ಗೌರವಿಸಿದೆ. ಇದಕ್ಕೆ ಮೊದಲು ಎಂಎಸ್ ಸುಬ್ಬಲಕ್ಷ್ಮಿ ಯವರಿಗೆ 1998ರಲ್ಲಿ ಭಾರತರತ್ನ ಪ್ರಶಸ್ತಿ ಕೊಟ್ಟು ಗೌರವಿಸಿತ್ತು.
ಇವರ ಜೀವನ ಚರಿತ್ರೆಯನ್ನು ಹಲವಾರು ಲೇಖಕರು ಬರೆದಿದ್ದಾರೆ. ಮನೆಗೆ ಬರುವ ಅತಿಥಿಗಳನ್ನು ಬಹಳ ಆದರದಿಂದ ಸ್ವಾಗತಿಸುತ್ತಾರೆ. ಇವರನ್ನು ನೈಟಿಂಗೇಲ್ ಆಫ್ ಬಾಲಿವುಡ್ ಅಂತ ಸಹ ಕರೆಯುತ್ತಾರೆ. ಲತಾಜೀಯವರಿಗೆ ಸ್ವಲ್ಪವೂ ಹಮ್ಮು-ಬಿಮ್ಮುಗಳಿಲ್ಲ. ಯಾವಾಗಲೂ ಕಲಿಯುತ್ತಲೇ ಇರಬೇಕೆಂದು ಹೇಳುವ ಲತಾಜೀಯವರ ಮನಸ್ಸು ಮಕ್ಕಳ ಮನಸ್ಸಿನಂತೆ ನಿಷ್ಕಲ್ಮಷ . ಸಂಗೀತ ನಿರ್ದೇಶಕರುಗಳು ಹೇಳುವ ಹಾಗೆ ಭಾವನಾತ್ಮಕವಾಗಿ ಹಾಡುತ್ತಿದ್ದರು ಹಾಗೂ ಉಪಾಧ್ಯಾಯರು ಹೇಳಿದಂತೆ ಕಲಿಯುವ ವಿದ್ಯಾರ್ಥಿನಿಯೂ ಆಗುತ್ತಿದ್ದರಂತೆ. ಅವರ ಹಾಡುಗಳಲ್ಲಿ ನಾನು ಯಾವಾಗಲೂ ಗುನುಗುವ ಹಾಡು ಆಜ್ ಫಿರ್ ಜೀನೇ ಕಿ ತಮನ್ನಾ ಹೆ
ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಸ್ವತ: ಹಾಡುಗಳ ನಿರ್ದೇಶನವನ್ನೂ ಮಾಡಿದ್ದಾರೆ.
ಆಕೆಯ ಖ್ಯಾತಿ ಮುಗಿಲೆತ್ತರವಾದಾಗ ಎಲ್ಲರೂ ಸಂಗೀತ ಕೋಗಿಲೆಯ ಸಂಪರ್ಕವನ್ನು ಬಯಸುತ್ತಿದ್ದರು.1999ರಲ್ಲಿ ಪರ್ಫ್ಯೂಮ್ ಒಂದಕ್ಕೆ ಲತಾ ಪರ್ಫ್ಯೂಮ್ ಎಂದು ನಾಮಕರಣ ಮಾಡಿದರು. ರಾಜ್ಯಸಭೆಯ ಮೆಂಬರ್ ಆಗಿ ನೇಮಕಗೊಂಡಿದ್ದರು. ಅನಾರೋಗ್ಯದ ಕಾರಣ 2005 ರಲ್ಲಿ ನಿವೃತ್ತಿ ಪಡೆದರು.ಪುಣೆಯಲ್ಲಿ ಅವರ ತಂದೆಯ ಹೆಸರಿನಲ್ಲಿ ದೀನನಾಥ ಮಂಗೇಶ್ಕರ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ ನಡೆಸುತ್ತಿದ್ದಾರೆ.
ಇವರು ಸೋದರ ಹೃದಯನಾಥ್ ರೊಡನೆ ಕ್ರಿಕೆಟ್ ಆಡುತ್ತಿದ್ದರಂತೆ. ಬಹುಶ: ಇವರ ಕ್ರಿಕೆಟ್ ಮೇಲಿನ ಅಭಿಮಾನಕ್ಕೆ ಪರೋಕ್ಷವಾಗಿ ಇದು ಕಾರಣವಿರಬಹುದು. ಸಚಿನ್ ತೆಂಡೂಲ್ಕರ್ ಅವರ ಮೇಲೆ ಇವರಿಗೆ ಮಗನಂತೆ ವಿಶ್ವಾಸ.
ಮಹಾನ್ ಗಾಯಕಿಗೆ ಹೃದಯ ತುಂಬಿದ ಶ್ರದ್ದಾಂಜಲಿ ಸಲ್ಲಿಸೋಣ.
.
ಇಲ್ಲಿರುವ ಹಾಡುಗಳನ್ನು ನಮ್ಮಓದುಗರಿಗಾಗಿ ಹಾಡಿದ್ದು ಪ್ರಿಯಾಂಕ ಪದಕಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಆಗಿರುವ ಪ್ರಿಯಾಂಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರೆ.
ಕೆಲ ದಿನಗಳಿಂದ ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾನ ಕೋಗಿಲೆ ಲತಾ ಮಂಗೇಶ್ಕರ್(28 ಸೆಪ್ಟೆಂಬರ್ 1929- 6 ಫೆಬ್ರವರಿ2022) ಚಿಕಿತ್ಸೆ ಫಲಿಸದೆ ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಭಾರತದ ನೈಂಟಿಗೇಲ್ ಎಂದೇ ಕರೆಸಿಕೊಳ್ಳುತ್ತಿದ್ದ ಲತಾಜೀ 13 ನೇ ವಯಸ್ಸಿಗೆ ಹಾಡಲು ಆರಂಭಿಸಿದ್ದರು. ಇದುವರೆವಿಗೂ ಸುಮಾರು 50000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
ಕನ್ನಡದಲ್ಲೂ ಹಾಡಿದ್ದ ಲತಾಜೀ
1967ರಲ್ಲಿ ಬಿಡುಗಡೆಯಾದ ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ ಕನ್ನಡ ಚಲನಚಿತ್ರದಲ್ಲಿನ “ಬೆಳ್ಳನೆ ಬೆಳಗಾಯಿತು” ಮತ್ತು “ಎಲ್ಲಾರೆ ಇರತೀರೋ ಎಂದಾರೆ ಬರತೀರೋ” ಹಾಡುಗಳನ್ನು ಹಾಡಿದ್ದಾರೆ.
ಶಾಸ್ತ್ರೀಯ-ಸಂಗೀತಕಾರ ಮತ್ತು ರಂಗ-ನಟ ಪಂಡಿತ್ ದೀನಾನಾಥ್ ಮಂಗೇಶ್ಕರ್ ಅವರ ಪುತ್ರಿ, ಲತಾ ಮಧ್ಯಪ್ರದೇಶದ ಇಂದೋರಿನಲ್ಲಿ ಜನಿಸಿದರು. ತಾಯಿಯನ್ನು ‘ಮಾಯಿ,’ ಎಂದೇ ಎಲ್ಲರೂ ಕರೆಯುತ್ತಿದ್ದರು. ತಾಯಿಯ ತವರಿನ ಹೆಸರು ಸೇವಂತಾ. ದೀನಾನಾಥರದು ಎರಡನೆಯ ಮದುವೆ. ಮೊದಲ ಮದುವೆ, ‘ನರ್ಮದಾ’ ಜೊತೆ. ಆಕೆಯ ಮರಣದ ನಂತರ ತಂಗಿ ಶೇವಂತಾರ ಜೊತೆಗೆ ಮದುವೆಯಾಯಿತು. ಈಕೆಯ ಹೆಸರನ್ನು ‘ಶುದ್ಧಮತಿ’ ಎಂದು ಹೆಸರಿಟ್ಟರು. ‘ಬಲವಂತ್ ಸಂಗೀತ್ ಮಂಡಳಿ’ ಎಂಬ ಸಂಸ್ಥೆಯನ್ನು ದೀನಾನಾಥ್ ಅವರು ನಡೆಸುತ್ತಿದ್ದರು. ದೀನಾನಾಥ್ ಒಳ್ಳೆಯ ನಟ, ಗಾಯಕ, ಕೃತಿಶೀಲ ಸಮಾಜಸೇವಕ. ಕೆಲವು ಕಾರಣಗಳಿಂದ ಕಂಪೆನಿ ಮುಚ್ಚಿತು. ದಂಪತಿಗಳಿಗೆ ಲತಾ, ಆಶಾ, ಮೀನಾ, ಉಷಾ ಎಂಬ ನಾಲ್ಕು ಹೆಣ್ಣು ಮಕ್ಕಳಲ್ಲದೆ ಹೃದಯನಾಥ್ ಎಂಬ ಗಂಡುಮಗ. ದೀನಾನಾಥ್ ಮನೆಯಲ್ಲಿ ಕೆಲವು ಮಕ್ಕಳಿಗೆ ಸಂಗೀತ ಪಾಠ ಹೇಳುತ್ತಿದ್ದರು. ಒಂದು ದಿನ ಒಬ್ಬ ಹುಡುಗ ಸಂಗೀತಾಭ್ಯಾಸ ಮಾಡುವಾಗ ತಪ್ಪುತ್ತಿದ್ದುದನ್ನು ಎಳೆಯ ವಯಸ್ಸಿನ ಲತಾ ತಿದ್ದುವುದನ್ನು ಗಮನಿಸಿದ ದೀನಾನಾಥ್ ಮಗಳಲ್ಲಿ ಸಂಗೀತದ ಪ್ರತಿಭೆ ಇರುವುದನ್ನು ಮನಗಂಡರು. ಮರುದಿನದಿಂದಲೇ ಅವರು ಮಗಳಿಗೆ ಮನೆಯಲ್ಲಿ ಸಂಗೀತಪಾಠ ಪ್ರಾರಂಭಿಸಿದರು.
ಲತಾ ಅವರ ಮೊದಲ ಹೆಸರು “ಹೇಮಾ” ಎಂದು. ಹೇಮಾಳ ಬಹುಮುಖಪ್ರತಿಭೆಯನ್ನು ತಂದೆ ಗುರುತಿಸಿ, ಒಮ್ಮೊಮ್ಮೆ ‘ಹೃದಯಾ’, ‘ಟಾಟಾಬಾಬಾ,’ ಎನ್ನುತ್ತಿದ್ದರು. “ಭಾವ್ ಬಂಧನ್” ನಾಟಕದಲ್ಲಿ ಮಾಡಿದ ಅಭಿನಯನದ ನಂತರ ಅವರ ಹೆಸರು ಲತಾ ಎಂದಾಯಿತು. ಲತಾಗೆ ಔಪಚಾರಿಕ ಶಿಕ್ಷಣವೇನೂ ದೊರೆಯಲಿಲ್ಲ. ಒಂದು ದಿನ ಶಾಲೆಗೆ ಹೋಗಿದ್ದರು. ಮರುದಿನ ತಮ್ಮ ತಂಗಿ ಆಶಾಳ ಜೊತೆ ಶಾಲೆಗೆ ಹೋದಾಗ ಶಿಕ್ಷಕರು ಗದರಿದರಂತೆ. ಸರಿ. ಲತಾ ಮುಂದೆ ಎಂದೂ ಶಾಲೆಯ ಮೆಟ್ಟಿಲು ಹತ್ತುವುದಿಲ್ಲವೆಂದು ಪಣತೊಟ್ಟರು. ಸಣ್ಣ-ಪುಟ್ಟ ನಾಟಕಗಳಲ್ಲಿ ಕಾಣಿಸಿಕೊಂಡರು. ತಾವು ತುಂಬಾ ತುಂಟತನ ಮಾಡುತ್ತಿದ್ದೆ ಎಂದು ಲತಾ ನೆನಪಿಸಿಕೊಂಡಿದ್ದಾರೆ. ಒಮ್ಮೆ ಮನೆಯವರು ಏನನ್ನೋ ತರಲು ಕಿರಾಣಿ ಅಂಗಡಿಗೆ ಕಳಿಸಿದರು. ಲತಾ ಹತ್ತಿರ ಒಂದು ಸವಕಲು ನಾಣ್ಯ ಇತ್ತು. ಅದನ್ನು ಅಂಗಡಿಗೆ ತೆಗೆದುಕೊಂಡು ಹೋಗಿ ಅಂಗಡಿಯವನಿಗೆ “ಇಗೋ ನಿನ್ನ ದುಡ್ಡಿನ ಪೆಟ್ಟಿಗೆಯಲ್ಲಿ ನಾಣ್ಯ ಹಾಕುತ್ತಿದ್ದೇನೆ, ನನಗೆ ಪದಾರ್ಥ ಕೊಡು,” ಎಂದು ಅಂಗಡಿಯವನಿಗೆ ಟೋಪಿ ಹಾಕಿದರಂತೆ. ಮನೆಗೆ ಬಂದು ತಮ್ಮ ಕೆಲಸವನ್ನು ಹೆಮ್ಮೆಯಿಂದ ಹೇಳಿಕೊಂಡಾಗ ತಂದೆಯಿಂದ ಚೆನ್ನಾಗಿ ಬೈಸಿಕೊಂಡು ಮತ್ತೆ ಅಂಗಡಿಗೆ ಹೋಗಿ ಕ್ಷಮಾಪಣೆ ಕೇಳಬೇಕಾಯಿತಂತೆ.
ಹಿಂದಿ ಚಿತ್ರರಂಗದ ಎಲ್ಲಾ ನಾಯಕಿಯರಿಗೂ ಹಾಡು
ಲತಾ ಅವರು ಬಹುಶಃ ಹಿಂದಿಯ ಪ್ರತಿಯೊಬ್ಬ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಇದಕ್ಕೆ ಒಂದೇ ಅಪವಾದವೆಂದರೆ ಓ.ಪಿ. ನಯ್ಯರ್. ಅದೇ ರೀತಿ ಅವರೊಂದಿಗೆ ಹಿಂದಿಯ ಪ್ರತಿಯೊಬ್ಬ ಗಾಯಕನ ಜೊತೆಯೂ ಹಾಡಿದ್ದಾರೆ. ಹಿಂದಿ ಚಿತ್ರರಂಗದ ಬಹುತೇಕ ನಟಿಯಾರಿಗಾಗಿ ಲತಾ ಹಾಡಿದ್ದಾರೆ. ಐವತ್ತರ ದಶಕದಲ್ಲಿ ಮೇಲೇರಿದ ಅವರ ಕೀರ್ತಿ ಪತಾಕೆ ಕೆಳಕ್ಕೆ ಇಳಿಯಲೇ ಇಲ್ಲ. ಗಜಲ್, ಪ್ರೇಮಗೀತೆ, ಭಜನೆ, ಜನಪದ ಗೀತೆ, ಯುಗಳಗೀತೆ, ಕ್ಲಬ್ ಸಾಂಗ್ … ಹೀಗೆ ಪ್ರತಿಯೊಂದೂ ಬಗೆಯ ಹಾಡುಗಳನ್ನು ಲತಾ ಹಾಡಿದ್ದಾರೆ. ಹಿಂದಿಯಲ್ಲದೆ ಭಾರತದ ಪ್ರತಿಯೊಂದು ಭಾಷೆಯಲ್ಲೂ ಅವರು ಹಾಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅವರನ್ನು “ಲತಾ ದೀದಿ” ಎಂದೇ ಕರೆಯುತ್ತಾರೆ. ಲತಾ ಅವರು ವಿವಾಹವಾಗಲಿಲ್ಲ. ತಮ್ಮ ಜೀವನವನ್ನು ಸಂಗೀತಕ್ಕೇ ಮುಡಿಪಾಗಿಟ್ಟರು. ಲತಾ ಅವರ ಕುಟುಂಬದಲ್ಲಿ ಪ್ರತಿಯೊಬ್ಬರೂ ಸಂಗೀತ ಕ್ಷೇತ್ರದಲ್ಲಿರುವುದು ಒಂದು ವಿಶೇಷ. ಆಶಾ ಮತ್ತು ಲತಾ, ಉಷಾ ಮತ್ತು ಲತಾ, ಮೀನಾ ಮತ್ತು ಲತಾ ಹಾಡಿರುವ ಕೆಲವು ಯುಗಳಗೀತೆಗಳೂ ಪ್ರಸಿದ್ಧವಾಗಿವೆ. ತಮ್ಮ ಹೃದಯನಾಥ್ ಮಂಗೇಷ್ಕರ್ ಸಂಗೀತ ನಿರ್ದೇಶನದಲ್ಲಿ ಲತಾ ಅನೇಕ ಗೀತೆಗಳನ್ನು ಹಾಡಿದ್ದಾರೆ – ಉದಾ. ಮೀರಾ ಭಜನೆಗಳು. ಲತಾ ಅವರು “ಲೇಕಿನ್” ಎಂಬ ಕಲಾತ್ಮಕ ಚಿತ್ರವನ್ನು ನಿರ್ಮಿಸಿದರು.
ಚೀನಾ-ಭಾರತ ಯುದ್ಧದಲ್ಲಿ ಭಾರತದ ಅನೇಕ ಸೈನಿಕರು ತಮ್ಮ ಪ್ರಾಣ ತೆತ್ತರು. ಇವರ ನೆನಪಿನಲ್ಲಿ ಒಂದು ವಿಶೇಷಗೀತೆಯನ್ನು ಪ್ರದೀಪ್ ಎಂಬ ಕವಿ ರಚಿಸಿದರು. ಈ ಗೀತೆಯನ್ನು ಸಿ. ರಾಮಚಂದ್ರ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಅವರು 1963 ಜನವರಿ 27ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಹಾಡಿದರು. “ಐ ಮೇರೆ ವತನ್ ಕೇ ಲೋಗೋಂ, ಜರಾ ಆಂಖ್ ಮೇ ಭರಲೋ ಪಾನಿ … ” ಎಂದು ಪ್ರಾರಂಭವಾಗುವ ಗೀತೆಯನ್ನು ಕೇಳಿ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರ ಕಣ್ಣಿನಲ್ಲಿ ನೀರಾಡಿತು. ಅವರು ಲತಾ ಮಂಗೇಶ್ಕರ್ ಅವರೊಂದಿಗೆ ಕಾರ್ಯಕ್ರಮದ ನಂತರ ಮಾತಾಡಿ “ನೀನು ನನ್ನನ್ನು ಅಳಿಸಿಬಿಟ್ಟೆ,” ಎಂದು ಭಾವುಕರಾಗಿ ಹೇಳಿದರಂತೆ. ಈ ಹಾಡನ್ನು ನವದೆಹಲಿಯಲ್ಲಿ ಪ್ರತಿ ಜನವರಿ 26ರ ಸಮಾರಂಭದಲ್ಲಿ ಕೇಳಬಹುದು.
ಆಕೆಯ ಹಾಡುಗಳ ವಿಶೇಷವೆಂದರೆ, ಅಸಾಧಾರಣ ಸ್ಪಷ್ಟ ಶಬ್ದೋಚ್ಚಾರ, ಶಾಸ್ತ್ರೀಯ ಸಂಗೀತದ ಸ್ವರಬದ್ಧ ಸಂಸ್ಕಾರ, ಗೀತೆಗಳ ಗುಣಮಟ್ಟ, ಸನ್ನಿವೇಶಕ್ಕೆ ನಟಿಯರ ಕಂಠಕ್ಕೆ ಸರಿಯಾಗಿ ಅಳವಡಿಸಿಹಾಡುವ ಕಲೆ. “ಪುಲೆ ವೇಚಿತಾ”- ಲತಾರವರ ಆತ್ಮಚರಿತ್ರೆ.
ಪ್ರಧಾನಿ ಸಂತಾಪ
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಲತಾಜೀ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪ್ರರ್ದಶಿತವಾದ ಕರ್ನಾಟಕದ ಸ್ತಬ್ಧಚಿತ್ರ ಕರ್ನಾಟಕ ಕರಕುಶಲ ಕಲಾ ವೈಭವ ದ್ವಿತೀಯ ಬಹುಮಾನವನ್ನು ಗಳಿಸಿದೆ.
ಕಾಶಿ ವಿಶ್ವನಾಥ ದೇವಾಲಯದ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಿದ್ದ ಉತ್ತರ ಪ್ರದೇಶ ಮೊದಲ ಬಹುಮಾನ ಪಡೆದಿದೆ. ಮೂರನೇ ಬಹುಮಾನ ಮೇಘಾಲಯದ ಪಾಲಾಗಿದೆ.
ಪಥ ಸಂಚಲನದಲ್ಲಿ ನೌಕಪಡೆಯ ತಂಡ ಮೊದಲ ಸ್ಥಾನ ಪಡೆದಿದೆ. ಸಾರ್ವಜನಿಕರ ಮತದ ಆಧಾರದಲ್ಲಿ ನೀಡಲಾಗುವ popular choiceನಲ್ಲಿ ವಾಯು ಪಡೆ ತಂಡ ಪಥ ಸಂಚಲನದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಸ್ತಬ್ಧ ಚಿತ್ರ ವಿಭಾಗದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ ಗಳಿಸಿದೆ.
ಬೆಂಗಳೂರಿನಲ್ಲಿರವು ಸರ್ಕಾರದ ಐಬ್ಯಾಬ್ ಸಂಸ್ಥೆಯು ಎಚ್.ಸಿ.ಜಿ. ವೈದ್ಯತಜ್ಞರ ಸಹಯೋಗದಲ್ಲಿ ಮಹತ್ವದ ಸಂಶೋಧನೆ ನಡೆಸಿ ಬಾಯಿಯ ಕ್ಯಾನ್ಸರ್ ಗೆ ಕಾರಣವಾಗುವ 114 ವಂಶವಾಹಿನಿ ರೂಪಾಂತರಗಳನ್ನು ಪತ್ತೆಹಚ್ಚಿದ್ದಾರೆ. ಇದರಿಂದ ಬಾಧಿತರು ಬದುಕುಳಿಯುವ ಸಾಧ್ಯತೆಯನ್ನು ಶೇ 90ರಷ್ಟು ನಿಖರತೆಯೊಂದಿಗೆ ಊಹಿಸುವ ಜೊತೆಗೆ ಪರಿಣಾಮಕಾರಿ ನಿರ್ದಿಷ್ಟ ಜೀವಕೋಶ ಕೇಂದ್ರಿತ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗಲಿದೆ.
ವಿಶ್ವ ಕ್ಯಾನ್ಸರ್ ಜಾಗೃತಿ ದಿನವಾದ ಶುಕ್ರವಾರ ವಿಧಾನಸೌಧದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು, ಜಿನೋಮಿಕ್ಸ್ (ವಂಶವಾಹಿನಿ ಅನುಕ್ರಮಣಿಕೆ ವಿಶ್ಲೇಷಣೆ) ಆಧಾರಿತವಾಗಿ ನಡೆದಿರುವ ಈ ಸಂಶೋಧನೆಯು ಬಾಯಿ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಪಟ್ಟಂತೆ ಹೊಸ ಆಶಾಕಿರಣಗಳನ್ನು ಮೂಡಿಸಿದೆ ಎಂದರು.
ಐಟಿ/ಬಿಟಿ ಇಲಾಖೆಯಿಂದ ಸ್ಥಾಪಿತವಾಗಿರುವ ‘ಐಬ್ಯಾಬ್’ನಲ್ಲಿರುವ (IBAB-ಇನ್ಸ್ ಟಿಟ್ಯೂಟ್ ಆಫ್ ಬಯೋಇನ್ಫರ್ಮ್ಯಾಟಿಕ್ಸ್ ಅಂಡ್ ಅಪ್ಲೈಡ್ ಬಯೋಟೆಕ್ನಾಲಜಿ- ಜೈವಿಕ ಚಹರೆಗಳು ಮತ್ತು ಆನ್ವಯಿಕ ಜೈವಿತ ತಂತ್ರಜ್ಞಾನ ಸಂಸ್ಥೆ) ಅತ್ಯಾಧುನಿಕ ಜೀನೋಮಿಕ್ಸ್ ವ್ಯವಸ್ಥೆ ಬಳಸಿ ನಡೆಸಿದ ಸಂಶೋಧನೆ ಇದಾಗಿದೆ. ಇದರ ಜೊತೆಗೆ ಸುಧಾರಿತ ಮಷೀನ್ ಲರ್ನಿಂಗ್ ಮತ್ತು ಬಯೋಇನ್ಫರ್ಮ್ಯಾಟಿಕ್ಸ್ ಉಪಯೋಗಿಸಿಕೊಂಡು ಈ ಅಧ್ಯಯನ ನಡೆದಿದೆ ಎಂದು ಸಚಿವರು ವಿವರಿಸಿದರು.
ನಮ್ಮ ದೇಶದಲ್ಲಿ ಬಾಯಿಯ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾಗಿದ್ದರೂ ( ಒಟ್ಟಾರೆ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 40ರಷ್ಟು) ಭಾರತದ ರೋಗಿಗಳನ್ನೇ ಆಯ್ಕೆ ಮಾಡಿಕೊಂಡು ನಡೆಸಲಾಗಿರುವ ಮೊತ್ತಮೊದಲ ವಿಸ್ತೃತ ಅಧ್ಯಯನ ಇದಾಗಿದೆ. ಇದೇ ವೇಳೆ, ಈ ಅಧ್ಯಯನದ ದತ್ತಾಂಶಗಳನ್ನು ಪಾಶ್ಚಿಮಾತ್ಯ ವಂಶವಾಹಿ ಅಧ್ಯಯನಗಳ ಜೊತೆ ತುಲನೆ ಮಾಡಿ ವಿಶ್ಲೇಷಿಸಲಾಗಿದೆ. ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳು ಈ ಸಂಶೋಧನೆಯ ಬಗ್ಗೆ ಒಳ್ಳೆಯ ಮಾತುಗಳನ್ನಾಡಿವೆ. ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕೆಯಲ್ಲಿ ಈ ಕುರಿತು ಅಧ್ಯಯನ ವರದಿ ಪ್ರಕಟಗೊಂಡಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ಬಾಯಿಯ ಕ್ಯಾನ್ಸರ್ ಗೆ ಕಾರಣವಾಗುವ 114 ವಂಶವಾಹಿನಿ ರೂಪಾಂತರಗಳ ಪೈಕಿ 35 ರೂಪಾಂತರಗಳು ಆಂಕೋಜೀನ್ ಗಳಾದರೆ, 11 ಟ್ಯೂಮರ್ ಸಪ್ರೆಸರ್ ಗಳಾಗಿದ್ದು, 2 ಡಿಎನ್ಎ ದುರಸ್ತಿ ವಂಶವಾಹಿನಿಗಳಾಗಿವೆ ಎಂಬುದನ್ನು ಗುರುತಿಸಲಾಗಿದೆ. ಈ ಅಧ್ಯಯನದಲ್ಲಿ ಕ್ಯಾನ್ಸರ್ ಬಾಧೆಯಿಂದ ಬದುಕುಳಿಯುವ ಸಾಧ್ಯತೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪ್ರಮುಖ ವಂಶವಾಹಿನಿಗಳನ್ನು ಕೂಡ ಗುರುತಿಸಲಾಗಿದೆ ಎಂದರು.
ಈ ಸಂಶೋಧನೆಯಲ್ಲಿ IRAK1 ವಂಶವಾಹಿನಿಯ ಹೊಸ ರೂಪಾಂತರವನ್ನು ಪತ್ತೆಹಚ್ಚಲಾಗಿದೆ. ಇದು ಪರಿಣಾಮಕಾರಿಯಾದ ನಿರ್ದಿಷ್ಟ ಜೀವಕೋಶ ಕೇಂದ್ರಿತ ಚಿಕಿತ್ಸೆಗೆ ಅನುವು ಮಾಡಿಕೊಡಲಿದೆ. ಇದಕ್ಕಾಗಿ ಔಷಧ ಕಂಪನಿಗಳೊಂದಿಗೆ ಸಹಭಾಗಿತ್ವ ಸಾಧಿಸುವ ಆಲೋಚನೆಗಳು ನಡೆದಿವೆ. ಇದು ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಕರ್ನಾಟಕ ರಾಜ್ಯದ ಮಹತ್ವದ ಕೊಡುಗೆಗೆ ಕಾರಣವಾಗುವ ಸಾಧ್ಯತೆಗಳಿವೆ. ಕ್ಯಾನ್ಸರ್ ವಂಶವಾಹಿನಿ ಅನುಕ್ರಮಣಿಕೆಗೆ ಕುರಿತಾದ ರಹಸ್ಯವನ್ನು ಬೇಧಿಸುವ ಮೂಲಕ ಜನರ ಜೀವ ಉಳಿಸಲು ಸಹಕಾರಿಯಾಗಲಿದೆ ಎಂದರು.
ಎಚ್.ಸಿ.ಜಿ. ಕ್ಯಾನ್ಸರ್ ಕೇಂದ್ರದ ಡೀನ್ ಡಾ.ವಿಶಾಲ್ ರಾವ್ ಅವರು ಮಾತನಾಡಿ, ಸರ್ಕಾರದ ನೆರವು ಇಲ್ಲದೆ ಕೇವಲ ಖಾಸಗಿ ಆಸ್ಪತ್ರೆಗಳು ಮಾತ್ರವೇ ಇಂತಹ ದೊಡ್ಡಮಟ್ಟದ ಸಂಶೋಧನೆಯನ್ನು ನಡೆಸಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರವು ಐಬ್ಯಾಬ್ ಮೂಲಕ ಚಿಕಿತ್ಸಕರು ಹಾಗೂ ಸಂಶೋಧಕರು ಒಂದೆಡೆ ಸೇರಿ ಅಧ್ಯಯನದಲ್ಲಿ ಪಾಲ್ಗೊಳ್ಳಲು ಅನುಕೂಲ ಮಾಡಿಕೊಟ್ಟಿದ್ದರಿಂದ ಈ ಮಹತ್ವದ ಸಂಶೋಧನೆ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಇದುವರೆಗೆ ಬಾಯಿ ಕ್ಯಾನ್ಸರ್ ಗೆ ಎಷ್ಟೇ ಉತ್ತಮ ಚಿಕಿತ್ಸೆ ಕೊಟ್ಟರೂ ಶೇ 50ರಷ್ಟು ಪ್ರಕರಣಗಳಲ್ಲಿ ರೋಗ ಮರುಕಳಿಸುತ್ತಿತ್ತು. ಆದರೆ ಈ ಸಂಶೋಧನೆಯು ರೋಗ ಮರುಕಳಿಸಿದಂತೆ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಐಬ್ಯಾಬ್ ನ ಪ್ರೊಫೆಸರ್ ವಿಭಾ ಚೌಧರಿ ಹೇಳಿದರು.
ಎಚ್.ಸಿ.ಜಿ.ಯ ಡಾ.ಆನಂದ್ ಸುಭಾಷ್, ವಂಶವಾಹಿನಿ ಅಧ್ಯಯನ ತಜ್ಞ ಡಾ.ಸತೀಶ್ ಕುಣಿಗಲ್, ಸಮಾಲೋಚಕ ಬಾಲಸುಬ್ರಮಣ್ಯಂ, ಡಾ.ಸಾಗರ್ , ಐಟಿ/ಬಿಟಿ ಇಲಾಖೆಯ ಪ್ರಧಾನ ವ್ಯವಸ್ಥಾಪಕಿ ಡಾ.ಕೃಪಾಲಿನಿ ಮತ್ತಿತರರು ಹಾಜರಿದ್ದರು.
2021-22ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ನೇಮಕಾತಿಯಿಂದ 9,800ಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎನ್ನುವ ವರದಿ ವಸ್ತುಸ್ಥಿತಿಗೆ ದೂರವಾಗಿದೆ’ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕೆಯಲ್ಲಿ ಬಂದಿರುವ ವರದಿಗೆ ಗುರುವಾರ ಸ್ಪಷ್ಟನೆ ನೀಡಿರುವ ಅವರು, `ಈವರೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಂದಾಜು 14 ಸಾವಿರ ಮಂದಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈಗ ಕಾರ್ಯಭಾರ ಮತ್ತು ವೇತನ ಎರಡನ್ನೂ ಸೂಕ್ತವಾಗಿ ನಿಗದಿಪಡಿಸಿ ಇವರ ಪೈಕಿ 10,600 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ವಾಸ್ತವ ಹೀಗಿರುವಾಗ, 9,881 ಮಂದಿ ಕೆಲಸ ಕಳೆದುಕೊಳ್ಳುವ ಪ್ರಶ್ನೆ ಎಲ್ಲಿ ಉದ್ಭವವಾಗುತ್ತದೆ?’ ಎಂದರು.
ನೇಮಕ ಪ್ರಕ್ರಿಯೆಯಲ್ಲಿ ಸೇವಾಹಿರಿತನ, ವಯಸ್ಸು ಮತ್ತು ಯುಜಿಸಿ ನಿಗದಿತ ಅರ್ಹತೆ ಮೂರನ್ನೂ ಸಮಾನವಾಗಿ ಪರಿಗಣಿಸಲಾಗಿದೆ. ನೇಮಕಾತಿಯಲ್ಲಿ ಇವರಿಗೇ ಆದ್ಯತೆ ಕೊಡಲಾಗುತ್ತಿದೆ. ಜತೆಗೆ ನಿಯಮಾನುಸಾರ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ 14 ಸಾವಿರ ಮಂದಿಯ ಪೈಕಿ ಕೇವಲ 3,400 ಮಂದಿ ಮಾತ್ರ ಆಯ್ಕೆ ಆಗುತ್ತಿಲ್ಲ. ಆದರೆ, ಇವರಲ್ಲಿ ಕೂಡ ಹೆಚ್ಚಿನವರು ಅತ್ಯಂತ ಕಡಿಮೆ ಅನುಭವ ಹೊಂದಿದವರಾಗಿದ್ದಾರೆ ಎಂದು ಅವರು ವಿವರಿಸಿದರು.
ಇದುವರೆಗೂ ಅತಿಥಿ ಉಪನ್ಯಾಸಕರು ಗರಿಷ್ಠ ಅವಧಿ ಬೋಧನೆ ಮಾಡಿದರೂ ಅವರ ಮಾಸಿಕ ವೇತನ 13 ಸಾವಿರ ರೂ. ದಾಟುತ್ತಿರಲಿಲ್ಲ. ಆದರೆ, ಈಗ ನೇಮಕ ಆಗುತ್ತಿರುವವರಿಗೆ ಗರಿಷ್ಠ 32 ಸಾವಿರ ರೂ.ಗಳವರೆಗೆ ಸಿಗುವ ಹಾಗೆ ಮಾಡಲಾಗಿದೆ ಎಂದು ಪ್ರದೀಪ್ ನುಡಿದರು.
ಅತಿಥಿ ಉಪನ್ಯಾಸಕರ ಹುದ್ದೆಗೆ 60 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಇದುವರೆಗೆ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದರವರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ವಿದ್ಯುತ್ ದ್ವಿಚಕ್ರ ವಾಹನಗಳ 1000 ತ್ವರಿತ ಚಾರ್ಜಿಂಗ್ ಸೌಲಭ್ಯ ಸ್ಥಾಪಿಸಲು ಮೆ. ಎಥರ್ ಎನರ್ಜಿ ಮತ್ತು ಎಸ್ಕಾಂಗಳ ನಡುವೆ ಒಪ್ಪಂದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಸಹಿ ಮಾಡಲಾಯಿತು.
ಈ ಚಾರ್ಜಿಂಗ್ ಸೌಲಭ್ಯಗಳಿಗೆ ಅಗತ್ಯ ತಾಂತ್ರಿಕ ಬೆಂಬಲವನ್ನು ಎಸ್ಕಾಂಗಳು ನೀಡಲಿದ್ದು, ಸರ್ಕಾರಿ ಸಂಸ್ಥೆಗಳು ಈ ಸೌಲಭ್ಯ ಸ್ಥಾಪನೆಗೆ ಸ್ಥಳಾವಕಾಶ ಒದಗಿಸಲು ಎಸ್ಕಾಂಗಳೊಂದಿಗೆ ಸಮನ್ವಯ ವಹಿಸಲಿವೆ.
ಎಥರ್ ಎನರ್ಜಿ ಕಂಪನಿಯು ವಿದ್ಯುತ್ ದ್ವಿಚಕ್ರ ವಾಹನಗಳಿಗೆ ಉಚಿತವಾಗಿ ಚಾರ್ಜಿಂಗ್ ಸೌಲಭ್ಯಗಳನ್ನು ಕಲ್ಪಿಸಲಿವೆ.
ಎಥರ್ ಎನರ್ಜಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ತರುಣ್ ಮೆಹ್ತಾ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಈ ಒಪ್ಪಂದಕ್ಕೆ ಸಹಿ ಮಾಡಿದರು.
ಶಾಸಕ ಅರವಿಂದ ಬೆಲ್ಲದ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿ.ಕುಮಾರ ನಾಯಕ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿದ್ದರಾಮಯ್ಯನವರ ಸುತ್ತಲೂ ಕ್ರೋಢೀಕರಣವಾಗುತ್ತಿರುವ ಮುಸ್ಲಿಂ ಮತಗಳನ್ನು ಚದುರಿಸಲು ದೇವೇಗೌಡರು ಇಬ್ರಾಹಿಂ ಅವರನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳಬಹುದೇ? ಎಂಬ ಕುತೂಹಲ ಸಹಜ.ಈ ಅಸ್ತ್ರ ಮೊದಲಿನ ಮೊನಚನ್ನು ಉಳಿಸಿಕೊಂಡಿದೆಯೇ? ಎಂಬ ಪ್ರಶ್ನೆಯೂ ಏಳುತ್ತದೆ.
ಸಿ.ರುದ್ರಪ್ಪ
ರಾಜಕಾರಣದಲ್ಲಿ ದಿಢೀರನೆ ಬೆಳಕಿಗೆ ಬರುವವರ ಬಗ್ಗೆ ಕುತೂಹಲ ಸಹಜ.”who is janardhana pujari?(ಯಾರು ಜನಾರ್ದನ ಪೂಜಾರಿ?)”.ಇದು ತುರ್ತು ಪರಿಸ್ಥಿತಿ ನಂತರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ The Indian Express ಪತ್ರಿಕೆಯ ವರದಿಯೊಂದರ ಶೀರ್ಷಿಕೆಯಾಗಿತ್ತು.ಮಂಗಳೂರು ಕ್ಷೇತ್ರದ ಹಾಲಿ ಸದಸ್ಯರಾಗಿದ್ದ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ಕೆ.ಕೆ.ಶೆಟ್ಟಿಯವರಿಗೆ ಟಿಕೆಟ್ ತಪ್ಪಿಸಿ ಜನಾರ್ದನ ಪೂಜಾರಿಯವರಿಗೆ ಅವಕಾಶ ಕಲ್ಪಿಸಲಾಗಿತ್ತು.ಅವರು ಪ್ರಸಿದ್ಧ ಕ್ರಿಮಿನಲ್ ಲಾಯರ್ ಯೂಸುಫ್ ಹೈದರ್ ಅವರ ಜೂನಿಯರ್ ಆಗಿದ್ದರು.ಕಾಂಗ್ರೆಸ್ ಸದಸ್ಯರೂ ಆಗಿರಲಿಲ್ಲ.ಈ ಬಿಲ್ಲವ ಯುವಕನ ಬಗ್ಗೆ ಪತ್ರಕರ್ತ ಗೇಬ್ರಿಯಲ್ ವಾಜ್ ತಮ್ಮ ವರದಿಯಲ್ಲಿ ಹೀಗೆ ಕುತೂಹಲ ವ್ಯಕ್ತಪಡಿಸಿದ್ದರು.
ಇದೇ ರೀತಿ 1971 ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರಕ್ಕೆ ಇಂದಿರಾ ಗಾಂಧಿ ಕಾಂಗ್ರೆಸ್ ಪಕ್ಷದ ಟಿಕೇಟನ್ನು ಗಿಟ್ಟಿಸಿಕೊಂಡಿದ್ದ ಸೇವಾದಳದ ಸಾಮಾನ್ಯ ಕಾರ್ಯಕರ್ತ ಸಿ.ಕೆ.ಜಾಫರ್ ಷರೀಫ್ ಬಗ್ಗೆಯೂ ಕುತೂಹಲ ವ್ಯಕ್ತವಾಗಿತ್ತು.ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಈ ಚುರಕಾದ ಯುವಕನನ್ನು ಎಸ್.ನಿಜಲಿಂಗಪ್ಪನವರು ಬೆಂಗಳೂರಿನ ಕಾಂಗ್ರೆಸ್ ಕಚೇರಿಗೆ ಕರೆದುಕೊಂಡು ಬಂದಿದ್ದರು.ಆದರೆ ಜಾಫರ್ ಷರೀಫ್ ,ನಿಜಲಿಂಗಪ್ಪ ಕ್ಯಾಂಪಿನ ವಿದ್ಯಮಾನಗಳನ್ನು ಪ್ರಧಾನಿ ಇಂದಿರಾ ಗಾಂಧಿಯವರಿಗೆ ರಹಸ್ಯವಾಗಿ ರವಾನಿಸಿ ಅವರ ವಿಶ್ವಾಸವನ್ನು ಗಳಿಸಿದ್ದರು.
ಅದೇ ರೀತಿ 1973 ರ ಸುಮಾರಿಗೆ ರಾಜ್ಯ ರಾಜಕೀಯ ವಲಯದಲ್ಲಿ”ಈ ಸಿ ಎಂ ಇಬ್ರಾಹಿಂ ಯಾರು?”ಎಂಬ ಪ್ರಶ್ನೆ ಉದ್ಭವಿಸಿತ್ತು.ಒಂದು ದಿನ ಲಾಲ್ ಬಾಗಿನ ಗಾಜಿನಮನೆಯಲ್ಲಿ ಸಂಸ್ಥಾ ಕಾಂಗ್ರೆಸ್ಸಿನ ರಾಜ್ಯ ಮಟ್ಟದ ಯುವಜನ ಸಮಾವೇಶ ನಡೆಯುತ್ತಿತ್ತು.ವೇದಿಕೆಯ ನೆಲಹಾಸಿನ ಮೇಲೆ ವೀರೇಂದ್ರ ಪಾಟೀಲ್,ರಾಮಕೃಷ್ಣ ಹೆಗಡೆ,ಎಚ್ ಡಿ ದೇವೇಗೌಡ ಮೊದಲಾದ ನಾಯಕರು ಗಹನ ಸಮಾಲೋಚನೆಯಲ್ಲಿ ತೊಡಗಿದ್ದರು. ವೇದಿಕೆಯ ತುದಿಯಲ್ಲಿ ಒಂದು ಮೈಕ್ ಇಟ್ಟಿದ್ದರು.ವಿವಿಧ ಜಿಲ್ಲೆಯ ಯುವ ಮುಖಂಡರು ಭಾಷಣ ಮಾಡಿ ಹೋಗುತ್ತಿದ್ದರು.ಶಿವಮೊಗ್ಗ ಜಿಲ್ಲೆಯ ಅಧ್ಯಕ್ಷ ಎಚ್ ಸಿ ಪ್ರಕಾಶ್ ಅವರ ಸರದಿ ಬಂದಿತು.ಆದರೆ ಅವರಿಗೆ ಸ್ಟೇಜ್ ಫಿಯರ್ ಶುರುವಾಯಿತು.ತಮ್ಮೊಂದಿಗೆ ಕಾರ್ಯಕರ್ತರ ನಿಯೋಗದಲ್ಲಿ ಬಂದಿರುವ ಭದ್ರಾವತಿಯ ಯುವಕ ಸಿ.ಎಂ.ಇಬ್ರಾಹಿಂ ಅವರೇ ತಮ್ಮ ಬದಲು ವೇದಿಕೆಯಲ್ಲಿ ಮಾತನಾಡಲು ಸರಿಯಾದ ವ್ಯಕ್ತಿ ಎಂದು ಅವರಿಗೆ ಅನ್ನಿಸಿತು.ರಾಜ್ಯೋತ್ಸವ,ಗಣೇಶೋತ್ಸವ ಗಳಲ್ಲಿ ಮತ್ತು ಶಿವಮೊಗ್ಗದ ಗೋಪಿ ಸರ್ಕಲ್ ನಲ್ಲಿ ವಿದ್ಯಾರ್ಥಿ ಹೋರಾಟಗಳಲ್ಲಿ ಇಬ್ರಾಹಿಂ ಮಾಡುತ್ತಿದ್ದ ಅದ್ಭುತವಾದ ಭಾಷಣಗಳು ಅವರ ನೆನಪಿಗೆ ಬಂದವು.
ಲಿಂಗಾಯತ ಮಠವೊಂದರಲ್ಲಿ ಆರಂಭಿಕ ಶಿಕ್ಷಣ ಪಡೆದಿದ್ದ ಇಬ್ರಾಹಿಂ,ಶರಣರ ವಚನಗಳನ್ನು ಕವಿ ಪುಂಗವರ ನುಡಿಮುತ್ತುಗಳನ್ನು ಪೋಣಿಸಿ, ದೇಶ-ವಿದೇಶಗಳ ವಿದ್ಯಮಾನಗಳ ಬಗ್ಗೆ ಮಾಡಿದ ವಿಶಿಷ್ಠ ಶೈಲಿಯ ಭಾಷಣ ಸಭಾಂಗಣದಲ್ಲಿ ಮಾರ್ದನಿಸಿತು.ಆಗ ಮೊದಲ ಬಾರಿಗೆ ಮುಖಂಡರು ಇಬ್ರಾಹಿಂ ಅವರತ್ತ ತಲೆ ಎತ್ತಿ ನೋಡಿದರು.ವೀರೇಂದ್ರ ಪಾಟೀಲ್ ಮಾರನೆಯ ದಿನವೇ ಇಬ್ರಾಹಿಂ ಅವರನ್ನು ತಮ್ಮ ಶಿಷ್ಯನನ್ನಾಗಿ ಮಾಡಿಕೊಂಡರು.ಇಬ್ರಾಹಿಂ ರಾಜ್ಯ ರಾಜಕಾರಣಕ್ಕೆ ದೊಡ್ಡ ಮಟ್ಟದ ಪ್ರವೇಶ ಪಡೆದರು.
ಮುಸ್ಲಿಂ ನಾಯಕರೆಲ್ಲಾ ದೇವರಾಜ ಅರಸು ಕ್ಯಾಂಪಿಗೆ ಜಿಗಿದಿದ್ದರು.ಸಂಸ್ಥಾ ಕಾಂಗ್ರೆಸ್ ನಲ್ಲಿ ಯಾರೂ ಇರಲಿಲ್ಲ.ಆ ಕೊರತೆಯನ್ನು ಇಬ್ರಾಹಿಂ ತುಂಬಿದರು.ಆಗ ಅವರೊಬ್ಬ ಗ್ಲಾಮರಸ್ ಯುವ ನಾಯಕ.1978 ರಲ್ಲಿ ಜನತಾ ಪಕ್ಷದಿಂದ ಶಿವಾಜಿ ನಗರ ಕ್ಷೇತ್ರದ ಶಾಸಕರಾದರು.ವೀರೇಂದ್ರ ಪಾಟೀಲ್ ಜೊತೆಗೆ ಇಂದಿರಾ ಕಾಂಗ್ರೆಸ್ಸಿಗೆ ಮರಳಿದ ಇಬ್ರಾಹಿಂ,ಗುಂಡೂರಾವ್ ಸಂಪುಟದಲ್ಲಿ ಸಚಿವರಾದರು.
ತಮ್ಮ ಹರಿತವಾದ ನಾಲಗೆಯನ್ನು ಯಾವ ದಿಕ್ಕಿಗೆ ಬೇಕಾದರೂ ಹೊರಳಿಸಿ ಭಾಷಣ ಮಾಡುವ ಕಲೆಯನ್ನು ಸಿದ್ಧಿಸಿಕೊಂಡಿರುವ ಇಬ್ರಾಹಿಂ ಅವರನ್ನು ಬಳಸಿಕೊಳ್ಳಲು ಅನೇಕ ನಾಯಕರು ಪ್ರಯತ್ನಿಸಿದ್ದಾರೆ.1994 ರಲ್ಲಿ ದೇವೇಗೌಡರು ಅಧಿಕಾರದ ದಡವನ್ನು ತಲುಪಲು ಇಬ್ರಾಹಿಂ ವಿಶೇಷವಾಗಿ ಪ್ರಯತ್ನಿಸಿದ್ದರು.ದೇವೇಗೌಡರಿಗಾಗಿ ರಾಜ್ಯದಲ್ಲೆಡೆ ಮುಸ್ಲಿಂ ಮುಖಂಡರ ಸಭೆಗಳನ್ನು ಸಂಘಟಿಸಿದ್ದರು. ದೇವೇಗೌಡರು ಪ್ರಧಾನಿಯಾದಾಗ ಇಬ್ರಾಹಿಂ ನಾಗರಿಕ ವಿಮಾನಯಾನ ಸಚಿವರಾಗಿದ್ದರು. ದೇವೇಗೌಡರಿಗೆ ಹಿಂದಿ ಚೆನ್ನಾಗಿ ಬರುತ್ತಿರಲಿಲ್ಲ.ಅವರು ಹಲವು ಸುತ್ತು ಉತ್ತರ ಭಾರತದ ಪ್ರವಾಸಗಳನ್ನು ಹಮ್ಮಿಕೊಂಡಿದ್ದರು. ಆಗ ಅವರನ್ನು ಅಲ್ಲಿನ ಜನರಿಗೆ ಪರಿಚಯಿಸಲು ಇಬ್ರಾಹಿಂ ಮಾಡುತ್ತಿದ್ದ ಹಿಂದೂಸ್ತಾನಿ ಭಾಷಣಗಳು ಜನಪ್ರಿಯವಾಗಿದ್ದವು.
ನಂತರ ಸಿದ್ದರಾಮಯ್ಯನವರ ತೆಕ್ಕೆಗೆ ಜಾರಿದ ಇಬ್ರಾಹಿಂ ಅಹಿಂದ ಸಮಾವೇಶಗಳಲ್ಲಿ ಸಾವಿರಾರು ಜನರನ್ನು ತಮ್ಮ ಅಮೋಘವಾದ ಭಾಷಣಗಳ ಮೂಲಕ ರಂಜಿಸಿದರು.2013 ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ತಮಗೆ ಮಂತ್ರಿ ಸ್ಥಾನ ನೀಡಬಹುದೆಂದು ನಿರೀಕ್ಷಿಸಿದ್ದರು. ಅದು ಹುಸಿಯಾಯಿತು.ಇತ್ತೀಚಿಗೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನ ಸ್ಥಾನವೂ ಕೈ ತಪ್ಪುತ್ತಿದ್ದಂತೆ ಇಬ್ರಾಹಿಂ ಸಿದ್ದರಾಮಯ್ಯನವರ ವಿರುದ್ಧ ಸಿಡಿದಿದ್ದಾರೆ.
ಈ ಬೆಳವಣಿಗೆಯಿಂದ ದೇವೇಗೌಡರ ಮನಸ್ಸಿಗೆ ಸ್ವಲ್ಪ ಸಮಾಧಾನವಾಗಿದ್ದರೆ ಯಾರೂ ಆಶ್ಚರ್ಯಪಡಬೇಕಿಲ್ಲ.ಅವರು ಯೋಗಸಾಧನೆ ಮೂಲಕ ತಮ್ಮ ಇಳಿ ವಯಸ್ಸಿನಲ್ಲಿಯೂ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ. ಆದರೆ ಅವರ ಮನಸ್ಸಿಗೆ ನೆಮ್ಮದಿ ಇದೆಯೇ ಎಂಬ ಪ್ರಶ್ನೆಗೆ ಉತ್ತರ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಬೇಡ ಬೇಡವೆಂದರೂ ಅವರ ಮನಸ್ಸಿನೊಳಗೆ ಕೆಲವು ನೆನಪುಗಳು ಮತ್ತು ಸಂಗತಿಗಳು ನುಗ್ಗಿ ಬರುತ್ತಿವೆ:
1 ವಿಧಾನ ಸೌಧದ ಮುಖ್ಯಮಂತ್ರಿಯವರ ಕೊಠಡಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಫೋಟೊ ಇತ್ತು.ಜೆ.ಎಚ್ .ಪಟೇಲ್ ಎಸ್.ಎಂ.ಕೃಷ್ಣ,ಧರಂ ಸಿಂಗ್,ಯಡಿಯೂರಪ್ಪ,ಡಿ.ವಿ.ಸದಾನಂದ ಗೌಡ,ಜಗದೀಶ್ ಶೆಟ್ಟರ್ ಹೀಗೆ ಯಾವ ಮುಖ್ಯಮಂತ್ರಿಯೂ ಆ ಫೋಟೋವನ್ನು ತೆಗೆಸಿರಲಿಲ್ಲ.ಆದರೆ 2013 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆ ಅದನ್ನು ತೆಗೆಸಿಬಿಟ್ಟರು.
2 2018 ರ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿಯವರು “ಜೆಡಿಎಸ್ ಬಿಜೆಪಿಯ ಬಿ ಟೀಮ್”ಎಂದು ಟೀಕಿಸಿದ್ದರು .ಅದರಿಂದಾಗಿ ಜೆಡಿಎಸ್ ಹಲವು ಸೀಟುಗಳನ್ನು ಕಳೆದುಕೊಳ್ಳಬೇಕಾಯಿತು. ರಾಹುಲ್ ಗಾಂಧಿಯವರಿಂದ ಈ ಹೇಳಿಕೆಯನ್ನು ಕೊಡಿಸಿದ್ದು ಸಿದ್ದರಾಮಯ್ಯನವರೇ ಎನ್ನುವುದು ದೇವೇಗೌಡರಿಗೆ ಚೆನ್ನಾಗಿ ಗೊತ್ತು.”ಈ ಹೇಳಿಕೆಯಿಂದ ಡ್ಯಾಮೇಜ್ ಆಯಿತು.ಇಲ್ಲದಿದ್ದರೆ ನಮಗೆ 60 ಸೀಟು ಬರುತ್ತಿದ್ದವು”ಎಂದು ದೇವೇಗೌಡರು ದಿ ಹಿಂದೂ ಪತ್ರಿಕೆ ಸಂದರ್ಶನದಲ್ಲಿ ಹೇಳಿದ್ದರು.
3. ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗುತ್ತಿದ್ದಂತೆ ಸಿದ್ದರಾಮಯ್ಯನವರ ನಡವಳಿಕೆಯಲ್ಲಿ ಬದಲಾವಣೆಯನ್ನು ದೇವೇಗೌಡರು ಗುರ್ತಿಸಿದ್ದರು.ವಿಧಾನಸಭೆಯಲ್ಲಿ ರೈತರ ಸಾಲ ಮನ್ನಾ ಮತ್ತು ಬಜೆಟ್ ಮೇಲಿನ ಚರ್ಚೆಗಳಿಗೆ ಕುಮಾರಸ್ವಾಮಿಯವರು ಉತ್ತರ ಹೇಳುತ್ತಿದ್ದಾಗ ಸಿದ್ದರಾಮಯ್ಯನವರು ಸದನದಿಂದ ಎದ್ದು ಹೋಗುತ್ತಿದ್ದುದನ್ನು ಕೂಡಾ ದೇವೇಗೌಡರು ಗಮನಿಸಿದ್ದರು.”siddaramaiah was not even in the assembly when Mr Kumaraswamy spoke during the three day session recently”ಎಂದು ದೇವೇಗೌಡರು ದಿ ಹಿಂದೂ ಪತ್ರಿಕೆ ಸಂದರ್ಶನದಲ್ಲಿ ಹೇಳಿರುವುದು ಗಮನಾರ್ಹ.
4. ಜಮೀರ್ ಅಹ್ಮದ್ ಮೊದಲಾದ ತಾವೇ ಬೆಳೆಸಿದ್ದ ಮುಸ್ಲಿಂ ನಾಯಕರನ್ನು ಸಿದ್ದರಾಮಯ್ಯ ಹೈಜಾಕ್ ಮಾಡುತ್ತಿದ್ದಾರೆ ಎಂಬ ಬೇಸರವೂ ದೇವೇಗೌಡರಿಗೆ ಇದೆ.”they also wooed one or two muslim leaders who were with me”ಎಂದು ಅವರು ಅದೇ ಸಂದರ್ಶನದಲ್ಲಿ ಹೇಳಿದ್ದರು.
5.ಸಮ್ಮಿಶ್ರ ಸರ್ಕಾರ ಯಶಸ್ವಿಯಾದರೆ ರಾಜ್ಯ ರಾಜಕಾರಣದ ಮೇಲಿನ ತಮ್ಮ ಹಿಡಿತ ತಪ್ಪಿಹೋದೀತೆಂಬ ಆತಂಕದಿಂದಲೇ ಸಿದ್ದರಾಮಯ್ಯ,ಕುಮಾರಸ್ವಾಮಿ ಸರ್ಕಾರದ ಪತನಕ್ಕೆ ಪಿತೂರಿ ಮಾಡಿರಬಹುದೆಂಬ ಅನುಮಾನ ದೇವೇಗೌಡರಿಗೆ ಮೊದಲಿಂದಲೂ ದಟ್ಟವಾಗಿತ್ತು.
ಅಧಿಕಾರವಿರಲಿ ಅಥವಾ ಇಲ್ಲದಿರಲಿ ಹಲವು ದಶಕಗಳಿಂದ ರಾಜಕಾರಣದ ದಾಳಗಳನ್ನು ಲೀಲಾಜಾಲವಾಗಿ ಉರುಳಿಸುತ್ತಾ ಬಂದಿರುವ ದೇವೇಗೌಡರಿಗೆ ಈಗ ಸಿದ್ದರಾಮಯ್ಯನವರೇ ಒಂದು ತೊಡರುಗಾಲು ಆಗಿರುವುದು ಸ್ಪಷ್ಟ. ಕಳೆದ ವರ್ಷ ದೇವೇಗೌಡರು”ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ದೆಹಲಿಗೆ ತೆರಳಲಿ”ಎಂಬ ಸಲಹೆ ನೀಡಿದ್ದರು.ಅವರು ಏಕೆ ಅಂತಹ ಹೇಳಿಕೆ ನೀಡಿದರು ಎಂಬುದು ಬಹಳ ಜನರಿಗೆ ಆಗ ಅರ್ಥವಾಗಿರಲಿಲ್ಲ.
ಸಿದ್ದರಾಮಯ್ಯನವರ ಸುತ್ತಲೂ ಕ್ರೋಢೀಕರಣವಾಗುತ್ತಿರುವ ಮುಸ್ಲಿಂ ಮತಗಳನ್ನು ಚದುರಿಸಲು ದೇವೇಗೌಡರು ಇಬ್ರಾಹಿಂ ಅವರನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳಬಹುದೇ? ಎಂಬ ಕುತೂಹಲ ಸಹಜ.ಈ ಅಸ್ತ್ರ ಮೊದಲಿನ ಮೊನಚನ್ನು ಉಳಿಸಿಕೊಂಡಿದೆಯೇ? ಎಂಬ ಪ್ರಶ್ನೆಯೂ ಏಳುತ್ತದೆ.
2013 ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಊರು ಭದ್ರಾವತಿಯಲ್ಲಿ ಇಬ್ರಾಹಿಂ ಮೂರನೇ ಸ್ಥಾನಕ್ಕೆ ಕುಸಿದಿದ್ದರು.ಇಬ್ರಾಹಿಂ ಈಗ ಚಿತ್ರ-ವಿಚಿತ್ರವಾಗಿ ಮಾತನಾಡುತ್ತಿದ್ದಾರೆ. “ನನ್ನ ಮನಸ್ಸು ಪರಿಶುದ್ಧವಾಗಿದೆ.ನಾನು ಶಾಪ ಹಾಕಿದರೆ ಅದು ಘೋರ ಪರಿಣಾಮವನ್ನು ಬೀರುತ್ತದೆ”ಎಂದು ಅವರು ದೂರ್ವಾಸ ಮುನಿಯ ರೀತಿ ಮಾತನಾಡುತ್ತಾ ರಾಜಕಾರಣಕ್ಕೆ ಪೌರಾಣಿಕ ಟಚ್ ಕೊಡಲು ಪ್ರಯತ್ನಿಸುತ್ತಿದ್ದಾರೆ.
“ಆರ್ ಎಸ್ ಎಸ್ ನಲ್ಲಿಯೂ ಒಳ್ಳೆಯವರಿದ್ದಾರೆ.ಭಾವೂರಾವ್ ದೇಶಪಾಂಡೆ ಅವರ ಕಾಲಲ್ಲಿ ಚಪ್ಪಲಿಯೇ ಇರಲಿಲ್ಲ.ಜಗನ್ನಾಥ ರಾವ್ ಜೋಶಿಯವರ ಬಳಿ ಆಸ್ಪತ್ರೆ ಬಿಲ್ ಕಟ್ಟಲು ದುಡ್ಡೇ ಇರಲಿಲ್ಲ”ಎನ್ನುತ್ತಾ ಬಿಜೆಪಿಯ ಬಿ ಟೀಮಿನವರ ರೀತಿ ಮಾತನಾಡುತ್ತಿದ್ದಾರೆ.ಇಬ್ರಾಹಿಂ ಅವರನ್ನು ಜನ ಗಂಭೀರವಾಗಿ ಪರಿಗಣಿಸುತ್ತಾರೆಯೇ? ಅಥವಾ ಅವರ ಭಾಷಣಗಳು ಕೇವಲ ಮನರಂಜನೆಗೆ ಸೀಮಿತವಾಗುತ್ತವೆಯೇ?.ಈ ಪ್ರಶ್ನೆಗಳಿಗೆ ಮುಂದೆ ಉತ್ತರ ಸಿಗಬೇಕಾಗಿದೆ.
ಸಿ ರುದ್ರಪ್ಪ ನಾಡಿನ ಹಿರಿಯ ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರು.