18.3 C
Karnataka
Tuesday, November 26, 2024
    Home Blog Page 32

    ಅತಿಯಾದರೆ ಅಮೃತವೂ ವಿಷ

    ಸುಮಾ ವೀಣಾ

    ಬಸುರ ಹೆಂಡತಿಯೂಟ ಶಿಶುವ ದಣಿಸುವವೊಲು–  ಚಾಮರಸನ ‘ಪ್ರಭುಲಿಂಗ ಲೀಲೆ’ಯಿಂದ ಪ್ರಸ್ತುತ ಸಾಲನ್ನು ಆರಿಸಿದೆ.   ಪ್ರಸ್ತುತ ಚಾಮರಸನ ದೇಸಿ  ಶೈಲಿಯ ತತ್ವವನ್ನು ಹೇಳುತ್ತದೆ.ಬಸುರಿ ಹೆಂಗಸು ಅಗತ್ಯವಿದ್ದಷ್ಟು ಮಾತ್ರ ಊಟವನ್ನು ಸೇವಿಸಬೇಕು ಇಲ್ಲದಿದ್ದರೆ ಬೆಳೆಯುವ ಭ್ರೂಣದ ಮೇಲೆ ಅಡ್ಡಪರಿಣಾಮ ಬೀರುತ್ತದೆ ಎಂಬ  ಅರ್ಥವನ್ನು ಕೊಡುತ್ತದೆ.

    ವಾಚ್ಯಾರ್ಥದಲ್ಲಿ ಇದು ಅನ್ನಾಹಾರಾದಿ ವಿಚಾರಗಳಿಗೆ ಸಂಬಂಧಿಸಿದ್ದು ಎಂದಾದರೆ ಲಕ್ಷ್ಯಾರ್ಥದಲ್ಲಿ  ಮನುಷ್ಯನ ಲೋಕವ್ಯಾಪಾರಕ್ಕೂ ಅನ್ವಯವಾಗುತ್ತದೆ.  ಅತಿಯಾದರೆ ‘ಅಮೃತವೂ ವಿಷ’  ಎಂಬಂತೆ    ಎಂಬ ಮಾತನ್ನು ಇಲ್ಲಿ ಸಂವಾದಿಯಾಗಿ ತೆಗೆದುಕೊಳ್ಳಬಹುದು.

    ಉದಾಹರಣೆಗೆ ಯಾರೋ ಕಷ್ಟದಲ್ಲಿದ್ದಾರೆ ಎಂದರೆ  ಅವರಿಗೆ ಸಹಾಯ ಮಾಡುವುದು ಸರಿ ಆದರೆ ಅತಿರೇಕಕ್ಕೆ ಹೋಗಿ ಸಹಾನುಭೂತಿ ತೋರಿದರೆ ಹಾಗೆಯೇ ಸಹಾಯ ಮಾಡುವ ವ್ಯಕ್ತಿ ತಾನು  ಮುನ್ನೆಲೆಗೆ ಬರಬೇಕೆಂದು ಅತಿರೇಕದ ವರ್ತನೆ ತೋರಿದರೆ ಕಷ್ಟದಲ್ಲಿರುವವರ ಖಾಸಗಿತನಕ್ಕೆ  ಧಕ್ಕೆ ಬರುತ್ತದೆ. ಬಸುರಿ ಸೇವಿಸುವ  ಆಹಾರ  ಆಕೆ ಹಾಗು ಆಕೆಗೆ ಜನಿಸಲಿರುವ ಮಗುವಿನ ಆರೋಗ್ಯವನ್ನು ಕಾಪಾಡಬೇಕು. ಆದರೆ ಬಸುರಿ ಆಹಾರ  ರುಚಿಯಾಗಿದೆ ನನಗಿಷ್ಟ  ಎಂದು ಅತಿಯಾಗಿ ಸೇವಿಸಿದರೆ ಮಗುವಿಗೆ ಅದನ್ನು ಸಹಿಸಲಾಗುವುದಿಲ್ಲ.

    ‘ಬಸುರ ಹೆಂಡತಿಯೂಟ ಶಿಶುವ ದಣಿಸುವವೊಲು’ ಈ ಮಾತನ್ನು  ಶಿಕ್ಷಕ ಹಾಗು  ವಿಜ್ಞಾನಿಯ ಹಿನ್ನೆಲೆಯಿಂದಲೂ ತೆಗೆದುಕೊಳ್ಳಬಹುದು.   ಅಧ್ಯಯನ  ಶೀಲ ಶಿಕ್ಷಕ  ತನ್ನ ತಿಳಿವಳಿಕೆಯನ್ನೆಲ್ಲಾ  ತನ್ನ ವಿದ್ಯಾರ್ಥಿಗಳಿಗೆ ತಿಳಿಸಬೇಕೆಂಬ ಆಸೆ ಇರಿಸಿಕೊಳ್ಳುವುದು ಸರಿ ಆದರೆ ಅದನ್ನು ವಿದ್ಯಾರ್ಥಿ ಎಷ್ಟರಮಟ್ಟಿಗೆ  ಅರ್ಜಿಸಿಕೊಳ್ಳುತ್ತಾನೆ ಎಂಬುದು ಮುಖ್ಯವಾಗುತ್ತದೆ.  ಶಿಕ್ಷಕ  ವಿದ್ಯಾರ್ಥಿಯ ವಯೋಮಾನಕ್ಕನ್ನುಗುಣವಾಗಿ ಅವನ ತಿಳಿವಳಿಕೆಗೆ  ತಕ್ಕಂತೆ ಬೋಧನೆ  ಮಾಡಿದರೆ ಸಹಾಯವಾಗುತ್ತದೆ.

    ಇನ್ನೊಂದು ಮಗ್ಗುಲಲ್ಲಿ  ನೋಡುವುದಾದರೆ  ವಿಜ್ಞಾನಿ  ತನ್ನ ಸಂಶೋಧನೆಗಳನ್ನು  ಪ್ರಯೋಗಾರ್ಥಿಗಳ ಮೇಲೆ ಅನ್ವಯಿಸಹೋದರೆ ಎಡವಟ್ಟುಗಳಾಗುತ್ತವೆ.   ‘ಗುಬ್ಬಿಮೇಲೆ  ಬ್ರಹ್ಮಾಸ್ತ್ರ’ವನ್ನು ಪ್ರಯೋಗಿಸಲಾಗದು ಎಂಬಂತೆ ತಮ್ಮ ಆಸೆ, ಸಹಾನುಭೂತಿ, ತಿಳಿವಳಿಕೆ.ಪರಿಣತಿಗಳನ್ನು   ಬಲವಂತವಾಗಿ ಈಡೇರಿಸಿಕೊಳ್ಳುವುದು, ಪ್ರಯೋಗಿಸ ಹೋದರೆ ಖಂಡಿತಾ  ಅನಾನುಕೂಲವಾಗುತ್ತದೆ .

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ಅತಿಥಿ ಉಪನ್ಯಾಸಕರ ನೇಮಕಕ್ಕೆ ಚಾಲನೆ: ಅರ್ಜಿ ಹಾಕಲು ಜ.21 ಕೊನೆ ದಿನ

    BENGALURU JAN 16

    2021-22ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಸರಕಾರವು ಅರ್ಜಿ ಆಹ್ವಾನಿಸಿದೆ.

    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜ.17ರ ಸೋಮವಾರದಿಂದ https://dec.karnataka.gov.in ಮೂಲಕ ಆನ್-ಲೈನ್ ಅರ್ಜಿ ಹಾಕಿಕೊಳ್ಳಬಹುದಾಗಿದ್ದು, ಅರ್ಜಿ ಸಲ್ಲಿಸಲು ಜ.21 ಕೊನೆಯ ದಿನವಾಗಿರಲಿದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಅಭ್ಯರ್ಥಿಗಳು ಅರ್ಜಿಯಲ್ಲಿ ತಮ್ಮ ಇಷ್ಟದ ಆಯ್ದ 10 ಸರಕಾರಿ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಆಯ್ಕೆಯಾದವರಿಗೆ ಈ ಕಾಲೇಜುಗಳಲ್ಲೇ ಕಾರ್ಯನಿರ್ವಹಿಸಲು ಆದಷ್ಟು ಮಟ್ಟಿಗೆ ಅವಕಾಶ ಕೊಡಲಾಗುವುದು. ಒಂದು ವೇಳೆ, ಅಭ್ಯರ್ಥಿಗಳ ಆಯ್ಕೆಯ ಕಾಲೇಜುಗಳಲ್ಲಿ ವಾರಕ್ಕೆ 15 ಗಂಟೆಗಳ ಕಾರ್ಯಭಾರ ಇಲ್ಲದಿದ್ದ ಪಕ್ಷದಲ್ಲಿ ಮಾತ್ರ ಬೇರೆ ಕಾಲೇಜುಗಳಲ್ಲಿ ಅವಕಾಶ ಕಲ್ಪಿಸಿ ಕೊಡಲಾಗುವುದು ಎಂದು ಅವರು ಹೇಳಿದ್ದಾರೆ.

    ಅತಿಥಿ ಉಪನ್ಯಾಸಕರಾಗಿ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿರುವವರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುವುದು. ಅಲ್ಲದೆ, ವಿದ್ಯಾರ್ಹತೆ ಮತ್ತು ಸೇವಾ ವಿವರಗಳ ಆಧಾರದ ಮೇಲೆ, ನಾನಾ ಮಾನದಂಡಗಳ ಅನ್ವಯ ರಾಜ್ಯವ್ಯಾಪ್ತಿಯ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ವಿದ್ಯಾರ್ಹತೆ ಮತ್ತು ಅಂಕಗಳ ವಿವರ

    ಅತಿಥಿ ಉಪನ್ಯಾಸಕರ ನೇಮಕಾತಿಗೆ 100 ಅಂಕಗಳನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯ ಎರಡು ವರ್ಷಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಪೈಕಿ ಶೇ.15ರಷ್ಟನ್ನು ಪರಿಗಣನೆಗೆ ತೆಗೆದುಕೊಂಡು, ಇದಕ್ಕೆ ಗರಿಷ್ಠ 25 ಅಂಕಗಳನ್ನು ಕೊಡಲಾಗುವುದು ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಉಳಿದಂತೆ, ಪಿಎಚ್.ಡಿ., ಎನ್ಇಟಿ/ಕೆ-ಸೆಟ್/ಸ್ಲೆಟ್ ಮತ್ತು ಎಂ.ಫಿಲ್ ಪದವಿಗಳನ್ನು ಹೆಚ್ಚುವರಿ ವಿದ್ಯಾರ್ಹತೆ ಎಂದು ಪರಿಗಣಿಸಿದ್ದು, ಇವುಗಳಿಗೆ ಕ್ರಮವಾಗಿ ಗರಿಷ್ಠ 12, 9 ಮತ್ತು 6 ಅಂಕಗಳನ್ನು ನೀಡಲಾಗುವುದು. ಜತೆಗೆ, ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮಾತ್ರ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಒಂದು ವರ್ಷಕ್ಕೆ (ಗರಿಷ್ಠ 16 ವರ್ಷಗಳಿಗೆ ಮಾತ್ರ ಅನ್ವಯವಾಗುವಂತೆ 48 ಅಂಕಗಳು) 3 ಅಂಕಗಳನ್ನು ಕೊಡಲಾಗುವುದು. ಈ ಅವಧಿಯಲ್ಲಿ ಶೈಕ್ಷಣಿಕ ವರ್ಷದ ಒಂದು ಸೆಮಿಸ್ಟರ್ ನಲ್ಲಿ ಮಾತ್ರ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದಲ್ಲಿ 1.5 ಅಂಕಗಳನ್ನು ಮಾತ್ರ ನೀಡಲಾಗುವುದು. ನೇಮಕಾತಿಯಲ್ಲಿ ವಿಕಲಚೇತನ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ 10 ಅಂಕಗಳನ್ನು ಕೊಡಲಾಗುವುದು ಎಂದು ಅವರು ವಿವರಿಸಿದ್ದಾರೆ.

    Indian Stock Market : start upಗಳು ಸಾರ್ವಜನಿಕ ಹೂಡಿಕೆದಾರರನ್ನು ಮರೆಯದಿರಲಿ

    ಷೇರುಪೇಟೆಯು ಸಧ್ಯಕ್ಕೆ ಎರಡು ವಿಧಗಳ ಚಟುವಟಿಕೆಗೆ ವೇದಿಕೆಯಾಗುತ್ತಿದೆ. ಅದೆಂದರೆ ಒಂದು ವರ್ಗದಿಂದ ಷೇರುಗಳನ್ನು ವಿತರಣೆ ಮಾಡುವುದು, ಮತ್ತೊಂದು ವರ್ಗದಿಂದ ಷೇರುಗಳನ್ನು ಹಿಂಪಡೆಯುವ ಅಥವಾ ಹಿಂಕೊಳ್ಳುವ ಪ್ರಕ್ರಿಯೆಗಳಾಗಿವೆ.

    ಒಂದೆಡೆ ಕಂಪನಿಯ ಪ್ರವರ್ತಕರು ತಮ್ಮ ಷೇರುಗಳನ್ನು ಸಾರ್ವಜನಿಕವಾಗಿ ವಿತರಿಸಿ ಷೇರುದಾರರ ಜಾಲವನ್ನು ವಿಸ್ತರಿಸುವ ಪ್ರಯತ್ನದಲ್ಲಿ, ಕಂಪನಿಯು ಹಾನಿಗೊಳಗಾಗಿದ್ದರೂ, ತಮ್ಮ ಖರೀದಿಯ ಬೆಲೆ ಒಂದಂಕಿಯಲ್ಲಿದ್ದರೂ, ಷೇರಿನ ಮುಖಬೆಲೆಯನ್ನು ರೂ.1 ಕ್ಕೆ ಸೀಳಿ ಆರಂಭಿಕ ಷೇರು ವಿತರಣೆಯ ಮೂಲಕ ಸಾರ್ವಜನಿಕರಿಂದ ಅಧಿಕ ಪ್ರೀಮಿಯಂನೊಂದಿಗೆ ಸಂಪನ್ಮೂಲ ಸಂಗ್ರಹಣೆ ಮಾಡುತ್ತಾರೆ. ಈ ಪ್ರಕ್ರಿಯೆಯಿಂದ ಕಂಪನಿಯಲ್ಲಿರುವ ಹಾನಿಯನ್ನು ಜನಸಾಮಾನ್ಯರ ಹೆಗಲಿಗೆ ಹಸ್ತಾಂತರಿಸುತ್ತಾರೆ. ವರ್ಣರಂಜಿತ, ವಿಶ್ಲೇಷಣೆಗಳು, ಭವಿಷ್ಯದಲ್ಲಿ ಸಾಧಿಸಬಹುದಾದ ಅಂಕಿ ಅಂಶಗಳ ಮೂಲಕ ಮೂಗಿನ ತುದಿಗೆ ತುಪ್ಪ ಸವರಿ, ತಮ್ಮ ಸಂಪನ್ಮೂಲ ಸಂಗ್ರಹಣೆಯನ್ನು ಯಶಸ್ವಿಗೊಳಿಸಿಕೊಳ್ಳುತ್ತಾರೆ. ಈ ದಿನಗಳಲ್ಲಿ ಸ್ಟಾರ್ಟ್‌ ಅಪ್‌ ಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ.

    ಮತ್ತೊಂದೆಡೆ ಕಂಪನಿಗಳು ತಮ್ಮಲ್ಲಿರುವ ಮೀಸಲು ನಿಧಿ, ಇತರೆ ಚಟುವಟಿಕೆಗಳಿಂದ ಸಂಗ್ರಹವಾದ ಸಂಪನ್ಮೂಲಗಳನ್ನು ಬಳಸಿಕೊಂಡು ತಮ್ಮ ಕಂಪನಿಯ ಷೇರುಗಳನ್ನು ಪೇಟೆಯ ಬೆಲೆಗಿಂತ ಹೆಚ್ಚಿನ ಬೆಲೆಗಳಿಗೆ ಹಿಂಕೊಳ್ಳುವ ಮೂಲಕ ಷೇರುದಾರರಿಗೆ ಉತ್ತಮ ಫಲ ನೀಡುವ ಕಾರ್ಪೊರೇಟ್‌ ಸಂಪ್ರದಾಯಗಳನ್ನು
    ಮುಂದುವರೆಸಿಕೊಂಡು ಹೋಗುವ ಹವ್ಯಾಸ. ಈ ಮೂಲಕ ಷೇರುದಾರರ- ಕಂಪನಿಗಳ ನಡುವೆ ಮೂಡಬಹುದಾದ ಬಾಂಧವ್ಯದ ಬೆಸುಗೆ ದೀರ್ಘಕಾಲೀನವಾಗಿ ಪ್ರಭಾವಿಯಾಗುವಂತೆ ಮಾಡುವುದು.

    ಸ್ಟಾರ್ಟ್‌ ಅಪ್‌ ಯೋಜನೆ

    ಸ್ಟಾರ್ಟ್‌ ಅಪ್‌ ಯೋಜನೆಯು 2015 ರಲ್ಲೇ ಪ್ರಕಟಿಸಲಾಯಿತು. ಲೈಸೆನ್ಸ್‌ ರಾಜ್‌ ಅಗತ್ಯವಿರುವ, ಪ್ರದೇಶ ಸ್ವಾದೀನ, ಸಂಪನ್ಮೂಲ ಒದಗಿಸುವ, ವಿದೇಶೀ ಹೂಡಿಕೆಯ ಯೋಜನೆಗಳ ವಲಯಗಳಲ್ಲಿ ಸ್ಟಾರ್ಟ್‌ ಅಪ್‌ ಉದ್ಧಿಮೆ ಆರಂಭಿಸಲು ಅನುವು ಮಾಡಿಕೊಡುವುದು ಯೋಜನೆಯ ಮೂಲ ಉದ್ದೇಶವಾಗಿದ್ದು, ಇದರಿಂದ ಯುವಶಕ್ತಿಯು ತಮ್ಮ ಕೌಶಲ್ಯಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಉದ್ಯೋಗ ಸೃಷ್ಠಿ ಮಾಡುವುದರೊಂದಿಗೆ ಸ್ವಯಂ ಉದ್ಯೋಗಪತಿಗಳಾಗಿ ದೇಶದ ಆರ್ಥಿಕ ಉನ್ನತಿಗೆ ಕೊಡುಗೆ ನೀಡಲು ಪ್ರೋತ್ಸಾಹಿಸಿದಂತಾಗುತ್ತದೆ.

    ಹತ್ತು ವರ್ಷಗಳೊಳಗೆ ಸ್ಥಾಪನೆಯಾದ, ಒಂದು ನೂರು ಕೋಟಿ ರೂಪಾಯಿಗಳೊಳಗೆ ವಾರ್ಷಿಕ ವಹಿವಾಟು ಹೊಂದಿರುವ ಕಂಪನಿಗಳು ಸ್ಟಾರ್ಟ್‌ ಅಪ್‌ ಪಟ್ಟಕ್ಕೆ ಅರ್ಹವಾಗಿದ್ದು, ಪೇಟೆಂಟ್‌ ನೋಂದಾವಣಿ, ಮೂರು ವರ್ಷಗಳ ಕಾಲ ತನಿಖೆಗಳಿಂದ, ಬಂಡವಾಳ ತೆರಿಗೆ ರಿಯಾಯಿತಿ, ತೆರಿಗೆ ರಿಯಾಯಿತಿ, ಸ್ವಯಂ ದೃಡೀಕರಣ ಪತ್ರಕ್ಕೆ ಅವಕಾಶ ಮುಂತಾದ ಸವಲತ್ತುಗಳನ್ನುಈ ಯೋಜನೆ ಒದಗಿಸುತ್ತದೆ.

    ಹಿಂದಿನ ವರ್ಷ ಪ್ರಧಾನ ಮಂತ್ರಿಗಳು ರೂ.1,000 ಕೋಟಿ ಗಾತ್ರದ ಸೀಡ್‌ ಫಂಡ್‌ ಯೋಜನೆಯನ್ನು ಸಹ ಪ್ರಕಟಿಸಿದರು. ಈ ಎಲ್ಲಾ ವಿವಿಧ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಅನೇಕ ಕಂಪನಿಗಳು ಕಾರ್ಯೋನ್ಮುಖವಾಗಿವೆ. ಸಧ್ಯ ಕರ್ನಾಟಕವು ಟಾಪ್‌ ಪರ್ಫಾರ್ಮರ್‌ ಎಂದು ಗುರುತಿಸಲ್ಪಟ್ಟಿದೆ.

    ಸಧ್ಯ ಷೇರುಪೇಟೆಗಳು ಉತ್ತುಂಗದಲ್ಲಿರುವ ಕಾರಣ, ಇತ್ತೀಚೆಗೆ ಝೊಮೆಟೋ, ಪೇಟಿಎಂ, ಪಾಲಿಸಿ ಬಜಾರ್‌, ಗಳಂತಹ ಕಂಪನಿಗಳು ಆರಂಭಿಕ ಷೇರು ವಿತರಣೆ ಮಾಡಿ ಷೇರುವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿವೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಕಂಪನಿಗಳು ಆರಂಭಿಕ ಷೇರು ವಿತರಣೆಗೆ ಸಜ್ಜಾಗುತ್ತಿವೆ. ಸ್ಟಾರ್ಟ್‌ಅಪ್‌ ನೆಪದಲ್ಲಿ ತಮ್ಮ ಬುನಾದಿಯನ್ನು ಹಾಕಿ, ಸರ್ಕಾರದ ಅಂದರೆ ಸಾರ್ವಜನಿಕ ಸವಲತ್ತುಗಳನ್ನು ಪಡೆದುಕೊಂಡು ಸಮೃದ್ಧವಾಗಿ ಬೆಳೆದು ನಂತರ ತಮ್ಮ ಮತ್ತು ತಮಗೆ ಪೂರ್ವಶ್ರಮದಲ್ಲಿ ಬೆಂಬಲಿಸಿದ ಖಾಸಗಿ ಹೂಡಿಕೆದಾರರಿಗೆ ಲಾಭ ಗಳಿಸಿವ ಚಿಂತನೆಯನ್ನೇ ಮೂಲವಾಗಿಸಿಕೊಂಡು ಆರಂಭಿಕ ದಿನಗಳಲ್ಲಿ ಆಲಿಂಗಿಸಿಕೊಂಡಿರುವ ಸಾರ್ವಜನಿಕರನ್ನೇ ಬಲಿಪಶುಗಳನ್ನಾಗಿಸುವ ರೀತಿಯು ಒಳ್ಳೆಯ ಸಂಪ್ರದಾಯವಲ್ಲ.

    ಆರಂಭಿಕ ಷೇರು ವಿತರಣೆಗಳನ್ನು ಅಧಿಕ ಪ್ರೀಮಿಯಂಗಳಲ್ಲಿ ವಿತರಿಸುವುದೊಂದೇ ಅಲ್ಲ, ವಿತರಣೆಗೆ ಮುನ್ನವೇ ಆ ಕಂಪನಿಗಳ ಆಡಳಿತ ಮಂಡಳಿಗಳು ಕಂಪನಿಯಲ್ಲಿರುವ ವಿವಿಧ ಮೀಸಲು ನಿಧಿಗಳನ್ನು ಕರಗಿಸುವ ಪ್ರಕ್ರಿಯೆಯು ನಿಜಕ್ಕೂ ಬೇಸರದ ಸಂಗತಿ. ಒಂದೆಡೆ ಹೆಚ್ಚಿನ ಪ್ರೀಮಿಯಂ ಮತ್ತೊಂದೆಡೆ ಕಂಪನಿಯಲ್ಲಿರುವ ಆಂತರಿಕ ಆರ್ಥಿಕ ಸಂಪತ್ತನ್ನು ಕರಗಿಸುವ ವಿಧಾನಗಳು ಇಂದು ಸಾಮಾನ್ಯವಾಗಿವೆ. ಕಂಪನಿಗಳು ತಮ್ಮ ಆರಂಭಿಕ ಷೇರು ವಿತರಣೆಗೂ ಮುನ್ನ ಷೇರಿನ ಮುಖಬೆಲೆಯನ್ನು ಸೀಳುವುದು, ಅಸಹಜ ಪ್ರಮಾಣದ ಬೋನಸ್‌ಷೇರುಗಳನ್ನು ವಿತರಿಸುವುದು ನಂತರ ಅಸಹಜ ಗಾತ್ರದ ಪ್ರೀಮಿಯಂನಲ್ಲಿ ವಿತರಣೆ ಮಾಡುವುದು ಇಂದಿನ ವಾಡಿಕೆಯಾಗಿದೆ. ಇಂತಹ ಅಂಶಗಳು ಹೊಸದಾಗಿ ಪೇಟೆ ಪ್ರವೇಶಿಸುವ ಹೂಡಿಕೆದಾರರಿರಲಿ, ಅನುಭವಸ್ಥ ಹೂಡಿಕೆದಾರರ ಗಮನಕ್ಕೂ ಬಾರದೆ, ಕೇವಲ ಅಲಂಕಾರಿಕ ಪ್ರಚಾರಗಳಿಗೆ ವಿಶ್ಲೇಷಣೆಗಳಿಗೆ ಒಲವು ಮೂಡಿಸಿಕೊಂಡು ಹೂಡಿಕೆ ಹಣವನ್ನು ಕರಗಿಸಿಕೊಂಡವರ ಸಂಖ್ಯೆ ಹೆಚ್ಚಾಗಿದೆ. ಲೀಸ್ಟಿಂಗ್‌ಆದ ಮೇಲೆಯೂ ಕೆಲವು ಕಂಪನಿಗಳಲ್ಲಿನ ಷೇರಿನ ದರದಲ್ಲಿ ಭಾರಿ ಇಳಿಕೆಯಾದಾಗ ಮಾರಾಟಮಾಡಲು ಮನಸಾಗದು, ಏರಿಕೆಯಾದಲ್ಲಿ ಇನ್ನೂ ಹೆಚ್ಚಬಹುದೆಂಬ ನಿರೀಕ್ಷೆಯಿಂದ ಲಾಭದ ನಗದೀಕರಣಕ್ಕೆ ಮುಂದಾಗದ ಪರಿಸ್ಥಿತಿಯಲ್ಲಿರುವುದು ಅನೇಕ ಹೂಡಿಕೆದಾರರಿಗೆ ಚಿಂತನೆಯಾಗಿರುತ್ತದೆ. ಶೇ. 27 ರಷ್ಟು ಆರ್ಥಿಕ ಸಾಕ್ಷರತೆ ಹೊಂದಿರುವ ನಮ್ಮ ದೇಶದಲ್ಲಿ ಇಂತಹ ಅಸಹಜ ರೀತಿಯ ಬೆಳವಣಿಗೆಗಳಿಗೆ ಕಡಿವಾಣ ಅಗತ್ಯ.

    ಇತ್ತೀಚೆಗೆ ಪ್ರಮುಖ ಕಂಪನಿಗಳಾದ ಅಜಂತಾ ಫಾರ್ಮ, ಗ್ರೇಟ್‌ ಈಸ್ಟರ್ನ್‌ ಶಿಪ್ಪಿಂಗ್‌, ಟಿಸಿಎಸ್‌ ಕಂಪನಿಗಳು ತಮ್ಮಲ್ಲಿರುವ ಹೆಚ್ಚುವರಿ ಮೀಸಲು ನಿಧಿಯನ್ನು ಹೂಡಿಕೆದಾರರಿಗೆ ಹಂಚಲು, ಷೇರು ಹಿಂಕೊಳ್ಳುವ ಯೋಜನೆ ಮೂಲಕ ಮುಂದಾಗಿವೆ. ಇದು ಹೂಡಿಕೆದಾರರಿಗೆ ಯಾವ ರೀತಿ ಅನುಕೂಲ ಅಥವಾ ಲಾಭದಾಯಕ ಕ್ರಮ ಎಂಬ ಅನುಮಾನ ಹಲವರಲ್ಲಿ ಮೂಡಬಹುದು. ಹಿಂಕೊಳ್ಳುವಿಕೆಯು ಪೇಟೆಯ ದರಗಳಿಗಿಂತ ಹೆಚ್ಚಿನ ದರದಲ್ಲಿ ನಡೆಯುವುದರಿಂದ ಲಭ್ಯವಿರುವ ಮೀಸಲು ನಿಧಿಯು ಷೇರುದಾರರಿಗೆ
    ಹಂಚಿದಂತಾಗುತ್ತದೆ.

    ಉದಾಹರಣೆಗೆ ಒಂದು ವಾರದ ಕೆಳಗೆ ರೂ.2,200 ರ ಸಮೀಪವಿದ್ದ ಅಜಂತಾ ಫಾರ್ಮ ಷೇರು, ಹಿಂಕೊಳ್ಳುವಿಕೆ ದರ ರೂ.2,550 ಎಂದು ಪ್ರಕಟವಾದ ಮೇಲೆ ಷೇರಿನ ಬೆಲೆ ರೂ.2,330 ರ ವರೆಗೂ ತಲುಪಿದೆ. ಈ ಮೂಲಕ ಹೂಡಿಕೆ ಮಾಡಿದವರಿಗೆ ಪೇಟೆಯಲ್ಲಿಯೂ ಲಾಭ ಗಳಿಕೆಗೆ ಅವಕಾಶ ಕಲ್ಪಿತವಾಗುವುದಲ್ಲದೆ, ಷೇರುಗಳನ್ನು ಹಿಂದಿರುಗಿಸಿದವರಿಗೆ ರೂ.2,550 ರಂತೆ ನಿಗದಿತ ಪ್ರಮಾಣದಲ್ಲಿ, ಆಂಗೀಕರಿಸಲಾದ ಷೇರುಗಳಿಗೆ ನೀಡಲಾಗುವುದು.

    ಇನ್ನು ಟಿಸಿಎಸ್‌ ಷೇರಿನ ಬೆಲೆ ರೂ.3,840 ರ ಸಮೀಪವಿದ್ದಾಗ ಪ್ರತಿ ಷೇರಿಗೆ ರೂ.4,500 ರಂತೆ ಹಿಂಕೊಳ್ಳುವ ಯೋಜನೆ ಪ್ರಕಟಿಸಿದೆ. ಈ ಕಾರಣ ಷೇರಿನ ದರಗಳಲ್ಲಿ ಭಾರಿ ಏರಿಕೆ ಕಂಡು ರೂ.3,970 ರ ಸಮೀಪಕ್ಕೆ ಏರಿಕೆಯಾಗಿದೆ. ಇಲ್ಲಿ ಪೇಟೆಯ ವಹಿವಾಟಿನಲ್ಲಿಯೂ ಲಾಭ ಗಳಿಕೆಗೆ ಅವಕಾಶ ಅಲ್ಲದೆ, ಷೇರನ್ನು ಹಿಂಕೊಳ್ಳುವ ಯೋಜನೆಯಲ್ಲಿ ಹಿಂದಿರುಗಿಸಿದ ಅನುಪಾತಕ್ಕೆ ತಕ್ಕಂತೆ ರೂ.4,500 ರಂತೆ ಮಾರಾಟಮಾಡಿ ಲಾಭ ಗಳಿಕೆಗೆ ಅವಕಾಶ.

    ಹೀಗೆ ಎರಡು ವಿಭಿನ್ನ ರೀತಿಯ ಚಟುವಟಿಕೆಗಳು ವಿರುದ್ಧ ಚಿಂತನೆಗಳ ಆಧಾರದ ಮೇಲೆ ನಡೆಯುತ್ತಿವೆ. ನಮಗೆ ಯಾವುದು ಅನುಕೂಲಕರ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕಾದ
    ಮಾಡಿಕೊಳ್ಳಬೇಕಾದ ಸಾಮರ್ಥ್ಯವನ್ನು ನಾವು ಬೆಳೆಸಿಕೊಳ್ಳಬೇಕಾಗಿರುವುದು ನಮ್ಮಗಳಿಗೆ ಸವಾಲಾಗಿದೆ.

    ಬಜೆಟ್‌ ಮಂಡಣೆಯು ಫೆಬ್ರವರಿ ಒಂದರಂದು ನಡೆಯಲಿದ್ದು, ಮುಂದಿನ ದಿನಗಳಲ್ಲಿ ಪೇಟೆಯು ಯಾವ ರೀತಿ ಸ್ಪಂಧಿಸುವುದೆಂದು ನಿರ್ಧರಿಸುವುದು ಸಾಧ್ಯವಾಗದ ಪರಿಸ್ಥಿತಿ, ಕಾರಣ ಪೇಟೆಯಲ್ಲಿ ಹರಿದುಬರುತ್ತಿರುವ ಹಣದ ಹೊಳೆ, ಹೂಡಿಕೆದಾರರ ಆಸಕ್ತಿಗಳು ಎತ್ತ ಬೇಕಿದ್ದರೂ ತಿರುಗಿಸಬಹುದು. ಈ ಸಂದರ್ಭದಲ್ಲಿ ಕಳೆದ ಒಂದು ವರ್ಷದಲ್ಲಿ ಷೇರುಪೇಟೆ ಪ್ರವೇಶಿಸಿದವರ ಸಂಖ್ಯೆ ಶೇ.55 ರಿಂದ 60 ರಷ್ಟು ಹೆಚ್ಚಿದೆ. ಇವರನ್ನು ಸಾಧ್ಯವಾದಷ್ಠು ಸುರಕ್ಷಿತವಾಗಿ ಉಳಿಸಿಕೊಂಡಲ್ಲಿ, ವಿದೇಶಿ ವಿತ್ತೀಯ ಸಂಸ್ಥೆಗಳ ಚಟುವಟಿಕೆಯ ಪ್ರಭಾವವನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದಾಗಿದೆ. ಈ ದಿಶೆಯಲ್ಲಿ ಆರಂಭಿಕ ಷೇರು ವಿತರಣೆ ಅಂದರೆ ಐಪಿಒ ವಿಭಾಗದಲ್ಲಿ ಕೆಲವು ಸುಧಾರಣೆಗಳು ಅಗತ್ಯವೆನಿಸುತ್ತದೆ. ಅವುಗಳಲ್ಲಿ ಕೆಲವು ಈ ರೀತಿ ಇರಬಹುದಲ್ಲವೇ?

    ಐಪಿಒ ವಿಭಾಗದಲ್ಲಿ ಕೆಲವು ಸುಧಾರಣೆಗಳು ಅಗತ್ಯ

    1. Safety net method should be introduced to protect the ignorant investors from getting screwed. Minimum 50% of the collections should be in escrew account for a period of one year.

    ಮೊದಲನೆಯದಾಗಿ ಐಪಿಒ ಮೂಲಕ ವಿತರಣೆಯಾದ
    ಷೇರುಗಳಿಗೆ ಒಂದು ವರ್ಷಕಾಲ ಸುರಕ್ಷಾ ಚಕ್ರದ ವ್ಯವಸ್ಠೆ ಜಾರಿಗೊಳಿಸುವುದರಿಂದ, ನ್ಯಾಯಸಮ್ಮತ ಬೆಲೆಯಲ್ಲಿ ವಿತರಣೆಗಳು ಸಾಗುತ್ತವೆ. ಶೇ.50 ರಷ್ಠು, ಭರವಸಾತ್ಮಕ ಖಾತೆಯಲ್ಲಿರಿಸಬೇಕು.

    1. All IPOs should be issued at a facevalue of Rs.10 only to enable public atlarge to handle the issues judiciasly.

    ಎಲ್ಲಾ ಐಪಿಒ ಗಳ ಷೇರಿನ ಮುಖಬೆಲೆಯನ್ನು ರೂ.10 ರಲ್ಲಿಯೇ ವಿತರಿಸಬೇಕು. ಇದು ಸಣ್ಣ ಹೂಡಿಕೆದಾರರು ನ್ಯಾಯಸಮ್ಮತವಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯ.

    1. Companies which converted into public limited Companies should have compleated one year before floating IPOs.

    ಕಂಪನಿಗಳು ಪ್ರೈವೇಟ್ ಲಿಮಿಟೆಡ್ ನಿಂದ ಪಬ್ಲಿಕ್ ಲಿಮಿಟೆಡ್ ಕಂಪನಿಗಳಾಗಿ ಪರಿವರ್ತಿಸಿದ ನಂತರ ಐಪಿಒ ವಿತರಿಸಲು ಒಂದು ವರ್ಷದ ಕೂಲಿಂಗ್ ಸಮಯವಿರಬೇಕು.

    1. Promotors should be blocked for a peiod of one year from buying and selling their Company shares after one year.

    ಪ್ರವರ್ತಕರು ಒಂದು ವರ್ಷಕಾಲ ಅವರ ಕಂಪನಿಯ ಷೇರುಗಳನ್ನು ಖರೀದಿಸಲಾಗಲಿ ಅಥವಾ ಮಾರಾಟಮಾಡುವುದಾಗಲಿ ನಿರ್ಬಂದಿಸಬೇಕು.

    1. Companies should have compleated one year after issue of bonus / huge dividend before the public issue.

    ಕಂಪನಿಗಳು ಬೋನಸ್ ಷೇರು ಅಥವಾ ಭಾರಿ ಪ್ರಮಾಣದ ಲಾಭಾಂಶ ವಿತರಣೆ ಮಾಡಿದ ನಂತರ ಐಪಿಒ ವಿತರಿಸಲು ಒಂದು ವರ್ಷ ಕಾಯಲೇಬೇಕು.

    1. Anchor Investors lock in should be extended from one month to 6 months, to justify the issue price.

    ಆಂಕರ್ ಇನ್ವೆಸ್ಟರ್ ಗಳು ತಮ್ಮ ಷೇರುಗಳನ್ನು 6 ತಿಂಗಳಕಾಲ ಮಾರಾಟಮಾಡದಿರಲು ನಿರ್ಬಂದಿಸುವುದು ಸಣ್ಣ ಹೂಡಿಕೆದಾರರ ದೃಷ್ಠಿಯಿಂದ ಸೂಕ್ತವೆನಿಸುತ್ತದೆ.

    1. If IPOs are priced at very high level, then they should be given green signal to list it in Secondary Market without IPO route. Markets will decide the fate of it. Thereby innocent investors interest will be protected. This category should be brought under T series ( Trade to trade segment)

    ಐಪಿಒ ಗಳು ಅತಿ ಹೆಚ್ಚಿನ ಬೆಲೆಯಲ್ಲಿ ವಿತರಿಸುವುದಕ್ಕಿಂತ ಅವುಗಳನ್ನು ನೇರವಾಗಿ ಸ್ಟಾಕ್ ಎಕ್ಸ್ ಚೇಂಜ್ ಗಳಲ್ಲಿ ಲಿಸ್ಟಿಂಗ್ ಮಾಡಿ, ಪೇಟೆಯೇ ಆ ಷೇರುಗಳ ಮೌಲ್ಯಮಾಪನ ಮಾಡುವಂತಾದಲ್ಲಿ ಸಣ್ಣ ಹೂಡಿಕೆದಾರರ ಹಿತದ ನಿರ್ಧಾರವಾಗುವುದು. ಈ ಲೀಸ್ಟಿಂಗ್ ಸಂದರ್ಭದಲ್ಲಿ ಒಂದು ತಿಂಗಳ ಕಾಲ ʼ ಟಿ ʼ ಗುಂಪಿನಲ್ಲಿ ಬಿಡುಗಡೆಯಾಗಬೇಕು.

    ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಪ್ರವಾಹಕ್ಕೆ ಸೂರು ಕಳೆದುಕೊಂಡ ವೃದ್ಧೆಗೆ ನಾಲ್ಕೇ ತಿಂಗಳಲ್ಲಿ ಮನೆ

    BENGALURU JAN 16

    ಭಾರಿ ಮಳೆಗೆ ಸೂರು ಕಳೆದುಕೊಂಡ ಕಮಲವ್ವನಿಗೆ ಗಣೇಶ ಹಬ್ಬವನ್ನೂ ಸಂಭ್ರಮಿಸಲಾಗದ ಸಂಕಟ. ಅಂದು ಖಾಸಗಿ ವಾಹಿನಿ ಖಾಸಗಿ ಟಿವಿ ಯ ಸಂದರ್ಶನ ಕಾರ್ಯಕ್ರಮದಲ್ಲಿ ಜನರ ಸಂಕಷ್ಟ ಆಲಿಸಿ ಸ್ಥಳದಲ್ಲೇ ಪರಿಹಾರ ಸೂಚಿಸುತ್ತಿದ್ದ ಮುಖ್ಯಮಂತ್ರಿಗಳನ್ನು ಕಂಡು ಕಮಲವ್ವನೂ ತನ್ನ ಸಂಕಷ್ಟ ತೋಡಿಕೊಂಡಳು.

    “ಇಬ್ಬರೂ ಗಂಡುಮಕ್ಕಳು ಸತ್ತ ಹೋಗ್ಯಾರ, ಮನಿ ಕಟ್ಟಸಿಕೊಡ್ರಿ ಸಾಹೇಬ್ರ” ಎಂದು ಗದ್ಗದಿತಳಾಗಿ ನುಡಿದ ಕಮಲವ್ವನಿಗೆ ಸಾಂತ್ವನ ಹೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಮಲವ್ವ ಸ್ವಂತ ಸೂರಿನಡಿ ಸಂಕ್ರಾಂತಿ ಆಚರಿಸುವಂತೆ ಮಾಡಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಕ್ಷೇತ್ರ ಶಿಗ್ಗಾಂವಿಯ ಮಂಚಿನಕೊಪ್ಪ ಗ್ರಾಮದ ಕಮಲವ್ವ ತಿಮ್ಮನಗೌಡ್ರ ತಮಗೆ ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಜಿಲ್ಲಾಡಳಿತಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ನಾಲ್ಕೇ ತಿಂಗಳಿನಲ್ಲಿ ಮನೆ ನಿರ್ಮಿಸಿ, ಸಂಕ್ರಾಂತಿಯಂದು ಕಮಲವ್ವನಿಗೆ ಮನೆಯನ್ನು ಹಸ್ತಾಂತರಿಸಲಾಯಿತು.

    ಹ್ಯಾಬಿಟ್ಯಾಟ್ ಸೆಂಟರ್ ಮೂಲಕ ನಿರ್ಮಿಸಲಾದ ಸುಸಜ್ಜಿತ ಮನೆಯನ್ನು ಸವಣೂರ ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರು ಹಸ್ತಾಂತರಿಸಿದರು.

    Guest Lecturers:ಅತಿಥಿ ಉಪನ್ಯಾಸಕರ ಸಮಸ್ಯೆಗೆ ರಾಜಕೀಯ ಬಣ್ಣ: ಸಚಿವರ ಬೇಸರ

    BENGALURU JAN 16

    ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಸಂಬಂಧಿಸಿದ ಸಂಘಟನೆಗಳೊಂದಿಗೆ ಚರ್ಚಿಸಿಯೇ ಪರಿಹರಿಸಲಾಗಿದ್ದು, ಅವರು ಬಯಸಿದ್ದಕ್ಕಿಂತ ಹೆಚ್ಚಿನ ವೇತನವನ್ನು ಘೋಷಿಸಲಾಗಿದೆ. ಆದರೆ, ಈಗ ಕೆಲವು ಸಂಘಟನೆಗಳು ಈ ವಿಚಾರಕ್ಕೆ ಅನಗತ್ಯವಾಗಿ ರಾಜಕೀಯ ಬಣ್ಣ ಬಳಿಯುತ್ತಿರುವುದು ಸರಿಯಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ- Dr.C.N.Ashwatha Narayana-ಹೇಳಿದ್ದಾರೆ.

    ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಜನರ ವೇತನ ಏರಿಕೆಯನ್ನು ಸಚಿವರು ಶನಿವಾರ ಪ್ರಕಟಿಸಿದ್ದರು. ಇದಾದ ನಂತರ ಮುಷ್ಕರನಿರತ ಉಪನ್ಯಾಸಕರು ತಾವು ಮುಷ್ಕರವನ್ನು ನಿಲ್ಲಿಸುವುದಿಲ್ಲ ಎನ್ನುತ್ತಿರುವ ಬಗ್ಗೆ ಸುದ್ದಿಗಾರರು ಭಾನುವಾರ ಇಲ್ಲಿ ಕೇಳಿದ ಪ್ರಶ್ನೆಗಳಿಗೆ ಸಚಿವರು ಹೀಗೆಂದು ಉತ್ತರಿಸಿದರು.

    ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿದ್ದು, ಇವರಲ್ಲಿ 4,500 ಮಂದಿ ಮಾತ್ರ ಯುಜಿಸಿ ನಿಗದಿತ ಶೈಕ್ಷಣಿಕ ಅರ್ಹತೆ ಹೊಂದಿದ್ದಾರೆ. ಸರಕಾರವು ಇವರ ವೇತನವನ್ನು ಗೌರವಾರ್ಹವಾಗಿ ಹೆಚ್ಚಿಸಬೇಕೆಂದು ಮುಷ್ಕರನಿರತ ಸಂಘಟನಗಳೇ ಹೇಳಿದ್ದವು. ಸರಕಾರ ಇದಕ್ಕೆ ಸ್ಪಂದಿಸಿದ್ದು, ದುಪ್ಪಟ್ಟಿಗಿಂತಲೂ ಹೆಚ್ಚು ವೇತನ ಏರಿಸಿದೆ. ಇಷ್ಟಾದಮೇಲೆ ಅತಿಥಿ ಉಪನ್ಯಾಸಕರು ಹಠ ತಳೆದಿರುವುದು ಬೇಸರದ ಸಂಗತಿ ಎಂದು ಅವರು ಹೇಳಿದರು.

    ಸೇವಾ ಭದ್ರತೆ ನೀಡುವುದಕ್ಕೂ ಸಾಧ್ಯ ಇಲ್ಲ ಎಂದು ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

    ಅತ್ತ ದರಿ, ಇತ್ತ ಪುಲಿ

     ಸುಮಾ ವೀಣಾ

    ಮುಳ್ಳಿಡಿದ ಮರನೇರಿದಂತೆ- ನಡುಗನ್ನಡ ಸಾಹಿತ್ಯದ ಮಹತ್ವದ ಕವಿ ಲಕ್ಷ್ಮೀಶನ ‘ಜೈಮಿನಿಭಾರತ’ದ  ಹತ್ತೊಂಬತ್ತನೆಯ ಸಂಧಿ  ಇಪ್ಪತ್ತನಾಲ್ಕನೆ ಪದ್ಯದಲ್ಲಿ   ಪ್ರಸ್ತುತ ಮಾತು  ಉಲ್ಲೇಖವಾಗಿದೆ.

    ಉಪಮಾಲೋಲ ಲಕ್ಷ್ಮೀಶನ   ಉಪಮೆಗಳಲ್ಲಿ   ಮಹತ್ವದ್ದಾಗಿರುವ ಉಪಮೆ. ಮುಳ್ಳಿಡಿದ ಮರನೇರಿದಂತೆ ಎಂಬುದು ಉದ್ಧಾಲಕ ಹೇಳುವ ಮಾತು . ಮುಳ್ಳಿನ ಮರ ಹತ್ತಿದಂತೆ ಆಯಿತು  ಎಂದರೆ  ಕಷ್ಟಗಳನ್ನು ಒಡಲಿನಲ್ಲಿ ಸಂಚಯನ  ಮಾಡಿಕೊಂಡಂತೆ  ಎಂಬ  ಅರ್ಥವನ್ನು  ಸೂಚಿಸುತ್ತದೆ.

    ಉದ್ಧಾಲಕನ ಹೆಂಡತಿ ಚಂಡಿಕೆ ಪತಿಯ ಜಪ ತಪಕ್ಕೆ  ಸಹಾಯ  ಮಾಡುತ್ತಿರುತ್ತಾಳೆ.  ಹೆಂಡತಿಯ ಸಹಕಾರಕ್ಕೆ ಮೆಚ್ಚಿ ಮನೆಯ ಕೆಲಸಗಳನ್ನು  ನೋಡಿಕೊ  ಎಂದು ಉದ್ಧಾಲಕ ಹೇಳಿದಾಗ   ಆಕೆ ನನ್ನಿಂದಾಗದು  ನಾನು ಮನೆಕೆಲಸದ ಹೆಂಗಸಲ್ಲ ಎಂದು  ಕಟುವಾಗಿಯೇ ಹೇಳುತ್ತಾಳೆ.  ಆ ಮಾತನ್ನು  ಕೇಳಿದ ಉದ್ದಾಲಕ   ಈ ಪರಿಸ್ಥಿತಿಯನ್ನು ಬಿಸಿ ತುಪ್ಪಕ್ಕೆ ಹೋಲಿಸಿಕೊಳ್ಳುತ್ತಾನೆ. ಉಗುಳಿದರೆ ನಷ್ಟ ನುಂಗಿದರೆ ದೇಹ ಭಾದೆ ಎಂದು ತನಗಾದ ಸಂದಿಗ್ಧ ಪರಿಸ್ಥಿತಿಯನ್ನು ವಿವರಿಸುತ್ತಾನೆ.

    ಈ ರೀತಿಯ ಉಭಯಸಂಕಟದ ಪರಿಸ್ಥಿತಿ ಆಧುನಿಕ ದಿನ ಮಾನಗಳಲ್ಲಿಯೂ ಆಗುವುದಿದೆ.   ಹಬ್ಬ ಹುಣ್ಣಿಮೆಯ  ಸಂದರ್ಭದಲ್ಲಿ  ನಿತ್ಯೋಪಯೋಗಿ ವಸ್ತುಗಳ ಬೆಲೆ ಧಿಡೀರ್ ಏರಿಕೆ  ಆದಾಗಲೂ ಕೊಳ್ಳಲೂ ಆಗದು  ಕೊಳ್ಳದೆ ಇರಲೂ ಆಗದ  ಸಂದರ್ಭ.  ಉದ್ಧಾಲಕನಿಗೂ ಹೆಂಡತಿಯ ವಿಚಾರದಲ್ಲಿ ಹೀಗೆ ಆಗುತ್ತದೆ.  

    ಮುಳ್ಳಿಡಿದ ಮರ ಹೆಸರೇ ಹೇಳುವಂತೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮುಳ್ಳಿರುವ ಮರವನ್ನು ಏರಿ ಮತ್ತೆ ಇಳಿಯುತ್ತೇನೆ ಎಂದರೆ ಭಾದೆ  ಇದ್ದೇ ಇರುತ್ತದೆ. ಅತ್ತ ದರಿ ಇತ್ತ  ಪುಲಿ ಎಂಬ ಮಾತನ್ನು ಇಲ್ಲಿ ಸಾಮಯಿಕವಾಗಿ ತೆಗೆದುಕೊಳ್ಳಬಹುದು.

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    Makara Sankranti :ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂಬ ಸಿಹಿ ಮಾತಿನ ಹಬ್ಬ

    ರತ್ನಾ ಶ್ರೀನಿವಾಸ್

    ಜಗಚ್ಚಕ್ಷುವಾಗಿರುವ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲವೇ ಸಂಕ್ರಮಣ ಅಥವ ಸಂಕ್ರಾಂತಿ.

    ಸೂರ್ಯ ದೇವನು ವಿಶ್ವದ ಆತ್ಮ. ಜಗತ್ತಿನ ಕಣ್ಣು. ಮಳೆ ಬೀಳಲು, ಬೆಳೆ ಬೆಳಗಲು, ಎಳೆ ಬೆಳಗು ಸೂರ್ಯನು ಕಾರಣ.ಆ ಸವಿತೃ ದೇವನ ದಿವ್ಯ ತೇಜಸ್ಸು ನಮಗೆ ಸಿದ್ದಿ, ಬುದ್ಧಿ, ಸಮೃದ್ದಿಗಳನ್ನು ನೀಡುತ್ತದೆ. ಸಂಕ್ರಾಂತಿ ಒಂದು ವಿಧದಲ್ಲಿ ಸೂರ್ಯನ ಆರಾಧನೆಯೇ.

    ಪುಷ್ಯ ಮಾಸದಲ್ಲಿ ಬರುವ (ಜನವರಿ 14 ಅಥವಾ 15ರಂದು) ಮಕರ ಸಂಕ್ರಾಂತಿ ಯನ್ನು ಉತ್ತರಾಯಣ ಪುಣ್ಯಕಾಲ ಎಂದು ಕರೆಯುತ್ತಾರೆ.
    ಸಂಕ್ರಾಂತಿಯಲ್ಲಿ ಎಳ್ಳು ಬೀರುವ ಸಂಪ್ರದಾಯವಿದೆ. ಇದಕ್ಕೆ ಪುರಾಣ ಕಾಲದ ಕಥೆಯೊಂದಿದೆ.

    ಶಿಲಾಸುರನೆಂಬ ರಕ್ಕಸ ಬ್ರಹ್ಮ ದೇವರಿಂದ ವರ ಪಡೆದುಕೊಂಡು ಅಹಂಕಾರದಿಂದ ಮೆರೆಯುತ್ತಾ ಲೋಕಪೀಡಕನಾಗಿರುತ್ತಾನೆ. ಆಗ ಸೂರ್ಯ ದೇವನು ಮಕರ ಮತ್ತು ಕರ್ಕ ರ ಸಹಾಯ ಪಡೆದುಕೊಂಡು ಶಿಲಾಸುರನನ್ನು ಸಂಹರಿಸುತ್ತಾನೆ. ಮಕರ ಶಿಲಾಸುರನನ್ನು ಹೊಟ್ಟೆ ಬಗಿದಾಗ ಭೂಮಿಗೆ ಎಳ್ಳು ಪ್ರವೇಶವಾಗುತ್ತದೆ. ಈತನ ಸಾಹಸಕ್ಕೆ ಮೆಚ್ಚಿದ ಸೂರ್ಯ ನಿನ್ನನ್ನು, ನಿನ್ನಿಂದ ಭೂಮಿಗೆ ಬಂದ ಎಳ್ಳನ್ನು ಪೂಜಿಸಿದವರಿಗೆ ಒಳ್ಳೆಯದಾಗಲಿ ಎಂದು ಹರಸಿದರಂತೆ. ಈ ಕಾರಣದಿಂದಲೇ ಎಳ್ಳು ಬೀರುವ ಆಚರಣೆ ಬಂದಿರುವುದಾಗಿಯೂ, ಮಕರ ಸಂಕ್ರಮಣ ಎಂಬ ಹೆಸರುಜನರಲ್ಲಿ ಉಳಿದಿರುವುದಾಗಿ ಈ ಕಥೆಯಿಂದ ತಿಳಿದುಬರುತ್ತದೆ.

    ಕರ್ನಾಟಕದಲ್ಲಿಎಳ್ಳು, ಸಕ್ಕರೆ ಅಚ್ಚು, ಬೆಲ್ಲ, ಕಬ್ಬು, ಬಾಳೆಹಣ್ಣನ್ನು ಬಂಧು ಮಿತ್ರರಿಗೆ ಹಂಚುವ ಸಂಪ್ರದಾಯ ಈ ಹಬ್ಬದ ಒಂದು ವಿಶೇಷ.
    ದನ ಕರುಗಳಿಗೆ ಮೈತೊಳೆದು ಭೂತ ಪೀಡೆಗಳಿಂದ ಅವುಗಳನ್ನು ರಕ್ಷಿಸುವ ಸಲುವಾಗಿ ಬೀದಿಗಳಲ್ಲಿ ಹೊತ್ತಿಸಿದ ಬೆಂಕಿಯನ್ನು ದಾಟಿಸುವುದರ ಉಂಟು.ಸಂಕ್ರಮಣ ಕರ್ನಾಟಕದ ಆಹಾರ ವೈವಿಧ್ಯ ಗಳನ್ನು ಅನಾವರಣಗೊಳಿಸುತ್ತದೆ. ಆ ವರ್ಷದಲ್ಲಿ ಬೆಳೆದ ಬೆಳೆಗಳನ್ನು ಬಳಸಿ ವಿಭಿನ್ನ ಅಡುಗೆಯನ್ನು ತಯಾರಿಸುತ್ತಾರೆ.

    ಒಟ್ಟಾರೆ ಸಂಕ್ರಾಂತಿ ಬದಲಾವಣೆ ಯನ್ನು ಅಳವಡಿಸಿ ಕೊಳ್ಳಲು ಹೇಳಿ ಮಾಡಿಸಿದ ಹಬ್ಬ. ಏಕೆಂದರೆ ಇದು ಕಾಲದ ಚಲನೆಯನ್ನು ತನ್ಮೂಲಕ ಬದಲಾವಣೆಯನ್ನೇ ಆಶಯವಾಗಿರಿಸಿ ಕೊಂಡಿದೆ.ಇದರ ವಿಶೇಷವೆಂದರೆ ಸಿಹಿಯಾದ ಮಾತು.ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂಬ ಸಿಹಿ ಮಾತಿನ ಹಬ್ಬ.

    ಈ ಸಂಕ್ರಮಣ ಎಲ್ಲರಲ್ಲಿಯೂ ಸಿಹಿ ಮಾತಿಗೆ, ಮಧುರಭಾವನೆಗೆ ಮೂಲವಾಗಲಿ. ಎಲ್ಲೆಡೆಯು ಆರೋಗ್ಯ, ಸಮೃದ್ದಿ, ಸಂತಸವಿರಲಿ.
    ಎಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

    This image has an empty alt attribute; its file name is ratna-srinivas-edited.jpg

    ರತ್ನಾ ಶ್ರೀನಿವಾಸ್ ಅವರು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ಯವರು.  ಪ್ರಾಥಮಿಕ ಪದವಿಯನ್ನು ಅರಸೀಕೆರೆಯಲ್ಲಿ ಪಡೆದು ಮುಂಬಯಿನಲ್ಲಿ  ಎಂ.ಎ ಎಂ.ಫಿಲ್  ಪಡೆದು ಪ್ರಸ್ತುತ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ & ರಿಸರ್ಚ್, ಯಲಹಂಕ, ಇಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇವರ ಚಾರುವಸಂತದ ಆಯಾಮ ಅನನ್ಯತೆ ಸಂಪ್ರಬಂಧದ  ಪುಸ್ತಕವಾಗಿ ಅಭಿಜಿತ್ ಪ್ರಕಾಶನ ಮುಂಬೈನಿಂದ ಪ್ರಕಟವಾಗಿದೆ.

    Guest Lecturers:ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸರ್ಕಾರದ ಸಂಕ್ರಾಂತಿ ಕೊಡುಗೆ

    BENGALURU JAN 14

    ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕಿಳಿದಿದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸರಕಾರ ಸಂಕ್ರಾಂತಿಗೆ ಸಿಹಿಸುದ್ದಿ ಕೊಟ್ಟಿದ್ದು, ವೇತನವನ್ನು ದುಪ್ಪಟ್ಟಿಗಿಂತಲೂ ಹೆಚ್ಚು ಏರಿಸಿದೆ. ಜೊತೆಗೆ, ಸೆಮಿಸ್ಟರ್-ವಾರು ನೇಮಕಾತಿಯನ್ನು ನಿಲ್ಲಿಸಿ, ಇನ್ನು ಮುಂದೆ ಇಡೀ ಶೈಕ್ಷಣಿಕ ವರ್ಷಕ್ಕೆ ನೇಮಿಸಿ ಕೊಳ್ಳುವುದಾಗಿ ಘೋಷಿಸಿದೆ.

    ಸರಕಾರದ ಪರವಾಗಿ ವಿಧಾನಸೌಧದಲ್ಲಿ ಶುಕ್ರವಾರ ಈ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು, ಯುಜಿಸಿ ನಿಗದಿತ ಶೈಕ್ಷಣಿಕ ಅರ್ಹತೆ ಇದ್ದು 5 ವರ್ಷ ಮತ್ತು ಅದಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರು ಇನ್ನು ಮುಂದೆ ಮಾಸಿಕ 32 ಸಾವಿರ ರೂ, ಇದಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವವರು ಮಾಸಿಕ 30 ಸಾವಿರ ರೂ ಗೌರವಧನ ಪಡೆಯಲಿದ್ದಾರೆ ಎಂದು ಪ್ರಕಟಿಸಿದರು.

    ಹಾಗೆಯೇ, ಯುಜಿಸಿ ಬಯಸುವ ಶೈಕ್ಷಣಿಕ ಅರ್ಹತೆ ಹೊಂದದೆ 5 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವವರಿಗೆ ಮಾಸಿಕ 28 ಸಾವಿರ ರೂ. ಮತ್ತು ಇದಕ್ಕಿಂತ ಕಡಿಮೆ ಕಾಲ ಸೇವೆ ಸಲ್ಲಿಸಿರುವವರಿಗೆ ಮಾಸಿಕ 26 ಸಾವಿರ ರೂ. ಗೌರವ ಧನ ನಿಗದಿಪಡಿಸಲಾಗಿದೆ. ಜತೆಗೆ, ಇವರು ನಿಗದಿತ ಶೈಕ್ಷಣಿಕ ಅರ್ಹತೆ ಗಳಿಸಿಕೊಳ್ಳಲು 3 ವರ್ಷಗಳ ಕಾಲಾವಕಾಶ ನೀಡಲಾಗಿದೆ. ಅತಿಥಿ ಉಪನ್ಯಾಸಕರಿಗೆಲ್ಲ ಇನ್ನು ಮುಂದೆ ಪ್ರತೀ ತಿಂಗಳು 10ರೊಳಗೆ ವೇತನ ಪಾವತಿಸಲಾಗುವುದು ಎಂದು ಅವರು ವಿವರಿಸಿದರು.

    ಇದುವರೆಗೆ, ಯುಜಿಸಿ ನಿಗದಿತ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರು ತಿಂಗಳಿಗೆ 13 ಸಾವಿರ ರೂ. ಮತ್ತು ಮಿಕ್ಕವರು 11 ಸಾವಿರ ರೂ. ಗೌರವಧನ ಪಡೆಯುತ್ತಿದ್ದರು.

    ಇದಲ್ಲದೆ, ಅತಿಥಿ ಉಪನ್ಯಾಸಕರ ಸುಗಮ ನೇಮಕಾತಿಗೆ ಆನ್-ಲೈನ್ ಪೋರ್ಟಲ್ಲನ್ನು ಸಹ ಅಭಿವೃದ್ಧಿ ಪಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಇದರಲ್ಲಿ ಜ.17ರಿಂದ ಅರ್ಜಿ ಹಾಕಿಕೊಳ್ಳಬಹುದು. ಇದಕ್ಕೆ ಒಂದು ವಾರ ಕಾಲಾವಕಾಶವಿದ್ದು, ಅಭ್ಯರ್ಥಿಗಳು ತಮ್ಮ ಇಷ್ಟದ 5 ಸರಕಾರಿ ಕಾಲೇಜುಗಳನ್ನು ಸೂಚಿಸಲು ಅವಕಾಶ ಮಾಡಿಕೊಡಲಾಗಿದೆ. ಇದರೊಂದಿಗೆ ಅತಿಥಿ ಉಪನ್ಯಾಸಕರಿಗೆ ಸೂಕ್ತ ಕಾರ್ಯಭಾರ ಇರುವಂತೆ ವ್ಯವಸ್ಥೆ ಮಾಡಲಾಗುವುದು  ಎಂದು ಅವರು ತಿಳಿಸಿದರು.

    ಅತಿಥಿ ಉಪನ್ಯಾಸಕರ ಸಮಸ್ಯೆ/ಬೇಡಿಕೆಗಳ ಪರಿಹಾರಕ್ಕಾಗಿ ಸರ್ಕಾರವು ತಿಂಗಳ ಹಿಂದೆ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿಯನ್ನು ರಚಿಸಿ, ವರದಿ ನೀಡಲು ಒಂದು ತಿನಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

    `ಅತಿಥಿ ಉಪನ್ಯಾಸಕರ ಸಮಸ್ಯೆ 2002ರಿಂದಲೂ ಇತ್ತು. ಆದರೆ ಹಿಂದಿನ ಸರಕಾರಗಳು ಇದನ್ನು ಸರಿಯಾಗಿ ನಿಭಾಯಿಸದೆ ಇದ್ದುದರಿಂದ ಇದೊಂದು ಕಗ್ಗಂಟಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಸಹಾನುಭೂತಿ ಮತ್ತು ಮಾನವೀಯ ನೆಲೆಯಲ್ಲಿ ಪರಿಗಣಿಸಿ, ಕ್ಷಿಪ್ರ ಗತಿಯಲ್ಲಿ ಸ್ಪಂದಿಸಿದರು. ಇದರಿಂದಾಗಿ ಕೇವಲ ಒಂದು ತಿಂಗಳಲ್ಲಿ ಪರಿಹಾರ ರೂಪಿಸುವುದು ಸಾಧ್ಯವಾಯಿತು’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಉಪಸ್ಥಿತರಿದ್ದರು.


    ಇದೊಂದು ಐತಿಹಾಸಿಕ ತೀರ್ಮಾನ. ಇದಕ್ಕೆ ಮಿಂಚಿನ ವೇಗದಲ್ಲಿ ಪರಿಹರ ಕೊಟ್ಟ ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ. ಬೋಧಕರು ಈ ಸಮಾಜದ ಸಂಪತ್ತು. ಅವರ ನೆಮ್ಮದಿಯೇ ಸಮಾಜದ ನೆಮ್ಮದಿ.

    -ಡಾ.ಸಿ.ಎನ್. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ


    ಸರ್ಕಾರದ ಆದೇಶದ ಪ್ರತಿ ಇಲ್ಲಿದೆ. ಸ್ಕ್ರಾಲ್ ಮಾಡಿ ಓದಿ

    ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ 5 ಟಿ ಸೂತ್ರ: ಪ್ರಧಾನಿ ಮೆಚ್ಚುಗೆ

    BENGALURU JAN 13

    ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಗೆ ಅಳವಡಿಸಿರುವ ಟೆಸ್ಟಿಂಗ್, ಟ್ರಾಕಿಂಗ್, ಟ್ರೇಸಿಂಗ್, ಟ್ರಯಾಜಿಂಗ್ ಮತ್ತು ಟೆಕ್ನಾಲಜಿ ಬಳಕೆಯ 5 ಟಿ ಸೂತ್ರವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೊ ಸಂವಾದದಲ್ಲಿ ಭಾಗವಹಿಸಿದ ನಂತರ ಪತ್ರಿಕಾ ಹೇಳಿಕೆ ನೀಡಿರುವ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಗಾಗಿ ಕೈಗೊಂಡಿರುವ ಕ್ರಮಗಳನ್ನು ಪ್ರಧಾನಿಯವರಿಗೆ ವಿವರಿಸಲಾಯಿತು. ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸುತ್ತಿರುವ ಕುರಿತು ಹಾಗೂ ರಾಜ್ಯದಲ್ಲಿ ಲಸಿಕೆ ಹಾಕಿಸಿಕೊಂಡವರ ಪ್ರಮಾಣ ದೇಶದ ಸರಾಸರಿಗಿಂತ ಹೆಚ್ಚಿರುವ ಕುರಿತು ಪ್ರಧಾನಿಯವರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ತಿಳಿಸಿದ್ದಾರೆ.

    ಇದರೊಂದಿಗೆ ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಕುರಿತು ಸಹ ಪ್ರಧಾನಿಯವರಿಗೆ ಮಾಹಿತಿ ನೀಡಲಾಯಿತು. ಹಾಗೂ ಆಕ್ಸಿಜನೇಟೆಡ್ ಬೆಡ್ ಗಳು ಮತ್ತು ಆಕ್ಸಿಜನ್ ಪ್ಲಾಂಟ್ ಗಳನ್ನು ಹೆಚ್ಚಿಸಲು ಕೇಂದ್ರದ ನೆರವು ಕೋರಲಾಯಿತು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

    ರಾಜ್ಯದಲ್ಲಿ ಹೋಂ ಐಸೊಲೇಷನ್ ನಲ್ಲಿ ಇರುವವರ ಮೇಲ್ವಿಚಾರಣೆಗೆ ತಂತ್ರಜ್ಞಾನದ ಬಳಕೆಯನ್ನು ಪ್ರಧಾನಿಯವರು ಶ್ಲಾಘಿಸಿದರು ಎಂದು ಅವರು ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅಲೆ ಫೆಬ್ರವರಿ ತಿಂಗಳಲ್ಲಿ ಅತ್ಯಂತ ತೀವ್ರಗೊಳ್ಳುವ ನಿರೀಕ್ಷೆಯಿದ್ದು, ಮೊದಲ ಹಾಗೂ ಎರಡನೇ ಅಲೆಯನ್ನು ಎದುರಿಸಿದ ಅನುಭವದ ಆಧಾರದಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು.

    ಮೂರನೇ ಅಲೆಯ ಸಂದರ್ಭದಲ್ಲಿ ಶೇ. 94ಕ್ಕೂ ಹೆಚ್ಚು ಸೋಂಕಿತರು ಹೋಮ್ ಐಸೊಲೇಷನ್ ನಲ್ಲಿ ಇದ್ದಾರೆ. ಆದ್ದರಿಂದ ಅವರಲ್ಲಿ ವಿಶ್ವಾಸ ಮೂಡಿಸುವ ಹಾಗೂ ಅವರಿಗೆ ಔಷಧ ಪೂರೈಕೆಯೂ ಸೇರಿದಂತೆ ಸೂಕ್ತ ಆರೈಕೆಯನ್ನು ಖಾತರಿಪಡಿಸಲು ಆದ್ಯತೆ ನೀಡುವಂತೆ ಪ್ರಧಾನಿಯವರು ತಿಳಿಸಿದ್ದಾರೆ.

    ಭಾರತ ಸರ್ಕಾರವು ಹೆಚ್ಚಿನ ಪರೀಕ್ಷೆ ನಡೆಸುವಂತೆ ಹಾಗೂ ಕೇಂದ್ರ ಸರ್ಕಾರ ಒದಗಿಸಿರುವ 23,000 ಕೋಟಿ ರೂ. ಪ್ಯಾಕೇಜ್ ನಡಿ ಅಂಬ್ಯುಲೆನ್ಸ್ ಹಾಗೂ ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲು ಕ್ರಮ ವಹಿಸುವಂತೆ ಸಲಹೆ ನೀಡಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ.

    ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳಿಗೆ 32 ಸಾವಿರ ಕೋಟಿ ಹಣವನ್ನು ಆರೋಗ್ಯ ಮೂಲಭೂತ ಸೌಕರ್ಯಕ್ಕಾಗಿ ಎರಡನೆಯ ನಂತರ ಒದಗಿಸಿದೆ. ಹಲವು ರಾಜ್ಯಗಳು ಇನ್ನೂ ಇದರ ಪ್ರಯೋಜನ ಪಡೆದಿಲ್ಲ. ಆರೋಗ್ಯ ಮೂಲಭೂತ ಸೌಕರ್ಯಗಳಾದ ಐಸಿಯು, ಆಕ್ಸಿಜನ್ ಪ್ಲಾಂಟ್, ಆಕ್ಸಿಜಿನೆಟೆಡ್ ಬೆಡ್ ಹಾಗೂ ಅಂಬುಲೆನ್ಸ್ ಸೇರಿದಂತೆ ಇತರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ರಾಜ್ಯಗಳು ಸಹ ತಮ್ಮ ಪಾಲನ್ನು ಸೇರಿಸಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿದೆ ಎಂದು ಸಲಹೆ ಕೊಟ್ಟರು.

    2nd Print Binnale-India: ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮುದ್ರಣ ಬಿ ನಾಲೆ

    ಬಳಕೂರ. ವಿ.ಎಸ್.ನಾಯಕ

    ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಅಡಿ ಇಟ್ಟವರಿಗೆ ಒಂದು ಅಚ್ಚರಿಯ ಕಲಾ ಲೋಕಕ್ಕೆ ಬಂದಂತಹ ಅನುಭವವಾಗಿತ್ತು. ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಶೈಲಿಯ ಕಲಾಕೃತಿಗಳು ಕಲಾಸಕ್ತರ ಗಮನಸೆಳೆದಿದ್ದು.ಇದಕ್ಕೆ ಕಾರಣ ಬೆಂಗಳೂರಿನಲ್ಲಿ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಅಂತರಾಷ್ಟ್ರೀಯ ಮುದ್ರಣ ಬಿ ನಾಲೆಯನ್ನು ಕೇಂದ್ರ ಲಲಿತ ಕಲಾ ಅಕಾಡೆಮಿ ಏರ್ಪಡಿಸಿದೆ.

    ಜನವರಿ 10 ರಿಂದ ಆರಂಭವಾಗಿ 23 ರವರೆಗೆ ನಡೆಯುವ ಈ ಪ್ರದರ್ಶನವನ್ನು ಲಲಿತಕಲಾ ಅಕಾಡೆಮಿ ಯು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಹಯೋಗದೊಂದಿಗೆ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ನಡೆಸುತ್ತಿರುವುದು ವಿಶೇಷವಾಗಿದೆ.

    ಲಲಿತ ಕಲೆಯು ಒಂದು ಪ್ರಮುಖ ಮಾಧ್ಯಮವಾಗಿರುವ ಪ್ರಿಂಟ್ ಮೇಕಿಂಗ್ ನ ಈ ಪ್ರದರ್ಶನದಲ್ಲಿ ಭಾರತವೂ ಸೇರಿದಂತೆ ಜರ್ಮನಿ, ರಷ್ಯಾ, ನೆದರ್ಲ್ಯಾಂಡ್, ಮೆಕ್ಸಿಕೋ, ಬಾಂಗ್ಲಾದೇಶ, ಅಮೆರಿಕ, ಪ್ರಾನ್ಸ್, ಅರ್ಜೆಂಟೈನಾ, ಪೋಲಂಡ್, ಕ್ರೋ ಏಶಿಯ, ಇಸ್ರೇಲ್ ಪೆರು ಮತ್ತು ನೇಪಾಳ ಇತ್ಯಾದಿ14 ದೇಶಗಳ ವಿಭಿನ್ನ ಕಲಾಕೃತಿಗಳನ್ನು ಪ್ರದರ್ಶಿಸಿರುವುದು ವಿಶೇಷವಾಗಿದೆ.

    ಎಲ್ಲಾ ದೇಶಗಳ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲಾಸಕ್ತರಿಗೆ ಇದೆ. ಇದರಲ್ಲಿ ಅಂತರಾಷ್ಟ್ರೀಯ ವಿಭಾಗದಲ್ಲಿ 28, ಆಹ್ವಾನಿತ ಕಲಾವಿದರಲ್ಲಿ 33, ಮತ್ತು ರಾಷ್ಟ್ರಮಟ್ಟದ 121 ಕಲಾಕೃತಿಗಳನ್ನು ಪ್ರದರ್ಶಿಸಿರುವುದು ವಿಶೇಷವಾಗಿದೆ. ನಮ್ಮ ದೇಶದ ಅತ್ಯಂತ ಪ್ರಸಿದ್ಧ ಮುದ್ರಣ ಕಲಾವಿದರಾಗಿದ್ದ ಶಾಂತಿನಿಕೇತನದ ಸೋಮನಾಥ ಹೋರೆ ಅವರ ಜನ್ಮಶತಾಬ್ದಿಯ ನೆನಪಿನಲ್ಲಿ ವಿಶೇಷವಾದ ಒಂದು ವಿಭಾಗವನ್ನು ತೆರೆಯಲಾಗಿದೆ.14 ದಿನಗಳಕಾಲ ನಡೆಯುವ ಕಲಾ ಪ್ರದರ್ಶನದ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಮುದ್ರಣ ಶಿಬಿರವೊಂದನ್ನು ಕೂಡ ಲಲಿತಕಲಾ ಅಕಾಡೆಮಿ ಆಯೋಜಿಸುತ್ತಿದೆ.

    ಈ ಅದ್ವಿತೀಯ ಕಲಾಪ್ರದರ್ಶನವನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ, ಬಿಎಲ್ ಶಂಕರ್ ಅವರು ಕೇಂದ್ರ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಡಾ, ನಂದಲಾಲ್ ಠಾಕೂರ್ ಅವರ ಸಮ್ಮುಖದಲ್ಲಿ ಜನವರಿ 10ರಂದು ನೆರವೇರಿಸಿದ್ದಾರೆ.ಅತ್ಯಂತ ಅಪರೂಪದ ವಿಶಿಷ್ಟ ಕಲಾಕೃತಿಗಳ ಪ್ರದರ್ಶನವನ್ನು ಕಲಾವಿದರು ಹಾಗೂ ಕಲಾಸಕ್ತರು ಕೋವಿಡ್ ನಿಯಮವನ್ನು ಪಾಲಿಸುವುದರ ಮೂಲಕ ವೀಕ್ಷಿಸ ಬೇಕಾಗಿ ಈ ಅಂತರಾಷ್ಟ್ರೀಯ ಮುದ್ರಣ ಬಿ ನಾಲೆಯ ಸಂಯೋಜಕರು ಹಾಗೂ ಕೇಂದ್ರ ಲಲಿತಕಲಾ ಅಕಾಡೆಮಿ ನಿಕಟಪೂರ್ವ ಆಡಳಿತಾಧಿಕಾರಿ ಚಿ. ಸು. ಕೃಷ್ಣ ಸೆಟ್ಟಿ ವಿನಂತಿಸಿಕೊಂಡಿದ್ದಾರೆ.

    ಒಂದೇ ಸೂರಿನಡಿ ಇಂತಹ ಅದ್ಭುತ ಕಲಾಕೃತಿಗಳನ್ನು ನೋಡುವ ಸೌಭಾಗ್ಯ ನಿಮ್ಮದಾಗಲಿದೆ.
    ಸ್ಥಳ:ಕರ್ನಾಟಕ ಚಿತ್ರಕಲಾ ಪರಿಷತ್
    ಕಲಾ ಗ್ಯಾಲರಿ,ಕುಮಾರಕೃಪಾ ರಸ್ತೆ ಶಿವಾನಂದ ವೃತ್ತದ ಬಳಿ ಬೆಂಗಳೂರು
    ದಿನಾಂಕ ಜನವರಿ 23ರವರೆಗೆ ಈ ಕಲಾ ಪ್ರದರ್ಶನ ನಡೆಯಲಿದೆ.ಪ್ರವೇಶ ಉಚಿತ.

    This image has an empty alt attribute; its file name is V-S-NAIK.jpg

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    error: Content is protected !!