23.5 C
Karnataka
Tuesday, November 26, 2024
    Home Blog Page 33

    OMICRON : ಕೋವಿಡ್ ರೂಲ್ಸ್ ತಿಂಗಳಾಂತ್ಯದವರೆಗೂ ವಿಸ್ತರಣೆ

    BENGALURU JAN 11

    ಕೋವಿಡ್ ಮುಂಜಾಗ್ರತೆ ಕ್ರಮವಾಗಿ ಜಾರಿಗೊಳಿಸುವ ಮಾರ್ಗಸೂಚಿಗಳನ್ನು ಈ ತಿಂಗಳ ಅಂತ್ಯದ ವರೆಗೆ ವಿಸ್ತರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆ ನಿರ್ಧರಿಸಿದೆ. ಕೋವಿಡ್ ಸೋಂಕಿಗೆ ಒಳಗಾಗಿರುವ ಮುಖ್ಯಮಂತ್ರಿಗಳು ತಮ್ಮ ನಿವಾಸದಿಂದಲೇ ಈ ಸಭೆಯಲ್ಲಿ ಭಾಗವಹಿಸಿದ್ದರು.

    ಸಭೆಯ ಮುಖ್ಯಾಂಶಗಳು:

    1. ಕೋವಿಡ್ ಮುಂಜಾಗ್ರತೆ ಕ್ರಮವಾಗಿ ಜಾರಿಗೊಳಿಸುವ ಮಾರ್ಗಸೂಚಿಗಳನ್ನು ಈ ತಿಂಗಳ ಅಂತ್ಯದ ವರೆಗೆ ವಿಸ್ತರಿಸಲು ನಿರ್ಧರಿಸಲಾಯಿತು.
    2. ಶಾಲಾ ಮಕ್ಕಳಲ್ಲಿ ಕೋವಿಡ್ ಹೆಚ್ಚುತ್ತಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪ್ರಕರಣಗಳನ್ನು ಆಧರಿಸಿ ಬಿಇಓ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳ ವರದಿಯನ್ನು ಆಧರಿಸಿ, ಶಾಲೆಗಳನ್ನು ಮುಚ್ಚುವ ಕುರಿತು ತೀರ್ಮಾನ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲು ತೀರ್ಮಾನಿಸಲಾಯಿತು.
    3. ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತ ಮಕ್ಕಳಿಗೆ ಚಿಕಿತ್ಸೆ ನೀಡಲು ಮಕ್ಕಳ ವಾರ್ಡ್, ಐಸಿಯುಗಳನ್ನು ಮೀಸಲಿರಿಸಲು ಸೂಚಿಸಲಾಯಿತು.
    4. ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲು ನಿರ್ಧರಿಸಲಾಯಿತು.
    5. ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಜಂಟಿಯಾಗಿ ಎಲ್ಲ ಶಾಲೆಗಳಲ್ಲಿ 15 ದಿನಗಳಿಗೊಮ್ಮೆ ಮಕ್ಕಳ ಸಾಮಾನ್ಯ ಆರೋಗ್ಯ ತಪಾಸಣೆ ಮಾಡುವಂತೆ ಸೂಚಿಸಲಾಯಿತು.
    6. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮವಾಗಿ ವಿಧಿಸಿರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಯಿತು.
    7. ಮೂರನೇ ಅಲೆಯಲ್ಲಿ ಹೋಮ್ ಐಸೋಲೇಷನ್ ನಲ್ಲಿ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ಆರೋಗ್ಯ ಸ್ಥಿತಿಯ ಮೇಲ್ವಿಚಾರಣೆಯನ್ನು ನಿಯಮಿತವಾಗಿ ಮಾಡುವಂತೆ ಹಾಗೂ ಸೂಕ್ತ ಔಷಧಿಗಳ ಕಿಟ್ ಅನ್ನು ಒದಗಿಸುವಂತೆ ಸೂಚಿಸಿದರು.
    8. ಪರೀಕ್ಷಾ ವರದಿ ಬಂದ ಕೂಡಲೇ ಸೋಂಕಿತರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ಆಸ್ಪತ್ರೆಗೆ ದಾಖಲಿಸುವ ಅಗತ್ಯವಿದೆಯೇ ಇಲ್ಲವೇ ಎಂದು ನಿರ್ಧರಿಸುವ ಟ್ರಯಾಜಿಂಗ್ ವ್ಯವಸ್ಥೆಯನ್ನು ಬಲಪಡಿಸುವಂತೆ ಸೂಚಿಸಿದರು.
    9. ಹೋಮ್ ಐಸೊಲೇಷನ್ ಮತ್ತು ಟ್ರಯಾಜಿಂಗ್ ಪ್ರಕ್ರಿಯೆಯಲ್ಲಿ ಹೌಸ್ ಸರ್ಜನ್ ವೈದ್ಯರು ಹಾಗೂ ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಯಿತು.
    10. ಬೆಂಗಳೂರಿನಲ್ಲಿ ಕೂಡಲೇ 27 ಕೋವಿಡ್ ಕೇರ್ ಸೆಂಟರುಗಳನ್ನು ಪ್ರಾರಂಭಿಸಲು ಸೂಚಿಸಿದರು.
    11. ಮುಂಬರುವ ಸಂಕ್ರಾಂತಿ, ವೈಕುಂಠ ಏಕಾದಶಿ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಕಂದಾಯ ಮತ್ತು ಮುಜರಾಯಿ ಇಲಾಖೆಗೆ ಸೂಚಿಸಿದರು.
    12. ಕೋವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದು 9 ತಿಂಗಳು ಪೂರೈಸಿದ ಮುಂಚೂಣಿಯ ಕಾರ್ಯಕರ್ತರಿಗೆ 3ನೇ ಡೋಸ್ ಅನ್ನು ಆದ್ಯತೆಯ ಮೇರೆಗೆ ನೀಡಲು ಸೂಚಿಸಿದರು.
    13. ಬಿಬಿಎಂಪಿ ವ್ಯಾಪ್ತಿಯಲ್ಲಿ ಪರೀಕ್ಷಾ ಪ್ರಮಾಣವನ್ನು ದಿನಕ್ಕೆ 1.3 ಲಕ್ಷ ವರೆಗೆ ಹೆಚ್ಚಿಸಲು ಸೂಚಿಸಿದರು.
    14. ಯಾವುದೇ ರೀತಿಯ ಸಾರ್ವಜನಿಕ ಸಮಾವೇಶಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
    15. ಮಾರುಕಟ್ಟೆ ಪ್ರದೇಶದಲ್ಲಿ ಜನದಟ್ಟಣೆ ಕಡಿಮೆಗೊಳಿಸಲು ವಸ್ತುಸ್ಥಿತಿ ಆಧರಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
    16. ರಾಜ್ಯದಲ್ಲಿ ಯಾವುದೇ ರೀತಿಯ ಸಿದ್ಧತೆಯಲ್ಲಿ ಲೋಪವಾಗದಂತೆ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
      ಸಭೆಯಲ್ಲಿ ಸಚಿವರಾದ ಡಾ.ಕೆ. ಸುಧಾಕರ್, ಬಿ.ಸಿ. ನಾಗೇಶ್, ಆರಗ ಜ್ಞಾನೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್ ಮತ್ತು ಇತರ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಂಕ್ರಾಂತಿ ಮತ್ತು ವೈಕುಂಠ ಏಕಾದಶಿ ಆಚರಣೆಗೆ ಮಾರ್ಗಸೂಚಿ:

    Guest Lecturers:ಅತಿಥಿ ಉಪನ್ಯಾಸಕರ ಬೇಡಿಕೆ: ಒಂದೆರಡು ದಿನದಲ್ಲಿ ಸಿಹಿಸುದ್ದಿ ಎಂದ ಸಚಿವರು

    BENGALURU JAN 11

    ರಾಜ್ಯದಲ್ಲಿರುವ 14 ಸಾವಿರ ಅತಿಥಿ ಉಪನ್ಯಾಸಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಸಾಕಷ್ಟು ಚರ್ಚಿಸಿದ್ದು, ಒಂದೆರಡು ದಿನಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಆದ್ದರಿಂದ ಅತಿಥಿ ಉಪನ್ಯಾಸಕರು ಮುಷ್ಕರ ಕೈಬಿಟ್ಟು, ಬೋಧನೆಗೆ ಹಿಂದಿರುಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

    ಅತಿಥಿ ಉಪನ್ಯಾಸಕರ ಬೇಡಿಕೆಗಳ ಈಡೇರಿಕೆ ಮತ್ತು ಸಮಸ್ಯೆಗಳನ್ನು ಕುರಿತು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಚೇರಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ತಮ್ಮ ನೇತೃತ್ವದಲ್ಲಿ ಮಂಗಳವಾರ ನಡೆದ ಮೂರು ತಾಸುಗಳ ಸಭೆಯ ನಂತರ ಅವರು ಈ ಭರವಸೆ ನೀಡಿದರು. ಸಭೆಯಲ್ಲಿ ಉಪನ್ಯಾಸಕರಿಗೆ ಸಂಬಂಧಿಸಿದ ನಾಲ್ಕೈದು ಸಂಘಗಳ ಪ್ರತಿನಿಧಿಗಳೂ ಭಾಗವಹಿಸಿದ್ದರು.

    ಸಭೆಯಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ತಿನ ಹಲವು ಸದಸ್ಯರೊಂದಿಗೆ ವಿಷಯವನ್ನು ಕುರಿತು ಚರ್ಚಿಸಲಾಯಿತು. ಜೊತೆಗೆ ಅತಿಥಿ ಉಪನ್ಯಾಸಕರ ಸಂಘಗಳ ಪರವಾಗಿ ಸಲ್ಲಿಸಿದ ಅಹವಾಲುಗಳನ್ನು ಕೂಡ ಪರಿಶೀಲಿಸಲಾಯಿತು.

    ನಂತರ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು. ಸಿಎಂ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡು ಚಿಕಿತ್ಸೆ ಪಡೆಯುತ್ತಿರುವ ಕಾರಣ ಒಂದೆರಡು ದಿನಗಳಲ್ಲಿ ಸೂಕ್ತ ತೀರ್ಮಾನ ಪ್ರಕಟಿಸಲಾಗುವುದು. ಅತಿಥಿ ಉಪನ್ಯಾಸಕರ ಸಮಸ್ಯೆ ಇತ್ಯರ್ಥದಲ್ಲಿ ಆರ್ಥಿಕ ಹೊರೆ ಮುಂತಾದ ಅಂಶಗಳಿವೆ. ಒಟ್ಟಿನಲ್ಲಿ ವಿಚಾರವನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುತ್ತಿದೆ ಎಂದರು.

    ಸಭೆಯಲ್ಲಿ ಎಂಎಲ್ಸಿಗಳಾದ ಆಯನೂರು ಮಂಜುನಾಥ್, ಶಶಿಲ್ ನಮೋಶಿ, ಪುಟ್ಟಣ್ಣ, ಚಿದಾನಂದಗೌಡ, ಎಸ್.ವಿ.ಸುಂಕನೂರು, ಅರುಣ್ ಶಹಾಪುರ, ವೈ.ಎ. ನಾರಾಯಣಸ್ವಾಮಿ, ಕೆ.ಟಿ.ಶ್ರೀಕಂಠೇಗೌಡ, ಭೋಜೇಗೌಡ ಮತ್ತು ಹನುಮಂತ ನಿರಾಣಿ, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್ ಮತ್ತು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಉಪಸ್ಥಿತರಿದ್ದರು.

    CM Bommai: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕೋವಿಡ್ ಪಾಸಿಟಿವ್

    BENGALURU JAN 10

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋವಿಡ್ ದೃಢ ಪಟ್ಟಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ತಾವು ಆರೋಗ್ಯ ದಿಂದ ಇರುವುದಾಗಿಯೂ ಸೌಮ್ಯ ಲಕ್ಷಣಗಳಿವೆ ಎಂದು ಹೇಳಿದ್ದಾರೆ. ತಮ್ಮ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅವರು ಕೋರಿದ್ದಾರೆ.

    ಸದ್ಯ ಮುಖ್ಯಮಂತ್ರಿಗಳು ಹೋಂ ಕೌರಂಟೈನ್ ನಲ್ಲಿ ಇದ್ದಾರೆ.

    OMICRON:ನಿಯಮ ಉಲ್ಲಂಘಿಸುವವರ ವಿರುದ್ಧ ಭೇದಭಾವವಿಲ್ಲದೆ ಕ್ರಮ: ಸಿಎಂ ಬಸವರಾಜ್ ಬೊಮ್ಮಾಯಿ

    BENGALURU JAN 10

    ಕೋವಿಡ್-COVID 19- ನಿಯಮ ಉಲ್ಲಂಘಿಸುವವರು ಯಾರೇ ಆಗಿರಲಿ. ಯಾವುದೇ ಭೇದ ಭಾವವಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ-BASAVARAJA BOMMAI- ತಿಳಿಸಿದರು.

    ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಾದಯಾತ್ರೆ ಕೈಗೊಂಡವರ ಪೈಕಿ 30 ಜನರ ಮೇಲೆ ಎಫ್ ಐ ಆರ್ ಆಗಿರುವ ಬಗ್ಗೆ ಪ್ರತಿಕ್ರಯಿಸಿದರು.

    ಪಾದಯಾತ್ರೆಯ ಸಂಘಟಕರು, ಕಾನೂನು ಉಲ್ಲಂಘನೆ ಮಾಡಿರುವವರ ಮೇಲೆ ಕಾನೂನಿನ ಕ್ರಮ ಜರುಗಿಸಲಾಗುತ್ತಿದೆ ಎಂದರು.

    ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವವರ ಆರೋಗ್ಯದ ಚಿಂತೆ ಸರ್ಕಾರಕ್ಕಿದೆ. ಸುದೀರ್ಘವಾಗಿ ನಡೆದು ಬಂದವರ ಆರೋಗ್ಯ ತಪಾಸಣೆ , ಆರೋಗ್ಯ ಇಲಾಖೆಯ ಕರ್ತವ್ಯ.ಇದಕ್ಕೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವವರು ಇದಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

    ಕೋವಿಡ್ ನಿಯಮಗಳನ್ನು ಯಾರೇ ಉಲ್ಲಂಘಿಸಲಿ. ಅವರು ಜನಸಾಮಾನ್ಯರು ಆಗಿರಲಿ, ಎಷ್ಟೇ ದೊಡ್ಡ ಲೀಡರ್ ಆಗಿರಲಿ. ಯಾವುದೇ ಬೇಧಭಾವವಿಲ್ಲದೇ ಎಲ್ಲರ ಮೇಲೆಯೂ ಏಕರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಎಚ್ಚರಿಕೆ ಕ್ರಮ ಹೆಚ್ಚಳದ ಅಗತ್ಯ

    ಕೋವಿಡ್ ಏರಿಕೆ ಹಿನ್ನೆಲೆಯಲ್ಲಿ ಎಚ್ಚರಿಕಾ ಕ್ರಮಗಳ ಹೆಚ್ಚಿಸುವ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ನಿನ್ನೆ ರಾಜ್ಯದಲ್ಲಿ 12,000 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಬೆಂಗಳೂರಿನಲ್ಲಿ 9000 ಪ್ರಕರಣಗಳಿವೆ. ರಾಜ್ಯದಲ್ಲಿ ಪಾಸಿಟಿವಿಟಿ ದರ 6.8 % ಆಗಿದ್ದರೆ, ಬೆಂಗಳೂರಿನಲ್ಲಿ 10% ಆಗಿದೆ. ಇಡೀ ದೇಶದಲ್ಲಿ ಕೋವಿಡ್ ಪ್ರಕರಣದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಆದ್ದರಿಂದ ಹೆಚ್ಚಿನ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದರು

    ಸಂಕ್ರಮಣದಲ್ಲಿ ಮೂಡಿದ ಚಂಪಾ ವ್ಯಕ್ತಿತ್ವ

    ಪ್ರೀತಿಯಿಲ್ಲದೆ/ ನಾನು ಏನನ್ನೂ ಮಾಡಲಾರೆ;/ ದ್ವೇಷವನ್ನು ಕೂಡ-ಚಂದ್ರಶೇಖರ ಪಾಟೀಲರು ಜಗಳಗಂಟಿ. ಯಾರೊಂದಿಗೂ ಅವರ ಸ್ನೇಹ ದೀರ್ಘವಾಗಿ ಉಳಿದಿಲ್ಲ ಎಂಬ ಅಭಿಪ್ರಾಯವೊಂದಿದೆ.ಸಂಕ್ರಮಣ ಪತ್ರಿಕೆಯ ಆರಂಭದಲ್ಲಿದ್ದ ಮೂವರು ಸಂಪಾದಕರಲ್ಲೊಬ್ಬರಾದ ಸಿದ್ದಲಿಂಗ ಪಟ್ಟಣಶೆಟ್ಟಿಯವರು ಚಂಪಾ ಹೇಗೆ ಎಂಬುದನ್ನು ತಮ್ಮದೇ ಶೈಲಿಯಲ್ಲಿ ಸಂಕ್ರಮಣ(416)ದಲ್ಲಿಯೇ ವರ್ಣಿಸಿದ್ದಾರೆ.

    ಚಂಪಾನದು ಒಮ್ಮೊಮ್ಮೆ ಸ್ವಲ್ಪ ಹರುಕು ಸ್ವಭಾವ: ತಟ್ಟನೆ ಏನಾದರೂ ಅಂದುಬಿಡುವುದು ಅಥವಾ ಬರೆದುಬಿಡುವುದು. ನನಗೂ ಕೆಟ್ಟ ಕೆಟ್ಟ ಪತ್ರಗಳನ್ನು ಬರೆದಿದ್ದಾನೆ. ಹಾಗೆ ಬರೆದದ್ದು ಅವನಿಗೆ ನೆನಪಿರಲಿಕ್ಕೂ ಇಲ್ಲ. ಅಷ್ಟರಮಟ್ಟಿಗೆ ಮತ್ತೆ ನಿರಾಳವಾಗಿ ಸ್ವಚ್ಛವಾಗಿ ಮುಂದೆ ಹೊರಟಿರುತ್ತಾನೆ. ಅವನ ಇಂಥ ಸ್ವಭಾವ ನನಗೆ ತಿಳಿದಿದೆ. ಹೀಗಾಗಿ ಅವನು ಮಾಡಿದಂಥದ್ದನ್ನೇ ನಾನೇಕೆ ಮಾಡಬೇಕು. ಈ ಕಾರಣದಿಂದಾಗಿ ಅವನು ನನಗೆ ಅಪ್ರಿಯನಾಗಿ ಕಾಣುವುದೇ ಇಲ್ಲ. ಆದರೆ ಅಂಥ ಸ್ವಭಾವದಿಂದಾಗಿ ಅವನು ಕೆಲವು ಗೆಳೆಯರನ್ನು, ಸಂಬಂಧಗಳನ್ನು, ಗೌರವಗಳನ್ನು, ಅವಕಾಶಗಳನ್ನು, ಸಂಸ್ಥೆಗಳನ್ನು ಕಳೆದುಕೊಂಡಿದ್ದಾನೆ. ಮತ್ತೆ ಮತ್ತೆ ಹೊಸತು ಕಟ್ಟಿದ್ದಾನೆ. ಬಿಟ್ಟಿದ್ದಾನೆ. ಇಂಥ ನಡವಳಿಕೆಯಿಂದಾಗಿ ಅವನ ವ್ಯಕ್ತಿತ್ವದ ಕೆಲವು ಆರೋಗ್ಯಪೂರ್ಣ ಅಂಶಗಳು ಕಳಚಿಹೋಗಿವೆ.

    ಪ್ರತಿ ಸಂಕ್ರಮಣ ಬಂದಾಗಲೂ ಐದು ಗೆಳೆತನಗಳು ತಪ್ಪುತ್ತವೆ, ಹತ್ತು ಹೊಸ ಪರಿಚಯವಾಗುತ್ತದೆ ಎಂದು ಚಂಪಾ ಅವರೇ ಹೇಳಿದ್ದಾರೆ. ಅವರಿಬ್ಬರೂ ಒಳ್ಳೆಯ ಸ್ನೇಹಿತರಾಗಿರುವ ಕಾರಣ ಇದಕ್ಕೆ ಹೆಚ್ಚಿನ ವಿವರಣೆ ಅಗತ್ಯವಿಲ್ಲ ಎಂಬುದು ನನ್ನ ಭಾವನೆ.

    ’’ ಪ್ರೀತಿ ದ್ವೇಷದ ಕುರಿತಾದ ಸಂಗತಿಯಲ್ಲಿ ನನ್ನ ಅಭಿಪ್ರಾಯವೆಂದರೆ ಪ್ರೀತಿ ಪ್ರೀತಿಯಾಗಿಯೇ ಇರಬೇಕು, ದ್ವೇಷ ಕೂಡ ಅಪ್ಪಟ ದ್ವೇಷವಾಗಿಯೇ ಇರಬೇಕು. ಇವೆರಡರ ನಡುವಣ ಗೆರೆಯ ಬಗ್ಗೆ ಖಚಿತತೆ ಇರಬೇಕು. ನಾಜೂಕಯ್ಯ ಶತ್ರುವಿಗಿಂತಲೂ ಅಪಾಯಕಾರಿ. ಚಂಪಾ ಎಂದೂ ನಾಜೂಕಯ್ಯ ಅಲ್ಲ’’ ಎಂದು ಮೋಹನ ನಾಗಮ್ಮನವರ ಚಂಪಾಯಣದಲ್ಲಿ ಬರೆದಿರುವರು.

    ಚಂಪಾ ತಮ್ಮನ್ನು ತಾವೇ ನಿರೀಕ್ಷಣೆ ಮಾಡಿಕೊಂಡಿರುವುದೂ ಸಂಕ್ರಮಣದಲ್ಲಿಯೇ ದಾಖಲಾಗಿದೆ.ಒಂದು ದೃಷ್ಟಿಯಿಂದ ನಾನು ಇಲ್ಲಿಗೆ ನಾನಾಗಿ, ಒಬ್ಬ ವ್ಯಕ್ತಿಯಾಗಿ ಬಂದಿಲ್ಲ. ಒಂದು ಹೋರಾಟದ, ಆದರ್ಶದ, ಮೌಲ್ಯದ ಸಂಕೇತವಾಗಿ ಬಂದಿದ್ದೇನೆ. ಮೊದಲಿನಿಂದಲೂ ನಿಷ್ಠುರ ವ್ಯಕ್ತಿವಾದಿಯಾಗಿ, ಎಡಸೊಕ್ಕಿನವನಾಗಿ ಬೆಳೆದುಬಂದ ನನಗೆ ಈ ಹೊಸ ಬಗೆಯ ವ್ಯಕ್ತಿತ್ವದ ಆವರಣ ಇನ್ನೂ ಸರಿಯಾಗಿ ಹೊಂದಿಕೊಳ್ಳಲೊಲ್ಲದು. ದೊಡ್ಡವರೆನ್ನಿಸಿಕೊಂಡವರ ಭಾನಗಡಿ ಕಣ್ಣಿಗೆ ಬಿದ್ದಾಗ ನನಗೆ ಸಿಟ್ಟು ನೆತ್ತಿಗೇರುತ್ತದೆ. ನಾಲಗೆ ಕೊಂಕಾಗುತ್ತದೆ. ಪರಿಣಾಮವೇನಾದೀತೆಂಬ ಅರಿವು ಇಲ್ಲದೆ ಏನಾದರೂ ಮಾತು ಆಡಿಯೇಬಿಡುತ್ತೇನೆ. ಇತ್ತೀಚಿನ ಎರಡು ವರ್ಷಗಳಲ್ಲಿ ಪಬ್ಲಿಕ್ಕಿನಲ್ಲಿ ನಾನಾಡಿದ ಕೊಂಕಿಗೆ ಮಿತಿಯೇ ಇಲ್ಲ. ಆದರೆ ನಾನು ನಿಜವಾಗಿಯೂ ‘ವ್ಯಕ್ತಿ’ಯಿಂದ ಸಾಮಾಜಿಕನಾಗುತ್ತಿದ್ದೇನೆಯೇ ಎಂಬ ಪ್ರಶ್ನೆ ಪ್ರತಿಯೊಂದು ಸಂದರ್ಭದಲ್ಲಿ ನನ್ನೆದುರು ಹೆಡೆಯೆತ್ತಿ ಕೆಣಕುತ್ತದೆ. ಅದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ. ಊರು ಉಪಕಾರ ಹೆಣ ಸಿಂಗಾರ ಇತ್ಯಾದಿ ಗೊತ್ತಿದ್ದರೂ ಹೀಗೇಕೆ ನಾನು ನನ್ನನ್ನೇ ಹೊಸ (ಹಾಗೂ ಅನಾವಶ್ಯಕ) ಅನುಭವಗಳಿಗೆ ಒಡ್ಡಿಕೊಳ್ಳುತ್ತೇನೋ ನನಗೆ ತಿಳಿಯದಾಗಿದೆ…’’ ಇದೊಂದು ಪ್ರಾಮಾಣಿಕವಾದ ದಾಖಲೆ.

    ನಾನು ನಂಬಿದ ಮೌಲ್ಯಗಳಿಗೆ ಕ್ರಿಯಾತ್ಮಕ ಆಯಾಮ ಕೊಟ್ಟಾಗ ಮಾತ್ರ ಆ ಹೋರಾಟ ಕೇವಲ ವ್ಯಕ್ತಿ ಪ್ರತಿಷ್ಠೆಗಳ ಮೇಲಾಗಲಿ, ಪತ್ರಿಕಾಹೇಳಿಕೆಗಳ ಮೇಲಾಗಲಿ ಅವಲಂಬಿಸದೆ ಜನತೆಯ ನಿರಂತರ ಹೋರಾಟವಾಗಲು ಸಾಧ್ಯ. ಈ ದಿಸೆಯಲ್ಲಿ ನಮ್ಮೆಲ್ಲರ ಹೋರಾಟಗಳೂ ಗಟ್ಟಿಗೊಳ್ಳುತ್ತ ಹೋಗಬೇಕಾಗಿದೆ.‘ವಿಚಾರವಾದಿ’ಗಳನ್ನೂ ವಿಚಾರವಾದದ ಒರೆಗಲ್ಲಿಗೆ ತಿಕ್ಕುತ್ತಲೇ.’’ ಇದು ಒಂದು ಮಾಗಿದ ವ್ಯಕ್ತಿತ್ವದ ಅನುದಿನದ ಧ್ಯಾನದಿಂದ ಮೂಡಿದ ಹೇಳಿಕೆ. ಚಂಪಾ ಅವರ ವ್ಯಕ್ತಿತ್ವ ಹೊಸ ರೀತಿಯಲ್ಲಿ ವಿಕಸನಗೊಂಡಿದ್ದು ಇಂಗ್ಲೆಂಡಿನಲ್ಲಿಯೇ ಎಂಬುದನ್ನು ಅವರ ಇನ್ನೊಬ್ಬ ಸ್ನೇಹಿತರಾದ ಮಾಧವ ಕುಲಕರ್ಣಿಯವರು ಹೇಳಿದ್ದಾರೆ. ಪಾಟೀಲರು ಇಂಗ್ಲಂಡಿನಲ್ಲಿ ಇನ್ನಿತರ ಎಷ್ಟೋ ವಿಷಯಗಳ ಜೊತೆಗೆ ಭಾರತವನ್ನು ಲೋಹಿಯಾ ಮತ್ತು ಗಾಂಧಿಯ ಕಣ್ಣುಗಳಿಂದ ನೋಡಿದರು. ಅವರು ಸಮಾಜಮುಖಿ ಸಾಹಿತ್ಯ ಸೃಷ್ಟಿಗೆ ಒತ್ತು ಕೊಡುತ್ತ ಮುಂದುವರಿದ ಧೋರಣೆಯ ಬೀಜಗಳು ಅಲ್ಲಿವೆ. ನವ್ಯದ ದಾರಿಯನ್ನು ಬಿಟ್ಟು ಬೇರೆ ದಾರಿಗಳನ್ನು ಹುಡುಕುತ್ತಲೇ ಅವರು ಭಾರತಕ್ಕೆ ಮರಳಿದರು ಎಂದಿದ್ದಾರೆ.

    ಸಂಕ್ರಮಣದ ಸಂಪಾದಕ ಟಿಪ್ಪಣಿಗಳಲ್ಲಿ ಅವರು ವಿಶ್ಲೇಷಿಸುವ ಪುಟ್ಟಪುಟ್ಟ ಪದ್ಯಗಳನ್ನು ನೋಡಬೇಕು. ಆ ವಿಶ್ಲೇಷಣೆಗಳಿಂದ ಕರ್ನಾಟಕ ಕಾಲೇಜಿನಲ್ಲಿ ಪಾಠಮಾಡುತ್ತಿದ್ದ ಆ ಹಳೆಯ ಪ್ರಾಧ್ಯಾಪಕ ಚಂಪಾ ಎದ್ದುಬರುತ್ತಾರೆ. ಹೀಗೆ ಹಳೆಯ ಸೂಕ್ಷ್ಮತೆಗಳನ್ನು ಬಿಡದೆ ಸೃಜನಶೀಲತೆಯ ಕಾಳಜಿಗಳನ್ನು ಬಿಟ್ಟುಕೊಡದೆ ಮತ್ತು ಸಾಮಾಜಿಕ ಕಾಳಜಿಗಳ ಮಧ್ಯದಲ್ಲಿಯೂ ಆತ್ಮಗತವಾದ ಕಾವ್ಯವನ್ನೂ ರಚಿಸುತ್ತ ಬದುಕಿದವರು ಚಂಪಾ. ಅವರು ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ತಮ್ಮ ವ್ಯಕ್ತಿತ್ವದ ಮೂಲಕ ಮತ್ತು ತಮ್ಮ ಸಂಕ್ರಮಣ ಪತ್ರಿಕೆಯ ಮೂಲಕ ನೀಡಿದ ಕೊಡುಗೆ ಅನನ್ಯವಾದುದು ಎಂದು ಮಾಧವ ಕುನಕರ್ಣಿ ಚಂಪಾಯಣದಲ್ಲಿ ಬರೆದಿರುವರು.

    `ಸಂಕ್ರಮಣ’ದ ಮೂಲಕವೇ ಚಂಪಾ ಅವರನ್ನು ಮೂರ್ತೀಕರಿಸುವ ಹರಿಹರಪ್ರಿಯ ಅವರು, ಕಳೆದ 25 ವರ್ಷಗಳ ಕರ್ನಾಟಕದ ಎಲ್ಲ ಜನಪರ ಚಳುವಳಿಗಳಿಗೆ ಬಲಿಯಾಗಿ ವ್ಯಕ್ತಿತ್ವ ನಾಶಮಾಡಿಕೊಳ್ಳದ, ಅಪ್ಟಟ ಲೋಹಿಯಾವಾದಿಯಾಗಿ ಭಾಷೆ, ಬದುಕು, ವೃತ್ತಿ, ಬರವಣಿಗೆ, ಚಿಂತನೆಗಳಲ್ಲಿ ಜೀವಂತಿಕೆ ಕಾಪಾಡಿಕೊಂಡು ಬಂದ ಚಂಪಾ, ಇವತ್ತಿಗೂ ದಲಿತ, ಬಂಡಾಯ ಚಳವಳಿಗಳೊಂದಿಗೆ ಸಂಬಂಧವಿಟ್ಟುಕೊಂಡಿದ್ದಾರೆ. ತಮ್ಮ ಸಂಕ್ರಮಣದವನ್ನು ಅದಕ್ಕಾಗಿ ತೊಡಗಿಸಿಕೊಂಡಿದ್ದಾರೆ. ಅವರ ಈ ವರೆಗಿನ ನೆಲೆ ಇವತ್ತಿನ ನಮ್ಮ ತಲೆಮಾರಿನವಿರೆಗೆ ಒಂದು ಪಾಠವಾಗಿ, ಮುಂದಿನ ಹಾದಿಯ ನಿರ್ಮಾಣಕ್ಕೆ ಚಾರಿತ್ರೆಕ ಮಹತ್ವ ತಂದುಕೊಡುವುದರಲ್ಲಿ ಯಾವ ಸಂದೇಹವೂ ಇಲ್ಲ……….’’ ಎಂದು ಹೇಳಿದ್ದಾರೆ. (ಚಂಪಾಯಣ)

    1979ರಲ್ಲಿ ಬಂಡಾಯ ಸಾಹಿತ್ಯ ಚಳವಳಿಯನ್ನು ಹುಟ್ಟುಹಾಕಿದ್ದಲ್ಲದೆ, ಬ್ರಾಹ್ಮಣ ಅಭವಗಳನ್ನು ಪ್ರತಿಭಟಿಸುವ ಹೋರಾಟಗಾರರಲ್ಲಿ ಒಬ್ಬರಾಗಿ ಸಾಹಿತ್ಯದ ಹೊಸ ತಿರುವಿಗೆ ಕಾರಣರಾದದ್ದು ಅವರ ಸಾಹಿತ್ಯಿಕ ಕಾಳಜಿಯ ನೈಜ ನಿಲುವಿಗೆ ಪ್ರತೀಕ. ದಟ್ಟವಾದ ಸಾಮಾಜಿಕ ಪ್ರಜ್ಞೆಯಿಂದ ಶೋಷಿತ ಜನತೆಯ ಪರವಾದ ನಿಲುವು, ಅಸ್ಪ್ರಶ್ಯತೆ, ಜಾತಿಪದ್ಧತಿ, ಲಿಂಗಭೇದ, ವರ್ಣ, ವರ್ಗ ಭೇದ ನೀತಿಯ ವಿರುದ್ಧ ಹೋರಾಟ ಮಾಡುತ್ತ, ಜನಪರ ನಿಲುವುಗಳಿಗೆ ಬೆಂಬಲಿಸುತ್ತ, ಚರ್ಚೆಗಳಿಂದ ಪರಿಹಾರ ಮಾರ್ಗ ತೋರುತ್ತ, ಸಾಂಸ್ಕೃತಿಕ ಹೋರಾಟದ ಮುಖ್ಯ ನೆಲೆಯಲ್ಲಿ, ಇಂತಹ ಒಲವುಳ್ಳ ಸಾಹಿತ್ಯವನ್ನು ಸೃಷ್ಟಿಸುತ್ತ, ಹೋರಾಟದ, ಅಂತೆಯೇ ಸಾಹಿತ್ಯದ ಗತಿಗಳನ್ನು ಅವಸ್ಥಾಂತರಗಳನ್ನೂ ತಮ್ಮ ಸಾಹಿತ್ಯದಲ್ಲಿ ಹಾಗೂ ಸಂಕ್ರಮಣ ಪತ್ರಿಕೆಯ ಮೂಲಕ ದಾಖಲುಗೊಳಿಸುತ್ತ ನಿರಾಯಾಸರಾಗಿ ಸಾಗಿರುವ ಚಂಪಾ ಬಂಡಾಯ ಸಾಹಿತ್ಯ ಚಳವಳಿಯ ಅಂತಃಸತ್ವವೇ ಆಗಿ ಬೆಳೆದಿದ್ದಾರೆ.

    ಕಳೆದ ನಲವತ್ತು ವರ್ಷಗಳಿಂದ ನಿತ್ಯ ಹೋರಾಟದ ಮೂಲಕ ನಾಡಿನ ಜನರ ಬದುಕನ್ನು ಹಸನುಗೊಳಿಸುವ ಆಕಾಂಕ್ಷೆಯುಳ್ಳ ಚಂದ್ರಶೇಖರ ಪಾಟೀಲರು ಸಂಕ್ರಮಣ ಪತ್ರಿಕೆಯನ್ನು ಆರಂಭಿಸಿ ವೈಚಾರಿಕ, ಸಾಹಿತ್ಯಿಕ, ಸಾಂಸ್ಕೃತಿಕ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತ ಪ್ರಜ್ಞಾವಂತಿಯ ಸತ್ಯದ ದಂಡನ್ನು ಕಟ್ಟುತ್ತಾ, ಬಂಡಾಯದ ಗಟ್ಟಿ ದನಿಗಳ ಒಂದು ಪರಂಪರೆಯ ಕೊಂಡಿಯಾಗಿ ಸೃಜನಶೀಲ ಲೇಖಕರನ್ನು ಹೊಸ ಯುಗದ ಸಾಹಿತ್ಯ ಸೃಷ್ಟಿಗೆ ಸಿದ್ಧಪಡಿಸಿದ್ದು ಅವರ ವೈಯಕ್ತಿಕ ಸಾಹಿತ್ಯ ಸೃಷ್ಟಿಯನ್ನು ಮೀರಿದ ಅಪೂರ್ವ ಸಾಧನೆ ಎಂದು ಕೆ.ಎಸ್.ರತ್ನಮ್ಮ ಹೇಳಿದ್ದಾರೆ.

    ಸಾಮಾಜಿಕ ಹೋರಾಟಗಳಲ್ಲಿ ಸದಾ ತೊಡಗಿಸಿಕೊಂಡಿರುವ ಚಂಪಾ ಸಾಹಿತ್ಯ ಎಂಬುದು ಸಾರ್ವಜನಿಕವಾದುದು ಮತ್ತು ಸಾರ್ವಜನಿಕವಾಗಿಯೇ ಇರಬೇಕು ಎಂದು ನಂಬಿದವರು.
    ನನ್ನ ಕಾವ್ಯ
    ನನ್ನ ಒಳಗೇ
    ನಾನು ಮಾತ್ರ
    ನನ್ನ ಕಾವ್ಯದ ಹೊರಗೆ ಹೀಗೆಂದು ಚಂಪಾ ತಮ್ಮ ಬಗೆಗೆ ಹೇಳಿಕೊಂಡಿರುವುದು ಸಂಕ್ರಮಣದಲ್ಲಿ ದಾಖಲಾಗಿದೆ.
    ಕಾವ್ಯಮೀಮಾಂಸೆಗೆ ಸಂಬಂಧಿಸಿದ ಮಾತೊಂದನ್ನು ಚಂಪಾ ಸಂಕ್ರಮಣದ 400ನೆ ಸಂಚಿಕೆಯ ತಮ್ಮ ಕಾಲಂನಲ್ಲಿ ದಾಖಲಿಸಿದ್ದಾರೆ. ಅಂದಿಗೆ ಸುಮಾರು 50 ವರ್ಷಗಳ ಹಿಂದೆ ದೀಪಾವಳಿಯ ಸಂದರ್ಭದಲ್ಲಿಈ ಮಣ್ಣ ಪಣತೆ ಎಂಬ ಕವಿತೆಯನ್ನು ಬರೆದಿದ್ದರು. “ಈ ಮಣ್ಣ ಪಣತೆಯ ಸಾಲುಗಳು ನನ್ನೊಳಗೆ ಸದಾ ಗುಂಯ್‌ಗುಡಲು ಕಾರಣವಿದೆ. ಡಾ.ಹನುಮಣ್ಣನಾಯಕ ದೊರೆ- (ಮೈಸೂರಿನ ಸಂಗೀತ ವಿಶ್ವವಿದ್ಯಾನಿಲಯದ ಹಾಲಿ ಕುಲಪತಿ)- ನನ್ನ ಪ್ರೀತಿಯ ಪುರಾತನ ಶಿಷ್ಯ. ಹಾಡು ಹೇಳುವಾಗ ತಾನೇ ಹಾಡಾಗಿ-ಬಿಡುವ ಹುಡುಗ, ಈ ಕವನ ಅವನಿಗೆ ಮೆಚ್ಚುಗೆ. ಹೋದಲ್ಲೆಲ್ಲ ಹಾಡುತ್ತಿದ್ದ. ಜೊತೆಗೊಬ್ಬ ಕಲಾವಿದೆ. ಮೊದಲ ಸಾಲು ಅವನದು; ನಂತರದ್ದು ಇವಳದು; ಮತ್ತೆ ಅವನು, ಮತ್ತೆ ಇವಳು. ಬರಬರುತ್ತ ಇಬ್ಬರಿಗೂ ಕವನ ಗುಂಗಾದಾಗ ಇಂದು ಹಬ್ಬ ಮಾಡೋಣ ಬಾ’ ಅನ್ನಿಸಿತಂತೆ. ಹಬ್ಬ ಮಾಡಿಯೇಬಿಟ್ಟರು. ಅವರಿಗೀಗ ಇಬ್ಬರು ಮಕ್ಕಳು.

    ಕವನ ಬರೆದವನ ಫಜೀತಿ ನೋಡಿರಿ. ಮೂಲದ ’ ನಾನು’ ಮತ್ತು ’ ನೀನು’ ಎಲ್ಲಿಯೋ ಮಾಯವಾಗಿ ನಮ್ಮ ’ ದೊರೆ’ ಮತ್ತು ಅವನ ’ ದೊರೆಸಾನಿ’ ಕವನವನ್ನು ಹೈಜಾಕ್ ಮಾಡಿಬಿಟ್ಟಿದ್ದಾರೆ! ಕಾವ್ಯ ಇರುವುದೇ ಹಾಗೆ- ದೀಪಾವಳಿಯ ಕತ್ತಲೆಯಂತೆ: ದೀಪಾವಳಿಯ ಬೆಳಕಿನಂತೆ. ಅದರ ಕಾಯಂ ಯಜಮಾನಿಕೆ ಯಾರದೂ ಅಲ್ಲ.’’ ವೈಯಕ್ತಿಕ ನೆಲೆಯಲ್ಲಿ ಸಾರ್ವತ್ರಿಕವಾಗುವ ವಿಸ್ಮಯವನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಇಲ್ಲಿ ಹೇಳಿದ್ದಾರೆ.

    Chandrashekhar Patil: ಹಿರಿಯ ಸಾಹಿತಿ ಚಂಪಾ ನಿಧನ

    BENGALURU JAN 10

    ಕನ್ನಡದ ಹಿರಿಯ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆಗಿದ್ದ ಡಾ.ಚಂದ್ರಶೇಖರ ಪಾಟೀಲ ( ಚಂಪಾ)(83) ಅವರು ಇಂದು ಮುಂಜಾನೆ ವಿಧಿವಶರಾಗಿದ್ದಾರೆ.

    ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಕೋಣನಕುಂಟೆ ಆಸ್ಟ್ರಾ ಆಸ್ಪತ್ರೆಯಲ್ಲಿ ವಯೋಸಹಜ ತೊಂದರೆಗಳಿಗಾಗಿ ಚಿಕಿತ್ಸೆ ಪೆಡಯುತ್ತಿದ್ದ ಅವರು ಅಲ್ಲಿಯೇ ಇಂದು ಮುಂಜಾನೆ ನಿಧನರಾಗಿದ್ದಾರೆ.ಎಲಚೇನಹಳ್ಳಿ ಮೆಟ್ರೋ ಸ್ಟೇಷನ್ ಪಕ್ಕದಲ್ಲೇ ಇರುವ ಜ್ಯೋತಿ ಶಾಲೆಯ ಬಳಿಯಿರುವ ನಿವಾಸಕ್ಕೆ ಕೆಲಹೊತ್ತಿನಲ್ಲೇ ಪಾರ್ಥಿವ ಶರೀರವನ್ನು ತರಲಾಗುತ್ತದೆ ಎಂದು ಅಪ್ತ ವಲಯ ತಿಳಿಸಿದೆ.

    ಸಿ ಎಂ ಕಂಬನಿ :ಹಿರಿಯ ಕವಿ, ಸಾಹಿತಿ, ವಿಮರ್ಶಕ, ನಾಟಕಕಾರ, ಪ್ರೊಫೆಸರ್ ಚಂದ್ರಶೇಖರ್ ಪಾಟೀಲ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ಸೂಚಿಸಿದ್ದಾರೆ.

    ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನ ಚಂದ್ರಶೇಖರ ಪಾಟೀಲ ಅವರು ಚಂಪಾ ಎಂದೇ ಪ್ರಸಿದ್ಧರಾದವರು. ಚಂಪಾ ಒಬ್ಬ ಕ್ರಾಂತಿಕಾರಿ ಸಾಹಿತಿ. ಕನ್ನಡ ನಾಡು-ನುಡಿಗೆ ಅವರು ಸಲ್ಲಿಸಿದ ಕೊಡುಗೆ ಅಪಾರ. ಗೋಕಾಕ್ ಚಳವಳಿ ಸೇರಿದಂತೆ ಕನ್ನಡಕ್ಕಾಗಿ ನಡೆದ ಹಲವಾರು ಹೋರಾಟಗಳಲ್ಲಿ ಮುಂಚೂಣಿಯಾಗಿ ನಿಂತವರು. ರಾಜ್ಯದಲ್ಲಿ ಕನ್ನಡ ಭಾಷಾ ಮಾಧ್ಯಮ ಕಲಿಕೆಗೆ ಒತ್ತು ನೀಡಿದರು ಎಂದು ಚಂಪಾ ಅವರನ್ನು ಸಿಎಂ ಬಣ್ಣಿಸಿದ್ದಾರೆ.

    ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಅವರು ಪ್ರಾಧ್ಯಾಪಕರಾಗಿ ಚೇರ್ಮನ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಂಕ್ರಮಣ ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕತ್ವದ ಸಾರಥ್ಯವನ್ನು ಅವರು ವಹಿಸಿದ್ದರು. ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

    ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಹಾಗೂ ಅವರ ಅಭಿಮಾನಿ ಮತ್ತು ಶಿಷ್ಯರಿಗೆ ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೋರಿದ್ದಾರೆ.

    ಪ್ರಭಾವಗಳಿಗೆ  ಸಿಕ್ಕಿ ದುಷ್ಟರೆ ಮುಂಬರುತ್ತಾರೆ,   ಸಹಜ ಪ್ರತಿಭೆಗಳು ಅರಳಲಾರದೆ ನರಳುತ್ತವೆ

    ಕಾಕಸಂಘಾತದೊಳ್ ಸಿಕ್ಕಿರ್ದ  ಕೋಗಿಲೆಯ ಮರಿಯಂತೆ- ನಡುಗನ್ನಡ ಸಾಹಿತ್ಯದ ಮಹತ್ವದ ಕವಿ ಲಕ್ಷ್ಮೀಶನ ಜೈಮಿನಿಭಾರತದ ಇಪ್ಪತ್ತೆಂಟನೆಯ ಸಂಧಿಯ  ಮೂವತ್ತೊಂದನೆಯ ಪದ್ಯದಲ್ಲಿ  ಪ್ರಸ್ತುತ ಮಾತು  ಉಲ್ಲೇಖವಾಗಿದೆ.

    ಪಾಂಡವರ  ಅಶ್ವಮೇಧದ ಕುದುರೆ ಚಂದ್ರಹಾಸನ ರಾಜ್ಯಕ್ಕೆ ಪ್ರವೇಶಿಸುತ್ತದೆ.  ಆ ವಿಚಾರವನ್ನು ನಾರದರು  ಚಂದ್ರಹಾಸ ಕುದುರೆಯನ್ನು ತಡೆದಿರುವುದಾಗಿ ಹೇಳಿ ಅವನ ಪೂರ್ವ ವೃತ್ತಾಂತವನ್ನು  ಹೇಳುತ್ತಾನೆ. ಚಂದ್ರಹಾಸ  ಎಳವೆಯಲ್ಲಿಯೇ ತಂದೆಯನ್ನು ಕಳೆದುಕೊಂಡು ದುಷ್ಟ ಮಂತ್ರಿಯ ಕೈಗೆ ಸಿಲುಕುತ್ತಾನೆ  ಮಂತ್ರಿ ಅತ್ಯಂತ ಕ್ರೌರ್ಯದಿಂದ  ಮಗು ಚಂದ್ರಹಾಸನನ್ನು  ಹೇಗೆ ನಡೆಸಿಕೊಂಡ ಎನ್ನುವಲ್ಲಿ “ಕಾಕಸಂಘಾತದೊಳ್ ಸಿಕ್ಕಿರ್ದ  ಕೋಗಿಲೆಯ ಮರಿಯಂತೆ” ಎಂಬ ಮಾತು ಬರುತ್ತದೆ.

     ಮಂತ್ರಿ ದುಷ್ಟಬುದ್ಧಿ  ಬಾಲಕನನ್ನು ಕೊಂದು  ಕುರುಹನ್ನು ತೋರಿಸಿ ಎಂದು ಆದೇಶಿಸಿದಾಗ ಭಟರು  ಚಂದ್ರಹಾಸನನ್ನು  ಹೊತ್ತುಕೊಂಡು ಹೋಗುವಾಗ  ಬಾಲಕ ಪಾತಕಿಗಳ  ಇರುವುದನ್ನು ‘’ಕಾಗೆಗಳ ಗುಂಪಿನ ಮಧ್ಯೆ  ಸಿಕ್ಕಿ  ನಲುಗಿದ ಕೋಗಿಲೆಯ  ಮರಿಗೆ ಹೋಲಿಸುತ್ತಾನೆ.  ಲೋಕಾಭಿರಾಮವಾಗಿ ಕಾಗೆಗಳು  ಸ್ನೇಹಪರವಾದರೂ ಹಂಚಿತಿನ್ನುವ ಸ್ವಭಾವದವಾಗಿವೆ. ಆದರೆ ಅವುಗಳು ಅರಚುವ ಬಗೆ ಕಿವಿಗೆ ಇಂಪನ್ನು ಕೊಡುವುದಿಲ್ಲ ಆ ಸದ್ದು  ಕರ್ಕಶವಾಗಿಯೇ ಇರುತ್ತದೆ.  ಇವುಗಳ ನಡುವೆ ಕೇಳಲು  ಉತ್ತಮ ಸ್ವರವಿರುವ ಕೋಗಿಲೆ ಸದಾ ಕೇಳುಗರನ್ನು  ಆಕರ್ಷಿಸುತ್ತದೆ.

    ಇದನ್ನು ಒತ್ತಟ್ಟಿಗೆ ಇಟ್ಟರೆ  ನಮ್ಮಲ್ಲಿ  ನಿಜವಾದ ಪ್ರತಿಭೆಗೆ   ನ್ಯಾಯ ಸಲ್ಲುತ್ತಿಲ್ಲ.  ಪ್ರಭಾವಗಳಿಗೆ, ದಾಕ್ಷಿಣ್ಯಗಳಿಗೆ ಒಳಗಾಗಿ ಅಪ್ರತಿಭರು ಇಲ್ಲವೆ ಅನರ್ಹರು, ಖಳರು, ದುಷ್ಟರು  ಸಮಾಜದಲ್ಲಿ ಮೆರೆಯುತ್ತಿದ್ದಾರೆ ಇದರಿಂದ ಸಹಜ ಪ್ರತಿಭೆಗಳು  ಮರೆಯಾಗಿ ಹೋಗುತ್ತಿವೆ. ಖಳರ ಕೂಟದಿಂದ ಮುಂಬರಲಾರದೆ  ಪ್ರತಿಭೆಗಳು ನೇಪಥ್ಯಕ್ಕೆ ಸರಿಯುತ್ತಿವೆ.  ಇದು ಸಾಮಾಜಿಕ ಅಪಸವ್ಯ. ಇದನ್ನು  ಉಪಮಾಲೋಲ ಲಕ್ಷ್ಮೀಶ ಸಾರ್ವಕಾಲಿಕವಾಗಿ ನಿಲ್ಲುವಂಥ   ಚಂದ್ರಹಾಸನ ಹಿನ್ನೆಲೆಯ ಉಪಮೆಯೊಂದಿಗೆ ಹೇಳಿರುವುದು  ಅನನ್ಯವಾಗಿದೆ. ಪ್ರಭಾವಗಳಿಗೆ  ಸಿಕ್ಕಿ ದುಷ್ಟರೆ ಮುಂಬರುತ್ತಾರೆ   ಸಹಜ ಪ್ರತಿಭೆಗಳು ಅರಳಲಾರದೆ ನರಳುತ್ತವೆ ಎಂಬ ಭಾವ  ಇಲ್ಲಿದೆ.

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ಜೆಡಿಎಸ್ ನಿಂದ ಜನತಾ ಜಲಧಾರೆ

    ಜನವರಿ 26ಕ್ಕೆ ರಾಜ್ಯಾದ್ಯಂತ ಪವಿತ್ರ ಜಲ ಸಂಗ್ರಹ

    BENGALURU JAN 7

    ರಾಜ್ಯದ ಎಲ್ಲಾ ಭಾಗಗಳಿಗೂ ನೀರು ಒದಗಿಸುವ, ಲಭ್ಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಹಾಗೂ ನೆನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಜಾರಿ ಮಾಡುವ ಮಹಾ ಸಂಕಲ್ಪದೊಂದಿಗೆ ಜೆಡಿಎಸ್ ಪಕ್ಷದಿಂದ ರಾಜ್ಯವ್ಯಾಪಿ ಇದೇ ಜನವರಿ 26ರಿಂದ ‘ ಜನತಾ ಜಲಧಾರೆ ‘ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

    ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಜನತಾ ಜಲಧಾರೆಗೆ ಹೊರಡಲಿರುವ ಗಂಗಾ ರಥವನ್ನು ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆ ಅನಾವರಣಗೊಳಿಸಿದರು.

    ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರು ಜನತಾ ಜಲಧಾರೆಯ ಪೂರ್ಣ ವಿವರಗಳನ್ನು ಮಾಧ್ಯಮಗಳಿಗೆ ನೀಡಿದರು. ಈ ಸಂದರ್ಭದಲ್ಲಿ ಜನತಾ ಜಲಧಾರೆಯ ಲಾಂಛನ ಬಿಡುಗಡೆ ಮಾಡಿ ಅವರು ಹಂಚಿಕೊಂಡ ಮಾಹಿತಿ ಹೀಗಿದೆ;

    ಕರ್ನಾಟಕ ಅತಿವೃಷ್ಟಿ- ಅನಾವೃಷ್ಟಿಗೆ ತುತ್ತಾಗುವ ರಾಜ್ಯ. ಇದು ಪ್ರತೀ ವರ್ಷ ಕಥೆ. ಅಗಾಧವಾಗಿ ಸುರಿಯುವ ಮಳೆ ನೀರನ್ನು ಪೋಲಾಗದಂತೆ ಬಳಕೆ ಮಾಡಿಕೊಳ್ಳುವುದು ಹಾಗೂ ವರುಣನ ಕೃಪೆ ಇಲ್ಲದೆ ಸದಾ ಬರದಿಂದ ತತ್ತರಿಸುವ ಬಯಲುಸೀಮೆಯನ್ನು ಜಲಶ್ಯಾಮಲಗೊಳಿಸುವ ಕನಸು ನಮ್ಮದು.

    ಸಸ್ಯಶ್ಯಾಮಲದ ಕನಸಿನೊಂದಿಗೆ ಕೃಷಿಗೆ ಸಮೃದ್ಧ ನೀರು ಹಾಗೂ ಜಲ ಶ್ಯಾಮಲಕ್ಕಾಗಿ ಕುಡಿಯಲು ಸಮೃದ್ಧ ನೀರು ಒದಗಿಸುವುದು ನಮ್ಮ ಗುರಿ. ಆ ನಿಟ್ಟಿನಲ್ಲಿ ಜಾತ್ಯತೀತ ಜನತಾದಳ ಏನು ಮಾಡುತ್ತದೆ? ಯಾವ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ? ಎಂಬ ಬಗ್ಗೆ ಜನರಿಗೆ ಹೇಳುತ್ತೇವೆ.

    ಗಂಗೆಯನ್ನು ಪರಮ ಪವಿತ್ರವೆಂದು ಭಾವಿಸುವ ಪರಂಪರೆ ನಮ್ಮದು. ಈ ನಂಬಿಕೆಗೆ ಚ್ಯುತಿ ಬಾರದಂತೆ ಶ್ರದ್ಧಾ ಭಕ್ತಿಯಿಂದ ರಾಜ್ಯದ 15 ನದಿಗಳ ಪವಿತ್ರ ಜಲವನ್ನು ಕಲಶಗಳಲ್ಲಿ ಸಂಗ್ರಹ ಮಾಡಿ, ಆ ನೀರನ್ನು ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನಕ್ಕೆ ಬರಮಾಡಿಕೊಂಡು ಗಂಗಾಪೂಜೆ ನೆರೆವೇರಿಸುವುದು.

    ಜ.23ಕ್ಕೆ ಗಂಗಾ ರಥಗಳಿಗೆ ಹಸಿರು ನಿಶಾನೆ:

    ಜನವರಿ 23ರಂದು ರಾಮನಗರದ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇಗುಲದಿಂದ ರಾಜ್ಯದ 15 ದಿಕ್ಕುಗಳಿಗೆ ಹೊರಡುವ ಗಂಗಾ ರಥಗಳಿಗೆ (15 ವಾಹನಗಳು) ನಾನು, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ.ದೇವೇಗೌಡರು ಹಾಗೂ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಕೆ.ಕುಮಾರಸ್ವಾಮಿ ಅವರು ಚಾಲನೆ ನೀಡುವರು.

    ಜ.26ರಿಂದ ಜಲಧಾರೆ ಆರಂಭ:

    ಜನವರಿ 26ರಂದು ಇಷ್ಟೂ ವಾಹನಗಳಲ್ಲಿ ಅಳವಡಿಸಲಾಗಿರುವ ಕಲಶಗಳ ಮೂಲಕ ಪೂರ್ವ ನಿಗದಿ ಮಾಡಲಾಗಿರುವ ಸ್ಥಳಗಳಲ್ಲಿ ಬೆಳಗ್ಗೆ 9 ಗಂಟೆಗೆ ಕಾವೇರಿ, ಕಬಿನಿ, ಮೇಕೆದಾಟು, ಹೇಮಾವತಿ, ನೇತ್ರಾವತಿ, ಕುಮಾರಧಾರ, ತುಂಗಭದ್ರಾ, ಶರಾವತಿ, ಅಘನಾಶಿನಿ, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಭೀಮಾ, ಅರ್ಕಾವತಿ, ಉತ್ತರ ಪಿನಾಕಿನಿ, ಚಿತ್ರಾವತಿ ಸೇರಿ 15 ಸ್ಥಳಗಳಲ್ಲಿ ಮೊದಲ ದಿನ ಜಲ ಸಂಗ್ರಹ ಮಾಡಲಾಗುವುದು.

    ಜಲ ಸಂಗ್ರಹ ಮಾಡುವ ದಿನ ರಾಜ್ಯದ ವಿವಿಧ ಭಾಗಗಳಲ್ಲಿ ತಾವೂ ಸೇರಿದಂತೆ ದೇವೇಗೌಡರು, ಎಚ್.ಕೆ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಬಂಡೆಪ್ಪ ಕಾಶೆಂಪೂರ್, ಸಾ.ರಾ.ಮಹೇಶ್, ನಾಡಗೌಡರು, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಸೇರಿದಂತೆ ಪಕ್ಷದ ಎಲ್ಲ ನಾಯಕರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

    ಒಟ್ಟು 51 ಕಡೆ ಜಲ ಸಂಗ್ರಹ:

    ಇಡೀ ಜಲಧಾರೆ ಕಾರ್ಯಕ್ರಮದಲ್ಲಿ ಒಟ್ಟು 51 ಸ್ಥಳಗಳಲ್ಲಿ ಪವಿತ್ರ ನದಿಗಳ ಜಲ ಸಂಗ್ರಹ ಮಾಡಲಾಗುವುದು. ರಾಜ್ಯದ 180 ವಿಧಾನಸಭೆ ಕ್ಷೇತ್ರಗಳು, 140 ತಾಲ್ಲೂಕು ಕೇಂದ್ರಗಳಲ್ಲಿ ಈ ಕಲಶಗಳು ಹಾದು ಹೋಗಲಿದ್ದು, ಎಲ್ಲೆಡೆ ಜಲ ತುಂಬಿದ ಕಲಶಗಳ ಮೆರೆವಣಿಗೆ, ಕಲಾ ತಂಡಗಳ ಮೆರಗು, ಮಂಗಳವಾದ್ಯಗಳ ಮೇಳ, ಕಲಶಗಳೊಂದಿಗೆ ಮಹಿಳೆಯರ ನಡಿಗೆ ನಡೆಯಲಿದೆ. ದಿನಂಪ್ರತಿ 15 ಕಡೆ ಇಂಥ ಕಾರ್ಯಕ್ರಮಗಳು ನಡೆಯಲಿವೆ.

    ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ:

    ರಾಜ್ಯದ ಉದ್ದಗಲಕ್ಕೂ ಸಾಗಿ ಬರುವ ಈ ಹದಿನೈದೂ ವಾಹನಗಳು 15-20 ದಿನಗಳ ಒಳಗಾಗಿ ಬೆಂಗಳೂರು ತಲುಪುತ್ತವೆ. ಅಂದು ಇಡೀ ಬೆಂಗಳೂರನ್ನು ಪ್ರದಕ್ಷಿಣೆ ಹಾಕುವ ಇಷ್ಟೂ ವಾಹಗಳು ಅದೇ ದಿನ ಸಂಜೆ ಅರಮನೆ ಮೈದಾನದಲ್ಲಿ ಸೇರಲಿವೆ. ಆ ನಂತರ ಎರಡು ದಿನಗಳಲ್ಲಿ ಒಂದು ಬೃಹತ್ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ಉದ್ದಗಲಕ್ಕೂ ಸಂಗ್ರಹಿಸಲಾದ ಜಲವನ್ನು ದೊಡ್ಡ ಕಲಶಕ್ಕೆ ತುಂಬಿಸಿ ಗಂಗಾ ಪೂಜೆ, ಗಂಗಾ ಆರತಿ ಕಾರ್ಯಕ್ರಮಗಳನ್ನು ನೆರವೇರಿಸಲಾಗುವುದು. ಆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು, ನಾಡಿನ ಧರ್ಮಗುರುಗಳು, ಗುರು ಹಿರಿಯರು ಸೇರಿ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.

    ವರ್ಷವಿಡೀ ಗಂಗಾ ಪೂಜೆ:

    ಆ ಕಾರ್ಯಕ್ರಮ ಮುಗಿದ ನಂತರ ಪೂಜಿಸಲ್ಪಟ್ಟಿದ್ದ ಪವಿತ್ರ ಜಲವುಳ್ಳ ಕಲಶವನ್ನು ಬೆಂಗಳೂರಿನ ವಿವಿಧೆಡೆಗಳಿಂದ ಮೆರವಣಿಗೆ ಮೂಲಕ ಪಕ್ಷದ ರಾಜ್ಯ ಕಚೇರಿ ಜೆಪಿ ಭವನಕ್ಕೆವಿದ್ಯುಕ್ತವಾಗಿ ಬರ ಮಾಡಿಕೊಂಡು ಆ ಕಲಶ ಪ್ರತಿಷ್ಠಾಪನೆ ಮಾಡಲಾಗುವುದು. ಅಂದಿನಿಂದ ಮುಂದಿನ 391 ದಿನಗಳ ಕಾಲ ಗಂಗಾ ಪೂಜೆ, ಗಂಗಾ ಆರತಿ ನಿರಂತರವಾಗಿ ನಡೆಯಲಿದೆ. ಆ ನಿತ್ಯ ಪೂಜೆಯಲ್ಲಿ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಹಾಗೂ ಮಹಿಳಾ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

    ಕೋವಿಡ್ ಬಗ್ಗೆ ಮುನ್ನೆಚ್ಚರಿಕೆ ವಹಿಸುತ್ತೇವೆ:

    ನಮಗೆ ಧಾವಂತವಿಲ್ಲ. ವೈರಸ್ ನಿಯಂತ್ರಣಕ್ಕೆ ಸರಕಾರ ಜಾರಿ ಮಾಡುವ ಎಲ್ಲಾ ನಿಯಮಗಳಿಗೆ ಬದ್ಧರಾಗಿ ಜಲಧಾರೆ ಕಾರ್ಯಕ್ರಮ ನಡೆಸುತ್ತೇವೆ. ಕಾಂಗ್ರೆಸ್ ನಾಯಕರಂತೆ ಅನುಮತಿ ಕೊಡದಿದ್ದರೆ ಪ್ರಾಣ ಬಿಡುತ್ತೇವೆ ಎಂದು ನಾವು ಬೆದರಿಕೆ ಹಾಕುವುದಿಲ್ಲ ಎಂದರು ಕುಮಾರಸ್ವಾಮಿ ಅವರು.

    ರಾಜ್ಯಕ್ಕೆ ನಿರಂತರ ಅನ್ಯಾಯ:

    ನೀರಿನ ಬಗ್ಗೆ ಇಡೀ ದೇಶದಲ್ಲೇ ಅತ್ಯಂತ ಕಿರುಕುಳಕ್ಕೆ ಒಳಗಾದ, ಅಷ್ಟೇ ಅನ್ಯಾಯಕ್ಕೆ ಒಳಗಾದ ರಾಜ್ಯ ಕರ್ನಾಟಕ. ಒಕ್ಕೂಟ ವ್ಯವಸ್ಥೆಯಲ್ಲೇ ಇದ್ದರೂ ಭಾಷೆ, ನೆಲ, ಜಲ, ಅಭಿವೃದ್ಧಿ, ಅನುದಾನ; ಇತ್ಯಾದಿಗಳಲ್ಲಿ ಇನ್ನಿಲ್ಲದ ಅವಗಣನೆಗೆ ಒಳಗಾದ ರಾಜ್ಯವೂ ಕರ್ನಾಟಕವೇ ಎಂದು ಮಾಜಿ ಸಿಎಂ ಹೇಳಿದರು.

    ದಕ್ಷಿಣದ ಇತರೆ ರಾಜ್ಯಗಳಂತೆ ಕರ್ನಾಟಕದಲ್ಲಿ ಪ್ರಾದೇಶಿಕ ಶಕ್ತಿಗಳಿಗೆ ಜನರು ಉತ್ತೇಜನ ನೀಡಲಿಲ್ಲ. ಸದಾ ಕಾಲ ರಾಷ್ಟ್ರೀಯ ಪಕ್ಷಗಳೆಂಬ ಮಾಯಾಜಿಂಕೆಗಳನ್ನು ಬೆನ್ಹತ್ತಿದ ಪರಿಣಾಮ ಇಂದಿಗೂ ನಾವು ನೀರಿಗಾಗಿ ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ಜತೆ ಗುದ್ದಾಡುತ್ತಿದ್ದೇವೆ. ಈಗ ಮೇಕೆದಾಟು ಯೋಜನೆ ಆ ಒದ್ದಾಟದ ಹೊಸ ಹೆಸರು ಎಂದು ಅವರು ಟಾಂಗ್ ನೀಡಿದರು

    guest lectures ಬೇಡಿಕೆ: ಸಚಿವರನ್ನು ಭೇಟಿಯಾದ ಸಂಘಟನೆ

    BENGALURU JAN 7

    ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ನಿಯೋಗವು ಶುಕ್ರವಾರ ಇಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಭೇಟಿ ಮಾಡಿ, ಅತಿಥಿ ಉಪನ್ಯಾಸಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ಚರ್ಚಿಸಿತು. ಜೊತೆಗೆ, ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವಂತೆ ನಿಯೋಗವು ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಕೂಡ ಇದ್ದರು.

    ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, `ಅತಿಥಿ ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ ಸದಸ್ಯರು, ಅತಿಥಿ ಉಪನ್ಯಾಸಕರ ಸಂಘಟನೆಗಳು ಮತ್ತು ಸಂಬಂಧಿಸಿದ ಎಲ್ಲರೊಂದಿಗೂ ಚರ್ಚಿಸಿ, ಶೀಘ್ರದಲ್ಲೇ ಪರಿಹಾರ ಕಂಡುಹಿಡಿಯಲಾಗುವುದು’ ಎಂದು ಭರವಸೆ ನೀಡಿದರು.

    ನಿಯೋಗದಲ್ಲಿ ಸಂಘಟನೆಯ ಅಧ್ಯಕ್ಷ ಡಾ. ರಘು ಅಕಮಂಚಿ, ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ, ಎಬಿವಿಪಿ ಮುಖಂಡರಾದ ಸ್ವಾಮಿ ಮೊದಲಾದವರು ಇದ್ದರು.

    OMICRON : ರಾಜ್ಯದಲ್ಲಿ 50:50 ಸೂತ್ರ, ನೈಟ್ ಮತ್ತು ವೀಕೆಂಡ್ ಕರ್ಫ್ಯೂ

    BENGALURU JAN 4

    ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸಲು ನಾಳೆಯಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರ ಕೆಲವು ನಿರ್ಬಂಧಗಳನ್ನು ವಿಧಿಸಿ ಆದೇಶಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಈ ತೀರ್ಮಾನವನ್ನು ತೆಗೆದುಕೊಂಡಿದೆ. ಜನವರಿ 5 ರ ರಾತ್ರಿ 10ರಿಂದ ಜಾರಿಗೆ ಬರುವ ಈ ನಿರ್ಬಂಧ ಜನವರಿ 19ರ ಬೆಳಗ್ಗೆ 5ರವರೆಗೂ ಜಾರಿಯಲ್ಲಿ ಇರಲಿದೆ.

    ಈಗ ಜಾರಿಯಲ್ಲಿರುವ ನೈಟ್ ಕರ್ಫ್ಯೂ ಮುಂದುವರಿಯಲಿದೆ.ರಾಜ್ಯದ್ಯಂತ ವೀಕೆಂಡ್ ಕರ್ಫ್ಯೂ ಜಾರಿಗೆ ಬರಲಿದೆ. ರಾಜ್ಯದ್ಯಂತ ಪ್ರತಿಭಟನೆ, ಮೆರವಣಿಗೆ, ಜಾಥಗಳನ್ನು ನಿರ್ಬಂಧಿಸಲಾಗಿದೆ. ಬೆಂಗಳೂರು ನಗರದಲ್ಲಿ 1 ರಿಂದ 9 ನೇ ತರಗತಿಗಳು ಆನ್ ಲೈನ್ ನಲ್ಲಿ ನಡೆಯಲಿವೆ. 10 ಮತ್ತು 2 ನೇ ಪಿಯು ಮಾತ್ರ ಭೌತಿಕ ತರಗತಿ ನಡೆಯಲಿದೆ.

    ಮದುವೆಗೆ ಜನರ ಸಂಖ್ಯೆಯನ್ನು ಮಿತಗೊಳಿಸಲಾಗಿದೆ. ಸಿನಿಮಾ , ಪಬ್ , ಮಾಲ್ ಇತ್ಯಾದಿಗಳಿಗೆ ಶೇಕಡ 50 ರ ಸೂತ್ರ ಅಳವಡಿಸಲಾಗಿದೆ. ಆದೇಶ ಪೂರ್ಣ ಪ್ರತಿ ಇಲ್ಲಿದೆ . ಸ್ಕ್ರಾಲ್ ಮಾಡಿ ಓದಿ.

    error: Content is protected !!