23.2 C
Karnataka
Tuesday, November 26, 2024
    Home Blog Page 34

    omicron: ತಜ್ಞರೊಂದಿಗೆ ನಾಳೆ ಸಿಎಂ ಸಭೆ

    BENGALURU JAN 3

    ಕೋವಿಡ್ ಮತ್ತು ಒಮೈಕ್ರಾನ್ ವೈರಸ್ ವೇಗವಾಗಿ ದೇಶ ಹಾಗೂ ರಾಜ್ಯಗಳಲ್ಲಿ ಹರಡುತ್ತಿದೆ. ಈ ಬಗ್ಗೆ ತಜ್ಞರೊಂದಿಗೆ ನಾಳೆ ಸಂಜೆ ಸಭೆ ನಡೆಸಿ ಚರ್ಚಿಸಲಾಗುವುದು. ಹಿಂದೆ ಎರಡು ಅಲೆಗಳನ್ನು ನಿಭಾಯಿಸಿರುವ ಅನುಭವದ ಹಿನ್ನೆಲೆಯಲ್ಲಿ ಆದಷ್ಟೂ ಜನಜೀವನಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕರೊನಾ ನಿಯಂತ್ರಣಕ್ಕೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಬಗ್ಗೆ ಸೂಚನೆ ನೀಡುವಂತೆ ತಜ್ಞರಿಗೆ ಸೂಚನೆ ನೀಡಲಾಗಿದೆ.

    ಗುರುವಾರದಂದು ನಡೆಯುವ ಸಚಿವ ಸಂಪುಟ -cabinet meeting-ಸಭೆಯಲ್ಲಿ ಒಟ್ಟಾರೆ ರಾಜ್ಯದ ಸ್ಥಿತಿಗತಿಗಳ ಬಗ್ಗೆ ಹಾಗೂ ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚೆ ಮಾಡಿ ದೀರ್ಘಾವಧಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಲಸಿಕೆ ಅಭಿಯಾನ
    ಇಂದು 15- 18 ವಯೋಮಾನದವರಿಗೆ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಯುವ ಜನರನ್ನು ಸುರಕ್ಷಾ ಚಕ್ರದೊಳಗೆ ತರಬೇಕಿದೆ. ಅದಕ್ಕಾಗಿ ವ್ಯಾಪಕವಾದ ಅಭಿಯಾನವನ್ನು ಕೈಗೊಳ್ಳಲಿದ್ದೇವೆ. ಇದು ಯಶಸ್ವಿಯಾಗಲು , ಪೋಷಕರು, ಶಿಕ್ಷಕರು, ಆರೋಗ್ಯ ಕಾರ್ಯಕರ್ತರ ಸಮನ್ವಯ ಅಗತ್ಯವಿದೆ ಎಂದರು.

    ಜನತೆ ಸ್ವಯಂ ನಿಯಂತ್ರಣ ಹಾಕಿಕೊಂಡು, ಮಾಸ್ಕ್ ಧಾರಣೆ, ಅಂತರ ಕಾಯ್ದುಕೊಳ್ಳುವ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ವಿನಂತಿ ಮಾಡಿದರು.

    ಪಾದಯಾತ್ರೆ : ಒಮಿಕ್ರಾನ್ ಭೀತಿಯ ನಡುವೆಯೂ ಕಾಂಗ್ರೆಸ್ ಪಾದಯಾತ್ರೆ ಕೈಗೊಳ್ಳುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯ ಮಂತ್ರಿಗಳು, ಕಾಂಗ್ರೆಸ್ ನಡೆಯನ್ನು ಗಮಸಿಸುತ್ತಿದ್ದು, ಸಾರ್ವತ್ರಿಕ ನಡವಳಿಕೆಯ ಬಗ್ಗೆ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಲಾಗುವುದು ಎಂದರು.

    ಸಮಯ ಮತ್ತು ಹಣದ ಸದುಪಯೋಗ ಸರ್ಕಾರದ ನೀತಿ

    RAMANAGARA JAN 3

    ಸಮಯ ಮತ್ತು ಹಣದ ಸದುಪಯೋಗ ಸರ್ಕಾರದ ನೀತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ-Basavaraja Bommai- ತಿಳಿಸಿದರು.

    ಅವರು ಇಂದು ಮಾಗಡಿ-Magadi- ತಾಲ್ಲೂಕಿನ ಚಿಕ್ಕಕಲ್ಯಾ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.

    ನಿಗದಿತ ಸಮಯದಲ್ಲಿ ಯೋಜನೆಗಳನ್ನು ಮುಗಿಸದೇ ಇದ್ದಲ್ಲಿ ಯೋಜನೆಯ ಮೊತ್ತ ಹೆಚ್ಚಾಗುತ್ತದೆ. ಕಾಲಮಿತಿಯೊಳಗೆ ಪೂರ್ಣಗೊಳ್ಳುವ ಯೋಜನೆಗಳನ್ನು ಹಾಕಿಕೊಳ್ಳಬೇಕು. ಹಣ ಮತ್ತು ಸಮಯವನ್ನು ಸಂಪೂರ್ಣವಾಗಿ ಒದಗಿಸಿ ಯೋಜನೆಗಳನ್ನು ಪೂರ್ಣಗೊಳಿಸಿದಾಗ ಜನರಿಗೆ ಮುಟ್ಟಿಸಲು ಸಾಧ್ಯವಿದೆ ಎಂದರು.

    ಜಿಟಿಟಿಸಿ-GTTC- ಉನ್ನತೀಕರಣ
    ಜಿಟಿಟಿಸಿ – ಬಹಳ ಉಪಯುಕ್ತವಾಗಿರುವ ತಾಂತ್ರಿಕ ಸಂಸ್ಥೆ. ಇಲ್ಲಿ ಪ್ರಮಾಣ ಪತ್ರ ಪಡೆದರೆ ಶೇ 100 ರಷ್ಟು ಕೆಲಸ ಸಿಗುವುದು ಖಾತ್ರಿ. ಆ ವಿಶ್ವಾಸಾರ್ಹತೆ ಜಿಟಿಟಿಸಿ ಗಿದೆ. ತಾವು ಖುದ್ದು ಇಂಜಿನಿಯರಿಂಗ್ ಕಲಿತ ನಂತರ 6 ತಿಂಗಳ ಕಾಲ ಜಿಟಿಟಿಸಿ ನಲ್ಲಿ ತರಬೇತಿ ಪಡೆಡಿದ್ದು ಹಾಗೂ ಟಾಟಾ ಮೋಟಾರ್ಸ್ ಸಂಸ್ಥೆಯಲ್ಲಿ ಉದ್ಯೋಗ ದೊರಕಿದ್ದ ಬಗ್ಗೆ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಸ್ಮರಿಸಿದರು. ಈ ಭಾಗದ ಮಕ್ಕಳ ಬದುಕಿನಲ್ಲಿಯೂ ಜಿಟಿಟಿಸಿ ಯಶಸ್ಸಿನ ಮೆಟ್ಟಿಲಾಗಲಿ ಎಂದರು.

    ಸರ್ಕಾರ 50 ಕೋಟಿ ರೂ.ಗಳಿಗಿಂತ ಹೆಚ್ಚು ಅನುದಾನದಲ್ಲಿ ಜಿಟಿಟಿಸಿಗಳನ್ನು ಉನ್ನತೀಕರಿಸಲಾಗಿದೆ. ಹಿಂದುಳಿದ ತಾಲ್ಲೂಕುಗಳಲ್ಲಿಯೂ ಈ ಸಂಸ್ಥೆಗಳನ್ನು ತೆರೆಯಬೇಕು. ಕಳೆದ 2 ವರ್ಷಗಳಲ್ಲಿ ಪ್ರತಿ ಐಟಿಐಗೆ ತಲಾ 30 ಕೊಟಿ ರೂ.ಗಳನ್ನು 150 ಐಟಿಐಗಳನ್ನು ಸಹ ಸರ್ಕಾರ ಟಾಟಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಉನ್ನತೀಕರಿಸಿದೆ. 4000 ಕೋಟಿ ರೂ.ಗಳನ್ನು ಇದಕ್ಕಾಗಿ ವೆಚ್ಚಮಾಡಿದೆ. ಸಮಕಾಲೀನ ಉದ್ಯೋಗಕ್ಕೆ ಯುವಕರನ್ನು ತಯಾರು ಮಾಡಲು ಉನ್ನತೀಕರಿಸಿದ ಐಟಿಐಗಳು ಸಹಕಾರಿಯಾಗಲಿವೆ. ಇಡೀ ದೇಶದಲ್ಲಿ ಇದನ್ನು ಸಾಧಿಸಿದ ಪ್ರಥಮ ರಾಜ್ಯ ಕರ್ನಾಟಕ ಎಂದರು.
    ಎಲ್ಲರಿಗೂ ಉದ್ಯೋಗ ಕಾರ್ಯಕ್ರಮವನ್ನು ಪ್ರತಿ ತಾಲ್ಲೂಕಿನಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಅರ್ಹತೆಯನುಗುಣವಾಗಿ ಯುವಕರಿಗೆ ಉದ್ಯೋಗ ದೊರೆಯಲು ತರಬೇತಿ, ಅವಕಾಶಗಳನ್ನು, ವ್ಯಕ್ತಿತ್ವ ವಿಕಸನ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದರು.

    ನೀರಾವರಿ ಯೋಜನೆಗಳು:
    ಮಂಚಿನಬೆಲೆಯಿಂದ ಈ ಭಾಗದ 3 ತಾಲ್ಲೂಕುಗಳಿಗೆ ಕುಡಿಯುವ ನೀರಿನ ಯೋಜನೆಗಳಿಗೆ ಬೇಡಿಕೆ ಇದೆ. ಜಲ್ ಜೀವನ್ ಮಿಷನ್ ಯೋಜನೆ ಪ್ರಧಾನ ಮತ್ರಿ ನರೇಂದ್ರ ಮೋದಿಯವರ ಕನಸಿನ ಕೂಸು. ಪ್ರತಿಯೊಂದು ಗ್ರಾಮದ ಪ್ರತಿಯೊಂದು ಮನೆಗೂ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿ ಸಾಕಾರಗೊಳಿಸಲು ಹಣಕಾಸಿನ ನೆರವನ್ನು ನೀಡಿದ್ದಾರೆ. ಇದು ಮಾಡಲು ಕೇವಲ ಒಬ್ಬ ಮುತ್ಸದ್ದಿಗೆ ಮಾತ್ರ ಸಾಧ್ಯ ಎಂದರು. ಮುಂದಿನ ಜನಾಂಗಕ್ಕೆ ಅನುಕೂಲವಾಗುವಂತಹ ಯೋಜನೆಗಳನ್ನು ಪ್ರಾರಂಭಿಸಿ ನಿಗದಿತ ಸಮಯದಲ್ಲಿ ಮುಗಿಸಬೇಕೆನ್ನುವ ದಿಟ್ಟ ತೀರ್ಮಾನವನ್ನು ಪ್ರಧಾನಿಗಳು ಮಾಡಿದ್ದಾರೆ. ಒಂದೂವರೆ ವರ್ಷದಲ್ಲಿ ನೀರು ನೀಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಭರವಸೆಯಿತ್ತರು. ಜಲಜೀವನ್ ಮಿಷನ್ ಯೋಜನೆಯನ್ನು ಯುದ್ದೋಪಾದಿಯಲ್ಲಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
    ಹೇಮಾವತಿ ಜಲಾಶಯದಿಂದ ನೀರಿನ ಹಂಚಿಕೆ, ಟಿಬಿಸಿ ತುಮಕೂರು, ನಾಗಮಂಗಲ ಮತ್ತು ಹಾಸನದ ಬ್ರಾಂಚ್ ಕಾಲುವೆಗಳ ಬಗ್ಗೆ ಮಾಹಿತಿ ಇದ್ದು, ನೀರಿನ ಹಂಚಿಕೆ ಬಗ್ಗೆ ಅಮೂಲಾಗ್ರವಾದ ನಿರ್ಣಯಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳಾಗಿವೆ. ಇವುಗಳ ಪ್ರಗತಿ ಪರಿಶೀಲನೆ ಮಾಡಿ ಈ ಯೋಜನೆಗಳ ಕಟ್ಟಕಡೆಯ ತಾಲ್ಲೂಕುಗಳ ಸಮುದಾಯಗಳನ್ನು ಮುಟ್ಟಿಸಲು ಕಾಯಕಲ್ಪವನ್ನು ದೊರಕಿಸಲು ಪ್ರಯತ್ನಿಸುವುದಾಗಿ ಭರವಸೆಯಿತ್ತರು. ಬಾನಂದೂರು, ವೀರಾಪುರ ಮುಂತಾದ ಪವಿತ್ರ ಸ್ಥಳಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ರಾಮನಗರ ವಿಶಿಷ್ಟ ಜಿಲ್ಲೆ. ಜಿಲ್ಲೆಯ ಅಭಿವೃದ್ಧಿಗೆ ಕಂಕಣ ಬದ್ಧನಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

    ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಸಚಿವರಾದ ಡಾ. ಕೆ. ಸುಧಾಕರ್, ಬಿ. ಎ. ಬಸವರಾಜ, ಮಾಗಡಿ ಶಾಸಕ ಮಂಜುನಾಥ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    Bengaluru City Development: ವಿವಿಧ ಇಲಾಖೆಗಳ ಸಮನ್ವಯಕ್ಕೆ ಸಮಿತಿ ರಚನೆ

    BENGALURU JAN 2

    ವಿವಿಧ ಇಲಾಖೆಗಳ ನಡುವೆ ಸಮನ್ವಯವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಬಿಬಿಎಂಪಿ, ಬೆಸ್ಕಾಂ, ಬಿಡಬ್ಲ್ಯುಎಸ್‍ಎಸ್‍ಬಿ ಅಧಿಕಾರಿಗಳ ವಲಯಮಟ್ಟದ ಸಮಿತಿ ಹಾಗೂ ರಾಜ್ಯಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಿ, ಸಂಯೋಜಕರನ್ನು ನೇಮಿಸುವ ಬಗ್ಗೆ ಆದೇಶವನ್ನು 2-3 ದಿನಗಳಲ್ಲಿ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

    ಅವರು ಇಂದು ಬೆಂಗಳೂರು ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ನಗರದ ಮಳೆ ನೀರು ಚರಂಡಿಗಳ ಕಾಮಗಾರಿ ಪಕ್ಕಾ ಕೆಲಸವಾಗಬೇಕು. ಇದಕ್ಕಾಗಿ ವೃತ್ತಿಪರ ಡಿ.ಪಿ.ಆರ್ ಸಿದ್ಧಪಡಿಸಿ, ರೂ. 1,500 ಕೋಟಿಗಳ ಹೆಚ್ಚುವರಿ ಅನುದಾನವನ್ನು ನೀಡಲಾಗುವುದು. ಯೋಜನೆ ಮಾದರಿಯಲ್ಲಿ ಈ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

    ನಗರದಲ್ಲಿ ಬೀದಿ ದೀಪಗಳ ವ್ಯವಸ್ಥೆ ಮಾಡಬೇಕು. ಹಣದ ಕೊರತೆ ಇದ್ದಲ್ಲಿ ತಕ್ಷಣವೇ ಅನುಮೋದನೆಯನ್ನು ಪಡೆದು ಕೂಡಲೇ ನಿರ್ವಹಣೆ ಕೆಲಸವನ್ನು ಪೂರ್ಣಗೊಳಿಸಬೇಕು. ಹೊಸ ದೀಪಗಳನ್ನು ಅಳವಡಿಸಲು ಸಹ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

    ನಿರ್ಭಯಾ ಯೋಜನೆಯಡಿ 7,000 ಸಿಸಿ ಟಿವಿಗಳನ್ನು ಬೆಂಗಳೂರು ನಗರದಾದ್ಯಂತ ಅಳವಡಿಸಲಾಗುವುದು ಎಂದು ಅವರು ತಿಳಿಸಿದರು.

    ಭೆಯ ಇತರ ಮುಖ್ಯಾಂಶಗಳು:

    · ನಗರದಲ್ಲಿರುವ 751.41 ಕಿ.ಮೀ ರಸ್ತೆಗಳ ಗುಂಡಿಗಳನ್ನು 15 ದಿನಗಳಲ್ಲಿ ಮುಚ್ಚುವಂತೆ ಸೂಚಿಸಿದರು.ಟೆಂಡರ್ ಶ್ಯೂರ್ ಯೋಜನೆಯಡಿ ರಸ್ತೆ ಅಭಿವೃದ್ದಿಯನ್ನು ಮಾರ್ಚ್ 31 ರೊಳಗೆ ಮುಗಿಸುವಂತೆ ಸೂಚನೆ.

    · ಹೈಡೆನ್ಸಿಟಿ ರಸ್ತೆ ದುರಸ್ತಿಗೆ ಅಲ್ಪಾವಧಿ ಟೆಂಡರ್ ಕರೆದು ಕೆಲಸ ಮುಗಿಸಲು ಸೂಚನೆ ನೀಡಲಾಯಿತು.

    · ಬೆಂಗಳೂರಿಗೆ ಹೊಸದಾಗಿ ಸೇರ್ಪಡೆಯಾದ 110 ಗ್ರಾಮಗಳಲ್ಲಿ 950 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗಳಲ್ಲಿ ಸಾಧ್ಯವಿರುವೆಡೆಗಳಲ್ಲಿ ಗರಿಷ್ಠ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚನೆ ನೀಡಲಾಯಿತು.

    · ವೈಟ್-ಟಾಪಿಂಗ್ ಯೋಜನೆಯಡಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೂರ್ಣಗೊಳಿಸುವಂತೆ ತಿಳಿಸಿದರು.

    · ರಸ್ತೆ ಸಂಚಾರಕ್ಕೆ ತೊಂದರೆಯಾಗಿರುವರಿಂದ ಗ್ರೇಡ್ ಸೆಪೆರೇಟರ್ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸೂಚನೆ ನೀಡಿದರು.

    · ಬೆಂಗಳೂರು ಎಲ್ಲ ವಲಯಗಳಲ್ಲಿ ಖಾಲಿ ಇರುವ ವಾರ್ಡ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

    · ಬೆಂಗಳೂರು ಪೂರ್ವ ವಲಯದಲ್ಲಿ ರಸೆಲ್ ಮಾರ್ಕೆಟ್ ನವೀಕರಣ ಕಾರ್ಯವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಸೇರ್ಪಡೆಗೊಳಿಸಿದೆ. ಬಿ.ವಿ.ಕೆ. ಅಯ್ಯಂಗಾರ್ ರಸ್ತೆ ಅಭಿವೃದ್ದಿಗೆ ಕ್ರಮ.

    ಟಿ.ಡಿ.ಆರ್ ಮತ್ತು ಭೂಸ್ವಾಧೀನ ವಿಷಯಗಳ ವಿಲೇವಾರಿಗೆ ಆದ್ಯತೆ ನೀಡಲು ಸೂಚಿಸಲಾಯಿತು.

    ಅಮೃತ್ ನಗರೋತ್ಥಾನ ಯೋಜನೆಯಡಿ ಪ್ರಮುಖ ರಸ್ತೆಗಳನ್ನು ತೆಗೆದುಕೊಳ್ಳುವುದು. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಮತ್ತು ಬೆಳವಣಿಗೆಗೆ ಯೋಜನಾಬದ್ಧವಾಗಿ ಕೆಲಸ ಮಾಡುವಂತೆ ತಿಳಿಸಿದರು.

    Indian Stock Market: 2021 ಸೇರಿ ನಿಘಂಟು, ಹೊತ್ತೊಯ್ಯಲಿ ಸರ್ವಸಮಸ್ಯೆಗಳ ಗಂಟು, 2022 ತರಲಿ ಸುಖ, ಸಂತೋಷ, ಸಂಮೃದ್ಧಿ, ನೆಮ್ಮದಿಗಳ ಸಂಪತ್ತು.

    2022 ರ ಹೊಸ ವರ್ಷದ ಶುಭಾಶಯಗಳು

    ಷೇರುಪೇಟೆಯ ಚಟುವಟಿಕೆಯಲ್ಲಿ ಹೂಡಿಕೆಯ ಉದ್ದೇಶವಾಗಿದ್ದಲ್ಲಿ ಆಯ್ಕೆಗಳು ಅನೇಕ ವಿಧಗಳಲ್ಲಿ ಲಭ್ಯವಿರುತ್ತವೆ. ಕೆಲವರಿಗೆ ನಿಯತಕಾಲಿಕವಾಗಿ ಆದಾಯದ ನಿರೀಕ್ಷೆ ಇದ್ದರೆ, ಕೆಲವರಿಗೆ ಹೂಡಿಕೆಯು ದೀರ್ಘಕಾಲೀನವಾಗಿ ಉತ್ತಮ ಬೆಳವಣಿಗೆಯ ನಿರೀಕ್ಷೆ, ಮತ್ತೆ ಕೆಲವರಿಗೆ ವ್ಯವಹಾರಿಕ ರೀತಿ ಚಟುವಟಿಕೆ ನಡೆಸುವ ಹಂಬಲ. ಹೀಗೆ ಹತ್ತಾರು ಚಿಂತನೆಗಳು ಪೇಟೆಗೆ ಬಹುಮುಖ ಚಾಲನೆ ನೀಡುತ್ತವೆ. ಇವುಗಳೆಲ್ಲದರ ಮಧ್ಯೆ ಸುರಕ್ಷತೆಗೆ ಆಧ್ಯತೆ ನೀಡುವುದು ಅಗತ್ಯ. ಕಾರಣ ಷೇರುಪೇಟೆಯ ಚಟುವಟಿಕೆಯ ರಭಸದಲ್ಲಿ ಭಾವನಾತ್ಮಕ ನಿರ್ಧಾರಗಳಿಗೊಳಗಾದಲ್ಲಿ ಹೂಡಿಕೆ ಹಣವು ಕರಗುವುದರ ವೇಗ ಅತಿ ಹೆಚ್ಚು.

    ವರ್ಷಾಂತ್ಯದ ಸೆನ್ಸೆಕ್ಸ್

    *2021 ರ ಜನವರಿ 1 ರಂದು ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ ನೋಂದಾಯಿತ ಗ್ರಾಹಕರ ಸಂಖ್ಯೆ 5.89 ಕೋಟಿ ಇತ್ತು. ಕಾಕತಾಳೀಯ ಎಂಬಂತೆ ಡಿಸೆಂಬರ್‌ 31 ರಂದು ಅದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಕೊನೆಯದಿನದಂದು 5.89 ಕೋಟಿಯಿದೆ. ಆದರೆ ಡಿಸೆಂಬರ್‌ 31 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.9.18 ಕೋಟಿಗೆ ಏರಿಕೆಯಾಗಿದೆ. ಅಂದರೆ ಶೇ.50 ಕ್ಕೂ ಹೆಚ್ಚಿನ ಬೆಳವಣಿಗೆಯಾಗಿದೆ. ಅಂದರೆ ನೋಂದಾಯಿತ ಗ್ರಾಹಕರ ಸಂಖ್ಯೆ ಈ ಪ್ರಮಾಣದಲ್ಲಿ ಏರಿಕೆ ಕಂಡಿರುವುದು ಪೇಟೆಯಲ್ಲಿ ವೈವಿಧ್ಯಮಯ ಚಿಂತನೆಯಿಂದ ಏರಿಳಿತಗಳನ್ನು ಕಾಣಬಹುದಾಗಿದೆ. ಈ ರಭಸದ ಏರಿಳಿತಗಳು ಸೃಷ್ಟಿ ಮಾಡುವ ಅನೇಕ ಅವಕಾಶಗಳು ಮಿಂಚಿನಂತೆ ಪ್ರತ್ಯಕ್ಷವಾಗಿ, ಸಿಡಿಲಿನಂತೆ ಮಾಯವಾಗುತ್ತಿರುವುದನ್ನು ಕಾಣುತ್ತಿದ್ದೇವೆ.

    *20ನೇ ಡಿಸೆಂಬರ್‌ 2021 ರಂದು ಸೆನ್ಸೆಕ್ಸ್‌ 1,189 ಪಾಯಿಂಟುಗಳ ಕುಸಿತ ಕಂಡಾಗ ಹೆಚ್ಚಿನ ಹೂಡಿಕೆದಾರರ ಜಂಗಾಬಲವನ್ನೇ ಕುಸಿಯುವಂತೆ ಮಾಡಿತು. ಅಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.252.57 ಲಕ್ಷ ಕೋಟಿಗೆ ಜಾರಿತ್ತು. ಅದೇ 14 ನೇ ಡಿಸೆಂಬರ್‌ ನಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.265.97 ಲಕ್ಷ ಕೋಟಿಯಲ್ಲಿತ್ತು. 29, ಡಿಸೆಂಬರ್‌ 2021 ರಂದು ಮತ್ತೆ ರೂ.266 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ನವೆಂಬರ್‌ 17,2021 ರಂದು ರೂ.271.08 ಲಕ್ಷ ಕೋಟಿಯಲ್ಲಿದ್ದ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.252.57 ಲಕ್ಷಕ್ಕೆ ಕುಸಿದು ಮತ್ತೆ ರೂ.266 ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ ಮಾರ್ಕೆಟ್‌ ನಲ್ಲಿ ವಹಿವಾಟು ಸೀಮಿತವಾದ ರೀತಿಯಲ್ಲಿ ನಡೆಯುತ್ತಿದ್ದು ಚಕ್ರಾಕಾರದ ಶೈಲಿಯಲ್ಲಿದೆ.

    *ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಆಡಳಿತ ಮಂಡಳಿಯು ಈ ತಿಂಗಳ 8 ರಂದು ಬೋನಸ್‌ ಷೇರು ವಿತರಣೆಯನ್ನು ಪರಿಶೀಲಿಸಲಿದೆ. ಈ ಕಾರಣ ಈ ಷೇರಿನ ಬೆಲೆಯು ಹೆಚ್ಚು ತೂಗುಯ್ಯಾಲೆಯಲ್ಲಿ ಏರಿಳಿತ ಕಂಡಿತು. ಇದರ ಅಂಸ ಸಂಸ್ಥೆ ಸಿ ಡಿ ಎಸ್‌ ಎಲ್‌ ಸಹ ಹೆಚ್ಚಿನ ಏರಿಳಿತ ಪ್ರದರ್ಶಿಸಿತು.

    *ಮಜ್‌ ಗಾಂವ್‌ ಡಾಕ್‌ ಶಿಪ್‌ ಬ್ಯುಲ್ಡರ್ಸ್ ಕಂಪನಿಯು ಪ್ರತಿ ಷೇರಿಗೆ ರೂ.7.10 ರ ಡಿವಿಡೆಂಡ್‌ ಘೋಷಿಸಿದೆ. ನಿಗದಿತ ದಿನಾಂಕ 7ನೇ ಜನವರಿ 2022.

    * ಈ ತಿಂಗಳಲ್ಲಿ ಟಿಸಿಎಸ್‌, ವಿಪ್ರೋ, ಹೆಚ್ ಸಿ ಎಲ್‌ ಟೆಕ್ನಾಲಜೀಸ್‌, ಇನ್ಫೋಸಿಸ್‌, ಆಕ್ಸಿಸ್‌ ಬ್ಯಾಂಕ್‌, ಎಚ್‌ ಡಿ ಎಫ್‌ ಸಿ ಬ್ಯಾಂಕ್‌, ಬಜಾಜ್‌ ಸಮೂಹದ ಕಂಪನಿಗಳು, ಡಾಕ್ಟರ್‌ ರೆಡ್ಡೀಸ್‌ ಲ್ಯಾಬ್‌ ಮುಂತಾದ ಅಗ್ರಮಾನ್ಯ ಕಂಪನಿಗಳು ತಮ್ಮ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸುವ ಕಾರ್ಯಸೂಚಿ ಘೋಷಿಸಿವೆ. ಟಿಸಿಎಸ್‌, ಎಚ್‌ ಸಿ ಎಲ್‌ ಟೆಕ್ನಾಲಜೀಸ್‌ ನಂತಹ ಕಂಪನಿಗಳು ಡಿವಿಡೆಂಡ್‌ ಘೋಷಿಸುವ ನಿರ್ಧಾರವನ್ನೂ ಸಹ ಪ್ರಕಟಿಸಿವೆ.

    ವಿಸ್ಮಯಕಾರಿ ಗುಣ:

    ಹೂಡಿಕೆ ಮಾಡುವಾಗ ಕಂಪನಿಯು ಉತ್ತಮ
    ವಲಯದಲ್ಲಿದ್ದು, ಕಂಪನಿಯ ಆಡಳಿತ ಮಂಡಳಿಯು ಹೂಡಿಕೆದಾರರ ಸ್ನೇಹಿಯಾಗಿದ್ದರೆ ಯಾವ ರೀತಿ ಕಂಪನಿಯ ಷೇರುಗಳು ಕುಸಿತದಿಂದ ಪುಟಿದೇಳಬಹುದೆಂಬುದಕ್ಕೆ ಉದಾಹರಣೆ ಇಂತಿದೆ.

    ಎವರೆಸ್ಟ್‌ ಕ್ಯಾಂಟೋ ಸಿಲಿಂಡರ್ ಲಿಮಿಟೆಡ್:‌ ಈ ಕಂಪನಿ 2005 ರಲ್ಲಿ ಪ್ರತಿ ಷೇರಿಗೆ ರೂ.160 ರಂತೆ ರೂ.10 ರ ಮುಖಬೆಲೆಯ ಆರಂಭಿಕ ಷೇರು ವಿತರಣೆ ಮಾಡಿತು. 2007 ರಲ್ಲಿ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.2 ಕ್ಕೆ ಸೀಳಲಾಯಿತು. 2008 ರಲ್ಲಿ ಷೇರಿನ ಬೆಲೆಯು ರೂ,380 ರ ಸಮೀಪಕ್ಕೆ ಜಿಗಿದಿದ್ದು 2009 ರಲ್ಲಿ ರೂ.238 ರ ಸಮೀಪದಲ್ಲಿತ್ತು. ಅಲ್ಲಿಂದ ಏಕಮುಖವಾಗಿ ಇಳಿಕೆ ಕಂಡು 2013 ರಿಂದ 2015 ರವರೆಗೂ ಹಲವು ಬಾರಿ ಏಕ ಅಂಕಿಯ ಬೆಲೆಗೆ ಕುಸಿದಿತ್ತು. 2020 ರಲ್ಲಿ ರೂ.10 ರ ಸಮೀಪವೂ ಇತ್ತು. ಈ ವರ್ಷ ಷೇರಿನ ಕನಿಷ್ಠಬೆಲೆಯು ರೂ.40 ರ ಸಮೀಪವಿದ್ದು ಶುಕ್ರವಾರದಂದು ರೂ.239 ರ ವಾರ್ಷಿಕ ಗರಿಷ್ಠಕ್ಕೆ ಜಿಗಿತ ಕಂಡು ತನ್ನ ದಶಕದ ಹಿಂದಿನ ಬೆಲೆಗಳನ್ನು ದಾಟಿ ವಿಭಿನ್ನತೆಯನ್ನು ಪ್ರದರ್ಶಿಸಿದೆ.

    • ಡಿಸೆಂಬರ್‌ ತಿಂಗಳಲ್ಲಿಯೂ ಜಿ ಎಸ್‌ ಟಿ ಸಂಗ್ರಹಣೆಯು ರೂ.1.29 ಲಕ್ಷ ಕೋಟಿಗೆ ತಲುಪಿದೆ. ಕಳೆದ ಆರು ತಿಂಗಳಿನಿಂದಲೂ ಸತತವಾಗಿ ರೂ.1.00 ಲಕ್ಷ ಕೋಟಿಗೂ ಹೆಚ್ಚು ಸಂಗ್ರಹಣೆಯಾಗುತ್ತಿದೆ.

    ಕೊನೆಯದಾಗಿ ಈಗಾಗಲೇ ಪೇಟೆಗಳು ಉತ್ತುಂಗದಲ್ಲಿರುವುದರಿಂದ, ಸಧ್ಯ ಓಮೈಕ್ರಾನ್ ಸಾಂಕ್ರಾಮಿಕವು ಹೆಚ್ಚಾಗುತ್ತಿರುವುದರಿಂದ ಅತ್ತ ಕಡೆಯೂ ಗಮನಹರಿಸಿ ಎಚ್ಚರಿಕೆಯ ವಹಿವಾಟು ನಡೆಸುವುದು ಇಂದಿನ ಅಗತ್ಯವಾಗಿದೆ. ಶುಭವಾಗಲಿ.

    ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಉಪ್ಪು ತಿಂದವನು ನೀರು ಕುಡಿಯಲೆ ಬೇಕು

    ಸುಮಾ ವೀಣಾ

    ಮಾಡಿದುದಂ ನಾವುಣ್ಣುದೆ  ಪೋಕುಮೆ– ನಾವು ಮಾಡಿದ  ಕರ್ಮಾಕರ್ಮಗಳಿಗೆ ನಾವೆ ಹೊಣೆಗಾರರು ಅದರಲ್ಲಿ ಪಾಲು ಯಾರಿಗೂ ಇಲ್ಲ  ಎಂಬರ್ಥ  ಇಲ್ಲಿದೆ. ನಾವು ಮಾಡಿದ ಅಡುಗೆಯನ್ನು ನಾವೆ ಸೇವಿಸಬೇಕು. ಉಪ್ಪು ತಿಂದವನು ನೀರು ಕುಡಿಯಲೆ ಬೇಕು ಎನ್ನುವ   ಅರ್ಥ ಇಲ್ಲಿ ಬರುತ್ತದೆ.

    ಮೂಲತಃ ಈ ಮಾತನ್ನು ಜನ್ನನ “ಯಶೋಧರಾ ಚರಿತೆ” ಕಾವ್ಯದಿಂದ  ಆರಿಸಿದೆ.  ಈ ಕಾವ್ಯವು ಯಶೋಧರ ಎಂಬ ಅಯೋಧ್ಯೆಯ ರಾಜ  ಹಾಗು ಅವನ ತಾಯಿಯಾದ ಚಂದ್ರಮತಿಯು ಒಂದು ಜನ್ಮದಲ್ಲಿ ಮಾಡುವ  ಸಂಕಲ್ಪವನ್ನು ಮಾಡಿದ್ದರಿಂದ   ನಾನಾ ಜನ್ಮಗಳನ್ನು ಎತ್ತಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗಿ ಬರುತ್ತದೆ. 

    ಅದರಲ್ಲಿ ಮಾರಿದತ್ತನ  ವರ್ಣನೆ ಸಂದರ್ಭದಲ್ಲಿ ಅಭಯರುಚಿ ಮತ್ತು ಅಭಯಮತಿಯರು ಮಾರಿದತ್ತನ  ಮುಂದೆ ಮಾರಿಗೆ  ಬಲಿಯಾಗಲು ಬಂದು ನಿಲ್ಲಬೇಕಾದ ಪ್ರಸಂಗ.  ಆ ಸಂದರ್ಭದಲ್ಲಿ  ಅಣ್ಣ ತಂಗಿಯರ ಸಂಭಾಷಣೆಯ ಸಂದರ್ಭದಲ್ಲಿ  ಅಭಯಮತಿ ಈ ಮಾತುಗಳನ್ನಾಡುತ್ತಾಳೆ.    

    ನಾವು ಮಾಡಿದ    ಕರ್ಮದ ಪ್ರತಿಫಲವನ್ನು ನಾವೆ ಸ್ವೀಕರಿಸಬೇಕು  ಅದು ಬೇರೆಯವರ ಹೆಗಲಿಗೆಣೆಯಲ್ಲ ಎಂಬುದು “ಮಾಡಿದುದಂ ನಾವುಣ್ಣುದೆ  ಪೋಕುಮೆ” ಎಂಬ ಮಾತಿನ ಮೂಲಕ ಸ್ಪಷ್ಟವಾಗಿ ಗ್ರಾಹ್ಯವಾಗುತ್ತದೆ.   ಒಳ್ಳೆಯದೆ ಆಗಲಿ ಕೆಟ್ಟದ್ದೆ ಆಗಲಿ ಎಲ್ಲವೂ ನಮ್ಮನ್ನು ನೆರಳಿನಂತೆ  ಹಿಂಬಾಲಿಸುತ್ತಿರುತ್ತದೆ.   ಹಾಗಾಗಿ  ಒಳ್ಳೆಯ ಆಲೋಚನೆ ಎಂದಿಗೂ ಕ್ಷೇಮವೆ  ಅದೇ ಕೆಟ್ಟ  ಕೆಲಸ ಮಾಡುವುದಿರಲಿ ಕೆಟ್ಟ ಆಲೋಚನೆ ಮಾಡಿದರೂ  ಅದಕ್ಕೆ ಪ್ರಾಯಶ್ಚಿತ್ತಪಡ ಬೇಕಾಗುತ್ತದೆ ಎಮಬುದು  ಈ ಮಾತಿನಿಂದ ತಿಳಿಯುತ್ತದೆ.  ಸದಾ ಒಳ್ಳೆಯ ಆಲೋಚನೆ ಒಳ್ಳೆಯ ಕೆಲಸವನ್ನೆ ಮಾಡಬೇಕು ಎಂಬುದು ಇದರ ಗೂಡಾರ್ಥ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    Omicron : ಮತ್ತೆ ಲಾಕ್ ಡೌನ್ ಸ್ಥಿತಿ ಸೃಷ್ಟಿಸದಂತೆ ಮುಖ್ಯಮಂತ್ರಿ ಮನವಿ: ಕಡ್ಡಾಯವಾಗಿ ನಿಯಮ ಪಾಲಿಸಲು ಸೂಚನೆ

    BELAGAAVI JAN 2


    ಕೊರೋನಾ ನಿಯಂತ್ರಣಕ್ಕೆ ಸರಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ..ಮತ್ತೆ ಲಾಕ್ ಡೌನ್ ಹೇರುವ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗದಿರಲು ಜನರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸಹಕರಿಸ ಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ತಿಳಿಸಿದ್ದಾರೆ.

    ಕಳೆದ ಒಂದು ವಾರದಲ್ಲಿ ಕರೋನಾ, ಒಮೈಕ್ರಾನ್ ಕೇಸ್ ಹೆಚ್ಚಾಗ್ತಿದೆ. ಮಹಾರಾಷ್ಟ್ರ ಅದರಲ್ಲಿಯೂ ಮುಂಬೈಯಲ್ಲಿ ಪ್ರಕರಣಗಳು ಹೆಚ್ಚುತ್ತಿದೆ. ಮುಂಬೈ ಮತ್ತು ಕರ್ನಾಟಕದ ವಹಿವಾಟು ಜಾಸ್ತಿಯಿರುವ ಕಾರಣ ಗಡಿಜಿಲ್ಲೆಗಳಲ್ಲಿ ಹೆಚ್ಚಿನ ಕಟ್ಟೆಚ್ಚರವನ್ನು ವಹಿಸಲು ಈಗಾಗಲೇ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.ಅವರು ಇಂದು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

    ಕೊರೋನಾ ಎದುರಿಸಲು ಸಕಲ ಸಿದ್ಧತೆ:
    ಕೊರೋನಾ ವನ್ನು ನಿರ್ಬಂಧಿಸುವ ಜೊತೆಗೆ ಕೊರೋನಾವನ್ನು ಎದುರಿಸಲು ಸಿದ್ಧತೆಯನ್ನು ಮಾಡಿಕೊಳ್ಳಬೇಕಿದೆ. ಕಳೆದ ಬಾರಿ ಸಂಭವಿಸಿದ ಆಕ್ಸಿಜನ್ ಕೊರತೆಯನ್ನು ನೀಗಿಸಲು ಸಂಬಂಧಪಟ್ಟ ಆಕ್ಸಿಜನ್ ಸರಬರಾಜು ಕಂಪನಿಗಳೊಂದಿಗೆ ಸಂಯೋಜಿಸಿ ಸಮರ್ಪಕ ಆಕ್ಸಿಜನ್ ಪೂರೈಕೆಗೆ ಕ್ರಮ ವಹಿಸಲಾಗಿದೆ. ಜಿಲ್ಲಾ ಹಾಗು ತಾಲ್ಲೂಕು ಮಟ್ಟದಲ್ಲಿರುವ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು ಮತ್ತು ಹೆಚ್ಚುವರಿ ಬೆಡ್, 4000 ಐಸಿಯುಗಳನ್ನು ಇಡೀ ರಾಜ್ಯದಲ್ಲಿ ಸಿದ್ಧಪಡಿಸಲು ಕ್ರಮ ವಹಿಸಲಾಗಿದೆ. ಸಮರ್ಪಕ ಔಷಧಿಪೂರೈಕೆಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ನೈಟ್ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚಿಸಿ ತೀರ್ಮಾನ :
    ನೈಟ್ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚಸಿ ತೀರ್ಮಾನ ಕೈಗೊಳ್ಳಲಾಗುವುದು. ಕರೋನಾ ಸ್ಥಿತಿಗತಿ, ಸಧ್ಯದಲ್ಲಿಯೇ ಕರೋನಾ ಸ್ಥಿತಿಗತಿಯನ್ನು ಪರಿಶೀಲಿಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.ಬೆಂಗಳೂರು ನಗರದಲ್ಲಿ ಕರೋನಾ ಬೆಳವಣಿಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

    ಎರಡು ಡೋಸ್ ಕಡ್ಡಾಯ ಲಸಿಕೆ ಹಾಗೂ ಆರ್ ಟಿಪಿಸಿಆರ್ ಪರೀಕ್ಷೆಯ ಪ್ರಮಾಣಪತ್ರ ಕಡ್ಡಾಯವಾಗಿ ಹೊಂದಿದವರಿಗೆ ಕರ್ನಾಟಕ ಪ್ರವೇಶಕ್ಕೆ ಅನುಮತಿಸಲಾಗುವುದು. ಬೆಳಗಾವಿ ಚೆಕ್ ಪೋಸ್ಟ್ ಜೊತೆಗೆ ಅಕ್ಕಪಕ್ಕದ ಚೆಕ್ ಪೋಸ್ಟ್ಗಳನ್ನೂ ಬಿಗಿಗೊಳಿಸಲು ಸೂಚನೆ ನೀಡಲಾಗಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಸುಮಾರು 11 ಚೆಕ್ ಪೋಸ್ಟ್ ಗಳನ್ನು ಮಾಡಲಾಗಿದೆ. ಬೆಳಗಾವಿಯಲ್ಲೂ ಚೆಕ್ ಪೋಸ್ಟ್ ಗಳನ್ನು ಮಾಡಲಾಗುವುದು. ಪ್ರಯಾಣಿಕರಿಗೆ ಸಣ್ಣಪ್ರಮಾಣದ ತೊಂದರೆಯಾದರೂ ಬೆಳಗಾವಿ ಜನರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ತಿಳಿಸಿದರು.

    ಲಸಿಕಾ ಅಭಿಯಾನ

    ಜನವರಿ 3 ರಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

    ಲಸಿಕಾಕರಣ ಕಾರ್ಯಕ್ರಮವನ್ನು ಯೋಜನಾಬದ್ಧವಾಗಿ ಶಿಸ್ತಿನಿಂದ ಕಾರ್ಯಗತಗೊಳಿಸಲು ಸೂಚನೆ ನೀಡಲಾಗಿದೆ. ಮಕ್ಕಳನ್ನು ಸುರಕ್ಷಾ ಚಕ್ರದೊಳಗೆ ತರುವ ಮಾನ್ಯ ಪ್ರಧಾನಮಂತ್ರಿಗಳ ಆಶಯದ ಈ ಕಾರ್ಯಕ್ರಮಕ್ಕೆ ಜನವರಿ 3 ರಂದು ಚಾಲನೆ ನೀಡಲಾಗುವುದು. ಜನವರಿ 10 ರಂದು ಕೊ -ಮಾರ್ಬಿಡಿಟಿ ಇರುವ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟಿರುವ ವ್ಯಕ್ತಿಗಳಿಗೆ ಲಸಿಕಾಕರಣವನ್ನು ಮಾಡಲಾಗುವುದು ಎಂದು ತಿಳಿಸಿದರು.

    ಸಹಕಾರ ವಾರಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ

    BENGALURU JAN 1

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಸಹಕಾರ ವಾರಪತ್ರಿಕೆಯ ವಿಶೇಷ ಸಂಚಿಕೆ ಹಾಗೂ 2022 ರ ಕ್ಯಾಲೆಂಡರನ್ನು ಇಂದು ಬಿಡುಗಡೆಗೊಳಿಸಿದರು.

    ಈ ಸಂದರ್ಭದಲ್ಲಿ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್, ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರೂ ಆದ ಜಿ.ಟಿ. ದೇವೇಗೌಡ, ಶಾಸಕರಾದ ಶಿವರಾಜ್ ಪಾಟೀಲ್‍, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಪ್ರಸಾದ್‍ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಎನ್. ಅರುಣ್‍ಕುಮಾರ್, ಕಾರ್ಯದರ್ಶಿಯಾದ ಲಕ್ಷ್ಮಿಪತಯ್ಯ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು

    Guest Lecturers : ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಕುರಿತು ಚರ್ಚೆ; ಮುಷ್ಕರ ಕೈಬಿಡಲು ಸಚಿವರ ಕರೆ

    BENGALURU JAN 1

    ಸರಕಾರವು ಅತಿಥಿ ಉಪನ್ಯಾಸಕರ ಪರವಾಗಿಯೇ ಇದ್ದು, ಅವರ ವೇತನವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸುತ್ತಿದೆ. ಸಂಬಂಧಿತ ಸಮಿತಿಯ ವರದಿ ಬಂದ ಕೂಡಲೇ ಸಾಧ್ಯವಿರುವ ಎಲ್ಲ ಪರಿಹಾರ ಕ್ರಮಗಳನ್ನೂ ತೆಗೆದುಕೊಳ್ಳಲಾಗುವುದು. ತಕ್ಷಣ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ.

    ಶನಿವಾರ ಇಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ  ಅವರು, “ಅತಿಥಿ ಉಪನ್ಯಾಸಕರನ್ನು ನೇರವಾಗಿ ಕಾಯಂ ಮಾಡುವುದು ಸಾಧ್ಯವಿಲ್ಲ. ಇದಕ್ಕೆ ಉಮಾದೇವಿ ಪ್ರಕರಣದ ತೀರ್ಪು ಅಡಚಣೆಯಾಗಿದೆ. ಆದರೂ ನಾವು ಅತಿಥಿ ಉಪನ್ಯಾಸಕರಿಗೆ ಕೊರೋನಾ ಸಮಯದಲ್ಲೂ ವೇತನ ಕೊಟ್ಟಿದ್ದೇವೆ. ಮುಷ್ಕರನಿರತ ಉಪನ್ಯಾಸಕರು ಇದನ್ನು ಅರ್ಥ ಮಾಡಿಕೊಳ್ಳಬೇಕು’’ ಎಂದರು.

    ಸರಕಾರಿ ಕಾಲೇಜುಗಳಲ್ಲಿ ಕಡಿಮೆ ಉಪನ್ಯಾಸಕರು ಇದ್ದ ಕಾರಣಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ. ಆದರೆ ಇವರು ಸರಕಾರದ ಗಮನಕ್ಕೆ ತಾರದೆಯೇ ಮುಷ್ಕರಕ್ಕೆ ಇಳಿದಿರುವುದು ಸರಿಯಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

    ಮೇಕೆದಾಟು- ಕಾಂಗ್ರೆಸ್ ನಾಟಕ

    ಮೇಕೆದಾಟು ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ನಾಟಕವಾಡುತ್ತಿದೆ. ಅದು ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯು ಈ ನಾಟಕದ ಒಂದು ಭಾಗವಷ್ಟೆ ಎಂದು ಸಚಿವರು ಲೇವಡಿ ಮಾಡಿದರು.

    ನೀರಾವರಿ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪರಿಣಿತರಿದ್ದಾರೆ. ಅವರು ಈ ಕ್ಷೇತ್ರದಲ್ಲಿ ಭಗೀರಥನಿದ್ದಂತೆ. ಮೇಕೆದಾಟು ವಿಚಾರದಲ್ಲಿ ಸರಕಾರದ ನಿಲುವನ್ನು ಸದನದಲ್ಲೇ ಸ್ಪಷ್ಟವಾಗಿ ತಿಳಿಸಲಾಗಿದೆ. ತಾನು ಅಧಿಕಾರದಲ್ಲಿದ್ದಾಗ ಏನನ್ನೂ ಮಾಡದ ಕಾಂಗ್ರೆಸ್, ಈಗ ಗದ್ದಲ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಹರಿಹಾಯ್ದರು.

    ಕಾಂಗ್ರೆಸ್ ಇದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದು, ಜನರನ್ನು ದಿಕ್ಕು ತಪ್ಪಿಸುತ್ತಿದೆ. ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ ಅನುಕೂಲವಾಗಲಿದ್ದು, ಸರಕಾರವು ಇದನ್ನು ಅನುಷ್ಠಾನಕ್ಕೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಕುಡಿಯುವ ನೀರಿನ ಪೂರೈಕೆ ಉದ್ದೇಶದ ಈ ಯೋಜನೆಯನ್ನು ಜಾರಿಗೆ ತರದೆ ವಿರಮಿಸುವ ಪ್ರಶ್ನೆಯೇ ಇಲ್ಲ ಎಂದು ಅಶ್ವತ್ಥನಾರಾಯಣ ಹೇಳಿದರು.

    NEPಯಿಂದ ಗ್ರಾಹಕರ ಹಿತರಕ್ಷಣೆ ಸಾಧ್ಯ: ಅಶ್ವತ್ಥನಾರಾಯಣ

    BENGALURU DEC 31

    ಗ್ರಾಹಕರ ಹಕ್ಕುಗಳು ಮತ್ತು ಅವರ ಹಿತರಕ್ಷಣೆ – ಎರಡೂ ಸಮಾಜದಲ್ಲಿ ಅತ್ಯಂತ ಮುಖ್ಯವಾಗಿದ್ದು, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇವುಗಳಿಗೆ ಒತ್ತು ಕೊಡಲಾಗಿದೆ. ಈ ಮೂಲಕ ಸಮಾಜದಲ್ಲಿ ಪರಿವರ್ತನೆಯ ಗಾಳಿ ಬೀಸುವುದಕ್ಕೆ ಅಗತ್ಯವಾದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    `ಅಖಿಲ ಭಾರತೀಯ ಗ್ರಾಹಕ ಪಂಚಾಯತಿ’ಯ ರಾಜ್ಯ ಘಟಕವು ಗಿರಿನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ  ಗ್ರಾಹಕ ಜಾಗೃತಿ ಪಕ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಬದಲಾವಣೆ ಬರಬೇಕೆಂದರೆ ಅದಕ್ಕೆ ಶಿಕ್ಷಣ ವ್ಯವಸ್ಥೆಯೇ ಆಧಾರಸ್ತಂಭವಾಗಿದೆ; ಹೀಗಾಗಿ ಎನ್ಇಪಿಯಲ್ಲಿ ಸಕಾರಾತ್ಮಕ ಮತ್ತು ಪರಿಪೂರ್ಣ ಬೆಳವಣಿಗೆಗೆ ಗಮನ ಹರಿಸಲಾಗಿದೆ. ಇದರಿಂದ ಪ್ರತಿಯೊಬ್ಬರೂ ಸಮಾಜಕ್ಕೆ ಉತ್ತರದಾಯಿಗಳಾಗಿ ಇರಲಿದ್ದಾರೆ ಎಂದರು.

    ಸಮಾಜದಲ್ಲಿ ಆಹಾರ, ಆರೋಗ್ಯ, ಶಿಕ್ಷಣ, ವಸತಿ ಮತ್ತು ವ್ಯಾಪಾರ ಈ ಐದು ಕ್ಷೇತ್ರಗಳು ಅತ್ಯಂತ ಪ್ರಮುಖವಾಗಿವೆ. ಎಬಿಜಿಪಿ ಸಂಸ್ಥೆಯ ರಾಜ್ಯ ಘಟಕವು ಸಕ್ರಿಯವಾಗಿದೆ. ಆದರೆ, ಒಂದು ವ್ಯವಸ್ಥೆಯಾಗಿ ನಾವು ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ವಿಚಾರದಲ್ಲಿ ತುಂಬಾ ಹಿಂದಿದ್ದೇವೆ. ಜನಹಿತದ ಈ ಕಾರ್ಯಕ್ಕೆ ಸಂಘಸಂಸ್ಥೆಗಳು ಕೈಜೋಡಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

    ಸಮಾಜದ ಬಗ್ಗೆ ಕಳಕಳಿಯುಳ್ಳವರ ಆಗ್ರಹಕ್ಕೆ ಮಣಿದೇ ಸರಕಾರಗಳು ಗ್ರಾಹಕ ರಕ್ಷಣಾ ಕಾಯ್ದೆಯನ್ನು ತಂದಿವೆ. ಸಂಸ್ಥೆಯು ಈ ನಿಟ್ಟಿನಲ್ಲಿ ಯಾವುದಾದರೂ ಯೋಜನೆಯನ್ನು ರೂಪಿಸಿದ್ದರೆ ಸರಕಾರವು ಅದಕ್ಕೆ ಅಗತ್ಯ ಬೆಂಬಲ ನೀಡಲಿದೆ ಎಂದು ಸಚಿವರು ನುಡಿದರು.

    ಸಮಾರಂಭದಲ್ಲಿ ಎಬಿಜಿಪಿ ಅಧ್ಯಕ್ಷ ನಾರಾಯಣಭಾಯ್, ದತ್ತಾತ್ರಿ ನಾಡಿಗೇರ್, ನ್ಯಾಷನಲ್ ಲಾ ಸ್ಕೂಲ್ ಸಂಸ್ಥೆಯ ಡಾ.ಅಶೋಕ್ ಪಾಟೀಲ್, ಡಾ.ಕಿಶೋರ್ ಮುಂತಾದವರು ಉಪಸ್ಥಿತರಿದ್ದರು.

    Omicron:ಒಮೈಕ್ರಾನ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ

    BENGALURU DEC 31

    ಒಮೈಕ್ರಾನ್ ಪ್ರಕರಣಗಳನ್ನು ನಿಯಂತ್ರಣಗೊಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ಆರೋಗ್ಯ ಮೂಲಸೌಕರ್ಯಗಳಾದ ಔಷಧಿ, ಐಸಿಯು ಬೆಡ್‍ಗೆ ಸಂಬಂಧಿಸಿದಂತೆ ಇನ್ನು ಹೆಚ್ಚಿನ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

    ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಷಯ ತಿಳಿಸಿದರು.ಇಡೀ ದೇಶದಲ್ಲಿಯೇ ಒಮೈಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ದೇಶದ 8 ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು ಒಂದು ಎಂದು ಕೇಂದ್ರಸರ್ಕಾರ ಗುರುತಿಸಿದೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ಹೇಳಿದರು.

    ಹಿಂದೂ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಹಿಂದೂ ದೇವಸ್ಥಾನಗಳನ್ನು ಸರ್ಕಾರದ ಕಟ್ಟುಪಾಡುಗಳಿಂದ ಮುಕ್ತಮಾಡುತ್ತಿದ್ದೇವೆ, ಡಿ.ಕೆ.ಶಿವಕುಮಾರ್ ರವರ ಹೇಳಿಕೆಯು ಹಿಂದೂ ದೇವಸ್ಥಾನ ಹಾಗೂ ಹಿಂದೂ ಭಕ್ತರ ವಿರುದ್ಧ ಅವರಿಗಿರುವ ಮನೋಭಾವ ವ್ಯಕ್ತ ಪಡಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

    error: Content is protected !!