21.7 C
Karnataka
Tuesday, November 26, 2024
    Home Blog Page 35

    ಬದಲಾವಣೆ ಬಗ್ಗೆ ಚಿಂತಿಸದೇ, ನೀವೇ ಬದಲಾವಣೆ ತನ್ನಿ : ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳ ಸಲಹೆ

    BENGALURU DEC 31

    ಜನಸ್ಪಂದನೆಯ ದೃಷ್ಟಿಯಿಂದ ನಮ್ಮ ಸರ್ಕಾರ ತೆಗೆದುಕೊಳ್ಳುವ ದಿಟ್ಟ ನಿರ್ಧಾರಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ಜಿಲ್ಲೆಗಳಲ್ಲಿ ಉತ್ತಮ ಆಡಳಿತವನ್ನು ನೀಡಲು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿ, ಬದಲಾವಣೆ ಬಗ್ಗೆ ಚಿಂತಿಸದೇ, ನೀವೇ ಬದಲಾವಣೆ ತನ್ನಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ-Basavaraja Bommai- ಅವರು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.

    ಇಂದು ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

    ಒಂದು ತಿಂಗಳಲ್ಲಿ 14 ಲಕ್ಷ ರೈತರಿಗೆ ಪರಿಹಾರ:ಸರ್ಕಾರ ಜನರ ಸಮಸ್ಯೆಗಳಿಗೆ ಧಾವಿಸುವ ಮೂಲಕ ತನ್ನ ಜೀವಂತಿಕೆಯನ್ನು ಮೆರೆಯುತ್ತದೆ. ಅಕಾಲಿಕ ಮಳೆಯಿಂದುಂಟಾದ ಬೆಳೆಹಾನಿಗೆ ಪರಿಹಾರ ಆ್ಯಪ್ ಮೂಲಕ 48 ಗಂಟೆಯೊಳಗೆ ಬೆಳೆ ಪರಿಹಾರ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಕಾರ್ಯಕ್ಷಮತೆಯಿಂದ ಶೇ.83 ರಷ್ಟು ಪರಿಹಾರ ರೈತರಿಗೆ ನೀಡಲು ಸಾಧ್ಯವಾಗಿದೆ. ಸಂಕಷ್ಟಗಳು, ರಾಜ್ಯ ಸರ್ಕಾರದ ತೀರ್ಮಾನ ಹಾಗೂ ಜಿಲ್ಲಾಡಳಿತದ ಕ್ರಿಯಾಶೀಲತೆಯಿಂದ ಜನರ ಸಮಸ್ಯೆಗಳಿಗೆ ಪರಿಹಾರ ನೀಡಬಹುದು. ಒಂದು ತಿಂಗಳಲ್ಲಿ 14 ಲಕ್ಷ ರೈತರಿಗೆ ಪರಿಹಾರ ನೀಡಿರುವು ಗಣನೀಯ ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸವಾಲುಗಳನ್ನು ಒಗ್ಗಟ್ಟಾಗಿ ಎದುರಿಸಿ, ತಂಡ ಸ್ಫೂರ್ತಿಯಿಂದ ಕೆಲಸ ಮಾಡಬೇಕು. ಕೋವಿಡ್‍ನ ಸಂದರ್ಭದಲ್ಲಿ ಜಿಲ್ಲಾಡಳಿತ ಅತ್ಯಂತ ಜಾಗರೂಕತೆ ಹಾಗೂ ಕ್ರಿಯಾಶೀಲತೆಯಿಂದ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

    ಬಾಕಿ ಇರುವ ನ್ಯಾಯಾಲಯ ಪ್ರಕರಣಗಳು :5 ವರ್ಷಗಳಿಂದ ಬಾಕಿ ಇರುವ ಜಮೀನು ವ್ಯಾಜ್ಯ ಹಾಗೂ ನ್ಯಾಯಾಲಯ ಪ್ರಕರಣಗಳು ರೈತರ ಆರ್ಥಿಕ ಸ್ಥಿತಿಗತಿಯನ್ನು ನಿರ್ಧರಿಸುತ್ತದೆ. ತಹಶೀಲ್ದಾರ, ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಬಾಕಿಯಿರುವ ಕೋರ್ಟ್ ಪ್ರಕರಣಗಳು ಶೀಘ್ರದಲ್ಲಿ ಇತ್ಯರ್ಥವಾಗಬೇಕು. ಇದಕ್ಕೆ ಅವಶ್ಯಕತೆಯಿದ್ದಲ್ಲಿ ಹೆಚ್ಚುವರಿ ತಹಶೀಲ್ದಾರ್, ಉಪವಿಭಾಗಾಧಿಕಾರಿಗಳ ನಿಯೋಜನೆಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಒಟ್ಟಾರೆ ಕನಿಷ್ಟ ಒಂದು ವರ್ಷದೊಳಗೆ ಎಲ್ಲಾ ನ್ಯಾಯಾಲಯ ಪ್ರಕರಣಗಳು ವಿಲೇವಾರಿ ಆಗಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.

    ವಾಲುಗಳಿಗೆ ಸಕಾರಾತ್ಮಕ ಪರಿಹಾರ :ಗೋಮಾಳ, ಬಗರಹುಕಂ, ಡೀಮ್ಡ್ ಅರಣ್ಯ ಪ್ರದೇಶಗಳ ವ್ಯಾಜ್ಯಗಳಿಗೆ ಕಾನೂನು ಪರಿಹಾರ ನೀಡಬೇಕು. ಇದರಿಂದಾಗಿ ಜನರು ಅನಿಶ್ಚಿತತೆಯ ಬದುಕು ಬದುಕುತ್ತಿದ್ದಾರೆ. ಇದಕ್ಕಾಗಿ ಸರ್ಕಾರ ನಿಶ್ಚಿತವಾದ, ಸ್ಪಷ್ಟವಾದ ಆಡಳಿತ, ಗೊಂದಲಗಳಿಲ್ಲದ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಜಿಲ್ಲಾಧಿಕಾರಿಗಳು ಸವಾಲುಗಳಿಗೆ ಸ್ಪಷ್ಟತೆಯಿಂದ ಸಕಾರಾತ್ಮಕವಾದ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದರು.

    ಸಹಾನುಭೂತಿಯಿಂದ ಬಡವರ ಕೆಲಸ

    ಉತ್ತಮ ಸ್ಪಂದನೆ ಹಾಗೂ ಸಕಾರಾತ್ಮಕ ಮನೋಭಾವದಿಂದ ಸರ್ಕಾರದ ಕಾರ್ಯಕ್ರಮಗಳನ್ನು ಜನರ ಬಳಿಗೆ ಕೊಂಡೊಯ್ಯಬೇಕು. ಅಧಿಕಾರಕ್ಕೆ ಹೊಣೆಗಾರಿಕೆ ಇರುತ್ತದೆ. ಜಿಲ್ಲೆಗಳಲ್ಲಿ ಕಾರ್ಯಕ್ರಮಗಳ ಪ್ರಗತಿ ಬಗ್ಗೆ ಪ್ರತಿ ತಿಂಗಳು ತಪ್ಪದೇ ವರದಿ ಮಾಡಬೇಕು ಎಂದು ಸೂಚಿಸಿದರು.

    ಬಡವರ ಕೆಲಸವನ್ನು ಸಹಾನುಭೂತಿಯಿಂದ ಮಾಡಬೇಕು. ಎಸ್‍ಸಿ, ಎಸ್ ಟಿ, ಓಬಿಸಿ ಹಾಗೂ ಮಹಿಳಾ ಮತ್ತು ಮಕ್ಕಳ ಕಾರ್ಯಕ್ರಮಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಬೇಕು. ಜಿಲ್ಲಾಡಳಿತದ ಉತ್ತಮ ಕಾರ್ಯಗಳಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಕಾನೂನಿನ ವ್ಯಾಪ್ತಿಯಲ್ಲಿ ಸಕಾರಾತ್ಮಕ ನಿರ್ಧಾರಗಳನ್ನು ತೆಗೆದುಕೊಂದು , ಜಿಲ್ಲೆಯಲ್ಲಿ ನಿಮ್ಮದೇ ಹೆಜ್ಜೆಗುರುತುಗಳನ್ನು ಮೂಡಿಸಿ ಎಂದು ತಿಳಿಸಿದರು. ನಿಮ್ಮ ಎಲ್ಲ ಉತ್ತಮ ಕೆಲಸಗಳಿಗೆ ನಮ್ಮ ಬೆಂಬಲ ಇರುತ್ತದೆ. ಆದರೆ ದುರುದ್ದೇಶಪೂರಿತ ನಡೆ, ನಡವಳಿಕೆಗೆ ಬೆಂಬಲ ಇಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

    ಜಿಲ್ಲಾಧಿಕಾರಿಗಳು ಕೇವಲ, ಸರ್ಕಾರದ ಅಥವಾ ಸಚಿವಾಲಯದ ಪ್ರತಿನಿಧಿಗಳಷ್ಟೇ ಅಲ್ಲ. ತಳಹಂತದ ವ್ಯವಸ್ಥೆ, ಜನತೆ, ಅವರಸಮಸ್ಯೆಯ ಭಾಗವಾಗಿಯೂ ಕಾರ್ಯನಿರ್ವಹಿಸಬೇಕು. ಜಿಲ್ಲಾ ಮುಖ್ಯಸ್ಥರ ಹೊಣೆಯೊಂದಿಗೆ ತಳಹಂತದ ಜನರ ಸೇವೆಯ ಜವಾಬ್ದಾರಿಯೂ ನಿಮ್ಮದಾಗಿದೆ ಎಂದು ತಿಳಿಸಿದರು.

    ನಿಮಗೆ ಹೆಚ್ಚಿನ ವಿವೇಚನಾ ಅಧಿಕಾರವಿದ್ದು, ಜವಾಬ್ದಾರಿಯೂ ಹೆಚ್ಚಿದೆ. ಬಡವರ ಹಿತಕ್ಕಾಗಿ ನಿಮ್ಮ ವಿವೇಚನಾಧಿಕಾರವನ್ನು ಬಳಸಿ. ಅಧಿಕಾರ ನಿಮ್ಮನ್ನು ವಿನಮ್ರರನ್ನಾಗಿಸಬೇಕು. ನ್ಯಾಯಾಲಯ ವಿಷಯಗಳಲ್ಲಿ ನಿಮ್ಮ ವಿವೇಚನೆಯನ್ನು ಕಾನೂನು ಪ್ರಕಾರ ಬಳಸುವಂತೆ ತಿಳಿಸಿದರು.

    ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿ, ತಹಸೀಲ್ದಾರರ ಪಾತ್ರವನ್ನು ಹಾಗೂ ಕಾರ್ಯನಿರ್ವಹಣೆಯನ್ನು ಅರಿತು ಕಾರ್ಯ ಹಂಚಿಕೆ ಮಾಡಿದರೆ, ಜಿಲ್ಲಾಧಿಕಾರಿಗಳ ಹೊರೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

    ಸಭೆಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ ಅವರು, ಜಿಲ್ಲೆಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ತಪ್ಪದೇ ನಡೆಯಬೇಕು. ಜಿಲ್ಲಾಧಿಕಾರಿಗಳು ತಿಂಗಳಲ್ಲಿ ಒಂದು ದಿನ ಕಡ್ಡಾಯವಾಗಿ ಒತ್ತುವರಿ ತೆರವು ಕಾರ್ಯಕ್ಕಾಗಿ ಮೀಸಲಿಡಬೇಕು. ಬಡವರ ಪರ ಕೆಲಸ ಮಾಡುವಾಗ ನಕಾರಾತ್ಮಕ ಚಿಂತನೆ ಬೇಡ ಎಂದು ತಿಳಿಸಿದರು.

    ಜನವರಿ 26 ರಂದು ಜನರ ಬಾಗಿಲಿಗೆ ಸರ್ಕಾರ ಸವಲತ್ತು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ರೈತರ ಮನೆಬಾಗಿಲಿಗೆ ದಾಖಲಾತಿಗಳನ್ನು ನೀಡುವ ವಿನೂತನ ಕಾರ್ಯಕ್ರಮವಾಗಿದೆ. ಜಿಲ್ಲಾಧಿಕಾರಿಗಳು ಒಂದು ದಿನದ ಅವಧಿಯಲ್ಲಿ ತಮ್ಮ ವ್ಯಾಪ್ತಿಗೆ ಬರುವ ರೈತರ ದಾಖಲಾತಿಗಳನ್ನು ಅವರ ಮನೆಬಾಗಿಲಿಗೆ ನೀಡುವ ಕಾರ್ಯಕ್ರಮವನ್ನು ಉತ್ತಮವಾಗಿ ನಿರ್ವಹಿಸಬೇಕು ಎಂದರು.

    ಗ್ರಾಮವಾಸ್ತವ್ಯ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮಗಳನ್ನು ಮುಂದುವರಿಸಬೇಕು. ಜಿಲ್ಲಾಧಿಕಾರಿಗಳಿಗೆ ಹಲವು ಯೋಜನೆಗಳಲ್ಲಿ ಸೂಚಿಸಿರುವ ಗುರಿಗಳನ್ನು ತಲುಪಬೇಕು ಎಂದು ತಿಳಿಸಿ , ಬೆಳೆಪರಿಹಾರ ವಿತರಿಸುವಲ್ಲಿ ಜಿಲ್ಲಾಡಳಿತ ತೋರಿದ ದಕ್ಷತೆಯನ್ನು ಕಂದಾಯ ಸಚಿವರು ಪ್ರಶಂಸಿಸಿದರು

    ಸಭೆಯಲ್ಲಿ ಸಚಿವ ಸಂಪುಟದ ಇತರ ಸದಸ್ಯರು, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    BMTC ಬಸ್ ನಲ್ಲಿ ಸುರೇಶ್ ಕುಮಾರ್ ಸಂಚಾರಕ್ಕೆ ಮೆಚ್ಚುಗೆ

    BENGALURU DEC 31

    ಇಂದು ಮುಂಜಾನೆಯೇ ಬೆಂಗಳೂರು ನಗರದಿಂದ ಮಾಗಡಿ ರಸ್ತೆಯಲ್ಲಿ ಬಿಎಂಟಿಸಿ ಬಸ್ ಮೂಲಕ ಸಂಚರಿಸಿ ಸರಳತೆಯನ್ನು ಮೆರೆದ ಮಾಜಿ ಸಚಿವ ಸುರೇಶ್ ಕುಮಾರ್-sureshkumar- ಅವರ ನಡೆಗೆ ಸಾರ್ವಜನಿಕರಿಂದ‌ ವ್ಯಾಪಕ ಮೆಚ್ಚುಗೆ‌ ವ್ಯಕ್ತವಾಗಿದೆ.

    ಬಸವೇಶ್ವರ ನಗರದ ತಮ್ಮ ಮನೆಯಿಂದ ಮಾಗಡಿ ರಸ್ತೆಯ ಸುಮನಹಳ್ಳಿ ಬಸ್ ನಿಲ್ದಾಣದವರೆಗೂ ಒಬ್ಬರೇ ನಡೆದು ಬಂದು ಅಲ್ಲಿಂದ ತಮ್ಮೊಬ್ಬ ಸ್ನೇಹಿತರೊಂದಿಗೆ ಬಿ.ಎಂ.ಟಿ.ಸಿ ಬಸ್ ಹತ್ತಿದ ಅವರು ತಾವರೆಕೆರೆಯವರೆಗೂ ಬಸ್ ನಲ್ಲಿ ಸಂಚರಿಸಿ ಬಸ್ ಪ್ರಯಾಣಿಕರ ಕುಶಲೋಪರಿ ವಿಚಾರಿಸಿದ್ದಾರೆ.

    ನಿರ್ವಾಹಕರು ಬೇಡವೆಂದರೂ ಕೇಳದೇ ತಮ್ಮ ಜೊತೆಗಿದ್ದ ಒಬ್ಬರೇ ಸ್ನೇಹಿತರದ್ದೂ ಸೇರಿದಂತೆ ತಲಾ ಇಪ್ಪತ್ತು ರೂಪಾಯಿ‌ ಕೊಟ್ಟು ಟಿಕೇಟು ಪಡೆದು ಮಾದರಿಯಾಗಿದ್ದಾರೆ. ತಮ್ಮೊಂದಿಗೆ ಅಂಗರಕ್ಷಕರನ್ನು ಸಹ ಕರೆದೊಯ್ಯದೇ ತಮ್ಮ ಎಂದಿನ ಸರಳ ನಡೆಯನ್ನು ಅವರು‌ ಅನುಸರಿಸಿದ್ದಾರೆ.

    ಬೆಂಗಳೂರಿನಲ್ಲಿ ವ್ಯಂಗ್ಯಚಿತ್ರ ಉತ್ಸವ

    ಸಂಕೇತದತ್ತ

    2022ರ ಹೊಸ ವರ್ಷದ ಮೊದಲ ದಿನವೇ ಬೆಂಗಳೂರಿನ ಟ್ರಿನಿಟಿ ವೃತ್ತದಲ್ಲಿರುವ ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಈ ವ್ಯಂಗ್ಯಚಿತ್ರ ಉತ್ಸವವು ಬೆಳಗ್ಗೆ 11ಕ್ಕೆ ಉದ್ಘಾಟನೆಯಾಗಲಿದೆ. ಇಲ್ಲಿ ಪ್ರದರ್ಶನವಾಗುತ್ತಿರುವ ದೊಡ್ಡ ಅಳತೆಯ ಕ್ಯಾರಿಕೇಚರ್ (ವ್ಯಂಗ್ಯ ಭಾವಚಿತ್ರ) ಗಳ ಪ್ರದರ್ಶನವು ಜನವರಿ 22ರವರೆಗೂ ಸಾರ್ವಜನಿಕರ ವೀಕ್ಷಣೆಗಾಗಿ ತೆರೆದಿರುತ್ತದೆ.


    ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಹಾಗೂ ಚತ್ತೀಸ್‍ಗಢದ ಕಾರ್ಟೂನ್ ವಾಚ್' ಮಾಸಪತ್ರಿಕೆಯ ಸಹಯೋಗದಲ್ಲಿ ಈವ್ಯಂಗ್ಯಚಿತ್ರ ಉತ್ಸವ-2022′ ನಡೆಯುತ್ತಿದೆ. ಇದರ ಉದ್ಘಾಟನೆಯನ್ನು `ಕಾರ್ಟೂನ್ ವಾಚ್’ ಕಾರ್ಟೂನ್ ಪತ್ರಿಕೆಯ ಸಂಪಾದಕರಾದ ತ್ರಿಯಂಬಕ ಶರ್ಮ ಅವರು ನಡೆಸಿ ಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ನಾಡಿನ ನಾಲ್ಕು ಹಿರಿಯ ವ್ಯಂಗ್ಯಚಿತ್ರಕಾರರಿಗೆ ಜೀವನಮಾನದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

    ದೊಡ್ಡ ಅಳತೆಯ ಕ್ಯಾರಿಕೇಚರ್ ಗಳ ಪ್ರದರ್ಶನ!
    ಈ ವ್ಯಂಗ್ಯಚಿತ್ರ ಉತ್ಸವದ ಅಂಗವಾಗಿ ದೇಶದಲ್ಲೇ ಅಪರೂಪದ ಒಂದು ಪ್ರಯೋಗಕ್ಕೆ ನಾಡಿನ ವ್ಯಂಗ್ಯಚಿತ್ರಕಾರರು ಮುಂದಾಗಿದ್ದಾರೆ. ಎರಡು ಅಡಿ ಅಗಲ ಹಾಗೂ 3 ಅಡಿ ಉದ್ದದ ಕಪ್ಪು-ಬಿಳುಪಿನ ಕ್ಯಾರಿಕೇಚರ್ ಪ್ರದರ್ಶನಗೊಳ್ಳಲಿವೆ.

    ಇದರಲ್ಲಿ ನಾಡಿನ ಹೆಸರಾಂತ 21 ವ್ಯಂಗ್ಯಚಿತ್ರಕಾರರಾದ ಬಿ ಜಿ ಗುಜ್ಜಾರಪ್ಪ, ವೈ ಎಸ್ ನಂಜುಂಡಸ್ವಾಮಿ, ರಾ ಸೂರಿ, ಸತೀಶ್ ಆಚಾರ್ಯ, ಚಂದ್ರನಾಥ್ ಆಚಾರ್ಯ, ಜಿ ಎಸ್ ನಾಗನಾಥ್, ರಘುಪತಿ ಶೃಂಗೇರಿ, ಮನೋಹರ್ ಆಚಾರ್ಯ, ಜೈರಾಮ್ ಉಡುಪ, ಜೀವನ್ ಶೆಟ್ಟಿ, ಜೇಮ್ಸ್ ವಾಜ್ , ಸುಭಾಶ್‍ಚಂದ್ರ, ರವಿ ಪೂಜಾರಿ, ಯತೀಶ್ ಸಿದ್ದನಕಟ್ಟೆ, ಚಂದ್ರಗಂಗೊಳ್ಳಿ, ಸಂಕೇತ್ ಗುರುದತ್ತ, ಸತೀಶ್ ಬಾಬು, ಶೈಲೇಶ್ ಉಜಿರೆ, ಗೀಚಾ ಬೋಳ್ಕಟ್ಟೆ, ಪ್ರಸನ್ನ ಕುಮಾರ್, ಎಂ ಎನ್ ದತ್ತಾತ್ರಿ ಭಾಗವಹಿಸುತ್ತಿದ್ದು ಒಟ್ಟು 42 ಕ್ಯಾರಿಕೇಚರ್ ಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ.

    ನಾಲ್ವರು ವ್ಯಂಗ್ಯಚಿತ್ರಕಾರರಿಗೆ ಜೀವನಮಾನದ ಪ್ರಶಸ್ತಿ ಪ್ರದಾನ

    ನಾಡಿನ ಪ್ರಸಿದ್ಧ ವ್ಯಂಗ್ಯಚಿತ್ರಕಾರರಾದ ಕೆ ಆರ್ ಸ್ವಾಮಿ, ವಿ ಜಿ ನರೇಂದ್ರ, ಬಿ ಜಿ ಗುಜ್ಜಾರಪ್ಪ (ಗುಜ್ಜಾರ್) ಹಾಗೂ ಜಿ ಎಸ್ ನಾಗನಾಥ್ ಅವರುಗಳು ಈ ಜೀವನಮಾನದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ನಾಲ್ವರು ಹಿರಿಯ ಕಲಾವಿದರ ಕಿರು ಪರಿಚಯವು ಹೀಗಿವೆ.

    ಕೆ ಆರ್ ಸ್ವಾಮಿ :ಕನ್ನಡ ನಾಡು ಕಂಡ ಖ್ಯಾತ ವ್ಯಂಗ್ಯಚಿತ್ರಕಾರರಲ್ಲಿ ಕೆ ಆರ್ ಸ್ವಾಮಿ ಅವರು ಅಗ್ರಪಂಕ್ತಿಯಲ್ಲಿದ್ದಾರೆ. ಇವರು ಇತ್ತೀಚಿಗಷ್ಟೇ 82ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಯೋಮಾನದಲ್ಲೂ ತಮ್ಮ ನೆಚ್ಚಿನ ಹವ್ಯಾಸವಾದ ಕಾರ್ಟೂನ್ ರಚನೆಯನ್ನು ಮಾತ್ರ ಬಿಟ್ಟಿಲ್ಲ. ವೃತ್ತಿಯಲ್ಲಿ ಇಂಜಿನಿಯರ್, ಕರ್ನಾಟಕ ವಿದ್ಯುನ್ಮಂಡಲಿಯಲ್ಲಿ 32 ವರ್ಷಗಳು ಸೇವೆ ಸಲ್ಲಿಸಿದ್ದಾರೆ. ವೃತ್ತಿಯಿಂದ ನಿವೃತ್ತಿ ಹೊಂದಿದ್ದರೂ ಪ್ರವೃತ್ತಿಯಲ್ಲಿನ ಉತ್ಸಾಹ ಮಾತ್ರ ಇಮ್ಮಡಿಗೊಂಡಿದೆ. ಸತತ ನಾಲ್ಕೈದು ದಶಕಗಳಿಂದ ಕಾರ್ಟೂನ್ ರಚನೆಯಲ್ಲಿ ತೊಡಗಿರುವ ಸ್ವಾಮಿ ಅವರು ಈಗಲೂ ಲವಲವಿಕೆಯಿಂದ ಇದ್ದಾರೆಂದರೆ ಅದಕ್ಕೆ ಈ ನಗೆ ಗುಳಿಗೆಯೆ ಸಿದ್ಧೌಷಧಿ ಎನ್ನಲಡ್ಡಿಯಿಲ್ಲ.

    ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಇವರ ಕಾರ್ಟೂನ್ ಗಳು ಪ್ರಕಟಗೊಂಡಿವೆ. ಆಗಿನ ಕಾಲದಿಂದ ಹಿಡಿದು ಈ ಕಾಲಘಟ್ಟದವರಗೂ ಇವರು ವ್ಯಂಗ್ಯಚಿತ್ರಗಳನ್ನು ರಚಿಸುತ್ತಿದ್ದಾರೆ. ಪೆನ್ನು-ಪೇಪರ್ ನಿಂದ ಆರಂಭಗೊಂಡ ಇವರ ವ್ಯಂಗ್ಯಚಿತ್ರದ ಅಭ್ಯಾಸ ತಂತ್ರಜ್ಞಾನ ಯುಗದಲ್ಲೂ ಅಷ್ಟೇ ಸ್ಪಷ್ಟ ಹಾಗೂ ವಿಭಿನ್ನವಾಗಿ ಮೂಡಿ ಬರುತ್ತಿದೆ. ಇವರ ಕಾರ್ಟೂನ್‍ಗಳಲ್ಲಿ ಮಾತಿಗಿಂತ ಚಿತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವುದು ಇವರ ವಿಶೇಷತೆ. ಕೆ ಆರ್ ಸ್ವಾಮಿ ಅವರು ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ಮಾವ(ಅಮ್ಮನ ತಮ್ಮ). ಸ್ವಾಮಿ ಅವರ ಕತೆ ಹೇಳುವ ಶೈಲಿಯನ್ನು ಕಾಸರವಳ್ಳಿ ಅವರು ಮೆಚ್ಚುತ್ತಾರೆ ಅಲ್ಲದೆ ತಮ್ಮ ಕೆಲವು ಚಿತ್ರಗಳಲ್ಲಿ ಸ್ವಾಮಿ ಅವರ ವ್ಯಂಗ್ಯಚಿತ್ರದ ವಸ್ತುಗಳನ್ನು ಬಳಸಿಕೊಂಡಿದ್ದಾರಂತೆ!

    ಇಳಿವಯಸ್ಸಲ್ಲೂ ಉತ್ಸಾಹದ ಚಿಲುಮೆಯಂತೆ ಸದಾ ಚಟುವಟಿಕೆಯಲ್ಲಿರುವ ಸ್ವಾಮಿ ಅವರು ತಮ್ಮ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಈ ದಿನಮಾನಕ್ಕೂ ಹೊಂದಿಕೊಂಡಿದ್ದಾರೆ.

    ವಿ.ಜಿ. ನರೇಂದ್ರ: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ರೂವಾರಿ ವಿ.ಜಿ. ನರೇಂದ್ರ ಅವರಿಗೆ ಶಾಲಾ ದಿನಗಳಲ್ಲೇ ವ್ಯಂಗ್ಯಚಿತ್ರ ಕಲೆಯ ಗೀಳು ಅಂಟಿಕೊಂಡಿತ್ತು. ಇವರನ್ನು ಮೊದಲು ಆಕರ್ಷಿಸಿದ್ದು ಖ್ಯಾತ ವ್ಯಂಗ್ಯಚಿತ್ರಕಾರ ಶಂಕರ್ ಅವರ ವ್ಯಂಗ್ಯಚಿತ್ರಗಳು. 1965ರಲ್ಲಿ ಇವರ ಮೊದಲ ವ್ಯಂಗ್ಯಚಿತ್ರ ಕರ್ಮವೀರ' ವಾರಪತ್ರಿಕೆಯಲ್ಲಿ ಪ್ರಕಟವಾಯ್ತು. ಅಲ್ಲಿಂದ ವ್ಯಂಗ್ಯಚಿತ್ರ ರಚನೆಯು ಆರಂಭವಾಯ್ತು. ವಿಜ್ಞಾನದ ಪದವಿಯ ನಂತರ ವೃತ್ತಿಗಾಗಿ ಮುಂಬೈ ಸೇರಿದರು. ಅಲ್ಲಿ ಇಲ್ಲಸ್ಟ್ರೇಡೆಡ್ ವೀಕ್ಲಿ ಆಫ್ ಇಂಡಿಯಾ, ಧರ್ಮಯುಗ ಮತ್ತಿತರ ಪತ್ರಿಕೆಗೆ ವ್ಯಂಗ್ಯಚಿತ್ರಗಳನ್ನು ಬರೆದರು. ಆನಂತರ ಭಾರತದ ಪ್ರಥಮ ಕಾಮಿಕ್ ಫೀಚರ್ ಸಿಂಡಿಕೇಟ್,ರಂಗ ರೇಖಾ ಫೀಚರ್ಸ್’ ಸೇರಿದರು. ಇವರ ರಿಪೋರ್ಟರ್ ಸಂಜು' ಉದಯವಾಣಿ ಸೇರಿದಂತೆ ಭಾರತದ ಬೇರೆ ಬೇರೆ ಭಾಷೆಗಳ 15 ದಿನಪತ್ರಿಕೆಗಳಲ್ಲಿ ಪ್ರಕಟವಾಗಲು ಪ್ರಾರಂಭವಾಯ್ತು. ಮುಂದೆಫ್ರೀ ಪ್ರೆಸ್ ಜರ್ನಲ್’ ಪತ್ರಿಕೆಯಲ್ಲಿ ರಾಜಕೀಯ ವ್ಯಂಗ್ಯಚಿತ್ರ ಬರೆಯಲು ಅವಕಾಶವಾಯ್ತು. ಅಲ್ಲಿ ಬರೆದ ವ್ಯಂಗ್ಯಚಿತ್ರಗಳು ಭಾರತದ ವ್ಯಂಗ್ಯಚಿತ್ರ ಪಿತಾಮಹ ಶಂಕರ್ ಅವರ ಗಮನ ಸೆಳೆದವು ಅಲ್ಲದೇ ಮೆಚ್ಚಿಕೊಂಡು ನರೇಂದ್ರ ಅವರನ್ನು ‘ಶಂಕರ್ಸ್ ವೀಕ್ಲಿ’ ಸೇರಲು ಅಹ್ವಾನಿಸಿದರು. 1973ರಲ್ಲಿ ಅವರು ‘ಶಂಕರ್ಸ್ ವೀಕ್ಲಿ’ ಸೇರಿದರು. ಇದು ಅವರ ಬದುಕಿನಲ್ಲಿ ದೊರೆತ ದೊಡ್ಡ ತಿರುವು. ಶಂಕರ್ಸ್ ವೀಕ್ಲಿ' ಪ್ರಕಟಣೆ ನಿಂತ ನಂತರ ನರೇಂದ್ರ ಅವರು ಬೆಂಗಳೂರಿಗೆ ಬಂದುಸಂಯುಕ್ತ ಕರ್ನಾಟಕ’ದಲ್ಲಿ 11 ವರ್ಷಗಳು ಸ್ಟಾಫ್ ವ್ಯಂಗ್ಯಚಿತ್ರಕಾರರಾದರು. ನಂತರದಲ್ಲಿ `ಕನ್ನಡ ಪ್ರಭ’ ಸೇರಿ 20 ವರ್ಷಗಳು ಸುದೀರ್ಘ ಸೇವೆಯ ನಂತರ 2007ರಲ್ಲಿ ನಿವೃತ್ತಿಯಾದರು.


    1977ರಲ್ಲಿ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ ಸ್ಥಾಪನೆಯಾದಾಗ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಪಡೆದ ನರೇಂದ್ರ ಅವರು 1978ರಲ್ಲಿ ಅದರ ಅಧ್ಯಕ್ಷರೂ ಆದರು. 2001ರಿಂದ ಅವರು ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟೀಯಾಗಿ ವ್ಯಂಗ್ಯಚಿತ್ರಕಲೆಯ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತ್ತಿದ್ದಾರೆ. ದೇಶ-ವಿದೇಶದ ವ್ಯಂಗ್ಯಚಿತ್ರಕಾರರನ್ನು ಗುರುತಿಸಿ ಅವರಿಗೆ ತಮ್ಮ ಸಂಸ್ಥೆಯ ಮೂಲಕ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಟ್ಟು ವ್ಯಂಗ್ಯಚಿತ್ರ ಕ್ಷೇತ್ರವನ್ನು ವಿಸ್ತಾರಗೊಳಿಸುತ್ತಿದ್ದಾರೆ. ನರೇಂದ್ರ ಅವರು ಯಾವುದೇ ವಯೋಮಾನದ ಹಂಗಿಲ್ಲದೇ ಈ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.

    ಬಿ ಜಿ ಗುಜ್ಜಾರಪ್ಪ(ಗುಜ್ಜಾರ್): ತುಮಕೂರು ಜಿಲ್ಲೆಯ ಬಾಣಗೆರೆಯ ಗುಜ್ಜಾರ್ ಅವರು ತಮ್ಮ ವಿದ್ಯಾಭ್ಯಾಸದ ದಿನಗಳಿಂದಲೇ ಚಿತ್ರ ರಚನೆ ಹಾಗೂ ಕಾರ್ಟೂನ್ ಸ್ಟ್ರಿಪ್‍ಗಳನ್ನು ಅಭ್ಯಾಸಿಸುತ್ತಾ ಬಂದಿದ್ದಾರೆ. ಇತಿಹಾಸದಲ್ಲಿ ಎಂಎ ಮಾಡಿ ಹಲವೆಡೆ ಕೆಲಸ ಮಾಡಿದ್ದಲ್ಲದೇ ಪ್ರಶಿಕ್ಷಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಆದರೆ ಚಿತ್ರ ರಚನೆಯ ಸೆಳೆತವು ವೃತ್ತಿಯನ್ನು ಬದಲಿಸುವಂತೆ ಮಾಡಿತು. ಲಂಕೇಶ್ ಪತ್ರಿಕೆಯಿಂದ ಕಾರ್ಟೂನ್ ಕ್ಷೇತ್ರಕ್ಕೆ ಬಂದರು. ಅಲ್ಲಿಂದ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಸುಧಾ ಹಾಗೂ ಮಯೂರ ಪತ್ರಿಕೆಗಳಿಗೆ ಮುಖ್ಯ ಕಲಾವಿದರಾಗಿ ಸೇರ್ಪಡೆಯಾದರು. ಅಲ್ಲಿ ಹಲವಾರು ವರ್ಷಗಳು ನಿರಂತರವಾಗಿ ಸಾಂದರ್ಭಿಕ ಚಿತ್ರ ಹಾಗೂ ಕಾರ್ಟೂನ್ ರಚನೆಯಲ್ಲಿ ತೊಡಗಿದರು.

    ನಂತರದಲ್ಲಿ ಬೆಂಗಳೂರಿನ ಕಿರ್ಲೋಸ್ಕರ್ ಮಲ್ಟಿ ಮೀಡಿಯಾದಲ್ಲಿ ಹಿರಿಯ ಕಲಾವಿದರಾಗಿ ಅನಿಮೇಶನ್ ಕಾರ್ಯವನ್ನು ನಿರ್ವಹಿಸಿದರು ಹಾಗೂ ದೆಹಲಿಯ ಎನ್‍ಐಐಟಿಯಲ್ಲಿ ಕೆಲಸ ಮಾಡಿದ್ದಾರೆ. ಆ್ಯನಿಮೇಶನ್ ಕ್ಷೇತ್ರದಲ್ಲೂ ತೊಡಗಿದ್ದಾರೆ. ಅಲ್ಲದೇ ನಾಡಿನ ದಿಗ್ಗಜರ ಪುಸ್ತಕಗಳಿಗೆ ಮುಖಪುಟ, ಒಳಪುಟಗಳಿಗೆ ಚಿತ್ರ ರಚನೆ ಮಾಡುವ ಮೂಲಕ ಪ್ರಸಿದ್ಧರಾಗಿದ್ದಾರೆ. ಸರ್ಕಾರ ಹಾಗೂ ಸರ್ಕಾರೇತರದ ಹಲವಾರು ಕಾರ್ಯಕ್ರಮಗಳಿಗೆ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ರೈಲ್ವೆ ಇಲಾಖೆಯ ಹಲವಾರು ಯೋಜನೆಗಳಿಗೆ ಮುಖ್ಯ ಚಿತ್ರಕಾರರಾಗಿ ಗುರುತಿಸಿಕೊಂಡಿದ್ದಾರೆ.


    ವ್ಯಂಗ್ಯಚಿತ್ರವನ್ನಷ್ಟೇ ಅಲ್ಲದೇ ಪೇಟಿಂಗ್ ಅನ್ನು ಮಾಡುತ್ತಿದ್ದು ಅವು ದೇಶ-ವಿದೇಶಗಳ ಆನ್ಲೈನ್ ತಾಣಗಳಲ್ಲಿ ದೊಡ್ಡ ಹೆಸರು ಮಾಡಿವೆ. ಇವರ ವಿಭಿನ್ನ ಶೈಲಿಯ ಕ್ಯಾರಿಕೇಚರ್ ಗಳು ಸಹ ದೇಶ-ವಿದೇಶಗಳ ಆನ್ಲೈನ್ ತಾಣಗಳಲ್ಲಿ ಇವೆ. ವ್ಯಂಗ್ಯಚಿತ್ರ ಕ್ಷೇತ್ರಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದಲ್ಲದೇ ಹೊಸ ಪೀಳಿಗೆ ಚಿತ್ರಕಲಾ ಉತ್ಸಾಹಿ ಯುವಕರನ್ನು ಪ್ರೋತ್ಸಾಹಿಸುತ್ತಾ ಹುರಿದುಂಬಿಸುತ್ತಾ ಬಂದಿದ್ದಾರೆ. ಈ ಕಾರ್ಟೂನ್ ಕ್ಷೇತ್ರಕ್ಕೆ ಬರಲು ಡೆಕ್ಕನ್ ಹೆರಾಲ್ಡ್ ಗ್ರೂಪ್‍ನ ಬಿ.ವಿ. ರಾಮಮೂರ್ತಿ ಅವರು ನನಗೆ ಸ್ಪೂರ್ತಿ ಎನ್ನುತ್ತಾರೆ. ಗುಜ್ಜಾರ್ ಅವರು ಬರೆದ ಮಾಜಿ ಪ್ರಧಾನಿ ಎ. ಬಿ. ವಾಜಪೇಯಿ ವ್ಯಂಗ್ಯ ಭಾವ ಚಿತ್ರವು ಪ್ರಧಾನಿಯವರ ಮನೆಯ ಗೋಡೆಯಲ್ಲಿದೆ.

    ಪುಸ್ತಕ ಮಾಲಿಕೆಯಲ್ಲಿ 16 ರಾಷ್ಟ್ರೀಯ, ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಪ್ರಕಟಣೆಗೊಂಡಿದೆ. ಅಲ್ಲದೇ ಬಾಪು ಹಾಗೂ ಬುದ್ಧನ ಸಂದೇಶ ಸಾರುವ ಚಿತ್ರ ಸಹಿತ ಪುಸ್ತಕಗಳ ಪ್ರಕಟಣೆಯನ್ನು ಮಾಡಿದ್ದು ಕಾಮಿಕ್ಸ್ ಲೋಕಕ್ಕೂ ಹೆಚ್ಚಿನ ಕೊಡುಗೆ ಕೊಟ್ಟಿದ್ದಾರೆ. ನಿರಂತರ ಚಿತ್ರರಚನೆಯಲ್ಲಿ ತೊಡಗಿರುವ ಗುಜ್ಜಾರ್ ಸದಾ ಹೊಸತನದ ಹುಡುಕುವಿಕೆಯತ್ತ ಚಿಂತಿಸುತ್ತಾರಲ್ಲದೇ ಹೊಸ ಹೊಸ ತಂತ್ರಜ್ಞಾನದ ತಿಳುವಳಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ತಾವು ಕಲಿತದ್ದನ್ನು ಆಸಕ್ತರಿಗೂ ಪರಿಚಯಿಸುತ್ತಾರೆ.

    ಜಿ ಎಸ್ ನಾಗನಾಥ್ :ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿಯಿದ್ದ ಕಾರಣ ದಾವಣಗೆರೆಯಲ್ಲಿ ವಾಣಿಜ್ಯಕಲೆಯನ್ನು ಅಭ್ಯಾಸಿಸಿದರು. ಆನಂತರ ಖ್ಯಾತ ಆ್ಯಡ್ ಏಜೆಂನ್ಸಿಯಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದರು. ಅಲ್ಲಿಂದ ಮುಂದೆ ಬೆಂಗಳೂರಿನ ಕಿರ್ಲೋಸ್ಕರ್ ಮಲ್ಟಿಮೀಡಿಯಾದಲ್ಲಿ ಹಿರಿಯ ಕಲಾವಿದರಾಗಿ ಅನಿಮೇಶನ್ ಕಾರ್ಯವನ್ನು ನಿರ್ವಹಿಸಿದರಲ್ಲದೇ ಮುಂದುವರಿದು ಹಲವಾರು ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಹಿರಿಯ ಕಲಾವಿದರಾಗಿ ಕಾರ್ಯನಿರ್ವಹಿಸಿದ್ದಾರೆ. ವೃತ್ತಿಯಲ್ಲಿ ವೆಬ್ ಡಿಸೈನರ್, ಅನಿಮೇಟರ್, ಇಲ್ಲಸ್ಟ್ರೇಟರ್‍ಗಳನ್ನೂ ಪ್ರವೃತ್ತಿಯಲ್ಲಿ ವ್ಯಂಗ್ಯಚಿತ್ರವನ್ನೂ ಮಾಡುತ್ತಾ ಬಂದಿದ್ದಾರೆ. ನಾಡಿನ ಹಲವಾರು ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ.

    ಪಿಯುಸಿ ಓದುವಾಗಲೇ ವ್ಯಂಗ್ಯಚಿತ್ರ ರಚನೆಯಲ್ಲಿ ತೊಡಗಿದ್ದು. ಮೊದಲ ವ್ಯಂಗ್ಯಚಿತ್ರವು 1985ರಲ್ಲಿ `ಸುಧಾ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಲ್ಲಿಂದ ಈವರೆಗೆ ಹತ್ತು ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ರಚಿಸಿದ್ದು ನಾಡಿನ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕ್ಯಾರಿಕೇಚರ್‍ಗಳಲ್ಲೂ ಪರಿಣತಿ ಪಡೆದಿದ್ದು ಸ್ಪಾಟ್ ಕ್ಯಾರಿಕೇಚರ್ ರಚನೆಯನ್ನೂ ರೂಡಿಸಿಕೊಂಡಿದ್ದಾರೆ.

    ಪ್ರಸಿದ್ಧ ವ್ಯಂಗ್ಯಚಿತ್ರಕಾರರಾದ ಆರ್ ಕೆ ಲಕ್ಷ್ಮಣ್ ಅವರ ಮುಂದಾಳತ್ವದಲ್ಲಿ 1996ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ವ್ಯಂಗ್ಯಚಿತ್ರ ಕಾರ್ಯಗಾರದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

    This image has an empty alt attribute; its file name is sanketh-gurudutt-855x1080.jpg

    ಸಂಕೇತದತ್ತ ಎಂಬ ಹೆಸರಿನಿಂದ ಸುಪ್ರಸಿದ್ಧರಾಗಿರುವ ಸಂಕೇತ ಗುರುದತ್ತ ಅವರ ಮೂಲ ತುಮಕೂರು. ಅಲ್ಲಿ ತುಮಕೂರು‌ವಾರ್ತೆ, ಪ್ರಜಾಪ್ರಗತಿ, ಕನ್ನಡ ಗಂಗೋತ್ರಿ, ನಗೆಮಿತ್ರ ಹಾಗೂ ನಗೆಮುಗುಳು, ಪತ್ರಿಕೆಗಳಿಗೆ ಕೆಲಸ ಮಾಡಿದ್ದರು. ಬೆಂಗಳೂರಿಗೆ ಬಂದು ಸುದ್ದಿ ಸಂಗಾತಿ ವಾರ ಪತ್ರಿಕೆಯಲ್ಲಿ ಕೆಲ ಕಾಲವಿದ್ದರು. ಆನಂತರ ಧಾರಾವಾಹಿ, ಸಿನಿಮಾಗಳಲ್ಲಿ ಕೆಲಸ ಮಾಡಿದರು. ನಂತರದಲ್ಲಿ ಕಿರ್ಲೋಸ್ಕರ್ ಮಲ್ಟಿಮೀಡಿಯಾಗೆ ಸೇರ್ಪಡೆ‌‌. ಅಲ್ಲಿಂದ ಒಂದಿಷ್ಟು ಕಲಿತು ಹೈದರಾಬಾದನತ್ತ ಪಯಣ. ಅಲ್ಲಿ ಹನ್ನೊಂದು ವರ್ಷವಿದ್ದು ಮತ್ತೆ ಬೆಂಗಳೂರಿಗೆ ವಾಪಸ್ ಆಗಿ ಸುಧಾ, ಮಯೂರ, ಪ್ರಜಾವಾಣಿ ವಿಶೇಷಾಂಕ, ಹೊಸತು, ಪ್ರಿಯಾಂಕಗಳಿಗೆ ಫ್ರೀಲ್ಯಾನ್ಸ್ ಆಗಿ ಕೆಲಸ ನಿರ್ವಹಿಸಿದರು. ಆ ಸಮಯದಲ್ಲಿಯೇ ಸಿಕ್ಕ ಮತ್ತೊಂದು ಉತ್ತಮ ಅವಕಾಶ ಕನ್ನಡಪ್ರಭದಲ್ಲಿ ಕಲಾಕಾರನಾಗಿದ್ದು. ಕಲಾ ವಿಭಾಗದ ಜೊತೆಗೆ ಪುರವಣಿಯ ಕೆಲ ಪುಟಗಳ ಜವಾಬ್ದಾರಿ ಸಿಕ್ಕಿತು. ಅಲ್ಲಿ ನಾಟಕ, ಸಿನಿಮಾ ಹಾಗೂ ಕಲಾಪ್ರದರ್ಶನಗಳ ವಿಮರ್ಶೆ, ವ್ಯಕ್ತಿ ಹಾಗೂ ಸಾಂಸ್ಕ್ರತಿಕ ತಂಡಗಳ ಪರಿಚಯ ಲೇಖನ ಹೀಗೆ ಹಲವಾರು ವಿಭಾಗದಲ್ಲಿ ಕೆಲಸ ಮಾಡಿದ ಅನುಭವ. ಪ್ರಸ್ತುತ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಶಿಕ್ಷಣ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆ ವಿಶ್ವವಿದ್ಯಾಲಯದಿಂದಲೇ ಪ್ರಾರಂಭವಾಗಬೇಕು: ಸಿಎಂ

    BELAGAVI DEC 22

    ಶಿಕ್ಷಣ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆ ವಿಶ್ವವಿದ್ಯಾಲಯದಿಂದಲೇ ಪ್ರಾರಂಭವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಬೆಳಗಾವಿಯ ಹಿರೇಬಾಗೇವಾಡಿ ಮಲ್ಲಪ್ಪನ ಗುಡ್ಡದ ಹೊಸ ನಿವೇಶನದಲ್ಲಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕಟ್ಟಡಗಳ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

    ಇಂದಿನ ಸವಾಲುಗಳ ಹಾಗೂ ಬದಲಾವಣೆಯ ಯುಗದಲ್ಲಿ ಫ್ಲೆಕ್ಸಿಬಲ್ ಆದ ಶಿಕ್ಷಣ ವ್ಯವಸ್ಥೆ ಅತ್ಯಂತ ಅವಶ್ಯಕ. ಪಠ್ಯದಲ್ಲಿರುವ ವಿದ್ಯೆ ಹಾಗೂ ಜಗತ್ತಿನಲ್ಲಿ ಬಳಕೆಯಾಗುತ್ತಿರುವ ವಿದ್ಯೆಯಲ್ಲಿ ಬಹಳಷ್ಟು ಅಂತರ ಇದೆ. ಇವರೆಡರ ನಡುವೆ ಇರುವ ಅಂತರವನ್ನು ಕಡಿಮೆಗೊಳಿಸಲು ಎನ್‍ಇಪಿಯನ್ನು ಜಾರಿಗೊಳಿಸಲಾಗಿದೆ. ಇಂದಿನ ಪೀಳಿಗೆ ಯಾವುದೇ ಸವಾಲುಗಳನ್ನು ಆತ್ಮಸ್ಥೈರ್ಯ, ಧೈರ್ಯದಿಂದ ಎದುರಿಸಲು ಜ್ಞಾನದ ಬಲ ಇರಬೇಕು. ಎನ್‍ಇಪಿ ಈ ಜ್ಞಾನದ ಬಲವನ್ನು ನೀಡುತ್ತದೆ ಎಂದು ತಿಳಿಸಿದರು.

    ವಿಶ್ವವಿದ್ಯಾಲಯವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಒಯ್ಯುವ ಬದ್ಧತೆ :
    ಕಿತ್ತೂರು ರಾಣಿ ಚೆನ್ನಮ್ಮ ಆತ್ಮಸ್ಥೈರ್ಯ, ಧೈರ್ಯದಿಂದ ಹೋರಾಡಿದ ಮೊದಲನೆಯ ಮಹಿಳಾ ಸ್ವತಂತ್ರ ಹೋರಾಟಗಾರರಾಗಿ ಬ್ರಿಟಿಷರನ್ನು ಮೆಟ್ಟಿನಿಂತದ್ದು ಈಗ ಇತಿಹಾಸ. ಬ್ರಿಟೀಷರನ್ನು ಹಿಮ್ಮೆಟ್ಟಿಸುವಲ್ಲಿ ಸಂಗೊಳ್ಳಿ ರಾಯಣ್ಣನ ಪಾತ್ರ ಬಹಳ ದೊಡ್ಡದು. ರಾಣಿ ಚೆನ್ನಮ್ಮನೇ ಈ ವಿಶ್ವವಿದ್ಯಾಲಯದ ಸ್ಪೂರ್ತಿ. ಈ ವಿಶ್ವವಿದ್ಯಾಲಯವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಒಯ್ಯುವ ಬದ್ಧತೆ, ಸ್ಪಷ್ಟತೆ ವಿಶ್ವವಿದ್ಯಾಲಯದ ಪ್ರತಿಯೊಬ್ಬರಿಗೂ ಇರಬೇಕು. ವಿಭಿನ್ನ, ವಿನೂತನ ಪ್ರಯೋಗ ಕಾರ್ಯಕ್ರಮಗಳನ್ನು ರೂಪಿಸಿ, ಸಮಕಾಲೀನ ಸವಾಲುಗಳನ್ನು ಎದುರಿಸುವ ಹಾಗೂ ವೈಚಾರಿಕತೆಯಿಂದ ಸಮಾಜದಲ್ಲಿನ ಸಮಸ್ಯೆಗಳನ್ನು ನಿವಾರಿಸುವ ಕೇಂದ್ರಗಳಾಗಬೇಕು. ಕೇವಲ ಡಿಗ್ರಿ ಪಡೆಯಲು ಸೀಮಿತವಾಗಿರಬಾರದು. ಆಧುನಿಕ ತಂತ್ರಜ್ಞಾನ ಹಾಗೂ ಜ್ಞಾನ ಕ್ಷೇತ್ರದಲ್ಲಿನ ಬದಲಾವಣೆ ಹಾಗೂ ಬೆಳವಣಿಗೆಯ ವೇಗಕ್ಕೆ ಸರಿಸಮಾನವಾದ ಚಿಂತನೆಯನ್ನು ವಿಶ್ವವಿದ್ಯಾಲಯಗಳು ಮಾಡಬೇಕು. ಅವಿಷ್ಕಾರಗಳನ್ನು ಮಾಡುವ ಕೇಂದ್ರವಾಗಬೇಕು. ಸಂಶೋಧನೆಗಳಲ್ಲಿ ಸ್ವಂತಿಕೆ, ಹೊಸತನ ಹಾಗೂ ವಿಭಿನ್ನತೆ ಇರಬೇಕು ಎಂದು ತಿಳಿಸಿದರು.

    ತರ್ಕಬದ್ಧ ಚಿಂತನೆಗೆ ಅವಕಾಶ:ವಿಶ್ವವಿದ್ಯಾಲಯಗಳು ತರ್ಕಬದ್ಧ ಹಾಗೂ ಲ್ಯಾಟರಲ್ ಚಿಂತನೆಗೆ ಅವಕಾಶ ನೀಡುವ ಜ್ಞಾನದ ಕೇಂದ್ರವಾಗಬೇಕು. ವಿದ್ಯಾರ್ಜನೆಗೆ ಪೂರಕವಾದ ಪರಿಸರ ವಿಶ್ವವಿದ್ಯಾಲಯದಲ್ಲಿ ದೊರೆಯಬೇಕು.ವಿಶ್ವವಿದ್ಯಾಲಯದಲ್ಲಿರುವವರು ತಮ್ಮ ಸೀಮಿತ ಪ್ರಪಂಚದಿಂದ ಹೊರಗೆ ಬರಬೇಕು. ಸಂಶೋಧನೆಗಳನ್ನು ಸಮರ್ಥಿಸಿಕೊಳ್ಳದೇ ಉಳಿದವರು ಅದರ ಉಪಯುಕ್ತತೆಯನ್ನು ನಿರ್ಧರಿಸಲಿ. ವಿಶ್ವವಿದ್ಯಾಲಯಗಳಿಗೆ ಕುಲಪತಿಗಳೇ ಮುಂದಾಳತ್ವ ವಹಿಸುವ ನಾಯಕ. ಅವರು ಇತರರಿಗೆ ಉದಾಹರಣೆಯಾಗಬೇಕು. ಮಾರ್ಗದರ್ಶನ ತೋರಬೇಕು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರಲು ಸರ್ಕಾರ ಬೆಂಬಲಕ್ಕೆ ನಿಲ್ಲುತ್ತದೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ನನ್ನ ಹೃದಯಕ್ಕೆ ಬಹಳ ಹತ್ತಿರವಾದದ್ದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ವಿಶ್ವವಿದ್ಯಾಲಯ ಜಗತ್ತಿಗೆ ಜ್ಞಾನದ ಸಂಪರ್ಕ ಕೊಂಡಿ :
    ವಿಶ್ವವಿದ್ಯಾಲಯಕ್ಕೆ ಸುಂದರ ಪರಿಸರ, ರಸ್ತೆ, ಮೂಲಸೌಕರ್ಯಗಳನ್ನು ಒಳಗೊಂಡ ಕಟ್ಟಡವನ್ನು ಒಂದು ವರ್ಷದಲ್ಲಿ ಮುಗಿಸುವ ಕೆಲಸವನ್ನು ಸರ್ಕಾರ ಮಾಡಲಿದೆ. ಕಟ್ಟಡದ ಪ್ರತಿಯೊಂದು ಕೊಠಡಿಯು ಡಿಜಿಟಲೈಸ್ ಆಗಬೇಕು. ಜಗತ್ತಿಗೆ ಜ್ಞಾನದ ಸಂಪರ್ಕ ಕೊಂಡಿಯಂತಿರಬೇಕು. ಇದು ಜ್ಞಾನದ ಶತಮಾನ. ಜ್ಞಾನ ಇದ್ದವರು ಜಗತ್ತನ್ನು ಆಳುತ್ತಾರೆ. ವಿಶ್ವವಿದ್ಯಾಲಯಗಳ ಸಂಶೋಧನೆಯನ್ನು ಇಡೀ ವಿಶ್ವ ಒಪ್ಪಿಕೊಂಡರೆ ಅದರ ಉಪಯುಕ್ತತೆ ಹೆಚ್ಚುತ್ತದೆ. ವಿಶ್ವವಿದ್ಯಾಲಯದಲ್ಲಿ ಕಳೆದ 10 ವರ್ಷದಲ್ಲಿ ಕೈಗೊಂಡಿರುವ ಪಿಹೆಚ್‍ಡಿ ಸಂಶೋಧನೆ ಹಾಗೂ ಅದರ ಉಪಯುಕ್ತತೆ ಬಗ್ಗೆ ವಿಶ್ಲೇಷಣೆಯನ್ನು ಕೈಗೊಳ್ಳಲು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಸಲಹೆ ನೀಡಿದರು.

    ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಸಿಎಂ ಅಶ್ವಥ್ ನಾರಾಯಣ, ಶಶಿಕಲಾ ಜೊಲ್ಲೆ, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್ ಮಹಾಂತೇಶ ಕವಟಗಿಮಠ, ಅರುಣ ಶಾಹಪೂರ, ಹನಮಂತ ನಿರಾಣಿ, ವಿಧಾನಪರಿಷತ್ ಚುನಾವಣೆಯಲ್ಲಿ ಜಯಶಾಲಿ ಯಾಗಿರುವ ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು.

    ಕುಂಚದಲ್ಲಿ ಅರಳಿದ ಮಂಗಳೂರಿನ ಸೊಬಗು

    ಬಳಕೂರ. ವಿ.ಎಸ್.ನಾಯಕ

    ಕಲಾವಿದನಾದವನಿಗೆ  ನಿಸರ್ಗವು ಒಂದಲ್ಲ ಒಂದು ರೀತಿಯಲ್ಲಿ ಪ್ರೇರಣೆಯಾಗುತ್ತದೆ. ನಿಸರ್ಗದಲ್ಲಿ  ಬದಲಾವಣೆಯಾದ  ಹಲವಾರು ವಿಚಾರಗಳು ಕಲಾವಿದನ ಕುಂಚದಲ್ಲಿ ಅರಳಿ ಅದ್ಭುತ ಕಲಾಕೃತಿಗಳಾಗಿ ಹೊರಹೊಮ್ಮುತ್ತವೆ. ಕಲಾವಿದನ ಕಲ್ಪನೆಗೆ ಗಡಿಯಿಲ್ಲ ಅವನ ಮನಸ್ಸಿನ ಪರದೆಯ ಮೇಲೆ ಮೂಡಿದ ಹಲವಾರು ವಿಚಾರಗಳು ಕಲಾ ರೂಪವನ್ನು ಪಡೆದಾಗ ಒಂದು ಉತ್ತಮವಾದ ಲೋಕಕ್ಕೆ ಅಡಿಯಿಟ್ಟ ಅನುಭವ ನಮಗಾಗುತ್ತದೆ.

    ಹೀಗೆ ಕಲಾವಿದ ತಾನು ಕಂಡ ಅನುಭವಿಸಿದ  ಹಲವಾರು ವಿಚಾರಗಳನ್ನು ಕಲಾತ್ಮಕವಾಗಿ ಬಿಂಬಿಸುತ್ತಾನೆ. ಹಾಗೆಯೇ ಇಲ್ಲಿ ತಾನು ಚಿಕ್ಕಂದಿನಿಂದಲೇ ಕಂಡ  ಹಲವಾರು ಘಟನೆ ವಿಚಾರ ನಿಸರ್ಗದ ಬದಲಾವಣೆಯ ಸನ್ನಿವೇಶಗಳನ್ನು ತಮ್ಮ ಕುಂಚದ ಮೂಲಕ ಅರಳಿಸಿದ್ದಾರೆ ಕಲಾ ಶಿಕ್ಷಕ ಸುಧೀರ್ ಕುಮಾರ್. ಜಿ. 

    ಮಂಗಳೂರಿನ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಇವರು ಮಂಗಳೂರಿನ ಮಹಾಲಸಾ ಚಿತ್ರಕಲಾ  ಮಹಾವಿದ್ಯಾಲಯದಿಂದ ಎಂ. ಎಫ್. ಎ. ಪದವಿಯನ್ನು ಪಡೆದುಕೊಂಡಿದ್ದಾರೆ.ಇವರು ಹುಟ್ಟಿ ಬೆಳೆದಿದ್ದು ಎಲ್ಲಾ ಮಂಗಳೂರಿನಲ್ಲಿ. ಇವರಿಗೆ ಇಲ್ಲಿನ ಪರಿಸರ  ಒಂದಲ್ಲ ಒಂದು ರೀತಿಯಲ್ಲಿ ಕಾಡಿದೆ. ತಾವು ಕಲಾವಿದರದ್ದರಿಂದ ತಾವು ಕಂಡ ಅನುಭವಿಸಿದ ಎಲ್ಲಾ ವಿಚಾರ ವಿಷಯಗಳನ್ನು ತಮ್ಮ ಚಿತ್ರಗಳಲ್ಲಿ ಬಿಂಬಿಸಿದ್ದಾರೆ.

    ಮಂಗಳೂರು ವೇಗವಾಗಿ ಬೆಳೆಯುವ ನಗರ ಆದ್ದರಿಂದ ಅಲ್ಲಿಯ ಸುತ್ತಮುತ್ತಲಿನ ಹಳೆಯ ಕಟ್ಟಡಗಳೆಲ್ಲ ದೂರವಾಗಿ ನವನವೀನವಾದ ಮಂಗಳೂರು ನಗರ ಕಾಣುತ್ತಿದೆ. ಆದರೆ ಅಂದಿನ ಅದ್ಭುತ ವಿಚಾರಗಳು ಕಲಾ ಸ್ಪರ್ಶವನ್ನು ಪಡೆದಾಗ ನಮಗೆ ಅರಿವಿಲ್ಲದಂತೆ ಹಲವಾರು ಚಿತ್ರಗಳು ಹೊರಹೊಮ್ಮುತ್ತವೆ. ಇಂತಹ ಸಂದರ್ಭದಲ್ಲಿ ಆಧುನಿಕ ಕಟ್ಟಡಗಳು ತಲೆಯೆತ್ತುತ್ತಿರುವ ಸಂದರ್ಭ  ಆಗಿನ ಕಾಲದ ಹಳೆಯ ಕಟ್ಟಡಗಳನ್ನು ಸೌಂದರ್ಯವನ್ನು ತನ್ನ ಕಲಾಕೃತಿಗಳಲ್ಲಿ ಬಿಂಬಿಸಿದ್ದಾರೆ.

    ಅವರ ಕಲಾಕೃತಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು  ವಿನೂತನವಾದ ವಿಚಾರಧಾರೆ ಕೊಡುವಂತಿದೆ.  ಸಾಮಾನ್ಯವಾಗಿ ಮಂಗಳೂರು ಹಳ್ಳಿಯ ಸುತ್ತಮುತ್ತಲಿನ ಎಲ್ಲಾ ವಿಚಾರಗಳನ್ನು ಚಿತ್ರಗಳಲ್ಲಿ ಬಿಂಬಿಸಿದ್ದಾರೆ.

    ಮಂಗಳೂರಿನ ಕಾಳಿಕಾಂಬಾ ರಸ್ತೆ. ಹಳೆಯ ಬಂದರು. ವೆಂಕಟರಮಣ ದೇವಾಲಯದ ಬೀದಿ. ಕ್ಲಾಕ್ ಟವರ್. ಭೈರವೇಶ್ವರ ದೇವಾಲಯ. ಸರ್ಕಾರಿ ಮಹಿಳಾ ಕಾಲೇಜು ಬಲ್ಮಟ್ಟ. ಮಾಲಿಂಗೇಶ್ವರ ದೇವಸ್ಥಾನ ಗಾಂಧಿನಗರ. ಮಂಗಳೂರಿನ ಮಣ್ಣಗುಡ್ಡ. ತುಂಬೆ ನದಿಯ ತೀರ ಹೀಗೆ ಎಲ್ಲ ವಿಚಾರಗಳನ್ನು ತಮ್ಮ ಜಲವರ್ಣ ಚಿತ್ರಗಳಲ್ಲಿ ಅದ್ಭುತವಾಗಿ ಚಿತ್ರಿಸಿದ್ದಾರೆ. ಇವರ ಕಲಾತ್ಮಕತೆಯನ್ನು ಎಲ್ಲರೂ ಒಂದು ಕ್ಷಣ ಮೆಚ್ಚಲೇಬೇಕು.

    ಇವರು ಸಾಮಾನ್ಯವಾಗಿ ಏಕವ್ಯಕ್ತಿ ಕಲಾ ಪ್ರದರ್ಶನ ಸಮೂಹ ಕಲಾಪ್ರದರ್ಶನವನ್ನು ರಾಜ್ಯಮಟ್ಟದಲ್ಲಿ ಮಂಡಿಸಿದ್ದಾರೆ. ಇವರು ಹಲವಾರು ಸಂಘ-ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ. ಶಾಲಾ ಮಟ್ಟದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರ ಮೂಲಕವಾಗಿ ಅತ್ಯುತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಕಲಾತ್ಮಕ ಸೇವೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    ಹಣಕಾಸು ಪರಿಸ್ಥಿತಿ ಅವಲೋಕಿಸಿ ಖಾಸಗಿ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಕ್ರಮ

    BELAGAVI,SUVARNA VIDHANA SOUDHA DEC 21

    ರಾಜ್ಯದ ಹಣಕಾಸು ಪರಿಸ್ಥಿತಿ ಅವಲೋಕಿಸಿ 1995 ಕ್ಕೂ ಮುನ್ನ ಹಾಗೂ ನಂತರದ ಖಾಸಗಿ ಶಾಲೆಗಳನ್ನು ಸರ್ಕಾರದ ವೇತನಾನುಧನಕ್ಕೆ ಒಳಪಡಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

    ಬೆಳಗಾವಿ ಸುವರ್ಣ ಸೌಧ ಸಮಿತಿ ಸಭಾಂಗಣದಲ್ಲಿ , ವಿಧಾನ ಪರಿಷತ್ ಸಭಾಪತಿ ಬಸವರಾಜ.ಎಸ್ .ಹೊರಟ್ಟಿ
    ಅಧ್ಯಕ್ಷತೆಯಲ್ಲಿ, ಜರುಗಿದ ಖಾಸಗಿ ಅನುದಾನಿತ , ಅನದಾನ ರಹಿತ ಶಿಕ್ಷಣ ಸಂಸ್ಥೆಗಳ ಕುರಿತಾದ ಸಭೆಯಲ್ಲಿ ಅವರು ಮಾತನಾಡಿದರು.

    ಜನವರಿ 30 ರ ಒಳಗಾಗಿ 1995 ಕ್ಕೂ ಮುನ್ನ ಸ್ಥಾಪಿಸಿದ ಖಾಸಗಿ ಶಾಲೆಗಳನ್ನು ಸರ್ಕಾರದ ಸಹಾಯಧನಕ್ಕೆ ಒಳಪಡಿಸಲು ಹಣಕಾಸು ಇಲಾಖೆಗೆ ಸೂಕ್ತ ದಾಖಲೆ ಹಾಗೂ ಅಂಕೆ ಸಂಖ್ಯೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಶಾಶ್ವತ ಅನುದಾನ ರಹಿತ ಖಾಸಗಿ ಶಾಲೆಗಳಿವೆ. ಹಣಕಾಸು ಪರಿಸ್ಥಿತಿ ಸುಧಾರಿಸಿದರೆ ಇವುಗಳಿಗೂ ಸಹ ಸಹಾಯಧನ ನೀಡಲಾಗುವುದು ಎಂದರು.

    ರಾಜ್ಯದಲ್ಲಿ ಅನುದಾನಿತ ಶಾಲೆಗಳ 500 ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಜಾಹಿರಾತು ನೀತಿ ನಿಯಮ ಪಾಲನೆಯಾಗಿಲ್ಲ ಎಂದು ಶಿಕ್ಷಣ ಇಲಾಖೆ ತಡೆ ಹಿಡಿದಿದೆ. ಶಾಲಾ ಆಡಳಿತ ಮಂಡಳಿ ರಾಜ್ಯ ಮಟ್ಟ ಹಾಗೂ ಜಿಲ್ಲಾ ಮಟ್ಟದ ಒಂದೊಂದು ಪತ್ರಿಕೆಯಲ್ಲಿ ನೇಮಕಾತಿ ಕುರಿತು ಜಾಹಿರಾತು ನೀಡಿವೆ. ಆದರೆ ಪ್ರತಿಕೆಗಳ ರಾಜ್ಯಪುಟಗಳಲ್ಲಿವೇ ಜಾಹಿರಾತು ಪ್ರಕಟವಾಗಬೇಕು ಎಂದು ಅಧಿಕಾರಿಗಳು ಕಡ್ಡಾಯ ಮಾಡಿ ನೇಮಕಾತಿಗೆ ತಡೆ ನೀಡಿದ್ದಾರೆ. ಇದನ್ನು ತಕ್ಷಣವೇ ಸರಿ ಪಡಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿಗಳಿಗೆ ತಿಳಿಸಿದರು.

    ಸಭಾಪತಿಗಳ ಮಾತಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ ನೇಮಕಾತಿ ಜಾಹಿರಾತು ನೀಡಿರುವ ಶಾಲಾ ಆಡಳಿತ ಮಂಡಳಿಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಯಲು ಅನುಮತಿ ನೀಡಿ. ಇಂತಹದೇ ಪುಟದಲ್ಲಿ ಜಾಹಿರಾತು ಬರಬೇಕು ಎಂಬ ನಿಯಮವಿಲ್ಲ. ಯಾವುದೇ ಪುಟದಲ್ಲಿ ಜಾಹಿರಾತು ಪ್ರಕಟಗೊಂಡರು ಅದನ್ನು ಪರಿಗಣಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಇಂಡೆಮ್ನಿಟಿ ಬಾಂಡ್ ನೀಡಿದರೆ ಸಾಕು

    ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಶಾಲಾ ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿ ಪ್ರಮಾಣ ಪತ್ರ ಪಡೆಯುವ ನಿಯಮಗಳನ್ನು ಸರಳಗೊಳಿಸಿ. ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಶಿಕ್ಷಣ ಸಂಸ್ಥೆಗಳಿಂದ ಇಂಡೆಮ್ನಿಟಿ ಬಾಂಡ್(ನಷ್ಟ ಪರಿಹಾರ) ಪಡೆದು ಶಾಲೆಗಳಿಗೆ ಮಾನ್ಯತೆ ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

    150 ಜನ ಸಿಬ್ಬಂದಿ ಕಾಯಂ ಗೆ ಕ್ರಮ

    ಶಿಕ್ಷಣ ಇಲಾಖೆಯಲ್ಲಿ 1997-98 ನೇ ಸಾಲಿನಲ್ಲಿ ಗುತ್ತಿಗೆ ಆಧಾರದ ಮೇಲೆ ಡಿ.ಪಿ.ಇ.ಪಿ.ಯೋಜನೆಯಡಿ ನೇಮಕೊಂಡ 150 ಜನ ಸಿಬ್ಬಂದಿಯನ್ನು ಸಕ್ರಮಗೊಳಿಸುವ ಕುರಿತಂತೆ ಕಾನೂನಾತ್ಮಕ ವಿಷಯಗಳನ್ನು ಪರಿಶೀಲಿಸಿ ಖಾಯಂಮಾತಿಗೆ ಕ್ರಮಕೈಗೊಳ್ಳುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು.

    ಎನ್.ಪಿ.ಎಸ್. ಯೋಜನೆಯಡಿ ಖಾಸಗಿ ಶಾಲಾ ಶಿಕ್ಷಕರು

    ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಖಾಸಗಿ ವ್ಯಕ್ತಿಗಳು ಸಹ ಪ್ರಾನ್ ಖಾತೆ ತೆರೆದು ಉಳಿತಾಯ ಮಾಡಬಹುದು. ಖಾಸಗಿ ಶಾಲಾ ಶಿಕ್ಷಕರನ್ನು ಸಹ ಎನ್.ಪಿ.ಎಸ್.ಯೋಜನೆಯಡಿ ತರಬೇಕು. ಶಾಲಾ ಆಡಳಿತ ಮಂಡಳಿಗಳು ಉದ್ಯೋಗಿಯ ವೇತನದಲ್ಲಿ ಶೇ.10 ರಷ್ಟು‌ ಹಣವನ್ನು ಕಟಾಯಿಸಿ, ಇದಕ್ಕೆ ಆಡಳಿತ ಮಂಡಳಿಯಿಂದ ಶೇ.10 ರಷ್ಟು ಹಣವನ್ನು ತುಂಬಬೇಕು. ಈ ಕುರಿತು ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ನೋಟಿಸ್ ನೀಡುವಂತೆ ಮುಖ್ಯಮಂತ್ರಿ ತಿಳಿಸಿದರು.

    ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಪ್ರಾಥಮಿಕ ಮತ್ತು‌ ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್. ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಎನ್.ಎಸ್.ಪ್ರಸಾದ್, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಇಲಾಖೆ

    ಚನ್ನಮ್ಮ ವಿವಿ: ಡಿಪ್ಲೊಮಾ ಪಡೆದವರಿಗೆ ಬಿ.ಕಾಂ. 3ನೇ ಸೆಮಿಸ್ಟರ್ ಗೆ ಪ್ರವೇಶ, ಕಾಲಾವಧಿ 3 ದಿನ ವಿಸ್ತರಣೆ

    BELAGAVI DEC 20

    ಕಮರ್ಷಿಯಲ್ ಪ್ರಾಕ್ಟೀಸ್ ಡಿಪ್ಲೊಮಾ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ನೇರವಾಗಿ ಬಿ.ಕಾಂ. 3ನೇ ಸೆಮಿಸ್ಟರಿಗೆ ಪ್ರವೇಶ ಪಡೆಯಲು ಇದ್ದ ಕಾಲಾವಕಾಶವನ್ನು ಡಿ.23ರವರೆಗೆ ವಿಸ್ತರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಈ ಬಗ್ಗೆ ಸೋಮವಾರ ಇಲ್ಲಿ ಮಾತನಾಡಿದ ಅವರು, ಈ ಹಿಂದಿನ ಸೂಚನೆಯಂತೆ ಕಡ್ಡಾಯ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡಬಹುದು. ರಾಣಿ ಚನ್ನಮ್ಮ ವಿವಿ ವ್ಯಾಪ್ತಿಗೆ ಬರುವ ಕಾಲೇಜುಗಳು ಇಂತಹ ವಿದ್ಯಾರ್ಥಿಗಳ ಪಟ್ಟಿಯನ್ನು ನಂತರ ವಿಶ್ವವಿದ್ಯಾಲಯಕ್ಕೆ ಕಳಿಸಿಕೊಡಬೇಕು. ಬಳಿಕ ಇಂತಹ ಪ್ರವೇಶಗಳಿಗೆ ಅನುಮೋದನೆ ಕೊಡಲಾಗುವುದು ಎಂದರು.

    ಈಗ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೂ ನಿಗದಿತ ಪಠ್ಯಕ್ರಮವನ್ನು ಸಂಪೂರ್ಣವಾಗಿ ಬೋಧಿಸಲಾಗುವುದು. ಆದ್ದರಿಂದ ಆಸಕ್ತ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

    ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ಸಚಿವರು ಈ ಕ್ರಮ ತೆಗೆದುಕೊಂಡಿದ್ದಾರೆ.

    ತಪ್ಪು ಮಾಡದವರು ಯಾರವ್ರೆ..ತಪ್ಪೇ ಮಾಡದವರು ಎಲ್ಲವರೇ…!

     ಸುಮಾ ವೀಣಾ

    ಅಬ್ದಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ–  ಅಭಿನವ ಪಂಪನೆಂದು ಬಿರುದಾಂಕಿತನಾಗಿರುವ  ನಾಗಚಂದ್ರನ   ‘ರಾಮಚಂದ್ರಚರಿತ ಪುರಾಣ’ದಿಂದ ಪ್ರಸ್ತುತ ಕಾವ್ಯದಿಂದ  ಆರಿಸಲಾಗಿದೆ. 

    ವಿಧಿಯ ಕಾರಣದಿಂದ  ಸಮುದ್ರವೂ ಸಹ  ತನ್ನ ಸೀಮಾ ರೇಖೆಯನ್ನು  ಮೀರುತ್ತದೆ  ಎಂಬ  ಅರ್ಥ ಇಲ್ಲಿದೆ.  ಸಮುದ್ರಕ್ಕೆ ನಿಶ್ಚಿತ ಎಲ್ಲೆ ಎಂಬುದು ಇರುತ್ತದೆ   ಚಂಡಮಾರುತದ ಕಾರಣಕ್ಕೋ ಇಲ್ಲ ಸುನಾಮಿ ಮುಂತಾದ ಪ್ರಕೃತಿ ವೈಪರೀತ್ಯಗಳ ಸಂದರ್ಭದಲ್ಲಿ ಸಮುದ್ರವೂ ತನ್ನ ಪರಿಧಿಯನ್ನು ದಾಟಿ  ಪ್ರಕ್ಷುಬ್ಧವಾಗಿ ಮುಂದುವರಿಯುತ್ತದೆ.  ಕಾಲಾನಂತರದಲ್ಲಿ ಶಾಂತವಾಗಿ  ಸೀಮಿತ ಪರಿಧಿಯಲ್ಲಿರುತ್ತದೆ.  ಹಾಗೆ ರಾಮಚಂದ್ರಚರಿತ ಪುರಾಣದ ರಾವಣನೂ ಕೂಡ   ಕ್ಷಣಕಾಲ ಚಿತ್ತಕ್ಷೋಭೆಗೆ ಒಳಗಾಗಿದ್ದ   ಸೀತೆಯನ್ನು ನೋಡಿದ ಕೂಡಲೆ ಅವನ ಮನಸ್ಸು ನೀತಿಯ ಗೆರೆಯನ್ನು ದಾಟಿತು ಎಂಬುದನ್ನು  ಕವಿ ಹೇಳಿದ್ದಾರೆ.

    ಮನುಷ್ಯ ತಪ್ಪನ್ನೇ ಮಾಡುವುದಿಲ್ಲ ಎಂತಲ್ಲ ತಪ್ಪುಗಳನ್ನು ಮಾಡಿಯೇ ಮಾಡುತ್ತಾನೆ ಆ ತಪ್ಪು ಎಂದು ತಿಳಿದ ಬಳಿಕ  ಆ ತಪ್ಪುಗಳನ್ನು  ತಿದ್ದಿಕೊಳ್ಳುವುದು  ಸಹಜ ಗುಣ   ಸೀತೆಯುನ್ನು ಹೊತ್ತೊಯ್ದಂಥ ತಪ್ಪನ್ನು  ತಿಳಿದ ಬಳಿಕ ರಾವಣ  ಮತ್ತೆ  ಸದ್ಭಾವವನ್ನೊಳಗೊಂಡ ಪುಣ್ಯಸತಿ ಎಂದು ಹೇಳುತ್ತಾನೆ  ತಪ್ಪುಗಳು  ಮನುಷ್ಯನನ್ನು ಗಟ್ಟಿಗೊಳಿಸುತ್ತದೆ.    ಮಾಡಿದ ತಪ್ಪುಗಳನ್ನು  ಸಮರ್ಥಿಸಿ ಕೊಳ್ಳುವುದರಲ್ಲಿ ಅರ್ಥವಿಲ್ಲ  ಅಂದರೆ ಜಟ್ಟಿಕೆಳಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ  ಎಂಬಂತೆ ಹುಂಬರ ಹಾಗೆ ಇರಬಾರದಷ್ಟೆ.

    ತಪ್ಪುಗಳನ್ನು   ಮಾಡಿದವರೆಲ್ಲಾ ಕೆಟ್ಟವರು   ಎಂದು ತೀರ್ಮಾನಕ್ಕೆ ಬಂದು ಅಪರಾದಿ ಸ್ತಾನದಲ್ಲಿ ನಿಲ್ಲಿಸುವುದಲ್ಲ. ಕೆಲವು ತಪ್ಪುಗಳು ಕ್ಷಮೆ ಮತ್ತು ಪ್ರಾಯಶ್ಚಿತ್ತದಿಂದ ಮಾಗುತ್ತವೆ. ತಪ್ಪುಗಳನ್ನು ಒಪ್ಪಿಕೊಂಡಲ್ಲಿ  ಮುಂದಇನ ಅನಾಹುತಗಳು ಘಟಿಸುವುದಿಲ್ಲ ಹಾಗಾಗಿಯೇ ತಪ್ಪು-ಒಪ್ಪು ಎಂಬ ಜೋಡುನುಡಿ ಚಾಲ್ತಿಯಲ್ಲಿದೆಯೇನೋ….!

    ತಪ್ಪುಗಳು  ಇಂಥ ವಯಸ್ಸಿನವರೆ  ಮಾಡಬೇಕೆಂದಿಲ್ಲ ಎಲ್ಲರೂ ತಪ್ಪು ಮಾಡುವವರೆ.   ತಪ್ಪನ್ನೇ ಮಾಡದೆ ಇರುವವರನ್ನು ಹುಡುಕ ಹೊರಟರೆ ಅದುವೆ ದೊಡ್ಡ ತಪ್ಪಾಗುತ್ತದೆ. ತಪ್ಪುಗಳು ಕಹಿ ಅನುಭವಗಳ  ತಡಿಕೆಗಳಾದಾಗ  ಸ್ವಯಂ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ.  ಮನುಷ್ಯನನ್ನು ಪರಿಪಕ್ವವಾಗಿಸುತ್ತದೆ.  ಹಾಗಾಗಿ ತಪ್ಪು ಮಾಡುವುದು  ದೋಷವಲ್ಲ     ಸಮರ್ಥನೆ ಮಾಡಿಕೊಳ್ಳುವುದು , ತಿದ್ದಿಕೊಳ್ಳದೆ ಇರುವುದು ದೋಷ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    Indian Stock Market News:ಹೂಡಿಕೆಗೂ ಮುಂಚೆ ಪರಿಶೀಲಿಸಿ, ನಿರ್ಧರಿಸುವುದೇ ಜಾಣತನ

    ಷೇರುಪೇಟೆಯ ಹೆಗ್ಗುರುತಾದ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಸೆನ್ಸೆಕ್ಸ್‌ ಶುಕ್ರವಾರದಂದು ಕಂಡ 889 ಪಾಯಿಂಟುಗಳ ಕುಸಿತವು ಹೊರನೋಟಕ್ಕೆ ಭಾರಿಯಾಗಿ ಕಂಡರೂ, 58 ಸಾವಿರದ ಮಟ್ಟದಲ್ಲಿ ಅದು ಹೆಚ್ಚಾಗಲಾರದು. ಬ್ಲಡ್‌ ಬಾತ್‌, ಬಂಡವಾಳ ನಾಶ ಮುಂತಾದ ಭಯಾನಕ ಪದಗಳಿಗೆ ಹೆದರುವ ಆವಶ್ಯಕತೆಯಿಲ್ಲ. ಆದರೆ ಅದರೊಂದಿಗೆ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಸೂಚ್ಯಂಕಗಳು ಮತ್ತು ಇತರೆ ವಲಯದ ಷೇರುಗಳು ಕಂಡಿರುವ ಕುಸಿತವು ಸ್ವಲ್ಪ ಆತಂಕವನ್ನುಂಟುಮಾಡಬಹುದಾದ ವಿಚಾರವಾಗಿದೆ.

    ಡಿಸೆಂಬರ್ 17ರ ಸೆನ್ಸೆಕ್ಸ್ ಆರಂಭದ ಗ್ರಾಫ್

    ಇದಕ್ಕೆ ಮುಖ್ಯ ಕಾರಣ ಎಂದರೆ ಜನವರಿ 1, 2021 ರಂದು ರಿಜಿಸ್ಟರ್ಡ್‌ ಕ್ಲೈಯೆಂಟ್ಸ್‌ ಸಂಖ್ಯೆ 5.89 ಕೋಟಿ ಇದ್ದು ಶುಕ್ರವಾರ 17, ಡಿಸೆಂಬರ್‌ 2021 ರಂದು ಆ ಸಂಖ್ಯೆಯು 9.03 ಕೋಟಿಗೆ ತಲುಪಿದೆ. ಅಂದರೆ ಪೇಟೆಯ ಚಟುವಟಿಕೆಯಲ್ಲಿ ಭಾಗವಹಿಸುವವರ ಆಸಕ್ತಿ ಹೆಚ್ಚು ಹೆಚ್ಚು ವೃದ್ಧಿಯಾಗುತ್ತಿದೆ. ಇದರಲ್ಲಿ ಹೆಚ್ಚಿನವರು ಷೇರುಪೇಟೆಯ ಬಗ್ಗೆ ಅರಿವಿಲ್ಲದೆ ಪ್ರಲೋಭನೆಗೊಳಗಾಗಿ, ಪ್ರಚಾರಗಳಿಂದ ಪ್ರೇರಿತರಾಗಿ ಪ್ರವೇಶಿಸಿರುವವರಿರುತ್ತಾರೆ. ಸತತವಾಗಿ ಏರಿಕೆಯನ್ನು ಕಾಣುತ್ತಿದ್ದ ಪೇಟೆಯಲ್ಲಿ ಹೂಡಿಕೆಯು ಬೆಳೆಯುತ್ತಿದ್ದ ವೇಗಕ್ಕೆ ಹರ್ಷಿತರಾಗುತ್ತಿದ್ದ ಸಮಯದಲ್ಲಿ ಅನಿರೀಕ್ಷಿತ ಮಟ್ಟದ ಕುಸಿತವನ್ನು ಕಂಡಾಗ ಖಿನ್ನತೆಗೊಳಗಾಗುವುದು ಸಹಜ. ಹಾಗಾಗಿ ಹೂಡಿಕೆಗೆ ಮುಂಚೆ ಅವಶ್ಯವಿರುವ ಅರಿವು, ಅಧ್ಯಯನ, ಚಿಂತನೆಗಳ ಪ್ರಯೋಗ ಅತ್ಯಗತ್ಯ.

    ಷೇರುಪೇಟೆ ಹೂಡಿಕೆಗೆ ಮುಂಚೆ ಅವಶ್ಯವಿರುವ ಕೆಲವು ಅಂಶಗಳನ್ನು ಓದುಗರ ಗಮನಕ್ಕೆ ತರಬಯಸುತ್ತೇನೆ. ಷೇರುಪೇಟೆಯಲ್ಲಿ ಹೂಡಿಕೆಗೂ ಮುಂಚೆ ಹೂಡಿಕೆಗೆ ಆಯ್ಕೆ ಮಾಡಿಕೊಂಡ ಕಂಪನಿಗಳ ಆಂತರಿಕ ಸಾಧನೆಗಳ ಬಗ್ಗೆ, ಆ ಕಂಪನಿಗಳ ಉತ್ಪನ್ನಗಳಿಗಿರುವ ಬೇಡಿಕೆ, ಲಾಭ ಗಳಿಸಲು ಇರುವ ಅವಕಾಶಗಳ ಬಗ್ಗೆ, ಕಂಪನಿಯ ಮೇನೇಜ್‌ ಮೆಂಟ್‌ ಗಳ ಚಿಂತನೆ ಮತ್ತು ಅವರು ಹೊಂದಿರುವ ಹೂಡಿಕೆದಾರ ಸ್ನೇಹಿ ಗುಣದ ಮಟ್ಟ ಮುಂತಾದ ವಿಚಾರಗಳ ಬಗ್ಗೆ ಸವಿವರವಾದ ಅಧ್ಯಯನದ ಅಗತ್ಯತೆ ನಮ್ಮ ಹೂಡಿಕೆಯ ಸುರಕ್ಷತೆಯ ದೃಷ್ಟಿಯಿಂದ ಬೇಕಾಗಿದೆ.

    ಕಂಪನಿಗಳ ಉತ್ಪನ್ನವು ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ತಾಂತ್ರಿಕತೆಯ ಅಭಿವೃದ್ಧಿಯ ಕಾರಣ ದೀರ್ಘಕಾಲೀನವಾಗಿ ಬೇಡಿಕೆಯಲ್ಲಿರಬಹುದೇ ಎಂಬ ಅಂಶವೂ ಮುಖ್ಯವಾಗಿರುತ್ತದೆ. ಕಾರಣ ತಾಂತ್ರಿಕತಾ ಯುಗಕ್ಕೂ ಮುಂಚೆ ಅಂದರೆ 80 ರ ದಶಕದಲ್ಲಿ ಟೈಪ್‌ ರೈಟರ್‌ ಗಳ ಯುಗದಲ್ಲಿ ರೆಮಿಂಗ್‌ ಟನ್‌ ರ್ಯಾಂಡ್‌ ಕಂಪನಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು, 86 ರಲ್ಲಿ 1:2 ಅನುಪಾತದ ಬೋನಸ್‌ ಷೇರು ಸಹ ವಿತರಿಸಿತು. ಆದರೆ ಟೈಪ್‌ ರೈಟರ್‌ ಗಳು, ಪರ್ಸನಲ್‌ ಕಂಪ್ಯೂಟರ್‌ ಗಳ ಪ್ರವೇಶದಿಂದ, ಮೂಲೆಗುಂಪಾದ ಕಾರಣ ಕಂಪನಿಯು ಕಣ್ಮರೆಯಾಯಿತು.

    1983 ರಲ್ಲಿ ನವದೆಹಲಿಯಲ್ಲಿ ಆರಂಭಿಸಲಾದ‌ ಡಿಜಿಟಲ್ ಸ್ಟೋರೇಜ್‌ ಕಂಪನಿ ಮೋಸರ್‌ ಬೇರ್‌ ತನ್ನ ಫ್ಲಾಪಿ ಡಿಸ್ಕ್ ಉತ್ಪಾದನೆಯನ್ನು ಕಾಲಕ್ಕೆ ತಕ್ಕಂತೆ ಬದಲಿಸಿ ಅಭಿವೃದ್ಧಿಪಡಿಸಿಕೊಂಡು ಬಂದು, ರೆಕಾರ್ಡಬಲ್‌, ಡಿಜಿಟಲ್‌ ವರ್ಸಟೈಲ್‌ ಡಿಸ್ಕ್‌ ಗಳನ್ನು ತಯಾರಿಸಿ ರಪ್ತುಮಾಡುವ ಹಂತಕ್ಕೆ ತಲುಪಿತಾದರೂ, ಬದಲಾದ ಪರಿಸ್ಥಿತಿಗೆ ಬಲಿಯಾಗಿ, 2018 ರಲ್ಲಿ ಸಮಾಪನಗೊಳಿಸಿಕೊಂಡಿತು (Liquidation). ಆರಂಭಿಕ ವರ್ಷಗಳಲ್ಲಿ ವಿಜೃಂಭಿಸಿದ ಚಟುವಟಿಕೆಯನ್ನು ಸ್ಟಾಕ್‌ ಎಕ್ಸ್‌ ಚೇಂಜ್‌ ಗಳಲ್ಲಿ ಪ್ರದರ್ಶಿಸಿ ನಂತರ ಮರೆಯಾಯಿತು.

    ಇನ್ನು ಕಂಪನಿಗಳ ಉತ್ಪನ್ನಗಳು ಸದಾ ಬೇಡಿಕೆಯಲ್ಲಿದ್ದಂತಹುದಾದರೆ ಮತ್ತು ಕಂಪನಿಗಳು ಷೇರುದಾರರ ಹಿತದ ನಿರ್ಣಯ ತೆಗೆದುಕೊಳ್ಳುವಂತಹವುಗಳಾದರೆ, ಷೇರಿನ ಬೆಲೆಗಳು ಕುಸಿತ ಕಂಡರೂ ಪುಟಿದೇಳುವ ಸಾಧ್ಯತೆ ಹೆಚ್ಚಿರುತ್ತದೆ.

    ಕ್ಲಾರಿಯಂಟ್‌ ಕಂಪನಿಯು, ಕೆಳಮಧ್ಯಮ ಶ್ರೇಣಿಯ ಕಂಪನಿಯಾದರೂ ಸಹ, ಎಷ್ಠರಮಟ್ಟಿಗೆ ಹೂಡಿಕೆದಾರ ಸ್ನೇಹಿ ಎಂದರೆ ಸುಮಾರು 20 ವರ್ಷಗಳಲ್ಲಿ ಪ್ರತಿ ಒಂದು ಷೇರಿಗೆ ರೂ.650 ಕ್ಕೂ ಹೆಚ್ಚಿನ ಲಾಭಾಂಶವನ್ನು ವಿತರಿಸಿದ ಕಂಪನಿಯಾಗಿದೆ. ಈ ಕಂಪನಿಯ ಷೇರಿನ ಬೆಲೆ ಒಂದು ತಿಂಗಳ ಹಿಂದಷ್ಠೇ ರೂ.520 ರ ಗರಿಷ್ಠದಲ್ಲಿದ್ದು, ನಂತರದಲ್ಲಿ ಶುಕ್ರವಾರ 17 ರಂದು ಷೇರಿನ ಬೆಲೆಯು ರೂ.499 ರವರೆಗೂ ಏರಿಕೆ ಕಂಡು ರೂ.482 ರ ಸಮೀಪಕ್ಕೆ ಅಂತ್ಯಗೊಂಡಿದೆ. 2020 ರಲ್ಲಿ ರೂ.151 ರೂಪಾಯಿಗಳ ಲಾಭಾಂಶ ವಿತರಿಸಿದರೆ, 2021 ರಲ್ಲಿ ಪ್ರತಿ ಷೇರಿಗೆ ರೂ.65 ರ ಲಾಭಾಂಶ ವಿತರಿಸಿದೆ. ಷೇರಿನ ಬೆಲೆಯು 2001 ರಲ್ಲಿ ರೂ.36 ರ ಕನಿಷ್ಠದ ಸಮೀಪವಿದ್ದ ಷೇರಿನ ಬೆಲೆಯು 2006 ರಲ್ಲಿ ರೂ.395 ಕ್ಕೆ ಏರಿಕೆ ಕಂಡು, 2009 ರಲ್ಲಿ ರೂ.144 ರ ಸಮೀಪಕ್ಕೆ ಇಳಿಯಿತು. 2011 ರಲ್ಲಿ ರೂ.854 ಕ್ಕೆ ಏರಿಕೆ ಕಂಡು 2013 ರಲ್ಲಿ ರೂ.371 ರವರೆಗೂ ಕುಸಿಯಿತು. 2015 ಕ್ಕೆ ರೂ.1,180 ಕ್ಕೆ ಜಿಗಿಯಿತು. 2019 ರಲ್ಲಿ ರೂ.265 ರ ಸಮೀಪಕ್ಕೆ ಕುಸಿದು 2020 ರಲ್ಲಿ ರೂ.193 ರ ಸಮೀಪಕ್ಕೆ ಜಾರಿತು. ಆದರೆ ಈ ವರ್ಷ ರೂ.642 ರವರೆಗೂ ಜಿಗಿದು ಈಗ ರೂ.482 ರ ಸಮೀಪವಿದೆ.

    ಹಿಂದೂಸ್ಥಾನ್‌ ಝಿಂಕ್‌ ಲಿಮಿಟೆಡ್ ಕಂಪನಿಯು ಆಗಷ್ಟ್‌ 17 ರಂದು ಮಧ್ಯಂತರ ಲಾಭಾಂಶ ವಿತರಣೆ ಪರಿಶೀಲನೆಯ ಕಾರ್ಯಸೂಚಿ ಪ್ರಕಟಿಸಿದಾಗ ಷೇರಿನ ಬೆಲೆ ರೂ.332 ರ ಸಮೀಪವಿದ್ದು, ಲಾಭಾಂಶ ಪರಿಶೀಲನೆಯನ್ನು ಮುಂದೂಡಿದ ಕಾರಣ ಷೇರಿನ ಬೆಲೆ ರೂ.311 ರ ವರೆಗೂ ಇಳಿದು ನಂತರದ ದಿನಗಳಲ್ಲಿ ಪುಟಿದೆದ್ದಿತು. ಸೆಪ್ಟೆಂಬರ್‌ 14 ರಂದು ಮತ್ತೊಮ್ಮೆ ಏರಿಕೆಯಿಂದ ರೂ.338 ನ್ನು ತಲುಪಿ ಅಕ್ಟೋಬರ್‌ 1 ರಂದು ರೂ.306 ಕ್ಕೆ ಕುಸಿದು 18 ರಂದು ರೂ.407.90 ರ ವಾರ್ಷಿಕ ಗರಿಷ್ಠಕ್ಕೆ ಜಿಗಿದು ರೂ.387 ರ ಸಮೀಪದಲ್ಲಿ ಕೊನೆಗೊಂಡಿದೆ. ಈ ತಿಂಗಳ 7 ರಂದು ಕಂಪನಿಯು ಪ್ರತಿ ಷೇರಿಗೆ ರೂ.18 ರಂತೆ ಲಾಭಾಂಶ ಪ್ರಕಟಿಸಿತು. ನಂತರದ ದಿನಗಳಲ್ಲಿ ರೂ.370 ರ ಸಮೀಪದವರೆಗೂ ಜಿಗಿತ ಕಂಡ ಷೇರು, ಲಾಭಾಂಶ ವಿತರಣೆಯ ನಂತರ ರೂ.335 ರ ಸಮೀಪದಲ್ಲಿ ಷೇರು ವಹಿವಾಟಾಗುತ್ತಿತ್ತು. ನಂತರ ಪೇಟೆಯ ಕುಸಿತದ ಒತ್ತಡದಿಂದ ರೂ.313 ರ ಸಮೀಪಕ್ಕೆ ಕುಸಿದಿದೆ.

    ಅಗ್ರಮಾನ್ಯ ಕಂಪನಿಗಳ ಷೇರಿನ ಬೆಲೆಗಳ ಏರಿಳಿತಗಳ ಲಾಭವನ್ನು ವಹಿವಾಟುದಾರರು ಪಡೆದುಕೊಳ್ಳುತ್ತಿರುವಾಗ ಸಣ್ಣ ಹೂಡಿಕೆದಾರರು ಸಹ ಅಲ್ಪ ಪ್ರಮಾಣದಲ್ಲಿ ಲಾಭ ಗಳಿಸಲು ಪ್ರಯತ್ನಿಸಬಹುದು. ಆದರೆ ಸದಾ ನೆನಪಿನಲ್ಲಿಡಬೇಕಾದ ಅಂಶ ಎಂದರೆ ಪ್ರವೇಶದ ಸಂದರ್ಭದಲ್ಲಿ ದೀರ್ಘಕಾಲೀನ ಹೂಡಿಕೆಯ ದೃಷ್ಠಿಯಿದ್ದರೂ ನಂತರ ಚಟುವಟಿಕೆಯು ವ್ಯವಹಾರಿಕ ದೃಷ್ಠಿಯಿಂದ, ದೀರ್ಘಕಾಲೀನ ಎಂಬ ಮೋಹಕ ಪದದಿಂದ ದೊರೆಯುವ ಅವಕಾಶ ಕಳೆದುಕೊಳ್ಳದೆ, ʼಆನೆಯಾಗಿ ಸೊಪ್ಪು ತಿನ್ನುವುದಕ್ಕಿಂತ – ಇರುವೆಯಾಗಿ ಸಕ್ಕರೆ ತಿನ್ನುವುದು ಲೇಸುʼ ಎಂಬುದು. ಗಜಗಾತ್ರದ ವಹಿವಾಟಿನ ವ್ಯಾಮೋಹ ಬೇಡ, ಸೀಮಿತ ಲಾಭಕ್ಕೆ ಸೀಮಿತಗೊಳಿಸಿಕೊಂಡಲ್ಲಿ ಬಂಡವಾಳವೂ ಸುರಕ್ಷಿತ ಮತ್ತು ಮನಸ್ಸು ಮತ್ತು ದೇಹಗಳ ಸೌಖ್ಯವೂ ಸಾಧ್ಯ.

    ಸಾಧ್ಯವಾದಷ್ಠು ಹೂಡಿಕೆಗುಚ್ಚವನ್ನು ಹೆಚ್ಚು ಹೆಚ್ಚು ಕಂಪನಿಗಳಿಗೆ ವಿಸ್ತರಿಸಿರಿ ಮತ್ತು ಷೇರಿನ ದರಗಳ ಕುಸಿತಕ್ಕೆ ಕಾಯಿರಿ. ಖಂಡಿತಾ ಅವಕಾಶಗಳು ಸೃಷ್ಠಿಯಾಗುತ್ತವೆ. ಇವು ಕೆಲವು ಉದಾಹರಣೆಗಳಾಗಿ ಹೆಸರಿಸಲಾಗಿದೆ, ಹೂಡಿಕೆಗೂ ಮುಂಚೆ ಪರಿಶೀಲಿಸಿರಿ, ನಿರ್ಧರಿಸಿರಿ. ಇದು ಯಾವುದೇ ಶಿಫಾರಸ್ಸು ಅಲ್ಲ, ಕೇವಲ ನಿದರ್ಶನಕ್ಕೆ ಮಾತ್ರ.

    ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಬೆಳಗಾವಿಯಲ್ಲಿ ಪುಂಡಾಟಿಕೆ: ಘಟನೆಯನ್ನು ಖಂಡಿಸಿದ ಮುಖ್ಯ ಮಂತ್ರಿ

    HUBBLLI DEC 18

    ಬೆಳಗಾವಿಯಲ್ಲಿ ನಿನ್ನೆ ರಾತ್ರಿ ನಡೆದ ಪುಂಡಾಟಿಕೆಯನ್ನು ಖಂಡಿಸುತ್ತೇನೆ. ಆ ಪುಂಡರನ್ನು ಸೆದೆ ಬಡಿಯುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

    ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಗೃಹ ಸಚಿವರಿಗೆ ಸೂಚಿಸಿದ್ದೇನೆ. ಅವರೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಕಲ್ಲು ತೂರಾಟ ಮಾಡುವುದು , ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾಗೂ ಸರ್ಕಾರಿ ವಾಹನಗಳಿಗೆ ಹಾನಿ ಉಂಟುಮಾಡುವುದು ಕಾನೂನು ಬಾಹಿರ. ಇಂಥ ಘಟನೆ ಪುನಃ ಜರುಗದಂತೆ ಇನ್ನಷ್ಟು ಕಠಿಣ ಹಾಗೂ ದೀರ್ಘಾವಧಿ ಕ್ರಮಗಳನ್ನು ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈ ಪ್ರವೃತ್ತಿ ಸರಿಯಲ್ಲ ಎಂದರು.

    ರಾಷ್ಟ್ರಭಕ್ತರ ಪ್ರತಿಮೆ ಭಗ್ನಗೊಳಿಸುವುದು ದೇಶಭಕ್ತರ ಕೆಲಸವಲ್ಲ. ದೇಶಭಕ್ತರು ಎಲ್ಲಾ ಸಮುದಾಯಕ್ಕೆ ಸೇರಿದವರು. ದೇಶಕ್ಕಾಗಿ ತ್ಯಾಗ ಮಾಡಿದವರು. ಪ್ರತಿಮೆ ಸ್ಥಾಪಿಸುವುದು ಅವರನ್ನು ಗೌರವಿಸಬೇಕೆಂದೇ ವಿನಃ ಅವರ ಮುಖಾಂತರ ಸಮಾಜದಲ್ಲಿ ಕ್ಷೋಭೇ ಉಂಟುಮಾಡುವುದಲ್ಲ. ಈ ವರ್ತನೆ ಎಳ್ಳಷ್ಟೂ ಸರಿಯಲ್ಲ. ಕೆಲವು ಪುಂಡರು ಈ ರೀತಿ ಮಾಡುತ್ತಿದ್ದು ಅವರನ್ನು ಸದೆ ಬಡಿಯಲಾವುದು. ಇದು ಉದ್ದೇಶಪೂರ್ವಕವೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.

    ಕನ್ನಡಿಗರ ರಕ್ಷಣೆ ನಮ್ಮ ಸರ್ಕಾರದ ಹೊಣೆ: ಬಸವರಾಜ ಬೊಮ್ಮಾಯಿ

    ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ರಕ್ಷಣೆ ನಮ್ಮ ಸರ್ಕಾರದ ಹೊನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಬೆಳಗಾವಿಯಲ್ಲಿ ಶುಕ್ರವಾರ ರಾತ್ರಿ ನಡೆದ ಪ್ರಕರಣದ ಬಗ್ಗೆ ಮಾತನಾಡಿದರು.

    ಕೆಲವರು ಕಾನೂನು ಬಾಹಿರವಾಗಿ ಪುಂಡಾಟಿಕೆ ಮಾಡಿದ್ದಾರೆ. ಕರ್ನಾಟಕದ ಕಾನೂನು ಸುವ್ಯವಸ್ಥೆ ನಮ್ಮ ಜವಾಬ್ದಾರಿ. ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ತೆ ಕಾಪಾಡಿಕೊಳ್ಳುವುದು ಅಲ್ಲಿನ ಸರ್ಕಾರದ ಜವಾಬ್ದಾರಿ. ಅಲ್ಲಿನ ಕನ್ನಡಿಗರ ರಕ್ಷಣೆ ಹಾಗೂ ಬಸ್ಸು ಇತ್ಯಾದಿ ವಾಹನಗಳ ರಕ್ಷಣೆ ಮಾಡಲು ನಮ್ಮ ಪೋಲಿಸ್ ವiಹಾ ನಿರ್ದೇಶಕರು ಅಲ್ಲಿನ ಪೊಲೀಸ್ ಮಹಾನಿರ್ದೇಶಕರೊಂದಿಗೆ ಹಾಗೂ ಗೃಹ ಸಚಿವರು ಮಹಾರಾಷ್ಟ್ರದ ಗೃಹ ಸಚಿವರು ರೊಂದಿಗೆ ಮಾತನಾಡಲಿದ್ದಾರೆ. ಮೊದಲು ಅಧಿಕಾರಿಗಳು ಮಾತನಾಡುತ್ತಾರೆ. ನಂತರ ಅಗತ್ಯ ಬಿದ್ದರೆ ಅಲ್ಲಿನ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದರು.

    ಶಿವಸೇನೆಯ ಸಂಜಯ್ ರಾವತ್ ಅವರು ಮರಾಠಿಗಳು ಒಂದಾಗುವಂತೆ ಕರೆ ನೀಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಜವಾಬ್ದಾರಿ ಇರುವ ಜನರು ಯಾರನ್ನೂ ಯಾವ ಸಮಯದಲ್ಲಿಯೂ ಪ್ರಚೋದನೆ ಮಾಡಬಾರದು. ಛತ್ರಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ, ದೇಶವನ್ನು ಒಗ್ಗೂಡಿಸಿದವರು. ಅವರ ಹೆಸರಿನಲ್ಲಿ ನಾವು ಜಗಳವಾಡಿಕೊಂಡು ಒಡಕು ಮೂಡಿಸಿದರೆ ಅದು ಅವರ ಹೋರಾಟಕ್ಕೆ ಅನ್ಯಾಯವೆಸಗಿದಂತಾಗುತ್ತದೆ. ಕಾನೂನನ್ನ ಕೈಗೆ ತೆಗೆದುಕೊಂಡು ಯಾರನ್ನೂ ಇಂತಹ ಕೆಲಸಗಳನ್ನು ಮಾಡಲು ಕುಮ್ಮಕ್ಕು ನೀಡಬಾರದು ಎಂದರು.

    error: Content is protected !!