19.6 C
Karnataka
Tuesday, November 26, 2024
    Home Blog Page 36

    Rani Channamma University :ರಾಣಿ ಚನ್ನಮ್ಮ ವಿ.ವಿ.ಕ್ಯಾಂಪಸ್ ನಿರ್ಮಾಣಕ್ಕೆ 22ರಂದು ಸಿಎಂ ಶಂಕುಸ್ಥಾಪನೆ: ಸಚಿವರಿಂದ ಸ್ಥಳ ವೀಕ್ಷಣೆ

    ಇಲ್ಲಿನ ಹಿರೇಬಾಗೇವಾಡಿಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪೂರ್ಣಪ್ರಮಾಣದ ಕ್ಯಾಂಪಸ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಇದೇ 22ರಂದು ಶಂಕುಸ್ಥಾಪನೆ ಮಾಡುತ್ತಿದ್ದು ಅದರ ಪೂರ್ವ ತಯಾರಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ, ವೀಕ್ಷಿಸಿದರು.

    ಕ್ಯಾಂಪಸ್ ನಿರ್ಮಾಣಕ್ಕೆಂದು ಮೀಸಲಿಟ್ಟಿರುವ 125 ಎಕರೆ ಪ್ರದೇಶವನ್ನು ವೀಕ್ಷಿಸಿದ ಅವರು, ನೂತನ ಕ್ಯಾಂಪಸ್ಸಿನಲ್ಲಿ ಯಾವ್ಯಾವ ಸೌಲಭ್ಯಗಳಿರಬೇಕು ಎನ್ನುವುದನ್ನು ವಿಶ್ವವಿದ್ಯಾಲಯದ ಕುಲಪತಿ ಮತ್ತು ಇತರ ಪ್ರಮುಖರೊಂದಿಗೆ ಚರ್ಚಿಸಿದರು.

    ನೂತನ ಕ್ಯಾಂಪಸ್ ವಿದ್ಯಾರ್ಥಿಸ್ನೇಹಿಯಾಗಿ ಇರಲಿದ್ದು, ಗುಣಮಟ್ಟದ ಬೋಧನೆಗೆ ಅಗತ್ಯವಿರುವ ಅತ್ಯಾಧುನಿಕ ಸೌಲಭ್ಯ ಮತ್ತು ತಂತ್ರಜ್ಞಾನಗಳನ್ನೆಲ್ಲ ಒಳಗೊಂಡಿರಲಿದೆ. ಈ ಕಾರ್ಯವನ್ನು ತ್ವರಿತ ಗತಿಯಲ್ಲಿ ಕೈಗೆತ್ತಿಕೊಂಡು, ಕಿತ್ತೂರು ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡಲಾಗುವುದು ಎಂದು ಅವರು ಹೇಳಿದರು.

    ಈ ಸಂದರ್ಭದಲ್ಲಿ ವಿವಿ ಕುಲಪತಿ ಪ್ರೊ‌ ರಾಮಚಂದ್ರ ಗೌಡ ಮುಂತಾದವರು ಸಚಿವರ ಜತೆಗಿದ್ದರು.

    UVCE, VTU will be upgraded on par with IIT;ಎಲ್ಲ ಜಿಲ್ಲೆಗಳಲ್ಲೂ ವಿವಿ ಸ್ಥಾಪನೆ

    BELAGAVI DEC 15

    ರಾಜ್ಯದಲ್ಲಿ ವಿಶ್ವವಿದ್ಯಾಲಯಗಳು ಇಲ್ಲದ ಜಿಲ್ಲೆಗಳಲ್ಲಿ ಆದಷ್ಟು ತ್ವರಿತವಾಗಿ ವಿ.ವಿ.ಗಳನ್ನು ಸ್ಥಾಪಿಸಲಾಗುವುದು. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತಲೆ ಎತ್ತಲಿರುವ ಈ ವಿ.ವಿ.ಗಳಲ್ಲಿ ಕುಲಪತಿಯೂ ಸೇರಿದಂತೆ ಗರಿಷ್ಠ 25 ಸಿಬ್ಬಂದಿ ಮಾತ್ರ ಇರಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ -VTU-ಆವರಣದಲ್ಲಿ ಬುಧವಾರ ನಡೆದ `ಜ್ಞಾನಯಜ್ಞ ಫೆಲೋಶಿಪ್ ವಿತರಣೆ ಮತ್ತು ವಿದ್ಯುನ್ಮಾನ ಪ್ರಮಾಣ ಪತ್ರಗಳ ಸೇವಾ ವ್ಯವಸ್ಥೆ’ (ಎಲೆಕ್ಟ್ರಾನಿಕ್ ಡಾಕ್ಯುಮೆಂಟರಿ ಡೆಲಿವರಿ) ಹಾಗೂ ಟ್ರ್ಯಾಕಿಂಗ್ ವ್ಯವಸ್ಥೆಯ ಉದ್ಘಾಟನೆ ನೆರವೇರಿಸಿ ಅವರು ಬುಧವಾರ ಮಾತನಾಡಿದರು.

    `ನೂರಾರು ಎಕರೆ ವಿಶಾಲವಾದ ಕ್ಯಾಂಪಸ್ಸುಗಳು ಈಗ ಅಪ್ರಸ್ತುತವಾಗುತ್ತಿವೆ. ಆಧುನಿಕ ತಂತ್ರಜ್ಞಾನವು ಸಮರ್ಥವಾಗಿದ್ದು, ತುಂಬಾ ಕಡಿಮೆ ಜಾಗದಲ್ಲಿ ವಿ.ವಿ.ಗಳನ್ನು ಸ್ಥಾಪಿಸಲು ಈಗ ಸಾಧ್ಯವಿದೆ. ದೊಡ್ಡದೊಡ್ಡ ವಿ.ವಿ.ಗಳನ್ನು ಆರಂಭಿಸುವ ಬದಲು ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ವಿಶ್ವವಿದ್ಯಾಲಯಗಳು ಇರುವಂತೆ ನೋಡಿಕೊಳ್ಳುವುದಕ್ಕೆ ಸರಕಾರದ ಆದ್ಯತೆ ಕೊಟ್ಟಿದೆ’ ಎಂದು ಅವರು ನುಡಿದರು.

    ಇದರ ಜತೆಗೆ ಬೆಂಗಳೂರಿನಲ್ಲಿರುವ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜನ್ನು (ಯುವಿಸಿಇ) ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ 10 ವರ್ಷಗಳ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

    120 ಎಕರೆ ವಿಶಾಲವಾಗಿರುವ ಬೆಳಗಾವಿಯ ವಿಟಿಯು ಕೂಡ ಐಐಟಿ ಮಾದರಿಯಲ್ಲೇ ಬೆಳೆಯಬೇಕು. ಈ ನಿಟ್ಟಿನಲ್ಲಿ ಕುಲಪತಿ ಪ್ರೊ.ಕರಿಸಿದ್ಧಪ್ಪನವರು ಇನ್ನು ಒಂದು ತಿಂಗಳಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ, ಸರಕಾರಕ್ಕೆ ಸಲ್ಲಿಸಲು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದರು.

    ಹಾಗೆಯೇ ರಾಜ್ಯದಲ್ಲಿರುವ 17 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಜಾಗತಿಕ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಎಂಜಿನಿಯರಿಂಗ್ ಓದುವವರು ಸಹಜವಾಗಿಯೇ ಈ ಕಾಲೇಜುಗಳತ್ತ ಆಕರ್ಷಿತವಾಗುವಂತೆ ಇವುಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಇವುಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡುವುದರ ಜತೆಗೆ ಆಡಳಿತ ಮಂಡಳಿಯನ್ನೂ ಸ್ಥಾಪಿಸಲಾಗುವುದು ಎಂದು ಅಶ್ವತ್ಥನಾರಾಯಣ ಹೇಳಿದರು.

    ಸಮಾರಂಭದಲ್ಲಿ ವಿಟಿಯು ಕುಲಪತಿ ಪ್ರೊ,ಕರಿಸಿದ್ಧಪ್ಪ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಕುಲಸಚಿವರಾದ ಪ್ರೊ.ಬಿ.ಇ.ರಂಗಸ್ವಾಮಿ, ಪ್ರೊ.ಎ.ಎಸ್.ದೇಶಪಾಂಡೆ ಮುಂತಾದವರು ಉಪಸ್ಥಿತರಿದ್ದರು.

    22 ವಿದ್ಯಾರ್ಥಿಗಳಿಗೆ ಜ್ಞಾನಯಾನ ಫೆಲೋಶಿಪ್

    ವಿಟಿಯು ಹಮ್ಮಿಕೊಂಡಿರುವ ಜ್ಞಾನಯಾನ ಫೆಲೋಶಿಪ್ ಕಾರ್ಯಕ್ರಮದಡಿ ಸಚಿವರು, 22 ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಪತ್ರ ವಿತರಿಸಿದರು.

    ಈ ಯೋಜನೆಯಡಿ ಪ್ರತಿ ವಿದ್ಯಾರ್ಥಿಗೂ ತಿಂಗಳಿಗೆ 25 ಸಾವಿರ ರೂ. ನೀಡಲಾಗುವುದು. ಆಯ್ಕೆಯಾಗಿರುವ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್, ನ್ಯಾನೊ ತಂತ್ರಜ್ಞಾನ, ಏರೋಸ್ಪೇಸ್ ಪ್ರೊಪಲ್ಶನ್ ಎಂಜಿನಿಯರಿಂಗ್ ಮುಂತಾದ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರುವವರು ಇದ್ದಾರೆ ಎಂದು ಅವರು ತಿಳಿಸಿದರು.

    ಎಲೆಕ್ಟ್ರಾನಿಕ್ ಡಾಕ್ಯುಮೆಂಟರಿ ಡೆಲಿವರಿ ವ್ಯವಸ್ಥೆ

    ವಿಟಿಯು ಆರಂಭಿಸಿರುವ ಈ ಯೋಜನಯಡಿ ವಿದ್ಯಾರ್ಥಿಗಳು ತಮಗೆ ಬೇಕಾದ ಪ್ರಮಾಣಪತ್ರ, ಸಂಭಾವ್ಯ ಪದವಿ ಪ್ರಮಾಣ ಪತ್ರ, ಅಂಕಪಟ್ಟಿ, ವರ್ಗಾವಣೆ ಪತ್ರ, ಹೆಸರು ಬದಲಾವಣೆ, ದಾಖಲಾತಿಗಳ ಪರಿಶೀಲನೆ, ಮಾಧ್ಯಮ ಆಯ್ಕೆ ಮುಂತಾದ ಹತ್ತಾರು ಸೇವೆಗಳನ್ನು ಆನ್ ಲೈನ್ ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಅಶ್ವತ್ಥನಾರಾಯಣ ಹೇಳಿದರು.

    Sri Jagannatha Daasaru:ಹರಿದಾಸ ಚರಿತೆಯ ಅನಾವರಣದ ಅಸ್ತಿಭಾರ

    ವಾದಿರಾಜ ದೇಸಾಯಿ

    ಕನ್ನಡ ನಾಡಿನಲ್ಲಿ ಹರಿದಾಸ ಪರಂಪರೆಗೆ ದೊಡ್ಡ ಇತಿಹಾಸವೇ ಇದೆ. ಕನ್ನಡಕ್ಕೆ ಹರಿದಾಸ ಸಾಹಿತ್ಯದ ಕೊಡುಗೆಯೂ ಅನನ್ಯ. ಇದನ್ನು ಪರಿಚಯಿಸುವುದಕ್ಕೆ ಚಿತ್ರ ಮಾಧ್ಯಮವನ್ನು ಸಾಧನವನ್ನಾಗಿ ಬಳಸಿಕೊಳ್ಳುವ ಪ್ರಯೋಗ ಇದೀಗ ಶುರುವಾಗಿದೆ.
    ಹೊಸ ಕಲಾವಿದರಿಗೆ ಅವಕಾಶ ನೀಡುವ ಮೂಲಕವೇ ಅಂತಹ ಪ್ರಯೋಗಕ್ಕೆ ಮಧುಸೂದನ ಹವಾಲ್ದಾರ್ ಮುಂದಾಗಿದ್ದಾರೆ.

    ತ್ರಿವಿಕ್ರಮ ಜೋಷಿ (ವಿಜಯದಾಸರು), ಪ್ರಭಂಜನ ದೇಶಪಾಂಡೆ (ಗೋಪಾಲ ದಾಸರು).

    ಹರಿದಾಸ ಸಾಹಿತ್ಯವನ್ನು ಸರಳವಾಗಿ, ಕನ್ನಡದಲ್ಲಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪುರಂದರದಾಸರು, ಕನಕದಾಸರು, ವಿಜಯದಾಸರು, ಗೋಪಾಲ ದಾಸರು, ಜಗನ್ನಾಥ ದಾಸರ ಪಾತ್ರ ಬಲು ದೊಡ್ಡದು.
    ಈ ನಿಟ್ಟಿನಲ್ಲಿ, ಆರಂಭದಲ್ಲಿ ಜಗನ್ನಾಥ ದಾಸರ ಜೀವನ ಚರಿತ್ರೆಯನ್ನು ದೃಶ್ಯ ಮಾಧ್ಯಮದ ಮೂಲಕ ಪ್ರಸ್ತುತಪಡಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

    ಡಾ. ಮಧುಸೂದನ ಹವಾಲ್ದಾರ್, ನಿರ್ದೇಶಕ (ಬಲಬದಿಗೆ)

    ಚಿತ್ರಕತೆ, ನಿರೂಪಣೆ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಸಂಭಾಷಣೆಯಲ್ಲಿ ಇನ್ನಷ್ಟು ಸುಧಾರಣೆಯ ಅಗತ್ಯವಿತ್ತು .ಜಗನ್ನಾಥ ದಾಸರ ಪಾತ್ರದಲ್ಲಿ ಶರತ್ ಜೋಷಿ, ಅದರಲ್ಲೂ ಅಂತಿಮ ದೃಶ್ಯದಲ್ಲಿ ಭಾವತನ್ಮಯರಾಗಿ ನಟಿಸಿದ್ದನ್ನು ನೋಡಿದರೆ, ಎರಡನೇ ಭಾಗದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ನಿರೀಕ್ಷೆ ಹುಟ್ಟಿಸುತ್ತಾರೆ.

    ಗೋಪಾಲ ದಾಸರಾಗಿ ಪ್ರಭಂಜನ ದೇಶಪಾಂಡೆ ಲವಲವಿಕೆಯಿಂದ ನಟಿಸಿ, ಪಾತ್ರಕ್ಕೆ ಜೀವ ತುಂಬಿದ್ದಾರೆ.ವಿಜಯ ದಾಸರಾಗಿ ತ್ರಿವಿಕ್ರಮ ಜೋಷಿ ಅವರು ಪಾತ್ರದ (ಗುರುವಾಗಿ) ಗಾಂಭೀರ್ಯವನ್ನು ಅರಿತು ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.

    ಹಾಡುಗಳು ಚಿತ್ರದ ಹೈಲೈಟ್ಸ್. ಕೊನೆಯಲ್ಲಿ, “ಜಗನ್ನಾಥ ವಿಠ್ಠಲ” ಎಂಬ ಅಂಕಿತ ಸಿಗುವ ಸನ್ನಿವೇಶದ ಮೂಲಕ ನಿರ್ದೇಶಕರು ಮುಂದಿನ ಭಾಗದ ಬಗ್ಗೆ ಕುತೂಹಲವನ್ನು ಮೂಡಿಸುತ್ತಾರೆ.


    ಕನ್ನಡಪ್ರಭ , ವಿಜಯ ಕರ್ನಾಟಕ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ವಾದಿರಾಜ ದೇಸಾಯಿ ನಾಡಿನ ಹಿರಿಯ ಪತ್ರಕರ್ತರು

    Guest Lecturers:ಅತಿಥಿ ಉಪನ್ಯಾಸಕರ ಸಮಸ್ಯೆ: ತಿಂಗಳಲ್ಲಿ ಸಮಿತಿ ವರದಿ, ಬಳಿಕ ಪರಿಹಾರ

    BELAGAVI DEC 14

    ಸೇವಾಭದ್ರತೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ರಾಜ್ಯದ 14 ಸಾವಿರ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ ಕಲ್ಪಿಸುವ ಸಂಬಂಧ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಸಭೆ ನಡೆಯಿತು.

    ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸೇರಿದಂತೆ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರು ಕೂಡ ಭಾಗವಹಿಸಿದ್ದ ಈ ಸಭೆಯು, ಈ ಸಂಬಂಧ ರಚಿಸಲಾಗಿರುವ ಉನ್ನತ ಮಟ್ಟದ ಸಮಿತಿಯು ಒಂದು ತಿಂಗಳಲ್ಲಿ ವರದಿ ಸಲ್ಲಿಸಬೇಕೆಂದು ಸೂಚಿಸಿತು. ಸಮಿತಿಯ ಭಾಗವಾಗಿರುವ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್. ಎನ್ ಪ್ರಸಾದ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಕೂಡ ಇದಕ್ಕೆ ಸ್ಪಂದಿಸಿ, ಕಾಲಮಿತಿಯೊಳಗೆ ವರದಿ ಕೊಡುವುದಾಗಿ ಹೇಳಿದ್ದಾರೆ.

    ಈ ಬಗ್ಗೆ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, ಸಮಿತಿಯ ವರದಿ ಕೈಸೇರಿದ ನಂತರ ಅತಿಥಿ ಉಪನ್ಯಾಸಕರ ಸಮಸ್ಯೆ ಮತ್ತು ಬೇಡಿಕೆಗಳನ್ನು ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಕೂಲಂಕಷವಾಗಿ ಚರ್ಚಿಸಲಾಗುವುದು. ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಈ ವಿಷಯಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಲಾಗಿದೆ ಎನ್ನುವುದನ್ನು ಪರಿಶೀಲಿಸಿ, ರಾಜ್ಯದ ಅತಿಥಿ ಉಪನ್ಯಾಸಕರಿಗೂ ನ್ಯಾಯ ಸಲ್ಲಿಸಲಾಗುವುದು ಎಂದರು.

    ಅಲ್ಲದೆ, ಈ ಅತಿಥಿ ಉಪನ್ಯಾಸಕರಿಗೆ ನೇಮಕಾತಿ ಸಂದರ್ಭದಲ್ಲಿ ಆದ್ಯತೆ ಕೊಡಬೇಕೇ ಅಥವಾ ಇವರಿಗೆ ಒಂದು ಗೌರವಾರ್ಹ ವೇತನವನ್ನು ನಿಗದಿಪಡಿಸಿ ಸೇವೆಯಲ್ಲಿ ಮುಂದುವರಿಸಬೇಕೇ ಎನ್ನುವ ಸಾಧ್ಯತೆಗಳನ್ನು ಕೂಡ ಗಮನಕ್ಕೆ ತೆಗೆದುಕೊಳ್ಳಲಾಗುವುದು ಎಂದು ಅವರು ನುಡಿದರು.

    ಇದೇ ಸಂದರ್ಭದಲ್ಲಿ ಸಭಾಪತಿಯವರು, ಅತಿಥಿ ಉಪನ್ಯಾಸಕರ ಸಮಸ್ಯೆಗಳ ನಿವಾರಣೆಗೆ ಉನ್ನತ ಶಿಕ್ಷಣ ಇಲಾಖೆ ಸಚಿವರು ಕೈಗೊಂಡಿರುವ ಹಲವು ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಕರ್ತವ್ಯಕ್ಕೆ ಹಾಜರಾಗಿ :ಇದೇ ಸಂದರ್ಭದಲ್ಲಿ ಸಚಿವರು, `ಮುಷ್ಕರ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು. ಸಮಸ್ಯೆ ನಿವಾರಣೆಗೆ ಸರಕಾರ ಕಟಿಬದ್ಧವಾಗಿದೆ. ಇಷ್ಟಾದರೂ ಮುಷ್ಕರ ನಿಲ್ಲಿಸದೆ ಹೋದರೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

    ಸಭೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯರುಗಳಾದ ಅರುಣ ಶಹಾಪುರ, ವೈ.ಎ.ನಾರಾಯಣಸ್ವಾಮಿ, ಕೆ.ಟಿ.ಶ್ರೀಕಂಠೇಗೌಡ, ಭೋಜೇಗೌಡ, ಅರುಣ್ ಶಹಾಪುರ, ಆಯನೂರು ಮಂಜುನಾಥ್, ಸಂಗಮೇಶ ನಿರಾಣಿ ಮತ್ತಿತರರು ಇದ್ದರು.

    Guest Lecturers : ಅತಿಥಿ ಉಪನ್ಯಾಸಕರ ಬೇಡಿಕೆಗಳ ಅಧ್ಯಯನಕ್ಕೆ ಸಮಿತಿ ರಚನೆ

    BENGALURU DEC 13

    ರಾಜ್ಯದಲ್ಲಿರುವ 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ನಾನಾ ಬೇಡಿಕೆಗಳನ್ನು ಕುರಿತು ಅಧ್ಯಯನ ನಡೆಸಿ, ವಿಸ್ತೃತ ವರದಿ ಸಲ್ಲಿಸಲು ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.

    ಈ ಬಗ್ಗೆ ಸರಕಾರ ಸೋಮವಾರ ಆದೇಶ ಹೊರಡಿಸಿದ್ದು, ಇದರಲ್ಲಿ ಆರ್ಥಿಕ ಮತ್ತು ಕಾನೂನು ಇಲಾಖೆಯ ಕಾರ್ಯದರ್ಶಿಗಳು ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಕೂಡ ಇರಲಿದ್ದಾರೆ. ಸಮಿತಿಯು ನಿಗದಿತ ಕಾಲಮಿತಿಯೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ.

    ಜೊತೆಗೆ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರಗಳಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯರುಗಳ ಸಭೆಯನ್ನು ಕೂಡ ಮಂಗಳವಾರದಂದು ಬೆಳಗಾವಿಯಲ್ಲಿ ಕರೆಯಲಾಗಿದೆ.

    ಪ್ರತಿಪಕ್ಷದವರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಸಿದ್ದ :ಸಿಎಂ


    BELAGAVI DEC 13
    ವಿರೋಧಪಕ್ಷದವರು ಪ್ರಸ್ತಾಪ ಮಾಡುವ ವಿಷಯಗಳಿಗೆ ಸಮರ್ಪಕ ಉತ್ತರ ನೀಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ವಿಮಾನ ನಿಲ್ದಾಣ ಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

    ಹಲವಾರು ಕಾನೂನುಗಳನ್ನು ತರುವುದು , ಜನಪರವಾದ ಅಭಿವೃದ್ಧಿಯ ಕುರಿತು ಚರ್ಚೆ ಮಾಡಿ ಅದಕ್ಕೆ ಪರಿಹಾರ ದೊರಕಿಸುವುದು ಸರ್ಕಾರದ ಆದ್ಯತೆ. ಸಮಗ್ರ ಕರ್ನಾಟಕದ ಜೊತೆಗೆ ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಯ ವಿಚಾರ ಹಾಗೂ ಯೋಜನೆಗಳ ಬಗ್ಗೆ ಚರ್ಚೆ ಆಗಬೇಕೆನ್ನುವುದು ನಮ್ಮ ಉದ್ದೇಶ ಎಂದರು.

    ವಿರೋಧ ಪಕ್ಷದವರಿಗೆ ವಿಧಾನ ಮಂಡಲದ ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶವಿದೆ. ಅವರು ಯಾವುದೇ ವಿಚಾರಗಳನ್ನು ಎತ್ತಿದರೂ ಕೂಡ ವಾಸ್ತವದ ನೆಲೆಗಟ್ಟಿನ ಮೇಲೆ ಸರ್ಕಾರ ಸಮರ್ಪಕವಾಗಿ ಉತ್ತರ ನೀಡಲಿದೆ ಎಂದರು.

    ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಹಲವಾರು ಅಭಿವೃದ್ಧಿ ಯೋಜನೆಗಳನ್ನು ತರಲು, ನಿರ್ಣಯಗಳನ್ನು
    ತೆಗೆದುಕೊಳ್ಳಬೇಕೆಂದಿದೆ. ಬಹಳ ವರ್ಷಗಳಿಂದ ಬೇಡಿಕೆಯಲ್ಲಿರುವ ವಿಷಯಗಳನ್ನು ಪೂರೈಸಲು ಬಗ್ಗೆ ಸಕಾರಾತ್ಮಕವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.

    ಮತಾಂತರ ನಿಷೇಧ ಕಾಯ್ದೆ:ಮತಾಂತರ ಕಾಯ್ದೆ ಕಾನೂನು ಇಲಾಖೆಯ ಪರಿಶೀಲನಾ ಸಮಿತಿಯಲ್ಲಿದ್ದು, ಒಪ್ಪಿಗೆಯಾಗಿ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಬೇಕು ನಂತರ ಸದನದಲ್ಲಿ ಮಂಡಿಸಲಾಗುವುದು ಎಂದರು .

    ಮತಾಂತರ ಕಾಯ್ದೆಯನ್ನು ವಿರೋಧಿಸುವುದಾಗಿ ವಿರೋಧ ಪಕ್ಷಗಳ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯ ಮಂತ್ರಿಗಳು, ಹಲವಾರು ಕಾನೂನುಗಳ ಬಗ್ಗೆ ಪರ-ವಿರೋಧ ಇದ್ದೇ ಇರುತ್ತದೆ. ಸರ್ಕಾರ ಜನಹಿತಕ್ಕಾಗಿ ಕಾನೂನು ಗಳನ್ನು ತರಲೇಬೇಕಾಗುತ್ತದೆ. ಈ ಕುರಿತು ಚರ್ಚೆ ಮಾಡುತ್ತೇವೆ. ಎಂದರು.

    ವಾರಣಾಸಿ ಭೇಟಿ:ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ವಾರಣಾಸಿಯಲ್ಲಿ ಬಿಜೆಪಿ ಮುಖ್ಯ ಮಂತ್ರಿಗಳ ಸಭೆಯಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಬೇಕೆಂಬ ಚಿಂತನೆ ಇದೆ. ಸಭೆಯಲ್ಲಿ ಪಾಲ್ಗೊಂಡು ನಾಳೆ ಸಂಜೆ ಹಿಂದಿರುಗುವುದಾಗಿ ತಿಳಿಸಿದರು.

    ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ರೈತ ಸಂಘಟನೆಗಳೊಂದಿಗೆ ಈ ಕುರಿತು ಮಾತನಾಡುವುದಾಗಿ ತಿಳಿಸಿದರು.

    Kashi Vishwanath Dham: ಕಾಶಿಯ ವಿಶ್ವನಾಥ ಧಾಮ ಕೇವಲ ಒಂದು ಭವ್ಯ ಕಟ್ಟಡವಲ್ಲ; ಭಾರತದ ಸನಾತನ ಸಂಸ್ಕೃತಿಯ ಪ್ರತೀಕ

    VARANASI DEC 13

    ಕಾಶಿಯ ವಿಶ್ವನಾಥ ಧಾಮ ಕೇವಲ ಒಂದು ಭವ್ಯ ಕಟ್ಟಡವಲ್ಲ. ಇದು ಭಾರತದ ಸನಾತನ ಸಂಸ್ಕೃತಿಯ ಪ್ರತೀಕ. ಇದು ನಮ್ಮ ಆಧ್ಯಾತ್ಮದ ಆತ್ಮದ ಸಂಕೇತ. ಇದು ಭಾರತದ ಪ್ರಾಚೀನತೆ, ಸಂಪ್ರದಾಯಗಳು, ಭಾರತದ ಶಕ್ತಿ ಮತ್ತು ಕ್ರಿಯಾಶೀಲತೆಯ ಸಂಕೇತವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

    ವಾರಾಣಾಸಿಯಲ್ಲಿ ಕಾಶಿ ಕಾರಿಡಾರ್ ಯೋಜನೆಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.ಇದಕ್ಕೂ ಮುನ್ನ ಕಾಶಿಯ ವಿಶ್ವನಾಥ ಧಾಮ ಮಯತ್ತು ಕಾಲ ಬೈರವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರು ಗಂಗಾನದಿಯಲ್ಲಿ ಪ್ರವಿತ್ರ ಸ್ನಾನ ಮಾಡಿದರು.

    ‘ನಗರ್ ಕೊತ್ವಲ್” (ಕಾಲ ಭೈರವ ದೇವ)ನ ಪಾದಕ್ಕೆ ಪ್ರಣಾಮಗಳನ್ನು ಸಲ್ಲಿಸಿ ತಮ್ಮ ಭಾಷಣ ಆರಂಭಿಸಿದ ಪ್ರಧಾನಮಂತ್ರಿ , ದೇವರ ಆಶೀರ್ವಾದವಿಲ್ಲದೆ ಯಾವುದೇ ವಿಶೇಷವೂ ಘಟಿಸುವುದಿಲ್ಲ ಎಂದರು. ದೇಶವಾಸಿಗಳಿಗಾಗಿ ದೇವನ ಆಶೀರ್ವಾದವನ್ನು ಕೋರಿದರು. ಕಾಶಿಯನ್ನು ಪ್ರವೇಶಿಸಿದ ಕೂಡಲೇ ಮಾನವ ಎಲ್ಲ ಬಂಧನಗಳಿಂದ ಮುಕ್ತನಾಗುತ್ತಾನೆ ಎಂಬ ಪುರಾಣಗಳನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು.

    “ವಿಶ್ವೇಶ್ವರನ ಆಶೀರ್ವಾದದಿಂದಾಗಿ ನಾವು ಇಲ್ಲಿಗೆ ಬಂದ ಕೂಡಲೇ ಅಲೌಕಿಕ ಶಕ್ತಿಯು ನಮ್ಮ ಅಂತರಾತ್ಮವನ್ನು ಜಾಗೃತಗೊಳಿಸಲಿದೆ” ಎಂದರು. ಈ ಇಡೀ ವಿಶ್ವನಾಥ ಧಾಮದ ಪ್ರಾಂಗಣ ಕೇವಲ ಒಂದು ಭವ್ಯ ಕಟ್ಟಡವಲ್ಲ ಎಂದು ಅವರು ಹೇಳಿದರು. ಇದು ಭಾರತದ ಸನಾತನ ಸಂಸ್ಕೃತಿಯ ಪ್ರತೀಕ. ಇದು ನಮ್ಮ ಆಧ್ಯಾತ್ಮದ ಆತ್ಮದ ಸಂಕೇತ. ಇದು ಭಾರತದ ಪ್ರಾಚೀನತೆ, ಸಂಪ್ರದಾಯಗಳು, ಭಾರತದ ಶಕ್ತಿ ಮತ್ತು ಕ್ರಿಯಾಶೀಲತೆಯ ಸಂಕೇತವಾಗಿದೆ ಎಂದರು.

    “ಯಾರು ಇಲ್ಲಿಗೆ ಬರುತ್ತಾರೆ ಅವರು ಕೇವಲ ನಂಬಿಕೆ ಮಾತ್ರವಲ್ಲ, ಪ್ರಾಚೀನ ವೈಭವನ್ನೂ ಸಹ ಅನುಭವಿಸುತ್ತಾರೆ”ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಾಚೀನತೆ ಮತ್ತು ನವೀನತೆ ಹೇಗೆ ಒಟ್ಟಿಗೆ ಜೀವಂತವಾಗಿದೆ. ಪುರಾತನ ಕಾಲದ ಪ್ರೇರಣೆಗಳು ಭವಿಷ್ಯಕ್ಕೆ ಹೇಗೆ ದಿಕ್ಕನ್ನು ನೀಡುತ್ತವೆ ಎಂಬುದನ್ನು ವಿಶ್ವನಾಥ ಧಾಮ ಸಂಕೀರ್ಣದಲ್ಲಿ ನಾವು ಸಾಕ್ಷಿಯಾಗುತ್ತಿದ್ದೇವೆ”ಎಂದು ತಿಸಿದರು.

    ಮೊದಲು ದೇವಾಲಯದ ಪ್ರದೇಶವು ಕೇವಲ 3000 ಚದರ ಅಡಿ ಇತ್ತು, ಇದೀಗ ಅದು 5ಲಕ್ಷ ಚದರ ಅಡಿಗೆ ವಿಸ್ತರಣೆಗೊಂಡಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಈಗ 50ಸಾವಿರದಿಂದ 75 ಸಾವಿರ ಭಕ್ತರು ದೇವಾಲಯಕ್ಕೆ ಮತ್ತು ದೇವಾಲಯದ ಪ್ರಾಂಗಣಕ್ಕೆ ಭೇಟಿ ನೀಡಬಹುದು. ಮೊದಲು ಗಂಗಾಮಾತೆಯಲ್ಲಿ ಸ್ನಾನ ಮತ್ತು ದರ್ಶನ ಹಾಗೂ ಆನಂತರ ನೇರವಾಗಿ ವಿಶ್ವನಾಥ ಧಾಮ ಪ್ರವೇಶಿಸಬಹುದು ಎಂದರು.

    ಕಾಶಿಯ ಮಹಿಮೆಯನ್ನು ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಕಾಶಿ ಎಂದಿಗೂ ಕೊಳೆಯುವುದಿಲ್ಲ, ಏಕೆಂದರೆ ಅದು ಶಿವನ ಕೃಪಾಶೀರ್ವಾದಲ್ಲಿದೆ ಎಂದರು. ಈ ಭವ್ಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಪ್ರತಿಯೊಬ್ಬ ಕೆಲಸಗಾರರಿಗೂ ಪ್ರಧಾನಿ ಕೃತಜ್ಞತೆಗಳನ್ನು ಸಲ್ಲಿಸಿದರು ಮತ್ತು ಕೊರೊನಾ ಕೂಡ ಅವರ ಕೆಲಸ ಕಾರ್ಯಗಳನ್ನು ನಿಲ್ಲಿಸಲಿಲ್ಲ ಎಂದು ಹೇಳಿದರು.

    ಧಾಮ ನಿರ್ಮಾಣಕ್ಕೆ ಶ್ರಮಿಸಿದ ಕಾರ್ಮಿಕರೊಂದಿಗೆ ಪ್ರಧಾನಮಂತ್ರಿ ಭೋಜನ ಸ್ವೀಕರಿಸಿದರು. ಅಲ್ಲದೆ, ನಿರ್ಮಾಣಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ತೊಡಗಿದ್ದ ಜನರು, ಕರಕುಶಲ ಕರ್ಮಿಗಳು ಮತ್ತು ಅಲ್ಲಿ ಮನೆಗಳನ್ನು ಹೊಂದಿರುವ ಆಡಳಿತಗಾರರ ಕುಟುಂಬಗಳನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಇದೆಲ್ಲದರ ಜೊತೆಗೆ ಕಾಶಿ ವಿಶ್ವನಾಥ ಧಾಮ ಯೋಜನೆ ಪೂರ್ಣಗೊಳಿಸಲು ಅಹರ್ನಿಶಿ ಶ್ರಮಿಸಿದ ಉತ್ತರ ಪ್ರದೇಶ ಸರ್ಕಾರ, ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರನ್ನು ಪ್ರಧಾನಿ ಅಭಿನಂದಿಸಿದರು.

    ಆಕ್ರಮಣಗಾರರು ಈ ನಗರದ ಮೇಲೆ ದಾಳಿ ಮಾಡಿದ್ದರು ಮತ್ತು ನಾಶಗೊಳಿಸಲು ಪ್ರಯತ್ನಿಸಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು. ಈ ನಗರ ಔರಂಗಜೇಬನ ದಾಳಿಗೆ ತುತ್ತಾದ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಆತ ಖಡ್ಗದಿಂದಲೇ ನಾಗರಿಕತೆಯನ್ನು ಬದಲಾಯಿಸಲು ಪ್ರಯತ್ನಿಸಿದ್ದನು ಆದರೆ ಈ ದೇಶದ ನೆಲ ಜಗತ್ತಿನ ಇತರೆಡೆಗಿಂತ ಭಿನ್ನವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

    ಪ್ರಧಾನಮಂತ್ರಿ ಅವರು ಕಾಶಿಯ ಕೃಪೆ ಮತ್ತು ಅದರ ಪ್ರಾಮುಖ್ಯತೆಯನ್ನು ವಿವರಿಸುತ್ತಾ ಹೋದರು. ಕಾಶಿ ಎಂದರೆ ಕೇವಲ ಪದಗಳನ್ನು ವರ್ಣಿಸುವಂತಹದ್ದಲ್ಲ, ಅದು ಸಂವೇದನೆಗಳ ಸೃಷ್ಟಿಯಾಗಿದೆ. ಕಾಶಿ ಎಂದರೆ ಬದಕು ಜಾಗೃತಗೊಳ್ಳುತ್ತದೆ, ಕಾಶಿ ಎಂದರೆ ಅಲ್ಲಿ ಮರಣವವೂ ಒಂದು ಹಬ್ಬವೇ, ಕಾಶಿ ಎಂದರೆ ಅಲ್ಲಿ ಸತ್ಯವೇ ಸಂಸ್ಕೃತಿ , ಕಾಶಿ ಎಂದರೆ ಅಲ್ಲಿ ಪ್ರೀತಿಯೇ ಪರಂಪರೆ ಎಂದರು. ಶ್ರೀ ಗುಮ್ಮಟರಾಜರ ಪರಿಶುದ್ಧತೆಯಿಂದ ಸ್ಪೂರ್ತಿಪಡೆದು ಜಗದ್ಗುರು ಶಂಕರಾಚಾರ್ಯರು ದೇಶವನ್ನು ಏಕತೆಯ ಎಳೆಯಲ್ಲಿ ಒಗ್ಗೂಡಿಸಲು ಸಂಕಲ್ಪ ಮಾಡಿದ ನಗರವೇ ವಾರಾಣಾಸಿ ನಗರಿ ಎಂದು ಅವರು ಹೇಳಿದರು. ಗೋಸ್ವಾಮಿ ತುಳಸೀದಾಸರು ಭಗವಾನ್ ಶಂಕರರ ಪ್ರೇರಣೆಯಿಂದ ರಾಮಚರಿತ ಮಾನಸದಂತಹ ಮಹಾನ್ ಕೃತಿಯನ್ನು ಸೃಷ್ಟಿಸಿದ ಸ್ಥಳವೂ ಹೌದು ಎಂದರು.

    ಮಾತು ಮುಂದುವರಿಸಿದ ಪ್ರಧಾನಮಂತ್ರಿ ಅವರು, ಇಲ್ಲಿಯೇ ಭಗವಾನ ಬುದ್ದನಿಗೆ ಜ್ಞಾನೋದಯವಾಗಿ ಸಾರನಾಥದಲ್ಲಿ ಜಗತ್ತಿಗೆ ಬಹಿರಂಗಗೊಂಡಿದ್ದು ಎಂದರು. ಸಮಾಜದ ಒಳಿತಿಗಾಗಿ ಕಬೀರದಾಸರಂತಹ ಸಂತರು ಇಲ್ಲಿ ಕಾಣಿಸಿಕೊಂಡರು. ಸಮಾಜವನ್ನು ಒಗ್ಗೂಡಿಸುವ ಅಗತ್ಯವಿದ್ದಲ್ಲಿ ಈ ಕಾಶಿಯು ಸಂತ ರೈ ದಾಸರ ಭಕ್ತಿಯ ಶಕ್ತಿಯ ಕೇಂದ್ರವಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

    ಕಾಶೀ ನಾಲ್ಕು ಜೈನ ತೀರ್ಥಂಕರರ ನಾಡು ಮತ್ತು ಅಹಿಂಸೆ ಮತ್ತು ತಪಸ್ಸಿನ ಪ್ರತಿರೂಪವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ರಾಜಾ ಹರಿಶ್ಚಂದ್ರನ ಏಕತೆಯಿಂದ ವಲ್ಲಭಾಚಾರ್ಯ, ರಮಾನಂದ ಜೀ ಅವರ ಜ್ಞಾನದವರೆಗೆ, ಚೈತನ್ಯ ಮಹಾ ಪ್ರಭು, ಸಮರ್ಥ ಗುರು ರಾಮದಶಸ್ ರಿಂದ ಸ್ವಾಮಿ ವಿವೇಕಾನಂದ, ಮದನ್ ಮೋಹನ್ ಮಾಳವೀಯದರೆಗೆ, ಈ ಪವಿತ್ರ ಕಾಶೀ ಭೂಮಿಯು ಅಸಂಖ್ಯಾತ ಸಂತರು, ಆಚಾರ್ಯರ ನೆಲೆವೀಡಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಇಲ್ಲಿಗೆ ಆಗಮಿಸಿದ್ದರು ಎಂದು ಪ್ರಧಾನಿ ಉಲ್ಲೇಖಿಸಿದರು. ರಾಣಿ ಲಕ್ಷ್ಮೀಭಾಯಿ ಅವರಿಂದ ಚಂದ್ರಶೇಖರ್ ಆಜಾದ್ ವರೆಗೆ ಹಲವು ಸ್ವಾತಂತ್ರ ಹೋರಾಟಗಾರರಿಗೆ ಇದು ಕರ್ಮಭೂಮಿಯಾಗಿದೆ. ಪ್ರತಿಭಾವಂತರಾದ ಭರತೇಂದು ಹರಿಶ್ಚಂದ್ರ, ಜೈ ಶಂಕರ್ ಪ್ರಸಾದ್, ಮುನ್ಷಿ ಪ್ರೇಮ್ ಚಂದ್, ಪಂಡಿತ್ ರವಿಶಂಕರ್ ಮತ್ತು ಬಿಸ್ಮಿಲ್ಲಾಖಾನ್ ಅವರು ಇದೇ ಶ್ರೇಷ್ಠ ನಗರಿಯವರು ಎಂದು ಪ್ರಧಾನಿ ಹೇಳಿದರು.

    ಕಾಶಿ ವಿಶ್ವನಾಥ ಧಾಮದ ಸಮರ್ಪಣೆಯು ದೇಶಕ್ಕೆ ನಿರ್ಣಾಯಕ ದಿಕ್ಸೂಚಿಯನ್ನು ನೀಡಲಿದೆ ಮತ್ತು ಉಜ್ವಲ ಭವಿಷ್ಯಕ್ಕೆ ಕಾರಣವಾಗಲಿದೆ ಎಂದು ಪ್ರಧಾನಿ ಹೇಳಿದರು.ಈ ಪ್ರಾಂಗಣ ನಮ್ಮ ಸಾಮರ್ಥ್ಯ ಮತ್ತು ನಮ್ಮ ಕರ್ತವ್ಯಕ್ಕೆ ಸಾಕ್ಷಿಯಾಗಿದೆ. ದೃಢ ಸಂಕಲ್ಪ ಮತ್ತು ಸಮಗ್ರ ಚಿಂತನೆಯಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಹೇಳಿದರು.

    “ಊಹೆಗೆ ನಿಲುಕದ್ದನ್ನು ನನಸಾಗಿಸುವ ಶಕ್ತಿ ಭಾರತೀಯರಿಗೆ ಇದೆ. ನಮಗೆ ತಪಸ್ಸು ಗೊತ್ತಿದೆ ಮತ್ತು ನಮಗೆ ಸಂಯಮವಿದೆ ಮತ್ತು ನಮಗೆ ಹೇಗೆ ಹಗಲು ಮತ್ತು ರಾತ್ರಿ ಕಳೆಯಬೇಕೆಂಬುದು ತಿಳಿದಿದೆ. ಸವಾಲು ಎಷ್ಟೇ ದೊಡ್ಡದಾಗಿದ್ದರೂ ಸಹ ಭಾರತೀಯರು ಒಟ್ಟಾಗಿ ಅದನ್ನು ಸೋಲಿಸಬಲ್ಲರು“ ಎಂದು ಪ್ರಧಾನಮಂತ್ರಿ ಹೇಳಿದರು.

    ಇಂದಿನ ಭಾರತ ಕಳೆದುಹೋದ ಪರಂಪರೆಯನ್ನು ಪುನರುಜ್ಜೀವನಗೊಳಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಲ್ಲಿ ಕಾಶಿಯಲ್ಲಿ ಮಾತೆ ಅನ್ನಪೂರ್ಣಕೂಡ ನೆಲೆಸಿದ್ದಾರೆ. ಕಾಶಿಯಿಂದ ಕಳ್ಳತನವಾಗಿದ್ದ ಮಾತೆ ಅನ್ನಪೂರ್ಣ ಮೂತಿಯು ಶತಮಾನಗಳ ಕಾಯುವಿಕೆ ನಂತರ ಇದೀಗ ಕಾಶಿಯಲ್ಲಿ ಪುನರ್ ಪ್ರತಿಷ್ಠಾಪಿಸಲಾಗಿದೆ ಎಂದರು.

    ನನಗೆ ದೇವರು ಜನರ ರೂಪದಲ್ಲಿ ಕಾಣಿಸುತ್ತಾರೆ. ನನಗೆ ಪ್ರತಿಯೊಬ್ಬ ಮನುಷ್ಯರೂ ದೇವರ ಭಾಗ ಎಂದು ಪ್ರಧಾನಮಂತ್ರಿ ಹೇಳಿದರು. ಈ ದೇಶದ ಜನರಿಂದ ನಾನು ಮೂರು ಸಂಕಲ್ಪಗಳನ್ನು ಕೇಳುತ್ತೇನೆ- ಅವೆಂದರೆ ಶುಚಿತ್ವ, ಸೃಷ್ಟಿ ಮತ್ತು ಸ್ವಾವಲಂಬಿ ಭಾರತಕ್ಕೆ ನಿರಂತರ ಪ್ರಯತ್ನ’ ಮಾಡುವುದು ಎಂದು ತಿಳಿಸಿದರು.

    ಸ್ಚಚ್ಛತೆಯು ಜೀವನದ ವಿಧಾನ ಎಂದ ಪ್ರಧಾನಿ ಅವರು, ಈ ಕಾರ್ಯದಲ್ಲಿ ವಿಶೇಷವಾಗಿ ನಮಾಮಿ ಗಂಗಾ ಯೋಜನೆಯಡಿ ಜನರು ಹೆಚ್ಚಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ದೀರ್ಘಾವಧಿಯ ಗುಲಾಮಗಿರಿಯು ನಮ್ಮ ಆತ್ಮವಿಶ್ವಾಸವನ್ನು ಮುರಿದಿತ್ತು, ನಮ್ಮ ಸೃಷ್ಟಿಯ ಬಗ್ಗೆಯೇ ನಮಗೆ ನಂಬಿಕೆ ಹೋಗಿತ್ತು ಎಂದು ಪ್ರಧಾನಿ ತಿಳಿಸಿದರು. ಇಂದು, ಸಹಸ್ರಾರು ವರ್ಷಗಳ ಇತಿಹಾಸವಿರುವ ಕಾಶಿಯಿಂದ ನಾನು ದೇಶವಾಸಿಗಳಿಗೆ ಕರೆ ನೀಡುವುದೆಂದರೆ – ಸಂಪೂರ್ಣ ವಿಶ್ವಾಸದಿಂದ ಸೃಷ್ಟಿಸಿ, ಆವಿಷ್ಕರಿಸಿ, ನವೀನ ವಿಧಾನದಲ್ಲಿ ಕಾರ್ಯ ಮಾಡಿ ಎಂದು.

    ಇಂದು ನಾವು ಕೈಗೊಳ್ಳಲೇಬೇಕಾದ ಮೂರನೇ ನಿರ್ಣಯವೆಂದರೆ ಸ್ವಾವಲಂಬಿ ಭಾರತಕ್ಕಾಗಿ ನಮ್ಮ ಪ್ರಯತ್ನಗಳನ್ನು ಹೆಚ್ಚಿಸುವುದು ಎಂದು ಪ್ರಧಾನಮಂತ್ರಿ ಹೇಳಿದರು. 75ನೇ ಸ್ವಾತಂತ್ರೋತ್ಸವದ ಈ ಅಮೃತ ಕಾಲದಲ್ಲಿ ಭಾರತವು 100 ವರ್ಷಗಳ ಸ್ವಾತಂತ್ರೋತ್ಸವವನ್ನು ಆಚರಿಸುವಾಗ ಭಾರತ ಹೇಗಿರಬೇಕು ಎಂಬುದಕ್ಕಾಗಿ ನಾವು ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿ ಪ್ರಧಾನಿ ಅವರು ತಮ್ಮ ಭಾಷಣವನ್ನು ಸಮಾಪನಗೊಳಿಸಿದರು.

    ಮತಾಂತರ ನಿಷೇಧ ಕಾಯ್ದೆ: ಜನರಿಗೆ ಆತಂಕ ಬೇಡ ಸಿಎಂ

    HUBBALLI DEC 12
    ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಜನರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.ಅವರು ಇಂದು ಹುಬ್ಭಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

    ಹಿಂದು, ಕ್ರಿಶ್ಚಿಯನ್, ಇಸ್ಲಾಂ ಹಾಗೂ ಸಿಖ್ ಧರ್ಮಗಳು ಸಂವಿಧಾನದಲ್ಲಿ ಗುರುತಿಸಲಾಗಿರುವ ಧರ್ಮಗಳಾಗಿದ್ದು, ಅವರ ಪ್ರಾರ್ಥನೆ, ಆಚರಣೆಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ಭರವಸೆ ನೀಡಿದ ಮುಖ್ಯಮಂತ್ರಿಗಳು, ಬಡತನದ ದುರುಪಯೋಗ ಪಡೆದು, ಆಸೆ, ಆಮಿಷಗಳನ್ನು ಒಡ್ಡಿ ಮತಾಂತರ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

    ಮತಾಂತರದ ವಿಷಯ ಇಂದಿನದಲ್ಲ, ಈ ಬಗ್ಗೆ ಸ್ವತಂತ್ರದ ನಂತರದಲ್ಲಿ ಬಹಳ ದೊಡ್ಡ ಚರ್ಚೆಯಾಗಿದೆ. ವಿವಿಧ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇವುಗಳನ್ನು ಅವಲೋಕಿಸಿ, ಕಾನೂನು ಜಾರಿಗೆ ತರಬೇಕೆನ್ನುವುದು ಕರ್ನಾಟಕದ ಬಹುತೇಕ ಜನರ ಅಪೇಕ್ಷೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ಇಲಾಖೆ ಪರಿಶೀಲನೆ ಮಾಡುತ್ತಿದೆ. ಪರಿಶೀಲನೆಯ ನಂತರ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡನೆಯಾಗಲಿದೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಬಹುತೇಕವಾಗಿ ಕಾನೂನು ಇಲಾಖೆ ಕರಡು ಕಾಯ್ದೆಗೆ ಒಪ್ಪಿಗೆ ನೀಡಿದಲ್ಲಿ ಅಧಿವೇಶನದಲ್ಲಿ ವಿಷಯ ಚರ್ಚೆಗೆ ಬರಲಿದೆ ಎಂದರು.

    ಮತಾಂತರ ಒಳ್ಳೆಯದಲ್ಲ
    ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ. ಬಡವರು, ದೀನದಲಿತರು ಅದಕ್ಕೆ ಒಳಗಾಗಬಾರದು. ಅವರ ಮನೆತನ, ಕುಟುಂಬದಲ್ಲಿ ಬಹಳಷ್ಟು ತೊಂದರೆಯಾಗುವುದರಿಂದ ಮತಾಂತರ ನಿಷೇಧ ಕಾಯ್ದೆಯನ್ನು ತರುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು.

    ಬದಲಾವಣೆ ಚಲನಶೀಲತೆಯ ಸಂಕೇತ

    ಗತಕಾಲಂ ಲಯಮಾಯ್ತು -ಬದಲಾವಣೆ ಜಗದ ನಿಯಮ ಕತ್ತಲು ಹರಿಸು ಬೆಳಕು ಮೂಡುವಂತೆ ಮನುಷ್ಯನ ಜೀವನದಲ್ಲೂ ಬದಲಾವಣೆಗಳಾಗುತ್ತವೆ. ಕಷ್ಟ ಕೋಟಲೆಗಳು ಕಳೆದು ಸುಖಾಭಾವ  ಆವರಿಸುತ್ತದೆ ಎಂಬುದನ್ನು  ಪ್ರಸ್ತುತ ವಾಕ್ಯದ ಮೂಲಕ  ಅರ್ಥೈಸಿಕೊಳ್ಳಬಹುದು.

    “ಗತಕಾಲಂ ಲಯಮಾಯ್ತು  ನಿನಗಿನ್ನಮಾಯ್ತಂತ್ಯಕಾಳಂಗಡಾ”  ರನ್ನ ಕವಿಯು ಬರೆದಿರುವ  ಸಾಹಸ ಭೀಮ ವಿಜಯಂನ ಭೀಮಸೇನಾಡಂಬರಂ ಭಾಗದಿಂದ  ಪ್ರಸ್ತುತ ಸಾಲನ್ನು ಆರಿಸಿದೆ.

    ಭೀಷ್ಮರ  ಆಣತಿಯಂತೆ ದುರ್ಯೋಧನ ವೈಶಂಪಾಯನ  ಸರೋವರದಲ್ಲಿ  ಅಡಗಿ ಕುಳಿತಿರುತ್ತಾನೆ. ಅವನ ವೈರಿ ಭೀಮ  ಆತನನ್ನು ಮೂದಲಿಕೆಯ ಮಾತುಗಳ ಮೂಲಕ ಹೊರಕ್ಕೆ ಬರುವಂತೆ ಮಾಡುತ್ತಾನೆ.  ನಂತರವೂ ಭೀಮ ಮತ್ತು ದುರ್ಯೋಧನನ ನಡುವೆ ಮತ್ತೆ  ,ಮಾತಿಗೆ ಮಾತು  ಬೆಳೆಯುತ್ತದೆ.  ಆ ಸಂದರ್ಭದಲ್ಲಿ ರನ್ನ ದುರ್ಯೋಧನನ ಮೂಲಕ ಅಡುಗೆ ಮಾಡಿ ಭಟ್ಟನಾಗಿದ್ದವನಿಗೆ  ಯುದ್ಧ  ಮಾಡುವ ಕೆಲಸವನ್ನು ಕೊಟ್ಟವರಾರು  ಎಂದು   ಹೀಯಾಳಿಸುತ್ತಾನೆ.  ಅದಕ್ಕೆ ಪ್ರತ್ಯುತ್ತರವಾಗಿ ಭೀಮ “ಗತಕಾಲಂ ಲಯಮಾಯ್ತು  ನಿನಗಿನ್ನಮಾಯ್ತಂತ್ಯಕಾಳಂಗಡಾ” ಎನ್ನುತ್ತಾನೆ ಅಂದರೆ  ನಮಗಿದ್ದ ಹಿಂದಿನ ಸ್ಥಿತಿ ಈಗಿಲ್ಲ ಹಿಂದಿನ ದಿನಗಳು ಲಯವಾಗಿ ಹೋಗಿವೆ  ಬದಲಾವಣೆಯ ಬೆಳ್ಳಿಗೆರೆಗಳು ಈಗಾಗಲೆ ಮೂಡಿವೆ  ಆಶಾದಾಯಕ ಸಹರ್ಷದ  ಈ ಬೆಳವಣಿಗೆಯನ್ನು ಯಾರಿಂದಲೂ ಮತ್ತೆ ಕಿತ್ತುಕೊಳ್ಳಲು ಸಾಧ್ಯವಿಲ್ಲ .  ಇದೀಗ ನಿನಗೆ ಅಂತ್ಯಕಾಲ  ಪ್ರಾರೆಂಭವಾಗಿದೆ ಇಷ್ಟು ದಿನ  ಬೆಳಕನ್ನು ಕಂಡ ನೀನು ಕತ್ತಲೆಗೆ ಸರಿಯಲೇ ಬೇಕು  ಎನ್ನುತ್ತಾನೆ.

    ರನ್ನನ ಪ್ರತಿಭಾಪಾಂಡಿತ್ಯವನ್ನು  ಪ್ರಸ್ತುತ ವಾಕ್ಯದಲ್ಲಿ ಲಯ ಮತ್ತು ಅಂತ್ಯ  ಎಂಬ ಪದಗಳು ಅರ್ಥವತ್ತಾಗಿ ಲಯಬದ್ಧವಾಗಿ ಬಂದಿವೆ.  ಇದು ರನ್ನನ ಪ್ರತಿಭಾಪಾಂಡಿತ್ಯಕ್ಕೆ  ಸಮರ್ಥ  ಉದಾಹರಣೆ. ಆದಿ-ಅಂತ್ಯ,  ಕಪ್ಪು-ಬಿಳಿಪು. ಹಗಲು-ರಾತ್ರಿ, ಸುಖ-ದುಃಖ ಮೊದಲಾದುವು ಸರತಿ ಪ್ರಕಾರ ಬಂದೇ ಬರುತ್ತವೆ . ಹಾಗಾಗಿ ಕತ್ತಲಲ್ಲಿ ಇದ್ದವರನ್ನು ಬೆಳಕಲ್ಲಿದ್ದವರು ಯಾವುದೇ  ಕಾರಣಕ್ಕೂ ಹೀಗಳೆಯಬಾರದು. ಬದಲಾವಣೆ ಚಲನಶೀಲತೆಯ ಸಂಕೇತ  ಎಂಬುದು ಪ್ರಸ್ತುತ ವಾಕ್ಯದ ಮೂಲಕ  ವೇದ್ಯವಾಗುತ್ತದೆ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    INDIAN STOCK MARKET:ಹೂಡಿಕೆಗೂ ಮುನ್ನ ವಿವೇಚನೆ, ಅಧ್ಯಯನ, ಚಿಂತನೆ, ಸಮಾಲೋಚನೆಗಳ ಅಗತ್ಯ

    ಒಂದು ಚಲನಚಿತ್ರವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಲು ನಾನಾ ದರ್ಜೆಯ ಪ್ರೇಕ್ಷಕರಿಗೆ ವೈವಿಧ್ಯಮಯ ಆಸನಗಳನ್ನುಒದಗಿಸಿ ಅದಕ್ಕನುಗುಣವಾಗಿ ಟಿಕೆಟ್‌ ದರಗಳನ್ನು ನಿಗದಿಪಡಿಸುವರು. ಬಾಲ್ಕನಿಗಳಲ್ಲಿನ ದರಗಳು ಅತಿ ಹೆಚ್ಚಾಗಿರುತ್ತದೆ. ಆದರೆ ಯಾವ ಆಸನಗಳಲ್ಲಿ ಕುಳಿತು ವೀಕ್ಷಿಸಿದರೂ ಚಲನಚಿತ್ರವು ಒಂದೇ. ಆದರೆ ಅದರಂತೆ ಷೇರುಪೇಟೆಯಲ್ಲಿ ಲಿಸ್ಟಿಂಗ್‌ ಆಗಿರುವ ಷೇರುಗಳನ್ನು ರೂ.100 ರ ಸಮೀಪ ವಹಿವಾಟಾಗುತ್ತಿರುವ ಎಲ್ಲಾ ಷೇರುಗಳೂ ಒಂದೇ ಎಂದು ಪರಿಗಣಿಸಲು ಸಾಧ್ಯವಿಲ್ಲ.

    10.12.2021 Closing Sensex

    ಉದಾಹರಣೆಗೆ ರೂ.147 ರ ಸಮೀಪ ವಹಿವಾಟಾಗುತ್ತಿರುವ ಒ ಎನ್‌ ಜಿ ಸಿ ಕಂಪನಿಯು ಶೇ.110 ರಷ್ಟು ಲಾಭಾಂಶ ವಿತರಿಸಿದರೆ ಪ್ರತಿ ಷೇರಿಗೆ ರೂ.5.50 ರಷ್ಟು ಲಭಿಸಿದರೆ, ಅದೇ ರೂ.147 ರ ಸಮೀಪ ವಹಿವಾಟಾಗುತ್ತಿರುವ ಎನ್‌ ಎಂ ಡಿ ಸಿ ಕಂಪನಿಯು ಶೇ.901 ರಷ್ಟು ಲಾಭಾಂಶ ವಿತರಿಸಿದಾಗ ಪ್ರತಿ ಷೇರಿಗೆ ರೂ.9.01 ಮಾತ್ರ ಲಭಿಸುತ್ತದೆ. ಅಂದರೆ ಶೇ.901 ಕ್ಕೂ ಮತ್ತು ಶೇ.110 ಕ್ಕೂ ಕೇವಲ ರೂ.3.51 ಮಾತ್ರ ವ್ಯತ್ಯಾಸವೇ? ಸೋಜಿಗವೆನಿಸುವುದಲ್ಲವೇ? ಇದೂ ಸಹ ಷೇರುಪೇಟೆಯ ವಿಸ್ಮಯಕಾರಿ ಗುಣ.

    ಅದೇ ರೀತಿ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್ ಶೇ.50 ರ ಲಾಭಾಂಶ ಪ್ರಕಟಿಸಿದ್ದಕ್ಕೆ ಪ್ರತಿ ಷೇರಿಗೆ ರೂ.5 ರಂತೆ, ಪವರ್‌ ಫೈನಾನ್ಸ್‌ ಕಾರ್ಪೊರೇಷನ್‌ ಶೇ.25 ರಂತೆ ಲಾಭಾಂಶ ಪ್ರಕಟಿಸಿ ಪ್ರತಿ ಷೇರಿಗೆ ರೂ.2.50 ಯಂತೆ ವಿತರಿಸಿವೆ. ಈ ಏರಡೂ ಕಂಪನಿಗಳು ರೂ.120 ರ ಸಮೀಪವಿದ್ದು ಪ್ರಕಟಿಸಿದ ಲಾಭಾಂಶದ ಶೇಕಡಾವಾರು ಪ್ರಮಾಣವು ಸರಿ ಹೊಂದುತ್ತದೆ. ಹಿಂದೂಸ್ಥಾನ್‌ ಝಿಂಕ್‌ ಕಂಪನಿ ಶೇ.900 ರಷ್ಟು ಲಾಭಾಂಶ ಪ್ರಕಟಿಸಿದ್ದು ರೂ.365 ರ ಸಮೀಪವಿರುವ ಈ ಷೇರಿಗೆ ನಿಗದಿತ ದಿನದ ನಂತರ ಪ್ರತಿ ಷೇರಿಗೆ ರೂ.18 ಲಭಿಸುವುದು, ಅದೇ ಸಮೂಹದ ವೇದಾಂತ ಕಂಪನಿಯು ಪ್ರತಿ ಷೇರಿಗೆ ಶೇ.1350 ರ ಲಾಭಾಂಶ ಪ್ರಕಟಿಸಿದೆ ಅಂದರೆ ನಿಗದಿತ ದಿನವಾದ 18 ನೇ ಡಿಸೆಂಬರ್‌ ನಂತರ ಪ್ರತಿ ಷೇರಿಗೆ ರೂ.13.50 ಮಾತ್ರ ಲಭಿಸುವುದು. ಇದು ಅಂಕಿ ಅಂಶಗಳನ್ನು ಪ್ರಸ್ತುತಪಡಿಸುವ ಶೈಲಿಯಾಗಿದೆ. ಅಂದರೆ ಈ ಶೇಕಡಾವಾರು ಲಾಭಾಂಶಗಳ ಅಂಕಿ ಅಂಶಗಳು ಹೂಡಿಕೆದಾರರನ್ನು ಗೊಂದಲಕ್ಕೀಡುಮಾಡುತ್ತದೆ. ಇದರ ಹಿಂದೆ ಅಡಕವಾಗಿರುವ ಅಂಶ ಎಂದರೆ ಕಂಪನಿಗಳ ಷೇರುಗಳ ಮುಖಬೆಲೆಯ ಪ್ರಭಾವವಾಗಿದೆ. ಒ ಎನ್‌ ಜಿ ಸಿ ಷೇರಿನ ಮುಖಬೆಲೆಯು ರೂ.5 ಆಗಿದ್ದರೆ, ಎನ್‌ ಎಂ ಡಿ ಸಿ ಷೇರಿನ ಮುಖಬೆಲೆ ರೂ.1. ಹಾಗೆಯೇ ಹಿಂದೂಸ್ಥಾನ್‌ ಝಿಂಕ್‌ ಷೇರಿನ ಮುಖಬೆಲೆ ರೂ.2 ಆಗಿದ್ದರೆ, ವೇದಾಂತ ಷೇರಿನ ಮುಖಬೆಲೆ ರೂ.1 ಆಗಿದೆ. ಇನ್ನು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಮತ್ತು ಪವರ್‌ ಫೈನಾನ್ಸ್‌ ಕಾರ್ಪೊರೇಷನ್ ಕಂಪನಿಗಳ ಷೇರುಗಳ ಮುಖಬೆಲೆ ರೂ.10 ಆಗದ್ದರಿಂದ ಶೇಕಡಾವಾರು ಪ್ರಮಾಣವನ್ನು ಸುಲಭವಾಗಿ ಹೋಲಿಕೆ ಮಾಡಲು ಸಾಧ್ಯ.

    ಮತ್ತೆ ಕೆಲವು ಕಂಪನಿಗಳಲ್ಲಿ ಅಂದರೆ‌ ರೂ.14,700 ರಲ್ಲಿರುವ ಯಮುನಾ ಸಿಂಡಿಕೇಟ್‌ ಲಿಮಿಟೆಡ್, ರೂ.14,135 ರ ಸಮೀಪವಿರುವ ಬಾಂಬೆ ಆಕ್ಸಿಜನ್‌ ಇನ್ವೆಸ್ಟ್‌ ಮೆಂಟ್ಸ್‌ ಲಿಮಿಟೆಡ್‌, 2,900ರ ಸಮೀಪವಿರುವ ವಿಕ್ಟೋರಿಯಾ ಮಿಲ್ಸ್‌ ಲಿಮಿಟೆಡ್‌ ನಂತಹ ಕಂಪನಿಗಳಲ್ಲಿ ಪ್ರತಿ ಷೇರಿಗೆ ಶೇ.50 ಅಂದರೆ ರೂ.50 ರಂತೆ, ಶೇ.100 ಅಂದರೆ ರೂ.100 ರಂತೆ ಲಾಭಾಂಶ ದೊರೆಯುತ್ತದೆ. ಇದಕ್ಕೆ ಮುಖ್ಯ ಕಾರಣ ಈ ಕಂಪನಿಗಳ ಷೇರುಗಳ ಮುಖಬೆಲೆಯು ರೂ.100 ಆಗಿದೆ. ಈ ಕಂಪನಿಗಳು ʼ X’ ಅಥವಾ ‘XT’ಗುಂಪಿನಲ್ಲಿ ವಹಿವಾಟಾಗುತ್ತಿವೆ.

    ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಕಂಪನಿಯು ಪ್ರತಿ ತ್ರೈಮಾಸಿಕದಲ್ಲೂ ದಾಖಲೆಯ ಲಾಭ ಗಳಿಸುತ್ತಿರುವ ಅಗ್ರಮಾನ್ಯ ಕಂಪನಿಯಾಗಿದೆ. ಈ ಷೇರಿನ ಪೇಟೆಯ ಬೆಲೆ ರೂ.2,460 ರ ಸಮೀಪವಿದೆ. ಮತ್ತೆ ಇತ್ತೀಚೆಗಷ್ಠೆ ಹೆಚ್ಚಿನ ಪ್ರಚಾರದೊಂದಿಗೆ ಪೇಟೆ ಪ್ರವೇಶಿಸಿ ವಿಜೃಂಭಿಸಿದ (?) ಪೇಟಿಎಂ ಕಂಪನಿ ಯ ಷೇರಿನ ಬೆಲೆ ರೂ.1,567 ಸಮೀಪವಿದೆ. ಈ ಎರಡೂ ಕಂಪನಿಗಳ ಷೇರಿನ ಬೆಲೆಗಳನ್ನು ಸಮೀಕರಿಸಿದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಷೇರಿನ ಬೆಲೆ ತೀರಾ ಕಡಿಮೆ ಬೆಲೆಯಲ್ಲಿದೆ. ಇದಕ್ಕೆ ಕಾರಣ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರಿನ ಬೆಲೆ ರೂ.2,460 ಇದ್ದರೂ ಷೇರಿನ ಮುಖಬೆಲೆ ರೂ.10 ಇದನ್ನು ರೂ.1 ಕ್ಕೆ ಪರಿವರ್ತಿಸಿದಾಗ ಅದರ ಬೆಲೆ ಕೇವಲ ರೂ.246 ಆಗುವುದು ಅಂದರೆ ರೂ.1 ರ ಮುಖಬೆಲೆಯ ಪೇಟಿಎಂ ಷೇರು ಇದಕ್ಕಿಂತ ಆರು ಪಟ್ಟು ಹೆಚ್ಚಿದೆ.

    ನಿರಂತರವಾಗಿ ಹಾನಿಗೊಳಗಾಗಿರುವ ಕಂಪನಿಗೆ ಹೆಚ್ಚಿನ ಆದ್ಯತೆ ಕೊಟ್ಟು ದಾಖಲೆ ಪ್ರಮಾಣದ ಲಾಭ ಗಳಿಸುತ್ತಿರುವ ಕಂಪನಿಗೆ ಕಳಪೆ ಬೆಲೆ ನೀಡುತ್ತಿರುವಂತೆ ಕಾಣುವ ಈ ಗುಣವು ಷೇರುಪೇಟೆಯ ವಿಸ್ಮಯಕಾರಿ ಗುಣವಾಗಿದೆ. ಇಂತಹ ಪರಿಸ್ಥಿತಿಗಳನ್ನು ತುಲನಾತ್ಮಕವಾಗಿ ವಿವೇಚಿಸಿ ಹೂಡಿಕೆ ಮಾಡಿದಲ್ಲಿ ಮಾತ್ರ ಹೂಡಿಕೆಯು ಸುರಕ್ಷತೆಯನ್ನು ಕಾಣಲು ಸಾಧ್ಯ. ಕೇವಲ ಪ್ರಚಾರಿಕ, ಅಲಂಕಾರಿಕ ಮಾತುಗಳಿಗೆ ಒಲವು ತೋರಿದಲ್ಲಿ ಫಲಿತಾಂಶ ಊಹೆಗೂ ನಿಲುಕದಂತಾಗುತ್ತದೆ.

    ಷೇರುಪೇಟೆಯ ಅಖಾಡದಲ್ಲಿ ವಹಿವಾಟಿಗೆ ಬಿಡುಗಡೆಯಾಗಿರುವ ಕಂಪನಿಗಳ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ 4,000 ಕ್ಕೂ ಹೆಚ್ಚು, ನ್ಯಾಶನಲ್‌ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ 2,000 ಕ್ಕೂ ಹೆಚ್ಚು. ಈ ಕಂಪನಿಗಳಲ್ಲಿ ಹೆಚ್ಚಿನ ಅಗ್ರಮಾನ್ಯ ಕಂಪನಿಗಳು ಎರಡೂ ಸ್ಟಾಕ್‌ ಎಕ್ಸ್‌ ಚೇಂಜ್‌ ಗಳಲ್ಲಿ ವಹಿವಾಟಾಗುತ್ತವೆ. ಲೀಸ್ಟಿಂಗ್‌ ಆದ ಕಂಪನಿಗಳಲ್ಲಿ ರೂ.1 ರ ಮುಖಬೆಲೆಯ ಷೇರುಗಳಿಂದ ರೂ.100 ರವರೆಗೂ ವಿವಿಧ ಮುಖಬೆಲೆ ಷೇರುಗಳು ವಹಿವಾಟಾಗುತ್ತವೆ. ಷೇರುಪೇಟೆಯ ಚಟುವಟಿಕೆಗೂ ಮುನ್ನ ಕಂಪನಿಗಳ ಷೇರಿನ ಮುಖಬೆಲೆಯನ್ನು ಅರಿತು ಚಟುವಟಿಕೆ ನಡೆಸಿದಲ್ಲಿ ಮಾತ್ರ ಸುರಕ್ಷತಾ ಕ್ರಮವಾಗಿರುತ್ತದೆ ಮತ್ತು ಕಾರ್ಪೊರೇಟ್‌ ಫಲಾನುಭವಿಗಳಾಗಲೂ ಸಾಧ್ಯ.

    ಲಾಭಾಂಶಗಳೊಂದಿಗೆ ಬೋನಸ್‌ ಷೇರುಗಳು ಹೂಡಿಕೆಯನ್ನು ಬೆಳೆಸುವುದಲ್ಲದೆ ಮುಂದೆ ಕಂಪನಿಗಳು ವಿತರಿಸಬಹುದಾದ ಲಾಭಾಂಶಗಳ ಪ್ರಮಾಣವು ಬೋನಸ್‌ ಷೇರುಗಳ ಕಾರಣ ಹೆಚ್ಚಾದ ಷೇರುಗಳ ಮೇಲೂ ಬರುವುದರಿಂದ ಹೂಡಿಕೆದಾರರಿಗೆ ಹೆಚ್ಚಿನ ಲಾಭ ತಂದುಕೊಡುತ್ತದೆ. ಆದ್ದರಿಂದ ಹೂಡಿಕೆಗೂ ಮುನ್ನ ವಿವೇಚನೆ, ಅಧ್ಯಯನ, ಚಿಂತನೆ, ಸಮಾಲೋಚನೆಗಳ ಅಗತ್ಯ ಹೆಚ್ಚಿರುತ್ತದೆ.

    ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು .

    error: Content is protected !!