19.6 C
Karnataka
Tuesday, November 26, 2024
    Home Blog Page 37

    ಅಪಘಾತದಲ್ಲಿ ಸೇನಾ ಮುಖ್ಯಸ್ಥರ ಮರಣ: ಬೇಕಾಬಿಟ್ಟಿ ಟ್ವೀಟ್ ಮಾಡಿದವರ ವಿರುದ್ಧ ಕಾನೂನು ಕ್ರಮ

    BENGALURU

    ಬಿಪಿನ್ ರಾವತ್ ಅವರ ನಿಧನಕ್ಕೆ ಸಂಬಂಧಿಸಿದಂತೆ ಕೆಲವು ವಿಕೃತ ಮನಸ್ಸುಗಳು ಬೇಕಾಬಿಟ್ಟಿ , ಟ್ವೀಟ್‍ಗಳನ್ನು ಮಾಡಿದ್ದು, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಪೊಲೀಸ್ ಮುಖ್ಯಸ್ಥರಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

    ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಇಂದು ನಡೆದ ಚುನಾವಣೆಯಲ್ಲಿ ಅವರು ಶಿಗ್ಗಾಂವ್ ತಾಲ್ಲೂಕು ಪಂಚಾಯತಿ ಕಾರ್ಯಾಲಯದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

    ಇದನ್ನು ಪ್ರತಿ ಭಾರತೀಯನೂ ಅತ್ಯಂತ ಕಠಿಣ ಶಬ್ಧಗಳಲ್ಲಿ ಖಂಡಿಸಬೇಕು. ದೇಶಕ್ಕಾಗಿ ದೊಡ್ಡ ಸೇನೆಯನ್ನು ಮುನ್ನಡೆಸಿ ರಕ್ಷಣೆ ಮಾಡುತ್ತಿದ್ದವರ ಬಗ್ಗೆ, ಆ ಹುದ್ದೆಯ ಘನತೆಯ ಕುರಿತು ಪರಿಕಲ್ಪನೆ ಇಲ್ಲದೆ ಅತ್ಯಂತ ಬೇಜವಾಬ್ದಾರಿಯಿಂದ ಟ್ವೀಟ್ ಮಾಡಿರುವವರ ಕೃತ್ಯಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್, ಟ್ವೀಟ್ ಮಾಡಿರುವವರ ವಿಳಾಸವನ್ನು ಪತ್ತೆ ಮಾಡಿ ಕೂಡಲೇ ಪ್ರಕರಣ ದಾಖಲು ಮಾಡಿ ಕಾನೂನಾತ್ಮಕ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಈ ವಿಕೃತಿಯನ್ನು ಕ್ಷಮಿಸುವ ಮಾತಿಲ್ಲ. ಖಂಡಿತವಾಗಿ ಶಿಕ್ಷೆ ಆಗಲೇಬೇಕು ಎಂದರು.

    ಬೆಳಗಾವಿ ಅಧಿವೇಶನ:
    ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದಿಂದ ಕಾನೂನು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಶ್ನೋತ್ತರ ಇರುತ್ತದೆ. ಪ್ರತಿಪಕ್ಷದವರು ಎತ್ತುವ ವಿಚಾರಗಳಿಗೆ ಸೂಕ್ತ ಉತ್ತರ ನೀಡಲು ಸಿದ್ಧರಿದ್ದೇವೆ ಎಂದರು.

    ಹಕ್ಕಿಜ್ವರ: ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಬಗ್ಗೆ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪ್ರತಿಕ್ರಯಿಸಿ, ಈ ಬಗ್ಗೆ ಸಭೆ ನಡೆಸಲಾಗಿದ್ದು, ಸೂಕ್ತ ಲಸಿಕೆ, ಔಷಧಿಗಳ ಪೂರೈಕೆ ಸೇರಿದಂತೆ ಮಾರ್ಗಸೂಚಿಗಳನ್ನು ಪಾಲಿಸಲು ತಿಳಿಸಲಾಗಿದೆ.
    ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಕೇಂದ್ರದಿಂದ ಮಾರ್ಗದರ್ಶನವನ್ನು ನಿರೀಕ್ಷಿಸಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ ನಿಗದಿಯಾಗಿಲ್ಲ ಎಂದು ತಿಳಿಸಿದರು.

    ಯಶವಂತಪುರ ವೃತ್ತದ ಸಮೀಪ ನಾಲ್ಕು ಪಥದ ರೈಲ್ವೆ ಸೇತುವೆ; ನಿರ್ಮಲಾ ಕಾನ್ವೆಂಟ್ ಬಳಿಯೂ ಸೇತುವೆ

    BENGALURU DEC 9

    ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಯಶವಂತಪುರ ವೃತ್ತದ ಸಮೀಪ ಇರುವ ರೈಲ್ವೆ ಸೇತುವೆಯನ್ನು 12 ಕೋಟಿ ರೂ.ವೆಚ್ಚದಲ್ಲಿ ನಾಲ್ಕು ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    ತಮ್ಮ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ರಸ್ತೆ, ಮೂಲಸೌಕರ್ಯ, ಬೃಹತ್ ನೀರುಕಾಲುವೆ ಮತ್ತು ಕೆರೆಗಳ ವಿಭಾಗಗಳಿಂದ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನಾ ಸಭೆ ನಡೆಸಿದ ಅವರು ಗುರುವಾರ ಈ ತೀರ್ಮಾನ ತಿಳಿಸಿದರು.

    ಸಭೆಯ ಬಳಿಕ ಮಾತನಾಡಿದ ಅವರು, ಈ ಸೇತುವೆಯ ಮರುನಿರ್ಮಾಣವು ಜನವರಿಯಲ್ಲಿ ಆರಂಭವಾಗಿ 2022ರ ಅಕ್ಟೋಬರಿನಲ್ಲಿ ಮುಗಿಯಲಿದೆ. ಇದರ ಜತೆಗೆ ಮಲ್ಲೇಶ್ವರಂ ಬಡಾವಣೆಯಲ್ಲಿರುವ ನಿರ್ಮಲಾ ಕಾನ್ವೆಂಟ್ ಬಳಿಯಲ್ಲೂ ಒಂದು ರೈಲ್ವೆ ಸೇತುವೆ ನಿರ್ಮಿಸಲಾಗುವುದು ಎಂದು ಹೇಳಿದರು.

    ಮಿಕ್ಕಂತೆ, ಮಲ್ಲೇಶ್ವರಂ 18ನೇ ಅಡ್ಡರಸ್ತೆಯಿಂದ ಮಿಲ್ಕ್ ಕಾಲೋನಿ ಸಂಪರ್ಕಕ್ಕೆ ರೈಲ್ವೆ ಅಂಡರ್ ಪಾಸ್, ಮೈಸೂರು ಲ್ಯಾಂಪ್ ಕಾರ್ಖಾನೆ ಪಕ್ಕದಿಂದ ಬ್ರಿಗೇಡ್ ಅಪಾರ್ಟ್ ಮೆಂಟ್ ನಡುವೆ ಸುಗಮ ಸಂಚಾರಕ್ಕೆ ರೈಲ್ವೆ ಕೆಳಸೇತುವೆ ಮತ್ತು ಇಡೀ ಸಂಪಿಗೆ ರಸ್ತೆಯನ್ನು ಟೆಂಡರ್ ಶ್ಯೂರ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ನುಡಿದರು.

    ಭಾರತೀಯ ವಿಜ್ಞಾನ ಮಂದಿರದ ಎದುರು ಮೇಖ್ರಿ ರಸ್ತೆಯ ಕಡೆಗೆ ಹೋಗುವ ರಸ್ತೆಯು ಈಗ ಕಿರಿದಾಗಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಈ ರಸ್ತೆ ಅಗಲೀಕರಣಕ್ಕೆ ವಿಜ್ಞಾನ ಮಂದಿರದ ಸ್ವಲ್ಪ ಭೂಮಿ ಬೇಕಾಗುತ್ತದೆ. ಈ ಸಂಬಂಧ ಆ ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲು ಮುಖ್ಯ ಕಾರ್ಯದರ್ಶಿಗಳಿಗೆ  ಜವಾಬ್ದಾರಿ ವಹಿಸಲಾಗಿದೆ ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

    ಸಭೆಯಲ್ಲಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್, ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ದೀಪಕ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

    ವಿಕಿ ಕೌಶಲ್, ಕತ್ರಿನಾ ಕೈಫ್ ವಿವಾಹ ಬಂಧನ

    ಬಾಲಿವುಡ್ ನ ಜನಪ್ರಿಯ ನಟ ವಿಕಿ ಕೌಶಲ್ ಮತ್ತು ಬೆಡಗಿ ಕತ್ರಿನಾ ಕೈಫ್ ರಾಜಸ್ಥಾನದ ಸಿಕ್ಸ್ ಸೆನ್ಸ್ ಸ್ ಫೋರ್ಟ್ ನಲ್ಲಿ ಗುರುವಾರ ವಿವಾಹವಾಗುವುದರ ಮೂಲಕ ಬಾಲಿವುಡ್ ನ ಪವರ್ ಕಪಲ್ ಗಳ ಸಾಲಿಗೆ ಸೇರಿದರು. ತಾರಾ ದಂಪತಿಗಳ ಸ್ನೇೇಹಿತರು, ಬಂಧುಗಳು ಮತ್ತು ಬಾಲಿವುಡ್ ತಾರಾ ಬಳಗ ಈ ಸಂಭ್ರಮಕ್ಕೆ ಸಾಕ್ಷಿ ಆಯಿತು.

    ಗಂಗಾ ಆರತಿಯಂತೆ ದಕ್ಷಿಣದಲ್ಲಿ ತುಂಗಾ ಆರತಿ ಮಂಟಪ ನಿರ್ಮಾಣ

    BENGALURU DEC 9

    ಕಾಶಿಯಲ್ಲಿ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣದಲ್ಲಿ ತುಂಗಾ ಆರತಿ ಮಂಪಟಗಳನ್ನು ನಿರ್ಮಿಸುವ 30 ಕೋಟಿ ರೂ. ವೆಚ್ಚದ ಯೋಜನೆಗೆ ಜನವರಿ 14, 15 ರ ಹರಜಾತ್ರೆ ಸಂದರ್ಭದಲ್ಲಿ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಹರಿಹರದ ಪಂಚಮಸಾಲಿ ಗುರುಪೀಠದ ಆಶ್ರಯದಲ್ಲಿ ನಡೆಯಲಿರುವ ಹರಜಾತ್ರೆಯ ಲೋಗೋ, ಧ್ವನಿಸುರುಳಿ, ಟಿ ಶರ್ಟ್ ನ್ನು ಬಿಡುಗಡೆ ಮಾಡಿ ಮಾತನಾಡಿದರು.

    ಹರ ಎಂದರೆ ಶಕ್ತಿ :ಹರ ಎಂದರೆ ಆಧ್ಯಾತ್ಮಕವಾಗಿ ಶಕ್ತಿ, ಲೌಕಿಕವಾಗಿ ‘ಬಗೆಹರಿಸುವುದು’ ಎಂದರ್ಥ. ಜಗತ್ತಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತಹ ಶ್ರೇಷ್ಠ ದೇವತೆ ಹರ. ಹರನನ್ನು ನಂಬುವವರು ತಮ್ಮ ಬದುಕಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ. ಪಂಚಮಸಾಲಿ ಸಮಾಜಕ್ಕೆ ದೊಡ್ಡ ಇತಿಹಾಸವಿದೆ. ಒಕ್ಕಲುತನವನ್ನು ನಂಬಿದವರು 21ನೇ ಶತಮಾನದಲ್ಲಿ ಬದಲಾವಣೆ ಆಗಬೇಕು. ಅತಿ ಹೆಚ್ಚು ವಿದ್ಯಾವಂತರಿರುವ, ಎಲ್ಲ ರಂಗದಲ್ಲಿಯೂ ಪರಿಣಿತರಿರುವ ಸಮಾಜವಾಗಿ ಹೊರಹೊಮ್ಮಬೇಕಾಗಿರುವ ಆಧುನಿಕ ಸಮಯದ ಬೇಡಿಕೆಯಾಗಿದೆ. ಈ ದಿಸೆಯಲ್ಲಿ ಶ್ರೀಗಳು ಹೊಸ ದಿಕ್ಕನ್ನು ತೋರಿಸಿದ್ದಾರೆ. ಪೀಠಕ್ಕೆ ಬಂದ ಕೆಲವೇ ದಿನಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಸಮಾಧಿ ಸ್ಥಳಕ್ಕೆ ಪಾದಯಾತ್ರೆ ಮಾಡುವ ಮೂಲಕ ತಮ್ಮ ಬದ್ಧತೆಯನ್ನು , ಕರ್ತವ್ಯನಿಷ್ಠೆಯನ್ನು ಇಡೀ ಸಮಾಜಕ್ಕೆ ತೋರಿಸಿದ್ದಾರೆ. ಕೇವಲ ಒಬ್ಬ ವ್ಯಕ್ತಿ ಮಾತ್ರವಲ್ಲ, ಇಡೀ ಸಮಾಜ, ಸಮುದಾಯ, ನಾಡಿನ ಜನ ಉತ್ತಮ ರೀತಿಯಲ್ಲಿ ಬದುಕು ನಡೆಸುವ ಕಲ್ಪನೆಯೊಂದಿಗೆ ಶ್ರೀಗಳು ದುಡಿಯುತ್ತಿದ್ದಾರೆ. ಪರಮಪೂಜ್ಯರ ನೇತೃತ್ವದಲ್ಲಿ ಹರಜಾತ್ರೆ ದೊಡ್ಡಮಟ್ಟದಲ್ಲಿ ನಡೆಯುತ್ತಾ ಬಂದಿದೆ ಎಂದರು.

    ಹರಜಾತ್ರೆಯ ಮೂಲಕ ನಾಡು, ಸಂಸ್ಕೃತಿಯ ಬೆಳವಣಿಗೆ :
    ನಾಗರಿಕತೆ ಬೆಳೆಯುತ್ತದೆ. ಆದರೆ ಸಂಸ್ಕøತಿಯನ್ನು ಬೆಳೆಸಬೇಕಾಗುತ್ತದೆ. ಹರಜಾತ್ರೆಯ ಮೂಲಕ ನಾಡು,ಸಂಸ್ಕೃತಿ ಬೆಳೆಸುವ ಗುರಿ ಪೂಜ್ಯರು ಹೊಂದಿದ್ದಾರೆ. ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಹರಜಾತ್ರೆಯಲ್ಲಿ ಯುವಜನರಿಗೆ ಎನ್‍ಇಪಿ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ. ಶಿಕ್ಷಣ ಮತ್ತು ಕೌಶಲ್ಯ ಸಿಕ್ಕ ನಂತರ ಉದ್ಯೋಗ ಮತ್ತು ಉದ್ಯಮ ಸೃಜನೆಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

    ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ :
    ಸಮಾಜವನ್ನು ಕಟ್ಟುವ ಜೊತೆಗೆ ಸಮಾಜಕ್ಕೆ ನ್ಯಾಯವನ್ನು ಒದಗಿಸುವ ವಿಚಾರದಲ್ಲಿ ಬಹಳ ಸ್ಪಷ್ಠತೆಯಿಂದ ಮುನ್ನೆಡಿದ್ದಾರೆ. ಸಮಾಜವನ್ನು 2 ಎ ಮೀಸಲಾತಿ ನೀಡುವ ಬಗ್ಗೆ ಸೂಕ್ತ ಸಲಹೆ ಸಹಕಾರಗಳನ್ನು ನೀಡಿದ್ದಾರೆ. ಸರ್ಕಾರ ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಹರಿಹರದ ಶ್ರೀವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಮಹಾಸ್ವಾಮಿಗಳು, ಸಚಿವರಾದ ಮುರುಗೇಶ್ ನಿರಾಣಿ, ಡಾ. ಸಿ ಎನ್ ಅಶ್ವತ್ಥ ನಾರಾಯಣ, ಶಂಕರ ಪಾಟೀಲ್ ಮುನೇನಕೊಪ್ಪ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ ಹಾಜರಿದ್ದರು

    OMICRON ಹಾಸ್ಟೆಲ್ ಹಾಗೂ ಕ್ಲಸ್ಟರ್‍ಗಳಿಗೆ ಪ್ರತ್ಯೇಕ ಮಾರ್ಗಸೂಚಿ; ನೈಟ್ ಕರ್ಫ್ಯೂ ಸಧ್ಯಕ್ಕಿಲ್ಲ

    BENGALURU DEC 9

    ಹಾಸ್ಟೆಲ್‍ಗಳು ಹಾಗೂ ಕ್ಲಸ್ಟರ್‍ಗಳಲ್ಲಿ ಕೋವಿಡ್ ನಿರ್ವಹಣೆಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಸಚಿವ ಸಂಪುಟ ಸಭೆಯ ನಂತರ ಕೋವಿಡ್ ಹಾಗೂ ಒಮಿಕ್ರಾನ್‍ಗೆ ಸಂಬಂಧಿಸಿದಂತೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

    ಕೋವಿಡ್ ತಜ್ಞರ ಸಮಿತಿಯಿಂದ ಪ್ರಸ್ತುತ ಕೋವಿಡ್ ಸ್ಥಿತಿಗತಿ ಹಾಗೂ ಹೊಸ ತಳಿ ಒಮಿಕ್ರಾನ್ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ. ಈಗಿರುವ ಪಾಸಿಟವಿಟಿ ದರ ಪರಿಶೀಲಿಸಿದರೆ ಆತಂಕ ಪಡುವ ಅಗ್ಯವಿಲ್ಲ, ಆದಾಗ್ಯೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ. ಹಾಸ್ಟೆಲ್‍ಗಳನ್ನು ಸ್ಯಾನಿಟೈಸ್ ಮಾಡುವುದು, ಊಟವನ್ನು ಪಾಳಿಯ ಮೇಲೆ ನೀಡುವುದು, ಕಡಿಮೆ ಮಾಡುವುದು, ಅಡುಗೆ ಸಿಬ್ಬಂದಿಗಳಿಗೆ ಎರಡೂ ಡೋಸ್ ಕಡ್ಡಾಯಗೊಳಿಸುವುದು, ಐಸೋಲೋಷನ್ ಕೊಠಡಿ ಬಗ್ಗೆ ವಿಶೇಷವಾದ ಮಾರ್ಗಸೂಚಿಗಳು ಹಾಗೂ ಬೆಂಗಳೂರು ಸೇರಿದಂತೆ ಇತರೆಡೆಗಳಲ್ಲಿ ಕ್ಲಸ್ಟರ್ ನಿರ್ವಹಣೆಗೂ ಪ್ರತ್ಯೇಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

    ಲಸಿಕೆ ಅಭಿಯಾನ :
    ಲಸಿಕೆ ಅಭಿಯಾನಗಳನ್ನು ಪುನ: ಆಯೋಜಿಸಲು ಸಚಿವರು ಸಲಹೆ ನೀಡಿದ್ದು, ಈ ಬಗ್ಗೆ ಶೀಘ್ರದಲ್ಲಿ ಕ್ರಮಕೈಗೊಳ್ಳಲಾಗುವುದು. ಗಡಿಭಾಗದಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದ್ದು, ಮಾರ್ಗಸೂಚಿಗಳನ್ನು ಮುಂದುವರೆಸಲಾಗುವುದು. ಕೇರಳ ವಿದ್ಯಾರ್ಥಿಗಳಿಗೆ ಎರಡು ಡೋಸ್, ಆರ್‍ಟಿಸಿಪಿಆರ್ ಪರೀಕ್ಷೆ ಸೇರಿದಂತೆ ನಿಯಮಗಳ ಕಡ್ಡಾಯ ಪರಿಪಾಲನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ರಾತ್ರಿ ಕಫ್ರ್ಯೂ, ಕ್ರಿಸ್‍ಮಸ್, ಹೊಸ ವರ್ಷದ ಆಚರಣೆ ಬಗ್ಗೆ ಮುಂದಿನ ವಾರದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಹಾಗಾದಾಗ….

    ಬೆಳಗಿನ ಕೆಲಸ ಮುಗಿದು ಹೊರಡುವವರು ಹೋದ ಮೇಲೆ ನನ್ನದೇ ಒಂದು ಪ್ರೀತಿಯ ಏಕಾಂತದಲಿದ್ದಾಗ ಅವಳ ಫೋನು ಬಂತು.
    ಈ ಸಮಯ ಇನ್ನೂ ಚಂದವಾಗಲಿಕ್ಕೆ ಇವಳಿಗೆಂತ ಇನ್ಯಾರು ಬೇಕು ಅಂತ ಅಂದುಕೊಂಡು ಫೋನ್ ರಿಸೀವ್ ಮಾಡಿದವಳಿಗೆ ಆ ಬದಿಯಿಂದ ಬಿಕ್ಕುವ ಸದ್ದು.

    ಎದೆ ಖಳಕ್ಕೆನಿಸಿತು.

    ‘ಯಾಕೋ..ಏನಾಯ್ತು’

    ಅಂತ ಅಕ್ಕರೆಯಿಂದಲೇ ಕೇಳಿದೆ.

    ‘ನಾನೆಷ್ಟು ಬೇಡವೆಂದಿದ್ದೆ.ನಿನಗೂ ಹೇಳಿದ್ದೆ.ಆದರೆ ಅವನೂ ಕೇಳಲಿಲ್ಲ.ನೀನೂ ಆಗಲಿ ಬಿಡು ಒಮ್ಮೆ ಎಂದೆ.ಈಗ ನೋಡು.
    ಮತ್ತೆ ಅವಳ ಕಟ್ಟೆಯೊಡೆಯಿತು.

    ಒಗಟಿನಂತಹ ಮಾತು…ಓಹ್…ಅದರ ಕುರಿತು..!

    ಏನಾಯ್ತೀಗ.?

    ******

    ಮೊನ್ನೆ ಸಂಜೆ ಕರೆ ಮಾಡಿ ಮಾತಾಡಿದವಳ ಭಾವದಲ್ಲಿ ಮೈಯೆಲ್ಲ ಗುಲಾಬಿ.!ಅವಳ ದೇಹದ ತಂತು ಮೀಟುತ್ತಿರುವ ಸದ್ದು ಫೋನಿನ ಈ ಬದಿಗೂ ಮೌನವಾಗೇ ಕೇಳುತ್ತಿತ್ತು.ಅಂಥ ಉತ್ಕಟದಲಿದ್ದಳು ಹುಡುಗಿ.

    ನನಗಿಂತ ಆರು ವರ್ಷ ಚಿಕ್ಕ ಗೆಳತಿ.ಮೂವ್ವತ್ತೈದರ ಆಸುಪಾಸು. ಒಂಟಿ ಬಾಳಿನ ನಂತರದಲ್ಲಿ ಆದದ್ದು ಒಂದು ಗಂಧದಂತ ಪರಿಚಯ. ಚಿಪ್ಪಿನ ಸ್ವಭಾವದ ಈ ಹುಡುಗಿ ತೆರೆದುಕೊಳಲೇ ಇಲ್ಲ ಮೊದಮೊದಲು.
    ಅವನೂ ಬಿಡಲಿಲ್ಲ. ಕಾಡಿ ಬೇಡಿ ತನ್ನದಾಗಿಸಿಕೊಂಡ.
    ಅವಳೆದೆ ಭಾವಗಳಿಗೆ ಬಯಕೆಯ ಕಿಡಿ ಹತ್ತಿಸಿದ್ದ.
    ಮೊಬೈಲಿರುವಾಗ ಮಾತು, ಭೇಟಿ,ಸ್ಪರ್ಶ, ಮುತ್ತು ಇವೆಲ್ಲ ಮುಂದುವರೆಸುವುದು ಬಹಳ ಸಲೀಸು.

    ಆಮೇಲೆ…

    ಎಂದಿನಂತೆ ಪ್ರೇಮ ತಣಿಯೊ ವಿಷಯ.

    ಅವನು ಕೇಳಿದ್ದ.ಬೆಚ್ಚಿದ ಈ ಹುಡುಗಿ ನಿರಾಕರಿಸಿದ್ದಳು.
    ಅವಳ ಒಂಟಿ ಬದುಕು ಜಂಟಿಯಾಗುತ್ತಿರುವ ಖುಷಿಗೆ ಅಭಿನಂದನೆ ಹೇಳಿದ ನನ್ನೊಡನೆ ಇದನ್ನೂ ಹೇಳಿಕೊಂಡಳು.ಒಂಥರ ಆತ್ಮೀಯತೆ ನಮ್ಮಿಬ್ಬರ ನಡುವೆ.

    ಒಮ್ಮೆ ಆಗಲಿ ಬಿಡು.ಆಮೇಲೆ ಯೋಚಿಸು ಹೇಳಿದ್ದೆ.

    ಪ್ರಾಯ ಏರುಗೈಯಾಗಿದ್ದ ಕಾಲದಲ್ಲಿ ಅವಳ‌ ಒಂಟಿ ಬದುಕಿಗೆ ಮುಕ್ತಿ ಸಿಗಲೆಂದು ನಾನು ಹಾಗಂದಿದ್ದೆ.ಒಪ್ಪಿ ನಡೆದಿತ್ತು ಎಲ್ಲಾ.
    ಖುಷಿಯಾಗಿದ್ದಳು ಆ ದಿನ.

    ಅದರ ಕುರಿತೇ ಹುಡುಗಿಯ ತಕರಾರು ಈಗ.
    ವಿವರಿಸುವಂತ ವಿಷಯವಲ್ಲದಿದ್ದರೂ ಹಸನಾದ ಸುಖದಲಿದ್ದಾಳೆ ಹುಡುಗಿ ಅನ್ನೋದು ಅವಳ‌ ಮಾತಿನಲ್ಲೇ ತಿಳಿಯುತಿತ್ತು ಅಂದು.
    ಸಂಭ್ರಮಿಸಿದ್ದೆ ನಾನೂ.

    ******

    ‘ಈಗೇನಾಯ್ತೋ’ಎಂದೆ.

    ಬಿಕ್ಕುತ್ತಲೇ “ಡಾಕ್ಟರ್ ಹತ್ತಿರ ಹೋಗಿದ್ದೆ’ ಅಂದಳು.

    ‘ಆರೆ ..ಮೂರೇ ದಿನಕ್ಕೆ ವಾಕರಿಕೆ ಶುರುವಾಯ್ತೆ.?

    ಕಂಗ್ರಾಜ್ಯುಲೇಷನ್ಸ್’

    ಅಂತ ರೇಗಿದರೆ ಸಿರ್ರನೆ ಸಿಡುಕಿದಳು.

    ‘ಅವತ್ತು ಒಂದು ದಿನ ಸರಿಯಿದ್ದೆ.ನೆನಪುಗಳ ಸಂತೆಯಲಿ ಜೊತೆಯಾಗಿ ತಿರುಗಿದ ಹಾಗೆ.ಆದರೆ ಮಾರನೇ ದಿನದಿಂದ ಅಲ್ಲೆಲ್ಲಾ ಕಿರಿಕಿರಿ. ಒಳಗಿಂದ ಮುಳುಮುಳು.ಮಾರನೇ ದಿನಕ್ಕೆ ತುರಿಕೆ,ನವೆ.
    ಕೆಂಡದಂತಹದೊಂದು ಇಟ್ಟರೆ ಸರಿ ಹೋದೀತು ಎನುವ ಹಾಗೆ.ನಿನ್ನೆ ರಾತ್ರಿಯಿಂದಲೇ ಸ್ರಾವ, ಹಿಂಸೆಯ ತೇವ.ಹೇಸಿಗೆ.
    ಡಾಕ್ಟರ್ ಹತ್ರ ಹೋದರೆ ಇನ್ನರ್ ಚೆಕ್ ಅಪ್ ಅಂತೆ.
    ಯಾರಿಗೆ ಬೇಕು ಇದೆಲ್ಲಾ.ಏನೂ ಬೇಡವೆಂದು ತಣ್ಣಗಿದ್ದೆ.ಎಲ್ಲಾ ಆಗಿದ್ದು‌ ನಿನ್ನಿಂದಲೆ’

    ಅಸಹನೆಯಂಥ ದುಃಖ ಅವಳ ಸ್ವರದಲ್ಲಿ.

    ಈಗರ್ಥವಾಯಿತು ಅವಳ ಸಮಸ್ಯೆ.ಹೇಳಿದೆಯಾ ಅಂದದ್ದಕ್ಕೆ ‘ಹು..ಮುಜುಗರದಿಂದಲೇ ಹೇಳಿದೆ.ಗಾಬರಿಯಾದ.ಬರ್ತೀನಿ ಡಾಕ್ಟರಲ್ಲಿಗೆ ‘
    ಅಂದ.

    ಎಲ್ಲದಕ್ಕೂ ಎಳ್ಳುನೀರು ಬಿಟ್ಟು ಮೊದಲಿನಂತೆ ತಣ್ಣಗಿರಬೇಕೆಂದುಕೊಂಡು ದಯಮಾಡಿ ಬೇಡವೆಂದೆ.
    ಬೇಡಿದ.

    ಬಿಲ್ಕುಲ್ ಬೇಡವೆಂದೆ.ಬೇಸರಿಸಿದ.

    ತನಗಾವ ಸಮಸ್ಯೆ ಯೂ ಇಲ್ಲವೆಂದ.ಏನೋ ಸಣ್ಣ ಸಮಸ್ಯೆ ಆಗಿದೆ. ಭಯ ಬೀಳಬೇಡ ನಾನಿದ್ದೀನಿ ಎಂದ.

    ಬಹುಶಃ ಇದು ಆಧುನಿಕ ಅನಿಸಿಕೊಂಡಿರುವ ಬಹುತೇಕ ಹೆಣ್ಣು ತನ್ನ ಬದುಕಿನ ಯಾವುದೋ ಕಾಲಘಟ್ಟದಲ್ಲಿ ಒಂದಿಲ್ಲೊಂದು ಬಾರಿ ಅನುಭವಿಸಿಯೇ ಇರುವಂಥ ಘಟನೆ.

    ಕೊಡುಕೊಳ್ಳುವಿಕೆಯ ಪ್ರಿಯ ಕೆಲಸದಲ್ಲಿ ಪಡೆದದ್ದು ಹೆಚ್ಚೋ,ನೀಡಿದ್ದು ಹೆಚ್ಚೊ ಎಂದರೆ ಉತ್ತರ ಅಸ್ಪಷ್ಟ. ಆದರೂ ತೊಂದರೆ ತಾಪತ್ರಯಗಳು ಈ “ಇವಳಿಗೇ” ಹೆಚ್ಚು.

    ನಂಬಿಕೆಗೋ,ಬದ್ಧತೆಗೋ ಅಥವಾ ನೈಜತೆಗೋ ಸುರಕ್ಷತೆಯನ್ನು ಹೊರಗಿಟ್ಟು ನಡೆಸಿದ ಕ್ರಿಯೆಯಲ್ಲಿ ಹೆಣ್ಣು ಕೆಲವೊಮ್ಮೆ ಬಹಳಷ್ಟು ದಿನದ ದೈಹಿಕ ಅನಾರೋಗ್ಯ ಅನುಭವಿಸಬೇಕಾದೀತು.
    ಮೊದಲ ದಿನದ ಮೋಹ ಎರಡನೆಯ ದಿನದ ಕಿರಿಕಿರಿಯೊಂದಿಗೆ‌ ಮುಗಿದು ಮೂರನೇ ದಿನ ವಿಪರೀತ ವಾಗಿ ಮಾನಸಿಕವಾಗಿ, ದೈಹಿಕವಾಗಿ ಕೈಯಾರೆ ಮಾಡಿಕೊಂಡಿದ್ದಕ್ಕೆ ತನ್ನ ತಾನೇ ಹಳಿಯುತ್ತ,ಸುಯ್ಯುತ್ತಾ ವೈದ್ಯರ ಬಳಿ ಹೋದರೆinner check upಇರದೇ ಮುಂದಿನ ಮಾತೇ ಇಲ್ಲ.

    ಎಂದೂ ಹೀಗೆಲ್ಲ ಆಗದಿದ್ದವಳಿಗೆ,ಆಗಬಾರದೆಂದುಕೊಂಡವಳಿಗೆ ಡಾಕ್ಟರು ಕೇಳಿದ ಪ್ರಶ್ನೆಗೆ ಹೇಳಿದ ಸುಳ್ಳಿನ ಗಿಲ್ಟೇ ಸಾಕಷ್ಟು ಕಾಡುವಾಗ ಜೀವ ಬಾಯಿಗೆ ಬರುವಂತ ಪ್ರಶ್ನೆಗಳು,ಪರೀಕ್ಷೆಗಳು.!.
    ಭೂಮಿ ಬಾಯಿ ಬಿಡಬಾರದೇ ಅನಿಸುವಂತ ಸಂದರ್ಭ.ಈಗಿವಳೂ ಅದೇ ಪರಿಸ್ಥಿತಿಯಲ್ಲಿದ್ದಾಳೆ.

    ಇದೇ ವಿಷಯದ ಕುರಿತು ಇನ್ನೂ ಅಚ್ಚರಿಯ ವಿಚಾರಗಳಿವೆ.
    ಕೇಳಿದ ನೋಡಿದ ಅಷ್ಟೂ ಘಟನೆಗಳಲ್ಲಿ ಗಂಡಿಗೆ ಯಾವ ತೊಂದರೆಯೂ ಇಲ್ಲ.

    ತಾಪತ್ರಯಗಳೆಲ್ಲವೂ ಹೆಣ್ಣಿನ ನಿಮಿತ್ತವೇ ಸೃಷ್ಟಿಯಾದಂತೆ.
    ಅಂತಹ ತೊಂದರೆ ಗಳಿಂದಾಗಿ ಎದುರಾಗುವ ಮಾನಸಿಕ ಕಿರಿಕಿಯಂತೂ ದೇಹಕಿಂತಲೂ ವಿಷಾದನೀಯ.ಹೇಳಲಾಗದ ಅನುಭವಿಸಲಾಗದ ತಪ್ಪಿತಸ್ಥ ಮನಸ್ಥಿತಿ.

    ‘ಬೇಕಿತ್ತಾ ನಿನಗಿದು.?ಅನುಭವಿಸು ಈಗ ಎನ್ನುವ ಸ್ವಕೌರ್ಯ,ಸ್ವಾನುಕಂಪದ ಅಸಹನೀಯ ಭಾವ.

    ನನ್ನದು ಒಂದೇ ಪ್ರಶ್ನೆ.

    ದೇವರು ಯಾರ ಪಕ್ಷಪಾತಿಯೂ ಅಲ್ಲವೆನ್ನುವುದಾದರೆ ಯಾಕಾಗಿ ಈ ತಾರತಮ್ಯ .?ಪರಸ್ಪರ ಒಪ್ಪಿಯೇ ಆದಮೇಲೆ ತೊಂದರೆಗೆ ಖಾಲಿ ಇವಳೊಬ್ಬಳೆ ಬಾಧ್ಯ ವಾಗಿಸುವುದಾದರೂ ಯಾಕೆ . ?
    ಪರಿಧಿಯ ಹೊರಗೆ,ಗೆರೆ ದಾಟಿದ ಪಾಪ ಪ್ರಜ್ಞೆಯ ಹೊರತಾಗಿ ದಾಂಪತ್ಯದಲ್ಲೂ ಇದು ತಪ್ಪಿದ್ದಲ್ಲ.
    ಗಂಡ ಬೇಲಿಹಾರಿ ಮೇಯ್ದು ಬಂದಿದ್ದರೂ ಅಮಶಂಕೆ ಶುರುವಾಗುವುದು ಹೆಂಡತಿಗೇ.!

    ಇಂತಹ ವಿಚಾರಗಳಲ್ಲಿ ಶೇಕಡಾ ಎಂಬತ್ತಕ್ಕೂ ಮೀರಿ ಸಮಸ್ಯೆ ಕಾಡುವುದು ಹೆಣ್ಣನ್ನೇ.

    ಆಗ ಮಾಡಬೇಕಿರುವುದು ಏನು?

    ಇಂತಹ ಪರಿಸ್ಥಿತಿಯಲ್ಲಿ ಮೊದಲಿಗೆ ಧೈರ್ಯ ಕಳೆದು ಕೊಳ್ಳ ಬಾರದು.
    ಏನೋ ಆಗಿಹೋಯಿತು ಎಂದುಕೊಂಡರೆ ಖಿನ್ನತೆ ಖಂಡಿತ.ಅದು ಪರಿಸ್ಥಿತಿಯನ್ನು ಇನ್ನೂ ಬಿಗಡಾಯಿಸುವಂತೆ ಮಾಡುತ್ತದೆ.
    ಸಾಧ್ಯವಾದರೆ ತಕ್ಷಣವೇ ಬಿಸಿನೀರಿನ ಟಬ್ ಬಾತ್ ಒಳ್ಳೆಯದು.
    ಕಿರಿಕಿರಿ ಆರಂಭವಾದ ಮೇಲಂತೂ ಟಬ್ ಬಾತ್ ಖಂಡಿತವಾಗಿ ಬೇಕು.
    ದಿನದಲ್ಲಿ ಮೂರುಬಾರಿ ಟಬ್ ಬಾತ್ ಮಾಡಿದರೆ ಎರಡು ದಿನದಲ್ಲಿ ತಹಬಂದಿಗೆ ಬರಬಹುದು.

    ಸಹಜವೆನಿಸಿದರೆ ವೈದ್ಯರ ಅವಶ್ಯಕತೆ ಬೇಡ.
    ಆದರೆ ಸಣ್ಣ ನವೆ ತುರಿಕೆಗಳು ಉಳಿದರೂ ನಿರ್ಲಕ್ಷ್ಯ ಕೂಡದು.
    ತಕ್ಷಣವೇ ವೈದ್ಯರನ್ನು ಕಂಡು ಅವರ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿ ಸಹಕರಿಸಿದರೆ ಮತ್ತೆ ಮೊದಲಿನಂತೆ ದಿನಚರಿ ಸುಗಮವಾಗುತ್ತದೆ.

    ಪ್ರಕೃತಿಯಲ್ಲಿ ಪ್ರತಿಯೊಂದೂ ಯಾವುದೋ ಒಂದು ನಿರ್ದಿಷ್ಟ ಕಾರಣಕ್ಕಾಗಿಯೇ ಹೀಗಿರುತ್ತದೆ.ಹೆಣ್ಣಿನ ಅಂಗಾಂಗಗಳ ಸಂಕೀರ್ಣತೆ ಬಹುಶಃ ಇದಕ್ಕೆ ಕಾರಣವಿರಬಹುದು.ಏನೇ ಇದ್ದರೂ ಹೆಣ್ಣು ತಾನು ಸುಕೋಮಲವಾಗಿದ್ದೂ ದೃಢವಾಗಿರಲು ಕಲಿಯಬೇಕಿರುವುದು ಇಂದಿನ ವೇಗ ಯುಗದಲ್ಲಿ ಅತ್ಯಂತ ಅನಿವಾರ್ಯ.

    BSY ಕರೆ ಮಾಡಿ ಬೆಂಬಲ ಕೇಳಿದ್ದಾರೆ, ಶೀಘ್ರವೇ ಮೈತ್ರಿ ಬಗ್ಗೆ ನಿರ್ಧಾರ: HDK

    MYSURU DEC 5

    ಪ್ರಸಕ್ತ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಅಥವಾ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವ ಬಗ್ಗೆ ಈವರೆಗೆ ಅಧಿಕೃತವಾಗಿ ಚರ್ಚೆ ನಡೆದಿಲ್ಲ. ಆದರೆ, ಈ ಬಗ್ಗೆ ಅತಿ ಶೀಘ್ರವೇ, ಅಂದರೆ ಮಂಗಳವಾರದೊಳಗೆ ನಿರ್ಧಾರ ಕೈಗೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

    ಮೈಸೂರಿನಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; “ಮೈತ್ರಿ ಬಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಹೊರಗೆ ಮುಕ್ತವಾಗಿಯೇ ಮಾತನಾಡಿದ್ದಾರೆ. ಅಲ್ಲದೆ, ಸ್ವತಃ ಅವರು ನನಗೆ ಮೊಬೈಲ್‌ ಕರೆ ಮಾಡಿ ಬೆಂಬಲ ಕೇಳಿದ್ದಾರೆ. ಎಲ್ಲಿ ಜೆಡಿಎಸ್‌ ಅಭ್ಯರ್ಥಿಗಳಲ್ಲವೋ ಅಂಥ ಕ್ಷೇತ್ರಗಳಲ್ಲಿ ಜೆಡಿಎಸ್‌ ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ” ಎಂದರು.

    ಯಡಿಯೂರಪ್ಪ ಅವರ ಮಾತಿಗೆ ಪೂರಕವಾಗಿ ಮುಖ್ಯಮಂತ್ರಿಗಳು ಮತ್ತು ಬಿಜೆಪಿಯ ಇತರೆ ನಾಯಕರು ಮೈತ್ರಿ ಬಗ್ಗೆ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ತೀರ್ಮಾನ ಮಾಡಿಕೊಳ್ಳುತ್ತಾರೆ ಎಂದು ಹೇಳುತ್ತಿದ್ದಾರೆ. ಅದು ವೈಯಕ್ತಿಕ ಮಟ್ಟದಲ್ಲಿ ತೀರ್ಮಾನ ಆಗುತ್ತದೆ ಎಂದು ಆ ಪಕ್ಷದಲ್ಲಿ ನಂಬಿದ್ದಾರೆ. ಇದರ ಜತೆಗೆ, ಕಾಂಗ್ರೆಸ್‌ ನಾಯಕರು ನಮಗೆ ಜೆಡಿಎಸ್‌ ಬೆಂಬಲದ ಅಗತ್ಯವಿಲ್ಲ ಎಂದು ಮುಕ್ತವಾಗಿ ಹೇಳಿಬಿಟ್ಟಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬೆಂಬಲದ ವಿಷಯವನ್ನು ಅಂತಿಮಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು.

    ಅಲ್ಲದೆ; ಮೈತ್ರಿ ಬಗ್ಗೆ ಕುಮಾರಸ್ವಾಮಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಈಗಾಗಲೇ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ಇನ್ನು, ಕಾಂಗ್ರೆಸ್ ಪಕ್ಷ ನಮ್ಮ ಬೆಂಬಲ ಕೇಳಿಲ್ಲ. ಸ್ಥಳೀಯ, ರಾಜ್ಯಮಟ್ಟದಲ್ಲಿ ನಮ್ಮೊಂದಿಗೆ ಆ ಪಕ್ಷ ಗೌರವಯುತವಾಗಿ ನಡೆದುಕೊಂಡಿಲ್ಲ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಸಣ್ಣಪುಟ್ಟ ಸಮಸ್ಯೆಗಳಿರುವ ಜಿಲ್ಲೆಗಳಲ್ಲಿ ಪರಿಸ್ಥಿತಿ ಸರಿಪಡಿಸಿ 2023ರ ಚುನಾವಣೆಗೆ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.

    ಚುನಾವಣೆ ನಡೆಯುತ್ತಿರುವ ಅಷ್ಟೂ ಜಿಲ್ಲೆಗಳ ಪಕ್ಷದ ಪದಾಧಿಕಾರಿಗಳು, ಮುಖಂಡರ ಜತೆ ಮಾತುಕತೆ ನಡೆಸಿ ಪಕ್ಷಕ್ಕೆ ಅನುಕೂಲವಾಗುವ ಅಗುವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ನಮ್ಮ ಗುರಿ 2023ರ ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವುದೇ ಆಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

    ರಾಜ್ಯವ್ಯಾಪಿ ನಮ್ಮ ಪಕ್ಷಕ್ಕೆ ನೆಲೆ ಇರುವುದರಿಂದಲೇ ಬಿಜೆಪಿ ನಾಯಕರು ನಮ್ಮ ಬೆಂಬಲ ಕೇಳಿದ್ದಾರೆ. ಆದರೆ, ನಮ್ಮ ಬೆಂಬಲ ಕೇಳದೇ ಇರುವ ಇನ್ನೊಂದು ಪಕ್ಷಕ್ಕೆ ನಾವೇ ಮುಂದೆ ಹೋಗಿ ಬೆಂಬಲ ನೀಡುವ ಪ್ರಶ್ನೆ ಉದ್ಭವ ಆಗುವುದಿಲ್ಲ. ಇವೆಲ್ಲ ಅಂಶಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬೆಂಬಲದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು.

    ಪ್ರತೀ ತಾಲೂಕಿಗೆ ವೀಕ್ಷಕರ ನೇಮಕ:ಪರಿಷತ್‌ ಚುನಾವಣೆ ಎದುರಿಸಲು ಜೆಡಿಎಸ್‌ ವ್ಯವಸ್ಥಿತ ಸಿದ್ಧತೆ ಮಾಡಿಕೊಂಡಿದ್ದು, ಸ್ಪರ್ಧೆ ಮಾಡಿರುವ ಆರು ಕ್ಷೇತ್ರಗಳ ಪ್ರತೀ ತಾಲೂಕಿಗೂ ವೀಕ್ಷಕರ ತಂಡವನ್ನು ನೇಮಕ ಮಾಡಲಾಗಿದೆ. ಪಕ್ಷದ ಇತಿಹಾಸದಲ್ಲಿಯೇ ಮೊತ್ತ ಮೊದಲಿಗೆ ಇಂಥ ಕ್ರಮಕ್ಕೆ ಮುಂದಾಗಿದ್ದೇವೆ. ನಮ್ಮ ವೀಕ್ಷಕರ ತಂಡ ಆಯಾ ತಾಲೂಕುಗಳ ಸ್ಥಳೀಯ ಸಂಸ್ಥೆಗಳ ಎಲ್ಲ ಮತದಾರರನ್ನು ಖುದ್ದು ಭೇಟಿ ಮಾಡುತ್ತಿದೆ ಎಂದು ಅವರು ಹೇಳಿದರು.

    ಪಕ್ಷ ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದೆ. ವೀಕ್ಷಕರ ತಂಡದ ಜತೆಗೆ ಆಯಾ ತಾಲೂಕಿನ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟೂ ವೀಕ್ಷಕರ ತಂಡಗಳನ್ನು ನೇರವಾಗಿ ನಾನೇ ಪರಿವೇಕ್ಷಣೆ ಮಾಡುತ್ತಿದ್ದೇನೆ, ಹಾಗೂ ಬಿಡದಿಯಲ್ಲಿ ನಡೆದ ʼಜನತಾಪರ್ವ 1.Oʼ, ಮತ್ತು ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ʼಜನತಾ ಸಂಗಮʼ ಕಾರ್ಯಾಗಾರಗಳಲ್ಲಿ ನೀಡಲಾದ ಸೂಚನೆ- ನಿರ್ದೇಶನಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

    ಪರಿಷತ್ ಚುನಾವಣೆ ಗೆಲ್ಲಲು ಪಕ್ಷ ರೂಪಿಸಿರುವ ಈ ವ್ಯವಸ್ಥೆಯನ್ನು ೨೦೨೩ರ ವಿಧಾನಸಭೆ ಚುನಾವಣೆಗೂ ರಾಜ್ಯವ್ಯಾಪಿ ಅನ್ವಯ ಮಾಡಲಾಗುವುದು. ಅದಕ್ಕೆ ಪೂರ್ವಭಾವಿಯಾಗಿ ಈಗ ಪ್ರಾಯೋಗಿಕವಾಗಿ ಅಳವಡಿಸಿಕೊಂಡಿದ್ದೇವೆ. ಈ ಮೂಲಕ ಮತದಾರರನ್ನು ನೇರವಾಗಿ ಪಕ್ಷ ತಲುಪುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

    ಅವರಿಗೆ ಎಲ್ಲ ಪಕ್ಷಗಳಲ್ಲೂ ಹಿತೈಷಿಗಳಿದ್ದ ಹಾಗೆಯೇ ನಮಗೂ ಇತರೆ ಎಲ್ಲ ಪಕ್ಷಗಳಲ್ಲೂ ಹಿತೈಷಿಗಳು, ವಿಶ್ವಾಸಿಗಳೂ ಇದ್ದಾರೆ. ನಮ್ಮ ಅಭ್ಯರ್ಥಿಗಳು ಗೆಲ್ಲುವುದಕ್ಕೆ ಅವರೆಲ್ಲರ ಬೆಂಬಲವನ್ನೂ ನಾನೂ ಕೇಳುತ್ತಿದ್ದೇನೆ. ಇದರಲ್ಲಿ ತಪ್ಪೇನಿದೆ? ಆರೂ ಕ್ಷೇತ್ರಗಳಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಹಾಗೂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

    ಜೆಡಿಎಸ್ ಸ್ಪರ್ಧೆ ಮಾಡಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಗಳು ಗಂಭೀರವಾಗಿ ಹೋರಾಟ ನಡೆಸುತ್ತಿವೆ. ಅದೇ ರೀತಿ ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಇದೆ. ಹೀಗಾಗಿ ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಈಗಿನ ಪರಿಷತ್ ಚುನಾವಣೆ ಮುಖ್ಯವಾಗಿದೆ ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

    ಮೈಸೂರಿನಲ್ಲಿ ನಮ್ಮ ಅಭ್ಯರ್ಥಿಗೆ ಗೆಲುವಿನ ಅವಕಾಶಗಳು ಹೆಚ್ಚಿದೆ. ಎರಡನೇ ಪ್ರಾಶಸ್ತ್ಯದ ಮತಗಳು ನಮಗೇ ಹೆಚ್ಚು ಬೀಳಲಿವೆ. ಬಿಜೆಪಿಗೆ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಅಭ್ಯರ್ಥಿಗಳು ಎರಡನೇ ಪ್ರಾಶಸ್ತ್ಯದ ಮತವನ್ನು ನಮ್ಮ ಅಭ್ಯರ್ಥಿಗೆ ಹಾಕುತ್ತಾರೆನ್ನುವ ಬಲವಾದ ನಂಬಿಕೆ ನನಗಿದೆ. ಹಾಗೆಯೇ, ಮೊದಲನೇ ಪ್ರಾಶಸ್ತ್ಯದ ಮತವನ್ನು ಜೆಡಿಎಸ್ ಅಭ್ಯರ್ಥಿಗೆ ಕೊಟ್ಟು ಎರಡನೇ ಪ್ರಾಶಸ್ತ್ಯದ ಮತವನ್ನು ಯಾವ ಪಕ್ಷದ ಅಭ್ಯರ್ಥಿಗಾದರೂ ಕೊಡಿ ಎಂದು ನಾನು ಈಗಾಗಲೇ ಮುಕ್ತವಾಗಿ ಹೇಳಿದ್ದೇನೆ ಎಂದು ಅವರು ಹೇಳಿದರು.

    ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್, ಪರಿಷತ್ ಚುನಾವಣೆಯ ಮೈಸೂರು ಅಭ್ಯರ್ಥಿ ಮಂಜೇಗೌಡ ಮುಂತಾದವರು ಹಾಜರಿದ್ದರು

    MLC Election: ಹಣಬಲದಿಂದ ಚುನಾವಣೆ ಗೆಲ್ಲಲು ಕಾಂಗ್ರೆಸ್ ಹುನ್ನಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    BENGALURU DEC 5

    ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಣ್ಣ ಬಯಲಾಗಿದೆ. ಜನಬಲ ಇಲ್ಲದಿರುವ ಕಾರಣ ಹಣದ ಮುಖಾಂತರವೇ ಚುನಾವಣೆ ಗೆಲ್ಲಬೇಕೆಂದು ಹುನ್ನಾರ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ-Basavaraja Bommai- ತಿರುಗೇಟು ನೀಡಿದರು.

    ಅವರು ಇಂದು ಆನೇಕಲ್-anekal ನ ಅತ್ತಿಬೆಲೆಯಲ್ಲಿ ಆಯೋಜಿಸಿದ್ದ ವಿಜಯ ಸಂಕಲ್ಪ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

    ಹಣವಿರುವ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿ, ಹಣ ಖರ್ಚು ಮಾಡಿ, ಜೊತೆಗೆ ಪಕ್ಷಕ್ಕೂ ನೀಡಿ , ಯಾವುದೇ ಮಾರ್ಗ ಅನುಸರಿಸಿ ಚುನಾವಣೆ ಗೆಲ್ಲಬೇಕೆನ್ನುವ ಅವರ ಚಿಂತೆನೆ ಅತ್ಯಂತ ಕೀಳು ಮಟ್ಟದ್ದಾಗಿದ್ದು, ಕಾಂಗ್ರೆಸ್ ನ ನೈತಿಕತೆ ಕೆಳಮಟ್ಟಕ್ಕೆ ಇಳಿದಿರುವುದು ಬಹಳ ಸ್ಪಷ್ಟವಾಗಿದೆ. ಅನೈತಿಕವಾಗಿ ಹಣ ಖರ್ಚು ಮಾಡಿ ಗೆಲ್ಲಲು ಬಯಸಿರುವ ಕಾಂಗ್ರೆಸ್ ಪಕ್ಷಕ್ಕೆ ಜನರು ಸರಿಯಾದ ಜಾಗವನ್ನು ತೋರಿಸಬೇಕು ಎಂದರು.

    ಸಿದ್ದರಾಮಯ್ಯ ಅವರು ಬಿಜೆಪಿ ಯಾವಾಗಲೂ ಹಣಬಲ ಹಾಗೂ ತೋಳ್ಬಲದಿಂದ ಗೆಲ್ಲುತ್ತಾರೆಂದು ದೂರುತ್ತಾರೆ. ಆದರೆ ಈ ಕೆಲಸವನ್ನು ಮಾಡುತ್ತಿರುವುದು ಕಾಂಗ್ರೆಸ್ ಪಕ್ಷ . ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಚುನಾವಣೆವರೆಗೂ ಹಣ ಚೆಲ್ಲುತ್ತಿರುವ ನಿಮಗೆ ಯಾವ ನೈತಿಕತೆ ಇದೆ ? ತಾವು ಅಧಿಕಾರದಲ್ಲಿದ್ದಾಗ ಗ್ರಾಮ ಪಂಚಾಯತಿಗಳ ಕಡೆ ತಿರುಗಿ ನೋಡಲಿಲ್ಲ. 2017 ರ ಚುನಾವಣೆಗೆ 3 ತಿಂಗಲ್ಲಿದ ಸಂದರ್ಭದಲ್ಲಿ ಲಕ್ಷ ಮನೆಗಳನ್ನು ನೀಡುವುದಾಗಿ ಹೇಳಿದಿರಿ, ಆದರೆ ಅದು ಘೋಷಣೆಯಾಗಿಯೇ ಉಳಿಯಿತು ಎಂದರು.

    ಕಾಂಗ್ರೆಸ್ ಪಕ್ಷ ಗೆಲ್ಲುವುದಿಲ್ಲ ಎಂದು ಅವರಿಗೆ ಮುಂಚೆಯೇ ತಿಳಿದ್ದಿತ್ತು. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದು ಲಕ್ಷ ಮನೆಗಳನ್ನು ನಿರ್ಮಾಣಕ್ಕೆ ಹಣ ಒದಗಿಸಿತು. ನಮ್ಮ ಸರ್ಕಾರ 4 ಲಕ್ಷ ಗ್ರಾಮೀಣ ಪ್ರದೇಶದಲ್ಲಿ ಹಾಗೂ 1 ಲಕ್ಷ ನಗರ ಪ್ರದೇಶದಲ್ಲಿ ಮನೆ ನಿರ್ಮಿಸಲು ಕ್ರಮ ಕೈಗೊಂಡಿದೆ. ಸದರಿ ಮನೆಗಳನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

    ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸಂಕಲ್ಪ

    ಬೆಂಗಳೂರಿನ ಸಮಗ್ರ ಅಭಿವೃದ್ಧಿ ಮಾಡುವ ಸಂಕಲ್ಪ ಸರ್ಕಾರ ಹೊಂದಿದೆ. ಬೆಂಗಳೂರಿಗೆ ಹೊಂದಿಕೊಂಡಿರುವ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಯಾದರೆ ಮಾತ್ರ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಕಲ್ಪನೆ ಮಾಡಿಕೊಳ್ಳಲು ಸಾಧ್ಯ. ಈ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಅಭಿವೃದ್ಧಿ ಸರ್ಕಾರದ ಗುರಿಯಾಗಿದೆ. ಬೆಂಗಳೂರಿಗೆ ಹೊಂದಿಕೊಂಡಿದ್ದರೂ ನಗರದ ವಾರ್ಡ್ ಗಳಲ್ಲಿ ಆಗುವ ಅಭಿವೃದ್ಧಿ ನಮ್ಮ ಗ್ರಾಮಗಳಲ್ಲಿ ಆಗುತ್ತದೆಯೇ ಎಂಬ ಚಿಂತೆ ಬೇಡ, ಆ ಚಿಂತೆ ದೂರ ಮಾಡಲು ನಾನಿಲ್ಲಿಗೆ ಬಂದಿದ್ದೇನೆ ಎಂದರು.

    ಬೆಂಗಳೂರಿನಲ್ಲಿ ಆಗಿರುವ ಔದ್ಯೋಗೀಕರಣ, ಅದರ ಮುಖಾಂತರ ಬರುವ ತೆರಿಗೆ ಹಣ ಸಂಪೂರ್ಣವಾಗಿ ಗ್ರಾಮ ಪಂಚಾಯಿತಿಗಳಿಗೆ ವಿನಿಯೋಗ ಆಗಬೇಕು . ಗ್ರಾಮೀಣ ಜನರ ಪರವಾದ ನಿರ್ಧಾರಗಳು ಸರ್ಕಾರದ್ದಾಗಿರುತ್ತದೆ ಎಂದು ತಿಳಿಸಿದರು.

    ಆಗಸ್ಟ್ 15 ರಂದು ಘೋಷಣೆ ಮಾಡಿದ ಅಮೃತ ಯೋಜನೆಗಳಲ್ಲಿ ಅಮೃತ ಗ್ರಾಮ ಪಂಚಾಯಿತಿ ಯೋಜನೆ ಮಹತ್ವದ್ದಾಗಿದೆ. 750 ಗ್ರಾಮ ಪಂಚಾಯಿತಿಗಳಲ್ಲಿ ಮೂಲಭೂತ ಸೌಕರ್ಯ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆಗಳು, ಶಾಲಾ ಕಟ್ಟಡಗಳು, ಸೌರಶಕ್ತಿ ದೀಪಗಳ ನಿರ್ಮಾಣ ಮಾರ್ಚ್ 30 ರೊಳಗೆ ಪೂರ್ಣಗೊಳಿಸಿದರೆ, ಹೆಚ್ಚುವರಿ 25 ಲಕ್ಷ ನೀಡುವ ವಿನೂತನ ಯೋಜನೆ ಇದಾಗಿದೆ. ಮುಂದಿನ ಆಯವ್ಯಯದಲ್ಲಿ ಈ ಯೋಜನೆಯನ್ನು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ವಿಸ್ತರಿಸುವ ಚಿಂತನೆ ಇದೆ. ಅಮೃತ ವಸತಿ ಯೋಜನೆಯಡಿ ಗ್ರಾಮಸ್ತರಿಗೆ ನಿವೇಶನ ಹಾಗೂ ಮನೆಗಳನ್ನು ನೀಡಲು ಕ್ರಮ ವಹಿಸಲಾಗುತ್ತಿದೆ. ಗ್ರಾಮಗಳಲ್ಲಿರುವ ಸ್ರೀ ಶಕ್ತಿ ಸಂಘಗಳು, 75000 ಎಸ್ ಸಿ ಎಸ್ ಟಿ, ಒಬಿಸಿ ಯುವಕರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

    ಜನರ ಸುತ್ತ ಅಭಿವೃದ್ಧಿ
    ನಮ್ಮ ಸರ್ಕಾರದ ಧ್ಯೇಯ ಜನರ ಸುತ್ತ ಅಭಿವೃದ್ಧಿ ಆಗಬೇಕು, ಗ್ರಾಮ ಹಾಗೂ ಗ್ರಾಮೀಣ ಜನರ ಅಭಿವೃದ್ಧಿ ಸರ್ಕಾರದ ಗುರಿ ಯಾಗಿದೆ.
    ಬಿಜೆಪಿಯ ಗೋಪಿನಾಥ್ ಅವರನ್ನು ಗೆಲ್ಲಿಸುವ ಮೂಲಕ ನಿಮ್ಮ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಬೇಕು ಎಂದು ಕೋರಿದರು.

    ಕಂದಾಯ ಸಚಿವ ಅಶೋಕ್ ಅವರು ಭೂ ಸುಧಾರಣಾ ಕಾಯ್ದೆ 79 ಎ, ಬಿ ತಿದ್ದುಪಡಿ ಮಾಡುವ ಮೂಲಕ ಬೆಂಗಳೂರಿನ ಸುತ್ತಮುತ್ತಲಿನ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ.

    ಆನೇಕಲ್ ವಿಷನ್
    ಆನೇಕಲ್ ತಾಲೂಕಿನಲ್ಲಿ ಬಂಡವಾಳ ಹೂಡಲು ಅನೇಕರು ಮುಂದೆ ಬರುತ್ತಿದ್ದಾರೆ, ಬೆಂಗಳೂರು ವಿಷನ್ ನಂತೆ ಆನೇಕಲ್ ನ ಸಮಗ್ರ ಅಭಿವೃದ್ಧಿಗೆ ಆನೇಕಲ್ ವಿಷನ್ ನಮ್ಮ ಸರ್ಕಾರ ಮಾಡಲಿದೆ.
    ನಾರಾಯಣ ಸ್ವಾಮಿಯವರು ಈ ಭಾಗದ ಅಭಿವೃದ್ಧಿಯಲ್ಲಿ ಬದ್ಧತೆ ತೋರುವ ಧೀಮಂತ ನಾಯಕರಾಗಿದ್ದಾರೆ. ಗೋಪಿನಾಥ್ , ನಾರಾಯಣ ಸ್ವಾಮಿಯವರಿಗೆ ಹಾಗೂ ಬಿಜೆಪಿ ಪಕ್ಷಕ್ಕೆ ಬಲತುಂಬಬೇಕೆಂದು ಕರೆ ನೀಡಿದರು.

    ಸಮಾವೇಶದಲ್ಲಿ ಕಂದಾಯ ಸಚಿವ ಆರ್ ಅಶೋಕ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಕೇಂದ್ರ ಸಚಿವ ನಾರಾಯಣಸ್ವಾಮಿ, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ ರೆಡ್ಡಿ, ಕೃಷ್ಣಪ್ಪ, ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ ಉಪಸ್ಥಿತರಿದ್ದರು.

    ತಾಯಿ ಇಲ್ಲದ ತವರು

    ಸುಮಾವೀಣಾ

    ಹೊಲಗೆಟ್ಟ ಕರು ತಾಯನರಸುವಂತೆ…ಹರಿಶ್ಚಂದ್ರ ಕಾವ್ಯದ  ‘ರಾಜ್ಯ ಸಮರ್ಪ ಭಾಗದಲ್ಲಿ    ಬರುವ ವಾಕ್ಯವಿದು.  ವಿಶ್ವಾಮಿತ್ರರಿಗೆ ಸಮಸ್ತ ರಾಜ್ಯವನ್ನು ವಹಿಸಿಕೊಟ್ಟು ಹರಿಶ್ಚಂದ್ರ ಕಾಡಿನ ದಾರಿಯನ್ನು ಹಿಡಿದಾಗ ಪುರಜನರು  ತಮ್ಮ ದೊರೆಯನ್ನು ಕಳೆದುಕೊಂಡು ದಾರಿತಪ್ಪಿದಂತಾದರು, ತಬ್ಬಲಿಗಳಾದರು ಎಂದು ಹೇಳುವ ಸಂದರ್ಭದಲ್ಲಿ ಈ ವಾಕ್ಯ ಬಂದಿದೆ.

    ಕರುವಿನ ಜವಾಬ್ದಾರಿಯನ್ನು ಹಸು ನೋಡಿಕೊಳ್ಳುತ್ತಿರುತ್ತದೆ. ಯಾವ ತೊಂದರೆಯೂ ಇಲ್ಲದೆ  ಸುಖಭಾವದಿಂದ   ಇದ್ದ ಕರುವನ್ನು ನಡುರಸ್ತೆಯಲ್ಲಿ ಬಿಟ್ಟು ಹಸು ಇನ್ನಿಲ್ಲವಾದರೆ ಕರುವಿಗೆ  ಆಗುವ ಆಘಾತ ಹೇಳತೀರದು.  ಅಂತೆಯೇ ಆದರ್ಶ ದೊರೆಯಾಗಿ ಅಯೋಧ್ಯೆಯ ಜನರನ್ನು ಸಾಕುತ್ತಿದ್ದ  ಹರಿಶ್ಚಂದ್ರ ವಿಶ್ವಾಮಿತ್ರನ ಪ್ರತಿಷ್ಟೆಯ ಸವಾಲುಗಳಿಗೆ ಒಳಗಾಗಿ ರಾಜ್ಯವನ್ನು  ಅವನಿಗೆ ಸಮರ್ಪಿಸಿ ಹೊರನಡೆದಾಗ ಸಹಜವಾಗಿ ಆತನ ಪ್ರಜೆಗಳಲ್ಲಿ  ಅನಾಥಪ್ರಜ್ಞೆ ಕಾಡುತ್ತದೆ. 

    ಲೋಹಿತಾಶ್ವನ  ಮರಣದ  ವಾರ್ತೆಯನ್ನು ಕೇಳಿ ಅವನನ್ನು ಹುಡುಕುವಾಗ ಚಂದ್ರಮತಿ ಪಡುವ ಸಂಕಟವನ್ನು, ಆಕೆಯ ಆರ್ತನಾದವನ್ನು   “ಬೀದಿ ಗರುವಿನಂತೆ’’ ಎಂಬ ಪದದ ಮೂಲಕ  ವಿವರಿಸಿದ್ದಾನೆ. ಜಾನಪದ ತ್ರಿಪದಿಯಲ್ಲಿಯೂ ಕೂಡ  “ತಾಯಿಯಿಲ್ಲದ ತವರಿಗೆ ಹೋಗದಿರು ನನ ಮನವೆ ನೀರಿಲ್ಲದ ಕೆರೆಗೆ  ಕರುಬಂದು  ತಿರುಗಾಗ ನೋಡವರ ದುಃಖಗಳ”  ಎಂಬಲ್ಲಿಯೂ ತಾಯಿಯನ್ನು ಕಾಣದ ಕರುವಿನ ಸಂಕಟವನ್ನು ನೀರಿಲ್ಲದ ಕೆರೆಗೆ ಹೋಲಿಸಿದ್ದಾರೆ.  

    ಪ್ರಜೆಗಳಿಗೆ ರಾಜನೆಂದರೆ ಮಕ್ಕಳಿಗೆ ತಂದೆಯಿದ್ದಂತೆ. ಹಾಗಾಗಿ  ರಾಜನಿಗೆ ಭೂಮಿಪಾಲಕ, ಭೂಭುಜ ಎನ್ನುವುದು  ಹಾಗೆ ಅತ್ಯಂತ ಕಾಳಜಿಯಿಂದ ಪ್ರಜೆಗಳನ್ನು ನೋಡಿಕೊಂಡಿದ್ದು ಏಕಾಏಕಿ ನಡುನೀರಿನಲ್ಲಿ ಕೈ ಬಿಟ್ಟಂತೆ ಅರಸನಾದವನ್ನು ಎಲ್ಲವನ್ನು ಬಿಟ್ಟು ಹೊರಟರೆ ಆಗಬಹುದಾದ  ಆಘಾತವನ್ನು, ಅವರಲ್ಲಿ ಕುಸಿಯುವ ನೈತಿಕ ಬೆಂಬಲವನ್ನು ಕವಿ ಇಲ್ಲಿ  ಹೇಳಿದ್ದಾರೆ.   ಹೆತ್ತತಾಯಿ ಹೊತ್ತನಾಡು ಸ್ವರ್ಗಕ್ಕಿಂತ ಮಿಗಿಲು ಎಂಬ ಮಾತಿದೆ ಹೀಗಿರುವಾಗ  ಭೂಮಿಪಾಲನಾದ ಹರಿಶ್ಚಂದ್ರನೂ ಅರಸುತನವನ್ನು, ರಾಜ್ಯವನ್ನೂ  ವಿಶ್ವಾಮಿತ್ರಗೆ ವಹಿಸಿಕೊಟ್ಟು ನಿರ್ಗಮಿಸುವಾಗ ಅಯೋಧ್ಯೆಯ ಪುರಜನರು  ದಾರಿತಪ್ಪಿದವರಂತೆ,  ತಾಯಿಯನ್ನು ಕಳೆದುಕೊಂಡಂತೆ ಮರವಟ್ಟಂತಾಗಿದ್ದರು.  ತಾಯಿಯ ಆಸರೆಯನ್ನು ಹುಡುಕುವ ಕರುವಿನಂತೆ ತಮ್ಮ ದೊರೆಯ ಕಾಣ್ಕೆಗೆ ಸಮಸ್ತರೂ ಹಲುಬುತ್ತಿದ್ದರು  ಎಂಬುದನ್ನು ಬಹಳ ಮಾರ್ಮಿಕವಾಗಿ  ರಾಘವಾಂಕರು ವರ್ಣಿಸಿದ್ದಾರೆ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    INDIAN STOCK MARKET: ಕಣ್ಣಿಗೆ ಕಂಡದ್ದು ಸತ್ಯವಲ್ಲ, ಕೈಗೆ ದಕ್ಕಿಸಿಕೊಂಡಿದ್ದೇ ಸತ್ಯ

    ಷೇರುಪೇಟೆಯಲ್ಲಿ ಬದಲಾವಣೆಗಳು, ಚಿಂತನೆಗಳು, ವಿಶ್ಲೇಷಣೆಗಳು ಹೆಚ್ಚು ಪ್ರಭಾವಿಯಾಗಿರದೆ, ಪೇಟೆಯು ಮುನ್ಸೂಚನೆ ಇಲ್ಲದೆ ಭಾರಿ ಪ್ರಮಾಣದಲ್ಲಿ ಏರಿಳಿತಗಳನ್ನು ಪ್ರದರ್ಶಿಸುತ್ತಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ವಿದೇಶಿ ವಿತ್ತೀಯ ಸಂಸ್ಥೆಗಳು ನಿರಂತರವಾಗಿ ಮಾರಾಟದ ಹಾದಿಯಲ್ಲಿದ್ದರೂ ಪೇಟೆಗಳು ಸ್ವಲ್ಪ ಮಟ್ಟಿನ ಸ್ಥಿರತೆ ಕಾಣುತ್ತಿದೆಯೇನೋ ಎನಿಸುತ್ತಿದೆ.

    ಕಾರ್ಪೊರೇಟ್‌ ವಲಯದಲ್ಲಿಯೂ ಹೆಚ್ಚಿನ ಕಂಪನಿಗಳು ಆಕರ್ಷಕ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿರುವುದು ಪೇಟೆಯನ್ನು ಮತ್ತಷ್ಟು ಆಕರ್ಷಣೀಯಗೊಳಿಸಿದೆ. ಸ್ವದೇಶಿ ವಿತ್ತೀಯ ಸಂಸ್ಥೆಗಳು, ಮ್ಯುಚುಯಲ್‌ ಫಂಡ್‌ ಗಳು ನಿರಂತರವಾಗಿ ಹೂಡಿಕೆ ಮಾಡುತ್ತಿವೆ. ಆದರೆ ಇವು ಹೆಚ್ಚಾಗಿ ಸೆನ್ಸೆಕ್ಸೇತರ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಿರುವಂತಿದೆ. ಇತ್ತೀಚೆಗೆ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಕಂಪನಿಗಳು, ವಿಶೇಷವಾಗಿ ಷೇರಿನ ಬೆಲೆಗಳು ಕುಸಿತಕ್ಕೊಳಗಾದಾಗ ದಿಢೀರನೆ ಏರಿಕೆಯನ್ನು ಕೆಲವು ಭಾರಿ 8 ರಿಂದ 12 % ವರೆಗೂ ಏರಿಕೆ ಪ್ರದರ್ಶಿಸಿವೆ. ಶುಕ್ರವಾರದಂದು ಇಂತಹ ಬೆಳವಣಿಗೆಗಳನ್ನು ಹೆಚ್ಚಿನ ಕಂಪನಿಗಳಲ್ಲಿ ಗುರುತಿಸಬಹುದು.

    ರಾಂಕೋ ಸಿಸ್ಟಂಸ್‌ ಲಿಮಿಟೆಡ್‌ ಕಂಪನಿಯ ಸಾಧನೆ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಪ್ರೋತ್ಸಾಹದಾಯಕವಾಗಿಲ್ಲ ಎಂಬ ಕಾರಣಕ್ಕಾಗಿ ಷೇರಿನ ಬೆಲೆಯು ನಿರಂತರವಾಗಿ ಕುಸಿಯುತ್ತಾ ಬಂದು ಈ ಒಂದು ವಾರದಲ್ಲಿ ರೂ.366 ರ ಸಮೀಪಕ್ಕೆ ಕುಸಿದಿತ್ತು. ಆದರೆ ಕೇವಲ ಐದೇ ದಿನಗಳಲ್ಲಿ ಹೆಚ್ಚಿನ ಸಂಖ್ಯಾ ಗಾತ್ರದೊಂದಿಗೆ ರೂ.470 ರ ಸಮೀಪಕ್ಕೆ ಜಿಗಿತ ಕಂಡಿದೆ. ಶುಕ್ರವಾರದ ರೂ.470 ರ ಬೆಲೆಯಲ್ಲಿ ಮಾರಾಟಮಾಡುವವರಿರದೆ ದಿನದ ಗರಿಷ್ಠ ಆವರಣ ಮಿತಿಯಲ್ಲಿತ್ತು.

    ಯುನಿಕೆಂ ಲ್ಯಾಬೊರೇಟರೀಸ್‌ ಲಿಮಿಟೆಡ್‌ ಕಂಪನಿಯ ತ್ರೈಮಾಸಿಕ ಫಲಿತಾಂಶವೂ ಸಹ ಆಕರ್ಷಕವಾಗಿರದೆ ಇರುವ ಕಾರಣ ಷೇರಿನ ಬೆಲೆ ರೂ.265 ರ ಸಮೀಪದಿಂದ ರೂ.198 ರವರೆಗೂ ಕುಸಿಯಿತು. ಆದರೆ ಗುರುವಾರದಂದು ರೂ.211 ರಿಂದ ರೂ.225 ರವರೆಗೂ ಏರಿಕೆ ಕಂಡು ಶುಕ್ರವಾರ ರೂ.256 ರವರೆಗೂ ಏರಿಕೆ ಕಂಡಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ 2018 ರಲ್ಲಿ ರೂ.370/380 ರ ಸಮೀಪ ಖರೀದಿಸಿದವರು ಈ ವರ್ಷದ ಮೇ ತಿಂಗಳಲ್ಲಿ ರೂ.370 ರಲ್ಲಿ, ಅವರ ಹೂಡಿಕೆಯ ಹಂತ ತಲುಪುವುದೆಂಬ ನಿರೀಕ್ಷೆಯು ಹುಸಿಯಾಯಿತಲ್ಲದೆ, ಭಾರಿ ಕುಸಿತಕ್ಕೊಳಗಾಗಿ ಪುಟಿದೆದ್ದಿದೆ.

    ಎಲ್‌ ಜಿ ಈಕ್ವಿಪ್ ಮೆಂಟ್ಸ್‌ ಲಿಮಿಟೆಡ್‌ ಕಂಪನಿಯು ಸೆಪ್ಟೆಂಬರ್‌ ತ್ರೈಮಾಸಿಕದ ಅಂತ್ಯದಲ್ಲಿ ಆಕರ್ಷಕವಾದ ಸಾಧನೆಯನ್ನು ಪ್ರದರ್ಶಿಸಿರುವುದರಿಂದ ಕೇವಲ ಒಂದೇ ತಿಂಗಳಲ್ಲಿ ರೂ.199 ರ ಸಮೀಪದಿಂದ ರೂ.299 ರವರೆಗೂ ಜಿಗಿತ ಕಂಡಿದೆ. ಕೆಳಮಧ್ಯಮ ಶ್ರೇಣಿಯ ಈ ಕಂಪನಿಯು ಸರಿಯಾಗಿ ಹಿಂದಿನ ವರ್ಷದ 3/12/2020 ರಲ್ಲಿ ರೂ.133 ರರಲ್ಲಿದ್ದು, ಡಿಸೆಂಬರ್ 3ರಂದು ರೂ.299 ಕ್ಕೆ ತಲುಪಿರುವುದು ಕಾಕತಾಳೀಯವಾಗಿ ಕಂಡರೂ ಸತ್ಯಾಂಶವಾಗಿದೆ.

    ಗುಜರಾತ್‌ ಆಲ್ಕಲೀಸ್‌ ಅಂಡ್‌ ಕೆಮಿಕಲ್ಸ್‌ ಲಿಮಿಟೆಡ್‌ ಕಂಪನಿ ಸೆಪ್ಟೆಂಬರ್‌ ಅಂತ್ಯದ ತ್ರೈಮಾಸಿಕದಲ್ಲಿ ಉತ್ತಮ ಸಾಧನೆಯನ್ನು ಪ್ರದರ್ಶಿಸಿದರೂ ಷೇರಿನ ಬೆಲೆಯು ಒಂದೇ ತಿಂಗಳಲ್ಲಿ ರೂ.795 ರ ಸಮೀಪದಿಂದ ರೂ.569 ರವರೆಗೂ ಕುಸಿದಿದ್ದು, ಕೆಲವು ದಿನಗಳಿಂದ ರೂ.605 ರ ಸಮೀಪದಲ್ಲೇ ವಹಿವಾಟಾಗುತ್ತಿತ್ತು. ಆದರೆ ಶುಕ್ರವಾರ ಪೇಟೆಯಲ್ಲಿ ರೂ.606 ರ ಸಮೀಪದಲ್ಲಿ ಆರಂಭವಾಗಿ ಕೆಲವೇ ಕ್ಷಣಗಳಲ್ಲಿ ರೂ.665 ರಕ್ಕೆ ಜಿಗಿತ ಕಂಡು ರೂ.652 ರ ಸಮೀಪ ಕೊನೆಗೊಂಡಿತು. ಅಂದರೆ ಒಂದೇ ದಿನ ಷೇರಿನ ಬೆಲೆ ರೂ.60 ರಷ್ಟರ ಏರಿಕೆ ಪ್ರದರ್ಶಿಸಿದೆ.

    ಷೇರುಪೇಟೆಯ ವಹಿವಾಟಿನಲ್ಲಿ ಅದು ಸೆನ್ಸೆಕ್ಸ್‌ 764 ಪಾಯಿಂಟುಗಳ ಕುಸಿತ ಕಂಡ ದಿನದಂದು ಕೆಳಮಧ್ಯಮ ಶ್ರೇಣಿಯ ಕಂಪನಿಗಳ ಷೇರುಗಳು ಪ್ರದರ್ಶಿಸಿರುವ ಏರಿಕೆಯ ಹಿಂದೆ ಮ್ಯುಚುಯಲ್‌ ಫಂಡ್‌ ಗಳ ಆಸಕ್ತಿ ಹೆಚ್ಚಿರಬಹುದಾಗಿದೆ. ವಿಶೇಷವಾಗಿ ಭಾರಿ ಕುಸಿತ ಕಂಡಂತಹ ಕಂಪನಿಗಳು ಉತ್ತಮ ಬ್ರಾಂಡ್‌ ಹೊಂದಿರುವ, ಸಾಧನೆಯಾಧಾರಿತ ಕಂಪನಿಗಳು ಅತ್ಯಂತ ತ್ವರಿತವಾದ ಏರಿಕೆ ಕಾಣುತ್ತಿವೆ.

    ಒಂದು ವರ್ಷದ ಹಿಂದೆ ನೋಂದಾಯಿತ ಗ್ರಾಹಕರ ಸಂಖ್ಯೆಗಿಂತ ಸುಮಾರು ಅರ್ಧಕ್ಕೂ ಹೆಚ್ಚಿನ ಹೂಡಿಕೆದಾರರು ನೋಂದಾಯಿಸಿಕೊಂಡಿದ್ದು ಅವರ ಮೂಲಕ ಪೇಟೆಗೆ ಹರಿದುಬರುತ್ತಿರುವ ಈಗಿನ ದಿನಗಳಲ್ಲಿ ಪ್ರತಿ ಸಾಧನೆಯಾಧಾರಿತ ಕಂಪನಿಯ ಷೇರಿನ ಬೆಲೆಯು ಕುಸಿತ ಕಂಡಾಗ ಏರಿಕೆ ಕಾಣಲು ಸ್ಪರ್ಧಾತ್ಮಕ ಖರೀದಿಯ ಒತ್ತಡವು ಅನಿರೀಕ್ಷಿತ ಲಾಭಕ್ಕೆ ದಾರಿಯಾಗುತ್ತಿದೆ. ಆದರೆ ಕಣ್ಣಿಗೆ ಕಂಡದ್ದು ಸತ್ಯವಲ್ಲ, ಕೈಗೆ ದಕ್ಕಿಸಿಕೊಂಡಿದ್ದೇ ಸತ್ಯ ಎಂಬಂತೆ ಲಾಭದ ನಗದೀಕರಣಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯವಾಗಿದೆ. ಆಗಲೇ ಹೂಡಿಕೆ ಗುಚ್ಚ ಸ್ವಲ್ಪ ಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ.

    ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು .

    error: Content is protected !!