18.6 C
Karnataka
Wednesday, November 27, 2024
    Home Blog Page 38

    OMICRON:ಕೋವಿಡ್ ಮೂರು ಪ್ರಕರಣವಿದ್ದರೆ ಕ್ಲಸ್ಟರ್ ಎಂದು ಘೋಷಣೆ

    BENGALURU DEC 4
    ಕೋವಿಡ್ ನ ಮೂರು ಪ್ರಕರಣಗಳು ಕಂಡಬಂದಲ್ಲಿ ಕ್ಲಸ್ಟರ್ ಎಂದು ಘೋಷಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.ಕೋವಿಡ್ ನ ಹೊಸ ರೂಪಾಂತರ ತಳಿ ಒಮಿಕ್ರಾನ್ ಕುರಿತು ಪ್ರಾಥಮಿಕ ವರದಿ ಬಂದಿದ್ದು, ಪೂರ್ಣ ಪ್ರಮಾಣದ ವರದಿ ಪಡೆಯಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದಕ್ಕೆ ಅನುಸರಿಸುತ್ತಿರುವ ಚಿಕಿತ್ಸಾ ನಿಯಮಗಳನ್ನು ತಿಳಿದುಕೊಳ್ಳಲು ಸೂಚಿಸಲಾಗುದೆ. ಪ್ರಸ್ತುತ ಡೆಲ್ಟಾ ತಳಿಗೆ ನೀಡಲಾಗುತ್ತಿದ್ದ ಚಿಕಿತ್ಸೆಯನ್ನೇ ಮುಂದುವರೆಸಬೇಕೆಂದು ಮಾಹಿತಿಯಿದ್ದು, ಈ ಬಗ್ಗೆ ವೈಜ್ಞಾನಿಕ ವಿಧಾನವನ್ನು ಅನುಸರಿಸಲು ಒತ್ತು ನೀಡಲಾಗಿದೆ ಎಂದರು.

    ಒಮಿಕ್ರಾನ್ ತೀವ್ರಗತಿಯಲ್ಲಿ ಹರಡುವ ತಳಿಯಾಗಿದ್ದು, ಪರಿಣಾಮ ಹೆಚ್ಚು ತೀವ್ರವಾಗಿರುವುದಿಲ್ಲ ಎಂದು ತಜ್ಞರ ಅಭಿಪ್ರಾಯ. ಆದರೆ ಸಂಪರ್ಕಿತರ ಪತ್ತೆ ಹಾಗೂ ಚಿಕಿತ್ಸೆಯನ್ನು ತೀವ್ರಗೊಳಿಸಲು ಸೂಚಿಸಿದೆ.

    ಎರಡು ವಿಧದ ಕ್ಲಸ್ಟರ್ ನಿರ್ವಹಣೆಗೆ ಸೂಚಿಸಲಾಗಿದ್ದು, ಶಾಲೆ ಮತ್ತು ಹಾಸ್ಟೆಲ್ ಕ್ಲಸ್ಟರ್ ಹಾಗೂ ಬೆಂಗಳೂರಿನ ಅಪಾರ್ಟ್ಮೆಂಟ್ ಸಮುಚ್ಚಯ ಕ್ಲಸ್ಟರ್ ನಿರ್ವಹಣೆ ಮಾಡಲಾಗುವುದು. ಅಲ್ಲಿರುವವರಿಗೆ ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆ ನೀಡಬೇಕು. ಅಪಾರ್ಟ್ಮೆಂಟ್ ನಲ್ಲಿ ಜನ ಸೇರುವ ಸಂದರ್ಭದಲ್ಲಿ ಎರಡು ಡೋಸ್ ಲಸಿಕೆ ಪಡೆದವರು ಮಾತ್ರ ಸೇರಬಹುದು, ಹೊರಗಿನವರಿಗೆ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಬಿಬಿಎಂಪಿ ಆಯುಕ್ತ ರಿಗೆ ತಿಳಿಸಿದೆ.

    ಶಾಲಾ ಕಾಲೇಜುಗಳಲ್ಲಿ ಪೋಷಕರು, ಸಿಬ್ಬಂದಿ, ಮತ್ತು ನರ್ಸಿಂಗ್, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು ತಂಗಿರುವ ಹಾಸ್ಟೆಲ್ ಗಳಲ್ಲಿ ಎಲ್ಲರಿಗೂ ಪರೀಕ್ಷೆ ಕಡ್ಡಾಯ ಹಾಗೂ ಎರಡು ಡೋಸ್ ಲಸಿಕೆ ಅಭಿಯಾನ ಕೈಗೊಳ್ಳಬೇಕು. ಕೋ- ಮಾರ್ಬಿಡಿಟಿ ಇದ್ದವರಿಗೆ ಪರೀಕ್ಷೆ ಯಾಗಬೇಕು. ಎಲ್ಲಿಯೂ ಸಣ್ಣ ಸಂಶಯ ಬರದಂತೆ ವ್ಯವಸ್ಥೆ ಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

    ಬೆಳಗಾವಿ ಅಧಿವೇಶನ:ಬೆಳಗಾವಿ ಅಧಿವೇಶನದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಅಧಿವೇಶದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಎರಡು ಡೋಸ್ ಲಸಿಕೆ ಕಡ್ಡಾಯ, ಸ್ಯಾನಿಟೈಸ್ ಮಾಡುವುದು ಹಾಗೂ ಆಸನ ವ್ಯವಸ್ಥೆಯನ್ನು ಕೋವಿಡ್ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮಾಡುವ ಮೂಲಕ ಸುರಕ್ಷಿತವಾಗಿ ಬೆಳಗಾವಿಯಲ್ಲಿ ಅಧಿವೇಶನವನ್ನು ಹಮ್ಮಿಕೊಳ್ಳಲಾಗುವುದು ಎಂದರು.

    ಹಿರಿಯ ಕಲಾವಿದ ಶಿವರಾಮ್ ನಿಧನ

    BENGALURU DEC 4

    ತಲೆಗೆ ತೀವ್ರವಾದ ಪೆಟ್ಟು ತಗಲಿ ಕಳೆದ ಮೂರು ದಿನಗಳಿಂದ ಬೆಂಗಳೂರಿನ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶಿವರಾಂ(84) ಅವರು ಇಂದು ಮಧ್ಯಾಹ್ನ ನಿಧನರಾದರು.

    ಹಾಸ್ಯನಟರಾಗಿ ಹೆಸರು ಮಾಡಿದ್ದ ಶಿವರಾಂ ಅವರು ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಪಳಗಿದ ಕಲಾವಿದರು. ಇವರ ಸಹೋದರ ರಾಮನಾಥ್ ಅವರ ಜೊತೆ ಸೇರಿ ರಾಶಿ ಬ್ರದರ್ಸ್ ಎಂಬ ಸಂಸ್ಥೆ ಹುಟ್ಟುಹಾಕಿ ವರನಟ ಡಾ.ರಾಜ್‍ಕುಮಾರ್ ಅಭಿನಯದ ನಾನೊಬ್ಬ ಕಳ್ಳ ಚಿತ್ರವೂ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದರು.

    ಶಿವರಾಮ್ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಗಡಿಯಲ್ಲಿನ ಚೂಡಸಂದ್ರ ಎಂಬ ಹಳ್ಳಿಯಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ, ಅವರು ಟೈಪ್ ರೈಟಿಂಗ್ ಇನ್ಸ್ಟಿಟ್ಯೂಟ್ ನಡೆಸುತ್ತಿದ್ದ ತಮ್ಮ ಸೋದರನ ಜೊತೆಗೆ ಬೆಂಗಳೂರಿಗೆ ಬಂದರು. ಗುಬ್ಬಿ ವೀರಣ್ಣ ಅವರ ನಾಟಕ ಪ್ರದರ್ಶನಗಳ ಪ್ರಭಾವಕ್ಕೆ ಒಳಗಾಗಿ, ಚಿತ್ರ ತಯಾರಿಕೆ ಮತ್ತು ನಟನೆಯತ್ತ ಆಸಕ್ತಿ ತಳೆದು ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು.

    1958ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿ ಕು. ರಾ. ಸೀತಾರಾಮಶಾಸ್ತ್ರಿ ಯವರಂತಹ ವಿವಿಧ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡಲು ಆರಂಭಿಸಿದರು . ಅವರು ಅನುಭವಿ ಛಾಯಾಗ್ರಾಹಕ ಬೊಮನ್ ಡಿ ಇರಾನಿ ಅವರಿಗೆ ಕ್ಯಾಮರಾ ಸಹಾಯಕರಾಗಿಯೂ ಕೆಲಸ ಮಾಡಿದ್ದರು. ಶಿವರಾಮ್ ಮೊದಲ ಬಾರಿ ಬೆಳ್ಳಿ ಪರದೆಯ ಮೇಲೆ 1965ರಲ್ಲಿ ಕು. ರಾ. ಸೀತಾರಾಮಶಾಸ್ತ್ರಿ ಅವರ ನಿರ್ದೇಶನದ ಮತ್ತು ಸಹ ನಿರ್ಮಾಣದ ಬೆರೆತ ಜೀವ ಚಿತ್ರದಲ್ಲಿ ನಟನಾಗಿ ಕಾಣಿಸಿಕೊಂಡರು .ಏತನ್ಮಧ್ಯೆ, ಅವರು ಕೆ ಎಸ್ ಎಲ್ ಸ್ವಾಮಿ, ಗೀತಪ್ರಿಯ, ಸಿಂಗೀತಂ ಶ್ರೀನಿವಾಸರಾವ್ ಮತ್ತು ಪುಟ್ಟಣ್ಣ ಕಣಗಾಲ್ ರಂತಹ ಹಲವಾರು ಪ್ರಮುಖ ನಿರ್ದೇಶಕರಿಗೆ ಸಹಾಯಕರಾಗಿದ್ದರು .

    1958 ರಿಂದ 1965 ರ ವರೆಗೆ ಸಹಾಯಕ ನಿರ್ದೇಶಕರಾಗಿ ದುಡಿದ ನಂತರ, ಅವರಿಗೆ ಕಲ್ಯಾಣ್ ಕುಮಾರ್ ನಟಿಸಿದ ಕು. ರಾ. ಸೀತಾರಾಮಶಾಸ್ತ್ರಿ ಅವರ ಬೆರೆತ ಜೀವ ಚಿತ್ರದಲ್ಲಿ ಪೋಷಕ ಪಾತ್ರದ ಮೂಲಕ ನಟನೆಗೆ ಬ್ರೆ ಕ್ ಸಿಕ್ಕಿತು. ಆಗಿನಿಂದ ಅವರು 2000 ದ ದಶಕದವರೆಗೆ ಹೆಚ್ಚೂ ಕಡಿಮೆ ಎಲ್ಲಾ ನಿರ್ದೇಶಕರ ನಿರ್ದೇಶನದಲ್ಲಿ ನಟಿಸಿದರು. ಅವರ ಅವಿಸ್ಮರಣೀಯ ಅಭಿನಯದ ಚಿತ್ರಗಳಲ್ಲಿ ಶರಪಂಜರ , ನಾಗರಹಾವು , ಶುಭಮಂಗಳ ಸೇರಿವೆ.ಇವೆಲ್ಲವೂ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಚಿತ್ರಗಳು.

    ಚಲಿಸುವ ಮೋಡಗಳು , ಶ್ರಾವಣ ಬಂತು , ಹಾಲು ಜೇನು , ಹೊಂಬಿಸಿಲು, ಹೊಸ ಬೆಳಕು, ಗುರು ಶಿಷ್ಯರು , ಸಿಂಹದಮರಿ ಸೈನ್ಯ , ಮಕ್ಕಳ ಸೈನ್ಯ ಇಂಥ ಅನೇಕ ಚಲನಚಿತ್ರಗಳಲ್ಲಿ ಅವರ ಹಾಸ್ಯ ಪಾತ್ರಗಳು ಜನರ ಮೆಚ್ಚುಗೆ ಪಡೆದವು. . ಡ್ರೈವರ್ ಹನುಮಂತು (1980) ದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.

    2000 ರ ನಂತರ ವರ್ಷಗಳಲ್ಲಿ ಅವರು ಬರ ಮತ್ತು ತಾಯಿ ಸಾಹೇಬ ದಂತಹ ಸಮಾನಾಂತರ ಚಿತ್ರಗಳಲ್ಲೂ ಆಪ್ತಮಿತ್ರ ,ಹುಚ್ಚ ದಂತಹ ಪ್ರಮುಖ ಯಶಸ್ವಿ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿಯೂ ನಟಿಸಿದರು . ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಗೃಹಭಂಗ ಟೆಲಿವಿಷನ್ ಧಾರಾವಾಹಿಯಲ್ಲೂ ಮತ್ತು ರವಿಕಿರಣ್ ನಿರ್ದೇಶಿಸಿದ ಬದುಕು ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ.

    ತಮ್ಮ ಸಹೋದರ ಎಸ್ ರಾಮನಾಥನ್ ಜತೆಗೂಡಿ “ರಾಶಿ ಬ್ರದರ್ಸ್” ಎಂಬ ಚಿತ್ರನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಮತ್ತು ಗೆಜ್ಜೆಪೂಜೆ (1970), ಉಪಾಸನೆ(1974), ನಾನೊಬ್ಬ ಕಳ್ಳ (1979), ಡ್ರೈವರ್ ಹನುಮಂತು(1980) ಮತ್ತು ಬಹಳ ಚೆನ್ನಾಗಿದೆ (2001) ಗಳಂತಹ ಯಶಸ್ವೀ ಚಿತ್ರಗಳನ್ನು ನಿರ್ಮಿಸಿದ್ದಾರೆ.

    ಚಲನಚಿತ್ರಗಳ ಪಟ್ಟಿ

    ನಿರ್ದೇಶಕರಾಗಿ

    ವರ್ಷಚಲನಚಿತ್ರಪಾತ್ರವರ್ಗಭಾಷೆ
    1972ಹೃದಯಸಂಗಮರಾಜ್‍ಕುಮಾರ್ಭಾರತಿ

    ನಿರ್ಮಾಪಕರಾಗಿ

    ವರ್ಷಚಲನಚಿತ್ರಪಾತ್ರವರ್ಗಭಾಷೆ
    1970ಗೆಜ್ಜೆಪೂಜೆಕಲ್ಪನಾಕನ್ನಡ
    1974ಉಪಾಸನೆಆರತಿಕನ್ನಡ
    1979ನಾನೊಬ್ಬ ಕಳ್ಳರಾಜ್ ಕುಮಾರ್ಕನ್ನಡ
    1980ಡ್ರೈವರ್ ಹನುಮಂತುಶಿವರಾಂಕನ್ನಡ

    ನಟನಾಗಿ

    • ಬೆರೆತ ಜೀವ (1965)
    • ಮಾವನ ಮಗಳು (1965)
    • ದುಡ್ಡೇ ದೊಡ್ಡಪ್ಪ (1966)
    • ಶ್ರೀ ಪುರಂದರದಾಸರು (1967)
    • ಲಗ್ನಪತ್ರಿಕೆ (1967)
    • ನಮ್ಮ ಮಕ್ಕಳು (1969)
    • ಅನಿರೀಕ್ಷಿತ (1970)
    • ಶರಪಂಜರ (1971)
    • ಮುಕ್ತಿ(1971)
    • ಭಲೇ ಅದೃಷ್ಟವೋ ಅದೃಷ್ಟ(1971)
    • ಸಿಪಾಯಿ ರಾಮು (1972)
    • ನಾಗರಹಾವು(1972)
    • ನಾ ಮೆಚ್ಚಿದ ಹುಡುಗ (1972)
    • ಹೃದಯಸಂಗಮ (1972)
    • ಮೂರೂವರೆ ವಜ್ರಗಳು (1973)
    • ಎಡಕಲ್ಲು ಗುಡ್ಡದ ಮೇಲೆ (1973)
    • ಉಪಾಸನೆ (1974)
    • ಬಂಗಾರದ ಪಂಜರ(1974)
    • ಹೆಣ್ಣು ಸಂಸಾರದ ಕಣ್ಣು (1975)
    • ಶುಭಮಂಗಳ (1975)
    • ಒಂದೇ ರೂಪ ಎರಡು ಗುಣ (1975)
    • ದೇವರ ಗುಡಿ (1975)
    • ಹುಡುಗಾಟದ ಹುಡುಗಿ (1976)
    • ಮಾಂಗಲ್ಯ ಭಾಗ್ಯ (1976)
    • ಬೆಸುಗೆ (1976)
    • ಬಂಗಾರದ ಗುಡಿ (1976)
    • ಬಯಸದೆ ಬಂದ ಭಾಗ್ಯ (1977)
    • ನಾಗರ ಹೊಳೆ (1977)
    • ಸ್ನೇಹ ಸೇಡು (1978)
    • ಪ್ರೇಮಾಯಣ (1978)
    • ಮುಯ್ಯಿಗೆ ಮುಯ್ಯಿ(1978)
    • ಕಿಲಾಡಿ ಕಿಟ್ಟು (1978)
    • ಹೊಂಬಿಸಿಲು (1978)
    • ಪ್ರಿಯಾ (1979)
    • ನಾನೊಬ್ಬ ಕಳ್ಳ (1979)
    • ಕಾಡುಕುದುರೆ (1979)
    • ಧರ್ಮಸೆರೆ(1979)
    • ಡ್ರೈವರ್ ಹನುಮಂತು (1980)
    • ಮಾರಿಯಾ ನನ್ನ ಡಾರ್ಲಿಂಗ್ (1980)
    • ಮಕ್ಕಳ ಸೈನ್ಯ (1980)
    • ಬರ (1980)
    • ಬಂಗಾರದ ಜಿಂಕೆ (1980)
    • ಸಿಂಹದ ಮರಿ ಸೈನ್ಯ (1981)
    • ಮರೆಯದ ಹಾಡು (1981)
    • ಗುರು ಶಿಷ್ಯರು (1981)
    • ಗೀತಾ (1981)
    • ಗರ್ಜನೆ (1981)
    • ಟೋನಿ (1982)
    • ಹೊಸ ಬೆಳಕು(1982)
    • ಹಾಲುಜೇನು (1982)
    • ಹಾಸ್ಯರತ್ನ ರಾಮಕೃಷ್ಣ (1982)
    • ಚಲಿಸುವ ಮೋಡಗಳು (1982)
    • ಬಾಡದ ಹೂ (1982)
    • ಪಲ್ಲವಿ ಅನುಪಲ್ಲವಿ (1983)
    • ಹೊಸ ತೀರ್ಪು (1983)
    • ಎರಡು ನಕ್ಷತ್ರಗಳು(1983)
    • ಭಕ್ತ ಪ್ರಹ್ಲಾದ (1983)
    • ಬೆಕ್ಕಿನ ಕಣ್ಣು (1984)
    • ಮುಗಿಲ ಮಲ್ಲಿಗೆ (1985)
    • ರಾಜಾ ಕೆಂಪು ರೋಜಾ (1990)
    • ಗಂಡು ಸಿಡಿಗುಂಡು (1991)
    • ಹಳ್ಳಿ ರಂಭೆ ಬೆಳ್ಳಿ ಬೊಂಬೆ (1991)
    • ಮಾಂಗಲ್ಯ(1991)
    • ಸಾಹಸಿ (1992)
    • ಕ್ಷೀರಸಾಗರ (1992)
    • ಪ್ರೇಮಸಂಗಮ (1992)
    • ಕೋಣ ಈದೈತೆ (1995)
    • ಅಮ್ಮಾವ್ರ ಗಂಡ(1997)
    • ತಾಯೀಸಾಹೇಬ (1997)
    • ಪ್ರತ್ಯರ್ಥ (1999)
    • ಹೃದಯವಂತ (2003)
    • ರಾಜನರಸಿಂಹ (2003)
    • ಆಪ್ತಮಿತ್ರ (2004)
    • ನಮ್ಮಣ್ಣ (2005)
    • ಬಳ್ಳಾರಿ ನಾಗ (2006)
    • ಸಜನಿ(2007)
    • ಗೌತಮ್(2009)
    • ಬ್ರೇಕಿಂಗ್ ನ್ಯೂಸ್ (2012)
    • ಬಜರಂಗಿ (2013)
    • ಶಿವಂ (2015)
    • ಕೇರ್ ಆಫ್ ಫುಟ್ ಪಾಥ್ 2 (2015)
    • …ರೆ (2016)
    • ಮುಕುಂದಮುರಾರಿ (2016)
    • ಶ್ರೀ ಓಂಕಾರ ಅಯ್ಯಪ್ಪನೆ(2016)
    • ಬಂಗಾರ s / O ಬಂಗಾರದ ಮನುಷ್ಯ (2017)
    • ಒನ್ಸ್ ಮೋರ್ ಕೌರವ (2017)

    ಕೋವಿಡ್ ಲಸಿಕೆ ಪಡೆದವರಿಗಷ್ಟೆ ಮಾಲ್, ಸಿನಿಮಾ ಮಂದಿರ ಪ್ರವೇಶ

    BENGALURU DEC 3

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೋವಿಡ್ ಕುರಿತ ಉನ್ನತ ಮಟ್ಟದ ಸಮತಿ ಓಮೈಕ್ರಾನ್ ರೂಪಾಂತರಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೆಲವು ನಿರ್ಧಾರಗಳನ್ನು ತೆಗೆದು ಕೊಂಡಿತು. ಅದರ ವಿವರ ಇಲ್ಲಿದೆ.

    1. ಓಮೈಕ್ರಾನ್ ರೂಪಾಂತರಿ ತಳಿಯ ವೈರಸ್ ನಿಂದ ಎರಡು ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದೆ. ಇಡೀ ವಿಶ್ವದಲ್ಲಿ ಸುಮಾರು 400 ಪ್ರಕರಣಗಳು ಈ ವರೆಗೆ ವರದಿಯಾಗಿದೆ.
    2. ಅಧಿಕೃತವಾಗಿ ಈ ಪ್ರಕರಣಗಳ ಕುರಿತು ಯಾವುದೇ ಅಧ್ಯಯನ ವರದಿ ಬಂದಿಲ್ಲ. ಆದರೆ ಅನೌಪಚಾರಿಕವಾಗಿ ದೊರೆತ ಮಾಹಿತಿಯ ಪ್ರಕಾರ ಈ ವೈರಸ್ ಸೋಂಕು ಹೆಚ್ಚು ತೀವ್ರ ಪರಿಣಾಮ ಬೀರಿಲ್ಲ. ಸೋಂಕಿತರಿಗೆ mild symptoms ಕಂಡು ಬಂದಿದೆ. ಸಾವಿನ ಪ್ರಕರಣಗಳು ವರದಿಯಾಗಿಲ್ಲ.
    3. ಈಗ ವರದಿಯಾಗಿರುವ ಎರಡೂ ಪ್ರಕರಣಗಳ ಪರೀಕ್ಷಾ ವರದಿಯನ್ನು ವಿಶ್ಲೇಷಿಸಿ ಸಲಹೆ ನೀಡುವಂತೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರಿಗೆ ತಿಳಿಸಿದರು.
    4. ಭಾರತ ಸರ್ಕಾರಕ್ಕೆ ಪತ್ರ ಬರೆದು, ಎನ್ ಸಿ ಬಿ ಎಸ್ ಪ್ರಯೋಗಾಲಯದ ವಿವರವಾದ ವರದಿ ಒದಗಿಸುವಂತೆ ಮನವಿ ಮಾಡಲಾಗುವುದು.
    5. ಅದಾಗ್ಯೂ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
    6. ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪರೀಕ್ಷೆ ನಡೆಸಿ, ನೆಗೇಟಿವ್ ವರದಿ ಬಂದ ನಂತರವೇ ಹೊರಗೆ ಕಳುಹಿಸಲಾಗುವುದು. ಪ್ರಯಾಣಿಕರ ಅನುಕೂಲಕ್ಕಾಗಿ ಪರೀಕ್ಷಾ ಯಂತ್ರಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುತ್ತಿದೆ. ಏರ್ ಲೈನ್ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ, ಪ್ರಯಾಣಿಕರಿಗೆ ಅರಿವು ಮೂಡಿಸುವಂತೆ ಸೂಚಿಸಲಾಗಿದೆ.
    7. ಒಮೈಕ್ರಾನ್ ಜೊತೆಗೆ ಈಗಾಗಲೇ ಕಂಡು ಬಂದಿರುವ ಡೆಲ್ಟಾ ವೈರಸ್ ಸೋಂಕಿನ ಕುರಿತು ಸಹ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
    8. ಸಿನೆಮಾ, ಮಾಲ್ ಗಳಿಗೆ ಭೇಟಿ ನೀಡುವವರಿಗೆ, ಶಾಲೆಗೆ ಹಾಜರಾಗುವ ಮಕ್ಕಳ ಪೋಷಕರಿಗೆ ಲಸಿಕೆ ಪಡೆಯುವುದು ಕಡ್ಡಾಯ ಮಾಡಲಾಗುವುದು.
    9. ಸರ್ಕಾರಿ ನೌಕರರಿಗೆ ಲಸಿಕೆ ಪಡೆಯುವುದು ಕಡ್ಡಾಯಗೊಳಿಸಲಾಗುವುದು.
    10. ನರ್ಸಿಂಗ್, ಅರೆವೈದ್ಯಕೀಯ ತರಬೇತಿ ಸಂಸ್ಥೆಗಳಲ್ಲಿ ಶೇ. 100 ರಷ್ಟು ಪರೀಕ್ಷೆ ನಡೆಸುವುದು. 65 ವರ್ಷ ಮೇಲಿನ ವ್ಯಕ್ತಿಗಳು ಹಾಗೂ ಇತರ ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳಿಗೆ ಸಹ ಪರೀಕ್ಷೆ ನಡೆಸಲಾಗುವುದು.
    11. ಶಾಲೆ, ಕಾಲೇಜುಗಳಲ್ಲಿ ಸಭೆ ಸಮಾರಂಭಗಳನ್ನು ನಡೆಸಲು ಅವಕಾಶವಿಲ್ಲ.
    12. ಯಾವುದೇ ಸಮ್ಮೇಳನ, ಮದುವೆ ಮತ್ತಿತರ ಕಾರ್ಯಕ್ರಮ, ಸಭೆ ಸಮಾರಂಭಗಳಲ್ಲಿ ಸೇರುವ ಜನರ ಸಂಖ್ಯೆಯನ್ನು 500ಕ್ಕೆ ಸೀಮಿತಗೊಳಿಸಲಾಗುವುದು.
    13. ಶಾಲೆಗಳಲ್ಲಿ ಸದ್ಯಕ್ಕೆ ತರಗತಿಗಳನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲಾಗುವುದು. ಅದಾಗ್ಯೂ ಶಾಲೆಗಳಲ್ಲಿ ತೀವ್ರ ನಿಗಾ ವಹಿಸಲು ಸೂಚಿಸಲಾಗಿದೆ.
    14. ಪರೀಕ್ಷಾ ಸಾಮರ್ಥ್ಯ ಹಾಗೂ ಪರೀಕ್ಷಾ ಪ್ರಮಾಣದ ಗುರಿ ಹೆಚ್ಚಿಸಲಾಗುವುದು. (increased to 1 lakh) ವಿಶೇಷವಾಗಿ ಆರೋಗ್ಯ ಕಾರ್ಯಕರ್ತರ ಪರೀಕ್ಷೆ ಹೆಚ್ಚಿಸಬೇಕೆಂದು ಸೂಚನೆ ನೀಡಲಾಗಿದೆ. ಇದಕ್ಕೆ ಅಗತ್ಯ ಮಾನವ ಸಂಪನ್ಮೂಲ ಒದಗಿಸಲು ತೀರ್ಮಾನಿಸಲಾಯಿತು.
    15. ಆರೋಗ್ಯ ಇಲಾಖೆ ಚಿಕಿತ್ಸಾ ಸೌಲಭ್ಯ ಒದಗಿಸಲು ಸಿದ್ಧತೆ ನಡೆಸಿಕೊಳ್ಳಬೇಕು. ಆಕ್ಸಿಜನೇಟೆಡ್ ಬೆಡ್ ಗಳನ್ನು ಸಜ್ಜುಗೊಳಿಸಬೇಕು; ಆಕ್ಸಿಜನ್ ಪ್ಲಾಂಟ್ ಗಳನ್ನು ಸಜ್ಜುಗೊಳಿಸಬೇಕು ಎಂದು ಸೂಚಿಸಲಾಗಿದೆ.
    16. ಆಕ್ಸಿಜನ್ ಲಭ್ಯತೆ, ಸಾಗಾಣಿಕೆ, ಪೂರೈಕೆ ಜಾಲವನ್ನು ಜಾಗೃತಗೊಳಿಸಬೇಕು.
    17. ಔಷಧಗಳ ಲಭ್ಯತೆ ಖಾತರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
    18. ಸಂಪರ್ಕಿತರ ಪತ್ತೆಯ ಪ್ರಮಾಣ ಹೆಚ್ಚಿಸಲು ಸೂಚಿಸಲಾಗಿದೆ.
    19. ರಾಜ್ಯಾದ್ಯಂತ ನಿಯಂತ್ರಣ ಕೊಠಡಿ ಪ್ರಾರಂಭಿಸಲು ನಿರ್ಧರಿಸಲಾಯಿತು.
    20. ದಕ್ಷಿಣ ಆಫ್ರಿಕಾದಿಂದ ಪ್ರಯಾಣಿಸಿದ ಒಮೈಕ್ರಾನ್ ವೈರಸ್ ಸೋಂಕಿತ ವ್ಯಕ್ತಿಯ ಪರೀಕ್ಷಾ ವರದಿಗಳಲ್ಲಿ ವೈರುಧ್ಯ ಕಂಡು ಬಂದಿರುವ ಕುರಿತು ಕೂಲಂಕಷ ತನಿಖೆ ನಡೆಸುವಂತೆ ಹೈ ಗ್ರೌಂಡ್ ಪೊಲೀಸರಿಗೆ ಸೂಚಿಸಲಾಯಿತು.

    ರಾಜ್ಯದಲ್ಲಿ OMICRON : ಶುಕ್ರವಾರ ತಜ್ಞರೊಂದಿಗೆ ಸಿಎಂ ಸಭೆ; ಹೊಸ ಮಾರ್ಗಸೂಚಿ ಸಂಭವ

    NEW DELHI DEC 2

    ರಾಜ್ಯದಲ್ಲಿ-karnataka- ಎರಡು ಒಮೈಕ್ರಾನ್ ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶುಕ್ರವಾರ ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಪರಿಣತರೊಂದಿಗೆ ಸಭೆ ನಡೆಸಿ ಹೊಸ ಮಾರ್ಗಸೂಚಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ-basavaraja bommai- ಅವರು ತಿಳಿಸಿದರು.

    ರಾಜ್ಯದಿಂದ NCBS ಗೆ ಕಳುಹಿಸಿದ್ದ ಮಾದರಿಯಲ್ಲಿ ಕೇಂದ್ರ ಸರ್ಕಾರವು ಇಂದು ಎರಡು ಒಮೈಕ್ರಾನ್ ಪ್ರಕರಣಗಳನ್ನು ದೃಢ ಪಡಿಸಿದೆ. ಆದರೆ ವಿವರವಾದ ಪರೀಕ್ಷಾ ವರದಿ ಬಂದಿಲ್ಲ. ಪ್ರಕರಣಗಳ ಸಂಪೂರ್ಣ ವಿವರ ಪಡೆಯುವಂತೆ ರಾಜ್ಯದ ಆರೋಗ್ಯ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ನಾಳೆ ಪರಿಣತರು ಹಾಗೂ ಹಿರಿಯ ಅಧಿಕಾರಿಗಳ ತುರ್ತು ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಹೊಸ ಹೊಸ ತಳಿಗಳ ಸೋಂಕನ್ನು ನಿಯಂತ್ರಿಸುವ ಕುರಿತು ರಾಜ್ಯ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಗುವುದು. ಕೇಂದ್ರದ ಪರಿಣತರ ಜೊತೆಗೂ ಈ ಕುರಿತು ಚರ್ಚಿಸಲಾಗುವುದು ಹಾಗೂ ಹೊಸ ಮಾರ್ಗ ಸೂಚಿಯನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

    ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವರನ್ನು ಮತ್ತೊಮ್ಮೆ ಭೇಟಿಯಾಗಿದ್ದೇನೆ. ಈ ಪ್ರಕರಣದ ವಿವರ ಒದಗಿಸುವುದಾಗಿ ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಈ ಪ್ರಬೇಧದ ಸೋಂಕು ತೀವ್ರ ಸ್ವರೂಪದಲ್ಲ ಎಂದು ತಿಳಿದು ಬಂದಿದೆ ಎಂದು ಅವರು ನುಡಿದರು.

    UPPER BHADRA :ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವ ಕುರಿತು ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ : ಸಿಎಂ

    NEWDELHI DEC 2

    ಡಿಸೆಂಬರ್ 6 ರಂದು ನಡೆಯಲಿರುವ ಮಹತ್ವದ ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಕುರಿತು ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ , ಆರೋಗ್ಯ , ಕಾನೂನು ಸಚಿವರನ್ನು ಭೇಟಿಯಾದ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.

    ಕೃಷ್ಣಾ ಮೇಲ್ದಂಡೆ ಯೋಜನೆಯ 2 ನೇ ನ್ಯಾಯಾಧಿಕರಣದ ಅಧಿಸೂಚನೆಯಲ್ಲಿ ನ್ಯಾಯಾಲಯದ ಆದೇಶದಂತೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ಪ್ರಕಟಣೆ ಮಾಡಿ, ಟ್ರಿಬ್ಯುನಲ್‌ನ ಸಂಪೂರ್ಣ ವರದಿಯ ನಂತರ ಸುಪ್ರೀಂ ಕೋರ್ಟ್ ನ ತೀರ್ಪಿನ ಪರಿಪಾಲನೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರದಿಂದ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದರು.

    ಗೋದಾವರಿ , ಕಾವೇರಿ, ಕೃಷ್ಣಾ ಮಹಾನದಿ ಲಿಂಕ್ ಬಗ್ಗೆ ರಾಜ್ಯದ ಅಹವಾಲನ್ನು ಕೇಳದೇ ಡಿಪಿಆರ್ ಮಾಡಬಾರದು ಹಾಗೂ ರಾಜ್ಯದ ನೀರಿನ ಪಾಲು ಎಷ್ಟು ಎಂಬುದು ನಿಗದಿ ಆಗುವ ವರೆಗೆ ಯೋಜನೆಯ ಅನುಷ್ಠಾನಕ್ಕೆ ಅನುಮೋದನೆ ನೀಡಬಾರದು ಎನ್ನುವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

    ಆರೋಗ್ಯ ಹಾಗೂ ರಸಗೊಬ್ಬರ ಮತ್ತು ರಾಸಾಯನಿಕ ಸಚಿವ ಮಾಂಡವೀಯ ಭೇಟಿ:
    ಕೋವಿಡ್ ನಿರ್ವಹಣೆ ಹಾಗೂ ಕೋವಿಡ್ ಹೊಸ ತಳಿಯ ಬಗ್ಗೆ ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಲಾಗಿದೆ, ರಾಜ್ಯದಲ್ಲಿ ಕೋವಿಡ್ ನಿರ್ವಹಣೆ, ಲಸಿಕೆ ಅಭಿಯಾನದ ಬಗ್ಗೆ ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿ ಅದನ್ನು ಮುಂದುವರೆಸಬೇಕೆಂದು ತಿಳಿಸಿದ್ದಾರೆ.
    ರಾಜ್ಯದಲ್ಲಿ ಲಸಿಕೆ ದಾಸ್ತಾನು ಸಾಕಷ್ಟಿದೆ. ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಕೇಂದ್ರ ಸರ್ಕಾರ ತಜ್ಞರೊಂದಿಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡುತ್ತದೆ. ರಾಜ್ಯಕ್ಕೆ ಕೇರಳದಿಂದ ಬರುವ ಪ್ರಯಾಣಿಕರನ್ನು ನಿಯಂತ್ರಣ ಮಾಡಿದಂತೆಯೇ ತಮಿಳುನಾಡಿನಿಂದ ಬರುವ ಪ್ರಯಾಣಿಕರ ಮೇಲೂ ನಿಗಾ ವಹಿಸಲು ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.

    ಹೆಚ್ಚುವರಿ ಡಿ ಎ ಪಿ ಗೆ ಮನವಿ

    ರಾಜ್ಯಕ್ಕೆ ಹೆಚ್ಚುವರಿ ಡಿಎಪಿಗೆ ಕೇಂದ್ರ ರಸಗೊಬ್ಬರ ಸಚಿವರಿಗೆ ಬೇಡಿಕೆ ಸಲ್ಲಿಸಲಾಗಿದೆ. ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ರಾಜ್ಯಕ್ಕೆ ನಿಗದಿಯಾಗಿರುವ ೪೮ ಸಾವಿರ ಮೆ.ಟನ್ ಡಿಎಪಿಯನ್ನು ಸಂಪೂರ್ಣವಾಗಿ ಪೂರೈಸುವ ಭರವಸೆ ನೀಡಿದ್ದಾರೆ.
    ರಾಜ್ಯದಲ್ಲಿ ಕೋರ್ಟು ಮತ್ತು ಕಾನೂನಿನ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ಕೇಂದ್ರ ಕಾನೂನು ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

    ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್‌ನೊಂದಿಗೆ ಮೈತ್ರಿಯ ಬಗ್ಗೆ ಪ್ರತಿಕ್ರಿಯಿಸಿ, ಕೇಂದ್ರದ ವರಿಷ್ಠರೊಂದಿಗೆ ಸಮಾಲೋಚಿಸಿ ಬಿ.ಎಸ್. ಯಡಿಯೂರಪ್ಪ ಹಾಗೂ ಜೆಡಿಎಸ್ ನಾಯಕರಾದ ಕುಮಾರಸ್ವಾಮಿಯವರು ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

    ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯಿಂದಾಗಿ ಜಾನುವಾರುಗಳಿಗೆ ಕಾಲು ಬಾಯಿ ರೋಗ ಹೆಚ್ಚಾಗಿದ್ದು, ಲಸಿಕೆಯ ಕೊರತೆ ಇರುವುದನ್ನು ಗಮನಿಸಲಾಗಿದೆ. ಲಸಿಕೆ ಕೊರತೆಯನ್ನು ನೀಗಿಸಿ ಲಸಿಕೆಯನ್ನು ಲಭ್ಯವಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಎಸ್.ಆರ್.ವಿಶ್ವನಾಥ್ ಅವರ ಕೊಲೆ ಸಂಚಿನ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅಲ್ಲಿರುವ ಮಾಹಿತಿಗಳನ್ನು ಕಲೆಹಾಕಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

    1 ಕೋಟಿ ಉದ್ಯೋಗ ಸೃಷ್ಟಿಗೆ `ಯುವ ಸಮೃದ್ಧಿ’ ಕಾರ್ಯಪಡೆ

    BENGALURU DEC 11

    ಐದು ವರ್ಷಗಳಲ್ಲಿ 1 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಸಂಬಂಧ ರಚಿಸಲಾಗಿರುವ ‘ಯುವ ಸಮೃದ್ಧಿ’ ಕಾರ್ಯಪಡೆಯು ಬುಧವಾರ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದು, ‘ಕರ್ನಾಟಕ ವೃತ್ತಿ ಮಾರ್ಗದರ್ಶನ ಉತ್ಕೃಷ್ಟತಾ ಕೇಂದ್ರ’ವನ್ನು ಸ್ಥಾಪಿಸಲು ಶಿಫಾರಸು ಮಾಡಿದೆ.

    ವಿಕಾಸಸೌಧದಲ್ಲಿ ಉನ್ನತ ಶಿಕ್ಷಣ ಮತ್ತು ಐಟಿ, ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಧ್ಯಾಂತರ ವರದಿಯನ್ನು ಸಲ್ಲಿಸಿ, ಇನ್ನು 10 ದಿನಗಳಲ್ಲಿ ಅಂತಿಮ ವರದಿ ಸಿದ್ಧವಾಗಲಿದೆ ಎಂದು ತಿಳಿಸಲಾಯಿತು.

    ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮಾದರಿಯಲ್ಲೇ  ಈ ವೃತ್ತಿ ಮಾರ್ಗದರ್ಶನ ಉತ್ಕೃಷ್ಟತಾ ಕೇಂದ್ರ ಕೂಡ ಸರ್ಕಾರಿ-ಖಾಸಗಿ ಪಾಲುದಾರಿಕೆಯಲ್ಲಿ ಅಸ್ತಿತ್ವಕ್ಕೆ ಬಂದು ಸೆಕ್ಷನ್ 8 ಕಂಪನಿಯಾಗಿರಬೇಕು ಎಂದು ಕಾರ್ಯಪಡೆ ಅಭಿಪ್ರಾಯಪಟ್ಟಿದೆ.

    “ಪ್ರಸ್ತುತ ರಾಜ್ಯದಲ್ಲಿ ಯಾವುದೇ ಏಕೀಕೃತ ವೃತ್ತಿ ಮಾರ್ಗದರ್ಶನ ಕೇಂದ್ರ ಇಲ್ಲವಾಗಿದೆ. ಇರುವ ಕೇಂದ್ರಗಳು ಪ್ರತ್ಯೇಕ ಘಟಕಗಳಂತೆ ಬಿಡಿ ಬಿಡಿಯಾಗಿ ಕೆಲಸ ಮಾಡುತ್ತಿವೆ. ಆದರೆ ಶಾಲಾ ಹಂತದಿಂದ ಶುರುವಾಗಿ ಕಾಲೇಜು ಹಂತ, ಮುಂದುವರಿದು ಉದ್ಯೋಗ ಗಳಿಸುವ ಹಂತದವರೆಗೆ ಮಾರ್ಗದರ್ಶನ ನೀಡುವುದಕ್ಕಾಗಿ ಸಾಮಾನ್ಯ ರೂಪುರೇಷೆ ಸಿದ್ಧಪಡಿಸುವ ಅಗತ್ಯವಿದೆ ಎಂದು ಕಾರ್ಯಪಡೆ ಪ್ರತಿಪಾದಿಸಿದೆ.

    ಡಿಜಿಟಲ್ ಕೌಶಲಗಳನ್ನು ಮೈಗೂಡಿಸಿ ಉದ್ಯಮಶೀಲತಾ ಧೋರಣೆ ಬೆಳೆಸುವುದು, ವೃತ್ತಿ ಮಾಹಿತಿ ನೀಡುವುದು ಹಾಗೂ ಮಾರ್ಗದರ್ಶನ, ಜಿಲ್ಲೆಗಳಲ್ಲಿ ಉದ್ಯಮಶೀಲ ಪರಿಸರ ನಿರ್ಮಾಣ, ಕೃಷಿ ಹಾಗೂ ಕೃಷಿ ತಾಂತ್ರಿಕತೆಗೆ ಉತ್ತೇಜನ, ಈ ಅಂಶಗಳ ಬಗ್ಗೆ ಗಮನ ಕೇಂದ್ರೀಕರಿಸಲು ಕಾರ್ಯಪಡೆಯು ಸಲಹೆ ನೀಡಿದೆ.

    6ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಡಿಜಿಟಲ್ ಕೌಶಲಗಳನ್ನು ಹಾಗೂ 21ನೇ ಶತಮಾನದ ಕೌಶಲಗಳನ್ನು ಕಲಿಸುವುದಕ್ಕಾಗಿ ರಾಜ್ಯದಾದ್ಯಂತ ‘ವೈಡಬ್ಲು ಎನ್ ಎಕ್ಸ್ ಟಿ ಹಾಗೂ ಯುವ್ಹಾ’ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕೆಂದು ಸಲಹೆ ಕೊಡಲಾಗಿದೆ. ಇದಕ್ಕಾಗಿ ಶಿಕ್ಷಣ ಇಲಾಖೆ/ ಪಿಯು ಮಂಡಳಿ/ ಐಟಿಐ ಗಳು ಯುನಿಸೆಫ್ ಜೊತೆ ಒಡಂಬಡಿಕೆಗಳನ್ನು ಮಾಡಿಕೊಳ್ಳಬೇಕು ಎಂದು ಸಚಿವ ಅಶ್ವತ್ಥ ನಾರಾಯಣ ವಿವರಿಸಿದರು.

    ಎನ್ಇಪಿ ಅಡಿ ಪದವಿ ಮಟ್ಟದಲ್ಲಿ 8 ಕ್ರೆಡಿಟ್ ಕೋರ್ಸುಗಳನ್ನು ಪ್ರಾರಂಭಿಸಬೇಕು. ಇದಕ್ಕಾಗಿ ಪಠ್ಯಕ್ರಮ ಸಿದ್ಧಪಡಿಸಲು ಹಾಗೂ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಇದನ್ನು ಅಳವಡಿಸುವುದಕ್ಕಾಗಿ ವಿಟಿಯು/ ರಾಜ್ಯ ಉನ್ನತ ಶಿಕ್ಷಣ ಪರಿಷತ್ ನೇತೃತ್ವದಲ್ಲಿ ಕಾರ್ಯತಂಡ ರಚಿಸಬೇಕೆಂಬ ಸಲಹೆ ಈ ವರದಿಯಲ್ಲಿದೆ ಎಂದೂ ಸಚಿವರು ತಿಳಿಸಿದರು.

    ಬೆಂಗಳೂರು ಗ್ರಾಮಾಂತರ, ಮೈಸೂರು, ದಕ್ಷಿಣ ಕನ್ನಡ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ `ಕೈಗಾರಿಕೋದ್ಯಮ ಸೌಲಭ್ಯ ಪೂರೈಕೆ ಕೇಂದ್ರ’ಗಳನ್ನು ಶೀಘ್ರವೇ ಅಸ್ತಿತ್ವಕ್ಕೆ ತರಬೇಕೆಂದು ವರದಿ ಅಭಿಪ್ರಾಯಪಟ್ಟಿದೆ ಎಂದು ಅವರು ಹೇಳಿದರು.

    ಕೃಷಿ ಮತ್ತು ಕೃಷಿ ತಂತ್ರಜ್ಞಾನಕ್ಕೆ ಒತ್ತು:  ಕೃಷಿ ಮತ್ತು ಕೃಷಿ ತಂತ್ರಜ್ಞಾನದತ್ತ ಯುವಜನರನ್ನು ಸೆಳೆಯಲು ಒತ್ತು ಕೊಡಲಾಗಿದ್ದು, ಈ ನಿಟ್ಟಿನಲ್ಲಿ ರೈತ ಉತ್ಪಾದಕ ಕೇಂದ್ರಗಳನ್ನು ಕೃಷಿ ತಂತ್ರಜ್ಞಾನ ಕಂಪನಿಗಳೊಂದಿಗೆ ಬೆಸೆಯುವ ಮೂಲಕ ಈ ವಲಯದಲ್ಲಿ ಬೇಡಿಕೆಯನ್ನು ಹೆಚ್ಚಿಸಬೇಕೆಂದು ಮತ್ತು `ಕೃಷಿಕಲ್ಪ’ ಉಪಕ್ರಮದಡಿ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ ಹಾಗೂ ಎಸ್ಆರ್ ಎಲ್ಎಂ (ಸ್ಟೇಟ್ ರೂರಲ್ ಲೈವ್ಲಿಹುಡ್ ಮಿಷನ್) ಜತೆಗೂಡಿ ಯುವಜನರಿಗೆ ರಾಜ್ಯ ಮಟ್ಟದ ಕೃಷಿ ತರಬೇತಿ ಯೋಜನೆಗೆ ಚಾಲನೆ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಸ್ವಸಹಾಯ ಗುಂಪುಗಳಿಗೆ ಮಾರುಕಟ್ಟೆ ಸಂಪರ್ಕವನ್ನು ಒದಗಿಸಬೇಕೆಂದು ಸಲಹೆ ಕೊಡಲಾಗಿದೆ ಎಂದರು.

    ಕಾರ್ಯಪಡೆಯ ಸಹ ಸಂಚಾಲಕರಾದ ಉದ್ಯಮಿ ಮದನ್ ಪದಕಿ, ಕೌಶಲಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆದ ಕಾರ್ಯಕಾರ್ಯಪಡೆ  ಮುಖ್ಯ ಸ್ಥರಾದ ಎಸ್. ಸೆಲ್ವಕುಮಾರ್, ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ, ಕಾರ್ಯಪಡೆಯ ಮತ್ತೊಬ್ಬ ಸಹ ಸಂಚಾಲಕರಾದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ನವೋದ್ಯಮ ದೂರದರ್ಶಿತ್ವ ಮಂಡಳಿಯ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಇದ್ದರು.

    ಮೇಲ್ಮನೆ : ಜೆಡಿಎಸ್ ಬಿಜೆಪಿ ಮೈತ್ರಿ ದೇವೇಗೌಡರು ದೆಹಲಿಯಿಂದ ಬಂದ ಮೇಲೆ ನಿರ್ಧಾರ : ಕುಮಾರಸ್ವಾಮಿ

    BENGALURU DEC 1

    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೆಹಲಿಯಿಂದ ಬಂದ ಮೇಲೆ ವಿಧಾನ ಪರಿಷತ್‌ ಚುನಾವಣೆಯ ಮೈತ್ರಿ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

    ಮೇಲ್ಮನೆ ಚುನಾವಣೆ ಹಿನ್ನೆಲೆಯಲ್ಲಿ ಬಿಡದಿಯ ತಮ್ಮ ತೋಟದಲ್ಲಿ ರಾಮನಗರ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳ ಮತದಾರರ ಜತೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು.

    ಜೆಡಿಎಸ್‌ ಸ್ಪರ್ಧೆ ಮಾಡದ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಯಡಿಯೂರಪ್ಪನವರು ಬಹಿರಂಗವಾಗಿಯೇ ಮನವಿ ಮಾಡಿದ್ದಾರೆ. ಆದರೆ, ಕಾಂಗ್ರೆಸ್‌ʼನವರು ನಮಗೆ ಜೆಡಿಎಸ್‌ ಪಕ್ಷದ ಮತಗಳ ಅಗತ್ಯವಿಲ್ಲ. ಅವರ ಜತೆ ಹೊಂದಾಣಿಕೆ ಪ್ರಶ್ನೆ ಇಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ಬೇಡ ಎಂದವರ ಮನೆ ಬಾಗಿಲಿಗೆ ಹೋಗಲಿಕ್ಕೆ ಆಗುತ್ತದೆಯೇ? ಹೀಗಾಗಿ ಯಡಿಯೂರಪ್ಪ ಅವರ ಮನವಿ ಬಗ್ಗೆ ಏನು ತೀರ್ಮಾನ ಕೈಗೊಳ್ಳಬೇಕೋ ಎಂಬುದನ್ನು ಶೀಘ್ರವೇ ನಿರ್ಧಾರ ಮಾಡುತ್ತೇವೆ ಎಂದು ಅವರು ಹೇಳಿದರು.

    ಮೋದಿ ಅವರ ಜತೆ ಗೌಡರು ಚುನಾವಣೆ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಸಿರಬಹುದಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು; ಮೊದಲಿನಿಂದಲೂ ಪ್ರಧಾನಮಂತ್ರಿಗಳು ಮತ್ತು ದೇವೇಗೌಡರ ನಡುವೆ ಉತ್ತಮ ಬಾಂಧವ್ಯವಿದೆ. ಗೌಡರ ಬಗ್ಗೆ ಮೋದಿ ಅವರಿಗೆ ವಿಶೇಷ ಗೌರವವಿದೆ. ಅವರಿಬ್ಬರೂ ಭೇಟಿಯಾಗುವುದು ಹೊಸದೇನಲ್ಲ. ನಾನು ಸಿಎಂ ಆಗಿದ್ದಾಗ ಭೇಟಿಯಾಗಿದ್ದ ಸಂದರ್ಭದಿಂದಲೂ ನನಗೆ ಗೊತ್ತಿದೆ. ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳು ಹಾಗೂ ಹಾಸನಕ್ಕೆ ಐಐಟಿ ತರುವ ವಿಚಾರದ ಬಗ್ಗೆ ಮೋದಿ ಅವರ ಜತೆ ಚರ್ಚೆ ನಡೆಸಲು ಹೋಗಿದ್ದಾರೆಂಬ ಮಾಹಿತಿ ಗಮನಿಸಿದ್ದೇನೆ. ಜತೆಗೆ, ವಿಧಾನ ಪರಿಷತ್‌ ಚುನಾವಣೆ ಬಗ್ಗೆಯೂ ಚರ್ಚೆ ನಡೆಸಿರಬಹುದು. ಗೌಡರು ದೆಹಲಿಯಿಂದ ವಾಪಸ್‌ ಬಂದ ಮೇಲೆ ಅವರೊಂದಿಗೆ ಚರ್ಚೆ ನಡೆಸಿ ಮಾಹಿತಿ ನೀಡುವೆ ಎಂದರು.

    What is UPA ? There is No UPA- ಯಪಿಎ ಎಂಬುದೇ ಇಲ್ಲ ಎಂದು ಸಾರಿದ ಮಮತಾ

    MUMBAI DEC 1

    ಕಾಂಗ್ರೆಸ್ ನಾಯಕತ್ವದಲ್ಲಿ ಪ್ರಾದೇಶಿಕ ಪಕ್ಷಗಳು ವಿಶ್ವಾಸ ಕಳೆದುಕೊಂಡು ನಿಧಾನವಾಗಿ ದೂರವಾಗುತ್ತಿವೆ. ಇದೀಗ ಯುಪಿಎ ಎಂಬುದೇ ಇಲ್ಲ ಎಂದು ಹೇಳುವ ಮೂಲಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಬುಧವಾರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು ಯುಪಿಎ (ಯುನೈಟಡ್ ಪ್ರೊಗ್ರೆಸಿವ್ ಅಲೆಯನ್ಸ್ ) ಎನ್ನುವುದು ಈಗ ಇಲ್ಲ ಎಂದು ಸಾರಿದ್ದಾರೆ. What is UPA ? There is No UPA ಎಂದು ಕಿಡಿಕಾರಿದ್ದಾರೆ.

    ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಉದ್ದೇಶದಿಂದ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಹೊರಟಿರುವ ಮಮತಾ ನಿನ್ನೆಯಷ್ಟೆ ಶಿವಸೇನಾ ನಾಯಕರನ್ನು ಭೇಟಿ ಮಾಡಿದ್ದರು. ಇನ್ನು ಎರಡು ವರ್ಷ ಬಾಕಿ ಇರುವ ಲೋಕಸಭೆ ಚುನಾವಣೆಯಲ್ಲಿ ಯುಪಿಎ ಗಿಂತ ಭಿನ್ನವಾದ ಪ್ರತಿಪಕ್ಷಗಳ ಒಕ್ಕೂಟ ರಚಿಸುವ ಉದ್ದೇಶವನ್ನು ಅವರು ಹೊಂದಿರುವಂತೆ ಕಾಣುತ್ತಿದೆ.

    ತ್ರಿಪುರ ಸ್ಥಳೀಯ ಸಂಸ್ಥೆ ಚುನಾವಣೆಯ ಕೆಲವು ವಾರ್ಡ್ ಗಳಲ್ಲಿ ಸಿಪಿಐ-ಎಂ ಅನ್ನು ಹಿಂದಿಕ್ಕಿ ಮುಖ್ಯ ಪ್ರತಿಪಕ್ಷವಾಗಿ ಹೊರ ಹೊಮ್ಮಿದ ಟಿಎಂಸಿ ಬಂಗಾಲದ ಆಚೆೆಗೂ ತನ್ನ ವ್ಯಾಪ್ತಿ ವಿಸ್ತರಿಸುವ ಬಗ್ಗೆ ಎದ್ದಿರುವ ಟೀಕೆ ಟಿಪ್ಪಣಿಗಳ ಬಗ್ಗೆ ಹರಿಹಾಯ್ದ ಮಮತಾ, ಕಾಂಗ್ರೆಸ್ ಪಕ್ಷ ಬಂಗಾಳದಲ್ಲಿ ಸ್ಪರ್ಧಿಸಬಹುದಾದರೆ ನಾವೇಕೆ ಗೋವಾದಲ್ಲಿ ಸ್ಪರ್ಧಿಸ ಬಾರದು ಎಂದು ಕೇಳಿದರು.

    ಶತಾಯ ಗತಾಯ ಬಿಜೆಪಿ ವಿರುದ್ಧ ಹೋರಾಡಲೇ ಬೇಕು, ಎಲ್ಲಾ ಪ್ರಾದೇಶಿಕ ಪಕ್ಷಗಳು ತಮ್ಮ ನೆೆಲೆಯಾಚೆಗಿಂದ ಹೊರಬಂದು ಬಿಜೆಪಿ ವಿರುದ್ಧ ಸಂಘಟಿತರಾಗಿ ಎದುರು ನಿಲ್ಲಬೇಕು ಎಂದರು.

    OMICRON ಕೋವಿಡ್ : ಎಲ್ಲ ಪ್ರಯಾಣಿಕರ ತಪಾಸಣೆ; ಲಾಕ್ ಡೌನ್ ಪ್ರಸ್ತಾವ ಇಲ್ಲ

    HUBBALLI DEC 1
    ಕೋವಿಡ್ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ -Basavaraja Bommai- ಅವರು ತಿಳಿಸಿದರು.ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತಮಾಡುತ್ತಿದ್ದರು.

    ಸುಮಾರು 2500 ಅಂತಾರಾಷ್ಟ್ರೀಯ ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರತಿನಿತ್ಯ ಆಗಮಿಸುತ್ತಾರೆ. ಕೆಲವರು ಮಂಗಳೂರು ವಿಮಾನ ನಿಲ್ದಾಣಕ್ಕೂ ಬರುತ್ತಾರೆ. ಕಳೆದ ಬಾರಿಯ ಅನುಭವದ ಮೇರೆಗೆ ಈಗಿನಿಂದಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

    ಅನಗತ್ಯ ಆತಂಕ ಬೇಡ ಜನರು ಕೋವಿಡ್ ಹೊಸ ತಳಿಯ ಕುರಿತು ಅನಗತ್ಯ ವಾಗಿ ಆತಂಕಕ್ಕೆ ಒಳಗಾಗಬಾರದು. ಜನರು ಈಗ ತಾನೇ ಆರ್ಥಿಕವಾಗಿ, ಸಾಮಾಜಿಕ ವಾಗಿ ಸುಧಾರಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ಪ್ರಸ್ತಾವ ನಮ್ಮ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.

    ಡಿಸೆಂಬರ್ 2 ರಂದು ದೆಹಲಿಗೆ

    ಡಿಸೆಂಬರ್ 2 ರಂದು ದೆಹಲಿಗೆ ತೆರಳಲಿದ್ದು, ಆ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿಯಲ್ಲಿರುವ ಕೋವಿಡ್ ಕಾರ್ಯಕರ್ತರು ಲಸಿಕೆ ಪಡೆದು 6 ತಿಂಗಳಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ವೈಜ್ಞಾನಿಕವಾಗಿ ಆಗಿರುವ ಪ್ರಗತಿ ಹಾಗೂ ಕೇಂದ್ರ ಸರ್ಕಾರದ ಶಿಫಾರಸ್ಸುಗಳ ಬಗ್ಗೆ ಚರ್ಚಿಸಲಿರುವುದಾಗಿ ತಿಳಿಸಿದರು.

    ಫ್ರಂಟ್ ಲೈನ್ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವುದು ಸೂಕ್ತ ಎನ್ನುವುದು ತಜ್ಞರ ಅನಿಸಿಕೆ ಕೂಡ ಆಗಿದೆ ಎಂದರು.

    ಈಗಾಗಲೇ ಒಂದು ಮಾದರಿಯನ್ನು ಕೇಂದ್ರ ದ ಎನ್.ಸಿ.ಬಿ.ಎಸ್ ಗೆ ಕಳುಹಿಸಲಾಗಿದೆ. ವರದಿ ಬಂದ ಕೂಡಲೇ ಕ್ರಮ ಜರುಗಿಸಲಾಗುವುದು ಎಂದರು. ಕೇರಳ ಗಡಿಯಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ ಹಾಗೂ ಲಸಿಕೆ ಹಾಕುವುದನ್ನು ತೀವ್ರಗೊಳಿಸಲಾಗಿದೆ.

    ವಿದೇಶಿ ಪ್ರಯಾಣಿಕರು ಹಾಗೂ ಕೇರಳ ಜಿಲ್ಲೆಯ ವಿದ್ಯಾರ್ಥಿಗಳ ಪರೀಕ್ಷೆಗೆ ಮುಖ್ಯವಾಗಿ ನಿಗಾ ವಹಿಸಿದೆ. ಎಲ್ಲಾ ಜಿಲ್ಲೆಗಳಲ್ಲಿ ಕೇರಳದ ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದಾರೆ. ಹಾಗಾಗಿ ಅವರೆಲ್ಲರ ಮೇಲೆ ನಿಗಾ ಇಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಧಾರವಾಡದ ಜಿಲ್ಲೆಯಲ್ಲಿ 306 ಜನರು ಪಾಸಿಟಿವ್ ಬಂದಿದ್ದು, 7 ದಿನಗಳ ನಂತರದ ಪರೀಕ್ಷೆಯಲ್ಲಿ ಇಬ್ಬರು ಮಾತ್ರ ಪಾಸಿಟಿವ್ ಇದ್ದಾರೆ ಎಂದರು.ಯಾರಿಗೂ ತೀವ್ರ ಲಕ್ಷಣಗಳಿಲ್ಲದೇ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದರು. ಸುಮಾರು 7 ಸಾವಿರ ಜನರಿಗೆ ಈಗಾಗಲೇ ಪರೀಕ್ಷೆ ಮಾಡಿದ್ದು, 500 ಮೀಟರ್ ವ್ಯಾಪ್ತಿಯೊಳಗೆ 1000 ಕ್ಕೂ ಹೆಚ್ಚು ಜನರ ಪರೀಕ್ಷೆ ಮಾಡಲಾಗಿದೆ ಎಂದರು.

    ಕಿರಿಯ ವೈದ್ಯರಿಗೆ ಶಿಷ್ಯವೇತನ

    ಕಿರಿಯ ವೈದ್ಯರು ರಾಜ್ಯಾದ್ಯಂತ ಮುಷ್ಕರ ಮಾಡಲಿರುವ ಬಗ್ಗೆ ಪ್ರಶ್ನಿಸಿದಾಗ ಈಗಾಗಲೇ ಹಣವನ್ನು ಬಿಡುಗಡೆ ಮಾಡಿದೇ. ಕೆಲವು ಕಾಲೇಜುಗಳಲ್ಲಿ ದಾಖಲೆಗಳಿಲ್ಲದೆ ಪಾವತಿಗೆ ತೊಂದರೆಯಾಗಿದೆ. ದಾಖಲೆಗಳಿದ್ದವರಿಗೆ ಕೋವಿಡ್ 19 ಹಾಗೂ ಶಿಷ್ಯವೇತನ ಪಾವತಿಸಲು ಈಗಾಗಲೇ ಸೂಚಿಸಲಾಗಿದೆ. 2-3 ದಿನಗಳಲ್ಲಿ ಎಲ್ಲರಿಗೂ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದರು.

    ಹೊಸ ತಾಲ್ಲೂಕುಗಳಿಗೆ ಮೂಲಸೌಕರ್ಯ
    ಹೊಸ ತಾಲ್ಲೂಕುಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡಿಲ್ಲವೆಂದು ಹೈಕೋರ್ಟ್ ಸರ್ಕಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕುರಿತ ಪ್ರಶ್ನೆಗೆ ಉತ್ತರಿಸಿ, ಕೋವಿಡ್ ಕಾರಣದಿಂದ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಕನಿಷ್ಠ ಸೌಲಭ್ಯಗಳನ್ನು ಹೊಸ ತಾಲ್ಲೂಕುಗಳಿಗೆ ಒದಗಿಸಲಾಗುವುದು ಎಂದರು.

    ಬಿ.ಜೆ.ಪಿ ಅಭ್ಯರ್ಥಿ ಆಯ್ಕೆ ನಿಶ್ಚಿತ
    ವಿಧಾನ ಪರಿಷತ್ ಚುನಾವಣೆಯಲ್ಲಿ ಹಾವೇರಿಯಿಂದಲೇ ಬಿಜೆಪಿ ಬಂಡಾಯ ಅಭ್ಯರ್ಥಿಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಅವರು ಬಿಜೆಪಿ ಎನ್ನುತ್ತಾರೆ. ಆಮೇಲೆ ಎಪಿಎಂಸಿ ಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಅಧ್ಯಕ್ಷರಾಗಿದ್ದರು. ಅವರಿಗೆ ಸ್ಥಿರವಾದ ನಿಲುವಿಲ್ಲ.ಆದರೆ ಅದರಿಂದ ಯಾವ ಪರಿಣಾಮವೂ ಉಂಟಾಗುವುದಿಲ್ಲ. ನಮ್ಮ ಅಭ್ಯರ್ಥಿ ಪ್ರದೀಪ್ ಶೆಟ್ಟರು ಆಯ್ಕೆಯಾಗುವುದು ನಿಶ್ಚಿತ ಎಂದರು.

    ಮೈತ್ರಿ:
    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿರುವ ಬಗ್ಗೆ ಪ್ರಸ್ತಾಪಿಸಿದಾಗ, ದೇವೇಗೌಡರು ಹಾಗೂ ಪ್ರಧಾನಿಗಳು ಹಲವಾರು ವಿಷಯಗಳ ಕುರಿತು ಚರ್ಚಿಸಿದ್ದಾರೆ. ಅದರಲ್ಲಿ ಸ್ಥಳೀಯವಾಗಿ ಮೈತ್ರಿ ಮಾಡಿಕೊಳ್ಳುವುದೂ ಸೇರಿದೆ. ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಎಚ್.ಡಿ.ಕುಮಾರಸ್ವಾಮಿ ಯವರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.

    ಗುತ್ತಿಗೆಗಾರರ ಕಮಿಷನ್ ವಿಚಾರದಲ್ಲಿ ತನಿಖೆಯನ್ನು ಪ್ರಧಾನ ಕಾರ್ಯದರ್ಶಿ ಗಳಿಗೆ ವಹಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ , ಟೆಂಡರ್ ಗೆ ಅನುಮತಿ ನೀಡುವ ಎಂಜಿನಿಯರ್ ಗಳು ಬೇರೆ. ಪ್ರಧಾನ ಕಾರ್ಯದರ್ಶಿ ಗಳು ಮೇಲ್ಮನವಿ ಪ್ರಾಧಿಕಾರವಾಗಿರುವುದರಿಂದ ಅವರಿಗೆ ವಹಿಸಲಾಗಿದೆ ಎಂದರು.

    ಲಾಕ್ ಡೌನ್ ಇಲ್ಲ: ಊಹಾಪೋಹಗಳಿಗೆ ಜನ ಕಿವಿಕೊಡಬಾರದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    BENGALURU OCT 30

    ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಇಲ್ಲ. ಈ ಕುರಿತಂತೆ ಊಹಾಪೋಹಗಳಿಗೆ ಜನ ಕಿವಿಗೊಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪುನರುಚ್ಚರಿಸಿದರು.ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

    ಸದ್ಯಕ್ಕೆ ಲಾಕ್ ಡೌನ್ ಪ್ರಶ್ನೆಯೇ ಇಲ್ಲ. ಜನಜೀವನ ಎಂದಿನಂತೆ ನಡೆಯಬೇಕು. ಹೆಚ್ಚು ಜನರು ಸೇರುವಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಂಘಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಸಂಸ್ಥೆಗಳು ಜವಾಬ್ದಾರಿಯುತವಾಗಿ ನಡೆದುಕೊಂಡು ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು. ಕೋವಿಡ್ ಬಗ್ಗೆ ಸರ್ಕಾರ ತೀವ್ರ ಕಟ್ಟೆಚ್ಚರ ವಹಿಸಿದೆ. ಕ್ಲಸ್ಟರ್ ಆಗಿರುವಲ್ಲಿ ವಿಶೇಷ ನಿಗಾ ವಹಿಸಲಾಗಿದೆ ಎಂದರು.

    ಕೋವಿಡ್ ಪರೀಕ್ಷೆ ಹೆಚ್ಚಳ:ಕೋವಿಡ್ ಹೊಸ ತಳಿ ಒಮಿಕ್ರಾನ್ ಕುರಿತು ನಿಗಾ ಇರಿಸಲಾಗಿದೆ. ಈಗಿರುವ ಡೆಲ್ಟಾ ತಳಿಯಿಂದ ಅಲ್ಲಲ್ಲಿ ಕ್ಲಸ್ಟರ್ ಆಗಿದೆ. ಎರಡು ಹಂತಗಳಲ್ಲಿ ಇದನ್ನು ನಿಭಾಯಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡು ತ್ತಿದ್ದು, ವೈಜ್ಞಾನಿಕವಾಗಿ ಕೈಗೊಳ್ಳಬೇಕಿರುವ ಕ್ರಮಗಳನ್ನು ಕೈಗೊಂಡಿದೆ., ಹೆಚ್ಚಿನ ತನಿಖೆಗೆ ಎನ್.ಸಿ.ಬಿ.ಎಸ್ ಗೂ ಮಾದರಿಗಳನ್ನು ಕಳುಹಿಸಲಾಗಿದೆ. ವಿದೇಶಗಳಿಂದ ಬಂದಿರುವ ಪ್ರಯಾಣಿಕರ ಬಗ್ಗೆ ವಿಶೇಷ ನಿಗಾ ಇರಿಸಿದ್ದು, ಸಂಪರ್ಕಿತರ ಪತ್ತೆ ಹಾಗೂ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.

    ಕ್ಲಸ್ಟರ್ ಗಳ ಬಗ್ಗೆ ಮಾರ್ಗಸೂಚಿ ಗಳನ್ನು ಬಿಡುಗಡೆ ಮಾಡಿದ್ದು, ಅಲ್ಲಿ ಪಾಲ್ಗೊಂಡಿದ್ದವರ ಪರೀಕ್ಷೆ, 7 ದಿನಗಳ ನಂತರ ಮತ್ತೊಮ್ಮೆ ಪರೀಕ್ಷೆ ಮಾಡಲು ಸೂಚಿಸಲಾಗಿದೆ. ಧಾರವಾಡದ ಎಸ್.ಡಿ.ಎಂ ಕಾಲೇಜಿನಲ್ಲಿ ಸುಮಾರು 4 ಸಾವಿರ ಜನರ ಪರೀಕ್ಷೆಯನ್ನು ಮಾಡಲಾಗಿದೆ. ಅದೇ ರೀತಿ ಮೈಸೂರು, ಹಾಸನ ಮತ್ತು ಬೆಂಗಳೂರಿನ ಆನೇಕಲ್y ನಲ್ಲಿನ ಕಸ್ಟರ್ ಗಳಲ್ಲಿ ತಪಾಸಣೆಯನ್ನು ತೀವ್ರ ಗೊಳಿಸಲಾಗಿದೆ.
    ಸಾಮಾನ್ಯ ಪರೀಕ್ಷೆಗಳನ್ನು ಹೆಚ್ಚಿಸಲೂ ಸಹ ಸೂಚನೆ ನೀಡಲಾಗಿದೆ ಎಂದರು.

    ಇಂದು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳು ರಾಜ್ಯಗಳ ಜೊತೆಗೆ ನಡೆಸುವ ಪರಿಶೀಲನಾ ಸಭೆ ನಡೆಸುತ್ತಿದ್ದು, ಸಭೆಯ ನಂತರ ಪರಿಸ್ಥಿತಿ ಅವಲೋಕಿಸಿ ಕ್ರಮ ವಹಿಸಲಾಗುವುದು ಎಂದರು.

    error: Content is protected !!