18.7 C
Karnataka
Wednesday, November 27, 2024
    Home Blog Page 39

    NEP:ಎನ್ಇಪಿ ಭಾರತ ಕೇಂದ್ರಿತ; ಸಂಶೋಧನೆ, ನಾವೀನ್ಯತೆಗೆ ಒತ್ತು

    BENGALURU NOV 30

    ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು-New education policy 2020- ಭಾರತ ಕೇಂದ್ರಿತವಾಗಿದ್ದು, ಶಿಕ್ಷಣ ಕ್ರಮದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳಿಗೆ ಒತ್ತು ಕೊಡುವ ಮೂಲಕ ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆಯನ್ನು ಗುರಿಯಾಗಿ ಹೊಂದಿದೆ. ಇದರ ಅನುಷ್ಠಾನದಲ್ಲಿ ರಾಜ್ಯವು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    ಎಜುಕೇಷನ್ ಪ್ರೊಮೋಷನ್ ಸೊಸೈಟಿ ಆಫ್ ಇಂಡಿಯಾ (ಇಪಿಎಸ್ಐ), ಕುಪೇಕಾ ಮತ್ತು ಕಾಮೆಡ್-ಕೆ ಸಂಘಟನೆಗಳು ಜತೆಗೂಡಿ ಮಂಗಳವಾರ ಏರ್ಪಡಿಸಿದ್ದ `ಎನ್ಇಪಿ ಜಾರಿ: ಶಿಕ್ಷಣ ಸಂಸ್ಥೆಗಳಿಗಿರುವ ಅವಕಾಶಗಳು ಮತ್ತು ಸವಾಲುಗಳು’ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

    ಎನ್ಇಪಿ ಜಾರಿಗೊಳಿಸಲು ರಾಜ್ಯ ಸರಕಾರವು ಅಗತ್ಯ ಕ್ರಮಗಳನ್ನೆಲ್ಲ ಕೈಗೊಂಡಿದ್ದು, ಶಾಲಾ ಶಿಕ್ಷಣ, ಉನ್ನತ ಶಿಕ್ಷಣದ ಪಠ್ಯಕ್ರಮ ಮತ್ತು ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಮತ್ತು ಸುಧಾರಣೆಗಳತ್ತ ಗಮನ ಕೇಂದ್ರೀಕರಿಸಿದೆ. ಇದಕ್ಕೆ ತಕ್ಕಂತೆ ರಾಜ್ಯದಲ್ಲಿ ಬಹುಶಿಸ್ತೀಯ ವಿಧಾನಗಳ ಮೂಲಕ ಮಾದರಿ ಕಾಲೇಜುಗಳನ್ನು ಸ್ಥಾಪಿಸುವ ಪ್ರಕ್ರಿಯೆ ಈಗಾಗಲೇ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

    ಎನ್ಇಪಿ ಆಶಯಕ್ಕೆ ತಕ್ಕಂತೆ ರಾಜ್ಯದಲ್ಲಿ ಇನ್ನು 10 ವರ್ಷಗಳಲ್ಲಿ ಇಡೀ ಉನ್ನತ ಶಿಕ್ಷಣ ವ್ಯವಸ್ಥೆಯು ಆಧುನೀಕರಣಗೊಳ್ಳಲಿದ್ದು, ವಿದ್ಯಾರ್ಥಿಕೇಂದ್ರಿತವಾಗಲಿದೆ. ಪದವಿ ಮಟ್ಟದಲ್ಲಂತೂ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಯಾವುದೇ ವಿಷಯಗಳನ್ನು ಐಚ್ಛಿಕವಾಗಿ ಓದುವ ಮಾದರಿ ಅಳವಡಿಸಿಕೊಳ್ಳಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸೂಕ್ತ ವಾತಾವರಣ ನಿರ್ಮಾಣವಾಗಲಿದೆ ಎಂದು ಸಚಿವರು ಪ್ರತಿಪಾದಿಸಿದರು.

    ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿ ಇರಬೇಕೆನ್ನುವುದು ಸರಕಾರದ ಸಂಕಲ್ಪವಾಗಿದೆ. ಇದಕ್ಕಾಗಿ 21ನೇ ಶತಮಾನದ ಅಗತ್ಯಗಳನ್ನು ಪರಿಗಣಿಸಿ, ಜಾಗತಿಕ ಗುಣಮಟ್ಟದ ಬೋಧನೆಗೆ ಒತ್ತು ನೀಡಿದ್ದೇವೆ. ಅಂತಿಮವಾಗಿ ಇದರಿಂದ ಆರೋಗ್ಯಕರ ಸಮಾಜ ನಿರ್ಮಾಣವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

    ನೂತನ ಶಿಕ್ಷಣ ನೀತಿಯಲ್ಲಿ ಹೇಳಿರುವಂತೆ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವು ಅಸ್ತಿತ್ವಕ್ಕೆ ಬರಲಿದೆ. ಮೂರು ದಶಕಗಳ ನಂತರ ರೂಪಿಸಿರುವ ಈ ನೀತಿಯು ಲಭ್ಯತೆ, ಸಮಾನತೆ, ಗುಣಮಟ್ಟ ಮತ್ತು ಉತ್ತರದಾಯಿತ್ವಗಳನ್ನು ಪ್ರತಿಪಾದಿಸುತ್ತಿದ್ದು, ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡಲಿದೆ ಎಂದು ಅವರು ಹೇಳಿದರು.

    ಕಾರ್ಯಕ್ರಮದಲ್ಲಿ ನವದೆಹಲಿಯಲ್ಲಿರುವ ಎಐಸಿಟಿಇ ಅಧ್ಯಕ್ಷ ಡಾ.ಅನಿಲ್ ದತ್ತಾತ್ರೇಯ ಸಹಸ್ರಬುದ್ಧೆ, ವೆಲ್ಲೂರು ತಾಂತ್ರಿಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಮತ್ತು ಕುಲಪತಿ ಡಾ.ಜಿ.ವಿಶ್ವನಾಥ, ಎಂ.ಎಸ್.ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿವಿ ಕುಲಪತಿ ಎಂ.ಆರ್.ಜಯರಾಂ, ಇಪಿಎಸ್ಐ ನಿರ್ದೇಶಕ ಡಾ.ಎಚ್.ಚತುರ್ವೇದಿ, ಪುಣೆಯಲ್ಲಿರುವ ಎಂಐಟಿ-ಎಡಿಟಿ ವಿವಿ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರೊ.ಮಂಗೇಶ್ ಟಿ.ಕರಾಡ್ ಉಪಸ್ಥಿತರಿದ್ದರು.

    Rain Water Harvesting :ಸಮೃದ್ಧಿಯ ನಾಳೆಗಳಿಗೆ ಇಂದು ನೀರು ಉಳಿಸಿ ಕೊಯ್ಲು ಮಾಡಲು ಶ್ರೀಪಡ್ರೆ ಕರೆ

    MANGALURU NOV 30

    ಓಡೋ ನೀರನ್ನು ನಡೆಯುವ ಹಾಗೆ ಮಾಡಿ,ನಡೆಯುವ ನೀರನ್ನು ತೆವಳುವ ಹಾಗೆ ಮಾಡಿ, ತೆವಳುವ ನೀರನ್ನು ನಿಲ್ಲಿಸಿ,ನಿಂತ ನೀರನ್ನು ಇಂಗಿಸಿ, ಜನಶಕ್ತಿಯಿಂದ ನದಿಗಳಿಗೆ ಮರುಜೀವವನ್ನು ನೀಡಬಹುದು ಎಂದು ಜಲ ಸಂರಕ್ಷಣಾ ತಜ್ಞ ಹಾಗೂ  ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಹೇಳಿದರು.

    ಮಂಗಳೂರು ವಿವಿ ಆವರಣದಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಗಳ ಉದ್ಘಾಟನೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಈ ಸಂದರ್ಭದಲ್ಲಿ ಹ್ಯುಮಾನಿಟೀಸ್ ಬ್ಲಾಕ್ ಬಳಿ   ಒಂದು ಲಕ್ಷ ಲೀಟರ್ ಸಾಮರ್ಥ್ಯದ ಮಳೆನೀರು ಕೊಯ್ಲು ವ್ಯವಸ್ಥೆ ಹಾಗೂ ಲೆಕ್ಚರ್ ಹಾಲ್ ಕಾಂಪ್ಲೆಕ್ಸ್ ಹಿಂದೆ ಎರಡು ಲಕ್ಷ ಲೀಟರ್ ಸಾಮರ್ಥ್ಯದ ಮಳೆನೀರು ಕೊಯ್ಲು ವ್ಯವಸ್ಥೆಯ ಉದ್ಘಾಟನೆಯನ್ನು ನೆರವೇರಿಸಲಾಯಿತು .ರಾಷ್ಟ್ರೀಯ ಉಚ್ಚತರ್ ಶಿಕ್ಷಾ ಅಭಿಯಾನ (RUSA) ಅನುದಾನದ ಅಡಿಯಲ್ಲಿ ಇವುಗಳನ್ನು ನಿರ್ಮಿಸಲಾಗಿದೆ.

    ಸರಾಸರಿ  ವಾರ್ಷಿಕ ಮಳೆ 3500 ಮಿ.ಮೀ ಸುರಿದರೆ ಒಂದು ಚ. ಮೀ. ಮೇಲೆ 3500 ಲೀಟರ್ ,ಒಂದೆಕ್ರೆಯ ಮೇಲೆ, 1.4 ಕೋಟಿ ಲೀಟರ್,ಐದು ಸೆಂಟ್ಸ್ ಮೇಲೆ , 7 ಲಕ್ಷ ಲೀಟರ್ ನಷ್ಟು ನೀರು ಸಂರಕ್ಷಿಸಿದರೆ ನೀರಿನ ಸಮಸ್ಯೆಗೆ ಸುಲಭ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಅವರು ವಿವರಿಸಿದರು.  ಸ್ಥಳದಲ್ಲೇ ಮಾಡುವ  ಮಳೆಕೊಯ್ಲಿನಿಂದ ಅನೇಕ ಲಾಭಗಳಿವೆ. ಇದು ಬಡವರಿಗೂ ಎಟಕುವಂಥದ್ದು. ಪೇಟೆ ಒಳಸುರಿ ಬೇಕಿಲ್ಲ.  ‘ಒಂದು ಬಾರಿಯ’ ಕೆಲಸ ಅಷ್ಟೆ. ಏಜೆಂಟರು, ಗುತ್ತಿಗೆದಾರರು ಬೇಕಿಲ್ಲ. ಸುಸ್ಥಿರ ಮತ್ತು ಪರಿಸರಸ್ನೇಹಿ.  ಉಳಿಸಿದ ನೀರು ಗಳಿಸಿದ್ದಕ್ಕೆ ಸಮ. ಆದುದರಿಂದ ನೀರು ಉಳಿಸುವ ಮೂಲಕ ಸಮೃದ್ಧಿಯನ್ನು ಕಾಣಬಹುದು ಎಂದರು .

    ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಪಿ . ಎಸ್ . ಯಡಪಡಿತ್ತಾಯ  ಅಧ್ಯಕ್ಷೀಯ ಭಾಷಣ ಮಾಡಿದರು, ” ಪರಿಸರ ಸ್ನೇಹಿ ಚಟುವಟಿಕೆಗಳು ಕೇವಲ ಬಾಯಿ ಮಾತಿನಲ್ಲಿ ಇರದೇ ಇಚ್ಛಾ ಶಕ್ತಿಯಿಂದ ಕಾರ್ಯರೂಪಕ್ಕೆ ತರಬೇಕು. ಶ್ರೀ ಪಡ್ರೆ  ಅವರು ಸಲಹೆ ನೀಡಿರುವಂತೆ ವಿದ್ಯಾರ್ಥಿಗಳ ಮೂಲಕ ಮಂಗಳಗಂಗೋತ್ರಿ ಆವರಣದಲ್ಲಿ ನೀರಿನ ಸಂರಕ್ಷಣೆಯ  ಸಾಕ್ಷ್ಯಚಿತ್ರವನ್ನು ಸಿದ್ಧತೆ ಮಾಡಲಾಗುವುದು;  ಆ ಮೂಲಕ ವಿದ್ಯಾರ್ಥಿಗಳಿಗೆ ಅನುಭವಿಕ  ಕಲಿಕೆಗೆ ಅವಕಾಶ ಮಾಡಿ ಕೊಡಲಾಗುವುದು. ಆದಷ್ಟು ಶೀಘ್ರದಲ್ಲಿ  ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ನ್ನು ಮಳೆನೀರು ಕೊಯ್ಲು ವಲಯವನ್ನಾಗಿ ರೂಪಿಸಲಾಗುವುದು. ನಾವು ಇಂದು ಮಾಡುವ ಸಮಾಜಮುಖಿ  ಕೆಲಸಗಳು  ಶಾಶ್ವತವಾಗಿ  ಉಳಿಯುವಂತಿರಬೇಕು. ಈ ನಿಟ್ಟಿನಲ್ಲಿ ಮಳೆನೀರು ಕೊಯ್ಲು ಒಂದು ಅತ್ಯತ್ತಮ ಸಮಾಜಮುಖಿ ಮತ್ತು ಪರಿಸರ ಸ್ನೇಹಿ ಕೆಲಸ ಎಂದರು.

    ಈ ಸಂದರ್ಭದಲ್ಲಿ   ‘ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ’ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

    ಕಾರ್ಯಕ್ರಮ ಸಂಯೋಜಕ  ಪ್ರೊ. ಪ್ರಶಾಂತ ನಾಯ್ಕ   ಪ್ರಾಸ್ತಾವಿಕವಾಗಿ ಮಾತನಾಡಿ  ಸರ್ವರನ್ನು ಸ್ವಾಗತಿಸಿದರು. ಕಾರ್ಯಕಾರಿ ಅಭಿಯಂತ ಲವ  ಎಂ. ಡಂಬರ ಉಪಸ್ಥಿತರಿದ್ದರು.RUSA – ನೋಡಲ್ ಅಧಿಕಾರಿ, ಪ್ರೊ.ಕೆ.ಎಸ್.ಜಯಪ್ಪ ವಂದನಾರ್ಪಣೆ ಸಲ್ಲಿಸಿದರು.  ಡಾ.  ಸಬಿತಾ ಅವರು ಅತಿಥಿಗಳನ್ನು ಪರಿಚಯಿಸಿದರು.  ಡಾ. ಧನಂಜಯ ಕುಂಬ್ಳೆ, ಕಾರ್ಯಕ್ರಮ  ನಿರೂಪಣೆ ಮಾಡಿದರು.  ಪ್ರೊ. ಎಂ . ಕೃಷ್ಣಮೂರ್ತಿ, ವಿವಿಯ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು,   ಸಂಶೋಧನಾ ವಿದ್ಯಾರ್ಥಿಗಳು,  ಸ್ನಾತಕೋತ್ತರ ವಿದ್ಯಾರ್ಥಿಗಳು, ದತ್ತು ಸ್ವೀಕೃತ ಸರ್ಕಾರಿ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  

    ACB RAID:ಎಸಿಬಿ ದಾಳಿ ನಂತರ ಮುಂದೇನು?

    ವಾದಿರಾಜ ದೇಸಾಯಿ

    ‘ಆಫೀಸರ್ ಗಳ ಮನೆ ಮೇಲೆ ದಾಳಿಗಳನ್ನು ಮಾಡ್ತಾನೆ ಇರ್ತಾರೆ; ಅಲ್ಲಿ ಸಿಕ್ಕ ದುಡ್ಡು ಏನಾಗುತ್ತದೆ ? ಮುಂದೇನು…?’ಗೃಹಿಣಿಯರೂ ಸೇರಿದಂತೆ ಜನಸಾಮಾನ್ಯರನ್ನು ಈಗ ಕಾಡುತ್ತಿರುವ ಪ್ರಶ್ನೆ ಇದು.

    ಈ ಪ್ರಶ್ನೆಯ ಹಿಂದೆ ಎರಡು ಅಂಶಗಳು ಅಡಗಿವೆ . ಒಂದು ಕುತೂಹಲ , ಇನ್ನೊಂದು ದಾಳಿ ಮಾಡುವ ಅಧಿಕಾರಿಗಳು ಆ ದುಡ್ಡನ್ನು ಪಡೆಯುತ್ತಾರಾ ಎಂಬ ಸಂಶಯ.

    ಈ ವಿಷಯದ ಪ್ರಸ್ತಾಪಕ್ಕೆ ಕಾರಣ ಮೊನ್ನೆ ಮೊನ್ನೆ ನಡೆದ ಎಸಿಬಿಯ (ಭ್ರಷ್ಟಾಚಾರ ನಿಗ್ರಹ ದಳ ) ದಾಳಿಗಳು. ಕಳೆದವಾರ ಬಿಡಿಎ ಕಚೇರಿ ಮೇಲೆ ದಾಳಿ ಬೆನ್ನಲ್ಲೇ ರಾಜ್ಯಾದ್ಯಂತ 15 ಸರ್ಕಾರಿ ನೌಕರರ ಮನೆ ಮೇಲಿನ ದಾಳಿ ಮತ್ತು ಇದೇ ಸಮಯದಲ್ಲಿ ಕೊಬ್ಬರಿ ವರ್ತಕರ ಮನೆ ಹಾಗೂ ಅಂಗಡಿಗಳ ಮೇಲೆ ಆದಾಯ ತೆರಿಗೆ ದಾಳಿಯೂ ಸುದ್ದಿಯಾಯಿತು.

    ಇಂತಹ ದಾಳಿಗಳ ಬಗ್ಗೆ ಜನರು ಈಗೀಗ ಹೆಚ್ಚು ಜಾಗೃತರಾಗುತ್ತಿದ್ದಾರೆ. ಆದರೆ ಕಲ್ಯಾಣ ಕರ್ನಾಟಕದ ಕೆಲವು (ಹಿಂದುಳಿದ) ಭಾಗಗಳಲ್ಲಿ ಜಾಗೃತಿ ಇನ್ನೂ ಅಷ್ಟಾಗಿಲ್ಲ.

    ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ದಾಳಿಯ ನಂತರದ ಪ್ರಕ್ರಿಯೆಗಳ ವಿಷಯ ಬಹುತೇಕವಾಗಿ ಜನರಿಗೆ ಗೊತ್ತಾಗದೇ ಇರುವುದರಿಂದ ನಿರೀಕ್ಷಿತ ಜಾಗೃತಿ ಆಗುತ್ತಿಲ್ಲ. ಭ್ರಷ್ಟಾಚಾರದ ಆರೋಪಿಗಳಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದ ಒಂದೆರಡು ಪ್ರಕರಣಗಳು ಪತ್ರಿಕೆಗಳಲ್ಲಿ ಸಣ್ಣ ಸುದ್ದಿಯಾಗಿ ಅಚ್ಚಾಗುವುದರಿಂದ ಜನರ ಗಮನ ಸೆಳೆಯುತ್ತಿಲ್ಲ.

    ದಾಳಿ ನಂತರದ ತನಿಖೆಗಳು ” ಠುಸ್” ಆಗಿ ಬಿಡುತ್ತವೆ ಎಂದು ಬಿಂಬಿಸಲಾಗುತ್ತಿದೆಯಾದರೂ , ಆ ಪ್ರಕ್ರಿಯೆಗಳನ್ನು ಅರಿತುಕೊಳ್ಳುವ ಪ್ರಯತ್ನ ಇಲ್ಲಿದೆ.

    ಸಂಪತ್ತು ಸುರಕ್ಷಿತ

    ರೇಡ್ ಸಮಯದಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು “ತನಿಖೆಯು ಪೂರ್ಣಗೊಳ್ಳುವವರೆಗೂ ತನ್ನ ವಶಕ್ಕೆ ನೀಡಬೇಕು” ಎಂದು ಎಸಿಬಿಯು ನ್ಯಾಯಾಲಯದ ಅನುಮತಿ ಕೋರುತ್ತದೆ. ಈ ಬಳಿಕವೇ ಆ ವಸ್ತುಗಳನ್ನು ಎಸಿಬಿ ಕಚೇರಿಗಳಲ್ಲಿ ಅಥವಾ ಜಿಲ್ಲಾ ಖಜಾನೆ ಕಚೇರಿಗಳಲ್ಲಿ ಭದ್ರವಾಗಿ ಇರಿಸಲಾಗುತ್ತದೆ.

    ಇದಕ್ಕೂ ಮುನ್ನ , ದಾಳಿ ನಡೆದ ಸ್ಥಳದಲ್ಲಿಯೇ, ಇಬ್ಬರು ಪಂಚರ (ಸರ್ಕಾರಿ ಉದ್ಯೋಗಿಗಳು) ಸಮ್ಮುಖದಲ್ಲೇ ಪಂಚನಾಮೆ ನಡೆಯುತ್ತದೆ. ಹೊಸ ನೋಟುಗಳಾದರೆ ಅವುಗಳ ಸೀರೀಸ್ ಸಂಖ್ಯೆ; ಹಳೆಯ ನೋಟ್ ಆದರೆ ಕಂತೆಗಳ ಸಂಖ್ಯೆ, ಒಡವೆಗಳ ತೂಕ ಎಲ್ಲವೂ ನಮೂದಿಸಲಾಗುತ್ತದೆ.

    ಎಸಿಬಿ ದಾಳಿಗಳ ಪ್ರಕರಣಗಳು ಆಯಾ ಜಿಲ್ಲಾ ಸೆಷನ್ಸ್ ಕೋರ್ಟಿನ ವ್ಯಾಪ್ತಿಗೆ ಬರುತ್ತಿದ್ದು , ಪ್ರಿನ್ಸಿಪಲ್ ಜಡ್ಜ್ ಅವರ ಕಣ್ಗಾವಲಿನಲ್ಲಿ ವಿಚಾರಣೆಯಾಗುತ್ತದೆ. ಹೀಗಾಗಿ ಹಣ, ಒಡವೆ ವಸ್ತುಗಳೆಲ್ಲ ಸುರಕ್ಷಿತವಾಗಿರುತ್ತವೆ.

    ಪೂರ್ವ ಸಿದ್ದತೆ

    ಎಸಿಬಿ ಹಾಗೂ ಐಟಿ ದಾಳಿಗಳು “ರಾಜಕೀಯಪ್ರೇರಿತ” ಎಂಬ ವಾದಕ್ಕೆ ಪುಷ್ಟಿಗಳಿದ್ದಂತಿಲ್ಲ. ಸ್ವತಂತ್ರ ತನಿಖಾ ಸಂಸ್ಥೆಯಾದ ಎಸಿಬಿಯು ದಾಳಿಗೆ ಮೊದಲು ಆರೋಪಿ ಅಧಿಕಾರಿಯ (ಅಕ್ರಮ) ಗಳಿಕೆಯ ಬಗ್ಗೆ ಎಲ್ಲ ಮಾಹಿತಿಯನ್ನು ಕಲೆ ಹಾಕಿರುತ್ತದೆ. ಸುಮಾರು ಆರು ತಿಂಗಳು ಮೊದಲೇ ಕಾರ್ಯಾಚರಣೆ ಶುರುವಾಗುತ್ತದೆ.

    ಕಚೇರಿಗೆ ಬರುವ ದೂರುಗಳನ್ನು, ಅಂದರೆ ಮೂಗರ್ಜಿ, ಸುಳ್ಳು ಹೆಸರಿನಲ್ಲಿ ಬರೆದ ಪತ್ರ (Pseudonymous petition) ಇವುಗಳನ್ನು “ಮಾಹಿತಿ” (Information) ಎಂದು ಗಣನೆಗೆ ತೆಗೆದುಕೊಳ್ಳುತ್ತಾರೆ.

    ನೌಕರರ ಘೋಷಿತ ಆದಾಯ, (ದೂರಿನಲ್ಲಿ ತಿಳಿಸಿದ ) ಗಳಿಕೆಯ ತಾಳೆ ಹಾಕುತ್ತಾರೆ. ಮನೆ , ಕಾರು, ಜಮೀನು ಇವುಗಳನ್ನು ಹೋಲಿಸಿ ನೋಡಿ, ಅವುಗಳ ಅಂದಾಜು ಮೌಲ್ಯವನ್ನು ಎಸಿಬಿ ಅಧಿಕಾರಿಗಳು ನಿರ್ಧರಿಸುತ್ತಾರೆ. ತಮ್ಮದೇ ಆದ ವಿಧಾನಗಳ ಮೂಲಕ ಸತ್ಯಾಸತ್ಯತೆಗಳನ್ನು ಪರೀಕ್ಷಿಸಿ, ಆ ಅಧಿಕಾರಿಯನ್ನು “ಟಾರ್ಗೆಟ್” ಮಾಡುತ್ತಾರೆ.

    ದೂರುದಾರರು ಯಾರು?

    ಆ ಅಧಿಕಾರಿಯ ಸಂಬಂಧಿಕರು, ಆಪ್ತಮಿತ್ರರು, ಇಲ್ಲವೇ ಹತ್ತಿರದಲ್ಲಿರುವವರು ದೂರು ನೀಡುವ ಸಾಧ್ಯತೆಯೇ ಹೆಚ್ಚು. ಕೌಟುಂಬಿಕ ಕಲಹ , ಅಧಿಕಾರಿಯಿಂದ ಪಡೆಯುತ್ತಿದ್ದ ನೆರವು ಹಠಾತ್ ನಿಂತಾಗ ಹತಾಶರಾದ ಆಪ್ತರು ದೂರು ನೀಡುವುದು ರೋಚಕವೆನಿಸುವ ಕಾರಣವೂ ಹೌದು. ಕಚೇರಿಗಳಲ್ಲಿ ಕಿರುಕುಳಕ್ಕೆ ಒಳಗಾದ ಸಿಬ್ಬಂದಿಯ ಪಾತ್ರವನ್ನು ಸಹ ಅಲ್ಲ ಗಳೆಯುವಂತಿಲ್ಲ. ಹೀಗಾಗಿ “ರಾಜಕೀಯಪ್ರೇರಿತ” ಎಂಬ ವಾದಕ್ಕೆ ಪುಷ್ಟಿ ಸಿಗುವುದಿಲ್ಲ.

    ಲಂಚ ಸ್ವೀಕರಿಸುವಾಗಿನ ( ಟ್ರ್ಯಾಪ್) ಕೇಸ್ ಗಳಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕ ಹಣವನ್ನು ಲೆಕ್ಕ ಹಾಕಲಾಗುತ್ತದೆ. ರೇಡ್ ಕೇಸ್ ಗಳಲ್ಲಿ, ಆಪಾದಿತನು ಸರ್ಕಾರಿ ಸೇವೆಗೆ ಸೇರಿದ ದಿನದಿಂದ ಪಡೆದ ಸಂಬಳವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

    ತನಿಖೆ ಪೂರ್ಣಗೊಳ್ಳಲು ಆರು ತಿಂಗಳಿನಿಂದ ಒಂದು ವರ್ಷದವರೆಗೆ ಸಮಯಬೇಕು. ಲಿಖಿತ ಸಾಕ್ಷಗಳನ್ನು ಸಂಗ್ರಹಿಸಬೇಕಾಗುತ್ತದೆ.

    ಆ ಮೇಲೆ, ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ (ಚಾರ್ಜ್ ಷೀಟ್) ಸಲ್ಲಿಸುವ ಮೊದಲು ಆರೋಪಿ ಅಧಿಕಾರಿಗೆ “ವಿವರಣೆ ನೀಡಲು” ಒಂದು ಅವಕಾಶವನ್ನೂ ನೀಡುತ್ತಾರೆ. ಅಮಾಯಕರಿಗೆ ಶಿಕ್ಷೆ ಆಗಬಾರದು ಎಂಬುದು ಇದರ ಉದ್ದೇಶ.

    ನ್ಯಾಯಾಲಯದಲ್ಲಿ

    ಭ್ರಷ್ಟಾಚಾರದ ಆರೋಪ ಸಾಬೀತಾದರೆ ಅಧಿಕಾರಿಗೆ ಜೈಲು ಶಿಕ್ಷೆಯಾಗುತ್ತದೆ (ಕನಿಷ್ಠ ಮೂರು ವರ್ಷ). ತನಿಖಾಧಿಕಾರಿಯು “ಬಿ” ರಿಪೋರ್ಟ್ ಸಲ್ಲಿಸಿದರೂ ಪ್ರಿನ್ಸಿಪಲ್ ಜಡ್ಜ್ ಅದನ್ನು ಒಪ್ಪದೇ ಇರಬಹುದು. ಆರೋಪಿ ನಿರ್ದೋಷಿ ಎಂದಾದರೆ, ವಶಪಡಿಸಿಕೊಂಡಿದ್ದ ವಸ್ತುಗಳನ್ನು ಆತನಿಗೆ ಹಿಂದಿರುಗಿಸಲಾಗುತ್ತದೆ.

    ಬಹುತೇಕ ದಾಳಿ ಪ್ರಕರಣಗಳಲ್ಲಿ, ಹಣ-ಒಡವೆ ವಾಪಸ್ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಅಲ್ಲದೇ ಶಿಕ್ಷೆಗೆ ಗುರಿಯಾಗುವವರ ಪ್ರಮಾಣವೂ ಕಡಿಮೆ ಎಂದು ಹೇಳಲಾಗುತ್ತಿದೆ.
    ಒಟ್ಟಾರೆಯಾಗಿ ಸಾರ್ವಜನಿಕರಲ್ಲಿ ಇನ್ನಷ್ಟು ಜಾಗೃತಿಯನ್ನು ಮೂಡಿಸಬೇಕಿದೆ. ಹಿಂದುಳಿದ ಪ್ರದೇಶಗಳ ಜನರು ಎಚ್ಚೆತ್ತು ಎಸಿಬಿ ಗೆ ದೂರು ನೀಡಲು ಮುಂದಾಗುವ ಅಗತ್ಯವಿದೆ.
    ಇನ್ನು ಅಧಿಕಾರಿಗಳಿಗೂ ಎಸಿಬಿ ದಾಳಿ, ಶಿಕ್ಷೆಯ ಭೀತಿ ಇದ್ದರೆ ವ್ಯವಸ್ಥೆ ಯಲ್ಲಿ ಸುಧಾರಣೆ ಸಾಧ್ಯವಾದೀತು.

    ಕಾನೂನಿನ ಕುಣಿಕೆ ಬಿಗಿಯಾಗಬೇಕಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?.


    (ಪೂರಕ ಮಾಹಿತಿ : ಚಂದ್ರಕಾಂತ ಭಂಡಾರೆ, ನಿವೃತ್ತ ಪೊಲೀಸ್ ಅಧಿಕಾರಿ)


    This image has an empty alt attribute; its file name is vadiraj-desai.jpg

    ಕನ್ನಡಪ್ರಭ , ವಿಜಯ ಕರ್ನಾಟಕ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ವಾದಿರಾಜ ದೇಸಾಯಿ ನಾಡಿನ ಹಿರಿಯ ಪತ್ರಕರ್ತರು.

    ಕೋವಿಡ್ ಸೋಂಕು ಹೆಚ್ಚಳ : ರಾಜ್ಯದಲ್ಲಿ ಕಟ್ಟೆಚ್ಚರ

    BENGALURU NOV 27

    ರಾಜ್ಯದ ಕೆಲವು ಭಾಗಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಹಾಗೂ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ omicron ಭೀತಿ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯ ವಿವರಗಳನ್ನು ಕಂದಾಯ ಸಚಿವ ಆರ್ ಅಶೋಕ ವರದಿಗಾರರಿಗೆ ತಿಳಿಸಿದರು.

    ಕೇರಳ, ಮಹಾರಾಷ್ಟ್ರ ಗಡಿಗಳಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ದಕ್ಷಿಣ ಕನ್ನಡ, ಮೈಸೂರು, ಕೊಡಗು, ಚಾಮರಾಜನಗರ, ಮಂಗಳೂರು ಸೇರಿದಂತೆ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲು ಸೂಚಿಸಲಾಗಿದೆ ಎಂದು ಅಶೋಕ್ ತಿಳಿಸಿದರು.

    ಈಗಾಗಲೇ ಕೇರಳದಿಂದ ಬಂದಿರುವ ವಿದ್ಯಾರ್ಥಿಗಳು ಮತ್ತೊಮ್ಮೆ ಕೋವಿಡ್ ಟೆಸ್ಟ್ ಗೆ ಒಳಗಾಗುವುದು ಕಡ್ಡಾಯವಾಗಿದೆ. ಗಡಿ ದಾಟಿ ಬರುವವರಿಗೆ ಆರ್ ಟಿಪಿಸಿ ಆರ್ ಟೆಸ್ಟ್ ಕಡ್ಡಾಯ. ಹೋಟೆಲ್, ಕಚೇರಿ, ಮಾಲ್ ಸಿಬ್ಬಂದಿಗಳಿಗೆ 2 ಡೋಸ್ ಲಸಿಕೆ ಕಡ್ಡಾಯ. ಮುಂದಿನ ದಿನಗಳಲ್ಲಿ ಕೊರೊನಾ ಸ್ಥಿತಿಗತಿ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆ ಮಾರ್ಗಸೂಚಿ ಬಗ್ಗೆ ಇನ್ನೊಂದು ಸಭೆ ನಡೆಸಿ ನಿರ್ಧರಿಸಲಾಗುವುದು. ಹೊಸ ರೂಪಾಂತರಿ ವೈರಸ್ ಈಗಿರುವ ವೈರಸ್ ಗಿಂತ ಐದು ಪಟ್ಟು ಹೆಚ್ಚು ವೇಗವಾಗಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

    ಮದುವೆ ಸೇರಿದಂತೆ ಎಲ್ಲಾ ಸಭೆ ಸಮಾರಂಭಗಳಲ್ಲೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಹೇಳಿದರು.

    ಸಭೆಯಲ್ಲಿನ ಪ್ರಮುಖಾಂಶಗಳು:

    * ಕೇರಳ ಮತ್ತು ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ.

    * ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿಗಿ ವಿಚಕ್ಷಣೆ ಕೈಗೊಳ್ಳುವುದು

    * ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯ ಪ್ರವೇಶಿಸುವವರಿಗೆ ಆರ್.ಟಿ.ಪಿ.ಸಿ. ಆರ್. ನೆಗೆಟಿವ್ ರಿಪೋರ್ಟ್ ಕಡ್ಡಾಯ.

    * ಗಡಿ ಜಿಲ್ಲೆಗಳಲ್ಲಿ ಮೂರು ಶಿಫ್ಟ್ ಗಳಲ್ಲಿ ಕೆಲಸ ಮಾಡುವಂತೆ ಡಿಸಿಗಳಿಗೆ ಸೂಚನೆ. ಇದಕ್ಕೆ ಎಲ್ಲ ಇಲಾಖೆಗಳ ಸಹಕಾರ ಪಡೆಯುವುದು.

    * 16 ದಿನಗಳ ಹಿಂದೆ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಬೇಕು

    * ಹಾಸ್ಟೆಲ್ ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ನೆಗಟಿವ್ ರಿಪೋರ್ಟ್ ಬಂದ ನಂತರದ 7 ನೇ ದಿನಕ್ಕೆ ಮತ್ತೊಮ್ಮೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡುವುದು.

    * ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವವರನ್ನು ಕಡ್ಡಾಯವಾಗಿ ಪರೀಕ್ಷೆಗೊಳಪಡಿಸಬೇಕು.

    *ಹೋಟೇಲು, ರೆಸ್ಟೋರೆಂಟ್‌ಗಳು, ಸಿನಿಮಾ ಹಾಲ್‌ಗಳು, ಈಜುಗೊಳ, ಸಾರ್ವಜನಿಕ ಗ್ರಂಥಾಲಯ, ಮೃಗಾಲಯಗಳು ಮತ್ತು ಜೈವಿಕ ಉದ್ಯಾನವನಗಳು, ಕೆಲಸ ಮಾಡುವವರು ಕಡ್ಡಾಯವಾಗಿ ಎರಡು ಡೋಸ್ ಪಡೆದಿರಬೇಕು.

    * ವೈದ್ಯಕೀಯ ಕಾಲೇಜು ಮತ್ತು ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸುವುದು.

    * ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಲು ಸೂಚನೆ

    • ಸರ್ಕಾರಿ ಕಚೇರಿಗಳಲ್ಲಿ ಹಾಗೂ ಮಾಲ್‌ಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆಯಬೇಕು. ಸರ್ಕಾರಿ ಕಚೇರಿ ಹಾಗೂ ಮಾಲ್‌ಗಳಲ್ಲಿಯೇ ಲಸಿಕೆ ನೀಡಲು ವ್ಯವಸ್ಥೆ ಕಲ್ಪಿಸುವುದು

    • ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗಳನ್ನು ತೀವ್ರಗೊಳಿಸುವುದು. ನೆಗಟಿವ್ ಇದ್ದವರಿಗೆ ನಗರ ಪ್ರವೇಶಕ್ಕೆ ಅನುಮತಿ.

    * ಪಾಸಿಟಿವ್ ಇದ್ದವರಿಗೆ ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸುವುದು.

    ದ.ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಇಬ್ಬರಿಗೆ ಕೋವಿಡ್ ಸೋಂಕು; ಓಮಿಕ್ರಾನ್ ರೂಪಾಂತರಿಯ ಭೀತಿ

    BENGALURU NOV 27

    ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಇಬ್ಬರು ದಕ್ಷಿಣ ಆಫ್ರಿಕನ್ನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಅದು “ಓಮಿಕ್ರಾನ್” ರೂಪಾಂತರಿಯೇ ಎಂಬುದನ್ನು ಇನ್ನಷ್ಟೇ ಖಚಿತ ಪಡಿಸಕೊಳ್ಳಬೇಕಿದೆ.

    ಇದೀಗ ಈ ಇಬ್ಬರೂ ವ್ಯಕ್ತಿಗಳನ್ನು ಐಸೊಲೇಷನ್ ಗೆ ಒಳಪಡಿಸಲಾಗಿದ್ದು, ಅವರಿಗೆ ದೃಢಪಟ್ಟಿರುವ ಸೋಂಕು ಓಮಿಕ್ರಾನ್ ರೂಪಾಂತರಿಯೇ ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಒಳಪಡಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

    ಪರೀಕ್ಷೆ ಫಲಿತಾಂಶ ಬರುವವರೆಗೂ ಅವರನ್ನು ಪ್ರತ್ಯೇಕವಾಗಿ ಇರಿಸಲಾಗುವುದು. ಹೆಚ್ಚು ಅಪಾಯಕಾರಿ ದೇಶಗಳೆಂದು ಗುರುತಿಸಲಾಗಿರುವ 10 ರಾಷ್ಟ್ರಗಳಿಂದ ಬೆಂಗಳೂರಿಗೆ 584 ಮಂದಿ ಆಗಮಿಸಿದ್ದಾರೆ. ದಕ್ಷಿಣ ಆಫ್ರಿಕಾ ಒಂದರಿಂದಲೇ 94 ಮಂದಿ ಆಗಮಿಸಿದ್ದಾರೆ. ಓಮಿಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನದಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದಾರೆ. ಡಬ್ಲ್ಯುಹೆಚ್ಒ ಓಮಿಕ್ರಾನ್ ರೂಪಾಂತರಿಯನ್ನು ಆತಂಕಕಾರಿ ರೂಪಾಂತರಿ ತಳಿ ವಿಭಾಗಕ್ಕೆ ಸೇರಿಸಿದೆ. 

    Omicron Explained : ಓಮಿಕ್ರಾನ್ ಎಂಬ ಕೋವಿಡ್ ಹೊಸ ತಳಿ ತಂದಿರುವ ಆತಂಕ; ಇನ್ನು ಒಂದು ವಾರದಲ್ಲಿ ಸ್ಪಷ್ಟ ಚಿತ್ರಣ

    ದಕ್ಷಿಣ ಆಫ್ರಿಕಾದಲ್ಲಿ ಇದೀಗ ಪತ್ತೆಯಾಗಿರುವ ಕೊರೊನಾ ವೈರಸ್ ನ ಹೊಸ ತಳಿ ಆತಂಕವನ್ನು ಹುಟ್ಟು ಹಾಕಿದೆ. ಕಳೆದ ಬಾರಿ ಕಾಣಿಸಿಕೊಂಡ ಡೆಲ್ಟಾ ವೈರಸ್ ಗಿಂತ ಇದು ವೇಗವಾಗಿ ಹರಡುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದರ ಬಗ್ಗೆ ಇನ್ನು ಅಧ್ಯಯನಗಳು ನಡೆಯುತ್ತಿವೆ. ಇದು ಎಷ್ಟರ ಮಟ್ಟಿಗೆ ಅಪಾಯಕಾರಿ ಎನ್ನುವುದು ಹಾಗೂ  ಈಗ ಲಭ್ಯ ಇರುವ ಕೊರೋನಾ  ಲಸಿಕೆಗಳು ಇದರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರಿಯಲು ಇನ್ನೊಂದು ವಾರವಾದರು ಬೇಕಾಗುತ್ತದೆ.

    ಮುನ್ನೆಚ್ಚರಿಕೆಯಾಗಿ ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳು ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಕಟ್ಟು ನಿಟ್ಟಿನ  ನಿಗಾ ಇರಿಸಿ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿವೆ.

    ದಕ್ಷಿಣ ಆಫ್ರಿಕಾದ  ವಿಜ್ಞಾನಿಗಳು  ನವೆಂಬರ್ 14 ರಿಂದ 16ರವರೆಗೆ ತೆಗೆದುಕೊಂಡ ಕೊರೊನಾ ವೈರಸ್ ಸ್ಯಾಂಪಲ್ ಗಳನ್ನು ಪರೀಕ್ಷಿಸುತ್ತಿರುವಾಗ ಈ B.11.529  ಸಂಖ್ಯೆಯ  ತಳಿ ಮಂಗಳವಾರ ಬೆಳಕಿಗೆ ಬಂದಿದೆ. ಇದು ಗೊತ್ತಾದ ಕೂಡಲೇ ತಡಮಾಡದೇ ಬುಧವಾರದಂದೇ ಇದರ  ಜಿನೋಮ್ ಸಿಕ್ವೇನ್ಸ್  ಮಾಡಿದ ಅಲ್ಲಿನ ವಿಜ್ಞಾನಿಗಳು ಇದು ಆತಂಕಕಾರಿ ರೂಪಾಂತರಿಯಂತೆ ಭಾಸವಾಗುತ್ತಿರುವುದರಿಂದ  ಕೂಡಲೇ  ಮತ್ತಷ್ಟು ತಾಂತ್ರಿಕ ಪರಿಶೀಲನೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ ಗಮನಕ್ಕೆ ತರುವಂತೆ  ಅಲ್ಲಿನ ಸರಕಾರವನ್ನು ಕೋರಿದರು.

    ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ದಟ್ಟಣೆ ಇರುವ ಜೊಹನೆಸ್ ಬರ್ಗ್ ಮತ್ತು ಪ್ರಿಟೋರಿಯಾ ನಗರಗಳು ಇರುವ  ಗೌಟೆಂಗ್ ಪ್ರಾಂತ್ಯದಲ್ಲಿ ಈ ರೂಪಾಂತರಿ ಹೆಚ್ಚು ಪತ್ತೆಯಾಗಿದೆ.

    ಕೋವಿಡ್ ಗೆ ಕಾರಣವಾಗುವ  SARS-Cov-2 ವೈರಸ್ ಗಳು ಸೇರಿದಂತೆ ಎಲ್ಲಾ ರೀತಿಯ ವೈರಸ್ ಗಳು  ರೂಪಾಂತರ ಹೊಂದುತ್ತಲೆ ಇರುತ್ತವೆ.  ಬಹಳಷ್ಟು  ರೂಪಾಂತರಿಗಳಲ್ಲಿ ಮೂಲ ವೈರಸ್ ನ ಪ್ರಾಥಮಿಕ ಗುಣ ಲಕ್ಷಣಗಳಲ್ಲಿ ಅಂಥ ಭಾರಿ ಎನ್ನಬಹುದಾದ ಬದಲಾವಣೆಯೇನು ಆಗಿರುವುದಿಲ್ಲ. ಹೀಗಾಗಿ ಅವುಗಳಿಗೆ ಈಗಾಗಲೇ  ಲಭ್ಯ ಇರುವ ಔಷಧಗಳು ಮತ್ತು  ಲಸಿಕೆಗಳೇ ರಾಮ ಬಾಣವಾಗಿರುತ್ತವೆ. ಮೂಲ ರೂಪದಿಂದ ಬಹಳಷ್ಟು ಬದಲಾವಣೆ  ಹೊಂದಿದ  ಹೊಸ ತಳಿ ಪತ್ತೆಯಾದರೆ ಅವುಗಳು ಹೇಗೆ ವರ್ತಿಸುತ್ತವೆ ಎಂಬುದು ತಕ್ಷಣಕ್ಕೆ ವಿಜ್ಞಾನಿಗಳಿಗೆ ಅರಿವಾಗುವುದಿಲ್ಲ. ಅವು ಹಾನಿಕಾರಕವಾಗಿಯೂ ಇರಬಹುದು ಅಥವಾ ಅಷ್ಟೇನು ತಕರಾರು ಮಾಡದೆ ಲಸಿಕೆಗೆ ಮಣಿಯುವಂಥ ರೂಪಾಂತರಿಯೂ ಆಗಿರಬಹುದು.

    ಈಗ ಪತ್ತೆಯಾಗಿರುವ ಈ ರೂಪಾಂತರಿ ತಳಿ ಮಾನವ ದೇಹವನ್ನು ಪ್ರವೇಶಿಸಲು ವೈರಸ್ ಗಳು ಪಾಸ್ ಪೋರ್ಟ್ ಆಗಿ ಬಳಸುವ  ಸ್ಪೈಕ್ ಪ್ರೋಟಿನ್ ಗಳ(ಇವು ಶುಗರ್ ಮಾಲಿಕೂಲ್ ಮಾದರಿಯಲ್ಲಿದ್ದು ಸೂಕ್ಷ್ಮ ದರ್ಶಕದಲ್ಲಿ ನೋಡಿದಾಗ ಕಿರೀಟದಂತೆ ಕಾಣುತ್ತದೆ) 30 ರೂಪಾಂತರಿಗಳ (Mutation)ನ್ನು ಹೊಂದಿದೆ.  ಇದು ಇತ್ತೀಚಿನ ಡೆಲ್ಟಾ ವೈರಸ್ ಹೊಂದಿದ್ದ ಸ್ಪೈಕ್ ಪ್ರೋಟಿನ್ ಗಳ ಸಂಖ್ಯೆಗಿಂತ ದುಪ್ಪಟ್ಟು. ಡೆಲ್ಟಾ ವೈರಸ್ ಕೂಡ ಮೂಲ ವೈರಸ್ ಗಿಂತ ತುಂಬಾನೆ ಭಿನ್ನವಾಗಿದೆ. ಈ ಹೊಸ ತಳಿ ಡೆಲ್ಟಾಗಿಂತ ಡಬಲ್ ಮ್ಯೂಟಂಟ್ ಗಳನ್ನು ಹೊಂದಿರುವುದರಿಂದ ಅದರ ಪರಿಣಾಮ ಹೇಗೆ ಆಗಬಹುದು ಎಂಬ ಸಂಗತಿಯೇ ವಿಜ್ಞಾನಿಗಳನ್ನು ಆತಂಕಕ್ಕೆ ತಳ್ಳಿದೆ.

    ಇಂಗ್ಲೆಂಡಿನ ತಜ್ಞರ ಪ್ರಕಾರ, ಅವರು ಈ ರೂಪಾಂತರವನ್ನು ಹಿಂದೆ ಗಮನಿಸಿಲ್ಲ.ಹೀಗಾಗಿ ಇದು ಬೇರೆ ಮ್ಯೂಟೆಂಟ್ ಗಳ  ಜೊತೆ  ಸೇರಿದಾಗ ಹೇಗೆ ವರ್ತಿಸಬಹುದು ಎಂಬುದು ಗೊತ್ತಾಗುತ್ತಿಲ್ಲ. ತುಂಬಾ ಸಂಕೀರ್ಣವಾಗಿರುವ ಈ ಮ್ಯೂಟೆಂಟ್ ಗಳ ಬಗ್ಗೆ  ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಿದೆ. ಇದರ ಸಂಪೂರ್ಣ ತಪಾಸಣೆಗೆ ಇನ್ನು ಒಂದು ವಾರವಾದರು ಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

    ಆದರೆ ಒಂದು ಸಮಾಧಾನಕರ ಅಂಶವೆಂದರೆ ಹೊಸ ರೂಪಾಂತರಿ ತಗುಲಿಸಿಕೊಂಡವರಲ್ಲಿ ಇದುವರಿಗಿನ ಕೋವಿಡ್ ಗಿಂತ ಭಿನ್ನವಾದ ರೋಗ ಲಕ್ಷಣಗಳು ಕಂಡು ಬಂದಿಲ್ಲ.  ಕೆಲವರಲ್ಲಿ ರೋಗ ಲಕ್ಷಣಗಳು ಕೂಡ ಗೋಚರಿಸಿಲ್ಲ.

    ದಕ್ಷಿಣ ಆಫ್ರಿಕಾದ ಎಂಟು ಪ್ರಾಂತ್ಯಗಳಲ್ಲಿ ಈ ತಳಿ ಪತ್ತೆಯಾಗಿದೆ. ಈಗ ಅಲ್ಲಿನ  ಹೊಸ ಪ್ರಕರಣ   ಗುರುವಾರ ಒಂದೇ ದಿನ  ನಿತ್ಯದ ಸರಾಸರಿಗಿಂತ ದುಪ್ಪಟ್ಟಾಗಿದೆ. ಅದರ ಅರ್ಥ ಈ ರೂಪಾಂತರಿಯ ಪ್ರಸರಣ ವೇಗ ಹೆಚ್ಚು. ಪಕ್ಕದ ಬೋಟ್ಸ್ ವಾನ್ ದಲ್ಲಿ 4 ಕೇಸುಗಳು ಪತ್ತೆಯಾಗಿದೆ. ಸೌತ್ ಆಫ್ರಿಕಾದಿಂದ ಹಾಂಗ್ ಕಾಂಗ್ ಗೆ ಬಂದ ಒಬ್ಬ ಪ್ರಯಾಣಿಕನಲ್ಲಿ ಈ ರೂಪಾಂತರಿ ಪತ್ತೆಯಾಗಿದೆ. ಅದೇ ರೀತಿ  ಇಸ್ರೇಲ್ ಮತ್ತು ಬೆಲ್ಜಿಯಂನಲ್ಲಿ ಒದೊಂದು ಕೇಸು ಪತ್ತೆಯಾಗಿದೆ. ಈ ಕೇಸುಗಳೆಲ್ಲಾ ದಕ್ಷಿಣಾ ಆಫ್ರಿಕಾದಿಂದ ಬಂದವರು.ಒಟ್ಟಾರೆಯಾಗಿ ಇದೀಗ ದಕ್ಷಿಣ ಆಫ್ರಿಕಾ ಒಂದರಲ್ಲೇ 58 ಕೇಸು, ಬೋಟ್ಸಾವಾನ್ ನಲ್ಲಿ  6 ಮತ್ತು ಹಾಂಗ್ ಕಾಂಗ್ ನಲ್ಲಿ  ಇಬ್ಬರು  ಪೀಡಿತರಿದ್ದಾರೆ.

    ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ  ಹೇಳಿರುವ ಪ್ರಕಾರ  ಈ ರೂಪಾಂತರಿಯನ್ನು   ಆತಂಕ ತರಬಹುದಾದ ವೈರಸ್ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಲಾಗಿದೆ. ಸದ್ಯ ಅದಕ್ಕೆ ಗ್ರೀಕ್ ಹೆಸರು ಓಮಿಕ್ರಾನ್ ಎಂದು ನಾಮಕರಣ ಮಾಡಲಾಗಿದೆ.

    ಈಗಾಗಲೇ  ಆಲ್ಫಾ,  ಬೀಟಾ  ಗಾಮ ಮತ್ತು ಡೆಲ್ಟಾ ರೂಪಾಂತರಿಗಳನ್ನು ವೇರಿಯೆಂಟ್ಸ್ ಆಫ್ ಕನ್ಸರ್ನ್ (voc)ಪಟ್ಟಿಗೆ ಸೇರಿಸಲಾಗಿದೆ. ಈ ಹಿಂದಿನ ಎರಡು ರೂಪಾಂತರಿಗಳನ್ನು ಲಂಬ್ಡಾ ಮತ್ತು ಮು ಎಂದು ಹೆಸರಿಸಲಾಗಿತ್ತು.

    ರೂಪಾಂತರಿಗಳು ಹರಡುವ ವೇಗ, ಅದು ಹಬ್ಬಿರುವ ದೇಶ, ಮಾಡುವ ಅವಾಂತರ ಮತ್ತು ಲಸಿಕೆಗೆ ಅದು ಪ್ರತಿಕ್ರಿಯಿಸುವ  ರೀತಿಯನ್ನು ಅಧ್ಯಯಮ ಮಾಡಿ ಅವುಗಳನ್ನು ವರ್ಗೀಕರಣ ಮಾಡಲಾಗುತ್ತದೆ.

    ಈ ಹೊಸ ತಳಿ ಇನ್ನು ಭಾರತಕ್ಕೆ ಬಂದಿಲ್ಲ. ಇದುವರೆವಿಗೂ  ಒಂದು ಕೇಸು ಕೂಡ ಪತ್ತೆಯಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ , ಆತಂಕ ಬೇಡ. ಆದರೆ ಎಲ್ಲರೂ ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

    ಅಲ್ಲದೆ ವೈರಸ್ ಗಳು ರೂಪಾಂತರ ಹೊಂದುವುದು ಸಹಜ ಪ್ರತಿಕ್ರಿಯೆ.  ಈಗಿನ ಲಸಿಕೆಗಳು ಈ ಹಿಂದಿನ ಎಲ್ಲಾ ರೂಪಾಂತರಿಗಳನ್ನು ಹಿಮ್ಮೆಟ್ಟಿಸಿದೆ. ಹೀಗಾಗಿ ಆತಂಕ ಪಡಬೇಕಾದ ಅಗತ್ಯ ಕಾಣುತ್ತಿಲ್ಲ. ಅದರ ಜೊತೆಗೆ ಕೋವಿಡ್ ಶಿಷ್ಟಾಚಾರವನ್ನು ಯಾವುದೇ ಕಾರಣದಿಂದಲೂ ನಿರ್ಲಕ್ಷಿಸದೆ ಮುಂದುವರಿಸುವುದು ಅಗತ್ಯವಾಗಿದೆ.

    ನಮ್ಮ ಹಾದಿ ಸರಿಯಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ನಿರಂತರವಾಗಿ ಮೌಲ್ಯಮಾಪನ ಮಾಡಲು ನಾವು ಸಂವಿಧಾನ ದಿನವನ್ನು ಆಚರಿಸಬೇಕು

    NEW DELHI NOV 25

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಸಂಸತ್ತಿನಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ಲೋಕಸಭಾ ಸ್ಪೀಕರ್ ಮಾತನಾಡಿದರು.

    ತಮ್ಮ ಭಾಷಣದ ನಂತರ ರಾಷ್ಟ್ರಪತಿಗಳು, ಸಂವಿಧಾನದ ಪೀಠಿಕೆಯನ್ನು ಓದುವ ನೇರ ಕಾರ್ಯಕ್ರಮದಲ್ಲಿ ರಾಷ್ಟ್ರದ ಜೊತೆಗೂಡಿದರು. ರಾಷ್ಟ್ರಪತಿಗಳು ಸಂವಿಧಾನ ಸಭೆಯ ಚರ್ಚೆಗಳ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಭಾರತ ಸಂವಿಧಾನದ ಕ್ಯಾಲಿಗ್ರಾಫ್ ಮಾಡಿದ ಡಿಜಿಟಲ್ ಆವೃತ್ತಿ ಮತ್ತು ಈವರೆಗಿನ ಎಲ್ಲ ತಿದ್ದುಪಡಿಗಳನ್ನು ಒಳಗೊಂಡಿರುವ ಭಾರತದ ಸಂವಿಧಾನದ ಪರಿಷ್ಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಅಲ್ಲದೆ, ಅವರು ‘ಸಾಂವಿಧಾನಿಕ ಪ್ರಜಾಪ್ರಭುತ್ವ ಕುರಿತಾದ ಆನ್ ಲೈನ್ ಕ್ವಿಜ್ ‘ಗೂ ಚಾಲನೆ ನೀಡಿದರು.

    ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಇಂದು ದೂರದೃಷ್ಟಿಯ ಮಹಾನ್ ವ್ಯಕ್ತಿಗಳಾದ ಬಾಬಾಸಾಹೇಬ್ ಅಂಬೇಡ್ಕರ್, ಡಾ.ರಾಜೇಂದ್ರ ಪ್ರಸಾದ್, ಬಾಪು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಬಲಿದಾನ ಮಾಡಿದ ಎಲ್ಲರಿಗೂ ಗೌರವ ಸಲ್ಲಿಸುವ ದಿನವಾಗಿದೆ ಎಂದರು. ಇಂದು ಸದನಕ್ಕೆ ಗೌರವ ಸಲ್ಲಿಸುವ ದಿನವಾಗಿದೆ. ಇಂತಹ ದಿಗ್ಗಜರ ನೇತೃತ್ವದಲ್ಲಿ, ಸಾಕಷ್ಟು ಚಿಂಥನ ಮಂಥನ ಮತ್ತು ಸಮಾಲೋಚನೆ ನಂತರ, ನಮ್ಮ ಸಂವಿಧಾನದ ಅಮೃತ ಹೊರಹೊಮ್ಮಿತು ಎಂದು ಅವರು ಹೇಳಿದರು. ಇಂದು ಪ್ರಜಾಪ್ರಭುತ್ವದ ಸದನಕ್ಕೆ ನಮಿಸುವ ದಿನವೂ ಆಗಿದೆ ಎಂದರು. ಪ್ರಧಾನಮಂತ್ರಿ ಅವರು 26/11ರ ಘಟನೆಯಲ್ಲಿ ಹುತಾತ್ಮರಾದವರಿಗೂ ಶ್ರದ್ಧಾಂಜಲಿ ಸಲ್ಲಿಸಿದರು.

    ಇಂದು 26/11, ದೇಶದ ಶತ್ರುಗಳು ದೇಶದೊಳಕ್ಕೆ ನುಗ್ಗಿದರು ಮತ್ತು ಮುಂಬೈನಲ್ಲಿ ಉಗ್ರರ ದಾಳಿ ನಡೆಸಿದ ಇದು ದುಃಖದ ದಿನವಾಗಿದೆ. ಭಯೋತ್ಪಾದಕರ ವಿರುದ್ಧ ಹೋರಾಡುವಾಗ ನಮ್ಮ ವೀರಯೋಧರು ಪ್ರಾಣತ್ಯಾಗ ಮಾಡಿದರು. ಇಂದು ನಾನು ಅವರ ತ್ಯಾಗಕ್ಕೆ ತಲೆಬಾಗುತ್ತೇನೆ “ಎಂದು ಪ್ರಧಾನಮಂತ್ರಿ ಹೇಳಿದರು.

    ನಮ್ಮ ಸಂವಿಧಾನವು ಕೇವಲ ಹಲವು ವಿಧಿಗಳ ಸಂಗ್ರಹವಲ್ಲ, ನಮ್ಮ ಸಂವಿಧಾನದ ಸಹಸ್ರಾರು ವರ್ಷಗಳ ಶ್ರೇಷ್ಠ ಸಂಪ್ರದಾಯವಾಗಿದೆ. ಅದು ಅಖಂಡ ಧಾರೆಯ ಅಧುನಿಕ ಅಭಿವ್ಯಕ್ತಿ. ನಾವು ಸಂವಿಧಾನ ದಿನವನ್ನು ಆಚರಿಸಬೇಕು ಏಕೆಂದರೆ, ನಮ್ಮ ಹಾದಿ ಸರಿಯಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ನಿರಂತರವಾಗಿ ಮೌಲ್ಯಮಾಪನ ಮಾಡಬೇಕು ಎಂದು ಪ್ರಧಾನಮಂತ್ರಿ ಹೇಳಿದರು.

    ಸಂವಿಧಾನ ದಿನ’ ಆಚರಣೆಯ ಹಿಂದಿನ ಪ್ರೇರಣೆಯವನ್ನು ವಿವರಿಸಿದ ಪ್ರಧಾನಮಂತ್ರಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜಯಂತಿ ವೇಳೆ “ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲು ಇದಕ್ಕಿಂತ ಪವಿತ್ರ ಸುಸಂದರ್ಭ ಯಾವುದಿದೆ ಎಂದು ನಾವೆಲ್ಲಾ ಭಾವಿಸಿದ್ದೇವೆ. ನಾವು ಅವರ ಕೊಡುಗೆಯನ್ನು ಸ್ಮಾರಕ ಗ್ರಂಥ(ಸ್ಮೃತಿ ಗ್ರಂಥ)ದ ಮೂಲಕ ಸದಾ ಸ್ಮರಿಸಬೇಕು”ಎಂದು ಅವರು ಹೇಳಿದರು. ಜನವರಿ 26ರಂದು ಗಣರಾಜ್ಯೋತ್ಸವ ಸಂಪ್ರದಾಯವನ್ನು ಸ್ಥಾಪಿಸಿರುವುದರ ಜೊತೆಗೆ ಆ ಸಮಯದಲ್ಲಿಯೇ ನವೆಂಬರ್ 26ರಂದು ‘ಸಂವಿಧಾನ ದಿನ’ ಆಚರಣೆ ಆರಂಭಿಸಿದ್ದರೆ ಒಳ್ಳೆಯದಿತ್ತು ಎಂದರು.

    ಕುಟುಂಬ ಆಧಾರಿತ ಪಕ್ಷಗಳ ರೂಪದಲ್ಲಿ ಭಾರತವು ಒಂದು ಬಗೆಯ ಬಿಕ್ಕಟ್ಟಿನತ್ತ ಸಾಗುತ್ತಿದ್ದು, ಇದು ಸಂವಿಧಾನಕ್ಕೆ ಬದ್ಧವಾದ ಜನರಿಗೆ ಕಾಳಜಿಯ ವಿಚಾರವಾಗಿದೆ ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರಿಗೆ ಕಾಳಜಿಯ ವಿಷಯವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಒಂದು ಕುಟುಂಬದ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಅರ್ಹತೆಯ ಆಧಾರದ ಮೇಲೆ ಪಕ್ಷವನ್ನು ಸೇರುವುದರಿಂದ ಅದು ಪಕ್ಷವು ವಂಶ ಪಾರಂಪರ್ಯವಾಗುವುದಿಲ್ಲ. ಒಂದೇ ಕುಟುಂಬದವರು ಪೀಳಿಗೆಯಿಂದ ಪೀಳಿಗೆಗೆ ಪಕ್ಷವನ್ನು ಮುನ್ನಡೆಸಿದಾಗ ಸಮಸ್ಯೆಗಳು ಉದ್ಬವಿಸುತ್ತವೆ”ಎಂದರು. ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ತಮ್ಮ ಗುಣಗಳನ್ನೇ ಕಳೆದುಕೊಂಡಾಗ ಸಂವಿಧಾನದ ಆಶಯಕ್ಕೂ ಧಕ್ಕೆಯಾಗುತ್ತದೆ, ಸಂವಿಧಾನದ ಪ್ರತಿಯೊಂದು ಭಾಗಕ್ಕೂ ಘಾಸಿಯಾಗುತ್ತದೆ ಎಂದು ಪ್ರಧಾನಮಂತ್ರಿ ಟೀಕಿಸಿದರು. “ತಮ್ಮ ಪ್ರಜಾಪ್ರಭುತ್ವ ಗುಣಗಳನ್ನು ಕಳೆದುಕೊಂಡಿರುವ ಪಕ್ಷಗಳಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹೇಗೆ ಸಾಧ್ಯ” ಎಂದು ಅವರು ಪ್ರಶ್ನಿಸಿದರು.

    ಶಿಕ್ಷೆಗೆ ಒಳಗಾಗಿರುವ ಭ್ರಷ್ಟ ವ್ಯಕ್ತಿಗಳನ್ನು ಮರೆತು ವೈಭವೀಕರಿಸುವ ಪ್ರವೃತ್ತಿಯ ವಿರುದ್ಧ ಪ್ರಧಾನಮಂತ್ರಿ ಎಚ್ಚರಿಕೆ ನೀಡಿದರು. ಅಂತಹ ವ್ಯಕ್ತಿಗಳಿಗೆ ಸುಧಾರಣೆಗೆ ಅವಕಾಶ ನೀಡುವಾಗ ಅವರನ್ನು ಸಾರ್ವಜನಿಕ ಜೀವನದಲ್ಲಿ ವೈಭವೀಕರಿಸುವುದಕ್ಕೆ ನಿರ್ಬಂಧ ವಿಧಿಸಬೇಕು ಎಂದರು.

    ಸ್ವಾತಂತ್ರ್ಯ ಚಳವಳಿಯಲ್ಲಿ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾಗಲೂ ಸಹ ಮಹಾತ್ಮ ಗಾಂಧೀಜಿ ಅವರು ದೇಶವನ್ನು ಕರ್ತವ್ಯಗಳಿಗೆ ಸಜ್ಜುಗೊಳಿಸಲು ಪ್ರಯತ್ನಿಸಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು. “ದೇಶಕ್ಕೆ ಸ್ವಾತಂತ್ರ್ಯ ನಂತರ ಕರ್ತವ್ಯಗಳಿಗೆ ಒತ್ತು ನೀಡಿದರೆ ಒಳ್ಳೆಯದಿತ್ತು”ಎಂದರು. ಆಜಾದಿ ಕಾ ಅಮೃತ ಮಹೋತ್ಸವದ ಈ ಸಮಯದಲ್ಲಿ ನಾವು ಹಕ್ಕುಗಳನ್ನು ರಕ್ಷಿಸಲು ನಮ್ಮ ಕರ್ತವ್ಯಗಳ ಪಾಲನೆ ಹಾದಿಯಲ್ಲಿ ಮುನ್ನಡೆಯುವುದು ಅತ್ಯವಶ್ಯಕ”ಎಂದು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.(PIB)

    ಸೂಳೆಕೆರೆಯಲ್ಲಿ ನೀರು ನಾಯಿ ಪ್ರತ್ಯಕ್ಷ

    SANTHEBENNUR NOV 25

    ಸೂಳೆ ಕೆರೆ

    ಕಳೆದ ವಾರ ಸುರಿದ ಎಡಬಿಡದ ಮಳೆಗೆ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಕೋಡಿಯಲ್ಲಿ ಭರ್ಜರಿ ನೀರು.ಕೋಡಿಯಿಂದ ಧುಮಕುವ ಜಲಧಾರೆಯನ್ನು ನೋಡುವುದೇ ಆನಂದ. ಕೆರೆ ಕೋಡಿಗೆ ಹೊಂದಿಕೊಂಡಿರುವ ಮಾವಿನ ತೋಪಿನ ಆಳ ಪ್ರದೇಶದಲ್ಲಿ ಅಪರೂಪದ ಜೀವ ಪ್ರಬೇಧ ನೀರು ನಾಯಿಗಳ ಹಿಂಡು ಪ್ರತ್ಯಕ್ಷವಾಗಿದೆ.

    ಮಾವಿನ ತೋಪಿನಲ್ಲಿ ನೀರು ನಾಯಿ

    ನೀಳ ದೇಹ, ನೀರಿನಲ್ಲಿ ತೋಯದ ತುಪ್ಪಳದ ಚರ್ಮ, ಚಪ್ಪಟೆ ತಲೆ, ಬಲವಾದ ಬಾಲ, ಹುಟ್ಟುಗಳಿಂತಿರುವ ಕಾಲು, ಸ್ವರ್ಶಸೂಕ್ಷ ಮೀಸೆ ಇದರ ದೈಹಿಕ ವಿಶೇಷತೆ. ವೈಜ್ಞಾನಿಕ ನಾಮಧೇಯ ಯುರೇಷಿಯನ ಒಟ್ಟರ್. ಶುದ್ಧ ನೀರಿನಲ್ಲಿ ವಾಸಿಸುವ ನೀರುನಾಯಿ ಚಾಣಾಕ್ಷ ಮೀನು ಬೇಟೆಗಾರ. ಕೆರೆ, ಹಳ್ಳ, ಕೊಳ್ಳದಲ್ಲಿ ಹರಿವ ನೀರಿಗೆ ಹಿಮ್ಮುಖ ಚಲಿಸುವ ಮೀನುಗಳ ಹುಡುಕಾಟದಲ್ಲಿ ಇವು ಸೂಳೆಕೆರೆಯತ್ತ ಧಾವಿಸಿರುವ ಸಾಧ್ಯತೆ ಹೆಚ್ಚು ಎಂದು ಇದರ ವಿಡಿಯೋ ಚಿತ್ರ ತೆಗೆದ ಕೆರೆಬಿಳಚಿಯ ಅಸ್ಲಂ ಷೇಕ್ ತಿಳಿಸಿದ್ದಾರೆ.

    ತಕ್ಷಣಕ್ಕೆ ಮುಂಗಸಿ ಮುಖ ಹೋಲುವ ಇದು ವಿರಳ ಗೋಚರ ಜೀವಿ. ಶಬ್ದ, ಜನರಿಂದ ದೂರವಿರುವ ಅಂಜುಬುರುಕ. ಅಪರೂಪಕ್ಕೆ ಎದುರಾಗುವ ಜಲಚರ. ಮೀನು, ಏಡಿ, ಕಪ್ಪೆ, ಬಾತುಕೋಳಿ, ನೀರುಕೋಳಿ ಬೇಟಿ ಆಡುವಲ್ಲಿ ನಿಷ್ಣಾತ. ಈಚೆಗೆ ನಲ್ಲೂರು ಹಾಗೂ ಪುಟ್ಟಪ್ಪನ ಕೆರೆಯಲ್ಲಿಯೂ ನೀರು ನಾಯಿ ಪ್ರತ್ಯಕ್ಷವಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

    ನಲ್ಲೂರು ಕೆರೆಯಲ್ಲಿ ಮುಂಜಾನೆ ಮಾತ್ರ ನೀರು ನಾಯಿಗಳ ಗುಂಪು ನೋಡಿದ್ದೇನೆ. ಕಳೆದೆರಡು ವರ್ಷದಿಂದ ಗಮನಿಸಿದ್ದೇನೆ. ವಿಡಿಯೋ, ಫೋಟೋ ತೆಗೆಯಲು ಸಾಧ್ಯವಾಗುತ್ತಿಲ್ಲ. ತಕ್ಷಣ ಮರೆಯಾಗುವ ಜೀವಿ. ಎರಡು ವರ್ಷದ ಹಿಂದೆ ಬಸ್ಸಿಗೆ ಸಿಕ್ಕಿ ಪ್ರಾಣ ಕಳೆದುಕೊಂಡ ನೀರು ನಾಯಿ ಗುರುತಿಸಲಾಗಿತ್ತು ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ ರವಿ.

    ಮಳೆಯಿಂದ ಎಲ್ಲೆಡೆ ನೀರಿನ ಹರಿವು ಹೆಚ್ಚಾಗಿತ್ತು. ಭದ್ರಾ ಜಲಾಶಯದ ಹಿನ್ನೀರಿನ ಮೂಲಕ ಸೂಳೆಕೆರೆ ತಲುಪಿರುವ ಸಾಧ್ಯತೆ ಹೆಚ್ಚು. ಅಲ್ಲಿ ಇವುಗಳ ಸ್ವಾಭಾವಿಕ ನೆಲೆ ಇದೆ ಎಂದು ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ವೀರೇಶ್ ನಾಯ್ಕ್ ತಿಳಿಸಿದ್ದಾರೆ.

    ನೀರು ನಾಯಿ ಬಗ್ಗೆ ಒಂದಿಷ್ಟು ಮಾಹಿತಿ (ಕನ್ನಡ ವಿಕಿಪಿಡಿಯಾದಿಂದ)

    Otter in Southwold.jpg

    ನೀರುನಾಯಿ(Lutra lutra) ಭಾರದಲ್ಲಿ ಕಾಶ್ಮೀರ , ಅಸ್ಸಾಂ ಹಾಗೂ ದಕ್ಷಿಣ ಭಾರತದಲ್ಲಿ ಇದು ವ್ಯಾಪಕವಾಗಿದೆ.ಇದು ನದಿಗಳ ಸಮೀಪ ಬಂಡೆಗಳ ಪೊಟರೆಗಳಲ್ಲಿ ವಾಸಿಸುವುದು.ನೀಳ ದೇಹ,ನೀರಿನಲ್ಲಿ ತೋಯದ ತುಪ್ಪಳದ ಚರ್ಮ,ಚಪ್ಪಟೆಯಾದ ತಲೆ,ಬಲವಾದ ಬಾಲ,ಹುಟ್ಟುಗಳಿಂತಿರುವ ಪಾದಗಳು, ಸ್ಪರ್ಶಸೂಕ್ಷ್ಮ ಮೀಸೆಗೂದಲು ಇವು ನೀರುನಾಯಿಯ ಮುಖ್ಯ ಲಕ್ಷಣಗಳು.ಮುಖ್ಯ ಆಹಾರ ಮೀನು.ಏಡಿ,ಕಪ್ಪೆ,ಬಾತುಕೋಳಿ,ನೀರುಕೋಳಿ ಹಾಗೂ ಕೆಲವೊಮ್ಮೆ ಎಲೆಗಳು ಕೂಡಾ ಇದರ ಆಹಾರವಾಗುವವು.ಗರ್ಭಧಾರಣಾ ಅವದಿ ಸುಮಾರು 60 ದಿನಗಳು.

    ಕರ್ನಾಟಕದಲ್ಲಿ ನೀರುನಾಯಿ

    • ತುಂಗಭದ್ರಾ ನದಿಗುಂಟ ಅಪಾರ ಸಂಖ್ಯೆಯಲ್ಲಿ ಅಪರೂಪದ ‘ನೀರುನಾಯಿ’ಗಳಿವೆ (ಆಟರ್‌).ಕೊಪ್ಪಳ ಜಿಲ್ಲೆಯ ಮುದ್ಲಾಪುರ ಗ್ರಾಮದಿಂದ ಹೊಸಪೇಟೆ ತಾಲ್ಲೂಕಿನ ಹಂಪಿ, ಕಂಪ್ಲಿ ಪಟ್ಟಣದವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ನೀರುನಾಯಿಗಳನ್ನು ಕಾಣಬಹುದು. ಈ ಭಾಗಗಳ ಮೂಲಕ ತುಂಗಭದ್ರೆ ಹರಿಯುವ ಕಾರಣದಿಂದ ಈ ಪ್ರದೇಶವನ್ನೇ ನೀರುನಾಯಿಗಳು ಆವಾಸ ಸ್ಥಾನ ಮಾಡಿಕೊಂಡಿವೆ. ಸ್ಥಳೀಯ ವನ್ಯಜೀವಿ ಮತ್ತು ಪರಿಸರ ಪ್ರೇಮಿಗಳ ಸತತ ಪ್ರಯತ್ನದಿಂದ 2015ರ ಏಪ್ರಿಲ್‌ನಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಯು 34 ಕಿ.ಮೀ. ಪ್ರದೇಶವನ್ನು ‘ನೀರು ನಾಯಿ ಸಂರಕ್ಷಿತ ಪ್ರದೇಶ’ ಎಂದು ಘೋಷಿಸಿದೆ.
    • ‘ನದಿಯ ಎರಡೂ ಕಡೆ ಅಪಾರ ಸಂಖ್ಯೆಯಲ್ಲಿ ನೀರುನಾಯಿಗಳಿವೆ. ಆದರೆ, ಅವೈಜ್ಞಾನಿಕವಾಗಿ ನಡೆಯುತ್ತಿರುವ ಮೀನುಗಾರಿಕೆ, ಮರಳುಗಾರಿಕೆಯಿಂದ ಅವುಗಳಿಗೆ ತೊಂದರೆ ಆಗುತ್ತಿದೆ. ತುಂಗಭದ್ರಾ ಕಾಲುವೆಗಳಲ್ಲೂ ನೀರುನಾಯಿಗಳು ಸುರಕ್ಷಿತವಿಲ್ಲ. ಮೀನುಗಾರಿಕೆಯೇ ಇದಕ್ಕೆಲ್ಲ ಕಾರಣ. ಮೀನುಗಾರಿಕೆಗೆ ನಿರ್ದಿಷ್ಟ ಜಾಗ ಗೊತ್ತು ಮಾಡಬೇಕು’ ಎಂದು ವನ್ಯಜೀವಿ ತಜ್ಞ ಸಮದ್‌ ಅಭಿಪ್ರಾಯ.

    ನೀರುನಾಯಿಗಳು ಸಂಕಷ್ಟದಲ್ಲಿ

    • ವಾಟರ್‌ಬಾಂಬ್‌ ಸಿಡಿಸಿ ಮೀನುಗಾರಿಕೆ ಮಾಡುತ್ತಿರುವ ಕಾರಣ ನೀರುನಾಯಿಗಳು ಸಾಯುತ್ತಿವೆ. ಇದಕ್ಕೆ ಕಡಿವಾಣ ಹಾಕಿ ಅವುಗಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಬೇಕು. ಕೇವಲ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದರೆ ಸಾಲದು. ಕಾವಲುಗಾರರು, ವೀಕ್ಷಣಾ ಗೋಪುರ, ದೋಣಿಗಳು ಸೇರಿದಂತೆ ಇತರ ಕೆಲಸಗಳು ಈಗಾಗಲೇ ಆಗಬೇಕಿತ್ತು. ‘ನೀರುನಾಯಿಗಳ ಸಂರಕ್ಷಣೆಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳಿಗೆ ಛಾಯಾಗ್ರಾಹಕರು ಪತ್ರ ಬರೆದಿದ್ದಾರೆ
    • ನೀರುನಾಯಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್‌ ಅವರು ನೀರುನಾಯಿಗಳ ಸಂರಕ್ಷಣೆಗೆ ಸಂಬಂಧಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸಲಾಗಿದೆ. ಸಿಬ್ಬಂದಿ ನೇಮಕ, ವೀಕ್ಷಣಾ ಗೋಪುರ ಸೇರಿದಂತೆ ಇತರ ಕೆಲಸಗಳು ಆಗಬೇಕಿದೆ, ಎನ್ನುತ್ತಾರೆ.

    . .

    ಪ್ರತಿ ಚುನಾವಣೆ ಬಂದಾಗಲೂ ಕಾಂಗ್ರೆಸ್‌ ನಾಯಕರಿಗೆ ಜೆಡಿಎಸ್‌ ಜ್ವರ ಬರುತ್ತೆ ಎಂದ ಎಚ್ ಡಿ ಕೆ

    CHIKKABALLAPURA NOV 25

    ಪ್ರತಿ ಬಾರಿ ಚುನಾವಣೆ ಬಂದಾಗಲೂ ಕಾಂಗ್ರೆಸ್‌ ಪಕ್ಷದ ನಾಯಕರಿಗೆ ಜೆಡಿಎಸ್‌ ಜ್ವರ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.

    ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದಲ್ಲಿರುವ ಪಕ್ಷದ ಮುಖಂಡ ರವಿ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; “ಯಾವ ಚುನಾವಣೆಯೇ ಬರಲಿ, ಕಾಂಗ್ರೆಸ್‌ ನಾಯಕರಿಗೆ ತಕ್ಷಣ ನೆನಪಾಗುವುದು ಜೆಡಿಎಸ್‌ ಪಕ್ಷ ಮಾತ್ರ. ಜೆಡಿಎಸ್‌-ಬಿಜೆಪಿ ಒಪ್ಪಂದ ಮಾಡಿಕೊಂಡಿವೆ ಎಂದು ಆ ಪಕ್ಷದ ನಾಯಕರು ಹೇಳುತ್ತಾರೆ. ಆ ಚುನಾವಣೆ ಮುಗಿದ ಮೇಲೆ ಆ ವಿಷಯವನ್ನು ಅಲ್ಲಿಯೇ ಕೈಬಿಡುತ್ತಾರೆ. ಅವರು ಪದೇಪದೆ ಯಾಕೆ ಈ ರೀತಿಯ ಅಪಪ್ರಚಾರ ನಡೆಸುತ್ತಿದ್ದಾರೆ ಎನ್ನುವುದು ನನಗಂತೂ ಅರ್ಥವಾಗುತ್ತಿಲ್ಲ” ಎಂದರು.

    ಒಂದು ವೇಳೆ ನಮ್ಮ ಪಕ್ಷ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಿದ್ದರೆ ಜೆಡಿಎಸ್‌ ಸ್ಪರ್ಧೆ ಮಾಡಿರುವ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹಾಕುತ್ತಿತ್ತೇ? ಈ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಗೆ ಮತಗಳೇ ಇಲ್ಲದಿದ್ದರೂ ಅಭ್ಯರ್ಥಿಯನ್ನು ನಿಲ್ಲಿಸಲಾಗಿದೆ. ಚುನಾವಣೆಯಲ್ಲಿ ನಮ್ಮನ್ನು ಸೋಲಿಸಬೇಕು ಎಂದು ಬಿಜೆಪಿ ನಾಯಕರು ಕೂಡ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಕೂಡ ಯತ್ನಿಸುತ್ತಿದೆ. ಹೀಗಿದ್ದರೂ ಕಾಂಗ್ರೆಸ್‌ ನಾಯಕರು ವಿನಾಕಾರಣ ನಮ್ಮ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆಂದು ಎಚ್‌ಡಿಕೆ ಬೇಸರ ವ್ಯಕ್ತಪಡಿಸಿದರು.

    ಒಳ ಒಪ್ಪಂದ ಎಂದರೆ ಇದು!:

    ಕಳೆದ ಲೋಕಸಭೆ ಚುನಾವಣೆ ವೇಳೆ ಹಾಸನದಲ್ಲಿ ಕಾಂಗ್ರೆಸ್‌ ಸರಕಾರದಲ್ಲಿ ಮಂತ್ರಿಯಾಗಿದ್ದ ನಾಯಕನನ್ನು ಬಿಜೆಪಿಗೆ ಕಳಿಸಿ ಅಭ್ಯರ್ಥಿಯನ್ನಾಗಿ ಮಾಡಿಸುತ್ತಾರೆ. ಈಗ ಅದೇ ನಾಯಕನ ಪುತ್ರ ಕೊಡಗಿನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಈಗ ಇಲ್ಲಿ ಅಪ್ಪ ಬಿಜೆಪಿ ಪಾರ್ಟಿ, ಮಗ ಕಾಂಗ್ರೆಸ್‌ ಪಾರ್ಟಿ! ಇದೇನು ಒಪ್ಪಂದ? ಜನರಿಗೆ ಎಲ್ಲವೂ ಚೆನ್ನಾಗಿ ಅರ್ಥವಾಗುತ್ತಿದೆ. ನಿಜಕ್ಕೂ ಒಳ ಒಪ್ಪಂದ ಎಂದರೆ ಇದೇ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

    ಬಿಜೆಪಿ ಸರಕಾರದ ಮಂತ್ರಿಯೊಬ್ಬರಿಗೆ ಆಪ್ತ ಕಾರ್ಯದರ್ಶಿ ಆಗಿದ್ದ ವ್ಯಕ್ತಿಗೆ ಮಂಡ್ಯದಲ್ಲಿ ಕಾಂಗ್ರೆಸ್‌ ಪಕ್ಷವು ಟಿಕೆಟ್‌ ನೀಡಿದೆ. ಒಳ ಒಪ್ಪಂದ ಜೆಡಿಎಸ್-ಬಿಜೆಪಿ ನಡುವೆ ಆಗಿದೆಯೋ ಅಥವಾ ಕಾಂಗ್ರೆಸ್-ಬಿಜೆಪಿ ನಡುವೆ ಆಗಿದೆಯೋ? ಎನ್ನುವುದನ್ನು ಜನತೆಯೇ ತೀರ್ಮಾನ ಮಾಡಲಿ. ಇನ್ನಾದರೂ ಕಾಂಗ್ರೆಸ್‌ ಪಕ್ಷದ ನಾಯಕರು ಜೆಡಿಎಸ್‌ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಅವರು ತಾಕೀತು ಮಾಡಿದರು.

    ಕಳೆದ ಬಾರಿ ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಮತದಾರರು ಗೆಲ್ಲಿಸಿದ್ದರು. ಆದರೆ, ಪ್ರತಿ ಬಾರಿ ಚುನಾವಣೆ ಬಂದಾಗ ಕಾಂಗ್ರೆಸ್‌ ಪಕ್ಷದ ನಾಯಕರು ನಮ್ಮ ಪಕ್ಷದ ವಿರುದ್ಧ ಕುತಂತ್ರಗಳನ್ನು ಹೂಡುತ್ತಲೇ ಇದ್ದಾರೆ. ಈ ಚುನಾವಣೆ ಇಂಥ ಕುತಂತ್ರಗಳಿಗೆ ಮತದಾರರು ತಕ್ಕ ಉತ್ತರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಮನವಿ ಮಾಡಿದರು.

    ಮಂತ್ರಿಗಳ ನೆರೆ ವೀಕ್ಷಣೆ ವೈಖರಿಗೆ ತರಾಟೆ:

    ಕಳೆದ ಅನೇಕ ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗಿ ಜನರು ಅತೀವ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮಂತ್ರಿಗಳ ನೆರೆ ವೀಕ್ಷಣೆ ಹೇಗಿದೆ ಎಂದರೆ, ಬಂದ ಪುಟ್ಟಾ.. ಹೋದ ಪುಟ್ಟಾ ಎನ್ನುವಂತಿದೆ. ಹಿಂದೆ ನೆರೆ ಬಂದಾಗಲೇ ಮನೆ ಕಳೆದುಕೊಂಡವರಿಗೆ, ಬೆಳೆ ನಷ್ಟವಾದರಿಗೆ ಇನ್ನೂ ಪರಿಹಾರ ನೀಡಲಿಲ್ಲ. ಈಗ ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂ. ಪರಿಹಾರ ಕೋಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಮೂರು ವರ್ಷಗಳ ಹಿಂದೆಯೇ ಘೋಷಣೆ ಮಾಡಿದ್ದ ಹಣವನ್ನೇ ಇನ್ನೂ ಬಿಡುಗಡೆ ಮಾಡಿಲ್ಲ. ಈಗ ಬಿಡುಗಡೆ ಮಾಡುತ್ತೆ ಅನ್ನುವುದಕ್ಕೆ ಖಾತ್ರಿ ಏನಿದೆ? ಈ ಸರಕಾರ ಬರೀ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಕಟುವಾಗಿ ಟೀಕಿಸಿದರು.

    Industry Linkage Cell set up by KSDC : ಉದ್ಯೋಗಾವಕಾಶ ಹೆಚ್ಚಿಸಲು ಕೈಗಾರಿಕಾ ಸಂಪರ್ಕ ಕೋಶ

    BENGALURU NOV 25

    ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಪ್ರಬಲ ಬಾಂಧವ್ಯ ಬೆಳೆಸುವ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಸ್ಥಾಪಿಸಿರುವ`ಕೈಗಾರಿಕಾ ಸಂಪರ್ಕ ಕೋಶ’ಕ್ಕೆ ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಗುರುವಾರ ಚಾಲನೆ ನೀಡಿದರು.

    ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಗುರುವಾರ ಏರ್ಪಡಿಸಿದ್ದ ಎಲೆಕ್ಟ್ರಾನಿಕ್ ವಲಯದ ಉದ್ದಿಮೆಗಳ `ಕೈಗಾರಿಕಾ ಸಂಪರ್ಕ ಸಮಾವೇಶ’ದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಈ ಕೋಶವು ಕೇಂದ್ರೀಕೃತ ವ್ಯವಸ್ಥೆಯಾಗಿದ್ದು, ರಾಜ್ಯದಲ್ಲಿರುವ ಕೌಶಲ್ಯದ  ಗುಣಮಟ್ಟ ಮತ್ತು ಪ್ರಸ್ತುತತೆಯನ್ನು ಸುಧಾರಿಸುವ ಗುರಿ ಹೊಂದಿದೆ. ಇದರಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮ ವಲಯಗಳ ನಡುವೆ ಕಾರ್ಯತಂತ್ರ ಬಾಂಧವ್ಯ ಬಲವರ್ಧನೆ ಆಗಲಿದ್ದು, ಕೌಶಲ್ಯ ಪೂರೈಕೆ ಜಾಲವೂ ಪ್ರಬಲವಾಗಲಿದೆ ಎಂದರು.

    ಉದ್ದಿಮೆಗಳೊಂದಿಗೆ ಸಂಪರ್ಕ ಹೊಂದುವುದರಿಂದ ಅವುಗಳ ಬೇಡಿಕೆಗೆ ತಕ್ಕಂತೆ ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ಅವಕಾಶಗಳು ಸಿಗಲಿವೆ. ಇದರಿಂದ ಅಂತಿಮವಾಗಿ ಕೌಶಲಗಳ ಪೂರೈಕೆಯಲ್ಲಿ ಈಗಿರುವ ಕೊರತೆ ನೀಗಲಿದ್ದು, ಕೈಗಾರಿಕೆಗಳಿಗೆ ಕೂಡ ಅಪೇಕ್ಷಿತ ಮಾನವ ಸಂಪನ್ಮೂಲ ಸಿಗಲಿದೆ. ಜತೆಗೆ ನಿರುದ್ಯೋಗವನ್ನು ಎದುರಿಸುತ್ತಿರುವ ಯುವಜನರಿಗೆ ಉತ್ತಮ ಉದ್ಯೋಗಗಳು ಸಿಗಲಿವೆ ಎಂದು ತಿಳಿಸಿದರು.

    ಕೇಂದ್ರ ಸರಕಾರದ ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳು ಅಗಾಧವಾಗಿ ಬೆಳೆಯುತ್ತಿವೆ. ಇದು ದೇಶದಲ್ಲಿ ಅಪಾರ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ. ಇದನ್ನು ಪರಿಗಣಿಸಿ, ರಾಜ್ಯದಲ್ಲಿ `ಕೈಗಾರಿಕಾ ಸಂಪರ್ಕ ಕೋಶ’ವನ್ನು ಆರಂಭಿಸಲಾಗಿದೆ. ಇದು ಶೈಕ್ಷಣಿಕ ವಲಯ ಹಾಗೂ ಉದ್ಯಮ ವಲಯದ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎಂದು ಸಚಿವರು ವಿವರಿಸಿದರು.

    ಮುಂದುವರಿದು ಮಾತನಾಡಿದ ಅವರು, `ಕೌಶಲಗಳಿಗೆ ಸಂಬಂಧಿಸಿದಂತೆ ಉದ್ಯಮಗಳ ಬೇಡಿಕೆ ಮತ್ತು ಪೂರೈಕೆ ನಡುವೆ ಇರುವ ಅಂತರವನ್ನು ಕೊನೆಗೊಳಿಸಬೇಕಾದ ಅಗತ್ಯವಿದೆ. ಕೈಗಾರಿಕಾ ಸಂಪರ್ಕ ಕೋಶವು ರಾಜ್ಯದ 31 ಜಿಲ್ಲೆಗಳಲ್ಲೂ ಉದ್ದಿಮೆಗಳೊಂದಿಗಿನ ಸಂಪರ್ಕವನ್ನು ಬೆಳೆಸಿಕೊಳ್ಳುವ ಚಟುವಟಿಕೆಗಳ ಮೇಲೆ ನಿಗಾ ಇಡಲಿದೆ. ಸರಕಾರವು ಉದ್ದಿಮೆಗಳ ಬೆಳವಣಿಗೆಗೆ ಕೌಶಲ್ಯ ಸಲಹಾ ಸಮಿತಿ ಮತ್ತು ರಾಜ್ಯದ ಆದ್ಯತಾ ವಲಯಗಳಿಗೆ ಸಂಬಂಧಿಸಿದಂತೆ ಉಪಸಮಿತಿಗಳನ್ನು ರಚಿಸಲಿದೆ. ಅಲ್ಲದೆ, ಸಂಬಂಧಿತ ಉದ್ದಿಮೆಗಳೊಂದಿಗೆ ಸೇರಿಕೊಂಡು ಸುಸ್ಥಿರ ಮತ್ತು ಗುಣಮಟ್ಟದ ಕೌಶಲ್ಯ ತರಬೇತಿ ಸಂಸ್ಥೆಗಳನ್ನು ರಾಜ್ಯದಾದ್ಯಂತ ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

    ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ, ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಒಕ್ಕೂಟ ಮತ್ತು ಎಲೆಕ್ಟ್ರಾನಿಕ್ಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ ಸೇರಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದವು. ಕಾರ್ಯಕ್ರಮದಲ್ಲಿ ಎಲ್ಸಿಯಾ ಮುಖ್ಯಸ್ಥ ಭವೇಶ್ ಕುಮಾರ್, ಸಿಇಒ ಎನ್.ಎಸ್.ರಮಾ, ಇಎಸ್ ಡಿಸಿ ಮುಖ್ಯಸ್ಥ ಎ.ವೈದ್ಯನಾಥನ್, ಸರಕಾರದ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಮತ್ತು ವ್ಯವಸ್ಥಾಪಕಿ ಕವಿತಾ ಗೌಡ ಉಪಸ್ಥಿತರಿದ್ದರು.

    error: Content is protected !!