ಸುಮಾವೀಣಾ
ಅಮ್ಮಾ… ಪದಕ್ಕೆ ವ್ಯಾಖ್ಯಾನ ಮಾಡುವುದು ಸುಲಭವೂ, ಸಾಧ್ಯವೂ ಇಲ್ಲದ್ದು. “ಮನೆಯೆ ಮೊದಲ ಪಾಠಶಾಲೆ ಜನನಿತಾನೆ ಮೊದಲಗುರು” ಎಂಬಂತೆ ಗುರುವಾಗಿ, ಮಾರ್ಗದರ್ಶಕಳಾಗಿ, ಹಿತೈಷಿಣಿಯಾಗಿ, ವಿಮರ್ಶಕಳಾಗಿ, ಸ್ನೇಹಿತೆಯಾಗಿ, ಸೃಜನಶೀಲತೆಯನ್ನು ಹುಟ್ಟುಹಾಕಿ, ಸಮಯಪ್ರಜ್ಞೆ ಮೂಡಿಸಿ ಸಮಾಜಕ್ಕೆ ಸಾಕ್ಷೀಭೂತರಾಗುವ ಮಕ್ಕಳ ಬೆನ್ನ ಹಿಂದೆ ಅಮ್ಮಾ ಇದ್ದೇ ಇರುತ್ತಾಳೆ. ಮನುಷ್ಯನಲ್ಲಿ ಮಾತ್ರವೇ ಈ ಪ್ರೇಮ ಇಲ್ಲ ಬದಲಾಗಿ ಪ್ರಾಣಿ-ಪಕ್ಷಿಗಳಲ್ಲಿಯೂ ಚಿರಸ್ಥಾಯಿಯಾಗಿರುವಂಥದ್ದು. ರೆಕ್ಕೆಬಲಿಯದ ಪಕ್ಷಿಗಳಿಗೆ ಗುಟುಕು ನೀಡುವ ತಾಯಿ ಪಕ್ಷಿಯಲ್ಲಿ, ಆಗ ತಾನೆ ಹುಟ್ಟಿದ ಕರುವಿನ ಮೈನೆಕ್ಕುವ ಹಸುವಿನಲ್ಲೂ ಅಗಾಧ ಪ್ರೇಮವನ್ನು ಕಾಣಬಹುದು.
ನಮ್ಮ ಬೆಕ್ಕು ನಮ್ಮ ಮನೆಗೆ ಬಂದು ಒಂದೂವರೆ ವರ್ಷದಲ್ಲಿ ,ಮೂರು ಬಾರಿ ಮಕ್ಕಳನ್ನು ಪಡೆದು ಸಾಕುತ್ತಿದೆ. ಅದು ತನ್ನ ಮರಿಗಳನ್ನು ರಕ್ಷಿಸಿಕೊಳ್ಳುವ ಪರಿ ಕಣ್ಣಲ್ಲಿ ನೀರು ತರಿಸುತ್ತದೆ. ತನ್ನ ಮರಿಗಳು ಇರುವ ಕಡೆ ನಾಯಿ ನೆರಳು ಬಿದ್ದರೂ ಆಕ್ರೋಶಗೊಳ್ಳುತ್ತದೆ. ಹೊಸ ಮನೆಯ ಕೆಲಸ ನಿಮಿತ್ತಪ್ಲಂಬರ್ ಗೋಡೆ ಕೊರೆಯಲು ಬಂದಾಗ ಆ ಸದ್ದಿಗೆ ಹೆದರಿ ನಾಲ್ಕು ದಿನದ ನಾಲ್ಕು ಮರಿಗಳನ್ನು ಪಕ್ಕದ ರಾಮೇಗೌಡರ ಹಿತ್ತಲ್ಲಿ ಎಲ್ಲೊ ಬಚ್ಚಿಟ್ಟು ನೋಡಿಕೊಂಡು ಇಪ್ಪತ್ತು ದಿನ ಕಳೆದ ಮೇಲೆ ಮತ್ತೆ ನಮ್ಮನೆಗೆ ಕರೆದುಕೊಂಡು ಬಂದು ಜೋಪಾನ ಮಾಡುತ್ತಿತ್ತು. ಅಕಸ್ಮಾತ್ತಾಗಿ ಮರಿ ಮೊದಲನೆ ಮಹಡಿ ಹತ್ತಿ ಅರಚಲು ಪ್ರಾರಂಭಿಸಿದಾಗ ಮರಿ ಎಲ್ಲಿದೆ ಎಂದು ತಿಳಿಯದೆ ಯುಟಿಲಿಟಿ ಸ್ಪೇಸಲ್ಲಿ ಬಂದು ನನಗೆ ಏನನ್ನೊ ಹೇಳಿ ಮೆಟ್ಟಿಲು ಹತ್ತುತ್ತಿತ್ತು ಅದೇ ಸಮಯಕ್ಕೆ ಆಗ ತಾನೆ ಕಣ್ಣು ಬಿಟ್ಟ ಮರಿಗಳ ಅಮ್ಮ ಒಂದೇ ಸಮನೆ ಬೆಕ್ಕು ನಮಗೆಲ್ಲಿ ತೊಂದರೆ ಕೊಡುತ್ತೆ ಎಂದು ಮರಿಗಳೊಡನೆ ಕಿರುಚುತ್ತಿತ್ತು . ಬೆಕ್ಕು ಮತ್ತು ಹಕ್ಕಿ ಇಬ್ಬರಿಗೂ ಮರಿಗಳ ಮೇಲೆ ಕಾಳಜಿ ತಾಯ್ತನ ಮನುಷ್ಯ ಲೋಕ ಪ್ರಾಣಿಲೋಕವನ್ನು ಮೀರಿದ್ದು .
ರಾಯಘಡ ಕೋಟೆಯೊಳಗಿನ ಊರಿಗೆ ಪ್ರತಿ ದಿನ ಹೀರಾ ಎನ್ನುವ ಮಹಿಳೆ ಹಾಲು ಮಾರಲು ಹೋಗುತ್ತಿದ್ದಳು ಹುಣ್ಣಿಮೆ ಜಾತ್ರೆ ನಿಮಿತ್ತ ಹಾಲು ಮಾರಿ ಸ್ವಲ್ಪ ತಡವಾಗಿ ಕೋಟೆ ಬಾಗಿಲಿಗೆ ಬಂದರೆ ಕಾವಲುಗಾರ ಮುಚ್ಚಿದ ಕೋಟೆ ಬಾಗಿಲನ್ನು ತೆಗೆಯುವುದಿಲ್ಲ ಅದೇ ಹೊತ್ತಿಗೆ ಆಕೆಗೆ ಮಗು ಅಳುವ ಸದ್ದು ಕೇಳಿದಂತಾಗುತ್ತದೆ. ಕೋಟೆ ಕೆಳಗೆ ಕಂದಕ ಇದೆ ಎಂದು ತಿಳಿದಿದ್ದರೂ ಕೋಟೆ ಮೇಲಿಂದ ಜಿಗಿದು ಮನೆಗೆ ಹೋಗಿ ಮಗುವಿಗೆ ಹಾಲುಣಿಸಿ ಸಂಭ್ರಮಿಸುತ್ತಾಳೆ. ಈ ವಿಷಯ ತಿಳಿದ ಶಿವಾಜಿ ಆಕೆಯನ್ನು ಕರೆಸಿ ಸನ್ಮಾನಿಸಿ ಮಾತೃಪ್ರೇಮದ ಮಹಿಮೆಯನ್ನು ಕೊಂಡಾಡಿ ಆಕೆ ಹಾರಿದ ಸ್ಥಳದಲ್ಲಿ ಬುರುಜನ್ನು ನಿರ್ಮಿಸಿ ಅದಕ್ಕೆ ‘ಹೀರಾಕಣಿ’ ಎಂಬ ಹೆಸರಿಡುತ್ತಾನೆ. ಮಾನವ ಜೀವಿಗೆ ತಾಯಿಯಂಥ ಋಣ ಮತ್ತೊಂದಿಲ್ಲ ಎಂಬ ಮಾತು ಅಕ್ಷರಶಃ ಸತ್ಯ ಅಲ್ವ!
ಜಾನಪದ ಹೆಣ್ಣುಮಕ್ಕಳು “ ಕಣ್ಣು ಕಾಣುವ ತನಕ ಬೆನ್ನು ಬಾಗುವ ತನಕ ತಾಯಿಯಿರಲಿ, ತವರಿರಲಿ” ಎಂದು ಹೇಳಿದ್ದಾರೆ. ಅಮ್ಮನನ್ನು ಕುರಿತ ಎಂಥ ಉದಾತ್ತ ನಿಲುವು? ಅಲ್ವೇ!
ಯಾರೂ ಇದ್ದರೂ ತನ್ನ ತಾಯವ್ವನ್ಹೋಲರ
ಸಾವಿರ ಕೊಳ್ಳಿ ಒಲಿಯಾಗ ಇದ್ದರೂ
ಜ್ಯೋತಿ ನಿನ್ಯಾರ್ ಹೋಲರ ಎಂದು ಮನತುಂಬಿ ಆ ಮಹಾಶಕ್ತಿಗೆ ವಂದಿಸುವುದಿದೆ.
“ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ” ಎಂಬಂತೆ ಬಂಧುಗಳ ಬಂಧು ಎಂದರೆ ತಾಯಿ ಜೀವವೆ. ನಮ್ಮಲ್ಲಿ ಬಳಕೆಯಲ್ಲಿರುವ motherland, mothertoungue,mother department ಮುಂತಾದ ಪದಗಳನ್ನು ತೆಗೆದುಕೊಂಡರೆ ಇಲ್ಲೆಲ್ಲಾ ಮದರ್ಸೆ ಇರುತ್ತಾರೆ. ‘ಮಾ’ ಅಂದರೆ ಅಮ್ಮನನ್ನು ಬಿಟ್ಟು ಅರ್ಥಾತ್ ಇತರರಿಗೆ ಸ್ಥಾನವಿಲ್ಲ. ಎಲ್ಲಾ ವಯೋಮಾನದವರಿಗೂ ಎಲ್ಲಾ ಸಂಬಂಧಗಳಿಗೂ ಕಡೆಯದಾಗಿ ಅಮ್ಮ ಪದವನ್ನು ಸೇರಿಸಿಕೊಳ್ಳುತ್ತೇವೆ. ಚಿಕ್ಕಮ್ಮ, ದೊಡ್ಡಮ್ಮ, ಅತ್ತಿಗೆಮ್ಮ, ಅತ್ಯಮ್ಮ. ತಂಗ್ಯಮ್ಮ ಇತ್ಯಾದಿ ಇತ್ಯಾದಿ… ಯಾವುದೇ ಸಂಬಂಧ ಹೇಳದೇ ಇದ್ದಾಗಲೂ ಆವಮ್ಮ, ಈವಮ್ಮ ಎಂದಾದರೂ ಹೇಳಿಬಿಡುತ್ತಾರೆ.
‘ಅಮ್ಮ’ ಈ ಪದದ ಬದಲಿಗೆ ಬೇರೆ ಪದವನ್ನು ರೀಪ್ಲೇಸ್ ಮಾಡಲು ಸಾಧ್ಯವಿಲ್ಲ. ‘ಅಮ್ಮಾ’ ಎಂದರೆನೆ ಧೈರ್ಯದ ಸಂಕೇತ. ನಾವೇನೇ ಕೇಳೀದರೂ ಇಲ್ಲ ಎನ್ನದ ಜೀವ! ಉಪಮನ್ಯು ತನ್ನ ತಾಯಿಯ ಬಳಿ ಹೋಗಿ ಕುಡಿಯಲು ಹಾಲು ಬೇಕೆಂದಾಗ ಇಲ್ಲ ಎನ್ನಲಾಗದೇ ಅಕ್ಕಿ ಹುಡಿಯನ್ನು ನೀರಿನಲ್ಲಿ ಬೆರೆಸಿಕೊಡುತ್ತಾಳೆ. ನಂತರದಲ್ಲಿ ಶಿವ ಪ್ರತ್ಯಕ್ಷನಾಗಿ ಹಾಲಿನ ಕಡಲನ್ನೇ ಕರುಣಿಸುತ್ತಾನೆ.
ಬ್ಯಾಸಿಗಿ ದಿವಸಕಿ ಬೇವಿನ ಮರತಂಪು
ಭೀಮಾರತಿ ಎಂಬವ ಹೊಳೆ ತಂಪು
ತಾಯಿ ತಂಪು ತವರಿಗೆ
ಎಂಬಂತೆ ತಾಯಿಯಿದ್ದರೆ ಸರ್ವಸ್ವವೂ ಇದ್ದಂತೆ, ಅಮ್ಮನ ಬಳಿ ಇರುವಷ್ಟು ಮಮತೆ,ನಡೆಯುವಷ್ಟು ಸುಳ್ಳು, ಸಲಿಗೆ, ಹಠ, ಉದ್ಧಟತನ, ಮೊಂಡುತನ, ದಡ್ಡತನ, ಬಾಲಿಷವರ್ತನೆ ಯಾರ ಬಳಿಯೂ ನಡೆಯುವುದಿಲ್ಲ.ಅಮ್ಮನಮನೆ, ತವರುಮನೆ, ತಾಯಿಮನೆ, ಎಂಬ ಪದಗಳೇ ಹೆಚ್ಚು. ಸಂಸ್ಕೃತಿ-ಸಂಸ್ಕಾರದ ಪಾಠ, ಸ್ವಚ್ಛತೆಯ, ಸತ್ಯ, ನಿಷ್ಠೆಯ ಪಾಠವನ್ನು ಸ್ವಾಭಿಮಾನದ ಉದಾರತೆಯ ಪಾಠವನ್ನು ಅಮ್ಮನೇ ಹೇಳಿಕೊಡುವುದು . ಅದಕ್ಕೆ ‘ತಾಯಿಯಂತೆ ಮಗಳು ನೂಲಿನಂತೆ ಸೀರೆ’, ‘ಅಮ್ಮನ ಕೈರುಚಿ’, ‘ಅಮ್ಮನ ಆರೈಕೆ’, ‘ಕರುಳಬಳ್ಳಿಯ ಸಂಬಂಧ’ ಎಂಬ ಪದಪಂಕ್ತಿಗಳು ಚಾಲ್ತಿಯಲ್ಲಿರುವುದು. ಹೊಟ್ಟೆ ಕಿಚ್ಚಿಗೆನಾವು ಅನ್ವರ್ಥವಾಗಿ ನಾವು ಬಳಸುವ ಹೆಸರೆಂದರೆ ಗಾಂಧಾರಿ. ಆಕೆಯೂ ತನ್ನ ಮಕ್ಕಳನ್ನು ಕಳೆದುಕೊಂಡು ಪಟ್ಟ ವೇದನೆ ವರ್ಣಿಸಲಸಾಧ್ಯ ಹಾಗಾಗಿ ಆಕೆ ‘ದುಃಖ ಶತನನಿ’ ಎಂದು ರನ್ನನಲ್ಲಿ ಕರೆಸಿಕೊಂಡಿದ್ದಾಳೆ. ಅಷ್ಟಾವಕ್ರಮುನಿಯತಾಯಿ ಸುಜಾತೆ ಮಗನ ಕಾಣುವಿಕೆಗೆ ಯಾವಾಗಲೂ ಹಂಬಲಿಸಿರುತ್ತಾಳೆ ಕುರೂಪಿ ಎಂದು ಭಾವಿಸುವುದೇ ಇಲ್ಲ.
ಮಾಡದ ತಪ್ಪಿಗೆ ತನ್ನೈವರೂ ಮಕ್ಕಳನ್ನು ಕರೆದುಕೊಂಡು ವನವಾಸ ಮಾಡುತ್ತಾ ಪ್ರತಿ ಕ್ಷಣದಲ್ಲೂ ತನ್ನನ್ನು ತಾನು ಸವಾಲುಗಳಿಗೆ ಒಡ್ಡಿಕೊಂಡ ಪಾತ್ರ ಎಂದರೆ ಕುಂತಿನೇ. ಆದ್ದರಿಂದ ತಾಯಿಗಿಂತ ಹಿರಿಯ ಪದವಿ ಅವಳಿಗಿರುವ ಮಮಕಾರದ ಬದಲಿಗೆ ಇನ್ನೊಬ್ಬರು ಇರುವುದಿರಲಿ ಇನ್ನೊಂದು ಪದವೂ ಇಲ್ಲ. ಇದನ್ನು “ಊರಿಗೆ ಅರಸಾದರೂ ತಾಯಿಗೆ ಮಗನಲ್ಲವೇ”. “ಹೆತ್ತವರಿಗೆ ಹೆಗ್ಗಣ ಮುದ್ದು” ಎಂಬ ಗಾದೆಗಳು ಶೃತಪಡಿಸುತ್ತವೆ. ಕಾಸಿಗೆ ಹೋಗುವುದಕ್ಕಿಂತ ತಾಸ್ಹೋತ್ತಿನ ಹಾದಿ ತವರೂರಿನದ್ದು ಎನ್ನುವ ಹೆಣ್ಣುಮಕ್ಕಳು ದೈವಸನ್ನಿಧಾನಕ್ಕಿಂತ ಮಿಗಿಲಾದ ಸ್ಥಾನವನ್ನು ಕೊಟ್ಟಿದ್ದಾರೆ.
ಬಿ. ಆರ್. ಲಕ್ಷ್ಮಣರಾವ್ ರವರ ಅಮ್ಮಾ ನಿನ್ನ ಎದೆಯಾಳ ಗೀತೆಯಲ್ಲಿ ಮೂಡಿರುವ “ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಮಿಡುಕಾಡುತ್ತಿರುವೆ ನಾನು” ಎಂಬ ಅಭೂತಪೂರ್ವ ಸಾಲುಗಳು ಅಮ್ಮನ ವ್ಯಕ್ತಿಚಿತ್ರಣವೇ ನಮ್ಮ ಕಣ್ಮುಂದೆ ಬಂದುಬಿಡುತ್ತದೆ. “ಆನಂದಾಮೃತಕರ್ಷಿಣಿ,ಅಮೃತವರ್ಷಿಣಿ ಭವಾನಿ ಹರಾದಿಪೂಜಿತೆ ಭವಾನಿ” ಎಂಬಂತೆ ಮಕ್ಕಳ ಬದುಕಲ್ಲಿ ಆನಂದವನ್ನು ಅನಂತವಾಗಿ ತರಬಯಸುವ ಬಂಧು ಅಮ್ಮಾ. ಸುಖಸ್ವರೂಪಿಣಿ! ಮಧುರಭಾಷಿಣಿ! ನಮ್ಮನ್ನು ತಿದ್ದಿದ ಈ ಜಗತ್ತಿಗೆ ತಂದ ಎಲ್ಲಾ ತಾಯಂದಿರಿಗೂ ಅಮ್ಮಂದಿರ ದಿನದ ಈ ಸಂದರ್ಭದಲ್ಲಿ ನನ್ನ ಪ್ರೀತಿಯ ನಮಸ್ಕಾರಗಳು.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.