‘ನಾವು ಕುರುಬರು. ನಮ್ಮ ದೇವರು ಬೀರಯ್ಯ. ಕಾವ ನಮ್ಮಜ್ಜ. ನರಕುರಿ ಹಿಂಡುಗಳ’ ಎಂಬ ವಿನೀತ ಜಾತಿ ಭಾವದಿಂದ ‘ಕುಲ
ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ…; ಎಂಬ ಪಾರಮಾರ್ಥಿಕ ದಿಗ್ದರ್ಶನದಿಂದ
ದಾಸಶ್ರೇಷ್ಠರಾಗಿ ಕನಕದಾಸರು ಜನ ಮಾನಸದಲ್ಲಿ ನಿಷ್ಕಲ್ಮಶ ಭಕ್ತನಾಗಿ ನೆಲೆ ನಿಂತಿದ್ದಾರೆ.
ಕನಕದಾಸರು ಈಗಿನ ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಬಾಡ ಗ್ರಾಮದಲ್ಲಿ ಹದಿನೈದನೇ ಶತಮಾನದ ಕೊನೆಭಾಗದಲ್ಲಿ
ಜನಿಸಿದರು. ತಂದೆ ಬೀರಪ್ಪ, ತಾಯಿ ಬಚ್ಚಮ್ಮ ಅವರ ಏಕೈಕ ಪುತ್ರ. ತಂದೆ-ತಾಯಿ ತಿರುಪತಿ ತಿಮ್ಮಪ್ಪನ ಭಕ್ತರಾಗಿದ್ದರಿಂದ
ತಿಮ್ಮಪ್ಪ ಎಂದು ನಾಮಕರಣ. ಬಾಲ್ಯದಲ್ಲಿಯೇ ವ್ಯಾಕರಣ, ತರ್ಕ, ಮೀಮಾಂಸೆ, ಗರಡಿ ಸಾಧನೆ, ಕುಸ್ತಿ, ಕತ್ತಿವರಸೆಯಲ್ಲಿ
ಪರಿಣತಿ. ತಂದೆ ವಿಜಯ ನಗರ ಅರಸರಲ್ಲಿ ದಂಡನಾಯಕ. ಚಿಕ್ಕ ವಯಸ್ಸಿನಲ್ಲಿ ತಂದೆ ಬೀರಪ್ಪ ಮರಣ ಹೊಂದಿದ್ದರಿಂದ
ತಿಮ್ಮಪ್ಪ ದಂಡನಾಯಕನಾಗಿ ನೇಮಕಗೊಂಡರು. ದಕ್ಷತೆ, ಶೌರ್ಯದಿಂದ ಯುದ್ದಗಳಲ್ಲಿ ಭಾಗವಹಿಸಿದ್ದರು ಎಂದು
ಇತಿಹಾಸದ ಪುಟಗಳಿಂದ ತಿಳಿದಿದೆ.
ಒಮ್ಮೆ ಭೂ ಅಗೆತದಲ್ಲಿ ಅಪಾರ ಸಂಪತ್ತು ಒದಗಿಬಂದಿತು. ಆದ್ದರಿಂದ ತಿಮ್ಮಪ್ಪ ಕನ್ನಕನೆಂದ ಕರೆದರೆಂತಲೂ ಐತಿಹ್ಯ ಇದೆ.
ದೊರೆತ ಸಂಪತ್ತಿನಿಂದ ಬಾಡ ಗ್ರಾಮದಲ್ಲಿ ಭವ್ಯವಾದ ದೇಗುಲ ನಿರ್ಮಿಸಿ ಆದಿಕೇಶವ ಮೂರ್ತಿ ಪ್ರತಿಷ್ಠಾಪಿದರು. ತಿರುಪತಿ
ಮಹಾಕ್ಷೇತ್ರದ ಪೂಜಾಪದ್ಧತಿ ಅಳವಡಿಸಿದ್ದರು. ಆದಿಕೇಶವ ಅಂಕಿತ ನಾಮದಲ್ಲಿಯೇ ದೇವರನಾಮ ಬರೆಯಲು ತೊಡಗಿಕೊಂಡರು
ಎಂದು ಹೇಳಲಾಗಿದೆ.
ದಂಡನಾಯಕನಾಗಿದ್ದರೂ ದೇವರಲ್ಲಿ ಅಪಾರ ಭಕ್ತಿ. ಪತ್ನಿ ಹಾಗೂ ತಾಯಿ ಇಹಲೋಕ ತ್ಯಜಿಸಿದ ನಂತರ ಸಂಸಾರದ
ಜಿಗುಪ್ಸೆಯಿಂದ ದೇವರಿಗೆ ಸಂಪೂರ್ಣ ತಮ್ಮ ಜೀವನ ಮುಡುಪಾಗಿಟ್ಟರು. ಕನಕದಾಸರಾಗಿ ಅಜರಾಮರಾಗಿದ್ದಾರೆ. ಅಧಿಕಾರ
ತೊರೆದು ವ್ಯಾಸರಾಯರ ಶಿಷ್ಯರಾದರು. ಜ್ಞಾನರ್ಜನೆ ಪಡೆದು ತೀರ್ಥಕ್ಷೇತ್ರಗಳ ಯಾತ್ರೆ ಮಾಡಿದರು.
ಉಡುಪಿಯ ಕನಕನ ಕಿಂಡಿ ಈಗಲೂ ಪ್ರಸಿದ್ಧ. ಬೇಲೂರಿನಲ್ಲಿ ವೈಕುಂಠದಾಸರೊಡನೆ ಬಹಳ ದಿನಗಳ ಸಾಂಗತ್ಯ. ಆನಂತರ
ವಿಜಯನಗರದಲ್ಲಿ ವ್ಯಾಸರಾಯರ ಸನ್ನಿಧಿಯಲ್ಲಿ ಜ್ಞಾನಾರ್ಜನೆ. ತತ್ವೋಪದೇಶಗಳಿಂದ ಮೂಢನಂಬಿಕೆ ಹೋಗಲಾಡಿಸಲು
ಪ್ರಯತ್ನಿಸದರು.
ಕನಕದಾಸರು ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವ(ಉಪಲಬ್ಧವಿಲ್ಲ) ಐದು
ಮುಖ್ಯ ಕಾವ್ಯಗಳು ರಚಿಸಿದ್ದಾರೆ. ಮೋಹನ ತರಂಗಿಣಿಯಲ್ಲಿ ಕೃಷ್ಣ ಚರಿತೆ ಆಗಿದೆ. ಇದರಲ್ಲಿ ಪಾತ್ರಸೃಷ್ಟಿ, ಜೀವನದೃಷ್ಟಿ,
ವರ್ಣನಾ ವೈಖರಿ, ಪದಜೋಡಣೆ ವಿಶಿಷ್ಟವಾಗಿದೆ. ನಳ ಚರಿತ್ರೆ ಭಾಮಿನಿ ಷಟ್ಪದಿಯಲ್ಲಿ ರಚಿತವಾದ ನಳ ದಮಯಂತಿ ಕಥೆ.
ರಾಮಧಾನ್ಯ ಚರಿತ್ರೆಯಲ್ಲಿ ಕೆಳವರ್ಗದ ಧಾನ್ಯ ರಾಗಿ ಹಾಗೂ ಧನಿಕರ ಧಾನ್ಯ ಅಕ್ಕಿ ನಡುವಿನ ಸಂಭಾಷಣೆ ಮೂಲಕ ರಾಗಿ ತನ್ನ ಔನ್ಯತ್ಯ ಸಾಬೀತು ಪಡಿಸಿದ ಬಗೆ. ರಾಮಧಾನ್ಯ ಎಂಬ ಹೆಸರು ಪಡೆದ ಬಗೆ ನಿರೂಪಿಸಲಾಗಿದೆ. ಹರಿ ಭಕ್ತಸಾರ 110 ಭಕ್ತಿ ಪದ್ಯದ ಗ್ರಂಥ. ಕನ್ನಡದ ಭಗವದ್ಗೀತೆಯಂತಿದೆ.ಕೀರ್ತನೆ, ಉಗಾಭೋಗ, ಮುಂಡಿಗೆ, ಕಾವ್ಯ ಕನದದಾಸರ ಕಾವ್ಯ ಪ್ರಾಕಾರಗಳು. ತರಕಾರಿಗಳನ್ನು ಬಳಸಿಕೊಂಡು
ಮುಂಡಿಗೆಗಳ ರೂಪದಲ್ಲಿ ನಿಗೂಡಾರ್ಥ ಕಾವ್ಯಸೃಷ್ಟಿ ಅದ್ಭುತ.
ಪರಮ ಪುರುಷ ನೀನೆಲ್ಲಿಕಾಯಿ. ಸರಸಿಯೊಳಗೆ ಕರಿಕೂಗಲಕಾಯಿ. ಹಿರಿದು ಮಾಡಿದ ಪಾಪ ನುಗ್ಗೆಕಾಯಿ, ಹರಿ ನಿನ್ನ ಧ್ಯಾನ ಬಾಳೇಕಾಯಿ, ಸರುವ ಜೀವರ್ಗುಣಿಸಿಯೂ ಬದನೆಕಾಯಿ, ರಿಷಡ್ವರ್ಗಗಳೊದಗಿಲಿಕಾಯಿ ಎಂಬ ಪರಮ ಪುರುಷ ನೀನೆಲ್ಲಿಕಾಯಿ ಮುಂಡಿಗೆ ಕಾವ್ಯದ ಸೃಷ್ಟಿಯ ನಿಲುಕದ ಸಂವಹನ.
ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ, ನೀ ದೇಹದೊಳಗೊ, ನಿನ್ನೊಳು ದೇಹವೊ… ಕೀರ್ತನೆ ಇಂದಿಗೂ
ಪ್ರಸ್ತುತ. ಮಾಯೆಯ ಪ್ರಭಾವದಿಂದ ಪ್ರಕ್ಷುಬ್ಧತೆಗೆ ಜಾರಿದ ಸಮಾಜಕ್ಕೆ ಸಾಂತ್ವನ ನೀಡುವ ಸಾಹಿತ್ಯ ಕನಕದಾಸರ ಕೊಡುಗೆ.
ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ದಾಸ ಶ್ರೇಷ್ಟ. ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯ ಎಂಬ ನಿಲುವು ತಳೆದ ಧೀಮಂತ ಇಂದಿಗೂ ಪೂಜನೀಯ. ಅವರ ಸಾಹಿತ್ಯ ಅಧ್ಯಯನದಿಂದ ಸಮಾಜದ ಪರಿವರ್ತನೆ ಮಾರ್ಗ. ಕನ್ನಡ ನಾಡಿನಲ್ಲಿ ಕನಕ ದಾಸರ ಭಕ್ತಿ, ಕಾವ್ಯ, ತ್ಯಾಗ, ಜಾತ್ಯತೀತ ಭಾವ ಸದಾ ಅಜರಾಮರ.