18.4 C
Karnataka
Wednesday, November 27, 2024
    Home Blog Page 41

    NEW EDUCATION POLICY :ಉನ್ನತ ಶಿಕ್ಷಣ: ಭವಿಷ್ಯದ ಕಾರ್ಯತಂತ್ರ

    BENGALURU NOV 13

    ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಫಲವಾಗಿ ಇನ್ನು 20 ವರ್ಷಗಳಲ್ಲಿ ಭಾರತವು ಜಗತ್ತಿನಲ್ಲಿ ಅಗ್ರಸ್ಥಾನಕ್ಕೇರಲಿದ್ದು, ದೇಶದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ರಾಮಬಾಣವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಪಾದಿಸಿದ್ದಾರೆ.

    ರಾಜ್ಯ ಸರಕಾರ ಮತ್ತು ಅಂತಾರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ISDC) ಜಂಟಿಯಾಗಿ ಎನ್ಇಪಿ ಕುರಿತು ಏರ್ಪಡಿಸಿದ್ದ ಪ್ರಪ್ರಥಮ ಸಮಾವೇಶ `ಉನ್ನತ ಶಿಕ್ಷಣ: ಭವಿಷ್ಯದ ಕಾರ್ಯತಂತ್ರ’ವನ್ನು ಉದ್ದೇಶಿಸಿ ಶನಿವಾರ ಅವರು ಮಾತನಾಡಿದರು.

    ಶಿಕ್ಷಣವನ್ನು ಬದಲಿಸುವ ಮೂಲಕ ದೇಶವನ್ನು ಬದಲಿಸಬಹುದು ಎನ್ನುವುದು ಪ್ರಧಾನಿ ಮೋದಿಯವರಿಗೆ ಗೊತ್ತಾಗಿದೆ. ಆದ್ದರಿಂದಲೇ ದೇಶದಲ್ಲಿ 34 ವರ್ಷಗಳ ನಂತರ ಎನ್ಇಪಿ ಜಾರಿಗೆ ತರಲಾಗುತ್ತಿದ್ದು, ದುರ್ಬಲ ವರ್ಗಗಳ ಮಕ್ಕಳಿಗೆ ಈಗ ಶಿಕ್ಷಣವನ್ನು ಪ್ರಧಾನ ಹಕ್ಕನ್ನಾಗಿ ಮಾಡಲಾಗಿದೆ. ಎನ್ಇಪಿ ನೂರಕ್ಕೆ ನೂರರಷ್ಟು ಸಕಾರಾತ್ಮಕವಾಗಿದೆ ಎಂದು ಅವರು ವಿವರಿಸಿದರು.

    ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ಶೇ.20ರಷ್ಟು ವಿದ್ಯಾರ್ಥಿಗಳು ಮಾತ್ರ ಉದ್ಯೋಗಕ್ಕೆ ಅರ್ಹರಾಗುತ್ತಿದ್ದರು. ಆದರೆ ಈಗ ಕೌಶಲ್ಯ ಮತ್ತು ಡಿಜಿಟಲ್ ಕಲಿಕೆಗೆ ಒತ್ತು ನೀಡಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಉದ್ಯೋಗಕ್ಕೆ ಬೇಕಾದ ಅರ್ಹತೆ ಮತ್ತು ಸಾಮರ್ಥ್ಯಗಳನ್ನು ತನ್ನದಾಗಿಸಿಕೊಳ್ಳಲಿದ್ದಾನೆ ಎಂದು ಅವರು ನುಡಿದರು.

    ಎನ್ಇಪಿಯಿಂದ ಸರಕಾರಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮೊದಲು ಲಾಭವಾಗಲಿದೆ. ಇಲ್ಲಿರುವ ಮಕ್ಕಳಲ್ಲಿ ಶೇ.95ರಷ್ಟು ವಿದ್ಯಾರ್ಥಿಗಳು ದುರ್ಬಲ ವರ್ಗಗಳಿಗೆ ಸೇರಿದವರೇ ಆಗಿದ್ದಾರೆ. ಆದ್ದರಿಂದ ಎನ್ಇಪಿಯಿಂದ ಶಿಕ್ಷಣದ ವಾಣಿಜ್ಯೀಕರಣ ನಡೆಯುತ್ತಿದೆ ಎನ್ನುವ ಮಾತುಗಳನ್ನು ನಂಬಿ ದಿಕ್ಕು ತಪ್ಪಬಾರದು. ಅಲ್ಪಸಂಖ್ಯಾತರೂ ಸೇರಿದಂತೆ ಯಾರೂ ಅನಗತ್ಯ ಭಯ, ಸಂಶಯಗಳನ್ನು ಇಟ್ಟುಕೊಳ್ಳಬಾರದು ಎಂದು ಅಶ್ವತ್ಥನಾರಾಯಣ ಹೇಳಿದರು.

    ಹಳೆಯ ವ್ಯವಸ್ಥೆಯಲ್ಲಿ ಜ್ಞಾನದ ಒಂದು ತುಣುಕಷ್ಟೇ ಸಿಕ್ಕುತ್ತಿತ್ತು. ಈಗ ದೇಶೀಯವಾದ ಮತ್ತು ಪರಿಪೂರ್ಣವಾದ ಬೋಧನೆ ಸಾಧ್ಯವಾಗಲಿದೆ. ಜಾಗತೀಕರಣದ ಯುಗದಲ್ಲಿ ಶಿಕ್ಷಣ ಸಂಸ್ಥೆಗಳ ಸುಧಾರಣೆ ಮತ್ತು ಹೊಸ ಸಂಸ್ಥೆಗಳ ಅಗತ್ಯ ಎರಡೂ ಇದೆ. ಗುಣಮಟ್ಟದ ವಿಚಾರದಲ್ಲಿ ಸಬೂಬುಗಳನ್ನು ಇನ್ನು ಮುಂದೆ ಸಹಿಸಿಕೊಳ್ಳುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

    ಎನ್ಇಪಿ ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರ್ಯ ಮತ್ತು ಸ್ವಾಯತ್ತೆ ನೀಡಲಿದೆ. ಇದು ಸಮಕಾಲೀನ ಅಗತ್ಯಗಳನ್ನು ಗಮನಕ್ಕೆ ತೆಗೆದುಕೊಂಡಿದ್ದು, ಎಲ್ಲರನ್ನೂ ಒಳಗೊಳ್ಳಲಿದೆ. ವಿಶ್ವ ಗುಣಮಟ್ಟದ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದುವ ಮೂಲಕ ಜಾಗತಿಕ ಮಟ್ಟದ ಶಿಕ್ಷಣವು ಮಕ್ಕಳಿಗೆ ದೊರೆಯುವಂತೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

    ಕಾರ್ಯಕ್ರಮದಲ್ಲಿ ಐಎಸ್ ಡಿಸಿ ಕಾರ್ಯನಿರ್ವಾಹಕ ನಿರ್ದೇಶಕ ಟಾಮ್ ಜೋಸೆಫ್, ನಿರ್ದೇಶಕಿ ತೆರೇಸಾ ಜಾಕೋಬ್ಸ್, ಕಾಲೇಜು ಶಿಕ್ಷಣ ಆಯುಕ್ತ ಪಿ.ಪ್ರದೀಪ, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ ಮುಂತಾದವರು ಉಪಸ್ಥಿತರಿದ್ದರು.

    ಆರ್ಟ್ ಫಾರ್ ಹಾರ್ಟ್ -ರೇಖೆಗಳ ಓಟ, ಕಲಾತ್ಮಕ ನೋಟ

    ವಿ ಎಸ್ ನಾಯಕ ಬಳಕೂರು

    ಮಕ್ಕಳಲ್ಲಿ ಅಗಾಧವಾದ ಶಕ್ತಿಯಿದೆ. ಅವರಲ್ಲಿ ಅಡಗಿರುವ ಅಗಾಧವಾದ ಶಕ್ತಿಯನ್ನು ಹೊರತರಬೇಕಾದರೆ ಸರಿಯಾದ ಮಾರ್ಗದರ್ಶನ ನೀಡಿದರೆ ಅವರು ತಮ್ಮ ಜೀವನದಲ್ಲಿ ಸಾಧನೆಯ ಶಿಖರದಲ್ಲಿ ಮುಂದುವರಿಯುತ್ತಾರೆ. ಅದೇ ರೀತಿ ಕಲೆಯೆಂಬುದು ಒಂದಲ್ಲ ಒಂದು ರೀತಿಯಲ್ಲಿ ಮಕ್ಕಳಲ್ಲಿ ಅಡಗಿರುತ್ತದೆ. ಸರಿಯಾದ ಸಂದರ್ಭಕ್ಕೆ ಸರಿಯಾದ ಮಾರ್ಗದರ್ಶನ ಗುರಿ ತೋರಿದರೆ ಜೀವನದಲ್ಲಿ ಯಾರು ಊಹಿಸಲಾರದ ಕಲಾವಿದರಾಗಿ ಹೊರ ಹೊಮ್ಮುವುದರಲ್ಲಿ ಸಂದೇಹವಿಲ್ಲ.

    ಕಲಾವಿದ ವಿಜಯ್ ಕುಮಾರ್ ಯಾದವ್

    ಇಂತಹ ಎಳೆಯ ಮಕ್ಕಳಲ್ಲಿ ಅಡಗಿದ ಕಲಾಪ್ರತಿಭೆಯನ್ನು ಹೊರಹೊಮ್ಮಿಸಲು ಬೆಂಗಳೂರಿನ ಮಲ್ಲೇಶ್ವರದ ಮಾರ್ಗೋಸಾ ರಸ್ತೆಯಲ್ಲಿ ಆರ್ಟ್ ಫಾರ್ ಹಾರ್ಟ್ ಎಂಬ ಕಲಾ ಸಂಸ್ಥೆಯನ್ನು ಪ್ರಾರಂಭಿಸಿದ ಕೀರ್ತಿ ಕಲಾವಿದ ವಿಜಯ್ ಕುಮಾರ್ ಯಾದವ್ ಅವರಿಗೆ ಸಲ್ಲಬೇಕು. ಇವರು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಅಧ್ಯಯನವನ್ನು ಮುಗಿಸಿ ಉತ್ತಮ ಕಲಾಕಾರರಾಗಿ ಹೊರಹೊಮ್ಮಿ ತಾವು ಕೂಡ ಹಲವಾರು ಕಲಾ ಪ್ರತಿಭೆಗಳನ್ನು ತರುವ ಪ್ರಯತ್ನವನ್ನು ಮಾಡಿದ್ದಾರೆ.

    ಇವರ ಕಲಾ ಸಂಸ್ಥೆ ವಿಭಿನ್ನವಾದ ಕಲಾ ಕಾಳಜಿಯನ್ನು ಬೆಳೆಸುವುದರ ಮೂಲಕ ಚಿಣ್ಣರಲ್ಲಿ ಅಡಗಿರುವ ಕಲಾಪ್ರತಿಭೆಯನ್ನು ಹೊರಹೊಮ್ಮಿಸಲು ಅದ್ಭುತವಾದ ಪ್ರಯತ್ನವನ್ನು ಮಾಡಿರುವುದು ಶ್ಲಾಘನೀಯ. ಇಲ್ಲಿ ಬರುವ ಚಿಕ್ಕ ಮಕ್ಕಳು ತಮಗೆ ಅರಿವಿಲ್ಲದಂತೆ ವಿಭಿನ್ನ ಕಲಾಕೃತಿಗಳನ್ನು ರಚಿಸುವುದರ ಮೂಲಕ ಕಲಾಸಕ್ತರ ಮಡಿಲಿಗೆ ವಿಶೇಷವಾದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಇವರ ಕಲಾ ಸಂಸ್ಥೆಯಲ್ಲಿ ಮೂರು ವಿಭಾಗದ ಲ್ಲಿ ವಿದ್ಯಾರ್ಥಿಗಳನ್ನು ವಿಂಗಡಿಸಿ ಅವರವರ ಬುದ್ಧಿ ಮಟ್ಟದಲ್ಲಿ ಕಲಾ ತರಬೇತಿಯನ್ನು ಕೊಡುವುದರ ಮೂಲಕ ಎಲ್ಲರೂ ಹುಬ್ಬೇರಿಸುವ ನಿಟ್ಟಿನಲ್ಲಿ ಕಲಾವಿದರನ್ನು ಹೊರ ತರುವ ಪ್ರಯತ್ನವನ್ನು ಮಾಡಿರುವುದು ನಿಜವಾಗಿಯೂ ಮೆಚ್ಚಲೇಬೇಕು.

    ಚಿಕ್ಕಮಕ್ಕಳಿಗೆ ಕಲಾ ತರಬೇತಿಯನ್ನು ಕೊಡುವುದು ಸುಲಭದ ಕೆಲಸವಲ್ಲ ಬಹಳ ತಾಳ್ಮೆಯಿಂದ ಅವರಿಗೆ ಕಲಾ ತರಬೇತಿಯನ್ನು ಮೂಲಕ ಸಮಾಜಕ್ಕೆ ಒಳ್ಳೆಯ ಅವರನ್ನು ಪರಿಚಯಿಸುವ ಕಾರ್ಯವನ್ನು ಮಾಡಿದ್ದಾರೆ. ಇಲ್ಲಿ ಕಲಿತ ಹಲವಾರು ಕಲಾ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಕಲಾಕಾರರಾಗಿ ಹೊರಹೊಮ್ಮಿದ್ದಾರೆ ಇವರು ರಚಿಸಿದ ಒಂದೊಂದು ಕಲಾಕೃತಿಗಳು ಕೂಡ ಪ್ರತಿಯೊಬ್ಬರನ್ನು ನಿಬ್ಬೆರಗಾಗಿಸುತ್ತದೆ. ಉತ್ತಮ ಕಲಾತ್ಮಕ ನೋಟ ಉಳ್ಳ ವಿಭಿನ್ನ ಕಲಾಕೃತಿಗಳ ಸರಮಾಲೆಗಳು ಪ್ರತಿಯೊಬ್ಬ ಚಿಕ್ಕ ಮಕ್ಕಳಿಂದ ಹಿಡಿದು ಕಲೆಯನ್ನು ಕಲಿಯಲು ಬರುವ ಎಲ್ಲರಿಗೂ ಕೂಡ ಪೂರ್ತಿಯ ಸೆಲೆಯಾಗಿ ಹೊರಹೊಮ್ಮಲಿದೆ.

    ಇಂತಹ ನಿಟ್ಟಿನಲ್ಲಿ ವಿಜಯ್ ಕುಮಾರ್ ಯಾದವ್ ಅದ್ಭುತ ಕಲಾ ಕಾರ್ಯವನ್ನು ಮಾಡಿರುವುದು ಮೆಚ್ಚಲೇಬೇಕು. ಇವರು ಬೆಂಗಳೂರಿನ ಯಶವಂತಪುರದಲ್ಲಿ ಕೂಡ ಇನ್ನೊಂದು ಶಾಖೆಯನ್ನು ಆರಂಭಿಸಿದ್ದಾರೆ. ಇಲ್ಲಿ ವಿದ್ಯಾರ್ಥಿಗಳು ರಚಿಸಿದ ನಿಸರ್ಗ ಚಿತ್ರಗಳು. ಪುರಾಣ ಪುಣ್ಯ ಕಥೆಗಳಲ್ಲಿ ಬರುವ ದೇವರ ಚಿತ್ರಗಳು ಮಹಾನ್ ಸಾಧಕರ ಚಿತ್ರಗಳು ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಕಲಾಕೃತಿಗಳು ಕಲಾಸಕ್ತರ ಮನಸೂರೆಗೊಳ್ಳುತ್ತದೆ

    ವಿಜಯ್ ಕುಮಾರ್ ಯಾದವ್ ರವರು ಹೇಳುವ ಹಾಗೆ ಕಲೆ ಎಂಬುದು ತಪಸ್ಸು ಅದನ್ನು ಶ್ರದ್ಧೆಯಿಂದ ಮಾಡಿದರೆ ಯಶಸ್ಸು ನಿಜವಾಗಿಯೂ ಕೂಡ ಅವರ ಬೆನ್ನ ಹಿಂದೆ ಇರುತ್ತದೆ ಮುಖ್ಯವಾಗಿ ಅವರಿಗೆ ಬೇಕಾಗಿರುವುದು ಮಾಡುವ ಕೆಲಸದಲ್ಲಿ ಶ್ರದ್ಧೆ ಆಸಕ್ತಿ ಗುರಿ ಇದ್ದರೆ ಸಾಕು ಅಸಾಧ್ಯವಾದುದನ್ನು ಸಾಧಿಸಬಹುದಾಗಿದೆ ಎಂದು ಹೇಳುತ್ತಾರೆ.

    ಉತ್ತಮ ನುರಿತ ಕಲಾ ಶಿಕ್ಷಕರ ತಂಡ ಭವಿಷ್ಯದ ಉತ್ತಮ ಕಲಾವಿದರನ್ನು ಗುರುತಿಸುವಲ್ಲಿ ರೂಪಿಸುವಲ್ಲಿ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ. ಇವರ ಕಲಾ ಸೇವೆಗೆ ನಿಜವಾಗಿಯೂ ಪಾಲಿಸಲೇಬೇಕು. ವಿಜಯ್ ಕುಮಾರ್ ರವರ ಕಲಾ ಸೇವೆ ಹೀಗೆ ಮುಂದುವರೆಯಲಿ ಉತ್ತಮ ಕಲಾವಿದರನ್ನು ನೀಡುವುದರ ಮೂಲಕ ಕಾರ್ಯವನ್ನು ಮುಂದುವರಿಸಲಿ ಎಂದು ಅಭಿನಂದಿಸಲು ದೂರವಾಣಿ ಸಂಖ್ಯೆ
    9448687636.

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    BENGALURU TECH SUMMIT : ಮೊದಲ ಬಾರಿಗೆ ಸಂಯುಕ್ತ ಅರಬ್ ಸಂಸ್ಥಾನ, ವಿಯಟ್ನಾಂ, ಯೂರೋಪಿಯನ್ ಯೂನಿಯನ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಭಾಗಿ

    BENGALURU NOV 12

    ನ.17ರಿಂದ 19ರವರೆಗೆ ನಗರದಲ್ಲಿ ನಡೆಯಲಿರುವ 24ನೇ ವರ್ಷದ `ಬೆಂಗಳೂರು ತಂತ್ರಜ್ಞಾನ ಶೃಂಗ’ದಲ್ಲಿ-bengaluru Tech summit -(ಬಿಟಿಎಸ್-2021) ಇದೇ ಮೊದಲ ಬಾರಿಗೆ ಸಂಯುಕ್ತ ಅರಬ್ ಸಂಸ್ಥಾನ, ವಿಯಟ್ನಾಂ, ಯೂರೋಪಿಯನ್ ಯೂನಿಯನ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಪಾಲ್ಗೊಳ್ಳುತ್ತಿವೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

    ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಜಾಗತಿಕ ನಾವೀನ್ಯತಾ ಮೈತ್ರಿಕೂಟವು (ಜಿಐಎ) ಕೈಗೊಂಡಿರುವ ರಚನಾತ್ಮಕ ಕ್ರಮಗಳಿಂದಾಗಿ 30ಕ್ಕೂ ಹೆಚ್ಚು ದೇಶಗಳೊಂದಿಗೆ ಶಿಕ್ಷಣ, ನವೋದ್ಯಮ, ಸಂಶೋಧನೆ ಹಾಗೂ ಅಭಿವೃದ್ಧಿ ಸಹಭಾಗಿತ್ವಕ್ಕೆ ಮುಂದಡಿ ಇಡಲಾಗಿದೆ ಎಂದರು.

    ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಇದೇ ಪ್ರಥಮ ಬಾರಿಗೆ ಅಮೆರಿಕ-ಭಾರತ ವಾಣಿಜ್ಯ ಸಮಿತಿ ಮತ್ತು ವರ್ಚುಯಲ್ ರೂಪದಲ್ಲಿ ಆಸ್ಟ್ರೇಲಿಯಾದ ಸಿಡ್ನಿ ವಾಣಿಜ್ಯ ವಿಚಾರ ವಿನಿಮಯ ಶೃಂಗಸಭೆಯ ಮತ್ತು ಬಿಟಿಎಸ್ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಸಂಘಟನೆಗಳು ರಾಜ್ಯದೊಂದಿಗೆ ತಮ್ಮ ತಂತ್ರಜ್ಞಾನ ಪರಿಣತಿಯನ್ನು ಪರಸ್ಪರ ನೆಲೆಯಲ್ಲಿ ಪ್ರದರ್ಶಿಸಲಿವೆ. ಅಮೆರಿಕದ ಜತೆಗಿನ ಸಹಭಾಗಿತ್ವವು ನಾವೀನ್ಯತೆಯ ಕ್ಷೇತ್ರದಲ್ಲಿ ಮತ್ತಷ್ಟು ಅಂತಾರಾಷ್ಟ್ರೀಯ ಸರಕಾರಕ್ಕೆ ಅವಕಾಶ ಸೃಷ್ಟಿಸಲಿದೆ ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದರು. ಬಿಟಿಎಸ್-2021ರಲ್ಲಿ 30ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿವೆ.

    ಜಾಗತಿಕ ಹೂಡಿಕೆ ಮೈತ್ರಿಕೂಟದ ಭಾಗವಾಗಿ ಆಸ್ಟ್ರೇಲಿಯಾ ನ್ಯೂಸೌತ್ ವೇಲ್ಸ್ ಪ್ರಾಂತ್ಯದ ಉದ್ಯೋಗ, ಹೂಡಿಕೆ ಮತ್ತು ಪ್ರವಾಸೋದ್ಯಮ ಸಚಿವ ಸ್ಟುವರ್ಟ್ ಏಯರ್ಸ್, ಜರ್ಮನಿಯ ನಾರ್ತ್ ರೀನ್-ವೆಸ್ಟ್ ಫಾಲಿಯಾ ಪ್ರಾಂತ್ಯದ ಆರ್ಥಿಕ, ನಾವೀನ್ಯತೆ ಮತ್ತು ಡಿಜಿಟಲೀಕರಣ ಸಚಿವ ಪ್ರೊ.ಆಂಡ್ರಿಯಾಸ್ ಪಿಂಕ್ ವರ್ಟ್, ಫಿನ್ಲೆಂಡಿನ ಸಾರಿಗೆ ಮತ್ತು ಸಂಪರ್ಕ ಸಚಿವ ಟಿಮೋ ಹರಕ್ಕಾ ಹಾಗೂ ವಿಯಟ್ನಾಂನ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಮಾಜಿ ಸಚಿವ ನುಯೆನ್ ಕ್ವಾನ್ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

    ಇದಲ್ಲದೆ, ಜಾಗತಿಕ ಮಟ್ಟದಲ್ಲಿ ತಮ್ಮ ತಾಂತ್ರಿಕ ಪರಿಣತಿಗೆ ಹೆಸರಾಗಿರುವ ಅಮೆರಿಕದ ದಾವೋಸ್ ನಲ್ಲಿರುವ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಎಎಫ್) ಸಂಸ್ಥಾಪಕ ಮತ್ತು ಮುಖ್ಯಸ್ಥ ಪ್ರೊ.ಕ್ಲಾಸ್ ಶ್ವಾಬ್, ಭಾರತೀಯ ಮೂಲದ ವಿಜ್ಞಾನಿ ಮತ್ತು ಲೇಖಕ ಡಾ.ಸಿದ್ಧಾರ್ಥ ಮುಖರ್ಜಿ, ಚೆಕ್ ಪಾಯಿಂಟ್ ಕಂಪನಿಯ ಸ್ಥಾಪಕ ಮತ್ತು ಸಿಇಒ ಗಿಲ್ ಶ್ವೆಡ್, ಆಪರೇಷನ್ಸ್ ಆಪಲ್ ಇಂಕ್ ಸಮೂಹದ ಉಪಾಧ್ಯಕ್ಷೆ ಪ್ರಿಯಾ ಬಾಲಸುಬ್ರಹ್ಮಣ್ಯಂ, ಮೈಕ್ರೋಸಾಫ್ಟ್ ಇಂಡಿಯಾದ ಮುಖ್ಯಸ್ಥ ಅನಂತ್ ಮಹೇಶ್ವರಿ, ಕಿಂಡ್ರೈಲ್ ಕಂಪನಿಯ ಸಿಇಒ ಮಾರ್ಟಿನ್ ಶ್ರೋಟರ್ ಮತ್ತು ಟೆಲ್ಸ್ಟ್ರಾ ಕಂಪನಿಯ ಪಾಲುದಾರ ಗ್ಯಾವೆನ್ ಸ್ಟ್ಯಾಂಡನ್ ಸೇರಿದಂತೆ 75ಕ್ಕೂ ಹೆಚ್ಚು ಆಹ್ವಾನಿತರು ವಿಚಾರಗೋಷ್ಠಿಗಳಲ್ಲಿ ಮಾತನಾಡಲಿದ್ದಾರೆ ಎಂದು ಅಶ್ವತ್ಥನಾರಾಯಣ ಹೇಳಿದರು.

    ನಾವೀನ್ಯತೆ ಮತ್ತು ತಂತ್ರಜ್ಞಾನ ವಲಯದ ಹತ್ತಾರು ಧಾರೆಗಳಲ್ಲಿ ಅಂತಾರಾಷ್ಟ್ರೀಯ ಸಹಭಾಗಿತ್ವವನ್ನು ಹೊಂದುವುದು ರಾಜ್ಯದ ಉದ್ದೇಶವಾಗಿದ್ದು, ಜಿಐಎ ಇದನ್ನು ನನಸು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಯೂರೋಪಿಯನ್ ಒಕ್ಕೂಟದೊಂದಿಗೆ ಇದೇ ಮೊದಲ ಬಾರಿಗೆ ನವೋದ್ಯಮಗಳನ್ನು ಕುರಿತು ವಿಚಾರಗೋಷ್ಠಿ ಏರ್ಪಡಿಸಲಾಗುತ್ತಿದೆ. ಈ ಮೂಲಕ ರಾಜ್ಯವು ಜಾಗತಿಕ ಮಟ್ಟದಲ್ಲಿ ತನ್ನ ತಂತ್ರಜ್ಞಾನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ ಎಂದು ಅವರು ನುಡಿದರು.

    ಪತ್ರಿಕಾಗೋಷ್ಠಿಯಲ್ಲಿ ರಾಜ್ಯದೊಂದಿಗೆ ಜಿಐಎ ಸಹಭಾಗಿತ್ವ ಹೊಂದಿರುವ ಆಸ್ಟ್ರಲಿಯಾ, ಡೆನ್ಮಾರ್ಕ್, ಫಿನ್ಲೆಂಡ್, ಜರ್ಮನಿ, ಜಪಾನ್, ಲಿಥುವೇನಿಯಾ, ಸ್ವೀಡನ್, ಸ್ವಿಟ್ಜರ್ಲೆಂಡ್ ಮತ್ತು ಯೂರೋಪಿಯನ್ ಒಕ್ಕೂಟಗಳ ಕೌನ್ಸಲ್ ಜನರಗಳು ಭಾಗವಹಿಸಿದ್ದರು. ಕೆಲವರು ವರ್ಚುವಲ್ ಮೂಲಕ‌.ಭಾಗವಹಿಸಿದ್ದರು.

    ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಎಸ್ಟಿಪಿಐ ನಿರ್ದೇಶಕ ಶೈಲೇಂದ್ರಕುಮಾರ್ ತ್ಯಾಗಿ ಮತ್ತು  ನವೋದ್ಯಮ ವಿಷನ್ ಗ್ರೂಪಿನ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಮಾತನಾಡಿದರು.

    ಸೈಬರ್ ಸೆಕ್ಯುರಿಟಿ, ಡಿಜಿಟಲೀಕರಣಕ್ಕೆ ಒತ್ತು

    ಬಿಟಿಎಸ್-2021ರಲ್ಲಿ ಮುಖ್ಯವಾಗಿ ಸೈಬರ್ ಸೆಕ್ಯುರಿಟಿ, ಡಿಜಿಟಲೀಕರಣ, ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯಾಧುನಿಕ ತಂತ್ರಜ್ಞಾನಗಳ ಕಡೆಗೆ ಗಮನ ಹರಿಸಲಾಗುವುದು. ಈ ಬಾರಿಯ ಶೃಂಗದಲ್ಲಿ ಆಸ್ಟ್ರೇಲಿಯಾ, ಪೆನ್ಸಿಲ್ವೇನಿಯಾ, ಯುನೈಟೆಡ್ ಕಿಂಗ್ ಡಂ, ಟೊರಾಂಟೋ ಬಿಜಿನೆಸ್ ಡೆವಲಪ್ಮೆಂಟ್ ಸೆಂಟರ್, ಜರ್ಮನಿ ಮತ್ತು ಅಮೆರಿಕ ದೇಶಗಳ ವರ್ಚುಯಲ್ ಬೂತ್ ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

    `ಸಿಡ್ನಿ ಡೈಲಾಗ್ ಶೃಂಗ’ದ ಲಾಭ

    ಬಿಟಿಎಸ್-2021 ಬೆಂಗಳೂರಿನಲ್ಲಿ ನಡೆಯುತ್ತಿರುವ ಸಂದರ್ಭದಲ್ಲೇ ಆಸ್ಟ್ರೇಲಿಯಾದಲ್ಲಿ ಇದೇ ತರಹದ `ಸಿಡ್ನಿ ಡೈಲಾಗ್ ಸಮಿಟ್’ ಏರ್ಪಾಡಾಗಿದೆ. ಹೀಗಾಗಿ, ಅಲ್ಲಿನ ಚಟುವಟಿಕೆಗಳನ್ನು ಬಿಟಿಎಸ್ ವೇದಿಕೆಯಲ್ಲಿ ಮತ್ತು ಇಲ್ಲಿನ ಚಟುವಟಿಕೆಗಳನ್ನು ಅಲ್ಲಿರುವವರು ವೀಕ್ಷಿಸುವಂತೆ ಸ್ಟ್ರೀಮಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

    ಬೆಂಗಳೂರು ನೆಕ್ಸ್ಟ್ ಸಿಇಒ ಸಮಾವೇಶ

    ಬಿಟಿಎಸ್-2021ರಲ್ಲಿ ನ.17 ಮತ್ತು 18ರಂದು ಸಂಜೆ 5ರಿಂದ 7 ಗಂಟೆಯವರೆಗೆ ಬೆಂಗಳೂರಿನಲ್ಲಿ ತಂತ್ರಜ್ಞಾನ ಬೆಳವಣಿಗೆಗೆ ಸಂಬಂಧಿಸಿದಂತೆ ಇಡಬೇಕಾದ ಮುಂದಿನ ಹೆಜ್ಜೆಗಳನ್ನು ಕುರಿತು `ಬೆಂಗಳೂರು ನೆಕ್ಸ್ಟ್ ಸಿಇಒ’ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

    ಇದರಲ್ಲಿ ಮೊದಲನೇ ದಿನ  ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಬಾಷ್ ಕಂಪನಿ ಸಿಇಒ ದತ್ತಾತ್ರಿ ಸಾಲಗಾಮೆ, ಕ್ರಿಸ್ ಗೋಪಾಲಕೃಷ್ಣನ್, ಕಿಂಡ್ರೈಲ್ ಇಂಡಿಯಾದ ಮುಖ್ಯಸ್ಥ ಲಿಂಗರಾಜು ಸಾಹುಕಾರ್ ಮತ್ತು ಕ್ರಿಸ್ ಗೋಪಾಲಕೃಷ್ಣನ್ ಮಾತನಾಡಲಿದ್ದಾರೆ.

    ನ.18ರಂದು ಗ್ಲ್ಯಾನ್ಸ್ ಇನ್ಮೊಬಿ ಸಂಸ್ಥಾಪಕ ನವೀನ್ ತಿವಾರಿ, ಡೈಲಿಹಂಟ್ ಸಹ ಸಂಸ್ಥಾಪಕ ಉಮಾಂಗ್ ಬೇಡಿ, ಫೋನ್-ಪೇ ಸ್ಥಾಪಕ ಸಿಟಿಒ ರಾಹುಲ್ ಚಾರಿ, ರೇಜರ್-ಪೇ ಸ್ಥಾಪಕ ಶಶಾಂಕ್ ಕುಮಾರ್, ಅನ್ಅಕಾಡೆಮಿ ಸಹಸಂಸ್ಥಾಪಕ ಗೌರವ್ ಮುಂಜಾಲ್ ಸೇರಿದಂತೆ ಜಾಗತಿಕ ಮಟ್ಟದ  20ಕ್ಕೂ ಹೆಚ್ಚು ಉದ್ಯಮಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

    ಉದ್ಘಾಟನೆಗೆ ಉಪರಾಷ್ಟ್ರಪತಿ

    24ನೇ ಬೆಂಗಳೂರು ತಂತ್ರಜ್ಞಾನ ಶೃಂಗವನ್ನು ನ.17ರ ಬೆಳಿಗ್ಗೆ 10ಕ್ಕೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಉದ್ಘಾಟಿಸಲಿದ್ದು, ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಐಟಿ ಮತ್ತು ಕೌಶಲ್ಯ ಖಾತೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ರಾಜ್ಯ ಸರಕಾರದ ಐಟಿ ವಿಷನ್ ಗ್ರೂಪ್ ಮುಖ್ಯಸ್ಥ ಕ್ರಿಸ್ ಗೋಪಾಲಕೃಷ್ಣನ್, ಬಿಟಿ ವಿಷನ್ ಗ್ರೂಪ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಪಾಲ್ಗೊಳ್ಳಲಿದ್ದಾರೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

    ಖಂಡಿತವಾದಿ ಲೋಕಕ್ಕೆ ನಿಷ್ಠುರವಾದಿ

    ಸುಮಾವೀಣಾ

    ಕಂಡುದದ ಆಡೆ ಭೂಮಂಡಲ ಮುನಿವುದು-ಸರ್ವಜ್ಞನ ತ್ರಿಪದಿಯಲ್ಲಿ  ಉಲ್ಲೇಖಿಸಲಾಗಿರುವ ಮಾತು. ನಾವು ನೇರವಾಗಿ ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಕೆಲವರಿಗೆ ಅದು ಇಷ್ಟವಾಗುವುದಿಲ್ಲ. ಸತ್ಯ ಯಾವಾಗಲೂ ಕಹಿ ಅನ್ನುತ್ತಾರಲ್ಲ ಹಾಗೆ. 

    ಒಟ್ಟಾರೆಯಾಗಿ  ಈ ಜಗತ್ತು,  ಈ ಜನಗಳು  ಭ್ರಮಾಲೋಕದಲ್ಲಿಯೇ ಇರುವರೇನೋ ಅನ್ನಿಸುತ್ತದೆ. ಸತ್ಯವನ್ನು ಕಂಡರೆ, ಕೇಳಿದರೆ ಅಪಥ್ಯ  ಅನ್ನುವ ಹಾಗೆ ಆಡುತ್ತಾರೆ. ನೇರವಾಗಿ ನುಡಿಯುವವರ ಮೇಲೆ  ಜನರು ಕೋಪಿಸಿಕೊಳ್ಳುತ್ತಾರೆ. ಖಂಡಿತವಾದಿ ಲೋಕಕ್ಕೆ ನಿಷ್ಠುರವಾದಿ ಎನ್ನುವ ಮಾತನ್ನು ಇಲ್ಲಿ ಸಂವಾದಿಯಾಗಿ ತೆಗೆದುಕೊಳ್ಳಬಹುದು.

    ಸತ್ಯಯಾವಾಗಲೂ ಕಠಿಣ ಆದರೆ ಸುಳ್ಳು  ತಕ್ಷಣಕ್ಕೆ ಸಿಹಿಯಾಗಿರುವುದರಿಂದ  ಅದನ್ನೆ ಸ್ವೀಕರಿಸುತ್ತಾರೆ.  ಮೇಲ್ನೋಟಕ್ಕೆ ಸುಂದರವಾಗಿ ಕಾಣುವುದೆಲ್ಲ  ನಮಗೆ ಅನುಕೂಲವಾಗಿರುತ್ತದೆ ಎಂಬುದು ಭ್ರಮೆ  ಅಷ್ಟೆ.

    ರತ್ನಾಕರವರ್ಣಿಯ  ‘ಭರತೇಶವೈಭವ’ದಲ್ಲಿ ಬರುವ ಪ್ರಸಂಗವೊಂದರಲ್ಲಿ ಭರತ ಚಕ್ರವರ್ತಿ  ಭೂಮಂಡಲವನ್ನೇ ಗೆದ್ದ ಸಂತಸದಲ್ಲಿ  ವೃಷಭಾದ್ರಿಯನ್ನು  ಏರಿ ಅಲ್ಲಿ ಬೆಟ್ಟದ ತುದಿಯಲ್ಲಿ ನಾನೇ ಜಗದೇಕ ವೀರ  ಎಂದು ಶಾಸನವನ್ನು ಕೆತ್ತಿಸುವ ಸಂದರ್ಭದಲ್ಲಿ ಅವನಿಗೂ ಮೊದಲೆ  ಭೂಮಂಡಲವನ್ನು ಗೆದ್ದ   ಸತ್ಯವನ್ನು ಕಂಡಾಗ  ಅದನ್ನು ಸಹಿಸದೆ ಕೋಪಗೊಳ್ಳುತ್ತಾನೆ.ಇದರಿಂದ ತಿಳಿಯುವುದು ಇಷ್ಟೆ ರಾಜನಾಗಲಿ  ಶ್ರೀಸಾಮಾನ್ಯನೆ ಆಗಲಿ ಇದ್ದುದನ್ನುಇದ್ದ ಹಾಗೆ ಸ್ವೀಕರಿಸಲಾರರು ಎಂದು. ಕರಿ ಕಾಗೆ ಬೆಳ್ಳಗೆ ಮಾಡಲಾದೀತೆ ಎಂಬ ಮಾತಿನಂತೆ ಸತ್ಯ ಯಾವಾಗಲೂ  ಸಾಲಿಡ್ ಅದರ ಸ್ವರೂಪ ಬದಲಿಸಲು ಸಾಧ್ಯವಿಲ್ಲ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    kannadapress.com explained : AY4.2 ರೂಪಾಂತರಿ ಅಪಾಯಕಾರಿಯೇ? ಇಲ್ಲವೇ?

    ಎರಡು ವರ್ಷದ ಹಿಂದೆ ಕೊರೋನಾ-covid- ವೈರಸ್ ಪತ್ತೆಯಾದ ದಿನದಿಂದ ಅದು ರೂಪಾಂತರ ಗೊಳ್ಳುತ್ತಲೇ ಇದೆ. ಕಳೆದ ಬಾರಿ ಈ ರೀತಿ ರೂಪಾಂತರ ಗೊಂಡ ವೈರಸ್ ಎರಡನೇ ಅಲೆಯಲ್ಲಿ ಭಾರಿ ಅವಾಂತರವನ್ನೇ ಸೃಷ್ಟಿಸಿತ್ತು.

    ಈಗ ಮತ್ತೊಂದು ರೂಪಾಂತರಿ AY4.2 ಡೆಲ್ಟಾದ ಅವಾಂತರ. ಇನ್ನೂ ಇದರ ಆಳ ಅಗಲಗಳ ಪರಿಚಯವಾಗಿಲ್ಲ. ಈಗಾಗಲೇ ಕೋಟ್ಯಾಂತರ ಲಸಿಕೆಗಳನ್ನು ಹಾಕಿರುವದರಿಂದ ಇದರ ಆಟ ನಡೆಯುವದಿಲ್ಲ ಎಂದೇ ಭಾವಿಸಬಹುದಾಗಿದೆ. ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವಿರಲೇ ಬೇಕು.

    ಈ ಬಗ್ಗೆ ನಮ್ಮ ಓದುಗರಿಗೆ ಹೆಚ್ಚಿನ ವಿಷಯ ತಿಳಿಸಲು ನಾವು ಮೈಸೂರಿನ ಪ್ರಖ್ಯಾತ ವೈದ್ಯ ಡಾ. ಸಿ ಜಿ ಪ್ರಹ್ಲಾದರಾವ್ ಅವರನ್ನು ಮಾತನಾಡಿಸಿದೆವು. ಅವರು ಈ ಬಗ್ಗೆ ಹೇಳಿದ ಸಂಗತಿಗಳು ಇಲ್ಲಿಮ ವಿಡಿಯೋದಲ್ಲಿ ದಾಖಲಾಗಿದೆ. ಆಲಿಸಿ , ವೀಕ್ಷಿಸಿ ಮತ್ತು ಪ್ರತಿಕ್ರಿಯಿಸಿ.

    ವಿಡಿಯೋ ನೋಡಿ ಸುಮ್ಮನಾಗಬೇಡಿ. ದಯಮಾಡಿ ವಿಡಿಯೋದಲ್ಲಿರುವ subscribe ಮತ್ತು bell icon ಒತ್ತಿ. ನಿಮ್ಮ ಒಂದು subscribe ನಮಗೆ ನೂರಾನೆ ಬಲ ಮತ್ತು ಮುಂದಿನ ಉಪಯುಕ್ತ ವಿಡಿಯೋಗಳಿಗೆ ಸ್ಪೂರ್ತಿ.

    INDIAN STOCK MARKET :ಮನಿ ವಿಕಾಸ ಮಾಡದ ಕಾರ್ಪೊರೇಟ್ ಫಲಗಳು

    ಷೇರುಪೇಟೆಯ ಸೂಚ್ಯಂಕಗಳು ಹೆಚ್ಚು ಹೆಚ್ಚು ವಿಜೃಂಭಿಸಿದರೂ ಪೇಟೆಯಲ್ಲಿ ಅನೇಕ ರೀತಿಯ ಹೂಡಿಕೆ ಅವಕಾಶಗಳು ಸೃಷ್ಟಿ ಯಾಗುತ್ತಿರುತ್ತವೆ. ಹೆಚ್ಚಿನ ಅಗ್ರಮಾನ್ಯ ಕಂಪನಿಗಳು ಉತ್ತಮ ಸಾಧನೆಯ ಅಂಕಿ ಅಂಶಗಳನ್ನು ಪ್ರಕಟಿಸಿದರೂ, ಹೂಡಿಕೆ ಮಾಡಿರುವ ಷೇರುದಾರರಿಗೆ ಪ್ರಯೋಜನವಿಲ್ಲದಂತಾಗಿದೆ. ಕಾರಣ ಕಂಪನಿಗಳ ತ್ರೈಮಾಸಿಕದ ಲಾಭಗಳಿಕೆಯು ಹಲವು ಪಟ್ಟು ಹೆಚ್ಚಿದ್ದರೂ ಕಾರ್ಪೊರೇಟ್‌ ಫಲಗಳನ್ನು ವಿತರಿಸದೇ ಸಾಧನೆಯನ್ನು ಕೇವಲ ಭಾಷಣಕ್ಕೆ ಭೂಷಣ ಎನ್ನುವಂತೆ ಮಾಡಿವೆ.

    ಅವೆನ್ಯೂ ಸೂಪರ್‌ ಮಾರ್ಕೆಟ್ಸ್, ಬೊರೊಸಿಲ್‌ ರಿನ್ಯೂವಬಲ್ಸ್‌, ಟಾಟಾ ಪವರ್‌, ಟಾಟಾ ಸ್ಟೀಲ್‌, ಡಾಕ್ಟರ್‌ ರೆಡ್ಡೀಸ್‌ ಲ್ಯಾಬ್‌, ವೇದಾಂತ ಮುಂತಾದ ಕಂಪನಿಗಳು ಪ್ರಕಟಿಸಿದ ಸಾಧನೆಯ ಅಂಕಿ ಅಂಶಗಳು ಮನೋಲ್ಲಾಸಗೊಳಿಸುವ ಮಟ್ಟದ್ದಾದರೂ, ʼಮನಿʼ ವಿಕಾಸವಿಲ್ಲದಂತೆ ಕೇವಲ ಮೂಗಿನ ತುದಿಗೆ ತುಪ್ಪ ಸವರುವ ಕಾರ್ಯದಂತಿದೆ.

    ಕಂಪನಿಗಳಾದ ಭಾರತ್‌ ಪೆಟ್ರೋಲಿಯಂ ಮತ್ತು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಗಳು ಪ್ರತಿ ಷೇರಿಗೆ ರೂ.5 ರಂತೆ ಲಾಭಾಂಶ ಘೋಷಣೆ ಮಾಡಿವೆ. ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ ಪ್ರತಿ ಷೇರಿಗೆ ರೂ.4 ರಂತೆ, ಆರ್‌ ಇ ಸಿ ಲಿಮಿಟೆಡ್‌ ಪ್ರತಿ ಷೇರಿಗೆ ರೂ.2.50 ರಂತೆ, ಜಿ ಇ ಶಿಪ್ಪಿಂಗ್‌ ಪ್ರತಿ ಷೇರಿಗೆ ರೂ.4.50 ಯಂತೆ, ಜೊತೆಗೆ ಕೇರ್‌ ರೇಟಿಂಗ್ಸ್‌, ಕೇವಲ್‌ ಕಿರಣ್‌ ನಂತಹ ವಿವಿಧ ಕಂಪನಿಗಳು ಲಾಭಾಂಶ ಪ್ರಕಟಿಸಿವೆಯಾದರೂ, ಹೆಚ್ಚಿನ ಅಗ್ರಮಾನ್ಯ ಕಂಪನಿಗಳು ಉತ್ತಮ ಸಾಧನೆ ಪ್ರದರ್ಶಿಸಿದರೂ, ಹೂಡಿಕೆದಾರರನ್ನು ಹರ್ಷಿತಗೊಳಿಸಲು ವಿಫಲವಾಗಿವೆ. ಇದು ಷೇರುದಾರರು ಮತ್ತು ಕಂಪನಿಗಳ ನಡುವೆ ಇರುವ ಲಾಯಲ್ಟಿ ಅಂಶವನ್ನು ಕಡೆಗಣಿಸಿ, ಷೇರುದಾರರು ಪೇಟೆಯ ವಾತಾವರಣವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಕೆಂದರೆ ಅವರು ಹೊಂದಿರುವ ಷೇರುಗಳನ್ನು ಮಾರಾಟಮಾಡಿದಲ್ಲಿ ಮಾತ್ರ ಹೂಡಿಕೆಯ ಲಾಭ ಪಡೆಯಬಹುದಾಗಿದೆ.

    ಹಿಂದೂಸ್ಥಾನ್‌ ಯೂನಿಲೀವರ್‌ ಕಂಪನಿ ಪ್ರತಿ ಒಂದು ಷೇರಿಗೆ ರೂ.15 ರೂಪಾಯಿಗಳಂತೆ, ಸುಮಾರು ಶೇ.2 ರಷ್ಟು ಕಳಪೆ ಸಾಧನೆ ಪ್ರದರ್ಶಿಸಿದೆ ಎಂಬ ಕಾರಣಕ್ಕೆ ಮಾರಾಟದ ಒತ್ತಡಕ್ಕೊಳಗಾಗಿರುವ ಕಾಲ್ಗೇಟ್‌ ಪಾಲ್ಮೊಲಿವ್‌ ಪ್ರತಿ ಷೇರಿಗೆ ರೂ.19 ರಂತೆ ಡಿವಿಡೆಂಡ್‌ ಘೋಷಿಸಿ, ನಿಗದಿತ ದಿನಾಂಕವೂ ಮುಗಿದಿದೆ. ಮುಂದಿನ ದಿನಗಳಲ್ಲಿ ಕುಸಿತದಿಂದ ಚೇತರಿಕೆ ಕಾಣಬಹುದೇ ಕಾದು ನೋಡೋಣ.

    ಈಚಿನ ದಿನಗಳಲ್ಲಿ ಕಂಪನಿಗಳು ಕೇವಲ ಅಲಂಕಾರಿಕವೆಂಬಂತೆ ಸಾಧನೆಯ ಅಂಶಗಳನ್ನು ವರ್ಣರಂಜಿತವಾಗಿ ಪ್ರಕಟಿಸುತ್ತವೆಯಾದರೂ, ಷೇರುದಾರರನ್ನು ಕಡೆಗಣಿಸುವುದು ಹವ್ಯಾಸವಾದಂತಾಗಿದೆ. ಇದು ಷೇರುದಾರರ ಮತ್ತು ಕಂಪನಿಗಳ ಬಾಂಧವ್ಯವು ಬದ್ಧತೆಮುಕ್ತವಾಗಿಸಿದೆ. ಅದಕ್ಕೆ ಪೂರಕವಾಗಿ ಸರ್ಕಾರದ ನಿಯಮಗಳೂ ಸಹ ಸಹಕಾರಿಯಾಗಿವೆ. ಷೇರುದಾರರು ಡಿವಿಡೆಂಡನ್ನು ಕಂಪನಿಗಳಿಂದ ಪಡೆಯುವುದಾದರೆ ಅದನ್ನು ನೇರವಾಗಿ ಷೇರುದಾರರ ತೆರಿಗೆಗೊಳಪಡುವ ಲಾಭವೆಂದು, ಯಾವುದೇ ರಿಯಾಯಿತಿ ಇಲ್ಲದೆ, ಪರಿಗಣಿಸಲಾಗುವುದು. ಆದರೆ ಷೇರಿನ ಬೆಲೆ ಏರಿಕೆಯಾದಾಗ ಮಾರಾಟಮಾಡಿದಲ್ಲಿ ಅದಕ್ಕೆ ಅಲ್ಪಕಾಲೀನ ಅವಧಿಯ ಲಾಭ ಎಂದು ವಿಂಗಡಿಸಿ ಅದಕ್ಕೆ ಶೇ.15 ರಂತೆ ತೆರಿಗೆಗೊಳಪಡಿಸುವರು. ಈ ಕ್ರಮವು ಷೇರುದಾರರಲ್ಲಿರುವ ದೀರ್ಘ ಕಾಲೀನ ಹೂಡಿಕೆ ಎಂಬ ಚಿಂತನೆಗೆ ತಿಲಾಂಜಲಿ ಹೇಳಿದಂತೆ.

    ಈಗಿನ ಚಿಂತನೆಗಳು, ವಿಶ್ಲೇಷಣೆಗಳ ಪರಿಸ್ಥಿತಿ ಹೇಗೆ ಬದಲಾಗಿದೆ ಎಂಬುದನ್ನು ನೋಡೋಣ:

    ಪ್ರಕರಣ : 1

    2008 ರ ಡಿಸೆಂಬರ್‌ 16 ರಂದು ಸಂಜೆ ಕಂಪನಿಯೊಂದು ತನ್ನ ಮಕ್ಕಳ ಕಂಪನಿಯ ಭಾಗಿತ್ವವನ್ನು 1.6 ಶತಕೋಟಿ ಡಾಲರ್‌ ಗೆ ಖರೀದಿಸುವ ತೀರ್ಮಾನವನ್ನು ಪ್ರಕಟಿಸಿತು. ಇದರ ಪರಿಣಾಮವಾಗಿ ಅಮೇರಿಕಾದಲ್ಲಿ ಆ ಕಂಪನಿಯ ಎ ಡಿ ಆರ್‌ ಗಳು ಶೇ.50 ಕ್ಕೂ ಹೆಚ್ಚಿನ ಕುಸಿತಕ್ಕೊಳಗಾಯಿತು. ಕಂಪನಿಯ ತೀರ್ಮಾನಕ್ಕೆಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಈ ಕಾರಣಗಳಿಂದ ಕಂಪನಿಯು ರಾತ್ರೋರಾತ್ರಿ ಯೋಜನೆಯನ್ನು ಕೈಬಿಟ್ಟಿತಾದರೂ, ಈ ಜಾರಿಗೊಳಗಾಗದ ನಿರ್ಧಾರವು ಕಂಪನಿಯ ಕಾರ್ಪೊರೇಟ್ ನೀತಿ ಪಾಲನೆಯಲ್ಲಿನ ಲೋಪವೆಂದು ಪರಿಗಣಿಸಿ 17 ರಂದು ಷೇರಿನ ಬೆಲೆಯು ರೂ.222 ರ ಸಮೀಪದಿಂದ ರೂ.113 ರವರೆಗೂ ಕುಸಿಯುವಂತಾಯಿತು. ಆ ಸಂದರ್ಭದಲ್ಲಿ ಪ್ರವರ್ತಕರು ಹೊಂದಿದ್ದ ಶೇ.8.27 ರ ಭಾಗಿತ್ವವು ಒತ್ತೆ ಇಡಲಾಗಿದ್ದ ಕಾರಣ ಕುಸಿದಿಂದುಟಾದ ಪರಿಣಾಮದಿಂದ ಪಾವತಿಸಬೇಕಾದ ಮಾರ್ಜಿನ್‌ ಹಣದ ಕೊರತೆಯ ಕಾರಣ ಫೈನಾನ್ಶಿಯರ್‌ ಗಳು ಒತ್ತೆ ಇಟ್ಟ ಷೇರುಗಳನ್ನು ಮಾರ್ಜಿನ್‌ ಹಣಕ್ಕಾಗಿ ಮಾರಾಟ ಮಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಈ ಕಾರಣದಿಂದ ಪ್ರವರ್ತಕರ ಭಾಗಿತ್ವವು ಶೇ.4.4 ಕ್ಕೆ ಕುಸಿಯಿತು. ಒಂದು ಜಾರಿಗೊಳಿಸಲಾಗದ ನಿರ್ಧಾರವನ್ನು ಪೇಟೆಯು ಆರಂಭಕ್ಕೂ ಮುನ್ನವೇ ಹಿಂದಿರುಗಿಪಡೆದರೂ ಅದನ್ನು ಕಾರ್ಪರೇಟ್‌ ನೀತಿ ಪಾಲನೆಯ ಲೋಪವೆಂದು ಪರಿಗಣಿಸಲಾಯಿತು.

    ಪ್ರಕರಣ : 2.

    2021 ರ ಅಕ್ಟೋಬರ್‌ 28 ರಂದು ಸಂಜೆ, ಐ ಆರ್‌ ಸಿ ಟಿ ಸಿ ಕಂಪನಿಯು ಆನ್‌ ಲೈನ್‌ ಬುಕ್ಕಿಂಗ್‌ ಮಾಡುವ ಗ್ರಾಹಕರಿಂದ ಸಂಗ್ರಹಿಸಿದ ಶುಲ್ಕದಲ್ಲಿ ರೇಲ್ವೇಗೂ ಪಾಲು ಕೊಡಬೇಕೆಂಬ ಸುತ್ತೋಲೆಯ ಕಾರಣ ಕಂಪನಿಯ ಲಾಭಗಳಿಕೆಯು ಕುಸಿಯುವುದೆಂದು ಭಾವಿಸಲಾಯಿತು. ಈ ಕಾರಣದಿಂದ ನಂತರದ ದಿನ ಪೇಟೆಯು ಆರಂಭವಾಗುತ್ತಿದ್ದಂತೆಯೇ ಮಾರಾಟದ ಒತ್ತಡ ಹೆಚ್ಚಾಗಿ ಷೇರಿನ ಬೆಲೆ ರೂ.822 ರಿಂದ ರೂ.639 ರವರೆಗೂ, ಷೇರುದಾರರಿಗೆ ಮಾರಾಟಮಾಡಲೂ ಸಹ ಅವಕಾಶ ನೀಡದೆ ಏಕಮುಖವಾಗಿ ಕುಸಿಯಿತು. ಮಾಡಬೇಕಾಗಿದ್ದಷ್ಠು ಹಾನಿಯನ್ನು ಉಂಟುಮಾಡಿದ ಮೇಲೆ ಎಚ್ಚೆತ್ತುಕೊಂಡ ಸರ್ಕಾರ DIPAM (Department of Investment and Public Asset Management) ಕಾರ್ಯದರ್ಶಿಗಳು ಸಾರ್ವಜನಿಕ ಷೇರುದಾರರ ಹಿತದ ದೃಷ್ಟಿಯಿಂದ ಇಂಥ ಕ್ರಮ ಸರಿಯಲ್ಲವೆಂಬ ಕಾರಣಕ್ಕಾಗಿ ಈ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂದು ದಿನದ ಚಟುವಟಿಕೆಯ ಮಧ್ಯೆ ಪ್ರಕಟಿಸಿದರು. ಆದರೂ ಅಷ್ಠೊತ್ತಿಗಾಗಲೇ ಆಗಬೇಕಾಗಿದ್ದ ಹಾನಿಯು ಪೂರ್ಣವಾಗಿತ್ತು. ಈ ಪ್ರಕಟಣೆಯ ನಂತರ ಷೇರಿನ ಬೆಲೆ ಮತ್ತೊಮ್ಮೆ ಚೇತರಿಕೆಯಿಂದ ರೂ.900 ರ ಗಡಿ ತಲುಪಿ ರೂ.845 ರ ಸಮೀಪ ದಿನದ ಅಂತ್ಯಗೊಂಡಿತು.

    ಈ ಮೇಲಿನ ಎರಡು ಪ್ರಕರಣಗಳನ್ನು ಪರಿಶೀಲಿಸಿದಾಗ ಮೊದಲನೆಯದರಲ್ಲಿ ಮಾರ್ಕೆಟ್‌ ಆರಂಭಕ್ಕೂ ಮುನ್ನವೇ ತೀರ್ಮಾನವನ್ನು ಹಿಂಪಡೆಯಲಾಯಿತಾದರೂ ಅದನ್ನ ಕಾರ್ಪೊರೇಟ್‌ ನೀತಿ ಪಾಲನೆ ಎಂದು ವಿಶ್ಲೇಷಿಸಲಾಯಿತು. ಎರಡನೆಯದರಲ್ಲಿ ಮಾರ್ಕೆಟ್‌ ಆರಂಭವಾಗಿ ಅರ್ಧದಿನದ ಸಮಯದಲ್ಲಿ ತೀರ್ಮಾನವನ್ನು ಹಿಂಪಡೆದು ಅನೇಕರಿಗೆ ಹಾನಿಯುಂಟುಮಾಡಿದರೂ ಅದು ನೀತಿ ಪಾಲನಾ ದೋಶ ಎಂದು ಗೋಚರಿಸಲಿಲ್ಲ. ಇದೂ ಒಂದು ರೀತಿಯ ಬದಲಾವಣೆ. ಇಂತಹ ಅನಿರೀಕ್ಷಿತ ಬೆಳವಣಿಗೆಗಳಿಂದಲೂ ಹೂಡಿಕೆದಾರರು ಎಚ್ಚರ ವಹಿಸಿಕೊಳ್ಳುವ ಕ್ರಮ ಕೈಗೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು

    ದಿಲ್ ವಾಲೆ ದಿಲ್ಲಿಯ ಜನರ ಉಮಂಗ್ ಭರಿ ತ್ಯೋಹಾರ್

    ದಿಲ್ಲಿ-DELHI-ಯಲ್ಲಿ ದೀಪಾವಳಿ ಹಬ್ಬದ ಆಚರಣೆಯನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ. ಮನೆಗಳ ಬಾಲ್ಕನಿಯಲ್ಲಿ ಅಂದವಾಗಿ ದೀಪಗಳನ್ನು ಹಚ್ಚಿ ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸುತ್ತಾರೆ. ಪ್ರತಿಯೊಬ್ಬರೂ ತಮ್ಮ ತಮ್ಮ ಒಳ್ಳೆಯ ಭಾವನೆಗಳನ್ನು ದೀಪದ ಮೂಲಕ ಅನಾವರಣ ಮಾಡುತ್ತಿದ್ದಾರೆ ಎಂದು ಇದನ್ನು ನೋಡಿದ ನನಗೆ ಅನ್ನಿಸುತ್ತಿತ್ತು. ಪರಸ್ಪರ ಸಿಹಿ ಹಂಚಿಕೊಂಡು, ಒಬ್ಬರನ್ನೊಬ್ಬರು ಅಪ್ಪಿಕೊಂಡು ದೀಪಾವಳಿಯ ಶುಭಾಶಯಗಳನ್ನು ಹೇಳುವ ದಿಲ್ ವಾಲೆ ದಿಲ್ಲಿಯ ಜನರನ್ನು ಮೆಚ್ಚಲೇಬೇಕು. ನಿಷ್ಕಲ್ಮಶವಾಗಿ ಒಬ್ಬರನ್ನೊಬ್ಬರು ಪ್ರೀತಿಯಿಂದ ಮಾತನಾಡಿಸಿ ಸಂತೋಷದಿಂದ ನಕ್ಕು-ನಲಿವ ಜನರಿದ್ದರೆ ಉಮಂಗ್ ಭರಿ ತ್ಯೋಹಾರುಗಳಿಗೆ ಮತ್ತಷ್ಟು ಸಂಭ್ರಮ.

    ಅವತ್ತು ಹೀಗೆಯೇ ದೀಪಾವಳಿ ಸಡಗರ. ಅಕ್ಕಪಕ್ಕದವರು ಸ್ನೇಹಿತರು ಗುರುತು ಪರಿಚಯವಿರುವವರು ಒಬ್ಬರಾದ ಮೇಲೆ ಒಬ್ಬರು ಮನೆಗೆ ಬರುತ್ತಲೇ ಇದ್ದಾರೆ . ನಾವು ನಮ್ಮ ಕಾಲೋನಿ ನಿವಾಸಿಗಳನ್ನು ಹಿಂದಿನ ದಿನವೇ ಭೇಟಿ ಮಾಡಿ ಹಬ್ಬದ ಶುಭಾಶಯಗಳನ್ನು ಹೇಳಿ ಬಿಟ್ಟಿದ್ದೆವು. ಹೀಗಾಗಿ ಇಂದು ಮನೆಗೆ ಬರುವ ಅತಿಥಿಗಳನ್ನು ಸ್ವಾಗತಿಸಿ ಶುಭಾಶಯ ಸ್ವೀಕರಿಸುವ ಸಂಭ್ರಮ ನಮಗೆ.

    ಈ ಮಧ್ಯೆ ನಾನೇ ಸ್ವತಃ ಫ್ರಾಕ್ ಗಳನ್ನು ಹೊಲೆದು ಎಂಬ್ರಾಯ್ಡರಿ ಮಾಡಿ ಮುದ್ದಾಗಿರುವ ನನ್ನ ಮಗಳಿಗೆ ಹಾಕಲೇಬೇಕು ಎಂಬ ಆಸೆಯೂ ನನಗೆ. ಈ ಫ್ರಾಕುಗಳನ್ನು ನೋಡಿದ ಎಲ್ಲರೂ ತುಂಬಾ ಚೆನ್ನಾಗಿದೆ ಎಲ್ಲಿ ತೆಗೆದುಕೊಂಡಿರಿ ಎಂದು ಕೇಳಬೇಕು. ಅದೇ ರೀತಿ ಫ್ರಾಕುಗಳನ್ನು ಹೊಲಿದು ಮಗಳಿಗೆ ಹಬ್ಬದ ದಿನ ಹಾಕಿ ಬೀಗಿದ್ದು ಆಯಿತು. ಮಗಳು ಕೇಳಿದವರಿಗೆ ನನ್ನ ಅಮ್ಮನೆ ಹೊಲಿದಿದ್ದು ಎಂದು ಹಿಂದಿಯಲ್ಲಿ ಹೇಳುತ್ತಿದ್ದರೆ ನನಗೆ ಹಬ್ಬದ ಸಡಗರ ನೂರ್ಮಡಿಸುತ್ತಿತ್ತು.

    ಆ ಸಮಯದಲ್ಲಿ ಎಲ್ಲ ಮಕ್ಕಳು ಆಟವಾಡುತ್ತ ಒಬ್ಬರು ಮತ್ತೊಬ್ಬರ ಮನೆಗೆ ಹೋಗುವುದು ಸಾಮಾನ್ಯವಾಗಿತ್ತು. ಈಗಿನ ಮಕ್ಕಳಿಗೆ ಬಿಡಿ. ಕೈಯಲ್ಲಿ ಮೊಬೈಲ್ ಇದ್ದರೆ ಯಾರೂ ಬೇಡ. ಆಗತಾನೆ ದಿಲ್ಲಿಯಲ್ಲಿ ಡಯೋನೋರಾ, ವೆಸ್ಟ ನ್, ವಿಡಿಯೋಕಾನ್ ಟೀವಿಗಳು ಅಡಿ ಇಡುತ್ತಿದ್ದ ಕಾಲ. ನಮ್ಮ ಕಾಲೋನಿಯ ಕೆಲವರ ಮನೆಗೂ ಟೀವಿ ಬಂದಿತ್ತು. ಮಕ್ಕಳು ಒಂದಾಗಿ ಟೀವಿ ನೋಡಲು ಒಬ್ಬೊಬ್ಬರ ಮನೆಗೆ ಹೋಗುವುದು ಸಾಮಾನ್ಯವಾಗಿತ್ತು. ಮಕ್ಕಳು ಮನೆಗೆ ಬಂದರೆ ಯಾರೂ ಬೇಸರ ಪಡುತ್ತಿರಲಿಲ್ಲ. ಸಂತಸವನ್ನೇ ಪಡುತ್ತಿದ್ದರು.

    ನಾವಿಬ್ಬರೂ ಬಂದವರೊಡನೆ ಮಾತುಕತೆಯಲ್ಲಿ ಬಿಝಿ ಇದ್ದಾಗ ನನ್ನ ನಾಲ್ಕು ವರ್ಷದ ಮಗಳು ಯಾವಾಗ ಕಣ್ಣುತಪ್ಪಿಸಿ ಹೊರಗೆ ಹೋದಳೋ ಗೊತ್ತಾಗಲಿಲ್ಲ. ಪಕ್ಕದ ಸರ್ದಾರ್ ಜೀ ಮನೆಯಲ್ಲಿ ಮಕ್ಕಳಿಗೆ ಮದುವೆಯಾದ ಮೇಲೆ ಮೊದಲ ದೀಪಾವಳಿ ಆಚರಿಸುತ್ತಿದ್ದರು.ಅವರ ಪಟಾಕಿ ಸಡಗರವೂ ಜೋರಾಗಿಯಿ ಇತ್ತು. ಪಕ್ಕದ ಪಾರ್ಕಿನಲ್ಲಿ ಬೇರೆ ಆನೆ ಪಟಾಕಿ ಹಚ್ಚುತ್ತಿದ್ದಾರೆ. ಶಬ್ದಜೋರಾಗಿದೆ. ಪಟಾಕಿ ಸದ್ದಿನ ಆರ್ಭಟದಲ್ಲಿ ಮನೆಯ ಮನೆಯಿಂದ ಹೊರಗೆ ಹೋಗುವುದು ಸಾಧ್ಯವೇ ಇಲ್ಲ. ಬಾಲ್ಕನಿಯಲ್ಲಿಯೇ ನಿಂತು ಒಬ್ಬರಿಗೊಬ್ಬರು ಶುಭಾಶಯಗಳನ್ನು ಹೇಳಬೇಕಾದ ಅಂತಹ ಸ್ಥಿತಿ.

    ಈ ಗದ್ದಲದಲ್ಲಿಯೇ ಮಗಳು ಕಾಣದಿದ್ದಾಗ ಬಾಲ್ಕನಿಯಲ್ಲಿಯೇ ನಿಂತು ಅಕ್ಕಪಕ್ಕದವರನ್ನು ಮಗಳು ನಿಮ್ಮ ಮನೆಗೆ ಬಂದಿದ್ದಾಳ ಎಂದು ಕೇಳಿದೆ. ಮಕ್ಕಳ ಜೊತೆ ಪಾರ್ಕಿನಲ್ಲಿ ಆಟವಾಡುತ್ತಿದ್ದಾಳೆೆ ಎಂದರು ಒಬ್ಬರು. ಪಾರ್ಕಿಗೆ ಹೋದರೆ ಅಲ್ಲಿ ಒಬ್ಬ ಮಕ್ಕಳು ಕಾಣುತ್ತಿಲ್ಲ. ಗಾಬರಿಯಾಯಿತು.

    ನಾವಿಬ್ಬರೂ ಅಕ್ಕಪಕ್ಕದವರ ಮನೆಗೆ ಹೋಗಿ ಮಗಳು ರಂಜು ಬಂದಿದ್ದಾಳ ಕೇಳಿದಾಗ ಯಾರೂ ತಮ್ಮ ಮನೆಗೆ ಬಂದಿಲ್ಲವೆಂದರು. ನನಗೆ ಕಣ್ಣೀರು . ಮಕ್ಕಳ ಮೇಲೆ ಗಮನವೇ ಇರುವುದಿಲ್ಲ ಎಂದು ಯಜಮಾನರು ಬೇರೆ ರೇಗಾಡುತ್ತಾ ನನ್ನ ತಪ್ಪಿತಸ್ಥ ಭಾವನೆಗೆ ತುಪ್ಪ ಸುರಿಯುತ್ತಿದ್ದರು. ಸಾಧ್ಯವಾದಷ್ಟು ಬೇಗ ಪೊಲೀಸರಿಗೆ ದೂರು ಕೊಡಲು ಅವರು ಯೋಚಿಸುತ್ತಿದ್ದಾರೆ ಎಂದು ನನಗೆ ಅರಿವಾಯಿತು.

    ಈ ಸಮಯದಲ್ಲಿ ನಮಗೆ ಇನ್ನು ಪರಿಚಯ ಇರದ, ಕಾಲೋನಿಗೆ ಹೊಸದಾಗಿ ಬಂದವರ ಮನೆ ಮುಂದೆ ನಾಲ್ಕಾರು ಮಕ್ಕಳು ನಗುನಗುತ್ತಾ ಒಬ್ಬರ ಕೈಯನ್ನು ಒಬ್ಬರು ಹಿಡಿದುಕೊಂಡು ಪಟಾಕಿ ಹೊಡೆದಿದ್ದು ಮುಗಿಯಲಿ ಮನೆಗೆ ಹೋಗೋಣ ಎಂದು ಮಾತನಾಡುತ್ತಿದ್ದು ನನ್ನ ಕಿವಿಗೆ ಬಿತ್ತು. ತಿರುಗಿ ನೋಡಿದರೆ ಆ ಮಕ್ಕಳ ಜೊತೆ ನನ್ನ ಮಗಳು ಇದ್ದಾಳೆ. ಹೋದ ಜೀವ ಮರಳಿ ಬಂದಂತೆ ಆಯ್ತು.

    ಎಲ್ಲಿಗೆ ಹೋಗಿದ್ದೇ ರಂಜು ಇಷ್ಟು ಹೊತ್ತು ಎಂದರೆ ಹೊಸ ಆಂಟಿ, ಅಂಕಲ್ ಮನೆಯಲ್ಲಿ ಟಾಮ್ ಆ್ಯಂಡ್ ಜೆರ್ರಿ ನೋಡುತ್ತಿದ್ದೆವು ಎನ್ನಬೇಕೆ. ಅವಳ ಮಾತು ಕೇಳಿ ನನಗೆ ನಗಬೇಕೋ ಅಳ ಬೇಕೋ ಗೊತ್ತಾಗಲಿಲ್ಲ.

    ಈಗ ಬೆಂಗಳೂರಿನ ಜಯನಗರದಲ್ಲಿ ನೆಲೆಸಿರುವ ನನಗೆ ಮೊಮ್ಮಗ ವಿಖ್ಯಾತನ ಪಟಾಕಿ ಸದ್ದು ಕೇಳುತಿದ್ದಂತೆ ಈ ಘಟನೆ ನೆನಪಾಯಿತು.

    ರಾಜ್ಯದಲ್ಲಿ ‘ಕೌಶಲ ಬೇಡಿಕೆ ನಿರ್ಧಾರಣಾ ಸಮೀಕ್ಷೆ’ ನಡೆಸಲು ನಿರ್ಧಾರ

    NEW DELHI NOV 3

    ಯೋಜಿತ ಕೌಶಲ ತರಬೇತಿಗೆ ಅನುಕೂಲವಾಗುವಂತೆ ಕರ್ನಾಟಕ ರಾಜ್ಯದಲ್ಲಿ ‘ಕೌಶಲ ಬೇಡಿಕೆ ನಿರ್ಧಾರಣಾ ಸಮೀಕ್ಷೆ’ ನಡೆಸಲು ಬುಧವಾರ ಇಲ್ಲಿ ನಿರ್ಧರಿಸಲಾಯಿತು. ಕೇಂದ್ರದ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತಾ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರೊಂದಿಗೆ ಕರ್ನಾಟಕದ ಕೌಶಲಾಭಿವೃದ್ಧಿ ಹಾಗೂ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ನಡೆಸಿದ ಸಭೆಯ ವೇಳೆ ಈ ನಿರ್ಧಾರ ಹೊರಹೊಮ್ಮಿತು.

    ಈ ರೀತಿಯ ಸಮೀಕ್ಷೆ ಮಾಡಿಸುವುದರಿಂದ ರಾಜ್ಯದ ಯಾವ್ಯಾವ ವಲಯದಲ್ಲಿ ಎಂತೆಂತಹ ಕೌಶಲಗಳಿಗೆ ಬೇಡಿಕೆ ಇದೆ ಎಂಬುದರ ಸ್ಪಷ್ಟ ಚಿತ್ರಣ ಸಿಗುತ್ತದೆ. ಇದನ್ನು ಆಧರಿಸಿ ಪ್ರಸ್ತುತ ಬೇಡಿಕೆಗಳಿಗೆ ಅನುಸಾರವಾಗಿ ಯುವಜನತೆಯನ್ನು ತರಬೇತುಗೊಳಿಸಲು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

    ಇದೇ ವೇಳೆ ರಾಜೀವ್ ಚಂದ್ರಶೇಖರ್ ಅವರು, ರಾಷ್ಟ್ರೀಯ ಮಟ್ಟದ ಐ.ಟಿ.ಸಚಿವರ ಸಮಾವೇಶವೊಂದನ್ನು ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಆಗ ಅಶ್ವತ್ಥ ನಾರಾಯಣ ಅವರು, ಇಂತಹ ಸಮಾವೇಶವನ್ನು ಕರ್ನಾಟಕದಲ್ಲೇ ನಡೆಸಲು ಕೋರಿದರು. ಇದರಿಂದ ಐಟಿ ಹಾಗೂ ಐಟಿಇಎಸ್ ಆಧಾರಿತ ಹೊಸ ತಾಂತ್ರಿಕತೆಗಳಲ್ಲಿ ರಾಜ್ಯದಲ್ಲಿ ಆಗಿರುವ ಬೆಳವಣಿಗೆಗಳನ್ನು ಪ್ರದರ್ಶಿಸಲು ಅವಕಾಶವಾಗುತ್ತದೆ ಎಂದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಜೀವ್ ಅವರು, ಈ ಸಂಬಂಧವಾಗಿ ಕೇಂದ್ರ ಇಲಾಖೆಗೆ ಪತ್ರವನ್ನು ಬರೆಯಲು ಸಲಹೆ ನೀಡಿದರು.

    ಸಚಿವ ಅಶ್ವತ್ಥ ನಾರಾಯಣ ಅವರು ‘ಮೇಕ್ ಇನ್ ಇಂಡಿಯಾ’ ರೀತಿಯಲ್ಲಿ ‘ಮೇಕ್ ಇನ್ ಕರ್ನಾಟಕ’ಕ್ಕೆ ಆದ್ಯತೆ ಕೊಡಬೇಕಾದ ಅಗತ್ಯವಿದೆ ಎಂದರು. ಜೊತೆಗೆ, ಕೈಮಗ್ಗದವರು ಸೇರಿದಂತೆ ರಾಜ್ಯದೆಲ್ಲೆಡೆ ಇರುವ ಕುಶಲಕರ್ಮಿಗಳ ಮ್ಯಾಪಿಂಗ್ ಸಿದ್ಧಪಡಿಸಬೇಕಾದ ಮಹತ್ವದ ಬಗ್ಗೆ ಪ್ರಸ್ತಾಪಿಸಿದರು. ರಾಜ್ಯದಲ್ಲಿ ಅರೆವಾಹಕ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳ ಬೆಳವಣಿಗೆಗೆ ಒತ್ತು ಕೊಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

    ಇದಕ್ಕೆ ಮುನ್ನ ಸಚಿವ ನಾರಾಯಣ ಅವರು ಮಂಗಳವಾರ ಐವರು ಕೇಂದ್ರ ಸಚಿವರನ್ನು ಭೇಟಿಯಾಗಿ ತಮ್ಮ ಇಲಾಖೆಗಳ ಪ್ರಸ್ತಾವಗಳ ಬಗ್ಗೆ ಚರ್ಚಿಸಿ ಸಹಕಾರ ಕೋರಿದ್ದರು.

    ವ್ಯಾಯಾಮಕ್ಕೆ ಮುನ್ನ ಹೃದಯದ ಶಕ್ತಿ ಗಮನಿಸಿ

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿರ್ಗಮನ ಎಲ್ಲರಲ್ಲೂ ದಿಗ್ಭ್ರಾಂತಿ ಮೂಡಿಸಿದೆ. ಇಡೀ ನಾಡನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಈ ಬಾರಿಯ ದೀಪಾವಳಿ ಮಂಕಾಗಿದೆ. ಈ ಶಾಕ್ ನಿಂದ ಹೊರಬರುವುದು ಸಾಧ್ಯವಾಗುತ್ತಿಲ್ಲ.

    ದೇಹದಾರ್ಢ್ಯತೆ ಎನ್ನುವುದು ಅಪಾಯಕಾರಿಯೇ ಎಂಬ ಪ್ರಶ್ನೆಗಳನ್ನು ಈ ನಿರ್ಗಮನ ಹುಟ್ಟು ಹಾಕಿದೆ. ರಾಜ್ಯ ಸರ್ಕಾರವು ಜಿಮ್ ಗಳಿಗೆ ಮಾರ್ಗಸೂಚಿ ಹೊರಡಿಸುವಷ್ಟು ಆತಂಕ ಎಲ್ಲರಲ್ಲೂ ಹುಟ್ಟಿಸಿದೆ.ತಜ್ಞರೊಂದಿಗೆ ಚರ್ಚಿಸಿ ಮಾರ್ಗಸೂಚಿ ಹೊರಡಿಸುವುದಾಗಿ ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.

    ಸದೃಢರಾಗಿದ್ದೂ ಕ್ರೀಡಾಪಟುಗಳು ಹಾಗೂ ಫುಟ್ ಬಾಲ್ ಆಟಗಾರರು ಮರಣಿಸಿದ ಕುರಿತು ಹೃದಯ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ ಕೆಲವು ಅಂಶಗಳನ್ನುಇಲ್ಲಿ ಗಮನಿಸಬಹುದು.

    * ಕ್ರೀಡಾಪಟುಗಳು ಮತ್ತು ಅತಿಯಾದ ವ್ಯಾಯಾಮ ಮಾಡುವವರು ಅವರ ಹೃದಯಕ್ಕೆ ಅಪಾರ ದಣಿವನ್ನುಂಟು ಮಾಡುತ್ತಾರೆ.

    * ವ್ಯಾಯಾಮ ಹೆಚ್ಚು ಶ್ರಮದಾಯಕವಾದಂತೆ ಹೃದಯ ಅತಿಯಾಗಿ ಕೆಲಸ ಮಾಡಬೇಕಾಗುತ್ತದೆ ಏಕೆಂದರೆ ಅದು ರಕ್ತವನ್ನು ಪಂಪ್ ಮಾಡುತ್ತಿರುತ್ತದೆ. ಕೆಲವೊಮ್ಮೆ ಅದು ವಿಸ್ತರಣೆಯಾಗುತ್ತದೆ. ಅತಿಯಾದ ಕೆಲಸದ ಒತ್ತಡದಿಂದ ಅದು ಕೆಲಸ ಮಾಡುವುದನ್ನು ನಿಲ್ಲಿಸಬಹುದು.
    ಆದ್ದರಿಂದ ಹೃದಯದ ಮೇಲೆ ಬೀಳುವ ಒತ್ತಡ ಸಾಮಾನ್ಯಕ್ಕಿಂತ ಹೆಚ್ಚಾಗಬಾರದು.

    *ವರ್ಕೌಟ್ ನಿಂದ ವಿಸ್ತಾರಗೊಂಡ ಹೃದಯವು ಸಹಜ ಸ್ಥಿತಿಗೆ ಮರಳಲು ಒಂದು ವರ್ಷ ತೆಗೆದುಕೊಳ್ಳಬಹುದು. ಅತಿಯಾದ ವ್ಯಾಯಾಮಗಳನ್ನು ಕೈಗೊಳ್ಳುವ ಮುನ್ನ ಈ ವಿಷಯಗಳ ಕುರಿತು ಅರಿವನ್ನು ಹೊಂದಿರಬೇಕು.

    ಅನುವಂಶಿಕತೆಯ ಪಾತ್ರ

    ಅನುವಂಶಿಕತೆ ಹೃದಯ ಸಂಬಂಧಿ ರೋಗಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ಭಾರತೀಯರಲ್ಲಿ ಹೃದಯ ರೋಗಗಳ ಸಂಭವನೀಯತೆ ಹೆಚ್ಚಾಗಿದೆ. ಭಾರತೀಯರಲ್ಲಿ ಕಿರಿಯ ವಯಸ್ಸಿಗೆ ಹೃದಯಾಘಾತದ ಸಂಭವನೀಯತೆ ಹೆಚ್ಚು. ವೈದ್ಯರ ಪ್ರಕಾರ ಶೇ.45ರಷ್ಟು ಮಂದಿ ಸೈಲೆಂಟ್ ಇಷೆಮಿಯಾದಿಂದ ಬಳಲುತ್ತಿರಬಹುದು. ಅದು ತೀವ್ರ ಹೃದಯಾಘಾತವಾಗುವವರೆಗೂ ಗೊತ್ತಾಗುವುದೇ ಇಲ್ಲ.

    ತೀವ್ರವಾದ ವ್ಯಾಯಾಮವು ಹೃದಯದ ಅಪಧಮನಿಗಳಿಗೆ ಒತ್ತಡ ಉಂಟು ಮಾಡುತ್ತದೆ. ಅದು ರಕ್ತನಾಳಗಳನ್ನು ಛಿದ್ರಗೊಳಿಸಿ ರಕ್ತ ಪ್ರಸಾರಕ್ಕೆ ಅಡಚಣೆ ತಂದೊಡ್ಡಬಹುದು. ಇದರಿಂದ ಹೃದಯಾಘಾತ ಸಂಭವಿಸಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

    ಹಠಾತ್ ಸಾವಿನ ಸಂದರ್ಭದಲ್ಲಿ ವೆಂಟ್ರಿಕ್ಯುಲರ್ ಫೈಬ್ರಿಲಿಯೇಷನ್ (ಅಸಹಜ ಹೃದಯಬಡಿತದ ಒಂದು ಬಗೆ)ಎಂಬ ಸಮಸ್ಯೆ ಉಂಟಾಗಿರುತ್ತದೆ. ಈ ಸಂದರ್ಭದಲ್ಲಿ ಯಾವುದೇ ರೋಗಿಗೆ ಡಿಫಿಬ್ರಿಲಿಯೇಷನ್ ಮೆಷಿನ್ ಬಳಸಿ ನಾಲ್ಕು ನಿಮಿಷಗಳ ಒಳಗೆ ಶಾಕ್ ನೀಡಿದ್ದಲ್ಲಿ ಅವರನ್ನು ಉಳಿಸುವ ಸಾಧ್ಯತೆ ಇರುತ್ತದೆ. ಸೈಲೆಂಟ್ ಇಷೆಮಿಯಾದಿಂದ ಬಳಲುತ್ತಿರುವವರಿಗೆ ಯಾವುದೇ ಮುನ್ಸೂಚನೆಯೂ ಇರುವುದೇ ಇಲ್ಲ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ.

    ಕುಟುಂಬ ವೈದ್ಯರಿಂದ ಮಾರ್ಗದರ್ಶನ ಪಡೆದು ಐದೇ ನಿಮಿಷದಲ್ಲಿ ಆಸ್ಪತ್ರೆ ಸೇರಲು ಸಾಧ್ಯವಾಗಿದ್ದರೂ ಪುನೀತ್ ಅವರನ್ನು ಈ ಯಾವ ತಂತ್ರಜ್ಞಾನವೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದು ಅವರನ್ನು ಅಭಿಮಾನಿಸುವ ಪ್ರತಿಯೊಬ್ಬರಲ್ಲೂ ತೀವ್ರವಾದ ಕೊರಗಾಗಿ ಉಳಿದಿದೆ.

    ಹೀಗಾಗಿ ಪ್ರತಿವರುಷಕ್ಕೊಮ್ಮೆ ಎಲ್ಲರೂ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಮತ್ತೊಬ್ಬ ತಜ್ಞ ವೈದ್ಯ ಡಾ.ದೇವಿ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

    DEEPAVALI :ಸಾಲು ಹಣತೆಗಳ ಹಬ್ಬ-ದೀಪಾವಳಿ

    ಎಂ.ವಿ.ಶಂಕರಾನಂದ

    ದೀಪಾವಳಿ- ಶಬ್ದವು ದೀಪ ಮತ್ತು ಅವಳಿ ಹೀಗೆ ರೂಪಿತಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗುತ್ತದೆ. ಮನೆಯ ತುಂಬಾ ದೀಪಗಳನ್ನು ಹಚ್ಚಿ, ಅದರ ನಗುವಿನ ಬೆಳಕಲ್ಲಿ ನಾವು ನಗುತ್ತಾ ಸಂಭ್ರಮಿಸುವುದೇ ದೀಪಾವಳಿ ಹಬ್ಬ.

    ದೀಪಯತಿ ಸ್ವಯಂ ಪರ ಚ ಇತಿ ದೀಪಃ’’ ಅಂದರೆ ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ.ತಮಸೋಮಾ ಜ್ಯೋತಿರ್ಗಮಯ’’ ಎಂಬ ಮಾತಿನಂತೆ ಅಜ್ಞಾನದ ಕತ್ತಲೆಯಿಂದ ಜ್ಞಾನದ ದಿಕ್ಕಿಗೆ ನಮ್ಮನ್ನು ಕೊಂಡೊಯ್ಯುವುದೇ ದೀಪ. ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಬೆಳಕಿನ ಹಣತೆಯ ಹಚ್ಚಿ ದೀಪ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ಎಲ್ಲೆಲ್ಲೂ ಜ್ಞಾನ, ನಿರ್ಮಲ ಆನಂದ, ಶುದ್ಧ ಮನಸ್ಸಿನ ಪ್ರೀತಿಯ ಬೆಳಗಿಸುವ ಸಂಕೇತವಾಗಿ ಆಚರಿಸಲ್ಪಡುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ.

    ಈ ದೀಪಗಳನ್ನು ಬೆಳಗಿಸುವುದರಿಂದ ಮಾನವನ ಪಾಪಗಳು ದೂರವಾಗಿ ಆತನಿಗೆ ವಿಶೇಷವಾದ ಪುಣ್ಯ ಸಿಗುತ್ತದೆ ಎಂಬುದಾಗಿ ಶಾಸ್ತ್ರಗಳು ಹೇಳುತ್ತವೆ. ಯಾವ ಮನೆಯಲ್ಲಿ ಪ್ರತಿನಿತ್ಯವೂ ಸೂರ್ಯಾಸ್ತದಿಂದ ಸೂರ್ಯೋದಯದವರೆಗೂ ದೀಪ ಬೆಳಗುತ್ತದೆಯೋ ಆ ಮನೆಯಲ್ಲಿ ಸುಖಸಂಪತ್ತು ಸಮೃದ್ಧವಾಗಿರುತ್ತದೆ. ಮತ್ತೆ ಅಂತಹ ಮನೆಗಳಲ್ಲಿ ದಾರಿದ್ರ್ಯ ಸುಳಿಯುವುದಿಲ್ಲ. ಹಾಗಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ವಿಶೇಷ ಮಹತ್ವವಿದೆ.

    ದೀಪೇನ ಲೋಕಾನ್ ಯಜತಿ ದೀಪಸ್ತೇಜೋಮಯಃ ಸ್ಮೃತಃI
    ಚರುರ್ವರ್ಗಪ್ರದೋ ದೀಪಸ್ತಸ್ಮಾದ್ ದೀಪೈರ್ಯಜೇತ್ ಪ್ರಿಯೇII

    ತೇಜೋಮಯವಾದ ದೀಪವು ಧರ್ಮ, ಅರ್ಥ, ಕಾಮ, ಮೋಕ್ಷ ರೂಪವಾದ ನಾಲ್ಕು ವರ್ಗಪ್ರದವಾಗಿದೆ. ಅಂತಹ ದೀಪವನ್ನು ಬೆಳಗಿಸು ಎಂದು ಈ ಶ್ಲೋಕವು ತಿಳಿಸುತ್ತದೆ.

    ದೀಪಾವಳಿ ಆರಂಭ ಎಂದಿನಿಂದ ?

    ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಶ್ರೀರಾಮಚಂದ್ರನು ಅಯೋಧ್ಯೆಗೆ ಹಿಂತಿರುಗಿದಾಗ ಪ್ರಜೆಗಳು ಬಂಗಾರದ ಕಲಶವನ್ನು ಮಣಿರತ್ನಗಳಿಂದ ಅಲಂಕರಿಸಿ, ಮನೆಯೆದುರು ಹೊಸ್ತಿಲಿನ ಮೇಲಿಟ್ಟರು, ದೀಪೋತ್ಸವವನ್ನು ಆಚರಿಸಿದರು. ಅಂದಿನಿಂದ ದೀಪಾವಳಿ ಹಬ್ಬದ ಆಚರಣೆ ಪ್ರಾರಂಭವಾಯಿತು ಎನ್ನುತ್ತಾರೆ.

    ದೀಪಾವಳಿಯನ್ನು ಭಾರತದಲ್ಲಷ್ಟೇ ಅಲ್ಲದೆ, ಶ್ರೀಲಂಕಾ, ಮಲೇಷ್ಯಾ, ಸಿಂಗಾಪುರ, ಆಸ್ಟ್ರೇಲಿಯಾ, ಥಾಯ್ಲೆಂಡ್‌ಗಳಲ್ಲಿ ಸಹ ಆಚರಿಸುತ್ತಾರೆ. ಇದು ಜೈನರ 24ನೇ ತೀರ್ಥಂಕರರಾದ ಮಹಾವೀರರು ನಿರ್ವಾಣ ಹೊಂದಿದ ದಿನವಾದ್ದರಿಂದ ಜೈನರು ಇದರ ಅಮಾವಾಸ್ಯೆಯನ್ನು ಹೊಸವರ್ಷದ ಆರಂಭವಾಗಿ ಆಚರಿಸುತ್ತಾರೆ. ಈ ದಿನದಂದೇ ಅಶೋಕ ಚಕ್ರವರ್ತಿ ಬೌದ್ದ ಧರ್ಮಕ್ಕೆ ಪರಿವರ್ತನೆಯಾದನು ಎಂಬ ಪ್ರತೀತಿ ಬೌದ್ಧರಲ್ಲಿದೆ. ಹೀಗಾಗಿ ಅವರು ದೀಪಾವಳಿಯನ್ನು ಅಶೋಕ ವಿಜಯದಶಮಿಯಾಗಿ ಆಚರಿಸುತ್ತಾರೆ. ಸಿಖ್ಖರ ೬ನೇ ಗುರು ಹರಗೋವಿಂದ ಸಿಂಗ್ ೧೬೧೯ರಂದು ಗ್ವಾಲೀಯಾರ್ ಕೋಟೆಯ ಸೆರೆಮನೆಯಿಂದ ಈ ದಿನವೇ ಬಿಡುಗಡೆ ಹೊಂದಿದ್ದರು. ಆದ್ದರಿಂದ ಗುರು ತಮ್ಮ ಬಾಳಿಗೆ ಬೆಳಕು ತಂದುದಕ್ಕಾಗಿ ಸಿಖ್ಖರು ದೀಪಾವಳಿಯನ್ನು ಬಂದಿಚಾರ್ ದಿನವಾಗಿ ಆಚರಿಸುತ್ತಾರೆ.

    ದೀಪಾವಳಿಯನ್ನು ಆಶ್ವಯುಜದ ಕೊನೆಯಲ್ಲಿನ ಕೃಷ್ಣ ತ್ರಯೋದಶಿ(ಧನ ತ್ರಯೋದಶಿ), ಕೃಷ್ಣ ಚತುರ್ದಶಿ(ನರಕ ಚತುರ್ದಶಿ), ಅಮಾವಾಸ್ಯೆ(ಲಕ್ಷ್ಮೀಪೂಜೆ) ಮತ್ತು ಕಾರ್ತೀಕ ಮಾಸದ ಆರಂಭದ ಶುಕ್ಲ ಪಾಡ್ಯ(ಬಲಿ ಪಾಡ್ಯಮಿ), ಯಮ ದ್ವಿತೀಯಗಳಂದು ಅದ್ಧೂರಿಯಾಗಿ ಐದು ದಿನಗಳ ಹಬ್ಬವನ್ನಾಗಿ, ಸಾಂಪ್ರದಾಯಕವಾಗಿ ಆಚರಿಸುತ್ತೇವೆ.

    ಹಬ್ಬದ ಆಚರಣೆ

    ಆಶ್ವಯುಜ ಬಹುಳ ತ್ರಯೋದಶಿಯಂದು ದೀಪಾವಳಿ ಹಬ್ಬವು ಆರಂಭವಾಗುತ್ತದೆ. ಆ ದಿನ ರಾತ್ರಿ ಎಳ್ಳೆಣ್ಣೆ ದೀಪ ಹಚ್ಚಿ, ಮನೆ ಮುಂದಿರುವ ಬಹು ಎತ್ತರವಾದ ಜಾಗದಲ್ಲಿ ದೀಪ ಇಡುವುದರಿಂದ ಅಪಮೃತ್ಯು’ ನಿವಾರಣೆಯಾಗುತ್ತದೆ. ಈ ದೀಪವನ್ನು ಯಮದೇವರ ಪ್ರೀತಿಗಾಗಿ, ಮೃತ್ಯು ನಿವಾರಣೆಗಾಗಿ ಇಡುತ್ತೇವೆ. ಹಾಗಾಗಿ ಈ ದೀಪವನ್ನುಯಮದೀಪ’ ಎನ್ನುತ್ತೇವೆ. ಅದೇ ದಿನದ ಸಂಜೆ ಹಂಡೆಯಲ್ಲಿ ನೀರು ತುಂಬಿಸುವ ಹಬ್ಬ ಎನ್ನುತ್ತೇವೆ. ಹಂಡೆಯನ್ನು ವಿವಿಧ ಹೂಗಳಿಂದ ಅಲಂಕಾರ ಮಾಡಿ, ಸುಣ್ಣ ಮತ್ತು ಕೆಮ್ಮಣ್ಣಿನಿಂದ ರಂಗೋಲಿ ಬಿಡಿಸುತ್ತಾರೆ. ಹಂಡೆಗೆ ನೀರು ತುಂಬಿಸಿ ಎಲೆ ಅಡಿಕೆ, ಹೂವು, ನಾಣ್ಯ ಹಾಕಿ ಪೂಜಿಸುತ್ತಾರೆ. ಈ ದಿನವನ್ನು ಧನತ್ರಯೋದಶಿ ಎಂದೂ ಕರೆಯುತ್ತಾರೆ. ಈ ದಿನ ಹೊಸ ಬಂಗಾರವನ್ನು ಖರೀದಿ ಮಾಡುವುದರಿಂದ ಮನೆಯಲ್ಲಿ ವರ್ಷವಿಡೀ ಧನಲಕ್ಷ್ಮಿಯು ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ.

    ಮಾರನೇ ದಿನವೇ ನರಕ ಚತುರ್ದರ್ಶಿ. ದೀಪಾವಳಿಯ ಪ್ರಮುಖ ದಿನ. ನರಕ ಎಂಬುವುದಕ್ಕೆ ಅಜ್ಞಾನ ಎಂದರ್ಥ. ಈ ಅಜ್ಞಾನವು ಚತುರ್ದಶಿಯ ದಿನವೇ ನಾಶವಾಗಿ ಜ್ಞಾನವು ದೊರೆಯಲಿ ಎಂದು ಈ ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಚತುರ್ದಶಿ ಎಂದರೆ ೧೪ ವಿದ್ಯೆ ಎಂದರ್ಥ. ಜ್ಞಾನವನ್ನು ಪಡೆಯಲು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದ, ಕಲ್ಪ, ಸಂಹಿತೆ, ಜ್ಯೋತಿಷ್ಯ, ಪುರಾಣ, ಸ್ಮೃತಿ, ವ್ಯಾಕರಣ, ಶೀಕ್ಷಾ, ನ್ಯಾಯ, ಛಂದಸ್ಸು, ಮೀಮಾಂಸೆ ಎಂಬ ೧೪ ವಿದ್ಯೆಗಳನ್ನು ಕಲಿಯಬೇಕೆಂದು ಶಾಸ್ತ್ರವು ತಿಳಿಸುತ್ತದೆ. ಅಂದು ವಿಶೇಷವಾಗಿ ಅಭ್ಯಂಜನ ಮಾಡುವುದನ್ನು ನಮ್ಮ ಧರ್ಮಶಾಸ್ತ್ರ ಹೇಳುತ್ತದೆ.

    ತೈಲೇ ಲಕ್ಷ್ಮೀರ್ಜಲೇ ಗಂಗಾ ದೀಪಾವಲ್ಯಾಂ ಚತುದರ್ಶಿ
    ಪ್ರಾತಃ ಸ್ನಾನಂ ತು ಯಃ ಕುರ್ಯಾದ್ಯಮಲೋಕಂ ನ ಪಶ್ಯತಿ


    ಎಣ್ಣೆಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯೂ, ನೀರಿನಲ್ಲಿ ಗಂಗೆಯೂ ನೆಲೆಸಿರುತ್ತಾರೆ. ಎಣ್ಣೆ ಹಚ್ಚಿಸಿಕೊಂಡು ಹದವಾದ ಬಿಸಿನೀರಿನಲ್ಲಿ ಮಾಡುವ ಅಭ್ಯಂಗ ಸ್ನಾನದಿಂದ ಗಂಗಾ-ಲಕ್ಷ್ಮಿಯರ ಅನುಗ್ರಹವಾಗಿ ಆಯುರಾರೋಗ್ಯ ಭಾಗ್ಯವುಂಟಾಗಿ ನವಚೈತನ್ಯ ಮೂಡುತ್ತದೆ. ಹಾಗೆಯೇ ಅಜ್ಞಾನವೆಂಬ ಕತ್ತಲೆ ದೂರವಾಗಿ ಸುಜ್ಞಾನವೆಂಬ ಬೆಳಕು ಮಾನವನಿಗೆ ಲಭಿಸುತ್ತದೆ.

    ಪೌರಾಣಿಕ ಹಿನ್ನಲೆ

    ನರಕ ಚತುರ್ದಶಿಯ ಬಗ್ಗೆ ಒಂದು ಪೌರಾಣಿಕ ಹಿನ್ನಲೆಯಿದೆ. ಇಂದಿನ ಅಸ್ಸಾಂ ಹಿಂದೆ ಕಾಮರೂಪವೆಂಬ ಹೆಸರಿನ ರಾಜ್ಯವಾಗಿತ್ತು. ನರಕಾಸುರನೆಂಬ ರಾಕ್ಷಸರಾಜ ಅದನ್ನು ಆಳುತ್ತಿದ್ದ. ಅವನು ಭೂದೇವಿಯ ಮಗನಾಗಿದ್ದು, ಬಹಳ ದೊಡ್ಡ ತಪಸ್ಸು ಮಾಡಿ ಬ್ರಹ್ಮನಿಂದ ವರವನ್ನು ಪಡೆದಿದ್ದ. ಎಲ್ಲ ದೇವತೆಗಳು, ಯಕ್ಷರನ್ನು, ಭೂಲೋಕದ ರಾಜರನ್ನು ಸೋಲಿಸಿ ಅಜೇಯನಾಗಿ, ಹದಿನಾರು ಸಾವಿರ ಕನ್ಯೆಯರನ್ನು ಸೆರೆಮನೆಯಲ್ಲಿ ಬಂದಿಸಿದ್ದ. ದೇವತೆಗಳ ಮಾತೆಯಾದ ಅದಿತಿಯ ಕರ್ಣಕುಂಡಲಗಳನ್ನು ಕಿತ್ತು ತಂದಿದ್ದ ಕ್ರೂರಿಯಾಗಿದ್ದ. ಎಲ್ಲಾ ದೇವತೆಗಳು ಸೇರಿ ಶ್ರೀಕೃಷ್ಣನನ್ನು ಪ್ರಾರ್ಥಿಸಿದಾಗ, ಶ್ರೀಕೃಷ್ಣನು ಭೂದೇವಿ ಸ್ವರೂಪಿಯಾದ ಸತ್ಯಭಾಮೆಯೊಂದಿಗೆ ಆಶ್ವಯುಜ ಕೃಷ್ಣ ಚತುರ್ದಶಿಯ ಮಧ್ಯರಾತ್ರಿ ಸರಕಾಸುರನನ್ನು ಕೊಂದು ಹಾಕಿದ. ಆ ದಿನವನ್ನೇ ನರಕ ಚತುರ್ದಶಿಯೆಂದು ಲೋಕಾದ್ಯಂತ ಹಬ್ಬವಾಗಿ ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ ಅಂದು ನರಕಾಸುರನ ಸಂಹಾರ ಮಾಡಿ ಬಂದ ಕೃಷ್ಣನಿಗೆ ಸುಮಂಗಲೆಯರು ಆರತಿ ಬೆಳಗುತ್ತಾರೆ. ಆ ಪದ್ಧತಿಯಂತೆ ಇಂದಿಗೂ ಮನೆಯಲ್ಲಿನ ಮಕ್ಕಳಿಗೆ ಆರತಿ ಮಾಡುವುದು ಸಂಪ್ರದಾಯದಂತೆ ಬೆಳೆದು ಬಂದಿದೆ.


    ಮೂರನೆಯ ದಿನ ಸಾಯಂಕಾಲ ಅಮಾವಾಸ್ಯೆಯ ರಾತ್ರಿ ಮನೆಯಲ್ಲಿನ ಅಲಕ್ಷ್ಮಿಯನ್ನು ಹೊರಹಾಕುವ ಉದ್ದೇಶದಿಂದ ಲಕ್ಷ್ಮಿಪೂಜೆಯನ್ನು ಮಾಡಿ ಮನೆಯ ತುಂಬಾ ದೀಪವನ್ನು ಬೆಳಗಬೇಕೆಂದು ಕೂಡ ಶಾಸ್ತ್ರ ತಿಳಿಸುತ್ತದೆ. ಈ ದಿನ ಲಕ್ಷ್ಮಿ ಪೂಜೆಗೆ ತುಂಬಾ ಪ್ರಶಸ್ತವಾದ ದಿನ. ಹಿರಣ್ಮಯಿ, ತೇಜಸ್ವಿ, ಜೀವನಪೋಷಕ ಹಾಗೂ ಚೈತನ್ಯಮಯಿಯಾದ ಲಕ್ಷ್ಮಿಯನ್ನು ವಾದ್ಯಘೋಷಗಳ ಸಹಿತ ಪ್ರವೇಶದ್ವಾರದಿಂದ ಮನೆಯೊಳಗೆ ಕರೆತಂದು ಅವಳ ವಾಸ್ತವ್ಯಕ್ಕೆ ಸ್ಥಾನ ನೀಡಿ ಪೂಜೆ ಮಾಡುವುದೇ-ಲಕ್ಷ್ಮೀಪೂಜೆ. ಈ ಅಮಾವಾಸ್ಯೆಯು ಕಲ್ಯಾಣಸ್ವರೂಪಿಯಾಗಿರುತ್ತದೆ. ಈ ಸಮಯದಲ್ಲಿ ರೈತರು ಬೆಳೆದ ದವಸ ಧಾನ್ಯಗಳು ಮನೆಗೆ ಬಂದಿರುತ್ತವೆ. ಮನೆಯಲ್ಲಿ ಆನಂದವಿರುತ್ತದೆ. ತಾವು ಪಟ್ಟ ಪರಿಶ್ರಮದ ಫಲವು ಭಗವಂತನ ಕೃಪೆಯಿಂದ ಅವರಿಗೆ ದೊರಕಿರುತ್ತದೆ. ಕೃಷಿಯಿಂದ ಉತ್ಪನ್ನವಾದ ಬೆಳೆಯೇ ನಿಜವಾದ ಲಕ್ಷ್ಮಿಯಾಗಿರುತ್ತದೆ. ಇಂದು ಮಹಾವಿಷ್ಣು ಮಹಾಲಕ್ಷ್ಮಿಯರ ವಾಷಿಕ ಪುನರ್ಮಿಲನ ದಿನ ಎನ್ನುತ್ತಾರೆ. ಅಮಾವಾಸ್ಯೆ ಕಗ್ಗತ್ತಲಾಗಿರುತ್ತದೆ. ದೀಪ ಬೆಳಗಿಸಿ ಕತ್ತಲನ್ನು ಓಡಿಸುವುದು ಜ್ಯೋತಿ ಸ್ವರೂಪಿಣಿಯಾದ ಮಹಾಲಕ್ಷ್ಮಿ. ಹಾಗಾಗಿ ಈ ದಿನ ಸಂಜೆ ಪ್ರಾಜ್ಞರಿಗೆ ದೀಪ ದಾನ ಮಾಡಿದರೆ ಸರ್ವ ಇಷ್ಟಾರ್ಥ ನೆರವೇರಿ, ಸಕಲ ಸಂಪತ್ತು ವೃದ್ಧಿಸುತ್ತದೆ. ಹಾಗೆಯೇ ಇದು ಶ್ರೀಕೃಷ್ಣನು ದೇಹತ್ಯಾಗ ಮಾಡಿದ ದಿನವೆಂದೂ, ನಚಿಕೇತನಿಗೆ ಆತ್ಮ ಸಾಕ್ಷಾತ್ಕಾರವಾದ ದಿನವೆಂದೂ ಹೇಳುತ್ತಾರೆ.

    ನಾಲ್ಕನೇಯ ದಿನವನ್ನು ಬಲಿಪಾಡ್ಯಮಿ ಎಂದು ಕರೆಯುತ್ತಾರೆ. ಮಹಾವಿಷ್ಣುವು ವಾಮನಾವತಾರದಿಂದ ಬಲಿಚಕ್ರವರ್ತಿಯ ಅಹಂಕಾರವನ್ನು ತೊಲಗಿಸಿ, ಆತನನ್ನು ಪಾತಾಳಕ್ಕೆ ನೂಕಿದ ದಿನ. ಪ್ರತಿವರ್ಷ ಕಾರ್ತೀಕ ಮಾಸದ ಮೊದಲ ದಿನವಾದ ಇಂದು ಸಂಜೆ ಬಲಿ ಚಕ್ರವರ್ತಿಯು ತನ್ನ ಸಾಮ್ರಾಜ್ಯವನ್ನು ನೋಡಲೆಂದು ಭೂಮಿಗೆ ಬಂದು ಮೂರೂಮುಕ್ಕಾಲು ಘಳಿಗೆ ಇರುತ್ತಾನೆಂದೂ ನಂಬಿಕೆಯಿದೆ. ಹೀಗಾಗಿಯೇ ಅಂದು ಸಂಜೆ ಬಲೀಂದ್ರನ ಪೂಜೆ ಮಾಡಲಾಗುತ್ತದೆ. ಹೊಲ ಗದ್ದೆ, ಮನೆಗಳಲ್ಲಿ ಬಲೀಂದ್ರನ ಸ್ವಾಗತಿಸಲೆಂದು ಸಾಲು ದೀಪಗಳನ್ನು ಹಚ್ಚಿಡುತ್ತಾರೆ. ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಎತ್ತಿದ್ದು ಇದೇ ದಿನವಂತೆ. ಆದ್ದರಿಂದ ಈ ದಿನ ಗೋಪೂಜೆ ಹಾಗೂ ಗೋವರ್ಧನನ ಪೂಜೆಗೆ ಮಹತ್ವ. ಈ ದಿನ ಗೋವಿನ ಪೂಜೆ ಮಾಡಿ ಅದಕ್ಕೆ ಅಕ್ಕಿ, ಬೆಲ್ಲ ನೀಡಿ ಪ್ರಾರ್ಥಿಸುವುದರಿಂದ ಮಾನವನಿಗೆ ಇಹದಲ್ಲಿ ಸೌಖ್ಯ, ಪರದಲ್ಲಿ ಮುಕ್ತಿವುಂಟಾಗುತ್ತದೆ ಎನ್ನುತ್ತಾರೆ.

    ಐದನೇಯ ದಿನವನ್ನು ಯಮ ದ್ವಿತೀಯ ಅಥವಾ ಭ್ರಾತೃ ದ್ವಿತೀಯ ಎಂದು ಆಚರಿಸುತ್ತಾರೆ. ಈ ದಿನ ಯಮ ತನ್ನ ತಂಗಿ ಯಮಿಯ ಮನೆಗೆ ಭೇಟಿ ಕೊಡುತ್ತಾನೆಂಬ ನಂಬಿಕೆ ಇದೆ. ತಂಗಿ ಅಣ್ಣನಿಗೆ ತಿಲಕವಿಟ್ಟು, ಸಿಹಿ ತಿನ್ನಿಸಿ, ಆರತಿ ಎತ್ತುತ್ತಾಳೆಂಬ ಪ್ರತೀತಿ. ಕಾರ್ತೀಕ ಪಾಡ್ಯದಿಂದ ಮನೆಬಾಗಿಲಲ್ಲಿ ಮತ್ತು ತುಳಸಿ ಕಟ್ಟೆಯ ಎದುರು ಒಂದು ತಿಂಗಳು ಪೂರ್ತಿ ದೀಪವನ್ನು ಹಚ್ಚಿಡುತ್ತಾರೆ. ಕೆಲವರು ಮನೆಯೆದುರು ಆಕಾಶಬುಟ್ಟಿಗಳನ್ನು ಕಟ್ಟುತ್ತಾರೆ. ಈ ರೀತಿ ದೀಪವನ್ನು ಹಚ್ಚಿಡುವ ದೀಪದ ಜ್ಯೋತಿಯು ಸತ್ತ ನಂತರ ಆತ್ಮ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವಾಗ ಬೆಳಕು ತೋರುತ್ತದೆ ಎಂಬುದು ನಂಬಿಕೆ.

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    error: Content is protected !!