19.8 C
Karnataka
Wednesday, November 27, 2024
    Home Blog Page 42

    ಮನೆ ಬಾಗಿಲಿಗೇ ಬರಲಿದೆ ಆಧಾರ್‌, ಪಿಂಚಣಿ, ಖಾತಾ, ಆರೋಗ್ಯ ಕಾರ್ಡ್‌

    ಜನವರಿ 26ರಂದು ಗ್ರಾಮೀಣ ಭಾಗಕ್ಕೂ ವಿಸ್ತರಣೆ

    ಸದ್ಯಕ್ಕೆ 8 ಇಲಾಖೆಗಳ 58 ಸೇವೆಗಳು ಲಭ್ಯ

    ಕೇವಲ 115 ರೂ ಶುಲ್ಕ ನಿಗದಿ

    ಬೆಂಗಳೂರು:

    ಆಧಾರ್ ಕಾರ್ಡ್, ವಿಧವಾ ಪಿಂಚಣಿ, ವೃದ್ಧಾಪ್ಯ ವೇತನ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳ 58 ಸೇವೆಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸುವ ಜನ ಸೇವಕ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಮಲ್ಲೇಶ್ವರನಲ್ಲಿ ಚಾಲನೆ ನೀಡಿದರು.

    ಪ್ಯಾಲೇಸ್ ಗುಟ್ಟಹಳ್ಳಿಯ 4 ಮತ್ತು 5ನೇ ಅಡ್ಡರಸ್ತೆಗಳಲ್ಲಿರುವ ಆಯ್ದ 10 ಮನೆಗಳಿಗೆ ಸ್ಥಳೀಯ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಜತೆ ತೆರಳಿದ ಮುಖ್ಯಮಂತ್ರಿಯವರು ವಿವಿಧ ಸೇವೆಗಳನ್ನು ಸಂಬಂಧಪಟ್ಟವರ ಮನೆಯೊಳಗೇ ಹೋಗಿ ತಲುಪಿಸಿದರು. ಇದರಿಂದ ಸ್ಥಳೀಯ ಜನರು ಹರ್ಷಚಿತ್ತರಾದರು. ಮುಖ್ಯಮಂತ್ರಿ ಮತ್ತು ಸಚಿವರಿಗೆ ಪುಷ್ಪವೃಷ್ಟಿ ಮಾಡಿ ಸಂಭ್ರಮಿಸಿದರು. ಪ್ರತಿ ಮನೆಯ ಒಳಗೆ ಹೋಗಿ, ಅವರಿಗೆ ಆಧಾರ್‌ ಕಾರ್ಡ್‌, ಆರೋಗ್ಯ ಕಾರ್ಡ್‌, ಎಪಿಎಲ್‌ ಕಾರ್ಡ್‌ ನೀಡಿದರು. ನಿರ್ಮಾಣ ಹಂತದ ಕಟ್ಟಡದೊಳಗೆ ಹೋಗಿ ಅಲ್ಲಿದ್ದ ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್‌ ನೀಡಿದರು. ತಳ್ಳುವ ಗಾಡಿಯಲ್ಲಿ ಹೂವು ಮಾರಾಟ ಮಾಡುತ್ತಿದ್ದ ಮಹಿಳೆಗೆ ಆರೋಗ್ಯ ಕಾರ್ಡ್‌ ನೀಡಿದರು. ಮುಖ್ಯಮಂತ್ರಿಯೇ ಬಂದು ಈ ರೀತಿ ಸೇವೆ ಒದಗಿಸಿದ್ದು ನಿಜಕ್ಕೂ ಸಂತಸ ತಂದಿದೆ ಎಂದು ಎಲ್ಲರೂ ಧನ್ಯತೆ ಮೆರೆದರು.

    ಈ ಯೋಜನೆಯನ್ನು ಇಡೀ ಬೆಂಗಳೂರಿನಲ್ಲಿ ಜಾರಿ ಮಾಡುತ್ತಿದ್ದು, ಅದರ ಸಾಂಕೇತಿಕ ಉದ್ಘಾಟನೆ ಮಲ್ಲೇಶ್ವರದಲ್ಲಿ ಆಗಿದೆ. ಜನವರಿ 26ರಿಂದ ರಾಜ್ಯದ ಗ್ರಾಮೀಣ ಭಾಗಕ್ಕೂ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು. ಜನರ ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದರ ಜತೆಗೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಆಲಿಸಲು ಕಾಲ್ ಸೆಂಟರ್ ಕೂಡ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಪಡಿತರ ಕೂಡ ನೇರವಾಗಿ ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಹೇಳಿದರು. ಜನಪ್ರತಿನಿಧಿಗಳು, ತಮ್ಮನ್ನು ಆರಿಸಿದ ಜನರ ಬಳಿಗೆ ತಾವೇ ಹೋಗಬೇಕೆನ್ನುವುದು ಸರಕಾರದ ಆಶಯವಾಗಿದೆ. ಈ ಆಶಯಕ್ಕೆ ಅನುಗುಣವಾಗಿಜನಸೇವಕ’ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.

    ನಡೆದೇ ಹೋದ ಸಿಎಂ, ಸಚಿವರು!

    ಮುಖ್ಯಮಂತ್ರಿಯವರು ಖುದ್ದು ಜನಸೇವಕರಂತೆ ಸ್ಕೂಟರಿನಲ್ಲಿ ಹೋಗಿಯೇ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಬೇಕಿತ್ತು. ಆದರೆ, ಕಾರ್ಯಕ್ರಮಕ್ಕೆ ಭಾರೀ ಜನ ಸೇರಿದ್ದ ಕಾರಣ, ಅವರು ಸಚಿವ ಅಶ್ವತ್ಥನಾರಾಯಣ ಅವರೊಂದಿಗೆ ನಡೆದುಕೊಂಡು ಹೋಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕ್ಷಣದಲ್ಲಿ ಇಕ್ಕೆಲಗಳಲ್ಲೂ ಅಕ್ಕಪಕ್ಕದ ಮಹಡಿಯ ಮೇಲೆಲ್ಲ ನೆರೆದಿದ್ದ ಜನರು ಸಿಎಂ ಮತ್ತು ಸಚಿವರ ಮೇಲೆ ಪುಷ್ಪವೃಷ್ಟಿ ಮಾಡಿ, ಹರ್ಷಿಸಿದರು. ಒಟ್ಟಿನಲ್ಲಿ, ಕಾರ್ಯಕ್ರಮದ ಅಂಗವಾಗಿ ಮಲ್ಲೇಶ್ವರಂನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.

    8 ಇಲಾಖೆಗಳ 58 ಸೇವೆಗಳು ಲಭ್ಯ

    `ಜನಸೇವಕ’ ಯೋಜನೆಯಡಿ ಸದ್ಯಕ್ಕೆ ರಾಜ್ಯ ಸರಕಾರದ 8 ಇಲಾಖೆಗಳ 58 ಸೇವೆಗಳು ಮನೆ ಬಾಗಿಲಿಗೇ ಬರಲಿವೆ. ಈ ಇಲಾಖೆಗಳಲ್ಲಿ ಕಂದಾಯ, ಆರೋಗ್ಯ, ಪೊಲೀಸ್, ವಸತಿ, ಶಿಕ್ಷಣ, ಜಲಮಂಡಲಿ, ಇಂಧನ, ಸಾರಿಗೆ, ಆಹಾರ ಇಲಾಖೆ ಸೇರಿವೆ. ಇದರ ವ್ಯಾಪ್ತಿಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಇಲಾಖೆ ಹಾಗೂ ಸೇವೆಗಳನ್ನು ಸೇರಿಸಲಾಗುವುದು. ವಿವರಗಳಿಗೆ www.janasevakakarnataka.gov.in ನೋಡಬಹುದು. ಅಥವಾ ಫೋನ್ ನಂ. 080-44554455ನ್ನು ಸಂಪರ್ಕಿಸಬಹುದು. ಮಲ್ಲೇಶ್ವರಂ ಕ್ಷೇತ್ರದ ನಾಗರಿಕರು ಸಂಪರ್ಕಿಸಬಹುದಾದ ಸಂಖ್ಯೆ 080-23563943.

    ಯಾವ್ಯಾವ ಸೇವೆಗಳು ಸಿಗಲಿವೆ?

    `ಜನಸೇವಕ’ ಯೋಜನೆಯಡಿ ಸದ್ಯಕ್ಕೆ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ವಿಧವಾ ವೇತನ, ವೃದ್ಧಾಪ್ಯ ವೇತನ, ಬಿಬಿಎಂಪಿ ಖಾತಾ ಸೇವೆಗಳು, ಹಿರಿಯ ನಾಗರಿಕರ ಕಾರ್ಡ್, ಆಧಾರ್ ಕಾರ್ಡ್, ಆಯುಷ್ಮಾನ್ ಭಾರತ- ಆರೋಗ್ಯ, ಕರ್ನಾಟಕ ಐಡಿ ಕಾರ್ಡ್ (ಹೆಲ್ತ್ ಕಾರ್ಡ್), ಮತದಾರರ ಗುರುತಿನ ಚೀಟಿಗಳು ಕೋರಿಕೆಯ ಮೇರೆಗೆ ಕ್ಷಿಪ್ರ ಗತಿಯಲ್ಲಿ ಮನೆ ಬಾಗಿಲಿಗೇ ತಲುಪಲಿವೆ. ಈ ಕೆಲಸವನ್ನು ನಿರ್ದಿಷ್ಟ ವಿನ್ಯಾಸದ ಟೀ-ಶರ್ಟ್ ಧಾರಿಗಳಾಗಿ ಸ್ಕೂಟರಿನಲ್ಲಿ ಬರುವ ಜನಸೇವಕರ ಪಡೆ ಮಾಡಲಿದೆ.

    ದಣಿವಿನ ಉಸಾಬರಿ ಇಲ್ಲ, ಸುಲಭ ಶುಲ್ಕ

    `ಜನಸೇವಕ’ ಯೋಜನೆಯಡಿ ಸಾರ್ವಜನಿಕರು ನಿಶ್ಚಿಂತೆಯಿಂದ ಇರಬಹುದು. ಅಂದರೆ, ಆಗಬೇಕಾದ ಕೆಲಸಗಳಿಗಾಗಿ ಹತ್ತಾರು ಸಲ ಸುತ್ತುವುದು, ಟ್ರಾಫಿಕ್ ಜಾಮ್ ನ ಕಿರಿಕಿರಿ, ವ್ಯರ್ಥ ಕಾಲಹರಣ ಏನೂ ಇಲ್ಲ. ಸರಕಾರವು ಇದರಡಿಯಲ್ಲಿ ಕೇವಲ 115 ರೂ.ಶುಲ್ಕ ನಿಗದಿಪಡಿಸಿದ್ದು, ಇದರ ಮೇಲೊಂದಿಷ್ಟು ಸೇವಾಶುಲ್ಕ ಸೇರಿಸಲಾಗಿದೆ ಅಷ್ಟೆ.

    ಮೊದಲ ದಿನದ ಫಲಾನುಭವಿಗಳು

    ಮೊದಲ ದಿನದಂದೇ ಮಲ್ಲೇಶ್ವರದ ಧನಲಕ್ಷ್ಮಿ (ಮನೆ ಪ್ರಮಾಣ ಪತ್ರ), ಶ್ರವ್ಯಾ (ಜಾತಿ ಮತ್ತು ಆದಾಯ ಪ್ರಮಾಣ ಪತ್ರ), ನಾಗೇಶ್ (ಖಾತಾ), ನಾಗರತ್ನ ಮತ್ತು ಮುಕ್ತಾ (ವಿಧವಾ ವೇತನ), ರಮೇಶ್ (ಲೇಬರ್ ಕಾರ್ಡ್), ನಜೀರ್ (ಹಿರಿಯ ನಾಗರಿಕರ ಕಾರ್ಡ್), ಶಿವಶಂಕರ್ (ಆಧಾರ್), ಶ್ರೀನಿವಾಸಮೂರ್ತಿ (ಎಪಿಎಲ್ ಕಾರ್ಡ್), ಜಯರಾಂ ಮತ್ತು ವೆಂಕಟಲಕ್ಷ್ಮಿ (ಎಆರ್ಕೆಎಚ್) ಸೇವೆಗಳನ್ನು ಪಡೆದುಕೊಂಡರು. ಇವರಲ್ಲಿ ಬೀದಿ ಬದಿಯಲ್ಲಿ ಹೂ ಮಾರುವವರು, ಗುಡಿಸಲಿನಲ್ಲಿ ವಾಸವಿರುವವರು, ಕಟ್ಟಡ ಕಾರ್ಮಿಕರು, ಒಂಟಿಯಾಗಿ ಬದುಕುತ್ತಿರುವ ಹಿರಿಯ ನಾಗರಿಕರು ಎಲ್ಲರೂ ಇದ್ದುದೊಂದು ವಿಶೇಷ.

    ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ ಸಿಂಗ್‌, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ಬಸವರಾಜು, ಇಡಿಸಿಎಸ್ ನಿರ್ದೇಶಕಿ ದೀಪ್ತಿ ಕಾನಡೆ, ಜನಸೇವಕ ಯೋಜನೆಯ ನಿರ್ದೇಶಕ ವರಪ್ರಸಾದ್ ರೆಡ್ಡಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

    ಎಲ್ಲಾದರು ಇರು ಎಂತಾದರು ಇರು ಕನ್ನಡಿಗನಾಗಿ ಹೆಮ್ಮೆಯಿಂದ ಇರು

    ಇಂದು ನವೆಂಬರ್ 1,    ವಿಶ್ವಾದ್ಯಂತ  ಕನ್ನಡಿಗರಿಗೆಲ್ಲರಿಗೂ   ಸಂಭ್ರಮದ ದಿನ.    ದಕ್ಷಿಣ ಭಾರತದ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ಅಖಂಡ  ರಾಜ್ಯವನ್ನಾಗಿ  ಘೋಷಣೆ ಮಾಡಿದ  ಸುದಿನ.  1956ರ ನವೆಂಬರ್ 1ರಂದು  ಮೈಸೂರು ರಾಜ್ಯವು(ಈಗಿನ ಕರ್ನಾಟಕ) ನಿರ್ಮಾಣವಾದುದರ ಸಂಕೇತವಾಗಿ ಅಂದಿನಿಂದ  ಕನ್ನಡ  ರಾಜ್ಯೋತ್ಸವವನ್ನು ನಾಡಹಬ್ಬವನ್ನಾಗಿ  ಆಚರಿಸಲಾಗುತ್ತದೆ.    ಸುಮಾರು 2000 ವರ್ಷಗಳಿಗಿಂತಲೂ ಮಿಗಿಲಾದ ಇತಿಹಾಸ ಇರುವ ಕನ್ನಡ ನಾಡು  ನುಡಿಯು   ಕಲೆ,  ಸಾಹಿತ್ಯ, ಸಂಸ್ಕೃತಿ, ಶಿಕ್ಷಣ,  ಕ್ರೀಡೆ,  ವಾಸ್ತುಶಿಲ್ಪ, ವಾಣಿಜ್ಯ,  ಆರ್ಥಿಕತೆ, ಶಿಲ್ಪಕಲೆ,  ಪ್ರವಾಸ,  ವಿಜ್ಞಾನ,  ತಂತ್ರಜ್ಞಾನ, ಅನೇಕ  ವಿಷಯಗಳಲ್ಲಿ  ರಾಷ್ಟ್ರ ಮಾತ್ರವಲ್ಲ  ವಿಶ್ವದಲ್ಲಿಯೇ  ಒಂದು ವಿಶೇಷ ಸ್ಥಾನಮಾನ ಹೊಂದಿದೆ.    ಕನ್ನಡ ನಾಡಿನ   ವಿಶೇಷತೆಗಳು, ಸಾಧನೆಗಳು  ಒಂದೆರಡಲ್ಲ, ನೂರಾರು.  ಅವುಗಳಲ್ಲಿ  ಕೆಲವೊಂದನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ.  ಅವುಗಳನ್ನು ಒಂದೊಂದಾಗಿ ತಿಳಿಯುತ್ತಾ ಹೋದಂತೆ     ಪ್ರತಿಯೊಬ್ಬ ಕನ್ನಡಿಗನಲ್ಲಿಯೂ   ಕನ್ನಡಿಗನಾಗಿ ಹುಟ್ಟಿರುವುದಕ್ಕೆ  ಅಭಿಮಾನ ತನ್ನಿಂತಾನೇ ಮೂಡಿಬರುತ್ತದೆ.  ಇದೇ  ಅಭಿಮಾನದಲ್ಲಿ  ಕನ್ನಡ ರಾಜ್ಯೋತ್ಸವದ ದಿನದಂದು ಮಾತ್ರವಲ್ಲ ಪ್ರತಿ ದಿನ, ಪ್ರತಿ ಕ್ಷಣವು ಕನ್ನಡಿಗರೆಲ್ಲರೂ ಹೆಮ್ಮೆಯಿಂದ ಸಂಭ್ರಮಿಸಬಹುದು.

    • ತಾರ್ಕಿಕವಾಗಿ ಮತ್ತು ವೈಜ್ಞಾನಿಕವಾಗಿ99.99 % ಪರಿಪೂರ್ಣವಾಗಿರುವ ಭಾಷೆ ಎಂದು ಗುರುತಿಸಲ್ಪಟ್ಟಿರುವ  ಭಾಷೆ  ಕನ್ನಡ.
    • ಪ್ರಾಚೀನವಾದ ಹಲ್ಮಿಡಿ ಶಾಸನದಲ್ಲಿ  ಕಾಣುವ  ಕನ್ನಡ   ಲಿಪಿಯು     ಕ್ರಿ.ಶ 450 ರ   ಸಮಯದಲ್ಲೇ   ಕನ್ನಡ ಆಡಳಿತ ಭಾಷೆಯಾಗಿತ್ತು ಎಂಬುವುದನ್ನು  ದೃಢಪಡಿಸುತ್ತದೆ.(ಚಿತ್ರ ನೋಡಿ)
    • ಎರಡನೇ ಶತಮಾನದಷ್ಟು ಹಿಂದೆಯೇ ಕನ್ನಡ ಭಾಷೆ ಗ್ರೀಸ್ ದೇಶದವರೆಗೂ ತನ್ನ ಕಂಪನ್ನು ಬೀರಿತ್ತು; ಚಾರಿಯಟ್ ಮೈಮ್ (Charition mime) ಎಂಬ ಎರಡನೇ ಶತಮಾನದ ಗ್ರೀಕ್ ನಾಟಕವೊಂದರಲ್ಲಿ  ಕನ್ನಡ ನುಡಿಗಟ್ಟುಗಳನ್ನು ಬಳಸಲಾಗಿತ್ತು. 
    • ಜಗತ್ತಿನಲ್ಲಿರುವ ಒಟ್ಟು  7,117 ಭಾಷೆಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮಾತನಾಡುವ ಭಾಷೆಗಳ ಪಟ್ಟಿಯಲ್ಲಿ 30 ನೇ ಸ್ಥಾನದಲ್ಲಿರುವ ಭಾಷೆ ಕನ್ನಡ.
    • ಜರ್ಮನಿಯ ರೆವರೆಂಡ್ ಎಫ್. ಕಿಟ್ಟೆಲ್,    1894ರಲ್ಲಿ ಭಾರತೀಯ ಉಪಖಂಡದ ಇತಿಹಾಸ,  ಸಂಸ್ಕೃತಿ, ಭಾಷೆ, ಮತ್ತು ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಲು  ಆಯ್ಕೆಮಾಡಿಕೊಂಡಿರುವುದು ಕನ್ನಡನಾಡು  ಮತ್ತು ಅವರು ನಿಘಂಟು ರಚಿಸಿರುವ  ಭಾರತೀಯ ಏಕೈಕ  ಭಾಷೆ ಕನ್ನಡ.
    • ಭಾರತ ಸರ್ಕಾರದಿಂದ  ಶಾಸ್ತ್ರೀಯ ಭಾಷೆಯ ಸ್ಥಾನವನ್ನು ಪಡೆದಿರುವ ೬ ಭಾಷೆಗಳಲ್ಲಿ ಕನ್ನಡವೂ ಒಂದು.
    • ಭಾರತದಲ್ಲಿ ಅತಿ ಹೆಚ್ಚು  ಜ್ಞಾನಪೀಠ  ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ   ಸಾಹಿತ್ಯ ದಿಗ್ಗಜರನ್ನು ಹೊಂದಿರುವ ರಾಜ್ಯ ಕರ್ನಾಟಕ (ಕುವೆಂಪು,  ಶ್ರೀ ರಾಮಾಯಣ ದರ್ಶನಂ-1967; ದ. ರಾ. ಬೇಂದ್ರ, ನಾಕುತಂತಿ – 1973; ಕೆ. ಶಿವರಾಮ ಕಾರಂತ, ಮೂಕಜ್ಜಿಯ ಕನಸುಗಳು – 1977; ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ – 1983; ವಿ. ಕೃ. ಗೋಕಾಕ, ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ – 1990; ಯು. ಆರ್. ಅನಂತಮೂರ್ತಿ ಕನ್ನಡ ಸಾಹಿತ್ಯಕ್ಕೆ ಸಮಗ್ರ – 1994;  ಗಿರೀಶ್ ಕಾರ್ನಾಡ್ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ, ನಾಟಕಗಳು – 1998;  ಚಂದ್ರಶೇಖರ ಕಂಬಾರ – ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ  -2010).
    • ವಿಕಿಪೀಡಿಯ ವಿಶ್ವಕೋಶ ಲಾಂಚನದಲ್ಲಿ ಸ್ಥಾನ ಪಡೆದಿರುವ ಜಗತ್ತಿನ  ಭಾಷೆಗಳಲ್ಲಿ ಕನ್ನಡವು ಒಂದು. 
    • ಜಗತ್ಪ್ರಸಿದ್ಧ  ವಚನ ಸಾಹಿತ್ಯ ಮತ್ತು   ದಾಸ ಸಾಹಿತ್ಯ ಪರಂಪರೆಯು ಬೆಳೆದುಬಂದಿರುವ ತಾಣ ಕನ್ನಡ ನಾಡು.
    • ತಾಜ್ ಮಹಲ್ ನಂತರ ಭಾರತದ  ಅತ್ಯಂತ ಅತೀ  ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ  ತಾಣ  ಕೃಷ್ಣರಾಜೇಂದ್ರ ಒಡೆಯರು  ನಿರ್ಮಿಸಿದ ಮೈಸೂರು ಅರಮನೆ.
    • 57 ಅಡಿ ಎತ್ತರವಿದ್ದು,  ಸುಮಾರು  30 ಕಿ.ಮೀ ದೂರದಿಂದಲೂ   ನೋಡಬಹುದಾದ  ವಿಶ್ವದ ಅತಿದೊಡ್ಡ ಏಕಶಿಲೆಯ ಪ್ರತಿಮೆ ಇರುವುದು ಕರ್ನಾಟಕದ  ಶ್ರವಣಬೆಳಗೋಳದಲ್ಲಿ. 
    • ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುವ  ಮತ್ತು  “ಪಿಸುಗುಟ್ಟುವ ಶಾಲೆ”ಯಲ್ಲಿ ಅತಿ ಸಣ್ಣ ಶಬ್ದವೂ 37 ಮೀಟರ್  ದೂರದಲ್ಲಿ ಸ್ಪಷ್ಟವಾಗಿ ಕೇಳಿಬರುವ  ವಿಶಿಷ್ಟ  ವಾಸ್ತುಶೈಲಿಯ ವಿಶ್ವದ ಏಕೈಕ  ಕಟ್ಟಡ ಮತ್ತು   ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್   ಬಿಜಾಪುರದ (ವಿಜಯಪುರ) ಗೋಲ ಗುಮ್ಮಟ. 
    • ದೇಶದ ಎರಡನೇ  ಅತ್ಯಂತ  ಎತ್ತರದಿಂದ ಧುಮುಕುವ ಜಲಪಾತ ಹಾಗೂ  ವಿಶ್ವದಲ್ಲಿ 13  ನೇ ಸ್ಥಾನದಲ್ಲಿರುವ ಪ್ರವಾಸಿಗರ ಆಕರ್ಷಣೀಯ ತಾಣ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತ. 
    • ‘ಭಾರತೀಯ ಶಿಲ್ಪಕಲೆಯ ತೊಟ್ಟಿಲು’ ಎಂದು ಖ್ಯಾತಿ ಹೊಂದಿರುವ ಪ್ರವಾಸಿ ತಾಣ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ   ಐಹೊಳೆ.
    • ರಾಷ್ಟ್ರೀಯ ಪ್ರಾಣಿ   ಹುಲಿ  ಅತಿ  ಹೆಚ್ಚು ಸಂಖ್ಯೆಯಲ್ಲಿರುವ  ಭಾರತದ  ಎರಡನೇ  ರಾಜ್ಯ ಕರ್ನಾಟಕ.
    • ನಾಯಕ ನಟನಾಗಿ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ  ರಾಷ್ಟ್ರೀಯ ಪ್ರಶಸ್ತಿ ಪಡೆದ ಭಾರತದ ಏಕೈಕ ಸಿನಿಮಾ ತಾರೆ  ಡಾ. ರಾಜಕುಮಾರ್. 
    • ನೀರೊಳಗಿನ ಚಿತ್ರೀಕರಣ ಮಾಡಿದ ಮೊದಲ ಭಾರತೀಯ ಚಿತ್ರ  ಶಂಕರ್ ನಾಗ್ ನಿರ್ದೇಶನದ ‘ಒಂದು ಮುತ್ತಿನ ಕಥೆ’.
    • ಭಾರತದ ಅತಿದೊಡ್ಡ ಕಚ್ಚಾ ರೇಷ್ಮೆ ಉತ್ಪಾದನಾ ಘಟಕಗಳ ನೆಲೆ ಎಂದು ಗುರುತಿಸಿಕೊಂಡಿರುವ ರಾಜ್ಯ  ಕರ್ನಾಟಕ;  ಪೇಟೆಂಟ್ ಪಡೆದಿರುವ   ಮೈಸೂರು ರೇಷ್ಮೆ ಜಗತ್ತಿನ ಅತ್ಯಂತ ಉತ್ಕೃಷ್ಟ ರೇಷ್ಮೆಗಳಲ್ಲಿ ಒಂದು ಎಂದು ಮನ್ನಣೆ ಪಡೆದಿದೆ.
    • ಭಾರತದ ರಾಷ್ಟ್ರ ಧ್ವಜಗಳನ್ನು ತಯಾರಿಸಲು ಮತ್ತು ಪೂರೈಸಲು ಸರ್ಕಾರದ ಅಧಿಕೃತ ಅನುಮತಿಯನ್ನು ಹೊಂದಿರುವ ಭಾರತದ ಏಕೈಕ ಘಟಕ ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ.
    • ಭಾರತದಲ್ಲಿನ ಎಲ್ಲಾ ಚುನಾವಣೆಗಳಿಗೆ ಬಳಸಲಾಗುವ ಅಳಿಸಲಾಗದ ಕಪ್ಪು ಶಾಯಿಯನ್ನು ತಯಾರಿಸಲು ಅಧಿಕಾರ ಹೊಂದಿರುವ ಏಕೈಕ ಸ್ಥಳ ಮೈಸೂರಿನಲ್ಲಿರುವ  ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್.
    • 1780 ರ ದಶಕದಲ್ಲಿ,  ಟಿಪ್ಪು ಸುಲ್ತಾನ್ ಮತ್ತು ಹೈದರ್ ಆಲಿ ಆಳ್ವಿಕೆಯ ಕಾಲದಲ್ಲಿ ಲೋಹ-ಸಿಲಿಂಡರ್ ಮತ್ತು ಕಬ್ಬಿಣ-ಕೇಸ್ಡ್ ರಾಕೆಟ್ ಫಿರಂಗಿಗಳನ್ನು ಪ್ರಥಮ ಬಾರಿಗೆ ಅಭಿವೃದ್ಧಿಪಡಿಸಲಾಗಿದೆ.  
    • ಭಾರತೀಯ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯವು  ಅತ್ಯಂತ ಶ್ರೀಮಂತ ಸಾಮ್ರಾಜ್ಯಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದ್ದು,  ಅಲ್ಲಿ ವ್ಯಾಪಾರಿಗಳು ಚಿನ್ನ ಮತ್ತು ಅಮೂಲ್ಯ ರತ್ನಗಳನ್ನು ಸಂತೆಗಳಲ್ಲಿ ವ್ಯಾಪಾರ ಮಾಡುತ್ತಿದ್ದರು.
    • ವಸಾಹತುಶಾಹಿ ಶಕ್ತಿಗಳ ವಿರುದ್ಧ ಹೋರಾಡಿದ   ರಾಣಿ ಅಬ್ಬಕ್ಕ ‘ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ’.  
    • ಭಾರತೀಯ ಸೇನೆಯು ಕಂಡ  ಅತ್ಯಂತ ಶ್ರೇಷ್ಠ ಮಿಲಿಟರಿ ಅಧಿಕಾರಿ, ಎರಡನೆಯ ಮಹಾಯುದ್ಧದ ಸಮಯದಲ್ಲಿ ಕಾಲಾಳುಪಡೆ ದಳಕ್ಕೆ ಯುದ್ಧ ಮಾಡಿದ ಏಕೈಕ ಭಾರತೀಯ  ಕರ್ನಾಟಕದ  ಜನರಲ್ ಕೆ.  ಎಸ್. ತಿಮ್ಮಯ್ಯ. 
    • ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ (ಸಿ-ಇನ್-ಸಿ) ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರಿಯಪ್ಪ.
    • ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ (ಐಟಿ) ರಫ್ತು ಮಾಡುವ ‘ಭಾರತದ ಸಿಲಿಕಾನ್ ವ್ಯಾಲಿ”  ಹಾಗೂ  “ಭಾರತದ ಐಟಿ ರಾಜಧಾನಿ’ ಎಂದು ಪರಿಗಣಿಸಲ್ಪಟ್ಟ  ದೇಶದ ಏಕೈಕ ನಗರ ಬೆಂಗಳೂರು. 
    • ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ 3 ನೇ  ಸ್ಥಾನದಲ್ಲಿರುವ .’ದಕ್ಷಿಣದ ಚಿರಾಪುಂಜಿ’  ಎಂದು ಗುರುತಿಸಿ ಸಲ್ಪಟ್ಟ ಪ್ರದೇಶ ಕರ್ನಾಟಕದ  ಆಗುಂಬೆ.  
    • ಭಾರತದಲ್ಲಿ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿದ್ದು  ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರನ್ನು ಉತ್ಪಾದಿಸುವ ರಾಜ್ಯ ಕರ್ನಾಟಕ.
    • ಅತಿ  ಹೆಚ್ಚು  ರಾಷ್ಟ್ರೀಕೃತ  ಬ್ಯಾಂಕ್ ಗಳನ್ನು  ಸ್ಥಾಪಿಸಿ  ‘ಭಾರತದ ಬ್ಯಾಂಕಿಂಗ್ ತೊಟ್ಟಿಲು’ ಎಂದು ಮನ್ನಣೆ ಪಡೆದಿರುವ ರಾಜ್ಯ ಕರ್ನಾಟಕ (ದೇಶದ ಏಳು ಪ್ರಮುಖ ಬ್ಯಾಂಕುಗಳಾದ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ವಿಜಯ ಬ್ಯಾಂಕ್, ಕರ್ನಾಟಕ ಬ್ಯಾಂಕ್, ವೈಶ್ಯ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು  ಜನ್ಮ ಪಡೆದಿರುವುದು  ಕರ್ನಾಟಕದಲ್ಲಿ).
    • ವಿಶ್ವ ದಾಖಲೆಯ  ಮಟ್ಟದ ವೇಗದಲ್ಲಿ  ಓಡಿ    ‘ಭಾರತದ ಉಸೇನ್ ಬೋಲ್ಟ್’  ಎಂದು ಹೆಸರು ಗಳಿಸಿದ  ಏಕೈಕ ವ್ಯಕ್ತಿ ಮೂಡುಬಿದಿರೆಯ ಕಂಬಳ ಓಟಗಾರ  ಶ್ರೀನಿವಾಸ ಗೌಡ. 
    • ಜಗತ್ತಿನಲ್ಲಿ 25 ಬಾರಿ ಮರುಮುದ್ರಣಗೊಂಡ ಏಕೈಕ ಕವನ ಸಂಕಲನಗಳ ಪುಸ್ತಕ ನಾಡೋಜ  ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರ ‘ ನಿತ್ಯೋತ್ಸವ ‘.
    • ಒಂದನೇ ಸ್ಥಾನದಲ್ಲಿರುವ ಭಾರತದ ಶೈಕ್ಷಣಿಕ ಕೇಂದ್ರ (Educational hub) ಎಂದು ಅಂತರರಾಷ್ಟ್ರೀಯ ಮನ್ನಣೆ ಪಡೆದ ನಗರ ಬೆಂಗಳೂರು.
    • “ಜಗತ್ತಿನ ಅತ್ಯಂತ ಜೀವವೈವಿಧ್ಯತೆಯ ತಾಣಗಳಲ್ಲಿ  ಒಂದಾಗಿರುವ  ಪಶ್ಚಿಮ ಘಟ್ಟಗಳ (ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ಅಭಯಾರಣ್ಯಗಳು ಮತ್ತು ಮೀಸಲು ಕಾಡುಗಳು ಸೇರಿದಂತೆ) ವಿಶ್ವ ಪರಂಪರೆಯ ಹತ್ತು  ತಾಣಗಳಿರುವುದು ಕರ್ನಾಟಕದಲ್ಲಿ.
    • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐ.ಐ.ಎಸ್ಸಿ.),  ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ (ಇಸ್ರೋ), ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿ.ಎಫ್.ಟಿ. ಆರ್. ಐ.),  ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್), ಒಟ್ಟು ಸುಮಾರು ೫೦ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಹೆಸರು ಗಳಿಸಿರುವ ಸಂಶೋಧನಾ ಕೇಂದ್ರಗಳು ಇರುವುದು ಕರ್ನಾಟಕದಲ್ಲಿ. 
    • ವಿಶಿಷ್ಟ ಶೈಲಿ ಮತ್ತು ರಂಗಭೂಮಿ ತಾಂತ್ರಿಕತೆಯೊಂದಿಗೆ  ನೃತ್ಯ, ಸಂಗೀತ, ಸಂಭಾಷಣೆ, ವೇಷಭೂಷಣ, ಮೇಕಪ್    ಸಮ್ಮಿಶ್ರಣದಿಂದ ಕೂಡಿರುವ ವಿಶ್ವದ ಏಕೈಕ ಕಲೆ  ಕರ್ನಾಟಕದ  ಯಕ್ಷಗಾನ.  
    • ಭಾರತದ ಮೊದಲ ಖಾಸಗಿ ರೇಡಿಯೊ ಕೇಂದ್ರ  ‘ಆಕಾಶವಾಣಿ’ಯನ್ನು ಸ್ಥಾಪಿಸಿದ್ದು ಕರ್ನಾಟಕದ ಮೈಸೂರಿನಲ್ಲಿ (1936 ರಲ್ಲಿ ಎಂ. ವಿ. ಗೋಪಾಲಸ್ವಾಮಿ).
    • ನೀರೊಳಗಿನ ಚಿತ್ರೀಕರಣ ಮಾಡಿದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು  ಶಂಕರ್ ನಾಗ್ ನಿರ್ದೇಶಿಸಿರುವ  ‘ಒಂದು  ಮುತ್ತಿನ  ಕಥೆ’.
    • ಭಾರತ ವಿಶ್ವದ ಅತಿದೊಡ್ಡ ಚಲನಚಿತ್ರಗಳ ನಿರ್ಮಾಣ ಮಾಡುವ ದೇಶ; ೨೦೧೯ರಲ್ಲಿಅತಿ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿರುವ ರಾಜ್ಯ  ಕರ್ನಾಟಕ.
    • ಇಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್ (ಇವಿಎಂ) ಗಳನ್ನು ತಯಾರಿಸುವ  ಸಂಸ್ಥೆ ಕರ್ನಾಟಕದಲ್ಲಿರುವ  ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್. 
    • ಸರ್ ಎಂ. ವಿಶ್ವೇಶ್ವರಯ ಅವರ ಜನ್ಮ ದಿನಾಚರಣೆಯನ್ನು (ಸೆಪ್ಟೆಂಬರ್ 15) ರಾಷ್ಟ್ರೀಯ ಇಂಜಿನಿಯರ್ಸ್  ದಿನಾಚರಣೆ ಎಂದು  ಆಚರಿಸಲಾಗುತ್ತದೆ.
    • ಭಾರತ ಕ್ರಿಕೆಟ್ ತಂಡಕ್ಕೆ  ಅತಿ ಹೆಚ್ಚು ಆಟಗಾರರನ್ನು  ನೀಡಿರುವ  ರಾಜ್ಯ ಕರ್ನಾಟಕ.
    • ವಿಧಾನಸೌಧ ಭಾರತದ ಅತಿದೊಡ್ಡ ಶಾಸಕಾಂಗ ಕಟ್ಟಡವಾಗಿದೆ.
    • ಕರ್ನಾಟಕ ರಾಜ್ಯದ ಸಾಫ್ಟ್‌ವೇರ್ ಉದ್ಯಮವು ಭಾರತದ ಆರ್ಥಿಕತೆಯ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದಾಗಿದ್ದು, ಭಾರತದಲ್ಲಿ ಸಾಫ್ಟ್‌ವೇರ್ ರಫ್ತಿನಿಂದ ಬರುವ ಆದಾಯ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ   ರಾಜ್ಯ ಕರ್ನಾಟಕ.
    • ಜಾಗತಿಕವಾಗಿ ‘ಸೈನ್ಸ್ ಕೆರಿಯರ್ಸ್ ಟಾಪ್ 20 ಉದ್ಯೋಗದಾತರು’ ಪಟ್ಟಿಯಲ್ಲಿ ಅಗ್ರ ಐದು ಬಯೋಟೆಕ್ ಉದ್ಯೋಗದಾತರಲ್ಲಿ ಸ್ಥಾನ ಪಡೆದಿರುವ ಬಯೋಕಾನ್  ಲಿಮಿಟೆಡ್ ಸಂಸ್ಥೆ ಇರುವುದು ಬೆಂಗಳೂರಿನಲ್ಲಿ ಮತ್ತು  ಅದರ ಸಂಸ್ಥಾಪಕಿ   ಕಿರಣ್ ಮಜುಂದಾರ್-ಶಾ ಅವರು ಶಿಕ್ಷಣ ಪಡೆದಿರುವುದು ಕರ್ನಾಟಕದಲ್ಲಿ.  
    • ಇನ್ಫೋಸಿಸ್ ಭಾರತದ ಎರಡನೇ ಅತಿದೊಡ್ಡ ಐಟಿ ಕಂಪನಿಯಾಗಿದೆ.
    • ವಿದ್ಯುತ್ ಬೀದಿ ದೀಪಗಳನ್ನು ಬಳಸಿದ ಏಷ್ಯಾದ ಮೊದಲ ನಗರ ಬೆಂಗಳೂರು.
    • ಸರ್ ಎಂ. ವಿಶ್ವೇಶ್ವರಯ್ಯ; ಭೀಮ್ಸೆನ್ ಜೋಶಿ; ಪ್ರೊ. ಸಿ.ಎನ್.ಆರ್. ರಾವ್ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಗೆ ಭಾಜನರಾದ ಕರ್ನಾಟಕದ ಶ್ರೇಷ್ಠ  ಸಾಧಕರು.  

      ಹೀಗೆ ಕನ್ನಡ  ನಾಡು ನುಡಿಯ  ವಿಶಿಷ್ಟತೆ,  ಸಾಧನೆ, ಸಾಧಕರುಗಳ ಪಟ್ಟಿ ಮಾಡುತ್ತಾ ಹೋದರೆ   ಬೆಳೆಯುತ್ತಾ ಹೋಗುತ್ತದೆ.  ಕುವೆಂಪು ಅವರ   ಕವನದ ಸಾಲುಗಳು ಕನ್ನಡಿಗರೆಲ್ಲರಿಗೂ ಎಂದೆಂದಿಗೂ ಸ್ಪರ್ತಿದಾಯಕ. 

    “ಎಲ್ಲಾದರು ಇರು

    ಎಂತಾದರು ಇರು

    ಎಂದೆಂದಿಗೂ ನೀ ಕನ್ನಡವಾಗಿರು

    ಕನ್ನಡವೇ ಸತ್ಯ

    ಕನ್ನಡವೇ ನಿತ್ಯ”

    ಆಲೂರು ವೆಂಕಟರಾವ್,  ಅನಕೃ, ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್, ಬಿ.ಎಂ.ಶ್ರೀಕಂಠಯ್ಯ ಮತ್ತು ಅಂದಿನ ರಾಜ್ಯದ ಮುಖ್ಯಮಂತ್ರಿ  ದೇವರಾಜ ಅರಸ್  ಕರ್ನಾಟಕ ಏಕೀಕರಣಕ್ಕಾಗಿ ದುಡಿದಿರುವ ಎಲ್ಲರಿಗೂ  ಕನ್ನಡ ರಾಜ್ಯೋತ್ಸವದ  ಈ ಶುಭ ಸಂದರ್ಭದಲ್ಲಿ  ಗೌರವಾರ್ಪಣೆ ಸಲ್ಲಿಸೋಣ.  

    ಕಷ್ಟಗಳಿದ್ದರೂ ತೋರ್ಪಡಿಸಿಕೊಳ್ಳದ ಬದುಕು

    ಸುಮಾ ವೀಣಾ

    ಸೀಗೆಯೊಳಗಣ ಬಾಳೆಗೆಣೆ– ‘ಕರುಣಾ ರಸ’ಕ್ಕೆಂದೇ ಮೀಸಲಾಗಿರುವ ಕಾವ್ಯ  ಎಂದರೆ ರಾಘವಾಂಕನ  ‘ಹರಿಶ್ಚಂದ್ರಕಾವ್ಯ’.ಪ್ರಸ್ತುತ  ‘ಸೀಗೆಯೊಳಗಣ ಬಾಳೆಗೆಣೆ’ಯಾದುದು ವಾಕ್ಯವನ್ನು ಚಂದ್ರಮತಿಯ ಪ್ರಲಾಪದಿಂದ ಆರಿಸಲಾಗಿದೆ.

    ಸೀಗೆ ಸ್ವಭಾವತಃ ಮುಳ್ಳುಗಳನ್ನು ಹೊಂದಿರುತ್ತದೆ. ಇದು ಇರುವಿಕೆಯ ಜಾಗವನ್ನು ಪೊದೆ ಎಂದು ಕರೆಯುತ್ತಾರೆ. ಮೊದಲೆ ಮುಳ್ಳು ಅದೂ ಪೊದೆಯಾಗಿರುವುದು ಅದರ ನಡುವೆ ಬಾಳೆಗಿಡ ಗೊನೆಬಿಟ್ಟು  ಎಡರು ತೊಡರುಗಳಿಲ್ಲದೆ ಹಣ್ಣಾಗಲು ಸಾಧ್ಯವೇ ಇಲ್ಲ  ಎಂಬ  ಅರ್ಥ ಇಲ್ಲಿ ಬರುತ್ತದೆ.

    ಹಾಗೆ ಚಂದ್ರಮತಿಯ ಪ್ರಲಾಪದ ಸಂದರ್ಭದಲ್ಲಿ  ಚಂದ್ರಮತಿಯ ಸಂಕಟವು  ಒಳಹೊಕ್ಕ ಬಾಣದಂತೆ  ಹೊರಗೆ ಕಾಣಿಸದೆ ಇದ್ದರೂ  ಮನಸ್ಸಿನಲ್ಲೆ  ಸಂಕಟವನ್ನು ಅನುಭವಿಸುತ್ತಿರುತ್ತಾಳೆ. ಮನೆಯೊಡತಿಗೆ ಅಂಜಿ, ಇನ್ನು ಬಾರದೆ ಇರುವ ಮಗನನ್ನು ನೆನಪಿಸಿಕೊಂಡು  ನಿತ್ಯದ ಕೆಲಸವನ್ನು  ಎಚ್ಚರದಿಂದ ಮಾಡುತ್ತಿದ್ದಳು.  ಹೇಳಿಕೊಳ್ಳಲಾಗದೆ ಅನುಭವಿಸಲಾದೆ  ಮಗನ  ಕುರಿತಾದ ತಹತಹಗಳನ್ನು ಚಂದ್ರಮತಿ ಏಕಾಂಗಿಯಾಗಿ ಅನುಭವಿಸಿ ಸಂಕಟದ ತೀವ್ರತೆಯನ್ನು ಬೇರೆಯವರಿಗೆ ತೋರಗೊಡುವುದಿಲ್ಲ. .ಅವಳ ಸಂಕಟವನ್ನು ಓದುಗರಿಗೆ ಪರಿಣಾಮಕಾರಿಯಾಗಿ ವಿವರಿಸಲು ರಾಘವಾಂಕ  ಇಂಥದ್ದೊಂದು ವಾಕ್ಯನ್ನು ನಿಬದ್ಧಗೊಳಿಸಿದ್ದಾನೆ ಎನ್ನಬಹುದು.

    ಲೋಕಾಭಿರಾಮವಾಗಿ ನೋಡುವುದಾದರೂ ಮನಸ್ಸಿನಲ್ಲಿ ಬೆಟ್ಟದಷ್ಟು ಕಷ್ಟವನ್ನು ಮನಸ್ಸಿನಲ್ಲಿ ಆವಕಮಾಡಿಕೊಂಡು ಬೇರೆಯವರ ಕಣ್ಣಿಗೆ ಅತ್ಯಂತ ಸುಖಿಗಳೆಂದು ತೋರಿಸಿಕೊಳ್ಳುವ ಅನೇಕರನ್ನು ಕಾಣಬಹುದು.

    ಕೆಲವರು ಹಾಗೆಯೇ ಕಷ್ಟವನ್ನು ಹೇಳಿಕೊಳ್ಳಲು ಇಚ್ಛಿಸದೆ ಸುಖವನ್ನು ಮಾತ್ರ  ಇತರರಿಗೆ ನೀಡಬಯಸುತ್ತಾರೆ. ಹೊರನೋಟಕ್ಕೆ ಪರಿಪಕ್ವವಾದ ಹಣ್ಣೊಂದರ ರೂಪವನ್ನು ಇರಿಸಿಕೊಂಡಿದ್ದರೂ ಸುಲಿದು ನೋಡಿದರೆ ಸಂಪೂರ್ಣ ಹುಳುಕಾಗಿರುವ  ಹಣ್ಣಿನಂತೆ ಕೆಲವರು ಇರಬಹುದು. ಇಲ್ಲವೇ ಸಮಾಜದ ವ್ಯಂಗ್ಯ ಕುಹಕ  ಇತ್ಯಾದಿಗಳನ್ನು ಛಲಬಿಡದ ತ್ರಿವಿಕ್ರಮರಂತೆ  ಸಹಿಸಿಕೊಳ್ಳುವ  ಅನೇಕರನ್ನು ಕಾಣಬಹುದು.

    ಸೀಗೆಯೊಳಗಣ ಬಾಳೆ ಈ ಮಾತಿಗೆ ಕೆಸರಿನಲ್ಲಿ ಅರಳಿದ ಕಮಲ ಎಂಬ  ಮಾತನ್ನೂ  ಸರಿಸುಮಾರು ಸಂವಾದಿಯಾಗಿ ತೆಗೆದುಕೊಳ್ಳಬಹುದು.  ಎಂಥ ಕ್ಲಿಷ್ಟ ಪರಿಸ್ಥಿತಿ ಇದ್ದರೂ ಹೂವಿನಂತೆ ಅರಳುವುದರಲ್ಲಿಯೇ ಮನುಷ್ಯನ ಮಹತಿ ಅಡಗಿದೆ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ನವೆಂಬರ್ ೧ ರ ಮಹತ್ವ; ಹಂಚಿಹೋಗಿದ್ದ ಕರುನಾಡು ಒಂದು ಗೂಡಿದ ದಿನ

    ತ್ನಾ ಶ್ರೀನಿವಾಸ್

    ಕನ್ನಡ ಅಥವಾ ಕರ್ನಾಟಕ ರಾಜ್ಯೋತ್ಸವ ವನ್ನು ಪ್ರತಿವರ್ಷ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಈ ದಿನವನ್ನು ಭೌಗೋಳಿಕ ವಾಗಿ ಹರಿದು ಹಂಚಿ ಹೋಗಿದ್ದ ಕನ್ನಡಿಗರಿಗೆ ಭಾಷೆಯ ಆಧಾರದ ಮೇಲೆ ತಮ್ಮ ಅಸ್ಮಿತೆಯನ್ನು ಪ್ರತಿಪಾದಿಸಿದ ದಿನವನ್ನಾಗಿ ಕನ್ನಡಿಗರು ಆಚರಿಸುತ್ತಾರೆ.

    ಕನ್ನಡದ ಭೌಗೋಳಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸುವ ದಿನವಾಗಿ ಆಚರಿಸುವ ಈ ದಿನಕ್ಕೆ ತನ್ನದೇ ಆದಂತಹ ಮಹತ್ವವಿದೆ. ಐತಿಹಾಸಿಕ ಹಿನ್ನೆಲೆ ಮೂಲಕ ಈ ದಿನವನ್ನು ನೋಡಿದಾಗ ಇದರ ಮಹತ್ವ ತಿಳಿಯುತ್ತದೆ.

    ಸ್ವಾತಂತ್ರ್ಯ ಸಂದರ್ಭದಲ್ಲಿ ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆಯುವ ಹೋರಾಟವೊಂದೆಡೆ ಆದರೆ ಇನ್ನೊಂದೆಡೆ ಪ್ರದೇಶಾವಾರು ಹಂಚಿ ಹೋಗಿದ್ದ ಕನ್ನಡಿಗರಿಗೆ ಸಾಂಸ್ಕೃತಿಕ ಮತ್ತು ಭೌಗೋಳಿಕ ನೆಲೆಯನ್ನು ಕಂಡುಕೊಳ್ಳುವದಾಗಿತ್ತು. ಆಗ ಕನ್ನಡದ ಪ್ರದೇಶಗಳು ಮೈಸೂರು, ಮದ್ರಾಸ್, ಮುಂಬಯಿ ಪ್ರಾಂತ್ಯ ಗಳಲ್ಲಿ ಹಚಿಹೋಗಿದ್ದವು.
    ಸ್ವಾತಂತ್ರ ಹೋರಾಟದ ಮೂಲಕ ಭಾರತೀಯರ ಏಕತೆಯ ಮಹತ್ವ ವನ್ನು ಅರಿತಿದ್ದ ಆಲೂರು ವೆಂಕಟ ರಾವ್, ಹುಯಿಲಗೋಲ ನಾರಾಯಣರಾವ್,ಸಿದ್ದಪ್ಪ ಕಂಬಳಿಯಂತಹ ಕನ್ನಡ ಪರ ಹೋರಾಟಗಾರರು ಕನ್ನಡದ ಸಾರ್ವಭೌಮತೆಯ ವಿಚಾರವಾಗಿ ಧ್ವನಿ ಎತ್ತಿದರು.

    ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟ ರಾಯರು ಕರ್ನಾಟಕ ಏಕೀಕರಣ ಚಳವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. ಭಾರತವು ಗಣರಾಜ್ಯ ವಾದ ನಂತರ ಭಾರತದ ವಿವಿಧ ಪ್ರಾಂತ್ಯ ಗಳು ಭಾಷೆಗಳ ಆಧಾರದ ಮೇಲೆ ರಾಜ್ಯ ಗಳಾಗಿ ರೂಪುಗೊಂಡ ವು. ಈ ಹಿಂದೆ ರಾಜರ ಆಳ್ವಿಕೆಯ ಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥೆಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು.

    ೧೯೫೬ ರ ನವೆಂಬರ್ ೧ರಂದು ಮದ್ರಾಸ್, ಮುಂಬಯಿ, ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು.ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪುಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.ಹೊಸದಾಗಿ ಏಕೀಕೃತಗೂಂಡ ರಾಜ್ಯದ ಆರಂಭದಲ್ಲಿ ಹೊಸಘಟಕದ ಕೋರ್ಟ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲಿ ಎಂದು “ಮೈಸೂರು ” ಹೆಸರನ್ನು ಉಳಿಸಿಕೊಂಡರು. ಮುಂದೆ ನವೆಂಬರ್ ೧ , ೧೯೭೩ ರಂದು “ಕರ್ನಾಟಕ ” ಎಂದು ಬದಲಾಯಿತು.ಈ ಸಮಯದಲ್ಲಿ ದೇವರಾಜ ಅರಸ್ ಅವರು ಮುಖ್ಯ ಮಂತ್ರಿಗಳಾಗಿದ್ದರು.
    ಕರ್ನಾಟಕ ಏಕೀಕರಣ ದ ಮನ್ನಣೆ ಎ.ಎನ್.ಕೃಷ್ಣ ರಾವ್, ಬಿ.ಎಂ.ಶ್ರೀ., ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕುವೆಂಪು, ಅ.ನ.ಕೃಷ್ಣರಾಯರು, ಶಿವರಾಮ ಕಾರಂತರಿಗೆ ಸಲ್ಲುತ್ತದೆ.

    ಕನ್ನಡ ಬಾವುಟ

    ಕನ್ನಡಕ್ಕೊಂದು ಬಾವುಟದ ಅವಶ್ಯಕತೆಯನ್ನು ಅರಿತ ಕನ್ನಡ ಹೋರಾಟಗಾರರಾದ ಎಂ.ರಾಮಮೂರ್ತಿಗಳುಹಳದಿ ಮತ್ತು ಕೆಂಪು ಬಣ್ಣವನ್ನು ಬಳಸಿ ಬಾವುಟವನ್ನು ಸಿದ್ಧ ಪಡಿಸಿದರು.ಈ ಧ್ವಜವನ್ನುಎರಡು ಸಮತಲ ಭಾಗಗಳಾಗಿ ಮಾಡಲಾಗಿದೆ.ಮೇಲಿನ ಭಾಗ ಹಳದಿ, ಕೆಳಗಿನ ಭಾಗ ಕೆಂಪು ಬಣ್ಣದ್ದಾಗಿದೆ. ಹಳದಿ ಬಣ್ಣಶಾಂತಿಯನ್ನು ಕೆಂಪು ಬಣ್ಣ ಧೈರ್ಯ ವನ್ನು ಪ್ರತಿನಿಧಿಸುತ್ತದೆ. ಈ ಬಣ್ಣ ಕನ್ನಡ ನಾಡಿನ ಹೆಣ್ಣು ಮಗಳ ಅರಿಶಿನ ಮತ್ತು ಕುಂಕುಮದ ಪ್ರತಿಕವೂ ಆಗಿದೆ. ಕೆಂಪು ಬಣ್ಣ ಅಭಿವೃದ್ಧಿ ಯ ಸಂಕೇತವಾದರೆ ಅರಿಶಿಣಬಣ್ಣ ಆರೋಗ್ಯಕರ ಸಮಾಜದ ಸಂಕೇತವಾಗಿದೆ.

    ಈ ಧ್ವಜವನ್ನು ನವಂಬರ್ ೧ನೇ ತಾರೀಕಿನಂದು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕದ ಸಾರ್ವಜನಿಕ ಸಂಸ್ಥೆ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾರಿಸಿ ಕರ್ನಾಟಕ ನಾಡಗೀತೆಯಾದ”ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ಗೀತೆ(ಹಾಡು) ಯನ್ನು ಹಾಡಲಾಗುತ್ತದೆ.

    ರಾಜ್ಯೋತ್ಸವ ಆಚರಣೆಯಲ್ಲಿ ನಮ್ಮೆಲ್ಲರ ಪಾ ತ್ರ ಹೆಚ್ಚು ಮಹತ್ವದ್ದಾಗಿದೆ. ನಾಡು, ನುಡಿ, ಸಂಸ್ಕೃತಿ, ಸಂಪತ್ತನ್ನು ಕಾಪಾಡಿ ಅದನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ಎಲ್ಲಾ ಕನ್ನಡಿಗರ ಜವಾಬ್ದಾರಿ ಯಾಗಿದೆ.

    ಜೈ ಕರ್ನಾಟಕ ಮಾತೆ.

    ರತ್ನಾ ಶ್ರೀನಿವಾಸ್ ಅವರು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ಯವರು.  ಪ್ರಾಥಮಿಕ ಪದವಿಯನ್ನು ಅರಸೀಕೆರೆಯಲ್ಲಿ ಪಡೆದು ಮುಂಬಯಿನಲ್ಲಿ  ಎಂ.ಎ ಎಂ.ಫಿಲ್  ಪಡೆದು ಪ್ರಸ್ತುತ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ & ರಿಸರ್ಚ್, ಯಲಹಂಕ, ಇಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇವರ ಚಾರುವಸಂತದ ಆಯಾಮ ಅನನ್ಯತೆ ಸಂಪ್ರಬಂಧದ  ಪುಸ್ತಕವಾಗಿ ಅಭಿಜಿತ್ ಪ್ರಕಾಶನ ಮುಂಬೈನಿಂದ ಪ್ರಕಟವಾಗಿದೆ.

    ಪರಮಾತ್ಮ ಚಿತ್ರದ ಟ್ಯೂನ್ ಗೆ ಹೊಸ ಸಾಲು ಬರೆದು ಅಪ್ಪುಗೆ ಗೀತ ನಮನ ಸಲ್ಲಿಸಿದ ಯೋಗರಾಜ ಭಟ್

    ಉಸಿರು ಪೂರ್ತಿ ಹೋದರೂ , ಹೆಸರು ಪೂರ್ತಿ ನೆನಪಿದೆ , ನೀನು ಇರದೆ ಹೋದರೂ , ನಿನ್ನ ನಗೆಯ ಬೆಳಕಿದೆ ಎಂದು ಹೆಸರಾಂತ ನಿರ್ದೇಶಕ ಯೋಗರಾಜ ಭಟ್ಟರು ಪುನೀತ್ ರಾಜ್ ಕುಮಾರ್ ಅವರಿಗೆ ಗೀತ ನಮನ ಸಲ್ಲಿಸಿದ್ದಾರೆ.

    ತಮ್ಮದೇ ಚಿತ್ರ ಪರಮಾತ್ಮ ಚಿತ್ರದಲ್ಲಿ ವಿ ಹರಿಕೃಷ್ಣ ರಾಗ ಸಂಯೋಜಿಸಿದ್ದ ಟ್ಯೂನ್ ಗೆ ಭಟ್ಟರು ಭಾವ ಪೂರ್ಣ ಸಾಲುಗಳನ್ನು ಸೇರಿಸಿದ್ದಾರೆ.

    ಯೋಗರಾಜ ಭಟ್ಟರ ಪಂಚರಂಗಿ ಆಡಿಯೋದಲ್ಲಿರುವ ಈ ಗೀತೆಯ ಲಿಂಕ್ ಇಲ್ಲಿದೆ. ಭಟ್ಟರ ಪುತ್ರಿ ಪುನರ್ವಸು ಭಟ್ ಈ ಹಾಡು ಹಾಡಿದ್ದಾರೆ.

    ಒಬ್ಬ ಅಪೂರ್ವ ತಾರೆ ; ಪುನೀತ್ ನೆನಪಿನಲ್ಲಿ ಸುದೀರ್ಘ ಲೇಖನ ಬರೆದ ಸುದೀಪ್

    ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನದ ಬಗ್ಗೆ ಕಂಬನಿ ಮಿಡಿದಿರುವ ನಟ ಕಿಚ್ಚ ಸುದೀಪ್ ಟ್ವಿಟರ್ ನಲ್ಲಿ ಸುದೀರ್ಘ ಬರಹದ ಮೂಲಕ ಅಶ್ರುತರ್ಪಣ ಸಲ್ಲಿಸಿದ್ದಾರೆ. ಆ ಬರೆಹದ ಪೂರ್ಣ ಪಾಠ ಇಲ್ಲಿದೆ.

    ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ನಾಳೆ ನಡೆಸಲು ತೀರ್ಮಾನ

    BENGALURU OCT 30

    ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ನಾಳೆ ನಡೆಸಲು ತೀಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪ್ರಕಟಿಸಿದರು.

    ಇಂದು ಮಧ್ಯಾಹ್ನ ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ಅವರ ಸಹೋದರರಾದ ಶಿವರಾಜ್ ಕುಮಾರ್ ಮತ್ತ ರಾಘವೇಂದ್ರ ರಾಜ್ ಕುಮಾರ್ ಅವರೊಂದಿಗೆ ಈ ಬಗ್ಗೆ ಇಂದು ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

    ಅಪ್ಪು ಅವರ ಅಂತಿಮ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಅವಕಾಶ ಮಾಡಿಕೊಡಲು ನಾಳೆ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಅಪ್ಪು ಅವರ ಅಂತಿಮ ದರ್ಶನಕ್ಕೆ ಹೆಚ್ಚಿನ ಜನರು ಆಗಮಿಸುತ್ತಿದ್ದಾರೆ. ನಾಳೆವರೆಗೂ ದರ್ಶನಕ್ಕೆ ಅವಕಾಶವಿರುವುದರಿಂದ ಜನರು ಸಮಾಧಾನದಿಂದ ಬರಬಹುದಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಜನರು ಸಹಕರಿಸುವಂತೆ ಮನವಿ ಮಾಡಿದರು.

    ಇನ್ಯಾವ ದೂರತೀರದ ಮೋಹದ ಮುರುಳಿ ನಿಮ್ಮನ್ನು ಆ ಮಟ್ಟಿಗೆ ದಂಡಿಸಿಕೊಳ್ಳುವಂತೆ ಮಾಡಿತು ಅಪ್ಪು?

    ನಿಷ್ಕಲ್ಮಶ ನಗುವಿನ ಸರದಾರ ಹೊರಟು ಹೋಗಿದ್ದಾನೆ.ಹಣ್ಣೆಲೆಯನ್ನೇ ಉಳಿಸಿ ಚಿಗುರೆಲೆಯೊಂದು ಉದುರಿಹೋಗಿದೆ. ಏನೋ ಮೋಡಿಯಾಗಿ ಆ ಚಿಗುರೆಲೆಯನ್ನು ಮರ ಮತ್ತೆ ತನ್ನ ಹರೆಗೆ ಅಂಟಿಸಿಕೊಳ್ಳಬಹುದಾ ಎನ್ನುವ ನಿರೀಕ್ಷೆ ಮತ್ತೂಮತ್ತೂ ಹುಟ್ಟುತ್ತಲೇ ಇದೆ.ಅದು ಹುಸಿ ನಿರೀಕ್ಷೆ ಎಂಬುದು ಗೊತ್ತಿದ್ದರೂ ಮನಸ್ಸು ಸುಳ್ಳನ್ನೇ ನೆಚ್ಚಿ‌ಕೂತಿದೆ.

    ಆದರೂ..

    ಕಲಾವಿದರ ಎದೆ ಮೇಲೆ ನಿರೀಕ್ಷೆಯ ಹೊರೆಯನ್ನು ಹೇರುವವರು ನಾವೇ ಅಲ್ಲವೇ?ಅವರ ಅಭಿಮಾನಿಗಳು?

    ಅಪ್ಪುವಿನ ಸಿಕ್ಸ್ ಪ್ಯಾಕಿಗೆ ಥಿಯೇಟರ್ರೇ ಹಾರಿ ಹೋಗುವಂತೆ ಸಿಳ್ಳೆ ಚಪ್ಪಾಳೆ ಹೊಡೆದು ನೀವು ಹೀಗೇ ಇರಬೇಕು ಎನ್ನುವ ಭಾರ ಹೊರಿಸಿದವರು?

    ಅವರ ಅತಿವೇಗದ ನೃತ್ಯಕ್ಕೆ ಇನ್ನಿಲ್ಲದಂತೆ ಹುಚ್ಚೆದ್ದವರು?
    ಬ್ಯಾಕ್ ಕಿಕ್ಕನ್ನು ,ಫೈಟ್ ಮಾಡುವ ಸೊಗಸನ್ನು ಕಣ್ರೆಪ್ಪೆ ಮಿಟುಕಿಸದೆ ನೋಡಿ., ಆ ಮೂಲಕ ನೀವು ಹೀಗೇ ಇರಬೇಕು ಎಂಬ ಪರೋಕ್ಷ ಸಂದೇಶ ತಲುಪಿಸಿದವರು ನಾವೇ ಅಲ್ಲವೇ?

    ಅಪ್ಪು, ನಿಮ್ಮ ಸಿಕ್ಸಪ್ಯಾಕ್ ಹೊರತಾಗಿಯೂ ನೀವು ನಮಗಿಷ್ಟ.
    ಸಾದಾ ಡ್ಯಾನ್ಸ್ ಮಾಡಿದರೂ ನಿಮ್ಮನ್ನು ಆರಾಧಿಸುತ್ತೇವೆ.
    ನಿಮ್ಮನ್ನು ಪ್ರೀತಿಸುವುದು ನಿಮ್ಮ ನಗುವಿಗೆ,ನಿಮ್ಮ ಮಗುತನಕ್ಕೆ,ನಿಮ್ಮ ಹಮ್ಮುಬಿಮ್ಮುಗಳಿಲ್ಲದ ನಡಾವಳಿಗೆ.

    ಹೌದಲ್ಲವೇ?

    ಯಾವುದೇ ಕಲಾವಿದನಿಗೂ ಅಭಿಮಾನಿಗಳು ಮನದಟ್ಟು ಮಾಡಬೇಕಾದ ಸಂಗತಿ ಇದು ತಾನೇ?

    ಅಪ್ಪುವಿನ ಸಿನೆಮಾ ನೋಡಿದ ಯಾವುದೇ ಹೆಣ್ಣೂ ಅಂತಹ ಪಾರ್ಟನರ್ ಸಿಗಲಿ ಎಂದುಕೊಂಡಿದ್ದಕ್ಕಿಂತ ಇವನಂಥ ಜೀವದ ಗೆಳೆಯನೊಬ್ಬ ಸಿಕ್ಕರೆ ಎಂದುಕೊಂಡಿದ್ದೇ ಹೆಚ್ಚಲ್ಲವೇ?

    ಇವನಂಥ ಅಣ್ಣ ತಮ್ಮ ಸಿಕ್ಕರೇ ಅದೆಷ್ಟು ಸೊಗಸು ಎಂದುಕೊಂಡೆವಲ್ಲವೇ? ಪ್ರತಿ ತಾಯಿಯೂ ಅಪ್ಪುವಿನಂತ ಮಗ ಹುಟ್ಟಲಿ ಎಂದುಕೊಂಡಿದ್ದರಲ್ಲವೇ?

    ಹಾಗಿದ್ದರೆ

    ಇನ್ಯಾವ ದೂರತೀರದ ಮೋಹದ ಮುರುಳಿ ನಿಮ್ಮನ್ನು ಆ ಮಟ್ಟಿಗೆ ದಂಡಿಸಿಕೊಳ್ಳುವಂತೆ ಮಾಡಿತು ಅಪ್ಪು?

    ಪ್ರತಿ ಕಲಾವಿದನೂ ವೈಯುಕ್ತಿಕ ಆಸೆ ಹಂಬಲ ಗುರಿಗಳ ಜೊತೆಗೆ ಸಮಾಜದ ಜವಾಬ್ದಾರಿಯನ್ನು ಬೇಕಿಲ್ಲದಿದ್ದರೂ ಹೊತ್ತಿರುತ್ತಾನೆ.ಅವನನ್ನು ಹಿಂಬಾಲಿಸುವ ದೊಡ್ಡದೊಂದು ಯುವ ಸಮೂಹ ಇದ್ದೇ ಇರುತ್ತದೆ. ಅದರಲ್ಲೂ ಅಪ್ಪುವಿನಂಥ ಸಮಾಜಮುಖಿ ವ್ಯಕ್ತಿತ್ವದ ನಾಯಕನನ್ನು ನೂರಾರು ಜೀವಗಳು ನೆಚ್ಚಿಕೊಂಡಿರುತ್ತವೆ.
    ಈ ನೆಚ್ಚುಗೆಯ ಋಣ ಅಪ್ಪುವನ್ನು ಎಚ್ಚರಿಸಬೇಕಿತ್ತು ಅಂತ ತೀವ್ರವಾಗಿ ಅನಿಸ್ತಿದೆ.

    ಸಣ್ಣ ನೋವು ಕಾಣಿಸಿಕೊಂಡಾಗಲೇ ವೈದ್ಯರನ್ನು ಕಂಡಿದ್ದರೆ,ನೋವನ್ನು ಕಡೆಗಣಿಸದಿದ್ದರೆ ಅಥವಾ ಸುಮ್ಮನೆ ಆರಾಮು ಮಾಡಿದ್ದರೆ?ಅರಮನೆಯಲ್ಲಿ ರಾಜಕುಮಾರ ಉಳಿಯುತ್ತಿದ್ದ. ಲೋಕದ ಶೋಕ ಈ ಮಟ್ಟಿಗೆ ಹೆಚ್ಚುತ್ತಿರಲಿಲ್ಲ.ಪರಮ್ ಈ ಹೊತ್ತಿಗೆ ಪರಮಾತ್ಮನಾಗುತ್ತಿರಲಿಲ್ಲ.

    ನಿಮ್ಮ ದಿನಚರಿ ,ನಿಮ್ಮ ಆಹಾರ ವಿಹಾರ, ನಿಮ್ಮ ಕುಟುಂಬ, ನಿಮ್ಮ ಮನಸ್ಥಿತಿ ಎಲ್ಲವನ್ನೂ ಕೇಳಿ, ಓದಿ ಅಷ್ಟೇ ಪರಿಚಿತರು ನಾವು. ಜಡ್ಜಮೆಂಟಲ್ ಆದ ಮಾತುಗಳನ್ನು ಹೇಳುವುದು ಒಳಗೊಂದು ಮುಳ್ಳುಮುರಿದ ಭಾವ ಹುಟ್ಟಿಸುತ್ತದೆ.

    ಇದೆಲ್ಲದರ ಹೊರತಾಗಿಯೂ
    ‘ನಾವೇನ್ ತಿಂತಿವಿ..ಎಲ್ಲ್ ಮಲಗ್ತಿವಿ…ಎಲ್ಲ ಬರೆದುಬಿಟ್ಟಿದ್ದಾನೆ…ವಿಧಿ…ವಿಧಿಯ ಮುಂದೆ ನಮ್ದೇನಿಲ್ಲ..’

    ನಿಮ್ಮದೇ ಸಿನೆಮಾ ಡೈಲಾಗ್ …ಮತ್ತು ಇದೇ ಅಂತಿಮ ಸತ್ಯ.

    ಕಂಠೀರವ ಸ್ಟುಡಿಯೋ ಆವರಣದಲ್ಲಿ ಪುನೀತ್ ರಾಜ್ ಕುಮಾರ್ ಅಂತ್ಯ ಸಂಸ್ಕಾರ

    BENGALURU OCT 29

    ಇಂದು ನಿಧನರಾದ ನಾಯಕ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರವನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ನೆರವೇರಿಸಲು ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.

    ಡಾ. ರಾಜ್ ಕುಮಾರ್ ಪ್ರತಿಷ್ಠಾನದ ಸ್ವಾಮ್ಯದಲ್ಲಿರುವ ಜಮೀನನಲ್ಲಿ ಸಕಲ ಸರಕಾರಿ ಗೌರವದೊಂದಿಗೆ ನೆರವೇರಿಸಲು ನಿರ್ಧರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

    ಪುನೀತ್ ಹಠಾತ್ ನಿಧನ; ಕಂಬನಿ ಮಿಡಿದ ಮೋದಿ

    ಕನ್ನಡದ ಜನಪ್ರಿಯ ನಟ ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ತಾವು ಪುನೀತ್ ಅವರೊಂದಿಗಿರುವ ಫೋಟೋವನ್ನು ಟ್ವೀಟ್ ಮಾಡಿರುವ ಅವರು ವಿಧಿ ನಮ್ಮಿಂದ ಒಬ್ಬ ಪ್ರತಿಭಾನ್ವಿತ ಕಲಾವಿದನನ್ನು ದೂರ ಮಾಡಿದೆ ಎಂದು ದುಃಖಿಸಿದ್ದಾರೆ.

    ಮುಂದಿನ ತಲೆಮಾರು ಈ ಕಲಾವಿದನನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡಿರುತ್ತದೆ ಎಂದೂ ಅವರು ಹೇಳಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ಅವರ ನಿಧನಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

    ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.ಕಿರುವಯಸ್ಸಿನಲ್ಲೇ ಅವರು ನಮ್ಮನ್ನು ಅಗಲಿದ್ದು ತೀವ್ರ ಆಘಾತ ತಂದಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ ಅವರ ಕುಟುಂಬ, ಅಪಾರ ಅಭಿಮಾನಿಗಳಿಗೆ ಆಘಾತವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

    ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರೂ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

    pm-modi-condoles-death-of-kannada-actor-puneeth-rajkumar

    error: Content is protected !!