26.4 C
Karnataka
Saturday, April 12, 2025
    Home Blog Page 6

    ಪರಿವರ್ತನೆ ಜಗದ ನಿಯಮ ಅಲ್ಲವೆ

    ಸುಮಾವೀಣಾ

    ಉದಾತ್ತನೊಳ್  ಪುಟ್ಟದಲ್ತೆ ನೀಲಿರಾಗಂ-  ನಾಗಚಂದ್ರ ಕವಿಯ   ‘ರಾಮಚಂದ್ರ ಚರಿತ ಪುರಾಣ’ದ ಹದಿನಾಲ್ಕನೆಯ ಆಶ್ವಾಸದಲ್ಲಿ ರಾವಣನನ್ನು ಉದ್ದೇಶಿಸಿ ಹೇಳಿರುವ ಮಾತಿದು. ಇದು ರಾವಣನೆ ಏಕೆ ಪರಿವರ್ತನೆಗೆ ಒಳಗಾಗಿ  ತನ್ನ ವ್ಯಕ್ತಿತ್ವವನ್ನು  ಹಿಗ್ಗಿಸಿಕೊಳ್ಳುವ  ಪ್ರತಿಯೊಬ್ಬರಿಗೂ ಅನ್ವಯವಾಗುವಂಥ ಮಾತು. 

    ಕಾರಣಾಂತರಗಳಿಂದ  ಪ್ರಮಾದಗಳು ಘಟಿಸಿದಾಗ ಅದನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕಿಂತ  ತಪ್ಪು ಎಂದೊಪ್ಪಿ ಆದ ತಪ್ಪುಗಳನ್ನು ಸರಿ ಮಾಡಬಹುದೆ ನೋಡಬೇಕಾಗುತ್ತದೆ. ಇದು ಮಾನವಂತನ ಲಕ್ಷಣ. ಇಲ್ಲಿ ರಾವಣನಲ್ಲಿ ಈ ಗುಣ ಇರುವುದನ್ನು ಕಾಣಬಹುದು.  ಸೀತೆಯ ಮೇಲಿನ ಕಾಮವ್ಯಾಮೋಹದಿಂದ ಆಕೆಯನ್ನು ಅಪಹರಿಸುತ್ತಾನೆ ಬಂಧಿಯಾಗಿಸುತ್ತಾನೆ. ಆಕೆಯನ್ನು ಎದಿರುಗೊಂಡು ಮಾತನಾಡಲೆಂದು ಹೋದಾಗ  ರಾಮಲಕ್ಷ್ಮಣರ ಪ್ರಾಣದವರೆಗೂ ಬಾರದಿರು ಎಂದು  ಮೂರ್ಛೆಹೋದಾಗ ರಾವಣನ ಮನಸ್ಸು ಮನಸ್ಸು ಕಾರುಣ್ಯದ ಕಡೆಗೆ ತಿರುಗುತ್ತದೆ. ಇಂಥ ಪುಣ್ಯಸತಿಯನ್ನು ನೋಯಿಸಿದೆನಲ್ಲ  ಎಂದು ಪಶ್ಚಾತ್ತಾಪ ಪಡುತ್ತಾನೆ.

    ರಾವಣ ತನ್ನ ಮನಸ್ಸನ್ನು ಎಲ್ಲಾ ಕ್ಷೋಭೆಗಳ ಬಂಧನದಿಂದ  ಬಿಡಿಸಿಕೊಂಡು ಆಕೆಯ ಗುಣಗಾನ ಮಾಡಲು  ಪ್ರಾರಂಭಿಸುತ್ತಾನೆ.  ತನ್ನ ತಪ್ಪಿಗೆ ಹಳಿದುಕೊಳ್ಳುತ್ತಾನೆ. ತಪ್ಪುಗಳನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದೂ ಕೂಡ   ಉದಾತ್ತ ನಾಯಕನ ಲಕ್ಷಣ. ಹಂಸಕ್ಷೀರ ನ್ಯಾಯ ಬಯಸುವ ನೀಡುವ ಪ್ರತಿ  ನಾಯಕನೂ ತನ್ನ ತಪ್ಪುಗಳನ್ನು ತಾನೆ ಹಳಿದುಕೊಂಡು  ತನ್ನಿಂದ ಆಗುತ್ತಿದ್ದ ಪ್ರಮಾದವನ್ನು  ತಡೆದು  ಮಂಗಳ ಬಯಸುವ    ಎಲ್ಲ ಧೀರ ಮತ್ತು ಉದಾತ್ತ ನಾಯಕರನ್ನು ಈ ವಾಕ್ಯ ಸಂಕೇತಿಸುತ್ತದೆ.  ಪರಿವರ್ತನೆ ಜಗದ ನಿಯಮ ಅಲ್ಲವೆ!

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ಅಮ್ಮನ ನೆನಪು

    ಒಂದು ದಿನವೂ ತನ್ನ ಇಷ್ಟಾನಿಷ್ಟಗಳನ್ನು ಹೇಳಿಕೊಳ್ಳಲಿಲ್ಲ. ತಾನಾಯಿತು ತನ್ನ ಜೀವನವಾಯಿತು , ದೇವರ ಪೂಜೆಯಾಯಿತು, ತನ್ನ ಕೆಲಸವಾಯಿತು ಎಂದು ಬಾಳಿ ಬದುಕಿದ ನನ್ನ ಅಮ್ಮ ರಮಾ ಬಾಯಿ ನಾಡಿಗ್ ಇವತ್ತಿಗೆ ಒಂದು ವಾರದ ಹಿಂದೆ ಅಂದರೆ ಡಿಸೆಂಬರ್ 13 , 2022 ರ ಮಂಗಳವಾರ ಹೇಳದೆ ಕೇಳದೆ ಹೊರಟು ಹೋಗಿಬಿಟ್ಟಳು. ತನ್ನ ಜೀವನ ಯಾತ್ರೆ ಮುಗಿಯೆತೆಂದು ಆಕೆಗೂ ಅರಿವಾಗಲಿಲ್ಲ. ನಮಗೂ ಗೊತ್ತಾಗಲಿಲ್ಲ. ಸದ್ದಿಲ್ಲದೆ ನಡೆದೇ ಬಿಟ್ಟಳು. ಪತಿಯೇ ಪರದೈವ ಎಂದು ನಂಬಿ ಬದುಕಿದ ಅಮ್ಮ ತನ್ನ 62 ವರ್ಷದ ಜೀವನದ ಸಂಗಾತಿ ಅಣ್ಣನಿಗೂ ಒಂದು ಮಾತು ಹೇಳದೆ ಹೊರಟು ಹೋದಳು.

    ಅಮ್ಮನೊಂದಿಗೆ ನಾನು

    ನನ್ನ ಅಮ್ಮ ಬೆಂಗಳೂರಿನಂಥ ಪಟ್ಟಣದಲ್ಲಿ ಬೆಳೆದಾಕೆ. ಆಗಿನ ಮಹಾರಾಣಿ ಕಾಲೇಜಿನಲ್ಲಿ ಹೋಂ ಸೈನ್ಸ್ ಓದಿದಾಕೆ. ಮದುವೆ ಆಗಿ ಸಂತೇಬೆನ್ನೂರಿನಂಥ ಪುಟ್ಟ ಊರಿನ ಗಂಡನ ಮನೆಗೆ ಬಂದಾಗ ಅದಕ್ಕೆ ಹೊಂದಿಕೊಂಡಂಥ ಪರಿಯೇ ಅನನ್ಯ. ನಮ್ಮದು ತುಂಬು ಕುಟುಂಬ. ದೊಡ್ಡ ಮನೆ. ಆ ಮನೆ ತುಂಬ ಜನ. ಒಬ್ಬೊಬ್ಬರಿಗೆ ಒಂದೊಂದು ಕೆಲಸದ ಹೊಣೆ. ಅದಕ್ಕೆಲ್ಲವೂ ಹೊಂದಿಕೊಂಡು ಜೀವನ ಸಾಗಿಸಿದ ಪರಿ ಭಾರತೀಯ ಕುಟುಂಬ ಪದ್ಧತಿಯ ಹಿರಿಮೆಗೊಂದು ಸಾಕ್ಷಿ. ಮನೆಯೆಂದ ಮೇಲೆ ಬರುವ ಸಣ್ಣ ಪುಟ್ಟ ವೈಮನಸ್ಯಗಳನ್ನು ದೊಡ್ಡದು ಮಾಡಿಕೊಂಡು ಹೋಗದೆ ಬಾಳಿದ ಜೀವ ನನ್ನಮ್ಮ.

    ಅಮ್ಮ ಮಾತ್ರವಲ್ಲ ನಮ್ಮ ಮನೆಯ ಎಲ್ಲರದೂ ಅದೇ ಗುಣ. ಅದೇ ಅಲ್ಲವೇ ಅವಿಭಕ್ತ ಕುಟುಂಬದ ಹಿರಿಮೆ. ನಾಡಿಗರ ಮನೆಯ ಅತ್ತೆ ಸೊಸೆಯಂದಿರು ಎಷ್ಟು ಚೆನ್ನಾಗಿ ಹೊಂದಿಕೊಂಡು ಬಾಳುತ್ತಿದ್ದರಲ್ಲಾ ಎಂದು ಸುತ್ತಲಿನ ಹೆಣ್ಣು ಮಕ್ಕಳು ಮಾತಾಡಿಕೊಳ್ಳುವಂತೆ ತುಂಬು ಕುಟುಂಬವಾಗಿ ಅನೇಕ ವರ್ಷ ಬದುಕು ಸಾಗಿಸಿದ್ದು ಸಂತೇಬೆನ್ನೂರು ನಾಡಿಗರ ಪೇಟೆ ಮನೆಯ ಹಿರಿಮೆ.

    ಸತ್ಯನಾರಾಯಣ ನಾಡಿಗ್ ಮತ್ತು ರಮಾ ನಾಡಿಗ್

    ನಮ್ಮ ಅಣ್ಣ ಸತ್ಯನಾರಾಯಣ ನಾಡಿಗರು ಮಲ್ಲಾಡಿಹಳ್ಳಿಯಲ್ಲಿದ್ದ ಪೋಸ್ಟ್ ಮಾಸ್ಟರಿಕೆ ಬಿಟ್ಟು ಊರಿಗೆ ಬಂದ ಮೇಲೆ ಅಲ್ಲಿನ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಸೇವೆಯಿಂದ ಸ್ಪೂರ್ತಿಗೊಂಡು ಸಮಾಜ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು. ವಿಜಯ ಯುವಕ ಸಂಘ ಎಂಬ ಸಂಸ್ಥೆಗೆ ಅಸ್ತಿಬಾರಿ ಹಾಕಿ ತಮ್ಮ ಜೀವನವನ್ನೇ ಆ ಸಂಸ್ಥೆಗೆ ಧಾರೆ ಎರೆದರು. ನನ್ನ ಅಣ್ಣನ ಈ ಸೇವಾ ಕಾರ್ಯಕ್ಕೆ ನನ್ನಮ್ಮ ಯಾವತ್ತೂ ಅಡ್ಡಿ ಬರಲಿಲ್ಲ. ಅಮ್ಮ ಏನಾದರು ಅಂದು ಅಡ್ಡಿ ಮಾಡಿದ್ದರೆ ನಮ್ಮ ಅಣ್ಣ ವಿಜಯ ಯುವಕ ಸಂಘದ ಮೂಲಕ ಇಷ್ಟೊಂದು ಸಾಧನೆ ಮಾಡಲು ಆಗುತ್ತಲೇ ಇರಲಿಲ್ಲ. ಅಮ್ಮ ತನಗಾಗಿ ಏನನ್ನು ಕೇಳಲಿಲ್ಲ. ಹೆಣ್ಣಿಗೆ ಸಹಜವಾಗಿ ಇರುವ ಒಡವೆ ಬಂಗಾರ ವಸ್ತ್ರಕ್ಕೆ ಆಸೆ ಪಡಲಿಲ್ಲ. ನನ್ನ ಅಣ್ಣ ತನ್ನ ದುಡಿಮೆಯ ಹೆಚ್ಚು ಹಣವನ್ನು ಸಂಘಕ್ಕೇ ಹಾಕಿದ್ದೇ ಹೆಚ್ಚು.

    ನಾನು ಪತ್ರಕರ್ತನಾಗಿ ಬೆಂಗಳೂರು ಸೇರಿದ ನಂತರ ಅಮ್ಮ ನನ್ನ ಜೊತೆಯೆ ಇರತೊಡಗಿದರು. ಮಗನಿಂದಲೂ ಆಕೆ ಏನನ್ನು ಕೇಳಲಿಲ್ಲ. ಆಕೆ ಕೇಳುತ್ತಿದ್ದುದು ಎರಡೇ ತನ್ನ ಶುಕ್ರವಾರದ ಪೂಜೆಗೆ ಒಂದು ಮೊಳ ಹೂವು . ದೇವರ ನೈವೇದ್ಯಕ್ಕೆ ಎರಡು ಬಾಳೆ ಹಣ್ಣು. ಟೀವಿಯ ರಿಮೋಟ್ ವರ್ಕ್ ಆಗದಿದ್ದರೆ ಅದಕ್ಕೆ ಸೆಲ್ಲು.

    ಸೊಸೆ ಬಂದ ಮೇಲೆ ಇಬ್ಬರೂ ಹೊಂದಿ ಕೊಂಡ ಪರಿಯೇ ಅನನ್ಯ. ಅಮ್ಮ ತನ್ನ ಅತ್ತೆಯ ದೌಲತ್ತು ತೋರಲಿಲ್ಲ. ನನ್ನ ಪತ್ನಿ ಮಮತಾ ಸೊಸೆಯ ಠೇಂಕಾರ ತೋರಲಿಲ್ಲ. ವಯಸ್ಸಾದ ಮೇಲೆ ಹಿರಿಯರನ್ನು ಚೆನ್ನಾಗಿ ಮಾತಾಡಿಸುತ್ತಾ ಇರಬೇಕಂತೆ. ಆ ಕೆಲಸವನ್ನು ಒಂದು ದಿನವೂ ತಪ್ಪದೇ ಮಾಡಿದ್ದು ನನ್ನಕ್ಕ ಭಾರತಿ. ನಿತ್ಯ ಸಂಜೆ ನಡೆಯುತ್ತಿ ದ್ದ ಅಮ್ಮ ಮಗಳ ಮುಲಾಕತ್ ಅಮ್ಮನ ಜೀವನೋತ್ಸಾಹ ಹೆಚ್ಚಿಸಿ ಚೇತೋಹಾರಿಯಾಗಿಡಲು ಸಹಕಾರಿಯಾಗುತ್ತಿತ್ತು.

    ಒಂದು ವರ್ಷದಲ್ಲಿ ಇಬ್ಬರು ಅಮ್ಮಂದಿರೂ ನನ್ನಿಂದ ದೂರವಾದರು. ಬಾಲ್ಯದಲ್ಲಿ ನನ್ನನ್ನು ಎತ್ತಿ ಆಡಿಸಿದ ದೊಡ್ಡಮ್ಮ ವನಜಮ್ಮ ದೂರವಾದ ವರ್ಷದೊಪ್ಪತ್ತಿನಲ್ಲಿ ಅಮ್ಮ ಕೂಡ ವಾರಗಿತ್ತಿಯನ್ನು ಹಿಂಬಾಲಿಸಿದರು.

    ಅಮ್ಮನಿಲ್ಲದ ಮನೆಯಲ್ಲಿ ಶೂನ್ಯ ಆವರಿಸಿದೆ. ಕನ್ನಡಪ್ರೆಸ್ .ಕಾಮ್ ನ ಪ್ರೇರಕ ಶಕ್ತಿಯಲ್ಲಿ ಅಮ್ಮನೂ ಒಬ್ಬರು. ಅವರನ್ನು ಕಳೆದುಕೊಂಡ ದುಃಖದಲ್ಲಿ ಕನ್ನಡಪ್ರೆಸ್ ಒಂದು ವಾರ ಸ್ಥಗಿತವಾಗಿತ್ತು. ಅದಕ್ಕೆ ತಮ್ಮೆಲ್ಲರ ಕ್ಷಮಾಪಣೆ ಕೇಳುತ್ತಾ ಅಮ್ಮನ ನೆನಪಿನಲ್ಲಿ ಮತ್ತೆ ಕನ್ನಡಪ್ರೆಸ್ ತಮ್ಮನ್ನು ತಲುಪುತ್ತಿದೆ.

    ಬೌಂಡ್ ಲೆಸ್ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

    ವಿ. ಎಸ್ . ನಾಯಕ

    ಕಲಾವಿದನಾದವನಿಗೆ ಕಲೆಯು ಯಾವ ರೀತಿಯಲ್ಲಿ ಆದರೂ ಆಕರ್ಷಿಸಬಹುದು. ತಾನು ನೋಡಿದ್ದನ್ನು ಅನುಭವಿಸಿದ್ದನ್ನು ತಿಳಿದಿದ್ದನ್ನು ತನಗೆ ಅರಿವಿಲ್ಲದೆ ಕುಂಚದಲ್ಲಿ ಚಿತ್ರಿಸಿ ವಿಭಿನ್ನವಾದ ಕಲಾಕೃತಿಗಳನ್ನು ರಚಿಸಿ ಒಂದು ವಿಸ್ಮಯಕಾರಿ ತಾಣಕ್ಕೆ ನಮ್ಮನ್ನು ಕೊಂಡಯ್ಯುತ್ತಾನೆ . ಅದೇ ರೀತಿ ಇಲ್ಲಿ ಒಂದು ಅಚ್ಚರಿಯ ಕಲಾ ಲೋಕವೇ ಧರೆಗಿಳಿದು ಬಂದಂತೆ ಕಾಣುತ್ತಿದೆ.

    ಗಿಳಿಯಾಲ್ ಜಯರಾಮ್ ಭಟ್

    ಪ್ರಖ್ಯಾತ ಕಲಾವಿದರಾದ ಗಿಳಿಯಾಲ್ ಜಯರಾಮ್ ಭಟ್ ರವರ ಕುಂಚದಲ್ಲಿ ಯಾರು ಊಹಿಸಲಾಗದ ಒಂದಕ್ಕಿಂತ ಒಂದು ವಿಭಿನ್ನ ಕಲಾಕೃತಿಗಳು ರಚಿಸಲ್ಪಟ್ಟಿವೆ. ಇವರಿಗೆ ಪ್ರಕೃತಿ ವಿಭಿನ್ನವಾಗಿ ಕಂಡಿದೆ. ಪ್ರಕೃತಿಯ ಬಗ್ಗೆ ಇವರ ಮನಸ್ಸಿನಲ್ಲಿ ಮೂಡಿದ ಹಲವಾರು ವಿಚಾರಧಾರೆಗಳನ್ನು ತಮ್ಮ ಕಲಾಕೃತಿಗಳಲ್ಲಿ ಬಿಂಬಿಸಿದ್ದಾರೆ.

    ಒಂದಕ್ಕಿಂತ ಒಂದು ವಿಭಿನ್ನ ಕಲಾಕೃತಿಗಳು ವಿಶಿಷ್ಟ ಸಂದೇಶವನ್ನು ಕೊಡುತ್ತವೆ. ಇವರ ಕಲಾಕೃತಿಗಳು ನಿಸರ್ಗ ದಲ್ಲಿರುವ ಕಾಡು ಬೆಟ್ಟ ಗುಡ್ಡ ಅಲ್ಲಿಯ ವೈವಿಧ್ಯತೆ ಆನಂದ ಸಂತೋಷ ಸಾಮಾನ್ಯವಾಗಿ ಅಲ್ಲಿಯ ರಮಣೀಯ ದೃಶ್ಯಗಳನ್ನು ತನ್ನ ಮನಸ್ಸಿಗೆ ಬಂದ ಹಾಗೆ ವಿಭಿನ್ನ ರೀತಿಯಲ್ಲಿ ಚಿತ್ರಿಸಿರುವುದು ವಿಶೇಷ. ಕ್ಷಣ ಕಲಾಸಕ್ತರಿಗೆ ಇವರ ಕಲಾಕೃತಿಗಳು ನೋಡಿದಾಗ ವಿನೂತನವಾದ ಒಂದು ಲೋಕಕ್ಕೆ ಅಡಿ ಇಟ್ಟ ಅನುಭವವಾಗುತ್ತದೆ. ಇವರ ಬಣ್ಣಗಳ ಸಂಯೋಜನೆ ಮೆರೆಗು ಬೆಳಕು ನೆರಳಿನ ನಡುವೆ ನೋಡಿದರೆ ಪ್ರಕೃತಿಯ ಜೊತೆಗೆ ಇದ್ದಂತಹ ಅನುಭವವಾಗುತ್ತದೆ.

    ಸುಮಾರು 50 ಕ್ಕಿಂತಲೂ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಕಲಾವಿದರಾದ ಜಯರಾಮ್ ಭಟ್ ರವರು ಹೇಳುವಂತೆ ಪ್ರಕೃತಿಯಲ್ಲಿ ನಾನು ನೋಡಿದ ಅನುಭವಿಸಿದ ಹಲವಾರು ವಿಚಾರಧಾರೆಗಳನ್ನ ಕಲಾಕೃತಿಗಳ ಮೂಲಕವಾಗಿ ಬಿಂಬಿಸಿದ್ದೇನೆ. ಎಂದು ಹೇಳುತ್ತಾರೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆರಂಭಗೊಂಡಿರುವ ಇವರ ಕಲಾಪ್ರದರ್ಶನವು ಡಿಸೆಂಬರ್ 13ರವರೆಗೆ ನಡೆಯಲಿದ್ದು ಕಲಾ ಸಕ್ತರು ತಮ್ಮ ಬಿಡುವಿನ ಸಮಯದಲ್ಲಿ ಬಂದು ವೀಕ್ಷಿಸಬಹುದು.

    ಕಲಾ ಪ್ರದರ್ಶನದ ಸ್ಥಳ
    ಕರ್ನಾಟಕ ಚಿತ್ರಕಲಾ ಪರಿಷತ್ತಿನ ಗ್ಯಾಲರಿ ಒಂದು ಮತ್ತು ಎರಡು
    ಕುಮಾರ ಕೃಪಾರಸ್ತೆ ಬೆಂಗಳೂರು
    ಸಮಯ: ಬೆಳಿಗ್ಗೆ 10 ಗಂಟೆಯಿಂದ ಸಂಜೆ 7:00ವರೆಗೆ
    ಪ್ರವೇಶ ಉಚಿತ

    This image has an empty alt attribute; its file name is V-S-NAIK.jpg

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    ಅಡ್ಡದಾರಿಗಳು ಬೇಡ, ಜ್ಞಾನಮಾರ್ಗದಲ್ಲಿ ನಡೆಯಲು ಸಚಿವರ ಕರೆ

    BENGALURU DEC 5

    ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಗಳು ಜ್ಞಾನಮಾರ್ಗದಲ್ಲೇ ಬೆಳೆದುಕೊಂಡು ಬಂದಿದ್ದು, ನಮ್ಮ ವಿದ್ಯಾರ್ಥಿ ಸಮುದಾಯ ಕೂಡ ಈ ಉನ್ನತ ಮಾರ್ಗದಲ್ಲೇ ಸಾಗಬೇಕು. ಸುಸ್ಥಿರ ಅಭಿವೃದ್ಧಿಗೆ ಗುಣಮಟ್ಟದ ಶಿಕ್ಷಣವೊಂದೇ ಮಾರ್ಗವಾಗಿದ್ದು, ಇದಕ್ಕೆ ಯಾವುದೇ ಅಡ್ಡಹಾದಿಗಳಿಲ್ಲ ಎನ್ನುವುದನ್ನು ಮನಗಾಣಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

    ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 57ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಚಿತ್ರನಟ ದ್ವಾರಕೀಶ್‌, ಅಮೆರಿಕದ ಕನ್ನಡ ಸಂಘಟನೆಗಳ ಒಕ್ಕೂಟದ ಡಾ.ಅಮರನಾಥ್‌ ಗೌಡ ಮತ್ತು ಕಲಾವಿದ ಟಿ.ಅನಿಲ್‌ಕುಮಾರ್‍‌ ಅವರಿಗೆ ಗೌರವ ಡಾಕ್ಟೊರೇಟ್‌ ಪ್ರದಾನ ಮಾಡಲಾಯಿತು. ಜತೆಗೆ 300 ಚಿನ್ನದ ಪದಕ, 73 ನಗದು ಬಹುಮಾನ ಮತ್ತು 257 ಪಿಎಚ್.ಡಿ. ಪದವಿಗಳನ್ನು ಕೊಡಲಾಯಿತು. ಅಲ್ಲದೆ, 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿಗೆ ಪಾತ್ರರಾದರು.

    21ನೇ ಶತಮಾನವು ಜ್ಞಾನದ ಯುಗವಾಗಿದೆ. 13೦ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಸಮಸ್ಯೆಗಳಾ ಭಾಗವಾಗುವುದು ಮತ್ತು ವ್ಯವಸ್ಥೆಯನ್ನು ದೂಷಿಸುವುದು ಯಾರಿಗೇ ಆದರೂ ತುಂಬಾ ಸುಲಭವಾಗಿದೆ. ಆದರೆ, ವಿದ್ಯಾರ್ಥಿಗಳು ಸಮಸ್ಯೆಯ ಭಾಗವಾಗದೆ ಪರಿಹಾರ ಕ್ರಮಗಳ ಭಾಗವಾಗಬೇಕು. ಆಗಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅವರು ಕರೆ ಕೊಟ್ಟರು.

    ಒಳ್ಳೆಯ ಸಮಾಜ ನಿರ್ಮಾಣದ ಹೊಣೆಗಾರಿಕೆಯು ಕಲಿಕೆಯ ಭಾಗವಾಗಬೇಕು ಎಂಬ ಉದ್ದೇಶದಿಂದಲೇ ಎನ್‌ಇಪಿ ಜಾರಿಗೆ ತರಲಾಗಿದೆ. ಇದನ್ನು ಈಗಾಗಲೇ ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇದು ಅಂತಿಮವಾಗಿ ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನಗಳ ಭಾಗವಾಗಬೇಕು. ಈ ವಿಷಯದಲ್ಲಿ ಸಾಧಿಸಬೇಕಾದ್ದು ಇನ್ನೂ ಬಹಳಷ್ಟಿದೆ ಎಂದು ಅವರು ಎಚ್ಚರಿಸಿದರು.

    ಅಮೆರಿಕದಂತಹ ದೇಶವು ಜಾಗತಿಕ ಮಟ್ಟದಲ್ಲಿ ಬಲಾಢ್ಯವಾಗಲು ಅಲ್ಲಿನ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳೇ ಕಾರಣ. ನಮ್ಮಲ್ಲಿ ಕೇವಲ ವೈಯಕ್ತಿಕ ಸಾಧನೆಯ ಕಡೆಗೆ ಗಮನವಿದೆಯೇ ವಿನಾ ಸಾಂಘಿಕ ಪ್ರಯತ್ನಗಳಿಗೆ ಆದ್ಯತೆ ಕೊಟ್ಟಿಲ್ಲ. ಈ ಕೊರತೆಯನ್ನು ನಿವಾರಿಸುವತ್ತ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ದಾಪುಗಾಲಿಡುತ್ತಿದೆ. ಇದರ ಭಾಗವಾಗಿ ಡಿಜಿಟಲೀಕರಣ ಮತ್ತು ತಂತ್ರಜ್ಞಾನ ಅಳವಡಿಕೆಯ ಕಾರ್ಯಕ್ರಮಗಳು ವ್ಯಾಪಕವಾಗಿ ನಡೆಯುತ್ತಿವೆ ಎಂದು ಅವರು ವಿವರಿಸಿದರು.

    ಉನ್ನತ ಶಿಕ್ಷಣ ವಲಯವು ಸ್ವತಂತ್ರ, ಸ್ವಾವಲಂಬಿ, ಉತ್ತರದಾಯಿ ಮತ್ತು ಪಾರದರ್ಶಕವಾಗಿರಬೇಕು. ಈ ಮಹೋದ್ದೇಶಗಳೊಂದಿಗೆ ಸಾಕಷ್ಟು ಸುಧಾರಣೆಗಳನ್ನು ಕಳೆದ ಮೂರು ವರ್ಷಗಳಲ್ಲಿ ತರಲಾಗಿದೆ. ಈಗ ಮುಂದುವರಿದ ಭಾಗವಾಗಿ ಇಡೀ ತಿಂಗಳು ‘ಸುಶಾಸನ ಮಾಸ’ವನ್ನು ಆಚರಿಸಲಾಗುತ್ತಿದೆ. ನಮ್ಮ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಎಲ್ಲೋ ಪ್ರತ್ಯೇಕವಾಗಿ ಕೆಲಸ ಮಾಡುವುದರ ಬದಲು ಸಮಾಜದಲ್ಲಿರುವ ಪರಿಣತಿಯನ್ನು ಸಕಾರಾತ್ಮಕವಾಗಿ ಬಳಸಿಕೊಂಡು ರಚನಾತ್ಮಕ ಪ್ರಗತಿಯ ಹಿರಿಮೆಯನ್ನು ಸಾಧಿಸಬೇಕು ಎಂದು ಸಚಿವರು ಪ್ರತಿಪಾದಿಸಿದರು.

    ಸ್ವಾಮಿ ವಿವೇಕಾನಂದರು ಹೇಳಿದಂತೆ ನಾವೇ ನಮ್ಮ ಬದುಕಿನ ಶಿಲ್ಪಿಗಳಾಗಬೇಕು. ಇದು ಸಾಧ್ಯವಾಗಬೇಕೆಂದರೆ ಉನ್ನತಿ ಮತ್ತು ಉತ್ಕೃಷ್ಟತೆಗಳ ಕಡೆಗೆ ವಿದ್ಯಾರ್ಥಿಗಳು ತುಡಿತ ಬೆಳೆಸಿಕೊಳ್ಳಬೇಕು. ಈ ಜ್ಞಾನದ ಯುಗದಲ್ಲಿ ಬೆಂಗಳೂರು ನಗರವು ದೇಶದ ನಂಬರ್‍‌ ಒನ್‌ ನಗರವಾಗಿದ್ದು, ಜಾಗತಿಕ ಸ್ತರದಲ್ಲಿ 24ನೇ ಸ್ಥಾನವನ್ನು ಅಲಂಕರಿಸಿದೆ. ಇಲ್ಲಿರುವ ಉಜ್ವಲ ಅವಕಾಶಗಳನ್ನು ವಿದ್ಯಾರ್ಥಿಗಳು ತಮ್ಮ ಮತ್ತು ಸಮುದಾಯದ ಯಶಸ್ಸಿಗೆ ಬಳಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.

    ಎನ್‌ಇಪಿಯಿಂದ ಭಾರತ ವಿಶ್ವಗುರು
    ಘಟಿಕೋತ್ಸವ ಭಾಷಣ ಮಾಡಿದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಪ್ರೊ.ಜಗದೀಶ್‌ಕುಮಾರ್, “ಲಭ್ಯತೆ, ಕೈಗೆಟುಕುವಿಕೆ, ಗುಣಮಟ್ಟ, ಸಮಾವ ಅವಕಾಶ ಮತ್ತು ಉತ್ತರದಾಯಿತ್ವ ಎನ್ನುವ ಐದು ಅಂಶಗಳೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಆಧಾರಸ್ತಂಭಗಳಾಗಿವೆ. ಇದರ ಆಧಾರದ ಮೇಲೆ ಪ್ರಧಾನಿ ಮೋದಿಯವರ ಆಶಯದಂತೆ ಭಾರತವು ವಿಶ್ವಗುರುವಾಗುತ್ತ ಮುಂದಡಿ ಇಟ್ಟಿದೆ” ಎಂದರು.

    ಆತ್ಮಶೋಧನೆಯೇ ಕಲಿಕೆಯ ಅಂತಿಮ ಗುರಿಯಾಗಿದೆ. ಇದರ ಜತೆಗೆ ನಿರಂತರ ಕಲಿಕೆ ಕೂಡ ಸಾಧ್ಯವಾಗಬೇಕು. ನಮ್ಮಲ್ಲಿ ಉದ್ಭವಿಸುವ ಪ್ರಶ್ನೆ ಮತ್ತು ಜಿಜ್ಞಾಸೆಗಳು ಕೂಡ ಉನ್ನತ ಮಟ್ಟದ್ದಾಗಿದ್ದಾಗ ಮಾತ್ರ ಅದಕ್ಕೆ ತಕ್ಕ ಗುಣಮಟ್ಟದ ಉತ್ತರ ದೊರೆಯುವುದು ಸಾಧ್ಯವಾಗಲಿದೆ ಎಂದು ಅವರು ನುಡಿದರು.

    ನಮ್ಮಲ್ಲಿ ಈಗ ಜನಸಂಖ್ಯೆಯ ಸರಸಾರಿ ವಯಸ್ಸು 29ರಷ್ಟಿದೆ. ಇದು ಸಾಧನೆಗೆ ಹೇಳಿಮಾಡಿಸಿದಂತಹ ವಾತಾವರಣವನ್ನು ಸೃಷ್ಟಿಸಿದೆ. ಭಾರತವು ಜ್ಞಾನಾಧಾರಿತ ಸಮಾಜವಾದರೆ ಮಾತ್ರ ವಿಶ್ವ ಮಟ್ಟದಲ್ಲಿ ಪ್ರತಿಷ್ಠಾಪಿತವಾಗಬಹುದಷ್ಟೆ. ಇದು ಸಾಕಾರಗೊಳ್ಳಬೇಕೆಂದರೆ ನಮ್ಮ ಶಿಕ್ಷಣ ವ್ಯವಸ್ಥೆಯ ಆದ್ಯತೆಗಳು ಆಮೂಲಾಗ್ರವಾಗಿ ಬದಲಾವಣೆಗೆ ತೆರೆದುಕೊಳ್ಳಬೇಕಿದೆ ಎಂದು ಅವರು ಪ್ರತಿಪಾದಿಸಿದರು.

    ಎನ್‌ಇಪಿ ಒಂದು ದಿಟ್ಟ ನಿರ್ಧಾರವಾಗಿದೆ. ಅತ್ಯಂತ ಚಾರಿತ್ರಿಕವಾಗಿರುವ ಈ ನೀತಿಯಿಂದಾಗಿ, ದೇಶದ ಶಿಕ್ಷಣ ಕ್ಷೇತ್ರವು ಹೊಸತನಕ್ಕೆ ಮತ್ತು ದೇಶಕ್ಕೆ ಅಗತ್ಯವಾದ ಶೈಕ್ಷಣಿಕ ದೃಷ್ಟಿಕೋನಕ್ಕೆ ಮುಕ್ತವಾಗಿ ತೆರೆದುಕೊಂಡಿದೆ. ಉದ್ಯೋಗಾವಕಾಶಗಳ ಜತೆಗೆ ಸಂಶೋಧನೆ ಮತ್ತು ಜ್ಞಾನದಾಹದ ಸೃಷ್ಟಿ ಇದರಿಂದ ಸಾಧ್ಯವಾಗಲಿದ್ದು, ಎನ್‌ಇಪಿ ಪರಿಪೂರ್ಣ ದೃಷ್ಟಿಕೋನದೊಂದಿಗೆ ಇವೆಲ್ಲವನ್ನೂ ಅಳವಡಿಸಿಕೊಂಡಿದೆ ಎಂದು ಅವರು ಒತ್ತಿ ಹೇಳಿದರು.

    ಕಾರ್ಯಕ್ರಮದಲ್ಲಿ ರಾಜ್ಯಪಾಲ ಮತ್ತು ಕುಲಾಧಿಪತಿಗಳಾದ ಥಾವರಚಂದ್‌ ಗೆಹಲೋಟ್‌, ಬೆಂಗಳೂರು ವಿವಿ ಕುಲಪತಿ ಡಾ.ಎಸ್‌ ಎಂ ಜಯಕರ್‍‌, ಕುಲಸಚಿವರಾದ ಪ್ರೊ.ಜೆ ಟಿ ದೇವರಾಜ್‌ ಮತ್ತು ಎನ್‌ ಮಹೇಶ್‌ ಬಾಬು ಮುಂತಾದವರು ಉಪಸ್ಥಿತರಿದ್ದರು.


    ಬೈದು ಹೇಳುವವರು  ಬದುಕುವುದಕ್ಕೆ ಎಂಬುದು  ಹಳೆಯ ಮಾತಾದರೂ ಸಾರ್ವಕಾಲಿಕ

     ಸುಮಾವೀಣಾ

    ಕವಿ ರನ್ನ

    ಆರಾಧ್ಯಂ ನ ಪ್ರಕೋಪಯೇತ್-ಶಕ್ತಿ ಕವಿ ರನ್ನ ಬರೆದಿರುವ ‘ಗದಾಯುದ್ಧ’ದ  ‘ಸಂಜಯ ವಚನ’ದಿಂದ ಪ್ರಸ್ತುತ ವಾಕ್ಯವನ್ನು ಆರಿಸಿದೆ. ನಾವು ಯಾರನ್ನು ಆರಾಧಿಸುತ್ತೇವೆಯೋ  ಅವರ ಮೇಲೆ ಕೋಪಿಸಿಕೊಳ್ಳಬಾರದು ಅನ್ನುವ  ಅರ್ಥ  ಬರುತ್ತದೆ . ಇದೊಂದು ದಾಕ್ಷಿಣ್ಯದ ಸನ್ನಿವೇಶ .  ನಮ್ಮ ಪ್ರೀತಿ ಪಾತ್ರರ ಮೇಲೆ   ಕೋಪ ಮಾಡಿಕೊಳ್ಳಲು ಏನೋ  ಕಷ್ಟ . ಅದು ಮನಸ್ಸಿಗೆ ಹಿಡಿಸದ ವಿಚಾರ.  ಅವರು ತಪ್ಪು ಮಾಡುತ್ತಿದ್ದಾರೆ ಎಂದು ತಿಳಿದ ಬಳಿಕವೂ ಅವರು ನೊಂದು ಕೊಲ್ಲುತ್ತಾರೆ ಅನ್ನುವ ಕಾರಣಕ್ಕೆ ಆ ತಪ್ಪುಗಳನ್ನು ಮನ್ನಿಸಿಬಿಡುವ ಸನ್ನಿವೇಶ ಎಷ್ಟೋ  ಬಾರಿ ಎದುರಾಗುತ್ತದೆ.  ಇಲ್ಲಿ ಈ ಸನ್ನಿವೇಶದಲ್ಲಿ ಇಂಥ ಇಕ್ಕಟ್ಟಿನ ಪರಿಸ್ಥಿತಿಯನ್ನು ಸಂಜಯ ಎದುರಿಸುತ್ತಾನೆ. ದುರ್ಯೋಧನನ ತಪ್ಪುಗಳನ್ನು ಆದಷ್ಟು ತಿದ್ದುವ ಪ್ರಯತ್ನ ಮಾಡುತ್ತಾನೆ  ಅವನಿಂದ  ಕೋಪದ ಪ್ರತಿಕ್ರಿಯೆ ಬಂದ ಬಳಿಕ “ಆರಾಧ್ಯಂ ನ ಪ್ರಕೋಪಯೇತ್” ಅನ್ನುವ ಮಾತನ್ನು  ತನ್ನಂತರ್ಗತದಲ್ಲಿ ಹೇಳುತ್ತಾನೆ.

     ಅದರೆ ಈ ಮಾತು ಮಕ್ಕಳ ಬೆಳವಣಿಗೆಯ ವಿಚಾರದಲ್ಲಿ ನಿಷಿದ್ಧ ಎಂದೇ ಹೇಳಬಹುದು  . ತೀಕ್ಷ್ಣ ಪ್ರತಿಕ್ರಿಯೆಗಳನ್ನು ಕೊಡಬೇಕಾಗುತ್ತದೆ ಅದರಿಂದ ಮಕ್ಕಳ ಕಲಿಕಾ  ಪ್ರಗತಿಯಾಗುತ್ತದೆ. ಇಲ್ಲವಾದರೆ  ಅವರ ಕಲಿಕೆಗೆ ಮಾರಕವಾಗುತ್ತದೆ.  ಇದೊಂದು ಸಂದಿಗ್ಧತೆಯನ್ನು  ಹೇಳುವ ಮಾತಾಗಿದೆ. ಬೈದು ಹೇಳುವವರು  ಬದುಕುವುದಕ್ಕೆ ಎಂಬುದು  ಹಳೆಯ ಮಾತಾದರೂ ಸಾರ್ವಕಾಲಿಕವಾದದ್ದು.

      ‘ಕಯ್ಪೆ ಸೋರೆಯ ಕುಡಿಯೇಂ ಮಿಡಿಯೇಂ’ ಸಂಜಯ ವಚನದಲ್ಲಿ ಬರುವ ಮಾತು  ತಂದೆಯಂತೆ ಮಗ ಕಹಿ ಸೋರೆಯ  ಕುಡಿಯೇನು?  ಕಾಯೇನು ಎಲ್ಲವೂ ಒಂದೇ ರುಚಿಯನ್ನು ಕೊಡುತ್ತದೆ ಇದರಲ್ಲೇನು ವಿಶೇಷ. ಜನ್ಮತಃ ಬಂದ ಕೆಲವು ಗುಣಗಳನ್ನು ಯಾರಿಂದಲೂ  ಬದಲಾಯಿಸಲು ಸಾದ್ಯವಿಲ್ಲ.    ಹುಟ್ಟು ಗುಣ ಎನ್ನುತ್ತಾರಲ್ಲ ಹಾಗೆ  ಗುಣಾವಗುಣಂಗಳು ಹುಟ್ಟನ್ನೇ ಅವಲಂಬಿಸಿರುತ್ತವೆ ಅದರ ಬದಲಾವಣೆ ಕಷ್ಟ ಎನ್ನುವುದು ಇಲ್ಲಿ ವೇದ್ಯವಾಗುತ್ತದೆ.

     ಹುಟ್ಟಿನಿಂದ ಬಂದ ಗುಣಕ್ಕೆ ತದ್ವಿರುದ್ಧ ಗುಣವನ್ನು ಆಶಿಸುವುದು ತಪ್ಪು ಸ್ವಾಭಾವಿಕ ಗುಣಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಇಲ್ಲಿ ದುರ್ಯೋಧನ ಹತಾಶೆಯಿಂದ   ಈ ಮಾತುಗಳನ್ನು ಹೇಳಿರುವಂತಿದೆ.ಎಲ್ಲರೂ ಸಹಾಯಮಾಡುವರೆಂಬ ನಿರೀಕ್ಷೆಯಲ್ಲಿರುತ್ತಾನೆ  ಆದರೆ ಯಾರೊಬ್ಬರೂ ಪೂರಕವಾಗಿ ಸ್ಪಂದಿಸದೆ ಇದ್ದಾಗ  ಇನ್ನು ಯಾರೂ ಸಹಾಯ ಮಾಡಲಾರರು ಅನ್ನುವ ನಿರಾಶೆ ಇಲ್ಲಿರುವುದನ್ನು ನೋಡಬಹುದು.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ಹಾಸ್ಮಾಟ್‌ನಲ್ಲಿ ರೊಬೊಟಿಕ್ ಶಸ್ತ್ರಚಿಕಿತ್ಸಾ ಘಟಕ ; ಕೀಲು ಬದಲಾವಣೆ ಈಗ ಮತ್ತಷ್ಟು ಸರಳ , ನಿಖರ

    BENGALURU NOV 28

    ಮೂಳೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆಯಲ್ಲಿ ಹೆಸರು ವಾಸಿಯಾಗಿರುವ ಬೆಂಗಳೂರಿನ ಹಾಸ್ಮಾಟ್ ಆಸ್ಪತ್ರೆ ಇಂದು ತನ್ನ ಮ್ಯಾಗ್ರಾಥ್ ರಸ್ತೆಯ ಆಸ್ಪತ್ರೆಯಲ್ಲಿ ಅತ್ಯಾಧುನಿಕ ರೊಬೊಟಿಕ್ ಸರ್ಜರಿ ಘಟಕದ ಸೇರ್ಪಡೆಯನ್ನು ಪ್ರಕಟಿಸಿತು. ಈ ಸೇರ್ಪಡೆಯಿಂದ ಈ ಬಗೆಯ ಅತ್ಯಾಧುನಿಕ ಆಟೊಮೇಟೆಡ್ ರೊಬೊಟಿಕ್ ಸಿಸ್ಟಂ ಅಳವಡಿಸಿದ ಕರ್ನಾಟಕದ 2ನೇ ಆಸ್ಪತ್ರೆಯಾಗಿ ಹಾಸ್ಮಾಟ್ ಹೊರಹೊಮ್ಮಿದೆ.

    ಹೊಟ್ಟೆಯ ಮತ್ತು pelvis ಶಸ್ತ್ರಚಿಕಿತ್ಸೆಗಳಲ್ಲಿ ರೊಬೊಟಿಕ್ ತಂತ್ರಜ್ಞಾನದ ಆವಿಷ್ಕಾರದ ನಂತರ, ಕೀಲು ಬದಲಾವಣೆಯಲ್ಲಿ ರೊಬೊಟಿಕ್ ಶಸ್ತ್ರಚಿಕಿತ್ಸೆಯು ತನ್ನ ಅತ್ಯಂತ ನಿಖರತೆ ಮತ್ತು ನಿಷ್ಕೃಷ್ಟತೆಯ ತಂತ್ರಕ್ಕೆ ಅತ್ಯಂತ ಖ್ಯಾತಿ ಪಡೆದಿದೆ. ಈ 3ನೇ ತಲೆಮಾರಿನ CUVIS ರೊಬೊಟಿಕ್ ಘಟಕವು ಕಳೆದ 2ವರ್ಷಗಳಿಂದ ಭಾರತ ಒಳಗೊಂಡು ಅಂತಾರಾಷ್ಟ್ರೀಯವಾಗಿ ಬಳಕೆಯಲ್ಲಿದೆ. ರೊಬೊಟಿಕ್ ಘಟಕವು ಅತ್ಯಂತ ನಿಖರತೆ ನೀಡುತ್ತದೆ. ಶಸ್ತ್ರಚಿಕಿತ್ಸೆಯ ನಂತರ ಚೇತರಿಕೆಯೂ ಅತ್ಯಂತ ನೋವು ರಹಿತವಾಗಿರುತ್ತದೆ ಹಾಗೂ ನೀ ಆರ್ಥೊಪ್ಲಾಸ್ಟಿ ಎಂದು ಕರೆಯುವ ಸಾಂಪ್ರದಾಯಿಕ ಮೊಣಕಾಲು ಬದಲಾವಣೆ ಚಿಕಿತ್ಸೆಗಿಂತ ಮೊಣಕಾಲನ್ನು ಈ ಚಿಕಿತ್ಸೆಯ ಮೂಲಕ ಬಗ್ಗಿಸುವುದು ಸುಲಭವಾಗುತ್ತದೆ.

    ಮೊಣಕಾಲಿನ ಮೂಳೆಯ ಮೇಲ್ಮೈಗಳನ್ನು ಹೈ ಡೆನ್ಸಿಟಿ ಪಾಲಿ ಎಥಿಲೀನ್ ಎಂಬ ಬಹಳ ಸದೃಢ ಪ್ಲಾಸ್ಟಿಕ್‌ನಿಂದ ಬದಲಾಯಿಸಲಾಗುತ್ತದೆ, ಅವುಗಳು ಮೊಣಕಾಲಿನ ಮುಚ್ಚಿದ ಮೂಳೆ ಮತ್ತು ಕಾಲಿನ ಮೇಲಿನ ಕೊನೆಯ ಮೂಳೆಯಾಗಿರುತ್ತದೆ, ತೊಡೆಯ ಮೂಳೆಯನ್ನು ವಿಶೇಷವಾದ ಕೋಬಾಲ್ಟ್ ಕ್ರೋಮ್ ಎಂಬ ವಿಶೇಷ ಲೋಹದೊಂದಿಗೆ ಸೇರಿಸಲಾಗುತ್ತದೆ ಅದು ಮ್ಯಾಗ್ನೆಟಿಕ್ ರಹಿತವಾಗಿದ್ದು ಎಂಆರ್‌ಐ ಸುರಕ್ಷಿತವಾಗಿರುತ್ತದೆ.

    ಈ ಮೊಣಕಾಲು ಬದಲಾವಣೆಯನ್ನು ಆರ್ಥೈಟಿಸ್ ಅಥವಾ ಹಳೆಯ ಗಾಯದಿಂದ ಅಥವಾ ವಯಸ್ಸಾಗುವಿಕೆಯಿಂದ ಮೊಣಕಾಲು ಹಾನಿಯುಂಟಾದ, ನಡೆದಾಡುವಾಗ ಅಥವಾ ಮೆಟ್ಟಿಲು ಹತ್ತುವಾಗ ನೋವಿರುವ ಶಸ್ತ್ರಚಿಕಿತ್ಸೆಯ ಹೊರತಾದ ಚಿಕಿತ್ಸೆಯಿಂದ ಯಾವುದೇ ಪ್ರಯೋಜನವಾಗದ ಹಾಗೂ ದೈನಂದಿನ ಚಟುವಟಿಕೆ ಸೀಮಿತವಾದ ರೋಗಿಗಳಿಗೆ ಪರಿಗಣಿಸಬಹುದು.

    ಹಲವು ಬಗೆಯ ಆರ್ಥೈಟಿಸ್ ಮೊಣಕಾಲಿನ ಕೀಲಿಗೆ ಬಾಧಿಸಬಹುದು. ಆಸ್ಟಿಯೊಆರ್ಥೈಟಿಸ್ ಅತ್ಯಂತ ಸಾಮಾನ್ಯ ಡೀಜನರೇಟಿವ್ ಕೀಲು ನೋವಾಗಿದ್ದು ಅದು ಅತಿಯಾದ ತೂಕವಿರುವ ಮಧ್ಯಮ ವಯಸ್ಸಿನ ಜನರಿಗೆ ಕಾಡುತ್ತದೆ ಮತ್ತು ಬಾಗಿದ ಮೊಣಕಾಲು ಉಳ್ಳವರಿಗೆ, 60 ವರ್ಷ ಮೀರಿದವರಿಗೆ, ರ‍್ಹುಮಟಾಯಿಡ್ ಆರ್ಥೈಟಿಸ್ ಉಳ್ಳವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಹಾನಿಯುಂಟು ಮಾಡಬಹುದು. ಹಳೆಯ ಗಾಯದಿಂದ ಉಂಟಾಗುವ ಟ್ರೌಮ್ಯಾಟಿಕ್ ಆರ್ಥೈಟಿಸ್, ಬೀಳುವುದರಿಂದ ಕೀಲು ಹರಿದು ಹೋಗುವುದರಿಂದ ಉಂಟಾಗುವ ಆರ್ಥೈಟಿಸ್ ಮತ್ತು ಮೊಣಕಾಲಿನ ಮೃದ್ವಸ್ಥಿ ಹಾಳಾಗುವುದು ಪ್ರಮುಖ ಕಾರಣಗಳಾಗಿವೆ.

    3ಡಿ ಸಿಟಿ ಸ್ಕ್ಯಾನ್ ಚಿತ್ರಗಳನ್ನು ಶಸ್ತ್ರಚಿಕಿತ್ಸೆಯ ಪೂರ್ವದಲ್ಲಿ ರೊಬೊಟಿಕ್ ಸಿಸ್ಟಂಗೆ ಪೆನ್ ಡ್ರೈವ್ ಮೂಲಕ ನೀಡಲಾಗುತ್ತದೆ. ಇದು ರೋಗಿಯ ಮೊಣಕಾಲಿನ ಕುರಿತು ವಿವರವಾದ ರಿಯಲ್ ಟೈಮ್ ಅಂಗರಚನೆಯನ್ನು ನೀಡುತ್ತದೆ ರೊಬೊಟಿಕ್ ಘಟಕದ ಈ “ಕಣ್ಣುಗಳು” ಮೊಣಕಾಲಿನ ಮೇಲಿದ್ದು ಸತತವಾಗಿ ಶಸ್ತ್ರಚಿಕಿತ್ಸಾ ತಜ್ಞರಿಗೆ ನೆರವಾಗುತ್ತವೆ, ಇದರಿಂದ ಅತ್ಯಂತ ನಿಖರ ಬದಲಾವಣೆ ಶಸ್ತ್ರಚಿಕಿತ್ಸೆ ಸಾಧ್ಯವಾಗುತ್ತದೆ. ಇದು ನಿಮ್ಮ ಮೊಣಕಾಲಿನ ಕುರಿತಾದ ಜಿಪಿಎಸ್ ರೀತಿಯ ಡಿವೈಸ್ ಮೂಲಕ ನಿಖರ ಮಾಹಿತಿಯ ಮೇಲೆ ಆಧಾರಪಡುತ್ತದೆ, ಅದು ರೊಬೊಟಿಕ್ಸ್ ಅಸಿಸ್ಟೆಡ್ ಹ್ಯಾಂಡ್ ಹೆಲ್ಡ್ ಡಿವೈಸ್‌ಗೆ ನಿಮ್ಮ ಮೊಣಕಾಲಿನ ಕುರಿತು ನಿಖರ ಮಾಹಿತಿ ಸಂವಹನ ನಡೆಸುತ್ತದೆ.

    ಶಸ್ತ್ರಚಿಕಿತ್ಸೆಯ ಮುನ್ನವೇ ರೋಗಿಯ ಮೊಣಕಾಲಿನ ಮಾಹಿತಿ ಪಡೆಯುವುದರಿಂದ ಶಸ್ತ್ರಚಿಕಿತ್ಸಾ ತಜ್ಞರು ರೊಬೊಟಿಕ್ಸ್-ಅಸಿಸ್ಟೆಡ್ ಹ್ಯಾಂಡ್ ಡಿವೈಸ್‌ಗೆ ವಿಶೇಷ ಡೇಟಾ ಪಡೆಯುವ ಮೂಲಕ ನಿಮ್ಮ ಮೊಣಕಾಲಿನ ಹಾನಿಯಾದ ಭಾಗ ರಿಪೇರಿ ಮಾಡಲು, ನಿಮ್ಮ ಕೀಲು ಸಮಗೊಳಿಸಲು ಮತ್ತು ಅಳವಡಿಕೆಯನ್ನು ನಿಖರವಾಗಿ ಸೇರಿಸಲು, ಕಾಲುಗಳನ್ನು ಬಾಗಿಸಲು ಮತ್ತು ಬದಿಗೆ ಬಾಗಿದ ಮೊಣಕಾಲುಗಳನ್ನು ನೇರ ಮಾಡಲು ಸಾಧ್ಯವಾಗುತ್ತದೆ.

    ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆಯ ಗುರಿ ನಡೆದಾಡುವ ನೋವು ನಿವಾರಿಸುವುದು ಮತ್ತು ರೋಗಿಯನ್ನು ಹೆಚ್ಚು ಸಕ್ರಿಯವಾಗಿ, ಸುಲಭವಾಗಿ ೨ ಮಹಡಿಗಳನ್ನು ಹತ್ತುವಂತೆ ಮಾಡುವುದು. ರೋಗಿಯು ಅಡುಗೆ ಮಾಡಲು ಒಂದು ಗಂಟೆ ನಿಲ್ಲುವುದು ಮತ್ತು ಕಛೇರಿಗೆ ಹೋಗುವುದನ್ನು ಸಾಧ್ಯವಾಗಿಸುವುದು. ಅತ್ಯಾಧುನಿಕ ಅಮೆರಿಕನ್ ಇಂಪ್ಲಾಂಟ್ಸ್ ಆದ ಮೆರಿಲ್ ಗೋಲ್ಡ್ ಮೂಲಕ ರೋಗಿಯು ಕೆಲ ತಿಂಗಳ ನಂತರ ನೆಲದ ಮೇಲೆ ಕಾಲು ಮಡಚಿ ಹಾಕಿ ಕುಳಿತುಕೊಳ್ಳಬಹುದು ಮತ್ತು ಬದಲಾವಣೆಯ ನಂತರ ದೀರ್ಘ ಜೀವನವಿರುತ್ತದೆ.

    ಈ ಹೊಸ ಆವಿಷ್ಕಾರದ ಕುರಿತು ಆರ್ಥೊಪಿಡಿಕ್ಸ್ ಅಂಡ್ ಆರ್ಥೊಪ್ಲಾಸ್ಟಿಯ ಮುಖ್ಯಸ್ಥ ಹಾಗೂ ಇಂಥ ಚಿಕಿತ್ಸೆಯಲ್ಲಿ 35 ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಡಾ.ಥಾಮಸ್ ಚಾಂಡಿ, ಉತ್ಸಾಹ ವ್ಯಕ್ತಪಡಿಸಿದ್ದಾರೆ. ಅತ್ಯಂತ ನಿಖರತೆ ಮತ್ತು ನಿಷ್ಕೃಷ್ಟತೆ ಟ್ರಿಮ್ ಮಾಡುವಾಗ ಮೊಣಕಾಲಿನ ಕೀಲಿನ ಮೂರು ಮೂಳೆಗಳ ಮೇಲ್ಮೈನ ಮೂಳೆ ನಷ್ಟ ಕಡಿಮೆ ಮಾಡುತ್ತದೆ ಎನ್ನುತ್ತಾರೆ. ಅವರು ಮರುದಿನವೇ ಕಡಿಮೆ ನೋವಿನೊಂದಿಗೆ ನಡೆದಾಡಬಹುದು ಮತ್ತು ವೇಗವಾಗಿ ಮೊಣಕಾಲು ಬಾಗಿಸಬಹುದು ಎನ್ನುವ ಸಾಮರ್ಥ್ಯ ಕುರಿತು ಅಪಾರ ಸಂತೋಷ ವ್ಯಕ್ತಪಡಿಸಿದ್ದಾರೆ.

    Indian Stock Market: ಪ್ರಚಾರಿಕ ಅಂಶಗಳಿಗೆ ಪ್ರಾಶಸ್ತ್ಯ ನೀಡದೇ ಆಂತರಿಕ ಅಂಶಗಳನ್ನೂ ಆಧರಿಸಿ ನಿರ್ಧರಿಸುವುದು ಕ್ಷೇಮ

    ಷೇರುಪೇಟೆಯ ಸೂಚ್ಯಂಕಗಳು ದಾಖಲೆಯ ಮಟ್ಟದಲ್ಲಿದ್ದು, ಅನೇಕ ಕಂಪನಿಗಳ ಷೇರುಗಳು ಗರಿಷ್ಠದಲ್ಲಿವೆ. ಇವುಗಳಲ್ಲಿ ಅಗ್ರಮಾನ್ಯ ಕಂಪನಿಗಳು ಸಹಜ ಸಾಧನೆಯುಳ್ಳ ಅನೇಕ ಕಂಪನಿಗಳೂ ಇವೆ. ಇನ್ನು ಕೆಲವು ಸಮಯದ ಪ್ರಭಾವದಿಂದ ಅಲಂಕಾರಿಕ ವಿಶ್ಲೇಷಣೆಗಳ ಪ್ರೇರಿತವಾಗಿ ಹೆಚ್ಚಿನ ಏರಿಕೆ ಕಂಡು ಅನೇಕ ಹೊಸ ಹೂಡಿಕೆದಾರರನ್ನು ಆಕರ್ಷಿಸುವುದೂ ಇದೆ. ಹಾಗಾಗಿ ಹೂಡಿಕೆ ಎಂದು ನಿರ್ಧರಿಸುವ ಸಂದರ್ಭದಲ್ಲಿ ಕಂಪನಿಗಳ ಆಂತರಿಕ ಸಾಧನೆ, ಆ ಕಂಪನಿಯ ಉತ್ಮನ್ನಗಳಿಗಿರುವ ವರ್ತಮಾನ ಮತ್ತು ಭವಿಷ್ಯದ ಪರಿಸ್ಥಿತಿಗಳು, ಪೇಟೆಯ ವಾತಾವರಣ, ಕಂಪನಿಯ ಆಡಳಿತ ಮಂಡಳಿಗಳ ಹೂಡಿಕೆದಾರರ ಸ್ನೇಹಿ ಗುಣದಂತಹ ವಿವಿಧ ಅಂಶಗಳನ್ನು ಗಮನಿಸಿ ಹೂಡಿಕೆಯ ಯೋಗ್ಯತಾಮಟ್ಟವನ್ನು ಮಾಪನ ಮಾಡಿ ನಿರ್ಧರಿಸಿದಲ್ಲಿ ಸ್ವಲ್ಪಮಟ್ಟಿನ ಸುರಕ್ಷತೆ ಕಾಣಬಹುದಾಗಿದೆ. ಈಗ ಪೇಟೆಗಳು ಗರಿಷ್ಠ ಹಂತದಲ್ಲಿರುವುದರಿಂದ ಅನೇಕ ಅಗ್ರಮಾನ್ಯ ಕಂಪನಿಗಳು ಏರಿಕೆ ಮತ್ತು ಇಳಿಕೆಗಳ ಚಕ್ರದೊಳಗೆ ಸಿಲುಕಿ ಚಕ್ರಾಕಾರದಲ್ಲಿ ಚಲಿಸುತ್ತಿವೆ.

    ಉದಾಹರಣೆಗೆ 21 ನೇ ಸೋಮವಾರದಂದು ಸೆನ್ಸೆಕ್ಸ್‌ 518 ಪಾಯಿಂಟುಗಳ ಇಳಿಕೆ ಕಂಡಿತು ಅಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಸೆನ್ಸೆಕ್ಸ್‌ ಗೆ 231 ಪಾಯಿಂಟುಗಳ ಇಳಿಕೆ ಕೊಟ್ಟಿತು. 22 ನೇ ಮಂಗಳವಾರದಂದು 43 ಪಾಯಿಂಟುಗಳ ಏರಿಕೆಯನ್ನು, ಬುಧವಾರ 23 ರಂದು 23 ಪಾಯಿಂಟುಗಳ ಇಳಿಕೆಯನ್ನು ಕಂಡರೆ, ಗುರುವಾರ 24 ರಂದು 79 ಪಾಯಿಂಟುಗಳ ಏರಿಕೆಯನ್ನು ಪಡೆಯಿತು. ಶುಕ್ರವಾರ 25 ರಂದು 104 ಪಾಯಿಂಟುಗಳ ಏರಿಕೆಯನ್ನು ಕಂಡಿದೆ. ಒಟ್ಟಾರೆ ವಾರದ ಬದಲಾವಣೆ 28 ಪಾಯಿಂಟುಗಳ ಇಳಿಕೆ. ಇದಕ್ಕೆ ವಾರದುದ್ದಕ್ಕೂ ವೈವಿಧ್ಯಮಯ ಕಾರಣಗಳ ಲೇಪನದಿಂದ ಏರಿಳಿತಗಳುಂಟಾಗಿ ಚಟುವಟಿಕೆ ಭರಿತವಾಗುವಂತಾಯಿತು.

    ಹೀಗೆಯೇ ಹೆಚ್‌ ಡಿ ಎಫ್‌ ಸಿ ಮತ್ತು ಹೆಚ್‌ ಡಿ ಎಫ್‌ ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಇನ್ಫೋಸಿಸ್‌, ಟಿಸಿಎಸ್‌, ಲಾರ್ಸನ್‌ ಅಂಡ್‌ ಟೋಬ್ರೋ ದಂತಹ ಕಂಪನಿಗಳು ಏರಿಳಿತಗಳನ್ನು ಪ್ರದರ್ಶಿಸಿ ಅನೇಕರಿಗೆ ಅಲ್ಪಕಾಲೀನ ಲಾಭ ಗಳಿಸಿಕೊಡುವ ಅವಕಾಶಗಳನ್ನು ಒದಗಿಸಿವೆ. ಆಕ್ಸಿಸ್‌ ಬ್ಯಾಂಕ್‌ ಷೇರು ವಾರ್ಷಿಕ ಗರಿಷ್ಠದಲ್ಲಿದ್ದಾಗ, ನವೆಂಬರ್‌ 1 ರಂದು ಸುಮಾರು ರೂ.900 ರ ಸಮೀಪವಿತ್ತು, ಕೇಂದ್ರ ಸರ್ಕಾರ ತಾನು ಹೊಂದಿರುವ SUUTI ಷೇರುಗಳನ್ನು ಅಂದರೆ ಶೇ.1.55 ರಷ್ಟನ್ನು ರೂ.830.63 ರ ಕನಿಷ್ಠಬೆಲೆಯ ಆಧಾರದ ಮೇಲೆ ಆಫರ್‌ ಫಾರ್‌ ಸೇಲ್‌ ಮೂಲಕ ಷೇರುವಿನಿಮಯ ಕೇಂದ್ರಗಳ ಮೂಲಕ ಮಾರಾಟಮಾಡುವ ಅಂಶ ಹೊರಬಿದ್ದು ನವೆಂಬರ್‌ 10, 11 ರಂದು ಮಾರಾಟಮಾಡಿತು. ಶೇ.1.55 ಅಂದರೆ 4,65,34,903 ಷೇರುಗಳಾಗುತ್ತವೆ. ಈ ಪ್ರಮಾಣದ ಷೇರುಗಳು ಪೇಟೆ ಪ್ರವೇಶಿಸುವುದರಿಂದ ಹರಿದಾಡುವ ಷೇರುಗಳ ಪ್ರಮಾಣ ಹೆಚ್ಚಾಗಿ ಪೂರೈಕೆಗೆ ತಕ್ಕಂತೆ ಬೇಡಿಕೆ ಇರದ ಕಾರಣ ಷೇರಿನ ಬೆಲೆಯಲ್ಲಿ ಕುಸಿತ ಉಂಟಾಗಿ ರೂ.841 ರವರೆಗೂ ಕುಸಿಯುವಂತಾಯಿತು. ಆದರೆ ಬ್ಯಾಂಕಿನ ಷೇರಿನ ಬೆಲೆ ರೂ.841 ರವರೆಗೂ ಕುಸಿದರೂ ಭಾರಿ ಪ್ರಮಾಣದ Value pick ಆಧಾರಿತ ಖರೀದಿಯ ಕಾರಣ ಷೇರಿನ ಬೆಲೆ ಪುಟಿದೆದ್ದು 25 ರಂದು ಶುಕ್ರವಾರ ರೂ.891 ರ ಗರಿಷ್ಠ ತಲುಪಿ ರೂ.887 ರ ಸಮೀಪ ಕೊನೆಗೊಂಡಿದೆ. ಈ ಅಂಶಗಳು ಪೇಟೆಯಲ್ಲಿ ನಡೆಯುವ ಏರಿಳಿತಗಳು ಒದಗಿಸುವ ಅವಕಾಶಗಳಿಗೆ ಹಿಡಿದ ಕನ್ನಡಿಯಾಗಿದೆ.

    Value pick ಚಟುವಟಿಕೆಗೆ ಮತ್ತೊಂದು ಉದಾಹರಣೆ ಎಂದರೆ ರೆಡಿಂಗ್ಟನ್‌ ಲಿಮಿಟೆಡ್‌ ಕಂಪನಿ. ಈ ಕಂಪನಿ ಹಿಂದಿನ ವರ್ಷದ ಆಗಷ್ಟ್‌ ನಲ್ಲಿ ಒಂದು ಷೇರಿಗೆ ಒಂದರಂತೆ (1:1 ರ ಅನುಪಾತ) ಬೋನಸ್‌ ಷೇರು ವಿತರಿಸಿದ್ದಲ್ಲದೆ, ಈ ವರ್ಷದ ಜುಲೈನಲ್ಲಿ ಪ್ರತಿ ಷೇರಿಗೆ ರೂ.6.60 ರ ಲಾಭಾಂಶ ವಿತರಿಸಿದೆ. ಸೆಪ್ಟೆಂಬರ್‌ 2022 ರ ಫಲಿತಾಂಶ ಉತ್ತಮವಾಗಿದ್ದ ಕಾರಣ ನಿರಂತರ ಚಟುವಟಿಕೆಗೊಳಗಾಗಿ, ಕಳೆದ ಒಂದು ತಿಂಗಳಿನಲ್ಲಿ ರೂ.135 ರ ಸಮೀಪದಿಂದ ರೂ.183 ರ ವರೆಗೂ ಪುಟಿದೆದ್ದಿದೆ. ಒಂದು ವಾರದಲ್ಲಿ ರೂ.165 ರ ಸಮೀಪದಿಂದ ರೂ.183 ರ ವರೆಗೂ ಚೇತರಿಕೆ ಕಂಡಿರುವುದು ಉತ್ತಮ ಲಾಭ ಗಳಿಕೆಯ ಅವಕಾಶವಲ್ಲವೇ?

    ಕಳೆದ ಒಂದು ವರ್ಷದಲ್ಲಿ ರೂ.1,800 ರ ಸಮೀಪದಿಂದ ರೂ.440 ರೂಪಾಯಿಗಳಿಗೆ ಕುಸಿದದ್ದಾಗಲಿ, ರೂ.1,330 ರಿಂದ ರೂ.360 ಕ್ಕೆ ಜಾರಿದ್ದಾಗಲಿ, ಕೆಲವು ತಿಂಗಳುಗಳಲ್ಲೇ ರೂ.700 ನ್ನು ದಾಟಿದ ಕಂಪನಿ ಷೇರು ರೂ.320 ಕ್ಕೆ ಇಳಿಯುವಂತಹ ಉದಾಹರಣೆಗಳಿರುವ ಸಂದರ್ಭದಲ್ಲಿ ಹೂಡಿಕೆ ಸುರಕ್ಷತೆಗೊಳಸುವಂತಹ ಚಟುವಟಿಕೆಗೆ ಆಧ್ಯತೆ ನೀಡಿದಲ್ಲಿ ಹೂಡಿಕೆ ನೆಮ್ಮದಿ ಮೂಡಿಸಲು ಸಾಧ್ಯ. ಕೇವಲ ಪ್ರಚಾರಿಕ ಅಂಶಗಳಿಗೆ ಪ್ರಾಶಸ್ತ್ಯ ನೀಡುವುದಕ್ಕಿಂತ ಆಂತರಿಕ ಅಂಶಗಳನ್ನೂ ಆಧರಿಸಿ ನಿರ್ಧರಿಸಿದಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಹಾಗಾಗಿ ಹೂಡಿಕೆಯನ್ನು ಅರಿತು ನಿರ್ಧರಿಸಿರಿ- ಅನುಸರಿಸಬೇಡಿ.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಡಿಸೆಂಬರ್ ಒಳಗೆ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ

    BENGALURU NOV 27
    ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ವಿಷ್ಣುವರ್ಧನ್ ಸ್ಮಾರಕವನ್ನು ಡಿಸೆಂಬರ್ ಒಳಗೆ ಉದ್ಘಾಟಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಹಿಂದೆ ವಿಷ್ಣುವರ್ಧನ್ ಅವರಿದ್ದ ಜಯನಗರದ ಮನೆಯ ಸ್ಥಳದಲ್ಲಿಯೇ ನೂತನವಾಗಿ ನಿರ್ಮಾಣವಾಗಿರುವ ಮನೆಯ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

    ಭಾರತಿಯವರು ಖುದ್ದಾಗಿ ಬಂದು ಗೃಹಪ್ರವೇಶಕ್ಕೆ ಆಹ್ವಾನ ನೀಡಿದ್ದರು. ವಿಷ್ಣುವರ್ಧನ್ ಅವರಿದ್ದ ಮನೆಯನ್ನು ಇನ್ನಷ್ಟು ಚಂದ ಮಾಡಿದ್ದಾರೆ. ನವೀಕರಣಗೊಂಡಿರುವ ವಿಷ್ಣುವರ್ಧನ್ ಅವರ ಮನೆಯ ಹಿಂದೆ ಭಾರತಿ ವಿಷ್ಣುವರ್ಧನ್ ಅವರ ಪ್ರಯತ್ನ ಹಾಗೂ ಶ್ರಮ ಎದ್ದುಕಾಣುತ್ತಿದೆ. ವಿಷ್ಣುವರ್ಧನ್ ಅವರ ತ್ಯಾಗವನ್ನು ಅಳವಡಿಸಿದ್ದಾರೆ ಎನ್ನುವುದು ನನ್ನ ಭಾವನೆ. ಅವರುಗೆ ಶುಭ ಕೋರಲು. ಬಂದಿದ್ದೇನೆ ಎಂದರು .

    ಮೈಸೂರಿನಲ್ಲಿ ನಿರ್ಮಾಣ ವಾಗುತ್ತಿರುವ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಪೂರ್ಣ ಗೊಳ್ಳುತ್ತಾ ಬಂದಿದೆ. ಡಿಸೆಂಬರ್ ಒಳಗೆ ಸ್ಮಾರಕದ ಉದ್ಘಾಟನೆಯನ್ನು ಅದ್ದೂರಿಯಾಗಿ ಮಾಡಲು ತೀರ್ಮಾನಿಸಲಾಗಿದೆ. ಹೆವಿವಿನ ವಿವರಗಳನ್ನು ಅವರ ಕುಟುಂಬದವರೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು. ವಿಷ್ಣುವರ್ಧನ್ ಅವರ ಮೇರು ವ್ಯಕ್ತಿತ್ವ ಹಾಗೂ ಘನತೆಗೆ ತಕ್ಕ ಹಾಗೆ ಕಾರ್ಯಕ್ರಮವನ್ನು ವೈಭವಾಯುತವಾಗಿ ಆಯೋಜಿಸಲಾಗುವುದು ಎಂದರು.

    ಸಾಮಾಜಿಕ  ಮಾಧ್ಯಮ ಜೀವಿ!

    ಸುಮಾವೀಣಾ  

    ಲೋಕದ ಡೊಂಕ ನೀವೇಕೆ ತಿದ್ದುವಿರಿ?’ ಅನ್ನುವ ಬಸವಣ್ಣನವರ ಮಾತು ತಿಳಿದಿದ್ದರೂ  ತಮ್ಮಲ್ಲಿರುವ ಡೊಂಕುಗಳನ್ನು ಬಿಟ್ಟು ಲೋಕದ ಕಾಳಜಿ ಮಾಡುವರೆ ಹೆಚ್ಚು.  ಹಾಗಾದರೆ ಲೋಕದ ಕಾಳಜಿ ಬೇಡವೆಂದರ್ಥವಲ್ಲ. ‘ಮನೆ ಗೆದ್ದು ಮಾತು ಗೆಲ್ಲು’ ಅನ್ನುತ್ತಾರಲ್ಲ ಹಾಗೆ.  ಮೊದಲಿಗೆ ನಾವು ನಮ್ಮ ಮನೆ ಆನಂತರ ಮಿಕ್ಕಿದ್ದು.

     ಮಾನವ ಸಾಮಾಜಿಕ ಪ್ರಾಣಿ ಎನ್ನುವುದು ಎಷ್ಟು ಸರಿಯೋ ಹಾಗೆ   ಸಾಮಾಜಿಕ  ಮಾಧ್ಯಮ ಜೀವಿಯೂ ಹೌದು!  ತನ್ನೆಲ್ಲ ಆಗು  ಹೋಗುಗಳು ಮನೆಯವರಿಗೆ ತಿಳಿದಿರುತ್ತದೆಯೋ ಇಲ್ಲವೋ   ಸಾಮಾಜಿಕ ಜಾಲತಾಣಗಳಲ್ಲಿ ಮೊದಲು ಹಂಚಿಕೊಂಡು ಸಂತಸ ಪಡುವ ಮಾದರಿಗಳೆ ಹೆಚ್ಚು.    ಇಷ್ಟು ಮನುಷ್ಯ ಸಂಕುಚಿತವಾಗುತ್ತಿರುವುದಕ್ಕೆ ಸಾಮಾಜಿಕ ಜಾಲತಾಣಗಳೂ  ಕಾರಣವೇ ಅನ್ನಿಸುತ್ತದೆ.

    ಸಂಘ ಜೀವಿ ಅಂದಮೇಲೆ ಇತರರ ಕಷ್ಟಗಳಿಗೂ ಸ್ಪಂದಿಸಬೇಕಾದವನ್ನು  ಮನುಷ್ಯ. ಇಂದಿಗೂ ಸ್ಪಂದಿಸುವ ಗುಣ ಗೌಣ ವಾಗಿಲ್ಲ ಆದರೆ ಸ್ಪಂದನೆ ನಿಜವಾಗಿಯೂ ಸಲ್ಲಬೇಕಾದವರಿಗೆ ಸಲ್ಲುತ್ತಿದೆಯೇ ಅನ್ನುವ ಪ್ರಶ್ನೆ ಇದೆ.  

    ತನ್ನ ಮನೆಯ ಕಿಟಕಿಯಿಂದ, ಬಾಗಿಲಿನಿಂದ ಯಾವ ಬಡತನವೂ, ತೊಂದರೆಯೂ ಕಾಣದ ಆಧುನಿಕರಿಗೆ ಜಾಲತಾಣದ ಕಿಂಡಿಯಲ್ಲಿ ಎಲ್ಲವೂ ಕಾಣುತ್ತದೆ ಹಣವನ್ನು  ತಕ್ಷಣ ತಕ್ಷಣ ಹಾಕಿ  ಅಪಡೇಟ್ಗಳನ್ನು ಅದೇ ಜಾಲತಾಣಗಳಲ್ಲಿ ಕೊಡುತ್ತಾರೆ. ಇಲ್ಲಿ ನಮ್ಮ  ಅಪ್ಡೇಟ್ ಯಾರಿಗೂ ಬೇಕಿಲ್ಲ. ನಮ್ಮ ನಮ್ಮೂರ ಸುತ್ತ -ಮುತ್ತ ಕೊರಗುವ, ಮರುಗುವ ಸಹಾಯ ನಿರೀಕ್ಷಿಸುವ  ಮನಸ್ಸುಗಳು ಅದೆಷ್ಟೋ ಇರುತ್ತವೆ, ಮೊದಲು ನಾವು ಅವರಿಗೆ ಸ್ಪಂದಸಬೇಕು. ನಮ್ಮ ಭಾಷೆ ,ನಮ್ಮೂರ ಜನರಿಗೆ ಸಹಾಯ ಮಾಡಿ ಅವರು ಕ್ಷಣ ನೆಮ್ಮದಿ ಅನುಭವಿಸಿದರೆ  ಬೇಕಾದಷ್ಟು. ಅದನ್ನು  ಬಿಟ್ಟು ನೇರವಾಗಿ ಕಾಣದ ಕೈಗಳಿಗೆ ಸಹಾಯ ಮಾಡುವುದು  ಸೂಕ್ತ ಅನ್ನಿಸಿದರೆ ಎರಡನೆ ಆಯ್ಕೆಯಾಗಬೇಕು .

    ಕೊಡುವ ಕೈ ಗೌಣವಾಗಿರಬೇಕು ಅನ್ನುವುದು ಈಗ ವ್ಯತಿರಿಕ್ತವಾಗಿದೆ  ಸಹಾಯ ತೆಗೆದು ಕೊಳ್ಳುವವರು ಗೌಣವಾಗಿರುತ್ತಾರೆ ಸಹಾಯು ಮಾಡುವರು ಎಲ್ಲಾ ಜಾಲತಾಣಗಳಲ್ಲಿ  ಪ್ರಚಾರ ಮಾಡಿಕೊಳ್ಳುತ್ತಾರೆ. ಹಾಗೆಯೇ ಸಾಮಾಜಿಕ   ಕೆಲಸಗಳಲ್ಲಿಯೂ ಅವರ ಮನೆಯದ್ದೆ ಒಂದಷ್ಟು ಇರುತ್ತದೆ ಅದನ್ನು ಬಿಟ್ಟು ಊರಿನ  ಬಗ್ಗೆ ಚಿಂತೆ ಮಾಡುವುದು ಯಾವಾಗಲೂ ಎರಡನೆ ಆಯ್ಕೆಯಾಗಿರಬೇಕು. ಮೊದಲು   ನಮ್ಮ ಡೊಂಕುಗಳು ಇಂಗಿದ ಮೇಲೆ ಲೋಕದ ಕಾಳಜಿ ಮಾಡಿದರೆ  ಚಿಂತಿಸುವವರು ಯಾರೂ ಇರಲಾರರು.  ಇದೆ ಅಂತಃಸತ್ವವನ್ನು ಇರಿಸಿಕೊಂಡ  ಮಾತು  ಬಸವಣ್ಣನವರ ನೆರೆಮನೆಯವರ ದುಃಖಕ್ಕೆ ಅಳುವರ ಮೆಚ್ಚ ನಮ್ಮ ಕೂಡಲಸಂಗಮದೇವಾ ಎನ್ನುವುದು.  

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

     

    ಪ್ರತಿಭಾವಂತನಿಗೆ ತನ್ನ ಸಾಮರ್ಥ್ಯವನ್ನು  ತೋರಿಸಲು ಅವಕಾಶ ಸಿಕ್ಕರೆ ಅದಕ್ಕಿಂತ ಸಂತೋಷ ಬೇರೆ ಏನಿದೆ

    ಸುಮಾವೀಣಾ

    ಕಡವರನೆಡಹಿ ಸಂಧಿಸಿದ ಕಡುನಡವನಂತೆ– ಉಪಮಾಲೋಲ ಲಕ್ಷ್ಮೀಶನ  ‘ಜೈಮಿನಿ ಭಾರತ’ದ  ‘ಚಂದ್ರಹಾಸನ ಬಾಲ್ಯ’ದಲ್ಲಿ ಉಲ್ಲೇಖವಾಗಿರುವ    ಮಾತಿದು.  ಕುಳಿಂದಕ ಎನ್ನುವ ಮಹಾರಾಜ ಬೇಟೆ ನಿಮಿತ್ತ ಕಾಡಿಗೆ ಬಂದಿರುವಾಗ  ಕಾಡಿನ ನಡುವೆ ರೋಧಿಸುತ್ತಿದ್ದ ಮಗುವನ್ನು ಪಡೆದಾಗ ರಾಜನಿಗಾದ ಸಂತೋಷವನ್ನು ವಿವರಿಸುವ ಸಂದರ್ಭದಲ್ಲಿ ಕವಿ ಈ ಮಾತುಗಳನ್ನಾಡಿದ್ದಾನೆ. 

     ಮಕ್ಕಳಿಲ್ಲದ ರಾಜನಿಗೆ ಕಾಡಿನ ನಡುವೆ ಬೆರಳನ್ನು  ಕಳೆದುಕೊಂಡು  ಅಸಾಧ್ಯವಾದ ನೋವಿನ ನಡುವೆಯೂ  ಹರಿನಾಮಸ್ಮರಣೆ ಮಾಡುತ್ತಿದ್ದ ಬಾಲಕನ  ಸಾಂಗತ್ಯ  ಅತ್ಯಂತ ಖುಷಿ ಕೊಡುತ್ತದೆ . ಕಡು ಬಡವನೊಬ್ಬ  ದಾರಿಯಲ್ಲಿ ನಡೆದುಹೋಗುವಾಗ ಅಕಸ್ಮಾತ್ ಎಡವಿ ಪಡೆಯುವ ದ್ರವ್ಯದ ಗಂಟು ಹೇಗೆ ಸಂತೋಷ ನೀಡುತ್ತದೆಯೋ ಹಾಗೆ ಕುಳಿಂದಕನಿಗೆ   ಅಕಸ್ಮಿಕ  ಎಂಬಂತೆ ಮಗು ಸಿಕ್ಕಿದ್ದು ಅವರ್ಣನೀಯ ಆನಂದ ತರುತ್ತದೆ.

    ಇಂದಿನ ದಿನಮಾನಗಳಲ್ಲಿ ಅನ್ನಾಹಾರಗಳಿಲ್ಲದೆ ಇದ್ದವ ರು ಮಾತ್ರ ಬಡವರು ಎನ್ನುವಂತಿಲ್ಲ. ವಿಶಾಲ ಚಿಂತನೆ ಮಾಡಿದರೆ ಅವಕಾಶ ದೇಹಿಗಳೂ ಬಡವರೇ ಸರಿ! ಪೈಪೋಟಿ ಯಿಂದ ಕೂಡಿತರುವ ಜಗತ್ತು ಇದು. ಆರೋಗ್ಯಕರ ಪೈಪೋಟಿ  ಇಲ್ಲವೇ ಇಲ್ಲ ಆನಾರೋಗ್ಯಕರ ಪೈಪೋಟಿ ಇರುವಂಥದ್ದು ಹೀಗಿರುವಾಗ  ನಿಜಕ್ಕೂ ಪ್ರತಿಭಾವಂತನಿಗೆ ತನ್ನ ಸಾಮರ್ಥ್ಯವನ್ನು  ತೋರಿಸಲು ಅವಕಾಶ ಸಿಕ್ಕರೆ ಅಪರಿಮಿತ ಸಂತೋಷವಾಗುತ್ತದೆ.

    ಯಾವ ನಿರೀಕ್ಷೆಯೂ ಇಲ್ಲದೆ  ನಮ್ಮ ನಿರೀಕ್ಷೆಗೂ ಮೀರಿದ್ದನ್ನು ಆಕಸ್ಮಿಕವಾಗಿ ಪಡೆಯುವುದೆಂದರೆ  ಸಂತೋಷದ ವಿಚಾರವೆ ಅಲ್ವೆ!   ಬದುಕಿನಲ್ಲಿ ಎಲ್ಲವೂ ನಿರೀಕ್ಷೆಯಂತೆ ಆಗುತ್ತದೆ ಎನ್ನುವುದು ಸುಳ್ಳು. ‘ತಾನೊಂದು ಬಗೆದರೆ ದೈವವೊಂದು ಬಗೆದಂತೆ’ ಎಂಬಂತೆ ಅಪಸವ್ಯಗಳಾಗುವುದೇ  ಹೆಚ್ಚು.  ಅವುಗಳ ನಡುವೆ ಇಂಥ ಅನಿರೀಕ್ಷಿತಗಳು  ಸಂತಸದ ಕಡಲಿನಂತೆಯೇ ಭಾಸವಾಗುತ್ತದೆ.

    ಲಕ್ಷ್ಮೀಶ ಕವಿ ಇಲ್ಲಿ  ಕಡುಬಡವ  ಬಂದರೆ ತೀವ್ರ ಬಯಕೆಯನ್ನು ಹೊಂದಿದ್ದವನು    ಎಂಬ ಅರ್ಥದಲ್ಲಿ ಬಳಸಿರುವುದು ಕವಿಯ  ಪ್ರತಿಭೆಗೆ ಹಿಡಿದಿರುವ ಕೈಗನ್ನಡಿ ಎನ್ನಬಹುದು.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    error: Content is protected !!