ಜಾತಕದಲ್ಲಿನ ಮೂವತ್ತನಾಲ್ಕು ಗುಣಗಳು ಸೇರಿದರೂ ಒಂದೇ ವರ್ಷಕ್ಕೆ ಮುರಿದು ಬೀಳುವ ಮದುವೆಗಳು. ಪ್ರೀತಿಸಿ ಮದುವೆಯಾದರು ವರ್ಷದೊಪ್ಪತ್ತಿನಲ್ಲಿ ನಾನೆೊಂದು ತೀರ ನೀನೊಂದು ತೀರ ಎಂದು ಸಾಗುವ ಜೋಡಿಗಳು. ಇಂಥ ಘಟನೆಗಳೇ ಅಧಿಕವಾಗುತ್ತಿರುವ ಈ ದಿನಮಾನದಲ್ಲಿ ಸುದೀರ್ಘ ವೈವಾಹಿಕ ಜೀವನಗಳು ಅನೇಕರಿಗೆ ಸ್ಫೂರ್ತಿ ತರುವಂಥವು. ನಮ್ಮ ಅಂಕಣಕಾರ ಮತ್ತು ಚಿಂತಕ ಮಂಜುನಾಥ ಬೊಮ್ಮಘಟ್ಟ ಮೊನ್ನೆ ತಮ್ಮ ವೈವಾಹಿಕ ಜೀವನದ 26 ವಸಂತಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಇಷ್ಟು ವರ್ಷಗಳ ವೈವಾಹಿಕ ಜೀನನದ ನೆನಪುಗಳನ್ನು ಓದುಗರ ಮುಂದೆ ಇಲ್ಲಿ ತೆರೆದಿಟ್ಟಿದ್ದಾರೆ.
ಇದು ಮೂಲಾ ನಕ್ಷತ್ರದ ಜಾತಕ. ನಿಂದು ಭರಣಿ ನಕ್ಷತ್ರ…ಇವೆರಡೂ ಕೂಡೋಕೆ ಸಾಧ್ಯವೇ ಇಲ್ಲ …ಈ ಹುಡುಗಿಯನ್ನು ಮದುವೆ ಆಗುವ ಆಸೆ ಇದ್ರೆ ಈಗಲೇ ತಲೆಯಿಂದ ಹೊರಗೆ ಹಾಕು ಅಂತ ಅಪ್ಪಣೆ ಮಾಡಿಬಿಟ್ರು ಅಪ್ಪನ ಬಾಲ್ಯ ಸ್ನೇಹಿತರೂ, ಹುಟ್ಟಿನಿಂದಲೇ ನನ್ನ ಜಾತಕ ಬರೆದವರು, ನೀನೇನೇ ಪ್ರಯತ್ನಿಸಿದರೂ ಡಾಕ್ಟರ್ ಆಗೋ ಯೋಗ ಇಲ್ಲ…ನೀನಾಗೋದೇ ಎಂಜಿನಿಯರ್ ಅಂತ ಹೇಳಿದ್ದ ನಮ್ಮೂರ ಹಿರೇಮಠದ ಗುರುಮೂರ್ತಿ ಸ್ವಾಮಿಗಳು!.
ನಾನು ಅವರನ್ನ ಕರೆದದ್ದೇ ಚಿಕ್ಕಪ್ಪ ಅಂತ…ಅಪ್ಪನಿಗಿಂತ ಕೆಲವು ತಿಂಗಳಿಗೆ ಚಿಕ್ಕವರಿದ್ದ ಕಾರಣಕ್ಕೆ…ಅವರೂ ವೃತ್ತಿಯಿಂದ ಅಪ್ಪನ ಹಾಗೆ ಶಾಲಾ ಶಿಕ್ಷಕರು. ಪಂಚಾಂಗ ನೋಡೋದು, ಶುಭ ಕಾರ್ಯಗಳಿಗೆ ಮುಹೂರ್ತ ಇಡುವುದು, ಜಾತಕ ಬರೆಯುವುದು, ಮದುವೆಗೆ ಜಾತಕ ಪರಿಶೀಲಿಸುವುದು ಅವರ ಮನೆಯಲ್ಲಿ ವಂಶಪಾರಂಪರ್ಯವಾಗಿ ಬಂದಿದ್ದ ವೃತ್ತಿಯನ್ನು ಇವರು ಮುಂದುವರೆಸಿಕೊಂಡು ಬಂದಿದ್ದರು.
ಅಪ್ಪನಿಗಿಂತ ತುಸು ಹೆಚ್ಚೇ ನನ್ನ ಮದುವೆಗೆ ಉತ್ಸಾಹ ತೋರಿದ್ದವರು ಹೀಗೆಂದಾಗ ನನಗೆ ಸಿಟ್ಟು ಬಂದುಬಿಟ್ಟಿತ್ತು! ನಿನಗೆ ನನ್ನ ಮದುವೆ ಮಾಡೋ ಆಸೆ ಇದ್ದರೆ ಈ ಜಾತಕದ ಹುಡುಗಿಯನ್ನ ಮಾಡಿಸು, ಇಲ್ಲವಾದ್ರೆ ನಿನ್ನ,ಅಪ್ಪನ ಮಾತು ಮೀರಿ ನಾನು ಮದುವೆ ಆಗಬೇಕಾಗುತ್ತದೆ ಅಂದು ಬಿಟ್ಟೆ. ಅಪ್ಪನಿಗೆ ಜಾತಕದ ಮೇಲೆ ವಿಪರೀತ ನಂಬಿಕೆ. ಅಪ್ಪ ಇವರ ಒಪ್ಪಿಗೆಗೆ ನನ್ನ ಮದುವೆಗೆ ಅಂತ ಬರ್ತಿದ್ದ ಎಲ್ಲಾ ಹುಡುಗಿಯರ ಜಾತಕ ತೋರಿಸುತ್ತಿದ್ದರು. ಇವಳದ್ದು ಮೂಲಾ ನಕ್ಷತ್ರ ಅಂತ ಹೇಳಿಯೇ ನನ್ನ ಅತ್ತೆ ಜಾತಕ ಕೊಟ್ಟಿದ್ದರು. ಹಾಗಾಗಿ ಸೀದಾ ಹತ್ತಿರದ ರಾಮದುರ್ಗದಲ್ಲಿದ್ದ ಇವರ ಹತ್ತಿರ ಜಾತಕ ತೆಗೆದುಕೊಂಡು ಬಂದಿದ್ದೆ.
ಬೇರೆ ಏನಾದ್ರು ಹೇಳು ಕೇಳ್ತೀನಿ…ನಿಮ್ಮಪ್ಪ ಇದೇ ಜಾತಕ ತಂದು ತೋರಿಸಿದ್ರೆ ನಾನು ಹೀಗೆಯೇ ಹೇಳುತ್ತೇನೆ…ಈ ವಿಷಯದಲ್ಲಿ ನಾನು ಇದುವರೆಗೂ ಯಾರಿಗೂ ಸುಳ್ಳು ಹೇಳಿಲ್ಲ…ಅದರಲ್ಲೂ ನಿನ್ನ ಅಪ್ಪನಿಗೆ ಸುಳ್ಳು ಹೇಳೋದು ಸಾಧ್ಯವೇ ಇಲ್ಲ…ಈ ಜಾತಕದ ಹುಡುಗಿಗೆ ಮಾವ ಇರದ ಮನೆ ಬೇಕು ಅಂದುಬಿಟ್ರು!
ಒಂದು ಕ್ಷಣ ದಂಗಾದೆನಾದ್ರೂ ಹಠ ಬಿಡಲಿಲ್ಲ…ಎಲ್ಲದಕ್ಕೂ ಪರಿಹಾರ ಇರುತ್ತೆ ಅಂತಿರಲ್ಲ, ಇದಕ್ಕೆ ಪರಿಹಾರ ಹೇಳಿ…ನಾನು ಇವಳನ್ನೇ ಮದುವೆ ಆಗೋದು ಅಂದೆ. ಜಾತಕವೇ ಇಲ್ಲದಿದ್ದರೆ ಏನು ಮಾಡುತ್ತಿದ್ದಿರಿ ಅಂತ ಬಹಳ ವಾದ ಮಾಡಿದ ಮೇಲೆ, ಒಂದು ಕೆಲಸ ಮಾಡು, ಹುಡುಗಿ ಮನೆಯವರು ಹುಡುಗಿ ಜಾತಕ ಇಲ್ಲ ಅಂತಿದ್ದಾರೆ, ಹೆಸರಿನ ಮೇಲೆಯೇ ಮದುವೆ ನಿಶ್ಚಯಿಸೋಣ ಅಂತ ಹೇಳ್ತೀನಿ ಅಂದ್ರು. ಸರಿ ಅಂದೆ…ಆರಾಧನಾ ಅಂತ ಇದ್ದ ಇವಳ ಹೆಸರು ನನ್ನ ಮನೆಯಲ್ಲಿ ಮಾನಸ ಅಂತ ಆಯ್ತು!
ಮದುವೆಯಾದ ಹೊಸ ಜೋಡಿಯನ್ನು ಕುಳ್ಳಿರಿಸಿ ತಿರುಪತಿಯ ವೆಂಕಟರಮಣನ ಸನ್ನಿಧಿಯಲ್ಲಿ ಕಲ್ಯಾಣೋತ್ಸವ ಸೇವೆಗೆ ನನ್ನ ಅತ್ತೆ ಏರ್ಪಾಟು ಮಾಡಿಸಿದ್ದರು. ಪ್ರಥಮವಾಗಿ ತಿರುಪತಿಗೆ ಭೇಟಿ ನೀಡಿದ್ದ ನನಗೆ ದರ್ಶನದ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲೋದು ಅಸಹನೀಯವಾಗಿ ಸಾಲಿನ ಮುಂದಿದ್ದ ನನ್ನವಳಿಗೆ ಇಷ್ಟೊಂದು ಬ್ಯುಸಿ ಇರೋ ದೇವರ ಅಪಾಯಿಂಟ್ಮೆಂಟ್ ಇನ್ಮೇಲೆ ತೊಗೋಬೇಡ ಅಂತ ನಿನ್ನ ಅಮ್ಮನಿಗೆ ಹೇಳು ಅಂತ ಹೇಳೋದನ್ನ ಕೇಳಿದ್ದ ನನ್ನ ಹಿಂದೆಯೇ ಇದ್ದ ಅತ್ತೆಗೆ ಸಿಟ್ಟು ಬಂದು ಬಿಟ್ಟಿತ್ತು! ಕಾಕತಾಳಿಯವೋ ಏನೋ ಮದುವೆ ಆಗಿ ಮೂರು ವರ್ಷ ನಮಗೆ ಮಕ್ಕಳಾಗಲಿಲ್ಲ. ನನ್ನ ಅತ್ತೆದು ಒಂದೇ ಒರಸೆ….ನಿನ್ನ ಗಂಡ ತಿರುಪತಿಯಲ್ಲಿ ದೇವರಿಗೆ ಅವಮಾನ ಮಾಡಿದ್ದಾನೆ, ಪ್ರಾಯಶ್ಚಿತ್ತಕ್ಕೆ, ಮತ್ತೆ ಬರ್ತೀನಿ ಅಂತ ಹರಕೆ ಹೊರ್ತೀನಿ, ಹೋಗಿ ಬರೋಣ…..ಹೆಂಡತಿಯೊಡಗಿನ ಸರಸದ ಮಾತಿಗೂ ಅವಮಾನದ ಮಾತಿಗೂ ಅರ್ಥ ಗೊತ್ತಿಲ್ಲದ ದೇವರ ಗೊಡವೆ ನನಗೆ ಬೇಡ ಅಂತ ನಾನು….
ಒಂದಲ್ಲ ಎರಡು ಗಂಡು ಮಕ್ಕಳಾದರು ನಮಗೆ….ಅಪ್ಪ,ಅಮ್ಮ ನಮ್ಮ ಮದುವೆ ಆಗಿ 24 ವರ್ಷ ಬದುಕಿದ್ದರು….ಅತ್ತೆ ಕೋವಿಡ್ ಸಮಯದಲ್ಲಿ ಹೋದ್ರು, ಮಾವನಿಗೆ ಡಯಬೇಟಿಕ್…ಹಾಗಾಗಿ 2007ರಲ್ಲೇ ಹೋದ್ರು….
ನಂದು ಇವಳದ್ದು ಬರೀ ಜಾತಕ ಅಲ್ಲ, ಏನೇನೂ ಇವತ್ತಿಗೂ ಹೊಂದಿಲ್ಲ! ಅವಳು ಶಾಂತಿಯ ಪ್ರತಿಮೆಯೇನೋ ಎಂಬಂತಹ ಹಸು….ನಾನು ರಾಕ್ಷಸ. ಅವಳು ಬಲು ಸಾಧ್ವಿ ಮತ್ತು ಅವಳ ಆಹಾರವೂ ಅಂತಹುದೇ…ಉಪ್ಪಿಲ್ಲ,ಖಾರ ಇಲ್ಲ….ಮೀನು,ಮಾಂಸ,ಮೊಟ್ಟೆ ಬಲು ದೂರ….ನನಗೋ ಇದೆಲ್ಲಾ ಇರಲೇಬೇಕು!
ಇವಳ ಪೂಜೆ,ವ್ರತ, ಉಪವಾಸದ ಬಗ್ಗೆ ಬರೆದ್ರೆ ಅದೇ ಒಂದು ಕಥನ ಆಗುತ್ತೆ. ದಿನಕ್ಕೆ ಮೂರು ಗಂಟೆ ಪೂಜೆ ಮಾಡ್ತಿದ್ದ ನನ್ನ ಅಪ್ಪನೂ ಇಷ್ಟೊಂದು ಉಪವಾಸ ಒಳ್ಳೆಯದಲ್ಲಮ್ಮ ಅಂತಿದ್ರು….ನನಗಂತೂ ಹೇಳಿದ್ದನ್ನ ಹೇಳೋದು ಅಭ್ಯಾಸವೇ ಇಲ್ಲ….ಇವಳು ವ್ರತ ಮಾಡಿ ಉಪವಾಸ ಇದ್ದ ದಿನವೇ ನನಗೆ ಮಾಂಸ ಬೇಕು. ನನಗೆ ಬೇಕಾದ್ದನ್ನು ನನಗೆ ಮಾಡಿಕೊಟ್ಟು ತನ್ನ ಪೂಜೆ ವ್ರತ ಮಾಡಿಕೊಂಡಿದ್ದಾಳೆ….ಹಾಗಾಗಿ ಅವಳ ದಾರಿಗೆ ನಾನು,ನನ್ನ ದಾರಿಗೆ ಅವಳು ಎಂದೂ ಅಡ್ಡಿ ಆದದ್ದು ಇಲ್ಲ.
ಇವತ್ತಿಗೂ ಅವಳ ಈಡೇರದ ಒಂದು ಆಸೆ ಇದೆ. ಅದೇನಂದ್ರೆ ಅವಳು ಬಾಯಿಬಿಟ್ಟು ಹೇಳದೇ, ನಾನೇ ಅವಳ ಮನಸ್ಸಲ್ಲಿದ್ದದ್ದು ಅರ್ಥಮಾಡಿಕೊಂಡು ವರ್ತಿಸಬೇಕು ಅನ್ನೋದು…ಅದು ಈ ಜನ್ಮದಲ್ಲಿ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಯಾಕಂದ್ರೆ ಕಿವಿಹಿಂಡಿ, ಬೆನ್ನಿಗೆ ಗುದ್ದಿ ಹೇಳಿದ್ದು ತಿಳಿತಾ ಅಂತ ಕೇಳ್ತಿದ್ದ ಮೇಷ್ಟ್ರಗಳ ಶಿಷ್ಯರು ನಾವುಗಳು!
ಮದುವೆ ಆಗೋಣ ಅಂತ ನಿಶ್ಚಯಿಸಿದ ದಿನದಿಂದ ನಾವಿಬ್ಬರೂ ಯಾವುದೇ ತರಹದ ಹುಸಿಗೌರವಗಳಿಗೆ ಮಣೆ ಹಾಕೋದನ್ನ ಇಬ್ಬರೂ ಸಮ್ಮತಿಸಿಲ್ಲ. ಎಷ್ಟಿರುತ್ತೋ ಅಷ್ಟರಲ್ಲೇ ನಮ್ಮೂರ ದೇವಸ್ಥಾನದಲ್ಲಿ ಮದುವೆ ಆದ ನಾವು ನಮ್ಮ ಹಿರಿಯರಿಗೂ ಹೊರೆ ಮಾಡಲಿಲ್ಲ. ಮೊದಲ ದಿನದಿಂದಲೇ ಅವಳ ಮನೆಯ ಸಮಸ್ಯೆ ನನ್ನದು ಅಂತಲೂ, ನನ್ನ ಮನೆಯ ಸಮಸ್ಯೆ ಅವಳದ್ದು ಅಂತಲೂ ಅಂದುಕೊಂಡು ಇವತ್ತಿಗೂ ಸ್ಪಂದಿಸುತ್ತಿದ್ದೇವೆ. ಅವಳ ಮನೆಯ ಎಲ್ಲಾ ಸಮಸ್ಯೆಗಳು ಮುಗಿದು ನಾನು ಫ್ರೀ ಆಗಿದ್ದೇನೆ, ಆದರೆ ನನ್ನ ಮನೆಯ ಸಮಸ್ಯೆಗಳಿಗೆ ಇಂದಿಗೂ ಅವಳೇ ಸ್ಪಂದಿಸುತ್ತಿದ್ದಾಳೆ, ಭಯಂಕರ ಕಿರಿಕ್ ಮನುಷ್ಯನಾದ ನನ್ನನ್ನೂ ಸಂಭಾಳಿಸಿಕೊಂಡು!
ಸಲಹಾ ಸಿವಿಲ್ ಎಂಜಿನಿಯರ್ ವೃತ್ತಿಯನ್ನು ಬಳ್ಳಾರಿಯಲ್ಲಿ ಶುರು ಮಾಡಿದ್ದ ನಾನು ಅಷ್ಟು ಬೇಗ ಬೇರೆ ಊರುಗಳಿಗೆ ನನ್ನ ವೃತ್ತಿಯನ್ನು ಬದಲಾಯಿಸೋದು ಅಸಾಧ್ಯವಾದ ಮಾತಾಗಿತ್ತು ಆಗ. ಕಂಪ್ಯೂಟರ್ ಎಂಜಿನೀಯರ್ ಆಗಿದ್ದ ಇವಳಿಗೆ ನನಗಿಂತಲೂ ಹೆಚ್ಚಿನ ವೃತ್ತಿ ಅವಕಾಶಗಳು ಇದ್ದವು. ಆಗಿದ್ದಾಗ್ಯೂ ದುಡಿಮೆ,ಹಣದ ನೆಪಕ್ಕೆ ನಾವಿಬ್ಬರೂ ಒಂದೊಂದು ಊರಲ್ಲಿ ಇರೋದು ಬೇಡ ಅಂತ ಇಬ್ಬರೂ ತೀರ್ಮಾನಿಸಿದ್ದೆವು. ಬಳ್ಳಾರಿಯಲ್ಲಿಯೇ ಇರಲು ನಿರ್ಧರಿಸಿದ ಅವಳು ಉನ್ನತ ವ್ಯಾಸಂಗ ಮುಗಿಸಿ ಡಾಕ್ಟರೇಟ್ ಪಡೆದು ಸ್ಥಳೀಯ ಎಂಜಿನೀರಿಂಗ್ ಕಾಲೇಜ್ ನಲ್ಲಿ ಪ್ರಾಧ್ಯಾಪಕಳಾಗಿದ್ದಾಳೆ. ನಾನೇ ಮಾತು ಮೀರಿ ಊರೂರು ಅಲೆಯುತ್ತಿದ್ದೇನೆ.
ಅವಳ ಮನೆಗೆ ಹೋಲಿಸಿದರೆ ನಾನು, ನನ್ನ ಮನೆಯವರು ಈ evolution process ಅಂತಾರಲ್ಲ, ಅದರಲ್ಲಿ ಹಿಂದೆ ಇದ್ದೇವೆ. ಹಾಗಾಗಿ ನನ್ನ ಇಬ್ಬರು ಗಂಡು ಮಕ್ಕಳು ಅವಳ ನೆರಳಲ್ಲೇ ಹೆಚ್ಚಾಗಿ ಬೆಳೆಯಲಿ ಅಂತ ನಾನೇ ನಿರ್ಧರಿಸಿದ್ದೇನೆ. ದಣಿದು ಬಂದು ಮಲಗಿದ್ದ ನನ್ನ ನಿದ್ದೆಗೆ ಭಂಗ ಆಗಬಾರದು ಅಂತ ಯಾವತ್ತು ನಡುರಾತ್ರಿಯಲ್ಲಿ ಆಳುತ್ತಿದ್ದ ನನ್ನ ಚಿಕ್ಕ ಮಕ್ಕಳನ್ನು ಬೇರೆ ಕೋಣೆಗೆ ಎತ್ತಿಕೊಂಡು ಹೋದಳೋ ಅವತ್ತೇ ನಿರ್ಧರಿಸಿದ್ದೆ, ನನ್ನ ಮಕ್ಕಳಿಗೆ ಇವಳ ನೆರಳೇ ಒಳ್ಳೆಯದು ಅಂತ!
ಒಂದು ದಿನಕ್ಕೂ ನನ್ನನ್ನು ಯಾವುದಕ್ಕೂ ಪೀಡಿಸಿಲ್ಲ… ಒಡವೆ, ಸೀರೆ ಕೊಡಿಸು ಅಂತಾಗಲಿ, ಅಲ್ಲಿಗೆ ಹೋಗೋಣ, ಇಲ್ಲಿಗೆ ಹೋಗೋಣ ಅಂತಾಗಲೀ ಅಂದವಳೇ ಅಲ್ಲ….ಅವಳೇ ದುಡಿದ ಹಣವನ್ನ ಯಾವುದಕ್ಕೇ ಖರ್ಚು ಮಾಡಬೇಕಾದರೂ ನನ್ನನ್ನ ಕೇಳ್ತಾಳೆ…ಹಣದಲ್ಲಿ ನನ್ನದು, ಅವಳದ್ದು ಅಂತ ಎಂದಿಗೂ ಬಂದಿಲ್ಲ….ಇಂದು ನಾವಿರುವ ಮನೆ,ಜೀವನವನ್ನ ಇಬ್ಬರೂ ಸೇರಿಯೇ ರೂಪಿಸಿಕೊಂಡಿರೋದು…ಇದರಲ್ಲಿ ಯಾರ ಹೆಚ್ಚುಗಾರಿಕೆಯೂ ಇಲ್ಲ…ಯಾಕಂದ್ರೆ ಇದು ನಮ್ಮಿಬ್ಬರ ಜೀವನ!
ಎದೆ ನಡುಗಿಸುವಂಥಹ, ಇಲ್ಲಿ ಹೇಳಿಕೊಳ್ಳಲು ಆಗದಂಥಹ ಬರಸಿಡಿಲೊಂದು 2002 ರಲ್ಲಿ, ಮನೆ ಕಟ್ಟಿ ಸುಧಾರಿಸಿಕೊಳ್ಳುವಾಗ ಬಂದೆರಗಿತ್ತು….ನನ್ನಂತಹ ರಾಕ್ಷಸನೇ ಅಲುಗಾಡಿಬಿಟ್ಟಿದ್ದೆ…ಆದ್ರೆ ಶಾಂತ ಮೂರ್ತಿ ಅಂದುಕೊಂಡಿದ್ದ ಇವಳು ತೋರಿದ್ದ ಧೈರ್ಯಕ್ಕೆ, ನನ್ನ ಬೆನ್ನ ಹಿಂದೆ ನಿಂತ ಆಚಲತೆಗೆ, ಮನೆ ಮಗನನ್ನು ನೋಡಿಕೊಂಡ ಬಗೆಗೆ ಬೆರಗಾಗಿ ಹೋಗಿದ್ದೆ!
ಎಲ್ಲರೂ ಹೇಳುವಂಥಹ ಹೊಂದಿಕೊಳ್ಳುವ ಯಾವ ವಿಷಯಗಳೂ ನಮ್ಮಿಬ್ಬರಲ್ಲಿ ಇಲ್ಲ ಅಂತ ಮಾತ್ರ ಖಡಾಖಂಡಿತವಾಗಿ ಹೇಳುತ್ತೇನೆ…ಆದರೂ ಸಂತೋಷದಿಂದ ಇಪ್ಪತ್ತಾರು ವರ್ಷಗಳನ್ನು ಬಂದ ಹಾಗೆ ಸ್ವೀಕರಿಸಿ ದ್ದೇವೆ. ನಮ್ಮಿಬ್ಬರ ಮಧ್ಯೆ ಅಹಂ ಇಲ್ಲ…ನನಗೆ ಸಿಟ್ಟು ಬಂದಾಗ ಒದರುತ್ತೇನೆ…ಅವಳಿಗೆ ಸಿಟ್ಟು ಬಂದಾಗ ಮೌನಿಯಾಗಿ ಬಿಡುತ್ತಾಳೆ…ಅವಳ ಮೌನ ನನ್ನ ಒದರುವಿಕೆ ಗಿಂತಲೂ strong ಅಂತ ಮಾತ್ರ ಹೇಳಬಲ್ಲೆ. ಹೊಂದಿಕೊಳ್ಳೋದು ನನ್ನ ಗುಣ ಅಲ್ಲ…ಆದ್ರೆ ಅವ್ಳಿಗೆ ಅದು ಹುಟ್ಟು ಗುಣ! ಕೆಲಸಕ್ಕೆ ಬಾರದ ವಿಷಯಗಳಿಗೆ ಇಬ್ಬರೂ ತಲೆ ಕೆಡಿಸಿಕೊಳ್ಳಲ್ಲ. ಬಹು ಮುಖ್ಯವಾದ ವಿಷಯ ಅಂದ್ರೆ ನಾವು ನಮಗೆ ಬದುಕುತ್ತಿದ್ದೇವೆ ಬಿಟ್ಟರೆ ಬೇರೆ ಯಾರಿಗೂ ಅಲ್ಲ. ಸ್ವಾರ್ಥಿಗಳು ಅಂತೀರಾ ನಮಗೆ ಏನೂ ಬೇಸರ ಇಲ್ಲ.
ದೀಪಾವಳಿ ಆದ 3ನೇ ದಿನಕ್ಕೆ ನಮ್ಮ ಮದುವೆ ಆಗಿತ್ತು. ಮಧುಚಂದ್ರಕ್ಕೆ ಹೋಗುವ ಅಂತ 20 ಸಾವಿರ ಇಟ್ಟುಕೊಂಡಿದ್ದೆ. ಊರಲ್ಲಿಯ ಎಲ್ಲಾ ಅಂಗಡಿಯ ಪಟಾಕಿ, ಪಕ್ಕದೂರಿನ ದಾರೂ ದುಕಾನಿನ ಮಾಲು ನಮ್ಮ ಮೆರವಣಿಗೆಯ ಕುಣಿತಕ್ಕೆ ಖಾಲಿ ಆಗಿ 18 ಸಾವಿರ ಬಿಲ್ ತಂದಿದ್ದರು ನನ್ನ ಸ್ನೇಹಿತರು. ಹಾಗಾಗಿ ಇನ್ನೂ ನಮ್ಮ honey moon ಆಗಿಲ್ಲ! ಇದಕ್ಕಾಗಿ ಅವಳಾಗಲಿ, ನಾನಾಗಲಿ ಒಂದು ದಿನಕ್ಕೂ ಬೇಸರಿಸಿಲ್ಲ.
ಮೊದಲ ದಿನದಿಂದಲೇ ಅವಳ ಮನೆಯ ಕಾಳಜಿ ನನಗೆ, ನನ್ನ ಮನೆಯ ಕಾಳಜಿ ಅವಳಿಗೆ ವಿನಿಮಯ ಮಾಡಿಕೊಂಡಿದ್ದರಿಂದ ಬಹುತೇಕ ಸಮಸ್ಯೆಗಳು ನಮ್ಮಿಬ್ಬರ ಮಧ್ಯೆ ಹುಟ್ಟುವ ಮೊದಲೇ ಸತ್ತು ಬಿಡುತ್ತಿದ್ದವು. ಬಂದ ಎಂತಹುದೇ ಕಷ್ಟಗಳನ್ನು ಇಬ್ಬರೇ ಹಂಚಿಕೊಡಿದ್ದೇವೆ ಬಿಟ್ಟರೆ ಅವಳ ಮನೆಯವರಿಗಾಗಲಿ, ನನ್ನ ಮನೆಯವರಿಗಾಗಲೀ ಹೊರೆ ಮಾಡಲಿಲ್ಲ. ಕಷ್ಟಗಳೇ ನಮ್ಮನ್ನು ಹತ್ತಿರ ತಂದವೇನೋ?!
ಅವಳನ್ನ ನಾನಾಗಲೀ, ನನ್ನನ್ನ ಅವಳಾಗಲೀ ಎಂದೂ ಬದಲಿಸಲು ಪ್ರಯತ್ನಿಸಿಲ್ಲ…ಅದು ಅಸಿಂಧು ಅಂತಾನೇ ಇಬ್ಬರೂ ಇವತ್ತಿನ ತನಕ ಭಾವಿಸಿದ್ದೇವೆ. ಬದಲಿಗೆ ಇರುವ ಹಾಗೇ ಸ್ವೀಕರಿಸಿದರೆ ರಗಳೆಯೇ ಇರಲ್ಲ. ಎಂಜಿನಿಯರ್ ಸೊಸೆ ಹೇಗಿರ್ತಾಳೋ ಅನ್ನೋ ಅಪ್ಪನ ಆತಂಕ ಅರಿತ ನಾನು ಇವಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸೊಸೆ ಆಗಿ ಇರು ಊರಲ್ಲಿ ಅಂತ ಹೇಳಿದ್ದನ್ನು ಅಕ್ಷರಶಃ ಇಂದಿಗೂ ಪಾಲಿಸಿಬಿಟ್ಟಿದ್ದಾಳೆ. ಅವಳ ತವರಲ್ಲಿ ನನ್ನ maintain ಮಾಡೋದು, ನನ್ನ ಮನೆಯಲ್ಲಿ ಅವಳನ್ನ maintain ಮಾಡೋದು ಅಂತ ಮೊದಲಿನಿಂದಲೂ ಇಲ್ಲ…ಒಬ್ಬರಿಗೊಬ್ಬರು no maintenance!!
ಮನೆ,ಸಂಸಾರ, ಮಕ್ಕಳು, ಕುಟುಂಬ ಅಂತ ಬಂದಾಗ ನನ್ನ ಪಾತ್ರ ಗೌಣ, ದೊಡ್ಡ ಮಗನಾಗಿದ್ದರೂ! ಎಲ್ಲವನ್ನೂ ಅವಳೇ ನಿಭಾಯಿಸಿದ್ದಾಳೆ. ಇಪ್ಪತ್ತಾರು ವರ್ಷ ಮುಗಿಸುತ್ತಿರುವ ಈ ಸಂದರ್ಭದಲ್ಲಿ ಅವಳಿಗೆ ನನ್ನ ಕೃತಜ್ಞತೆಯನ್ನು ಈ ಅಕ್ಷರಗಳ ಮೂಲಕ ಸಲ್ಲಿಸುವ ಮನಸ್ಸಾಯ್ತು….ನಿಮ್ಮಲ್ಲಿ ಹಂಚಿಕೊಂಡೆ. ಕನಸು ಕಾಣೋದು ತಪ್ಪಲ್ಲ, ಕನಸಲ್ಲೇ ಇರೋದು ತಪ್ಪು. ಇತಿ ಮಿತಿ ಅರಿತು ಬದುಕಿದರೆ ಬಾಳು ನಿಜವಾಗಲೂ ಸುಂದರವಾಗುತ್ತದೆ….ಒಟ್ಟಾರೆ ನನ್ನನ್ನು ಮಹಾರಾಜನ ಹಾಗೆ ನೋಡಿಕೊಂಡು ತಾನು ಮಹಾರಾಣಿಯಾಗಿದ್ದಾಳೆ ನನ್ನ ಹೆಂಡತಿ!!