ಎಂ.ವಿ.ಶಂಕರಾನಂದ
ಪಾವಳಿ- ಶಬ್ದವು ದೀಪ ಮತ್ತು ಅವಳಿ ಹೀಗೆ ರೂಪಿತಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗುತ್ತದೆ. ಮನೆಯ ತುಂಬಾ ದೀಪಗಳನ್ನು ಹಚ್ಚಿ, ಅದರ ನಗುವಿನ ಬೆಳಕಲ್ಲಿ ನಾವು ನಗುತ್ತಾ ಸಂಭ್ರಮಿಸುವುದೇ ದೀಪಾವಳಿ ಹಬ್ಬ.
ದೀಪಯತಿ ಸ್ವಯಂ ಪರ ಚ ಇತಿ ದೀಪಃ’’ ಅಂದರೆ ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ.
ತಮಸೋಮಾ ಜ್ಯೋತಿರ್ಗಮಯ’’ ಎಂಬ ಮಾತಿನಂತೆ ಅಜ್ಞಾನದ ಕತ್ತಲೆಯಿಂದ ಜ್ಞಾನದ ದಿಕ್ಕಿಗೆ ನಮ್ಮನ್ನು ಕೊಂಡೊಯ್ಯುವುದೇ ದೀಪ. ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಬೆಳಕಿನ ಹಣತೆಯ ಹಚ್ಚಿ ದೀಪ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ಎಲ್ಲೆಲ್ಲೂ ಜ್ಞಾನ, ನಿರ್ಮಲ ಆನಂದ, ಶುದ್ಧ ಮನಸ್ಸಿನ ಪ್ರೀತಿಯ ಬೆಳಗಿಸುವ ಸಂಕೇತವಾಗಿ ಆಚರಿಸಲ್ಪಡುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ.
ಈ ದೀಪಗಳನ್ನು ಬೆಳಗಿಸುವುದರಿಂದ ಮಾನವನ ಪಾಪಗಳು ದೂರವಾಗಿ ಆತನಿಗೆ ವಿಶೇಷವಾದ ಪುಣ್ಯ ಸಿಗುತ್ತದೆ ಎಂಬುದಾಗಿ ಶಾಸ್ತ್ರಗಳು ಹೇಳುತ್ತವೆ. ಯಾವ ಮನೆಯಲ್ಲಿ ಪ್ರತಿನಿತ್ಯವೂ ಸೂರ್ಯಾಸ್ತದಿಂದ ಸೂರ್ಯೋದಯದವರೆಗೂ ದೀಪ ಬೆಳಗುತ್ತದೆಯೋ ಆ ಮನೆಯಲ್ಲಿ ಸುಖಸಂಪತ್ತು ಸಮೃದ್ಧವಾಗಿರುತ್ತದೆ. ಮತ್ತೆ ಅಂತಹ ಮನೆಗಳಲ್ಲಿ ದಾರಿದ್ರ್ಯ ಸುಳಿಯುವುದಿಲ್ಲ. ಹಾಗಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ವಿಶೇಷ ಮಹತ್ವವಿದೆ.
ದೀಪೇನ ಲೋಕಾನ್ ಯಜತಿ ದೀಪಸ್ತೇಜೋಮಯಃ ಸ್ಮೃತಃI
ಚರುರ್ವರ್ಗಪ್ರದೋ ದೀಪಸ್ತಸ್ಮಾದ್ ದೀಪೈರ್ಯಜೇತ್ ಪ್ರಿಯೇII
ತೇಜೋಮಯವಾದ ದೀಪವು ಧರ್ಮ, ಅರ್ಥ, ಕಾಮ, ಮೋಕ್ಷ ರೂಪವಾದ ನಾಲ್ಕು ವರ್ಗಪ್ರದವಾಗಿದೆ. ಅಂತಹ ದೀಪವನ್ನು ಬೆಳಗಿಸು ಎಂದು ಈ ಶ್ಲೋಕವು ತಿಳಿಸುತ್ತದೆ.
ದೀಪಾವಳಿ ಆರಂಭ ಎಂದಿನಿಂದ ?
ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಶ್ರೀರಾಮಚಂದ್ರನು ಅಯೋಧ್ಯೆಗೆ ಹಿಂತಿರುಗಿದಾಗ ಪ್ರಜೆಗಳು ಬಂಗಾರದ ಕಲಶವನ್ನು ಮಣಿರತ್ನಗಳಿಂದ ಅಲಂಕರಿಸಿ, ಮನೆಯೆದುರು ಹೊಸ್ತಿಲಿನ ಮೇಲಿಟ್ಟರು, ದೀಪೋತ್ಸವವನ್ನು ಆಚರಿಸಿದರು. ಅಂದಿನಿಂದ ದೀಪಾವಳಿ ಹಬ್ಬದ ಆಚರಣೆ ಪ್ರಾರಂಭವಾಯಿತು ಎನ್ನುತ್ತಾರೆ.
ದೀಪಾವಳಿಯನ್ನು ಭಾರತದಲ್ಲಷ್ಟೇ ಅಲ್ಲದೆ, ಶ್ರೀಲಂಕಾ, ಮಲೇಷ್ಯಾ, ಸಿಂಗಾಪುರ, ಆಸ್ಟ್ರೇಲಿಯಾ, ಥಾಯ್ಲೆಂಡ್‌ಗಳಲ್ಲಿ ಸಹ ಆಚರಿಸುತ್ತಾರೆ. ಇದು ಜೈನರ 24ನೇ ತೀರ್ಥಂಕರರಾದ ಮಹಾವೀರರು ನಿರ್ವಾಣ ಹೊಂದಿದ ದಿನವಾದ್ದರಿಂದ ಜೈನರು ಇದರ ಅಮಾವಾಸ್ಯೆಯನ್ನು ಹೊಸವರ್ಷದ ಆರಂಭವಾಗಿ ಆಚರಿಸುತ್ತಾರೆ. ಈ ದಿನದಂದೇ ಅಶೋಕ ಚಕ್ರವರ್ತಿ ಬೌದ್ದ ಧರ್ಮಕ್ಕೆ ಪರಿವರ್ತನೆಯಾದನು ಎಂಬ ಪ್ರತೀತಿ ಬೌದ್ಧರಲ್ಲಿದೆ. ಹೀಗಾಗಿ ಅವರು ದೀಪಾವಳಿಯನ್ನು ಅಶೋಕ ವಿಜಯದಶಮಿಯಾಗಿ ಆಚರಿಸುತ್ತಾರೆ. ಸಿಖ್ಖರ ೬ನೇ ಗುರು ಹರಗೋವಿಂದ ಸಿಂಗ್ ೧೬೧೯ರಂದು ಗ್ವಾಲೀಯಾರ್ ಕೋಟೆಯ ಸೆರೆಮನೆಯಿಂದ ಈ ದಿನವೇ ಬಿಡುಗಡೆ ಹೊಂದಿದ್ದರು. ಆದ್ದರಿಂದ ಗುರು ತಮ್ಮ ಬಾಳಿಗೆ ಬೆಳಕು ತಂದುದಕ್ಕಾಗಿ ಸಿಖ್ಖರು ದೀಪಾವಳಿಯನ್ನು ಬಂದಿಚಾರ್ ದಿನವಾಗಿ ಆಚರಿಸುತ್ತಾರೆ.
ದೀಪಾವಳಿಯನ್ನು ಆಶ್ವಯುಜದ ಕೊನೆಯಲ್ಲಿನ ಕೃಷ್ಣ ತ್ರಯೋದಶಿ(ಧನ ತ್ರಯೋದಶಿ), ಕೃಷ್ಣ ಚತುರ್ದಶಿ(ನರಕ ಚತುರ್ದಶಿ), ಅಮಾವಾಸ್ಯೆ(ಲಕ್ಷ್ಮೀಪೂಜೆ) ಮತ್ತು ಕಾರ್ತೀಕ ಮಾಸದ ಆರಂಭದ ಶುಕ್ಲ ಪಾಡ್ಯ(ಬಲಿ ಪಾಡ್ಯಮಿ), ಯಮ ದ್ವಿತೀಯಗಳಂದು ಅದ್ಧೂರಿಯಾಗಿ ಐದು ದಿನಗಳ ಹಬ್ಬವನ್ನಾಗಿ, ಸಾಂಪ್ರದಾಯಕವಾಗಿ ಆಚರಿಸುತ್ತೇವೆ.
ಹಬ್ಬದ ಆಚರಣೆ
ಆಶ್ವಯುಜ ಬಹುಳ ತ್ರಯೋದಶಿಯಂದು ದೀಪಾವಳಿ ಹಬ್ಬವು ಆರಂಭವಾಗುತ್ತದೆ. ಆ ದಿನ ರಾತ್ರಿ ಎಳ್ಳೆಣ್ಣೆ ದೀಪ ಹಚ್ಚಿ, ಮನೆ ಮುಂದಿರುವ ಬಹು ಎತ್ತರವಾದ ಜಾಗದಲ್ಲಿ ದೀಪ ಇಡುವುದರಿಂದ ಅಪಮೃತ್ಯು’ ನಿವಾರಣೆಯಾಗುತ್ತದೆ. ಈ ದೀಪವನ್ನು ಯಮದೇವರ ಪ್ರೀತಿಗಾಗಿ, ಮೃತ್ಯು ನಿವಾರಣೆಗಾಗಿ ಇಡುತ್ತೇವೆ. ಹಾಗಾಗಿ ಈ ದೀಪವನ್ನು
ಯಮದೀಪ’ ಎನ್ನುತ್ತೇವೆ. ಅದೇ ದಿನದ ಸಂಜೆ ಹಂಡೆಯಲ್ಲಿ ನೀರು ತುಂಬಿಸುವ ಹಬ್ಬ ಎನ್ನುತ್ತೇವೆ. ಹಂಡೆಯನ್ನು ವಿವಿಧ ಹೂಗಳಿಂದ ಅಲಂಕಾರ ಮಾಡಿ, ಸುಣ್ಣ ಮತ್ತು ಕೆಮ್ಮಣ್ಣಿನಿಂದ ರಂಗೋಲಿ ಬಿಡಿಸುತ್ತಾರೆ. ಹಂಡೆಗೆ ನೀರು ತುಂಬಿಸಿ ಎಲೆ ಅಡಿಕೆ, ಹೂವು, ನಾಣ್ಯ ಹಾಕಿ ಪೂಜಿಸುತ್ತಾರೆ. ಈ ದಿನವನ್ನು ಧನತ್ರಯೋದಶಿ ಎಂದೂ ಕರೆಯುತ್ತಾರೆ. ಈ ದಿನ ಹೊಸ ಬಂಗಾರವನ್ನು ಖರೀದಿ ಮಾಡುವುದರಿಂದ ಮನೆಯಲ್ಲಿ ವರ್ಷವಿಡೀ ಧನಲಕ್ಷ್ಮಿಯು ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ.
ಮಾರನೇ ದಿನವೇ ನರಕ ಚತುರ್ದರ್ಶಿ. ದೀಪಾವಳಿಯ ಪ್ರಮುಖ ದಿನ. ನರಕ ಎಂಬುವುದಕ್ಕೆ ಅಜ್ಞಾನ ಎಂದರ್ಥ. ಈ ಅಜ್ಞಾನವು ಚತುರ್ದಶಿಯ ದಿನವೇ ನಾಶವಾಗಿ ಜ್ಞಾನವು ದೊರೆಯಲಿ ಎಂದು ಈ ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಚತುರ್ದಶಿ ಎಂದರೆ ೧೪ ವಿದ್ಯೆ ಎಂದರ್ಥ. ಜ್ಞಾನವನ್ನು ಪಡೆಯಲು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದ, ಕಲ್ಪ, ಸಂಹಿತೆ, ಜ್ಯೋತಿಷ್ಯ, ಪುರಾಣ, ಸ್ಮೃತಿ, ವ್ಯಾಕರಣ, ಶೀಕ್ಷಾ, ನ್ಯಾಯ, ಛಂದಸ್ಸು, ಮೀಮಾಂಸೆ ಎಂಬ ೧೪ ವಿದ್ಯೆಗಳನ್ನು ಕಲಿಯಬೇಕೆಂದು ಶಾಸ್ತ್ರವು ತಿಳಿಸುತ್ತದೆ. ಅಂದು ವಿಶೇಷವಾಗಿ ಅಭ್ಯಂಜನ ಮಾಡುವುದನ್ನು ನಮ್ಮ ಧರ್ಮಶಾಸ್ತ್ರ ಹೇಳುತ್ತದೆ.
ತೈಲೇ ಲಕ್ಷ್ಮೀರ್ಜಲೇ ಗಂಗಾ ದೀಪಾವಲ್ಯಾಂ ಚತುದರ್ಶಿ
ಪ್ರಾತಃ ಸ್ನಾನಂ ತು ಯಃ ಕುರ್ಯಾದ್ಯಮಲೋಕಂ ನ ಪಶ್ಯತಿ
ಎಣ್ಣೆಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯೂ, ನೀರಿನಲ್ಲಿ ಗಂಗೆಯೂ ನೆಲೆಸಿರುತ್ತಾರೆ. ಎಣ್ಣೆ ಹಚ್ಚಿಸಿಕೊಂಡು ಹದವಾದ ಬಿಸಿನೀರಿನಲ್ಲಿ ಮಾಡುವ ಅಭ್ಯಂಗ ಸ್ನಾನದಿಂದ ಗಂಗಾ-ಲಕ್ಷ್ಮಿಯರ ಅನುಗ್ರಹವಾಗಿ ಆಯುರಾರೋಗ್ಯ ಭಾಗ್ಯವುಂಟಾಗಿ ನವಚೈತನ್ಯ ಮೂಡುತ್ತದೆ. ಹಾಗೆಯೇ ಅಜ್ಞಾನವೆಂಬ ಕತ್ತಲೆ ದೂರವಾಗಿ ಸುಜ್ಞಾನವೆಂಬ ಬೆಳಕು ಮಾನವನಿಗೆ ಲಭಿಸುತ್ತದೆ.
ಪೌರಾಣಿಕ ಹಿನ್ನಲೆ
ನರಕ ಚತುರ್ದಶಿಯ ಬಗ್ಗೆ ಒಂದು ಪೌರಾಣಿಕ ಹಿನ್ನಲೆಯಿದೆ. ಇಂದಿನ ಅಸ್ಸಾಂ ಹಿಂದೆ ಕಾಮರೂಪವೆಂಬ ಹೆಸರಿನ ರಾಜ್ಯವಾಗಿತ್ತು. ನರಕಾಸುರನೆಂಬ ರಾಕ್ಷಸರಾಜ ಅದನ್ನು ಆಳುತ್ತಿದ್ದ. ಅವನು ಭೂದೇವಿಯ ಮಗನಾಗಿದ್ದು, ಬಹಳ ದೊಡ್ಡ ತಪಸ್ಸು ಮಾಡಿ ಬ್ರಹ್ಮನಿಂದ ವರವನ್ನು ಪಡೆದಿದ್ದ. ಎಲ್ಲ ದೇವತೆಗಳು, ಯಕ್ಷರನ್ನು, ಭೂಲೋಕದ ರಾಜರನ್ನು ಸೋಲಿಸಿ ಅಜೇಯನಾಗಿ, ಹದಿನಾರು ಸಾವಿರ ಕನ್ಯೆಯರನ್ನು ಸೆರೆಮನೆಯಲ್ಲಿ ಬಂದಿಸಿದ್ದ. ದೇವತೆಗಳ ಮಾತೆಯಾದ ಅದಿತಿಯ ಕರ್ಣಕುಂಡಲಗಳನ್ನು ಕಿತ್ತು ತಂದಿದ್ದ ಕ್ರೂರಿಯಾಗಿದ್ದ. ಎಲ್ಲಾ ದೇವತೆಗಳು ಸೇರಿ ಶ್ರೀಕೃಷ್ಣನನ್ನು ಪ್ರಾರ್ಥಿಸಿದಾಗ, ಶ್ರೀಕೃಷ್ಣನು ಭೂದೇವಿ ಸ್ವರೂಪಿಯಾದ ಸತ್ಯಭಾಮೆಯೊಂದಿಗೆ ಆಶ್ವಯುಜ ಕೃಷ್ಣ ಚತುರ್ದಶಿಯ ಮಧ್ಯರಾತ್ರಿ ಸರಕಾಸುರನನ್ನು ಕೊಂದು ಹಾಕಿದ. ಆ ದಿನವನ್ನೇ ನರಕ ಚತುರ್ದಶಿಯೆಂದು ಲೋಕಾದ್ಯಂತ ಹಬ್ಬವಾಗಿ ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ ಅಂದು ನರಕಾಸುರನ ಸಂಹಾರ ಮಾಡಿ ಬಂದ ಕೃಷ್ಣನಿಗೆ ಸುಮಂಗಲೆಯರು ಆರತಿ ಬೆಳಗುತ್ತಾರೆ. ಆ ಪದ್ಧತಿಯಂತೆ ಇಂದಿಗೂ ಮನೆಯಲ್ಲಿನ ಮಕ್ಕಳಿಗೆ ಆರತಿ ಮಾಡುವುದು ಸಂಪ್ರದಾಯದಂತೆ ಬೆಳೆದು ಬಂದಿದೆ.
ಮೂರನೆಯ ದಿನ ಸಾಯಂಕಾಲ ಅಮಾವಾಸ್ಯೆಯ ರಾತ್ರಿ ಮನೆಯಲ್ಲಿನ ಅಲಕ್ಷ್ಮಿಯನ್ನು ಹೊರಹಾಕುವ ಉದ್ದೇಶದಿಂದ ಲಕ್ಷ್ಮಿಪೂಜೆಯನ್ನು ಮಾಡಿ ಮನೆಯ ತುಂಬಾ ದೀಪವನ್ನು ಬೆಳಗಬೇಕೆಂದು ಕೂಡ ಶಾಸ್ತ್ರ ತಿಳಿಸುತ್ತದೆ. ಈ ದಿನ ಲಕ್ಷ್ಮಿ ಪೂಜೆಗೆ ತುಂಬಾ ಪ್ರಶಸ್ತವಾದ ದಿನ. ಹಿರಣ್ಮಯಿ, ತೇಜಸ್ವಿ, ಜೀವನಪೋಷಕ ಹಾಗೂ ಚೈತನ್ಯಮಯಿಯಾದ ಲಕ್ಷ್ಮಿಯನ್ನು ವಾದ್ಯಘೋಷಗಳ ಸಹಿತ ಪ್ರವೇಶದ್ವಾರದಿಂದ ಮನೆಯೊಳಗೆ ಕರೆತಂದು ಅವಳ ವಾಸ್ತವ್ಯಕ್ಕೆ ಸ್ಥಾನ ನೀಡಿ ಪೂಜೆ ಮಾಡುವುದೇ-ಲಕ್ಷ್ಮೀಪೂಜೆ. ಈ ಅಮಾವಾಸ್ಯೆಯು ಕಲ್ಯಾಣಸ್ವರೂಪಿಯಾಗಿರುತ್ತದೆ. ಈ ಸಮಯದಲ್ಲಿ ರೈತರು ಬೆಳೆದ ದವಸ ಧಾನ್ಯಗಳು ಮನೆಗೆ ಬಂದಿರುತ್ತವೆ. ಮನೆಯಲ್ಲಿ ಆನಂದವಿರುತ್ತದೆ. ತಾವು ಪಟ್ಟ ಪರಿಶ್ರಮದ ಫಲವು ಭಗವಂತನ ಕೃಪೆಯಿಂದ ಅವರಿಗೆ ದೊರಕಿರುತ್ತದೆ. ಕೃಷಿಯಿಂದ ಉತ್ಪನ್ನವಾದ ಬೆಳೆಯೇ ನಿಜವಾದ ಲಕ್ಷ್ಮಿಯಾಗಿರುತ್ತದೆ. ಇಂದು ಮಹಾವಿಷ್ಣು ಮಹಾಲಕ್ಷ್ಮಿಯರ ವಾಷಿಕ ಪುನರ್ಮಿಲನ ದಿನ ಎನ್ನುತ್ತಾರೆ. ಅಮಾವಾಸ್ಯೆ ಕಗ್ಗತ್ತಲಾಗಿರುತ್ತದೆ. ದೀಪ ಬೆಳಗಿಸಿ ಕತ್ತಲನ್ನು ಓಡಿಸುವುದು ಜ್ಯೋತಿ ಸ್ವರೂಪಿಣಿಯಾದ ಮಹಾಲಕ್ಷ್ಮಿ. ಹಾಗಾಗಿ ಈ ದಿನ ಸಂಜೆ ಪ್ರಾಜ್ಞರಿಗೆ ದೀಪ ದಾನ ಮಾಡಿದರೆ ಸರ್ವ ಇಷ್ಟಾರ್ಥ ನೆರವೇರಿ, ಸಕಲ ಸಂಪತ್ತು ವೃದ್ಧಿಸುತ್ತದೆ. ಹಾಗೆಯೇ ಇದು ಶ್ರೀಕೃಷ್ಣನು ದೇಹತ್ಯಾಗ ಮಾಡಿದ ದಿನವೆಂದೂ, ನಚಿಕೇತನಿಗೆ ಆತ್ಮ ಸಾಕ್ಷಾತ್ಕಾರವಾದ ದಿನವೆಂದೂ ಹೇಳುತ್ತಾರೆ.
ನಾಲ್ಕನೇಯ ದಿನವನ್ನು ಬಲಿಪಾಡ್ಯಮಿ ಎಂದು ಕರೆಯುತ್ತಾರೆ. ಮಹಾವಿಷ್ಣುವು ವಾಮನಾವತಾರದಿಂದ ಬಲಿಚಕ್ರವರ್ತಿಯ ಅಹಂಕಾರವನ್ನು ತೊಲಗಿಸಿ, ಆತನನ್ನು ಪಾತಾಳಕ್ಕೆ ನೂಕಿದ ದಿನ. ಪ್ರತಿವರ್ಷ ಕಾರ್ತೀಕ ಮಾಸದ ಮೊದಲ ದಿನವಾದ ಇಂದು ಸಂಜೆ ಬಲಿ ಚಕ್ರವರ್ತಿಯು ತನ್ನ ಸಾಮ್ರಾಜ್ಯವನ್ನು ನೋಡಲೆಂದು ಭೂಮಿಗೆ ಬಂದು ಮೂರೂಮುಕ್ಕಾಲು ಘಳಿಗೆ ಇರುತ್ತಾನೆಂದೂ ನಂಬಿಕೆಯಿದೆ. ಹೀಗಾಗಿಯೇ ಅಂದು ಸಂಜೆ ಬಲೀಂದ್ರನ ಪೂಜೆ ಮಾಡಲಾಗುತ್ತದೆ. ಹೊಲ ಗದ್ದೆ, ಮನೆಗಳಲ್ಲಿ ಬಲೀಂದ್ರನ ಸ್ವಾಗತಿಸಲೆಂದು ಸಾಲು ದೀಪಗಳನ್ನು ಹಚ್ಚಿಡುತ್ತಾರೆ. ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಎತ್ತಿದ್ದು ಇದೇ ದಿನವಂತೆ. ಆದ್ದರಿಂದ ಈ ದಿನ ಗೋಪೂಜೆ ಹಾಗೂ ಗೋವರ್ಧನನ ಪೂಜೆಗೆ ಮಹತ್ವ. ಈ ದಿನ ಗೋವಿನ ಪೂಜೆ ಮಾಡಿ ಅದಕ್ಕೆ ಅಕ್ಕಿ, ಬೆಲ್ಲ ನೀಡಿ ಪ್ರಾರ್ಥಿಸುವುದರಿಂದ ಮಾನವನಿಗೆ ಇಹದಲ್ಲಿ ಸೌಖ್ಯ, ಪರದಲ್ಲಿ ಮುಕ್ತಿವುಂಟಾಗುತ್ತದೆ ಎನ್ನುತ್ತಾರೆ.
ಐದನೇಯ ದಿನವನ್ನು ಯಮ ದ್ವಿತೀಯ ಅಥವಾ ಭ್ರಾತೃ ದ್ವಿತೀಯ ಎಂದು ಆಚರಿಸುತ್ತಾರೆ. ಈ ದಿನ ಯಮ ತನ್ನ ತಂಗಿ ಯಮಿಯ ಮನೆಗೆ ಭೇಟಿ ಕೊಡುತ್ತಾನೆಂಬ ನಂಬಿಕೆ ಇದೆ. ತಂಗಿ ಅಣ್ಣನಿಗೆ ತಿಲಕವಿಟ್ಟು, ಸಿಹಿ ತಿನ್ನಿಸಿ, ಆರತಿ ಎತ್ತುತ್ತಾಳೆಂಬ ಪ್ರತೀತಿ. ಕಾರ್ತೀಕ ಪಾಡ್ಯದಿಂದ ಮನೆಬಾಗಿಲಲ್ಲಿ ಮತ್ತು ತುಳಸಿ ಕಟ್ಟೆಯ ಎದುರು ಒಂದು ತಿಂಗಳು ಪೂರ್ತಿ ದೀಪವನ್ನು ಹಚ್ಚಿಡುತ್ತಾರೆ. ಕೆಲವರು ಮನೆಯೆದುರು ಆಕಾಶಬುಟ್ಟಿಗಳನ್ನು ಕಟ್ಟುತ್ತಾರೆ. ಈ ರೀತಿ ದೀಪವನ್ನು ಹಚ್ಚಿಡುವ ದೀಪದ ಜ್ಯೋತಿಯು ಸತ್ತ ನಂತರ ಆತ್ಮ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವಾಗ ಬೆಳಕು ತೋರುತ್ತದೆ ಎಂಬುದು ನಂಬಿಕೆ.