RAICHUR OCT 11
ಬಹುದಿನಗಳ ಬೇಡಿಕೆಯಾದ ಏಮ್ಸ್ ಸಂಸ್ಥೆಯನ್ನು ರಾಯಚೂರಿಗೆ ತರಲು ಎಲ್ಲಾ ಪ್ರಯತ್ನಗಳು ನಡೆದಿದೆ. ಕೇಂದ್ರ ಆರೋಗ್ಯ ಸಚಿವರ ಬಳಿ ಮಾತನಾಡಿದ್ದೇನೆ. ಮುಂದಿನ ವಾರ ದೆಹಲಿಗೆ ಹೋಗಿ ಮಾತನಾಡಲಿದ್ದೇನೆ. ನರೇಂದ್ರ ಮೋದಿಯವರ ಆಶೀರ್ವಾದದಿಂದ ಏಮ್ಸ್ ರಾಯಚೂರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. .ಮಂತ್ರಾಲಯದ ಸೇತುವೆಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನರ ಹೆಸರು ಇಡಲು ಸಧ್ಯದಲ್ಲಿಯೇ ಆದೇಶ ಹೊರಡಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಅವರು ಇಂದು ರಾಯಚೂರು ತಾಲ್ಲೂಕಿನ ಗಿಲ್ಲೆಸಗೂರು ಗ್ರಾಮದಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಯಚೂರಿನ ರಾಜಕಾರಣದಲ್ಲಿ ಬಹಳ ದೊಡ್ಡ ಬದಲಾವಣೆ ಆಗಲಿದೆ. ನಾವು ರಾಯಚೂರಿಗೆ ಮಾಡಿರುವ ಕೆಲಸಗಳ ರಿಪೋರ್ಟ್ ಕಾರ್ಡ್ ಇಟ್ಟು, ನಿಮ್ಮ ಬೆಂಬಲವನ್ನು ಪಡೆದು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎಂಬ ಸಂಕಲ್ಪವನ್ನು ಮಾಡಿದ್ದೇವೆ ಎಂದು ತಿಳಿಸಿದರು.
ರಾಯಚೂರಿನ ಗ್ರಾಮೀಣ ಭಾಗದಲ್ಲಿ 23 ಕೆರೆ ತುಂಬಿಸುವ ಯೋಜನೆಯನ್ನು ಖಂಡಿತವಾಗಿಯೂ ಜಾರಿ ಮಾಡಲಾಗುವುದು. ಗ್ರಾಮೀಣ ಭಾಗದಲ್ಲಿ ಕಟ್ಟಕಡೆಯಲ್ಲಿರುವವ ಜಮೀನಿಗೂ ನೀರು ತಲುಪಿಸಲಾಗುವುದು. ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ ಭಾಜಪ ಸರ್ಕಾರ ಕಂಕಣಬದ್ಧವಾಗಿದೆ ಎಂದರು.
ರಾಯಚೂರು ಜಿಲ್ಲೆಗೆ ವಿಶೇಷವಾದ ಕೈಗಾರಿಕಾ ಯೋಜನೆ :
ರಾಯಚೂರು ಕರ್ನಾಟಕದ ಹೃದಯ ಭಾಗ. ವಿದ್ಯುತ್ ಕೊಡುವ ಮಹತ್ವದ ಕೇಂದ್ರ. ಈ ಭಾಗದಲ್ಲಿ ಔದ್ಯೋಗೀಕರಣವಾಗಬೇಕು, ಯುವಕರಿಗೆ ಉದ್ಯೋಗ ಸಿಗಬೇಕು. ರಾಯಚೂರು ಜಿಲ್ಲೆಗೆ ವಿಶೇಷವಾದ ಕೈಗಾರಿಕಾ ಯೋಜನೆಗಳನ್ನು ಬರುವ ತಿಂಗಳಲ್ಲಿ ಘೋಷಣೆ ಮಾಡಲಾಗುವುದು. ರಾಯಚೂರು ವಿಶ್ವವಿದ್ಯಾಲಯಕ್ಕೆ ಅನುದಾನ, ರಾಯಚೂರು ಜಿಲ್ಲೆಯ ಮಕ್ಕಳ ಪೌಷ್ಟಿಕ ಆಹಾರಕ್ಕೆ ವಿಶೇಷ ಅನುದಾನ ನೀಡಲಾಗುವುದು ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ದಿ :
ಕಲ್ಯಾಣ ಕರ್ನಾಟದಲ್ಲಿ 1101 ಶಾಲಾ ಕೊಠಡಿಗಳನ್ನು ಕಟ್ಟಲು ವಿಶೇಷ ಅನುದಾನ, 64 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪ್ರಾರಂಭ, ಪ್ರತಿ ಕ್ಷೇತ್ರಕ್ಕೆ, ರಸ್ತೆ, ಮೂಲಭೂತ ಸೌಕರ್ಯ ಅಭಿವೃದ್ಧಿ ಬರುವ ದಿನಗಳಲ್ಲಿ ಈ ಭಾಗಕ್ಕೆ 5000 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ನೀಡಲಾಗುವುದು., ಇದನ್ನು ಮಾಡೇ ತೀರುತ್ತೇನೆ ಎಂದರು. ಕಲ್ಯಾಣ ಕರ್ನಾಟಕಕ್ಕೆ, ದೀನದಲಿತರಿಗೆ, ರಾಯಚೂರಿಗೆ ಕೈಕೊಟ್ಟು, ಇಡೀ ಕರ್ನಾಟಕದ ಜನತೆಗೆ ಸುಳ್ಳು ಹೇಳಿದ್ದಾರೆ. ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿದರೆ ಸತ್ಯವಾಗುತ್ತದೆ ಎಂದುಕೊಂಡಿದ್ದಾರೆ. ಜನಮನ್ನಣೆ ಕೊಡುತ್ತಾರೆ ಎಂದು ಕಾಂಗ್ರೆಸ್ ನವರು ತಿಳಿದಿದ್ದಾರೆ ಎಂದರು.
ದುಡಿಯುವ ವರ್ಗ ಭವಿಷ್ಯ ನಿರ್ಮಾಣ:
ಸನ್ಮಾನ್ಯ ಯಡಿಯೂರಪ್ಪನವರ ಅವಧಿಯಲ್ಲಿ ರೈತರಿಗೆ 10 ಹೆಚ್ ಪಿ ಉಚಿತ ವಿದ್ಯುತ್, ರೈತ ಸನ್ಮಾನ ಯೋಜನೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ, ರೈತಬಂಧುಗಳ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು 10 ಲಕ್ಷ ರೈತರ ಮಕ್ಕಳಿಗೆ ನೀಡಲಾಗಿದೆ. ರೈತ ಕೂಲಿ ಮಕ್ಕಳಿಗೆ, ನೇಕಾರರು, ಮೀನುಗಾರರು, ಟ್ಯಾಕ್ಸಿ ಡ್ರೈವರ್, ಆಟೋಚಾಲಕರ ಮಕ್ಕಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ದುಡಿಯುವ ವರ್ಗ ಭವಿಷ್ಯ ನಿರ್ಮಾಣಕ್ಕೆ ಸಹಾಯ ಮಾಡುತ್ತಿದ್ದೇವೆ. ನಮ್ಮ ಸರ್ಕಾರ 28 ಸಾವಿರ ಕೋಟಿ ರೂ. ಎಸ್‍ಸಿಪಿ, ಟಿಎಸ್‍ಪಿ ಯೋಜನೆಗಳಿಗೆ ನೀಡಲಾಗಿದೆ. ಎಸ್ ಸಿ ಎಸ್ ಟಿ ಬಡ ಜನರಿಗೆ ವಿದ್ಯುತ್ ಉಚಿತ, 2 ಲಕ್ಷ ಮನೆ ನಿರ್ಮಾಣಕ್ಕೆ, 100 ಯುವಕರಿಗೆ ಉದ್ಯೋಗ ಬಾಬು ಜಗಜೀವನರಾಂ ಅವರ ಹೆಸರಿನಲ್ಲಿ ಸ್ವಯಂಉದ್ಯೋಗ ಕೊಡುವ ಯೋಜನೆ , 100 ಅಂಬೇಡ್ಕರ್ ಹಾಸ್ಟೆಲ್ಗಳು, ಕಲ್ಬುರ್ಗಿ ಸೇರಿದಂತೆ 5 ವಿವಿಧ ಶೈಕ್ಷಣಿಕ ಕೇಂದ್ರಗಳಲ್ಲಿ ಮೆಗಾ ಹಾಸ್ಟೆಲ್‍ಗಳನ್ನು ನಿರ್ಮಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ನೀಡಿ ಉತ್ಪಾದನೆ ಹಾಗೂ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯವನ್ನು ನೀಡಲಾಗುತ್ತಿದ್ದು, 5 ಲಕ್ಷ ಮಹಿಳೆಯರಿಗೆ ಹಾಗೂ 5 ಲಕ್ಷ ಯುವಕರಿಗೆ ಉದ್ಯೋಗ ನೀಡಲಾಗುತ್ತಿದೆ ಎಂದರು.