23.3 C
Karnataka
Sunday, December 1, 2024
    Home Blog Page 97

    ವೈರಾಣು ಇನ್ನೂ ನಮ್ಮ ನಡುವೆಯೇ ಇದ್ದು, ಅದು ರೂಪಾಂತರಗೊಳ್ಳುವ ಸಾಧ್ಯತೆಯಿದೆ, ಹೀಗಾಗಿ ನಾವು ಸನ್ನದ್ಧವಾಗಿರಬೇಕು: ಪ್ರಧಾನಿ

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಕೋವಿಡ್-19 ಮುಂಚೂಣಿ ಕಾರ್ಮಿಕರಿಗಾಗಿ `ವೈಯಕ್ತೀಕರಿಸಿದ ಕ್ರ್ಯಾಶ್ ಕೋರ್ಸ್’ ಕಾರ್ಯಕ್ರಮಕ್ಕೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಈ ತರಬೇತಿ ಕಾರ್ಯಕ್ರಮವನ್ನು 26 ರಾಜ್ಯಗಳಲ್ಲಿರುವ 111 ತರಬೇತಿ ಕೇಂದ್ರಗಳಲ್ಲಿ ನಡೆಸಲಾಗುವುದು. ಈ ಉಪಕ್ರಮದಲ್ಲಿ ಸುಮಾರು ಒಂದು ಲಕ್ಷ ಮುಂಚೂಣಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗುವುದು. ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ. ಮಹೇಂದ್ರ ನಾಥ್ ಪಾಂಡೆ ಸೇರಿದಂತೆ ಅನೇಕ ಕೇಂದ್ರ ಸಚಿವರು, ರಾಜ್ಯಗಳ ಸಚಿವರು, ತಜ್ಞರು ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

    ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಯವರು, ಈ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದು ಕೊರೊನಾ ವಿರುದ್ಧದ ಹೋರಾಟದಲ್ಲಿ ನಮ್ಮ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು. ವೈರಾಣು ಇನ್ನೂ ನಮ್ಮ ನಡುವೆಯೇ ಇದ್ದು, ಅದು ರೂಪಾಂತರಗೊಳ್ಳುವ ಸಾಧ್ಯತಯಿದೆ ಎಂದು ಅವರು ಎಚ್ಚರಿಸಿದರು. ವೈರಾಣು ನಮ್ಮ ಮುಂದೆ ಒಡ್ಡಬಹುದಾದ ಸವಾಲುಗಳು ಎಂಥವು ಎಂಬುದನ್ನು ಎರಡನೇ ಅಲೆಯು ನಿರೂಪಿಸಿದೆ. ಈ ಸವಾಲುಗಳನ್ನು ಎದುರಿಸಲು ದೇಶ ಸನ್ನದ್ಧವಾಗಿರಬೇಕು, ಈ ನಿಟ್ಟಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮುಂಚೂಣಿ ಕಾರ್ಯಕರ್ತರನ್ನು ತರಬೇತುಗೊಳಿಸುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು.

    ಕೋವಿಡ್‌ ಸಾಂಕ್ರಾಮಿಕವು ವಿಶ್ವದ ಪ್ರತಿಯೊಂದು ದೇಶ, ಸಂಸ್ಥೆ, ಸಮಾಜ, ಕುಟುಂಬ ಮತ್ತು ವ್ಯಕ್ತಿಯ ಸಾಮರ್ಥ್ಯವನ್ನು ಪರೀಕ್ಷಿಸಿದೆ ಎಂದು ಪ್ರಧಾನಿ ನೆನಪಿಸಿದರು. ಇದೇ ವೇಳೆ, ವಿಜ್ಞಾನ, ಸರಕಾರ, ಸಮಾಜ, ಸಂಸ್ಥೆ ಅಥವಾ ವ್ಯಕ್ತಿಗಳಾಗಿ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಇದು ನಮಗೆ ಎಚ್ಚರಿಕೆ ಗಂಟೆಯಾಗಿದೆ ಎಂದರು. ಭಾರತವು ಈ ಸವಾಲನ್ನು ಸ್ವೀಕರಿಸಿತು ಮತ್ತು ಪ್ರಸ್ತುತ ದೇಶದಲ್ಲಿರುವ ಪಿಪಿಇ ಕಿಟ್‌ ಉತ್ಪಾದನೆ, ಟೆಸ್ಟಿಂಗ್‌ ಮತ್ತಿತರ ಕೋವಿಡ್‌ ಆರೈಕೆ ಹಾಗೂ ಚಿಕಿತ್ಸೆ ಸಂಬಂಧಿತ ವೈದ್ಯಕೀಯ ಮೂಲಸೌಕರ್ಯದ ಸ್ಥಿತಿಗತಿಯು ನಮ್ಮ ಪ್ರಯತ್ನಗಳ ಸಾಫಲ್ಯತೆಗೆ ಸಾಕ್ಷಿಯಾಗಿದೆ ಎಂದರು.

    ದೂರದ ಆಸ್ಪತ್ರೆಗಳಿಗೂ ವೆಂಟಿಲೇಟರ್ ಮತ್ತು ಆಮ್ಲಜನಕ ಸಾಂದ್ರಕವನ್ನು ಒದಗಿಸಲಾಗಿದೆ. ಸಮರೋಪಾದಿಯಲ್ಲಿ 1500ಕ್ಕೂ ಹೆಚ್ಚು ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಈ ಎಲ್ಲಾ ಪ್ರಯತ್ನಗಳ ನಡುವೆ, ನುರಿತ ಮಾನವ ಶಕ್ತಿಯ ಪಾತ್ರವೂ ನಿರ್ಣಾಯಕವಾಗಿದೆ. ಇದಕ್ಕಾಗಿ ಮತ್ತು ಕೊರೊನಾ ಯೋಧರ ಪ್ರಸ್ತುತ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಲಕ್ಷ ಯುವಕರಿಗೆ ತರಬೇತಿ ನೀಡಲಾಗುತ್ತಿದೆ. ಈ ತರಬೇತಿ ಎರಡು-ಮೂರು ತಿಂಗಳಲ್ಲಿ ಮುಗಿಯಬೇಕು ಎಂದು ಪ್ರಧಾನಿ ಹೇಳಿದರು.

    ಇಂದು ಆರಂಭಿಸಲಾದ ಈ ಆರು ಕೋರ್ಸ್‌ಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬೇಡಿಕೆಗಳ ಪ್ರಕಾರ ದೇಶದ ಉನ್ನತ ತಜ್ಞರು ವಿನ್ಯಾಸಗೊಳಿಸಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಮನೆ ಆರೈಕೆ, ಪ್ರಾಥಮಿಕ ಆರೈಕೆ, ಸುಧಾರಿತ ಆರೈಕೆ, ತುರ್ತು ಆರೈಕೆ, ಮಾದರಿ ಸಂಗ್ರಹ, ಮತ್ತು ವೈದ್ಯಕೀಯ ಪರಿಕರ ನೆರವು ಎಂಬ ಆರು ವೈಯಕ್ತೀಕರಿಸಿದ ಉದ್ಯೋಗ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೊರೊನಾ ಯೋಧರಿಗೆ ತರಬೇತಿ ನೀಡಲಾಗುವುದು. ಇದು ಹೊಸ ಕೌಶಲ್ಯ ಕಲಿಕೆ ಮತ್ತು ಈಗಾಗಲೇ ಈ ರೀತಿಯ ಕೆಲಸದಲ್ಲಿ ಕೊಂಚ ತರಬೇತಿ ಹೊಂದಿರುವವರಿಗೆ ಕೌಶಲ್ಯ ಸುಧಾರಣೆಯನ್ನು ಇದು ಒಳಗೊಂಡಿರುತ್ತದೆ. ಈ ಅಭಿಯಾನವು ಆರೋಗ್ಯ ವಲಯದ ಮುಂಚೂಣಿ ಕಾರ್ಯಕರ್ತರಿಗೆ ಹೊಸ ಶಕ್ತಿಯನ್ನು ನೀಡುತ್ತದೆ ಮತ್ತು ನಮ್ಮ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂದರು.

    ಕರೋನಾ ಅವಧಿಯು ಕೌಶಲ್ಯ, ಮರು ಕೌಶಲ್ಯ ಮತ್ತು ಕೌಶಲ್ಯ ಸುಧಾರಣೆ ಎಷ್ಟು ಮುಖ್ಯ ಎಂಬುದನ್ನು ಸಾಬೀತುಪಡಿಸಿದೆ. ದೇಶದಲ್ಲಿ ಮೊದಲ ಬಾರಿಗೆ ಪ್ರತ್ಯೇಕವಾಗಿ ʻಸ್ಕಿಲ್ ಇಂಡಿಯಾ ಅಭಿಯಾನʼವನ್ನು ಅನ್ನು ಪ್ರಾರಂಭಿಸಲಾಯಿತು, ಕೌಶಲ್ಯ ಅಭಿವೃದ್ಧಿ ಸಚಿವಾಲಯವನ್ನು ಸ್ಥಾಪಿಸಲಾಯಿತು ಮತ್ತು ದೇಶಾದ್ಯಂತ ಪ್ರಧಾನ ಮಂತ್ರಿಯವರ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ತೆರೆಯಲಾಯಿತು ಎಂದು ಪ್ರಧಾನಿ ಹೇಳಿದರು. ಇಂದು ʻಸ್ಕಿಲ್ ಇಂಡಿಯಾʼ ಅಭಿಯಾನವು ದೇಶದ ಲಕ್ಷಾಂತರ ಯುವಕರಿಗೆ ಇಂದಿನ ಅಗತ್ಯಗಳಿಗೆ ಅನುಗುಣವಾಗಿ ತರಬೇತಿ ಪಡೆಯಲು ಸಹಾಯ ಮಾಡುತ್ತಿದೆ. ಕಳೆದ ವರ್ಷದಿಂದ ಕೌಶಲ್ಯ ಅಭಿವೃದ್ಧಿ ಸಚಿವಾಲಯವು ಸಾಂಕ್ರಾಮಿಕದ ನಡುವೆಯೂ ದೇಶಾದ್ಯಂತ ಲಕ್ಷಾಂತರ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಿದೆ ಎಂದು ಪ್ರಧಾನಿ ಹೇಳಿದರು.

    ನಮ್ಮ ಜನಸಂಖ್ಯೆಯ ಗಾತ್ರವನ್ನು ಗಮನಿಸಿದರೆ, ಆರೋಗ್ಯ ಕ್ಷೇತ್ರದಲ್ಲಿ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಪ್ರಧಾನಿ ಹೇಳಿದರು. ಕಳೆದ 7 ವರ್ಷಗಳಲ್ಲಿ ಹೊಸ ಏಮ್ಸ್, ಹೊಸ ವೈದ್ಯಕೀಯ ಕಾಲೇಜುಗಳು ಮತ್ತು ಹೊಸ ನರ್ಸಿಂಗ್ ಕಾಲೇಜುಗಳನ್ನು ಪ್ರಾರಂಭಿಸಲು ಸರಕಾರ ಗುರಿ ನಿರ್ದೇಶಿತ ವಿಧಾನದಲ್ಲಿ ಕೆಲಸ ಮಾಡಿದೆ. ಅದೇ ರೀತಿ, ವೈದ್ಯಕೀಯ ಶಿಕ್ಷಣ ಮತ್ತು ಸಂಬಂಧಿತ ಸಂಸ್ಥೆಗಳಲ್ಲಿ ಸುಧಾರಣೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಆರೋಗ್ಯ ವೃತ್ತಿಪರರನ್ನು ಸನ್ನದ್ಧಗೊಳೀಸುವ ನಿಟ್ಟಿನಲ್ಲಿ ಈಗ ನಡೆಯುತ್ತಿರುವ ಕೆಲಸದ ಗಂಭೀರತೆ ಮತ್ತು ವೇಗವು ಅಭೂತಪೂರ್ವವಾದುದು ಎಂದು ಪ್ರಧಾನಿ ಹೇಳಿದರು.

    ಹಳ್ಳಿಗಳಲ್ಲಿನ ಆಸ್ಪತ್ರೆಗಳಲ್ಲಿ ನಿಯೋಜಿಸಲಾದ ಆಶಾ ಕಾರ್ಯಕರ್ತೆಯರು, ಸೂಲಗಿತ್ತಿಯರು (ಎಂಎನ್‌ಎಂ), ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತರಂತಹ ವೈದ್ಯಕೀಯ ವೃತ್ತಿಪರರು ನಮ್ಮ ಆರೋಗ್ಯ ಕ್ಷೇತ್ರದ ಬಲವಾದ ಆಧಾರಸ್ತಂಭಗಳಲ್ಲಿ ಒಂದೆನಿಸಿದ್ದಾರೆ. ಆದರೆ, ಆಗಾಗ್ಗೆ ಅವರು ಚರ್ಚೆಯಿಂದ ಹೊರಗುಳಿಯುತ್ತಾರೆ ಎಂದು ಪ್ರಧಾನಿ ಹೇಳಿದರು. ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಹೆಗಲು ನೀಡುವ ಮೂಲಕ ಸೋಂಕನ್ನು ತಡೆಗಟ್ಟುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದ ಪ್ರಧಾನಿ, ಪ್ರತಿಯೊಬ್ಬ ದೇಶವಾಸಿಯ ಸುರಕ್ಷತೆಗಾಗಿ ಎಲ್ಲ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಆರೋಗ್ಯ ಕಾರ್ಯಕರ್ತರು ಮಾಡಿದ ಕಾರ್ಯವನ್ನು ಶ್ಲಾಘಿಸಿದರು. ದೂರದ ಪ್ರದೇಶಗಳಲ್ಲಿ ಮತ್ತು ಗುಡ್ಡಗಾಡು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಅವರ ಪಾತ್ರ ದೊಡ್ಡದೆಂದು ಬಣ್ಣಿಸಿದರು.

    ಜೂನ್ 21ರಿಂದ ಪ್ರಾರಂಭವಾಗಲಿರುವ ಲಸಿಕಾ ಅಭಿಯಾನಕ್ಕೆ ಸಂಬಂಧಿಸಿದಂತೆ ಅನೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ಪ್ರಧಾನಿ ಹೇಳಿದರು. 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಿಗೂ ಜೂನ್ 21ರಿಂದ ಲಸಿಕೆ ವಿಚಾರದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಸಿಗುವ ಪ್ರಾಧಾನ್ಯತೆಯೇ ದೊರೆಯಲಿದೆ. ಕೊರೊನಾ ಶಿಷ್ಟಾಚಾರದ ಪಾಲನೆಯೊಂದಿಗೆ ಪ್ರತಿಯೊಬ್ಬ ನಾಗರಿಕನಿಗೂ ಉಚಿತ ಲಸಿಕೆಗಳನ್ನು ನೀಡಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದರು.

    ತರಬೇತಿ ಪಡೆಯಲಿರುವವರಿಗೆ ಶುಭ ಹಾರೈಸಿದ ಪ್ರಧಾನಿ, ಕಲಿಕಾರ್ಥಿಗಳ ಹೊಸ ಕೌಶಲ್ಯಗಳು ದೇಶವಾಸಿಗಳ ಜೀವ ಉಳಿಸುವಲ್ಲಿ ಬಳಕೆಯಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

    ಹೆದರಬೇಡಿ, ಡಾಕ್ಟರ್ ಮೇಲೆ ನಂಬಿಕೆ ಇಡಿ


    ಕೋವಿಡ್ ಎರಡನೇ ಅಲೆ ಕಡಿಮೆಯಾಗುತ್ತಿದೆ.ಈ ಅಲೆಯನ್ನು ಅನೇಕರು ಮೆಟ್ಟಿನಿಂತು ಎದುರಿಸಿ ಬಂದಿದ್ದಾರೆ. ಗೆದ್ದವರ ಪಾಸಿಟಿವ್ ಕಥೆಗಳನ್ನು ಇಲ್ಲಿ ಸಾದರ ಪಡಿಸುತ್ತಿದ್ದೇವೆ. ಈ ಗೆಲವು ಇನ್ನೊಬ್ಬರಿಗೆ ಸ್ಫೂರ್ತಿಯಾಗಲಿ. ಕರೋನಾ ಒಂದೇ ಅಲ್ಲ ಯಾವ ರೋಗ ಬಂದರು ಧೈರ್ಯದಿಂದ ಎದುರಿಸಿದಾಗ ಜಯಿಸಲು ಸಾಧ್ಯ.


    Nobody thought that I will get covid

    ಕೋವಿಡ್ ಮೊದಲ ಅಲೆ  ಬಂದಾಗಲೇ ನಾವು ಎಲ್ಲಾ ಎಚ್ಚರಿಕೆಯನ್ನೂ ತೆಗೆದುಕೊಳ್ತಾಯಿದ್ವಿ.  ಕೋವಿಡ್  ಶಿಷ್ಟಾಚಾರಗಳನ್ನೆಲ್ಲಾ (protocols)  ಫಾಲೋ ಮಾಡ್ತಾ ಇದ್ವಿ.ಮಾಸ್ಕ್ ಹಾಕ್ಕೊಳೋದು, ಸೋಷಿಯಲ್ ಡಿಸ್ಟೆನ್ಸಿಂಗ್ ಎಲ್ಲಾನೂ ಮಾಡ್ತಾ ಇದ್ವಿ. ಹಾಗಾಗಿ ನಾವು ಅಂದುಕೊಂಡ್ವಿ we are safe ಅಂತ.

    ಅವತ್ತಿ ಏಪ್ರಿಲ್ 4 .ಭಾನುವಾರ .ಮನೆ ಸಮೀಪದ ಆಸ್ಪತ್ರೇಲೆ ವ್ಯಾಕ್ಸಿನೇಷನ್ ಹಾಕಿಸ್ಕೊಂಡೆ .ಆಮೇಲೆ  ಜ್ವರ ಬರುತ್ತೆ ಅಂತ
    ಗೊತ್ತಿದ್ದ   ಕಾರಣ ಟ್ಯಾಬ್ಲೆಟ್ಸ್ ತಗೋತಾ ಇದ್ದೆ. ಎರಡು ದಿನವಾದ್ರೂ  ಜ್ವರ ಕಮ್ಮಿನೇ ಆಗ್ಲಿಲ್ಲ . ಮೂರು ದಿನ, ನಾಲ್ಕು ದಿನ, ಐದು ದಿನವೂ ಆಯ್ತು.  ಆದಿನ ಶನಿವಾರ. ನಂಗೆ ಜಾಸ್ತಿನೇ ಜ್ವರ ಇತ್ತು.  ಮೈ ಕೈ ನೋವೂ ಜಾಸ್ತಿ ಇತ್ತು ಹಾಗೇ vomitting sensation ಸಹ ಇತ್ತು.   ಹಾಗಾಗಿ ಹಾಸ್ಪಿಟಲ್ ಗೆ ಅಡ್ಮಿಟ್  ಆಗಿಬಿಡೋಣ, ಅಲ್ಲಿ  ಡ್ರಿಪ್ಸ್ ಕೊಟ್ರೆ ಸ್ವಲ್ಪ  ಸುಸ್ತು, vomiting ಎಲ್ಲಾ ಕಮ್ಮಿ ಆಗಬಹುದು ಅಂತ ಯೋಚಿಸಿ ಆಸ್ಪತ್ರೆಗೆ ಹೋದ್ವಿ.

    ಅಡ್ಮಿಟ್   ಆಗೋದಾದ್ರೆ ಆಗಿ ಅಥವಾ  ಕೋವಿಡ್ ಟೆಸ್ಟ್  ಮಾಡಿಸಿದ ನಂತರ   ಬಂದು ಅಡ್ಮಿಟ್ ಆಗಿ.  ಆದ್ರೆ  ಟೆಸ್ಟ್ ರಿಪೋರ್ಟ್ ಪಾಸಿಟೀವ್ ಬಂದ್ರೆ ನಮ್ಮಲ್ಲಿ   ಕೋವಿಡ್ ಗೆ ಟ್ರೀಟ್ ಮೆಂಟ್ ಕೊಡಲ್ಲ ಅಂತ ಅಲ್ಲಿನ   ಡಾಕ್ಟರ್ ಹೇಳಿದ್ರು.   “ನಂಗೆ ತುಂಬಾ ವೀಕ್ ನೆಸ್  ಇದೆ ಹಾಗೇ vomiting ಸಹ ಜಾಸ್ತಿ ಇದೆ ದಯವಿಟ್ಟು ಅಡ್ಮಿಟ್ ಮಾಡಿಕೊಳ್ಳಿ ಅಂತ ನಾನು ಡಾಕ್ಟರ್ ನ ರಿಕ್ವೆಸ್ಟ್ ಮಾಡಿಕೊಂಡೆ. ದೇವರ ದಯೆಯಿಂದ ಅವರು ಒಪ್ಪಿದರು. ಹಾಗಾಗಿ ಅದೇ ದಿನ ಅಡ್ಮಿಟ್ ಆದೆ.  ಅವತ್ತೇ ಕೋವಿಡ್ ಟೆಸ್ಟ್ ಕೂಡ ಮಾಡಿದ್ರು, ಡ್ರಿಪ್ಸ್ ಹಾಕಿದ್ರು , chest x –  ray ನೂ ತೆಗೆದರು.

    ಮರುದಿನ ಬೆಳಗ್ಗೆ 10 ಗಂಟೆಗೆ ಡಾಕ್ಟರ್ ರೌಂಡ್ಸ್ ಗೆ ಬಂದಾಗ ಹೇಳಿದ್ರು ನಿಮ್ಮ ಟೆಸ್ಟ್ ರಿಪೋರ್ಟ್ ಪಾಸಿಟೀವ್ ಅಂತ!!  Really it was a shock to me and to my family.  Nobody thought that I will get covid. ಆಗ ಯೋಚನೆ ಶುರುವಾಯಿತು. ಹಾಸ್ಪಿಟಲ್ ನವರು ಕೋವಿಡ್ ಗೆ ಟ್ರೀಟ್ ಮೆಂಟ್ ಕೊಡೋಲ್ಲ ಡಿಸ್ಚಾರ್ಜ್ ಆಗಿ ಅಂದ್ರು. ನಮಗೆ ಸ್ವಲ್ಪ ಪ್ಯಾನಿಕ್ ಆಯ್ತು.  ಹತ್ತಿರದ ಆಸ್ಪತ್ರೆಗಳನ್ನೆಲ್ಲ ಹುಡುಕಿದ್ವಿಬೆಡ್ ಸಿಗುತ್ತಾ  ಅಂತ .ಎಲ್ಲೂ ಖಾಲಿ ಇರ್ಲಿಲ್ಲ.  ಇಲ್ಲಿಂದ 3 – 4 ಕಿಲೋಮೀಟರ್ ದೂರದ ಒಂದು ಆಸ್ಪತ್ರೆಯಲ್ಲಿ ಬೆಡ್ ಇದೆ ಅಂತ ತಿಳಿಯಿತು. ಆದರೆ ಅಲ್ಲಿ ಮೊದಲು ಬಂದವರಿಗೆ ಆದ್ಯತೆ ಎಂದರು. 

    ಆ ಟೈಮ್ ನಲ್ಲಿ ನನ್ನ ಅದೃಷ್ಟ ಚೆನ್ನಾಗಿತ್ತು. ಗೌರ್ನಮೆಂಟ್ ಗೈಡ್ ಲೈನ್ಸ್ ಪ್ರಕಾರ ಕೋವಿಡ್ ಟ್ರೀಟ್ ಮೆಂಟ್ ಆ ದಿನದಿಂದಲೇ  ಶುರು ಮಾಡ್ತಾ ಇದಾರೆ ಹಾಗಾಗಿ ನಾನು ದಾಖಲಾಗಿದ್ದ ಆಸ್ಪತ್ರೆಯವರೇ ಹೇಳಿದ್ರು .  ಹಾಗಾಗಿ ನಾನು ಆ ದಿನವೇ ಕೋವಿಡ್ ವಾರ್ಡಿಗೆ  ಅಡ್ಮಿಟ್ ಆದೆ.   ರಾತ್ರಿನೇ ಟ್ರೀಟ್ಮೆಂಟ್ ಶುರು ಮಾಡಿದ್ರು.  ಅಲ್ಲಿಯ ಡಾಕ್ಟರ್ಸ್,  ಸ್ಟಾಫ್ ನರ್ಸ್ ಗಳೆಲ್ಲ ತುಂಬ ಸಪೋರ್ಟಿವ್ ಆಗಿದ್ರು. ರಾತ್ರಿಯಿಂದ್ಲೇ ನನಗೆ ಫ್ಯಾಬಿ ಫ್ಲೂ ಮಾತ್ರೆ   ಕೊಟ್ರು, 34  ಮಾತ್ರೆಗಳ  ಕೋರ್ಸ್ ಅದು. ಆಂಟಿ ಬಯಾಟಿಕ್ ಸಹ ಶುರುಮಾಡಿದರು.

    ಮಾನಸಿಕವಾಗಿ ಗಟ್ಟಿ ಆಗೋಕ್ಕೆ ಪ್ರಯತ್ನ ಮಾಡ್ತಾ ಇದ್ದೆ. ಟಿವಿ  ನೋಡ್ತಾ ಇರಲಿಲ್ಲ.  ನನ್ನ ಮನಸ್ಸಿಗೆ ಮುದ ನೀಡುವ  ಹಾಡುಗಳನ್ನು  ಕೇಳ್ತಾ ಇದ್ದೆ. ಕಾಮಿಡಿ ಶೋಸ್ ನೋಡ್ತಾ ಇದ್ದೆ.

    ಮೊದಲ  5 ದಿನ ಜ್ವರ ಇತ್ತು.  ಪ್ಯಾರಸಿಟಮಾಲ್ ಇಂಜೆಕ್ಷನ್ ಕೊಡೋರು.  ಡಾಕ್ಟರ್ಸ  2  – 3 ರೌಂಡ್ಸ್  ಬರೋರು.     ಕನ್ಸಲ್ಟಿಂಗ್ ಡಾಕ್ಟರ್  ಪ್ರತಿದಿನ  ಬೆಳಿಗ್ಗೆ 10 ರಿಂದ  – 10.30ರ ಹೊತ್ತಿಗೆ  ಬಂದು ವಿಚಾರಿಸಿಕೊಳ್ಳೋರು.

    4ನೇ ದಿನದಿಂದ ನನಗೆ Remdesivir ಶುರುಮಾಡಿದರು.  7ನೇ ದಿನದಿಂದ ನನ್ನ ದೇಹ ಟ್ರೀಟ್ ಮೆಂಟ್ ಗೆ ಸ್ಪಂದಿಸಲು ಶುರುವಾಯಿತು.  ಆಗ ಡಾಕ್ಟರ್ ಹೇಳಿದ್ರು improve ಆಗ್ತಾ ಇದೀರ , ಸ್ವಲ್ಪ ನಿಧಾನ ಅಷ್ಟೆ ಅಂತ. ಆರು ದಿನದ ಮೇಲೆ  remdesivir ಜೊತೆ ಆಂಟಿ ಬಯಾಟಿಕ್ ನಿಲ್ಲಿಸಿದರು. ನಿಧಾನವಾಗಿ ನಾನು ಇಂಪ್ರೂವ್ ಆಗುತ್ತಿದ್ದೆ.

    ಇಷ್ಟು ಮೆಡಿಸಿನ್ ತಗೋತಾ ಇದ್ನಲ್ಲ ತುಂಬಾನೇ ಹಸಿವು ಆಗೋದು. ಸಮತೋಲನ ಆಹಾರ  ದೇಹಕ್ಕೆ ಬೇಕಾಗಿತ್ತು . ಅದನ್ನು  ಆಸ್ಪತ್ರೆಯವರೇ ಅರೇಂಜ್ ಮಾಡಿದ್ರು. ಬೆಳಿಗ್ಗೆ ಬ್ರೇಕ್ ಫಾಸ್ಟ್ ,ಮಧ್ಯಾಹ್ನ, ರಾತ್ರಿ, ಚಪಾತಿ , ಪಲ್ಯ, ಅನ್ನ, ರಸಂ , ಸಾಯಂಕಾಲ ಫ್ರೂಟ್ಸ್  ಹೀಗೆ ಒಳ್ಳೆಯ ಆಹಾರ ಕೊಟ್ಟರು.

    ಹತ್ತರಿಂದ ಹನ್ನೊಂದು ದಿನ ಇದ್ದೆ  ಆಸ್ಪತ್ರೆಯಲ್ಲಿ.  ಮೊದಲು ನಾನು  4 ಲೀಟರ್ ಆಕ್ಸಿಜನ್ ಮೇಲಿದ್ದೆ.  Almost 7 ದಿನ ಆಕ್ಸಿಜನ್ ಮೇಲೇ ಇದ್ದೆ .  ಆಮೇಲೆ ನಿಧಾನವಾಗಿ 2 ಗಂಟೆಗಳ ಕಾಲ ಆಕ್ಸಿಜನ್ ಕೊಡೋದು ಮತ್ತೆ  ತೆಗೆಯುವುದು ಹೀಗೆ ಮಾಡೋರು. ನಂತರ 2 ಲೀಟರ್ ಗೆ ಇಳಿಸಿದರು. ಕೊನೆಯ ಮೂರು ದಿನ  ಆಕ್ಸಿಜನ್  ಇಲ್ಲದೆ ಟ್ರೀಟ್ ಮಾಡಿದ್ರು.

    ದಿನವೂ ನನ್ನ ಕುಟುಂಬದವರ ಜೊತೆ ಮಾತನಾಡುತ್ತಿದ್ದೆ, ಹಾಗಾಗಿ ಮನೋಧೈರ್ಯ, ಮನೋಬಲ ಜಾಸ್ತಿ ಆಗ್ತಾ ಇತ್ತು.
    ಈ ಕೋವಿಡ್ ಬಗ್ಗೆ ನಾವು ಮಾತೇ ಆಡ್ತಿರಲಿಲ್ಲ. ಕಾರಣ ಆಸ್ಪತ್ರೆಯ ವಾತಾವರಣ ಸ್ವಲ್ಪ ಹೆದರಿಕೆ ಹುಟ್ಟಿಸುತ್ತಿತ್ತು.

    ಅಂತೂ ಎಲ್ಲರ ಹಾರೈಕೆಯಿಂದ ನಾನು ಕೋವಿಡ್ ನಿಂದ ಹುಷಾರಾಗಿ ಮನೆಗೆ ಬಂದೆ. ಈಗಲೂ ಎರಡು ಮೂರು ತಿಂಗಳು ಕೇರ್ ಫುಲ್ ಆಗಿರಬೇಕು ಅಂತ ಡಾಕ್ಟರ್ ಹೇಳಿದ್ದಾರೆ.

    ಒಟ್ಟಿನಲ್ಲಿ ನನ್ನ ಈ ಅನುಭವದಿಂದ ಎಲ್ರಿಗೂ  ಹೇಳುವುದು ಏನಂದ್ರೆ ಕೋವಿಡ್ ಬಂದ ತಕ್ಷಣ ಹೆದರಬೇಡಿ.  ಡಾಕ್ಟರ್ ಕೊಡೋ ಔಷಧಿಯನ್ನು ಸರಿಯಾಗಿ ತೆಗೆದುಕೊಳ್ಳಿ,  ಪೂರಕ ಔಷಧಿಗಳು, ಒಳ್ಳೆಯ ಆಹಾರ ಸೇವಿಸಿ, ಹಣ್ಣು ತರಕಾರಿಗಳನ್ನು ಜಾಸ್ತಿ ಬಳಸಿ.

    14 ದಿನಗಳು ಮುಗಿದು ಮನೆಗೆ ಬಂದ ಮೇಲೂ ಡಾಕ್ಟರ್ ಅಡ್ವೈಸ್ ಪ್ರಕಾರ ಸ್ವಲ್ಪ ದಿನ  ಕ್ವಾರನ್ಟೈನ್  / ಪ್ರತ್ಯೇಕವಾಗಿ ಇರಬೇಕಾಗುತ್ತದೆ. ಈಗ ನಾನು ಆರೋಗ್ಯವಾಗಿದ್ದೇನೆ. ಇಲ್ಲಿಗೆ ನನ್ನ ಕೋವಿಡ್ ಅನುಭವದ ಲೇಖನ ಮುಗಿಸುತ್ತಿರುವೆ. 


    ಕೊರೋನಾ ಗೆದ್ದವರು ತಮ್ಮ ಅನುಭವದ ಕಥೆಯನ್ನು [email protected] ಗೆ ಇ ಮೇಲ್ ಮಾಡಿ. ಸೂಕ್ತವಾದುವನ್ನು ಪ್ರಕಟಿಸಲಾಗುವುದು

    ಬಹುದಿನಗಳ ದೈಹಿಕ ಶಿಕ್ಷಕರ ಬೇಡಿಕೆಗೆ ಅಸ್ತು:148 ದೈಹಿಕ ಶಿಕ್ಷಕರಿಗೆ ಮುಂಬಡ್ತಿ

    ಸರ್ಕಾರಿ ಪ್ರೌಢ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಬಹುಕಾಲದ ಬೇಡಿಕೆಯಾಗಿದ್ದ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಬಡ್ತಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಸರ್ಕಾರಿ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-1 ಹುದ್ದೆಯಿಂದ ಗ್ರೂಪ್-ಬಿ ವೃಂದದ ದೈಹಿಕ ಶಿಕ್ಷಣ ಪರಿವೀಕ್ಷಕರ 148 ಹುದ್ದೆಗಳಿಗೆ ಮುಂಬಡ್ತಿಯನ್ನು ನೀಡಿ ಆದೇಶ ಹೊರಡಿಸುವ ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ ಪ್ರೌಢ ಶಾಲಾ ದೈಹಿಕ ಶಿಕ್ಷಕರ ಸಂಘದ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದಂತಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    2016ರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪದೋನ್ನತಿ ಪ್ರಕ್ರಿಯೆ ನಡೆದಿದ್ದು, ಐದು ವರ್ಷಗಳ ಕಾಲ ಪ್ರೌಢ ಶಾಲಾ ದೈಹಿಕ ಶಿಕ್ಷಕರಿಗೆ ಯಾವುದೇ ಪದೋನ್ನತಿ ನೀಡಿರಲಿಲ್ಲ. ನೆನೆಗುದಿಗೆ ಬಿದ್ದಿದ್ದ ಬಡ್ತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಆಡಳಿತಾತ್ಮಕ ಸಮಸ್ಯೆ ಬಗೆಹರಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

    ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಜೂನ್ 21ರಂದು ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ   ಮಾಡಲಾಗುತ್ತಿದ್ದು, ಕೋವಿಡ್ ನಿಯಮಗಳನ್ನು ಪಾಲಿಸಿ ದೈಹಿಕ ಶಿಕ್ಷಕರು ಕೌನ್ಸೆಲಿಂಗ್ ನಲ್ಲಿ ಭಾಗವಹಿಸಿ ತಮ್ಮ ಇಚ್ಛಾನುಸಾರ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು  ಸಚಿವರು ತಿಳಿಸಿದ್ದಾರೆ. ಆದೇಶದ ಪ್ರತಿ ಇಲ್ಲಿದೆ.

    ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಬಡ್ತಿ ನೀಡಬೇಕೆಂಬುದು ಕರ್ನಾಟಕ ರಾಜ್ಯ ಸರ್ಕಾರಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಬೇಡಿಕೆಯಾಗಿತ್ತು. ಈಗ ಆ ಪ್ರಕ್ರಿಯೆ ಮುಗಿದಿದ್ದು, ಮುಂಬಡ್ತಿ ಹೊಂದಲಿರುವ ದೈಹಿಕ ಶಿಕ್ಷಣ ಪರಿವೀಕ್ಷಕರು ಇಲಾಖೆಯಲ್ಲಿ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ ಗುಣಮಟ್ಟದ ಶಿಕ್ಷಣದಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಬೇಕೆಂದು ಸುರೇಶ್ ಕುಮಾರ್ ಹೇಳಿದ್ದಾರೆ.

    ಪಾಸಿಟಿವಿಟಿ ದರ ಮತ್ತಷ್ಟು ಇಳಿದಿದೆ

    ಕೊರೊನಾ ಸೋಂಕಿನ ವಿರುದ್ಧ ನಿರಂತರ ಹೋರಾಟ ನಡೆಸುತ್ತಾ ಬಂದಿರುವ ಭಾರತ ಸರ್ಕಾರ, ಇದೀಗ ಸೋಂಕಿನ ಪ್ರಮಾಣವನ್ನು ಗಣನೀಯವಾಗಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗುತ್ತಿದೆ. ದೇಶಾದ್ಯಂತ ಕೊರೊನಾ ಸಕ್ರಿಯ ಪ್ರಕರಣಗಳ ಪ್ರಮಾಣ ಇದೀಗ 8 ಲಕ್ಷ ಮಟ್ಟಕ್ಕಿಂತ ಕೆಳಕ್ಕೆ ತಗ್ಗಿದ್ದು, ಅದೀಗ 73 ದಿನಗಳ ನಂತರ 7,98,656ಕ್ಕೆ ಇಳಿಕೆ ಕಂಡಿದೆ.

    ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 62,480 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

    ದೇಶದಲ್ಲಿ ಇಲ್ಲಿಯ ತನಕ 2,85,80,647 ಸೋಂಕಿತರು ಗುಣಮುಖರಾಗಿದ್ದಾರೆ.

    ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 88,977 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

    ಸತತ 36ನೇ ದಿನದಲ್ಲಿ ದೈನಂದಿನ ಚೇತರಿಕೆ ಪ್ರಕರಣಗಳು ದಿನನಿತ್ಯ ಕಾಣಿಸಿಕೊಳ್ಳುತ್ತಿರುವ ಹೊಸ ಪ್ರಕರಣಗಳನ್ನು ಹಿಂದಿಕ್ಕುತ್ತಿವೆ.

    ಚೇತರಿಕೆ ಪ್ರಮಾಣ ಇದೀಗ 96.03%ಗೆ ಸುಧಾರಣೆ ಕಂಡಿದೆ.

    ವಾರದ ಪಾಸಿಟಿವಿಟಿ ದರ 5% ಒಳಗಿದ್ದು, ಅದೀಗ 3.80%ಗೆ ತಗ್ಗಿದೆ.

    ದೈನಿಂದಿನ ಪಾಸಿಟಿವಿಟಿ ದರವೂ ಸತತ 11ನೇ ದಿನದಲ್ಲಿ 5%ಗಿಂತ ಕೆಳಗಿನ ಮಟ್ಟದಲ್ಲಿದ್ದು, ಅದೀಗ 3.24% ಇದೆ.

    ಗಂಟಲು ಮತ್ತು ಮೂಗಿನ ದ್ರವ ಪರೀಕ್ಷೆ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಇದುವರೆಗೆ 38.71 ಕೋಟಿ ಜನರ ಪರೀಕ್ಷೆ ನಡೆಸಲಾಗಿದೆ.

    ದೇಶವ್ಯಾಪಿ ಹಮ್ಮಿಕೊಂಡಿರವ ಬೃಹತ್ ಕೋವಿಡ್-19 ಲಸಿಕಾ ಆಂದೋಲನ ಭರದಿಂದ ಸಾಗಿದ್ದು, ಇಲ್ಲಿಯ ತನಕ 26.89 ಕೋಟಿ ಲಸಿಕಾ ಡೋಸ್ ನೀಡಲಾಗಿದೆ.


    ರಾಷ್ಟ್ರೀಯ ಶಿಕ್ಷಣ ನೀತಿ ಈ ವರ್ಷದಿಂದಲೇ ಜಾರಿ

    ಇಪ್ಪತ್ತೊಂದನೆ ಶತಮಾನದಲ್ಲಿ ಕರ್ನಾಟಕ ಸೇರಿ ಇಡೀ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ  ಬಹುದೊಡ್ಡ ಕ್ರಾಂತಿಕಾರಕ ಬದಲಾವಣೆಗಳಾಗುತ್ತವೆ. ಆ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ ಅಧ್ಯಕ್ಷರೂ ಆದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷ ಡಾ.ಕಸ್ತೂರಿ ರಂಗನ್‌ ಹೇಳಿದರು.

    ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮತ್ತು ಡೆನ್ಮಾರ್ಕ್ ನ ಅಲ್ಬೋರ್ಗ್ ವಿವಿಯ ಯುನೆಸ್ಕೊ ಸೆಂಟರ್ ಫಾರ್ ಪ್ರಾಬ್ಲಮ್ ಬೇಸ್ಡ್ ಲರ್ನಿಂಗ್ ಇನ್ ಎಂಜಿನಿಯರಿಂಗ್ ಸೈನ್ಸ್ ಮತ್ತು ಸಸ್ಟೈನಬಿಲಿಟಿ ಸಹಯೋಗದಲ್ಲಿ  ʼಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಲಿಕಾ ಪದ್ಧತಿʼ ಬಗೆಗಿನ ಪ್ರಾದೇಶಿಕ ಸಂಶೋಧನಾ ವಿಚಾರ ಸಂಕಿರಣವನ್ನು ಉದ್ದೇಶಿಸಿ ಅವರು ಮಾತನಾಡಿದರು.

    “ರಾಷ್ಟ್ರೀಯ ಶಿಕ್ಷಣ ನೀತಿ ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ಜಾರಿಗೆ ಬರುತ್ತಿದೆ. ನೂತನ ಶಿಕ್ಷಣ ನೀತಿಯ ಕರಡು ಲಭ್ಯವಾದ ಕೂಡಲೇ ಹಾಗೂ ಕೇಂದ್ರ ಸರಕಾರ ಈ ನೀತಿಯನ್ನು ಪ್ರಕಟಿಸಿದ ಮೊದಲ ದಿನದಿಂದಲೇ ಸರಕಾರ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಈ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗಿದ್ದನ್ನು ಕಂಡಿದ್ದೇನೆ” ಎಂದು ಕಸ್ತೂರಿರಂಗನ್ ಮೆಚ್ವುಗೆ ವ್ಯಕ್ತಪಡಿಸಿದರು.

    ಶಿಕ್ಷಣ ನೀತಿಯ ಬಗ್ಗೆ ರಾಜ್ಯ ಸರಕಾರಕ್ಕೆ ಇರುವ ಬದ್ಧತೆ, ದೂರದೃಷ್ಟಿ ಶ್ಲಾಘನೀಯ. ಡಾ.ಅಶ್ವತ್ಥನಾರಾಯಣ ಅವರು ಹೋಗುತ್ತಿರುವ ವೇಗ ನನಗೆ ಅಚ್ಚರಿ ಉಂಟು ಮಾಡಿದೆ ಎಂದು ಕಸ್ತೂರಿ ರಂಗನ್‌ ಹೇಳಿದರು.

    ಈ ವರ್ಷದಿಂದಲೇ ಜಾರಿಗೆ ಸಿದ್ಧತೆ

    ಬಳಿಕ ಮಾತನಾಡಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರು, “ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ವರ್ಷದಿಂದಲೇ ಜಾರಿ ಮಾಡಲು ಸರಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ” ಎಂದರು.

    ರಾಜ್ಯವು ಉದ್ಯಮಶೀಲತೆ, ಆವಿಷ್ಕಾರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುವುದರಿಂದ ಶಿಕ್ಷಣ ನೀತಿಯೂ ರಾಜ್ಯದ ಶೈಕ್ಷಣಿಕ ವ್ಯವಸ್ಥೆಗೆ ಹೊಸ ಹುರುಪು ನೀಡಲಿದೆ. ಸಮಸ್ಯೆಗೆ ಪರಿಹಾರ ಕಲ್ಪಿಸುವ ಶಿಕ್ಷಣ ನೀಡುವ ಮೂಲಕ ಸಮಾಜ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಶೀಘ್ರದಲ್ಲೇ ಸಾಕಾರವಾಗಲಿದೆ ಎಂದೇ ಡಿಸಿಎಂ ಹೇಳಿದರು.

    ಶಿಕ್ಷಣ ನೀತಿ ಜಾರಿ ಮಾಡುವ ನಿಟ್ಟಿನಲ್ಲಿ ನನಗೆ ಅವಕಾಶ ಸಿಕ್ಕಿದ್ದು, ನನ್ನ ಜೀವಮಾನದಲ್ಲಿ ಸಿಕ್ಕಿದ ಸುವರ್ಣಾವಕಾಶ ಎಂದ ಡಿಸಿಎಂ, ನಮ್ಮ ಜ್ಞಾನ ಸಂಪತ್ತು ಹೆಚ್ಚಿಸಿಕೊಳ್ಳಲು ನೀತಿಯೂ ಹೆಚ್ಚು ಪರಿಣಾಮಕಾರಿ. ಎಲ್ಲ ಸಮಸ್ಯೆಗಳಿಗೂ ಇದೊಂದೇ ಪರಿಹಾರ ಎಂದರು.

    ಯುನೆಸ್ಕೋದ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕಲಿಕಾ ಶಿಕ್ಷಣ ವಿಭಾಗದ ಮುಖ್ಯಸ್ಥೆ ಪ್ರೊ.ಅನೆಟ್‌ ಕೊಲ್ಮಾಸ್‌ ಅವರು ಮಾತನಾಡಿ, ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ತಾಂತ್ರಿಕ ಮತ್ತು ಆವಿಷ್ಕಾರ ಶಿಕ್ಷಣಕ್ಕೆ ಯುನೆಸ್ಕೋ ಹೆಚ್ಚು ಒತ್ತು ನೀಡುತ್ತಿದೆ. ಆ ನಿಟ್ಟಿನಲ್ಲಿ ನಾವು ಎಲ್ಲ ದೇಶಗಳ ಜತೆ, ಮುಖ್ಯವಾಗಿ ಭಾರತದ ಜತೆ ನಿಕಟವಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದರು.

    ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಷಿ ಸೇರಿದಂತೆ ದೇಶ- ವಿದೇಶಗಳ ತಜ್ಞರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

    ಶ್ರೀಶಿವಕುಮಾರ ಸ್ವಾಮೀಜಿ ಮನೆಯ ಜೀರ್ಣೋದ್ಧಾರಕ್ಕೆ ಭೂಮಿ ಪೂಜೆ‌

    ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಸಿದ್ದಗಂಗಾ ಮಠದ ಹಿರಿಯ ಜಗದ್ಗರು ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹುಟ್ಟಿದ ಮನೆ ಜೀರ್ಣೋದ್ಧಾರ ಕಾಮಗಾರಿಗೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಇಂದು ಮಾಗಡಿ ತಾಲೂಕಿನ ವೀರಾಪುರದಲ್ಲಿ ಭೂಮಿ ಪೂಜೆ ನೆರವೇರಿಸಿದರು.

    ನಂತರ ಮಾತನಾಡಿ ಇದೊಂದು ಪುಣ್ಯದ ಕೆಲಸವಾಗಿದ್ದು ವೀರಾಪುರದಲ್ಲಿ ರಸ್ತೆ, ಶಾಲೆ ಹಾಗೂ ದೇವಸ್ಥಾವನ್ನು ಸಹ ಅಭಿವೃದ್ಧಿ ಪಡಿಸಲಾಗುವುದು‌. ಶ್ರೀಗಳ ಮನೆಯನ್ನು ಜೀರ್ಣೋದ್ಧಾರಗೊಳಿಸಿ ಸುಸಜ್ಜಿತ ವಸ್ತುಸಂಗ್ರಹಾಲಯ ನಿರ್ಮಾಣ ಮಾಡಲಾಗುವುದು. ಅಲ್ಲಿ
    ಶ್ರೀ ಗಳು ಉಪಯೋಗಿಸುತ್ತಿದ್ದ ವಸ್ತುಗಳನ್ನು ಇಡಲಾಗುವುದು ಎಂದರು.

    ವೀರಾಪುರ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಸಿದ್ದಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿ ಅವರ 111 ಅಡಿ ಪುತ್ಥಳಿ ನಿರ್ಮಾಣ ಸಾಂಸ್ಕೃತಿಕ ಹಾಗೂ ಪಾರಂಪರಿಕ ಪಾರ್ಕ್ ಗೆ ಸರ್ಕಾರ 25 ಕೋಟಿ ಅನುದಾನ ನೀಡಿದ್ದು, ಕೆ.ಆರ್.ಐ.ಡಿ.ಎಲ್ ಅವರು ಯಾವುದೇ ಸೇವಾ ಶುಲ್ಕ ಪಡೆಯದೆ ಪೂರ್ಣ ಹಣವನ್ನು ಕಾಮಗಾರಿಗೆ ವಿನಿಯೋಗಿಸಲಿದ್ದಾರೆ. ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿದ್ದು, ಶೀಘ್ರವಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದರು.

    ಇಲ್ಲಿ ನಿರ್ಮಾಣವಾಗುವ 111ಅಡಿ ಪ್ರತಿಮೆಯನ್ನು ಶಿವಗಂಗೆ ಹಾಗೂ ಸಿದ್ದಗಂಗೆ ಯಿಂದ ನೋಡುವ ರೀತಿ ನಿರ್ಮಾಣ ಮಾಡಲಾಗುವುದು. ಪ್ರತಿಮೆಯ ಕೆಳಭಾಗದಲ್ಲಿ ಶ್ರೀ ಗಳ ಜೀವನ ಚರಿತ್ರೆಯ ಮ್ಯೂಸಿಯಂ ನಿರ್ಮಾಣ ಹಾಗೂ ಜೀವನ ಚರಿತ್ರೆಯ ಕಿರುಚಿತ್ರ ವೀಕ್ಷಿಸಲು ಆಡಿಟೋರಿಯಂ ಸಹ ನಿರ್ಮಿಸಲಾಗುವುದು.

    ಶ್ರೀ ಗಳ ಹುಟ್ಟೂರಿನಿಂದ ಸಿದ್ದಗಂಗೆ ಕರ್ಮಭೂಮಿಗೆ 22 ಕಿ.ಮೀ ಇದ್ದು,ಜನರು ಪಾದಯಾತ್ರೆ ಮಾಡುವಂತೆ ರಸ್ತೆ ಅಭಿವೃದ್ಧಿಯಾಗಬೇಕು. , ಅದಿರಂಗ, ಮಧ್ಯರಂಗ, ಅಂತ್ಯರಂಗ ದರ್ಶನ ಪಡೆದರೆ ಪುಣ್ಯ ಬರುತ್ತದೆ ಎಂಬ ನಂಬುಕೆ ಇದೆ. ಅದೇ ರೀತಿ ಶ್ರೀಗಳ ಹುಟ್ಟೂರು ವೀರಾಪುರ , ಸಿದ್ದಗಂಗಾ ಹಾಗೂ ಶಿವಗಂಗಾ ಸ್ಥಳಗಳ ದರ್ಶನ ಪಡೆದರೆ ಪುಣ್ಯ ಸಿಗುತ್ತದೆ ಎಂದರು.

    ಇದಕ್ಕೂ ಮುನ್ನ ಸಚಿವರು ಪ್ರತಿಮೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

    ಕಾರ್ಯಕ್ರಮದಲ್ಲಿ ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ರುದ್ರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ, ರಾಮನಗರ ಉಪವಿಭಾಗಾಧಿಕಾರಿ ಮಂಜುನಾಥ್, ಮಾಗಡಿ ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವಿನಯ್ ಕುಮಾರ್ ಉಪಸ್ಥಿತರಿದ್ದರು.

    ಹಳ್ಳಿ ಹಕ್ಕಿ ಸಿಡಿಸಿದ ಬಾಂಬ್ ಗೆ ಬೆಚ್ಚಿ ಬಿತ್ತೆ ಹೈಕಮಾಂಡ್

    ಬೃಹತ್‌ ನೀರಾವರಿ ಇಲಾಖೆಯಲ್ಲಿ 20,000 ಕೋಟಿ ರೂ. ಟೆಂಡರ್‌ ವ್ಯವಹಾರವನ್ನು ಹಣಕಾಸು ಇಲಾಖೆ ಕ್ಲಿಯರೆನ್ಸ್‌ ಇಲ್ಲದೆ ಅಂತಿಮಗೊಳಿಸಲಾಗಿದೆ. ಇದರಲ್ಲಿ 10% ಕಿಕ್‌ಬ್ಯಾಕ್‌ ವ್ಯವಹಾರವಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ನೇರ ಪಾತ್ರವಿದೆ ಎಂದು ಬಿಜೆಪಿ ಹಿರಿಯ ನಾಯಕ ಎಚ್.ವಿಶ್ವನಾಥ್‌ ಮಾಡಿರುವ ಆರೋಪ ಗುರುವಾರ ಕತ್ತಲಾಗುವ ಮುನ್ನವೇ ಹೈಕಮಾಂಡ್‌ ಕಿವಿಗೆ ಬಿದ್ದಿದೆ.ಇದರ ಬೆನ್ನ ಹಿಂದೆಯೇ ವಿಜಯೇಂದ್ರ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತು ಕತೆ ನಡೆಸಿದ್ದಾರೆ.

    ಅಲ್ಲದೆ, ಬಳ್ಳಾರಿಯಲ್ಲಿ ಜಿಂದಾಲ್‌ಗೆ 3,600 ಎಕರೆ ಪ್ರದೇಶವನ್ನು ಪರಭಾರೆ ಮಾಡುವುದರಲ್ಲೂ ಭರ್ತಿ ಭ್ರಷ್ಟಾಚಾರ ನಡೆದಿದೆ. ಹೈಕಮಾಂಡ್‌ಗೆ ಹಣ ನೀಡಬೇಕು ಎಂದು ಹೇಳುವ ಮೂಲಕ ಇಲ್ಲಿನ ಗಲೀಜನ್ನು ವರಿಷ್ಠರಿಗೂ ಮೆತ್ತಿಸುವ ಕೆಲಸ ನಡೆಯುತ್ತಿದೆ ಎಂದು ವಿಶ್ವನಾಥ್‌ ಹೇಳಿರುವ ಮಾತು ಗಂಭೀರ ಸ್ವರೂಪ ಪಡೆದುಕೊಂಡಿದೆ

    ಅರುಣ್‌ ಸಿಂಗ್‌ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಶಾಸಕರ ಅಭಿಪ್ರಾಯ ಆಲಿಸುತ್ತಿದ್ದ ಸಮಯದಲ್ಲೇ ವಿಶ್ವನಾಥ್‌ ಸಿಡಿಸಿದ ಬಾಂಬ್‌ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ. ಹಳ್ಳಿಹಕ್ಕಿ ಹೇಳಿಕೆಗಳು ಭಿನ್ನಮತೀಯರ ಗುಂಪಿಗೆ ದೊಡ್ಡ ಲೀಡ್‌ ಕೊಟ್ಟಿದ್ದರೆ ಅತ್ತ ಸಿಎಂ ನಿಷ್ಠರ ಪಾಳೆಯದಲ್ಲಿ ಆತಂಕ ಉಂಟಾಗಿದೆ. ಜತೆಗೆ, ಮುಖ್ಯಮಂತ್ರಿ ನಿಷ್ಠರ ಗುಂಪಿನ ರೇಣುಕಾಚಾರ್ಯ ಹಾಗೂ ಎಸ್.ಆರ್.‌ವಿಶ್ವನಾಥ್‌ ವಿರುದ್ಧ ʼಕೆಲ ಶಬ್ದʼಗಳನ್ನು ಬಳಸಿ ಹಳ್ಳಿಹಕ್ಕಿ ಹರಿಹಾಯ್ದಿರುವುದು ಸ್ವತಃ ಮುಖ್ಯಮಂತ್ರಿಗೂ ತೀವ್ರ ಮುಜುಗರ ಉಂಟು ಮಾಡಿದೆ.

    ಇಷ್ಟಕ್ಕೂ ವಿಶ್ವನಾಥ್‌ ಹೇಳಿದ್ದೇನು?

    “ಜೆಡಿಎಸ್‌ನಲ್ಲಿ ಇದ್ದ ಕೆಟ್ಟ ಪರಿಸ್ಥಿತಿ ಈಗ ಬಿಜೆಪಿಯಲ್ಲೂ ಇದೆ. ಅಲ್ಲಿಂದ ಇಲ್ಲಿ ಬಂದರೆ, ಇಲ್ಲಿಯೂ ಅದೇ ಕುಟುಂಬ ರಾಜಕಾರಣ ಮನೆ ಮಾಡಿದೆ. ಕರ್ನಾಟಕದ ಬಿಜೆಪಿ ಘಟಕ ನರೇಂದ್ರ ಮೋದಿ ಸಾಧನೆ, ಕೆಲಸಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇವರಿಗೆಲ್ಲ ʼವ್ಯವಹಾರವೇʼ ಮುಖ್ಯವಾಗಿಬಿಟ್ಟಿದೆ. ಇನ್ನು ಯಡಿಯೂರಪ್ಪ ಅವರಿಗೆ ವಯಸ್ಸು ಸಹಕರಿಸುತ್ತಿಲ್ಲ. ಆಡಳಿತದಲ್ಲಿ ಸಿಎಂ ಕುಟುಂಬದ ಹಸ್ತಕ್ಷೇಪ ಅತಿಯಾಗಿದೆ. ಲಂಚಗುಳಿತನ, ಭ್ರಷ್ಟಾಚಾರ ಮಿತಿ ಮೀರಿಬಿಟ್ಟಿದೆ. ಮುಖ್ಯವಾಗಿ ವಿಜಯೇಂದ್ರ ಹಸ್ತಕ್ಷೇಪದಿಂದ ಎಲ್ಲರಿಗೂ ಕಷ್ಟವಾಗುತ್ತಿದೆ. ನೀರಾವರಿ ಇಲಾಖೆಯಲ್ಲಿ 20,000 ಕೋಟಿ ರೂ. ಟೆಂಡರ್‌ ಫೈನಲ್‌ ಮಾಡಲಾಗಿದೆ. ಈ ಟೆಂಡರ್‌ಗೆ ಹಣಕಾಸು ಇಲಾಖೆ ಒಪ್ಪಿಗೆಯನ್ನೇ ನೀಡಿಲ್ಲ. ಅಧಿಕಾರಿಗಗಳನ್ನು ಕಡೆಗಣಿಸಲಾಗಿದೆ. ಇದೆಲ್ಲದರ ಹಿಂದೆ ವಿಜಯೇಂದ್ರ ಇದ್ದಾರೆ. 10% ಕಮೀಷನ್‌ ವ್ಯವಹಾರವಿದೆ. ಹೈಕಮಾಂಡ್‌ಗೂ ಹಣ ನೀಡಬೇಕೆಂದು ಇವರೆಲ್ಲ ಹೇಳಿಕೊಂಡು ಓಡಾಡುತ್ತಿದ್ದಾರೆ. ಇದರಿಂದ ವರಿಷ್ಠರಿಗೂ ಕೆಟ್ಟ ಹೆಸರು ಬರುತ್ತಿದೆ” ಎಂದು ವಿಶ್ವನಾಥ್‌ ಹೇಳಿದ್ದಾರೆ.

    ಇದೇ ವಿಷಯವನ್ನು ಅರುಣ್‌ ಸಿಂಗ್‌ಗೂ ನೇರವಾಗಿ ಹೇಳಿದ್ದೇನೆ ಎಂದ ಅವರು ಮಾಧ್ಯಮಗಳ ಮುಂದೆಯೂ ವಿವರವಾಗಿ ಮಾತನಾಡಿದರು.

    ಯಡಿಯೂರಪ್ಪ ಅವರನ್ನು ಬದಲಿಸಿ

    ವೀರಶೈವ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಿ ಎಂದು ವಿಶ್ವನಾಥ್ ಹೇಳಿದ್ದಾರೆ.
    ಪಂಚಮಸಾಲಿ ಸಮುದಾಯಕ್ಕೆ ಸೇರಿದ ಮೂವರು ಶಾಸಕರಿದ್ದಾರೆ. ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್. ಈ ಮೂವರಲ್ಲಿ ಯಾರನ್ನಾದರೂ ಮುಖ್ಯಮಂತ್ರಿಯನ್ನಾಗಿ ಮಾಡಲಿ ಎಂದರು.

    ಯಡಿಯೂರಪ್ಪನವರಿಗೆ ಮೊದಲಿದ್ದ ಶಕ್ತಿ, ಸ್ಪಿರಿಟ್, ಆರೋಗ್ಯ ಈಗ ಇಲ್ಲ. ಹೀಗಾಗಿ ಕಾಮನ್ ಸೆನ್ಸ್ ಇರುವ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ. ಇನ್ನು, ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡುತ್ತಿರುವ ಮಠಾಧೀಶರು ಬಸವ ತತ್ತ್ವವನ್ನು ಮರೆಯಬಾರದು ಎಂದರು.

    ಸ್ವಲ್ಪ ಮೆತ್ತಗಾದರಾ ಸೈನಿಕ

    ಯೋಗೇಶ್ವರ್‌ ಉಸ್ತುವಾರಿ ಅರುಣ್‌ ಸಿಂಗ್‌ ಮುಂದೆ ಇದ್ದದ್ದೆಲ್ಲವನ್ನೂ ಬಿಚ್ಚಿಟ್ಟರು ಎಂದು ಅವರ ಆಪ್ತರೊಬ್ಬರು ಹೇಳಿದರು. ರಾಜ್ಯದಲ್ಲಿ ಮೂರು ಪಕ್ಷಗಳ ಸರಕಾರ ಇದೆ. ರಾಮನಗರ ಜಿಲ್ಲೆಯಲ್ಲೂ ಅದರಲ್ಲೂ ಚನ್ನಪಟ್ಟಣ ಕ್ಷೇತ್ರದಲ್ಲಿ ನಾನು ಹೇಳಿದ ಕೆಲಸಗಳು ಆಗುತ್ತಿಲ್ಲ. ಆದರೆ ಜೆಡಿಎಸ್‌ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳುವ ಕೆಲಸಗಳೆಲ್ಲ ಆಗುತ್ತಿವೆ” ಎಂದು ದೂರಿದರು.

    ಈ ಮಾತು ಕೇಳುತ್ತಿದ್ದಂತೆ, “ಹೇ ಸಚ್ಛಾ ಹೈ ಕ್ಯಾ” ಎಂದು ತಿರುಗಾ ಯೋಗಿಯನ್ನೇ ಪ್ರಶ್ನೆ ಮಾಡಿದ್ದಾರೆ. ಯೋಗಿ, ತಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲ ವಿಷಯಗಳನ್ನು ಬಿಡಿಸಿ ಬಿಡಿಸಿ ಹೇಳಿದ್ದಾರೆ ಎನ್ನಲಾಗಿದೆ.

    ಫೋನ್‌ ಕದ್ದಾಲಿಕೆ ಬಾಂಬ್

    ಉಳಿದಂತೆ ಭಿನ್ನರು ಸ್ಫೋಟಿಸಿದ ಇನ್ನೊಂದು ಭಾರೀ ಬಾಂಬ್‌ ಎಂದರೆ ಮೊಬೈಲ್‌ ಕರೆ ಕದ್ದಾಲಿಕೆ. ಭುನ್ನಮತೀಯರ ಗ್ಯಾಂಗ್‌ ಲೀಡರ್‌ ಎಂದೇ ಗುರುತಿಸಿಕೊಂಡಿರುವ ಅರವಿಂದ ಬೆಲ್ಲದ್‌ ತಮ್ಮ ಫೋನ್‌ ಕರೆಗಳ ಕದ್ದಾಲಿಕೆ ಆಗುತ್ತಿದೆ. ಪಕ್ಷದಲ್ಲಿಯೇ ಈ ಬಗ್ಗೆ ನನ್ನ ವಿರುದ್ಧ ದೊಡ್ಡ ಷಡ್ಯಂತ್ರ್ಯ ನಡೆಯುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.‌

    ಈ ಹಿಂದಿನ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕೂಡ ಫೋನ್‌ ಕದ್ದಾಲಿಕೆ ಆರೋಪ ಬಂದು ದೊಡ್ಡ ಗದ್ದಲವಾಗಿತ್ತು. ಈಗ ಸ್ವಪಕ್ಷೀಯರಿಂದಲೇ ಸಿಎಂ ವಿರುದ್ಧ ಈ ಗಂಭೀರ ಆರೋಪ ಬಂದಿದೆ. ಜತೆಗೆ, ನನ್ನನ್ನು ಯಾರೋ ಅಪರಿಚಿತರು ಫಾಲೋ ಮಾಡುತ್ತಿದ್ದಾರೆಂದು ಬೆಲ್ಲದ್‌ ಅವರು ಕಾಣದ ವ್ಯಕ್ತಿಗಳತ್ತ ಬೆರಳು ತೋರಿಸಿದ್ದಾರೆ.

    ಇವತ್ತಿನ ಮತ್ತೊಂದು ಮಹತ್ತ್ವದ ಬೆಳವಣಿಗೆ ಎಂದರೆ ನಿಗದಿಯಾಗದ್ದ ರೆಬೆಲ್‌ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಅರುಣ್‌ ಸಿಂಗ್‌ ಭೇಟಿ ರದ್ದಾಗಿದೆ. ಬಿಜೆಪಿ ಮೂಲಗಳ ಪ್ರಕಾರ ಯತ್ನಾಳ್‌ ಭೇಟಿಗೆ ಸಿಂಗ್‌ ನಿರಾಕರಿಸಿದ್ದಾರೆ ಎನ್ನಲಾಗಿದೆ. ಹಿಂದೆ ಇದೇ ಯತ್ನಾಳ್‌ ಅವರು ಅರುಣ್‌ ಸಿಂಗ್‌ ವಿರುದ್ಧ ಹರಿಹಾಯ್ದಿದ್ದರು. ಸಿಂಗ್‌ ಮುಖ್ಯಮಂತ್ರಿಗೆ ಫೇವರ್‌ ಮಾಡುತ್ತಿದ್ದಾರೆಂದು ದೂರಿದ್ದರು. ಬಹುಶಃ ಈ ಭೇಟಿ ಕ್ಯಾನ್ಸಲ್‌ಗೆ ಹಳೆಯ ಜಿದ್ದು ಕಾರಣ ಎನ್ನಬಹುದು.

    ಫೈನಲಿ, ಇವತ್ತು 10 ಶಾಸಕರನ್ನಷ್ಟೇ ಭೇಟಿಯಾಗಿದ್ದಾರೆ. ನಾಳೆ ಅಬ್ಬಾ ಎಂದರೂ 20 ಶಾಸಕರ ಅಭಿಪ್ರಾಯ ಕೇಳಬಹುದು. ಇದು ಪಕ್ಕಾ ಕಾಟಾಚಾರದ ಮಾತುಕತೆ ಎನ್ನುವುದು ಯಾರಿಗಾದರೂ ಅನಿಸುತ್ತದೆ ಎನ್ನುವುದು ವಿರೋಧಿ ಬಣದ ಗೊಣಗಾಟ. ಶುಕ್ರವಾರ ಸಂಜೆ ದಿಲ್ಲಿ ಫ್ಲೈಟ್‌ ಹತ್ತುವ ಮುನ್ನ ಅವರು ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆಯನ್ನೂ ನಡೆಸಲಿದ್ದಾರೆ.-cknewsnow.com

    ಕೋವಿಡ್ ಬರುವ ಮುನ್ನ Stay home, Stay safe ಕೋವಿಡ್ ಬಂದಾಗ Stay Brave, Stay safe


    ಕೋವಿಡ್ ಎರಡನೇ ಅಲೆ ಕಡಿಮೆಯಾಗುತ್ತಿದೆ.ಈ ಅಲೆಯನ್ನು ಅನೇಕರು ಮೆಟ್ಟಿನಿಂತು ಎದುರಿಸಿ ಬಂದಿದ್ದಾರೆ. ಗೆದ್ದವರ ಪಾಸಿಟಿವ್ ಕಥೆಗಳನ್ನು ಇಲ್ಲಿ ಸಾದರ ಪಡಿಸುತ್ತಿದ್ದೇವೆ. ಈ ಗೆಲವು ಇನ್ನೊಬ್ಬರಿಗೆ ಸ್ಫೂರ್ತಿಯಾಗಲಿ. ಕರೋನಾ ಒಂದೇ ಅಲ್ಲ ಯಾವ ರೋಗ ಬಂದರು ಧೈರ್ಯದಿಂದ ಎದುರಿಸಿದಾಗ ಜಯಿಸಲು ಸಾಧ್ಯ


    .

    ನನ್ನ ಕರೋನಾಜನಕ ಕಥೆ

    ಕರೋನಾ ಕುರಿತ ವಾರ್ತೆಯನ್ನು ಟಿವಿಯಲ್ಲಿ ನೋಡಿ ಭಯ ಪಡುತ್ತಿದ್ದ ಕಾಲ ಒಂದಿತ್ತು. ಆದರೆ ನನ್ನ test report ಪಾಸಿಟಿವ್ ಬಂದ ಕ್ಷಣ ನೆನಪಾಗಿದ್ದು ಶಾಲೆಯಲ್ಲಿ ಓದಿದ್ದ ಸುಭಾಷಿತ ” ಧೈರ್ಯಂ ಸರ್ವತ್ರ ಸಾಧನಂ” .

    ಮೇ 22 ನನ್ನ ಕರೋನಾ ಲಕ್ಷಣದ (ಜ್ವರ, ತಲೆಭಾರ) ಮೊದಲ ದಿನ. ಮೇ 23 (ಭಾನುವಾರ) ನನ್ನ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದ ದಿನ.

    ಆ ದಿನ ನನ್ನ ತಲೆಯಲ್ಲಿ ಓಡುತ್ತಿದ್ದ 2 ವಿಷಯಗಳು: 

    1. ನನ್ನಿಂದ ಮನೆಯ ಯಾರಿಗೂ ಕರೋನಾ ಹರಡಬಾರದು.
    2. ಆಫೀಸ್ ಕೊಡುವ   3 ವಾರಗಳ ಕೋವಿಡ್  ರಜದಲ್ಲಿ ಯಾವ ಫಿಲ್ಮ್ ಮತ್ತು ವೆಬ್ ಸೀರಿಸ್ ನೋಡಬೇಕು?

    ಮೊದಲನೇ ದಿನದ ತಲೆ ಭಾರದಿಂದ ಚೇತರಿಸಿಕೊಂಡ ನಂತರ ನನಗೆ almost ಕೋವಿಡ್ ನ ಎಲ್ಲಾ ರೋಗ ಲಕ್ಷಣಗಳು ಕಾಣಿಸಲಾರಂಭಿಸಿದವು (ತಲೆಭಾರ, ಜ್ವರ, ಮೈ ಕೈ ನೋವು, ವಾಂತಿ,  ಭೇದಿ , ರುಚಿ ಮತ್ತು ವಾಸನೆ  ಇಲ್ಲದಾಯಿತು).

    ಆದರೆ  ನನ್ನ ವೈದ್ಯರ,  ಸ್ನೇಹಿತರ ಮತ್ತು ಮನೆಯ ಇತರ ಸದಸ್ಯರ ಸಹಾಯ ಮತ್ತು ಅವರು ನೀಡಿದ ಆತ್ಮಸ್ಥೈರ್ಯದಿಂದ ಮೊದಲ 5 ದಿನಗಳಲ್ಲಿ ಎಲ್ಲಾ ಲಕ್ಷಣಗಳು ಕ್ಷೀಣಿಸತೊಡಗಿದವು, ಆದರೆ ರುಚಿ ಮತ್ತು ವಾಸನೆ ಇಲ್ಲದೆ ನಾನು ಕಳೆದ 10 ದಿನಗಳು ಸ್ವಲ್ಪ ಮಟ್ಟಿಗೆ ಕಷ್ಟಕರವಾಗಿದ್ದವು.

    ಜಂಕ್ ಫುಡ್ ಮತ್ತು ಕುರುಕಲು ತಿಂಡಿಗೆ ಅಭ್ಯಾಸವಾಗಿದ್ದ ನಾಲಿಗೆಗೆ ಏನೂ ರುಚಿಯಿಲ್ಲದ ಬಿಸಿನೀರು, ಕಷಾಯ, ಅನ್ನ,ಸಾರು  ಹಸಿಬಿಸಿ ತರಕಾರಿ, ಹಣ್ಣು ತಿಂದು ಬೇಸರವಾಗಿತ್ತು. ಆದರೆ ಆರೋಗ್ಯವಾಗಿದ್ದಾಗ ಮಾಡಬೇಕೆಂದುಕೊಂಡಿದ್ದ ಸೋ ಕಾಲ್ಡ್  ಸ್ಟ್ರಿಕ್ಟ್ ಹೆಲ್ದಿ ಡಯೆಟ್ ,  ರೆಗ್ಯುಲರ್ ವಾಕಿಂಗ್  ಆ ಇಪ್ಪತ್ತೊಂದು ದಿನ ಮಾಡಿದ ಕಾರಣ ನನ್ನ ತೂಕ 1.5 kg ಕಡಿಮೆಯಾಯಿತು.

    ನ್ಯೂಸ್ ಚಾನೆಲ್ ಗಳನ್ನು ನೋಡಿ ನಾನು ಪಟ್ಟ ಭಯ ತುಂಬ ಸಿಲ್ಲಿ ಎನ್ನುವ ಅನುಭವ ಆಯಿತು.

    ಕೋವಿಡ್ –  19 ಒಂದು ಸಾಧಾರಣ ಜ್ವರ,  ಮತ್ತಿತರ ಲಕ್ಷಣಗಳಿಂದ ಕೂಡಿದ ರೋಗ.  ಅದರ ಬಗ್ಗೆ ತುಂಬಾ ತಲೆ/ ಮನಸ್ಸು ಕೆಡಿಸಿಕೊಂಡು ಕಂಗಾಲಾಗುವ ಅಗತ್ಯವಿಲ್ಲ. ಮೊದಲನೆಯ ದಿನದಿಂದಲೇ ವೈದ್ಯರನ್ನು ಸಂಪರ್ಕಿಸಿ ಔಷಧಿ, ಪ್ರಾಪರ್ ರೆಸ್ಟ್,  ಗುಡ್ ಡಯೆಟ್ ನಿಂದ ನಾವಿದನ್ನು ಸುಲಭವಾಗಿ ಸೋಲಿಸಬಹುದು.  ಇದು ನನ್ನ ಅನುಭವದ ಮಾತು. ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಹಿಂದೆ ಮುಂದೆ ನೋಡದೆ ಟೆಸ್ಟ್ ಮಾಡಿಸಿಕೊಳ್ಳಬೇಕು. ವೈದ್ಯರ ಸಲಹೆಯಂತೆ ನಡೆಯಬೇಕು. self medication ಯಾವಾಗಲೂ ಅಪಾಯಕಾರಿ.

    ಕೋವಿಡ್ ಬರುವ ಮುನ್ನ
    “Stay home, Stay safe”
    ಕೋವಿಡ್ ಬಂದಾಗ
    “Stay Brave, Stay safe”

    ನನ್ನ ಈ ಅನುಭವದ ಲೇಖನದಿಂದ ಇದನ್ನು ಓದುತ್ತಿರುವ ಯಾರಾದರೂ ಒಬ್ಬರಿಗೆ 1% ಕೋವಿಡ್ ನ ಭಯ ಹೋಗಿ ಅದನ್ನು ಎದುರಿಸಬಲ್ಲೆ ಎಂಬ positive energy ಬಂದರೆ ನನ್ನ ಈ ಮೊದಲ ಬರವಣಿಗೆ ಪ್ರಯತ್ನ ಸಾರ್ಥಕ. 


    ಕೊರೋನಾ ಗೆದ್ದವರು ತಮ್ಮ ಅನುಭವದ ಕಥೆಯನ್ನು [email protected] ಗೆ ಇ ಮೇಲ್ ಮಾಡಿ. ಸೂಕ್ತವಾದುವನ್ನು ಪ್ರಕಟಿಸಲಾಗುವುದು

    ಬೆಲ್ಲದ ಪೋನ್ ಟ್ಯಾಪ್ ಆರೋಪ; ನ್ಯಾಯಾಂಗ ತನಿಖೆಗೆ ಸಿದ್ಧರಾಮಯ್ಯ ಆಗ್ರಹ

    ತಮ್ಮ ಪೋನ್ ಟ್ಯಾಪ್ ಆಗ್ತಿದೆ ಎಂದು ಬಿಜೆಪಿಯ ಭಿನ್ನಮತೀಯ ಶಾಸಕ ಅರವಿಂದ್ ಬೆಲ್ಲದ ಅವರು ಮಾಡಿರುವ ಆರೋಪ ಗಂಭೀರ ಸ್ವರೂಪದ್ದಾಗಿದ್ದು. ಈ ಆರೋಪವನ್ನು ತಿಪ್ಪೆ ಸಾರಿಸುವ ಸ್ಪಷ್ಟೀಕರಣದ ಮೂಲಕ ಮುಚ್ಚಿಹಾಕುವ ಪ್ರಯತ್ನ ಮಾಡದೆ ಈ ಬಗ್ಗೆ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಿ ಸತ್ಯ ಸಂಗತಿಯನ್ನು ಬಯಲಿಗೆ ತರಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

    ಪೋನ್ ಟ್ಯಾಪಿಂಗ್ ಆಗುತ್ತಿರುವುದನ್ನು ಬಹಿರಂಗಪಡಿಸುವ ಧೈರ್ಯ ತೋರಿದ ಶಾಸಕ ಅರವಿಂದ ಬೆಲ್ಲದ ಅವರನ್ನು ಅಭಿನಂದಿಸುತ್ತೇನೆ. ಇದು ಕೇವಲ ಬೆಲ್ಲದರೊಬ್ಬರ ಪೋನ್ ಗೆ ಸಂಬಂಧಿಸಿದ್ದಾಗಿರಲಿಕ್ಕಿಲ್ಲ, ರಾಜ್ಯ ಬಿಜೆಪಿಯಲ್ಲಿ ಭಿನ್ನಮತೀಯರೆಂದು ಗುರುತಿಸಿಕೊಂಡಿರುವ ಇತರ ಶಾಸಕರು ಮಾತ್ರವಲ್ಲ ವಿರೋಧಪಕ್ಷದ ನಾಯಕರ ಪೋನ್ ಗಳ ಕದ್ದಾಲಿಕೆಯೂ ನಡೆದಿರುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

    ರಾಜ್ಯ ಬಿಜೆಪಿಯ ಭಿನ್ನಮತೀಯ ನಾಯಕರಿಂದ ಮುಖ್ಯಮಂತ್ರಿಗಳನ್ನು ಪದಚ್ಯುತಿಗೊಳಿಸುವ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲಿಯೇ ಇಂತಹದ್ದೊಂದು ಆರೋಪ ವ್ಯಕ್ತವಾಗಿದೆ. ಅರವಿಂದ ಬೆಲ್ಲದ ಅವರು ಭಿನ್ನಮತೀಯರ ಜೊತೆ ಗುರುತಿಸಿಕೊಂಡಿರುವ ಪ್ರಮುಖ ಶಾಸಕರೂ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಆರೋಪದ ಗುರಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಆಗಿರುತ್ತಾರೆ.
    ಬೆಲ್ಲದ ಅವರ ಆರೋಪದ ತನಿಖೆಯನ್ನು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಯಾವ ಸಂಸ್ಥೆ ನಡೆಸಿದರೂ ಅದರಿಂದ ಸತ್ಯ ಸಂಗತಿ ಖಂಡಿತ ಹೊರಬರಲಾರದು. ಆದ್ದರಿಂದ ಈ ತನಿಖೆಯನ್ನು ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಂದಲೇ ನಡೆಸುವುದು ಸೂಕ್ತವಾಗಿದೆ. ಬೆಲ್ಲದ ಅವರು ತನ್ನ ಆರೋಪದಲ್ಲಿ ಈಗಾಗಲೇ ಜೈಲಲ್ಲಿರುವ ಯುವರಾಜ ಸ್ವಾಮಿ ಎಂಬ ವ್ಯಕ್ತಿಯ ಹೆಸರೂ ಪ್ರಸ್ತಾಪವಾಗಿದೆ. ಈ ಬಗ್ಗೆಯೂ ತನಿಖೆಯಾಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.

    ಇಡೀ ರಾಜ್ಯ ಕೊರೊನಾ ಸೋಂಕಿನಿಂದ ತತ್ತರಿಸಿಹೋಗಿರುವ ರಾಜ್ಯದ ಜನತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವಾಗಲೇ ಆಡಳಿತಾರೂಢ ಬಿಜೆಪಿಯ ನಾಯಕರು ಬೀದಿಬೀದಿಗಳಲ್ಲಿ ಕಚ್ಚಾಟಕ್ಕೆ ಇಳಿದಿರುವುದು ನೋಡಿದರೆ ಇವರಿಗೆ ಅಧಿಕಾರದ ಲಾಲಸೆ ಮಾತ್ರ ಇದೆ ಹೊರತು ರಾಜ್ಯದ ಜನರ ಹಿತರಕ್ಷಣೆಯ ಕಾಳಜಿ ಕಿಂಚಿತ್ತೂ ಇಲ್ಲ ಎನ್ನುವುದು ಸಾಬೀತಾಗಿದೆ.
    ಭಿನ್ನಮತೀಯ ಚಟುವಟಿಕೆಗಳಿಂದಾಗಿ ರಾಜ್ಯದ ಆಡಳಿತ ಯಂತ್ರ ಸಂಪೂರ್ಣವಾಗಿ ಸ್ಥಬ್ಧವಾಗಿದೆ.ಈ ಪರಿಸ್ಥಿವತಿಯನ್ನು ಘನತೆವೆತ್ತ ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿ ಈ ಜನದ್ರೋಹಿ ಸರ್ಕಾರವನ್ನು ವಜಾಮಾಡಬೇಕು ಎಂದು ಸಿದ್ಧರಾಮಯ್ಯ ಆಗ್ರಹ ಪಡಿಸಿದ್ದಾರೆ.


    ಬೆಲ್ಲದ ಆರೋಪ ಏನು?

    ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅರವಿಂದ ಬೆಲ್ಲದ ತಮ್ಮ ಪೋನ್ ಟ್ಯಾಪ್ ಆಗುತ್ತಿರುವ ಸಂಶಯ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸ್ಪೀಕರ್, ಗೃಹ ಮಂತ್ರಿ, ಪೋಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿರುವುದಾಗಿ ಹೇಳಿದ್ದರು.

    ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡಿತ ಇಲ್ಲ

    ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಮೊಟಕುಗೊಳಿಸುವ ಯಾವುದೇ ಚಿಂತನೆ ಅಥವಾ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.

    ಗುರುವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಸ್ಥಳೀಯ ಹಾಗೂ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚು ಮನ್ನಣೆ ನೀಡಿ ಆ ಭಾಷೆಗಳಲ್ಲೇ ವೃತ್ತಿಪರ ಶಿಕ್ಷಣ ಸೇರಿ ಎಲ್ಲ ವಿಭಾಗದ ಉನ್ನತ ಶಿಕ್ಷಣವನ್ನು ಬೋಧಿಸಬೇಕು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ. ಈ ಅಂಶಕ್ಕೆ ಶಿಕ್ಷಣ ನೀತಿಯಲ್ಲಿ ಹೆಚ್ಚು ಒತ್ತು ನೀಡಲಾಗಿದೆ” ಎಂದಿದ್ದಾರೆ.

    ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ಪದವಿ ಶಿಕ್ಷಣ ಸಂರಚನೆ ಹೀಗಿರುತ್ತದೆ. ಮೂರು ವರ್ಷ ವ್ಯಾಸಂಗ ಮಾಡಿದರೆ ಪದವಿ ಮುಗಿಯುತ್ತದೆ. ನಾಲ್ಕು ವರ್ಷ ಓದಿದರೆ ಅದನ್ನು ʼಡಿಗ್ರಿ ಆನರ್ಸ್‌ʼ ಎಂದು ಪರಿಗಣಿಸಲಾಗುತ್ತದೆ, ಮತ್ತೂ ಐದು ವರ್ಷ ವ್ಯಾಸಂಗ ಮಾಡಿದರೆ ಸ್ನಾತಕೋತ್ತರ ಪದವಿಯೇ ಪೂರ್ಣಗೊಳಿಸಿದಂತೆ ಆಗುತ್ತದೆ. ಇದು ಪೂರ್ವ ವ್ಯವಸ್ಥೆಯ ಸುಧಾರಣಾ ಕ್ರಮವಷ್ಟೇ ಎಂದು ಡಿಸಿಎಂ ವಿವರಿಸಿದ್ದಾರೆ.

    ಈ ವಿಷಯ ಇನ್ನು ಕರಡು ತಯಾರಿಕೆ ಹಂತದಲ್ಲಿದೆ. ಈಗಲೇ ಅದರ ಬಗ್ಗೆ ಆತಂಕಪಡುವ ಅಗತ್ಯ ಇಲ್ಲ. ಮುಖ್ಯವಾಗಿ ಪದವಿ ಶಿಕ್ಷಣದಲ್ಲಿ ಎರಡು ವರ್ಷ ಕನ್ನಡ ಬೋಧನೆ ಆಗುತ್ತಿರುವ ಹಾಲಿ ವ್ಯವಸ್ಥೆಯಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ. ಮಾತೃಭಾಷೆ ಕಲಿಕೆಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸುವ ಬಗ್ಗೆ ಸರಕಾರ ಚಿಂತನೆ ನಡೆಸಿಲ್ಲ ಎಂದು ಡಾ.ಅಶ್ವತ್ಥನಾರಾಯಣ ಸ್ಪಷ್ಟವಾಗಿ ಪುನುರುಚ್ಛರಿಸಿದ್ದಾರೆ.

    ಶಿಕ್ಷಣದಲ್ಲಿ ಗುಣಮಟ್ಟ ಹಾಗೂ ಜಾಗತಿಕ ದೃಷ್ಟಿ ಇಟ್ಟುಕೊಂಡು ಅತ್ಯಂತ ಪುರಾತನ ಭಾಷೆಯಾದ ಕನ್ನಡದ ಭೋಧನೆ ಮತ್ತು ಕಲಿಕೆಯನ್ನು ಮತ್ತಷ್ಟು ವಿಸ್ತೃತಗೊಳಿಸುವ ಉದ್ದೇಶ ಸರಕಾರಕ್ಕೆ ಇದೆಯೇ ವಿನಾ, ಅದಕ್ಕೆ ಧಕ್ಕೆ ಉಂಟು ಮಾಡುವ ಯಾವುದೇ ಚಿಂತನೆ ಹೊಂದಿಲ್ಲ. ಈ ಬಗ್ಗೆ ಯಾವುದೇ ತಪ್ಪು ಅಭಿಪ್ರಾಯ ಉಂಟಾಗುವುದು ಬೇಡ ಎಂದು ಡಿಸಿಎಂ ಮನವಿ ಮಾಡಿದ್ದಾರೆ.

    ಈ ವರ್ಷದಿಂದಲೇ ಶಿಕ್ಷಣ ನೀತಿ ಜಾರಿ ಆಗುತ್ತದೆ. ಅಂದರೆ, ಮೊದಲ ವರ್ಷವನ್ನು ಶೂನ್ಯವರ್ಷ ಎಂದು ಪರಿಗಣಿಸಲಾಗಿದೆ. ಆಡಳಿತಾತ್ಮಕ-ಕಾನೂನಾತ್ಮಕ ಸಿದ್ಧತೆಗಳನ್ನು ಪ್ರಸಕ್ತ ವರ್ಷದಲ್ಲಿ  ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಅದರ ರೂಪುರೇಶೆಯಷ್ಟೇ ಸದ್ಯಕ್ಕೆ ಸಿದ್ಧವಾಗುತ್ತಿದೆ. ಕನ್ನಡ ಕಲಿಕೆಯನ್ನು ಮೊಟಕುಗೊಳಿಸಲಾಗುತ್ತದೆ ಎಂದು ಈಗಲೇ ಆತಂಕಪಡುವುದು ಬೇಡ. ಸೂಕ್ತ ಮಾಹಿತಿ ಪಡೆದುಕೊಂಡು ಗೊಂದಲ ಬಗೆಹರಿಸಿಕೊಳ್ಳಬಹುದು ಎಂದು ಡಿಸಿಎಂ ಮನವಿ ಮಾಡಿದರು.

    error: Content is protected !!