20.6 C
Karnataka
Sunday, December 1, 2024
    Home Blog Page 98

    ಬರಲಿದೆ ಕೈಗೆ ಹಾನಿ ಮಾಡದ ಸ್ಯಾನಿಟೈಜರ್

    ಕೈಗಳಿಗೆ ಹಿತವಾಗಿರುವ ಮತ್ತು ಅವುಗಳನ್ನು ಒಣಗಿಸದಿರುವ ಪರಿಸರ ಸ್ನೇಹಿ ಹ್ಯಾಂಡ್ ಸ್ಯಾನಿಟೈಜರ್, ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಆಲ್ಕೋಹಾಲ್ ಮುಕ್ತ, ಉರಿಯದ ಮತ್ತು ವಿಷಕಾರಿಯಲ್ಲದ ಹ್ಯಾಂಡ್ ಸ್ಯಾನಿಟೈಜರ್ ಅನ್ನು ಸಿಲ್ವರ್ ನ್ಯಾನೊಪರ್ಟಿಕಲ್ ನಿಂದ ಪುಣೆ ಮೂಲದ ಸ್ಟಾರ್ಟ್ ಅಪ್ ಅಭಿವೃದ್ಧಿಪಡಿಸಿದೆ.

    ಸ್ಯಾನಿಟೈಜರ್ಗಳನ್ನು ಪದೇ ಪದೇ ಬಳಸುವುದರಿಂದ ಕೈಗಳು ಒಣಗಿ ಬಿರುಸಾಗುತ್ತಿದ್ದುದು ಕೋವಿಡ್ 19 ಸಾಂಕ್ರಾಮಿಕದ ಸಮಯದಲ್ಲಿ ಜನರು ಎದುರಿಸುತ್ತಿರುವ ಸವಾಲಾಗಿದೆ.

    ವಿಇನ್ನೋವೇಟ್-ಬಯೋಸೊಲ್ಯೂಷನ್ಸ್ ಎಂಬ ಈ ಸ್ಚಾರ್ಟಪ್ ಅಭಿವೃದ್ಧಿಪಡಿಸಿದ ಸ್ಯಾನಿಟೈಜರ್ ಆಂಟಿಮೈಕ್ರೊಬಿಯಲ್ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಮತ್ತೆ ಮತ್ತೆ ಸ್ಯಾನಿಟೈಜರ್ ಹಾಕುವ ಅಗತ್ಯವನ್ನು ನಿವಾರಿಸುತ್ತದೆ. ಇದರಲ್ಲಿರುವ ಸಿಲ್ವರ್ ನ್ಯಾನೊಪಾರ್ಟಿಕಲ್ಸ್ ಸಂಪರ್ಕಕ್ಕೆ ಬರುವ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ.

    “ಅಧ್ಯಯನದ ಫಲಿತಾಂಶಗಳ ಬಗ್ಗೆ ನಮಗೆ ತುಂಬಾ ವಿಶ್ವಾಸವಿದೆ ಮತ್ತು ನಮ್ಮ ಸ್ಯಾನಿಟೈಸರ್ ಗೆ ಪರವಾನಗಿಯನ್ನು ಭಾರತದ ಸಿಡಿಎಸ್ ಸಿ ಓ ದಿಂದ ಪಡೆಯಲು ಕಾಯುತ್ತಿದ್ದೇವೆ. ಇಂತಹ ಆವಿಷ್ಕಾರವು ಭಾರತವನ್ನು ತನ್ನ ‘ಆತ್ಮನಿರ್ಭರ ಭಾರತ್’ ಧ್ಯೇಯದತ್ತ ಕೊಂಡೊಯ್ಯುತ್ತದೆ ಮತ್ತು ಭವಿಷ್ಯದಲ್ಲಿ ಇಂತಹ ಸಾಂಕ್ರಾಮಿಕ ರೋಗಗಳನ್ನು ಎದುರಿಸಿ ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುತ್ತದೆ ಎಂದು ನಮಗೆ ಖಾತ್ರಿಯಿದೆ ”ಎಂದು ವಿಇನ್ನೋವೇಟ್-ಬಯೋಸೊಲ್ಯೂಷನ್ಸ್ ಸಂಸ್ಥೆಯು ಸಹ-ಸಂಸ್ಥಾಪಕ ಮತ್ತು ಸಿಒಒ ಡಾ. ಅನುಪಮಾ ಎಂಜಿನಿಯರ್ ಹೇಳಿದ್ದಾರೆ.

    ಸಿಲ್ವರ್ ನ್ಯಾನೊ ಪಾರ್ಟಿಕಲ್ಸ್ ಎಚ್ಐವಿ, ಹೆಪಟೈಟಿಸ್ ಬಿ, ಹರ್ಪಿಸ್ ಸಿಂಪ್ಲೆಕ್ಸ್ ವೈರಸ್, ಇನ್ಫ್ಲುಯೆನ್ಜ ವೈರಸ್ ಮುಂತಾದ ಅನೇಕ ಮಾರಕ ವೈರಸ್ ಗಳ ವಿರುದ್ಧ ಕಾರ್ಯನಿರ್ವಹಿಸುವ ಪರಿಣಾಮಕಾರಿ ಆಂಟಿವೈರಲ್ ಎಂದು ಕಂಡುಬಂದಿದೆ.

    ವಿವಿಧ ರೀತಿಯ ವೈರಸ್ಗಳ ಮೇಲೆ ಸ್ಯಾನಿಟೈಸರ್ ನ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವ ಅಧ್ಯಯನವನ್ನು ಪ್ರಸ್ತುತ ತಂಡವು ನಡೆಸುತ್ತಿದೆ. (ಮಾಹಿತಿ: ಪಿಐಬಿ)

    ದೇಶವ್ಯಾಪಿ ಕೋವಿಡ್ ಸಕ್ರಿಯ ಪ್ರಕರಣ ಇಳಿಕೆ

    ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 8,26,740 ಆಗಿದ್ದು, ಇದು 71 ದಿನಗಳ ನಂತರದ ಅತೀ ಕಡಿಮೆ ಪ್ರಮಾಣವಾಗಿದೆ

    ಕಳೆದ 24 ಗಂಟೆಗಳಲ್ಲಿ ಭಾರತವು 67,208 ದೈನಂದಿನ ಹೊಸ ಪ್ರಕರಣಗಳನ್ನು ವರದಿ ಮಾಡಿದೆ

    ದೇಶಾದ್ಯಂತ ಇದುವರೆಗೆ ಚೇತರಿಸಿಕೊಂಡವರ ಸಂಖ್ಯೆ 2,84,91,670

    ಕಳೆದ 24 ಗಂಟೆಗಳಲ್ಲಿ 1,03,570 ರೋಗಿಗಳು ಚೇತರಿಸಿಕೊಂಡಿದ್ದಾರೆ

    ದೈನಂದಿನ ಚೇತರಿಕೆಯ ಪ್ರಕರಣಗಳ ಸಂಖ್ಯೆಯು ಸತತ 35 ನೇ ದಿನವೂ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸುತ್ತಿವೆ

    ಚೇತರಿಕೆಯ ದರ 95.93% ರಷ್ಟು ಹೆಚ್ಚಾಗಿದೆ

    ಸಾಪ್ತಾಹಿಕ ದೃಢಪಟ್ಟ ದರವು 5% ಕ್ಕಿಂತ ಕಡಿಮೆ ಇದೆ, ಈಗ ಇದು 3.99% ಆಗಿದೆ

    ದೈನಂದಿನ ಸದೃಢಪಟ್ಟ ಪ್ರಕರಣಗಳ ದರವು 3.48% ಇದ್ದು, ಇದು ಸತತ 10 ದಿನಗಳವರೆಗೆ 5% ಕ್ಕಿಂತ ಕಡಿಮೆಯಿದೆ.

    ಪರೀಕ್ಷಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗಿದೆ – ಒಟ್ಟು 38.52 ಕೋಟಿ ಪರೀಕ್ಷೆಗಳನ್ನು ಮಾಡಲಾಗಿದೆ

    26.55 ಕೋಟಿ ಲಸಿಕೆ ಡೋಸೇಜ್ ಅನ್ನು ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ನೀಡಲಾಗಿದೆ

    ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಈ ತಿಂಗಳೇ ಶುರು

    ಕೊರೋನಾ ಎರಡನೆ ಅಲೆ ಕಾರಣದಿಂದ ಅರ್ಧಕ್ಕೆ ನಿಂತಿದ್ದ ಕಲರ್ಸ್ ಕನ್ನಡ ಚಾನಲ್ ನ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಆರಂಭವಾಗುತ್ತದೆ ಎಂಬ ಸುದ್ದಿ ಇದೀಗ ಅಧಿಕೃತವಾಗಿ ಖಚಿತ ಗೊಂಡಿದೆ.

    ವಾಹಿನಿಯ ಬಿಸ್ನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಊರು ಸೇರಿದಾಗಲೇ ದಾರಿ ಮುಗಿಯುವುದು. ಮನೆ ಸೇರಿದಾಗಲೇ ಹಾದಿಯಲ್ಲಿ ಕಷ್ಟಪಟ್ಟಿದ್ದು ಸಾರ್ಥಕ ಅನಿಸೋದು. ಅರ್ಧದಲ್ಲಿಯೇ ನಿಲ್ಲಿಸಿದ್ದ ಪ್ರಯಾಣವನ್ನು ಈಗ ಪುನಃ ಅದೇ ಹನ್ನೆರಡು ಜನರೊಂದಿಗೆ ಶುರು ಮಾಡುವ ಸಮಯ ಎಂದು ಹೇಳುವ ಮೂಲಕ ಬಿಗ್ ಬಾಸ್ ಜರ್ನಿ ಆರಂಭವಾಗುವ ಸೂಚನೆ ನೀಡಿದ್ದಾರೆ.

    ಇಂದೊಂದು ಥರ ಎರಡನೇ ಇನ್ನಿಂಗ್ಸ್. ಯಾರು ಚೆನ್ನಾಗಿ ಆಡುತ್ತಿದ್ದಾರೆ, ಎಲ್ಲಿ ಚೆನ್ನಾಗಿ ಆಡಬಹುದಿತ್ತು, ಎಲ್ಲಿ ಚೆನ್ನಾಗಿ ಆಡಬೇಕಾಗಿತ್ತು, ಯಾರಿಗೆ ಗಾಯವಾಗಿದೆ, ಯಾರು ಬೇಗ ಸುಸ್ತಾಗುತ್ತಾರೆ, ಯಾರು ರೊಚ್ಚಿಗೇಳುತ್ತಾರೆ, ಪಿಚ್ ಹೇಗೆ ವರ್ತಿಸುತ್ತಿದೆ ಎನ್ನುವುದೆಲ್ಲಾ ಗೊತ್ತಿದೆ. ಮೊದಲನೇ ಇನ್ನಿಂಗ್ಸ್ ನ ಸ್ಕೋರ್ ಕಾರ್ಡ್ ಎಲ್ಲರಿಗೂ ಗೊತ್ತು. ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ ಯಾರು ಹೇಗೆ ಆಡುತ್ತಾರೆ ಅನ್ನುವುದರ ಮೇಲೇ ಮ್ಯಾಚ್ ಯಾರು ಗೆಲ್ಲುತ್ತಾರೆ ಎಂಬ ತೀರ್ಮಾನ ಆಗುವುದು.. ಎರಡನೇ ಇನ್ನಿಂಗ್ಸ್ನಲ್ಲಿ ಮತ್ತೆ ಮೊದಲ ರನ್ ಓಡಬೇಕು. ಮೊದಲ ವಿಕೆಟ್ ಉರುಳಿಸಬೇಕು. ಅದೇ ಏಕಾಗ್ರತೆ, ಶ್ರದ್ಧೆ ಮತ್ತು ಜೀವನಪ್ರೀತಿ ಬೇಕು.

    ಇಷ್ಟು ವರ್ಷಗಳ ಕಾಲ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ ಯಾವ ಬಿಗ್ ಬಾಸ್ ಶೋದಲ್ಲೂ ಎರಡನೇ ಇನಿಂಗ್ಸ್ ಆಡುವ ಅವಕಾಶ ಯಾರಿಗೂ ಸಿಕ್ಕಿರಲಿಲ್ಲ. ಕನ್ನಡದಲ್ಲಿ ಈ ಹನ್ನೆರಡು ಕಂಟೆಸ್ಟೆಂಟುಗಳಿಗೆ ಅಂಥದ್ದೊಂದು ಅವಕಾಶ ಸಿಗುತ್ತಿದೆ.ಜೂನ್ ತಿಂಗಳು. ಹೊರಗಡೆ ಮಳೆ. ಹೊಸ ತರಗತಿಗೆ ಹೊಸದಾಗಿರೋ ಕೊಡೆ ಹಿಡಿದು ಹೋದಷ್ಟೇ ಖುಷಿಯೊಂದಿಗೆ ವಾಪಸ್ ಕೆಲಸಕ್ಕೆ ಹಾಜರಾಗುತ್ತಿದ್ದೇವೆ. ಪಾಸಾಗುತ್ತೇವೋ ಫೇಲಾಗುತ್ತೇವೋ ಅನ್ನುವುದಕ್ಕಿಂತ ತರಗತಿಯಲ್ಲಿ ಕುಳಿತು ಕಲಿತಾ ಇರಬೇಕು ಅನ್ನೋದೇ ವಿಷಯ ಎಂದು ಪರಮೇಶ್ವರ್ ಹೇಳುತ್ತಾರೆ.

    ಆರಂಭ ಎಂದಿನಿಂದ ಎಂಬುದು ಇನ್ನಷ್ಟೆ ಪ್ರಕಟವಾಗಬೇಕಿದೆ.

    ಪರಿಸರ ಪ್ರೇಮಿ, ಜನಪ್ರಿಯ ಶಿಕ್ಷಕ ಸಂತೇಬೆನ್ನೂರು ಮೇಘರಾಜ್ ನಿಧನ

    ಸಂತೇಬೆನ್ನೂರಿನ ನಿವೃತ್ತ ಶಿಕ್ಷಕರು ಮತ್ತು ವಿಜಯ ಯುವಕ ಸಂಘದ ಸ್ಥಾಪಕ ಸದಸ್ಯರು ಆಗಿದ್ದ ಎಸ್. ಮೇಘರಾಜ್ (77) ಅವರು ಕೆಲ ಕಾಲದ ಅಸ್ವಸ್ಥತೆಯ ನಂತರ ಇಂದು ಮುಂಜಾನೆ ದಾವಣಗರೆಯೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಒಬ್ಬ ಪುತ್ರಿ ಮತ್ತು ಇಬ್ಬರು ಪುತ್ರರು ಇದ್ದಾರೆ.

    ಮೃದು ಭಾಷಿಯಾಗಿದ್ದ ಅವರು ತಮ್ಮ ಸರಳ ವ್ಯಕ್ತಿತ್ವದಿಂದ ಎಲ್ಲರ ಒಲವನ್ನು ಗಳಿಸಿದ್ದರು. ಶಿಕ್ಷಕರಾಗಿ ಅಪಾರ ಶಿಷ್ಯ ಕೋಟಿಯನ್ನು ಹೊಂದಿದ್ದರು.ಪರಿಸರ ಪ್ರೇಮಿಯೂ ಆಗಿದ್ದ ಅವರು ಸ್ಥಳೀಯವಾಗಿ ಆಯುರ್ವೇದ ಔಷಧಿಯನ್ನು ನೀಡುತ್ತಿದ್ದರು. ಜಾನಪದ ಗೀತೆಗಳನ್ನು ಸೊಗಸಾಗಿ ಹಾಡುತ್ತಿದ್ದರು. ಮೃತರ ಅಂತ್ಯಕ್ರಿಯೆ ಇಂದು ಸಂತೇಬೆನ್ನೂರಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ಸಂತಾಪ

    ತನ್ನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಮೇಘರಾಜ್ ಅವರ ನಿಧನಕ್ಕೆ ವಿಜಯ ಯುವಕ ಸಂಘದ ಆಡಳಿತ ಮಂಡಳಿ ಕಂಬನಿ ಮಿಡಿದಿದೆ. ಸಂಘ ಒಬ್ಬ ಸಹೃದಯಿ ಕಾರ್ಯಕರ್ತನನ್ನು ಕಳೆದುಕೊಂಡಂತಾಗಿದೆ ಎಂದು ಗೌರವಾಧ್ಯಕ್ಷ ಸತ್ಯನಾರಾಯಣ ನಾಡಿಗ್ ಕಂಬನಿ ಮಿಡಿದಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

    ಸಂಘದ ಕಾರ್ಯಧ್ಯಕ್ಷ ಕೆ ಮೂರ್ತಿ, ಕಾರ್ಯದರ್ಶಿ ಕೆ. ಸಿದ್ಧಲಿಂಗಪ್ಪ, ಕಾರ್ಯನಿರ್ವಹಣಾಧಿಕಾರಿ ಸುಮತೀಂದ್ರ ನಾಡಿಗ್, ಸಹ ಕಾರ್ಯದರ್ಶಿ ಎಂ ಜಯಪ್ಪ ಸೇರಿದಂತೆ ಶಿಕ್ಷಣ ಸಂಸ್ಥೆಯ ಅನೇಕರು ಸಂತಾಪ ಸೂಚಿಸಿದ್ದಾರೆ.

    ಸಂತೇಬೆನ್ನೂರು ಒಬ್ಬ ಪರಿಸರ ಕಾರ್ಯಕರ್ತರನ್ನು ಕಳೆದುಕೊಂಡಂತಾಗಿದೆ ಎಂದು ಪಂಚಾಯಿತಿ ಸದಸ್ಯ ಅಸೀಫ್ ಖಾನ್ ದುಃಖಿಸಿದ್ದಾರೆ. ಹಿತೈಷಿಯೊಬ್ಬರನ್ನು ಕಳೆದುಕೊಂಡಿರುವುದಾಗಿ ಪತ್ರಕರ್ತ ಕೆ. ಎಸ್ ವೀರೇಶ ಪ್ರಸಾದ್ ಕಂಬನಿ ಮಿಡಿದಿದ್ದಾರೆ. ಸಂತೇಬೆನ್ನೂರು ನಾಗರಿಕ ಸಮಿತಿಯ ಪರವಾಗಿ ಪ್ರಕಾಶ್ ಅಗಲಿದ ಹಿರಿಯರಿಗೆ ಅಶ್ರುತರ್ಪಣ ಸಲ್ಲಿಸಿದ್ದಾರೆ.

    ಮೇಘರಾಜ್ ಅವರು ಕನ್ನಡಪ್ರೆಸ್ .ಕಾಮ್ ನ ಅಭಿಮಾನಿ ಓದುಗರು ಮತ್ತು ಹಿತೈಷಿಗಳು ಆಗಿದ್ದರು. ಅವರ ನಿಧನ ದೊಡ್ಡ ನಷ್ಟ ಎಂದು ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ ಸಂತಾಪ ವ್ಯಕ್ತಪಡಿಸಿದ್ದಾರೆ.

    ಭಾರತ-ಇಸ್ರೇಲ್ ಕೃಷಿ ಯೋಜನೆಯಡಿ ಕರ್ನಾಟಕದಲ್ಲಿ 3 ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ

    ತೋಟಗಾರಿಕೆ ಕ್ಷೇತ್ರದಲ್ಲಿ ಇಸ್ರೇಲಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು, ಭಾರತ-ಇಸ್ರೇಲ್ ಕೃಷಿ ಯೋಜನೆ (ಐಐಎಪಿ) ಅಡಿಯಲ್ಲಿ ಕರ್ನಾಟಕದಲ್ಲಿ ಸ್ಥಾಪಿಸಲಾದ 3 ಉತ್ಕೃಷ್ಟತಾ ಕೇಂದ್ರ (ಸಿಒಇ) ಗಳನ್ನು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್  ಜಂಟಿಯಾಗಿ ಉದ್ಘಾಟಿಸಿದರು.

    ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಎಂ ಐ ಡಿ ಎಚ್ ವಿಭಾಗ ಮತ್ತು ಇಸ್ರೇಲ್‌ನ ಅಂತಾರಾಷ್ಟ್ರೀಯ ಅಭಿವೃದ್ಧಿ ಸಹಕಾರ ಸಂಸ್ಥೆ – ಎಂ ಎ ಎಸ್ ಎಚ್ ಎ ವಿ ಭಾರತದಾದ್ಯಂತ 12 ರಾಜ್ಯಗಳಲ್ಲಿ 29 ಉತ್ಕೃಷ್ಟತಾ ಕೇಂದ್ರ (ಸಿಒಇ) ಗಳೊಂದಿಗೆ ಸುಧಾರಿತ ಇಸ್ರೇಲಿ ಕೃಷಿ- ತಂತ್ರಜ್ಞಾನವನ್ನು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಅಳವಡಿಸಿ ಅನುಷ್ಠಾನಗೊಳಿಸುತ್ತಿವೆ.

    29 ಸಂಪೂರ್ಣ ಕಾರ್ಯಾಚರಣೆಯಲ್ಲಿರುವ ಸಿಒಇಗಳಲ್ಲಿ 3 ಕರ್ನಾಟಕದಲ್ಲಿವೆ.  ಮಾವು ಬೆಳೆಗೆ ಸಂಬಂಧಿಸಿದಂತೆ ಕೋಲಾರದಲ್ಲಿ, ದಾಳಿಂಬೆಗಾಗಿ ಬಾಗಲಕೋಟೆಯಲ್ಲಿ ಮತ್ತು ತರಕಾರಿಗಳಿಗೆ ಧಾರವಾಡದಲ್ಲಿ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

    ಕರ್ನಾಟಕದಲ್ಲಿ ಭಾರತ-ಇಸ್ರೇಲ್ ಕೃಷಿ ಯೋಜನೆ (ಐಐಎಪಿ) ಅಡಿಯಲ್ಲಿ ಈ ಉತ್ಕೃಷ್ಟತಾ ಕೇಂದ್ರ (ಸಿಒಇ) ಗಳನ್ನು ಸ್ಥಾಪಿಸಲು ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಿದ ಭಾರತ ಸರ್ಕಾರ ಮತ್ತು ಇಸ್ರೇಲ್ ದೇಶಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಧನ್ಯವಾದ ತಿಳಿಸಿದರು.

    ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್, “ಈ ಕೇಂದ್ರಗಳು ಕರ್ನಾಟಕದ ಕೃಷಿಕ ಸಮುದಾಯಕ್ಕೆ ಇತ್ತೀಚಿನ ಇಸ್ರೇಲಿ ತಂತ್ರಜ್ಞಾನಗಳು ಲಭ್ಯವಾಗಲು ಸಹಾಯ ಮಾಡುತ್ತವೆ ಮತ್ತು ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ” ಎಂದರು. ಈ ಸಿಒಇಗಳು ವಾರ್ಷಿಕವಾಗಿ 50,000 ಕಸಿ ಉತ್ಪಾದನೆ ಮತ್ತು 25 ಲಕ್ಷ ತರಕಾರಿ ಸಸಿಗಳ ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಿವೆ. ತೋಟಗಾರಿಕೆಯಲ್ಲಿ ಆಧುನಿಕ ಕೃಷಿ ಪದ್ಧತಿಗಳ ಬಗ್ಗೆ ಜ್ಞಾನ ಪಡೆಯಲು ಸುಮಾರು 20,000 ರೈತರು ಈ ಸಿಒಇಗಳಿಗೆ ಭೇಟಿ ನೀಡಿದ್ದಾರೆ  ಎಂದು ಅವರು ತಿಳಿಸಿದರು.

    ಕರ್ನಾಟಕದ ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಆರ್. ಶಂಕರ್ ಮಾತನಾಡಿ, ಈ ಕೇಂದ್ರಗಳು ಉತ್ಪಾದನೆಯಲ್ಲಿ ಹೆಚ್ಚಳ, ಉತ್ಪಾದಕತೆಯ ವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ ರೈತರ ಆದಾಯವನ್ನು ಹೆಚ್ಚಿಸುತ್ತವೆ ” ಎಂದರು.

    ಭಾರತದಲ್ಲಿನ ಇಸ್ರೇಲ್ ರಾಯಭಾರಿ ಡಾ.ರಾನ್ ಮಲ್ಕಾ ಅವರು ಮಾತನಾಡಿ, “ಇಂಡೋ-ಇಸ್ರೇಲಿ ಸಹಭಾಗಿತ್ವದ ಮಹತ್ವದ ಭಾಗವಾಗಿರುವ ಕೃಷಿಯಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಸಹಯೋಗ ಹೊಂದಲು ನಾವು ಹೆಮ್ಮೆ ಪಡುತ್ತೇವೆ ಮತ್ತು ಉತ್ಸುಕರಾಗಿದ್ದೇವೆ. ನಮ್ಮ ದೇಶಗಳ ನಡುವಿನ ಸಂಬಂಧಗಳು ಬಲಗೊಳ್ಳುತ್ತಿರುವ ಮತ್ತು ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ನಾವು ಮೂರು ವಿಭಿನ್ನ ಕೇಂದ್ರಗಳನ್ನು ಉದ್ಘಾಟಿಸಿದ್ದೇವೆ. ಇದು ರಾಜ್ಯದ ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಒಂದು ಮೈಲಿಗಲ್ಲಾಗಿದ್ದು, ಸ್ಥಳೀಯ ರೈತರಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧೆಯ ಅವಕಾಶವನ್ನು ನೀಡುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ಅನುಗುಣವಾಗಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ಇದು ಸಹಕಾರಿಯಾಗುತ್ತದೆ” ಎಂದರು.

    ಉದ್ಘಾಟನಾ ಸಮಾರಂಭದಲ್ಲಿ ಭಾರತ ಸರ್ಕಾರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸಂಜಯ್ ಅಗರ್ವಾಲ್, ಇಸ್ರೇಲಿ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳು, ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಅಧಿಕಾರಿಗಳು ಭಾಗವಹಿಸಿದ್ದರು. ವರ್ಚುವಲ್ ಸಮಾರಂಭಕ್ಕೆ ಎಲ್ಲಾ ರಾಜ್ಯ ತೋಟಗಾರಿಕೆ ಮಿಷನ್‌ಗಳ ಹಿರಿಯ ಅಧಿಕಾರಿಗಳು ಸಾಕ್ಷಿಯಾದರು.

    ಸೋಸಲೆ ವ್ಯಾಸರಾಜ ಮಠದಿಂದ ನೆರವಿನ ಹಸ್ತ

    ಕೋವಿಡ್‍ನ ಈ ವಿಷಮ ಪರಿಸ್ಥಿತಿ ನಗರದಿಂದ ಗ್ರಾಮಾಂತರ ಪ್ರದೇಶಗಳಿಗೆ ಹರಡಿದೆ. ಲಾಕ್‍ಡೌನ್ ಜಾರಿಗೊಂಡ ನಂತರ ಟಿ ನರಸೀಪುರ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಆಶಾ ಕಾರ್ಯಕರ್ತರು, ಪೌರಕಾರ್ಮಿಕರು, ದಲಿತರು, ಬಡವರು, ಅರ್ಚಕರು, ದೋಣಿ ಹಾಯಿಸುವವರು, ತರಕಾರಿ ಮಾರುವವರು ತೀವ್ರ ಸಂಕಷ್ಚಕ್ಕೆ ಒಳಗಾಗಿದ್ದಾರೆ. ಇವರುಗಳ ಕಷ್ಟಕ್ಕೆ ತಿರುಮಕೂಡಲಿನ ಸೋಸಲೆ ಶ್ರೀ ವ್ಯಾಸರಾಜ ಮಠದವತಿಯಿಂದ ಸುಮಾರು 1000 ಜನರಿಗೆ 10ಕೆಜಿ ಅಕ್ಕಿ, ಬೇಳೆ 2ಕೆಜಿ, ಗೋಧಿಹಿಟ್ಟು 1ಕೆಜಿ ರಾಗಿಹಿಟ್ಟು1ಕೆಜಿ, ಬೆಲ್ಲ 1ಕೆಜಿ, ಸಕ್ಕರೆ 1ಕೆಜಿ, ರವೆ 1ಕೆಜಿ, ಆಲೂಗೆಡ್ಡೆ 1ಕಜಿ, ಎಣ್ಣೆ 1ಲೀ, ಸಾಂಬಾರ್ ಪುಡಿ 250ಗ್ರಾಂ ಆಹಾರ ಪದಾರ್ಥಗಳನ್ನು ಒಳಗೊಂಡಿರುವ ಚೀಲಗಳನ್ನು ನೀಡುವುದರ ಮೂಲಕ ಸ್ಫಂದಿಸಿದೆ.

    ತಿರುಮಕೂಡಲು ವ್ಯಾಸರಾಜ ಮಠದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೋಸಲೆ ಶ್ರೀವ್ಯಾಸರಾಜ ಮಠದ ಮಠಾಧೀಶರಾದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳವರು ಪೌರಕಾರ್ಮಿಕರಿಗೆ ಆಹಾರಪದಾರ್ಥಗಳಿರುವ ಕಿಟ್‍ನ್ನು ವಿತರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಪರಮ ಪೂಜ್ಯ ಶ್ರೀಪಾದಂಗಳವರು ಕರೋನ ರೋಗ ದೇಶದಲ್ಲಿ ತೀವ್ರ ಹಾನಿಯನ್ನು ಉಂಟುಮಾಡಿದ್ದು, ನಗರದಲ್ಲಿದ್ದರೋಗ ಈಗ ಗ್ರಾಮ ಪ್ರದೇಶಗಳಿಗೆ ಹರಡುತ್ತಿದೆ. ಬಹಳ ಜನ ಕಷ್ಟಪಡುತ್ತಿದ್ದಾರೆ. ಲಾಕ್‍ಡೌನ್‍ನಂತಹ ಸಂದರ್ಭದಲ್ಲಿ ಪ್ರತಿ ನಿತ್ಯದ ಕಾರ್ಯವನ್ನು ಮಾಡಲಾಗದಿರುವುದರಿಂದ ನಮ್ಮ ಶ್ರೀಮಠದವತಿಯಿಂದ ಸಮಾಜಕ್ಕೆ ಅಲ್ಪ ಸೇವೆಯನ್ನು ಮಾಡುತ್ತಿದೆ. ಅನೇಕ ದಾನಿಗಳು ನಮಗೆ ನೆರವಾಗಿದ್ದಾರೆ. ನಾವು ಕೊಡುವ ಕೃಷ್ಣಪ್ರಸಾದ ಕೆಲವು ದಿನಗಳು ಮಾತ್ರ ಉಪಯೋಗವಾಗಬಹುದು, ನಾವು ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಮೈಸೂರಿನ ಆಶಾ ಕಿರಣ ಆಸ್ಪತ್ರೆಯೊಂದಿಗೆ ಸೇರಿ ನರಸೀಪುರದ ಗ್ರಾಮಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಲಾಗುವುದು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಶ್ರೀವ್ಯಾಸತೀರ್ಥ ವಿದ್ಯಾಪೀಠದ ಕಾರ್ಯದರ್ಶಿಗಳಾದ ಡಾ. ಡಿ.ಪಿ ಮಧುಸೂದನ ಚಾರ್, ಶಿರಸ್ತೆದಾರ್ ಪ್ರಭು, ಟಿ ನರಸೀಪುರದ ಇನ್‍ಸ್ಪೆಕ್ಟರ್ ಕೃಷ್ಣಪ್ಪ, ಶ್ರೀಮಠದ ಮುಖ್ಯಸ್ತರಾದ ಆಶಾಕಿರಣ ಗುರುರಾಜ್, ಮುರಳಿಧರ್, ರಾಯರ ಹುಂಡಿ ಆನಂದ, ಶ್ರೀಗಳವರ ಆಪ್ತ ಸಹಾಯಕರಾದ ಅಭಿಜಿತ್ ಎಸ್ ರಾವ್ ತಿರುಮಕೂಡಲು ಮಠದ ವ್ಯವಸ್ಥಾಪಕರಾದ ಜಿ.ಶ್ರೀಧರ್, ಕೆ.ಪಿ ಮಧುಸೂದನ, ಮೈಸೂರು ಮಠದ ವ್ಯವಸ್ಥಾಪಕರಾದ ವಾಸುರವರು ಉಪಸ್ಥಿತರಿದ್ದರು.

    ಸದ್ಯಕ್ಕೆ ಯಡಿಯೂರಪ್ಪ ಸುರಕ್ಷಿತ; ಅರುಣ್‌ ಸಿಂಗ್‌ ಸಂಧಾನ ಆಲಿಸುವುದಕ್ಕಷ್ಟೇ ಸೀಮಿತ

    ನಾಯಕತ್ವ ಬಿಕ್ಕಟ್ಟು ಬಗೆಹರಿಸಲು ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಬೆಂಗಳೂರಿಗೆ ಬಂದಾಗಿದೆ.

    ಮೇಲ್ನೋಟಕ್ಕೆ ಮೊದಲ ದಿನಕ್ಕೆ ಸಿಕ್ಕಿರುವ ಆರಂಭಿಕ ರಿಸಲ್ಟ್‌ ಇಷ್ಟು;

    *ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಇಲ್ಲ.

    *ಎಲ್ಲರ ಖಾತೆಗಳಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನಲಾದ ಸಿಎಂ ಪುತ್ರ ವಿಜಯೇಂದ್ರಗೆ ಲಕ್ಷ್ಮಣ ರೇಖೆ.

    *ಪಕ್ಷದಲ್ಲಿ ಕೆಲ ಬದಲಾವಣೆಗಳು ಆಗುತ್ತವೆ, ಜತೆಗೆ ಸಂಪುಟದಲ್ಲಿ ಕೆಲವರಿಗೆ ಕೊಕ್-ಹೊಸಬರಿಗೆ ಅವಕಾಶ.

    *ಇವತ್ತು, ನಾಳೆ ಮತ್ತು ನಾಡಿದ್ದು ಪಕ್ಷಸಂಧಾನ ಕೈಂಕರ್ಯವನ್ನು ಮುಗಿಸಿದ ಮೇಲೆ ದಿಲ್ಲಿಗೆ ಹೋಗಿ ಇಡೀ ಬೆಳವಣಿಗೆಗಳ, ನಾಯಕರು ಸಚಿವರ & ಶಾಸಕರ ಅಭಿಪ್ರಾಯಗಳ, ಬೇಸರ-ಸಿಟ್ಟುಗಳ ಗಿಣಿಪಾಠವನ್ನು ಅಗ್ರನಾಯಕರಿಗೆ ಒಪ್ಪಿಸಲಿದ್ದಾರೆ.

    ಶುಕ್ರವಾರ ಸಂಜೆ ದಿಲ್ಲಿಗೆ ಹೋದ ಮೇಲೆ ರಾಜ್ಯ ಬಿಜೆಪಿಗೆ ಸೂಚನೆಗಳು ರವಾನೆಯಾಗಲಿದ್ದು, ಅದರಲ್ಲಿ ಮುಖ್ಯಮಂತ್ರಿ ಬಣ ಹಾಗೂ ವಿರೋಧಿ ಬಣಕ್ಕೂ ಚುರುಕು ಮುಟ್ಟಿಸುವ ಅಂಶಗಳು ಇದ್ದೇ ಇರುತ್ತವೆ ಎನ್ನುವುದು ಖಚಿತ.

    ಸದ್ಯಕ್ಕೆ ಬಿಜೆಪಿ ಬಿಕ್ಕಟ್ಟು ಶಮನ ಪ್ರಯತ್ನ ಕೈಗೂಡುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಬಿಕ್ಕಟ್ಟಿನಿಂದ ಸಿಎಂ ಯಡಿಯೂರಪ್ಪ ಪಾರಾಗುವುದು ಖಚಿತ. ಆದರೆ, ಸರಕಾರಕ್ಕೆ ಹೈಕಮಾಂಡ್‌ ಸರ್ಜರಿ ಮಾಡುವುದಂತೂ ಗ್ಯಾರಂಟಿ.

    ಸಂಪುಟದಲ್ಲಿ ಕೆಲವರನ್ನು ಬದಲಾಯಿಸುವ ಹಾಗೂ ಕೆಲ ಆಯ್ದ ಹೊಸ ಮುಖಗಳಿಗೆ ಅವಕಾಶ ನೀಡುವ ಕೆಲಸ ನಡೆಯಲಿದೆ. ಸಚಿವರ ಖಾತೆಗಳಲ್ಲಿ ಮುಖ್ಯಮಂತ್ರಿ ಕುಟುಂಬದ ಯಾರೂ ಹಸ್ತಕ್ಷೇಪ ಮಾಡದಂತೆ ನಿಗಾ ಇರಿಸಲು ಹೈಕಮಾಂಡ್‌ ಹೊಸ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ.

    ಬುಧವಾರದಂದು ಕೆಲವರನ್ನಷ್ಟೇ ಹೊರತುಪಡಿಸಿದರೆ ಬಹುತೇಕ ಶಾಸಕರು ಮತ್ತು ಸಚಿವರು ಯಡಿಯೂರಪ್ಪ ಅವರಲ್ಲಿ ʼಪರಮ ನಿಷ್ಠೆʼ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಅರುಣ್‌ ಸಿಂಗ್‌ ನಡೆಸುವ ಮಾತುಕತೆ ಕೇವಲ ಔಪಚಾರಿಕ ಎನ್ನಲಾಗಿದೆ.

    ಇದೇ ವೇಳೆ, ವೀರಶೈವ ಲಿಂಗಾಯತ ಮಹಾಸಭೆ ಬಿಕ್ಕಟ್ಟಿನೊಳಕ್ಕೆ ನೇರವಾಗಿ ಎಂಟ್ರಿ ಕೊಟ್ಟಿದೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಪದವಿಯಲ್ಲಿ ಕೂತಿರುವ ಯಡಿಯೂರಪ್ಪ ಅವರನ್ನು ಟಚ್‌ ಮಾಡಬಾರದು ಎಂದು ಹೇಳಿದೆ.

    ಜತೆಗೆ, ರಾಜ್ಯದ ವೀರಶೈವ ಲಿಂಗಾಯತ ಸಮುದಾಯದ ಅನೇಕ ಸ್ವಾಮೀಜಿಗಳು ಈಗಾಗಲೇ ಯಡಿಯೂರಪ್ಪ ಪರ ಹೇಳಿಕೆಗಳನ್ನು ಕೊಟ್ಟು, ಸಮುದಾಯದ ಅಗ್ರನಾಯಕನಿಗೆ ಅನ್ಯಾಯವಾದರೆ ಸಹಿಸುವ ಪ್ರಶ್ನೆ ಇಲ್ಲ ಎಂದಿದ್ದಾರೆ. ಈ ಕಾರಣಕ್ಕೆ ಹೈಕಮಾಂಡ್‌ ಸದರಿ ಬಿಕ್ಕಟ್ಟನ್ನು ಹಾಗೆಯೇ ʼಜೀವಂತʼ ಇಟ್ಟು ತಾತ್ಕಾಲಿಕವಾಗಿ ತೇಪೆ ಹಚ್ಚುವ ಕೆಲಸ ಮಾಡಲಿದೆ ಎನ್ನುತ್ತಿದೆ ಪಕ್ಷದ ಉನ್ನತ ಮೂಲವೊಂದು.

    ಇವೆಲ್ಲ ಅಂಶಗಳನ್ನು ಬಿಜೆಪಿ ವರಿಷ್ಠರು ಪಟ್ಟಿ ಮಾಡಿದ್ದಾರೆ. ಈ ಪಟ್ಟಿ ಇಟ್ಟುಕೊಂಡೇ ಸಿಂಗ್‌ ಬೆಂಗಳೂರಿಗೆ ಧಾವಿಸಿದ್ದು, ಸದ್ಯಕ್ಕೆ ಆತುರದ ಕ್ರಮ ಬೇಡ ಎನ್ನುವ ನಿರ್ಧಾರಕ್ಕೆ ಹೈಕಮಾಂಡ್‌ ಬಂದಿದೆ. ಎಲ್ಲಾ ಸಚಿವರಿಂದ ಅರುಣ್‌ ಸಿಂಗ್‌ ಮಾಹಿತಿ ಸಂಗ್ರಹ ಮಾಡಲಿದ್ದಾರೆ, ನಿಜ. ಪ್ರತ್ಯೇಕವಾಗಿ ಅಥವಾ ಸಿಎಂ ಸಮ್ಮುಖದಲ್ಲೇ ಸಚಿವರ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಗುರುವಾರ ಬೆಳಗ್ಗೆಯಿಂದ ಈ ಸರ್ಕಸ್‌ ಶುರುವಾಗಲಿದೆ. ಹೀಗಾಗಿ ಅಭಿಪ್ರಾಯ ಸಂಗ್ರಹ ಕಣ್ಣೊರೆಸುವ ತಂತ್ರವಷ್ಟೇ ಎನ್ನುತ್ತಾರೆ ಪಕ್ಷದ ಹಿರಿಯ ನಾಯಕರೊಬ್ಬರು.

    ಇದಕ್ಕೆ ಪೂರಕ ಎನ್ನುವಂತೆ, ಬಂದ ದಿನವೇ ಅರುಣ್‌ ಸಿಂಗ್‌ ಕೊಟ್ಟ ಹೇಳಿಕೆ ಇದಕ್ಕೆ ಪುಷ್ಠಿ ನೀಡುತ್ತಿದೆ. “ನಾಯಕತ್ವದ ಬಗ್ಗೆ ಈಗಾಗಲೇ ಹೇಳಿದ್ದೇನೆ. ಹೊಸದಾಗಿ ಹೇಳುವುದೇನೂ ಇಲ್ಲ. ಇನ್ನು, ಯಡಿಯೂರಪ್ಪ ಅವರು ಕೋವಿಡ್‌ ಬಿಕ್ಕಟ್ಟನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಸೋಂಕಿನಿಂದ ಸಾವನ್ನಪ್ಪಿದ ಕುಟುಂಬದ ಒಬ್ಬರಿಗೆ ಒಂದು ಲಕ್ಷ ಪರಿಹಾರವನ್ನೂ ಸಿಎಂ ಘೋಷಣೆ ಮಾಡಿದ್ದಾರೆ” ಎಂದು ಹೇಳಿದ್ದಾರೆ ಅರುಣ್‌ ಸಿಂಗ್.‌ ಈ ಹೇಳಿಕೆ ವಿರೋಧಿ ಪಾಳಯದಲ್ಲಿ ನಿರಾಶೆಯ ಕಾರ್ಮೋಡ ಕವಿಯುವಂತೆ ಮಾಡಿದೆ. ಮೊದಲ ದಿನವೇ ಹೀಗಾದರೆ, ನಾಳೆ, ನಾಡಿದ್ದರ ಕಾರ್ಯತಂತ್ರದ ಕಥೆಯೇನು ಎನ್ನುವ ಗೊಂದಲದಲ್ಲಿದ್ದಾರೆ ಭಿನ್ನಮತೀಯರು.

    ವಿಜಯೇಂದ್ರ ವಿರುದ್ಧವೇ ಸಿಡಿಯಲಿವೆಯೇ ದೂರು ಕ್ಷಿಪಣಿಗಳು?

    ಮೂರು ದಿನಗಳ ಅರುಣ್‌ ಸಿಂಗ್‌ ರಾಯಭಾರದಲ್ಲಿ ಹೊರಬೀಳುವ ಪ್ರಮುಖ ಫಲಿತಾಂಶವೆಂದರೆ, ಎಲ್ಲರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನಲ್ಲಾದ ಬಿಜೆಪಿ ಉಪಾಧ್ಯಕ್ಷ ಹಾಗೂ ಬಿಎಸ್ ವೈ ಪುತ್ರ ವಿಜಯೇಂದ್ರ ಅವರಿಗೆ ಸೂಕ್ತ ಎಚ್ಚರಿಕೆ ಕೊಡುವ ಸಾಧ್ಯತೆಯೂ ಇಲ್ಲದಿಲ್ಲ. ಗುರುವಾರ ಬೆಳಗ್ಗೆಯಿಂದ ಕುಮಾರಕೃಪ ವಸತಿ ಗೃಹದಲ್ಲಿ ನಡೆಯಲಿರುವ ಶಾಸಕರ ಸಭೆಯಲ್ಲಿ ಬಹಳಷ್ಟು ನಾಯಕರ ʼದೂರು ಕ್ಷಿಪಣಿಗಳುʼ ವಿಜಯೇಂದ್ರ ವಿರುದ್ಧವೇ ಸಿಡಿಯಲಿವೆ ಎನ್ನಲಾಗಿದೆ.

    ಅರುಣ್‌ ಸಿಂಗ್‌ ಜತೆ ಮುಖ್ಯಮಂತ್ರಿ ಎದುರಿಗೇ ಕೂತಿರಲಿ, ಬಿಡಲಿ; ಯೋಗೇಶ್ವರ್‌, ಬಸನಗೌಡ ಪಾಟೀಲ್‌ ಯತ್ನಾಳ್‌, ವಿಶ್ವನಾಥ್‌, ಅರವಿಂದ ಬೆಲ್ಲದ್‌, ಸುನೀಲ್‌ ಕುಮಾರ್‌ ಮುಂತಾದವರು ನೇರವಾಗಿ ಹೇಳಬೇಕಾದ್ದನ್ನು ಹೇಳದೇ ಬಿಡುವುದಿಲ್ಲ. ಇನ್ನು ಜೂ.೧೮ರಂದು ರಾಜ್ಯ ಪದಾಧಿಕಾರಿಗಳ ಸಭೆಯೂ ಇದೆ.

    ಒಂದಾದ ಸಮುದಾಯ

    ಯಡಿಯೂರಪ್ಪ ಅವರ ಕುರ್ಚಿ ಅಲ್ಲಾಡುತ್ತಿರುವ ಬಗ್ಗೆ ಸಿಟ್ಟಾಗಿರುವ ವೀರಶೈವ ಲಿಂಗಾಯಿತ ಸಮುದಾಯ ಪುನಾ ಬಲ ಪ್ರದರ್ಶನಕ್ಕೆ ಸಜ್ಜಾಗಿದೆ. ಹಿಂದೆ, ವೀರೇಂದ್ರ ಪಾಟೀಲರಿಗೆ ಆಗಿರುವ ಅನ್ಯಾಯವನ್ನೇ ಮರೆಯದ ಸಮುದಾಯ, ಈಗ ನಡೆಯುತ್ತಿರುವ ಬೆಳವಣಿಗೆಗಳಿಂದ ಕೊತ ಕೊತ ಕುದಿಯುತ್ತಿದೆ. ಜತೆಗೆ, ಅಧಿಕಾರದಲ್ಲಿರುವ ಯಡಿಯೂರಪ್ಪ ಅವರನ್ನೇ ಉಳಿಸಿಕೊಳ್ಳುವುದು ಅತ್ಯಂತ ಜಾಣ ನಡೆ ಎಂಬ ಲೆಕ್ಕಾಚಾರಕ್ಕೂ ಬಂದು ಇಡೀ ಸಮುದಾಯ ಪಕ್ಷಾತೀತವಾಗಿ ಒಗ್ಗಟ್ಟಿಗೆ ಬಂದಿದೆ. ವಿವಿಧ ಮಠಾಧೀಶರು ಈಗಿರುವ ನಾಯಕತ್ವವನ್ನು ಕಳೆದುಕೊಳ್ಳಲು ಸಿದ್ಧವಿಲ್ಲ. ಹಾಗೆ ಆಗಲು ಬಿಡುವಂತಿಲ್ಲ ಎಂದು ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

    ಪರಿಸ್ಥಿತಿಯನ್ನು ಮೊದಲೇ ಊಹಿಸಿದ್ದ ವಿಜಯೇಂದ್ರ ವಾರಕ್ಕೆ ಮೊದಲೇ ಇಡೀ ರಾಜ್ಯವನ್ನು ಮಿಂಚಿನಂತೆ ರೌಂಡ್‌ ಹಾಕಿ ಬಂದಿದ್ದರು. ಬಿಕ್ಕಟ್ಟು ಕಾಲದಲ್ಲೇ ಬಹುತೇಕ ಮಠಗಳಿಗೆ ಭೇಟಿ ನೀಡಿದ್ದರು. ಸಮುದಾಯದ ವಿವಿಧ ಶ್ರೀಗಳ ಜತೆ ಮಹತ್ತ್ವದ ಮಾತುಕತೆ ನಡೆಸಿದ್ದರು. ಸುಮಾರು ಐವತ್ತಕ್ಕೂ ಹೆಚ್ಚು ವೀರಶೈವ ಲಿಂಗಾಯತ ಮಠಗಳ ಶ್ರೀಗಳೆಲ್ಲರೂ ಯಡಿಯೂರಪ್ಪ ಬೆನ್ನಿಗೆ ನಿಂತಿದ್ದಾರೆಂಬ ಮಾಹಿತಿ ವಿಜಯೇಂದ್ರ ಕ್ಯಾಂಪಿನಿಂದಲೇ ಹೊರಬಿದ್ದಿದೆ.

    ಫೈನಲಿ, ಏನಾಗುತ್ತದೆ?

    ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸದ್ಯಕ್ಕಿಲ್ಲ.‌ ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇದೆ. ಅಸಮರ್ಥ ಸಚಿವರನ್ನು ಕೈಬಿಟ್ಟು ಪಕ್ಷನಿಷ್ಠ ಹೊಸ ಮುಖಗಳಿಗೆ ಅವಕಾಶ ನೀಡಲು ಹೈಕಮಾಂಡ್ ನಿರ್ಧರಿಸಿರುವುದು ಪಕ್ಕ. ಸದ್ಯದ ಸ್ಥಿತಿಯಲ್ಲಿ ಯಡಿಯೂರಪ್ಪ ಬದಲಾವಣೆ ಮಾಡುವುದು ರಿಸ್ಕ್‌ ಎನ್ನುವುದನ್ನು ವರಿಷ್ಠರು ಮನಗಂಡಿದ್ದಾರೆ. ಜಿಲ್ಲಾ-ತಾಲೂಕು ಪಂಚಾಯಿತಿ ಚುನಾವಣೆ ಬಳಿಕ ನಿರ್ಧಾರ ಕೈಗೊಳ್ಳುವ ಮನಸ್ಸು ಮಾಡಿದೆ ಹೈಕಮಾಂಡ್. ಈಗ ಅಭಿಪ್ರಾಯ ಸಂಗ್ರಹಕ್ಕೆ ಮಾತ್ರ ಅರುಣ್‌ ಸಿಂಗ್‌ ಭೇಟಿ ಸೀಮಿತ.

    ಯಡಿಯೂರಪ್ಪ ಬದಲಾವಣೆ‌ ಬದಲು ಪಕ್ಷಕ್ಕೆ-ಸರಕಾರಕ್ಕೆ ಚಿಕಿತ್ಸೆ ನೀಡುವುದು ಹೈಕಮಾಂಡ್‌ ಲೆಕ್ಕಾಚಾರ. ‌ಕೆಲ ಹಿರಿಯ ಸಚಿವರನ್ನು ಸಂಘಟನೆಗೆ ನಿಯೋಜಿಸಿ ಯುವಮುಖಗಳಿಗೆ ಸಂಪುಟದಲ್ಲಿ ಆದ್ಯತೆ ನೀಡಲಿದೆ. ರಾಮದಾಸ್, ತಿಪ್ಪಾರೆಡ್ಡಿ, ಸುನೀಲ್ ಕುಮಾರ್ ಅವರಂಥ ಪಕ್ಷ‌ನಿಷ್ಠರಿಗೆ ಅವಕಾಶ ನೀಡಲು ಹೈಕಮಾಂಡ್ ಚಿಂತನೆ ನಡೆಸಿದೆ. ಬಸನಗೌಡ ಪಾಟೀಲ್‌ ಯತ್ನಾಳ್‌, ರೇಣುಕಾಚಾರ್ಯರಂಥವರಿಗೆ ಚಾನ್ಸ್‌ ಕಡಿಮೆ. ಯೋಗೇಶ್ವರ್‌ ಬಗ್ಗೆ ಏನಾಗುತ್ತದೋ ಸದ್ಯಕ್ಕೆ ಗೊತ್ತಿಲ್ಲ. ಆದರೆ, ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಬಗ್ಗೆ ಪಕ್ಷಕ್ಕೆ ನಂಬಿಕೆ- ಸಿಂಪಥಿ ಇದೆ.

    ಈ ಯು-ಟರ್ನ್‌ಗೆ ಕಾರಣವೇನು?

    ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ನಂತರ ಒಳ್ಳೆಯ ಕ್ಯಾಂಡಿಡೇಟುಗಳೇನೋ ಇದ್ದಾರೆ. ಅವರೆಲ್ಲರೂ ಎರಡ್ಮೂರು ಅವಧಿಯಿಂದ ಗೆಲ್ಲುತ್ತಲೇ ಇದ್ದಾರೆ, ಸರಿ. ಆದರೆ ಅವರು ಕೇವಲ ʼಮ್ಯಾನೇಜರುʼಗಳಷ್ಟೇ. ಯಾವುದಾದರೂ ನಿರ್ದಿಷ್ಟ ಜವಾಬ್ದಾರಿಯನ್ನು ವಹಿಸಿದರೆ, ಅವರ ಶಕ್ತಿ ಅಷ್ಟಕ್ಕೆ ಸೀಮಿತ. ಅವರಲ್ಲಿ ಹಣಬಲ ಇರಬಹುದು, ಆದರೆ ಪಕ್ಷದ ವೋಟ್‌ ಬ್ಯಾಂಕ್‌ ಕಾಪಾಡಿಕೊಳ್ಳುವ ಅಥವಾ ಹೊಸ ವೋಟ್‌ ಬ್ಯಾಂಕ್‌ ಸೃಷ್ಟಿ ಮಾಡುವ ಶಕ್ತಿ ಇಲ್ಲ. ಎಂಥ ರಾಜಕೀಯ ಬಿಕ್ಕಟ್ಟು ಎದುರಾದರೂ ಬಂಡೆಯಂತೆ ಎದುರಿಸಿ ನಿಲ್ಲಬಲ್ಲ ಅಚಲ ಶಕ್ತಿ ಯಡಿಯೂರಪ್ಪ ಅವರಿಗೆ ಮಾತ್ರ ಸಿದ್ಧಿಸಿದೆ. ಅಂಥ ತಾಕತ್ತು ಉಳ್ಳ ಇನ್ನೊಬ್ಬ ನಾಯಕ ಇನ್ನೊಬ್ಬರಿಲ್ಲ. ಯಾರನ್ನೇ ಭವಿಷ್ಯದ ನಾಯಕಕನ್ನಾಗಿ ಮುನ್ನೆಲೆಗೆ ತಂದರೂ ಅವರಿಗೆ ಹೈಕಮಾಂಡ್‌ ಆಸರೆ ಇರಲೇಬೇಕು. ಸ್ಪೂನ್‌ ಫೀಡಿಂಗ್‌ ತಪ್ಪುವುದಿಲ್ಲ. ಡಿ.ವಿ.ಸದಾನಂದ ಗೌಡ, ಜಗದೀಶ್‌ ಶೆಟ್ಟರ್‌, ಅಶೋಕ್, ಈಶ್ವರಪ್ಪ ಮುಂತಾದವರ‌ನ್ನು ಪ್ರಯೋಗಕ್ಕೆ ಒಡ್ಡಿ ಈ ಸತ್ಯವನ್ನು ಪಕ್ಷ ಕಂಡುಕೊಂಡಿದೆ.

    ಹೀಗಾಗಿ ಪಕ್ಷಕ್ಕೆ ಸದ್ಯಕ್ಕೆ ರಿಸ್ಕ್‌ ಬೇಕಿಲ್ಲ, ಇಷ್ಟವೂ ಇಲ್ಲ. ಕಬ್ಬಿಣ ಕಾದು ಬೆಂಡಾಗುವ ತನಕ ಬಿಜೆಪಿ ವರಿಷ್ಠರಿಗೆ ಕಾಯದೆ ಬೇರೆ ದಾರಿ ಇಲ್ಲ. ಸದ್ಯಕ್ಕೆ ಹೈಕಮಾಂಡ್‌ ಮುಂದೆ 2024 ಬಿಟ್ಟರೆ ಬೇರೆ ಏನೂ ಇಲ್ಲ.(CKNEWSNOW.COM)

    ಕಚೇರಿಯಲ್ಲಿ ಕೆಲಸ ಮಾಡಬೇಕಾದ ಮಂತ್ರಿಗಳು ಹೈಕಮಾಂಡ್ ಪ್ರತಿನಿಧಿ ಎದುರು ಕ್ಯೂ ನಿಂತಿದ್ದಾರೆ!

    ರಾಜ್ಯದ ಬಿಜೆಪಿ ಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕುರಿತಂತೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಸರಣಿ ಟ್ವಿೀಟ್ ಗಳನ್ನು ಮಾಡಿದ್ದಾರೆ.

    ಕೊರೊನಾ ವಿರುದ್ಧ ನಿರ್ಣಾಯಕ ಹೋರಾಟ ನಡೆಸಲು ರಾಜ್ಯಕ್ಕೆ ಸುಭದ್ರ ಸರ್ಕಾರದ ಅಗತ್ಯ ಇದೆ. ಬಿಎಸ್ವೈ ಅವರನ್ನು ಇಟ್ಟುಕೊಳ್ತಿರಾ? ಕಿತ್ತುಹಾಕ್ತೀರಾ? ಎಂದು ಕೇಳುತ್ತಲೆ ಇದು ಬಿಜೆಪಿ ಆಂತರಿಕ ವಿಚಾರ ಎಂದಿದ್ದಾರೆ.

    ಸಿದ್ಧರಾಮಯ್ಯ ಮಾಡಿರುವ ಸರಣಿ ಟ್ವೀಟ್ ಗಳು ಇಲ್ಲಿವೆ.

    ರಸಗೊಬ್ಬರ ಮತ್ತು ಬಿತ್ತನೆ ಬೀಜದ ಕೊರತೆ ಇಲ್ಲ

    ಮುಂಗಾರು ಹಂಗಾಮು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಬುಧವಾರ ಪೂರ್ವಸಿದ್ಧತಾ ಸಭೆ ನಡೆಸಿ, ಪರಿಶೀಲಿಸಿದರು.

    ಜಿಲ್ಲೆಯಲ್ಲಿ ಬಿತ್ತನೆ ಬೀಜವು ರೈತರಿಗೆ ಸರಿಯಾದ ಸಮಯದಲ್ಲಿ ದೊರೆಯಬೇಕು. ಯಾವ ರೈತರಿಗೂ ಬಿತ್ತನೆ ಬೀಜದ ಕೊರತೆಯಾಗಬಾರದು. ಹಾಗೂ ಬಿತ್ತನೆ ಬೀಜಗಳ ಬಗ್ಗೆ ಹೆಚ್ಚು ಪ್ರಚಾರ ನೀಡಿ ಎಂದು ಅಧಿಕಾರಿಗಳಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ತಿಳಿಸಿದರು.

    ಜಿಲ್ಲೆಯ ಕೃಷಿ ಕೇಂದ್ರಗಳಲ್ಲಿ ಎಷ್ಟು ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳು ಇದೆ ಎಂಬುದರ ಬಗ್ಗೆ ರೈತರಿಗೆ ಮಾಧ್ಯಮದ ಮುಖಾಂತರ ತಿಳಿಸಿ. ಇದರಿಂದ ರೈತರಿಗೆ ಅನುಕೂಲಕರವಾಗಲಿದೆ. ಇಲ್ಲದಿದ್ದರೆ ಬಿತ್ತನೆ ಬೀಜ ಸಿಗುತ್ತಿಲ್ಲ ಎಂದು ತಪ್ಪು ಸುದ್ದಿ ಹೋಗುತ್ತದೆ. ಹೀಗಾಗಿ ಇದರ ಬಗ್ಗೆ ಹೆಚ್ಚು ಪ್ರಚಾರ ನೀಡಿ ಎಂದು ಹೇಳಿದರು.

    ರೈತರಿಗೆ ಬಿತ್ತನೆ ಬೀಜಗಳು ಸೂಕ್ತ ಬೆಲೆಯಲ್ಲಿ ನಿಗದಿತ ಸಮಯಕ್ಕೆ ಸಿಗಬೇಕು. ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೆ ಅಂತಹವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ಕೃತಕವಾಗಿ ಅಭಾವ ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಹಾಗೂ ಸಾಧ್ಯವಾದರೆ ಅಂತಹ ಅಂಗಡಿಗಳನ್ನು ಜಪ್ತಿ ಮಾಡಿ ಎಂದರು.

    ಮೈಸೂರು ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಇಲ್ಲ. ಬಿತ್ತನೆ ಬೀಜಕ್ಕೆ 39798 ಕ್ವಿಂಟಾಲ್ ಬೇಡಿಕೆ ಇದ್ದು, 45275 ಕ್ವಿಂಟಾಲ್ ಲಭ್ಯತೆ ಇದೆ‌. ರಸಗೊಬ್ಬರ 44,209 ಮೆಟ್ರಿಕ್ ಟನ್ ದಾಸ್ತಾನು ಇತ್ತು. ಈಗಾಗಲೇ 26,459 ಮೆಟ್ರಿಕ್ ಟನ್ ಮಾರಾಟ ಮಾಡಲಾಗಿದೆ. ಇನ್ನೂ 17,749 ಮೆಟ್ರಿಕ್ ಟನ್ ದಾಸ್ತಾನು ಉಳಿದಿದೆ ಎಂದು ಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.

    ಶಾಸಕರಾದ ಕೆ.ಮಹದೇವ್, ಹರ್ಷವರ್ಧನ್, ಅನೀಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯರಾದ ಧರ್ಮಸೇನ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿಯ ಸಿಇಒ ಎ.ಎಂ.ಯೋಗೀಶ್, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ ಸೇರಿದಂತೆ ಇತರರು ಹಾಜರಿದ್ದರು.

    ಸ್ಯಾಂಕಿ ಕೆರೆ ರಸ್ತೆ & ಮೇಕ್ರಿ ವೃತ್ತ- ಯಶವಂತಪುರ ರಸ್ತೆ ಶೀಘ್ರ ಅಗಲೀಕರಣಕ್ಕೆ ಸೂಚನೆ


    ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸ್ಯಾಂಕಿ ಕೆರೆ ರಸ್ತೆ, ಮೇಕ್ರಿ ವೃತ್ತದಿಂದ ಯಶವಂತಪುರಕ್ಕೆ ಹೋಗುವ ರಸ್ತೆ ಹಾಗೂ ಮೇಕ್ರಿ ವೃತ್ತದಿಂದ ಬಿಡಿಎ ವರೆಗಿನ ರಸ್ತೆಗಳನ್ನು ಅಗಲೀಕರಣ ಮಾಡುವ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದರು.

    ಬೆಂಗಳೂರಿನಲ್ಲಿ ಬುಧವಾರ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಹಾಗೂ ಬೃಹತ್‌ ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ನಂತರ ಅವರು ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು.

    ಮೇಕ್ರಿ ವೃತ್ತದಿಂದ ಯಶವಂತಪುರದ ಕಡೆ ಹೋಗುವ ರಸ್ತೆ ಅಗಲೀಕರಣ ಬಹಳ ವರ್ಷದಿಂದ ನೆನೆಗುದಿಗೆ ಬಿದ್ದಿದೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಅಗತ್ಯ ಜಾಗ ನೀಡದ ಕಾರಣಕ್ಕೆ ಅಗಲೀಕರಣ ವಿಳಂಬವಾಗಿತ್ತು. ತ್ವರಿತವಾಗಿ ಐಐಎಸ್ಸಿಯಿಂದ ಭೂಮಿ ಪಡೆಯಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಡಿಸಿಎಂ ಸೂಚಿಸಿದರು.

    ಈ ಬಗ್ಗೆ ಏನಾದರೂ ಆಡಳಿತಾತ್ಮಕ ಅಥವಾ ಕಾನೂನಾತ್ಮಕ ಸಮಸ್ಯೆಗಳಿದ್ದರೆ ತಕ್ಷಣ ಬಗೆಹರಿಸಿಕೊಳ್ಳಿ ಎಂದು ಗೌರವ ಗುಪ್ತ ಅವರಿಗೆ ತಿಳಿಸಿರುವುದಾಗಿ ಅವರು ಮಾಹಿತಿ ನೀಡಿದರು.

    ಬಳ್ಳಾರಿ ರಸ್ತೆಯ ಮೇಕ್ರಿ ವೃತ್ತದಿಂದ ಬಿಡಿಎವರೆಗೂ ರಸ್ತೆ ಅಗಲೀಕರಣದ ಬಗ್ಗೆಯೂ ಚರ್ಚೆ ನಡೆಸಲಾಯಿತಲ್ಲದೆ, ಈ ಯೋಜನೆಗೆ 56 ಕೋಟಿ ರೂ. ಮೀಸಲು ಇಡಲಾಗಿದೆ. ಟೆಂಡರ್‌ ಕೂಡ ಆಗಿದೆ. ಕಾನೂನು ತೊಡಕು ಇರುವ ಕಾರಣಕ್ಕೆ ಕೈಗೆತ್ತಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಇದಕ್ಕೆ ಮೀಸಲಿಟ್ಟ ಹಣವನ್ನು ಸ್ಯಾಂಕಿ ಕೆರೆ ರಸ್ತೆ ಅಗಲ ಮಾಡಲು ಉಪಯೋಗಿಸಿ ಎನ್ನುವ ಸಲಹೆ ಕೂಡ ಡಿಸಿಎಂ ನೀಡಿದರು.

    ಸ್ಯಾಂಕಿ ಕೆರೆ ರಸ್ತೆಯ ಅಗಲೀಕರಣದ ಬಗ್ಗೆ 10 ವರ್ಷಗಳ ಹಿಂದೆಯೇ ಹೈಕೋರ್ಟ್‌ ವಿಭಾಗೀಯ ಪೀಠದಿಂದಲೇ ಸ್ಪಷ್ಟ ಆದೇಶ ಬಂದಿತ್ತು. ಆದರೂ ಕಾಮಗಾರಿ ಶುರು ಆಗಿರಲಿಲ್ಲ. ನಿರ್ದಿಷ್ಟ ಕಾಲಾವಧಿಯೊಳಗೇ ಕಾಮಗಾರಿ ಮುಗಿಸಬೇಕು ಎಂದು ನ್ಯಾಯಾಲಯದ ಆದೇಶವಿತ್ತು. ಆದರೂ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದು ನ್ಯಾಯಾಂಗ ನಿಂದನೆಯಾಗುತ್ತದೆ. ಹೀಗಾಗಿ ತಕ್ಷಣ ಈ ರಸ್ತೆಯ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಬೃಹತ್‌ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಉಪ ಮುಖ್ಯಮಂತ್ರಿಯವರ ಕಾರ್ಯದರ್ಶಿ ಪಿ.ಪ್ರದೀಪ, ಮಲ್ಲೇಶ್ವರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪಾಪರೆಡ್ಡಿ ಸೇರಿದಂತೆ ಪಾಲಿಕೆಯ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

    error: Content is protected !!