21.3 C
Karnataka
Sunday, December 1, 2024
    Home Blog Page 99

    ಮಳೆಗಾಲ ಆರಂಭ; ಜೂನ್23 ರಿಂದ ಆಗಸ್ಟ್ 16ರವರೆಗೆ ಕೊಡಗಿನಲ್ಲಿ ಭಾರಿ ವಾಹನ ಸಂಚಾರ ನಿಷೇಧ


    ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಮಳೆಗಾಲ ಆರಂಭವಾಗಿದೆ. ಮುಂದಿನ ಮುಂಗಾರು ಮಳೆಗಾಲದ ದಿನಗಳಲ್ಲಿ ನದಿಪಾತ್ರಗಳಲ್ಲಿ ನೀರಿನ ಹರಿವು ಹೆಚ್ಚಾಗಲಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ ಹಿತದೃಷ್ಟಿಯಿಂದ ಮರಳುಗಾರಿಕೆ, ಮರದ ದಿಮ್ಮಿಗಳ ಸಾಗಾಣೆ ಮತ್ತು ಇತರೆ ಸರಕು ಸಾಗಾಣಿಕೆಯನ್ನು ಕೊಡಗು ಜಿಲ್ಲೆಯಾದ್ಯಂತ ಮಳೆಗಾಲ ಮುಕ್ತಾಯವಾಗುವವರೆಗೆ ನಿರ್ಬಂಧಿಸುವ ಬಗ್ಗೆ ಜಿಲ್ಲಾಡಳಿತ ತೀರ್ಮಾನಿಸಿದೆ.

    ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಹೆಚ್ಚಾಗುವ ದಿನಗಳಲ್ಲಿ ರಸ್ತೆಯ ಪರಿಸ್ಥಿತಿ ಹದಗೆಡುತ್ತದೆ. ಹಾಗೆಯೇ ಅಧಿಕ ಭಾರ ತುಂಬಿದ ಭಾರೀ ಸರಕು ಸಾಗಾಣೆ ವಾಹನಗಳು ದಿನನಿತ್ಯ ಸಂಚರಿಸುವುದರಿಂದ ರಸ್ತೆಯ ಬದಿಗಳ ಮಣ್ಣು ಭೂಕುಸಿತದಿಂದಾಗಿ ರಸ್ತೆಯ ಮೇಲೆ ಮಣ್ಣು ಬಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯಾಗಿ ಸಾಕಷ್ಟು ಅಪಘಾತಗಳಿಗೆ ಕಾರಣವಾಗುತ್ತದೆ.

    ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಜೀವ ಮತ್ತು ಆಸ್ತಿಗಳ ಹಿತದೃಷ್ಟಿಯಿಂದ 16,200 ಕೆ.ಜಿ.ಗಿಂತ ಹೆಚ್ಚಿನ ತೂಕದ ಸರಕು ಸಾಗಾಣಿಕೆ ವಾಹನ/ ಮಲ್ಟಿ ಆಕ್ಸಿಲ್ ಟ್ರಕ್‍ಗಳ ಸಂಚಾರ ಮತ್ತು ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸಿಸ್ (ಮಲ್ಟಿ ಆಕ್ಸಿಲ್) ಮತ್ತು ಮರಳು ಸಾಗಾಣಿಕೆ, ಮರದ ದಿಮ್ಮಿಗಳನ್ನು ಸಾಗಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಮುಗಿಯುವವರೆಗೆ ನಿರ್ಬಂಧಿಸಲು ಸಂಬಂಧಪಟ್ಟ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ.

    ಜೊತೆಗೆ ರಾಜ್ಯ ಹವಾಮಾನ ಇಲಾಖೆಯಿಂದ ಹೆಚ್ಚಿನ ಮಳೆಯಾಗುವ ದಿನಗಳಲ್ಲಿ 02-03 ದಿನಗಳ ಮುಂಚಿತವಾಗಿ ಆಗಿಂದಾಗ್ಗೆ ವರದಿಯನ್ನು ನೀಡುತ್ತಾ ಬರುತ್ತಿದ್ದಾರೆ. ಇದನ್ನು ಅವಲೋಕಿಸಿ ಮತ್ತು ಕಳೆದ 03 ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಮತ್ತು ನೆರೆ ಹಾವಳಿಯಿಂದಾಗಿ ಹಲವಾರು ರಸ್ತೆಗಳು ಹಾಳಾಗಿದೆ. ಈ ರಸ್ತೆಗಳನ್ನು ಈಗಾಗಲೇ ಮಳೆಹಾನಿ ದುರಸ್ತಿಯಡಿ ಸರಿಪಡಿಸಲಾಗುತ್ತಿದ್ದು, ಪ್ರಸ್ತುತ ವರ್ಷದ ಮಳೆಗಾಲ ಸಹ ಪ್ರಾರಂಭವಾಗಿದೆ. ಇದರಿಂದ ಮುಂದೆ ಸಂಭವಿಸಬಹುದಾದ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಭಾರೀ ವಾಹನ ಸಂಚಾರದಿಂದ ರಸ್ತೆಗೆ ಅಪಾಯವಾಗುವ ಸಾಧ್ಯತೆ ಇರುತ್ತದೆ.

    ಈ ಎಲ್ಲಾ ಅಂಶಗಳನ್ನ ಗಮನಿಸಿ ಸಾರ್ವಜನಿಕ ಆಸ್ತಿಪಾಸ್ತಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಕೊಡಗು ಜಿಲ್ಲೆಯಾದ್ಯಂತ ಇದೇ ಜೂನ್ 23 ರಿಂದ ಆಗಸ್ಟ್ 16 ವರೆಗೆ ಎಲ್ಲಾ ರೀತಿಯ ಮರದ ದಿಮ್ಮಿ ಮತ್ತು ಮರಳು ಸಾಗಾಣಿಕೆ ವಾಹನಗಳು, ವಾಹನದ ನೋಂದಣಿ ತೂಕ 16,200 ಕೆ.ಜಿ.ಗಿಂತ ಹೆಚ್ಚಿನ ಸರಕು ಸಾಗಾಣೆ ಮಾಡುವ ಸರಕು ಸಾಗಾಣಿಕೆ ವಾಹನಗಳು, ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸಿಸ್ (ಮಲ್ಟಿ ಆಕ್ಸಿಲ್) ವಾಹನಗಳನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶ ಹೊರಡಿಸಿದ್ದಾರೆ. ಹಾಗೆಯೇ ಅಡುಗೆ ಅನಿಲ ಮತ್ತು ಇಂಧನ ಪೂರೈಕೆ ವಾಹನಗಳು, ಹಾಲು ಪೂರೈಕೆ ವಾಹನಗಳು, ಸರ್ಕಾರಿ ಕೆಲಸದ ನಿಮಿತ್ತ ಉಪಯೋಗಿಸುವ ವಾಹನಗಳು, ಶಾಲಾ ಕಾಲೇಜು ಮತ್ತು ಸಾರ್ವಜನಿಕ ಪ್ರಯಾಣಿಕರ ವಾಹನಗಳಿಗೆ (ಮಲ್ಟಿ ಆಕ್ಸಿಲ್ ಬಸ್‍ಗಳು ಸೇರಿದಂತೆ) ನಿರ್ಬಂಧದಿಂದ ವಿನಾಯಿತಿ ನೀಡಿದ್ದಾರೆ.

    ಈ ಬಗ್ಗೆ ಮೋಟಾರು ವಾಹನ ಕಾಯ್ದೆ 1988 ರ ಸೆಕ್ಷನ್ 116 ರಂತೆ ಅವಶ್ಯವಿರುವ ಸಂಜ್ಞೆ / ಸೂಚನಾ ಫಲಕಗಳನ್ನು ಅಳವಡಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ, ಇವರಿಗೆ ಅನುಮತಿಸಿದೆ.

    ಕೊಡಗು ಜಿಲ್ಲೆಯ ಮುಖಾಂತರ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 275 ರ ಜಿಲ್ಲೆಯ ಗಡಿಭಾಗಗಳಾದ ಕುಶಾಲನಗರ ಮತ್ತು ಸಂಪಾಜೆಯಲ್ಲಿ ವ್ಯವಸ್ಥಿತ ಚೆಕ್‍ಪೋಸ್ಟ್ ನಿರ್ಮಿಸಿ, ದಿನದ 24 ಗಂಟೆಯೂ ನಿಗಾ ವಹಿಸಲು ಸಿಬ್ಬಂದಿಗಳನ್ನು ನಿಯೋಜಿಸಲು, ಮೊಬೈಲ್ ಪ್ಯಾಟ್ರೋಲಿಂಗ್ ನಡೆಸಲು ಹಾಗೂ ಈ ಆದೇಶ ಉಲ್ಲಂಘನೆಯಾಗದಂತೆ ಮತ್ತು ಆದೇಶ ಉಲ್ಲಂಘಿಸಿದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲು ಆರಕ್ಷಕ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

    ಸತತ 9ನೇ ದಿನ ಪಾಸಿಟಿವಿಟಿ ದರ 5ಕ್ಕಿಂತ ಕಡಿಮೆ

    ಕೋವಿಡ್-19 ಸೋಂಕಿನ ವಿರುದ್ಧ ನಿರಂತರ ಹೋರಾಟ ನಡೆಸುತ್ತಾ ಬಂದಿರುವ ಭಾರತ ಸರ್ಕಾರ, ಇದೀಗ ಸೋಂಕು ನಿಯಂತ್ರಣದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ದೇಶಾದ್ಯಂತ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 8,65,432ಕ್ಕೆ ಇಳಿಕೆ ಕಂಡಿದೆ.

    70 ದಿನಗಳ ನಂತರ ಸಕ್ರಿಯ ಪ್ರಕರಣಗಳ ಪ್ರಮಾಣ 9 ಲಕ್ಷ ಮಟ್ಟಕಿಂತ ಕೆಳಕ್ಕೆ ತಗ್ಗಿದೆ.

    ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 62,224 ದೈನಂದಿನ ಹೊಸ ಪ್ರಕರಣಗಳು ಪತ್ತೆಯಾಗಿವೆ.

    ಇಲ್ಲಿಯ ತನಕ ದೇಶಾದ್ಯಂತ 2,83,88,100 ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.

    1,07,628 ರೋಗಿಗಳು ಕಳೆದ 24 ತಾಸುಗಳಲ್ಲಿ ಚೇತರಿಸಿಕೊಂಡಿದ್ದಾರೆ.

    ಸತತ 34ನೇ ದಿನದಲ್ಲೂ ದಿನನಿತ್ಯದ ಚೇತರಿಕೆ ಪ್ರಮಾಣ ದೈನಂದಿನ ಹೊಸ ಪ್ರಕರಣಗಳನ್ನು ಹಿಂದಿಕ್ಕಿದೆ. ಇದರೊಂದಿಗೆ ಚೇತರಿಕೆ ದರ ಇದೀಗ 95.80%ಗೆ ಸುಧಾರಣೆ ಕಂಡಿದೆ.

    ವಾರದ ಪಾಸಿಟಿವಿಟಿ ದರ (ಸೋಂಕಿತರ ಪ್ರಮಾಣ) 5% ಮಟ್ಟಕ್ಕಿಂತ ಕೆಳಗಿದೆ. ಅಂದರೆ ಅದೀಗ 4.17% ಕಾಯ್ದುಕೊಂಡಿದೆ.

    ಸತತ 9ನೇ ದಿನದಲ್ಲೂ ದೈನಂದಿನ ಪಾಸಿಟಿವಿಟಿ ದರ 5% ಮಟ್ಟದಿಂದ ಕೆಳಗಿದ್ದು, 3.22% ಇದೆ.

    ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದ್ದು, ಇದುವರೆಗೆ 38.33 ಕೋಟಿ ಜನರ ಪರೀಕ್ಷೆ ನಡೆಸಲಾಗಿದೆ.

    ರಾಷ್ಟ್ರವ್ಯಾಪಿ ನಡೆಯುತ್ತಿರುವ ಬೃಹತ್ ಲಸಿಕಾ ಆಂದೋಲನದಲ್ಲಿ 26.19 ಕೋಟಿ ಲಸಸಿಕಾ ಡೋಸ್|ಗಳನ್ನು ನೀಡಲಾಗಿದೆ.


    ಖಾಸಗಿ ಶಾಲೆ-ಕಾಲೇಜುಗಳ ಎಲ್ಲಾ ಸಿಬ್ಬಂದಿಗಳಿಗೂ ಪರಿಹಾರ ಘೋಷಿಸಲು ಸಿದ್ಧರಾಮಯ್ಯ ಒತ್ತಾಯ

    ಖಾಸಗಿ ಅನುದಾನಿತ ಶಾಲೆ-ಕಾಲೇಜುಗಳಲ್ಲಿ ಸರ್ಕಾರಿ ಸಂಬಳ ಪಡೆಯದೆ ದುಡಿಯುತ್ತಿರುವ ಎಲ್ಲಾ ಸಿಬ್ಬಂದಿಗಳಿಗೂ ಪರಿಹಾರ ಘೋಷಿಸಬೇಕು ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಕೊರೋನಾ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ರಾಜ್ಯದ ಜನರಿಗೆ ಸರ್ಕಾರ ಬಿಡಿಗಾಸಿನ ಪರಿಹಾರದ ಪ್ಯಾಕೇಜ್ ಘೋಷಿಸಿದೆ.

    ಅದರಲ್ಲಿ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೂ ಸೇರಿಸಿದ್ದಾರೆ. ಈ ಪ್ಯಾಕೇಜ್‍ನ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಜೂನ್ 14 ಕೊನೆಯ ದಿನ ಎಂದು ತಿಳಿಸಲಾಗಿದೆ.ಆದರೆ ಈ ಪ್ಯಾಕೇಜ್ ಘೋಷಿಸುವಾಗ ಸರ್ಕಾರ ಖಾಸಗಿ ಅನುದಾನಿತ ಶಾಲೆಗಳ ಕಾಯಂ ಅಲ್ಲದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಕೈ ಬಿಟ್ಟಿದೆ.

    ಅನುದಾನಿತ ಶಾಲೆ-ಕಾಲೇಜುಗಳಲ್ಲೂ 3-5 ಸಾವಿರ ರೂಪಾಯಿ ಮಾತ್ರ ಪಡೆದು ಕೆಲಸ ಮಾಡುವ ಸಾಕಷ್ಟು ಮಂದಿ ಅತಿಥಿ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿಗಳು ಇದ್ದಾರೆ. ಬಹು ದೊಡ್ಡ ಸಂಖ್ಯೆಯಲ್ಲಿರುವ ಇವರನ್ನು ಸರ್ಕಾರದ ಪ್ಯಾಕೇಜ್‍ನಲ್ಲಿ ಸೇರಿಸದಿರುವುದು ನ್ಯಾಯಸಮ್ಮತವಲ್ಲ.

    ಮೊದಲ ಅಲೆಯಲ್ಲೂ ಅನುದಾನಿತ ಶಾಲೆ ಕಾಲೇಜುಗಳ ಸಿಬ್ಬಂದಿ ಹೈರಾಣಾಗಿದ್ದರು. ಆಗಲೂ ಸರ್ಕಾರ ಇವರ ನೆರವಿಗೆ ಬರಲಿಲ್ಲ. ಒಂದೂವರೆ ವರ್ಷದಿಂದ ಸಂಬಳಗಳಿಲ್ಲದೆ ಈ ಕುಟುಂಬಗಳು ವಿಪರೀತ ಸಂಕಷ್ಟದಲ್ಲಿವೆ.

    ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳ ಅತಿಥಿ ಶಿಕ್ಷಕರು ಬೀದಿ ಬದಿ ತರಕಾರಿ, ಹೂ, ಹಣ್ಣು ಮಾರಾಟ ಮಾಡುತ್ತಿರುವುದು, ನರೇಗಾ ಕೂಲಿ ಕೆಲಸಕ್ಕೆ ಹೋಗಿರುವ ಅಸಂಖ್ಯಾತ ಪ್ರಕರಣಗಳನ್ನು ಹಾಗೂ ಸಂಕಷ್ಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳನ್ನು ಮಾಧ್ಯಮಗಳು ವರದಿ ಮಾಡಿವೆ.

    ಸಾಮಾಜಿಕ ತಾಣಗಳಲ್ಲಿ ಇವರು ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಇಷ್ಟಾದರೂ ಸರ್ಕಾರ ಇವರ ಕಡೆಗೆ ಗಮನ ಹರಿಸದಿರುವುದು ಅಕ್ಷಮ್ಯ ಸಂಗತಿ.

    ಮಕ್ಕಳಿಗೆ ಪಾಠ ಮಾಡುವ ಈ ಸಿಬ್ಬಂದಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲಾಗದ ಸ್ಥಿತಿಯಲ್ಲಿ ಇದ್ದಾರೆ.

    ಸರ್ಕಾರದ ಪ್ಯಾಕೇಜ್‍ನಲ್ಲಿ ಖಾಸಗಿ ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಪರಿಹಾರ ಘೋಷಿಸಿಲ್ಲ. ಅವರಿಗೂ ಪರಿಹಾರ ಘೋಷಿಸಬೇಕು.ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಬೇಕು. ಅಥವಾ ಅರ್ಜಿ ಕರೆದು ಭಿಕ್ಷೆಯಂತೆ ಒಂದೆರಡು ಸಾವಿರ ನೀಡುವ ಬದಲಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಈ ಸಿಬ್ಬಂದಿಗಳ ವಿವರಗಳನ್ನು ಪಡೆದು ನೇರವಾಗಿ ಅವರ ಖಾತೆಗಳಿಗೆ ಪರಿಹಾರದ ಹಣವನ್ನು ವರ್ಗಾಯಿಸಬೇಕೆಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

    ಕೋವಿಶೀಲ್ಡ್ ಲಸಿಕೆಯ ನಡುವಿನ ಅಂತರ ಹೆಚ್ಚಿಸಲು ಕಾರಣವೇನು?

    ಎರಡು ಕೋವಿಶೀಲ್ಡ್ ಡೋಸ್‌ಗಳ ನಡುವಿನ ಅಂತರವನ್ನು 4-6 ವಾರಗಳಿಂದ 12ರಿಂದ 16 ವಾರಗಳಿಗೆ ಹೆಚ್ಚಿಸುವ ನಿರ್ಧಾರದ ಹಿಂದೆ ಅಡೆನೊವೆಕ್ಟರ್ ಲಸಿಕೆಗಳ ವರ್ತನೆ ಕುರಿತಾದ ಮೂಲಭೂತ ವೈಜ್ಞಾನಿಕ ಕಾರಣ ಅಡಗಿದೆ ಎಂದು ಪ್ರತಿರಕ್ಷಣೆ ಕುರಿತಾದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ (ಎನ್‌ಟಿಎಜಿಐ) ಭಾರತ ಕೋವಿಡ್‌-19 ಕಾರ್ಯಪಡೆಯ ಅಧ್ಯಕ್ಷ ಡಾ. ಎನ್.ಕೆ. ಅರೋರಾ ವಿವರಿಸಿದ್ದಾರೆ.

    “ಲಸಿಕೆ ನಡುವಿನ ಅಂತರವು 12 ವಾರಗಳಾಗಿದ್ದಾಗ ಲಸಿಕೆಯ ಪರಿಣಾಮಕಾರಿತ್ವವು 65% – 88% ರಷ್ಟು ಬದಲಾವಣೆಯಾಗುತ್ತದೆ ಎಂಬುದನ್ನು 2021ರ ಏಪ್ರಿಲ್ ಕೊನೆಯ ವಾರದಲ್ಲಿ ಬ್ರಿಎಟನ್‌ನ ಆರೋಗ್ಯ ಇಲಾಖೆಯ ಕಾರ್ಯಕಾರಿ ಸಂಸ್ಥೆಯಾದ ʻಪಬ್ಲಿಕ್ ಹೆಲ್ತ್ ಇಂಗ್ಲೆಂಡ್ʼ ಬಿಡುಗಡೆ ಮಾಡಿದ ದತ್ತಾಂಶವು ತೋರಿಸಿದೆ. ಇದರ ಆಧಾರದ ಮೇಲೆಯೇ ಅವರು ʻಆಲ್ಫಾʼ ರೂಪಾಂತರಿ ವೈರಸ್‌ನಿಂದ ಉಂಟಾದ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ಜಯಿಸಲು ಸಾಧ್ಯವಾಯಿತು. ಲಸಿಕೆಯ ನಡುವಿನ ಅಂತರವನ್ನು 12 ವಾರ ಇರಿಸಿದ್ದರಿಂದಲೇ ಬ್ರಿಟನ್‌ ಇದರಿಂದ ಹೊರಬರಲು ಸಾಧ್ಯವಾಯಿತು. ಅಡೆನೊವೆಕ್ಟರ್ ಲಸಿಕೆಗಳ ನಡುವಿನ ಅಂತರವನ್ನು ಹೆಚ್ಚಿಸಿದಾಗ ಅವು ಉತ್ತಮ ಪ್ರತಿಕ್ರಿಯೆಯನ್ನು ನೀಡುತ್ತವೆ ಎಂದು ತೋರಿಸಲು ಮೂಲಭೂತ ವೈಜ್ಞಾನಿಕ ಕಾರಣಗಳಿರುವುದರಿಂದ ಇದು ಉತ್ತಮ ಆಲೋಚನೆ ಎಂದು ನಾವು ಸಹ ಭಾವಿಸಿದೆವು. ಆದ್ದರಿಂದ ಮೇ 13ರಂದು ಲಸಿಕೆ ಡೋಸ್‌ಗಳ ನಡುವಿನ ಅಂತರವನ್ನು 12-16ವಾರಗಳಿಗೆ ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.” ಎಂದು ಅವರು ಡಿಡಿ ನ್ಯೂಸ್ ಗೆ ತಿಳಿಸಿದ್ದಾರೆ.

    “ನಾವು ಅತ್ಯಂತ ಮುಕ್ತ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಹೊಂದಿದ್ದೇವೆ, ಅಲ್ಲಿ ವೈಜ್ಞಾನಿಕ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಕೋವಿಡ್ ಕಾರ್ಯಪಡೆಯು ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಈ ನಿರ್ಧಾರವನ್ನು ಕೈಗೊಂಡಿತು. ನಂತರ ಈ ವಿಷಯವನ್ನು ʻಎನ್‌ಟಿಎಜಿಐʼ ಸಭೆಯಲ್ಲಿ ಮತ್ತೆ ಚರ್ಚಿಸಿದಾಗಲೂ ಯಾವುದೇ ಭಿನ್ನಾಭಿಪ್ರಾಯ ವ್ಯಕ್ತವಾಗಲಿಲ್ಲ. ಲಸಿಕೆಯ ಡೋಸ್‌ ನಡುವಿನ ಅಂತರವು 12 – 16 ಆಗಿರಬೇಕು ಎಂಬ ಶಿಫಾರಸು ಅಂಗೀಕರಿಸಲಾಯಿತು.” ಎಂದರು.

    ಲಸಿಕೆ ಡೋಸ್‌ಗಳ ನಡುವೆ ನಾಲ್ಕು ವಾರಗಳ ಅಂತರ ಕುರಿತಾದ ಈ ಹಿಂದಿನ ನಿರ್ಧಾರವು ಆಗ ಲಭ್ಯವಿದ್ದ ಬ್ರಿಡ್ಜಿಂಗ್ ಪ್ರಾಯೋಗಿಕ ದತ್ತಾಂಶವನ್ನು ಆಧರಿಸಿತ್ತು ಎಂದು ಡಾ. ಅರೋರಾ ಹೇಳಿದರು. ಎರಡು ಡೋಸ್‌ಗಳ ನಡುವಿನ ಅಂತರದ ಹೆಚ್ಚಳದಿಂದ ಲಸಿಕೆಯ ಪರಿಣಾಮಕಾರಿತ್ವ ಹೆಚ್ಚಾಗುವುದನ್ನು ತೋರಿಸುವ ಅಧ್ಯಯನಗಳನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಉಲ್ಲೇಖಿಸಿದರು.

    ಆರಂಭಿಕ ಅಧ್ಯಯನಗಳು ಬಹಳ ವೈವಿಧ್ಯಮಯ

    “ಕೋವಿಶೀಲ್ಡ್ ಕುರಿತ ಆರಂಭಿಕ ಅಧ್ಯಯನಗಳು ಬಹಳ ವೈವಿಧ್ಯಮಯವಾಗಿದ್ದವು. ಬ್ರಿಟನ್‌ನಂತ ಕೆಲವು ದೇಶಗಳು ಡಿಸೆಂಬರ್ 2020ರಲ್ಲಿ ಲಸಿಕೆಯನ್ನು ಪರಿಚಯಿಸಿದಾಗ 12 ವಾರಗಳ ಡೋಸ್ ಅಂತರ ಪಾಲಿಸಿದವು. ನಮಗೆ ಈ ದತ್ತಾಂಶವನ್ನು ಗೌಪ್ಯವಾಗಿರಿಸಲಾಗಿತ್ತು. ಹಾಗಾಗಿ ನಾವು ಡೋಸ್‌ಗಳ ನಡುವಿನ ಅಂತರವನ್ನು ನಿರ್ಧರಿಸಲು ನಮ್ಮ ಬ್ರಿಡ್ಜಿಂಗ್ ಪ್ರಾಯೋಗಿಕ ದತ್ತಾಂಶದ ಆಧಾರದ ಮೇಲೆ ಅವಲಂಬಿಸಬೇಕಾಯಿತು. ಅದರಂತೆ ನಾಲ್ಕು ವಾರಗಳ ಅಂತರಕ್ಕೆ ನಿರ್ಧರಿಸಿದೆವು. ಅದು ಉತ್ತಮ ರೋಗನಿರೋಧಕ ಪ್ರತಿಕ್ರಿಯೆಯನ್ನು ತೋರಿಸಿತು. ನಂತರ ನಾವು ಹೆಚ್ಚುವರಿ ವೈಜ್ಞಾನಿಕ ಮತ್ತು ಪ್ರಯೋಗಾಲಯದ ದತ್ತಾಂಶವನ್ನು ಆಧರಿಸಿ ಈ ಅಂತರವನ್ನು ಮತ್ತಷ್ಟು ಹೆಚ್ಚಿಸುವುದು ಸೂಕ್ತವೆಂದು ಭಾವಿಸಿದೆವು. ಅದರಂತೆ ಡೋಸ್‌ಗಳ ನಡುವಿನ ಅಂತರವನ್ನು ಆರು ವಾರಗಳು ಅಥವಾ ಅದಕ್ಕಿಂತ ಹೆಚ್ಚು ಎಂದು ನಿರ್ಧರಿಸಲಾಯಿತು. ಲಸಿಕೆಯ ಪರಿಣಾಮಕಾರಿತ್ವವು ನಾಲ್ಕು ವಾರಗಳಲ್ಲಿ 57% ಮತ್ತು ಎಂಟು ವಾರಗಳಲ್ಲಿ ಸುಮಾರು 60% ಇರುವುದನ್ನು ಅಧ್ಯಯನಗಳು ತೋರಿಸಿವೆ.” ಎಂದರು.

    ʻಎನ್‌ಟಿಎಜಿಐʼ ಈ ಅಂತರವನ್ನು ಮೊದಲೇ 12 ವಾರಗಳಿಗೆ ಏಕೆ ಹೆಚ್ಚಿಸಲಿಲ್ಲ ಎಂಬುದರ ಬಗ್ಗೆ ಮಾತನಾಡಿದ ಅವರು, “ನಾವು ಬ್ರಿಟನ್‌ನಿಂದ (ಆಸ್ಟ್ರಾಜೆನೆಕಾ ಲಸಿಕೆಯ ಇತರ ಅತಿದೊಡ್ಡ ಬಳಕೆದಾರ) ತಳಮಟ್ಟದ ದತ್ತಾಂಶಕ್ಕಾಗಿ ಕಾಯಲು ನಿರ್ಧರಿಸಿದ್ದೆವು” ಎಂದು ಹೇಳಿದರು.ಕೋವಿಶೀಲ್ಡ್‌ಗೆ ಸಮಾನವಾಗಿರುವ ಆಸ್ಟ್ರಾಜೆನೆಕಾ ಲಸಿಕೆ ವಿಚಾರದಲ್ಲಿ ಕೆನಡಾ, ಶ್ರೀಲಂಕಾ ಮತ್ತು ಇತರ ಕೆಲವು ದೇಶಗಳು 12-16 ವಾರಗಳ ಅಂತರ ಪಾಲಿಸುತ್ತಿವೆ ಎಂದು ಅವರು ಹೇಳಿದರು.

    “ಆಸ್ಟ್ರಾಜೆನೆಕಾ ಲಸಿಕೆಯ ಒಂದು ಡೋಸ್ ಕೇವಲ 33% ರಕ್ಷಣೆಯನ್ನು ನೀಡುತ್ತದೆ ಮತ್ತು ಎರಡು ಡೋಸ್‌ಗಳು ಸುಮಾರು 60% ರಕ್ಷಣೆಯನ್ನು ನೀಡುತ್ತವೆ ಎಂದು ಬ್ರಿಟನ್‌ನಿಂದ ವರದಿಗಳು ಬಂದವು. ನಾವು ಡೋಸೇಜ್ ಅಂತರವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಂಡ 2-3 ದಿನಗಳ ನಂತರ ಈ ವರದಿಗಳು ಬಯಲಾದವು. ಮೇ ತಿಂಗಳ ಮಧ್ಯಭಾಗದಿಂದಲೂ ಭಾರತದವು ನಾಲ್ಕು ಅಥವಾ ಎಂಟು ವಾರ ಅಂತರಕ್ಕೆ ಮರಳಬೇಕೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು,ʼʼ ಎಂದರು.

    ಲಸಿಕೆ ಕಾರ್ಯಕ್ರಮದ ಪರಿಣಾಮವನ್ನು ನಿರ್ಣಯಿಸಲು ಟ್ರ್ಯಾಕಿಂಗ್ (ನಿಗಾ) ವ್ಯವಸ್ಥೆಯನ್ನು ಸ್ಥಾಪಿಸಲು ಸಹ ನಿರ್ಧರಿಸಲಾಯಿತು ಎಂದು ಅವರು ಹೇಳಿದರು. “ಎನ್‌ಟಿಎಜಿಐ ಈ ನಿರ್ಧಾರವನ್ನು ತೆಗೆದುಕೊಂಡಾಗ, ಲಸಿಕೆ ಕಾರ್ಯಕ್ರಮದ ಪರಿಣಾಮವನ್ನು ಮಾತ್ರವಲ್ಲದೆ, ಲಸಿಕೆಯ ವಿಧ ಮತ್ತು ಡೋಸ್‌ಗಳ ನಡುವಿನ ಅಂತರವನ್ನು ನಿರ್ಣಯಿಸಲು ಹಾಗೂ ಯಾರಾದರೂ ಸಂಪೂರ್ಣವಾಗಿ / ಭಾಗಶಃ ಲಸಿಕೆ ಪಡೆದಾಗ ಏನಾಗುತ್ತದೆ ಎಂಬುದನ್ನು ತಿಳಿಯಲು ಲಸಿಕೆ ನಿಗಾ ವೇದಿಕೆಯನ್ನು ಸ್ಥಾಪಿಸಬೇಕೆಂದೂ ನಾವು ತೀರ್ಮಾನಿಸಿದೆವು. ಭಾರತದಲ್ಲಿ ಸುಮಾರು 17 – 18 ಕೋಟಿ ಜನರು ಕೇವಲ ಒಂದು ಡೋಸ್ ಪಡೆದಿರುವುದರಿಂದ ಮತ್ತು 4 ಕೋಟಿ ಜನರು ಮಾತ್ರ ಎರಡು ಡೋಸ್‌ಗಳನ್ನು ಪಡೆದಿರುವುದರಿಂದ ಈ ವಿಷಯ ತುಂಬಾ ಮುಖ್ಯವಾಗಿತ್ತು,ʼʼ ಎಂದರು.

    ಡಾ. ಅರೋರಾ ಅವರು ಭಾಗಶಃ ವರ್ಸಸ್ ಪೂರ್ಣ ಪ್ರತಿರಕ್ಷಣೆಯ ಪರಿಣಾಮಕಾರಿತ್ವವನ್ನು ಹೋಲಿಸಿದ ಚಂಡೀಗಢದ ʻಪಿಜಿಐʼನ ಅಧ್ಯಯನವನ್ನೂ ಉಲ್ಲೇಖಿಸಿದರು. “ಭಾಗಶಃ ಲಸಿಕೆ ಮತ್ತು ಸಂಪೂರ್ಣವಾಗಿ ಲಸಿಕೆ ಪಡೆದ ಇಬ್ಬರಲ್ಲೂ ಪರಿಣಾಮಕಾರಿತ್ವವು 75% ಆಗಿತ್ತು ಎಂದು ಚಂಡೀಗಢದ ಪಿಜಿಐ ಅಧ್ಯಯನವು ಸ್ಪಷ್ಟವಾಗಿ ತೋರಿಸುತ್ತದೆ. ಆದ್ದರಿಂದ ನೀವು ಭಾಗಶಃ ಅಥವಾ ಸಂಪೂರ್ಣವಾಗಿ ಲಸಿಕೆ ಪಡೆದರೂ ಅಲ್ಪಾವಧಿಯಲ್ಲಿ ಅದರ ಪರಿಣಾಮಕಾರಿತ್ವವು ಒಂದೇ ಆಗಿರುತ್ತದೆ ಎಂದು ಅರ್ಥ ಎಂದು ಅರೋರಾ ಹೇಳಿದರು.

    ಸಿಎಂಸಿ ಅಧ್ಯಯನದ ಫಲಿತಾಂಶ

    ವೆಲ್ಲೂರಿನ ʻಸಿಎಂಸಿʼ ಅಧ್ಯಯನದ ಫಲಿತಾಂಶಗಳೂ ಇದೇ ರೀತಿ ಇದ್ದವೆಂದು ಅವರು ಹೇಳಿದರು. “ಕೆಲವು ದಿನಗಳ ಹಿಂದೆ, 2021ರ ಏಪ್ರಿಲ್ ಮತ್ತು ಮೇನಲ್ಲಿ – ಅಂದರೆ ಭಾರತದಲ್ಲಿ ಎರಡನೇ ಅಲೆಯು ತೀವ್ರವಾಗಿ ವ್ಯಾಪಿಸಿದ್ದ ಅವಧಿಯಲ್ಲಿ ತಮಿಳುನಾಡಿನ ವೆಲ್ಲೂರಿನ ಸಿಎಂಸಿ ನಡೆಸಿದ ಮತ್ತೊಂದು ಪ್ರಮುಖ ಅಧ್ಯಯನವು ಮಹತ್ವದ ವಿಷಯವನ್ನು ಬಯಲು ಮಾಡಿದೆ. ಒಂದು ಡೋಸ್‌ ಕೋವಿಶೀಲ್ಡ್‌ ಪಡೆದ ವ್ಯಕ್ತಿಯಲ್ಲಿ ಲಸಿಕೆಯ ಪರಿಣಾಮಕಾರಿತ್ವವು 61% ಮತ್ತು ಎರಡು ಡೋಸ್ ಪಡೆದ ವ್ಯಕ್ತಿಗಳಲ್ಲಿ ಪರಿಣಾಮಕಾರಿತ್ವವು 65% ಆಗಿರುವುದನ್ನು ವರದಿಯು ಬಹಿರಂಗಪಡಿಸಿದೆ. ಅಂದರೆ ಭಾಗಶಃ ಮತ್ತು ಪೂರ್ಣ ಪ್ರತಿರಕ್ಷಣೆಯ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲವೆಂದು ವರದಿ ತೋರಿಸಿದೆ. ಆದರೆ ವಿಶೇಷವಾಗಿ ಈ ಲೆಕ್ಕಾಚಾರಗಳು ಸ್ವಲ್ಪ ಮಟ್ಟಿನ ಅನಿಶ್ಚಿತತೆ ಒಳಗೊಂಡಿರುವುದರಿಂದ ಬಹಳ ಕಡಿಮೆ ವ್ಯತ್ಯಾಸ ಕಂಡುಬಂದಿರಬಹುದು,ʼʼ ಎಂದರು.

    ನಿರಂತರ ಅಧ್ಯಯನಗಳು ಮತ್ತು ಲಸಿಕೆ ಪರಿಣಾಮಕಾರಿತ್ವದ ಮೇಲ್ವಿಚಾರಣೆ

    ʻಪಿಜಿಐʼ ಮತ್ತು ವೆಲ್ಲೂರಿನ ʻಸಿಎಂಸಿʼ ಅಧ್ಯಯನಗಳಲ್ಲದೆ, ದೆಹಲಿಯಲ್ಲಿರುವ ಮತ್ತೆರಡು ವಿಭಿನ್ನ ಸಂಸ್ಥೆಗಳಿಂದ ಇತರ ಎರಡು ಅಧ್ಯಯನಗಳು ಹೊರಬೀಳುತ್ತಿವೆ ಎಂದು ಡಾ. ಅರೋರಾ ಹೇಳಿದರು. “ಒಂದು ಡೋಸ್‌ ಲಸಿಕೆಯಿಂದ ʻಬ್ರೇಕ್‌ಥ್ರೂ ಇನ್‌ಫೆಕ್ಷನ್‌ʼ (ಲಸಿಕೆ ಪಡೆಯುವುದರಿಂದ ಉಂಟಾಗುವ ಸೋಂಕು) ಸುಮಾರು 4% ರಷ್ಟಿದ್ದರೆ, ಎರಡು ಡೋಸ್‌ಗಳಿಂದ ʻಬ್ರೇಕ್‌ಥ್ರೂ ಇನ್‌ಫೆಕ್ಷನ್‌ʼ 5% ರಷ್ಟಿರುತ್ತದೆ. ಮೂಲತಃ ಯಾವುದೇ ರೀತಿಯ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಈ ಎರಡೂ ಅಧ್ಯಯನಗಳು ಹೇಳಿವೆ. ʻಬ್ರೇಕ್‌ಥ್ರೂ ಇನ್‌ಫೆಕ್ಷನ್‌ʼ ಪ್ರಮಾಣ ಶೇ. 1.5% – 2% ಎಂದು ಮತ್ತೊಂದು ಅಧ್ಯಯನವು ತೋರಿಸಿದೆ,ʼʼ ಎಂದು ಅರೋರಾ ಹೇಳಿದರು.

    ಲಸಿಕೆ ಕಾರ್ಯಕ್ರಮದ ವಿವಿಧ ಅಂಶಗಳ ಪರಿಣಾಮವನ್ನು ನಿರ್ಣಯಿಸಲು ಮತ್ತು ವರದಿ ಮಾಡಲು ವಿವಿಧ ಮೂಲಗಳಿಂದ ದತ್ತಾಂಶವನ್ನು ಸಂಯೋಜಿಸಲಾಗುವುದು ಎಂದು ಡಾ. ಅರೋರಾ ಹೇಳಿದರು. ಲಸಿಕೆ ಬಳಿಕ ಪ್ರತಿಕೂಲ ಪರಿಣಾಮಗಳ (ಎಇಎಫ್‌ಐ) ಮೇಲ್ವಿಚಾರಣೆಗಾಗಿ ಭಾರತವು ದೃಢವಾದ ವ್ಯವಸ್ಥೆಯನ್ನು ಹೊಂದಿದೆ ಎಂದು ಅವರು ಹೇಳಿದರು.

    ಈ ಪ್ರಶ್ನೆಗೆ ಉತ್ತರಿಸಿದ ಡಾ. ಅರೋರಾ, ಸಮುದಾಯದ ಆರೋಗ್ಯ ಮತ್ತು ಸಂರಕ್ಷಣೆಯ ದೃಷ್ಟಿಯಿಂದ ವೈಜ್ಞಾನಿಕವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. “ಕೋವಿಡ್-19 ಮತ್ತು ಲಸಿಕೆ ಬಹಳ ಕ್ರಿಯಾತ್ಮಕವಾಗಿವೆ. ಲಸಿಕೆಗಳ ನಡುವೆ ಕಡಿಮೆ ಅಂತರವು ನಮ್ಮ ಜನರಿಗೆ ಉತ್ತಮ ಎಂದು ಲಸಿಕೆ ನಿಗಾ ವೇದಿಕೆಯಿಂದ ನಾಳೆ ತಿಳಿದುಬಂದರೆ, ಅದರ ಪ್ರಯೋಜನವು ಕೇವಲ ಶೇಕಡ 5 ರಿಂದ 10ರಷ್ಟೇ ಆಗಿದ್ದರೂ ಸಹ, ಸಮಿತಿಯು ವಿವೇಚನೆ ಆಧಾರದ ಮೇಲೆ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಮತ್ತೊಂದೆಡೆ, ಪ್ರಸ್ತುತ ಕೈಗೊಂಡಿರುವ ನಿರ್ಧಾರವೇ ಉತ್ತಮವಾಗಿದೆ ಎಂದು ಕಂಡುಬಂದರೆ, ನಾವು ಅದನ್ನು ಮುಂದುವರಿಸುತ್ತೇವೆ.” ಎಂದರು. ಅಂತಿಮವಾಗಿ, ನಮ್ಮ ಸಮುದಾಯದ ಆರೋಗ್ಯ ಮತ್ತು ರಕ್ಷಣೆ ಮುಖ್ಯ ಎಂದು ಅವರು ಒತ್ತಿ ಹೇಳಿದರು.

    “ನಮ್ಮೆಲ್ಲಾ ಚರ್ಚೆಗಳು, ಹೊಸ ವೈಜ್ಞಾನಿಕ ಪುರಾವೆಗಳ ಸಂಶೋಧನೆ ಮತ್ತು ನಿರ್ಧಾರ ಕೈಗೊಳ್ಳುವಿಕೆಗೂ ಸಮುದಾಯದ ಆರೋಗ್ಯ ಹಾಗೂ ರಕ್ಷಣೆ ಧ್ಯೇಯವೇ ಚಾಲಕ ಶಕ್ತಿಯಾಗಿದೆ,ʼʼ ಎಂದು ಅವರು ಒತ್ತಿ ಹೇಳಿದರು.(ಪಿಐಬಿ ವರದಿ)

    ಬಿಜೆಪಿಯಲ್ಲಿ ಬೇಗುದಿಗೆ ಎಣೆ ಇಲ್ಲ;ಉಸ್ತುವಾರಿ ವಿರುದ್ಧವೇ ಅಸಮಾಧಾನ ಸ್ಫೋಟ

    ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ನಾಯಕತ್ವ ಬಿಕ್ಕಟ್ಟಿಗೆ ತೆರೆ ಎಳೆಯುವ ಪ್ರಯತ್ನ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ರಾಜ್ಯ ಉಸ್ತುವಾರಿ ಆರುಣ್‌ ಸಿಂಗ್‌ ವಿರುದ್ಧವೇ ಅತೃಪ್ತಿಯ ಹೊಗೆಯೆದ್ದಿದೆ. ಶಾಸಕರ ಅಭಿಪ್ರಾಯ ಕೇಳುವ ಮೊದಲೆ ನಾಯಕತ್ವ ಬದಲಿಲ್ಲ ಎಂದು ಅವರು ಪ್ರಕಟಿಸಿದ್ದು ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಶಾಸಕರ ಅತೃಪ್ತಿಗೆ ಕಾರಣವಾಗಿದೆ.

    ಬಿಕ್ಕಟ್ಟು ಶಮನ ಮಾಡುವ ಸಲುವಾಗಿ ನಾಳೆ (ಬುಧವಾರ) ಸಂಜೆ ಐದು ಗಂಟೆ ಹೊತ್ತಿಗೆ ಬೆಂಗಳೂರಿಗೆ ಲ್ಯಾಂಡ್‌ ಆಗಲಿದ್ದಾರೆ ಅರುಣ್‌ ಸಿಂಗ್.‌ ಏರ್‌ಪೋರ್ಟ್‌ನಲ್ಲಿಯೇ ಅವರನ್ನು ಓಲೈಸಲು ಸಿಎಂ ನಿಷ್ಠರು ಸಿದ್ಧತೆ ಮಾಡಿಕೊಂಡಿದ್ದರೆ, ಅಂಥ ಔಪಚಾರಿಕ ಕಸರತ್ತುಗಳಿಂದ ದೂರವಿರಲು ವಿರೋಧಿ ಬಣ ನಿರ್ಧರಿಸಿದೆ.

    ಒಂದೆಡೆ ಮುಖ್ಯಮಂತ್ರಿ ಬೆಂಬಲಿಗರ ಒತ್ತಡ, ಇನ್ನೊಂದೆಡೆ ಬಂಡಾಯ ಶಾಸಕರ ವರಸೆಯಿಂದ ಅಡಕತ್ತರಿಯಲ್ಲಿ ಸಿಲುಕಿರುವ ಅರುಣ್‌ ಸಿಂಗ್‌, ವರಿಷ್ಠರು ನೀಡಿರುವ ಸೂಚನೆಗಳ ಪಟ್ಟಿ ಇಟ್ಟುಕೊಂಡೇ ಎಲ್ಲ ಶಾಸಕರು, ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ ಎಂದು ಗೊತ್ತಾಗಿದೆ.

    ಅರುಣ್‌ ಸಿಂಗ್‌ ಅವರನ್ನು ವಿಮಾನ ನಿಲ್ದಾಣದಲ್ಲಿಯೇ ಎದಿರುಗೊಳ್ಳಲು ಅತೃಪ್ತರಲ್ಲದ ಶಾಸಕರು ಸಿದ್ಧತೆ ನಡೆಸಿದ್ದಾರೆ. ಈ ಪೈಕಿ ಶಾಸಕ ರೇಣುಕಾಚಾರ್ಯ ಏನು ಮಾಡುತ್ತಾರೆಂಬ ಕುತೂಹಲ ಎಲ್ಲರದ್ದು. ಮತ್ತೊಂದೆಡೆ ವಾರದಿಂದ ನಗರದ ಹೊರಗಿದ್ದ ಬಹುತೇಕ ಶಾಸಕರು ರಾಜಧಾನಿಗೆ ವಾಪಸ್‌ ಆಗುತ್ತಿದ್ದಾರೆ. ಕಳೆದ ೩ ದಿನಗಳಿಂದ ದೆಹಲಿಯಲ್ಲಿ ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿದ್ದ ಶಾಸಕ ಅರವಿಂದ ಬೆಲ್ಲದ್‌ ಕೂಡ ಅರುಣ್‌ ಸಿಂಗ್‌ ಬರುವುದಕ್ಕೆ ಮೊದಲೇ ವಾಪಸ್‌ ಬಂದಿದ್ದಾರೆ.

    ಸಿಎಂ ವಿರೋಧಿಗಳ ದೂರು ಹಾಗೂ ಸಿಎಂ ಆಪ್ತರ ಪ್ರತಿದೂರಿನಿಂದ ಕಂಗೆಟ್ಟಿರುವ ಹೈಕಮಾಂಡ್‌ ಈ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮನಸ್ಸು ಮಾಡಿದೆ. ಈ ನಡುವೆ ಅರವಿಂದ ಬೆಲ್ಲದ್‌ ಅವರು, “ದಿಲ್ಲಿ ನಾಯಕರನ್ನು ಭೇಟಿಯಾಗಿದ್ದು ನಿಜ. ಅವರಿಗೆ ಹೇಳಬೇಕಾದ್ದನ್ನು ಹೇಳಿದ್ದೇನೆ” ಎಂದು ಹೇಳಿದ್ದಾರೆ. ಇನ್ನು, ಅರುಣ್‌ ಸಿಂಗ್‌ ಮುಂದೆ ಶಾಸಕರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ನೀಡಲು ಪಕ್ಷ ನಿರ್ಧರಿಸಿದೆ.

    ಈ ಪೈಕಿ ಬಂಡಾಯ ಗುಂಪಿನಲ್ಲಿ ಗುರುತಿಸಿಕೊಂಡಿರುವ ಸಚಿವ ಸಿ.ಪಿ.ಯೋಗೇಶ್ವರ್‌, ಶಾಸಕ ಬಸವಗೌಡ ಪಾಟೀಲ್‌ ಯತ್ನಾಳ್‌, ಅರವಿಂದ ಬೆಲ್ಲಡ್‌, ಎಚ್.ವಿಶ್ವನಾಥ್‌, ಸುನೀಲ್ ಕುಮಾರ್ ಮುಂತಾದವರ ಜತೆ ಅರುಣ್‌ ಸಿಂಗ್‌ ಪ್ರತ್ಯೇಕ ಮಾತಕತೆ ನಡೆಸಲಿದ್ದಾರೆ. “ಈ ಬಗ್ಗೆ ಹೊರಗೆ ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇನ್ನು ಅರುಣ್‌ ಸಿಂಗ್‌ಗೆ ಹೇಳಬೇಕಾದ್ದನ್ನು ಹೇಳುತ್ತೇನೆ” ಎಂದಿದ್ದಾರೆ ವಿಶ್ವನಾಥ್.‌

    ಹುಣಸೂರಿನಲ್ಲಿ ತಮ್ಮ ಸೋಲು ಹೇಗಾಯಿತು? ಅದಕ್ಕೆ ಸಿ.ಪಿ.ಯೋಗೇಶ್ವರ್‌ ಮತ್ತು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್‌ ಹೇಗೆ ಕಾರಣರು ಎಂಬುದನ್ನು ವಿಶ್ವನಾಥ್‌ ಅವರು ಅರುಣ್‌ ಸಿಂಗ್‌ ಅವರಿಗೆ ಬಿಡಿಸಿ ಹೇಳುವ ನಿರೀಕ್ಷೆ ಇದೆ.

    ಅರುಣ್‌ ಸಿಂಗ್‌ ವಿರುದ್ಧ ದೂರು

    ಶಾಸಕರ ಅಭಿಪ್ರಾಯ ಆಲಿಸುವ ಮೊದಲೇ ಯಡಿಯೂರಪ್ಪ ಬದಲಾವಣೆ ಇಲ್ಲ ಎಂದು ಹೇಳಿದ್ದ ಅರುಣ್‌ ಸಿಂಗ್‌ ಬಗ್ಗೆ ಅರವಿಂದ ಬೆಲ್ಲದ್‌ ಸೇರಿ ಭಿನ್ನರ ಗುಂಪಿನ ಬಹುತೇಕ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿಗೆ ಶಾಸಕರ ಅಹವಾಲು ಕೇಳುವುದಕ್ಕೆ ಮೊದಲೇ ದಿಲ್ಲಿಯಲ್ಲಿ ಯಡಿಯೂರಪ್ಪ ಪರವಾಗಿ ಮಾತನಾಡಿದ್ದು ಸರಿಯಲ್ಲ. ಅವರಿಂದ ನಮಗೆ ನ್ಯಾಯ ಸಿಗಲಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಬೆಲ್ಲದ್‌ ಅವರಿಗೆ ಬಿ.ಎಲ್.‌ಸಂತೋಷ್‌ ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಉಸ್ತುವಾರಿ ಉಸಾಬರಿಯೇ ಇಲ್ಲದೆ ನೇರವಾಗಿ ವರಿಷ್ಠರನ್ನು ಭೇಟಿಯಾಗಿದ್ದಾರೆ.

    ಮತ್ತೊಂದೆಡೆ; ಬಸನಗೌಡ ಯತ್ನಾಳ್, ​​ತಿಪ್ಪಾರೆಡ್ಡಿ ಸಚಿವ ಯೋಗೇಶ್ವರ್‌ ಹಾಗೂ ಸುನೀಲ್ ಕುಮಾರ್ ಮುಂತಾದವರು ಸಿಂಗ್‌ ನಡೆಯ ಬಗ್ಗೆ ಕಿಡಿಕಾರಿದ್ದಾರೆ.

    ನಗರದಲ್ಲೇ‌ ಕೇಂದ್ರ ಸಚಿವರು

    ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ಮತ್ತು ಪ್ರಹ್ಲಾದ ಜೋಷಿ ಅವರನ್ನು ಅರುಣ್‌ ಸಿಂಗ್‌ ಅಭಿಪ್ರಾಯ ಸಂಗ್ರಹ ಮಾಡುವ ಸಮಯದಲ್ಲಿ ನಗರದಲ್ಲೇ ಇರುವಂತೆ ಸಿಎಂ ಬಣ ಕೇಳಿಕೊಂಡಿದೆ ಎಂದು ಗೊತ್ತಾಗಿದೆ. ಈ ಹಿನ್ನೆಯಲ್ಲಿ ಈ ಇಬ್ಬರೂ ಸಚಿವರು ನಾಳೆಯಿಂದ ಮೂರು ದಿನ ರಾಜಧಾನಿಯಲ್ಲೇ ಉಳಿಯಲಿದ್ದಾರೆನ್ನಲಾಗಿದೆ. ಇವರಿಬ್ಬರೂ ಬಹಿರಂಗವಾಗಿಯೇ ಯಡಿಯೂರಪ್ಪ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಅರುಣ್‌ ಸಿಂಗ್‌ ರಾಜ್ಯ ಕೋರ್‌ ಕಮಿಟಿ ಸದಸ್ಯರ ಜತೆಯೂ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆಂಬ ಮಾಹಿತಿ ಸಿಕ್ಕಿದೆ ಹಾಗೂ ಸಂಘ ಪರಿವಾರದ ಪ್ರಮುಖರ ಜತೆಯೂ ಅವರು ಭೇಟಿಯಾಗಲಿದ್ದಾರೆ. (cknewsnow.com)

    ಬಿಎಸ್ಸಿಗೆ ಸಿಇಟಿ ಮೂಲಕ ಪ್ರವೇಶ ಇಲ್ಲ

    ಬಿಎಸ್ಸಿಗೆ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಮೂಲಕ ಪ್ರವೇಶ ನೀಡುವ ಚಿಂತನೆಯನ್ನು ಸರಕಾರ ಕೈಬಿಟ್ಟಿದೆ ಎಂದು ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ತಿಳಿಸಿದರು.

    ವಿಜ್ಞಾನ ಬೋಧನೆ ಮತ್ತು ಕಲಿಕೆಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪದವಿ ವಿಜ್ಞಾನ ಪ್ರವೇಶಕ್ಕೂ ಸಿಇಟಿ ತರುವ ಯೋಚನೆ ಇತ್ತು. ಆದರೆ, ಸದ್ಯಕ್ಕೆ  ಕೈಬಿಡಲಾಗಿದೆ ಎಂದು ವಿವಿಧ ವಿವಿಗಳ ಕುಲಪತಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ತಿಳಿಸಿದರು.

    ಸಿಇಟಿ ಪರೀಕ್ಷೆ ಬಗ್ಗೆ ಹೈಕೋರ್ಟ್‌ ನೀಡಿರುವ ಸೂಚನೆ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಪ್ರಸಕ್ತ ವರ್ಷ ಪಿಯುಸಿ ಪಾಸಾದವರೆಲ್ಲ ಸಿಇಟಿ ಬರೆಯಬಹುದು. ನ್ಯಾಯಾಲಯ ನೀಡಿರುವ ಆದೇಶದ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಸಚಿವರ ಜತೆ ಚರ್ಚೆ ನಡೆಸಲಾಗುವುದು ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ವಿಶ್ವವಿದ್ಯಾಲಯಗಳಲ್ಲಿ ನಾಲ್ಕು ವರ್ಷಗಳ ಪದವಿ ಕೋರ್ಸ್‌; ಕುಲಪತಿಗಳಿಗೆ ಡಿಸಿಎಂ ಸಲಹೆ

    ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸಿನಂತೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪದವಿ ಕೋರ್ಸುಗಳನ್ನು ಆರಂಭ ಮಾಡುವಂತೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಕುಲಪತಿಗಳಿಗೆ ಸಲಹೆ ಮಾಡಿದ್ದಾರೆ.

    2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಎಲ್ಲ ಕುಲಪತಿಗಳ ಜತೆ ಬೆಂಗಳೂರಿನಲ್ಲಿ ಮಂಗಳವಾರ ವರ್ಚುಯಲ್‌ ಚರ್ಚೆ ನಡೆಸಿದ ನಂತರ ಡಿಸಿಎಂ ಅವರು ಮಾಧ್ಯಮಗಳಿಗೆ ಈ ಮಾಹಿತಿ ನೀಡಿದರು.

    ಕೋವಿಡ್‌ ಕಾರಣಕ್ಕೆ ಪ್ರಸಕ್ತ ವರ್ಷದಲ್ಲಿ ಪಿಯುಸಿ ವಿದ್ಯಾರ್ಥಿಗಳೆಲ್ಲರೂ ಪಾಸಾಗಿದ್ದಾರೆ. ವಿವಿಧ ಕೋರ್ಸುಗಳಿಗೆ ಬಹಳ ಬೇಡಿಕೆ ಬರುತ್ತಿದೆ. ವಿವಿಗಳಿಗೆ ಇದೊಂದು ಸುವರ್ಣಾವಕಾಶ. ನಾಲ್ಕು ವರ್ಷದ ಪದವಿ ತರಗತಿಗಳನ್ನು ಆರಂಭ ಮಾಡುವ ಮೂಲಕ ವಿವಿಗಳು ಪದವಿ ವ್ಯಾಸಂಗದ ಅಭಿಲಾಶೆಯುಳ್ಳ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಕುಲಪತಿಗಳಿಗೆ ಸೂಚಿಸಲಾಗಿದೆ ಎಂದರು.

    ಎನ್‌ಇಪಿ ಜಾರಿಗೆ ವಿಷಯವಾರು ಸಮಿತಿ ರಚನೆ:

    ಈ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ. ಅದಕ್ಕೆ ಸೂಕ್ತವಾದ ʼಕಾರ್ಯ ಚೌಕಟ್ಟುʼ ರೂಪಿಸಲು ವಿಷಯವಾರು ಸಮಿತಿ ರಚನೆ ಮಾಡುವಂತೆಯೂ ಕುಲಪತಿಗಳಿಗೆ ಸೂಚನೆ ನೀಡಲಾಗಿದ್ದು, ಜುಲೈ 15ರೊಳಗೆ ಈ ಸಮಿತಿಗಳು ವರದಿಗಳನ್ನು ಸಲ್ಲಿಸಬೇಕೆಂದು ತಿಳಿಸಲಾಗಿದೆ ಎಂದು ಡಿಸಿಎಂ ಹೇಳಿದರು.

    ಇನ್ನು ಸದ್ಯಕ್ಕೆ ನಮ್ಮನ್ನು ಕಾಡುತ್ತಿರುವ ಈ ವೈರಸ್‌ ಎಷ್ಟು ಕಾಲ ಇರುತ್ತೋ ಇಲ್ಲವೋ ಗೊತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಆನ್‌ಲೈನ್‌ ಮತ್ತು ಆಫ್ ಲೈನ್‌ ನಲ್ಲಿ ಕಲಿಯಲು ಅವಕಾಶ ಇರಲೇಬೇಕು. ಅದಕ್ಕೆ ಬೇಕಾದ ಎಲ್ಲ ತಾಂತ್ರಿಕ ಸೌಲಭ್ಯಗಳು ವಿದ್ಯಾಸಂಸ್ಥೆಗಳಲ್ಲಿ ಇರಬೇಕು. ಡಿಜಿಟಲ್‌ನಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವರ್ಚಯುಲ್‌ ಮೂಲಕ ಬೋಧನೆ ಮಾಡುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

    ಅಕ್ಟೋಬರ್‌ನಿಂದ ಹೊಸ ಶೈಕ್ಷಣಿಕ ವರ್ಷ

    ಎಲ್ಲ ವಿವಿಗಳ 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಅಕ್ಟೋಬರ್‌ ಮೊದಲ ವಾರದಲ್ಲಿ ಈ ವರ್ಷದ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಆರಂಭವಾಗುತ್ತವೆ. ಮೊದಲ ವರ್ಷದ ಪದವಿಗೆ ಅಕ್ಟೋಬರ್‌ ಮೊದಲ ವಾರದಿಂದಲೇ ದಾಖಲಾತಿ ಆರಂಭ ಮಾಡುವಂತೆ ಕುಲಪತಿಗಳಿಗೆ ತಿಳಿಸಲಾಗಿದೆ ಎಂದರು ಡಿಸಿಎಂ.

    ಕೆಲ ಕಡೆ ಪರೀಕ್ಷೆಗಳು ನಡೆದಿವೆ, ಇನ್ನು ಕೆಲವೆಡೆ ಆಗಿಲ್ಲ. ಈ ಬಗ್ಗೆ ಕೂಡ ಚರ್ಚೆ ನಡೆಸಲಾಯಿತು. ಇನ್ನು ಈಗಾಗಲೇ ದೈನಂದಿನ ತರಗತಿಗಳು ಶುರುವಾಗಿದ್ದು, ಅವುಗಳನ್ನು ಕೂಡ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಆಧಾರದಲ್ಲೇ ನಡೆಸಲಾಗುವುದು ಎಂದ ಅವರು, ಮುಂದಿನ ವರ್ಷದ ಪರೀಕ್ಷೆಗಳನ್ನು ಹೇಗೆ ನಡೆಸಬೇಕು ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳು ಪೈಪೋಟಿ ನಡೆಸಬೇಕಾದರೆ ಕಲಿಕೆ ಮತ್ತು ಬೋಧನೆಯಲ್ಲಿ ಗುಣಮಟ್ಟ ಇರಬೇಕು ಎಂಬ ಬಗ್ಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಲಾಯಿತು ಎಂದರು.

    ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿಕೊಂಡು ವಿದ್ಯಾಭ್ಯಾಸ ನಡೆಸುವ ನಿಟ್ಟಿನಲ್ಲಿ ಎಲ್ಲರಿಗೂ ಟ್ಯಾಬ್‌ ನೀಡಲಾಗುತ್ತಿದೆ. ಸ್ಮಾರ್ಟ್‌ ಕ್ಲಾಸ್‌ಗಳು ಶುರುವಾಗುತ್ತಿವೆ. ಈಗಾಗಲೇ ಸಮಗ್ರ ಕಲಿಕಾ ನಿರ್ವಹಣಾ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ಅವರು ಹೇಳಿದರು.

    ಏಕೀಕೃತ ವಿವಿ- ಕಾಲೇಜು ನಿರ್ವಹಣಾ ವ್ಯವಸ್ಥೆ

    ಮುಂದಿನ ದಿನಗಳಲ್ಲಿ ವಿ.ವಿಗಳು ಹಾಗೂ ಕಾಲೇಜುಗಳನ್ನು ಅನುಸಂಧಾನಗೊಳಿಸಿ ʼಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆʼ ಮೂಲಕ ಈ ವರ್ಷದಿಂದಲೇ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ಇದಕ್ಕಾಗಿ ಪ್ರತ್ಯೇಕ ಡಿಜಿಟಲ್‌ ಪೋರ್ಟಲ್‌ ಸಿದ್ಧವಾಗುತ್ತಿದ್ದು, ಅದನ್ನು ಇ-ಗವರ್ನೆನ್ಸ್‌ ಇಲಾಖೆ ಅಭಿವೃದ್ಧಿಪಡಿಸುತ್ತಿದೆ. ಜೂನ್‌ 25ರಿಂದ ಪ್ರಾಯೋಗಿಕವಾಗಿ ಇದನ್ನು ಬಳಸಲು ಸರಕಾರ ಅನುಮತಿ ನೀಡಿದ್ದು, ಜುಲೈ 15ಕ್ಕೆ ಲೋಕಾರ್ಪಣೆ ಆಗಲಿದೆ. ದಾಖಲಾತಿಗೆ ನಿಗದಿ ಮಾಡಿರುವ ದಿನಾಂಕಕ್ಕೆ ಮುನ್ನವೇ ಎಲ್ಲ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಈ ಪೋರ್ಟಲ್‌ ಬಳಕೆಗೆ ಸಿದ್ಧವಾಗಿರಬೇಕು ಎಂದು ಕುಲಪತಿಗಳಿಗೆ ಸೂಚಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    ಅಲ್ಲದೆ, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳು ಇನ್ನು ಮುಂದೆ ಇ-ಆಫೀಸ್‌ ಮೂಲಕವೇ ನಡೆಯುತ್ತವೆ. ಕಾಗದ ಪತ್ರಗಳಿಗೆ ಅವಕಾಶ ಇಲ್ಲ ಎಂದು ಇದೇ ವೇಳೆ ಸ್ಪಷ್ಟವಾಗಿ ತಿಳಿಸಿದರು.

    ಇದನ್ನೂ ಓದಿ

    ಶಾಲಾ ಶುಲ್ಕ; ಸಂಘರ್ಷ ನಿವಾರಿಸುವಂತೆ ಸಿದ್ದರಾಮಯ್ಯ ಪತ್ರ

    ಶುಲ್ಕ ವಿಚಾರದಲ್ಲಿ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳ ನಡುವೆ ಉಂಟಾಗಿರುವ ಸಂಘರ್ಷವನ್ನು ತಕ್ಷಣ ನಿವಾರಿಸುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಪೋಷಕರು ಪಾವತಿಸಬೇಕಾದ ರಿಯಾಯ್ತಿ ಶುಲ್ಕವನ್ನು ಸರ್ಕಾರವೇ ನಿರ್ಧರಿಸಬೇಕು ಮತ್ತು ಸರ್ಕಾರದ ನಿರ್ಧಾರ ಕಟ್ಟುನಿಟ್ಟಿನ ಜಾರಿ ಆಗುವಂತೆ ಕ್ರಮ ವಹಿಸಬೇಕು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ತಡೆ ಹಿಡಿದಿರುವ ಸಂಬಳ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ಖಾಸಗಿ ಶಾಲಾ ಆಡಳಿತ ಮಂಡಳಿಗಳು ಬ್ಯಾಂಕ್‍ಗಳಿಗೆ ಪಾವತಿಸಬೇಕಾದ ಕೊರೋನಾ ಅವಧಿಯಲ್ಲಿನ ಸಾಲದ ಮೇಲಿನ ಬಡ್ಡಿ ಮುಂತಾದ ವಿಚಾರಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅವರಿಗಾಗುವ ಹೊರೆ ತಗ್ಗಿಸಲು ಸಾಧ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

    ಕೊರೊನಾ ಕಾರಣದಿಂದಾಗಿ ಕಳೆದ ವರ್ಷದಿಂದ ಮಕ್ಕಳು ಶಾಲೆಗಳಿಗೆ ಹೋಗಲು ಸಾಧ್ಯವಾಗಲೇ ಇಲ್ಲ. ತರಗತಿಗಳು ನಡೆಯಲಿಲ್ಲವೆಂದು ಖಾಸಗಿ ಶಾಲೆ-ಕಾಲೇಜುಗಳು ಶಿಕ್ಷಕರಿಗೆ ಸಂಬಳವನ್ನು ನೀಡಿಲ್ಲ. ಸಂಬಳವಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಶಿಕ್ಷಕರು ನರೇಗಾ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅನೇಕರು ಹಣ್ಣು ತರಕಾರಿ ವ್ಯಾಪಾರಿಗಳಾಗಿದ್ದಾರೆ.

    ಇಂಥ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆ ಕಾಲೇಜುಗಳು ವಿದ್ಯಾರ್ಥಿಗಳ ಶುಲ್ಕದಲ್ಲಿ ವಿನಾಯಿತಿ ನೀಡಬೇಕೆಂದು ಪೋಷಕರು ಒತ್ತಾಯ ಮಾಡುತ್ತಿದ್ದಾರೆ. ಪೋಷಕರ ಒತ್ತಾಯಕ್ಕೆ ಮಣಿದ ಸರ್ಕಾರ ಕಳೆದ ವರ್ಷ ಬೋಧನಾ ಶುಲ್ಕದಲ್ಲಿ ಶೇ 30 ರಷ್ಟು ವಿನಾಯ್ತಿ ನೀಡಿ ಶೇ 70 ರಷ್ಟು ಶುಲ್ಕ ಕಟ್ಟಬೇಕೆಂದು ಆದೇಶ ಹೊರಡಿಸಿತ್ತು. ಆದರೆ ಈ ಆದೇಶ ಜಾರಿಗೆ ಬರಲಿಲ್ಲ.

    ವಾಹನ ಶುಲ್ಕ ಸೇರಿ ಇತರೆ ಶುಲ್ಕವನ್ನೂ ಕಟ್ಟಿಸಿಕೊಳ್ಳಲಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ನಿಷ್ಕ್ರಿಯವಾಗಿ ಕೂರುವುದು ಅಸಾಮಥ್ರ್ಯದ, ಲಾಬಿಗೆ ಮಣಿದಿರುವುದರ ಲಕ್ಷಣ. ಸರ್ಕಾರದ ಆದೇಶಕ್ಕೆ ಕಿಮ್ಮತ್ತು ಕೊಡದ ಖಾಸಗಿ ಶಿಕ್ಷಣ ಸಂಸ್ಥೆಗಳ ಕುರಿತು ಯಾವ ಕ್ರಮ ವಹಿಸಲಾಗಿದೆ ? ಪೂರ್ತಿ ಶುಲ್ಕವನ್ನು ಕಟ್ಟಲಾಗದ ಮಕ್ಕಳಿಗೆ ಮುಂದಿನ ತರಗತಿಗಳಿಗೆ ಪ್ರವೇಶ ನೀಡದೆ ಶೋಷಿಸುತ್ತಿರುವ ಶಾಲೆಗಳ ವಿಚಾರದಲ್ಲಿ ಯಾವ ಕ್ರಮ ವಹಿಸಲಾಗಿದೆ ?ಎಂದು ರಾಜ್ಯದ ಜನರಿಗೆ ಸ್ಪಷ್ಟಪಡಿಸಬೇಕಿದೆ.

    ಜುಲೈ 1 ರಿಂದ ಶೈಕ್ಷಣಿಕ ವರ್ಷದ ತರಗತಿಗಳನ್ನು ಆರಂಭಿಸಲು ಹಾಗೂ ದಿನಾಂಕ 15-6-2021 ರಿಂದಲೇ ದಾಖಲಾತಿ ಪ್ರಕ್ರಿಯೆ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಆದರೆ, ಶುಲ್ಕ ವಸೂಲಿ ಬಗ್ಗೆ ಇಲಾಖೆ ಯಾವುದೇ ಸ್ಪಷ್ಟ ಸೂಚನೆ ನೀಡಿಲ್ಲ. ಹೀಗಾಗಿ ಕಳೆದ ವರ್ಷದಂತೆಯೇ ಈ ಶೈಕ್ಷಣಿಕ ವರ್ಷದಲ್ಲೂ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳ ನಡುವೆ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ.

    ಕಳೆದ ವರ್ಷ ಶಾಲೆಗೆ ಮಕ್ಕಳು ಕಾಲಿಡಲು ಸಾಧ್ಯವಾಗದಿದ್ದರೂ ಬಸ್ ಶುಲ್ಕವನ್ನೂ ವಸೂಲಿ ಮಾಡಿದ ಶಾಲೆಗಳೂ ಇವೆ. ಈ ವರ್ಷವೂ ಇದೇ ಪರಿಸ್ಥಿತಿ ಮುಂದುವರೆದಿದೆ. ಸಾಲದ್ದಕ್ಕೆ ಸರ್ಕಾರ ಶೇ 30 ರಷ್ಟು ಶುಲ್ಕ ಕಡಿತ ಮಾಡಿದ್ದು ಹಿಂದಿನ ವರ್ಷಕ್ಕೆ ಮಾತ್ರ, ಈ ವರ್ಷ ಸರ್ಕಾರವೇ ಪೂರ್ಣ ಶುಲ್ಕ ವಸೂಲಿ ಮಾಡಲು ಒಪ್ಪಿಗೆ ಕೊಟ್ಟಿದೆ ಎಂದು ಆಡಳಿತ ಮಂಡಳಿಗಳು ಪೋಷಕರಿಗೆ ಹೇಳುತ್ತಿವೆ. ಹೀಗಾಗಿ ತಕ್ಷಣ ಸರ್ಕಾರ ಈ ವಿಚಾರದಲ್ಲಿ ತನ್ನ ನಿಲುವು ಏನು ಎನ್ನುವುದನ್ನು ಸ್ಪಷ್ಟಪಡಿಸಬೇಕು ಮತ್ತು ಶುಲ್ಕದ ಪ್ರಮಾಣವನ್ನು ಸರ್ಕಾರವೇ ನಿರ್ಧರಿಸಿ ತನ್ನ ನಿರ್ಧಾರ ಕಟ್ಟುನಿಟ್ಟಾಗಿ ಜಾರಿ ಆಗುವಂತೆ ಕ್ರಮ ವಹಿಸಬೇಕು ಎಂದು ಸಿದ್ದರಾಮಯ್ಯ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

    ಕೋವಿಡ್ ಸೋಂಕು; ಮುಂದುವರೆದ ಇಳಿಕೆ

    ದೇಶದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 9,13,378ಕ್ಕೆ ಇಳಿಕೆಯಾಗಿದೆ.

    ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 60,471 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಕಳೆದ 75 ದಿನಗಳಲ್ಲಿ ದಾಖಲಾಗಿರುವ ಅತ್ಯಂತ ಕಡಿಮೆ ಪ್ರಮಾಣ ಇದಾಗಿದೆ.

    ದೇಶಾದ್ಯಂತ ಇದುವರೆಗೆ 2,82,80,472 ಸೋಂಕಿತರು ಗುಣಮುಖರಾಗಿದ್ದಾರೆ.

    ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 1,17,525 ಸೋಂಕಿತರು ಗುಣಮುಖರಾಗಿದ್ದಾರೆ.

    ಸತತ 33ನೇ ದಿನದಲ್ಲಿ ಪ್ರತಿನಿತ್ಯ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳಿಗಿಂತ ದೈನಂದಿನ ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಇದರೊಂದಿಗೆ ಚೇತರಿಕೆ ದರ ಶೇಕಡ 95.64ಕ್ಕೆ ಸುಧಾರಣೆ ಕಂಡಿದೆ.

    ವಾರದ ಪಾಸಿಟಿವಿಟಿ ದರ ಅಥವಾ ಸೋಂಕಿತರ ಪ್ರಮಾಣ ಶೇಕಡ 3.45ಕ್ಕೆ ಇಳಿಕೆ ಕಂಡಿದ್ದು, ಸತತ 8ನೇ ದಿನದಂದು ಶೇಕಡ 5ರ ಮಟ್ಟದಿಂದ ಕೆಳಗಿದೆ.

    ದೇಶಾದ್ಯಂತ ಕೋವಿಡ್ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಇದುವರೆಗೆ 38.13 ಕೋಟಿ ಜನರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ.

    ದೇಶವ್ಯಾಪಿ ನಡೆಸುತ್ತಿರುವ ಬೃಹತ್ ಲಸಿಕಾ ಆಂದೋಲನದಲ್ಲಿ ಇದುವರೆಗೆ 25.90 ಕೋಟಿ ಲಸಿಕಾ ಡೋಸ್ ಗಳನ್ನು ನೀಡಲಾಗಿದೆ.

    ಪ್ರಿಪೇರ್ ಎಜುಟೆಕ್: ಕನ್ನಡ ವಿದ್ಯಾರ್ಥಿಗಳಿಗೆ ಹೊಸ ಆಶಾಕಿರಣ

    ಕರ್ನಾಟಕದ ಅದರಲ್ಲಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪಠ್ಯಪುಸ್ತಕ, ಇಂಗ್ಲಿಷ್ ಟೀಚಿಂಗ್ ಒಮ್ಮೊಮ್ಮೆ ಕಷ್ಟವೆಂದೆನಿಸುತ್ತದೆ. ಅಯ್ಯೋ ಕ್ಲಾಸ್ನಲ್ಲಿ ಏನು ಹೇಳ್ತರಪ್ಪ. ಒಂದು ಪದನೂ ಅರ್ಥ ಆಗೋದಿಲ್ಲ ಎನ್ನುವುದು ಬಹುತೇಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಗೋಳು. ಅದರಲ್ಲಿಯೂ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಯ ಇತರೆ ಕೋರ್ಸ್‌ಗಳನ್ನು ಕಲಿಯಲು ಎಸ್ಎಸ್ಎಲ್ಸಿ, ಪಿಯುಸಿ ಬಳಿಕ ಸೇರಿದ ವಿದ್ಯಾರ್ಥಿಗಳಿಗೆ ಟೀಚಿಂಗ್ ಅರ್ಥವಾಗದೆ ಕಷ್ಟಪಡುವುದುಂಟು. ಈ ಲೆಕ್ಚರರ್ ಕನ್ನಡದಲ್ಲಿ ಒಂದೂ ವರ್ಡ್ ಹೇಳೋದಿಲ್ಲ ಎನ್ನುವುದು ವಿದ್ಯಾರ್ಥಿಗಳ ದೂರು.

    ಕನ್ನಡ ವಿದ್ಯಾರ್ಥಿಗಳೇ ಭಯಬೇಡ

    ಆರಂಭಿಕ ಶಿಕ್ಷಣದಲ್ಲಿ ಮೊದಲ ಮತ್ತು ಎರಡನೇಯ ಭಾಷೆಯಾಗಿ ಕನ್ನಡವನ್ನು ಓದಿರುವ ಬಹುತೇಕ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿರುವ ಕೋರ್ಸ್‌ಗಳು, ಅಲ್ಲಿರುವ ಪದಪುಂಜಗಳು ಅರ್ಥವಾಗದೆ ಪರಿತಪಿಸುತ್ತಾರೆ. ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಕೇರ್ ಇಂತಹ ಕಷ್ಟದ ವಿಷಯಗಳನ್ನು ಕನ್ನಡದಲ್ಲಿ, ಕಂಗ್ಲಿಷ್ನಲ್ಲಿ ಯಾರಾದರೂ ಹೇಳಿಕೊಡುವಂತೆ ಇದ್ದರೆ…. ಎಂದು ಸಾಕಷ್ಟು ವಿದ್ಯಾರ್ಥಿಗಳು ಆಲೋಚಿಸುತ್ತಿರಬಹುದು. ಇಂತಹ ಸಾಹಸಕ್ಕೆ ಬಾಗಲಕೋಟೆಯ ಜನಪ್ರಿಯ ವೈದ್ಯರೊಬ್ಬರು ಕೈಹಾಕಿದ್ದಾರೆ. ಬಾಗಲಕೋಟೆಯ ಜನಪ್ರಿಯ ನೆಪ್ರೊಲಜಿಸ್ಟ್ ಡಾ. ಸಂದೀಪ್ ಹುಯಿಲಗೋಳ ಅವರ, ಒಂದಿಷ್ಟು ಸಮಾನಾಸಕ್ತ ಪರಿಣಿತರನ್ನು ಒಟ್ಟಾಗಿಸಿ ಕನ್ನಡ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷ Preped ಸ್ಟಾರ್ಟಪ್ ಆರಂಭಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳು ಇದನ್ನು ಬಳಸಬಹುದು ಎಂದು ಡಾ. ಸಂದೀಪ್‌ ಮಾಹಿತಿ ನೀಡಿದ್ದಾರೆ.

    ಸ್ಟಾರ್ಟಪ್ ಹಿಂದಿನ ಕಾಳಜಿ

    ಒಳ್ಳೆಯ ಭವಿಷ್ಯ ಪಡೆಯುವುದು ಎಲ್ಲರ ಕನಸು. ಆದರೆ, ಕೆಲವೊಮ್ಮೆ ಇಂತಹ ಕಷ್ಟದ ಇಂಗ್ಲಿಷೇ ಭೂತವಾಗಿ ಕಾಡುವುದುಂಟು. ಕೆಲವೊಮ್ಮೆ ಸಾಕಷ್ಟು ಪ್ರತಿಭೆ ಇರುವ ಗ್ರಾಮೀಣ ಪ್ರತಿಭೆಗಳು ಈ ಇಂಗ್ಲಿಷ್‌ನಿಂದಾಗಿ ಬದಿಗೆ ಸರಿಯುವುದುಂಟು. ಮುಖ್ಯವಾಗಿ ಆರೋಗ್ಯ ಸೇವಾ ವಲಯದಲ್ಲಿ ಈ ರೀತಿ ಆದರೆ ಒಳ್ಳೆಯ ಸೇವೆ ಜನರಿಗೆ ದೊರೆಯುವುದು ಕಷ್ಟವಾಗುತ್ತದೆ. ಆದರೆ, ಕಲಿಯಲು ಆಸಕ್ತಿ ಉಳ್ಳವರಿಗೆ ಭಾಷೆ ಅಡ್ಡಿಯಾಗಬಾರದು ಎನ್ನುವುದು ಡಾ. ಸಂದೀಪ್ ಹುಯಿಲಗೋಳ ಅವರ ಕಾಳಜಿ.

    ಶೈಕ್ಷಣಿಕ ಹಬ್ ಆದ ಬಾಗಲಕೋಟೆಯಲ್ಲಿ ಡಾ. ಸಂದೀಪ್ ಅವರು ಕನ್ನಡ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಯ ಬೋಧಿಸುವ ವಿಶೇಷ ಸೇವೆ ಪರಿಚಯಿಸಿದ್ದಾರೆ. ಇವರ ಈ Preped ಸ್ಟಾರ್ಟಪ್‌ಗೆ ಹಲವು ಜನರು ಕೈ ಜೋಡಿಸಿದ್ದು, ಶೀಘ್ರದಲ್ಲಿ ದೊಡ್ಡ ಮಟ್ಟದಲ್ಲಿ ಎಲ್ಲರಿಗೂ ಲಭ್ಯವಾಗಲಿದೆ. ಈ ಸೇವೆ ಕೇವಲ ಬಾಗಲಕೋಟೆಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಎಲ್ಲರಿಗೂ ದೊರಕಬೇಕು ಎಂಬ ಕಾಳಜಿಯಿಂದ ಇದಕ್ಕಾಗಿ ವಿಶೇಷ ಆನ್ಲೈನ್ ಕೋರ್ಸ್‌ಗಳನ್ನು ಆರಂಭಿಸಿದ್ದಾರೆ. ಅತ್ಯಂತ ಕಡಿಮೆ ದರದಲ್ಲಿ ಈ ಕೋರ್ಸ್‌ಗಳನ್ನು ಕಲಿಯುವ ಅವಕಾಶ ವಿದ್ಯಾರ್ಥಿಗಳಿಗಿದೆ.ಅಂದರೆ ಕೆಲವು ನೂರು ರೂಪಾಯಿ ಮೊತ್ತಕ್ಕೆ ಕೋರ್ಸ್‌ಗಳು ಲಭ್ಯವಿದೆ.. ಇದಕ್ಕಾಗಿ ಇವರಿಗೆ ಮತ್ತು ಇವರ ತಂಡಕ್ಕೆ ಅಭಿನಂದನೆ ಸಲ್ಲಿಸಲೇಬೇಕು. ಜೊತೆಗೆ ಇನ್ನು ಕೆಲವೇ ದಿನಗಳಲ್ಲಿ ಇದಕ್ಕಾಗಿ App ಹೊರತರಲಿದ್ದು, ವಿದ್ಯಾರ್ಥಿಗಳು ತಮ್ಮ smartphone ಮೂಲಕವೇ ಕಲಿಯಬಹುದು.

    Preped ವಿಶೇಷತೆಗಳೇನು?

    •  ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಗೆ ಸಂಬಂಧಪಟ್ಟ ಕೋರ್ಸ್‌ಗಳನ್ನು ಅತ್ಯಂತ ಕಡಿಮೆ ಶುಲ್ಕದಲ್ಲಿ ಕಲಿಯುವ ಅವಕಾಶ. (ಕೇವಲ 300 ರೂ, 500 ರೂ. ಗೆ ಇಂತಹ ಕೋರ್ಸ್‌ ಗೆ ಸೇರಬಹುದಾಗಿದೆ).

    •    ಕನ್ನಡ ವಿದ್ಯಾರ್ಥಿಗಳನ್ನುಗಮನದಲ್ಲಿಟ್ಟುಕೊಂಡು ನರ್ಸಿಂಗ್, ಪ್ಯಾರಮೆಡಿಕಲ್, ಅಲೈಡ್ ಹೆಲ್ತ್ಕೇರ್ ಸಬ್ಜೆಕ್ಟ್ಗಳನ್ನು ಅತ್ಯಂತ ಸರಳವಾಗಿ ಅರ್ಥ ಮಾಡಿಸುವ ಪ್ರಯತ್ನ ಇದಾಗಿದೆ.

    •   ಗುಣಮಟ್ಟದ ಶಿಕ್ಷಣ ಎಲ್ಲರಿಗೂ ದೊರಕಬೇಕುಎನ್ನುವುದು preped.in ಕಾಳಜಿ. ಈ ವಿಶೇಷ ಕೋರ್ಸ್‌ಗಳಿಗೆ ಸೇರಿದ ವಿದ್ಯಾರ್ಥಿಗಳು ತಮ್ಮ ನರ್ಸಿಂಗ್, ಪ್ಯಾರಮೆಡಿಕಲ್, ಅಲೈಡ್ ಹೆಲ್ತ್ಕೇರ್ ಕೋರ್ಸ್ ಗಳನ್ನು ಅತ್ಯಂತ ಸುಲಭವಾಗಿ ಪಾಸ್ ಆಗಬಹುದು.

    •   Preped. ಇನ್ ವೆಬ್ ಮತ್ತು ಆಪ್‌ನಲ್ಲಿ 500ಕ್ಕೂ ಹೆಚ್ಚು ವಿಡಿಯೋ ಉಪನ್ಯಾಸಗಳನ್ನು ಅಪ್ಲೋಡ್ ಮಾಡಲಾಗಿದೆ. ಸ್ಥಳೀಯ ಭಾಷೆಯಲ್ಲಿ ಬೋಧಕರು ಬೋಧಿಸುವುದು ಇದರ ವಿಶೇಷ. ಮುಖ್ಯವಾಗಿ ಕನ್ನಡಿಗರಿಗೆ ಕನ್ನಡ ಭಾಷೆಯಲ್ಲಿ ಕಲಿಯಲು ಸಾಧ್ಯವಾಗಲಿದೆ. ಶೀಘ್ರದಲ್ಲಿ ಕೋರ್ಸ್‌ಗಳನ್ನು ಕಲಿಯಬಹುದು.

    •     10ನೇ ತರಗತಿಬಳಿಕದ ನರ್ಸಿಂಗ್, ಪ್ಯಾರಮೆಡಿಕಲ್, ಅಲೈಡ್ ಹೆಲ್ತ್‌ಕೇರ್‌ ವಿಷಯಗಳನ್ನುಕಲಿಯಬಹುದು.

    ಸೂಪರ್ ಆಗಿದೆ ಅಲ್ವ ಸ್ನೇಹಿತರೇ, ನೀವು ವಿದ್ಯಾರ್ಥಿಯಾಗಿದ್ದರೆ ಈಗಲೇ preped.in ಪರಿಶೀಲಿಸಿರಿ.ಈಗಲೇ ಈ ಮಾಹಿತಿಯನ್ನು, ಲೇಖನದ ಲಿಂಕ್‌ ಅನ್ನು ಸೇವ್‌ ಮಾಡಿಟ್ಟುಕೊಳ್ಳಿ. ಮುಂದೊಂದು ದಿನ ಅಗತ್ಯಬಿದ್ದಾಗ ಮಾಹಿತಿ ಹುಡುಕುವುದು ಸುಲಭವಾಗಲಿದೆ. ಎಲ್ಲಾದರೂ ಈ ಲೇಖನ ಓದುತ್ತಿರುವುದು ವಿದ್ಯಾರ್ಥಿಗಳ ಹೆತ್ತವರು, ಪೋಷಕರು ಆಗಿದ್ದರೆ ಖಂಡಿತವಾಗಿಯೂ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಪ್ರಿಪೇರ್ ಎಜುಟೆಕ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಿರಿ.

    ಪ್ರಿಪೇರ್ ಎಜುಟೆಕ್ ವೆಬ್ಸೈಟ್  ನೋಡಲು ಇಲ್ಲಿ ಕ್ಲಿಕ್ ಮಾಡಿ

    ಪ್ರಿಪೇರ್ ಎಜುಟೆಕ್ ಅವರ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ.

    ಶೀಘ್ರದಲ್ಲಿ ಪ್ರಿಪೆಡ್‌.ಇನ್‌ App ಲಾಂಚ್‌ ಆಗಲಿದ್ದು, ಹೆಚ್ಚಿನ ಮಾಹಿತಿಗೆ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡುತ್ತ ಇರಿ. ಧನ್ಯವಾದ

    (ಪ್ರಾಯೋಜಿತ ಬರಹ)

    error: Content is protected !!