ಭಾರತೀಯ ಪಂಚಾಂಗದ ಪ್ರಕಾರ ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ
ಶಾರ್ವರಿ ನಾಮ ಸಂವತ್ಸರದ ಜ್ಯೇಷ್ಠ ಕೃಷ್ಣ ಅಮಾವಾಸ್ಯೆ 21-06-2020 ರವಿವಾರ, ಮೃಗಶಿರ ಹಾಗೂ ಆರಿದ್ರಾ ನಕ್ಷತ್ರದಲ್ಲಿ, ಮಿಥುನ ರಾಶಿಯಲ್ಲಿ, ಸಿಂಹ ಮತ್ತು ಕನ್ಯಾ ಲಗ್ನಗಳಲ್ಲಿ , ಗ್ರಹಣ ಸಂಭವಿಸಲಿದೆ.
ಗ್ರಹಣ ಸಮಯ : ಜೂನ್ 21, 2020 ರವಿವಾರ 03 ಗಂಟೆ 19 ನಿಮಿಷ
ಸ್ಪರ್ಶ : ಬೆಳಿಗ್ಗೆ 10-13, ಮಧ್ಯ : ಬೆಳಿಗ್ಗೆ 11-52 ಮೋಕ್ಷ : ಮಧ್ಯಾಹ್ನ 01-32
ಒಂದಂತೂ ಎಲ್ಲರೂ ಒಪ್ಪುವ ವಿಷಯವೆಂದರೆ, ವೇದಗಳ ಕಾಲದಿಂದಲೂ, ಸೂರ್ಯ/ಚಂದ್ರ ಗ್ರಹಣಗಳು ಇಷ್ಟೇ ಸಮಯಕ್ಕೆ ಸಂಭವಿಸುತ್ತದೆ ಹಾಗೂ ಮುಗಿಯುತ್ತದೆ ಎಂದು ಕರಾರುವಕ್ಕಾಗಿ ಹೇಳುವ ಪಂಚಾಂಗಗಳ ಹಿಂದೆ ವೈಜ್ಞಾನಿಕ ಲೆಕ್ಕಾಚಾರಗಳು ಇದೆ ಎಂಬುದು ಪಕ್ಕಾ.
ಗ್ರಹಣ ಎಂದಕೂಡಲೇ ಕೇವಲ ಕೆಟ್ಟದ್ದು ಸಂಭವಿಸುತ್ತದೆ. ರಾಹು ಕೇತು ಎಂಬ ರಾಕ್ಷಸರು ಭೂಮಿಗೆ ಕೆಟ್ಟದ್ದನ್ನ ಮಾಡುತ್ತಾರೆ. ಅದಕ್ಕೆಇಂಥಹದೇ ಗ್ರಹಣಾಚರಣೆಗಳನ್ನು ಮಾಡಲೇ ಬೇಕು ಎಂದು ಇಂದಿಗೂ ಟಿವಿ ಗಳಲ್ಲಿ ಗಂಟೆಗಟ್ಟಲೆ ಜೋತಿಷ್ಯ ಕಾರ್ಯಕ್ರಮಗಳಲ್ಲಿ ಪುಕ್ಸಟ್ಟೆ ಸಲಹೆಗಳನ್ನು ಕೊಡುತ್ತಾ ಭಯದ ವಾತಾವರಣ ಸೃಷ್ಟಿ ಮಾಡಿ ಮೂಢನಂಬಿಕೆಗಳನ್ನ ಉಳಿಸಿ, ಬೆಳೆಸುತ್ತಿದ್ದಾರೆ.
ಗ್ರಹಣ ಸಮಯದಲ್ಲಿ ವೈಜ್ಞಾನಿಕವಾಗಿ ನಭೋಮಂಡಲದಲ್ಲಿ ಆಗುವ ಬದಲಾವಣೆಗಳೇನು? ಹೇಗೆ ಆಗುವ ಬದಲಾವಣೆಯ ಪರಿಣಾಮ ಭೂಮಿಯ ಮೇಲೆ ಏನಾದರು ವ್ಯತ್ಯಾಸವಾಗುತ್ತದೆಯಾ? ಒಂದು ಪಕ್ಷ ಆದರೆ, ಇದರ ಪರಿಣಾಮ ಎಷ್ಟು ದಿನಗಳ ವರೆಗೆ ಇರುಲು ಸಾಧ್ಯ? ನಿಜವಾದ ಗ್ರಹಣಾಚರಣೆಯಲ್ಲಿರುವ ವೈಜ್ಞಾನಿಕ ಹಿನ್ನಲೆ ಏನು ಎಂಬುದನ್ನ ವಿಶ್ಲೇಷಣೆ ಮಾಡುವ ಪ್ರಯತ್ನ ಇಲ್ಲಿದೆ .
ಎಲ್ಲರಿಗೂ ತಿಳಿದಿರುವಂತೆ ಸೂರ್ಯ, ಭೂಮಿ, ಚಂದಿರನ ಪಥಗಳು ಸಮಾನಾಂತರ ರೇಖೆಯಲ್ಲಿ ಬಂದಾಗ ಗ್ರಹಣಗಳು ( ನೆರಳು) ಸಂಭವಿಸುತ್ತವೆ. ಭೂಮಿಯ ನೆರಳು ಚಂದ್ರನಲ್ಲಿ ಬಿದ್ದಾಗ. ಚಂದ್ರ ಗ್ರಹಣ ಚಂದಿರನ ನೆರೆಳು ಭೂಮಿಯಲ್ಲಿ ಹಾದುಹೋದಾಗ ಸೂರ್ಯಗ್ರಹಣ. ಇಲ್ಲಿ ವಿಶೇಷವಾಗಿ ತಿಳಿಯಬೇಕಾಗಿದ್ದು ಕೆಲವೊಮ್ಮೆ ರಾಹುಗ್ರಸ್ತ, ಮತ್ತೊಮ್ಮೆ ಕೇತುಗ್ರಸ್ತ ಚಂದ್ರ/ಸೂರ್ಯ ಗ್ರಹಣ ಎನ್ನುವ ಪದಗಳು.
ಈ ರಾಹು ಹಾಗು ಕೇತು ಯಾರು?
ರಾಹು ಕೇತುಗಳಿಗೆ ಯಾಕೆ ಭಾರತೀಯ ಪಂಚಾಂಗದಲ್ಲಿ ಇಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ? ರಾಹು ಕೇತುಗಳೆರೆಡೂ ಕೇವಲ ಕಾಲ್ಪನಿಕ ಗ್ರಹಗಳು ( ಭೂಮಿ ಮತ್ತು ಚಂದ್ರನ ಪರಿಧಿಯ ಉತ್ತರದಿಕ್ಕನ್ನು ಸಂಧಿಸುವುದು ರಾಹು, ದಕ್ಷಿಣ ದಿಕ್ಕನ್ನು ಸಂಧಿಸುವುದು ಕೇತು) ಗ್ರಹಣ ಕಾಲದಲ್ಲಿ ಭೂಮಿಯ ನೆರೆಳು ಉತ್ತರ ದಿಕ್ಕಿನಲ್ಲಿ ಚಂದಿರನಲ್ಲಿ ಬಿದ್ದರೆ ರಾಹುಗ್ರಸ್ತ, ದಕ್ಷಿಣದಲ್ಲಿ ಬಿದ್ದರೆ ಕೇತುಗ್ರಸ್ತ. ಅದೇ ರೀತಿ ಭೂಮಿಯ ಚಂದಿರನ ನೆರೆಳು ಯಾವ ದಿಕ್ಕಿನಲ್ಲಿ ಬೀಳುತ್ತದೋ ಅದರ ಆಧಾರದ ಮೇಲೆ ರಾಹು ಕೇತು ಗ್ರಸ್ತ ಗ್ರಹಣ ಎಂದು ನಿರ್ಧರಿಸುತ್ತಾರೆ.
ಗ್ರಹಣಾಚರಣೆಯ ವೈಜ್ಞಾನಿಕ ವಿಶ್ಲೇಷಣೆ.
ಒಂದು ವೈಜ್ಞಾನಿಕ ವರದಿಯ ಪ್ರಕಾರ ಸಾಮಾನ್ಯ ಸೂರ್ಯನ ಬೆಳಕು ಮತ್ತು ಗ್ರಹಣ ಹಂತಕ್ಕೆ ಒಡ್ಡಿಕೊಳ್ಳುವ ಸಮಯದಲ್ಲಿ ಸೂರ್ಯನ ಬೆಳಕಿನಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಈ ಅಧ್ಯಯನದ ಸಮಯದಲ್ಲಿ ಬ್ಯಾಕ್ಟೀರಿಯಾದ ವಸಾಹತುಗಳು ಸ್ಮೀಯರ್ ಪರೀಕ್ಷೆ ಮತ್ತು ಸೂಕ್ಷ್ಮತೆಯ ಮಾದರಿಯಲ್ಲಿ ರೂಪ ವಿಜ್ಞಾನದಲ್ಲಿ ವ್ಯತ್ಯಾಸವನ್ನು ತೋರಿಸಿದೆ. ಒಂದು ಶಿಲೀಂಧ್ರ ಪ್ರಭೇದಗಳು ಮತ್ತು ಮೂರು ಬ್ಯಾಕ್ಟೀರಿಯಾದ ಪ್ರತ್ಯೇಕತೆಗಳನ್ನು ಅಧ್ಯಯನ ಮಾಡಲಾಯಿತು. ಗ್ರಹಣ ಸಮಯದಲ್ಲಿ ಸೂರ್ಯನ ಬೆಳಕಿಗೆ ಪ್ರಭೇದಗಳು ಒಡ್ಡಿಕೊಳ್ಳುವುದರ ಮೇಲೆ ಅವುಗಳ ರೂಪವಿಜ್ಞಾನದಲ್ಲಿ ಒಂದು ನಿರ್ದಿಷ್ಟ ಬದಲಾವಣೆಯನ್ನು ತೋರಿಸಿದವು. ಇದರ ಅರ್ಥ ಗ್ರಹಣ ಸಮಯದಲ್ಲಿ ಭೂಮಿಗೆ ಬಡಿಯುವ ಸೂರ್ಯನ ಬೆಳಕಿನಲ್ಲಿ ಆಗುವ ವ್ಯತ್ಯಾಸ ಜೀವಿಗಳ ಮೇಲೆ ಸೂಕ್ಷ್ಮ ಬದಲಾವಣೆ ತರುತ್ತದೆ ಎಂದು ನಿಖರವಾಗಿ ತಿಳಿಯಬಹುದು.
ಈ ಸೂಕ್ಷ್ಮ ಬದಲಾವಣೆ ಮಾನವನ ದೇಹದ ಆರೋಗ್ಯದಲ್ಲಿ ಏರುಪೇರು ಆಗುವುದನ್ನು ತಡೆಗಟ್ಟಲು, ಗ್ರಹಣಸಮಯದಲ್ಲಿ ಸೂರ್ಯನ ಕಿರಣಗಳಿಗೆ ಮೈ ಒಡ್ಡುವುದನ್ನು ತಪ್ಪಿಸಲು ಗ್ರಹಣಾಚರಣೆ ಬಂದಿರಬಹುದು.
ಭಾರತೀಯ ಸಂಸ್ಕೃತಿಯಲ್ಲಿ ಹಿಂದಿನಿಂದಲೂ ಗ್ರಹಣ ಕಾಲದಲ್ಲಿಕೆಳಗಿನ ಪ್ರಮುಖ ಆಚರಣೆಗಳು ಪಾಲಿಸುತ್ತಾ ಬಂದಿದ್ದಾರೆ.
ಸ್ನಾನ : ಗ್ರಹಣ ಪ್ರಾರಂಭ ಮತ್ತು ಮುಗಿದ ಮೇಲೆ ಸ್ನಾನ ಮಾಡಬೇಕು. ವೈಜ್ಞಾನಿಕವಾಗಿ ತಣ್ಣೀರಿನಿಂದ ಸ್ನಾನ ಮಾಡಿದಾಗ ದೇಹ ಶುದ್ಧಿ ಜೊತೆಗೆ ಮನಸ್ಸಿನ ಮೇಲೆ ಹೆಚ್ಚು ಹತೋಟಿ ಇಡಲು ಸಾಧ್ಯ. ಗ್ರಹಣ ಕಾಲದಲ್ಲಿ ಸೂರ್ಯನ ಬೆಳಕಿನಲ್ಲಿ ಆಗುವ ವ್ಯತ್ಯಾಸ ದೇಹದ ಮೇಲೆ ಹೆಚ್ಚು ಆಗದಿರಲಿ ಎಂದು ಈ ಸ್ನಾನಾಚರಣೆ ಬಂದಿರಲಿಕ್ಕೂ ಸಾಧ್ಯವಿದೆ.
ಆಹಾರ ವಿಚಾರ: ಗ್ರಹಣ ಪ್ರಾರಂಭವಾಗುವ ನಾಲ್ಕು ಗಂಟೆಗೆ ಮೊದಲು ಲಘು ಆಹಾರ ಗ್ರಹಣಾ ನಂತರ ಎಂದಿನಂತೆ ಆಹಾರ ಸ್ವೀಕಾರ. ನಮ್ಮ ಉದರದಲ್ಲಿ ಒಳ್ಳೆಯ ಹಾಗು ಕೆಟ್ಟ ಬ್ಯಾಕ್ಟೀರಿಯಾಗಳು ಪಚನ ಕ್ರಿಯೆಗೆ ಸಹಾಯ ಮಾಡುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಅದರಂತೆ ಗ್ರಹಣದ ಸಮಯದಲ್ಲಿ ಆಹಾರ ಸ್ವೀಕರಿಸಿದರೆ ಉದರದಲ್ಲಿ ಇರುವ ಆಹಾರದ ಪಚನ ಕ್ರಿಯೆಯಲ್ಲಿ ಬ್ಯಾಕ್ಟೀರಿಯಾಗಳು ಎಂದಿನಂತೆ ಕಾರ್ಯ ನಿರ್ವಹಿಸದೇ ಇದ್ದಾಗ ದೇಹದ ಆರೋಗ್ಯದ ಮೇಲೆ ಆಗುವ ಪರಿಣಾಮ ತಡೆಯಲು ಹಾಗು ನಾಲ್ಕು ಗಂಟೆ ಮುಂಚೆ ಹೆಚ್ಚು ಆಹಾರ ಸೇವಿಸಿದರೆ ಹಿಂದಿನ ಕಾಲದಲ್ಲಿ ಬಹಿರ್ದೆಶೆಗೆ ಗ್ರಹಣ ಕಾಲದಲ್ಲಿ ಊರಿನಿಂದ ದೂರ ಹೋಗಿ ಬರಬೇಕಾದ ಸನ್ನಿವೇಶ ತಪ್ಪಿಸಲು ( ಗ್ರಹಣ ಕಾಲದ ಸೂರ್ಯನ ಕಾಸ್ಮಿಕ್ ಕಿರಣಗಳು ತಾಗದಿರಲಿ, ಅಪ್ಪಿ ತಪ್ಪಿ ಬರೆಕಣ್ಣಿನಿಂದ ಸೂರ್ಯನನ್ನು ನೋಡದಿರಲಿ ಎಂಬ ಉದ್ದೇಶ ವಿರಬಹುದು) ಈ ಆಚರಣೆ ಬಂದಿರಲು ಸಾಧ್ಯವಿದೆ.
ಗ್ರಹಣ ಕಾಲದ ಧ್ಯಾನ,ಶಾಂತಿ, ಹೋಮ ಹವನಗಳು: ಇವು ಕೂಡಾ ಗುರುತ್ವಾ ವತ್ಯಾಸದಿಂದ ಮನಸ್ಸಿನ ಮೇಲೆ ಆಗುವ ಪರಿಣಾಮಗಳನ್ನು ನಿಗ್ರಹಿಸಲು ಧ್ಯಾನ, ಪಾಠ, ಪಾರಾಯಣ, ಶಾಂತಿ ಹೋಮದ ನೆಪದಲ್ಲಿ ಸೂರ್ಯನ ರೇಶ್ಮಿಗೆ ದೇಹ ಒಡ್ಡದಂತೆ ಮನೆಯಲ್ಲಿಯೇ ಇರಲು ಮಾಡಿರುವ ಆಚರಣೆ ಎನ್ನುವುದು ಗೋಚರಿಸುತ್ತದೆ.
ದಾನ: ಇದು ಕೂಡ ಸನಾತನ ಸಂಸ್ಕೃತಿಯಲ್ಲಿ ಯಾವುದೇ ಆಚರಣೆಯಲ್ಲಿ ದಾನ (ಒಬ್ಬರಿಂದ ಇನ್ನೊಬರಿಗೆ ಅವರ ಜೀವನೋಪಾಯಕ್ಕೆ ಬೇಕಾದ ಪದಾರ್ಥಗಳ ಹಂಚುವಿಕೆ ) ಕೊಡುವುದು ಒಂದು ವೃತ್ತಿಯನ್ನೇ ನಂಬಿದ ವರ್ಗವನ್ನು ಸಲುಹಲು ಇರುವ ಒಂದು ಸಾಧನವಷ್ಟೇ . ಮತ್ತೊಬ್ಬರಿಗೆ ಊಟ ಕೊಡಿಸಿದಾಗ ಸಿಗುವ ಆನಂದದ ಸುಖ ಈ ದಾನಪ್ರಕ್ರಿಯೆ ಇಂದ ಬಂದು ಮನುಷ್ಯ ಧನ್ಯತಾ ಭಾವ ಹೊಂದುವ ಸಾಮಾನ್ಯ ಪ್ರಕ್ರಿಯೆ ಹೊರತು ಇದರಲ್ಲಿ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ.
ಹೀಗೆ ಹಲವಾರು ನಂಬಿಕೆ, ಮೂಢನಂಬಿಕೆಗಳು ಬೆಳೆದುಬಂದಿವೆ.
ಮೂಢನಂಬಿಕೆಗೂ ಗ್ರಹಣಾಚರಣೆಗೂ ತುಂಬಾ ವ್ಯತ್ಯಾಸ
ಮೂಢನಂಬಿಕೆಗೂ ಗ್ರಹಣಾಚರಣೆಗೂ ತುಂಬಾ ವ್ಯತ್ಯಾಸವಿದೆ. ಮೂಢ ನಂಬಿಕೆ ಎಂದರೆ ಒಂದು ಆಚರಣೆಯ ಬಗ್ಗೆ ಏನೂ ತಿಳಿದುಕೊಳ್ಳದೇ ಯಾರೋ ಮಾಡುತ್ತಾರೆ ಅದನ್ನ ಅಂಧ ರೀತಿಯಲ್ಲಿ ಅನುಸರಿಸಿ ಆಚರಿಸುವುದು. ಯಾವುದೇ ವಿಷಯಗಳನ್ನ ಅರಿಯದೆ ಯಾವುದೇ ಆಚರಣೆ ಮಾಡುವುದು ಶುದ್ಧ ತಪ್ಪು.
ಈ ವಿಶ್ಲೇಷಣೆಯ ಉದ್ದೇಶ ಗ್ರಹಣಾಚರಣೆಯನ್ನು ಜನರು ಪಾಲಿಸಲಿ ಎಂಬುವುದಲ್ಲ ಬದಲಾಗಿ ವೈಜ್ಞಾನಿಕವಾಗಿ ಗ್ರಹಣ ಸಂಭವಿಸಿದಾಗ ಪ್ರಕೃತಿಯಲ್ಲಿ ಆಗುವ ಬದಲಾವಣೆ ಹಾಗು ದೇಹದ ಮೇಲೆ ಆಗುವ ಪರಿಣಾಮಗಳ ಸತ್ಯಾಸತ್ಯೆತೆಯ ಬಗ್ಗೆ ಬೆಳಕು ಚಲ್ಲುವುದಾಗಿದೆ.
ಗ್ರಹಣ ಸಮಯದಲ್ಲಿ ನಿಮ್ಮ ದೇಹದ ಸ್ವಾಸ್ಥ್ಯಕ್ಕೆ ಆರೋಗ್ಯಕ್ಕೆ ನಿಮಗೆ ಯಾವುದು ಉತ್ತಮ ಎಂದು ಎನಿಸುತ್ತದೆಯೋ, ಆ ರೀತಿ ನಿಮ್ಮ ನಿಲುವುಗಳನ್ನು ತೆಗೆದುಕೊಂಡು, ನಮ್ಮ ನಭೋಮಂಡಲದ ನೆರಳು ಬೆಳಕಿನಾಟದ ವಿಸ್ಮಯವನ್ನು ಕಣ್ತುಂಬಿಕೊಳ್ಳಿ.
ಇನ್ನು ಹೆಚ್ಚು ವೈಜ್ಞಾನಿಕ ವಿಚಾರ ತಿಳಿದು ತಿಳಿಸಬಹುದಾಗಿದೆ…
ವೈಜ್ಞಾನಿಕ ಕಾರಣಗಳೊಂದಿಗೆ ರಾಹು ಕೇತುವಿನ ಬಗ್ಗೆ ವಿಶ್ಲೇಷಣೆ ಚೆನ್ನಾಗಿ ಮೂಡಿ ಬಂದಿದೆ. ಜನರಿಗೆ ಇದ್ದ ಭಯ ದೂರಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನನ್ನ ಭಾವನೆ.